Categories
ವಚನಗಳು / Vachanagalu

ಗುಮ್ಮಳಾಪುರದ ಸಿದ್ಧಲಿಂಗನ ವಚನಗಳು

ಪ್ರಥಮದಲ್ಲಿ ನಾಮ ರೂಪು ಕ್ರೀ
ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು.
ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ.
ಆ ಶುದ್ಧ ಪ್ರಣವಧಿಂದ ಚಿತ್ತು ಭಾವದಕ್ಷರ.
ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ.
ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು.
ಆ ಅಕ್ಷರತ್ರಯಂಗಳಿಂದ ಓಂಕಾರ.
ಆ ಓಂಕಾರವೆ ಬಸವಣ್ಣನು. ಆ ಬಸವಣ್ಣನೆ
ಎನ್ನ ವದನಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಬಲದ ಭುಜಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಎಡದ ಭುಜಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದೇಹಮಧ್ಯಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ
ಎನ್ನ ಬಲದ ತೊಡೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಎಡದ ತೊಡೆಗೆ ಯಕಾರಾವಾಗಿ ಬಂದನಯ್ಯ ಬಸವಣ್ಣ.
ಎನ್ನ ಸ್ಥೂಲತನುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಮಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಕಾರಣತನುವಿಂಗೆ ಆಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆಯತಕ್ಕೆ ಬಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸ್ವಾಯತಕ್ಕೆ ಸಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸನ್ನಿಹಿತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಕ್ರೀಗೆ ಅವಾಚ್ಯ ಸ್ವರೂಪಾಗಿ ಬಂದನಯ್ಯ ಬಸವಣ್ಣ.
ಎನ್ನ ಜ್ಞಾನಕ್ಕೆ ಮಹಾಶೂನ್ಯ ಸ್ವರೂಪನಾಗಿ ಬಂದನಯ್ಯ ಬಸವಣ್ಣ.
ಎನ್ನ ರುಧಿರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಮಾಂಸಕ್ಕೆ ಮಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಮೇದಸ್ಸಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆಸ್ಥಿಗೆ ವಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಮಜ್ಜೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ತ್ವಗಮಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದೇಹಭಾವ ಕೊಂದಹೆನೆಂದು ಬಕಾರವಾಗಿ ಬಂದನಯ್ಯ
ಬಸವಣ್ಣ.
ಎನ್ನ ಹೊನ್ನು ಹೆಣ್ಣು ಮಣ್ಣೆಂಬ ಸಕಲಾಸೆಯ ಕೊಂದಹೆನೆಂದು
ಸಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಇಂದ್ರಿಯ ವಿಷಯಂಗಳ ಕೊಂದಹೆನೆಂದು
ವಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ನಾದಕ್ಕೆ ಆಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಬಿಂದುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಕಳೆಗೆ ಮಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪ್ರಾಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ವಿಶ್ವಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ತೈಜಸಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ
ಎನ್ನ ಪ್ರಜ್ಞೆಗೆ ತೃಪ್ತಿಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಸತ್ವಕ್ಕೆ ಶುದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ.
ಎನ್ನ ರಜಕ್ಕೆ ಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ.
ಎನ್ನ ತಮಕ್ಕೆ ಪ್ರಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ.
ಎನಗೆ ಬಕಾರವೆ ಗುರುವಾಗಿ ಬಂದನಯ್ಯ ಬಸವಣ್ಣ.
ಎನಗೆ ಸಕಾರವೆ ಲಿಂಗವಾಗಿ ಬಂದನಯ್ಯ ಬಸವಣ್ಣ.
ಎನಗೆ ವಕಾರವೆ ಜಂಗಮವಾಗಿ ಬಂದನಯ್ಯ ಬಸವಣ್ಣ.
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಕಾರಣತನುವಿಂಗೆ ಭಾವಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಶಿವ ಕ್ಷೇತ್ರಜ್ಞ ಕರ್ತಾರ ಭಾವ ಚೈತನ್ಯ ಅಂತರ್ಯಾಮಿಯೆಂಬ
ಷಡುಮೂರ್ತಿಗಳಿಗೆ
ನಕಾರ ಮಃಕಾರ ಶಿಕಾರ ವಾಕಾರ ಯಕಾರ ಓಂಕಾರವಾಗಿ
ಬಂದನಯ್ಯ ಬಸವಣ್ಣ.
ಎನ್ನ ಚಿತ್ತಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಬುದ್ಧಿಗೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಮನಸ್ಸಿಂಗೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಜ್ಞಾನಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಭಾವಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಬ್ರಹ್ಮತತ್ವಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ವಿಷ್ಣುತತ್ವಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ರುದ್ರತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಈಶ್ವರತತ್ವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸದಾಶಿವತತ್ವಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಮಹಾಶ್ರೀಗುರುತತ್ವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪೃಥ್ವಿಗೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಪ್ಪುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಗ್ನಿತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆಕಾಶಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆತ್ಮಂಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪ್ರಾಣವಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಪಾನವಾಯುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ವ್ಯಾನವಾಯುವಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಉದಾನವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸಮಾನವಾಯುವಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ
ಎನ್ನ ಪಂಚವಾಯುವಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆಧಾರಚಕ್ರಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಸ್ವಾಧಿಷ್ಠಾನಚಕ್ರಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಮಣಿಪೂರಚಕ್ರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಅನಾಹತಚಕ್ರಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ವಿಶುದ್ಧಿಚಕ್ರಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಆಜ್ಞಾಚಕ್ರಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಚತುರ್ದಳಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಷಡುದಳಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದ್ವಾದಶದಳಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಷೋಡಶದಳಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದ್ವಿದಳಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಚತುರಾಕ್ಷರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಷಡಾಕ್ಷರಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದಶಾಕ್ಷರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದ್ವಾದಶಾಕ್ಷರಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಷೋಡಶಾಕ್ಷರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ದ್ವಿಯಾಕ್ಷರಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಮ.
ಎನ್ನ ಕೆಂಪುವರ್ಣಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ನೀಲವರ್ಣಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಕುಂಕುಮವರ್ಣಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪೀತವರ್ಣಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಶ್ವೇತವರ್ಣಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಮಾಣಿಕ್ಯವರ್ಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಜ್ರಾಗ್ರಾವಸ್ಥೆಗೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸ್ವಪ್ನಾವಸ್ಥೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸುಷುಪ್ತಾವಸ್ಥೆಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ತೂರ್ಯಾವಸ್ಥೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅತೀತಾವಸ್ತೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ನಿರಾವಸ್ಥೆಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಂತಃಕರಣಂಗಳಿಗೆ ಚತುರ್ವಿಧ ಬಿಂದು
ಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಅರಿಷಡ್ವರ್ಗಂಗಳಿಗೆ ಷಡ್ವಿಧಧಾತು ಲಿಂಗವಾಗಿ
ಬಂದನಯ್ಯ ಬಸವಣ್ಣ.
ಎನ್ನ ದಶವಾಯುಗಳಿಗೆ ದಶವಿದ ಕ್ಷೇತ್ರಲಿಂಗವಾಗಿ
ಬಂದನಯ್ಯ ಬಸವಣ್ಣ.
ಎನ್ನ ದ್ವಾದಶೇಂದ್ರಿಯಂಗಳಿಗೆ ದ್ವಾದಶ ವಿಕೃತಿಲಿಂಗವಾಗಿ
ಬಂದನಯ್ಯ ಬಸವಣ್ಣ.
ಎನ್ನ ಷೋಡಶಕಲೆಗೆ ಷೋಡಶಕಲಾಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಹಂಕಾರ ಮಮಕಾರಗಳಿಗೆ ವಿದ್ಯಾಲಿಂಗವಾಗಿ ಬಂದನಯ್ಯಬಸವಣ್ಣ.
ಎನ್ನ ಭಕ್ತಿಸ್ಥಲಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಮಾಹೇಶ್ವರಸ್ಥಲಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಪ್ರಸಾದಿಸ್ಥಲಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಪ್ರಾಣಲಿಂಗಿಸ್ಥಳಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಶರಣಸ್ಥಲಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಐಕ್ಯಸ್ಥಲಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ಚಿತ್ತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಬುದ್ಧಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಮನಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಜ್ಞಾನಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಭಾವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಕ್ರಿಯಾಶಕ್ತಿಗೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಜ್ಞಾನಶಕ್ತಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಇಚ್ಛಾಶಕ್ತಿಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆದಿಶಕ್ತಿಗೆ ವಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪರಶಕ್ತಿಗೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಚಿತ್ಶಕ್ತಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಶ್ರದ್ಧೆಗೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ನಿಷ್ಠೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅವಧಾನಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಅನುಭಾವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಆನಂದಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಸಮರಸಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಶಬ್ದಕ್ಕೆ ಗುರುವಾಗಿ ಬಂದನಯ್ಯ ಬಸವಣ್ಣ.
ಎನ್ನ ಸ್ಪರುಶನಕ್ಕೆ ಲಿಂಗವಾಗಿ ಬಂದನಯ್ಯ ಬಸವಣ್ಣ.
ಎನ್ನ ರೂಪಿಂಗೆ ಶಿವಲಾಂಛನವಾಗಿ ಬಂದನಯ್ಯ ಬಸವಣ್ಣ.
ಎನ್ನ ರಸಕ್ಕೆ ಶಿವಪ್ರಸಾದವಾಗಿ ಬಂದನಯ್ಯ ಬಸವಣ್ಣ.
ಎನ್ನ ಗಂಧಕ್ಕೆ ಶಿವಾನುಭಾವವಾಗಿ ಬಂದನಯ್ಯ ಬಸವಣ್ಣ
ಎನ್ನ ನಾಸಿಕಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಜಿಹ್ವೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ನೇತ್ರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ತ್ವಕ್ಕಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಶ್ರೋತ್ರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಹೃದಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ವಾಕ್ಕಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪಾಣಿಗೆ ವಾಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪಾದಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಗುಹ್ಯಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ.
ಎನ್ನ ಪಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ.
ಇಂತೀ ಪಂಚೇಂದ್ರಿಯಂಗಳೆ ಪಂಚಮಹಾಯಜ್ಞ.
ಆ ಪಂಚಮಹಾಯಜ್ಞದಲ್ಲಿ
ಎನ್ನ ಮನ ಹಾರೈಸಿ ಪೂರೈಸಿ ಒಲಿದು
ಕೇಳಿತ್ತು ಮುಟ್ಟಿತ್ತು ನೋಡಿತ್ತು ರುಚಿಸಿತ್ತು ವಾಸಿಸಿತ್ತು.
ಎನ್ನ ಮಾನಸ ವಾಚಕ ಕಾಯಕ ಕರಣಂಗಳೆಲ್ಲವು
ಪಂಚಮಹಾಯಜ್ಞ ಸೋಂಕಿ ಪಂಚಮಹಾಯಜ್ಞವಪ್ಪುದು ತಪ್ಪದು.
ಅದೆಂತೆಂದಡೆ-
ಮಹಾಜ್ಯೋತಿಯ ಸೋಂಕಿದ
ಉತ್ತಮ ಅಧಮ ತೃಣ ಮೊದಲಾದವೆಲ್ಲವು
ಮಹಾ ಅಗ್ನಿಯ ಸೋಂಕಿ ಮಹಾ ಅಗ್ನಿಯಪ್ಪುದು ತಪ್ಪದು.
ಇಂತಪ್ಪ ಮಹಾಯಜ್ಞವನೊಳಕೊಂಡಿಪ್ಪ
ಮೂಲಾಗ್ನಿಯೇ ಬಸವಣ್ಣ.
ಆ ಬಸವಣ್ಣನೆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ
ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯೇ ಚಿದ್ಬ ್ರಹ್ಮ.
ಆ ಚಿದ್ಬ ್ರಹ್ಮವೇ ಬಸವಣ್ಣ. ಆ ಬಸವಣ್ಣನೇ ಎನಗೆ ಅಷ್ಟಾವರಣ
ಸ್ವರೂಪನಾದ ಸಚ್ಚಿದಾನಂದ ಬಸವಣ್ಣ.
ನಿತ್ಯಪರಿಪೂರ್ಣ ಬಸವಣ್ಣ. ಅಖಂಡಾದ್ವಯ ಬಸವಣ್ಣ.
ನಿರಂಜನ ಬಸವಣ್ಣ.
ನಿರ್ಮಾಯ ಬಸವಣ್ಣ, ನಿರಾಚರಣ ಬಸವಣ್ಣ.
ನಿರ್ಜನಿತ ಬಸವಣ್ಣ.
ನಿಲರ್ೆಪ ಬಸವಣ್ಣ. ನಿಃಕಪಟಿ ಬಸವಣ್ಣ.
ಅಸಾಧ್ಯ ಸಾಧಕ ಬಸವಣ್ಣ.
ಅಭೇದ್ಯ ಭೇದಕ ಬಸವಣ್ಣ. ಚಿತ್ಪ್ರಕಾಶ ಬಸವಣ್ಣ.
ಇಂತಪ್ಪ ಬಸವಣ್ಣನ ಅಂಗವೆ ಚಿದಾಕಾಶ.
ಆ ಚಿದಾಕಾಶದ ಮಧ್ಯದಲ್ಲಿ ಚಿತ್ಪ್ರಾಣವಾಯು.
ಆ ಚಿತ್ಪ್ರಾಣವಾಯುವಿನ ಮಧ್ಯದಲ್ಲಿ ಚಿದಾಗ್ನಿ.
ಆ ಚಿದಾಗ್ನಿಯ ಮಧ್ಯದಲ್ಲಿ ಚಿಜ್ಜಲ.
ಆ ಚಿಜ್ಜಲದ ಮಧ್ಯದಲ್ಲಿ ಚಿದ್ಭೂಮಿ.
ಆ ಚಿದ್ಭೂಮಿಯ ಮಧ್ಯದಲ್ಲಿ ಹೃದಯ.
ಆ ಹೃದಯದ ಮಧ್ಯದಲ್ಲಿ
ಆಕಾರ ಉಕಾರ ಮಕಾರ ಪ್ರಣಮಪೀಠ.
ಆ ಪ್ರಣವಪೀಠದ ಮಧ್ಯದಲ್ಲಿ ಜಂಗಮ
ಆ ಜಂಗಮವ ಮಕುಟದಲ್ಲಿ ಶೂನ್ಯಲಿಂಗ.
ಆ ಶೂನ್ಯಲಿಂಗದಲ್ಲಿ ಚಿದಂಬರ, ಆ ಚಿದಂಬರರಲ್ಲಿ ಶಿವಶಕ್ತಿ.
ಆ ಶಿವಶಕ್ತಿಯಲ್ಲಿ ಪಂಚಶಕ್ತಿ. ಆ ಪಂಚಶಕ್ತಿಯಲ್ಲಿ ಪಂಚನಾದ.
ಆ ಪಂಚನಾದದಲ್ಲಿ ಪಂಚಸಾದಾಖ್ಯ.
ಆ ಪಂಚಸಾದಾಖ್ಯದಲ್ಲಿ ಈಶ್ವರ.
ಆ ಈಶ್ವರನಲ್ಲಿ ಮಾಹೇಶ್ವರ. ಆ ಮಾಹೇಶ್ವರನಲ್ಲಿ ರುದ್ರ.
ಆ ರುದ್ರನಲ್ಲಿ ತ್ರಯವಯ ಹಿರಣ್ಯಗರ್ಭ ವಿರಾಟ್ಮೂರ್ತಿ.
ಇಂತೀ ಎಂಬತ್ತುಮೂರು ಮೂರ್ತಿಗಳೊಳಗೆ
ಎಂಬತ್ತೆರಡೆ ಬಸವಣ್ಣನಂಗವೊಂದೆ ಪ್ರಾಣ.
ಆ ಪ್ರಾಣ ಚೈತನ್ಯ ಶೂನ್ಯವೆ
ಗೋಳಕ ಗೋಮುಖ ವೃತ್ತಾಕಾರವಾಗಿ
ಕರಸ್ಥಲದಲ್ಲಿ ಪಿಡಿದು
ಆ ಲಿಂಗದ ಆದಿಪ್ರಣಮವೆ ಪೀಠ,
ಆಕಾರವೆ ಕಂಠ,
ಉಕಾರವೆ ಗೋಮುಖ,
ಮಕಾರವೆ ವರ್ತುಳ, ನಾಳ ಬಿಂದು ಮಹಾತೇಜ.
ನಾದವೆ ಅಖಂಡಲಿಂಗ.
ಇಂತಪ್ಪ ಬಸವಣ್ಣನ ನಿತ್ಯತ್ವವೆ ಲಿಂಗ; ಪೂರ್ಣತ್ವವೆ ಗುರು.
ಚಿತ್ಪ್ರಕಾಶವೆ ಜಂಗಮ.
ಆನಂದವೆ ಪ್ರಸಾದ, ಚಿದ್ರಸದ ಪ್ರವಾಹವೆ ಪಾದತೀರ್ಥ.
ಇಂತಪ್ಪ ಬಸವಣ್ಣ ಅನಂತಕೋಟಿ ಬ್ರಹ್ಮಾಂಡಗಳ
ರೋಮಕೂಪದಲ್ಲಿ ಸಂಕಲ್ಪಿಸಿ
ಅಲ್ಲಿದ್ದಾತ್ಮಂಗೆ ಸುಜ್ಞಾನ ಕ್ರೀಯನಿತ್ತು ತದ್ ಭೃತ್ಯ ಕರ್ತ ತಾನಾಗಿ
ಇಷ್ಟಾರ್ಥಸಿದ್ಧಿಯನೀವುತಿಪ್ಪ ಬಸವಣ್ಣನ
ಭೃತ್ಯರ ಭೃತ್ಯರ ತದ್ಭೃತ್ಯನಾಗಿರಿಸಿ
ಬಸವಣ್ಣನ ಪಡುಗ ಪಾದರಕ್ಷೆಯ ಹಿಡಿವ
ಭಾಗ್ಯವಯೆನಗೀವುದಯ್ಯ,
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಬಸವಣ್ಣನ ಅರುಹಿಕೊಟ್ಟ
ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗನಾಗಿರ್ದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./1
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಬ್ರಹ್ಮವೇ ಬಸವಣ್ಣನೆನಗೆ.
ಆ ಬಸವಣ್ಣನೆ ನವಲಿಂಗಸ್ವರೂಪವಾಗಿಪ್ಪನಯ್ಯ.
ಅದು ಹೇಗೆಂದಡೆ-
ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವವೆಂದು
ಇಂದ್ರಿಯಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸಿಪ್ಪನಯ್ಯ.
ಅದು ಹೇಗೆಂದಡೆ-
ನಾಸಿಕದಲ್ಲಿ ಅಂಗಲಿಂಗಸಂಗ ಚತುರ್ವಿಂಶತಿ ಸ್ವರೂಪನೊಳಕೊಂಡು
ಆಚಾರಲಿಂಗವಾಗಿ ಎನ್ನ ನಾಸಿಕದಲ್ಲಿ
ಇಂಬುಗೊಂಡನಯ್ಯ ಬಸವಣ್ಣ.
ಜಿಹ್ವೆಯಲ್ಲಿ ಅಂಗಲಿಂಗಸಂಗ ಅಷ್ಟಾದಶ ಸ್ವರೂಪನೊಳಕೊಂಡು
ಗುರುಲಿಂಗವಾಗಿ ಎನ್ನ ಜಿಹ್ವೆಯಲ್ಲಿ
ಇಂಬುಗೊಂಡನಯ್ಯ ಬಸವಣ್ಣ.
ನೇತ್ರದಲ್ಲಿ ಅಂಗಲಿಂಗಸಂಗ ಷೋಡಶ ಸ್ವರೂಪನೊಳಕೊಂಡು
ಶಿವಲಿಂಗವಾಗಿ ಎನ್ನ ನೇತ್ರದಲ್ಲಿ
ಇಂಬುಗೊಂಡನಯ್ಯ ಬಸವಣ್ಣ.
ತ್ವಕ್ಕಿನಲ್ಲಿ ಅಂಗಲಿಂಗಸಂಗ ಸಪ್ತಾದಶ ಸ್ವರೂಪನೊಳಕೊಂಡು
ಜಂಗಮಲಿಂಗವಾಗಿ ಎನ್ನ ತ್ವಕ್ಕಿನಲ್ಲಿ
ಇಂಬುಗೊಂಡನಯ್ಯ ಬಸವಣ್ಣ.
ಶ್ರೋತ್ರದಲ್ಲಿ ಅಂಗಲಿಂಗಸಂಗ ತ್ರೆ ದಶ ಸ್ವರೂಪನೊಳಕೊಂಡು
ಪ್ರಸಾದಲಿಂಗವಾಗಿ ಎನ್ನ ಶ್ರೋತ್ರದಲ್ಲಿ
ಇಂಬುಗೊಂಡನಯ್ಯ ಬಸವಣ್ಣ.
ಹೃದಯದಲ್ಲಿ ಅಂಗಲಿಂಗಸಂಗ
ತ್ರಯೋದಶ ಸ್ವರೂಪವನೊಳಕೊಂಡು
ಮಹಾಲಿಂಗವಾಗಿ ಎನ್ನ ಹೃದಯದಲ್ಲಿ
ಇಂಬುಗೊಂಡನಯ್ಯ ಬಸವಣ್ಣ.
ಇಂತೀ ಬಸವಣ್ಣನೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ
ಪದಾರ್ಥ ಪ್ರಸಾದ.
ಇಂತಿವನರಿದು ಅರ್ಪಿಸಿದೆನಾಗಿ
ಎನ್ನ ತನುವಿನಲ್ಲಿ ಶುದ್ಧಪ್ರಸಾದವಾಗಿ
ಇಂಬುಗೊಂಡನಯ್ಯ ಬಸವಣ್ಣ.
ಎನ್ನ ಮನದಲ್ಲಿ ಸಿದ್ಧಪ್ರಸಾದವಾಗಿ
ಇಂಬುಗೊಂಡನಯ್ಯ ಬಸವಣ್ಣ.
ಎನ್ನ ಪ್ರಾಣದಲ್ಲಿ ಪ್ರಸಿದ್ಧಪ್ರಸಾದವಾಗಿ
ಇಂಬುಗೊಂಡನಯ್ಯ ಬಸವಣ್ಣ.
ಇಂತೀ ಶುದ್ಧಸಿದ್ಧ ಪ್ರಸಿದ್ಧ ಪ್ರಸಾದದೊಳಗೆ
ಮುಳುಗಿದ್ದ ಭೇದವನರಿದು
ಬೋಳಬಸವೇಶ್ವರನ ಅನುಭಾವ ಸಂಪರ್ಕದಿಂದ
ಸಿದ್ಧೇಶ್ವರನ ಘನಪ್ರಕಾಶ ಸಾಧ್ಯವಾಯಿತ್ತಾಗಿ
ಪರಂಜ್ಯೋತಿ ಮಹಾಲಿಂಗಗುರು ಸಿದ್ದಲಿಂಗಪ್ರಭುವಿನಲ್ಲಿ
ಎರಡರಿಯದಿರ್ದೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ./2
ಅಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳ ಕಳದು
ಎನ್ನ ಅಂತರಂಗ ಬಹಿರಂಗ ಶುದ್ಧಾತ್ಮನ ಮಾಡಿದ ಮಡಿವಾಳಯ್ಯ.
[ಎನ್ನ] ಸಾಕಾರ ಮೂರು ಮೂರು ಹದಿನೆಂಟು
ಪ್ರಕಾರವನೊಳಕೊಂಡು,
ಎನ್ನ ಬಹಿರಂಗದಲ್ಲಿ ಆಯತವಾದನಯ್ಯ ಬಸವಣ್ಣ.
ಎನ್ನ ಅಂತರಂಗದಲ್ಲಿ ಸ್ವಾಯತವಾದನಯ್ಯ ಚೆನ್ನಬಸವಣ್ಣ.
ನಿರಾಳ ನಿರ್ಮಾಯ ನಿಶ್ಯೂನ್ಯ ಬ್ರಹ್ಮವೆ ಉಭಯಸಂಗದಲ್ಲಿ
ಸನ್ನಹಿತವಾದನಯ್ಯ ಪ್ರಭುದೇವರು.
ಇಂತೀ ಅಂತರಂಗ ಬಹಿರಂಗ ಆತ್ಮಸಂಗವನರುಹಿ
ಬೋಳಬಸವೇಶ್ವರನು ಸಿದ್ಧೇಶ್ವರನ ನಿಜಪದವನೊರೆದೊರೆದು
ತೋರಿದ ಕಾರಣ
ಎನ್ನ ತನು ಬಯಲಾಯಿತ್ತು, ಎನ್ನ ಮನ ಬಯಲಾಯಿತ್ತು,
ಪ್ರಾಣ ಬಯಲಾಯಿತ್ತು, ಇಂದ್ರಿಯ ಬಯಲಾಯಿತ್ತು,
ವಿಷಯ ಬಯಲಾಯಿತ್ತು,
ಇಂತಿವರೊಳಗೆ ನಾನು ಬಯಲಾದೆನು.
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಹಿಂದು ಮುಂದು ಎಡ ಬಲ ಅಡಿ ಆಕಾಶವೆಂಬ
ಭೇದವನರಿಯದೆ ಮುಳುಗಿ
`ನಿಶ್ಯಬ್ದ ಬ್ರಹ್ಮಮುಚ್ಯತೆ’ ಎಂಬ ನುಡಿಯಡಗಿತ್ತಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ./3
ಸದ್ಗುರುಸ್ವಾಮಿ ಕೃಪೆ ಮಾಡಿ ಕೊಟ್ಟ
ಪಂಚಾಕ್ಷರ ಷಡಾಕ್ಷರ ಏಕಾಕ್ಷರವೆ
ಎನಗೆ ಇಷ್ಟ ಪ್ರಾಣ ಭಾವ.
ಇಷ್ಟವೆ ಬಸವಣ್ಣ. ಪ್ರಾಣವೆ ಚೆನ್ನಬಸವಣ್ಣ.
ಭಾವವೆ ಪ್ರಭುದೇವರು.
ಅದು ಹೇಗೆಂದಡೆ: ಸಾಕಾರ ಮೂರು ಮೂವತ್ತೊಂದು ಪ್ರಕಾರವನೊಳಕೊಂಡು
ಎನ್ನ ಕಾಯದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ನಿರಾಕಾರ ಮೂರು ಹದಿಮೂರು ಪ್ರಕಾರವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ನಿಃಕಲ ನಿರವಯ ಚಿದದ್ವಯ ಜಂಗಮವೆ
ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು.
ಅದು ಹೇಗೆಂದಡೆ: ಅಂಗ ಪ್ರಾಣ ಇಂದ್ರಿಯಂಗಳೆ ಗುರು ಲಿಂಗ ಜಂಗಮ.
ಆ ಗುರು ಲಿಂಗ ಜಂಗಮವೆ ಗೋಳಕ ಗೋಮುಖ ವೃತ್ತಾಕಾರ.
ಅದು ಹೇಗೆಂದಡೆ: ಗುರುಲಿಂಗ ತ್ರಿವಿಧವನೊಳಕೊಂಡು
ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ
ಶಿವಲಿಂಗ ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ಜಂಗಮಲಿಂಗ ತ್ರಿವಿಧವನೊಳಕೊಂಡು
ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು.
ಆಗಮಲಿಂಗ ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ಕಾಯಲಿಂಗ ತ್ರಿವಿಧವನೊಳಕೊಂಡು
ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ.
ಆಚಾರಲಿಂಗ ತ್ರಿವಿಧವನೊಳಕೊಂಡು
ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು.
ಅನುಗ್ರಹಲಿಂಗ ತ್ರಿವಿಧವನೊಳಕೊಂಡು
ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ.
ಅರ್ಪಿತಲಿಂಗ ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ತನುಗುಣಲಿಂಗ ತ್ರಿವಿಧವನೊಳಕೊಂಡು
ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು.
ಒಲವುಲಿಂಗ ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ನಿರೂಪುಲಿಂಗ ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ಪ್ರಸಾದಲಿಂಗ ತ್ರಿವಿಧವನೊಳಕೊಂಡು
ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು.
ಪಾದೋದಕಲಿಂಗ ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ನಿಃಪತಿಲಿಂಗ ತ್ರಿವಿಧವನೊಳಕೊಂಡು
ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ.
ಆಕಾಶಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ
ಸಂಗವಾದನಯ್ಯ ಪ್ರಭುದೇವರು.
ಪ್ರಕಾಶಲಿಂಗ ತ್ರಿವಿಧವನೊಳಕೊಂಡು
ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು.
ಕೊಂಡುದು ಪ್ರಸಾದ, ನಿಂದುದೋಗರ, ಚರಾಚರ ನಾಸ್ತಿ ಎಂಬ
ತ್ರಿವಿಧವನೊಳಕೊಂಡು
ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ಭಾಂಡ ಭಾಜನ ಅಂಗಲೇಪನವೆಂಬ ತ್ರಿವಿಧವನೊಳಕೊಂಡು
ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ.
ಈ ಗುರು ಲಿಂಗ ಜಂಗಮದೇಕಾರ್ಥ ಸಚ್ಚಿದಾನಂದ ಬ್ರಹ್ಮವು
ಆ ಸಚ್ಚಿದಾನಂದ ಪಿಂಡ ಬ್ರಹ್ಮಾಂಡದೊಳಹೊರಗೆ
ಪರಿಪೂರ್ಣವಾಗಿ ತೋರುವ ಭೇದವನು
ಬೋಳಬಸವೇಶ್ವರನು ಎನ್ನ ಅಂತರಂಗ ಬಹಿರಂಗ ಎಡಬಲ
ಹಿಂದು ಮುಂದು ಅಡಿ ಆಕಾಶ
ತತ್ಪರಿಪೂರ್ಣ ಸಮರಸೈಕ್ಯ ಏಕಾರ್ಥವ ಮಾಡಿಕೊಟ್ಟ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ವಾಯುವನಪ್ಪಿದ ಪರಿಮಳದಂತೆ
ಅಂಬುಧಿಯೊಳಗೆ ಬಿದ್ದ ವಾರಿಕಲ್ಲಿನಂತೆ
ಉರಿಯುಂಡ ಕಪರ್ೂರದಂತಾದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ./4
ಎನ್ನ ತನುವೆ ಬಸವಣ್ಣ, ಎನ್ನಾತ್ಮವೆ ಮಡಿವಾಳಯ್ಯ,
ಎನ್ನ ಪ್ರಾಣವೆ ಚೆನ್ನಬಸವಣ್ಣ,
ಎನ್ನ ಇಂದ್ರಿಯಂಗಳೆ ಪ್ರಭುದೇವರು,
ಎನ್ನ ವಿಷಯಂಗಳೆ ಮೋಳಿಗೆ ಮಾರಿತಂದೆ
ಎನ್ನ ಪ್ರಕೃತಿಯೆ ಅಜಗಣ್ಣದೇವರು.
ಎನ್ನ ಅಂಗಕರಣಂಗಳೆ ಅಸಂಖ್ಯಾತ ಮಹಾಗಣಂಗಳು.
ಎನ್ನ ಮನವೆ ಮಹಾದೇವಿಯಕ್ಕ,
ಎನ್ನ ಬುದ್ಧಿಯೆ ಮೋಳಿಗಯ್ಯನ ರಾಣಿ,
ಎನ್ನ ಚಿತ್ತವೆ ನೀಲಲೋಚನೆಯಮ್ಮ.
ಎನ್ನ ಅಹಂಕಾರವೆ ತಂಗಟೂರ ಮಾರಯ್ಯನ ರಾಣಿ.
ಎನ್ನ ಅರುಹೆ ಅಕ್ಕನಾಗಾಯಕ್ಕ.
ಎನ್ನ ಅರುಹಿನ ವಿಶ್ರಾಂತಿಯೆ ಮುಕ್ತಾಯಕ್ಕ.
ಎನ್ನ ನೇತ್ರದ ದೃಕ್ಕೆ ಸೊಡ್ಡಳ ಬಾಚರಸರು.
ಎನ್ನ ಪುಣ್ಯದ ಪುಂಜವೆ ಹಡಪದಪ್ಪಣ್ಣ.
ಎನ್ನ ಕ್ಷುತ್ತು ಪಿಪಾಸೆಯೆ ಘಟ್ಟಿವಾಳಯ್ಯ.
ಎನ್ನ ಶೋಕ ಮೋಹವೆ ಚಂದಿಮರಸರು.
ಎನ್ನ ಜನನ ಮರಣವೆ ನಿಜಗುಣದೇವರು.
ಎನ್ನ ಯೋಗದ ನಿಲುಕಡೆಯೆ ಸಿದ್ಧರಾಮೇಶ್ವರರು.
ಎನ್ನ ಅಂಗಕರಣವೆ ಏಳ್ನೂರೆಪ್ಪತ್ತಮರಗಣಂಗಳು.
ಇಂತಿವನರಿದೆನಾಗಿ ಬೋಳಬಸವೇಶ್ವರನ ಕೃಪೆಯಿಂದ
ಸಿದ್ಧೇಶ್ವರನೆಂಬ ಪರುಷ ಸಾಧ್ಯವಾಯಿತ್ತಯ್ಯ.
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಅಂಗ ಮಿಥ್ಯಭಾವವನರಿಯದೆ
ನಿಮ್ಮ ಕೃಪಾನಂದದೊಳಗೆ ಮುಳುಗಿರ್ದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ./5
ಎನ್ನ ಉನ್ಮನಿಯ ತತ್ವದ ಮೇಲೆ ತಳತಳನೆ ಹೊಳೆವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಪರಮಲಿಂಗವನು
ಮೆಲ್ಲ ಮೆಲ್ಲನೆ ಎನ್ನ ಭಾವಸ್ಥಲದಲ್ಲಿತಂದು
ಇಂಬಿಟ್ಟನಯ್ಯ ಶ್ರೀಗುರು.
ಎನ್ನ ಭಾವಸ್ಥಲದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಕಲಾಲಿಂಗವನು
ಎನ್ನ ಆತ್ಮಸ್ಥಲದಲ್ಲಿ ಮೆಲ್ಲನೆ ತಂದು
ನ್ಯಸ್ತವ ಮಾಡಿದನಯ್ಯ ಶ್ರೀಗುರು.
ಎನ್ನ ಆತ್ಮಸ್ಥಲದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿದಾನಂದಲಿಂಗವನು
ಮೆಲ್ಲಮೆಲ್ಲನೆ ಎನ್ನ ಆಕಾಶತತ್ವದಲ್ಲಿ
ಸ್ಥಾಪ್ಯವ ಮಾಡಿದನಯ್ಯ ಶ್ರೀಗುರು.
ಎನ್ನ ಆಕಾಶತತ್ವದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮಯಲಿಂಗವನು
ಮೆಲ್ಲಮೆಲ್ಲನೆ ಎನ್ನ ವಾಯುತತ್ವದಲ್ಲಿ
ನ್ಯಸ್ತವ ಮಾಡಿದನಯ್ಯ ಶ್ರೀಗುರು.
ಎನ್ನ ವಾಯುತತ್ವದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮೂರ್ತಿಲಿಂಗವನು
ಮೆಲ್ಲಮೆಲ್ಲನೆ ಎನ್ನ ಅಗ್ನಿತತ್ವದಲ್ಲಿ ಅನುಗೊಳಿಸಿದನಯ್ಯ ಶ್ರೀಗುರು.
ಎನ್ನ ಅಗ್ನಿತತ್ವದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿಲ್ಲಿಂಗವನು
ಮೆಲ್ಲಮೆಲ್ಲನೆ ಎನ್ನ ಅಪ್ಪುತತ್ವದಲ್ಲಿ ನೆಲೆಗೊಳಿಸಿದನಯ್ಯ ಶ್ರೀಗುರು.
ಎನ್ನ ಅಪ್ಪುತತ್ವದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿದ್ರೂಪಲಿಂಗವನು
ಮೆಲ್ಲಮೆಲ್ಲನೆ ಎನ್ನ ಪೃಥ್ವಿತತ್ವದಲ್ಲಿ
ಹುದುಗೊಳಿಸಿದನಯ್ಯ ಶ್ರೀಗುರು.
ಎನ್ನ ಪೃಥ್ವಿತತ್ವದಲ್ಲಿ ತಳತಳನೆ ಹೊಳವುತ್ತಿಹ
ಚಿತ್ಪೂರ್ಣ ಚಿತ್ಪ್ರಕಾಶ ಚಿದದ್ವಯಲಿಂಗವನು
ಎನ್ನ ಭಾವ ಮನ ದೃಕ್ಕಿಗೆ ಕರತಳಾಮಳಕವಾಗಿ
ಎನ್ನ ಕರಸ್ಥಲದಲ್ಲಿ ಮೂರ್ತಗೊಳಿಸಿದನಯ್ಯ ಶ್ರೀಗುರು.
ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಇಷ್ಟಬ್ರಹ್ಮವೆ ಬಸವಣ್ಣನೆನಗೆ.
ಆ ಬಸವಣ್ಣನೆ ಎನ್ನ ಆಧಾರಚಕ್ರದಲ್ಲಿ
ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಿಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಸ್ಥೂಲಾಂಗದಲ್ಲಿ ಇಷ್ಟಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಸೂಕ್ಷಾ ್ಮಂಗದಲ್ಲಿ ಪ್ರಾಣಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಕಾರಣಾಂಗದಲ್ಲಿ ಭಾವಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ನಾಸಿಕದಲ್ಲಿ ಆಚಾರಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ದೃಕ್ಕಿನಲ್ಲಿ ಶಿವಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಪೃಥ್ವಿಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು
ಆಚಾರಲಿಂಗವಾಗಿ ಎನ್ನ ಭಕ್ತಸ್ಥಲದಲ್ಲಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಅಪ್ಪುಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು
ಗುರುಲಿಂಗವಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಅಗ್ನಿಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು
ಶಿವಲಿಂಗವಾಗಿ ಎನ್ನ ಪ್ರಸಾದಿಸ್ಥಲದಲ್ಲಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ವಾಯುಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು
ಜಂಗಮಲಿಂಗವಾಗಿ ಎನ್ನ ಪ್ರಾಣಲಿಂಗಿಸ್ಥಲದಲ್ಲಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಆಕಾಶಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು
ಪ್ರಸಾದಲಿಂಗವಾಗಿ ಎನ್ನ ಶರಣಸ್ಥಲದಲ್ಲಿ
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಆತ್ಮ ಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು
ಮಹಾಲಿಂಗವಾಗಿ ಎನ್ನ ಐಕ್ಯದಲ್ಲಿ
ಮೂರ್ತಿಗೊಂಡನಯ್ಯ ಬಸವಣ್ಣ.
ಇಂತೀ ನಾನಾವಿಧ ಪ್ರಕಾರವನೊಳಕೊಂಡು ಬಸವಣ್ಣನೆ
ಇಷ್ಟಬ್ರಹ್ಮವನೆಗೆ.
ಆ ಇಷ್ಟಬ್ರಹ್ಮವೆ
ಎನ್ನ ಅಂಗ ಮನ ಪ್ರಾಣ ಇಂದ್ರಿಯ ಸಕಲ ಕರಣಂಗಳ
ಕೊನೆಯ ಮೊನೆಯ ಮೇಲೆ ತಳತಳನೆ ಬೆಳಗುತ್ತಿಪ್ಪ
ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಉರಿಯುಂಡ ಕಪರ್ೂರದಂತಾದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./6
ಪ್ರಥಮದಲ್ಲಿ ವಾಙ್ಮನಕ್ಕೆ ಬಾರದ ಸಚ್ಚಿದಾನಂದ ನಿತ್ಯಪರಿಪೂರ್ಣ
ಲಕ್ಷಣವನುಳ್ಳ ನಿಃಕಲದೇವರು.
ದ್ವಿತೀಯದಲ್ಲಿ
`ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್’
ಎಂಬ ಪಂಚಸಂಜ್ಞೆಯನ್ನುಳ್ಳ ಮಹಾಲಿಂಗದೇವರು.
ತೃತೀಯದಲ್ಲಿ ಕರ್ಮ ಕರ್ತ ಮೂರ್ತಿ ಅಮೂರ್ತಿ
ಶಿವಸಾದಾಖ್ಯವನುಳ್ಳ ಸದಾಶಿವದೇವರು.
ಚತುರ್ಥದಲ್ಲಿ ಭವ ಶರ್ವ ರುದ್ರ ಭೀಮ ಸದಾಶಿವ ಉಗ್ರ
ಸೋಮ ಪಶುಪತಿ ಎಂಬ
ಎಂಟು ಪ್ರಕಾರವನುಳ್ಳ ಈಶ್ವರದೇವರು.
ಪಂಚಮದಲ್ಲಿ ಶರ್ವ ಶಿವ ಮಹಾದೇವರು ನೀಲಕಂಠ
ವೃಷಭದ್ವಜ ಈಶಾನ ಶಂಕರ ಭೀಮ ಪಿನಾಕಿ ಚಂದ್ರಶೇಖರ
ಕಪದರ್ಿ ವಿರೂಪಾಕ್ಷ ವಾಮದೇವ ಮೃಡ ಭೂತೇಶ ಶೂಲಿ
ಸರ್ವಜ್ಞ ಸ್ಥಾಣು ಪಾರ್ವತಿಪ್ರಿಯ ಮಹಾಂಕಾಳ ಮಹಾದೀರ್ಘ
ಮಹಾತಾಂಡವ ಗಂಗಾಧರ ಗಣೇಶ್ವರ ಗಜಧ್ವಂಸಿ ಎಂಬ
ಇಪ್ಪತ್ತೆ ದು ಪ್ರಕಾರವನುಳ್ಳ ಮಾಹೇಶ್ವರದೇವರು.
ಷಷ್ಠಮದಲ್ಲಿ ಶಿವ ಮಾಹೇಶ್ವರ ರುದ್ರ ಶ್ರೀಕಂಠ ಶಂಭು ಈಶ್ವರ
ಮಹಾದೇವರು ಪಶುಪತಿ ನೀಲಕಂಠ ವೃಷಭಧ್ವಜ
ಪರಮೇಶ್ವರನೆಂಬ
ಹನ್ನೊಂದು ಪ್ರಕಾರವನುಳ್ಳ ರುದ್ರದೇವರು.
ಸಪ್ತಮದಲ್ಲಿ ಭವ ಮೃಡ ಹರನೆಂಬ ಮೂರು ಪ್ರಕಾರವನುಳ್ಳ
ತ್ರಯಾವಯದೇವರು.
ಅಷ್ಟಮದಲ್ಲಿ ಭಯಂಕರವನುಳ್ಳ ವಿರಾಟಮೂರ್ತಿದೇವರು.
ನವಮದಲ್ಲಿ ಸರ್ವಚೈತನ್ಯಾತ್ಮಕವನುಳ್ಳ ಹಿರಣ್ಯದೇವರು.
ದಶಮದಲ್ಲಿ ಸುಷುಪ್ತಾವಸ್ಥೆಯನುಳ್ಳ ಪ್ರಾಜ್ಞದೇವರು.
ದ್ವಾದಶದಲ್ಲಿ ಜಾಗ್ರಾವಸ್ಥೆಯನುಳ್ಳ ವಿಶೇಶ್ವರದೇವರು.
ಇಂತೀ ನಾಮ ಪರಿಯಾಯಂಗಳನೆಲ್ಲವನು
ಬಸವೇಶ್ವರನೆ ಅಲಂಕರಿಸಿ
`ಏಕಮೂರ್ತಿಸ್ತ್ರಯೋಭರ್ಾಗಂ’ ಎಂಬ ಶ್ರುತಿ ಪ್ರಮಾಣದಿಂದ
ಎನ್ನ ಸಾಕಾರ ಮೂರು ಮೂರು ನವವಿಂಶತಿ ನವವಿಂಶತಿ
ಸ್ವರೂಪವನೊಳಕೊಂಡು
ಎನ್ನ ಬಹಿರಂಗದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ನಿರಾಕಾರ ಮೂರು ಮೂರು ವಿಂಶತಿ ವಿಂಶತಿ
ಸ್ವರೂಪವನೊಳಕೊಂಡು
ಎನ್ನ ಅಂತರಂಗದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಸಚ್ಚಿದಾನಂದ
ಲಕ್ಷಣವನುಳ್ಳ ಬ್ರಹ್ಮವೇ
ಉಭಯಸಂಗದಲ್ಲಿ ಸನ್ನಿಹಿತವಾದನಯ್ಯ ಪ್ರಭುದೇವರು.
ಇಂತೀ ಪಿಂಡಾದಿ ಜ್ಞಾನಶೂನ್ಯಾಂತ ಸ್ಥಲ ಕುಳ ಭೇದವನು
ಸಿದ್ಧೇಶ್ವರನೆನಗೆ ಅರುಹಿ
ತನ್ನ ನಿಜಪದದೊಳಗೆ ಇಂಬಿಟ್ಟುಕೊಂಡ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಸಿದ್ಧೇಶ್ವರನ ಘನವು ಎನಗೆ
ವಾರಿಕಲ್ಲ ಪುತ್ಥಳಿಯನಪ್ಪಿಕೊಂಡಂತಾಯಿತ್ತಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./7
ಎನ್ನ ಮೂವತ್ತಕ್ಷರಸ್ವರೂಪವನೊಳಕೊಂಡು ಆಚಾರಲಿಂಗವಾಗಿ
ಎನ್ನ ಭಕ್ತಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಇಪ್ಪತ್ತೆ ದುಕ್ಷರಸ್ವರೂಪವನೊಳಕೊಂಡು ಗುರುಲಿಂಗ ಸ್ವರೂಪಾಗಿ
ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಇಪ್ಪತ್ತಕ್ಷರಸ್ವರೂಪವನೊಳಕೊಂಡು ಶಿವಲಿಂಗ ಸ್ವರೂಪಾಗಿ
ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಹದಿನೈದಕ್ಷರಸ್ವರೂಪವನೊಳಕೊಂಡು
ಜಂಗಮಲಿಂಗ ಸ್ವರೂಪಾಗಿ
ಎನ್ನ ಪ್ರಾಣಲಿಂಗಿಸ್ಥಳದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ದಶಾಕ್ಷರಸ್ವರೂಪವನೊಳಕೊಂಡು ಪ್ರಸಾದಲಿಂಗ ಸ್ವರೂಪಾಗಿ
ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ಏಕಾಕ್ಷರಸ್ವರೂಪವನೊಳಕೊಂಡು ಮಹಾಲಿಂಗ ಸ್ವರೂಪಾಗಿ
ಎನ್ನ ಐಕ್ಯಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ.
ಇಂತೀ ನಾನಾವಿಧ ಪ್ರಕಾರವನೊಳಕೊಂಡ
ಬಸವಣ್ಣನೆ ಇಷ್ಟಬ್ರಹ್ಮವೆನಗೆ.
ಈ ಇಷ್ಟಬ್ರಹ್ಮವೆ ಎನ್ನ ಭಾವ ಮನ ದೃಕ್ಕಿನಲ್ಲಿ ತೊಳಗಿ ಬೆಳಗುತ್ತಿರ್ದೆ
ಭೇದವನು
ಸಿದ್ಧೇಶ್ವರನು ಅರುಹಿ ಕೊಟ್ಟ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಸಿದ್ಧೇಶ್ವರನ ಕೃಪೆ ಎನಗೆ ಸಾಧ್ಯವಾಯಿತ್ತಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./8
ಎನ್ನ ಅಷ್ಟಾಕ್ಷರಸ್ವರೂಪವನೊಳಕೊಂಡೆನ್ನ ತನುವಿನಲ್ಲಿ
ಸಂಗವಾದನಯ್ಯ ಬಸವಣ್ಣ.
ಎನ್ನ ಷಡಾಕ್ಷರಸ್ವರೂಪವನೊಳಕೊಂಡೆನ್ನ ನಯನದಲ್ಲಿ
ಸಂಗವಾದನಯ್ಯ ಚೆನ್ನಬಸವಣ್ಣ.
ಎನ್ನ ಪಂಚಾಕ್ಷರಸ್ವರೂಪವನೊಳಕೊಂಡೆನ್ನ ಪ್ರಾಣದಲ್ಲಿ
ಸಂಗವಾದನಯ್ಯ ಪ್ರಭುದೇವರು.
ಇಂತೀ ತನು ಮನ ಪ್ರಾಣವೆ ಸಚ್ಚಿದಾನಂದ ಬ್ರಹ್ಮವು.
ಆ ಸಚ್ಚಿದಾನಂದ ಬ್ರಹ್ಮವೆ ಎನ್ನ ಭಾವ ಮನ ಕರಣಂಗಳೊಳಗೆ
ತಳತಳನೆ ಹೊಳಹುತ್ತಿಪ್ಪ ಭೇದವನು
ಸಿದ್ಧೇಶ್ವರನೆನಗೆ ಅರುಹಿದ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಸಮುದ್ರದೊಳಗೆ ಮುಳುಗಿದ ವಾರಿಕಲ್ಲಿನಂತಾದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./9
ಆಚಾರಭಕ್ತ ಎಪ್ಪತ್ತೆರಡು ಪ್ರಕಾರವನೊಳಕೊಂಡು
ಆಚಾರಲಿಂಗವಾಗಿ ಎನ್ನ ಶ್ರದ್ಧೆಯಲ್ಲಿ ಸಂಗವಾದನಯ್ಯ ಬಸವಣ್ಣ.
ಗೌರವಮಾಹೇಶ್ವರನು ಎಪ್ಪತ್ತೆರಡು ಪ್ರಕಾರವನೊಳಕೊಂಡು
ಗುರುಲಿಂಗವಾಗಿ ಎನ್ನ ನೈಷ್ಠೆಯಲ್ಲಿ ಸಂಗವಾದನಯ್ಯ ಬಸವಣ್ಣ.
ಲೈಂಗಿಪ್ರಸಾದಿ ಎಪ್ಪತ್ತೆರಡು ಪ್ರಕಾರವನೊಳಕೊಂಡು
ಶಿವಲಿಂಗವಾಗಿ ಎನ್ನ ಸಾವಧಾನದಲ್ಲಿ ಸಂಗವಾದನಯ್ಯ ಬಸವಣ್ಣ.
ಚರಪ್ರಾಣಲಿಂಗಿ ಎಪ್ಪತ್ತೆರಡು ಪ್ರಕಾರವನೊಳಕೊಂಡು
ಜಂಗಮಲಿಂಗವಾಗಿ ಎನ್ನನುಭಾವದಲ್ಲಿ
ಸಂಗವಾದನಯ್ಯ ಬಸವಣ್ಣ.
ಪ್ರಸಾದಶರಣ ಎಪ್ಪತ್ತೆರಡು ಪ್ರಕಾರವನೊಳಕೊಂಡು
ಪ್ರಸಾದಲಿಂಗವಾಗಿ ಎನ್ನಾನಂದದಲ್ಲಿ ಸಂಗವಾದನಯ್ಯ ಬಸವಣ್ಣ.
ಮಹಾಘನಐಕ್ಯ ಎಪ್ಪತ್ತೆರಡು ಪ್ರಕಾರವನೊಳಕೊಂಡು
ಮಹಾಲಿಂಗವಾಗಿ ಎನ್ನ ಸಮರಸದಲ್ಲಿ ಸಂಗವಾದನಯ್ಯ ಬಸವಣ್ಣ.
ಆಚಾರ ಗೌರವ ಶ್ರದ್ಧೆ ನೈಷ್ಟೆ ಲಿಂಗದ ಪೀಠ.
ಲೈಂಗಿ ಸಾವಧಾನ ಲಿಂಗದ ಮಧ್ಯಚರ.
ಅನುಭಾವ ಲಿಂಗದ ಗೋಮುಖ.
ಪ್ರಸಾದ ಆನಂದ ಲಿಂಗದ ವರ್ತುಳ.
ಮಹಾಘನ ಸಮರಸಲಿಂಗದ ಗೋಳಕ.
ಇಂತೀ ನಾನಾ ಪ್ರಕಾರವ
ಸಿದ್ಧೇಶ್ವರ ಇಷ್ಟಲಿಂಗದಲ್ಲಿ ಅರುಹಿದನಾಗಿ
ತತ್ವಮಸಿ ವಾಕ್ಯವೆಲ್ಲವೂ ನುಗ್ಗುನುಸಿಯಾಗಿ ಹೋದವು.
ಸಚ್ಚಿದಾನಂದಬ್ರಹ್ಮ ತಾನಾಗಿ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ನಾನು ಕೆಟ್ಟು ಬಟ್ಟಬಯಲಾಗಿ ಹೋದೆನಯ್ಯ ಬೋಳಬಸವೇಶ್ವರ
ನಿಮ್ಮ ಧರ್ಮ ನಿಮ್ಮ ಧರ್ಮ./10
ಆಚಾರಭಕ್ತ ಮೂವತ್ತಾರುಭೇದವನೊಳಕೊಂಡು
ನಕಾರವಾಗಿ ಲಿಂಗದ ಪೀಠದಲ್ಲಿ
ಸಂಬಂಧವಾದನಯ್ಯ ಬಸವಣ್ಣ.
ಗೌರವಮಾಹೇಶ್ವರ ಮೂವತ್ತಾರು ಭೇದವನೊಳಕೊಂಡು
ಮಃಕಾರವಾಗಿ ಲಿಂಗದ ಮಧ್ಯದಲ್ಲಿ
ಸಂಬಂಧವಾದನಯ್ಯ ಮಡಿವಾಳಯ್ಯ.
ಲೈಂಗಿಪ್ರಸಾದಿ ಮೂವತ್ತಾರು ಭೇದವನೊಳಕೊಂಡು
ಶಿಕಾರವಾಗಿ ಲಿಂಗದ ವರ್ತುಳದಲ್ಲಿ
ಸಂಬಂಧವಾದನಯ್ಯ ಚೆನ್ನಬಸವಣ್ಣ.
ಚರಪ್ರಾಣಲಿಂಗಿ ಮೂವತ್ತಾರು ಭೇದವನೊಳಕೊಂಡು
ವಾಕಾರವಾಗಿ ಲಿಂಗದ ಗೋಮುಖದಲ್ಲಿ
ಸಂಬಂಧವಾದನಯ್ಯಾ ಪ್ರಭುದೇವರು.
ಪ್ರಸಾದಶರಣ ಮೂವತ್ತಾರು ಭೇದವನೊಳಕೊಂಡು
ಯಕಾರವಾಗಿ ಲಿಂಗದ ನಾಳದಲ್ಲಿ
ಸಂಬಂಧವಾದನಯ್ಯ ಉರಿಲಿಂಗಯ್ಯಗಳು.
ಮಹಾಘನ ಐಕ್ಯ ಮೂವತ್ತಾರು ಭೇದವನೊಳಕೊಂಡು
ಓಂಕಾರವಾಗಿ ಲಿಂಗದ ಗೋಳಕದಲ್ಲಿ
ಸಂಬಂಧವಾದನಯ್ಯ ಅಜಗಣ್ಣ.
ಇಂತಪ್ಪ ಇಷ್ಟಬ್ರಹ್ಮವೆ ಎನ್ನ ನವದ್ವಾರ ನವಚಕ್ರ
ಅಂಗ ಮನ ಪ್ರಾಣ ಸರ್ವೇಂದ್ರಿಯದಲ್ಲಿ ಪ್ರಭಾವಿಸಿದ ಭೇದವನು
ಸಿದ್ಧೇಶ್ವರನು ಶ್ರುತ ಗುರು ಸ್ವಾನುಭಾವದಿಂದ ಅರುಹಿದನಾಗಿ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಎರಡರಿಯದೆ ಇದ್ದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./11
ಆಚಾರಭಕ್ತ ಹನ್ನೆರಡು ಪ್ರಕಾರವನೊಳಕೊಂಡು
ಆಚಾರಲಿಂಗವಾಗಿ
ಲಿಂಗದ ಪೀಠದಲ್ಲಿ ಸಂಯೋಗವಾದನಯ್ಯ ಬಸವಣ್ಣ.
ಗೌರವಮಾಹೇಶ್ವರ ಹನ್ನೆರಡು ಪ್ರಕಾರವನೊಳಕೊಂಡು
ಗುರುಲಿಂಗವಾಗಿ
ಲಿಂಗದ ಮಧ್ಯದಲ್ಲಿ ಸಂಯೋಗವಾದನಯ್ಯ ಬಸವಣ್ಣ.
ಲೈಂಗಿಪ್ರಸಾದಿ ಹನ್ನೆರಡು ಪ್ರಕಾರವನೊಳಕೊಂಡು
ಶಿವಲಿಂಗವಾಗಿ ಲಿಂಗದ ವರ್ತುಳದಲ್ಲಿ ಸಂಯೋಗವಾದನಯ್ಯ
ಬಸವಣ್ಣ.
ಚರಪ್ರಾಣಲಿಂಗಿ ಹನ್ನೆರಡು ಪ್ರಕಾರವನೊಳಕೊಂಡು
ಜಂಗಮಲಿಂಗವಾಗಿ
ಲಿಂಗದ ಗೋಮುಖದಲ್ಲಿ ಸಂಯೋಗವಾದನಯ್ಯ ಬಸವಣ್ಣ.
ಪ್ರಸಾದಶರಣ ಹನ್ನೆರಡು ಪ್ರಕಾರವನೊಳಕೊಂಡು
ಮಹಾಲಿಂಗವಾಗಿ
ಲಿಂಗದ ಗೋಳಕದಲ್ಲಿ ಸಂಯೋಗವಾದನಯ್ಯ ಬಸವಣ್ಣ.
ಇಂತಪ್ಪ ಬಸವಣ್ಣನೆ ಸಚ್ಚಿದಾನಂದ ಬ್ರಹ್ಮವು.
ಆ ಸಚ್ಚಿದಾನಂದ ಬ್ರಹ್ಮವೆ ತನ್ನ ಲೀಲೆದೋರಿ ಒಂದು ಎರಡು
ಮೂರು ಆರು ಒಂಬತ್ತು ಹದಿನೆಂಟು ಮೂವತ್ತಾರು
ನೂರೊಂದು ನೂರೆಂಟು ಇನ್ನೂರಹದಿನಾರು
ಮಿಗೆ ಮಿಗೆ ತೋರುವ ಬ್ರಹ್ಮವೆ ಬಸವಣ್ಣನು.
ಈ ಬಸವಣ್ಣನೆ ಎನಗೆ ಇಷ್ಟಬ್ರಹ್ಮ.
ಈ ಇಷ್ಟಬ್ರಹ್ಮದಲ್ಲಿ
ಷೋಡಶ ದ್ವಿಶತ ಅಷ್ಟಾಶತ ಏಕಶತ ಛತ್ತೀಸ ಅಷ್ಟಾದಶ ನವ
ಇಂತಿವೆಲ್ಲವು ಆರರೊಳಗಡಗಿ ಆರು ಮೂರರೊಳಗಡಗಿ
ಆ ಮೂರು ಲಿಂಗದ ಗೋಳಕ ಗೋಮುಖ ವೃತ್ತಾಕಾರದಲ್ಲಿ
ಅಡಗಿದ ಭೇದವನು ಸಿದ್ಧೇಶ್ವರನು ಎನಗರುಹಿದ ಕಾರಣ
ದ್ವೆ ತಾದ್ವೆ ತವೆಲ್ಲವು ಸಂಹಾರವಾಗಿ ಹೋದವು.
ನಾನು ದ್ವೆ ತಾದ್ವೆ ತವ ಮೀರಿ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಸತ್ತು
ಪರಂಜ್ಯೋತಿ ಮಹಾಲಿಂಗಗುರು ಸಿದ್ಧ[ಲಿಂಗ] ಪ್ರಭುವಿನಲ್ಲಿ
ಕೆಟ್ಟು ಬಟ್ಟಬಯಲಾದೆನಯ್ಯಾ,
ಬೋಳಬಸವೇಶ್ವರ ನಿಮ್ಮಧರ್ಮ ನಿಮ್ಮ ಧರ್ಮ./12
ಭಕ್ತ ಮಾಹೇಶ್ವರ ಆಚಾರಲಿಂಗ ಗುರುಲಿಂಗ
ಈ ಇಪ್ಪತ್ತುನಾಲ್ಕುನೊಳಕೊಂಡು
ಎನ್ನ ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವಾದನಯ್ಯ ಬಸವಣ್ಣ.
ಪ್ರಸಾದಿ ಪ್ರಾಣಲಿಂಗಿ ಶಿವಲಿಂಗ ಜಂಗಮಲಿಂಗ
ಈ ಇಪ್ಪತ್ತುನಾಲ್ಕುನೊಳಕೊಂಡು
ಎನ್ನ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವಾದನಯ್ಯ
ಚೆನ್ನಬಸವಣ್ಣ.
ಶರಣ ಐಕ್ಯ ಪ್ರಸಾದಲಿಂಗ ಮಹಾಲಿಂಗ ಈ
ಇಪ್ಪತ್ತನಾಲ್ಕುನೊಳಕೊಂಡು
ಎನ್ನ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವಾದನಯ್ಯ
ಪ್ರಭುದೇವರು.
ಉಳಿದ ಶೇಷವೆರಡೆರಡು ಈ ಇಪ್ಪತ್ತುನಾಲ್ಕುನೊಳಕೊಂಡು
ಎನ್ನ ಇಷ್ಟಲಿಂಗದ ನಾಳದಲ್ಲಿ ಸಂಬಂಧವಾದನಯ್ಯ
ಮರುಳಶಂಕರದೇವರು.
ಇಂತೀ ನಾದ ಬಿಂದು ಕಲೆ ಪ್ರಕೃತಿ ಒಂದಾದ
ನಿಃಕಲಬ್ರಹ್ಮವೆ ತಾನಾಗಿ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಜ್ಯೋತಿಯೊಳಗೆ ಬೆರದ ಕಪರ್ೂರದಂತೆ
ಅಂಗಸಕೀಲ ಲಿಂಗಸಕೀಲವನೊಳಕೊಂಡು
ಸಿದ್ಧೇಶ್ವರನ ಬಯಲ ಬೆರಸಿ ನಿರ್ವಯಲಾದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./13
ಎನ್ನ ಕಂಗಳ ದೃಕ್ಕಿನಲ್ಲಿ ಅಂಗ ಲಿಂಗ ಸಂಗ
ನಾಲ್ವತ್ತೆರಡು ಭೇದವನೊಳಕೊಂಡು
ಎನ್ನ ಕಾಯದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣನು.
ಎನ್ನ ಮನೋದೃಕ್ಕಿನಲ್ಲಿ ಅಂಗ ಲಿಂಗ ಸಂಗ
ಮೂವತ್ತಮೂರು ಭೇದವನೊಳಕೊಂಡು
ಎನ್ನ ಮನದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣನು.
ಎನ್ನ ಭಾವದ ದೃಕ್ಕಿನಲ್ಲಿ ಅಂಗ ಲಿಂಗ ಸಂಗ
ಪಡುವಿಂಶತಿ ಸ್ವರೂಪವನೊಳಕೊಂಡು
ಎನ್ನ ಭಾವದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ.
ಪ್ರಭುದೇವರು.
ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
ಎನಗೇನೂಯಿಲ್ಲದೆ ಪರಂಜ್ಯೋತಿ
ಮಹಾಲಿಂಗ ಗುರು ಸಿದ್ಧಲಿಂಗಪ್ರಭುವಿನಲ್ಲಿ
ಸಿದ್ಧೇಶ್ವರನ ನಿಜಪದವ ಬೆರಸಿ ಮನಮಗ್ನವಾಗಿರ್ದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./14
ಎನ್ನ ಇಪ್ಪತ್ತೆ ದಕ್ಷರ ಸ್ವರೂಪವನೊಳಕೊಂಡು
ಎನ್ನ ಜ್ಞಾತೃವಿನಲ್ಲಿ ಸಂಗವಾದನಯ್ಯ ಬಸವಣ್ಣ.
ಎನ್ನ ದಶಾಕ್ಷರ ಸ್ವರೂಪವನೊಳಕೊಂಡು
ಎನ್ನ ಜ್ಞಾನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ.
ಎನ್ನ ಏಕಾಕ್ಷರ ಸ್ವರೂಪವನೊಳಕೊಂಡು
ಎನ್ನ ಜ್ಞೇಯದಲ್ಲಿ ಸಂಗವಾದನಯ್ಯ ಪ್ರಭುದೇವರು.
ಇಂತೀ ತ್ರಿವಿಧವನು ಸಿದ್ಧೇಶ್ವರನು
ಇಷ್ಟಲಿಂಗದಲ್ಲಿ ಸಂಬಂಧಿಸಿಕೊಟ್ಟ ಕಾರಣ
ಎನ್ನ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧವರತು,
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಮೇರೆದಪ್ಪಿದ ಸಮುದ್ರದಲ್ಲಿ ಅದ್ದಿದಂತಾದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./15
ಅಯ್ಯಾ ತತ್ವ ವಿತತ್ವ ಶೂನ್ಯ ಮಹಾಶೂನ್ಯವಿಲ್ಲದಂದು,
ಬ್ರಹ್ಮ ವಿಷ್ಣು ರುದ್ರ ಇನ ಶಶಿ ವ್ಯೋಮ ಸಮೀರ ಅಗ್ನಿ ಅಂಬು
ಪೃಥ್ವಿ ನವಗ್ರಹ ದಶದಿಕ್ಕು ಛತ್ತೀಸ ತತ್ವಂಗಳೇನೂ ಇಲ್ಲದಂದು,
ತಾರಜ ತಂಡಜ ಬಿಂದುಜ ಭಿನ್ನಾಯುಕ್ತ ಅವ್ಯ[ಕ್ತ] ಅಮದಾಯುಕ್ತ
ಮಣಿರಣ ಮಾನ್ಯರಣ್ವ ವಿಶ್ವರಣ ವಿಶ್ವಾವಸು
ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ
ಇಂತಿವು ಯಾವವೂ ಇಲ್ಲದಂದು,
ನಾದ ಬಿಂದು ಕಳೆಗಳಿಲ್ಲದಂದು,
ಪಶುಪಾಶ ಪತಿ ಕುಂಡಲಿ ಕಾರಕ ಇವೇನೂ ಇಲ್ಲದಂದು,
ವಿಜ್ಞಾನಾಲಕರು ಸಕಲಾಕಲರು ಪ್ರಳಯಾಕಲರು
ಇವೇನೂ ಇಲ್ಲದಂದು,
ದನುಜ ಮನುಜ ದಿವಿಜ ಮನು ಮುನಿ ನಕ್ಷತ್ರಮಂಡಲ
ಇವೇನೂ ಇಲ್ಲದಂದು,
ಅಂದು ನೀನು ನಿಷ್ಕಲ ನಿರವಯ
ನಿಃಶೂನ್ಯನಾಗಿರ್ದೆಯಯ್ಯ ಬಸವಣ್ಣ.
ನೀವೊಂದು ಅನಂತಕಾಲ ಅನಂತಯುಗ ನಿಮ್ಮ ಲೀಲಾ ವಿಚಿಂತನೆ
ನೆನೆದ ನೆನಹೇ ಸುನಾದ.
ಆ ಸುನಾದದ ಪ್ರಕಾಶ ತೇಜೋಪುಂಜವೇ ಬಿಂದು.
ನಾದವೇ ನಿರಂಜನ.
ಬಿಂದುವೇ ನಿರಾಲಂಬ….. ಕೂಟವೇ ನಿರಾಮಯ.
ಇಂತೀ ನಾದ ಬಿಂದು ಕಳೆ ಮೂರು ಕೂಡೆ
ಅಖಂಡ ತೇಜೋಮಯವಾಗಿ
ಷಡ್ಬ್ರಹ್ಮಸ್ವರೂಪವನೈದಿದೆಯಲ್ಲ ಬಸವಣ್ಣ.
ನಿನ್ನ ವಿನೋದದಿಂದ ಆ ಷಡ್ಬ್ರಹ್ಮದಿಂದ
ಷಡ್ವಿಧ ಭೂತಂಗಳು ಪುಟ್ಟಿ
ಆ ಷಡ್ವಿಧಭೂತಂಗಳೇ ಎನಗಂಗವಾದಲ್ಲಿ
ಆ ಷಡ್ಬ್ರಹ್ಮವೇ ಷಡಕ್ಷರಿಮಯವಾಗಿ
ಆ ಷಡ್ವಿಧಭೂತಂಗಳೊಳಗೆ ಸಮೇತವಾಗಿ ಕೂಡಿ
ಛತ್ತೀಸತತ್ವ ಮಂತ್ರಸ್ವರೂಪವಾದ ಭೇದ ಹೇಗೆಂದಡೆ
ಅದಕ್ಕೆ ವಿವರ: ಓಂಕಾರವೇ ಆತ್ಮನು.
ಓಂಕಾರ ಯಕಾರ ಸಂಯೋಗವಾದಲ್ಲಿ ಆಕಾಶ ಪುಟ್ಟಿತ್ತು.
ಓಂಕಾರ ವಾಕಾರ ಸಂಯೋಗವಾದಲ್ಲಿ ವಾಯು ಪುಟ್ಟಿತ್ತು.
ಓಂಕಾರ ಶಿಕಾರ ಸಂಯೋಗದಲ್ಲಿ ಅಗ್ನಿ ಪುಟ್ಟಿತ್ತು.
ಓಂಕಾರ ಮಃಕಾರ ಸಂಯೋಗದಲ್ಲಿ ಅಪ್ಪು ಪುಟ್ಟಿತ್ತು.
ಓಂಕಾರ ನಕಾರ ಸಂಯೋಗವಾದಲ್ಲಿ ಪೃಥ್ವಿ ಪುಟ್ಟಿತ್ತು.
ಇನ್ನ ಯಕಾರ ಓಂಕಾರ ಸಂಯೋಗವಾದಲ್ಲಿ ಭಾವ ಪುಟ್ಟಿತ್ತು.
ಯಕಾರವೇ ಜ್ಞಾನ.
ಯಕಾರ ವಾಕಾರ ಸಂಯೋಗವಾದಲ್ಲಿ ಮನ ಪುಟ್ಟಿತ್ತು.
ಯಕಾರ ಶಿಕಾರ ಸಂಯೋಗವಾದಲ್ಲಿ ಅಹಂಕಾರ ಪುಟ್ಟಿತ್ತು.
ಯಕಾರ ಮಃಕಾರ ಸಂಯೋಗವಾದಲ್ಲಿ ಬುದ್ಧಿ ಪುಟ್ಟಿತ್ತು.
ಯಕಾರ ನಕಾರ ಸಂಯೋಗವಾದಲ್ಲಿ ಚಿತ್ತು ಪುಟ್ಟಿತ್ತು.
ಇನ್ನು ವಕಾರ ಓಂಕಾರ ಸಂಯೋಗವಾದಲ್ಲಿ
ಪಂಚವಾಯು ಪುಟ್ಟಿದವು.
ವಕಾರ ಯಕಾರ ಸಂಯೋಗವಾದಲ್ಲಿ ಸಮಾನವಾಯು ಪುಟ್ಟಿತ್ತು.
ವಾಕಾರ ತಾನೇ ಉದಾನವಾಯು.
ವಕಾರ ಶಿಕಾರ ಸಂಯೋಗವಾದಲ್ಲಿ ವ್ಯಾನವಾಯು ಪುಟ್ಟಿತ್ತು.
ವಕಾರ ಮಃಕಾರ ಸಂಯೋಗವಾದಲ್ಲಿ ಅಪಾನವಾಯು ಪುಟ್ಟಿತ್ತು.
ವಕಾರ ನಕಾರ ಸಂಯೋಗವಾದಲ್ಲಿ ಪ್ರಾಣವಾಯು ಪುಟ್ಟಿತ್ತು.
ಇನ್ನು ಶಿಕಾರ ಓಂಕಾರ ಸಂಯೋಗವಾದಲ್ಲಿ ಹೃದಯ ಪುಟ್ಟಿತ್ತು.
ಶಿಕಾರ ಯಕಾರ ಸಂಯೋಗವಾದಲ್ಲಿ ಶ್ರೋತ್ರ ಪುಟ್ಟಿತ್ತು.
ಶಿಕಾರಾ ವಾಕಾರ ಸಂಯೋಗವಾದಲ್ಲಿ ತ್ವಕ್ಕು ಪುಟ್ಟಿತ್ತು.
ಶಿಕಾರ ತಾನೇ ನೇತ್ರ
ಶಿಕಾರ ಮಃಕಾರ ಸಂಯೋಗವಾದಲ್ಲಿ ಜಿಹ್ವೆ ಪುಟ್ಟಿತ್ತು.
ಶಿಕಾರ ನಕಾರ ಸಂಯೋಗವಾದಲ್ಲಿ ಘ್ರಾಣ ಪುಟ್ಟಿತ್ತು.
ಇನ್ನು ಮಃಕಾರ ಓಂಕಾರ ಸಂಯೋಗವಾದಲ್ಲಿ ತೃಪ್ತಿ ಪುಟ್ಟಿತ್ತು.
ಮಕಾರ ಯಕಾರ ಸಂಯೋಗವಾದಲ್ಲಿ ಶಬ್ದ ಪುಟ್ಟಿತ್ತು.
ಮಕಾರ ವಾಕಾರ ಸಂಯೋಗವಾದಲ್ಲಿ ಸ್ಪರ್ಶನ ಪುಟ್ಟಿತ್ತು.
ಮಕಾರ ಶಿಕಾರ ಸಂಯೋಗವಾದಲ್ಲಿ ರೂಪು ಪುಟ್ಟಿತ್ತು.
ಮಃಕಾರ ತಾನೇ ರಸ.
ಮಕಾರ ನಕಾರ ಸಂಯೋಗವಾದಲ್ಲಿ ಗಂಧ ಪುಟ್ಟಿತ್ತು.
ಇನ್ನು ನಕಾರ ಓಂಕಾರ ಸಂಯೋಗವಾದಲ್ಲಿ ಅಂತರ್ವಾಕ್ಕು
ಪುಟ್ಟಿತ್ತು.
ನಕಾರ ಯಕಾರ ಸಂಯೋಗವಾದಲ್ಲಿ ವಾಕ್ಕು ಪುಟ್ಟಿತ್ತು.
ನಕಾರ ವಾಕಾರ ಸಂಯೋಗವಾದಲ್ಲಿ ಪಾಣಿ ಪುಟ್ಟಿತ್ತು.
ನಕಾರ ಶಿಕಾರ ಸಂಯೋಗವಾದಲ್ಲಿ ಪಾದ ಪುಟ್ಟಿತ್ತು.
ನಕಾರ ಮಃಕಾರ ಸಂಯೋಗವಾದಲ್ಲಿ ಗುಹ್ಯ ಪುಟ್ಟಿತ್ತು.
ನಕಾರ ತಾನೇ ವಾಯು.
ಇಂತೀ ಛತ್ತೀಸತತ್ವವೆಲ್ಲ ಮಂತ್ರಸ್ವರೂಪವಾದ ಬಸವಣ್ಣನೇ.
ಎನಗೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ
ಇಂತಿವೆಲ್ಲವನರಿದು ಅರ್ಪಿಸುವ ಭೇದ ಹೇಗೆಂದಡೆ
ಪ್ರಮಥದಲ್ಲಿ ಷಟ್ಸ್ಥಲದ ವಿವರ: ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ.
ಇನ್ನು ಭಕ್ತನ ಷಡ್ವಿಧಲಿಂಗದ ವಿವರ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ.
ಇನ್ನು ಭಕ್ತನ ಷಡ್ವಿಧಹಸ್ತದ ವಿವರ: ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ.
ಇನ್ನು ಭಕ್ತನ ಷಡ್ವಿಧಮುಖದ ವಿವರ: ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ.
ಇನ್ನು ಭಕ್ತನ ಷಡ್ವಿಧಶಕ್ತಿಯ ವಿವರ: ಶ್ರದ್ಧೆ ನೈಷ್ಠೆ ಸಾವಧಾನ ಅನುಭಾವ ಆನಂದ ಸಮರಸ.
ಇನ್ನು ಭಕ್ತನ ಷಡ್ವಿಧಪದಾರ್ಥದ ವಿವರ: ಗಂಧ ರಸ ರೂಪು ಸ್ಪರ್ಶನ ಶಬ್ದ ಪರಿಣಾಮ.
ಇನ್ನು ಭಕ್ತನ ಷಡ್ವಿಧಪ್ರಸಾದದ ವಿವರ: ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರ್ಶಪ್ರಸಾದ
ಶಬ್ದಪ್ರಸಾದ ಪರಿಣಾಮಪ್ರಸಾದ.
ಇನ್ನು ದ್ವಿತೀಯದಲ್ಲಿ ಮಾಹೇಶ್ವರನ ಷಟ್ಸ್ಥಲ ವಿವರ: ಮಾಹೇಶ್ವರ ಭಕ್ತ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ.
ಇನ್ನು ಮಾಹೇಶ್ವರನ ಷಡ್ವಿಧಲಿಂಗದ ವಿವರ: ಗುರುಲಿಂಗ ಆಚಾರಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ.
ಇನ್ನು ಮಾಹೇಶ್ವರನ ಷಡ್ವಿಧಹಸ್ತದ ವಿವರ: ಸುಬುದ್ಧಿ ಸುಚಿತ್ತ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ.
ಇನ್ನು ಮಾಹೇಶ್ವರನ ಷಡ್ವಿಧಮುಖದ ವಿವರ: ಜಿಹ್ವೆ ಘ್ರಾಣ ನೇತ್ರ ತ್ವಕ್ಕು ಶ್ರೋತ್ರ ಹೃದಯ.
ಇನ್ನು ಮಾಹೇಶ್ವರನ ಷಡ್ವಿಧಶಕ್ತಿಯ ವಿವರ: ಜ್ಞಾನಶಕ್ತಿ ಕ್ರಿಯಾಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ.
ಇನ್ನು ಮಾಹೇಶ್ವರನ ಷಡ್ವಿಧಭಕ್ತಿಯ ವಿವರ: ನೈಷ್ಠೆ ಶ್ರದ್ಧೆ ಸಾವಧಾನ ಅನುಭಾವ ಆನಂದ ಸಮರಸ.
ಇನ್ನು ಮಾಹೇಶ್ವರನ ಷಡ್ವಿಧಪದಾರ್ಥದ ವಿವರ: ರಸ ಗಂಧ ರೂಪು ಸ್ಪರುಶನ ಶಬ್ದ ಪರಿಣಾಮ
ಇನ್ನು ಮಾಹೇಶ್ವರನ ಷಡ್ವಿಧಪ್ರಸಾದದ ವಿವರ: ರಸಪ್ರಸಾದ ಗಂಧಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ
ಶಬ್ದಪ್ರಸಾದ ಪರಿಣಾಮಪ್ರಸಾದ.
ಇನ್ನು ತೃತೀಯದಲ್ಲಿ ಪ್ರಸಾದಿಯ ಷಟ್ಸ್ಥಲದ ವಿವರ: ಪ್ರಸಾದಿ ಭಕ್ತ ಮಾಹೇಶ್ವರ ಪ್ರಾಣಲಿಂಗಿ ಶರಣ ಐಕ್ಯ.
ಇನ್ನು ಪ್ರಸಾದಿಯ ಷಡ್ವಿಧಲಿಂಗದ ವಿವರ: ಶಿವಲಿಂಗ ಆಚಾರಲಿಂಗ ಗುರುಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ.
ಇನ್ನು ಪ್ರಸಾದಿಯ ಷಡ್ವಿದಹಸ್ತದ ವಿವರ: ನಿರಹಂಕಾರ ಸುಚಿತ್ತ ಸುಬುದ್ಧಿ ಸುಮನ ಸುಜ್ಞಾನ ಸದ್ಭಾವ.
ಇನ್ನು ಪ್ರಸಾದಿಯ ಷಡ್ವಿಧಮುಖದ ವಿವರ: ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಶ್ರೋತ್ರ ಹೃದಯ.
ಇನ್ನು ಪ್ರಸಾದಿಯ ಷಡ್ವಿಧಶಕ್ತಿಯ ವಿವರ: ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ.
ಇನ್ನು ಪ್ರಸಾದಿಯ ಷಡ್ವಿಧಭಕ್ತಿಯ ವಿವರ: ಸಾವಧಾನ ಶ್ರದ್ಧೆ ನೈಷ್ಠೆ ಅನುಭಾವ ಆನಂದ ಸಮರಸ.
ಇನ್ನು ಪ್ರಸಾದಿಯ ಷಡ್ವಿಧಪದಾರ್ಥದ ವಿವರ: ರೂಪು ಗಂಧ ರಸ ಸ್ಪರುಶನ ಶಬ್ದ ಪರಿಣಾಮ.
ಇನ್ನು ಪ್ರಸಾದಿಯ ಷಡ್ವಿಧಪ್ರಸಾದದ ವಿವರ: ರೂಪುಪ್ರಸಾದ ಗಂಧಪ್ರಸಾದ ರಸಪ್ರಸಾದ ಸ್ಪರುಶನ ಪ್ರಸಾದ
ಶಬ್ದಪ್ರಸಾದ ಪರಿಣಾಮಪ್ರಸಾದ.
ಇಂತೀ ಮಾರ್ಗಕ್ರಿ ಅಂಗ ಲಿಂಗವಾದಲ್ಲಿ
ಮುಂದೆ ಮೀರಿದ ಕ್ರಿಯೆ ಅಂಗ ಲಿಂಗ ತೃತೀಯಸ್ಥಲ.
ಇನ್ನು ಚತುರ್ಥದಲ್ಲಿ ಪ್ರಾಣಲಿಂಗಿಯ ಷಡ್ವಿಧ ವಿವರ: ಪ್ರಾಣಲಿಂಗಿ ಭಕ್ತ ಮಾಹೇಶ್ವರ ಪ್ರಸಾದಿ ಶರಣ ಐಕ್ಯ.
ಇನ್ನು ಪ್ರಾಣಲಿಂಗಿಯ ಷಡ್ವಿಧಲಿಂಗದ ವಿವರ: ಜಂಗಮಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ
ಪ್ರಸಾದಲಿಂಗ ಮಹಾಲಿಂಗ.
ಇನ್ನು ಪ್ರಾಣಲಿಂಗಿಯ ಷಡ್ವಿಧಹಸ್ತದ ವಿವರ: ಸುಮನ ಸುಚಿತ್ತ ಸುಬುದ್ಧಿ ನಿರಹಂಕಾರ ಸುಜ್ಞಾನ ಸದ್ಭಾವ.
ಇನ್ನು ಪ್ರಾಣಲಿಂಗಿಯ ಷಡ್ವಿಧಶಕ್ತಿಯ ವಿವರ: ಆದಿಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಪರಶಕ್ತಿ ಚಿತ್ಯಕ್ತಿ.
ಇನ್ನು ಪ್ರಾಣಲಿಂಗಿಯ ಷಡ್ವಿಧಭಕ್ತಿಯ ವಿವರ: ಅನುಭಾವ ಶ್ರದ್ಧೆ ನೈಷ್ಠೆ ಸಾವಧಾನ ಆನಂದ ಸಮರಸ.
ಇನ್ನು ಪ್ರಾಣಲಿಂಗಿಯ ಷಡ್ವಿಧಪದಾರ್ಥದ ವಿವರ: ಸ್ಪರುಶನ ಗಂಧ ರಸ ರೂಪು ಶಬ್ದ ಪರಿಣಾಮ.
ಇನ್ನು ಪ್ರಾಣಲಿಂಗಿಯ ಷಡ್ವಿಧಪ್ರಸಾದದ ವಿವರ: ಸ್ಫರುಶನಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ
ಶಬ್ದಪ್ರಸಾದ ಪರಿಣಾಮಪ್ರಸಾದ.
ಇನ್ನು ಪಂಚಮದಲ್ಲಿ ಶರಣನ ಷಟ್ಸ್ಥಲದ ವಿವರ: ಶರಣ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಐಕ್ಯ.
ಇನ್ನು ಶರಣನ ಷಡ್ವಿಧಲಿಂಗದ ವಿವರ: ಪ್ರಸಾದಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಮಹಾಲಿಂಗ.
ಶರಣನ ಷಡ್ವಿಧಹಸ್ತದ ವಿವರ: ಸುಜ್ಞಾನ ಸುಚಿತ್ತ ಸುಬುದ್ಧಿ ನಿರಂಕಾರ ಸುಮನ ಸದ್ಭಾವ
ಇನ್ನು ಶರಣನ ಷಡ್ವಿಧಶಕ್ತಿಯ ವಿವರ: ಪರಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಚಿತ್ಯಕ್ತಿ.
ಇನ್ನು ಶರಣನ ಷಡ್ವಿಧಭಕ್ತಿಯ ವಿವರ: ಆನಂದ ಶ್ರದ್ಧೆ ನೈಷ್ಠೆ ಸಾವಧಾನ ಅನುಭಾವ ಸಮರಸ.
ಇನ್ನು ಶರಣನ ಷಡ್ವಿಧ ಪ್ರಸಾದದ ವಿವರ: ಶಬ್ದಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ
ಸ್ಪರುಶನಪ್ರಸಾದ ಪರಿಣಾಮಪ್ರಸಾದ.
ಇನ್ನು ಷಷ್ಠಮದಲ್ಲಿ ಆ ಐಕ್ಯನ ಷಟ್ಸ್ಥಲದ ವಿವರ: ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ.
ಇನ್ನು ಐಕ್ಯನ ಷಡ್ವಿಧಲಿಂಗದ ವಿವರ: ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ.
ಇನ್ನು ಐಕ್ಯನ ಷಡ್ವಿಧಹಸ್ತದ ವಿವರ: ಸದ್ಭಾವ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ.
ಇನ್ನು ಐಕ್ಯನ ಷಡ್ವಿಧಮುಖದ ವಿವರ: ಹೃದಯ ಪ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ.
ಇನ್ನು ಐಕ್ಯನ ಷಡ್ವಿಧಶಕ್ತಿಯ ವಿವರ: ಚಿತ್ಯಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ.
ಇನ್ನು ಐಕ್ಯನ ಷಡ್ವಿಧಭಕ್ತಿಯ ವಿವರ: ಸಮರಸ ಶ್ರದ್ಧೆ ನೈಷ್ಠೆ ಸಾವಧಾನ ಅನುಭಾವ ಆನಂದ.
ಇನ್ನು ಐಕ್ಯನ ಷಡ್ವಿಧಪದಾರ್ಥದ ವಿವರ: ಪರಿಣಾಮ ಗಂಧ ರಸ ರೂಪು ಸ್ಪರುಶನ ಶಬ್ದ.
ಇನ್ನು ಐಕ್ಯನ ಷಡ್ವಿಧಪ್ರಸಾದದ ವಿವರ: ಪರಿಣಾಮಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ
ಸ್ಪರುಶನಪ್ರಸಾದ ಶಬ್ದಪ್ರಸಾದ.
ಇಂತಿವೆಲ್ಲವೂ ಅರ್ಪಿತವಾಗಲೊಡನೆ ಏಕಮೇವ ಪರಬ್ರಹ್ಮ
ತಾನೆಯಾಗಿ ಉಳಿದ ಉಳುಮೆಯೇ ಬಸವಣ್ಣ.
ಆ ಬಸವಣ್ಣನೇ ಎನಗೆ ಇಷ್ಟಬ್ರಹ್ಮವು.
ಆ ಇಷ್ಟಬ್ರಹ್ಮದಲ್ಲಿ ಎನ್ನ ಅಂಗ ಮನ ಪ್ರಾಣ ಇಂದ್ರಿಯ
ಕರಣಂಗಳೆಲ್ಲವು ನಿರವಯಲಾದ ಭೇದ ಹೇಗೆಂದಡೆ
ವಾರಿ[ಬಲಿ]ದು ವಾರಿಕಲ್ಲಾಗಿ ವಾರಿಯಾದ ಹಾಗೆ
ಉಪ್ಪಿನ ಪೊಟ್ಟಣವಪ್ಪುವಿನೊಳು ಬಯಚಿಟ್ಟ ಹಾಗೆ
ಉರಿ ಕಪರ್ುರ ಸಂಯೋಗವಾದ ಹಾಗೆ
ಎನ್ನ ಅಂಗ ಮನ ಅಂಗ ಏಕರಸವಾದ ಭೇದವನು
ಸಿದ್ಧೇಶ್ವರನು ತೋರಿ[ದ ಕಾ]ರಣ ಪರಂಜ್ಯೋತಿ
ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಬಸವೇಶ್ವರನ ಶ್ರೀಪಾದದಲ್ಲಿ ಮನಮಗ್ನ ಯೋಗವೆನಗಾಯಿತಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./16
ಎನ್ನ ಪಂಚಾಕ್ಷರವ ಇಷ್ಟಲಿಂಗ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಸಪ್ತದಶಾಕ್ಷರವ ಪ್ರಾಣಲಿಂಗ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ತ್ರಿವಿಧಾಕ್ಷರವ ಭಾವಲಿಂಗ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಷಡಿಂದ್ರಿಯಂಗಳ ಷಡ್ವಿಧಲಿಂಗ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ನವಚಕ್ರಂಗಳ ನವವಿಧಲಿಂಗಕ್ಷೇತ್ರ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಅನ್ನಮಯವ ಪ್ರಸಾದ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಪ್ರಾಣಮಯವ ಲಿಂಗ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಮನೋಮಯವ ಶಿವಧ್ಯಾನ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ವಿಜ್ಞಾನಮಯವ ಜ್ಞಾನ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಆನಂದಮಯವ ಶಿವಾನಂದಮಯವಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಎನ್ನ ಷಡ್ಧಾತುಗಳ ಷಡಕ್ಷರ ಸ್ವರೂಪಾಗಿ ಬಂದು
ಒಳಕೊಂಡನಯ್ಯ ಬಸವಣ್ಣ.
ಇಂತೀ ಬಸವಣ್ಣನೇ
ಎನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಪರಿಪೂರ್ಣನಾಗಿ
ಬಸವಣ್ಣನೇ ಇಷ್ಟವಾಗಿ ತೊಳಗಿ ಬೆಳಗುತ್ತಿಪ್ಪ ಭೇದವನು
ಬೋಳಬಸವೇಶ್ವರನೆನಗೆ ಅರುಹಿಕೊಟ್ಟು
ಸಿದ್ಧೇಶ್ವರನೆಂಬ ಚಿದಬ್ಧಿಯೊಳಗೆ ಮುಳುಗಿಸಿದ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಉಭಯಭಾವವನರಿಯದೆ ಶಿವಶಿವ ಎನುತಿರ್ದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ./17
ಎನ್ನ ದ್ವಿವಿಧಾಕ್ಷರದಲ್ಲಿ ಲಿಂಗ ಸ್ವರೂಪಾಗಿ ಬಂದು
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ತ್ರಿವಿಧಾಕ್ಷರದಲ್ಲಿ ಜಂಗಮಲಿಂಗ ಸ್ವರೂಪಾಗಿ ಬಂದು
ಮೂರ್ತಿಗೊಂಡನಯ್ಯ ಬಸವಣ್ಣ.
ಇಂತೀ ದ್ವಿವಿಧಾಕ್ಷರ ತ್ರಿವಿಧಾಕ್ಷರವೇ ಅಂಗ ಪ್ರಾಣ.
ಆ ಅಂಗ ಪ್ರಾಣವೇ ಉಭಯಸ್ಥಲ.
ಆ ಉಭಯಸ್ಥಲದ ಭೇದವನು ದ್ವೆ ತಾದ್ವೆ ತಿಗಳೆತ್ತ ಬಲ್ಲರಯ್ಯ?
ಇದನರಿದು ಸಿದ್ಧೇಶ್ವರನು ಅಂಗ ಪ್ರಾಣದಲ್ಲಿ ಲಿಂಗ ಜಂಗಮವ
ಏಕಾರ್ಥವ ಮಾಡಿ ತೋರಿಸಿಕೊಟ್ಟ ಕಾರಣ,
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ
ಅರ್ಕನ ಪ್ರಭೆಯೊಳಕೊಂಡ ಅರಿಸಿನದಂತಾದೆನಯ್ಯಾ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ./18