Categories
ವಚನಗಳು / Vachanagalu

ಗಣದಾಸಿ ವೀರಣ್ಣನ ವಚನಗಳು

ಅಂದಿನವರಿಗೆ ಅಷ್ಟಾವರಣವು ಸಾಧ್ಯವಪ್ಪುದಲ್ಲದೆ
ಇಂದಿನವರಿಗೆ ಅಷ್ಟಾವರಣವು ಸಾಧ್ಯವಾಗದೆಂಬರು.
ಅದೇನು ಕಾರಣ ಸಾಧ್ಯವಿಲ್ಲ ಶ್ರೀಗುರುವೆ ?
ಅಂದಿನ ಸೂರ್ಯ ಚಂದ್ರ ಆತ್ಮ ಆಕಾಶ ವಾಯು
ಅಗ್ನಿ ಅಪ್ಪು ಪೃಥ್ವಿ ಎಂಬ ಅಷ್ಟತನುಮೂರ್ತಿಗಳು
ಅಂದುಂಟು ಇಂದುಂಟು.
ಅಂದು ಬೆಳೆವ ಹದಿನೆಂಟು ಜೀನಸಿನ ಧಾನ್ಯಗಳು
ಇಂದು ಬಿತ್ತಿದರೆ ಬೆಳೆವವು.
ಅಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆದುದುಂಟು.
ಇಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆವುದುಂಟು.
ಅಂದಿನ ಅಷ್ಟಾವರಣಸ್ವರೂಪ ಇಂದುಂಟು.
ಅಂದು ಇಂದೆಂಬ ಸಂದೇಹದ ಕೀಲವ ಕಳೆದು ನಿಂದರೆ ಸಾಕು
ದಯಮಾಡು ಸದ್ಗುರುವೆ.
ಕೇಳೈ ಮಗನೆ : ದೃಢವಿಡಿದು ಏಕಚಿತ್ತದಲ್ಲಿ ನಂಬಿಗೆಯುಳ್ಳ
ಶಿವಭಕ್ತಂಗೆ ಅಂದೇನು, ಇಂದೇನು ?
ಗುರುಲಿಂಗಜಂಗಮದಲ್ಲಿ ಪ್ರೇಮ ಭಕ್ತಿ ಇದ್ದವರಿಗೆ,
ವಿಭೂತಿ ರುದ್ರಾಕ್ಷಿಯಲ್ಲಿ ವಿಶ್ವಾಸ ಇದ್ದವರಿಗೆ,
ಶಿವಮಂತ್ರವಲ್ಲದೆ ಎನಗೆ ಬೇರೆ ಮಂತ್ರವಿಲ್ಲವೆಂಬವರಿಗೆ
ಅಂದೇನೊ, ಇಂದೇನೊ ?
ಗುರುಲಿಂಗಜಂಗಮಕ್ಕೋಸ್ಕರವಾಗಿ ಕಾಯಕ ಮಾಡುವವರಿಗೆ
ಪಂಚಾಚಾರವೇ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿಪ್ಪವರಿಗೆ
ಅಂದೇನೊ, ಇಂದೇನೊ ?
ಪುರಾತರ ವಚನವಿಡಿದು ಆರಾಧಿಸುವವರಿಗೆ,
ಆದಿ ಮಧ್ಯ ಅವಸಾನ ತಿಳಿದವರಿಗೆ,
ಅಂದು ಇಂದೆಂಬ ಸಂದೇಹವಿಲ್ಲವೆಂದು ಹೇಳಿದಿರಿ ಸ್ವಾಮಿ
ಎನ್ನಲ್ಲಿ ನೋಡಿದರೆ ಹುರಿಳಿಲ್ಲ, ಹುರುಳಿಲ್ಲ.
ಎನ್ನ ತಪ್ಪಿಂಗೇನೂ ಎಣೆಯಿಲ್ಲ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ.
ಮೇರುಗುಣವನರಸುವುದೆ ಕಾಗೆಯಲ್ಲಿ?
ಪರುಷಗುಣವನರಸುವುದೆ ಕಬ್ಬುನದಲ್ಲಿ?
ನೀವು ಎನ್ನ ಗುಣವನರಸಿದರೆ ಎಂತು ಜೀವಿಸುವೆನಯ್ಯಾ,
ಶಾಂತಕೂಡಲಸಂಗಮದೇವ,
ನಿಮ್ಮ ಧರ್ಮ, ನಿಮ್ಮ ಧರ್ಮ./1
ಅಂದಿನವರಿಗೆ ಪರುಷವಿಪ್ಪುದು
ಇಂದಿನವರಿಗೆ ಪರುಷವೇಕಿಲ್ಲ ?
ದಯದಿಂದ ಕರುಣಿಸಿ ಸ್ವಾಮಿ.
ಕೇಳಯ್ಯ ಮಗನೆ : ಲಾಂಛನಧಾರಿಗಳು ಸ್ವಯಪಾಕ ಭಿಕ್ಷಕ್ಕೆ ಬಂದ ವೇಳೆಯಲ್ಲಿ
ಗೋದಿಯ ಬೀಸುವಗೆ ಆ ಹಿಟ್ಟು ಬಿಟ್ಟು
ಕಡೆಯಲಿದ್ದ ಹಿಟ್ಟು ನೀಡುವವರಿಗೆ ಎಲ್ಲಿಹುದೊ ಪರುಷ ?
ಲಾಂಛನಧಾರಿಗಳು ಧಾನ್ಯ ಭಿಕ್ಷಕ್ಕೆ ಬಂದಡೆ
ಘನವ ಮಾಡಿಕೊಳ್ಳಿರಿ ಎಂಬವರಿಗೆ ಎಲ್ಲಿಹುದೊ ಪರುಷ ?
ಶಿವಯೋಗಿ ಲಿಂಗಾರ್ಪಿತ ಬಿಕ್ಷಕ್ಕೆ ಬಂದಡೆ ಸುಮ್ಮನಿಹರು.
ಇದು ಭಿಕ್ಷವೇಳೆಯೆ ? ಎಂಬವರಿಗೆ ಎಲ್ಲಿಹುದೊ ಪರುಷ ?
ಮತ್ತಂ, ಹಬ್ಬವ ಮಾಡುವಾಗ ಭಿಕ್ಷಕ್ಕೆ ಬಂದಡೆ
ತಂಗಳ ನೀಡಿ ಕಳಿಸುವವರಿಗೆ ಎಲ್ಲಿಹುದೊ ಪರುಷ ?
ಪರುಷ ಎಲ್ಲಿಹುದು ಎಂದಡೆ : ಜಂಗಮವು ಮನೆಗೆ ಬಂದಡೆ ಬಂದ ಬರವ, ನಿಂದ ನಿಲವ
ಅರಿತವರಿಗೆ ಅದೇ ಪರುಷ.
ಯಾವ ವೇಳೆಯಾಗಲಿ, ಯಾವ ಹೊತ್ತಾಗಲಿ
ಜಂಗಮವು ಭಿಕ್ಷಕ್ಕೆ ಬರಲು
ಹಿಂದಕ್ಕೆ ತಿರುಗಗೊಡ[ದ]ವರನ್ನೆಲ್ಲ ಸುಖವಬಡಿಸುವುದೇ ಪರುಷ.
ಸಮಸ್ತ ಒಡವೆಯೆಲ್ಲವನು
ಎನ್ನ ಒಡವೆಯಲ್ಲವೆಂದವರಲ್ಲಿ ಅದೇ ಪರುಷ.
ತನ್ನ ಪ್ರಪಂಚಿನ ಪುತ್ರ ಮಿತ್ರ ಕಳತ್ರರಿಗೆ ಮಾಡುವ ಹಾಗೆ
ಗುರು-ಲಿಂಗ-ಜಂಗಮಕ್ಕೆ, ಕೇವಲ ಸದ್ಭಕ್ತಿಗೆ
ಭಕ್ತಿಯ ಮಾಡಿದವರಿಗೆ ಅದೇ ಪರುಷ.
ಹೀಗೆ ಮಾಡಿದವರಿಗೆ ಅಂದೇನು ಇಂದೇನು
ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ/2
ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ :
ಸದ್ಯೋಜಾತಮುಖದಿಂದಾದ ಪೃಥ್ವಿ
ಲಿಂಗಕ್ಕೆ ಪತ್ರಿ ಪುಷ್ಪ ಬೇಕೆಂದು
ಅನಂತ ಪತ್ರಿ ಪುಷ್ಪಗಳಿಂದ ಅಚರ್ಿಸುತ್ತಿಹುದು.
ವಾಮದೇವಮುಖದಿಂದಾದಪ್ಪು
ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂದು
ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ,
ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ,
ಮಜ್ಜನ ನೀಡಿಸುತ್ತಿಹುದು.
ಅಘೋರಮುಖದಿಂದಾದ ಅಗ್ನಿ
ಲಿಂಗಕ್ಕೆ ಧೂಪ ದೀಪ ಆರತಿಗಳಾಗಬೇಕೆಂದು,
ಕಾಷ್ಠದಲ್ಲಿ ಪಾಷಾಣದಲ್ಲಿ ಬೆಳಗುತ್ತಿಹುದು.
ತತ್ಪುರುಷಮುಖದಿಂದಾದ ವಾಯು
ಲಿಂಗಕ್ಕೆ ಜಪವ ಮಾಡುತ್ತಿಹುದು.
ಈಶಾನ್ಯ ಮುಖದಿಂದಾದ ಆಕಾಶ
ಲಿಂಗಕ್ಕೆ ಭೇರಿ ಮೊದಲಾದ ನಾದಂಗಳ ಬಾರಿಸುತ್ತಿಹುದು.
ಗೋಪ್ಯಮುಖದಿಂದಾದ ಆತ್ಮನು ಲಿಂಗಕ್ಕೆ ಸಿಂಹಾಸನವಾಗಿಪರ್ುದು.
ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿಹರು.
ಇಂತಪ್ಪ ಘನವಸ್ತು ಎರಡಾಗಿ
ತನ್ನ ವಿನೋದಕ್ಕೆ ಅರ್ಪಿಸಿಕೊಂಬಾತನು ತಾನೇ,
ಅರ್ಪಿಸುವಾತನು ತಾನೇ.
ಇಂತಪ್ಪ ಘನಲಿಂಗವು ಕರಸ್ಥಲದೊಳಗೆ
ಚುಳುಕಾಗಿ ನಿಂದ ನಿಲವ ಎನ್ನೊಳರುಹಿದಾತ
ನಮ್ಮ ಶಾಂತಕೂಡಲಸಂಗಮದೇವ./3
ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ
ಹೇಳಿಹೆ ಕೇಳಿರಣ್ಣ :
ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ;
ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ;
ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ;
ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ;
ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ;
ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ ;
ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ ;
ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ.
ಇನ್ನು ಷಟ್ಸ್ಥಲದ ನಿರ್ಣಯವ ಕೇಳಿ : ಭಕ್ತಸ್ಥಲ ಬಸವಣ್ಣಂಗಾಯಿತ್ತು ;
ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು ;
ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು ;
ಪ್ರಾಣಲಿಂಗಿಸ್ಥಲ ಸಿದ್ಭರಾಮಯ್ಯಂಗಾಯಿತ್ತು ;
ಶರಣಸ್ಥಲ ಪ್ರಭುದೇವರಿಗಾಯಿತ್ತು;
ಐಕ್ಯಸ್ಥಲ ಅಜಗಣ್ಣಂಗಾಯಿತ್ತು.
ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.-
ಭಕ್ತಸ್ಥಲದ ವಿವರವು : ಗುರುಲಿಂಗಜಂಗಮವು ಒಂದೆಯೆಂದು ಕಂಡು
ಸದಾಚಾರದಲ್ಲಿ ನಡೆವನು,
ತ್ರಿಕಾಲ ಮಜ್ಜನವ ನೀಡುವನು,
ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು,
ಆಪ್ಯಾಯನಕ್ಕೆ ಅನ್ನವ ನೀಡುವನು,
ಜಂಗಮಕ್ಕೆ ಪ್ರತಿ ಉತ್ತರವ ಕೊಡನು.
ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು.
ಸಾಕ್ಷಿ : ‘ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ |
ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ ||
ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾಧಿಕಂ |
ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||’
ಇನ್ನು ಮಾಹೇಶ್ವರಸ್ಥಲದ ವಿವರವು : ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ
ಇವು ಪಂಚಮಹಾಪಾತಕವು,
ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇದರ್ು
ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು.
ಸಾಕ್ಷಿ : ‘ಪರಸ್ತ್ರೀಯಂ ಪರಾರ್ಥಂ ಚ ವಜರ್ಿತೋ ಭಾವಶುದ್ಧಿಮಾನ್ |
ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||’
ಇನ್ನು ಪ್ರಸಾದಿಸ್ಥಲದ ವಿವರ : ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು,
ಅನರ್ಪಿತವ ವಜರ್ಿಸುವುದು, ಲಿಂಗದೊಡನೆ ಉಂಬುವುದು,
ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ.
ಇನ್ನು ಪ್ರಾಣಲಿಂಗಿಸ್ಥಲದ ವಿವರವು : ಸುಗುಣ ದುಗರ್ುಣ ಉಭಯವನತಿಗಳೆದು
ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು
ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ.
ಇನ್ನು ಶರಣಸ್ಥಲದ ವಿವರವು : ಸತಿಪತಿಭಾವ ಅಂಗಲಿಂಗವಾಗಿಪ್ಪುದು,
ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು,
ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು.
ಸಾಕ್ಷಿ : ‘ಪತಿಲರ್ಿಂಗಂ ಸತೀ ಚಾಹಂ ಇತಿ ಯುಕ್ತಂ ಸನಾತನಃ |
ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||’
ಇನ್ನು ಐಕ್ಯಸ್ಥಲದ ವಿವರವು : ಅರಿಷಡ್ವರ್ಗಂಗಳಿಲ್ಲದಿಹರು, ನಿಭರ್ಾವದಲ್ಲಿಹರು,
ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು,
ಉರಿಯುಂಡ ಕಪರ್ುರದ ಹಾಗೆ ಇಹರು,
ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು.
ಸಾಕ್ಷಿ : ‘ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ |
ನಿಭರ್ಾವಂ ಶಿವಲಿಂಗೈಕ್ಯಂ ಶಿಖಿಕಪರ್ೂರಸಯೋಗವತ್||’
ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ
ಅಂದೇನೊ ಇಂದೇನೊ ?
ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು
ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ./4
ಆದಿ ಮಧ್ಯ ಅವಸಾನ ಹೇಗೆಂದಡೆ:
ಗುರುವಿನ ಕರಕಮಲದಲ್ಲಿ ಹುಟ್ಟಿದುದೇ ಆದಿ.
ಗುರುಲಿಂಗಜಂಗಮ ಪ್ರಸಾದ ಕೊಂಬುದೇ ಮಧ್ಯ.
ಜಂಗಮದಲ್ಲಿ ಲಯವಾದುದೇ ಅವಸಾನ.
ಇದ ತಿಳಿದು ಎಲ್ಲ ಗಣಂಗಳು ಎನಗೆ
ಮತ್ರ್ಯಲೋಕಕ್ಕೆ ಹೋಗಿ ಭಕ್ತಗಣಂಗಳ ಕೈಯಲ್ಲಿ
ಹೊಯಿಸಿಕೊಂಡು, ಬೈಸಿಕೊಂಡು
ಅವರೊಕ್ಕು ಮಿಕ್ಕ ಪ್ರಸಾದವ ಹಾರೈಸಿಕೊಂಡು
ಅವರ ನೆರಮನೆಯ ಅವರವರ ಹೊರ ಮನೆಯಲ್ಲಿದರ್ು
ಅವರ ಕರುಣಪ್ರಸಾದವ ಕೊಂಡು ಬಾಯೆಂದು
ಆಜ್ಞೆಯನಿತ್ತ ಭೇದವ ಗುರು ಅರುಹಿದನಾಗಿ,
ಗಣದಾಸಿ ವೀರಣ್ಣನೆಂಬ ನಾಮವಾಯಿತ್ತೆನಗೆ.
ಸತ್ಯಣ್ಣನ ಮನೆಯ ಬಂಟ ನಾನಯ್ಯ.
ನನ್ನನು ತಮ್ಮ ಗಣಂಗಳು ಸಲಹಿ
ಕೃತಾರ್ಥವ ಮಾಡಿದರಯ್ಯಾ.
ಅವರಿಗೇನೆಂದುಪಮಿಸುವೆನಯ್ಯಾ,
ಅವರು ಮಹಾದೇವನಲ್ಲದೆ ಬೇರುಂಟೆ?
ಅವರ ಮನೆಯ ದಾಸಾನುದಾಸ ನಾನು.
ಅವರ ಮನೆಯ ಹೂವಾಡಿಗನು.
ನೂತನ ಗಣಂಗಳೆಲ್ಲರನು ಎನ್ನ
ಇಷ್ಟಲಿಂಗದೊಳಗೆ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./5
ಇನ್ನು ಇಷ್ಟಲಿಂಗದ ಸಿಂಹಾಸನ ಗದ್ದಿಗಿ ಉದ್ದರಣೆ:
ಕರಕಮಲದೊಳಗೆ ಷಟ್ಕೋಣೆಯಂ ಬರದು
ಇಪ್ಪತ್ತು ಮೂರು ಪ್ರಣಮಮಂ ವಿಭೂತಿಯಲ್ಲಿ ಬರದು
ಲಿಂಗವ ಮೂರ್ತವ ಮಾಡಿಸಿ,
ತ್ರಿಕಾಲದಲ್ಲಿ ಅಚರ್ಿಸಿ ಪೂಜಿಸಿದವರಿಗೆ
ರಾಜಭಯ, ಚೋರಭಯ, ಮೃತ್ಯುಭಯ,
ಸಿಡಿಲುಭಯ, ಗ್ರಹ ಭಯ, ಕುಟಿಲ ಭಯ,
ವ್ಯಾಧಿ ಭಯ, ಉರಗ ಭಯ, ವೃಶ್ಚಿಕ ಭಯ,
ಮೃಗಭಯ, ನೂರೆಂಟು ವ್ಯಾದಿ ಭಯ,
ಸರ್ವವ್ಯಾಧಿ ಮೊದಲಾದ ಎಲ್ಲವನು
ಪರಿಹರವಪ್ಪುದು ತಪ್ಪದು ಎಂದಾತ
ನಮ್ಮ ಶಾಂತಕೂಡಲಸಂಗಮದೇವ /6
ಇನ್ನು ಲಿಂಗಕ್ಕೆ ಪ್ರಸಾದ ಅರ್ಪಿಸುವ ಕ್ರಮವು.
ಓಂ ಬಸವಲಿಂಗಾಯ ನಮಃ
ಹ್ರಾಂ ಹ್ರೀಂ ಸದ್ಯೋಜಾತ, ವಾಮದೇವ
ಶುದ್ಧಪ್ರಸಾದ, ಆಚಾರಲಿಂಗ, ಗುರುಲಿಂಗ,
ಇಷ್ಟಲಿಂಗಕ್ಕೆ ರೂಪು ಅರ್ಪಿತ.
ಓಂ ಬಸವಲಿಂಗಾಯ ನಮಃ
ಹ್ರಾಂ ಹ್ರೈಂ ಅಘೋರ, ತತ್ಪುರುಷ,
ಸಿದ್ಧಪ್ರಸಾದ, ಶಿವಲಿಂಗ, ಜಂಗಮಲಿಂಗ,
ಪ್ರಾಣಲಿಂಗಕ್ಕೆ ರುಚಿ ಅರ್ಪಿತ.
ಓಂ ಬಸವಲಿಂಗಾಯ ನಮಃ
ಹ್ರೌಂ ಹ್ರಃ ಈಶಾನ್ಯ ಗೋಮುಖ,
ಪ್ರಸಿದ್ಧಪ್ರಸಾದ, ಪ್ರಸಾದಲಿಂಗ, ಮಹಾಲಿಂಗ,
ಭಾವಲಿಂಗಕ್ಕೆ ತೃಪ್ತಿ ಅರ್ಪಿತ.
ಈ ಕ್ರಮವ ಅರಿದಾತ ಬಲ್ಲನಲ್ಲದೆ
ಅಂಗಭೋಗಿಗಳೆತ್ತ ಬಲ್ಲರು
ನಮ್ಮ ಶಾಂತಕೂಡಲಸಂಗಮದೇವಾ./7
ಇಷ್ಟಲಿಂಗಕ್ಕೆ ಅರ್ಪಿಸುವಾಗ, ಇಷ್ಟಲಿಂಗದಲ್ಲಿ ಮೂಲಮಂತ್ರವ
ಧ್ಯಾನಿಸುವ ಕ್ರಮವು:
ಓಂ ಹ್ರಾಂ ನಾಂ ಸದ್ಯೋಜಾತ ಆಚಾರಲಿಂಗಾಯನಮಃ
ಇಷ್ಟಲಿಂಗದ ಶಕ್ತಿ ಪೀಠದ ಹಿಂದೆಸೆಯಲ್ಲಿ ಸಂಬಂಧ.
ಓಂ ಹ್ರೀಂ ಮಾಂ ವಾಮದೇವ ಗುರುಲಿಂಗಾಯನಮಃ
ಇಷ್ಟಲಿಂಗದ ಎಡದ ಕೈಯಲ್ಲಿ ಸಂಬಂಧ.
ಓಂ ಹ್ರೂಂ ಸಿಂ ಅಘೋರ ಶಿವಲಿಂಗಾಯನಮಃ
ಇಷ್ಟಲಿಂಗದ ಬಲಭಾಗದ ವತರ್ುಳದ ಸಂಧಿಲಿ ಸಂಬಂಧ.
ಓಂ ಹ್ರೈಂ ವಾಂ ತತ್ಪುರುಷ ಜಂಗಮಲಿಂಗಾಯನಮಃ
ಇಷ್ಟಲಿಂಗದ ಎಡದ ಭಾಗದ ಗೋಮುಖದಲ್ಲಿ ಸಂಬಂಧ.
ಓಂ ಹ್ರೌಂ ಯಾಂ ಈಶಾನ್ಯ ಪ್ರಸಾದಲಿಂಗಾಯನಮಃ
ಇಷ್ಟಲಿಂಗದ ನಾಳದಲ್ಲಿ ಸಂಬಂಧ.
ಓಂ ಹ್ರಃ ಓಂ ಗೋಪ್ಯಮುಖ ಮಹಾಲಿಂಗಾಯನಮಃ
ಇಷ್ಟಲಿಂಗದ ಗೋಳಕದಲ್ಲಿ ಸಂಬಂಧ.
ಓಂ ಬಾಂ ಅಂ ಇಷ್ಟಲಿಂಗಾಯನಮಃ
ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧ.
ಓಂ ಸಾಂ ಉಂ ಪ್ರಾಣಲಿಂಗಾಯ ನಮಃ
ಇಷ್ಟಲಿಂಗದ ಬಲಭಾಗದ ವತರ್ುಳದಲ್ಲಿ ಸಂಬಂಧ.
ಓಂ ವಾಂ ಮಾಂ ಭಾವಲಿಂಗಾಯ ನಮಃ
ಇಷ್ಟಲಿಂಗದ ಬಲಭಾಗದ ಗೋಮುಖದ ತುದಿಯಲ್ಲಿ ಸಂಬಂಧ
ಶಾಂತಕೂಡಲಸಂಗಮದೇವಾ./8
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು
ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ.
ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ
ಇರಬಲ್ಲಾತನೇ ಭಕ್ತನು.
ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ
ಹೋದೀತೋ ಇದ್ದೀತೋ ಅಳಿದೀತೋ
ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಭಿನ್ನವಿಜ್ಞಾನಿಗಳು.
ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು.
ಸಾಕ್ಷಿ : ‘ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||’
ಎಂದುದಾಗಿ,
ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ
ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ
ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ
ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ.
ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ,
ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ?
ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು.
ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು
ಮಧುರ ಒಗರು ಖಾರ ಹುಳಿ ಕಹಿ ಸವಿ.
ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ.
ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ!
ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ.
ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ
ಬಲ್ಲನಲ್ಲದೆ ಭಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!/9
ಎನ್ನ ಪಶ್ಚಿಮದಲ್ಲಿ
ನಿರಂಜನಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಶಿಖೆಯಲ್ಲಿ
ಬಸವತ್ರಯಾಕ್ಷರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಬ್ರಹ್ಮರಂಧ್ರದಲ್ಲಿ
ಅಉಮಾಕ್ಷರ ಪ್ರಸಾದ ಪಂಚಾಕ್ಷರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಆಜ್ಞಾಚಕ್ರದಲ್ಲಿ
ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ವಿಶುದ್ಧಿಯಲ್ಲಿ
ಯಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಅನಾಹತದಲ್ಲಿ
ವಾಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಮಣಿಪೂರಕದಲ್ಲಿ
ಶಿಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಸ್ವಾಧಿಷ್ಠಾನದಲ್ಲಿ
ಮಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಆಧಾರದಲ್ಲಿ
ನಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಮತ್ತಂ, ಮಸ್ತಕದಲ್ಲಿ ಹಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಬಲದ ಬದಿಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಎಡದ ಬದಿಯಲ್ಲಿ ಅಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಹೃದಯದಲ್ಲಿ ಉಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಎನ್ನ ಬೆನ್ನಿನಲ್ಲಿ ಮಕಾರವಾಗಿ ನಿಂದಾತ ನಮ್ಮ ಬಸವಣ್ಣ.
ಸಾಕ್ಷಿ : ‘ಅಕಾರಂ ವಾಮಭಾಗಂ ಚ ಉಕಾರಂ ಪೂರ್ವಮೇವ ಚ |
ಮಕಾರಂ ಪಶ್ಚಿಮಶ್ಚೈವ ಓಂಕಾರಂ ದಕ್ಷಿಣಸ್ತಥಾ |
ಹಕಾರಂ ಊಧ್ರ್ವಭಾಗಂ ಚ ಪಂಚ ಪ್ರಣವ ಕೀರ್ತಿತಾ ||’
ಎಂದುದಾಗಿ,
ಎನ್ನ ಲಲಾಟದಲ್ಲಿ ಓಂಕಾರವಾಗಿ ನಿಂದಾತ ಬಸವಣ್ಣ.
ಎನ್ನ ಬಲದ ಭುಜದಲ್ಲಿ ನಕಾರವಾಗಿ ನಿಂದಾತ ಬಸವಣ್ಣ.
ಎನ್ನ ಎಡದ ಭುಜದಲ್ಲಿ ಮಕಾರವಾಗಿ ನಿಂದಾತ ಬಸವಣ್ಣ.
ಎನ್ನ ನಾಭಿಯಲ್ಲಿ ಶಿಕಾರವಾಗಿ ನಿಂದಾತ ಬಸವಣ್ಣ.
ಎನ್ನ ಬಲದ ತೊಡೆಯಲ್ಲಿ ವಕಾರವಾಗಿ ನಿಂದಾತ ಬಸವಣ್ಣ.
ಎನ್ನ ಎಡದ ತೊಡೆಯಲ್ಲಿ ಯಕಾರವಾಗಿ ನಿಂದಾತ ಬಸವಣ್ಣ.
ಸಾಕ್ಷಿ : ‘ಓಂಕಾರಂ ವದನಂ ದೇವಿ ನಮಸ್ಕಾರಂ ಭುಜದ್ವಯಂ |
ಶಿಕಾರಂ ದೇಹಮಧ್ಯಸ್ತು ವಾಕಾರಂ ಚ ಪದದ್ವಯಂ ||’
ಎಂದುದಾಗಿ,
ಎನ್ನ ಪಂಚಭೂತಾತ್ಮದಲ್ಲಿ ಓಂಕಾರವಾಗಿ ನಿಂದಾತ ಬಸವಣ್ಣ.
ಎನ್ನ ದಶ ಇಂದ್ರಿಯದಲ್ಲಿ ನಕಾರವಾಗಿ ನಿಂದಾತ ಬಸವಣ್ಣ.
ಎನ್ನ ಮನಪಂಚಕದಲ್ಲಿ ಮಕಾರವಾಗಿ ನಿಂದಾತ ಬಸವಣ್ಣ.
ಎನ್ನ ಪ್ರಾಣದಲ್ಲಿ ಶಿಕಾರವಾಗಿ ನಿಂದಾತ ಬಸವಣ್ಣ.
ಎನ್ನ ದಶವಾಯುಗಳಲ್ಲಿ ವಾಕಾರವಾಗಿ ನಿಂದಾತ ಬಸವಣ್ಣ.
ಎನ್ನ ತ್ರಿಗುಣದಲ್ಲಿ ಯಕಾರವಾಗಿ ನಿಂದಾತ ಬಸವಣ್ಣ.
‘ಓಂಕಾರಂ ಪಂಚಭೂತಾತ್ಮಕಂ ನಕಾರಂ ದಶ ಇಂದ್ರಿಯಂ |
ಮಕಾರಂ ಮನಪಂಚಕಂ ಶಿಕಾರಂ ಪ್ರಾಣನಾಯಕಂ |
ವಾಕಾರಂ ದಶವಾಯೂನಾಂ ಯಕಾರಂ ತ್ರಿಗುಣಂ ಭವೇತ್ ||’
ಎಂದುದಾಗಿ,
ಶಿವನ ಆರು ಮುಖದಿಂದ ಆರು ಪ್ರಣವಂಗಳು ಪುಟ್ಟಿದವು.
ಈ ಆರು ಪ್ರಣವಂಗಳನರಿಯದೆ ಪೂಜೆಯ ಮಾಡಿದಡೆ
ಆ ಪೂಜೆ ನಿಷ್ಫಲಂ.
ಸಾಕ್ಷಿ : ‘ಷಡಕ್ಷರ ಸಮಾಖ್ಯಾತಂ ಷಡಾನನ ಸಮನ್ವಿತಂ |
ಷಡ್ಭೇದಂ ಯೋ ನ ಜಾನಾತಿ ಪೂಜಾ [ಸಾ] ನಿಷ್ಫಲಂ ಭವೇತ್ ||’
ಎಂದುದಾಗಿ,
ಎನ್ನ ಸರ್ವಾಂಗದಲ್ಲಿ ಸರ್ವಮಯ ಮಂತ್ರಮೂರ್ತಿಯಾಗಿ
ನಿಂದಾತ ನಮ್ಮ ಬಸವಣ್ಣನೆಂದು ಎನ್ನೊಳಗೆ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./10
ಓಂಕಾರನಾದವು ಪಿಂಡಬ್ರಹ್ಮಾಂಡ ತುಂಬಿಕೊಂಡಿಪ್ಪುದು.
ಮಹಾಜ್ಞಾನಿಗಳಿಗೆ ಪ್ರತ್ಯಕ್ಷವಾಗಿಪ್ಪುದು.
ಆ ನಾದವಿಲ್ಲದಿರ್ದಡೆ ನಿಜರ್ಿವಿಗಳು ಹೇಗೆ ನುಡಿವವು?
ನಿಜರ್ಿವಿ ಯಾವು ಯಾವುವೆಂದಡೆ: ಕಡುವಿಡಿದ ಶಬ್ದ – ಚರ್ಮವಿದ್ಯೆ ಭೇರಿ ತಮ್ಮಟ;
ಲೋಹವಿಡಿದ ಶಬ್ದ – ತಾಳ ಕಂಸಾಳ
ಗಂಟೆ ಕಾಳೆ ಕನರ್ೆ ಸಪೂರಿ ಸನಾಯಿ;
ತಂತಿವಿಡಿದ ಶಬ್ದ – ಕಿನ್ನರಿ ವೀಣೆ
ಕಾಮಾಕ್ಷಿ ತಂಬೂರಿ ರುದ್ರವೀಣೆ.
ಇನ್ನು ಆಕಾಶದೊಳಗೆ ಶಬ್ದವನಿಕ್ಕಿದಡೆ
ಪ್ರತಿಶಬ್ದವ ಕೊಡುವುದು.
ದೇಗುಲದೊಳಗೆ ಹೇಗೆ ನುಡಿದಡೆ ಹಾಗೆ ನುಡಿವುದು.
ಪರಿಪೂರ್ಣವಸ್ತುವಿಲ್ಲದಿರ್ದಡೆ
ಈ ನಿಜರ್ಿವಿಗಳು ಹೇಗೆ ನುಡಿವವು?
ಈ ನಾದ ಶಬ್ದವು ಆವಾವ ಘಟದೊಳಗೆ ಹೊಕ್ಕು,
ಆ ಘಟಶಬ್ದವ ಕೊಡುತ್ತಿಹುದು
ಆ ಘಟದ ಗುಣವೆಂದು ತಿಳಿವುದು.
ನಮ್ಮ ಗಣಂಗಳು ಆ ಘಟದ ಗುಣಮಂ ಬಿಟ್ಟು
ಪಿಂಡಬ್ರಹ್ಮಾಂಡದೊಳಗಿಪ್ಪ ಪರಿಪೂರ್ಣ ವಸ್ತುವಿನೊಳಗೆ
ಬೆರೆದುದ ಎನ್ನೊಳರುಹಿದಾತ
ನಮ್ಮ ಶಾಂತಕೂಡಲಸಂಗಮದೇವ./11
ಕುಲ ಎಷ್ಟು ಎಂದಡೆ, ಎರಡು ಕುಲ.
ಅವಾವೆಂದಡೆ :
ಭವಿ ಒಂದು ಕುಲ, ಭಕ್ತ ಒಂದು ಕುಲ.
ಅಷ್ಟಾವರಣವೇ ಅಂಗವಾಗಿ,
ಪಂಚಾಚಾರವೇ ಪ್ರಾಣವಾಗಿಪ್ಪ
ಭಕ್ತರ ಕುಲವನರಸಿದಡೆ
ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು.
ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ ?
ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ ?
ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ ?
ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ
ಬಿನ್ನಹವ ಕೈಕೊಂಡು
ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ,
ಹಾವಿನಹಾಳ ಕಲ್ಲಯ್ಯಗಳ ಮನೆಯ
ಶ್ವಾನನಾಗಿ ಹುಟ್ಟಲಿಲ್ಲವೆ ?
ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ
ಪ್ರಸಾದವ ಕೊಳಬೇಕು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./12
ಗುರುಭಕ್ತರಾದವರು ಶಿವಭಕ್ತರಾದವರ ದಣಿವ ಕಂಡು
ಸುಮ್ಮನಿರಲಾಗದು.
ಅದೇನು ಕಾರಣವೆಂದಡೆ : ಒಬ್ಬ ಗುರುವಿನ ಮಕ್ಕಳಾದ ಮೇಲೆ
ತನಗೆ ಗುರುವು ಕೊಟ್ಟ ದ್ರವ್ಯವ ಸವೆಸಲೇಬೇಕು.
ಮತ್ತೆ ಪ್ರಪಂಚಿನ ತಂದೆ ಒಬ್ಬನಿಗೆ ಮಕ್ಕಳೈವರು.
ಅವರು ತಂದೆಯ ಬದುಕು ನ್ಯಾಯದಿಂದ ಸರಿಮಾಡಿಕೊಂಬರು.
ಈ ದೃಷ್ಟವ ಕಂಡು ನಮಗೆ ಭಕ್ತಿಪಕ್ಷವಾಗದಿದ್ದಡೆ
ಈ ಪ್ರಪಂಚರಿಗಿಂತ ಕಡಿಮೆಯಾಯಿತಲ್ಲಾ ಗುರುವೆ ಎನ್ನ ಬಾಳುವೆ.
ಒಂದಗಳ ಕಂಡರೆ ಕಾಗೆ ಕರೆಯದೆ ತನ್ನ ಬಳಗವನೆಲ್ಲವ ?
ಒಂದು ಗುಟುಕ ಕಂಡರೆ ಕೋಳಿ
ಕೂಗಿ ಕರೆಯದೆ ತನ್ನ ಕುಲವನೆಲ್ಲವ ?
ಇಂತಪ್ಪ ದೃಷ್ಟವ ಕಂಡು ನೋಡಿ
ಆ ಭಕ್ತರಿಗೆ ಭಕ್ತಿಪಕ್ಷವಾಗದಿದ್ದಡೆ
ಆ ಕಾಗೆ ಕೋಳಿಗಿಂದ ಕರಕಷ್ಟವಾಯಿತಲ್ಲಾ ಎನ್ನ ಬಾಳುವೆ.
ಭಕ್ತರಿಗೆ ಕಡಬಡ್ಡಿ ಕೊಟ್ಟ ಮೇಲೆ
ಕೊಟ್ಟರೆ ಲೇಸು, ಕೊಡದಿರ್ದಡೆ ಲೇಸು.
ಬೇಡಲಾಗದು, ಅದೇನು ಕಾರಣವೆಂದಡೆ
ಅವರಲ್ಲಿ ಗುರು-ಲಿಂಗ-ಜಂಗಮವು ಇಪ್ಪರಾಗಿ.
ಗುರುವಿನ ದ್ರವ್ಯ ಗುರುವಿಗೆ ಮುಟ್ಟಿತಲ್ಲದೆ,
ಮತ್ತೆ ನ್ಯಾಯಕಿಕ್ಕಿ ಅನ್ಯರಿಗೆ ಹೇಳಿ
ಅವರ ಭಂಗವ ಮಾಡಿಸಿದರೆ ಗುರುಹಿರಿಯರೆಂಬರು,
ನಮ್ಮ ಮನೆಯ ಬೆಕ್ಕು ನಾಯಿಗೆ ಮನ್ನಿಸಬೇಕಲ್ಲದೆ,
ಮನ್ನಿಸದಿದ್ದಡೆ ಅವರಿಗೆ ಅವರ ತಕ್ಕ ಶಿಕ್ಷೆಯಾದೀತು.
ಮತ್ತೆ ಭಕ್ತಾಭಕ್ತರಿಗೆ ಕೊಟ್ಟು ಕೊಂಬ ಉದ್ಯೋಗವಾಗಲಿ
ಆಚಾರ-ವಿಚಾರವಾಗಲಿ, ಬೈದರಾಗಲಿ, ಹೊಯ್ದರಾಗಲಿ
ಮತ್ತೆ ಏನಾದರು ತೊಡಕು ಬರಲಿ
ತಮ್ಮ ಮನೆಯೊಳಗೆ ಸುಮ್ಮನೆ ಇರುವುದು ಲೇಸು.
ಮತ್ತೆ ಭಕ್ತಗಣಂಗಳು ಇದ್ದಲ್ಲಿಗೆ ಇಬ್ಬರೂ ಹೋಗಿ
ತಮ್ಮಲ್ಲಿ ಇರುವ ಸ್ಥಿತಿಯ ಹೇಳಿ,
ಅವರು ಹೇಳಿದ ಹಾಗೆ ಕೇಳಿಕೊಂಡು ಇಪ್ಪುದೇ ಲೇಸು.
ಇಲ್ಲಿ ಭಕ್ತಗಣಂಗಳು ಒಪ್ಪಿದರೆ ಅಲ್ಲಿ ಒಪ್ಪುವರು.
ಕಡ ಒಯ್ದದ್ದು ಕೊಡದಿದ್ದಡೆ,
ಮತ್ತೆ ಭಕ್ತರು ಬೈದರೆ ನಮಗೆ ದುಮ್ಮಾನವಾಗುವದು ಸ್ವಾಮಿ.
ಅನ್ಯರು ಒಯ್ದ ದ್ರವ್ಯ ಮುಳುಗಿದಡೆ ಚಿಂತೆಯಿಲ್ಲವು,
ಭವಿಜನಾತ್ಮರು ಬೈದಡೆ ಎಳ್ಳಷ್ಟು ಸಿಟ್ಟಿಲ್ಲವು.
ಇಂಥ ಬುದ್ಧಿಯ ಕೊಡಬಹುದೆ ಲಿಂಗವೆ !
ನೀವು ಬೇಡಿದುದನೀವೆನೆಂಬ
ನಿಮ್ಮ ತಮ್ಮಟ ಬಿರಿದನು ಕೇಳಿ ಬೇಡಿಕೊಂಬೆನು.
ಏನೆಂದಡೆ : ಉದ್ಯೋಗ ವ್ಯಾಪಾರ ಮಾಡುವಲ್ಲಿ
ಹುಸಿ [ಬರೆಹವ] ಮಾಡಿ ಒಬ್ಬರ ಮನೆಯ ದ್ರವ್ಯವ
ಒಬ್ಬರ ಮನೆಗೆ ಹಾಕಿ,
ಅಹುದಲ್ಲದ ಮಾಡುವದ ಬಿಡಿಸು.
ನಿಮ್ಮ ನೆನಹಿನೊಳಗೆ ಇಟ್ಟ ಮೇಲೆ ಮತ್ತೆ ರೊಕ್ಕ ಕೊಟ್ಟು
ಉದ್ಯೋಗವ ಮಾಡದಿರಯ್ಯ.
ಈ ರೊಕ್ಕವು ತಂದೆ-ಮಕ್ಕಳಿಗೆ ವಿರೋಧ.
ಕೊಂಬಲ್ಲಿ ವಿರೋಧ, ಕೊಟ್ಟಲ್ಲಿ ವಿರೋಧ.
ಇಂತಿದ ತಿಳಿದ ಮೇಲೆ ಹೇಸಿಕೆಯಾಯಿತ್ತು.
ರೊಕ್ಕವ ಕೊಡಬೇಡ, ಸಿರಿತನ ಬೇಡ,
ಬಡತನ ಕೊಡಿರಯ್ಯ.
ಹಿರಿತನ ಬೇಡ ಕಿರಿತನ ಕೊಡಿರಯ್ಯ.
ಒಡೆತನ ಬೇಡ ಬಂಟತನ ಕೊಡಿರಯ್ಯ.
ಭಕ್ತಗಣಂಗಳ ಸೇವೆಯ ಕೊಡಿರಯ್ಯ.
ಭಕ್ತರ ನೆರೆಯಲ್ಲಿ ಇರಿಸಯ್ಯ.
ಅವರು ಒಕ್ಕುಮಿಕ್ಕ ಪ್ರಸಾದವ ಕೊಡಿಸಯ್ಯ.
ಅವರು ತೊಟ್ಟ ಮೈಲಿಗೆಯ ಕೊಡಿಸಯ್ಯ.
ಅವರ ಬಾಗಿಲ ಕಾಯಿಸಯ್ಯ.
ಅವರ ಬಂಟತನ ಮಾಡಿಸಯ್ಯ.
ಅವರ ಸಂಗ ಎಂದೆಂದಿಗೂ ಅಗಲಿಸದಿರಯ್ಯ.
ನಾಲಗೆಯಲ್ಲಿ ಪಂಚಾಕ್ಷರವ ನಿಲಿಸಯ್ಯ.
ನೇತ್ರದೊಳಗೆ ನಿಮ್ಮ ರೂಪವ ನಿಲಿಸಯ್ಯ.
ಇಷ್ಟನು ಕೊಡದಿರ್ದಡೆ ನೀವು ಬೇಡಿದ್ದನೀವನೆಂಬ
ನಿಮ್ಮ ತಮ್ಮಟ ಬಿರಿದು ಕೇಳಿ ನಮ್ಮ ಗಣಂಗಳು
ಹಿಡಿತಿಯ ಹಿಡಿದಾರಯ್ಯ !
ಎಂದಾತ ನಮ್ಮ ಶಾಂತಕೂಡಲಸಂಗಮದೇವ./13
ಗುರುಭಕ್ತರು ವಾರ ತಿಥಿ ನಕ್ಷತ್ರ ವ್ಯತಿಪಾತ
ಯೋಗ ಕರಣ ಶುಭಾಶುಭವ ನೋಡಲಾಗದು, ಕೇಳಲಾಗದು.
ಅವರ ಮನೆಯಲ್ಲಿ ಬಾಲರಂಡೆ ಇಪ್ಪ ಕಾರಣ ಕೇಳಲಾಗದು.
ವಾರ ತಿಥಿ ನಕ್ಷತ್ರ ಆರೈದು ಕೇಳಿದವರಿಗೆ ಗುರುವಿಲ್ಲ, ಶಿವನಿಲ್ಲ.
ಅವರಿಗೆ ವಾರಗಳೇ ದೈವವಾಗಿಪ್ಪವು.
ಇದಕ್ಕೆ ದೃಷ್ಟಾಂತ: ವಸಿಷ್ಠಮುನಿ ರಾಮ ಲಕ್ಷ್ಮಣರಿಗೆ ಒಳ್ಳೆ ಶುಭವೇಳೆಯ
ಲಗ್ನವ ನೋಡಿ ತೆಗೆದುಕೊಟ್ಟನು.
ಲಗ್ನವಾದ ಮೇಲೆ ಹೆಂಡತಿ ಸೀತೆಯನ್ನು ರಾವಣನೇಕೆ ಒಯ್ದ?
ಮತ್ತೆ ಅವರು ದೇಶತ್ಯಾಗಿಯಾಗಿ ವನವಾಸವೇಕೆ ಹೋದರು?
ಸಾಕ್ಷಿ: ‘ಕರ್ಮಣಾಂ ಹಿ ಪ್ರಧಾನತ್ವಂ ಕಿಂ ಕರೋತಿ ಶುಭಗ್ರಹಃ |
ವಸಿಷ್ಠಾದಿ ಕೃತೇ ಲಗ್ನೇ ರಾಮಃ ಕಿಂ ಭ್ರಮತೇ ವನಂ||’
ಎಂದುದಾಗಿ,
ಈ ನಡತೆ ಭಕ್ತಗಣಂಗಳಿಗೆ ಸಮ್ಮತವಲ್ಲ.
ಸಮ್ಮತ ಹೇಗೆಂದಡೆ : ಮದುವೆಯ ಮಾಡುವಲ್ಲಿ, ಊರು ಕೇರಿಗೆ ಹೋಗುವಲ್ಲಿ,
ಪ್ರಸ್ಥವ ಮಾಡುವಲ್ಲಿ, ಕೆರೆ ಬಾವಿ ಅಗಿಸುವಲ್ಲಿ,
ಸಮಸ್ತ ಕಾರ್ಯಕ್ಕೆ ಗುರುಲಿಂಗಜಂಗಮ ಭಕ್ತಗಣಂಗಳ ಕೇಳಿ,
ಅವರು ಹೇಳಿದ ಹಾಗೆ ಕೇಳಿ ಅಪ್ಪಣೆಯ ತಕ್ಕೊಂಡು
ಸಮಸ್ತ ಕಾರ್ಯವ ಮಾಡುವುದು.
ಹೀಗೆ ನಂಬಿದವರಿಗೆ ಸಿದ್ಧಿಯಾಗುವುದು.
ಅದು ಹೇಗೆಂದಡೆ : ನಕ್ಷತ್ರಫಲವ ಕೇಳಿಹೆನೆಂದಡೆ,
ನಮ್ಮ ಗಣಂಗಳಾದ ರಾಜೇಂದ್ರಜೋಳ, ಚೇರಮರಾಯ, ಸೌಂದರ ಪಾಂಡ್ಯ
ಈ ಮೂವರ ಸೀಮೆಯ ಮೇಲೆ ಮಳೆ ಬೀಳದಿದ್ದಡೆ
ಆಗ ಮೂವರು ಕೂಡಿ ಸ್ವರ್ಗಕ್ಕೆ ಹೋಗಿ
ಆ ಇಪ್ಪತ್ತೇಳು ನಕ್ಷತ್ರಗಳ ಮುಂಗೈ ಕಟ್ಟಿ
ತಮ್ಮ ಊರಿಗೆ ತಂದು
ಸೆರೆಮನೆಯೊಳಗೆ ಹಾಕಿದುದ ಜಗವೆಲ್ಲ ಬಲ್ಲುದು.
ಅಂದಿನ ಗಣಂಗಳು ಇಂದಿದ್ದಾರೆಂದು ನಂಬಿದವರಿಗೆ
ಬೇಡಿದ್ದನೀವ ನಮ್ಮ ಶಾಂತಕೂಡಲಸಂಗಮದೇವ./14
ಗುರುಲಿಂಗ ಶಿವಭಕ್ತ ಇವರು ಒಂದೆ ವಸ್ತು; ಎಂಟಕ್ಷರಾದವು.
ಆ ಎಂಟಕ್ಷರವೆ ಅಷ್ಟಾವರಣವಾದವು.
ಆ ಅಷ್ಟಾವರಣವೆ ಇಪ್ಪತ್ತುನಾಲ್ಕು ಅಕ್ಷರಾದವು.
ಆ ಇಪ್ಪತ್ತುನಾಲ್ಕು ಅಕ್ಷರವೆ ಚತುರ್ವಿಂಶತಿತತ್ವಂಗಳಾದವು.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಇವೈದು ಒಂದೇ ವಸ್ತು;
ಹದಿನಾಲ್ಕು ಅಕ್ಷರಾದವು.
ಆ ಹದಿನಾಲ್ಕು ಅಕ್ಷರಂಗಳೇ ಹದಿನಾಲ್ಕು ಭುವನಂಗಳಾದವು.
ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಇವು ಮೂರು ಒಂದೇ ವಸ್ತು;
ಹತ್ತು ಅಕ್ಷರವಾದವು.
ಆ ಹತ್ತಕ್ಷರವೇ ದಶದಿಕ್ಕುಗಳಾದವು.
ಆ ದಶಾಕ್ಷರವೇ ದಶಗಂಗೆಗಳಾದವು.
ಆ ದಶಾಕ್ಷರವೇ ದಶವಿಧ ಪಾದೋದಕವಾದವು.
ಇಂತಿವನೊಳಕೊಂಡು ಎನ್ನ ಕರಸ್ಥಳಕ್ಕೆ ಬಂದು ನಿಂದಾತ
ನಮ್ಮ ಶಾಂತಕೂಡಲಸಂಗಮದೇವ./15
ಗುರುಲಿಂಗಜಂಗಮಾರ್ಚನೆಯ ಕ್ರಮವ
ದಯೆಯಿಂದ ಕರುಣಿಪುದು ಸ್ವಾಮಿ.
ಕೇಳೈ ಮಗನೆ :
ತಾನಿದ್ದ ಊರಲ್ಲಿ ಗುರುವು ಇದ್ದಡೆ
ನಿತ್ಯ ತಪ್ಪದೆ ದರುಶನವ ಮಾಡುವುದು.
ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ
ಲಿಂಗ-ಜಂಗಮವುಂಟೆಂದು ಭಾವಿಸಿ
ತನು-ಮನ-ಧನವನೊಪ್ಪಿಸಿ ಅಚರ್ಿಸಿದ್ದುದೆ ಗುರುಪೂಜೆ.
ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ
ಜಂಗಮ-ಗುರುವುಂಟೆಂದುಭಾವಿಸಿ
ತನು-ಮನ-ಧನವನೊಪ್ಪಿಸಿ ಅಚರ್ಿಸಿದ್ದುದೆ ಲಿಂಗಪೂಜೆ.
ಇನ್ನು ಜಂಗಮದ ಪೂಜೆ ಮಾಡುವಾಗ
ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ
ತನು-ಮನ-ಧನವನೊಪ್ಪಿಸಿ ಅಚರ್ಿಸಿದ್ದುದೆ ಜಂಗಮಪೂಜೆ.
ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ
ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ.
ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ.
ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ
ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ
ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ.
ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ
ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ
ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ.
ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ
ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ
ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ.
ಸಾಕ್ಷಿ : ‘ಏಕಮೂರ್ತಿಸ್ತ್ರಯೋ ಭಾಗಾಃ ಗುರುಲರ್ಿಂಗಂತು ಜಂಗಮಃ |
ಜಂಗಮಶ್ಚ ಗುರುಲರ್ಿಂಗಂ ತ್ರಿವಿಧಂ ಲಿಂಗಮುಚ್ಯತೇ ||’
ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ
ನಮ್ಮ ಶಾಂತಕೂಡಲಸಂಗಮದೇವ./16
ಗುರುವೇ ಪರಶಿವನು.
ಗುರುವೇ ಸಕಲಾಗಮಮೂರ್ತಿ.
ಗುರುವೇ ಸಕಲ ವಿದ್ಯಾಸ್ವರೂಪನು.
ಗುರುವೇ ಸಕಲ ಮಂತ್ರಸ್ವರೂಪನು.
ಗುರುವೇ ಕಲ್ಪವೃಕ್ಷವು, ಕಾಮಧೇನುವು.
ಗುರುವೇ ಪರುಷದ ಖಣಿ, ತವನಿಧಿ.
ಗುರುವೇ ಕರುಣರಸಾಬ್ಧಿ.
ಗುರುವಿನಿಂದಧಿಕ ದೈವವಿಲ್ಲ.
ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ.
ಸರ್ವಪೂಜೆಗೆ ಗುರುವಿನ ಪಾದಪೂಜೆಯೇ ಅಧಿಕ.
ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ.
ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ.
ಸಾಕ್ಷಿ : ”ಧ್ಯಾನಮೂಲಂ ಗುರೋಮರ್ೂರ್ತಿಃ
ಪೂಜಾಮೂಲಂ ಗುರೋಃ ಪದಂ |
ಮಂತ್ರಮೂಲಂ ಗುರೋರ್ವಾಕ್ಯಂ
ಮುಕ್ತಿಮೂಲಂ ಗುರೋಃ ಕೃಪಾ ||”
ಎಂಬುದಾಗಿ, ಇಂತಿವನೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ
ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ
ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ
ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ
ಎನ್ನ ಅÙರುಹಿನಲ್ಲಿ ಗುರು
ಎನ್ನ ಪ್ರಾಣದಲ್ಲಿ ಲಿಂಗ
ಎನ್ನ ಜ್ಞಾನದಲ್ಲಿ ಜಂಗಮ
ಎನ್ನ ಜಿಹ್ವೆಯಲ್ಲಿ ಪಾದೋದಕ
ಎನ್ನ ನಾಸಿಕದಲ್ಲಿ ಪ್ರಸಾದ
ಎನ್ನ ತ್ವಕ್ಕಿನಲ್ಲಿ ವಿಭೂತಿ
ಎನ್ನ ನೇತ್ರದಲ್ಲಿ ರುದ್ರಾಕ್ಷಿ
ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ
ಇಂತಿವು ಅಷ್ಟಾವರಣಸ್ವರೂಪವಾಗಿ
ಎನ್ನೊಳು ತನ್ನ ಕರುಣಕೃಪೆಯ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./17
ಘಟಾಕಾಶ ಮಹಾಕಾಶ ಮಹದಾಕಾಶ ಆವುವೆಂದಡೆ :
ಘಟಾಕಾಶವೆ ಇಷ್ಟಲಿಂಗಕ್ಕೆ ಮನೆಯಾಗಿಪ್ಪುದು,
ಜಿಹ್ವೆಯೆ ತಾಯಾಗಿಪ್ಪುದು, ನೇತ್ರವೆ ತಂದೆಯಾಗಿಪ್ಪುದು,
ದ್ವಿಕರ್ಣಂಗಳೆ ಅಣ್ಣತಮ್ಮಂದಿರಾಗಿಪ್ಪವು,
ಹಸ್ತಪಾದಂಗಳೆ ಕುಟುಂಬವಾಗಿಪ್ಪವು,
ಚಿತ್ತಶುದ್ಧವೆ ಅರಮನೆಯಾಗಿಪ್ಪುದು.
ಇವರು ಇಷ್ಟಲಿಂಗಕ್ಕೆ ಉಪಚಾರವ ಮಾಡುತ್ತಿಹರು.
ಸಾಕ್ಷಿ : ‘ ಮಾತಾ ಜಿಹ್ವಾ ಪಿತಾ ಚಕ್ಷುಃ ದ್ವಿಕರ್ಣಶ್ಚ ಸಹೋದರಂ |
ಹಸ್ತಪಾದ ಕುಟುಂಬೇನ ಚಿತ್ತಶುದ್ಧೇ ಯಥಾ ಮಠಃ ||’
ಇನ್ನು ಮಠಾಕಾಶವೆ ಪ್ರಾಣಲಿಂಗಕ್ಕೆ ಮನೆಯಾಗಿಪ್ಪುದು,
ಸತ್ಯವೆ ತಾಯಾಗಿಪ್ಪುದು,
ಜ್ಞಾನವೆ ತಂದೆಯಾಗಿಪ್ಪುದು,
ಧರ್ಮವೇ ಅಣ್ಣತಮ್ಮಂದಿರಾಗಿಪ್ಪರು,
ದಯವೆ ಗೆಳೆಯನಾಗಿಪ್ಪನು,
ಶಾಂತಿಯೆ ಸ್ತ್ರೀಯಾಗಿಪ್ಪಳು,
ಕ್ಷಮೆಯೇ ಪುತ್ರರಾಗಿಪ್ಪರು,
ಇವರು ಬಂಧುಗಳಾಗಿ ಪ್ರಾಣಲಿಂಗಕ್ಕೆ ಉಪಚರಿಸುತ್ತಿಹರು.
ಸಾಕ್ಷಿ : ‘ಸತ್ಯಂ ಮಾತಾ ಪಿತಾ ಜ್ಞಾನಂ ಧಮರ್ೊ ಭ್ರಾತಾ ದಯಾ ಸಖಾ |
ಶಾಂತಿಃ ಪತ್ನೀ ಕ್ಷಮಾ ಪುತ್ರಾಃ ಷಡೇತೇ ಮಮ ಬಾಂಧವಾಃ ||’
ಮಹದಾಕಾಶವೆ ಭಾವಲಿಂಗಕ್ಕೆ ಮನೆಯಾಗಿಪ್ಪುದು,
ತೃಪ್ತಿಯೆ ತಾಯಾಗಿಪ್ಪಳು, ಆನಂದವೆ ತಂದೆಯಾಗಿಪ್ಪನು,
ಸಂತೋಷವೆ ಅಣ್ಣತಮ್ಮಂದಿರಾಗಿಪ್ಪರು,
ಹರುಷಾಬ್ಧಿಯೆ ಸ್ತ್ರೀಯಾಗಿಪ್ಪಳು,
ಸದ್ಭಾವವೆ ಮಕ್ಕಳಾಗಿಪ್ಪರು,
ಇವರು ಭಾವಲಿಂಗಕ್ಕೆ ಉಪಚರಿಸುತ್ತಿಹರು.
ಘಟಾಕಾಶವೆಂದಡೆ ಜೀವಾತ್ಮ,
ಮಠಾಕಾಶವೆಂದಡೆ ಅಂತರಾತ್ಮ,
ಮಹದಾಕಾಶವೆಂದಡೆ ಪರಮಾತ್ಮ,
ಚೆನ್ನಂಗಿಬೇಳೆಗಿಂದ ಸಣ್ಣನಾಗಿಪ್ಪ ನೇತ್ರವು ತ್ರಿವಿಧಲಿಂಗವು.
ಈ ತ್ರಿವಿಧಾಕಾಶವನೊಳಕೊಂಡ ಭೇದವ
ನಮ್ಮಶಾಂತಕೂಡಲಸಂಗಮದೇವ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ !/18
ಜೀವನ್ಮುಕ್ತಿ ಯಾವುದೆಂದಡೆ
ಹೇಳಿಹೆ ಕೇಳಿರಯ್ಯಾ.
ಜೀವನ ಬುದ್ಧಿಯ ಬಿಟ್ಟುದು ಜೀವನ್ಮುಕ್ತಿ.
ಜೀವನ ಬುದ್ಧಿ ಯಾವುದೆಂದಡೆ : ಜ್ಞಾನಗುರುಗಳಿಂದ ಜ್ಞಾನವ ಪಡೆದು
ಅಂಗಲಿಂಗಸಂಗ ಸಮರಸವಾದುದೇ ಜೀವನ್ಮುಕ್ತಿ.
ಇಂಥದ ಬಿಟ್ಟು ತಾನು ಮಂಗಬುದ್ಧಿಯಿಂದ ನಡೆದು
ಜ್ಞಾನಪ್ರಕಾಶವ ಕಾಣಲಿಲ್ಲವೆಂದು
ಮತ್ತೊಬ್ಬ ಗುರುಗಳಲ್ಲಿ ತಿಳಿಯಬೇಕೆಂಬರು.
ಅವರಲ್ಲಿ ಏನು ಇದ್ದಿತೊ !
ಹೀಗೆಂಬುದೇ ಜೀವನ ಬುದ್ದಿಯು.
ಹೊಲವ ಬಿತ್ತುವ ಒಕ್ಕಲಿಗ ಯಾವನಾದಡೆ ಆಗಲಿ
ಬೀಜವ ಬಿತ್ತುವ ಪರಿ ಒಂದೇ.
ಮತ್ತೆ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆಯ ದೃಢದಿಂದ ಪೂಜಿಸಿ
ಗುರು ಪ್ರಸನ್ನತೆಯ ಹಡೆದುದಿಲ್ಲವೆ ?
ಅವಿಶ್ವಾಸದಿಂದೆ, ಅಂಗಬುದ್ಧಿಯಿಂದೆ
ಹಲವು ಗುರು, ಹಲವು ಲಿಂಗ ಅಚರ್ಿಸಿ ಪೂಜಿಸಿ
ಹಲವು ಭವದಲ್ಲಿ ಬಂದರು ನೋಡಾ !
ಜೀವನ ಬುದ್ಧಿ ಎಂತೆಂದಡೆ : ಆಶೆ ರೋಷ ಅಹಂಕಾರ ಅರಿಷಡ್ವರ್ಗಂಗಳು
ಅಷ್ಟಮದಂಗಳು, ಅನೃತ,
ಪರಧನ, ಪರಸ್ತ್ರೀ, ಪರನಿಂದೆ, ಪರಹಿಂಸೆ
ಇವೆಲ್ಲವೂ ಜೀವನಬುದ್ಧಿ.
ಇಂತಿವೆಲ್ಲವ ಒಳಗಿಟ್ಟುಕೊಂಡು
ನಾವು ಜೀವನ್ಮುಕ್ತರೆಂಬರು ಎಂತಹರೋ ನೋಡಾ!
ದೀಪವೆಂದಡೆ ಕತ್ತಲೆ ಹೋಯಿತ್ತೆ ?
ಅಮೃತವೆಂದಡೆ ಹಸಿವು ಹೋಯಿತ್ತೆ ?
ಉದಕವೆಂದಡೆ ತೃಷೆ ಹೋಯಿತ್ತೆ ?
ಇಂಥವರಿಗೆ ಮುಕ್ತಿಯಿಲ್ಲವಯ್ಯಾ.
ಮತ್ತೆ ಜೀವನ್ಮುಕ್ತಿ ಹೇಗೆಂದಡೆ –
ಶರಣಸತಿ ಲಿಂಗಪತಿಯೆಂಬ
ಭೇದವ ತಿಳಿದಡೆ ಜೀವನ್ಮುಕ್ತಿ.
ಈ ತ್ರಿವಿಧತನವು ಮೀಸಲಾಗಿ
ತ್ರಿವಿಧಲಿಂಗಕ್ಕೆ ಅರ್ಪಿಸಬಲ್ಲಾತನೆ ಜೀವನ್ಮುಕ್ತನು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./19
ತಮಂಧಕಾರದೊಳು ಮೋಡವಿಲ್ಲದ ನಿರ್ಮಲಾಕಾಶದಂತೆ,
ಎಲೆಯಿಲ್ಲದ ವೃಕ್ಷದಂತೆ, ರೆಕ್ಕೆಯಿಲ್ಲದ ಪಕ್ಷಿಯಂತೆ,
ಗಾಳಿಯಿಲ್ಲದ ದೀಪದಂತೆ,
ನೊರೆ ತೆರೆ ಬುದ್ಬುದಾಕಾರವಿಲ್ಲದ ಸಮುದ್ರದಂತೆ,
ಇದು ಸಹಜಜ್ಞಾನವು ಎಂದು ಎನ್ನೊಳಗೆ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./20
ದೇಹದೊಡನೆ ತ್ರಿದೋಷಗಳು,
ವಾತ ಪಿತ್ತ ಶ್ಲೇಷ್ಮ-ಇವು ಮೂರುಕೂಡಿ ದೇಹ ಹುಟ್ಟಿತು.
ಇದರ ವಿವರವು :
ವಾತ , ಪಿತ್ತ , ಶ್ಲೇಷ .
ಇವು ಕೂಡಿ ವ್ಯಾಧಿಗಳಾದವು.
ಇವು ಶಿವನ ಅಪ್ಪಣೆಯಿಂದ ಬಂದುವಲ್ಲದೆ,
ಮನುಷ್ಯನ ಯತ್ನವಿಲ್ಲವು.
ಅದಕ್ಕೆ ಮನುಷ್ಯರು ವೈದ್ಯವ ಮಾಡಿದಡೆ
ಲೋಕ ಏಕೆ ಸಾವುದು ?
ಅದಕ್ಕೆ ಸೊಕ್ಕಿದವರಿಗೆ, ಗುರುತಲ್ಪಕರಿಗೆ,
ಭಕ್ತರ ನಿಂದ್ಯವ ಮಾಡಿದವರಿಗೆ,
ತಂದೆಗೆ ಮಗ ಬೈದರೆ, ಅತ್ತೆಗೆ ಸೊಸೆ ಸೊಕ್ಕಿ ನುಡಿದಡೆ,
ಅನಾಚಾರಿಗಳಿಗೆ, ಆಸೆಯ ಕೊಟ್ಟು ಭಾಷೆಗೆ ತಪ್ಪಿದವರಿಗೆ,
ಶಿವಸದ್ವರ್ತನೆ ಸದ್ಧರ್ಮ ಸದಾಚಾರವಿಲ್ಲದವರಿಗೆ
ಈ ವ್ಯಾಧಿಗಳು ಕಾಡುತ್ತಿಹವು.
ತಲೆಶೂಲೆ, ಪಕ್ಕಶೂಲೆ, ಜ್ವರ, ಉರಿ
-ಇವು ಕಣ್ಣಿಗೆ ಕಾಣಿಸದೆ ಬಂದಂಥ ವ್ಯಾಧಿಗಳು ;
ಶಿವನ ಅಂಶಿಕವು.
ತದ್ದು ತುರಿ ಕೆಮ್ಮು ಭಗದಳ ಕುಷ್ಠ ಗಂಡಮಾಲೆ
ಕುರು ಬಾವು ಹುಣ್ಣುಗಳು
ಕಣ್ಣಿಗೆ ಕಾಣಿಸುವಂಥ ಬೇನೆಗಳು ;
ಪಾರ್ವತಿಯ ಅಂಶಿಕವು.
ಇವು ಎಲ್ಲ ವ್ಯಾಧಿಗಳು ಅವರಿಗೆ ತಕ್ಕಷ್ಟು
ಶಿಕ್ಷೆ ಮಾಡಿಸುತ್ತಿಹವು.
ಮತ್ತೆ ಗುರುಮಾಗರ್ಾಚಾರವಿಡಿದು ಆಚರಿಸುವ ಪ್ರಸಾದಿಗಳಿಗೆ
ಅವೇ ವ್ಯಾಧಿಗಳು ಹಿತವಾಗಿಹವು.
ಮತ್ತೆ ಸರ್ಪ ಕಚ್ಚಿದಡೆ, ಸ್ತ್ರೀಯು ಹಡೆಯಲಾರದಿದ್ದಡೆ,
ಯಾವ ಕುಲದವನಾಗಲಿ ವಿಚಾರಿಸದೆ
ಅವರು ಮಂತ್ರಿಸಿದ ಉದಕವ ಕುಡಿವುದು.
ಮತ್ತೆ ಅವರ ಕುಲಕ್ಕೆ ಭಕ್ತರ ಕುಲಕ್ಕೆ ಹೇಸುವುದು.
ಅನ್ಯಕುಲದ ವೈದ್ಯನ ಕೈಯಲ್ಲಿ ಮದ್ದು ಮಾಡಿಸಿಕೊಂಬರು.
ಭಕ್ತರು ಅಡುಗೆಯ ಮಾಡಿದಡೆ, ಯಾವ ಕುಲವೆಂಬರು ?
ಅವರಿಗೆ ಎಂದೆಂದಿಗೂ ಮುಕ್ತಿಯಿಲ್ಲವಯ್ಯಾ.
ಮತ್ತೆ ಪ್ರಸಾದವ ಕೊಂಬುವರು ಮದ್ದು ಕೇಳಲಾಗದು.
ಅದೇನುಕಾರಣವೆಂದಡೆ-
ಪ್ರಸಾದಕ್ಕಿಂತ ಮದ್ದು ಹಿತವಾಯಿತಲ್ಲ !
ಶಿವಮಂತ್ರ ಕಾಯಕ್ಕೆ
ಅನ್ಯರ ಕೈಯಲ್ಲಿ ಮಂತ್ರಿಸಿ ಕೇಳಲಾಗದು.
ಅದೇನು ಕಾರಣವೆಂದಡೆ –
ಶಿವಮಂತ್ರಕ್ಕಿಂತ ಅನ್ಯರ ಮಂತ್ರ ಅಧಿಕವಾಯಿತ್ತಲ್ಲ !
ಮತ್ತೆ ವೈದ್ಯಕಾರನಿಂದ ಮಂತ್ರಗಾರನಿಂದ
ಮನುಷ್ಯರ ಪ್ರಾಣ ಉಳಿವುದೆಂದು
ಯಾವ ಶಾಸ್ತ್ರ ಹೇಳುತ್ತದೆ ?
ಯಾವ ಆಗಮ ಸಾರುತ್ತದೆ ? ಹೇಳಿರಿ.
ಅರಿಯದಿದ್ದಡೆ ಕೇಳಿರಿ : ಭಕ್ತಗಣಂಗಳು ಪಾದೋದಕ ಪ್ರಸಾದ
ವಿಭೂತಿ ಶಿವಮಂತ್ರಗಳಿಂದೆ
ಲೆಕ್ಕವಿಲ್ಲದೆ ಹೋಹ ಪ್ರಾಣವ ಪಡೆದರು –
ಎಂದು ಬಸವೇಶ್ವರ ಪುರಾಣದಲ್ಲಿ ಕೂಗ್ಯಾಡುತ್ತದೆ.
ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ
ಆವಿನ ಕೆಚ್ಚಲೊಳಗೆ ಉಣ್ಣೆಯಿದ್ದು
ಹಾಲು ಬಿಟ್ಟು ರಕ್ತವ ಸೇವಿಸುವಂತಾಯಿತ್ತು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./21
ಧ್ಯಾನ ಧಾರಣ ಸಮಾಧಿಯೆಂತೆಂದಡೆ ಸದ್ಗುರುವೆ ಕರುಣಿಪುದು.
ಕೇಳಯ್ಯ ಮಗನೆ :
ಧ್ಯಾನ ಯೋಗವೆಂತೆಂದಡೆ : ಷಡಾಧಾರಚಕ್ರದೊಳಗೆ ಆಧಾರ ಮೊದಲಾಗಿ ಆಜ್ಞೆ ಕಡೆತನಕ
ಇಷ್ಟಲಿಂಗವ ಧ್ಯಾನಿಸಿ ಅಚರ್ಿಸಿ ಪೂಜಿಸಿ
ಅಲ್ಲಿ ತ್ರಿಕೂಟ ಸಂಗಮದಲ್ಲಿ
ಗಂಗಾ ಯಮುನಾ ಸರಸ್ವತಿ ನದಿಗಳು ಕೂಡಿದ ಠಾವಿನಲ್ಲಿ
ಪ್ರಮಥಗಣಂಗಳು ಮೊದಲಾಗಿ ಅಲ್ಲಿ ಮಜ್ಜನವ ನೀಡುತ್ತಿಹರು.
ಅಲ್ಲಿ ಸೂರ್ಯಪೀಠದ ಮೇಲೆ ಗುರುವು ಮೂರ್ತವ ಮಾಡಿರಲು
ಅವರ ಪಾದಾರ್ಚನೆಯಂ ಮಾಡಿ,
ಪಾದೋದಕದ ನದಿಗಳಲ್ಲಿ ಸ್ನಾನವ ಮಾಡಿ
ಅವರ ಸಂಗಡ ಏಳನೆಯ ಮಂಟಪಕ್ಕೆ ಹೋಗಿ
ಅಲ್ಲಿ ಪಶ್ಚಿಮಚಕ್ರದಿಂದ ನಿರಂಜನಜಂಗಮವು
ಶಿಖಾಚಕ್ರದಲ್ಲಿರ್ದ ಬಸವಾದಿ ಪ್ರಮಥರು ಮೊದಲಾದವರು ಬಿಜಯಮಾಡಿ,
ಅಲ್ಲಿ ಅಸಂಖ್ಯಾತ ಪ್ರಮಥರು, ನೂತನ ಗಣಂಗಳು
ಸಹವಾಗಿ ಲಿಂಗಾರ್ಚನೆಯ ಮಾಡುತ್ತಿಹರು.
ಆ ಲಿಂಗಾರ್ಚನೆ ಎಂತೆಂದಡೆ : ಮೊದಲು ಚಿದ್ಭಸ್ಮವನೆ ಧರಿಸಿ,
ಆನಂದೋದಕದಿಂದ ಲಿಂಗಕ್ಕೆ ಕ್ರಿಯಾಮಜ್ಜನವ ನೀಡಿ,
ಅಷ್ಟತನುವಿನ ಅಷ್ಟಸುಗಂಧವ ಧರಿಸಿ,
ಕರಣಂಗಳ ಸಂಚಲವಿಲ್ಲದ ಗುಣತ್ರಯದಕ್ಷತೆಯ ಧರಿಸಿ,
ಸಾವಿರದೈವತ್ತು ಪ್ರಣವದ ಪರಿಮಳ ತುಂಬಿರ್ದ ಪುಷ್ಪವ ಧರಿಸಿ,
ದಶವಾಯುಗಳ ಗುಣಧರ್ಮಂಗಳ ಜ್ಞಾನಾಗ್ನಿಯೊಳು ನೀಡಿ,
ದಶಾಂಗದ ಸದ್ವಾಸನೆಯ ಧೂಪವ ಧರಿಸಿ,
ಹೃದಯವೆಂಬ ಪ್ರಣತಿಯಲ್ಲಿ
ದೃಢಚಿತ್ತವೆಂಬ ಬತ್ತಿಯನಿರಿಸಿ,
ಅರುಹೆಂಬ ತೈಲವನೆರದು,
ಮಹಾಜ್ಞಾನವೆಂಬ ಜ್ಯೋತಿಯ ಮುಟ್ಟಿಸಿ
ಅದರಿಂದೊದಗಿದ ಏಕಾರತಿ ತ್ರಿಯಾರತಿ ಪಂಚಾರತಿ
ಕಡ್ಡಿ ಬತ್ತಿ ಮೊದಲಾದ ಮಹಾಪ್ರಕಾಶದ ದೀಪವ ಧರಿಸಿ,
ಕ್ರಿಯಾ ಜ್ಞಾನ ಇಚ್ಫಾ ಆದಿ ಪರ ಚಿತ್ಶಕ್ತಿ
ಮೊದಲಾದವರು ಆರತಿಯ ಪಿಡಿದಿಹರು.
ಆ ಮೇಲೆ ಪಾದತೀರ್ಥವ ಸಲಿಸಿ,
ಮತ್ತೆ ಐವತ್ತು ದಳದಲ್ಲಿರ್ದ
ಐವತ್ತು ರುದ್ರಕನ್ನಿಕೆಯರು ಅಡುಗೆಯ ಮಾಡಿ,
ಅವರಿಗೆ ಇಚ್ಫಾಪದಾರ್ಥವ ನೀಡುತ್ತಿಹರು.
ಅವರ ಒಕ್ಕುಮಿಕ್ಕ ಪ್ರಸಾದವನುಂಡು
ಫಲದಾಕಾಂಕ್ಷೆಗಳಿಲ್ಲದೆ
ಉಲುಹಡಗಿದ ನಿಜ ಪ್ರಭಾಲತೆ ಪರ್ಣದ ವೀಳ್ಯವನಿತ್ತು
ಅವರ ತಾಂಬೂಲ ಪ್ರಸಾದವ ಕೊಂಡು ಪರಿಣಾಮಿಸಿ
ಮನ ಭಾವಂಗಳಿಂದ ಪ್ರತ್ಯಕ್ಷವಾಗಿ ಕಂಡು,
ಧ್ಯಾನಿಸುವುದೇ ಧ್ಯಾನ ಯೋಗ.
ಇನ್ನು ಧಾರಣಯೋಗದ ವಿವರ : ಕರದೊಳಗೆ ಇಷ್ಟಲಿಂಗವ ಮೂರ್ತವ ಮಾಡಿಸಿ
ಮನದೊಳಗೆ ಪ್ರಾಣಲಿಂಗವ ಮೂರ್ತವ ಮಾಡಿಸಿ
ಭಾವದೊಳಗೆ ತೃಪ್ತಿಲಿಂಗವ ಮೂರ್ತವ ಮಾಡಿಸಿ
ಕರ ಮನ ಭಾವದೊಳಗೆ ಪ್ರತ್ಯಕ್ಷವಾಗಿ ಕಂಡು
ಧರಿಸಿಕೊಂಡಿಪ್ಪುದೀಗ ಧಾರಣಯೋಗ.
ಇನ್ನು ಸಮಾಧಿಯೋಗದ ವಿವರ : ಆ ಇಷ್ಟ ಪ್ರಾಣ ಭಾವಲಿಂಗವ ಏಕವ ಮಾಡಿ,
ಅಲ್ಲಿ ಐಕ್ಯವಾಗಿಪ್ಪುದೀಗ ಸಮಾದಿಯೋಗ ಎಂದರುಹಿದಾತ
ನಮ್ಮ ಶಾಂತಕೂಡಲಸಂಗಮದೇವ./22
ನಮ್ಮ ಗಣಂಗಳ ಸಹವಾಸದಿಂದೆ
ಏನೇನು ಫಲಪದವಿಯಾಯಿತ್ತೆಂದಡೆ,
ಅಷ್ಟಾವರಣಂಗಳು ಸಾಧ್ಯವಾದವು.
ಸಾಧ್ಯವಾದ ಕಾರಣ,
ಶ್ರೀಗುರುವು ಎನ್ನ ಕರಸ್ಥಲಕ್ಕೆ ಲಿಂಗವ ಕೊಟ್ಟ,
ಎಂದೆಂದಿಗೂ ಸತಿ-ಪತಿ ಭಾವ ತಪ್ಪಬೇಡವೆಂದು
ಗಣಂಗಳ ಸಾಕ್ಷಿಯ ಮಾಡಿ,
ನೀನು ಅಂಗವಾಗಿ ಲಿಂಗವೇ ಪ್ರಾಣವಾಗಿರಿಯೆಂದು
ಇಬ್ಬರಿಗೂ ಆಜ್ಞೆಯ ಮಾಡಿದ ಕಾರಣ
ಎನ್ನಂಗವೇ ನಿನ್ನಂಗ, ಎನ್ನ ಪ್ರಾಣವೇ ನಿನ್ನ ಪ್ರಾಣ.
ನಿನ್ನ ಪ್ರಾಣವೇ ಎನ್ನ ಪ್ರಾಣವಾದ ಮೇಲೆ
ಎನ್ನ ಮಾನಾಪಮಾನ ನಿಮ್ಮದಯ್ಯಾ,
ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ.
ನೀವು ಈರೇಳು ಲೋಕದ ಒಡೆಯರೆಂಬುದ
ನಾನು ಬಲ್ಲೆನಯ್ಯಾ.
ಬಲ್ಲೆನಾಗಿ, ಪುರುಷರ ದೊರೆತನ ಹೆಂಡರಿಗಲ್ಲದೆ ಬೇರುಂಟೆ?
ಎನ್ನ ಸುಖದುಃಖವೆ ನಿನ್ನದಯ್ಯ,
ನಿನ್ನ ಸುಖದುಃಖವೆ ಎನ್ನದಯ್ಯ,
ಅದಕ್ಕೆ ಎನ್ನ ತನುಮನಧನವ ಸೂಸಲೀಯದೆ
ನಿಮ್ಮೊಡವೆ ನೀವು ಜೋಕೆಯ ಮಾಡಿಕೊಳ್ಳಿರಿ.
ಜೋಕೆಯ ಮಾಡದಿದ್ದಡೆ ಗಣಂಗಳಿಗೆ ಹೇಳುವೆ,
ಏಕೆಂದರೆ ಗಣಂಗಳು ಸಾಕ್ಷಿಯಾಗಿದ್ದ ಕಾರಣ.
ಆಗ ಆ[ಣೆ]ಯ ಮಾತು ಹೇಳಬಹುದೆಯೆಂದಡೆ
ಆಗ ಎನಗೆ ಪ್ರತ್ಯುತ್ತರವಿಲ್ಲ ಸ್ವಾಮಿ.
ನಿಮ್ಮ ಒಡವೆ ನಿಮಗೆ ಒಪ್ಪಿಸುವೆನೆಂದರುಹಿದನು
ನಮ್ಮ ಶಾಂತಕೂಡಲಸಂಗಮದೇವ./23
ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ,
ಇಪ್ಪತ್ತೆಂಟು ದಿವ್ಯಾಗಮಂಗಳು
ಇವು ಯಾಕೆ ನಿರ್ಮಾಣ ಮಾಡಿದಿರಿ ಸ್ವಾಮಿ ?
ದಯದಿಂದ ಕರುಣಿಪುದು.
ಕೇಳಯ್ಯ ಮಗನೆ : ಹರಿ ಸುರ ಬ್ರಹ್ಮಾದಿಗಳು
ದೇವ ದಾನವ ಮಾನವರುಗಳು
ಎಂಬತ್ತೆಂಟು ಕೋಟಿ ಮುನಿಗಳು
ಇವರೆಲ್ಲರು ಮನವ ನಿಲಿಸಿಹೆವೆಂದು ಬಿನ್ನಹ ಮಾಡಿಕೊಳ್ಳಲು
ಶಿವನು ಸರ್ವ ಶ್ರುತಿ ಸ್ಮೃತಿ ಶಾಸ್ತ್ರವ ನಿರ್ಮಾಣ ಮಾಡಿದನು.
‘ವೇದಾಂತತತ್ತ್ವಮದಿಕಂ ನವನೀತಸಾರಂ’ ಎಂಬುದಾಗಿ,
ವೇದ ಮೊದಲಾದುವೆಲ್ಲವು ಮಜ್ಜಿಗೆ ಹಾಗೆ,
ಪುರಾತನರ ವಚನಗಳು ಗುರುವಾಕ್ಯವೆಲ್ಲವು ಬೆಣ್ಣೆ ಹಾಗೆ.
ಈ ಗುರುವಾಕ್ಯವಿಡಿದು ಲಿಂಗದಲ್ಲಿ ಮನವ ನಿಲಿಸಿದಡೆ
ಸರ್ವ ಶಾಸ್ತ್ರವೇಕೆ ?
ಮನವು ಲಿಂಗದಲ್ಲಿ ನಿಲ್ಲದಿರ್ದಡೆ, ಏನು ಮಾಡಿದಡೂ ನಿಷ್ಫಲ.
ಇದನು ಮಹಾಜ್ಞಾನಿಗಳು ತಿಳಿದು
ಗುರುವಿನ ಕರುಣೆಯ ಕೃಪೆಯಿಂದ ಲಿಂಗದಲ್ಲಿ ಬೆರೆದು
ಲಿಂಗವೇ ತಾನು ತಾನಾಗಿ,
ಜ್ಯೋತಿಗೆ ಜ್ಯೋತಿ ಕೂಡಿದಂತೆ ನಿಜಲಿಂಗೈಕ್ಯರಾದರು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./24
ನಿರಾಕಾರ ಪರವಸ್ತು ತನ್ನ ಲೀಲಾವಿನೋದದಿಂದ
ಎರಡು ಮುಖದಿಂದ ಎರಡು ಸೃಷ್ಟಿಯ ಮಾಡಿದರು.
ಒಂದು ಊಧ್ರ್ವಸೃಷ್ಟಿ, ಒಂದು ಅಧೋಸೃಷ್ಟಿ.
ಅಧೋಸೃಷ್ಟಿ ಯಾವುದೆಂದಡೆ : ಅಂಡಜ ಪಿಂಡಜ ಜರಾಯುಜ ಉದ್ಭಿಜ ಇವು ನಾಲ್ಕು ಕೂಡಿ
ಎಂಬತ್ತುನಾಲ್ಕು ಜೀವರಾಶಿಯ ಮಾಡಿದರು.
ಸ್ವರ್ಗ ನರಕ ಇಹ ಪರ ಪುಣ್ಯ ಪಾಪ ಧರ್ಮ ಕರ್ಮ
ಸತ್ಯ ಅಸತ್ಯ ಜ್ಞಾನ ಅಜ್ಞಾನ ಹೆಣ್ಣು ಗಂಡು ಹಿರಿದು ಕಿರಿದು
ಉತ್ಪತ್ತಿ-ಸ್ಥಿತಿ-ಲಯಕ್ಕೆ ಅಧಿಕಾರಿಗಳಾದ
ಬ್ರಹ್ಮ-ವಿಷ್ಣು-ರುದ್ರರು ಮಾಡಿಟ್ಟರು.
ಇನ್ನು ಊಧ್ರ್ವಸೃಷ್ಟಿ ಹೇಗೆಂದಡೆ : ಅಸಂಖ್ಯಾತ ಮಹಾಪ್ರಮಥಗಣಂಗಳು,
ಇವರಿಗೆ ಸ್ವರ್ಗ-ನರಕವಿಲ್ಲ,
ಇಹ-ಪರವಿಲ್ಲ, ಪುಣ್ಯ-ಪಾಪವಿಲ್ಲ,
ಧರ್ಮ-ಕರ್ಮವಿಲ್ಲ, ಹುಸಿ-ಖರೆಯಿಲ್ಲ, ಜ್ಞಾನ-ಅಜ್ಞಾನವಿಲ್ಲ,
ಹೆಣ್ಣು-ಗಂಡುವಿಲ್ಲ, ಹಿರಿದು-ಕಿರಿದುವಿಲ್ಲ,
ಉತ್ಪತ್ತಿ-ಸ್ಥಿತಿ-ಲಯವಿಲ್ಲ,
ಅವರಿಗೆ ಬ್ರಹ್ಮ-ವಿಷ್ಣು ರುದ್ರರು ಇಲ್ಲ.
ಅವರಿಗೆ ಮತ್ತಂ,
ಆ ನಿರಾಕಾರ ಪರವಸ್ತು ತಾನೆ ಗುರು-ಲಿಂಗ-ಜಂಗಮವಾಗಿ
ಗುರುವಿನಲ್ಲಿ ಉತ್ಪತ್ತಿ, ಲಿಂಗದಲ್ಲಿ ಸ್ಥಿತಿ,
ಜಂಗಮದಲ್ಲಿ ನಿಜೈಕ್ಯರು.
ಮತ್ತೆ ಪರಶಿವಮೂರ್ತಿ ತನ್ನ ವಿನೋದಕ್ಕೆ ಆಟವ ಆಡಬೇಕಾಗಿ
ಮಹದಾಕಾಶವ ಮಂಟಪವ ಮಾಡಿ, ಆಕಾಶವ ಪರದೆಯ ಕಟ್ಟಿ,
ಅಸಂಖ್ಯಾತ ಪ್ರಮಥಗಣಂಗಳಿಗೆ ಮೂರ್ತವ ಮಾಡಿಸಿ
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆ ಸೂತ್ರವ ಮಾಡಿ
ತಮ್ಮ ಕೈಯಲ್ಲಿ ಪಿಡಿದು, ಚಿತ್ರವಿಚಿತ್ರದಾಟವ
ಆಡಿಸುತ್ತಿಹುದಕ್ಕೆ ಲೆಕ್ಕವಿಲ್ಲ, ಹೇಳುವುದಕ್ಕೆ ಅಸಾಧ್ಯ.
ಆ ಪ್ರಮಥಗಣಂಗಳು ನೋಡಿ, ಆ ಬೊಂಬೆಗಳೇನು ಆಡಿಹವು ?
ಸೂತ್ರಿಕನು ಆಡಿಸಿದ ಹಾಂಗೆ ಆಡ್ಯಾವು.
ಆ ಗೊಂಬೆಗೆ ಸೂತ್ರವಲ್ಲದೆ ಶಿವನಿಲ್ಲ.
ಆ ಗೊಂಬೆಯೊಳಗೆ ಶಿವನಿದ್ದರೆ, ಆಡಿಸುವುದು ಹ್ಯಾಂಗೆ ?
ಇವೆಲ್ಲವು ಅನಿತ್ಯವೆಂದು ತಿಳಿದು ಪ್ರಮಥಗಣಂಗಳು
ತಮ್ಮ ಲಿಂಗದಲ್ಲಿ ನಿಜ ಮೋಕ್ಷಿಗಳಾಗಿ ಶಾಂಭವಪುರಕ್ಕೆ
ಹೋದ ಭೇದವ ಎನ್ನೊಳರುಹಿದಾತ
ನಮ್ಮ ಶಾಂತಕೂಡಲಸಂಗಮದೇವ./25
ನಿರಾಕಾರ ಪರವಸ್ತು ಹೇಗೆಂದಡೆ :
ಹೆಣ್ಣಲ್ಲ ಗಂಡಲ್ಲ, ಬೀಜವಲ್ಲ ವೃಕ್ಷವಲ್ಲ,
ಆಕಾರವಲ್ಲ ನಿರಾಕಾರವಲ್ಲ, ಸ್ವೇತವಲ್ಲ ಪೀತವಲ್ಲ,
ಹರಿತವಲ್ಲ ಮಾಂಜಿಷ್ಟವಲ್ಲ, ಕಪೋತವಲ್ಲ, ಮಾಣಿಕ್ಯವಲ್ಲ.
ಆತನು ವಣರ್ಾತೀತನು, ವಾಙ್ಮನಕ್ಕಗೋಚರನು.
ಇಂತಪ್ಪ ವಸ್ತುವಿನೊಳಗೆ ಬೆರೆವ ಪರಿಯೆಂತೆಂದಡೆ : ಗುರುವಿನ ವಾಕ್ಯವಿಡಿದು ಆಚರಿಸಿದವನು ಐಕ್ಯನು.
ಹೇಗೆಂದಡೆ : ಎಲೆಯಿಲ್ಲದ ವೃಕ್ಷದಂತೆ,
ಸಮುದ್ರದೊಳಗೆ ನೊರೆ ತೆರೆ ಬುದ್ಬುದಾಕಾರ ಅಡಗಿದ ಹಾಗೆ
ಭಕ್ತನು ಮಹೇಶ್ವರನೊಳಡಗಿ,
ಆ ಮಹೇಶ್ವರನು ಪ್ರಸಾದಿಯೊಳಡಗಿ,
ಆ ಪ್ರಸಾದಿಯು ಪ್ರಾಣಲಿಂಗಿಯೊಳಡಗಿ,
ಆ ಪ್ರಾಣಲಿಂಗಿಯು ಶರಣನೊಳಡಗಿ,
ಆ ಶರಣ ಐಕ್ಯನೊಳಡಗಿ,
ಆ ಐಕ್ಯನು ನಿರವಯದೊಳು ಕೂಡಿ
ಕ್ಷೀರವು ಕ್ಷೀರವ ಕೂಡಿದಂತೆ
ನೀರು ನೀರ ಕೂಡಿದಂತೆ
ಜ್ಯೋತಿ ಜ್ಯೋತಿಯ ಕೂಡಿದಂತೆ
ಬಯಲು ಬಯಲ ಕೂಡಿ
ಚಿದ್ಬಯಲುವಾಗಿ ನಿಂದ ನಿಲವ ಲಿಂಗದೊಳರುಹಿ
ಮೂವತ್ತಾರುಲಿಂಗದ ಮುಖದಿಂದಾದ
ಮೂವತ್ತಾರು ವಚನವ ಓದಿದವರು ಕೇಳಿದವರು
ಸದ್ಯೋನ್ಮುಕ್ತರಪ್ಪುದು ತಪ್ಪದು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./26
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ
ಕ್ರಮವು ಎಂತೆಂದಡೆ :
‘ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ |
ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||’
ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ
ಜಂಗಮಕ್ಕೆ ಪಾದಾರ್ಚನೆಯಂ ಮಾಡಿ
ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ
ತನ್ನ ಕರಕಮಲವಂ ಮುಗಿದು
ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ
ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು
ಗುರುವಿನಗುರು ಪರಮಗುರು ಪರಮಾರಾಧ್ಯ
ಶ್ರೀಪಾದಗಳಿಗೆ ಶರಣು ಶರಣಾಥರ್ಿಯೆಂದು
‘ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್]
ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾಕ್ಷತಾದಿಬಿಃ ||’
ಎಂದುದಾಗಿ,
ದೀರ್ಘದಂಡ ನಮಸ್ಕಾರವಂ ಮಾಡಿ
ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು
ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ
ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ
ವಿಭೂತಿಯಲ್ಲಿ ಬರೆದು
ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ
ಲಿಂಗೋಪಾದಿಯಲ್ಲಿ ಪಿಡಿದುಕೊಂಡು
ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ,
ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು
ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ,
ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ
ಆÙರುವೇಳೆ ಷಡಕ್ಷರವ ನುಡಿದು
ಇಷ್ಟಲಿಂಗವೆಂದು ಭಾವಿಸಿ,
ಎಡದಂಗುಷ್ಠದ ಮೇಲೆ ನೀಡುವಾಗ
ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ,
ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ
ಒಂದು ವೇಳೆ ‘ಓಂ ಬಸವಲಿಂಗಾಯನಮಃ’ ಎಂದು ಸ್ಮರಿಸಿ,
ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು
ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾಥರ್ಿಯೆಂದು
ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು.
ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ
ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು
ಗುರುಪಾದೋದಕ.
ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು
ಲಿಂಗಪಾದೋದಕ.
ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ.
ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು.
ಹೀಗೆ ಕ್ರಮವರಿದು ಸಲಿಸುವಗರ್ೆ
ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ
ನಮ್ಮ ಶಾಂತಕೂಡಲಸಂಗಮದೇವ./27
ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಡು ನಡೆಯಬಹುದಲ್ಲದೆ
ಪ್ರಸಾದವ ಕೊಂಬ ಭೇದವನರಿಯರು.
ಕರುಣಿಸು ಮದ್ಗುರವೆ,
ಕೇಳಯ್ಯ ಮಗನೆ : ಗುರುವಿನಲ್ಲಿ ತನುವಂಚನೆಯಿಲ್ಲದೆ ಕೊಂಬುದು ಶುದ್ಧಪ್ರಸಾದ ;
ಲಿಂಗದಲ್ಲಿ ಮನವಂಚನೆಯಿಲ್ಲದೆ ಕೊಂಬುದು ಸಿದ್ಧಪ್ರಸಾದ ;
ಜಂಗಮದಲ್ಲಿ ಧನವಂಚನೆಯಿಲ್ಲದೆ ಕೊಂಬುದು ಪ್ರಸಿದ್ಧಪ್ರಸಾದ.
ಈ ತ್ರಿವಿಧಲಿಂಗದಲ್ಲಿ ತ್ರಿವಿಧ ವಂಚನೆಯಿಲ್ಲದೆ
ಅವರ ಕರುಣಪ್ರಸಾದವ ಕೊಂಬ ಪ್ರಸಾದಕಾಯಕ್ಕೆ
ಪ್ರಳಯಬಾಧೆಗಳು ಬಾಧಿಸಲಮ್ಮವು ;
ಕರಿ ಉರಗ ವೃಶ್ಚಿಕ-ಇವು ಹೊದ್ದಲಮ್ಮವು ;
ಇರುವೆ ಕೆಂಡವು ಹೊದ್ದಲಮ್ಮವು.
ಹೊದ್ದುವ ಪರಿ ಎಂತೆಂದೊಡೆ : ಲಿಂಗದಲ್ಲಿ ನಿಷ್ಠೆಯಿಲ್ಲ ; ಜಂಗಮದಲ್ಲಿ ಪ್ರೇಮ-ಭಕ್ತಿಯಿಲ್ಲ ;
ವಿಭೂತಿ – ರುದ್ರಾಕ್ಷೆಯಲ್ಲಿ ವಿಶ್ವಾಸವಿಲ್ಲ ;
ಶಿವಾಚಾರದಲ್ಲಿ ದೃಢವಿಲ್ಲದ ಕಾರಣ
ತಾಪತ್ರಯಂಗಳು ಕಾಡುವವು ಎಂದಿರಿ ಸ್ವಾಮಿ,
‘ಮತ್ತೆ ನಂಬುಗೆಯುಳ್ಳ ಪ್ರಸಾದಿಗಳಿಗೆ ವ್ಯಾಧಿಯೇಕೆ ಕಾಡುವವು ?
ಸದ್ಗುರುಮೂರ್ತಿಯೆ ಕರುಣಿಸು ಎನ್ನ ತಂದೆ’.
ಕೇಳೈ ಮಗನೆ : ಭಕ್ತಗಣಂಗಳಿಗೆ ವಂದಿಸಿ ನಿಂದಿಸಿ
ಹಾಸ್ಯ ದೂಷಣವ ಮಾಡಿದಡೆ
ಅದೇ ವ್ಯಾಧಿರೂಪಾಗಿ ಕಾಡುವದು ;
ತಲೆಶೂಲೆ ಹೊಟ್ಟೆಶೂಲೆ ನಾನಾತರದ ಬೇನೆಯಾಗಿ ಕಾಡುವವು.
ಆ ಭಕ್ತಗಣಂಗಳಿಗೆ ತಾನು ನಿಂದಿಸಿದುದ ತಿಳಿದು,
ಅವರಿಗೆ ತ್ರಿಕರಣಶುದ್ಧವಾಗಿ ಸೇವೆಯ ಮಾಡಿ,
ಅವರ ಕರುಣವ ಹಡೆದಡೆ
ಆಗ ಅವರಿಗೆ ವ್ಯಾಧಿ ಬಿಟ್ಟು ಹೋಗುವವು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./28
ಬಸವ ನೀಲಲೋಚನೆ ಇಬ್ಬರ ನಾಮಾಕ್ಷರ ಕೂಡಲು
ಎಂಟಕ್ಷರಗಳಾದವು.
ಆ ಎಂಟಕ್ಷರಗಳೇ ಮಾಯಾಖ್ಯ ಪಂಚಾಕ್ಷರವಾದವು,
ಮಾಯಾಖ್ಯ ಪಂಚಾಕ್ಷರ ಎಂತೆಂದಡೆ : ಓಂ ಹ್ರಾಂ ಹ್ರೀಂ ನಮಃಶಿವಾಯ.
ಸಾಕ್ಷಿ: ‘ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ |
ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ತ್ವನಿರ್ಣಯಂ||
ನೀಲಲೋಚನೆ ಯಸ್ತು ನಾಮಾಕ್ಷರಂ ಪಂಚಕಂ |
ಸ್ತೋತ್ರಂ ವೇತ್ತಿ ತ್ರಿಸಂಧ್ಯಾಂ ಚ ಭಕ್ತಸ್ಸರ್ವಂ ಕಾಮಮೋಕ್ಷದಂ||’
ಎಂದುದಾಗಿ,
ಈ ಎಂಟಕ್ಷರವೇ ಎನ್ನ ಅಷ್ಟದಳಕಮಲದೊಳಗೆ
ಇಷ್ಟಲಿಂಗವಾಗಿ ನಿಂದ ನಿಲವ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./29
ಭಕ್ತಗಣಂಗಳು ನಮಸ್ಕಾರವ ಮಾಡುವ ಕ್ರಮವು:
ಗುರುವಿಗೆ ದೀರ್ಘದಂಡ ನಮಸ್ಕಾರವ ಮಾಡಿದಡೆ
ಹಿಂದಣ ಜನ್ಮದ ಪಾತಕದ ಪರಿಹಾರವು.
ಲಿಂಗಕ್ಕೆ ಕರಮುಟ್ಟಿ ನಮಸ್ಕಾರವ ಮಾಡಿದಡೆ
ಉರಿಯುಂಡ ಕಪರ್ುರದ ಹಾಗೆ ಆಗುವುದು.
ಜಂಗಮಕ್ಕೆ ತಲಮುಟ್ಟಿ ನಮಸ್ಕಾರವ ಮಾಡಿದಡೆ
ನಿಜಮುಕ್ತಿಯಾಗುವುದು.
ಭಕ್ತಂಗೆ ಸಾಷ್ಟಾಂಗ ನಮಸ್ಕಾರವು.
ಅಭಯಂಗೆ ಸಾಷ್ಟಾಂಗ ನಮಸ್ಕಾರವು.
ಏಕೆಂದಡೆ, ಆ ಭಕ್ತನ ಹೃದಯದಲ್ಲಿ
ಅಷ್ಟಾವರಣಮೂರ್ತಿಗಳಿಹರು.
ಅದಕ್ಕೆ ಭಕ್ತಂಗೆ ಅಷ್ಟಾಂಗಭೂಮಿಗೆ ಹೊಂದಿ
ನಮಸ್ಕಾರವ ಮಾಡಿದಡೆ ಗಣಪದವಿಯಪ್ಪುದು.
ಇದಕ್ಕೆ ತ್ರಿಕರಣಶುದ್ಭವಾಗಿ ವಂಚನೆಯಿಲ್ಲದೆ
ತನು-ಮನ-ಧನವನೊಪ್ಪಿಸಿ
ಈ ಚತುರ್ವಿಧಮೂರ್ತಿಗಳಿಗೆ
ನಮಸ್ಕಾರವ ಮಾಡಿದಡೆ ನಾಲ್ಕು ಪದವಿ
ಸಿದ್ಧವಪ್ಪುದು ತಪ್ಪದು ಶಾಶ್ವತ
ಎಂದಾತ ನಮ್ಮ ಶಾಂತಕೂಡಲಸಂಗಮದೇವ./30
ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿಹವು.
ಲಿಂಗವು ತಾನು ಬ್ರಹ್ಮಾಂಡದೊಳಡಗಿ
ಆ ಬ್ರಹ್ಮಾಂಡವು ಲಿಂಗವು ತನ್ನೊಳಡಗಿದ ಭೇದವು
ಶಾಸ್ತ್ರವ ಬಲ್ಲವರಿಗೆ ಕಾಣಿಸದು,
ಆಗಮಯುಕ್ತರಿಗೆ ತಿಳಿಯದು ;
ಕರ್ಮ ಭೂಭಾರಿಗಳಿಗೆ ಸಲ್ಲದು.
ಇದನ್ನು ಭಕ್ತಗಣಂಗಳಿಗೆ ಗುರು ಪ್ರತ್ಯಕ್ಷಮಂ ಮಾಡಿ
ತೋರಿಸಿದ ಭೇದವು ಎಂತೆಂದಡೆ : ಕರಿ ಕನ್ನಡಿಯೊಳಡಗಿದ ಹಾಗೆ ;
ಮುಗಿಲ ಮರೆಯ ಸೂರ್ಯನ ಹಾಗೆ
ನೇತ್ರದ ಕೊನೆಯೊಳಗೆ ಆಕಾಶವಡಗಿದ ಹಾಗೆ,
ನೆಲದ ಮರೆಯ ನಿಧಾನದ ಹಾಗೆ
ಬೀಜದೊಳಡಗಿದ ವೃಕ್ಷದ ಹಾಗೆ.
ಈ ಭೇದವು ಗುರುಭಕ್ತರಂಶಿಕರಾದವರಿಗೆ ಸಾಧ್ಯವಲ್ಲದೆ
ಉಳಿದ ಭಿನ್ನ ಜ್ಞಾನಿಗಳೆತ್ತ ಬಲ್ಲರು ಎಂದಾತ
ನಮ್ಮ ಶಾಂತಕೂಡಲಸಂಗಮದೇವ./31
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ.
ಅದೇಕೆಂದಡೆ ಶಿವನು ದೀನನು.
ಅದು ಹೇಗೆಂದಡೆ:
ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು.
ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು,
ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ
ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು
ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ
ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು.
ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ
ಕನ್ನವನಿಕ್ಕಿ ಒಯ್ದು,
ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ,
ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ.
ದಿನದಿನಕ್ಕೆ ಇದೇ ಚಿಂತೆ ನಿಮಗೆ.
ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು.
ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ
ಇಂದಿನ ಕಾಸು ಉದಯಕ್ಕೆ ತಂಗಳೆಂಬರು.
ನಾಳಿನ ಚಿಂತೆ ನನಗೇಕೆಂಬರು.
ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು,
ನಮ್ಮ ಕರಿಕಾಲಚೋಳನ ಮನೆಯಲ್ಲಿ
ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ?
ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ,
ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು.
ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು.
ಇದ ನೀವು ಬಲ್ಲಿರಿಯಾಗಿ,
ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ
ಎಂದಾತ ನಮ್ಮ ಶಾಂತಕೂಡಲಸಂಗಮದೇವ./32
ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ,
ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ,
ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ,
ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು
ಅವರಿಗೆ ಅಂಜಿ ಮನದ ಕೊನೆಯಲ್ಲಿ
ಮಂತ್ರರೂಪಾಗಿ ನಿಂದ ಕಾರಣ
ಹೊನ್ನಿನ ನೆನಹು ಕೆಟ್ಟಿತ್ತು ನೋಡಾ !
ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ
ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ
ಹೆಣ್ಣಿನ ನೋಟ ಕೆಟ್ಟಿತ್ತು.
ಕರಕಮಲ ಗದ್ದುಗೆಯ ಮಾಡಿದ ಕಾರಣ
ಮಣ್ಣಿನ ಧಾವತಿ ಬಿಟ್ಟುಹೋಯಿತ್ತು.
ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ
ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ.
ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು.
ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ
ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿಧಿ ನಿಧಾನಗಳುಂಟು,
ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ.
ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ.
ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು.
ಅವರ ನಾಮವ ಪೇಳ್ವೆನು –
ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು,
ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು.
ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು.
ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ
ಹೇಳಿಹೆನು ಕೇಳಿರೆ ಲಿಂಗವೆ.
ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು,
ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ
ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ,
ತನುತ್ರಯವನೆ ವಸ್ತ್ರವ ಮಾಡಿ,
ಇವುಗಳನೆ ಅವರು ನಮಗೆ ಕೊಟ್ಟರು.
ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ
ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು.
ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ
ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು.
ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು.
ನೂರೆಂಟು ನಾಮ ಹರಗಣ ಕೊರಳಲಿ ಹಾಕಿದರು.
ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ
ಜೋಡಂಗಿಯ ಮಾಡಿ ತೊಡಿಸಿದರು.
ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು.
ಆವ ಕಂಟಕವು ಬಾರದ ಹಾಗೆ
ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು.
ಭಕ್ತಿಯೆಂಬ ನಿಧಾನವ ಕೊಟ್ಟು,
ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು.
ಅಷ್ಟಾವರಣವೆ ನಿಧಿನಿಧಾನವೆಂದು ಹೇಳಿದರು.
ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ.
ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು
ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ./33
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ.
ಕೇಳೈ ಮಗನೆ :
ಮುಖಪ್ರಕ್ಷಾಲನ ಮಾಡುವಾಗ
ಲಿಂಗಕ್ಕೆ ಮಜ್ಜನವ ನೀಡಿದುದು
ಇಷ್ಟಲಿಂಗದ ಮಜ್ಜನ.
ಲಿಂಗಾರ್ಚನೆ ಮಾಡುವಾಗ
ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು
ಪ್ರಾಣಲಿಂಗದ ಮಜ್ಜನ.
ಲಿಂಗಾರ್ಚನೆ ಮುಗಿದ ಬಳಿಕ
ಮಜ್ಜನ ನೀಡಿದುದು
ಭಾವಲಿಂಗದ ಮಜ್ಜನವೆಂದರಿವುದು.
ಇನ್ನು ವಿಭೂತಿಯ ಧರಿಸುವ ಕ್ರಮವು : ಸ್ನಾನ ಧೂಳನ ಧಾರಣ.
ಸ್ನಾನ ಮಾಡಿದುದು ಇಷ್ಟಲಿಂಗದಲ್ಲಿ ;
ಧೂಳನವ ಮಾಡಿದುದು ಪ್ರಾಣಲಿಂಗದಲ್ಲಿ ;
ಧಾರಣವ ಮಾಡಿದುದು ಭಾವಲಿಂಗದಲ್ಲಿ.
ಇನ್ನು ಲಿಂಗಪೂಜೆ ;
ಹೊರಗಣ ಪುಷ್ಪ ಇಷ್ಟಲಿಂಗಕ್ಕೆ ;
ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ ;
ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು.
ಇನ್ನು ಜಪದ ಕ್ರಮ ;
ಹನ್ನೆರಡು ಪ್ರಣವ ಮಾಡಲಾಗಿ
ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ ;
ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು
ಪ್ರಾಣಲಿಂಗಕ್ಕೆ ;
ಬಯಲ ಜಪ ಭಾವಲಿಂಗಕ್ಕೆಂದರಿವುದು.
ಇನ್ನು ತ್ರಿಕಾಲಪೂಜೆ : ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ ;
ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ ;
ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು.
ಇನ್ನು ಪ್ರಸಾದತ್ರಯದ ವಿವರ : ಶುದ್ಧಪ್ರಸಾದ ಇಷ್ಟಲಿಂಗಕ್ಕೆ ;
ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ ;
ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು.
ಇನ್ನು ಭೋಗತ್ರಯದ ವಿವರ : ಭೋಜನಸುಖವು ಇಷ್ಟಲಿಂಗಕ್ಕೆ ;
ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ ;
ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು.
ಲಿಂಗಾಂಗಿಯ ಚರಿತ್ರದ ವಿವರ ;
ನಿಂತಿದರ್ುದು ಇಷ್ಟಲಿಂಗಕ್ಕೆ ;
ಕುಂತಿದರ್ುದು ಪ್ರಾಣಲಿಂಗಕ್ಕೆ
ಮಲಗಿದರ್ುದು ಭಾವಲಿಂಗಕ್ಕೆಂದರಿವುದು.
ಇನ್ನು ನಡೆವುದು ಇಷ್ಟಲಿಂಗವು ;
ನುಡಿವುದು ಪ್ರಾಣಲಿಂಗವು ;
ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು.
ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು
ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ
ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು.
ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ
ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು.
ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ
ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು.
ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ
ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು.
ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು
ಸನ್ನಹಿತ ಭಾವಲಿಂಗವು ಎಂದರಿವುದು.
ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು ;
ಮತ್ರ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು ;
ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು.
ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು ;
ಚರ್ಮಚಕ್ಷುವಿಗೆ ಅಗೋಚರವು,
ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು.
ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು.
ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು
ಇಷ್ಟಲಿಂಗವು ತಾನೆ.
ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು
ಪ್ರಾಣಲಿಂಗವು ತಾನೆ.
ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು
ಭಾವಲಿಂಗವು ತಾನೆ.
ಸಾಕ್ಷಿ : ‘ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ |
ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||’
ಎಂದುದಾಗಿ,
ಅಂಗವೆಂದರೆ ರೂಪು, ಮನವೆಂದರೆ ರುಚಿ,
ಸಂತೋಷವೆಂದರೆ ತೃಪ್ತಿ ಎಂದರಿವುದು.
ಕ್ರಿಯೆವಿಡಿದು ಕಾಯಾರ್ಪಣ ಮಾಡುವ
ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ.
ಜ್ಞಾನವಿಡಿದು ಕರಣಾರ್ಪಣವ ಮಾಡುವ
ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ.
ಭಾವವಿಡಿದು ಪರಿಣಾಮಾರ್ಪಣ ಮಾಡುವ
ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ.
ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ
ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು.
ಬಯಲ ಹಸ್ತದಿಂದ ಪೂಜಿಸಿ
ಆ ಬಯಲಲಿಂಗದೊಳಗೆ ತಾನಾಗಿ
ತನ್ನೊಳಗೆ ಬಯಲ ಲಿಂಗವು ಬೆರದುದು
ಇದು ಲಿಂಗಾಂಗಸಂಗ ಸಮರಸವು.
ಇದು ‘ಶರಣಸತಿ ಲಿಂಗಪತಿ’ ನ್ಯಾಯವು.
ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು.
ಇಂತಿವೆಲ್ಲ ಕ್ರಮವನೊಳಕೊಂಡು
ಇಷ್ಟಬ್ರಹ್ಮವು ತಾನೆಯೆಂದರಿದಾತ
ನಮ್ಮ ಶಾಂತಕೂಡಲಸಂಗಮದೇವ
ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ./34
ಲಿಂಗಾರ್ಚನೆಯ ಮಾಡುವಾಗ
ಪಾದಪೂಜೆಯ ಮಾಡುವಾಗ
ಪಾದೋದಕ ಪ್ರಸಾದ ಕೊಂಬುವಾಗ
ಭವಿಶಬ್ದ ಕುಶಬ್ದ ಹಿಂಸಾಶಬ್ದ ಹೊಲೆಶಬ್ದ ಹುಸಿಶಬ್ದ
ಹೇಸಿಕೆಶಬ್ದ ವಾಕರಿಕೆಶಬ್ದ
ಇವೆಲ್ಲವ ಪ್ರಸಾದಿಗಳು ವಜರ್ಿಸುವುದು.
ವಜರ್ಿಸದಿರ್ದಡೆ,
ಲಿಂಗಾರ್ಚನೆ ಪಾದಪೂಜೆ ಪಾದೋದಕ ಪ್ರಸಾದ ನಿಷ್ಫಲ.
ಸಾಕ್ಷಿ : ‘ಭವಿಶಬ್ದಂ ಕುಶಬ್ದಂ ಚ ಹಿಂಸಾಶಬ್ದಂ ಸತಾಪಕಂ |
ಶ್ವಪಚ್ಯಾನೃತಶಬ್ದಂ ಚ ಕರ್ಕಶೋ ಭಾಂಡಿಕೋಪಿ ವಾ |
ಬೀಭತ್ಸಕಂ ಮಹಾದೇವಿ ಪ್ರಸಾದಂ ಚ ವಿವರ್ಜಯೇತ್ ||’
ಎಂದುದಾಗಿ,
ಪ್ರಸಾದ ಮುಗಿಯುವತನಕ ಭೋಜ್ಯ ಭೋಜ್ಯಕ್ಕೆ
ಪಂಚಾಕ್ಷರಿಯ ಸ್ಮರಿಸುತ್ತ ಸಲಿಸುವುದು.
ಶಿವಸ್ಮರಣೆಯಿಂದ ಸ್ವೀಕರಿಸಿದ್ದು ಮುನ್ನೂರರುವತ್ತು
ವ್ಯಾಧಿ ನಿಲ್ಲದೆ ಓಡುವವು.
ಹೀಗೆ ನಂಬಿಗೆಯುಳ್ಳಡೆ ಪ್ರಸಾದಸಿದ್ಧಿಯಪ್ಪುದು ನೋಡಾ !
ನಮ್ಮ ಬಿಬ್ಬಬಾಚಯ್ಯನವರು ನಂಬಿದ ಕಾರಣದಿಂದ
ಓಗರ ಪ್ರಸಾದವಾಗಿ,
ಎಂಜಲವೆಂದ ವಿಪ್ರರ ಮಂಡೆಯಮೇಲೆ ತಳೆಯಲು ಕೆಂಡವಾಗಿ
ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ ?
ಮತ್ತೆ, ಮರುಳಶಂಕರದೇವರು ಪ್ರಸಾದದ ಕುಂಡದೊಳಗೆ
ಹನ್ನೆರಡು ವರ್ಷವಿದ್ದು ನಿಜೈಕ್ಯವಾದುದಿಲ್ಲವೆ ?
ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು ;
ನಂಬಿದವರಿಗಿಂಬಾಗಿಪ್ಪನು ನಮ್ಮ ಶಾಂತಕೂಡಸಂಗಮದೇವ./35
ವಸ್ತುವೆಂದಡೆ ಪರಬ್ರಹ್ಮದ ನಾಮವು.
ಅದು ಹೇಗೆಂದಡೆ :
ಹರಿ ಸುರ ಬ್ರಹ್ಮಾದಿಗಳಿಗೆ ಅಗೋಚರವಾಗಿಪ್ಪುದು.
ಸಾಧ್ಯಕ್ಕಸಾಧ್ಯವಾಗಿಪ್ಪುದು.
ಭೇದ್ಯಕ್ಕಭೇದ್ಯವಾಗಿಪ್ಪುದು.
ಕೋಟಿ ಸೂರ್ಯ ಕೋಟಿ ಸೋಮಪ್ರಕಾಶಕ್ಕೆ
ಮಿಗಿಲಾಗಿಪ್ಪುದು.
ಈರೇಳು ಭುವನವ ತುಂಬಿಕೊಂಡಿಪ್ಪುದು.
ಅಪ್ರಮಾಣ ಅಗೋಚರವಾದ ವಸ್ತು
ಎನ್ನ ಕರ ಮನ ಭಾವದೊಳಗಿಪ್ಪ ಭೇದವ ತಿಳುಹಿದಾತ
ನಮ್ಮ ಶಾಂತಕೂಡಲಸಂಗಮದೇವ./36
ಶಿವನು ಗುರುಭಕ್ತರ ಮನವ ನೋಡುವುದಕ್ಕೆ
ಕಂಟಕವನೊಡ್ಡುವನು, ಅಪರಾಧಗೊಡುವನು,
ಭಾಗ್ಯವೆಲ್ಲ ಬಯಲುಮಾಡುವನು.
ಬಂಧುಗಳೆಲ್ಲರ ವೈರಿಗಳ ಮಾಡುವನು,
ದೇಶತ್ಯಾಗವ ಮಾಡಿಸುವನು,
ಭಯಭೀತಿಯನೊಡ್ಡುವನು,
ಮನಕ್ಕೆ ಅಧೈರ್ಯವ ತೋರುವನು.
ಸಾಕ್ಷಿ: ‘ಪುಣ್ಯಮೇಕೋ ಮಹಾಬಂಧುಃ ಪಾಪಮೇಕೋ ಮಹಾರಿಪುಃ |
ಅಸಂತೋಷೋ ಮಹಾವ್ಯಾಧಿಃ ಧೈರ್ಯಂ ಸರ್ವತ್ರಸಾಧನಂ || ”
ಎಂದುದಾಗಿ,
”ಅಪರಾಧ್ಯೋರ್ಥನಾಶಂ ಚ ವಿರೋಧೋ ಬಾಂಧವೇಷು ಚ |
ದೇಶತ್ಯಾಗೋ ಮಹಾವ್ಯಾಧಿಃ ಮದ್ಭಕ್ತಸ್ಯ ಸುಲಕ್ಷಣಂ || ”
ಇಂತೀ ದುಃಖವೆಲ್ಲವು
ಶಿವನ ಅನುಜ್ಞೆಯಿಂದ ಬಂದವೆಂದು ತಿಳಿದು,
ಗುರುಲಿಂಗಜಂಗಮಕ್ಕೆ ಬಲಗೊಂಡು
ನೀವೇ ಗತಿಯೆಂದು ನೀವೇ ಮತಿಯೆಂದು,
ನೀವು ಹಾಲಲದ್ದಿರಿ ನೀರಲದ್ದಿರಿ
ಎಂಬ ಭಾವದಲ್ಲಿದ್ದಡೆ
ಅವರ ಶಿವನು ತನ್ನ ಗರ್ಭದಲ್ಲಿ ಇಂಬಿಟ್ಟುಕೊಂಬನು.
ನಮ್ಮ ಶಾಂತಕೂಡಲಸಂಗಮದೇವ
ತನ್ನ ನಂಬಿದವರ ಹೃದಯದಲ್ಲಿಪ್ಪನು./37
ಶಿವಭಕ್ತ ಆವ ಊರೊಳಗಿದ್ದರೇನು ?
ಆವ ಕೇರಿಯಲಿದ್ದರೇನು ?
ಹೊಲಗೇರಿಯೊಳಗಿದ್ದರೇನು ?
ಶಿವಭಕ್ತನಿದ್ದುದೇ ಕೈಲಾಸ !
ಆತನ ಮನೆಯೇ ಶಿವನ ಅರಮನೆ !
ಆತನ ಮನೆಯ ಸುತ್ತಮುತ್ತಲಿದ್ದ ಲೋಕವೆಲ್ಲ ಶಿವಲೋಕ !
ಸಾಕ್ಷಿ : ‘ಚಾಂಡಾಲವಾಟಿಕಾಯಾಂ ಚ ಶಿವಭಕ್ತಃ ಸ್ಥಿತೋ ಯದಿ |
ಅತ್ಯ್ರಾಪಿ ಶಿವಲೋಕಃ ಸ್ಯಾತ್ ತದ್ಗೃಹಂ ಶಿವಮಂದಿರಂ ||’
ಎಂದುದಾಗಿ,
ಇಂತಪ್ಪ ಶಿವಭಕ್ತನ ಅಂಗಳವ ಕಂಡಡೆ
ಕೋಟಿ ಬ್ರಹ್ಮಹತ್ಯ ಕೋಟಿ ಶಿಶುಹತ್ಯ
ಇವೆಲ್ಲ ಅಳಿದುಹೋಗುವವು.
ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದವರಿಗೆ
ಅಷ್ಟೈಶ್ವರ್ಯ ಅಷ್ಟಮಹಾಸಿದ್ಧಿ ಫಲವು ತಪ್ಪದು.
ಅವರ ಒಕ್ಕುಮಿಕ್ಕ ಪ್ರಸಾದವ ಕೊಂಡಡೆ
ಸದ್ಯೋನ್ಮುಕ್ತರಪ್ಪುದು ತಪ್ಪದು.
ಇಂತಪ್ಪ ಶಿವಭಕ್ತರಿಗೆ ಏನೆಂದು ಉಪಮಿಸುವೆನಯ್ಯ
ಆತನು ಮಹಾದೇವನಲ್ಲದೆ ಬೇರುಂಟೆ ?
ಆತ ಅಗಮ್ಯ ಅಗೋಚರ ಅಪ್ರಮಾಣ ಆನಂದಮಹಿಮನು.
ಅಂತಪ್ಪ ಸದ್ಭಕ್ತನ ಶ್ರೀಚರಣವ ಎನ್ನೊಳಗೆ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ./38
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಮಹಾಘನಲಿಂಗವು
ಭಕ್ತಂಗೆ ಸಾಕಾರವಾಗಿ ತನುತ್ರಯಕ್ಕೆ ಇಷ್ಟ-ಪ್ರಾಣ-ಭಾವಲಿಂಗ
ಸ್ವರೂಪವಾಗಿರ್ದ ಕಾರಣ,
ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿ ಲಿಂಗದೊಳಗಿಪ್ಪಾತನೆ ಭಕ್ತ.
ಹೀಗಲ್ಲದೆ ನಿತ್ಯವಾದ ಲಿಂಗಕ್ಕೆ ಕೇಡ ಬಯಸುವ
ತನ್ನ ಸಂಕಲ್ಪ ವಿಕಲ್ಪ ಸಂದೇಹದಿಂದ ನುಡಿದಡೆ
ತನ್ನ ಭಾವಕ್ಕಲ್ಲದೆ ಆ ಮಹಾಘನಲಿಂಗವ ನಂಬಿದವರಿಗೆ
ಇಂಬಾಗಿಪ್ಪನು ವಿಶ್ವಾಸದಿಂದ.
ವಿಶ್ವಾಸದಿಂದ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆ ಲಿಂಗವಾದುದಿಲ್ಲವೆ ?
ಸದ್ಭಾವದಿಂದ ಬಳ್ಳೇಶಮಲ್ಲಯ್ಯಂಗೆ ಬಳ್ಳ ಲಿಂಗವಾದುದಿಲ್ಲವೆ?
ಭಾವದಿಂದ ನಂಬೆಣ್ಣಂಗೆ ಅಂಗನೆಯ ಕುಚ ಲಿಂಗವಾದುದಿಲ್ಲವೆ ?
ವಿಶ್ವಾಸದಿಂದ ಕೆಂಬಾವಿ ಭೋಗಣ್ಣಂಗೆ ಲಿಂಗ ಒಡನೆ ಹೋದುದಿಲ್ಲವೆ?
ಮತ್ತೆ ಇಷ್ಟಲಿಂಗದೊಳಗೆ ನೀಲಲೋಚನೆಯಮ್ಮನವರ
ಶರೀರವೆ ಏಕಾಕಾರವಾಗಲಿಲ್ಲವೆ ?
ಸಾಕ್ಷಿ: ”ಕಪರ್ೂರಮನಲಗ್ರಾಹ್ಯಂ ರೂಪಂ ನಾಸ್ತಿ ನಿರಂತರಂ |
ತಥಾ ಲಿಂಗಾಂಗಸಂಯೋಗೇ ಅಂಗೋ ನಿರ್ವಯಲಂ ಗತಃ ||’
ಎಂದುದಾಗಿ,
ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು.
ಇಂತಪ್ಪ ಮಹಾಲಿಂಗದ ನಿಲವ ಅರಿದಾತ
ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ
ದುಭರ್ಾವಕರು ಎತ್ತ ಬಲ್ಲರು ನೋಡಾ ! /39
ಸಹಜ ಶಿವಭಕ್ತರಾದವರು ತಟ್ಟೆ ಬಟ್ಟಲೊಳಗುಂಡದ್ದು
ಇಷ್ಟಲಿಂಗದ ಪ್ರಸಾದ.
ಕರಕಮಲದೊಳಗುಂಡದ್ದು ಪ್ರಾಣಲಿಂಗದ ಪ್ರಸಾದ.
ಪಾವಡ ಪರ್ಣದೊಳಗುಂಡದ್ದು ಭಾವಲಿಂಗದ ಪ್ರಸಾದ.
ಲಿಂಗದಲ್ಲಿ ಮನ ನೋಟ ನಿಲಿಸಿಕೊಂಬುವುದು ಲಿಂಗಪ್ರಸಾದ.
ಲಿಂಗದಲ್ಲಿ ಮನ ನೋಟವಿಲ್ಲದೆ ಕೊಂಬುದು ಅನರ್ಪಿತವು.
ಅದು ಕಾರಣ, ಲಿಂಗ ನೆನಹಿನಿಂದಲೆ ಸ್ವೀಕರಿಸುವುದು
ಎಂದರುಹಿದಾತ
ನಮ್ಮ ಶಾಂತಕೂಡಲಸಂಗಮದೇವ./40