Categories
ವಚನಗಳು / Vachanagalu

ಗಜೇಶಮಸಣಯ್ಯದ ಪುಣ್ಯಸ್ತ್ರೀ ಮಸಣಮ್ಮನ ವಚನಗಳು

762
ಅಂಗದಮೇಲಣ ಲಿಂಗವು ಲಿಂಗವಲ್ಲ;
ಮನದಮೇಲಣ ಲಿಂಗವು ಲಿಂಗವಲ್ಲ;
ಭಾವದಮೇಲಣ ಲಿಂಗವು ಲಿಂಗವಲ್ಲ.
ಅಂಗದಮೇಲಣ ಲಿಂಗ ವ್ಯವಹಾರ;
ಮನದಮೇಲಣ ಲಿಂಗ ಸಂಕಲ್ಪ;
ಭಾವದಮೇಲಣ ಲಿಂಗ ಭ್ರಾಂತುತತ್ವ.
ಆಳಿನ ಆಳು ಅರಸನಪ್ಪನೆ, ಆಳನಾಳುವನರಸಲ್ಲದೆ ?
ಅಂಗ ಪ್ರಾಣ ಭಾವಂಗಳನೊಳಕೊಂಡಿರ್ಪುದೆ ಲಿಂಗ
ಕಾಣಾ, ಮಸಣಯ್ಯಪ್ರಿಯ ಗಜೇಶ್ವರಾ.
763
ಅಹುದು ಅಹುದು
ಲಿಂಗವಿಲ್ಲದ ಶಿಷ್ಯನ ಅರಿಯಿಸಬಲ್ಲ ಗುರುವು
ಲಿಂಗವಿಲ್ಲದ ಗುರುವು.
ಲಿಂಗವಿಲ್ಲದೆ ಇದ್ದ ಗುರುವನರಿಯಬಲ್ಲ ಶಿಷ್ಯ,
ಶಿಷ್ಯನನರಿಯಬಲ್ಲ ಗುರು,
ಇವರಿಬ್ಬರ ಭೇದವ ನೀನೆ ಬಲ್ಲೆ
ಮಸಣಯ್ಯಪ್ರಿಯ ಗಜೇಶ್ವರಾ.
764
ಎನ್ನನರಿಯಿಸದಿರುವೆ, ಎನ್ನನರಿಯಿಸು ನಿನ್ನನರಿಯಿಸಬೇಡ.
ಎನ್ನನರಿಯದವ ನಿನ್ನನರಿಯ.
ಎನ್ನನರಿಯಿಸದೆ ನಿನ್ನನರಿಯಿಸಿದಡೆ,
ನೀನೆನಗೆ ಗುರುವಲ್ಲ, ನಾ ನಿನಗೆ ಶಿಷ್ಯನಲ್ಲ.
ಎನ್ನನರಿಯಿಸಿದಡೆ ನೀನೆನಗೆ ಗುರುದ ನಾ ನಿನಗೆ ಶಿಷ್ಯ,
ಮಸಣಯ್ಯಪ್ರಿಯ ಗಜೇಶ್ವರಾ.

765
ಗುರುಕೊಟ್ಟ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಪ್ರಣವಪಂಚಾಕ್ಷರಿಯ
ಅನ್ಯರಿಗೆ ಕೊಡಬಹುದೆ ? ಕೊಡಬಾರದು.
ಆ ಗುರುವಿಂಗೆ ಕೊಡಬೇಕುದ ಆ ಗುರುವಲ್ಲದೆ ಈಸಿಕೊಳ್ಳಲರಿಯನಾಗಿ,
ಇಂತಲ್ಲದೆ ಗುರುಸಂಬಂಧಕ್ಕೆ ಬೆರೆವ ಗುರುದ್ರೋಹಿಯನೇನೆಂಬೆ
ಮಸಣಯ್ಯಪ್ರಿಯ ಗಜೇಶ್ವರಾ ?
766
ಗುರುವಿಂಗೆ ಗುರುವಾಗಿ ಎನಗೆ ಗುರುವಾದನಯ್ಯಾ ಬಸವಣ್ಣನು.
ಲಿಂಗಕ್ಕೆ ಲಿಂಗವಾಗಿ ಎನಗೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಜಂಗಮಕ್ಕೆ ಜಂಗಮವಾಗಿ
ಎನಗೆ ಜಂಗಮವಾದನಯ್ಯಾ ಪ್ರಭುದೇವರು.
ಪ್ರಸಾದಕ್ಕೆ ಪ್ರಸಾದವಾಗಿ
ಎನಗೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಬಸವಣ್ಣನಿಂದ ಶುದ್ಭಪ್ರಸಾದಿಯಾದೆನು.
ಚೆನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆನು.
ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆನು.
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.
ಇಂತೀ ಚತುರ್ವಿಧವೆನ್ನ ಸರ್ವಾಂಗದಲ್ಲಿ ಕರಿಗೊಂಡು
ಎಡದೆರಹಿಲ್ಲದೆ ಪರಿಪೂರ್ಣವಾಯಿತ್ತು.
ಮಸಣಯ್ಯಪ್ರಿಯ ಗಜೇಶ್ವರಾ,
ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎನುತಿರ್ದೆನು.
767
ಪರಂಜ್ಯೋತಿ ಗುರುವಿನಿಂದ ತನಗೆ
ಲಿಂಗಾನುಗ್ರಹ ಪ್ರಣವ ಪಂಚಾಕ್ಷರಿ ಅಳವಟ್ಟಿರಲು,
ಅದ ಕಂಡು ಮತ್ತೊಬ್ಬ ಗುರುಕರುಣವಾದಾತ ಬರಲು,
ಆ ಲಿಂಗಾನುಗ್ರಹ ಪ್ರಣವಪಂಚಾಕ್ಷರಿಯನಾತಂಗೀಯಲು
ಆತಂಗೆ ತಾನು ಗುರುವೆನಬಹುದೆ ? ಎನ್ನಬಾರದು.
ಆತನೂ ತಾನೂ ಆ ಪರಂಜ್ಯೋತಿಯ ಆಣತಿವಿಡಿದವರಾಗಿ,
ಇಬ್ಬರೂ ದಾಯಾದರು.
ಆ ಪರಂಜ್ಯೋತಿಯಲ್ಲಿಯೆ ಅಡಗಿದರಾಗಿ,
ಗುರುವಿಂಗೆಯೂ ಶಿಷ್ಯಂಗೆಯೂ ಲಿಂಗಕ್ಕೂ ಭೇದವಿಲ್ಲ,
ಮಸಣಯ್ಯಪ್ರಿಯ ಗಜೇಶ್ವರಾ.
768
ಪರದಿಂದಲಾಯಿತ್ತು ಪರಶಕ್ತಿ.
ಪರಶಕ್ತಿಯಿಂದಲೊದಗಿದ ಭೂತಂಗಳು,
ಭೂತಂಗಳಿಂದಲೊದಗಿದ ಅಂಗ,
ಅಂಗಕ್ಕಾದ ಕರಣೇಂದ್ರಿಯಂಗಳು,
ಇಂದ್ರಿಯಂಗಳಿಂದಲೊದಗಿದ ವಿಷಯಂಗಳು.
ಆ ವಿಷಯಂಗಳ ಪರಮುಖಕ್ಕೆ ತಾ ಶಕ್ತಿಯಾಗಿ ಭೋಗಿಸಬಲ್ಲಡೆ,
ಆತ ನಿರ್ಲೆಪ ಮಸಣಯ್ಯಪ್ರಿಯ ಗಜೇಶ್ವರಾ.
769
ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ.
ಗುರುವಾಗಿದ್ದು ಭಕ್ತನೊಳಡಗಿದೆ.
ಅದೇನು ಕಾರಣವೆಂದಡೆ
ಗುರುವಿಂಗೆ ಅರ್ಥಪ್ರಾಣಾಬಿಮಾನವನು ಕೊಟ್ಟು,
ಆತ ಭೋಗಿಸಿದ ಬಳಿಕ
ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ,
ಆ ಗುರುವು ತನ್ನೊಳಡಗಿದ.
ಲಿಂಗವಾಗಿದ್ದು ಭಕ್ತನೊಳಡಗಿದೆ.
ಅದೇನು ಕಾರಣವೆಂದಡೆ
ಲಿಂಗಕ್ಕೆ ಅರ್ಥಪ್ರಾಣಾಬಿಮಾನವನು ಕೊಟ್ಟು,
ಆತ ಭೋಗಿಸಿದ ಬಳಿಕ
ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ,
ಆ ಲಿಂಗವು ಭಕ್ತನೊಳಡಗಿದ.
ಜಂಗಮವಾಗಿದ್ದು ಭಕ್ತನೊಳಡಗಿದೆ.
ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಬಿಮಾನವನು ಕೊಟ್ಟು,
ಆ ಜಂಗಮವು ಭೋಗಿಸಿದ ಬಳಿಕ
ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ,
ಆ ಜಂಗಮವು ಭಕ್ತನೊಳಡಗಿದ.
ಇಂತಡಗುವರೆ ಹಿರಿಯರುದ ಇಂತಡಗುವರೆ ಗುರುವರುದ
ಇಂತಡಗುವರೆ ಮಹಿಮರು
ಇವರಿಗೆ ಭಾಜನವೊಂದೆ ಭೋಜನವೊಂದೆ.
ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ
ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ,
ಮಸಣಯ್ಯಪ್ರಿಯ ಗಜೇಶ್ವರಾ.
770
ಸರ್ವಜನ ಸನುಮತವೆಂಬ ಮಾತು ಸಾಮಾನ್ಯವೆ ಅವ್ವಾ ?
ತಾ ಮೆಚ್ಚದ ಕಲಿಯಾಗಿಪ್ಪವರ ಕೆಲ ಮೆಚ್ಚ.
ಸುಖಿಯಾಗಿಪ್ಪವರ ಒಬ್ಬರನಾದಡೂ ಕಾಣೆನವ್ವಾ.
ತಾ ಸತ್ತು ಹೆರರ ಕೊಂದವಸ್ಥೆಯ ಚಂದವ ಚಂದ್ರಮತಿಯಲ್ಲಿ ಕಂಡೆನು.
ಇಂದು ಕಂಡೆನು ಮಹಾಲಿಂಗ ಮಸಣಯ್ಯಗಳಲ್ಲಿ
ಗಜೇಶ್ವರದೇವರು ಮಾಡಿತ್ತ.
771
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಭವೆ ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ