Categories
ವಚನಗಳು / Vachanagalu

ಕಾಮಾಟದ ಭೀಮಣ್ಣನ ವಚನಗಳು

45
ಐಗೈಮನೆ ನಾಗೈಕಂಬ ಮೂಗೈತೊಲೆ
ಭೇದ ಕರವಳವ ಹಾಕಿ ನೋಡಿ ಅರಿದಡೆ ಆಯ ಬಂದಿತ್ತು.
ಮಸದಡೆ ಆಯ ಹೋಯಿತ್ತು.
ಮೂಗೆಯ್ಯ ಕರದಲ್ಲಿ ಇದರರಿಕೆಯಾಗಿ
ಹೇಳಾ ಧಾರೇಶ್ವರ ನಿನ್ನಾಲಯಕ್ಕೆ.
46
ಜೀವನೆಂಬ ಅಳತದ ಕೋಲಿನಲ್ಲಿ
ಭಾವಜ್ಞ ನಾನಾದೆನೆಂಬವರೆಲ್ಲರೂ
ಅಳತಕ್ಕೆ ಸಂದು ಹೊರಳಿ ಮರಳುತೈದಾರೆ.
ಸರ್ವಸಂಗ ಪರಿತ್ಯಾಗವ ಮಾಡಿದೆನೆಂಬ ಅರುಹಿರಿಯರೆಲ್ಲರೂ
ತಥ್ಯಮಿಥ್ಯವೆಂಬ ಕೋಲಿನಲ್ಲಿ ಅಳತೆಗೊಳಗಾಗುತೈದಾರೆ.
ಹಿಂದಕೊಂದು ಕುರುಹಿಲ್ಲ, ಮುಂದಕೊಂದು ಲಕ್ಷ ್ಯವಿಲ್ಲಾ
ಎಂದು ಹಿಂಗಿ ನುಡಿದು,
ನಾವು ನಿರಂಗಿಗಳೆಂದು ಅಂಗವ ಹೊತ್ತು ತಿರುಗಾಡುವರೆಲ್ಲರು
ಬಂಧ ಮೋಕ್ಷ ಕರ್ಮಂಗಳಿಂದ
ಅಂಗಳ ಬಾಗಿಲ ವಾಸಂಗಳಲ್ಲಿ
ಬಾ ಹೋಗೆನಿಸಿಕೊಂಬ ನಿಂದೆಯ ಕೋಲಿನಲ್ಲಿ
ಅಳತಕ್ಕೊಳಗಾಹರೆಲ್ಲರು ಸರ್ವಾಂಗಲಿಂಗಿಗಳಪ್ಪರೆ?
ಇದರಂದವ ತಿಳಿದು ಆರಾರ ಇರವು ಅವರಿರವಿನಂತೆ.
ತಾವಾಗಿ ಅರಿದವರಲ್ಲಿ ಅರುಹಿಸಿಕೊಂಬನ್ನಕ್ಕ
ಅವರೊಡಗೂಡಿ ಅವರು ತನ್ನನರಿದ ಮತ್ತೆ
ಆ ಅರಿಕೆಯ ತೆರ ತಾನೆಂಬುದನೆ ಪ್ರಮಾಣಿಸಿ
ಪಕ್ಷವಾಹನ್ನಕ್ಕ ತೊಟ್ಟಿನೊಳಗಿಪ್ಪ ಫಲದ ತೆರನಂತೆ
ಈ ದೃಷ್ಟ ತನ್ನಷ್ಟವಹನ್ನಕ್ಕ
ತನ್ನ ಕಣ್ಣಿನಿಂದ ಕನ್ನಡಿಯ ನೋಡಿ
ತನ್ನ ತಾನೆ ಅರಿವುದು ಕಣ್ಣೋ ಕನ್ನಡಿಯೋ?
ಕನ್ನಡಿಯೆಂದಡೆ ಅಂಧಕಂಗೆ ಪ್ರತಿರೂಪಿಲ್ಲ.
ಇದು ಕಾರಣದಲ್ಲಿ ಅವರರಿವ ತಾನರಿದು ತನ್ನರಿವ ಅವರರಿದು
ಉಭಯದರಿವು ಒಡಗೂಡುವನ್ನಕ್ಕ ಹಿಂದಣ ಕುರುಹು
ಮುಂದಣ ಲಕ್ಷಣವ ವಿಚಾರಿಸಿ ಮರೆಯಬೇಕು
ಧಾರೇಶ್ವರಲಿಂಗನ ಕೂಡಬಲ್ಲಡೆ.
47
ಬೋದಿಗೆ ನಾಲ್ಕು ಕಂಬವೆಂಟು, ಅರುಗುಗಾಲು ಹತ್ತು,
ತೊಲೆಯೊಂದೇ ಏರಿತ್ತು.
ಮುಚ್ಚಳವಲಗಿಗೆ ದಿಕ್ಕು ಕಾಣದೆ
ಕರ್ಮಕಾಂಡಿಗಳೆಲ್ಲರು ಕಾಮನ ಕಾಮಾಟಕ್ಕೆ ಒಳಗಾಗಿ ಹೋದರು.
ಈ ಗುಣವ ನಾನು ನೀನೆಂಬುದ ತಿಳಿದು ನೋಡು
ಧಾರೇಶ್ವರಲಿಂಗವನರಿವುದಕ್ಕೆ.
48
ಮೂರು ಕೋಲ ಬ್ರಹ್ಮಂಗೆ ಅಳದು ಕೊಟ್ಟೆ;
ನಾಲ್ಕು ಕೋಲ ವಿಷ್ಣುವಿಂಗೆ ಆಳದು ಕೊಟ್ಟೆ;
ಐದು ಕೋಲ ರುದ್ರಂಗೆ ಅಳದು ಕೊಟ್ಟೆ;
ಆರು ಕೋಲ ಈಶ್ವರಂಗೆ ಅಳದು ಕೊಟ್ಟೆ;
ಒಂದು ಕೋಲ ಸದಾಶಿವಂಗೆ ಅಳದು ಕೊಟ್ಟೆ.
ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ
ಅಳಲುತ್ತ ಬಳಲುತ್ತ ಒಳಗಾದರು.
ಇಂತೀ ಒಳ ಹೊರಗ ಸೋಧಿಸಿಕೊಂಡು
ಅಳಿವು ಉಳಿವಿನ ವಿವರವನರಿಯಬೇಕು,
ಧಾರೇಶ್ವರಲಿಂಗವನರಿವುದಕ್ಕೆ.