Categories
ವಚನಗಳು / Vachanagalu

ಕೋಲ ಶಾಂತಯ್ಯನ ವಚನಗಳು

ಅಂಗ ಮಾಸಿದಲ್ಲಿ ಜಲದೊಲುಮೆ;
ಮನ ಮರೆದಲ್ಲಿ ಅರಿವಿನೊಲುಮೆ;
ಈ ಉಭಯವು ಮರೆದಲ್ಲಿ ಮಹಾಶರಣರ ಸಂಗದೊಲುಮೆ,
ಒಲುಮೆಯ ಒಲವರವ ನಿನ್ನಿ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./1
ಅಂಗಲಿಂಗ ಸಂಬಂಧ ಶೈವಗುರು,
ಸ್ಥಾವರಲಿಂಗ ಸಂಬಂಧ ಶೈವಗುರು,
ಪಥಲಿಂಗ ಸಂಬಂಧ ಶೈವಗುರು,
ಸಂಕಲ್ಪಲಿಂಗ ಸಂಬಂಧ ಶೈವಗುರು.
ಪ್ರಾಣಲಿಂಗ ಸಂಬಂಧ ವೀರಶೈವ ಸಿದ್ಧಾಂತ ಗುರುವಾಗಬೇಕು.
ಚತುರ್ವಿಧ ಶೈವನಾಸ್ತಿ:ಅವು ಸೂತಕಭಾವ;
ಅವು ಜಗದ ವರ್ತಕದಲ್ಲಿ ಕಾಬ ನಿಲುವು; ಆಚಾರ್ಯರ ಭೇದ,
ಪ್ರಾಣಕ್ಕೆ ಪಂಚಾಚಾರವ ಕೊಟ್ಟು,
ಕಾಯದ ಗುಣವ ತ್ರಿವಿಧದಿಂದ ಶುದ್ಧಮಾಡಿ,
ಕಾಯಕ್ಕೆ ಕ್ರೀ ಮನಕ್ಕೆ ಅರಿವು ಎಂದು ಭಾವಿಸಿ ಕೊಟ್ಟುದ್ದುಪ್ರಾಣಲಿಂಗ.
ಆತನಿಹಪರದಲ್ಲಿ ಪರಿಣಾಮಿ, ಸದ್ಗುರು;
ಆ ಭೇದವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./2
ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು
ಸುಖಪಟ್ಟಣವ ಕಂಡೆ.
ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ.
ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ.
ತಳವಾರ ತಿರುಗುವುದಕ್ಕೆ ಕಣ್ಣಿಲ್ಲ.
ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು.
ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ.
ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ.
ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ.
ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ?
ಬಂಟರು ಸತ್ತರು, ಅರಸು ನಷ್ಟವಾದ.
ಆ ಉಭಯದ ಬೇಧವ ನಾನರಿಯೆ, ನೀ ಹೇಳು.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./3
ಅಣು ಇರುಹಿನ ಮರಿ ಬ್ರಹ್ಮನ ಅಂಡವನೂರಿ
ವಿಷ್ಣುವಿನ ಪಿಂಡವ ನುಂಗಿತ್ತು,
ಅದು ತನ್ನೊಡಲಿಗೆಯಿದದೆ ರುದ್ರನ ತೊಡೆಮುಡಿಯವಳ
ಆತ ಸಹಿತಾಗಿ ನುಂಗಿತ್ತು.
ಅದೇತರ ಸೂತ್ರವೆಂದು ಆತ್ಮನ ಭೇದವನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./4
ಅರ್ತಿಗಾರಿಕೆಯಲ್ಲಿ ಕೆಲಬರು ಮೆಚ್ಚಬೇಕೆಂದು ಮಾಡುವನ ಭಕ್ತಿ
ಮಂಡೆಯ ಮೇಲೆ ಹೊತ್ತ ಸುರೆಯ ಲಚ್ಚಣಿಯಂತೆ;
ಅದು ನಿಶ್ಚಯವಲ್ಲ.
ಒಳಗಣ ಕಪಟ ಹೊರಗಣ ಬಣ್ಣ,
ಆ ತೊಡಿಗೆಯ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./5
ಅಲಗನೇರಿ ಹುವ್ವ ಕೊಯಿದು, ಬಾವಿಯ ನುಂಗಿ ನೀರ ಕುಡಿದು,
ಹಣ್ಣ ಹಾಕಿ ಮರನ ಮೆದ್ದವನಾರಯ್ಯ?
ಹೆತ್ತವನ ಕೊಂದು ಅರಿಗಳ ಕೆಳೆಗೊಂಡು
ಬದುಕಿದವನಾರೆಂಬುದ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./6
ಆಡಿನ ಕಾಲ ಮುರಿದು, ಕೋಡಗದ ಹಲ್ಲ ಕಿತ್ತು,
ಉಡುವಿನ ಕುಡಿನಾಲಗೆಯ ಕೊಯಿದು, ಬಳ್ಳುವಿನ ಸೊಲ್ಲನರಿದು
ಇವೆಲ್ಲವ ನಿನ್ನಲ್ಲಿಗೆ ತಂದೆ; ಇವ ಬಲ್ಲವ ನೀನಲ್ಲದಿಲ್ಲ.
ಎನಗೆ ಅಲ್ಲಿಯೊ ಇಲ್ಲಿಯೊ ಮತ್ತೆ ಅಂದು ನೀ ಹೇಳಿದಲ್ಲಿಯೊ
ಎಂಬುದ ನಾನರಿಯೆ, ನೀ ಹೇಳು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./7
ಆತ್ಮತತತ್ವ ವಸ್ತುವಾದಡೆ ನಾನಾ ಘಟದಲ್ಲಿ ಇರಲೇಕೆ?
ಆ ಘಟ ವಸ್ತುವ ಗರ್ಭಿಕರಿಸಿದಲ್ಲಿ ಪಂಚಭೌತಿಕಕ್ಕೆ
ಒಡಲಾಗಲೇಕೆ?
ಹಿಡಿಯಬಾರದು, ಹಿಡಿದು ಬಿಡಬಾರದು.
ಒಡಲು ದಿಟವೆಂದಡೆ ಅದು ಒಡೆಯ ಹಾಕುವ ಕುಂಭ.
ಒಡಲೊಡೆಯ ದಿಟವೆಂದಡೆ ರೂಪಿಲ್ಲದ ಛಾಯ.
ಅರಿದು ಮುಕ್ತಿಯ ತೆರನಾವುದು?
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./8
ಆತ್ಮನಿದ್ದು ಶಯನಾಂತನಾಗಿ ಇದ್ದಲ್ಲಿ
ಸಕಲ ಭೋಗಂಗಳನರಿಯಬಲ್ಲುದೆ?
ರಾಜಸ ತಾಮಸದ ಮರೆಯಲ್ಲಿದ್ದು ಸಾತ್ವಿಕವನರಿಯಬಲ್ಲುದೆ?
ಏತರಲ್ಲಿದ್ದು ಚೇಟಿಯ ಕೊಡದಂತಿರಬೇಕು.
ಇಷ್ಟ ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./9
ಆರಿಗೂ ತೋರದ ಅಂಬರದಲ್ಲಿ
ಒಂದು ಎರಳೆ ಮರಿಯನಿಕ್ಕಿ ಸತ್ತಿತ್ತು.
ಮರಿಯ ಮಂಡೆಯ ದೆಸೆಯಲ್ಲಿ ಮರಿ ತಾಯ ನೆರೆನೋಡಿ,
ಸತ್ತುದನರಿಯದೆ ಗೊತ್ತ ಮೂಸುತ್ತಿದ್ದಿತ್ತು.
ಹೊಲಸಿನ ಗಲವಲು ನಾಸಿಕವ ತಾಗಿ ಸತ್ತುದು ಎಂಬುದನರಿದು
ಮರಿ ಬಚ್ಚಬಯಲಾಯಿತ್ತು.
ಬಯಲ ತಿಳಿದರಿ ನಿನ್ನ ನೀ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./10
ಆರು ಸ್ಥಲವನರಿದು ಮೂರು ಸ್ಥಲವ ಮುಟ್ಟಿ,
ಮೂವತ್ತಾರು ಸ್ಥಲವ ಕೂಡಿ,
ಇಪ್ಪತ್ತೈದು ಸ್ಥಲದಲ್ಲಿ ನಿಂದು,
ನೂರೊಂದರಲ್ಲಿ ಸಂಗವ ಮಾಡಿ ಬೇರೆ ನೆಲೆಗಳೆದು ನಿಂದಲ್ಲಿ,
ಕಾಯ ಜೀವದ ಬಂಧ ಅದೇತರಿಂದ ನಿಂದಿತ್ತೆಂದರಿ ನಿನ್ನ ನೀನೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./11
ಆರೂ ಇಲ್ಲದ ಠಾವಿನಲ್ಲಿ ಊರ ಕಟ್ಟಿ,
ಊರವರೆಲ್ಲರು ಒಳಗೆ ತಾ ಹೊರಗಾಗಿ,
ಕೆರೆಯ ಕಟ್ಟಿ, ಕೆರೆಯ ಬಾಗಿಲು ಊರೊಳಗೆ ಮನೆ ಹೊರಗಾಗಿ
ಎಡೆಯಾಡುತ್ತಿದ್ದಾತನ ನೀತಿಯನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./12
ಆಸೆಯಳಿದು ನಿರಾಸಕನಾದಲ್ಲಿ ಪಾಶಬದ್ಧರೊಳಗಣ
ಮಾತಿನ ಮಾಲೆಯೇಕೆ?
ಸರ್ವವ ನೇತಿಗಳೆದು ನಿಂದಲ್ಲಿ ಸ್ತುತಿ ನಿಂದೆಯ ಮಾತಿನ
ಬಿರುಬು ಅದೇತಕ್ಕೆ?
ಇಂತಿವನರಿದು ನುಡಿದು ನಡೆಯಲಿಲ್ಲದ ತ್ರಿವಿಧ
ಸುರೆಗುಡಿಹಿಗಳ ಮಾತು.
ಮಂಜಿನ ಹರಿಗೆಯ ಬಿಸಿಲಂಬು ತಾಗಿದಂತಾಯಿತ್ತು.
ಇಷ್ಟರ ಗುಣ ಏತರಿಂದಾಯಿತ್ತು, ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./13
ಇಚ್ಛಾಶಕ್ತಿ ಹೋತಿಂಗೆ ಸತಿಯಾಹಲ್ಲಿ,
ಕ್ರಿಯಾಶಕ್ತಿ ಕೋಡಗಕ್ಕೆ ಸತಿಯಾಹಲ್ಲಿ,
ಜ್ಞಾನಶಕ್ತಿ ಬಳ್ಳುವಿನ ಬಾಗಿಲು ಕಾವಲ್ಲಿ
ಇವರೆಲ್ಲರ ನೀ ನೋಡುತ್ತಿದ್ದೆ.
ನೀ ನೋಡುವ ನೋಟ ತ್ರಿವಿಧ ನಾಶ.
ಕೋಲಿನ ಶಾಂತನ ವೇಷ, ನಿನ್ನ ಕಾರುಣ್ಯವಾಸ,
ಎನ್ನ ಭ್ರಾಂತಿನ ವೇಷ ನಾಶವಾಯಿತ್ತು.
ಪುಣ್ಯಾರಮ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./14
ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ
ಭರಿತನಾಗಿ ಇರಬೇಕು.
ಅದು ಆರೋಪಿಸಿದಲ್ಲಿ ಭಾವ ಇದಿರಿಡದಲ್ಲಿ
ಬೇರೊಂದು ಬಯಕೆಯ ಅರಿತಿರಬೇಕು.
ಅರಿವನರಿತೆನೆಂದು ಕುರುಹ ಮರೆದಡೆ
ಆ ಮರೆವುದೆ ತನ್ನ ತಿಂಬ ಮಾಯೆ ಎಂದರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./15
ಇಷ್ಟ ಪ್ರಾಣವ ಸಂಬಂಧಿಸಬೇಕೆಂಬರು.
ಪ್ರಾಣ ಇಷ್ಟದಲ್ಲಿ ನಿಂದ ಮತ್ತೆ ಕಾಯದ ಸುಳುಹುಂಟೆ?
ಇಷ್ಟದ ಕಳೆ ಪ್ರಾಣದಲ್ಲಿ ನಿಂದ ಮತ್ತೆ
ಇಷ್ಟವ ಮುಟ್ಟಿ ಪೂಜಿಸುವ ಪರಿಯಿನ್ನೆಂತೊ?
ಉಭಯದ ಘಟ ಬಿದ್ದಲ್ಲಿ ಅರಿವೆಲ್ಲಿ ನಿಂದಿತ್ತು?
ಅಲ್ಲಿ ಶೂನ್ಯಕ್ಕೆ ಸುಳುಹುಂಟೆ?
ಇದು ಅವಿದ್ಯರ ಮತ, ವಿದ್ಯರ ಮತವಲ್ಲ;
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./16
ಉದಕ ನಾನಾ ವರ್ಣದ ರೂಪಿನಲ್ಲಿ ಬೆರಸಿ
ಅವರ ಛಾಯಕ್ಕೆ ಭಿನ್ನಭಾವವಿಲ್ಲದೆ,
ಆ ರೂಪಿಂಗೆ ತಾ ದ್ರವವೊಡಲಾಗಿ ತೋರುವಂತೆ
ಎನ್ನ ಸರ್ವಾಂಗದಲ್ಲಿ ತೋರುವ ಕೋರಿಕೆ ನೀನಾಗಿ,
ಮುಕುರವ ನೋಡುವ ನೋಟದಂತೆ ಒಳಗೆ ತೋರುವ ಇರವು,
ಹೊರಗಳವನ ಪ್ರತಿರೂಪಿನಂತೆ
ಎಲ್ಲಿಯೂ ನೀನಾಗಿ ನಾನರಿದು ಮರೆವುದಕ್ಕೆ ತೆರಪಿಲ್ಲ.
ಹಾಗೆಂದಲ್ಲಿಯೆ ನಿನ್ನ ಉಳುಮೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./17
ಊರ ಬಾರುಕನ ಬಾಗಿಲಲ್ಲಿ ಮಹಾರಾಜ ಕಾಯಿದೈದಾನೆ.
ಅವನ ಓಲಗಕ್ಕೆ ಎಡೆತೆರಪಿಲ್ಲದೆ ಅವಸರವ ಕಾಯಿದೈದಾನೆ.
ಆವ ಮನೆಮನೆಯ ಹೊಕ್ಕು ಬವಣೆಗೆ ಬಹ
ಬಾರುಕನ ಭವಕ್ಕೊಳಗಾದನರಸು.
ಒಡೆಯ ಬಂಟನಾದುದನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./18
ಊರೆಲ್ಲರೂ ಕೂಡಿಕೊಂಡು ತಿಂದರು ದನವ.
ಆ ಖಂಡವನೊಲ್ಲದೆ ಕಾಲ ಕೊಳಗು
ತಲೆಯ ಕೊಂಬು ಬೇಯಿಸಿ ತಿಂಬ ಶರಣ.
ತಿಂಬ ಕೊಂಬು ಕೊಳಗು ಅವನಂಗವ ನುಂಗಿತ್ತು.
ಅಂಗ ಸುಸಂಗ ಲೀಯವಾಯಿತ್ತು.
ಲೀಯ ನಿಜದಲ್ಲಿ ನಿಂದು ನಿರ್ಲೆಪವಾಯಿತ್ತು.
ಆ ಗುಣವೇತರಿಂದ ಆಯಿತ್ತು ಎಂಬುದನರಿ ನಿನ್ನ ನೀ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./19
ಎನಗುಣಲಿಕ್ಕಿದರಯ್ಯ ಸಿರಿಯಾಳ-ಚೆಂಗಳೆಯರು.
ಎನಗುಡ ಕೊಟ್ಟರಯ್ಯಾ ದಾಸ- ದುಗ್ಗಳೆಯವರು.
ಎನ್ನ ಮುದ್ದಾಡಿಸಿದರಯ್ಯಾ ಅಕ್ಕನಾಗಮ್ಮನವರು.
ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು
ಚೋಳಿಯಕ್ಕ ನಿಂಬವ್ವೆ ನೀಲಮ್ಮ ಮಹಾದೇವಿ ಮುಕ್ತಾಯಕ್ಕಗಳು.
ಇಂತಿವರ ಒಕ್ಕುಮಿಕ್ಕ ತಾಂಬೂಲ ಪ್ರಸಾದವ ಕೊಂಡು ಬದುಕಿದೆನಯ್ಯಾ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./20
ಎನ್ನಾಕಾರವೆ ನೀನಯ್ಯ ಬಸವಣ್ಣ.
ನಿ [ನ್ನಾಕಾರವೆ] ಕೋಲ ಶಾಂತ.
ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ
ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ
ನಮೋ ನಮೋಯೆಂಬೆ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./21
ಒಂದಿರುಹಿನ ಗೂಡಿನಲ್ಲಿ ಆಯಿದಾನೆ
ಮರಿಯನಿಕ್ಕಿ ಹೋದವು ತಮ್ಮ ಕಾಡಿಗೆ.
ಇರುಹು ಮರಿಯ ಕಣ್ಣ ಕಟ್ಟಿ
ಮರಿಯ ತೆಗೆದು ಹಾಕಿದವು ತಮ್ಮ ಗೃಹದಿಂದ.
ಆನೆ ಬಂದು ನಿಂದು ನೋಡಿ ಇದೇನಾಯಿತ್ತು ಮರಣ
ಎಂಬುದಕ್ಕೆ ಮೊದಲೇ ಆನೆ ಸತ್ತು ಇರುಹಿನ ಹಗೆ ಬಿಟ್ಟಿತ್ತು.
ಆ ಅರಿವ ಅರಿದು ನೋಡು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./22
ಒಂದು ಯೋನಿಯಲ್ಲಿ ಬಂದ ಮಕ್ಕಳ ವಿವರ:
ಕಡೆ ನಡು ಮೊದಲೆಂದು ಕುರುಹಿಟ್ಟು ಕರೆದಡೆ ನುಡಿವಂತೆ
ಅವರ ಪರಿ.
ನಾಮಧೇಯದಲ್ಲಿ ಕರೆದಡೆ ಓ ಎಂಬಂತೆ ಅದು ಏಕರೂಪು.
ಸರ್ವಮಯನಾಗಿ ಸಂಪದಕ್ಕೆ ಬಂದುದನರಿ;
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./23
ಓಡ ಕುದುರೆಯ ಮೇಲೆ ಮಸಿಯ ಹಲ್ಲಣವ ಹಾಕಿ,
ಬಸಲೆಯ ಹಂಬ ಬಾಯಿಗೆ ಕಟ್ಟಿ, ದೆಸೆವರಿವ ಅಸುರಾವುತ
ಚೊಲ್ಲೆಹದ ಬಲ್ಲೆಹವ ಹಿಡಿದು,
ಮುಗುಳುನಗೆಯವಳಲ್ಲಿ ಏರಿ ತಿವಿದ.
ಚೊಲ್ಲೆಹದ ಬಲ್ಲೆಹ ಮುರಿದು, ಓಡಿನ ಕುದುರೆ ಒಡೆದು,
ಮಸಿಯ ಹಲ್ಲಣ ನುಗ್ಗುನುಸಿಯಾಗಿ,
ಬಸಲೆಯ ಬಾಯಕಟ್ಟು ಹರಿದು,
ಅಸುರಾವುತ ಅವಳ ಕಿಸಲೆಯ ರಸಕ್ಕೊಳಗಾದ.
ಅದೇತರಿಂದ ಹಾಗಾದನೆಂಬುದ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./24
ಕಂಡವರಿಗೆ ದೇವರ ಕಟ್ಟುವ ಭಂಡ ಗುರುವಿನ ಇರವು
ಜಗಭಂಡೆ ಎದೆಯ ಕೊಟ್ಟು ಕಂಡವರ ಕೈಯಲ್ಲಿ ಎದೆಯ ಹೆಟ್ಟಿಸಿಕೊಂಬಂತೆ.
ಅಗಲಿ ಬೀಳುವ ಕಲ್ಲಿಗೆ ಹರಿದು ತಲೆಯನೊಡ್ಡಿಸುವನಂತೆ.
ಆ ಬರಿ ಕಾಯನಲ್ಲಿ ಕಟ್ಟಿದ ಇಷ್ಟ
ತೊಟ್ಟಿಯ ಹುದುರಿನಲ್ಲಿ ಕಲ್ಲು ಸಿಕ್ಕಿದಂತಾಯಿತ್ತು.
ಅದು ಭ್ರಷ್ಟನ ಕೈಯ ಕಟ್ಟುಗೂಳು, ಉತ್ತಮರೊಲ್ಲರು.
ಆ ಚಿತ್ತವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./25
ಕಣ್ಣಿನೊಳಗಣ ಮತ್ಸ ್ಯಕ್ಕೆ ಬಲೆಯ ಬೀಸಿ,
ಹದ್ದಿನ ಬಾಯ ಹಾವಿಂಗೆ ಹೇಳಿಗೆಯ ಮಾಡಿ,
ಕಾಣಬಾರದ ಬಯಲಿಂಗೆ ಮನೆಯ ಕಟ್ಟಿ
ಬಾಳುತ್ತಿದ್ದವನ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./26
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ತನ್ನಯ ಕಣ್ಣ ಕಂಡ.
ಕಾಲಿಲ್ಲದ ಅದವ ಕಠಾರವ ಹಿಡಿದು ಮೂಗಾವುದ ತಿರುಗಿ ಬಂದ.
ನಪುಂಸಕ ಬೆಸನಾಗಿ ಬಂದು ಹುಸಿಯ ಕೂಸು ಹುಟ್ಟಿ ಮಸಕಿತು.
ಮೊಲೆ ಹೊಲೆಗೇರಿಯಲ್ಲಿ ಹೊಲೆ
ಮೂಲೆಯನುಂಡು ಬೆಳೆದವರನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./27
ಕಳ್ಳ ಉಸುರಡಗಿ ಬೆಳ್ಳನ ಮಂದಿರದಲ್ಲಿ ಬಂದಡಗಿದಂತೆ
[ದರ್ಶ] ನವ ಹೊತ್ತು ಪಶುಪತಿಯ ಭಕ್ತರುಗಳು ಸರ ಸಂಪದವರಿಯದೆ
ತಮ್ಮಯ ತುರೀಯ ಆಪ್ಯಾಯನಕ್ಕಾಗಿ ಅಗಡವ ನುಡಿವ
ದರುಶನ ಸಾಗರಗಳ್ಳರಿಗೇಕೆ ಮೂರಕ್ಷರದ ಭೇದ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./28
ಕಾಮಧೇನುವಿನ ನಡುವೆ ಒಂದು ಕೋಣ ಕಟ್ಟಿ ಇದ್ದಿತ್ತು.
ಕೋಣನ ಗವಲು ತಾಗಿ ಕಾಮಧೇನು ಕೆಡುತ್ತದೆ.
ಕೋಣನ ಡೋಣಿಗೆ ತಳ್ಳಿ ಕಾಮಧೇನುವ ಕಾಣದಂತೆ ಮಾಡು.
ಅರಿವು ಅಜ್ಞಾನವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./29
ಕಾಳಿಯ ಹೊಲದ ಓಣಿಯ ದಾರಿಯಲ್ಲಿ ಮೂವರು ಕಳ್ಳರು ಕಟ್ಟಿ
ಬೆಳ್ಳನೊಬ್ಬನ ಆ ಕಳ್ಳರು ಹಿಡಿಯಲಾಗಿ
ಬೆಳ್ಳನ ಬೆಳುವೆ ತಾಗಿ, ಕಳ್ಳರು ಮೈಮರೆದು,
ಮೂರು ಹಳ್ಳದಲ್ಲಿ ಬಿದ್ದರು.
ಬಿದ್ದು ಸಾವರ ಕೊಲ್ಲಲೊಲ್ಲದೆ ಬೆಳ್ಳನಲ್ಲಿಯೆ ಅಡಗಿದ.
ಅಡಗಿದವನಾರೆಂದರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./30
ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟು ಕೊಂಡು
ಘನಲಿಂಗದ ಮುದ್ರೆಯನಿಕ್ಕಿ ಹೊಲೆದೊಳೆದೆವೆಂದು
ಕಲಹಕ್ಕೆ ಇದಿರಹ ಕುಲುಮೆಗಾರರಿಗೇಕೆ ಮೂರಕ್ಷರದ ಒಲವರ?
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./31
ಕೋಣನ ಕಿವಿಯಲ್ಲಿ ಮೂರು ಹಸು ತೆನೆ ತುಂಬಿ
ಕರವೊಂದನೆ ಈಯಿತ್ತು.
ಕರು ತಾಯಿ ನೆರೆ ನೋಡಿ ಹಾಲಿಗೆ ಒಡೆಯರಿಲ್ಲಾ ಎಂದು
ಪ್ರಾಣವ ಬಿಟ್ಟಿತ್ತು.
ಕರುವಿನ ಹರಣವರಿ; ಅರಿತಡೆ ನಿನ್ನ ನೀನೆ ಭಿನ್ನಭಾವವಿಲ್ಲ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./32
ಕೋಲ ಬಳಿಯ ಅಂಧಕನಂತೆ, ವಾಹನದ ಪಂಗುಳನಂತೆ,
ಗಹನದಲ್ಲಿ ಸಿಕ್ಕಿದ ಸಿಸುವಿನಂತೆ,
ಸ್ಥಾನದಪ್ಪಿ ಹೊಲಬುದಪ್ಪಿದ್ದೇನೆ,
ಹೊಲದ ಹೊಲಬ ಹೇಳು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./33
ಕೋಲು ಕಪ್ಪರವ ಹಿಡಿದು,
ಭಾಳಾಂಬಕನ ಲೀಲೆಯ ತೊಟ್ಟು,
ಅಶನದಾಪ್ಯಾಯನಕ್ಕೆ ತಿರುಗುವ ಬಾಲಲೀಲೆಯಲ್ಲದೆ
ಭಾಳಾಂಬಕನ ನೆಲೆಯಲ್ಲ.
ಜಾಳು ಮಾತ ಬಿಟ್ಟು ಮೂರಕ್ಷರದ ನೆಲೆಯನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./34
ಕ್ಷಮೆಯಿಲ್ಲದ ಭಕ್ತಿ, ನಯರತಿಯಿಲ್ಲದ ಮಾಟ,
ಶ್ರದ್ಥೆಯಿಲ್ಲದ ಕೂಟ, ಶಿವಲಿಂಗಾರ್ಚನೆಯಿಲ್ಲದವನ ಹೃದಯ
ನಂದಿಸಿದ ಕಜ್ಜಳದಂತೆ.
ಆ ಸಂದೇಹವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./35
ಗೋವು ಮೊದಲು ಚತುಃಪಾದಿ ಜೀವಂಗಳು
ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ
ಬೀಡಿಂಗೆ ಹೋಹಂತೆ,
ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.
ಬಂದುದ ಮರೆದ ಬಂಧಜೀವಿಗ ನಾನಾಗಿ
ಜೀವಕಾಯದ ಸಂದ ಬಿಡಿಸು.
ಬಿಂದು ನಿಲುವ ಅಂದವ ಹೇಳು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./36
ಚರ ಸ್ಥಾವರವಾದುದುಂಟೆ?
ಮಹಾಸಮುದ್ರಕ್ಕೆ ಕೆರೆಯೇರಿಯುಂಟೆ?
ಸುಖವ ಮಚ್ಚಿ ಅಖಿಳರೊಳಗಿದ್ದು ಸಕಲ ವಿರಹಿತರಾದ ಪರಿಯಿನ್ನೆಂತೊ?
ಅದು ವಿಕಳರ ಮಾತು, ಮೂರಕ್ಷರಕ್ಕೆ ದೂರ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./37
ಜ ಎಂದಲ್ಲಿ ಜನನ ನಾಸ್ತಿಯಾಗಿ,
ಗ ಎಂದಲ್ಲಿ ಗಮನ ನಾಸ್ತಿಯಾಗಿ,
ಮ ಎಂದಲ್ಲಿ ಮರಣ ನಾಸ್ತಿಯಾಗಿ,
ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ,
ಕೂಟಕ್ಕೆ ನೆರೆದ ಅಗುಳಾಸೆಯ ವಿಹಂಗನಂತಾಗಬೇಡ.
ತ್ರಿವಿಧಾಕ್ಷರವ ತ್ರಿಗುಣದಲ್ಲಿ ಇರಿಸಿ ತ್ರಿಗುಣಕ್ಕೆ ಹೊರಗಾಗು.
ತ್ರಿಗುಣರಹಿತ ಸಗುಣಭರಿತನಾಗು.
ಅದ ನಿನ್ನ ನೀನರಿ, ಲಿಂಗ ಜಂಗಮವೆ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./38
ಜಡೆಮುಡಿ ಬೋಳು ಹೇಗಾದಡಾಗಲಿ,
ನಡೆನುಡಿ ಸಿದ್ಧಾಂತವಾದಡೆ ಸಾಕು,
ಆತ ಪರಂಜ್ಯೋತಿ ಗುರುವಹ.
ಆ ಇರವ ನಿನ್ನ ನೀನರಿ,
ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ./39
ಜಲದ ಮಧ್ಯದಲ್ಲಿ ಅಯಿಮೂಲೆಯ ಕೆಲದಲ್ಲಿ
ಒಂದು ಹೊಲ ಬೆಳೆಯಿತ್ತು.
ಬೆಳೆಯ ಮೇಯ ಬಂದ ಎರಳೆ ತೆನೆಯಿಲ್ಲದ ಮರಿಗಂಡಿತ್ತು.
ಆ ಮರಿ ಕಣ್ಣ ತೆಗೆದು ನೋಡಿ
ಎನ್ನ ಹೆತ್ತ ತಾಯಿಯಲ್ಲಾಯೆಂದು ಎರಳೆಯ ಮರಿ ನುಂಗಿತ್ತು.
ಹೊಲದೊಡೆಯ ಬಂದು ನಿಂದು ನೋಡಿ
ಮರಿಯ ಕಂಡು ಅಂಜಿ ಹೊಲಬುದಪ್ಪಿದ.
ಹುಲ್ಲೆ ತಪ್ಪಿ ಹೊಲದಣ್ಣ ಕಪ್ಪಿನಲ್ಲಿ ಬಿದ್ದ.
ಆ ಹೊಲಬ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./40
ಜಲದುಡುಕೆಯ ತುಂಬಿ ಮೊಲೆನೀರ ಮೀವವರೆಲ್ಲರು
ಅಮಲನ ಗುಣ ನೇಮವ ಮಾತಾಡಲೇಕೆ?
ಸುಮನೆಯ ಸುಖದೊಳಗೆ ಲಯವಹರೆಲ್ಲರು.
ಆ ಸುಮನನ ಭಾವವ ವಿಘಟಿಸುವ ಪರಿಯಿನ್ನಾವುದು?
ಬಾಲೆ ಭವಕ್ಕೆ ಬೀಜ.
ನಿರ್ಗತಿ ನಾಮರೂಪಿಲ್ಲ.
ಇಂತೀ ಭೇದವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./41
ತಡಿಮಡುವಾದಡೆ ಮೊಗೆವ ಠಾವೆಲ್ಲಿಯದು?
ಜಗದೆಲ್ಲವನರಿದ ಮತ್ತೆ ಬಲ್ಲವನಿನ್ನಾರು?
ಸ್ವಪ್ನದ ತೆರದಂತೆ ಎತ್ತಾನಕ್ಕೆ ಇಪ್ಪವನೊಬ್ಬ
ಆತನ ಚಿತ್ತವನರಿ ನಿನ್ನ ನೀನೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./42
ತತ್ಕಾಲವನರಿವ ಕುಕ್ಕುಟನ ಬಾಯ
ತುತ್ತನಿಕ್ಕಿಸಿಕೊಂಡವನಾರಯ್ಯ?
ಆ ತುತ್ತು ಮುತ್ತದವರ ಮುಕ್ತಿಯ ಬಲೆಗೀಡು ಮಾಡುವುದು.
ತುತ್ತ ಮುಟ್ಟದೆ ಕುಕ್ಕುಟನ ಕುಲವ ಕರೆ.
ಕರೆದಲ್ಲಿ ಬಂದು ನಿಂದುಳುಮೆ, ಅದರಂಗವ ಆರೆಂದರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./43
ತನಗೆ ಇದಿರಾದ ಗುರುವ ಕಳೆದು
ತಾನು ಗುರುವಾಗಿ ಗುರುವಾಗಬೇಕು.
ತಾ ಹರಕರಜಾತನಾಗಿ ನಿಂದು
ತನ್ನಯ ಭೃತ್ಯರ ಗುರುಕರಜಾತನ ಮಾಡಬೇಕು.
ತನ್ನಯ ಗುಣ ಜಡ,
ಇದಿರಿಗೆ ಅಜಡವ ಹೇಳುವ ನರಬಿನ್ನ ಕಾರುಕಂಗೆ
ಸದ್ಗುರು ಸ್ಥಲವಿಲ್ಲ.
ಅದ ಅವನರಿಯ, ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./44
ತಾ ಗುರುವಾಹಾಗ ತನ್ನ ಗುರುವ ತಾನರಿತು,
ತನಗೆ ಇಹದಲ್ಲಿ ಸುಖ,
ತನ್ನ ಗುರುವಿಂಗೆ ಪರದಲ್ಲಿ ಪರಿಣಾಮವನೈದಿಸುವ
ಉಭಯ ಗುರು ತಾನಾಗಿ ಇದಿರಿಂಗೆ ಪ್ರತಿಸ್ವರೂಪವ ಕೊಡುವಲ್ಲಿ,
ತನ್ನಯ ನಿಜರೂಪ ಪ್ರಾಣಪ್ರತಿಷ್ಠೆಯ ಮಾಡಿ
ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ,
ಕಾಯದ ಸೂತಕವ ಕಳೆದು, ಮನದ ವಿಕಾರವ ಹಿಂಗಿಸಿ,
ತನ್ನಿರವನರಿತು ಅರಿದರಿವ ಶಿಷ್ಯನ ಹೃತ್ಕಮಲ ಮಧ್ಯದಲ್ಲಿನೆಲೆಗೊಳಿಸಿ,
ಅರಿವಿನ ಭೇದದಿಂದ ಶಿಲೆಯ ಸೂತಕವ ಕಳೆದು
ಇಷ್ಟಪ್ರಾಣವ ಬೆಸುವ ಬೆಸುಗೆಯ ತೋರಿ,
ಉಡುವ ತೊಡುವ, ಕೊಡುವ ಕೊಂಬ,
ಮುಟ್ಟುವ ಅರ್ಪಿತಭೇದವ ದೃಷ್ಟದಿಂದ ತೋರಿ,
ಗುರುವೆಂಬ ಭಾವ ತನಗೆ ತಲೆದೋರದೆ
ಹರಶರಣರ ಮುಂದಿಟ್ಟು
ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು
ತ್ರಿವಿಧದ ಭೇದವ ತೋರಿ,
ಗುರುವೆಂಬ ಭಾವ ತನಗೆ ತಲೆದೋರದೆ
ಹರಶರಣರ ಮುಂದಿಟ್ಟು,
ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು
ತ್ರಿವಿಧವ ಭೇದವ ತೋರಿ.
ತಾನು ಶುಕ್ತಿ ನುಂಗಿದ ಜಲದಂತೆ,
ಭ್ರಮರ ನುಂಗಿದ ಗಂಧದಂತೆ,
ದೃಜಕೊಂಡ ದೃಮಣಿಯಂತೆ,
ನಾಮ ರೂಪು ಭಾವವಳಿದು ತಾನು ತಾನಾದಡೆ ಗುರುಸ್ಥಲ.
ಅದ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./45
ತ್ರಿಸಂಧಿಯಲ್ಲಿ ನಿಂದು, ತ್ರಿಗುಣಾತ್ಮನ ಕೊಂದು,
ಕೆಲದಲ್ಲಿ ನಿಂದವನಾರೆಂಬುದ ತಿಳಿ.
ತಿಳಿದು ನೋಡೆ ಅಯಿಗಡಲನಂಗ ಮೂರು ಮುಡಿಯವನ ಸಂಗ.
ಬೇರೊಂದ ಹಿಡಿದು ನೋಡುವವನ ನಿಸ್ಸಂಗ.
ತನ್ನ ತಾನರಿದಲ್ಲಿಯೆ ಕಾಣಬಂದಿತ್ತು.
ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ
ನಿರಂಗಸಂಗ./46
ದಾಳಿಹೋದ ಆಳಿನ ಉಸುರಿನಲ್ಲಿ ಒಂದು ವೇಣು ಹುಟ್ಟಿತು.
ಮೂರು ಗೆಣ್ಣು, ಹದಿನಾರು ಹೋಟೆ.
ಹತ್ತ ಕಳೆದು ಆರರ ಮೇಲೆ ನಿಂದುದು ಅಯಿದರ ನೆಲೆ.
ಅಯಿದ ಕೂಡಿ ನಿಂದುದು ಇಪ್ಪತ್ತರ ಭಾವ.
ತತ್ವಶಕ್ತಿಯಲ್ಲಿ ಅಡಗಿ ಆಳುವೆಣು
ಹತ್ತು ಆರು ಇಪ್ಪತ್ತೈದು ಕೂಡಿ ನಿಶ್ಚಯವಾಯಿತ್ತು.
ಇದರಾಗ ಭೇದಿಸಿ ತತ್ವವನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./47
ದಿನಚರಿಯೆಂಬ ಪಟ್ಟಣದಲ್ಲಿ ಕನಕರತಿಯೆಂಬರಸು,
ಮನಸಿಜನೆಂಬ ಪ್ರಧಾನ,
ಕನಸಕಂಡಡೆ ಅರಿವ ತಮಸೂನು ತಳವಾರ.
ಇವರೆಲ್ಲರ ವಂಚಿಸಿ ಅರಸಿನ ಹೆಂಡತಿ
ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದಳು.
ಪ್ರಧಾನ ಕಂಡ; ಅರಸು ತಳವಾರ ಕಂಡುದಿಲ್ಲ.
ಮನಸಿಜ ಕಂಡು ಬದುಕಿದೆ ಹೋಗೆಂದ.
ಅರಸಿಗೆ ಕೂಪನಾದ; ಮಾನಹಾನಿಗೆ ಕೇಡಿಲ್ಲದಂತೆ.
ಇಂತೀ ಭೇದವನರಿ, ಪಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./48
ಧರೆ ಸಲಿಲ ಅನಲ ರವಿ ಶಶಿ ಜಗಸೂತ್ರವೆಲ್ಲಕ್ಕೂ ಸರಿ.
ಅರಿದವನ ಚಿತ್ತದ ದಯ ಸರ್ವಪ್ರಾಣಿಗಳಿಗೂ ಸರಿ.
ದಯ ವಿಶ್ರಾಂತಿ ಇದು ಮಿಥ್ಯವಲ್ಲದೆ ತಥ್ಯವಲ್ಲದ
ದಂತಶೂಕ ಶಿಲೆಯಲ್ಲಿ ನಿಂದಂತಾಗಬೇಡ, ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./49
ಧರೆ ಸಿರಿ ಉರಿ ಮೂರು ಕೂಡಿ ಉರಿವುತ್ತದೆ.
ಆ ಉರಿಯ ನಡುವೆ ಮಲಯಜ ಹುಟ್ಟಿತ್ತು.
ಮಲಯಜದ ಗಂಧ ತಾಗಿ ಮೂವರ ಬಲೋತ್ರ ನಂದಿತ್ತು.
ಅವು ನಂದುವಾಗ ನಾ ನಿಂದಿರಲಾಗಿ
ಆ ರಾಹು ತಾಗಿ ಎನ್ನಯ ಕಾಯದ ರೂಪು ಬಯಲಾಗದಿದೆ
ಎಂದೆನುತ್ತ ಚಿಹ್ನದೋರುತ್ತದೆ.
ತೋರಿ ಅಡಗಬೇಡ, ಅಡಗಿದಡೆ ನಾ ಬಿಡೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./50
ಧಾತ ಮಾಡುವ ತೆರಪನರಿಯದೆ
ಕಾಡುವ ಕಮ್ಮಟದೇಹಿಗಳ ನೋಡಾ!
ಆತನೇ ಆಗುಚೇಗೆಯನರಿಯದೆ ಮರಿಪಕ್ಷಿ ಕುಟುಕಿಂಗೆ ಬಾಯ
ಬಿಡುವಂತೆ
ಕೈ ಬಾಯಾನುವ ದರುಶನ ದಾರಿಗಳ್ಳರಿಗೇಕೆ ಮೂರಕ್ಷರ?
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./51
ನಾಮ ಘಟ್ಟಿಸಿಯಲ್ಲದೆ ಕರೆದಡೆ ನುಡಿಯಬಾರದು.
ಕ್ರೀ ಶುದ್ಧತೆಯಾಗಿ ನಿಂದಲ್ಲದೆ ಅರಿಯಬಾರದು.
ಅರಿವಿಂಗೆ ಆಶ್ರಯಿಸುವುದಕ್ಕೆ ಒಡಲಿಲ್ಲ.
ಅರಿವು ಕುರುಹಿನಲ್ಲಿ ವಿಶ್ರಮಿಸಿ
ಹಣ್ಣಿನ ಸಿಪ್ಪೆಯ ಮರೆಯಲ್ಲಿ ಭಿನ್ನರುಚಿ ನಿಂದು ಸವಿದಾಗ
ಸಿಪ್ಪೆ ನಿಂದು ರಸವೊಪ್ಪಿತ್ತು.
ಆ ಚಿತ್ತವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./52
ನಿರ್ಮಲ ಜಲ ಸ್ಥಾನದಲ್ಲಿ ಇದ್ದಡೇನು
ತಹುದಕ್ಕೆ ಘಟವಿಲ್ಲದ ಮತ್ತೆ?
ಅರಿವಿನ ಮಾತ ಬರಿಕಾಯರು ನುಡಿದಡೇನು
ಕುರುಹಿಲ್ಲದ ಮತ್ತೆ?
ತನ್ನ ಸೀಮೆಯ ತಾನರಿದು ಅಲ್ಲಿಗೆಯಿದುವನಂತೆ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./53
ಪಂಚಪೃಥ್ವಿಯ ಮಧ್ಯದಲ್ಲಿ ಒಂದು ಉಡುವರದ ಗಿಡು ಹುಟ್ಟಿತ್ತು.
ಆ ಗಿಡವನೊಡೆದು ಒಬ್ಬ ದುರುದುಂಡಿ ಹುಟ್ಟಿದಳು.
ಅವಳಂಡಕರಂಡದಲ್ಲಿ ಹುಟ್ಟಿದ ಬೆಳೆಯನುಂಬ ಮಕ್ಕಳಾರು?
ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./54
ಪಂಚವಳಯ ವಿಸ್ತೀರ್ಣದಲ್ಲಿ ಕಟ್ಟಿದವು ಮೂರು ಪಟ್ಟಣ.
ಕೆಲದಲ್ಲಿ ಹೊಲಗೇರಿ, ಬಲದಲ್ಲಿ ಮಾದಿಗರ ಮನೆ.
ನಡುವೆ ಹೆಬ್ಬಾರುವರ ಮಹಾಜನಂಗಳ ಗುಡಿವಾಡ.
ಹೊಲೆಯರ ಗೋವಧೆಯ ಮಾದಿಗರ ಮನೆಯ ನಾತ.
ಹಾರುವರೂಟದ ಸುಖ ಲೇಸಾಯಿತ್ತು.
ಜಗದ ಕೀಳು ಮೇಲಿನ ಕೂಟ
ಅದೇತರಿಂದಾಯಿತ್ತು ಎಂಬುದ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./55
ಪಥವನರಿಯದೆ ಇಷ್ಟವ ಕಟ್ಟುವ ಗುರು
ಬೆಳಕಿಗೆ ಸಿಕ್ಕಿದ ಪತಂಗನಂತಾದ.
ಗುರುವಿನ ಕೈಯಲ್ಲಿ ಕಟ್ಟಿದ ಶಿಷ್ಯ
ಕೀಟಕನ ಕೈಯಲ್ಲಿ ಸಿಕ್ಕಿದ ಮಕ್ಷಿಕನಂತಾದ.
ಚೇಟಿದಾಸನ ಕೂಟದಂತಾಯಿತ್ತು; ಅದೇತರ ಭೇದ, ನಿನ್ನನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./56
ಪುಟ್ಟಿದ ಮರದಲ್ಲಿ ಹಾರಿದ ಪಕ್ಷಿ ತಲೆದೋರುತ್ತದೆ.
ಆಗದ ಹಣ್ಣ ಕುಟುಕಿ ರಸ ತಾಗದೆ ನುಂಗುತ್ತದೆ.
ಅದು ನಾಗರಿಕ ಪಕ್ಷಿ, ಹಾರಿಹೋಯಿತು.
ಅದರಾಗತವನರಿ, ಆತ್ಮನಿರವ ನಿನ್ನ ನೀನೆ ತಿಳಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./57
ಪೂರ್ವವ ಕಳೆದು ಪುನರ್ಜಾತನಾದೆವೆಂಬಿರಿ.
ಪೂರ್ವ ಬಂದ ಬಟ್ಟೆಯ ಮರೆದು ಜಾತತ್ವಕ್ಕೆ ನಾನಾ ಭೌತಿಕವ ತೊಟ್ಟು
ಪಿಷ್ಪದವರ ಅಭೀಷ್ಟನಾಗಿ ಮತ್ತೆ ಪುನರ್ಜಾತನಾದ ಪರಿಯಿನ್ನೆಂತೂ?
ಜಂಗಮವಾದಲ್ಲಿ ಜನನಿ ಜನಕ ಸಹೋದರ
ಮಿಕ್ಕಾದ ಭವಪಾಶಂಗಳ ಸ್ವಪ್ನದ ಸುಖದಂತೆ ಎಂದರಿದು,
ತನ್ನಿರವ ತಾನರಿತು, ಮುಟ್ಟಿದ ಭಕ್ತರ ಮುಕ್ತಿಯ ಮಾಡು;
ತ್ರಿಯಕ್ಷರದ ಗೊತ್ತು ಮುಟ್ಟರು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./58
ಪೃಥ್ವಿ ಪೃಥ್ವಿಯ ಕೂಡಿದಲ್ಲಿ
ಅಪ್ಪು ಅಪ್ಪುವ ಕೂಡಿದಲ್ಲಿ
ತೇಜ ತೇಜವ ಕೂಡಿದಲ್ಲಿ
ವಾಯು ವಾಯುವ ಕೂಡಿದಲ್ಲಿ
ಆಕಾಶ ಆಕಾಶವ ಕೂಡಿ ನಿಂದಲ್ಲಿ
ಜೀವನ ಪಾಪ ಪುಣ್ಯವಾವುದು ಹೇಳಿರಣ್ಣಾ.
ಜೀವಕೆ ಭವ ಕಾಯಕ್ಕೆ ಮರಣವೆಂಬರು.
ಕಾಯ ಜೀವದ ಬೆಸುಗೆ ಅದಾವುದು ಹೇಳಿರಣ್ಣಾ.
ಒಡೆಹಂಚ ಹೊಯಿದಡೆ ದನಿ ಭಿನ್ನವಾದಂತೆ
ಅದಾರಿಂದ ಉಭಯ ಭಿನ್ನ ಹೇಳಿರಣ್ಣಾ.
ಅದು ಕಂಚಿನ ಕಾಯದಿಂದಲೊ, ನಾದದ ಪ್ರಕೃತಿಯಿಂದಲೊ?
ವಾಗದ್ವೆತದ ಸಂಬಂಧವಲ್ಲ, ಸ್ವಯದ ನಿಜ.
ನಿನ್ನ ನೀನರಿ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./59
ಬಾಹ್ಯದ ನೀತಿ ಅಂತರಂಗದ ಅರಿವು ಸರ್ವರಲ್ಲಿ ಕ್ಷಮೆ
ಒಳಹೊರಗಾಗುವ ವರ್ತಕ ತ್ರಿವಿಧ ಶುದ್ಧವಾಗಿಯಿಪ್ಪ
ಭಕ್ತನ ಜಂಗಮದ ಹೃತ್ಕಮಲವೆ ವಿರಕ್ತವಾಸ.
ಇಷ್ಟನರಿದು ಮರೆದವಂಗಲ್ಲದೆ ತೆರಪಿಲ್ಲ; ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./60
ಬಾಳೆ ಬಲಿದು ಈಳೆಯ ಮರನಾಯಿತ್ತು.
ಆ ಈಳೆಯ ಮರನ ಏರಿ ಈರೇಳು ಲೋಕವ ಕಂಡವನ
ಕಂಗಳ ಮಧ್ಯದಲ್ಲಿ ನಿಂದವನ ಆರೆಂದರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./61
ಬಿತ್ತಿದ ಬೆಳೆ, ಕಟ್ಟಿದ ಕರೆ, ಸಲಹಿದ ಶರೀರ, ನೆಟ್ಟ ವೃಕ್ಷ
ತನಗಲ್ಲದೆ ಅವಕ್ಕೊಡಲುಂಟೆ?
ತಾ ಮಾಡುವ ಭಕ್ತಿ ತನಗಲ್ಲದೆ ಬೇರೊಂದು ಗುಣವನರಸಲಿಲ್ಲ.
ಆ ಪರಿಯ ನಿನ್ನ ನೀ ತಿಳಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./62
ಬಿತ್ತು ಅಂಕುರವ ನುಂಗಿಪ್ಪಾಗ
ಅಂಕುರ ಆ ಬಿತ್ತ ತನ್ನಯ ಸಂಕೇತದಲ್ಲಿ ಇರಿಸಿಕೊಂಡು ಇಹಾಗೆ
ಉಭಯದ ಭೇದ ಎಲ್ಲಿ ಅಡಗಿತ್ತು ಹೇಳಿರಣ್ಣಾ.
ಅರುಹಿಸಿಕೊಂಬ ಕುರುಹು; ಆ ಅರುಹಿನಲ್ಲಿ ಕುರುಹಿನ ಕಳೆ
ನಿಂದ ತೆರಪಾವುದು?
ಅರುಹಿಸಿಕೊಂಬ ಅರಿವು ತೋರಿಸಿಕೊಂಬ ಕುರುಹಿನ ಕಳೆ
ಬೇರೊಂದೆಡೆ ತೆರಪಿಲ್ಲ, ಅದು ತಾನೆ ನಿಶ್ಚಯ;
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./63
ಬಿಸಿಲ ಮುಂದಣ ಮಂಜಿನಂತಾಯಿತ್ತು.
ದಿಟದ ಮುಂದಣ ಸಟೆಯಂತಾಯಿತ್ತು.
ಪುಣ್ಯದ ಮುಂದಣ ಪಾಪದಂತಾಯಿತ್ತು.
ಯೋಗಿಯ ಮುಂದಣ ಸಂಸಾರದಂತಾಯಿತ್ತು.
ಧೀರನ ಮುಂದಣ ಹೇಡಿಯಂತಾಯಿತ್ತು.
ಉರಗನ ಮುಂದಣ ಭೇಕನಂತಾಯಿತ್ತು.
ಹರಿಯ ಮುಂದಣ ಕರಿಯಂತಾಯಿತ್ತು.
ವಿವೇಕದ ಮುಂದಣ ದುಃಖದಂತಾಯಿತ್ತು.
ಪುಣ್ಯಾರಣ್ಯದಹನ ಭೀಮೇಶ್ವರನೆಂಬ
ಸದ್ಗುರು ಕಾರುಣ್ಯವಾಗಲೊಡನೆ
ಎನ್ನ ಸುತ್ತಿಹ ಪ್ರಪಂಚು ಸರ್ವವೂ ಓಡಿದವಯ್ಯಾ!/64
ಬೇವಿನ ಮರದಲ್ಲಿ ಕಾಗೆ ಮನೆಯ ಮಾಡಿತ್ತು.
ಕೋಗಿಲೆ ಮರಿಯ ಹಾಕಿತ್ತು.
ಗೂಗೆ ಆರೈಕೆಯ ಮಾಡಿ ಸಾಕಿತ್ತು.
ಹಂಸೆ ತಂಬೆಲರ ಕುಟುಕ ಕೊಟ್ಟು ಸಂಭ್ರಮವ ಮಾಡಿತ್ತು.
ಅದು ಆರ ಹಂಗಿಲ್ಲದೆ ಹಾರಿ ಹೋಗುತ್ತ
ಎನಗೆ ಬೇವಿನ ಮರನೆ ತಾಯಿಯೆಂದಿತ್ತು
ಹಾಗೆಂದುದ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./65
ಬ್ರಹ್ಮನ ಬಾಯ ಓಗರವನುಂಡು,
ವಿಷ್ಣುವಿನ ಕೈಯ ಸೀರೆಯ ಹೊದ್ದು,
ರುದ್ರನ ಮನೆಯಲ್ಲಿ ತಿರುಗಾಡುತ್ತಿಪ್ಪ ಭದ್ರಾಂಗಿಗಳು ಕೇಳಿರೋ.
ಬ್ರಹ್ಮನ ಬಾಯ ಮುಚ್ಚಿ,
ವಿಷ್ಣುವಿನ ಕೈಯ ಮುರಿದು,
ರುದ್ರನ ಮನೆಯ ಸುಟ್ಟು ಬುದ್ಧಿವಂತರಾಗಿ.
ಬುದ್ಧಿವಂತರಾದವರ ಅರಿದವರನರಿ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./66
ಭಕ್ತನಾದಲ್ಲಿ ಆವ ಸೋಂಕು ಬಂದಡೂ ಭಾವಶುದ್ಧವಾಗಿರಬೇಕು.
ಭಕ್ತಂಗಲ್ಲದೆ ತಾಕು ಸೋಂಕು ಮತ್ತೊಬ್ಬರಿಗೆ ಬಾರವು.
ಬಿರಿದ ಕಟ್ಟಿದ ಬಂಟಂಗೆ ತಡಹಲ್ಲದೆ ಬರುಬರಿಗುಂಟೆ
ಮನೆದಗಹು?
ನಿಮ್ಮನರಿವಂಗೆ ಮರವೆ ಬಂದಡೆ
ನಿಮ್ಮನರಿದು ತನ್ನ ತಾನರಿಯಬೇಕೆಂಬುದ ನಿನ್ನ ನೀ ತಿಳಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./67
ಭಕ್ತನಾದಲ್ಲಿ ದ್ರವ್ಯವ ಸವೆಸಿ ಮರ್ಮವನರಿಯದೆ ವ್ಯರ್ಥವಾಯಿತ್ತು.
ಖ್ಯಾತಿಗೆ ಇಕ್ಕಿ ಕೊಟ್ಟು ಮಾಡುವಾತನ ಭಕ್ತನೆಂದಡೆ
ವಾಸಿಯ ಮಾತಿಗೆ ಸತ್ತವನ ಪಾಶದಂತೆ ಆತನ ಮಾಟ.
ಮಾಟವನರಿದುಣ್ಣಬೇಕು,
ಸರ್ವವ ನೇತಿಗಳೆದ ನಿರ್ಮಲಗುರು.
ಆತನ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./68
ಭಕ್ತಿಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು
ಭಕ್ತಿಯೊ ಜ್ಞಾನವೊ ವೈರಾಗ್ಯವೊ?
ಮೂರಿಕ್ಕೆ ಬೇರೊಂದೆಡೆಯುಂಟೆ?
ಅದರ ಎಡೆ ಗುಡಿಯ ತೋರು,
ಬರಿಯ ಮಾತಿನ ಮಾಲೆ ಬೇಡ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./69
ಮದನದ ಗುಹ್ಯದಲ್ಲಿ ಒಂದು ರಸವಾದದ ಕೂಸು ಹುಟ್ಟಿತ್ತು.
ಅದು ಚಿನ್ನವ ಕೆಡಿಸಿ ಮಣ್ಣ ಮಾಡುವುದು.
ಮಣ್ಣ ಮಣ್ಣಿನಲ್ಲಿ ಬೆರಸಿ ಬೂದಿಯ ಕೂಡಿ ವಾದವ ಮಾಡಿತ್ತು.
ವಾದ ನೀರಿನಲ್ಲಿ ನೆರೆದು ಹೋಹಾಗ ಮೀರಿ ನಿಂದವರಾರು
ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ
ನಿರಂಗಸಂಗ./70
ಮದ್ದಿಗೆ ರುಜೆಯಡಸಿ, ನೀರಿಗೆ ಬಾಯಾರಿ,
ಹಾವಿಗೆ ಹಲ್ಲಿಲ್ಲದೆ ವಿಷವಂಟಾಯಿತ್ತು.
ಬೇವಿನ ಮರದಲ್ಲಿ ಮಾವಿನ ಹಣ್ಣಾಗಿ
ಆ ಮರನ ಏರಿ ಮೆದ್ಧವರನರಿ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./71
ಮನ ಮಂಗಳಾಂಗಿಯೆಂಬ ಹೆಂಗೂಸಿನ ಕೈಯಲ್ಲಿ
ತ್ರಿವಿಧ ಬಂಧವೆಂಬ ಗಡಿಗೆಯಿದ್ದಿತ್ತು.
ಆ ಗಡಿಗೆಯ ಕೊಂಡು ಹೋಗಿ
ಅವಿಗತನೆಂಬ ಬಾವಿಯಲ್ಲಿ ರವಿಶೇಖರನೆಂಬ ನೀರ ತುಂಬಿ
ಬ್ರಹ್ಮಂಗೆ ಎರೆಯಲಾಗಿ ಬಾಯ ಮುಚ್ಚಿತ್ತು;
ವಿಷ್ಣುವಿನ ಉಂಬ ಕೈಗೆ ಎರೆಯಲಾಗಿ ಕೈ ಖಂಡಿಸಿ ಬಿದ್ದಿತ್ತು;
ರುದ್ರನ ಮಂಡೆಗೆ ಮಜ್ಜನವ ಮಾಡಲಾಗಿ
ಅಂಗ ಕರಗಿ ಅವಳಂಗೈಯ ಗಡಿಗೆಯಲ್ಲಿ ಅಡಗಿದ.
ಎನಗಿನ್ನು ಅಂಗವಳಿದ ಠಾವ ಹೇಳಾ,
ನಿರಂಗಮಯ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./72
ಮನೆಯ ಮಂದಿರದ ನಿಳಯವ ಮಾಡಿದಡೇನು
ಎಡೆಯಾಡುವುದಕ್ಕೆ ಬಾಗಿಲು ಬೇಕು.
ನುಡಿಗಡಗಣವನಾಡಿದಡೇನು
ಮನ ಮಡಿವುದಕ್ಕೆ ಕುರುಹಿನ ಅಡಿ ಬೇಕು.
ಅದೆ ಅರುಹಿನ ತೆರ, ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./73
ಮರುತ ಸಂಚಾರಿಸಿದಲ್ಲಿ ಲಘುತೃಣ ಪರ್ಣ
ಅದುಗೂಡಿ ಸಂಭವಿಸಿದಾಗ
ಅದರ ಆತ್ಮಗೂಡಿ ತಾ ಒಂದಾಗಿರೆ
ಸಂಚಾರ ಹಿಂದೆ ತಾವು ಮುನ್ನಿನಂದದಿ ಹಿಂಗಿರೆ
ಆತ್ಮಂಗೆ ಬಂಧ ಮೋಕ್ಷ ಎಲ್ಲಿಯದೆಂದೆ.
ಅದು ನಿಂದ ಠಾವ ಹೇಳಿ ಎನ್ನ ಚಿತ್ತದ ಬಂಧವ ಬಿಡಿಸು
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./74
ಮರೆಯ ಮನೆಯ ಮಧ್ಯದಲ್ಲಿ
ಮನೋವಿಕಾರದ ಮಾನಿನಿ ಹುಟ್ಟಿದಳು.
ಹಗಲಿಗೆ ಹಾದರಗಿತ್ತಿ, ಇರುಳಿಗೆ ಸಜ್ಜನೆಯಾಗಿ
ಪುರುಷನ ಒಡಗೂಡಿಪ್ಪಳು.
ಅವಳಂಗದ ಬಸುರ ಯೋನಿಯ ಕಂಗಳು, ಮನದ ಮೊಲೆ
ವಿಪರೀತದ ಮಂಡೆಯ ತುರುಬು ತುಡುಕಿತ್ತು ಮೂರಡಿಯಲ್ಲಿ.
ಅವಳ ಒಡಗೂಡುವರನಾರೆಂದಲ್ಲಿ ನಿನ್ನ ನೀ ತಿಳಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./75
ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ
ಮೂವರು ಪುರೋಹಿತರು ಬಂದರು.
ಒಬ್ಬ ಇಹದಲ್ಲಿ ಗುಣವ ಬಲ್ಲವ;
ಒಬ್ಬ ಪರದಲ್ಲಿ ಗುಣವ ಬಲ್ಲವ;
ಮತ್ತೊಬ್ಬ ಇಹಪರ ಉಭಯ ತಾ ಸಹಿತಾಗಿ
ಮೂರ ನೆನೆದು ಅರಿಯ.
ಅರಿಯದವನ ತೋಳಿನ ಕೊಡಗೂಸು,
ಕಾಳವ್ವೆಯ ಕತ್ತಲೆಯಲ್ಲಿ ತಳ್ಳಿ, ಮಲೆಗೆ ಕಿಚ್ಚ ಹಚ್ಚಿ,
ಮಂದಿರವ ಹಿರಿದುಹಾಕಿ, ಪುರೋಹಿತರ ಕಣ್ಣ ಕಳೆದು
ಕೊಡಗೂಸು ಕೊಡನೊಳಗಾದಳು.
ಇಂತಿವರಡಿಯ ಭೇದವನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./76
ಮಹಾಮನೆಯ ಮಂಟಪದಲ್ಲಿ
ನಾಲ್ಕು ನಡುವಳ ಕಂಬದ ನಡುವಳ ಕಂಬದಲ್ಲಿ
ಒಂದು ಒರಲೆ ಮನೆಯ ಮಾಡಿತ್ತು.
ಅದಕ್ಕೆ ಎಂಟು ಕಂಬ, ಒಂಬತ್ತು ಬಾಗಿಲು, ಹತ್ತು ಕದ;
ಮಿಗಿಲೊಂದು ಮುಚ್ಚುವುದಕ್ಕೆ ಬಾಗಿಲಿಲ್ಲ.
ತುಂಬಿ ಅಲ್ಲಿ ಹಾರಿತ್ತು.
ಆ ಆತ್ಮನ ನೆಲೆಯನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./77
ಮಾಡಿ ಆಡಲೇತಕ್ಕೆ? ಸಲಹಿ ಕೊಲಲೇತಕ್ಕೆ?
ಬಿತ್ತಿ ಕೀಳಲೇತಕ್ಕೆ? ಕಟ್ಟೆ ಒಡೆಯಲೇತಕ್ಕೆ?
ಮಾಡಿ ಮಾಡಿ ಮನಗುಂದುವ,
ನೀಡಿ ನೀಡಿ ನಿಜಗುಂದುವ ಬೇಡ.
ಆ ಮಾಟವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./78
ಮಾತಬಲ್ಲವನಾದಡೆ ಸರ್ವ ಜೀವದ ನೀತಿಯನರಿಬೇಕು.
ಜ್ಞಾತೃ ಜ್ಞಾನ ಜ್ಞೇಯ ಭಾವವ ಬಲ್ಲಡೆ
ಇದಿರ ಭೂತಹಿತವ ಬಲ್ಲವನಾಗಿ ಇರಬೇಕು.
ಸುಜ್ಞಾನವರಿತಡೆ ಭವಪಾಶ ಪಾಕುಳರನರಿಯಬೇಕು.
ಇದೆಲ್ಲವನರಿತು ತನ್ನನರಿಯಬೇಕು.
ಆ ಅನ್ಯ ಭಿನ್ನವ ತಿಳಿ ನಿನ್ನ ನೀನೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./79
ಮೂರು ಮೊಲೆಯನುಂಡು ಬಂದವ,
ಈರೈದು ಕಂಡು ಬಂದವ ನೀನಾರು ಹೇಳಾ?
ಸಂದಿಲ್ಲದ ಪಟ್ಟಣದಲ್ಲಿ ಬಂದು ನೊಂದೆಯಲ್ಲ!
ಅಂದಿನ ಬೆಂಬಳಿಯ ಮರೆದು ಇಂದಿನ ಸಂದೇಹಕ್ಕೊಡಲಾಗಿ,
ಈ ಉಭಯದ ಸಂದ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ/80
ಮೂಲದ ಮೊಳೆಯ ಮುರಿದಲ್ಲಿ
ಬೇರೊಂದು ಮರ ಶಾಖೆ ಫಲವುಂಟೆ?
ಅರಿವು ಸಂಬಂಧ ನೆರೆ ನಿಂದಲ್ಲಿ
ಕ್ರಿಯೆ ನೆರೆ ಮಾಡುವುದಕ್ಕೆ ಬೇರೊಂದೊಡಲುಂಟೆ?
ತನ್ನಯ ಶಂಕೆ ಅನ್ಯರ ಮಚ್ಚು ಇದು ಭಿನ್ನಭಾವ;
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./81
ಮೃತ ಬೊಂಬೆಯ ಗದಕದ ಪಾಶ ಮಸಕಲಿಕ್ಕೆ
ಸ್ಥಾಣು ಹಲಗೆ ಕಂಬದ ಮರೆಯಲ್ಲಿ ನೇಣಿನ ನೂಲು ಹರಿಯೆ
ಅವು ಜಾಣ ಜೀವನಾಗಿ ಆಡುತ್ತದೆ.
ಅದರ ಜೀವಾಳವನರಿ;
ಕಾಯ ಜೀವ ಕೂಡಿಹ ತತ್ವದ ಭೇದವ ತಿಳಿ ನಿನ್ನ ನೀನೆ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./82
ರಾಜ್ಯ ಹೋದಲ್ಲಿ ರಾಯತನ ಉಂಟೆ?
ಪೂಜೆ ಅಡಗಿದಲ್ಲಿ ಪುಣ್ಯದ ಹಂಗುಂಟೆ?
ಮಾಟಕೂಟ ನಷ್ಟವಾದಲ್ಲಿ ಮಹಾಮನೆಯ ಎಡೆಯಾಟವುಂಟೆ?
ಸಟ್ಟೆಯನೊಪ್ಪಿಸಿದವಂಗೆ ಮತ್ತೆ ಒಪ್ಪದ ಚೀಟುಂಟೆ?
ಭಕ್ತನಾಗಿ ಮಾಡಿ ಕಂಡೆ, ಭೃತ್ಯನಾಗಿ ಕಾಯಿದು ಕಂಡೆ
ಮತ್ತೆ ನೀ ನೀವೊಪ್ಪಿ ಕೊಟ್ಟಿರಿ.
ಎನ್ನಂಗದಲ್ಲಿ ಮರ್ತ್ಯರೂಪನ ರೂಪ
ನಿಮಗೆ ಒಪ್ಪಿಸಿದೆಯೆಂಬುದಕ್ಕೆ ಮೊದಲೇ ಬಚ್ಚಬಯಲಾಯಿತ್ತು.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./83
ಲಂದಣಗಿತ್ತಿಯ ಮಾತು ಬಂದಿಕಾರರ ಜಗಳದಂತೆ
ಕಂಡವರಲ್ಲಿ ತಂದು ಮಾಡುವನ ಮಾಟ
ಸಾಕಿಕೊಂಡಿಹನ ದಯದಂತೆ.
ಆ ಮಾಟದ ಅಂದವನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./84
ಲಿಂಗಕ್ಕೆ ಮಜ್ಜನವ ಮಾಡಿದಲ್ಲಿ ತನುವಿನಾವಿಷ್ಕಾಂತದ ಕೇಡು.
ಕುಸುಮವ ಧರಿಸುವಲ್ಲಿ ಮನದ ಪ್ರಕೃತಿಯ ಕೇಡು.
ನೈವೇದ್ಯವ ಸಮರ್ಪಿಸುವಲ್ಲಿ ಸರ್ವ ಇಂದ್ರಿಯಂಗಳ ಕೇಡು.
ಕಾಯಕ್ಕೆ ಮಜ್ಜನ, ಚಿತ್ತದ ವಿಲಾಸಿತಕ್ಕೆ ಕುಸುಮ.
ಮನ ಘನದಲ್ಲಿ ನಿಂದುದಕ್ಕೆ ಅರ್ಪಿತ.
ಇಂತೀ ತ್ರಿವಿಧದ ಮರೆಯಲ್ಲಿ ಕುರುಹುದೋರಿದವನ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./85
ವಾರಿ ಸಲಿಲದಲ್ಲಿ ಒಂದು ಶರಧಿ ಹುಟ್ಟಿ
ಊರೆಲ್ಲರ ಉರುಳುತ್ತದೆ.
ಆ ಉರುಳು ಕೊರಳ ಬೀರಿ ಬ್ರಹ್ಮನ ಉಸುರಡಗಿತ್ತು;
ವಿಷ್ಣುವಿನ ಎಡೆಯಾಟ ಬಿಟ್ಟಿತ್ತು,
ರುದ್ರನ ಹಣೆಗಿಚ್ಚು ದಳ್ಳುರಿ ಬೇವುತ್ತದೆ.
ಅದ ನಂದಿಸುವರಿಲ್ಲ, ಮೂರರ ಬಿಂದುವನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./86
ವೇಸಿಯ ಸಂಗ ದ್ರವ್ಯದ ಕೇಡು,
ದಾಸಿಯ ಸಂಗ ಮಾನಹಾನಿಗೆ ಮೊದಲು;
ನಿಮ್ಮ ಶರಣರ ಸಂಗ ಕರಣಂಗಳ ಕೇಡು.
ಇಂತೀ ಆಗುಚೇಗೆಯನರಿ ನಿನ್ನ ನೀ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./87
ವ್ರತ ನೇಮವ ತೋರಿ
ಗದಕದಲ್ಲಿ ಮಾಡುವ ಭಕ್ತಿ
ಪಶುವ ಕೊಂದು ಹಸಿಯ ಭಕ್ಷಿಸುವವನ ದೆಸೆ ಲೇಸು.
ಪಶುಪತಿಯ ಭಕ್ತನಾಗಿದ್ದು ಹುಸಿದು ಸರ್ವರ ವಂಚಿಸಿ
ಪಿಸುಣತನದಿಂದ ಕಾಡಿ ಬೇಡಿ ತಂದವನ ಮನೆಯನ್ನ
ಕಿಸುಕುಳಕೆ ಸರಿ.
ಅದು ಹುಸಿಯಲ್ಲ, ನಿನ್ನ ನೀ ತಿಳಿದು ನೋಡು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./88
ಶಾಸ್ತ್ರವೆ ಅಡ್ಡಣಿಗೆಯಾಗಿ, ಆಗಮವೆ ಹರಿವಾಣವಾಗಿ,
ಪುರಾಣವೆ ಓಗರವಾಗಿ, ಉಂಬಾತ ವೇದವಾಗಿ,
ಸಕಲ ರುಚಿಯನರಿದು ಭೋಗಿಸುವ ಪ್ರಣವ ತಾನಾಗಿ,
ಅದರ ಭೇದ ಏತರಿಂದ ಅಳಿವು ಉಳಿವು? ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./89
ಸಂಜೀವನವ ತಂದೆನೆಂದಡೆ ಅದು ಬಂದ ಠಾವಿಲ್ಲವೆ?
ಕಾಮಧೇನುವ ಕಟ್ಟಿದೆನೆಂದಡೆ ಅದು ಹುಟ್ಟಿದ ಠಾವಿಲ್ಲವೆ?
ಇಷ್ಟನರಿಯದೆ ವಿರಕ್ತನಾದೆನೆಂಬ
ವಿಧಾಂತರ ಕತ್ತೆಗಾಹಿಯ ಮಾತು ಬೇಡ.
ಕುರುಹಿನ ಮರೆಯ ನಿಜವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./90
ಸಂಪಗೆಯ ತಂಬೆಲರಿನಲ್ಲಿ ಒಂದು ಭೃಂಗ ತತ್ತಿಯನಿಕ್ಕಿತ್ತು.
ತನ್ನ ಬಾಳು ಕುಸುಮದ ವಾಸನೆ ಬಲಿವನ್ನಕ್ಕ ತುಂಬಿಯಿದ್ದಿತ್ತು.
ವಾಸನೆ ತೋರಿ ತುಂಬಿ ಸತ್ತು ಮರಿ ಹಾರಿ ಹೋಯಿತ್ತು.
ಆ ಮರಿಯ ಅರಿವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./91
ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು
ನಿಂದ ಧರೆಯ ಮೇಲೆ ಅಯಿದು ರೂಪಾಗಿ
ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ
ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ
ಅರಿವ ಅರಿವಿಂದ ಭಾವವ ಭಾವದಿಂದ
ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ
ನಿಜವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./92
ಸತ್ತ ಹಾವು ಹೆಣನ ಕಚ್ಚಿ ಮತ್ತೆ ಸತ್ತಿತ್ತು.
ಸತ್ತುದ ಕಂಡು ಹದ್ದು ಎತ್ತಲಾಗಿ,
ಎತ್ತಿದ ಬೆಂಬಳಿಯಲ್ಲಿ ಹಾವಿನ ಜೀವವೆದ್ದು
ಹೆಡೆಯನೆತ್ತಿ ಆಡಲಾಗಿ, ಹದ್ದು ಬಿಟ್ಟಿತ್ತು;
ಹಾವು ಹಾವಡಿಗಂಗೆ ಈಡಾಯಿತ್ತು.
ಆ ಹದ್ದು ಹಿಡಿದು ಬಿಟ್ಟೆನಲ್ಲಾ ಎಂದು ಮರೆದೊರಗಿತ್ತು.
ಹಾವು ಹದ್ದು ಕೂಡಿ ಬದುಕಿದವು; ಅದೇನುಕಾರಣವೆಂಬುದನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./93
ಸತ್ವ ರಜ ತಮವೆಂಬ ಮೂರು ಭಿತ್ತಿ ಕೂಡಿ ಘಟ್ಟಿಯಾದಲ್ಲಿ
ಚಿತ್ತೆಂಬ ಪುತ್ಥಳಿ ಹುಟ್ಟಿತ್ತು.
ಪುತ್ಥಳಿಯ ಪತ್ಥಳಿಯಲ್ಲಿ ಜಗಕರ್ತೃ ಹುಟ್ಟಿದ.
ಕರ್ತೃವಂ ಹೆತ್ತವನ ನಾಭಿಯ ಮಧ್ಯದ ಬಾಲಲೀಲೆಯ
ಸಾಲಿನೊಳಗಾದ ಸಂಪದವರಿವರಲ್ಲಾ
ಕಾಲಕ್ಷಯನ ಕರ್ಮನಾಶನ ಭಾಳಾಂಬಕನ
ಲೀಲೆಯಲ್ಲಿ ಆಡುತ್ತಿರೆಂದು ಸರ್ವಮಯಕ್ಕೆ ಹೊರಗಾದ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./94
ಸದ್ಗತಿಯ ತೋರುವ ಗುರುವಿಂಗೆ ರಾಜಸ ತಾಮಸವುಂಟೆ?
ಕೆಡದ ಜ್ಯೋತಿಗೆ ಪಡಿಕುಡಿಗೆ ಎಣ್ಣೆ ಉಂಟೆ?
ಆ ಬಿಡುಮುಡಿಯ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./95
ಸದ್ಗುರುಮೂರ್ತಿಯ ಇರವು ಕರ್ಪುರವ ತಾಳಿರ್ದ
ಕರಂಡದಂತಿರಬೇಕು.
ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.
ಕಮಲಪತ್ರದ ಬೆಂಬಳಿಯ ಅಂಬುವಿನಂತಿರಬೇಕು.
ಪುಡಿಸಂಗದ ಸಂಚಾರದ ಸಂಗದಂತಿರಬೇಕು.
ಕುಡಿವೆಳಗಿನ ಬುಡದ ಬೆಳಗಿನಂತಿರಬೇಕು.
ಸದ್ಗುರು ಸದಮಲಾನಂದಮೂರ್ತಿ ಗುರುವಾದುದ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./96
ಸಮಯ ಸಮೂಹ ದರುಶನ ಆಡಂಬರ ವಾಚಾರಸದಿಂದ
ನೀತಿಯ ತೋರಿ, ವಾಸವ ಹೊಕ್ಕು
ಧಾತುಗೆಡುವ ಘಾತರಿಗೇಕೆ ಮೂರಕ್ಷರ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./97
ಸುಖದುಃಖ ಸತಿ ಪುರುಷಂಗೂ ಸರಿ.
ಗತಿ ಭೇದ ಕರ್ತೃ ಭೃತ್ಯಂಗೂ ಸರಿ.
ನೀರು ನೆಲದಂತೆ, ಸಾರ ಸುಧೆಯಂತೆ ಭಕ್ತ ಜಂಗಮದ ಇರವು.
ಕರ್ಪೂರ ಉರಿಯಂತೆ ಇದು ನಿಶ್ಚಯ.
ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ
ನಿರಂಗಸಂಗ/98
ಸೂತೆಯಲ್ಲಿ ಬೀಜ ಹುಟ್ಟಿದಡೆ ಅದೇತಕ್ಕೆ ಬಾತೆ?
ಪಾಷಾಣದ ಕೈಯಲ್ಲಿ ಈಶ ರೂಪ ಧರಿಸಿದಡೆ
ಅದು ನೆಲೆಗಳೆದ ತಟಾಕದ ತೂಬು.
ಆ ಪಥವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./99
ಸ್ಥಳಕುಳವನೆತ್ತಿದಲ್ಲಿ ಸಮಯಕ್ಕೆ ದೂರ.
ಚಿದ್ಘನ ಭೇದ ಭೇದಾಂತವನೆತ್ತಿದಲ್ಲಿ ಅಧ್ಯಾತ್ಮಕ್ಕೆ ದೂರ.
ಸರ್ವವು ಸಮವೆಂದಡೆ ವಿಧಿ ನಿಷೇಧ
ಕಾಲಕರ್ಮಕ್ಕೊಳಗಹರುಂಟು.
ಅದು ತನ್ನೊಪ್ಪದ ದರ್ಪಣದಂತೆ;
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./100
ಹಲವ ತೊಳೆವ ಮಡಿವಾಳಂಗೆ
ತನ್ನಯ ಕುರುಹಿನ ಸೆರಗ ನೋಡಿಯಲ್ಲದೆ ಅರಿಯ.
ಅವ ಮರೆದು ಕೊಟ್ಟಡೆ,
ಸೀರೆಯೊಡೆಯರು ಬೇರೊಂದು ಕುರುಹನಿಟ್ಟುಕೊಂಡಿಹರು.
ಅದು ಒಡವೆಯರೊಡವೆಯಲ್ಲದೆ ಬರುಬರಿಗರಗದು.
ಆ ಕುರುಹ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./101
ಹಿತ್ತಿಲ ಬಾಗಿಲಲ್ಲಿ ಹೋಹ ಹೆತ್ತ ತಾಯ ಮಗ ಕೊಂದು
ಸತ್ತಳೆಂದು ಅಳುತ್ತಿದ್ದ.
ಸತ್ತವಳೆದ್ದು ಮಗನಕ್ಕೆಯ ಮಾಣಿಸಿ
ಮೊತ್ತದ ಬಂಧುಗಳೆಲ್ಲಾರು ಮತ್ತಿವರು ಬದುಕಿದರೆಂದು
ಅಳುತ್ತಿದ್ದರು.
ಇಂತೀ ಚಿತ್ತದ ಭೇದವನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./102
ಹೇಮ ಬಣ್ಣವ ಕೂಡಿದ ದೆಸೆಯಿಂದ
ಮರ್ತ್ಯರುಗಳಿಗೆ ಆಗುಚೇಗೆಗಳಿಗೀಡಾಯಿತ್ತು.
ದಿವ್ಯ ನಿರಂಜನ ನಿಜವಸ್ತು ಭವ್ಯರ ಭಕ್ತಿಗಾಗಿ
ಶಕ್ತಿ ನಾಮರೂಪವಾಗಿ ತಲ್ಲೀಯವಾಗಲ್ಪಟ್ಟುದು,
ಶಕ್ತಿ ಸಮೇತವಾಗಿ ಲಿಂಗವಾಯಿತ್ತು.
ಅದು ರಂಜನೆಯ ಬಣ್ಣ, ಮಾಯದ ಗನ್ನ,
ಅಂಬರದ ಚಾಪದ ಸಂಚದ ವಸ್ತು.
ಮುನ್ನಿನಂತೆ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ./103