Categories
ವಚನಗಳು / Vachanagalu

ಅಲ್ಲಮ ಪ್ರಭು ವಚನಗಳು

ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು,
ಅಂಬು ಏನ ಮಾಡುವುದು?
ಎಲೆ ಎಲೆ ನೋಡಿರಣ್ಣಾ, ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು
ಏನು ಕಾರಣ ಹೇಳಾ ಗುಹೇಶ್ವರಾ ?/1001
ನಾರು ಬೇರಿನ ಕುಟಿಲ ಕಪಟದ
ಯೋಗವಲ್ಲಿದು ನಿಲ್ಲಿ ಭೋ.
ಕಾಯಸಮಾದಿ ಕರಣಸಮಾದಿ-
ಯೋಗವಲ್ಲಿದು ನಿಲ್ಲಿ ಭೋ.
ಜೀವಸಮಾದಿಯೆಂಬುದಲ್ಲ,
ನಿಜ ಸಹಜಸಮಾದಿ ಗುಹೇಶ್ವರಾ !/1002
ನಿಂದಡೆ; ಹೊನ್ನು ಹೆಣ್ಣು ಮಣ್ಣು ಹಿಡಿದು
ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದಡೆ; ಹೊನ್ನು ಹೆಣ್ಣು ಮಣ್ಣು ಬಿಟ್ಟು
ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದು ಭಕ್ತನಲ್ಲದ, ಸುಳಿದು ಜಂಗಮವಲ್ಲದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಯ್ಯಾ ? /1003
ನಿಂದೆ, ಎಂಬುದು ಬಂದ ಭವದಲ್ಲಿಯೆ ಹೋಯಿತ್ತು.
ಮುಂದೆ ಗುರುಕಾರುಣ್ಯವಾದಲ್ಲಿಯೇ `ಹಿಂದು’ ಹರಿಯಿತ್ತು.
ಮರ್ತ್ಯಲೋಕದ ಮಹಾಗಣಂಗಳು ಮೆಚ್ಚೆ, ದಾಸೋಹವ ಮಾಡಿದಲ್ಲಿಯೆ
ಪ್ರಮಥಗಣಂಗಳು ತಮ್ಮೊಳಗೆ ನಿಮ್ಮನು ಇಂಬಿಟ್ಟುಕೊಂಡು.
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದು,
ನಿನ್ನ ಸರ್ವಾಂಗದಲ್ಲಿ ಲಿಂಗಸನ್ನಹಿತವಾದಲ್ಲಿಯೆ
ಪ್ರಾಣಲಿಂಗಸಂಬಂಧವಳವಟ್ಟಿತ್ತು.
ಲಕ್ಷದ ಮೇಲೆ ತೊಂಬತ್ತಾರುಸಾವಿರ ಪ್ರಮಥರಿಗೆ ಮಾಡಿದ ಸಯದಾನವ
ನಿಮ್ಮ ಲಿಂಗಕ್ಕೆ ಆರೋಗಿಸಲಿತ್ತು ತೃಪ್ತಿಪಡಿಸಿದಲ್ಲಿಯೆ
ನಿನ್ನ ತನು ಮನ ಪ್ರಾಣಗಳು ಅರ್ಪಿತವಾದಲ್ಲಿ
ಮಹಾಪ್ರಸಾದ ಸಾಧ್ಯವಾಯಿತ್ತು.
ಆದಿಯ ಲಿಂಗವಿಡಿದು ನಾನು ನಿಮ್ಮಲ್ಲಿ ಅಡಗಿದ ಬಳಿಕ
ಹಿಂದಣ ಸಂಕಲ್ಪವಳಿಯಿತ್ತು.
ಸರ್ವಾಚಾರಸಂಪತ್ತು ನಿನ್ನಲ್ಲಿ ಸಯವಾದಲ್ಲಿ
ಸರ್ವಸೂತಕ ತೊಡೆಯಿತ್ತು.
ಗುಹೇಶ್ವರಲಿಂಗವು ನಿನ್ನ ಹೃದಯಕಮಲದಲ್ಲಿ ನೆಲೆಗೊಂಡು
ನಿನ್ನ ಕರಸ್ಥಲದೊಳಗೆ ತೊಳಗೆ ಬೆಳಗುತ್ತೈದಾನೆ.
ಇನ್ನೊಮ್ಮೆ ತಿಳಿದು ನೋಡಾ ಸಂಗನಬಸವಣ್ಣಾ./1004
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ,
ಅಚ್ಚುಗವಾಯಿತ್ತಯ್ಯಾ ನಮ್ಮ ನಲ್ಲಂಗೆ.
ಕಿಚ್ಚನೆ ಹೊತ್ತುಕೊಂಡು ಅರ್ಚನೆಯನಾಡಲು,
ಅಚ್ಚುಗವಾಯಿತ್ತವ್ವಾ ನಮ್ಮ ನಲ್ಲಂಗೆ.
ಅರ್ಚನೆಯ ಗಳಿಹವ ನಿಳುಹಿದಡೆ,
ಬಳಿಕ ನಿಶ್ಚಿಂತವಾಯಿತ್ತು ಗುಹೇಶ್ವರಾ/1005
ನಿಜ ಬಲ್ಲವಂಗೆ ಜಲವೂ ಸರಿ, ನೆಲವೂ ಸರಿ.
ಅರಿದು ನುಡಿವಂಗೆ ಜಗವೂ ಸರಿ, ಸಮಯವೂ ಸರಿ.
ಎಮಗಾಮಿಥ್ಯವಿಲ್ಲ, ಸಂಗನಬಸವಣ್ಣಾ,
ಗುಹೇಶ್ವರಲಿಂಗವು ಪರಿಪೂರ್ಣವಾದ ಕಾರಣ./1006
ನಿಜವನರಿಯದ ನಿಶ್ಚಿಂತನೆ, ಮರಣವ ಗೆಲಿದ ಮಹಂತನೆ,
ಘನವ ಕಂಡ ಮಹಿಮನೆ, ವರವನೊಳಕೊಂಡ ಪರಿಣಾಮಿಯೆ,
ಬಯಲಲೊದಗಿದ ಭರಿತನೆ,
ಗುಹೇಶ್ವರಲಿಂಗನಿರಾಳವನೊಳಕೊಂಡ ಸಹಜನೆ/1007
ನಿಜವರಿಯದ (ನಿಜವರಿದ?) ಶರಣಂಗೆ ಆಚಾರವಿಲ್ಲ,
ಆಚಾರವಿಲ್ಲದವಂಗೆ ಲಿಂಗವಿಲ್ಲ.
ಲಿಂಗವಿಲ್ಲದ ಶರಣನ ಸುಳುಹು ಜಗದಲ್ಲಿ ಸುಳಿವು,
ಹೊರವೇಷದ ಜಂಗಮಕ್ಕೆ ವಿಪರೀತ ಚರಿತ್ರವದು
ಸರ್ವರಿಗೆ ಪ್ರಕಟವಲ್ಲ ನೋಡಾ !
ಸಂಸಾರಿಗಳು ಬಳಸುವ ಬಳಕೆಯನೆಂದೂ ಹೊದ್ದನು.
ಇದನರಿಯದೆ ಸಟೆಯ ಹಿಡಿದು ದಿಟವಮರದು
ಇಲ್ಲದ ಲಿಂಗವನುಂಟೆಂದು ಪೂಜಿಸುವರಾಗಿ ಆಚಾರವುಂಟು,
ಆಚಾರವುಳ್ಳವಂಗೆ ಗುರುವುಂಟು,
ಗುರುವುಳ್ಳವಂಗೆ ಲಿಂಗವುಂಟು,
ಲಿಂಗಪೂಜಕರಿಗೆ ಭೋಗವುಂಟು.
ಈ ಬರಿವಾಯ ಮಂಜಕ(ವಂಚಕ ?)ರೆಲ್ಲರೂ ಪೂಜಕರಾದರು.
ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು
ಈ ವೇಷಲಾಂಛನರೆತ್ತ ಬಲ್ಲರು ಹೇಳಯ್ಯ ಸಂಗನಬಸವಣ್ಣಾ./1008
ನಿತ್ಯ ನಿರಂಜನ ತಾನೆಂದರಿಯದೆ, `ತತ್ತ್ವ ಮಸಿ’ ಎಂದು
ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ !
ತಮ್ಮ ತಾವರಿಯದೆ,
ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?/1009
ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ,
ನಿಂದ ನಿಲವನರಿದು ಭಕ್ತ,
ಗುರುಪ್ರಸನ್ನವಿಡಿದು ಮಾಹೇಶ್ವರ,
ಲಿಂಗಪೂಜೆಯವಿಡಿದು ಪ್ರಸಾದಿ,
ಸ್ವಾನುಭಾವ ವಿವೇಕವಿಡಿದು ಪ್ರಾಣಲಿಂಗಿ,
ಸ್ವಯಾನಂದವಿಡಿದು ಶರಣ,-
ಸೋಹಂ ಬ್ರಹ್ಮಾಸ್ಮಿನ್ನೆಂದು ಲಿಂಗೈಕ್ಯ.
ಇಂತೀ ಷಟ್ಸ್ಥಲ ಸಂಪನ್ನನಾಗಿ, ನಿಂದ ನಿಲವ ನೀ ಬಲ್ಲೆಯಲ್ಲದೆ
ಲೋಕದ ಸಂದೇಹಿಮಾನವರೆತ್ತ ಬಲ್ಲರು ಗುಹೇಶ್ವರಾ./1010
ನಿದ್ರೆಯಿದ್ದಡೆಯಲ್ಲಿ ಬುದ್ಧಿಯೆಂಬುದಿಲ್ಲ ನೋಡಾ.
ಕಾಯವೊಂದೆಸೆ, ಜೀವವೊಂದೆಸೆ,
ಗುಹೇಶ್ವರಲಿಂಗ ತಾನೊಂದೆಸೆ !/1011
ನಿಧಾನವ ಸಾದಿಸಿದವರಿಗೆ ವಿಗುರ್ಬಣೆ ಕಾಡುವುದು.
ಅದಕ್ಕಂಜಲಾಗದು ಬೆಚ್ಚಲಾಗದು ಬೆದರಲಾಗದು.
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧಮಾಯವ ತೋರಿ, ಹೆರತೆಗೆಸುವನಾಗಿ !
ಸತಿಪುರುಷಸಂಯೋಗದ ವೇಳೆಯಲ್ಲಿ
ಜೀವಧನ ಬಿಟ್ಟುಕೊಂಡು ಮಡಕೆಯನೂಕುವುದು.
ಇದಿರ ಜೀವಧನ ಬಿಟ್ಟುಕೊಂಡು ಮನೆಯ ಹಿಂದನುಚ್ಚುವುದು.
ಬೆಕ್ಕು ನೆಲಹಿಗೆ ತುಡುಕುವುದು. ನಾಯಿ ಮನೆಯ ಹೊರಗ ಹೊಂಚಿಕೊಂಡಿಹುದು.
ಮಗುವು ಮೊಲೆಗೆ ಅಳುವುದ ಕೇಳಿ-
ಇವೆಲ್ಲವ ಸಂತವಿಟ್ಟು ಬಂದು ಪುರುಷನ ನೆರೆವಳು,
[ಇದು ಸಜ್ಜನಸ್ತ್ರೀಯ ಲಕ್ಷಣವು !
ಇಂತಪ್ಪ ಆ ತವಕ ನಿನಗಳವಟ್ಟಿತ್ತು ಬಸವಾ
ಆ ಗುಹೇಶ್ವರನ ಸಂಯೋಗದ ವೇಳೆಯಲ್ಲಿ !/1012
ನಿನ್ನ ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲವೂ ಭಕ್ತಿರಸ !
ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ?
ಅರುಹಿನ ಕುರುಹಿನ ಮರವೆ ಮಾತಿನೊಳಗದೆ
ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ?
ಕುರುಹಳಿದು ಕುರುಹನರಿಯ ಬಲ್ಲಡೆ
ಗುಹೇಶ್ವರ ಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ,
ಕಾಣಾ ಮಡಿವಾಳ ಮಾಚಯ್ಯಾ./1013
ನಿಮ್ಮ ತೇಜವ ನೋಡಲೆಂದು ಹೆರಸಾರಿ ನೋಡುತ್ತಿರಲು
ಶತಕೋಟಿ ಸೂರ್ಯರು ಮೂಡಿದಂತೆ ಇರ್ದುದಯ್ಯಾ !
ಮಿಂಚಿನಬಳ್ಳಿಯ ಸಂಚವ ಕಂಡಡೆ,
ಎನಗಿದು ಸೋಜಿಗವಾಯಿತ್ತು !
ಗುಹೇಶ್ವರಾ ನೀನು ಜ್ಯೋತಿರ್ಲಿಂಗವಾದಡೆ
ಉಪಮಿಸಿ ನೋಡಬಲ್ಲವರಿಲ್ಲಯ್ಯಾ./1014
ನಿಮ್ಮ ನೆನೆವುತ್ತಿದ್ದಿತ್ತು-ನೆನೆವ ಮುಖವಾವುದೆಂದರಿಯದೆ,
ಪೂಜೆಯ ಪೂಜಿಸುತ್ತಿದ್ದಿತ್ತು-ಪೂಜೆಯ ಮುಖವಾವುದೆಂದರಿಯದೆ;
ಆಡಿ ಹಾಡಿ ಬೇಡುತ್ತಿದ್ದಿತ್ತು-ಬೇಡುವ ಮುಖವಾವುದೆಂದರಿಯದೆ;
ಕಾಯದಲ್ಲಿ ಇಲ್ಲ, ಜೀವದಲ್ಲಿಇಲ್ಲ, ಭಾವದಲ್ಲಿ ಇಲ್ಲ;
ಭರಿತವು ಅದು ತಾನಪ್ಪುದು.
ತಾನಲ್ಲದುದೇನ ಹೇಳುವೆ ಕೌತುಕವ?
ಗುಹೇಶ್ವರನೆಂಬ ಹೆಸರೊಳಗಿದ್ದುದ
ಬೆಸಗೊಂಬವರಿಲ್ಲ ನಿರಾಳದ ಘನವ !/1015
ನಿಮ್ಮ ನೋಡುವ ಸುಖ ಉಳ್ಳನ್ನಕ್ಕರ, ಬೆರಸಲೆಲ್ಲಿಯದಯ್ಯಾ ?
ನಿಮ್ಮ ಬೆರಸುವ ತವಕ ಉಳ್ಳನ್ನಕ್ಕ ನೋಟ ಹಿಂಗದು !
ನೋಡಿ ಕೂಡಿ ಸೈವೆರಗಾದ ಸುಖವನು
ಏನೆಂದುಪಮಿಸುವೆನಯ್ಯಾ ಗುಹೇಶ್ವರಾ ? /1016
ನಿಮ್ಮ ಲೀಲೆ, ನಿಮ್ಮ ವಿನೋದ, ನಿಮ್ಮ ಹರೆ, ನಿಮ್ಮ ಕೊಳಲು,
ಆನಿದಕ್ಕೆ ಬೇಕೆನ್ನೆ ಬೇಡೆನ್ನೆ.
ಮೇಘವಹ್ನಿ ಧರೆಗೆರಗುತ್ತ ಭೂಲೋಕವ ಬೆಸಗೊಂಡಿತ್ತೆ ?
ಉದರಾಗ್ನಿ ಧರೆಗೆರಗುತ್ತ ಭೂತಂಗಳ ಬೆಸಗೊಂಡಿತ್ತೆ ?
ಗುಹೇಶ್ವರ ಅಲ್ಲಮನ ನಿರುಪಮ ಮಹಿಮೆ ಎಂತಿದ್ದಿತ್ತು
ಆ ಹಾಂಗೆ ನೀನು ಮಾಡುವುದಲ್ಲದೆ
ನಾನಿದಕ್ಕೆ ಬೇಕೆನ್ನೆನು ಬೇಡೆನ್ನೆನು/1017
ನಿಮ್ಮ ಶಕ್ತಿ ಜಗದೊಳಗಿಪ್ಪುದು, ಜಗದ ಶಕ್ತಿ ನಿಮ್ಮೊಳಗಿಪ್ಪುದು.
ಜಗಕ್ಕೆ ನಿಮಗೆ ಭೇದವಾದುದಕ್ಕೆ ಬೆರಗಾದೆನು !
ಅಂದೊಮ್ಮೆ ತ್ರಿಪುರವ ಸುಟ್ಟಲ್ಲಿ ನಾಚಿತ್ತೆನ್ನ ಮನವು.
ಕಾಮನನುರುಹಿ ಕಾಮಹರನೆನಿಸಿಕೊಂಡಡೆ
ನಿನ್ನ ಅಹಂಕಾರವ ನೋಡಿ ಹೇಸಿತ್ತೆನ್ನ ಮನವು.
ಕಾಲನ ಸುಟ್ಟು ಬೊಟ್ಟನಿಟ್ಟಡೆ ನಗೆಗೆಡೆಯಾಯಿತ್ತು ನಿಮ್ಮ ಘನವೆನಗೆ.
ಗುಹೇಶ್ವರಾ, ನೀ ಮುನಿದು ನೊಸಲಕಣ್ಣ ತೆಗೆದಡೆ
ಎನ್ನ ಅಂಗಾಲೊಳಡಗಿತ್ತಯ್ಯಾ ನಿಮ್ಮ ಕೋಪ./1018
ನಿಮ್ಮಲ್ಲಿ ನೀವು ತಿಳಿದು ನೋಡಿದರೆ:ಅನ್ಯವಿಲ್ಲ ಕಾಣಿರಣ್ಣಾ.
ಅರಿವು ನಿಮ್ಮಲ್ಲಿಯೆ ತದ್ಗತವಾಗಿಯದೆ.
ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು. /1019
ನಿಮ್ಮಲ್ಲಿ ಭಕ್ತಿಯುಂಟು, ತಮ್ಮಲ್ಲಿ ಭಕ್ತಿಯುಂಟು
ಎಮ್ಮಲ್ಲಿ ಭಕ್ತಿಯುಂಟು ಎಂದಡೆ ಶಿವಶರಣರು ಮೆಚ್ಚುವರೆ ?
ಹೂಸಿ ಹುಂಡನೆ ಮಾಡಿ ಬಾಯ ಸವಿಯ ನುಡಿವರೆಲ್ಲಾ ಭಕ್ತರಪ್ಪರೆ ?
ಮಾತಿನ ಅದ್ವೈತವ ಕಲಿತು ಮಾರುಗೋಲ ಬಿಡುವರೆಲ್ಲ ಭಕ್ತರಪ್ಪರೆ ?
ಬೆಳ್ಳಿಗೆಯ ಮಕ್ಕಳೆಂದಡೆ ಬಳ್ಳವಾಲ ಕರೆವವೆ ಮರುಳೆ ?
ಸಂಗನಬಸವಣ್ಣನೆಂದರೆ ಮಾತಿನ ಮಾತಿಂಗೆಲ್ಲ ಭಕ್ತಿಯುಂಟೆ ?
ಬಂದ ಜಂಗಮದ ಇಂಗಿತಾಕಾರವನರಿದು, ಇದಿರೆದ್ದು ವಂದಿಸಿ,
ಕೈಮುಗಿದು ನಡುನಡುಗಿ ಕಿಂಕಿಲನಾಗಿ,
ಭಯಬಿತಿ ಭೃತ್ಯಾಚಾರವಾಗಿ ಇರಬಲ್ಲಡೆ ಅದು ಭಕ್ತಿ, ಅದು ವರ್ಮ !
ಬಂದವರಾರೆಂದರಿಯದೆ, ನಿಂದ ನಿಲವರಿಯದೆ
ಕೆಮ್ಮನೆ ಅಹಂಕಾರವ ಹೊತ್ತುಕೊಂಡಿಪ್ಪವರ
ನಮ್ಮ ಗುಹೇಶ್ವರಲಿಂಗನೊಲ್ಲ ನೋಡಾ !/1020
ನಿಮ್ಮಲ್ಲಿ ಸನ್ನಹಿತನಾಗಿ ನಿಜವನರಿತು ಬೆರಸಿದ
ಶಿವಯೋಗಿಯ ಕಂಡಡೆ ಎನ್ನ ಮನ ಅಗಲಲಾರದಯ್ಯಾ;
ಎನ್ನ ತನು ಅಪ್ಪದಿರಲಾರದಯ್ಯಾ,
ಎನ್ನ ಶಬುದ ಹೊಗಳಿದಲ್ಲದೆ ಸೈರಿಸಲಾರದಯ್ಯಾ.
ಗುಹೇಶ್ವರಾ ನಿಮ್ಮ ಶರಣ ಸಿದ್ಧರಾಮಯ್ಯನನಪ್ಪಿ
ಸೊಪ್ಪಳಿದು ನಮೋ ನಮೋ ಎನುತಿರ್ದೆನು./1021
ನಿರವಯ ನಿರ್ಗುಣ ನಿಃಶೂನ್ಯಲಿಂಗಕ್ಕೆ
ಶರಣರು ತಮ್ಮ ತಮ್ಮ ತನುಗುಣಾದಿಗಳ
ಅರ್ಪಿಸಿಹೆನೆಂಬುದೆ ಮಹಾಪಾಪ!
ಅವು ತಮ್ಮ ತನುವಿನಲ್ಲಿಪ್ಪುದೆ ಭಂಗ, ಅದೇ ಕರ್ಮ.
ಈ ಉಭಯ ನಾಸ್ತಿಯಾಗದ ಸುಳುಹು
ಮುಂದೆ ಕಾಡಿಹುದಯ್ಯಾ ಗುಹೇಶ್ವರಾ./1022
ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ,
ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ
ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು-
ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು,
ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು
ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ
ಸಂದಿ ಗೊಂದಿ ಗೊತ್ತಿನೊಳಗಿಟ್ಟು
ಅದರ ಬಳಿದ [ತೊಳೆದ] ನೀರು, ಅವರೆಂಜಲ ತಿಂಬುವ ಪಶುಗಳಿಗೆ
ದೇವಭಕ್ತರೆನಬಹುದೇನಯ್ಯಾ ? ಎನಲಾಗದು.
ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ
ಜಂಗಮವೆಂದು ಪೂಜಿಸಲಾಗದು ಕಾಣಿರೊ.
ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ
ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ/1023
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ, ಹೆಸರಿಟ್ಟು ಕರೆದವರಾರೊ ?
ಅಕಟಕಟಾ ಶಬ್ಧದ ಲಜ್ಜೆ[ಯ] ನೋಡಾ !
ಗುಹೇಶ್ವರನರಿಯದ ಅನುಭಾವಿಗಳೆಲ್ಲರ
ತರಕಟ ಕಾಡಿತ್ತು./1024
ನಿರಾಳವೆಂಬ ಶಿಶುವಿಂಗೆ ಪೃಥ್ವಿಯೆಂಬ ತೊಟ್ಟಿಲು,
ನಿಜೈಕ್ಯವೆಂಬ ತಾಯಿ ಬಂದು ಮೊಲೆಯ ಕೊಟ್ಟು ಬೆಣ್ಣೆಯನಿಕ್ಕಿ;
ವಾಯು ಬಂದು ತೊಟ್ಟಿಲ ತೂಗಿ ಜೋಗುಳವಾಡಿದಡೆ,
ಆಕಾಶ ಬಂದು ಶಿಶುವನೆತ್ತಿಕೊಂಡು ಬೆಳೆಯಿಸಿತ್ತಲ್ಲಾ !
ನಿರಾಳವೆಂಬ ಹಸಿವು-ತೃಷೆಯ ಶಿಶುವಿಂಗೆ ಬೇಕೆಂದು
ಮುಗ್ಧೆಯ ಬೆಸಗೊಳಲರಿಯರು ಮೂರುಲೋಕವು ಗುಹೇಶ್ವರಾ./1025
ನಿರಾಳಸ್ಥಾನದಲ್ಲಿ ಆಪ್ಯಾಯನವಿಲ್ಲದೆ ಹೋಯಿತ್ತದೇನೆಂಬೆನಯ್ಯಾ ?
ಹಲವು ನಾಮವಾದೆಯಲ್ಲಾ !
ಚಂದಚಂದದ ಚರಿತ್ರನಲ್ಲ – ನಿಲ್ಲು ಮಾಣು .
ನಿಮ್ಮಿಚ್ಛೆಯ ಪಡೆದರೆಮ್ಮವರು.
ಇಂತಹ ದೇವನು ಅಂತಹ ದೇವನು ಎಂಬ ನಾಮ ಉಳಿಸದು,
ಒಲ್ಲೆ ಕಾಣಾ ಗುಹೇಶ್ವರಾ./1026
ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ
ಮಾಯಾ ಸೂತ್ರವಿದೇನೊ! ಕಂಗಳೊಳ[ಗಣ] ಕತ್ತಲೆ ತಿಳಿಯದಲ್ಲಾ !
ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ./1027
ನಿರ್ವಿಕಲ್ಪಿತದ ಅದ್ವೈತವ ನೋಡಿರೆ !
ಬೆಳಗಿನೊಳಗಣ ಬೆಳಗು ಅಡಗಿತ್ತು ನೋಡಿರೆ !
ಚಂದ್ರ ಸೂರ್ಯರು ಭೂಲೋಕದೊಳು ಅಂದು ಅದಾರುವ ಕಾಣೆ !
ಜ್ಯೋತಿಯಿಲ್ಲದ ಬೆಳಗಿನ ಪ್ರಭೆಯೊ,
ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯದೇವರ ಮಹಾಘನವು ! /1028
ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ ?)
ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ ?/1029
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ,
ಪರಮಾನಂದವೆಂಬ ಜಲವನೆರೆದು,
ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು
ಮಹಾಘನದಲ್ಲಿ ನಿಂದು ಘನತೃಪ್ತಿಯನೀವುತ್ತಿದ್ದಿತ್ತು ಕಾಣಿರೆ !
ಅದ ಕಣ್ಣಿಲ್ಲದೆ ಕಂಡು ಕೈಯಿಲ್ಲದ ಕೊಂಡು
ಬಾಯಿಲ್ಲದೆ ಉಂಡ ತೃಪ್ತಿಯ, ಅರಿವಿಲ್ಲದ ಅರಿವಿನಿಂದ ಅರಿದು,
ಸುಖಿಯಾದೆ ನಾನು ಗುಹೇಶ್ವರಾ./1030
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ
ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ,
ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ
ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ,
ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ
ತೂರ್ಯದ ಕ್ರಿಯೆ ವೇದಿಸಿ ನಿಂದವನ ನಿಲವು ಎಂತುಟೆಂದರೆ:
ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ.
ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ
ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು
ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು
ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು
ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು
ದೃಷ್ಟವ ಕಂಡು ಬರ….ಕೇಳಲಾಗಿ,
ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು
ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು.
ಅದೇನು ಕಾರಣವೆಂದರೆ:
ಮೊಟ್ಟ ಮೊದಲಲ್ಲಿ ಮೂರು ಬಿನ್ನವ ಕೇಳುವದು
ಆ ಮೂರು ಬಿನ್ನಯೆಂತಾದವಯ್ಯಯೆಂದರೆ,
ಅದರೊಳಗೈದು ಬಿನ್ನ ಉಂಟು.
ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂದಿಸೂದು.
ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು.
ನೋಡಿ ನಿಶ್ಚಯವಾದ ಮತ್ತೆ
ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ,
ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು
ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು,
ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ
ತಮ್ಮ ತ್ಯಾಗದ ಮೈಮರೆದಿದರ್ಾತನ ಎಚ್ಚರ ಮಾಡಿ,
ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ
ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ./1031
ನೀ ದೇವರೊಳಗೊ ? ದೇವರು ನಿನ್ನೊಳಗೊ ? ಎಂಬಠಾವನರಿಯೆ.
ಸಿಪ್ಪೆ ಒಪ್ಪೆಗೆಟ್ಟಾಗ ಹಣ್ಣಿನ ರಸ ಕೊಳಕಾಯಿತ್ತು,
ಅದು ಗುಹೇಶ್ವರನೊಪ್ಪದ ಮಾತು./1032
ನೀ ನಾನೆಂಬ ಭಾವವಾರಿಂದಾಯಿತ್ತು ಹೇಳಾ?
ನೀನೆಂಬುದು ಅಜ್ಞಾನ, ನಾನೆಂಬುದು ಮಾಯಾದಿನ.
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ
ಬಿನ್ನವಿಲ್ಲದೆ ಅರಿಯಬಲ್ಲಡೆ;
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ./1033
ನೀನು’ `ನಾನು’ ಎಂಬ ಉಭಯಸಂಗವಳಿದು ತಾನು ತಾನಾದ
ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು,
ಬಟ್ಟಬಯಲು ಕಾಣಬಹುದು ನೋಡಾ !
ಆ ಬಯಲ ಬೆರಸುವಡೆ-ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ !
ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ !
ನಡೆ ಅಲ್ಲಿಗೆ ತಾಯೆ,
ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ/1034
ನೀರ ನಡುವೆ ಒಂದು ಗಿಡು ಹುಟ್ಟಿತ್ತು.
ಆ ಗಿಡುವಿನ ಎಲೆಯ ಮೆಲಬಂದಿತ್ತೊಂದು ಕೋಡಗ.
ಆ ಕೋಡಗದ ಕೊಂಬಿನಲ್ಲಿ ಮೂಡಿತ್ತು ಅದ್ಭುತ.
ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರಾ./1035
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ,
ಶಾರದೆಯೆಂಬವಳ ಬಾಯ ಕಟ್ಟಿ,
ಕಾರ ಮೇಘದ ಬೆಳಸ ನೀರ ಹರಿ ನುಂಗಲು
ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು.
ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು,
ನೀರ ಹೊಳೆಯವರೆಲ್ಲರ ಕೊಡನೊಡೆದವು.
ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ,
ಸೋರುಮುಡಿಯಾಕೆ ಗೊರವನ ನೆರೆದಳು.
ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು,
ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ,
ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ,
ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು!
ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ,
ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು,
ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ,
ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!/1036
ನೀರ ಬೊಂಬೆಯ ಚೋಹವ ತೊಟ್ಟು,
ಅಗ್ನಿಯ ಬಣ್ಣದ ಹೊದಕೆಯ ಹೊದ್ದು,
ಗಾಳಿಯ ಗತಿಯಲ್ಲಿ ಸುಳಿದಾಡುವ ಪ್ರಾಣಿಗಳು
ದೇವರನೆತ್ತ ಬಲ್ಲರು ಗುಹೇಶ್ವರಾ ?/1037
ನೀರ ಸುಟ್ಟ ಕಿಚ್ಚಿನ ಬೂದಿಯ ಮರ್ಮವ ಬಲ್ಲಡೆ,
ನೀವು ಹೇಳಿರೆ?
ಬಯಲ ಸುಟ್ಟ ಕಿಚ್ಚಿನ ಬೂದಿಯ ಕಂಡಡೆ,
ನೀವು ಹೇಳಿರೆ?
ವಾಯುನಿಂದ ಸ್ಥಾನಕ್ಕೆ (ವ?), ಗುಹೇಶ್ವರ ನಿಂದ ನಿಲವ ಕಂಡಡೆ,
ನೀವು ಹೇಳಿರೆ?/1038
ನೀರ, ಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ,
ಈರೇಳು ಭವನವನಮಳೋಕ್ಯವ ಮಾಡಿ,
ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು
ಮೂರ್ತಿಗೊಳಿಸಿದವರಾರು ?
ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ.
ಬಿಂದುವಿನ ರಸದ ಪರೀಕ್ಷೆಯ ಭೇದವ
ಚಂದ್ರಕಾಂತದ ಗಿರಿಗೆ ಅರುಣ ಚಂದ್ರನೊಡನೆ
ಇಂಬಿನಲ್ಲಿಪ್ಪ ಪರಿಯ ನೋಡಾ !
ಅಂಗಯ್ಯ ತಳದೊಳು ಮೊಲೆ
ಕಂಗಳಲ್ಲಿ ಕರಸನ್ನೆಗೆಯ್ದಿಂಬಿನಲ್ಲಿ ನೆರೆವ ಸುಖ
ಅಂದಿನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು.
ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು./1039
ನೀರನೀಜುವನ ದೇಹ ಬಳಲುವುದಲ್ಲದೆ ನೀರು ಬಳಲುವುದೆ ?
ಸಮಯವ ನುಡಿದಡೆ ಸಮಯಕ್ಕೆ ನೋವಲ್ಲದೆ
ಗುಹೇಶ್ವರಲಿಂಗಕ್ಕೆ ಭ್ರಮೆಯಿಲ್ಲ (ನೋವಿಲ್ಲ?) ಸಂಗನಬಸವಣ್ಣಾ/1040
ನೀರಲೊಗೆದ ಮರಕ್ಕೆ ಕಾಣಬಾರದ ನೆಳಲು !
ಬೀಜವಿಲ್ಲದ ಮರನ ಹೆಸರೇನೆಲವೊ ?
ಇದನೇನ ಬಲ್ಲಿರಿ ? ಇದನೇನ ಬಲ್ಲಿರಿ ?
ಅರಿವಿನ ಮರೆಯ ಘನಕ್ಕೆ ಘನವಾದುದ !
ಕಾಸಲಿಲ್ಲದ ತುಪ್ಪ, ವಾಸನೆಯಿಲ್ಲದ ಪರಿಮಳ !
ಗುಹೇಶ್ವರನಿಪ್ಪ ನಿರಾಳವ ನೋಡಯ್ಯಾ./1041
ನೀರಿಲ್ಲದ ಒರಳಿಂಗೆ ನೆಳಲಿಲ್ಲದ ಒನಕೆ !
ರೂಹಿಲ್ಲದ ನಾರಿಯರು ಬೀಜವಿಲ್ಲದಕ್ಕಿಯ ತಳಿಸುತ್ತಲಿ
ಬಂಜೆಯ ಮಗನ ಜೋಗುಳವಾಡುತ್ತೈದಾರೆ,
ಉರಿಯ ಚಪ್ಪರವನಿಕ್ಕಿ-
ಗುಹೇಶ್ವರನ ಕಂದನು ಲೀಲೆಯಾಡಿದನು !/1042
ನೀರಿಲ್ಲದ ನೆರಳಿಲ್ಲದ ಬೇರಿಲ್ಲದ ಗಿಡುವ
ತಲೆಯಿಲ್ಲದ ಮೃಗ ಬಂದು ಮೇಯಿತ್ತು.
ಕಣ್ಣಿಲ್ಲದ ಕುರುಡನು ಕಂಡನಾ ಮೃಗವ.
ಕೈಯಿಲ್ಲದ ವ್ಯಾಧನು ಎಚ್ಚನಾ ಮೃಗವ.
ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡೆ
ಲಿಂಗಕ್ಕರ್ಪಿತವಾಯಿತ್ತು ಗುಹೇಶ್ವರಾ !/1043
ನೀರು ಕ್ಷೀರದಂತೆ ಕೂಡಿದ ಭೇದವ, ಆರಿಗೂ ಹೇಳಲಿಲ್ಲ, ಕೇಳಲಿಲ್ಲ.
ಬೆಳುಗಾರ ಬೆರಸಿ ಬೆಚ್ಚ ಬಂಗಾರಕ್ಕೆ ಸಂದುಂಟೆ ಹೇಳಾ ?
ಉರಿಯುಂಡ ಕರ್ಪುರದ ಪರಿಯಂತಿರ್ದುದನು,
ಇದಿರಿಂಗೆ ಕೊಂಡಾಡಿ ಹೇಳಲುಂಟೆ ? ಅದಂತಿರಲಿ,-
ನಮ್ಮ ಗುಹೇಶ್ವರಲಿಂಗದ ಕಣ್ಣಮುಂದೆ,
ನಿಮ್ಮ ಧರ್ಮದಿಂದಲೊಂದು ಆಶ್ಚರ್ಯವ ಕಂಡು ಬದುಕಿದೆನು ಕಾಣಾ
ಸಂಗನಬಸವಣ್ಣಾ./1044
ನೀರೂ ನೆಳಲೂ ಇಲ್ಲದಂದು, ಷಡುಶೈವ (ದೈವ ?) ರಿಲ್ಲದಂದು.
ಬ್ರಹ್ಮಾಂಡ ಭಾಂಡ ಭಾಂಡಾವಳಿಗಳಿಲ್ಲದಂದು,
ಪಿಂಡಾಂಡ ಅಂಡ ಅಂಡಾವಳಿಗಳಿಲ್ಲದಂದು,
ಅಖಂಡಿತ ಜ್ಯೋತಿರ್ಮಯಲಿಂಗ ಶರಣನ ಲೀಲೆಯಿಂದಾದ
ಏಳು ತರದ ಗಣಪಿಂಡವಂ ಕಂಡು ಅಖಂಡಿತನಾಗಿ
ಬದುಕಿದೆನಯ್ಯಾ ಗುಹೇಶ್ವರಾ./1045
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು.
ದೂರ[ದ] ಧಾತು ಸಾರಾಯದೊಳಡಗಿತ್ತು.
ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ.
ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು,
ಘೋರ ರುದ್ರನ ದಳ ಮುರಿಯಿತ್ತು-ಗುಹೇಶ್ವರಾ./1046
ನೀರೊಳಗೆ ಚಿತ್ರವ ಬರೆದಡೆ ಅದಾರ ಕಣ್ಣಿಗೆ ಕಾಣಬಹುದು ?
ಒಡಲು ಬರಿಯ ಬಯಲು ಬೊಮ್ಮವ ನುಡಿವಲ್ಲಿ
ಆ ಬೊಮ್ಮದ ಮಾತದೆಲ್ಲಿ ಬಿದ್ದಿತ್ತು ?
ಅದು ಸಾಕಾರದೊಡಲುಗೊಂಡು ನುಡಿಯಿತ್ತು.
ಆ ಉಭಯವನರಿದು ಅಡಗುವನ್ನಕ್ಕ
ನಮ್ಮ ಗುಹೇಶ್ವರಲಿಂಗವೆಂಬ ಕುರುಹು ಬೇಕು
ಕಾಣಾ ಎಲೆ ಅಂಬಿಗರ ಚಾಡಯ್ಯ./1047
ನುಡಿಗೆಡೆಗೊಡದ ಘನವ ಹಿಡಿದು ಒಡಬಂದಿಯಾಳು.
ಎಡೆಯಿಲ್ಲದ ಪರಿಪೂರ್ಣದೊಳಗೆ ನಡೆನುಡಿಗೆಟ್ಟಳು.
ತನ್ನ ನಿಲುಕಡೆಯ ನಿಜವ ತಾನರಿಯದಂತೆ
ಎನ್ನಿಂದ ಕೇಳಿ ಸ್ವಯವಾದಳು.
ಗುಹೇಶ್ವರಲಿಂಗ ಸಾಕ್ಷಿಯಾಗಿ,
ಮಹಾದೇವಿಯಕ್ಕನ ನಿಲವ ಕೊಂಡಾಡುವುದಕ್ಕೆ
ತೆರಹಿಲ್ಲ ಕಾಣಾ ಮಡಿವಾಳಯ್ಯ./1048
ನುಡಿಯಿಂದ ನಡೆಗೆಟ್ಟಿತ್ತು ನಡೆಯಿಂದ ನುಡಿಗೆಟ್ಟಿತ್ತು.
ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು.
ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು./1049
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ.
ನೆನೆವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ ?
ತನ್ನಲ್ಲಿ ತಾನಾಯಿತ್ತು, ಬಿನ್ನವಿಲ್ಲದೆ ನಿಂದ ನಿಜವು.
ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ.
ಎಂತಿದ್ದುದು ಅಂತೆ ಅದೆ ಚಿಂತೆಯಿಲ್ಲದನುಭಾವ ಗುಹೇಶ್ವರಾ/1050
ನೆನಹು ನೆನೆವ ಮನದಲ್ಲಿಲ್ಲ, ತನುವಿನಾಶೆ ಮುನ್ನವಿಲ್ಲ.
ಮನ ಮನವನೊಳಕೊಂಡ ಘನಘನವನೇನೆಂಬೆ !
ತನ್ನಲ್ಲಿ ತಾನೆಯಾಯಿತ್ತು !
ನೆನೆಯಲಿಲ್ಲದ ನಿಂದ ನಿರಾಳ ಅನಾಗತವಾದುದ ಕಂಡು
ನಾನು ಬೆರಗಾದೆನು.
ಅಂತು ಇಂತು ಎನಲಿಲ್ಲ, ಚಿಂತೆಯಿಲ್ಲದ ಮಹಾಘನವ.
ಗುಹೇಶ್ವರಲಿಂಗವ ಬೇರೆ ಅರಸಲಿಲ್ಲ./1051
ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು.
ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು.
ಗತಿಯನರಸಲುಂಟೆ? ಮತಿಯನರಸಲುಂಟೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು.
ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ./1052
ನೆನೆ ಎಂದಡೆ ಏನ ನೆನೆವೆನಯ್ಯಾ?
ಎನ್ನ ಕಾಯವೆ ಕೈಲಾಸವಾಯಿತ್ತು,
ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು.
ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ?
ಗುಹೇಶ್ವರಲಿಂಗ ಲೀಯವಾಯಿತ್ತು. /1053
ನೆನೆದೆಹೆನೆಂದಡೆ ಮನಕ್ಕೆ ಸಿಲುಕದು,
ಅರಿದೆಹೆನೆಂದಡೆ ಕುರುಹಿಂಗೆ ಬಾರದು,
ಕಂಡೆಹೆನೆಂದಡೆ ಮೂರ್ತಿಯಲ್ಲ.
ತನುವಿನೊಳಗಿಲ್ಲದ ಮನದೊಳಗಿಲ್ಲದ ಘನವು,
ನಿಮ್ಮ ಮನಕ್ಕೆ ವೇದ್ಯವಾದ ಪರಿ, ಎಂತಯ್ಯಾ ?
ಗುಹೇಶ್ವರನೆಂಬ ಲಿಂಗವು ಜಗದ ಕಣ್ಣಿಂಗೆ ಕತ್ತಲೆಯ ಕವಿಸಿ
ತನ್ನ ತಪ್ಪಿಸಿಕೊಂಡಿಪ್ಪ [ಆ] ಭೇದ
ನಿನ್ನೊಳಗಡಗಿದ ಪರಿ ಎಂತು ಹೇಳಾ ಸಂಗನಬಸವಣ್ಣಾ ?/1054
ನೆನೆನೆನೆದು ಮನ ಘನವ ವೇದಿಸಿತ್ತು.
ಕಂಡು ಕಂಡು ಮನ ಡಾವರಿಸಿತ್ತು
ತತ್ತಲ್ಲೀಯವಾಯಿತ್ತು, ತದುಗತ ಶಬ್ದ ಮುಗ್ಧವಾಯಿತ್ತು.
ಎತ್ತಣ ಗುಹೇಶ್ವರನೆಂದರಿಯದೆ,
ಉಭಯಲಿಂಗ ಒಳಕೊಂಡಿತ್ತಯ್ಯಾ./1055
ನೆನೆವಡೆ ಮನವಿಲ್ಲ. ತನುವಿನಾಸೆ ಮುನ್ನಿಲ್ಲ,
ನೆನೆವ ಮನವ ನೇತಿ ಮಾಡುವ
ಘನಕ್ಕೆ ಘನವನೇನೆಂಬೆನಯ್ಯಾ ?
ತನ್ನಿಂದ ತಾನಾದುದು ಬಿನ್ನವಿಲ್ಲದೆ ನಿಂದ ನಿಜವು !
ಅನಾಯಾಸದಿರವಿಂಗೆ ಬೆರಗಾದೆ ಗುಹೇಶ್ವರಾ./1056
ನೆಲ ಹುಟ್ಟದಂದಿನ ಧವಳಾರ,
ಧವಳಾರದೊಳಗೊಬ್ಬ ಸೂಳೆ ನೋಡಯ್ಯಾ.
ತಲೆಯಿಲ್ಲದಾತ ನಿಚ್ಚಕ್ಕೆ ಬಪ್ಪ,
ಕರುಳಿಲ್ಲದಾತ ಕುಂಟಿಣಿಯಾದ ನೋಡಯ್ಯಾ.
ಕೈಕಾಲಿಲ್ಲದೆ ಅಪ್ಪಲೊಡನೆ !-
ಇದ ಕಂಡು ಬೆರಗಾದೆ ಗುಹೇಶ್ವರಾ./1057
ನೆಲದ ಬೊಂಬೆಯ ಮಾಡಿ, ಜಲದ ಬಣ್ಣವನುಡಿಸಿ,
ಹಲವು ಪರಿಯಾಶ್ರಿ(ಶ್ರ?)ಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲನ ಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೊ ?
ಬಯಲ ಕಂಬಕ್ಕೆ ತಂದು ಸಯವೆಂದು ಪರವ ಕಟ್ಟಿದಡೆ
ಸಯವದ್ವಯವಾಯಿತ್ತು-ಏನೆಂಬೆನು ಗುಹೇಶ್ವರಾ !/1058
ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಗಿದ ಮರೀಚನಂತೆ (ಮರೀಚಿಯಂತೆ?)
ಕಂಗಳ ಮರೆಯಲಡಗಿದ ಬೆಳಗಿನಂತೆ-ಗುಹೇಶ್ವರಾ ನಿಮ್ಮ ನಿಲವು!/1059
ನೆಲದ[ತ್ತ] ಮುಂದಣ ಬಾಗಿಲು,
ಮೂರು ಮೊನೆಯ ಕಂಭದ ಶೂಲದಲ್ಲಿ ಒಂದು ದೇಗುಲ !
ಅಲ್ಲಿ ಒಳಗಣ ಹೂವಿನ ಕಲ್ಲಿನಲ್ಲಿ ಸಿಲುಕಿ (ನೆಲಸಿ?)
ನಾದ ಮೂರುತಿ ಲಿಂಗವಿಪ್ಪುದು.
ಒಂದು ಮಾತನಾಡಿದಡೆ ನುಡಿವುದು.
ಗುಹೇಶ್ವರ ಮೆಚ್ಚಲು, ಬಹುಮಾತಿನ ಮಾಲೆಯ ಅನುಭಾವಕ್ಕೆ
ನಾಚುವನು ಕಾಣಾ ಸಂಗನಬಸವಣ್ಣಾ./1060
ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ ಶಬ್ದ
ಬೇಡಲಿಲ್ಲದ ವರ-ನೋಡಿರೆ ನಿರಾಳವ !
ಬಾಡಲಿಲ್ಲದ ಸಸಿಯ ಬೆಳಸು
ಕೂಡದೆ ಕೂಡಿತ್ತೊಂದು ಸುಖವ ಕಂಡೆ ನಾನು.
ಇಲ್ಲದ ಉಪಕಾರ ಮೆಲ್ಲದ ಸವಿಯಿಂದ
ಸುಖಿಯಾದೆ ಗುಹೇಶ್ವರಾ./1071
ನೋಡು ನೋಡಾ ಸಿದ್ಧರಾಮಯ್ಯಾ;
ಆಗಳೆ ಭಕ್ತರಿಗೆ ಅಹಂಕಾರವಾಯಿತ್ತು.
ಭೃತ್ಯನಿದ್ದೆಡೆಗೆ ಕರ್ತನೈತಂದಡೆ
ಅಟ್ಟಾಟಿಕೆಯಲ್ಲಿ ಇಂತು ಕರೆದವರುಂಟೆ ?
ಬಸವಣ್ಣನೊಳಗೆ ಇಂತು ಮರವೆ ಹುಟ್ಟಿದ ಬಳಿಕ
ಉಳಿದ ಶಿವಭಕ್ತರ ಪಾಡೇನು ಹೇಳಾ ?
ಗುಹೇಶ್ವರಲಿಂಗವನು ಭಕ್ತಿರತಿಯಿಂದ
ಮನಮುಟ್ಟಿ ಕರೆದಡೆ ಹೋಹುದಲ್ಲದೆ
ವ್ಯರ್ಥಕ್ಕೆ ಹೋಗಲಾರದು ನೋಡಯ್ಯಾ. /1072
ನೋಡುವ ಸೂರ್ಯ ಸುರಿವ ಜಲ
ಹೊಲೆನೆಲೆ ಶುದ್ಧ ಎಲ್ಲಕ್ಕೂ ಸರಿ.
ಅರಿದು ನುಡಿವವಂಗೆ, ಮರೆದು ನುಡಿದು ತಲ್ಲಣಿಸುವವಂಗೆ
ಅವನ ಹೃದಯವೆ ಸಾಕ್ಷಿ !
ಗುಹೇಶ್ವರಲಿಂಗಕ್ಕೆ ತಥ್ಯ ಮಿಥ್ಯವಿಲ್ಲ ಸಂಗನಬಸವಣ್ಣಾ./1073
ನೋಡೂದ ನೋಡಲರಿಯದೆ, ಕೆಟ್ಟಿತ್ತೀ ಲೋಕವೆಲ್ಲ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ/1074
ನೋಳ್ಪುದೆ ನೋಟದೊಳ್, ನೋಟವೆ ನೋಟಕನೊಳ್,
ನೋಟಕನೆ ಸಾಕ್ಷಿ, ಸಾಕ್ಷಿಯೆ ಲಿಂಗ.
ಲಿಂಗದಿಂದೆಲ್ಲವು, ಆ ಲಿಂಗಕ್ಕೆ ಕುರುಪಿಲ್ಲ.
ಲಿಂಗಕ್ಕೆ ಲಿಂಗವೇ, ಲಿಂಗವಿದು ಬಹು ಗುಹ್ಯ,
ಗುರುಲಿಂಗದೆರಕದಿಂ ಸಚ್ಛಿಷ್ಯನೆ ಬಲ್ಲ.
ಭವಿಗಳದನೆತ್ತ ಬಲ್ಲರು ?
ಕಣ್ಣುಗೆಟ್ಟವರು ನೋಡಾ ಗುಹೇಶ್ವರಾ/1075
ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ
ಪಂಚಮುಖ ದಶಭುಜ ಫಣಿಯ ಮಣಿಯ ಮೇಲೆ ನೋಡುತ್ತೈದಾನೆ !
ಸಮತೆ ಸಮಾದಿಯೆಂಬ ಸಮರಸದೊಳಗೆ;
ಚಂದ್ರಕಾಂತಕೊಡದಲ್ಲಿ ಅಮೃತವ ತುಂಬಿ,
ಕೊಡನೊಡೆಯದೆ ಬೆಳಗುತ್ತಿದೆ, ಗುಹೇಶ್ವರಾ. /1076
ಪಂಚಭೂತ ತ್ರಿಗುಣವನು ಸಂಚರಿಸಿ
ರವಿಶಶಿಯ ಅಂತು ಕೂಡದ ರಜಬೀಜ
ಬದ್ಧ ಬಂಧವಾಯಿತ್ತೊ !
ಸಂಗತಿಯಿಲ್ಲದವನಲ್ಲ, ಪವನಗತಿಯ ನಡೆವವನಲ್ಲ.
ಭೇದಿಸುತ್ತಿದ್ದಿತು ಲೋಕವೆಲ್ಲ ಆತನ !
ರಜಬೀಜವಿಲ್ಲದ ಬಯಲು ಬದ್ಧವಾಯಿತ್ತೆ ?
ಇನ್ನೇನೆಂದು ಉಪಮಿಸುವೆ ಗುಹೇಶ್ವರಾ
ಸಿದ್ಧರಾಮನ ನಾಮವನು ?/1077
ಪಂಚಭೂತಸಂಗದಿಂದ ಜ್ಯೋತಿಯಾಯಿತ್ತು.
ಪಂಚಭೂತಸಂಗದಿಂದ ಕರ್ಪುರವಾಯಿತ್ತು.
ಈ ಎರಡರ ಸಂಗವೇನಾಯಿತ್ತು ಹೇಳಾ ವಾಙ್ಮನಾತೀತ ಗುಹೇಶ್ವರಾ ? /1078
ಪಂಚಮಹಾಪಾತಕಂಗಳು ಹೋವಠಾವ ಕಂಡೆ.
ಸರ್ವದುಃಖಗಳು ಬೇವ ಠಾವ ಕಂಡೆ.
ಕಾಲನ, ಕಾಲಲೊದೆವ ರಾವ ಕಂಡೆ.
ಕಾಮನ ಕೈಯ ಕೊಯ್ವ ರಾವ ಕಂಡೆ.
ಮಾಯೆಯ ಬಾಯ ಕುಟ್ಟುವ ರಾವ ಕಂಡೆ.
ಗುಹೇಶ್ವರಲಿಂಗಯ್ಯನ
ಎನ್ನ ಕರಸ್ಥಲದಲ್ಲಿ ಕಣ್ಣು ತುಂಬಿ ಕಂಡೆ./1079
ಪಂಚಮಹಾಪಾತಕವಾವುದೆಂದರಿಯರು –
ಭವಿಯ ತಂದು ಭಕ್ತನ ಮಾಡೂದು ಪ್ರಥಮ ಪಾತಕ.
ಭಕ್ತರಿಗೆ ಶರಣೆಂಬುದು ದ್ವಿತೀಯ ಪಾತಕ, ಗುರುವೆಂಬುದು ತೃತೀಯ ಪಾತಕ.
ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ.
ಗುಹೇಶ್ವರಲಿಂಗದಲ್ಲಿ ಹಿರಿದು ಭಕ್ತಿಯ ಮಾಡೂದು ಪಂಚಮ ಪಾತಕ !/1080
ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು,
ಸಂಚರಿಸುವಡೆ ಆವೆಡೆಯೂ ಇಲ್ಲ.
ನಿಂದ ಚಿತ್ತಿನ ಪ್ರಭೆ ಅಂಗವನು ನೆರೆ ನುಂಗೆ,
ಹಿಂದು ಮುಂದು ಎಡಬಲನೆಂಬುದಿಲ್ಲ !
ಅಡಿಯಾಕಾಶವೆಂಬುದಿಲ್ಲ
ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ
ಕಡೆಗೆ ಸಾರುವೆನೆನಲು ಊಧ್ರ್ವವಿಲ್ಲ.
ನಡುವೆ ನಾನಿದ್ದಿಹೆನೆಂದಡೆ,
ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು !
ಈ ಬೆಡಗು ಬಿನ್ನಾಣವ ಬಡವರರಿವರೆ ?
ಇದನರಿದು ನುಡಿದು ತೋರಿದನು
ಗುಹೇಶ್ವರನ ಶರಣ ಚನ್ನಬಸವಣ್ಣನು./1081
ಪಂಚಾಶತ್ಕೋಟಿ ಭೂಮಂಡಲವನು,
ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು.
ತಲೆಯಿಲ್ಲದೆ ಕಂಡು ಬೆರಗಾದೆನು
ನವಖಂಡ ಮಂಡಲ ಬಿನ್ನವಾದಂದು-
ಆ ತಲೆಯ ಕಂಡವರುಂಟೆ ಗುಹೇಶ್ವರಾ ?/1082
ಪಂಚೀಕೃತವೆಂಬ ಪಟ್ಟಣದೊಳಗೆ;
ಈರೈದು ಕೇರಿ, ನಾಲ್ಕೈದು ವೀಥಿ, ಅಲ್ಲಿ ಹಾವ ಕಂಡೆ.
ಹಿಂಡುಗಟ್ಟಿ ಆಡುವ ಮದಗಜವ ಕಂಡೆ!
ಕೇಸರಿಯ ಕಂಡು ಮನ ಬೆದರಿತ್ತು ನೋಡಾ.
ಮೂವರರಸಿಂಗೆ ಇಪ್ಪತ್ತೈದು ಪರಿವಾರ,
ಅಂಜಲಂಜ ಬೆಳಗಾಯಿತ್ತು ಗುಹೇಶ್ವರಾ/1083
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-
ವಿಷಯವನತಿಗಳೆದಲ್ಲಿ ಫಲವೇನೊ ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು-ಗುಹೇಶ್ವರಾ/1084
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು.
ಗುಹೇಶ್ವರಾ ನಿಮ್ಮ ಶರಣರು,
ಹಿಂದ ನೋಡಿ ಮುಂದನರ್ಪಿಸುವರು./1085
ಪದ್ಮಾಸನದಲ್ಲಿ ಕುಳ್ಳಿರ್ದು, ಕುಂಡಲಿಯ ಸ್ಥಾನವನರಿದು,
ಅಂಡಲೆವ ಅಧೋವಾಯುವ ಊಧ್ರ್ವಮುಖವ ಮಾಡಿ
ಷಡಂಗುಲವನೊತ್ತಿ ಊಧ್ರ್ವವಾಯುವನಧೋಮುಖಕ್ಕೆ ತಂದು
ಉತ್ತರಪೂರ್ವದಕ್ಷಿಣವನತಿಗಳೆದು
ಪಶ್ಚಿಮದ ಸುಷುಮ್ನೆಯಲ್ಲಿ ಮನಶ್ಶಕ್ತಿಸಂಧಾನಸಂಯೋಗದಿಂದ
ಸಹಸ್ರದಳಕಮಲದಲ್ಲಿ ನಾದಬ್ರಹ್ಮವನೆಯ್ದಿ,
ಮಹಾವಾಸನಾಮೃತವ ದಣಿಯುಂಡು
ತ್ರಿಸಂಧಾನ ಒಂದಾದ ಬಳಿಕ-ಆತ್ಮ ಪರಮಾತ್ಮ ಇಂತಾಗಿ,
ಅಂತರಾತ್ಮ ವಿಚಾರಕ್ಕೆ ಇಳಿದಲ್ಲಿ ಅಭ್ಯಾಸಕ್ಕೆ ಬರಲಾಗದು.
ಅದೆಂತೆಂದಡೆ:ದೇವಲೋಕಕ್ಕೆ ಸಂದು ಮರಳಿ ಮಾನವನಪ್ಪಡೆ ಅದೇ ಪಾತಕ
ಹಸಿದವನಮೃತವನುಂಡು,
ಮರಳಿ ಹಸಿದು, ಉಂಡಿಹೆನೆಂದಡೆ ಅದೇ ಪ್ರಕೃತಿ ಗುಣ.
ಇದು ಕಾರಣ-ಪರಮಾತ್ಮ ತಾನಾದಾತನು, ಪರಮಾತ್ಮ ತಾನಾದನಾಗಿ
ತನ್ನಲ್ಲಿ ತಾನೆ ಏಕೀ ಭವಿಸಿರಬೇಕು, ಗುಹೇಶ್ವರಾ./1086
ಪದ್ಯದಾಸೆಯ ಹಿರಿಯರು ಕೆಲಬರು.
ಬುದ್ಧಿಯಾಸೆಯ ಹಿರಿಯರು ಕೆಲಬರು.
ಸಮತೆಯಾಸೆಯ ಹಿರಿಯರು ಕೆಲಬರು.
ಇವರೆಲ್ಲರು ತಮ್ಮ ನಿಜವ ತಾವರಿಯದೆ
ತಪವನಾಚರಿಸಿದರು.
ವೇಷ ನಿರ್ವಯಲಾಗಿ ಆಸೆ ರೋಷವ ಬಿಟ್ಟು
ದಾಸೋಹಿಯಾಗಿದ್ದಡೆ ತಾನೆ ಗುಹೇಶ್ವರಲಿಂಗ./1087
ಪರಮ(ಪರ?)ತತ್ವದಲ್ಲಿ ತದ್ಗತವಾದ ಬಳಿಕ
ಬೇರೆ ಮತ್ತೆ ಅರಿದೆಹೆನೆಂಬ ಭ್ರಾಂತೇಕೆ ?
ಅರಿವು ಸಯವಾಗಿ ಮರಹು ನಷ್ಟವಾದ ಬಳಿಕ
ತಾನಾರೆಂಬ ವಿಚಾರವೇಕೆ ?
ಗುಹೇಶ್ವರನ ಬೆರಸಿ ಭೇದಗೆಟ್ಟ ಬಳಿಕ
ಮತ್ತೆ ಸಂಗವ ಮಾಡಿಹೆನೆಂಬ ತವಕವೇಕಯ್ಯಾ ?/1088
ಪರಮಜ್ಞಾನವೆಂಬ ಸಸಿಗೆ,
ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ
ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ
ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ.
ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ
ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ./1089
ಪರಮತತ್ವ (ಪರತತ್ವ?)ದೊಳಗಿರಬಲ್ಲಡೆ; ಉಣಲಾಗದು ಉಣದಿರಲಾಗದು.
ಎಲ್ಲರ ಸಂಗದಲ್ಲಿರಲಾಗದು, ಮತ್ತೆ ಒಬ್ಬನೆ ಇರಲಾಗದು.
ತಾಯಿ ಸತ್ತ ಅರುದಿಂಗಳಿಗೆ ತಾ ಹುಟ್ಟಿದ, ಮೂಲ ಗುಹೇಶ್ವರ./1090
ಪರಮಸುಖದ ಪರಿಣಾಮದ ಇರವ ಬಲ್ಲವರಾರೊ?
ಅದು ದೊರಕೊಳ್ಳದು ನೋಡಾ !
ತನತನಗೆ ತನ್ನ ಇರವ ಲಿಂಗದಲ್ಲಿರಿಸಿ, ಪರವ ಮನದಲ್ಲಿ ಹಿಡಿದು
ಇಹ ಪರವೆಂಬುದೊಂದು ಭ್ರಾಂತಳಿದು,
ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ
ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ./1091
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಗುರುವಾರೂ ಇಲ್ಲ ಚೋಳ ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಭಕ್ತರಾರೂ ಇಲ್ಲ ಬಸವಣ್ಣ ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ನಿರ್ವಾಣಿಗಳಾರೂ ಇಲ್ಲ ಅಕ್ಕಗಳು ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಹಿರಿಯರಾರೂ ಇಲ್ಲ ಚೀಲಾಳ ತಪ್ಪಿಸಿ.
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ
ಗಂಬಿರರಾರೂ ಇಲ್ಲ ಅಜಗಣ್ಣ ತಪ್ಪಿಸಿ.
ಇಂತೀ ಐದು ತೆರದನುವು ಆರಿಗೂ ಇಲ್ಲವೆಂದೆನಬೇಡ.
ಅವರ ಕರುಣ ಉಳ್ಳವರಿಗೆ ಆ ಮುಕ್ತಿಯುಂಟು.
ಆ ಐವರ ಕಾರುಣ್ಯದ ಪ್ರಸಾದವ ಕೊಂಡು
ನಾನು ಬಯಲಾದೆನು ಕಾಣಾ ಗುಹೇಶ್ವರಾ. /1092
ಪರವನರಿದ ಸತ್ಪುರುಷರ ಸಂಗದಿಂದ
ಶಿವಯೋಗದ ವಚನಾಮೃತವನು,
ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರಮುಖದಲ್ಲಿ ಕೇಳಿ,
ಮನೋಮುಖದಲ್ಲಿ ಹಾರೈಸಿ, ತೃಪ್ತಿಮುಖದಲ್ಲಿ ಸಂತೋಷವನೆಯ್ದಬಲ್ಲಡೆ
ಆ ಸುಖವು ಪರಿಣಾಮವನೊಡಗೂಡುವುದು !
ಹೀಂಗಲ್ಲದೆ,
ಸಂಸಾರವಿಷಯರಸವ ತಮ್ಮ ಹೃದಯಕೂಪದಲ್ಲಿ ತುಂಬಿಕೊಂಡಿಪ್ಪ ಜೀವರು
ಕಾಯದಲ್ಲಿ ವಚನಾಮೃತವ ತುಂಬಿದಡೆ,
ಬಿನ್ನಘಟದಲ್ಲಿ ಉದಕವ ಹೊಯ್ದಂತೆ ಕಾಣಾ ಗುಹೇಶ್ವರಾ./1093
ಪರಿಣಾಮದೊಳಗೆ ಮನದ ಪರಿಣಾಮವೆ ಚೆಲುವು.
ಸಂಗದೊಳಗೆ ಶರಣರ ಸಂಗವೆ ಚೆಲವು.
ಕಾಯಗೊಂಡು ಹುಟ್ಟಿದ ಮೂಢರೆಲ್ಲರು
ಸಾಯದ ಸಂಚವನರಿವುದೆ ಚೆಲುವು-ಗುಹೇಶ್ವರಾ./1094
ಪರಿಣಾಮಪರಿಮಿತ ದೊರೆಕೊಂಡಾತಂಗೆ
ಬಳಿಕೇಕೊ ಬರು ಮಾತಿನವರೊಡನೆ ಗೋಷ್ಠಿ?
ಬಳಿಕೇಕೊ ಬರಿಯ ಸಂಭ್ರಮಿಗಳೊಡತಣ ಅನುಭಾವ?
ಐವತ್ತೆರಡಕ್ಷರ ತಮ್ಮಲ್ಲಿ ತಾವು ಉಲಿಯದಂತೆ ಉಲಿದವು,
ಗುಹೇಶ್ವರನೆಂಬ ಲಿಂಗವನರಿದಾತಂಗೆ ಬಳಿಕೇಕೊ?/1095
ಪರಿಪರಿಯ ಅವಲೋಹ[ವ]ಪರುಷ ಮುಟ್ಟಲು
ಹೊನ್ನು ಪರಿವರ್ತನಕ್ಕೆ ಬಂದು ಸಲುತ್ತಿರ್ದುವು ನೋಡಾ
ಪರುಷವ ಮಾಡುವ ಪುರುಷರೆಲ್ಲರು
ಪರುಷ ಮುಟ್ಟಿದ ಹೊನ್ನಿನಂತಿದ್ದರು ನೋಡಾ.
ಪರುಷ ತಾನಾಗಲು, ಹರಿಬ್ರಹ್ಮರಿಗಳವಲ್ಲ.
ಸುರರು ಕಿನ್ನರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದ್ದರು.
ಪರುಷದಂತಿದ್ದರು ನಮ್ಮ ಗುಹೇಶ್ವರನ ಶರಣರು./1096
ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ!
ಬಯಲ ಸಿಡಿಲು ಹೊಯ್ದಡೆ
ಹಿಂದಕ್ಕೆ (ಹಿಂದೆ?) ಹೆಣನ ಸುಡುವರಿಲ್ಲ ಗುಹೇಶ್ವರಾ./1097
ಪರುಷಕ್ಕೆ ಬೆಲೆಯಿಲ್ಲ, ಪ್ರಾಣಕ್ಕೆ ನಿರ್ಮಾಲ್ಯವಿಲ್ಲ.
ರುಚಿಗೆ ಎಂಜಲಿಲ್ಲ, ಸುಖಕ್ಕೆ ಆರೋಚಕವಿಲ್ಲ.
ಗುಹೇಶ್ವರಾ ನಿಮ್ಮ ಶರಣಂಗೆ ಭವವಿಲ್ಲ ಬಂಧನವಿಲ್ಲಯ್ಯಾ./1098
ಪರುಷದ ಪುತ್ಥಳಿಗೆ ಕಬ್ಬುನದ ಆಭರಣಗಳುಂಟೆ ಅಯ್ಯಾ ?
ಲೋಕದೊಳಗೆ ಲಿಂಗ, ಲಿಂಗದೊಳಗೆ ಲೋಕವಾದಡೆ
ಹಿಂದಣ ಪ್ರಳಯಂಗಳೆಂತಾದವು ?
ಇನ್ನು ಮುಂದಣ ಪ್ರಳಯಗಳಿಗಿನ್ನೆಂತೊ ?
ಲೋಕವು ಲೋಕದಂತೆ, ಲಿಂಗವು ಲಿಂಗದಂತೆ,
ಈ ಉಭಯ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ/1099
ಪರುಷದ ಪುತ್ಥಳಿಗೆ ಲೋಹದ ಶೃಂಗಾರವೇತಕೊ ?
“ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಬಾಹ್ಯಾತ್ ಪರಂ ನಾಸ್ತಿ” ಎಂಬ ಭ್ರಾಂತೇಕೋ ?
ಲಿಂಗಮಧ್ಯೆ ಜಗತ್ಸರ್ವವಾದರೆ, ಈ ಆತ್ಮಂಗೆ
ಹಿಂದಣುತ್ಪತ್ಯ ಸ್ಥಿತಿಲಯಂಗಳೆಂತಾದವು ?
ಲಿಂಗ ಲಿಂಗದಂತೆ ಜಗ ಜಗದಂತೆ
ಲಿಂಗವನೊಳಗುಮಾಡಿ, ಜಗವ ಹೊರಗು ಮಾಡಬಲ್ಲನೆಮ್ಮ ಶರಣ,
ಗುಹೇಶ್ವರ ನೀನೇ ತಾನು. /1100
ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು
ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?
ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು,
ಲಿಂಗವಂತರಲ್ಲದೆ ಪ್ರಾಣಲಿಂಗಸಂಬಂದಿಗಳಾಗಬಲ್ಲರೆ ?
ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು,
ಆಚಾರ ವೀರಶೈವಸಂಪನ್ನಸಿದ್ಧಾಂತ
ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ.
ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೆದ್ಯ
ನಿರಾಳ ನಿರಂಜನ ಪರಾತ್ಪರತರನು ತಾನೆ ನೋಡಾ.
ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು ಸಂದೇಹ ಸಂಕಲ್ಪದಿಂದ ದೂಷಿಸಿ
ಜರೆವ ದುರಾಚಾರಿ [ಗಳ] ಬಾಯಲ್ಲಿ
ಬಾಲಹುಳ ಸುರಿಯದೆ ಮಾಣ್ಬುದೆ ಗುಹೇಶ್ವರಾ./1101
ಪರುಷವಾದರೂ ಒಂದರಲ್ಲಿ ಇರಿಸಬೇಕು.
ರತ್ನವಿಶೇಷವಾದಡೂ ಕುಂದಣದಲ್ಲಿ ಬಂದಿಸಿ ಸಂದಿಸಬೇಕು.
ಲಿಂಗವ ಹಿಡಿದಲ್ಲಿ ಪೂಜಿಸುವ ಅಂಗವಿರಬೇಕು.
ಇದು ಕಾರಣ, ಗುಹೇಶ್ವರಲಿಂಗವನರಿದು
ಮರೆಯಲಿಲ್ಲ ಕಾಣಾ ಚಂದಯ್ಯಾ./1102
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,
ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ; ಹೊರಗಣ ಹೊರಗನು ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು,
ತಂದು ತೋರಿದ ನಮ್ಮ ಗುಹೇಶ್ವರನು./1103
ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು.
ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ./1104
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ.
ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ.
ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ
ಲಿಂಗದ್ರೋಹಿಗಳು ನೀವು ಕೇಳಿರೆ.
ಭೈರವನು ಭಯಂಕರಹರನ ಮಗನೆಂಬ
ಭವಹರಗುರುದ್ರೋಹಿಗಳು ನೀವು ಕೇಳಿರೆ.
ಅಜಾತನ ಚರಿತ್ರ ಪವಿತ್ರ.
ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ
ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ,
ಆದಿಯ ಲಿಂಗ ಅನಾದಿಯ ಶರಣ
ಗುರುವಿನ ಗುರು ಪರಮಗುರುವರ[ನ]
ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು/1105
ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ ಲೋಕ.
ಗಂಡ ಗಂಡರನಿರಿಸಿ, ಬಡವರೊಡೆಯರ ನುಂಗಿ,
ನಾಡೊಳಗೆ ನಿಡು ನಡೆದು, ಮಡುವನೆಲ್ಲವ ತೊಡೆದು
ನಡುರಂಗದಲ್ಲಿ ಕೊಡನೊಡೆಯಲೀಯದೆ;
ಮಡದಿಯೊಡಗೂಡಿ, ಗಗನವನಡಿಗೆಯ ಮಾಡಿ
ಉಂಡು ಸುಖಿಯಾದೆ ಗುಹೇಶ್ವರಾ./1106
ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ-ತಿಳಿದೆ ನೋಡಾ.
ಪಿಂಡವೆ ಕುಂಡಲಿಯ ಶಕ್ತಿ, ಪದವೆ ಹಂಸನ ಚರಿತ್ರ,
ಬಿಂದು ಅನಾಹತವೆಂದರಿದು-ಗುಹೇಶ್ವರಲಿಂಗವ ಕೂಡಿದೆನು./1107
ಪುಣ್ಯಪಾಪವಿಲ್ಲಾಗಿ ಜನನದ ಹಂಗಿಲ್ಲ.
ಬಂದುದನುಂಬನಾಗಿ ಮಾನವರ ಹಂಗಿಲ್ಲ.
ಭವಗೆಟ್ಟನಾಗಿ ದೈವದ ಹಂಗಿಲ್ಲ.
ಸತ್ಯಜ್ಞಾನಾನಂದವೆ ತಾನಾಗಿ ಇನ್ನಾರ ಹಂಗಿಲ್ಲ.
ಇನ್ನಾರ ಹಂಗಿಲ್ಲದಾತ ಗುಹೇಶ್ವರಲ್ಲಯ್ಯನೊಬ್ಬನೆ !/1108
ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಪ್ಪುದು,
ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು ನೋಡಾ.
ಮುನ್ನ ಮುನ್ನವೆ,
ಅಚ್ಚೊತ್ತಿದ ಭಾಗ್ಯ ಎನ್ನ ಕಣ್ಣ ಮುಂದೆ ಕಾಣಬಂದಿತ್ತು ನೋಡಾ !
ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡಬಳಿಕ,
ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ ?/1109
ಪೂಜಿಸಿ ಕೆಳಯಿಂಕಿಳುಹಲದೇನೊ ?
ಅನಾಹತ ಪೂಜೆಯ ಮಾಡಲದೇನೊ ?
ದೇಹವೆ ಪೀಠಿಕೆ, ಜೀವವೆ ಲಿಂಗ ಗುಹೇಶ್ವರಾ./1110
ಪೂಜಿಸಿ ಕೆಳಯಿಂಕೆ ಇಳುಹಲದೇನೊ?
ಅನಾಗತ (ಅನಾಯತ?) ಪೂಜೆಯ ಮಾಡಲದೇನೊ?
ದೇಹವೆ ಪಿಂಡಿಗೆ, ಜೀವವೆ ಲಿಂಗ-ಗುಹೇಶ್ವರಾ./1111
ಪೂಜೆಯಾಯಿತ್ತದೇನೊ ? ಪೂಜೆಯ ಮೇಲೆ ಸಿಂಹಾಸನವಿದೇನೊ ?
ಧೂಪ ದೀಪ ನಿವಾಳಿ ಇದೇನೊ ?
ತಳದಲ್ಲಿ ಜ್ಯೋತಿ ಮೇಲೆ ಪ್ರಣತೆ !
ಕಳಸದ ಮೇಲಣ ನೆಲಗಟ್ಟು ಕಂಡು
ನೋಡಿ ಬೆರಗಾದೆ ಗುಹೇಶ್ವರಾ !/1112
ಪೂರಾಯ ಗಾಯ ತಾಗಿ ನೊಂದೆನೆಂದರಿಯೆನಯ್ಯಾ,
ಇದ್ದೆನೆಂದರಿಯೆನಯ್ಯಾ, ಸತ್ತೆನೆಂದರಿಯೆನಯ್ಯಾ,
ಕಾಯ ಪಲ್ಲಟವಾಯಿತ್ತು ಗುಹೇಶ್ವರಲಿಂಗ ಸ್ವಾಯತವಾಗಿ./1113
ಪೂರ್ವಗುಣವನೆಲ್ಲ ಅಳಿದು ಪುನರ್ಜಾತನಾದ ಬಳಿಕ
ಗುರುವಿನ ಕರಸ್ಥಲದಲ್ಲಿ ಉತ್ಪತ್ತಿ ಸದ್ಭಕ್ತರಲ್ಲಿ ಸ್ಥಿತಿ ಲಿಂಗದಲ್ಲಿ ಲಯ-
ಇಂತೀ ನಿರ್ಣಯವನರಿಯದೆ;
ಶೀಲವಂತರ ಶೀಲ ತಪ್ಪಿದಡೆ ಹೇಳಬಹುದೆ ? ಹೇಳಬಾರದು.
ಸೂಳೆ ಮುತ್ತು ಗೊರವಿತಿಯಾದಂತೆ, ಬಂಟ ಮುತ್ತು ಬಾಗಿಲಕಾಯ್ದಂತೆ,
ನರಿ ಮುತ್ತು ಬಳ್ಳಾದಂತೆ, ಹಾವು ಮುತ್ತು ಸಿಂಗಿಯಾದಂತೆ !
ಎಲ್ಲ ದೇವರಿಗೆ ಮಸ್ತಕ ಪೂಜೆ ಜಂಗಮದೇವರಿಗೆ ಪಾದಪೂಜೆ.
ಪಾದೋದಕ ಪ್ರಸಾದವ ಕೊಡುವ ಜಂಗಮದೇವರು,
ಕಂಠಪಾವಡ ಧೂಳಪಾವಡ ಸರ್ವಾಂಗಪಾವಡ ಶೀಲಸಂಬಂಧವೆಂದಡೆ
ಕೇಸರಿ ಶುನಕನಾದಂತೆ ಕಾಣಾ ಗುಹೇಶ್ವರಾ. /1114
ಪೂರ್ವಬೀಜವು ಬ್ರಹ್ಮಚರ್ಯವೆ ? ಅರಿವು ತಾ ಬ್ರಹ್ಮಚರ್ಯವೆ ?
ಜ್ಞಾನಾಜ್ಞಾನದುದಯ ತಾ ಬ್ರಹ್ಮಚರ್ಯವೆ ?
ಗುಹೇಶ್ವರಾ ನಿಮ್ಮ ಶರಣರ ಪರಿಣಾಮವೆ ಬ್ರಹ್ಮಚರ್ಯವು./1115
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕ,
ಮನೋಬುದ್ಧಿ ಚಿತ್ತ ಅಹಂಕಾರ ಚತುಷ್ಟಯ ಕರಣಂಗಳು,
ಸತ್ವ ರಜ ತಮದಲ್ಲಿ-ಆತ್ಮನ ಎತ್ತಲೆಂದರಿಯರು!
ಇದನರಿದಡೆ; ಸಮತೆ ಸದಾಚಾರ ಆಶ್ರಮಸ್ಥಾನಕ
ಸಹಸ್ರದಳಕಮಲದಲ್ಲಿ ಗುಹೇಶ್ವರಲಿಂಗವು./1116
ಪೃಥ್ವಿ ಅಪ್ಪು ತೇಜ ವಾಯು ಆಕಾಶದ ಕೊನೆಯ ಮೊನೆಯ ಮೇಲೆ,
ಇಪ್ಪತ್ತೈದು ಗ್ರಾಮಂಗಳು, ಚೌಷಷ್ಟಿ ಪಟ್ಟಣ.
ಛಪ್ಪನ್ನ ವೀಥಿಗಳ ದಾಂಟಿ, ಛತ್ತೀಸ ಪುರದ ರಚನೆಯ ನೋಡಬಲ್ಲೆವೆಂಬರು,
ತ್ರಿಕೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ,
ಶಾಸನದ ಲಿಪಿಯಂ ತಿಳಿಯಲೋದಿ,
ಎಂಬತ್ತುನಾಲ್ಕುಲಕ್ಷ ದ್ವಾರದೊಳಗೆ ಹೊಕ್ಕು ಹೊರವಡುವ ಜೀವನ
ತಿಳಿಯಲರಿಯದೆ ದಕ್ಷಿಣದ್ವಾರದಿಂದ ಉತ್ತರದ್ವಾರಕ್ಕೆ ಬಂದು,
ಪಶ್ಚಿಮವಾಯುವ ಕೊನೆಯ ಮೊನೆಯ ಮೇಲೆ ಬೆಳಗುವ ಜ್ಯೋತಿಯ
ನಿಮ್ಮ ಶರಣರಲ್ಲದೆ, ಲೋಕದ ಅಜ್ಞಾನಿಗಳೆತ್ತ ಬಲ್ಲರು ಗುಹೇಶ್ವರಾ ?/1117
ಪೃಥ್ವಿ ಅಪ್ಪು ತೇಜ ವಾಯು ಆಕಾಶದಲ್ಲಿ
ಬೆಳೆಯುತ್ತಿದ್ದಡೇನು ನೋಡಾ.
ಘನ ಘನವನರಿದೆನೆಂಬ ಮರುಳು ಮಾನವರ ನೋಡಾ.
ನಿರ್ಣಯವಿಲ್ಲದ ನಿರ್ವಿಕಾರ ಗುಹೇಶ್ವರನೆಂಬ ಮಹಾಘನವ
ತಿಳಿಯರು ನೋಡಾ !/1118
ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ ?
ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ ?
ತೇಜ ಜಡನೆಂದರಿದವಂಗೆ ಹೋಮ ಸಮಾದಿಗಳೇಕಯ್ಯಾ ?
ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ ?
ಆಕಾಶ ಜಡನೆಂದರಿದವಂಗೆ ಮಂತ್ರ(ತ್ರಾ ?)ರೂಡಿ ಏಕಯ್ಯಾ ?
ಇನಿತೂ ಜಡನೆಂದರಿದವಂಗೆ ವಿದಿ ಕಿಂಕರತೆ ಇಲ್ಲವಯ್ಯಾ ?
ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ./1119
ಪೃಥ್ವಿ ಹೋದತ್ತಲಿದೆ (ಹೊರುತ್ತಲಿದೆ ?) ಅಪ್ಪು ಉಲಿವುತ್ತಲಿದೆ,
ತೇಜ ಉರಿವುತ್ತಲಿದೆ, ವಾಯು ಹರಿಯುತ್ತಲಿದೆ,
ಆಕಾಶವಿಂಬುಗೊಡುತ್ತಲಿದೆ.
ಅಗಣಿತವಪ್ರಮಾಣವಾನಂದ ಗುಹೇಶ್ವರ ! /1120
ಪೃಥ್ವಿಕುಲಮಂಟಪದ ಮೇಲೆ ಪಾದ(ಪದ?)ಶಿಲೆ ಬಿಗಿದು,
ತಳಕಂಭ ಕಳಸದ ಮೇಲೆ ಕೆಸರುಗಲ್ಲು-
ಒಂದು ವಠಕ್ಕೆ ಒಂಬತ್ತು ತುಂಬಿಯ ಆಳಾಪ.
ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ !
ಅಂಗಜನ ಪಡೆ ಕೋಟಿ, ಮುಂಡವೆದ್ದು ಕುಣಿವಲ್ಲಿ,
ರಣವುಂಡ ಭೂಮಿಯನು ಮೀರಿದನು ಗುಹೇಶ್ವರಾ !/1121
ಪೃಥ್ವಿಗೆ ಹುಟ್ಟಿದ ಶಿಲೆ, ಕಲುಕಟಿಗಂಗೆ ಹುಟ್ಟಿದ ಮೂರುತಿ,
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ!
ಈ ಮೂವರಿಗೆ ಹುಟ್ಟಿದ ಮಗನ (ಮಗುವ?) ಲಿಂಗವೆಂದು ಕೈವಿಡಿವ,
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರಾ./1122
ಪೃಥ್ವಿಯ ಕಠಿಣವ ಕೆಡಿಸಿ,
ಅಪ್ಪುವಿನ ಕೈಕಾಲು ಮುರಿದು,
ಅಗ್ನಿಯ ಕಿವಿ ಮೂಗಂ ಕೊಯ್ದು,
ವಾಯುವಿನ ಶಿರವರಿದು,
ಆಕಾಶವ ಶೂಲದಲ್ಲಿಕ್ಕಿದ ಬಲ್ಲಿದ ತಳವಾರನೀತ ನೋಡಯ್ಯಾ.
ಒಂಬತ್ತು ಬಾಗಿಲ ಬೀಗಮಂ ಬಲಿದು
ಒಡನೆ ನವಸಹಸ್ರ ಮಂದಿಯ ಕೊಂದುಳಿದ ಗುಹೇಶ್ವರಾ ನಿಮ್ಮ ಶರಣ. /1123
ಪೃಥ್ವಿಯ ಪಾಷಾಣ ಪೃಥ್ವಿಯ ಮೇಲೆ ಬಿದ್ದುಹೋದಡೆ
ಪ್ರಾಣಲಿಂಗ ಹೋಯಿತ್ತು ಪ್ರಾಣಲಿಂಗ ಹೋಯಿತ್ತು ಎಂಬಿರಿ.
ಪ್ರಾಣಲಿಂಗ ಹೋದಡೆ ನೀವು ನುಡಿವ ಪರಿಯೆಂತು ?
ಅಂತರಂಗದಿ ಪ್ರಾಣಲಿಂಗಸಂಬಂಧದ ಸುದ್ದಿಯ (ಹೊಲಬ?) ನರಿಯರಾಗಿ,
ಗುಹೇಶ್ವರಾ, ನೀ ಮಾಡಿದ ಬೆಡಗು ಬಿನ್ನಾಣಕ್ಕೆ ನಾನು ಬೆರಗಾದೆನು ! /1124
ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ
ಅಪ್ಪುವಿನ ಪೂರ್ವಾಶ್ರಯವ ಕಳೆಯದನ್ನಕ್ಕ
ತೇಜದ ಪೂರ್ವಾಶ್ರಯವ ಕಳೆಯದನ್ನಕ್ಕ
ವಾಯುವಿನ ಪೂರ್ವಾಶ್ರಯವ ಕಳೆಯದನ್ನಕ್ಕ
ಆಕಾಶದ ಪೂರ್ವಾಶ್ರಯವ ಕಳೆಯದನ್ನಕ್ಕ
ಚಂದ್ರ ಸೂರ್ಯರ ಪೂರ್ವಾಶ್ರಯವ ಕಳೆಯದನ್ನಕ್ಕ
ಆತ್ಮನ ಪೂರ್ವಾಶ್ರಯವ ಕಳೆಯದನ್ನಕ್ಕ
ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ./1125
ಪೃಥ್ವಿಯ ಮೇಲೊಂದು ಪರಮಶಾಂತಿ ಎಂಬ ಪರ್ವತವ ಕಂಡೆ.
ಆ ಪರ್ವತದ ಮೇಲೆ ಪರಮಗುರು ಪರಿಯಾಯವಾಯಿತ್ತ ಕಂಡೆ.
ಆ ಪರಿಯಾಯ ಗುರು ಒಂದು ಕಥನದಿಂದ ದೃಷ್ಟಿ ತೆರೆಯಿತ್ತ ಕಂಡೆ.
ಆ ದೃಷ್ಟಿಯ ಬೆಳಗಿನಿಂದ ನೆತ್ತಿಯ ಕಲಶ ಪುಟದೋರುತ್ತ ನಡೆದು
ಸಸಿಯಾಯಿತ್ತ ಕಂಡೆ.
ಆ ಸಸಿಯ ಕೆಳಗಣ ಮೃತ್ತಿಕೆ,
ಭಕ್ತರಿಗೆ ಮೂರಾಯಿತ್ತ ಕಂಡೆ ಗುಹೇಶ್ವರಾ/1126
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ;
ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ.
ಅಗ್ನಿಯನತಿಗಳೆದ ಹೋಮ ಸಮಾದಿಗಳಿಲ್ಲ.
ವಾಯುವನತಿಗಳೆದ ನೇಮನಿತ್ಯಂಗಳಿಲ್ಲ.
ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ.
ಗುಹೇಶ್ವರನೆಂದರಿದವಂಗೆ ಇನ್ನಾವಂಗವೂ ಇಲ್ಲ./1127
ಪೃಥ್ವಿಯನತಿಗಳೆದು ಅಪ್ಪುವಿಲ್ಲ, ಅಪ್ಪುವನತಿಗಳೆದು ಅಗ್ನಿಯಿಲ್ಲ,
ಅಗ್ನಿಯನತಿಗಳೆದು ವಾಯುವಿಲ್ಲ, ವಾಯುವನತಿಗಳೆದು ಆಕಾಶವಿಲ್ಲ,
ಆಕಾಶವನತಿಗಳೆದು ನಾದವಿಲ್ಲ, ನಾದವನತಿಗಳೆದು ಬಿಂದುವಿಲ್ಲ,
ಬಿಂದುವನತಿಗಳೆದು ಕಳೆಯಿಲ್ಲ, ಕಳೆಯನತಿಗಳೆದು ಆತ್ಮನಿಲ್ಲ,
ಆತ್ಮವನತಿಗಳೆದು ಗುಹೇಶ್ವರನೆಂಬ ಲಿಂಗವಿಲ್ಲ./1128
ಪೃಥ್ವಿಯಲೊದಗಿದ ಘಟವು ಪೃಥ್ವಿಯಲಡಗಿದಡೆ
ಆ ಪೃಥ್ವಿಯ ಚರಿತ್ರವೆ ಚರಿತ್ರ ನೋಡಾ !
ಅಪ್ಪುವಿನಲೊದಗಿದ ಘಟವು ಅಪ್ಪುವಿನಲಡಗಿದಡೆ
ಆ ಅಪ್ಪುವಿನ ಚರಿತ್ರವೆ ಚರಿತ್ರ ನೋಡಾ !
ತೇಜದಲೊದಗಿದ ಘಟವು ತೇಜದಲಡಗಿದಡೆ
ಆ ತೇಜದ ಚರಿತ್ರವೆ ಚರಿತ್ರ ನೋಡಾ !
ವಾಯುವಿನಲೊದಗಿದ ಘಟವು ವಾಯುವಿನಲಡಗಿದಡೆ
ಆ ವಾಯುವಿನ ಚರಿತ್ರವೆ ಚರಿತ್ರ ನೋಡಾ !
ಆಕಾಶದಲೊದಗಿದ ಘಟವು ಆಕಾಶದಲಡಗಿದಡೆ
ಆ ಆಕಾಶದ ಚರಿತ್ರವೆ ಚರಿತ್ರ ನೋಡಾ !
ಗುಹೇಶ್ವರನೆಂಬ ಲಿಂಗದಲೊದಗಿದ ಘಟವು ಲಿಂಗದಲಡಗಿದಡೆ,
ಆ ಲಿಂಗದ ಚರಿತ್ರವೆ ಚರಿತ್ರ ನೋಡಾ./1129
ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ,
ಚತುರ್ದಶ ಭುವನಾದಿ ಭುವನಂಗಳೊಳಗೆಯೂ ಇಲ್ಲ.
ಹೊರಗೆಯೂ ಇಲ್ಲ-ಏನಾಯಿತ್ತೆಂದರಿಯೆನಯ್ಯಾ.
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ ಎಂದೂ ಇಲ್ಲ./1130
ಪೌರ್ಣಮಿ ಬಪ್ಪನ್ನಕ್ಕ,
ಬಾಯಿಬಂಧನದಲ್ಲಿದ್ದ ಚಕೋರನಂತಿದ್ದೆನಯ್ಯಾ.
ಉಣಲಾಗದೆಂಬ ಶಾಸ್ತ್ರವಿಡಿದು ಇದ್ದವನಲ್ಲ.
ಉಣಲಾಗದೆಂಬ ಶಾಸ್ತ್ರವುಂಟೆ ಲಿಂಗವಂತಂಗೆ ?
ಅಹೋರಾತ್ರಿ ಅಷ್ಟಭೋಗಂಗಳ ಲಿಂಗಕ್ಕೆ ಕೊಟ್ಟು ಕೊಳಬೇಕು.
ಮಾಡುವ ನೀಡುವ ನಿಜಭಕ್ತರಿಲ್ಲದ ಕಾರಣ, ಬಾಯ್ದೆರೆಯದಿದ್ದೆನು.
ಮಾಡಿಹೆ ನೀಡಿಹೆನೆಂಬ ಸಂತೋಷದ ಆಪ್ಯಾಯನ ಹಿರಿದಾಯಿತ್ತು.
ನೀಡಯ್ಯಾ ಸಂಗನಬಸವಣ್ಣಾ ಗುಹೇಶ್ವರಂಗೆ !/1131
ಪ್ರಕೃತಿಗುಣವುಳ್ಳನ್ನಕ್ಕರ ಭಕ್ತನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಉಳ್ಳನ್ನಕ್ಕರ ಶರಣನಲ್ಲ.
ಹಸಿವು ತೃಷೆ ನಿದ್ರೆ ವಿಷಯ ಉಳ್ಳನ್ನಕ್ಕರ ಪ್ರಸಾದಿಯಲ್ಲ.
ಆಚಾರದಲ್ಲಿ ಅನುಭಾವಿ ಪ್ರಸಾದದಲ್ಲಿ ಪರಿಣಾಮಿ,
ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣನೆಂಬ ಪ್ರಸಾದಿಗೆ
ನಮೋ ನಮೋ ಎಂಬೆನು./1132
ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?
`ಸ್ಯೋಹಂ’ ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳೆವೆ ನೋಡಾ ಗುಹೇಶ್ವರಾ. /1133
ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು,
ಪ್ರಣವಮಂತ್ರದರ್ಥವ ತಿಳಿದು ನೋಡಿರೆ.
ಪ್ರಣವ `ನಾಹಂ’ ಎಂದುದೆ ?
ಪ್ರಣವ `ಕ್ಯೋಹಂ’ ಎಂದುದೆ ?
ಪ್ರಣವ `ಸ್ಯೋಹಂ’ ಎಂದುದೆ ?
ಪ್ರಣವ `ಚಿದಹಂ’ ಎಂದುದೆ ?-ಎನ್ನದಾಗಿ,
ಪ್ರಣವ `ಭಗರ್ೊದೇವಸ್ಯ ದಿಮಹಿ’ ಎಂದುದು.
“ಸವಿತುಃ ಪದಮಂಗಃ ಸ್ಯಾತ್ ಭರ್ಗಸ್ತು ಲಿಂಗಮೇವ ಚ
ದಿಮಹಿ ಪದಮಿತ್ಯೇಷಾಂ ಗಾಯತ್ರ್ಯಾಂ ಲಿಂಗಸಂಬಂಧಃ ” -ಎಂದುದಾಗಿ
ಪ್ರಣವದರ್ಥ ತಾನೆ ನಿಮ್ಮ ಮಯವು ಗುಹೇಶ್ವರಾ./1134
ಪ್ರಣವಮಂತ್ರವ ಕರ್ಣದಲ್ಲಿ ಹೇಳಿ,
ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ,
ಪ್ರಾಣದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ಮಲ ಮೂತ್ರ ಮಾಂಸದ ಹೇಸಿಗೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿ ಇರಿಸಿ ನೆರೆಯ ಬಲ್ಲಡೆ,
ಆತನೆ ಪ್ರಾಣಲಿಂಗಸಂಬಂದಿ.
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು/1135
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು.
ಆ ಅನಿರ್ವಾಚ್ಯವಾಗಿದ್ದ ಪರವಸ್ತು
ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು !
ಆ ನಾಮವನೆಯ್ದಿ ಕುಳವಾಯಿತ್ತು,
ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು.
ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು.
ಅದೆಂತೆಂದಡೆ:
ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ,
ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ,
ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ,
ಚಿತ್ತದಿಂದಾಯಿತ್ತು ಅಹಂಕಾರ.
ಇಂತು-ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು.
ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು.
ಇದ ಕೆಡಿಸುವುದಕ್ಕೆ ಆರು ಸ್ಥಲವಾದವು.
ಅವಾವೆಂದಡೆ:
ಅಹಂಕಾರ ಅಡಗಿದಾಗ ಭಕ್ತಸ್ಥಲ,
ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ
ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ,
ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ,
ಜೀವನ ಗುಣ ಸಂದಾಗ ಶರಣ ಸ್ಥಲ
ಭಾವ ನಿರ್ಭಾವವಾದಾಗ ಐಕ್ಯಸ್ಥಲ.
ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು.
ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು.
ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು,
ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು.
ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು.
ಇಂತು-ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ:
ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ,
ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ,
ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು !
ಇಂತು-ಷಡಂಗವಡಗಿದ ಪರಿ ಎಂತೆಂದಡೆ: “ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ
ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ
ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ” –
ಎಂದುದಾಗಿ
ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ./1136
ಪ್ರಥಮದಲ್ಲಿ ವಸ್ತು ಏನೂ ಏನೂ ಇಲ್ಲದ
ಮಹಾಘನಶೂನ್ಯಬ್ರಹ್ಮವಾಗಿದ್ದಿತ್ತು.
ಅಂತಿರ್ದ ಪರವಸ್ತು ತಾನೆ, ತನ್ನ ಲೀಲೆಯಿಂದ, ತನ್ನ ದಿವ್ಯಾನಂದ
ಸ್ವಲೀಲಾ ಸ್ವಭಾವದಿಂದಾದುದು ಆತ್ಮನೆಂಬಂಗಸ್ಥಲ.
ಅಂತಾದ ಜೀವಾತ್ಮನೆಂಬ ಅಂಗಸ್ಥಲಕ್ಕೆ
ಸೇರಿದ ತತ್ವಂಗಳಿಪ್ಪತ್ತೈದು.
ಅವಾವುವಯ್ಯಾ ಎಂದಡೆ:
ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ವಾಗಾದಿ ಕಮರ್ೆಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು,
ಪ್ರಾಣಾದಿ ವಿಷಯಂಗಳೈದು,
ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು.-
ಅಂತು ಅಂಗ ತತ್ವಂಗಳಿಪ್ಪತ್ತೈದು.
ಇಂತು ಅಂಗತತ್ವ ಇಪ್ಪತ್ತೈದು ತನ್ನೊಳಗೆ ಸಮರಸತ್ವನೆಯ್ದಿಸಲೋಸುಗ,
ಭಕ್ತಿ ತದರ್ಥವಾಗಿ, ಆ ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು
ಹನ್ನೊಂದು ತತ್ವವಾಯಿತ್ತು.
ಇಂತೀ ಹನ್ನೊಂದು ತತ್ವದ ಪರಿಕ್ರಮವೆಂತೆಂದೊಡೆ:
ಶಾಂತ್ಯಾದಿ ಶಕ್ತಿಗಳೈದು,
ಶಿವಾದಿ ಸಾದಾಖ್ಯಗಳೈದು, ಪರಶಿವತತ್ವವೊಂದು.-
ಇಂತೀ ಲಿಂಗತತ್ತ್ವ ಹನ್ನೊಂದು.
ಆ ಅಂಗತತ್ತ್ವ ಲಿಂಗತತ್ತ್ವವೆಂಬ ಉಭಯತತ್ತ್ವ ಮೂವತ್ತಾರು.
ಇಂತಿವರ ಸಮರಸೈಕ್ಯವೆಂತುಂಟಯ್ಯಾ ಎಂದಡೆ:
ನಿವೃತ್ತಿಶಕ್ತಿಯನೈದಿ, ವಾಗಾದಿ ಕಮರ್ೆಂದ್ರಿಯಂಗಳೈದು
ಕರ್ಮ ಸಾದಾಖ್ಯವನೊಡಗೂಡಿದಲ್ಲಿ,
ಪೃಥ್ವಿ ತತ್ತ್ವ ಬಯಲಾಯಿತ್ತು.
ಪ್ರತಿಷ್ಠಾಶಕ್ತಿಯನೈದಿ, ಶಬ್ದಾದಿ ವಿಷಯಂಗಳೈದು
ಕರ್ತುಸಾದಾಖ್ಯವನೊಡಗೂಡಿದಲ್ಲಿ,
ಅಪ್ಪು ತತ್ತ್ವ ಬಯಲಾಯಿತ್ತು.
ವಿದ್ಯಾಶಕ್ತಿಯನೈದಿ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು
ಮೂರ್ತಿ ಸಾದಾಖ್ಯವನೊಡಗೂಡಿದಲ್ಲಿ,
ತೇಜತತ್ತ್ವ ಬಯಲಾಯಿತ್ತು.
ಶಾಂತಿಶಕ್ತಿಯನೈದಿ, ಪ್ರಾಣಾದಿವಾಯುಗಳೈದು
ಅಮೂರ್ತಿಸಾದಾಖ್ಯವನೊಡಗೂಡಿದಲ್ಲಿ,
ವಾಯುತತ್ತ್ವ ಬಯಲಾಯಿತ್ತು.
ಶಾಂತ್ಯತೀತ ಶಕ್ತಿಯನೈಯ್ದಿ,
ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು
ಶಿವಸಾದಾಖ್ಯವನೊಡಗೂಡಿದಲ್ಲಿ,
ಆಕಾಶತತ್ತ್ವ ಬಯಲಾಯಿತ್ತು.
ಇಂತೀ ಪಂಚವಿಂಶತಿತತ್ತ್ವಂಗಳು ಲಿಂಗೈಕ್ಯವಾಗಲೊಡನೆ,
ಲಿಂಗತತ್ತ್ವ ಹನ್ನೊಂದು ತಾವು ಒಂದೊಂದನೊಡಗೂಡಿ ಏಕಾರ್ಥವಾದಲ್ಲಿ,
ಕುಳಸ್ಥಲವಡಗಿತ್ತು.
ಇಂತು ಕುಳಸ್ಥಲ-ಸ್ಥಲಕುಳವಡಗಲೊಡನೆ,
ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು, ವಾರಿಕಲ್ಲು ಕರಗಿ ನೀರಾದಂತೆ
ತನ್ನ ಪರಮಾನಂದದಿಂದವೆ ಸರ್ವಶೂನ್ಯವಾಯಿತ್ತು.
ಅದೆಂತೆನಲು,
ಸಾಕ್ಷಿ:
ಅನಾದಿಸಿದ್ಧಸಂಸಾರಂ ಕರ್ತೃ ಕರ್ಮ ವಿವರ್ಜಯೇತ್
ಸ್ವಯಂಮೇವ ಭವೇದ್ದೇಹೀ ಸ್ವಯಂಮೇವ ವಿಲೀಯತೇ
ಅಂತಃ ಶೂನ್ಯಂ ಬಹಿಃ ಶೂನ್ಯಂ ಶೂನ್ಯಶೂನ್ಯಾ ದಿಶೋ ದಶ
ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ
-ಎಂದುದಾಗಿ, ಇಂತೀ ಅಂಗ ತತ್ತ ್ವವಿಪ್ಪತ್ತೈದು ಲಿಂಗತತ್ತ್ವ ಹನ್ನೊಂದು,
ಇಂತೀ ಉಭಯತತ್ತ್ವ ಏಕಾರ್ಥವಾಗಿ,
ಸರ್ವಶೂನ್ಯವನೆಯ್ದಿದ ಪರಿಕ್ರಮದ ನಿರ್ಣಯದ ಬೆಡಗು,
ತತ್ತ್ವಮಸ್ಯಾದಿ ವಾಕ್ಯಾರ್ಥಂಗಳಲ್ಲಿ ಕಾಣಲಾಯಿತ್ತು.-ಅದೆಂತೆಂದಡೆ:
ತತ್ಪದವೇ ಲಿಂಗ, ತ್ವಂ ಪದವೇ ಅಂಗ,
ಈ ಎರಡರ ಐಕ್ಯವೇ ಅಸಿ ಎಂದುದಾಗಿ .
ಇಂತು ಸಕಲನಾಗಬಲ್ಲ, ಸಕಲ ನಿಃಕಲನಾಗಬಲ್ಲ,
ಸಕಲ ನಿಃಕಲಾತೀತನಾಗಿ ಏನೂ ಏನೂ ಇಲ್ಲದ ಮಹಾ ಘನಶೂನ್ಯಬ್ರಹ್ಮವಾಗಿ
ಇರಬಲ್ಲನಯ್ಯಾ ನಮ್ಮ ಗುಹೇಶ್ವರಲಿಂಗವು ! /1137
ಪ್ರಸಾದಲಿಂಗ ಉಳ್ಳನ್ನಕ್ಕರ, ಪ್ರಾಣಲಿಂಗವೆಂಬ ವಾರ್ತೆ
ಭಂಗ ನೋಡಾ ಬಸವಣ್ಣಾ.
ಬೀದಿಯಲ್ಲಿ ಕೊಡನನೊಡೆದು
ಬಯಲನುಡುಗಿದಡೆ ಉಂಟೆ ಹೇಳಾ ?
ಗುಹೇಶ್ವರಲಿಂಗವ ಬೇರೆಮಾಡಿ ಅರಸಲುಂಟೆ ಬಸವಣ್ಣಾ ?/1138
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ
ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ.
ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಮತ್ತಾರನು ಕಾಣೆನಯ್ಯಾ. /1139
ಪ್ರಾಣ, ಲಿಂಗದಲ್ಲಿ ಸಮನಿಸದು; ಲಿಂಗ ಪ್ರಾಣದಲ್ಲಿ ಸಮನಿಸದು.
ಪ್ರಾಣ ಲಿಂಗ, ಲಿಂಗ ಪ್ರಾಣವೆಂಬುದು
ಸಂದು ಸಂಶಯವಲ್ಲದೆ ನಿಜವ ಕೇಳಾ.
ದಶಪ್ರಾಣವಳಿದು ಲಿಂಗವೆ ತಾನೆಂದರಿಯ ಬಲ್ಲಡೆ
ಅದೇ ಪ್ರಾಣಲಿಂಗ ಗುಹೇಶ್ವರಾ ! /1140
ಪ್ರಾಣಲಿಂಗ ಪರಾಪರವೆಂದರಿದು,
ಅಣು ರೇಣು ತೃಣ ಕಾಷ್ಠದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು,
ಇಂತು-ಕ್ಷಣವೇದಿ ಅಂತರಂಗವ ವೇದಿಸಲ್ಕೆ
ಅಗಣಿತ ಅಕ್ಷೇಶ್ವರ ತಾನೆಂದರಿದು
ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ,
ಗುಹೇಶ್ವರಾ ನಿಮ್ಮ ಶರಣನುಪಮಾತೀತನು./1141
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ.
ಹೂವಿಲ್ಲದ ಪರಿಮಳದ ಪೂಜೆ!
ಹೃದಯಕಮಳದಲ್ಲಿ `ಶಿವಶಿವಾ’ ಎಂಬ ಶಬ್ದ-
ಇದು, ಅದ್ವೈತ ಕಾಣಾ ಗುಹೇಶ್ವರಾ./1142
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು.
ಪ್ರಾಣ ಹೋದರೆ ಕಾಯ ಬಿದ್ದಿತ್ತು,
ಲಿಂಗ ಒಂದೆಸೆಯಾದಡೆ ಮನ ನಾಚಿತ್ತು.
ಗುಹೇಶ್ವರನೆನಲಿಲ್ಲದ ಘನವು./1143
ಪ್ರಾಣವ ಮಾರುವವರಿಂಗೆ ಪ್ರಾಣಲಿಂಗವೆಲ್ಲಿಯದೊ?
ಇಷ್ಟಲಿಂಗಪೂಜಕರೆಲ್ಲ ನೇಮವ ಮಾಡುತ್ತಿಪ್ಪರು.
ಸೂನೆಗಾರಂಗೆ ಪ್ರಸಾದವೆಲ್ಲಿಯದೊ ಗುಹೇಶ್ವರಾ./1144
ಪ್ರಾಯದ ಪಿಂಡಕ್ಕೆ, ಮಾಯದ ದೇವರಿಗೆ,
ವಾಯಕ್ಕೆ, ಕಾಯವ ಬಳಲಿಸದೆ ಪೂಜಿಸಿರೊ.
ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು,
ಸೂಜಿಯ ಪೋಣಿಸಿ ದಾರವ ಮರೆದಡೆ,
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ/1145
ಪ್ರಾರಬ್ಧವಂತೆ-
ನೊಸಲಬರಹವೆಂತು ಹೋಯಿತ್ತೆನಬಹುದು ?
ನೊಸಲಬರಹವಂತೆ-
ಹಸ್ತಮಸ್ತಕ ಸಂಯೋಗವೆಂತಾಯಿತ್ತು ?
ಪ್ರಳಯವಂತೆ-
ಪ್ರಾಣಲಿಂಗವೆಂತುಟು ಹೇಳಾ, ಗುಹೇಶ್ವರಾ. /1146
ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು.
`ಸ’ ಎಂಬಲ್ಲಿ ಸರ್ವಜ್ಞನಾದೆನು.
`ವ’ ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು.
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳಗುವ ಭೇದವನರಿದು
ಆನೂ ನೀನೂ `ಬಸವಾ’ `ಬಸವಾ’ `ಬಸವಾ’
ಎನುತಿರ್ದೆವಯ್ಯಾ ಗುಹೇಶ್ವರಾ./1147
ಬಂ(ಬಿಂ?)ದು ನಿಂದು ಮೊ(ಹೊ?)ಲೆನೀರ ಮಿಂದವರೆಲ್ಲರು
ಹೆಂಡತಿಯರಾಗಬಲ್ಲರೆ ?
ಬಂದು ನಿಂದು ಸುಳಿದು ಮಾಡುವರೆಲ್ಲರು
ಸಂಗನಬಸವಣ್ಣನಂತೆ ಗುಹೇಶ್ವರಲಿಂಗವ ಬಲ್ಲರೆ ?/1148
ಬಂದ ಬಟ್ಟೆಯ ನಿಂದು ನೋಡದೆ, ಬಂದ ಬಟ್ಟೆಯ ಕಂಡು ಸುಖಿಯಾದೆ.
ನಿಂದ ನಿಲುವ ಮುಂದುಗೆಡಿಸಿ, ನಿಂದನಿಲವ ಮುಂದುಗೊಂಡಿತ್ತು.
ತಂದೆ ಮಕ್ಕಳ ಗುಣ ಒಂದು ಭಾವದೊಳಡಗಿ,
ಸಂದಿಲ್ಲದ ಕಾಲೊಳಗೆ ಕೈ ಮೂಡಿತ್ತು.
ಒಂದೊಂದನೆ (ಒಂದನೆ ?) ಹಿಡಿದು ಒಂದೊಂದನೆ (ಒಂದನೆ ?) ಬಿಟ್ಟಡೆ-
ಇದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನಬಸವಣ್ಣಾ/1149
ಬಂದ ಬಟ್ಟೆಯ ನಿಂದು ನೋಡಲೊಲ್ಲೆ ಕಂದಾ,
ಅದೇನು ಸೋಜಿಗವೊ ? ಬಿಂದು ಛಂದವಲ್ಲ
ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ./1150
ಬಂದುದನತಿಗಳೆದು ಬಾರದುದ ಬಯಸೆನೆಂಬುದು
ಒಡಲ ಗುಣಧರ್ಮರಹಿತಂಗಲ್ಲದೆ,
ಒಡಲ ಗುಣಧರ್ಮ ಉಳ್ಳವಂಗೆ ಆಗದು ನೋಡಾ.
ಅದೆಂತೆಂದಡೆ:
ರಾಜಭಯ ಚೋರಭಯ ಮೃಗಭಯ ದೆಸೆಭಯ ಸ್ತ್ರೀಭಯ ಬಂದು ಸೋಂಕಿದಲ್ಲಿ
ಹೆಚ್ಚು ಕುಂದಿಲ್ಲದೆ ಒಂದೆ ಸಮವಾಗಿ ಕಾಣಬೇಕು.
ಕ್ಷೀರ ಘೃತ ನವರತ್ನ ಆಭರಣ ಮನೆ ಮಂಚ ಹಸು ಧನ ವನಿತೆಯರ ಭೋಗಂಗಳು,
ಲಿಂಗದಾಣತಿಯಿಂದ ಬಂದವೆಂದು,
ಬಿಡದೆ ಭೋಗಿಸುವ ಅಣ್ಣಗಳು ನೀವು ಕೇಳಿರೊ,
ಮದಸೊಕ್ಕಿದಾನೆ ಪೆಬರ್ುಲಿ ಕಾಳೋರಗ ಮಹಾಜ್ವಾಲೆ
ಅಪ್ರಯತ್ನದಿಂದ ಬಂದು ಸಂದಿಸೆ,
ಸಂದು ಸಂಶಯವಿಲ್ಲದೆ `ಲಿಂಗದಾಣತಿ’ ಎನ್ನದಿದ್ದಡೆ
ಸ್ವಯವಚನ ವಿರುದ್ಧ ನೋಡಾ.
ಇದು ಜೀವಜಾಲಂಗಳ ಉಪಾದಿಕೆಯಲ್ಲದೆ ನಿರುಪಾದಿಕೆಯಲ್ಲ.
ಪೇಯಾಪೇಯವನರಿದು ಭೋಗಿಸಬೇಕು.
ಭಯ ಲಜ್ಜೆ ಮೋಹ ಉಳ್ಳನ್ನಕ್ಕರ ಎಂತಪ್ಪುದೊ ?
ಇದು ಕಾರಣ-ಅಂಗಕ್ಕಾಚಾರ, ಭಾವಕ್ಕೆ ಕೇವಲ ಜ್ಞಾನ.
ಬಂದಿತ್ತು ಬಾರದು ಎಂಬ ತಥ್ಯಮಿಥ್ಯ ರಾಗದ್ವೇಷವನಳಿದು
ತನ್ನ ನಿಜದಲ್ಲಿ ತಾನೆ ಪರಿಣಾಮಿಯಾಗಿಪ್ಪ[ನು]
ಗುಹೇಶ್ವರಾ ನಿಮ್ಮ ಶರಣ./1151
ಬಂದುದನೆಲ್ಲವ ನುಂಗಿ, ಬಾರದುದನೆಲ್ಲವ ನುಂಗಿ,
ಆರಿಗಿಲ್ಲದ ಅವಸ್ಥೆ ಎನಗಾಯಿತ್ತು.
ಆ ಅವಸ್ಥೆ ಅರತು ನೀನು, ನಾನೆಂದರಿದೆ ಗುಹೇಶ್ವರಾ./1152
ಬಂದೂ ಬಾರದು ಹೊಂದಿಯೂ ಹೊಂದದು,
ನಿಂದೂ ನಿಲ್ಲದ ಪರಿಯ ನೋಡಾ !
ಬಿಂದು ನಾದವ ನುಂಗಿತ್ತು, ಮತ್ತೊಂದದಿಕವುಂಟೆ?
ನವಖಂಡ ಪೃಥ್ವಿಯನೊಳಕೊಂಡ ಅಗಮ್ಯ ಸನ್ಮತ ಸುಖವಿರಲು
ಗುಹೇಶ್ವರನ ಬೇರೆ ಅರಿಯ(ಅರಸ?)ಲುಂಟೆ?/1153
ಬಟ್ಟಬಯಲ ಮಹಾಮನೆಯೊಳಗೊಂದು
ಹುಟ್ಟದ ಹೊಂದದ ಶಿಶುವ ಕಂಡೆ.
ಮುಟ್ಟಿ ಪೂಜಿಸಹೋದಡೆ
ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು
ಮುಟ್ಟಲಿಲ್ಲ ನೋಡಲಿಲ್ಲ, ಪೂಜೆಗೆ ಕಟ್ಟಳೆ ಮುನ್ನಿಲ್ಲ.
ಗುಹೇಶ್ವರ ಬಯಲು ! /1154
ಬಟ್ಟೆಗೊಂಡು ಹೋಗುತ್ತೊಂದ ಕೊಟ್ಟುಹೋದರೆಮ್ಮವರು.
ಎಲ್ಲಿಯದು ಲಿಂಗ ಎಲ್ಲಿಯದು ಜಂಗಮ ?
ಎಲ್ಲಿಯದು ಪಾದೋದಕ ಪ್ರಸಾದವಯ್ಯಾ ?
ಅಲ್ಲದವರೊಡನಾಡಿ ಎಲ್ಲರೂ ಮುಂದುಗೆಟ್ಟರಯ್ಯಾ.
ಅನು ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ./1155
ಬಟ್ಟೆಯ ಬಡಿವ ಕಳ್ಳಂಗೆ, ಬೇಹು ಸಂದು ಕಳವು ದೊರಕಿದಂತಾಯಿತ್ತು.
ಕುರುಡನು ಎಡಹುತ್ತ ತಡಹಿ ಹಿಡಿದು ಕಂಡಂತಾಯಿತ್ತು.
ನಿರ್ಧನಿಕ ಧನದ ಬಯಕೆಯಲ್ಲಿ ನಡೆವುತ್ತ ಎಡಹಿದ ಕಲ್ಲು
ಪರುಷವಾದಂತಾಯಿತ್ತು.
ಅರಸುವಂಗೆ ಅರಿಕೆ ತಾನಾದಂತಾಯಿತ್ತು.
ಎಲೆ ಗುಹೇಶ್ವರಾ ನೀನು ಎನಗೆ ದೊರಕುವುದೆಂಬುದು,
ನಾ ಮುನ್ನ ಮಾಡಿದ ಸುಕೃತದ ಫಲ ! ಏನ ಬಣ್ಣಿಪೆ ಹೇಳಾ ?/1156
ಬಣ್ಣವುಂಡ ಚಿನ್ನದಂತೆ, ಬೆಣ್ಣೆ ಉಂಡ ಘೃತದಂತೆ,
ಪ(ಸ್ವ?)ರವುಂಡ ಶಬ್ದದಂತೆ, ಪರಿಮಳವುಳ್ಳ ಪುಷ್ಪದಂತೆ,
ಗುಹೇಶ್ವರಲಿಂಗದಲ್ಲಿ ಹೊರೆಯಿಲ್ಲದಿರ್ಪ ಸಂಗನಬಸವಣ್ಣನ
ಭಕ್ತಿಯಾಚಾರದ ಮಹಾತ್ಮೆಯೆಂತು ಪೇಳಾ ಮಡಿವಾಳ ಮಾಚಯ್ಯಾ./1157
ಬತ್ತೀಸಾಯುಧವನು ಅನಂತ ದಿನ ಸಾದಿಸಿ ಪಿಡಿದರೂ
ಕಾದುವುದು ಒಂದೇ ಕೈದು ಒಂದೇ ದಿನ.
ಆ ಹಾಂಗೆ-ಫಲ ಹಲವಾದಡೂ
ಅರಿವುದೊಂದೇ ಮನ, ಒಂದೇ ಲಿಂಗ !
ಆ ಮನವು ಆಲಿಂಗದ ನೆಲೆಯಲ್ಲಿ ನಿಂದು ಸ್ಥಲಲೇಪವಾದ ಮತ್ತೆ
ಸ್ಥಲವಿಲ್ಲ ನಿಃಸ್ಥಲವಿಲ್ಲ, ನಿಜ ನೀನೇ ಗುಹೇಶ್ವರಾ./1158
ಬಯಕೆ ಎಂಬುದು ದೂರದ ಕೂಟ,
`ಬಯಸೆ’ ಎಂಬುದು ಕೂಟದ ಸಂದು.
ಈ ಉಭಯವೂ ಕಪಟ ಕನ್ನಡವಲ್ಲದೆ ಸಹಜವಲ್ಲ.
ಕೂಡಿ ಕಂಡ ಪರಿಯೆಂತು ಹೇಳಾ ಇನ್ನು ಲಿಂಗೈಕ್ಯವನು ?
ಕೂಪಠಾವಿನಲ್ಲಿ ಪರವಶವಾದೆನೆಂಬ ಮಾತ ಮೆಚ್ಚುವನೆ
ನಮ್ಮ ಗುಹೇಶ್ವರಲಿಂಗ ?/1159
ಬಯಲ ಪೀಠದಲ್ಲಿ ನಿರ್ವಯಲ ಕಂಡಿಹೆನೆಂದಡೆ,-
`ಅತ್ಯತಿಷ್ಠದ್ದಶಾಂಗುಲ’ ಎಂಬ ಶ್ರುತಿಯ ನೋಡಲು,
ಮತ್ತೆ `ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ‘
ಎಂಬುದ ವಿಚಾರಿಸಿ ನೋಡೆ
ಸ್ಥಾನಮಾನಕ್ಕೆ ಬಂದಿತೆಂಬ ಶ್ರುತಿಯುಂಟೆ ?
ಕಾಯದ ಜೀವದ ಹೊಲಿಗೆಯ ಬಿಚ್ಚಿ, ನಾದ ಬಿಂದುವಂ ತಿಳಿದು
ಪರಿಪೂರ್ಣ ಜ್ಞಾನಿಯಾಗಿ, ಪರಿಪೂರ್ಣಶಿವನನೊಳಕೊಳ್ಳಬಲ್ಲ ಶರಣನೆ,
ಗುಹೇಶ್ವರಲಿಂಗದಲ್ಲಿ ಸಹಜ ಶಿವಯೋಗಿ ಕಾಣಾ ಸಿದ್ಧರಾಮಯ್ಯಾ./1160
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ !
ಕಾಣೆನೆಂಬ ನುಡಿಗೆಡೆಯ ಕಾಣೆ !
ಕುರುಹುಗೆಟ್ಟು ಅರಿವ ನೆರೆಯರಿದು
ಬೆರಸಿದೆನೆಂಬ ಬರುನುಡಿಯ ನುಡಿಗೆ
ನಾಚಿದೆನಯ್ಯಾ ಗುಹೇಶ್ವರಾ/1161
ಬಯಲ ಮೂರ್ತಿಗೊಳಿಸಿದನೊಬ್ಬ ಶರಣ.
ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ.
ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ.
ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ.
ಆ ಲಿಂಗವನೆ ಸರ್ವಾಂಗದಲ್ಲಿ ವೇದಿಸಿಕೊಂಡನೊಬ್ಬ ಶರಣ.
ಆ ಸರ್ವಾಂಗವನೆ ನಿರ್ವಾಣಸಮಾದಿಯಲ್ಲಿ ನಿಲಿಸಿದನೊಬ್ಬ ಶರಣ.
ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ,
ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು
ಶರಣೆಂದು ಬದುಕಿದೆನು/1162
ಬಯಲಿಂಗೆ ಕಡೆಯಿಲ್ಲ ಮರುತಂಗೆ ತಡೆಯಿಲ್ಲ.
ರುಚಿಗೆ ಖಂಡಿತವಿಲ್ಲ ಸುಖಕ್ಕೊಗಡಿಕೆಯಿಲ್ಲ.
ಸುಖವೆ ಪರಬ್ರಹ್ಮಾನಂದವಾಗಿ ಶೂನ್ಯತೃಪ್ತಿಗೆ ಸೂತಕವಿಲ್ಲ !
ಸಾಕಾರಕ್ಕೆ ಸತ್ಕ್ರಿಯೆಯಿಂದರ್ಪಿಸಬೇಕು.
ಅದೆಂತೆಂದಡೆ:
ಲೋಹದ ಸಂಗದಿಂದ ಅಗ್ನಿ ಬಡಿವಡೆದಂತೆ
ರೂಪುಗೂಡಿದ ರುಚಿಯ ಸತ್ಕ್ರಿಯೆಯಿಂದರ್ಪಿಸಬೇಕು
ನಮ್ಮ ಗುಹೇಶ್ವರಲಿಂಗದಲ್ಲಿ ಸಂದು ಸಂಶಯವಿಲ್ಲದೆ. /1163
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ. /1164
ಬಯಸಿ ಬಂದುದು ಅಂಗಭೋಗ
ಬಯಸದೇ ಬಂದುದು ಲಿಂಗಭೋಗವೆಂದು ವಚನವನೋದಿ,
ಕಾರ್ಯಕ್ಕಾಗಿ ಬಂದ ವೇಷಧಾರಿಗಳ ಕಂಡು ಹಿಗ್ಗಿ ಹಾರೈಸಿ
ಅನ್ನದಾಶೆಯಿಂದ ಒಪ್ಪುಗೊಳಿಸಿ ಬಯಸಿ ಬಾಯಾರಿ ಬಳಲಬಾರದೆಂದು,
ಗೋಳಿಟ್ಟು, ಬಗುಳಾಡಿ, ಅನ್ನ ಅಶನೋಪಜೀವಿ
ಶೇಷ ಭೋಗಂಗಳಿಗೆ ಕಕ್ಕುಳ ಕುದಿದು ಬಿಕ್ಕನೆ ಬಿರಿದು
ಮತ್ತೆ ಲಿಂಗಾಣತಿಯೆಂಬ ವೇಷಧಾರಿಗಳಿಗೆ
ಅಘೋರನರಕ ತಪ್ಪದು ಗುಹೇಶ್ವರಾ./1165
ಬಯಸುವ ಬಯಕೆ ನೀನಾದ ಪರಿಯೆಂತು ಹೇಳಾ ?
ಅರಸುವ ಅರ(ರಿ?)ಕೆ ನೀನಾದ ಪರಿಯೆಂತು ಹೇಳಾ ?
ಕಾಯವೆ ಲಿಂಗ ಪ್ರಾಣವೆ ಜಂಗಮವಾದ ಶರಣಂಗೆ
ಬೇರೆ ದೇವಾಲಯ ಮಾಡಿಸಲೇಕೆ ಹೇಳಾ ?
ಗುಹೇಶ್ವರಲಿಂಗವು ಸಾಧ್ಯವಾಯಿತ್ತೆಂಬುದ ಮಾತಿನಲ್ಲಿ ಕಂಡೆನಲ್ಲದೆ,
ಕಾರ್ಯದಲ್ಲಿ ಕಾಣೆ ನೋಡಾ ಸಿದ್ಧರಾಮಯ್ಯಾ./1166
ಬರಿಯ ನಚ್ಚಿನ ಮಚ್ಚಿನ ಭಕ್ತರು,
ಲಿಂಗವ ಮುಟ್ಟಿಯೂ ಮುಟ್ಟದ ಒಳಲೊಟ್ಟಿಗಳು,
ನೆರೆದು ಗಳಹುತ್ತಿಪ್ಪರು,
ತಮ ತಮಗೆ ಅನುಭಾವವ ನುಡಿವರು.
ಅನುಭಾವದ ಆಯತವನರಿಯದಿರ್ದರೆ ಹಿಂದಣ ಅನುಭಾವಿಗಳು?
ಗುಹೇಶ್ವರಲಿಂಗದ ಸುಖವನು ಮುಟ್ಟಿದರೆ,
ಮರಳಿ ಭವಕಲ್ಪಿತವೆಲ್ಲಿಯದೊ?/1167
ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು
ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು
ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾಯಿತ್ತು.
ಅಶನ, ವ್ಯಸನ, ಹಸಿವು, ತೃಷೆ, ನಿದ್ರೆ ಇಚ್ಛೆಗೆ
ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ !
ಅನಂತ ಮೇಳಾಪದಚ್ಚಗೋಷ್ಠಿಯ
ಭಂಡರೆಲ್ಲ ಇನ್ನು ಬಲ್ಲರೆ, ಹೇಳಿರೆ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಚ್ಛೆಗೆ
ಹರಿದಾಡುವ ಹಂದಿಗಳೆಲ್ಲ
ನಾಯನೊಡನಾಡಿದ ಕಂದನಂತಾಯಿತ್ತು ಗುಹೇಶ್ವರಾ. /1168
ಬಲ್ಲತನವನೇರಿಸಿಕೊಂಡು ಅಲ್ಲದಾಟವನಾಡಿದಡೆ
ಬಲ್ಲತನಕ್ಕೆ ಭಂಗವಾಯಿತ್ತು.
ವ್ಯಸನದಿಚ್ಛೆಗೆ ಹರಿದಾಡುವವರು ಬಲ್ಲಡೆ ಹೇಳಿರೆ ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿಚ್ಛೆಗೆ ಹರಿದು
ಹಂದಿಯೊಡನಾಡಿದ ಕಂದಿನಂತಾದರು.
ಇನ್ನು ಬಲ್ಲರೆ ಗುಹೇಶ್ವರಾ ಮಾಯಾಮುಖರು ನಿಮ್ಮನು ?/1169
ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು ಬಲ್ಲರಯ್ಯಾ ?
ಅರಿವು ಸಾಮಾನ್ಯವೆ ?
ಅರಿಯದುದನಾರಿಗೂ ಅರಿಯಬಾರದು
ಗುಹೇಶ್ವರನೆಂಬ ಲಿಂಗವನರಿಯದಡೆರಡು, ಅರಿದೊಡೊಂದೇ /1170
ಬಲ್ಲೆನು, ಒಲ್ಲೆ ಮರ್ತ್ಯದ ಹಂಗ,
ಹಿಂದಣ ಮರವೆಯಿಂದ ಬಂದು ನೊಂದೆ, ಸಾಕು.
ಇನ್ನು ಅರಿದೆ, ತ್ರಿವಿಧಪಾಶವ ಹರಿದೆ.
ಗುಹೇಶ್ವರಾ, ಇನ್ನು ಮರ್ತ್ಯದ ಸುಖವ ಮನದಲ್ಲಿ ನೆನೆದೆನಾದಡೆ
ನಿಮ್ಮಾಣೆ ನಿಮ್ಮ ರಾಣಿವಾಸದಾಣೆಯಯ್ಯಾ. /1171
ಬಸವಣ್ಣ ಎಂಬಲ್ಲಿ ಎನ್ನ ಕಾಯ ಬಯಲಾಯಿತ್ತು.
ಚನ್ನಬಸವಣ್ಣ ಎಂಬಲ್ಲಿ ಎನ್ನ ಪ್ರಾಣ ಬಯಲಾಯಿತ್ತು.
ಈ ಉಭಯಸ್ಥಲ ನಿರ್ಣಯದ ನಿಷ್ಪತ್ತಿ,
ಗುಹೇಶ್ವರಲಿಂಗ ಸಾಕ್ಷಿಯಾಗಿ ಚನ್ನಬಸವಣ್ಣನಿಂದ
ಸಾಧ್ಯವಾಯಿತ್ತು ಕಾಣಾ ಸಂಗನಬಸವಣ್ಣಾ. /1172
ಬಸವಣ್ಣ ನಿನ್ನ ಹೊಗಳತೆ ಅಂತಿರಲಿ, ಎನ್ನ ಹೊಗಳತೆ ಅಂತಿರಲಿ,
ಗುರುವಾಗಬಹುದು ಲಿಂಗವಾಗಬಹುದು ಜಂಗಮವಾಗಬಹುದು,
ಇಂತೀ ತ್ರಿವಿಧವೂ ಆಗಬಹುದು.
ನಿನ್ನ ಆಚಾರಕ್ಕೆ ಪ್ರಾಣವಾಗಿ, ಎನ್ನ ಜ್ಞಾನಕ್ಕೆ ಆಚಾರವಾಗಿ
ಈ ಉಭಯ ಸಂಗದ ಸುಖದ ಪ್ರಸನ್ನಕ್ಕೆ
ಪರಿಣಾಮಿಯಾಗಿ ಬಂದ ಘನಮಹಿಮನು
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನಾಗಬಾರದು ಕಾಣಾ
ಸಂಗನಬಸವಣ್ಣಾ. /1173
ಬಸವಣ್ಣನ ಉಂಗುಷ್ಠದಲ್ಲಿ,
ಅಷ್ಟಾಷಷ್ಟಿ ತೀರ್ಥಂಗಳ ಉದಕವ ಮೀರಿದ
ಮಹಾತೀರ್ಥದೊಟ್ಟಿಲ ಕಂಡೆನಯ್ಯಾ !
ಬಸವಣ್ಣನ ಆಧಾರ ಲಿಂಗ ನಾಬಿ ಪರಿಯಂತರವು
ಗುರುಸ್ವರೂಪದೊಟ್ಟಿಲ ಕಂಡೆನಯ್ಯಾ.
ಬಸವಣ್ಣನ ನಾಬಿ ಹೃದಯ ಪರಿಯಂತರವು
ಲಿಂಗಸ್ವರೂಪದೊಟ್ಟಿಲ ಕಂಡೆನಯ್ಯಾ.
ಬಸವಣ್ಣನಗಳ ಮುಖ ಭ್ರೂಮಧ್ಯ ಉನ್ಮನಿ
ಉತ್ತಮಾಂಗ ಪರಿಯಂತರವು
ಜಂಗಮಸ್ವರೂಪದೊಟ್ಟಿಲ ಕಂಡೆನಯ್ಯಾ.
ಬಸವಣ್ಣನ ವಿಶ್ವತೋಮುಖವನುಳ್ಳ ಶರೀರದೊಳಗೆ,
ಈ ಪರಿಯ ಕಂಡಾತನೆ ಭಕ್ತ,
ಜಂಗಮವೆಂಬೆನು ಕಾಣಾ ಗುಹೇಶ್ವರಾ./1174
ಬಸವಣ್ಣನೆ ಪ್ರಾಣಲಿಂಗವೆಂದು ಭಾವಿಸಿ,
ದೃಷ್ಟಿನಟ್ಟು ಸೈವೆರಗಾದುದ ಕಂಡೆ-ಕಲ್ಪಿಸಿ
ಮನ ನಟ್ಟು ನಿಬ್ಬೆರಗಾಯಿತ್ತಯ್ಯಾ !
ಗುಹೇಶ್ವರಾ ನಿಮ್ಮಲ್ಲಿ, ಸರ್ವನಿರ್ವಾಣಿ
ಸಂಗನಬಸವಣ್ಣನೆ ಎನ್ನ ಪ್ರಾಣಲಿಂಗವೆಂದರಿದು
ನೀನೆನ್ನ ಒಳಕೊಂಡ ಗುರುವೆಂದು ಕಂಡೆನಯ್ಯಾ
ನಿಮ್ಮ ಧರ್ಮ ನಿಮ್ಮ ಧರ್ಮ/1175
ಬಸವಣ್ಣಾ ನಿನಗೇಳು ಜನ್ಮ, ನನಗೆ ನಾಲ್ಕು ಜನ್ಮ,
ಚನ್ನಬಸವಣ್ಣಗೊಂದೆ ಜನ್ಮ.
ನೀನು ಗುರುವೆನಿಸಿಕೊಳಬೇಡ,
ನಾನು ಜಂಗಮವೆನಿಸಿಕೊಳಬೇಡ,
ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ
ನಮ್ಮ ಗುಹೇಶ್ವರ ಸಾಕ್ಷಿಯಾಗಿ
ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ. /1176
ಬಸವಣ್ಣಾ ನಿನ್ನ ಕಂಡು ಎನ್ನ ತನು ಬಯಲಾಯಿತ್ತು.
ಬಸವಣ್ಣಾ ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು.
ಬಸವಣ್ಣಾ ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು.
ಬಸವಣ್ಣಾ ನಿನ್ನ ಮಹಾನುಭಾವವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು.
ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಅಜಾತನೆಂಬುದ ನೆಲೆಮಾಡಿ
ಭವಪಾಶಂಗಳ ಹರಿದಿಪ್ಪೆಯಾಗಿ,
ನಿನ್ನ ಸಂಗದಿಂದಲಾನು ಬದುಕಿದೆನು !/1177
ಬಸಿರೊಳಗಣ ಕೂಸಿಂಗ ಬೇರೆ ಊಟ ಬೇರೆ ಮೀಹ ಉಂಟೆ ?
ಜ್ಞಾನವೆಂಬ ಗರ್ಭದೊಳಗೆ ಲಿಂಗವೆಂಬ ಶಿಶುವಿರಲು
ಬೇರೆ ಕೊಡುವ ಕೊಂಬ ಪರಿಯೆಂತೊ ?
ದೇಹದೊಳಗಿನ ಪ್ರಾಣವ ಬೇರೆ ಮಾಡಿ ಭೋಗಿಸಲುಂಟೆ ?
ಅನುಮಾನ ಅಳಿದು ಮಹದಲ್ಲಿ ಮನ ಮುಸುಕಿದ ಬಳಿಕ
ಬಿನ್ನವ ಮಾಡಲುಂಟೆ ಗುಹೇಶ್ವರಾ ? /1178
ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ
ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ !
ಪ್ರಥಮವಿಷಯವಿಂತಿರಲಿಕೆ, ಗುಹೇಶ್ವರ ಏಕೋ ಅದ್ವೈತ !/1179
ಬಾರದುದೆಲ್ಲವನು ಹಿಂಗಿ, ಬಂದುದನೆಲ್ಲವನು ನುಂಗಿ,
ಆರಿಗೂ ಇಲ್ಲದ ಅವಸ್ಥೆ ಎನಗಾಯಿತ್ತಯ್ಯಾ.
ಆ ಅವಸ್ಥೆಯರತು, ನಾನು ನೀನೆಂದಿದ್ದೆ ಕಾಣಾ ಗುಹೇಶ್ವರಯ್ಯಾ./1180
ಬಿಂದುವೆ ಪೀಠವಾಗಿ, ನಾದವೇ ಲಿಂಗವಾದಡೆ
ಅದು ಬಿನ್ನಲಿಂಗ ನೋಡಾ.
ಕಳೆ ಎಂಬ ಪೂಜೆ ನಿರ್ಮಾಲ್ಯವಾಗಿ,
ನಾದಬಿಂದುಕಳಾತೀತ ನೋಡಾ ಮಹಾಘನವು.
ಅಲ್ಲಿ ಇಲ್ಲಿ ಸಿಲುಕಿದ ಅಚಲವಪ್ಪ ನಿರಾಳವ
ಪ್ರಣವರೂಪೆಂದು ಹೆಸರಿಡಬಹುದೆ ?
ನಮ್ಮ ಗುಹೇಶ್ವರನ ನಿಲುವು `ನಿಶ್ಯಬ್ದಂ ಬ್ರಹ್ಮ ಉಚ್ಯತೇ’
ಎಂಬುದನರಿಯಾ ಸಿದ್ಧರಾಮಯ್ಯಾ ? /1181
ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ
ಸುಖಿಯಾಗಿ ನಿಂದವರಾರೊ ?
ಇದ, ಹೇಳಲೂ ಬಾರದು ಕೇಳಲೂ ಬಾರದು.
ಗುಹೇಶ್ವರಾ ನಿಮ್ಮ ಶರಣನು,
ಲಚ್ಚಣವಳಿಯದೆ ರಾಶಿಯನಳೆದನು/1182
ಬಿತ್ತಿ ಮೂರರ ಮೇಲೆ ಚಿತ್ರ ಬರೆಯಿತ್ತು;
ಪ್ರಥಮ ಬಿತ್ತಿಯ ಚಿತ್ರ ಚಿತ್ರದಂತೆ ಇದ್ದಿತ್ತು;
ಎರಡನೆಯ ಬಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು,
ಮೂರನೆಯ ಬಿತ್ತಿಯ ಚಿತ್ರ ಹೋಯಿತ್ತು ಮರಳಿ ಬಾರದು.
ಗುಹೇಶ್ವರಾ-ನಿಮ್ಮ ಶರಣ ತ್ರಿವಿಧದಿಂದತ್ತತ್ತಲೆ !/1183
ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ,
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು.
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು.
ಸುಳಿದು ಜಂಗಮವಾಗಲರಿಯದ, ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರನೇನೆಂಬೆ ಗುಹೇಶ್ವರಾ/1184
ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ.
ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ, ವಾಯುವೆ ಶಿವದಾರ,
ಬೆಳಗೆ ಸಿಂಹಾಸನ.
ಅತ್ತಲಿತ್ತ ಚಿತ್ತವ ಹರಿಯಲೀಯದೆ,
ಮಜ್ಜನಕ್ಕೆರೆದು ಸುಖಿಯಾದೆ ಗುಹೇಶ್ವರಾ. /1185
ಬಿಸುಜಂತೆ ಜವಳಿಗಂಭ !
ಲೇಸಾಯಿತ್ತು ಮನೆ, ಲೇಸಾಯಿತ್ತು ಮೇಲುವೊದಕೆ.
ಮಗುಳೆ ಆ ಲಿಂಗಕ್ಕೆ ಕಿಚ್ಚನಿಕ್ಕಿ ಸುಟ್ಟು,
ಮನೆಯನಿಂಬು ಮಾಡಿದ ಲಿಂಗಜಂಗಮಕ್ಕೆ.
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರಾ. /1186
ಬಿಳಿಯ ಮುಗಿಲ ನಡುವಣ ಕರಿಯನಕ್ಷತ್ರ ಮಧ್ಯದಲ್ಲಿ
ಉರಿಯ ಅಂಕುರ ಹುಟ್ಟಿ ಒಂದೆರಡೆಂಬಂತೆ ತೋರುತ್ತದೆ,
ಹೊಸ್ತಿಲ ಜ್ಯೋತಿಯಂತೆ ಒಳಹೊರಗೆ ಬೆಳಗುತ್ತದೆ.
ಅದು ನೋಡಿದಡೆ ಘನ, ನೋಡದಿದ್ದಡೆ ಸಹಜ.
ಈ ಭೇದವ ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣ ಬಲ್ಲನು.
ಬೆಸಗೊಂಬ ಬಾರಾ ಸಿದ್ಧರಾಮಯ್ಯಾ. /1187
ಬೀದಿಯಲ್ಲಿ ಬಿದ್ದ ಮಾಣಿಕ್ಯವು, ಹೂಳಿದ್ದ ನಿಧಾನವು,
ಆರಿಗೂ ಕಾಣಬಾರದು ನೋಡಾ !
ಮರಣ ಉಳ್ಳವರಿಗೆ ಮರುಜವಣಿ ಸಿಕ್ಕುವುದೆ ?
ಪಾಪಿಯ ಕಣ್ಣಿಂಗೆ ಪರುಷ ಕಲ್ಲಾಗಿಪ್ಪಂತೆ
ಇಪ್ಪರಯ್ಯಾ ಶಿವಶರಣರು.
ನಮ್ಮ ಗುಹೇಶ್ವರನ ಶರಣ ಮರುಳಶಂಕರದೇವರ
ನಿಲವ ನೋಡಾ ಸಂಗನಬಸವಣ್ಣಾ./1188
ಬೆಂಕಿ ಸುಡಬಲ್ಲಡೆ ಕಲ್ಲು ನೀರು ಮರಂಗಳಲ್ಲಡಗಬಲ್ಲುದೆ ?
ಅರಿವು ಶ್ರೇಷ್ಠವೆಂದಡೆ ಕುರುಹಿನಲ್ಲಡಗಿ
ಬೇರೊಂದೆಡೆಯುಂಟೆಂದು ನುಡಿವಾಗ ಅದೇತರಲ್ಲಿ ಒದಗಿದ ಅರಿವು ?
ಪಾಷಾಣದಲ್ಲಿ ಒದಗಿದ ಪ್ರಭೆಯಂತೆ,
ಆ ಪಾಷಾಣ ಒಡೆಯೆ ಆ ಪ್ರಭೆಗೆ ಕುರುಹುಂಟೆ ?
ಇಂತೀ ಲೇಸಪ್ಪ ಕುರುಹನರಿಯಬೇಕು ಕಾಣಾ,
ನಮ್ಮ ಗುಹೇಶ್ವರನುಳ್ಳನ್ನಕ್ಕ ಅಂಬಿಗರ ಚೌಡಯ್ಯ./1189
ಬೆಕ್ಕ ನುಂಗಿದ ಕೋಳಿ ಸತ್ತು ಕೂಗಿತ್ತ ಕಂಡೆ.
ಕರಿಯ ಕೋಗಿಲೆ ಬಂದು ರವಿಯ ನುಂಗಿತ್ತ ಕಂಡೆ.
(ಕರಿಯ ಕೋಗಿಲೆಯ ರವಿ ಬಂದು ನುಂಗಿತ್ತ ಕಂಡೆ ?).
ಸೆಜ್ಜೆ ಬೆಂದು ಶಿವದಾರ ಉಳಿಯಿತ್ತು.
ಪ್ರಾಣಲಿಂಗವೆಂಬ ಶಬ್ದ ವ್ರತಗೇಡಿಯಾಯಿತ್ತು
ನೀರ ಮೇಲಣ ಹೆಜ್ಜೆಯನಾರು ಬಲ್ಲವರಿಲ್ಲ.
ಗುಹೇಶ್ವರನೆಂಬ ಶಬ್ದ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ./1190
ಬೆಟ್ಟಕ್ಕೆ ಚಳಿಯಾದೊಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆ ಇದ್ದಡೆ ಏನ ನುಡಿಸುವರಯ್ಯಾ?
ಭಕ್ತನು ಭವಿಯಾದಡೆ ಅದೇನನುಪಮಿಸುವೆನಯ್ಯಾ ಗುಹೇಶ್ವರಾ ?/1191
ಬೆಣ್ಣೆಯ ಕಂದಲ ಕರಗಲಿಟ್ಟಡೆ
ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು !
ತುಂಬಿ ಇದ್ದಿತ್ತು ಪರಿಮಳವಿಲ್ಲ, ಪರಿಮಳವಿದ್ದಿತ್ತು ತುಂಬಿಯಿಲ್ಲ.
ತಾನಿದ್ದನು ತನ್ನ ಸ್ವರೂಪವಿಲ್ಲ; ಗುಹೇಶ್ವರನಿದ್ದನು ಲಿಂಗವಿಲ್ಲ/1192
ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು
ಎಲ್ಲಿ ಚುಂಬಿಸಿದಡೂ ಇನಿದಹುದು.
ಒಳ್ಳಿಹ ಬೇವಿನ ಹಣ್ಣ ಮೆಲ್ಲನೆ ಚುಂಬಿಸಿದಡೆ ಇನಿದಹುದೆ?
ಎಲ್ಲ ವಿದ್ಯೆಯನೂ ಬಲ್ಲೆವೆಂದೆಂಬರು,
ಅವರು ಅ(ಸ?)ಲ್ಲದೆ ಹೋದರಯ್ಯಾ ಗುಹೇಶ್ವರಾ./1193
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ,
ಆ ಬೆವಸಾಯದ ಘೋರವೇತಕ್ಕಯ್ಯಾ ?
ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕ್ಕಯ್ಯಾ ?
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ;
ಆ ಉಪದೇಶವ ಕೊಟ್ಟ ಗುರು,
ಕೊಂಡ ಶಿಷ್ಯ,- ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ,
ಗುಹೇಶ್ವರನೆಂಬವನತ್ತಲೆ ಹೋಗಲಿ./1194
ಬೆಳಗಪ್ಪ ಜಾವದಲ್ಲಿ ಲಿಂಗವ ಮುಟ್ಟಿ ಪೂಜಿಸಿ
ಪ್ರಾತಃಕಾಲದಲ್ಲಿ ಜಂಗಮದ ಮುಖದ ನೋಡಿದಡೆ,
ಹುಟ್ಟಿದೇಳು ಜನ್ಮದ ಪಾಪ ಹಿಂಗುವುದು.
ಅದೆಂತೆಂದಡೆ:
`ಸೂಯರ್ೊದಯವೇಲಾಯಾಂ ಯಃ ಕರೋತಿ ಶಿವಾರ್ಚನಂ
ಋಣತ್ರಯವಿನಿಮರ್ುಕ್ತೋ ಯಸ್ಯಾಂತೇ ಬ್ರಹ್ಮ ತತ್ಪದಂ ‘-ಎಂದುದಾಗಿ
ಇಂತಪ್ಪ ಸತ್ಕ್ರೀ ಇಲ್ಲದವರನೊಲ್ಲ ನಮ್ಮ ಗುಹೇಶ್ವರ./1195
ಬೆಳಗಿನೊಳಗಣ ಬೆಳಗ ಕಡೆದಡೆ ಮರಳಿ ಕೂಡಿತ್ತಲ್ಲಾ !
ಮೇರುವನೆ ಬೋನವ ಮಾಡಿ ಸವಿದ ಭಕ್ತರ ನೋಡಾ !
ಅಡಗನಾರೋಗಣೆಯ ಮಾಡಿದ ಲಿಂಗವ
ಕೊಡಗೂಸು ನುಂಗಿತ್ತ ಕಂಡೆ ಗುಹೇಶ್ವರಾ. /1196
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು,
ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ-ಆತ ಲಿಂಗಪ್ರಸಾದಿ !
ಜಾತಿ ಸೂತಕವಳಿದು ಶಂಕೆ ತಲೆದೋರದೆ,
ನಿಶ್ಶಂಕನಾಗಿ,- ಆತ ಸಮಯಪ್ರಸಾದಿ!
ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ-
ಬಸವಣ್ಣನೊಬ್ಬನೆ [ಅಚ್ಚ]ಪ್ರಸಾದಿ ! /1197
ಬೆಳಗಿನೊಳಗೊಂದು ಬೆಳಗು ದೊರೆಕೊಂಡಡೆ
ಮತ್ತೊಂದು ಬೆಳಗು ಮತ್ತೆಲ್ಲಿಯದೊ ?
ಘನದೊಳಗೊಂದು ಘನವು ದೊರೆಕೊಂಡಡೆ
ಮತ್ತೊಂದು ಘನವು ಮತ್ತೆಲ್ಲಿಯದೊ ?
ಸಮೀಪನ ಮೇಲೆ ಸಮೀಪ ದಾಳಿವರಿದನು.
ಗುಹೇಶ್ವರನ ಶರಣ ಚನ್ನಬಸವಣ್ಣನು !/1198
ಬೆಳಗು ಕತ್ತಲೆಯ ನುಂಗಿ, ಒಳಗೆ ತಾನೊಬ್ಬನೆಯಾಗಿ
ಕಾಬ ಕತ್ತಲೆಯ ಕಳೆದುಳಿದು
ನಿಮಗೆ ಆನು ಗುರಿಯಾದೆ ಗುಹೇಶ್ವರಾ./1199
ಬೆಳಗುವ ಜ್ಯೋತಿಯ ತಿರುಳಿನಂತೆ ಹೊಳೆವ ಕಂಗಳ ಕಾಂತಿ,
ಒಳಹೊರಗೆನ್ನದೆ ಅಳವಟ್ಟ ಶಿವಯೋಗಿಯ ಕಂಡೆ ನೋಡಾ !
ನಿಜ ಉಂಡ ನಿರ್ಮಲದ ಘನವ ಕಂಡು ಬೆರಗಾದೆ ನಾನು
ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನಿಂದ ಆನು ಬದುಕಿದೆನು./1200
ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತಿ
ಬೇಡುವನೆ(ದೆ?) ಲಿಂಗಜಂಗಮವು?
ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ
ಪ್ರಸಾದವಿಲ್ಲ-ಗುಹೇಶ್ವರಾ./1201
ಬೇಡುವೆನೆ ದೇವೇಂದ್ರನ ಪದವಿಯನಿನ್ನು ?
ಮೂಡುವ ಸೂರ್ಯನ ಪ್ರಭೆಯಂತೆ ಓಡದಿರು.
ಓಡದಿರು ಎನ್ನ ಮುಂದೆ ಮಾಣಿಕ್ಯದ ಬೆಳಗಿನಂತೆ.
ನೋಡು, ಮಾತಾಡು.
ಕೃತಕದ ಪರಿಯ (ಪದವಿಯ?) ಬೇಡುವ,
ಲಿಂಗವೆನ್ನಲಿದ್ದುದೆ ಗುಹೇಶ್ವರಾ ? /1202
ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ ಪುಷ್ಪ ಹುಟ್ಟಿ,
ರೂಹಿಲ್ಲದ ಅನಲನು ಅವಗ್ರಹಿಸಿತ್ತು ನೋಡಾ !
ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿ ಹುಟ್ಟಿತ್ತು ನೋಡಾ !
ಅತ್ತಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತ್ತಲ್ಲಾ !
ನಿತ್ಯಾನಂದಪರಿಪೂರ್ಣದ ನಿಲವಿನ,
ಅಮೃತಬಿಂದುವಿನ ರಸವ ದಣಿಯುಂಡು,
ಪಶ್ಚಿಮದಲ್ಲಿ ಗುಹೇಶ್ವರಲಿಂಗವ ಸ್ವೀಕರಿಸಿತ್ತಲ್ಲಾ./1203
ಬೋನದೊಳಗೊಂದು ಆನೆ ಇದ್ದಿತ್ತು.
ಬೋನ ಬೆಂದಿತ್ತು ಆನೆ ಬದುಕಿತ್ತು-ಇದೇನು ಸೋಜಿಗವಯ್ಯಾ ?
ದೇವ ಸತ್ತ, ದೇವಿ ಕೆಟ್ಟಳು !
ಆನು ಬದುಕಿದೆನು ಗುಹೇಶ್ವರಾ./1204
ಬ್ರಹ್ಮ ಘನವೆಂದಡೆ ಬ್ರಹ್ಮನ ನುಂಗಿತ್ತು ಮಾಯೆ
ವಿಷ್ಣು ಘನವೆಂದಡೆ ವಿಷ್ಣುವ ನುಂಗಿತ್ತು ಮಾಯೆ
ರುದ್ರ ಘನವೆಂದಡೆ ರುದ್ರನ ನುಂಗಿತ್ತು ಮಾಯೆ
ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ
ಸರ್ವವೂ ನಿನ್ನ ಮಾಯೆ !
ಒಬ್ಬರನ್ನೊಳಕೊಂಡಿತ್ತೆ ಹೇಳಾ ಗುಹೇಶ್ವರಾ ?/1205
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಸಂದಣಿ
ತಲೆದೋರದ ಮುನ್ನ-ಅಲ್ಲಿಂದತ್ತ ಬಯಲೆ ಸ್ವರೂಪವಾಯಿತ್ತು.
ಆ ಸ್ವರೂಪಿನ ಘನತೆಯ ಉಪಮಿಸಬಾರದು.
ನೋಡಬಾರದ ಬೆಳಗು, ಕೂಡಬಾರದ ಮೂರ್ತಿ,
ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳ(ಬೆಡ?)ಗಿನ ಮೂಲವ
ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೇನ ಬಲ್ಲರೊ ? /1206
ಬ್ರಹ್ಮ ವಿಷ್ಣುವ ನುಂಗಿ, ವಿಷ್ಣು ಬ್ರಹ್ಮನ ನುಂಗಿ,
ಬ್ರಹ್ಮಾಂಡದೊಳಡಗಿ, ಶತಪತ್ರ ಸಹಸ್ರದಳಂಗಳ ಮೀರಿ
ಚಿತ್ರಗುಪ್ತರ ಕೈಯ ಪತ್ರವ ನಿಲಿಸಿತ್ತು
ಗುಹೇಶ್ವರನೆಂಬ ಲಿಂಗೈಕ್ಯನದ ನಿಲಫವು./1207
ಬ್ರಹ್ಮಂಗೆ ದೂರುವೆನೆ ? ಸರಸ್ವತಿಯ ವಿಕಾರ.
ವಿಷ್ಣುವಿಂಗೆ ದೂರುವೆನೆ ? ಲಕ್ಷ್ಮಿಯ ವಿಕಾರ.
ರುದ್ರಂಗೆ ದೂರುವೆನೆ ? ದೇವಿಯ ವಿಕಾರ.
ಇನ್ನಾರಿಗೆ ದೂರುವೆ ಕಾಮನ ಹುಯ್ಯಲ ?
ಎಲ್ಲರೂ ತಮ್ಮ ತಮ್ಮ ಅವಸ್ಥೆಯ ಕಳೆಯಲಾರರು.
ಪರದೈವವೆಂಬಂತೆ ನಾನು ಹೇಳಾ ಗುಹೇಶ್ವರಾ ?/1208
ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ,
ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣ್ಣನಾಡಿದ ಬೇಂಟೆಯ.
ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ. /1209
ಬ್ರಹ್ಮವ ನುಡಿದಾನು ಭ್ರಮಿತನಾದೆನಯ್ಯಾ,
ಅದ್ವೈತವ ನುಡಿದಾನು ಅಹಂಕಾರಿಯಾದೆನಯ್ಯಾ,
ಶೂನ್ಯವ ನುಡಿದಾನು ಸುಖದುಃಖಕ್ಕೆ ಗುರಿಯಾದೆನಯ್ಯಾ,
ಸ್ಥಲಗೆಟ್ಟು ನುಡಿದಾನು ಸಂಸಾರಿಯಾದೆನಯ್ಯಾ,
ಗುಹೇಶ್ವರಾ, ನಿಮ್ಮ ಶರಣ ಸಂಗನಬಸವಣ್ಣನ
ಪ್ರಸಾದವ ಕೊಂಡು ಬದುಕಿದೆನಯ್ಯಾ. /1210
ಬ್ರಹ್ಮವಿಷ್ಣುಗಳ ಮಾಯೆ ತೊತ್ತಳದುಳಿವಂದು,
ರುದ್ರಗಣ ಪ್ರಮಥಗಣಂಗಳೆಂಬವರ
ಮಾಯೆ ಮರುಳ್ಮಾಡಿ ಕಾಡುವಂದು,
ನೊಸಲ ಕಣ್ಣು ಪಂಚಮುಖ ದಶಭುಜದವರಿಗೆ
ಮಾಯೆ ಅಧರ್ಾಂಗಿಯಾದಂದು,
ದೇವದಾನವರ ಮಾಯೆ ಅಗಿದಗಿದು ತಿಂಬಂದು,
ಅಷ್ಟಾಶೀತಿಸಹಸ್ರ ಋಷಿಗಳ
ಮಾಯೆ, ತಪೋಮದದಲ್ಲಿ ಕೆಡಹುವಂದು
ನಾನು ಮಾಯಾಕೊಲಾಹಲ (ನಿರ್ಮಾಯನೆಂಬ ಗಣೇಶ್ವರ?)ನಾಗಿರ್ದೆ
ಕಾಣಾ ಗುಹೇಶ್ವರಾ./1211
ಭಕ್ತ ಜಂಗಮದ ಷಟ್ಸ್ಥಲದ,
ಸಕೀಲ ಸಂಬಂಧವನಾರು ಬಲ್ಲರು ಹೇಳಾ
ಅದೇನು ಕಾರಣವೆಂದಡೆ:
ಹಸಿವುಳ್ಳವ ಭಕ್ತನಲ್ಲ
ವಿಷಯವುಳ್ಳವ ಮಹೇಶ್ವರನಲ್ಲ
ಆಸೆಯುಳ್ಳವ ಪ್ರಸಾದಿಯಲ್ಲ
ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ
ತನುಗುಣವುಳ್ಳವ ಶರಣನಲ್ಲ
ಜನನ-ಮರಣವುಳ್ಳವ ಐಕ್ಯನಲ್ಲ
ಈ ಆರರ ಅರಿವಿನ ಅರ್ಥದ, ಸಂಪತ್ತಿನ
ಭೋಗ ಹಿಂಗಿದರೆ, ಸ್ವಯಂ ಜಾತನೆಂಬೆ
ಆ ದೇಹ ನಿಜದೇಹವೆಂಬೆ
ಆ ದೇಹ ಗುರುಗುಹೇಶ್ವರನೆಂಬೆ. /1212
ಭಕ್ತ ಭಕ್ತನೆಂದೇನು ? ಭವಿಗಳ ಮನೆಯಲುಳ್ಳನ್ನಬರ ಭಕ್ತನೆ ?
ಭಕ್ತ ಭಕ್ತನೆಂದೇನು ? ಜಾತಿ ವರ್ಣಾಶ್ರಮ ಕುಲ ಗೋತ್ರ ನಾಮ ಸೀಮೆಯೆಂಬ
ಷಡುಭ್ರಮೆ ಕಣ್ಣಲ್ಲಿ ಕವಿದು ಓಲಾಡುವನ್ನಬರ ಭಕ್ತನೆ ?
ಭಕ್ತ ಭಕ್ತನೆಂದೇನು ? ಪಂಚಸೂತಕವುಳ್ಳನ್ನಬರ ಭಕ್ತನೆ ?
ಭಕ್ತ ಭಕ್ತನೆಂದೇನು ? ತನುವಂಚಕ, ಮನವಂಚಕ ಧನವಂಚಕ ಭಕ್ತನೆ ?
ಅಲ್ಲಲ್ಲ ನಿಲ್ಲು ಮಾಣು,-
ಇವರು ಸಾವಿಂಗೆ ಸಂಬಳಗುಂಡನಿರಿದು ಕೊಂಬವರು,
ಭಕ್ತರಪ್ಪರೆ ಗುಹೇಶ್ವರಾ ?/1213
ಭಕ್ತ ಭಕ್ತನೆಂಬರು,
ಪೃಥ್ವಿಯ ಪೂರ್ವಾಶ್ರಯವ ಕಳೆಯನಲರಿಯಫದನ್ನಕ್ಕ,
ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,
ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,-
ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ನಾನು ಬೆರಗಾದೆ ಗುಹೇಶ್ವರಾ./1214
ಭಕ್ತ ಮಾಡಿಹನೆಂಬಿರಿ, ಭಕ್ತ ಮಾಡಿಹನೆಂಬಿರಿ;-
ಭಕ್ತ ಮಾಡಿಹನೆಂದು ಗೆಗ್ಗೆವಾಯ್ದುಕೊಳ್ಳಲಾಗದು.
ಅದೇಕೆಂದಡೆ:
ಭಕ್ತನು ಅಸ್ತಿ ನಾಸ್ತಿ ಅರಿಯದನ್ನಕ್ಕ, ಉಂಟು ಇಲ್ಲವೆಂದು ತಿಳಿಯದನ್ನಕ್ಕ
ಮಾಡಿತ್ತೇ ಗೆಲ್ಲ ಎಂದುಕೊಂಡಡೆ ಆ ಸುಳುಹಿಂಗೆ ಭಂಗ.
ತೂಳವೆತ್ತಿದಾತನು ಇರಿದುಕೊಂಬುದು,
ಭೂತದ ಗುಣವಲ್ಲದೆ ವೀರದ ಗುಣವಲ್ಲ.
ಸ್ವೇಚ್ಛಾತುರದ ಮಾಟವೊ ? ಮುಕ್ತ್ಯಾತುರದ ಮಾಟವೊ ?
ರಿಣಾತುರದ ಮಾಟವೊ ?-ಎಂಬುದ ತಿಳಿಯಬೇಕಲ್ಲದೆ
ಕೊಂಡುದೆ ಕೋಳಾಗಿ ಹೋಹನ್ನಕ್ಕರ ಜಂಗಮಲಕ್ಷಣವಲ್ಲ.
ತುಂಬಿದ ಬಂಡಿಯ ಹಾರವನರಿದು ನಡೆಸುವನ
ಜಾಣಿಕೆಯಂತಿರಬೇಡಾ ಲಿಂಗಜಾಣರು ?
ಸ್ವೇಚ್ಛಾತುರವನಾಚರಿಸುವ ಜಂಗಮಕ್ಕೆ ಭವಂ ನಾಸ್ತಿ
ಮುಕ್ತ್ಯಾತುರವನಾಚರಿಸುವ ಜಂಗಮಕ್ಕೆ ಭವ ಹಿಂಗದು.
ರಿಣಾತುರವನಾಚರಿಸುವ ಜಂಗಮಕ್ಕೆ ಯಮದಂಡನೆ.
ಹರಿದು ಬರಲಿ ಕಿತ್ತು ಬರಲಿ ಅವನೇನಾದರೂ ಆಗಲಿ
ನಾನು ತೆಕ್ಕೊಂಡು ಹೋದೆನೆಂಬನ್ನಕ್ಕರ ಜಂಗಮಲಕ್ಷಣವಲ್ಲ,-
ಜಂಗಮ ಕರುಣರಸಭರಿತನಾಗಿ,
ಭಕ್ತನಲ್ಲಿ ಜಂಗಮದಲ್ಲಿ ಭಾವಭೇದವಿಲ್ಲಾಗಿ.
ಇಂತೀ ಕ್ರಮಾದಿಕ್ರಮಂಗಳನರಿದು ಸುಳಿಯದಿದ್ದಡೆ
ನಿರ್ವಯಲಸ್ಥಲಕ್ಕೆ ದೂರ ಕಾಣಾ ಗುಹೇಶ್ವರಾ. /1215
ಭಕ್ತ, ಪ್ರಸಾದವ ಕೊಂಡು ಪ್ರಸಾದವಾದ
ಪ್ರಸಾದ, ಭಕ್ತನ ನುಂಗಿ ಭಕ್ತನಾಯಿತ್ತು.
ಭಕ್ತನೂ ಪ್ರಸಾದವು ಏಕಾರ್ಥವಾಗಿ-ಲಿಂಗಸಂಗವ ಮರೆದು,
ಭಕ್ತನೆ ಭವಿಯಾದ, ಪ್ರಸಾದವೆ ಓಗರವಾಯಿತ್ತು.
ಮತ್ತೆ ಆ ಓಗರವೆ ಭವಿ, ಭವಿಯೆ ಓಗರವಾಯಿತ್ತು.
ಓಗರ ಭವಿ ಎಂಬೆರಡೂ ಇಲ್ಲದೆ
ಓಗರವೆ ಆಯಿತ್ತು ಗುಹೇಶ್ವರಾ. /1216
ಭಕ್ತಂಗೆ ಉತ್ಪತ್ಯ(ತ್ತಿ?) ವಿಲ್ಲಾಗಿ, ಸ್ಥಿತಿಯಿಲ್ಲ.
ಸ್ಥಿತಿಯಿಲ್ಲಾಗಿ ಲಯವಿಲ್ಲ.-ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ,
ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ./1217
ಭಕ್ತ-ಜಂಗಮದ ಸಕೀಲಸಂಬಂಧವನು ಆರು ಬಲ್ಲರು ಹೇಳಾ ?
ಅರ್ಥವನೊಪ್ಪಿಸಿದಾತ ಭಕ್ತನಲ್ಲ, ಪ್ರಾಣವನೊಪ್ಪಿಸಿದಾತ ಭಕ್ತನಲ್ಲ,
ಅಬಿಮಾನವನೊಪ್ಪಿಸಿದಾತ ಭಕ್ತನಲ್ಲ.
ಅದೇನು ಕಾರಣವೆಂದಡೆ-ಸತ್ಯಸದಾಚಾರಕ್ಕೆ ಸಲ್ಲನಾಗಿ.
ಆ ಭಕ್ತನ ಮನೆಯ ಹೊಕ್ಕು-ಪಾದಾರ್ಚನೆಯ ಮಾಡಿಸಿಕೊಂಡು
ಒಡಲ ಕುಕ್ಕಲತೆಗೆ ಅಶನವನುಂಡು, ವ್ಯಸನದ ಕಕ್ಕುಲತೆಗೆ ಹಣವ ಬೇಡಿ,
ಕೊಟ್ಟಡೆ ಕೊಂಡಾಡಿ ಕೊಡದಿರ್ದಡೆ ದೂರಿಕೊಂಡು ಹೋಹಾತ ಜಂಗಮವಲ್ಲ.
ಆದಿ ಅನಾದಿಯಿಂದಲತ್ತತ್ತ ಮುನ್ನಲಾದ, ಮಹಾಘನವ ಭೇದಿಸಿ ಕಂಡು ಅರಿದು
ಕಾಯದ ಜೀವದ ಹೊಲಿಗೆಯ ಬಿಚ್ಚಿ ಬೀಸಾಡಿ, ತನ್ನನೆ ಅರ್ಪಿಸಿ ಇರಬಲ್ಲಾತ ಭಕ್ತ.
ಸುಳುಹಿನ ಸೂತಕ ಮೈದೋರದೆ, ಒಡಲ ಕಳವಳದ ರುಚಿಗೆ ಹಾರೈಸದೆ,
ಅರಿವೆ ಅಂಗವಾಗಿ ಆಪ್ಯಾಯನವೆ ಭಕ್ತಿಯಾಗಿ, ಕಿಂಕುರ್ವಾಣವೆಂಬ ಶಿವಮಂತ್ರಕ್ಕೆ
ನಮೋ ನಮೋ ಎನಬಲ್ಲಡೆ ಆತ ಜಂಗಮ.
ಆ ಜಂಗಮದ ಆ ಭಕ್ತನ ಸಮ್ಮೇಳವೆ ಸಮ್ಮೇಳ.
ಮಿಕ್ಕಿನ ಅರೆಭಕ್ತರ ಒಡತಣ ಸಂಗ
ನಮ್ಮ ಗುಹೇಶ್ವರಲಿಂಗಕ್ಕೆ ಸೊಗಸದು./1218
ಭಕ್ತನಾದಿನವಾಗಿ ಭಕ್ತಿಯ ಬೇಡ ಬಂದವನಲ್ಲ.
ಮುಕ್ತಿಯಾದಿನವಾಗಿ ಮುಕ್ತಿಯ ಬೇಡಬಂದವನಲ್ಲ.
ಅಶನಾತುರನಾಗಿ ವಿಷಯವ ಬಯಸಿ ಬಂದವನಲ್ಲ.
ಗುಹೇಶ್ವರನ ಶರಣ ಸಂಗನಬಸವಣ್ಣ
ಮಾಡುವ ಭಕ್ತನಲ್ಲಾಗಿ, ನಾನು ಬೇಡುವ ಜಂಗಮವಲ್ಲ, ಕಾಣಾ,
ಚೆನ್ನಬಸವಣ್ಣಾ. /1219
ಭಕ್ತನಿದರಠಾವಿಂಗೆ ಕರ್ತ ಬಂದಡೆ.
ಅತ್ತಿತ್ತ ಹರಿಯದೆ ನಂಬಬೇಕು ನೋಡಾ.
ಕರ್ತನ ಕಂಡು ಭೃತ್ಯ ಉರಿಯನುಗುಳಿದಡೆ
ಬಳಿಕ ಈ ಕರ್ತನ [ಭೃತ್ಯ] ಭಾವಕ್ಕೆ ಸಂಬಂಧವೇನು ?
ತಪ್ಪಿ ತಪ್ಪಿ ತಿದ್ದಿಕೊಂಡೆಹೆನೆಂದಡೆ ಹಸನಾಗಬಲ್ಲುದೆ ?
ಗುಹೇಶ್ವರನ ಶರಣನಾರೆಂಬುದನು ನೀನೆತ್ತ ಬಲ್ಲೆ ? ಹೋಗಾ,
ಮರುಳ ಸಿದ್ಧರಾಮಯ್ಯಾ. /1220
ಭಕ್ತನೆಂದಲ್ಲಿ ದೃಷ್ಟವಾಯಿತ್ತು; ಐಕ್ಯನೆಂದಲ್ಲಿ ನಷ್ಟವಾಯಿತ್ತು.
ಈ ನಷ್ಟ ದೃಷ್ಟವನೊಳಗೊಂಡು ಅದೃಶ್ಯವಾಗಿಪ್ಪ
ಅಖಂಡಗುಹೇಶ್ವರನ ನಿಲವ ಉಪಮಿಸಬಾರದೆ
ನಿಶ್ಶಬ್ದಿಯಾದೆನು./1221
ಭಕ್ತನೆಂಬವ ಸೂತಕಿ, ಲಿಂಗೈಕ್ಯನೆಂಬವ ವ್ರತಗೇಡಿ.
ಶರಣಸತಿ ಲಿಂಗಪತಿ ಎಂಬ ಶಬ್ದ ಸರ್ವಗುಣಸಾಹಿತ್ಯ ಎಂಬಾತ
ಕಮರ್ೆಂದ್ರಿಯ ಭೋಗಕ್ಕೆ ಬಾರದ ಭೋಗಿ,
ಗುಹೇಶ್ವರಾ ನಿಮ್ಮ ಶರಣ,
ಆವ ಬಿತನೂ ಅಲ್ಲ ಆವ ಕರ್ಮಿಯೂ ಅಲ್ಲ./1222
ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು.
ಜಂಗಮಗಳೆಲ್ಲರೂ (ಜಂಗಮವೆಲ್ಲ?)
ಉಪಜೀವಿಗಳಾಗಿ, ಹೋದರು (ಹೋಯಿತ್ತು?).
ಇದೇನೊ? ಇದೆಂತೊ? ಅರಿಯಲೆ ಬಾರದು.
ಕಾಯಗುಣ ನಾಸ್ತಿಯಾದಾತ ಭಕ್ತ,
ಪ್ರಾಣಗುಣ ನಾಸ್ತಿಯಾದಾತ ಜಂಗಮ,
ಉಳಿದವೆಲ್ಲವ ಸಟೆಯೆಂಬೆ ಗುಹೇಶ್ವರಾ/1223
ಭಕ್ತಿಭಾವದ ಭಜನೆ ಎಂತಿದ್ದುದಂತೆ ಅಂತರಂಗದಲ್ಲಿ ಅರಿವು,
ಆ ಅಂತರಂಗದಲ್ಲಿ ಅರಿವಿಂಗೆ ಆಚಾರವೆ ಕಾಯ,
ಆ ಆಚಾರಕಾಯವಿಲ್ಲದೆ ಅರಿವಿಂಗಾಶ್ರಯವಿಲ್ಲ.
ಅರಿವು ಆಚಾರದಲ್ಲಿ ಸಮವೇದಿಸಿದ ಲಿಂಗೈಕ್ಯ,
ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ.
ನಿನ್ನ ಅರಿವಿಂಗಚ್ಚಾಗಿ ಆಚಾರಕ್ಕೆ ಆಳಾಗಿ
ನಮ್ಮ ಗುಹೇಶ್ವರಲಿಂಗ ನಿನ್ನ ಕೈವಶಕ್ಕೊಳಗಾದನು.
ನಿನ್ನ ಸುಖಸಮಾದಿಯ ತೋರು ಬಾರಾ ಸಿದ್ಧರಾಮಯ್ಯಾ. /1224
ಭಕ್ತಿಯೆ ಓಗರವಾಗಿ, ಸತ್ಯವೆ ಮೇಲೋಗರವಾಗಿ
ನಿಜತತ್ವವೆ ಸವಿಯಾಗಿ-
ಗುಹೇಶ್ವರಲಿಂಗಕ್ಕೆ ಇಕ್ಕಬಲ್ಲವ
ಸಂಗನಬಸವಣ್ಣನಲ್ಲದಿಲ್ಲ. /1225
ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ ಎನಗಾಯಿತ್ತು.
ಪ್ರಸಾದವೆಂಬ ಪರಿಣಾಮ ಮರುಳುಶಂಕರದೇವರಿಂದ ಎನಗಾಯಿತ್ತು.
ಏಕೋಭಾವದ ನಿಷ್ಠೆ ಸಿದ್ಧರಾಮಯ್ಯದೇವರಿಂದ ಎನಗಾಯಿತ್ತು.
ಸರ್ವಜೀವ ಪರಿಪೂರ್ಣಕಳೆ ಚನ್ನಬಸವಣ್ಣನಿಂದ ಎನಗಾಯಿತ್ತು.
ಆದ (ಅದರ?) ನಿಜದ ನೆಲೆ ಗುಹೇಶ್ವರಲಿಂಗವೆಂಬ ನಾಮವಾಯಿತ್ತು. /1226
ಭಕ್ತಿಯೆಂಬುದು ಯುಕ್ತಿಯೊಳಗು, ಪೂಜೆಯೆಂಬುದು ನಿರ್ಮಾಲ್ಯದೊಳಗು.
ಪ್ರಸಾದವೆಂಬುದು ಓಗರದೊಳಗು, ಆಚಾರವೆಂಬುದು ಅನಾಚಾರದೊಳಗು.
ಧರ್ಮವೆಂಬುದು ಅಧರ್ಮದೊಳಗು, ಸುಖವೆಂಬುದು ದುಃಖದೊಳಗು.
ವ್ರತವೆಂಬುದು ವೈರಾಗ್ಯದೊಳಗು, ನೇಮವೆಂಬುದು ಉದ್ದೇಶದೊಳಗು.
ಅಹಿಂಸೆಯೆಂಬುದು ಹಿಂಸೆಯೊಳಗು!-ಇವಾವಂಗವೂ ಇಲ್ಲದೆ
ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!/1227
ಭರಿತಭೋಜನ ಭರಿತಭೋಜನ ಎಂದು,
ಭ್ರಮೆಗೊಂಡಿತ್ತು ಲೋಕವೆಲ್ಲ.
ಭರಿತಭೋಜನವೆ ದಿಟವಾದಡೆ ಮತ್ರ್ಯದಲ್ಲಿ ಸುಳಿಯಲುಂಟೆ ?
ಚತುರ್ವಿಧ ಅರ್ಪಿತದೊಳಗೆ, ಆವುದು ಭರಿತ ಎಂಬುದನರಿಯರಾಗಿ,
ಗುಹೇಶ್ವರಲಿಂಗದಲ್ಲಿ ಭರಿತಭೋಜನದ ಅನು,
ಚನ್ನಬಸವಣ್ಣಂಗಾಯಿತ್ತು !/1228
ಭವವಿರಹಿತಂಗೆ ಭಕ್ತಿಯ ಮಾಡುವರು ನೀವು ಕೇಳಿರಣ್ಣಾ,
ಭವದ ಬಾಧೆಯೊಳಗೆ ನೀವಿದ್ದು ಅಭವಭಕ್ತಿಯ ಮಾಡುವ ಪರಿಯಂತೊ ?
ತಾನಭವನಾದಲ್ಲದೆ ಸಹಜಭಕ್ತಿಯ ಮಾಡಬಾರದು ಗುಹೇಶ್ವರಾ./1229
ಭವವುಳ್ಳನ್ನಕ್ಕ ಧಾವತಿ ಮಾಣದು, ಶರೀರವುಳ್ಳನ್ನಕ್ಕ ಅವಸ್ಥೆ ಮಾಣದು.
ಗುಹೇಶ್ವರನೆಂಬ [ನೆನಹು]ಉಳ್ಳನ್ನಕ್ಕ, ಲಿಂಗವೆಂಬುದ ಬಿಡಲಾಗದು./1230
ಭವವೆತ್ತಿ ಶಿರ ಕಳಕೊಂಡ.
ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ.
ದಿವಸೇಂದ್ರ ಕಿರಣ ನಷ್ಟವಾದ.
ಮುನೀಂದ್ರರ್ನಷ್ಟವಾಗಿ ಮಡಿದರು.
ಮನು ಮಾಂಧಾತರು ಮಂದಮತಿಗಳಾದರು.
ದೇವ ದಾನವ ಮಾನವರು ಮಡಿದರು.
ಇದ ನೋಡಿ ನಮ್ಮ ಶರಣರು,
ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು,
ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ
ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ./1231
ಭವಿಬೀಜವೃಕ್ಷದ ಫಲದೊಳಗೆ, ಭಕ್ತಿಬೀಜವೃಕ್ಷ ಪಲ್ಲವಿಸಿತ್ತು !
ಭಕ್ತಿಬೀಜವೃಕ್ಷದ ಫಲದೊಳಗೆ, ಶರಣಬೀಜವೃಕ್ಷ ಪಲ್ಲವಿಸಿತ್ತು !
ಶರಣಬೀಜವೃಕ್ಷದ ಫಲದೊಳಗೆ;
ಕುಲನಾಶಕನಾದ ಶರಣ ಒಂದೆ ಬಸುರಲ್ಲಿ ಬಂದ-
ಬಂದು, ಬಳಗಕ್ಕೆ ತನ್ನ ಕುಲಕ್ಕೆ ತಾನೆ ಮಾರಿಯಾದ ಶರಣ.
ಭವಿಭಕ್ತ ಭವಿಬೀಜವೃಕ್ಷದ ತಂಪು ನೆಳಲ ಬಿಟ್ಟು,
ಕುಳ್ಳಿರ್ದಲ್ಲಿಯೆ; ಬಳಿ ಬಳಿಯೆ ಬಯಲಾದ ಶರಣ !
[ನಾದ]ಬಿಂದು ಬೀಜವಟ್ಟ ಹಾಳಾಗಿ ಹಾರಿಹೋದಲ್ಲಿ; ಇನ್ನೇನ ಹೇಳಲುಂಟು ?
ಗುಹೇಶ್ವರನೆಂಬ ಲಿಂಗವನರಿದು ಭವಿಗೆ ಭವಿಯಾದಾತಂಗೆ
ಇನ್ನೇನು ಪಥ (ಪದ?)ವುಂಟಯ್ಯಾ ? /1232
ಭವಿಯ ಕಳೆದೆವೆಂಬ ಮರುಳು ಜನಂಗಳು ನೀವು ಕೇಳಿರೆ;
ಭವಿಯಲ್ಲವೆ ನಿಮ್ಮ ತನುಗುಣಾದಿಗಳು ?
ಭವಿಯಲ್ಲವೆ ನಿಮ್ಮ ಮನಗುಣಾದಿಗಳು ?
ಭವಿಯಲ್ಲವೆ ನಿಮ್ಮ ಪ್ರಾಣಗುಣಾದಿಗಳು ?
ಇವರೆಲ್ಲರೂ ಭವಿಯ ಹಿಡಿದು ಭವಭಾರಿಗಳಾದರು.
ನಾನು ಭವಿಯ ಪೂಜಿಸಿ ಭವಂನಾಸ್ತಿಯಾದೆನು ಗುಹೇಶ್ವರಾ./1233
ಭವಿಯ ಕಳೆದೆಹೆವೆಂಬ ಅಪ್ರಮಾಣಿಗಳು ನೀವು ಕೇಳಿರೆ,
ಭವಿಯ ಕಳೆದೆಹೆವೆಂಬ ಭವಭಾರಿಗಳು ನೀವು ಕೇಳಿರೆ;
ಭವಿಗೆ ಕೊಡಲಾಗದೆಂಬ ಭಕ್ತನ ನುಡಿಯ ಕೇಳಲಾಗದು.
ನಾನು ಭವಿವಿಡಿದು ಭಕ್ತಿಯಿಂದ ಸುಖಿಯಾದೆ ಗುಹೇಶ್ವರಾ/1234
ಭವಿಯ ತಂದು ಭಕ್ತನ ಮಾಡಿ, ಪೂರ್ವಾಶ್ರಯವ ಕಳೆದ ಬಳಿಕ,
ಮರಳಿ ಪೂರ್ವಾಶ್ರಯವನೆತ್ತಿ ನುಡಿವ, ಗುರುದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು, ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ-
ಈ ತ್ರಿವಿಧಸ್ಥಲವನರಿಯದೆ ಕೆಟ್ಟರು ಗುಹೇಶ್ವರಾ./1235
ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ.
ಶೀಲವೆಂಬುದು ಸಂಕಲ್ಪ, ಸಮತೆಯೆಂಬುದು ಸೂತಕ.-
ಇಂತೀ ಚತುರ್ವಿಧದೊಳಗಿಲ್ಲ,
ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!/1236
ಭಸ್ಮವ ಹೂಸಿ ಬತ್ತಲೆಯಿದ್ದಡೇನು ಬ್ರಹ್ಮಚಾರಿಯೇ ?
ಅಶನವನುಂಡು ವ್ಯಸನವ ಮರೆದಡೇನು ಬ್ರಹ್ಮಚಾರಿಯೆ ?
ಭಾವ ಬತ್ತಲೆಯಿರ್ದು ಮನ ದಿಗಂಬರವಾಗಿರ್ದಡೆ
ಅದು ಸಹಜನಿರ್ವಾಣವು ಕಾಣಾ ಗುಹೇಶ್ವರಾ./1237
ಭಾನು ಶಶಿ ಕಳೆಗುಂದಿ,
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ
ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ-
ವಾಯುವನರಿಯವೊ!
ಆದಿಪ್ರಣಮವನರಿದಹೆನೆಂಬವಂಗೆ,
ಬಯಲು ಆಕಾಶದೊಳಗೊಂದು ರಸದ ಬಾವಿ!
ಮುನ್ನಾದವರೆಲ್ಲಿಯವರೆಂದೆನಬೇಡ
ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ!/1238
ಭಾವ ಸದ್ಭಾವ ನಿರ್ಭಾವವೆಂಬ ತ್ರಿಪುಟಿಭಾವವಾವುದೆಂದಡೆ:
ಜಡವಹ ತನ್ನನ್ನು ಅಜಡವಹ ಮನಸ್ಸಿನಿಂದಲೆ
ತದೇಕ ನಿಷ್ಠೆಯಿಂದ ಭಾವಿಸೂದೀಗ ಭಾವವು.
ಸದ್ಭಾವವೆಂದಡೆ:
ಜಡವಾಗಿ ದೃಶ್ಯವಲ್ಲದ ಅಜಡವಾಗಿ ಅದೃಶ್ಯವಲ್ಲದ
ಜಡಾಜಡ ಸಮ್ಮಿಶ್ರವಲ್ಲದ ಭಾವವ ಭಾವಿಸೂದೆ ಸದ್ಭಾವವು.
ನಿರ್ಭಾವವೆಂದಡೆ:ಭಾವ ಸದ್ಭಾವವೆರಡಳಿದು
ವಾಚಿಕ ಅವಾಚಿಕವಾಗಿಹುದಾಗಿ ನಿರ್ಭಾವವು.
ಇಂತೀ ಭಾವ ಸದ್ಭಾವ ನಿರ್ಭಾವವೆಂಬ
ತ್ರಿಪುಟಿಭಾವವಳಿದುಳಿದ ಮಹಾಘನವು ತಾನೆ;
ಶ್ರೀಗುರುವಾದ, ಲಿಂಗವಾದ, ಜಂಗಮವಾದ.
ಇಂತೀ ತ್ರಿವಿಧದ ಪಾದೋದಕ ಪ್ರಸಾದದಲ್ಲಿ
ಪರಿಣಾಮಿ ಗುಹೇಶ್ವರಾ ನಿಮ್ಮ ಶರಣ. /1239
ಭಾವಕ್ಕೆ ಇಂಬಿಲ್ಲ ಶಬ್ದ ಮೀಸಲು ನೋಡಾ.
ನುಡಿಗೆ ಎಡೆಯಿಲ್ಲ ಎಡೆಗೆ ಕಡೆಯಿಲ್ಲ,
ಗುಹೇಶ್ವರನೆಂಬ ಶಬ್ದ ವೇದಿಸಲೊಡನೆ/1240
ಭಾವಕ್ಕೆ ಪೂಜ್ಯನಲ್ಲ,
ಬಹಿರಂಗದೊಳಗಡಗಿತ್ತೆಂದಡೆ ಕ್ರಿಯಾಶಬ್ದನಲ್ಲ.
ಅರಿವಿನೊಳಗಡಗಿತ್ತೆಂದಡೆ ಮತಿಗೆ ಹವಣಲ್ಲ.
ಭಾವ ನಿರ್ಭಾವ ನಿಶ್ಶೂನ್ಯವನು ಕಾಬ ಪರಿಯಿನ್ನೆಂತು ಹೇಳಾ?
ಅದ ಕಂಡು, ತನ್ನೊಳಗಿಂಬಿಟ್ಟುಕೊಂಬ ಪರಿಯೆಂತು ಹೇಳಾ,
ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣಾ ?/1241
ಭಾವಗೆಟ್ಟು ಭವನಷ್ಟನು ಒಡಹುಟ್ಟಿದ ಐವರ ಕೈಬಿಟ್ಟನು.
ಭಂಡನು ಲಜ್ಜೆಭಂಡನು, ಕಂಡಡೆ ನುಡಿಸದಿರಾ ಮಾಯಾದೇವಿ.
ಅರಿವೆಯ (ಅರಿವ?)ನುಟ್ಟು ನೆರೆ ಮರುಳಾದನು
ಹುಟ್ಟ ಮುರಿದನು ಮಡಕೆಯನೊಡೆದನು
ಆದಿ ಪುರಾತನು ಅಚಲ ಲಿಂಗೈಕ್ಯನು.
ಗುಹೇಶ್ವರನಲ್ಲಯ್ಯಂಗೆ ಮೂಗಿಲ್ಲ ಮಗಳೆ. /1242
ಭಾವದಲೊಬ್ಬ ದೇವರ ಮಾಡಿ,
ಮನದಲೊಂದು ಭಕ್ತಿಯ ಮಾಡಿದಡೆ,
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?/1243
ಭಾವದಲ್ಲಿ ಭ್ರಮಿತರಾದವದ
ಸೀಮೆಯೇನು ? ನಿಸ್ಸೀಮೆಯೇನು ?
ವಚನದ ರಚನೆಯ ರಂಜನೆಯ ಲೀಲೆಯನಾಡುವರು.
ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು./1244
ಭಾವದಲ್ಲಿ ಸಿಲುಕಿದ ಲಿಂಗಕ್ಕೆ ಪ್ರಳಯವದ್ಭುತ ಕಾಣಿರೆ !
ಅದ ಪ್ರಾಣಲಿಂಗವೆಂತೆಂಬೆ ? ಲಿಂಗಪ್ರಾಣವೆಂತೆಂಬೆ ?`ಗುಹೇಶ್ವರ’ `ಗುಹೇಶ್ವರ’ ಎಂದೆಂಬ ಲಿಂಗವು
ನಿಂದಲ್ಲಿಯೆ ನಿಂದಿತ್ತು./1245
ಭಾವವಳಿಯದೆ ಬಯಕೆ ಸವೆಯದೆ
ಐಕ್ಯವು ಅವ ಘನವೆಂದಡಹುದೆ?
ಶಬ್ದ ಸಂಭ್ರಮದ ಮದವಳಿಯದೆ,
ತನ್ನ ಇದಿರಲ್ಲಿ ಪ್ರತಿಯುಳ್ಳಡೆ, ಏನೆಂದಡೂ ಅಹುದೆ?
ಗುಹೇಶ್ವರನೆಂಬ ಶಬ್ದಸಂದಳಿಯದೆ
ಬೇಸತ್ತು ಬಯಲಾದಡೆ ಆಯತವಹುದೆ?/1246
ಭಾವಿ(ವು?)ಕರಿಗೆ ಮೂರ್ತಿಯ ಆರಾಧನೆ ಸಂಸಾರಕ್ಕೆ ಬೀಜ,
ಲಿಂಗಾರಾಧನೆ ಭವಕ್ಕೆ ಬೀಜ.
ಲಿಂಗಸ್ವಾಯತ ಜಂಗಮವೆ ಪ್ರಾಣಲಿಂಗ.
ಇದು ಕಾರಣ-ಗುಹೇಶ್ವರಾ
ಸಂಗನಬಸವಣ್ಣನ ಮರೆಯ ಹೊಕ್ಕು ಬದುಕಿದೆನು/1247
ಭಾವಿಸಿ ದೃಷ್ಟಿನಟ್ಟು ಸೈವೆರಗಾಗಿದ್ದುದ ಕಂಡೆ,
ಕಲ್ಪಿಸಿ ದೃಷ್ಟಿನಟ್ಟು ಸೈವೆರಗಾಯಿತ್ತಯ್ಯಾ.
ಗುಹೇಶ್ವರಾ, ನಿಮ್ಮಲ್ಲಿ ಸರ್ವನಿರ್ವಾಣಿ ಸಂಗನಬಸವಣ್ಣ.
ಎನ್ನ ಪ್ರಾಣಲಿಂಗವೆಂದರಿದು ಕಂಡೆನಿಂದು./1248
ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ,
ಅದು ತಾ ಮುನ್ನಿನಂತೆ ಇದ್ದಿತ್ತು.
ಮುಂದೆ ಭಾವಿಸಬೇಡ ಕೂಡಬೇಡ,
ಕೂಡಿಹೆನೆಂಬ ಭಾವ ಮುನ್ನವೆ ಬೇಡ ಗುಹೇಶ್ವರಾ./1249
ಭುವನ ಹದಿನಾಲ್ಕರ ಭವನದ ಕೀಲನೆ ಕಳೆದು
ಉರವಣಿಸುವ ಪವನಂಗಳ ತರಹರಿಸಿದಡೆ-ಅದು ಯೋಗ !
ಚತುರಸದೊಳಗಣ ನಿಲವ ಕಾಣಬೇಕು.
ವಜ್ರ ನೀಲದ ಹೊದಿಕೆಯಲ್ಲಿರ್ದ ಭುವನಂಗಳ ಹೊದ್ದಿ
ಮಾಣಿಕವ ನುಂಗಿ ಉಗುಳದು-ಗುಹೇಶ್ವರಾ. /1250
ಭುವರ್ಲೊಕದ ಸ್ಥಾವರಕ್ಕೆ,
ಸತ್ಯಲೋಕದ ಅಗ್ಘಣಿಯಲ್ಲಿ ಮಜ್ಜನಕ್ಕೆರೆದು,
ದೇವಲೋಕದ ಪುಷ್ಪದಲ್ಲಿ ಪೂಜೆಯ ಮಾಡಿದಡೆ
ಹತ್ತು ಲೋಕದಾಚಾರ ಕೆಟ್ಟಿತ್ತು.
ಮೂರು ಲೋಕದರಸುಗಳು ಮುಗ್ಧರಾದರು.
ಗುಹೇಶ್ವರಲಿಂಗವು ಸ್ಥಾವರಕ್ಕೆ ಸ್ಥಾವರವಾದನು./1251
ಭೂತ ಭೂತವ ಕೂಡಿ ಅದ್ಭುತವಾಯಿತ್ತು,
ಕಿಚ್ಚು ಕೋಡಿತ್ತು, [ನೀರು] ನೀರಡಿಸಿತ್ತು-ಅದ್ಭುತವಾಯಿತ್ತು !
ಉರಿ, ಪವನದೋಷದೊಳಡಗಿರ್ದು
ವಾಯುವಿಮ್ಮಡಿಸಿತ್ತ ಕಂಡೆ, ಗುಹೇಶ್ವರಾ./1252
ಭೂತವೈದರಿಂದ ಸ್ಥೂಲ ತನು.
ಮನ ಬುದ್ಧಿ ಚಿತ್ತ ಅಹಂಕಾರದಿಂದ ಸೂಕ್ಷ್ಮತನು.
ಭಾವಜ್ಞಾನದಿಂದ ಕಾರಣತನು.-ಈ ತ್ರಿವಿಧವು ಚೈತನ್ಯವಿಡಿದ ಕಾರಣ,
ಭೂತ ಅಂತಃಕರಣ ಭಾವ ಜ್ಞಾನಕ್ಕೆ ಸ್ವತಂತ್ರತೆಯಿಲ್ಲ.
ಆ ಚೈತನ್ಯಕ್ಕೆ ಶರೀರಭಾವವಿಲ್ಲದಿರ್ದಡೆ ತೋರಿಕೆ ಇಲ್ಲವಾಗಿ
ಆ ಚೈತನ್ಯವೆ ತನ್ನ ಲೀಲೆಯಿಂದ ಶರಣನೆನಿಸಿತ್ತು.
ಆ ಶರಣನ ಪಂಚಭೌತಿಕ ತನುವ ಇಷ್ಟಲಿಂಗ ಇಂಬುಗೊಂಡಿಹ ಕಾರಣ,
ಕಾಯ ಪಂಚಬ್ರಹ್ಮಮಯವಾಯಿತ್ತು.
ಅಂತಃಕರಣ[ವ] ಅಂತಃಪ್ರೇರಕ ಪ್ರಾಣಚೈತನ್ಯಲಿಂಗವೊಳಕೊಂಡ ಕಾರಣ
ಶರಣನ ಕರಣಂಗಳೆ ಲಿಂಗಕಿರಣಂಗಳಾದವು.
ಭಾವ ಜ್ಞಾನವೆಡೆಗೊಂಡು [ಲಿಂಗ] ತೃಪ್ತಿಸ್ವರೂಪದಿಂದ
ಆನಂದಮಯವಪ್ಪ ಕಾರಣ,
ಶರಣ ಸಚ್ಚಿನ್ಮಯನಾದ-ಇದು ಕಾರಣ,
ಗುಹೇಶ್ವರಾ ನಿಮ್ಮ ಶರಣರ ದೃಷ್ಟಲಿಂಗವೆಂಬೆ !/1253
ಭೂತಳದ ಮತಿವಂತರು ಆತ್ಮನ ಸ್ಥಲವಿಡಲು
ಮಾತು ಮಾಣಿಕವ ನುಂಗಿ; ಜಾತಿ ಧರ್ಮವನುಡುಗಿ,
ವ್ರತದ ಭ್ರಮೆಗಳ ಸುಟ್ಟು, ಚಿತ್ತ ಭಸ್ಮವ ಧರಿಸಿ
ಅಣಿಮಾದಿ ಗುಣಂಗಳ ಗತಿಯ ಪಥವನೆ ಮೀರಿ,
ಭ್ರಾಂತಳಿದು ಜ್ಯೋತಿ ಬೆಳಗುತ್ತಿದೆ ಗುಹೇಶ್ವರಾ/1254
ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ-
ಅವು ಜಗಕ್ಕಿಕ್ಕಿದ ವಿದಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ.
ಅಂತಪ್ಪ ದಿವ್ಯರತ್ನವ ಕೆಡಗುಡದೆ
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ./1255
ಭೂಮಿಯ ಕಠಣವನು, ಆಕಾಶದ ಮೃದುವನು; ತಿಳಿವ ಗಮನ
ಅಲ್ಲಿಯೇ ನಿಂದಿತ್ತು.
ಉದಕದೊಳಗೆ ಹುಟ್ಟಿದ ತೃಷ್ಣೆ ಉದಕವನರಸಿತ್ತಲ್ಲಾ!
ಒಳಗೆ ಸತ್ತು ಹೊರಗೆ ಆಡುತ್ತದೆ !
ಗುಹೇಶ್ವರ ಬೆರಗಾಗಿ ಅಲ್ಲಿಯೇ ನಿಂದನು./1256
ಭೂಮಿಯಲ್ಲಿ ಹುಟ್ಟಿ ಅಂತರಂಗದಲ್ಲಿ ಬೆಳೆವ ಫಲವೃಕ್ಷದಂತೆ,
ಸರ್ವರಿಗೆ ಭೂತಹಿತವಾಗಿ ಫಲರಸವನೀವಂತೆ,
ನೀ ಭೂಮಿಯಾಗಿ ನಾ ಸಸಿಯಾಗಿ ಬೆಳೆದ ಬೆಂಬಳಿಯಲ್ಲಿ
ಗುಹೇಶ್ವರಲಿಂಗವೆಂಬುದು ಫಲವಾಯಿತ್ತು.
ಅರಿದ ಅರಿಕೆ ರಸವಾಯಿತ್ತು.ಸಂಗನಬಸವಣ್ಣನಿಂದ ಎನ್ನಂಗ ಬಯಲಾಯಿತ್ತು !/1257
ಭೂಮಿಯಾಕಾಶ ಒಂದು ಜೀವನದುದರ.
ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ ?
ಆ ಘನವು ಮನಕ್ಕೆ ಗಮಿಸಿದಡೆ, ಇನ್ನು ಸರಿಯುಂಟೆ ಗುಹೇಶ್ವರಾ ?/1258
ಭೂಮಿಯೊಳಗಿಲ್ಲ ಆಕಾಶದೊಳಗಿಲ್ಲ:
ಚತುರ್ದಶ ಭುವನದೊಳಗಿಲ್ಲ, ಹೊರಗಿಲ್ಲ.
ಏನೆಂದರಿಯರು ಎಂತೆಂದರಿಯರು ಹೇಳಿರಯ್ಯಾ (ಹೇಳಯ್ಯಾ?)
ಕೃತಯುಗದಂದಿನ ಮಾತು ಬೇಡ
ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ./1259
ಭೂವಳಯ ಮಧ್ಯದ ಎಂಟೆಸಳ ಪದ್ಮದ ಮೇಲೆ
ಸುಳಿವನ ಎಚ್ಚರಲೀಯ,
ಕಂಟಕ ವಿರಹಿತನು, ನಂಟರಿಗೆ ವಿರೋದಿಸಿ, ಇಳೆಯ ಗುಣ ರಹಿತನು,
ಗಗನಕಮಲಕುಸುಮ ಪರಿಣಾಮದೊಳಗೆ ಪರಿಣಾಮಿ ನೋಡಾ !
ತಾನೆಂಬುದ ಹುಸಿ ಮಾಡಿ, ಲಿಂಗಜಂಗಮ ದಿಟವೆಂದುಸಕಲ ಸುಖಭೋಗಂಗಳನರ್ಪಿಸಿದ.
ಗುಹೇಶ್ವರಾ [ಅದು], ನಿಮ್ಮ ಶರಣ ಬಸವಣ್ಣಂಗಲ್ಲದೆ
ಇನ್ನಾರಿಗೂ ಅಳವಡದು./1260
ಮಂಜರನೇತ್ರದಲ್ಲಿ ಉಭಯಚಂದ್ರರ ಕಾಬವರಾರೊ?
ಕಂಡುದ ದಶರವಿ ಕರದಲ್ಲಿ ಪಿಡಿದು
ಅಗ್ನಿಮುಖಕ್ಕೆ ಸಲಿಸುವರಲ್ಲದೆ, ಲಿಂಗಮುಖಕ್ಕೆ ಸಲಿಸುವರಾರೊ ?
ತದನಂತರ ಪ್ರಾಣಲಿಂಗಕ್ಕೆ ಕೊಟ್ಟು ಕೊಂಬಲ್ಲಿ
ನಿರಂತರ ಸಾವಧಾನಿ ಗುಹೇಶ್ವರಾ-ನಿಮ್ಮ ಪ್ರಸಾದಿ./1261
ಮಂಡೆ ಮರ…………..ಹರಿದು ಹೊರಳಿದಡೆ,
ದಂಡೆಯ ಕಟ್ಟಿದ ಗಂಡ ನಗೆಗೆಡೆಯಾದಡೆ,
ಗೌರಿ ರಂಡೆ ಕಾಣಾ ಗುಹೇಶ್ವರಾ/1262
ಮಂತ್ರವ ಕಲಿತಡೇನು ?
ಪುರಶ್ಚರಣೆಯ ಮಾಡಿದಲ್ಲದೆ ಸಿದ್ಧಿಸದು.
ಮದ್ದನರಿದು ಫಲವೇನು ?
ಪ್ರಯೋಗಿಸಿಕೊಂಡಲ್ಲದೆ ಮಾಣದು.
ಲಿಂಗವನರಿದಡೇನು ?
ನೆನೆದಲ್ಲದೆ ಸಿದ್ಧಿಸದು ಕಾಣಾ ಗುಹೇಶ್ವರಾ./1263
ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ ?
ಸೈದಾನವ(ಸುಯಿಧಾನವ ?)ನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ !/1264
ಮಜ್ಜನಕ್ಕೆರೆವಡೆ ಭೂತವಿಕಾರ. ಪ್ರಮಥ ಗಣಂಗಳೆಲ್ಲರೂ ಪ್ರೇತರು.
ವೀರಭದ್ರ ಗಣಂಗಳೆಲ್ಲರೂ ಬ್ರಹ್ಮರಾಕ್ಷಸರು.
ಅರ್ಧನಾರೀಶ್ವರರೆಲ್ಲರೂ ಚಿಕ್ಕಮಕ್ಕಳ ಮೇಲೆ, ತಪ್ಪ ಸಾದಿಸಿ ಕಾಡಿ ಉಂಬರು.-
ಈ ನಾಲ್ಕು ಸ್ಥಾನದೊಳಗೆ ಆವುದೂ ಅಲ್ಲ
ಗುಹೇಶ್ವರಾ ನಿಮ್ಮ ಲಿಂಗೈಕ್ಯವು !/1265
ಮಜ್ಜನಕ್ಕೆರೆವಡೆ; ನೀನು ಶುದ್ಧ ನಿರ್ಮಲದೇಹಿ.
ಪೂಜೆಯ ಮಾಡುವಡೆ; ನಿನಗೆ ಗಗನಕಮಲಕುಸುಮದ ಅಖಂಡಿತಪೂಜೆ.
ಧೂಪದೀಪಾರತಿಗಳ ಬೆಳಗುವಡೆ; ನೀನು ಸ್ವಯಂ ಜ್ಯೋತಿಪ್ರಕಾಶನು.
ಅರ್ಪಿತವ ಮಾಡುವಡೆ; ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆಗಳ ಮಾಡುವಡೆ; ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಗಳ ಮಾಡುವಡೆ;
ನಿನಗೆ ಅನಂತನಾಮಂಗಳಾದವು ಗುಹೇಶ್ವರಾ./1266
ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು?
ಮುದ್ರಾಧಾರಿಗಳಪ್ಪರಯ್ಯಾ.
ಲಿಂಗದಲ್ಲಿ ನಿಷ್ಠೆಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ
ವೇಷಧಾರಿಗಳಪ್ಪರಯ್ಯಾ.
ಲಾಂಛನ ನೋಡಿ ಮಾಡುವ ಭಕ್ತಿ, ಸಜ್ಜನಸಾರಾಯವಲ್ಲ,
ಗುಹೇಶ್ವರ ಮೆಚ್ಚನಯ್ಯಾ./1267
ಮಠವೇಕೋ ಪರ್ವತವೇಕೋ ಜನವೇಕೋ ನಿರ್ಜನವೇಕೋ
ಚಿತ್ತ ಸಮಾಧಾನವುಳ್ಳ ಶರಣಂಗೆ ?
ಮತ್ತೆ-ಹೊರಗಣ ಚಿಂತೆ ಧಾನ್ಯ ಮೌನ ಜಪತಪವೇಕೊ;
ತನ್ನ ತಾನರಿದ ಶರಣಂಗೆ ಗುಹೇಶ್ವರಾ ?/1268
ಮಣಿಯನೆಣಿಸಿ ಕಾಲವ ಕಳೆಯಬೇಡ.
ಕಣಿಯ ಪೂಜಿಸಿ ದಿನವ ಕಳೆಯಬೇಡ.
ಕ್ಷಣವಾದಡೆಯೂ ಆಗಲಿ ನಿಜದ ನೆನಹೆ ಸಾಕು.
ಬೆಂಕಿಯಲುಳ್ಳ ಗುಣ ಬಿಸಿನೀರಲುಂಟೆ ಗುಹೇಶ್ವರಾ ?/1269
ಮಣ್ಣಿಲ್ಲದ ಹಾಳ ಮೇಲೆ, ಕಣ್ಣಿಲ್ಲದಾತ ಮಣಿಯ ಕಂಡ,
ಕೈಯಿಲ್ಲದಾತ ಪವಣಿಸಿದ, ಕೊರಳಿಲ್ಲದಾತ ಕಟ್ಟಿಕೊಂಡ !
ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ ?/1270
ಮಣ್ಣಿಲ್ಲದ ಹಾಳಿನ ಮೇಲೆ
ಕಣ್ಣಿಲ್ಲದ ಕುರುಡನೊಂದು ರತ್ನವ ಕಂಡ.
ಕೈಯಿಲ್ಲದವ ತಕ್ಕೊಂಡ, ಕೊರಳಿಲ್ಲದವ ಧರಿಸಿಕೊಂಡ.
ಗಂಡನಿಲ್ಲದ ಬಾಲೆ ಆರು ಮಕ್ಕಳ ಹಡೆದು,
ಗುಹೇಶ್ವರನೆಂಬಂತರತೊಟ್ಟಿಲ ಕಟ್ಟಿ, ತಾಯಿಯೆದ್ದು ಆಡುವಾಗ
ಮಗನೆದ್ದು ಮೊಲೆಯ ಕೊಡುತಿರ್ದ.
ಆದ ಕಂಡು ಬೆರಗಾದ ನಮ್ಮ ಗುಹೇಶ್ವರನು./1271
ಮತಿಯೊಳಗೆ ದುರ್ಮತಿ ಹುಟ್ಟಿ, ಕಲಿ ಗಸಣಿಗೊಳಗಾದ ಪರಿಯ ನೋಡಾ !
ಜ್ಞಾನವನು ಅಜ್ಞಾನ ಬಂದು ನುಂಗಿದಡೆ,
ಭಾನು ಗ್ರಹಣಕ್ಕೆ ಒಳಗಾದಂತೆ ಆದುದಲ್ಲಾ !
ಕ್ಷೀರವುಳ್ಳ ಪಶು ಕರುವನಗಲಿ ಅರಿಯದ ಮೋಹದಂತಿದ್ದುದಲ್ಲಾ.
ಹೇಳುವಲ್ಲಿ ಯುಕ್ತ ಕೇಳುವಲ್ಲಿ ಮುಕ್ತನೆಂಬುದೆಲ್ಲವೂ,
ಅಜ್ಞಾನಭಾವಕ್ಕೆ ಬಂದುದಲ್ಲಾ !
ನೀರ ಮೇಲಣ ಲಿಪಿಯ ಓದಬಲ್ಲವರುಂಟೆ ? ಸಾರಾಯ ವೇದ್ಯರಿಗಲ್ಲದೆ ?
ಕನ್ನಡಿಯೊಳಗೆ ನೋಡೆ ಬಿನ್ನವಿದ್ದುದೆ ಅಯ್ಯಾ ?
ತನ್ನಕಣ್ಣಿಂಗೆ ಕಾಣದಂತೆ ಇದ್ದಿತ್ತು
ದರ್ಪಣದೊಳಗಣ ಬೆಳಗು.
ಬೆಳಗಿನೊಳಗಣ ಬೆಳಗು,
ಗುಹೇಶ್ವರನಿಪ್ಪೆಡೆಯ ತಿಳಿದು ನೋಡಿರೆ ! /1272
ಮತಿಯೊಳಗೊಂದು ದುರ್ಮತಿ ಹುಟ್ಟಿದ ಬಳಿಕ;
ಮತಿಯ ಮರವೆಯೊಳಕೊಂಡು,
ಭವಕ್ಕೆ ಗುರಿಮಾಡಿ ಕೆಡಹಿತ್ತು ನೋಡಾ.
ಅಖಂಡಿತವ ತಂದು ಮತಿಯೊಳಗೆ ವೇದಿಸಲು,
ಗತಿಗೆಟ್ಟು ನಿಂದಿತ್ತು ಗುಹೇಶ್ವರಾ. /1273
ಮತ್ರ್ಯಲೋಕದ ಕವಿಗಳೆಲ್ಲರೂ ಎನ್ನ ತೊತ್ತಿನ ಮಕ್ಕಳು.
ದೇವಲೋಕದ ಕವಿಗಳೆಲ್ಲರೂ ಎನ್ನ ಕರುಣದ ಕಂದಗಳು
ಹಿಂದೆ ಮುಂದೆ ಆಡುವ ಕವಿಗಳೆಲ್ಲರೂ ಲೆಂಕ ಡಿಂಗರಿಗರು
ಹರಿ ಬ್ರಹ್ಮ ರುದ್ರ ಈ ಮೂವರೂ ಎನ್ನ ಕಕ್ಷೆಯ ಒಕ್ಕಲು
ಗುಹೇಶ್ವರಾ ನೀ ಮಾವ ನಾನಳಿಯ./1274
ಮತ್ರ್ಯಲೋಕದ ಮಾನವರು;
ದೇಗುಲದೊಳಗೊಂದು ದೇವರ ಮಾಡಿದಡೆ,
ಆನು ಬೆರಗಾದೆನು.
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜೆಯ ಮಾಡಿಸಿ,
ಭೋಗವ ಮಾಡುವರ ಕಂಡು ನಾನು ಬೆರಗಾದೆನು.
ಗುಹೇಶ್ವರಾ ನಿಮ್ಮ ಶರಣರು, ಹಿಂದೆ ಲಿಂಗವನಿರಿಸಿ ಹೋದರು./1275
ಮಥನದ ಲೀಲೆಯಲ್ಲಿ ಹುಟ್ಟುವುದೇ ಬ್ರಹ್ಮವು ?
ಶ್ರುತಿ ಸ್ಮೃತಿಗಳಿಗೆ ಅಳವಡದು ನೋಡಾ !
ಪೃಥ್ವಿಯೊಳಗಿಲ್ಲದ ಅಚಲವಪ್ಪ ಘನವನು,
ಸಚರಾಚರದಲ್ಲಿ ಭರಿತವೆಂತೆಂಬೆ ?
ಇಲ್ಲದ ಲಿಂಗವನಲ್ಲಲ್ಲಿಗೆ ಉಂಟುಮಾಡುವ
ಈ ಲೀಲೆಯ ವಾರ್ತೆ ಎಲ್ಲಿಯದೊ ಗುಹೇಶ್ವರಾ ?/1276
ಮದ್ದ ನಂಬಿಕೊಂಡಡೆ ರೋಗ ಮಾಣದಿಪ್ಪುದೆ ?
ಸಜ್ಜನಿಕೆಯುಳ್ಳಡೆ ಪ್ರಸಾದಕಾಯ ಕೆಡುವುದೆ ?
ಪ್ರಾಣ, ಲಿಂಗವಾದಡೆ ಪ್ರಾಣ ಬೇರಪ್ಪುದೆ ?
ಪ್ರಾಣಲಿಂಗ ಪ್ರಸಾದವನು ತಿಳಿದು ನೀವು ನೋಡಿರೆ,
ನಾದ ಬಿಂದು ಸೂಸದ ಮುನ್ನ, ಆದಿಯ ಪ್ರಸಾದವ ಭೇದಿಸಿಕೊಂಡರು-
ಗುಹೇಶ್ವರಾ ನಿಮ್ಮ ಶರಣರು./1277
ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ-ನೀವು ಕೇಳಿರೆ.
ಮದ್ಯವಲ್ಲದೇ(ವೇ?)ನು ಅಷ್ಟಮದಂಗಳು ?
ಮಾಂಸವಲ್ಲದೇ(ವೇ?)ನು ಸಂಸಾರಸಂಗ ?
ಈ ಉಭಯವನತಿಗಳದಾತನೆ, ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು./1278
ಮನ ಉಂಟೆ ಮರುಳೆ ಶಿವಯೋಗಿಗೆ ?
ಮತ್ತೊಂದು ಮನಮಗ್ನ ಉಂಟೆ ಶಿವಯೋಗಿಗೆ ?
ಇಲ್ಲದ ಮನವ ಉಂಟೆಂದು ನುಡಿದು, ಅಡಗಿಸಿದೆನೆಂಬ ಮಾತು
ಮನವ ನೆಲೆಮಾಡಿ ತೋರುತ್ತದೆ.
ಗುಹೇಶ್ವರನ ಅರಿದ ಶರಣಂಗೆ
ತೋರಲಿಲ್ಲ ಅಡಗಲಿಲ್ಲ ಕೇಳಾ./1279
ಮನ ಬಸಿರಾದಡೆ ಕೈ ಬೆಸಲಾಯಿತ್ತ ಕಂಡೆ !
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ !
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ !
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ !
ಒಂದು ನೀಲದೊಳಗೆ ಮೂರುಲೋಕವಡಗಿತ್ತ ಕಂಡೆ, ಗುಹೇಶ್ವರಾ,/1280
ಮನ ಮನ ಒಂದಾಗಿ ಅರಿವು ಸಯವಾದ ಬಳಿಕ
ಕೊಂಡಾಡಲಿಕ್ಕೆ ಇಂಬುಂಟೆ ಹೇಳಾ ? ಶಬ್ದಕ್ಕೆ ತೆರಹಿಲ್ಲ !
ಗುಹೇಶ್ವರಲಿಂಗದಲ್ಲಿ ಬೆರಸಿ, ಬೇರಿಲ್ಲ ಕಾಣಾ ಸಂಗನಬಸವಣ್ಣಾ./1281
ಮನ ಮನ ಒಂದಾಗಿ ತನು ತನು ಒಂದಾಗಿ ಬೆರಸಿದ ಬಳಿಕ,
ಕರೆಯಲಿಲ್ಲ ಕಾಲುವಿಡಿಯಲಿಲ್ಲ ಎಂದು ಅರಿದವರು,
ಉಪಚರಿಸಿ ಬರಹೇಳಿದಡೆ ಅದೆ ಕೊರತೆ ನೋಡಾ !
ಅಂಗದ ಕೈಯಲ್ಲಿ ಕ್ರೀ ಇರಲು ಮಾತಿನಲ್ಲಿ ಅದ್ವೈತವೆಂತಪ್ಪುದೊ ?
ಆಗಾಗದ ಮುನ್ನವೆ ತಾನಾದೆನೆಂಬವರಲ್ಲಿಗೆ
ನಮ್ಮ ಗುಹೇಶ್ವರಲಿಂಗವು ಅಡಿಯಿಡುವನಲ್ಲ. /1282
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ
ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ
ಕೆಲದಲ್ಲಿದ್ದವರಿಗೆ ಅರಿಯಬಹುದೆ ?
ನಿಜಗುಣಭರಿತ ಶಿವಶರಣರ ನಿಲವ
ಕಂಡಿಹೆನೆಂದಡೆ ಕಾಣಬಹುದೆ ?/1283
ಮನ ಮನ ಬೆರಸಿದವರೆಂತಿಪ್ಪರಂತಿಪ್ಪರು.
ಅವರ ಪರಿಯನರಿಯಬಾರದು ಕೇಳಾ.
ಇದಿರಿಚ್ಛೆಯರಿಯದಿಪ್ಪರು.
ಒಳಗೆ ನೋಡಿದರೆ ಬಟ್ಟಬಯಲಲ್ಲಿಪ್ಪರು.
ಗುಹೇಶ್ವರನ ಶರಣರು ತಾವಿಲ್ಲದ ಮಹಿಮರೆಂಬುದ
ನಿನ್ನಿಂದಲರಿದೆ ನೋಡಾ ಸಿದ್ಧರಾಮಯ್ಯಾ./1284
ಮನ ಮನವ (ಘನವ?) ಬೆರಸಿದನುಭಾವ
ಘನಕ್ಕೆ ಘನ ಒಂದಾಯಿತ್ತು ನೋಡಾ !
ಅದು ತನ್ನಲ್ಲಿ ತಾನು ತೃಪ್ತಿಯಾದ ನಿಜವು (ನಿಲವು?)
ನಿರ್ಣಯದ ಮೇಲೆ ನಿರ್ಧರವಾಯಿತ್ತು ನೋಡಾ.
ಗುಹೇಶ್ವರಲಿಂಗದಲ್ಲಿ,
ಚನ್ನಬಸವಣ್ಣನಿಂದ ಸುಖಿಯಾದೆನು./1285
ಮನ ಮುಕ್ತಿ ವಿವೇಕವೆಂಬ ಅಕ್ಕಿಯನು ಗುಪಿತವೆಂಬ ಒರಳೊಳಗಿಕ್ಕಿ
ಅಬಿನ್ನಮಥನವೆಂಬ ಒನಕೆಯಲ್ಲಿ ಥಳಿಸಿ ಕಲ್ಮಷವೆಂಬ ತಾಡ ಹಾರಿಸಿ,
ಸಮತೆಯೆಂಬ ಸಲಿಲದಲ್ಲಿ ಜಾಳಿಸಿ, ಅಳುಪು ಎಂಬ ಹರಳ ಕಳೆದು
ದಯಾಮೃತವೆಂಬ ಹಾಲಿನಲ್ಲಿ ಬೋನವ ಮಾಡಿ
ಸಮರಸ ರುಚಿಕರದಿಂದ ಶಾಕಪಾಕಂಗಳಂ ಮಾಡಿ
ನೆನಹಿನ ಲವಲವಕಿಯೆ ಅಬಿಗಾರವಾಗಿ
ನಿರ್ಮಲವೆಂಬ ಶಿವದಾನವ ಗಡಣಿಸಿ ಕಾಯ್ದಿದ್ದರಯ್ಯಾ.
ಪಂಚೇಂದ್ರಿಯವೆಂಬ ಸೊಣಗ ಮುಟ್ಟದಂತೆ ಕಾಯ್ದಿದ್ದರಯ್ಯಾ.
ಷಡುವರ್ಗವೆಂಬ ತೊತ್ತಿರು ಮುಟ್ಟದಂತೆ ಕಾಯ್ದಿದ್ದರಯ್ಯಾ.
ಅಷ್ಟಮದವೆಂಬ ಮಕ್ಕಳು ಮುಟ್ಟದಂತೆ ಕಾಯ್ದಿದ್ದರಯ್ಯಾ.
ಇನಿತು ಮುಖ್ಯವಾದ ಹೀನಂಗಳಾವೂ ಮುಟ್ಟದಂತೆ ಕಾಯ್ದಿದ್ದರಾಗಿ,
ಈ ಬೋನ ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು, ಕಾಣಾ
ಚೆನ್ನಬಸವಣ್ಣಾ. /1286
ಮನ ಮುಟ್ಟದ ಮಜ್ಜನ ತನು ತಾಗದ ದೇಹಾರ,
ಭಾವ ತಾಗದ ಪೂಜೆ, ಎದೆ ತಾಗದ ನೋಟ
ವಾಯು ತಾಗದ ನಲಿಂಗದಫರಠಾವ ತೋರಾ ಗುಹೇಶ್ವರಾ./1287
ಮನ ಸಂದಲ್ಲಿ ಬೇರೊಂದು ನೆನಹುಂಟೆ ?
ನೆನಹು ನಿಷ್ಪತಿಯಾದಲ್ಲಿ ಉಭಯವೆಂಬುದಕ್ಕೆ ಒಡಲಿಲ್ಲ,
ಅದು ಸಲ್ಲದ ನೇಮ.
ಗುಹೇಶ್ವರಲಿಂಗ ಅಲ್ಲಿ ಇಲ್ಲವೆಂಬುದಕ್ಕೆ
ಅದೇ ಕುರುಹು. /1288
ಮನಕ್ಕೆ ಮನ ಏಕಾರ್ಥವಾಗಿ, ಕಾಯಕ್ಕೆ ಕಾಯ ಸಮದರ್ಶನವಾಗಿ
ಪ್ರಾಣಕ್ಕೆ ಪ್ರಾಣ ಸಮಕಳೆಯಾಗಿ ಇದ್ದವರಲ್ಲಿ-
ಮನ ವಚನ ಕಾಯದಲ್ಲಿ ಶಬ್ದಸೂತಕ ಹುಟ್ಟಿದಡೆ
ಸೈರಿಸಬಾರದು ಕೇಳಾ.
ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಭಕ್ತನಾದ ಕಾರಣ,
ಮುಳಿಸು ಮೊಳೆದೋರಿತ್ತು ಕಾಣಾ ಸಂಗನಬಸವಣ್ಣಾ./1289
ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ.
ತನುವಿನಲ್ಲಿ ಸುಖವ ಧರಿಸಿಕೊಂಡಡೆ, ಆ ತನುವಿಂಗೆ ಕೊರತೆ ನೋಡಾ.
ಅರಿವನರಿದು ಸುಖವಾಯಿತ್ತೆಂದಡೆ,
[ಆ] ಅರಿವಿಂಗೆ ಭಂಗ ನೋಡಾ-ಗುಹೇಶ್ವರಾ./1290
ಮನದ ಕತ್ತಲೆಯೊಳಗಣ ಜ್ಯೋತಿಯ ಕೊನೆಯ[ಮೊನೆಯ]ಮೇಲೆ
ಘನವನರಿದೆವೆಂಬರ ಅನುಮಾನಕ್ಕೆ ದೂರ.
ತಮತಮಗೆ ಅರಿದೆವೆಂಬರು,-ಕನಸಿನಲಿಂಗ ಗುಹೇಶ್ವರಾ./1291
ಮನದ ಕಾಲತ್ತಲು ತನುವಿನ ಕಾಲಿತ್ತಲು.
ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು.
ಲಿಂಗ ಮುಖದಲಾದ ಸೂಚನೆಯ ಸುಖವ ಕಂಡು ಗಮನ ಕೆಟ್ಟಿತ್ತು.
ಅನುವಾಯಿತ್ತು ಅನುವಾಯಿತ್ತು, ಅಲ್ಲಿಯೆ ತಲ್ಲೀನವಾಯಿತ್ತು-
ಗುಹೇಶ್ವರನೆಂಬ ಲಿಂಗೈಕ್ಯಂಗೆ/1292
ಮನದ ಕೊನೆಯ ಮೊನೆಯ ಮೇಲೆ ನೆನೆದ ನೆನಹು
ಜನನ ಮರಣವ ನಿಲಿಸಿತ್ತು.
ಜ್ಞಾನಜ್ಯೋತಿಯ ಉದಯ ಭಾನುಕೋಟಿಯ ಮೀರಿ,
ಸ್ವಾನುಭಾವದ ಉದಯ ಜ್ಞಾನಶೂನ್ಯದಲಡಗಿದ
ಘನವನೇನೆಂಬೆ ಗುಹೇಶ್ವರಾ !/1293
ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು ?
ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ,
ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ ?
ಗುಹೇಶ್ವರಾ, ನಿಮ್ಮ ಶರಣರು,
ಬಾರದ ಭವದಲ್ಲಿ ಬಂದ ಕಾರಣ-ಸುಖಿಗಳಾದರಯ್ಯಾ./1294
ಮನದ ಸುಖವ ಕಂಗಳಿಗೆ ತಂದರೆ,
ಕಂಗಳ ಸುಖವ ಮನಕ್ಕೆ ತಂದರೆ,
ನಾಚಿತ್ತು, ಮನ ನಾಚಿತ್ತು.
ಸ್ಥಾನಪಲ್ಲಟವಾದ ಬಳಿಕ ವ್ರತಕ್ಕೆ ಭಂಗ ಗುಹೇಶ್ವರಾ./1295
ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ
ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ,
ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ.
ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ./1296
ಮನಬೀಸರವೆಂಬ ಗಾಳಿ ಬೀಸಿತ್ತು, ವಿದ್ಯಾಮುಖದ ಜ್ಯೋತಿ ನಂದಿತ್ತು.
ಕತ್ತಲೆಯಲ್ಲಿ ಗತಿಯ ಕಾಣದೆ ದುಮ್ಮಾನ ನೆಲೆಗೊಂಡಿತ್ತು.
ಸುಮ್ಮಾನ ಹೋಯಿತ್ತು.
ಸಕಳಕಲಾವಿದ್ಯಾಗುರುವಲ್ಲಾ! ಮತಿತಾಳವೆಂಬ ಗುಹ್ಯತಾಗಿ,
ಸುತಾಳವೆಂಬ ಶರಣಸಂಗದಲ್ಲಿ ಬಿದ್ದು,
ಗುರುವಿಂಗೆ ಪ್ರಸಾದವಾದುದು, ಶಿಷ್ಯಂಗೆ ಓಗರವಾದುದು ನೋಡಾ!
ಲಾಕಿಕಕಾಯಕ ನರಕ (ಲಾಕಿಕ ನಾಯಕನರಕ?)
ಅರ್ಪಿತಮುಖವನರಿಯದೆ, ಅನರ್ಪಿತಮುಖವಾಯಿತ್ತು ಗುಹೇಶ್ವರ/1297
ಮನಮಗ್ನವೆಂತಿರ್ಪುದು ಅಂತೆ ಇರಬೇಕಲ್ಲದೆ
ಮತ್ತೊಂದು ಮನವೆಂಬುದುಂಟೆ ಹೇಳಾ ?
ಅರಿದು ಮರೆದುದ ಅರಿದು ನುಡಿದು
ಮರೆದೆನೆಂಬ ಜ್ಞಾನ (ಅಜ್ಞಾನ?) ವುಂಟೆ ?
ಗುಹೇಶ್ವರಲಿಂಗವು ನೆರೆ ಅರಿದೆನೆಂಬಲ್ಲಿ
ಮನವ ಮರೆಮಾಡಿ ಕಾಡುವನು. /1298
ಮನವ ತೊಳೆದು ನಿರ್ಮಲವ ಮಾಡಿಹೆನೆಂಬ ಯೋಗವೆಂತುಟೊ ?
ಮನವ ಹಿಡಿದು ತಡೆದಿಹೆನೆಂಬವರ
ಮರುಳುಮಾಡಿ ಕಾಡಿತ್ತು ನೋಡಾ ಮನವು !
ಮನ ವಿಕಲ್ಪಜ್ಞಾನದಿಂದರಿದು,
ಅದ ಶುದ್ಧವ ಮಾಡಿಹೆನೆಂಬುದು ತಾನೆ ಮನ ನೋಡಾ.
ನಮ್ಮ ಗುಹೇಶ್ವರಲಿಂಗದ ಅನುವನರಿದಿಹೆನೆಂಬವರು,
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ./1299
ಮನವ ಮರೆದು ಮಾಡಿದಡೆ ಲಿಂಗರೂಪವಾಯಿತ್ತು.
ಧನವ ಮರೆದು ಮಾಡಿದಡೆ ಜಂಗಮರೂಪವಾಯಿತ್ತು.
ತನುವ ಮರೆದು ಮಾಡಿದಡೆ ಪ್ರಸಾದರೂಪವಾಯಿತ್ತು.
ಇಂತೀ ತ್ರಿವಿಧವನರಿದು ಮಾಡಿದಡೆ ಬಯಲು ರೂಪವಾಯಿತ್ತು.
ಮನವನರಿಯನಾಗಿ, ಲಿಂಗವನರಿತ.
ಧನವನರಿಯನಾಗಿ ಜಂಗಮವನರಿತ.
ತನುವನರಿಯನಾಗಿ ಪ್ರಸಾದವನರಿತ-
ಈ ತ್ರಿವಿಧಸುಖವ ಮರೆದನಾಗಿ ಬಯಲೆಂದರಿತ.
ಮನವ ಲಿಂಗ ಒಳಕೊಂಡಿತ್ತು.
ಧನವ ಜಂಗಮ ಒಳಕೊಂಡಿತ್ತು.
ತನುವ ಪ್ರಸಾದ ಒಳಕೊಂಡಿತ್ತು.
ಇಂತೀ ತ್ರಿವಿಧರೂಪವನು ಬಯಲು ಒಳಕೊಂಡಿತ್ತು ಗುಹೇಶ್ವರಾ./1300
ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ ?
ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು ?
ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ
ಅರಿವುದಿನ್ನಾರನು ಗುಹೇಶ್ವರಾ ?/1301
ಮನಸುಖವನರಿಯನಾಗಿ ಲಿಂಗವೆಂದರಿದನು.
ಧನಸುಖವನರಿಯನಾಗಿ ಜಂಗಮವೆಂದರಿದನು.
ತನುಸುಖವನರಿಯನಾಗಿ ಪ್ರಸಾದವೆಂದರಿದನು.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣ
ಸ್ವಯಲಿಂಗವಾದ ಕಾರಣ./1302
ಮರನುಳ್ಳನ್ನಕ್ಕ ಎಲೆ ಉಲಿವುದು ಮಾಬುದೆ ?
ಶರೀರವುಳ್ಳನ್ನಕ್ಕ ವಿಕಾರ ಮಾಬುದೆ ?
ಅಯ್ಯಾ ಸುಳುಹುಳ್ಳನ್ನಕ್ಕ ಸೂತಕ ಹಿಂಗೂದೆ
ಗುಹೇಶ್ವರಾ ?/1303
ಮರನೊಳಗಣ ಕಿಚ್ಚು ಮರನಸುಟ್ಟಂತಾದೆನಯ್ಯಾ.
ಬಯಲ ಗಾಳಿಯ ಪರಿಮಳ ನಾಸಿಕವನಪ್ಪಿದಂತಾದೆನಯ್ಯಾ.
ಕರುವಿನ ಬೊಂಬೆಯನುರಿಯುಂಡಂತಾದೆನಯ್ಯಾ.
ಗುಹೇಶ್ವರನೆಂಬ ಲಿಂಗವ ಪೂಜಿಸಿ ಭವಗೆಟ್ಟೆನಯ್ಯಾ./1304
ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು, ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ./1305
ಮರಹು ಬಂದಹುದೆಂದು ಶ್ರೀಗುರು ಕರಸ್ಥಲಕ್ಕೆ ಕುರುಹ ಕೊಟ್ಟಡೆ;
ಆ ಕುರುಹು ನೋಟದಲ್ಲಿ ಅಳಿದು,
ಆ ನೋಟ ಮನದಲ್ಲಿ ಅಳಿದು,
ಆ ಮನ ಭಾವದಲ್ಲಿ ಅಳಿದು,
ಆ ಭಾವ ಜ್ಞಾನದಲ್ಲಿ ಅಳಿದು,
ಆ ಜ್ಞಾನ ಸಮರಸದಲ್ಲಿ ಅಳಿದ ಬಳಿಕ-
ಇನ್ನು ಅರಿವ ಕುರುಹಾವುದು ಹೇಳಾ ?
ನೀನರಸುವ ಕುರುಹು ಎನ್ನ ಕರಸ್ಥಲದ ಲಿಂಗ,
ಎನ್ನ ಕರಸ್ಥಲ ಸಹಿತ ನಾನು ನಿನ್ನೊಳಗೆ ನಿರ್ವಯಲಾದೆ.
ಎನ್ನ ನಿರ್ವಯಲಲಿಂಗ ನಿನಗೆ ಸಾಧ್ಯವಾಯಿತ್ತಾಗಿ;
ನೀನೇ ಪರಿಪೂರ್ಣನಯ್ಯಾ.
ನಿನ್ನಲ್ಲಿ ಮಹಾಲಿಂಗವು ಸಾಧ್ಯವಾಗಿ ಅದೆ.
ಗುಹೇಶ್ವರ ಸಾಕ್ಷಿಯಾಗಿ,
ನೀ ಬಯಸುವ ಬಯಕೆ ಸಂದಿತ್ತು ಕಾಣಾ ಸಂಗನಬಸವಣ್ಣಾ./1306
ಮರುಳುಂಡ ಮನುಷ್ಯನ ಇರವಿನ ಪರಿಯಂತೆ,
ವಿವರವನರಿಯಬಾರದು ನೋಡಾ,-ಶಿವಜ್ಞಾನ.
ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು.
ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು !
ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು;
ನಿಸ್ಸೀಮಸುಖಿಗಳು ನೋಡಾ. /1307
ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ !
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು,
ಅಗಣಿತಗಣಂಗಳೆಲ್ಲರ ಹಿಡಿತಂದು,
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,
ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮರೆದು ತೋರಿ,
ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ
ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು.
ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು,
ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ !
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ./1308
ಮಲಿನ ದೇಹಕ್ಕೆ ಮಜ್ಜನವಲ್ಲದೆ, ನಿರ್ಮಲದೇಹಕ್ಕೆ ಮಜ್ಜನವೇಕೊ ?
ಉಂಟೆ ವಿಷಯ ಲಿಂಗ ನಿಷ್ಪತಿಯಾದ ಶರಣಂಗೆ ?
ಆಗಮ್ಯ ಅಗೋಚರ ಅಪ್ರಮಾಣ ಗುಹೇಶ್ವರಾ-ನಿಮ್ಮ ಶರಣ./1309
ಮಸಿಯಿಲ್ಲದ ಗೂಡಿನೊಳಗೆ
ಹೊಸಬಣ್ಣದ ಪಕ್ಷಿಯ ಗೂಡನೈದೆ ಭಸ್ಮವ ಮಾಡಿ ನುಂಗಿ,
ಶಿಶು ತಾಯ ಬೆಸಲಾಗಲಾ ತಾಯಿ ಶಿಶುವನೆ ನುಂಗಲಾ ಶಿಶು
ಕೋಪದಿಂದಲಾ ತಾಯ ಐದೆ ನುಂಗಿ,
ಹೊಸ ದೇಶದಿಂದೊಬ್ಬನಾರಯ್ಯ ಬಂದಾತ ಪೆಸರಿಲ್ಲದಂತಿಪ್ಪರನೈದೆ ನುಂಗಿ,
ಬಸವ ಚೆನ್ನಬಸವ ಅನುಮಿಷ ಗುಹೇಶ್ವರ ಸಹಿತವಾಗಿ
ಶಿಶುವಿನ ಕರಸ್ಥಲದಲ್ಲಿ ಸುಖಿಯಾದರು./1310
ಮಹಾಘನವೆ ತಾನಾದ ಬಳಿಕ ಪುಣ್ಯವಿಲ್ಲ, ಪಾಪವಿಲ್ಲ;
ಸುಖವಿಲ್ಲ, ದುಃಖವಿಲ್ಲ;
ಕಾಲವಿಲ್ಲ, ಕರ್ಮವಿಲ್ಲ;
ಜನನವಿಲ್ಲ, ಮರಣವಿಲ್ಲ;
ಗುಹೇಶ್ವರಾ ನಿಮ್ಮ ಶರಣಂಗೆ ! ಆತ ಮಹಾಮಹಿಮ ನೋಡಯ್ಯಾ./1311
ಮಹಾಜ್ಞಾನದೊಳಗೆ ಪರಮಾನಂದ ನಿಜಬಿಂದು.
ಆ ನಿಜದೊಳಗೆ ಪರಮಾಮೃತ ತುಂಬಿ,
ಮೊದಲ ಕಟ್ಟೆಯೊಡೆದು ನಡುವಳ ಕಟ್ಟೆಯನಾಂತುದು,
ಮೊದಲ ಕಟ್ಟೆಯು, ನಡುವಳ ಕಟ್ಟೆಯು ಒಡೆದು,
ಕಡೆಯ ಕಟ್ಟೆಯನಾಂತುದು,
ಮೊದಲ ಕಟ್ಟೆಯು, ನಡುವಳ ಕಟ್ಟೆಯು,
ಕಡೆಯ ಕಟ್ಟೆಯು ಕೂಡಿ ಕಟ್ಟೆ ಕಟ್ಟೆಯನಾಂತುದು.
ಈ ಮೂರು ಕಟ್ಟೆಯೊಡೆದ ಮಹಾಜಲವನು ಪರಮ ಪದವಾಂತುದು.
ಆ ಪರಮ ಪದದಲ್ಲಿ ಎರಗಿ,
ನಾನು ಪಾದೋದಕ ಸಂಬಂದಿಯಾಗಿ,
ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ./1312
ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು
ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು !
ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು.
ರಂಜನೆಗೊಳಗಪ್ಪುದೆ ? -ಆಗರದ ಸಂಚವನರಿಯರು !
ರಂಜಕನೂ ಅಲ್ಲ, ಭುಂಜಕನೂ ಅಲ್ಲ,
ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು !/1313
ಮಹಾಮೇರುವಿನ ಮರೆಯಲ್ಲಿರ್ದು,
ಭೂತದ ನೆಳಲನಾಚರಿಸುವ ಕರ್ಮಿ, ನೀ ಕೇಳಾ,
ಆ ಮಹಾಲಿಂಗಕ್ಕೆ ಮಜ್ಜನವೆಂದೇನೊ ?
ಪರಿಮಳಲಿಂಗಕ್ಕೆ ಪತ್ರಪುಷ್ಪಗಳೆಂದೇನೊ ?
ಜಗಜ್ಯೋತಿಲಿಂಗಕ್ಕೆ ಧೂಪದೀಪಾರತಿಗಳೆಂದೇನೊ ?
ಅಮೃತಲಿಂಗಕ್ಕೆ ಆರೋಗಣೆಯೆಂದೇನೊ ?
ಗುಹೇಶ್ವರಲಿಂಗದಂತುವ ಬಲ್ಲವರಾರೊ ?/1314
ಮಹಾಲಿಂಗಕ್ಕೆ ಮಜ್ಜನವೆಂದರೇನು ?
ಪರಿಮಳದ ಲಿಂಗಕ್ಕೆ ಪತ್ರಿಪುಷ್ಪವೆಂದರೇನು ?
ಜಗಜ್ಯೋತಿ ಲಿಂಗಕ್ಕೆ ದೀಪಾರತಿ ಎಂದರೇನು ?
ಅಮೃತಲಿಂಗಕಾರೋಗಣೆ ಎಂದರೇನು ?
ಗುಹೇಶ್ವರಲಿಂಗದಂತುವ ಬಲ್ಲವರಾರೊ ?/1315
ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು,
ಬಯಲ ಸಮರಸದೊಳಗೆ ಬಯಲ ಬಯಲಾಗಿಪ್ಪವರಾರು ಹೇಳಾ
ಬಸವಣ್ಣನಲ್ಲದೆ ?
ತನ್ನ [ಅ?] ಬಿನ್ನವ ಮಾಡಿ ಅನ್ಯವೇನೂ ಇಲ್ಲದೆ
ತನ್ನ ತಾ ಮರೆದಿಪ್ಪವರಾರು ಹೇಳಾ
ಬಸವಣ್ಣನಲ್ಲದೆ ?
ಗುಹೇಶ್ವರಾ ನಿಮ್ಮ ಶರಣ ಸಂಗಬಸವಣ್ಣನ ನಿಲವಿಂಗೆ
ನಮೋ ನಮೋ ಎಂಬೆನು./1316
ಮಾಡಿದ ಓಗರ ಮಾಡಿದಂತಿದ್ದಿತ್ತು,
ನೀಡಿದ ಕೈಗಳೆಡೆಯಾಡುತ್ತಿರ್ದವು.
ಲಿಂಗಕರ್ಪಿತವ ಮಾಡಿದೆವೆಂಬರು.
ಒಂದರಲೊಂದು ಸವೆಯದು ನೋಡಾ.
ಲಿಂಗವಾರೋಗಣೆಯ ಮಾಡಿದನೆಂಬರು,
ತಾವುಂಡು ನಿಮ್ಮ ದೂರುವರು ಗುಹೇಶ್ವರಾ. /1317
ಮಾಡಿಹೆ ಮಾಡಿಹೆನೆಂಬನ್ನಬರ
ತನ್ನ ಅವದಿಗೆ ಬಂದುದನು ಅರಿವ ಪರಿ ಇನ್ನೆಂತೊ ?
ಅಗಸ ನೀರಡಿಸಿ ನಿಂದಂತೆ ಆಗಬೇಡ ಮಾರಯ್ಯಾ,
ಗುಹೇಶ್ವರಲಿಂಗವ ಅರಿವುದಕ್ಕೆ. /1318
ಮಾಡುವ ಭಕ್ತನಲ್ಲಿ ಕೂಡಿಪ್ಪ ಜಂಗಮವು.
ಖೋಡಿಗಳೆವುತ್ತಿಪ್ಪರು ಒಬ್ಬರನೊಬ್ಬರು,
ತಮ್ಮವರ ತಾವರಿಯದಖಂಡಿತರು.
ಒಡಲ ಗುಣಧರ್ಮದಿಂದ ಅನ್ನಾಸನ ಪಂಕ್ತಿಗೆ
ಹೋರುವವರಿಗೇಕೆ ಶಿವನ ವೇಷ ?
ಜಂಗಮವೆನಿಸಿಕೊಳ್ಳವೆ ಚರಾಚರವೆಲ್ಲವು ?
ಅರಸನ ಹೆಸರಿನಲ್ಲಿ ಕರೆಯಿಸಿಕೊಂಡ ಅನಾಮಿಕನಂತೆ
ನಾಮ ರೂಪ ಇರ್ದಡೇನಾಯಿತ್ತು ? ಅಲ್ಲಿ ಶಿವನಿಲ್ಲ !
ಎಲ್ಲಾ ಅವನಿಯಲ್ಲಿ ಹೇಮವಿಪ್ಪುದೆ ? ಇಪ್ಪುದೊಂದುಠಾವಿನಲ್ಲಿ.
ಪರಮನ ವೇಷಕ್ಕೆ ತಕ್ಕ ಚರಿತ್ರವುಳ್ಳಲ್ಲಿ ಶಿವನಿಪ್ಪನು.
ಅದೆಂತೆಂದಡೆ : `ಧಾರಯೇತ್ ಸಮತಾಕಂಥಾಂ ಕ್ಷಮಾಖ್ಯಾಂ ಭಸ್ಮಘುಟಿಕಾಂ
ದಯಾ ಕಮಂಡಲಮೇವ ಜ್ಞಾನದಂಡೋ ಮನೋಹರಃ
ಬಿಕ್ಷಾಪಾತ್ರಂ ಚ ವೈರಾಗ್ಯಭಕ್ತಿಬಿಕ್ಷಾಂ ಚ ಯಾಚಯೇತ್ ‘ ಎಂದುದಾಗಿ
ಅರಿವಿನ ವೇಷವ ಜ್ಞಾನದಲ್ಲಿ ಧರಿಸಿ, ಕುರುಹಿನ ವೇಷವ ಅಂಗದಲ್ಲಿ ಧರಿಸಿ`ಭಕ್ತಿಬಿಕ್ಷಾಂದೇಹಿ’ ಆದ ಅರಿವುಮೂರ್ತಿಗೆ ವೇಷವು ತಾ ಬೇಡ,
ಗುಹೇಶ್ವರಲಿಂಗದ ಆಣತಿಯುಂಟಾಗಿ./1319
ಮಾಡುವ ಮಾಟದಿಂದವೆ ಬೇರೊಂದ ಅರಿಯಬೇಕು
ಅರಿವಿಂಗೆ ನೆಮ್ಮುಗೆ ಒಡಗೂಡಬೇಕು.
ಅರಿವಿಂಗೆ ನೆಮ್ಮುಗೆ ಒಡಗೂಡಿದ ಬಳಿಕ
ಬಯಲ ಭ್ರಮೆಯ ಕಳೆದು
ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪದವನೆಯ್ದುವುದು ಮಾರಯ್ಯಾ./1320
ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳೋಷ್ಠಸಂಪುಟವೆಂಬುದು ನಾದಬಿಂದುಕಳಾತೀತ.
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ./1321
ಮಾನವ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು.
ತಾಳುದ್ದ (ತಾಳ ಮರದುದ್ದ ?)ವೆರಡು ಕೋಡು ನೋಡಾ !
ಆದನರಸ ಹೋಗಿ ಆರುದಿನ, ಅದು ಕೆಟ್ಟು ಮೂರುದಿನ !
ಅಘಟಿತ ಘಟಿತ ಗುಹೇಶ್ವರಾ, [ಅರಸುವ ಬಾರೈ]/1322
ಮಾಮರದೊಳಗೊಂದು ಮಾಯದ ಮಂಜು ಕವಿದಡೆ,
ಹೂ ಮಿಡಿ ಫಲಂಗಳು ಉದುರವಿನ್ನೆಂತೊ ?
ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ,
ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ./1323
ಮಾಯದ ಕೈಯಲಿ ಓಲೆ ಕಂಠವ ಕೊಟ್ಟಡೆ,
ಲಗುನ ವಿಗುನವ ಬರೆಯಿತ್ತು ನೋಡಾ
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ,
ಅದು ಸಿರಿಯ ಸಿಂಗಾರವಾಯಿತ್ತು ನೋಡಾ.
ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದ ಅಗಲಿತ್ತು ನೋಡಾ-ಗುಹೇಶ್ವರಾ./1324
ಮಾಯದ ಬಲೆಯಲ್ಲಿ ಸಿಲುಕಿದ ಮರುಳ ನಾನೆಂದರಿದ ಪರಿಯ ನೋಡಾ !
ಲಿಂಗವೆಂದರಿದ ಪರಿಯ ನೋಡಾ !
ತನ್ನ ವಿನೋದಕ್ಕೆ ಬಂದು (ದ?) ನಿಶ್ಚಿಂತ ನಿರಾಳ
ಗುಹೇಶ್ವರನೆಂದರಿದ ಪರಿಯ ನೋಡಾ./1325
ಮಾಯಾಮಂಜಿನ ಜಲ ಉಕ್ಕಿ ಸಂಸಾರಕ್ಕೆ ಬೀಜವಾಗಿ
ಘಟಾನುಘಟಿತರ ಲಯಜನನವ ತನ್ನೊಳಗೆ ಮಾಡಿಸಿ
ಕುಂಜರ ಬಂದು ಸಿಂಹಾಸನವ ಸೀಳಿದಂತೆ
ನಿನ್ನಂಗದಲ್ಲಿ ನಿನ್ನನೆ ಕೊಲುವುದಾಗಿ-
ರಂಜನೆಗೆ ಸಿಲುಕುಗೊಳಿಸಿ ಮಂಜಿನ ರಂಜಕನ ಮಾಡದ ಮುನ್ನ
ನಿರಂಜನನಾಗು ಕಂಡಾ ನೀನು !
ನೀನಂಜದೆ ನೆನೆ ಕಂಡಾ ಗುಹೇಶ್ವರನ./1326
ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ? ನಿಜವು ಬರಿದೆ ಸಾಧ್ಯವಪ್ಪುದೆ ?
ಮರುಳೆ, ಗುಹೇಶ್ವರಲಿಂಗವನರಿಯ ಬಲ್ಲಡೆ,
ನಿನ್ನ ನೀ ತಿಳಿದು ನೋಡಾ./1327
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ,
ಮೀಯದೆ ಮೀನು ? ಮೀಯದೆ ಮೊಸಳೆ ?
ತಾ ಮಿಂದು, ತನ್ನ ಮೀಯದನ್ನಕ್ಕರ
ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ ?/1328
ಮುಂಡಧಾರಿಯ ತಲೆ ಮುಂದೆ ಬರ್ಪುದ ಕಂಡೆ.
ಜಟಾಧಾರಿಯ ತಲೆ ನಡೆದು ಹೋಯಿತ್ತ ಕಂಡೆ.
ಖಂಡಕಪಾಲಿಯ ಖಂಡವ ಕೊಯಿತ್ತ ಕಂಡೆ.
ಬಾಲಬ್ರಹ್ಮಚಾರಿಯ ಬಾರನೆತ್ತಿತ್ತ ಕಂಡೆ.
ಭಕ್ತರೆಲ್ಲರೂ ಸತ್ತು ನೆಲಕ್ಕಿಕ್ಕಿತ್ತ ಕಂಡೆ.
ಗುಹೇಶ್ವರಾ ನೀ ಸತ್ತು ಲಿಂಗವಾಯಿತ್ತ ಕಂಡೆ./1329
ಮುಂದಳೂರಿಗೆ ಬಟ್ಟೆ ಇದೇ ಹೋಗೆಂದಡೆ
ಅಂಧಕನೇನು ಬಲ್ಲನು ಹೇಳಾ ?
ಸಂಗ್ರಾಮದಲ್ಲಿ ಓಡಿದ ಹೆಂದೆ ಗೆಲಬಲ್ಲನೆ ಹೇಳಾ ?
ನಿಂದ ನಿಲವಿನ (ನೀರಿನ ?) ಮಡುವ ಕಂದನೀಸಾಡ ಬಲ್ಲನೆ ಹೇಳಾ ?
ಗುಹೇಶ್ವರನೆಂಬ ನಿರಾಳದ ಘನವ
ಪಂಚೇಂದ್ರಿ[ಯ]ಕನೆತ್ತ ಬಲ್ಲನು ಹೇಳಾ?/1330
ಮುಂದು ಜಾವದಲೆದ್ದು, ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ ಶಿವಭಕ್ತರ ಮುಖವ ನೋಡುವುದು.
ಹುಟ್ಟಿದುದಕ್ಕೆ ಇದೇ ಸಫಲ ನೋಡಾ,
ಸತ್ಯವಚನವಿಂತೆಂದುದು-ಇವಿಲ್ಲದವರ ನಾನೊಲ್ಲೆ ಕಾಣಾ ಗುಹೇಶ್ವರಾ./1331
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ
ಅರಿವಿಂಗೆ ಅರಿವಾಗಿಪ್ಪ ಭೇದ ಕಾಣಬಂದಿತ್ತು ನೋಡಾ !
ಅರಿವರಿತು ಮರಹು ನಷ್ಟವಾಗಿಪ್ಪುದು ನಿನ್ನಲ್ಲಿ ಸನ್ನಹಿತವಾಗಿತ್ತು.
ಗುಹೇಶ್ವರನ ಶರಣ ಅಜಗಣ್ಣನ ನಿಲವು
ಬಯಲ ಬೆರಸಿದ ಮರೀಚಿಯಂತಾಯಿತ್ತು,
ಬೆರಸಿ ನೋಡಾ ಬೇರಿಲ್ಲದೆ !/1332
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ
ಅರಿವಿಂಗೆ ಅರಿವಾಗಿಪ್ಪ ಭೇದವು
ಎನಗೆ ಕಾಣಬಂದಿತ್ತು ನೋಡಾ.
ನಿನ್ನ ಒಳಗ ಒರೆದು ನೋಡಿದಡೆ,
ಒರೆದೊರೆಯಿಲ್ಲದ ಚಿನ್ನದ ಪರಿಮಳ ಎನ್ನ ಮನವನಾವರಿಸಿ
ಪರಮಸುಖದ ಪರಿಣಾಮವನು ಒಳಕೊಂಡಿತ್ತು ನೋಡಾ.
ಈ ಕುರುಹಿನ ಮೊಳೆಯ
ಬರಿಯ ಬಯಲಲ್ಲಿ ನಿಲಿಸಿ ನೋಡಿ ಕೂಡಾ,
ನಮ್ಮ ಗುಹೇಶ್ವರನ ಶರಣ ಅಜಗಣ್ಣನೊಳಗೆ
ನೀನು ನಿರಾಳಸಂಗಿಯಾಗಿ./1333
ಮುಖಮಧ್ಯದಲ್ಲಿ ನೇತ್ರ,
ನೇತ್ರ ಮಧ್ಯದಲ್ಲಿ ಮನ,
ಮನೋ ಮಧ್ಯದಲ್ಲಿ ತಾನು ತಾನಲ್ಲದೆ,
ಮತ್ತೊಂದು ಸಾಕಾರವಿಲ್ಲದಂತಹುದು ತಾರಕಬ್ರಹ್ಮವು
ಗುಹೇಶ್ವರಾ./1334
ಮುಗಿಲ ಬಣ್ಣದ ಪಕ್ಷಿ ಮಗನ ಕೈಯ ಅರಗಿಳಿ,
ಗಗನನ[ದ] ಕೋಲಂಬಿನಲ್ಲಿ ಸ್ವಪ್ನದ ನಿಲವನು ತೆಗೆದೆಚ್ಚವನಾರೊ ?
ಉಪಮಿಸಬಾರದು !
ಜಾಗ್ರ ಸ್ವಪ್ನ ಸುಷುಪ್ತಿಯ ನಡುವೆ ತ್ರಿಜಗವಾಯಿತ್ತು.
ಜಗಜ್ಯೋತಿ, ನಿನ್ನ ಮಾಯೆಯನೇನೆಂಬೆನು ಗುಹೇಶ್ವರಾ./1335
ಮುಗಿಲನೆಚ್ಚ ಕೋಲು ಮುಗಿಲ ಮುಟ್ಟದೆ ಮರಳಿ ಬಿದ್ದಂತೆ,
ಏರಿ ಜಾರಿ ಬೀಳುವ ಪ್ರಾಣಿಗಳು ಅತ್ತಲಾರು ಬಲ್ಲರೊ ?
ಹೊನ್ನು ಹೆಣ್ಣು ಮಣ್ಣೆಂಬ ಬಲೆಯಲ್ಲಿ ಬಿದ್ದವರು ಅತ್ತಲಾರು ಬಲ್ಲರೊ ?
ಗುಹೇಶ್ವರಾ, ನಿಮ್ಮ ಬಂದಿವಿಡಿದು ಸಯಬಂದಿಯಾದೆನು !/1336
ಮುಟ್ಟದ ಮುನ್ನ ನರರು, ಸುರರು, ಕಿನ್ನರರು
ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ
ಅಡಗಿದರಾಗಿ
ನಾನವರ ರೂಪಿಸಬಲ್ಲೆ.
ದೇವಗಣ ಪ್ರಮಥಗಣ, ರುದ್ರಗಣಂಗಳೆಂಬವರೆಲ್ಲರೂ
ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ,
ನಾನವರ ಭಾವಿಸಬಲ್ಲೆ.
ಸತ್ಯರು, ನಿತ್ಯರು, ಮುಕ್ತರೆಂಬ ಮಹಾಮಹಿಮರೆಲ್ಲರೂ
ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ,
ನಾನವರನರಿದು ಬಲ್ಲೆ.
ಇಂತೀ ತ್ರಿಭಾಂಡವನೊಳಕೊಂಡ ಆ ಅಖಂಡಿತದಿರವೆ
ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ,
ಭಾವಿಸಲಿಲ್ಲಾಗಿ, ಅರಿಯಲಿಲ್ಲ.
ಅರಿವೆ ತಾನೆಂದರಿದ ಬಳಿಕ, ಗುಹೇಶ್ವರನೆಂಬುದು
ಬಯಲು ನೋಡಾ !/1337
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು,
ಅದೆಂತೆಂದಡೆ:
ನೀವೆನ್ನ ವಂಶೀಭೂತರಾದ ಕಾರಣ-ನಿಮ್ಮ ಹೆಚ್ಚು ಕುಂದು ಎನ್ನದಾಗಿ,
ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ,
ನಿಮ್ಮ ಹಾನಿವೃದ್ಧಿ ಎನ್ನದಾಗಿ.
ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ?
ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ,
ಅಡಿಗಲ್ಲನೊಡ್ಡಿ ಹೋದಬಳಿಕ
ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ !
ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ
ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ,
ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ
ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು !
ಅದೆಂತೆಂದಡೆ, ಶಿವರಹಸ್ಯದಲ್ಲಿ:
“ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾದಿಕಂ
ನಿರ್ದೆಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ
ಇಂತೆಂಬ ಶ್ರುತ್ಯರ್ಥವ ಕೇಳದೆ,
ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ,
ಇದಕ್ಕೆ ಮತ್ತೆಯೂ ಶ್ರುತಿ:
“ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ
ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ
ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು
ಕೋಪ ತಾಪಮಂ ಬಿಟ್ಟು,
ಭ್ರಾಂತು ಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ.
ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ
ಭವ ಹಿಂಗದು ಕಾಣಾ ಗುಹೇಶ್ವರಾ./1338
ಮುನ್ನ ಎಂತಾಯಿತ್ತು ? ಆಗದಡೆಂತಾಯಿತ್ತು ?
ತನ್ನ ತಾನು ಅರಸುತ್ತಿದ್ದಿತ್ತು.
ತನ್ನ ಬಚ್ಚಿಟ್ಟ ಬಯಕೆಯ ನಿಧಾನವ ಕಂಡು
ತಾನೆ ಮಹವೆಂದು ತಿಳಿದು ನೋಡಾ.
ಗುಹೇಶ್ವರಲಿಂಗ ತನ್ನುವ ತನ್ನಂತೆ ಮಾಡಿತ್ತು./1339
ಮುನ್ನಿನ ಪರಿಯಂತುಟಲ್ಲ.
ಆದಡೆಂತಹುದು? ಆಗದಡೆಂತಾಯಿತ್ತು ? (ಆದಡಿಂತಹುದೆ ? ಆಗದಡಿಂತಾಯಿತ್ತು)
ಹಲವು ಪರಿ ಬಗೆಯ ಬಯಕೆ ತಾರ್ಕಣೆಯಾದಂತೆ
ಗುಹೇಶ್ವರಲಿಂಗ, ತನುವ ತನ್ನತ್ತಲೊಯ್ದನು./1340
ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ,
ಕಸವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ,
ಅನ್ನ ಉದಕ ಹೊನ್ನು ವಸ್ತ್ರವುಳ್ಳ ದೊರೆಯ ಬಾಗಿಲಲ್ಲಿ
ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು.
ಗುಹೇಶ್ವರಾ, ನಿಮ್ಮ ಶರಣರು ಆಶಾಪಾಶವಿರಹಿತರು !/1341
ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲರಿಯರು !
ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಲರಿಯರು !
ಐದರ ಮುಸುಕ ತೆಗೆದು ಐದರ ಕಳೆಯ ಕೆಡಿಸಿ,
ಐದರ ನಿಲವನಡಗಿಸಿ ಮೂರುಸಂಕಲೆಯ ಕಳದು
ಮೂರರ ಮುದ್ರೆಯನೊಡದು ಒಂದುಮುಖವಾಗಿನಿಂದಲ್ಲದೆ
ಜಂಗಮವಾಗಲರಿಯರು ಕಾಣಾ ಗುಹೇಶ್ವರಾ./1342
ಮೂರರಲ್ಲಿ ಮುಟ್ಟಲಿಲ್ಲ, ಆರರಲ್ಲಿ ತೋರಲಿಲ್ಲ.
ಎಂಟರಲ್ಲಿ ಕಂಡುದಿಲ್ಲ ಒಂದರಲ್ಲಿ ನಿಂದುದಿಲ್ಲ.
ಏನೆಂದೆಂಬೆ ? ಎಂತೆಂದೆಂಬೆ ?
ಕಾಯದಲ್ಲಿ ಅಳಿದುದಿಲ್ಲ ಜೀವದಲ್ಲಿ ಉಳಿದುದಿಲ್ಲ,
ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ/1343
ಮೂರು ಪುರದ ಹೆಬ್ಬಾಗಿಲೊಳಗೊಂದು ಕೋಡಗನ ಕಟ್ಟಿರ್ದುದ ಕಂಡೆ.
ಅದು ಕಂಡಕಂಡವರನೇಡಿಸುತ್ತಿದ್ದಿತ್ತು ನೋಡಾ!
ಆ ಪುರದರಸು ತನ್ನ ಪಾಯದಳ ಸಹಿತ ಬಂದಡೆ,
ಒಂದೆ ಬಾರಿ ಮುರಿದು ನುಂಗಿತ್ತ ಕಂಡೆ.
ಆ ಕೋಡಗಕ್ಕೆ ಒಡಲುಂಟು ತಲೆಯಿಲ್ಲ.
ಕಾಲುಂಟು ಹೆಜ್ಜೆಯಿಲ್ಲ, ಕೈಯುಂಟು ಬೆರಳಿಲ್ಲ.
ಇದು ಕರಚೋದ್ಯ ನೋಡಾ,
ತನ್ನ ಕರೆದವರ ಮುನ್ನವೆ ತಾ ಕರೆವುದು!
ಆ ಕೋಡಗ ತನ್ನ ಬಸುರಲ್ಲಿ ಬಂದ ಮದಗಜದ ನೆತ್ತಿಯನೇರಿ,
ಗಾಳಿಯ ದೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
ವಾಯದ ಗಗನದ ಮೇಲೆ ತನ್ನ ಕಾಯವ,
ಪುಟನೆಗೆದು ತೋರುತ್ತಿಹುದ ಕಂಡೆ !
ಹತ್ತು ಮುಖದ ಸರ್ಪನ ತನ್ನ ಹೇಳಿಗೆಯೊಳಗಿಕ್ಕಿ,
ಆಡಿಸುತ್ತಿಹುದ ಕಂಡೆ !
ಐವರು ಕೊಡಗೂಸುಗಳ ಕಣ್ಣಿಂಗೆ,
ಕನ್ನಡಕವ ಕಟ್ಟುತಿಹುದ ಕಂಡೆ!
ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ,
ಹುಬ್ಬೆತ್ತುತ್ತಿಹುದ ಕಂಡೆ !
ಆ ಕೋಡಗದ ಕೈಯೊಳಗೆ ಮಾಣಿಕವ ಕೊಟ್ಟರೆ,
ನೋಡುತ್ತ ನೋಡುತ್ತ ಬೆರಗಾದುದ ಕಂಡೆ !
ಕೂಡಲಿಲ್ಲ ಕಳೆಯಲಿಲ್ಲ;
ಗುಹೇಶ್ವರ[ನ]ನಿಲುವು, ಪ್ರಾಣಲಿಂಗಸಂಬಂಧವಿಲ್ಲದವರಿಗೆ ಕಾಣಬಾರದು./1344
ಮೂರುಲೋಕಕೊಂದು ಪುಷ್ಪ !
ಆ ಪುಷ್ಪದ ಬಂಡ ಉಣಬಂದ ತುಂಬಿಯ ನೋಡಾ !
ತುಂಬುತ್ತ ಕೆಡಹುತ್ತಲೈದಾವೆ ಅವು ತಮ್ಮ ಪೂರ್ವಜನ್ಮಂಗಳಿಗೆ !
ಅದಕ್ಕೆ ಇಕ್ಕಿದೆನು ಒರೆಯ,
ಕಟ್ಟಿದೆನು ತೊಡರ,
ಓಡದ ಬಿರುದು ಗುಹೇಶ್ವರಾ./1345
ಮೂರುಲೋಕದ ದಿರೆ ನಿದ್ರಾಂಗನೆ,
ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯ ಮಾಡಿ,
ಕಟ್ಟಿ ಕೆಡಹಿದಳಲ್ಲಾ !
ಇವಳ ಗೆಲುವ ದಿರನಾರುವನೂ ಕಾಣೆ
ಇವಳ ಬಾಣಕ್ಕೆ ಗುರಿಯಾಗಿ
ಏಳುತ್ತ ಬೀಳುತ್ತಲಿದ್ದರು ಎಲ್ಲರೂ-ಗುಹೇಶ್ವರಾ./1346
ಮೂಲ ಮಂತ್ರವ ಕರ್ಣದಲ್ಲಿ ಹೇಳಿ
ಶ್ರೀ ಗುರು ಶಿಷ್ಯನಂಗದ ಮೇಲೆ ಲಿಂಗ ಪ್ರತಿಷ್ಠೆಯ ಮಾಡಿದ ಬಳಿಕ
ತನುವಿನೊಳಗೆ ಲಿಂಗ ಬೇರಿಪ್ಪುದೆಂಬ
ವ್ರತಗೇಡಿಯ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ?
ಮಲಮೂತ್ರದ ಹೇಸಿಕೆಯೊಳಗೆ,
ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣನ ತಂದು, ತನ್ನ ಇಷ್ಟಲಿಂಗದಲ್ಲಿರಿಸಿ
ನೆರೆಯಬಲ್ಲರೆ ಆತನೆ ಪ್ರಾಣಲಿಂಗಸಂಬಂದಿ.
ಇಷ್ಟಿಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?/1347
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ!
ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ?
ಗಗನದ ವಾಯುವ ಬೆಂಬಳಿವಿಡಿದು,
ಅಗ್ನಿಯಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ!
ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ,
ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು./1348
ಮೃಡನೆ ನಿಮ್ಮ ಪುರಾತನರ ಕಾಣುತ್ತ,
ತಡೆಯದೆ ಇದಿರೆದ್ದು ಹೊಡೆವಡೆನಾಗಿ ಬಿಡದು ನಾಚಿಕೆ.
ಸುಡಲಿಕೆನ್ನ ನುಡಿಹ,
ಸಡಿಲದೆನ್ನ ಅಹಂಕಾರ ನೋಡಯ್ಯಾ.
ಬಡಮನದವನ ಜಡಿದು ನಡೆಸಯ್ಯಾ ಗುಹೇಶ್ವರಾ./1349
ಮೇರುಗಿರಿಗಳೆಲ್ಲವೂ ಪ್ರಮಥರೊಡವೆ.
ರಜತಗಿರಿಗಳೆಲ್ಲವೂ ಪುರಾತರೊಡವೆ.
ಚತುರ್ದಶ ಭುವನವೆಲ್ಲವೂ ಲಿಂಗದೊಡವೆ.
ಪೃಥ್ವಿ ಎಂಬುದು ಕರ್ತಾರನ ಕಮ್ಮಟ ಅಚ್ಚಿನ ಮೊಳೆ ಬಾಣಸದ ಮನೆ.
ತನುಮನಧನಂಗಳೆಲ್ಲವು ನಮ್ಮ ಗುಹೇಶ್ವರಲಿಂಗದ ಸೊಮ್ಮು.
ನೀನೇನ ಕೊಟ್ಟು ಭಕ್ತನಾದೆ ಹೇಳಾ ಬಸವಣ್ಣಾ ?/1350
ಮೇರುಮಂದಿರದಲ್ಲಿ ಈರೈದರತಲೆ,
ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು.
ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು.
ವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ
ಶರಣು ಶರಣೆನುತಿದ್ದೆನು.
ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ (ಚಂದ್ರಹಾರ?) ಬೇಡಿದಡೆ
ಖಂಡಕಪಾಲದಲ್ಲಿ ಉಂಡ ತೃಪ್ತಿ,
ಅಖಂಡ ನಿರಾಳ ಗುಹೇಶ್ವರ. /1351
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,
ಆ ಧಾವತಿಯಿಂದ ಮುನ್ನಿನ ವಿಧಿ[ಯೆ] ಸಾಲದೆ ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,
ನಿಮ್ಮಿಂದ ಹೊರಗಣ ಜನವೆ ಸಾಲದೆ ?/1352
ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ !
ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ !
ತಾ ಸತ್ತು, ಹಾಲ ಕುಡಿಯ ಬಲ್ಲಡೆ,
ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !/1353
ಮೋಟರ ಮದುವೆಗೆ ಭಂಡರು ಹರೆಯ ಹೊಯ್ದು,
ಮೂಕೊರತಿಯರು ಕಳಸವ ಹೊತ್ತರಲ್ಲಾ !
`ಉಘೇ ಚಾಂಗು ಭಲಾ’ ಎಂದು ನಿಬ್ಬಣ ನೆರೆದು,
ಹೂದಂಬುಲಕ್ಕೆ ಮುನಿವರದೇಕಯ್ಯಾ ?
ತ್ರಿಜಗವೆಲ್ಲಾ ನಿಬ್ಬಣವಾಯಿತ್ತು,
ಗುಹೇಶ್ವರನನರಿಯದ ಹಗರಣವೊ !/1354
ಯುಕ್ತಿಯ ಕೇಳಿದಡೆ ಭಕ್ತಿಯ ತೋರಿದ.
ಭಕ್ತಿಯ ಕೇಳಿದಡೆ ಯುಕ್ತಿಯ ತೋರಿದ.
ನಿತ್ಯವ ಬೆಸಗೊಂಡಡೆ ಅತ್ತತ್ತಲೋಸರಿಸಿದ.
ಗುಹೇಶ್ವರನ ಶರಣ ಬಸವಣ್ಣ,
ಮರೆಗೆ ಮರೆಯನೊಡ್ಡಿ ಜಾರಿದನು.
ಬಸವಣ್ಣನ ಪರಿ ಎಂತು ಹೇಳಾ ಮಡಿವಾಳ ಮಾಚಯ್ಯಾ./1355
ಯುಗ ಜುಗವ ಬಲ್ಲೆನೆಂಬವರು,
ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು.
ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು.
ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ/1356
ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ
ಲಿಂಗವೆಂದರಿತವರಾರೊ ?
ಶಿವ ಶಿವಾ ವಾಯದಲೊದಗಿದ ಮಾಯಾವಾದಿಗಳು !
ದೇವನೆಂದರಿತವರಾರೊ ?
ಶಿವ ಶಿವಾ ಅಗ್ನಿ ತೃಣದೊಳಗಡಗಿ ಲೀಯವಾದುದ
ಗುಹೇಶ್ವರಾ ನಿಮ್ಮ ಶರಣ ಬಲ್ಲ !/1357
ಯುಗದ ಉತ್ಸಾಹವ (ಉತ್ಸವವ?) ನೋಡಿರೆ !
ಪಂಚಶಕ್ತಿಗಳಿಗೆ ಪಂಚಪ್ರಧಾನರು.
ಅವರ ಆಗುಹೋಗನು ಆ ಶರಣನೆ ಬಲ್ಲ.
ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ !
ಮೂರು ದರುಶನಕ್ಕೆ ಮುಯ್ಯಾನುವನಲ್ಲ,
ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು,
ನಿಘಂಟುಗಳೆಂಬುವಕ್ಕೆ ಭೇದಕನಲ್ಲ,
ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ.
ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ.
ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ
ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು,
ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು.
ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು.
ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ
ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು./1358
ಯೋಗ ವಿಯೋಗವೆಂಬ ಹೊಲಬ ಬಲ್ಲವರನಾರನೂ ಕಾಣೆನು.
ನವನಾಳದ ಸುಳುಹ ತಿಳಿದಹೆನೆಂಬುದು ಯೋಗವಲ್ಲ.
ಐವತ್ತೆರಡಕ್ಷರದ ಶಾಸನವ ತಿಳಿದು ನೋಡಿ,
ಹೃದಯಕಮಲಕರ್ಣಿಕೆಯಲ್ಲಿ ಸಿಲುಕಿದೆನೆಂಬುದು ಯೋಗವಲ್ಲ.
ಬಹಿರಂಗವೆಂಬಡೆ ಕ್ರಿಯಾರಹಿತ (ಬದ್ಧ?) ಅಂತರಂಗವೆಂಬಡೆ ವಾಙ್ಮನೋತೀತ
ಗುಹೇಶ್ವರನೆಂಬ ಲಿಂಗವು ಷಡುಚಕ್ರದ ಮೇಲಿಲ್ಲ ಕಾಣಾ
ಸಿದ್ಧರಾಮಯ್ಯಾ./1359
ಯೋಗ ಶಿವಯೋಗಗಳ ಹೊಲಬನರಿಯದೆ
ಯೋಗಿಗಳು ಶಿವಯೋಗಿಗಳು ಎಂದರೆ,
ಶೀಳ್ನಾಯಿ ಸಿಂಹನಾಗಬಲ್ಲುದೆ ?
ಯೋಗದ ಅಷ್ಟಾಂಗವನು, ಶಿವಯೋಗದ ಷಟ್ಸ್ಥಲವನು
ಶಿವಲಿಂಗದಲ್ಲಿ ಹುರಿಗೊಳಿಸಿದಲ್ಲದೆ
ಯೋಗ ಶಿವಯೋಗಗಳ ಹೊಲಬಿನ ನಿಲುಕಡೆಯು ನಿಲುಕದು
ಅದೆಂತೆಂದೊಡೆ:-
ಯಮ ನಿಯಮಗಳ ಗುಣಧರ್ಮಗಳನರಿತಾಚರಿಪನೆ ಭಕ್ತ
ಆಸನಗಳ ಭೇದವನರಿತಾಚರಿಪನೆ ಮಹೇಶ್ವರ
ಚರಾಚರಾತ್ಮಕವೆನಿಪ್ಪ ಪ್ರಾಣಿಗಳಿಗೆ ಲಯಸ್ಥಾನವಾದ
ಪ್ರಾಣಾಯಾಮದ ಭೇದವನರಿತಾಚರಿಪನೆ ಪ್ರಾಣಲಿಂಗಿ
ಪಂಚೇಂದ್ರಿಯ ವಿಷಯಂಗಳಲ್ಲಿ ಸಂಚರಿಪ
ಮನ-ಮಾರುತಂಗಳ ಸಂಯಮದ ನಿಗ್ರಹದ
ಪ್ರತ್ಯಾಹಾರವನರಿತಾಚರಿಪನೆ
ಪ್ರಸಾದಿ
ಇಷ್ಟಲಿಂಗಧ್ಯಾನದ ಮೂಲವನರಿತು
ಭಾವದ ಹಸ್ತದಲ್ಲಿಧರಿಸುವ ಮಹಾಲಿಂಗದ
ಧ್ಯಾನ-ಧಾರಣಗಳನರಿತಾಚರಿಪನೆ ಶರಣ
ಅಂತಪ್ಪ ಭಾವದ ಹಸ್ತದಲ್ಲಿ ಧ್ಯಾನಧಾರಣಗಳಿಂದತಂದ
ಮಹಾಲಿಂಗದಲ್ಲಿ ಕೂಡಿ ಸಮರಸವಾಗುವ
ಸಮಾದಿಯನರಿತಾಚರಿಪನೆ ಐಕ್ಯ
ಅದೆಂತೆಂದೊಡೆ: ಯೋಗಜಾಗಮೇ
“ಯಮೇನ ನಿಯಮೇನೈವಮನ್ಯೇಭಕ್ತ ಇತಿ ಸ್ವಯಂ
ಸ್ಥಿರಾಸನಸಮಾಯುಕ್ತೋ ಮಾಹೇಶ್ವರ ಪದಾನ್ವಿತಃ
ಚರಾಚರಲಯಸ್ಥಾನಂ ಲಿಂಗಮಾಕಾಶಸಂಜ್ಞಕಂ
ಪ್ರಾಣೇತದ್ಯೋಮ್ನಿ ತಲ್ಲೀನೇ ಪ್ರಾಣಲಿಂಗಿಭವೇತ್ಸುಮಾನೆ
ಪ್ರತ್ಯಾಹಾರೇಣ ಸಂಯುಕ್ತಃ ಪ್ರಸಾದೀತಿ ನ ಸಂಶಯಃ
ಧ್ಯಾನಧಾರಣ ಸಂಪನ್ನಃ ಶರಣಸ್ಥಲವಾನೆಸುದಿಃ
ಲಿಂಗೈಕ್ಯೋದ್ವೈತಭಾವತ್ಮಾ ನಿಶ್ಚಲೈಕಸಮಾದಿನಾ
ಏವಮಷ್ಟಾಂಗಯೋಗೇನ ವೀರಶೈವೋಭವೇನ್ನರಃ
ತಸ್ಮಾತ್ ಸರ್ವಪ್ರಯತ್ನೇನ ಕರ್ಮಣಾಜ್ಞಾನತೋಪಿವಾ
ತ್ವಮಪ್ಯಷ್ಟಾಂಗ ಮಾರ್ಗೆಣ ಶಿವಯೋಗೀಭವೇತ್
ಎಂಬುದಾಗಿ,
ಇಂತಪ್ಪ ಅಷ್ಟಾಂಗಯೋಗದ ಕೀಲವನು
ಷಟ್ಸ್ಥಲ, ಶಿವಯೋಗದಲ್ಲಿ, ನಿಜವೀರಶೈವನಾಗುವ
ನಿಲುವಳಿಯನರಿದು, ನಮ್ಮ ಗುಹೇಶ್ವರಲಿಂಗದಲ್ಲಿ
ನಿಬ್ಬೆರಗುಗೊಂಡವರಿಬ್ಬರು
ಶಿವಸಿದ್ದರಾಮ, ನಿಜಗುಣಶಿವಯೋಗಿಗಳು ಕೇಳಾ ಗೋರಕ್ಷಯ್ಯ./1360
ಯೋಗ ಶಿವಯೋಗವೆಂಬರು,
ಯೋಗದ ಹೊಲಬನಾರು ಬಲ್ಲರಯ್ಯಾ ?
ಹೃದಯಕಮಲ ಮಧ್ಯದಲ್ಲಿ ಭ್ರಮಿಸುವನ ಕಳೆದಲ್ಲದೆ
ಯೋಗವೆಂತಪ್ಪುದೊ ?
ಐವತ್ತೆರಡಕ್ಷರದ ಲಿಪಿಯ ಓದಿ ನೋಡಿ ತಿಳಿದಲ್ಲದೆ
ಯೋಗವೆಂತಪ್ಪುದೊ ?
ಆರುನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲಡೆ
ಅದು ಯೋಗ !
`ಸ್ಯೋಹಂ’ ಎಂಬಲ್ಲಿ ಸುಳುಹಡಗಿ ಮನ ನಷ್ಟವಾಗಿರಬಲ್ಲ ಕಾರಣ,
ಗುಹೇಶ್ವರಲಿಂಗದಲ್ಲಿ ನೀನು ಸ್ವತಂತ್ರದಿರನೆಂಬುದು
ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ./1361
ಯೋಗದಾಗೆಂಬುದ ಮುನ್ನವೆ ಹೊದ್ದದ ಯೋಗಿಯೆ ಶಿವಯೋಗಿ
ಮೂಗ ಕಂಡ ಕನಸಿನ ಸ್ನೇಹದಂತೆ,
ಮುಗ್ಧೆಯ ಮನಹರುಷದ ರತಿಯಂತೆ, ಸಂಧಾನದಂತೆ;
ನಡು ಬಟ್ಟೆಯ ಮೂರು ನಡೆಗಳಲ್ಲಿ ಬರಿಗೆಯ್ದಡೆ
ನಡೆಯೊಂದೆ ಸಸಿನ ಕಂಡಾ.
ಒಂದ ಮೂರು ಮಾಡಿದಡೆಯೂ ಒಂದೆ ಕಂಡಾ.
ಮೂರಾರಾದಡೆಯೂ ಒಂದೆ ಕಂಡಾ.
ಆರು ಮುವತ್ತಾರಾದಡೆಯೂ ಒಂದೆ ಕಂಡಾ.
ನಿನ್ನ ಅವಯವಂಗಳೆಲ್ಲ ಒಂದೆ ಕಂಡಾ.
ನಿನ್ನ ಅರಿವು ಹಲವಾದಡೆ ಅರಿವು ನಿನಗೊಂದೆ ಕಂಡಾ.
ಕತ್ತಲೆಯ ಮನೆ, ಮಾಯೆಯೆ ಕಾಡುವ ನಿದ್ರೆ.
ಜಾಗರವಾಗಿ ಕಂಗೆಡಿಸಲು, ಕಂಗಳ ಹರವರಿಯಲು,
ಮನವ ಮಣ್ಣಿಸು ಕಂಡಾ.
ಗುಹೇಶ್ವರ ತಾನಾದ ಮುಗ್ಧತನಕ್ಕೆ ಕಡೆಮೊದಲುಂಟೆ ?/1362
ಯೋಗದಾಗೆಂಬುದನಾರು ಬಲ್ಲರೊ?
ಅದು ಮೂಗ ಕಂಡ ಕನಸು !
ನಡೆವ ಬಟ್ಟೆ ಮೂರು, ನಡೆಯದ ಬಟ್ಟೆ ಒಂದೆ !
ಒಂದನೊಂಬತ್ತ ಮಾಡಿ ನಡೆದೆಹೆವೆಂಬರು
ಒಂಬತ್ತನೊಂದ ಮಾಡಿ ನಡೆದೆಹೆವೆಂಬ[ನ್ನಕ್ಕರ],
ಮೂರು ಮುಖದ ಕತ್ತಲೆ ಒಂದು ಮುಖವಾಗಿ ಕಾಡುತ್ತಿಪ್ಪುದು.
ಪ್ರಾಣಲಿಂಗಸಂಬಂಧವೆಲ್ಲಿಯದು ಹೇಳಾ ಗುಹೇಶ್ವರಾ./1363
ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ
ಭಕ್ತರೆಂತಾದಿರಿ ಭೋ !
ಭಕ್ತಿ ಷಟ್ಸ್ಥಲದ ಭೇದವ ನಿಶ್ಚೈಸಲರಿಯದೆ
ಜಂಗಮವೆಂತಾದಿರಯ್ಯಾ ?
ನಿಃ ಕಾಮಿಯಾಗಿ ನಿಃ ಪ್ರಿಯನಾಗಿ ನಿರ್ಮೊಹಿಯಾಗಿ,
ನಿರಾಶ್ರಿತನಾಗಿ ನಿಲರ್ೆಪನಾಗಿ,
ಉಭಯಗುಣ ರಹಿತನಾಗಿ,
ಸರ್ವಾಂಗದಲ್ಲಿ ನಿರ್ಮೊಹಿಯಾಗಿ,
ತನು ಮನ ಧನ ಸುಖಾದಿಗಳ ನಿರ್ವಹಿಸಿ,
ಬಂದುದನೆ ಪರಿಣಾಮಿಸಿ ಇರಬಲ್ಲಡೆ ಜಂಗಮಸ್ಥಲವಹುದು.
ಆತನೆ ಜಂಗಮವೆಂಬುದಾಗಿತ್ತಾಗಿ
ಗುಹೇಶ್ವರ ಲಿಂಗ ತಾನೆಂಬೆ./1364
ರಂಗ ಒಂದೇ ಕಂಭ ಒಂದೇ ದೇವರೊಂದೇ ದೇಗುಲ ಒಂದೇ.
ಗುಹೇಶ್ವರಾ ನಿಮ್ಮ ಮನ್ನಣೆಯ ಶರಣರ ದೇವರೆಂದೆಂಬೆ./1365
ರಂಜಕರೆಲ್ಲರು ರತ್ನವ ಕೆಡಿಸಿ ಅಂಧಕಾರದಲ್ಲಿ ಬಂದರಸುವರು.
ಅದರಂದ ತಿಳಿಯದು ಛಂದ ತಿಳಿಯದು.
ಬಂದ ಬಟ್ಟೆಯಲಿ ತೊಳಲುವರು.
ಸಂದೆಗವಿಡಿದು ಸಂದವರೆಲ್ಲ ಅಂದಂದಿಗೆ ದೂರ ಗುಹೇಶ್ವರಾ. /1366
ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ !
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು-ಇದೇನು ಹೇಳಾ ಗುಹೇಶ್ವರಾ ?/1367
ರತ್ನದೀಪ್ತಿಯಾದಡೇನು ? ಬಂದಿಸಿದ ಕುಂದಣದಲ್ಲಿಯೆ ಸಂದಿರಬೇಕು.
ಸ್ವಾದುರಸದ ರುಚಿಯನೀವ ಫಲವೆಂದಡೇನು ವೃಕ್ಷವಿಲ್ಲದನ್ನಕ್ಕರ ?
ಚಿತ್ರಸೌಂದರ್ಯ ನೋಟಕೆ ಸುಖವೆಂದಡೇನು
ಬಿತ್ತಿಯ ಪಟ ಮುಖ್ಯಸ್ಥಾನದಲ್ಲಿಲ್ಲದನ್ನಕ್ಕರ ?
ಅಂಜನ ಸಿದ್ಧಿಯಿಂ ನಿಧಾನವ ಕಂಡಡೇನು
ಸಾಧನ ಕ್ರೀಯಿಂದ ಸಾಧ್ಯವ ಮಾಡಿಕೊಳ್ಳದನ್ನಕ್ಕರ ?
ಇದು ಕಾರಣ-
ಕಾಯದ ಕರಸ್ಥಲಕ್ಕೆ ಇಷ್ಟಲಿಂಗಸಾಹಿತ್ಯವಿಲ್ಲದಿದ್ದಡೆ,
ನಿರವಯವಾದ ಜ್ಞಾನಯೋಗ ಕೂಟ ಸಾಧ್ಯವಾಗದು.
ಇದು ಕಾರಣ-
ಕ್ರಿಯಾಲಿಂಗಸಂಬಂಧವೆ ಭಕ್ತಂಗೆ ಮತವು, ಇದೇ ಕಾರಣ ದೇಹಶೌಚವು !
ನಮ್ಮ ಗುಹೇಶ್ವರನ ಶರಣರ ಮನ ಒಪ್ಪುವಂತೆ
ಸಿದ್ಧರಾಮಯ್ಯಂಗೆ ಲಿಂಗಸಾಹಿತ್ಯವ ಮಾಡಾ ಚೆನ್ನಬಸವಣ್ಣಾ./1368
ರವಿಕಾಂತಿಯ ಪ್ರಭೆ ಪಾಷಾಣವ ಕೂಡಿ ರತ್ನವೆನಿಸಿಕೊಂಬಂತೆ
ಅರಿವ ಜ್ಞಾನ ಮಾಡುವ ಸತ್ಕ್ರೀಯಿಂದಲ್ಲದೆ
ಆ ಸಾಕಾರದ ಪಟಲವು ಹರಿಯದು.
ಈ ರವಿಕಾಂತಿಯ ಪ್ರಭೆಯಿಲ್ಲದಿದ್ದಡೆ
ಆ ಪಾಷಾಣಕ್ಕೆ ರತ್ನವೆಂಬ ಕುಲ ಮುನ್ನವೇ ಇಲ್ಲ.
ರವಿಕಾಂತಿಯ ಪ್ರಭೆಯಡಗೂದಕ್ಕೆ ಪಾಷಾಣ ಹೇಂಗೆ
ಅರಿವಡಗೂದಕ್ಕೆ ಕುರುಹೆಂಬ ನಾಮ ಹಾಂಗೆ.
ಆ ಉಭಯವಡಗಿ ಕುರುಹಿಲ್ಲದಿದ್ದಡೆ ಮತ್ತೆ
ನಮ್ಮ ಗುಹೇಶ್ವರನೆಂಬ ಮಾತಿನ ಕುರುಹಿಲ್ಲದಿರಬೇಕು.
ಕಾಣಾ ಎಲೆ ಅಂಬಿಗರ ಚಾಡಯ್ಯ./1369
ರಸದ ಬಾವಿಯ ತುಡುಕಬಾರದು,
ಕತ್ತರಿವಾಣಿಯ ದಾಂಟಿದವಂಗಲ್ಲದೆ.
ಪರುಷವಿದೆ ಕಬ್ಬುನವಿದೆ ಸಾದಿಸಬಲ್ಲವಂಗೆ.
ಶ್ರೀಶೈಲದುದಕವ ಧರಿಸಬಾರದು ಗುಹೇಶ್ವರಾ-
ನಿಮ್ಮ ಶರಣಂಗಲ್ಲದೆ./1370
ರಾಗವಡಗಿ ತಾಮಸ ನಿಂದು, ಆಹಂಕಾರದ ಗಿರಿ ಉಡುಗಿ,
ಮಾತಿನ ಬಣವೆಯ ಮೆದೆಯ ಸುಟ್ಟುರುಹದೆ,
ಕಾಯ ಕರ್ಮದಲ್ಲಿ ಸವೆಯುತ್ತ, ಜೀವ ಸಕಲ ಸಂಸಾರದಲ್ಲಿ ನೋಯುತ್ತ [ಇದ್ದಡೆ]
ಮತ್ತೆ ಭಾವಶುದ್ಧವುಂಟೆ ಗುಹೇಶ್ವರಲಿಂಗಕ್ಕೆ ?/1371
ರಾಜಸಭೆ ದೇವಸಭೆಯೊಳಗೆ, ದೇವ-ರಾಜ-ಪೂಜಕರೆಲ್ಲಾ ಮುಖ್ಯರಿಗೆ,
ಗುರುವಿನ ಕರುಣ !
ಇದ ಬಲ್ಲರೆ ಅಯ್ಯಾ ಪೂಜಕರೆಲ್ಲರು ?
ಇಂತಹ ಪರಿಗಳ ಕಂಡು ಬೆರಗಾದೆ,
ಗುಹೇಶ್ವರಾ-ಇವರೆಲ್ಲ ಸಂಸಾರವ್ಯಾಪಕರು./1372
ರಾತ್ರಿಯೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗ,
ಹೆಡೆಯನೆತ್ತಿ ಆಡಿ ಕಚ್ಚಲೊಡನೆ
ಅಂಜನಸಿದ್ಧರ ಅಂಜನ ಕರಗಿತ್ತು, ಘುಟಿಕಾಸಿದ್ಧರ ಘುಟಿಕೆ ಉರುಳಿತ್ತು
ಯಂತ್ರಿಗಳ ಯಂತ್ರ ಅದ್ದಿ ಹೋಯಿತ್ತು,
ಮಂತ್ರಿಗಳ ಮಂತ್ರ ಮರೆತು ಹೋಯಿತ್ತು
ಔಷದಿಕರ ಔಷಧವನು ಆಳಿಗೊಂಡಿತ್ತು,
ಸರ್ವ ವಿದ್ಯಾಮುಖದ ಜ್ಯೋತಿ ನಂದಿತ್ತು,
ಇದರ ವಿಷವ ಪರಿಹರಿಸುವರನಾರನೂ ಕಾಣೆ.
ಈ ರಾಹುವಿನ ವಿಷಯದಲ್ಲಿ ತ್ರಿಭುವನವೆಲ್ಲ
ಮೂರ್ಛಿತವಾಗುತ್ತಿಹುದು ಗುಹೇಶ್ವರಾ/1373
ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗ-ಅಂತಹ ಆತನೊಬ್ಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಬಿಕ್ಷವ ಬೇಡಿದಾತನೊಬ್ಬ ಗಣೇಶ್ವರನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು.-
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು/1374
ರೂಪ[ನೆ] ಕಂಡರು, ನಿರೂಪ[ನ] ಕಾಣರು.
ಅನುವನೆ ಕಂಡರು, ತನುವನೆ ಕಾಣರು.
ಆಚಾರವನೆ ಕಂಡರು, ವಿಚಾರವನೆ ಕಾಣರು.
ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು,
ಕೂಡಲರಿಯದೆ ಕೆಟ್ಟರು ! /1375
ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ.
ರೂಪು ನಿರೂಪನೊಡಗೂಡುವ ಪರಿ ಎಂತು ಹೇಳಾ ?
ಅಸಂಬಂಧ ಸಂಬಂಧವಾಗಿ ಇದೆ.
ದೇಹ ಇಂದ್ರಿಯವೆಂಬ ಜಾತಿಸೂತಕವಿರಲು
ಗುಹೇಶ್ವರಲಿಂಗವ ಮುಟ್ಟಬಾರದು ಕೇಳವ್ವಾ. /1376
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು.
ಮಾತಿಂಗೆ ವೇದಿಸಿದ ಮನ ರಾಟಾಳದ ಕುಂಭದಂತೆ.
ಅದ ನೇತಿಗಳೆದು ನಿಂದಲ್ಲಿ
ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ. /1377
ರೂಪೆಂದಡೆ ನಷ್ಟ, ನಿರೂಪೆಂದಡೆ ಶೂನ್ಯ.
ರೂಪು ನಿರೂಪನತಿಗಳೆದ ರೂಪ ಕಾಬಡೆ
ಗುಹೇಶ್ವರಲಿಂಗದಲ್ಲಿ ತನ್ನ ರೂಪನತಿಗಳದು ಕಾಣಬೇಕು ಕಾಣಾ
ಸಿದ್ಧರಾಮಯ್ಯಾ./1378
ಲಿಂಗ ಒಳಗೊ ಹೊರಗೊ? ಬಲ್ಲಡೆ ನೀವು ಹೇಳಿರೆ ?
ಲಿಂಗ ಎಡನೊ ಬಲನೊ ? ಬಲ್ಲಡೆ ನೀವು ಹೇಳಿರೆ ?
ಲಿಂಗ ಮುಂದೊ ಹಿಂದೊ ? ಬಲ್ಲಡೆ ನೀವು ಹೇಳಿರೆ ?
ಲಿಂಗ ಸ್ಥೂಲವೊ ಸೂಕ್ಷ್ಮವೊ ? ಬಲ್ಲಡೆ ನೀವು ಹೇಳಿರೆ ?
ಲಿಂಗ ಪ್ರಾಣವೊ, ಪ್ರಾಣ ಲಿಂಗವೊ ?
ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು ?/1379
ಲಿಂಗ ಜಂಗಮವ ಪೂಜಿಸಿ ಭಕ್ತನಾದೆನೆಂದಡೆ
ಸದಾಚಾರವಿರಬೇಕು ನೋಡಾ.
ಆ ಸದಾಚಾರಕ್ಕೆ ಭೃತ್ಯಾಚಾರವೆ ಮೊದಲು ನೋಡಾ.
ವಿಶ್ವಾಸವುಳ್ಳ ಭಕ್ತಿಗೆ ಹೊರೆಯಿಲ್ಲ !
ಅಲಂಕಾರವೆಂಬ ಅಲಗ ಹಿಡಿದು ಮಾಡುವ ಭಕ್ತಿ ತನ್ನನೆ ಇರಿವುದು
ಗುಹೇಶ್ವರನೆಂಬ ಹಗೆಯ ಗೆಲುವಡೆ
ಅರಿವೆಂಬ ಅಲಗ ಅವಧಾನ ತಪ್ಪದೆ ಹಿಡಿಯಬೇಕು ನೋಡಾ
ಸಂಗನಬಸವಣ್ಣಾ./1380
ಲಿಂಗ ಜಂಗಮವೆಂಬ ಸಕೀಲವ ಅರಿದು
ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು
ಆ ಲಿಂಗ ಜಂಗಮದೊಳಡಗಿ,
ಆ ಜಂಗಮ ಪರಾಪರವೆಂದರಿದು ತೋರಿತ್ತು-
ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ,
ಗುಹೇಶ್ವರಾ, ನಿಮ್ಮ ಅನುವನರಿದು
ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ
ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ
ನಾನು ಬಸವಣ್ಣಂಗೆ ನಮೋ ನಮೋ ಎನುತಿರ್ದೆನು. /1381
ಲಿಂಗ ನಿಮ್ಮದಾದಡೆ ನಿಮ್ಮ ಅಂಗೈಯೊಳಗೇಕೆ ಅಡಗದು ?
ನಿಮ್ಮ ಅಂಗಮಯ ಲಿಂಗವಾದಡೆ
ಸಂಸಾರದ ಅಂಗವ ಉಲುಹೇತಕ್ಕೆ ?
ಅದು ನಮ್ಮ ಗುಹೇಶ್ವರಲಿಂಗದಲ್ಲಿ
ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ./1382
ಲಿಂಗ ನೋಡಿದರೆ ನೋಡುವ, ಲಿಂಗ ಕೇಳಿದರೆ ಕೇಳುವ,
ಲಿಂಗ ಮುಟ್ಟಿದರೆ ಮುಟ್ಟುವ, ಲಿಂಗ ರುಚಿಸಿದರೆ ರುಚಿಸುವ,
ಲಿಂಗ ವಾಸಿಸಿದರೆ ವಾಸಿಸುವ ಲಿಂಗ ಕ್ರೀಡಿಸಿದರೆ ಕ್ರೀಡಿಸುವ.
ಇಂತಪ್ಪ ಲಿಂಗ ಪ್ರಸಾದಭೋಗದಲ್ಲಿ ಪರಿಣಾಮಿ
ಗುಹೇಶ್ವರಾ ನಿಮ್ಮ ಶರಣ./1383
ಲಿಂಗ ಸೂತ್ರಾತ್ಮನೋರಪಿ, ವಿಶ್ವತಶ್ಚಕ್ಷುಂ, ಊಧ್ರ್ವರೇತಂ ವಿರೂಪಾಕ್ಷಃ,
ಪುರುಷಂ ಕೃಷ್ಣಪಿಂಗಳಂ ಋತಗ್ಂ ಸತ್ಯಂ ಪರಬ್ರಹ್ಮಂ, ಲಿಂಗಂ ಮನಂ
ತಮವ್ಯಕ್ತಮಚಿಂತ್ಯಂ, ಲಿಂಗಂ ಶಿವ ಪರಾತ್ಪರಮದಿಷ್ಠಾನಾಂ ಸಮಸ್ತಸ್ಯಂ’
ಎಂಬ ಶ್ರುತಿಯುಂಟಾಗಿ;
ಜಗವೆಲ್ಲಾ ನೇತ್ರಂಗಳಾಗಿಪರ್ಾತನು ಶಿವನೆನಲಾ ಶ್ರುತಿ
ಜಗವೆಲ್ಲಾ ನೇತ್ರಂಗಳಾಗಿದ್ದರೆ,
ನೇತ್ರಂಗಳೊಳಗೆ ಉತ್ತಮ ಮಧ್ಯಮ ಕನಿಷ್ಠಂಗಳೇಕಾದವೆಂದಡೆ,
ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶವಾಗಿ
ತನ್ನ ತಾ ತೋರದಿದ್ದಂತೆ,
ಜ್ಯೋತಿರ್ಲಿಂಗವನೆ ನೋಡಿದ ನೇತ್ರವು ಲಿಂಗನೇತ್ರವು.
ಅದೀಗ ಉತ್ತಮವು.
ಖಗಮೃಗ ಕ್ರಿಮಿಕೀಟ ಪತಂಗ ನೇತ್ರಂಗಳು
ಉಭಯ ಕರ್ಮಂಗಳಿಲ್ಲವಾಗಿ ದೃಷ್ಟಿದೋಷವಿಲ್ಲ.
ಅದು ಮಧ್ಯಮವೆನಿಸಿತ್ತು.
ಅಪವಿತ್ರಜೀವಿಗಳಾದ ಭವಿಗಳ ನೇತ್ರವು ಉಭಯ ಕರ್ಮಕ್ಕನುಕೂಲವಾದ
ಕಾರಣ,
ಚರ್ಮಚಕ್ಷುವೆಂದು ತನ್ನ ತಾನರಿಯದ ಗಾಡಾಂಧಕಾರವೆಂದು,
ವಿೂನನೇತ್ರವೆಂದು ವಿಷನೇತ್ರ ವಿಷಯನೇತ್ರವೆಂದು
ಮನ್ಮಥನ ಕೈಗೆ ಸಿಲ್ಕಿದ ನೀಲೋತ್ಪಲಬಾಣವೆಂದು,
ತಾಮಸಾಗ್ನಿಯೆಂದು, ನೇತ್ರೇಂದ್ರಿಯವೆಂದು,
ಶಿವಲಾಂಛನಧಾರಿಗಳ ಕೆಡಿಸುವ ಮಹಾಪಾತಕದೃಷ್ಟಿಯೆಂದು,
ವಿಷಯ ಗಾಳಿಯೆಂದು ಪೇಳಲ್ಪಟ್ಟಿತ್ತು.
ಅವರಿಗಿಷ್ಟಲಿಂಗಧಾರಣವಿಲ್ಲದ ಕಾರಣ, ಕನಿಷ್ಠವೆಂದು ಪೇಳಲ್ಪಟ್ಟಿತ್ತು.
ಇದು ಕಾರಣ, ಶಿವಭಕ್ತರವರ ನೋಡುವುದಿಲ್ಲ.
ಅವರು ಸುಕರ್ಮ ದುಷ್ಕರ್ಮವೆಂಬ ಮಾಯಾ ರೂಪುಗಳಂ
ಎದುರಿಟ್ಟು ನೋಡುತ್ತಿಹರಾಗಿ,
ಶಿವಾರ್ಚನೆ ಶಿವಾರ್ಪಣವಂ ಮಾಡುವುದಿಲ್ಲ.
ಅವರ ಬಹುಜನ್ಮಾಂತರದ ಮಹಾಪಾತಕಂಗಳು ಶಿವಭಕ್ತರು ತಮ್ಮ ಸೋಂಕವೆಂದು,
ಮೇರುಗಿರಿಯಂ ಪಿಡಿದು ಘೋರಾಸ್ತ್ರ ಪ್ರಯೋಗದಿಂ ದಹಿಸಿ
ಗುಹೇಶ್ವರಲಿಂಗವನೊಡಗೂಡುವರು ನೋಡಾ./1384
ಲಿಂಗಗಂಬಿರ ಸುನಾದವೆ ತನುಗುಣ ಚರಿತ್ರ
ಜಂಗಮಗಂಬಿರ ಅನಾಹತವೆ ಮನಗುಣ ಸ್ವಭಾವ.
ಈ ಎರಡರ ಸಂಬಂಧವೆ ಒಡಲು.
ಪರಮಾನಂದ ಜಲದಲ್ಲಿ ಅಲುಬಿ, ಮಹಾಪ್ರಕಾಶದಲ್ಲಿ ಆರಿಸಿ
ಅನಾಹತ ಮಥನದಲ್ಲಿ ಘಟ್ಟಿಸಿ ಆ ವಸ್ತ್ರವ ಎನಗೆ ಕೊಟ್ಟಡೆ
ಉಡದ ಮುನ್ನವೆ ಉರಿ ಹತ್ತಿತ್ತು ನೋಡಾ !
ಆ ಉರಿಯು ಕಣ್ಣಿಗೆ ಕಾಣಬಾರದು ಮನಕ್ಕೆ ನೆನೆಯಬಾರದು.
ಉರಿ ಉಂಟು ಉಷ್ಣವಿಲ್ಲದ ಆ ಸ್ವಯಂಜ್ಯೋತಿಯ
ನಿಜನಿವಾಸದಲ್ಲಿ ನಿಶ್ಚಿಂತನಾಗಿದ್ದು, ಮಡಿವಾಳನ ಕೃಪೆಯಿಂದ
ನಾನು ಬದುಕಿದೆನು ಕಾಣಾ ಗುಹೇಶ್ವರಾ./1385
ಲಿಂಗಜಂಗಮ ಒಂದೇ ಎಂದು ಕಂದೊಳಲುಗೊಂಡಿರಲ್ಲಾ!
ಮೂರೆಡೆಯ ಮುಟ್ಟಿತ್ತು ತ್ರಿವಿಧಾಚಾರ;-
ಲಿಂಗ ಒಂದೆಡೆಯಲ್ಲಿ, ಜಂಗಮ ಒಂದೆಡೆಯಲ್ಲಿ, ಪ್ರಸಾದ ಒಂದೆಡೆಯಲ್ಲಿ.
-ಇಂತು ಎಲ್ಲಿಯ ಪ್ರಸಾದವೊ ಗುಹೇಶ್ವರಾ./1386
ಲಿಂಗ-ಜಂಗಮದ ಸಂಬಂಧ ಸಯವ ಮಾಡಿಹೆನೆಂಬರು,
ಗುರು ಮುನ್ನವೊ ? ಶಿಷ್ಯ ಮುನ್ನವೊ ?
ಆವುದು ಮುನ್ನವೆಂದರಿಯರು ನೋಡಾ !
ಇದು ಕಾರಣ-ಆವ ಸಂಬಂಧವನರಿಯರು ಗುಹೇಶ್ವರಾ./1387
ಲಿಂಗದಲ್ಲಿ ಆಗಾಗಿ ಅಂಗವಿರಹಿತನಾಗಿ ಫಲವೇನಯ್ಯಾ ?
ಜಂಗಮದಲ್ಲಿ ಸನ್ನಹಿತನಾಗಿ ದಾಸೋಹವ ಮಾಡಿ ಫಲವೇನಯ್ಯಾ ?
`ನೀ’ `ನಾ’ ಎಂಬ ಭಾವ ಉಳ್ಳನ್ನಕ್ಕರ
ಜಂಗಮದಲ್ಲಿ ಸಮಯಾಚಾರಿಯಾಗಿಪ್ಪನ್ನಕ್ಕರ
ಮಾಡುವ ಭಕ್ತಿಗೆ ಬಿನ್ನವದೆ.
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣಂಗೆ
ಆಚರಣೆ ತಿಳಿಯದು ನೋಡಾ ಚೆನ್ನಬಸವಣ್ಣಾ./1388
ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಎಂದು ಅರಿದು ಮರೆದು
ಬರುದೊರೆವೋದವರು, ಜಂಗಮವನಿನ್ನು ಬೇರೆ ಅರಸಲೇಕಯ್ಯಾ ?
ಆ ಲಿಂಗದೊಳಗೆ ಜಂಗಮವ ಅರಸಿಕೊಂಬುದು.
ಲಿಂಗಾರ್ಚನೆಯ ಅವಸರಕ್ಕೆ ಜಂಗಮ ಮನೆಗೆ ಬಂದಡೆ
ಲಿಂಗಾರ್ಚನೆಯ ಮಾದು, ಜಂಗಮಕ್ಕೆ ಇದಿರೆದ್ದು ವಂದಿಸಿ
ಭಕ್ತಿಯ ಮಾಡಬಲ್ಲಾತನೆ ಭಕ್ತ.-ಆ ಜಂಗಮ ಹೊರಗಿರಲು
ಲಿಂಗಾರ್ಚನೆಯ ಮಾಡುತ್ತಿಪ್ಪಾತನೇತರ ಭಕ್ತ ?
ಜಂಗಮದ ಮುಂದೆ ಲಿಂಗವ ಕೈಯಲ್ಲಿ ಹಿಡಿದುಕೊಂಡುಸಹಪಂಕ್ತಿಯಲ್ಲಿ ಕುಳ್ಳಿರ್ದು ಪೂಜಿಸುವಾತ ಭೃತ್ಯಾಚಾರದ್ರೋಹನು.
ಆ ಭಕ್ತನ ಮನೆಯ ಹೋಗುವ ಜಂಗಮ ಅಜ್ಞಾನಿ.
ನಮ್ಮ ಗುಹೇಶ್ವರನ ಶರಣರ ಕೂಡ
ಅಹಂಕಾರವ ಹೊತ್ತಿಪ್ಪವರ ಕಂಡಡೆ
ನಾನೊಲ್ಲೆ ಕಾಣಾ ಸಂಗನಬಸವಣ್ಣಾ./1389
ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು.
ಲಿಂಗಭಕ್ತನ ಇಂಬಾವುದೆಂದರಿಯರು.
ಲಿಂಗಭಕ್ತ ಹಮ್ಮುಬಿಮ್ಮಿನವನೆ ? ಲಿಂಗಭಕ್ತ ಸೀಮೆಯಾದವನೆ ?
ಪ್ರಾಣವಿಲ್ಲದ ರೂಹು, ಒಡಲಿಲ್ಲದ ಜಂಗಮ,
ಉಳಿದುವೆಲ್ಲಾ `ಸಟೆ’ ಎಂಬೆನು ಗುಹೇಶ್ವರಾ./1390
ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೆ ಭಂಗ.
ಹಂಗು ನೋಡಾ ಹಂಗಿನ ಶಬ್ದ ನೋಡಾ !
ಕೊಡನ ತುಂಬಿದ ಹಾಲನೊಡೆಯ ಹಾಯ್ಕಿ
ಇನ್ನು ಉಡಿಗಿಹೆನೆಂದಡೆ ಉಂಟೆ ? ಗುಹೇಶ್ವರಾ ?/1391
ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೇ ಭಂಗ,
ಹಂಗು ನೋಡಾ, ಹಂಗಿನ ಶಬ್ದ ನೋಡಾ !
ಕೊಡನ ತುಂಬಿದ ಹಾಲನೊಡೆಯ ಹಾಯಿಕಿ
ಇನ್ನು ಉಡುಗಿಹೆನೆಂದಡೆ ಉಂಟೆ ಗುಹೇಶ್ವರಾ?/1392
ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ.
ಆ ಲಿಂಗವಂತ ಲಿಂಗ ಪ್ರಾಣಿಯಾಗಿಪ್ಪ.
ಇದು ಸತ್ಯ ವಚನ.
ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ
ರೌರವನರಕದಲ್ಲಿಕ್ಕುವ ಕಾಣಾ
ಗುಹೇಶ್ವರಾ./1393
ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ,
ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ.
ಸರ್ವಕಾರಣ ಲಿಂಗವಾಗಿ,
ಲಿಂಗವನೆ ಅರಿದರಿದು ಲಿಂಗಸಂಗವನೆ ಮಾಡುವೆ.
ಸಂಗಸುಖದೊಳು ಓಲಾಡುವೆ ಗುಹೇಶ್ವರಾ./1394
ಲಿಂಗವನೂ ಪ್ರಾಣವನೂ ಒಂದು ಮಾಡಿ ತೋರಿದ
ಗುರುವಿದ್ದಾನಲ್ಲಾ ಲಿಂಗವಿದ್ದಾನಲ್ಲಾ,
ಇದಕ್ಕೆ ಸಾಕ್ಷಿ ಮುಂದೆ ಜಂಗಮವಿದ್ದಾನಲ್ಲಾ-
ಈ ತ್ರಿವಿಧ ದೃಷ್ಟವ ಕಂಡು, ಬೇರೆಂಬ ಅಜ್ಞಾನಕ್ಕೆ
ನಾನು ಬೆರಗಾದೆನು ಗುಹೇಶ್ವರಾ./1395
ಲಿಂಗವಿಚಾರ ಆಚಾರದೊಳಡಗಿ,
ಆಚಾರಕ್ರಿಯೆಗಳು ಗುರುವಿನೊಳಡಗಿ
ಗುರುವೆನ್ನಂಗದೊಳಡಗಿ,
ಅಂಗ ಲಿಂಗ ನೈಷ್ಠೆಯೊಳಡಗಿ,
ಲಿಂಗನೈಷ್ಠೆಯ ಆಚರಣೆಯಾಚಾರವಾವರಿಸಿ,
ಆಚಾರದ ನಿಲವ ಗುರುಮೂರ್ತಿಯಾವರಿಸಿ,
ಗುರುಮೂರ್ತಿ ಸರ್ವಾಂಗವನಾವರಿಸಿ,
ಸರ್ವಾಂಗವ ಲಿಂಗನೈಷ್ಠೆಯಾವರಿಸಿ,
ಲಿಂಗನೈಷ್ಠೆಯ ಸಾವಧಾನವಾವರಿಸಿ,
ಸಾವಧಾನ ಸುವಿಚಾರವ ಮಹಾಜ್ಞಾನವಾವರಿಸಿ,
ಮಹಾಜ್ಞಾನದೊಳಗೆ ಪರಮಾನಂದ ನಿಜನಿಂದು,
ನಿಜದೊಳಗೆ ಪರಮಾಮೃತ ತುಂಬಿ,
ಮೊದಲ ಕಟ್ಟೆ ಒಡೆದು,
ನಡುವಣ ಕಟ್ಟೆಯನಾಂತು ನಿಂದು,
ನಡುವಣ ಕಟ್ಟೆಯು ಎರಡು ಕಟ್ಟೆಯು ಕೂಡಿ ಬಂದು ಕಟ್ಟೆಯನಾಂತುದು.
ಈ ಮೂರು ಕಟ್ಟೆಯನೊಡೆದ ಮಹಾಜಲವೆ ಪರಮಪದವಾದುದು.
ಆ ಪದದಲ್ಲಾನೆರಗಿ ಪಾದೋದಕ ಕೊಂಡೆನ್ನ ನಾನರಿಯದೆ ಹೋದೆ
ಕಾಣಾ ಗುಹೇಶ್ವರಾ./1396
ಲಿಂಗವಿಡಿದು ಅರಿವ ಅರಿವು ಅವಲ್ಲದೆ
ಗುರುವಿಡಿದು ಅರಿವ ಅರಿವು ಅರಿವಲ್ಲ.
ಗುರುವಿಡಿದು ಲಿಂಗವುಂಟೆಂಬುದು ಕಲ್ಪಿತ,
ತನ್ನಿಂದ ತಾನಹುದಲ್ಲದೆ.
ಗುಹೇಶ್ವರಲಿಂಗದಲ್ಲಿ ಹಂಗು ಹರಿಯದನ್ನಕ್ಕರ
ತಾನಾಗಬಾರದು ಕಾಣು ಚೆನ್ನಬಸವಣ್ಣಾ./1397
ಲಿಂಗವೆ ಕರಲಿಂಗವೆ ನುತಿವೆತ್ತ ಗುರುವಿತ್ತ-
ಅಂಗವೆ ತನುಕರಣ ಕಣು ಮನವು ಕರವೆನಿಸೆ
ಮಂಗಳವು ಯೋಗದೊಳು ಸಮರಸದಿ ಷಟ್ಚಕ್ರ
ಲಿಂಗೈಕ್ಯವಿರ್ವಗೆಯ ಕುಂಭಕ ಸಮಾದಿಯೊಳು ಕುಂಡಲಿಯ ಕುಣಿಕೆ ಗುಹ್ಯ.
ಲಿಂಗ ಬಿಂದುವೆ ನಾದ ಲಿಂಗವೆ ಸುಷುಮ್ನಾಗ್ರ-
ಲಿಂಗತನುವೀಡಾಡಿ ಸಂಗದೆರಕದೊಳಾಳೆ ಗುಹ್ಯತಮ ಗುಹೇಶ್ವರ./1398
ಲಿಂಗವೆ ಪ್ರಾಣ, ಪ್ರಾಣವೆ ಲಿಂಗವಾಯಿತ್ತು.
ಆ ಲಿಂಗವೆ ಲಿಂಗಾಂಗವಾಯಿತ್ತು.
ಗುಹೇಶ್ವರಲಿಂಗದಲ್ಲಿ
ಸರ್ವಾಂಗ ಪ್ರಾಣಲಿಂಗ ಸ್ವಾಯತವಾಯಿತ್ತು ಕಾಣಾ
ಚೆನ್ನಬಸವಣ್ಣಾ./1399
ಲಿಂಗಾರ್ಚನೆಯಿಲ್ಲದ ಮುನ್ನ, ಸಿಂಗಿಯನಾರೋಗಿಸಿದಿರಿ.
ಸಂಜೆ ಸಮಾದಿಗಳಿಲ್ಲದ ಮುನ್ನ ಉಂಡಿರಿ ಚನ್ನನ ಮನೆಯಲ್ಲಿ.
ಚಿತ್ರಗುಪ್ತರರಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ,
ಬೈಚಿಟ್ಟಿರಿ ಕೈಲಾಸದಲ್ಲಿ.
ನಿಮ್ಮ ಚಿಕ್ಕುಟ ಉದರದಲ್ಲಿ ಈರೇಳು ಭುವನಂಗಳೆಲ್ಲವು.
ನಿಮ್ಮ ರೋಮಕೂಪದಲ್ಲಿ ಅಡಗಿದವು;
ಪ್ರಾಣ ಅಪಾನ ವ್ಯಾನ ಉದಾನ ಸಮಾನ [ಗಳು]-ಗುಹೇಶ್ವರಾ. /1400
ಲಿಂಗಾರ್ಪಿತ ಲಿಂಗಾರ್ಪಿತ ಎಂಬರು
ನಾವು ಇದನರಿಯೆವಯ್ಯಾ.
ನಿತ್ಯತೃಪ್ತಲಿಂಗಕ್ಕೆ ಹಸಿವೆಂಬುದುಂಟೆ ?
ಶಿವಾ ಶಿವಾ ತಮ್ಮ ತಮ್ಮ ಹಸಿವ ಲಿಂಗದ ಮೇಲಿಟ್ಟು
ಉಣ್ಣದ ಲಿಂಗಕ್ಕಾಗಿ ಅರ್ಪಿತವ ಮೆರೆವರು.
ನಮ್ಮ ಗುಹೇಶ್ವರಲಿಂಗಕ್ಕೆ ಒಡಲೆಂಬುದುಳ್ಳಡೆ
ಉದರಾಗ್ನಿಯುಂಟು./1401
ಲೋಕ ಅಳುತ್ತಿದೆ,
ಇದ ಬೇಕು ಬೇಡ ಎಂಬವರ ಒಬ್ಬರನು ಕಾಣೆ.
ದೇಹವೆಂಬುದೊಂದು ವಿಮಾನವ ಮಾಡಿ
ದೇವರೆಂಬುದೊಂದು ಹೆಣನ ಮಾಡಿ ಕುಳ್ಳಿರಿಸಿ,
ದೇವರು ಸತ್ತರೂ ತಮ್ಮಡಿ ಉಳಿದಡೆ
ದೇಗುಲ ಹಾಳಾಯಿತ್ತ ನಾ ಕಂಡೆ.
ಅಂಡಜದವರೆಲ್ಲ (ಪಿಂಡಜದವರೆಲ್ಲ ?) ಮುಂಡೆಯರಾದರು
ನಿಮ್ಮ ಕಂಡವರು ಉ(ಅ?)ಳಿದರೆ ಗುಹೇಶ್ವರಾ ?/1402
ಲೋಕ ಒಂದನೆಂದಡೆ ತಾನೊಂದನೆನಬೇಡ.
ಮತ್ತಾರೇನೆಂದಡೆಯೂ ತನ್ನನೆಂದರೆನಬೇಡ.
ಭೈತ್ರಕ್ಕೆ ಬೆಂಗುಂಡನಿಕ್ಕಿದಂತಿರಬೇಕು ಹಿರಿಯರು-ಗುಹೇಶ್ವರಾ./1403
ಲೋಕದ ನಚ್ಚು ಮಚ್ಚು ಬಿಟ್ಟು ನಿಶ್ಚಿಂತವಾಯಿತ್ತು.
ಏನು ಹತ್ತಿತ್ತೆಂದರಿಯೆನಯ್ಯಾ.
ಏನು ಹೊಂದಿ(ಹೊದ್ದಿ?)ತ್ತೆಂದರಿಯೆನಯ್ಯಾ.
ಗುಹೇಶ್ವರನೆಂಬ ಗ್ರಹ ಒಳಕೊಂಡಿತ್ತಾಗಿ
ನಾನೇನೆಂದರಿಯೆನಯ್ಯಾ./1404
ಲೋಕದವರನೊಂದು ಭೂತ ಹಿಡಿದಡೆ,
ಆ ಭೂತದಿಚ್ಛೆಯಲ್ಲಿ ನುಡಿವುತ್ತಿಪ್ಪರು.
ಲಾಂಛನ ಧಾರಿ ವೇಷವ ಧರಿಸಿ, ಆಸೆಯಿಂದ ಘಾಸಿಯಾಗಲೇಕಯ್ಯಾ ?
ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವ
ಮಾನವರನೇನೆಂಬೆ ಗುಹೇಶ್ವರಾ ?/1405
ಲೋಕವಿರಹಿತ ಶರಣ, ಶರಣವಿರಹಿತ ಲೋಕ.
ಹದಿನಾಲ್ಕು ಭುವನ ಒಬ್ಬ ಶರಣನ ಕುಕ್ಷಿಯೊಳಗು.
ಅರಿವು ಮರಹಿಲ್ಲದ ಘನವು
ಗುಹೇಶ್ವರಾ ನಿಮ್ಮ ಶರಣ./1406
ಲೋಭವೆಂಬ ಮಸೆದಡಾಯುಧವನೊರೆಯುಚ್ಚಬಾರದು
ಇಂತಪ್ಪ ಕದಳಿಯಂ ಪೊಕ್ಕು ಪೊಡೆಮಾಡಿ ಮುಳ್ಮುಸೆ ಮುಟ್ಟದೆ ಕಳೆದುತ್ತರಿಸಿ
ಗುಹೇಶ್ವರನೆಂಬ ನಿಜಸಮಾದಿಯಲ್ಲಿ ನಿಂದು ಪರವಶನಾಗಿ
ನಿರಾಳಕ್ಕೆ ನಿರಾಳ ನಿರಾಳ (ಅವಿರಳ) ವಾಗಿರ್ದೆನಯ್ಯಾ./1407
ಲೋಹ ಕರಗಿ ಗುಂಡಾದಲ್ಲಿ ಕಾಯವನಿರಿಯಬಲ್ಲುದೆ ?
ಮಾತಿನ ಅದ್ವೈತದಲ್ಲಿ ನುಡಿವರೆಲ್ಲರೂ
ಗುಹೇಶ್ವರಲಿಂಗವನೆತ್ತಬಲ್ಲರು ಸಂಗನಬಸವಣ್ಣಾ ?/1408
ವಚನದ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ನೋಡಾ.
ಹೊಲಳಿ ಕಂಡವರೆಲ್ಲರು ಮೂರ್ತಿಗೊಳಗಾದರು.
ವೇದ ಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ,
ಗುಹೇಶ್ವರ ಸಾಕ್ಷಿಯಾಗಿ ಮೂರುಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯಾ./1409
ವರ ವೇಷದ ವಿಭೂತಿ ರುದ್ರಾಕ್ಷಿಯ ಧರಿಸಿಕೊಂಡು
ವೇದ ಶಾಸ್ತ್ರ ಪುರಾಣಾಗಮದ ಬಹುಪಾಠಿಗಳು
ಅನ್ನ ಹೊನ್ನು ವಸ್ತ್ರವ ಕೊಡುವನ ಬಾಗಿಲಕಾಯಿದು
ಮಣ್ಣ ಪುತ್ಥಳಿಯಂತೆ ಅನಿತ್ಯನೇಮದ ಹಿರಿಯರುಗಳು.
ಅದೆಂತೆಂದಡೆ:
ವೇದವೃದ್ಧಾ ವಯೋವೃದ್ಧಾ ಶಾಸ್ತ್ರವೃದ್ಧಾ ಬಹುಶ್ರುತಾಃ
ಇತ್ಯೇತೆ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ
ಎಲ್ಲಾ ಹಿರಿಯರುಗಳು ಲಕ್ಷ್ಮಿಯ ದ್ವಾರಪಾಲಕರಾದರಯ್ಯ.
ಅರುಹಿಂಗೀ ವಿದಿಯೇ ಗುಹೇಶ್ವರಾ./1410
ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷ್ಠೆಯ ಮಾಡುವರು.
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವರು.
ನುಡಿಯಬಾರದ ಲಿಂಗಕ್ಕೆ ಜಪಸ್ತೋತ್ರ ಪೂಜೆಯ ಮಾಡುವರು.
ಮುಟ್ಟಬಾರದ ಲಿಂಗಕ್ಕೆ ಕೊಟ್ಟು ಕೊಂಡಾಡಿಹೆವೆಂಬರು.
ಬೊಟ್ಟಿಡಲು ಎಡೆಯಿಲ್ಲದ ಲಿಂಗವ ಮುಟ್ಟಿ
ಪೂಜಿಸಿಹೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ./1411
ವಸುಧೆಯ ಮುಟ್ಟದೆ ರಸವ ಒಸರಲೀಯದೆ
ರಸದಲ್ಲಿ ಕಟ್ಟಬಲ್ಲಡೆ ಅದು ಯೋಗ.
ಹೊರಗಿದ್ದ ರಸವ ಕಟ್ಟಬಲ್ಲೆವೆಂಬರೆಲ್ಲಾ
ಅಂಜನಸಿದ್ಧರಾಗಿ ಹೋದರು.
ಸುಷುಮ್ನಸೂಕ್ಷ್ಮನಿದಿಯ ಮಧ್ಯದ ಕೂಪ ಕಂಭದ ಮೇಲೆ
ಪಂಚೇಂದ್ರಿಯವೆಂಬ ಗುಹ್ಯವ ತೊಡೆದು ರಸವ ಕಟ್ಟಬಲ್ಲ
ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು./1412
ವಸುಧೆಯಿಲ್ಲದ ಬೆಳಸು ರಾಜಾನ್ನ ಹೆಸರಿಲ್ಲದ ಓಗರ,
ವೃಷಭ ಮುಟ್ಟದ ಹಯನು,
ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆ.
ಶಿಶು ಕಂಡ ಕನಸಿನಂತೆ, ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು !/1413
ವಸ್ತುಕ ವರ್ಣಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು
ಇತ್ತಿತ್ತಲಲ್ಲದೆ ಅತ್ತತ್ತಲಾರು ಬಲ್ಲರು.
ಇವರೆತ್ತಲೆಂದರಿಯರು-ಗಿಳಿವಿಂಡುಗೆಡೆವರು ನಿಮ್ಮನೆತ್ತಬಲ್ಲರು
ಗುಹೇಶ್ವರಾ ? /1414
ವಾಗ್ಬ್ರಹ್ಮಿಗಳೆಲ್ಲರು ಪಡುವ ಪಾಟ ನೋಡಿ ನಮ್ಮ ಭಕ್ತರು,
ತ್ಯಾಗಾಂಗದಲ್ಲಿ, ಇಷ್ಟ ಪ್ರಾಣ ಭಾವಕ್ಕೆ ಬಾಹ್ಯ ಪದಾರ್ಥರೂಪವ
ಈಕ್ಷಣ ಜ್ಞಾನಸ್ಪರ್ಶದಿಂದ ಅರ್ಪಿಸಿ ದೇಹಪ್ರಸಾದಿಗಳಾಗಿ
ಚರಶೇಷದಲ್ಲಿ ಇಷ್ಟಲಿಂಗಪೂಜಕರಾಗಿ ಅನಿಷ್ಟವ ಪರಿಹರಿಸಿದರು.
ಭೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ದೇಹಪದಾರ್ಥರೂಪವ
ರೂಪು ರುಚಿ ತೃಪ್ತಿಯಿಂದ ಅರ್ಪಿಸಿ ಪ್ರಾಣಪ್ರಸಾದಿಗಳಾಗಿ
ಲಿಂಗಶೇಷದಲ್ಲಿ ಪ್ರಾಣಲಿಂಗ ನೈಷ್ಠಿಕರಾಗಿ ವಾಯುಗುಣವಿಕಾರವ ಕೆಡಿಸಿದರು.
ಯೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ವಾಯು ಪದಾರ್ಥರೂಪವ
ಸ್ಥೂಲ ಸೂಕ್ಷಕಾರಣದಿಂದ ಅರ್ಪಿಸಿ ಮಹಾಪ್ರಸಾದಿಗಳಾಗಿ
ಗುರುಶೇಷದಲ್ಲಿ ಮನೋಗುಣ ವಿಕಾರ ಪರಿಹರಿಸಿದರು
ಗುಹೇಶ್ವರಲಿಂಗದಲ್ಲಿ./1415
ವಾಙ್ಮನಕ್ಕತೀತವಾದ ಪರಶಿವನು(ನೆ?) ಪರಮಾತ್ಮಸ್ವರೂಪನಾಗಿ
ವಿಶ್ವವೆಂಬ ನಾಣ್ಣುಡಿಯ ತೆರೆಯ ಸೀರೆಯ ಮರೆಯಲ್ಲಿ.
ಸಕಲ ಭೋಗಾದಿಭೋಗಂಗಳ ಭೋಗಿಸುತಿಪ್ಪಿರಿ.
ಗುಹೇಶ್ವರಾ ನಿಮ್ಮ ನಿಲವಿನ ಪರಿಣಾಮದ ಸುಖವ ನೀವೆ ಬಲ್ಲಿರಿ./1416
ವಾಚಾತೀತಂ ಮನೋತೀತಂ
ಭಾವಾತೀತಂ ಜ್ಞಾನಾತೀತಂ ನಿರಂಜನಂ
ಅಣೋರಣೀಯಾನ್ ಮಹತೋಮಹೀಯಾನ್
ಎಂದೆನಿಸುವ ಅತಿಶಯಬ್ರಹ್ಮವು,
ದಿವ್ಯ ಜ್ಞಾನವೆಂಬ ಭಕ್ತಿಮಂದಿರಕ್ಕೆ ಕರ್ತೃವಾದ
ಈಶ್ವರ-ಗುಹೇಶ್ವರ./1417
ವಾಮಭಾಗದಲೊಂದು ಶಿಶು ಹುಟ್ಟಿತ್ತ ಕಂಡೆ.
`ಜೋ ಜೋ’ ಎಂದು ಜೋಗುಳವಾಡಿತ್ತ ಕಂಡೆ.
ಜೋಗುಳವಾಡಿದ ಶಿಶು ಅಲ್ಲಿಯೆ ಲಯವಾಯಿತ್ತು (ಬಯಲಾಯಿತ್ತು ?),
ಗುಹೇಶ್ವರನೆಂಬ ಶಬ್ದ ಅಲ್ಲಿಯೆ ಲಯವಾಯಿತ್ತು !/1418
ವಾಯದ ಪಿಂಡಿಗೆ ಮಾಯದ ದೇವರಿಗೆ
ವಾಯಕ್ಕೆ ಕಾಯವ ಬಳಲಿಸದೆ ಪೂಜಿಸಿರೊ.
ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು,
ಸೂಜಿಯ ಪೋಣಿಸಿ ದಾರವ ಮರೆದಡೆ
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ./1419
ವಾಯು ನಿದ್ರೆಗೆಯ್ದಡೆ ಆಕಾಶ ಜೋಗುಳವಾಡಿತ್ತು.
ಬಯಲು ಬಳಲಿದೆನೆಂದಡೆ ನಿರಾಳ ಮೊಲೆಗೊಟ್ಟಿತ್ತು.
ಆಕಾಶವಡಗಿತ್ತು ಜೋಗುಳ ನಿಂದಿತ್ತು
ಗುಹೇಶ್ವರನೈದಾನೆ ಇಲ್ಲದಂತೆ./1420
ವಾರವೇಳು, ಜಾತಿ ಹದಿನೆಂಟೆಂದು ನುಡಿವ ಪಾತಕರ ನುಡಿಯ ಕೇಳಲಾಗದು
ಅದೆಂತೆಂದಡೆ: ವಾರವೆರಡು, ಜಾತಿಯೆರಡು, ಭವಿಯೊಂದು ಕುಲ, ಭಕ್ತನೊಂದು ಕುಲ.
ಇಂತೀ ಎಂಬತ್ತು ನಾಲ್ಕು ಲಕ್ಷ ಜೀವಕ್ಕೆ ಜೀವನವೇ ಆಹಾರ.
ಜೀವ ತಪ್ಪಿಸಿ ಜೀವಿಸಬಾರದು.
`ಯಥಾ ಮಂತ್ರ ತಥಾ ಸಿದ್ಧಿ’ಯೆಂದು ಲಿಂಗಕ್ಕರ್ಪಿತವ ಮಾಡಿಕೊಂಬುದೆ ಶುದ್ಧ,
ಉಳಿದಾದುದೆಲ್ಲ ಜೀವನ್ಮಯ ಗುಹೇಶ್ವರ./1421
ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು.
ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು,
ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ,
ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ,
ಆ ಸಂಸಾರದಿಂದಾಯಿತ್ತು ಮರವೆ.
ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ
ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲಾ
ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ
ಮಾಯೆಯ ಬಾಯ ತುತ್ತಾದರಲ್ಲಾ ! ಗುಹೇಶ್ವರಾ./1422
ವಾರಿಕಲ್ಲ ಪುತ್ಥಳಿಯ ಅಪ್ಪು ಕೊಂಡಂತಾಯಿತ್ತು.
ಅಗ್ನಿಪುರುಷನ ಮುಸುಕ ತೆಗೆದ ಕರ್ಪುರದಂತಾಯಿತ್ತು.
ಕತ್ತಲೊಳಗೆ ರವಿಯ ಬೆಳಗು ಹೊಕ್ಕಂತಾಯಿತ್ತು.
ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಯ ಕೃಪೆಯಿಂದ
ಬಸವಣ್ಣಾ ನಿನ್ನ ಕಂಡೆನು.
ನಿನ್ನನ್ನು ಮಡಿವಾಳನನು ನೀನೆಂದೆ ಕಂಡೆನಯ್ಯಾ./1423
ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ.
ವಿಚಾರಿಸುವನ್ನಕ್ಕರ ನೀನಾರೆಂಬುದನೆತ್ತ ಬಲ್ಲೆ ?
ಮರುಳೆ ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೆ ?
ಗುಹೇಶ್ವರನೆಂಬ ಲಿಂಗವು ತನ್ನ ತಿಳಿದು ನೋಡಿಹೆನೆಂಬವರ[ನು]
ವಿಚಾರವೆಂಬ ಬಲೆಯಲ್ಲಿ ಕೆಡಹಿದನು./1424
ವಿಭೂತಿ, ಆವ ಭೂಷಣದೊಳಗು ?
ಪುಲಿಯ ಚರ್ಮ ಆವ ವಸ್ತ್ರದೊಳಗು ?
ಖಟ್ಟಾಂಗ ಆವ ಆಯುಧದೊಳಗು ?
ನೀ ಇಡುವುದು ಇಂತುಟು ನೀ ಹೊದೆವುದು ಇಂತುಟು
ನೀ ಹಿಡಿವುದು ಇಂತುಟು,
ನೀ ಕೊಡುವುದು ಇಂದ್ರಪದವಿ ಗುಹೇಶ್ವರಾ./1425
ವಿರಹದಲುತ್ಪತ್ಯವಾದವರ, ಮಾಯದ ಬೇಳುವೆ ಹತ್ತಿತ್ತಲ್ಲಾ !
ಸ್ವರೂಪ ನಿರೂಪವೆಂದರಿಯರು,
ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ/1426
ವಿಶ್ವಾಸದಿಂದ ಭಕ್ತನಾಗಿ, ಆ ವಿಶ್ವಾಸದೊಳಗಣ ನೈಷ್ಠೆಯಿಂದ ಮಹೇಶ್ವರನಾಗಿ,
ಆ ನೈಷ್ಠೆಯೊಳಗಣ ಸಾವಧಾನದಿಂದ ಪ್ರಸಾದಿಯಾಗಿ,
ಆ ಸಾವಧಾನದೊಳಗಣ ಸ್ವಾನುಭಾವದಿಂದ ಪ್ರಾಣಲಿಂಗಿಯಾಗಿ,
ಆ ಸ್ವಾನುಭಾವದೊಳಗಣ ಅರಿವಿನಿಂದ ಶರಣನಾಗಿ,
ಆ ಅರಿವು ನಿಜದಲ್ಲಿ ಸಮರಸಭಾವವನೈದಿ ನಿರ್ಭಾವಪದದೊಳು ನಿಂದ ಭೇದವೇ
ಐಕ್ಯಸ್ಥಲ ಕಾಣಾ ಗುಹೇಶ್ವರಾ./1427
ವೀರಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ
ಈರೇಳು ಭುವನವ ಅಮಳೋಕ್ಯವ ಮಾಡಿ
ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ
ತಂದು ಮೂರ್ತಿಗೊಳಿಸಿದವರಾರು ?
ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ.
ಬಿಂದುವಿನ ರಸದ ಪರೀಕ್ಷೆಯ ಭೇದವ
ಚಂದ್ರಕಾಂತದ ಗಿರಿಗೆ(ಯ?) ಅರುಣ ಚಂದ್ರರೊಡನೆ
ಇಂಬಿನಲ್ಲಿಪ್ಪ ಪರಿಯ ನೋಡಾ !
ಅಂಗೈಯ ತಳದೊಳು ಮೊಲೆ ಕಂಗಳಲ್ಲಿ ಕರಸನ್ನೆ
ಇಂಬಿನಲ್ಲಿ ನೆರೆವ ಸುಖ ಒಂದೆ !
ಆದಿ ಅನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು.
ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಶರಣೆನುತಿರ್ದೆನು. /1428
ವೇದ ಘನವೆಂಬುದೊಂದು ಸಂಪಾದನೆ.
ಶಾಸ್ತ್ರ ಘನವೆಂಬುದೊಂದು ಸಂಪಾದನೆ.
ಪುರಾಣ ಘನವೆಂಬುದೊಂದು ಸಂಪಾದನೆ.
ಆಗಮ ಘನವೆಂಬುದೊಂದು ಸಂಪಾದನೆ.
ಅಹುದೆಂಬುದೊಂದು ಸಂಪಾದನೆ.
ಅಲ್ಲವೆಂಬುದೊಂದು ಸಂಪಾದನೆ.
ಗುಹೇಶ್ವರನೆಂಬ ಮಹಾಘನದ
ನಿಜಾನುಭಾವಸಂಪಾದನೆಯ ಅರಿಯದ ಕಾರಣ
ಹಲವು ಸಂಪಾದನೆಗಳಾದವು./1429
ವೇದ ಘನವೆಂಬೆನೆ, ವೇದ ನಾದದೊಳಗಡಗಿತ್ತು.
ನಾದ ಘನವೆಂಬೆನೆ, ನಾದ ಬಿಂದುವಿನೊಳಗಡಗಿತ್ತು.
ಬಿಂದು ಘನವೆಂಬೆನೆ, ಬಿಂದು ಅಂಗದೊಳಗಡಗಿತ್ತು.
ಅಂಗ ಘನವೆಂಬೆನೆ, ಅಂಗ ಲಿಂಗದೊಳಗಡಗಿತ್ತು.
ಲಿಂಗ ಘನವೆಂಬೆನೆ, ಲಿಂಗ ನಿಶ್ಚಿಂತದೊಳಗಡಗಿತ್ತು.
ನಿಶ್ಚಿಂತ ಘನವೆಂಬೆನೆ, ನಿಶ್ಚಿಂತ ನಿರಾಳದೊಳಗಡಗಿತ್ತು.
ನಿರಾಳ ಘನವೆಂಬೆನೆ, ನಿರಾಳ ನಿರೂಪದೊಳಗಡಗಿತ್ತು.
ನಿರೂಪ ನಿಃಕಳಂಕ ನಿಃಶೂನ್ಯ ನಿರಂಜನ ಪರಾಪರ ನೀನೇ
ಗುಹೇಶ್ವರಾ./1430
ವೇದ ದೈವವೆಂದು ನುಡಿವರು, ಶಾಸ್ತ್ರ ದೈವವೆಂದು ನುಡಿವರು,
ಪುರಾಣ ದೈವವೆಂದು ನುಡಿವರು, ಕಲ್ಲು ದೈವವೆಂದು ನುಡಿವರು,
ಕಾಷ್ಠ ದೈವವೆಂದು ನುಡಿವರು, ಪಂಚಲೋಹ ದೈವವೆಂದು ನುಡಿವರು,
ಇವರೆಲ್ಲ ಸಕಲದಲಾದ ಸಂದೇಹವನೆ ಪೂಜಿಸಿ ಸತ್ತು ಹೋದರಲ್ಲಾ !
ಸಮಸ್ತ ಪ್ರಾಣಿಗಳೂ-ತಾಯನರಿಯದ ತರ್ಕಿಗಳು,
ತಂದೆಯನರಿಯದ ಸಂದೇಹಿಗಳು.
ತನು ಪೃಥ್ವಿಯಿಂದಲಾಯಿತ್ತು ಮನ ವಾಯುವಿನಿಂದಲಾಯಿತ್ತು.
ಕಲ್ಲು ಕಾಷ್ಠ ಸಕಲ-ನಿಷ್ಕಲದಿಂದಲಾಯಿತ್ತು.
ವಾಯುವಾಧಾರದ ಪವನಸಂಯೋಗದ ಅನಾಹತ ಚಕ್ರದಿಂದ ಮೇಲಣ
ಆಜ್ಞಾಚಕ್ರದಲ್ಲಿ ನಿಂದು; ಅನಂತಕೋಟಿಬ್ರಹ್ಮಾಂಡಗಳ ಮೆಟ್ಟಿ-
ಕಾಯದ ಕಣ್ಣ ಮುಚ್ಚಿ, ಜ್ಞಾನದ ಕಣ್ಣ ತೆರೆದು ನೋಡಲ್ಕೆ,
ಅಲ್ಲಿ ಒಂದು ನಿರಾಕಾರ ಉಂಟು.
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ,
ಅಲ್ಲಿ ಒಂದು ನಿಶ್ಶೂನ್ಯವುಂಟು.
ಆ ನಿಶ್ಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,
ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ !/1431
ವೇದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ
ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ !
ಅಂಗಸಂಗದ ಮಧ್ಯದಲ್ಲಿಟ್ಟು ಬೈಚಿಟ್ಟು ಬಳಸಿದ
ಗುಹೇಶ್ವರಾ ನಿಮ್ಮ ಶರಣ./1432
ವೇದ ವೇದಿಸಲರಿಯದೆ ಕೆಟ್ಟವು, ಶಾಸ್ತ್ರ ಸಾದಿಸಲರಿಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು:
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ? /1433
ವೇದಂಗಳೆಂಬವು ಬ್ರಹ್ಮನ ಬೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಗಳೆಂಬವು ಋಷಿಯ ಮರುಳಾಟ.
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?)
ಇಂತು ಇವನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು !/1434
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು/1435
ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವೂ ಐವತ್ತೆರಡಕ್ಷರದೊಳಗು
ಐವತ್ತೆರಡಕ್ಷರಂಗಳೆಲ್ಲವು ಒಂದು ಜಿಹ್ವೆಯೊಳಗು.
ಆ ಜಿಹ್ವೆ ಮನದೊಳಗು, ಆ ಮನ ಪ್ರಾಣದೊಳಗು.
ಆ ಪ್ರಾಣ ನಾದದೊಳಗು, ಆ ನಾದ ಬ್ರಹ್ಮದೊಳಗು.
ಆ ನಾದಬ್ರಹ್ಮದ ಸಂಚವ ತಿಳಿದೊಡೆ,
ಗುಹೇಶ್ವರಲಿಂಗವು ತಾನೆ./1436
ವ್ರತಗೇಡಿ ವ್ರತಗೇಡಿ ಎಂಬರು,
ವ್ರತ ಕೆಡಲು ಅದೇನು ಹಾಲಂಬಿಲವೆ ?
ವ್ರತ ಕರಿದೊ ? ಬಿಳಿದೊ ?
ಕಟ್ಟಿದಾತ ಭಕ್ತನಪ್ಪನೆ ? ಕೆಡಹಿದಾತ ವೈರಿಯಪ್ಪನೆ ?
ಕಟ್ಟುವುದಕ್ಕೆ ಲಿಂಗವು ಒಳಗಾಗಬಲ್ಲುದೆ ?
ಕೆಡಹುವುದಕ್ಕೆ ಲಿಂಗವು ಬೀಳಬಲ್ಲುದೆ ?
ಲಿಂಗವು ಬಿದ್ದಡೆ ಭೂಮಿ ಆನಬಲ್ಲುದೆ ?
ಲೋಕಾದಿ ಲೋಕಂಗಳುಳಿಯಬಲ್ಲವೆ ?
ಪ್ರಾಣಲಿಂಗ ಬಿದ್ದಿತ್ತೆಂಬ ದೂಷಕರ ನುಡಿಯ
ಕೇಳಲಾಗದು ಗುಹೇಶ್ವರಾ./1437
ವ್ರತಗೇಡಿ ವ್ರತಗೇಡಿ ಎಂಬವ, ತಾನೆ ವ್ರತಗೇಡಿ.
ವ್ರತ ಕೆಡಲಿಕೇನು ಹಾಲಂಬಿಲವೆ?
ವ್ರತ ಕೆಟ್ಟ ಬಳಿಕ ಘಟ ಉಳಿಯಬಲ್ಲುದೆ ?
ಕಾಯದೊಳಗೆ ಜೀವವುಳ್ಳನ್ನಕ್ಕ
ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರಾ./1438
ಶಂಕಿನಿನಾಡಿಯ ಸಪುರನಾಳದೊಳಗಣ
ಸಣ್ಣ ಬಣ್ಣದ ಹೊಲಬ ಅಣ್ಣಗಳೆತ್ತ ಬಲ್ಲರು ?
ಲಿಂಗದ ಹಂಗಿನ ಪ್ರಾಣ, ಪ್ರಾಣದ ಹಂಗಿನ ದೇಹ,
ದೇಹದ ಹಂಗಿನ ಲಿಂಗವ, ಲಿಂಗವೆಂದು ಪೂಜಿಸಲು;-
ಆಳಿನಾಳಿನ ಕೀಳಾಳು ಪಟ್ಟಕ್ಕೆ ಸಲುವನೆ ?
ಗುಹೇಶ್ವರನೆಂಬ ಸಹಜದ ನಿಲವು
ಸಂತೆಯ ಪಸರಕ್ಕೆ ಬಂದಡೆ ನಾಚಿತ್ತೆನ್ನ ಮನವು !/1439
ಶತಕೋಟಿ ಲೋಕಂಗಳೆಲ್ಲ ಬಸವಣ್ಣನ ಕೋಡಿನಲ್ಲಿರ್ದವು ನೋಡಾ.
ಅತೀತವಪ್ಪ ಪರಶಿವನು,
ಬಸವಣ್ಣನ ಹಿಳಿಲ ಕೆಳಗೆ ಸೂಕ್ಷ್ಮರೂಪಾಗಿರ್ದನು ನೋಡಾ.
ಸಕಲ ಶ್ರುತಿ ಸ್ಮೃತಿಗಳೆಲ್ಲ ಬಸವಣ್ಣನ ಹೊಗಳಲರಿಯದೆ ಕೆಟ್ಟವು ನೋಡಾ.
ಕರ್ತನಾದನಲ್ಲದೆ ಭೃತ್ಯನಲ್ಲ, ಬಿನ್ನಾಣವ ಹೋಲಲರಿಯೆ
ಒಂದೆತ್ತಿಲ್ಲದಿರ್ದಡೆ ಕತ್ತಲೆಯಾಗದೆ ಈ ಜಗವೆಲ್ಲವು ?
ಹರಿವ ನದಿಗಳೆಲ್ಲ ಅಮೃತವಾದವು ಕಾಣಾ ಬಸವಣ್ಣ ನಿನ್ನಿಂದ !
ಹರಿಹನ್ನಿಕೋಟಿ ಯುಗಜುಗಂಗಳು ನಿನ್ನ ಉಸಿರಿನಲ್ಲಿ ಒತ್ತಿದಡೆ
ಬ್ರಹ್ಮಾಂಡಕ್ಕೆ ಹೋದವು, ಬಿಟ್ಟಡೆ ಬಿದ್ದವು, ಕಾದಡೆ ಬದುಕಿದವು.
ನೀನು ಹೊರೆವ ಯುಗಜುಗಂಗಳು ಒಂದು ತೃಣಮಾತ್ರವಾದ ಕಾರಣ
ನಿನ್ನ ಹಸುಮಕ್ಕಳವರೆನುತಿರ್ದೆನಯ್ಯಾ.
ನಿನ್ನ ಗೋಮಯದ ಷಡುಸಮ್ಮಾರ್ಜನೆಯ ಮೇಲೆ ಕುಳ್ಳಿರ್ದು
ಗುಹೇಶ್ವರಲಿಂಗವು ಶುದ್ಧನಾದನು, ಕಾಣಾ ಸಂಗನಬಸವಣ್ಣಾ ನಿನ್ನಿಂದ !/1440
ಶಬ್ದ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು,
ತಮ್ಮ ತಾವರಿಯರು.
ಇದು ಕಾರಣ-ಮೂರು ಲೋಕವೆಲ್ಲವು,
ಬರುಸೂರೆವೋಯಿತ್ತು ಗುಹೇಶ್ವರಾ./1441
ಶಬ್ದ ಸೂತಕವೆಂಬರು, ಶಬ್ದ ಸೂತಕ ಉಂಟೆ,
ತನ್ನಯ ಸಂದೇಹವಲ್ಲದೆ ?
ಗಾಳಿಗೆ ಧೂಳು ಲೇಪವಪ್ಪುದೆ ?
ಗುಹೇಶ್ವರಲಿಂಗಕ್ಕೆ ಆ ಭಾವವಿಲ್ಲ ಸಂಗನಬಸವಣ್ಣಾ !/1442
ಶಬ್ದ ಸ್ಪರ್ಶ ರೂಪು ರಸ ಗಂಧ, ಪಂಚ ಇಂದ್ರಿಯ,
ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು
ನೀವು ಕೇಳಿರೆ;
ಲಿಂಗದ ವಾರ್ತೆಯ ವಚನದಲ್ಲಿ ರಚನೆಯ ಮಾಡುವ (ವಿ?) ರಯ್ಯಾ,
ಸಂಸಾರದ ಮಚ್ಚು ಬಿಡದನ್ನಕ್ಕ, ಸೂಕ್ಷ್ಮ ಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲ್ಲಿ ವಾಕು ಪಾಕವಾದಡೇನೊ,
ಮನ ಪಾಕವಾಗದನ್ನಕ್ಕ ?/1443
ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು.
ರೂಪೆಂಬೆನೆ ? ನೇತ್ರದೆಂಜಲು. ರುಚಿಯೆಂಬೆನೆ? ಜಿಹ್ವೆಯೆಂಜಲು.
ಪರಿಮಳವೆಂಬೆನೆ ? ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬ ಬಿನ್ನವಳಿದ, ಬೆಳಗಿನೊಳಗಣ ಬೆಳಗು
ಗುಹೇಶ್ವರನೆಂಬ ಲಿಂಗವು./1444
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ.
ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ.
ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ.
ಇದು ಕಾರಣ-ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು
ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ. /1445
ಶಯನಾಸನ ಪರವಿಲ್ಲೆಂದುದು.
ಜ್ಞಾನಾಜ್ಞಾನ ಭಾವ ನೋಟ ತಾನಲ್ಲ,
ಅರಿವಿನ ಭಾವ ಸ್ವತಂತ್ರವಿಲ್ಲ ಕಾಣಾ.
ಆಕಾಯದಲ್ಲಿ ಅದ್ವೈತ ಚರಿತ್ರ;
ಅರಿವಿನಲನುಗ್ರಹಿಸಿ ಸಕಾಯದಲ್ಲಿ ಸದೈವ ಚರಿತ್ರ.
ಮರಹು ಉದಯಿಸದ ನಿರುಗೆಯ ಪವನ ಬ್ರಹ್ಮರಂಧ್ರರಹಿತ !
ಶಯನಾಸನವೆಂದಲ್ಲಿ ಗುಹೇಶ್ವರನೆನಲು ಹೇಸಿತ್ತು./1446
ಶರಣ, ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕರವ ನೀಡಿದಡೆ,
ಆ ಪುಷ್ಪ ನೋಡ ನೋಡ ಕರದೊಳಡಗಿತ್ತಲ್ಲಾ !
ಅದು ಓಗರದ ಗೊಬ್ಬರವ ನುಣ್ಣದು;
ಕಾಮದ ಕಣ್ಣರಿಯದು, ನಿದ್ರೆಯ ಕಪ್ಪೊತ್ತದು.
ಅದು ಅರುಣ ಚಂದ್ರ[ರ] ತೆರೆಯಲ್ಲಿ ಬೆಳೆಯದು.
ಲಿಂಗವೇದಿಯಾಗಿ ಬೆಳೆದ ಪುಷ್ಪವನು
ಗುಹೇಶ್ವರಾ ನಿಮ್ಮ ಶರಣನು ಪ್ರಾಣಲಿಂಗಕ್ಕೆ ಪೂಜೆಯ ಮಾಡಿದನು./1447
ಶರಣಂಗೆ ಉತ್ಪತ್ಯವಿಲ್ಲಾಗಿ ಸ್ಥಿತಿಯಿಲ್ಲ,
ಸ್ಥಿತಿಯಿಲ್ಲವಾಗಿ ಲಯವಿಲ್ಲ,
ಲಯವಿಲ್ಲವಾಗಿ ದೇಹನಾಮ ಪ್ರವರ್ತನೆಯಿಲ್ಲ,
ಇವಾವುದೂ ಇಲ್ಲದ ಕಾರಣ,
ಗುಹೇಶ್ವರಯ್ಯಾ, ನಿಮ್ಮ ಶರಣ ಬಚ್ಚಬರಿಯ ಬೆಳಗು./1448
ಶರಣನ ಒಡಲುಗೊಂಡ ಅಖಂಡಿತಲಿಂಗಕ್ಕೆ ಅರ್ಚನೆಯಿಲ್ಲ,
ಶರಣನ ಒಡಲುಗೊಂಡ ಅಚಲಿತಲಿಂಗಕ್ಕೆ ಅರ್ಪಿತವಿಲ್ಲ,
ಶರಣನ ಒಡಲುಗೊಂಡ ಅನುಪಮಲಿಂಗಕ್ಕೆ ಅವಧಾನವಿಲ್ಲ.
ಅದೇನು ಕಾರಣವೆಂದಡೆ: ಶರಣನಿಂದಾದ ಆರ್ಚನೆ, ಶರಣನಿಂದಾದ ಅರ್ಪಿತ,
ಶರಣನಿಂದಾದ ಅವಧಾನ.
ಇದು ಕಾರಣ ಸಂದಳಿದು ಲಿಂಗವಾದ ಮತ್ತೆ
ಆನಂದವಲ್ಲದೆ ಅಣುಮಾತ್ರ ಕ್ರೀಯಿಲ್ಲ ಕಾಣಾ ಗುಹೇಶ್ವರಾ./1449
ಶರಣಸಂಬಂಧವನರಿದವನು ಎಂತಿರ್ದಡೇನಯ್ಯಾ ?
ತಿಳಿದು ನೋಡಿ ನಡೆಯದಿರ್ದಡೆ ಭಕ್ತಿವಿರೋಧ.
ತೆರನನರಿದು ಮರವೆಯಳಿದು ಸುಳಿವನಾಗಿ
ಉಪಜೀವಿಕನಲ್ಲ ಕೇಳಿರಣ್ಣಾ.
ಗುಹೇಶ್ವರನ ಶರಣನ ಸಂಗಸುಖದ ಉರವಣೆಯ ಸೋಂಕು
ಲೋಕಕ್ಕೆ ವಿರೋಧ !/1450
ಶರಣು ಶರಣಾಥರ್ಿ ಎಲೆ ತಾಯೆ,-
ಧರೆಯಾಕಾಶ ಮನೆಗಟ್ಟದಂದು
ಹರಿವ ಅನಿಲ ಅಗ್ನಿ ಜಲ ಮೊಳೆದೋರದಂದು ಹುಟ್ಟಿದಳೆಮ್ಮವ್ವೆ !
ಅದಕ್ಕೆ ಮುನ್ನವೆ ಹುಟ್ಟದೆ ಬೆಳೆದನೆಮ್ಮಯ್ಯ.
ಈ ಇಬ್ಬರ ಬಸಿರಲ್ಲಿ ಬಂದೆ ನಾನು !
ಎಮ್ಮ(ನ್ನ?) ತಂಗಿಯರೈವರು ಮೊರೆಗೆಟ್ಟು ಹೆಂಡಿರಾದರೆನಗೆ !
ಕಾಮಬಾಣ ತಾಗದೆ ಅವರ ಸಂಗವ ಮಾಡಿದೆನು.
ನಾ ನಿಮ್ಮ ಭಾವ ಅಲ್ಲಯ್ಯನು,
ನೀನೆನಗೆ ನಗೆವೆಣ್ಣು
ನಮ್ಮ ಗುಹೇಶ್ವರನ ಕೈವಿಡಿದು ಪರಮಸುಖಿಯಾಗಿ,
ಕಳವಳದ ಕಂದೆರವೆಯೇನು ಹೇಳಾ ?/1451
ಶರೀರ ಉಳ್ಳನ್ನಕ್ಕ ನೆಳಲಿಲ್ಲದಿರಬಾರದು,
ಭೂಮಿಯುಳ್ಳನ್ನಕ್ಕ ಆಕಾಶವಿಲ್ಲದಿರಬಾರದು.
ನಾನುಳ್ಳನ್ನಕ್ಕ ನೀನಿಲ್ಲದಿರಬಾರದು
ಗುಹೇಶ್ವರಲಿಂಗವು ಶಕ್ತಿಗೆ ಒಳಗಾಯಿತ್ತಾಗಿ,
ಬಚ್ಚಬರಿಯ ಬಯಲೆಂಬುದಕ್ಕೆ ಉಪಮಾನವಿಲ್ಲ./1452
ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ,
ಗುಹೇಶ್ವರಾ ನಿಮ್ಮ ಶರಣಸಂಬಂಧ/1453
ಶಿವ’ ಎಂಬ ವಚನವ ಬಿಡದಿರಿ,
ಮಡದಿಯರ ಒಲುಮೆಯ ನಚ್ಚದಿರಿ,
ದರ್ಪಣದ ಒಪ್ಪವ ತಪ್ಪದಿರಿ,
ವಾಯುವ ಕಡೆಗಡೆಗೆ ತಿದ್ದದಿರಿ,
ಹಿಡಿವಡೆ ದೃಢವಾಗಿ ಹಿಡಿಯಿರೆಲವೊ,
ಗುಹೇಶ್ವರ ಸಿಕ್ಕಿದ ಅಲ್ಲಮಂಗೆ./1454
ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.-
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾ ಮಹಿಮ ಸಂಗನಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ./1455
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ;
ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು.
ಇಂತು-ಚೈತನ್ಯಾತ್ಮಕನೆ ಚಿತ್ಸ್ವರೂಪನೆಂದರಿಯ ಬಲ್ಲಡೆ
ಆತನೆ ಶರಣ ಗುಹೇಶ್ವರಾ./1456
ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ
ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಿಲ್ಲಯ್ಯಾ.
ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆನಯಫ
ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು.
ಬಣ್ಣ ಸಮುಚ್ಚಯವಾಗಿ ಬಣ್ಣ ಬಗೆಯನೆ ನುಂಗಿ
ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು./1457
ಶಿಷ್ಯನ ಮುಖದಿಂದಾದ ಗುರುವಿಂಗೆ ಶಿಷ್ಯನ ಪ್ರಸಾದ.
[ಶಿಷ್ಯ]ಪ್ರಸಾದ ಗುರುವಿಂಗಲ್ಲದೆ ಗುರುವಿನ ಪ್ರಸಾದ ಶಿಷ್ಯಂಗಿಲ್ಲ !
ಇದು ಕಾರಣ,-ಗುರುವೆ ಓಗರ, ಓಗರವೆ ಅರ್ಪಿತ.
ಪ್ರಸಾದ ಪ್ರಸಾದವೆಂದು ಉಂಡುಂಡು ಸವೆದರಲ್ಲಾ !
ಸುಡು ಸುಡು, ಶಬ್ದಸೂತಕರ ಕೈಯಲ್ಲಿ,
ಸ್ಥಾವರ ವಿದಿವಶವಾಯಿತ್ತು ಗುಹೇಶ್ವರಾ./1458
ಶೀಲ ಶೀಲವೆಂದೇನೊ, ತನುಮನಧನವೆಂಬ ತ್ರಿಪುರವಿರಲು ?
ಆ ತ್ರಿಪುರಸಂಹಾರವ ಮಾಡಿ ಭಸ್ಮಾಂಗಿಯಾದಲ್ಲದೆ
ಶೀಲವಿಲ್ಲ ಕಾಣಾ ಗುಹೇಶ್ವರಾ./1459
ಶೀಲಶೀಲವೆಂಬ [ನೀಲಿಗ]ವಾರ್ತೆಯ ಬೇಳುವೆ,
ಬಾಲರಾಳಿಯಂತೆ ಆಳಿಗೊಂಡಿತ್ತು.
ಹೇಳಲಿಲ್ಲ ಕೇಳಲಿಲ್ಲದ ವಳಾವಳಿಯ ಬರಿಯ ಶಬ್ದ, ಬಯಲ ಹೋರಟೆ !
ಅಂಗಸುಖಿಗಳಿಗೆ ಲಿಂಗವಿಲ್ಲಾಗಿ,
ಗುಹೇಶ್ವರನೆಂಬ ಶೀಲವು ಸೀಮೆಯ ಮೀರಿ ಕಾಡಿತ್ತು/1460
ಶೂಲದ ಮೇಲಣ ತಲೆಯ ವೈಭೋಗವನಾರು ಬಯಸಿದಡೆಲ್ಲಿಯದು ?
ಉಂಬಡೆ ಒಡಲಿಲ್ಲ ಲಿಂಗಾರ್ಚನೆಯಿಲ್ಲ,
ಅಂಗಭೋಗಕ್ಕೆ ಕರಚರಣಂಗಳಿಲ್ಲ.
ಅಂಗವಿಲ್ಲೆಂಬ ಮಾತು ನಿಮಗೇಕೆ ? ಸುಡು, ಭಂಗ.
ಲಿಂಗ ನಿರಾಳ ಗುಹೇಶ್ವರಾ !/1461
ಶ್ರೀಗುರು ಲಿಂಗ ಜಂಗಮದ ಕರುಣ ಕಟಾಕ್ಷೆಯಿಂದ ದಶವಿಧ ಲಿಂಗಂಗಳ ಪಡೆದು
ಆ ಲಿಂಗನಿಷ್ಠಾಪರತ್ವದಿಂದ, ನಿನ್ನ ಪ್ರಾಣನ ಮಧ್ಯದಲ್ಲಿ ನೆಲಸಿರ್ಪ
ದಶವಿಧ ಚಿದ್ವಾಯುಗಳು, ದಶವಿಧ ಸುನಾದಗಳು, ದಶವಿಧಸತ್ಕರಣಂಗಳನ್ನು
ಮಹಾಜ್ಯೋತಿರ್ಮಯಲಿಂಗದತ್ತ ಮುಖಮಾಡಿ ನೋಡಲು
ಮಹಾಶರಣಗಣಮಾರ್ಗದ
ಬಟ್ಟಬಯಲ ನಿಜಾಚರಣೆ ದೊರೆವುದು ನೋಡ !
ಗುಹೇಶ್ವರ ಲಿಂಗದಲ್ಲಿ ಚನ್ನಬಸವಣ್ಣ./1462
ಶ್ರೀಗುರುವನರಿಯಲೆ ಬೇಕು, ಶ್ರೀಗುರುವನರಿಯಲೆ ಬೇಕು.
ಅಂತಲ್ಲದೆ ಸುಖವಿಲ್ಲಯ್ಯಾ, ಅಂತಲ್ಲದೆ ಸುಖವಿಲ್ಲಯ್ಯಾ.
ಶ್ರೀಗುರುವನರಿದಲ್ಲದೆ ಇಹಪರಸುಖವನರಿಯಬಾರದು.
ಅಂತಲ್ಲದೆ-ಶ್ರೀಗುರುವನು ಅರಿಯದವನೆ ಲಘು.
ಶ್ರೀಗುರುವನು ಅರಿದಂಗೆ ಶ್ರೀಗುರು ಗುಹೇಶ್ವರ./1463
ಶ್ರೀಗುರುವೆ ಎನಗೆ ಕಾಯವು, ಶ್ರೀಗುರುವೆ ಎನಗೆ ಪ್ರಾಣವು,
ಶ್ರೀಗುರುವೆ ಎನಗೆ ಇಹವು, ಶ್ರೀಗುರುವೆ ಎನಗೆ ಪರವು,
ಶ್ರೀಗುರುವೆ ಎನಗೆ ಗತಿಯು, ಶ್ರೀಗುರುವೆ ಎನಗೆ ಮತಿಯು,
ಶ್ರೀಗುರುಪಾದವೆ ಎನಗೆ ಘನತರ ಮುಕ್ತಿಗೆ ಕಾರಣವು.
ಗುಹೇಶ್ವರ ಗುಹೇಶ್ವರಾ, ನಿಮ್ಮಾಣೆ ಇದು ಸತ್ಯ./1464
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು
ಪುನರ್ಜಾತನಂ ಮಾಡಿದ ಬಳಿಕ,
ಪಂಚಭೂತಕಾಯವ ಕಳೆದು
ಪ್ರಸಾದಕಾಯವ ಮಾಡಿದ ಬಳಿಕ,
ವಾಯುಪ್ರಾಣಿಯ ಕಳೆದು
ಲಿಂಗಪ್ರಾಣಿಯ ಮಾಡಿದ ಬಳಿಕ,
ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ,
ಎಲ್ಲಿಯ ತನುಸೂತಕ ಎಲ್ಲಿಯ ಮನಸೂತಕ
ಎಲ್ಲಿಯ ನೆನಹುಸೂತಕ ಎಲ್ಲಿಯ ಭಾವಸೂತಕ,
-ಇವನೆಂತೂ ಹಿಡಿಯಲಾಗದು, ಸದ್ಭಕ್ತನು.
ಕುಲಸೂತಕವುಳ್ಳನ್ನಕ್ಕರ ಭಕ್ತನಲ್ಲ
ಛಲಸೂತಕವುಳ್ಳನ್ನಕ್ಕರ ಮಹೇಶ್ವರನಲ್ಲ
ತನುಸೂತಕವುಳ್ಳನ್ನಕ್ಕರ ಪ್ರಸಾದಿಯಲ್ಲ
ಮನಸೂತಕವುಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ
ನೆನಹುಸೂತಕವುಳ್ಳನ್ನಕ್ಕರ ಶರಣನಲ್ಲ
ಭಾವಸೂತಕವುಳ್ಳನ್ನಕ್ಕರ
ಐಕ್ಯನಲ್ಲ
ಇಂತೀ ಸೂತಕವ ಮುಂದುಗೊಂಡಿಪ್ಪವರ
ಮುಖವ ನೋಡಲಾಗದು ಗುಹೇಶ್ವರ./1465
ಶ್ರೀಮನ್ಮನದ ಕೊನೆಯಿಂದ ನೆನೆದ ನೆನಹು
ಜನನ ಮರಣ ನಿಲಿಸಿತ್ತು.
ಜ್ಞಾನಜ್ಯೋತಿಯ ಉದಯ, ಭಾನುಕೋಟಿಯ ಮೀರಿ ಸ್ವಾನುಭಾವದುದಯ,
ಜ್ಞಾನಶೂನ್ಯದೊಳಡಗಿದ ಭೇದವನು
ಏನೆಂಬೆನು ನೋಡಾ ಗುಹೇಶ್ವರಾ ?/1466
ಶ್ರುತಿಯ ನಂಬದಿರೊ, ಶ್ರುತಿಯ ನಂಬದಿರೊ
ಶ್ರುತಿತತಿಗಳು ಮುನ್ನವೆ ಶಿವನಡಿಯ ಕಾಣದೆ
ಶ್ರುತಿ `ಚಕಿತಮಬಿದತ್ತೇ’ ಎನುತ್ತ
ಮುನ್ನವೆ ಅರಸಿ ತೊಳಲಿ ಬಳಲುತ್ತೈದಾವೆ.
ಶ್ರುತಿ ಹೇಳಿದತ್ತ ಹರಿಹರಿದು ಬಳಲದಿರೊ,
ಶೂನ್ಯಕ್ಕೆ ತಲೆವಾರನಿಕ್ಕದಿರೊ,
ವಸ್ತು ಭ್ರೂಮಧ್ಯದಲುಂಟೆಂದು ನೆನೆಯದಿರೊ.
ವಸ್ತು ಭ್ರೂಮಧ್ಯದಲುಂಟೆಂದು ಭ್ರಮಿಸದಿರೊ.
ವಸ್ತು ಬ್ರಹ್ಮರಂಧ್ರದಲುಂಟೆಂದು ಹೊಲಬುಗೆಡದಿರೊ.
ವಸ್ತುವ ಕಾಬಡೆ,
ಎನ್ನ ಸದ್ಗುರು
ಅನಿಮಿಷದೇವನಂತೆ
ನಿನ್ನ ಕರಸ್ಥಲದಲ್ಲಿ ನಿಶ್ಚಯಿಸಿ, ವಸ್ತುನಿಶ್ಚಯವ ಕಂಡು
ನಮ್ಮ ಗುಹೇಶ್ವರಲಿಂಗದಲ್ಲಿ ನಿಬ್ಬೆರಗಾಗೊ ಮರುಳೆ./1467
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ
ಷಡುವರ್ಣವೆಂದೆನ್ನ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ.
ಲಿಂಗವಿಂತುಟೆನ್ನ, ಲಿಂಗೈಕ್ಯವ ನುಡಿಯ.
ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ./1468
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಣಿಕವೆಂಬ ಆರು ವರ್ಣ.
ಅದಕ್ಕೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಶ್ರೀಗುರು-ಎಂಬ
ಆದು ಅದಿದೇವತೆ, ಈ ಭೇದವನೆಲ್ಲ ತಿಳಿದು ನೋಡಿ,
ಉನ್ಮನಿಯ ಜ್ಯೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದ್ಮದ
ಅಮೃತಬಿಂದುವಿನೊಳಗಣ ಪ್ರಾಣವೆ ರೂಪಾಗಿ,
ಪ್ರಾಣಲಿಂಗದಲ್ಲಿ ಒಡಗೂಡಬಲ್ಲ ಗುಹೇಶ್ವರಾ ನಿಮ್ಮ ಶರಣ./1469
ಶ್ವೇತನ ಕರೆಯಬಂದ ದೂತರು,
ರಂಭೆಯ ಕಣ್ಣ ಮುಂದೆ ಅಲೆಯುತ್ತಿರಲು ಇನ್ನೇಕೆ ಮರವೆ ?
ಇಹಕ್ಕೆ ದಿಟ ಪರಕ್ಕೆ ಪರಿಣಾಮ;
ಪಯಣಕ್ಕೆ ನಿಶ್ಚಯ ಕಾಣಾ ಗುಹೇಶ್ವರಾ./1470
ಷಡುದರುಶನ ಜ್ಞಾನವಲ್ಲದೆ ನಮತ್ತೆ ಇಲ್ಲೆಂಬ
ಜ್ಞಾನಿಗಳೆಲ್ಲರೂ ಚಾಂಡಾಲಿಗಳು,
ಬ್ರಹ್ಮಚಾರಿಗಳೆಲ್ಲರೂ ಉದ್ದೇಶಿಗಳು,
ಶಿವಯೋಗಿಗಳೆಲ್ಲರು ಅಂಧಕರು,
ಇಷ್ಟಲಿಂಗಸಂಬಂದಿಕರೆಲ್ಲರೂ ಅವಿಚಾರಿಗಳು.
ಅವರಿವರ ಪರಿಯಲ್ಲ ಗುಹೇಶ್ವರಾ,
ನಿಮ್ಮ ಶರಣರ ಪರಿ ಬೇರೆ !/1471
ಷಡೂರ್ಮಿಯಿಲ್ಲ ಷಡ್ವರ್ಗವಿಲ್ಲ
ನಾನೆಂಬುದಿಲ್ಲ ನೀನೆಂಬುದಿಲ್ಲ.
ಏನೆಂಬುದೇನೂ ಇಲ್ಲದಿಹುದೆ, ಚಿದಹಂಕಾರದ ಲಿಂಗೈಕ್ಯವಯ್ಯಾ
ಗುಹೇಶ್ವರಾ./1472
ಸಂಗದಿಂದಾಯಿತ್ತು ತನು, ಆ ತನುವಿನಿಂದಾಯಿತ್ತು ಮರವೆ,
ಆ ಮರವೆಯಿಂದಾಯಿತ್ತು ನೋಡಾ `ನೀ’ `ನಾ’ ಎಂಬುದು.
ನೀನೆಂಬ ಬಹಿರಂಗವಂತಿರಲಿ, ನಾನೆಂಬ ಅಂತರಂಗವಂತಿರಲಿ-
ಈ ಉಭಯ ಭಾವವಲ್ಲದೆ,
ನಿನ್ನಿಂದ ನಿನ್ನನರಿದಹೆನೆಂಬುದು ವಿಪರೀತಭಾವ !
ಈ ಅರಿವು ಮರವೆಯಾಟದ ಭ್ರಾಂತು ಬಿಡದು.
ಗುಹೇಶ್ವರಲಿಂಗವು ನಿನ್ನಲ್ಲಿ ನಿಂದ ಪರಿ ಎಂತು ಹೇಳಾ
ಸಂಗನಬಸವಣ್ಣಾ ?/1473
ಸಂಗಿಯಲ್ಲದ ನಿಸ್ಸಂಗಿಯಲ್ಲದ,
ರೂಪಿಲ್ಲದ ನಿರೂಪಿಲ್ಲದ ಸುಳುಹು ನೋಡಾ !
ದ್ವೈತವಿಲ್ಲದ ಅದ್ವೈತವಿಲ್ಲದ,
ಸೀಮೆಯಿಲ್ಲದ ನಿಸ್ಸೀಮೆಯಿಲ್ಲದ ಸುಳುಹು ನೋಡಾ !
ನಡೆಯಿಲ್ಲದ ನುಡಿಯಿಲ್ಲದ ಒಡಲಿಲ್ಲದ ಸುಳುಹು ನೋಡಾ !
ಕಡೆ ಮೊದಲೆಡೆದೆರಹಿಲ್ಲದಖಂಡ ಗುಹೇಶ್ವರಲಿಂಗ
ನಿರಾಳ ನಿಜೈಕ್ಯ ನೋಡಾ./1474
ಸಂಗ್ರಾಮ ಒಡ್ಡಿದಲ್ಲಿ ಹಂದೆ ಗೆಲಬಲ್ಲನೆ ಹೇಳಾ ?
ನಿಂದ ನಿಲವಿನ ಘನಮಡುವ, ಕಂದ ಈಸಾಡಬಲ್ಲನೆ ಹೇಳಾ ?
ಗುಹೇಶ್ವರನೆಂಬ ನಿರಾಳದ ಘನವ, ಪಂಚೇಂದ್ರಿಯಕ ಬಲ್ಲನೆ ಹೇಳಾ ?/1475
ಸಂಬಂಧ ಅಸಂಬಂಧವೆಂದು ಹೆಸರಿಟ್ಟುಕೊಂಡು ನುಡಿವಿರಿ.
ಸಂಬಂಧವಾವುದು? ಅಸಂಬಂಧವಾವುದು ?- ಬಲ್ಲಡೆ ನೀವು ಹೇಳಿರೆ?
ಕಾಯಸಂಬಂಧ ಜೀವಸಂಬಂಧ ಪ್ರಾಣಸಂಬಂಧ-
ಇಂತೀ ತ್ರಿವಿಧಸಂಬಂಧವನರಿದಡೆ
ಆತನೆ ಸಂಬಂದಿ ಕಾಣಾ ಗುಹೇಶ್ವರಾ./1476
ಸಂಸಾರವ ಬಿಟ್ಟೆನೆಂದು,
ನಿರಾಶಾಪದವ ಮಾಡಿ,
ತಲೆಯ ಬೋಳಿಸಿಕೊಂಡು,
ಕುದಿದು ಕೋಟಲೆಗೊಂಡು,
ಮನೆ ಮನೆ ತಪ್ಪದೆ ಬಿಕ್ಷವ ಬೇಡಿ,
ಉಂಡು, ಎದ್ದು ಹೋಗಿ ತತ್ವವ ಬೋದಿಸಿ,
ಉದರವ ಹೊರೆವಂದು ಮುನ್ನವಿಲ್ಲ ಮರುಳಾ ?
ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ,
ಮುಕ್ತಿಯುಂಟೆ ಮರುಳಾ ?
ಜಂಗಮದಂಗವು ನಿರ್ಗಮನಿ,
ಭಕ್ತಪ್ರಿಯ ನಮ್ಮ ಗುಹೇಶ್ವರಲಿಂಗದಲ್ಲಿ
ಜಂಗಮದ ನಡೆಯಿಲ್ಲ ಕಾಣಾ, ಎಲೆ ಮರುಳಾ./1477
ಸಂಸಾರವೆಂಬ ಶರಿದಿ ಅಡ್ಡಗಟ್ಟಲು,
ಅನುವನರಿದವಂಗೆ ಅಂಗವೆ ಹಡಗು, ಮನವೆ ಕೂಕಂಬಿಕಾರ.
ಜ್ಞಾನ-ಸುಜ್ಞಾನವೆಂಬ ಗಾಳಿ ತೀಡಲು, ಸುಲಕ್ಷಣದಿಂದ ಸಂಚರಿಸುತ್ತಿರಲು
ಬರ್ಪವು ಮೀನು, ಮೊಸಳೆ, ಅಷ್ಟಗಿರಿ,-ಜತನ.
ಮೊತ್ತದ ಸಂಚಾರದ ಹಡಗು ತಾಗುತ್ತಿದೆ, ಎಚ್ಚತ್ತಿರು,
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಮೈಮರೆಯದೆ.
ಕತ್ತಲೆ ದೆಸೆ ಅತ್ತಲೆ ಪೋಗು; ಉತ್ತರನಕ್ಷತ್ರದ ಪ್ರಭೆಯಿದೆ !
ಸೆಟ್ಟಿ ಜತನ ! ಪಟ್ಟಣವಿದೆ,-ಗುಹೇಶ್ವರಾ./1478
ಸಂಸಾರವೆಂಬ ಹೆಣ ಬಿದ್ದಿದ್ದಡೆ, ತಿನಬಂದ ನಾಯ ಜಗಳವ ನೋಡಿರೆ !
ನಾಯ ಜಗಳವ ನೋಡಿ ಹೆಣ[ನೆದ್ದು] ನಗುತ್ತಿದೆ.
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ./1479
ಸಂಸಾರಸಂಗವ ಭೇದಿಸಿ ನೋಡುವಡೆ,
ದೂರವೆ ? ಕಪಟ ಕನ್ನಡವೆ ?
ರವಿಯ ತಪ್ಪಿಸಿ ಸುಳಿವ ಗುಹೇಶ್ವರನೆಂದರಿದ ಶರಣ ಸಂಸಾರಿಯೆ ?/1480
ಸಕಲ ಭುವನಾದಿಭುವನಂಗಳಿಗೆ ತಂದೆ, ಸಕಲದೇವಾದಿದೇವರ್ಕಳಿಗೆ ತಂದೆ.
ಭವಭವದಲ್ಲಿ ನೀನೆನ್ನ ತಂದೆ.
ಗುಹೇಶ್ವರಲಿಂಗ, ನಿರಾಳದಲ್ಲಿ ನೀನೆನ್ನ ತಂದೆ./1481
ಸಕಲವನೆಲ್ಲ ಲಿಂಗದೊಳಗೆ ತೋರಿದನು.
ಆ ಲಿಂಗದ ಬೆಳಗ ಸಕಲದೊಳಗೆ ತೋರಿದನು.
ಎನ್ನ ಮನಕ್ಕೆ ಅತಿಶಯವ ತೋರಿ ತೋರಿ ರಕ್ಷಿಸಿದನು.
ಎನ್ನೊಳಗೆ ತನ್ನ ತೋರಿದನು, ತನ್ನೊಳಗೆ ಎನ್ನ ತೋರಿದನು.
ಮತ್ತೆ ಎರಡುವನು ಏಕಮಾಡಿ
ಎನ್ನೊಳಗೆ ಗುಹೇಶ್ವರನಾದನು ಹೊರಗೆ ಮಹಾಲಿಂಗವಾಗಿ ನಿಂದನು,
ಶ್ರೀಗುರುಲಿಂಗ ಬಸವಣ್ಣನು./1482
ಸಕಳಸ್ಥಲದ ಲಿಂಗ ಮನಸ್ಥಲದಲ್ಲಿ ವೇದ್ಯವಾಗಿ,
ಮನಸ್ಥಲದ ಲಿಂಗ ಮಹಾಸ್ಥಲದಲ್ಲಿ ವೇದ್ಯವಾಗಿ,
ಆ ಮಹಾಸ್ಥಲವೇ ಎನ್ನ ಸರ್ವಾಂಗದಲ್ಲಿ ವೇದ್ಯವಾದ ಬಳಿಕ
ಇನ್ನು ಬಿನ್ನಭಾವಕ್ಕೆ ತೆರಹೆಂಬುದುಂಟೆ ?
ಗುಹೇಶ್ವರನೆಂಬ ಪ್ರಾಣಲಿಂಗವ ಬೆರಸಿ ಸಮರಸವಾದ ಬಳಿಕ
ಎರಡೆಂಬುದಿಲ್ಲ ನೋಡಾ ಚೆನ್ನಬಸವಣ್ಣ./1483
ಸಚರಾಚರವೆಂಬುದೊಂದು ಕಿಂಚಿತ್ತು.
ಚತುರ್ಯುಗವೆಂಬುದೊಂದು ಕಿಂಚಿತ್ತು.
ಅಪ್ಪುದೆಂಬುದೊಂದು ಕಿಂಚಿತ್ತು, ಆಗದೆಂಬುದೊಂದು ಕಿಂಚಿತ್ತು.
ತಾನು ಶುದ್ಧವಾದ ಶರಣಂಗೆ
ಗುಹೇಶ್ವರನೆಂಬುದೊಂದು ಕಿಂಚಿತ್ತು./1484
ಸಜ್ಜನಸನ್ನಹಿತವಾದ ಭಕ್ತಿ, ಹೊತ್ತಿಗೊಂದು ಪರಿಯುಂಟೆ ಹೇಳಾ ?
ಒಮ್ಮೆ ಅಹಂಕಾರ ಒಮ್ಮೆ ಕಿಂಕಿಲವೆ ?
ಮನಕ್ಕೆ ಮನ ಸಾಕ್ಷಿಯಾಗಿ ಮಾಡುವ ಭಕ್ತನಲ್ಲಿ
ಗುಹೇಶ್ವರನಿಪ್ಪನಲ್ಲದೆ,
ಪ್ರಪಂಚಿನೊಳಗಿಲ್ಲ ಕಾಣಾ ಸಂಗನಬಸವಣ್ಣಾ./1485
ಸಟೆ ದಿಟವಾದಲ್ಲಿ ಮುಟ್ಟಿಯೂ ಮುಟ್ಟದೆ ಇರಬೇಕು.
ಅತಿರತಿ ಗತಿಮತಿಗೆ ಮಂದವಾಯಿತ್ತು.
ಎಂಟು ಹಿಟ್ಟು ಪಂಚಮಠವುಂಟು ಧರೆಯ ಮೇಲೆ.
ನರಸುರಾದಿಗಳೆಲ್ಲ ಸಭಾರವ ಹೊತ್ತು ಬಂದೈದಾರೆ.
ಹಿಟ್ಟು ನಷ್ಟ, ಮಠ ಹಾಳು, ಊರಿಗುಪಟಳ,
ಮಠವ ಸುಟ್ಟು ಗುಹೇಶ್ವರ ಬೀದಿಗರುವಾದ./1486
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು,
ಪತಿ ಭಕ್ತನಾದೆಡೆ ಕುಲಕಂಜಲಾಗದು.
ಸತಿ-ಪತಿಯೆಂಬ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ
ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ?
ಹಾಲುಂಡು ಮೇಲುಂಬರೆ ಗುಹೇಶ್ವರಾ?/1487
ಸತಿಯ ಕಂಡು ಬ್ರತಿಯಾದ ಬಸವಣ್ಣ.
ಬ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ.
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ.
ಗುಹೇಶ್ವರಾ ನಿಮ್ಮಲ್ಲಿ ಬಾಲಬ್ರಹ್ಮಚಾರಿಯಾದ ಬಸವಣ್ಣ ಒಬ್ಬನೇ./1488
ಸತ್ತ ಕೋಳಿ ಎದ್ದು ಕೂಗಿತ್ತ ಕಂಡೆ.
ಮೊತ್ತದ ಮಾಮರನುಲಿಯಿತ್ತ ಕಂಡೆ.
ಕತ್ತಲೆ ಬೆಳಗಾಯಿತ್ತ ಕಂಡೆ.
ಹೊತ್ತಾರೆ ಎದ್ದು ಹೊಲಬುದಪ್ಪೂದ ಕಂಡೆ.
ಇದೇನು ಹತ್ತಿತ್ತೆಂದರಿಯೆ ಗುಹೇಶ್ವರಾ./1489
ಸತ್ತ ಬಳಿಕ ಮುಕ್ತಿಯ ಹಡೆದೆಹೆನೆಂದು ಪೂಜಿಸ ಹೋದಡೆ,
ಆ ದೇವರೇನ ಕೊಡುವರೊ ?
ಸಾಯದೆ ನೋಯದೆ ಸ್ವತಂತ್ರನಾಗಿ, ಸಂದುಭೇದವಿಲ್ಲದಿಪ್ಪ
ಗುಹೇಶ್ವರಾ ನಿಮ್ಮ ಶರಣ./1490
ಸತ್ತ ಬಳಿಕ ಲಿಂಗದೊಳಗಾದೆಹೆವೆಂಬುದು ಎತ್ತಣ ವಾರ್ತೆ ?
ಅದು ಹುಸಿ ನೋಡಾ.
ಸಾಯದ ಮುನ್ನ ನಿಜವನರಿದು ಸ್ವಯವಾಗಿ ನಡೆಯಬಲ್ಲಡೆ
ಗುಹೇಶ್ವರಲಿಂಗವನರಿದ ಶರಣರು ಒಲಿವರು ಕಾಣಾ
ಸಿದ್ಧರಾಮಯ್ಯಾ./1491
ಸತ್ತಾತನೊಬ್ಬ ಹೊತ್ತಾತನೊಬ್ಬ,-
ಈ ಇಬ್ಬರನೂ ಒಯ್ದು ಸುಟ್ಟಾತನೊಬ್ಬ.
ಮದವಣಿಗನಾರೊ? ಮದವಳಿಗೆ ಯಾರೊ?
ಮದುವೆಯ ನಡುವೆ ಮರಣವಡ್ಡಬಿದ್ದಿತ್ತು.
ಹಸೆಯಳಿಯದ ಮುನ್ನ ಮದವಣಿಗನಳಿದ.
ಗುಹೇಶ್ವರಾ-ನಿಮ್ಮ ಶರಣನೆಂದೂ ಅಳಿಯ./1492
ಸತ್ತು ಮುಂದೆ ದೇವರ ಕೂಡಿಹೆವೆಂಬಿರಿ,
ಸಾಯದ ಮುನ್ನ ಸತ್ತಿಪ್ಪಿರಿ.
ಎಂತಯ್ಯಾ ನಿಮ್ಮ ಲಿಂಗೈಕ್ಯದ ಪರಿ ?
ಎಂತಯ್ಯಾ ನಿಮ್ಮ ಪ್ರಮಥರ ಪರಿ ?
ಅಂಗದ ಅವಸ್ಥೆಯಲ್ಲದೆ ಲಿಂಗದ ಅವಸ್ಥೆ ಆರಿಗೂ ಇಲ್ಲ
ಗುಹೇಶ್ವರಾ./1493
ಸತ್ತು ಮುಂದೆ ದೇವರ ಕೂಡುವುದುಳ್ಳಡೆ,
ಸಾಯಲೆ ಬೇಕು. ಹಿಂದೆ ನೋಯಲೇಕಯ್ಯಾ ?
ತಮ್ಮಿಂದ ತಾವು ಸತ್ತು, ನಿಮ್ಮ ಮೇಲೆ ಇಡುವರು.
ಲೋಕದ ದುರ್ಜನವ ಹೊತ್ತೆ ಕಾಣಾ ಗುಹೇಶ್ವರಾ/1494
ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರನು/1495
ಸತ್ಯ ಶುದ್ಧ ದೇವರ ನಂಬಲರಿಯದೆ,
ಮಿಥ್ಯ ದೈವಂಗಳನೆ ನಂಬಿ,
ಸತ್ತು ಹೋದರು ನಿತ್ಯವನರಿಯದೆ.
ಎತ್ತಲೆಂತರಿಯರು ಗುಹೇಶ್ವರಲಿಂಗವನು/1496
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ,
ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ.
ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ !
ಮನವನೊಳಕೊಂಡ ಜ್ಞಾನಕ್ಕೆ ಭಂಗ;
ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೆ ಗುಹೇಶ್ವರಾ ?/1497
ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು,
ಲಕ್ಷಕ್ಕೊಮ್ಮೆ ನುಡಿಯಲಾಗದು, ಕೋಟಿಗೊಮ್ಮೆ ನುಡಿಯಲಾಗದು.
ಸುಡಲಿ-ಅವಂದಿರ ಕೂಡೆ ಮಾರಿ ಹೋರಲಿ.
ಗುಹೇಶ್ವರಾ ನಿಮ್ಮ ಶರಣರಲ್ಲದವರೊಡನೆ,
ಬಾಯಿದೆರೆಯಲಾಗದು./1498
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ,
ಸಹಜವೂ ಇಲ್ಲ, ಅಸಹಜವೂ ಇಲ್ಲ,
ನಾನೂ ಇಲ್ಲ, ನೀನೂ ಇಲ್ಲ.
`ಇಲ್ಲ’ `ಇಲ್ಲ’ ಎಂಬುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು !/1499
ಸದ್ಯೋಜಾತ ಬದ್ಧಜ್ಞಾನಿ, ವಾಮದೇವ ಆತುರಜ್ಞಾನಿ,
ಅಘೋರ ಕೋಪಜ್ಞಾನಿ, ತತ್ಪುರುಷ ಕ್ಷಣಿಕಜ್ಞಾನಿ,
ಈಶಾನ್ಯ ಅತೀತಜ್ಞಾನಿ-[ಇದು] ಪರಿಯಲ್ಲ ನೋಡಾ.
ಗುಹೇಶ್ವರಲಿಂಗದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣ,
[ಆತನ] ಶ್ರೀಪಾದಕ್ಕೆ ನಮೋನಮೋ ಎಂಬೆನು/1500