Categories
ವಚನಗಳು / Vachanagalu

ಗಾವುದಿ ಮಾಚಯ್ಯ ವಚನಗಳು

272
ಎನ್ನಂತರಂಗವೆ ಬಸವಣ್ಣನಯ್ಯಾ.
ಎನ್ನ ಬಹಿರಂಗವೆ ಚೆನ್ನಬಸವಣ್ಣನಯ್ಯಾ.
ಎನ್ನ ಸರ್ವಾಂಗವೆ ಪ್ರಭುದೇವರಯ್ಯಾ.
ಇಂತಿವರ ಕರುಣದ ಕಂದನಾಗಿ ಬದುಕಿದೆನಯ್ಯಾ,
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
273
ಒಡಲು ಒಡವೆ ಧರೆ ನಿನಗಾಯಿತ್ತೆಂದು
ಉಣಲೊಲ್ಲದಿಪ್ಪ ಮರುಳೆ ಕೇಳಾ!
ಅಡವಿಯನೆ ಕೆಳೆಗೊಂಡು ನೆಲದೊಳಗೆ ಬೈಚಿಟ್ಟು.
ಹೊಲಬುದಪ್ಪಿ ಭೂತ ಕೊಡಲೊಲ್ಲದವೆಯೊ.
ಹಾಗಕ್ಕೆ ಹಾಗವ ಗಳಿಸಿ ಆಗಾಯಿತ್ತೆಂದು
ಉಣಲೊಲ್ಲದಿಪ್ಪ ಮರುಳೆ ಕೇಳಾ!
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ಕೇಳು ಮಾನವಾ.

274
ಕೆರೆಯಲ್ಲಿ ಉಂಡು ತೊರೆಯಲ್ಲಿ ನೆನೆವನಂತೆ
ಆರು ಕೊಟ್ಟ ಒಡವೆಯ ಆರಿಗಿಕ್ಕಿ
ತಾನಾರಾಧಿಸಿಕೊಂಬವನ ನೋಡಾ!
ಅಲ್ಲಿಗಲ್ಲಿಗೆ ಎಲ್ಲಿಯೂ ತಪ್ಪದು.
ಇದನರಿದು, ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.

275
ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು?
ತಾ ಹೇಳುವ ಅರಿವು ತನಗೆ ಮರವೆಯಾದ ಮತ್ತೆ
ತಾನರಿವುದೇನು?
ಇದು ಕಾರಣ, ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
276
ಪಶು ಸಾವುತ್ತ ತನ್ನ ಶಿಶುವಿಂಗೆ ಏನ ಗಳಿಸಿಕೊಟ್ಟಿತ್ತು?
ಪಿಂಡ ಹುಟ್ಟುವಾಗ ಅದಕ್ಕೆ ಸಂಚಿತ ಪ್ರಾರಬ್ಧ ಆಗಾಮಿ ತಪ್ಪದೆಂದೆ.
ಆರು ಸತ್ತರೂ ಲೇಸಿಗರಿಲ್ಲ;
ತಮ್ಮ ತಮ್ಮಷ್ಟಕ್ಕೆ ಲೇಸಿಗರೆಲ್ಲರು.
ಇದು ತಪ್ಪದು, ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
277
ಭಕ್ತರು ದ್ರವ್ಯವ ಗಳಿಸಿದಲ್ಲಿ
ತಮ್ಮ ತನುವಿದ್ದಲ್ಲಿಯೆ ಗುರು ಲಿಂಗ ಜಂಗಮಕ್ಕರ್ಪಿಸುವುದು.
ಇದೇ ಸದ್ಭಕ್ತಿಯ ಹೊಲಬು.
ತಾನಳಿದು ಮತ್ತೆ ಮನೆಮಕ್ಕಳಿಗೆಂದಡೆ
ಅದೆ ಆಚಾರಕ್ಕೆ ಭಂಗ.
ಆತ ಸ್ವಾಮಿಗೆ ಸ್ವಾಮಿದ್ರೋಹಿ.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ.

278
ಭಕ್ತರು ಬಯಕೆಯನಿರಿಸಿದಡೆ
ಅದು ಸತ್ತ ನಾಯ ಮಾಂಸ.
ವಿರಕ್ತರು ದ್ರವ್ಯವ ಮುಟ್ಟಿದಡೆ
ಅದು ಕತ್ತೆಯ ಹಡುಹಿಂಗೆ ತಪ್ಪಿದರೆಂಬೆ.
ಇದು ಸತ್ಯ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ
ಹೇಳಿದುದ ಸತ್ಯವೆನ್ನಿರಣ್ಣಾ.
279
ಮುನ್ನ ಗಳಿಸಿದವರೊಡವೆಯ ಈಗ ಕಂಡು ಮತ್ತೆ
ಇನ್ನಾರಿಗೆ ಇರಿಸಿದೆ?
ಅದಂದಿಗೆ ಮಳೆ ಬೆಳೆ ತಾನಿದ್ದಂದಿಗೂ ತಪ್ಪದು.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
280
ಶಿಲೆ ಕಮ್ಮಾರನ ಹಂಗು,
ಮಾತು ಮನಸ್ಸಿನ ಹಂಗು,
ಮನಸ್ಸು ಆಕಾಶದ ಹಂಗು,
ಆಕಾಶ ಬಯಲ ಹಂಗು.
ಕುರುಹುವಿಡಿದು ಇನ್ನೇತರಿಂದರಿವೆ?
ಅರಿವುದಕ್ಕೆ ಸ್ವಯಂಭುವಿಲ್ಲ,
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ
ಹೇಳಿದುದೆ ದಿಟವೆಂಬೆ.
281
ಹುಲ್ಲಾದಡೂ ತಳ್ಳಿ ಹೋಹ ಜಲವೆ ತಡೆವುದು.
ಹುಳ್ಳಿಯಾದಡೂ ಪ್ರಸ್ತಾವಕ್ಕೊದಗುವದು.
ಎನ್ನಲ್ಲಿದ್ದ ಮಾತು ಭಕ್ತಿಯುಳ್ಳವರಿಗೆಲ್ಲಕ್ಕೂ ಬೇಕು.
ಎನ್ನೊಡೆಯ ಸಂಗನ ಬಸವಣ್ಣ ಪಣ್ಣೆಯದಂದವನಿಕ್ಕಿ ಕೊಟ್ಟ
ಆ ದಂದುಗದಲ್ಲಿದ್ದೇನೆ,
ಆ ಮಾತಿಂಗೆ ದಂದಾಣಾ ದತ್ತಣಾ ಎನ್ನದೆ.
ಇದರಂದವ ತಪ್ಪದಾಡಿ ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಪಣ್ಣೆಯದ ಚಿಣ್ಣ ಹೇಳಿದ ಮಾತ ಕೇಳಿರಣ್ಣಾ.
282
ಹೊತ್ತಾಡಿದ ಚೋಹವ ಮತ್ತೆ ತೊಟ್ಟು ಬಂದಡೆ
ಮೆಚ್ಚರಯ್ಯಾ ಜಗದವರು.
ಬಿಟ್ಟ ಹೊನ್ನು ಹೆಣ್ಣು ಮಣ್ಣು ಮತ್ತೆ ಕಚ್ಚಿದಡೆ
ಅದು ಸತ್ಯಕ್ಕೆ ದೂರ.
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ
ಹೇಳಿದುದ ಸತ್ಯವೆನ್ನಿರಣ್ಣಾ.