Categories
ವಚನಗಳು / Vachanagalu

ಗುಪ್ತ ಮಂಚಣ್ಣನ ವಚನಗಳು

ಅಟ್ಟಕ್ಕೆ ನಿಚ್ಚಣಿಕೆಯನಿಕ್ಕಲಾಗಿ
ನುಂಗಿತ್ತು ಅಟ್ಟವ ನಿಚ್ಚಣಿಕೆ.
ನಿಚ್ಚಣಿಕೆಯ ಮೆಟ್ಟಿದವಳ ಅಟ್ಟ ನುಂಗಿತ್ತು.
ಅಟ್ಟವ ನಿಚ್ಚಣಿಕೆಯ ಮೆಟ್ಟಿದವಳ ಬಟ್ಟಬಯಲು ನುಂಗಿತ್ತು.
ಆ ಬಟ್ಟಬಯಲ ಮೆಟ್ಟಿ ನೋಡಿ ಕಂಡ
ನಾರಾಯಣಪ್ರಿಯ ರಾಮನಾಥ./1
ಅರು ಹಿರಿಯರೆಲ್ಲರು ಕೋಡಗದ ದಾಡೆಯ
ಸಂಚದ ಕೂಳನುಂಡು,
ತಮ್ಮ ಸಂಚಾರದ ಸಂಚವನರಿಯದೆ,
ಮುಂಚಿದರು ಕಾಲನ ನಾಲಗೆಗೆ.
ಇಂತಿವರು ಸಂಚಿತ ಆಗಾಮಿ ಪ್ರಾರಬ್ಧದಲ್ಲಿ ಲಯಕಾರಣರು.
ಲಯವಿರಹಿತ ನಾರಾಯಣಪ್ರಿಯ ರಾಮನಾಥನಲ್ಲಿ
ಅವಿರಳವಾದ ಶರಣಂಗೆ./2
ಆಡು ತೋಳನ ಮುರಿದಾಗ, ಮೊಲ ನಾಯ ಕಚ್ಚಿತ್ತು.
ಕಚ್ಚುವುದ ಕಂಡು ಹದ್ದು ಹಾರಲಾಗಿ
ಆ ಹದ್ದ ಹಾವು ಕಚ್ಚಿ ಸತ್ತಿತ್ತು;
ವಿಷವೇರಿ ಹೋಯಿತ್ತು ಗಾರುಡ.
ನಾರಾಯಣಪ್ರಿಯ ರಾಮನಾಥನಲ್ಲಿ
ಐಕ್ಯಾನುಭಾವಿಯಾದ ಶರಣಂಗೆ./3
ಆತ್ಮ ತೇಜದಿಂದ ಹೋರುವ ಮಿಥ್ಯಾಭಾವಿಗೆ
ನಿಜತತ್ವದ ಮಾತೇಕೆ?
ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಬಲ್ಲವರಾದಡೆ
ವಾದಕ್ಕೆ ಹೋರಿಹೆನೆಂಬ ಸಾಧನವೇಕೆ?
ಇಷ್ಟನರಿವುದಕ್ಕೆ ದೃಷ್ಟ
ಕುಸುಮ ಗಂಧದ ತೆರದಂತೆ;
ಅನಲ ಅನಿಲನ ತೆರದಂತೆ;
ಕ್ಷೀರ ನೀರಿನ ತೆರದಂತೆ;
ಅದು ತನ್ನಲ್ಲಿಯೆ ಬೀರುವ ವಾಸನೆ.
ನಾರಾಯಣಪ್ರಿಯ ರಾಮನಾಥನಲ್ಲಿ
ಐಕ್ಯಾನುಭಾವಿಯಾದ ಶರಣ./4
ಆದಿ ಮಧ್ಯ ಅವಸಾನ ಉಚಿತದ ಸಾವಧಾನವ ಎಚ್ಚರಿಕೆಯಲ್ಲಿ
ಅಸು ಅಡರುವಾಗ ದೆಸೆದಿಕ್ಕಿನಲ್ಲಿ ಕುಚಿತ್ತ ಭಾವವಿಲ್ಲದೆ
ಅಂತರಿಕ್ಷ ಸುಮಾನತೆಯಲ್ಲಿ, ದ್ವಾರದಲ್ಲಿ ನೀರೆಯ್ದುವಂತೆ,
ಸ್ಫಟಲದಲ್ಲಿ ಪನ್ನಗ ಹೋಹಂತೆ,
ಕುಸುಮದಲ್ಲಿ ಗಂಧ ಸಂಚಾರದಲ್ಲಿ ಸಂಗವ ಮಾಡಿದಂತೆ,
ಮಿಂಚಿನಲ್ಲಿ ತೋರಿದ ಕುಡಿವೆಳಗಿನ ಗೊಂಚಲ ಸಂಚಲದಂತೆ,
ಅಂಚೆ ಸೇವಿಸುವ ಪಯ ಉದಕದ
ಹಿಂಚುಮುಂಚನರಿದಂತಿರಬೇಕು.
ಸಂಚಿತ ಆಗಾಮಿ ಪ್ರಾರಬ್ಧಕ್ಕೆ ಹೊರಗಾದ ಮಹಂತನ
ಐಕ್ಯದಿರವು.
ಕಂಚಿನ ನಾದ ಸಂಚಾರ ಮುಂಚಿದಲ್ಲಿಯೆ ಲಯ
ನಾರಾಯಣಪ್ರಿಯ ರಾಮನಾಥಾ./5
ಆನರಿದ ಭಕ್ತಿತ್ರಯ ಎಂತುಟೆಂದಡೆ: ತ್ರಿವಿಧ ಲಿಂಗ, ತ್ರಿವಿಧ ಗುರು, ತ್ರಿವಿಧ ಜಂಗಮ
ತ್ರಿವಿಧ ಪಾದೋದಕ, ತ್ರಿವಿಧ ಪ್ರಸಾದ, ತ್ರಿವಿಧ ಆತ್ಮ;
ತ್ರಿವಿಧ ಬುದ್ಧಿಯಲ್ಲಿ ತ್ರಿವಿಧ ಅರ್ಪಿತ ತ್ರಿವಿಧ ಅವಧಾನಂಗಳಿಂದ
ತ್ರಿವಿಧ ಭೇದೋಪಭೇದಗಳಲ್ಲಿ ಎಚ್ಚತ್ತು,
ತ್ರಿವಿಧ ಗುಣದಲ್ಲಿ ತ್ರಿವಿಧವನರಿತು,
ತ್ರಿವಿಧ ಗುಣದಲ್ಲಿ ತ್ರಿವಿಧವ ಮರೆದು,
ಅರಿದೆ ಮರೆದೆನೆಂಬ ಈ ಉಭಯ ನಷ್ಟವಾಗಿ ನಿಂದುದೆ
ಸಾತ್ವಿಕ ಭಕ್ತಿ, ಸಜ್ಜನ ಯುಕ್ತಿ,
ನಾರಾಯಣಪ್ರಿಯ ರಾಮನಾಥಾ./6
ಆನು ನಾಮದ ದಾಸನಲ್ಲದೆ
ದಾಸೋಹದ ದಾಸನಲ್ಲಯ್ಯ.
ಆನು ಹರಿಭಕ್ತನಲ್ಲದೆ ಶಿವಭಕ್ತನಲ್ಲಯ್ಯ.
ಎನಗೆ ಶಿವಭಕ್ತಿ ನೆಲೆಗೊಳ್ಳದಯ್ಯ.
ನೀನೆ ಎನಗೆ ಕೃಪೆಮಾಡಾ
ನಾರಾಯಣಪ್ರಿಯ ರಾಮನಾಥಾ./7
ಆವ ಕೈದಿನಲ್ಲಿ ಇರಿದಡೆ ಸಾವುದೊಂದೆ.
ಕೈದಿನ ಭೇದವಲ್ಲದೆ ಕರಣ ಭೇದವಿಲ್ಲ.
ಇಂತಿವರಲ್ಲಿ ಭೇದವ ತಿಳಿ,
ನಾರಾಯಣಪ್ರಿಯ ರಾಮನಾಥಾ./8
ಇದು ಅರಿಬಿರಿದು ಇದಾರಿಗೂ ಅಸಂಗ.
ಹಾವು ಹದ್ದಿನಂತೆ ಹುಲಿ ಹುಲ್ಲೆಯಂತೆ
ಹಾವು ಹರಿಯ ಕೂಟದಂತೆ ಅರಿ ಬಿರಿದಿನ ಸಂಗ.
ತೆರಹಿಲ್ಲದ ಆಲಯ, ಭಟರಿಲ್ಲದ ಕಟಕ,
ದಿಟಪುಟವಿಲ್ಲದ ಜಾವಟಿ,
ಎಸಕವಿಲ್ಲದ ಒಲುಮೆ, ರಸಿಕರಿಲ್ಲದ ರಾಜನಗರ
ಇಂತಿವರ ಉಪಸಾಕ್ಷಿ ಸಂತೈಸುವದಕ್ಕೆ, ಭ್ರಾಂತನಳಿವುದಕ್ಕೆ
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು
ಆಮ್ನೆಯ ಅನುಮಾನದಲ್ಲಿ ಅರಿದು
ಅಭಿನ್ನವಿಲ್ಲದೆ ಅವಿರಳನಾಗಾ, ಮನಸಿಜಪಿತಪ್ರಿಯ
ಶ್ರುತಿ ನಾಮ ದೂರ ಗತಿ ಮತಿ ಈವ
ರಾಮೇಶ್ವರ ಲಿಂಗದಲ್ಲಿ ಪ್ರತಿಭಿನ್ನವಿಲ್ಲದ ಶರಣಂಗೆ./9
ಈಶ್ವರ ಲೀಲಾಮೂತಿಯಾಗಿ
ಏಕಾದಶ ರುದ್ರಮೂರ್ತಿಯ ಭಾವಿಸುವಲ್ಲಿ
ವಾದರುದ್ರನ ಕಳುಹಿದ ಬಿಜ್ಜಳನೆಂಬ ನಾಮವ ಕೊಟ್ಟು,
ಕಾಲರುದ್ರನ ಕಳುಹಿದ ಭಕ್ತಿನಾಮವ ಕೊಟ್ಟು ಬಸವೇಶ್ವರನ,
ಮಾಯಾಕೋಳಾಹಳನೆಂಬ ರುದ್ರನ ಕಳುಹಿದ
ಪ್ರಭುನಾಮವ ಕೊಟ್ಟು,
ಮತ್ಸರವೆಂಬ ನಾಮ ಗುಪ್ತಗಣೇಶ್ವರನೆಂಬ ನಾಮವ
ತಾಳ್ದು ಬಪ್ಪುದಕ್ಕೆ ಮುನ್ನವೇ ಐಕ್ಯ.
ಪ್ರಮಥರುಗಳು ಪ್ರಕಟವ ಮಾಡಲಿಕ್ಕೆ ಬಂದಿತ್ತು.
ಎನಗೆ ಮರ್ತ್ಯದ ಭವ.
ಭವ ಬಸವನಿಂದ ಹರಿವುದು.
ನಾ ಬಿತ್ತಿದ ಬೆಳೆಯೆನಗೆ ಫಲಭೋಗವನಿತ್ತು
ಎನ್ನ ಅವತಾರಭಕ್ತಿ ಇನ್ನೆಂದು ಮೀರವಪ್ಪುದು,
ಅಚ್ಚುತಪ್ರಿಯ ರಾಮನಾಥಾ./10
ಈಶ್ವರಮೂರ್ತಿಯ ಕರಕಮಲಕ್ಕೆ ತಂದಲ್ಲಿ,
ಕಣ್ಮನ ಮೂರ್ತಿಧ್ಯಾನ ಹೆರೆಹಿಂಗದಕ್ಕರಿಂದ
ಭಾವ ಭ್ರಮಿಸದೆ, ಚಿತ್ತ ಸಂಚರಿಸದೆ
ಮನ ವಚನ ಕಾಯದಲ್ಲಿ ಭಿನ್ನ ಭಾವವಿಲ್ಲದೆ
ಪೂಜಿಸುವ ಕೈಯೂ ತಾನಾಗಿ, ಅರಿದ ಮನವೂ ತಾನಾಗಿ,
ಹೊತ್ತಿಪ್ಪ ಅಂಗದ ನೆಲೆಯೂ ತಾನಾಗಿ
ಹೆರೆಹಿಂಗದೆ ಪೂಜೆಯ ಮಾಡುತಿರ್ಪ
ಆತನ ಅಂಗವೆ ಲಿಂಗ, ಆತನಿದ್ದುದೆ ಅವಿಮುಕ್ತಿ ಕ್ಷೇತ್ರ.
ಇಂತಪ್ಪ ಮಹಾಮಹಿಮ
ನಾರಾಯಣಪ್ರಿಯ ರಾಮನಾಥ ತಾನು ತಾನೆ./11
ಉಡುವಿನ ನಾಲಗೆ ಮದಾಳಿಯ ಕಾಲು
ಮಾರನ ಕಣ್ಣು ಮನ್ಮಥನ ಬಾಣ ಸಾರಥಿಯ ರೂಪು
ಸಕಲರ ಸಂಗದಲ್ಲಿ ವಿಕಳತೆಗೊಂಬ ಪಶುಗಳಿಗುಂಟೆ?
ರಸಾಳದ ಅಸು ನಾರಾಯಣಪ್ರಿಯ ರಾಮನಾಥನಲ್ಲಿ
ಅರಿದು ಮರೆದೊರಗಿದವಂಗಲ್ಲದೆ./12
ಉದಕ ಒಂದಾದಡೆ ಕೂಟದ ಗುಣದಿಂದ ಜಾತಿ ಉತ್ತರವಾಯಿತ್ತು.
ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ
ಅವರವರಲ್ಲಿ ಅವ ಬೆರಸಿದಡೆ
ಅವರವರ ಭಾವಕ್ಕೆ ತಕ್ಕಂತೆ ಇಪ್ಪ ಜಲಭೇದದ ವಸ್ತು ನಿರ್ದೆಶ.
ಆನೆಯ ಮಾನದಲ್ಲಿ ಇರಿಸಬಹುದೆ?
ಕಿರಿದು ಘನದಲ್ಲಿ ಅಡಗುವುದಲ್ಲದೆ
ಘನ ಕಿರಿದಿನಲ್ಲಿ ಅಡಗುವುದೆ?
ಅಮೃತದ ಕೆಲದಲ್ಲಿ ಅಂಬಲಿಯುಂಟೆ?
ನಾರಾಯಣಪ್ರಿಯ ರಾಮನಾಥಾ./13
ಉದಕಕ್ಕೆ ಹಳಚಿಕೆಯಲ್ಲದೆ ಪಾಕುಳಕ್ಕುಂಟೆ ಅಯ್ಯಾ.
ಮನದ ಮನ್ನಣೆ ಮಾನ್ಯರಿಗಲ್ಲದೆ ಸಮಯಕ್ಕುಂಟೆ?
ಇಂತೀ ಮನದೆರನರಿ,
ನಾರಾಯಣಪ್ರಿಯ ರಾಮನಾಥಾ./14
ಉಳಿಯ ಹಿಡಿಯಲ್ಲಿ ಕಲೆ ಮಾಡಿಸಿಕೊಂಡ ದೇವರಿಗೆ
ಅಳಿವು ಉಳಿವಲ್ಲದೆ,
ಉಳಿಗೆ ಹೊರಗಾದ ಅಳಿಯದವನನರಿಯಾ,
ನಾರಾಯಣಪ್ರಿಯ ರಾಮನಾಥಾ./15
ಎತ್ತು ಹಸುವ ಹಾಯಲಾಗಿ ತೆಕ್ಕೆಯನಿಕ್ಕಿದ ಕಣ್ಣಿಯಲ್ಲಿ
ತೆಕ್ಕೆಗೆ ನಡೆಯದ ಹಸು, ಕಟ್ಟುಗೊಳ್ಳದ ಹೋರಿ.
ಇವೆರಡ ಸಿಕ್ಕಿಸುವ ಪರಿಯಿನ್ನೆಂತೊ?
ಕಟ್ಟಿದ ಕಣ್ಣಿಯ ಕುಣಿಕೆ ಕಳಚಿ ಹೋರಿಯ ಕೊರಳಲ್ಲಿ
ಹೋಯಿತ್ತು,
ಹಸು ಬೆತ್ತಲೆಯಾಯಿತ್ತು,
ನಾರಾಯಣಪ್ರಿಯ ರಾಮನಾಥಾ./16
ಎನ್ನ ಕ್ರಿಯಾಜ್ಞಾನದ ಕೂಟ
ಮಡಕೆ ಮಣ್ಣಿನಂತಾಯಿತ್ತಯ್ಯಾ,
ಭ್ರಮರ ಗಂಧದಂತಾಯಿತ್ತು ತಂದೆ.
ಮಧುರ ವಾಣಿಯಂತೆ ಸರ ಶರಧಿಯಂತಾಯಿತ್ತಯ್ಯಾ.
ಅಮೃತ ಅಮೃತದಂತಾಯಿತ್ತು.
ಬೆಳಗಿನಂತೆ ಬಯಲು ಬೆಳಗಿನಂತಾಯಿತ್ತು.
ಎಡೆ ಬಿಡುವಿಲ್ಲದೆ ಕಡೆನಡು ಮೊದಲೆನ್ನದೆ
ಸಕ್ಕರೆಯ ದಂಡದಂತೆ ಆ ಗುಣವೆತ್ತಲೂ ಸರಿ,
ಎಲೆ ಅಚ್ಯುತಪ್ರಿಯ, ರಾಮನಾಥಾ ನಿಮ್ಮಲ್ಲಿ ಎನಗೆ./17
ಎನ್ನ ಹರಿಭಕ್ತಿಯಿಂದ ಸಾವಿರ ಕಮಲ ಕುಸುಮ ತಂದು
ಪಶುಪತಿಯ ಚರಣಕ್ಕೆ ಒಸೆದು ಮಾಡುತಿರಲಾಗಿ,
ಶಶಿಧರ ಒಂದು ಕುಸುಮವ ಕಡಿಮೆ ಮಾಡಲಾಗಿ,
ಹುಸಿಯ ಹೊರಲಾರದೆ ತೆಗೆದಿಕ್ಕಿದ ಕಣ್ಣು
ಕಾಲಸಂಹಾರನ ಕಾಲಲಿದೆ.
ಇದು ಕಾರಣ, ನಾರಾಯಣಪ್ರಿಯ ರಾಮನಾಥ./18
ಎಮ್ಮಾಕೆಯ ಕೈಯ ಮೊಗೆಯ ನೀರಿನಲ್ಲಿ ನಾಮವ ತೇಯಲಾಗಿ
ನಾಮವುಳಿದು ನೀರಳಿಯಿತ್ತು.
ಅಳಿದ ನೀರ ಹಣೆಗಿಕ್ಕಲಾಗಿ ನಿರ್ನಾಮವಾಯಿತ್ತು;
ನಾರಾಯಣಪ್ರಿಯ ರಾಮನಾಥನಲ್ಲಿ
ನಿಶ್ಚಯವಾಯಿತ್ತೆನಗೆ./19
ಎಲ್ಲರಿಗೂ ಬಲ್ಲತನವ ಹೇಳಿ
ಬಲ್ಲವನೆಂದಡೆ ಅದು ಇಲ್ಲದ ಮಾತು.
ಬಲ್ಲತನವನರಿವುದೆಂದು ಹೇಳುವ ಮಾತು ಅವರಿಗೊ ತನಗೊ?
ಸಾಧನೆಯ ಮಾಡುವ ಭೇದಕ
ಗಾಯದ ಆಗ ತೋರಿ ತಿವಿಯೆಂದಡೆ
ಅದರ ಆಗು ಹೋಗು ಆರಿಗೆಂಬುದನರಿ.
ತಂಬಿಗೆಯಲ್ಲಿ ತುಂಬಿದ ಉದಕವ ಕೊಂಬುದು
ತಂಬಿಗೆಯೊ ಕೊಂಬುವ ತಾನೊ ಎಂಬುದನರಿ.
ತನಗಾ ನಿರಂಗದ ಸಂಗ ನಿಬದ್ಧಿಯಾದಲ್ಲಿ,
ಅಂತಾ ಇರವ ಇದಿರು ಕಂಡು ಪ್ರಮಾಣಿಸುವಲ್ಲಿ,
ಅವರಿಗದೇ ನಿಂದ ಉಪದೇಶ.
ಇದು ಅರಿಕೆವಿದರ ಇರವು.
ಹಾಗಲ್ಲದೆ ಬೆಳೆಗೆ ನೀರನೆರೆದು ಫಲವ ಭೋಗಿಸುವಂತೆ
ನಾರಾಯಣಪ್ರಿಯ ರಾಮನಾಥಾ./20
ಐದು ಕೊಂಬಿನ ಮರನನೇರಿ
ಮೂರು ಕಾಲಿನಲ್ಲಿ ಮೆಟ್ಟಿ ನಿಂದು
ಎಲೆಯ ಮರೆಯ ಹಣ್ಣ ಕೊಯ್ದೆಹೆನೆಂದಡೆ
ಕೊಂಬು ಕೊಯ್ಯಲೀಸದು ನೋಡಾ!
ಮತ್ತೆ ಇಳಿವಡೆ ಮರನಿಲ್ಲ,
ಹಿಡಿವಡೆ ಕೊಂಬಿಲ್ಲ, ಹರಿವಡೆ ಹಣ್ಣಿಲ್ಲ.
ಈ ಗುಣ ಮರದ ಮರವೆಯೊ, ಮನವ ಮರವೆಯೊ?
ಇದನರಿದವಂಗಲ್ಲದೆ ಒಡಗೂಡಲಿಲ್ಲ
ನಾರಾಯಣಪ್ರಿಯ ರಾಮನಾಥಾ./21
ಕದ್ದಡೆ ಕಳವ ಕೊಟ್ಟಿದ್ದವರಿದ್ದಂತೆ
ಆಚೆಯಲ್ಲಿ ಇದ್ದವರಿಗೇನು?
ಹುಸಿ ಕೊಲೆ ಕಳವು ಹಾದರ ಇಂತಿವನೆಸಗಿ ಮಾಡುವ
ಪಾಪಿಯ ಎದುರಿಗೆ ಹೇಳಿ ಹೇಸದೆ ಬಿಡಲೇತಕ್ಕೆ?
ಇಂತೀ ರಸಿಕವನರಿದವಂಗೆ ಎಸಕವಿಲ್ಲದ ಮಾತು,
ಶಶಿಧರನ ಶರಣಂಗೆ ಹಸುಳೆಯ ತೆರನಂತೆ,
ನಸುಮಾಸದ ಪಿಕದಂತೆ, ಶಬರನ ಸಂದಣಿಯಂತೆ,
ಉಲುಹಡಗಾ ಕಲಹಪ್ರಿಯ ಕಂಜಳಧರ ರಾಮನಾಥಾ./22
ಕನ್ನಡಿಗೆ ಕಪ್ಪಾದಡೆ ಬೆಳಗಿದಡೆ ದೋಷವ ಕಟ್ಟಬಹುದೆ?
ಅರಿ ಕೊಲಬಂದಿದ್ದಲ್ಲಿ ಅರುಪಿದಡೆ ವಿರೋಧವುಂಟೆ?
ಸಂಸಾರ ಸಂಪತ್ತಿನಲ್ಲಿ ರಾಜಸದಲ್ಲಿ ಗುರುವಿಂಗೆ ತಾಮಸ ಬಂದಡೆ
ಭೃತ್ಯ ಬಿನ್ನಹವ ಮಾಡುವಲ್ಲಿ
ಸತ್ಯರೆಂದು ಪ್ರಮಾಣಿಸುವುದು ಗುರುಸ್ಥಲ.
ಇಂತೀ ಉಭಯ ಏಕವಾಗಿಯಲ್ಲದೆ
ಗುರು-ಶಿಷ್ಯ ಜ್ಞಾನಸ್ಥಲವಿಲ್ಲ
ನಾರಾಯಣಪ್ರಿಯ ರಾಮನಾಥಾ./23
ಕನ್ನವನಿಕ್ಕಿದ ಕಳ್ಳನಿದ್ದಂತೆ ಮಣ್ಣ ಬಂಧಿಸಬಹುದೆ?
ಎನ್ನ ಅಂಗ ಪ್ರಾಣಕ್ಕೆ ಲಿಂಗವಲ್ಲದೆ
ಕರಣಂಗಳಿಗೆ ಬೇರೊಂದಂಗವುಂಟೆ?
ಇದಕ್ಕೆ ಅಂಜುವಡೆ,
“ಗುರೋಃ ಪಾಪಂ ಶಿಷ್ಯಸ್ಯಾಪಿ ಶಿಷ್ಯಪಾಪಂ ಗುರೋರಪಿ’
ಎಂಬುದ ಹುಸಿಯಾದಡೆ
ಹೇಳಿಸಿಕೊಂಬುವ ಗುರು ಹೇಳುವಾತ ಶಿಷ್ಯನೆ?
ಆತ ಹೇಳೂದಕ್ಕೆ ಮುನ್ನ ತಾನರಿಯಬೇಕು.
ಈ ಉಭಯಕ್ಕೆ ಭಿನ್ನ ಭಾವವಿಲ್ಲ.
ಜೂಳಿಯ ಕುಂಭದಂತೆ ಏತರಲ್ಲಿ ಒದಗಿದಡೂ ಸರಿ.
ಸಗುಣನೀತಿಗೆ ಮುಕ್ತಿ ಉಭಯಸ್ಥಲ ಯುಕ್ತಿ
ನಾರಾಯಣಪ್ರಿಯ ರಾಮನಾಥಾ./24
ಕಲ್ಲಿಯ ಗಂಟು, ಲಲನೆಯರ ಮೋಹ,
ಪುಳಿಂದರ ವೇಷ, ಮಾರುತನ ಗ್ರಾಸ,
ಇಂತಿವರ ಇರುವು ಗುರುಮಾರ್ಗದ ಬೋಧೆ.
ಜಲಚರ ಆಹಾರಕ್ಕೆ ಸಿಕ್ಕಿದ ಕೊರಳಿನ ವಿಧಿಯಂತೆ,
ನೆರೆಗೆ ಇಲ್ಲದ ಗುರುವಿನ ಕೈದೊಡಕಿನ ಶಿಷ್ಯ
ಅರಿವಿಂಗೆ ಬಡಿಹೋರಿಯಾದ.
ಇಂತಿವ ಕಂಡು ನೊಂದ ಸಂದೇಹಿಗೆ
ನೀ ಅಜಡನಾಗಿ ಎನ್ನ ಜಡವ ಉದ್ಧರವ ಮಾಡು
ಸದ್ಗುರುಮೂರ್ತಿ ನಾರಾಯಣಪ್ರಿಯ ರಾಮನಾಥಾ./25
ಕಳನನೇರಿ ಕೈಮರೆದ ಸುಭಟಂಗೆ
ಅರಿದು ಮರೆವ ಬರುಕಾಯಂಗೆ
ಕುರುಹಿಡಲೇತಕ್ಕೆ ನೆರೆ ವಿಶ್ವಾಸಹೀನಂಗೆ.
ಅರಿದಡೆ ಗೊಲ್ಲಳನಂತಿರಬೇಕು;
ಮರೆದಡೆ ಚಂದಯ್ಯನಂತಿರಬೇಕು.
ಇಂತೀ ಗುಣಂಗಳಲ್ಲಿ ಸ್ವತಂತ್ರ ಸಂಬಂಧಿಗಳು
ನಾರಾಯಣಪ್ರಿಯ ರಾಮನಾಥಾ,
ನಿಮ್ಮ ಶರಣರು./26
ಕಳವು ಹಾದರಕ್ಕೆ ಗುಪ್ತ.
ಶಿವಭಕ್ತಿ ಶಿವಪೂಜೆ ಶಿವಜ್ಞಾನ ಇಂತಿವಕ್ಕೆ
ಬಾಹ್ಯಾಡಂಬರವೆ?
ಅರಿವುದೊಂದು ಅರುಹಿಸಿಕೊಂಬುದೊಂದು.
ಇಂತೀ ಉಭಯ ಸುಖ ಸಂಭಾಷಣವಲ್ಲದೆ
ರಟ್ಟೆಯ ಪೂಜೆ ಕರ್ಕಶದನುಭವ.
ಡೊಂಬರ ಡೊಳ್ಳ ಕೇಳಿ, ಬಂದವರೆಲ್ಲರು ನಿಂದು ನೋಡಿ
ತಮ್ಮ ತಮ್ಮ ಮಂದಿರಕ್ಕೆ ಹೋಹಂತಾಯಿತ್ತು.
ಈ ಪಥದ ಸಂದನಾರು ಅರಿಯರು.
ನಾರಾಯಣಪ್ರಿಯ ರಾಮನಾಥನಲ್ಲಿ
ತನ್ನ ತಾನೆ ತಿಳಿದ ಶರಣ ಬಲ್ಲ./27
ಕಾಗೆಯ ತಿಂದವ ಕಮ್ಮಾರ,
ಎಮ್ಮೆಯ ತಿಂದವ ಸಮಗಾರ,
ಹಸುವ ತಿಂದವ ಪಶುಪತಿಯ ಶರಣ;
ಇವರ ಮೂವರ ತಿಂದ ಅಂದವ ನೋಡಾ!
ಇದರ ಸಂಗವಾರಿಗೂ ಅರಿದು,
ನಿಸ್ಸಂಗ ನಿರ್ಲೆಪ ನಾರಾಯಣಪ್ರಿಯ ರಾಮನಾಥ./28
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು.
ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ,
ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ
ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು
ವಿಶ್ವಾಸವುಳ್ಳ ಶರಣಂಗೆ
ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ!
ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!/29
ಕಾಯ ಕಾಯವ ನಂಗಿ, ಮನ ಮನವ ನುಂಗಿ,
ಘನ ಘನವ ನುಂಗಿ, ತನ್ಮಯ ತದ್ರೂಪಾಗಿ ನಿಂದಲ್ಲಿ,
ವಿರಳವ ಅವಿರಳ ನುಂಗಿ, ಸೆರಗುದೋರದ ಕುರುಹು
ಅವತಾರ ಸಾಧನ ಸಾಧ್ಯ ಗುಪ್ತನ ಭಕ್ತಿ,
ಮತ್ರ್ಯದ ಮಣಿಹ ಸಂದಿತ್ತು.
ವೃಷಭೇಶ್ವರ ಮಂದಿರಕ್ಕೆ ಬಂದು
ಎನ್ನ ಸಂದೇಹ ಸಂಕಲ್ಪವಂ ಬಿಡಿಸಿ
ಪ್ರಕಟವೆ ಕಡೆಯೆಂದು ಅಂದು ಎಂದು ಬಂದುದು ಸಂದಿತ್ತು
ಅಂಗಪೂಜೆ ಲಿಂಗವೆ ಎಂಬುದಕ್ಕೆ ಮುನ್ನವೆ ಐಕ್ಯ, ಅವಸಾನ
ರಾಮೇಶ್ವರಲಿಂಗದಲ್ಲಿ./30
ಕಾಯ ಸ್ಥಿರವೆಂಬುವ ಭಕ್ತನಲ್ಲ.
ಅದೆಂತೆಂದಡೆ: ಎಲು ನರ ಚರ್ಮದ ಹೊದಿಕೆ,
ಮಲ ಮೂತ್ರ ಕೀವಿನ ಹುತ್ತ, ಹುಳುವಿನಾಗರ.
ಮಲಭಾಂಡದ ಶರೀರವ ನಚ್ಚಿ
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ
ಇಂತೀ ತ್ರಿವಿಧವ ಕೊಟ್ಟು ಇಪ್ಪ ಕೃತಾರ್ಥಂಗೆ
ನಮೋ ನಮೋ ಎಂದು ಬದುಕಿದೆ,
ನಾರಾಯಣಪ್ರಿಯ ರಾಮನಾಥಾ./31
ಕಾಲವನರಿವುದಕ್ಕೆ ಕೋಳಿಯಾಯಿತ್ತು
ಋತುಕಾಲವನರಿವುದಕ್ಕೆ ಕೋಗಿಲೆಯಾಯಿತ್ತು.
ಶಾಖೆಯ ಲಂಘನವನರಿವುದಕ್ಕೆ ಗೋಲಾಂಗುಲವಾಯಿತ್ತು.
ಕರಣದ ಮರಣವನರಿವುದಕ್ಕೆ ಮಲತ್ರಯ ದೂರನಾದ
ನಾರಾಯಣಪ್ರಿಯ ರಾಮನಾಥಾ./32
ಕಾಷ್ಠವ ಕಾರ್ಮುಗಿಲು ನುಂಗಿತ್ತು.
ಹರಿವ ನೀರ ಉರಿ ಕುಡಿಯಿತ್ತು.
ಬಡವ ಬಲ್ಲಿದನ ಕೊಂದು ಸತ್ತ ಠಾವಿನಲ್ಲಿ
ಬಂಧುಗಳೆಲ್ಲರು ಕೂಡಿ ಎತ್ತುವರಿಲ್ಲದೆ ಅರೆವೆಣನಾಯಿತ್ತು.
ಮುಕ್ತಿ ನಾಮ ನಷ್ಟ,
ನಾರಾಯಣಪ್ರಿಯ ರಾಮನಾಥಾ, ಇನ್ನೇವೆನಿನ್ನೇವೆ!/33
ಕಾಳರಾತ್ರಿಯಲ್ಲಿ ಅಂಧಕಾರದ ಕೊಟ್ಟಿಗೆಯಲ್ಲಿ
ಕಾಳೆಮ್ಮೆಯ ಕರು ಹಾಳವಾಗಿ
ಹಾಳಿದ್ದ ದನಿಗಂಜೆ ಕೊಟ್ಟಿಗೆ ಹಾಳಾದುದಿಲ್ಲ.
ಎತ್ತ ಕಟ್ಟುವುದಿಲ್ಲ ಎಮ್ಮೆಯಕರು ಸತ್ತಲ್ಲದೆ.
ಕೊಟ್ಟಿಗೆ ಹಾಳಾಗದಯ್ಯಾ.
ಕರುವಿನ ಕೊರಳೂ ಅಡಗದು.
ಇನ್ನೇವೆನಿನ್ನೇವೆನಯ್ಯಾ,
ನಾರಾಯಣಪ್ರಿಯ ರಾಮನಾಥಾ,
ನೀನೇ ಗುರು ರೂಪಾಗಿ ಬಂದೆನ್ನ ಕರಸ್ಥಲವನಿಂಬು
ಗೊಳ್ಳಯ್ಯಾ./34
ಕೀರ್ತಿಗೆ ಜಗವ ಕೊಂಡು ಮಾಡುವಾತ ಭಕ್ತನೆ?
ನಿಂದಿಸಿಹರೆಂದು ಅಂಜಿಕೊಂಡಿಪ್ಪವ ತಪಸಿಯಲ್ಲ;
ಜಗವ ಮೆಚ್ಚಬೇಕೆಂದು ಮಾಡುವಾತ ಭಕ್ತನಲ್ಲ;
ಇಚ್ಛೆಗೆ ನುಡಿವವ ವಿರಕ್ತನಲ್ಲ.
ಇದರಚ್ಚುಗ ನಿಮಗೇಕೆ?
ನಾರಾಯಣಪ್ರಿಯ ರಾಮನಾಥ ಒಚ್ಚತ ನಿಮ್ಮನೊಲ್ಲ./35
ಕುದುರೆಗೆ ಹುಲ್ಲ ಹಾಕಲಾಗಿ
ಹುಲ್ಲು ಕುದುರೆಯ ತಿಂದಿತ್ತು.
ಬಂದ ಗೋವ ಕುದುರೆಯ ನೋಡಿ
ಅದರಂಗದ ಕಾಲು ಇರಲಾಗಿ,
ತಿಂದವರಾರೊ ಎಂಬುದಕ್ಕೆ ಮೊದಲೆ ತಿಂದಿತ್ತು.
ಆ ಕಾಲು ನಿಂದ ಗೋವನ ಈ ಮೂವರ ಅಂದವ ತಿಳಿಯೊ
ನಾರಾಯಣಪ್ರಿಯ ರಾಮನಾಥಾ./36
ಕುರುಡ ಕೈಯ ಕೋಲ ಹಿಂಗಿದಾಗ ಅವ ಅಡಿಯಿಡಬಲ್ಲನೆ?
ಮೃಡಭಕ್ತಿಯ ಮಾಡುವಂಗೆ ದೃಢಚಿತ್ತವಿಲ್ಲದಿರ್ದಡೆ
ಕಡೆಗಾಣಿಸಬಲ್ಲನೆ?
ಇಂತೀ ವಿಶ್ವಾಸದಡಿ ಬೆಚ್ಚಂತಿರಬೇಕು,
ನಾರಾಯಣಪ್ರಿಯ ರಾಮನಾಥನಲ್ಲಿ./37
ಕೆನೆಯ ತೆಗೆದು ಹಾಲನೆರೆವವಳ ವಿನಯ
ತಲೆಯನೊಡೆದು ಲಾಲನೆಯ ಮಾಡುವಳಂತೆ,
ವಂದಿಸಿ ನಿಂದಿಸುವನ ಭಕ್ತಿ ಕೈನೆರವಿಂಗೆ ಹೋಗಿ
ತಮ್ಮವರಳಿದ ಅಂದವ ನೆನೆದು ಅಳುವರಂತೆ,
ನಾರಾಯಣಪ್ರಿಯ ರಾಮನಾಥಾ./38
ಕೆರೆ ತೊರೆ ಬಟ್ಟೆ ಬಾಗಿಲಲ್ಲಿ ಪೂಜಿಸಿಕೊಂಬುವ
ದೈವವೆಂದು ಪ್ರಮಾಣಿಸುವಲ್ಲಿ
ತಮ್ಮ ಮನಕ್ಕೆ ಸಂದೇಹವಂ ಬಿಡಿಸಿದೆವೆಂದು
ತಮ ತಮಗೆ ಹಿಂಗದ ದೈವವೆಂದು
ನಿಂದು ಹೋರಲಾಗಿ ಕೊಂದನೆ ಶಿವನು?
ಅವರಂಗದ ಪ್ರಮಾಣು ಇದಕ್ಕೆ ಕೊಂದಾಡಲೇತಕ್ಕೆ?
ನಾರಾಯಣಪ್ರಿಯ ರಾಮನಾಥಾ./39
ಕೈದಿಲ್ಲದವಂಗೆ ಕಾಳಗವುಂಟೆ?
ಆತ್ಮನಿಲ್ಲದ ಘಟಕ್ಕೆ ಚೇತನವುಂಟೆ?
ಅಜಾತನ ನೀತಿಯನರಿಯದವಂಗೆ
ನಿರ್ಧರದ ಜ್ಯೋತಿರ್ಮಯವ ಬಲ್ಲನೆ?
ಇಷ್ಟವನರಿಯದವನ ಮಾತಿನ ನೀತಿ
ಮಡಕೆಯ ತೂತಿನ ಬೈರೆಯ ನೀರು
ನಾರಾಯಣಪ್ರಿಯ ರಾಮನಾಥಾ./40
ಕೋಟೆ ಕೋಳಹೋಗದ ಮುನ್ನವೆ
ಸೂರೆಮಾಡಿದ ಪರಿ ಇನ್ನೆಂತೊ?
ಮಾಡುವ ಮಾಟ ಪುರೋಭಿವೃದ್ಧಿಗೆ ಸಲ್ಲದ ಮುನ್ನವೆ
ಭಕ್ತಿಯಲ್ಲಿ ತಲ್ಲೀಯವಾದ ಪರಿ ಇನ್ನೆಂತೊ.
ಎವೆ ಹಳಚುವುದಕ್ಕೆ ಮುನ್ನವೆ ಅರಿಯಾ
ನಾರಾಯಣಪ್ರಿಯ ರಾಮನಾಥನ./41
ಕೋಡಗದ ತಲೆಯ ಚಂಡಿನ ಮೇಲೆ
ಮೂರುಕವಲಿನ ಸೂಜೆ.
ಮೂರರ ಮನೆಯಲ್ಲಿ ಐದು ಬೆಟ್ಟವಡಿಗಿದವು.
ಬೆಟ್ಟದ ತುತ್ತತುದಿಯಲ್ಲಿ ಮಟ್ಟಿಲ್ಲದ ಬಾವಿ.
ಬಾವಿಯೊಳಗೊಂದು ಹಾವು ಹುಟ್ಟಿತ್ತು.
ಆ ಹಾವಿನ ಮೈಯೆಲ್ಲವೊ ಬಾಯಿ.
ಬಾಲದಲ್ಲಿ ಹೆಡೆ ಹುಟ್ಟಿ,
ಬಾಯಲ್ಲಿ ಬಾಲ ಹುಟ್ಟಿ,
ಹರಿವುದಕ್ಕೆ ಹಾದಿಯಿಲ್ಲದೆ,
ಕೊಂಬುದಕ್ಕೆ ಆಹಾರವಿಲ್ಲದೆ ಹೊಂದಿತ್ತು.
ಆ ಹಾವು ಬಾವಿಯ ಬಸುರಿನಲ್ಲಿ ಬಾವಿಯ ಬಸುರೊಡೆದು
ಹಾವಿನ ಇಲು ನುಂಗಿ ಬೆಟ್ಟ ಚಿಪ್ಪು ಬೇರಾಗಿ
ಸೂಜಿಯ ಮೊನೆ ಮುರಿದು
ಕೋಡಗದ ಚಂಡು ಮಂಡೆಯ ಬಿಟ್ಟು ಹಂಗು ಹರಿಯಿತ್ತು.
ಆತ್ಮನೆಂಬ ಲಿಂಗ ನಾಮ ರೂಪಿಲ್ಲ
ನಾರಾಯಣಪ್ರಿಯ ರಾಮನಾಥನಲ್ಲಿ
ಶಬ್ದಮುಗ್ಧನಾದ ಶರಣಂಗೆ./42
ಕೋಣ ಎಮ್ಮೆಯನೀಯಿತ್ತು,
ಎಮ್ಮೆ ಹೋರಿಯನೀಯಿತ್ತು,
ಹೋರಿ ಹಸುವನೀಯಿತ್ತು,
ಹಸು ಕೋಳಿಯನೀಯಿತ್ತು,
ಕೋಳಿ ಕೊಕೋ ಎಂದು ಕೂಗುವಾಗ
ಕೋಣ ಎಮ್ಮೆಯ ನುಂಗಿತ್ತು;
ಎಮ್ಮೆಯ ಕೋಣನ ಹೋರಿ ನುಂಗಿತ್ತು;
ಹೋರಿಯ ಕೋಳಿಯ ಕೂಗು ನುಂಗಿತ್ತು
ಇದನಾರೈವುತಿದ್ದೆ ನಾರಾಯಣಪ್ರಿಯ ರಾಮನಾಥಾ./43
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು.
ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು.
ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ
ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ.
ಊಧ್ರ್ವನಾಮ ಯೋಗ ಸಂಬಂಧವಾದ
ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು
ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು
ನಾರಾಯಣಪ್ರಿಯ ರಾಮನಾಥಾ./44
ಕೋಳಿ ಕುದುರೆಯ ತಿಂದಿತ್ತು.
ವೇಣು ನಾದವ ನುಂಗಿತ್ತು.
ಕೀಳು ಮೇಲ ನುಂಗುವಾಗ
ಆಳದಲ್ಲಿದ್ದವ ಕಂಡು ಗೋಳುಗುಟ್ಟಲಾಗಿ
ಗೋಳಿನ ದನಿಯ ಕೇಳಿ ಬೇಳುವೆ ಹಾಯಿತ್ತು.
ಎಲ್ಲಕ್ಕೂ ಇದು ಎನಗೆ ಆಳವಾಗಿ ಕಾಡುತ್ತಿದೆ
ನಾರಾಯಣಪ್ರಿಯ ರಾಮನಾಥಾ./45
ಕೋಳಿಯ ಗಂಟಲ ಕಾಳ ನಾಯಿ ಕಡಿವುತ್ತಿದೆ.
ನಾಯ ಹಲ್ಲ ಮುರಿದ ಪರನಾರಿಯ ಸಹೋದರ.
ಕೋಳಿಯ ಕೊರಳು ಉಳಿಯಿತ್ತು
ಕೋಳಿ ಸತ್ತಿತ್ತು, ನಾಯಿ ನಾತಿತ್ತು.
ಇಂತಿವ ಹೇಳಬಂದವನ ವಿಷಾಳಿ ನುಂಗಿತ್ತು,
ನಾರಾಯಣಪ್ರಿಯ ರಾಮನಾಥಾ./46
ಗಂಡ ಸತ್ತ ಮುಂಡೆಗೆ ಮೂವರು ಮಿಂಡರು.
ಒಬ್ಬಂಗೆ ಅಂಡಿನ ಆಶೆ,
ಒಬ್ಬಂಗೆ ಖಂಡಿಯಾಶೆ,
ಒಬ್ಬಂಗೆ ಮಂಡೆಯಾಶೆ.
ಇಂತೀ ಮೂವರಿಗಾದ ಸೂಳೆ ಸೂಳಕೊಡುವ ಪರಿಯಿನ್ನೆಂತೊ?
ಅಂಡಿಗೆ ಖಂಡಿಗೆ ಮಂಡೆಗೆ ದಿಂಡೊಂದೆ
ಮೂವರು ಕೊಂದಾಡುತ್ತಿದ್ದರು.
ಅಭಿಸಂಧಿಯ ತಿಳಿ ನಾರಾಯಣಪ್ರಿಯ ರಾಮನಾಥಾ./47
ಗಡಿಗೆ ಗುಡವನು ನುಂಗಿತ್ತು
ಅಡಿಯಲ್ಲಿದ್ದ ಕುಡಿಕೆ ಆ ಉಭಯವ ನುಂಗಿತ್ತು.
ನುಂಗಿಹೆನೆಂದ ಚಿತ್ತವ ಸಂದೇಹ ನುಂಗಿತ್ತು.
ಈ ಉಭಯದ ಸಂದೇಹದ ಸಂಚ
ಹಿಂಗಿಯಲ್ಲದೆ ಲಿಂಗವಿಲ್ಲ
ನಾರಾಯಣಪ್ರಿಯ ರಾಮನಾಥಾ./48
ಗುರುವ ನುಡಿಯಬಾರದೆಂದು ಅಡಗಿಪ್ಪುದೆ ಗುರುದ್ರೋಹ.
ಅಪ್ಪು ನಷ್ಟವಾದಲ್ಲಿ ತಪ್ಪದೆ ಬೆಳೆ?
ಘಟವಳಿದಲ್ಲಿ ಆತ್ಮಂಗೆ ಮಠವಿಲ್ಲ.
ಗುರುವಿನ ಮರವೆ ಶಿಷ್ಯನ ವಿಶ್ವಾಸದ ಕೇಡು.
ಕೈಗೆ ಕಣ್ಣು ಮನ ಅಂಗಕ್ಕೆ ಬೇರೆ ನೋವುಂಟೆ?
ಬಿತ್ತು ನಷ್ಟವಾದಲ್ಲಿ ಅಂಕುರವುಂಟೆ?
ನೋವ ಗುರು ಇದಕ್ಕಂಜಿ ಹೇಳದ ಶಿಷ್ಯ
ಕಿವಿಮೂಳ ಮೌಕ್ತಿಕದ ಜಾವಳಿಯ ಗಳಿಸಿದಂತೆ
ನಾರಾಯಣಪ್ರಿಯ ರಾಮನಾಥಾ./49
ಗೋವಿನ ಮರೆ ವಿಹಂಗನಂತಾಗಲಾಗದು.
ತೋಹಿನ ಮರೆಯಲ್ಲಿದ್ದ ಶಬರನಂತಾಗಲಾಗದು.
ಲಾಂಛನದ ಮರೆಯಲ್ಲಿದ್ದ ವೇಷಧಾರಿಯಂತಾಗಲಾಗದು.
ಹೊರವೇಷಮಂ ತೊಟ್ಟು ವ್ಯಾಪ್ತಿಯ ಮನುಜರಂತೆ ನಡೆದು ಮತ್ತೆ
ಅರಿವೇಕೆ ನಾರಾಯಣಪ್ರಿಯ ರಾಮನಾಥಾ./50
ಚಿನ್ನದೊಳಗಣ ಬಣ್ಣದಂತೆ,
ಬಣ್ಣ ನುಂಗಿದ ಬಂಗಾರದಂತೆ,
ಅನ್ಯ ಭಿನ್ನವಿಲ್ಲದ ಲಿಂಗೈಕ್ಯವು.
ಲಿಂಗಾಂಗವಾದಲ್ಲಿ, ಅಂಗ ಲಿಂಗವಾದಲ್ಲಿ
ಹಿಂಗದ ಭಾವ ಚಿನ್ನ ಬಣ್ಣದ ತೆರ.
ಇದು ಪ್ರಾಣಲಿಂಗಯೋಗ, ಸ್ವಾನುಭಾವ ಸಮ್ಮತ.
ಉಭಯ ನಾಶನ ಐಕ್ಯಲೇಪ
ನಾರಾಯಣಪ್ರಿಯ ರಾಮನಾಥಾ/51
ಜಗವೆಲ್ಲವೂ ಗೋವಿನ ಹಂಗು.
ನರ ಸುರಾದಿಗಳೆಲ್ಲರೂ ಗೋವಿನ ಹಂಗು.
ಸಕಲ ಜೀವನ ಆಧಾರ ಗೋಮರ.
ಗೋಕುಲಕ್ಕೆ ಒಡೆಯ ಗೋಪತಿಧರ.
ಗೋ ಪ್ರಾಣಸ್ವರೂಪ
ಗೋವಿಂದನೊಡೆಯ ನಾರಾಯಣಪ್ರಿಯರಾಮನಾಥಾ./52
ಜಲದಲ್ಲಿ ಹುಟ್ಟಿದ ಚರಾದಿಗಳೂ ಸರಿ,
ಜಲವೂ ಸರಿಯೆ.
ಅನಾದಿ ವಸ್ತುವಿನಲ್ಲಿ ಹುಟ್ಟಿದ
ಬ್ರಹ್ಮ ಆದಿಯಾದ ಬಾಧಿಸಿಕೊಂಬ ದೈವವೂ ಸರಿಯೆ,
ವಸ್ತುವೂ ಸರಿಯೆ.
ಇದನಲ್ಲ ಅಹುದೆನಬಾರದು
ಸಂತೆಗೆ ಬಂದವರೆಲ್ಲಕ್ಕೂ ಬೆಲ್ಲದ ವ್ಯವಹಾರವೆ?
ನಾರಾಯಣಪ್ರಿಯ ರಾಮನಾಥಾ./53
ಡಂಬಕದ ಪೂಜೆ ಹೋಹ ಹೊತ್ತಿನ ಕೇಡು.
ಆಡಂಬರದ ಪೂಜೆ ತಾಮ್ರದ ಮೇಲಣ
ಸುವರ್ಣದ ಛಾಯೆ.
ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ
ಮನ ಹೂಣದೆ ಮಾಡುವ ಪೂಜೆ
ಬೇರು ನನೆಯದೆ ನೀರು,
ಆಯವಿಲ್ಲದ ಗಾಯ,
ಭಾವವಿಲ್ಲದ ಘಟ ವಾಯವೆಂದ
ನಾರಾಯಣಪ್ರಿಯ ರಾಮನಾಥಾ./54
ತನ್ನ ಮರೆದಡೆ ಜಗವೆಲ್ಲವೂ ತನ್ನ ಸುತ್ತಿದ ಮಾಯೆ
ತಾನರಿತಡೆ ತನ್ನಯ ಅನ್ಯ ಭಿನ್ನವಿಲ್ಲ.
ಪ್ರತಿಬಿಂಬದ ಹಾಗೆ
ನಾರಾಯಣಪ್ರಿಯ ರಾಮನಾಥಾ./55
ತುಂಬಿ ಕಡದ ಗೂಡಿನ ಮರಿಯಂದವ ತಿಳಿ.
ಆತ್ಮನಿಪ್ಪ ಅಂದವನರಿ.
ಅದರ ಗುಣದ ಸಂಗದ ಯೋಗ ಕೀಟದ ಸಂಗದ ಗುಣ.
ಖೇಚರದ ಆಟ ತಪ್ಪದೆ,
ರತಿಯ ಕೂಟ ತಪ್ಪದೆ.
ಇಪ್ಪುದು ಯೋಗ ಸಂಬಂಧ
ನಾರಾಯಣಪ್ರಿಯ ರಾಮನಾಥಾ./56
ತೊಳಸಿಯ ಗಿಡುವ ಮೆಲಲಾರದೆ ಕಿವಿಯೊಳಗಿಕ್ಕಿದೆ.
ಕಲಸಿದ ನಾಮಕ್ಕೆ ಹಣೆಯ ಕಾಣದೆ ಎದೆಯೊಳಗಿಕ್ಕಿದೆ.
ತಾವರೆಯ ಮಣಿಯ ತಾವಡಿಸೂದಕ್ಕೆ
ಠಾವ ಕಾಣದೆ ಡಾವರಿಸುತ್ತಿದ್ದೆ,
ಇದಕಿನ್ನಾವುದು ಹದನಯ್ಯಾ.
ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯಾ
ನಾರಾಯಣಪ್ರಿಯ ರಾಮನಾಥಾ./57
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ.
ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ.
ಇಂತೀ ಸರ್ವಗುಣ ಸಂಪನ್ನನಾಗಿ
ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು
ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ.
ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ,
ನಿರಂಗಕ್ಕೆ ಸಂಗ ನೀನೇ.
ಹಿಂಗೂದಕ್ಕೆ ನಿನ್ನಂಗ ಅನ್ಯ ಭಿನ್ನವಲ್ಲ.
ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ
ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು,
ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು,
ಇಂತಿವ ಹೇಳುವಡೆ ವಾಙ್ಮನಕ್ಕತೀತ
ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ
ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ./58
ನಾ ಬಂದೆ ಹರಿಭಕ್ತನಾಗಿ,
ಬಾಹಾಗ ನಾ ದಾಸನಾಗಿ.
ಒಂಬತ್ತು ಜೂಳಿಯ ತಣ್ಣೀರ ಕಣಿತೆಯ ಹೊತ್ತು
ತಿತ್ತಿಗ ನೀರ ಕಾಣೆ.
ಲೆಕ್ಕವಿಲ್ಲದ ನಾಮವನಿಕ್ಕಿದೆ,
ಸುತ್ತಿ ಸುತ್ತಿ ಬಳಸಿದೆ.
ಹೀಲಿಯ ಗರಿಯ ಹೇಕಣ್ಣ,
ಪಜ್ಞೆಯ ನಾಮವ ದೃಷ್ಟಿಯ ಮಧ್ಯದಲ್ಲಿ ಇಕ್ಕಿ
ಮತ್ತೆ ಅದರ ನಡುವೆ ನಿಶ್ಚಯ ಬಿಳಿಯ ನಾಮವನಿಕ್ಕಿ
ಹೊತ್ತ ದಾಸಿಕೆ ಹುಸಿಯಾಯಿತ್ತು.
ದಾಸೋಹವೆಂಬುದನರಿಯದೆ ಎನ್ನ ವೇಷ ಹುಸಿಯಾಯಿತ್ತು,
ನಾರಾಯಣಪ್ರಿಯ ರಾಮನಾಥಾ./59
ನಾ ವಿಶ್ವಾಸಿಯಾದಡೆ ಗುಪ್ತ ಭಕ್ತಿಯ ಮಾಡಬೇಕೆ?
ನಾ ವಿಶ್ವಾಸಿಯಾದಡೆ ಹರಿವೇಷವಂ ಇದಿರಿಗೆ ತೊಟ್ಟು
ಹರನ ಹರಣದಲ್ಲಿ ಇರಿಸಿಹೆನೆಂಬ ಸಂದೇಹವೇತಕ್ಕೆ?
ನನ್ನ ವಿಶ್ವಾಸಕ್ಕೆ ಇದಿರ ಅರಿತಡೆ
ಅಸುವ ಹೊಸೆದೆಹೆನೆಂಬ ಹುಸಿಮಾತಿನ ಗಸಣಿಯೇತಕ್ಕೆ?
ಎನ್ನ ವೇಷವು ಹುಸಿ,
ನಿಮ್ಮ ಭಕ್ತಿಯ ದಾಸೋಹದ ದಾಸನೆಂಬುದು ಹುಸಿಯಯ್ಯಾ,
ನಾರಾಯಣಪ್ರಿಯ ರಾಮನಾಥಾ./60
ನಾನಾ ಭೇದವ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ
ನಾನಾ ಜೀವದ ಕಳೆ ನಿನ್ನ ಕಾರುಣ್ಯದಲ್ಲಿ
ಬೆಳೆವುತಿಪ್ಪ ಮೂರುತಿ ನೀನೆ
ನಾರಾಯಣಪ್ರಿಯ ರಾಮನಾಥಾ./61
ನಾನು ಭೃತ್ಯನಾಗಿದ್ದಲ್ಲಿ ಕರ್ತರ ಇರವ ವಿಚಾರಿಸೂದು
ಭಕ್ತರ ಇರವಲ್ಲ, ಇದು ವಿಶ್ವಾಸದ ಯುಕ್ತಿ.
ಇಷ್ಟಕಂಜಿ ಬಿಟ್ಟಡೆ ಮೊದಲು ಮೋಸವಾದಲ್ಲಿ
ಲಾಭಕ್ಕೆಸರಿಹುದುಗುಂಟೆ?
ಶರಣರ ಮರೆ ಮನಕ್ಕೆ ವಿರೋಧವುಂಟೆ?
ಮಣ್ಣಿನ ಹೊದಕೆ ಮೈ ಜಲಕ್ಕೆ ನಿರ್ಮಲವಲ್ಲದೆ ಭಿನ್ನಭಾವವಿಲ್ಲ.
ಎನ್ನ ಮಾತು ನಿನಗೆ ಅನ್ಯವೆ, ನನ್ನಿಯಲ್ಲದೆ?
ಅದಕ್ಕೆ ಭಿನ್ನ ಭಾವವಿಲ್ಲ,
ನಾರಾಯಣಪ್ರಿಯ ರಾಮನಾಥಾ./62
ನಾಯ ನರಿಯ ಮಧ್ಯದಲ್ಲಿ ನಾರಿವಾಳದ ಸಸಿ ಹುಟ್ಟಿತ್ತು.
ಐದು ಗೇಣು ಉದ್ದ ಎಂಟು ಗೇಣು ವಿಸ್ತೀರ್ಣ.
ಅದರ ಬೇರು ಪಾತಾಳಕ್ಕೆ ಇಳಿಯಿತ್ತು;
ಬೇರಿನ ಮೊನೆ ನೀರ ತಿಂದಿತ್ತು;
ನೀರ ಸಾರ ತಾಗಿ ಮರನೊಡೆಯಿತ್ತು,
ಮಟ್ಟೆ ಇಪ್ಪತ್ತೈದಾಗಿ ಹೊಂಬಾಳೆ ಬಿಟ್ಟಿತ್ತು;
ಹದಿನಾರು ವಳಯದಲ್ಲಿ ಕಾಯಿ ಬಲಿದವು.
ಮೂರು ದಿಸೆಯಲ್ಲಿ ಆ ಮರವ ಹತ್ತಿ ಕಾಯ ಕೆಡಹುವರಿಲ್ಲ.
ವಾಯವಾಯಿತ್ತು ಮರಹುಟ್ಟಿ ಮರದ ಕೆಳಗಿದ್ದು
ಹಣ್ಣಿನ ಹಂಬಲು ಹರಿವುದ ನೋಡುತ್ತಿದ್ದೇನೆ.
ನಾರಾಯಣಪ್ರಿಯ ರಾಮನಾಥಾ./63
ನೀರ ನೆಳಲು ನುಂಗಿತ್ತೆಂದು,
ಆರೈಕೆಗೊಂಬವನ ಅರಣ್ಯ ನುಂಗಿತ್ತು.
ನುಂಗಿದ ಅರಣ್ಯವ ಗುಂಗುರು ನುಂಗಿತ್ತು.
ಗುಂಗುರ ಅಂಗವ ಸೀಳಲಾಗಿ ಕಂಡರು ಮೂರು ಲೋಕವ.
ಈ ಗುಣವ ಕಂಡ ಕಂಡವರಿಗೆ ಹೇಳಿ,
ಭಂಡಾಹವರ ಕಂಡು ನಿಂಗು ನೋಡುತ್ತಿದ್ದೆ
ನಾರಾಯಣಪ್ರಿಯ ರಾಮನಾಥಾ./64
ನೀಲಮೇಘದ ಭೂಮಿಯಲ್ಲಿ ಕಾಳ ಗೂಳಿ ಹುಟ್ಟಿತ್ತು.
ಬಾಲ ಬಿಳಿದು ಕಾಲು ಕೆಂಪು.
ಅದರ ಕೋಡು ಕಾಳಕೂಟ.
ಅದರ ಬಾಯಿ ಅಸಿಯ ಬಳಗ.
ಅದರ ನಾಲಗೆ ಸಾಲು ಲೋಕದ ಸಂಹಾರ.
ಅದರ ನಾಸಿಕದ ವಾಸ
ಶೇಷನ ಕಮಠನ ಆಶ್ರಯಿಸಿದ ಕ್ಷೋಣಿ.
ಇಂತಿವು ಉಚ್ಚಾಸದಲ್ಲಿ ಆಡುವ ತುಂತುರು ಬಿಂದು.
ಇದರಂತುಕದಲ್ಲಿ ನಿಂದು ಹೂಂಕರಿಸಲಾಗಿ
ಅಡಗಿತ್ತು ಜಗ, ಉಡುಗಿತ್ತು ಆಕಾಶ.
ತಮ್ಮತಮ್ಮ ತೊಡಿಗೆಯ ಬಿಟ್ಟರು,
ಮೂರು ಜಾತಿ ಕುಲ ವರ್ಗ.
ಇಂತೀ ಗೂಳಿಯ ದೆಸೆಯಿಂದ ಗೋಳಕಾಕಾರವಾದೆ
ಗೋಪಾಲಪ್ರಿಯ ರಾಮನಾಥಾ./65
ಪರವನರಿವುದು ಅಪರವೊ ಪರವೊ?
ಜ್ಞಾತೃವನರಿವುದು ಜ್ಞಾನವೊ ಜ್ಞಾತೃವೊ?
ಜ್ಞೇಯವನರಿವುದು ಭಾವವೊ ಜ್ಞೇಯವೊ?
ಅರಿವನರಿವುದು ಅರಿವೊ ಅಜ್ಞಾನವೊ?
ದಿವವನರಿವುದು ರಾತ್ರಿಯೊ ದಿವವೋ?
ಇಂತಿವರುಭಯವನರಿತಲ್ಲಿ
ಭ್ರಾಂತುಗೊಂಡವರಂತೆ ಭ್ರಮಿಸಲದೇತಕ್ಕೆ?
ಕ್ರೀಯಲ್ಲಿ ವೇಧಿಸಿ ಜ್ಞಾನದಲ್ಲಿ ಭೇದಿಸಿ ಬಣ್ಣ ಬಂಗಾರದಂತೆ
ಭಿನ್ನ ಭಾವವಿಲ್ಲದೆ ನೆನೆವ ಮನವೇ ಲಿಂಗವಾಗಿ,
ಲಿಂಗಮೂರ್ತಿಯ ನೆನಹಿಂಗೆ ಭಿನ್ನವಿಲ್ಲದೆ
ರತ್ನಕುಲ ಪಾಷಾಣದಲ್ಲಿ ತೋರುವ ದೀಪ್ತಿಯ ಕಳೆಯಂತೆ
ಲಿಂಗಕ್ಕೂ ಚಿತ್ತಕ್ಕೂ ಕುರುಹು ಹಿಂಗದ ಬೆಳಕು.
ಹೀಗಲ್ಲದೆ ಲಿಂಗಸಂಗವಿಲ್ಲ.
ಬಯಲ ಮಾತಿನ ಬಳಕೆಯಲ್ಲಿ, ವೇಷದ ಬಲಿಕೆಯಲ್ಲಿ,
ಬರು ಮಾತಿಂಗೆ ಬಯಲ ಸಂಗಿ ಒಲಿವನೆ?
ಮಾತು ಮನಸ್ಸು ಕೂರ್ತು ಜಗದೀಶನನರಿ
ರಘುನಾಥಪ್ರಿಯ ರಾಮನಾಥಾ./66
ಪುಷ್ಪಕ್ಕೆ ಗಂಧ ಬಲಿವಲ್ಲಿ,
ಫಲಕ್ಕೆ ರಸ ತುಂಬುವಲ್ಲಿ,
ತರಳೆಗೆ ವಿಷಯ ತೋರುವಲ್ಲಿ,
ಇವು ಋತುವಲ್ಲದೆ ಸ್ವಯವಲ್ಲ.
ತನ್ನನರಿವುದಕ್ಕೆ ಮುನ್ನವೆ ಲಿಂಗತನ್ಮಯವಾಗಿರಬೇಕು.
ಹೇಮದ ಪುತ್ಥಳಿಯ ಕರಗಿ [ಸಿ] ಮರಳಿ
ರೂಪನರಸಲುಂಟೆ?
ನಾರಾಯಣಪ್ರಿಯ ರಾಮನಾಥಾ./67
ಬಣ್ಣ ನುಂಗಿದ ಕಪ್ಪಡಕ್ಕೆ ಮುನ್ನಿನ ಅಂದವುಂಟೆ?
ನಿಜದ ನನ್ನಿಯನರಿತವಂಗೆ ಮುನ್ನಿನ ಕುನ್ನಿಯ ಗುಣವುಂಟೆ?
ಇದು ಸನ್ನದ್ದ ನಾರಾಯಣಪ್ರಿಯ ರಾಮನಾಥನಲ್ಲಿ
ಸುಸಂಗಿಯಾದ ಶರಣಂಗೆ./68
ಬಣ್ಣವ ಬಯಲು ನುಂಗಿದಾಗ
ಅಣ್ಣಗಳೆಲ್ಲಕ್ಕೂ ಮರಣವಹಾಗ
ಮದವಳಿಗೆಯ ಮದವಳಿಗೆ ಹೋದನೆಂದುಕೊಂಡ.
ಒಂದು ಕಡೆಯಲ್ಲಿ ತಾ ಒಂದು ಕಡೆಯಾದ
ಪರಿಯ ನೋಡಾ!
ಗಂಡನೊಂದಾಗಿ ಹೋದವರ ಮಿಂಡ ಉಳುಹಿಸಿಕೊಂಡ
ಪರಿಯ ನೋಡಾ!
ಮಿಂಡನೊಂದಾಗಿ ಗಂಡನ ಕೂಡಿಕೊಂಬ
ಉಂಡ ಮುಂಡೆಯರತನವ ಕಂಡು ನಾನಂಜುವೆ,
ನಾರಾಯಣಪ್ರಿಯ ರಾಮನಾಥಾ./69
ಬಿತ್ತಿದ ಬೆಳೆದ ಪೃಥ್ವಿ ನುಂಗಿದಾಗ
ಬಿತ್ತದ ವಟ್ಟ ಎಂತಪ್ಪುದೋ?
ಇಷ್ಟಲಿಂಗವ ಚಿತ್ತ ನುಂಗಿದಾಗ
ಭಕ್ತಿಯ ಹೊಲ ಎಂತಪ್ಪುದೊ?
ಮಾರ್ಗವ ಕೇಳುವ ಶಿಷ್ಯ ಪ್ರತ್ಯುತ್ತರಗೆಯ್ದಲ್ಲಿ
ಭೃತ್ಯನಹ ಪರಿಯಿನ್ನೆಂತೊ?
ಇದರಚ್ಚುಗವ ನೋಡಾ,
ನಾರಾಯಣಪ್ರಿಯ ರಾಮನಾಥಾ./70
ಬಿತ್ತು ರಸವ ಮೆದ್ದಾಗ ಹಣ್ಣಿನ ಹಂಗು ಹರಿಯಿತ್ತು.
ಬಲ್ಲವ ಗೆಲ್ಲ ಸೋಲವ ನುಡಿಯಲಾಗಿ
ಬಲ್ಲತನ ಅಲ್ಲಿಯೇ ಅಡಗಿತ್ತು.
ಬೆಲ್ಲದ ಸಿಹಿಯಂತೆ ಬಲ್ಲವನ ಇರವು, ಎಲ್ಲಕ್ಕೂ ಸರಿ,
ನಾರಾಯಣಪ್ರಿಯ ರಾಮನಾಥಾ./71
ಬಿರಿದ ಕಟ್ಟಿದವನಿದ್ದಂತೆ ಕಟ್ಟಿಸಿಕೊಂಬ ಕೈದುವಿಂಗೇನು
ಒಚ್ಚೆ ಕಟ್ಟಿದವಂಗಲ್ಲದೆ?
ಜ್ಞಾನವರಿತೆಹೆನೆಂಬ ಭಾವಿಗಲ್ಲದೆ ನಿರ್ಭಾವಿಗುಂಟೆ
ಬಂಧ ಮೋಕ್ಷ ಕರ್ಮಂಗಳೆಂಬವು?
ಇದರಂಗದ ಸಂಗ ಕರಿ ಮುಕುರ ನ್ಯಾಯ.
ಪರಿಪೂರ್ಣ ಪರಂಜ್ಯೋತಿ ಅಘನಾಶನ
ನಾರಾಯಣಪ್ರಿಯ ರಾಮನಾಥಾ./72
ಬೆಲ್ಲದಿಂದಾದ ಸಕ್ಕರೆ ತವರಾಜಗೂಳ
ಇವೆಲ್ಲವು ಅಲ್ಲಿ ಒದಗಿದವಲ್ಲದೆ
ಬೇರೆ ಮತ್ತೊಂದರಲ್ಲಿ ಒದಗಿದವೆ?
ಇವರಂದವ ತಿಳಿದು ನೋಡಲಾಗಿ
ಹಿಂಗದ ದೈವಕ್ಕೆ ಕೊಂಡಾಡಲೇತಕ್ಕೆ?
ಸಂದಳಿದಭಂಗಂಗೆ ಅದು ನಿಂದಲ್ಲಿಯೆ ತಾನು
ನಾರಾಯಣಪ್ರಿಯ ರಾಮನಾಥಾ./73
ಬ್ರಹ್ಮ ಅಂಡಿಂಗೆ ಒಡೆಯನಾದಲ್ಲಿ,
ವಿಷ್ಣು ಖಂಡಿಂಗೆ ಒಡೆಯನಾದಲ್ಲಿ,
ರುದ್ರ ಮಂಡೆಗೆ ಒಡೆಯನಾದಲ್ಲಿ
ಅಂಡು ಆಧಾರ, ಖಂಡಿ ಸ್ಥಿತಿ, ಮಂಡೆ ಮರಣ.
ಇಂತೀ ಮೂವರ ಅಂದವನರಿತ ಮತ್ತೆ ಕೊಂಡಾಡಲೇತಕ್ಕೆ?
ಬೇರೊಂದು ಲಿಂಗವುಂಟೆಂದು ಮೂವರ ಹಂಗ ಹರಿದಲ್ಲದೆ
ಪ್ರಾಣಲಿಂಗಿಯಲ್ಲ
ನಾರಾಯಣಪ್ರಿಯ ರಾಮನಾಥಾ./74
ಬ್ರಹ್ಮ ಆಧಾರ ಚಕ್ರವಾದಲ್ಲಿ,
ವಿಷ್ಣು ಯೋನಿಯಾದಲ್ಲಿ,
ರುದ್ರ ಪ್ರಜಾಪತಿಯಾಗಿ
ಸಂಯೋಗವಾದಲ್ಲಿ ಜಗದ ವ್ಯಾಪಾರ.
ಇದು ಕಾರಣ,
ತಲ್ಲೀಯವಾಗಲ್ಪಟ್ಟುದು ಲಿಂಗವೆಂದು ಹಿಂಗಿದೆ.
ಅವನ ಇತ್ತ ಸಂಗದ ನಿಜವೇ ಆದೆ.
ನಾರಾಯಣಪ್ರಿಯ ರಾಮನಾಥನಲ್ಲಿ
ನಾಮರೂಪು ಲೇಪವಾದ ಶರಣ./75
ಬ್ರಹ್ಮ ಮಣಿಯಾದ ವಿಷ್ಣು ಬಲಿಯಾದ
ಸಕಲ ದೇವತಾ ಕುಲವೆಲ್ಲ ಗೊರುವ ದಾರವಾದರು
ವ್ಯಾಪಾರವೆಂಬ ಹೊಳೆಯಲ್ಲಿ ಬೀಸಲಾಗಿ
ಸಿಕ್ಕಿತ್ತು ಜೀವವೆಂಬ ಮತ್ಸ ್ಯ.
ಆ ಮತ್ಸ ್ಯಕ್ಕೆ ಕಣ್ಣು ಮೂರು, ಬಾಯಿ ಐದು,
ಗರಿ ಹದಿನಾರು, ಹಲ್ಲು ಎಂಟು,
ಆ ಹೊಲಸಿನ ಮುಳ್ಳು ಲೆಕ್ಕವಿಲ್ಲ.
ಕತ್ತಿಗಳವಡದು ಬೆಂಕಿಗೆ ಬೇಯದು.
ಈ ಶಂಕೆಯ ಇನ್ನಾರಿಗೆ ಹೇಳುವೆ,
ನಾರಾಯಣಪ್ರಿಯ ರಾಮನಾಥಾ./76
ಭಕ್ತಂಗೆ ತನು ಮನ ಧನ
ಮಾಡುವ ಭಕ್ತಿಯಲ್ಲಿ, ಪೂಜಿಸುವ
ಶಿವಲಿಂಗದಲ್ಲಿ ಭೃತ್ಯಭಾವ,
ಗುರುವಿನಲ್ಲಿ ನಿಶ್ಚಯಭಾವ,
ಜಂಗಮದಲ್ಲಿ ಇವೆಲ್ಲವೂ ತನ್ನೊದಗಲ್ಲದೆ
ಇದಿರಿಗೆ ಭಿನ್ನಭಾವವಿಲ್ಲವಾಗಿ
ತಾ ಬಿತ್ತಿದ ಬೆಳೆಯ ತಾ ಸಲಿಸುವಂತೆ
ತನಗೆ ಲಾಭವಲ್ಲದೆ ಇದಿರಿಗೆ ಲಾಭವಿಲ್ಲ.
ಅರ್ಚಿಸಿ ಪೂಜಿಸಿ ಮಾಡಿ ನೀಡಿ ಮನ ಹೊಲ್ಲದಿರಬೇಕು.
ಇದು ಪ್ರಸಿದ್ಧ, ನಾರಾಯಣಪ್ರಿಯ ರಾಮನಾಥನಲ್ಲಿ
ಭಕ್ತನ ವಿಶ್ವಾಸಸ್ಥಲ./77
ಭಕ್ತರಾಗಿದ್ದವರು ಭಕ್ತರ ವಿರಕ್ತರ
ಮಿಥ್ಯದಿಂದ ನುಡಿವುದು ಸತ್ಯವಲ್ಲ.
ಮಿಥ್ಯವನಳಿದು ಸತ್ಯವ ಕುರಿತು
ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ
ನಿತ್ಯ ಅನಿತ್ಯವ ತಿಳಿಯಬೇಕು.
ಇದು ಸುಚಿತ್ತದ ಭಾವ.
ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ.
ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು
ತನಗೆ ಅನ್ಯ ಭಿನ್ನವಿಲ್ಲದೆ ತೋರುವವೊಲು
ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ.
ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ.
ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ.
ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ
ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ
ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ
ನಿಜಪದ ತತ್ವ ಸ್ವರೂಪ.
ಸಕಲ ಜೀವದ ಆಧಾರ,
ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ
ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ,
ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ
ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ
ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ
ಗುಪ್ತಮಂಚನ ನಿತ್ಯನೇಮ ಸಂದಿತ್ತು.
ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು.
ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ
ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ./78
ಮಣ್ಣ ಹೂಟೆ ಮಳೆಗೆ ಮುಚ್ಚುವುದಲ್ಲದೆ
ಕಲ್ಲ ಹೂಟೆ ಮುಚ್ಚುವುದೆ?
ಬಲ್ಲವನಲ್ಲಿ ಸೋಂಕು ಸುಳಿದಡೆ
ಅಲ್ಲ ಅಹುದೆಂದು ತಿಳಿಯಬಲ್ಲವ ಎಲ್ಲವನು ಬಲ್ಲ,
ಮಣ್ಣಿನ ಬಿರಯ ತೆರದಂತೆ.
ಬಲ್ಲತನವಿಲ್ಲದವನ ಅನುಭಾವಕೂಟ
ಕಲ್ಲಿನ ಹೋಟೆಯಂತೆ,
ನಾರಾಯಣಪ್ರಿಯ ರಾಮನಾಥಾ./79
ಮತ್ರ್ಯಲೋಕವ ಪಾವನವ ಮಾಡುವೆನೆಂದು
ಸುಳಿವ ವಿರಕ್ತ ಜಂಗಮದಿರವು ಹೇಗಿರಬೇಕೆಂದಡೆ: ಕಲ್ಲಿನ ಮೇಲೆ ಹೊಯ್ದ ನೀರಿನಂತಿರಬೇಕು.
ಪಥವಿಲ್ಲದ ಪಯಣವ ಹೋಗಿ ಗತಿಗೆಟ್ಟವನಂತಿರಬೇಕು.
ಶ್ರುತಿಯಡಗಿದ ನಾದದ ಪರಿಯಂತಿರಬೇಕು.
ಹುರಿದ ಬೀಜದ ಒಳಗಿನಂತಿರಬೇಕು.
ಅದಾವಂಗೂ ಅಸಾಧ್ಯ ನೋಡಾ,
ನಾರಾಯಣಪ್ರಿಯ ರಾಮನಾಥಾ./80
ಮರುಳನ ಊಟದಂತೆ, ಮಯೂರನ ನಿದ್ರೆಯಂತೆ,
ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ,
ಕಟಕದಲ್ಲಿ ತೋರುವ ಅಸಿಯ ರಸೆಯಂತೆ,
ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ,
ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ,
ಇಪ್ಪ ಸುಳಿವ ಜಂಗಮಮೂರ್ತಿಯ ಕಂಡು
ನಮೋ ನಮೋ ಎಂಬೆ
ನಾರಾಯಣಪ್ರಿಯ ರಾಮನಾಥಾ./81
ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲ
ಆತ ಏತರೊಳಗೂ ಸಿಕ್ಕದ ಅಜಾತ ಶಂಭು.
ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟು
ವೇಷದಿಂದಾದ ಘಾತಕತನವನೊಲ್ಲದೆ
ಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆ
ನಿಜ ತತ್ವದ ಆಶೆಯೇ ಸಾಕಾರವಾಗಿ
ಅರಿದ ಆತ್ಮ ಕರಿಗೊಂಡಲ್ಲಿ
ಹರಿಪ್ರಿಯ ಅಘೋರನಾಶನ ರಾಮನಾಥಾ./82
ಮಾಧವನ ಮನೆಯ ಬಾಗಿಲಿನಲ್ಲಿ
ಮಹಾಜನಂಗಳೆಲ್ಲರು ಕೂಡಿ
ಹೋಮವನಿಕ್ಕಲಾಗಿ, ಎದ್ದಿತ್ತು ಉರಿ.
ಮೂವರ ಮಸ್ತಕವ ಮುಟ್ಟಿ, ಆ ಹೋಮದ ಹೊಗೆ ತಾಗಿ
ನಾಲ್ವರ ಕಣ್ಣು ಕೆಟ್ಟಿತ್ತು.
ಆ ಹೋಮದ ದಿಕ್ಕಿನ ಕುಂಭ ಉರುಗಿಹೋಗಲಾಗಿ
ತೊರೆ ಹರಿಯಿತ್ತು.
ಕಾಲ ಕಡಹು ಆರಿಗೂ ಆಗದು.
ಎಲ್ಲಾ ಠಾವಿನಲ್ಲಿ ಮಡುಮಯವಾಯಿತ್ತು.
ಮಡುವಿನ ಮೊಸಳೆ ತಡಿಯಲ್ಲಿ
ಆರನೂ ನಿಲಲೀಸದೆ ಕಡಿದು ನುಂಗಿಹುದಿನ್ನೇವೆ.
ಮೊಸಳೆಯ ಹಿಡಿವರ ಕಾಣೆ,
ಮಡುವ ಒಡೆವರ ಕಾಣೆ,
ಹೋಮವ ಕೆಡಿಸುವರ ಕಾಣೆ,
ಮಾಧವನ ಬಾಗಿಲಿನಲ್ಲಿ ನಿಂದು ಹೋದರು ಹೊಲಬುದಪ್ಪಿ,
ನಾರಾಯಣಪ್ರಿಯ ರಾಮನಾಥಾ./83
ಯೋನಿ ಒಂದರಲ್ಲಿ ಬಂದೆನೆಂದಡೆ ಹಿಂಚುಮುಂಚಿಲ್ಲವೆ?
ರತ್ನಕುಲ ಒಂದಾದಡೆ ಕಾಲಿಗೂ ಸರಿ, ಕೈಗೂ ಸರಿಯೆ?
ನಾ ನುಡಿದಹೆನೆಂದಡೆ ಕಡೆನಡು ಮೊದಲಿಲ್ಲ.
ಅಂಜನವನಿಕ್ಕಿ ನಿಧಾನವ ಕಾಬಂಗೆ
ಬರುಬದೊಂದಾಗಿ ಸಂಗವೇತಕ್ಕೆ?
ನಾರಾಯಣಪ್ರಿಯ ರಾಮನಾಥಾ./84
ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ?
ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ?
ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ?
ಇಂತೀ ಮೂರು ಅಳಿವಿಂಗೊಳಗು.
ಅನಾದಿ ಚಿಚ್ಛಕ್ತಿಯ ಅಂಶೀಭೂತ
ಮಾಯಿಕ ಸಂಬಂಧ ದೇಹಿಕರು;
ಅವತಾರಮೂರ್ತಿಗಳಾದ ರಣಜಗದ ದೈವಂಗಳಿವರು.
ಇವರ ಭೇದ ದರ್ಪಣದ ಒಳ ಹೊರಗಿನಂತಪ್ಪ ಭೇದ.
ನಿಶ್ಚಯವಂತರು ತಿಳಿದು ನೋಡಿರಣ್ಣಾ,
ತಿಳಿದಡೆ ಇರವು ಉದಕದೊಳಗಣ ವಿಕಾರದಂತೆ
ಬಯಲೊಳಗಣ ಮರೀಚಿಯಂತೆ ಹಿಂಗದ ವಸ್ತು
ನಾರಾಯಣಪ್ರಿಯ ರಾಮನಾಥನಲ್ಲಿ ಗುಣವಿರಹಿತ ಶರಣಂಗೆ./85
ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಸಿಕ್ಕುವನೆ?
ಅದು ತನ್ನ ಸಿಕ್ಕಿನ ಬಹುದ ತಾನರಿಯ.
ಈ ಉಭಯವ ತಿಳಿದಲ್ಲಿ ಲಾಭ ನಷ್ಟ ದಿವರಾತ್ರಿಯಂತೆ
ಮಾಟ ಕೂಟದ ಒದಗು.
ವಿಶ್ವಾಸದಲ್ಲಿ ಲಾಭಾ, ಅದು ಹೀನವಾದಲ್ಲಿ ನಷ್ಟ.
ಇಂತೀ ನಷ್ಟ ಲಾಭವ ಬಿಟ್ಟು
ಸುಚಿತ್ತ ನಿರ್ಮಲಾತ್ಮಕನಾಗಿ ಅರಿದು ಕರಿಗೊಳ್ಳಬೇಕು.
ನಾರಾಯಣಪ್ರಿಯ ರಾಮನಾಥನಲ್ಲಿ
ಚಿತ್ತಶುದ್ಧನಾಗಿರಬೇಕು./86
ಲಿಂಗ ಸಂಗಿಯಾದಲ್ಲಿ ಕಲ್ಲು ನೆಲ್ಲಿನಂತಿರಬೇಕು.
ಲಿಂಗ ಪ್ರಾಣವಾದಲ್ಲಿ ಉರಿ ಕರ್ಪೂರದಂತಾಗಬೇಕು.
ಆ ತದ್ಭಾವ ಲಿಂಗದ ಕೂಟ.
ವರುಣನ ಕಿರಣ ಕೊಂಡ ಮರೀಚಿಕಾ ಜಲದಂತೆ
ಮಕರ ಉದಕ ಪಥದಂತೆ ನಾಮದೋರದ ಇರವು,
ನಾರಾಯಣಪ್ರಿಯ ರಾಮನಾಥಾ./87
ಲಿಂಗಪೂಜೆಯ ಮಾಡುವಲ್ಲಿ
ಮನ ಗುರಿಯ ತಾಗಿದ ಕೋಲಿನಂತಿರಬೇಕು.
ಶಿವಲಿಂಗಪೂಜೆಯ ಮಾಡುವಲ್ಲಿ
ಶ್ರವಕ್ಕೆ ಸಂಜೀವನ ಹುಟ್ಟಿದಂತಿರಬೇಕು.
ಹೀಗಲ್ಲದೆ ಪೂಜೆಯಲ್ಲ.
ಒಳಗಣ ಹುಳುಕು ಮೇಲಕ್ಕೆ ನಯವುಂಟೆ,
ಆ ತರು ಒಣಗುವವಲ್ಲದೆ?
ಇಂತೀ ಬರುಬರ ಅರ್ಚನೆ ಹುರಿಯ ಬೊಂಬೆಯಂತೆ.
ಇಂತೀ ಅರಿಗುರಿಗಳ ಪೂಜೆ ಬರುಕಟೆಯಂತೆ
ನಾರಾಯಣಪ್ರಿಯ ರಾಮನಾಥಾ./88
ಲೋಕವ ಕುರಿತಲ್ಲಿ ಆಚಾರದ ಮಾತು.
ತನ್ನ ಕುರಿತಲ್ಲಿ ಅನಾಚಾರದ ಮಾತು.
ಆಚಾರಸಂಪನ್ನರನ್ನೆಲ್ಲಿಯೂ ಕಂಡೆ.
ಅನಾಚಾರಸಂಪನ್ನರನ್ನೆಲ್ಲಿಯೂ ಕಾಣೆ.
ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು.
ಬೆಣ್ಣೆಗೆ ತುಪ್ಪವಲ್ಲದೆ ತುಪ್ಪ ಬೆಣ್ಣೆಯಪ್ಪುದೆ?
ತರು ಬೆಂದಲ್ಲಿ ಕರಿಯಲ್ಲದೆ, ಕರಿ ಬೆಂದಲ್ಲಿ ತರು ಉಂಟೆ?
ಇದು ಅಘಟಿತ, ಅನಾಮಯ,
ನಾರಾಯಣಪ್ರಿಯ ರಾಮನಾಥಾ./89
ವಸ್ತು ಭಾವದ ಶಕ್ತಿಸ್ವರೂಪು ವಿಷ್ಣು.
ವಿಷ್ಣುಭಾವದ ಶಕ್ತಿಸ್ವರೂಪು ಬ್ರಹ್ಮ.
ಆ ವಿಷ್ಮುವಿನ ಅವತಾರ ಅರುಹಂತ.
ಇಂತಿವೆಲ್ಲವು ವಸ್ತು ಬುಡವೆಂದರಿದು
ಹೇಳುತ್ತದೆ ಪ್ರಣವದಲ್ಲಿ, ಸಾಗಿಸುತ್ತದೆ ವೇದಶಾಸ್ತ್ರ
ಸಂದೇಹವಿಲ್ಲದೆ ಕೂಗುತ್ತದೆ ಪುರಾಣ
ಪುಣ್ಯ ಗತಿಮತಿ ಒಬ್ಬನೇ ಎಂದು.
ಮುಕುರವ ಹಿಡಿದು ಮುಖವ ಕೇಳಲೇಕೆ?
ನಾರಾಯಣಪ್ರಿಯ ರಾಮನಾಥಾ./90
ವಾದ ವಶ್ಯ ಯಂತ್ರ ಮಂತ್ರ ಇಂದ್ರಜಾಲ ಮಹೇಂದ್ರಜಾಲ
ಅದೃಶ್ಯಾಕರಣ ಪರಕಾಯಪ್ರವೇಶ ತೀರ್ಥಯಾತ್ರೆ
ದಿಗ್ವಳಯದಲ್ಲಿ ಜನಜನಿತದ ಆಗುಚೇಗೆಯಲ್ಲದೆ ಎಲ್ಲಿಯೂ ಕಾಬುದಿಲ್ಲ.
ಕಾಬುದಕ್ಕೆ ತೆರಪು ಮೂರನರಿದು ಮೂರ ಮರೆದು
ಆರನರಿದು ಹದಿನಾರ ಹರಿದು,
ಐದ ಬಿಟ್ಟು ಇಪ್ಪತ್ತೈದ ಕಟ್ಟಿ
ಬಟ್ಟ ಬಯಲು ತುಟ್ಟತುದಿಯ ಮೆಟ್ಟಿ ನೋಡಿ ಕಂಡ
ನಾರಾಯಣಪ್ರಿಯ ರಾಮನಾಥನಲ್ಲಿ ಕೂಟದ ಶರಣ./91
ವಾದ್ಯದೊಳಗಣ ನಾದದೊಲು
ಪಾಷಾಣದೊಳಗಣ ಪಾವಕನೊಲು
ಕಿಸಲಯದೊಳಗಣ ರಸದವೊಲು
ಅಸಿಮೊನೆಯಲ್ಲಿ ತೋರುವ ನಯ ಕುಶಲದವೊಲು
ಮುಸುಕಿನೊಳಗೆ ತೋರುವ ಆಕಾಶದ ಪ್ರತಿರೂಪಿನವೊಲು
ಗಜಗತಿಯಂತೆ ಮಯೂರನಂತೆ ಉಲುಹಡಗಿದ ವೃಕ್ಷ
ಬಯಲೊಳಗಡಗಿದ ನಾದ ಹೊರಹೊಮ್ಮದ ಐಕ್ಯ.
ಇಂತಿವರಂದದಲ್ಲಿ ಸಂದ ಶರಣಂಗೆ ಸಂದೇಹ ಪಥವಿಲ್ಲ
ನಂದಗೋಪಿಯ ಕಂದಪ್ರಿಯ ನಿಸ್ಸಂಗಲಿಂಗ ರಾಮನಾಥಾ./92
ವೇದ ಪ್ರಣವದ ಶೇಷ.
ಶಾಸ್ತ್ರ ಸಂಕಲ್ಪದ ಸಂದು.
ಪುರಾಣ ಪುಣ್ಯದ ತಪ್ಪಲು.
ಇಂತೀ ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ
ವಾದಕ್ಕೆ ಹೋರುವ ವಾಗ್ವಾದಿಗಳು
ಭೇದವನರಿಯದೆ ಹೋರಲೇಕೆ?
ಹೊಲಬುದಪ್ಪಿ ಬೇವಿನ ಮರನ ಹತ್ತಿ
ಬೆಲ್ಲವ ಮೆದ್ದಡೆ ಕಹಿಯೊ? ಸಿಹಿಯೊ?
ಎಂಬುದನರಿತಾಗ,
ಆವ ಬಳಕೆಯಲ್ಲಿದ್ದಡೂ ದೇವನ ಕಲೆಯನರಿತಲ್ಲಿ
ಆವ ಲೇಪವೂ ಇಲ್ಲ,
ನಾರಾಯಣಪ್ರಿಯ ರಾಮನಾಥಾ./93
ಸಮಯಕ್ಕೆ ಹೋರಬೇಕು, ಜ್ಞಾನದಲ್ಲಿ ಸುಮ್ಮನಿರಬೇಕು.
ಹೋರದಿದ್ದಡೆ ರುದ್ರಂಗೆ ದೂರ.
ಹೋರಿದಡೆ ಪರವಸ್ತುವಿಗೆ ದೂರ.
ಇದರಿಂದ ಬಂದುದು ಬರಲಿ.
ಮನೆಯೊಳಗಿದ್ದು ಮನೆಯ ಸುಟ್ಟರುಂಟೆ?
ನಾರಾಯಣಪ್ರಿಯ ರಾಮನಾಥಾ./94
ಸರ್ವಜ್ಞಾನ ಸಂಬಂಧಿಯ ಇರವು: ಕಿರಣದೊಳಗಣ ಸುರಂಗದಂತೆ
ಸುರಭಿಯೊಳಗಣ ನವನೀತದಂತೆ
ಬೀಜದೊಳಗಣ ವೃಕ್ಷದಂತೆ
ಸಾಧಕರಲ್ಲಿ ತೋರುವ ಸಂಕಲ್ಪದಂತೆ
ಸಾತ್ವಿಕರಲ್ಲಿ ತೋರುವ ವಿಲಾಸಿತದಂತೆ
ಆಗ್ನಿಯಲ್ಲಿ ಹೊರಹೊಮ್ಮದ ತೆರವು
ಕೆಡದೆ ಉಡುಗಿ ತೋರುವ ಬೆಳಗಿನಂತೆ
ತೆರಹಿಲ್ಲದ ಭಾವ ವೇದಕ್ಕೆ ಅತೀತ, ಶಾಸ್ತ್ರಕ್ಕೆ ಅಗಮ್ಮ,
ಪುರಾಣಕ್ಕೆ ಆಗೋಚರ,
ಪುಣ್ಯದ ಪಟಲ ದಗ್ಧ, ನಾಮ ನಾಶ,
ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯವಾದ ಶರಣ./95
ಸರ್ವವ ಮುಟ್ಟಿ ಅರ್ಪಿಸುವಲ್ಲಿ
ಅರ್ಪಿಸಿಕೊಂಬ ವಸ್ತು ಹಿಂಚೊ ಮುಂಚೊ
ಎಂಬುದನರಿದಲ್ಲದೆ ಅರ್ಪಿತಾವಧಾನಿಗಳಲ್ಲ.
ಅರ್ಪಿಸಿಕೊಂಬ ದ್ರವ್ಯ ವಸ್ತುವ ಅರಿಯಬೇಕೊ
ವಸ್ತು ದ್ರವ್ಯವ ತಾನರಿತು ಅರ್ಪಿಸಿಕೊಳಬೇಕೊ?
ಈ ಉಭಯವನರಿತಡೆ ಅರ್ಪಿತ ಅವಧಾನಿ.
ಪುರುಷಂಗೆ ಸತಿ ಸಂಯೋಗದಿಂದಲ್ಲದೆ
ಸತಿಗೆ ಪುರುಷನ ಸಂಯೋಗದಿಂದಲ್ಲದೆ
ಈ ಉಭಯ ಸುಖವಿಲ್ಲ
ನಾರಾಯಣಪ್ರಿಯ ರಾಮನಾಥಾ./96
ಸ್ಥೂಲ ತನುವನರಿದು ಮರೆದಲ್ಲಿ ಗುರುವನರಿದವ.
ಸೂಕ್ಷ ್ಮ ತನುವನರಿದು ಮರೆದಲ್ಲಿ ಲಿಂಗವನರಿದವ.
ಕಾರಣ ತನುವನರಿದು ಮರೆದಲ್ಲಿ ಜಂಗಮವನರಿದವ.
ಇಂತೀ ತ್ರಿವಿಧವನರಿದು ನಿಶ್ಚಯವಾದ ನಿಶ್ಚಟಂಗೆ
ಅರಿದು ಮರೆಯಲಿಲ್ಲ, ಮರೆದು ಅರಿಯಲಿಲ್ಲ.
ವಾಯುವಿನ ಕೈಯ ಗಂಧದಂತ
ನಾರಾಯಣಪ್ರಿಯ ರಾಮನಾಥನಲ್ಲಿ ಭಾವ
ನಿರ್ಭಾವನಾದವಂಗೆ./97
ಹರಿ ಬಂದ ವಿಧಿ, ಬ್ರಹ್ಮ ಬಂದ ಭವ, ಜಿನ ಬಂದ ಲಜ್ಜೆ.
ದೃಷ್ಟವ ಕಂಡೇಕೆ ಮಿಥ್ಯದಿಂದ ಹೋರುವರು?
ಆದಿ ವಸ್ತುವಿನ ಕಾಲುರಂಗು ವಿಷ್ಣು,
ಅರೆರಂಗು ಬ್ರಹ್ಮ, ಸಂದೇಹ ಮಾತ್ರ ಜಿನ.
ಇವರ ಭಂಗಿತವ ಹೇಳಲೇಕೆ?
ಇವರ ಸಂದೇಹದ ಮಂದಮತಿಯ ದಿಂಡೆಯತನದಿಂದ
ಹೋರುವ ಭಂಡರ ತಿಳಿ,
ನಾರಾಯಣಪ್ರಿಯ ರಾಮನಾಥನಲ್ಲಿ
ಗುಪ್ತಭಕ್ತರಪ್ಪ ಸತ್ಯವಂತರು./98
ಹರಿ ಮಾಡಿದ ಭಕ್ತಿಗೆ ಕಡೆ ನಡು ಮೊದಲಿಲ್ಲ
ಜಗದ ಕಂಟಕ ಬಂದಲ್ಲಿ
ದಶಾವತಾರನಾಗಿ ಪಶುಪತಿಯ ಸೇವೆ ಮಾಡಿದ.
ಶಶಿಶೇಖರನ ಅಲಯದಲ್ಲಿ ಪತಿಭಕ್ತಿಯಾಗಿಪ್ಪ
ನಾರಾಯಣನ ಜಗವೇಷಮಂ ತಾಳಿ
ಇಂತಿವರೆಲ್ಲರೂ ಎನ್ನ ರಾಮನಾಥ
ಗೋವಿಂದಾ ಗೋವಿಂದಾ ಎನುತಿದ್ದರು./99
ಹಾಸನಿಕ್ಕುವಾತನ ಕೈಯ ತೂತಿನ ಕೊಳಪೆಯ
ನೂಲು ನುಂಗಿತ್ತು.
ಕಡ್ಡಿಯ ಸುತ್ತುವ ಕೂಸ ರಾಟಿಯ ಕೈ ನುಂಗಿತ್ತು.
ಉಂಕೆಯ ಮಾಡುವಾತನ ಕೈಯ ಕುಂಚಿಗೆಯ
ತುಂತುರು ನುಂಗಿತ್ತು.
ನೆಯ್ವ ಅಣ್ಣನ ಕೈಯ ನಳಿಗೆ ನುಂಗಿತ್ತು.
ಹಾಸಿನ ಕಡ್ಡಿಯ ಉಂಕೆಯ ನೆಯ್ವಾತನ ಬುದ್ಧಿಯ ಚಿತ್ತವ
ಏನೆಂದರಿಯದ ಕೂಸು ನುಂಗಿತ್ತು.
ನಾರಾಯಣಪ್ರಿಯ ರಾಮನಾಥನಲ್ಲಿ
ಐಕ್ಯಾನುಭಾವಿಯಾದ ಶರಣ./100