Categories
ವಚನಗಳು / Vachanagalu

ಆಯ್ದಕ್ಕಿ ಲಕ್ಕಮ್ಮನ ವಚನಗಳು

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ?
ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ ಅಮರೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ./1
ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ,
ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು
ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ,
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಮಾರಯ್ಯಾ./2
ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ ?
ಸಮಯಕ್ಕೆ ಹೋಗಿ ಸಮಯವನರಿಯರೆಂದು ಭವಗೆಡಲುಂಟೆ ?
ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಹೊದ್ದುವ ಭಾವ./3
ಆಯ್ದಿಹೆನೆಂಬ ಕಾಯಕದ ಅರಿಕೆ ಹಿಂಗಿತೆ ?
ನಾ ಮಾಡಿಹೆನೆಂಬ ತವಕ ಹಿಂಗಿತೆ ?
ಉಭಯದ ಕೈಕೂಲಿ ಹಿಂಗಿ,
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಅಲಸಿಕೆಯಾಯಿತು./4
ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ ?
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ ?
ಬೇರೊಂದಡಿಯಿಡದಿರು, ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಬಲ್ಲಡೆ./5
ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ ?
ಈಸಕ್ಕಿಯಾಸೆ ನಿಮಗೇಕೆ ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ./6
ಐದು ಇಲ್ಲವಾದಂದಿಗಲ್ಲದೆ ಜಗದೊಳಗಾರಿಗೂ ಬಡತನವಲ್ಲದಿಲ್ಲ.
ಐದು ಉಳ್ಳನ್ನಕ್ಕ ಸಕಲಜೀವನಕ್ಕೆ ಚೇತನ.
ಮಾರಯ್ಯಪ್ರಿಯ ಅಮರೇಶ್ವರಲಿಂಗ ಉಳ್ಳನ್ನಕ್ಕ ಧನಮನಸಂಪನ್ನರು./7
ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ,
ಇದು ನಿಮ್ಮ ಮನವೊ, ಬಸವಣ್ಣನ ಅನುಮಾನದ ಚಿತ್ತವೊ ?
ಈ ಮಾತು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲ್ಲದಬೋನ.
ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ./8
ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ.
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ,
ಬೇಗ ಹೋಗು ಮಾರಯ್ಯಾ./9
ಕಾಯವಳಿದ ಠಾವಿನಲ್ಲಿ ಜೀವದ ಎಡೆಯಾಟ ಉಂಟೆ ?
ಭಾವವಿಲ್ಲದ ಭಕ್ತಿ ಹೋಯಿತ್ತು,
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದೆ./10
ಕೈದಕೊಡುವರಲ್ಲದೆ ಕಲಿತನವ ಕೊಡುವರುಂಟೆ ಮಾರಯ್ಯಾ ?
ಹೆಣ್ಣಕೊಡುವರಲ್ಲದೆ ಕೂಟಕ್ಕೊಳಗಾದವರುಂಟೆ ಮಾರಯ್ಯಾ ?
ಕಳುವಚೋರಂಗೆ ಬಡವರೆಂದು ದಯವುಂಟೆ ಮಾರಯ್ಯಾ ?
ಮನವನೊರೆದು ಭಕ್ತಿಯನೋಡಿಹೆನೆಂಬವಂಗೆ
ಎಮ್ಮಲ್ಲಿ ಗುಣವ ಸಂಪಾದಿಸಲಿಲ್ಲ ಮಾರಯ್ಯಾ.
ಶೂಲವನೇರಿ ಸಂದಲ್ಲಿ ಮತ್ತಿನ್ನು ಸಾವಿಂಗೆ ಹಂಗುಪಡಬೇಕೆ ?
ಮಾರಯ್ಯಪ್ರಿಯ ಅಮರೇಶ್ವರಲಿಂಗಾ ನೀನೆ ಬಲ್ಲೆ./11
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರದ
ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ,
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದ ಭಕ್ತಿ./12
ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣಬಂದಿತ್ತು.
ಮಾಟವುಳ್ಳನ್ನಕ್ಕ ಮಹಾಪ್ರಮ ಥರ ಭಾಷೆ ಭಾಗ್ಯ ದೊರೆಕೊಂಡಿತ್ತು.
ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು.
ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ,
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಕೂಡುವ ಕೂಟ./13
ಪ್ರತಿಷ್ಠೆಗೆ ಮಾಟವಲ್ಲದೆ ಸ್ವಯಂಭುಗುಂಟೆ ಉಳಿ ?
ನನಗೂ ನಿನಗೂ ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿವುದಕ್ಕೆ
ಬೇರೊಂದು ಠಾವುಂಟೆ ಮಾರಯ್ಯಾ ?/14
ಪ್ರಭುದೇವರು, ಸಿದ್ಧರಾಮಯ್ಯದೇವರು, ಮಡಿವಾಳ ಮಾಚಯ್ಯ,
ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಸಕಲಪ್ರಮಥಗಣಂಗಳು
ನೇಮ ನಿತ್ಯದ ಜಂಗಮಲಿಂಗ ಮುಂತಾದ ಸರ್ವಸಮೂಹಕ್ಕೆ
ತ್ರಿಕರಣಶುದ್ಧವಾಗಿ ಭಾವಭ್ರಮೆಯಡಗಿ ಜೀವವಿಕಾರ ನಿಂದು
ಮಾಡುವ ಮಾಟದ ಸಮಯದಿಂದವೆ ಮಾರಯ್ಯಪ್ರಿಯ
ಅಮರೇಶ್ವರಲಿಂಗದಲ್ಲಿಯೆ ಐಕ್ಯ./15
ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ
ನೇಮ ನಿತ್ಯ ಕೃತ್ಯ ಸಕಲಸಮೂಹ ನಿತ್ಯನೇಮದ
ಜಂಗಮಭಕ್ತರು ಗಣಂಗಳು ಮುಂತಾದ ಸಮೂಹಸಂಪದಕ್ಕೆ
ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ,
ಅಮರೇಶ್ವರಲಿಂಗದ ಮನೆಯಲ್ಲಿ ಆದಿಹಿತೆಂದು./16
ಬಸವಣ್ಣನ ಪ್ರಸಾದವಕೊಂಡು ಎನ್ನ ಕಾಯ ಶುದ್ಧವಾಯಿತ್ತಯ್ಯಾ.
ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನ ಜೀವ ಶುದ್ಧವಾಯಿತ್ತಯ್ಯಾ.
ಮಡಿವಾಳಯ್ಯನ ಪ್ರಸಾದವಕೊಂಡು ಎನ್ನ ಭಾವ ಶುದ್ಧವಾಯಿತ್ತಯ್ಯಾ.
ಶಂಕರದಾಸಿಮಯ್ಯನ ಪ್ರಸಾದವಕೊಂಡು ಎನ್ನ ತನು ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವಕೊಂಡು ಎನ್ನ ಮನ ಶುದ್ಧವಾಯಿತ್ತಯ್ಯಾ.
ಘಟ್ಟಿವಾಳಯ್ಯನ ಪ್ರಸಾದವಕೊಂಡು ಎನ್ನ ಪ್ರಾಣ ಶುದ್ಧವಾಯಿತ್ತಯ್ಯಾ.
ಅಕ್ಕನಾಗಾಯಮ್ಮನ ಪ್ರಸಾದವಕೊಂಡು ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ.
ಮುಕ್ತಾಯಕ್ಕಗಳ ಪ್ರಸಾದವಕೊಂಡು ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ.
ಪ್ರಭುದೇವರ ಪ್ರಸಾದವಕೊಂಡು ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳ
ಪ್ರಸಾದವಕೊಂಡು ಬದುಕಿದೆನಯ್ಯಾ
ಮಾರೇಶ್ವರಪ್ರಿಯ ಅಮಲೇಶ್ವರಾ,
ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ ಎನುತಿರ್ದೆನು./17
ಬಾಹಾಗ ಕೊಂಡುಬಂದ ಪ್ರಾಪ್ತಿಯಲ್ಲದೆ,
ಬೇರೊಂದ ಗಳಿಸಲಿಲ್ಲದ ಬೇರೊಂದ ಕೆಡಿಸಲಿಲ್ಲ.
ಬಂದುದು ನಿಂದುದು. ಮಾರಯ್ಯಪ್ರಿಯ ಅಮರೇಶ್ವರಲಿಂಗ ಕೊಟ್ಟಲ್ಲದಿಲ್ಲ./18
ಭಕ್ತಂಗೆ ಬಡತನವುಂಟೆ ? ನಿತ್ಯಂಗೆ ಮರಣವುಂಟೆ ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ,
ಮಾರಯ್ಯಪ್ರಿಯ ಅಮರೇಶ್ವರಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ/19
ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ದಾಸೋಹವ ಮಾಡಬಹುದೆ ?
ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ
ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಸಲಬೇಕು ಮಾರಯ್ಯಾ./20
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ./21
ಮಾಡಿ ನೀಡಿ ಹೋದೆನೆಂಬಾಗ ಕೈಳಲಾಸವೇನು ಕೈಕೂಲಿಯೆ ?
ಮುಂದೊಂದ ಕಲ್ಪಿಸದೆ, ಹಿಂದೊಂದ ಭಾವಿಸದೆ ಸಲೆಸಂದಿದ್ದಾಗವೆ
ಮಾರಯ್ಯಪ್ರಿಯ ಅಮರೇಶ್ವರಲಿಂಗವಿದ್ದ ಠಾವೆ ಕೈಲಾಸ./22
ಮಾಡುವ ಮಾಟವುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ ?
ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ
ಕೈಲಾಸವೆಂಬ ಆಸೆ ಬೇಡ. ಮಾರಯ್ಯಪ್ರಿಯ ಅಮರೇಶ್ವರಲಿಂಗವಿದ್ದ ಠಾವೆ ಕೈಲಾಸ./23
ಸಂದಣಿಗೊಂಡು ಮನಹರುಷದಿಂದ ಬಸವಣ್ಣನ ಅಂಗಳಕ್ಕೆ ಹೋಗಿ
ತಿಪ್ಪೆಯ ತಪ್ಪಲಲ್ಲಿ ಬಿದ್ದಿದ್ದ ತಂಡುಲವ ಕಟ್ಟಿಕೊಂಡು
ಎಯಿದಾಗಿ ತರಲು ಎಯಿದಾಗಿ ಬಂದಿತ್ತಲ್ಲಾ?
ನಮಗೆ ಎಂದಿನಂದವೆ ಸಾಕು,
ಮತ್ತೆ ಕೊಂಡು ಹೋಗಿ ಅಲ್ಲಿಯೆ ಸುರಿ,
ಮಾರಯ್ಯಪ್ರಿಯ ಅಮರೇಶ್ವರಲಿಂಗ ಕೊಟ್ಟ ಕಾಯಕವೆ ಸಾಕು ಮಾರಯ್ಯಾ./24
ಸಸಿಗೆ ನೀರೆರೆದಡೆ ಎಳಕುವುದಲ್ಲದೆ,
ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಎಳಕುವುದೆ ಮಾರಯ್ಯಾ ?
ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಿರಯ್ಯಾ./25