Categories
ವಚನಗಳು / Vachanagalu

ಕೀಲಾರದ ಭೀಮಣ್ಣ ವಚನಗಳು

67
ಇಮ್ಮನ ಹತ್ತಿಯಕಾಳ ಸುರಿದು ಪಶು ಮೇವುತ್ತಿರಲಾಗಿ
ಓಮ್ಮನವ ಮೇದು ಇಮ್ಮನ ಉಳಿಯಿತು.
ಅದ ಸುಮ್ಮಾನದಲ್ಲಿ ಕರೆಯ ಹೋಗಲಿಕೆ
ಅಂಡೆಯಲ್ಲಿ ಐಗುಳವ ಕರೆದು
ಕಂದಲಲ್ಲಿ ಸುರಿಯಲಾಗಿ ಮೂಗುಳವಾಯಿತ್ತು.
ಆ ಮೂಗುಳವ ಒಲೆಯ ದೆಸೆಯಲ್ಲಿರಿಸಲಿಕೆ
ಕಾಸೂದಕ್ಕೆ ಮುನ್ನವೆ ನಾಶವಾಯಿತ್ತು.
ಇಂತೀ ಈಶ್ವರ ವಿಶ್ವಾಸದಲ್ಲಿ ಆತ್ಮ ನಿಶ್ಚಯಿಸಲಾಗಿ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.

68
ಎರಡು ಮೊಲೆಯ ಪಶುವಿಂಗೆ
ಕೊಂಬು ಮೂರು, ಕಿವಿ ನಾಲ್ಕು, ಕಣ್ಣೊಂದೆ.
ಮೂರು ಮೊಲೆಯ ಪಶುವಿಂಗೆ
ಕೊಂಬು ನಾಲ್ಕು, ಕಿವಿಯೊಂದು, ಕಣ್ಣು ಮೂರು.
ನಾಲ್ಕು ಮೊಲೆಯ ಪಶುವಿಂಗೆ
ಕೊಂಬಾರು, ಕಿವಿಯೆಂಟು, ಕಣ್ಣೆರಡು.
ಒಂದು ಮೊಲೆಯ ಪಶುವಿಂಗೆ
ಕೊಂಬು ಹಿಂದೆ, ಕಿವಿ ಸಂದಿಯಲ್ಲಿ, ಕಣ್ಣು ನೆತ್ತಿಯಲ್ಲಿ,
ಮುಟ್ಟಿ ನೋಡಿ ಕರೆದಹೆನೆಂದಡೆ
ಕೆಚ್ಚಲು ಮೊಲೆಯೊಳಗಡಗಿತ್ತು.
ಮೊಲೆಯ ಮುಟ್ಟಿ ನೋಡಿಹೆನೆಂದಡೆ ಬಟ್ಟಬಯಲು,
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾಯಿತ್ತು.

69
ಕಂಟಕ ಬಂದಲ್ಲಿ ಸಂತೈಸಿಕೊಂಡು ಆತ್ಮನ ಸಂಚರಿಸದೆ
ನಿಷ್ಠೆಯಿಂದ ದೃಷ್ಟವ ಕಾಬುದೇ
ಶ್ರದ್ಧೆ ಸದ್ಭಕ್ತನ ಇರವು.
ವೃಥಾಳಾಪದಿಂದ ನಿಂದ, ದುರ್ಜನ ಬಂದಲ್ಲಿ
ಸಂದು ಸಂಶಯವಿಲ್ಲದೆ ಅಂಗವ ಬಂಧಿಸದೆ
ನಿಜಾತ್ಮನ ಸಂದೇಹಕಿಕ್ಕದೆ
ಪರಮಾನಂದಸ್ವರೂಪನಾಗಿ
ಬಂಧ ಮೋಕ್ಷಕರ್ಮಂಗಳ ಹರಿದಿಪ್ಪುದು
ಸರ್ವಾಂಗಲಿಂಗಿಯ ಅರಿವು.
ಅದು ಕರಿಗೊಂಡು ಎಡೆದೆರಪಿಲ್ಲದೆ
ಪರಿಪೂರ್ಣನಾದುದು ಪರಮ ವಿರಕ್ತನ ಪರಿ.
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ತಾನಾದ
ಶರಣನ ಇರವು.

70
ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ?
ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತ್ತೆಂದು
ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ?
ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು
ಅಲಗಿನ ಕ್ರೂರ ಸುಲಲಿತವೆನ್ನಬಹುದೆ?
ಆ ಗುಣ ಅಲ್ಲಲ್ಲಿಗೆ ದೃಷ್ಟ.
ಇದು ನಿಶ್ಚಯ ನಿಜ ಲಿಂಗಾಂಗಿಗೆ ಅರಿವಿನ ಭೇದ.
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದವನ ತೆರ.

71
ಕಾಯವಿಕಾರವಳಿದಲ್ಲದೆ ಗುರುಸ್ಥಲಕ್ಕೆ ಸಲ್ಲ.
ಮನೋವಿಕಾರವಳಿದಲ್ಲದೆ ಲಿಂಗಪೂಜಕನಲ್ಲ.
ತ್ರಿವಿಧಮಲ ದೂರಸ್ಥನಲ್ಲದೆ ವಿರಕ್ತಭಾವಿಯಲ್ಲ.
ಇಂತೀ ಒಂದರಲ್ಲಿ ಒಂದು ಕಲೆಯಿದ್ದು ಮತ್ತೆ
ಲಿಂಗದಲ್ಲಿ ನಿಂದಲ್ಲಿ ಸನ್ಮುಕ್ತನಲ್ಲ.
ಇಂತೀ ಬಂಧ ಮೋಕ್ಷ ಕರ್ಮಂಗಳ ಬಿಟ್ಟು
ನಿಜ ಸಂದು ಸುಖಿಯಾಗಬಲ್ಲಡೆ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವು ಸಾಧ್ಯವಲ್ಲ.

72
ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ.
ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ.
ಅಂಗೈಯಲ್ಲಿ ಹಿಡಿದು ಕೈದ ನೋಡದೆ
ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ
ತನ್ನ ತಾ ಮರದು ಅನ್ಯರ ದೆಸೆಯಿಂದ ತನ್ನ ಕೇಳುವನಂತಾಗದೆ
ಅರಿ ನಿಜದರಿವ ಮರೆಯದಂತೆ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.

73
ತೊಗಟೆಯೊಳಗಣ ಬೀಜ
ಬೀಜದೊಳಗಣ ಅಂಕುರ
ಸಾರ ಸಸಿರೂಪುದೋರದೆ ವೇಧಿಸಿಕೊಂಡಿಪ್ಪಂತೆ.
ಇಂತೀ ಕ್ರೀಯೊಳಗಣ ಭಾವ,
ಭಾವದೊಳಗಣ ಜ್ಞಾನ,
ಜ್ಞಾನದೊಳಗಣ ಅರಿವು,
ಅರಿವಿನೊಳಗಣ ನಿಜದ ಬೆಳಗಿನ ಮಹಾಕಲೆಯನೊಳಕೊಂಡು
ಘನಮಹಿಮಂಗೆ ಹಿಡಿದಹೆನೆಂಬ ಭಾವದ ಭ್ರಮೆಯಿಲ್ಲ;
ಬಿಟ್ಟಿಹೆನೆಂಬ ಕಟ್ಟಿನ ಸೂತಕವಿಲ್ಲ.
ಎಲ್ಲಿ ಬಿಟ್ಟಲ್ಲಿ ತೊಟ್ಟು ಬಿಟ್ಟ ಹಣ್ಣಿನಂತೆ
ಎಲ್ಲಿ ಮುಟ್ಟಿದಲ್ಲಿ ಕರ್ಪುರದ ಪಂಜರದಲ್ಲಿ
ಉರಿಯಗಿಳಿ ಮಾತಾಡಿದಂತೆ
ಉತ್ತರ ಮಾತಿಂಗೆ ಪ್ರತ್ಯುತ್ತರ ನಷ್ಟವಾದಂತೆ.
ಇಂತೀ ಬಟ್ಟಬಯಲ ಕಟ್ಟಕಡೆಯ ದೃಷ್ಟವಿಲ್ಲದ ನಿರ್ಲಕ್ಷ ್ಯಂಗೆ
ಲಕ್ಷ ್ಯಗೆಟ್ಟ ನಿಶ್ಚಯವಂತಂಗೆ,
ಯೋಮವಿಲ್ಲದ ಭಾವ ಭಾವವಿಲ್ಲದ ಜ್ಞಾನ
ಜ್ಞಾನವಿಲ್ಲದ ಶೂನ್ಯ ಶೂನ್ಯವಿಲ್ಲದ ಸುಳುಹು
ಸುಳುಹಿಲ್ಲದ ಅಖಂಡಿತನಾದ ಸರ್ವಗುಣ ಭರಿತ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವೆಂಬಲ್ಲಿ ತಾನು
ತಾನಾದ ಶರಣ.

74
ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ
ಒಂದೇ ಹೊಲದಲ್ಲಿ ಮೇದು,
ಆರು ಕೆರೆಯ ನೀರ ಕುಡಿದು,
ಒಂದೇ ದಾರಿಯಲ್ಲಿ ಬಂದು,
ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು.
ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,
ಹಾಲಿಗೆ ಏಕವರ್ಣ.
ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ
ಚಟ್ಟಿ ಹತ್ತದೆ, ಹಸುಕು ನಾರದೆ,
ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ
ಕಾಸಿ ಉಣಬಲ್ಲಡೆ ಆತನೆ ಭೋಗಿ.
ಆತ ನಿರತಿಶಯಾನುಭಾವ ಶುದ್ಧಾತ್ಮನು,
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.

75
ವ್ಯಾಧನಂತೆ ಜಾಲಗಾರನಂತೆ ಹೇಮಚೋರನಂತೆ
ಇಂತೀ ಗಾಹುಗಳ್ಳರಂತೆ ಮಾತಿನಲ್ಲಿ ಬ್ರಹ್ಮವ ನುಡಿದು
ಸರ್ವ ಸಂಸಾರದಲಿ ಏಳುತ್ತ ಮುಳುಗುತ್ತ
ಬೇವುತ್ತ ನೋವುತ್ತ ಮತ್ತೆ
ಬ್ರಹ್ಮದ ಸುಮ್ಮಾನದ ಸುಖಿಗಳೆಂತಪ್ಪರೊ?
ಇಂತು ನುಡಿಯಬಾರದು ಸಮಯವ ಬಿಡಬಾರದು ಕ್ರೀಯ
ಅರಿದು ಮರೆಯಬಾರದು ಜ್ಞಾನವ.
ಇಂತೀ ಭೇದವನರಿದು ಹರಿದವಗಲ್ಲದೆ
ಕಾಲಕರ್ಮವಿರಹಿತ ತ್ರಿಪುರಾಂತಕ ಲಿಂಗವು ಸಾಧ್ಯವಿಲ್ಲ.

76
ಹಲವು ಗಿರಿಗಳ ತಪ್ಪಲಲ್ಲಿ,
ಮಲೆಯ ಮಂದಿರಗಳಲ್ಲಿ
ಬಳನೆ ಬಳನೆ ಮೇದು
ಮತ್ತೆ ತಮ್ಮ ನೆಲಹೊಲಕ್ಕೆ ತಪ್ಪದೆ ಬಪ್ಪವು ನೋಡಾ.
ಆ ಪಶುವಿಂಗೆ ಕಟ್ಟು ಗೊತ್ತಿಲ್ಲ,
ಕಾವ ಕಟ್ಟಿಗೆ ಒಳಗಲ್ಲ.
ತಮ್ಮ ಠಾವಿಂಗೆ ಬಂದು ಹಾಲ ಕೊಟ್ಟು,
ಮತ್ತೆ ತಮ್ಮ ನೆಲೆಯ ಠಾವಿಗೆ ಹೋದ ಮತ್ತೆ ಕಾವಲು ತಪ್ಪಿಲ್ಲ,
ಕಾಲಕರ್ಮವಿರಹಿತ ತ್ರಿಪುರಾಂಕ ಲಿಂಗದೊಳ-ಗಾದವಂಗೆ.