Categories
ವಚನಗಳು / Vachanagalu

ಆಯ್ದಕ್ಕಿ ಮಾರಯ್ಯ ವಚನಗಳು

ಅಂಧಕಂಗೆ ಜೀವವಿದ್ದಡೆ ಕಣ್ಣಿದ್ದಂತೆ ಕಂಡು ನಡೆಯಬಲ್ಲನೆ ?
ನೀ ಸತಿಯಾಗಿ ನಾ ಪತಿಯಾಗಿ
ಉಭಯ ಪ್ರಾಣ ಏಕರೂಪಾಗಿ
ಎನ್ನಂಗದ ಅಂಗನೆ ಅಮರೇಶ್ವರಲಿಂಗವ ತೋರಾ./1
ಅಮೃತದ ಸವಿ ಸ್ವಾದಿಸುವರಿಗಲ್ಲದೆ
ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ
ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ?
ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ
ನೇಮದ ಕಟ್ಟು ನಿನ್ನದು ಬಸವಣ್ಣಾ.
ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ?
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ,
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು./2
ಅಹಂಕಾರವರತಲ್ಲದೆ ಗುರುಭಕ್ತನಲ್ಲ,
ಬಯಕೆ ಹಿಂಗಿಯಲ್ಲದೆ ಶಿವಲಿಂಗಪೂಜಕನಲ್ಲ,
ತ್ರಿವಿಧ ಮಲತ್ರಯದ ಬಲುಹುಳ್ಳನ್ನಕ್ಕ ಚರಸೇವಿಯಲ್ಲ.
ಇಂತೀ ಗುಣಂಗಳಲ್ಲಿ ನಿಶ್ಚಯವಾದಲ್ಲದೆ,
ಅಮರೇಶ್ವರಲಿಂಗವನರಿಯಬಾರದು./3
ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ,
ಮಾಡುವುದೇನು ? ನೀಡುವುದೇನು ?
ಮನೆ ಧನ ಸಕಲಸಂಪದಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು,
ಎನ್ನೊಡಲ ಹೊರೆವೆನಾಗಿ,
ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ./4
ಒಂದ ಬಿಟ್ಟು ಒಂದ ಕಂಡೆಹೆನೆಂದಡೆ,
ಅದು ಕಾಣಬಾರದ ಬಯಲು.
ಒಂದರಲ್ಲಿ ಸಲೆ ಸಂದು ಹಿಂಗದ ಭಾವ ನೆಲೆಗೊಂಡಲ್ಲಿ
ಅಮರೇಶ್ವರಲಿಂಗವು ತಾನೆ./5
ಕಟ್ಟಿಗೆ ಕಸ ನೀರು ತಂದು,
ಸತ್ಯರ ಮನೆಯಲ್ಲಿ ಒಕ್ಕುದನೀಸಿಕೊಂಡು,
ತನ್ನ ಕೃತ್ಯ ತಪ್ಪದೆ ಒಕ್ಕುದ ಕೊಂಡು,
ಸತ್ಯನಾಗಿಪ್ಪ ಭಕ್ತನಂಗವೆ ಅದು ಅಮರೇಶ್ವರಲಿಂಗದ ಸಂಗ./6
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು/7
ಗಂಗೆವಾಳುಕ ಸಮಾರುದ್ರರೆಲ್ಲರು
ತಾವು ತಾವು ಬಂದಲ್ಲಿಯೆ ಬಟ್ಟೆಯ ಮೆಟ್ಟಿದಂತಾದರು.
ಪ್ರಮಥಗಣಂಗಳೆಲ್ಲರು ಪ್ರಮಾಣಿಸಿದಲ್ಲಿ ಹರಿದರು,
ಎನಗೆ ಕರಿಗೊಂಬ ಅರಿವೆಲ್ಲಿ ಅಮರೇಶ್ವರಲಿಂಗಾ ?/8
ಗಣಸಮೂಹವೆಂದು ಕೂಡಿ ಮಾಡುವಲ್ಲಿ
ಸಮಯದ ನೋವು ಭೂರಿಗೀಡಾಗಿ, ಮಾಟದ ಸಂದೇಹವ ಹೊತ್ತು
ಮಾತಿಂಗೊಳಗಾದಲ್ಲಿ, ಭಕ್ತಿಯ ನೀತಿ ಸಿಕ್ಕಿತ್ತು,
ಅಮರೇಶ್ವರಲಿಂಗಕ್ಕೆ ದೂರವಾಯಿತ್ತು./9
ಗುರುಪೂಜೆಯ ಮಾಡುವಲ್ಲಿ ಗುರುಪೂಜೆಯಲ್ಲಿಯೇ ಮುಕ್ತರು,
ಲಿಂಗಪೂಜೆಯ ಮಾಡುವಲ್ಲಿ ಲಿಂಗಪೂಜೆಯಲ್ಲಿಯೇ ಮುಕ್ತರು,
ಜಂಗಮಪೂಜೆಯ ಮಾಡುವಲ್ಲಿ ಜಂಗಮಪೂಜೆಯಲ್ಲಿಯೇ ಮುಕ್ತರು.
ಮೂರೊಂದಾಗಲಾಗಿ ಬೇರೊಂದಂಗವಿಲ್ಲ.
ಆಗುಚೇಗೆ ಮೂರರಲ್ಲಿ ಅಡಗಿದ ಮತ್ತೆ
ಅಮರೇಶ್ವರಲಿಂಗವ ಪೂಜಿಸಲಿಲ್ಲ./10
ಗುರುಲಿಂಗಜಂಗಮದಲ್ಲಿ ಬೆರಸಿ ದಾಸೋಹವ ಮಾಡುವಲ್ಲಿ,
ಹೆಣ್ಣು ಹೊನ್ನು ಮಣ್ಣು ಇವೇ ಮೂಲ ಮೊದಲು.
ಮಾಟ ಸ್ವಸ್ಥವಾದಲ್ಲಿ ಈ ಮೂರ ಮರೆಯಬೇಕು,
ಅಮರೇಶ್ವರಲಿಂಗವನರಿಯಬೇಕು./11
ಗೆಜ್ಜಲು ಮನೆಯ ಮಾಡಿ ಸರ್ಪಂಗಿಂಬಾದಂತೆ
ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ
ನ್ನನಗಿನ್ನೆತ್ತಣ ಮುಕ್ತಿ ಅಮರೇಶ್ವರಲಿಂಗ !/12
ಚಂದ್ರಕಾಂತದ ಶಿಲೆಯಲ್ಲಿ ಬಿಂದು ಅಡಗಿಪ್ಪಂತೆ,
ಗೋವುಗಳಲ್ಲಿ ಗೋರಂಜನ ರಂಜಿಸುವಂತೆ,
ಶಿಲೆಕಾಷ್ಠಂಗಳಲ್ಲಿ ಅನಲ ಅಡಗಿಪ್ಪಂತೆ,
ಸತ್ಯರ ಹೃದಯದಲ್ಲಿ
ವರಿಾಕ್ತಿಕದ ಉದಕದಂತೆ ಭಾವವಿಲ್ಲದೆ ಅಡಗಿದೆಯಲ್ಲಾ
ಅಮರೇಶ್ವರಲಿಂಗವೆ./13
ತನುವೀವಡೆ ತನುವೆನಗಿಲ್ಲ, ಮನವೀವಡೆ ಮನವೆನಗಿಲ್ಲ,
ಧನವೀವಡೆ ಧನವೆನಗಿಲ್ಲ.
ಇಂತೀ ತನುಮನಧನ ಸಕಲಸಂಪತ್ತುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದುತಂದು
ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ./14
ತವನಿಧಿಯ ಬೆಳೆವಂಗೆ ಕಣಜದ ಹಂಗುಂಟೆ ?
ವಿರಕ್ತಂಗೆ ಆರೈಕೆಗೊಂಬವರುಂಟೆ ?
ಕಾಯಕವ ಮಾಡುವ ಭಕ್ತಂಗೆ ಇನ್ನಾರುವ ಕಾಡಲೇತಕ್ಕೆ ?
ಆ ಗುಣ ಅಮರೇಶ್ವರಲಿಂಗಕ್ಕೆ ದೂರ./15
ತೊಟ್ಟುಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು,
ಮರ್ತ್ಯದ ಹಂಗುಳ್ಳನ್ನಕ್ಕ
ಸತ್ಯಶರಣರ ಸಂಗ, ನಿತ್ಯಜಂಗಮಸೇವೆ ಕೃತ್ಯವಿರಬೇಕು
ಅಮರೇಶ್ವರಲಿಂಗವನರಿವುದಕ್ಕೆ./16
ನರನ ಮುಟ್ಟಿ ಓಲೈಸಿದಲ್ಲಿ ಪರಿಪರಿಯ ಪದವಿಗಳುಂಟು.
ಪರಶಿವಮೂರ್ತಿಯನರಿದಲ್ಲಿ ಇಹಪರದಲ್ಲಿ ಪರಮಸುಖವುಂಟು.
ಇದೇ ಪರತತ್ವದ ಇರವು.
ಅಮರೇಶ್ವರಲಿಂಗವ ಬೆರಸಬಲ್ಲಡೆ ಇದೇ ಸುಖ./17
ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು,
ಕಾಯಕ ಸತ್ತು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ ?
ಆ ಗುಣ ಅಮರೇಶ್ವರಲಿಂಗಕ್ಕೆ ದೂರ./18
ಬೇಡಿ ತಂದು ದಾಸೋಹವ ಮಾಡುವನ್ನಬರ,
ಪಂಗುಳನ ಪಯಣದಂತೆ.
ಯಾಚಕತ್ವ ಭಕ್ತಂಗುಂಟೆ ?
ಭಕ್ತನಾಗಿ ಹುಟ್ಟಿ ಭಕ್ತರ ಬೇಡಿತಂದು ಮಾಡಿ ಮುಕ್ತಿಯನರಸಲುಂಟೆ ?
ಅದು ಅಮರೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು./19
ಭಕ್ತಂಗೆ ಆಗುಚೇಗೆ ಅಹಂಕಾರಕ್ಕೊಳಗಾದಲ್ಲಿಯೆ ಸತ್ಯ ಸದಾಚಾರ ಸಿಕ್ಕಿತ್ತು.
ಅಹಂಕಾರವ ಮರೆದು, ನಿಹಿತಾಚಾರವನರಿದು,
ಅಮರೇಶ್ವರಲಿಂಗವ ಅವಗವಿಸಬೇಕು./20
ಭಕ್ತರ ಭಾವದಲ್ಲಿ ಸುಳಿವ ಸುಳುಹು,
ವಿರಕ್ತರ ಜ್ಞಾನದಲ್ಲಿ ಹೊಳೆವ ಕಳೆಯು, ನೀನೆಯಯ್ಯಾ !
ಸೂರ್ಯನ ಬೆಳಗಿನೊಳಗೆ ಸಚರಾಚರಪ್ರಾಣಿಗಳು ಸುಳಿವಂತೆ,
ನಮ್ಮ ಕಟ್ಟಿನ ನೇಮದ ನಿಷ್ಠೆ ನೀನೆಯಯ್ಯಾ.
ಅಮರೇಶ್ವರಲಿಂಗದ ಒಡಲು ಸಂಗನಬಸವಣ್ಣನೆಂಬುದನು
ಮಡಿವಾಳಮಾಚಿತಂದೆಗಳೆ ಬಲ್ಲರು ಕಾಣಾ ಸಂಗನಬಸವಣ್ಣ./21
ಭಕ್ತರಿಗೆ ಬಡತನವುಂಟೆ? ಸತ್ಯರಿಗೆ ಕರ್ಮವುಂಟೆ ?
ಚಿತ್ತ ಮುಟ್ಟಿ ಸೇವೆಯ ಮಾಡುವ ಭಕ್ತಂಗೆ ಮರ್ತ್ಯ ಕೈಲಾಸವೆಂಬುದುಂಟೆ ?
ಆತನಿದ್ದುದೆ ಸುಕ್ಷೇತ್ರ,
ಆತನಂಗವೆ ಅಮರೇಶ್ವರಲಿಂಗದ ಸಂಗಸುಖ./22
ಮನದಲ್ಲಿ ಹುಟ್ಟಿದ ಅರಿವು ಮಾಡುವ ಮಾಟದಲ್ಲಿ ಕಾಣಬಹುದು,
ಶರಣರ ಸಂಗಕ್ಕೆಳಸಿದ ಚಿತ್ತವ ಅನುಭಾವದಲ್ಲಿ ಕಾಣಬಹುದು.
ಒಳಹೊರಗೆ ತೆರಹಿಲ್ಲದ ಕೂಟ ನಿನ್ನದು.
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು./23
ಮಲಕ್ಕೆ ಜಲವಲ್ಲದೆ ಅಮಲಕ್ಕೆ ಜಲವುಂಟೆ ?
ಅರಿವು ಮಾಡುವ ಭಕ್ತ ಫಲಪದವೆಂಬ ಛಲನೆಗೊಳಗಹನೆ ?
ಮಾಡುವ ಮಾಟಂಗಳಲ್ಲಿ ಕಲೆದೋರದಿಪ್ಪುದು,
ಅಮರೇಶ್ವರಲಿಂಗವ ಹಿಂಗದ ಭಾವ./24
ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ
ತ್ರಿವಿಧಪೂಜೆ ಕೆಟ್ಟಿತ್ತು.
ಗುರುಲಿಂಗಜಂಗಮದ ಅನುವನರಿತುದೆ ನೇಮ.
ಕಾಲ ಉಚಿತಕ್ಕೆ ಬಂದುದ ಕೂಡಿಕೊಂಬುದೆ ನಿತ್ಯ.
ಈ ಗುಣ ಅಮರೇಶ್ವರಲಿಂಗವ ಕೂಡುವ ಕೂಟ./25
ವಿಶ್ವಮಯರೂಪಾಗಿ ಬಂದೆಯಯ್ಯಾ ಭಕ್ತಿಗೆ.
ಎನ್ನ ಮನಕ್ಕೆ ಭಿನ್ನವಿಲ್ಲದೆ ಸಲೆ ಸಂದ ನಿಲವು
ಅಮರೇಶ್ವರಲಿಂಗಕ್ಕೆ ಕೂಟವಾಯಿತ್ತು./26
ಶಿವನೆ ಶಿವಭಕ್ತನಾಗಿ ಬಂದ ಲೋಕಹಿತಾರ್ಥ.
ಶಿವನೆ ಶಿವರಹಸ್ಯವ ಬೋಧಿಸಲೆಂದು ಗುರುವಾಗಿ ಬಂದು,
ಲಿಂಗದ ಕಳೆಯನರುಹಿದ ಲೋಕಹಿತಾರ್ಥ.
ಶಿವನೆ ಚರವೇಷದಲ್ಲಿ ಬಂದು,
ಅಂಗ ಮೊದಲು, ಮನವೆ ಕಡೆಯಾದ ಪದಾರ್ಥ
ದಾಸೋಹದಲ್ಲಿ ಸವೆಯಲೆಂದು ಬಂದ ಲೋಕಹಿತಾರ್ಥ.
ಶಿವನೆ ಮಂತ್ರತಂತ್ರಯಂತ್ರೋಪಕರಣವಾಗಿ ಬಂದ ಲೋಕಹಿತಾರ್ಥ.
ಇದರಂಗಸಂಗವ ಲಿಂಗಸಂಗಿಗಳು ಬಲ್ಲರು,
ಅನಂಗಸಂಗಿಗಳೆತ್ತ ಬಲ್ಲರಯ್ಯಾ,
ಅಮರೇಶ್ವರಲಿಂಗದನುವನರಿದ ಸಂಗನಬಸವಣ್ಣಾ?/27
ಸತ್ಯವೆಂಬ ತಟ್ಟೆಯಲ್ಲಿ, ಚಿತ್ತಶುದ್ಧವೆಂಬ ವಿಭೂತಿಯ ಬೈಚಿಟ್ಟು
ಸಕಲಸಂಪದ ಪ್ರಮಥರು ಮುಂತಾಗಿ
ಅಮರೇಶ್ವರಲಿಂಗದ ಆಶ್ರಯಕ್ಕೆ ಪ್ರಸಾದವ ಕೊಂಬುದಕ್ಕೆ
ಬಾ ಬಸವಣ್ಣ./28
ಸಮಯಕ್ಕೆ ಬಂದೆಹೆನೆಂದು ಕಂದದೆ, ಬಾರೆನೆಂದು ಕುಂದದೆ,
ಈ ಉಭಯದ ಸಂದನಳಿದು ನಿಂದಲ್ಲಿ
ಅಮರೇಶ್ವರಲಿಂಗವು ತಾನೆ./29
ಸ್ಥಾವರದ ಒಡಲಿಗೆ ಕಟ್ಟಿದ ತೊಗಲಿನಂತೆ,
ಆರು ಮುಟ್ಟಿದರು ಮುಟ್ಟಿಂಗೊಳಗಾಗಿ ತೋರುತ್ತಿಪ್ಪುದು ದನಿ.
ಅದು ಮೂರು ತಂತ್ರದ ಭೇದ.
ಆತ್ರಿವಿಧಭೇದವನರಿಯಬಲ್ಲಡೆ,
ಅಮರೇಶ್ವರಲಿಂಗವನರಿದುದು./30
ಹಮ್ಮುಬಿಮ್ಮುಳಿದ ಅನವರತ ಶಿವ ನೀನು ! ಎನ್ನ ಕರಸ್ಥಲದ ಕಳೆ ನೀನು !
ಎನ್ನ ಮನೋಮಧ್ಯದ ಸ್ವಯಂಜ್ಯೋತಿ ನೀನು !
ಅಮರೇಶ್ವರಲಿಂಗದ ಅನುವಿನ ಕಳೆ ನೀನು
ಸಂಗನಬಸವಣ್ಣಾ !!/31
ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ
ಸತ್ಯದ ಕಾಯಕ ಉಂಟೆ ?
ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು
ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ./32