Categories
ವಚನಗಳು / Vachanagalu

ಗಾಣದ ಕಣ್ಣಪ್ಪ ವಚನಗಳು

262
ಒಂದು ಧನುವಿಂಗೆ ಮೂರಂಬ ಹಿಡಿದೆ.
ಒಂದು ಬಾಣದ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು.
ಮತ್ತೊಂದು ಬಾಣವ ಬಿಡಲಾಗಿ ಪದ್ಮನಾಭನ ಹೆಡಗಯ್ಯ ಕಟ್ಟಿತ್ತು.
ಕಡೆಯ ಬಾಣ ರುದ್ರನ ಹಣೆಯನೊಡೆದು
ಅಲಗು ಮುರಿಯಿತ್ತು; ಗರಿ ಜಾರಿತ್ತು;
ನಾರಿಯ ಹೂಡುವ ಹಿಳುಕು ಹೋಳಾಯಿತ್ತು;
ಗೊಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲುಮುರಿಯಿತ್ತು.
263
ಒಂದೆ ಕೋಲಿನಲ್ಲಿ ಮೂರುಲೋಕ ಮಡಿಯಿತ್ತು.
ಬಿಲ್ಲಿನ ಕೊಪ್ಪು ಹಾರಿ ನಾರಿ ಸಿಡಿದು ನಾರಾಯಣನ ತಾಗಿತ್ತು.
ನಾರಾಯಣನ ಹಲ್ಲು ಮುರಿದು ಬ್ರಹ್ಮನ ಹಣೆಯೊಡೆಯಿತ್ತು.
ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು, ನಷ್ಟವಾಯಿತ್ತು;
ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು.
264
ಗಾಣವ ಹಾಕಲಾಗಿ ಆರಾರು ಸಿಕ್ಕಿದರು ಆರೈಕೆಗೊಳ್ಳಯ್ಯ.
ಐದಕ್ಕೊಂದು ಹೋಗಿ ನಾಲ್ಕರಲ್ಲಿ ನಾಚಿಕೆಗೆಟ್ಟು
ಜಗದಾಶೆಯ ಬಯಕೆಯಿಂದ ದಶಾವತಾರವಾದ.
ಇಷ್ಟದ ಇಂದ್ರಿಯಕ್ಕಾಗಿ ಪಾಶವ ಹೊತ್ತ ತಲೆಯಲ್ಲಿ
ಇಂತೀ ವೇಷಧಾರಿ ಹಾಕಿದ ಗಾಣದಲ್ಲಿ ಇಷ್ಟಕ್ಕೆ ಸಿಕ್ಕಿ
ಘಾಸಿಯಾದರು ಇನ್ನಿಪ್ಪುವರಾರಯ್ಯ
ಗೊಹೇಶ್ವರನ ಶರಣ ಅಲ್ಲಮನಲ್ಲದೆ?
265
ತನ್ನ ತಾ ಬೀಳುವರ ಕಂಡು ತಳ್ಳಿ ಹಗೆಯಾಗಲೇಕೆ?
ಒಡೆದುದ ಕಂಡು ಒಡಯಿರಿಯಲೇಕೆ?
ಇಂತೀ ಬಿಡುಮುಡಿಯನರಿಯದೆ
ಒಡೆಯರೆಂದು ಕೊಡುವರ ಕಾಲ ಪಡಿಗಕ್ಕೆ
ಇವರು ಹೆಸರೊಡೆಯರಲ್ಲದೆ ಅಸಮಾಕ್ಷರಲ್ಲ.
ಇಂತೀ ಗಸಣಿಗಿನ್ನೇವೆ,
ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮಾ.

266
ನಾ ಬಂದುದಕ್ಕೆ ಮಾಡಿದೆ.
ನೀ ಕಳುಹಿದವರ ಕೊಂದೆ.
ಬಂದೆ ನೀವಿರಿಸಿದಂತಿದ್ದು
ಎನ್ನಗಿನ್ನು ಬಂಧ ಮೋಕ್ಷವೇಕೆ,
ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮನ ಲೇಪವಾದವಂಗೆ.
267
ನಾ ಬಂದ ಹಾದಿಯಲ್ಲಿ
ಎಂಬತ್ತು ನಾಲ್ಕು ಲಕ್ಷ ಕಳ್ಳರು ಕಟ್ಟಲಂಜಿದರು.
ಮೂರು ಠಾವಿನ ಅನುವ ಮೀರಿದೆ.
ಬಂದು ನಿಂದಿರಲಾಗಿ, ಈ ದೇಶದ ಅಂದವೇನೊ
ಎಂದು ಕೇಳಿದ, ಗೊಹೇಶ್ವರನ ಶರಣ ಅಲ್ಲಮನು.
268
ನಾ ಹಡೆದೆ ಮೂವರು ಸೂಳೆಯರ.
ಒಬ್ಬಳಿಗೋಹೆಯನಿಕ್ಕುವೆ;
ಒಬ್ಬಳಿಗೆ ವೇಳೆಗೊತ್ತೆಯ ಕೊಡುವೆ;
ಒಬ್ಬಳ ಮನೆಯೊಳಗೆ ಹಾಕಿಕೊಂಡೆ.
ಎನ್ನ ವಂಚಿಸಿ ಮೂವರೂ ಓಡಿಹೋದರು; ಲೇಸಾಯಿತ್ತೆಂದೆ,
ಗೊಹೇಶ್ವರನ ಶರಣ ಅಲ್ಲಮನ ದೆಸೆಯಿಂದ.
267
ಬಂದ ಜೀವವನೆಲ್ಲವ ಕೊಂದೆ.
ಅಂದಂದಿಗೆ ಹೆರಹಿಂಗಿದೆ.
ಅವರೆಂದಿನ ಅಸುವಿಂಗೊಡೆಯ ಬಂದರೂ ಬಿಡೆನೆಂದೆ
ಗೊಹೇಶ್ವರನ ಶರಣ ಅಲ್ಲಮನಲ್ಲಿ.
270
ಮದಕರಿ ಮದವೇರಿ ಬೀದಿಯಲ್ಲಿ ಬರಲಾಗಿ
ಎಂಟು ಕೇರಿಯ ಕಂಬ ಮುರಿದು
ಒಂಬತ್ತು ಬಾಗಿಲ ಕದವ ಕಿತ್ತು
ಮತ್ತೆ ಎನ್ನ ಮೇಲೊತ್ತಿ ಬರಲಾಗಿ ನಿಶ್ಚಯವಾಗಿ ನಿಂದೆ.
ಮತ್ತಗಜದ ಸೊಂಡಿಲು ಮುರಿದೊತ್ತಿ ಇಟ್ಟೆ ಆ ಗಜವ
ಗೊಹೇಶ್ವರನ ಶರಣ ಅಲ್ಲಮನೊತ್ತಿಗಾಗಿ.
271
ಹೋಗುತಿದ್ದ ಎರಳೆಯನೆಚ್ಚಡೆ ಮೂರು ಕಾಲು ಹರಿದು
ಒಂದರಲ್ಲಿ ಆಧರಿಸಿ ನಿಂದಿತ್ತು.
ನಿಂದ ಹೆಜ್ಜೆಯ ಕೀಳಲಾರದೆ ಅಂಗ ಬಿದ್ದಿತ್ತು; ಎರಳೆ ಅಳಿಯಿತ್ತು.
ಗೊಹೇಶ್ವರನ ಶರಣ ಅಲ್ಲಮನಲ್ಲಿ ಬೇಂಟೆಯ ಹಪ್ಪು ಕೆಟ್ಟಿತ್ತು.