Categories
ವಚನಗಳು / Vachanagalu

ಕರಸ್ಥಲದ ಮಲ್ಲಿಕಾರ್ಜುನೊಡೆಯ ವಚನಗಳು

1
ಅಂತರಂಗದಲ್ಲಿ ಅರಿವಿಲ್ಲದವಂಗೆ
ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು ?
ಅದು ಕಣ್ಣಿಲ್ಲದವನ ಬಾಳುವೆಯಂತೆ.
ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ
ಅಂತರಂಗದಲ್ಲಿ ಅರಿವಿದ್ದು ಫಲವೇನು ?
ಅದು ಶೂನ್ಯಾಲಯದ ದೀಪದಂತೆ.
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಾಂಗವೊಂದಾಗಬೇಕು.
ಅದೆಂತೆಂದಡೆ : ”ಅಂತರ್ಜ್ಞಾನ ಬಹಿಃಕ್ರಿಯಾ ಏಕೀಭಾವೋ ವಿಶೇಷತಃ”
ಎಂದುದಾಗಿ,
ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಕ್ರೀಯುಳ್ಳ ಮಹಾತ್ಮನೆ
ಭಕ್ತನಪ್ಪ, ಮಹೇಶ್ವರನಪ್ಪ, ಪ್ರಸಾದಿಯಪ್ಪ
ಪ್ರಾಣಲಿಂಗಿಯಪ್ಪ, ಶರಣನೈಕ್ಯನಪ್ಪ.
ನಮ್ಮ ಪರಮಗುರು ಶಾಂತಮಲ್ಲಿಕಾರ್ಜುನ ತಾನೆಯಪ್ಪ.
2
ಕರಸ್ಥಲದಲ್ಲಿದ್ದ ಲಿಂಗವ ಬಿಟ್ಟು
ಧರೆಯ ಮೇಲಣ ಪ್ರತಿಷ್ಠೆಗೆರಗುವ
ನರಕಿ ನಾಯಿಗಳನೇನೆಂಬೆನಯ್ಯ
ಪರಮಗುರು ಶಾಂತಮಲ್ಲಿಕಾರ್ಜುನ !
3
ವಾರಿಧಿಯೊಳಗಣ ವಾರಿಕಲ್ಲ ಕಡಿದು
ತೊಲೆ ಕಂಬವ ಮಾಡಿ ಮನೆಯ ಕಟ್ಟಿಕೊಂಡು
ಒಕ್ಕಲಿರಬಹುದೆ ಅಯ್ಯಾ ?
ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ
ಪರಿಮಳವ ತುಂಬಿ, ಅನುಲೇಪನಮಾಡಿ
ಸುಖಿಸಬಹುದೆ ಅಯ್ಯಾ ?
ವಾಯುವಿನೊಳಗಣ ಪರಿಮಳವ ಹಿಡಿದು
ದಂಡೆಯ ಕಟ್ಟಿ ಮಂಡೆಯೊಳಗೆ
ಮುಡಿಯಬಹುದೆ ಅಯ್ಯಾ ?
ಬಯಲ ಮರೀಚಿಕಾಜಲವ ಕೊಡನಲ್ಲಿ ತುಂಬಿ
ಹೊತ್ತು ತಂದು ಅಡಿಗೆಯ ಮಾಡಿಕೊಂಡು
ಉಣಬಹುದೆ ಅಯ್ಯಾ ?
ನಿಮ್ಮ ನೆರೆಯರಿದು ನೆರೆದು ಪರವಶನಾಗಿ
ತನ್ನ ಮರೆದ ಪರಶಿವಯೋಗಿಗೆ
ಮರಳಿ ಪರಿಭವಂಗಳುಂಟೆ
ಪರಮಗುರು ಶಾಂತಮಲ್ಲಿಕಾರ್ಜುನಾ ?

4
ಸತಿಯರ ನೋಡಿ ಸಂತೋಷವ ಮಾಡಿ,
ಸುತರ ನೋಡಿ ಸುಮ್ಮಾನವನೈದಿ,
ಮತಿಯ ಹೆಚ್ಚುಗೆಯಿಂದ ಮೈಮರದೊರಗಿ
ಸತಿಸುತರೆಂಬ ಸಂಸಾರದಲ್ಲಿ
ಮತಿಗೆಟ್ಟು ಮರುಳಾದುದನೇನೆಂಬೆ
ಎನ್ನ ಪರಮಗುರು ಶಾಂತಮಲ್ಲಿಕಾರ್ಜುನಾ.