Categories
ವಚನಗಳು / Vachanagalu

ಕರುಳ ಕೇತಯ್ಯ ವಚನಗಳು

26
ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ,
ತುಂಬಿದ ಘಟ, ಅರಿದು ಕೊಂಡ ಆತ್ಮ
ಇವ ಹಿಡಿದಡೆ ಭಂಗ.
ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು
ಆಸೆಯ ನುರಿಚಿ ಹಾಕಿ
ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ
ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
27
ಈ ವ್ರತ ತಪ್ಪಿತ್ತೆಂದು ಘಟವ ಬಿಟ್ಟಲ್ಲಿ
ಮೆಚ್ಚುವ ದೈವ ಬೇಡ.
ಇಂತೀ ಕ್ರೀ ಓಸರಿಸಿದಲ್ಲಿ ಬಟ್ಟಡೆ ಪ್ರಾಣವ
ಮೆಚ್ಚಿ ಕೈಲಾಸಕ್ಕೆ ಕರೆವ ದೈವವುಂಟೆ?
ಇಂತೀ ಉಭಯ ಭ್ರಷ್ಟವಾದಲ್ಲಿ ಸಿಕ್ಕಿತ್ತು ವ್ರತ.
ಮನಕ್ಕೆ ಮನೋಹರ ಶಂಕೇಶ್ವರ ಲಿಂಗ ತಪ್ಪಿದಡೂ
ಹೊರಗೆಂಬೆನು.
28
ಎಂದಿಂಗೂ ಸಾವುದು ತಪ್ಪದೆಂದು ಅರಿದು ಮತ್ತೆ
ವ್ರತಭಂಗಿತನಾಗಿ ಅಂದಿಂಗೆ ಸಾಯಲೇತಕ್ಕೆ?
ನಿಂದೆಗೆಡೆಯಾಗದ ಮುನ್ನವೆ
ಅಂಗವ ಹಾಕಿ ಚಿತ್ತದ ನಿಜಲಿಂಗವನೆಯ್ದಿ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ ಕೂಡಿ.

29
ಜಲ ನೆಲ ಅನಲ ಅನಿಲ ಮಿಕ್ಕಾದ
ದೃಷ್ಟಂಗಳೆಲ್ಲವನೂ ನಿರೀಕ್ಷಿಸಿ ಸಾಧಿಸಿಕೊಂಡು
ಶ್ರುತ ದೃಷ್ಟ ಅನುಮಾನಂಗಳಲ್ಲಿ ತಿಳಿದು,
ಹಿಂದಣ ಮುಂದಣ ಸಂದೇಹವ ಹರಿದು
ಮುಟ್ಟೂದು ಘಟಕ್ರಿಯಾಭೇದ
ಮನಕ್ಕೆ ಮನೋಹರ ಸಂಕೇಶ್ವರ ಲಿಂಗವನರಿವುದಕ್ಕೆ.
30
ತನಗಲ್ಲದುದ ಘಟ ಸೋಂಕಿದಲ್ಲಿ ಅಲ್ಲಿಯೇ ಕಡಿವೆನು.
ತನಗಲ್ಲದುದ ಕೈ ಮುಟ್ಟಿದಲ್ಲಿ ಅಲ್ಲಿಯೇ ತೆಗೆವೆನು.
ತನಗಲ್ಲದುದ ಕಿವಿ ಕೇಳಿದಲ್ಲಿ ಅಲ್ಲಿಯೇ ಗುಂಟಿ ಬಲಿವೆನು.
ತನಗಲ್ಲದುದ ನಾಸಿಕ ವಾಸಿಸಿದಲ್ಲಿ
ಅಲ್ಲಿಯೇ ದಸಿಯ ದಕ್ಕನೇರಿಸುವೆನು.
ದೃಷ್ಟಿ ಅನುತಪ್ಪಿ ನೋಡಿದಲ್ಲಿ ಅಲ್ಲಿಯೇ ಕಿತ್ತಿಡುವೆನು.
ಚಿತ್ತ ಅನುತಪ್ಪಿ ಮತ್ತೊಂದ ನೆನೆದಡೆ,
ಆತ್ಮನನಲ್ಲಿಯೆ ಕಿತ್ತು ಹಾಕುವೆನು.
ಇದಕ್ಕೆ ನೀವೇ ಸಾಕ್ಷಿ,
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು.
31
ತನ್ನ ಸಮ ಕ್ರೀವಂತರಲ್ಲಿಯಲ್ಲದೆ ಕೊಳುಕೊಡೆ
ಮಿಕ್ಕಾದ ಹೊರಗಣ ಕ್ರೀ ಸೋಂಕು ಬಾಹ್ಯರಚನೆ ತಪ್ಪದಿರಬೇಕು.
ಆತ್ಮನರಿದು ಮುಟ್ಟುವಲ್ಲಿ ತನ್ನ ವ್ರತದೆಸಕವನರಿದು
ಸ್ವಪ್ನಾವಸ್ಥೆಗಳಲ್ಲಿದ್ದು ಸೂಕ್ಷ ್ಮತನುವಂ ಮುಟ್ಟದೆ,
ಅಲ್ಲದುದ ಕಂಡು ಮತ್ತೆ ಆರೂ ಅರಿಯರೆಂದು ತನ್ನಲ್ಲಿಯೇ
ಅಡಗದೆ,
ತಲೆದೋರಿದಲ್ಲಿಯೇ ಲಯವಾಗಬೇಕು.
ಇಂತೀ ಗುಣ ಆತ್ಮನ ಶೀಲ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗದಲ್ಲಿ.
32
ದೃಷ್ಟಿ ಕಾಮ್ಯಾರ್ಥದಲ್ಲಿ ನೆಟ್ಟು ನೋಡಿ,
ಒಡೆಯರು ಭಕ್ತರ ವಧುಗಳಲ್ಲಿ
ಮತ್ತಾ ದೃಷ್ಟಿಯ ಮುಟ್ಟಲೇತಕ್ಕೆ?
ಮತ್ತೆ ಇತ್ಯಾದಿಗಳ ಬಿಟ್ಟು ಹೆಣ್ಣವ್ರತ ಕಟ್ಟೆಂದು ಮಾಡಬಹುದೆ?
ಮತ್ತದ ಕಟ್ಟಿಕೊಂಡು ಮಿಟ್ಟಿಯ ಭಂಡರಂತೆ
ಕುಟ್ಟಿಯಾಡಬಹುದೆ?
ಇಂತೀ ಬಾಹ್ಯ ದೃಷ್ಟಿಗಳ್ಳರ, ಆತ್ಮಚಿತ್ತಗಳ್ಳರ
ವ್ರತಸ್ಥರೆಂದು ಎನಲಾಗದು.
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು
ಅವರುವ ಮುಟ್ಟದಿಹನಾಗಿ
33
ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲ
ಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂ
ಓಸರಿಸಿದಲ್ಲಿ ಭಾಷೆ ಹೋಯಿತ್ತು.
ಕಳ್ಳನ ತಾಯ ಕಣಿಯ ಕೇಳ ಹೋದಂತೆ.
ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿ
ಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ
ಮುಟ್ಟದೆ ಹೋಯಿುತ್ತು.