Categories
ವಚನಗಳು / Vachanagalu

ಗಜೇಶ ಮಸಣಯ್ಯ ವಚನಗಳು

ಅಂಗಸಂಗದಲ್ಲಿದ್ದು ಬಂದುದನೆ ಕಂಡು
ಹಾವು ಹಸು ಮಗುವಿನಂತೆ ಆದೆ ನೋಡವ್ವಾ.
ಕಂಗಳ ನೋಟದ ಸುಖಕ್ಕೆ ಮನವನೊಪ್ಪಿಸುವೆ.
ಪತಂಗದ ಬೆಸನಿಯಂತೆ ಆದೆ ನೋಡವ್ವಾ.
ಮದಾಳಿಯ ನಾಸಿಕದಂತೆ ಸುಳಿದು ಸುಖಬಡುವೆ.
ಮಹಾಲಿಂಗ ಗಜೇಶ್ವರಾ ನಿನ್ನ ವಿನಯ ನೋಡವ್ವಾ./1
ಅಖಂಡ ಪರಿಪೂರ್ಣ ಲಿಂಗ ತಾನೆಯಾದ ಶರಣಂಗೆ
ಲಿಂಗವೆಂಬುದೇನು ಹೇಳಾ?
ಲಿಂಗ ಹೊರಗೊ ಒಳಗೊ ಎಂದು ಶಂಕಿಸಿ ನುಡಿವ ಶಂಕಿತರಂತಿರಲಿ.
ಮುನ್ನ ಮುನ್ನವೆ ಮಹಾಲಿಂಗವಾದ ಬಳಿಕ ಮತ್ತೇನೆಂದುನೆನೆಯಲಿಲ್ಲ.
ಮಹಾಲಿಂಗ ಗಜೇಶ್ವರನಲ್ಲಿ ನಿಜೈಕ್ಯವಾದ ಶರಣಂಗೆ
ಮುಂದೆ ಒಂದೂ ಇಲ್ಲ, ಮಾಣು./2
ಅಗಲಲಿಲ್ಲದ ನಲ್ಲನನಗಲಿ ನೆರೆದೆಹೆನೆಂಬ
ಕಾಮಿನಿಯರ ಭಂಗವ ನೋಡಾ!
ಆ ನಮ್ಮ ನಲ್ಲನ ಅನುವಿನೊಳಿರ್ದು
ನೆರೆದೆಹೆನೆಂಬ ಭರವೆನಗವ್ವಾ
ಮಹಾಲಿಂಗ ಗಜೇಶ್ವರದೇವರನಗಲುವಡೆ
ನಾನೇನು ಕಲ್ಲುಮನದವಳೆ ಅವ್ವಾ/3
ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ.
ಸಂಸಾರವೆಂಬುದು ಹುಸಿ ಕಂಡಾ ಎಲವೋ!
ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ.
ದಿನದಿನದ ಸುಖ ಹುಸಿ ಕಂಡಾ ಎಲ್ಲವೊ!
ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ.
ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!/4
ಅಪ್ಪಿನ ಸೋಂಕಿನ ಸುಖವನಗಲುವ ಮನಕ್ಕಿಂದ
ಬಂಜೆಯಾಗಿಪ್ಪುದು ಕರಸುಖ ನೋಡವ್ವಾ.
ಕಂಗಳ ನೋಟ ಮನಕ್ಕೆ ಸೈರಿಸದು,
ಎಣೆಗೊಂಡು ಬಡವಾದ ಪರಿಯ ನೋಡವ್ವಾ.
ತುಪ್ಪುಳನಿಕ್ಕಿದ ಹಂಸೆಯಂತಾದೆನವ್ವಾ
ಮಹಾಲಿಂಗ ಗಜೇಶ್ವರನುಳಿದಡೆ./5
ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ?
ತುಂಬಿದ ಸಾಗರ, ತೆರೆನೊರೆಗಳಾಡದಿಹುದೆ ಅಯ್ಯಾ?
ಆಕಾಶವ ಮುಟ್ಟುವವ, ಅಟ್ಟಗೋಲ ಹಿಡಿವನೆ ಅಯ್ಯಾ?
ಪರದಲ್ಲಿ ಪರಿಣಾಮಿಯಾದ ಶರಣ,
ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ./6
ಅವ್ವಾ, ನಾನು ಸೀರೆಯನುಡಲಮ್ಮೆನು.
ಅಲ್ಲಿ ಗಂಡೆಣೆ ಇದ್ದೂದೆಂದೆಲೆ ಅವ್ವಾ.
ಅವ್ವಾ, ಬೇಟದ ರತಿಯಲ್ಲಿ ಹುಟ್ಟಿ ಬೆಳೆದುದಯವಾದಳು.
ಅವ್ವಾ, ಇಂದೆನ್ನ ಮಹಾಲಿಂಗ ಗಜೇಶ್ವರನುಳಿದನೆಂದಟ್ಟಿದಡೆ
ಅವ್ವಾ, ನಾನು ಮುತ್ತಲಮ್ಮೆ
ಅಲ್ಲಿ ಪ್ರತಿಬಿಂಬವಿದ್ದೂದೆಂದು./7
ಅಷ್ಟವಿಧಾರ್ಚನೆ ಷೋಡಶೋಪಚಾರ
ಬಾಹ್ಯಕ್ರೀಯಲ್ಲಿ ಲಿಂಗವುಂಟೆ?
`ಸ್ವಯಮಾತ್ಮ ಪರೋಲಿಂಗ’ ವೆಂದುಲಿವ
ಬೀದಿಯ ಭಂಡರ ಮಾತ ಕೇಳಲಾಗದು.
ತಿಲಕುಸುಮ ಪರಿಮಳದಂತೆ ಒಳ ಹೊರಗು ಪರಿಪೂರ್ಣ
ಮಹಾಲಿಂಗ ಗಜೇಶ್ವರಾ./8
ಅಹುದಹುದು,
ಲಿಂಗವಿಲ್ಲದೆ ಶಿಷ್ಯನನರಿಯಬಲ್ಲ ಗುರು,
ಲಿಂಗವಿಲ್ಲದೆ ಗುರುವನರಿಯಬಲ್ಲ ಶಿಷ್ಯ.
ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು,
ಇವರಿಬ್ಬರ ಭೇದವ ನೀನೆ ಬಲ್ಲೆ ಗಜೇಶ್ವರಾ./9
ಆಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ.
ಕಂಡ ಕನಸು ದಿಟವಾದಡೆ ಆವ ನಮ್ಮ ನಲ್ಲನವ್ವಾ.
ಮನಸುಳ್ಳವರು ನೀವು ಪುಣ್ಯಗೈದಿರವ್ವಾ
ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ.
ಕನಸಿನ್ನೆಲ್ಲಿ ಬಹುದವ್ವಾ./10
ಆತನ ನೋಡಿದಂದು ದೆಸೆಗಳ ಮರೆದೆನಿನ್ನೆಂತವ್ವಾ.
ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯೆಲ್ಲಾ ಬೆವತುದಿನ್ನೆಂತವ್ವಾ.
ಅವ್ವಾ ಅವ್ವಾ ಆತನ ಕೈಯ ಹಿಡಿದಡೆ
ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ.
ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ
ನಾನಪ್ಪ ಮರೆದೆನಿನ್ನೆಂತವ್ವಾ./11
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ,
ಹೇಳಲೂಬಾರದು, ಕೇಳಲೂಬಾರದು;
ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ.
ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ
ಹೇಳಲು ಬಾರದವ್ವಾ./12
ಆಲಿಕಲ್ಲ ಮರದಡಿಯಲಿಹ ಮಘಮಘಿಸುವ ಗಿಳಿವಿಂಡು
ಉರವಣಿಸುವ ಪಕ್ಷಿಗಳು, ಸರಸಗೈವ ಕೋಗಿಲೆ,
ಗಗನದ ಚಂದ್ರಮ;
ಅಗಲಲಾರೆನು ಸಖಿಯೆ ಬೆಳುದಿಂಗಳು ಬಿಸಿಲಾದವೆ?
ಗಗನದ ದಶರಥನ ಬೀಡಿನಲ್ಲಿ ಕಾಮಿನಿ ಕೈವೋದಳೆ?
ದಶಾವಸ್ಥೆಗೊಂಡೆನು ಮಹಾಲಿಂಗ ಗಜೇಶ್ವರನುಳಿದಡೆ./13
ಆವುಗೆಯ ಕಿಚ್ಚಿನಂತೆ, ಧಾಮಧೂಮವಾದಂತೆ
ಆವ ನಾಡ ಸುಟ್ಟನೆಂದರಿಯೆನವ್ವಾ.
ಬೊಬ್ಬೆಯ ಕೊಂಡು ಹೋದವನೆಲ್ಲಿ ಉಳಿದನೆಂದರಿಯೆನವ್ವಾ.
ನಿರಾಳ ನಿರಾಳದಲ್ಲಿ ಮಹಾಲಿಂಗ ಗಜೇಶ್ವರದೇವನುಳಿದನೆಂದು ಹೇಳಿದಡೆ
ಕಂಗಳ ನೀರಲ್ಲಿ ನಿಂದೆನವ್ವಾ./14
ಇಂದುವಿನಲ್ಲಿ ಉದಯವಾದ ಕಲ್ಲಿನಂತೆ ಮುನಿಸ ಮರೆದಿರ್ದಳವ್ವೆ.
ಅವನ ಸೋಂಕಿನಲ್ಲಿ ಸುಖಿಯಾದಳು.
ಆಗಲಿದಡೆ ಕರೆಗೊಂಡಳು.
ಮಹಾಲಿಂಗ ಗಜೇಶ್ವರದೇವರಲ್ಲಿ
ಮನಸೋಂಕಿ ಮನ ಲೀಯವಾದಳವ್ವೆ./15
ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ
ಇರುಳಿನ ತಾವರೆಯಂತೆ ಮುಖ ಬಾಡಿ,
ಇರುಳಿನ ನೆಯ್ದಿಲಂತೆ ಕಣ್ಣಮುಚ್ಚದೆ,
ಇರುಳಿನ ಸಮುದ್ರದಂತೆ ಘನವಾಗಿ,
ಸಲೆ ಉಮ್ಮಳಿಸಿ ಸಂಜೆವರಿದು
ಮಹಾಲಿಂಗ ಗಜೇಶ್ವರನ ಬರವಿಂಗೆ ಬೆಳಗಾಯಿತು./16
ಈ ಸಕಲದೊಳಗೆ ಒಂದು ಸಯವಿಲ್ಲದೆ
ನಾವು ಹಿರಿಯರು ನಾವು ಲಿಂಗವಂತರೆಂಬರು.
ಇದಿರ ಕೈಯಲ್ಲಿ ಎನಿಸಿಕೊಳ್ಳುತ್ತಿಹರು ಮನ ನಾಚದೆ.
ಇಂಥ ಮೂಗುನಾಚಿಗಳ ಮೆಚ್ಚುವನೆ
ಮಹಾಲಿಂಗ ಗಜೇಶ್ವರನಲ್ಲಿ
ಎನ್ನ ಹೆತ್ತ ತಂದೆ ಪೂರ್ವಾಚಾರ್ಯ ಸಂಗನಬಸವಣ/17
ಉದರವ ತಾಗಿದ ಮಾತು ಅಧರದಲ್ಲಿ ಬೀಸರವೋದೀತೆಂದು
ಅಧರವ ಮುಚ್ಚಿಕೊಂಡಿರ್ದಳವ್ವೆ.
ಕಂಗಳ ಮುಚ್ಚಿಕೊಂಡಿರ್ದಳವ್ವೆ.
ಪರಿಮಳ ಬೀಸರವೋದೀತೆಂದು
ಆಳಿಗೆ ಬುದ್ಧಿಯ ಹೇಳಿದಳವ್ವೆ.
ಮನ ಬೀಸರವೋದೀತೆಂದು
ದಿನಕರನ ಕಾವಲಕೊಟ್ಟಳವ್ವೆ,
ಇಂದು ನಮ್ಮ ಮಹಾಲಿಂಗ ಗಜೇಶ್ವರನ ನೆರೆವಭರದಿಂದ./18
ಋತುಕಾಲ ತಪ್ಪಿದ ಕೋಗಿಲೆಯಂತೆ
ನುಡಿಯದಂತಿರ್ದಳಲ್ಲಾ!
ಪರಿಮಳ ತಪ್ಪಿದ ಭ್ರಮರನಂತೆ
ಸುಳಿಸುಳಿಗೊಳುತಿರ್ದಳಲ್ಲಾ!
ಫಲವು ತಪ್ಪಿದ ಬಂಜೆ ಬನದೊಳಗಣ ಅರಗಿಳಿಯಂತಿರ್ದಳಲ್ಲಾ!
ಧುರಭಾರದ ಜವ್ವನದಲ್ಲಿ ತೋರಣದೆಲೆಯಂತೆ
ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ
ಅಳಿಕಾವೃದ್ಧೆಯಾಗಿರ್ದಳಲ್ಲಾ!/19
ಎನ್ನ ಕಡೆಗಣ್ಣು ಕೆಂಪಾಯಿತವ್ವಾ.
ಎನ್ನ ನಳಿತೋಳು ಉಡುಗಿದವವ್ವಾ.
ಇಕ್ಕಿದ ಹವಳದ ಸರ ಬೆಳುಹಾದವವ್ವಾ.
ಮುಕ್ತಾಫಳ ಹಾರದಿಂದ ಆನು ಬೆಂದೆನವ್ವಾ.
ಇಂದೆನ್ನ ಮಹಾಲಿಂಗ ಗಜೇಶ್ವರನು
ಬಹಿರಂಗವನೊಲ್ಲದೆ ಅಂತರಂಗದಲಿ ನೆರೆದ ಕಾಣೆಅವ್ವಾ!/20
ಎನ್ನ ಕರಸ್ಥಲವೇ ಬಸವಣ್ಣನಯ್ಯಾ.
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಾ.
ಎನ್ನ ಭಾವಸ್ಥಲವೇ ಪ್ರಭುದೇವರಯ್ಯಾ.
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಲ್ಲೀಯವಾಗಿ
ಮಹಾಲಿಂಗ ಗಜೇಶ್ವರಾ,
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲಿ ಕಂಡು ಪರಮಸುಖಿಯಾಗಿರ್ದೆನು./21
ಎಲೆ ಎಲೆ ತಾಯೆ ನೋಡವ್ವಾ!
ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ!
ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ!
ಮಹಾಲಿಂಗ ಗಜೇಶ್ವರನ
ಅನುಭಾವಸಂಬಂಧಿಗಳ ಬರವೆನ್ನ
ಪ್ರಾಣದ ಬರವು ನೋಡವ್ವಾ/22
ಎವೆ ಎವೆ ಹಳಚದೆ ಮೊಲೆಯ ಮೇಲಣ ಗಾಯ
ಬಿಳಿಯ ರಕ್ತದ ಧಾರೆ ಸುರಿದಲ್ಲಿ ಸಸಿವಸರೆ
ಬಸವಂತವೆಸೆದನವ್ವಾ.
ಅಪ್ಪಿನ ಸೋಂಕಿನ ಸುಖ ಅಚ್ಚುಗವಳಿದುಳಿದಡೆ
ಮಹಾಲಿಂಗ ಗಜೇಶ್ವರದೇವ ನಿರಾಸನಾಗಿರ್ದನವ್ವಾ./23
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ?
ಅವರನೊಲ್ಲೆನೆಂದಡೆ ಸಾಲದೆ?
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ!/24
ಒಳಗೆ ಶೋಧಿಸಿ, ಹೊರಗ ಧವಳಿಸಿ
ಭಾವದಿಂದ ಗುಡಿತೋರಣವ ಕಟ್ಟಿದೆನಯ್ಯಾ.
ಲಿಂಗ ಬಾರಯ್ಯಾ, ಎನ್ನ ದೇವಾ ಬಾರಯ್ಯಾ.
ಅಂತರಂಗದ ಪರಂಜ್ಯೋತಿಯನಿದಿರುಗೊಂಬೆನೆನ್ನ
ಮಹಾಲಿಂಗ ಗಜೇಶ್ವರನ/25
ಕಂಗಳ ಕಾಳಗ ನೋಟದ ಮಸಕ
ಮಿಂಚಿನಗೊಂಚಲು ತಾಗಿದಂತಾದುದವ್ವಾ.
ತಾರಕಿ ತಾರಕಿ ಸೂಸಿದಂತೆ, ಅರಗಿನ ಬಳ್ಳಿ ಹಬ್ಬಿದಂತವ್ವಾ.
ಓರೆಕೋರೆ ಕೆಂಪಾದವವ್ವಾ, ಆಳುಗಳಿನ್ನಾರೋ?
ಐದು ರೂಹನೊಂದು ಮಾಡಿ,
ಕಾದಿ ಗೆದ್ದು ಸೋತು ಹೊರಹೊಂಟುಹೋದನವ್ವಾ,
ಮಹಾಲಿಂಗ ಗಜೇಶ್ವರ ಕಂಗಳ ಕಾಳಗದ ಮಾಸಾಳು./26
ಕಂಗಳ ಬಲದಲ್ಲಿ ಮುನಿದೆಹೆನೆಂಬೆನೆ
ಕಂಗಳು ತನ್ನನಲ್ಲದೆ ನೋಡವು.
ಮನದ ಬಲದಲ್ಲಿ ಮುನಿದೆಹೆನೆಂಬೆನೆ
ತನುಮನ ತಾಳಲಾರವವ್ವಾ.
ಇಂತೀ ಮನಪ್ರೇರಕ ಮನ ಚೋರಕ
ತನ್ನಾಧೀನವಾಗಿ ಸಾಧನವಪ್ಪಡೆ
ಮನದ ಒಳ ಮೆಚ್ಚುವನವ್ವಾ.
ಮನದಲ್ಲಿ ಬಯಸುವೆ, ಭಾವದಲ್ಲಿ ಬೆರಸುವೆ,
ಮನಹಿಂಗೆ ಪ್ರಾಣನಾಥನಾಗಿ
ಮಹಾಲಿಂಗ ಗಜೇಶ್ವರದೇವ
ಮನಸಿಂಗೆ ಮನಸ ತರಲೀಸನವ್ವಾ./27
ಕಾಮಗಂಜಿ ಚಂದ್ರನ ಮರೆಹೊಗಲು ರಾಹು ಕಂಡಂತಾದಳವ್ವೆ.
ಹಾವೆಂದರಿಯದೆ ನೇವಳವೆಂದರಿಯದೆ
ಕ್ಷಣ ನಾಗಭೂಷಣೆಯಾಗಿರ್ದಳವ್ವೆ
ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ
ಕಳಕ್ಕೆ ಬಂದ ಮೃಗದಂತಿದ್ದಳವ್ವೆ./28
ಕೂಪರನಗಲುವದು ಆತ್ಮಘಾತುಕವವ್ವಾ.
ದಿಬ್ಯವ ತುಡುಕಿದಡೆ ಕೈ ಬೇವುದಲ್ಲದೆ ಮೈ ಬೇವುದೆ?
ಒಲಿದವರನಗಲಿದಡೆ ಸರ್ವಾಂಗವೂ ಬೇವುದವ್ವಾ.
ಮಹಾಲಿಂಗ ಗಜೇಶ್ವರನನಗಲಿ
ಆವುಗೆಯ ಮಧ್ಯದ ಘಟದಂತಾದೆನವ್ವಾ./29
ಕೋಗಿಲೆಗಳು ಹುಳುವಟ್ಟೆ ಹೋದ ಬನದಂತೆ ಆದೆ ನೋಡವ್ವಾ.
ರಾಮರಾಡಿದ ಹೊಳಲಿನಂತೆ ಆದೆ ನೋಡವ್ವಾ.
ಜವ್ವನೆಗಳು ಬಳಲ್ದ ಸ್ತ್ರೀಯರ ಮುಖ ಕಾಂತಿಯಂತೆ ಆದೆ ನೋಡವ್ವಾ.
ಪರಿಮಳವಿಲ್ಲದ ಪುಷ್ಪದಂತೆ ಆದೆ ನೋಡವ್ವಾ.
ಚಂದ್ರಮನಿಲ್ಲದ ನಕ್ಷತ್ರಗಳಂತೆ ಆದೆ ನೋಡವ್ವಾ.
ಮಹಾಲಿಂಗ ಗಜೇಶ್ವರನನಗಲುವದರಿಂದ
ಸಾವುದು ಸುಖ ನೋಡವ್ವಾ./30
ಗಾಂಧಾರಿ ಮಾಂಧಾರಿಯೆಂಬ ಹೊತ್ತಿನಣತೆ ರಟ್ಟೆಯರೆಂಬರರಿವು
ಮಲುಹಣ ಮಲುಹಣ ನಿಮಗೆಂತು ಬಲ್ಲೆ, ಎಮಗೆಂತು ಅರಿಯೆ,
ಮಲುಹಣ, ಮನೆಯವರು ಬರಲೀಯರು,
ಅನ್ನವನು ಬಿಡಲಾರೆ.
ದೇವರಲ್ಲಿಗೆ ಹೋಗಿ ಬೇಡಿಕೊಳ್ಳೊ.
ಮಲುಹಣ, ಅಬುಜಮುಖಿ ಲಂಪಟ ಮಹಾಲಿಂಗ ಗಜೇಶ್ವರ
ನಿಮಗೆಂತು ಬಲ್ಲೆ ಎಮಗೆಂತರಿಯನೋ./31
ಗಿಡ ಮರದ ಕುರುಬಿತ್ತಿಯ ಜವ್ವನದಂತೆ
ನುಡಿಯಲರಿಯದ ಮುಗ್ಧೆಯಾಗಿರ್ದೆನವ್ವಾ.
ಹಗಲನರಿಯದ ಜಕ್ಕವಕ್ಕಿಯಂತೆ
ಮನ ಬಯಸುತ್ತಲಿರ್ದೆನವ್ವಾ.
ಹಲವು ಕಾಲ ಎಲವದಮರನ ಸಾರಿರ್ದ ಗಿಳಿಯಂತಾದೆನವ್ವಾ.
ಇಂದು ಮಹಾಲಿಂಗ ಗಜೇಶ್ವರದೇವನ ನೆರೆಯಲರಿಯದೆ
ಇವರೆಲ್ಲರ ವಿಧಿಯ ಹೊತ್ತೆನವ್ವಾ./32
ಚಂದ್ರಮನ ಕಂಡು ಮಂಡೆಯ ಬಿಟ್ಟು
ಏಳು ಬಂಧವ ತೋರಿ ಬೆದರಿಸಿದನವ್ವಾ.
ಮಗಳ ಕುಂಕುಮ ತಿಲಕವ ಕಂಡು
ನಿನ್ನ ನೊಸಲಲ್ಲಿ ಎಸೆಯಬಂದ ಕಾಮ ಕೈಮರೆದನವ್ವಾ.
ಸಟ್ಟುಪದಿಯ ಸಂಗ ಮಹಾಲಿಂಗ ಗಜೇಶ್ವರನ
ಸಂಪಗೆಯ ವನಕ್ಕೆ ಬಂದು ಶರಣೆನ್ನು ಮಗಳೆ./33
ಚಕೋರನಂತೆ ದಿನವನೆಣಿಸುತ್ತಿರ್ದಳವ್ವೆ
ದರುವಕ್ಕಿ ಕಂಡ ಕನಸಿನಂತಿರ್ದಳವ್ವೆ
ಮೋಡಂ ಬೊಕ್ಕ ಚಂದ್ರನಂತಿರ್ದಳವ್ವೆ
ಎಂಟನೆಯವಸ್ಥೆಯ ಆಚೆಯ ತಡಿಯಲಿರ್ದವರನು
ಈಚೆಯ ತಡಿಗೆ ಕರೆದುಕೊಂಬಂತೆ ಇದು
ನಮ್ಮ ಮಹಾಲಿಂಗ ಗಜೇಶ್ವರ
ಕಂಗಳ ಕಾಮ ಕಂಗಾಹಿಗಂಡವ್ವಾ./34
ಜಾತಸ್ಯ ಮರಣಂ’ ಆವಗೆಯೂ ತಪ್ಪದು.
ಅರಿದು ಮರೆಯಬೇಡಯ್ಯಾ.
ಉರಗನ ಬಾಯ ಕಪ್ಪೆಯಂತೆ
ಸಂಸಾರ ಹೆರೆಗೊಳುತ್ತಿರ್ದುದಲ್ಲಾ!
ರೋಮಜರು ಮೀನಜರ ಕಾಲಕಲ್ಪಿತಕೊಳಗಾದರು.
ಮಹಾಲಿಂಗ ಗಜೇಶ್ವರಯ್ಯನೊಬ್ಬನೆ ಶಾಶ್ವತನು./35
ತಮ್ಮ ತಮ್ಮ ಗಂಡರು ಚೆಲುವರೆಂದು
ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ!
ನಾನೆನ್ನ ನಲ್ಲನೆಂಥಾವನೆಂದರಿಯೆನವ್ವಾ!
ಮಹಾಲಿಂಗ ಗಜೇಶ್ವರದೇವನು ನಿರಿಯ ಸೆರಗ ಸಡಿಲಿಸಲೊಡನೆ
ಅನೇನೆಂದರಿಯೆನವ್ವಾ./36
ತಳಿಗೆ ಚಿಕ್ಕುಟು ಕೈಯಲಾರಿಸುಂಬಡೆ ಬಿಸಿ ಬಿಡಲಿಲ್ಲ.
ಆಗಲಿಕ್ಕೆ ತೆರಹಿಲ್ಲ.
ಮಹಾಲಿಂಗ ಗಜೇಶ್ವರನೆತ್ತಿಕೊಂಡು ಕುಡಿದನು./37
ದೃಷ್ಟಿಯ ಕಲು ತಾಗಿದಂತೆ ಮುನಿಸ ನೋಡಾ ಅವ್ವಾ.
ಸೋಂಕಿದಡೆ ಸುಖಿಯಾದೆ, ಉಳಿದಡೆ ಕರಿಗೊಂಡೆ.
ಪಾಷಾಣದೊಸರಿನಂತೆ ಆದೆ ನೋಡಾ ಅವ್ವಾ ಸೋಂಕಿದಡೆ.
ಮಹಾಲಿಂಗ ಗಜೇಶ್ವರನೊಲವು
ಎನಗೆ ಕಲುದೇಹ, ಎನಗೆ ಸುಖದ ಮೊದಲು ನೋಡಾಅವ್ವಾ./38
ದೇವರ ನೆನೆದು ಮುಕ್ತರಾದೆವೆಂಬ
ಯುಕ್ತಿಶೂನ್ಯರ ಮಾತ ಕೇಳಲಾಗದು.
ಅದೇನು ಕಾರಣವೆಂದಡೆ: ದೇವರ ನೆನೆವಂಗೆ ದೇವರುಂಟೆ?
ದೂರ ದೂರದಲ್ಲಿದ್ದವರ ನೆನೆವರಲ್ಲದೆ
ಸಮೀಪದಲ್ಲಿದ್ದವರ ನೆನೆವವರಿಲ್ಲ.
ಇದನರಿದು ನೀನೆನ್ನೊಳಗಡಗಿ
ನಾ ನಿನ್ನ ನೆನೆಯಲಿಲ್ಲ;
ನೀನೆನಗೆ ಮುಕ್ತಿಯನೀಯಲಿಲ್ಲ.
ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ./39
ದೇಶಾಖಿಯಲ್ಲದ ರಾಗ, ಉಪ್ಪಿಲ್ಲದ ಊಟ
ಸಪ್ಪೆ ಕಾಣಿರೋ ಅಯ್ಯಾ, ಮಿಕ್ಕಿನ ರಾಗ.
ಶಿವನಲ್ಲದ ದೈವಫಲವಿಲ್ಲ ಕಾಣಿರೊ ಅಯ್ಯಾ.
ಮಿಕ್ಕಿನ ತುಂಬುರ ನಾರದರು ಶಿವನ ಕೇಳಿಸುವ ರಾಗ,
ಮಹಾಲಿಂಗ ಗಜೇಶ್ವರನ ನಚ್ಚಿನ ರಾಗ./40
ನಲ್ಲನುಳಿದನೆಂದೊಂದು ಮಾತನಟ್ಟಿದಡೆ
ಕರಸ್ಥಲದಲ್ಲಿ ನೆಯ್ದಿಲು ಮೂಡಿತ್ತ ಕಂಡೆನವ್ವಾ.
ಉದಕದೊಳಗೆ ತಾವರೆ ಬಾಡಿತ್ತ ಕಂಡೆ.
ಎನ್ನ ಮಹಾಲಿಂಗ ಗಜೇಶ್ವರನುಳಿದನೆಂದಡೆ
ಒಂದೆಲೆಯಲ್ಲಿ ಹೂ ಮೂಡಿತ್ತ ಕಂಡೆನವ್ವಾ./41
ನೀನೊಲಿದು ಕೂರ್ತವರು ನಿಮಗೊಲಿದು ಕೂರ್ತವರು.
ನಿಮ್ಮ ಪರಿಯೇ ಅವರು, ನಿಮ್ಮರೂಹೇ ಅವರು.
ಅವರನೇನ ಹೇಳುವೆ.
ಆಳಾರು ಅರಸಾರು ಎಂದರಿಯಬಾರದು.
ನಿಮ್ಮ ರೂಹೆ ಅವರು.
ಮಹಾಲಿಂಗ ಗಜೇಶ್ವರನೊಲಿದು ಪೂಜಿಸಿದವರು
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ
ಪದವಿಗಳ ಪಡೆವರು.
ಎನಗೆ ನಿಮ್ಮ ಶರಣರೇ ನೀವೆಂದು ಅರಿದಿರ್ಪುದೇ ಸಾಕು./42
ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರ ಹೇಳವ್ವಾ.
ನೆರೆವ ಕ್ರೀಯಲ್ಲಿ ಸುಖಿಸುವದಲ್ಲದೆ, ನೆನೆವುದಿನ್ನಾರ ಹೇಳವ್ವಾ.
ನೆನೆದೆನೆಂಬ ಭರವೇಕವ್ವಾ.
ಮಹಾಲಿಂಗ ಗಜೇಶ್ವರದೇವರ ಕಂಡಲ್ಲಿ ಅಗಲಿದಡೆ
ಕರೆಗೊಂಬಲ್ಲಿ ನಾನೇನು ಕಲುಮನದವಳೆ ಕೇಳವ್ವಾ./43
ನೇಹದ ಮುತ್ತು ಅಧರದ ಬಿತ್ತು.
ಅದು ರಸವಿರಸಕ್ಕೆ ಘಟ್ಟಿಯಾಯಿತ್ತವ್ವಾ.
ಅವ್ವಾ, ತನು ವಿಕಳಚಿತ್ತ ನಾಗೇಂದ್ರನ ಸೂತ್ರದ
ದೃಷ್ಟದಂತೆಯವ್ವಾ.
ನೇಹದ ಮುಗುದೆ ವಿಕಳೆಯಾಗಿ
ಮಹಾಲಿಂಗ ಗಜೇಶ್ವರನಲ್ಲಿ ವಿಕಾರಗೊಂಡು ಇದ್ದಳವ್ವೆ./44
ನೇಹದ ಸನ್ನೆಯ ಮನವರಿಯಲೊಡನೆ ನೋಡಲಮ್ಮೆನವ್ವಾ.
ಕಂಗಳಲಿ ಹಿಸುಣವ ಹೇಳಿಹನೆಂದು ನೋಡಲಮ್ಮೆನವ್ವಾ.
ಕಜ್ಜಲ ಕಲಕಿದಡೆ ಕುರುಹಳಿದೀತೆಂದು ನೋಡಲಮ್ಮೆನವ್ವಾ.
ಕಜ್ಜಲ ಕಲಕಿದಡೆ ಕುರುಹಳಿದೀತೆಂದು ನೋಡಲಮ್ಮೆನವ್ವಾ.
ಕಂಗಳಲಿ ಮಹಾಲಿಂಗ ಗಜೇಶ್ವರನೊಲವ!
ಎನಗೆ ಕಲುದೇಹ, ತನಗೆ ಸುಖದ ಮೊದಲು ನೋಡವ್ವಾ/45
ನೇಹವೆಳದಾಯಿತ್ತಾಗಿ ನೋಟ ವಿಪುಳವಾಯಿತ್ತ ಕಂಡೆ.
ಅಂಗದ ಕಳೆ ಕಂಗಳ ಮೋಹ ಎವೆಗೆವೆ ಸೈರಿಸದು.
ಬೆಳಕಿನ ಮೇಲೆ ಕೆಂಪಡರಿತ್ತು.
ಉದಕ ಪಲ್ಲಟ, ಮತ್ಸ ್ಯ ಬೆನ್ನು ಬಸುರ ತೋರಿತ್ತು.
ಮಾಗಿಯ ಕೋಗಿಲೆಯಂತೆ ಮೂಗನಾಗಿದ್ದೆನವ್ವಾ.
ಮಹಾಲಿಂಗ ಗಜೇಶ್ವರನೊಲವಿಂದೆನಗೆ ರಣದಣಕನವ್ವಾ/46
ನೋಟಕ್ಕೆಯೂ ಕೂಟಕ್ಕೆಯೂ ಕಣ್ಣು ಮನವೆರಸವವ್ವಾ.
ಅವ್ವಾ, ಕಂಗಳು ತಪ್ಪಿ ನೋಡಲಮ್ಮೇ;
ಅಮ್ಮೆ ಕೇಳೆಲೆಯವ್ವಾ.
ಅವ್ವಾ, ಕಿವಿಗಳ ತಪ್ಪಿ ಕೇಳಲಮ್ಮೆ;
ಆಮ್ಮೆ ಕೇಳೆಲೆಯವ್ವಾ.
ಅವ್ವಾ, ಕಲಿಗಳಾಗದಲ್ಲಿ ಸೋತಂತೆ.
ತನು ಮನ ಧನದ ಭಂಗವಳಿದು ನೆರೆಯನವ್ವಾ
ಮಹಾಲಿಂಗ ಗಜೇಶ್ವರನವ್ವಾ./47
ಪದುಮ ಪಜ್ಜಳ ವರ್ಣ ನೈದಿಲೆಯಾಗಿರ್ದಳವ್ವೆ
ತುಂಬಿ ಮುತ್ತನುಗುಳದಂತೆ;
ಕಂಗಳು ಕಂಕಣವಾಗಿ ಚಂದ್ರಬಿಂಬವಾಗಹದಂತೆ
ಅವಗವಿಸಿಕೊಂಡಿರ್ದ ಬಂಗಾರಕ್ಕೆರಗಿದ ರತ್ನದಂತೆ
ಆನೊಂದೆ ಗ್ರಾಹಯಾಗಿರ್ದೆನವ್ವಾ
ಅಖಂಡಿತನಾಗಿ ಮಹಾಲಿಂಗ ಗಜೇಶ್ವರನ ಅನುಭಾವಕ್ಕೆಸುಖಿಯಾಗಿ./48
ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು,
ಮಹಾಲಿಂಗ ಗಜೇಶ್ವರದೇವಾ,
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ./49
ಬಟ್ಟಬಯಲಲೊಂದು ದೃಷ್ಟವಪ್ಪ ಮೂರುತಿಯಾಗಿ
ನಾನೊಂದು ಅಷ್ಟತನುವ ಪಡೆದೆ.
ಬಾಳೆಯ ದಿಂಡು ಲಾಳಿಲು ನೂಲು ಘಳಿಯ ಶಬುದ
ಉದಕದ ಬಿಂದು ಓ ಓ ಬಾಳೆ
ಮಹಾಲಿಂಗ ಗಜೇಶ್ವರನಲ್ಲಿ ಉದಕ ದಿಟವೆಂದೆನು./50
ಬರು ಮನವಾದೀತೆಂದು ಬೇರುವೋದಳು ನೋಡಾ ಅವ್ವಾ.
ಕಮ್ಮರಿವರಿವಳು ನೋಡಾ ಅವ್ವಾ.
ಸಮಧಾತುವಿಲ್ಲ ನೋಡೆಮಗೆ.
ಮದ್ದು ಕುತ್ತದೊಳಗಾದಂತೆ
ಮಹಾಲಿಂಗ ಗಜೇಶ್ವರದೇವರ ಒಲವು ನೋಡಾಅವ್ವಾ./51
ಬಾಲಕ ಹಾಲ ಸವಿದಂತೆ,
ಮರುಳಿನ ಮನದ ಹರ್ಷದಂತೆ,
ಮೂಗರು ಕಂಡ ಕನಸಿನಂತೆ,
ಬಂಜೆಯ ಮನದ ನೇಹದಂತೆ,
ನೆಯಿ ಆರಿದ ನೆಳಲಂತೆ,
ಮಹಾಲಿಂಗ ಗಜೇಶ್ವರನೊಲವು ನೋಡವ್ವಾ./52
ಬಿಟ್ಟ ತಲೆಯ ಬಿಡುಮುಡಿಯ ಬರುಮೈಯ
ಕಿವಿಯ ಬಿಚ್ಚೋಲೆಯ ಬಿಟ್ಟ ನಿರಿಯ
ಸಡಿಲಿದ ಕಳೆಯ ಘಳಿಲನೆ ನಡೆತಂದಳು.
ನಚ್ಚಿ ಮಚ್ಚಿ ಮನಸಂದ ಕಳೆವಳು.
ಬಂದಪ್ಪಿನ ಸೋಂಕಿನ ಸುಖವ
ಮಹಾಲಿಂಗ ಗಜೇಶ್ವರ ತಾನೆ ಬಲ್ಲ./53
ಬೇರೆ ಗತಿ ಮತಿ ಚೈತನ್ಯವಿಲ್ಲದವಳು.
ತೊತ್ತಿನ ಮುನಿಸು ಸಲುವುದೆ?
ಅವಳು ಮುನಿದಡೆ ಆಗಲೇ ಕೆಡುವಳು.
ಅರಸು ಮುನಿದಡೆ ಆಗಲೇ ಕೆಡುವಳು ತೊತ್ತು.
`ರಾಜಾರಕ್ಷತೇ ಧರ್ಮಃ’ ಮಹಾಲಿಂಗ ಗಜೇಶ್ವರಯ್ಯಾ./54
ಭಕ್ತನ ಮಠಕ್ಕೆ ಜಂಗಮ ಬಂದು,
ಆ ಭಕ್ತ ಮಾಡಿದಂತೆ ಭಕ್ತಿಯ ಮಾಡಿಸಿಕೊಂಡು,
ಕ್ಷಮಿಸಬಲ್ಲಡೆ ಜಂಗಮ;
ಆ ಕ್ಷಮೆಯೊಳಗೆ ಮಗ್ನನಾಗಬಲ್ಲಡೆ ಭಕ್ತ.
ಉಪಾಧಿಯಾಗಿ ಹೇಳಿ ಮಾಡಿಸಿಕೊಂಬನ್ನಬರ ಭೂತಪ್ರಾಣಿ: ಬಂದ ಪರಿಯಲ್ಲಿ ಪರಿಣಾಮಿಸಬಲ್ಲಡೆ ಲಿಂಗಪ್ರಾಣಿ.
ಬೇಡಿದಲ್ಲದೆ ಮಾಡೇನೆಂಬೆನ್ನಕ್ಕರ ಫಲದಾಯಕ;
ಬಂದ ಜಂಗಮದ ಇಂಗಿತಾಕಾರವರಿದು
ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತನೆಂಬೆನು;
ಬೇಡದ ಮುನ್ನವೆ ಮಾಡುವ ಭಕ್ತನು,
ಬೇಡದೆ ಮಾಡಿಸಿಕೊಂಬ ಜಂಗಮವು,
ಇಂತೀ ಎರಡರ ಸಮ್ಮೇಳ ಸನ್ನಿಧಿಯಲ್ಲಿರ್ದು
ನಾನು ಸುಖಿಯಾದೆನು ಕಾಣಾ ಮಹಾಲಿಂಗ ಗಜೇಶ್ವರಾ./55
ಭಕ್ತಿ ಸಮೇಳ ಎತ್ತಿದ ಹಳವಿಗೆ ಸುತ್ತಲೂ ಬೇವಿನ ದಂಡೆ
ರಣರಂಗ ಹಾಸಿನ ಮೇಲೆ.
ಸಮಕಳೆ ಸಮರತಿ ನೆರೆವ ಭರದಲ್ಲಿ.
ಎಲೆ ಬಿದ್ದ ಮಸಿಯನರಿಯದಿದ್ದಳು.
ರಣರಂಗ ಸಂಯೋಗ ವಿಯೋಗ ಬ್ರಹ್ಮಸಮಾಧಿ
ಮಹಾಲಿಂಗ ಗಜೇಶ್ವರನೇಕೋಭಾವ./56
ಮಾಗಿಯ ಹುಲ್ಲಿನ ಸೋಂಕಿನಂತೆ
ತನು ಪುಳಕಿತಳಾದಳವ್ವೆ.
ನುಡಿ ತೊದಳು ಆತನ ಒಲವೆ ಆಧಾರವಾಗಿದ್ದಳವ್ವೆ.
ಬಿಳಿಯ ತುಂಬಿ ಕುಂಕುಮ ರಸದಲ್ಲಿ ಬಂಡುಂಡಂತೆ.
ಮಹಾಲಿಂಗ ಗಜೇಶ್ವರನಲ್ಲಿ
ತನ್ನಲ್ಲಿ ತಾನೆ ರತಿಯಾಗಿರ್ದಳವ್ವೆ/57
ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ
ರೂಪು ಹೊಲೆಯನಾಗಬಲ್ಲುದೆ ಅಯ್ಯಾ?
ಮರ್ತ್ಯಲೋಕದ ಮಾನವರೊಳಗೆ ಶರಣ ಸುಳಿದಡೆ
ಶರಣ ಸೂತಕಿಯಾಗಬಲ್ಲನೆ ಅಯ್ಯಾ?
ಮರ್ತ್ಯರ ಭವಿಯ ಮಾತ ವರ್ತಮಾನವೆಂಬ ಜೀವಿಗಳ
ಆಗೆದೊಗೆಯದೆ ಮಾಬನೆ ಮಹಾಲಿಂಗ ಗಜೇಶ್ವರಯ್ಯ/58
ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ.
ತೆಗೆದಪ್ಪಿದಡೆ ಚಂದನ ಶೀತಾಳದ ಹಾಂಗಾಗಬೇಕವ್ವಾ.
ಹೋಗುವಲ್ಲಿ ಮೈಯೆಲ್ಲಾ ಕೈಯಾಗಿ ಹೆಣಗುತ್ತಿರಬೇಕವ್ವಾ.
ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ
ನೊಂದಂಕದ ಮೇಲೆ ಬಿದ್ದ ಹಾಂಗಿರಬೇಕವ್ವಾ./59
ಮೂಗಿನ ಕಪ್ಪು ಪ್ರಣತೆಯ ಕತ್ತಲೆ ಜ್ಯೋತಿಯೆಂಬರು.
ವಿವರಣೆ ಹೋಗದೆಂತೂ ರಸದ ರುದ್ರಾಕ್ಷಿ ಸ್ಫಟಿಕದ ಧಾರಂಬೊ.
ಮಾಣಿಕ್ಯ ಸ್ವಯಂಜ್ಯೋತಿ ಜ್ಞಾನದ ಪ್ರಭೆ.
ಮಹಾಲಿಂಗ ಗಜೇಶ್ವರನ ನೆನೆವ ಮನವು ಕಮಳ ತಳವೆಳಕು ಭೋ./60
ಮೂಗಿನ ತುಂಬಿಗೆ ಪರಿಮಳ ಒತ್ತಿಹವೆಂದು
ಅಂಗಸಂಗದಲ್ಲಿಕ್ಕಿ ಮುಚ್ಚುವೆನವ್ವಾ.
ಮನವ ಮರೆದ ಮದಾಳಿಯ ನೇಹದಂತಾದೆನವ್ವಾ,
ಮಹಾಲಿಂಗ ಗಜೇಶ್ವರನನುಭಾವಕ್ಕೆ ಸುಖಿಯಾಗಿ./61
ರಿಪುಗಳ ಕಾಳಗ ಕೊಳುಗುಳದನುಭಾವ
ಅತಿಶಯದ ಬಾಣ ತಾಗಿದುದಕೆ ಹೋಗಿ ನಿಂದ ಮುಮ್ಮರಿಯಂತೆ
ಜಗಕ್ಕೆಲ್ಲಾ ಕನ್ನಡಿಗೆ ನೋಡಾ!
ಮಹಾಲಿಂಗ ಗಜೇಶ್ವರನ ಅರಿಯನೆ ಬಲ್ಲ ಕನ್ನಡಿಗೆ
ಮರದೊಡಕು./62
ಸಮರಸದೊಳಗಣ ಸ್ನೇಹ
ಮತ್ಸ ್ಯ ಕೂರ್ಮ ವಿಹಂಗದಂತೆ;
ಸ್ನೇಹದ ನೋಟದಲ್ಲಿಯೇ ತೃಪ್ತಿ,
ಸ್ನೇಹದ ನೆನಹಿನಲ್ಲಿಯೇ ತೃಪ್ತಿ,
ಸ್ನೇಹದ ಸ್ಪರ್ಶನದಲ್ಲಿಯೇ ತೃಪ್ತಿ.
ಈ ಪರಿಯಲ್ಲಿ ಎಮ್ಮ ಮಹಾಲಿಂಗ ಗಜೇಶ್ವರನಲ್ಲಿ ಲಿಂಗೈಕ್ಯವು
ವಾರಿಕಲ್ಲ ಪುತ್ಥಳಿ ಕರಗಿ ಅಪ್ಪುವನೊಡಗೂಡಿದಂತಾಯಿತ್ತು./63
ಸರ್ವಜ್ಞನ ಸನುಮತವೆಂಬ ಮಾತು ಸಾಮಾನ್ಯವೆ ಅವ್ವಾ?
ತಾ ಮೆಚ್ಚ, ಕಲಿಯಾಗಿಪ್ಪವರ ಮೆಚ್ಚ,
ಸುಖಿಯಾಗಿಪ್ಪವರನೊಬ್ಬರನಾರುವ ಕಾಣೆನವ್ವಾ!
ತಾ ಸತ್ತು ಹೆರರ ಕೊಂದವಸ್ಥೆಯ ಚಂದವ
ಚಂದ್ರಮತಿಯಲ್ಲಿ ಕಂಡೆನು.
ಇಂದು ಕಂಡೆನು ಮಹಾಲಿಂಗ ಮಸಣಯ್ಯಗಳಲ್ಲಿ
ಮಹಾಲಿಂಗ ಗಜೇಶ್ವರದೇವರು ಮಾಡಿದ./64
ಹಗಲು ಮನಸಿಂಗಂಜಿ ಇರುಳು ಕನಸಿಂಗಂಜಿ
ಧ್ಯಾನ ಮೋನಿಯಾಗಿರ್ದಳವ್ವೆ.
ಸಖಿ ಬಂದು ಬೆಸಗೊಂಡಡೆ,
ಏನೆಂದು ಹೇಳುವಳವ್ವೆ ಏನೆಂದು ನುಡಿವಳವ್ವೆ?
ಸಾಕಾರದಲ್ಲಿ ಸವೆಸವೆದು ನಿರಾಕಾರದಲರ್ಪಿಸಿದಡೆ
ಮಹಾಲಿಂಗ ಗಜೇಶ್ವರನುಮೇಶ್ವರನಾಗಿರ್ದನವ್ವೆ./65
ಹಗಲು ಹಸಿವಿಂಗೆ ಕುದಿದು
ಇರುಳು ನಿದ್ರೆಗೆ ಕುದಿದು
ಉಳಿದಾದ ಹೊತ್ತೆಲ್ಲಾ ಅಶನ ವ್ಯಸನಕ್ಕೆ ಕುದಿದು
ಅಯ್ಯಾ, ನಿಮ್ಮನರಿಯದ ಪಾಪಿ ನಾನಯ್ಯಾ.
ಅಯ್ಯಾ, ನಿಮ್ಮನರಿಯದ ಕರ್ಮಿ ನಾನಯ್ಯಾ.
ಮಹಾಲಿಂಗ ಗಜೇಶ್ವರದೇವಾ,
ಅಸಗ ನೀರಡಸಿದಂತಾಯಿತ್ತೆನ್ನ ಸಂಸಾರ./66
ಹಲವುಕಾಲದ ಅಗಲಿಕೆ ತಾರ್ಕಣೆಗೊಂಡಂತವ್ವಾ,
ಮುನಿಸು ನಾಚಿಕೆ ಹೋಗಿ ಕಂಗಳ ಕೊನೆಯಲ್ಲಿ ಸಿಲುಕಿದೆನವ್ವಾ.
ತನು ಜರ್ಝರಿತವಾಗಿ ಕಂಗಳ ಕೊನೆಯಲ್ಲಿ ಸಿಲುಕಿದ ಎನ್ನ
ಮಹಾಲಿಂಗ ಗಜೇಶ್ವರನುಳಿದನೆಂದಡೆ
ಆಲಿಕಲ್ಲ ನುಂಗಿದ ಚಕೋರನಂತಾದೆನವ್ವಾ./67
ಹೆರರಿಗೆ ಕೂರ್ತವಳ ತೆಗೆದಪ್ಪಿಕೊಂಡಡೆ
ಅರ್ಥಗೆಡಹುದಲ್ಲದೆ ಮನವು ಬೇರೆ ತಾನಿರ್ಪುದಲ್ಲಿಯೆ.
ಇದ್ದಿಲ ಹಿಂಡಿದಡೆ ರಸವುಂಟೆ?
ಸಾಧಕ ಸಾಧಿಸಿದ ನಿಧಾನವನೊಯ್ದ ಕುಳಿಯಂತೆ
ಅದರ ವಿಧಿ ಎನಗಾಯಿತ್ತು, ಮಹಾಲಿಂಗ ಗಜೇಶ್ವರಾ./68
ಹೊನ್ನು ಕೊಡನ ಹೊಮ್ಮಿನ ಹಮ್ಮಿನ ಕಳಯ ಪುಳಕದಲ್ಲಿ
ತಾರಕಿ ತಾರಕಿ ತಳಿತಂತೆ ಅಂಗಸಂಗದಲ್ಲಿದ್ದಳವ್ವೆ.
ಬಂದ ಭರವಿನ ನಿಂದ ಚಂದದ ಹೊಸಹೂವ ಮುಡಿದಳವ್ವೆ.
ಅಡವಿಯಲಾದ ಮರನಡಿಯಲಿದ್ದ ಬಿಸಿಲ ಬಯಸಿದಳವ್ವೆ.
ಇಂದು ಮಹಾಲಿಂಗ ಗಜೇಶ್ವರನ ನೆರೆವ ಭರದಲ್ಲಿ,
ಕಳಕೆ ಬಂದ ಮೃಗದಂತೆ ತನ್ನ ತಾ ಮರೆದಿರ್ದಳವ್ವೆ./69
ಹೊಸ ಮದುವೆ ಹಸೆಯುಡುಗದ ಮುನ್ನ,
ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ,
ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು
ಹುಸಿಯಿಲ್ಲದಿರ್ದಡೆ ಭಕ್ತನೆಂಬೆ!
ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ!
ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ!
ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ!
ಆಶೆಯಿಲ್ಲದಿರ್ದಡೆ ಶರಣನೆಂಬೆ!
ಈ ಐದರ ಸಂಪರ್ಕ ನಿರ್ಬೊಗವಾದಡೆ ಐಕ್ಯನೆಂಬೆ!
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ!
ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು.
ಬೈದಡರಿಯದು; ಹೊಯ್ದಡರಿಯದು.
ನಿಂದಿಸಿದಡರಿಯದು; ಸ್ತುತಿಸಿದಡರಿಯದು.
ಸುಖವನರಿಯದು; ದುಃಖವನರಿಯದು.
ಇಂತಿವರ ತಾಗು ನಿರೋಧವನರಿಯದಿರ್ದಡೆ
ಅವರ ಮಹಾಲಿಂಗ ಗಜೇಶ್ವರನೆಂಬೆ./70