Categories
ವಚನಗಳು / Vachanagalu

ಕಾಡಸಿದ್ಧೇಶ್ವರನ ವಚನಗಳು

ಅಂಗದ ಮೇಲೆ ಇಷ್ಟಲಿಂಗವ ಧರಿಸಿ
ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ.
ಎನ್ನ ಗುರುವೆಂದು ಭಾವಿಸಿ ಶರಣೆಂದು
ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ.
ಜಂಗಮವೆಂದು ನಂಬಿ, ವಿಶ್ವಾಸ ಬಲಿದು,
ಪಾದಪೂಜೆಯ ಮಾಡಿ
ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ.
ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು
ಬಿಡದೆ ಪಿಡಿದು ಪೂಜಿಸುವವರು
ಪ್ರಾಣಲಿಂಗಿಗಳೆಂಬೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./1
ಅಂಗಭಾವ ಹಿಂಗಿ, ಲಿಂಗಭಾವ ಮುಂದುಗೊಂಡಿರುವುದೇ
ಪಾರಮಾರ್ಥ.
ಪಂಚೇಂದ್ರಿಯ ವಿಷಯಸುಖವನಳಿದು
ಪಂಚಲಿಂಗದ ಸಮರಸದಲ್ಲಿರುವುದೇ ಪಾರಮಾರ್ಥ.
ಅಹಂಕಾರವಳಿದು ನಿರಹಂಕಾರದಲ್ಲಿರುವುದೇ ಪಾರಮಾರ್ಥ.
ಶಬ್ದಜಾಲಂಗಳನಳಿದು ನಿಶ್ಯಬ್ದವೇದಿಯಾಗಿರುವುದೇ
ಪಾರಮಾರ್ಥ.
ಈ ವಚನದ ತಾತ್ಪರ್ಯಾರ್ಥವನರಿದವರೆ
ಗುರುಲಿಂಗಜಂಗಮವೆಂಬೆ.
ಅರಿಯದಿರ್ದಡೆ ಭವಭಾರಿಗಳೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./2
ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ
ಗರ್ಭವಿಲ್ಲದೆ ಬಸುರಾದುದ ಕಂಡೆ.
ದಿನ ವಾರ ಮಾಸವಿಲ್ಲದೆ ಬೇನೆತೋರದೆ
ಒಂದು ಶಿಶು ಹಡೆದುದ ಕಂಡೆ.
ಆ ಶಿಶು ಮಂಡಲಾಧಿಪತಿಯ ಕೊಂದು
ಮಂಡಲವೆಲ್ಲ ಸುಡುವುದ ಕಂಡೆ.
ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ.
ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು
ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ.
ಅದು ಅಡಗಿದಲ್ಲಿ ತಾನಡಗಬಲ್ಲರೆ
ಪ್ರಳಯವಿರಹಿತ ಪರಶಿವಮೂರ್ತಿ
ತಾನೆಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./3
ಅಂಗೈಯೊಳಗಿನ ಕೂಸು ಆಕಾಶವ ನುಂಗಿ,
ಮಂಗಳಾಂಗಿಯ ಸಂಗವ ಮಾಡಿ
ಕಂಗಳಿಲ್ಲದವನ ಕೈಪಿಡಿದು,
ಕೋಲ ಮುರಿದು, ಕಾಲ ಕಡಿದು,
ಕಮಲದ ಹಾಲು ಕುಡಿದು,
ಸತ್ತು ಎತ್ತ ಹೋಯಿತೆಂದರಿಯೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./4
ಅಂತಪ್ಪ ಭವಭಾರಿಗಳಾದ ಜೀವಾತ್ಮರು
ಒಂದುಗೂಡಿ ದಾಸೋಹಮಾಡಿ,
ಅಗ್ನಿಜ್ವಾಲೆಯಲ್ಲಿ ಅರತು ಹೋಗುವ ನೀರಿಗೆ
ಪಾದೋದಕವೆಂದು ಹೆಸರಿಟ್ಟು,
ಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು,
ಅಗ್ನಿ ನೀರಿನಿಂದ ಅಟ್ಟು ಪಾಕ ಮಾಡಿದ ಅನ್ನಕ್ಕೆ
ಪ್ರಸಾದವೆಂದು ಹೆಸರಿಟ್ಟು,
ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸೆಂದು
ಎಲ್ಲರೂ ಕ್ಯೆಯ್ಯೊಡ್ಡೊಡ್ಡಿ ಕೈಕೊಂಡು,
ತಮ್ಮ ಕೈಯಲ್ಲಿರ್ದ ಇಷ್ಟಲಿಂಗಕ್ಕೆ ತೋರಿ ತೋರಿ
ಲಿಂಗಕ್ಕೆ ಕೊಟ್ಟೆವೆಂದು ತಮ್ಮ ಉದರಾಗ್ನಿ
ಹಸಿವು ತೃಷೆಯನಡಗಿಸಿಕೊಂಡು,
ಮುಂಜಾವಿನಲ್ಲೆದ್ದು ಮಲಮೂತ್ರ ವಿಸರ್ಜಿಸುವ
ಮೂಳಹೊಲೆಮಾದಿಗರಿಗೆಲ್ಲಿಹುದಯ್ಯಾ
ಆ ಗುರುಲಿಂಗಜಂಗಮದ ತೀರ್ಥಪ್ರಸಾದಸಂಬಂಧ ?
ಇಂತಪ್ಪ ಮತಿಭ್ರಷ್ಟ ಮರುಳಮಾನವರ
ಭಿನ್ನಕ್ರಿಯಾಚಾರವನು ಸುಜ್ಞಾನಿ ಶರಣ ಕಂಡು
ಹೊಟ್ಟಿ ಹುಣ್ಣಾಗುವನ್ನಬರ ನಕ್ಕು
ಶಬ್ದಮುಗ್ಭನಾಗಿ ಸುಮ್ಮನಿದ್ದನು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./5
ಅಂಬರದ ಕೂಸು ಆನೆಯ ನುಂಗಿ,
ಕುಂಭಿನಿಯ ಕೂಸು ಕುದುರೆಯ ನುಂಗಿ,
ಉಭಯರಂಗದ ಕೂಸು ಕುನ್ನಿಯ ನುಂಗಿ,
ಆ ರಂಗದ ಕೂಸು ನಾಡೆಲ್ಲ ನುಂಗಿ ಕಣ್ಣೊಳಡಗಿ,
ಅಡಗಿದ ಕೂಸ ಪಿಡಿದು ನುಂಗಬಲ್ಲಡೆ ಲಿಂಗೈಕ್ಯನೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./6
ಅಂಬರದ ಪಕ್ಷಿಗೆ ಕಾಲಾರು, ತಲೆ ಮೂರು,
ಬಾಲೆರಡು, ಕಣ್ಣೊಂದು, ಕೈ ಆರಾಗಿ,
ನಡೆದರೆ ಹೆಜ್ಜೆಯಿಲ್ಲ, ನುಡಿದರೆ ಶಬ್ದವಿಲ್ಲ.
ಅನ್ನ ಉದಕವನೊಲ್ಲದೆ ಅಗ್ನಿಯ ಸೇವಿಸುವದು.
ಆ ಮೃಗವ ಕಣ್ಣಿಲ್ಲದೆ ನೋಡಿ,
ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು,
ಬಾಯಿಲ್ಲದೆ ನುಂಗಿ ಬೇಟೆಯನಾಡುವೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./7
ಅಕ್ಕನಪುರುಷನ ಬಲದಿಂದ
ಬ್ರಹ್ಮನ ತಲೆ ಹೊಡೆದು,
ತಂಗಿಯಪುರುಷನ ಬಲದಿಂದ
ವಿಷ್ಣುವಿನ ಹಸ್ತವ ಕಡಿದು,
ತಾಯಿಯ ಗಂಡನ ಬಲದಿಂದ
ರುದ್ರನ ಎದೆಯ ಹೊಡೆದು ಇರ್ಪಾತನೆ
ಚಿಲ್ಲಿಂಗಸಂಬಂಧಿ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./8
ಅಗಮ್ಯ, ಅಗೋಚರವಾದ ಪರಬ್ರಹ್ಮವನು
ಪ್ರಮಾಣಕ್ಕೆ ತಂದು ಹೇಳುವಿರಯ್ಯಾ.
ಪ್ರಮಾಣಕ್ಕತೀತವಾಗಿರ್ಪುದು ಪರಬ್ರಹ್ಮವು.
ಹಳದಿ, ಹಸಿರು, ಕೆಂಪು, ಬಿಳಿದು, ನೀಲ, ಮಾಣಿಕ್ಯವೆಂಬ
ಷಡ್ವರ್ಣಗಳಿಂದ ವರ್ಣಿಸಿ ಹೇಳುವಿರಯ್ಯಾ;
ವರ್ಣಾತೀತವಾದ ವಸ್ತುವನು
ವರ್ಣಿಸುವ ಪರಿಯಿನ್ನೆಂತು ಹೇಳಿರಯ್ಯಾ !
ಜಪ-ತಪ-ಮಂತ್ರ-ಸ್ತೋತ್ರಂಗಳಿಂದ ವಾಚ್ಯಕ್ಕೆ ತಂದು ಹೇಳುವಿರಯ್ಯಾ;
ವಾಚಾತೀತವಾದ ವಸ್ತುವನು ವಾಚ್ಯಕ್ಕೆ ತರುವುದಿನ್ನೆಂತು ಹೇಳಿರಯ್ಯಾ !
ಇಂತೀ ಎಲ್ಲವನು ತನ್ನ ಪರಮಜ್ಞಾನದೃಷ್ಟಿಗೆ
ಮಿಥ್ಯವೆಂದು ತಿಳಿಯುವುದೇ ಶಿವಜ್ಞಾನ.
ಆ ಶಿವಜ್ಞಾನವೆಂಬರುಹೇ ತಾನೆಂಬ ತನು.
ತನ್ನಲ್ಲಿ ತಾನೇ ತಿಳಿಯುವುದೀಗ ಅದೇ ಬ್ರಹ್ಮಜ್ಞಾನವಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./9
ಅಗ್ನಿವರ್ಣದ ಚಿತ್ರ ಆಕಾಶವ ನುಂಗಿತ್ತು.
ಚಂದ್ರವರ್ಣದ ಚಿತ್ರ ಜಲವ ನುಂಗಿತ್ತು.
ಸೂರ್ಯವರ್ಣದ ಚಿತ್ರ ಪೃಥ್ವಿಯ ನುಂಗಿತ್ತು.
ಉಳಿದ ವರ್ಣದ ಚಿತ್ರವು ಪಂಚವರ್ಣದ ಭೂಮಿಯ ನುಂಗಿದವು,
ಈ ಚಿತ್ರದ ಭೇದವ ಬಲ್ಲವರು
ಅಸುಲಿಂಗಿಗಳು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./10
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ
ಏಕಪ್ರಸಾದ ಎಂಬರಯ್ಯಾ.
ಈ ನಾಲ್ಕು ಪ್ರಸಾದಿಗಳ ವಿವರ ಎಂತೆಂದಡೆ : ಹಲ್ಲುಕಡ್ಡಿ ದರ್ಪಣ ಮುಳ್ಳು ಸ್ತ್ರೀಸಂಭೋಗ
ಮೊದಲಾದ ದಿವಾರಾತ್ರಿಯಲ್ಲಿ ಜಂಗಮಕ್ಕೆ
ಸಕಲ ಪದಾರ್ಥವನು ಅರ್ಪಿಸಿ
ಮರಳಿ ತಾ ಭೋಗಿಸಬಲ್ಲಾತನೆ ಅಚ್ಚಪ್ರಸಾದಿಗಳೆಂಬರು.
ತ್ರಿಕಾಲದಲ್ಲಿ ನಿತ್ಯ ತಪ್ಪದೆ ಜಂಗಮವನರ್ಚಿಸಿ
ಪಾದೋದಕ ಪ್ರಸಾದವ ಸಲಿಸಬಲ್ಲಾತನೆ
ನಿಚ್ಚ ಪ್ರಸಾದಿಗಳೆಂಬರು.
ತಮ್ಮ ಸಮಯಾಚಾರದ ಜಂಗಮವ ಕಂಡಲ್ಲಿ
ಪಾದೋದಕ ಪ್ರಸಾದ ಸಲಿಸಬಲ್ಲಾತನೆ
ಸಮಯಪ್ರಸಾದಿಗಳೆಂಬರು.
ಶ್ರೀಗುರೂಪದೇಶವ ಪಡೆದ ಸಮಯದಲ್ಲಿ
ಪಾದೋದಕ ಪ್ರಸಾದವ ಸೇವಿಸಿ
ಮರಳಿ ಪಾದೋದಕಪ್ರಸಾದವ ಸೇವಿಸದಾತನೆ
ಏಕಪ್ರಸಾದಿಗಳೆಂಬರು.
ಇಂತೀ ಚತುರ್ವಿಧಪ್ರಸಾದಿಗಳು
ನಮ್ಮ ನಿರ್ಮಾಯಪ್ರಭುವಿಂಗೆ ಸಲ್ಲರು
ಅದೇನು ಕಾರಣವೆಂದಡೆ, ಇವರು ಕರ್ಮಕಾಂಡಿಗಳಾದ ಕಾರಣ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./11
ಅಚ್ಚಪ್ರಸಾದಿಗಳೆಂದು ಹೆಸರಿಟ್ಟುಕೊಂಡು
ಪ್ರಸಾದಿಗಳ ಕಂಡರೆ ಅಗಲನೆಲ್ಲವ ನೀರಿನಿಂದ ತೊಳೆತೊಳೆದು
ಮುಸುರಿಗೆ ಬಿಟ್ಟ ಎಮ್ಮಿಯಂತೆ ಕುಡಿದು,
ಆಯತಮಾಡಿ ಅಗಲನೆಲ್ಲವ ನೆಕ್ಕಿ ನೀರ ತೊಂಬಲವೆಲ್ಲ ತೆಗೆವರು.
ಆರೂ ಇಲ್ಲದ ವೇಳೆಯಲ್ಲಿ ರಣಬೀರರಂತೆ
ಕೂಳ ತಿಂದು ಚಲ್ಲಾಡಿ,
ತುದಿಹಸ್ತವ ತೊಳೆದು ಹೋಗುವವರಿಗೆ
ಅಚ್ಚಪ್ರಸಾದವೆಲ್ಲಿಹುದಯ್ಯ ?
ದೇಹಕ್ಕೆ ವ್ಯಾಧಿ ಸಂಘಟಿಸಿದಲ್ಲಿ
ತನ್ನ ಖಬರು ತನಗೆ ವಿಸ್ಮೃತಿಯಾಗಲು
ಆ ವೇಳೆಯಲ್ಲಿ ಅನ್ನ ಉದಕವ ಆರು ನೀಡಿದಡೆಯೂ
ಜೀವನ ಕಕಲಾತಿಗೆ ತಾ ಮಲಗಿರ್ದ
ಹಾಸಿಗೆಯಲ್ಲಿ ಏಳದೆ ಮಲಗಿರ್ದಲ್ಲಿ
ಅನ್ನ ಉದಕವ ತಿಂಬುವವರಿಗೆ
ಎಲ್ಲಿಹುದಯ್ಯ ಅಚ್ಚಪ್ರಸಾದ ?
ಇಂತಪ್ಪ ವ್ರತಭ್ರಷ್ಟ ಸೂಳೆಯಮಕ್ಕಳು
ನುಚ್ಚಬಡಕರಲ್ಲದೆ ಇವರು ಅಚ್ಚಪ್ರಸಾದಿಗಳಾಗಬಲ್ಲರೆ ?
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./12
ಅಟಮಟವೃಕ್ಷದ ಘಟದಲ್ಲಿ
ಕಂಚುಮಿಂಚಿನ ಸೂಜಿಯ ಹಿನ್ನಿಯಲ್ಲಿ
ಈರೇಳುಲೋಕದ ಎಡೆಯಾಟ.
ಅಗ್ರದಲ್ಲಿ ಪರ್ವತ ಗಜ ತುರಂಗದ
ತಂಡತಂಡಿನ ಒಡೆಯನ ಶಿರವೊಡೆದು
ಕಮಲದಲ್ಲಿ ಬರಲು, ಸರ್ವ ನಷ್ಟವಾಗಿ,
ತಂಡಿನೊಡೆಯ ಕಮಲವ ನುಂಗಿ ನಿರ್ವಯಲಾದ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./13
ಅಟ್ಟುಂಬ ಜನರಿಗೆ ಮಡಿಕೆಯ ಕೊಡಲಿಲ್ಲ;
ಅಟ್ಟುಣ್ಣದೆ ಉಂಬ ಜನರಿಗೆ ಮಡಿಕೆಯ ಮಾರುವನು.
ಹಣವ ತಂದವರಿಗೆ ಮಡಿಕೆಯ ಕೊಡಲಿಲ್ಲ;
ಹಣವ ತಾರದವರಿಗೆ ಮಡಿಕೆಯ ಮಾರುವನು.
ಉಭಯದ ಸಂದನರಿದವರಿಗೆ ಮಡಿಕೆಯ ಮಾರುವನು.
ಅರಿಯದವರಿಗೆ ಮಡಿಕೆಯ ತೋರನು
ನೋಡೆಂದ ವೀರಮಾಹೇಶ್ವರನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./14
ಅಡ್ಡಕ್ಕೆ ಆರು, ದುಡ್ಡಿಗೆ ಮೂರು ಲಿಂಗ ಮಾರುವರು.
ಇಂತಪ್ಪ ಅಗ್ಗದ ಲಿಂಗವ ತಂದು
ಮೂಢಗುರುವಿನ ಕೈಯಲ್ಲಿ ಕೊಟ್ಟು
ಮಡ್ಡಜೀವಿಗಳು ಅಡ್ಡಬಿದ್ದು ಕಾಡಲಿಂಗವ ಪಡಕೊಂಡು
ತಮ್ಮ ಕೊರಳಲ್ಲಿ ಕಾಣಿಯ ಕಲ್ಲು
ತಕ್ಕಡಿಗೆ ಕಟ್ಟಿದ ಹಾಗೆ ಕಟ್ಟಿಕೊಂಡು,
ನಾವು ಪ್ರಾಣಲಿಂಗಿಗಳೆಂದಡೆ
ನಗುವರಯ್ಯ ನಿಮ್ಮ ಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./15
ಅಡ್ಡಗುಡ್ಡದ ಬೆಟ್ಟವನೊಡೆದು,
ಅರ್ಧಗಜ ಅಡ್ಡಗಲು, ಪೋಣೆಗಜ ನಿಡಿದು ಕಲ್ಲ ತಂದು,
ಅದರ ಮೇಲೆ ಲಿಂಗಾಕಾರ ಚಂದ್ರಸೂರ್ಯರ ಬರೆದು ಕಟಿಸಿ,
ಭೂಮಿಯಲ್ಲಿ ಚೌರಸ ಭೂಮಿಯ ಮಾಡಿ,
ನಾಲ್ಕುಮೂಲಿಯ ಸ್ಥಾನದಲ್ಲಿ
ಭೂಮಿಯೊಳಗೆ ಅರ್ಧಗಜ ಭೂಮಿಯನಗಿದು,
ಆ ಅಗಿದ ಭೂಮಿಯ ಸ್ಥಾನದಲ್ಲಿ ಬೆಳ್ಳಿ ಬಂಗಾರ
ಮೊದಲಾದ ಪಂಚಲೋಹವ ಹಾಕಿ,
ಆ ಲಿಂಗಮುದ್ರೆಯಕಲ್ಲು ತಂದು ಮಜ್ಜನವ ಮಾಡಿ,
ವಿಭೂತಿಯ ಧರಿಸಿ, ಪತ್ರಿ ಪುಷ್ಪದಿಂದ ಪೂಜೆ ಮಾಡಿ,
ಅಗಿದ ಭೂಮಿಯಲ್ಲಿ ನಡಿಸಿ, ಟೆಂಗನೊಡೆದು,
ನಾಲ್ವರು ಕೂಡಿ, ಶ್ಮಶಾನಭೂಮಿಯ ಪೂರ್ವವನಳಿದು
ರುದ್ರಭೂಮಿಯಾಯಿತ್ತು ಎಂದು
ಹೆಸರಿಟ್ಟುಕೊಂಡು ನುಡಿವಿರಿ.
ಅದೆಂತು ಶುದ್ಧವಾಯಿತು ಎನಗೆ ತಿಳಿಯದು,
ನೀವು ಪೇಳಿರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./16
ಅಣ್ಣಗಳು ಅಕ್ಕನ ಕೂಡ
ಹನ್ನೆರಡುವರ್ಷ ಮಾತನಾಡದೆ
ಶಬ್ದಮುಗ್ಧನಾಗಿ ಲಿಂಗೈಕ್ಯರಾದರೆಂದು
ಪುರಾಣವಾಕ್ಯವ ಕೇಳಿ,
ಮರ್ತ್ಯಲೋಕದ ಶಿವಗಣಂಗಳು ಪೇಳುತ್ತಿರ್ಪರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./17
ಅತ್ತೆ ಅಳಿಯನ ನೆರೆದು ಮಾವ ಸೊಸೆಯ ಬೆರೆದು,
ಗುರುವಿನ ಸತಿ ಶಿಷ್ಯನ ನೆರೆದು,
ಶಿಷ್ಯನ ಸತಿ ಗುರುವ ಬೆರೆದು,
ಊರೊಳಗೆ ಬೆಳಗಾಯಿತ್ತು.
ಬೆಳಗಿನೊಳಗೆ ಸಮಗಾರನೆದ್ದು ಕಾಳಿಯಳಿದು
ಅರಸನ ಸತಿಯಸಂಗವ ಮಾಡಿ,
ಮೊಲೆಯುಂಡು ಹಾಲ ನಂಜೇರಿ ಸಮಗಾರ ಸತ್ತು,
ಆವಲ್ಲಿ ಪೋದನೆಂಬುದ ತಿಳಿಯಬಲ್ಲರೆ ಶರಣರೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./18
ಅನೇಕ ಹೊಲಿಗೆಯ ಕಪ್ಪಡವ ಬಿಚ್ಚಿ,
ಮೂರೆಳಿದಾರದ ಕಪ್ಪಡವ ಹೊಲಿದು,
ನಾಲ್ಕು ಗಳಿಗೆಯ ಜೋಡಿಸಿ
ಬೇಡಿದವರಿಗೆ ಕೊಡರು, ಬೇಡದವರಿಗೆ ಕೊಡುವರು
ನೋಡೆಂದನಯ್ಯಾ ಲಿಂಗಿಗಳು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಂಲಿಂಗ
ನಿರ್ಮಾಯಪ್ರಭುವೆ./19
ಅಮ್ಮನ ಮೊಮ್ಮಗಳ ಗಂಡ
ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ,
ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ
ತಂದೆ – ತಾಯಿಯ ಕೊಂದು
ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./20
ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ
ಬೇರಿಲ್ಲದ ವೃಕ್ಷಪುಟ್ಟಿ, ಶಾಖೆಯಿಲ್ಲದೆ ಪಲ್ಲವಿಸಿ,
ತಳಿರಿಲ್ಲದೆ ಕೊನರಾಗಿ, ಮೊಗ್ಗೆಯಿಲ್ಲದೆ ಹೂವಾಗಿ,
ಹೂವಿಲ್ಲದೆ ಕಾಯಾಗಿ, ಕಾಯಿಲ್ಲದೆ ಹಣ್ಣಾಗಿ,
ಹಣ್ಣಿಲ್ಲದೆ ರಸತುಂಬಿ ತೊಟ್ಟು ಬಿಟ್ಟಿತ್ತು.
ಆ ಹಣ್ಣಿಗೆ ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ,
ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು,
ಜಿಹ್ವೆಯಿಲ್ಲದೆ ರುಚಿಸಿ, ತೃಪ್ತಿಯಿಲ್ಲದೆ ಪರಿಣಾಮಿಸಿ,
ಸಂತೋಷವಿಲ್ಲದೆ ನಿಶ್ಚಿಂತನಾದ
ಈ ಭೇದವ ಬಲ್ಲರೆ
ಘನಲಿಂಗಿಯಾಗಿ ನಿಜಲಿಂಗೈಕ್ಯ
ಅನಾದಿ ಶರಣನೆಂದನು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./21
ಅರಗಿನ ಭೂಮಿ ನೀರಹೊಳೆಯಲ್ಲಿ ಅಗ್ನಿ ಪುಟ್ಟಿ
ನೀರಲ್ಲಿ ನೊಂದದೆ ನೀರು ಸುಟ್ಟು.
ಆ ಅರಗಿನ ಭೂಮಿಯನುರುಹದೆ,
ಆ ಭೂಮಿಯಲ್ಲಿರುವ ತೃಣ ಪತ್ರಿ
ಮೊದಲಾದ ಎಲ್ಲ ವೃಕ್ಷವನು ದಹಿಸಿ,
ಆ ಅರಗಿನ ಭೂಮಿಯಲ್ಲಿ ಬಯಲಾದುದ ಕಂಡು
ಸೋಜಿಗ ಸೋಜಿಗ ಎಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./22
ಅರಣ್ಯದ ಅಡ್ಡಗುಡ್ಡದ ಸರೋವರದಲ್ಲಿರುವ ಹಂದಿಯ
ಉಕ್ಕಿನ ಬಿಲ್ಲತಂತಿಯ ನಾರಿಗೆ,
ಗುರಿಯಿಲ್ಲದ ಸರಳ ಹೂಡಿ ಹೊಡೆಯಲು
ಬಿಲ್ಲು ಮುರಿದು, ನಾರಿ ಹರಿದು, ಬಾಣ ತಾಗಿ,
ಹಂದಿ ಸತ್ತು ಬಾಣ ಉಳಿಯಿತು.
ಆ ಬಾಣದಿಂದ ಸತ್ತ ಹಂದಿಯ
ಕಾಲು, ಕೊಳಗ, ಹಲ್ಲು, ಕೋರಿ, ಕಣ್ಣು,
ತಲೆ, ಕರಳು, ಮಿದಡು, ಚರ್ಮ, ಕೂದಲ ಮೊದಲಾದವನು ತೆಗೆದು
ಉಳಿದುದನು ನೀರಿಲ್ಲದೆ ಹೆಸರಿಟ್ಟು,
ಬೆಂಕಿಯಿಲ್ಲದೆ ಸುಟ್ಟು, ಪಾಕವ ಮಾಡಿ,
ಎನ್ನ ನಿರ್ಮಾಯಪ್ರಭುವಿಂಗೆ ಅರ್ಪಿಸಿ,
ಆ ಪ್ರಭುವಿನ ಮಹಾಪ್ರಸಾದವ ಕೊಂಡು
ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./23
ಅರಣ್ಯದ ಬೆಟ್ಟದಲ್ಲಿ ಮೂವರು ಕಳ್ಳರು ಮನೆಮಾಡಿ
ಲೆಕ್ಕವಿಲ್ಲದೆ ನರರ ಕೊಲ್ಲುತ್ತಿರ್ಪರು,
ಅರಣ್ಯದ ಬೆಟ್ಟವ ಸುಟ್ಟು ಮನೆಯ ಸುಡದೆ
ಕಳ್ಳರಕೊಂದಾತನೆ ಪ್ರಾಣಲಿಂಗೈಕ್ಯನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./24
ಅರಣ್ಯದೊಳಗಿರುವಣ್ಣಗಳ
ಅಂಗನೆಯರ ಅಂಗಳದಲ್ಲಿರಿಸಿತ್ತು ಮಾಯೆ.
ಅರಮನೆಯೊಳಗೆ ಅಂಗನೆಯರ ಸಂಗಸುಖದಲ್ಲಿರುವಣ್ಣಗಳ
ಅರಣ್ಯದ ಗುಡ್ಡಗಂಹಾರ ಗುಹ್ಯದಲ್ಲಿರಿಸಿತ್ತು ಮಾಯೆ.
ಹೆಣ್ಣುಬಿಟ್ಟೆವೆಂಬಣ್ಣಗಳ ಸ್ತ್ರೀಯರ ಕಣ್ಣ ಮುಂದೆ
ಕಾಲಕಟ್ಟಿ ಕೆಡವಿತ್ತು ಮಾಯೆ.
ಹೊನ್ನು ಬಿಟ್ಟೆವೆಂಬಣ್ಣಗಳ ಕಳವಳದಿಂದ
ಪರದ್ರವ್ಯವ ಅಪಹರಿಸಿತ್ತು ಮಾಯೆ.
ಮಣ್ಣಬಿಟ್ಟೆವೆಂಬಣ್ಣಗಳ ಮಠಮಾನ್ಯಕ್ಕೆ ಹೋರಾಡಿಸಿ
ದೇಶಭ್ರಷ್ಟನಾಗಿ ತಿರುಗಿಸಿತ್ತು ಮಾಯೆ.
ಬುದ್ಧಿವಂತರೆಂಬಣ್ಣಗಳ ಮುದ್ದಿ ನರಕವ ತಿನಿಸಿತ್ತು ಮಾಯೆ.
ಸಕಲವಿದ್ಯೆ ಬಲ್ಲೆವೆಂಬಣ್ಣಗಳ ಬಲ್ಲತನ ನೋಡಾ !
ಬಾಲೆಯರ ಬಾಯ ಲೋಳೆಯ ನೆಕ್ಕಿಸಿತ್ತು ಮಾಯೆ.
ಸ್ತ್ರೀಯರ ಮುಖ ನೋಡಲಾಗದೆಂದು
ಮುಖದಮೇಲೊಂದು ವಸ್ತ್ರವ ಹಾಕಿಕೊಂಡು ತಿರುಗುವಣ್ಣಗಳ
ಬಾಲೆಯರ ಬಾಗಿಲ ಮೋರೆಯಲ್ಲಿರಿಸಿತ್ತು ಮಾಯೆ.
ಸ್ತ್ರೀಯರ ಕಂಡು ನಾಚಿ ಮಾತಾಡದಣ್ಣಗಳ
ನಾಚಿಕೆಯ ಬಿಡಿಸಿ ಮಾತಾಡಿಸಿತ್ತು ಮಾಯೆ.
ವಿರಕ್ತರೆಂಬಣ್ಣಗಳ ಬಾಲೆಯರ ಬಾಯಿತೊಂಬಲ ತಿನಿಸಿತ್ತು ಮಾಯೆ.
ಪಾದಪೂಜೆಯ ಮಾಡಿ ಪಾದೋದಕ ಪ್ರಸಾದ ಕೊಂಬ
ಭಕ್ತಜನಂಗಳ ಪಾದಪೂಜೆಯ ಮಾಡಿಸಿಕೊಂಡು
ಪಾದೋದಕ ಪ್ರಸಾದವ ಪಾಲಿಸುವ ಹಿರಿಯರ
ಇಂತಪ್ಪ ದೇಶಭಕ್ತರೆಂಬುಭಯರ
ಬಾಲೆಯರ ಪಾದಪೂಜೆ ಮಾಡಿಸಿತ್ತು ಮಾಯೆ.
ಸರ್ವಾಂಗ ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ
ಬಾಲೆಯರ ಮನೆಯಲ್ಲಿ ಒಲಿಯ ಬೂದಿಯ ಬಳಿಸಿತ್ತು ಮಾಯೆ.
ಮಂತ್ರವ ನೆನೆವಣ್ಣಗಳ ಬಾಲೆಯರ ನಾಮವ ನೆನಿಸಿ
ಅವರ ಬಾಗಿಲ ಮುಂದೆ ಹೆಳವನಂತೆ ಹೊಗಳಿಸಿತ್ತು ಮಾಯೆ.
ಕರಸ್ಥಲದಲ್ಲಿ ಲಿಂಗವ ಪಿಡಿವಣ್ಣಗಳ
ಬಾಲೆಯ ಕುಚವ ಪಿಡಿಸಿ ಮುಖದ ಮೇಲೆ ಚುಂಬನವ ಕೊಡಿಸಿ
ತೊಡೆಯ ಸಂದಿನಲ್ಲಿರಿಸಿತ್ತು ಮಾಯೆ.
ಪಂಡಿತರೆಂಬಣ್ಣಗಳ ಬಾಲೆಯರ ಮಲವಸರುವ
ಪೃಷ್ಠ ಹಿಡಿಸಿತ್ತು ಮಾಯೆ.
ಇಂತಪ್ಪ ಮಾಯಾಶಕ್ತಿಯ ಗೆಲುವರೆ
ನವಖಂಡಪೃಥ್ವಿಮಧ್ಯದಲ್ಲಿರುವ
ದೇವ ದಾನವ ಮಾನವರು ಮೊದಲಾದವರಿಗೂ ಅಳವಲ್ಲ.
ಶಿವಜ್ಞಾನಸಂಪನ್ನರಾದ ಶಿವಶರಣರಿಗಲ್ಲದೆ
ಇಲ್ಲ ಅಲ್ಲ ಎಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./25
ಅರಣ್ಯವ ಸುಟ್ಟು ಭಸ್ಮವ ಧರಿಸಬಲ್ಲಡೆ
ಭಸ್ಮಧಾರಕರೆಂಬೆ.
ಪರ್ವತವ ಸುಟ್ಟು ಭಸ್ಮವ ಧರಿಸಬಲ್ಲಡೆ
ಭಸ್ಮಧಾರಕರೆಂಬೆ.
ನೀರ ಸುಟ್ಟು ಭಸ್ಮವ ಧರಿಸಬಲ್ಲಡೆ
ಭಸ್ಮಧಾರಕರೆಂಬೆ.
ವಾಯುವ ಸುಟ್ಟು ಭಸ್ಮವ ಧರಿಸಬಲ್ಲಡೆ
ಭಸ್ಮಧಾರಕರೆಂಬೆ.
ಸಮುದ್ರವ ಸುಟ್ಟು ಭಸ್ಮವ ಧರಿಸಬಲ್ಲಡೆ
ಭಸ್ಮಧಾರಕರೆಂಬೆ.
ಇಂತಪ್ಪ ಭಸ್ಮವ ಧರಿಸಬಲ್ಲವರಿಗೆ
ಮೋಕ್ಷವೆಂಬುವದು ಕರತಳಾಮಳಕ ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./26
ಅರಸನ ಹೆಂಡತಿಯ ತಂದು
ಹೊಲೆಯಗೆ ಮದುವೆಯ ಮಾಡಿದೆ.
ಹೊಲೆಯನ ಹೆಂಡತಿಯ ತಂದು
ಅರಸಗೆ ಮದುವೆಯ ಮಾಡಿದೆ.
ಅಣ್ಣನ ಹೆಂಡತಿಯ ತಂದು ತಮ್ಮಗೆ ಮದುವೆಯ ಮಾಡಿದೆ.
ತಮ್ಮನ ಹೆಂಡತಿಯ ತಂದು ಅಣ್ಣಗೆ ಮದುವೆಯ ಮಾಡಿದೆ.
ಒಡೆಯನ ಹೆಂಡತಿಯ ತಂದು
ಆಳಿಗೆ ಮದುವೆಯ ಮಾಡಿದೆ.
ಆಳಿನ ಹೆಂಡತಿಯ ತಂದು
ಒಡೆಯಗೆ ಮದುವೆಯ ಮಾಡಿದೆ.
ಇಂತಿವರ ಮದುವೆಯ ಸಂಭ್ರಮದೊಳಗೆ
ಕಂಬ ಸುಟ್ಟು ಹಂದರ ಉಳಿಯಿತ್ತು.
ಭೂಮಿ ಸುಟ್ಟು ಹಸಿಜಗುಲಿ ಉಳಿಯಿತ್ತು.
ಐದುಮಂದಿ ಐದಗಿತ್ತೇರು ತಮ್ಮ ಶಾಲಿಯ ಕಳೆದು,
ಕುಪ್ಪಸ ತೆಗೆದು, ಹೆಂಡಗಾರನ ಬೆನ್ನು ಹತ್ತಿ
ಹೋದುದು ಕಂಡು ಬೆರಗಾದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./27
ಅರಸಿಯ ಪುತ್ರನು ಶಿರವಿಲ್ಲದೆ ಐದರಲ್ಲಿರಲು,
ಕೋತಿಯ ತಲೆಯಲ್ಲಿ ಇರುವೆ ಪುಟ್ಟಲು,
ಇಬ್ಬರು ಸತ್ತು ಶಿರ ಚಿಗಿದು,
ಅರಸಿಯ ನೆರದು ಅರಸಿನಲ್ಲಿ ಅಡಗಿತ್ತು.
ಅದು ಅಡಗಿದ ಸ್ಥಾನದಲ್ಲಿ ಅಡಗಿದವರು ಲಿಂಗೈಕ್ಯರು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./28
ಅರಸು ಪ್ರಧಾನಿ ಗೌಡರಿಗೆ ಅಂಜದೆ,
ಬಂಟಂಗೆ ಅಳುಕದೆ ಊರನಾಳಿ
ದಾಳಿಹೋದರು ಚಿಲ್ಲಿಂಗಸಂಬಂಧಿಗಳು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./29
ಅರಸು ಪ್ರಧಾನಿ ಬಂಟರು ವೀರರು
ಮೊದಲಾದ ಸಕಲ ಪ್ರಜೆಗಳ ಸಂಗವ ಮಾಡದೆ,
ಕುರುಡರು ಕುಂಟರು ಅಧಮರು
ಮೊದಲಾದ ಬಡವರ ಸಂಗವ ಮಾಡಿ,
ಅವರು ಕೊಟ್ಟ ಪಡಿಯ ಕೊಂಡುಂಡು
ಸುಖದಲ್ಲಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./30
ಅರಸು ಪ್ರಧಾನಿಗಳು ಬಿಟ್ಟಿಯ ಮಾಡಲಿಲ್ಲ.
ಬ್ಯಾಗಾರಿ ಗಂಟ ಹೊರಲಿಲ್ಲ.
ಹೊಲೆ ಮಾದಿಗ ಡೋಹಾರ ಗಂಟು ಹೊತ್ತು
ಕೂಳುಕಾಣದೆ ಬಿಟ್ಟಿಯಮಾಡಿ.
ಹಾಗದ ಕಾಯಕವನುಂಡು
ಕಾಯಕವ ಮಾಡುತಿರ್ದರಯ್ಯ ನಿಮ್ಮವರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./31
ಅರಳಿ ಅತ್ತಿ ಆಲದ ಮರವೆಂಬ
ವೃಕ್ಷಪರ್ಣದ ಪಾತ್ರೆಯಲ್ಲಿ ಭೋಜನವ ಮಾಡದೆ
ಟೆಂಗು ಮಾವು ಬಾಳೆ ವೃಕ್ಷ ಪಾನಪಾತ್ರೆಯಲ್ಲಿ
ಭೋಜನವ ಮಾಡಿ ಬಲಭೀಮನಾಗಿ
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./32
ಅಲುಕುಮಲುಕಿನ ಅರಮನೆಯಲ್ಲಿ
ಮೂರುಮುಖದ ಅಂಗನೆ ಇರ್ಪಳು.
ಆ ಅಂಗನೆಯ ಮೂರುಮುಖದಲ್ಲಿ
ಮೂರುರಾಜ್ಯಕ್ಕೆ ಒಡೆಯರಾದ ರಾಜರು ಇರ್ಪರು.
ಆ ಅಂಗನೆಯ ಕಾಲೊಳಗೆ ಕೆಲಬರು ಎಡೆಯಾಡುತ್ತಿರ್ಪರು.
ಆ ಅಂಗನೆಯ ಉದರದಲ್ಲಿ ಉರಿ ಉದ್ಭವಿಸಲು
ಅಂಗನೆಯಳಿದು ಮುಖವಿಕಾರವಾಗಿ, ತ್ರಿಪುರ ಸುಟ್ಟು,
ಅರಸು ಮಡಿದು, ಕಾಲು ಮುರಿದು, ಮನೆ ನಷ್ಟವಾದಲ್ಲದೆ
ತನ್ನ ತಾನರಿಯಬಾರದು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./33
ಅಲ್ಲಂಗೆ ದ್ವಯಜ್ಯೋತಿ ಬೆಳಗಿಲ್ಲ.
ಮಸೂತಿಯ ನಮಾಜದಿಂ ಎಡೆಯಾಟವಿಲ್ಲ.
ಹಲವಕ್ಕೆ ಹರಿದು ತಿಳಿಯಲಿಲ್ಲ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./34
ಅವಿದ್ಯಾಪಟ್ಟಣದ ಹೊರಕೇರಿಯಲ್ಲಿ
ಅಂಗವಿಲ್ಲದ ಉರಿಮಾರಿ ಬಿಳಿಯ ಸೀರೆಯನುಟ್ಟು
ಹೆಂಡವ ಹೊತ್ತು ಮಾರುತ್ತಿಹಳು.
ಆ ಹೆಂಡವ ಕುಡಿಯಬೇಕೆಂದು
ಅವಿದ್ಯಾನಗರದ ಅರಸು ಮಂತ್ರಿಗಳು
ಮೊದಲಾದ ಜನಂಗಳು ಪೋಗುತಿರ್ಪರು.
ಹೆಂಡವ ಮಾಡಿ ಕಂಡವ ಕೊಡಳು.
ಹೊನ್ನು ಇದ್ದವರಿಗೆ, ಸತಿಸಂಗದಲ್ಲಿದ್ದವರಿಗೆ,
ಇಬ್ಬರ ಸಂಗದಲ್ಲಿ ವರ್ತಿಸಿದವರಿಗೆ ಸಂಗಮಾಡಳು.
ಹೆಂಡ ಕೊಡಳು, ಕಂಡ ಮಾರಳು.
ಕೈಕಾಲು ಕಣ್ಣು ಇಲ್ಲದ ಬಡವರು ಬಂದರೆ
ಕಂಡವ ತಿನಿಸಿ, ಹೆಂಡ ಕುಡಿಸಿ,
ಸಂಗಸುಖದಲ್ಲಿ ಅಗಲದೆ ಇರ್ಪಳು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./35
ಅಷ್ಟಪರ್ವತ ಮೇಲುಗಿರಿಯ ಮೇಲೊಂದು
ಪಕ್ಕವಿಲ್ಲದ ಹಕ್ಕಿ ಮೂರುಗೂಡನಿಕ್ಕಿ,
ತಲೆಯಿಲ್ಲದ ಮರಿಮಾಡಿ,
ಹಾಲು ಹೊಲಸು ಕೂಡಿ ತಿನ್ನಿಸಿ.
ಕಣ್ಣು ಬಂದು ಗೂಡ ಕೆಡಿಸಿ,
ಹಕ್ಕಿಯ ಕೊಂದು, ಪುಚ್ಚ ಬಲಿದು,
ಪಕ್ಕ ಬಂದು ಪರ್ವತವ ಮೆಟ್ಟಿ ಗಗನಕ್ಕೆ ಹಾರಿ
ಎತ್ತ ಹೋಯಿತೆಂಬುದ ಬಲ್ಲರೆ ಐಕ್ಯನೆಂಬುದು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./36
ಆಕಾರ ಪ್ರಸಾದ ಅಂಗೈ ನುಂಗಿ,
ನಿರಾಕಾರ ಪ್ರಸಾದ ಮುಂಗೈ ನುಂಗಿ,
ಉಭಯ ಪ್ರಸಾದ ಮೊಳಕೈ ನುಂಗಿ,
ಬಾಹುಭುಜದ ಪ್ರಸಾದ ನಾನುಂಗಿ,
ಸತ್ತುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./37
ಆಕಾರವಿಲ್ಲ-ನಿರಾಕಾರವಿಲ್ಲ, ಅಡಿಯಿಲ್ಲ-ಅಂತರವಿಲ್ಲ,
ಎಡನಿಲ್ಲ-ಬಲನಿಲ್ಲ, ಹಿಂದಿಲ್ಲ-ಮುಂದಿಲ್ಲ,
ಒಳಗಿಲ್ಲ-ಹೊರಗಿಲ್ಲ, ಈರೇಳರಲ್ಲಿಲ್ಲ, ಮಧ್ಯದಲ್ಲಿಲ್ಲ.
ಮತ್ತೆಲ್ಲಿಹುದು? ಎರಡಳಿದು ಒಂದಿಲ್ಲದೆ
ನಿರಾಳದಲ್ಲಿಹುದುಯೆಂದನಯ್ಯ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./38
ಆಡ ಅಣ್ಣ ತಿಂದ, ಕುರಿ ತಮ್ಮ ತಿಂದ,
ಹೋತ ಕಿರಿತಮ್ಮ ತಿಂದ, ಹಲವು ಮರಿಗಳವರಪ್ಪ ತಿಂದ.
ಅಪ್ಪನ ಎಂಜಲ ಕುರುಬ ತಿಂದು, ಬೀರೇಶ್ವರಲಿಂಗಕ್ಕೆ ಕೊಟ್ಟು
ಕಾಯಕವ ಮಾಡುತಿರ್ದರು ನಿಮ್ಮವರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./39
ಆಡ ಕೊಂದು ಗಡಿಗೆಯಲಿಕ್ಕಿ,
ಕುರಿಯ ಸುಲಿದು ಮಡಿಕೆಯಲಿಕ್ಕಿ,
ಹೋತ ಕೊಯ್ದು ಕುಳ್ಳಿಯಲಿಕ್ಕಿ,
ಬೆಂಕಿಯಿಲ್ಲದೆ ಪಾಕವ ಮಾಡಿ ಬೀರೇಶ್ವರಲಿಂಗಕ್ಕೆ ಕೊಟ್ಟು,
ಕೀಲಿಲ್ಲದ ಕತ್ತರಿಯಿಂದ ಉಣ್ಣಿಯ ಕತ್ತರಿಸಿ,
ಬಿರಿಕಿಲ್ಲದೆ ನೂಲು ಮಾಡಿ ಘಟ್ಟಿಸಿ ನೇದು,
ಘಳಿಗೆಯ ಮಾಡಿ ವೀರಬೀರಗೆ ಹೊಚ್ಚಿ
ಡೊಳ್ಳು ಹೊಡೆದು, ಸತ್ತಿಗೆಯ ನೆರಳಲ್ಲಿ ಪಿರಿಕೆಯ ಹೊಡೆದು,
ಕಾಯಕವ ಮಾಡಿ ಹೋಗಬೇಕಣ್ಣ ವೀರಬೀರೇಶ್ವರಲಿಂಗದಲ್ಲಿಗೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./40
ಆಡಿನ ಹಾಲ ಹರವಿಯ ತುಂಬಿ,
ಕುರಿಯ ಹಾಲ ಕೊಡವ ತುಂಬಿ,
ಮರಿಯ ಹಾಲ ಮಗಿಯ ತುಂಬಿ,
ಒಂದು ಕಲ್ಲಿನ ಒಲೆಯಮೇಲಿರಿಸಿ,
ಐದೂರ ಬೆಂಕಿಲ್ಲದೆ, ಆರೂರ ಬೆಂಕಿಯಿಂದ ಕಾಸಲು,
ಹಾಲರತು ಘಟ ಉಳಿದು,
ಉಳಿದ ಘಟವ ತಲೆಯಿಂದ ಹೊತ್ತು
ವೀರಬೀರೇಶ್ವರಲಿಂಗಕ್ಕೆ ಕೊಟ್ಟು
ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./41
ಆದಿ ಅನಾದಿ ಸುರಾಳ ನಿರಾಳ
ಶೂನ್ಯ ನಿಃಶೂನ್ಯದಿಂದತ್ತತ್ತಲಾದ
ಘನಮಹಾಲಿಂಗವೆಂಬ ಪರಬ್ರಹ್ಮವು,
ಗುರುಕರುಣದಿಂ ಬಹಿಷ್ಕರಿಸಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬರಲು
ಆ ಲಿಂಗದಲ್ಲಿ ಕೃಷ್ಣಾ ಭಾಗೀರಥಿ ಮೊದಲಾದ ಅನೇಕ ತೀರ್ಥಂಗಳು,
ಕಾಶಿರಾಮೇಶ್ವರ ಮೊದಲಾದ ಅನೇಕ ಕ್ಷೇತ್ರಂಗಳು,
ಹಿಮಾಚಲ ಶ್ರೀಶೈಲಪರ್ವತ ಮೊದಲಾದ
ಅನೇಕ ಪುಣ್ಯಶೈಲಂಗಳುಂಟೆಂದು,
ತನ್ನ ಸ್ವಾನುಭಾವಮೂಲಜ್ಞಾನದಿಂ ತಿಳಿದು,
ಸಕಲ ಸಂಶಯಂ ಬಿಟ್ಟು ನಿಶ್ಚಿಂತನಾಗಿ,
ಮನವ ಮಹಾಘನದಲ್ಲಿರಿಸಿ ಇರಬಲ್ಲಡೆ
ಆತನೇ ಅನಾದಿಸದ್ವೀರಮಹೇಶ್ವರನ ಭಕ್ತನು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./42
ಆದಿ ಅನಾದಿಯಿಲ್ಲದಂದು ;
ಶೂನ್ಯ ನಿಃಶೂನ್ಯವಿಲ್ಲದಂದು: ಸುರಾಳ ನಿರಾಳವಿಲ್ಲದಂದು ;
ಭೇದಾಭೇದಂಗಳೇನೂ ಇಲ್ಲದಂದು ;
ನಿಮ್ಮ ನೀವರಿಯದೇ ಇರ್ದಿರಲ್ಲ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./43
ಆಧಾರ, ಸ್ವಾಧಿಷ್ಠಾನ, ಮಣಿಪೂರಕ,
ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರ,
ಶಿಖಾ, ಪಶ್ಚಿಮವೆಂಬ ನವಚಕ್ರಸ್ಥಾನವ
ಗುದ ಗುಹ್ಯ ನಾಭಿ ಹೃದಯ ಕಂಠ ಉತ್ತಮಾಂಗ
ಅಳ್ಳನೆತ್ತಿ ನಡುನೆತ್ತಿ ಹಿಂಭಾಗದ ಕಳ್ಳಕುಣಿಕೆಯೆಂದು ಪೇಳುವಿರಿ.
ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗ ಇರ್ಪುದೇ? ಇಲ್ಲ.
ಮತ್ತಂ, ಬಲ್ಲಾದರೆ ಪೇಳಿರಿ,
ಇಲ್ಲವಾದರೆ ನಮ್ಮ ಶಿವಗಣಂಗಳ ಕೇಳಿರಿ.
ಅದೆಂತೆಂದಡೆ : ಆಧಾರಚಕ್ರವೆಂಬುದೇ ಘ್ರಾಣ.
ಸ್ವಾಧಿಷ್ಠಾನಚಕ್ರವೆಂಬುದೇ ಜಿಹ್ವೆಸ್ಥಾನ.
ಮಣಿಪೂರಕಚಕ್ರವೆಂಬುದೇ ನೇತ್ರಸ್ಥಾನ.
ಅನಾಹತಚಕ್ರವೆಂಬುದೇ ತ್ವಕ್ಕಿನಸ್ಥಾನ.
ವಿಶುದ್ಧಿಚಕ್ರವೆಂಬುದೇ ಕರ್ಣಸ್ಥಾನ.
ಆಜ್ಞಾಚಕ್ರವೆಂಬುದೇ ಹೃದಯಸ್ಥಾನ.
ಬ್ರಹ್ಮಸ್ಥಾನವೆಂಬುದೇ ಕರಸ್ಥಲ.
ಶಿಖಾಸ್ಥಾನವೆಂಬುದೇ ಮನಸ್ಥಲ.
ಪಶ್ಚಿಮಸ್ಥಾನವೆಂಬುದೇ ಪ್ರಾಣಸ್ಥಲ.
ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗವು ಸಂಬಂಧವಾಗಿರುವುದಲ್ಲದೆ
ಅಂತಪ್ಪ ಜಡದೇಹಿ ನವಸ್ಥಾನದ
ಮಾಂಸರಕ್ತದಲ್ಲಿ ಪರಶಿವಲಿಂಗವು ಇರ್ಪುದೆ? ಇಲ್ಲ.
ಅದೇನು ಕಾರಣವೆಂದಡೆ : ಘ್ರಾಣದಲ್ಲಿ ಆಚಾರಲಿಂಗಸ್ವಾಯತವಿಲ್ಲದೆ
ಗಂಧ ದುರ್ಗಂಧ ಮೊದಲಾದ
ಆವ ಗಂಧದ ವಾಸನೆಯು ತಿಳಿಯದು.
ಜಿಹ್ವೆಯಲ್ಲಿ ಗುರುಲಿಂಗಸ್ವಾಯತವಿಲ್ಲದೆ
ಸವಿ ಕಹಿ ಮೊದಲಾದ ಆವ ರುಚಿಸ್ವಾದವು ತಿಳಿಯದು.
ನೇತ್ರದಲ್ಲಿ ಶಿವಲಿಂಗಸ್ವಾಯತವಿಲ್ಲದೆ
ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ ಮೊದಲಾದ
ಷಡ್ವರ್ಗದ ರೂಪು ಲಕ್ಷಣ ತಿಳಿಯದು.
ತ್ವಕ್ಕಿನಲ್ಲಿ ಜಂಗಮಲಿಂಗಸ್ವಾಯತವಿಲ್ಲದೆ
ಮೃದು ಕಠಿಣ ಮೊದಲಾದ ಆವ ಸುಖವು ತಿಳಿಯದು.
ಶ್ರೋತ್ರದಲ್ಲಿ ಪ್ರಸಾದಲಿಂಗಸ್ವಾಯತವಿಲ್ಲದೆ
ಸುಸ್ವರ ಅಪಸ್ವರ ಮೊದಲಾದ ಆವ ಸ್ವರಲಕ್ಷಣವು ತಿಳಿಯದು.
ಹೃದಯದಲ್ಲಿ ಮಹಾಲಿಂಗಸ್ವಾಯತವಿಲ್ಲದೆ
ಷಡಿಂದ್ರಿಸುಖತೃಪ್ತಿ ಮೊದಲಾದ ಸಕಲೇಂದ್ರಿಯ ಸುಖತೃಪ್ತಿ
ಸಂತೋಷವು ತಿಳಿಯದು.
ಕರಸ್ಥಲದಲ್ಲಿ ನಿರಾಕಾರವಾದ ನಿಷ್ಕಲಲಿಂಗವೆಂಬ
ಇಷ್ಟಲಿಂಗ ಸ್ವಾಯತವಿಲ್ಲದೆ
ಷಡ್ವಿಧಾಂಗದಲ್ಲಿ ಷಡ್ವಿಧಲಿಂಗಸ್ವಾಯತವಾಗಿರುವ ಭೇದವು ತಿಳಿಯದು.
ಮನದಲ್ಲಿ ಶೂನ್ಯಲಿಂಗವೆಂಬ ಪ್ರಾಣಲಿಂಗಸ್ವಾಯತವಿಲ್ಲದೆ
ಸರ್ವೆಂದ್ರಿಯಲ್ಲಿ ಲಿಂಗಸ್ವಾಯತವಾಗಿರುವ ಭೇದವು ತಿಳಿಯದು.
ಪ್ರಾಣವೆಂಬಾತ್ಮನಲ್ಲಿ ಭಾವಲಿಂಗಸ್ವಾಯತವಿಲ್ಲದೆ
ಸರ್ವಾಂಗಲಿಂಗಮಯ ಪರವಸ್ತುಸ್ವರೂಪ ತಾನೆಂದು ತಿಳಿಯದು.
ಇಂತಪ್ಪ ವಿಚಾರವನು ತಿಳಿಯಬಲ್ಲಾತನೇ ಅನಾದಿಶರಣನು.
ಅಂತಪ್ಪ ಪರಶಿವಲಿಂಗದ ಸ್ವಾಯತಸಂಬಂಧವಾದ ಭೇದವ ತಿಳಿಯದೆ
ಅಂಗಭಾವ ಮುಂದುಗೊಂಡು ಇರ್ಪಾತನೇ
ಭವಭಾರಿಕನು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./44
ಆನೆ ಕುದುರೆ ಒಂಟೆ ನಾಯಿ ಕೋತಿಗಳು
ಮೊದಲಾದ ಪಂಚವಾಹನಾರೂಢರಾಗಿ ಚರಿಸುವವರಿಗೆ ಸುಂಕ.
ಮನೆಯ ಕೆಡಿಸಿ ಮನೆಯ ಕಟ್ಟುವವರಿಗೆ ಸುಂಕ.
ಹಾದರನಾಡುವವರಿಗೆ ಸುಂಕ.
ತಳಮೇಲು ನಡುಮಧ್ಯ ಚತುದರ್ಶದಲ್ಲಿರುವವರಿಗೆ ಸುಂಕ.
ಕಾಮಧೇನುವಿನ ಹಾಲ ಕರದು ಕುಡಿದವರಿಗೆ ಸುಂಕಿಲ್ಲ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./45
ಆನೆ ಕುದುರೆ ವೈಲಿ ಪಾಲಿಕಿ ರೂಢರಾದವರು,
ಮನೆಯ ಪುರುಷನ ಉಪಚಾರಮಾಡುವ ಸತಿಯರಿಗೆ
ಎಣ್ಣೆಯ ತೋರಿ ಮಾರರು.
ಎಣ್ಣೆಯ ಕಾಣದೆ, ಎಣ್ಣೆಯ ನಾತಿಗೆ
ಮಣ್ಣು ಮುಕ್ಕುವರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./46
ಆನೆಯ ಏರುವಾತ ಮಹೇಶ್ವರನಲ್ಲ.
ಕುದುರೆಯ ಏರುವಾತ ಮಹೇಶ್ವರನಲ್ಲ.
ಬಸವನನೇರುವಾತ ಮಹೇಶ್ವರನಲ್ಲ.
ಕೋಣವನೇರುವಾತ ಮಹೇಶ್ವರನಲ್ಲ.
ವೈಲಿಪಾಲಿಕಿ ಸುಖಾಸನ ಏರುವಾತ ಮಹೇಶ್ವರನಲ್ಲ.
ಗರುಡಗಂಭವನೇರುವಾತ ಮಹೇಶ್ವರನಲ್ಲ.
ಕನ್ಯಸ್ತ್ರೀಯಳ ಕಳಸಕುಚವ ಪಿಡಿದು
ಸಂಗವ ಮಾಡಬಲ್ಲರೆ ಮಹೇಶ್ವರನೆಂಬೆನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./47
ಆನೆಯ ಹಿಂಡು ಹೊಗದೆ, ಕುದುರೆಯ ತೂರ ಹಿಡಿಯದೆ,
ನಾಯಿಗಳ ಕೂಡ ಉಣ್ಣದೆ, ಓಣಿ ಬೀದಿಯ ಉಡುಗಿ,
ನರಕವ ಬಳಿದುಚೆಲ್ಲಿ, ಊರ ನಿರ್ಮಲವ ಮಾಡಿ,
ರಾಜಂಗೆ ಬಿನ್ನೈಸಲು, ಕೊಟ್ಟ ಹಣವ ಕೊಂಡು,
ಕಾಯಕವ ಮಾಡಿ ಸುಖಿಯಾಗಿರ್ದರಯ್ಯ ನಿಮ್ಮವರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./48
ಆಯತಲಿಂಗ ಮರ್ತ್ಯವ ನುಂಗಿತ್ತು.
ಸ್ವಾಯತಲಿಂಗ ಸ್ವರ್ಗವ ನುಂಗಿತ್ತು.
ಸನ್ನಹಿತಲಿಂಗ ಪಾತಾಳವ ನುಂಗಿತ್ತು.
ತ್ರಿಣೇಶ್ವರಲಿಂಗ ಬ್ರಹ್ಮಾಂಡವ ನುಂಗಿತ್ತು.
ನುಂಗಿದವರ ನುಂಗಿ ಬಾರದೆ ಪೋದರು.
ಆದವರು ಪೋದರು, ಆಗದವರು ಪೋದರು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./49
ಆರು ಇಲ್ಲದ ಅರಣ್ಯದಲ್ಲೊಂದು
ಬೀಜವಿಲ್ಲದ ವೃಕ್ಷ ಪುಟ್ಟಿತ್ತು.
ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು.
ಗಾಳಿಯಿಲ್ಲದೆ ಗಂಧವ ತೋರಿತ್ತು.
ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ
ಹಣ್ಣನೆ ಕಚ್ಚಿತ್ತು.
ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು
ಭೂಮಿ ಬೆಂದು, ಸಮುದ್ರ ಬತ್ತಿ,
ಅರಸನ ಮಾರ್ಬಲವೆಲ್ಲ ಪ್ರಳಯವಾಗಿ,
ಅರಸು ಪ್ರಧಾನಿ ಸತ್ತು
ಅರಸಿ ಅರಮನೆಯಲ್ಲಿ ಬಯಲಾಗಿ,
ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು
ತಾನೆಯೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./50
ಆರುಕಾಲವನ ಸುದ್ದಿ ಉಭಯ ಜಿಹ್ವೆಯನುಳ್ಳವರಿಗೆ ಹೇಳಿದಡೆ
ಕೇಳಬಲ್ಲರೆ? ಮೋಟಮರಕ್ಕೆ ಪೇಳಿದಡೆ ಕೇಳಬಹುದು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./51
ಆರುವರ್ಣದ ಪಕ್ಷಿ ಮೂರುವರ್ಣದ ಗೂಡನಿಕ್ಕಿ,
ತಲೆಯಿಲ್ಲದ ಮರಿಯನೀದು
ಕಾಲಿಲ್ಲದೆ ನಡೆದಾಡುತಿರ್ಪುದ ಕಂಡೆ!
ಆ ಮರಿ ಹಾಲನೊಲ್ಲದು.
ಬೆಲ್ಲ ಕಹಿಯೆಂದು ಬೇವಿನ ರಸವ ಕುಡಿದು,
ಮಲವ ತಿಂದು ಬದುಕೇನೆನುತಿರ್ಪುದ ಕಂಡೆ.
ಆ ಮರಿಗೆ ಅಗ್ನಿವರ್ಣದ ಕೋಳಿ ಗುಟುಕನಿಕ್ಕಿ,
ಗೂಗಿ ಆರೈಕೆಯ ಮಾಡಲು,
ತಲೆ ಬಂದು, ಕಣ್ಣು ತೆರೆದು, ಪಕ್ಕವಿಲ್ಲದೆ ಹಾರಿಹೋಗಿ,
ಕೊಂಕಣದೇಶದಲ್ಲಿ ಸತ್ತುದ ಕಂಡು ಬೆರಗಾದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./52
ಆರುವರ್ಣದ ಭೂಮಿಯ ಮೂರು ಬೆಟ್ಟದ ನಡುವಣ
ಅಷ್ಟಪರ್ವತ ಸರೋವರ ಸಮುದ್ರದ ಹಂಸನು
ಹಾಲನೊಲ್ಲದೆ ಹೊಲಸ ತಿಂದು,
ಆರನಳಿದು, ಮೂರ ಕೆಡಹಿ, ಎಂಟ ಸುಟ್ಟು,
ಸಾಗರ ಬತ್ತಿ, ಹಂಸ ಹಾಲು ಕುಡಿದು ಹಾರಿಹೋಯಿತ್ತು.
ಇದರಂದಚಂದ ನಿಮ್ಮವರು ಬಲ್ಲರಲ್ಲದೆ
ಮತ್ತಾರು ಬಲ್ಲರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./53
ಆರೂ ಇಲ್ಲದ ಅರಣ್ಯಕ್ಕೆ ಪೋಗಿ,
ನಾನಾ ವರ್ಣದ ಕಟ್ಟಿಗೆಯ ತಂದು,
ಸೂರ್ಯವರ್ಣದ ಕಟ್ಟಿಗೆಯಿಂದ ಗಳಿಗೆಯ ಬಂಧಿಸಿ,
ಚಂದ್ರವರ್ಣದ ಕಟ್ಟಿಗೆಯಿಂದ ಗುಮ್ಮಿಯ ಬಂಧಿಸಿ,
ಅಗ್ನಿವರ್ಣದ ಕಟ್ಟಿಗೆಯಿಂದ ಬುಟ್ಟಿಯ ಬಂಧಿಸಿ,
ಉಳಿದ ವರ್ಣದ ಕಟ್ಟಿಗೆಯಿಂದ ತಟ್ಟಿ, ಹೆಡಗಿಯ ಬಂಧಿಸಿ,
ಜ್ಯೋತಿವರ್ಣದ ಕಟ್ಟಿಗೆಯಿಂದ ಊರೆಲ್ಲವ ಬಂಧಿಸಿ,
ಇಂತೀ ಪದಾರ್ಥವ ಮಾರಿ, ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./54
ಆರೂ ಇಲ್ಲದ ಅರಣ್ಯದ ಹುಲ್ಲತಂದು,
ಮೂರು ಚಾಪೆಯ ಹೆಣೆದು, ಮುಪ್ಪುರದರಸಿಂಗೆ ಕೊಟ್ಟು,
ಮೂವರ ತಲೆ ಹೊಡೆದು,
ಕೈಕಾಲು ಕಡಿದು, ಕಣ್ಣು ಕಳೆದು,
ಪರದ್ರವ್ಯ ಕೊಳ್ಳದೆ ಹರದ್ರವ್ಯ ಕಳೆಯದೆ
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./55
ಆರೂ ಇಲ್ಲದ ಭೂಮಿಯಲ್ಲಿ
ಬೇರಿಲ್ಲದ ರುದ್ರಾಕ್ಷಿಯ ಮರ ಪುಟ್ಟಿತ್ತು.
ನೀರಿಲ್ಲದೆ ಆ ವೃಕ್ಷ ಪಲ್ಲವಿಸಿತ್ತು.
ಆ ವೃಕ್ಷಕ್ಕೆ ರಕ್ತವರ್ಣದ ಒಂದು ಕುಸುಮ ಪುಟ್ಟಿತ್ತು.
ಆ ಕುಸುಮದಲ್ಲಿ ಒಂದುಮುಖದ ಮೂರುಮುಖದ
ಸಹಸ್ರಮುಖದ ದ್ವಿಮುಖದ
ಷೋಡಶಮುಖದ ದ್ವಾದಶಮುಖದ ದಶಮುಖದ ಷಣ್ಮುಖದ
ಚತುರ್ವಿಧಮುಖದ ಬ್ರಹ್ಮ ಮೊದಲಾಗಿ ರುದ್ರಾಕ್ಷಿಗಳು ಪುಟ್ಟಿದವು ನೋಡಾ.
ಅಂತಪ್ಪ ರುದ್ರಾಕ್ಷಿಗಳನು ಗುರುಮುಖದಿಂದ ಪಡಕೊಂಡು
ಒಂದುಮುಖದ ರುದ್ರಾಕ್ಷಿಯನು ಸ್ವರ್ಗಲೋಕದಲ್ಲಿಟ್ಟು,
ಮೂರುಮುಖದ ರುದ್ರಾಕ್ಷಿಯನು ಪಾತಾಳದಲ್ಲಿಟ್ಟುಕೊಂಡು
ಸಹಸ್ರಮುಖದ ರುದ್ರಾಕ್ಷಿಯನು ಮರ್ತ್ಯಲೋಕದಲ್ಲಿಟ್ಟು
ದ್ವಿಮುಖದ ಉದ್ರಾಕ್ಷಿಯನು ಬೈಲಲ್ಲಿಟ್ಟು,
ಷೋಡಶಮುಖದ ರುದ್ರಾಕ್ಷಿಯನು ಆಕಾಶದಲ್ಲಿಟ್ಟು
ದ್ವಾದಶಮುಖದ ರುದ್ರಾಕ್ಷಿಯನು ವಾಯುವಿನಲ್ಲಿಟ್ಟು,
ದಶಮುಖದ ರುದ್ರಾಕ್ಷಿಯನು ಅಗ್ನಿಯಲ್ಲಿಟ್ಟು,
ಷಣ್ಮುಖದ ರುದ್ರಾಕ್ಷಿಯನು ನೀರಲ್ಲಿಟ್ಟು
ಚತುರ್ಮುಖದ ರುದ್ರಾಕ್ಷಿಯನು ಭೂಮಿಯಲ್ಲಿಟ್ಟು,
ಇದಲ್ಲದೆ ಕೆಲವು ರುದ್ರಾಕ್ಷಿಗಳನು ಬ್ರಹ್ಮಾಂಡದಲ್ಲಿಟ್ಟು
ಇಂತೀ ಕ್ರಮದಲ್ಲಿ ರುದ್ರಾಕ್ಷಿಯನ್ನು ಧರಿಸಿ
ಕಾಯಕವ ಮಾಡುತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./56
ಆರೇಣಿನ ಬೆಸೆ, ಒಂಬತ್ತುಹುರಿ ಬೇವ,
ಎರಡು ಹಿಡಿಕಿಯ ಕೊಡತಿ ಹೆಣಕಿಲ್ಲದ ತಟ್ಟಿ,
ಇಂತೀ ಆಯುಧದಿಂದ ಕೆಂಪಡಿ ಮಸಬ ಭೂಮಿಯ
ಹತ್ತಿ ಅರಳಿಯ ಪಿಡಿದು ಝಾಡಿಸದೆ
ಎರಿನೀರು ಕಲ್ಲಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸಿ,
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./57
ಆಶೆಯುಳ್ಳವರಿಗೆ ವೇಷವ ಧರಿಸಿ
ಮುಹೂರ್ತವ ಪೇಳಲಿಬೇಕು.
ಪೇಳದಿದ್ದರೆ ಹೆಂಡಗಾರರು ಮೆಚ್ಚರು.
ಆಶೆಯಿಲ್ಲದವರಿಗೆ ಆಶೆ ಮಾಡಿ ವೇಷವ ಧರಿಸಿ
ಮುಹೂರ್ತವ ಪೇಳಿದವರಿಗೆ
ಮೂರು ಮಲದ ಕೊಂಡದಲ್ಲಿರಿಸುವರು ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./58
ಆಳಿಂಗೆ ವರುಷದ ಚಿಂತೆ.
ಬಂಟರಿಗೆ ಮೋಸದ ಚಿಂತೆ.
ಮಜೂರಿ ಮಾನವರಿಗೆ ದಿವಸದ ಚಿಂತೆ.
ನೆರೆದ ಹಿರಿಕಿರಿಯರಿಗೆ ಅಶನದ ಚಿಂತೆ.
ಲಿಂಗೈಕ್ಯನಾದ ಶರಣನಿಗೆ ತನ್ನ ದೇಹದ ಚಿಂತೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./59
ಇಂತಪ್ಪ ಗುರುಶಿಷ್ಯರ ಮೇಳಾಪವ ಕಂಡು
ವಿಸರ್ಜಿಸಿದೆನೆಂದು,
ಬಣ್ಣದ ನುಡಿಗಳ ನುಡಿವರಯ್ಯಾ ನಿಮ್ಮ ಶರಣರ ಮುಂದೆ.
ಕೇಳಯ್ಯ ಎನ್ನ ಮತ್ಪ್ರಾಣನಾಥ ಲಿಂಗತಂದೆ.
ತನುವ ಮುಟ್ಟಿದಲ್ಲಿ ಅತ್ತಿಯ ಹಣ್ಣಿನಂತೆ,
ಮನವ ಮುಟ್ಟಿದಲ್ಲಿ ನಸಗುನ್ನಿ ಚುರ್ಚಿಯಂತೆ,
ಧನವ ಮುಟ್ಟಿದಲ್ಲಿ ಉಕ್ಕಿನ ಸಲಾಕೆಯಂತೆ,
ಭಕ್ತರಲ್ಲ ಕತ್ತೆಗಳೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./60
ಇಂತಪ್ಪ ತ್ರಿವಿಧಾಚರಣೆಯಲ್ಲಿ ಭಿನ್ನಜ್ಞಾನಿಗಳಾಗಿ
ಭಿನ್ನ ಕ್ರಿಯಗಳಾಚರಿಸಿ,
ಭಿನ್ನಭಾವ ಮುಂದುಗೊಂಡು ವ್ರತವನಾಚರಿಸುವ
ಅಜ್ಞಾನಿಗಳಾದ ಜೀವಾತ್ಮರಿಗೆ
ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ?
ಮತ್ತೆಂತೆಂದೊಡೆ : ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ,
ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ
ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ,
ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು
ತನುವಿನಲ್ಲಿ ಸ್ವಾಯತವ ಮಾಡಿ,
ಆ ತನುಪ್ರಕೃತಿಯನಳಿದು
ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ
ದಿನಚರಿ ವಾರ ಸೋಮವಾರವ್ರತವೆಂಬೆ.
ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ
ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ,
ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ
ಸುಜ್ಞಾನಕ್ರಿಯಗಳನಾಚರಿಸುವುದೇ
ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ.
ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ
ನಿರಂಜನಭಾವಲಿಂಗವನು –
ಧನವೆಂದಡೆ ಆತ್ಮ.
ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ,
ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ
ಮಹಾಜ್ಞಾನಾಚರಣೆಯನಾಚರಿಸುವುದೇ
ದ್ವಾದಶಮಾಸ, ದ್ವಾದಶ ಚತುರ್ದಶಿ,
ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ
ಶಿವರಾತ್ರಿಅಮವಾಸೆಯ ವ್ರತವೆಂಬೆ.
ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು
ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು
ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ,
ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ
ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ
ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು
ಮನು ಮುನಿ ದೇವ ದಾನವರು ಮಾನವರು ಮೊದಲಾದ
ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ
ಇದಿರಿಟ್ಟು ಕೆಟ್ಟುಪೋದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./61
ಇಂತಪ್ಪ ದೇಹವ ತಾಳಿ
ತನ್ನ ಮಲಮೂತ್ರದಲ್ಲಿ ತಾನೇ ಹೊರಳ್ಯಾಡಿ
ಬಾಲತ್ವ ತೀರಿ ಯೌವ್ವನವಯಸ್ಸು ಒದಗಲು,
ಕನ್ಯಕುಮಾರಿ ಹೆಣ್ಣಿನ ಕೆಂಪನ್ನ ಚರ್ಮವ ಕಂಡು
ಉಳುವಿನ ಕುದುರೆಯಂದದಿ
ಊರ ಮಾರಿಯ ಕೋಣನಂದದಿ
ಮದವೇರಿದ ಆನೆಯಂದದಿ
ಇಂದ್ರಿಯವೆಂಬ ಮದ ತಲೆಗೇರಿ ಮನಬಂದತ್ತ ತಿರಿತಿರಿಗಿ,
ಯೌವ್ವನವಯಸ್ಸು ತೀರಿದಮೇಲೆ
ಮುಪ್ಪಿನವಯಸ್ಸು ಒದಗಿ ಕಣ್ಣು ಒಳನಟ್ಟು
ಗಲ್ಲ ಒಳಸೇರಿ ನಿರಿಗೆಗಟ್ಟಿ
ಬೆನ್ನುಬಾಗಿ, ಮಣಕಾಲು ಗೂಡುಗಟ್ಟಿ. ಕೂದಲು ಬಿಳಿದಾಗಿ,
ಕೋಲುಪಿಡಿದು ಕೆಮ್ಮುತ್ತ ಕೆಕ್ಕರಿಸುತ್ತ ಮಣಕಾಲಮೇಲೆ ಕೈಯನ್ನೂರಿ
ಏಳುವಾಗ ಶಿವನ ನೆನೆದರೆ, ಶಿವನ ನೆನಹು ನೆಲೆಗೊಳ್ಳದು,
ಶಿವನು ಮೆಚ್ಚನು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./62
ಇಂತಪ್ಪ ನಿರ್ಣಯವನರಿಯದೆ
ಪೃಥ್ವಿಯ ಮೇಲಣ ಕಣಿಯ ತಂದು ಕಲ್ಲಕುಟಿಗನಿಂದ ಕಟಿಸಿ,
ಲಿಂಗವೆಂದು ಹೆಸರಿಟ್ಟು,
ಹಳ್ಳ ನದಿ ಕೊಳ್ಳ ಕೆರೆ ಬಾವಿ ಮೊದಲಾದ ಉದಕವ ತಂದು,
ಮಜ್ಜನಕ್ಕೆರೆದು ಪಂಚಾಭಿಷೇಕದಿಂದ ಅಭಿಷೇಕವ ಮಾಡಿಸಿ,
ಬಿಲ್ವಪತ್ರಿ ಮೊದಲಾದ ನಾನಾ ಜೀನಸದ ಕಾಡಪತ್ರಿಯ ತಂದು
ಆ ಲಿಂಗಕ್ಕೇರಿಸಲು,
ಅಂತಪ್ಪ ಜಡಪಾಷಾಣಲಿಂಗವ ಭಕ್ತನ ಅಂಗದ ಮೇಲೆ,
ಸ್ವಾಯತವ ಮಾಡುವಾತ ಗುರುವಲ್ಲ, ಆತ ಭಕ್ತನಲ್ಲ,
ಅದು ಲಿಂಗವಲ್ಲ.
ಅದೇನು ಕಾರಣವೆಂದಡೆ: ಶಿಲಾಭಾವ ಕಳೆದು ಕಳಾಭೇದವ ತುಂಬಿ,
ಜೀವಭಾವವಳಿದು ಶಿವಭಾವ ತುಂಬಿ,
ಅಂಗದಲ್ಲಿ ಲಿಂಗ ಕಳೆದೋರಿ, ಲಿಂಗದಲ್ಲಿ ಅಂಗ ಕಳೆದೋರಿ,
ಅಂಗಲಿಂಗವೆಂಬುಭಯಭಾವವಳಿದು
ಲಿಂಗವ ಕೊಡಬಲ್ಲಡೆ ಆತ ಗುರು ಎಂಬೆ;
ಇಂತೀ ಭೇದವ ತಿಳಿದು ಲಿಂಗವ ಕೊಳಬಲ್ಲಡೆ ಶಿಷ್ಯನೆಂಬೆ.
ಇಂತಲ್ಲದೆ ತನು-ಮನ ಉಲ್ಲಾಸದಿಂದ
ಲಿಂಗವ ಕೊಟ್ಟಾತನು, ಆ ಲಿಂಗವ ಧರಿಸಿದಾತನು
ಈ ಉಭಯರು ಚಂದ್ರಸೂರ್ಯರಿರುವ ಪರ್ಯಂತರವು
ನರಕದಲ್ಲಿರ್ಪರು ಎಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./63
ಇಂತಪ್ಪ ನಿರ್ಣಯವನು ಸ್ವಾನುಭಾವ ಗುರುಮುಖದಿಂ
ತಿಳಿದು ವಿಚಾರಿಸಿಕೊಳ್ಳದೆ,
ಭಿನ್ನಗುರುವಿನ ಕೈಯಲ್ಲಿ ಉಪದೇಶವ ಹಡದು,
ಲಿಂಗವ ಪಡಕೊಂಡು ಗುರುಕಾರುಣ್ಯ ಉಳ್ಳವರೆಂದು
ಲೋಕದ ಮುಂದೆ ಬೊಗಳುವ ಮೂಳಹೊಲೆಯರ
ಕಟಬಾಯ ಸೀಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಹೊಡೆದಡೆ,
ಎನ್ನ ಸಿಟ್ಟು ಮಾಣದು.
ಅದೇನು ಕಾರಣವೆಂದಡೆ,
ನೀವು ಪಡಕೊಂಡ ಗುರುವಿಗೆ ಗುರುಕಾರುಣ್ಯವಿಲ್ಲ.
ಅವನ ಗುರುವಿಗೆ ಮುನ್ನವೇ ಗುರುಕಾರುಣ್ಯವಿಲ್ಲ.
ನಿಮಗಿನ್ನಾವ ಕಡೆಯ ಗುರುಕಾರುಣ್ಯವೊ?
ಎಲೆ ಮರುಳ ಮಾನವರಿರಾ ಗುರುಕಾರುಣ್ಯವಾದ ಬಳಿಕ
ತನು-ಮನ-ಧನದಾಸೆ ಹಿಂದುಳಿದು
ಗುರು-ಲಿಂಗ-ಜಂಗಮದಾಶೆ ಮುಂದುಗೊಂಡಿರಬೇಕು.
ಗುರುಕಾರುಣ್ಯವಾದಡೆ
ಆಣವಮಲ, ಮಾಯಾಮಲ, ಕಾರ್ಮಿಕಮಲಗಳ ಜರಿದು
ಇಷ್ಟ-ಪ್ರಾಣ-ಭಾವದಲ್ಲಿ ಭರಿತವಾಗಬೇಕು.
ಗುರುಕಾರುಣ್ಯವಾದಡೆ
ಲಿಂಗವು ಆರಿಗೂ ತೋರದಿರಬೇಕು.
ಇಷ್ಟುಳ್ಳಾತನೆ ಗುರುಕಾರುಣ್ಯ ಉಳ್ಳವನೆಂದನಯ್ಯಾ
ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./64
ಇಂತಪ್ಪ ನಿರ್ಣಯವನು ಸ್ವಾನುಭಾವಜ್ಞಾನದಿಂ ತಿಳಿದು
ಶಿವಜ್ಞಾನಿಗಳಾದ ಶಿವಶರಣರಿಗೆ,
ಅಚ್ಚ ನಿಚ್ಚ ಸಮಯ ಏಕಪ್ರಸಾದಿಗಳೆಂದೆನ್ನಬಹುದು.
ಭಕ್ತಾದಿ ಐಕ್ಯಾಂತಮಾದ ಷಟ್ಸ್ಥಲಬ್ರಹ್ಮ ಎಂದೆನ್ನಬಹುದು.
ಅಂಗಸ್ಥಲ /65
ಇಂತಪ್ಪ ಪ್ರಣಮಮಂತ್ರಸಂಬಂಧವನು
ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ,
ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು.
ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ,
ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ,
ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ
ಹಕಾರ ಪ್ರಣಮವ ಸಂಬಂಧಿಸಿ,
ಉದಯ ಮಧ್ಯಾಹ್ನ ಸಾಯಂಕಾಲವೆಂಬ
ತ್ರಿಕಾಲದಲ್ಲಿ ಸ್ನಾನವ ಮಾಡಿ,
ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ
ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ
ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ,
ಶುಭ್ರ ರೋಮಕಂಬಳಿಯಾಗಲಿ,
ತೃಣದಾಸನವಾಗಲಿ, ನಾರಾಸನವಾಗಲಿ,
ಇಂತೀ ಪಂಚಾಸನದೊಳಗೆ ಆವುದಾನೊಂದು
ಆಸನ ಬಲಿದು, ಮೂರ್ತವ ಮಾಡಿ,
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ,
ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ,
ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ
ಉಭಯದೊಳಗೆ ದಾವುದಾದರೇನು
ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ
ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ
ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು.
ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ
ಅಜ್ಞಾನಿಗಳೊಳಗಣ ಜ್ಞಾನಿಗಳು ಊಧ್ರ್ವಮುಖವಾಗಿ
ರುದ್ರಾಕ್ಷಿ ಜಪಿಸೆಂದು ಪೇಳುವರು.
ಇಂತಪ್ಪ ಸಂಶಯದಲ್ಲಿ ಮುಳುಗಿ
ಮೂರುಲೋಕವು ಭವಭವದಲ್ಲಿ
ಎಡೆಯಾಡುವುದು ಕಂಡು,
ಶಿವಜ್ಞಾನ ಶರಣನು ವಿಸರ್ಜಿಸಿ
ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ,
ಅಧೋ ಊಧ್ರ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ
ನಿಮಿಷ ನಿಮಿಷವನಗಲದೆ ಮರಿಯದೆ
ಜಪಿಸಿ ಸದ್ಯೋನ್ಮುಕ್ತನಾಗಿ
ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./66
ಇಂತಪ್ಪ ಪ್ರಣವಪಂಚಾಕ್ಷರಿ ಮಂತ್ರವನು
ಸಾಯದಕಿನ್ನ ಮುನ್ನವೆ ಸುಜ್ಞಾನೋದಯವಾಗಿ
ಶ್ರೀಗುರುಕಾರುಣ್ಯವ ಹಡದು
ಸರ್ವಾಂಗದಲ್ಲಿ ಪ್ರಣವ ಮಂತ್ರವನು
ಸಂಬಂಧಿಸಿಕೊಳ್ಳಬೇಕಲ್ಲದೆ,
ಸತ್ತ ಶವಕ್ಕೆ ಭುಜಪತ್ರದ ಮೇಲೆ ಪ್ರಣಮವ ಬರದು
ಆ ದೇಹಕ್ಕೆ ಹಚ್ಚಿದರೆ ಆ ದೇಹವು ಮಂತ್ರದೇಹವಾಗಬಲ್ಲದೆ?
ಆಗಲರಿಯದು. ಅದೆಂತೆಂದಡೆ: ಚಿತ್ರಕನು ಕಾಗದದ ಮೇಲೊಂದು
ಚಿತ್ರವ ಬರೆದು ಗೋಡೆಗೆ ಹಚ್ಚಿದರೆ
ಆ ಗೋಡೆಯು ಚಿತ್ರವಾಗಲರಿಯದು ಎಂಬ ಹಾಗೆ.
ಉಭಯವು ಒಂದೇ ಆದ ಕಾರಣ;
ಅಂತಪ್ಪ ಮೂಢಾತ್ಮರ ಮೇಳಾಪವ
ವಿಸರ್ಜಿಸಿದ ಶಿವಶರಣನು
ದೇಹದಲ್ಲಿರುವ ಪರಿಯಂತರದಲ್ಲಿ
ಶ್ರೀಗುರುಕಾರುಣ್ಯವ ಹಡದು
ಸರ್ವಾಂಗದಲ್ಲಿ ಪ್ರಣವಮಂತ್ರವನು
ಮುಳ್ಳೂರಲಿಕ್ಕೆ ಇಂಬಿಲ್ಲದ ಹಾಗೆ ಸ್ವಾಯತವ ಮಾಡಿಕೊಂಡು
ಆ ಮಂತ್ರದಲ್ಲಿ ಲೀಯವಾಗಿ
ಪ್ರಪಂಚವನಾಚರಿಸುತ್ತಿರ್ದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./67
ಇಂತಪ್ಪ ಭಿನ್ನ ಗುರುವಿನ ಕೈಯಿಂದ
ಪಡಕೊಂಡ ಲಿಂಗವ
ಮರಳಿ ಜ್ಞಾನಗುರುವಿನ ಕೈಯಲ್ಲಿ ಕೊಟ್ಟು
ಲಿಂಗವ ಪಡಿಯಲುಬೇಕು.
ಇದಕ್ಕೆ ಸಂಶಯ ಮಾಡುವಿರಿ;ಸಂಶಯ ಮಾಡಲಾಗದು.
ಅದು ಅಜ್ಞಾನದೊಳಗು.
ಅದೆಂತೆಂದೊಡೆ, ಇದಕ್ಕೆ ದೃಷ್ಟಾಂತ : ಲೌಕಿಕದಲ್ಲಿ ಪಂಚಾಳಕುಲದಲ್ಲಿ
ಒಬ್ಬ ಪತ್ತಾರನಿಗೆ
ಒಂದು ಸನಗು ಮಾಡಿಕೊಡೆಂದು ಕೊಟ್ಟರೆ,
ಅವರು ಮಾಡಿಕೊಟ್ಟ ಸನಗು ತಮಗೆ
ಪರಿಣಾಮ ತಟ್ಟಿದಡೆ ಇಟ್ಟುಕೊಂಬುವರು.
ಪರಿಣಾಮವಿಲ್ಲದಾದರೆ ಮರಳಿ ಮತ್ತೊಬ್ಬ
ಜಾಣಪತ್ತಾರನ ಕೈಯಿಂದ ಮಾಡಿಸಿ ಇಟ್ಟುಕೊಂಬುವರು.
ಮತ್ತಂ, ಒಬ್ಬ ಬಡಿಗನಿಂದ
ಆವುದಾನೊಂದು ಗಳೆಯ ಹಾಸಿಕೊಂಡೊಯಿದು
ಹೋಗಿ ಭೂಮಿಯಲ್ಲಿ ಹೂಡಿ ಹೊಡೆದರೆ
ನೀಟವಾಗಿ ನಡೆದರೆ ಹೂಡುವರು.
ನೀಟವಾಗಿ ನಡೆಯದಿದ್ದರೆ
ಮರಳಿ ಮತ್ತೊಬ್ಬ ಬಡಗಿಯನ ಕರದೊಯ್ದು
ನೀಟವಾಗಿ ಗಳೆಯ ಹಾಯಿಸಿ
ಹೂಡುವುರಲ್ಲದೆ ಹಾಗೇ ಹೊಡೆಯರು.
ಒಬ್ಬ ಸಿಂಪಿಗನಲ್ಲಿ ಆವುದಾನೊಂದು
ಉಡಿಗೆತೊಡಿಗೆ ಹೊಲಿಸಿಕೊಂಡು ಉಟ್ಟುತೊಟ್ಟರೆ
ತಮ್ಮಂಗಕ್ಕೆ ಹಿತವಪ್ಪಿದರೆ ಇಟ್ಟುಕೊಂಬುವರು.
ಇಲ್ಲವಾದರೆ ಮರಳಿ ಮತ್ತೊಬ್ಬ
ಜಾಣ ಸಿಂಪಿಗನಲ್ಲಿ ಹೊಲಿಸಿಕೊಂಡು ತೊಡುವರಲ್ಲದೆ,
ಹಾಗೇ ತೊಡರು.
ಇಂತೀ ತ್ರಿವಿಧವು ಮೊದಲೇ ಇದ್ದ ಹಾಗೆ ಆಚರಿಸಿದಡೆ,
ಅವರಂಗಕ್ಕೆ ದಣುವಲ್ಲದೆ
ಹಿತಕರವಾಗಿ ತೋರದೆಂಬ ಹಾಗೆ,
ಅಂತಪ್ಪ ಭಿನ್ನಭಾವದ ಶೈವಗುರುವಿನ
ಉಪದೇಶವ ವಿಸರ್ಜಿಸಿ,
ಅಭಿನ್ನಭಾವವೆಂಬ ಸ್ವಾನುಭಾವಜ್ಞಾನಗುರುಮುಖದಿಂ
ತಾರಕಮಂತ್ರೋಪದೇಶವ ಪಡೆದು,
ಲಿಂಗಧಾರಣವಾದಡೆಯು
ವೀರಶೈವರ ಅಚ್ಚು, ಪುರಾತನರ ಮಚ್ಚು,
ಸರ್ವಗಣಂಗಳಿಗೆ ಸಮ್ಮತ.
ಇಂತಪ್ಪ ವಿಚಾರವನರಿಯದೆ
ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಕೊಟ್ಟು
ಪೂಜಿಸು ಎಂದು ಹೇಳುವ ಗುರುವು,
ಆ ಕಲ್ಲಲಿಂಗವ ಕೈಯಲ್ಲಿ ಪಿಡಿದು
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ
ಪೂಜಿಸುವ ಶಿಷ್ಯನು,
ಬಳಿಗುರುಡನ ಕೈ ಬಳಿಗುರುಡ ಪಿಡಿದು,
ಕಾಣದೆ ಡೊಂಗುರವ ಬಿದ್ದಂತೆ
ಗುರುಶಿಷ್ಯರೆಂಬುಭಯರು ಯಮಗೊಂಡದಲ್ಲಿ
ಬೀಳುವರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/68
ಇಂತಪ್ಪ ಭೇದವ ತಿಳಿಯದೆ
ಪುರಾತರ ವಚನವ ನೋಡಿ ಕೇಳಿ,
ಹೊನ್ನು, ಹೆಣ್ಣು, ಮಣ್ಣು ಬಿಟ್ಟು ಪ್ರಪಂಚವ ಬಿಟ್ಟೆವೆಂಬಿರಿ,
ಬಿಟ್ಟ ಪರಿಯ ಪೇಳಿರಯ್ಯ ?
ಹೊನ್ನಲ್ಲವೇ ಆತ್ಮ ? ಹೆಣ್ಣಲ್ಲವೇ ಮನಸ್ಸು ?
ಮಣ್ಣಲ್ಲವೇ ಪೃಥ್ವಿತತ್ವಾಂಶಭೂತವಾದ ದೇಹವು ?
ಇಂತಪ್ಪ ಹೊನ್ನು, ಹೆಣ್ಣು, ಮಣ್ಣು ಒಳಗಿಟ್ಟುಕೊಂಡು
ಬಾಹ್ಯದ ಹೊನ್ನು ಹೆಣ್ಣು ಮಣ್ಣನೆ ಬಿಟ್ಟರೆ,
ಬಿಟ್ಟಂತಾಯಿತೇ ಎಲಾ ಮರುಳ ಮಾನವರಿರಾ ?
ದೇಹವ ದಗ್ಧಮಾಡಬೇಕೆಂದು
ಅನ್ನ ಉದಕವ ಬಿಟ್ಟು, ಅರಣ್ಯಕ್ಕೆ ಹೋಗಿ,
ಕಂದಮೂಲ ಪರ್ಣಾಹಾರವ ಭಕ್ಷಿಸಿ
ತನು ಒಣಗಿಸಿದರೇನು ದೇಹದಗ್ಧವಾದಂತಾಯಿತೇ ? ಆಗದು.
ಹುತ್ತದ ಮೇಲೆ ಬಡಿದು ಸರ್ಪನ ಕೊಂದಂತಾಯಿತಲ್ಲದೆ
ದೇಹ ದಗ್ಧವಾಗಲರಿಯದು
ಎಲೆ ಮರುಳ ಮಾನವರಿರಾ.
ಅದೆಂತೆಂದೊಡೆ: ಶಿವಜ್ಞಾನೋದಯವಾಗಿ ಗುರುಕಾರುಣ್ಯವ ಪಡದು,
ಲಿಂಗಾಂಗಸಂಬಂಧಿಯಾದ ಶಿವಶರಣನ ದೇಹವು
ಜ್ಞಾನಾಗ್ನಿಯಲ್ಲಿ ದಗ್ಧವಾಯಿತಲ್ಲದೆ
ಉಳಿದ ಜೀವಾತ್ಮರ ದೇಹವು ದಗ್ಧವಾಗಲರಿಯದು.
ದೇಹದ ಗುಣವ ಬಿಡಬೇಕೆಂಬಿರಿ,
ಬಿಡಲಿಕ್ಕೇನು ಕಟ್ಟಿದ ಪಶುಗಳೆ ?
ಬಿಡಲಿಕ್ಕೇನು ಹಟ್ಟಿಯ ಪಶುಗಳೆ ?
ಕಣ್ಣಿಗೆ ಕಾಣಿಸದ, ಕೈಗೆ ಸಿಕ್ಕದ ಗುಣಗಳ ಬಿಡಬೇಕೆಂಬಿರಿ.
ಇದಕ್ಕೆ ದೃಷ್ಟಾಂತ: ಸೂರ್ಯನ ಬಿಂಬ ಜಲದಲ್ಲಿ ಕಾಣುವದು.
ಆ ಬಿಂಬವ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ.
ಜ್ಯೋತಿಯ ಪ್ರಭೆಯ ಕಡೆಯಕ್ಕೆ ತೆಗೆದು
ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ.
ದೇಹದೊಳಗಣ ಪ್ರಾಣವ ಬಹಿಷ್ಕರಿಸಿ
ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ.
ಇಂತೀ ಭೇದವ ತಿಳಿಯದೆ
ವನವಾಸದಲ್ಲಿ ತನುಮನವ ಬಳಲಿಸಿ
ಭವದತ್ತ ಮುಖವಾಗಿ ಹೋಗುವ
ಹೇಸಿಮೂಳರ ಕಂಡು ನಾಚಿತ್ತಯ್ಯ ಎನ್ನ ಮನವು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./69
ಇಂತಪ್ಪ ಮಾಯೆಯ ಗೆಲಲರಿಯದೆ
ಮುಂದೆ ಮೋಕ್ಷವ ಹಡೆಯಬೇಕೆಂಬಣ್ಣಗಳ ಮುಕ್ತಿಯ ಪೇಳುವೆ.
ಅದೆಂತೆನೆ: ಕ್ಷುತ್ತಿಗೆ ಭಿಕ್ಷೆ, ಶೀತಕ್ಕೆ ರಗಟೆ,
ಮಾತಿಗೆ ಮಂತ್ರ, ನಿದ್ರೆಗೆ ಶಿವಧ್ಯಾನ.
ಇಂತಪ್ಪ ಶಿವಾಚಾರಮಾರ್ಗವನು ಹಿಡಿದು ಆಚರಿಸಿ
ಮುಂದೆ ಶಿವಪಥವ ಸಾಧಿಸಬೇಕಲ್ಲದೆ,
ಇಂತೀ ಗುರುವಾಕ್ಯವ ಮೀರಿ,
ಹೊನ್ನೊಂದು ಬಿಳುಪಿನ ಮಲ, ಹೆಣ್ಣೊಂದು ಕೆಂಪಿನ ಮಲ,
ಮಣ್ಣೊಂದು ಕಪ್ಪಿನ ಮಲ-
ಇಂತೀ ತ್ರಿವಿಧಮಲವ ತಿಂದು
ಸಂಸಾರವಿಷಯರಸವೆಂಬ ಕಾಳಕೂಟ ನೀರು ಕುಡಿದು,
ಮುಂದೆ ನಾವು ಶಿವಪಥವ ಸಾಧಿಸಿ ಮುಕ್ತಿಯ ಹಡೆಯಬೇಕೆಂಬ
ಯುಕ್ತಿಗೇಡಿಗಳು ಈ ಹೀಂಗೆ
ಪ್ರಪಂಚವಮಾಡಿ ಇದರೊಳಗೆ ಮೋಕ್ಷವೆಂದು,
ಇದನ್ನು ಬಿಟ್ಟರೆ ಮೋಕ್ಷವಿಲ್ಲವೆಂದು
ಯುಕ್ತಿಹೇಳುವ ಯುಕ್ತಿಗೇಡಿಗಳ ಈ ಮಾತ ಸಾದೃಶ್ಯಕ್ಕೆ ತಂದು,
ಆಚಾರಹೇಳುವ ಅನಾಚಾರಿಗಳ
ಈ ಉಭಯಭ್ರಷ್ಟ ಹೊಲೆಮಾದಿಗರ ನಾಲಿಗೆಯ ಶಿರಸಿನ ಹಿಂಭಾಗದಲ್ಲಿ ಸೀಳಿ,
ಅವರ ನಾಲಿಗೆಯ ಹಿರಿದು ತೆಗೆದು
ಕೆರವಿನಟ್ಟೆಗೆ ಹಾಕೆಂದಾತ ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./70
ಇಂತಪ್ಪ ಮೂಢಾತ್ಮರ ಮೇಳಾಪವ ಬಿಟ್ಟು
ನೀರಿಲ್ಲದ ಹೊಳೆಯಲ್ಲಿ
ಪಂಚವರ್ಣದ ಒಂದು ಕಲ್ಲು ತಂದು
ಕಣ್ಣಿಲ್ಲದ ಗೊಲ್ಲನ ಕೈಯಲ್ಲಿ ಕೊಟ್ಟು,
ಗುಲ್ಲುಮಾಡದೆ ಆ ಕಲ್ಲು ಪಡಕೊಂಡು
ಸಂದುಸಂದಿನಲ್ಲಿ ಬಡಕೊಂಡು
ಆ ಕಲ್ಲ ಪೆಟ್ಟು ಆರಿಗೆ ಹೇಳದೆ
ಸತ್ತು ಸಮಾಧಿಯ ಕೊಳಲಿಲ್ಲ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./71
ಇಂತಪ್ಪ ರುದ್ರಾಕ್ಷಿಯನು ಅಂತರಂಗ ಬಹಿರಂಗದಲ್ಲಿ
ಧರಿಸಿ ಆಚರಿಸಲರಿಯದೆ
ಬಹಿರಂಗದಲ್ಲಿ ಕ್ರೀಯವಿಟ್ಟು
ಹಸ್ತ, ತೋಳು, ಕಂಠ, ಕರ್ಣ, ಉತ್ತಮಾಂಗ, ಶಿಖೆ,
ಕಕ್ಷೆಯಲ್ಲಿ ಧರಿಸಿದವರಿಗೆ
ಪುಣ್ಯಫಲಪ್ರಾಪ್ತಿಯಾಗುವುದಲ್ಲದೆ ಭವ ಹಿಂಗದು ನೋಡಾ.
ಇಂತಪ್ಪ ಮೂಢಾತ್ಮರು ರುದ್ರಾಕ್ಷಿಯನು ಧರಿಸಿದ
ಆಚಾರವೆಂತೆಂದಡೆ: ಔಡಲಗಿಡಕ್ಕೆ ಔಡಲಗೊನಿ ಬಿಟ್ಟಂತಾಯಿತು ನೋಡಾ.
ಇಂತಪ್ಪ ನಿರ್ಣಯವನು ಸುಜ್ಞಾನಿ ಶರಣನು
ತನ್ನ ಪರಮಜ್ಞಾನದಿಂದ ವಿಸರ್ಜಿಸಿ,
ಹಿಂದೆ ಹೇಳಿದ ವಚನದ ನಿರ್ಣಯವನು ತಿಳಿದು,
ತನ್ನ ಸರ್ವಾಂಗದಲ್ಲಿ ರುದ್ರಾಕ್ಷಿಯ ಧರಿಸಿ
ಚಿದ್ಘನಲಿಂಗದಲ್ಲಿ ನಿರ್ವಯಲಾದನು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./72
ಇಂತಪ್ಪ ರುದ್ರಾಕ್ಷಿಯನು ಧರಿಸಿದ
ಚೇರಮರಾಯಂಗೆ ಮೋಕ್ಷವಾಯಿತ್ತು.
ಈ ರುದ್ರಾಕ್ಷಿಯಿಂದ ಮಹಾದೇವಿಯಕ್ಕಗಳಿಗೆ
ಆರೂಢಪದವಾಯಿತ್ತು.
ಈ ರುದ್ರಾಕ್ಷಿಯಿಂದ ಸೌಂದರನಂಬೆಣ್ಣಗಳಿಗೆ
ನಿಜಲಿಂಗೈಕ್ಯಪದವಾಯಿತ್ತು.
ಇಂತಿವರು ಮೊದಲಾಗಿ ಸಕಲಗಣಂಗಳಿಗೆ
ರುದ್ರಾಕ್ಷಿಯಿಂದ ಶಿವಪದವಾಯಿತ್ತು.
ಇಂತಿದರ ನಿರ್ಣಯವನು ಸ್ವಾನುಭಾವಗುರುಮುಖದಿಂ
ತಿಳಿದು ವಿಚಾರಿಸಿಕೊಂಡು
ಸರ್ವಾಂಗದಲ್ಲಿ ರುದ್ರಾಕ್ಷಿಯನು ಧರಿಸಿ ರುದ್ರಾಕ್ಷಿಮಯವಾಗಿ
ಪರಶಿವಲಿಂಗದಲ್ಲಿ ಬೆರೆಯಬೇಕಲ್ಲದೆ
ಇಂತಪ್ಪ ವಿಚಾರವನು ತಿಳಿಯದೆ ರುದ್ರಾಕ್ಷಿಧಾರಕರ
ಕಂಡು ನೋಡಿ ಧರಿಸುವರೆಲ್ಲಾ
ಹುಲಿಯ ಬಣ್ಣಕ್ಕೆ ನರಿಯು ಮೈಸುಟ್ಟುಕೊಂಡು
ಸತ್ತಂತಾಯಿತ್ತು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /73
ಇಂತಪ್ಪ ಲಿಂಗಧಾರಣದ ನಿರ್ಣಯವನು
ಸ್ವಾನುಭಾವಮೂರ್ತಿಗಳಿಂದ ವಿಚಾರಿಸಿಕೊಂಡು
ಅಂಗದ ಮೇಲೆ ಲಿಂಗಧಾರಣವಾಗಿ
ಪ್ರಪಂಚಮಾಡಿದಡೆಯೂ ಪ್ರಪಂಚಕನಲ್ಲ.
ಅದೇನು ಕಾರಣವೆಂದಡೆ-
ತಾವರೆಪರ್ಣ ಉದಕದಲ್ಲಿ ಪುಟ್ಟಿ
ಆ ಉದಕಕ್ಕೆ ಹೊಂದದೆ ಇರ್ಪಂತೆ-
ಲೋಕದ ಕಾಕುಜನರ ಮಧ್ಯದಲ್ಲಿ
ಶಿವಶರಣನುದ್ಭವಿಸಿದಡೆಯೂ
ಆ ಲೋಕಕ್ಕೆ ಸಮವಿಲ್ಲೆಂಬ ಹಾಗೆ.
ಚಿದಂಶಿಕನಾದ ಜ್ಞಾನಕಲಾತ್ಮನು
ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು
ಲಿಂಗಾಂಗಸಂಬಂಧಿಗಳಾಗಿ ಇಷ್ಟ ವ್ಯವಹಾರವನಾಚರಿಸಿದಡೆ
ಲಿಂಗಮುಖದಿಂದಾಚರಿಸುವರು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./74
ಇಂತಪ್ಪ ಲಿಂಗಧಾರಣದ ಭೇದವ ತಿಳಿಯದೆ
ಕಲ್ಲ ಲಿಂಗಕ್ಕೆ ಕಾಡಹೂವ ತಂದು,
ಹೊಳೆ-ಬಾವಿ-ಹಳ್ಳ-ಕೊಳ್ಳ-ಕೆರೆಯ ನೀರು ತಂದು ಮಜ್ಜನಕ್ಕೆರೆದು,
ದೀಪ ಧೂಪ ಪತ್ರಿ ಪುಷ್ಪದಿಂದ ಶಿವನೆಂದು ಭಾವಿಸಿ
ಪೂಜೋಪಚಾರವ ಮಾಡಿ,
ವರವ ಬೇಡಿದರೆ ಬೇಡಿದ ಫಲವ ಕೊಟ್ಟು ಗಾಡಿಕಾರನಂತೆ
ಅವರ ಕಣ್ಣಿಗೆ ಮಂಜುಗವಿಸಿ ಕಡೆಗಾಗಿರ್ಪ ನಮ್ಮ ಶಿವನು.
ಇಂತಪ್ಪ ಮೂಢಾತ್ಮರು, ಅಂತಪ್ಪ ಜಡಪಾಷಾಣಲಿಂಗವ
ಅನಂತಕಾಲ ಧರಿಸಿ, ಪೂಜೋಪಚಾರವ ಮಾಡಿದಡೆಯೂ
ವ್ಯರ್ಥವಲ್ಲದೆ ಸ್ವಾರ್ಥವಲ್ಲ.
ಮುಂದೆ ಭವರಾಟಾಳದಲ್ಲಿ ಬಪ್ಪುದು ತಪ್ಪದು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./75
ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ,
ಆವ ನೇಮ ವ್ರತವ ಪಿಡಿದು ಆಚರಿಸಿದಡೆ
ಮುಂದೆ ಭವಬಂಧನವೇ ಪ್ರಾಪ್ತಿಯಾಗುವದು.
ಮತ್ತಂ, ವಾರದಫಲ ಬಯಸುವವರಿಗೆ ಗುರುವಿಲ್ಲ.
ಮಾಸದ ಫಲ ಬಯಸುವವರಿಗೆ ಲಿಂಗವಿಲ್ಲ.
ಚತುರ್ದಶಿ ಫಲ ಬಯಸುವವರಿಗೆ ಜಂಗಮವಿಲ್ಲ.
ಆ ಮಾಸದ ಫಲ ಬಯಸುವವರಿಗೆ ಪಾದೋದಕವಿಲ್ಲ.
ಗ್ರಹಣ ಫಲ ಬಯಸುವವರಿಗೆ ಪ್ರಸಾದವಿಲ್ಲ.
ಇಂತಪ್ಪ ಫಲವ ಬಯಸಿ ಮಾಡಬೇಕೆಂಬವರಿಗೆ
ವಿಭೂತಿ, ರುದ್ರಾಕ್ಷಿ, ಮಂತ್ರ ಮೊದಲಾದ ಅಷ್ಟಾವರಣವು ಇಲ್ಲ.
ಇತಂಪ್ಪ ವ್ರತಭ್ರಷ್ಟ ಹೊಲೆಯರಿಗೆ ವೀರಮಹೇಶ್ವರರೆಂದಡೆ
ನಿರ್ಮಾಯಪ್ರಭುವಿನ ಶರಣರು ನರಕದಲ್ಲಿಕ್ಕದೆ ಬಿಡುವರೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ?/76
ಇಂತಪ್ಪ ಲಿಂಗೈಕ್ಯದ ಭೇದವ ತಿಳಿಯದೆ
ತಮ್ಮಾತ್ಮನ ಭಿನ್ನಭಾವಮೂಢಮತಿಯಿಂದ
ಲಿಂಗೈಕ್ಯವಾಗಬೇಕೆಂದು
ಊರಬಿಟ್ಟು ಕಾಂತಾರಕ್ಕೆ ಪೋಗಿ
ಗುಡ್ಡ ಗಂಹಾರ ಕಲ್ಲುಪಡಿ ಗುಹೆದಲ್ಲಿ
ಅನ್ನ ಉದಕವ ತೊರೆದು, ವಸ್ತ್ರವ ಬಿಟ್ಟು,
ಕಂದಮೂಲ ಪರ್ಣಾಹಾರವ ಭಕ್ಷಿಸಿ,
ಇರುವ ಮರುಳುಗಳೆಲ್ಲಾ ಮರಣವಾದ ಮೇಲೆ,
ಮರಳಿ ವನಚರಪಕ್ಷಿಯಾಗಿ ಗೂಗಿಯಾಗಿ ಪುಟ್ಟುವರಲ್ಲದೆ,
ಇವರು ಲಿಂಗೈಕ್ಯವಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./77
ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ
ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಪಿಡಿದು,
ಮೈಯಲ್ಲಿ ಬೂದಿಯ ಧರಿಸಿ,
ಗುಡ್ಡಗಂಹರ ಗುಹೆಗಳಲ್ಲಿ ಕಲ್ಲಪಡಿಯಲ್ಲಿ ಪರ್ಣಶಾಲೆಯ ಬಂಧಿಸಿ,
ಅನ್ನ ಉದಕ ನಿದ್ರೆಯ ತೊರೆದು,
ಪರ್ಣಾಹಾರವ ಭಕ್ಷಿಸಿ,
ತನುವನೊಣಗಿಸಿ, ಮನವ ಬಳಲಿಸಿ,
ಆತ್ಮನ ಸತ್ವಗುಂದಿ, ಚಳಿ ಮಳಿ ಗಾಳಿ ಬಿಸಿಲುಗಳಿಂದ,
ಕಲ್ಲುಮರದಂತೆ ಕಷ್ಟಬಟ್ಟರೆ,
ಇಂತಪ್ಪವರು ಲಿಂಗೈಕ್ಯವಾಗಲರಿಯರು ;
ಕಡೆಯಲ್ಲಿ ಭವಭಾರಿಗಳು.
ಮತ್ತೆಂತೆಂದಡೆ : ತಮ್ಮ ನಿಲವ ತಾವರಿಯದೆ
ಎಲ್ಲಿ ಕುಳಿತರೂ ಇಲ್ಲ ; ಎಲ್ಲಿ ಹೋದಡೆಯೂ ಇಲ್ಲ.
ಏನು ಮಾಡಿದಡೆಯು ವ್ಯರ್ಥವಲ್ಲದೆ ಸ್ವಾರ್ಥವಿಲ್ಲ.
ಅದೇನು ಕಾರಣವೆಂದಡೆ : ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು
ಲಿಂಗಾಂಗಸಂಬಂಧಿಯಾಗಿ
ಸರ್ವಾಂಗಲಿಂಗಮಯ ತಾನೆಂದು ತಿಳಿದು,
ಆ ಘನಮಹಾ ಇಷ್ಟಬ್ರಹ್ಮದಲ್ಲಿ ಬೇರೆಯಲ್ಲದೆ
ಕೂಡಬಲ್ಲರೆ ಅದೇ ಲಿಂಗೈಕ್ಯ ಎಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./78
ಇಂತಪ್ಪ ವಿಚಾರವ ತಿಳಿದು
ಉಪದೇಶವ ಮಾಡಬಲ್ಲಾತನೇ ಗುರುವೆಂಬೆ.
ಇಂತೀ ಭೇದವ ತಿಳಿದು
ಉಪದೇಶವ ಕೊಳಬಲ್ಲಡಾತನೇ ಶಿಷ್ಯನೆಂಬೆ.
ಇಂತಪ್ಪ ನಿರ್ಣಯವ ತಿಳಿದು
ಪಾದೋದಕ ಪ್ರಸಾದವ ಕೊಡಬಲ್ಲಡಾತನೇ
ಜಂಗಮಲಿಂಗಿಯೆಂಬೆ.
ಇಂತೀ ವಿಚಾರವನಳವಡಿಸಿಕೊಂಡು
ಪಾದೋದಕ ಪ್ರಸಾದವ ಕೊಳಬಲ್ಲಡಾತನೇ ಭಕ್ತನೆಂಬೆ.
ಇಂತಪ್ಪ ಶಿವಾಚಾರದ ಬಗೆಯನು ತಿಳಿಯದೆ
ಮಾಡುವ ಮಾಟವೆಲ್ಲಾ ಹೊಳ್ಳಕುಟ್ಟಿ,
ಕೈ ನೊಂದು ಗಾಳಿಗೆ ತೂರಿದಂತಾಯಿತಯ್ಯಾ.
ಈ ಲೋಕದೊಳಗೆ ಗುರುಶಿಷ್ಯ, ದೇವ ಭಕ್ತರೆಂಬುಭಯರ
ಮೇಳಾಪವ ನೋಡೆಂದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./79
ಇಂತಪ್ಪ ವಿಚಾರವ ತಿಳಿಯದೆ
ಹತ್ತು ಹೊನ್ನಿಗೆ ಒಂದು ಹೊಲವ ಮಾಡಿ,
ಹತ್ತು ಖಂಡಗ ಧಾನ್ಯವ ಬೆಳೆದು,
ಹಗೆಯ ಮೆಟ್ಟಿ ಹಗೆಯ ಹಾಕಿ,
ಮುಂದೆ ಮಾರಿ ಕಡಬಡ್ಡಿಯ ಕೊಟ್ಟು
ತೆಗೆದುಕೊಂಬವರು ಭಕ್ತರೆಂತಪ್ಪರಯ್ಯ ?
ಇಂತಪ್ಪವರು ಭಕ್ತರೆಂದರೆ
ನಗುವರಯ್ಯ ನಿಮ್ಮ ಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./80
ಇಂತಪ್ಪ ವಿಚಾರವನು
ಸ್ವಾನುಭಾವಗುರುಮುಖದಿಂ ತಿಳಿದು,
ವಿಚಾರಿಸಿಕೊಳ್ಳಲರಿಯದೆ ತಮ್ಮ ತನುಮನದ ಉಲ್ಲಾಸದಿಂದ,
ಕಾಶಿ ಶ್ರೀಶೈಲ ರಾಮೇಶ್ವರ ಉಳವಿ ಗೋಕರ್ಣ
ಕಾರ್ತಿಕ ಕಂಚಿ ಹಂಪಿ ಮೊದಲಾದ
ಸಕಲ ಕ್ಷೇತ್ರಯಾತ್ರೆಗಳಲ್ಲಿ ತಿರುಗಿ ತಿರುಗಿ
ತನುಮನ ಬಳಲಿ ಶ್ರಮಬಟ್ಟರಲ್ಲದೆ
ಶಿವನ ಕಾಣಲರಿಯರು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./81
ಇಂತಪ್ಪ ವಿರಕ್ತನ ನಿಲುಕಡೆಯ
ದೇವ ದಾನವ ಮಾನವರು ಮೊದಲಾದ
ಸಕಲಜೀವಾತ್ಮರು ತಿಳಿಯದೆ
ವೇಷವ ಧರಿಸಿ, ಗ್ರಾಸಕ್ಕೆ ತಿರುಗುವ
ಹೇಸಿಗಳ್ಳರ ನಾನೇನೆಂಬೆನಯ್ಯಾ ?
ಇಂತಪ್ಪ ವಿರಕ್ತನ ನಿಲುಕಡೆಯ ಬಲ್ಲವರು ಆರೆಂದಡೆ
ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯ ಪಡೆದು
ಲಿಂಗಾಂಗಸಂಬಂಧಿಗಳಾದ ವೀರಮಾಹೇಶ್ವರರಾಗಲಿ
ಅಥವಾ ಭಕ್ತಗಣಂಗಳಾಗಲಿ
ಅಲ್ಲದೆ ವಿಪ್ರಮೊದಲು ಶ್ವಪಚಕಡೆಯಾಗಿ
ಆವ ಜಾತಿಯಲ್ಲಿ ಆವನಾದಡೇನು
ಸುಜ್ಞಾನೋದಯವಾದ ಜ್ಞಾನಕಲಾತ್ಮರು ಬಲ್ಲರಲ್ಲದೆ
ಮಿಕ್ಕಿನ ಭಿನ್ನಭಾವಿಗಳಾದ
ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ
ಕರ್ಮಕಾಂಡಿಗಳಾದ ವೇಷಧಾರಿಗಳೆತ್ತ ಬಲ್ಲರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ?/82
ಇಂತಪ್ಪ ಶಿವಪ್ರಸಾದದ ಮಹಾಘನವನರಿಯದೆ
ಒಬ್ಬರುಂಡು ಮಿಕ್ಕುದ ಬೆಕ್ಕುನಾಯಿಗಳು ತಿಂದಂತೆ
ಒಬ್ಬ ಹೇಸಿಮೋರಿ ಕಾಶಿನಜಂಗಮವು ತಿಂದು
ಮಿಕ್ಕಿದ ರೊಟ್ಟಿ ನುಚ್ಚಿಗೆ ಪ್ರಸಾದವೆಂದು
ತಪ್ಪು ಮಾಡಿದವರಂತೆ ಅಡ್ಡ ಅಡ್ಡ ಬಿದ್ದು
ಅವನ ಎಂಜಲವ ತೆಗೆದು ತಮ್ಮ ಅಗಲಾಗ ನೀಡಿಕೊಂಡು,
ತಿಂಬ ಮೂಳ ಹೊಲೆಮಾದಿಗರಿಗೆ ಶಿವಪ್ರಸಾದಯೆಲ್ಲಿಹುದಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ?/83
ಇಂತಪ್ಪ ಶಿವಾಚಾರದ ನಿರ್ಣಯವನರಿಯದೆ
ಜಡಭೂಮಿ ಪೃಥ್ವಿಯಲ್ಲಿ ಕಾಡಗಲ್ಲಿನ ಮೇಲೆ
ಲಿಂಗಸ್ವರೂಪವ ಬರೆದು,
ಜಡಭೂಮಿ ಪೃಥ್ವಿಯಲ್ಲಿ ನಡಿಸಿ,
ಮಡ್ಡಜೀವಿಗಳಾದ ಜಡಶವವನ್ನು ನೆಲದಲ್ಲಿ ಹೂಳಿದಡೆ,
ಮೂರು ದಿವಸಕ್ಕೆ ಮಣ್ಣಾಗಿ ಹೋಗುವುದಲ್ಲದೆ
ಬಯಲಾಗಲರಿಯದು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./84
ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ
ಮಣ್ಣು ಮಟ್ಟಿಯ ಧರಿಸಿ ಭವಭಾರಕ್ಕೆ ಒಳಗಾದರು
ವಿಪ್ರ ಮೊದಲು ಶ್ವಪಚ ಕಡೆಯಾಗಿ ನೋಡಾ.
ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ
ದೇವ-ದಾನವ-ಮಾನವರು ಮೊದಲಾದ
ಸಕಲ ಲೋಕಾದಿಲೋಕಂಗಳು
ಭವಕ್ಕೆ ಭಾಜನವಾದರು ನೋಡಾ.
ಶ್ರೀ ವಿಭೂತಿಯ ಧರಿಸಲರಿಯದೆ
ಗರುಡ ಗಂಧರ್ವ ಕಿನ್ನರ ಕಿಂಪುರುಷರು ಮೊದಲಾದ
ಸಕಲ ಮನುಮುನಿಜನಂಗಳು ಋಷಿಗಳು
ಭವಕ್ಕೆ ಗುರಿಯಾದರು ನೋಡಾ.
ಶ್ರೀ ವಿಭೂತಿಯ ಧರಿಸಲರಿಯದೆ
ಅಂಗಾಲಕಣ್ಣವರು ಮೈಯೆಲ್ಲಕಣ್ಣವರು
ಒಂದುತಲೆಯವರು ಎರಡುತಲೆಯವರು
ಮೂರುತಲೆಯವರು ನಾಲ್ಕುತಲೆಯವರು
ಐದುತಲೆಯವರು ಆರುತಲೆಯವರು
ಏಳುತಲೆಯವರು ಎಂಟುತಲೆಯವರು
ಒಂಬತ್ತು ತಲೆಯವರು ಹತ್ತುತಲೆಯವರು
ಹನ್ನೊಂದುತಲೆಯವರು ನೂರುತಲೆಯವರು
ಐದುನೂರುತಲೆಯವರು ಸಾವಿರತಲೆಯವರು
ಗಂಗೆಗೌರಿವಲ್ಲಭರು ಸಮಾರುದ್ರರು ನಂದಿವಾಹನರು
ಇಂತಪ್ಪವರೆಲ್ಲ ಆದಿಪ್ರಮಥರು
ಇವರು ಎತ್ತಲಾನುಕಾಲಕ್ಕೆ ಭವಕ್ಕೆ ಬರುವರು ನೋಡಾ.
ಮತ್ತಂ, ಇಂತಪ್ಪ ಶ್ರೀ ವಿಭೂತಿಯನು
ಬಸವಾದಿ ಪ್ರಭುದೇವರಾಂತ್ಯಮಾದ
ಏಳುನೂರುಯೆಪ್ಪತ್ತು ಪ್ರಮಥಗಣಂಗಳು
ಮೂಳ್ಳೂರಲಿಕ್ಕೆ ಇಂಬಿಲ್ಲದೆ
ಸರ್ವಾಂಗದಲ್ಲಿ ಧರಿಸಿ ತ್ರೈಲೋಕ ಮೊದಲಾದ
ಚತುರ್ದಶಭುವನವ
ತಮ್ಮ ಚರಣದಿಂದ ಸ್ವಯವಮಾಡಿ
ಪರಶಿವಲಿಂಗದಲ್ಲಿ ಶಿಖಿಕರ್ಪುರ ಸಂಯೋಗದ ಹಾಗೆ
ಬೆರೆದು ನಿರ್ವಯಲಾದರು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./85
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ
ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ
ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ
ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ,
ಮಂತ್ರದಿಂದ ಅನ್ನ ಉದಕವ ಹಾಕಿ,
ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು,
ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ,
ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ,
ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ,
ಜಂಗಮದ ಪಾದೋದಕದಿಂದ ಆ ಭಸ್ಮವ
ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ,
ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ
ಲಿಂಗಾರ್ಚನೆಯ ಮಾಡಿದವರಿಗೆ
ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ
ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು.
ಆ ಫಲಪದ ಪಡೆದವರು ವೃಕ್ಷದ ಮೇಲೆ
ಮನೆಯ ಕಟ್ಟಿದವರು ಉಭಯರು ಒಂದೆ.
ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು
ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು.
ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ
ನೆಲಕ್ಕೆ ಬೀಳುವರಲ್ಲದೆ,
ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ.
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ
ಚತುರ್ವಿಧಫಲಪದವ ಪಡೆದವರು
ಆ ಫಲಪದವಿ ಇರುವ ಪರ್ಯಂತರವು
ಸ್ಥಿರವಾಗಿ ಇರುವರಲ್ಲದೆ,
ಆ ಫಲಪದವಿ ಕಾಲೋಚಿತದ ಮೇಲೇರಿ
ಅಳಿದು ನಾಶವಾದ ಮೇಲೆ
ಮರಳಿ ಭವಕ್ಕೆ ಬೀಳುವರಲ್ಲದೆ,
ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು
ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು
ತನ್ನ ಪರಮಜ್ಞಾನದಿಂ ಭೇದಿಸಿ
ಚಿದ್ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ,
ಶಿಖಿ-ಕರ್ಪುರದ ಸಂಯೋಗದ ಹಾಗೆ
ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /86
ಇಂತಪ್ಪ ಸಂಸಾರವ ಮಾಡಲರಿಯದೆ
ಹೊನ್ನು ನನ್ನದು, ಹೆಣ್ಣು ನನ್ನದು, ಮಣ್ಣು ನನ್ನದು ಎಂದು
ನಚ್ಚಿ ಮೆಚ್ಚಿಕೊಂಡು ಕೊಟ್ಟು
ಎರಡು ಬಡ್ಡಿಯ ತೆಗೆದುಕೊಂಡು ಗಳಿಸಿ, ಗಳಿಸಿ,
ತುಂಡ ಅಧಮ ಸೊಳೆಯರ ಬಾಯ ತೊಂಬಲ,
ಉಚ್ಚಿ ಹೊಯ್ಯುವ ಬಚ್ಚಲಹರಿಗೆ ಮೆಚ್ಚಿ ಮರುಳಾಗಿ
ತಾನು ಗಳಿಸಿದಂಥ ದ್ರವ್ಯವನು ಸತ್ಪಾತ್ರಕ್ಕಲ್ಲದೆ ಅಪಾತ್ರಕ್ಕೆ ಕೊಟ್ಟು,
ಕೆಟ್ಟು ನಷ್ಟವಾಗಿ ಹೋಗುವ ಮೂಳ ಹೊಲೆಯರಿಗೆ
ಇನ್ನೆತ್ತಣ ಶಿವಜ್ಞಾನವೆಂದನಯ್ಯಾ
ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./87
ಇಂತಪ್ಪಪ್ರಸಾದದ ಘನವನರಿಯದೆ
ಸ್ಥಾವರಕ್ಕೆ ಕೊಟ್ಟ ದ್ರವ್ಯವು ಲಿಂಗಕ್ಕೆ ಸಲ್ಲದೆಂಬರು.
ಅದೇನು ಕಾರಣವೆಂದಡೆ: ಸ್ಥಾವರವು ನಿಶ್ಶಬ್ದ, ಲಿಂಗವು ಮಂತ್ರಶಬ್ದ ಎಂಬರಯ್ಯಾ.
ಎಲೆ ಮರುಳ ಮಾನವರಿರಾ,
ಹದಿನೆಂಟು ಜೀನಸು ಧಾನ್ಯವು ಭೂಮಿಯಲ್ಲಿ ಬೆಳೆಯುವದು.
ಆ ಭೂಮಿ ಸ್ಥಾವರವಲ್ಲವೆ?
ಆ ಧಾನ್ಯವ ತಂದು ಕಲ್ಲವಳ್ಳಿಗೆ ಹಾಕಿ ಕುಟ್ಟಿ ಬೀಸಿ
ಗಡಿಗೆಯೊಳಗೆ ಹಾಕಿ ಪಾಕವ ಮಾಡುವರು.
ಆ ಕಲ್ಲು ಒಳ್ಳು ಗಡಿಗೆ ಸ್ಥಾವರವಲ್ಲವೆ?
ಅಂತಪ್ಪ ಪಾಕವನು ಗಡಿಗೆಯೊಳಗೆ ಇದ್ದಾಗ
ಬೋನವೆಂಬರು.
ಹರಿವಾಣಕ್ಕೆ ಬಂದಲ್ಲಿ ನೈವೇದ್ಯವೆಂಬರು.
ಜಂಗಮದ ಹಸ್ತಸ್ಪರ್ಶವಾದಾಗಲೇ
ಪದಾರ್ಥದ ಪೂರ್ವಾಶ್ರಯವಳಿಯಿತೆಂಬರು.
ಜಂಗಮವು ತನ್ನ ಲಿಂಗಕ್ಕೆ ತೋರಿ,
ಸಲಿಸಿದ ಮೇಲೆ ಪ್ರಸಾದವಾಯಿತೆಂಬರು.
ಇಂತಪ್ಪ ಪ್ರಸಾದಕ್ಕೆ ‘ಅಯ್ಯಾ ಹಸಾದ
ಮಹಾಪ್ರಸಾದ ಪಾಲಿಸಿರೆ’ಂದು
ಕೂಳ ಚೆಲ್ಲಿದರೆ ಕಾಗಿ ನೆರೆದು
ಒಂದಕ್ಕೊಂದು ಕಚ್ಚಿ ಕಡಿದಾಡುವಂತೆ,
ಒಬ್ಬರಿಗೊಬ್ಬರು ನಾ ಮುಂದೆ ನೀ ಮುಂದೆಂದು
ಅಡ್ಡಡ್ಡ ಬಿದ್ದು,
ಆ ಜಂಗಮ ತಿಂದ ಎಂಜಲ ಪ್ರಸಾದವೆಂದು
ಪಡಕೊಂಡು ತಮ್ಮ ತಮ್ಮ ಲಿಂಗಕ್ಕೆ ತೋರಿ ತೋರಿ
ಆಧಾರಸ್ಥಾನ ಮೊದಲಾಗಿ ವಿಶುದ್ಧಿಸ್ಥಾನ ಪರಿಯಂತರ
ತೊಗಲತಿತ್ತಿ ನೀರ ತುಂಬಿದಂತೆ ತುಂಬಿಕೊಂಡು,
ಸತ್ತ ಮೊಲದಂತೆ ಕಣ್ಣ ಬಿಡುವಣ್ಣಗಳು
ನಿಮ್ಮ ಶಿವಶರಣರ ಮಹಾಘನಪ್ರಸಾದವ
ಈ ಕುರಿಮನುಜರೆತ್ತಬಲ್ಲರಯ್ಯ.
ಅದೆಂತೆಂದಡೆ : ಲಿಂಗಕ್ಕೆ ಶಿವಕಳೆಯಿಲ್ಲ,
ಭಕ್ತಂಗೆ ಗುರುಕಾರುಣ್ಯವಿಲ್ಲ,
ಜಂಗಮಕ್ಕೆ ಪರಮಕಳೆಯಿಲ್ಲ.
ಪ್ರಸಾದಕ್ಕೆ ಜಡರೂಪಿಲ್ಲದಾದಕಾರಣ
ಹೀಗೆಂಬುದ ತಿಳಿಯದೆ ಮಾಡುವ ಮಾಟವೆಲ್ಲ,
ನೀರೊಳಗೆ ಅಗ್ನಿಹೋಮವನಿಕ್ಕಿದಂತೆ ಆಯಿತು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./88
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ
ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ
ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು.
ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ
ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ
ನೀಡಿದಾತನೇ ಭಕ್ತನೆಂದು
ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು.
ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ.
ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ
ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ,
ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ
ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು
ಗುರುವಿಗೆ ತನುವ ನೀಡಬೇಕೆಂದು,
ಆ ಗುರುವಿನ ಸೇವಾವೃತ್ತಿಯಿಂದ
ತನುವ ದಂಡನೆಯ ಮಾಡುವರು.
ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ.
ಲಿಂಗಕ್ಕೆ ಮನವ ನೀಡಬೇಕೆಂದು
ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ,
ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು
ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ
ಕಣ್ಣು ತೆರೆದು ನೋಡಿದಡೆ
ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ?
ನಿಲ್ಲಲರಿಯದು.
ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ
ತಾವೆಂದರಿಯದ ಕಾರಣ.
ಇಂತೀ ಪರಿಯಲ್ಲಿ ಮನವ ಬಳಲಿಸುವರು.
ಜಂಗಮಕ್ಕೆ ಧನವ ನೀಡಬೇಕೆಂದು
ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ
ನಾನಾ ಧಾವತಿಯಿಂದ ಗಳಿಸಿ
ಸಕಲ ಪದಾರ್ಥವನು ಜಂಗಮಕ್ಕೆ ನೀಡಿ,
ಆತ್ಮನ ಬಳಲಿಸುವರು.
ಅದೇನು ಕಾರಣವೆಂದಡೆ,
ಆ ಜಂಗಮದ ನಿಜನಿಲುಕಡೆಯ ಸ್ವರೂಪ
ತಾವೆಂದರಿಯದ ಕಾರಣ.
ಇಂತಿವೆಲ್ಲವು ಹೊರಗಣ ಉಪಚಾರ.
ಈ ಹೊರಗಣ ಉಪಚಾರವ ಮಾಡಿದವರಿಗೆ
ಪುಣ್ಯಫಲಪ್ರಾಪ್ತಿ ದೊರಕೊಂಬುವದು.
ಆ ಪುಣ್ಯಫಲ ತೀರಿದ ಮೇಲೆ
ಮರಳಿ ಭವಬಂಧನವೇ ಪ್ರಾಪ್ತಿ.
ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ.
ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು.
ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು
ನೋಡೆಂದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./89
ಇಂತೀ ಕ್ರಮವನರಿದು ದೀಕ್ಷೊಪದೇಶವ
ಮಾಡಬಲ್ಲಡಾತನೇ ಅನಾದಿಗುರುವೆಂಬೆ.
ಇಂತೀ ವಿಚಾರವ ತಿಳಿದು ದೀಕ್ಷೊಪದೇಶವ
ಹಿಡಿಯಬಲ್ಲಡಾತನೇ ಅನಾದಿಶಿಷ್ಯನೆಂಬೆ.
ಇಂತಿದರನುಭವ ತಿಳಿದು ಅನುಭಾವವ
ಹೇಳಬಲ್ಲಡಾತನೇ ಅನಾದಿಜಂಗಮವೆಂಬೆ.
ಇಂತಿದರ ಭೇದವ ತಿಳಿದು ದೀಕ್ಷೊಪದೇಶವ
ಕೇಳಬಲ್ಲಡಾತನೇ ಅನಾದಿಭಕ್ತನೆಂಬೆ.
ಇಂತೀ ಕ್ರಮವನರಿದು ದೀಕ್ಷೊಪದೇಶವ
ಮಾಡುವವರು,
ಇಂತೀ ಭೇದವ ತಿಳಿದು ದೀಕ್ಷೊಪದೇಶವ
ಪಡೆವವರು,
ಈ ಉಭಯತರು ಇಹಲೋಕಕ್ಕೆ ಸಲ್ಲರು,
ಪರಲೋಕಕ್ಕೆ ಸಲ್ಲರು.
ಈರೇಳುಲೋಕ ಮೊದಲಾದ ಆವಾವ ಲೋಕಕ್ಕೆ ಸಲ್ಲರು
ಎಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./90
ಇಂತೀ ನಿರ್ಣಯದಲ್ಲಿ ವಿಭೂತಿ ಧರಿಸಲರಿಯದೆ
ಕುಳ್ಳು ಕಟ್ಟಿಗೆಯ ಸುಟ್ಟು ಬೂದಿಯ ತಂದು,
ನೀರಲ್ಲಿ ಕಲಿಸಿದ ಉಂಡಿ ತಂದು,
ಜಂಗಮದ ಪಾದೋದಕದಿಂ ಶುದ್ಧಮಾಡಿ ಧರಿಸಿದಡೆ
ಭವ ಹಿಂಗುವುದೇ? ಭವ ಹಿಂಗದು.
ವಿಶ್ವಾಸದಿಂದ ಚಿದ್ಭಸ್ಮವೆಂದು ಧರಿಸಿದಡೆ
ಪುಣ್ಯದ ಫಲ ಪ್ರಾಪ್ತಿಯಾಗುವುದು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./91
ಇಂತೀ ಪಿಂಡಾದಿ ಜ್ಞಾನಶೂನ್ಯಾಂತಮಾದ
ನೂರೊಂದುಸ್ಥಲ ಮೊದಲಾದ
ಸರ್ವಾಚಾರಸಂಪನ್ನನೆಂದೆನ್ನಬಹುದು.
ಇಂತೀ ಭೇದವನರಿಯದೆ ತಮ್ಮ ತಾವಾರೆಂಬುದು
ತಿಳಿಯದಿರ್ದಂಥ ಮತಿಭ್ರಷ್ಟ ಹೊಲೆಮಾದಿಗರಿಗೆ
ಅದೆಲ್ಲಿಯದೊ ಗುರುಲಿಂಗಜಂಗಮದ ತೀಥಪ್ರಸಾದಸಂಬಂಧ ?
ಅದೆಲ್ಲಿಯದೋ ಅಚ್ಚ ನಿಚ್ಚ ಸಮಯ ಏಕಪ್ರಸಾದದಸಂಬಂಧ ?
ಇಂತಪ್ಪ ಗುರುಲಿಂಗಜಂಗಮದ ತೀರ್ಥಪ್ರಸಾದಕ್ಕೆ
ಅಂದೇ ಹೊರಗಾಗಿ ಮತ್ತೆ ಮರಳಿ
ಇಂದು ನಾವು ಗುರುಲಿಂಗಜಂಗಮದ
ತೀರ್ಥಪ್ರಸಾದ ಪ್ರೇಮಿಗಳೆಂದು,
ಆ ತ್ರಿಮೂರ್ತಿಗಳ ತಮ್ಮಂಗದಿಂ ಭಿನ್ನವಿಟ್ಟು,
ತ್ರಿಕಾಲಂಗಳಲ್ಲಿ ಸ್ನಾನವ ಮಾಡಿ,
ಜಪ, ತಪ, ಮಂತ್ರ, ಸ್ತೋತ್ರಗಳಿಂದ ಪಾಡಿ,
ಪತ್ರಿ, ಪುಷ್ಪ ಮೊದಲಾದುದರಿಂ
ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಅರ್ಚಿಸಿ,
ನಿತ್ಯನೇಮದಿಂ ಶೀಲ ವ್ರತಾಚಾರಂಗಳಿಂದ
ಸಕಲ ಕ್ರಿಯಗಳನಾಚರಿಸಿ ಭಿನ್ನಫಲಪದವ ಪಡದು,
ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ
ರಾಟಣದಂತೆ ತಿರುಗುವ ಭವಭಾರಿಗಳಾದ ಜೀವಾತ್ಮರಿಗೆ
ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./92
ಇಂತೀ ವಿಚಾರವನು ತಿಳಿಯದೆ
ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ಹೆಸರಿಟ್ಟು
ಇಷ್ಟಲಿಂಗದಲ್ಲಿ ಅವಿಶ್ವಾಸವ ಮಾಡಿ,
ಕ್ರಿಯಾಚಾರದಲ್ಲಿ ಅನಾಚಾರಿಯಾಗಿ,
ಜೀವಾತ್ಮನೇ ಪರಮಾತ್ಮನೆಂದು ಅಹಂಕರಿಸಿ,
ದೇಹದ ಸಕಲಕರಣವಿಷಯಂಗಳಲ್ಲಿ ಮನಮಗ್ನವಾಗಿ
ತನ್ನ ನಿಜದ ನಿಲವ ಮರೆದು,
ಪರರಿಗೆ ಶಿವಶರಣಂಗಳ ವಚನವ ನೋಡಿ
ಶಿವಾನುಭಾವವ ಪೇಳುವ ಕುನ್ನಿ ಮನುಜರ
ಕೂಗ್ಯಾಡಿ ಕೂಗ್ಯಾಡಿ ನರಕದಲ್ಲಿಕ್ಕೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./93
ಇಂದಿನ ಚಿಂತೆಯುಳ್ಳವರೆಲ್ಲ ಹಂದಿಗಳು.
ನಾಳಿನ ಚಿಂತೆಯುಳ್ಳವರೆಲ್ಲ ನಾಯಿಗಳು.
ತನ್ನ ಚಿಂತೆಯುಳ್ಳವರೆಲ್ಲ ಜೋಗಿಗಳು.
ನಿನ್ನ ಚಿಂತೆಯುಳ್ಳವರೆಲ್ಲ ಯೋಗಿಗಳು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./94
ಇಬ್ಬರ ಸಂಗದಲ್ಲಿ ಹುಟ್ಟಲಿಲ್ಲ,
ಒಬ್ಬರ ಸಂಗದಲ್ಲಿ ನಿಲ್ಲಲಿಲ್ಲ,
ಮೂವರ ಕೂಡ ಮಾತಾಡಲಿಲ್ಲ,
ನಾಲ್ವರ ಕೂಡ ನಡೆಯಲಿಲ್ಲ,
ಐವರ ಕೂಡ ಉಣಲಿಲ್ಲ.
ಕೈ ಕಾಲಿಲ್ಲದ ಕುರುಡಿಯ ಸಂಗದಲ್ಲಿ
ಸಂಸಾರವ ಮಾಡುತ್ತಿರ್ದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/95
ಇಬ್ಬರಲ್ಲಿ ಹುಟ್ಟದೆ ಕರದಲ್ಲಿ ಹುಟ್ಟಿ,
ಕೂಲಿಯ ಮಾಡದೆ ಸಾಲವ ಬೇಡದೆ
ಕಡ ಕೊಡದೆ, ಕೊಟ್ಟು ಮರಳಿ ಬೇಡದೆ,
ಕೊಂಡ ಒಡವೆಯ ಕೊಂಡ ಹಾಗೇ ಕೊಟ್ಟು
ಕಾಯಕವ ಮಾಡುತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./96
ಇಬ್ಬರಿಗೆ ಮೂರು, ಮೂರಿಟ್ಟವರು
ಹಲವು ಮನೆಯಲ್ಲಿ ಚರಿಸುವರು.
ಒಬ್ಬಂಗೆ ಒಂದು, ಒಂದಿಟ್ಟವರು ಮನೆಯಿಲ್ಲದೆ
ಬಯಲಲ್ಲಿ ಚರಿಸುವರು.
ಬಯಲ ಹೊತ್ತವರೆ ಅಸುಲಿಂಗಿಗಳು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./97
ಇರುವ ಮನೆಯ ವಿಸರ್ಜಿಸಿ ನೆರೆಮನೆಯಲ್ಲಿ ಚರಿಸಿ,
ಜನ್ಮವ ನೀಗಿ ಸತ್ತನೆಂಬವರಿಗೆ ಜನರು ಮೆಚ್ಚರು.
ಅದೇನು ಕಾರಣವೆಂದಡೆ: ನೆರೆಮನೆಗೆ ಪೋಗದೆ, ಇರುವಮನೆ ವಿಸರ್ಜಿಸದೆ
ಹುಟ್ಟಿ ಆಚರಿಸಿ ಸತ್ತವರಿಗೆ
ಜನರು ಮೆಚ್ಚುವರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./98
ಇರುವೆ ಕುಕ್ಕಟ ವಿಹಂಗ ಮರ್ಕಟ ಗಜ ಶ್ವಾನವೆಂಬ
ಇಂತೀ ಷಡ್ವಿಧವ ಪಿಡಿದು
ಕಾಯಕವ ಮಾಡುವವರಿಗೆ ಮೂರೆಡೆಯಲ್ಲಿ ಸುಂಕವಿಲ್ಲ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./99
ಇಹವ ತಿಳಿಯದೆ, ಮೂರಿಟ್ಟು ಕಮಲವ ಕಾಣದೆ
ಬೆಟ್ಟದಲ್ಲಿ ಕೂಡಿ ಹಳ್ಳದಲ್ಲಿ ಬಿದ್ದು ಸಮುದ್ರವ ಕೂಡಿದವರಿಗೆ
ಇನ್ನೆತ್ತಣ ಮುಕ್ತಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./100
ಈ ಲೌಕಿಕದ ಮಧ್ಯದಲ್ಲಿ ಜೀವಾತ್ಮರು ದಿನಚರಿ,
ವಾರ, ಮಾಸ, ಚತುದರ್ಶಿಯಲ್ಲಿ
ಉಪವಾಸ ಮಾಡುವ ಕ್ರಮವ ಪೇಳ್ವೆ.
ಅದೆಂತೆಂದಡೆ : ದಿನಚರಿ ವಾರದೊಳಗೆ ಸೋಮವಾರ ವ್ರತವುಳ್ಳವರು
ಆ ದಿವಸ ಉದಯದಿಂ ಮೂರುಪ್ರಹರ ವೇಳೆ ಪರಿಯಂತರವಾಗಿ
ಉಪವಾಸವ ಮಾಡಿ ಆ ದಿವಸಕ್ಕಿಂತು ಆ ವಾರ ದಿವಸ
ಆವ ಪದಾರ್ಥವಾದಡೆಯು ನಿರ್ಮಳ ಪಾಕವ ಮಾಡಿಸಿ
ಕೆರೆ, ಬಾವಿ, ಹಳ್ಳ, ಹೊಳೆಗಳಿಗೆ ಹೋಗಿ,
ಮಜ್ಜನವ ನೀಡಿ ಪತ್ರಿಪುಷ್ಪವ ತಂದು
ತನ್ನ ಲಿಂಗಪೂಜೆಯ ಮಾಡಿ,
ಗ್ರಾಮದ ಹೊರಗೆ ಒಂದು ಸ್ಥಾವರಲಿಂಗದ
ದೇವಾಲಯಕ್ಕೆ ಹೋಗಿ ನಮಸ್ಕಾರವ ಮಾಡಿ,
ಮರಳಿ ತಮ್ಮ ಗ್ರಹಕ್ಕೆ ಬಂದು
ಆ ಸ್ಥಾವರಲಿಂಗಕ್ಕೆ ನೈವೇದ್ಯವ ಕಳಿಸಿ
ಆ ಮೇಲೆ ಜಂಗಮವ ಕರಿಸಿ ಅರ್ಚಿಸಿ,
ಪಾದೋದಕ ಸೇವಿಸಿ,
ಆ ಜಂಗಮಕ್ಕೆ ಉತ್ತಮವಾದ ಪದಾರ್ಥವ ಸ್ವಲ್ಪ ಎಡೆ ಮಾಡಿಸಿ
ತನ್ನ ಹರಿವಾಣದಲ್ಲಿ ಅರಲು ತುಂಬಿದ ಹೆಡಿಗೆಯಂತೆ ಒಟ್ಟಿಸಿಕೊಂಡು
ಮನಬಂದಪರಿಯಲ್ಲಿ ಎರಡು ವೇಳ್ಯದಾಹಾರ
ಒಂದುವೇಳೆಯಲ್ಲಿ ರಣವೀರರಂತೆ
ತಿಂದು ತಿಂದು ಒಡಲ ತುಂಬಿಕೊಂಡು
ನಾವು ಸೋಮವಾರ ಒಂದೊತ್ತು ಉಪವಾಸವ್ರತವುಳ್ಳವರೆಂದು
ಪರರಮುಂದೆ ಬೊಗಳುವರಯ್ಯ.
ಇಂತಪ್ಪ ವ್ರತಭ್ರಷ್ಟವುಳ್ಳ ಮಂಗಮನುಜರಿಗೆ
ವೀರಮಾಹೇಶ್ವರರೆಂದಡೆ ಮೆಚ್ಚರಯ್ಯಾ
ನಿಮ್ಮ ಶಿವಜ್ಞಾನಿಗಳಾದ ಶಿವಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./101
ಈರಾರುಮಣಿಯ ಲೆಕ್ಕಕ್ಕೆ ನಿಲುಕದು.
ಮೂರಾರು ವೇಳೆಯಲ್ಲಿ ಮುಳುಗಿದರೆ ನಿಲುಕದು.
ಒಂಬತ್ತು ಬಾಗಿಲವನಿಕ್ಕಿ ಕಣ್ಣುಮುಚ್ಚಿದಡೆ ನಿಲುಕದು.
ಎರಡು ಮೂರುಳ್ಳನ್ನಕ್ಕ ನಿಲುಕದು.
ಇಂತಲ್ಲದೆ ತಾನಳಿದು ನೀನೆಂಬುದ
ಮರೆದವರಿಗೆ ನಿಲುಕುವುದು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./102
ಉಂಡು ಕಾರುವಾತ ಇಸವ ಕಂಡ.
ಕಾರಿದ್ದು ಉಂಡು ಉಗುಳದಾತ ಹರಳ ಕಂಡ.
ಕಾರಿದ್ದು ಕಂಡು ನುಂಗದೆ ಉಗುಳುವಾತ ಈರಿಸವ ಕಂಡ.
ಕಾರಿದ್ದು ಕಂಡು ಉಗುಳದೆ ನುಂಗುವಾತ ಈರಾಳ ಕಂಡ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./103
ಉಣ್ಣಬೇಕು, ಉಡಬೇಕು, ಇಡಬೇಕು,
ಭೋಗಿಸಬೇಕೆಂಬರಯ್ಯ.
ಉಂಡದ್ದು ಏನಾಯಿತು ? ಉಟ್ಟಿದ್ದು ಏನಾಯಿತು ?
ಇಟ್ಟಿದ್ದು ಏನಾಯಿತು ? ಭೋಗಿಸಿದ್ದು ಏನಾಯಿತು ?
ಇಂತೀ ವಿಚಾರವ ಬಲ್ಲವರಾದರೆ ಪೇಳಿರಿ,
ಅರಿಯದಿದ್ದರೆ ಕೇಳಿರಿ ಎಲೆ ಮರುಳ ಮನುಜರಿರಾ,
ಅದೆಂತೆಂದಡೆ : ಮೃಷ್ಟಾನ್ನವಾಗಲಿ, ಕೃಷ್ಣಾನ್ನವಾಗಲಿ ಆವ ಪದಾರ್ಥವಾದಡೇನು
ಉಂಡ ಮೂರು ಘಳಿಗೆಯ ಮೇಲೆ ನರಕವಾಗಿ ತೋರುವದು.
ಆ ಅನ್ನ ಹೆಚ್ಚಾಗಿ ಕೊಂಡಡೆ ಹೊಟ್ಟೆ ಉಬ್ಬಿ
ಕಮರಡರಕಿ ಬಂದು ಕರಸತ್ತ ಮರುವಿನ ಎಮ್ಮೆಯಂತೆ
ಪೃಷ್ಠ ಒದರುವದು.
ಮತ್ತಂ,
ಒಂದು ಹೊನ್ನಾಗಲಿ, ಐದು ಹೊನ್ನಾಗಲಿ,
ಹತ್ತು ಹೊನ್ನಾಗಲಿ, ನೂರು ಹೊನ್ನಾಗಲಿ,
ಇಂತೀ ಹೊನ್ನು ಮೊದಲಾದ
ಹೊನ್ನಿನ ವಸ್ತ್ರ ಶಾಲು ಶಕಲಾತಿ ಮೊದಲಾದ
ಆವ ವಸ್ತ್ರವಾದಡೇನು ಉಟ್ಟು ತೊಟ್ಟು ಪೊದ್ದಗಳಿಗೆಯ ಜಾವದಲ್ಲಿ
ನಿರಿಬಿದ್ದು ದಡಿ ಮಾಸಿ
ಮುಂದೆ ಅವು ವರುಷಾರುತಿಂಗಳಿಗೆ ಸವದು
ಹಣ್ಣಹರದು ಹರಿದು ಹೋಗುವವು.
ಮತ್ತಂ, ಬೆಳ್ಳಿ ಬಂಗಾರ ಮೊದಲಾದ
ವಸ್ತು ಒಡವೆಗಳು ಆವುದಾದರೇನು
ಅಂಗದ ಮೇಲೆ ಇಟ್ಟಲ್ಲಿ
ದಿನಚರ್ಯ ಮಾಸದ ಕಾಲದಲ್ಲಿ
ಸವಸವದು ಸಣ್ಣಾಗಿ ಹೋಗುವದು.
ಮತ್ತಂ, ಕನ್ಯಾಕುಮಾರಿ, ಮಿಂಡಿಹೆಣ್ಣು, ತುಂಟರಂಡಿ,
ಹಲವಾದ ಸ್ತ್ರೀ ಮೊದಲಾದ ಆವಳಾದರೇನು,
ಸಂಗವಾಗದಕ್ಕಿಂತ ಮುನ್ನವೆ ಚಲುವೆ,
ಸಂಗವಾದ ಬಳಿಕ ನೀರಿಲ್ಲದ ವೃಕ್ಷ
ಮೂಲಸಹವಾಗಿ ಕಿತ್ತು ಚೆಲ್ಲಿದಂತೆ.
ಉಭಯ ಸ್ತ್ರೀ ಪುರುಷರ ತನುವು ಜರ್ಜರಿತವಾಗಿ
ಸತ್ವಗುಂದಿ ಕೈಕಾಲ ಲಾಡಿ ಸತ್ತು,
ಕೈಯ್ಯೂರಿ ಏಳುವರು.
ಇಂಥ ಮಾಯಾವಿಲಾಸವ ಶಿವಜ್ಞಾನಿ ಶರಣ ಕಂಡು
ಆರೂ ಅರಿಯದೆ ವಿಸರ್ಜಿಸಿ
ತನ್ನ ಲಿಂಗದ ನೆನವಿನಲ್ಲಿ ಸ್ವಸ್ಥಿರಚಿತ್ತನಾಗಿರ್ದ ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./104
ಉದಯಕಾಲದ ಸೂರ್ಯನಂತೆ;
ಮುಗಿಲೊಳಗಣ ಕ್ಷಣಿಕದಂತೆ;
ಗರ್ಭದೊಳಗಣ ಶಿಶುವಿನಂತೆ;
ನೆಲದಮರೆಯ ನಿಧಾನದಂತೆ;
ಜ್ಞಾನಕಲಾತ್ಮನಂಗದಿಂದ ಪರವಸ್ತು ನಿದರ್ಶನವಾಗುತ್ತಿರ್ದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/105
ಉದಯಕ್ಕೆ ತನುವೆಂಬ ಹಸ್ತದಲ್ಲಿ
ಇಷ್ಟಲಿಂಗವ ಮೂರ್ತಿಗೊಳಿಸಿ
ಪೂಜಿಸಬಲ್ಲರೆ ಶರಣನೆಂಬೆ.
ಮಧ್ಯಾಹ್ನಕ್ಕೆ ಮನವೆಂಬ ಹಸ್ತದಲ್ಲಿ
ಪ್ರಾಣಲಿಂಗವ ಮೂರ್ತಿಗೊಳಿಸಿ
ಪೂಜಿಸಬಲ್ಲರೆ ಶರಣನೆಂಬೆ.
ಅಸ್ತಮಾನಕ್ಕೆ ಧನವೆಂಬ ಹಸ್ತದಲ್ಲಿ
ಭಾವಲಿಂಗವ ಮೂರ್ತಿಗೊಳಿಸಿ
ಪೂಜಿಸಬಲ್ಲರೆ ಶರಣನೆಂಬೆ.
ತನು ಮುಟ್ಟದ ಮುನ್ನ, ಮನ ಮುಟ್ಟದ ಮುನ್ನ,
ಭಾವ ಮುಟ್ಟದ ಮುನ್ನ,
ಲಿಂಗಕ್ಕೆ ದ್ರವ್ಯವ ಸಲಿಸಬಲ್ಲರೆ ಶರಣನೆಂಬೆ.
ಕಾಲು ತಾಗದ ಮುನ್ನ, ಕೈ ಮುಟ್ಟದ ಮುನ್ನ
ಉದಕವ ತಂದು ಲಿಂಗಕ್ಕೆ ಮಜ್ಜನವ ನೀಡಬಲ್ಲರೆ
ಶರಣನೆಂಬೆ.
ಹೂವು ನೋಡದ ಮುನ್ನ, ಹಸ್ತದಿಂದ ಮುಟ್ಟದ ಮುನ್ನ,
ಹೂವಕೊಯಿದು ಧರಿಸಬಲ್ಲರೆ ಶರಣನೆಂಬೆ.
ಈ ಭೇದವ ತಿಳಿಯಬಲ್ಲರೆ
ಶಿವಜ್ಞಾನಿಶರಣ ಲಿಂಗಾಂಗಸಂಬಂಧಿ.
ಇಂತೀ ನಿರ್ಣಯವ ತಿಳಿಯದೆ
ಶರಣಸತಿ ಲಿಂಗಪತಿ ಎಂಬಾತನ ಲಿಂಗ ಪ್ರೇತಲಿಂಗ,
ಅವ ಭೂತಪ್ರಾಣಿ ಎಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./106
ಉದಯದ ಉದಕವ
ನಾಲ್ಕು ಮುಖದ ರಾಜಂಗೆ ಕುಡಿಸಿ ಕೊಂದು,
ಮಧ್ಯಾಹ್ನದ ಉದಕವ
ವಿಟಪುರುಷನೆಂಬ ರಾಜಂಗೆ ಕುಡಿಸಿ ಕೊಂದು,
ಅಸ್ತಮಾನದ ಉದಕವ
ಉಭಯ ಸತಿಪುರುಷನೆಂಬ ರಾಜಂಗೆ ಕುಡಿಸಿ ಕೊಂದು,
ಮೂರುಕಾಲದುದಕವ ಕುಡಿದವರು
ಮರಳಿ ಮನೆಗೆ ಬಾರದೆ ಪೋದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./107
ಊರ ಬಾರಿಕನ ಬಾಗಿಲಲ್ಲಿ
ತಲೆ ಕೆಳಗಾಗಿ ಕಾಲು ಮೇಲಾಗಿ ಚರಿಸ್ಯಾಡುವ ಮೃಗವ
ಎಡಪಾದ ಮುಂದಿಟ್ಟು, ಬಲಪಾದ ಹಿಂದಿಟ್ಟು,
ವೀರಮಂಡಿಯ ಹೂಡಿ, ಒಳಬಾಗಿಲೊಳಗೆ ಕೂತು
ಒಂದೇ ಬಾಣದೊಳಗೆ ಹತಮಾಡಿ
ನೀರು ಬೆಂಕಿಯಿಲ್ಲದೆ ಪಾಕವ ಮಾಡಿ,
ಬಾಲಹನುಮಗರ್ಪಿಸಿ ಕಾಯಕವ ಮಾಡುವೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./108
ಊರ ಬೆಂಕಿ ಊರ ಸುಟ್ಟಿತ್ತ ಕಂಡೆ.
ಸುಟ್ಟ ಊರೊಳಗಣ ಅಗ್ನಿ
ಊರ ಮುಂದಿನ ಶಿಶುವ ನುಂಗಿತ್ತ ಕಂಡೆ.
ಆ ಶಿಶು ಊರ ಬೆಂಕಿಯ ನುಂಗಿ,
ಸೂಳಿಯ ಸಂಗವ ಮಾಡಿ,
ಆ ಶಿಶುವು ಸತ್ತಿತ್ತ ಕಂಡು ಬೆರಗಾದೆನಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./109
ಎಡಭಾಗದ ಮುರಗಿಂದ ಬ್ರಹ್ಮನ ಹೊಡೆದು ಕೊಂದೆ,
ಬಲಭಾಗದ ಮುರಗಿಂದ ವಿಷ್ಣುವಿನ ಕೊಂದೆ,
ಹಿಂಭಾಗದ ಮುರಗಿಂದ ರುದ್ರನ ಕೊಂದೆ.
ಒಂಟಿಮುರಗಿಯ ಹನಿಗಳಿಂದ ಶುನಿಗಳ ಕೊಂದೆ,
ಮೈಲಿಗಿ ಮೋಳಗಿಯ ನುಂಗಿ ಸತ್ತು
ಕಾಯಕವ ಮಾಡುತಿರ್ದನು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./110
ಎನಗೆ ಭಕ್ತನೆಂಬರು,
ಎನ್ನ ಭಕ್ತಿಚಾರಿತ್ರವ ಪೇಳ್ವೆ ಕೇಳಿರಯ್ಯ.
ಎನ್ನ ಮತ್ಪ್ರಾಣನಾಥಲಿಂಗತಂದೆ
ಗುರುಲಿಂಗಜಂಗಮದ ಭಕ್ತಿಯೆಂದಡೆ
ಎನ್ನ ತನುಮನವು ಕುಗ್ಗುವುದು.
ಮಾರಿ ಮಸಣಿಯ ಭಕ್ತಿಯೆಂದಡೆ ನದಿ ಸರ್ಪನಂತೆ
ಎನ್ನ ತನು-ಮನವು ಉಬ್ಬುವುದು.
ಶಿವಶಾಸ್ತ್ರ, ಶಿವಾನುಭಾವ ಶಿವಮಂತ್ರಬೋಧೆ ಎಂದಡೆ
ಎನ್ನ ಶ್ರೋತ್ರಂಗಳು ಲಾಲಿಸವು.
ಕುಟಿಲ, ಕುಹಕ, ಸಟೆಯ ಶಾಸ್ತ್ರ,
ಕಪಟ ಮಂತ್ರ ಯಂತ್ರ ತಂತ್ರಗಳೆಂದಡೆ
ಎನ್ನುಭಯ ಶ್ರೋತ್ರಂಗಳು ಚೈತ್ರ ವೈಶಾಖ ಮಾಸದಲ್ಲಿ
ಮೊಲ್ಲೆ ಮೊಗ್ಗೆ ಉದಯಕ್ಕೆ ಅರಳಿ
ಹೇಗೆ ಎಸೆಯುವುದು ಹಾಗೆ ವಿಕಸಿತವಾಗಿ,
ಶಬ್ದವಿಷಯ ಎಸೆವುದು.
ಹರಪೂಜೆ ಗುರುಪೂಜೆ ಲಿಂಗನಿರೀಕ್ಷಣವೆಂದಡೆ
ಎನ್ನ ನೇತ್ರಂಗಳು ನಿರೀಕ್ಷಿಸವು.
ಆಟ, ನೋಟ, ಸೂಳೆಯರ ಬೇಟ,
ಕನ್ಯಾಸ್ತ್ರೀಯರ ರೂಪಲಾವಣ್ಯವೆಂದಡೆ
ಎನ್ನ ನೇತ್ರದ ರೂಪುವಿಷಯವು
ಬೇಂಟೆಯ ಶ್ವಾನನಂತೆ ಹರಿಯುತಿಪ್ಪುದು.
ಗುರುಲಿಂಗಜಂಗಮದ ತೀರ್ಥಪ್ರಸಾದ ಸೇವಿಸೆಂದಡೆ
ಎನ್ನ ಜಿಹ್ವೆಯು ಸೇವಿಸದು.
ದಾಸಿ ವೇಸಿಯರ ಬಾಯ ತಾಂಬೂಲವೆಂದಡೆ
ಎನ್ನ ಜಿಹ್ವೇಂದ್ರಿಯ ರುಚಿವಿಷಯವು
ಕೀಳುಮಾಂಸಕ್ಕೆ ಮೆಚ್ಚಿ ಹರಿದಂತೆ ಹರಿಯುತ್ತಿಪ್ಪುದು.
ಗುರುಲಿಂಗಜಂಗಮದ ಪಾದಸೇವೆಯೆಂದಡೆ
ಎನ್ನ ತ್ವಕ್ಕು ಜಾಡ್ಯವಾಗಿ ಆಲಿಸದು.
ಸೂಳಿಢಾಳಿಯರ ಅಂಗಸೇವನೆಯೆಂದಡೆ
ಎನ್ನ ತ್ವಕ್ಕು ಉಡ ಉಬ್ಬಿದಂತೆ ಉಬ್ಬುವದು.
ಗುರುಲಿಂಗಜಂಗಮವು ಧರಿಸಿದ ಪುಷ್ಪ ಪತ್ರಿ
ಪರಿಮಳ ಸುಗಂಧ ಚಂದನದ ಸದ್ವಾಸನೆ ಎಂದಡೆ
ಎನ್ನ ಘ್ರಾಣವು ಮುಡಿಯದು.
ವೇಶ್ಯೆ, ದಾಸಿ, ಜಾರಸ್ತ್ರೀಯರು ಧರಿಸಿದ
ಪುಷ್ಪ ಪರಿಮಳ ಗಂಧ ಚಂದನದ
ಸದ್ವಾಸನೆಯೆಂದಡೆ ಎನ್ನ ಘ್ರಾಣವು
ಸಂಪಿಗೆಯರಳಿಗೆ ಭ್ರಮರ ಎರಗಿದಂತೆ ಎರಗುವದು.
ಇಂತಪ್ಪ ಗುಪ್ತಪಾತಕವಾದ ಗುರುದ್ರೋಹಿಗೆ
ಗುರುಲಿಂಗಜಂಗಮಭಕ್ತನೆಂದಡೆ
ನಗುವರಯ್ಯ ನಿಮ್ಮ ಶರಣರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /111
ಎನಗೊಂದು ವ್ಯಾಧಿ ಹತ್ತಿ ಗೊಲ್ಲನ ಧ್ವನಿಮಾಡಲು,
ಆ ಗೊಲ್ಲನು ಮೆಲ್ಲಮೆಲ್ಲನೆ ಬಂದು
ತನ್ನ ಜೋಳಿಗೆಯೊಳಗಣ ನವಗುಳಿಗೆಯ ತೆಗೆದು,
ಎಂಟು ದಿಕ್ಕಿಗೆ ಎಂಟು ಗುಳಿಗೆಯನೊಗೆದು,
ಮಧ್ಯದಲ್ಲಿ ಒಂದು ಗುಳಿಗೆಯನಿಟ್ಟು,
ತಣ್ಣೀರು ಕುಡಿಯಬೇಡ, ತಂಗಳನ್ನವನುಣ್ಣಬೇಡ,
ಮಜ್ಜಿಗೆಯ ಕುಡಿಯಬೇಡ, ಎಮ್ಮಿಯ ಹಾಲ ಸೇವಿಬೇಡ,
ಇಂತೀ ಎಲ್ಲವನು ವಿಸರ್ಜಿಸಿ,
ಬಿಸಿನೀರು ಕುಡಿದು, ಬಿಸಿ ಅನ್ನವನುಂಡು,
ಬಿಳಿ ಆವಿನ ಹಾಲು ಸೇವಿಸಿ, ಪಥ್ಯವ ಮಾಡೆಂದು
ಗೊಲ್ಲನು ಪೇಳಿದನು.
ಇಂತೀ ಕ್ರಮದಲ್ಲಿ ಪಥ್ಯವ ಮಾಡಿದವರಿಗೆ
ರೋಗಾದಿಗಳ ಬಾಧೆ ಪಲಾಯನವಾಗುವದು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./112
ಎನ್ನ ಕಾಳಿಯ ಧ್ವನಿಕೇಳಿ ಬ್ರಹ್ಮ ಬೆದರಿದ,
ವಿಷ್ಣು ಹೆದರಿದ, ರುದ್ರ ಲೆಕ್ಕಮರೆದು ಸುಮ್ಮನಿರ್ದ,
ದೇವತೆಗಳು ನೇಮದ ಕಟ್ಟಳೆಯನಳಿದು ಭ್ರಷ್ಟರಾದರು.
ಈ ಪರಿಯಲ್ಲಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./113
ಎನ್ನ ತಾಯಿ ಹೊಲೆಯನ ಸಂಗವಮಾಡಿ
ಎನ್ನ ಹಡದು ಊರಲ್ಲಿಟ್ಟಳು.
ಆ ಊರಿಗೆ ಒಡೆಯನಾಗಿ
ತಲೆಯಿಲ್ಲದ ಸ್ತ್ರೀಸಮ್ಮೇಳನದಲ್ಲಿರುತ್ತಿರಲು,
ಎನ್ನ ಕುಲದವರು ಬಂದು
ಈ ಊರವ ನೀನಲ್ಲ, ಹೊಲೆಯನೆಂದು ಪೇಳಿದಾಕ್ಷಣವೆ
ತಲೆಯಿಲ್ಲದ ಸ್ತ್ರೀಯ ಕೊಂದು,
ಊರ ಸುಟ್ಟು ಮನುಜರ ಬಿಟ್ಟು,
ಕುಲದವರ ಕೂಡಿ ಕಾಯಕವ ಮಾಡುತಿರ್ದರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /114
ಎನ್ನ ಮನದಲ್ಲಿ ನೀ ಹುಟ್ಟಿ, ನಿನ್ನ ಕರದಲ್ಲಿ ನಾ ಹುಟ್ಟಿ,
ಉಭಯರು ಕೂಡಲಿಕ್ಕೆ
ಎನಗೊಂದು, ನಿನಗೆ ಮೂರು ಮಕ್ಕಳು ಹುಟ್ಟಿ,
ನಾ ಬರುವಾಗ ನಿನ್ನ ಮಕ್ಕಳ ಮೂವರನು
ಒಬ್ಬನ ಮರ್ತ್ಯಲೋಕದಲ್ಲಿಟ್ಟೆ,
ಒಬ್ಬನ ಪಾತಾಳಲೋಕದಲ್ಲಿಟ್ಟೆ,
ಒಬ್ಬನ ಸ್ವರ್ಗಲೋಕದಲ್ಲಿಟ್ಟೆ.
ಇಂತೀ ಮೂವರನು ಮೂರುಲೋಕದಲ್ಲಿಟ್ಟು
ನಾ ನನ್ನ ಮಗನ ಸಂಗವ ಮಾಡಿ,
ಸತ್ತು ಮುತ್ತೈದೆಯಾಗಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./115
ಎಮ್ಮ ಶಿವಗಣಂಗಳು ಕಲ್ಯಾಣಪುರದಲ್ಲಿ
ಇಂತಪ್ಪ ಕಾಮಾಟದಿಂದ ಕಾಯಕವ ಮಾಡಿ
ಜಂಗಮಾರ್ಚನೆ ಮಾಡುತ್ತಿರ್ದರಲ್ಲದೆ,
ಲೌಕಿಕರ ಹಾಗೆ ಮಣ್ಣು ಕಲ್ಲಿನ ಕಾಮಾಟವ ಮಾಡಿ
ನಾಲ್ಕು ಹಾಗದ ಕಾಂಚನವ ತಂದು,
ಗುರು-ಲಿಂಗ-ಜಂಗಮಕ್ಕೆ ಭಿನ್ನವಿಟ್ಟು ಅರ್ಚಿಸಿ,
ಫಲಪದವ ಪಡವರೆ, ಇಲ್ಲೆಂಬ ಹಾಗೆ.
ಮತ್ತಂ, ಒಂದು ಸಮಯದಲ್ಲಿ
ಮಾಡಿದಡೆಯೂ ಮಾಡುವರು.
ಮಾಡಿದಡೆಯೂ ಜ್ಞಾನಕ್ಕೆ ಹಾನಿ ಇಲ್ಲ, ದೋಷವಿಲ್ಲ.
ಅದೆಂತೆಂದಡೆ : ಶಿವಕೃಪೆಯಿಂ ದೇಹವ ತಾಳಿ
ಮರ್ತ್ಯಲೋಕಕ್ಕೆ ಬಂದ ಮೇಲೆ,
ಆ ದೇಹದಲ್ಲಿರುವ ಪರಿಯಂತರದಲ್ಲಿ
ಅನ್ನ ಉದಕ ವಸ್ತ್ರದಿಂದ ದೇಹವ ರಕ್ಷಿಸಬೇಕಲ್ಲದೆ,
ಆ ಅನ್ನ ಉದಕ ವಸ್ತ್ರದಿಂದ ದೇಹದ ಶೋಷಣವ ಮಾಡಲಾಗದು,
ಮಾಡಿದಡೆ ಜ್ಞಾನಕ್ಕೆ ಹಾನಿ.
ಅದೇನು ಕಾರಣವೆಂದಡೆ: ಅಂತಪ್ಪ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ
ಸುಖಿಸಿದಡೆ ಜ್ಞಾನಕ್ಕೆ ಹಾನಿ.
ಹೀಗೆಂದರೆಂದು ಆ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ
ಶೋಷಣೆಯ ಮಾಡಿದಡೆಯು ಜ್ಞಾನಕ್ಕೆ ಹಾನಿ.
ಈ ಉಭಯ ಭೇದವ ತಿಳಿದು ಆ ದೇಹ ನಿಮಿತ್ಯವಾಗಿ
ಪ್ರಪಂಚವ ಮಾಡುವರಲ್ಲದೆ
ಇಂದಿಂಗೆಂತು ನಾಳಿಂಗೆಂತು ಎಂದು ಹೆಂಡರು ಮಕ್ಕಳುಪಾದಿಯ ಪಿಡಿದು
ಮಾಡುವರೆ ? ಮಾಡುವರಲ್ಲ.
ಈ ನಿರ್ಣಯವನು ಶಿವಜ್ಞಾನಶರಣರೇ ಬಲ್ಲರಲ್ಲದೆ,
ಈ ಲೋಕದ ಜಡಮತಿಗಳೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./116
ಎಮ್ಮ ಶಿವಶರಣರ ಪ್ರಸಾದವಿವರ ಎಂತೆಂದಡೆ :
ಶುದ್ಧಪ್ರಸಾದಸ್ವರೂಪವಾದ ಸದ್ರೂಪಾಚಾರ್ಯನನು
ತನುವಿನಲ್ಲಿ ಸ್ವಾಯತವ ಮಾಡಿ,
ಆ ತನುಪ್ರಕೃತಿ ಆ ಗುರುವಿನಲ್ಲಿ ನಷ್ಟವಾದುದೆ ಅಚ್ಚಪ್ರಸಾದ.
ಸಿದ್ಧಪ್ರಸಾದಸ್ವರೂಪವಾದ ಚಿದ್ರೂಪಲಿಂಗವನು
ಮನದಲ್ಲಿ ಸ್ವಾಯತವ ಮಾಡಿ,
ಆ ಮನೋಪ್ರಕೃತಿ ಆ ಲಿಂಗದಲ್ಲಿ ನಷ್ಟವಾದುದೆ ನಿಚ್ಚಪ್ರಸಾದ.
ಸಿದ್ಧಪ್ರಸಾದಸ್ವರೂಪವಾದ ಪರಮಾನಂದ ಜಂಗಮವನು
ಆತ್ಮದಲ್ಲಿ ಸ್ವಾಯತವ ಮಾಡಿ,
ಆತ್ಮಪ್ರಕೃತಿ ಆ ಜಂಗಮದಲ್ಲಿ ನಷ್ಟವಾದುದೇ ಸಮಯಪ್ರಸಾದ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದತ್ರಯದ
ಏಕಸ್ವರೂಪವಾದ ಮಹಾಪ್ರಸಾದ,
ಅಂತಪ್ಪ ಮಹಾಪ್ರಸಾದಸ್ವರೂಪವಾದ
ಘನಮಹಾಲಿಂಗವು.
ಆ ಘನ ಮಹಾಲಿಂಗವನು
ಅಪಾದ ಮಸ್ತಕ ಪರಿಯಂತರವಾಗಿ,
ಸರ್ವಾಂಗದಲ್ಲಿ ಸ್ವಾಯತವ ಮಾಡಿ
ಆ ಲಿಂಗಪ್ರಕಾಶದಲ್ಲಿ ಸರ್ವಾಂಗದ ಪ್ರಕೃತಿ ನಷ್ಟವಾಗಿ,
ಅಂತಪ್ಪ ಘನಮಹಾಲಿಂಗದೇಕಸ್ವರೂಪ
ತಾನಾದುದೇ ಏಕಪ್ರಾಸದ.
ಇಂತೀ ನಾಲ್ಕುತರದ ಪ್ರಸಾದವ ಕೊಂಡವರು ಆರೆಂದಡೆ : ಹಿಂದಕ್ಕೆ ಕಲ್ಯಾಣಪುರದಲ್ಲಿ ಬಸವಾದಿ ಪ್ರಭುದೇವರಾಂತ್ಯಮಾದ
ಏಳುನೂರೆಪ್ಪತ್ತು ಪ್ರಮಥಗಣಂಗಳು,
ಇನ್ನು ಮುಂದೆ ಶಿವಜ್ಞಾನೋದಯವಾಗಿ
ಶ್ರೀಗುರುಕಾರುಣ್ಯವ ಪಡೆದು,
ಲಿಂಗಾಂಗಸಂಬಂಧಿಗಳಾದ ಶಿವಶರಣರಿಗೆ
ಇದೇ ಪ್ರಸಾದವು ನೋಡೆಂದನಯ್ಯಾ
ನಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./117
ಎಮ್ಮಿಯ ಕೊಂದು ಹಾಲು ಕರದು,
ಗಡಿಗೆಯನೊಡೆದು ಹಾಲು ತುಂಬಿ,
ಮಾರಬಲ್ಲಾತನೇ ಗೊಲ್ಲರ ನಾಗಣ್ಣನೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./118
ಎಮ್ಮೆ ಕೋಣನ ಚರ್ಮವ ತೆಗೆದು,
ಸುಣ್ಣವಿಲ್ಲದೆ ಆಕಾಶದ ರಂಜಣಿಗಿಯಲಿಕ್ಕಲು
ಮೂರಾರಕ್ಕೆ ಹದ ಬಂದು,
ಒಳ ಅಟ್ಟೆಗೆ ಮೂರುಹೊಲಿಗೆ, ಹೊರ ಅಟ್ಟೆಗೆ ಆರುಹೊಲಿಗೆ,
ಉಂಗುಷ್ಠಕ್ಕೆ ಸೂರ್ಯನ ಹೊಲಿಗೆ,
ಚಂಡಿಕೆಗೆ ಚಂದ್ರನಹೊಲಿಗೆ, ಹಿಮ್ಮಡಕ್ಕೆ ಅಗ್ನಿಯಹೊಲಿಗೆ,
ಶತವೊಂದು ಬಾರ ಬಂಧಿಸಿದ ಮೆಟ್ಟು
ಹಣವ ಕೊಟ್ಟೊಡೆ ಕೊಡೆ, ಮಲವ ಕೊಟ್ಟೊಡೆ ಕೊಟ್ಟು
ಕಾಯಕವ ಮಾಡುತಿರ್ದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./119
ಎರಕದ ಭಾಂಡಕ್ಕೆ ತೂಕಿಲ್ಲ, ಹಣವಿಲ್ಲ.
ಚಕ್ಕಿಯ ಭಾಂಡಕ್ಕೆ ತೂಕುಂಟು ಹಣವುಂಟು.
ಎರಕದ ಭಾಂಡವ ಕೊಂಡವರು ಹೊರಕೇರಿಯವರು.
ಮಿಕ್ಕಾದ ಚಕ್ಕಿಯ ಭಾಂಡವ ಕೊಂಡವರು ಗ್ರಾಮದವರು.
ಎರಡಿಲ್ಲದೆ ಕೊಂಬವರು ಲಿಂಗೈಕ್ಯರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./120
ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ.
ಆ ಪಟ್ಟಣಕ್ಕೆ ಒಡೆಯನಾದ ನಿರಂಜನನೆಂಬ ರಾಜನು
ಸಂಗವಿಲ್ಲದ ಸ್ತ್ರೀಸಂಯೋಗದಿಂ ಶಿಶುವ ಪಡೆದು,
ಆ ಶಿಶು ತಂಗಿಯನೊಡಗೂಡಿ
ಪಂಚಮುಖವುಳ್ಳಾತನ ಪಡೆದು,
ಆ ಪುತ್ರನ ಮಮಕಾರಶಕ್ತಿಯಿಂದ ಮೂವರು ಪುಟ್ಟಿದರು.
ಆ ಮೂವರು ಮೂರುಪುರವ ನಿರ್ಮಿಸಿದರು.
ಆ ಮೂರುಪುರ ಈರೈದು ನಾಲ್ಕು ದೇಶ,
ಆ ದೇಶದಲ್ಲಿ ಎರಡು ಕುಲ, ಎಂಬತ್ತುನಾಲ್ಕು ಕುಲವಾಯಿತ್ತು.
ಇಂತೀ ಎಲ್ಲವು ಯಾತರಿಂದಾಯಿತ್ತೆಂದರಿದು ಅದ ನುಂಗಿ
ತಾನಳಿದುಳಿದು ಇರ್ಪಾತನೇ ಶರಣ.
ಅಂಗಲಿಂಗಸಂಬಂಧಿ ಸರ್ವಾಂಗಲಿಂಗಿಯೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./121
ಎರಡು ಕೊಟ್ಟು ಒಂದು ಕೊಂಡೆ,
ಒಂದು ಕೊಟ್ಟು ಏನೂ ಕೊಳ್ಳಲಿಲ್ಲ.
ಮೂರುಹಣವ ಕೊಟ್ಟು ಮೂರುರತ್ನವ ಕೊಂಡೆ.
ಮೂರು ಕೊಂದು ಆರುಮಂದಿಗೆ ಹೇಳದೆ
ಏಳರಲ್ಲಿ ಸತ್ತು ಸಂಸಾರ ಮಾಡುತಿರ್ದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./122
ಎರಡುಗಾಲಿಯ ಬಂಡಿಯ ಮುರಿದು
ಮೂರುಗಾಲಿಯ ಬಂಡಿಯ ಹೂಡಿ,
ಮೂಗೇಣ ಬಿಟ್ಟು, ಮೂಯೆತ್ತ ಕಟ್ಟಿ,
ಭೂಮಿಲ್ಲದಾರಣ್ಯ ಬೆಟ್ಟದ ಕಲ್ಲ ಬಂಡಿತುಂಬ ತುಂಬಿತಂದು
ಬೇಡಿದವರಿಗೆ ಕಲ್ಲ ಕೊಡೆ, ಬೇಡದವರಿಗೆ ಕಲ್ಲ ಹಾಕಿ,
ಹಾಗದ ರೊಕ್ಕವ ಕೊಂಡು, ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./123
ಏಕ ಪಾವುಮೇ ಶತಯೇಕ ಪಾವು ಗಈಬಾ.
ಏಕ ಪಾಣಿಮೆ ಛೇ ದಸ್ ಕೋಟಿ ಪಾಣಿ ಗಈಬಾ.
ಏಕ ಪಾವು ಜಾಗಾಮೇ ತೇಶತ ಛೇ ದಸ್ ಕೋಟಿ ಪುನ್ ಜಾಗಾ ಗಈಬಾ.
ಅಲ್ಲಾಕು ಖಬರ ಸಹಿದರ ಸುಂತಿಕು ಬಂಮನ ಬಲಾ ಆದ್ಮಿಕು ಜಾನತಾಹೈ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./124
ಏಳು ತೊಲೆಗೆ ನಾಲ್ಕು ಬೋದು, ಎಂಟು ಕಂಬ,
ಆರು ಬಿಗಿಜಂತಿ.
ಮೂರು ಕೋಣೆಗೆ ಒಂಬತ್ತು ಬಾಗಿಲ,
ಒಂದು ಕವಾಡ, ಎರಡು ಕುಲ್ಪಿ.
ಇಂತೀ ಅಲುಕುಮಲಕಿನ ಅರಮನೆಯಲ್ಲಿ
ಪಸುರುಕುಪ್ಪುಸ ಹಳದಿ ಶಾಲಿಯನುಟ್ಟು
ಕಾಲು ಮೇಲಾಗಿ, ತಲೆ ಕೆಳಗಾಗಿ
ಚಿತ್ರಾಂಗನೆಯೆಂಬ ವೇಶ್ಯಾಂಗನೆ ನಡದಾಡುತಿರ್ಪಳು.
ಶ್ರೀಗುರುಚೆನ್ನಮಲ್ಲಯ್ಯನ ಕೂಡಬೇಕೆಂಬಣ್ಣಗಳ
ಎರಡು ಬಟ್ಟೆಯಲ್ಲಿ ನಿಂದು ಕಣ್ಣುಸೊನ್ನೆಯ ಮಾಡಿ
ಕರವುತಿರ್ಪಳು ನೋಡಾ.
ಅಷ್ಟರಲ್ಲಿಯೇ ಕುಪ್ಪುಸ ಕಳೆದು ಶಾಲಿಯ ಹರಿದು
ತಲೆಯ ಮೇಲಕ್ಕೆ ಕಾಲು ಕೆಳಯಕ್ಕೆ ಮಾಡಿ
ಸೂತಕಾಗ್ನಿಯಂ ಬಿಟ್ಟು ಸೂತಕ ಇಲ್ಲದ ಅಗ್ನಿಯಿಂದ
ಚಿತ್ರಾಂಗನೆಯೆಂಬ ವೇಶ್ಯಾಂಗನೆಯ ಮನೆಯಲ್ಲಿ ಸುಟ್ಟು
ಎರಡು ಬಟ್ಟೆಯ ಮೆಟ್ಟಿ, ನಟ್ಟನಡುವಿನ ಬಟ್ಟೆಯ ಪಿಡಿದು,
ಶ್ರೀಗಿರಿಚೆನ್ನಮಲ್ಲಯ್ಯನಲ್ಲಿಗೆ ಹೊಗಬಲ್ಲರೆ
ಆತನೇ ಅಸುಲಿಂಗಸಂಬಂಧಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./125
ಏಳುಕೊಳ್ಳದ ಕಲ್ಲು ತಂದು,
ವಜ್ರಸುತ್ತಿಗೆಯಿಂದ ಒಡೆದು,
ಮಣ್ಣಿಗೊಂದು ಕಲ್ಲು, ನೀರಿಗೊಂದು ಕಲ್ಲು ಹಾಕಿ,
ಚೌಷಷ್ಠಿಯ ಸಂಬಂಧಿಸಿದೆ.
ಅಗ್ನಿಗೊಂದು ಕಲ್ಲು, ಗಾಳಿಗೊಂದು ಕಲ್ಲು ಹಾಕಿ,
ರಂಗವಲ್ಲಿಯ ರಚಿಸಿದೆ.
ಅಂಬರಕೊಂದು ಕಲ್ಲು, ಬಯಲಿಗೊಂದು ಕಲ್ಲು ಹಾಕಿ,
ಕೋಣೆಯ ಬಂಧಿಸಿದೆ.
ಮೂರು ಕಲ್ಲು ಮೂರಕ್ಕೆ ಹಾಕಿ
ಉಳಿದ ಚೀಪುಗಲ್ಲು ಸಂದುಸಂದಿಗೆ ಬಂಧಿಸಿ,
ಮನೆಯ ಕಟ್ಟಿ ಕಾಯಕವ ಮಾಡುವೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./126
ಒಂದನೆಯ ಗಾಳಕ್ಕೆ ಬ್ರಹ್ಮನ ಕೆಡವಿದೆ.
ಎರಡನೆಯ ಗಾಳಕ್ಕೆ ವಿಷ್ಣುವಿನ ಕೆಡವಿದೆ.
ಮೂರನೆಯ ಗಾಳಕ್ಕೆ ರುದ್ರನ ಕೆಡವಿದೆ.
ಮಿಕ್ಕಾದ ಗಾಳದಿಂ ಹಲವು ದೇವತೆಗಳ ಕೆಡವಿದೆ.
ಒಂದು ಗಾಳದಿಂದ ನಾ ಸತ್ತು
ಕಾಯಕವ ಮಾಡುತ್ತಿರ್ಪೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./127
ಒಂದು ಅಚ್ಚಿಗೆ ನಾಲ್ಕು ಗಾಲಿ, ಒಂದೇ ಕೀಲು.
ಎಂಟು ಕಂಬದ ಮಂಟಪದಲ್ಲಿ ಮಂಚದಮೇಲೆ
ಜಗನ್ಮೋಹಿನಿಯೆಂಬ ಸ್ತ್ರೀ ಇರುವಳು.
ಆ ಸ್ತ್ರೀಯಳ ಮಸ್ತಕದ ಮೇಲೊಂದು
ನವರತ್ನಯುಕ್ತವಾದ ವಜ್ರದ ಪೆಟ್ಟಿಗೆಯಲ್ಲಿ
ಬೆಲೆಯಿಲ್ಲದ ಒಂದು ಮಾಣಿಕ ಇರುವುದು.
ಆ ಮಾಣಿಕಕ್ಕೆ ಇಬ್ಬರು ಹೆಣಗಾಡುತಿರ್ಪರು.
ಅವರ ಹೆಣಗಾಟವ ಕಂಡು
ಅತ್ತಣ ಊರಿಂದ ಒಬ್ಬ ಪುರುಷ ಬಂದು,
ನಾಲ್ಕು ಗಾಲಿಯ ತುಂಡಿಸಿ, ಕೀಲನುಚ್ಚಿ, ಅಚ್ಚು ಮುರಿದು,
ಅಷ್ಟಕಂಬದ ಮಂಟಪವ ಕೆಡಿಸಿ, ಮಂಚವ ಮೆಟ್ಟಿ,
ಆ ಜಗನ್ಮೋಹಿನಿಯೆಂಬ ಸ್ತ್ರೀಯಳ ಕೈಕಾಲುತಲೆಹೊಡೆದು
ಆ ಪೆಟ್ಟಿಗೆಯೊಳಗಣ ಮಾಣಿಕವ ತಕ್ಕೊಳ್ಳಬಲ್ಲರೆ
ಆತನೇ ಅಸುಲಿಂಗಸಂಬಂಧಿ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./128
ಒಂದು ಕೊಟ್ಟು ಎರಡು ಕೊಂಡು,
ಎರಡು ಕೊಟ್ಟು ಮೂರು ಕೊಂಡು,
ಎರಡು ತಲೆಯುಳ್ಳ ಸ್ತ್ರೀಸಂಗದಲ್ಲಿ
ಲೋಕಾದಿಲೋಕಂಗಳು ಸಂಸಾರಮಾಡುತ್ತಿರ್ಪವು.
ಇಂತಪ್ಪ ಸಂಸಾರಮಾಡುವನಲ್ಲ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./129
ಒಂದು ಕ್ಷೇತ್ರಕ್ಕೆ ಹೋಗಿ
ಬ್ರಹ್ಮಲೋಕವ ದಾನವ ಕೊಟ್ಟೆ.
ಎರಡನೆಯ ಕ್ಷೇತ್ರಕ್ಕೆ ಹೋಗಿ
ವಿಷ್ಣುಲೋಕವ ದಾನವ ಕೊಟ್ಟೆ,
ಮೂರನೆಯ ಕ್ಷೇತ್ರಕ್ಕೆ ಹೋಗಿ
ರುದ್ರಲೋಕವ ದಾನವ ಕೊಟ್ಟೆ,
ನಾಲ್ಕನೆಯ ಕ್ಷೇತ್ರಕ್ಕೆ ಹೋಗಿ
ಈಶ್ವರಲೋಕವ ದಾನವ ಕೊಟ್ಟೆ.
ಐದನೆಯ ಕ್ಷೇತ್ರಕ್ಕೆ ಹೋಗಿ
ಸದಾಶಿವಲೋಕವ ದಾನವ ಕೊಟ್ಟೆ,
ಆರನೆಯ ಕ್ಷೇತ್ರಕ್ಕೆ ಹೋಗಿ
ಶಿವಲೋಕವ ದಾನವ ಕೊಟ್ಟೆ,
ಏಳನೆಯ ಕ್ಷೇತ್ರಕ್ಕೆ ಹೋಗಿ
ಮರ್ತ್ಯಲೋಕವ ದಾನವ ಕೊಟ್ಟೆ.
ಎಂಟನೆಯ ಕ್ಷೇತ್ರಕ್ಕೆ ಹೋಗಿ
ಸ್ವರ್ಗಲೋಕವ ದಾನವ ಕೊಟ್ಟೆ,
ಒಂಬತ್ತನೆಯ ಕ್ಷೇತ್ರಕ್ಕೆ ಹೋಗಿ
ಪಾತಾಳಲೋಕವ ದಾನವ ಕೊಟ್ಟೆ,
ದಶ ಕ್ಷೇತ್ರಕ್ಕೆ ಹೋಗಿ
ಚತುರ್ದಶಭುವನ ದಾನವ ಕೊಟ್ಟೆ.
ನಾ ಸತ್ತು ಬದುಕಿದವರ ಹೊತ್ತು ಕಾಯಕವ ಮಾಡುತಿರ್ದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./130
ಒಂದು ಜಡಿಯ ಬಿಚ್ಚಿ ಸಹಸ್ರ ಹುರಿಗೂಡಿದ ಒಂದು ಹಗ್ಗ.
ಮೂರು ಹುರಿಗೂಡಿದ ಒಂದು ಹಗ್ಗ.
ಒಂದು ಹುರಿಗೂಡಿದ ಒಂದು ಹಗ್ಗ.
ನಾಲ್ಕು ಹುರಿಗೂಡಿದ ಒಂದು ಹಗ್ಗ.
ಆರು ಹುರಿಗೂಡಿದ ಒಂದು ಹಗ್ಗ.
ಹತ್ತು ಹುರಿಗೂಡಿದ ಒಂದು ಹಗ್ಗ.
ದ್ವಾದಶ ಹುರಿಗೂಡಿದ ಒಂದು ಹಗ್ಗ.
ಷೋಡಶ ಹುರಿಗೂಡಿದ ಒಂದು ಹಗ್ಗ.
ಎರಡು ಹುರಿಗೂಡಿದ ಒಂದು ಹಗ್ಗ.
ಇಂತೀ ಹುರಿಗೂಡಿದ ಹಗ್ಗ ಮೊದಲಾದ
ಅನೇಕ ಹುರಿಗೂಡಿದ ಒಂದು ಅಖಂಡ ಹಗ್ಗವಮಾಡಿ,
ನಾಲ್ಕು ಹುರಿ ಹಗ್ಗದಿಂ ಬ್ರಹ್ಮನ ಕಟ್ಟಿ,
ಷಡುಹುರಿ ಹಗ್ಗದಿಂ ವಿಷ್ಣುವಿನ ಕಟ್ಟಿ,
ದಶಹುರಿ ಹಗ್ಗದಿಂ ರುದ್ರನ ಕಟ್ಟಿ,
ದ್ವಾದಶಹುರಿ ಹಗ್ಗದಿಂ ಈಶ್ವರನ ಕಟ್ಟಿ,
ಷೋಡಶಹುರಿ ಹಗ್ಗದಿಂ ಸದಾಶಿವನ ಕಟ್ಟಿ,
ದ್ವಿಹುರಿ ಹಗ್ಗದಿಂ ಶಿವನ ಕಟ್ಟಿ,
ಸಹಸ್ರ ಹುರಿಹಗ್ಗದಿಂ ಮರ್ತ್ಯದರಸನ ಕಟ್ಟಿ,
ಮೂರು ಹುರಿಹಗ್ಗದಿಂ ಸ್ವರ್ಗಲೋಕದರಸನ ಕಟ್ಟಿ,
ಒಂದು ಹುರಿಹಗ್ಗದಿಂ ಪಾತಾಳಲೋಕದರಸನ ಕಟ್ಟಿ,
ಅನಂತ ಹುರಿಗೂಡಿದ ಅಖಂಡ ಹಗ್ಗದಿಂ
ಚತುರ್ದಶಭುವನಯುಕ್ತವಾದ ಬ್ರಹ್ಮಾಂಡವ ಕಟ್ಟಿ,
ಕಾಯಕವ ಮಾಡುತಿರ್ದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
ಈ ಭೇದವ ಬಲ್ಲವರು ಲಿಂಗಸಂಬಂಧಿಗಳು
ಈ ಭೇದವ ತಿಳಿಯದವರು ಅಂಗಸಂಬಂಧಿಗಳು./131
ಒಂದು ಜನ್ಮದಲ್ಲಿ ನಿನ್ನ
ಕಲ್ಲದೇವರ ಮಾಡಿ ಪೂಜಿಸಿ,
ಜೋಗಿ, ಜಂಗಮ, ಗೊರವನಾಗಿ ಪುಟ್ಟಿದೆ.
ಒಂದು ಜನ್ಮದಲ್ಲಿ ನಿನ್ನ
ಕಟ್ಟಿಗೆದೇವರ ಮಾಡಿ ಪೂಜಿಸಿ
ಬಡಗಿ ಕಂಬಾರನಾಗಿ ಪುಟ್ಟಿದೆ.
ಒಂದು ಜನ್ಮದಲ್ಲಿ ನಿನ್ನ
ಮಣ್ಣುದೇವರ ಮಾಡಿ ಪೂಜಿಸಿ,
ಬಾರಿಕ ತಳವಾರನಾಗಿ ಪುಟ್ಟಿದೆ.
ಒಂದು ಜನ್ಮದಲ್ಲಿ ನಿನ್ನ
ನೀರದೇವರ ಮಾಡಿ ಪೂಜಿಸಿ, ವಿಪ್ರನಾಗಿ ಪುಟ್ಟಿದೆ.
ಒಂದು ಜನ್ಮದಲ್ಲಿ ನಿನ್ನ
ಬೆಂಕಿಯ ದೇವರೆಂದು ಮಾಡಿ ಪೂಜಿಸಿ,
ವಿಪ್ರಾಚಾರ್ಯನಾಗಿ ಪುಟ್ಟಿದೆ,
ಇಂತಿವೆಲ್ಲವನು ನೀನೆಂದು ಭಾವಿಸಿ ಪೂಜಿಸುವಲ್ಲಿ,
ಇಂತೀ ಭವದಲ್ಲಿ ನಾನು ಪುಟ್ಟಿದೆ.
ಇಂತೀ ಜಡಸ್ವರೂಪ ನೀನಲ್ಲ,
ನೀನು ನಿರಾಳ ನಿಃಶೂನ್ಯ ನಿರಾಕಾರನೆಂದು
ಎನ್ನ ಕರಸ್ಥಲದಲ್ಲಿ ಅರಿದು ಪೂಜಿಸಿ
ಸಕಲಕುಲದವರಿಗೆ ಹೊರತಾಗಿ
ಕುಲಗೆಟ್ಟು ನಾನಾವಜನ್ಮಕ್ಕೆ ಹೊದೆನೆಂದರಿಯೆನಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./132
ಒಂದು ಟಗರು ಮೂರು ಸೊನ್ನಿಗೆ ಹತವಾಗಿ,
ಒಂದು ಟಗರು ಆರು ಸೊನ್ನಿಗೆ ಹತವಾಗಿ,
ಒಂದು ಟಗರು ಅನೇಕ ಸೊನ್ನಿಗೆ ಹತವಾಗಿ,
ನಾ ಸತ್ತು ಟಗರ ಸೊನ್ನೆಯನುಳ್ಳವರು
ಅತ್ತಯಿಲ್ಲದವರು ಇತ್ತೆಂದು ಮುಂಡಿಗೆಯ ಹಾಕಿದೆನು
ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./133
ಒಕ್ಕಲಿಗನ ಸಂಗದಲ್ಲಿದ್ದವರಿಗೆ ಬಡತನವಿಲ್ಲ.
ಕೂಲಿಮನುಜರ ಸಂಗದಲ್ಲಿದ್ದವರಿಗೆ ದ್ರವ್ಯ ತಾನಿಲ್ಲ.
ಒಕ್ಕಲಿಗನ ಸಂಗದಲ್ಲಿದ್ದವರಿಗೆ ಸಾವಿಲ್ಲ.
ಕೂಲಿಮನುಜರ ಸಂಗದಲ್ಲಿದ್ದವರಿಗೆ ಸಾವುಂಟು
ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./134
ಒಬ್ಬ ಪುರುಷಂಗೆ ಮೂವರು ಸಸ್ತ್ರೀಯರು.
ಒಬ್ಬ ಸ್ತ್ರೀಗೆ ಮೂವರು ಪುರುಷರು.
ಒಬ್ಬ ಕಂಗಳ, ಒಬ್ಬ ಮೂಕ, ಒಬ್ಬ ಹೆಳವ,
ಇಂತೀ ಮೂವರ ಗಂಡರ ಆಳಾಪದಿಂದಿರಲು
ಅಷ್ಟರಲ್ಲಿಯೇ ಪೂರ್ವದ ಪುರುಷನು ಬಂದು
ಕಂಗಳಪುರುಷನ ಮರ್ತ್ಯದಲ್ಲಿಟ್ಟು,
ಮೂಕ ಪುರುಷನ ಸ್ವರ್ಗದಲ್ಲಿಟ್ಟು,
ಹೆಳವ ಪುರುಷನ ಪಾತಾಳದಲ್ಲಿಟ್ಟು,
ಶಾಲಿಕುಪ್ಪುಸ ಕಳೆದು ಎನ್ನ ಅಪ್ಪಲೊಡನೆ
ಅವನಂಗದಲ್ಲಿ ಅಡಗಿ ಎತ್ತ ಹೋದೆನೆಂಬುದ
ಪತಿವ್ರತಾಸ್ತ್ರೀಯರು ಬಲ್ಲರಲ್ಲದೆ
ಹಾದರಮಾಡುವ ಸ್ತ್ರೀಯರು ಅರಿಯರು ನೋಡಾ!
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./135
ಒಬ್ಬನ ಮಾತಕೊಟ್ಟು ಬಾಹ್ಯದಲ್ಲಿಟ್ಟು ಕೊಂದೆ.
ಒಬ್ಬನ ಗುಪ್ತಭಾಷೆಯಕೊಟ್ಟು ಅಂತರಂಗದಲ್ಲಿಟ್ಟು ಕೊಂದೆ.
ಒಬ್ಬನ ಮೌನಭಾಷೆಯಕೊಟ್ಟು ಆಕಾಶದಲ್ಲಿಟ್ಟು ಕೊಂದೆ.
ಒಬ್ಬ ಅಧಮನಿಗೆ ತಪ್ಪದೆ ಭಾಷೆಯಕೊಟ್ಟು ಒಳಗಾಗಿ
ಹಾದರವನಾಡಿ ಕಾಯಕದಲ್ಲಿರ್ಪೆನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./136
ಒಮ್ಮನದ ಯೋನಿಯಲ್ಲಿ ಪುಟ್ಟಿದವರು
ಮನೆಯೊಳಗೆ ಕಂಡು ಲಯವಾದರು ಹೊರಗೆ ಕಾಣಲಿಲ್ಲ.
ಇಮ್ಮನದ ಯೋನಿಯಲ್ಲಿ ಹುಟ್ಟಿದವರು
ಮನೆಯೊಳಗೆ ಕಾಣದೆ ಬಾಹ್ಯದಲ್ಲಿ ಕಂಡು
ಲಯವಾಗಿ ಪೋದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./137
ಒಮ್ಮನದವರಿಗೆ ಹಣವಿಲ್ಲ;
ಇಮ್ಮನದವರಿಗೆ ಹಣವುಂಟು.
ಇಮ್ಮನ ಸುಟ್ಟು, ಒಮ್ಮನ ನುಂಗಿ ಬಂದವರು
ಮರಳಿಬಾರದೆ ಪೋದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./138
ಒಳ್ಳೆ ಪದಾರ್ಥಬಂದಡೆ ನೀಡೆಂಬಿರಿ,
ಕೀಳುಪದಾರ್ಥಬಂದಡೆ ಬೇಡೆಂಬಿರಿ.
ಕಮ್ಮಾದರೆ ನೀಡೆಂಬಿರಿ,
ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ.
ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ,
ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ.
ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ
ಆರೂ ಅರಿಯದ ಹಾಗೆ ತೆಗೆದು ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ.
ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ
ಪರಶಿವಪ್ರಸಾದಿಗಳಾದ ಶಿವಶರಣರು
ಊರ ಸೂಳೆಯರ ಹಾಟಹೊಯಿಸಿ ತಲೆಯಬೋಳಿಸಿ ಪಟ್ಟಿಯ ತೆಗೆದು
ಅವರ ಎಡಗಾಲಕೆರ್ಪಿನಿಂದ ಘಟ್ಟಿಸಿ
ಮೂಡಲದಿಕ್ಕಿಗೆ ಅಟ್ಟಿದರು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./139
ಒಳ್ಳೆಯವರ ಸಂಗವ ಮಾಡಿ
ಅವರ ಬಾಯ ತಾಂಬೂಲವ ಸೇವಿಸದೆ,
ಭವಿಗಳ ಸಂಗವ ಮಾಡಿ
ಅವರ ಬಾಯ ತಾಂಬೂಲವ ಸೇವಿಸಿ
ಕಾಯಕದಲ್ಲಿರ್ಪೆನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./140
ಓದಿದರೆ ಓದಬಹುದು ಅಧಮ ಮೂಢರಮುಂದೆ ;
ಅರಸು ಪ್ರಧಾನಿಗಳಾದ ಪುರುಷರ ಮುಂದೆ ಓದಲಾಗದು.
ಕುರುಡನ ಕೈಯೊಳಗೆ ಕನ್ನಡಿಯ ಕೊಟ್ಟರೆ
ನೋಡಬಲ್ಲನೇ ಕಣ್ಣುಳ್ಳವನಲ್ಲದೆ?
ಹುಟ್ಟಿದವರು ಬಲ್ಲರು, ಹುಟ್ಟದವರು ಅರಿಯರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./141
ಔಷಧಿಯ ಕೊಂಡು ಬಿಸಿಹಾಲು ಕುಡಿಯದೆ
ಹಸಿಹಾಲವ ಕುಡಿದು ಮಹಿಷಾಸುರನ ಮಗನಾಗಿರ್ಪರು,
ನಾನು ಔಷಧಿಯ ಕೊಂಡು ಹಸಿಹಾಲು ಕುಡಿಯದೆ
ಬಿಸಿಹಾಲು ಕುಡಿದು ಹಿಂಗಿ ನುಂಗಿ
ಉಸುರದೆ ಕಾಯಕವ ಮಾಡುತ್ತಿರ್ಪೆನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./142
ಕಂಡವರಿಗೆ ಒಂದು, ಕಾಣದವರಿಗೆ ಎರಡು.
ಎರಡಿಲ್ಲದವರಿಗೆ ಆವುದೂ ಇಲ್ಲ.
ಎರಡುಳ್ಳವರಿಗೆ ಹಲವು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./143
ಕಕ್ಷೆ ಕರಸ್ಥಲ ಹೃದಯ ಕಂಠ ಉತ್ತಮಾಂಗ
ಅಮಳೋಕ್ಯವೆಂಬ
ಷಟ್ಸ್ಥಾನದಲ್ಲಿ ಲಿಂಗವ ಧರಿಸಬೇಕೆಂಬರು ವೇಷಧಾರಿಗಳು.
ಅದೆಂತೆಂದೊಡೆ: ಕರಸ್ಥಲದಲ್ಲಿ ಲಿಂಗವ ಧರಿಸುವರೆಲ್ಲ ಸನ್ಯಾಸಿಗಳೆನಿಸುವರು.
ಕಕ್ಷೆಯಲ್ಲಿ ಲಿಂಗವ ಧರಿಸುವರೆಲ್ಲ ಮುಪ್ಪಿನ ಹಿರಿಯರೆನಿಸುವರು.
ಹೃದಯದಲ್ಲಿ ಲಿಂಗವ ಧರಿಸುವರೆಲ್ಲ ಪ್ರೌಢಪತಿಯೆನಿಸುವರು.
ಕಂಠದಲ್ಲಿ ಲಿಂಗವ ಧರಿಸುವರೆಲ್ಲ ಬಾಲಕರೆನಿಸುವರು.
ಉತ್ತಮಾಂಗದಲ್ಲಿ ಲಿಂಗವ ಧರಿಸುವರೆಲ್ಲ ಯತಿಗಳೆನಿಸುವರು.
ಅಮಳೋಕ್ಯದಲ್ಲಿ ಲಿಂಗವ ಧರಿಸುವರೆಲ್ಲ ಸಿದ್ಧರೆನಿಸುವರು.
ಇಂತೀ ಷಡ್ವಿಧಸ್ಥಾನಂಗಳಲ್ಲಿ ಕಲ್ಪಿಸಿ
ಲಿಂಗವ ಧರಿಸುವರೆಲ್ಲ ಷಟ್ಶೈವವಾದಿಗಳು
ಇವರು ಲಿಂಗಧಾರಕರಲ್ಲ;
ಇವರು ಲಿಂಗವೆಂಬ ಲಾಂಛನಧಾರಕರು
ನೋಡೆಂದ ನಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./144
ಕಟ್ಟಿದ ಮನೆ ಬಿಚ್ಚದೆ, ಮಾಡಿದ ಮನೆ ಕೆಡವದೆ,
ಅಟ್ಟನ್ನವನುಣ್ಣದೆ, ಅಡದನ್ನವನುಂಡು,
ಇದ್ದವರಿಗೆ ಹೇಳದೆ, ಹೋದವರ ಕೇಳದೆ
ಇರಬಲ್ಲರೆ ಪ್ರಾಣಲಿಂಗಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/145
ಕಣ್ಣಿಲ್ಲದ ಒಡ್ಡರು ಕಲ್ಲು ತಂದು
ತಲೆಯಿಲ್ಲದವನ ಮನೆಗೆ ಹಾಕಿ,
ಮನೆಯ ಕಟ್ಟದೆ ಕಲ್ಲಕೂಲಿಯ ತೆಗೆದುಕೊಂಡು ಗಮನಿಸಿದರು.
ಅಂತಪ್ಪ ಗೃಹಕ್ಕೆ ನಾನು ತಿಗಟೆಯ ಹೂಡಿ
ಮನೆಯ ಬಿಚ್ಚದೆ ಲೋಮಗುಂಡುವ ಇಳಿಯ ಬಿಟ್ಟು,
ಮೂರುಮೂಲಿಯ ಯಾಸಿಯ ತಿದ್ದಿ,
ಮನೆಯ ಕಟ್ಟಿ ಮದುವೆಯ ಮಾಡಿ
ಸತ್ತು ಕಾಯಕವ ಮಾಡೆಂದು ಪೇಳಿದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./146
ಕತ್ತಲಿಪುರದಲ್ಲಿ ಎತ್ತೆಮ್ಮೆ ಮೈಥುನ ಮಾಡುವದ ಕಂಡೆ.
ಆ ಎಮ್ಮೆಯ ಗರ್ಭದಲ್ಲಿ
ಎಂಬತ್ತುನಾಲ್ಕುಲಕ್ಷ ಎತ್ತು ಪುಟ್ಟುವದ ಕಂಡೆ.
ಹಾಳೂರ ಕೋಳಿ ಕೂಗಲು ಕತ್ತಲಿಪುರ ಬೆಳಕುದೋರಿತ್ತ ಕಂಡೆ.
ಆ ಬೆಳಗಿನೊಳಗೆ ಎತ್ತೆಮ್ಮಿ ಸತ್ತು
ಎಂಬತ್ತುನಾಲ್ಕುಲಕ್ಷ ಎತ್ತೆತ್ತ ಹೋದವೆಂದರಿಯೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /147
ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ
ಮೋಕ್ಷವಾಯಿತು.
ಬೇಂಟೆಗಾರನು ಶುನಿಗಳ ಕೂಡಿಕೊಂಡು ಅರಣ್ಯದಲ್ಲಿ
ಬೇಂಟೆಯನಾಡುವ ಸಮಯದಲ್ಲಿ
ಒಂದು ರುದ್ರಾಕ್ಷಿಯ ಕಂಡು
ತನ್ನ ಶುನಿಗಳಿಗೆ ಗಾದಿಯ ಮಣಿಗಳೆಂದು ಕಟ್ಟಿಬಿಡಲು,
ಆ ಶುನಿಗಳು ಹೋಗಿ ಹಂದಿಯ ಹಿಡಿಯಲು
ಆ ಹಂದಿಗೂ ಆ ಶುನಿಗೂ ಮೋಕ್ಷವಾಯಿತು.
ವೇಶ್ಯಾಂಗನೆಯು ತನ್ನ ವಿನೋದಕ್ಕೆ
ಮರ್ಕಟ ಕುಕ್ಕುಟಂಗೆ ರುದ್ರಾಕ್ಷಿ ಧರಿಸಲು
ಅವಕ್ಕೆ ಮುಂದೆ ಅಂತ್ಯಕಾಲಕ್ಕೆ ಮೋಕ್ಷವಾಯಿತೆಂದು
ವೇದ, ಶ್ರುತಿ, ಪ್ರಮಾಣಗಳಿಂದ ಕೇಳಿ ಜೀವಾತ್ಮರು
ರುದ್ರಾಕ್ಷಿಯ ಧರಿಸುತ್ತಿರ್ದರು
ಕಾಣಾ ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./148
ಕತ್ತೆಯ ಕಟ್ಟದೆ, ಮಡಿಯ ಮುಟ್ಟದೆ,
ಬಿಜ್ಜಳನ ಕಪ್ಪಡದ ಹಣವಕೊಂಡುಣ್ಣದೆ,
ನಾಯಿಯ ಕಟ್ಟಿ, ಮೈಲಿಗೆಯ ಮುಟ್ಟಿ,
ಬಸವನ ಕಪ್ಪಡದ ಹಣವಕೊಂಡುಂಡು,
ಸೂರ್ಯನ ನುಂಗಿ ಸೊಪ್ಪೆಯ ಸುಟ್ಟು,
ಚಂದ್ರನ ನುಂಗಿ ನಡುರಂಗವ ಸುಟ್ಟು,
ಅಗ್ನಿಯ ನುಂಗಿ ಕೋಣೆಯ ಸುಟ್ಟು ಭಸ್ಮವ ಧರಿಸಿ,
ಕಾಯಕವ ಮಾಡುತಿರ್ಪರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ
ನಿರ್ಮಾಯಪ್ರಭುವೆ./149
ಕತ್ತೆಯ ಕಟ್ಟಲಿಲ್ಲಾ, ಕತ್ತೆಯಿಲ್ಲದೆ ಅರಣ್ಯಕ್ಕೆ ಹೋಗಲಿಲ್ಲ.
ಕತ್ತೆಯ ಕಾಲು ಮುರಿದು ಕಣ್ಣು ಕಳೆದು ಅಡವಿಗೆ ಹೋಗಿ,
ಬೇರಿಲ್ಲದೆ ಪುಟ್ಟಿ, ಪರ್ಣ ಶಾಖೆಯಿಲ್ಲದೆ ಪಲ್ಲವಿಸದ
ವೃಕ್ಷದ ಕಟ್ಟಿಗೆಯ ತಂದು
ಮುಪ್ಪುರದರಸುಗಳಿಗೆ ಕೊಟ್ಟು,
ಭಿಕ್ಷವಕೊಂಡು ಆರಿಗೂ ಕೊಡದೆ ಇರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./150
ಕನ್ಯಾಸ್ತ್ರೀಯಳ ಕುಚವ ಪಿಡಿದು,
ಚುಂಬನವ ಮಾಡಿ ಭೋಗಿಸಬಲ್ಲರೆ
ಪರಮಾನಂದಜಂಗಮವೆಂಬೆ.
ಇಲ್ಲಾದರೆ ವೇಷಧಾರಿ ಜಾತಿಕಾರ ಸೂಳೆಮಕ್ಕಳೆಂಬೆ.
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಕೆಡಿಸಿ
ಧೂಪವ ಸುಟ್ಟು, ಪತ್ರಿ ಪುಷ್ಪವ ತಿಂದು,
ಜ್ಯೋತಿಯ ನುಂಗಿ, ಸತ್ತ ಕರವ ತಿಂದು,
ನೀರು ಕುಡಿಯಬಲ್ಲರೆ ಪರಮಚಿದ್ಘನಲಿಂಗವೆಂಬೆ.
ಇಲ್ಲಾದರೆ ತಕ್ಕಡಿಯ ಕಾಣಿಕಲ್ಲು ಕಂಡು ತೂಗುವ ಸೇರುಗಲ್ಲೆಂಬೆ.
ಮಾದಿಗರ ಮನೆಯ ಪದ್ಮಜಾತಿನಿಯೆಂಬ ಕನ್ಯೆಕುಮಾರಿಯ
ಕಳಸ ಕುಚವ ಪಿಡಿದು
ಮುದ್ದುಕೊಟ್ಟು ಕಂಡವ ತಿಂದು ಹೆಂಡವ ಕುಡಿದು ಭೋಗಿಸಿ
ಸಂಗಸುಖದೊಳಗಿರಬಲ್ಲರೆ
ಪರಮಸದ್ರೂಪವಾದಾಚಾರ್ಯನೆಂಬೆ.
ಇಲ್ಲವಾದರೆ ಮೂಕಾರ್ತಿಮೂಳೆಯ ಮಕ್ಕಳೆಂಬೆ.
ಹದ್ದು ಗೂಗಿ ಕಪ್ಪಿ ಇರಿವಿ ಮೊದಲಾದ
ಈ ನಾಲ್ಕು ತಿಂದು ಈಚಲಸೆರೆಯ ಕುಡಿದು,
ಮದವೇರಿದ ಮದಗಜದ ಹಾಗಿರಬಲ್ಲರೆ,
ಪಾದೋದಕ ಪ್ರಸಾದಿಗಳೆಂಬೆ.
ಇಲ್ಲಾದರೆ ಕುಟಿಲ ಕುಹಕ ವೇಷಧಾರಿ ಡೊಂಬತಿಯ ಮಕ್ಕಳೆಂಬೆ.
ಇಂತೀ ಪಂಚಬ್ರಹ್ಮತತ್ವದ ಭೇದವ
ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರಾಂತ್ಯಮಾದ
ಏಳನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರು.
ಮತ್ತಂ, ಅಂತಪ್ಪ ಪ್ರಮಥಗಣಂಗಳ ಪ್ರಸಾದದಿಂದುದ್ಭವಿಸಿದ
ಚಿದಾತ್ಮರುಗಳಾದ ಜ್ಞಾನಕಲಾತ್ಮರು ಬಲ್ಲರಲ್ಲದೆ,
ಮಿಕ್ಕಿನ ಜಡಮತಿ ವೇಷಧಾರಿಗಳಾದ
ಕುರಿಮನುಜರೆತ್ತ ಬಲ್ಲರೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./151
ಕಪ್ಪಿನ ಭೂಮಿಗೆ ಮೂರುಗಜ ಸೂರ್ಯಕಾಂತದ ಕಲ್ಲು ಹಾಕಿ,
ಮೂರು ಹಣವ ಕೊಂಡೆ.
ಕೆಂಪಿನ ಭೂಮಿಗೆ ಆರು ಐದು ಗಜ ಚಂದ್ರಕಾಂತದ ಕಲ್ಲು ಹಾಕಿ,
ಆರೈದು ಹಣವ ಕೊಂಡೆ.
ಬಿಳುಪಿನ ಭೂಮಿಗೆ ಎರಡೆಂಟು ಏಳುಗಜದ ಅಗ್ನಿಕಾಂತದ ಕಲ್ಲು ಹಾಕಿ,
ಎರಡೆಂಟು ಏಳು ಹಣವ ಕೊಂಡೆ.
ಉಳಿದ ವರ್ಣದ ಭೂಮಿಗೆ ಮೂವತ್ತಾರು ಗಜ ಹಲವು ವರ್ಣದ
ಚಿಪ್ಪುಗಲ್ಲುಗಳ ತುಂಬಿ ಈರೈದುಹಣವ ಕೊಂಡೆ.
ಹೀಗೆ ಕಲ್ಲುಮಾರಿ ಹಾಗದ ಹಣವ ಕೊಂಡು
ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./152
ಕಮಲಪ್ರಸಾದ ಬ್ರಹ್ಮನ ನುಂಗಿತ್ತು.
ಕರಳಪ್ರಸಾದ ವಿಷ್ಣುವಿನ ನುಂಗಿತ್ತು.
ಕೋಣಿಪ್ರಸಾದ ರುದ್ರನ ನುಂಗಿತ್ತು.
ಆಕಾಶಪ್ರಸಾದ ಬ್ರಹ್ಮಾಂಡ ನುಂಗಿತ್ತು.
ಈ ನಾಲ್ಕು ಪ್ರಸಾದ ನುಂಗಿದಾತನೇ ಪ್ರಾಣಲಿಂಗಿ ಪ್ರಸಾದಿ.
ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ
ನಿರ್ಮಾಯಪ್ರಭುವೆ./153
ಕರಿಚರ್ಮದ ಮಚ್ಚಿ ಮೆಟ್ಟಿದವರು ಕೆಳಗಾದರು.
ಎರಡುವರ್ಣದ ಮಚ್ಚಿ ಮೆಟ್ಟಿದವರು ಮೇಲಾದರು.
ಮೂರುಗೂಡಿದ ವರ್ಣದ ಮಚ್ಚಿಯ ಮೆಟ್ಟಿದವರು
ತಳಮೇಲು ಅವಸ್ಥಾನದಲ್ಲಿರದೆ
ಕಮಲ ಭ್ರಮರದಲ್ಲಿ ಸತ್ತುಪೋದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./154
ಕರಿದು ಕೆಂಪು ಬಿಳಿದು ಮೊದಲಾದ ಬಣ್ಣವನೆದ್ದದೆ
ಹಳದಿ ಬಣ್ಣವನೆದ್ದಿ ವ್ಯಾಪಾರವ ಮಾಡುತ್ತಿರ್ಪರು.
ಅದೇನುಕಾರಣವೆಂದಡೆ,
ಆ ತ್ರಿಬಣ್ಣ ಮೊದಲಾದ ಅನೇಕ ಬಣ್ಣಕ್ಕೆ ಮೇಲುಂಟು,
ಹಳದಿಬಣ್ಣಕ್ಕೆ ಮೇಲಿಲ್ಲ.
ಹಳದಿಬಣ್ಣದ ವ್ಯಾಪಾರವನುಳ್ಳವರು ಬಣ್ಣಗಾರನೊಳಗಾದರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./155
ಕರಿಭೂಮಿಯ ಬಿದಿರ ಬೊಂಬವ ಕಡಿದು
ಬಿಳಿಭೂಮಿಯ ಬಿದಿರ ಅಗ್ನಿಯಿಂದ ದಹಿಸಿ ಭಸ್ಮ ಮಾಡಿ ಧರಿಸಿ
ಕಾಯಕದಲ್ಲಿರ್ದು ಕಾಯಕಕ್ಕೆ ಸಿಕ್ಕದೆ
ಮೇದಾರ ಕೇತಯ್ಯನೊಳಗಾದರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./156
ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ,
ಮಲತ್ರಯಯುಕ್ತವಾದ ಒಬ್ಬ ಹೊಲಸು ಪೃಷ್ಠದ ನರಮನುಜನ
ಜಂಗಮನೆಂದು ಕರತಂದು ಗದ್ದುಗೆಯ ಮೇಲೆ ಕುಳ್ಳಿರಿಸಿ,
ಅವರ ಎದುರಿಗೆ ತಪ್ಪುತಡಿಯ ಮಾಡಿದ
ಪಾತಕರ ಅಡ್ಡಗೆಡವಿ ಮೂಗಿನ ದಾರಿ ತೆಗೆವರಂತೆ,
ಹೊಟ್ಟೆಗಿಲ್ಲದೆ ಒಬ್ಬ ಬಡವನು
ಧನಿಕನ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವಂತೆ,
ಇಂತೀ ದೃಷ್ಟಾಂತದಂತೆ
ಆಶೆ ಆಮಿಷ ತಾಮಸದಿಂದ ಮಗ್ನರಾದ ಭೂತದೇಹಿಗಳ ಮುಂದೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಕಚ್ಚಿ,
ಸಂಸಾರವಿಷಯದಲ್ಲಿ ಮಗ್ನರಾದ ಪಾತಕ ಮನುಜರು
ಅಡ್ಡಬಿದ್ದು ಪಾದಪೂಜೆಯ ಮಾಡಿ
ಪಾದೋದಕಪ್ರಸಾದ ಕೊಂಬುವರು.
ಇವರು ಭಕ್ತರಲ್ಲ, ಅವನು ಜಂಗಮನಲ್ಲ.
ಇಂತವರು ಕೊಂಬುವದು ಪಾದೋದಕಪ್ರಸಾದವಲ್ಲ.
ಇಂತಪ್ಪ ದೇವಭಕ್ತರ ಆಚರಣೆ ನಡತೆಯೆಂತಾಯಿತೆಂದೊಡೆ
ದೃಷ್ಟಾಂತ: ಒಬ್ಬ ಜಾರಸ್ತ್ರಿ ತನ್ನ ಉದರಪೋಷಣಕ್ಕೆ
ಆಶೆಯ ಮಾಡಿ, ಒಬ್ಬ ವಿಟಪುರುಷನ ಸಂಗವಮಾಡಿದರೆ
ಅವನು ಪರುಷನಾಗಲರಿಯನು,
ಅವಳು ಸತಿಯಾಗಲರಿಯಳು.
ಅದೇನು ಕಾರಣವೆಂದೊಡೆ ಹೊನ್ನಿಗಲ್ಲದೆ.
ಮತ್ತಂ, ಆವನೊಬ್ಬ ಜಾತಿಹಾಸ್ಯಗಾರನು ರಾಜರ ಮುಂದೆ
ತನ್ನ ಜಾತಿಆಟದ ಸೋಗನ್ನೆಲ್ಲ ತೋರಿ
ಆ ರಾಜರ ಮುಂದೆ ನಿಂತು ಮಜುರೆಯ ಮಾಡಿ
ಮಹಾರಾಜಾ ಎನ್ನೊಡೆಯ ಎನ್ನ ತಂದೆಯೇ ಎಂದು ಹೊಗಳಿ
ನಿಮ್ಮ ಹೆಸರು ತಕ್ಕೊಂಡು ದೇಶದಮೇಲೆ ಕೊಂಡಾಡೇನೆಂದು
ಬೇಡಿಕೊಂಡು ಹೋಗುವನಲ್ಲದೆ
ಅವನು ತಂದೆಯಾಗಲರಿಯನು, ಇವನು ಮಗನಾಗಲರಿಯನು.
ಅದೇನು ಕಾರಣವೆಂದೊಡೆ: ಒಡಲಕಿಚ್ಚಿಗೆ ಬೇಡಿಕೊಳ್ಳುವನಲ್ಲದೆ.
ಇಂತೀ ದೃಷ್ಟಾಂತದಂತೆ ಒಡಲ ಉಪಾಧಿಗೆ ಪೂಜೆಗೊಂಬರು
ವ್ರತನಿಯಮನಿತ್ಯಕ್ಕೆ ಪೂಜೆಯ ಮಾಡುವರು
ಅವರು ದೇವರಲ್ಲ, ಇವರು ಭಕ್ತರಲ್ಲ.
ಅದೇನು ಕಾರಣವೆಂದೊಡೆ-
ಉಪಾಧಿ ನಿಮಿತ್ಯಕಲ್ಲದೆ.
ಇಂತಪ್ಪ ವೇಷಧಾರಿಗಳಾದ
ಭಿನ್ನ ಭಾವದ ಜೀವಾತ್ಮರ ಪ್ರಸಾದವೆಂತಾಯಿತೆಂದಡೆ
ತುರುಕ ಅಂತ್ಯಜರೊಂದುಗೂಡಿ ಸರ್ವರೂ ಒಂದೇ ಆಗಿ
ತೋಳ ಬೆಕ್ಕು ನಾಯಿಗಳ ತಿಂದ ಹಾಗೆ,
ಸರ್ವರೂ ತಿಂದು ಹೋದಂತೆ ಆಯಿತಯ್ಯ.
ಇಂತಪ್ಪವರಿಗೆ ಭವಹಿಂಗದು ಮುಕ್ತಿದೋರದು.
ಮತ್ತಂ, ಅದೆಂತೆಂದೊಡೆ: ತನುವೆಂಬ ಭೂಮಿಯ ಮೇಲೆ ಮನವೆಂಬ
ಕರಿಕಂಬಳಿಯ ಗದ್ದುಗೆಯ ಹಾಕಿ,
ಅದರ ಮೇಲೆ ಪರಮಶಾಂತಿ ಜ್ಞಾನವೆಂಬ ಮೇಲುಗದ್ದುಗೆಯನಿಕ್ಕಿ,
ಅಂತಪ್ಪ ಪರಮಶಾಂತಿಯೆಂಬ ಮೇಲುಗದ್ದಿಗೆಯ ಮೇಲೆ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತವಾದ
ಪರಮನಿರಂಜನವೆಂಬ ಜಂಗಮವ ಮೂರ್ತವ ಮಾಡಿಸಿ,
ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಳ್ಳಬಲ್ಲರೆ
ಆತ ಆನಾದಿ ಭಕ್ತ.
ಇಂತೀ ಭೇದವ ತಿಳಿದು ಕೊಡಬಲ್ಲರೆ
ಆತ ಅನಾದಿ ಜಂಗಮ.
ಇಂತಪ್ಪವರಿಗೆ ಭವಬಂಧನವಿಲ್ಲ,
ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವದು.
ಇಂತಪ್ಪ ವಿಚಾರವನು ಸ್ವಾನುಭಾವಜ್ಞಾನದಿಂ ತಿಳಿಯದೆ
ಅಜ್ಞಾನದಿಂದ ಮಾಡುವ ಮಾಟವೆಲ್ಲ
ಜೊಳ್ಳು ಕುಟ್ಟಿ ಹೊಳ್ಳು ಗಾಳಿಗೆ ತೂರಿದಂತೆ ಆಯಿತ್ತು
ನೋಡೆಂದ ನಿಮ್ಮ ಶರಣ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./157
ಕರಿಯಬಣ್ಣದ ನೂಲು ಉತ್ಪತ್ಯದವನ ನುಂಗಿತ್ತು.
ಬಿಳಿಯಬಣ್ಣದ ನೂಲು ಸ್ಥಿತಿಯುಳ್ಳವನ ನುಂಗಿತ್ತು.
ಅಗ್ನಿ ಬಣ್ಣದ ನೂಲು ಲಯವುಳ್ಳವನ ನುಂಗಿತ್ತು.
ಉಳಿದ ವರ್ಣದ ನೂಲು ಬ್ರಹ್ಮಾಂಡವ ನುಂಗಿತ್ತು.
ಇಂತೀ ಬಣ್ಣದ ನೂಲು ಕಮಲ ನುಂಗಿದವರು ಹಿಂಗಿ ಕಾಣದೆ ಪೋದರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./158
ಕರಿಶಾಲಿಯ ಹರಕ ಬಿಡಿಹೊಲಿಗೆಯ ಕರಿಕುಪ್ಪಸ,
ಕರಿಗೊಂಗಡಿ ಕುಂಚಿಗೆ-
ಇಂತೀ ಮೂರುಜೀನಸು ಹೊಲಿಯದೆ
ಶಾಲು ಶಕಲಾತಿ ಸುಳುಹು ಮೊದಲಾದ
ಬಣ್ಣದ ಕಪ್ಪಡವ ಹೊಲಿವರು.
ಆ ಕಪ್ಪಡವ ಕೊಂಡು ಕಾಯಕವ ಮಾಡುತ್ತಿರ್ಪರು
ನೋಡೆಂದನಯ್ಯಾ ಆಚಾರ್ಯನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./159
ಕರಿಹಾಸ ಆರುಮಳ ಹೂಡಿ,
ಬಣ್ಣದ ಕುಂಚಗಿಯಲ್ಲಿ ಮೂರೆಳೆಯ ನೆಯ್ಯಲು
ಆರುಮಳ ಕರಿಹಾಸ ಅಳಿದು, ಮೂರುಮಳ ಬಿಳಿಹಾಸನೊಳಕೊಂಡು
ಒಂದು ಮೊಳದ ರೇಷ್ಮೆ ಹಾಸನುಳಿಯಿತ್ತು.
ಉಳಿದ ಹಾಸಿನ ಎಳಿ ಒಂಬತ್ತು ಬಣ್ಣದ ಲಾಳಿಯ ನುಂಗಿ,
ನುಂಗಿದ ಎಳೆಯ ನೆಯ್ವಣ್ಣನು
ಸರ್ವಾಂಗದಲ್ಲಿ ಸುತ್ತಿ ಸತ್ತಿರ್ಪನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./160
ಕರೆದವರಿಗೆ ಕೊಡುವರು;
ಕರೆಯದವರಿಗೆ ಕೊಡರು.
ಎರಡಿಲ್ಲದವರಿಗೆ ತನ್ನಂತೆ ಮಾಡುವರು.
ಹಿಂದಿನವರಿಗೆ ಮುಂದಿನವರಿಗೆ
ಇದೇ ಆಚಾರಪ್ರಮಾಣ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./161
ಕರೆಯದೆ ಬಂದವರು ಕೆಲಬರು,
ಹೇಳದೆ ಹೋದವರು ಕೆಲಬರು,
ಬಾರದೆ ಹೋಗದೆ ಬಹುಕಾಲಿರ್ಪರು ಕೆಲಬರು,
ಈ ಮಾತು ಕಣ್ಣಿದ್ದವ ಬಲ್ಲ, ಕಂಗಳರಿಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/162
ಕರ್ಲಭೂಮಿ ಸವುಳ ಭೂಮಿ ಕಲ್ಲು ಭೂಮಿ
ಈ ಮೂರು ಭೂಮಿಯ ಹುಲ್ಲಿನ ಹೊಡೆಯ ರಸವ ಸೇವಿಸದೆ,
ಕೆಂಪು ಬಿಳುಪು ಮಸಬು ಎಂಬ ಭೂಮಿಯ
ಹುಲ್ಲಹೊಡೆಯ ರಸವ ಸೇವಿಸಿ,
ಗುರುಕೊಟ್ಟ ಕಾಯಕದಲ್ಲಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./163
ಕರ್ಲಭೂಮಿ, ನೀರಭೂಮಿ, ಹಾಳಭೂಮಿ
ಈ ಮೂರು ಭೂಮಿಯ ಸವಳು ತಾರದೆ,
ಕೆಂಪು ಮಸಬು ಬಿಳುಪೆಂಬ ತ್ರಿಭೂಮಿಯ ಸವಳ ತಂದು,
ನೀರಿಲ್ಲದ ಮಾಳ ಉಪ್ಪ ಸೇವಿಸಿ
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./164
ಕರ್ಲಭೂಮಿಯ ಹರಳ
ಅಶ್ವಪತಿ ಕಿರಣದಿಂದ ದಹಿಸಿ,
ನೀರಭೂಮಿಯ ಹರಳ
ಯರಳಪತಿ ಕಾಯಿಂದ ದಹಿಸಿ,
ಬೆಟ್ಟದ ಭೂಮಿಯ ಹರಳ
ಟೆಗರಪತಿ ಕಾಂತಿಯಿಂದ ದಹಿಸಿ,
ಉಳಿದ ಭೂಮಿಯ ಹರಳ
ದಗಡಲೋಹದ ಕಿಡಿಗಳಿಂದ ದಹಿಸಿ,
ಸುಣ್ಣವ ಮಾಡಿ ಮೂರು ಮುಖದಪ್ಪಿಗೆ ಕೊಟ್ಟು
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./165
ಕಲ್ಯಾಣನಗರದ ಬಸವೇಶ್ವರನ ಪ್ರಮಥಗಣಂಗಳ
ಮಿಕ್ಕಪ್ರಸಾದಕೊಂಡದಲ್ಲಿ ಮರುಳಶಂಕರದೇವರು
ಹನ್ನೆರಡುವರ್ಷ ಅಡಗಿರ್ದನೆಂದು
ವೇದಾಂತಿ ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ
ಭಿನ್ನಭಾವದ ಶಾಸ್ತ್ರಸಂಧಿಗಳು ಪೇಳುತಿರ್ಪರು.
ಇದರ ಭೇದವ ತಿಳಿಯಬಲ್ಲ ಜ್ಞಾನಿಗಳು ಎನಗೆ ಪೇಳಿರಿ,
ಇಲ್ಲದ ಅಜ್ಞಾನಿಗಳು ನಮ್ಮ ನಿರ್ಮಾಯಪ್ರಭುವಿನ ಶರಣರ ಕೇಳಿರಿ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./166
ಕಲ್ಯಾಣಪುರದೊಳಗೆ ಬಿಜ್ಜಳಾಂಕನೆಂಬ ರಾಜನು
ಅಷ್ಟವಿಧಪ್ರಧಾನರ ಸಮೂಹದಲ್ಲಿ
ಶಿವಭಕ್ತಿ ಇಲ್ಲದೆ ರಾಜ್ಯವನಾಳುತಿರ್ಪನು.
ಇಂಗಳೇಶ್ವರನೆಂಬ ಪುರದ ವಿಪ್ರರ ಸಂದಣಿಯಲ್ಲಿ
ಬಸವೇಶ್ವರನುದ್ಭವಿಸಿ ಕಲ್ಯಾಣಕ್ಕೆ ಬಂದು
ಬಿಜ್ಜಳನ ಅಷ್ಟವಿಧಪ್ರಧಾನರ ನಷ್ಟವಮಾಡಿ,
ನವಮಪ್ರಧಾನನಾಗಿ, ಬಿಜ್ಜಳನ ರಾಜ್ಯವನ್ನಾಳುತ್ತ
ನಿತ್ಯದಲ್ಲಿ ಹಲವು ಜಂಗಮಕ್ಕೆ ಭೋಜನವ ಮಾಡುತ್ತ
ಬಸವಣ್ಣ ಇರ್ಪನು ಕಲ್ಯಾಣಪುರದಲ್ಲಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./167
ಕಲ್ಲಮರದ ಕೋಡಗದ ತಲೆಯೆಂಟು ಸ್ಥಾನವ ಮೆಟ್ಟಿ
ತಿರಗುವ ತಲೆ ಕಾಲು ಪಕ್ಕವಿಲ್ಲದ ವಿಹಂಗನ ನಡುನೆತ್ತಿ ಸುಳಿಯೊಳು ನಿಲ್ಲಿಸಲು,
ಹಾಲುಬಿಟ್ಟು ಹಾಲು ಬೇಡುವದು.
ಈ ಭೇದವ ತಿಳಿಯಬಲ್ಲಡೆ ಅವರು ಲಿಂಗಸಂಬಂಧಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./168
ಕಲ್ಲು ದೇವರೆಂದು ಪೂಜಿಸುವರೆಲ್ಲ
ಕಲ್ಲಾಗಿ ಪುಟ್ಟುವರು.
ಕಟ್ಟಿಗೆ ದೇವರೆಂದು ಪೂಜಿಸುವರೆಲ್ಲ
ಕಟ್ಟಿಗೆಯಾಗಿ ಪುಟ್ಟುವರು.
ಮಣ್ಣುದೇವರೆಂದು ಪೂಜಿಸುವರೆಲ್ಲ
ಮಣ್ಣಾಗಿ ಪುಟ್ಟುವರು.
ನೀರು ದೇವರೆಂದು ಪೂಜಿಸುವರೆಲ್ಲ
ನೀರಾಗಿ ಪುಟ್ಟುವರು.
ಅಗ್ನಿದೇವರೆಂದು ಪೂಜಿಸುವರೆಲ್ಲರು
ಅಗ್ನಿಯಾಗಿ ಪುಟ್ಟುವರು.
ಇದಕ್ಕೆ ದೃಷ್ಟಾಂತ: ‘ಯದ್ದೃಷ್ಟಂ ತನ್ನಷ್ಟಂ ಯಥಾಭಾವಸ್ತಥಾ ಸಿದ್ಧಿಃ’
ಎಂದುದಾಗಿ,
ಇಂತಿವರೆಲ್ಲರು ದೇವರೆಂದು ಪೂಜಿಸುವರು
ಹುಟ್ಟುಕುರುಡನು ಬೆಣ್ಣೆಯೆಂದು
ನರಕವ ಭುಂಜಿಸಿದಂತಾಯಿತ್ತಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./169
ಕಾಮವಿಲ್ಲದ ಸ್ತ್ರೀಗೆ ನಪುಂಸಕನೆಂಬ ಪುರುಷನು.
ಹುಟ್ಟಬಂಜಿಗೆ ಗಂಡಸ್ತನಯಿಲ್ಲದ ಗಂಡನು.
ಇಬ್ಬರ ಸಂಗದಿಂದ ಅಂಗವಿಲ್ಲದೊಂದು ಉರಿಮಾರಿ ಶಿಶು ಹುಟ್ಟಿತ್ತು.
ಆ ಶಿಶುವು ತಾಮಸಪುರವೆಂಬ ರಾಜನ ಕಣ್ಣು ಕಳದು
ಮಂತ್ರಿಯ ತಲೆ ಚಂಡಾಡಿ,
ಆನೆ, ಕುದುರಿ, ನಾಯಿಗಳ ಕೊಂದು, ರಥ ಮುರಿದು,
ಬಾರಿಕ ತಳವಾರಕುಲವ ಸವರಿ,
ಸರ್ವಮಾರ್ಬಲವೆಲ್ಲ ಹೊಡೆದು
ತಾಮಸಪುರವೆಂಬ ಪಟ್ಟಣವ ಸುಟ್ಟು,
ಬೂದಿಯ ಧರಿಸಿ ಮಾತಾಪಿತರುಗಳ ಹತ ಮಾಡಿ
ಕಾಶಿ ವಿಶ್ವನಾಥನ ಚರಣಕ್ಕೆರಗಿ
ಸತ್ತು ಕಾಯಕವ ಮಾಡುತಿರ್ದಿತ್ತು ಆ ಶಿಶುವು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./170
ಕಾಲಿಲ್ಲದೆ ನೂರಾವಂದುಯೋಜನ ನಡೆದು,
ಕಣ್ಣಿಲ್ಲದೆ ಸಾವಿರದೈವತ್ತೆರಡು ಕೋಶವ ನೋಡಿ,
ಕೈಯಿಲ್ಲದೆ ಇರುಳು ಬಿಟ್ಟು ಹಗಲು ಹಿಡಿದು,
ನೀರುಸುಟ್ಟು ಬೂದಿಯ ಧರಿಸಬಲ್ಲಾತನೇ ಐಕ್ಯ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./171
ಕಾಶಿಗೆ ಹೋಗಬೇಕೆಂಬಣ್ಣಗಳು ನೀವು ಲಾಲಿಸಿರಯ್ಯ,
ಕಾವಡಿಯ ಹೊತ್ತು ಹೋಹ
ವಿಪ್ರನ ಕಾವಡಿಯನೊಡದು ವಿಪ್ರನ ಕೊಂದು
ಬೆಕ್ಕುನಾಯಿಗಳು ಮಾತಾಪಿತರುಗಳು,
ಸತಿಸುತರುಗಳು
ಮೊದಲಾದವರುಗಳನ್ನು ಕ್ಷಣದಲ್ಲಿ ಹತಮಾಡಿ,
ಕಾಶಿಯ ಬಟ್ಟೆಯ ಮೆಟ್ಟಿ ಪೋಗುವ ಭಕ್ತಜನರಿಗೆ
ಮೋಕ್ಷವೆಂಬುದು ಕರತಳಾಮಳಕವಾಗಿ
ಕಾಣುವುದು ನೋಡೆಂದ,
ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./172
ಕಾಶಿಗೆ ಹೋಗಬೇಕೆಂಬಣ್ಣಗಳು
ತಲೆಕೆಳಗಾಗಿ ಕಾಲುಮೇಲಾಗಿ ನಡೆವರು.
ಕೇದಾರಕ್ಕೆ ಹೋಗಬೇಕೆಂಬಣ್ಣಗಳು
ಕಣ್ಣು ಹಿಂದಾಗಿ ಕಾಲುಮುಂದಾಗಿ ನಡೆವರು.
ಶ್ರೀಶೈಲಕ್ಕೆ ಪೋಗಬೇಕೆಂಬಣ್ಣಗಳು
ತಲೆಯಿಲ್ಲದೆ ಕಾವಡಿಯ ಹೊತ್ತು ನಡೆಯುವರು.
ಇಂತೀ ತ್ರಿವಿಧ ಪುರುಷರಿಗೆ ತ್ರಿಲಿಂಗದ ದರುಶನವಾಗದು.
ಮೂರು ಬಿಟ್ಟು, ಅಷ್ಟ ಕುಟ್ಟಿ, ಮೂರು ಪರ್ವತ ಸುಟ್ಟು,
ಈರಾರು ಬಿಟ್ಟು, ಮೂರುಗೂಡಿದ ಬಟ್ಟೆಯ ಪಿಡಿದು
ಹೊಗುವಣ್ಣಗಳಿಗೆ
ತ್ರಿವಿಧ ಕ್ಷೇತ್ರದಲ್ಲಿರುವ ಲಿಂಗದರುಶನವಾಗುವದು,
ಪರಿಣಾಮದೋರುವದು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./173
ಕಾಳಮ್ಮನ ಪೂಜಿಸದೆ, ಕಾಳಿಶಾಲಿಯನುಡದೆ
ಕಾವಿಶಾಲಿಯನುಟ್ಟು ಹೆಂಡಗಾರರ ಗುಂಡವ ಪೂಜಿಸಿ,
ನುಂಗಿ ಉಗುಳದೆ ಹಿಂಗಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./174
ಕಾಳಿಯ ಉದರದ ಮೂರು ಕೋಣೆ
ಕೋತಿಯ ದಾಡಿಯಲ್ಲಿ ಮೂರು ಲೋಕ ಅಡಗಿರ್ಪುದು.
ಆ ಕೋತಿಯ ಮಸ್ತಕದ ಹಾಲ ಕುಡಿದು
ಸತ್ತಾತನೇ ಪ್ರಳಯವಿರಹಿತನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./175
ಕಾಳಿಯ ಧ್ವನಿ ಒಳ್ಳೆಯವರು ಕೇಳರು, ಬಡವರು ಕೇಳ್ವರು.
ಕೇಳಿದವರು ಸತ್ತು, ವಂಶ ನಿರ್ವಂಶವಾಗುವರು.
ಕೇಳದವರು ಸಾಯದೆ ಬಳಗದಲ್ಲಿರುವರು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./176
ಕೀಲಿಲ್ಲದ ಕತ್ತರಿ, ಹಿನ್ನಿಯಿಲ್ಲದ ಸೂಜಿ, ನೂಲಿಲ್ಲದ ದಾರ.
ಕತ್ತರಿಯ ಬ್ರಹ್ಮನುಂಗಿದ, ಸೂಜಿಯ ವಿಷ್ಣುನುಂಗಿದ, ದಾರವ ರುದ್ರನುಂಗಿದ.
ಗಜಕಟ್ಟಿಗೆ ಸಿಂಪಿಗೇರ ಸಂಗಣ್ಣ ನುಂಗಿ
ಕಾಯಕವ ಮಾಡುತ್ತಿರ್ಪರು ನೋಡೆಂದನಾಚಾರ್ಯನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./177
ಕೀಲಿಲ್ಲದ ಬಂಡಿಯ ಗಾಲಿಯನುಚ್ಚಿ,
ಈಸಿಲ್ಲದ ನೊಗಕ್ಕೆ ಕಾಲಿಲ್ಲದ ಕೋಣನ ಹೂಡಿ,
ಹಾರಿ ಇಲ್ಲದೆ ಕಲ್ಲನೆಬ್ಬಿಸಿ, ಕೈಯಿಲ್ಲದೆ ಕಲ್ಲಪಿಡಿದು,
ಬಂಡಿಯ ಮೇಲೆ ಹೇರಿ ಊರೆಲ್ಲಾ ಮಾರಿ
ಹಾಗದ ರೊಕ್ಕವ ಕೊಂಡು ಕಾಯಕವ ಮಾಡುತಿರ್ದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./178
ಕುಬಟಗಿಯನೊಡೆದು ಇದ್ದಲಿಯ ಹಾಕದೆ,
ಬೆಂಕಿಯ ಕಳದು ಕಲ್ಲ ಕರಗಿ ರಸಹಿಂಡಿ,
ಚಿನ್ನವಮಾಡಿ ಹಣವಿಲ್ಲದವರಿಗೆ ಕೊಟ್ಟು,
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./179
ಕುರಿತೊಗಲು ಬಿಸಿಲಿಗೆ ಹದಮಾಡಿ,
ಮರಿತೊಗಲು ಬೆಳದಿಂಗಳಿಗೆ ಹದಮಾಡಿ,
ಹೋತಿನ ತೊಗಲು ಅಗ್ನಿಗೆ ಹದಮಾಡಿ,
ಉಳಿಮುಟ್ಟದೆ ಎಳೆಯಿಂದ ಮೂರು ಮಚ್ಚೆಯ ಹೊಲಿದು
ಕೊಡ್ಡ ಹಾಕಿ ತಿದ್ದಿ,
ಕೈ ಕಾಲಿದ್ದವರಿಗೆ ಕೊಡೆ, ಕಣ್ಣು ತಲೆಯುಳ್ಳವರಿಗೆ ಕೊಟ್ಟು,
ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./180
ಕುರಿಯ ಹಾಲ ಮರಿಯು ಕುಡಿದು
ಕುರುಬನ ಕೊಂದಿತ್ತು.
ಸತ್ತ ಕುರುಬ ಎದ್ದು ಕೂಗಲು
ಕೂಗಿನೊಡೆಯ ಬಂದು ಮರಿಯ ಕೊಂದು
ಕುರಿಯ ಸುಲಿದು, ಹೋತನ ಕಡಿದು,
ವೀರನೊಳಗೆ ಬೀರ, ಬೀರನೊಳಗೆ ವೀರ.
ಉಭಯಸಂದನರಿಯದ ವೀರರೆಲ್ಲ
ಕಾಡನೊಳಗಾದ ಶಂಕಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./181
ಕುರುಡ, ಕುಂಟ, ಅಧಮರು ಹಾಕಿದ
ಗಾಳಕ್ಕೆ ಬಿದ್ದ ಮತ್ಸ್ಯವು ಸತ್ತಿರ್ಪವು.
ಅರಸು, ಪ್ರಧಾನಿ, ಮಹಾವೀರರು ಹಾಕಿದ
ಗಾಳಕ್ಕೆ ಬಿದ್ದ ಮತ್ಸ್ಯವು ಸಾಯದೆ ಇರ್ಪವು
ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./182
ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ.
ಎನಗೆ ಐವರು ಸ್ತ್ರೀಯರ ಮದುವೆಯ ಮಾಡಿದರು.
ಅವರ ಸಂಗದಲ್ಲಿರಲೊಲ್ಲದೆ
ಒಬ್ಬಳ ಬ್ರಹ್ಮಂಗೆ ಕೊಟ್ಟೆ,
ಒಬ್ಬಳ ವಿಷ್ಣುವಿಂಗೆ ಕೊಟ್ಟೆ,
ಒಬ್ಬಳ ರುದ್ರಂಗೆ ಕೊಟ್ಟೆ,
ಒಬ್ಬಳ ಈಶ್ವರಂಗೆ ಕೊಟ್ಟೆ,
ಮತ್ತೊಬ್ಬಳ ಸದಾಶಿವಂಗೆ ಕೊಟ್ಟು
ತಾಯಿಯ ಒಡನಾಡಿ ಸಂಸಾರ ಮಾಡುತಿರ್ದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./183
ಕೆಚ್ಚಿಲ್ಲದ ವೃಕ್ಷಕ್ಕೆ ಫಲವಾದುದೆ ಕಡೆ.
ನಾರಿಯ ಕುಚ ಇಳಿದುದೆ ಕಡೆ.
ವಿಷದ ಪುಳುವಿಂಗೆ ಗರ್ಭವಾದುದೆ ಕಡೆ.
ತೃಣದ ಸಸಿಗೆ ತೆನೆಯಾದುದೆ ಕಡೆ.
ಎನ್ನ ಕರಕ್ಕೆ ನೀ ಬಂದುದೆ ಕಡೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./184
ಕೇಳು ಕೇಳಯ್ಯ ಎನ್ನ ಮತ್ಪ್ರಾಣನಾಥ
ಬಸವಣ್ಣಲಿಂಗತಂದೆ.
ಜಿತೇಂದ್ರಿಯರಲ್ಲಿ ತೀರ್ಥಪ್ರಸಾದ ಇಪ್ಪುದಲ್ಲದೆ
ಕೃತಕೇಂದ್ರಿಗಳಲ್ಲಿ ತೀರ್ಥಪ್ರಸಾದ ಇಪ್ಪುದೇನಯ್ಯಾ?
ಶಿವಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು
ಲಿಂಗಾಂಗಸಂಬಂಧಿಗಳಾದ ಶಿವಶರಣರಲ್ಲಿ
ಪರಶಿವಲಿಂಗ ಇಪ್ಪುದಲ್ಲದೆ,
ಬಿನ್ನಜ್ಞಾನಿಗಳಾದ ಅಜ್ಞಾನ ನರಕಜೀವಿಗಳಾದ
ಮತಿಭ್ರಷ್ಟಮನುಜರಲ್ಲಿ ಪರಶಿವಲಿಂಗ ಇಪ್ಪುದೇನಯ್ಯ?
ಊಧ್ರ್ವಕುಂಡಲಿಯಲ್ಲಿ ಅಮೃತಕುಂಭ ಇಪ್ಪುದಲ್ಲದೆ,
ಅಧೋಕುಂಡಲಿಯಲ್ಲಿ ಅಮೃತಕುಂಭ ಇಪ್ಪುದೇನಯ್ಯ?
ಚಿತ್ತಸ್ವಸ್ಥಿರವಾದ ಸದ್ಭಕ್ತ ಮಹೇಶ್ವರರ ಹಸ್ತದಲ್ಲಿ
ಚಿದ್ಘನಲಿಂಗವಿಪ್ಪುದಲ್ಲದೆ,
ಕುಚಿತ್ತ ಕುಬುದ್ಧಿ ದುರ್ಭಾವಿಗಳ ಹಸ್ತದಲ್ಲಿ
ಚಿದ್ಘನಲಿಂಗವಿಪ್ಪುದೇನಯ್ಯಾ?
ಉದಯದಲ್ಲಿ ಸೂರ್ಯನು ಹೊರಡುವುನಲ್ಲದೆ,
ಅಸ್ತಮಾನಕ್ಕೆ ಸೂರ್ಯನು ಹೊರಡುವುನೇನಯ್ಯಾ?
ಆಕಾಶದೊಳಗೆ ಮಿಂಚು ಮಿಂಚುವುದಲ್ಲದೆ,
ಭೂಮಿಯೊಳಗೆ ಮಿಂಚು ಮಿಂಚುವುದೇನಯ್ಯ?
ಇಂತೀ ದೃಷ್ಟದಂತೆ ತನ್ನ ತಾನರಿದಂಥ
ಗುರುಹಿರಿಯರಲ್ಲಿ ತೀರ್ಥಪ್ರಸಾದ ಇಪ್ಪುದಲ್ಲದೆ
ತನ್ನ ನಿಜವ ಮರೆದು ಮಲತ್ರಯಯುಕ್ತವಾದ
ದೇಹೋಹಮೆಂದು ಸಟೆಯ ಸಂಸಾರದಲ್ಲಿ
ಮನಮಗ್ನವಾಗಿ ಜಡಸಂಸಾರ ಮಾಡುವ
ಜಗಭಂಡ ಹೊಲೆಮಾದಿಗರಲ್ಲಿ ಲಿಂಗವಿಲ್ಲ,
ಲಿಂಗವಿಲ್ಲಾಗಿ ತೀರ್ಥಪ್ರಸಾದವಿಲ್ಲ.
ಇಂತಪ್ಪ ಜಡಮತಿ ನರಕಜೀವಿಗಳ ವಿಸರ್ಜಿಸಿ,
ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯವ ಪಡೆದು,
ಲಿಂಗಾಂಗಸಮರಸವುಳ್ಳ ಗುರುಲಿಂಗಜಂಗಮದ
ತೀರ್ಥಪ್ರಸಾದವ ಕೊಂಡಡೆ ನರಕ ತಪ್ಪುವದು.
ಮೋಕ್ಷವೆಂಬುದು ಕರತಳಾಮಳಕವಾಗಿ ತೋರುವುದು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./185
ಕೊಂಬಿಲ್ಲದ ಪಶುವಿನ ಮೇಲೆ
ನಾಲ್ಕು ಘಟದ ಮಂಕಣಿಯ ಬಿಗಿದು,
ಗದ್ದಲದ ಉದಕವ ತುಂಬಿತಾರದೆ,
ಗದ್ದಲಿಲ್ಲದ ಉದಕವ ತುಂಬಿತಂದು,
ಅರಸು ಮೊದಲಾದ ಪ್ರಜೆಗಳೆಲ್ಲರಿಗೆ ಕುಡಿಸಿ ಕೊಂದು
ನಾ ಕುಡಿದು ಸತ್ತು ಬದುಕಿ
ಕಾಯಕವ ಮಾಡುತ್ತಿರ್ಪೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./186
ಕೊಟ್ಟ ಪಡಿಯನುಣ್ಣದೆ
ಕೊಡದ ಪಡಿಗೆ ಹವಣಿಸುವರು.
ನಿಶ್ಶಬ್ದವಾಕ್ಯವ ನುಡಿಯದೆ
ಶಬ್ದವಾಕ್ಯವ ನುಡಿವರು.
ಇವರಿಗೆ ಸ್ಥಿತಿ ಉತ್ಪತ್ಯದ ಮಾರ್ಗ
ನಷ್ಟವಾಗದು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./187
ಕೊಟ್ಟ ಹಣವ ಮುಟ್ಟದೆ,
ಒಂದು ಕೊಟ್ಟು ಎರಡು ಪಡೆಯದೆ,
ತಮ್ಮ ಮಾತಾಪಿತರು ಗಳಿಸಿದ ದ್ರವ್ಯವನುಂಡು
ಸುಖದಿಂದ ಕಾಯಕವ ಮಾಡುತ್ತಿರ್ದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./188
ಕೊಳಗವಾಯಿತ್ತು.
ಮರಳಿ ಒಂದರಲ್ಲಿ ಅಳದರೆ ಒಮ್ಮನವಾಯಿತ್ತು.
ಆ ಒಮ್ಮನವ ಸರಕಾರಕ್ಕೆ ಕೊಟ್ಟು ಸುಮ್ಮನೆ ಇದ್ದನಯ್ಯಾ
ನಿಮ್ಮ ಶರಣ ಬಡವನಾಗಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./189
ಖುದಾ ಜಾತಕು ಬಮ್ಮನ ಆದ್ಮಿಕು ಗರಕಾ ದಂದೇಗನೈ
ಆಖು ಬಮ್ಮನ ಬಡಾವಲ್ಲಿ ಆದ್ಮಿಕು
ದಿವಾರಾತ್ ರೋಯಿ ವಖತ್ ಅಲ್ಲಾಕು
ಬಗರ ದುಸರಾಕು ಖಬರ್ ನಯಿ
ಇದೋ ಇಕುಬಾತ್ ಖಬರ್ ಅಲ್ಲಾಕು ಜಾತ ಬಡಾ ವಲ್ಲಿಕು
ಮಾಲುಮ್ ಸುನೋ ಬಲಾ ಆದ್ಮಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./190
ಗಂಡಗೊಂದು ಲಿಂಗ, ಹೆಂಡತಿಗೊಂದು ಲಿಂಗ,
ಮಕ್ಕಳಿಗೊಂದು ಲಿಂಗ, ಸ್ನೇಹಿತರು ಗೆಳೆಯರಿಗೊಂದು ಲಿಂಗ,
ಇಂತೀ ನಾಲ್ವರಿಗೆ ನಾಲ್ಕು ಲಿಂಗವಾದರೆ
ಭವಮಾಲೆ ಹರಿಯದು.
ಇಂತೀ ನಾಲ್ವರಿಗೆ ಒಂದೇ ಲಿಂಗವಾದರೆ
ಭವಮಾಲೆ ಹಿಂಗುವುದು ನೋಡಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./191
ಗಂಡನಿಲ್ಲದ ಸ್ತ್ರೀಯರು ಗಂಡನ ಮದುವೆಯಾಗಿ,
ಮನೆಯ ಗಂಡನ ಕೂಡ ಒಗತನವ ಮಾಡದೆ,
ಪರಪುರುಷನ ಸಂಗವಮಾಡಿ ಬಹುಕಾಲಿರ್ಪರು.
ಎನಗೆ ಗಂಡರಿಲ್ಲ.
ಬಂದಲ್ಲಿ ಗಂಡರು ಮದುವೆಯಾಗಿ ಒಗತನವ ಮಾಡಿ
ಗಂಡನ ಕೊಂದು ರಂಡೆಯಾಗಿ
ಸೋಮೇಶ್ವರಲಿಂಗಕ್ಕೆ ಅರ್ಪಿತಮಾಡಿ
ಕಾಯಕದಲ್ಲಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./192
ಗಜಿಬಿಜಿಯೆಂಬ ಪಟ್ಟಣದ ಗುಜ್ಜದೇವಿ ಎಂಬ ಸ್ತ್ರೀಯಳ
ಕೋತಿವಿಲಾಸವ ಕಂಡು,
ಶಿಕಾರಿಗೆ ಬಂದ ರಾಜಕುಮಾರನು ಮರುಳಾಗಿರುವದ
ಅರಸು ಕಂಡು ಬಂದು ಮೂರು ಕಲ್ಲಾರು ಕೋಲಿನಿಂದ ಹೊಡೆದು,
ಪುತ್ರನ ಕೊಂದು ತಾ ಸಾಯಲು,
ಗಜಿಬಿಜಿಪಟ್ಟಣ ಸುಟ್ಟು, ಗುಜ್ಜದೇವಿಯಳಿದು,
ಕೋತಿವಿಲಾಸವಡಗಿತ್ತು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./193
ಗಿಲಾಯದ ಮಣ್ಣಿನ ಗೋಡೆಗೆ,
ಕಟೆದ ಕಲ್ಲಿನ ಗಚ್ಚಿನ ಶಿವಾಲಯಕ್ಕೆ, ಎರಕದ ದೇಗುಲಕ್ಕೆ,
ಇಂತೀ ತ್ರಿವಿಧಭಿತ್ತಿಗಳಿಗೆ ಚಿತ್ರವ
ಬರೆದವರು ಬರೆಸಿದವರು ಇತ್ತಾಗಿ ಬಹುಕಾಲ ಇರ್ಪರು.
ಇಂತೀ ಭಿತ್ತಿಗಳಲ್ಲಿ ಚಿತ್ರವ ಬರೆಯದವರು
ಅತ್ತಾಗಿ ಬಹು ಕಾಲ ಇರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./194
ಗುಂಗರಿಯ ಮೂರು ಮುಖದಲ್ಲಿ ಊರು ಇರ್ಪುದು.
ಊರ ಮಧ್ಯದಲ್ಲಿ ಮೂರುಲೋಕವಿರ್ಪುದು.
ಮೂರುಲೋಕದ ಮಧ್ಯದಲ್ಲಿ ಅಗ್ನಿಕೊಂಡ ಇರ್ಪುದು.
ಆ ಕೊಂಡದೊಳಗೆ ವಿಚಿತ್ರದ ಸರ್ಪ ಇರ್ಪುದು.
ಆ ಸರ್ಪದ ತಲೆಯೊಳಗೆ ಅನಂತಕೋಟಿ
ಚಂದ್ರಸೂರ್ಯರ ಬೆಳಗಕೀಳ್ಪಡಿಸುವಂಥ ರತ್ನವಿರ್ಪುದು.
ಗುಂಗರಿಯ ಕೊಂದು ಮೂರುಮುಖ ವಿಕಾರಮಾಡಿ,
ಊರ ಸುಟ್ಟು ಮೂರುಲೋಕವೆಲ್ಲ ಕೆಡಿಸಿ,
ಅಗ್ನಿಯ ನಂದಿಸಿ, ಸರ್ಪನ ಕೊಂದು,
ಆ ರತ್ನವ ತಕ್ಕೊಳ್ಳಬಲ್ಲರೆ ಅನಾದಿಭಕ್ತನೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./195
ಗುಡಿಗೊರವ ಗುಡಿಸಿ ಕಣ್ಣು ಕೆಂಪಗಾಗಿ
ಜಟ್ಟಿಂಗ ಬೇತಾಳನ ನುಂಗಿ,
ಬೇತಾಳ ಜಟ್ಟಿಂಗನ ನುಂಗಿ
ತಲೆ ನರೆಗೂದಲ ನುಂಗಿ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./196
ಗುರು ಗುರುವೆಂದು ಬೊಗಳುತ್ತಿರ್ಪರು
ಗುರುಸ್ವರೂಪವೆಂತಾದರಯ್ಯ?
ಗುರುವಿನ ಸ್ವರೂಪ ಗುರುವಿನ ಲಕ್ಷಣವ ಪೇಳ್ವೆ.
ಅದೆಂತೆಂದಡೆ: ಗುರುವಿನ ನಿಲವು ಸ್ವಯಂಜ್ಯೋತಿ,
ಸ್ವಯಂ ಪ್ರಕಾಶ ಪರಂಜ್ಯೋತಿ.
ಅಂತಪ್ಪ ಗುರುಸ್ವರೂಪರಾದ ಶಿವಜ್ಞಾನಿಗಳು
ಭಕ್ತರಾಗಲಿ ಮಹೇಶ್ವರರಾಗಲಿ
ಇಂತೀ ಆಶ್ರಮವನುಳ್ಳ ಪರದೇಶಿಗಳಾಗಲಿ
ಆರಾದಡೇನು ಅಂತಪ್ಪವರಿಗೆ
ಷಡೂರ್ಮಿ-ಷಡ್ವರ್ಗ-ಸಪ್ತವ್ಯಸನ-ಅಷ್ಟಮದ-
ಪಂಚಕರಣಂಗಳು ಮೊದಲಾದ
ಅರುವತ್ತಾರುಕೋಟಿ ಕರಣಂಗಳು ಅಳಿದು ಅಳಿಯದ ಹಾಂಗೆ
ಲಿಂಗಕಿರಣಂಗಳ ಮಾಡಿ ಧರಿಸಿದವರೇ
ಅನಾದಿಗುರುವೆಂದೆನುತ್ತಿರ್ಪೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./197
ಗುರು ಮುನ್ನವೋ ಶಿಷ್ಯ ಮುನ್ನವೋ ಲಿಂಗ ಮುನ್ನವೋ
ಶರಣ ಮುನ್ನವೋ ಜಂಗಮ ಮುನ್ನವೋ ಭಕ್ತ ಮುನ್ನವೋ
ಪಾದೋದಕ-ಪ್ರಸಾದ ಮುನ್ನವೋ ವಿಭೂತಿ-ರುದ್ರಾಕ್ಷಿ ಮುನ್ನವೋ
ಮಂತ್ರ ಮುನ್ನವೋ ಶಿವಾಚಾರ ಮೊದಲಾಗಿ ಆವುದು ಮುನ್ನವೋ
ಎಂದು ತಿಳಿಯಬಲ್ಲರೆ ಗುರುವೆಂಬೆ.
ಭೂಮಿ ಮುನ್ನವೋ ಆಕಾಶ ಮುನ್ನವೋ
ಅಗ್ನಿ ಮುನ್ನವೋ ವಾಯು ಮುನ್ನವೋ
ಚಂದ್ರ ಮುನ್ನವೋ ಸೂರ್ಯ ಮುನ್ನವೋ
ಜ್ಯೋತಿ ಮುನ್ನವೋ ಕಾಳಗತ್ತಲೆ ಮುನ್ನವೋ
ಸಮುದ್ರ ಮುನ್ನವೋ ಆತ್ಮ ಮೊದಲಾಗಿ ಆವುದು ಮುನ್ನವೋ
ಎಂದು ತಿಳಿಯಬಲ್ಲರೆ ಲಿಂಗವೆಂಬೆ.
ಹೆಣ್ಣು ಮುನ್ನವೋ ಗಂಡು ಮುನ್ನವೋ,
ಗರ್ಭ ಮುನ್ನವೋ ಶಿಶು ಮುನ್ನವೋ
ತಾಯಿ ಮುನ್ನವೋ ತಂದೆ ಮುನ್ನವೋ
ಜ್ಞಾನ ಮುನ್ನವೋ ಅಜ್ಞಾನ ಮುನ್ನವೋ
ಗಂಧ ಮುನ್ನವೋ ಘ್ರಾಣ ಮುನ್ನವೋ
ರುಚಿ ಮುನ್ನವೋ ಜಿಹ್ವೆ ಮುನ್ನವೋ
ನೋಟ ಮನ್ನವೋ ರೂಪ ಮುನ್ನವೋ
ಶ್ರೋತ್ರ ಮುನ್ನವೋ ಶಬ್ದ ಮುನ್ನವೋ
ತ್ವಕ್ ಮುನ್ನವೋ, ಮೃದು ಕಠಿಣ ಮೊದಲಾದ
ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಜಂಗಮವೆಂಬೆ.
ಅರಿವು ಮುನ್ನವೋ ಮರೆವು ಮುನ್ನವೋ
ಆಚಾರ ಮುನ್ನವೋ ಅನಾಚಾರ ಮುನ್ನವೋ
ಬ್ರಹ್ಮಾಂಡ ಮುನ್ನವೋ ಪಿಂಡಾಂಡ ಮುನ್ನವೋ
ಮನ ಮುನ್ನವೋ ಪ್ರಾಣ ಮುನ್ನವೋ
ಧರ್ಮ ಮುನ್ನವೋ ಕರ್ಮ ಮುನ್ನವೋ
ಇಂತೀ ಸರ್ವರೊಳಗೆ ತಾ ಮೊದಲಾಗಿ
ಆವುದು ಮುನ್ನವೋ ಎಂದು ತಿಳಿಯಬಲ್ಲರೆ
ಪಾದೋದಕ ಪ್ರಸಾದಿಗಳೆಂಬೆ;
ವಿಭೂತಿ ರುದ್ರಾಕ್ಷಿಧಾರಣ ಮಂತ್ರಮೌನಿಗಳೆಂಬೆ.
ಇಂತಪ್ಪ ವಚನದ ತಾತ್ಪರ್ಯ ತಿಳಿಯಬಲ್ಲರೆ
ಲಿಂಗಾಂಗಸಮರಸಾನಂದಸುಖವ ತಿಳಿಯಬಲ್ಲ
ಶಿವಜ್ಞಾನಸಂಪನ್ನರೆಂಬೆ.
ಪರಶಿವಯೋಗಿಗಳೆಂಬೆ, ಷಟ್ಸ್ಥಲ ಭಕ್ತರೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./198
ಗುರುಕಾರುಣ್ಯವಾದಡೆ ಕಾಲಿಲ್ಲದೆ ನಡೆಯಬೇಕು,
ಕಣ್ಣಿಲ್ಲದೆ ನೋಡಬೇಕು, ಸತಿಸುತರ ಬಿಡಬೇಕು,
ಊರಲ್ಲಿರದೆ ಅರಣ್ಯಕ್ಕೆ ಹೋಗದೆ ಇರಬಲ್ಲರೆ
ಗುರುಕಾರುಣ್ಯವುಳ್ಳವರೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./199
ಗುರುಪೂಜೆ ಮಾಡುವಣ್ಣಗಳ
ಸೂಳೇರ ಬಾಯಿಲೋಳೆ ನೆಕ್ಕಿಸಿತ್ತು ಮಾಯೆ.
ಲಿಂಗಪೂಜೆ ಮಾಡುವಣ್ಣಗಳ
ಅಂಗನೆಯರ ತೊಡೆಯ ಮೂಸಿನೋಡಿಸಿತ್ತು ಮಾಯೆ.
ಜಂಗಮಪೂಜೆ ಮಾಡುವಣ್ಣಗಳ
ರಂಭೆಯರ ಜಾನು ಜಂಘಯಲ್ಲಿರಿಸಿತ್ತು ಮಾಯೆ.
ಪಾದೋದಕ ಪ್ರಸಾದವಕೊಂಬ ಅಣ್ಣಗಳ
ಮದ್ಯಪಾನ ಮಾಂಸವ ತಿನಿಸಿತ್ತು ಮಾಯೆ.
ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ
ತಿದಿಯ ಹಿರಿಸಿ ಮುಸುಕಿಯ ಕಟ್ಟಿಸಿತ್ತು ಮಾಯೆ.
ಮಂತ್ರಧ್ಯಾನಿಗಳೆಲ್ಲರ ಅಂಗನೆಯರ
ಭಗಧ್ಯಾನದಲ್ಲಿರಿಸಿತ್ತು ಮಾಯೆ
ಜಪತಪವ ಮಾಡುವಣ್ಣಗಳ
ಮುಸುಕು ತೆಗೆದು ಸ್ತ್ರೀಯರ ಮುಖವ ನೋಡಿಸಿತ್ತು ಮಾಯೆ.
ಗುರುಹಿರಿಯರೆಂಬಣ್ಣಗಳ
ಹಿರಿಯ ಶೂಲಕ್ಕೆ ಇಕ್ಕಿತ್ತು ಮಾಯೆ.
ವಿರಕ್ತರೆಂಬಣ್ಣಗಳ
ರಂಭೇರ ಮಲ ಒಸರುವ ಪೃಷ್ಠವ ಪಿಡಿಸಿತ್ತು ಮಾಯೆ.
ಪಟ್ಟದಯ್ಯಗಳು ಚರಮೂರ್ತಿ ಹಿರಿಯರು
ಮಾನ್ಯರೆಂಬಣ್ಣಗಳ ರಟ್ಟೆಗೆ ಹಗ್ಗಹಚ್ಚಿ
ಸ್ತ್ರೀಯರ ಮುಂದೆ ಹಿಂಡಗಟ್ಟಿ ಎಳಸಿತ್ತು ಮಾಯೆ.
ವೇದಾಗಮ ಪುರಾಣ ತರ್ಕ ತಂತ್ರಗಳೆಲ್ಲ ನೋಡಿ
ಹಾಡುವಣ್ಣಗಳೆಲ್ಲರ ಹೊಲೆಮಾದಿಗರ ಕಾಲು ಹಿಡಿಸಿತ್ತು ಮಾಯೆ.
ಇಂತೀ ನಾನಾ ಹಾದಿ ಶ್ರುತಿಗಳ ವಾಕ್ಯವ ಕೇಳಿ
ದಾನಧರ್ಮಗಳ ಮಾಡುವಣ್ಣಗಳನೆಲ್ಲರ
ತಲೆಕೆಳಗಾಗಿ ಕಾಲುಮೇಲಾಗಿ
ಎಂಬತ್ತುನಾಲ್ಕುಲಕ್ಷ ಯೋನಿಗಳಲ್ಲಿ
ರಾಟಾಳ ತಿರುಗಿದಂತೆ ತಿರುಗಿಸಿತ್ತು ಮಾಯೆ.
ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ.
ಶಿವಜ್ಞಾನಸಂಪನ್ನರಾದ ಶಿವಶರಣರೇ ಬಲ್ಲರಲ್ಲದೆ,
ಮಿಕ್ಕಿನ ದೇವ ದಾನವ ಮಾನವರು ಮೊದಲಾದ
ಎಲ್ಲರಿಗೂ ಇಲ್ಲ ಇಲ್ಲ ಎಂದನಯ್ಯ ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./200
ಗುರುಪೂಜೆ ಮಾಡುವಾತ ಶಿಷ್ಯನಲ್ಲ.
ಲಿಂಗಪೂಜೆ ಮಾಡುವಾತ ಶರಣನಲ್ಲ.
ಜಂಗಮಪೂಜೆ ಮಾಡುವಾತ ಭಕ್ತನಲ್ಲ.
ಇಂತೀ ತ್ರಿಮೂರ್ತಿಗಳ ಪಾದೋದಕ ಪ್ರಸಾದವ
ಕೊಂಬುವಾತ ಪ್ರಸಾದಿಯಲ್ಲ.
ಇಂತೀ ಚತುರ್ವಿಧದ ಹಂಗು ಹಿಂಗದೆ
ಭವಹಿಂಗದು ಮುಕ್ತಿದೋರದು.
ಮತ್ತಂ, ಇಂತೀ ತ್ರಿವಿಧ ಪೂಜೋಪಚಾರಂಗಳಮಾಡಿ
ಪಾದೋದಕ ಪ್ರಸಾದವ ಕೊಳ್ಳದವರಿಗೆ
ಭವಹಿಂಗದು ಮುಕ್ತಿದೋರದು
ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./201
ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ
ತನುವ ದಂಡಿಸಲಾಗದು.
ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ
ಮನವ ಬಳಲಿಸಲಾಗದು.
ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ
ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು.
ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು.
ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ.
ಇಂತಪ್ಪವರ ಭಿನ್ನಕ್ರಿಯಾಚಾರವನು
ಸುಜ್ಞಾನೋದಯವಾದ ಜ್ಞಾನಕಲಾತ್ಮನು
ತನ್ನ ಪರಮಜ್ಞಾನದಿಂ ನಷ್ಟವ ಮಾಡಿ,
ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂಧಿಯಾಗಿ,
ಸರ್ವಾಂಗಲಿಂಗಮಯ ತಾನೆಂದು ತಿಳಿದು,
ವಿಚಾರಿಸಿಕೊಂಡು ಪರಶಿವಪರಮೂರ್ತಿಗಳಾದ
ಗುರುಲಿಂಗಜಂಗಮವನ್ನು
ತನ್ನ ತನುಮನದಲ್ಲಿ ಸ್ವಾಯತವಮಾಡಿದ
ಶಿವಶರಣಂಗೆ ಭವ ಹಿಂಗಿ,
ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./202
ಗುರುಲಿಂಗಜಂಗಮದ ಪಾದೋದಕ
ಪ್ರಸಾದಪ್ರೇಮಿಗಳೆಂದು,
ನುಡಿದುಕೊಂಬ ನುಡಿಯಜಾಣರಲ್ಲದೆ,
ಆ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಸೇವಿಸಿ ಭವಹಿಂಗಿಸಲರಿಯರು.
ಅದೆಂತೆಂದಡೆ : ಶುದ್ಧಪ್ರಸಾದದಿಂದ ಮರ್ತ್ಯದ ಹಂಗು ಹಿಂಗಿತ್ತು.
ಸಿದ್ಧಪ್ರಸಾದದಿಂದ ಸ್ವರ್ಗದ ಹಂಗು ಹಿಂಗಿತ್ತು.
ಪ್ರಸಿದ್ಧಪ್ರಸಾದದಿಂದ ಪಾತಾಳದ ಹಂಗು ಹಿಂಗಿತ್ತು.
ಮಹಾಪ್ರಸಾದದಿಂದ ಹದಿನಾಲ್ಕುಲೋಕದ ಹಂಗು ಹಿಂಗಿತ್ತು.
ಇಂತೀ ಪ್ರಸಾದದ ಗ್ರಾಹಕದಿಂ
ಗುರು-ಲಿಂಗ-ಜಂಗಮದ ಹಂಗು ಹಿಂಗಿ,
ಸತಿಪತಿಯರು ಸತ್ತು ಅವರೆಲ್ಲಿರ್ದರು ಎಂಬುದನಾರೂ ಅರಿಯರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./203
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು
ಪರರ ಮುಂದೆ ತಮ್ಮ ಬಿಂಕವ ತೋರುವರು.
ತೋರಿದಂತೆ ಆಚರಣೆಯ ತೋರರು.
ಅದೆಂತೆಂದಡೆ : ತನ್ನ ದೀಕ್ಷೊಪದೇಶವ ಮಾಡಿದಂಥ ಗುರು
ಮನೆಗೆ ಬಂದರೆ ಮನ್ನಿಸರು.
ನಯನುಡಿಯ ಮಾತನಾಡರು.
ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ
ಕೊಟ್ಟು ಸಂತೋಷಪಡಿಸುವವರಿಲ್ಲ.
ಗ್ರಾಮದ ಮಧ್ಯದಲ್ಲಿ ಆವನೊಬ್ಬ
ಜಾತಿಹಾಸ್ಯಕಾರನು ಬಂದು,
ಡೋಲು ಡಮಾಮಿಯ ಹೊಡೆದು,
ಬೊಬ್ಬಿಯ ರವಸದಿಂದ ಮಣ್ಣವರಸಿ,
ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ,
ಕೋ ಎಂದು ಕೂಗಿ,
ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು,
ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ,
ಮುಂದೆ ಬಂದು ನಿಂತು,
ಮಜುರೆಯ ಮೇಲೆ ಮಜುರೆಯ ಹೊಡೆದು,
ಅವರ ಹೆಸರೆತ್ತಿ ಕೊಂಡಾಡಲು,
ಅವರ ಲಾಗಕ್ಕೆ ಮೆಚ್ಚಿ
ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು,
ಕಾಲತೊಡರು ಮುಂಗೈಸರಪಳಿ
ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು,
ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ.
ಮತ್ತಂ,
ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು.
ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು,
ಬಂದ ಪದಾರ್ಥವ ಲಿಂಗಕ್ಕೆ ತೋರದೆ
ಬಾಯಿಗೆಬಂದಂತೆ ತಿಂಬುವರು.
ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ
ಚಂಡಿ ಮಾರಿಯ ಪೂಜಿಸೆಂದಡೆ ತನುಮನವು
ಹೊಳೆಯುಬ್ಬಿದಂತೆ ಉಬ್ಬಿ,
ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು,
ಒಂದೊತ್ತು ಉಪವಾಸ ಮಾಡಿ,
ಮೈಲಿಗೆಯ ಕಳೆದು ಮಡಿಯನುಟ್ಟು,
ಮನಪೂರ್ವಕದಿಂ ಪೂಜೋಪಚಾರವ ಮಾಡಿ,
ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ
ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ,
ಆ ದೇವತೆಗಳಿಗೆ ನೈವೇದ್ಯವ ಕೊಟ್ಟು,
ಮರಳಿ ತಾವು ಉಂಬುವರಲ್ಲದೆ,
ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ
ಸಾಯಂಕಾಲಪರಿಯಂತರವಾದಡೂ
ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ,
ತನು-ಮನ ಬಳಲಿಸುವರಯ್ಯಾ.
ಮತ್ತಂ,
ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ
ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ,
ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು
ಮನೆಯೊಳಗೆ ಗೃಹಸ್ಥರು ಬಂದಾರೆ,
ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ,
ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು
ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ.
ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು
ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ
ಆ ಜಾರಸ್ತ್ರೀಗೆ ಮನೆಯವರೆಲ್ಲರು
ಉಣ್ಣು ಏಳು ಉಂಬೇಳೆಂದು
ಆಕೆಯ ಕರವ ಪಿಡಿದು ಕರೆವರಯ್ಯಾ.
ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು,
ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ.
ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ
ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ,
ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು
ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./204
ಗುರುವೆಂಬವನೇ ಹೊಲೆಯ.
ಲಿಂಗಾಂಗಿ ಎಂಬವನೇ ಮಾದಿಗ.
ಜಂಗಮವೆಂಬವನೇ ಸಮಗಾರ.
ಈ ಮೂವರೊಳಗೆ ಹೊಕ್ಕು ಬಳಕೆಯ ಮಾಡಿದಾತನೇ ಭಕ್ತ.
ಆ ಭಕ್ತನೆಂಬುವನೇ ಡೋರ.
ಇಂತೀ ಚತುರ್ವಿಧ ಭೇದವ ತಿಳಿದು,
ಪಾದೋದಕ ಪ್ರಸಾದವ ಕೊಡಬಲ್ಲರೆ
ಗುರುಲಿಂಗಜಂಗಮವೆಂಬೆ.
ಈ ನಿರ್ಣಯವ ತಿಳಿದು ಪಾದೋದಕ ಪ್ರಸಾದ ಕೊಳ್ಳಬಲ್ಲರೆ
ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ,
ಶರಣೈಕ್ಯರೆಂಬ ಷಟ್ಸ್ಥಲಬ್ರಹ್ಮಿ ಎಂಬೆ.
ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ,
ಸಮಯಪ್ರಸಾದಿ, ಏಕಪ್ರಸಾದಿ.
ಇಂತೀ ಕ್ರಮವರಿತು
ಪಾದೋದಕ ಪ್ರಸಾದವ ಕೊಳ್ಳಬಲ್ಲರೆ
ಮೋಕ್ಷವಾಗುವುದಕ್ಕೆ ತಡವಿಲ್ಲವಯ್ಯ.
ಈ ಭೇದವ ತಿಳಿಯದೆ
ಅಯ್ಯಾ, ಹಸಾದ ಮಹಾಪ್ರಸಾದ
ಪಾಲಿಸಿರೆಂದು, ಕರುಣಿಸಿರೆಂದು ಕೃಪೆ ಮಾಡಿ
ಭೂತದೇಹಿಗಳೆದುರಿಗೆ ಪಾತಕಮನುಜರು
ಅಡ್ಡಡ್ಡ ಬಿದ್ದು ಎದಿ ವಡ್ಡುಗಟ್ಟಿ
ಮೊಳಕಾಲು ಗೂಡುಗಟ್ಟಿ ಹಣೆ ಬುಗುಟಿ ಎದ್ದು
ಈ ಪರಿಯಲ್ಲಿ ಅಯ್ಯಾ ಪ್ರಸಾದ ಪಾಲಿಸೆಂದು ಪಡಕೊಂಡು
ಲಿಂಗಕ್ಕೆ ತೋರಿ ತೋರಿ ತಮ್ಮ ಉದರಾಗ್ನಿ ಅಡಗಿಸಿಕೊಂಡು,
ಕಡೆಯಲ್ಲಿ ಎಣ್ಣೆಯ ನಾತಕ್ಕೆ ಅಲಗ ನೆಕ್ಕುವ ಶ್ವಾನನ ಹಾಗೆ
ತಮ್ಮ ನಾಲಿಗಿಯಲಿ ತಳಗಿ ತಾಬಾಣವ ನೆಕ್ಕಿ ನೆಕ್ಕಿ,
ಆ ತಳಗಿ ತಾಬಾಣ ಸವೆದು ಸಣ್ಣಾಗಿ ಹೋದವಲ್ಲದೆ,
ಇಂತಪ್ಪ ಮತಿಭ್ರಷ್ಟ ಹೊಲೆಯ ಮಾದಿಗರಿಗೆ
ಪರಶಿವನ ಮಹಾಪ್ರಸಾದ ಸಾಧ್ಯವೇ? ಸಾಧ್ಯವಲ್ಲ.
ಮುಂದೆ ಎಂಬತ್ತುನಾಲ್ಕುಲಕ್ಷ
ಯೋನಿದ್ವಾರದಲ್ಲಿ ತಿರುಗಿ ತಿರುಗಿ
ಭವದತ್ತ ಮುಖವಾಗಿ ನರಕವನೆ
ಭುಂಜಿಸುವದು ಉಂಟೆಂದ ನಿಮ್ಮ ಶರಣ ವೀರಾಧಿವೀರ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./205
ಗುರುವೆನಲು ಕೊರವದು ಭವಗಜವು.
ಗುರುವೆನಲು ಹರಿವದು ಬಹುಜನ್ಮದ ದೋಷವು.
ಗುರುವೆನಲು ಮುನ್ನೂರರುವತ್ತು ರೋಗಾದಿ ಬಾಧೆಗಳು
ಸಂಹಾರವಾಗುವವು.
ಗುರುವೆನಲು ಕಾಲಕಾಮಮಾಯಾದಿಗಳ ಭೀತಿ ಕಂಟಕಗಳು
ಸಂಹಾರವಾಗುವವು.
ಗುರುವೆನಲು ಸಕಲೈಶ್ವರ್ಯ ದೊರಕೊಂಬುವದು.
ಇಂತಪ್ಪ ಗುರುವಿನ ಶ್ರೀಚರಣಕ್ಕೆರಗಿ
ನಮೋ ನಮೋ ಎಂದು ಬದುಕಿದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./206
ಗೊಲ್ಲಂಗೆ ಕಲ್ಲಿನ ಕಷ್ಟ, ಅಗ್ನಿಯ ತಪದ್ಯೋಗಿಗಳ
ಸ್ತುತಿ ನಿಂದ್ಯ ಆವ ಪ್ರೇಮದ ಉಲ್ಲಾಸ
ಸಂದುಸಂಶಯ ನಿಮಿಷಾರ್ಧವಿಲ್ಲ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./207
ಗೊಲ್ಲನ ಕೊಳಲಧ್ವನಿ ಕೇಳಿ
ಹಂದಿ ನಾಯಿ ಎಮ್ಮೆ ಕೋಣ ಸರಳ ಕೊಂಬಿನಪಶುಗಳು
ಸಾಯದೇ ಇರ್ಪವು.
ಕೊಂಬಿಲ್ಲದ ಪಶುವು ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು
ಮೊದಲಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಸತ್ತಿರ್ಪರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./208
ಚಮ್ಮಾರನಲ್ಲಿ ಮಚ್ಚೆಯ ಕೊಂಡು
ಆರಿಗೂ ಸಿಕ್ಕದೆ ಪೋದರು ಕೆಲವರು.
ಮಚ್ಚೆಯ ಕೊಂಡು ಮೆಟ್ಟದೆ ಕರದಲ್ಲಿ ಪಿಡಿದು
ಕನ್ನಡಿಯಂತೆ ನೋಡಿ ಮರುಳಾಗಿ ಸಿಕ್ಕಿ ಪೋದರು ಕೆಲವರು.
ಕೊಳ್ಳದೆ ಪಿಡಿಯದೆ ಮಚ್ಚೆಯ ಮೆಟ್ಟಿ
ಪೋದರು ಹಲವಕೊಬ್ಬರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./209
ಚಿತ್ರವನರಿಯದವರು
ಕೋಟಲೆಯಗೊಂಡು ಬರುವರು.
ಚಿತ್ರವನರಿದು ನುಂಗಿದವರು
ಕೋಟಲೆಯನಳಿದು ಬಾರದೆ ಪೋದರು.
ಈ ಉಭಯದ ಭೇದವನರಿದು ನುಂಗಿದವರು
ಹಾಂಗಾದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./210
ಜಂಗಮರ ಕಂಡರೆ ಜರಿವರು,
ಜೋಗಿ ಸನ್ಯಾಸಿಯ ಕಂಡರೆ ನಮಿಸುವರು.
ಲಿಂಗವ ಕಂಡರೆ ಹಿಂಗುವರು,
ಗಾಂಜಿ ಭಂಗಿಯುಳ್ಳವರ ಕಂಡರೆ ಬಗ್ಗುವರು.
ಹರಪೂಜೆಯೆಂದರೆ ಜರಿಯುವರು,
ನರಪೂಜೆಯೆಂದರೆ ಉಬ್ಬುವರು,
ಗುರು ಕೊಟ್ಟ ಲಿಂಗವ ನಂಬರು;
ವಿಪ್ರ ಮೊದಲು ಶ್ವಪಚರ ಕಡೆಯಾಗಿ
ನೂರೊಂದು ಕುಲದವರು ಕೂಡಿ ನೆರೆದು
ಒಂದು ಕಾಡಗಲ್ಲ ತಂದು ಲಿಂಗವೆಂದು
ನಡಸಿದ ಲಿಂಗಕ್ಕೆ ಒಂದೊತ್ತು ಉಪವಾಸ ಮಾಡಿ
ನೇಮನಿತ್ಯದಿಂದ ನಡೆವವರು
ಶರಣರೆಂದೊಡೆ ನಿಮ್ಮ ಪ್ರಮಥರು ನಗುವರಯ್ಯಾ.
ಶಿವನು ಒಲಿ ಒಲಿ ಎಂದಡೆ
ಇಂತಪ್ಪ ವ್ರತಭ್ರಷ್ಟ ಸೂಳೆಯ ಮಕ್ಕಳಿಗೆ
ಎಂತೊಲಿವನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./211
ಜಲದೊಳಗಣ ಸೂರ್ಯನಂತೆ;
ಭೂಮಿಯೊಳಗಣ ದ್ರವ್ಯದಂತೆ;
ಕಾಷ್ಠದೊಳಗಣ ಪಾವಕನಂತೆ;
ಪುಷ್ಪದೊಳಗಣ ಪರಿಮಳದಂತೆ;
ಕ್ಷೀರದೊಳಗಣ ಘೃತದಂತೆ;
ಇರ್ದಿರಯ್ಯ, ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. /212
ಜ್ಯೋತಿ ಉದಕದಂತೆ ಲಿಂಗೈಕ್ಯರು.
ಭೂಮಿ ಆಕಾಶದಂತೆ ಲಿಂಗೈಕ್ಯರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./213
ತನ್ನ ಗ್ರಾಮವಬಿಟ್ಟು ಅನ್ಯಗ್ರಾಮದಲ್ಲಿರಲು,
ಒಡೆಯರು ನವಮುಗ್ಧರ ಕಳುಹಲು
ನವಮುಗ್ಧರ ನವಹಳ್ಳಿಗೆ ಕಳುಹಿ,
ಹಣವ ಧಣಿಯಂಗೆ ಮುಟ್ಟಿಸಿ
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./214
ತಮ್ಮನ ಪ್ರಸಾದ, ಅಣ್ಣಗಲ್ಲದೆ
ಅಣ್ಣನ ಪ್ರಸಾದ ತಮ್ಮಗಿಲ್ಲ.
ಅಳಿಯನ ಪ್ರಸಾದ ಮಾವಗಲ್ಲದೆ
ಮಾವನ ಪ್ರಸಾದ ಅಳಿಯನಿಗಿಲ್ಲ.
ತಂಗಿಯ ಪ್ರಸಾದ ಅಕ್ಕಗಲ್ಲದೆ
ಅಕ್ಕನ ಪ್ರಸಾದ ತಂಗಿಗಿಲ್ಲ.
ಹೆಂಡತಿಯ ಪ್ರಸಾದ ಗಂಡಗಲ್ಲದೆ
ಗಂಡನ ಪ್ರಸಾದ ಹೆಂಡತಿಗಿಲ್ಲ.
ಮಗನ ಪ್ರಸಾದ ತಂದೆಗಲ್ಲದೆ
ತಂದೆಯ ಪ್ರಸಾದ ಮಗನಿಗಿಲ್ಲ.
ಹೊಲೆಯನ ಪ್ರಸಾದ ಶೀಲವಂತಗಲ್ಲದೆ
ಶೀಲವಂತನ ಪ್ರಸಾದ ಹೊಲೆಯನಿಗಿಲ್ಲ.
ಇಂತಪ್ಪ ಪ್ರಸಾದದ ಭೇದವ ಬಲ್ಲರೆ
ಪ್ರಾಣಲಿಂಗಿ ಪ್ರಸಾದಿಯೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./215
ತಲೆಯಿಲ್ಲದ ಪುರುಷನಿಗೆ ಕಾಲಿಲ್ಲದ ಸ್ತ್ರೀ.
ಕುಲಗೇಡಿ ಗಂಡಗೆ ಅನಾಚಾರಿ ಹೆಂಡತಿ.
ಇಬ್ಬರ ಸಂಗದಿಂದುತ್ಪತ್ಯವಿಲ್ಲದ ಒಂದು ಶಿಶುವು ಹುಟ್ಟಿ,
ಒಡಹುಟ್ಟಿದ ಬಂಧುಗಳ ಕೊಂದು,
ತಂದಿತಾಯಿಯ ಹತವ ಮಾಡಿ,
ಸತ್ತವರ ನುಂಗಿ, ಬದುಕಿದವರ ಹೊತ್ತು
ಇತ್ತ ಮರದು, ಅತ್ತ ಹರಿದು,
ಸತ್ತು ಕಾಯಕವ ಮಾಡುತಿರ್ದುದು ಶಿಶು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./216
ತಾಡಿನಮರದಮೇಲೆ ತೆಂಗಿನಮರವ ಕಂಡೆ.
ಟೆಂಗಿನಮರದಮೇಲೆ ಮಾವಿನಮರವ ಕಂಡೆ.
ಮಾವಿನಮರದಲ್ಲಿ ಮೇಲುದೇಶದ ಪಕ್ಷಿ ಗೂಡನಿಕ್ಕಿದುದ ಕಂಡೆ.
ಶ್ವೇತವರ್ಣ ಅಗ್ನಿಮುಖ ಕಿಡಿಗಣ್ಣು
ಅಂಡಜಾತಪಕ್ಷಿ ಇರುವುದ ಕಂಡೆ.
ತತ್ತಿಯಲ್ಲಿ ಎರಡು ಪಕ್ಷಿ ಪುಟ್ಟಿದುದ ಕಂಡೆ.
ನಡುವಲ್ಲಿ ಹಲವು ಮರಿಗಳುದಯವಾದುದ ಕಂಡೆ.
ಕಾಗಿಯ ಮರಿಗಳು ನುಂಗಿ ಪಕ್ಷಿಯ ಕೊಂದು
ಉಭಯ ಮರ ಮೆಟ್ಟಿ ಹಾರಿ ಮಾವಿನಮರದ ಗೂಡಿನಲ್ಲಿ ಅಡಗಲು
ಆ ಮರ ಬಯಲಾಯಿತ್ತು.
ಅದಡಗಿದಲ್ಲಿ ಅದಡಗಿದಾತನೇ ಮಾಯಾಕೋಳಾಹಳ ಶರಣನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /217
ತೀಸಹಿದರು ಆ ಕರ್ ಬಚ್ಚ್ಯಾಕು ಘರ್ಮೇ
ಆಗಮೇ ಜಲ್ಕು ಸಾಹೇಬಕು ಘರ್ಮೇ ಕರ್ಕರ್
ಸುಂತಿ ದಿಯಾತೋ ವೋ ಜಾಕರ್ ಪಾಚ್ಭಾಮೇ ಮರಗಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./218
ತುಡುಗುವ್ಯಾಪಾರದವರಿಗೆ, ಶೀಲವಂತರಿಗೆ
ಕಾಷ್ಠಲೋಹದ ಪಡಿಯಲ್ಲದೆ ಬಣ್ಣದ ಪಡಿಯ ಕೊಡರು.
ಅಧಮ, ಅಂಧಕ, ಹೆಳವರಾದ ಹೊಲೆಮಾದಿಗರಿಗೆ
ಬಣ್ಣದ ಪಡಿಯ ಕೊಟ್ಟು
ಕಾಯಕವ ಮಾಡುತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./219
ತೊಟ್ಟ ಕಾಶಿಯ ಕಳೆಯದೆ ಸುಟ್ಟು,
ಕಟ್ಟಿದ ವೀರಕಂಕಣ ಬಿಚ್ಚದೆ ಕಳೆದು,
ಮೂರುಲೋಕದ ಗಂಡನೆಂದು ಮುಂಡಿಗೆಯ ಹಾಕಿ
ಕಾಯಕವ ಮಾಡುತ್ತಿರ್ದೆನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./220
ತ್ರಿಪುರಮಧ್ಯದಲ್ಲಿ ಮೂರಾರು ಮಂಡಲ ಇರ್ಪುದ ಕಂಡೆ.
ಮಂಡಲದ ಮಧ್ಯದಲ್ಲಿ ಅಗ್ನಿಪರ್ವತವ ಕಂಡೆ.
ಪರ್ವತಾಗ್ರದಲ್ಲಿ ಸಾವಿರಕಂಬದ ಮಂಟಪವ ಕಂಡೆ.
ಮಂಟಪದ ಮಧ್ಯದಲ್ಲಿ ಬಿಳಿಯತಾವರೆಯ ಕಮಲವ ಕಂಡೆ.
ಕಮಲದಲ್ಲಿ ಅಗಣಿತಕೋಟಿ ರವಿಶಶಿಕಳೆಯ ನುಂಗಿದ
ನವರತ್ನದ ತಗಡವ ಕಂಡೆ.
ಕಂಡವರು ಹಿಂಗಿ ಕಾಣದವರು ಬಂದು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./221
ದಿನಚರಿ ಮಾಸದೊಳಗೆ ಏಳು ವಾರದೊಳಗೆ
ಸೋಮವಾರ ಉಪವಾಸ ಮಾಡಬೇಕೆಂಬಿರಿ.
ದ್ವಾದಶಮಾಸದೊಳಗೆ ಶ್ರಾವಣಸೋಮವಾರ
ಉಪವಾಸಮಾಡಬೇಕೆಂಬಿರಿ.
ಮಾಘಮಾಸದ ಚತುರ್ದಶಿ ಉಪವಾಸ
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂಬಿರಿ.
ಇಂತೀ ವಾರ, ಮಾಸ, ತಿಥಿಯಲ್ಲಿ
ಅನ್ನ ಉದಕವ ತೊರೆದು, ಉಪವಾಸ ಮಾಡಿ,
ಆತ್ಮವ ಬಳಲಿಸಿ, ತನುವನೊಣಗಿಸಿ,
ನೀವು ವ್ರತವನಾಚರಿಸಿದಡೆ
ನಿಮ್ಮ ಆತ್ಮದ್ರೋಹವು ಆ ದೇವತೆಗಳಿಗೆ ತಾಕಿ
ಭವಭವದಲ್ಲಿ ಬೀಳುವರು.
ಇದು ಕಾರಣವಾಗಿ ಉಪವಾಸ ಮಾಡಲಾಗದು.
ಉಪವಾಸ ಮಾಡಿದಲ್ಲಿ ಪ್ರಯೋಜನವಿಲ್ಲ.
ಅದೆಂತೆಂದಡೆ : ಉಂಡುಟ್ಟು ಲಿಂಗವ ಪೂಜಿಸಬೇಕು.
ಉಣಿಸಿ ಉಡಿಸಿ ಜಂಗಮವನರ್ಚಿಸಬೇಕು.
ಕೊಟ್ಟು ಕೊಂಡು ಗುರುವನರ್ಚಿಸಬೇಕು.
ಇಂತೀ ತ್ರಿವಿಧದ ಭೇದ ಬಲ್ಲರೆ
ಉಪವಾಸವ ಮಾಡಬಲ್ಲರೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./222
ದೀಕ್ಷೊಪದೇಶವ ಮಾಡಿ ಗುರುವಿನ
ಕಣ್ಣ ಕಳೆದು ತಲೆ ಹೊಡೆದು ಮೂರು ಹಣವ ಕೊಂಡೆ.
ದೀಕ್ಷೊಪದೇಶವ ಹಡೆದ ಭಕ್ತರ ನಾಲಗೆಯ ಕೊಯ್ದು
ಕೈ ಮುರಿದು ಮೂರು ಹಣವ ಕೊಂಡೆ.
ಈ ಗುರುಶಿಷ್ಯರುಭಯರ ಸಂಯೋಗಕಾಲದಲ್ಲಿರುವ
ಸಾಕ್ಷಿಗಣಂಗಳ ಮನೆಯ ಸುಟ್ಟು ಮೂರು ರತ್ನವ ಕೊಂಡೆ.
ಇಂತೀ ಮೂವರ ಹಣವ ತಂದು ಗುರುವಿಗೆ ಕೊಟ್ಟು
ಕಾಯಕವ ಮಾಡುತ್ತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./223
ದೇವನಾದಡೆ ಅಗ್ನಿಯ ನುಂಗಬೇಕು.
ಭಕ್ತನಾದಡೆ ಮೂರು ನುಂಗಬೇಕು.
ದೇವರಿಗೆ ಎರಡಿಲ್ಲ; ಎರಡುಳ್ಳನ್ನಕ್ಕ ದೇವರಲ್ಲ.
ಅಗ್ನಿಯುಳ್ಳನ್ನಕ್ಕ ದೇವರಲ್ಲ.
ಕ್ರಿಯಕ್ಕೆ ಹೊರತಾದವರು ದೇವರಲ್ಲ.
ಇಂತಿಲ್ಲದೆ ದೇವರೆಂಬವರ ದರುಶನಕ್ಕೆ ಭವಬಂಧನವುಂಟು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./224
ದೇವರಿಗೆ ಅಗ್ನಿಯಿಲ್ಲ, ಪೂಜಾರಿಗೆ ಜಲವಿಲ್ಲ.
ಜನರಿಗೆ ಜೀವವಿಲ್ಲ, ಎನಗೆ ನೀವಿಲ್ಲ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./225
ದೇವರು ದೇವರು ಎಂದು ಬಳಲುತ್ತಿರ್ಪರು
ಬ್ರಹ್ಮಾಂಡದ ಜನರೆಲ್ಲರು.
ಅದೇನು ಕಾರಣವೆಂದಡೆ-
ತಾವೇ ದೇವರೆಂಬ ನಿಲುಕಡೆಯನರಿಯದೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./226
ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ?
ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ?
ಎಲಾ ಮರುಳಗಳಿರಾ, ಕಲ್ಲು ದೇವರೆಂಬಿರಿ,
ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ?
ಕಟ್ಟಿಗೆ ದೇವರೆಂಬಿರಿ,
ಕಟ್ಟಿಗೆ ದೇವರೆಂದರೆ ಅಗ್ನಿಯಿಂದ ಪ್ರಳಯವಾಗದೆ ?
ಮಣ್ಣು ದೇವರೆಂಬಿರಿ,
ಮಣ್ಣು ದೇವರಾದಡೆ ಜಲದಿಂದ ಪ್ರಳಯವಾಗದೆ ?
ನೀರು ದೇವರೆಂಬಿರಿ,
ನೀರು ದೇವರಾದಡೆ ಅಗ್ನಿಯಿಂದ ಅರತುಹೋಗದೆ ?
ಅಗ್ನಿ ದೇವರೆಂಬಿರಿ,
ಅಗ್ನಿ ದೇವರಾದಡೆ ಜಲದಿಂದ ಪ್ರಳಯವಾಗದೆ ?
ಇಂತೀ ದೇವರೆಂದು ನಂಬಿ ಪೂಜಿಸಿದ ಜೀವಾತ್ಮರು
ಇರುವೆ ಮೊದಲು ಆನೆ ಕಡೆ
ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ
ರಾಟಾಳ ತಿರುಗಿದಂತೆ
ಜನನಮರಣಗಳಿಂದ
ಎಡೆಯಾಡುತಿಪ್ಪರು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./227
ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./228
ದ್ವಾದಶಮಾಸದೊಳಗೆ ಶ್ರಾವಣಮಾಸದ ಫಲಪುಣ್ಯ ಮಹಾದೊಡ್ಡದೆಂದು,
ವೇದ, ಪುರಾಣ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಶ್ರಾವಣಮಾಸ ತಿಂಗಳಪರಿಯಂತರವಾಗಿ,
ನಿತ್ಯದಲ್ಲಿ ವ್ರತವನಾಚರಿಸುವರ ಆಚರಣೆಯ ಪೇಳ್ವೆ
ಅದೆಂತೆಂದಡೆ : ಶ್ರಾವಣಮಾಸ ಪಾಡ್ಯದಿವಸ ಮೊದಲು ಮಾಡಿ
ನಿತ್ಯದಲಿ ಒಬ್ಬ ಜಂಗಮದ ಪಾದವ ಪಿಡಿದು,
ಪತ್ರಿ ಪುಷ್ಪ ನಿತ್ಯದಲ್ಲಿ ತಂದು,
ಪಾದಪೂಜೆಯ ಮಾಡಿ, ಪಾದೋದಕ ಪ್ರಸಾದವ ಕೊಂಡು
ಆ ಜಂಗಮಸಹಿತನಾಗಿ ಮೃಷ್ಟಾನ್ನಭೋಜನವ
ಹಾ ಹಾ ಎಂದು ಒಟ್ಟಿಸಿಕೊಂಡು ಒಡಲತುಂಬಿಸಿಕೊಂಡು,
ಮತ್ತೆ ಮರಳಿ ಸಾಯಂಕಾಲಕ್ಕೆ ಫಲಹಾರವೆಂದು ಮಾಡಿಸಿ ತಿಂದು,
ನಾವು ಶ್ರಾವಣಮಾಸ ಒಂದೊತ್ತು ಉಪವಾಸ,
ನಿತ್ಯದಲ್ಲಿ ಜಂಗಮದ ತೀರ್ಥಪ್ರಸಾದ
ತಪ್ಪದೆ ಕೊಂಬ ವ್ರತವುಳ್ಳವರೆಂದು
ತಮ್ಮ ಬಿಂಕದ ಮಾತ ಮೂಢಾತ್ಮರ ಮುಂದೆ ಬೀರುವರಯ್ಯ.
ಇಂತಪ್ಪ ತಾಮಸಗುಣವುಳ್ಳ ಅಹಂಕಾರಿಗೆ
ವೀರಮಾಹೇಶ್ವರರೆಂದಡೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭು ಮೆಚ್ಚುವನೆ ?
ಮೆಚ್ಚನಯ್ಯ ನರಕದಲ್ಲಿಕ್ಕೆಂದ ನೋಡಾ./229
ನವಖಂಡಪೃಥ್ವಿ ಎಂಬುದು ಪಂಚಶತಕೋಟಿ ಯೋಜನ.
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಕ್ಕೆ
ಮಂಡಲಾಕಾರವಾದ ಭೂಮಂಡಲ ಒಂದೇ
ಅಂತಪ್ಪ ಭೂಮಂಡಲದ ಮಧ್ಯದಲ್ಲಿ
ಸಪ್ತಸಮುದ್ರ, ಸಪ್ತದ್ವೀಪಾಂತರ
ಹಿಮಾಚಲ ಮಹಾಮೇರುವರ್ಪತ ಮೊದಲಾದ
ಅಷ್ಟ ಪರ್ವತಂಗಳು.
ಕಾಶಿ, ರಾಮೇಶ್ವರ ಮೊದಲಾದ
ಮುನ್ನೂರಾ ಅರುವತ್ತು ಕ್ಷೇತ್ರಂಗಳು.
ಕೃಷ್ಣಾ, ಭಾಗೀರಥಿ, ಯಮುನಾ, ಸರಸ್ವತಿ, ಗಂಗಾ
ಮೊದಲಾದ ಅರುವತ್ತಾರುಕೋಟಿ ತೀರ್ಥಂಗಳು
ಇಂತೀ ತೀರ್ಥಕ್ಷೇತ್ರಂಗಳ ತೆತ್ತೀಸಕೋಟಿ ದೇವರ್ಕಳು ಸ್ಥಾಪಿಸಿದರು.
ಮತ್ತಂ, ಮಂದಮತಿಗಳಾದ ಜೀವಾತ್ಮರು ಕೂಡಿ,
ಇದು ದೇವಭೂಮಿ, ಇದು ಹೊಲೆಭೂಮಿ,
ಇದು ಮಠಮಾನ್ಯದ ಭೂಮಿ, ಇದು ಗ್ರಾಮ ಗೃಹದ ಭೂಮಿ,
ಇದು ಲಿಂಗಸ್ಥಾಪನೆಯಾದ ರುದ್ರಭೂಮಿ, ಇದು ಶ್ಮಶಾನ ಭೂಮಿ
ಎಂದು ಹೆಸರಿಟ್ಟು ಸ್ಥಾಪನೆಯ ಮಾಡುವಿರಿ.
ಎಲಾ ದಡ್ಡ ಪ್ರಾಣಿಗಳಿರಾ,
ಇದಕೊಂದು ದೃಷ್ಟವ ಪೇಳ್ವೆ ಕೇಳಿರಯ್ಯಾ.
ಅದೆಂತೆಂದೊಡೆ : ಒಂದು ನದಿಯಲ್ಲಿ ಕೋಲು ಹಾಕಿ,
ಗೆರೆಯ ಬರೆದು ಎರಡು ಮಾಡಿ,
ಇದು ಸೀ ಉದಕ, ಇದು ಲವಣೋದಕವೆಂದಡೆ
ಆಗಬಲ್ಲುದೇನಯ್ಯಾ ? ಆಗಲರಿಯದು.
ಮತ್ತಂ,
ಒಂದೇ ಬೇವಿನಮರದೊಳಗೆ
ಒಂದು ಶಾಖೆಗೆ ಮಾವಿನಹಣ್ಣು, ಒಂದು ಶಾಖೆಗೆ ಬೇವಿನಹಣ್ಣು,
ಒಂದು ಶಾಖೆಗೆ ಬಾಳೆಯಹಣ್ಣು,
ಒಂದು ಶಾಖೆಗೆ ಹಸಲು, ನೀರಲಹಣ್ಣು,
ಆಗೆಂದಡೆ ಆಗಬಲ್ಲವೇನಯ್ಯಾ ?
ಆಗಲರಿಯವು ಎಂಬ ಹಾಗೆ.
ಇಂತೀ ದೃಷ್ಟದಂತೆ ಒಂದು ನವಖಂಡಮಂಡಲಭೂಮಿಯೊಳಗೆ,
ಇದು ಮಂಗಲಭೂಮಿ, ಇದು ಅಮಂಗಳಭೂಮಿ,
ಇದು ಶುದ್ಧಭೂಮಿ, ಇದು ಅಶುದ್ಧಭೂಮಿ,
ಎಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು.
ಅದೇನು ಕಾರಣವೆಂದಡೆ : ಆದಿ ಅನಾದಿಯಿಂದತ್ತತ್ತಲಾದ ಪರಶಿವನ
ಮಹಾ ಪ್ರಸಾದದಿಂದುದ್ಭವಿಸಿದ ಬ್ರಹ್ಮಾಂಡವು,
ಒಮ್ಮೆ ಶುದ್ಧ ಒಮ್ಮೆ ಅಶುದ್ಧವಾಗಬಲ್ಲುದೆ ಎಲೆ ಮರುಳ ಮನುಜರಿರಾ.
ನಿಮ್ಮ ಮನದ ಸಂಕಲ್ಪ ವಿಕಲ್ಪದಿಂ
ಶುದ್ಧ ಅಶುದ್ಧವಾಗಿ ತೋರುವುದಲ್ಲದೆ.
ನಿಮ್ಮ ಮನದ ಸಂಕಲ್ಪವನಳಿದಡೆ
ಸಕಲಬ್ರಹ್ಮಾಂಡಗಳೆಲ್ಲ ನಿರ್ಮಳವಾಗಿ ತೋರುವವು.
ನಿಮ್ಮ ಮನದ ಸಂಕಲ್ಪವನಳಿಯದಿರ್ದಡೆ
ಸಕಲಬ್ರಹ್ಮಾಂಡಗಳೆಲ್ಲ ಅಮಂಗಳವಾಗಿ ತೋರುವವು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./230
ನವಖಂಡಮಂಡಲದೊಳಗೊಂದು
ಅದ್ಭುತವಾದ ಪಟ್ಟಣವಿಪ್ಪುದು.
ಆ ಪಟ್ಟಣಕ್ಕೆ ಮೂರಾರು ಕೊತ್ತಲ,
ಎರಡೆಂಟು ಬುರುಜು, ಸಪ್ತ ಅಗಳತ,
ಎಂಟೊಂದು ದರವಾಜ, ಉಭಯ ಕವಾಟ,
ಷಡ್ವಿಧನಾಯಕರು, ಐವರು ತಳವಾರರು,
ಮೂರುಮಂದಿ ಹುದ್ದೇದಾರರು, ನಾಲ್ಕುಮಂದಿ ಕರಣಿಕರು,
ತಲೆಯಿಲ್ಲದ ಮಂತ್ರಿ, ಕಣ್ಣಿಲ್ಲದ ರಾಜನಾಗಿಹ,
ಮೂರಾರು ಕೆಡಿಸಿ, ಎರಡೆಂಟು ಹಿಟ್ಟಗುಟ್ಟಿ,
ಸಪ್ತ ಎಂಟೊಂದ ಮುಚ್ಚಿ,
ಎರಡು ಕಿತ್ತು, ಆರು ಆಯಿದು ಹರಿಗಡಿದು,
ಮೂರುನಾಲ್ಕು ಮುರಿಗಡಿದು,
ಮಂತ್ರಿಗೆ ತಲೆ ರಾಜನಿಗೆ ಕಣ್ಣು ಬಂದಲ್ಲದೆ,
ಆ ಪಟ್ಟಣ ಆರಿಗೂ ಸೌಖ್ಯವೇ? ಸೌಖ್ಯವಲ್ಲ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./231
ನಾ ಪುಟ್ಟಿದುದ ಎಲ್ಲರೂ ಬಲ್ಲರು.
ನೀ ಪುಟ್ಟಿದುದನಾರೂ ಅರಿಯರಲ್ಲಾ !
ನನ್ನ ಗುಣಚಾರಿತ್ರ ಎಲ್ಲರೂ ಬಲ್ಲರು ;
ನಿನ್ನ ಗುಣಚಾರಿತ್ರವನಾರೂ ಅರಿಯರಲ್ಲಾ !
ಎನ್ನಾಟ ಸೂಳೆಯರ ಬ್ಯಾಟ
ನಿನ್ನಾಟ ಹೊಲತಿಯರ ಕೂಟ.
ಎನ್ನವರು ನಿನ್ನ ಸೇರರು, ನಿನ್ನವರು ಎನ್ನ ಸೇರರು.
ಇಂತೀ ಉಭಯದ ಸಂದ ತಿಳಿದಾತನೇ ಐಕ್ಯ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./232
ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ
ದ್ವಾದಶಮಂತ್ರವ ಕಲಿಸಿದ.
ಒಂದು ಮಂತ್ರದಿಂದ ಮರ್ತ್ಯಲೋಕವ ಸುಟ್ಟೆ.
ಒಂದು ಮಂತ್ರದಿಂದ ಪಾತಾಳಲೋಕವ ಸುಟ್ಟೆ.
ಒಂದು ಮಂತ್ರದಿಂದ ಸ್ವರ್ಗಲೋಕವ ಸುಟ್ಟೆ.
ಮೂರು ಮಂತ್ರದಿಂದ ಮುಪ್ಪುರದರಸುಗಳ ಕೊಂದೆ.
ಆರು ಮಂತ್ರದಿಂದ ಆರು ವರ್ಣವ ಸುಟ್ಟೆ.
ಇಂತೀ ಮಂತ್ರವ ಮಂತ್ರಿಸುವ ವೇಳೆಯಲ್ಲಿ
ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./233
ನಾನು ಪರಶಿವತತ್ವದಿಂ ಭಿನ್ನವಾಗಿ
ಶಿವಕೃಪೆಯಿಂ ಮರ್ತ್ಯಲೋಕದಲ್ಲಿ
ದೇಹಸಂಬಂಧಿಯಾಗಿ ಪುಟ್ಟದೇ ಮೋಹಯೆಂದು ಇರುತ್ತಿರಲು,
ಎನ್ನ ಕುಲದವರೆಂದಡೆ ಜೀವಾತ್ಮರು.
ಅಂತಪ್ಪ ಜೀವಾತ್ಮರು ಬಂದು
ನೀನಾವ ಕುಲದವನೆಂದು ವಿಚಾರಿಸಲು
ಎನ್ನ ನಿಜವ ಮರೆದು ನಾನು ಕರಿಕುಲದವನೆಂದಡೆ
ನಗುವರಯ್ಯ ನಿಮ್ಮ ಶರಣರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./234
ನಿನ್ನಿನವರೂ ಇಂದಿನವರೂ ನಾಳಿನವರೂ ಹೋದ ದಾರಿ
ಒಂದಲ್ಲದೆ ಎರಡಿಲ್ಲ ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /235
ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ,
ನಿಮ್ಮ ತಂದಿಯ ತಂದಿ ಸತ್ತದ್ದು ಕಾಣುತ್ತಿದ್ದಿ,
ನಿಮ್ಮ ಅಜ್ಜ ಪಣಜ ಸತ್ತದ್ದು ಕೇಳುತ್ತಿದ್ದಿ,
ನಿಮ್ಮ ತಾಯಿ ಸತ್ತದ್ದು ನೋಡುತ್ತಿದ್ದಿ,
ನಿಮ್ಮ ತಾಯಿಯ ತಾಯಿ ಸತ್ತದ್ದು ಕಾಣುತ್ತಿದ್ದಿ,
ನಿಮ್ಮ ತಾಯಿಯ ಅಜ್ಜಿ ಪಣಜಿ ಸತ್ತದ್ದು ಕೇಳುತ್ತಿದ್ದಿ.
ನಿನ್ನ ಸತಿಸುತರು ಒಡಹುಟ್ಟಿದ ಬಂಧುಗಳು
ಸ್ನೇಹಿತರು ಬೀಗರು ಮೊದಲಾದ ಸಕಲಲೋಕಾದಿಲೋಕಂಗಳು
ನಿಮ್ಮ ಕಣ್ಣಮುಂದೆ ವೃಕ್ಷದ ಪರ್ಣಗಳು ಉದುರಿದ ಹಾಗೆ
ಸಕಲರು ಅಳಿದುಹೋಗುವುದ ನೋಡುತ್ತಿದ್ದಿ.
ಇದಲ್ಲದೆ ದೃಷ್ಟಾಂತ: ಒಬ್ಬ ರೋಮಜಋಷಿಗೆ
ಮೂರುವರೆಕೋಟಿ ರೋಮಂಗಳುಂಟು,
ಅಂತಹ ಋಷಿಗೂ ಕೃತಯುಗ, ತ್ರೇತಾಯುಗ,
ದ್ವಾಪರ, ಕಲಿಯುಗವೆಂಬ ಚತುರ್ಯುಗ ಪ್ರಳಯವಾದಲ್ಲಿ
ಒಂದು ರೋಮ ಉದುರುವದು.
ಹೀಗೆ ಈ ಪರಿಯಲ್ಲಿ ಮೂರುವರೆಕೋಟಿ ರೋಮಂಗಳು
ಉದುರಿದಲ್ಲಿ ಆ ರೋಮಋಷಿಯೆಂಬ
ಮುನೀಶ್ವರನು ಪ್ರಳಯವಾಗುವನು.
ಮತ್ತೆ ದೇವಲೋಕದ ಸನಕ ಸನಂದಾದಿ
ಮುನಿಜನಂಗಳು ಅನಂತಕೋಟಿ ಋಷಿಗಳು
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ
ತೆತ್ತೀಸಕೋಟಿ ದೇವರ್ಕಳು ಇಂತಿವರೆಲ್ಲರು
ಎತ್ತಲಾನುಕಾಲಕ್ಕೆ ಮರಣಕ್ಕೆ ಒಳಗಾದರು.
ವೇದಾಗಮ ಶಾಸ್ತ್ರ ಪುರಾಣ ಶ್ರುತಿ ಪ್ರಮಾಣಗಳಿಂದ
ಮತ್ತೆ ಹರ, ಗುರು, ಪುರಾತನರ ವಾಕ್ಯದಿಂದ
ನಿಮ್ಮ ಉಭಯ ಕರ್ಣದಿಂ ಕೇಳುತ್ತಿದ್ದಿ.
ಇಂತೀ ಎಲ್ಲವನು ಕಂಡು ಕೇಳಿ ಗಾಢನಿದ್ರೆಯ ಮನುಷ್ಯನ ಹಾಂಗೆ
ನಿನ್ನ ನಿಜಸ್ವರೂಪವ ಮರದು ತ್ರಿವಿಧಮಲವ ಕಚ್ಚಿ
ಶುನಿ ಶೂಕರನ ಹಾಗೆ ಕಚ್ಚಿ ಕಡಿದಾಡಿ
ಸತ್ತು ಹೋಗುವ ವ್ಯರ್ಥಗೇಡಿ
ಮೂಳ ಹೊಲೆಮಾದಿಗರ ಕಿವಿ ಹರಿದು,
ಕಣ್ಣುಗುಡ್ಡಿಯ ಮೀಟಿ, ನೆತ್ತಿಯ ಮೇಲೆ ಮೂರು ಪಟ್ಟೆಯನೆ ಕೆತ್ತಿ
ಅವನ ಮುಖದ ಮೇಲೆ ಹೆಂಡಗಾರನ ಮುಖದಿಂದ
ಲೊಟ್ಟಲೊಟ್ಟನೆ ಉಗುಳಿಸಿ ಪಡುವಲದಿಕ್ಕಿಗೆ ಅಟ್ಟೆಂದ ಕಾಣಾ
ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./236
ನಿರವಯನೆಂಬ ಗಣೇಶ್ವರನ ಶಿಷ್ಯ
ನಿರಾಮಯನೆಂಬ ಗಣೇಶ್ವರ.
ನಿರಾಮಯನೆಂಬ ಗಣೇಶ್ವರನ ಶಿಷ್ಯ
ನಿರಾಕುಳನೆಂಬ ಗಣೇಶ್ವರ.
ನಿರಾಕುಳನೆಂಬ ಗಣೇಶ್ವರನ ಶಿಷ್ಯ
ನಿರ್ಭೆದ್ಯನೆಂಬ ಗಣೇಶ್ವರ.
ನಿರ್ಭೆದ್ಯನೆಂಬ ಗಣೇಶ್ವರನ ಶಿಷ್ಯ
ನಿರ್ಮಳ ನಿಜೈಕ್ಯನೆಂಬ ಗಣೇಶ್ವರ.
ನಿರ್ಮಳ ನಿಜೈಕ್ಯನೆಂಬ ಗಣೇಶ್ವರನ ಶಿಷ್ಯ
ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರ.
ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರನ ಶಿಷ್ಯ
ನಿರಾಕಾರ ನಿರಾವರಣನೆಂಬ ಗಣೇಶ್ವರ.
ನಿರಾಕಾರ ನಿರಾವರಣನೆಂಬ ಗಣೇಶ್ವರನ ಶಿಷ್ಯ
ನಿರುಪಮನೆಂಬ ಗಣೇಶ್ವರ.
ನಿರುಪಮನೆಂಬ ಗಣೇಶ್ವರನ ಶಿಷ್ಯ
ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರ.
ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರನ ಶಿಷ್ಯ
ಸರ್ವಾಧಾರ ಸದಾಶಿವನೆಂಬ ಗಣೇಶ್ವರ.
ಸರ್ವಾಧಾರ ಸದಾಶಿವನೆಂಬ ಗಣೇಶ್ವರರ ಸ್ವರೂಪರಾದಂಥ
ಆದಿನಾಥೇಶ್ವರದೇವರು.
ಆದಿನಾಥೇಶ್ವರದೇವರ ಶಿಷ್ಯರು ಸತ್ಯೇಶ್ವರದೇವರು.
ಸತ್ಯೇಶ್ವರದೇವರ ಶಿಷ್ಯರು ಘಟಯಂತ್ರದೇವರು.
ಘಟಯಂತ್ರದೇವರ ಶಿಷ್ಯರು ಭೃಕುಟೇಶ್ವರದೇವರು.
ಭೃಕುಟೇಶ್ವರದೇವರ ಶಿಷ್ಯರು ವಿಶ್ವೇಶ್ವರದೇವರು.
ವಿಶ್ವೇಶ್ವರದೇವರ ಶಿಷ್ಯರು ಮುಕ್ತೇಶ್ವರದೇವರು.
ಮುಕ್ತೇಶ್ವರದೇವರ ಶಿಷ್ಯರು ಬ್ರಹ್ಮೇಶ್ವರದೇವರು.
ಬ್ರಹ್ಮೇಶ್ವರದೇವರ ಶಿಷ್ಯರು ಶಿವದೇವಯ್ಯನವರು.
ಶಿವದೇವಯ್ಯನವರ ಶಿಷ್ಯರು ಶಿವಜ್ಞಾನೇಶ್ವರದೇವರು.
ಶಿವಜ್ಞಾನೇಶ್ವರದೇವರ ಶಿಷ್ಯರು ಓಂಕಾರದೇವರು.
ಓಂಕಾರದೇವರ ಶಿಷ್ಯರು ಸೋಮಲಿಂಗದೇವರು.
ಸೋಮಲಿಂಗದೇವರ ಶಿಷ್ಯರು ಸಂಗಮೇಶ್ವರದೇವರು.
ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ
ಶಿಶುವು ಕಾಡಸಿದ್ಧ ನಾನಯ್ಯ.
ಹಾಂಗೆಂದು ಅನಾದಿವಿಡಿದು ಬಂದ ಗುರುಶಿಷ್ಯಸಂಬಂಧ,
ಹಾಂಗೆ ಅನಾದಿವಿಡಿದು ಬಂದ ಲಿಂಗ,
ಅನಾದಿವಿಡಿದು ಬಂದ ಜಂಗಮ,
ಅನಾದಿವಿಡಿದು ಬಂದ ಪಾದೋದಕ-ಪ್ರಸಾದ,
ಅನಾದಿವಿಡಿದು ಬಂದ ವಿಭೂತಿ-ರುದ್ರಾಕ್ಷಿ-ಮಂತ್ರ,
ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ.
ಅನಾದಿವಿಡಿದು ಬಂದ ವೀರಶೈವಷಟ್ಸ್ಥಲದ ಆಚಾರವು.
ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ
ನಿರ್ಮಾಯಪ್ರಭುವೆ./237
ನೀರಲ ಫಲ, ಉತ್ತತ್ತಿ, ಮಾವಿನ ಹಣ್ಣಿನಂತೆ
ಇರುವರು ಮರ್ತ್ಯರು.
ಹಲಸು, ತೆಂಗು, ದಾಳಿಂಬರದಂತೆ ಇರುವರು
ಸ್ವರ್ಗದವರು.
ಹಾಲು ಸಕ್ಕರೆ ಬೆಲ್ಲ ತುಪ್ಪದಂತೆ ಇರುವರು ನಿಮ್ಮವರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./238
ನೀರಿಲ್ಲದ ಭೂಮಿಯ ಹರಳು ತಂದು
ಊರ ಮಧ್ಯದ ನಡುವೆ ಬೆಂಕಿಯಿಲ್ಲದೆ ಸುಡಲು,
ಊರ ಸುಟ್ಟು ಹರಳುಳಿದು
ಉಳಿದ ಹರಳ ಕಂಗಳು ನುಂಗಿ ಹಿಂಗದೆ
ಹಿಂಗಿಸುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./239
ನೀರಿಲ್ಲದ ಭೂಮಿಯಲ್ಲೊಂದು ಬೇರಿಲ್ಲದ ವೃಕ್ಷಪುಟ್ಟಿ,
ಆ ವೃಕ್ಷದಗ್ರದಲ್ಲಿ ನವರತ್ನಯುಕ್ತವಾದ
ಶ್ವೇತವರ್ಣದ ಪಟ್ಟಣವಿಹುದು.
ಆ ಪಟ್ಟಣಕ್ಕೆ ದಾಳಿಯನಿಕ್ಕಿ,
ರಾಜನ ಸೆರೆಕೊಂಡೊಯ್ಯಬೇಕೆಂದು
ಮೂರುಲೋಕದ ರಾಜರು ಹವಣಿಸಿ ಹಿಂದಕ್ಕೆ ಬಿದ್ದರು.
ಅದರೊಳೊಬ್ಬ ರಾಜಂಗೆ ತಲೆಯಿಲ್ಲದೆ ಕಣ್ಣು ಬಂದು,
ಕೈಕಾಲಿಲ್ಲದೆ ಪಟ್ಟಣಕ್ಕೆ ದಾಳಿಯನಿಕ್ಕಿ
ರಾಜನ ಕೊಂಡೊಯ್ದ ಭೇದವ ಬಲ್ಲಾದಡೆ ಚಿಲ್ಲಿಂಗಸಂಬಂಧಿ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./240
ನೀರಿಲ್ಲದ ಮರದ ಬೇರ ತಂದು,
ಏಳು ಗುಳಿಗೆಯ ಮಾಡಿ
ಎನ್ನ ಕೈಯೊಳಗೆ ಕೊಟ್ಟನು ಗೊಲ್ಲನು.
ಆ ಏಳು ಗುಳಿಗೆಯನು- ಒಂದು ಬ್ರಹ್ಮಂಗೆ ಕೊಟ್ಟೆ,
ಒಂದು ವಿಷ್ಣುವಿಂಗೆ ಕೊಟ್ಟೆ,
ಒಂದು ಈಶ್Ùಳರಂಗೆ ಕೊಟ್ಟೆ, ಒಂದು ಸದಾಶಿವಂಗೆ ಕೊಟ್ಟೆ,
ಒಂದು ರುದ್ರಂಗೆ ಕೊಟ್ಟೆ, ಒಂದು ಪರಮೇಶ್ವರಂಗೆ ಕೊಟ್ಟೆ,
ಒಂದು ನಾ ನುಂಗಿ ಸತ್ತು ಬದುಕಿ
ಕಾಯಕವ ಮಾಡುತ್ತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./241
ನೀರಿಲ್ಲದ ಸಮುದ್ರದಲ್ಲಿ ಅಗ್ನಿಯು ಪುಟ್ಟಿ,
ಭೂಮಿಯ ತಳದಲ್ಲಿ ಪ್ರಜ್ವಲಿಸಿ,
ಆಕಾಶವನಡರಿ, ನೀರ ಕುಡಿದು ಭೂಮಿಯ ನುಂಗಿ
ಅಂಗಜನ ಅರಮನೆಯಲ್ಲಿ ಅಂಗಸಹಿತ ನಿರ್ವಯಲಾದ
ಭೇದವ ತಿಳಿಯಬಲ್ಲರೆ ಲಿಂಗೈಕ್ಯನೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./242
ನೀರಿಲ್ಲದ ಸಾಗರದಲ್ಲಿರ್ಪ ಮತ್ಸ್ಯಕ್ಕೆ
ಮುಳ್ಳಿಲ್ಲದ ಗಾಳವ ಹಾಕಿ,
ನೂಲಿಲ್ಲದ ದಾರವ ಹಚ್ಚಿ ಎಳೆದು
ಕೊಲ್ಲುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./243
ನೀರಿಲ್ಲದೆ ಬೆಳೆದ ಹುಲ್ಲು ಮೆಯ್ದ
ಪಶುವಿನ ಹಾಲು ಸಣ್ಣವರಿಗಲ್ಲದೆ ದೊಡ್ಡವರಿಗೆ ಇಲ್ಲ.
ಒಣಹುಲ್ಲು ಮೆಯ್ದ ಪಶುವಿನ ಹಾಲು
ಬಡವರಿಗಲ್ಲದೆ ಬಲ್ಲಿದರಿಗಿಲ್ಲ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./244
ನೀಲವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ.
ಪಂಚವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ.
ಶ್ವೇತವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ.
ಮುತ್ತಿನವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ.
ರಕ್ತವರ್ಣದ ಮಾಣಿಕಕ್ಕೆ ನಾಲ್ಕುಹೊನ್ನು ಕೊಟ್ಟೆ.
ಅಗ್ನಿವರ್ಣದ ಮಾಣಿಕಕ್ಕೆ ಒಂದುಹೊನ್ನು ಕೊಟ್ಟೆ.
ಸೂರ್ಯಪ್ರಕಾಶದ ಮಾಣಿಕಕ್ಕೆ ಮರ್ತ್ಯಲೋಕವ ಕೊಟ್ಟೆ.
ಚಂದ್ರಕಾಂತಿಯ ಮಾಣಿಕಕ್ಕೆ ಸ್ವರ್ಗಲೋಕವ ಕೊಟ್ಟೆ,
ಅಗ್ನಿಕಾಂತಿಯ ಮಾಣಿಕಕ್ಕೆ ಪಾತಾಳಲೋಕವ ಕೊಟ್ಟೆ
ಇಂತೀ ರತ್ನವ ಕೊಂಡು ಮಣಿಯ ಸುಟ್ಟು ಬೂದಿಯ ಧರಿಸಿ
ಕಾಯಕವ ಮಾಡುತಿರ್ದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./245
ನೆಲದೊಳಗಣ ಮಧುರದಂತೆ;
ಶಿಲೆಯೊಳಗಣ ಜ್ಯೋತಿಯಂತೆ;
ಶಬ್ದದೊಳಗಣ ನಿಶ್ಯಬ್ದದಂತೆ;
ಕಪ್ಪಿನೊಳಗಣ ರೂಪಿನಂತೆ
ಇರ್ದಿರಯ್ಯ, ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./246
ನೆಲನಿಲ್ಲದ ಭೂಮಿಯ ಪಕ್ಷಿ
ನೆಲದಲ್ಲಿ ಬಂದು ಚರಿಸಲು,
ಆ ನೆಲದೊಡೆಯರು ಚರಿಸ್ಯಾಡುವ ಪಕ್ಷಿಗೆ
ಬಲಿಯ ಬೀಸಿ ಕೊಂಡು ಎಲ್ಲರು ತಿಂದು,
ತಿಂದ ಪಕ್ಷಿಯ ನಾ ಕೊಂದು ಪಾಕವ ಮಾಡಿ
ಬಾಲದಂಡಂಗೆ ಕೊಟ್ಟು ಬೇಟೆಯನಾಡುವೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./247
ನೆಲನಿಲ್ಲದ ಭೂಮಿಯಲ್ಲಿ ಪುಟ್ಟಿದ
ವೃಕ್ಷದ ಬೇರು ತಂದು,
ಆ ಬೇರಿನಿಂದ ಮೂರೆಸಳ ತೆಗೆದು,
ಆರು ಕಾಲು ಹಚ್ಚಿ, ಒಂದು ಬುಟ್ಟಿಯ ಹೆಣೆದು,
ಆ ಬುಟ್ಟಿಯನ್ನು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರೆಂಬ
ಪಂಚಮೂರ್ತಿಗಳು ಬಂದರೆ ಕೊಡೆನು.
ಕೈಕಾಲು ಕಣ್ಣಿಲ್ಲದ ಅಧಮ ಮೋಟನು ಬಂದರೆ ಕೊಟ್ಟೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./248
ನೆಲವಿಲ್ಲದ ಭೂಮಿ ಭಾಗವ ಮಾಡಿ
ಕಳ್ಳಿ ಮುಳ್ಳ ಹಚ್ಚದೆ ಶೀಗರೀ ಗಜಗ ಹಚ್ಚಿ,
ಉಳ್ಳಿ ಮೂಲಂಗಿ ಬಳ್ಳೊಳ್ಳಿ ಸಬ್ಬಸಗಿ ನಾರಗಡ್ಡೆ
ಮೊದಲಾದ ಕಿರುಕುಳ ಬಾಡವ ಬಿತ್ತದೆ,
ತೆಂಗು ಹಲಸು ಮಾವು ಮೊದಲಾದ
ಅಮೃತಫಲದ ವೃಕ್ಷವ ಬಿತ್ತಿ,
ನೀರಿಲ್ಲದೆ ಫಲವಡ್ಡಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./249
ನೆಲವಿಲ್ಲದ ಭೂಮಿಯ ಮಣ್ಣನ್ನು ತಂದು,
ಲದ್ದಿ ಉಸುಕವ ಬೆರೆಸದೆ ಮಡಿಕೆಯ ಮಾಡಿ,
ಸುಡದೆ ಮಾರಿ ಹಣವಕೊಂಡು ಯಾರಿಗೂ ಕೊಡದೆ
ಉಂಡು ಸುಖದಿಂದ ಕಾಯಕವ ಮಾಡುತಿರ್ಪರು ನೋಡೆಂದ ಶ್ರೀಗುರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./250
ನೆಲವಿಲ್ಲದ ಭೂಮಿಯಲ್ಲಿ ಪುಟ್ಟಿದ ವೃಕ್ಷದ ಬೇರ ತಂದು
ನೀರಿಲ್ಲದೆ ಅರದು ಗುಳಿಗೆಯ ಕಟ್ಟಿ,
ಕಣ್ಣು ತಲೆಯಿಲ್ಲದವರಿಗೆ ಒಂದು ಗುಳಿಗಿ,
ಕೈಕಾಲು ಇಲ್ಲದವಂಗೆ ಎರಡು ಗುಳಿಗಿ,
ಸೂಲದವಂಗೆ ಮೂರು ಗುಳಿಗಿ,
ಹಿರಿರೋಗದವರಿಗೆ ಆರು ಗುಳಿಗಿ,
ಈ ವೈದ್ಯಕ್ಕೆ ನಿದ್ರೆಯ ತೊರದು
ತಣ್ಣೀರು ತಂಗಳನ್ನವನುಣ್ಣದೆ
ಬಿಸಿನೀರು ಬಿಸಿ ಅನ್ನವ ಸೇವಿಸಬೇಕು.
ಈ ಪಥ್ಯವ ಪಾಲಿಸಿದವರಿಗೆ ಗುಳಿಗಿ ಸಾಧ್ಯವಾಗಿ
ಸರ್ವಸಿದ್ಧಿಸುವುದು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./251
ನೆಲೆಯಿಲ್ಲದ ಬಾವಿಗೆ ಕಾವಲಿಲ್ಲದ ಯಾತ,
ಹುರಿಯಿಲ್ಲದ ಹಗ್ಗ, ಎತ್ತಿಲ್ಲದೆ ನೀರು ಜಗ್ಗಿ,
ಫಲವಡ್ಡಿ ಅರಸು ಪ್ರಧಾನಿಗೆ ಕೊಡದೆ,
ಸಮಗಾರ ಹೊಲೆಮಾದಿಗರು ಮೊದಲಾದ
ಕುರುಡ ಕುಂಟರಾದ ಅಧಮರಿಗೆ ಕೊಟ್ಟು ಕಾಯಕವಳಿದು
ಕಾಯಕದಲ್ಲಿರ್ದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./252
ಪಂಕದೊಳಗಿನ ಪಶುವಿಗೆ ಒಬ್ಬ ಪುರುಷನಿಂದ ಚೆೃತನ್ಯವಲ್ಲದೆ
ಆ ಪಂಕದೊಳಗಿನ ಪಶುವಿಗೆ ಬೇರೆ ಚೆೃತನ್ಯ ಉಂಟೆ ಹೇಳಾ ?
ಅರಣ್ಯದೊಳಗೆ ಅಜಗರನೆಂಬ ಸರ್ಪನು
ಆಹಾರವಿಲ್ಲದೆ ಇರಲು ಅದಕ್ಕೆ ಪರಶಿವನು
ತಾವೇ ತಮ್ಮ ಕರುಣ ಕೃಪೆಯಿಂದೊಂದು ಮೃಗಪಕ್ಷಿಯ
ಅನಾಯಾಸದಿಂದ ಮುಂದೆ ಹಾಯಿಸಿದೊಡೆ,
ಆ ಅಜಗರನೆಂಬ ಸರ್ಪನು ಭಕ್ಷಿಸಿ ಇರುವುದಲ್ಲದೆ,
ತಾ ಬೇರೆ ಮೃಗಪಕ್ಷಿಗಳ ಭಕ್ಷಿಸುವ ಚೆೃತನ್ಯವುಂಟೆ ಹೇಳಾ?
ಎಷ್ಟು ದಿವಸವಾದಡೆಯೂ ಬಿದ್ದಲ್ಲಿ ಬಿದ್ದಿರ್ಪುದು ನೋಡಾ.
ಬೇಡಿ ಬಂದೀಖಾನೆ ಕೊಳ್ಳದೊಳಗೆ ಇರುವ ಪ್ರಾಣಿಗಳಿಗೆ
ಒಬ್ಬ ರಾಜನ ದಯದಿಂದ ಅನ್ನಪಾನ ಉಂಟಲ್ಲದೆ,
ಅವರಿಗೆ ಬೇರೆ ತಮ್ಮ ಸ್ವತಂತ್ರದಿಂದ ತಾವೇ
ಅನ್ನೋದಕವ ಕೊಂಬ ಚೆೃತನ್ಯ ಉಂಟೆ ಹೇಳಾ?
ಅವರು ಎಷ್ಟು ಕಾಲವಾದಡೆಯು ಇದ್ದಲ್ಲಿ ಇರುವರು ನೋಡಾ.
ತೊಟ್ಟಿಲೊಳಗಿನ ಶಿಶು ಹೊಟ್ಟೆಹಸಿದು ಒದರಿದರೆ
ಆ ಶಿಶುವಿನ ತಾಯಿ ಬಂದು ಮೊಲೆವಾಲ ಕೊಟ್ಟು ರಕ್ಷಣಮಾಡುವದಲ್ಲದೆ
ಆ ಶಿಶುವಿಗೆ ಬೇರೆ ಸ್ವತಂತ್ರಚೈತನ್ಯ ಉಂಟೆ ಹೇಳಾ?
ಎಷ್ಟೊತ್ತಾದಡೆಯೂ ಆ ಶಿಶುವು ಇದ್ದಲ್ಲಿ ಇರುವದು ನೋಡಾ.
ಇಂತೀ ದೃಷ್ಟದಂತೆ ಇರುವೆ ಮೊದಲು ಆನೆ ಕಡೆ
ಎಂಬತ್ತುನಾಲ್ಕುಲಕ್ಷ ಜೀವರಾಶಿ ಯೋನಿಯಲ್ಲಿ
ಸುಖದುಃಖದಿಂದ ನೊಂದು ಬೆಂದು ಅಳಲಿ ಬಳಲಿ
ಭವಜಾಲದಲ್ಲಿ ತಿರುಗುವ ಜೀವಾತ್ಮರಿಗೆ ಪರಕ್ಕೆ ಪರವಾದ
ಪರಶಿವನು ತಾನೆ ತನ್ನ ಕರುಣಕೃಪೆಯಿಂದ
ಆ ಜೀವಾತ್ಮರ ಹೃದಯದಲ್ಲಿ ಶಿವಜ್ಞಾನೋದಯವನಿತ್ತು
ಸಂಸಾರಪ್ರಪಂಚವ ನಿವೃತ್ತಿಯ ಮಾಡಿ ಬಹಿಷ್ಕರಿಸಿ
ಕ್ರಿಯಾಘನಗುರುವಾಗಿ ಬಂದು
ಲಿಂಗಾಂಗಸಮರಸವ ತೋರಿ ಭವಬಂಧನವೆಂಬ ಭವಪಾಶವ ಛೇದಿಸಿ
ಆ ಜೀವಾತ್ಮರ ಜೀವಭಾವವನಳಿದು
ಸಜ್ಚೀವಾತ್ಮರುಗಳ ಮಾಡಿ, ರಕ್ಷಿಸುವನಲ್ಲದೆ,
ಆ ಜೀವಾತ್ಮರು ತಮ್ಮಾತ್ಮಜ್ಞಾನದಿಂದ
ಅಷ್ಟಾಂಗಯೋಗ ಅನುಪಾನ ಕ್ರಿಯೆಗಳಿಂದ ಸಾಧಿಸಿ ಭವಹಿಂಗಿಸಿ
ಪರಶಿವಲಿಂಗದಲ್ಲಿ ಬೆರಸಿದನೆಂದಡೆ ಎಂದಿಗೂ ಸಾಧ್ಯವಾಗದು.
ಅದೇನು ಕಾರಣವೆಂದೊಡೆ,
ತಮ್ಮ ನಿಜವ ತಾವರಿಯದ ಕಾರಣ.
ಎಷ್ಟು ಯುಗಾಂತರದಲ್ಲಿ ಭವಭವದಲ್ಲಿ
ಘಾಸಿಯಾಗುತ್ತಿರ್ಪರು ನೋಡೆಂದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./253
ಪಂಚರಸದ ಪಡಿಗೆ
ಮೂರು ಮುದ್ರೆ ಸುಂಕದ ಧಾನ್ಯವನಳೆಯದೆ
ಸುಂಕಿಲ್ಲದ ಧಾನ್ಯವನಳದು, ಕೊಟ್ಟ ಪಡಿಯನುಂಡು,
ಕಾಯಕ ಮಾಡುತಿರ್ಪರು ನೋಡೆಂದನಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./254
ಪಂಚಲೋಹದ ಕಬ್ಬಿಣವ ಬೆಂಕಿಯಿಲ್ಲದೆ
ಇದ್ದಲಿಯ ಹಾಕಿ ತಿದಿಯಿಲ್ಲದೆ ಊದಿ, ಕಬ್ಬಿಣವಕಾಸಿ,
ಅಡಗಲ್ಲಿನ ಮೇಲಿಟ್ಟು ಹೊಡೆಯಲು
ಲೋಹವಳಿದು ಚಿನ್ನವಾಯಿತ್ತು.
ಚಿನ್ನ ಚಿನ್ಮಯಂಗೆ ಮಾರಿ ಕೊಟ್ಟು ಪಡಿಯ ಕೊಂಡುಂಡು
ಕಾಯಕವ ಮಾಡುತ್ತಿರ್ಪರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./255
ಪಂಚಲೋಹವ ಕರಗಿಸಿ ರಸ ಬೆರೆಸಲು
ಚಿನ್ನದಲೋಹವಾಯಿತ್ತು.
ಆ ಚಿನ್ನದ ಲೋಹಭಾಂಡದಲ್ಲಿ
ತಣ್ಣೀರು ತುಂಬದೆ ಬಿಸಿನೀರ ತುಂಬಿ
ಬಿಸಿಲಲ್ಲಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./256
ಪಂಚವರ್ಣದ ಗಾಣ, ಆರೇಣಿನ ಕಣಿ,
ಎರಡೆತ್ತು ಹೂಡಿ, ಹುರಿದ ಬೀಜದ ಎಣ್ಣೆಯ ತೆಗೆದು,
ಉಂಡವರು ಕೈಕಂಡವ ಆರಿಗೂ ತೋರಿ ಉಸುರದೆ ನುಂಗಿ,
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./257
ಪಂಚವರ್ಣದ ಗಾಣಕ್ಕೆ ಎಂಟೇಣಿನ ಕಣಿಯನಿಕ್ಕಿ,
ಮೂರೆತ್ತ ಹೂಡಿ, ಎಳ್ಳು ಅಗಸಿ ಔಡಲ ಎಣ್ಣೆಯ ತೆಗೆದು ಉಂಡವರು
ಕೈಯೊಳಗಿನ ಕಂಡವ ತಿನ್ನದೆ ಕಾಣದವರ ಮುಂದೆ ಕಾರಿಕೊಂಡು
ಕಾಣದೆ ಎಡೆಯಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./258
ಪಂಚವರ್ಣದ ಗೋವಿನ ಶೆಗಣೆಯ
ಬೆಂಕಿಲ್ಲದೆ ಸುಟ್ಟು, ನೀರಿಲ್ಲದೆ ನೀರಲ್ಲಿ ಕಲಿಸಿ ಉಂಡಿಗಟ್ಟಿ,
ಕೈಯಲ್ಲಿ ಪಿಡಿದು ಸರ್ವಾಂಗದಲ್ಲಿ ಧರಿಸಿ
ಕಾಯಕವ ಮಾಡುತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./259
ಪಂಚವರ್ಣದ ಗೋವಿನ ಹಾಲ ಕರದು
ಬಿಸಿಲಿಗೆ ಕಾಸಿ ಹಾಲು ಬೆಣ್ಣೆ ತುಪ್ಪವ ಮಾರಿ,
ಮೊಸರು ಮಜ್ಜಿಗೆ ಮಾರದೆ
ಕಾಯಕ ಮಾಡುತ್ತಿರ್ದೆ ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./260
ಪಂಚವರ್ಣದ ಚಿತ್ತದ
ಮೂರುಮುಖ ವೃಶ್ಚಿಕನ ಮುಳ್ಳುತಾಗಿ,
ಮೂರುಲೋಕವು ಬೇನೆಹತ್ತಿ ಬೇವುತಿದ್ದಿತು.
ಆ ಮುಳ್ಳಿನ ನಂಜೇರಿ ಮೂರುಲೋಕ ಪ್ರಳಯವಾಗಿ
ರಾಜರು ಮಡಿದರು.
ಆ ಶಿವಶರಣ ನೋಡಿ ಕಲ್ಲು ಮರೆಗೊಂಡ ಭೇದವ
ತಿಳಿಯಬಲ್ಲಾತ ಅಸುಲಿಂಗಿ ಎಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./261
ಪಂಚವರ್ಣದ ನಗರದಲ್ಲಿ,
ಕಾಲು ತಲೆಗಳಿಲ್ಲದ ದೊರೆಗಳು.
ಕಣ್ಣು ಕೈಗಳಿಲ್ಲದ ಕಾರಭಾರಿಗಳು.
ಗೌಡ, ಶ್ಯಾನಭೋಗರಿಂದುತ್ಪತ್ಯ,
ಪರಿಚಾರಕರಿಂದ ಬಂಧನ.
ಇಂತಿವರೆಲ್ಲರಿಗೆ ಒಡತಿ ಮೂರುಮುಖದ ಕುಂಪಣಿ.
ಪರದೇಶಕ್ಕೈದಬೇಕಾದರೆ
ಪಂಚವರ್ಣದ ಸಂಚಾರವ ಕೆಡಿಸಿ,
ಕಾಲು, ತಲೆ ದೊರೆಗೆ ಬಂದಲ್ಲದೆ,
ಕಣ್ಣು, ಕೈ ಕಾರಭಾರಿಗೆ ಬಂದಲ್ಲದೆ,
ಗೌಡ, ಶ್ಯಾನಭೋಗ, ಪರಿಚಾರಕರ ಕೊಂದಲ್ಲದೆ,
ಮೂರುಮುಖದ ಕುಂಪಣಿಯ ತಲೆಹೊಡೆದಲ್ಲದೆ
ಮುನ್ನಿನ ಬಟ್ಟೆಯನರಿಯಬಾರದು.
ಅರಿಯದಕಾರಣ ಅಸುಲಿಂಗಸಂಬಂಧಿಗಳಲ್ಲ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./262
ಪಂಚವರ್ಣದ ಭಸ್ಮವನು ಸಂಚಲಗುಣವಳಿದು,
ಪಂಚಸ್ಥಾನದಲ್ಲಿ ಧರಿಸಬಲ್ಲಡೆ ಭಸ್ಮಧಾರಕರೆಂಬೆ.
ಅಷ್ಟವರ್ಣದ ಭಸ್ಮವನು ಅಷ್ಟಗುಣ ನಷ್ಟಮಾಡಿ
ಅಷ್ಟದಿಕ್ಕಿನಲ್ಲಿ ಧರಿಸಬಲ್ಲಡೆ ಭಸ್ಮಧಾರಕರೆಂಬೆ.
ಬಯಲ ಸುಟ್ಟ ಬೂದಿಯ ನೀರಿಲ್ಲದೆ ಧರಿಸಬಲ್ಲಡೆ
ಭಸ್ಮಧಾರಕರೆಂಬೆ.
ಮನೆಯ ಸುಟ್ಟ ಬೂದಿಯ ಕೈಯಿಲ್ಲದೆ ಧರಿಸಿ
ಶರಣು ಶರಣೆಂದು ಸತ್ತು ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./263
ಪಂಚವರ್ಣದ ಭೂಮಿಯ ಮೇಲಿನ ಕಣಿಯ ತಂದು
ಮೂರುಮುಖದಪ್ಪಗೆ ಕೊಟ್ಟು,
ಮೂರುಮಂದಿಯ ಬಿಟ್ಟು, ಐವರ ಸುಟ್ಟು,
ಎಂಟುಮಂದಿಯ ಕುಟ್ಟಿ, ಗುಲ್ಲುಮಾಡದೆ
ಮೂರುಮುಖದಪ್ಪನ ಕೊಂದು, ಕಣಿಯ ಕೊಂಡೊಯಿದು,
ಈ ಬೆಡಗಿನ ಕೀಲವ ಬಲ್ಲಾತನೆ ಲಿಂಗಸಂಬಂಧಿ,
ಇಲ್ಲದಾತನೆ ಅಂಗಸಂಬಂಧಿ ಎಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕಂದಂಬಲಿಂಗ
ನಿರ್ಮಾಯಪ್ರಭುವೆ/264
ಪಂಚವರ್ಣದ ವಟವೃಕ್ಷದ ಘಟ್ಟದಲ್ಲಿ
ಕಿಷ್ಕಿಂದಕೋಣೆಯೊಳಗೆ ಅಡಗಿರ್ದ
ಅಗ್ನಿ ಪುಟವಾಗಿ
ಕೋಣೆ ವಟವೃಕ್ಷದ ಘಟ್ಟವ ದಹಿಸಿ,
ವರ್ಣ ಉಳಿದು ನಿರ್ವರ್ಣವ ಕೂಡಿ ನಿರ್ವಯಲಾಯಿತ್ತು.
ಇದ ತಿಳಿಯಬಲ್ಲರೆ ಪ್ರಾಣಲಿಂಗಿ ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./265
ಪಂಚಶತಕೋಟಿ ಯೋಜನದಾಚೇಲಿ
ನೆಲವಿಲ್ಲದ ಭೂಮಿಯ ಕಂಡೆ.
ಆ ಭೂಮಿಯಲ್ಲಿ ನೀರಿಲ್ಲದೆ ಒಂದು ವೃಕ್ಷ ಪುಟ್ಟಿ
ಬೇರಿಲ್ಲದೆ ಬೆಳೆವುದ ಕಂಡೆ.
ಶಾಖೆ ಪರ್ಣ ಮೊಗ್ಗೆಯಿಲ್ಲದೆ ಕುಸುಮ ತೋರುವುದ ಕಂಡೆ.
ಫಲವಿಲ್ಲದ ಹಣ್ಣು ರಸಪೂರಿತವಾಗಿ
ವೃಕ್ಷದ ಕೊನೆಯಲ್ಲಿರುವುದ ಕಂಡೆ.
ಆ ಹಣ್ಣಿಗೆ ಹಲವರು ಹವಣಿಸಿ
ಕಾಣದೆ ಹಿಂದಕ್ಕೆ ಬಿದ್ದುದ ಕಂಡೆ.
ಆ ಹಣ್ಣನು ಕೈಕಾಲು ಕಣ್ಣು ತಲೆಯಿಲ್ಲದ ಅಧಮನು ಸೇವಿಸಿ
ಸತ್ತುದ ಕಂಡೆ.
ಸತ್ತ ಸುದ್ದಿಯ ಕೇಳಿ ಸತ್ತರು ನಿಮ್ಮವರು.
ಸಾಯದೆ ಬದುಕಿದರು ಎಮ್ಮಡಿಯ ಮಕ್ಕಳು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./266
ಪಂಚಾಂಗವ ಬರೆದು ಓದಿ
ಮುಹೂರ್ತವ ಹೇಳುವರ ಕಂಡೆ.
ಪಂಚಾಂಗವ ಪಿಡಿದು ಮುಹೂರ್ತವ ಕೇಳುವರ ಕಂಡೆ.
ಪಂಚಾಂಗದ ಅಕ್ಷರವ ಕಲಿತು ಹೇಳುವರ ಕಂಡೆ.
ಆ ಅಕ್ಷರವ ಕಲಿತು ಎಣಿಸುವರ ಕಂಡೆ.
ಪಂಚಾಂಗದ ಭೇದವನು ಆರೂ ಅರಿಯರು.
ಅರಿಯದೆ ನುಂಗಿ ಅಕ್ಷರವನಡಗಿಸಿ
ಮರುಳನಂತೆ ಕಾಯಕವ ಮಾಡುತ್ತಿರ್ಪರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./267
ಪಂಚಾಂಗವ ಸುಟ್ಟವರಿಗೆ ಪಂಚಾಂಗವ ಕೊಟ್ಟು
ಮುಹೂರ್ತವ ಪೇಳಲಿಬೇಕು.
ಪಂಚಾಂಗವ ಪಿಡಿದು ಪಂಚಪದಾರ್ಥವ ಸೇವಿಸುವವರಿಗೆ
ಪಂಚಾಂಗವ ಕೊಟ್ಟು ಮುಹೂರ್ತವ ಪೇಳಲಾಗದು.
ಪೇಳಿದವರಿಗೆ ಎರಡಳಿಯವು ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./268
ಪಂಚಾಕ್ಷರಮಂತ್ರದಿಂದ
ಅಜಗಣ್ಣ ತಂದೆಗಳಿಗೆ ಆರೂಢಪದವಾಯಿತು.
ಪಂಚಾಕ್ಷರಮಂತ್ರದಿಂದ ಶಿವಜಾತಯ್ಯನ ಶಿಷ್ಯ
ಮಂತ್ರಜಾತಯ್ಯ ಮಂತ್ರದಲ್ಲಿ ಬಯಲಾದನು.
ಪಂಚಾಕ್ಷರಮಂತ್ರದಿಂದ ಸಾನಂದಮುನಿಗಣೇಶ್ವರನು
ಯಮಪುರವ ಹಾಳುಮಾಡಿದ.
ಪಂಚಾಕ್ಷರಮಂತ್ರದಿಂದ ವೀರಭದ್ರನು
ದಕ್ಷಬ್ರಹ್ಮನ ತಲೆಹೊಡೆದು ಯಜ್ಞವ ಕೆಡಿಸಿದ.
ಇಂತಪ್ಪ ಶ್ರುತಿಪ್ರಮಾಣ ವಾಕ್ಯಗಳಿಂದ
ಪಂಚಾಕ್ಷರ ಮಹತ್ವವ ಕೇಳಿ
ಜೀವಾತ್ಮರು ನೆನೆನೆನೆದು ಭವಕ್ಕೆ ಹೇಳಿದರು.
ನಾನು ಪಂಚಾಕ್ಷರವ ನೆನೆನೆದು
ಭವಮಾಲೆಯ ಹರಿದು ಮಂತ್ರದಲ್ಲಿ ಲಯವಾದೆನಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./269
ಪಂಚಾಕ್ಷರವೆಂದಡೆ ಪರಬ್ರಹ್ಮ.
ಪಂಚಾಕ್ಷರವೆಂದಡೆ ಪರಶಿವ.
ಪಂಚಾಕ್ಷರವೆಂದಡೆ ಪರವಸ್ತುವಿನ ನಾಮ.
ಪಂಚಾಕ್ಷರವೆಂದಡೆ ಭವದುರಿತ ಬಿಟ್ಟೋಡುವುದು.
ಪಂಚಾಕ್ಷರವೆಂದಡೆ ಬಹುಜನ್ಮದ ದೋಷ ಪರಿಹಾರವಾಗುವುದು.
ಪಂಚಾಕ್ಷರವೆಂದಡೆ ಸಕಲ ತೀರ್ಥಕ್ಷೇತ್ರಯಾತ್ರೆಯಾದ
ಪುಣ್ಯಫಲಪ್ರಾಪ್ತಿಯಾಗುವುದು.
ಪಂಚಾಕ್ಷರವೆಂದಡೆ ಅಷ್ಟಮಹಾಸಿದ್ಧಿ ನವಮಹಾಸಿದ್ಧಿ
ಅಷ್ಟಾಂಗಯೋಗದ ಫಲ ಅಷ್ಟೈಶ್ವರ್ಯಸಂಪತ್ತು
ದೊರಕೊಳ್ಳುವುದು ನೋಡಾ.
ಇಂತಪ್ಪ ಪಂಚಾಕ್ಷರೀಮಂತ್ರದ ಮಹತ್ವವ ಕಂಡು
ಮನ ಕರಗಿ ತನು ಉಬ್ಬಿ,
ಪಂಚಾಕ್ಷರಿ, ಪಂಚಾಕ್ಷರಿಯೆಂದು ನೆನೆನೆನೆದು
ಭವಹರಿದು ಪರಶಿವಲಿಂಗವ ಕೂಡಿ
ಸುಖಿಯಾಗಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /270
ಪಂಚಾಗ್ನಿಪುರವೆಂಬ ಪಟ್ಟಣದಲ್ಲಿ
ಮುದ್ದುಮುಖದ ಒಬ್ಬ ನಾರಿ ಇರ್ಪಳು.
ಆ ನಾರಿಯ ಮಸ್ತಕದಲ್ಲಿ
ಮೂರು ಲೋಕವನೊಳಕೊಂಡ ಮಹಾಪ್ರಕಾಶವಿರ್ಪುದು.
ಆ ಪ್ರಕಾಶದೊಳಗೆ ನಿರ್ವಯಲಾಗಬಲ್ಲಡೆ ಲಿಂಗೈಕ್ಯನೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./271
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ,
ನಿಮ್ಮ ಬಲ್ಲತನವ ಪೇಳಿರಯ್ಯಾ.
ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ,
ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ.
ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ
ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ.
ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ
ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ.
ಶಾಸ್ತ್ರಸಂಧಿಗಳರಿರಾನಿಮ್ಮಶಾಸ್ತ್ರ ಸಾಧಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ
ಒರಲಿ ಒರಲಿ ಹೋದವು ಕೇಳಿರಯ್ಯಾ.
ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ
ಹೋರಾಡಿ ಮಥನದಿಂದ ಹೊಡೆದಾಡಿ
ಪರಶಿವನ ಕಾಣದೆ ಸತ್ತು ಹೋದರಲ್ಲಾ !
ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು
ಶಿವನ ನಿಲುಕಡೆಯನೆಂದಿಗೂ ಅರಿಯವು.
ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು
ಮುನ್ನವೆ ಅರಿಯರು, ಅದೇನು ಕಾರಣವೆಂದಡೆ-
ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ?
ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ
ಫಲವ ಬಯಸಿದರುಂಟೆ ?
ಈ ದೃಷ್ಟಾಂತದಂತೆ ತಿಳಿದು
ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ.
ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ.
ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು
ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ
ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./272
ಪರ್ಣ ಉದುರಿದ ವೃಕ್ಷ ಕಡಿದು, ಕೊಂಗೆಯ ಸವರದೆ ಮನೆಯ ಕಟ್ಟಿ,
ಪಾತಾಳದ ಬೇತಾಳಂಗೆ ರುದ್ರನನಾಹುತಿಯ ಕೊಟ್ಟು,
ಸ್ವರ್ಗಲೋಕದ ಮಾರೇಶ್ವರಂಗೆ ವಿಷ್ಣುವಿನ ಆಹುತಿ ಕೊಟ್ಟು,
ಮರ್ತ್ಯಲೋಕದ ಜಗಜಟ್ಟಿಗೆ ಬ್ರಹ್ಮನ ಆಹುತಿ ಕೊಟ್ಟು,
ಉಳಿದಲೋಕದ ಭೂತಂಗಳಿಗೆ ಷಟ್ಸ್ಥಲದ ಭವಿಗಳ ಕೊಟ್ಟು,
ಜನಿವಾರ ಹರಿದು ಗಂಧವ ಧರಿಸದೆ,
ಜಳಕವ ಮಾಡದೆ, ಮಡಿ ಉಡದೆ, ಮೈಲಿಗೆಯನುಟ್ಟು,
ಉಣ್ಣದ ಆಹಾರವನುಂಡು
ಕಾಯಕವ ಮಾಡುತ್ತಿರ್ಪರು ನೋಡೆಂದ,
ಕಾಡನೋಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./273
ಪರ್ವತಕ್ಕೆ ಹೋಗಬೇಕಾದರೆ
ಮನೆಯ ಸುಟ್ಟು, ಬಸವನ ಕೊಂದು,
ಶಿಶುವಿನ ತಲೆಹೊಡೆದು, ಗುರುಲಿಂಗಜಂಗಮವ ಕೊಂದು,
ತನ್ನ ಕೈಕಾಲು ತಲೆ ಛೇದಿಸಿ,
ತಿದಿಯ ಹಿಡಿದು, ಕಾವಡಿಯನೊಡದು,
ಸಾಲಮಾಡದೆ ತಾವು ಗಳಿಸಿದಂಥ ದ್ರವ್ಯವನೊಯ್ಯದೆ
ಪೋಗಿ ಕೇಶವನೆಲ್ಲಾ ಬೋಳಿಸಿ,
ಪಾತಾಳಗಂಗಿಯ ಸ್ನಾನವ ಮಾಡಿ,
ಮನೆಯ ಸುಟ್ಟು ಬೂದಿಯ ಧರಿಸಿ,
ಒಂದು ಪಾದವ ಹಿಂದಿಟ್ಟು, ಒಂದು ಪಾದವ ಮುಂದಿಟ್ಟು,
ಎಡಕ ಬಂದವನ ಮೆಟ್ಟಿ, ಬಲಕ ಬಂದವನ ಕುಟ್ಟಿ,
ಎದುರಿಗೆ ಬಂದವನ ಮೆಟ್ಟಿ, ಅವನಾಚೆಗೆ ದಾಟಿ ಹೋಗಬಲ್ಲರೆ,
ಮಲ್ಲಯ್ಯನ ದರುಶನವಾಹುದು,
ಆತನ ಶಿಖರ ಕಾಣುವದು.
ಕಂಡಾಕ್ಷಣವೇ ನಿರ್ವಯಲಪದವಹುದು.
ಇಂತಿದರ ವಿಚಾರವ ತಿಳಿಯಬಲ್ಲರೆ
ಕಾಶಿ ಶ್ರೀಶೈಲಯಾತ್ರೆಯ ಮಾಡಬಲ್ಲವರು ಎಂದನಯ್ಯಾ
ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./274
ಪರ್ವತಮಲ್ಲಯ್ಯನ ಯಾತ್ರೆಗೆ ಹೋಗಬೇಕೆಂಬರಯ್ಯಾ,
ಅದೇನು ಕಾರಣವೆಂದಡೆ : ಗ್ರಂಥ : ‘ಶ್ರೀಶೈಲಶಿಖರಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ’
ಎಂದುದಾಗಿ,
ಅಂತಪ್ಪ ಪರ್ವತಮಲ್ಲಯ್ಯನ
ಶಿಖರವ ಕಂಡಾಕ್ಷಣದಲ್ಲಿ ಮೋಕ್ಷವಾಹುದೆಂದು,
ಶ್ರುತಿ ಪುರಾಣ ವಾಕ್ಯಂಗಳ ಕೇಳಬಲ್ಲಂಥ
ಭಕ್ತಜನಂಗಳು, ಉಳಿದಂಥ ಕೆಲವು ಗಣಂಗಳು
ಇಂತೀ ಸರ್ವರು ಕೂಡಿ ಸಾಲ ಕಡ ಮಾಡಿ
ಹೊನ್ನು ತಂದು ಒಂದೊತ್ತು ಬರಿಗಾಲಿಲೆ ನಡೆವುತ್ತ
ಆಸತ್ತು, ಬೇಸತ್ತು, ಅಳಲಿ, ಬಳಲಿ
ಶಿವಶಿವಾ ಹರಹರಾ ಎಂದು ಮಲ್ಲಯ್ಯನ ನೆನೆವುತ್ತ
ಎಡವುತ್ತ, ಮುಗ್ಗುತ್ತ ನಿನ್ನ ಪಾದ ಎಂದು ಕಂಡೆವು ಎನ್ನುತ್ತ,
ಸಕಲ ಲೋಕಾದಿಲೋಕಂಗಳೆಲ್ಲ
ಇಂತೀ ಪರಿಯಲ್ಲಿ ಹೋಹರಯ್ಯಾ.
ಇವರಿಗೆ ಮಲ್ಲಯ್ಯನ ದರುಶನವಿಲ್ಲ.
ಅವನ ಶಿಖರವ ಕಾಣಬಾರದು ನೋಡೆಂದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./275
ಪಶುವಿಗೆ ಕರುವಿನ ಮಮಕಾರ,
ಜಾರಸ್ತ್ರೀಗೆ ವಿಟನ ಮಮಕಾರ,
ದಾಸಿಗೆ ಶಿಶುವಿನ ಮಮಕಾರ,
ವೈಜಕವ್ವೆಗಳು ನಿಮ್ಮ ಮಮಕಾರದಲ್ಲಿರ್ದು
ಕಾಯಕವ ಮಾಡುತಿರ್ಪಳು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /276
ಪಶ್ಚಿಮದೇಶದ ಧಾನ್ಯಕ್ಕೆ ಒಂದು ಸುಂಕ.
ಉತ್ತರದೇಶದ ಧಾನ್ಯಕ್ಕೆ ಹಲವು ಸುಂಕ.
ಒಮ್ಮನಕ್ಕೆ ಸುಂಕಿಲ್ಲ; ಇಮ್ಮನಕ್ಕೆ ಸುಂಕುಂಟು.
ಒಮ್ಮನಸುಂಕದ ಹಣವ ಕೊಂಡು
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./277
ಪಾಕವಾದನ್ನವನುಣ್ಣದೆ ಪಾಕವ ಮಾಡುಂಬೆವೆಂಬರು.
ಕೊಟ್ಟ ಫಲವ ಬಚ್ಚಿಟ್ಟು ತಿನ್ನಲರಿಯದೆ
ವೃಕ್ಷದ ಕೊನೆಯೊಳಗಣ ಫಲವ ತಿಂದೇವೆಂಬರು.
ಇದ್ದವರನರಿಯದೆ ಸತ್ತವರ ಬಲ್ಲೆವೆಂಬರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./278
ಪಾದೋದಕ ಪಾದೋದಕವೆಂದು ಕೊಂಬಿರಿ,
ಎಲ್ಲರಿಗೆ ಎಲ್ಲಿಹುದೋ ಪಾದೋದಕ ?
ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ,
ಅರಿಯದಿದ್ದರೆ ಕೇಳಿರಿ.
ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ
ಅಖಿಳಕೋಟಿ ಬ್ರಹ್ಮಾಂಡಗಳ ಗರ್ಭಿಕರಿಸಿಕೊಂಡಿರ್ದ
ಪರಿಪೂರ್ಣತ್ವವೇ ಪಾದೋದಕ.
ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು
ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ.
ಇಂತಪ್ಪ ಪಾದೋದಕದ ಭೇದ ಬಲ್ಲವರು
ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು
ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ,
ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ?
ಇಂತಪ್ಪ ಪರಾಪರ ನಾಮವನುಳ್ಳ
ಪರಂಜ್ಯೋತಿಸ್ವರೂಪವಾದ
ಪರತತ್ವ ಪಾದೋದಕವನರಿದು ಕೊಡಬಲ್ಲರೆ
ಗುರುಲಿಂಗಜಂಗಮವೆಂದೆನ್ನಬಹುದು.
ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ
ಸತ್ಯಸದ್ಭಕ್ತರೆಂದೆನ್ನಬಹುದು.
ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು
ಆಣವಾದಿ ಕಾಮಿಕಾಂತ್ಯಮಾದ
ಮಲತ್ರಯದ ಬಲೆಯಲ್ಲಿ ಶಿಲ್ಕಿ,
ದೇಹಾದಿ ಮನಾಂತ್ಯಮಾದ
ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ
ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ,
ಮಂದಮತಿ ಅಧಮ ಜಂಗಮದ ಕಾಲ
ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು
ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು
ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು
ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ
ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ
ಮೂಗ ತುಟಿತನಕ ಕೊಯ್ದು
ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ
ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ
ನಿರ್ಮಾಯಪ್ರಭುವೆ./279
ಪಾದೋದಕ ಪ್ರಸಾದಗಳೆಂದೆಂಬಿರಿ,
ಪಾದೋದಕ ಪ್ರಸಾದದ ಬಗೆಯ ಪೇಳ್ವೆ.
ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ,
ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ,
ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ,
ಕೆರೆ ಬಾವಿ ಹಳ್ಳ ಕೊಳ್ಳ ನದಿ
ಮೊದಲಾದವುಗಳ ನೀರ ತಂದು-
ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ,
ಆ ಜಂಗಮದ ಉಭಯಪಾದದ ಮೇಲೆರೆದು,
ಪಾದೋದಕವೇ ಪರಮತೀರ್ಥವೆಂದು
ಲಿಂಗ ಮುಂತಾಗಿ ಸೇವಿಸಿ,
ನವಖಂಡಪೃಥ್ವಿಯಲ್ಲಿ ಬೆಳೆದ
ಹದಿನೆಂಟು ಜೀನಸಿನ ಧಾನ್ಯವ ತಂದು,
ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ,
ತಂದು ಜಂಗಮಕ್ಕೆ ಎಡೆಮಾಡಿ,
ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ
ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ,
ಕೊಂಡು ಸಲಿಸುವರಯ್ಯ.
ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ.
ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು,
ಮುಕ್ತಿದೋರದು.
ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ,
ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ
ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ.
ಇಂತಪ್ಪವರಿಗೆ ಭವ ಹಿಂಗುವದು,
ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು.
ಈ ಪಾದೋದಕದ ಭೇದವ
ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ
ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ
ಮಿಕ್ಕಿನ ಜಡಮತಿ ಕಡುಪಾತಕರಾದ
ಬಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ
ನಿರ್ಮಾಯಪ್ರಭುವೆ./280
ಪಿಂಡದಲ್ಲಿ ಶಿವಜ್ಞಾನ ತಲೆದೋರಿದ ಲಕ್ಷಣವೆಂತೆಂದೊಡೆ:
ಪೃಥ್ವಿ ಆಕಾಶದ ಮಧ್ಯದಲ್ಲಿ ತೋರುವ ತೋರಿಕೆಗಳು
ಸ್ವರ್ಗ-ಮರ್ತ್ಯ-ಪಾತಾಳಂಗಳೆಂಬ ತ್ರಿಲೋಕಮಧ್ಯದಲ್ಲಿ
ಪುಣ್ಯ-ಪಾಪ ಮೊದಲಾದ ಸರ್ವಕರ್ಮಂಗಳು
ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗದಲ್ಲಿ
ಆಗು-ಚೇಗೆಗಳು-
ಇದಲ್ಲದೆ ಪಂಚತತ್ವಮಿಶ್ರವಾದ ದೇಹ ಪ್ರಕೃತಿ ಮನ
ಮೊದಲಾದ ಅರುವತ್ತಾರುಕೋಟಿ ಕರಣಂಗಳು
ಇಂತೀ ಎಲ್ಲವು ಪರಶಿವಲಿಂಗದಿಂದುದಯವಾಗಿ,
ತೋರಿ ತೋರಿ ಅಡಗುವುದಲ್ಲದೆ
ನಿಜವಲ್ಲವೆಂದು ವಿಭಾಗಿಸಿ,
ಪರಶಿವತತ್ವ ಒಂದೇ ನಿಜ, ಉಳಿದುವೆಲ್ಲ ಮಿಥ್ಯವೆಂದು
ತಿಳಿವುದೇ ಅದೇ ಪರಮಜ್ಞಾನ.
ಆ ಪರಮಜ್ಞಾನವೆಂಬಾತ ತಾನೆಂದು ತಿಳಿದಾತನೆ
ಶಿವಜ್ಞಾನಿಶರಣನೆಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./281
ಪುಣ್ಯಕ್ಷೇತ್ರಯಾತ್ರೆ ಪುಣ್ಯತೀರ್ಥಸ್ನಾನವ ಮಾಡಬೇಕೆಂಬಿರಿ.
ಮರ್ತ್ಯಲೋಕದ ಮಹಾಗಣಂಗಳು
ನೀವು ಬಲ್ಲಾದರೆ ಪೇಳಿ, ಅರಿಯದಿದ್ದರೆ ಕೇಳಿರಯ್ಯ.
ಶ್ರೀಗುರುಕಾರುಣ್ಯವ ಹಡದು ಲಿಂಗಾಂಗಸಂಬಂಧಿಯಾಗಿ
ಸರ್ವಾಂಗಲಿಂಗಮಯವಾದ
ಒಬ್ಬ ಶಿವಭಕ್ತನ ದರ್ಶನವಾದವರಿಗೆ
ಅನಂತಕೋಟಿ ಪುಣ್ಯ ಫಲದೊರಕೊಂಬುವದು.
ಅದೆಂತೆಂದೊಡೆ : ಆತನ ಮಂದಿರವೇ ಶಿವಲೋಕ.
ಆತನ ಕಾಯವೇ ಸತ್ಯಲೋಕ.
ಆತನ ಅಂಗದ ಮೇಲೆ ಇರುವ ಲಿಂಗವೇ
ಅನಾದಿಪರಶಿವಲಿಂಗ,
ಆತನ ಅಂಗಳವೇ ವಾರಣಾಸಿ.
ಅಲ್ಲಿ ಮುನ್ನೂರಾ ಅರುವತ್ತುಕೋಟಿ ಕ್ಷೇತ್ರಂಗಳಿರುವವು.
ಆತನ ಬಚ್ಚಲವೇ ಗಂಗಾತೀರ.
ಅಲ್ಲಿ ಮುನ್ನೂರರುವತ್ತುಕೋಟಿ ತೀರ್ಥಂಗಳಿರ್ಪವು.
ಇಂತಪ್ಪ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು,
ವಿಚಾರಿಸಿ ಕೊಳ್ಳಲರಿಯದೆ ತೀರ್ಥಕ್ಷೇತ್ರವೆಂದು
ತಿರುಗುವ ವ್ರತಭ್ರಷ್ಟ ಅನಾಚಾರಿ
ಮೂಳಹೊಲೆಯರಿಗೆ ನಾನೇನೆಂಬೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./282
ಪುರುಷ ಸತ್ತಬಳಿಕ ಗಂಧ ಅಕ್ಷತೆ ಧರಿಸಿ
ಒಗತನವ ಮಾಡಲಿಲ್ಲ.
ಸತಿಯಳ ಕೊಂದು, ಸತ್ತಪುರಷನ ಸತಿಯಳ ಕೂಡಿ
ಒಗತನವ ಮಾಡುತ್ತಿರ್ಪರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./283
ಪುರುಷನ ಮರೆದು ಮಾವನ ಪೇಳುವರು.
ತಂದೆಯ ಮರೆದು ಮುತ್ಯನ ಪೇಳುವರು.
ಇದ್ದುದ ಮರೆದು ಇಲ್ಲದುದ ಪೇಳುವರು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ/284
ಪುರುಷನನಗಲಿ ಪರಪುರುಷನ ನೆನೆದರೆ
ಹಾದರ ಎಂಬರು.
ಅದರಿಂದ ದೋಷಪ್ರಾಪ್ತಿಯಾಗುವುದು.
ನಾನು ಪುರುಷನ ಅಗಲಿ ಹಾದರವ ಮಾಡಿ
ದೋಷವ ಕಳೆದು ಪುರುಷನ ಕೊಂದು
ಒಗತನವ ಮಾಡಿಕೊಟ್ಟು ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./285
ಪುಲ್ಲ ಕೊಯ್ಯದೆ ಹೊಡೆಯ ಹಿರಿದು
ರಸವ ಹಿಂಡಿ ಪಾಕವ ಮಾಡಿ,
ಹೊಡೆಹುಲ್ಲ ಬಂಕೇಶ್ವರಲಿಂಗಕ್ಕೆ ಕೊಟ್ಟು
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./286
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು
ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ,
ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು,
ಭೂತದೇಹಿಗಳು ಪಡಕೊಂಡು
ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ,
ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ,
ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು
ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು.
ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು.
ಒಂದು ಹನಿ ಉದಕವ ಮುಟ್ಟದು.
ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ
ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ
ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ.
ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ.
ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ.
ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ
ವೀರಶೈವಮಾರ್ಗ ಮುನ್ನವೇ ಅಲ್ಲ.
ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು
ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು
ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು,
ಸದ್ಭಾವವೆಂಬ ಹಸ್ತದಲ್ಲಿ
ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ,
ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು,
ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ,
ಪೂಜಿಸಬಲ್ಲರೆ ಭವಹಿಂಗುವದು.
ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು
ಎಂದನಯ್ಯ ನಿಮ್ಮ ಶರಣ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./287
ಪ್ರಪಂಚ ಪಾರಮಾರ್ಥ, ಲೌಕಿಕ ಪಾರಮಾರ್ಥ
ಇಂತೀ ಉಭಯವನು ನಡೆಸುವಾತನೇ ಜಾಣನೆಂಬರು.
ಪ್ರಪಂಚ ಪಾರಮಾರ್ಥ ಎಂದೊಡೆ ಆವುದು,
ಲೌಕಿಕ ಪಾರಮಾರ್ಥ ಎಂದೊಡೆ ಆವುದು,
ಬಲ್ಲಾದರೆ ಪೇಳಿರಿ, ಅರಿಯದಿದ್ದರೆ
ನಮ್ಮ ನಿರ್ಮಾಯಪ್ರಭುವಿನ ಶರಣರ ಕೇಳಿರಿ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./288
ಪ್ರಮಥಗಣಂಗಳ ಪ್ರಸಾದಕೊಂಡದಲ್ಲಿ
ಅಡಗಿದ ಗೊತ್ತ ಆರೂ ಅರಿಯರಲ್ಲ,
ಬಸವಣ್ಣಂಗೆ ಪ್ರಭುದೇವರು ತೋರಿ ಕೊಟ್ಟನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./289
ಪ್ರಸಾದ ಪ್ರಸಾದವೆಂದು ನುಡಿದುಕೊಂಡುಂಬಿರಿ.
ಎಲ್ಲರಿಗೆಲ್ಲಿಹುದೊ ಶಿವಪ್ರಸಾದ ?
ಇಂತಪ್ಪ ಪ್ರಸಾದದ ಘನವಬಲ್ಲರೆ ಹೇಳಿರಿ,
ಅರಿಯದಿದ್ದರೆ ಕೇಳಿರೋ.
ಪ್ರಸಾದವೆಂಬುದು, ಪರಾಪರನಾಮವುಳ್ಳ
ಪರಮಾನಂದವೇ ಪ್ರಸಾದ ಕಾಣಿರೋ.
ಪ್ರಸಾದವೆಂಬುದು, ಪರಮನಿರಂಜನ ಪರಬ್ರಹ್ಮವೇ
ಪ್ರಸಾದ ಕಾಣಿರೋ.
ಪ್ರಸಾದವೆಂಬುದು, ಅಖಿಳಕೋಟಿ ಬ್ರಹ್ಮಾಂಡಗಳ
ಗಮಿಸುವುದಕ್ಕೆ ಲಯಿಸುವುದಕ್ಕೆ ಮಾತೃಸ್ಥಾನವಾದ
ಚಿತ್ಪ್ರಕಾಶವೇ ಪ್ರಸಾದ ಕಾಣಿರೋ.
ಪ್ರಸಾದವೆಂಬುದು, ಪರಶಿವತತ್ವ ಪರಿಪೂರ್ಣತ್ವ
ಪರಂಜ್ಯೋತಿ ಪರಮಪ್ರಕಾಶವೇ ಪ್ರಸಾದ ಕಾಣಿರೋ.
ಇಂತಪ್ಪ ವಿಚಾರವ ತಿಳಿದು ಪ್ರಸಾದವ ಕೊಡಬಲ್ಲರೆ
ಗುರುಲಿಂಗಜಂಗಮರೆಂದೆನ್ನಬಹುದು.
ಇಂತಪ್ಪ ನಿರ್ಣಯವ ತಿಳಿದು ಪ್ರಸಾದವ ಕೊಳಬಲ್ಲಡೆ
ಪ್ರಸಾದಿಗಳೆನ್ನಬಹುದು;
ಪ್ರಳಯವಿರಹಿತರೆಂದೆನ್ನಬಹುದು.
ಸತ್ಸದ್ಭಕ್ತರೆಂದೆನ್ನಬಹುದು.
ಇಂತೀ ಭೇದವ ತಿಳಿಯದೆ ನೀರು ಕೂಳಿಗೆ
ಪಾದೋದಕ ಪ್ರಸಾದವೆಂದು
ಒಡಲಹೊರವುದು ಪ್ರಸಾದವಲ್ಲ.
ಅಂತಪ್ಪ ಘನಮಹಾಪ್ರಸಾದದ
ಸಕೀಲಸಂಬಂಧವನರಿದು ನಿರ್ಧರಿಸಿದವರಾರೆಂದರೆ,
ಹಿಂದಕ್ಕೆ ಬಸವಾದಿ ಪ್ರಭುದೇವರಾಂತ್ಯಮಾದ
ಏಳುನೂರಾ ಎಪ್ಪತ್ತು ಪ್ರಮಥಗಣಂಗಳು
ಕೊಂಡುದು ಇದೇ ಪ್ರಸಾದ.
ಇನ್ನು ಮುಂದಿನವರಿಗಾದಡು ಇದೇ ಪ್ರಸಾದ.
ಇಂತಪ್ಪ ಪರತತ್ವಪ್ರಸಾದಕ್ಕೆ
ಸುಜ್ಞಾನಿಗಳಾಗಿ ಸತ್ಕ್ರಿಯಾ ಸಮ್ಯಜ್ಞಾನವೆಂಬ ಎರಡುಕಾಲಿಗೆ
ಷಡ್ವಿಧಭಕ್ತಿ ಎಂಬ ಹಲ್ಲು ಜೋಡಿಸಿ,
ಏಣಿಯ ಹಚ್ಚಿ, ನಿರ್ವಯಲಪದವನೈದಲರಿಯದೆ,
ಅಹಂಕಾರ ಮಮಕಾರವೆಂಬ ಎರಡುಕಾಲಿಗೆ
ಅಷ್ಟಮದವೆಂಬ ಹಲ್ಲುಜೋಡಿಸಿ
ಸಪ್ತವ್ಯಸನಗಳೆಂಬ ಕೀಲುಜಡಿದು
ಷಡ್ವರ್ಗಗಳೆಂಬ ಹಗ್ಗದ ಬಿರಿಯ ಬಂಧಿಸಿ,
ಏಣಿಯ ಯಮಲೋಕಕ್ಕೆ ಹಚ್ಚಿ,
ನರಕವ ಭುಂಜಿಸುವ ನರಕಜೀವಿಗಳಿಗೆ
ಪ್ರಸಾದಿಗಳೆಂದಡೆ ನಿಮ್ಮ ಶರಣ ಚೆನ್ನಬಸವಣ್ಣ ಕಂಡು,
ಇಂತಪ್ಪ ಮೂಳಹೊಲೆಯರ ಮೂಗಕೊಯ್ದು
ಮೆಣಸಿನ ಹಿಟ್ಟು ತುಂಬಿ ಮೂಡಲದಿಕ್ಕಿಗೆ ಅಟ್ಟೆಂದ ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./290
ಪ್ರಸಾದ ಪ್ರಸಾದವೆಂದು ನುಡಿಯಬಹುದಲ್ಲದೆ,
ಪ್ರಸಾದದ ಘನವನಾರು ಬಲ್ಲರಯ್ಯಾ ?
ಪ್ರಸಾದವೆಂಬುದು ಪರಕ್ಕೆಪರವಾಗಿರ್ಪುದು.
ಪ್ರಸಾದವೆಂಬುದು ಪರತರ ಮುಕ್ತಿದೋರುವುದು.
ಪ್ರಸಾದವೆಂಬುದು ಪರಮಪದವಿಯನೀವುದು.
ಪ್ರಸಾದವೆಂಬುದು ಪರಂಜ್ಯೋತಿಸ್ವರೂಪವನುಳ್ಳುದು.
ಪ್ರಸಾದವೆಂಬುದು ಪರಬ್ರಹ್ಮನಾಮವುಳ್ಳದು.
ಪ್ರಸಾದವೆಂಬುದು ಮಹಾಜ್ಞಾನಪ್ರಕಾಶವನುಳ್ಳುದು.
ಪ್ರಸಾದವೆಂಬುದು ಸ್ವಾನುಭಾವಸಮ್ಯಜ್ಞಾನ,
ಜ್ಞಾನ, ಸುಜ್ಞಾನ, ಮಹಾಜ್ಞಾನ, ಶಿವಜ್ಞಾನವೆಂಬ
ಷಡ್ವಿದಜ್ಞಾನಸ್ವರೂಪವಾದ ಕರಕಮಲದಲ್ಲಿ
ಪ್ರಕಾಶಮಯವಾಗಿ ತೋರುವ ಘನಮಹಾಲಿಂಗವು.
ಅಂತಪ್ಪ ಘನಮಹಾ ಇಷ್ಟಬ್ರಹ್ಮದಲ್ಲಿ
ಎರಡಳಿದು ಕೂಡಿ ಬೆರೆದು ಬೇರಿಲ್ಲದೆ ಇರಬಲ್ಲಡೆ
ಆತನೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ
ಇಂತೀ ಚತುರ್ವಿಧಪ್ರಸಾದದೇಕಸ್ವರೂಪಾದ
ಮಹಕ್ಕೆ ಮಹವಾದ, ಘನಕ್ಕೆ ಘನವಾದ
ಪರಶಿವನ ಮಹಾಪ್ರಸಾದಿಯೆಂದನು ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./291
ಪ್ರಸಾದಗ್ರಾಹಕನಾದ ಸದ್ಭಕ್ತನು
ಭೋಜನಶಾಲೆಯಲ್ಲಿ ಉಣಲಾಗದು.
ರಂಗಮಂಟಪದಲ್ಲಿ ಉಣಲಾಗದು.
ಕೋಣೆಯಲ್ಲಿ ಉಣಲಾಗದು.
ಗೃಹದ ಬಾಗಿಲಲ್ಲಿ ಉಣಲಾಗದು.
ಬಾಹ್ಯದಲ್ಲಿ ಉಣಲಾಗದು, ಒಳಗೆ ಉಣಲಾಗದು.
ಇಂತೀ ಸ್ಥಾನಗಳಲ್ಲಿ ಉಣ್ಣದಾತನೇ
ಶಿವಪ್ರಸಾದಿ ಎಂದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./292
ಪ್ರಸಾದವೆಂಬುದು ಆಕಾರವಲ್ಲ ನಿರಾಕಾರವಲ್ಲ,
ಸಗುಣವಲ್ಲ, ನಿರ್ಗುಣವಲ್ಲ,
ಶ್ವೇತ, ಪೀತ, ಹರಿತ, ಮಾಂಜಿಷ್ಟ, ಕಪೋತ, ಮಾಣಿಕ್ಯವೆಂಬ
ಷಡ್ವರ್ಣಸ್ವರೂಪ ತಾನಲ್ಲ.
ಇಂತಪ್ಪ ಶಿವಪ್ರಸಾದವನು ಕಂಗಳ ಕಂಡು,
ಕೈಯಿಲ್ಲದವ ಪಿಡಿದು,
ಕೈಕಾಲುಕಣ್ಣುಳ್ಳವರು ಕಾಣದೆ,
ಭವಕ್ಕೆ ಭಾಜನವಾದರು ನೋಡಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./293
ಪ್ರಸಾದಿ ಪ್ರಸಾದಿಗಳೆಂದು ಹೆಸರಿಟ್ಟುಕೊಂಡು
ಹಸ್ತಪರುಷವಿಲ್ಲದ ಪದಾರ್ಥ ಕಿಲ್ಬಿಷ
ಲಿಂಗಕ್ಕೆ ಅರ್ಪಿಸಲಾಗದೆಂದು ಶ್ರುತಿವಾಕ್ಯ ಕೇಳಿ,
ಲಿಂಗಜಂಗಮವ ಕಂಡಲ್ಲಿ
ಅನ್ನ ಉದಕವ ಜಂಗಮದ ಹಸ್ತಪರುಷದಿಂದ
ಸೇವಿಸುವರು.
ಸೂಳೆಯರ ಕಂಡಲ್ಲಿ ವೀಳ್ಯವ ಕೊಟ್ಟು
ಆ ವೀಳ್ಯವ ಅವರು ಅರ್ಧ ಕಡಿದು ಕೊಟ್ಟರೆ ತಿಂಬುವರು.
ಎಲ್ಲಿದೆಯಯ್ಯಾ ನಿಮ್ಮ ಹಸ್ತಪರುಷ ?
ಮೋಹದ ಪುತ್ರರಿಗೆ ಆವುದಾನೊಂದು
ಅಮೃತಫಲವ ತಂದುಕೊಟ್ಟು
ಆ ಪುತ್ರರು ಅದರ ಅರ್ಧ ಫಲವ ಸೇವಿಸಿ
ತಮ್ಮ ತಂದೆಗೆ ನೀ ತಿನ್ನೆಂದು ಕೊಟ್ಟರೆ
ಆ ಪುತ್ರನ ಮಮಕಾರದಿಂ ಎಂಜಲೆಂಬುದನ್ನರಿಯದೆ
ತಿಂಬುವರಿಗೆ ಎಲ್ಲಿಯದಯ್ಯ ಹಸ್ತಪರುಷ ?
ಇಂತಪ್ಪವರು ಪ್ರಸಾದಿಗಳೆಂದಡೆ
ಶಿವಜ್ಞಾನಿಗಳಾದ ಶರಣರು ಕಂಡು
ತಮ್ಮ ಹೊಟ್ಟೆಹುಣ್ಣಾಗುವತನಕ
ಶಬ್ದಮುಗ್ಧರಾಗಿದ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./294
ಪ್ರಸಾದಿಗೆ ಪರದ್ರವ್ಯದ ಪ್ರೇಮವುಂಟೆ ?
ಪ್ರಸಾದಿಗೆ ಪರಸ್ತ್ರೀಯರ ಮೋಹವುಂಟೆ ?
ಪ್ರಸಾದಿಗೆ ಮಾತಾಪಿತ ಸತಿಸುತರ ಮಮಕಾರವುಂಟೆ ?
ಒಬ್ಬರಿಗೆ ಉಂಟು, ಒಬ್ಬರಿಗೆ ಇಲ್ಲ.
ಈ ಭೇದವ ನಿಮ್ಮ ಶರಣರೇ ಬಲ್ಲರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./295
ಪ್ರಾಣಲಿಂಗಿ ಪ್ರಾಣಲಿಂಗಿ ಎಂಬರಯ್ಯಾ ;
ಪ್ರಾಣಲಿಂಗದ ನಿಲವನಾರು ಬಲ್ಲರಯ್ಯಾ ?
ಪ್ರಾಣಲಿಂಗದ ನಿಲವ ಉರಿಲಿಂಗಪೆದ್ದಯ್ಯಗಳು ಬಲ್ಲರು.
ಪ್ರಾಣಲಿಂಗದ ನಿಲುಕಡೆಯ ಸಿದ್ಧರಾಮಯ್ಯನವರು ಬಲ್ಲರು.
ಪ್ರಾಣಲಿಂಗದ ಸ್ವರೂಪವನು ಹಡಪದಪ್ಪಣ್ಣ ಸತ್ಯಣ್ಣನವರು ಬಲ್ಲರು.
ಪ್ರಾಣಲಿಂಗದ ನಿಲವ ನುಲಿಯ ಚಂದಯ್ಯ,
ನೀಲಲೋಚನೆಯಮ್ಮನವರು ಮೊದಲಾದ
ಬಸವಾದಿ ಪ್ರಮಥರು ಪ್ರಭುದೇವರಾಂತ್ಯಮಾದ
ಏಳುನೂರಾ ಎಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ
ಮಿಕ್ಕಿನ ಜಡಮತಿ ವೇಷಧಾರಿಗಳಾದ
ಜೀವರುಗಳೆತ್ತ ಬಲ್ಲರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./296
ಪ್ರಾಣಲಿಂಗಿ ಪ್ರಾಣಲಿಂಗಿ ಎಂಬಿರಿ,
ಪ್ರಾಣಲಿಂಗದ ಸ್ವರೂಪವನಾರು ಬಲ್ಲರಯ್ಯಾ ಎಂದಡೆ,
ಆರುಬಟ್ಟೆಯ ಕೆಡಿಸಿ, ಮೂರುಬಟ್ಟೆಯ ಮೆಟ್ಟಿ,
ಉಭಯ ಬಟ್ಟೆಯಲ್ಲಿ ನಿಂದು ಅತ್ತಿತ್ತ ಹರಿಯದೆ,
ಹಿತ್ತಲಬಾಗಿಲಲ್ಲಿ ಪೋಗದೆ ಕಮಲದ ಬಾಗಿಲಲ್ಲಿ ಪೋಗಬಲ್ಲರೆ
ಅಸುಲಿಂಗಿಗಳು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./297
ಪ್ರಾಣಲಿಂಗಿಗೆ ಚತುರ್ವಿಧಭಕ್ತಿಯಿಂದ
ಗುರುವಿಗೆ ತನುವ ದಂಡಿಸಬೇಕೆಂಬ ಮಮಕಾರವುಂಟೆ ?
ಪ್ರಾಣಲಿಂಗಿಗೆ ಅನ್ನ ವಸ್ತ್ರ ಧನ ಧಾನ್ಯ ಮೊದಲಾದ
ಹದಿನೆಂಟು ಜೀನಸಿನ ಧಾನ್ಯವ ಜಂಗಮಕ್ಕೆ ನೀಡಿ
ತೃಪ್ತಿಯಬಡಿಸಿ ಆತ್ಮನ ಬಳಲಿಸಿ,
ಆ ಜಂಗಮದ ಪಾದೋದಕ ಪ್ರಸಾದವ
ಸೇವಿಸಬೇಕೆಂಬ ಮಮಕಾರವುಂಟೆ ?
ಇಂತೀ ತ್ರಿಮೂರ್ತಿಗಳಲ್ಲಿ ಪಾದೋದಕ, ಪ್ರಸಾದದ ಮೇಲಣ
ಮಮಕಾರವನಳಿದುಳಿದಾತನೇ ಪ್ರಾಣಲಿಂಗಿ.
ಮತ್ತಂ-
ಅಂತಪ್ಪ ತ್ರೈಮೂರ್ತಿಗಳ ಪಾದೋದಕ ಪ್ರಸಾದದ ಮೇಲಣ
ಮಮಕಾರ ನಿಮಿಷ ನಿಮಿಷಾರ್ಧವನಗಲದಿರ್ಪಾತನೇ
ಅಚ್ಚ ಪ್ರಾಣಲಿಂಗಿ ನಿಜಲಿಂಗೈಕ್ಯ.
ಇಂತೀ ಉಭಯದ ಭೇದವ ತಿಳಿಯಬಲ್ಲರೆ
ಶಿವಜ್ಞಾನಿಗಳಾದ ಪರಶಿವಯೋಗಿಗಳೆಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./298
ಪ್ರಾಣಲಿಂಗಿಗೆ ಪದಾರ್ಥಪ್ರೇಮವುಂಟೆ ?
ಪ್ರಾಣಲಿಂಗಿಗೆ ಪ್ರಪಂಚದ ಮೋಹವುಂಟೆ ?
ಪ್ರಾಣಲಿಂಗಿಗೆ ಸ್ಥಲಕುಲದ ಅಭಿಮಾನ,
ಕುಲಗೋತ್ರದ ಹಂಗು ಉಂಟೆ ?
ಪ್ರಾಣಲಿಂಗಿಗೆ ಮಾತಾ-ಪಿತಾ, ಸತಿ-ಸುತ
ಬಂಧುಗಳ ಸ್ನೇಹಿತರ ಮೋಹವುಂಟೆ ?
ಇಂತೀ ಸರ್ವರಲ್ಲಿ ಮಮಕಾರ ಉಳ್ಳಾತ ಅಂಗಪ್ರಾಣಿಯಲ್ಲದೆ
ಲಿಂಗಪ್ರಾಣಿ ಆಗಲರಿಯನು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./299
ಪ್ರಾಣಲಿಂಗಿಗೆ ಪರದೈವ ಪೂಜೆಯುಂಟೆ ?
ಪ್ರಾಣಲಿಂಗಿಗೆ ಪರರ ಸೇವಾವೃತ್ತಿಯುಂಟೆ ?
ಪ್ರಾಣಲಿಂಗಿಗೆ ಪರಲೋಕದ ಬ್ರಹ್ಮ, ವಿಷ್ಣು,
ರುದ್ರ, ಈಶ್ವರ, ಸದಾಶಿವರೆಂಬ ಪಂಚಬ್ರಹ್ಮರು
ಮೊದಲಾದ ಅನೇಕ ದೇವತೆಗಳ
ಚತುರ್ವಿಧಫಲಪದ ಮೊದಲಾದ
ಎಂಬತ್ತೆಂಟುಕೋಟಿ ಫಲಪದದ ಮೇಲಣ ಕಾಂಕ್ಷೆಯುಂಟೆ ?
ಪ್ರಾಣಲಿಂಗಿಗೆ ಮರ್ತ್ಯಲೋಕದ ಅರ್ಥಶ್ವರ್ಯ
ಸಕಲಸಂಪದದ ಭೋಗೋಪಭೋಗವನು
ಭೋಗಿಸಬೇಕೆಂಬ ಪುಣ್ಯದಮೇಲಣ ಮಮಕಾರವುಂಟೆ ?
ಇಂತಪ್ಪ ಕರ್ಮದ ಶೇಷವನಳಿದುಳಿದಾತನೇ ಪ್ರಾಣಲಿಂಗಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./300
ಪ್ರಾಣಲಿಂಗಿಯ ನಿಲವ ಪೇಳ್ವೆ.
ಬಲ್ಲರೆ ಪೇಳಿರಿ, ಅರಿಯದಿದ್ದರೆ ಕೇಳಿರಯ್ಯಾ.
ಪ್ರಾಣಲಿಂಗಿಗೆ ಪ್ರಪಂಚದ ಪ್ರೇಮವುಂಟೆ ?
ಪ್ರಾಣಲಿಂಗಿಗೆ ಮಾತಾಪಿತ, ಸತಿಸುತರುಗಳು
ಮೊದಲಾದ ಬಂಧುಗಳ ಸ್ನೇಹಿತರ ಪ್ರೇಮವುಂಟೆ ?
ಪ್ರಾಣಲಿಂಗಿಗೆ ಪರದ್ರವ್ಯದ ಪ್ರೇಮವುಂಟೆ ?
ಪ್ರಾಣಲಿಂಗಿಗೆ ದ್ವೈತಿಗಳಾದ ವೇದಾಂತಿ, ಸಿದ್ಧಾಂತಿಗಳು
ಮೊದಲಾದ ಭಿನ್ನಭಾವದ ಜೀವಾತ್ಮರಲ್ಲಿ ಪ್ರೇಮವುಂಟೆ ?
ಪ್ರಾಣಲಿಂಗಿಗೆ ಊಟ ಉಡಿಗೆ ತೊಡಿಗೆ ಮೃಷ್ಟಾನ್ನ ಭೋಜನವ ಸೇವಿಸಿ,
ಸಕಲಪದಾರ್ಥವ ಭೋಗಿಸಬೇಕೆಂಬ ಮಮಕಾರವುಂಟೆ ?
ಇಂತೀ ಮಾಯಾಪ್ರಪಂಚದ ವಿಲಾಸದ ಮೇಲಣ
ಮಮಕಾರವನಳಿದುಳಿದಾತನೇ ಪ್ರಾಣಲಿಂಗಿ, ಇಲ್ಲದಾತನೇ ಅಂಗಲಿಂಗಿ
ಮುಖಭಂಗಿತರಾದ ಜೀವರುಗಳು ಎಂದರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./301
ಪ್ರಾಸದವೆಂಬುದು ಪುಣ್ಯಪಾಪವೆಂಬುಭಯ ಕರ್ಮವ
ಸಂಹರಿಸುವುದು.
ಪ್ರಸಾದವೆಂಬುದು ಉತ್ಪತ್ತಿ, ಸ್ಥಿತಿಲಯಂಗಳ
ಸಂಹರಿಸುವುದು.
ಪ್ರಸಾದವೆಂಬುದು ಭವಗಜಕ್ಕೆ ಅಂಕುಶವಾಗಿರ್ಪುದು.
ಪ್ರಸಾದವೆಂಬುದು ಪರತರಮುಕ್ತಿಗೆ ಹಡಗಾಗಿರ್ಪುದು.
ಪ್ರಸಾದವೆಂಬುದು ಎನ್ನ ಮರಿಸಿ ನಿನ್ನರುಹುತೋರುವುದು.
ಪ್ರಸಾದವೆಂಬುದು ಮಾತಾ-ಪಿತ ಸತಿ-ಸುತರ ಬಂಧುಗಳ
ಮೊದಲಾದ ಸಕಲಜನಂಗಳ ಹಂಗುದೊರೆಸಿ
ನಿನ್ನ ಗುರುಲಿಂಗಜಂಗಮದ ಹಂಗಿನಲ್ಲಿರಿಸುವುದು.
ಪ್ರಸಾದವೆಂಬುದು ಪರಮಜ್ಞಾನಿಗಳಾದ ಶಿವಶರಣರಿಗೆ
ಅಮೃತಮಯವಾಗಿ ತೋರುವುದು.
ಪ್ರಸಾದವೆಂಬುದು ಭಿನ್ನಜ್ಞಾನಿಗಳಾದ
ಜೀವಾತ್ಮರಿಗೆ ಮಹಾಕಠಿಣವಾಗಿ ತೋರುವುದು.
ಇಂತಪ್ಪ ಶಿವಪ್ರಸಾದದ ಘನವನರಿಯದೆ
ನುಚ್ಚು ರೊಟ್ಟಿ ಪ್ರಸಾದವೆಂದು ಪಡಕೊಂಡು,
ಲಿಂಗಕ್ಕೆ ತೋರಿ, ತಮ್ಮಂಗಕ್ಕೆ ಹೊಂದಿದಲ್ಲಿ ದುರ್ಗಂಧವಾಗಿ,
ಮಲಮೂತ್ರ ವಿಸರ್ಜಿಸುವ ಮಂಗಮೂಳ ಹೊಲೆಯರಿಗೆ
ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಪ್ರಸಾದಪ್ರಮಥರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./302
ಬಯಲ ಪಟ್ಟಣದ ರಾಜಕುಮಾರನು
ಮಲೆಯಪುರದಲ್ಲಿ ಶಿಕಾರಿಯ ಮಾಡಲು,
ಆ ಪಟ್ಟಣದ ಬೀದಿಬಾಜಾರದೊಳಗೆ
ಪದ್ಮಜಾತಿನಿಯೆಂಬ ಸ್ತ್ರೀ ಇರುವಳು.
ಆ ಸ್ತ್ರೀಯ ಕೈಯೊಳಗಿನ ಕೋತಿಯ ವಿಲಾಸವನು,
ಆ ಸ್ತ್ರೀಯ ರೂಪಲಾವಣ್ಯವನು, ರಾಜಕುಮಾರನು ಕಂಡು,
ಬೆರಗಾಗಿ ಮರುಳುಗೊಂಡು,
ಆ ನಾರಿಯ ವಾಸದೊಳಗೆ ಬಹುಕಾಲವಿರ್ದು,
ಪಟ್ಟಣ ಪಾಳೆಯಲ್ಲಿ ಚರಿಸುತ್ತಿರಲು,
ಅತ್ತಳ ಊರಿಂದ ಜೋಗಿ ಬಂದು ಪತ್ರವ ಕೊಡಲಾಗಿ
ಆ ಪಟ್ಟಣ ಬೆದರಿ, ಪಾಳ್ಯ ಅಳಿದು,
ಪಾಳ್ಯದ ನಾಯಕರು ಪಲಾಯನವಾಗಿ,
ನಾರಿಯಮುಖ ವಿಕಾರವಾಗಿ,
ಬಹುವರ್ಣದ ಕೋತಿ ಏಕವರ್ಣವಾಗಿ,
ಆ ಹಸ್ತದೊಳಗಿನ ಪತ್ರವ ಸುಕುಮಾರ ನೋಡಿ,
ಅಗ್ನಿಸ್ಪರ್ಶದ ಬೆಣ್ಣಿಯಂತೆ,
ಜ್ಯೋತಿಯ ಸಂಗದ ಕರ್ಪೂರದಂತೆ,
ಆ ಪತ್ರದಲ್ಲಿ ನಿರ್ವಯಲಾದುದು ಸೋಜಿಗ ಸೋಜಿಗವೆಂದನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./303
ಬಯಲ ಹೊತ್ತವರು ಅಳಲಿಲ್ಲ;
ಆಕಾಶ ಹೊತ್ತವರು ಅಳುತ್ತಿರ್ಪರು.
ಅತ್ತವರು ಇತ್ತಾದರು, ಅಳದವರು ಆತ್ತಾದರು
ನೋಡೆಂದನಯ್ಯಾ ಪ್ರಾಣಲಿಂಗಿ
ಕಾಡನೊಳಗಾದ ಶಂಕರಪರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./304
ಬಯಲಭೂಮಿಯಲ್ಲಿ ನಿಂತು ನಮಾಜ ಮಾಡಲು
ಸಹೀದಪಾಶ್ಚಾ ಬಂದು ಪಾತಿಯ ಕೊಟ್ಟು
ಮಸೂತಿಯ ಸುಟ್ಟು,
ಪೀರಜಾಜಿಯರ ಕೊಂದು, ವಲ್ಲಿಯ ಸಹೀದ ಕೊಂದು,
ಸಹೀದನ ವಲ್ಲಿ ನುಂಗಿರ್ಪನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./305
ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ,
ಯೌವನಪ್ರಾಯದಲ್ಲಿ ಮದಮತ್ಸರದಿಂದ ಹೋರಾಡಿ,
ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು,
ಲೋಭ ಮೋಹದಿಂದ ಮಗ್ನರಾಗಿ,
ಯೌವನಬಲಗುಂದಿ ಮುಪ್ಪುವರಿದು
ಹಲ್ಲು ಬಿದ್ದು, ಕಣ್ಣು ಒಳನಟ್ಟು, ಬೆನ್ನು ಬಾಗಿ,
ದಮ್ಮು ಹತ್ತಿ, ಗುರುಗೂರಿ ಗರಹತ್ತಿ, ಸಾಯುವ ಮನುಜರಿಗೆ,
ವಿಭೂತಿ ವೀಳ್ಯೆ ಎಂದು ಮಾಡಿ,
ಅವನ ಪಣೆಯಲ್ಲಿ ವಿಭೂತಿಯ ಧರಿಸಿ,
ಸರ್ವಾಂಗದಲ್ಲಿ ವಿಭೂತಿ ಲೇಪನ ಮಾಡಿ,
ಸ್ಥಾನಸ್ಥಾನಂಗಳಲ್ಲಿ ರುದ್ರಾಕ್ಷಿಯ ಧರಿಸಿ,
ಅವನ ಮನೆಯಲ್ಲಿ ಶಿವಗಣಂಗಳು ಸಲಿಸಿ,
ಅವನ ಮಸ್ತಕದ ಮೇಲೆ ಸಕಲ ಗಣಂಗಳು ತಮ್ಮ ಪಾದವನಿಟ್ಟು
ಅವನ ಕೈಯಲ್ಲಿ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ಸುವರ್ಣ
ಮೊದಲಾದ ಕಾಂಚನವ ಭಿಕ್ಷವ ಕೊಂಡು
ಅವನು ಸತ್ತುಹೋದ ಮೇಲೆ
ಊರ ಹೊರಗಾಗಲಿ, ಊರೊಳಗಾಗಲಿ,
ಲಿಂಗಸ್ಥಾಪನೆಯಿದ್ದ ಮಠಮಾನ್ಯದಲ್ಲಿ
ಏಳುಪಾದ ನಿಡಿದು, ಏಳುಪಾದ ಉದ್ದ ಭೂಮಿಯ ಒಳಗೆ,
ಐದುಪಾದ ಚೌಕು, ಮೂರುಪಾದ ಅಡ್ಡಗಲ,
ಮೂರುಪಾದ ಒಳಯಕ್ಕೆ ತ್ರಿಕೋಣೆ.
ಇಂತೀ ಕ್ರಮದಲ್ಲಿ ಕ್ರಿಯಾಸಮಾಧಿಯ ಮಾಡಿ,
ಸುಣ್ಣ ಕೆಂಪುಮಣ್ಣಿನ ಸಾರಣೆಯ ಮಾಡಿ
ರಂಗವಾಲಿಯ ತುಂಬಿ,
ತಳಿರುತೋರಣವ ಕಟ್ಟಿ, ಕೋಣಿ ಕೋಣಿ ಸ್ಥಾನಕ್ಕೆ
ಓಲೆಯ ಮೇಲೆ ಪ್ರಣಮವಂ ಬರೆದು
ಆ ಸಮಾಧಿಯಲ್ಲಿ ಸಂಬಂಧಿಸಿ,
ಮತ್ತಂ, ಅವನ ಶವಕ್ಕೆ ಹಾಗೆ ಪ್ರಣಮವಂ ಬರೆದು ಸಂಬಂಧಿಸಿ,
ಸಂಚರಿಸಿ ಮೇಲೆ ಮೋಕ್ಷವಾಯಿತು ಎಂಬರಯ್ಯಾ;
ಮೋಕ್ಷವಾಗಲರಿಯದು.
ಅದೆಂತೆಂದಡೆ, ಇಂತಿವೆಲ್ಲವು ಹೊರಗಣ ಉಪಚಾರವು.
ಈ ಉಪಚಾರದಿಂದ ಕರ್ಮದೋಷಗಳು ಹರಿದು
ಪಿಶಾಚಿಯಾಗನು, ಭವ ಹಿಂಗದು.
ಇಂತೀ ಕ್ರಮದಲ್ಲಿ, ಅಂತರಂಗದಲ್ಲಿ ಲಿಂಗಾಂಗಕ್ಕೆ
ಸ್ವಾನುಭಾವಜ್ಞಾನಸೂತ್ರದಿಂ
ಪ್ರಣವಸಂಬಂಧ ಮಾಡಿಕೊಂಡಡೆ
ಅದೇ ಕ್ರಿಯಾಸಮಾಧಿ, ಗೋಮುಖಸಮಾಧಿ,
ಮಹಾನಿಜ ಅಖಂಡ ಚಿದ್ಬಯಲಸಮಾಧಿ.
ಇಂತಪ್ಪ ಸಮಾಧಿ ಉಳ್ಳವರಿಗೆ ಭವಬಂಧನ ಹಿಂಗಿ
ಮುಂದೆ ಮೋಕ್ಷವಾಗುವದು ನೋಡೆಂದನಯ್ಯ
ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./306
ಬುದ್ದಲಿಕಿ ಎಣ್ಣೆಯ ಊರೊಳಗಿನ ಶೀಲವಂತರಿಗೆ ಮಾರುವಳು.
ಮಣ್ಣ ಕೊಡದಿಣ್ಣೆಯ ಹೊರಕೇರಿ ಹೊಲೆಮಾದಿಗರಿಗೆ ಮಾರುವಳು.
ಕೊಡದೆಣ್ಣೆಯ ಕುಡಿದವರು ಲಯವಾದರು.
ಬುದ್ದಲಿಕಿ ಎಣ್ಣೆಯ ಕುಡಿದವರು ಎರವಾದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./307
ಬೆಳ್ಳನ್ನವರ ಭಾಷೆಯ ಹಿಂಗಿ
ಕಂಬಳಿಯವರ ಭಾಷೆಯ ನುಂಗಿ
ತೃಷೆಯಾದ ವ್ಯಾಘ್ರನಂತೆ ತೋರುವರ ಗೊಲ್ಲನೆಂದೆನ್ನೆ.
ಬೆಳ್ಳನ್ನವರ ಭಾಷೆಯ ನುಂಗಿ
ಕಂಬಳಿಯವರ ಭಾಷೆಯ ಹಿಂಗಿ
ತೃಷೆಯಾದ ತುರುಕನಂತೆ ತೋರುವರ ಗೊಲ್ಲನೆಂದೆನ್ನೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./308
ಬೆಳ್ಳಿ, ಬಂಗಾರ, ತಾಮ್ರ, ಹಿತ್ತಾಳಿಯ ಕೊಡದೆ,
ತಾಮ್ರದುಡ್ಡು ಕೊಟ್ಟು ಜೋಗಿಯ ಕೈಯಲ್ಲಿ ಒಂದು ರತ್ನವ ಕೊಂಡೆ.
ಆ ರತ್ನ ಮೂರುಲೋಕಕ್ಕೆ ಬೆಲೆಯಾಯಿತ್ತು.
ಅಂತಪ್ಪ ರತ್ನವ ಆರಿಗೂ ತೋರದೆ ಬೀರದೆ
ಒಬ್ಬ ಬಡಭಕ್ತನು ಬಂದು ಕಬ್ಬಿಣವ ಕೊಟ್ಟರೆ
ಆ ರತ್ನವ ಕೊಟ್ಟು ಉದ್ಯೋಗ ಮಾಡುತಿರ್ದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./309
ಬೇಡಿಸಿಕೊಂಡು ನೀಡುವಾತ ಭಕ್ತನಲ್ಲ,
ಬೇಡಿ ಉಂಬಾತ ಜಂಗಮನಲ್ಲ.
ರೂಪಕ್ಕೆ ಪರಿದಾಡುವಾತ ಭಕ್ತನಲ್ಲ,
ರುಚಿಗೆ ಹರಿದಾಡುವಾತ ಜಂಗಮನಲ್ಲ.
ಜಂಗಮಕ್ಕೆ ಅನ್ನ ವಸ್ತ್ರವ ಕೊಟ್ಟು
ಸುಖಿಸಿದೆನೆಂಬಾತ ಭಕ್ತನಲ್ಲ,
ಆ ಭಕ್ತನ ಅನ್ನ ವಸ್ತ್ರದಿಂದ
ನಾನು ಸುಖಿಯಾದೆನೆಂಬಾತ ಜಂಗಮನಲ್ಲ.
ಅದೆಂತೆಂದೊಡೆ: ಆ ಜಂಗಮನಂತುವ ಭಕ್ತನರಿಯ,
ಆ ಭಕ್ತನಂತುವ ಜಂಗಮನರಿಯದ ಕಾರಣ,
ದೇವಭಕ್ತನೆಂಬ ನಾಮವಾಯಿತು.
ಇಂತೀ ಉಭಯರ ಭೇದವ
ನಿಮ್ಮ ಶರಣರೇ ಬಲ್ಲರಲ್ಲದೆ
ಈ ಲೋಕದ ಗಾದಿಯಮನುಜರೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ?
/310
ಬೇರಿಲ್ಲದೆ ಭೂಮಿಗೆ ಹೊಂದದೆ
ಒಂದು ಮಾವಿನ ವೃಕ್ಷವು ಪುಟ್ಟಿತ್ತು.
ಆ ವೃಕ್ಷ ನೀರಿಲ್ಲದೆ ಗಾಳಿ ಸೋಂಕದೆ ಪಲ್ಲವಿಸಿತ್ತು.
ಮೂರಾರು ಗಂಟಾಗಿರ್ಪವು.
ತುದಿಗಂಟಿನಲ್ಲಿ ಮೊಳೆದೋರಿ ಎರಡು ಶಾಖೆ ಪುಟ್ಟಿದವು.
ಎರಡು ಶಾಖೆಗೆ ಮೂರು ಕವಲು,
ಮೂರು ಕವಲಿಗೆ ಆರು ಬಗಲು,
ಆರು ಬಗಲಿಗೆ ಮೂವತ್ತಾರು ಪರ್ಣಂಗಳು,
ಇನ್ನೂರಾಹದಿನಾರು ಕುಡಿಗಳು, ಅನೇಕ ಕುಸುಮಂಗಳು.
ಅದರೊಳಗೆ ಅಗ್ನಿವರ್ಣದ ಕುಸುಮ
ಮೂರುಗಂಟಿನ ಮೇಲೆ ಪುಟ್ಟಿ, ತುದಿಯಲ್ಲಿ ಅರಳಿ ಫಲವಾಗಿ,
ಐದು ಗಂಟಿನ ಮೇಲೆ ಹಣ್ಣಾಗಿ,
ಅಮೃತಜೇವಣಿಯೆಂಬ ಹಣ್ಣನು ಕಮಲದಲ್ಲಿ ಕಂಡು
ಸೇವಿಸಿ ವ್ಯಾಧಿಯ ಪರಿಹರಿಸಬಲ್ಲಡೆ
ಅಸುಲಿಂಗಸಂಬಂಧಿಯೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./311
ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ,
ಚಿನ್ನಿ ಸಕ್ಕರೆಯ ಖಾತವ ಹಾಕಿ,
ಜೇನುತುಪ್ಪ ನೊರೆವಾಲೆಂಬ ನೀರೆರೆದರೆ,
ಬೇವಿನಮರವಳಿದು ಬೆಲ್ಲದ ಮರವಾಗಬಲ್ಲುದೆ ?
ಮಾವಿನಮರಕ್ಕೆ ವಿಷದ ಕಟ್ಟೆಯ ಕಟ್ಟಿ,
ಉಪ್ಪಿನ ಖಾತವ ಹಾಕಿ, ಬೇವಿನ ಈಚಲ ತಾಡಿನ ಹಣ್ಣು
ಮೊದಲಾದ ತ್ರಿವಿಧ ಹಣ್ಣಿನ ರಸವೆಂಬ
ನೀರೆರೆದರೆ ಮಾವಿನಮರವಳಿದು
ಬೇವು ಈಚಲ ತಾಡ ಮೊದಲಾದ ತ್ರಿವಿಧ ವೃಕ್ಷವಾಗುವುದೆ ?
ಇಂತೀ ದೃಷ್ಟಾಂತದಂತೆ ಲೋಕದ ಮಧ್ಯದಲ್ಲಿ
ಸಂಸಾರವಿಷಯರಸಪೂರಿತವಾದ ಕಡುಪಾತಕ ಜಡಜೀವಿಗಳಾದ
ಕುರಿಮನುಜರ ತಂದು
ಭಿನ್ನಜ್ಞಾನಿಗಳಾದ ಆಶಾಬದ್ಭ ಗುರುಮೂರ್ತಿಗಳು
ಅಂತಪ್ಪ ಜಡಮತಿಗಳಿಗೆ ವಿಭೂತಿಯ ಪಟ್ಟವಗಟ್ಟಿ,
ರುದ್ರಾಕ್ಷಿಯ ಧರಿಸಿ, ಅವನ ಮಸ್ತಕದ ಮೇಲೆ
ಪತ್ರಿ ಪುಷ್ಪವನಿಟ್ಟು, ಮೂರೇಳು ಪೂಜೆಯ ಮಾಡಿ,
ಇದಕ್ಕೆ ದೃಷ್ಟಾಂತ : ಹಸಿಯ ಕುಳ್ಳಲ್ಲಿ ಬೆಂಕಿಯನಿಟ್ಟು
ಊದಿ ಪುಟುಮಾಡುವ ಮರುಳರಂತೆ,
ಬರಡು ಆವಿನ ಹಾಲ ಕರಸಿಹೆನೆಂಬ ಅಧಮನಂತೆ,
ದುಮ್ಮಡಿಯ ಹಚ್ಚಿ ಊದಿ ಕಿವಿಯೊಳಗಣ
ತೊನಸಿ ತೆಗೆವ ಗಂಧಿಗಾರನಂತೆ,
ಅಂತಪ್ಪ ಮಲತ್ರಯಯುಕ್ತವಾದ ಜೀವಾತ್ಮರ
ದಕ್ಷಿಣ ವಾಮಭಾಗದ ಕರ್ಣದಲ್ಲಿ
ತಾರಕಮಂತ್ರದುಪದೇಶವನು
ತಮ್ಮ ನಿಲವ ತಾವರಿಯದ ಭಿನ್ನಭಾವದ ಗುರುಮೂರ್ತಿಗಳು
ಊದಿ ಊದಿ ಬಾಯಾರಿ ಗಂಟಲೊಣಗಿ ಧ್ವನಿಬಿದ್ದು
ದಣಿದು ಹೋದರಲ್ಲದೆ
ಸದ್ಭಕ್ತ ಶರಣಜನಂಗಳು ಮಾಡಲರಿಯರು.
ಮತ್ತಂ, ಚಿದಂಶಿಕನಾದಾತ್ಮನು ಶಿವಕೃಪೆಯಿಂ
ಸುಜ್ಞಾನೋದಯವಾಗಿ,
ಸಕಲಪ್ರಪಂಚವನ್ನೆಲ್ಲ ನಿವೃತ್ತಿಯ ಮಾಡಿ,
ಶ್ರೀಗುರುಕಾರುಣ್ಯವ ಪಡೆದ
ಲಿಂಗಾಂಗಸಂಬಂಧಿಯಾದ
ಸದಾಚಾರಸದ್ಭಕ್ತ ಶರಣಜನಂಗಳಿಗೆ
ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ
ಸಕಲ ಭಿನ್ನಭಾವದ ಜೀವಾತ್ಮರು
ವೇದಾಗಮ ಶಾಸ್ತ್ರ ಪುರಾಣ ತರ್ಕ ತಂತ್ರಗಳೆಲ್ಲವು
ತಮ್ಮ ವೇದಾಗಮ ಬೋಧಿಸಿ
ಶಿವಾಗಮವನೋದಿದ ಶಿವಶರಣರಿಗೆ
ಹೇಳಿ ಹೇಳಿ ತಾವೇ ಬೇಸತ್ತು ಬಳಲಿ ಬೆಂಡಾಗಿ
ಮುಖಭಂಗಿತರಾಗಿ ಹೋದರಲ್ಲದೆ
ಅವರೇನು ಮರಳಿ ಜಡಮತಿಜೀವರಾಗಲರಿಯರು.
ಅಂತಪ್ಪ ಶಿವಜ್ಞಾನಸಂಪನ್ನರಾದ ಶರಣಜನಂಗಳು
ಎಷ್ಟು ಪ್ರಪಂಚವ ಮಾಡಿದಡೂ ಮಲತ್ರಯಯುಕ್ತವಾದ
ಜೀವರಾಗಲರಿಯರು.
ಅವರು ಎಷ್ಟು ಕ್ರೀಯವನಾಚರಿಸಿದೊಡೆಯು
ಫಲಪದವಿಯ ಪಡೆದು
ಭವಭಾರಕ್ಕೆ ಬರುವ ಜಡಮತಿ
ನರಕಜೀವಿಗಳಾಗಲರಿಯರು ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./312
ಬೇವಿನಮರದ ಬೆಂಕಿ ಪುಟವಾಗಿ,
ಕಾಗೆ ಸತ್ತು ಗೂಡು ಉಳಿದಿತ್ತ ಕಂಡೆ.
ಆ ಗೂಡಿನೊಳಗಣ ಕೋಗಿಲೆ
ಬೇವಿನಮರದ ಬಳಗವನೊಂದುಳಿಯದೆ ಕೊಂದು
ಆರ ಹಂಗಿಲ್ಲದೆ ಎಲ್ಲರ ಕೂಡಿಕೊಂಡು
ಮೇಲುದೇಶಕ್ಕೆ ಹಾರಿಹೋಯಿತ್ತು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./313
ಬ್ರಹ್ಮಂಗೆ ಕಾಲಕೊಟ್ಟು, ವಿಷ್ಣುವಿಂಗೆ ಕೈಯಕೊಟ್ಟು,
ರುದ್ರಂಗೆ ತಲೆಯಕೊಟ್ಟು,
ಉಳಿದ ಪರುಷರಿಗೆ ಸರ್ವಾಂಗವನು ಕೊಟ್ಟು,
ಹಾದರ ಮಾಡಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./314
ಬ್ರಹ್ಮಯ್ಯನವರು ನಿತ್ಯದಲ್ಲಿ ಹಾದರವನಾಡಿ
ಹಾಗದ ಕಾಯಕದ ಹಣವ ತಂದು,
ಜಂಗಮಾರ್ಚನೆಯ ಮಾಡುವರು.
ಅದರೊಳಗೆ ಒಂದು ದಿವಸ ಬ್ರಹ್ಮಯ್ಯನವರು
ಹಾದರಕಾಯಕವ ತಡೆಯಲು,
ಆತನ ಸತಿಯಳು ಪುರುಷನ ಅಪ್ಪಣೆಯಕೊಂಡು ಪೋಗಿ
ಹಾದರವನಾಡಿ ಹಾಗದ ಕಾಯಕವ ತಂದು,
ಜಂಗಮಾರ್ಚನೆ ಮಾಡುವರೆಂದು
ವೇದ ಶ್ರುತಿ ಪುರಾಣ ವಾಕ್ಯದಲ್ಲಿ ಪೇಳುವರು.
ಇದರ ಅನುಭಾವವನು ಬಲ್ಲಿದರೆ ಪೇಳಿ,
ಅರಿಯದಿದ್ದರೆ ಕೇಳಿ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./315
ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ.
ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು
ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು
ತನ್ನ ಸ್ವಲೀಲೆಯಿಂದ ತಾನೇ ಜಗತ್ಸೃಷ್ಟಿ ನಿಮಿತ್ತವಾಗಿ,
ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು.
ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು.
ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು
ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.
ಆ ಮಹಾಲಿಂಗದಿಂದ ಆತ್ಮ ಜನನ ;
ಆತ್ಮದಿಂದ ಭಾವ ಪುಟ್ಟಿತ್ತು.
ಆ ಭಾವದಿಂದ ಮೋಹ ಪುಟ್ಟಿತ್ತು.
ಆ ಮೋಹವೆಂದಡೆ, ಮಾಯವೆಂದಡೆ, ಆಶೆಯೆಂದಡೆ, ಮನವೆಂದಡೆ
ಏಕಪರ್ಯಾಯಾರ್ಥ.
ಇಂತಪ್ಪ ಮೋಹದಿಂದ ತ್ರೈಲೋಕ ಮೊದಲಾಗಿ
ಚತುರ್ದಶಭುವನಂಗಳು ಪುಟ್ಟಿದವು.
ಆ ಚತುರ್ದಶಭುವನದ ಮಧ್ಯದಲ್ಲಿ ಇರುವೆ ಮೊದಲು ಆನೆ ಕಡೆಯಾಗಿ
ಎಂಬತ್ತುನಾಲ್ಕುಲಕ್ಷ ಜೀವರಾಶಿಯೊಳಗೆ
ದೇವ-ದಾನವ-ಮಾನವರು ಮೊದಲಾದ ಹೆಣ್ಣು-ಗಂಡು,
ಸಚರಾಚರಂಗಳೆಲ್ಲವು ಉತ್ಪತ್ತಿಯಾದವು.
ಇಂತೀ ಎಲ್ಲವು ಪರಶಿವನ ನೆನವುಮಾತ್ರದಿಂದ ಮರೀಚಿಕಾಜಲದಂತೆ,
ಸುರಚಾಪದಂತೆ, ತೋರಿ ತೋರಿ ಅಡಗುವವಲ್ಲದೆ
ನಿಜವಲ್ಲ ಮಿಥ್ಯವೆಂದು ತಿಳಿದು ವಿಸರ್ಜಿಸಿ ಬಿಡುವಾತ
ತಾನೇ ಪರಶಿವನೆಂದು ತಿಳಿವುದಯ್ಯ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./316
ಭಕ್ತನಾದಮೇಲೆ ಗುರುವಿಗೆ ತನುವ ನೀಡಬೇಕು,
ಲಿಂಗಕ್ಕೆ ಮನವ ನೀಡಬೇಕು,
ಜಂಗಮಕ್ಕೆ ಧನವ ನೀಡಬೇಕು.
ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟು
ಹೊಲಗೇರಿಯ ಹೊಕ್ಕು ಕುಲಗೆಟ್ಟವನೇ ಭಕ್ತ ಕಾಣಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./317
ಭಕ್ತನಾದರೆ ಬಾಳೆಹಣ್ಣಿನಂತಿರಬೇಕು.
ಭಕ್ತನಾದರೆ ಬೆಲ್ಲದಕುಳ್ಳಿಯಂತಿರಬೇಕು.
ಭಕ್ತನಾದರೆ ಮಾವಿನಫಲದಂತಿರಬೇಕು.
ಇಂತಪ್ಪಾತನೇ ಸದ್ಭಕ್ತ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/318
ಭಕ್ತರಮನೆಗೆ ಕರೆಯದೆ ಅಶನಕ್ಕೆ ಪೋಗುವ ಮಹೇಶ್ವರರೆಲ್ಲ
ಬೆಕ್ಕು ನಾಯಿಗಳಂತೆ,
ಭಕ್ತರು ಹೊಡೆದು ಬಡಿದು ಹೊರಯಕ್ಕೆ ನೂಕಿದಡೆ
ಬಾಗಿಲಲ್ಲಿ ನಿಂತು ಅಶನವ ನೀಡೆಂದು ಒದರುವರೆಲ್ಲ
ಮನೆಮನೆ ತಪ್ಪದೆ ತಿರುಗುವ
ಚಂಚರು ಕೊರವರಂತೆ.
ಭಕ್ತರು ಭಿಕ್ಷವ ಕೊಟ್ಟರೆ ಹೆಳವ ಗೊರವನಂತೆ
ಹೊಗಳಿ ಕೊಂಡಾಡುವರು.
ಇಲ್ಲವಾದರೆ ಬೆಕ್ಕು ನಾಯಿಗಳ ಹಾಗೆ ಬೊಗಳುವರು.
ಇಂತಪ್ಪವರು ಮಹೇಶ್ವರರೆಂದಡೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವಿನ
ಶರಣರು ಮೂಗಕೊಯ್ದು ಕನ್ನಡಿಯ ತೋರಿ
ತಮ್ಮ ಪಾದರಕ್ಷೆಯಲ್ಲಿ ಘಟ್ಟಿಸದೆ ಬಿಡುವರೆ ?/319
ಭಕ್ತಿಗೆ ತೋಲಾಗಿ ಓಡುವಾತ ಜಂಗಮವಲ್ಲ.
ಮಂತ್ರ ತಂತ್ರ ವಶೀಕರಣ ಕಲಿತು
ಮೆರೆದಾಡುವಾತ ಜಂಗಮವಲ್ಲ.
ವೇಷದ ಗುಣವನರಿಯದ ಹಾಸ್ಯಗಾರನ ಹಾಗೆ
ವಿಭೂತಿ ರುದ್ರಾಕ್ಷಿ ಕಾವಿಲಾಂಛನವ ಧರಿಸಿ
ತಿರುಗುವರೆಲ್ಲ ಜಂಗಮರಲ್ಲ.
ಬೇಟೆಯ ನಾಯಿಯಂತೆ ವಿಷಯದಾಶೆಗೆ
ಮುಂದುವರೆದು ತಿರುಗುವಾತ ಜಂಗಮವಲ್ಲ.
ಇವರು ಜಂಗಮವೆಂದಡೆ
ನಗುವರಯ್ಯ ನಿಮ್ಮ ಶರಣರು.
ಅದೇನು ಕಾರಣವೆಂದಡೆ: ಇಂತಿವರೆಲ್ಲರು ಪರಮಜಂಗಮದ
ನಿಲುಕಡೆಯನರಿಯರಾಗಿ,
ಮುಂದೆ ಭವಜಾಲದಲ್ಲಿ ರಾಟಾಳ ತಿರುಗಿದಂತೆ
ತಿರುಗುವದೇ ಪ್ರಾಪ್ತಿ ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./320
ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು
ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ.
ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ
ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ.
ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ
ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ
ಇಂತೀ ಉಭಯ ಪಾಶಬದ್ಧರ ಕೈಯಿಂದ
ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ
ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ
ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು
ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು,
ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ,
ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ,
ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ.
ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ
ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು.
ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ
ನಿಲುಕಡೆಯ ತಿಳಿಯದ ಕಾರಣ.
ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು,
ಸರ್ವಾಂಗಲಿಂಗಮಯವಾಗಿರುವಂಥ
ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ,
ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ
ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ
ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ
ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ
ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ
ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ
ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ
ಇಂತೀ ಉಭಯ ಭಕ್ತಗಣಂಗಳು
ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು,
ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು,
ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ
ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ
ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ.
ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ
ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು.
ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು.
ಮತ್ತಂ, ಲಿಂಗಾಂಗಸಂಬಂಧಿಯಾಗಿ ಸರ್ವಾಚಾರ ನೆಲೆಗೊಂಡು
ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ,
ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ,
ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ
ದೀರ್ಘದಂಡನಮಸ್ಕಾರಮಂ ಮಾಡಿ
ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು
ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು.
ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ,
ಅಥವಾ ಜಂಗಮಲಿಂಗಿಗಳಲ್ಲಾಗಲಿ,
ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ,
ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು,
ತೋರದಿದ್ದರೆ ಪ್ರಮಥರು ಮೆಚ್ಚರು.
ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ
ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು
ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./321
ಭವಿಗಳ ಕಪ್ಪಡ ಕವುದಿ ಕಂಬಳಿ ಕರಿಯಶಾಲಿಯ ತೊಳೆಯದೆ
ಲಿಂಗವಂತರಾದವರ ಕಪ್ಪಡ ಶಾಲು ಶಕಲಾತಿ ಜರತಾರವ ತೊಳೆದು,
ಮಡಿಯ ತೊಳೆಯದೆ, ಮೈಲಿಗೆಯ ತೊಳೆದು,
ಮಡಿ ಉಡದೆ ಮೈಲಿಗೆಯನುಟ್ಟು ಕಳೆಯದೆ
ಕಾಯಕವ ಮಾಡುತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./322
ಭವಿಗಳ ನೂಲಪಿಡಿದು ನೆಯ್ದು ವಸ್ತ್ರವ ಮಾರಿ
ಕಾಯಕವ ಮಾಡುತ್ತಿರ್ಪರು.
ಶೀಲವಂತರ ನೂಲಪಿಡಿದು ನೆಯ್ದು ಮಾರಿ
ಕಾಯಕವ ಮಾಡಲಿಲ್ಲ ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./323
ಭೂಮಿ ಬಿಟ್ಟವರಿಗೆ ಭೂಮಿಕೊಟ್ಟು ಹಣವ ಕೊಂಬುವರು ;
ಭೂಮಿ ಹಿಡಿದವರಿಗೆ ಭೂಮಿಕೊಟ್ಟು ಹಣವ ಕೊಳಲಿಲ್ಲ.
ಅನ್ನೋದಕ ಉಂಬವರಿಗೆ ವಿಷ ಅಮೃತವನುಣಿಸಲಿಲ್ಲ;
ಅನ್ನೋದಕ ಬಿಟ್ಟಿವರಿಗೆ ವಿಷ ಅಮೃತವನುಣಿಸುವರು
ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./324
ಭೂಮಿಯ ಬೆಳೆ ಕಳೆಯದೆ,
ಪಂಚಪದಾರ್ಥವ ಬಿಡದೆ, ಪಂಚಾಗ್ನಿಯ ಸುಡದೆ,
ಷೋಡಶ ಮದಕರಿ ಬೆಟ್ಟವನಳಿಯದೆ,
ಇವನಳಿಯದೆ ಗೊಲ್ಲನೆಂದಡೆ ಹಾಸನಗೈವರು ನಿಮ್ಮವರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./325
ಭೂಮಿಯಲ್ಲಿ ಲಿಂಗಸ್ಥಾಪನೆಯಿಲ್ಲದೆ
ಶ್ಮಶಾನಭೂಮಿಯಲ್ಲಿ ಶವವ ಸಂಚಗರಿಸಲಾಗದು ಎಂಬಿರಿ.
ಭೂಮಿಯ ಶುದ್ಧಮಾಡಿ ಸಂಚಗರಿಸುವ ಕ್ರಮವಂ ಪೇಳ್ವೆ,
ಅದೆಂತೆಂದೊಡೆ : ಆರೂ ಇಲ್ಲದ ಅರಣ್ಯದ ಬೆಟ್ಟವನೊಡದು,
ಚಂದ್ರ ಸೂರ್ಯ ಅಗ್ನಿ ಪ್ರಕಾಶವನುಳ್ಳ
ನಾನಾ ವರ್ಣದ ಕಲ್ಲು ತಂದು,
ಸಪ್ತಚರಣದ ಭೂಮಿಯ ಮೂರಾರು ಕೋಣೆಗೆ ಹಾಕಿ,
ಹಂಚು ಹರಳು ಎಲುವು ನೋಡಿ ತೆಗೆದು,
ಹುಲ್ಲುಕೊಯ್ದು ಭೂಮಿಯ ಹಸನ ಮಾಡಿ,
ಕಳ್ಳಿ ಮುಳ್ಳ ಹಚ್ಚದೆ ಬೇಲಿಯ ಬಂಧಿಸಿ,
ಆ ನಿರ್ಮಳವಾದ ಭೂಮಿಯಲ್ಲಿ
ಶವಸಂಚಗರಿಸಿದಾಕ್ಷಣವೇ ಬಯಲಾಗುವದು ನೋಡಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./326
ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು
ಲಿಂಗವೆಂದು ಹೆಸರಿಟ್ಟು,
ಶುಕ್ಲ ಶೋಣಿತಾತ್ಮಸಂಬಂಧವಾದ
ಮಾತಾಪಿತರ ಸಂಯೋಗದಿಂದ ಪುಟ್ಟಿದ ಮನುಜರಿಗೆ
ಭಕ್ತನೆಂದು ಹೆಸರಿಟ್ಟು,
ಇಂತಪ್ಪ ಭಕ್ತಂಗೆ ಅಂತಪ್ಪ ಲಿಂಗವನು
ವೇಧಾ, ಮಂತ್ರ, ಕ್ರಿಯೆ ಎಂಬ ತ್ರಿವಿಧ ದೀಕ್ಷೆಯಿಂದ
ಮೂರೇಳು ಪೂಜೆಯ ಮಾಡಿ,
ಅಂಗದ ಮೇಲೆ ಲಿಂಗಧಾರಣವ ಮಾಡಿದಡೆ,
ಅದು ಲಿಂಗವಲ್ಲ, ಅವನು ಭಕ್ತನಲ್ಲ.
ಅದೇನು ಕಾರಣವೆಂದಡೆ: ಅವನು ಮರಣಕ್ಕೆ ಒಳಗಾಗಿ ಹೋಗುವಲ್ಲಿ
ಪೃಥ್ವಿಯ ಕಲ್ಲು ಪೃಥ್ವಿಯಲ್ಲಿ ಉಳಿಯಿತು.
ಭಕ್ತಿ ಭ್ರಷ್ಟವಾಗಿ ಹೋಯಿತು ಬಿಡಾ ಮರುಳೆ.
ಇದು ಲಿಂಗಾಂಗಸ್ವಾಯುತವಲ್ಲ.
ಲಿಂಗಾಂಗದ ಭೇದವ ಹೇಳ್ವೆ ಲಾಲಿಸಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/327
ಭೂಮಿಯಿಲ್ಲದೆ ಊರೊಳಗೆ ಒಂದು ಶಿಶು ಹುಟ್ಟಿ,
ತ್ರಿಲೋಕದ ಸಿದ್ಧಕಳ್ಳರ ಗುದ್ದಿ,
ಭೂಮಿ ಆಕಾಶವ ಕೆಡಿಸಿ,
ಪಂಚವಕ್ತ್ರವನುಳ್ಳ ಶೇಷನ ಕೊಂದು,
ಸತ್ತಶೇಷನು ಕಪ್ಪೆಯ ನುಂಗಲು, ಸತ್ತ ಕಪ್ಪೆಯು ಶಿಶುವ ನುಂಗಿ
ಬಟ್ಟಬಯಲಲ್ಲಿ ನಿರ್ವಯಲಾಯಿತ್ತು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./328
ಭೂಲೋಕದಲ್ಲಿ ಪುಟ್ಟಿದ ವೃಕ್ಷ ಪರ್ಣಪಾತ್ರೆಯಲ್ಲಿ
ಮೂರು ಕೂಳನುಂಬುವರು,
ಇಮ್ಮಡಿ ಮಕ್ಕಳಾಗಿ ಕಾಲನ ಪುರದಲ್ಲಿರ್ಪರು.
ಸ್ವರ್ಗಲೋಕದಲ್ಲಿ ಪುಟ್ಟಿದ ವೃಕ್ಷಪರ್ಣಪಾತ್ರೆಯಲ್ಲಿ
ಮೂರು ಶೇಷನುಂಬುವರು,
ಮುಮ್ಮಡಿ ಮಕ್ಕಳು ಕಾಲಸಂಹರನಪುರದಲ್ಲಿರುವರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./329
ಮಂಗಳಾಂಗಿ ಮಧುರವಾಣಿ ಕೇಳವ್ವಾ,
ನಿನಗೊಂದು ವಿಚಿತ್ರ ಪೇಳ್ವೆ.
ಎಮ್ಮವರು ಎನಗೆ ಹಳೆಯ ಮುದುಕನ ತಂದು
ಮದುವೆಯ ಮಾಡಿದರು ನೋಡವ್ವಾ!
ನಿನ್ನಿನ ಇರುಳ ಆತನ ಸಂಗಸುಖವನೇನು ಪೇಳ್ವರೆ ಅವ್ವಾ.
ಮೂರು ಮನೆಯೊಳಗಣ ಕೋಣೆಯೊಳಗೆ ಮಂಚದ ಮೇಲೆ
ಆರೂ ಇಲ್ಲದೆ ಎಳೆಯಕುಮಾರಿ ನಾ ಒಬ್ಬಳು ಮಲಗಿರ್ದೆನು ಕೇಳವ್ವಾ.
ಮೆಲ್ಲಮೆಲ್ಲನೆ ಬಂದು ಎನ್ನ ಮುಸುಕು ತೆಗೆಯಲು
ಆ ನಲ್ಲನ ಕಂಡು ಹೆದರಿ ಬೆದರಿ ಎದ್ದುನಿಂತೆನೆ ಅವ್ವಾ.
ನಾ ಬೆದರಿದ ಕಂಡು ಮುದುಕನು ಎಳೆಯಕುಮಾರನಾಗಿ
ಎನ್ನ ಕರವನೆ ಪಿಡಿದನೆ ಅವ್ವಾ.
ಆತನ ಚಲ್ವಿಕೆಯ ಕಂಡು ಮನೆಮಾರು ತೊರೆದು ಮರುಳಾಗಿರ್ದೆನವ್ವಾ.
ಆ ಪುರುಷನ ಚಲ್ವಿಕೆಯ ನೋಡಿ
ಎನಗೆ ಕಾಮ ತೋರಿತ್ತು ನೋಡವ್ವಾ.
ಆ ಕಾಮದಿಂದ ಉಟ್ಟ ಶಾಲಿ ತೊಟ್ಟ ಕುಪ್ಪಸ ಸಡಲಿ
ಮುಡಿ ಬಿಚ್ಚಿದವು ನೋಡವ್ವಾ.
ತನ್ನ ಬಾಯೊಳಗಿನ ತಾಂಬೂಲವ
ಎನ್ನ ಬಾಯೊಳಗೆ ಇಕ್ಕಿದ ನೋಡವ್ವಾ.
ಹತ್ತೆ ಕರೆದು ಬಿಗಿದಪ್ಪಿ ತಕರ್ೈಸಿ
ಎನ್ನಂಗದ ಎಲುವು ಮುರಿದು ನುಗ್ಗುನುಸಿಯ ಮಾಡಿದ ನೋಡವ್ವಾ.
ಈ ಸ್ತ್ರೀ ಪುರುಷರ ಸುಖವ
ಪುರುಷನುಳ್ಳ ಸತಿಯರು ಬಲ್ಲರಲ್ಲದೆ
ಪುರುಷರಿಲ್ಲದ ಸ್ತ್ರೀಯರು ತಿಳಿಯರು ನೋಡವ್ವಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./330
ಮಂಡಲತ್ರಯದ ಚಿತ್ತದೊಳಗೆ
ನೀರಮುಖದ ಶೇಷನಿರ್ಪುದು.
ಆ ಶೇಷನ ಮಸ್ತಕದ ಮಾಣಿಕದ ನೆರಳಿನಲ್ಲಿ
ಈರೇಳುಲೋಕ ಇರ್ಪುದು.
ಆ ಮಾಣಿಕದ ಪ್ರಕಾಶದಲ್ಲಿ ತಾನಡಗಿ
ತನ್ನ ಪ್ರಕಾಶದಲ್ಲಿ ಮಾಣಿಕವನಡಗಿಸಿಕೊಳ್ಳಬಲ್ಲಾತನೇ
ಅಸುಲಿಂಗಿ ನೋಡಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./331
ಮಣ್ಣ ತುಳಿದು ಮಡಿಕೆಯ ಮಾಡಿ
ಆವಿಗೆಯನೊಟ್ಟಿ ಸುಡುವಲ್ಲಿ,
ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು,
ಹರವಿಯ ಉಪಚಾರುಳ್ಳವಂಗೆಕೊಟ್ಟು.
ಉಪಚಾರಿಲ್ಲದವನ ಕೊಂದು,
ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು
ಉಪಚಾರುಳ್ಳವನ ಕೊಂದು,
ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು,
ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು
ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು,
ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು
ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./332
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ,
ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ,
ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ.
ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು
ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು,
ಆಚರಿಸುವ ಜ್ಞಾನಕಲಾತ್ಮನಿಗೆ
ಈ ಲೋಕದ ಜಡಜೀವರು ಕಡುಪಾತಕರು ಬಂದು
ಈ ಸಂಸಾರದಲ್ಲಿ ಪಾರಮಾರ್ಥವುಂಟು,
ಇದರೊಳಗೆ ಸಾಧಿಸಬೇಕೆಂದು
ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು.
ಇದಕ್ಕೆ ಉಪಮೆ-
ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು
ಬಂದ ಗಣಂಗಳಾರಾರೆಂದಡೆ: ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು.
ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು.
ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು.
ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ
ಏಳನೂರೆಪ್ಪತ್ತು ಪ್ರಮಥಗಣಂಗಳು.
ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು.
ಅವರೆಲ್ಲರು ಹುಚ್ಚರು, ನೀವೇ ಬಲ್ಲವರು.
ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು
ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ
ಪರಶಿವಲಿಂಗಲೀಲಾವಿನೋದದಿಂ
ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು.
ಇದರನುಭಾವವ ತಿಳಿಯಬಲ್ಲರೆ ಹೇಳಿರಿ;
ಅರಿಯದಿದ್ದರೆ ಕೇಳಿರಿ.
ತನು-ಮನ-ಧನ ನೀನಲ್ಲ,
ಪಂಚವಿಂಶತಿತತ್ವ ನೀನಲ್ಲ,
ಪಂಚಭೂತಪ್ರಕೃತಿ ನೀನಲ್ಲ,
ಮನ ಮೊದಲಾದ ಅರವತ್ತಾರುಕೋಟಿ ಕರಣಾದಿ ಗುಣಂಗಳು ನೀನಲ್ಲ.
ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು
ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು
ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ,
ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ,
ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾಧಿಸೆಂದು
ಹಾಡಿದರಲ್ಲದೆ ಅವರೇನು ದಡ್ಡರೇ?
ನೀವೇ ಬಲು ಬುದ್ಧಿವಂತರು, ಬಲುಜಾಣರು !
ಇಂಥ ಯುಕ್ತಿ ವಿಚಾರವ ಹೇಳುವ
ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ,
ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ
ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು,
ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು,
ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ
ಹಾಕೆಂದ ಕಾಣಾ ನಿಮ್ಮ ಶರಣ ವೀರಾಧಿವೀರ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./333
ಮಣ್ಣಪಡಿಯಿಂದ ಮರ್ತ್ಯವನಳದು,
ಸಣ್ಣಪಡಿಯಿಂದ ನೀರನಳದು,
ಹಿರಿಯ ಪಡಿಯಿಂದ ಹಣವನಳದು,
ಮೂರು ಪಡಿಯನೊಡದು,
ಬಣ್ಣದ ಪಡಿಯಿಂದ ಹಿರಿಖಂಡುಗದ ಬತ್ತವನಳದು,
ಖಂಡುಗ ಪಡಿಯನುಂಡು,
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./334
ಮಣ್ಣಿಲ್ಲದ ಮುಶಿಯೊಳಗೆ ಪಂಚರಸದ ಲೋಹವ ಹಾಕಿ
ಮೂರು ಬೆಂಕಿಯ ಕುಕ್ಕಿ, ಜೋಡು ತಿದಿ ಕೂಡಿ ಊದಲು,
ಆರುವರ್ಣದ ಲೋಹವಾಯಿತ್ತು.
ಆ ಲೋಹಕ್ಕೆ ಮೂರು ನದಿಗೂಡಿದ ಉದಕವ ಕುಡಿಸಲು,
ಉಭಯವು ಬಯಲಾದ ಬಯಲವನು ನುಂಗಿ ಹಿಂಗದೆ
ಕಾಯಕವ ಮಾಡುತ್ತಿರ್ಪರು ನೋಡೆಂದ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./335
ಮದನಂಗದ ಗುಹ್ಯದ ಮುದಿಕೋಡಗದ ಹಾಲು
ಭೂಮಿಗೆ ಇಳಿಯಲು,
ಭೂಮಿಯ ಒಡೆಯರು ಹಾಲು ಕುಡಿಯದೆ,
ಹೇಸಿಕೆಯ ಕುಡಿದು, ನರಕ ತಿಂದು ಬಹುಕಾಲಿರ್ಪರು.
ಹೇಸಿಕೆ ನರಕ ನಿಃಕರಿಸಿ ಹಾಲು ಕುಡಿದವರು
ಗಡಿಗೆಯನೊಡೆದು ಮನೆಗೆ ಬಾರದೆ ಪೋದರು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./336
ಮದುವೆಯಿಲ್ಲದವರಿಗೆ ಮುಹೂರ್ತವ ಪೇಳಲಿಲ್ಲ.
ಮದುವೆಯಾದವರಿಗೆ ಮುಹೂರ್ತವ ಪೇಳ್ವೆ.
ಎನ್ನ ಮುಹೂರ್ತವ ಕೇಳಿದವರ ಬಾಗಿಲಿಕ್ಕಿ ಮನೆಯ ಸುಡುವೆ.
ಸುಟ್ಟ ಮನೆಯವರು ಸತ್ತವನ ಮನೆಯಲ್ಲಿರ್ದು
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಗೋವಿಂದಭಟ್ಟನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./337
ಮನುಜರಿಲ್ಲದ ಊರ ಬಳೆಯ ತಂದು,
ಗಂಡನಿಲ್ಲದ ಸತಿಯಳಿಗೆ ಇಡಿಸಿ ಮದುವೆಯ ಮಾಡಲು
ಉಭಯತರು ಸತ್ತು ಪದಾರ್ಥವ ನೀಡಿ,
ಭೂಮವನುಂಡು ಕಾರದೆ, ಕಾಯಕವ ಮಾಡುತ್ತಿರ್ಪರು
ನೋಡೆಂದ ಬಳಿಗಾರ ಬಸವಂತ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./338
ಮನೆ ಸುಟ್ಟು ಸತಿಸುತರು ಸತ್ತು
ಅರಸನಿಗೆ ಹಣವ ಕೊಟ್ಟವರು ಅಳಲಿಲ್ಲ,
ಇಷ್ಟುಳ್ಳವರು ಅಳುತ್ತಿರ್ಪರು.
ಅಳುವರ ಕೈಯೊಳಗೆ ಕನ್ನಡಿಯ ಕೊಡಲು
ಅಳುವಡಗಿ ಕನ್ನಡಿಯ ನೋಡಿ ಹಲ್ಲುಕಿಸಿದು ನಕ್ಕು
ಸತ್ತು ಬದುಕಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./339
ಮನೆಯ ಕಟ್ಟುವಾತ ಪ್ರಾಣಲಿಂಗಿಯಲ್ಲ ;
ಮನೆಯ ಕಟ್ಟುವಾತ ಪ್ರಾಣಲಿಂಗಿ.
ಮನೆಯ ಕೆಡಿಸುವಾತ ಪ್ರಾಣಲಿಂಗಿಯಲ್ಲ ;
ಮನೆಯ ಕೆಡಿಸುವಾತ ಪ್ರಾಣಲಿಂಗಿ.
ಬಿಟ್ಟು ಹಿಡಿಯುವಾತ ಪ್ರಾಣಲಿಂಗಿಯಲ್ಲ ;
ಬಿಟ್ಟು ಹಿಡಿಯುವಾತ ಪ್ರಾಣಲಿಂಗಿ.
ಇಂತೀ ವಿಚಾರವನು ತಿಳಿಯಬಲ್ಲಾತನೆ
ಚಿಲ್ಲಿಂಗಸಂಬಂಧಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/340
ಮನೆಯೆನ್ನದು, ಧನವೆನ್ನದು, ತನುವೆನ್ನದು,
ಮಾತಾಪಿತರು, ಸತಿಸುತರು ಎನ್ನವರು,
ಸ್ನೇಹಿತರು ಬಾಂಧವರು ಎನ್ನವರು ಎಂದರೆ
ಭಕ್ತಿ ಭಿನ್ನವಾಯಿತ್ತು.
ಅವನಿಗೆ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ,
ಲಿಂಗವಿಲ್ಲವಾಗಿ ಜಂಗಮವಿಲ್ಲ,
ಜಂಗಮವಿಲ್ಲವಾಗಿ ಪಾದೋದಕ ಪ್ರಸಾದವಿಲ್ಲ,
ಪಾದೋದಕ ಪ್ರಸಾದವಿಲ್ಲವಾಗಿ ವಿಭೂತಿ ರುದ್ರಾಕ್ಷಿ ಮಂತ್ರ
ಮೊದಲಾಗಿ ಅಷ್ಟಾವರಣಂಗಳಿಲ್ಲ.
ಇಂತಪ್ಪ ಪಂಚಮಹಾಪಾತಕರಿಗೆ ಮುಕ್ತಿಯೆಂಬುದು
ಎಂದೆಂದಿಗೂ ಇಲ್ಲ.
ಇಂಥ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ,
ಸಕಲ ಪ್ರಪಂಚವನೆಲ್ಲವನು ನಿವೃತ್ತಿಯಂ ಮಾಡಿ,
ಹಿಂದೆ ಹೇಳಿದ ಗುರುಮಾರ್ಗ ಆಚಾರವನು ವಿಚಾರಿಸಿ ತಿಳಿದಲ್ಲದೆ
ಶಿವಪಥವೆಂದಿಗೂ ಸಾಧ್ಯವಾಗದು.
ಇದನರಿಯದೆ ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು,
ಲೋಭ ಮೋಹದಲ್ಲಿ ಮಗ್ನರಾಗಿ,
ಮದಮತ್ಸರದಲ್ಲಿ ಮುಂದುಗಾಣದೆ,
ಅಷ್ಟಮದದಲ್ಲಿ ಕಟ್ಟುವಡೆದು,
ದಶವಾಯುಗಳಲ್ಲಿ ಹರಿದಾಡಿ,
ಹೀಗೆ ಭವದತ್ತ ಮುಖವಾಗಿ
ಹೊತ್ತುಗಳೆದು ಸತ್ತು ಹೋಗುವ
ಹೇಸಿ ಮೂಳರ ಹಿಡಿತಂದು,
ಅವರ ಮೂಗು ಹಲ್ಲು ಮೋರೆ ಕೊಯಿದು
ಕಟವಾಯಿ ಸೀಳಿ ಕನ್ನಡಿಯ ತೋರಿ,
ಅವನ ಬಾಯಲ್ಲಿ ಸಣ್ಣ ಸುಣ್ಣ ಮೆಣಸಿನ ಹಿಟ್ಟು ತುಂಬಿ
ಮೇಲು ಮುಂದಾಗಿ ನಮ್ಮ ಗಣಂಗಳ ಪಾದರಕ್ಷೆಯಲ್ಲಿ ಘಟ್ಟಿಸಿ
ಅಟ್ಟೆಂದಾತ ನಮ್ಮ ಶರಣ ವೀರಾಧಿವೀರ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./341
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು,
ಮನೆ ಉಳಿದಿತ್ತು, ಅರಣ್ಯಸುಟ್ಟು
ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು,
ತಲೆ ಸುಟ್ಟು ಕಣ್ಣು ಉಳಿದಿತ್ತು.
ಮೈಸುಟ್ಟು ಪ್ರಾಣ ಉಳಿದಿತ್ತು,
ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ
ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು.
ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./342
ಮನೆಯೊಳಗೊಂದು ಮಾಯದ ಕೂಸು ಹುಟ್ಟಿ,
ಮನೆಯ ಮಂದಿಯ ನುಂಗಿ, ಕಮಲದಲ್ಲಿ ಬಂದು,
ಶಾಲಿಕುಪ್ಪುಸವ ಕಳೆದು, ಎನ್ನ ಬತ್ತಲೆ ಮಾಡಿ,
ಮನೆಯ ಸುಟ್ಟು, ಬೂದಿಯ ಮೈಗೆ ಪೂಸಲು
ಯೌವನವಾಯಿತ್ತು ಎನಗೆ ನೋಡಪ್ಪ.
ಆ ಕೂಸಿನಾಟವ ಕಂಡು
ಅವಿರಳಭಕ್ತಿಯಿಂದಪ್ಪಲೊಡನೆ
ಆ ಕೂಸುಸಹಿತವಾಗಿ ನಾನೆತ್ತ ಹೋದೆನೆಂಬುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./343
ಮರಿದುಂಬಿ ಮರದ ಮೂಲಗೂಡಿನಲ್ಲಿರುವ
ಕರಿಕಾಗಿಪುಚ್ಚದ ಗಾಳಿಯಲ್ಲಿ ಮೂರುಲೋಕ
ಅಳಿಯುವುದ ಕಂಡೆ.
ಗರ್ಭದಲ್ಲಿ ಹಲವು ಲೋಕದ ಪ್ರಾಣಿಗಳ ಶಿರದಲ್ಲಿ
ಮಾಣಿಕ ಇರುವುದ ಕಂಡೆ.
ಗಾಳಿಯ ನಿಲ್ಲಿಸಿ ಪುಚ್ಚತೆರೆದು, ಹೊಟ್ಟೆಯೊಡೆದು,
ಹಕ್ಕಿಯ ಕೊಂದು ಶಿರವ ಛೇದಿಸಿದಲ್ಲದೆ,
ಆ ಮಾಣಿಕವು ಆರಿಗೂ ಸಾಧ್ಯವಾಗದು.
ಆ ಮಾಣಿಕವು ಸಾಧ್ಯವಾಗದಿರ್ದಡೆ
ಭವಹಿಂಗದು ಮುಕ್ತಿದೋರದು,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./344
ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ
ಆ ಶೂಕರ ಮದಗಜವಾಗಬಲ್ಲುದೆ ?
ಎಲುಬು ಕಡಿಯುವ ಶುನಿಗಳಿಗೆ ಗಜವೈರಿಯ ಹೋಲಿಸಿದರೆ
ಆ ಶುನಿಗಳು ಗಜವೈರಿಯಾಗಬಲ್ಲುವೆ ?
ಇಲಿಯ ತಿಂಬುವ ಮಾರ್ಜಾಲನಿಗೆ ಮಹಾವ್ಯಾನ ಹೋಲಿಸಿದರೆ
ಆ ಮಾರ್ಜಾಲ ಮಹಾವ್ಯಾಘ್ರನಾಗಬಲ್ಲುದೆ ?
ಹೊಲಸುತಿಂಬುವ ಕಾಗಿಯ ಮರಿಗೆ ಕೋಗಿಲೆಯ ಹೋಲಿಸಿದರೆ
ಆ ಕಾಗಿಯಮರಿ ಸುನಾದಸ್ವರ ಕೋಗಿಲಮರಿಯಾಗಬಲ್ಲುದೆ ?
ಕಸವ ತಿಂಬುವ ಕತ್ತೆಗೆ ಕುದುರೆಯ ಹೋಲಿಸಿದರೆ
ಆ ಕತ್ತೆ ಮಹಾತೇಜಿಯಾಗಬಲ್ಲುದೆ ?
ಕಸ ನೀರು ಹೊರುವ ದಾಸಿಗೆ ಅರಸಿಯ ಹೋಲಿಸಿದರೆ
ಆ ದಾಸಿಯು ಅರಸಿಯಾಗಬಲ್ಲಳೆ ?
ಈಚಲ ಕಾಡಿನಮರಕ್ಕೆ ಟೆಂಗಿನಮರ ಹೋಲಿಸಿದರೆ
ಆ ಈಚಲ ಕಾಡಿನಮರ ಎಳೆಯ ಟೆಂಗಿನಮರವಾಗಬಲ್ಲುದೆ ?
ನೀರೊಳಗಣ ಕೋಳಿಗೆ ಕೊಳದೊಳಗಣ ಹಂಸನ ಹೋಲಿಸಿದರೆ
ಆ ನೀರಕೋಳಿಯು ರಾಜಹಂಸನಾಗಬಲ್ಲುದೆ ?
ತಿಪ್ಪೆಯೊಳಗಣ ಪುಳವತಿಂಬುವ ಕೋಳಿಗೆ
ಪಂಜರದೊಳಗಣ ಗಿಣಿಯ ಹೋಲಿಸಿದರೆ
ಆ ಕೋಳಿಯು ಅರಗಿಳಿಯಾಗಬಲ್ಲುದೆ ?
ಇಂತೀ ದೃಷ್ಟದ ಹಾಗೆ ಲೌಕಿಕದ ಜಡಮತಿ ಮನುಜರಿಗೆ
ಶಿವಜ್ಞಾನಸಂಪನ್ನರಾದ ಶರಣರ ಹೋಲಿಸಿದರೆ,
ಆ ಮಂದಮತಿ ಜೀವರು ಶಿವಜ್ಞಾನಿಗಳಾದ
ಶಿವಶರಣರಾಗಬಲ್ಲರೆ ?
ಈ ಭೇದವ ತಿಳಿಯಬಲ್ಲರೆ
ಕೂಡಲ ಚನ್ನಸಂಗಯ್ಯನ ಶರಣರೆಂಬೆ.
ಇದ ತಿಳಿಯದಿದ್ದರೆ ಭವಭಾರಿಗಳೆಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./345
ಮಲೆಯ ಕಡಿದು ಒಂದು ವೃಕ್ಷವ ತಂದು,
ಕೊರೆದು ಅನೇಕ ತೊಲಿ ಕಂಬ
ಬೋದುಗೆಗಳು ಚಿಲುಕಿ ಮೊದಲಾದ ಎಲ್ಲವನು ಕೆತ್ತಿ
ಉಣ್ಣದೆ ಉಂಡು, ಮನೆಯ ಕಟ್ಟಿ, ಒಗತನವಿಲ್ಲದೆ ಸತ್ತು
ಕಾಯಕವ ಮಾಡುತ್ತಿರ್ಪರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./346
ಮಲೆಯಮಂದಿರದ ವಟವೃಕ್ಷದ ಘಟದಲ್ಲಿ
ಮಕ್ಷಿಕ ಮನೆಯ ಮಾಡಿ ಹಂದಿಯನೇರಿ,
ಮೂಡಲಗಿರಿಯಲ್ಲಿ ಕೋಳಿ ಕೂಗಿ,
ಪಶ್ಚಿಮಗಿರಿಯಲ್ಲಿ ಬೆಳಗುತೋರಿ,
ವೃಕ್ಷದಡಿಯಲ್ಲಿ ಅಗ್ನಿಪುಟವಾಗಿ ಬೇರುಸುಟ್ಟು,
ವೃಕ್ಷ ಉಳಿದು, ಮಕ್ಷಿಕ ಹಂದಿ ಸತ್ತುಳಿದು,
ಕೂಗಡಗಿದ ಕುಕ್ಕುಟನಲ್ಲಿ ಮಕ್ಷಿಕ ಹಂದಿಯು ಕೂಡಿ
ಕುಕ್ಕುಟನ ಮನೆಯಲ್ಲಿ ಅಡಗಿದರು.
ಅಡಗಿದ ಭೇದವ ನಿಮ್ಮ ಶರಣಬಲ್ಲ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./347
ಮಹಾಮಲಸರೋವರದ ವರಾಹ ಆಕಾಶವ ನುಂಗಿ
ಊರನಾಯಿಗಳ ಸಮ್ಮೇಳದಲ್ಲಿರುವುದು.
ಊರಮಲವ ಭುಂಜಿಸಿ ಕೊಕ್ಕರನಾಗಿ
ಮೂರುಲೋಕಕ್ಕೆ ಒಡೆಯನೆಂದು ಚಿಂತೆಯಿಲ್ಲದೆ ಇರುವುದು.
ಅಂತಪ್ಪ ವರಾಹವ ಕೊಲ್ಲದೆ ಕಣ್ಣಕಳೆದು
ಹೃದಯದಲ್ಲಿ ಹುದುಗಿರ್ದ ಮಹಾಕಾಳಜವ ತೆಗೆದುಕೊಂಡು
ಸಲಿಸಬಲ್ಲಡೆ ಲಿಂಗೈಕ್ಯರೆಂಬೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./348
ಮಹಾಮಲೆಯ ವ್ಯಾಘ್ರನ ನೀರ ನಕ್ರ ಕಚ್ಚಿ,
ನಕ್ರನ ಹಂದಿ ಕಚ್ಚಿ, ಹಂದಿಯ ನಾಯಿ ಕಚ್ಚಿ,
ನಾಯಿಯ ಕಾಳೋರಗ ಕಚ್ಚಿ ಹೆಡೆಯೆತ್ತಿ ಆಡಲಾಗಿ,
ಆಕಾಶದ ಹದ್ದು ಕಂಡು ಎರಗಲಾಗಿ,
ಹೆಡೆಯುಡಿಗಿ ಸುನಿಗಳು ಬಿಟ್ಟು,
ಹಂದಿ ಸತ್ತು, ನಕ್ರ ಬಿದ್ದು, ವ್ಯಾಘ್ರ ಪಲಾಯನವಾಗಿ,
ಹಾವ ಹದ್ದು ಕಚ್ಚಿ, ಹದ್ದು ಹಾವ ಕಚ್ಚಿ,
ಹದ್ದಳಿದು ಹಾವು ಉಳಿದ ಭೇದವ
ತಾನೆ ಬಲ್ಲನಲ್ಲದೆ ಈ ಲೋಕದ ಜಡಜೀವಿಗಳೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./349
ಮಹಾಮಲೆಯಲ್ಲಿ ಮಕ್ಷಿಕವಿರ್ಪುದು.
ಆ ಮಕ್ಷಿಕನ ಬಾಯೊಳಗೆ ಉಡುವಿರ್ಪುದು.
ಆ ಉಡುವಿನ ಬಾಯೊಳಗೆ ವ್ಯಾಘ್ರವಿರ್ಪುದು.
ಆ ವ್ಯಾಘ್ರನ ಬಾಯೊಳಗೆ ಅರಸಿನ ಶಿಶುವಿರ್ಪುದು.
ಆ ಶಿಶು ಒದರಲು ಮಕ್ಷಿಕ ಬಿಟ್ಟಿತ್ತು,
ಉಡವು ಸತ್ತಿತ್ತು, ವ್ಯಾಘ್ರ ಬಿಟ್ಟಿತ್ತು.
ಆ ಶಿಶು ಮೂರು ಲೋಕವ ನುಂಗಿ ತಾಯಿತಂದೆಯ ಕೊಂದು
ಬಟ್ಟಬಯಲಲ್ಲಿ ನಿರ್ವಯಲಾಯಿತ್ತು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./350
ಮಾನವರಿಗೆ ಮರ್ತ್ಯಲೋಕ,
ದೇವರಿಗೆ ದೇವಲೋಕ,
ಉಳಿದ ಪ್ರಾಣಿಗಳಿಗೆ ಯಮಲೋಕ,
ಎನಗೆ ಇನ್ನಾವಲೋಕವಿಲ್ಲ ಕಾಣಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./351
ಮಾಳಿ ಮೂರಳಿದು, ಕಾವಲಿ ಆರಳಿದು,
ಕಟ್ಟೆ ಎಂಟಳಿದು, ಬೆಂಕಿಲ್ಲದೆ ಉಪ್ಪನಟ್ಟು ಉಂಬರೆ
ಉಪ್ಪುಣಿಗ ಭರಮಣ್ಣನ ಪುತ್ರರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./352
ಮಾಳಿಯ ಉಪ್ಪ ಬಡವರು ಉಣ್ಣಲಾಗದು.
ಘಟ್ಟದ ಉಪ್ಪ ಧನಿಕರು ಉಣ್ಣಲಾಗದು.
ಮಾಳಿಯ ಉಪ್ಪಿಗೆ ಹಣವುಂಟು;
ಘಟ್ಟದ ಉಪ್ಪಿಗೆ ಹಣವಿಲ್ಲ.
ಹಣವಿಲ್ಲದೆ ಉಪ್ಪ ಕೊಂಡುಂಬುವರು ಬಯಲದೇಶದವರು.
ಹಣವುಳ್ಳ ಉಪ್ಪ ಕೊಂಡುಂಬುವರು ಮಲೆಯಾಳದೇಶದವರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./353
ಮುಖದಲ್ಲಿ ಮಂತ್ರ, ಪಣೆಯಲ್ಲಿ ವಿಭೂತಿ,
ಕೊರಳಲ್ಲಿ ರುದ್ರಾಕ್ಷಿ,
ಹೃದಯದಲ್ಲಿ ಶಿವಲಿಂಗಸಜ್ಜೆಯ ಧರಿಸಿ,
ಭಕ್ತಿಸ್ಥಲವನಾಚರಿಸುವ ಶರಣಜನಂಗಳು
ಶಿವಗಣಂಗಳ ಕಂಡು ಹರಹರ ಶಿವಶಿವ
ಶಿವಮಹಾದೇವ ಎಂದು ನಮಸ್ಕಾರವ ಮಾಡಿ,
ಅವರ ಪಾದದ ಮೇಲೆ ಉರುಳಾಡಿ,
ಅವರ ಪಾದಧೂಳವ ಸರ್ವಾಂಗದಲ್ಲಿ ಧರಿಸಿ,
ತಮ್ಮ ತಮ್ಮ ಗೃಹಾಶ್ರಮಕ್ಕೆ ಬಿಜಯಂಗೈಸಿಕೊಂಡು ಹೋಗಿ,
ಪಾದಾರ್ಚನೆಯಂ ಮಾಡಿ ಉನ್ನತಾಸನದ ಮೇಲೆ
ಮುಹೂರ್ತವ ಮಾಡಿಸಿ,
ಅಂಬಲಿ ಸೊಪ್ಪು ಮೊದಲಾದ ಪಂಚಾಮೃತವ ಎಡೆ ಮಾಡಿ,
‘ಸ್ವಾಮೀ ಮನಃಪೂರ್ವಕ ಸಲಿಸೆಂ’ದು
ಹಸ್ತ-ಪಾದವ ಜೋಡಿಸಿಕೊಂಡು
‘ಶರಣಾರ್ಥಿ ಸ್ವಾಮಿ ಲಿಂಗಾರ್ಪಣವಾಗಲೆಂ’ದು
ಅಡಿಗಡಿಗೆ ಇಚ್ಫಾಪದಾರ್ಥವ ಎಡೆಮಾಡಿ,
ಅವರು ಸಲಿಸಿದ ಮೇಲೆ ವೀಳ್ಯ ಅಡಿಕೆಯ ನೀಡಿ,
ಅವರ ಸುಖ-ದುಃಖವ ವಿಚಾರಿಸಿ,
ಅವರಿಗೆ ಶಿವಕೊಟ್ಟ ದ್ರವ್ಯವನು ಭಿಕ್ಷವ ನೀಡಿ,
ತಮ್ಮಾಪ್ತರಾದ ಬೀಗರು ಸ್ನೇಹಿತರು ಬಾಂಧವರು
ಉಲ್ಲಾಸದಿಂದ ಸರ್ವರೂ ಕೂಡಿ
ಊರಬಿಟ್ಟು ಹೊರಯಕ್ಕೆ ಬಂದು,
ಒಬ್ಬರಿಗೊಬ್ಬರು ಶರಣು ಶರಣೆಂದು ಕಳಿಸಿದ ಹಾಗೆ,
ಶಿವಗಣಂಗಳ ಪಾದಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ,
‘ಸ್ವಾಮಿ ಬರುವಂಥವರಾಗಿರಿ’ ಎಂದು
ಶರಣು ಮಾಡಿದಾತನೆ ಶಿವಭಕ್ತ;
ಮೂರು ಲೋಕಕ್ಕೆ ಒಡೆಯನಾಗುವನು ನೋಡಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./354
ಮುಡಿಮೂಡದ ಮುನ್ನ ಪುರುಷನ ಹುಡುಕಲೇಕೆ ?
ಮುಡಿಬಂದು ಪುರುಷನ ನೆರೆದ ಬಳಿಕ ಇನ್ನಾವ ಚಿಂತೆ ಏತಕ್ಕೆ?
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./355
ಮುದುಕಿ ಮುದುಕನ ಸಂಗದಿಂದೊಂದು
ಎಳೆಯ ಶಿಶು ಪುಟ್ಟಿತ್ತು.
ಆ ಶಿಶುವಿನ ಬೆನ್ನಿನಿಂದ ಒಬ್ಬ
ಎಳೆಯ ಕುಮಾರಿ ಪುಟ್ಟಿದಳು.
ಆ ಕುಮಾರಿ ಅಣ್ಣನ ಮದುವೆಯಾಗಿ
ಮುದುಕನ ಒಡಗೂಡಿ ಮನೆಯ ಸುಟ್ಟು,
ಮನೆಯ ಒಡೆಯನ ಕೊಂದು ಒಡತಿಯ ನುಂಗಿ,
ತಾಯಿಯ ಕೊಂದು ಹೊಲಗೇರಿಯ ಹೊಕ್ಕು,
ಕುಲಗೆಟ್ಟು ಹೊಲೆಯನ ಸಂಗವ ಮಾಡಿ,
ಸತ್ತುಹೋದ ಭೇದವನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ
ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರಯ್ಯಾ./356
ಮುದ್ದುಮುಖದ ಮಾನಿನಿಯ ಮಸ್ತಕದ ಮೇಲೆ
ಅಗ್ನಿವರ್ಣದ ಪಂಜರದಲ್ಲಿ ಶ್ವೇತವರ್ಣದ
ಒಂದು ಗಿಳಿ ಇಹುದು.
ಆ ಗಿಳಿಯ ಕೊಳ್ಳಬೇಕೆಂದು
ಆನೆ, ಕುದುರೆ, ವೈಲಿ, ಪಲ್ಲಕ್ಕಿಯನೇರಿಕೊಂಡು ಹೋದವರಿಗೆ
ಆ ಗಿಳಿಯ ಕೊಡಳು.
ದ್ರವ್ಯವುಳ್ಳವರಿಗೆ ಆ ಗಿಳಿಯ ತೋರಳು.
ಕೈ ಕಾಲು ಕಣ್ಣು ಇಲ್ಲದ ಒಬ್ಬ ಬಡವ್ಯಾಧನು ಬಂದರೆ,
ಆ ಗಿಳಿಯ ಕೊಟ್ಟು ಸುಖಿಸುವಳು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./357
ಮುದ್ರಿಕಿಪಶುವಿಂಗೆ ಭಯವಿಲ್ಲ.
ಮುದ್ರಿಕಿಲ್ಲದ ಪಶುವಿಂಗೆ ಭಯವುಂಟು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./358
ಮುಷ್ಟಿಯ ಚಡಾಯಿಸಿ ಮಾನವರ ಕೊಲ್ಲುವಾತ
ಮಹೇಶ್ವರನಲ್ಲ.
ಯಂತ್ರವ ಬರೆದು ಕಟ್ಟಿ ಭೂತವ ಬಿಡಿಸುವಾತ
ಮಹೇಶ್ವರನಲ್ಲ.
ವೈದ್ಯಗಳ ಮಾಡಿ ರೋಗಾದಿಗಳ ಪರಿಹರಿಸುವಾತ
ಮಹೇಶ್ವರನಲ್ಲ.
ಅದೇನು ಕಾರಣವೆಂದಡೆ : ಕಾಲ-ಕಾಮ-ಮಾಯಾದಿಗಳು
ಸಂಕಲ್ಪ ವಿಕಲ್ಪವೆಂಬ ಮುಷ್ಟಿಯ
ತಮ್ಮಂಗಕ್ಕೆ ಚಡಾಯಿಸಿ ಕೊಲ್ಲುವದನರಿಯದೆ,
ಪರರಿಗೆ ಮುಷ್ಟಿಯ ಮಾಡುವರು.
ಮತ್ತಂ, ಮಾಯೆಯೆಂಬ ಭೂತ,
ಹೊನ್ನು ಹೆಣ್ಣು ಮಣ್ಣೆಂಬ ಯಂತ್ರವ
ನಿಮ್ಮ ಮನದಲ್ಲಿ ನಿಲುಕಿಸಿ ಬಂಧಿಸಿ
ಭವಭವದಲ್ಲಿ ಗಾಸಿಯಾಗುವದನರಿಯದೆ
ಪರರಿಗೆ ಯಂತ್ರವ ಕಟ್ಟುವರು.
ಮತ್ತಂ, ಆಶೆ-ರೋಷ-ಹರುಷವೆಂಬ ರೋಗಾದಿಗಳು
ತಮ್ಮಾತ್ಮಂಗೆ ಪ್ರವೇಶವಾಗಿ
ಯುಗಯುಗಾಂತರದಲ್ಲಿ ಶ್ರಮಬಡುವುದನರಿಯದೆ
ಪರರಿಗೆ ವೈದ್ಯವ ಮಾಡುವರು,
ಇವರು ಮಹೇಶ್ವರರಲ್ಲ ; ಭವಭಾರಿಗಳು.
ಅದೆಂತೆಂದೊಡೆ-ಲಿಂಗವಿಲ್ಲದ ಕಾರಣ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./359
ಮೂಗಿಲ್ಲದ ಸತಿಗೆ ಪತಿಯಾದಾತ
ಚಂದ್ರಸಾಲೆಯ ರಚಿಸಿ,
ಮಲವ ಭುಂಜಿಸಿದಾತ ರಂಗಮಂಟಪವ ರಚಿಸಿ,
ಪುತ್ರರು ಇಲ್ಲದ ಸತಿಯರಿಗೆ ಪತಿಯಾದಾತ
ಗರ್ಭಮಂಟಪವ ರಚಿಸಿ,
ಈ ಮೂವರು ಕೂಡಿ ರಚಿಸಿದ
ಅರಗಿನ ದೇವಾಲಯದೊಳಗೆ ಒಂದು ಉರಿಲಿಂಗ ಉದ್ಭವಿಸಿ,
ಆಲಯದ ತೊಲಿ ಕಂಬ ಬೋದು ಜಂತಿಯೆಲ್ಲವನು ದಹಿಸಿ,
ಆಲಯವನುಳುಹಿ, ಗೊರವನ ನುಂಗಿ ಮೂವರ ಕೊಂದು
ಮೂರುಗೂಡಿದ ಠಾವಿನಲ್ಲಿ ನಿಃಪತಿಯಾಯಿತು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಬುವೆ,
ಈ ಭೇದವನು ನಿಮ್ಮ ಶರಣರೇ ಬಲ್ಲರಲ್ಲದೆ
ಈ ಲೋಕದ ಮೂಢಾತ್ಮರೆತ್ತ ಬಲ್ಲರಯ್ಯ ?/360
ಮೂದೇವಿಯ ಮಕ್ಕಳೆಲ್ಲಾ ಚಿತ್ರವ ಪೂಜಿಸಿ
ಅನಂತ ವೇಷವ ಧರಿಸಿರ್ಪರು.
ಹೊಲತಿಯ ಮಕ್ಕಳೆಲ್ಲ ಚಿತ್ರವ ಪೂಜಿಸಿ ಚಿನಿಪಾಲವ ಮಾಡಿ
ಹಲವು ವೇಷವ ಧರಿಸದೆ ಇರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./361
ಮೂರಳಿದು ಮೂರುಳಿದು ಮೂರೊಂದುಗೂಡಿದವರ
ಕೂಡಬೇಕೆಂಬವರಿಗೆ ಪಂಚಾಂಗವ ಬಿಚ್ಚಿ ಮುಹೂರ್ತವ ಪೇಳಬೇಕು.
ಆರಳಿದು ಆರುಳಿದು ಆರುಗೂಡಿದವರ ಕೂಡಬೇಕೆಂಬವರಿಗೆ
ಪಂಚಾಂಗವ ಬಿಚ್ಚಿ ಮುಹೂರ್ತವ ಪೇಳಬೇಕು.
ಎಂಟಳಿದು ಎಂಟುಳಿದು ಎಂಟುಗೂಡಿದವರ ಕೂಡಿ
ಕಂಟಕವ ಗೆಲೆಯಬೇಕೆಂಬವರಿಗೆ ಪಂಚಾಂಗವ ಬಿಚ್ಚಿ
ಮುಹೂರ್ತವ ಪೇಳಬೇಕು ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./362
ಮೂರಾರು ಕಂಡಿಕಿ ದಂಡಿಗಿಗೆ
ಮೂರಾರು ಬಟ್ಟಗಾಯ ಕಟ್ಟಿ, ಈರೆಂಟು ಮೆಟ್ಟಿ,
ಆರೊಂದು ತಂತಿಯ ಹೂಡಿ, ಕರವ ಕಟ್ಟಿ, ಬಿರಡಿಯ ತಿರುಹಿ,
ಮೂರು ಬೆರಳಿನಲ್ಲಿ ಕಿನ್ನರಿಯ ಹೊಡೆದು
ಬೀದಿಬಾಜಾರದಲ್ಲಿ ತಿರುಗುತ್ತಿರುವಲ್ಲಿ,
ತಿರುಗುವದ ಜೋಗಿ ಕಂಡು
ಕಕ್ಕನ ಕಿನ್ನರಿಯಕಾಯನೊಡೆದು ದಂಡಗಿಯ ಮುರಿದುಹಾಕಿತ್ತು.
ತಂತಿಯ ಹರಿದು, ಬಿರಡಿಯನುಚ್ಚಿ, ಕುದುರಿಯ ಸುಟ್ಟು,
ಬೆರಳ ಮುರಿದು ಡೋಹಾರನ ಕೊಂದು,
ಡೋಹಾರ ಕಕ್ಕಯ್ಯನ ಮನೆಯಲ್ಲಿ ಜೋಗಿ ಅಡಗಲು,
ಅಡಗಿದ ಜೋಗಿಯು ಸತ್ತು, ಡೋಹಾರ ಕಂಡು ಎದ್ದು
ಕಾಯಕವ ಮಾಡುತಿರ್ದರಯ್ಯ ನಿಮ್ಮ ಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./363
ಮೂರಾರು ಪರ್ವತದ ಮೇಲುಗಿರಿ ಅಗ್ರದ ಕಮಲದೊಳಗೆ,
ಸೂರ್ಯವರ್ಣದ ಶೇಷವು.
ಆ ಶೇಷನ ವಕ್ತ್ರದೊಳಗೆ ಚಂದ್ರವರ್ಣದ ಮಂಡೂಕ.
ಆ ಮಂಡೂಕನ ವಕ್ತ್ರದ ಜೊಲ್ಲು ಭೂಮಿಗೆ ಬೀಳಲು,
ತಲೆಯಿಲ್ಲದ ಶೇಷ, ಸೇವಿಸಲು ತಲೆ ಬಂದು,
ಕಣ್ಣು ತೆರೆದು ನೋಡಿ, ಜೊಲ್ಲಿನ ದಾರಿಯ ಪಿಡಿದು,
ಎಡಬಲದ ಬಟ್ಟೆಯ ಬಿಟ್ಟು, ನಡುವಣ ಬಟ್ಟೆಯಿಂದ
ಊಧ್ರ್ವಮುಖವಾಗಿ ಏರಲು,
ಆ ಏರುವ ಶೇಷನ ರಭಸದಿಂ
ಕತ್ತಲಿಪುರದರಸು ಮಂತ್ರಿ ಮಾರ್ಬಲವೆಲ್ಲ ಬೆದರಿ,
ಶೇಷ ಮಂಡೂಕನ ಕಚ್ಚಿ, ಮಂಡೂಕ ಶೇಷನ ನುಂಗಲು,
ಶೇಷ ಸತ್ತು, ಮಂಡೂಕ ಉಳಿದಿತ್ತು.
ಆ ಉಳಿದ ಉಳುಮೆಯ ತಾನೇನೆಂದು ತಿಳಿದಾತನೇ
ಅಸುಲಿಂಗಸಂಬಂಧಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./364
ಮೂರಾರು ಬಾಗಿಲಲ್ಲಿ ಹೋಹ ಕರುವ
ಹುರಿಯಿಲ್ಲದ ಕಣ್ಣಿಯಲ್ಲಿ ಬಂಧಿಸಿ,
ಅನ್ನ ಉದಕವಿಲ್ಲದೆ ಬದುಕಿ,
ಕಂಡವರ ನುಂಗಿ, ಅಂಗೈಯಲ್ಲಿ ಅಡಗಿತ್ತು.
ಈ ಭೇದವ ತಿಳಿಯಬಲ್ಲರೆ ಶಿವಶರಣನೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./365
ಮೂರು ಜರಿಬಾವಿಯ ನೀರಿನಲ್ಲಿ
ಕುರಿತೊಗಲು ಹದಮಾಡಿ,
ಕರಿಯಿಲ್ಲದ ತೊಗಲ ಹುರಿಗೂಡದ ಮಿಣಿಯ
ಊರ ಸುತ್ತ ಬಿಗಿಯಲು,
ಊರ ಜನರು ಕುಲಗೆಟ್ಟು ಭ್ರಷ್ಟರಾದರು.
ಮಾತಾಡುವವರನಾರನು ಕಾಣೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./366
ಮೂರು ಮಲವ ಜರಿದು,
ಮೂರು ಮಲವ ತಿಂದು,
ಆರು ಮಂದಿಯ ಕೊಂದು,
ಆರು ಮಂದಿಯ ಸಂಗವ ಮಾಡಿ,
ಮೂರು ಮಂದಿಯ ಕೊಂದು,
ಮೂವರ ಕೂಡಿ ಗುಲ್ಲುಮಾಡದೆ ಸಲ್ಲಡಗಿ,
ಸೂರ್ಯನ ಪ್ರಕಾಶದಲ್ಲಿ ಸತ್ತು ಚಲಿಸುತಿರ್ದ ನಿಮ್ಮ ಭಕ್ತ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./367
ಮೂರು ಸುತ್ತಿನ ಹಟ್ಟಿಯ ಸುಟ್ಟು
ಕುರಿಯ ತಂಡನು ಹೊಡೆದು,
ವೀರಬೀರೇಶ್ವರಲಿಂಗಕ್ಕೆ ಹಬ್ಬವಮಾಡಿ,
ಆರು ಸುತ್ತಿನ ಹಟ್ಟಿಯ ಕುರಿ ಕೊಲ್ಲದೆ ಕೊಂದು
ಹಾಲ ಕುಡಿದು ಮಲೆಯೊಳಡಗಿ ಮಲೆಯ ತಿಂದು,
ಮೂರುಮಂದಿ ವೀರಗಾರರ ಕೊಂದು,
ಶಸ್ತ್ರವ ಮುರಿದು ಶಸ್ತ್ರವ ಪಿಡಿದು ಕುಣಿಕುಣಿದಾಡಿ,
ಕಾಯಕವ ಮಾಡಿ ಡೊಳ್ಳುಹೊಡೆದು
ಡಂಗಿಯ ಗೂಡಿಗೆ ಹೋಗಬೇಕಣ್ಣ ಬೀರರೆಲ್ಲ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./368
ಮೂರು ಹೊನ್ನಿಗೆ ಹಚ್ಚಡವ ಮಾರಿದೆ.
ಆರು ವರಹಕ್ಕೆ ಶಾಲ್ಯವ ಮಾರಿದೆ.
ಒಂದು ಮೋಹರಕ್ಕೆ ಮುಂಡಾಸವ ಮಾರಿದೆ.
ಇಂತೀ ಕಪ್ಪಡವ ಮಾರಿ ಹಲವು ಹಣವ ಕೊಟ್ಟು,
ಶಾಲ ಕೊಂಡು, ಹೊತ್ತು ಕಾಯಕವ ಮಾಡುತಿರ್ದರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./369
ಮೂರು ಹೊನ್ನು ಕೊಟ್ಟು ಮೂರಾರು ಹೊನ್ನಿನ ಊರಕೊಂಡು
ರೈತರ ಕಾಡದೆ ಪಟ್ಟಿಯನೊಡೆದು ಧಣಿಯಂಗೆ ಕೊಟ್ಟು,
ಊರ ಸುಖದಲ್ಲಿಟ್ಟು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./370
ಮೂರು ಹೊನ್ನು ಕೊಟ್ಟು
ಐದುಮಾರು ಭೂಮಿಯ ಕೊಂಡೆ.
ಆ ಭೂಮಿಯಲ್ಲಿ ಆರುವರ್ಣದ ಬೀಜವ ಬಿತ್ತಿ
ನೀರಿಲ್ಲದೆ ಫಲ ಒಡ್ಡಿದೆ.
ಬೆಳೆಯಿಲ್ಲದೆ ಕೊಯ್ದ ರಾಸಿಯ ಒಕ್ಕಿದೆ.
ಎರಡರಲ್ಲಿ ಅಳದರೆ/371
ಮೂರುಗಂಟಿನ ದಂಡಿಗಿ,
ಆರು ಕಾಯಿ, ಒಂಬತ್ತು ಮೆಟ್ಟು, ಬಿಳಿಯ ಕುದುರೆ,
ಒಂದೆ ತಂತಿ, ನಾಲ್ಕು ಬಿರಡಿ,
ಮೂರುಬೆರಳಿನಲ್ಲಿ ಡೋಹಾರನ ಕಿನ್ನರಿಯ ಹೊಡೆಯಲು,
ಬ್ರಹ್ಮ ಮರ್ತ್ಯದಲ್ಲಿ ಸತ್ತು, ವಿಷ್ಣು ಸ್ವರ್ಗದಲ್ಲಿ ಸತ್ತು,
ರುದ್ರ ಪಾತಾಳದಲ್ಲಿ ಸತ್ತು,
ಸಕಲ ಪ್ರಾಣಿಗಳು ಬ್ರಹ್ಮಾಂಡದಲ್ಲಿ ಅಳಿದರು.
ಇಂತೀ ವಿಚಿತ್ರವ ನೋಡಿ ಕಿನ್ನರಿಸಹಿತ
ಡೋಹಾರ ಅಂಗೈಯಲ್ಲಿ ಬಯಲಾದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./372
ಮೂರುದಿಬ್ಬದ ಅರಣ್ಯದಲ್ಲಿ ಚರಿಸುವ ಕುರಿತಂಡನು
ಕೊಳಲ ಧ್ವನಿಯಿಂದ ದ್ವದ್ವಿಯ ಹೊಡೆದು
ತಪ್ಪೆಜ್ಜಿಯನಿಕ್ಕಿ ನಡೆಸುತ್ತ ತಂದು,
ಮೂರುಸುತ್ತಿನ ಹಟ್ಟಿಯೊಳಗೆ ತರುಬಿ
ಕುನ್ನಿಯ ಬಿಟ್ಟು, ಜಾವಲಿಯ ಕಟ್ಟಿ,
ವೀರಬೀರೇಶ್ವರಲಿಂಗಕ್ಕೆ ಜಗ್ಗನಿಕ್ಕಿ ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./373
ಮೃತ್ಯುವೆಂಬ ಪಟ್ಟಣದಲ್ಲಿ ಒಂದು ಚಿತ್ರವ ಕಂಡೆ.
ಆಡು ಆನೆಯ ನುಂಗಿದ ಕಂಡೆ.
ಗುಂಗಾಡಿ ಹುಲಿಯ ನುಂಗಿದ ಕಂಡೆ.
ಹಂದಿ ಶುನಿಗಳ ಕಚ್ಚಿ ಹರಿದಾಡುವದ ಕಂಡೆ.
ಗಗನದೊಳಗಣ ಚಂದ್ರನ
ಭೂಮಿಯೊಳಗಣ ಸರ್ಪ ನುಂಗಿದ್ದ ಕಂಡೆ.
ಕೋತಿ ಕುದುರೆಯನೇರಿ ಹರಿದಾಡುವದ ಕಂಡೆ.
ಅರಸಿನ ಮಗ ಹೊಲತಿಯ ಸಂಗ ಮಾಡುವದ ಕಂಡೆ.
ಅಷ್ಟರಲ್ಲಿಯೇ ಒಂದು ಇರುವೆ ಹುಟ್ಟಿ,
ಅರಸಿನ ಮಗನ ನುಂಗಿ, ಹೊಲತಿಯ ಕೊಂದು,
ಆನೆ ಆಡಿಗೆ ಕಚ್ಚಿ, ಹುಲಿ ಗುಂಗಾಡಿಯ ನುಂಗಿ,
ಗಗನದ ಚಂದ್ರನವಗ್ರಹಿಸಿ, ಸರ್ಪನ ಕೊಂದು,
ಹಂದಿ, ನಾಯಿ ಕುದುರೆ, ಕೋತಿಯ ಹತಮಾಡಿ,
ಮೃತ್ಯುವೆಂಬ ಪಟ್ಟಣವ ಸುಟ್ಟು,
ಇರುವೆಯ ಗರ್ಭದಲ್ಲಿ ಇಬ್ಬರು ಹತವಾದರು.
ಇಬ್ಬರು ಹತವಾದಲ್ಲಿ ಹಲಬರು ಹತವಾದರು.
ಈ ಭೇದವ ತಿಳಿಯಬಲ್ಲರೆ ಅಂಗಲಿಂಗಿ
ಪ್ರಾಣಲಿಂಗಿ ಸರ್ವಾಂಗಲಿಂಗಿ ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./374
ಮೇಲುಗಿರಿಯಮೇಲಣ ಪಕ್ಷಿ ಉತ್ತಾಯವಾಗಿ
ಉಭಯ ರೆಕ್ಕೆಯಿಂದ ಗಗನಕ್ಕೆ ಹಾರಿ,
ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿ ಮರಿಯನಿಕ್ಕಲು,
ಆ ಮರಿಯ ವಿಲಾಸದಿಂ
ಹಲಬರು ರೋಧನಂಗೈಯುತ್ತಿಪ್ಪರು.
ಇವರಬ್ಬರವ ಕೇಳಿ ಉತ್ತರದೇಶದ ಕಪ್ಪಿ
ಆರ್ಭಟಿಸಿ ಉರಿಯನುಗುಳಿ,
ಸುನಾದಸ್ವರದಿಂದ ಧ್ವನಿಯಮಾಡಿ,
ಆ ಸುಸ್ವರನಾದವ ಕೇಳಿ ಪೂರ್ವದಿಕ್ಕಿನ
ಕಾಳೋಗರವೆಂಬ ಸರ್ಪನು ಹೊರಟು
ಉರಿಯ ಬೆಳಕಿನಲ್ಲಿ ಮನುಜರ ಕಚ್ಚಿ
ಉರಿಯ ನುಂಗಿ ಸರ್ಪ ಸತ್ತು
ಸತ್ತ ಸರ್ಪನ ಕಪ್ಪಿ ನುಂಗಿ
ಎತ್ತ ಹೋದಿತ್ತೆಂದರಿಯೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./375
ಮೋಟ ಮೂಕಾರ್ತಿಯ ಮದುವೆಗೆ
ಮುಪ್ಪುರದರಸುಗಳು ನಿಬ್ಬಣ ಹೋದುದ ಕಂಡೆ.
ಐವರರಸರ ಸತಿಯರು ಆರತಿಯ ಪಿಡಿದುದ ಕಂಡೆ.
ಮೋಟಂಗೆ ಸೇಸೆಯನಿಕ್ಕಿ ತಾಳಿಯ ಹರಿದು
ತಾಳಿಯ ಕಟ್ಟಿದುದ ಕಂಡೆ.
ಮುಪ್ಪುರದರಸುಗಳು ಸತ್ತು
ಅಷ್ಟಪರ್ವತ ಅಳಿವುದ ಕಂಡೆ.
ಚಂದ್ರಸೂರ್ಯರೊಂದಾಗಿ
ಸಪ್ತಸಮುದ್ರ ಬತ್ತಿದುದ ಕಂಡೆ.
ಭೂಮಿ ಆಕಾಶ ಅಳಿದು
ಕತ್ತಲೆ ಬೆಳಗಾದುದ ಕಂಡೆ.
ಆ ಬೆಳಗಿನೊಳಗೆ ಮೋಟ ಮೂಕಾರ್ತಿಯ ಕೂಟವ ಕಂಡೆ.
ಆ ಕೂಟದ ನಡುವೆ ಒಂದು ತಲೆಯಿಲ್ಲದ ಶಿಶು ಹುಟ್ಟಿದುದ ಕಂಡೆ.
ಆ ಕೂಸಿನ ಕಂಡು ಇಬ್ಬರು ಹತವಾದುದ ಕಂಡೆ.
ಇಬ್ಬರು ಹತವಾದಲ್ಲಿ ಚತುರ್ದಶಭುವನಂಗಳು
ಜಲದಲ್ಲಿ ಪ್ರಳಯವಾದುದ ಕಂಡೆ.
ಇಂತೀ ವಿಚಿತ್ರವ ಶಿಶು ಕಂಡು
ಬಟ್ಟಬಯಲಿನ ಕಲ್ಲು ಮಾಯವಾಯ್ತು,
ಆ ಶಿಶುವಡಗಿದಲ್ಲಿ ಅಡಗಿದಾತನೇ ಪ್ರಳಯವಿರಹಿತನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./376
ಮೋಟಮರದ ಹಾಟ ಕುಡಿದವರು
ದೊನ್ನಿ ತುಪ್ಪವನುಣಲಿಲ್ಲ.
ಉಂಡವರು ಹಾಟ ಧಾರೆ ಹನಿಯ ಕಾಣದೆ
ತಲೆಕೆಳಗಾಗಿ ಕಾಲುಮೇಲಾಗಿ ನಡೆವರು.
ಹಾಟ ಕುಡಿದು ಸತ್ತವರು ಜೀರರ ಸಂಕಣ್ಣನ ಕುಲದವರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./377
ಮೋಟುಗಿಡದಲ್ಲಿ ಹೂವು ಕಾಯಿಲ್ಲದೆ
ಫಲದೋರಿ ಬೇರಿನಲ್ಲಿ ಹಣ್ಣಾಗಿ,
ಆ ಹಣ್ಣಿಗೆ ನಾಲ್ವರು ಹೆಣಗಾಡುತ್ತಿರ್ಪರು.
ಆ ಹಣ್ಣನೇ ಮೂವರು ಸೇವಿಸಿ ಬದುಕಿದರು.
ಅದರೊಳಗೊಬ್ಬ ಸತ್ತಿರ್ಪನು.
ಇದರರ್ಥವ ಹೇಳಬಲ್ಲರೆ ಅನಾದಿಗುರುಲಿಂಗಜಂಗಮವೆಂಬೆ.
ಇಂತೀ ಭೇದವ ತಿಳಿಯಬಲ್ಲರೆ
ಅನಾದಿಶಿಷ್ಯಶರಣ ಭಕ್ತನೆಂಬೆ.
ಇವರಿಂದ ಅಂದಚಂದ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./378
ಮೋರೆಯಿಲ್ಲದವರಿಗೆ ಕನ್ನಡಿಯ ತೋರಿದಂತೆ,
ಕಿವಿಯಿಲ್ಲದ ಕಿವುಡಗೆ ಶಾಸ್ತ್ರವ ಹೇಳುವಂತೆ,
ಮೂಗಿಲ್ಲದ ಮೂಕಂಗೆ ಮಾತು ಹೇಳುವಂತೆ,
ಬಾಯಿ ಇಲ್ಲದವರಿಗೆ ಪಂಚಾಮೃತವನುಣಿಸಿದಂತೆ,
ಒಲ್ಲದ ಕೂಸಿಗೆ ನೊರೆವಾಲನೆರೆದಂತೆ,
ಕನ್ಯಾಕುಮಾರಿಯ ಸಂಗ ನಪುಂಸಕ ಮಾಡುವಂತೆ,
ಇಂತೀ ದೃಷ್ಟಾಂತದಂತೆ ತ್ರಿವಿಧಮಲವ ಕಚ್ಚಿ,
ಸಂಸಾರವಿಷಯಲಂಪಟರಾದ ತಾಮಸಜೀವಿಗಳಿಗೆ
ಶಿವಾನುಭವಬೋಧೆಯ ಮಾಡಿದುದು ಒಂದೇ ನೋಡಾ.
ಅಂತಪ್ಪ ಮಂಗಮೂಳರ ಮುಂದೆ ಮಾತನಾಡಲಾಗದು.
ಮನದೆರದು ಮಹಾನುಭಾವಬೋಧೆಯ ಬೆಸಗೊಳ್ಳಲಾಗದು.
ತಥಾಪಿ ಬಿಡೆಯಭಾವದಿಂ ಶಿವಾನುಭಾವ ಬೆಸಗೊಂಡಡೆ
ಹಳ್ಳಗೊಂಡ ಹರವಿಯ ನೀರು ತುಂಬಿ ಇರಿಸಿದಂತೆ,
ಹೊಳ್ಳ ಕುಟ್ಟಿ ಗಾಳಿಗೆ ತೂರಿದಂತೆ ಆಯಿತ್ತು.
ಇದು ಕಾರಣ ಶಬ್ದಮುಗ್ಧನಾಗಿ ಕಲ್ಲುಮರದಂತೆ,
ಪರ್ಣ ಉದುರಿದ ವೃಕ್ಷದಂತೆ,
ಸುಮ್ಮನೆ ಇರ್ದನು ಕಾಣಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./379
ಯೋನಿಯಿಲ್ಲದ ಸ್ತ್ರೀಗೆ ಶಿಶ್ನವಿಲ್ಲದ ಪುರುಷನು.
ಮೊಲೆ ಮುಡಿ ಇಲ್ಲದ ಸ್ತ್ರೀಗೆ ಕೈಕಾಲು ಇಲ್ಲದ ಪುರುಷನು.
ಇಬ್ಬರ ಸಂಗದಿಂದ ಕರುಳಿಲ್ಲದ
ಶ್ವೇತವರ್ಣದ ಶಿಶುವು ಹುಟ್ಟಿತ್ತು.
ಆ ಶಿಶುವು ನೋಡಿದವರ ನೋಟದಲ್ಲಿ ಸತ್ತು
ಬದುಕಿದವರ ಹೊತ್ತು, ಅತ್ತವರ ನುಂಗಿ,
ಹೆತ್ತವರ ಹೆಸರ ಮಾಜಿ
ಗುಹೇಶ್ವರನ ಚರಣದಲ್ಲಿ ಅಡಗಿತ್ತು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./380
ರಂಜಣಿಗೆಯ ಉದಕವ ಕುಡಿದವರು ಸಾಯಲಿಲ್ಲ.
ಕುಳ್ಳಿಯುದಕವ ಕುಡಿದವರು ಸಾಯುವರು ನೋಡೆಂದ.
ಕುಳ್ಳಿಯುದಕವ ರಂಜಣಿಗಿಯ ತುಂಬಲು
ರಂಜಣಿಗಿ ಒಡೆದು ಕುಳ್ಳಿಯಾಯಿತ್ತು.
ಕುಳ್ಳಿಯ ಕೊಂಬವನಾರನು ಕಾಣೆ ನೋಡೆಂದ ದಮ್ಮಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./381
ರಂಜನಿಪುರದಲ್ಲಿ ಕಪಿ ಉಡವ ಕಚ್ಚಿ
ತಿರುಗಾಡುವದ ಕಂಡೆನಯ್ಯ.
ಆ ಉಡುವಿನ ಬಾಯೊಳಗೆ ಮೂರುಲೋಕವೆಲ್ಲ
ಏಳುತ್ತ ಬೀಳುತ್ತ ಇರ್ಪುದ ಕಂಡೆ.
ಆ ಕೋಡಗದಾಟವ ಕಂಡು ಈರೇಳುಲೋಕದ ಪ್ರಾಣಿಗಳು
ಬೆರಗಾದುದ ಕಂಡೆ.
ಅದಾರಿಗೂ ಸಾಧ್ಯವಲ್ಲ.
ಅಷ್ಟರಲ್ಲಿಯೇ ಅರಸನ ಮನೆಯಲ್ಲಿ ಒಂದು ಎಳೆ ಶಿಶು ಹುಟ್ಟಿ,
ಕಸ ನೀರು ಹೊರುವ ಗಾಡಿಯ ಕೊಂದು, ಕೋತಿಯ ತಿಂದು,
ಉಡವ ನುಂಗಿ, ತ್ರೈಲೋಕದ ಬಂಧನವ ಬಿಡಿಸಿ,
ತಂಗಿಯನೊಡಗೂಡಿ, ಅಕ್ಕನ ಸಂಗವ ಮಾಡಿ,
ಅರಸಿನ ಅರಮನೆಯಲ್ಲಿ ಆರು ಕಾಣದೆ ಅಡಗಿಹೋಯಿತ್ತು.
ಇದರಂದಚಂದವ ನಿಮ್ಮ ಶರಣ ಬಲ್ಲ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./382
ರಂಡೆಮುಂಡೆಯ ಮಗ ರಾಜಕುಮಾರ
ಗಗನದಲ್ಲಿ ಪುಟ್ಟಿ, ಭೂಮಿಯಲ್ಲಿ ಬಂದು,
ಆ ಭೂಮಿಯ ರಾಜನಲ್ಲಿ ಯುದ್ಭವ ಮಾಡಿ,
ಆನೆಯ ಹಲ್ಲು ಕಿತ್ತು, ಕುಂಭವನೊಡೆದು,
ಕುದುರೆಯ ಕಾಲ ಮುರಿದು, ನಾಯಿಯ ನಾಲಿಗೆ ಕಿತ್ತು,
ಬೆಕ್ಕಿನ ಕಣ್ಣು ಕಳೆದು ಉಣ್ಣದೆ ಉಪವಾಸ ಮಾಡದೆ
ಯುದ್ಧದಿಂ ತ್ರಿಲೋಕದ ರಾಜರ ಗೆದ್ದು,
ತ್ರಿಲೋಕದ ರಾಜರಲ್ಲಿ ಸತ್ತು ನಿಂದಿತ್ತು.
ಈ ಭೇದವ –
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ
ಮಿಕ್ಕಿನ ಜೀವಾತ್ಮರು ಅರಿಯರು./383
ರಾತ್ರಿಯಲ್ಲಿ ಬಹುಕುಲದಲ್ಲಿ ಪುಟ್ಟಿದೆ.
ಹಗಲಿನಲ್ಲಿ ಒಂದು ಕುಲದಲ್ಲಿ ಪುಟ್ಟಿದೆ.
ಉಭಯವಿಲ್ಲದಕಾರಣ ಆವಲ್ಲಿ ನಾ ಪುಟ್ಟಿದೆನೆಂಬುದ
ನೀ ಬಲ್ಲೆಯಲ್ಲದೆ ಇವರೆತ್ತ ಬಲ್ಲರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./384
ಲಿಂಗಜಂಗಮ ಒಂದೆಂದರಿಯದೆ
ಲಿಂಗಜಂಗಮವ ಭಿನ್ನವಿಟ್ಟು ಅರ್ಚಿಸುವರು.
ಅದೆಂತೆಂದಡೆ: ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೆ?
ಬೀಜ ವೃಕ್ಷಕ್ಕೆ ಭೇದವುಂಟೆ? ಜ್ಯೋತಿ ಪ್ರಭೆಗೆ ಭೇದ ಉಂಟೆ?
ಹಾಗೆ ಲಿಂಗಜಂಗಮಕ್ಕೆ ಭೇದವಿಲ್ಲ.
ಅದೇನು ಕಾರಣವೆಂದಡೆ: ಲಿಂಗವೇ ಅಂಗ, ಜಂಗಮವೇ ಪ್ರಾಣ.
ಲಿಂಗವೇ ಬೀಜ, ಜಂಗಮವೇ ವೃಕ್ಷ.
ಲಿಂಗವೇ ಜ್ಯೋತಿ, ಜಂಗಮವೇ ಪ್ರಕಾಶ.
ಇಂತೀ ನಿರ್ಣಯವ ತಿಳಿದರೆ ಪ್ರಾಣಲಿಂಗಿ,
ತಿಳಿಯದಿದ್ದರೆ ಜಡಲಿಂಗಿಗಳೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./385
ಲಿಂಗಧಾರಣದ ನಿರ್ಣಯವ ಪೇಳ್ವೆ.
ಅದೆಂತೆಂದಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯಮಾಡಿ,
ಶ್ರೀಗುರುಕಾರುಣ್ಯವ ಹಡದು,
ಅಂಗದ ಮೇಲೆ ಲಿಂಗಧಾರಣವಾದ ಶಿವಶರಣನು,
ಷಟ್ಸ್ಥಾನದಲ್ಲಿ ಲಿಂಗವ ಧರಿಸುತ್ತಿರ್ದ.
ಅದೆಂತೆಂದಡೆ: ಕರಸ್ಥಲವೆಂಬ ಪೃಥ್ವಿತತ್ವದಲ್ಲಿ ಆಚಾರಲಿಂಗಸ್ವಾಯತವಮಾಡಿ,
ಕಕ್ಷೆಯೆಂಬ ಅಪ್ಪುತತ್ವದಲ್ಲಿ ಗುರುಲಿಂಗಸ್ವಾಯತವಮಾಡಿ,
ಹೃದಯವೆಂಬ ತೇಜತತ್ವದಲ್ಲಿ ಶಿವಲಿಂಗಸ್ವಾಯತವಮಾಡಿ,
ಕಂಠವೆಂಬ ವಾಯುತತ್ವದಲ್ಲಿ ಜಂಗಮಲಿಂಗಸ್ವಾಯತವಮಾಡಿ,
ಉತ್ತಮಾಂಗವೆಂಬಾಕಾಶತತ್ವದಲ್ಲಿ ಪ್ರಸಾದಲಿಂಗಸ್ವಾಯತವಮಾಡಿ,
ಅಮಳೋಕ್ಯವೆಂಬ ಆತ್ಮತತ್ವದಲ್ಲಿ ಮಹಾಲಿಂಗಸ್ವಾಯತವಮಾಡಿ,
ಇದಲ್ಲದೆ, ಆಪಾದಮಸ್ತಕ ಪರಿಯಂತರ
ಸರ್ವಾಂಗಲಿಂಗಮಯವಾಗಿ,
ಆವಾವೇಷವ ಧರಿಸದೆ ಲೌಕಿಕಾತ್ಮರಲ್ಲಿ
ಹತ್ತರೊಳಗೆ ಹನ್ನೊಂದು ಎಂಬ ಹಾಗೆ
ಸರ್ವರಲ್ಲಿಯೂ ಶಿವಶರಣನು ಅವರಂತೆ ಇರ್ಪನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./386
ಲಿಂಗನಿಷ್ಠೆಯುಳ್ಳ ವೀರಶೈವ ಮಹೇಶ್ವರರು
ಸಕಲಪದಾರ್ಥವ ಲಿಂಗಕ್ಕೆ ಕೊಡದೆ,
ಎನ್ನಂಗಕ್ಕೆ ಕೊಂಡಡೆ ವ್ರತಕ್ಕೆ ಭಂಗವೆಂದೆಂಬಿರಯ್ಯಾ
ಉದಯಕಾಲದಲ್ಲಿ ಶೌಚಾಚಮನವ ಮಾಡಿ
ಅಗ್ಗಣಿಯ ಬಳಸುವಿರಿ,
ಆವಾಗ ಅವ ಲಿಂಗಕ್ಕೆ ಕೊಡುವಿರಿ.
ಆ ಮೇಲೆ ಹಳ್ಳ ಕೊಳ್ಳ ಕೆರೆ ಬಾವಿ ನದಿಗಳಿಗೆ ಹೋಗಿ,
ಮೃತ್ತಿಕಾದಿಂದ ಹಸ್ತಪಾದಕ್ಕೆ ಮೂರು ವೇಳೆ ಪೂಸಿ
ಮೂರು ವೇಳೆ ತೊಳೆವಿರಿ.
ಆವಾಗ ಅವ ಲಿಂಗಕ್ಕೆ ಕೊಡುವಿರಿ.
ಆ ಮೇಲೆ ಶೌಚಕ್ಕೆ ಒಯ್ದ ಪಾತ್ರೆಯ
ಮೃತ್ತಿಕಾದಿಂದ ತೊಳೆದು,
ತಾ ಉಟ್ಟು ತೊಟ್ಟ ಪಾವಡಪಂಕಿಗಳ ನೀರಿನಲ್ಲಿ ಸೆಳೆದು
ಗಾಳಿ ಬಿಸಲಾಗ ಹಾಕುವಿರಿ.
ಆವಾಗ ಅವ ಲಿಂಗಕ್ಕೆ ಕೊಡುವಿರಿ.
ಇಂತೀ ಎಲ್ಲವನು ಶುಚಿ ಮಾಡಿ
ಜ್ಯಾಲಿ ಬೊಬ್ಬಲಿ ಉತ್ರಾಣಿಕಡ್ಡಿ ಮೊದಲಾದ ಕಡ್ಡಿಗಳ ತಂದು
ಆವಾಗ ತಮ್ಮ ಅಂಗದ ಮೇಲಣ ಲಿಂಗವ ತೆಗೆದು
ಅಂಗೈಯಲ್ಲಿ ಪಿಡಿದು, ಆ ಲಿಂಗಕ್ಕೆ ಮಜ್ಜನ ಮಾಡಿ,
ಮರಳಿ ತಾ ಮುಖಮಜ್ಜನವ ಮಾಡಿ,
ಆ ಮೇಲೆ ತಮ್ಮ ಅಂಗೈಯೊಳಗಿನ
ಇಷ್ಟಲಿಂಗಕ್ಕೆ ಆ ಕಡ್ಡಿಯ ತೋರಿ,
ತೋರಿದಂಥ ಧಾವನೆಯ ಮಾಡುವರು.
ಲಿಂಗದ ಗೊತ್ತು ತಮಗಿಲ್ಲ ;
ತಮ್ಮ ಅಂಗದ ಗೊತ್ತು ಲಿಂಗಕ್ಕಿಲ್ಲ .
ಇಂತಪ್ಪ ಭಿನ್ನವಿಚಾರವನುಳ್ಳ ಮಂಗಮನುಜರಿಗೆ
ಲಿಂಗನೈಷ್ಠೆಯುಳ್ಳ ವೀರಮಹೇಶ್ವರರೆಂದಡೆ
ನಿಮ್ಮ ಶಿವಶರಣರು ಮುಖವೆತ್ತಿ ನೋಡರು.
ಮನದೆರೆದು ಮಾತನಾಡರು,
ತಮ್ಮೊಳಗೆ ತಾವೇ ಮುಗುಳುನಗೆಯ ನಕ್ಕು
ಸುಮ್ಮನಿರುವರು ನೋಡಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./387
ಲಿಂಗಪೂಜೆಯುಳ್ಳನ್ನಕ್ಕ ಲಿಂಗವಿಲ್ಲ.
ಲಿಂಗದ ನೆನವು ಉಳ್ಳನ್ನಕ್ಕ ಲಿಂಗವಿಲ್ಲ.
ಲಿಂಗವ ಕೂಡಬೇಕು, ಲಿಂಗವನರಿಯಬೇಕೆಂಬನ್ನಕ್ಕ ಲಿಂಗವಿಲ್ಲ.
ಲಿಂಗವನರಿಯದಿರ್ದು, ಲಿಂಗವನರಿದು, ಲಿಂಗದಲ್ಲಿ ಬೆರೆದು,
ಸುಖಿಯಾದೆನೆಂಬನ್ನಕ್ಕ ಲಿಂಗವಿಲ್ಲ.
ನಾ ನನ್ನ ನಿಜವನರಿದು ಪರಿಣಾಮಿಯಾದೆನೆಂಬನ್ನಕ್ಕ ಲಿಂಗವಿಲ್ಲ.
ಲಿಂಗೈಕ್ಯನಾದೆನೆಂದು ಪರರ ಮುಂದೆ ಬೀರುವನ್ನಕ್ಕ
ಎಂದೆಂದಿಗೂ ಮುನ್ನವೆ ಲಿಂಗವಿಲ್ಲ.
ಮತ್ತಂ, ಲಿಂಗವನರಿಯಬೇಕು, ಲಿಂಗವ ಕೊಡಬೇಕು,
ಭವಬಂಧವ ಕಡಿಯಬೇಕೆಂದು ದೇಶದೇಶವ ತಿರುಗಿದರಿಲ್ಲ.
ಊರಬಿಟ್ಟು ಅರಣ್ಯವ ಸೇರಿದರಿಲ್ಲ,
ಹೊನ್ನು ಹೆಣ್ಣು ಮಣ್ಣು ಮೊದಲಾದ
ಮನೆಮಾರು ತೊರೆದು ಸನ್ಯಾಸಿಯಾಗಿ
ವೈರಾಗ್ಯತೊಟ್ಟು ವನವಾಸಗೈದರಿಲ್ಲ.
ಅಶನ ವ್ಯಸನವ ಬಿಟ್ಟು, ಹಸಿವು ತೃಷೆಗಳ ತೊರೆದು,
ಪರ್ಣಾಹಾರ ಕಂದಮೂಲ ತಿಂದು,
ತನುಮನಧನವನೊಣಗಿಸಿದರಿಲ್ಲ.
ಮಾತನಾಡಿದರಿಲ್ಲ, ಮಾತುಬಿಟ್ಟು ಮೌನದಿಂದಿದ್ದರೂ ಇಲ್ಲ.
ಕ್ರೀಯ ಬಿಟ್ಟರಿಲ್ಲ, ಕ್ರೀಯ ಮಾಡಿದರಿಲ್ಲ.
ಏನು ಮಾಡಿದರೇನು ವ್ಯರ್ಥವಲ್ಲದೆ ಸ್ವಾರ್ಥವಲ್ಲ.
ಅದೇನುಕಾರಣವೆಂದರೆ, ತಮ್ಮ ನಿಲವು ತಾವು ಅರಿಯದ ಕಾರಣ.
ನಮ್ಮ ಗುಹೇಶ್ವರಲಿಂಗವ ಬೆರೆಸಬೇಕಾದರೆ
ಸಕಲಸಂಶಯ ಬಿಟ್ಟು, ಉಪಾಧಿರಹಿತನಾಗಿ,
ಎರಡಳಿದು ಕರಕಮಲದಲ್ಲಿ ಅಡಗಬಲ್ಲರೆ
ಪರಶಿವಲಿಂಗದಲ್ಲಿ ಅಚ್ಚಶರಣ ತಾನೇ ಎಂದನಯ್ಯ ನಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./388
ಲಿಂಗವಂತರಿಗೆ ಮುಹೂರ್ತವ ಪೇಳಿ
ಪಂಚಾಂಗವ ತೋರಬೇಕಲ್ಲದೆ
ಭವಿಗಳಿಗೆ ಮುಹೂರ್ತವ ಪೇಳಿ ಪಂಚಾಂಗವ ತೋರಲಾಗದು.
ಅದೇನು ಕಾರಣವೆಂದಡೆ: ಕೈಯೊಳಗಿನ ಪಂಚಾಂಗ ಹೃದಯದೊಳಗಣ ಮುಹೂರ್ತ
ತನಗೆ ಸಾಧ್ಯವಾಗದಾಗಿ.
ಪೇಳಿದರೆ ಪೇಳಬಹುದು.
ಹಣವ ಕೊಡವುಳ್ಳವರ ಕಂಡರೆ
ಪಂಚಾಂಗದ ಮುಹೂರ್ತವ ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./389
ಲಿಂಗೈಕ್ಯಂಗೆ ಕಾಮವಿಲ್ಲ, ಕ್ರೋಧವಿಲ್ಲ,
ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ.
ಷಡೂರ್ಮಿಗಳು ಮೊದಲಾದ ಆವ ಕಾರಣವಿಷಯವು ಇಲ್ಲ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./390
ಲಿಂಗೈಕ್ಯರು ಲಿಂಗೈಕ್ಯರು ಎಂದೆಂಬಿರಿ.
ಲಿಂಗೈಕ್ಯರ ನಿಲವ ಆರು ಬಲ್ಲರಯ್ಯ ಎಂದಡೆ,
ಅಜಗಣ್ಣತಂದೆ, ಮೋಳಿಗೆ ಮಾರಿತಂದೆ, ಕೂಗಿನ ಮಾರಿತಂದೆ,
ನುಲಿಯಚಂದಯ್ಯ, ಹಡಪದ ಅಪ್ಪಣ್ಣ, ಮುಗ್ಧಸಂಗಯ್ಯನವರು,
ಘಟ್ಟಿವಾಳತಂದೆ ಮೊದಲಾದ ಪ್ರಮಥಗಣಂಗಳು,
ಶಿವಜ್ಞಾನೋದಯವಾದಂಥ ಜ್ಞಾನಕಲಾತ್ಮರು ಬಲ್ಲರಲ್ಲದೆ
ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರು
ನೋಡೆಂದನಯ್ಯ ನಿಮ್ಮ ಲಿಂಗೈಕ್ಯನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./391
ಲಿಂಗೈಕ್ಯವಾಗಬೇಕೆಂದು ಅಜ್ಞಾನದೊಳಗೆ
ಭಿನ್ನ ಜ್ಞಾನವೆಂಬ ಜ್ಞಾನೋದಯವಾಗಿ,
ಶೈವಗುರುಗಳಲ್ಲಿ ಶೈವಲಿಂಗವ ಪಡಕೊಂಡು,
ಶೈವಲಿಂಗವ ಪೂಜೆಯ ಮಾಡಿ,
ಆ ಶೈವಲಿಂಗವ ಸರ್ವಜೀವಿಗಳ ಹಾಗೆ
ಕಣ್ಣಗೊಂಬಿಯ ತಿರುಹಿ, ಅನಿಮಿಷದೃಷ್ಟಿಯೆಂದು
ಕಣ್ಣ ಕಿಸಿಕಿಸಿದು ನೋಡಿದಡೆಯು
ಕಣ್ಣ ಗುಡ್ಡಿ ಬ್ಯಾನಿಕ್ಕಿ ನೀರು ಸುರಿವುದಲ್ಲದೆ,
ಇವರು ಲಿಂಗೈಕ್ಯವಾಗಲರಿಯರು.
ಮತ್ತಂ, ಏಕಾಂತಸ್ಥಾನದಲ್ಲಿಗೆ ಹೋಗಿ
ಕಾಲ ಮೇಲಕ್ಕೆ ತಲೆಯ ಕೆಳಯಕ್ಕೆ ಮಾಡಿ,
ಆ ತಲೆಯ ಕೆಳಗೆ ಅಡಕಿಯಾಗಲೀ, ಹಳ್ಳವಾಗಲೀ
ಒಂದರ ಮೇಲೆ ಒಂದು ಇಟ್ಟು ಕಣ್ಣು ಮುಚ್ಚಿ ಕೈ ಮುಗಿದು
ಒಂದು ಜಾವ, ಗಳಿಗಿ, ತಾಸುವ್ಯಾಳ್ಯದಲ್ಲಿ
ತಪವ ಮಾಡುವವರೆಲ್ಲ ಮರಣವಾದ ಮೇಲೆ
ಮರಳಿ ವನಚರದೊಳಗೆ ವೃಕ್ಷದ ಕೊನೆಯಲ್ಲಿ
ಅಧೋಮುಖವಾಗಿರುವ ಹಕ್ಕಿಯಾಗಿ ಪುಟ್ಟುವರಲ್ಲದೆ
ಇವರು ಲಿಂಗೈಕ್ಯವಾಗಲರಿಯರು.
ಇಂತಪ್ಪ ಮೂಢಾತ್ಮರ ಕಂಡು ನಗುತಿರ್ದನಯ್ಯಾ ನಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./392
ಲೋಕದ ಗಂಡರ ಪರಿ ಬೇರೆ,
ಎನ್ನ ಗಂಡನ ಪರಿ ಬೇರೆ ಕೇಳಿರವ್ವಾ.
ಲೋಕದ ಗಂಡರು ಉಪಚಾರವ ಮಾಡಿ
ಕರೆದರೆ ಬರುವರು.
ಇಲ್ಲದಾದರೆ ಮೋರೆಯ ತೋರರು.
ಎನ್ನ ಗಂಡ ಉಪಚಾರವ ಒಲ್ಲ.
ಕರೆದರೆ ಎನ್ನ ಬಿಟ್ಟು ಹೋಗುವ.
ಎನ್ನ ಒಡಹುಟ್ಟಿದವರ ಬಿಟ್ಟು
ಶಾಲಿಯ ಕಳದು ಪೋದೊಡೆ
ಎನ್ನ ಸರ್ವಾಂಗವನು ಬಿಗಿದಪ್ಪಿ
ಅಗಲದೆ ಇರುವನವ್ವಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/393
ಲೋಡಿಗೆ ಮೂರು ಹಣವ ಕೊಂಬರು.
ತಿಬ್ಬಿಗೆ ಐದು ಹಣವ ಕೊಂಬರು.
ಎಳೆಗೆ ಎಂಟಾರು ಹಣವ ಕೊಂಬರು.
ಬೆನ್ನಿಗೆ ಹೀಗೆ ಕೊಂಬರು, ಉದರಕ್ಕೆ ಹೀಗೆ ಕೊಂಬರು
ನೋಡೆಂದನಯ್ಯಾ ಅಸುಲಿಂಗಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./394
ಲೌಕಿಕ ಪಾರಮಾರ್ಥವೆಂಬುಭಯವನು ಪಿಡಿದು
ಆಚರಿಸಿ ಮುಕ್ತನಾಗುವಾತ ಜಾಣನೆಂದೆಂಬರು.
ಲೌಕಿಕಕ್ಕೆ ಮುಕ್ತಿದೋರದು, ಪಾರಮಾರ್ಥಕ್ಕೆ ಮುಕ್ತಿದೋರುವದು.
ಅದೆಂತೆಂದೊಡೆ: ಲೌಕಿಕವೆಂದಡೆ ಆವುದು,
ಪಾರಮಾರ್ಥವೆಂದಡೆ ಆವುದು, ಬಲ್ಲಾದರೆ ಪೇಳಿ,
ಇಲ್ಲಾದರೆ ನಮ್ಮ ಪ್ರಭುವಿನ ಶರಣರ ಕೇಳಿ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./395
ಲೌಕಿಕದ ಮಧ್ಯದಲ್ಲಿ ಬಾಗಿಣವನಿಕ್ಕಿದ ಸ್ತ್ರೀಯರ
ಪುರುಷರು ಮೃತವಾದಡೆ ಮರಳಿ ಬಾಗಿಣವನಿಕ್ಕಿ
ವಿವಾಹವ ಮಾಡುವರು.
ವಿವಾಹವಾದ ಸ್ತ್ರೀಯರ ಪುರುಷರು ಮೃತವಾದಡೆ
ಮರಳಿ ಹಳದಿಯ ಪೂಸಿ ವಿವಾಹವ ಮಾಡುವರೆ ?
ಮಾಡಲಾಗದು.
ಅದರೊಳಗೊಬ್ಬ ಪತಿವ್ರತಾಸ್ತ್ರೀಯಳು
ಎನ್ನ ಪ್ರಾಣವಲ್ಲಭನು ಮೃತವಾದನೆಂದು
ಆ ಪುರುಷಂಗೆ ತನ್ನ ಪ್ರಾಣತ್ಯಾಗ ಮಾಡುವಳು.
ಒಬ್ಬರು ಮಂಡಿಬೋಳಾಗಿ ಮೈ ಬತ್ತಲೆಯಿರ್ಪರು.
ಒಬ್ಬರು ಮರಳಿ ಒಬ್ಬ ಪುರುಷನ ಕೈ ಹಿಡಿದು
ಪೋಗುವದ ಕಂಡು ಬೆರಗಾದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./396
ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು
ಒಬ್ಬರು, ಇಬ್ಬರು, ಮೂವರು, ನಾಲ್ವರು, ಐವರು
ಪರಿಯಂತರ ಸತಿಯರುಂಟು.
ಒಬ್ಬ ಸ್ತ್ರೀಯಳಿಗೆ ಐವರು ಪುರುಷರುಂಟೆ?
ಇಲ್ಲೆಂಬ ಹಾಗೆ, ಎನಗೆ ಎನ್ನ ತಾಯಿತಂದೆಗಳು
ಮೂರಾರು ಗಂಡರ ಮದುವೆ ಮಾಡಿ
ಒಗತನ ಮಾಡೆಂದು ಸಕಲಗಣಂಗಳ ಸಾಕ್ಷಿಯಾಗಿ
ಎನಗೆ ಕೊಟ್ಟರು.
ಆ ನಿರೂಪವ ಕೈಕೊಂಡು ಗಂಡನ ಸಂಗವ ಮಾಡದೆ
ಅವರ ಸಂಗವ ಬಿಡದೆ ರಂಗಮಂಟಪದಲ್ಲಿ ಒಬ್ಬನ ಕುಳ್ಳಿರಿಸಿ,
ನಡುಮನೆಯಲ್ಲಿ ಒಬ್ಬನ ಕುಳ್ಳಿರಿಸಿ,
ಒಬ್ಬನ ಹಿರಿಮನೆಯಲ್ಲಿ ಕುಳ್ಳಿರಿಸಿ,
ಷಡ್ವಿಧಸ್ಥಾನಗಳಲ್ಲಿ ಷಡ್ವಿಧರ ಕುಳ್ಳಿರಿಸಿ,
ಇಂತೀ ಪುರುಷರ ಕೂಡಿ ಒಗತನವ ಮಾಡಿ,
ಇವರಿಗೆ ಸಿಕ್ಕದೆ ಹೊಲೆಯನ ಕೂಡಿ ಕುಲಗೆಟ್ಟು
ನಾಯೆತ್ತ ಹೋದೆನೆಂದರಿಯನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./397
ವಂದಿಸಿದಲ್ಲಿ ಶತಕೋಟಿ ಯೋಜನವಾಯಿತ್ತು.
ಪೂಜಿಸಿದಲ್ಲಿ ದ್ವಿಶತಕೋಟಿ ಯೋಜನವಾಯಿತ್ತು.
ಪಣೆಮುಟ್ಟಿವಂದಿಸಿದಲ್ಲಿ ತ್ರಿಶತಕೋಟಿ ಯೋಜನವಾಯಿತ್ತು.
ಸೇವಿಸಿದಲ್ಲಿ ನಾಲ್ಕುಕೋಟಿ ಯೋಜನವಾಯಿತ್ತು.
ಕೊಂಡಲ್ಲಿ ಪಂಚಶತಕೋಟಿ ಯೋಜನವಾಯಿತ್ತು.
ಇಂತೀ ಐವರಲ್ಲಿದ್ದವರಿಗೆ ಪಂಚವರ್ಣದ ಕಲ್ಲು
ಷಡ್ವಿಧಶತಕೋಟಿ ಯೋಜನವಾಯಿತ್ತು.
ಇದ ಕಂಡು ನಾ ಬೆರಗಾಗಿ ಮರೆಯಾದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./398
ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು
ಕುಂಭಿನಿಯ ಮೇಲೆ ಕಾಗಿ ತಾ ಕರೆದಂತೆ,
ಅರಸಿ ಮಂಚವನೇರಿದಳೆಂದು
ಕಸ ನೀರು ಹೊರುವ ದಾಸಿ ತಾ ಹೊರಸನೇರುವಂತೆ,
ಮಹಾರಾಜಕುಮಾರನು ಆನೆಯನೇರಿದನೆಂದು
ಮಣ್ಣು ಹೊರುವ ಉಪ್ಪರಿಗನಮಗ ತಾ ಕೋಣ[ನ]ನೇರುವಂತೆ,
ಮಹಾವೀರಕುಮಾರ ಮಹಾತೇಜಿಯನೇರಿದನೆಂದು
ಮೈಲಿಗೆಯ ತೊಳೆಯುವ ಮಡಿವಾಳನಮಗ ತಾ
ಮೋಳಿಗೆಯ ಹೇರುವ ಕತ್ತೆಯನೇರುವಂತೆ,
ಬಾಲಹನುಮನು ಲಂಕೆಗೆ ಹಾರಿದನೆಂದು
ಒಂದು ಮರುಳಕೋತಿ ತಾ ಪರ್ವತವನೇರಿ ಕೆಳಕ್ಕೆ ಬಿದ್ದಂತೆ,
ಮಹಾಮಲೆಯೊಳಗೆ ಒಂದು ಮಹಾವ್ಯಾಘ್ರನು
ಘುಡುಘುಡಿಸಿ ಲಂಘಿಸಿ ಒಂದು ಪಶುವಿಗೆ ಹಾರಿತೆಂದು
ಮಹಾ ಶೀಗರಿಮೆಳೆಯೊಳಗೊಂದು ಮರುಳ ನರಿ ತಾ
ಒದರಿ ಹಲ್ಲು ಕಿಸಿದು ಕಣ್ಣು ತೆರೆದೊಂದು ಇಲಿಗೆ
ತಾ ಲಂಘಿಸಿ ಹಾರುವಂತೆ.
ಇಂತೀ ದೃಷ್ಟಾಂತದಂತೆ ಆದಿ ಆನಾದಿಯಿಂದತ್ತತ್ತಲಾದ
ಘನಮಹಾಲಿಂಗದೊಳಗೆ ಜ್ಯೋತಿ ಜ್ಯೋತಿ ಕೂಡಿದಂತೆ,
ಬೆರಸದ ಶಿವಶರಣರು ಹಾಡಿದ ವಚನವ
ಶಿವಾಂಶಿಕರಾದ ಸಜ್ಜೀವಾತ್ಮರು ಹಾಡಿ ನಿರ್ವಯಲಾದರೆಂದು
ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿರುವ
ದೇವ ದಾನವ ಮಾನವರು ಮೊದಲಾದ ಜೀವಾತ್ಮರು
ಇಟ್ಟೆಯ ಹಣ್ಣ ನರಿ ತಾ ತಿಂದು ಪಿಟ್ಟೆಸಿಕ್ಕು ಬಾಯಿತೆರೆದು ಒದರುವಂತೆ
ಏಕಲಿಂಗ ನಿಷ್ಠಾಪಾರಿಗಳ ವಚನವ ಮಲತ್ರಯವೆಂಬ ಇಟ್ಟೆಯಹಣ್ಣ ತಿಂದು
ಪಿಟ್ಟೆಸಿಕ್ಕು ಬಾಯಿ ತೆರೆದು ಬೇನೆಹಾಯ್ದ ಕುರಿಯಂತೆ
ಒದರಿ ಒದರಿ ಸತ್ತು ಭವದತ್ತ ಮುಖವಾಗಿ ಹೋದರಲ್ಲದೆ
ಇವರು ಲಿಂಗೈಕ್ಯಗಳಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./399
ವಸ್ತುವೆಂದರೆ ಪರಬ್ರಹ್ಮದ ನಾಮವು.
ಅಂತಪ್ಪ ವಸ್ತುವಿನ ಕಳೆ, ಆ ವಸ್ತುವಿನ ನಿಲವು ಪೇಳ್ವೆ ಕೇಳಿರಯ್ಯ.
ಅನಂತಹಸ್ತ, ಅನಂತಪಾದ, ಅನಂತಮುಖ,
ಅನಂತನಯನ, ಅನಂತಕರಣ, ಅನಂತಾಂಗ,
ಅನಂತ ಮಿಂಚಿನಲತೆಪ್ರಕಾಶದಂತೆ,
ಅನಂತ ಚಂದ್ರ ಸೂರ್ಯಪ್ರಕಾಶದಂತೆ,
ಅನಂತ ವಜ್ರ ವೈಡೂರ್ಯ ಮಾಣಿಕದ ಪ್ರಕಾಶದಂತೆ,
ಇಂತೀ ನಿಲವನು, ಇಂತೀ ಪ್ರಕಾಶವನು ಗರ್ಭಿಕರಿಸಿಕೊಂಡು,
ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯದಿಂದತ್ತತ್ತಲಾದ
ಪರವಸ್ತು ಸ್ವಯಂಭುವಾಗಿರ್ದು ತನ್ನ ವಿನೋದಕ್ಕೆ ತಾನೆ ಶಂಭುರೂಪದಿಂ
ಲೀಲಾಮೂರ್ತಿಯಾಗಿ, ಇಂತೀ ನಿಲವನು, ಇಂತೀ ಕಳೆಯನು ಧರಿಸಿ,
ಘನಮಹಾಲಿಂಗವಾಗಿರ್ಪನು.
ಅಂತಪ್ಪ ಘನಮಹಾಲಿಂಗವನು ಬಹಿಷ್ಕರಿಸಿ,
ಶ್ರೀಗುರು ಶಿಷ್ಯನ ಕರಸ್ಥಳಕ್ಕೆ ಇಷ್ಟಲಿಂಗವ ಮಾಡಿ,
ತೋರಿ ಕೊಟ್ಟ ಬಳಿಕ ಆ ಲಿಂಗದಲ್ಲಿ ತನ್ನ ತನುವನು ಅಡಗಿಸಿ,
ಆ ತನುವಿನಲ್ಲಿ ಆ ಲಿಂಗವ ಸಂಬಂಧಿಸಿ,
ಶಿಖಿ-ಕರ್ಪೂರದ ಸಂಯೋಗದ ಹಾಗೆ
ಅಂಗಲಿಂಗವೆಂಬುಭಯ ನಾಮ ನಷ್ಟವಾಗಿರ್ಪಾತನೇ
ಶಂಭುಸ್ವಯಂಭುಗಿಂದತ್ತತ್ತ ತಾನೆ ನೋಡಾ,
ಶಂಭು-ಎಂದಡೆ ಇಷ್ಟಲಿಂಗ, ಸ್ವಯಂಭು ಎಂದೊಡೆ ಪ್ರಾಣಲಿಂಗ,
ಉಭಯದಿಂದತ್ತತ್ತವೆಂದೊಡೆ ಭಾವಲಿಂಗ.
ಅಂತಪ್ಪ ಭಾವಲಿಂಗಸ್ವರೂಪ ಶರಣ ತಾನೆ ನೋಡಾ ಎಂದನಯ್ಯ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./400
ವಿಭೂತಿ ರುದ್ರಾಕ್ಷಿಯ ಧರಿಸಿ
ಕಾಂಚನಕ್ಕೆ ಕೈ ಒಡ್ಡುವಾತ ಮಹೇಶ್ವರನಲ್ಲ.
ಕಾವಿಕಾಷಾಂಬರ ಹೊದ್ದು ಶಿವಲಿಂಗಧಾರಣವಾಗಿ
ಮೃಷ್ಟಾನ್ನಕ್ಕೆ ಮನಸೋಲುವಾತ ಮಹೇಶ್ವರನಲ್ಲ.
ಕೌಪ ಖಟ್ವಾಂಗವ ಧರಿಸಿ
ಪರಸ್ತ್ರೀಯರ ಕಂಡು ಮನಯೆಳಸುವಾತ ಮಹೇಶ್ವರನಲ್ಲ.
ಜಂಗಮವ ಜರಿದು ಸ್ಥಾವರ ಪೂಜಿಸುವಾತ ಮಹೇಶ್ವರನಲ್ಲ
ಇವರು ನಮ್ಮ ವೀರಮಾಹೇಶ್ವರರ ಸರಿ ಎಂದಡೆ
ನಗುವರಯ್ಯಾ ನಿಮ್ಮ ಶರಣರು.
ಅದೆಂತೆಂದಡೆ : ಭವಭಾರಿಗಳಾದ ಕಾರಣ.
ಇಂತಪ್ಪ ಮಹೇಶ್ವರರ ಕಂಡಡೆ
ಮೂಗುಕೊಯ್ದು ಮೂಕಾರ್ತಿಯ ಮದುವಿಯ ಮಾಡಿ
ಹೊರಕೇರಿಯಲ್ಲಿರಿಸಿದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವಿನ ಶರಣ./401
ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು
ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು.
ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ
ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು
ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು.
ಶಿವಲಿಂಗವ ಧರಿಸುವ ಕೊರಳಿಗೆ
ಬೆಳ್ಳಿಬಂಗಾರದ ತಾಯಿತದಲ್ಲಿ
ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ
ಗೊಲ್ಲರಾಗಿ ಪುಟ್ಟುವರು.
ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ
ಹಾವು ಚೋಳಿನ ಮಂತ್ರ ಮೊದಲಾದ
ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು
ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು.
ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು
ಮರಳಿ ಕ್ಷೀಣಜಾತಿಯಲ್ಲಿ ಜನಿಸಿ,
ನೂರೊಂದು ಕುಲ, ಹದಿನೆಂಟು ಜಾತಿಯವರಿಗೆ
ಶಿರಬಾಗಿ ಶರಣುಮಾಡುವರು.
ಗುರುಕೊಟ್ಟ ಇಷ್ಟಲಿಂಗದ ಪೂಜೆಯ ಬಿಟ್ಟು,
ಶೈವರು ಸ್ಥಾಪಿಸಿದ ನಟ್ಟಕಲ್ಲು
ಸ್ಥಾವರ ಶೈವಲಿಂಗವ ಪೂಜಿಸುವವರು,
ಮರಳಿ ವಿಪ್ರ ಪಂಚಾಳ ಕುಲದವರು
ಮೊದಲಾಗಿ ಅನೇಕ ಭವಿಗಳಲ್ಲಿ ಜನಿಸಿ,
ಹುಲಿಗಿ, ಎಲ್ಲಿ, ಬನಶಂಕರಿ, ಕಾಳಿ, ಜಟ್ಟಿಂಗ,
ಹಿರಿಯೊಡಿಯ ಲಕ್ಕಿ, ದುರ್ಗಿದೇವಿ ಮೊದಲಾದ
ಬೀದಿಬಜಾರದಲ್ಲಿರುವ ಅಧಮ ಕ್ಷೀಣ ದೇವತೆಗಳ ಪೂಜಿಸುವವರು.
ಜಂಗಮವ ಕಂಡು ಜರಿದು
ಜಂಗುಳಿದೈವಕ್ಕೆ ಜನಿಗಿಯ ಬಿಟ್ಟು,
ಒಂದ್ಹೊತ್ತು ಉಪವಾಸ ಮಾಡಿ ಮಡಿಗಳನುಟ್ಟು,
ಎಡಿಯ ಕೊಟ್ಟುಂಬುವವರು ಮರಳಿ
ಆ ದೇವತೆಗಳ ಸೇವಕರಾಗಿ ಪುಟ್ಟುವರು.
ಅನ್ನೋದಕದ ಪೂರ್ವಾಶ್ರಯವನಳಿಯದೆ
ಲಿಂಗಕ್ಕೆ ತೋರಿ ಉಂಬವರೆಲ್ಲ
ಮರಳಿ ಹೆಂಡಗಾರ ಕಟುಕರಲ್ಲಿ ಜನಿಸಿ
ಕಂಡ ಹೆಂಡ ಸೇವಿಸುವರು.
ಇಂತಪ್ಪರಿಗೆ ಶಿವನು ಒಲಿ ಒಲಿ ಎಂದರೆ
ಎಂತೊಲಿವನಯ್ಯ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./402
ವಿರಕ್ತನಾದಡೆ ಕುಳ್ಳಬೂದಿಯ ಧರಿಸಲಾಗದು.
ವಿರಕ್ತನಾದಡೆ ಮಂಡೆಬೋಳಾಗಿ ಮೈ ಬತ್ತಲೆ ಇರಲಾಗದು.
ವಿರಕ್ತನಾದಡೆ ಅಂಗದಮೇಲೆ ಲಿಂಗವಕಟ್ಟಿ ತಿರುಗಲಾಗದು.
ವಿರಕ್ತನಾದಡೆ ರಂಡೆಯ ಸಂಗವ ಬಿಟ್ಟು
ಕನ್ನೆಯ ಸಂಗವ ಮಾಡದಿರಲಾಗದು.
ವಿರಕ್ತನಾದಡೆ ಕನ್ನೆಯ ಸಂಗವಮಾಡಿ
ಮುಖವ ಮುಚ್ಚಿ ತಲೆತಗ್ಗಿಸಿ ತಿರುಗಲಾಗದು.
ವಿರಕ್ತನಾದಡೆ ಹಿರಿಕಿರಿಯರ ಸಂಗವ ಮಾಡಲಾಗದು.
ವಿರಕ್ತನಾದಡೆ ಕಾಂಚಾಣಕ್ಕೆ ಕೈಯನೊಡ್ಡಲಾಗದು.
ಇಂತೀ ಬಿಟ್ಟಲ್ಲದೆ ವಿರಕ್ತನಾಗಲರಿಯನು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./403
ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿರಬೇಕು.
ವಿರಕ್ತನಾದಡೆ ಊರನಾಶ್ರಯಿಸಿ
ಮನೆ, ಮನೆ ಭಿಕ್ಷವ ಬೇಡಬೇಕು.
ವಿರಕ್ತನಾದಡೆ ಅರಣ್ಯ ಪರ್ವತ
ಕಮಳಸರೋವರ ನದಿಗಳಲ್ಲಿರಬೇಕು.
ವಿರಕ್ತನಾದಡೆ ದೇಶಬಿಟ್ಟು ಪರದೇಶಕ್ಕೆ ಹೋಗಬೇಕು.
ವಿರಕ್ತನಾದಡೆ ಮಂಡೆಬೋಳಾಗಿ ನೀರ ಬೂದಿಯ ಧರಿಸಿ
ಅಂಗದ ಮೇಲೆ ಲಿಂಗವಕಟ್ಟಿ ತಿರುಗಬೇಕು.
ಇಂತೀ ಭೇದವ ತಿಳಿಯಬಲ್ಲರೆ ವಿರಕ್ತನೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/404
ವಿರಕ್ತನಾದಡೆ ರಂಡೆಯ ಸಂಗವಮಾಡಿ,
ಮೂರುಮೊಲೆ ಹಾಲು ಕುಡಿದು ಕನ್ಯೆಯ ಸಂಗವಮಾಡಿ,
ಹೆಂಡವ ಕುಡಿದು ಹೊಲೆಮಾದಿಗ
ಸಮಗಾರರಲ್ಲಿ ಕೂಡಿ ಉಂಡು ಕುಲಗೆಟ್ಟು
ಶೀಲವಂತನಾದಾತನೇ ವಿರಕ್ತ.
ಇಂತಪ್ಪ ವಿರಕ್ತರ ನಿಲುಕಡೆಯ
ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು,
ಮಡಿವಾಳ ಮಾಚಯ್ಯ, ಮರುಳಶಂಕರಪ್ರಿಯ,
ಸಿದ್ಧರಾಮಯ್ಯ ಮೊದಲಾದ
ಏಳುನೂರಾಎಪ್ಪತ್ತು ಪ್ರಮಥಗಣಂಗಳು
ಬಲ್ಲರಲ್ಲದೆ ಮಿಕ್ಕಿನ ವೇಷಧಾರಿಗಳೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ?
/405
ವಿರಕ್ತನಾದೆನೆಂಬರು, ವಿರಕ್ತನ ಬಗೆಯ ಪೇಳ್ವೆ.
ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿ ಇರಲಾಗದು.
ವಿರಕ್ತನಾದಡೆ ಊರನಾಶ್ರಯಿಸಿ ಮನೆಮನೆಯ ತಿರುಗಿ
ಭಿಕ್ಷವ ಬೇಡಲಾಗದು.
ವಿರಕ್ತನಾದಡೆ ದೇಶ ಬಿಟ್ಟು ಪರದೇಶಕ್ಕೆ ಹೋಗಲಾಗದು.
ವಿರಕ್ತನಾದಡೆ ಅರಣ್ಯಪರ್ವತದಲ್ಲಿರಲಾಗದು.
ವಿರಕ್ತನಾದಡೆ ಮೇರುಪರ್ವತದ ಕಮಲಸರೋವರದಲ್ಲಿರಲಾಗದು.
ವಿರಕ್ತನಾದಡೆ ಊರೂರು ತಿರುಗಲಾಗದು.
ಪುಣ್ಯದೇಶಕ್ಕೆ ಹೋಗಲಾಗದು.
ಇಂತಿಲ್ಲದಿರಬಲ್ಲರೆ ವಿರಕ್ತನೆಂಬೆನಯ್ಯ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./406
ವೀರಮಾಹೇಶ್ವರರು ಸರ್ವಾಂಗದಲ್ಲಿ
ವಿಭೂತಿ-ರುದ್ರಾಕ್ಷಿ ಧಾರಣವಾಗಿ, ಶಿವಲಿಂಗವ ಧರಿಸಿ,
ಕಾವಿಲಾಂಛನವ ಪೊದ್ದರೆಂದು
ಈ ಮರ್ತ್ಯಲೋಕದ ಜಡಮತಿ ಮರುಳಮಾನವರು
ತಾವು ಧರಿಸುತ್ತಿರ್ಪರು.
ಇಂತಪ್ಪವರ ನಡತೆ ಎಂತಾಯಿತ್ತೆಂದರೆ,
ಗುರುವನರಿಯದೆ ವಿಭೂತಿಧರಿಸುವರೆಲ್ಲ
ಬೂದಿಯೊಳಗಣ ಕತ್ತೆಗಳೆಂಬೆ.
ತಮ್ಮ ನಿಜವ ತಾವರಿಯದೆ ರುದ್ರಾಕ್ಷಿ ಧರಿಸುವರೆಲ್ಲ
ಕಳವು ಮಾಡಿ ಕೈಯ ಕಟ್ಟಿಸಿಕೊಂಡ ಕಳ್ಳರೆಂಬೆ.
ಲಿಂಗದ ಸ್ವರೂಪವ ತಿಳಿಯದೆ ಕೊರಳಲ್ಲಿ ಲಿಂಗವ ಕಟ್ಟುವರೆಲ್ಲ
ವಾಳೆ ಆವಿಗೆ ಯಳಗುದ್ದಿಯ ಕಟ್ಟುವಂತೆ ಕಟ್ಟುವರೆಂಬೆ.
ಜಂಗಮದ ನಿಲವ ಅರಿಯದೆ
ಕಾವಿಯ ಲಾಂಛನ ಹೊದ್ದವರೆಲ್ಲ
ರಕ್ತಮುಳುಗಿದ ಹಸಿಯ ಚರ್ಮವ ಹೊದ್ದವರೆಂಬೆ.
ಇಂತಿದರನುಭಾವವ ತಿಳಿಯದೆ
ಈಶ್ವರನ ವೇಷವ ಧರಿಸಿ ಉದರಪೋಷಣಕ್ಕೆ ತಿರುಗುವರೆಲ್ಲ
ಜಾತಿಹಾಸ್ಯಗಾರರೆಂಬೆ.
ಇಂತಪ್ಪ ವೇಷಧಾರಿಗಳ ಶಿವಸ್ವರೂಪರೆಂದು ಭಾವಿಸುವವರ
ಶಿವಸ್ವರೂಪರೆಂದು ಹೇಳುವವರ,
ಇಂತಪ್ಪ ಉಭಯ ಮೂಢಾತ್ಮರ ಮುಖದ ಮೇಲೆ
ಲೊಟ್ಟಲೊಟ್ಟನೆ ಉಗುಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ
ಘಟ್ಟಿಸಿ ಅಟ್ಟೆಂದ ಕಾಣಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./407
ವೇದವನೋದುವರೆಲ್ಲ ಬಂಜೆಯ ಮಕ್ಕಳು.
ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು.
ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು.
ಆಗಮವ ನೋಡುವರೆಲ್ಲ ಹಾರುತಿಯ ಮಕ್ಕಳು.
ತರ್ಕತಂತ್ರಗಳ ನೋಡಿ ಹೇಳುವರೆಲ್ಲ
ವೈದ್ಯಗಾರತಿಯ ಮಕ್ಕಳು.
ಇಂತೀ ವೇದಾಗಮಶಾಸ್ತ್ರಪುರಾಣ
ತರ್ಕತಂತ್ರಂಗಳೆಲ್ಲ ಕೇಳಿ ಆಚರಿಸುವವರೆಲ್ಲ
ಡೊಂಬಜಾತಕಾರ್ತಿಯ ಮಕ್ಕಳು.
ಇಂತಪ್ಪ ಜಡಮತಿ ವ್ರತಭ್ರಷ್ಟ ಮೂಳಹೊಲೆಯರಿಗೆ
ಭವಬಂಧನ ಎಂದೂ ಹಿಂಗದು, ಮುಕ್ತಿದೋರದು.
ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ ವಿಷ್ಣು ರುದ್ರ
ಮೊದಲಾದ ದೇವತೆಗಳಿಗೆ ಮುನ್ನವೇ ಭವಹಿಂಗದು,
ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./408
ಶಕಲಾತಿ ಬ್ರಹ್ಮಂಗೆ ಕೊಟ್ಟು,
ಕಿನಕಾಪು ವಿಷ್ಣುವಿಂಗೆ ಕೊಟ್ಟು,
ಸುಳುಹು ರುದ್ರಂಗೆ ಕೊಟ್ಟು,
ಕೊಟ್ಟ ಕಪ್ಪಡದ ಹಣವ ಕೊಳ್ಳದೆ
ಕಾಯಕವ ಮಾಡುತ್ತಿರ್ದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./409
ಶರಣನ ನಿಲವು ಜ್ಯೋತಿಯಂತೆ,
ಶರಣನ ನಿಲವು ಚಂದ್ರನಂತೆ,
ಶರಣನ ನಿಲವು ಸೂರ್ಯನಂತೆ,
ಶರಣನ ನಿಲವು ಮಾಣಿಕದ ದೀಪ್ತಿಯಂತೆ,
ಶರಣನ ನಿಲವು ಅಗ್ನಿಯ ಕಾಂತಿಯಂತೆ,
ಶರಣನ ನಿಲವು ನವರತ್ನಯುಕ್ತವಾದ ಮೌಕ್ತಿಕದ ಮಾಲೆಯಂತೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/410
ಶರಣನಾದೊಡೆ ಅಚ್ಚೊತ್ತಿದ ಅರಿವಿಯಂತಿರಬೇಕು ಲಿಂಗದಲ್ಲಿ.
ಶರಣನಾದೊಡೆ ಮುರಿದ ಬಂಗಾರ ಬೆಳ್ಳಾರದಲ್ಲಿ
ಬೆಚ್ಚಂತೆ ಇರಬೇಕು ಲಿಂಗದಲ್ಲಿ.
ಶರಣನಾದೊಡೆ ಪುಷ್ಪ-ಪರಿಮಳದಂತೆ,
ಪ್ರಭೆ-ಪಾಷಾಣದಂತೆ, ಜ್ಯೋತಿ-ಪ್ರಕಾಶದಂತೆ
ಇರಬೇಕು ಲಿಂಗದಲ್ಲಿ.
ಶರಣನಾದೊಡೆ ಸೂರ್ಯನ ಕಿರಣದಂತೆ, ಚಂದ್ರನ ಕಾಂತಿಯಂತೆ,
ಗಾಳಿ-ಗಂಧದಂತೆ, ಜಾಗಟಿ-ನಾದದಂತೆ ಇರಬೇಕು ಲಿಂಗದಲ್ಲಿ.
ಇಷ್ಟುಳ್ಳಾತನೇ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./411
ಶರಣರ ನಿಲುಕಡೆ ದಾರುಬಲ್ಲರಯ್ಯ ?
ಶರಣರ ನಿಲವ ಉರಿಲಿಂಗಪೆದ್ದಯ್ಯಗಳು,
ನುಲಿಯ ಚಂದಯ್ಯಗಳು, ಹಡಪದ ಅಪ್ಪಣ್ಣಗಳು,
ಮ್ಯಾದಾರ ಕೇತಯ್ಯಗಳು, ಗಜೇಶ ಮಸಣಯ್ಯಗಳು,
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು ಮೊದಲಾದ
ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ
ಮಿಕ್ಕಿನ ಭವಭಾರಿಗಳಾದ ವೇದಾಂತಿ, ಸಿದ್ಧಾಂತಿ,
ಯೋಗಮಾರ್ಗಿಗಳು ಮೊದಲಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ?/412
ಶರಣರು ಶರಣರು ಎಂದು ಹೆಸರಿಟ್ಟುಕೊಂಬಿರಿ,
ಶರಣರ ಪರಿಯಾರು ಬಲ್ಲರಯ್ಯಾ ಎಂದಡೆ : ಕಾಲಿಲ್ಲದ ಹೆಳವ, ಕೈಯಿಲ್ಲದ ಮೋಟ,
ಕಣ್ಣಿಲ್ಲದ ಕುರುಡ, ತಲೆಯಿಲ್ಲದ ಮಂಡೂಕ,
ಈ ನಾಲ್ವರು ಬಲ್ಲರಲ್ಲದೆ,
ಉಳಿದ ಭವಭಾರಿಗಳೆತ್ತ ಬಲ್ಲರಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./413
ಶರಣಸತಿ ಲಿಂಗಪತಿ ಎಂಬಾಚಾರವ ಪಿಡಿದು
ಆಚರಿಸುವ ಭಕ್ತರು
ಇಷ್ಟಲಿಂಗಕ್ಕೆ ರೂಪು, ಮೊದಲಾದ ಪದಾರ್ಥವ
ಕೊಟ್ಟು ಸೇವಿಸಬೇಕು.
ಪ್ರಾಣಲಿಂಗಕ್ಕೆ ರುಚಿಪದಾರ್ಥವನರ್ಪಿಸಿ
ಸೇವಿಸಬೇಕು.
ಭಾವಲಿಂಗಕ್ಕೆ ತೃಪ್ತಿಪದಾರ್ಥವನರ್ಪಿಸಿ
ಸೇವಿಸಬೇಕು.
ಇಷ್ಟುಳ್ಳಾತನೇ ಶರಣಸತಿ ಲಿಂಗಪತಿ ಎಂಬಾಚಾರ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/414
ಶಶಿರವಿಕಿರಣಕೋಟಿ ಮಾಣಿಕದ ದೀಪ್ತಿಯಂತೆ,
ಚಂದ್ರಕಾಂತಿ ಪ್ರಕಾಶದಂತೆ, ಮಿಂಚಿನ ಲತೆಯಂತೆ ಲಿಂಗೈಕ್ಯನ ನಿಲವು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./415
ಶಿಕಾರಿಯ ಹೋದಲ್ಲಿ ಶುನಿಗಳ ಕೊಂದು
ಕಾಡಬೆಕ್ಕಿನ ಬೇಟೆಯನಾಡಿ
ನರಿಯ ಕೊಲ್ಲದೆ ಗುದ್ದಹೊಕ್ಕ ಇಲಿಯಕೊಂದು
ರಾತ್ರಿಯ ಕಳೆದು ಹಗಲಳಿದು ಕಾಯಕವ ಮಾಡುತ್ತಿರ್ಪರು
ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./416
ಶಿವ ಶಿವಾ, ನಾವು ಗುರುಲಿಂಗಜಂಗಮದ
ಅಚ್ಚಪ್ರಸಾದಿಗಳು ನಿಚ್ಚಪ್ರಸಾದಿಗಳು ಏಕಪ್ರಸಾದಿಗಳೆಂದು
ಸಮಯಪ್ರಸಾದಿಗಳು ನುಡಿದುಕೊಂಬುವ,
ಮತಿಭ್ರಷ್ಟ ಮರುಳಮಾನವರ ನಾನೇನೆಂಬೆನಯ್ಯಾ ?
ಅದೇನು ಕಾರಣವೆಂದಡೆ : ಪಾತಾಳಾದಿ ಸ್ವರ್ಗಾಂತ್ಯಮಾದ ತ್ರೈಭುವನಂಗಳು
ಉತ್ಪತ್ಯವಾಗುವುದಕ್ಕಿಂತ ಮುನ್ನವೆ,
ನಾನಾರು, ನಾನೆಲ್ಲಿದ್ದೆನೆಂದು ತನ್ನ ತಾನರಿದು
ನಿಲ್ಲಬಲ್ಲಾತನಿಗೆ ಗುರುವುಂಟು,
ಅದಲ್ಲದೆ ಅತಳ, ವಿತಳ, ಸುತಳ, ಮಹಾತಳ,
ರಸಾತಳ, ತಳಾತಳ, ಪಾತಾಳವೆಂಬ ಕೆಳಗೇಳುಲೋಕ.
ಮತ್ತಂ, ಭೂಲೋಕ, ಭುವರ್ಲೊಕ, ಸುವರ್ಲೊಕ, ಜನರ್ಲೊಕ,
ತಪರ್ಲೊಕ, ಸತ್ಯಲೋಕ, ಮಹಾಲೋಕವೆಂಬ ಮೇಲೇಳುಲೋಕ.
ಇಂತೀ ಈರೇಳುಲೋಕವು ಜಲಪ್ರಳಯವಾಗಿ ಮುಳುಗ್ಯಾಡಲು
ರುದ್ರಲೋಕೊಂದು ಉಳಿಯಿತ್ತು.
ಆ ರುದ್ರಲೋಕವು, ಅತಂಪ್ಪ ರುದ್ರಲೋಕದಲ್ಲಿರುವ
ಸನಕಸನಂದಾದಿ ಮುನಿಜನಂಗಳೆಲ್ಲರು,
ಅದಲ್ಲದೆ, ಬ್ರಹ್ಮಾದಿ ಸದಾಶಿವಾಂತ್ಯಮಾದ ದೇವ ದಾನವರು
ಮೊದಲಾದ ತೆತ್ತೀಸಕೋಟಿ ದೇವರ್ಕಳು,
ಆ ರುದ್ರನು ಇಂತಿವರೆಲ್ಲರು
ಉತ್ಪತ್ಯವಾಗದಕ್ಕಿನ್ನ ಮುನ್ನವೆ,
ನಾನಾರು, ನಾನೆಲ್ಲಿದ್ದೆ, ನನ್ನ ಹೆಸರೇನು,
ನಾನಾವ ಕುಲದವನು ನಾನೆಲ್ಲಿಂದ ಹುಟ್ಟಿಬಂದೆ ?
ಆವಾಗ ಎನಗೆ ತಂದಿ-ತಾಯಿಗಳಾರು ?
ಆ ತಾಯಿ-ತಂದೆಗಳ ಹೆಸರೇನು ?
ಎಂದು ವಿಚಾರಿಸಿ,
ತನ್ನ ತಾನರಿದು ನಿಲ್ಲಬಲ್ಲಡೆ,
ಆತನಿಗೆ ಲಿಂಗವುಂಟು ಜಂಗಮವುಂಟು
ತೀರ್ಥಪ್ರಸಾದಿ ಎಂದೆನ್ನಬಹುದಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./417
ಶಿವ ಶಿವಾ, ನಾವು ಗುರುಲಿಂಗಜಂಗಮದ
ತೀರ್ಥಪ್ರಸಾದಸಂಬಂಧಿಗಳೆಂದು ನುಡಿದುಕೊಂಬ
ಎಲೆ ಮತಿಭ್ರಷ್ಟ ಮರುಳಮಾನವರಿರಾ,
ನೀವು ಕೇಳಿರೋ, ನಾನು ಹೇಳಲಂಜುವೆನು.
ಹೇಳಿದರೆ ಜಿಗುಪ್ಸೆ, ಹೇಳುವೆನು ಕೇಳಿರೋ.
ಹೊಲಸು ಹಿಡಿಯಬಹುದು, ಪರಸ್ತ್ರೀಗಮನ ಮಾಡಬಾರದು.
ಅದೇನು ಕಾರಣವೆಂದಡೆ: ಆ ಹೊಲಸಿನ ದೋಷವು ನೀರಿನಿಂದ ತೊಳೆದರೆ
ನಿರ್ಮಲವಾಗಿ ತೋರುವುದು.
ಆ ಹೆಂಗಸಿನ ದೋಷವು ನೀರಿನಿಂದ ತೊಳೆದರೆ ಹೋಗದು,
ಬೆಂಕಿಯಿಂದ ಸುಟ್ಟರೆ ಹೋಗದು.
ಅಂತಪ್ಪ ಹೊಲಸಿಗಿಂತ ಕರಕಷ್ಟವಾದ
ಪೊಂಬಣ್ಣದ ಚರ್ಮದ ಹೆಂಗಸಿನ
ಶೃಂಗಾರದ ಚಲ್ವಿಕೆಯ ಕಂಡು,
ಆಶ್ಚರ್ಯಗೊಂಡು ಬೆಕ್ಕನೆ ಬೆರಗಾಗಿ, ಲಿಂಗಕ್ಕೆ ಹೊರಗಾಗಿ
ಆ ಹೆಣ್ಣಿನ ತೊಡೆಯ ಕಣಕಾಲ ಸಂದುಗಳಲ್ಲಿ ಕುಳಿತು,
ಲಿಂಗವ ಪಿಡಿವ ಕರದಲ್ಲಿ ಮಲ ಒಸರುವ ಪುಕಳಿಯ ಪಿಡಿದು,
ಅಮರ್ದಪ್ಪಿ ಗಲ್ಲವ ಕಡಿದು
ಆಕೆಯ ಉಚ್ಚಿ ಪುಚ್ಚಿ, ಜೌಗಿನ ಬಚ್ಚಲಹರಿಗೆ ಮೆಚ್ಚಿ,
ನಿಚ್ಚ ನಿಚ್ಚಕ್ಕೆ ಕಚ್ಚಿ ಕಡಿದಾಡುವ
ನುಚ್ಚಬಡುಕ ಮರುಳಮಾನವರು,
ಗುರುಹಿರಿಯರು, ಜಂಗಮಲಿಂಗಿಗಳೆಂದು ಕರೆತಂದು,
ನೀರು, ಕೂಳು ನೀಡಿ ತೀರ್ಥಪ್ರಸಾದವೆಂದು ಹೆಸರಿಟ್ಟು,
ದೊಡ್ಡ ದೊಡ್ಡ ಗಡ್ಡದ ಹಿರಿಯರೆಲ್ಲರು ಕೂಡಿ, ದಾಸೋಹ ಮಾಡಿ,
ಎದೆ ದಡ್ಡುಗಟ್ಟುವನ್ನಕ್ಕ ಅಡ್ಡಡ್ಡ ಬಿದ್ದು,
ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸೆಂದು ಪಡಕೊಂಡು,
ತಮ್ಮ ಉದರಾಗ್ನಿಯನಡಗಿಸಿಕೊಂಡು,
ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ತಿರುಗುವ
ಜಗಭಂಡ ಅಚ್ಚವ್ರತಗೇಡಿ ನಿಜ ಅಪರಾಧಿ
ಕತ್ತೆ ಸೂಳೆಮಕ್ಕಳೆಲ್ಲ
ತೀರ್ಥಪ್ರಸಾದಸಂಬಂಧ, ನಿತ್ಯ ನಿಜಲಿಂಗೈಕ್ಯ
ಸತ್ಯಸದ್ಭಕ್ತರಾಗಬಲ್ಲರೇನಯ್ಯಾ?
ಇಂತಪ್ಪ ಭವಕರ್ಮಿಗಳ ಮುಂದೆ
ಲಿಂಗಾಂಗಸಂಗಸಮರಸದ ಅನುಭಾವವ ನುಡಿಯಲಂಜಿ,
ಶಬ್ದಮುಗ್ಧನಾಗಿ ಸುಮ್ಮನಿದ್ದನು ಕಾಣಾ ನಿಮ್ಮ ಶರಣನು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./418
ಶಿವಶಿವಾ, ಈ ಮರುಳಮಾನವರ
ಮರುಳತನವ ನಾನೇನೆಂಬೆನಯ್ಯಾ.
ಹೊನ್ನು ತನ್ನದೆಂಬರು, ಹೊನ್ನು ರುದ್ರನದು.
ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು.
ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು.
ಇಂತೀ ತ್ರಿವಿಧವು ನಿಮ್ಮವೆಂಬಿರಿ-
ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ.
ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು
ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು.
ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ;
ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ.
ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು
ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ
ಹರುಷಾನಂದದಲ್ಲಿ ಆಡುವದು ;
ಪ್ರೇಮದಿಂದಲಿ ಕುಣಿಯವದು.
ಕುಣಿದರೇನು ? ಚಂಡವಾಯುವಿನಿಂದ
ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ
ನವಿಲು ಅಡ್ಡಬಂದಿತ್ತೆ ? ಇಲ್ಲ.
ಗಿರಿಯೊಳಗಣ ಮಯೂರನನ್ನು
ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ
ಆ ಮೋಡ ಅಡ್ಡಬಂದಿತ್ತೆ ? ಇಲ್ಲ.
ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ
ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ.
ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ.
ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ
ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ,
ಕುಸಿದು ಕುಗ್ಗಿ ಮುಪ್ಪುವರಿದು,
ಮರಣಕಾಲಕ್ಕೆ ಯಮದೂತರು ಬಂದು
ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ,
ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ.
ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ.
ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ.
ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ.
ನಿನಗವರಿಲ್ಲ, ಅವರಿಗೆ ನೀನಿಲ್ಲ.
ಇಂತಿದನು ಕಂಡು ಕೇಳಿ ಮತ್ತಂ
ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ,
ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ,
ಹಡಕಿಗೆ ಶ್ವಾನ ಮೆಚ್ಚಿದ ಹಾಗೆ,
ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ-
ಜೀವನಬುದ್ಭಿಯುಳ್ಳವನೇ ಹಂದಿ.
ಕರಣಬುದ್ಧಿಯುಳ್ಳವನೇ ನಾಯಿ.
ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ.
ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು,
ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ,
ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು
ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ,
ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ.
ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು.
ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು.
ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು,
ಬಲ್ಲರೇನು ? ಬಿಡಲಾರರು.
ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ
ಇಂಥ ಹೊಲೆಸೂಳೆಯ ಮಕ್ಕಳ ಶರೀರವ
ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ,
ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು.
ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ
ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು
ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./419
ಶಿವಶಿವಾ, ಈ ಮರುಳಮಾನವರಿಗೆ
ನಾನೇನೆಂಬೆನಯ್ಯಾ!
ಎನ್ನ ಮನೆ, ಎನ್ನ ಬದುಕು, ಎನ್ನ ತಾಯಿತಂದೆ,
ಎನ್ನಸತಿಸುತರು ಬಾಂಧವರು ಎಂದು
ಮೆಚ್ಚಿ ನಚ್ಚಿ ಮರುಳಾಗಿರ್ದರಯ್ಯಾ.
ಹಿಂದೆ ನಾನಾಯೋನಿಯಲ್ಲಿ
ಆನೆ ಮೊದಲು ಇರುವೆ ಕಡೆಯಾಗಿ
ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಹುಟ್ಟಿ, ಸಹಸ್ರವೇಳೆ ಸತ್ತು,
ಸಹಸ್ರವೇಳೆ ಹುಟ್ಟಿ ಬಪ್ಪಲ್ಲಿ
ಆವಾಗ ನಿನಗೆ ತಾಯಿ ಯಾರು, ನಿನಗೆ ತಂದೆ ಯಾರು,
ನಿನಗೆ ಸತಿಸುತರು ಬಾಂಧವರು ಯಾರು?
ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ.
ನಿನಗೆ ಶ್ರೀಗುರುವೇ ತಾಯಿ, ನಿನಗೆ ಶ್ರೀಗುರುವೇ ತಂದೆ,
ನಿನಗೆ ಶ್ರೀಗುರುವೆ ಸತಿಸುತರು, ಬಂಧುಗಳೆಂಬ ನಿರ್ಣಯವನು
ಸಮ್ಯಜ್ಞಾನಗುರುಮುಖದಿಂದ ತಿಳಿದು
ವಿಚಾರಿಸಿಕೊಳ್ಳಬಲ್ಲರೆ ಬಲ್ಲರೆಂಬೆ.
ಗುರು-ಲಿಂಗ-ಜಂಗಮ ಒಂದೆಯೆಂದು ತಿಳಿಯಬಲ್ಲರೆ ಬಲ್ಲರೆಂಬೆ.
ಈ ಭೇದವನರಿಯದೆ ಮಿಥ್ಯಸಂಸಾರದ ಮಾತಾಪಿತರು,
ಸತಿಸುತರು ಬಾಂಧವರ ತನು-ಮನ-ಧನದ ಅಭಿಮಾನದಲ್ಲಿ
ಸಟೆಯ ಸಂಸಾರದಲ್ಲಿ ಹೊಡೆದಾಡಿ ಹೊತ್ತುಗಳೆದು
ಸತ್ತುಹೋಗುವ ಮಂಗಮನುಜರಿಗೆ
ಇನ್ನೆಂದು ಮೋಕ್ಷವಹುದೊ ?
ಶಿವಶಿವಾ, ಈ ಲೋಕದ ಅಭಿಮಾನವ ಬಿಟ್ಟು,
ಪರಲೋಕದಭಿಮಾನವ ಹಿಡಿದು ಆಚರಿಸಿ ಇರಬಲ್ಲರೆ
ಗುರು-ಲಿಂಗ-ಜಂಗಮದ ಪುತ್ರರೆಂಬೆ,
ಪುರಾತರ ಮಗನೆಂಬೆ,
ಇಲ್ಲದಿರೆ ಕಿರಾತರ ಮಗನೆಂಬೆ,
ನರಗುರಿಗಳ ಪುತ್ರರೆಂಬೆನೆಂದಾತ
ವೀರಾದಿವೀರ ನಮ್ಮ ಶರಣ ಕಾಡಿನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./420
ಶಿವಶಿವಾ, ಈ ಮರುಳಮಾನವರು ಸಟೆಯ ಸಂಸಾರದಲ್ಲಿ ಸಿಲ್ಕಿ,
ತಾವಾರೆಂಬುದನರಿಯದೆ, ತಮ್ಮ ನಿಜಸ್ವರೂಪವ ಮರದು
ಕೆಟ್ಟ ಕೇಡ ಹೇಳುವೆನು ಕೇಳಿರಯ್ಯ.
ಹುಲಿಯ ಬಾಯ ಕುರಿಯ ಹಾಗೆ, ತೋಳನ ಬಾಯ ಮರಿಯ ಹಾಗೆ,
ಸರ್ಪನ ಬಾಯ ಕಪ್ಪೆಯ ಹಾಗೆ, ಬೆಕ್ಕಿನ ಬಾಯ ಇಲಿಯ ಹಾಗೆ,
ಕಟುಕನ ಕೈಯ ಹೋತಿನ ಹಾಗೆ, ರಾಜನ ಕೈಯ ಚೋರನ ಹಾಗೆ,
ಇಂತೀ ದೃಷ್ಟಾಂತದಂತೆ-
ಮಾಯಾಕಾಳರಕ್ಕಸಿಯ ಮೂರು ಮುಖದಲ್ಲಿ-
ಆ ಮೂರು ಮುಖ ಆವಾವೆಂದಡೆ: ಜಾಗ್ರ ಸ್ವಪ್ನ ಸುಷುಪ್ತಿಯೆಂಬ ತ್ರಿಮುಖದೊಳಗೆ
ಗೋಪ್ಯಮುಖ, ಸಂದ ಮುಖಗಳುಂಟು, ಪೇಳ್ವೆ.
ಜಾಗ್ರಾವಸ್ಥೆಯೇ ವಕ್ತ್ರವಾಗುಳ್ಳ ಮಣ್ಣಿನಲ್ಲಿ
ಕಾಮ ಕ್ರೋಧ ಲೋಭವೆಂಬ ತ್ರಿವಿಧಮುಖವು.
ಸ್ವಪ್ನಾವಸ್ಥೆಯೇ ವಕ್ತ್ರವಾಗುಳ್ಳ ಹೆಣ್ಣಿನಲ್ಲಿ
ಘ್ರಾಣ, ಜಿಹ್ವೆ, ನೇತ್ರ, ಶ್ರೋತ್ರ, ತ್ವಕ್ಕುಯೆಂಬ ಪಂಚಮುಖವು.
ಸುಷುಪ್ತಾವಸ್ಥೆಯೇ ವಕ್ತ್ರವಾಗುಳ್ಳ ಹೊನ್ನಿನಲ್ಲಿ
ಪ್ರಾಣಾದಿ ಧನಂಜಯಾಂತ್ಯಮಾದ ದಶವಾಯುಗಳೇ ದಶಮುಖವಾಗಿರ್ಪವು.
ಇಂತೀ ತ್ರಿವಿಧಮುಖ ಮೊದಲುಮಾಡಿಕೊಂಡು
ಹಲವು ಮುಖದಿಂದ ಹರಿಹರಿದುಕೊಂಡು ತಿಂದು
ಹಿಂಡಿ ಹಿಪ್ಪಿಯ ಮಾಡುವಾಗ
ಹಿಂದೆ ಹೇಳಿದ ದೃಷ್ಟಾಂತದಂತೆ ಮಾಯೆಯೆಂಬ ಹೊಲೆಯಲ್ಲಿ ಶಿಲ್ಕಿ
ಈರೇಳುಲೋಕವೆಲ್ಲ, ಆಳುತ್ತ, ಮುಳುಗುತ್ತ
ಆಲಪರಿದು, ಚಾಲಿವರಿದು ಎಂಬತ್ತುನಾಲ್ಕುಲಕ್ಷ ಭವಮಾಲೆಯಲ್ಲಿ
ಸತ್ತುಹೋದ ಪ್ರಾಣಿಗಳಿಗೆ ಇನ್ನೆತ್ತಣ ಮುಕ್ತಿಯಯ್ಯಾ.
ಇಂತೀ ಮರುಳಮಾನವರ ಕಂಡು ಬೆಕ್ಕನೆ ಬೆರಗಾಗಿ
ಹೊಟ್ಟೆಹುಣ್ಣಾಗುವನ್ನಕ್ಕರ ನಕ್ಕು ಶಬ್ದಮುಗ್ಧನಾಗಿ
ಸುಮ್ಮನಿರ್ದ ಕಾಣಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./421
ಶಿವಶಿವಾ, ಈ ಮಾಯಾಸಂಸಾರಯುಕ್ತವಾದ
ದೇಹದ ಸುಖ ಹೇಳಲಂಜುವೆ.
ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ.
ಈ ದೇಹದ ವಿಸ್ತಾರ ಪೇಳ್ವೆ, ಎಲೆ ಮರುಳ ಮಾನವರಿರಾ,
ಲಾಲಿಸಿ ಕೇಳಿರಿ,
ಎಲುವಿನ ಕಂಬ, ಎಲುವಿನ ತೊಲೆಗಳು,
ಸಂದೆಲವುಗಳೆ ಬಿಗಿ ಮೊಳೆಗಳು,
ಕರುಳಜಾಳಿಗೆ ಬಿಗಿಜಂತಿಗಳು,
ಬರುಕಿ ಎಲವುಗಳೆ ಜಂತಿಗಳು,
ಬೆರಳೆಲವುಗಳೆ ಚಿಲಿಕೆಗಳು.
ಇಂತೀ ಗೃಹಕ್ಕೆ ಮಾಂಸದ ಮೇಲುಮುದ್ದೆಗಳು,
ರಕ್ತದ ಸಾರಣೆಗಳು, ಮಜ್ಜದ ಮಡುಗಳು,
ಕೀವಿನ ಕುಣಿಗಳು, ಪಿತ್ತದ ಕೊಂಡಗಳು,
ಶೋಣಿತದ ಕಾವಲಿಗಳು, ಮೂತ್ರದ ಹಳ್ಳಗಳು,
ಅಮೇಧ್ಯದ ಹುತ್ತಗಳು, ಹುಳುವಿನ ಡೋಣಿಗಳು,
ಜಂತಿನ ಬಣವೆಗಳು-ಇಂತಪ್ಪ ಮನಗೆ ಎಂಟು ಗವಾಕ್ಷಗಳು.
ಬಾಯಿ ಎಂಬುದೊಂದು ದೊಡ್ಡ ದರವಾಜು.
ಇಂತೀ ದುರಾಚಾರಯುಕ್ತವಾದ ದೇಹವೆಂಬ ಗೃಹಕ್ಕೆ
ಮೂವರು ಕರ್ತೃಗಳಾಗಿಹರು.
ಅವರು ಆರಾರೆಂದಡೆ: ಹೊನ್ನೊಂದು ಭೂತ, ಹೆಣ್ಣೊಂದು ಭೂತ, ಮಣ್ಣೊಂದು ಭೂತ.
ಇಂತೀ ತ್ರಿವಿಧ ಭೂತಸ್ವರೂಪರಾದ
ಬ್ರಹ್ಮ ವಿಷ್ಣು ರುದ್ರರೆಂಬ ತ್ರಿವಿಧದೇವತೆಗಳು.
ಅದೆಂತೆಂದಡೆ: ಹೊನ್ನು ರುದ್ರನಹಂಗು, ಹೆಣ್ಣು ವಿಷ್ಣುವಿನಹಂಗು,
ಮಣ್ಣು ಬ್ರಹ್ಮನಹಂಗು,
ಇಂತಪ್ಪ ತ್ರಿಮೂರ್ತಿಗಳ ಹಂಗಿನಿಂದಾದ ದೇಹವು
ಮಿಥೆಯೆಂದು ತಿಳಿದು ವಿಸರ್ಜಿಸಲರಿಯದೆ,
ಆ ಅನಿತ್ಯದೇಹದ ಸುಖವನು ಮೆಚ್ಚಿ ಮರುಳಾಗಿ,
ಬಿಡಲಾರದೆ, ಈ ಹೇಸಿಕಿ ಹೊಲೆಸಂಸಾರದಲ್ಲಿ ಶಿಲ್ಕಿ
ಮಲತ್ರಯದಾಶೆಗೆ ಹೊಡದಾಡಿ
ಹೊತ್ತುಗಳೆದು ಸತ್ತುಹೋಗುವ
ಕತ್ತೆಗಳಿಗಿನ್ನೆತ್ತಣ ಮುಕ್ತಿ ಹೇಳಾ !
ಮುಂದೆ ಹೊಲೆಮಾದಿಗರ ಮನೆಯಲ್ಲಿ
ಶುನಿ ಶೂಕರ ಕುಕ್ಕುಟನ ಬಸುರಲ್ಲಿ ಹುಟ್ಟಿಸದೆ ಬಿಡನೆಂದಾತ
ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ
ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./422
ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ.
ಅದೆಂತೆಂದಡೆ: ನಾವು ಗುರುಗಳು, ನಾವು ಲಿಂಗಾಂಗಿಗಳು,
ನಾವು ಜಂಗಮಲಿಂಗಿಗಳು,
ನಾವು ಸದಾಚಾರಸದ್ಭಕ್ತರು ಎಂಬರಯ್ಯ.
ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ: ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು
ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ,
ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ,
ಗುರು-ಹಿರಿಯರು ಜಂಗಮಲಿಂಗಿಗಳೆಂದು
ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು,
ಸದಮಲದ ಬೆಳಗ ತೋರೇವು ಎಂದು
ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ,
ಲಿಂಗಾಂಗಸಮರಸವ ತೋರಿ,
ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ,
ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು
ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ ಅಡಗಿಸಿಕೊಂಬುವರಲ್ಲದೆ
ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ
ಆಚರಣೆಯೆಂತಾಯಿತ್ತೆಂದೊಡೆ-
ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ.
ಅದೆಂತೆಂದೊಡೆ: ಜೀವನಬುದ್ಭಿಯುಳ್ಳ ಗುರುವೆಂದಾತ ಹಂದಿ,
ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ.
ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು
ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು
ಕಾಣದೆ ಕಮ್ಮರಿಬಿದ್ದಂತಾಯಿತಯ್ಯ.
ಅದೇನು ಕಾರಣವೆಂದಡೆ,
ಗುರುವಿನಂತ ಶಿಷ್ಯನರಿಯ, ಶಿಷ್ಯನಂತ ಗುರುವರಿಯ,
ಜಂಗಮನಂತ ಭಕ್ತನರಿಯ, ಭಕ್ತನಂತ ಜಂಗಮವರಿಯದ ಕಾರಣ.
ಉಪಾಧಿಯುಳ್ಳವರು ಗುರುವಲ್ಲ ಶಿಷ್ಯರಲ್ಲ.
ಉಪಾಧಿಯುಳ್ಳವರಲ್ಲಿ ಉಪದೇಶವ ಹಡಿಯಬೇಕೆಂಬವರ,
ಉಪಾಧಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ,
ಈ ಉಭಯಭ್ರಷ್ಟ ಹೊಲೆಮಾದಿಗರ
ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು
ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./423
ಶಿವಶಿವಾ, ಈ ಲೋಕದ ಮಾನವರು
ಸಂಸಾರಸುಖವ ಬಹುಸವಿಯೆಂದು ಹರುಷದಿಂದ ಉಬ್ಬಿ ಕೊಬ್ಬಿ
ಹೊನ್ನು, ಹೆಣ್ಣು, ಮಣ್ಣಿನ ಹೋರಾಟವ ಮಾಡುವ ಪರಿಯ-
ಪೇಳ್ವೆ ಕೇಳಿರಯ್ಯಾ.
ಹೊನ್ನಿಗಾಸೆಯ ಮಾಡಿ ನಾನಾದೇಶವ ತಿರುಗಿ ತಿರುಗಿ,
ನಾನಾವ್ಯಾಪಾರವ ಮಾಡಿ ದುಡಿದು ದುಃಖಮಂಬಟ್ಟು
ಹಗಲು ಹಸುವಿನ ಚಿಂತೆ ಇಲ್ಲ, ಇರುಳು ನಿದ್ರೆಯ ಚಿಂತೆ ಇಲ್ಲ.
ಈ ಪರಿಯಲ್ಲಿ ಸರ್ವರನು ಠಕ್ಕುಠವಳಿಯಿಂದ ಸಿಂತರಿಸಬೇಕೆಂಬ
ಚಿಂತೆಯುಂಟಲ್ಲದೆ
ಇವರಿಗೆ ಜಂಗಮದ ನೆನವು ಎಲ್ಲಿಹುದೋ?
ಹೀಗೆ ನಾನಾ ಧಾವತಿಯಿಂದ ಆ ಹೊನ್ನ ಗಳಿಸಿ ತಂದು
ಆ ಹೆಣ್ಣು ತರಬೇಕು, ಈ ಹೆಣ್ಣು ಬಿಡಬೇಕು,
ಆ ಹೆಣ್ಣು ನೋಡಬೇಕು, ಈ ಹೆಣ್ಣು ಮಾಡಬೇಕು
ಎಂಬೀ ಉಲ್ಲಾಸದಿಂದ ಮದವೇರಿದ ಆನೆಯ ಹಾಗೆ
ಮಸ್ತಿಗೆ ಬಂದ ಕೋಣನ ಹಾಗೆ, ಮಚ್ಚರಕ್ಕೆ ಬಂದ ಟಗರಿನ ಹಾಗೆ,
ಇಂತೀ ಪರಿಯಲ್ಲಿ ತಿರುಗುವ ಕತ್ತಿಮೂಳರಿಗೆ
ಲಿಂಗದ ನೆನಹು ಎಲ್ಲಿಹುದೊ?
ಹೀಗೆ ಆ ಹೊನ್ನಿನಿಂದ ಆ ಊರಲ್ಲಿ ಹೊಲವ ಮಾಡಬೇಕು,
ಈ ಊರಲ್ಲಿ ಹೊಲವ ಮಾಡಬೇಕು,
ಅಲ್ಲಿ ಮನೆಯ ಮಾಡಬೇಕು, ಇಲ್ಲಿ ಮನೆಯ ಮಾಡಬೇಕು.
ಈ ಉಲ್ಲಾಸ ಚಿಂತೆಯಿಂದ ಹಗಲು ಹಸಿವಿನ ಚಿಂತೆ ಇಲ್ಲ.
ಇರುಳು ನಿದ್ರೆಯ ಖಬರಿಲ್ಲ.
ಇಂತೀ ಪರಿಯಲ್ಲಿ ಬೆಕ್ಕು ನಾಯಿಗಳು
ತಮ್ಮ ಒಡಲ ವಿಷಯದ ಚಿಂತೆಯಿಂದ ಹಗಲು ಇರುಳು ಚರಿಸುವಂತೆ
ಈ ಮಾಯಾ ಪ್ರಪಂಚದಲ್ಲಿ ತಿರುಗುವ ಮಂಗಮನುಜರಿಗೆ
ಗುರುವಿನ ನೆನಹು ಎಲ್ಲಿಹುದೋ?
ಇಂತೀ ಪ್ರಕಾರದಲ್ಲಿ ತ್ರಿವಿಧ ಹೋರಾಟದಲ್ಲಿ
ಸಿಲ್ಕಿದ ಜಡಜೀವರುಗಳಿಗೆ
ಪರಬ್ರಹ್ಮದ ಎಚ್ಚರವಿಲ್ಲದೆ
ಮುಂದೆ ಮೋಕ್ಷವ ಹರಿಯಬೇಕೆಂಬ ಚಿಂತೆಯಿಲ್ಲ.
ಇಂತೀ ವಿಚಾರವನು ತಿಳಿಯದೆ ಹೊನ್ನು, ಹೆಣ್ಣು, ಮಣ್ಣೆಂಬ
ತ್ರಿವಿಧಮಲವ ಕಚ್ಚಿ ಹಂದಿ ನಾಯಿಗಳ ಹಾಗೆ
ಈ ಸಂಸಾರವೆಂಬ ಹಾಳಕೇರಿಯಲ್ಲಿ ಹೊಡದಾಡಿ ಹೊತ್ತುಗಳೆದು
ವ್ಯರ್ಥ ಸತ್ತು ಹೋಗುವ ಕತ್ತೆಮೂಳ ಹೊಲೆಮಾದಿಗರಿಗೆ
ಇನ್ನೆತ್ತಣ ಮುಕ್ತಿ ಹೇಳಾ!
ಇಂತಪ್ಪ ಮೂಢಾತ್ಮರಿಗೆ ಕಲ್ಪಕಲ್ಪಾಂತರ
ಎಂಬತ್ತುನಾಲ್ಕುಲಕ್ಷ ಯೋನಿಚಕ್ರದಲ್ಲಿ ತಿರುಗುವುದೇ
ಪ್ರಾಪ್ತಿಯುಂಟೆಂದ ಕಾಣಾ
ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./424
ಶಿವಶಿವಾ, ಈ ಲೋಕದೊಳಗೆ
ನಾವು ಗುರುಗಳು, ನಾವು ಚರಂತಿಹಿರಿಯರೆಂದು ಬಂದು
ದೀಕ್ಷೊಪದೇಶ ಅಯ್ಯತನವ
ಮಾಡುವೆವೆಂದು ಹೇಳಿಕೊಂಬರಯ್ಯ.
ಅದೆಂತೆಂದೊಡೆ: ಭಕ್ತರ ದೀಕ್ಷೊಪದೇಶವ ಮಾಡುವ ಕಾಲಕ್ಕೆ
ಅವರ ಮನೆಯೊಳಗಣ ಗಡಿಗೆ ಮಡಕೆಯ ಹೊರೆಯಕ್ಕೆ ಹಾಕಿಸಿ,
ಮೈಲಿಗೆ ಮುಟ್ಟಚಟ್ಟನೆಲ್ಲವ ತೊಳಿಸಿ,
ಗೃಹವನೆಲ್ಲ ಸಾರಣೆಯ ಮಾಡಿಸಿ,
ಹೊಸ ಮಡಕೆಯ ತರಿಸಿ,
ಆ ಭಕ್ತರ ಮಂಡೆಯ ಬೋಳಿಸಿ, ಮೈಯ ತೊಳಸಿ,
ಹೊಸ ವಸ್ತ್ರವ ಉಡಿಸಿ, ತೊಡಿಸಿ, ಹೊದಿಸಿ,
ಅವರ ಪೂರ್ವದ ಲಿಂಗವನೆಲ್ಲ ವಿಚಾರಿಸಿ ನೋಡಿ
ಭಿನ್ನವಾದ ಲಿಂಗವನೆಲ್ಲ ತೆಗೆದು ಪ್ರತ್ಯೇಕಲಿಂಗವ ತಂದು,
ವೇಧಾಮಂತ್ರಕ್ರೀಯೆಂಬ ತ್ರಿವಿಧ ದೀಕ್ಷೆಯಿಂದ
ಮೂರೇಳು ಪೂಜೆಯ ಮಾಡಿ
ಅವರಂಗದ ಮೇಲೆ ಲಿಂಗವ ಧರಿಸಿ
ಮಾಂಸಪಿಂಡವಳಿದು ಮಂತ್ರಪಿಂಡವಾಯಿತು,
ಭವಿಜನ್ಮವಳಿದು ಭಕ್ತನಾದೆ, ಪೂರ್ವಜನ್ಮವಳಿದು ಪುನರ್ಜಾತನಾದೆ ಎಂದು
ಅವರಂಗದ ಮೇಲೆ ಲಿಂಗಧಾರಣ ಮಾಡಿ,
ವಿಭೂತಿ ರುದ್ರಾಕ್ಷಿಯ ಧರಿಸಿ, ಸದ್ಭಕ್ತರಾದಿರೆಂದು
ಅವರನು ಬೋಳೈಸಿಕೊಂಡು ತಮ್ಮ ಒಡಲ ಹೊರೆವರಲ್ಲದೆ
ಇವರು ಸದ್ಭಕ್ತರ ಮಾಡಲರಿಯರು.
ಸದ್ಭಕ್ತರ ಮಾಡುವ ಪರಿಯ ಪೇಳ್ವೆ.
ಅದೆಂತೆಂದೊಡೆ: ಪಂಚಭೂತ ಮಿಶ್ರವಾದ ದೇಹವೆಂಬ ಘಟವನು ತೆಗೆದು,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಪಂಚಲಕ್ಷಣವುಳ್ಳ ಚಿದ್ಘಟವ ತಂದು,
ಸಂಕಲ್ಪ ವಿಕಲ್ಪ, ಸಂಸಾರಸೂತಕವೆಂಬ
ಮುಟ್ಟು ಚಟ್ಟನೆಲ್ಲ ಚಿಜ್ಜಲದಿಂದ ತೊಳೆದು,
ಮಾಯಾ ಮೋಹವೆಂಬ ಹೊದಿಕೆಯ ತೆಗೆಸಿ,
ನಿರ್ಮಾಯ ನಿರ್ಮೊಹವೆಂಬ ವಸ್ತ್ರವನುಡಿಸಿ ತೊಡಿಸಿ,
ಆಶೆ ಎಂಬ ಕೇಶವ ಬೋಳಿಸಿ,
ಅವನ ಹಲ್ಲು ಕಳೆದು, ನಾಲಿಗೆಯ ಕೊಯ್ದು,
ಕಣ್ಣುಗುಡ್ಡಿಯ ಮೀಟಿ, ಎರಡು ದಾಡಿಯ ಮುರಿಗುಟ್ಟಿ,
ತಲೆ ಹೊಡೆದು, ಕೈಕಾಲು ಕಡಿದು, ತಿದಿಯ ಹರಿದು, ಸಂದ ಮುರಿದು,
ಹಂದಿ ನಾಯಿಯ ಕೊಂದು ಕಂಡವ ತಿನಿಸಿ,
ಕಪ್ಪೆಯ ಉಚ್ಚಿಯ ಕುಡಿಸಿ,
ಇಂತೀ ಪರಿಯಲ್ಲಿ ದೀಕ್ಷೊಪದೇಶವ ಮಾಡಿ
ಲಿಂಗವ ಕೊಡಬಲ್ಲರೆ ಗುರುವೆಂಬೆ.
ಇಲ್ಲವಾದರೆ ಕಳ್ಳಗುರುಕಿಮಕ್ಕಳೆಂಬೆ.
ಇಂತಪ್ಪ ವಿಚಾರವ ತಿಳಿದುಕೊಳ್ಳಬಲ್ಲರೆ ಭಕ್ತರೆಂಬೆ.
ಇಲ್ಲದಿದ್ದರೆ ಬದ್ಧಭವಿಗಳೆಂಬೆ.
ಇಂತೀ ತರುವಾಯದಲ್ಲಿ ಅಯ್ಯತನವ
ಮಾಡಬಲ್ಲರೆ ಚರಂತಿಹಿರಿಯರು ಎಂಬೆ.
ಇಲ್ಲದಿದ್ದರೆ ಮೂಕೊರತಿ ಮೂಳಿಯ ಮಕ್ಕಳೆಂಬೆ.
ಇಂತೀ ನಿರ್ಣಯವನು ಸ್ವಾನುಭಾವಗುರುಮುಖದಿಂ
ತಿಳಿದುಕೊಳ್ಳಬೇಕಲ್ಲದೆ,
ಈ ಲೋಕದ ಜಡಜೀವರು ಕಡುಪಾತಕರಲ್ಲಿ ಕೊಳ್ಳಲುಬಾರದು.
ಅದೇನು ಕಾರಣವೆಂದೊಡೆ: ತಾವಾರೆಂಬ ತಮ್ಮ ನಿಲವ ತಾವರಿಯರು,
ಇನ್ನೊಬ್ಬರಿಗೆ ಏನು ಹೇಳುವರಯ್ಯ?
ಇಂತಪ್ಪ ಮೂಢಾತ್ಮರಲ್ಲಿ-ಇದಕ್ಕೆ ದೃಷ್ಟಾಂತ: ಹಿತ್ತಲಲ್ಲಿ ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ,
ಬಾವಿಯೊಳಗೆ ಕೊಡಕ್ಕೆ ಹಗ್ಗವ ಕಟ್ಟಿ ಬಿಟ್ಟಂತೆ,
ನಾವು ನಮ್ಮ ಪಾದದಲ್ಲಿ ಮರೆಯ ಮಾಡಬೇಕೆಂದು,
ತಮ್ಮ ಕಾಲಿಗೆ ಒಂದೊಂದು ಪೋರಗಳ ಕಟ್ಟಿಕೊಂಡು
ಅಡ್ಡಡ್ಡ ಬಿದ್ದು ಮರಿಯ ಪಡಕೊಂಬವರ,
ಆ ಮರಿಗಳಿಗೆ ಅಯ್ಯತನ ಮಾಡಿದೆವು ಎಂಬವರ,
ಈ ಉಭಯಭ್ರಷ್ಟ ಹೊಲೆಮಾದಿಗರ
ಮೂಗ ಕೊಯಿದು ಕನ್ನಡಿಯ ತೋರಿ
ಮೂಗಿನೊಳಗೆ ಮೆಣಸಿನಹಿಟ್ಟು ತುಂಬಿ ಸಂಗನ ಶರಣರ
ಪಾದರಕ್ಷೆಯಲ್ಲಿ ಘಟ್ಟಿಸಿ,
ಮೂಡಲ ದಿಕ್ಕಿಗೆ ಅಟ್ಟೆಂದ ಕಾಣಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./425
ಶಿವಶಿವಾ, ಈ ಸಂಸಾರದಂದುಗ ದುಃಖ ನಾನೆಂತು ಪೇಳ್ವೆ.
ಹೊನ್ನಿನ ವ್ಯಾಪಾರವ ಮಾಡಿ, ಧಾವತಿಯಿಂದ ಗಳಿಸುವದು ದುಃಖ.
ಆ ಹೊನ್ನು ಜೋಕೆಮಾಡುವದು ದುಃಖ.
ಆ ಹೊನ್ನು ಹೋದಮೇಲೆ ಅನೇಕ ದುಃಖ.
ಹೆಣ್ಣು ತರುವದು ದುಃಖ; ಆ ಹೆಣ್ಣು ಆಳುವದು ದುಃಖ.
ಹೆಣ್ಣು ಸತ್ತುಹೋದಮೇಲೆ ಅನೇಕ ದುಃಖ.
ಮಣ್ಣು ದೊರಕಿಸುವದು ದುಃಖ.
ಆ ಮಣ್ಣಿನ ಧಾವತಿ ಹೋರಾಟ ಮಾಡುವದು ದುಃಖ.
ಆ ಮಣ್ಣು ನಾಶವಾದ ಮೇಲೆ ಅನೇಕ ದುಃಖ.
ಇಂತೀ ತ್ರಿವಿಧವು ಮಲಸಮಾನವೆಂದರಿಯದೆ,
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂಬಿರಿ.
ಎಲೆ ಹುಚ್ಚು ಮರುಳು ಮಾನವರಿರಾ,
ನೀವು ಮರಣವಾದ ಮೇಲೆ ಅವು ನಿಮ್ಮ ಕೂಡ ಬರ್ಪವೆ?
ಬರ್ಪುದಿಲ್ಲ ಕೇಳಾ, ಎಲೆ ಹುಚ್ಚ ಮರುಳ ಮಾನವರಿರಾ,
ಅವು ಆರ ಒಡವೆ ಎಂದರೆ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ.
ಹೊನ್ನು ರಾಜನದು, ಹೆಣ್ಣು ಅನ್ಯರದು, ಮಣ್ಣು ಬಲ್ಲಿದರದು.
ಇಂತೀ ತ್ರಿವಿಧವು ಅನಿತ್ಯವೆಂದು
ತನ್ನ ಸ್ವಾತ್ಮಜ್ಞಾನದಿಂದ ತಿಳಿದೆಚ್ಚತ್ತು ವಿಸರ್ಜಿಸಿ,
ಗುರುಕಾರುಣ್ಯಮಂ ಪಡೆದು, ಲಿಂಗಾಂಗಸಂಬಂಧಿಯಾಗಿ,
ಗುರೂಪಾವಸ್ತೆಯಂ ಮಾಡಿ, ಮುಂದೆ ಮೋಕ್ಷವ ಹಡೆಯಬೇಕೆಂಬ
ಯುಕ್ತಿ ವಿವೇಕ ವಿಚಾರ ಬುದ್ಧಿಯನರಿಯದೆ
ಅಶನಕ್ಕಾಗಿ ಮಣ್ಣ ಮೆಚ್ಚಿ, ವ್ಯಸನಕ್ಕಾಗಿ ಹೆಣ್ಣ ಮೆಚ್ಚಿ,
ಅಂಗಸುಖಕ್ಕಾಗಿ ಹೊನ್ನ ಮೆಚ್ಚಿ-
ಇಂತೀ ತ್ರಿವಿಧ ಆಶೆ ಆಮಿಷ ಮಮಕಾರದಿಂದ ಮನಮಗ್ನರಾಗಿ,
ಮತಿಗೆಟ್ಟು ಮುಂದುಗಾಣದೆ, ಸಟೆಯ ಸಂಸಾರದಲ್ಲಿ ಹೊಡದಾಡಿ
ಹೊತ್ತುಗಳೆದು ವ್ಯರ್ಥ ಸತ್ತುಹೋಗುವ
ಕತ್ತೆಸೂಳೆಮಕ್ಕಳ ಬಾಳ್ವೆ ಶುನಿ ಸೂಕರ ಕುಕ್ಕುಟನ
ಬಾಳ್ವೆಗಿಂದತ್ತತ್ತಯೆಂದಾತ ನಿಮ್ಮ ಶರಣ ವೀರಾಧಿವೀರ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./426
ಶಿವಶಿವಾ, ತಾವಾರೆಂಬುದನರಿಯದೆ
ತಮ್ಮ ನಿಜವನು ಮರೆದು ಈ ಮರುಳ ಮಾನವರು
ಕೆಟ್ಟ ಕೇಡ ಪೇಳ್ವೆ, ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ.
ಆನೆ ಮೊದಲು ಇರುವೆ ಕಡೆ ಒಂದೊಂದು ಜನ್ಮದಲ್ಲಿ
ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ,
ತೊಡದ ದೇಹವ ತೊಟ್ಟು, ಮೆಟ್ಟದ ಭೂಮಿಯ ಮೆಟ್ಟಿ,
ಉಣ್ಣದ ಆಹಾರವನುಂಡು, ಭವಭವದಲ್ಲಿ ಘಾಸಿಯಾಗಿ,
ಕಡೆಯಲ್ಲಿ ಮನುಷ್ಯದೇಹವ ತಾಳಿದಲ್ಲಿ
ವಾತ ಪಿತ್ಥ ಶ್ಲೇಷ್ಮ ಮೊದಲಾದ ಮುನ್ನೂರರುವತ್ತು
ರೋಗಾದಿ ಬಾಧೆಗಳಿಂದ ಕಂದಿ ಕುಂದಿ ನೊಂದು ಬೆಂದು
ತಾಪತ್ರಯಾಗ್ನಿಯಿಂದ ದಗ್ಭವಾದ ದುಃಖವ ಪೇಳಲಿಕ್ಕೆ
ಸಹಸ್ರಹೆಡೆಯ ಶೇಷಂಗೆ ಎರಡು ಸಹಸ್ರಜಿಹ್ವೆಯಿಂದ ಅಳವಲ್ಲ,
ಸಹಸ್ರನೇತ್ರವುಳ್ಳ ದೇವೇಂದ್ರಂಗೆ ನೋಡೆನೆಂದರೆ ಅಸಾಧ್ಯ.
ಚತುರ್ಮುಖಬ್ರಹ್ಮಂಗೆ ಪೇಳಲಿಕ್ಕೆ ಅಗಮ್ಯ ಅಗೋಚರ.
ಇಂತಿದನು ಕಂಡು, ಕೇಳಿ ಮೈಮರೆದು,
ಹೇಸಿಕಿ ಸಂಸಾರದಲ್ಲಿ ಸಿಲ್ಕಿ ಸತ್ತುಹೋಗುವ
ಹೇಸಿಮೂಳ ಹೊಲೆಮಾದಿಗರಿಗೆ ಶಿವಪಥವು
ಎಂದೆಂದಿಗೂ ಸಾಧ್ಯವಿಲ್ಲ, ಅಸಾಧ್ಯವೆಂದಾತ
ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ
ಚನ್ನಕದಂಬಲಿಂಗ ನಿರ್ಮಾಯಪ್ರಭುವೆ./427
ಶಿವಶಿವಾ, ನಾವು ಗುರುಗಳು,
ನಾವು ಜಂಗಮಲಿಂಗಪ್ರೇಮಿಗಳು,
ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು,
ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ.
ಅದೆಲ್ಲಿಯದೊ ಸದಾಚಾರ?
ಮಣ್ಣುಹಿಡಿದವಂಗೆ ಗುರುವಿಲ್ಲ,
ಹೆಣ್ಣುಹಿಡಿದವಂಗೆ ಲಿಂಗವಿಲ್ಲ,
ಹೊನ್ನುಹಿಡಿದವಂಗೆ ಜಂಗಮವಿಲ್ಲ.
ಇಂತೀ ತ್ರಿವಿಧಮಲವ ಕಚ್ಚಿದ
ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ?
ಇಲ್ಲವಾಗಿ, ಅಷ್ಟಾವರಣವು ಇಲ್ಲ.
ಇಂತಪ್ಪ ಪಂಚಮಹಾಪಾತಕರು
ನಾವು ಮೋಕ್ಷವ ಹಡೆಯಬೇಕೆಂದು
ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು
ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ,
ಸಾರೂಪ್ಯ, ಸಾಯುಜ್ಯವೆಂಬ
ಚರ್ತುವಿಧ ಖಂಡಿತಫಲಪದವ ಪಡೆದು,
ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ
ಭವಮಾಲೆಯಲ್ಲಿ ಬಪ್ಪುದು ತಪ್ಪುದು.
ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು
ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ
ದ್ವೈತಾದ್ವೈತವ ನಷ್ಟವ ಮಾಡಿ,
ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು,
ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ
ಮುಂದೆ ಶಿವಪಥವ ಸಾಧಿಸಬೇಕಲ್ಲದೆ ಇದನರಿಯದೆ
ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ
ಮಾತಾಪಿತರು, ಸತಿಸುತರು, ಸ್ನೇಹಿತರು,
ಬಾಂಧವರು ಎನ್ನವರು ಎಂದು
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು
ಸಂಸಾರ ರಸೋದಕವೆಂಬ ನೀರು ಕುಡಿದು
ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ
ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ
ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು
ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ
ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ
ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./428
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ.
ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು
ಭಕ್ತರಿಗೆ ದೀಕ್ಷೆಯ ಮಾಡಿ
ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು.
ಜಂಗಮಲಿಂಗಿಗಳಿಗೆ ಚರಂತಿಹಿರಿಯರು
ಗುರುವೆಂಬಾತನು ಉಭಯರು ಕೂಡಿ,
ಅಯ್ಯತನ ಮಾಡಿದೆವು ಎಂಬರು.
ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ?
ಈಗೇನು ಕೆಂಪಗಾದರೆ ?
ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ?
ಎಲಾ ದಡ್ಡಪ್ರಾಣಿಗಳಿರಾ,
ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ.
ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ,
ಅರಿಯದಿದ್ದರೆ ಕೇಳಿರಿ.
ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ,
ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ.
ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ,
ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ.
ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ,
ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ
ತೋರಬಲ್ಲರೆ ವೀರಶೈವರೆಂಬೆ.
ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ,
ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ.
ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ,
ಇಲ್ಲದಿದ್ದರೆ ನರಗುರಿಗಳೆಂಬೆ.
ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ
ಚರಮೂರ್ತಿಗಳೆಂಬೆ.
ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ.
ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ,
ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ,
ಈ ಉಭಯಭ್ರಷ್ಟ ಹೊಲೆಮಾದಿಗರ
ಅಘೋರನರಕದಲ್ಲಿಕ್ಕೆಂದ ಕಾಣಾ
ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./429
ಶಿವಾಶಿವಾ, ಗುರು ಲಿಂಗಾಂಗಿ ಜಂಗಮ ಭಕ್ತರ ಭೇದವ
ಪೇಳ್ವೆ ಕೇಳಿರಯ್ಯಾ.
ಶೆರೆಯ ಕುಡಿದವನೇ ಗುರುವೆಂಬೆ.
ಸುರೆಯ ಕುಡಿದವನೇ ಲಿಂಗಾಂಗಿಯೆಂಬೆ.
ಕಂಡವ ತಿಂದವನೇ ಜಂಗಮವೆಂಬೆ.
ಇಂತೀ ಮೂವರ ಕೊಂದು ತಿಂದವನ
ಕೊಂದು ತಿಂದಾತನೇ ಭಕ್ತನೆಂಬೆ.
ಇಂತಿದರ ಅನುಭಾವ ತಿಳಿಯಬಲ್ಲರೆ
ಗುರು-ಲಿಂಗ-ಜಂಗಮ ಭಕ್ತನೆಂಬೆ.
ಇಂತೀ ಚತುರ್ವಿಧದ ನಿರ್ಣಯವ ಹೇಳಿದಾತನೇ
ಅನಾದಿಗುರುಲಿಂಗಜಂಗಮವೆಂಬೆ.
ಆತನಲ್ಲಿ ಉಪದೇಶವ ಹಡಿಯಬೇಕು.
ಇಂತಿದರ ಭೇದವ ತಿಳಿಯಬಲ್ಲಾತನೇ
ಅನಾದಿ ಶಿಷ್ಯ ಭಕ್ತನೆಂಬೆ.
ಇಂತಿವರಿಗೆ ಉಪದೇಶವ ಹೇಳಬೇಕು.
ಇಂತಪ್ಪ ಗುರುಶಿಷ್ಯಸಂಬಂಧವೆಂತೆಂದೊಡೆ: ಶಿಖಿ-ಕರ್ಪುರ ಸಂಯೋಗದಂತೆ.
ಪಯೋಧರಫಲ ಉದಕದಲ್ಲಿ ಲೀಯವಾದಂತೆ.
ಲವಣ ಸಮುದ್ರದಲ್ಲಿ ಲೀಯವಾದಂತೆ.
ಈ ಗುರುಶಿಷ್ಯರುಭಯರು ಕೂಡಿ ಪರಶಿವಸಾಗರದಲ್ಲಿ
ನಿರ್ವಯಲಾದರೆಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./430
ಶಿಶುವಿನ ಗರ್ಭದೊಳಗೆ ಈರೇಳು ಭುವನಂಗಳಿರ್ಪವು.
ಆ ಭುವನಂಗಳನೆಲ್ಲ ಒಂದು ನಕ್ರ ನುಂಗಿರ್ಪುದು.
ಆ ನಕ್ರನ ತಲೆಯೊಳಗೆ ಒಂದು ಬೆಲೆಯಿಲ್ಲದ ರತ್ನ ಇರ್ಪುದು.
ಆ ರತ್ನಕ್ಕೆ ಇಬ್ಬರು ಹೆಣಗಾಡುತ್ತಿರ್ಪರು ನೋಡಾ!
ಹೆಳವ ನಡದ, ಅಂಧಕ ಕಂಡ, ಕೈಯಿಲ್ಲದವ ಪಿಡಿದುದ ಕಂಡು
ನಾ ಬೆರಗಾದೆನಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./431
ಶೀಲಮಾಡುವಣ್ಣಗಳ ಶುಚಿ ಅವಶುಚಿಯೆಂಬ
ಅಂಕುಶದಿಂದಳಿಕಿಸಿ ಕಾಡಿತ್ತು ಮಾಯೆ.
ಕ್ರೀಯ ಮಾಡುವಣ್ಣಗಳ
ಕರ್ಮಕ್ಕೆ ಒಳಗು ಮಾಡಿ ಕಾಡಿತ್ತು ಮಾಯೆ.
ವ್ರತಮಾಡುವಣ್ಣಗಳ ವ್ರತಭ್ರಷ್ಟರ ಮಾಡಿ ಕಾಡಿತ್ತು ಮಾಯೆ.
ನೇಮ ಮಾಡುವಣ್ಣಗಳ ನೇಮವೆಂಬ
ಸಂಕಲ್ಪಶೂಲದಲ್ಲಿ ನೀರಿಲ್ಲದ ವೃಕ್ಷದಂತೆ ಒಣಗಿಸಿ ಕಾಡಿತ್ತು ಮಾಯೆ.
ದಾಸೋಹಮಾಡುವಣ್ಣಗಳ ದೇಶದೇಶಕ್ಕೆ ಯಾಚಕನಮಾಡಿ ತಿರುಗಿಸಿ
ಕಂಡಕಂಡವರಿಗೆ ಬಾಯಿತೆರಿಸಿ ಕಾಡಿ ಬೇಡಿಸಿ ಕಾಡಿತ್ತು ಮಾಯೆ.
ಭಕ್ತಿಮಾಡುವಣ್ಣಗಳ ಹೊನ್ನು ವಸ್ತ್ರ ಹದಿನೆಂಟುಜೀನಸು ಧಾನ್ಯ
ಮೊದಲಾದ ಭತ್ತದ್ರವ್ಯವ ಹಾಳುಮಾಡಿ,
ಲೋಕದ ಜನರ ಮುಂದೆ ನಗೆ ಹಾಸ್ಯ ಅವಮಾನದಿಂ ಕಾಡಿತ್ತು ಮಾಯೆ.
ಧರ್ಮಮಾಡುವಣ್ಣಗಳ ಯುಕ್ತಿ ಮುಂದುದೋರಿ
ಕರ್ಮಕ್ಕೆ ಬೆಳಗುಮಾಡಿ ಕಾಡಿತ್ತು ಮಾಯೆ.
ವೇದಾಗಮಶಾಸ್ತ್ರಪುರಾಣವನೋದಿ ಹಾಡಿ ಹೇಳುವಣ್ಣಗಳ
ಅಂತಪ್ಪ ಪುಣ್ಯಕಥೆ ಕಾವ್ಯವನೋದಿಸಿ ಲಾಲಿಸಿ
ಏಕಚಿತ್ತರಾಗಿ ಕೇಳುವಣ್ಣಗಳ
ಬಾಲೆಯರ ತೋಳು ತೊಡೆಯಲ್ಲಿ ಒರಗಿಸಿ ಕಾಡಿತ್ತು ಮಾಯೆ.
ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ.
ಸದಾಚಾರಮಾರ್ಗ ಮುನ್ನವೇ ಅಲ್ಲ.
ಅದೆಂತೆಂದೊಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯ ಮಾಡಿ
ಶ್ರೀಗುರುಕಾರುಣ್ಯದಿಂ ತ್ರಿವಿಧ ಷಡ್ವಿಧಾಂಗ ಮೊದಲಾದ
ಸರ್ವಾಂಗದಲ್ಲಿ ಘನಮಹಾ ಇಷ್ಟಬ್ರಹ್ಮವನು
ತ್ರಿವಿಧ ಷಡ್ವಿಧಲಿಂಗ ಮೊದಲಾಗಿ
ಅನೇಕ ಲಿಂಗಸ್ವರೂಪಿನಿಂ ಸ್ವಾಯತವ ಮಾಡಿ,
ಅಚ್ಚೊತ್ತಿದ ಅರಿವಿಯಂತೆ, ಕಚ್ಚಾದ ಗಾಯದಂತೆ,
ಬೆಚ್ಚ ಬಂಗಾರದಂತೆ, ಅಂಗಲಿಂಗಕ್ಕೆ ಭಿನ್ನವಿಲ್ಲದೆ
ಅವಿರಳ ಸಮರಸದಿಂ ಏಕಲಿಂಗನಿಷ್ಠಾಪಾರಿಗಳಾದ
ವೀರಮಹೇಶ್ವರರೇ ಸದಾಚಾರ ಸದ್ಭಕ್ತಶರಣಜನಂಗಳು.
ಇಂತಿವರು ಮೊದಲಾದ
ಶಿವಜ್ಞಾನಿಗಳಾದ ಜ್ಞಾನಕಲಾತ್ಮರು
ಮಾಯಾಕೋಲಾಹಲರಲ್ಲದೆ,
ಇಂತಪ್ಪ ಶಿವಾಚಾರ ಧರ್ಮವನು ತಿಳಿಯದೆ
ನೇಮದಿಂದಾಚರಿಸಿ ಇಷ್ಟ ಶೀಲ ವ್ರತ ಕ್ರಿಯಾ
ದಾನಧರ್ಮವ ಮಾಡಿದರೇನು ವ್ಯರ್ಥವಲ್ಲದೆ
ಸಾರ್ಥಕವಲ್ಲ ಎಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./432
ಶೀಲವಂತರ ಶೀಳ ಕೊಳ್ಳದೆ, ಭವಿಗಳ ಶೀಳ ಕೊಂಬುವರು.
ಅದೇನುಕಾರಣವೆಂದಡೆ,
ಶೀಲವಂತರ ಶೀಳಿಗೆ ಹಣವುಂಟು,
ಭವಿಗಳ ಶೀಳಿಗೆ ಹಣವಿಲ್ಲ.
ಭವಿಗಳ ಶೀಳ ಕೊಂಬುವರು ಕಲ್ಲಿನ ಕೇತನೊಳಗಾಗಿ
ಕಾಯಕದಲ್ಲಿದ್ದರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./433
ಶೀಲವಂತರೆಲ್ಲ ಶೂಲದ ಹೆಣನೆಂಬೆ.
ಕ್ರಿಯಸ್ಥರೆಲ್ಲ ಬೇಡಿಬಂದಿಕಾರರೆಂಬೆ.
ವ್ರತಸ್ಥರೆಲ್ಲ ಢಾಲಿಬಂದಿಕಾರರೆಂಬೆ.
ನೇಮಸ್ಥರೆಲ್ಲ ಆಳುಗಳೆಂಬೆ.
ಲಿಂಗ ಇದ್ದವರಿಗೆ ಹೊಲೆಯರೆಂಬೆ.
ಲಿಂಗವಿಲ್ಲದವರಿಗೆ ಉತ್ತಮರೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./434
ಶುಕ್ಲ ಶೋಣಿತಾತ್ಮಸಂಬಂಧವಾದ
ಮಾತಾಪಿತೃಗಳ ಸಂಯೋಗ ಕಾಲಕ್ಕೆ
ಜೀವಾತ್ಮರು ಜನಿಸಿದ ಪರಿಯ ಪೇಳುವೆ.
ಅದೆಂತೆಂದೊಡೆ : ಜನಿಸಿದ ಮೂರುದಿವಸಕ್ಕೆ ಸ್ತ್ರೀಯರ ನಯನ ಕೆಂಪಾಗಿ
ಮೂರಾರುದಿವಸಕ್ಕೆ ಕೈಕಾಲು ಕತ್ತರಿಸಿ
ಏಳೆಂಟುದಿವಸಕ್ಕೆ ಅಂಗ ಜಾಡ್ಯವಾಗಿ
ಈರ್ಹತ್ತುದಿವಸಕ್ಕೆ ಇಂದ್ರಿಯ ಹೆಪ್ಪುಗೊಂಡು
ಒಂದುಮಾಸಕ್ಕೆ ಮಾಂಸಗೊಂಡು
ಎರಡುತಿಂಗಳಿಗೆ ಪಿಂಡಗಟ್ಟಿ ಬಯಕೆ ತೋರಿ
ಮೂರುತಿಂಗಳಿಗೆ ಅಂಡಗಟ್ಟಿ ಹೇಸಿಕೆ ಹುಟ್ಟಿ
ನಾಲ್ಕುತಿಂಗಳಿಗೆ ಅಂಗರೂಪು ಹುಟ್ಟಿ
ಐದುತಿಂಗಳಿಗೆ ಅವಯವಂಗಳು ಹುಟ್ಟಿ
ಆರುತಿಂಗಳಿಗೆ ಅವಯವಂಗಳು ಬಲಿದು
ಏಳುತಿಂಗಳಿಗೆ ರೋಮ ಹುಟ್ಟಿ
ಇಂತೀ ಪರಿಯಲ್ಲಿ ಶಿವಕೃಪೆಯಿಂದ ಪಿಂಡವರ್ಧನವಾಗಲು,
ಇಂತಪ್ಪ ಪಿಂಡದಲ್ಲಿ ಶಿವಾಜ್ಞೆಯಿಂದ
ಆತ್ಮನು ಪ್ರವೇಶವಾದಾಕ್ಷಣವೇ ಗರ್ಭದಲ್ಲಿ ಶಿಶುವು ಉಲುಕುವುದು.
ಎಂಟುತಿಂಗಳಿಗೆ ಕುಕ್ಕುಟಾಸನದಿಂದ ಶಿಶುವು ಹುದುಗಿಕೊಂಡಿರ್ಪುದು.
ನವಮಾಸಕ್ಕೆ ಮರ್ಕಟಾಸನದಿಂದ ನೆಟ್ಟನೆ ಕುಳ್ಳಿರ್ದು ಶಿಶುವು
ಸರ್ಪನುಂಗಿದ ಇಲಿಯ ಹಾಂಗೆ
ಗರ್ಭವೆಂಬ ಸರ್ಪ ಶಿಶುವನೊಳಕೊಂಡಿರ್ಪುದು.
ಆ ಶಿಶುವಿಗೆ ಕ್ರಿಮಿಕೀಟಕ ಜಂತುಗಳು ಮೊದಲಾದ
ಅನೇಕ ಬಾಧೆಗಳುಂಟು.
ಆ ಬಾಧೆಗಳಿಂದ ಆ ಶಿಶುವು ತನ್ನ ಕೆನ್ನೆಗೆರಡು ಹಸ್ತವ ಹಚ್ಚಿ
ಊಧ್ರ್ವಮುಖವಾಗಿ ಶಿವಧೋ ಶಿವಧೋ ಎಂದು
ಶಿವಧ್ಯಾನವ ಮಾಳ್ಪ ಸಮಯದಲ್ಲಿ
ಹರಕರುಣದಿಂದ ಆ ಗರ್ಭವೆಂಬ ಮನೆಯ ಬಿಟ್ಟು
ಹೊರಡುವ ಸಮಯಕ್ಕೆ
ಆ ಶಿಶುವಿನ ದುಃಖವ ಪೇಳ್ವೆ: ಕೋಟಿಸಿಡಿಲು ಹೊಯ್ದಂತೆ, ಸಾವಿರಚೇಳು ಕಡಿದಂತೆ,
ಧರ್ಮಿಷ್ಟರಾಜನು ಮೃತವಾದರೆ ಅತಿಬಡವರಿಗೆ ದುಃಖವಾದಹಾಂಗೆ.
ಬಳಗುಳ್ಳ ಪುಣ್ಯಪುರುಷನು ಸಾಯಂಕಾಲದಲ್ಲಿ ಮೃತನಾಗಿ
ಪ್ರಾತಃಕಾಲದಲ್ಲಿ ಅವನ ಶವ ಎತ್ತುವಕಾಲಕ್ಕೆ
ಅವನ ಬಳಗಕ್ಕೆ ದುಃಖವಾದಹಾಂಗೆ.
ಆ ಮಾಯಾಯೋನಿಯೆಂಬ ಸೂಕ್ಷ್ಮ ಅಧೋದ್ವಾರದಿಂ ಆತ್ಮನು
ಅನೇಕ ದುಃಖ ದಾವತಿಯಿಂದ ಜನಿಸಲು
ಅಂತಪ್ಪ ಪಿಂಡಕ್ಕೆ ಯೋನಿ ಕಂಡರೆ ಹೆಣ್ಣೆಂಬರು
ಶಿಶ್ನವ ಕಂಡರೆ ಗಂಡೆಂಬರು.
ಒಳಗಿರುವ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನಿರಾಳ ಬ್ರಹ್ಮಾಂಶಿಕವು.
ಅದೆಂತೆಂದಡೆ: ಪಾಪದದೆಸೆಯಿಂದ ಹೆಣ್ಣಾಗಿ ಜನಿಸುವುದು;
ಪುಣ್ಯದದೆಸೆಯಿಂದ ಪುರುಷನಾಗಿ ಜನಿಸುವುದು.
ಇಂತೀ ಪರಿಯಲ್ಲಿ ಇರುವೆ ಮೊದಲು ಆನೆ ಕಡೆ
ಎಂಬತ್ತುನಾಲ್ಕುಲಕ್ಷ ಜೀವರಾಶಿಯ ಯೋನಿಚಕ್ರಮಾರ್ಗದಲ್ಲಿ
ತಿರುಗಿ ತಿರುಗಿ ಭವರಾಟಾಳಮಾರ್ಗದಲ್ಲಿ
ದೇವ ದಾನವ ಮಾನವರು ಮೊದಲಾದ
ಸಕಲಜನರು ಬರುವದುಕಂಡು ಥರಥರನೆ ನಡುಗಿ
ಮರಳಿ ಈ ಜನನೀಜಠರಕ್ಕೆ ಬರಲಾರೆನೆಂದು ಅಂಜಿ
ನಿಮ್ಮ ಮರೆಹೊಕ್ಕನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./435
ಶುಕ್ಲಶೋಣಿತಾತ್ಮಸಂಬಂಧವಾದ
ಮಾತಾ ಪಿತರುಗಳ ಕಾಮವಿಕಾರದಿಂದ ಪುಟ್ಟಿದ ಪಿಂಡಕ್ಕೆ,
ಅಂಗೈಯೊಳಗೆ ಇರುವ ಪರಿಯಂತರವಾಗಿ
ಜಡೆಯ ಕೂಸೆಂಬುವರು.
ಅಂಬೆಗಾಲಲಿ ನಡೆಯುವಾಗ ಹುಡುಗನೆಂಬುವರು.
ಎದ್ದು ಕಾಲಲಿ ನಡೆಯುವಾಗ ಪೋರನೆಂಬುವರು
ಒಳ ಹೊರಗೆ ಓಡಾಡುವಾಗ ಹೆಸರುಗೊಂಡು
ಬಾರಲೇ ಹೋಗಲೆಯೆಂಬುವರು.
ಷೋಡಶವರುಷಕ್ಕೆ ತಮ್ಮಾ ಅಪ್ಪಾ ಎಂದು ಕರೆವರು.
ಪಂಚವಿಂಶತಿವರುಷಕ್ಕೆ ಅಣ್ಣಾ ಅಪ್ಪಾ ಎಂದು ಕರೆವರು.
ಮೂವತ್ತುವರುಷದಿಂ ಐವತ್ತುವರುಷತನಕ ಅಪ್ಪನವರು ಎಂದು ಕರೆವರು,
ನೆರೆಯೊಡೆದ ಮೇಲೆ ಹಿರಿಯರೆಂಬುವರು.
ಹಲ್ಲುಬಿದ್ದ ಮೇಲೆ ಮುದುಕನೆಂಬುವರು.
ಬೆನ್ನುಬಾಗಿ ಕಣ್ಣು ಒಳನಟ್ಟು ಗೂಡುಗಟ್ಟಿ ಗೂರಿಗೂರಿ
ಮುಕುಳಿ ನೆಲಕ್ಕೆಹತ್ತಲು ಮುದೋಡ್ಯಾ ಎಂಬುವರು.
ಇಂತೀ ನಾಮಂಗಳು ಆತ್ಮಂಗೆ ದೇಹಸಂಗದಿಂದ ಪುಟ್ಟಿದವಲ್ಲದೆ
ಆ ದೇಹದೊಳಗಿರುವ ಆತ್ಮನು
ಕೂಸಲ್ಲ, ಪೋರನಲ್ಲ, ಹಿರಿಯನಲ್ಲ, ಮುದುಕನಲ್ಲ.
ಈ ಭೇದವ ನಿಮ್ಮ ಶರಣರು ಬಲ್ಲರಲ್ಲದೆ
ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./436
ಶೈವರುಕಟ್ಟಿದ ಗುಡಿಯ ಬಿಚ್ಚದೆ,
ಶೈವಲಿಂಗವ ತೆಗೆಯದೆ,
ಪಾಯಾ ಸೋಸಿ ಗುಡಿಯ ಕಟ್ಟಿ,
ಆ ಶೈವಲಿಂಗವ ಸ್ಥಾಪಿಸಲು,
ಗುಡಿ ಲಿಂಗವ ನುಂಗಿ, ಲಿಂಗ ಗುಡಿಯ ನುಂಗಿದ ಕಂಡು,
ಸತ್ತು ಬದುಕಿ ಕಾಯಕವ ಮಾಡುತ್ತಿದ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./437
ಶ್ರೀಗುರು ಬಂದು ತ್ರಿವಿಧದೀಕ್ಷೆಯಿಂದ
ಉಪದೇಶವ ಮಾಡುವ ಕಾಲದಲ್ಲಿ
ಹಸ್ತದಲ್ಲಿ ಶಸ್ತ್ರವ ಹಿಡಿದು ಕಡಿದುಕೊಂಡು
ನುಂಗಿದಾತನೇ ಶಿಷ್ಯನೆಂಬೆ.
ಲಿಂಗವು ಬಂದು ಹಸ್ತದಲ್ಲಿ
ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ
ಪೂಜೆಗೊಂಬ ವೇಳೆಯಲ್ಲಿ ವಜ್ರಾಯುಧದಿಂದ
ಬಡಿದು ಒಡೆದು ಚೂರ್ಣವ ಮಾಡಿ
ಉದಕದೊಳಗೆ ಹಾಕಿ ಕುಡಿಯುವವನೇ ಶರಣನೆಂಬೆ.
ಜಂಗಮ ಬಂದು ಇದುರಿನಲ್ಲಿ ಕುಳಿತು
ಅನುಭಾವಬೋಧೆಯನು ಮಾಡುವ ಸಮಯದಲ್ಲಿ
ಹಸ್ತದಲ್ಲಿ ಖಡ್ಗವ ಪಿಡಿದು
ಎಡಕ ಬಂದವನ ಕುಟ್ಟಿ, ಬಲಕ ಬಂದವನ ಹೆಟ್ಟಿ,
ಎದುರಿನಲ್ಲಿ ಬಂದವನ ಮೆಟ್ಟಿ,
ಆ ಜಂಗಮವನು ಕಡಿದು
ಅವನ ಕಂಡವ ಚಿನಿಪಾಲವ ಮಾಡಿ,
ನೀರಿಲ್ಲದೆ ಅಟ್ಟು, ಕಿಚ್ಚಿಲ್ಲದೆ ಸುಟ್ಟು,
ಹಸ್ತವಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು,
ಜಿಹ್ವೆಯಿಲ್ಲದೆ ರುಚಿಸಿ, ಸಂತೋಷವಿಲ್ಲದೆ
ಪರಿಣಾಮಿಸಬಲ್ಲರೆ ಭಕ್ತನೆಂಬೆ.
ಇಂತೀ ತ್ರಿವಿಧದ ಅನುಭಾವವ ಹೇಳಬಲ್ಲರೆ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯನೆಂಬೆ.
ಲಿಂಗಾಂಗಿ ಎಂಬೆ, ಶಿವಜ್ಞಾನಸಂಪನ್ನರೆಂಬೆ,
ಪರಶಿವಯೋಗಿಗಳೆಂಬೆ, ಚಿತ್ಪ್ರಕಾಶಜ್ಞಾನಿಗಳೆಂಬೆ,
ಈ ವಚನದ ಭೇದವ ತಿಳಿಯದಿದ್ದರೆ
ಸತ್ತಹಾಗೆ ಸುಮ್ಮನೆ ಇರು ಎಂದ ಕಾಣಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./438
ಶ್ವೇತವರ್ಣದ ವಸ್ತ್ರವನೆಲ್ಲ ಭಕ್ತಂಗೆ ಕೊಟ್ಟು,
ಪೀತವರ್ಣದ ವಸ್ತ್ರವನೆಲ್ಲ ಮಾಹೇಶ್ವರಂಗೆ ಕೊಟ್ಟು,
ಹರಿತವರ್ಣದ ವಸ್ತ್ರವನೆಲ್ಲ ಪ್ರಸಾದಿಗೆ ಕೊಟ್ಟು,
ಮಾಂಜಿಷ್ಟವರ್ಣದ ವಸ್ತ್ರವನೆಲ್ಲ ಪ್ರಾಣಲಿಂಗಿಗೆ ಕೊಟ್ಟು,
ಕಪೋತವರ್ಣದ ವಸ್ತ್ರವನೆಲ್ಲ ಶರಣಂಗೆ ಕೊಟ್ಟು,
ಮಾಣಿಕ್ಯವರ್ಣದ ವಸ್ತ್ರವನೆಲ್ಲ ಐಕ್ಯಂಗೆ ಕೊಟ್ಟು,
ಇಂತೀ ವಸ್ತ್ರದ ಹಣವ ಕೊಳ್ಳದೆ ಕೊಂಡು ನುಂಗಿ
ಕಾಯಕವ ಮಾಡುತ್ತಿರ್ದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./439
ಸಂದಿ ಕೇರಿ ಗೊಂದಿ ಪಕ್ಷಿಯ ಕೋಡು ಕಿತ್ತು,
ಕಣ್ಣು ಕಾಲು ಹಲ್ಲು ತೆಗೆದು, ರೆಕ್ಕೆಯ ಮುರಿದು,
ಹೊಟ್ಟೆಯ ಬಿಟ್ಟು, ತಲೆಯ ಬೇಯಿಸಿ ಪಾಕವ ಮಾಡಿ,
ಡೊಂಕಮೋರೆಯ ಹನುಮಗೆ ಕೊಟ್ಟು,
ನಾನುಂಡು ಕಾಯಕವ ಮಾಡಿದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./440
ಸಕಲ ಲೋಕಾದಿಲೋಕಂಗಳು
ಉದಯ, ಮಧ್ಯಾಹ್ನ, ಸಾಯಂಕಾಲ ಪರಿಯಂತರವು
ಒಡಲೋಪಾಧಿಯ ಚಿಂತೆಯಿಂದ
ತಾಪತ್ರಯಾಗ್ನಿಯಲ್ಲಿ ಬೇಯುತ್ತಿರ್ಪರು ನೋಡಾ.
ಅದೆಂತೆಂದೊಡೆ: ಉದಯಕಾಲಕ್ಕೆ ಹೋರಾಟದ ಚಿಂತೆ,
ಮಧ್ಯಾಹ್ನಕಾಲಕ್ಕೆ ಅಶನದ ಚಿಂತೆ,
ಸಾಯಂಕಾಲಕ್ಕೆ ವ್ಯಸನದ ಚಿಂತೆ,
ಇಂತೀ ತ್ರಿವಿಧ ವ್ಯಸನದಲ್ಲಿ ಮನಮಗ್ನವಾದ ಪ್ರಾಣಿಗಳಿಗೆ
ಶಿವಜ್ಞಾನವೆಲ್ಲಿಯದಯ್ಯಾ?
ಇಂದಿನ ಚಿಂತೆಯ ಮಾಡುವರೆಲ್ಲ ಹಂದಿಗಳು.
ನಾಳಿನ ಚಿಂತೆಯ ಮಾಡುವರೆಲ್ಲ ನಾಯಿಗಳು.
ಅದೆಂತೆಂದೊಡೆ: ನೀ ಹುಟ್ಟದ ಮುನ್ನವೆ ತಾಯಿಗರ್ಭದಲ್ಲಿ
ನವಮಾಸ ಪರಿಯಂತರವು
ನಿನಗೆ ಆಹಾರವ ಕೊಟ್ಟವರಾರು ಹೇಳಾ ಮರುಳೆ?
ಅಖಂಡತಂಡ ಶಿಲೆಯೊಳಗಿನ ಮಂಡೂಕಕ್ಕೆ
ಆಹಾರವ ಕೊಟ್ಟು ಸಲಹಿದವರಾರು ಹೇಳಾ ಮರುಳೆ?
ಕಟ್ಟಿಗಿಯೊಳಗಿನ ಭೃಂಗಕ್ಕೆ
ಮಲೆಗಳ ಕೊಟ್ಟು ಸಲಹಿದವರಾರು ಹೇಳಾ ಮರುಳೆ?
ಇರುವೆ ಮೊದಲು ಆನೆ ಕಡೆ
ಎಂಬತ್ತು ನಾಲ್ಕುಲಕ್ಷ ಜೀವರಾಶಿಯ ಗರ್ಭದಲ್ಲಿ
ಹುಟ್ಟಿ ಹುಟ್ಟಿ ಬರುವಲ್ಲಿ ನಿನಗೆ ಆಹಾರವ ಕೊಟ್ಟು
ರಕ್ಷಣವ ಮಾಡಿದವರಾರು ಹೇಳಾ ಮರುಳೆ?
ಇಂತೀ ಸರ್ವಲೋಕಾದಿಲೋಕಂಗಳಿಗೆ ಶಿವನೇ ಕರ್ತನೆಂದು
ತಿಳಿದು ನೋಡಾ ಮರುಳೆ!
ಇಂತಪ್ಪ ಯುಕ್ತಿವಿಚಾರದ ಸುಜ್ಞಾನವಿಲ್ಲದೆ
ಬರಿಯ ಒಡಲ ಚಿಂತೆಯಲ್ಲಿ ಹೊತ್ತುಗಳೆದು
ಸತ್ತು ಹೋಗುವ ಹೇಸಿ ಮೂಳರ ಕಂಡು ನಾಚಿದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ||/441
ಸತ್ತ ಹೆಣದ ಮುಂದೆ ಅತ್ತವರು
ಅತ್ತಲೇ ಸುರಚಾಪದಂತೆ ಇರ್ಪರು.
ಅಳದವರು ಬಹುಕಾಲಿರುವರು.
ಆ ಹೆಣದ ಮುಂದೆ ಮಾಯವಿಲ್ಲದೆ,
ಅತ್ತವರು ಆರಿಗೂ ಸಿಕ್ಕದೆ ಎತ್ತ ಹೋದರೆಂಬುದ
ಬಡವರು ಬಲ್ಲರು, ಬಲ್ಲಿದರು ಅರಿಯರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./442
ಸತ್ತವರ ಮನೆಗೆ ಸಾಯದವರು ಪೋಗಿ
ತಮ್ಮ ಅಳುವ ಮಾಣಿಸಿ,
ಸತ್ತವನ ಸತಿಯಳ ಸಂಗವ ಮಾಡಿ
ಕುಲಗೆಟ್ಟು ಹೊಲೆಗೇರಿಯ ಪೊಕ್ಕು
ಎತ್ತ ಹೋದರೆಂಬುದು ತಿಳಿಯಬಲ್ಲರೆ ಅಚ್ಚಶರಣನೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./443
ಸತ್ತವರ ಸಂಗ ಸಾಯದವರು ಮಾಡಿ
ಸತ್ತು ಪೋದರು.
ಸಾಯದವರ ಸಂಗ ಸತ್ತವರು ಮಾಡಿ
ಸಾಯದವರು ಆಗಲಿಲ್ಲ ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./444
ಸತ್ತವರ ಸಮಾಧಿಯಲ್ಲಿ ತಡಿಗಿಯ ಕಟ್ಟಿಸಿ,
ಹಿರಿಯರ ಗದ್ದುಗೆಯನ್ನು ಪೂಜಿಸುವವರು
ಮಹೇಶ್ವರರಲ್ಲ.
ಕಟ್ಟಿಗೆ ಹಾವಿಗೆ, ಬೆಳ್ಳಿಯ ಕಟ್ಟಿಗೆ ಜಡಿಗಟ್ಟಿದ ಕೂದಲು
ಹಿರಿಯರೆಂದು ಪೂಜಿಸುವವರು ಮಹೇಶ್ವರರಲ್ಲ.
ಸತ್ತ ತಾಯಿತಂದೆಗಳ ಹೆಸರು ತಮ್ಮ ಪುತ್ರರಿಗೆ ಇಟ್ಟು,
ಪರರಿಗೆ ತಮ್ಮ ಹಿರಿಯರು ಗಳಿಸಿದ
ಮಠಮಾನ್ಯವೆಂದು ಹೋರಾಡಿ ತಗಾದಿ ತಳ್ಳಿ ತಡಿಯ ಮಾಡಿ
ಸರಕಾರಕ್ಕೆ ಹೊನ್ನ ಕೊಟ್ಟವರು ಮಹೇಶ್ವರರಲ್ಲ.
ಇಂತಿವರು ಮಹೇಶ್ವರರೆಂದಡೆ
ನಿಮ್ಮ ಶರಣರು ತಮ್ಮ ಪಾದರಕ್ಷೆಯಿಂದ ಹೊಡೆಯದೆ ಮಾಣ್ಬರೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./445
ಸತ್ತವರ ಸುದ್ದಿ ಇದ್ದವರು ಕೇಳಿ
ಸಾಯಬೇಕೆಂಬರು.
ಸತ್ತವರ ಸುದ್ದಿ ಹೊಲೆಯರು ಬಲ್ಲರು
ಉತ್ತಮರರಿಯರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./446
ಸತ್ತವರು ಸಾಯದವರ ನುಂಗಿ, ಸಾಯದವರು ಸತ್ತವರ ನುಂಗಿ,
ಈ ಉಭಯರು ಎತ್ತಹೋದರೆಂಬುದ ನೀ ಬಲ್ಲೆ, ನಾನರಿಯೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./447
ಸಮಾಧಿ ಸಮಾಧಿ ಎಂಬರಯ್ಯಾ,
ಸಮಾಧಿಯ ಬಗೆಯ ಪೇಳ್ವೆ.
ಅದೆಂತೆಂದಡೆ: ಪಂಚಭೂತಮಿಶ್ರವಾದ ದೇಹವೆಂಬುವುದೆ ಸಮಾದಿ.
ಅಂತಪ್ಪ ದೇಹದ ಪೃಥ್ವಿತತ್ವದಲ್ಲಿ ನಕಾರಪ್ರಣವ ಸ್ವಾಯತ.
ಅಪ್ಪುತತ್ವದಲ್ಲಿ ಮಕಾರಪ್ರಣವ ಸ್ವಾಯತ.
ತೇಜತತ್ವದಲ್ಲಿ ಶಿಕಾರಪ್ರಣವ ಸ್ವಾಯತ.
ವಾಯುತತ್ವದಲ್ಲಿ ವಕಾರಪ್ರಣವ ಸ್ವಾಯತ.
ಆಕಾಶತತ್ವದಲ್ಲಿ ಯಕಾರಪ್ರಣವ ಸ್ವಾಯತ.
ಆತ್ಮದಲ್ಲಿ ಓಂಕಾರಪ್ರಣವ ಸ್ವಾಯತ.
ಮತ್ತಂ, ಬಲಪಾದದಲ್ಲಿ ನಕಾರ,
ಎಡಪಾದದಲ್ಲಿ ಮಕಾರ, ಮಧ್ಯನಾಭಿಸ್ಥಾನದಲ್ಲಿ ಶಿಕಾರ,
ಬಲಹಸ್ತದಲ್ಲಿ ವಕಾರ, ಎಡಹಸ್ತದಲ್ಲಿ ಯಕಾರ,
ಮಸ್ತಕದಲ್ಲಿ ಓಂಕಾರ.
ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ.
ಮತ್ತಂ, ಸ್ಥೂಲತನುವಿನಲ್ಲಿ ಬಕಾರಪ್ರಣವ ಸ್ವಾಯತ.
ಸೂಕ್ಷ್ಮತನುವಿನಲ್ಲಿ ನಕಾರಪ್ರಣವ ಸ್ವಾಯತ.
ಕಾರಣತನುವಿನಲ್ಲಿ ವಕಾರಪ್ರಣವ ಸ್ವಾಯತ.
ಮತ್ತಂ,
ವಿಶ್ವನಲ್ಲಿ ಅಕಾರಪ್ರಣವಸಂಬಂಧ.
ತೈಜಸನಲ್ಲಿ ಉಕಾರಪ್ರಣವಸಂಬಂಧ.
ಪ್ರಾಜ್ಞದಲ್ಲಿ ಮಕಾರಪ್ರಣವಸಂಬಂಧ.
ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ.
ಮತ್ತಂ,
ಆಧಾರದಲ್ಲಿ ನಕಾರ, ಸ್ವಾಧಿಷ್ಠಾನದಲ್ಲಿ ಮಕಾರ,
ಮಣಿಪೂರಕದಲ್ಲಿ ಶಿಕಾರ,
ಅನಾಹತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ,
ಆಜ್ಞೆಯಲ್ಲಿ ಓಂಕಾರ, ಬ್ರಹ್ಮರಂಧ್ರದಲ್ಲಿ
ಬಕಾರ, ಅಕಾರ, ವಕಾರ, ಶಿಖೆಯಲ್ಲಿ ಕ್ಷಕಾರ, ಉಕಾರ, ಸಕಾರ.
ಪಶ್ಚಿಮದಲ್ಲಿ ಹಕಾರ, ಮಕಾರ, ವಕಾರ.
ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ.
ಮತ್ತಂ, ಬಲಭಾಗದಲ್ಲಿ ಓಂಕಾರ, ಎಡಭಾಗದಲ್ಲಿ ಮಕಾರ,
ಮುಂಭಾಗದಲ್ಲಿ ಅಕಾರ, ಹಿಂಭಾಗದಲ್ಲಿ ಮಕಾರ,
ಊಧ್ರ್ವಭಾಗದಲ್ಲಿ ಹಕಾರ.
ಮತ್ತಂ, ಬಲಹಸ್ತದ ಮಧ್ಯದಲ್ಲಿ ಓಂಕಾರ,
ಹೆಬ್ಬೆರಳಿನಲ್ಲಿ ಯಕಾರ, ಉಳಿದ ನಾಲ್ಕು ಬೆರಳಿನಲ್ಲಿ
ನಾಲ್ಕು ಪ್ರಣವಗಳು.
ಆ ಹಸ್ತದ ಮೇಲುಭಾಗದಲ್ಲಿ ಅಕಾರ, ಮುಂಗೈಯಲಿ ಬಕಾರ,
ಮೊಳಕೈಯಲ್ಲಿ ಉಕಾರ, ರಟ್ಟೆಯಲ್ಲಿ ಸಕಾರ,
ಭುಜದಲ್ಲಿ ಮಕಾರ, ಹೆಗಲಲ್ಲಿ ವಕಾರ,
ಇಂತೀ ಪರಿಯಲ್ಲಿ ಉಭಯ ಹಸ್ತ ತೋಳಿನಲ್ಲಿ
ಹಿಂದೆ ಹೇಳಿದ ಪಂಚಸ್ಥಾನಂಗಳಲ್ಲಿ
ಪ್ರಣವಸಂಬಂಧವಾದುದೇ ಸಮಾಧಿ.
ಮತ್ತಂ, ಉಭಯ ತಳಪಾದದಲ್ಲಿ ಓಂಕಾರ,
ಉಭಯ ಪಾದಾಂಗುಷ್ಠದಲ್ಲಿ ಯಕಾರ,
ಉಭಯ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಂಗಳು.
ಉಭಯ ಪಾದದ ಮೇಲುಭಾಗದಲ್ಲಿ ಅಕಾರ,
ಉಭಯ ಪಾದದ ಬಾಹ್ಯ ಹರಡಿನಲ್ಲಿ ಉಕಾರ,
ಉಭಯ ಪಾದದಂತರ ಹರಡಿನಲ್ಲಿ ಬಕಾರ.
ಉಭಯ ಪಾದದ ಹಿಂಬಡದಲ್ಲಿ ಮಕಾರ,
ಉಭಯ ಕಣಕಾಲಲ್ಲಿ ಸಕಾರ, ಮೊಳಕಾಲಲ್ಲಿ ಪಕಾರ,
ಉಭಯ ಕಿರಿದೊಡೆಯಲ್ಲಿ ಅಕಾರ.
ಹಿರಿದೊಡೆಯಲ್ಲಿ ಉಕಾರ, ಉಭಯಾಂಗದಲ್ಲಿ ಮಕಾರ.
ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ.
ಮತ್ತಂ, ಉಭಯ ಬರಕಿಯಲ್ಲಿ ಓಂ ನಮಃಶಿವಾಯ
ಎಂಬ ಮೂಲ ಷಡಕ್ಷರ.
ಉಭಯ ಮೊಲೆಯಲ್ಲಿ ಓಂಕಾರ, ಉಭಯ ಬಗಲಲ್ಲಿ ಬಕಾರ,
ಕಕ್ಷೆಯಲ್ಲಿ ಅಕಾರ, ಹೃದಯದಲ್ಲಿ ಉಕಾರ,
ಕಂಠದಲ್ಲಿ ಮಕಾರ, ಹೆಡಕಿನಲ್ಲಿ ಸಕಾರ,
ಹೆಡಕಿನ ಎಡಬಲದಲ್ಲಿ ವಕಾರ,
ಉಭಯ ಕರ್ಣದ ಮಧ್ಯದಲ್ಲಿ ಓಂಕಾರ,
ಹಾಲಿಯಲ್ಲಿ ಯಕಾರ, ಕಿರಿಹಾಲಿಯಲ್ಲಿ ವಕಾರ,
ಕರ್ಣದ ಊಧ್ರ್ವಭಾಗದಲ್ಲಿ ಶಿಕಾರ,
ಬಲ ಎಡಭಾಗದಲ್ಲಿ ಮಕಾರ, ಕರ್ಣದ ಹಿಂಭಾಗದಲ್ಲಿ ನಕಾರ.
ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ.
ಮತ್ತಂ,
ಬಲಭಾಗದ ನಯನದಲ್ಲಿ ಅಕಾರ, ಬಕಾರ.
ಎಡಭಾಗದ ನಯನದಲ್ಲಿ ಉಕಾರ, ಸಕಾರ,
ಉಭಯ ನಯನದ ಮಧ್ಯದಲ್ಲಿ ಮಕಾರ, ವಕಾರ,
ಉಭಯ ಗಲ್ಲದಲ್ಲಿ ಓಂಕಾರ.
ನಾಶಿಕದ ತುದಿಯಲ್ಲಿ ಮಕಾರ.
ಬಲಭಾಗದ ಹೊಳ್ಳಿಯಲ್ಲಿ ಅಕಾರ,
ಎಡಭಾಗದ ಹೊಳ್ಳಿಯಲ್ಲಿ ಉಕಾರ.
ಮೇಲುಭಾಗದ ತುಟಿಯಲ್ಲಿ ಬಕಾರ.
ಕೆಳಭಾಗದ ತುಟಿಯಲ್ಲಿ ಸಕಾರ.
ಉಭಯಮಧ್ಯದಲ್ಲಿ ವಕಾರ.
ನಾಲಿಗೆಯಲ್ಲಿ ಓಂ ನಮಃಶಿವಾಯವೆಂಬ
ಮೂಲ ಷಡಕ್ಷರ.
ದಂತಪಂಕ್ತಿಗಳೇ ಹಂ ಕ್ಷಂ ಎಂಬ ಶೂನ್ಯಪ್ರಣಮಂಗಳು.
ಚರ್ಮವೆ ವಕಾರ, ಅಸ್ತಿಯೇ ಮಕಾರ,
ಮಾಂಸವೇ ಶಿಕಾರ, ಮಜ್ಜವೇ ವಕಾರ,
ರಕ್ತವೇ ಯಕಾರ, ಪ್ರಾಣವೇ ಓಂಕಾರ.
ರೇಚಕ ಪೂರಕ ಕುಂಭಕವೆಂಬ ಸ್ವರದಲ್ಲಿ
ಅಕಾರ, ಉಕಾರ, ಮಕಾರ.
ಮತ್ತಂ, ಅಪಾದಮಸ್ತಕದ ಪರಿಯಂತರವು
ರೋಮನಾಳಂಗಳಲ್ಲಿ ನಿರಂಜನ ಮೂಲಪ್ರಣಮವೆಂಬ ಓಂಕಾರ.
ಇಂತೀ ಸ್ಥಾನಂಗಳಲ್ಲಿ ಪ್ರಣಮಸಂಬಂಧವಾದುದೇ ಸಮಾಧಿ.
ಇಂತೀ ಕ್ರಮದಲ್ಲಿ ಕೀಯವಿಟ್ಟು ಬಾಹ್ಯದಲ್ಲಿ ದೇಹಕ್ಕೆ
ಪ್ರಣಮಸಂಬಂಧಿಸಿದಡೆಯು
ಆ ದೇಹವು ಭೂಮಿಯ ಮರೆಯಲ್ಲಿ
ಒಂದು ಕ್ಷಣಕ್ಕೆ ನಿರ್ವಯಲಾಗುವುದು.
ಇಂತೀ ಕ್ರಮದಲ್ಲಿ ಅಂತರಂಗದಲ್ಲಿ ಪ್ರಾಣಕ್ಕೆ
ಪ್ರಣಮಸಂಬಂಧವ ಸುಜ್ಞಾನ ಕ್ರಿಯೆಗಳಿಂದ ಸಂಬಂಧಿಸಿದಡೆಯು
ದೇಹದಲ್ಲಿರಲಿಕ್ಕೆಯು ಜೀವನ್ಮುಕ್ತನಾಗುವನು.
ಅದೆಂತೆಂದಡೆ: ಚಿದಂಶಿಕನಾದ ಜ್ಞಾನಕಲಾತ್ಮಂಗೆ ಸುಜ್ಞಾನೋದಯವಾಗಿ
ಸಕಲಪ್ರಪಂಚವ ನಿವೃತ್ತಿ ಮಾಡಿ,
ಶ್ರೀಗುರುಕಾರುಣ್ಯವ ಹಡೆದು
ಅಂಗದ ಮೇಲೆ ಇಷ್ಟಲಿಂಗವು ಧಾರಣವಾದಾಕ್ಷಣವೇ
ಹಿಂದೆ ಹೇಳಿದ ನಿರ್ಣಯದಲ್ಲಿ
ಸರ್ವಾಂಗದಲ್ಲಿ ಮೂಲಪ್ರಣಮಾದಿ ಕ್ಷಕಾರ ಪ್ರಣಮಾಂತ್ಯವಾದ
ಸಕಲನಿಃಷ್ಕಲಪ್ರಣಮಂಗಳು
ಬೆಲ್ಲದ ಕುಳ್ಳಿಗೆ ಇರುವೆ ಮುತ್ತಿದಂತೆ
ತನ್ನಿಂದ ತಾನೆ ಸಂಬಂಧವಾಗಿ
ಜೀವನ್ಮುಕ್ತನಾಗಿ ಲೀಲೆಯಲ್ಲಿರುವ ಪರಿಯಂತರದಲ್ಲಿ
ಉದಕದೊಳಗೆ ಇರ್ಪ ತಾವರೆಯಂತೆ
ನಿರ್ಲೆಪನಾಗಿ ಪ್ರಪಂಚವನಾಚರಿಸುವನು.
ಈ ಭೇದವನು ಶಿವಜ್ಞಾನಿ ಶರಣರು ಬಲ್ಲರಲ್ಲದೆ
ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./448
ಸರ್ಪನ ಧ್ವನಿಗೆ ಆಕಾಶದ ಟೆಂಗಿನುದಕ ಉಕ್ಕಿ
ಭೂಮಿಗೆ ಬೀಳಲು, ಭೂಮಿ ಕರಗಿ,
ಸಮುದ್ರ ಬತ್ತಿ, ಸತ್ತವರು ಬದುಕಿದವರ ಹೊತ್ತು
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./449
ಸವುಳಭೂಮಿಯ ಉಳ್ಳಿ ಮೂಲಂಗಿ ಬಳ್ಳೊಳ್ಳಿ
ಸಬ್ಬಸಗಿ ನಾರುಗಡ್ಡೆಯ ತಿಂದವರಿಗೆ
ರೋಗ ಪ್ರಾಪ್ತಿಯಾಗುವದು.
ಕೆಂಪುಭೂಮಿಯ ಉಳ್ಳಿ ಮೂಲಂಗಿ ಬಳ್ಳೊಳ್ಳಿ
ಸಬ್ಬಸಗಿ ನಾರುಗಡ್ಡೆಯ ತಿಂಬವರಿಗೆ
ರೋಗ ಪರಿಹಾರವಾಗುವದು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./450
ಸಹಸ್ರಮುಖ ರುದ್ರಾಕ್ಷಿಯನು ಬ್ರಹ್ಮನ ಸಂತತಿಗೆ ಕಟ್ಟಿದೆ.
ಮೂರುಮುಖದ ರುದ್ರಾಕ್ಷಿಯನು ವಿಷ್ಣುವಿನ ಸಂತತಿಗೆ ಕಟ್ಟಿದೆ.
ಏಕಮುಖದ ರುದ್ರಾಕ್ಷಿಯನು ರುದ್ರನ ಸಂತತಿಗೆ ಕಟ್ಟಿದೆ.
ಐದು ಬಾಗಿಲಿಗೆ ಐದು ರುದ್ರಾಕ್ಷಿಯನು ಕಟ್ಟಿದೆ.
ಒಂದು ರುದ್ರಾಕ್ಷಿಯನು ಒಳಹೊರಗೆ ಕಟ್ಟಿ
ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./451
ಸಹೀದರ ಖುರಾನವ ನೋಡಿ ದಾಡಿ ಜವನ ಲೋಚವ ಬಿಟ್ಟು
ದಿಗಂಬರವಾಗುವರು.
ಆ ಖುರಾನವ ನೋಡಿ ದಾಡಿ ಜವನ ಲೋಚವ ಬೋಳಿಸಿ
ಸಹೀದನಾಗುವನಾರನು ಕಾಣೆ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./452
ಸಹೀದರು ಕೊಟ್ಟ ಖುರಾನವ ಮುಂದಿಟ್ಟು
ಅರ್ಚಿಸಿ ನಮಾಜ ಮಾಡುವರು.
ಮಾಟವಳಿದು ಕೂಟ ನಿಂದು ಶಬ್ದವಡಗಿ
ಬಯಲ ಖುದಾನಾಗಿರಬಲ್ಲಡೆ ಸಹೀದರೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./453
ಸಾಣಿಯ ಮೇಲೆ ಶ್ರೀಗಂಧವನಿಟ್ಟು,
ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ?
ಜಡಚಕ್ರದೊಳಗೆ ಧಾನ್ಯವ ನೀಡಿ
ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ?
ಗಾಣಕ್ಕೆ ಎಳ್ಳು ನೀಡಿ,
ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ?
ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ
ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ
ಹೊಟ್ಟೆ ತುಂಬಿ ಹಸುವಡಗಬಲ್ಲುದೆ ?
ಹಾಗೆ ಜಡರೂಪವಾದ ಲಿಂಗವ
ಜಡಮತಿಗಳಾದ ಗುರುಮುಖದಿಂ ಪಡಕೊಂಡು
ಅಂಗದ ಮೇಲೆ
ಇಷ್ಟಲಿಂಗವೆಂದು ಧರಿಸಿ
ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ,
ಆ ಲಿಂಗವು ಮುಕ್ತಿಯ ಕೊಡಲರಿಯದು.
ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು
‘ಮರ್ದನಂ ಗುಣವರ್ಧನಂ’ ಎಂದುದಾಗಿ,
ಇಂತೀ ಎಲ್ಲವು ಮರ್ದನವಿಲ್ಲದೆ
ಸ್ವಧರ್ಮಗುಣ ತೋರಲರಿಯವು.
ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು
ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು,
ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ
ವಿಶ್ವಾಸ ಬಲಿದು ತುಂಬಿ
ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂಧಿಯಾಗಿ
ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ
ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು,
ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./454
ಸಾಯದ ಪಶುವಿಂಗೆ ಒಂದು ಗೂಟ,
ಸಾಯುವ ಪಶುವಿಂಗೆ ಮೂರು ಗೂಟ,
ಸತ್ತ ಪಶುವಿಂಗೆ ಆರು ಗೂಟ.
ಸತ್ತ ಕರವ ಹೊತ್ತವರಿಗೆ ಅನೇಕ ಗೂಟ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./455
ಸಾಯದವರು ಸತ್ತವರ ಸುದ್ದಿಯ ಕೇಳಿ,
ಇದ್ದವರಿಗೆ ಹೇಳಿ ಸಾಯೆಂಬರು.
ಹೇಳದವರು ಸಾಯದೆ, ಕೇಳದವರು ಸಾಯದೆ,
ಇವರ ಸುದ್ದಿಯ ನೆರೆಮನೆಯವರು ಕೇಳಿ ಸತ್ತುಹೊದರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./456
ಸಾಲ ಮಾಡಲಿಲ್ಲ, ಕಡ ಕೊಡಲಿಲ್ಲ,
ಊರನಾಶ್ರೈಸಲಿಲ್ಲ, ಕಾಂತಾರಕ್ಕೆ ಹೋಗಲಿಲ್ಲ.
ನೆಲವಿಲ್ಲದ ಭೂಮಿಯಲ್ಲಿ ಬೀಜವಿಲ್ಲದೆ ಬಿತ್ತಲು,
ಅದು ಅಂಕುರಿಸಿ ಎರಡಾಯಿತ್ತು,
ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು,
ಕುಸುಮ ಮೂವತ್ತಾರಾಯಿತ್ತು
ಫಲ ಇನ್ನೂರಾ ಹದಿನಾರಾಯಿತ್ತು,
ಹಣ್ಣು ವಿಶ್ವಪರಿಪೂರ್ಣವಾಯಿತ್ತು,
ಆ ಹಣ್ಣನು ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು,
ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಪರಿಣಾಮಿಸಿ,
ಜಿಹ್ವೆ ಇಲ್ಲದೆ ರುಚಿಸಿ ಸುಖಿಯಾಗಿರ್ದು
ಸಂಸಾರವ ಮಾಡುತಿರ್ದ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./457
ಸುಟ್ಟ ಸುಣ್ಣವ ಹಸಿಮಡಕೆಗೆ ತುಂಬದೆ,
ಹಸಿಗೋಡೆಗೆ ಸಾರಿಸದೆ, ಬಿಸಿಮಡಕೆಗೆ ತುಂಬದೆ,
ಬಿಸಿಲಿಗೆ ಒಣಗಿಸಿ ಬಿಸಿನೀರೊಳಗೆ ಕಲಿಸಿ,
ಒಣಗೋಡೆಗೆ ಸಾರಿಸುವರು.
ಬಯಸಿ ಹಿಂಗದವರು ಈ ಸುಣ್ಣವ ಕೊಳ್ಳಿರಿ.
ಇಲ್ಲಾದರೆ ಇರುವಿರಿ ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./458
ಸೂಜಿಯ ಹಿನ್ನಿಯ ಹರಿದು ದಾರವ ಪೋಣಿಸಿ,
ಮೂರುಮೂಲಿ ಆರೇಣಿಗೆ ಹಲವು ವರ್ಣದ ಮಣಿಗಳ ಹೊಲಿದು
ಸಂದುಸಂದಿಗೆ ಯಂತ್ರವ ಹೊಲಿದು ಕಾಂತಿಯ ಮಾಡಿ
ಕೈಕಾಲು ಕಣ್ಣು ಕರುಳಿಲ್ಲದ ಪರದೇಶದ ಪರದೇಶಿಯಾದ
ಶಿಶುವಿಂಗೆ ತೊಡಿಸುವರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./459
ಸೂರ್ಯವರ್ಣದ ಚಾಪಿ ಬ್ರಹ್ಮಲೋಕವ ನುಂಗಿತ್ತು.
ಚಂದ್ರವರ್ಣದ ಚಾಪಿ ವಿಷ್ಣುಲೋಕವ ನುಂಗಿತ್ತು.
ಅಗ್ನಿವರ್ಣದ ಚಾಪಿ ರುದ್ರಲೋಕವ ನುಂಗಿತ್ತು.
ಉಳಿದ ವರ್ಣದ ಚಾಪಿ ಹಲವು ಲೋಕ ಬ್ರಹ್ಮಾಂಡವ ನುಂಗಿತ್ತು.
ನುಂಗದೆ ಹಿಂಗದಿರಬಲ್ಲಡೆ ಕಾಯಕದಲ್ಲಿರಬೇಕು.
ಹಿಂಗಿದಡೆ ಭಂಗ, ಅಂತಕನವರ ಮನೆವಾಸ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./460
ಸೆರೆಯ ಕುಡಿದವ ಗುರು ಎಂಬೆನೆ? ಎನ್ನೆನಯ್ಯಾ.
ಹೆಂಡವ ಕುಡಿದವ ಲಿಂಗಾಂಗಿ ಎಂಬೆನೆ? ಎನ್ನೆನಯ್ಯಾ.
ಕಂಡವ ತಿಂದವ ಚರಲಿಂಗವೆಂಬೆನೆ? ಎನ್ನೆನಯ್ಯಾ.
ಈ ಭೇದವ ತಿಳಿಯಬಲ್ಲರೆ ಭಕ್ತರೆಂಬೆ,
ತಿಳಿಯದಿದ್ದರೆ ಭವಭಾರಿಗಳೆಂಬೆ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./461
ಸೆಳವಿನ ಮಡದ ಮತ್ಸ್ಯವು ವ್ಯಾಧಂಗೆ ವಶ.
ತಿರುಗಣಿಯ ಮಡುವಿನ ಮತ್ಸ್ಯವು
ವ್ಯಾಧಂಗೆ ವಶವಾಗದೆ ಪೋದವು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./462
ಸೆಳವು ನೆಲೆಯಿಲ್ಲದ ಮಡುವಿನ
ಏಡಿ ಮಂಡೂಕವ ಬಲೆಯಿಲ್ಲದೆ ಪಿಡಿದು,
ಕರುಳನೆಲ್ಲವ ತೆಗೆದು ಮಾರಿ,
ಮಾರಾಂಕನ ಕಾಯಕವ ಮಾಡುತ್ತಿರ್ಪನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./463
ಸೌಟೆಣ್ಣೆಯ ಪ್ರೇಮಿಗಳು ಘನ ಎಣ್ಣೆಯ ಪ್ರೇಮವನೆತ್ತಬಲ್ಲರು?
ಕೊಡದೆಣ್ಣೆಯ ಧಾರೆಯ ಕೊಳ್ಳದವರು
ಕೊಡ ಎಣ್ಣೆಯ ಕೊಂಡೇವೆಂಬರು.
ಇಂತಪ್ಪ ವ್ಯವಹಾರಿಗಳ ಕೂಡ ಗಾಣಿಗೇರ
ಕಲ್ಲಪ್ಪನು ಮಾತಾಡನು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./464
ಸ್ಥಾವರ ಜಂಗಮವೆಂದೆಂಬಿರಿ.
ಸ್ಥಾವರವು ನಿಃಶಬ್ದ, ಜಂಗಮವು ಮಂತ್ರಶಬ್ದ.
ಒಂದೆಂದಾಗದಯ್ಯ, ಒಂದಾಗಲರಿಯದು.
ಅದೆಂತೆಂದಡೆ: ತಿಳಿದರೆ ಒಂದು, ತಿಳಿಯದಿದ್ದರೆ ಎರಡು.
ಅದೇನು ಕಾರಣವೆಂದರೆ-
ಸ್ಥಾವರವಾವುದು ಜಂಗಮವಾವುದು ತಿಳಿಯದ ಕಾರಣ.
ಸ್ಥಾವರವೇ ಇಷ್ಟಲಿಂಗ, ಜಂಗಮವೇ ಪ್ರಾಣಲಿಂಗ.
ಅಂತಪ್ಪ ಪ್ರಾಣಲಿಂಗವನೇ
ಶ್ರೀಗುರು ಬಹಿಷ್ಕರಿಸಿ ಕರಸ್ಥಲಕ್ಕೆ
ಇಷ್ಟಬ್ರಹ್ಮವ ಮಾಡಿಕೊಟ್ಟನೆಂದು ತಿಳಿಯಬಲ್ಲರೆ
ಸ್ಥಾವರ ಜಂಗಮ ಒಂದೇ.
ಈ ನಿರ್ಣಯವ ತಿಳಿಯದಿದ್ದರೆ ಸ್ಥಾವರ ಜಂಗಮ ಒಂದೇ ಅಲ್ಲವು.
ಉಭಯದ ಭೇದವ ನಿಮ್ಮ ಶರಣರೇ ಬಲ್ಲರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./465
ಹಂದಿ, ಮೊಲ, ಪಶುವ ತಿಂದವನೇ ಭಕ್ತ.
ಆನೆ, ಕುದುರೆ, ನಾಯಿಯ ತಿಂದವನೇ ಮಹೇಶ್ವರ.
ಕೋಣ, ಎಮ್ಮೆ, ಹುಲಿಯ ತಿಂದವನೇ ಪ್ರಸಾದಿ.
ಕೋಡಗ, ಸರ್ಪ, ಉಡವ ತಿಂದವನೇ ಪ್ರಾಣಲಿಂಗಿ.
ಬೆಕ್ಕನು, ಹರಿಣವನು, ಕರುಗಳನು ತಿಂದವನೇ ಶರಣನು.
ಹದ್ದು, ಕಾಗೆ, ಪಿಪೀಲಿಕನ ತಿಂದವನೇ ಐಕ್ಯ.
ಇಂತೀ ಎಲ್ಲವ ಕೊಂದು ತಿಂದವನ ಕೊಂದು
ಯಾರೂ ಇಲ್ಲದ ದೇಶಕ್ಕೆ ಒಯ್ದು
ಅಗ್ನಿ ಇಲ್ಲದೇ ಸುಟ್ಟು, ನೀರಿಲ್ಲದೆ ಅಟ್ಟು,
ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು,
ಪರಿಮಾಣವಿಲ್ಲದ ಹರಿವಾಣದಲ್ಲಿ ಗಡಣಿಸಿಕೊಂಡು,
ಹಿಂದು ಮುಂದಿನ ಎಡಬಲದ ಸಂಶಯಂ ಬಿಟ್ಟು ನಿಶ್ಚಿಂತನಾಗಿ,
ಸ್ವಸ್ಥ ಪದ್ಮಾಸನದಲ್ಲಿ ಮುಹೂರ್ತವ ಮಾಡಿ,
ಏಕಾಗ್ರಚಿತ್ತಿನಿಂದ ಹಲ್ಲು ಇಲ್ಲದೆ ಮೆಲ್ಲಬಲ್ಲರೆ
ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ,
ಸಮಯಪ್ರಸಾದಿ, ಏಕಪ್ರಸಾದಿ,
ಗುರು ಲಿಂಗ ಜಂಗಮ ಪಾದೋದಕ ಪ್ರಸಾದಿ ಎಂಬೆನಯ್ಯಾ.
ಇಂತೀ ಭೇದವನು ತಿಳಿಯದೆ ಭಕ್ತರ ಮನೆಯಲ್ಲಿ
ಉನ್ನತಾಸನದ ಗದ್ದುಗೆಯ ಮೇಲೆ ಕುಳಿತು,
ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ
ಗುರುಮೂರ್ತಿಗಳು, ಚರಮೂರ್ತಿಗಳು
ಇಂತೀ ಉಭಯರು ಸತ್ತ ಶವದಿಂದತ್ತತ್ತ ನೋಡಾ.
ಇಂತೀ ವಿಚಾರವನು ತಿಳಿಯದೆ
ನಾವು ಪರಮವಿರಕ್ತರು, ಪಟ್ಟದಯ್ಯಗಳು, ಚರಮೂರ್ತಿಗಳು,
ಗುರುಸ್ಥಲದ ಅಯ್ಯತನದ ಮೂರ್ತಿಗಳೆಂದು
ಪಾದಪೂಜೆಯ ಮಾಡಿಸಿಕೊಂಡು
ಪಾದವ ಪಾಲಿಸುವರೆಂದು
ಭಕ್ತರಿಗೆ ತೀರ್ಥವೆಂದು ಕೊಡುವಂಥವರು
ಬೀದಿಬಾಜಾರದಲ್ಲಿ ಕುಳಿತು ಸೆರೆಯ ಮಾರುವ
ಹೆಂಡಗಾರರು ಇವರಿಬ್ಬರು ಸರಿ ಎಂಬೆ.
ಇಂತೀ ನಿರ್ಣಯವನು ತಿಳಿಯದೆ
ಭಕ್ತರನಡ್ಡಗೆಡಹಿಸಿಕೊಂಡು.
ಪ್ರಸಾದವೆಂದು ತಮ್ಮ ಎಡೆಯೊಳಗಿನ
ಕೂಳ ತೆಗೆದು ಕೈಯೆತ್ತಿ ನೀಡುವರು.
ಪೇಟೆ ಬಜಾರ, ಬೀದಿಯಂಗಡಿ ಕಟ್ಟೆಯಲ್ಲಿ ಕುಳಿತು
ಹೋತು ಕುರಿಗಳನು ಕೊಂದು
ಅದರ ಕಂಡವನು ಕಡಿದು ತಕ್ಕಡಿಯಲ್ಲಿ ಎತ್ತಿ ತೂಗಿ ಮಾರುವ
ಕಟುಕರು ಇವರಿಬ್ಬರು ಸರಿ ಎಂಬೆ.
ಇಂತೀ ಭೇದವ ತಿಳಿಯದೆ
ಗುರುಲಿಂಗಜಂಗಮವೆಂಬ ತ್ರಿಮೂರ್ತಿಗಳು
ಪರಶಿವಸ್ವರೂಪರೆಂದು ಭಾವಿಸಿ ಪಾದೋದಕ ಪ್ರಸಾದವ ಕೊಂಬ ಭಕ್ತನು
ಕೊಡುವಂತ ಗುರುಹಿರಿಯರು
ಇವರ ಪಾದೋದಕ ಪ್ರಸಾದವೆಂತಾಯಿತಯ್ಯಾ ಎಂದಡೆ.
ಹಳೆನಾಯಿ ಮುದಿಬೆಕ್ಕು ಸತ್ತ
ಮೂರುದಿನದ ಮೇಲೆ ಆರಿಸಿಕೊಂಡು ಬಂದು
ಅದರ ಜೀರ್ಣಮಾಂಸವನು ತಿಂದು
ಬೆಕ್ಕು, ನಾಯಿ, ಹಂದಿಯ ಉಚ್ಚಿಯ ಕುಡಿದಂತಾಯಿತಯ್ಯಾ.
ಇಂತಿದರನುಭಾವವನು ಸ್ವಾನುಭಾವಗುರುಮೂರ್ತಿಗಳಿಂದ
ತನ್ನ ಸ್ವಯಾತ್ಮಜ್ಞಾನದಿಂದ ವಿಚಾರಿಸಿ ತಿಳಿದು ನೋಡಿ,
ಇಂತಿವರೆಲ್ಲರೂ ಕೂಳಿಗೆ ಬಂದ ಬೆಕ್ಕು ನಾಯಿಗಳ ಹಾಗೆ
ಅವರ ಒಡಲಿಗೆ ಕೂಳನು ಹಾಕಿ,
ಬೆಕ್ಕು ನಾಯಿಗಳ ಅಟ್ಟಿದ ಹಾಗೆ ಅವರನು ಅಟ್ಟಬೇಕು ನೋಡಾ.
ಇಂತಿವರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು.
ಈ ಹೊಲೆಯ ಮಾದಿಗರ ಮೇಳಾಪವನು ಬಿಟ್ಟು
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಗುರುಲಿಂಗಜಂಗಮದ
ಪಾದೋದಕ ಪ್ರಸಾದವ ಕೊಳಬಲ್ಲರೆ
ಆ ಭಕ್ತರಿಗೆ ಮೋಕ್ಷವೆಂಬುದು ಕರತಳಾಮಳಕ ನೋಡೆಂದನಯ್ಯಾ
ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./466
ಹಗಲಳಿದು ಇರುಳಲ್ಲಿ ಒಂದು ಕತ್ತೆಯನೇರಿ,
ಇಬ್ಬರ ಹೆಂಡರ ಮದುವೆಯಾಗಿ,
ಒಬ್ಬಳು ಕರಾಂಡ, ಒಬ್ಬಳು ಅಜಾಂಡ.
ಕರಾಂಡವೆಂಬ ಸತಿಗೆ ಕತ್ತೆಯ ಕೊಟ್ಟೆ;
ಅಜಾಂಡವೆಂಬ ಸತಿಗೆ ಕಾಂಡವ ಕೊಟ್ಟೆ.
ಒಬ್ಬಳ ಹಿಂದೆ ಒಬ್ಬಳ ಮುಂದೆ ಮಲಗಿ
ಇಬ್ಬರ ಸಂಗದಿಂ ಒಂದು ಶಿಶುವು ಹುಟ್ಟಿ,
ಒಬ್ಬಳ ಬಿಟ್ಟು ಒಬ್ಬಳ ನುಂಗಿ ಶಿಶುವು ಎನ್ನ ನುಂಗಿತ್ತು.
ಆ ಶಿಶುವ ನಾ ನುಂಗಿದೆನೆಂಬುದ ನೀನರಿ ನಾನರಿಯೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./467
ಹಗಲೋದಿ ಬ್ರಹ್ಮಂಗೆ ಪೇಳಿದೆ,
ಇರುಳೋದಿ ವಿಷ್ಣುವಿಂಗೆ ಪೇಳಿದೆ,
ಉಭಯವಿಲ್ಲದ ವೇಳೆಯಲ್ಲಿ ಓದಿ ರುದ್ರಂಗೆ ಪೇಳಿದೆ,
ಎನ್ನ ಓದು ಕೇಳಿ ನಿದ್ರೆಯ ಕಳೆದು
ಜಾಗ್ರದಲ್ಲಿ ಕುಳಿತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./468
ಹಡಿಯದವರಿಗೆ ಬಳೆಯನಿಡಿಸುವೆ,
ಹಡದವರಿಗೆ ಬಳೆಯನಿಡಿಸದೆ.
ರಂಡಿಗೆ ಬಳೆಯನಿಡಿಸುವೆ,
ಮುತ್ತೈದೆಗೆ ಬಳೆಯನಿಡಿಸದೆ.
ಸಣ್ಣವರಿಗೆ ಬಳೆಯನಿಡಿಸುವೆ,
ದೊಡ್ಡವರಿಗೆ ಬಳೆಯನಿಡಿಸದೆ.
ನೀಲಬಳೆಯನಳಿದು ಬಿಳಿಬಳೆಯನಿಟ್ಟು ಒಡೆಯದೆ
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./469
ಹತ್ತಕ್ಕೆ ನೀಡಿ ಹನ್ನೊಂದಕ್ಕೆ ನೀಡದಾತ
ಭಕ್ತನೇ? ಅಲ್ಲಲ್ಲ.
ಭಿಕ್ಷವ ಕೊಡುವಲ್ಲಿ ಮುಖವ ನೋಡಿ ಕೊಡುವಾತ
ಭಕ್ತನೇ? ಅಲ್ಲಲ್ಲ.
ಗಣಾರಾಧನೆಯ ಮಾಡಿದಲ್ಲಿ
ಒಳಗೊಂದು ಹೊರಗೊಂದು ನೀಡುವಾತ
ಭಕ್ತನೇ? ಅಲ್ಲಲ್ಲ.
ಅದೇನು ಕಾರಣವೆಂದರೆ ಇವರು ತಾಮಸಭಕ್ತರು.
ಇಂತಪ್ಪ ತಾಮಸಭಕ್ತರಿಗೆ
ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./470
ಹರಕರವಿಯ ಹುರಿಯಿಲ್ಲದ ದಾರದಲ್ಲಿ ಹೊಲಿದು,
ಹೊಲಿದ ಕೂಲಿಯ ಕೊಡುವರು.
ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸುವರು.
ಹರಕರವಿಯ ಹೊಲಿಯದೆ ಹುರಿಗೂಡಿದ ದಾರವ ಬಿಚ್ಚದೆ
ಹರಿಯದೆ ಹೊಸ ಅರಿವೆಯ ಹೊಲಿದು,
ಹೊಲಿದ ಕೂಲಿಯ ಕೊಳ್ಳದವರು
ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸದೆ
ಬಯಲುಭೂಮಿಯಲ್ಲಿ ಚರಿಸಿ ಆರಿಗೂ ಸಿಕ್ಕದೆ
ಇರ್ಪರು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./471
ಹರಹರಾ, ಈ ಮಾಯೆ ಇದ್ದೆಡೆಯ ನೋಡಾ!
ಶಿವಶಿವಾ, ಈ ಮಾಯೆ, ಇದ್ದೆಡೆಯ ನೋಡಾ!
ಪುರುಷನ ಮುಂದೆ ಸ್ತ್ರೀಯಾಗಿರ್ಪಳು,
ಸ್ತ್ರೀಯ ಮುಂದೆ ಪುರುಷನಾಗಿರ್ಪುದ ಕಂಡೆ.
ಕೂಟಕ್ಕೆ ಸತಿಯಾಗಿರ್ಪಳು, ಮೋಹಕ್ಕೆ ಮಗಳಾಗಿರ್ಪಳು ಕಂಡೆ.
ಜನನಕ್ಕೆ ತಾಯಾಗಿರ್ಪಳು, ಮೋಹವಿಳಾಸಕ್ಕೆ
ಜಾರಸ್ತ್ರೀಯಾಗಿರ್ಪಳು ಕಂಡೆ.
ಧರ್ಮಕ್ಕೆ ಕರ್ಮರೂಪಿಣಿಯಾಗಿರ್ಪಳು,
ಕರ್ಮಕ್ಕೆ ಧರ್ಮರೂಪಿಣಿಯಾಗಿರ್ಪಳು ಕಂಡೆ.
ಯೋಗಿಗಳೆಂಬವರ ಭೋಗಕ್ಕೆ ಒಳಗುಮಾಡಿತ್ತು,
ಭೋಗಿಗಳೆಂಬವರ ಯೋಗಿಗಳ ಮಾಡಿತ್ತು ಕಂಡೆ.
ಇಂತಪ್ಪ ಮಾಯೆಯ ಗೆಲುವಡೆ ತ್ರೈಲೋಕದೊಳಗೆ
ದೇವ ದಾನವ ಮಾನವರು ಮೊದಲಾದವರ
ನಾನಾರನು ಕಾಣೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./472
ಹರಿವ ನೀರ ಉರಿಕೊಂಡದಲ್ಲಿ
ಅರಗಿನ ಭೂಮಿ ಕರಗದಿರುವದ ಕಂಡೆ.
ನವಗೋಪುರಯುಕ್ತವಾದ ಆಕಾಶದಲ್ಲಿ ಒಂದೂರ ಕಂಡೆ.
ಸತಿಪತಿಸಹಿತವಾಗಿ ನವಮುಗ್ಧರಿರುವದ ಕಂಡೆ.
ಊರ ನಡುವೆ ಸಹಸ್ರ ಶತಪಂಚತ್ರಯ
ಏಕಕಾನಿಯ ಪಂಜರವ ಕಂಡೆ.
ಅಗ್ನಿವರ್ಣ ಶ್ವೇತಮುಖದ ಗಿಳಿಯ ಕಂಡೆ.
ಹಲವರು ಗಿಳಿಯ ಕಂಡು ಸಂತೋಷಬಟ್ಟು
ರಕ್ಷಿಸಿ ಉಣ್ಣದೆ ಉಂಡು ಹೋಗುವದ ಕಂಡೆ.
ನಾನು ಗಿಳಿಯ ಕಂಡು ಸಂತೋಷಬಟ್ಟು
ರಕ್ಷಿಸಿ ಉಂಡು ಉಣ್ಣದೆ ಹೋಗುವದ ಕಂಡೆ.
ಹಡದವರು ಸತ್ತು, ಹಡಿಯದವರು ಉಳಿದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./473
ಹಸಿತೊಗಲಿಗೆ ಬಿಸಿಯೆಳಿಯನಿಕ್ಕಿ,
ಮಚ್ಚೆಯ ಮಾಡಲು,
ಮೆಟ್ಟಿದವ ಸತ್ತ, ಮೆಟ್ಟದವ ಉಳಿದ,
ಉಳಿದವರು ಬಹುಮಚ್ಚಿಯ ಮೆಟ್ಟಿದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./474
ಹಸಿಯ ಗೋಡೆಗೆ ಚಿತ್ರವ ಬರೆಯದೆ
ಒಣಗೋಡೆಗೆ ಆರುವರ್ಣಗೂಡಿದ ಬಣ್ಣದ ಚಿತ್ರವ ಬರೆಯಲು,
ಚಿತ್ರ ಗೋಡೆಯ ನುಂಗಿ, ಗೋಡೆ ಚಿತ್ರವ ನುಂಗಿ,
ಚಿತ್ರದ ಮನೆಯವರು ಚಿತ್ರಕನ ಕೊಂದು ಕಾಯಕವ ಮಾಡುತ್ತಿರ್ಪರು.
ಇದ ಬಲ್ಲವರು ಕಾಯಕವ ಮಾಡಬೇಕು.
ಅರಿಯದವರು ಕಾಯಕ ಬಿಟ್ಟು,
ಚಿತ್ರಕರು ಇದ್ದೆಡೆಗೆ ಪೋಗಿ ಚಿತ್ರವ ಬರಿಸಿ
ತಿಳಿಯಬೇಕು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./475
ಹಸಿಹುಲ್ಲಿನ ರಸವ ಕುಡಿದವರು ಬರುವರು.
ಒಣಹುಲ್ಲಿನ ರಸವ ಕುಡಿದವರು ಬಾರದೆ ಪೋದರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./476
ಹಸಿಹುಲ್ಲು ಮೆಯ್ದ ಪಶುವಿಗೆ
ಹಾಲುಂಟು, ಬೆಣ್ಣೆಯಿಲ್ಲ.
ಒಣಹುಲ್ಲು ಮೆಯ್ದ ಪಶುವಿಗೆ
ಹಾಲಿಲ್ಲ, ಬೆಣ್ಣೆಯುಂಟು.
ಸರ್ವರು ಪಶುವಿಂಗೆ ರಸದ ಹುಲ್ಲು ಮೆಯ್ಸಿ
ಹಾಲ ಕರೆದುಂಬರು.
ಅದರೊಳೊಬ್ಬ ಅಧಮ ಕರಡವ ಪಶುವಿಗೆ ಮೆಯ್ಸಿ
ಹಾಲ ಕರೆದುಂಬನು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./477
ಹಳದಿಯ ಪೂಸಿ, ವಸ್ತ್ರವ ಪೊದ್ದು,
ಕಂಕಣವ ಕಟ್ಟಿ ಕಾಳಗಕ್ಕೆ ಹೋಗಿ ಮರಳಿದರೆ,
ವೀರನೆಂತಪ್ಪನಯ್ಯ ?
ಆವುದಾನೊಂದು ಶುನಿಗೆ ಕಣಕ ತುಪ್ಪವ ತಿನ್ನಿಸಿ
ಕಾಲಗಗ್ಗರಿ ಜಂಗು ಜಲ್ಲಿ ಕೊರಳಲ್ಲಿ ಕಿರಿಗೆಜ್ಜಿಯ ಕಟ್ಟಿ
ಶಿಕಾರಿಯವೈದು ಜಂಬುಕದ ಮೇಲೆ ಬಿಡಲು
ಮರಳಿದರೆ ವೀರನೆಂತಪ್ಪುದಯ್ಯ ?
ಹಾಗೆ ಶ್ರೀಗುರುಕಾರುಣ್ಯವ ಪಡೆದು
ಲಿಂಗಾಂಗಸಂಬಂಧಿಯಾಗಿ,
ಗುರುಲಿಂಗಜಂಗಮದ ನಡೆನುಡಿ ಭಕ್ತಿಯೆಂದಡೆಯು
ಮನ ಹಿಮ್ಮೆಟ್ಟಿದಡೆಯು
ನಿಮ್ಮ ಲಿಂಗಾಂಗಿಭಕ್ತನೆಂತಪ್ಪುವನಯ್ಯ ?
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./478
ಹಳೆಯ ರಗಳೆಯ ಹೋಲಬಲ್ಲರೆ ಭಕ್ತರೆಂಬೆ.
ಹರಿವ ನೀರ ಹೋಲಬಲ್ಲರೆ ಭಕ್ತರೆಂಬೆ.
ಭೂಮಿಯ ಹೋಲಬಲ್ಲರೆ ಭಕ್ತರೆಂಬೆ.
ಇಷ್ಟುಳ್ಳಾತನೆ ಶಿವನಲ್ಲಿ ಸಮರಸವನುಳ್ಳ ಸದ್ಭಕ್ತನೆಂಬೆ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/479
ಹಾದರಗಿತ್ತಿಗೆ ಹಲವು ಶಬ್ದ,
ಪುರುಷನುಳ್ಳವರಿಗೆ ಅರೆನಾಲಿಗೆ,
ನಾನು ಹಲವು ಶಬ್ದವನಳಿದು ಅರೆನಾಲಿಗೆಯನುಡುಗಿಸಿ,
ಹಾದರವನಾಡಿ ಸರ್ವಕಾಯಕವ ಮಾಡುತ್ತಿರ್ಪೆನಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./480
ಹಾದರದಲ್ಲಿ ಹುಟ್ಟಿದ ಕೂಸಿಂಗೆ
ಹಲವು ವೇಷ, ಹಲವು ಕಾಯಕ.
ಹಾದರ ಇಲ್ಲದೆ ಪುಟ್ಟಿದ ಕೂಸಿಂಗೆ
ಹಲವು ಕಾಯಕವಿಲ್ಲದೆ ಒಂದು ವೇಷ, ಒಂದು ಕಾಯಕ.
ಎನಗೆ ಆವ ವೇಷ ಆವ ಕಾಯಕವಿಲ್ಲ ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./481
ಹಾದರವನಾಡುವರಿಗೆ ಹನ್ನೆರಡು ಮಂದಿ,
ಹಾದರ ಇಲ್ಲದವರಿಗೆ ಒಬ್ಬ ಪುರುಷನು.
ಎನಗೆ ಹನ್ನೆರಡೂ ಇಲ್ಲ, ಒಂದೂ ಇಲ್ಲ ನೋಡೆಂದನಯ್ಯಾ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./482
ಹಾದಿಹೊಲವ ಮಾಡಿ, ಮೂರೆತ್ತು ಹೂಡಿ,
ಆ ಮೂರೆತ್ತಿಗೆ ಒಂದು ನೊಗ ಕಟ್ಟಿ, ನೇಗಲಿಯ ಹೂಡಿ,
ಕರಕಿಯ ಬಿಟ್ಟು ಕಣಗಿಲ ತೆಗೆದು,
ಹೊಲ ಹಸನ ಮಾಡಿ,
ಗೋದಿ, ಕಡಲೆ, ಜೋಳ ಮೊದಲಾದ
ಹದಿನೆಂಟು ಧಾನ್ಯ ಜೀನಸವಿಲ್ಲದೆ ಬಿತ್ತಿಬೆಳೆದು
ಹಕ್ಕಿ ಹೊಡೆಯದೆ ಹೊಲವ ಮಾಡಿ
ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./483
ಹಾರುವರ ಬಿಟ್ಟಿಯ ಮಾಡಲಿಲ್ಲ, ಹಾಲಕೊಡ ಹೊರಲಿಲ್ಲ.
ತುಪ್ಪವನುಂಡು ಕಾರದೆ ಎನ್ನ ಸತಿಯ ಸಂಗವಬಿಟ್ಟು
ಅಪ್ಪನ ಸತಿಯ ಸಂಗವ ಮಾಡಿ
ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./484
ಹಾಲುಕುಡಿದ ಶಿಶು ಸತ್ತು
ವಿಷಕುಡಿದ ಶಿಶು ಬದುಕಿದುದ ಕಂಡೆ.
ಬೆಣ್ಣೆಯ ತಿಂದ ಶಿಶು ಸತ್ತು
ಕೆಂಡವ ತಿಂದ ಶಿಶು ಬದುಕಿದುದ ಕಂಡೆ.
ಉಂಡಾಡುವ ಶಿಶು ಸತ್ತು
ಉಣ್ಣದೆ ಓಡಾಡುವ ಶಿಶು ಬದುಕಿದುದ ಕಂಡೆ.
ಅಂಗೈಯೊಳಗಣ ಶಿಶು ಸತ್ತು
ಬೀದಿಬಾಜಾರದಲ್ಲಿರುವ ಶಿಶು ಬದುಕಿದುದ ಕಂಡೆ.
ಬೆಳದಿಂಗಳೊಳಗಿನ ಶಿಶು ಸತ್ತು
ಬಿಸಿಲೊಳಗಿನ ಶಿಶು ಬದುಕಿದುದ ಕಂಡೆ.
ಅರಮನೆಯೊಳಗಣ ಅರಸಿಯ ಶಿಶು ಸತ್ತು
ಊರೊಳಗಣ ದಾಸಿಯ ಶಿಶು ಬದುಕಿದುದ ಕಂಡೆ.
ಹುಟ್ಟಿದ ಶಿಶು ಬೇನೆಯಿಲ್ಲದೆ ಸತ್ತು
ಹುಟ್ಟದೆ ಬೇನೆ ಹತ್ತಿದ ಶಿಶು ಬದುಕಿದುದ ಕಂಡೆ.
ಈ ಉಭಯ ಭೇದವ ಬಲ್ಲ ಶಿಶು ಚನ್ನಮಲ್ಲಯ್ಯನಲ್ಲಿ ಬಯಲಾಯಿತ್ತು.
ಮತ್ತಂ, ಈ ಉಭಯ ನಿರ್ಣಯವನರಿಯದ ಶಿಶು
ಮಹಾಮಲೆಯಲ್ಲಿ ಬಯಲಾಯಿತ್ತು.
ಇದರಂದಚಂದ ನಿಮ್ಮ ಶರಣರೇ ಬಲ್ಲರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./485
ಹಾಳುಗೋಟಿನ ಭಿತ್ತಿ ಬೇಲಿಯಲ್ಲಿ
ತಲೆ ಕಣ್ಣು ಕಾಲಿಲ್ಲದ ಮೂರು ಹೆಣವ ಕಚ್ಚಿ,
ಉಡವು ಹರಿದಾಡುವದ ಕಂಡೆ.
ಕಬ್ಬಕ್ಕಿಹಿಂಡಿನಲ್ಲಿ ಕೂಡಿ ಮೇಯುವದ ಕಂಡೆ.
ಆಕಾಶದಲ್ಲಿ ಧೂಮಕೇತು ಮೂಡಲು
ಉಡು ಸತ್ತು, ತಲೆ ಕಾಲು ಕಣ್ಣು ಬಂದು ನೋಡಲು
ಕಬ್ಬಕ್ಕಿಯ ಹಿಂಡು ಕೈಯ ನುಂಗಿತ್ತು,
ಸತ್ತ ಉಡವು ಕೈಯ ನುಂಗಿ, ಎಲ್ಲಿ ಹೋಯಿತ್ತೆಂಬುದ ತಿಳಿಯಬಲ್ಲರೆ,
ಅಚ್ಚಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./486
ಹಾಳುಬಾವಿ ಹಿಡಿಮೊಟ್ಟೆಗೆ
ತೊಗಲಿಲ್ಲದೆ, ಉಳಿಮುಟ್ಟದೆ, ಎಳಿಯನಿಕ್ಕಿ ನೀರುತುಂಬಲು,
ಕುಡಿದವರು ಒಳಗಾದರು.
ಕುಡಿಯದವರು ಹೊರಗಾದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./487
ಹಿಡಿಯಿಲ್ಲದ ಉಳಿ, ಕಾವಿಲ್ಲದ ಬಾಚಿ, ಹಲ್ಲಿಲ್ಲದ ಕರಗಸ
ಇಂತೀ ಆಯುಧದಿಂದ ಕಟ್ಟಿದಮನೆ ಕೆಡವಿ,
ತೊಲೆ ಕಂಬವ ಕಡಿದು ಸುಟ್ಟು, ತೊಲೆ ಕಂಬವಿಲ್ಲದೆ
ದಾರದಿಂ ಮನೆಯ ಕಟ್ಟಿಕೊಟ್ಟು ಹಣವ ಕೊಂಡುಂಡು
ಕಾಯಕವ ಮಾಡುತ್ತಿರ್ದರು ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./488
ಹಿತ್ತಾಳಿಯ ಭಾಂಡಕ್ಕೆ ಹೊನ್ನು ಕೊಟ್ಟು
ಮೂರು ಕಳೆವೆ.
ಕಂಚಿನ ಭಾಂಡಕ್ಕೆ ವರಹಕೊಟ್ಟು
ಐದು ಕಳೆವೆ.
ತಾಮ್ರಭಾಂಡಕ್ಕೆ ಮೋಹರಕೊಟ್ಟು
ಹದಿನಾರು ಕಳೆವೆ.
ಕಿರುಕಳಭಾಂಡಕ್ಕೆ ಮುತ್ತು ಮಾಣಿಕ ವಜ್ರದ ಕಿರಣಂಗಳ ಕೊಟ್ಟು
ಪಂಚವಿಂಶತಿಯ ಕಳೆವೆ.
ಇಂತಿಲ್ಲದೆ ಕಾಯಕವ ಮಾಡಿ
ಕಾಳಮ್ಮನ ಉದರದಲ್ಲಿ ಸತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./489
ಹಿರಿಬೇನೆಯನಳಿಯಬೇಕೆಂಬಣ್ಣಗಳು
ಲಾಲಿಸಿರಯ್ಯಾ.
ಆನೆಯ ತಲೆ ಒಡದು ಹಲ್ಲುಕಿತ್ತು,
ಕೋತಿಯ ಕೊಂದು, ಕೋತಿಯ ಕಂಡವ ಹೆಂಡದ ಕುಡಕಿಯಲ್ಲಿ
ಅಟ್ಟು ತಿಂದವರು ಹಿರಿರೋಗವ ಕಳವರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./490
ಹುಟ್ಟದ ಮುನ್ನ ಹೋಗಾಡಿ ಕೊಟ್ಟು ಕೊಂಡೆ.
ಹುಟ್ಟದ ಮುನ್ನ ಮೂವರ ಸೇವೆ ಮಾಡಿದೆ.
ಹುಟ್ಟದ ಮುನ್ನ ಭವಿಗಳಲ್ಲಿ ಚರಿಸಿದೆ.
ಹುಟ್ಟಿದ ಮೇಲೆ ನಷ್ಟವ ಮಾಡಿ
ಅಂಗೈಯ ಮೇಲೆ ಹಾಲು ಕುಡಿದು
ಸತ್ತು ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./491
ಹುಟ್ಟಲಿಲ್ಲದ ಮರದಲ್ಲಿ ಹಾರದ ಪಕ್ಷಿ ಗೂಡನಿಕ್ಕಿ,
ಬ್ರಹ್ಮಾಂಡವನು ಉಭಯ ರೆಕ್ಕೆಯಿಂದ ಆವರಿಸಿಕೊಂಡು,
ಆರೂ ಇಲ್ಲದ ದೇಶಕ್ಕೆ ಹಾರಿಹೋಯಿತ್ತು.
ಆ ಪಕ್ಷಿಯನು ಕೊಲ್ಲದೆ ತಿಂದವನೇ ಚಿಲ್ಲಿಂಗಸಂಬಂಧಿ,
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./492
ಹುಟ್ಟಿ ಸಾಯಬೇಕೆಂಬಾತ ಶರಣನಲ್ಲ.
ಸತ್ತು ಸ್ವರ್ಗದಲ್ಲಿರಬೇಕೆಂಬಾತ ಶರಣನಲ್ಲ.
ಎರಡಿಲ್ಲದೆ ಇರುವಾತ ಅಚ್ಚಶರಣ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./493
ಹುಟ್ಟಿದ ಶಿಶುವಿಂಗೆ ಸುನತಿ ಇಲ್ಲ;
ಹುಟ್ಟದ ಶಿಶುವಿಂಗೆ ಸುನತಿಯುಂಟು.
ಸುನತಿಯಿಲ್ಲದವರು ಸತ್ತು
ಸುನತ್ಯಾದವರು ಸಾಯದೆ ಇರ್ಪರು.
ಇದ ಕಂಡು ಬಯಲ ಬೋದನದಲ್ಲಿ ಬೆರಗಾಗಿ
ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./494
ಹೆಂಡದ ಹರವಿಗೆ ಹಾಲಹರವಿಯ ಹೋಲಿಸಿದರೆ,
ಆ ಹೆಂಡದ ಹರವಿ ಹಾಲಹರವಿಯಾಗಬಲ್ಲುದೆ ?
ಮದ್ಯಪಾನದ ಘಟಕ್ಕೆ ಘೃತದಘಟ ಹೋಲಿಸಿದರೆ
ಆ ಮದ್ಯಪಾನದ ಘಟ ಘೃತಘಟವಾಗಬಲ್ಲುದೆ ?
ಆಡಿನ ಕೊರಳಮೊಲೆಗೆ ಆಕಳಮೊಲೆಯ ಹೋಲಿಸಿದರೆ
ಆ ಆಡಿನ ಕೊರಳ ಮೊಲೆ ಆಕಳ ಮೊಲೆಯಾಗಬಲ್ಲುದೆ ?
ಗುಲಗಂಜಿಗೆ ಮಾಣಿಕವ ಹೋಲಿಸಿದರೆ
ಆ ಗುಲಗಂಜಿ ಮಾಣಿಕವಾಗಬಲ್ಲುದೆ ?
ವಜ್ರದ ಪಾಷಾಣಕ್ಕೆ ರಂಗೋಲಿಯಕಲ್ಲು ಹೋಲಿಸಿದರೆ,
ಆ ರಂಗೋಲಿಯಕಲ್ಲು ವಜ್ರವಾಗಬಲ್ಲುದೆ ?
ಬಿಳಿಹೂಲಿಗೆ ಮೌಕ್ತಿಕವ ಹೋಲಿಸಿದರೆ
ಆ ಬಿಳಿಹೂಲಿಯ ಹಣ್ಣು ಮುತ್ತಾಗಬಲ್ಲುದೆ ?
ಇಂತೀ ದೃಷ್ಟಾಂತದಂತೆ ಲೋಕಮಧ್ಯದಲ್ಲಿ ಜೀವಾತ್ಮರು
ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು.
ಹಾಗೆ ಸುಜ್ಞಾನೋದಯವಾಗಿ-
ಶ್ರೀಗುರುಕಾರುಣ್ಯದಿಂ ಸರ್ವಾಂಗಲಿಂಗಸಂಬಂಧಿಗಳಾದ
ಶಿವಶರಣರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು.
ಇದು ಕಾರಣ ಅಂತಪ್ಪ ಭಿನ್ನಜ್ಞಾನಿಗಳಾದ ಜೀವಾತ್ಮರಿಗೆ
ಸುಜ್ಞಾನಿಗಳಾದ ಶಿವಶರಣರ ಹೋಲಿಸಿದರೆ
ಆ ಕಡುಪಾತಕಿ ಜಡಜೀವಿಗಳು ಶಿವಜ್ಞಾನಸಂಪನ್ನರಾದ
ಶರಣಜನಂಗಳಾಗಬಲ್ಲರೆ ?
ಆಗಲರಿಯರು ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./495
ಹೊತ್ತಾರೆ ಎದ್ದು ಗುಡಿಯ ಜಾಡಿಸಿ,
ಪಾತಾಳಗಂಗೆಯ ಉದಕದಿಂದ ಮಜ್ಜನಕ್ಕೆರೆದು,
ಭಕ್ತರ ಮನೆಗೆ ಹೋಗಿ ಭಿಕ್ಷವ ಬೇಡಿ ತಂದು
ಶ್ರೀಶೈಲಲಿಂಗಕ್ಕೆ ನೈವೇದ್ಯವ ಕೊಟ್ಟು
ಸುಖದಿಂದ ಕಾಯಕವ ಮಾಡುತಿರ್ದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./496
ಹೊನ್ನು ತೆತ್ತಲ್ಲದೆ ಹೊಲ ಮಾಡಬಾರದು.
ಬಿಟ್ಟಿ ಬೇಗಾರವಿಲ್ಲದೆ ಊರೊಳಗಿರಬಾರದು.
ಸರಕಾರಕ್ಕೆ ರುಜು ಇಲ್ಲದೆ ರೈತನಾಗಬಾರದು.
ಅದೆಂತೆಂದೊಡೆ: ಇಷ್ಟುಳ್ಳಾತನೇ ಪಾಚ್ಫಾರೈತ;
ಇಲ್ಲದಾತ ದುಬ್ಬುಳಕ ಎಂದನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
/497
ಹೊನ್ನು ತೆತ್ತಲ್ಲದೆ ಹೊಲ ಮಾಡಿದೆ,
ಬಿಟ್ಟಿ ಬೇಗಾರಿಲ್ಲದೆ ಊರೊಳಗೆ ಇದ್ದೆ,
ಸರಕಾರಕ್ಕೆ ರುಜು ಇಲ್ಲದೆ ರೈತನಾಗಿ.
ಅದೆಂತೆಂದಡೆ: ಇಂತಲ್ಲದೆ ಪಾಚ್ಫಾರೈತನಲ್ಲ; ಅವ ನಕ್ರ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./498
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಪಿಡಿದು
ಆಚರಿಸುವದು ಲೌಕಿಕವಲ್ಲ.
ಸತಿಸುತರ ಪಿಡಿದು ಮನಿಮಾರು ಕಟ್ಟಿ
ಪ್ರಪಂಚಮಾಡುವದು ಲೌಕಿಕವಲ್ಲ.
ಸಕಲ ಪ್ರಪಂಚಿನ ವ್ಯವಹಾರದಲ್ಲಿ ಇರ್ದಡೆಯು ಲೌಕಿಕವಲ್ಲ.
ಇನ್ನಾವುದು ಲೌಕಿಕವೆಂದಡೆ,
ತನ್ನ ಸ್ವಸ್ವರೂಪ ಪರಂಜ್ಯೋತಿಸ್ವರೂಪವೆಂಬುದ ಮರದು
ಪಂಚಭೂತದೇಹಸ್ವರೂಪ ನಾನೆಂದು ಇರುವುದೇ ಲೌಕಿಕ.
ತನ್ನ ಸ್ವಯಾತ್ಮಜ್ಞಾನವೆಂಬ ಸ್ವಾನುಭಾವಜ್ಞಾನದ
ಎಚ್ಚರವ ಮರತು ಅಜ್ಞಾನಜೀವನಾಗಿ
ಮಾಯಾಪ್ರಪಂಚಿನ ಮರವೆಯಲ್ಲಿರುವುದೇ ಲೌಕಿಕ.
ಶ್ರೀಗುರುಕರುಣದಿಂ ಪಡಕೊಂಡ ಕರಕಮಲದ
ಲಿಂಗಾಂಗದ ಸಮರಸವನರಿಯದೆ
ಅಂಗಮುಖದಲ್ಲಿ ಸಂಚರಿಸುವದು ಲೌಕಿಕ.
ಈ ವಚನದ ತಾತ್ಪರ್ಯಾರ್ಥವನರಿಯದವರು
ಲೌಕಿಕರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./499
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನಳಿದಲ್ಲದೆ
ಭವ ಹಿಂಗದೆಂಬರು ಭಿನ್ನ ಭಾವದಜ್ಞಾನಕಲಾತ್ಮರು.
ಅವೇನು ತಮ್ಮ ಸಂಬಂಧವೆ? ಸಂಬಂಧವಲ್ಲ.
ತಮ್ಮ ಸಂಬಂಧವಾದ ಮಲತ್ರಯವ ಪೇಳ್ವೆ.
ತನುವೇ ಮಣ್ಣು, ಮನವೇ ಹೆಣ್ಣು, ಆತ್ಮವೇ ಹೊನ್ನು.
ಇಂತೀ ಹೊನ್ನು ಹೆಣ್ಣು ಮಣ್ಣೆಂಬ
ತ್ರಿವಿಧವನೊಳಗಿಟ್ಟುಕೊಂಡು
ಬಾಹ್ಯದ ಮಲತ್ರಯಂಗಳ ವಿಸರ್ಜಿಸಿ
ಭವಹಿಂಗಿಸಬೇಕೆಂದು ಗುಡ್ಡ ಗಂಹರವ ಸೇರುವರು.
ಅವರಿಗೆ ಎಂದಿಗೂ ಭವಹಿಂಗದು.
ಮತ್ತೆಂತೆಂದೊಡೆ: ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು
ಅಂಗದ ಮೇಲೆ ಇಷ್ಟಲಿಂಗವ ಸ್ವಾಯತವ ಮಾಡಿಕೊಂಡು
ಆ ಇಷ್ಟಬ್ರಹ್ಮವನು ತನುಮನಧನದಲ್ಲಿ ಸ್ವಾಯತವ ಮಾಡಿ,
ಆ ತ್ರಿವಿಧ ಲಿಂಗದ ಸತ್ಕ್ರಿಯಾ ಸಮ್ಯಜ್ಞಾನ ಸ್ವಾನುಭಾವದಾಚರಣೆಯಿಂದ
ಆ ತನುತ್ರಯದ ಪ್ರಕೃತಿಯನಳಿದು,
ಆ ಮಾಯಾಮಲಸಂಬಂಧವೆಂಬ ಸತಿಸುತರು
ಮಾತಾಪಿತೃಗಳ ಸಂಬಂಧವಿಡಿದು,
ಆಚರಿಸಿದಡೆಯು ಅದಕ್ಕೇನು ಚಿಂತೆಯಿಲ್ಲ,
ಇಷ್ಟುಳ್ಳವರಿಗೆ ಭವ ಹಿಂಗಿ ಮುಕ್ತಿಯಾಗುವದು.
ಪ್ರಮಥಗಣಂಗಳ ಸಮ್ಮತ ಶಿವಜ್ಞಾನಿಗಳು ಮೆಚ್ಚುವರು.
ಅದೇನು ಕಾರಣವೆಂದಡೆ: ಈ ಮಲಸಂಬಂಧ ಜೀವಾತ್ಮರೆಲ್ಲ
ದೇಹ ಇರುವ ಪರ್ಯಂತರವಲ್ಲದೆ
ಲಿಂಗಾಂಗಿಗೆ ಇದ್ದೂ ಇಲ್ಲದಂತೆ ನೋಡೆಂದನಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./500

 

ಹೊಲಗೇರಿಯಲ್ಲಿ ಎಲುವಿನ ಮರ
ಪೂತು ಫಲವಾಗಿ,
ಆ ಫಲವ ಸೇವಿಸಿದವರು ಜೀವಿಸಿದರು.
ಆ ಫಲ ಸೇವಿಸದವರು ಸತ್ತು ಜೀವಿಸಿದರು.
ಈ ಬೆಡಗಿನ ಕೀಲ ಬಲ್ಲರೆ ಶರಣಲಿಂಗಸಂಬಂಧಿ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./501
ಹೊಲತಿ ಹೊಲೆಯನು ಕೂಡಿ
ಕರುಳಿಲ್ಲದ ಮಗನ ಪಡೆದು
ಮಗನ ಮದುವೆಯಾಗಿ, ಮಗನ ಕೊಂದು,
ತನ್ನ ಕೈಕಾಲು ಕಡಿದು ತಾ ಸತ್ತು ಪೋದಳು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./502