Categories
ವಚನಗಳು / Vachanagalu

ಕಿನ್ನರಿ ಬ್ರಹ್ಮಯ್ಯ ವಚನಗಳು

ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.
ತನ್ನನಳಿದು ನಿಜವುಳಿದ
ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು
ಬದುಕಿದೆನು ಕಾಣಾ ಸಂಗನಬಸವಣ್ಣಾ./1
ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ.
ಅರಮನೆ ಗುರುಮನೆ ಹಿರಿದಾದ ಕಾರಣ-
ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!/2
ಆಶ್ರಯ ನಿರಾಶ್ರಯ ಹರಪುರಾತರಿಗಲ್ಲದೆ ಕಿರಾತರಿಗುಂಟೆ?
ಆಶ್ರಯಿಸಬಹುದು ಪ್ರಭುವಿನ ನುಡಿಯ;
ಆಶ್ರಯಿಸಬಹುದು ಹರಗಣಂಗಳ ನುಡಿಯ.
ಅದೇನು ಕಾರಣವೆಂದಡೆ: ಕಾರಣವಿಲ್ಲದೆ ಕಂಡಂತಾದರು
ತ್ರಿಪುರಾಂತಕಲಿಂಗ ಶರಣರು ಚೆನ್ನಬಸವಯ್ಯಾ./3
ಕಲ್ಲಿಲಿಟ್ಟವಂಗೊಲಿದೆ, ಕಾಲಲೊದ್ದವಂಗೊಲಿದೆ,
ಬಾಯಲ್ಲಿ ಉಗಿದವಂಗೊಲಿದೆ.
ಅದು ನಿನ್ನ ಭಕ್ತಿಯೋ ಸತ್ಯವೋ ಗರ್ವವೋ!
ತ್ರೈಭುವನಂಗಳಿಗಭೇದ್ಯ ತಿಳಿವಡೆ ನಿನ್ನ ಮಹಿಮೆ,
ಉಮೆಯ ವರ ತ್ರಿಪುರಾಂತಕಲಿಂಗವೆ./4
ಕಲ್ಲೊಳಗಣ ಬೆಲ್ಲವ ಮೆದ್ದವರಿನ್ಯಾರೊ?
ಕಲ್ಲನೆ ಹಿಡಿದು ಬಿಡದೆ ಹಾರುವಿರಿ.
ಕಲ್ಲು ಹಲ್ಲನೆ ಕಳೆಯಿತ್ತು,
ಬಲ್ಲವರಿದ ಹೇಳಿ.
ಕಲ್ಯಾಣದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ./5
ಕಾಯದಲ್ಲಿ ಕಳವಳವಿರಲು,
ಪ್ರಾಣದಲ್ಲಿ ಮಾಯೆಯಿರಲು,
ಏತರ ಗಮನ ಏತರ ನಿರ್ವಾಣ.
ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ
ಸಜ್ಜನೆಯೆಂದು ಕೈವಿಡಿವನಲ್ಲ./6
ಚಂದ್ರನ ಸೂಡುವವ ಲಿಂಗನೊ ಅಂಗನೊ?
ಸುಸಂಗದ ಮುಕುಟದಲ್ಲಿ ಗಂಗೆಯ ಧರಿಸುವವ ಭಂಗನೊ ಆಭಂಗನೊ?
ಭಕ್ತರಂಗದಿಚ್ಛೆಯಲ್ಲಿ ಅಡಗುವವ ಬಂಧನೊ ನಿರ್ಬಂಧನೊ?
ಇದು ನನಗೆ ಸಂದೇಹವಾಗಿದೆ.
ತ್ರೈಭುವನಂಗಳಿಗೆ ಚೋದ್ಯ ನಿಮ್ಮ ಪರಿ,
ಅಂಬಿಕಾವರ ತ್ರಿಪುರಾಂತಕಲಿಂಗವೆ./7
ಚನಿಪಾಲ ಚಿನ್ನದ ಹರಿವಾಣದಲ್ಲಿ ಭೋಗಿಪುದು
ಭೂಷಣವಲ್ಲದೆ,
ಮಣ್ಣ ಹರಿವಾಣದಲ್ಲಿ ಭೂಷಣವೆ?
ತಾ ಮಾಳ್ಪ ಶಿವಲಿಂಗ ಪೂಜೆಗೆ ಕಾಯ ಪವಿತ್ರವಲ್ಲದೆ,
ಅಪವಿತ್ರವೆಂತೊ ತ್ರಿಪುರಾಂತಕಲಿಂಗವೆ?/8
ತನು ಸೆಜ್ಜೆ ಮನ ಲಿಂಗವಾದ ಬಳಿಕ
ಆನು ಮತ್ತೆ ಬೇರೆ ಅರಸಲುಂಟೆ?
ತನುವೆ ಬಸವಣ್ಣ ಮನವೇ ಪ್ರಭುದೇವರೆಂಬ
ಮಹಾ ಘನವನೊಳಕೊಂಡಿರ್ದ ಬಳಿಕ
ಗುಣಾವಗುಣವ ಸಂಪಾದಿಸುವರೆ?
ಮಹಾಲಿಂಗ ತ್ರಿಪುರಾಂತಕದೇವ, ಸಂಗನ ಬಸವಣ್ಣನಲ್ಲಿ
ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ?
ಬಿಜಯಂಗೈವುದಯ್ಯಾ ಪ್ರಭುವೆ./9
ನಿನ್ನ ಸ್ವರೂಪ ಕಂಡೆನ್ನ ದೃಷ್ಟಿ ನಟ್ಟುದೆನಗೆ.
ನಿನ್ನ ಲಾವಣ್ಯರಸವ ಕಂಡು ಮನ ಹಾರೈಸಿತ್ತೆನಗೆ.
ನಿನ್ನ ಪ್ರವುಡಿಯಿಂದ ಕೂಡಿದೆನೆಂಬುದು ಭಾವದಲ್ಲಿ
ಬಚ್ಚಬರಿಯ ಹೆಂಗುಸಾಗಿ ತೋರಿತ್ತೆನೆಗೆ.
ಮಹಾಲಿಂಗ ತ್ರಿಪುರಾಂತಕನೆನಗೊಡ್ಡಿದ ಮಾಯೆಯ
ನಿನ್ನ ಸಮಸುಖ ಕೂಟದೊಳಿರ್ದು ಶಿವಭಾವಭಕ್ತಿಯಿಂ
ಗೆಲುವೆನು ಮಹಾ ಹೆಣ್ಣು ಎಂದು ಕೈವಿಡಿದೆನು./10
ನಿನ್ನ ಹರೆಯದ ರೂಹಿನ ಚೆಲುವಿನ, ನುಡಿಯ ಜಾಣಿನ,
ಸಿರಿಯ ಸಂತೋಷದ,
ಕರಿ ತುರಗ ರಥ ಪದಾತಿಯ ನೆರವಿಯ,
ಸತಿ ಸುತರ ಬಂಧುಗಳ ಸಮೂಹದ,
ನಿನ್ನ ಕುಲದಭಿಮಾನದ
ಗರ್ವವ ಬಿಡು, ಮರುಳಾಗದಿರು.
ಅಕಟಕಟಾ ರೋಮಜನಿಂದ ಹಿರಿಯನೆ?
ಮದನನಿಂ ಚೆಲುವನೆ?
ಸುರಪತಿಯಿಂದ ಸಂಪನ್ನನೆ?
ವಾಮದೇವ ವಶಿಷ್ಟರಿಂದ ಕುಲಜನೆ?
ಅಂತಕನ ದೂತರು ಬಂದು ಕೈವಿಡಿದೆಳದೊಯ್ಯುವಾಗ
ನುಡಿ ತಡವಿಲ್ಲ ಕೇಳೋ ನರನೆ!
ಎನ್ನ ಮಾಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ
ಕೇಡಿಲ್ಲದ ಪದ ದೊರಕೊಂಬುದು ಮರುಳೆ./11
ಪ್ರಣವದ ಚಿನ್ನಾದವೆ ಅಕಾರ,
ಪ್ರಣವದ ಚಿದ್ಬಿಂದುವೆ ಉಕಾರ,
ಪ್ರಣವದ ಚಿತ್ಕಲೆಯೆ ಮಕಾರ.
ಪ್ರಣವದ ಬಟ್ಟೆಯೆ ಬಕಾರ,
ಪ್ರಣವದ ಸೋಪಾನವೆ ಸಕಾರ,
ಪ್ರಣವದ ವರ್ತನೆಯೆ ವಕಾರ.
ಪ್ರಣವದ ಬಹಳಾಕಾರವೆ ಬಕಾರ
ಪ್ರಣವದ ಸಾಹಸವೆ ಸಕಾರ,
ಪ್ರಣವದ ವಶವೆ ವಕಾರ.
ಪ್ರಣವದ ಬರವೆ ಬಕಾರ,
ಪ್ರಣವದ ಸರವೆ ಸಕಾರ,
ಪ್ರಣವದ ಇರವೆ ವಕಾರ.
ಪ್ರಣವದ ಬಲ್ಮೆಯೆ ಬಕಾರ,
ಪ್ರಣವದ ಸಲ್ಮೆಯೆ ಸಕಾರ,
ಪ್ರಣವದ ಒಲ್ಮೆಯೆ ವಕಾರ.
ಪ್ರಣವದ ಪಶ್ಯಂತಿವಾಕೇ ಬಕಾರ,
ಪ್ರಣವದ ಸೂಕ್ಷ್ಮವಾಕೇ ಸಕಾರ,
ಪ್ರಣವದ ವೈಕಲ್ಯವಾಕೇ ವಕಾರ.
ಪ್ರಣವದ ಬಹಳ ಜ್ಞಾನವೆ ಬಕಾರ,
ಪ್ರಣವದ ಸಹಜ ಜ್ಞಾನವೆ ಸಕಾರ,
ಪ್ರಣವದ ಶುದ್ಧ ಜ್ಞಾನದೀಪ್ತಿಯೆ ವಕಾರ.
ಪ್ರಣವದ ಮೂಲವೆ ಬಕಾರ,
ಪ್ರಣವದ ಶಾಖೆಯೆ ಸಕಾರ,
ಪ್ರಣವದ ಫಲವೆ ವಕಾರ.
ಪ್ರಣವದ ಬಹಳ ನಾದವೆ ಬಕಾರ,
ಪ್ರಣವದ ಸನಾದವೆ ಸಕಾರ,
ಪ್ರಣವದ ಸುನಾದವೆ ವಕಾರ.
ಪ್ರಣವದ ಭಕ್ತಿಯೆ ಬಕಾರ,
ಪ್ರಣವದ ಸುಜ್ಞಾನವೆ ಸಕಾರ,
ಪ್ರಣವದ ವೈರಾಗೈವೆ ವಕಾರ.
ಪ್ರಣವದ ಶಬ್ದವೆ ಬಕಾರ,
ಪ್ರಣವದ ನಿಃಶಬ್ದವೆ ಸಕಾರ,
ಪ್ರಣವದ ಶಬ್ದ ನಿಶಬ್ದದ ವಾಕುಗಳೆ ವಕಾರ.
ಇಂತಪ್ಪ ಪ್ರಣವ ಮಂತ್ರಂಗಳೇ
ಬಸವಾ ಎಂಬ ಪ್ರಣವ ನಾದತ್ರಯಸಂಬಂಧವಾದುದಂ
ತ್ರಿಪುರಾಂತಕಲಿಂಗದಲ್ಲಿ ಅರಿದು ಸುಖಿಯಾಗಿ
ಆನು ಬಸವಾ, ಬಸವಾ, ಬಸವಾ, ಎಂದು
ಜಪಿಸುತ್ತಿದ್ದೆನಯ್ಯಾ./12
ಭಕ್ತಿಸ್ಥಲವನರಿದು ತಮ್ಮ ಭಕ್ತಿ ಸ್ಥಲದಲ್ಲಿ
ಬಯಲಾದರು ಸಂಗನ ಬಸವರಾಜದೇವರು.
ಮಾಹೇಶ್ವರ ಸ್ಥಲವನರಿದು ತಮ್ಮ ಮಾಹೇಶ್ವರ ಸ್ಥಲದಲ್ಲಿ
ಬಯಲಾದರು ಮಡಿವಾಳ ಮಾಚಿತಂದೆಗಳು.
ಪ್ರಸಾದಿಸ್ಥಲವನರಿದು ತಮ್ಮ ಪ್ರಸಾದಿಸ್ಥಲದಲ್ಲಿ
ಬಯಲಾದರು ಬಿಬ್ಬಬಾಚಯ್ಯಗಳು.
ಪ್ರಾಣಲಿಂಗಿಸ್ಥಲವನರಿದು ತಮ್ಮ ಪ್ರಾಣಲಿಂಗಿಸ್ಥಲದಲ್ಲಿ
ಬಯಲಾದರು ನುಲಿಯ ಚಂದಯ್ಯಗಳು.
ಶರಣಸ್ಥಲವನರಿದು ಶರಣಸ್ಥಲದಲ್ಲಿ
ಬಯಲಾದರು ಘಟ್ಟಿವಾಳಯ್ಯಗಳು.
ಐಕ್ಯಸ್ಥಲವನರಿದು ತಮ್ಮ ಏಕ್ಯಸ್ಥಲದಲ್ಲಿ
ಬಯಲಾದರು ಅಜಗಣ್ಣಯ್ಯಗಳು.
ಇಂತೀ ಷಡ್ವಿಧಸ್ಥಲವನರಿದು ತಮ್ಮ ಷಡ್ವಿಧಸ್ಥಲದಲ್ಲಿ
ಬಯಲಾದರು ಚೆನ್ನ ಬಸವೇಶ್ವರ ದೇವರು.
ನಿಜಸ್ಥಲನರಿದು ತಮ್ಮ ನಿಜಸ್ಥಲದಲ್ಲಿ
ಬಯಲಾದರು ಅಲ್ಲಮಪ್ರಭುದೇವರು.
ನಿರ್ವಯಲಸ್ಥಲವನರಿದು ತಮ್ಮ ನಿರ್ವಯಲಸ್ಥಲದಲ್ಲಿ
ಬಯಲಾದರು ಏಳ್ನೂರೆಪ್ಪತ್ತಮರಗಣಂಗಳು.
ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು
ನಾನು ಬಯಲಾದೆನು ಕಾಣಾ ಮಹಾಲಿಂಗ
ತ್ರಿಪುರಾಂತಕದೇವಾ./13
ಮಸ್ತಕವ ಮುಟ್ಟಿ ನೋಡಿದಡೆ,
ಮನೋಹರದಳಿವು ಕಾಣ ಬಂದಿತ್ತು!
ಮುಖಮಂಡಲವ ಮುಟ್ಟಿ ನೋಡಿದಡೆ,
ಮೂರ್ತಿಯ ಅಳಿವು ಕಾಣ ಬಂದಿತ್ತು!
ಕೊರಳ ಮುಟ್ಟಿ ನೋಡಿದಡೆ,
ಗರಳಧರನ ಇರವು ಕಾಣ ಬಂದಿತ್ತು!
ತೋಳುಗಳ ಮುಟ್ಟಿ ನೋಡಿದಡೆ,
ಶಿವನಪ್ಪುಗೆ ಕಾಣ ಬಂದಿತ್ತು!
ಉರಸ್ಥಲವ ಮುಟ್ಟಿ ನೋಡಿದಡೆ,
ಪರಸ್ಥಲದಂಗಲೇಪ ಕಾಣ ಬಂದಿತ್ತು
ಬಸಿರ ಮುಟ್ಟಿ ನೋಡಿದಡೆ,
ಬ್ರಹ್ಮಾಂಡವ ಕಾಣ ಬಂದಿತ್ತು!
ಗುಹ್ಯವ ಮುಟ್ಟಿ ನೋಡಿದಡೆ,
ಕಾಮದಹನ ಕಾಣ ಬಂದಿತ್ತು!
ಮಹಾಲಿಂಗ ತ್ರಿಪುರಾಂತಕದೇವಾ,
ಮಹಾದೇವಿಯಕ್ಕನ ನಿಲುವನರಿಯದೆ
ಅಳುಪಿ ಕೆಟ್ಟೆನು./14
ವಿಷಯಂಗಳು ನಿರ್ವಿಷಯವಾದವಿಂದು,
ಕರ್ಣಂಗಳು ತರಹರಿಸಿದವಿಂದು,
ಎನ್ನ ಆಳುಪೆಂಬ ಅರೆವಾವು ಮಡಿಯಿತ್ತಿಂದು
ಎನ್ನ ಹೃದಯದ ಕಲ್ಮಶ ತೊಡೆಯಿತ್ತಿಂದು
ಮಹಾಲಿಂಗ ತ್ರಿಪುರಾಂತಕ, ಮಹಾದೇವಿಯಕ್ಕಗಳ ಧರ್ಮದಿಂದ
ಹಿಂದಣ ಹುಟ್ಟು ಮುರಿಯಿತ್ತಿಂದು./15
ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,
ಶರಣಾರ್ಥಿ ಶರಣಾರ್ಥಿ ಕರುಣ ಸಾಗರ ನಿಧಿಯೆ,
ದಯಾಮೂರ್ತಿ ತಾಯೆ, ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,
ನೀವು ಬಿಡಿಸಿದರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ./16
ಹುಟ್ಟಿತ್ತಲ್ಲಾ ಉಂಟೆನಿಸಿತ್ತಲ್ಲಾ.
ಕರುವಿಟ್ಟಿತ್ತಲ್ಲಾ ರೂಪಾಯಿತ್ತಲ್ಲಾ.
ನೋಡ ನೋಡ ವಾಯುಗುಂದಿತ್ತಲ್ಲಾ.
ನೋಡ ನೋಡ ಭಾವಗುಂದಿತ್ತಲ್ಲಾ.
ಅರಿವು ವಿಕಾರದಲ್ಲಿ ಆಯಿತ್ತು, ಹೋಯಿತ್ತು,
ಮಹಾಲಿಂಗ ತ್ರಿಪುರಾಂತಕಾ, ನಿಮಗೆರಗದ ತನು./17
ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು
ಏನೆಂಬೆನೇನೆಂಬೆ ವಿಧಿ ಮಾಡಿತ್ತ.
ಸಮೆದ ಮಾಡಿಗಳು ನೆಲೆಗೊಳ್ಳದೆ ಹೋದವು.
ಮಹಾಲಿಂಗ ತ್ರಿಪುರಾಂತಕನ ಶರಣರೆ
ಎನ್ನೊಡೆಯರೆಂದರಿಯದೆ ಇದ್ದ ಕಾರಣ
ತೆರಹು ಮರಹಿನಲ್ಲಿ ತಾವೆಡೆಗೊಂಡವು./18