Categories
ವಚನಗಳು / Vachanagalu

ಇತರ ಶರಣ/ಶರಣೆಯರ ವಚನಗಳು

ಬೊಮ್ಮಗೊಂಡೇಶ್ವರ
921
ಶ್ರೀಗುರು ವೀರಸಂಗಮನ ಬಣ್ಣಿಸುವುದೆಂತು ಸಾಧ್ಯವೋ ?
ಸೂಳೆಯ ಮನೆಯಲ್ಲುಂಡು ಅವಳ ದೀಕ್ಷೆಯಗೈದು
ಶಿವಶರಣೆಯನ್ನಾಗಿ ಮಾಡಿದ ;
ಕಾಟುಗನ ಮನೆಯಲ್ಲುಂಡು
ಅವನ ಜಂಗಮದಾಸೋಹಿಯಾಗಿ ಮಾಡಿದ ;
ವೈರಿ ಭಾಸ್ಕರಂಗೆ ಲಿಂಗದೀಕ್ಷೆಯ ತೆತ್ತು
ಮೈದುನನನ್ನಾಗಿ ಮಾಡಿಕೊಂಡ ;
ಮೃತಪಟ್ಟವಂಗೆ ಮರಳಿ ಪ್ರಾಣವ ತೆತ್ತ
ಪರುಷದ ಪುತ್ಥಳಿ ಪತಿತ ಪಾವನಮೂರ್ತಿ
ಶ್ರೀಗುರು ವೀರಸಂಗಯ್ಯನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಬಸವಣ್ಣ.

ಮರುಳಸಿದ್ಧೇಶ್ವರ
1126
ಆಲಿ ಆಲಯದಲ್ಲಿ ಕರಿಗೊಳಲು,
ಆಲಿಸುವ ಶ್ರವಣವು ಮೇಲಿಪ್ಪ ಆಕಾಶವನಡರಲು,
ಉಲುಹು ನಿರ್ಭೂತಚಿತ್ತ ಸಮಾಧಾನವನೆಯ್ದಲು,
ಕಾಲಕರ್ಮಭವಂಗಳ ಗೆಲುವುದಿದೇನು ಸೋಜಿಗವು ಹೇಳಾ, ರೇವಣ್ಣಪ್ರಭುವೆ.

ಮರ್ಕಟೇಶ್ವರ ##
1346
ಹೇಮ ಕಾಮಿನಿ ಭೂಮಿ ಜೀವರಾಧಾರ,
ಜೀವರ ಪ್ರಾಣ, ಜೀವರ ಸಿಕ್ಕು ತೊಡಲು.
ಇಹಪರದೊಳಗೆ ಜಂಘೆಯ ಬಿಟ್ಟು,
ಲಂಘಿಸಿ ನಿಂದಾತನೆ ವಿರತಿ ಸಮಗ್ರ ಕಾಣಾ,
ಮರ್ಕಟೇಶ್ವರಾ.

ಮಳುಬಾವಿಯ ಸೋಮಣ್ಣ
1154
ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು.
ಸುಖವಿಲ್ಲದ ಸಂಸಾರ.
ಎಳತಟೆಗೊಂಬ ಕಾಯದ ಸಂಗ.
ಬಳಲಿಸುವ ಜೀವಭಾವ.
ಇವರ ಕಳವಳವಳಿದಲ್ಲದೆ
ಮಳುಬಾವಿಯ ಸೋಮನ ತಿಳಿಯಬಾರದು.

ಮಸಣಯ್ಯಪ್ರಿಯ ಮಾರೇಶ್ವರಲಿಂಗ ##
1351
ಅಯ್ಯಾ, ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ,
ಹಂದಿಯ ದೇವರ ಮಾಡಿ ಕುಳ್ಳಿರಿಸಿ,
ಪಾದರಕ್ಷೆಯ ಪೂಜೆಯ ಮಾಡಿ
ನೈವೇದ್ಯವ ಹಿಡಿದು, ಮೂತ್ರದ ನೀರ ಕುಡಿಸಿ,
ಶ್ವಾನ ಕುಕ್ಕುಟನಂತೆ ಕೂಗಿ ಬೊಗುಳಿ,
ದಡದಡ ನೆಲಕ್ಕೆ ಬಿದ್ದು ಕಾಡಿ ಕೊಂಡು
ಆ ದೇವರ ಒಡೆಯ ಮಾರೇಶ್ವರ
ಕಂಡ ಹೆಂಡ ಕೊಡುವನಲ್ಲದೆ ಅನ್ನ ನೀರು ಕೊಡುವನೆ ?
ಆ ದೇವರಿಗೆ ಹೊಲೆಯರು ಮಚ್ಚುವರಲ್ಲದೆ,
ಉತ್ತಮರು ಮಚ್ಚರು ನೋಡಯ್ಯ, ಮಸಣಯ್ಯಪ್ರಿಯ ಮಾರೇಶ್ವರಲಿಂಗವೆ.

ಮಹಾದೇವೀರಯ್ಯ
1153
ಜಾತಿ ಶೈವರು ಅಜಾತಿ ಶೈವರೆಂದು
ಎರಡು ಪ್ರಕಾರವಾಗಿಹರಯ್ಯಾ.
ಜಾತಿ ಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯಾ.
ಅಜಾತಿ ಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯಾ.
ಜಾತಿ ಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ,
ದ್ವಾರೇ ಯಸ್ಸ ಚ ಮಾತಂಗೋ ವಾಯುವೇಗ ತುರಂಗಮಃ |
ಪೂರ್ಣೆಂದು ವದನಾ ನಾರೀ ಶಿವಪೂಜಾ ವಿಧೇಃ ಫಲಂಃ ||
ಎಂದುದಾಗಿ, ಇವು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯಾ.
ಅಜಾತಿಶೈವರು ಗುರುಲಿಂಗಜಂಗಮಕ್ಕೆ ತನುಮನಧನವ ನಿವೇದಿಸಿ,
ಸರ್ವಸೂತಕರಹಿತರಾಗಿಹರಯ್ಯಾ.
ಅಹಂ ಮಾಹೇಶ್ವರ ಪ್ರಾಣೇ ಮಾಹೇಶ್ವರೋ ಮಮ ಪ್ರಾಣಃ |
ತಥೈಕಂ ನಿಷ್ಕ್ರೀಯಂ ಭೂಯಾದನ್ಯಲ್ಲಿಂಗೈಕ್ಯಮೇವ ಚ ||
ಇದು ಕಾರಣ, ಸರ್ವೆಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿಕಾಯನೆಂಬೈಕ್ಯಪದವನು ಅಜಾತಿಶೈವರಿಗೆ ಕೊಡುವನಯ್ಯಾ.

ಮಹಾಲಿಂಗ ವೀರರಾಮೇಶ್ವರ ##
1348
ಬಯಲೊಳೆರಗಿದ ಸಿಡಿಲಿನಂತಾಯಿತ್ತೆನ್ನ ಗುರುವಿನುಪದೇಶ.
ಮಿಂಚಿನ ಪ್ರಭೆಯ ಸಂಚದಂತಾಯಿತ್ತೆನ್ನ ಗುರುವಿನುಪದೇಶ.
ಸ್ಫಟಿಕದ ಘಟದೊಳಗಣ ಜ್ಯೋತಿಯಂತಾಯಿತ್ತೆನ್ನ ಗುರುವಿನುಪದೇಶ
ಮಹಾಲಿಂಗ ವೀರರಾಮೇಶ್ವರನಂತಾಯಿತ್ತೆನ್ನ
ಗುರುವಿನುಪದೇಶವೆನಗಯ್ಯಾ.

ಮಾರುಡಿಗೆಯ ನಾಚಯ್ಯ
1271
ತನು ಉಡುಗಿ ಮನ ಉಡುಗಿ ಧ[ನ ಉಡುಗಿ]
ನಾಚಿ ಮಾಡಬಲ್ಲಡೆ, ನಾಚನೆಂದೆಂಬೆ.
ನಾಚದೆ ಮಾಡುವ ನೀಚರು ನೀವು ಕೋಚಿಯಾಗದೆ,
ಯಾಚಕತನವ ಬಿಟ್ಟು ಆಚರಿಸಿ, ಅಗೋಚರನ ಗೋಚರಿಸಿ,
ನಿಷ್ಠಾನಿಷ್ಠೆಯಿಂ ವ್ಯವಹರಿಸಬೇಡ.
ಊಟವೊಂದಿಲ್ಲದೆ ಮಾರೂಟ ಕೋರೂಟವನುಣ್ಣೆ.
ಉಡಿಗೆವೊಂದಲ್ಲದೆ ಮಾರುಡಿಗೆ ಮೀರುಡೆಗೆಯನು[ಡೆ]
ಉಂಡುಟ್ಟೆನಾದಡೆ ಎನ್ನ ಹೊದ್ದಿದಾರುಸ್ಥಲದ ಧೂಳಣ್ಣಗಳು
ನಗುವರು ಕಾಣಾ, ಮಾರುಡಿಗೆಯ ನಾಚೇಶ್ವರಾ.

ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ
1204
ಗರುಡಿಯಲ್ಲಿ ಕೋಲಲ್ಲದೆ ಕಾಳಗದಲ್ಲಿ ಕೋಲುಂಟೆ ?
ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ ಭಕ್ತಂಗುಂಟೆ ?
ವ್ರತ ತಪ್ಪಲು ಶರೀರವಿಡಿವ ನರಕಿಗೆ ಮುಕ್ತಿಯಿಲ್ಲ
ಅಮುಗೇಶ್ವರಲಿಂಗದಲ್ಲಿ.

ರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮ
1205
ಲಿಂಗಬಾಹ್ಯನ, ಆಚಾರಭ್ರಷ್ಟನ, ವ್ರತತಪ್ಪುಕನ,
ಗುರುಲಿಂಗಜಂಗಮವ ಕೊಂದವನ,
ಪಾದೋದಕ ಪ್ರಸಾದ ದೂಷಕನ,
ವಿಭೂತಿ ರುದ್ರಾಕ್ಷಿ ನಿಂದಕನ ಕಂಡಡೆ,
ಶಕ್ತಿಯುಳ್ಳಡೆ ಸಂಹಾರವ ಮಾಡುವುದು.
ಶಕ್ತಿಯಿಲ್ಲದಿದ್ದಡೆ ಕಣ್ಣು ಕರ್ಣವ ಮುಚ್ಚಿಕೊಂಡು
ಶಿವಮಂತ್ರ ಜಪಿಸುವುದು.
ಅಷ್ಟೂ ಆಗದಿದ್ದಡೆ, ಆ ಸ್ಥಳವ ಬಿಡುವುದು.
ಅದಲ್ಲದಿದ್ದಡೆ, ಕುಂಬಿಪಾತಕ ನಾಯಕನರಕದಲ್ಲಿಕ್ಕುವ
ಶ್ರೀಗುರುಸಿದ್ಧೇಶ್ವರನು.

ಲದ್ದೆಯ ಸೋಮಯ್ಯ
20
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?

ವರದ ಸೋಮನಾಥ ##
1358
ಬಸವ ಜಗದಾದಿ ಬೀಜ, ಬಸವ ಆನತ ಸುರಭೂಜ.
ಬಸವ ಬಸವಾ ಎಂಬ ನಾಮಸಾಲದೆ?
ಬಸವ ಭವರೋಗ ವೈದ್ಯ, ಬಸವ ವೇದಾಂತ ವೇದ್ಯ.
ಬಸವ ಬಸವಾ ಎಂಬ ಲೀಲೆ ಸಾಲದೆ?
ಬಸವ ಕರುಣಾಮೃತ ಸಿಂಧು, ಬಸವ ಪರಮಬಂಧು,
ಬಸವ ವರದ ಸೋಮನಾಥ ನೀನೆ,
ಬಸವ ಬಸವಾ ಬಸವಾ ಶರಣೆಂದರೆ ಸಾಲದೆ?

ಶ್ರೀಗುರು ಪ್ರಭುನ್ಮುನೀಶ್ವರ ##
1453
ಭಸಿತ ರುದ್ರಾಕ್ಷಿಯನು, ಎಸೆವ ಪಂಚಾಕ್ಷರಿಯನು,
ಅಸಮ ಶ್ರೀಗುರುಲಿಂಗಜಂಗಮದತಿಶಯದ
ಪಾದೋದಕ ಪ್ರಸಾದವನು ಅರುಹಿ,
ಎನ್ನ ಸರ್ವಾಂಗದಲ್ಲಿ ಸಂಬಂಧಿಸಿ ಸಲಹಿದಾತನು
ಶ್ರೀಗುರು ಪ್ರಭುನ್ಮುನೀಶ್ವರ.

1454
ವಂದಿಸುವವರ ಕಂಡಡೆ ಉಪಚಾರವ ಮಾಡಿ,
ನಿಂದಿಸುವವರ ಕಂಡಡೆ ಕಸವ ಮಾಡಿ,
ತನಗೆ ಭಕ್ತಿಯ ಮಾಡಿದವರೆ ಭಕ್ತರೆಂದು,
ತನಗೆ ಮಾಡದವರೆ ಅಜ್ಞಾನಿಗಳೆಂಬುವರು.
ತಾವು ಜ್ಞಾನವರತು, ಉಪಾಯದಲ್ಲಿ ವೇಷವ ಹೊತ್ತು,
ದೋಷವ ಮಾಡಿ, ನಾನೀಶನೆಂಬ ಘಾತಕರ ಕಂಡು,
ಬಾಚಿಯ ಕಾಯಕವ ಮಾಡೆ,
ಶ್ರೀಗುರು ಪ್ರಭುನ್ಮುನೀಶ್ವರಾ.

ಸತ್ಯ ಕರಂಡಮೂರ್ತಿ ಸದಾಶಿವಲಿಂಗ ##
1458
ಘೃತ ಘೃತವ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಬಸವಣ್ಣ.
ಕ್ಷೀರ ಕ್ಷೀರವ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಚೆನ್ನಬಸವಣ್ಣ.
ಜ್ಯೋತಿ ಜ್ಯೋತಿಯ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಪ್ರಭು[ದೇವ].
ಬಯಲು ಬಯಲ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಮಡಿವಾಳಯ್ಯ.
ಬೆಳಗು ಬೆಳಗ ಬೆರಸಿದಂತೆ
ನಿಮ್ಮ ಶ್ರೀಪಾದವ ಬೆರಸಿದನಯ್ಯಾ ಸಿದ್ಧರಾಮಯ್ಯ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ
ಶ್ರೀಪಾದದಲ್ಲಿ ಉರಿ ಕರ್ಪುರ ಬೆರಸಿದಂತೆ ಬೆರಸಿದೆನಯ್ಯಾ,
ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಲಿಂಗವೆ.

ಸದ್ಗುರು ಶಂಭು ಸೋಮೇಶ್ವರ ##
1461
ಶಿವನೆ ಅಧಿಕನು, ಶಿವಭಕ್ತನೆ ಕುಲಜನು,
ಶಿವಪ್ರಸಾದದಿಂಧಿಕವಾವುದೂ ಇಲ್ಲವೆಂದುದು ಶ್ರುತಿ.
ಇದನರಿದು, ಸದ್ಗುರು ಶಂಭುಸೋಮೇಶ್ವರನ ಭಜಿಸಿ,
ಪ್ರಸಾದಸೇವನೆಯ ಮಾಡದಿರಲು, ಅಘೋರನರಕ ತಪ್ಪದು.

ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ
1233
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ
ಸತ್ತ ನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಬಿಮೇಶ್ವರಾ.

ಸಿದ್ಧಲಿಂಗಪ್ರಿಯ ಬಸವಪ್ರಭುವೆ ##
1464
ಬಸವಣ್ಣ ಚೆನ್ನಬಸವಣ್ಣ ಪ್ರಭುಸ್ವಾಮಿ
ಮಡಿವಾಳ ಮಾಚಯ್ಯ ಹಡಪದಪ್ಪಣ್ಣ
ಅಕ್ಕಮಹಾದೇವಿ ನೀಲಲೋಚನೆಯಮ್ಮ
ಗಂಗಾಂಬಿಕೆ ಅಕ್ಕನಾಗಲಿ ಮುಕ್ತಾಯಕ್ಕ
ನಿಂಬೆಕ್ಕ ಚೋಳವ್ವೆ ಅಮ್ಮವ್ವೆ ಆದವ್ವೆ
ಕೋಳೂರು ಕೊಡಗೂಸಮ್ಮ ಗೊಗ್ಗವ್ವೆ ದುಗ್ಗಳವ್ವೆ
ಸುಗ್ಗಳವ್ವೆಯರ ಪಾದರಕ್ಷೆಯೊಳಗೆ
ಐಕ್ಯಪದವೀಯಯ್ಯ ಸಿದ್ಧಲಿಂಗಪ್ರಿಯ ಬಸವಪ್ರಭುವೆ
ನಿಮ್ಮ ಧರ್ಮ ನಿಮ್ಮ ಧರ್ಮ
ಈ ದೇವರ ಸೆರಗೊಡ್ಡಿ ಬೇಡಿಕೊಂಬೆನು.
ಪಾಲಿಸಯ್ಯಾ ಸ್ವಾಮಿ ದಯದಿಂದ
ಚಿದಾದಿತ್ಯ ನಿರೀಕ್ಷಣ ವಿಚಕ್ಷಣ.
ವಸ್ತುವ ಕಂಡರೆ ಸುಮ್ಮನಿರುವುದುಚಿತವಯ್ಯಾ.
ಅಂತಲ್ಲದೆ ಹೆಮ್ಮೆಗೆ ನುಡಿದಡೆ ಉಚಿತವಲ್ಲವಯ್ಯಾ
ನೀನಾನೆಂಬುಭಯವಳಿದಾತಂಗೆ ಏನೂ ಇಲ್ಲವಯ್ಯಾ
ವಿರಕ್ತರೆಂಬವರು ಸ್ತುತಿ ನಿಂದ್ಯಾದಿಗಳಿಗೆ ಹೆದರಿರಬೇಕಯ್ಯ,
ಸಿದ್ಧಲಿಂಗಪ್ರಿಯ ಪ್ರಭುವೆ.

ಸೂಳೆಸಂಕವ್ವೆ
1234
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.

ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ
1349
ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ.
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ, ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.

ಹುಂಜಿನ ಕಾಳಗದ ದಾಸಯ್ಯ
1192
ಹುಂಜ ಸೋತಡೆ ಹಿಡಿವೆ.
ವ್ರತ ಹೋದವರ ನೋಡೆನು,
ಚಂದ್ರಚೂಡೇಶ್ವರಲಿಂಗವೆ.

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-##: ಈ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.