Categories
ಶರಣರು / Sharanaru

ಆಯ್ದಕ್ಕಿ ಲಕ್ಕಮ್ಮ

ಅಂಕಿತ: ಮಾರಯ್ಯಪ್ರಿಯ ಅಮರೇಶ್ವರಲಿಂಗ
ಕಾಯಕ: ಆಕ್ಕಿಯನ್ನು ಆಯುವ ಕಾಯಕ

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಆಸೆ ನಿಮಗೇಕೆ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ. -ಸವಸ-೫ ವಚನ ಸಂಖ್ಯೆ:೬೨೮

ಆಯ್ಕಕ್ಕಿ ಮಾರಯ್ಯನ ಪತ್ನಿ. ಮೂಲತಃ ರಾಯಚೂರ ಜಿಲ್ಲೆ ಲಿಂಗಸೂರ ತಾಲೂಕಿನ ಅಮರೇಶ್ವರ ಗ್ರಾಮಕ್ಕೆ ಸೇರಿದ ಈ ದಂಪತಿಗಳು ಬಸವಣ್ಣನವರ ಕೀರ್ತಿವಾತೆ೯ ಕೇಳಿ ಕಲ್ಯಾಣಕ್ಕೆ ಬದು, ಆಕ್ಕಿಯನ್ನು ಆಯುವ ಕಾಯಕ ಕೈಕೊಳ್ಳುತ್ತಾರೆ. ಇಷ್ಟದೈವ-ಆಮರೇಶ್ವರ. “ಮಾರಯ್ಯಪ್ರಿಯ ಅಮರೇಶ್ವರಲಿಂಗ” ಅಂಕಿತದಲ್ಲಿ ಬರೆದ ೨೫ ವಚನಗಳು ಈಗ ದೊರೆತಿವೆ. ಎಲ್ಲವೂ ಕಾಯಕ ಮತ್ತು ದಾಸೋಹದ ಮಹಿತಿಯನ್ನು ಎತ್ತಿ ಹೇಳುತ್ತವೆ. ’ಶೂನ್ಯ ಸಂಪಾದನೆಯಲ್ಲಿ ಈ ದಂಪತಿಗಳ ಕಾಯಕ ನಿಷ್ಠೆಯ ಕಥೆ ತುಂಬ ಸೊಗಸಾಗಿ ನಿರೂಪಿತವಾಗಿದೆ.

ಕಾಯಕ ಸಿದ್ಧಾಂತದ ರೂವಾರಿ ಆಯ್ದಕ್ಕಿ ಲಕ್ಕಮ್ಮ

ಕಾಯಕ ಸಿದ್ಧಾಂತವನ್ನು ಅಕ್ಷರಶಃ ಬದುಕಿದವಳು ಆಯ್ದಕ್ಕಿ ಲಕ್ಕಮ್ಮ. ಆಯ್ದಕ್ಕಿ ಲಕ್ಕಮ್ಮ ಕಾಯಕ ತತ್ವದಂತೆ ಅಕ್ಕಿ ಆಯ್ದು ತಂದು ಜೀವನ ಸಾಗಿಸುತ್ತಾಳೆ. ಕಾಯಕಕ್ಕೆ ಸಂಬಂಧಿಸಿದಂತೆ ಲಕ್ಕಮ್ಮನು ತನ್ನ ಗಂಡನಿಗೆ ಉಪದೇಶ ನೀಡುವ ಕೆಲಸ ಮಾಡುತ್ತಾಳೆ. ಒಂದು ವಿಧದಲ್ಲಿ ಗಂಡನಿಗೆ ತಾನೇ ‘ಗುರು’ವಾಗುತ್ತಾಳೆ. ಮಾರಯ್ಯ ಕಾಯಕವನ್ನು ಮರೆತಾಗ ಲಕ್ಕಮ್ಮನು ಎಚ್ಚರಿಕೆ ನೀಡಿ ಕಾಯಕಕ್ಕೆ ಕಳುಹಿಸುತ್ತಾಳೆ.

‘ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯ’.

ಈ ವಚನದಲ್ಲಿ ಲಕ್ಕಮ್ಮನು ಕಾಯಕಕ್ಕೆ ‘ಹೋಗು’ ಎಂಬುದನ್ನು ಒತ್ತಿ ಹೇಳುತ್ತಾಳೆ. ಇನ್ನೊಂದು ವಚನದಲ್ಲಿ ಆಕೆಯು ಕಾಯಕ ಮತ್ತು ಸಂಪಾದನೆಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾಳೆ. ಕಾಯಕದಿಂದ ದ್ರವ್ಯದ ಸಂಪಾದನೆಯಾಗುತ್ತದೆ. ಆದ್ದರಿಂದ ಕಾಯಕದಲ್ಲಿ ನಿರತರಾದ ಶರಣ-ಶರಣೆಯರಿಗೆ ಬಡತನ ಸಾಧ್ಯವಿಲ್ಲ ಎಂಬ ಸೂಕ್ಷ್ಮವನ್ನು ಅವಳು ಹೇಳುತ್ತಿದ್ದಾಳೆ.

‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ.’

ಲಕ್ಕಮ್ಮನು ‘ಕಾಯಕಯುಕ್ತ ಭಕ್ತಿ’ಯ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದಾಳೆ. ಭಕ್ತಿ ಯಿಲ್ಲದ ಕಾಯಕ ಮತ್ತು ಕಾಯಕವಿಲ್ಲದ ಭಕ್ತಿ ಅವಳಿಗೆ ಅರ್ಥಹೀನ. ಕಾಯಕದಿಂದ ಮಾತ್ರವೇ ಭಕ್ತಿಗೆ ಶಕ್ತಿ ಪ್ರಾಪ್ತವಾಗುತ್ತದೆ. ಕಾಯಕವಿಲ್ಲದವನ ಭಕ್ತಿ ವ್ಯರ್ಥವೆಂಬ ಮಾತನ್ನು ಲಕ್ಕಮ್ಮ ಆಡುತ್ತಾಳೆ. ವಚನ ಸಂಸ್ಕೃತಿಯು ಚಿತ್ತಶುದ್ಧ ಕಾಯಕದ ಬಗ್ಗೆ ಮಾತನಾಡುತ್ತದೆ. ಅವಳ ಕೆಳಗಿನ ವಚನವು ಇದಕ್ಕೆ ಸಾಕ್ಷಿಯಾಗಿದೆ.

‘ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣ ಬಂದಿತ್ತು
ಮಾಟವುಳ್ಳನ್ನಕ್ಕ ಮಹಾ ಪ್ರಮಥರ ಭಾಷೆ ದೊರೆಕೊಂಡಿತ್ತು
ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು
ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ ಕೂಡುವ ಕೂಟ.

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೇ?
ಬೆಟ್ಟ ಬಲ್ಲಿತ್ತೆ೦ದಡೆ,ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ?
ಘನ ಶಿವಭಕ್ತರಿಗೆ ಬಡತನವಿಲ್ಲ ,ಸತ್ಯರಿಗೆ ದುಷ್ಕರ್ಮವಿಲ್ಲ,
ಎನಗೆ ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವುಳ್ಳನ್ನಕ್ಕ
ಆರ ಹಂಗಿಲ್ಲ ಮಾರಯ್ಯ !!!

ಅತಿಯಾಸೆ ಇಲ್ಲದಿದ್ದರೆ ಮನಸ್ಸು ಯಾವಾಗಲು ಶ್ರೀಮಂತಿಕೆಯನ್ನು ಅನುಭವಿಸುತ್ತದೆ.ಬೆಟ್ಟ ಬೃಹತ್ತಾಗಿರಬಹುದು.ಉಳಿಯ ಮೊನೆಗೆ ಬಡತನವಿದ್ದೀತೆ? ಸತ್ಪಾತ್ರನನ್ನು ದುಷ್ಕರ್ಮಿಗಳು ಕಾಡುವುದಿಲ್ಲ.ಘನ ಭಕ್ತರಿಗೆ ಬಡತನವಿಲ್ಲ.ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವನ್ನು ನಂಬಿರುವಾಗ ಅನ್ಯರ ಹಂಗು ನಮಗಿಲ್ಲ.