Categories
ವಚನಗಳು / Vachanagalu

ಗುರು ಸಿದ್ಧ ದೇವರ ವಚನಗಳು

ಅಂಗದಮೇಲೆ ಲಿಂಗವ ಧರಿಸಿ,
ಶಿವಭಕ್ತರೆಂದು ಹೇಳಿ, ಶಿವಾಚಾರಮಾರ್ಗವ ಬಿಟ್ಟು,
ಭವಿಶೈವದೈವಗಳಿಗೆ ಲಿಂಗವಡಿಯಾಗಿ ಅಡ್ಡಬಿದ್ದು
ಶರಣೆಂಬ ಹೊಲೆಯರಿಗೆ ಶಿವಭಕ್ತಜನ್ಮ ತೀರಿ,
ಚಂದ್ರಸೂರ್ಯರುಳ್ಳನ್ನಕ್ಕರೆ ಇಪ್ಪತ್ತೆಂಟುಕೋಟಿ ನರಕ ತಪ್ಪದು.
ಆ ನರಕ ತೀರಿದ ಬಳಿಕ ಶ್ವಾನ ಸೂಕರಜನ್ಮ ತಪ್ಪದು.
ಆ ಜನ್ಮ ತೀರಿದ ಬಳಿಕ ರುದ್ರಪ್ರಳಯ ತಪ್ಪದೆಂದ ಕಾಣಾ
ಸಂಗನಬಸವೇಶ್ವರ./1
ಅಯ್ಯ ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾಮ,
ವಿಶುದ್ಧಿಚಕ್ರ, ಕಪೊತವರ್ಣ, ಶರಣಸ್ಥಲ, ಆನಂದತನು,
ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ,
ಆನಂದಭಕ್ತಿ, ಸುಶಬ್ದಪದಾರ್ಥ, ಸುಶಬ್ದ ಪ್ರಸಾದ,
ಸದಾಶಿವ ಪೂಜಾರಿ, ಸದಾಶಿವನಧಿದೇವತೆ, ಶಿವಸಾದಾಖ್ಯ,
ಪರಿಪೂರ್ಣವೆಂಬ ಲಕ್ಷಣ, ಅನಾದಿವತುವೆಂಬ ಸಂಜ್ಞೆ,
ಊಧ್ರ್ವದಿಕ್ಕು, ಅಜಪೆವೇದ, ಆಕಾಶವೆ ಅಂಗ,
ಶುದ್ದಾತ್ಮ, ಪರಾಶಕ್ತಿ, ಶಾಂತ್ಯತೀತಕಲೆ-
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು,
ಎನ್ನ ವಿಶುದ್ಧಿಚಕ್ರವೆಂಬ ಐಮುಕ್ತಿಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ ಈಳನಾಸ್ವರೂಪವಾದ
ಪ್ರಸಾದಲಿಂಗವೆ ವಿಶ್ವನಾಥಲಿಂಗವೆಂದು
ಭಾವತ್ರಯವ ಮಡಿಮಾಡಿ, ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು,
ಗಗನನಿವೃತ್ತಿಯಾದ ಗಂಧವ ಧರಿಸಿ,
ಜ್ಞಾನ ಸುಜ್ಞಾನವಾದದಕ್ಷತೆಯನಿಟ್ಟು,
ಅಲ್ಲಿಹ ಷೋಡಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಕಪೋತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ತುರ್ಯಾತೀತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ,
ನಿರ್ಮದವೆಂಬಾಭರಣವ ತೊಡಿಸಿ,
ಸುಶಬ್ಧವೆಂಬ ನೈವೇದ್ಯವನರ್ಪಿಸಿ,
ಆನಂದವೆಂಬ ತಾಂಬೂಲನವಿತ್ತು,
ಇಂತು ಪ್ರಸಾದಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ
ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು
ಆ ಪ್ರಸಾದಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ಯಂ ಯಂ ಯಂ ಯಂ ಯಂ ಯಂ ಎಂಬ
ಯಕಾರ ಷಟ್ವಿಧ ಮಂತ್ರಗಳಿಂದೆ ನಮಸ್ಕರಿಸಿ,
ಆ ಪ್ರಸಾದಲಿಂಗವೆ ತಾನೆಂದರಿದು ಕೂಡಿ ಎರಡಳಿದು
ನಿರ್ಮೋಹಿಯಾಗಿ ಆಚರಿಸಬಲ್ಲಾತನೆ ಆನಂದಭಕ್ತಿಯುಳ್ಳ ಶಿವಶರಣ ನೋಡ
ಸಂಗನಬಸವೇಶ್ವರ./2
ಅಯ್ಯ ನಿನ್ನ ಅಷ್ಟತನುವಿನ ಮಧ್ಯದಲ್ಲಿ
ಆ ಪರಬ್ರಹ್ಮನಿಜವಸ್ತುವೆ ನಿನ್ನ ಪಾವನ ನಿಮಿತ್ಯಾರ್ಥವಾಗಿ
ಅಷ್ಟಾವರಣಸ್ವರೂಪಿನದಿಂದ ನೆರದಿರ್ಪುದು ನೋಡ.
ಅದರ ವಿಚಾರವೆಂತೆಂದಡೆ : ನಿನ್ನ ಸ್ಥೂಲತನುವಿನ ಮಧ್ಯದಲ್ಲಿ
ಅರುಹೆ ಗುರುವಾಗಿ ನೆಲಸಿರ್ಪರು ನೋಡ.
ನಿನ್ನ ಸೂಕ್ಷ್ಮತನುವಿನ ಮಧ್ಯದಲ್ಲಿ
ಸುಜ್ಞಾನವೆ ಲಿಂಗವಾಗಿ ನೆಲಸಿರ್ಪರು ನೋಡ.
ನಿನ್ನ ಕಾರಣತನುವಿನ ಮಧ್ಯದಲ್ಲಿ
ಸ್ವಾನುಭಾವಜಂಗಮವಾಗಿ ನೆಲಸಿರ್ಪರು ನೋಡ.
ನಿನ್ನ ನಿರ್ಮಲತನುವಿನ ಮಧ್ಯದಲ್ಲಿ
ಕರುಣಾಮೃತ ಪಾದೋದಕವಾಗಿ ನೆಲಸಿರ್ಪರು ನೋಡ.
ನಿನ್ನ ಆನಂದತನುವಿನ ಮಧ್ಯದಲ್ಲಿ
ಕೃಪಾಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಚಿದ್ರೂಪತನುವಿನ ಮಧ್ಯದಲ್ಲಿ
ಚಿತ್ಪ್ರಕಾಶಭಸಿತವಾಗಿ ನೆಲಸಿರ್ಪರು ನೋಡ.
ನಿನ್ನ ಚಿನ್ಮಯತನುವಿನ ಮಧ್ಯದಲ್ಲಿ
ಚಿತ್ಕಾಂತೆ ರುದ್ರಾಕ್ಷಿಯಾಗಿ ನೆಲಸಿರ್ಪರು ನೋಡ.
ಇಂತು ನಿನ್ನ ಸರ್ವಾಂಗದಲ್ಲಿ ಅಷ್ಟಾವರಣಸ್ವರೂಪಿನಿಂದ
ಪರಾತ್ಪರ ನಿಜವಸ್ತು ನೆರದಿರ್ಪುದು ನೋಡ.
ನಿನ್ನ ನಿರ್ಮಾಯಚಿತ್ತ ಮಹಾಜ್ಞಾನ ನಿಜದೃಷ್ಟಿಯಿಂದ
ನಿನ್ನ ನೀ ತಿಳಿದು ನೋಡ.
ಎಂದು ಗಣಸಾಕ್ಷಿಯಾಗಿ ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ಉಪಮಾದೀಕ್ಷೆ ಇಂತುಂಟೆಂದು ನಿರೂಪಂ ಕೊಡುತ್ತಿರ್ದರು ನೋಡ
ಸಂಗನಬಸವೇಶ್ವರ./3
ಅಯ್ಯ ಬಸವ ಮೊದಲಾದ ಪ್ರಮಥಗಣಾರಾಧ್ಯರ
ಸನ್ಮಾರ್ಗಾಚಾರಕ್ಕೆ ದೃಢಚಿತ್ತದಿಂದ ನಿಂದು,
ನೀರಾಭಾರಿವೀರಶೈವ ಷಚಟ್ಸ್ಥಲಮಾರ್ಗದಲ್ಲಿ ಆಚರಿಸುವ
ಶರಣಗಣಂಗಳಲ್ಲಿ ಪಂಷಸೂತಕಂಗಳ ಕಲ್ಪಿಸಿದೆ,
ಭೃತ್ಯಾಚಾರ ಮುಂದುಗೊಂಡು, ಅವರೊಕ್ಕುಮಿಕ್ಕುದ ಹಾರೈಸಿ,
ನಿಜಭಕ್ತಿಯಲ್ಲಿ ನಿಂದು, ದೃಢಚಿತ್ತನಾಗಿ,
ಸನ್ಮಾರ್ಗಾಚಾರಕ್ಕೆ ಬಾರದಂಥ ಗುರು-ಚರ-ಪರ-ಭಕ್ತ-ಗಣ
ಬಂಧು-ಬಳಗ, ತಂದೆ-ತಾಯಿ, ಪಯತ್ರ, ಮಿತ್ರ, ಕಳತ್ರ, ಶಿಷ್ಯ ಮೊದಲಾಗಿ,
ತೃಣಕ್ಕೆ ಸಮಮಾಡಿ ತ್ಯಜಿಸಿ, ಮನದ ಮಧ್ಯದಲ್ಲಿ ಹುಟ್ಟಿದ
ಕಾಮ, ಕ್ರೋಧ, [ಲೋಭ] ಮೋಹ, ಮದ, ಮತ್ಸರಂಗಳ ಬಲೆಗೆ ಸಿಲ್ಕದೆ,
ತ್ರಿಕರಣದ ಪವಿತ್ರತೆಯಿಂದ ಅಷ್ಟಾವರಣದ ಸ್ತೋತ್ರವ
ಮಾಡುವಂಥಾದೆ ಸಮಯದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ನಿರಾಲಂಬ ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು
ನೋಡ ಸಂಗನಬಸವೇಶ್ವರ. /4
ಅಯ್ಯ ಶ್ರೀಗುರುದೇವನು ಪ್ರಮಥಗಣಾರಾಧ್ಯ ಭಕ್ತಮಹೇಶ್ವರರರೊಡಗೂಡಿ
ಪಂಚಾಭಿಷೇಕ ಮೊದಲಾಗಿ ಪಾದೋದಕವೆ ಕಡೆಯಾಗಿ,
ಅಷ್ಟವಿಧಾರ್ಚನೆ, ಷೋಡಶೋಪಚಾರದಿಂದ
ಇಷ್ಟಲಿಂಗದೇವಂಗೆ ಸಪ್ತವಿಧಾರ್ಚನೆಯಮಾಡಿ,
ತಮ್ಮ ಕುಮಾರಮೂರ್ತಿಯೆಂದು ಮಹಾಸಂತೋಷದಿಂದ
ತೊಡೆಯ ಮೇಲೆ ಮುಹೂರ್ತ ಮಾಡಿಸಿಕೊಂಡು,
ಆಮೇಲೆ ಪ್ರಾಣಲಿಂಗಸ್ವರೂಪವಾದ ಉಭಯ ಹಸ್ತವನ್ನು
ಸಪ್ತವಿಧಾರ್ಚನೆಯ ಮಾಡಿ,
ದಶಾಂಗುಲಮಧ್ಯದಲ್ಲಿ ದ್ವಾದಮೂಲಪ್ರಣಮವ ಲಿಖಿಸಿ,
ಕುಮಾರಠಾವ ಮಾಡಿ, ಆಮೇಲೆ ಭಾವಲಿಂಸ್ವರೂಪ
ಗೋಳಕಸ್ಥಾನವಾದ ಮಸ್ತಕವನ್ನು ಸಪ್ತವಿಧಾರ್ಚನೆಯ ಮಾಡಿ,
ದ್ವಾದಶ ಮಹಾಪ್ರಣವ ಲಿಖಿಸಿ,
ಸರ್ವಾಂಗದಲ್ಲಿ ಕ್ರಿಯಾಪಾದೋದಕಸ್ವರೂಪವಾದ ಚಿದ್ಭಸಿತವ
ಮಹಾಮಂತ್ರಸ್ಮರಣೆಯಿಂದ ಸ್ನಾನ-ಧೂಳನ-ಧಾರಣವ ಮಾಡಿ,
ಲಲಾಟದಲ್ಲಿ ಅನಾದಿಪರಶಿವಲಿಖಿತವ ಲಿಖಿಸಿ,
ಸರ್ವಾಚಾರಸಂಪನ್ನನಾಗೆಂದು
ಆಶೀರ್ವಚನವ ನೀಡುವಂಥಾದೆ ವಿಭೂತಿಪಟ್ಟದೀಕ್ಷೆ !
ಇಂತುಟೆಂದು ಶ್ರೀಗುರುನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ. /5
ಅಯ್ಯ, ಅರ್ಧಚಂದ್ರಾಕೃತಿ, ವಕಾರಪ್ರಣಮ, ಮೇಘನಾದ,
ಅನಾಹತಚಕ್ರ, ಮಾಂಜಿಷ್ಠವರ್ಣ, ಪ್ರಾಣಲಿಂಗಿಸ್ಥಲ,
ನಿರ್ಮಿಲತನು, ಸುಮನಹಸ್ತ, ಜಂಗಮಲಿಂಗ,
ತ್ವಕ್ಕೆಂಬ ಮುಖ, ಅನುಭಾವಭಕ್ತಿ, ಸುಸ್ಪರ್ಶನ ಪದಾರ್ಥ,
ಸುಸ್ಪರ್ಶನ ಪ್ರಸಾದ, ಈಶ್ವರಿ ಪೂಜಾರಿ, ಈಶ್ವರನಧಿದೇವತೆ,
ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ನಿರ್ಮಲಾತ್ಮ,
ಆದಿಶಕ್ತಿ, ಶಾಂತಿಕಲೆ-ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು,
ಎನ್ನ ಅನಾಹತಚಕ್ರವೆಂಬ ಹಿಮವತ್ಕೇತಾರಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ ಯಜನಸ್ವರೂಪವಾದ ಜಂಗಮಲಿಂಗವೆ
ಹಿಮಗಿರೀಶ್ವರಲಿಂಗವೆಂದು, ಪ್ರಾಣತ್ರಯವ ಮಡಿಮಾಡಿ,
ಶಾಂತಿಯೆಂಬ ಜಲದಿಂ ಮಜ್ಜನಕ್ಕೆರದು,
ವಾಯು ನಿವೃತ್ತಿಯಾದ ಗಂಧವ ಧರಿಸಿ,
ಮನ ಸುಮನವಾದಕ್ಷತೆಯನಿಟ್ಟು
ಅಲ್ಲಿಹ ದ್ವಾದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಮಾಂಜಿಷ್ಠವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ತೂರ್ಯಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ,
ನಿರ್ಲೇಪವೆಂಬಾಭರಣವ ತೊಡಿಸಿ,
ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ,
ಅನುಭಾವವೆಂಬ ತಾಂಬೂಲವನಿತ್ತು
ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಜಂಗಮಲಿಂಗವನ್ನು
ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು,
ಆ ಜಂಗಮಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ
ವಾಕಾರಷಡ್ವಿಧ ಮಂತ್ರಂಗಳಿಂದೆ ನಮಸ್ಕರಿಸಿ,
ಆ ಜಂಗಲಿಂಗಮವೆ ತಾನೆಂದರಿದು ಕೂಡಿ
ಎರಡಳಿದು ನಿಃಪ್ರಪಂಚಿಯಾಗಿ ಆಚರಿಸಬಲ್ಲಾತನೆ
ಅನುಭಾವಭಕ್ತಿಯನುಳ್ಳ ಲಿಂಗಪ್ರಾಣಿ ನೋಡ
ಸಂಗನಬಸವೇಶ್ವರ./6
ಅಯ್ಯ, ಆಚರಣೆಯಲ್ಲಿ ಇಷ್ಟ-ಪ್ರಾಣ-ಭಾವಲಿಂಗಗಳಿಗೆ
ಗುರು-ಚರ-ಭಕ್ತರ ಮೂಲಚೈತನ್ಯಮೂರ್ತಿ
ಅನಾದಿ ಚಿದ್ಘನ ಪಾದೋದಕ ಪ್ರಸಾದ ಮಂತ್ರಸ್ವರೂಪ ನೋಡ.
ಅಯ್ಯ. ಸಂಬಂಧದಲ್ಲಿ ಗುರು-ಚರ-ಭಕ್ತಂಗೆ
ಇಷ್ಟ-ಪ್ರಾಣ-ಭಾವಲಿಂಗಂಗಳೆ ಮೂಲಚೈತನ್ಯಮೂರ್ತಿ
ಅನಾದಿ ಚಿದ್ಘನ ಪಾದೋದಕ ಪ್ರಸಾದ ಮಂತ್ರಸ್ವರೂಪ ನೋಡ.
ಈ ವಿಚಾರವ ನಿನ್ನ ನೀನರಿದಡೆ
ಅನಾದಿ ಗುರು-ಚರ-ಭಕ್ತ-ಇಷ್ಟ-ಪ್ರಾಣ-ಭಾವ.
ಪಾದೋದಕ-ಪ್ರಸಾದ-ಮಂತ್ರ
ನಿನ್ನ ಸರ್ವಾಂಗದಲ್ಲಿ ಉಂಟು ನೋಡ
ಸಂಗನಬಸವೇಶ್ವರ./7
ಅಯ್ಯ, ಇಂತು ಅನಾದಿ ಮಹಾಂತ ಚಿದ್ಘನ ಶರಣನ
ಸ್ವರೂಪು ನಿಲುಕಡೆಯ ನಿನ್ನ ನಿಜಚಿದ್ಬೆಳಗಿನ ಅರುಹಿನಿಂದರಿದು
ಮಾರ್ಗಕ್ರಿಯಾ-ಮೀರಿದಕ್ರಿಯಾ, ಆಚರಣೆ-ಸಂಬಂಧದ
ಉಲುಹಡಗಿ ನೀನೆಂದಿನಂತೆ ನಿರಂಜನ ನಿರಾವಯಮೂರ್ತಿ ನೋಡ
ಸಂಗನಬಸವೇಶ್ವರ. /8
ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ
ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು
ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ,
ಚಿಕ್ಕದಂಡನಾಯಕ ಮುಖವಚನದಿಂದೆ
ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ,
ನವರತ್ನ ಖಚಿತ ಮಂಟಪವ ರಚಿಸಿ,
ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ,
ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ
ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ
ಬೋಧಿಸಿದ ನಿಲುಕಡೆಯ ಸೂತ್ರವದೆಂತೆಂದಡೆ : ಅಯ್ಯ, ಮೂವತ್ತಾರು ತತ್ವಂಗಳಲ್ಲಿ ಸಂಬಂಧವಾದ
ಅಷ್ಟಾವರಣಂಗಳ ಕೂಡಿ ನಾಲ್ವತ್ತುನಾಲ್ಕು ಚಿದಂಗತತ್ವಂಗಳೆಂದೆನಿಸಿ,
ಅಯ್ಯ, ಇಷ್ಟಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು,
ಪ್ರಾಣಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು,
ಭಾವಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು
ಕೂಡಲಾಗಿ ಐವತ್ತೇಳು ಮಹಾಪ್ರಣಮಂಗಳೆ ಚಿದ್ಛನಲಿಂಗಸ್ಥಲಂಗಳಾಗಿ
ಶೋಭಿಸುವಂಥ ಚಿದಂಗ-ಚಿದ್ಘನಲಿಂಗವ
ಉಭಯಭಾವವಳಿದು ನೂರೊಂದುಸ್ಥಲವ ಸಂಬಂಧವಮಾಡಿ,
ಮಾರ್ಗಾಚರಣೆಯ ಕುರುಹ ತೋರಿ,
ಅಂತರಂಗದಲ್ಲಿ ಶೋಭಿಸುವ ಲೋಮವಿಲೋಮದಳಂಗಳೆ
ನೂರೆಂಟು ತೆರದ ಚಿದಂಗಂಗಳಾಗಿ,
ಆ ದಳಂಗಳಲ್ಲಿ ಝಗಝಗಾಯಮಾನವಾಗಿ ಪ್ರಕಾಶಿಸುವ ಪ್ರಣಮಂಗಳೆ
ನೂರೆಂಟು ತೆರದ ಚಿದ್ಘನಲಿಂಗಂಗಳಾಗಿ,
ಒಳಗು-ಹೊರಗು ಎಂಬ ಉಭಯ ನಾಮ ರೂಪು ಕ್ರಿಯವನಳಿದು
ಇನ್ನೂರ ಹದಿನಾರು ಸ್ಥಲವ ಸಂಬಂಧವ ಮಾಡಿ
ಮೀರಿದ ಕ್ರಿಯಾಚರಣೆಯ ಕುರುಹ ತೋರಿ
ಅನಾಧಿಗುರು ಬಸವರಾಜೇಂದ್ರನ ಪ್ರಸಿದ್ಧಪ್ರಸಾದನೆ
ಮಾರ್ಗಕ್ರಿಯಾರೂಪವಾದ ನೂರೊಂದು ಸ್ಥಲಂಗಳಾಗಿ,
ಅನಾದಿಜಂಗಮ ಪ್ರಭುರಾಜೇಂದ್ರನ ಶುದ್ಧಪ್ರಸಾದವೆ
ಮೀರಿದ ಕ್ರಿಯಾರೂಪವಾದ ಇನ್ನೂರ ಹದಿನಾರುಸ್ಥಲಂಗಳಾಗಿ,
ಇವರಿಬ್ಬರ ಮಹಾಪ್ರಸಾದವೆ ಘಟ್ಟಿಗೊಂಡು
ಅನಾದಿಶರಣರೂಪವ ತಾಳಿ ಚೆನ್ನಬಸವಣ್ಣನೆಂಬಭಿಧಾನದಿಂದ
ಮಾರ್ಗಕ್ರಿಯಾಸ್ವರೂಪ ನೂರೊಂದುಸ್ಥಲವೆ ಆಚರಣೆಯಾಗಿ
ಮೀರಿದ ಕ್ರಿಯಾಸ್ವರೂಪ ಇನ್ನೂರ ಹದಿನಾರುಸ್ಥಲವೆ ಸಂಬಂಧವಾಗಿ
ಅನಾದಿಪರಶಿವರೂಪ ಶಿವಯೋಗಿಸಿದ್ಧರಾಮನ
ಕರ-ಮನ-ಭಾವಂಗಳಲ್ಲಿ ಮಿಶ್ರಾಮಿಶ್ರಂಗಳೊಡನೆ
ಅಗಣಿತ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ
ತ್ಯಾಗ-ಭೋಗ-ಯೋಗಾನುಸಂಧಾನದಿಂದ ಸಿದ್ಧರಾಮನ
ಕರಸ್ಥಲದಲ್ಲಿ ಶುದ್ಧಪ್ರಸಾದ-ಇಷ್ಟಲಿಂಗವಾಗಿ
ಅಷ್ಟವಿಧಾರ್ಚನೆ-ಷೋಡಶೋಪಚಾರವ ಕೈಕೊಂಡು ಒಪ್ಪುತ್ತಿರ್ಪರು ನೋಡ.
ಮನಸ್ಥಲದಲ್ಲಿ ಸಿದ್ಧಪ್ರಸಾದ-ಪ್ರಾಣಲಿಂಗವಾಗಿ
ಮಂತ್ರ-ಧ್ಯಾನ-ಜಪ-ಸ್ತೋತ್ರಂಗಳ ಕೈಕೊಂಡು ಒಪ್ಪುತ್ತಿರ್ಪರು ನೋಡ.
ಭಾವಸ್ಥಲದಲ್ಲಿ ಪ್ರಸಿದ್ಧಪ್ರಸಾದ-ಭಾವಲಿಂಗವಾಗಿ
ಮನೋರ್ಲಯ ನಿರಂಜನ ಪೂಜಾಕ್ರಿಯಾನಂದ ಕೂಟವ
ಕೈಕೊಂಡು ಒಪ್ಪುತ್ತಿರ್ಪರು ನೋಡ.
ಇಂತು ಸಂಬಂಧಾಚರಣೆಯ ಸ್ಥಲಕುಳಂಗಳ ಚಿದ್ಬೆಳಗಿನಲ್ಲಿ ಶೋಭಿಸುವ
ಬಸವಣ್ಣ, ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ
ಪ್ರಮಥಗಣಂಗಳ ಮಹಾಪ್ರಸಾದ ಬೆಳಗಿಗೆ ಯೋಗ್ಯರಾಗಿ
ದಗ್ಧಪಟನ್ಯಾಯ, ಉರಿವುಂಡ ಕರ್ಪೂರದಂತಾದೆವು ನೋಡ
ಸಂಗನಬಸವೇಶ್ವರ./9
ಅಯ್ಯ, ಇಂತು ನಿರಂಜನ ಮಹಾಲಿಂಗಾನುಭಾವಸೂತ್ರವ
ಎರಡೆಂಬತ್ತೆಂಟುಕೋಟಿ ಹರಗುರು ವಾಕ್ಯಪ್ರಮಾಣವಚನಾನುಭಾವವ
ಪ್ರಕಟಿಸಿ ಈ ಒಂದು ವಚನಾರ್ಥದಲ್ಲಿ ಅತಿಗೋಪ್ಯದಿಂದ
ಅನಾದಿ ನಿಃಕಳಂಕ ನಿಶ್ಶೂನ್ಯ ನಿರಂಜನ ನಿರಾವಯ
ಶರಣಸೂತ್ರವಿಡಿದು ನಿರಾಯಾಸಂ ಆಯಾಸಂಗಳೇನು ತೋರದೆ
ಈ ವಚನಾರ್ಥದ ಆದಿ-ಅಂತ್ಯವನರುಹಿಸಿಕೊಟ್ಟೆವು ನೋಡ.
ಆ ವಿಚಾರವೆಂತೆಂದಡೆ : ಶ್ರೀ ಮದ್ಗುರು ಕಾರುಣ್ಯವೇದ್ಯನು, ವಿಭೂತಿ-ರುದ್ರಾಕ್ಷಧಾರಕನು,
ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕ-ಪ್ರಸಾದಗ್ರಾಹಕನು, ಗುರುಭಕ್ತಿ ಸಂಪನ್ನನು,
ಏಕಲಿಂಗ ನಿಷ್ಠಾಪರನು, ಚರಲಿಂಗ ಲೋಲುಪ್ತನು,
ಶರಣ ಸಂಗವೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣಶುದ್ಧನು,
ತ್ರಿವಿಧ ಲಿಂಗಾಂಗಸಂಬಂಧಿ, ಅನ್ಯದೈವದ ಸ್ಮರಣೆಯ ಹೊದ್ದ,
ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸ್ತ್ರೀಯರ ಬೆರಸ,
ಪರಧನವನೊಲ್ಲ, ಪರನಿಂದ್ಯವನಾಡ, ಅನೃತವ ನುಡಿಯ,
ಹಿಂಸೆಯ ಮಾಡ, ತಾಮಸಭಕ್ತರ ಸಂಗವಮಾಡ,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ ಮುಂತಾದವೆಲ್ಲವ
ಸಮರ್ಪಿಸಿ ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದ್ಯವ ಸೈರಿಸ, ಪ್ರಸಾದನಿಂದ್ಯವ ಕೇಳ,
ಅನ್ಯರನಾಸೆಗೈಯ್ಯ, ಪಾತ್ರಾಪಾತ್ರವನರಿದೀವ, ಚತುರ್ವಿಧಪದವಿಯ ಹಾರೈಸ,
ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ,
ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪ-ವಿಕಲ್ಪವ ಮಾಡುವನಲ್ಲ,
ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್ಸ್ಥಲಭರಿತ,
ಸರ್ವಾಂಗಲಿಂಗಿ, ದಾಸೋಹಂ ಸಂಪನ್ನ
ಇಂತೀ ಭಾವನ್ನದಿರವ ಅಂತರಂಗದಲ್ಲಿ ಒಳಕೊಂಡು
ಬಹಿರಂಗದಲ್ಲಿ ನಡೆದಂತೆ ನುಡಿದು, ನುಡಿದಂತೆ ನಡದು,
ಸದ್ಭಕ್ತಿ-ಜ್ಞಾನ-ವೈರಾಗ್ಯ ಸಂಪನ್ನತ್ವದಿಂದ
ಸಕಲಪ್ರಮಥಗಣಂಗಳಿರುವ ಕೀರ್ತಿಸಿಕೊಳ್ಳುತ್ತ,
ಆ ಆದಿಪ್ರಮಥರ ಕೀರ್ತನೆ ವಿಚಾರವೆಂತೆಂದಡೆ : ಶ್ರೀಮದನೇಕಲೋಕ-ವಿಸ್ತಾರಕ ಕಾರಣರೂಪ,
ಸತ್ತಿಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿಸ್ವರೂಪ,
ಪರತರ ಪರಬ್ರಹ್ಮಾನುಭಾವ ಸಾರ್ವಭೌಮ,
ಷಟ್ಸ್ಥಲಸ್ಥಾಪನಾಚಾರ್ಯ, ಪಂಚಾಚಾರ ಪ್ರಮಥನಾಯಕ
ಸರ್ವಾಚಾರ ನಿಷ್ಠಾಗರಿಷ್ಠ, ಲಿಂಗಲೋಲುಪ್ತ,
ಲಿಂಗಭೋಗೋಪಭೋಗಿ, ಜಂಗಮಾನುಭಾವ,
ಸದ್ಭಕ್ತ ಹೃನ್ಮಂದಿರವಾಸ, ನಿತ್ಯ ಕಲ್ಯಾಣೋತ್ಸಹಪೂಣರ್ಾವತರ್ಯ,
ಲಿಂಗಲೀಲಾನಂದ, ಏಕವಿಂಶತಿಯುಗಸ್ಥಾಪನಾಚಾರ್ಯವರ್ಯ,
ಮಂಜುಳಾಂತರಂಗ, ಮನುಮುನಿವಂದ್ಯ, ಪ್ರದಾಯಕ
ತ್ರೈದಶಪರ್ವತಾಧೀಶ್ವರ, ಮದನಮರ್ದನ, ಮಾಯಾಕೋಲಾಹಲ,
ಅಷ್ಟಾವರಣ ಸ್ವರೂಪ, ತ್ರಿವಿಧಾನುಗ್ರಹ ಪ್ರತಿಪಾದಕ,
ತ್ರಿವಿಧ ಪಾದೋದಕ ಪ್ರಸಾದಲೋಲುಪ್ತ,
ತ್ರಿವಿಧಾಚಾರಸನ್ಮೋಹಿ, ತ್ರಿಗುಣಾನಂದಭರಿತ, ತ್ರಿಮಲದೂರ,
ನಿರ್ಮಲ-ನಿಃಕಳಂಕ-ನಿಃಶೂನ್ಯ-ನಿರಂಜನ, ಅನುಮಿಷಾರಾಧ್ಯ,
ತ್ರಿವಿಧ ಲಿಂಗಾನುಭಾವ ಅಖಿಳಾಂಡ ಪ್ರತಿಷ್ಠಾಪ್ರದಾಯಕ,
ಸದ್ಧರ್ಮಸ್ವರೂಪ, ಸತ್ಕ್ರಿಯಾ ಸಮ್ಯಜ್ಞಾನ ಸದಾಭರಿತ,
ನಿತ್ಯ ತೃಪ್ತಾನಂದಮಂತ್ರಸ್ವರೂಪ,
ಅನಂತಸೂರ್ಯಚಂದ್ರಾಗ್ನಿಪ್ರಕಾಶ, ಅಜ್ಞಾನ ತಿಮಿರಾಂಧಸ್ಯ,
ಕಾರಣಾವತಾರ ಸರ್ವಜ್ಞ
ಪ್ರದಾಯಕ, ಕಾಮಧೇನು-ಕಲ್ಪವೃಕ್ಷ,
ಚಿಂತಾಮಣಿಗೆ ಮಾತೃಸ್ವರೂಪ,
ವಾಚಾತೀತ-ವಣರ್ಾತೀತ-ಭಾವಾತೀತ-ಜ್ಞಾನಾತೀತ,
ಚಿತ್ಕಲಾಸ್ವರೂಪ, ಅಯೋನಿಸಂಭವ, ಅಜಡಸ್ವರೂಪ,
ಬತ್ತೀಶಕಳಾಮೂರ್ತಿ, ಜರೆಮರಣ ಸಂಸ್ಕೃತಿದೂರ,
ವರವೀರಶೈವಮತ ಸ್ಥಾಪನಾಚಾರ್ಯ,
ನಿಜ ಶಿವಯೋಗಭರಿತಾನಂದಮೂರ್ತಿ,
ಗುರುಮಾರ್ಗಾಚಾರ ಪ್ರತಿಷ್ಠಾಪ್ರದಾಯಕ,
ಅನಾಚಾರ ಸಂಹಾರ, ಮಹಿಮಾಸ್ವರೂಪ,
ಸದ್ಭಕ್ತಜಿಹ್ವಾಗ್ರ ಹೃನ್ಮಂದಿರಾವಾಸ.
ಏಕವಿಂಶತಿ ದೀಕ್ಷಾಬೋಧಸ್ವರೂಪ,
ಷಡ್ಗುಣೈಶ್ವರ್ಯ ಸಂಪತ್ಕರವನುಳ್ಳ ಮುಕ್ತಿಪ್ರದಾಯಕ,
ಮೂಲಮಂತ್ರಮೂರ್ತಿ
ಲೋಕಪಾವನಾರ್ಥ ಕೂಡಲಸಂಗಮೇಶ್ವರನ ಚಿದ್ಗಭರ್ೋದಯ
ಬಸವದಂಡನಾಥ ಪ್ರಮಥಗಣಂಗಳ ಭಕ್ತಿಹಿತಾರ್ಥವಾಗಿ,
ಅವತರಿಸಿದಂಥ ವಿರಾಣ್ಮೂರ್ತಿ!
ಅನಾದಿಗಣೇಶ್ವರ,
ಅನಾದಿಗಣೇಶ್ವರನ ಶಿಷ್ಯರು ಆದಿಗಣೇಶ್ವರ,
ಆದಿಗಣೇಶ್ವರನ ಶಿಷ್ಯರು ನಿರ್ಮಾಯವೆಂಬ ಗಣೇಶ್ವರ,
ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ,
ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರ,
ಜ್ಞಾನಾನಂದನೆಂಬ ಗಣೇಶ್ವರನ ಶಿಷ್ಯರು ಆತ್ಮ ಗಣೇಶ್ವರ,
ಆತ್ಮಗಣೇಶ್ವರನ ಶಿಷ್ಯರು ಆಧ್ಯಾತ್ಮ ಗಣೇಶ್ವರ,
ಆಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ,
ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು,
ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು,
ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು,
ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿ ಗೋಸಲದೇವರು,
ಹರದನಹಳ್ಳಿ ಗೋಸಲದೇವರ ಶಿಷ್ಯರು ಶಂಕರದೇವರು,
ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು,
ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು,
ಚೆನ್ನಬಸವೇಶ್ವರದೇವರ ಶಿಷ್ಯರು ತೋಂಟದ ಸಿದ್ಧೇಶ್ವರಸ್ವಾಮಿಗಳು,
ತೋಂಟದ ಶಿದ್ಧೇಶ್ವರಸ್ವಾಮಿಗಳ ಸಿಷ್ಯರು ಮರುಳಸಿದ್ಧೇಶ್ವರಸ್ವಾಮಿಗಳು,
ಮರುಳಸಿದ್ಧೇಶ್ವರಸ್ವಾಮಿಗಳ ಶಿಷ್ಯರು ರೇವಣಸಿದ್ಧೇಶ್ವರಸ್ವಾಮಿಗಳು,
ರೇವಣಸಿದ್ಧೇಶ್ವರಸ್ವಾಮಿಗಳ ಶಿಷ್ಯರು ಶಿವಲಿಂಗೇಶ್ವರಸ್ವಾಮಿಗಳು,
ಶಿವಲಿಂಗೇಶ್ವರಸ್ವಾಮಿಗಳ ಶಿಷ್ಯರು ನಿರಂಜನೇಶ್ವರಸ್ವಾಮಿಗಳು,
ನಿರಂರನೇಶ್ವರಸ್ವಾಮಿಗಳ ಶಿಷ್ಯರು ಮರಿಬಸವಲಿಂಗೇಶ್ವರಸ್ವಾಮಿಗಳು,
ಮರಿಬಸವಲಿಂಗೇಶ್ವರಸ್ವಾಮಿಗಳ ಶಿಷ್ಯರು ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳು,
ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳ ಶಿಷ್ಯರು ಚೆನ್ನಮಲ್ಲೇಶ್ವರಸ್ವಾಮಿಗಳು
ಚೆನ್ನಮಲ್ಲೇಶ್ವರಸ್ವಾಮಿಗಳ ಶಿಷ್ಯರು ಚೆನ್ನಂಜೇಶ್ವರಸ್ವಾಮಿಗಳು,
ಚೆನ್ನಂಜೇಶ್ವರಸ್ವಾಮಿಗಳ ಶಿಷ್ಯರು ಗುರುಶಾಂತೇಶ್ವರಸ್ವಾಮಿಗಳು,
ಗುರುಶಾಂತೇಶ್ವರಸ್ವಾಮಿಗಳ ಶಿಷ್ಯರು ಶಾಂತಮಲ್ಲಸ್ವಾಮಿಗಳು
ಶಾಂತಮಲ್ಲಸ್ವಾಮಿಗಳ ಕರ-ಮನ-ಭಾವದಲ್ಲುದಯವಾದ
ಗುರುಸಿದ್ಧಲಿಂಗ ನಾನಯ್ಯ.
ಆ ಗುರುಸಿದ್ಧಲಿಂಗನ ಕರ-ಮನ-ಸುಭಾವದಲ್ಲಿ
ಶರಣಗಣಂಗಳ ಶುದ್ಧಸಿದ್ಧಪ್ರಸಿದ್ಧ ಪ್ರಸಾದವಾಗಿ
ಅಷ್ಟವಿಧಾರ್ಚನೆ-ಷೋಡಶೋಪಚಾರ-ಮಂತ್ರ-ಧ್ಯಾನ-
ಜಪ-ಸ್ತೋತ್ರ-ಮನೋರ್ಲಯ-ನಿರಂಜನ ಪೂಜೆಯ ಕೈಕೊಂಡು
ಪ್ರಮಥಗಣಂಗಳ ಸ್ವಾನುಭಾವಸೂತ್ರವನೊಳಕೊಂಡು
ಒಳಗು ಬೆಳಗನೆ ನುಂಗಿ ಬೆಳಗು ಒಳಗನೆ ನುಂಗಿ,
ಛಳಿ ಮೋಹಕದ ಮಂಜು ನುಂಗಿದಂತೆ
ಹಲವು ದೀಪವ ಬಯಲ ಗಾಳಿ ನುಂಗಿದ ತೆರದಿ
ಕಳೆಯಳಿದ ಕೂಡಲಚೆನ್ನಸಂಗಯ್ಯನು.
ಇಂತು ಚಿಕ್ಕದಂಡನಾಥ ಚೆನ್ನಬಸವೇಶ್ವರಸ್ವಾಮಿಗಳ
ಪ್ರಸನ್ನಪ್ರಸಾದಕ್ಕೆ ಒಪ್ಪಿಗೆಯಾಗಿ
ಈ ವಚನಾನುಭಾವಶಾಸ್ತ್ರವ ಕೈಕೊಂಡು
ಸದ್ಭಕ್ತಶರಣಗಣಂಗಳಿಗೆ ಬೋಧಿಸಿ ಸಂಪೂರ್ಣವಮಾಡುವುದಕ್ಕೆ
ಕರ್ತುಗಳಾಗಿ ಒಪ್ಪುತಿರ್ಪಿರಿ ನೋಡ
ಸಂಗನಬಸವೇಶ್ವರ./10
ಅಯ್ಯ, ಇಂತು ನಿರಾವಯ ಶೂನ್ಯಲಿಂಗಾನುಭಾವ
ಸ್ಥಲಾಚರಣೆಯ ಕರ್ತೃ ಗುರುಬಸವೇಶ್ವರಸ್ವಾಮಿಗಳ
ಪಾದೋದಕ ಪ್ರಸಾದದ ಬೆಳಗಿನೊಳಗೆ ಬೆಳಗಾದರು ನೋಡ ಪ್ರಭುಸ್ವಾಮಿಗಳು.
ಪ್ರಭುಸ್ವಾಮಿಗಳ ಪಾದೋದಕ-ಪ್ರಸಾದದ
ನಿಜಚಿದ್ಬೆಳಗಿನೊಳಗೆ ಬೆಳಗಾದರು ನೋಡ
ಗುರುಬಸವೇಶ್ವರಸ್ವಾಮಿಗಳು.
ಇವರಿಬ್ಬರ ಪಾದೋದಕ-ಪ್ರಸಾದದ ಚಿದ್ದೆಳಗಿನೊಳಗೆ
ಚಿನ್ನಬಸವಣ್ಣ, ನಿರ್ಲಜ್ಜಶಾಂತಲಿಂಗೇಶ್ವರ, ಸಿದ್ಧರಾಮ
ಮೊದಲಾದ ಸಕಲಪ್ರಮಥಗಣಂಗಳೆಲ್ಲ
ಬಯಲೊಳಗೆ ಮಹಾಬಯಲಾದರು ನೋಡ.
ಇಂತು ಜೋಗೈಸಿ ಏಕಸಮರಸವಾದ
ಬಸವ-ಪ್ರಭು-ಚನ್ನಬಸವಣ್ಣ-ಪ್ರಮಥಗಣಂಗಳ
ಪಾದೋದಕ-ಪ್ರಸಾದನೆ ರೂಪಾಗಿ,
ಗುರುಸಿದ್ಧ-ಸಂಗನಬಸವಣ್ಣನೆಂಬಭಿಧಾನದಿಂದವತರಿಸಿ
ಚಿದ್ಘನ ಮಹಾಂತ ಪ್ರಮಥಗಣಂಗಳ ಕೃಪಾದೃಷ್ಟಿಯಿಂದ
ಸರ್ವಸಂಗಪರಿತ್ಯಾಗಸ್ಥಲ ಮೊದಲಾಗಿ
ನಿರಾವಯ ಶೂನ್ಯಲಿಂಗಾನುಭಾವಸ್ಥಲ ಕಡೆಯಾದ
ನವಸ್ಥಲಂಗಳೊಳಗೆ ಎರಡೆಂಬತ್ತೆಂಟುಕೋಟಿ ವಚನಾನುಭಾವದ
ಸುಧಾರಸ್ವಾನುಭಾವ ಸೂತ್ರಕ್ಕೆ ಬೆಟ್ಟದ ನೆಲ್ಲಿ ಘಟ್ಟದ ಉಪ್ಪು
ಕೂಡಿದೋಪಾದಿಯಲ್ಲಿ ಯೋಗ್ಯವಾದೇವು ನೋಡ
ಸಂಗನಬಸವೇಶ್ವರ./11
ಅಯ್ಯ, ಇಂತು ಮಹಾಪ್ರಮಥಗಣಂಗಳ
ಚಿದ್ಘನಪ್ರಸಾದವಚನಾಮೃತದ ಅನುಭಾವಸೂತ್ರವ
ಮತ್ರ್ಯಲೋಕದ ಮಹಾಗಣಂಗಳು ಅರಿದಾನಂದಿಸುವ ವಿಚಾರವೆಂತೆಂದಡೆ : ಈ ವಚನಾರ್ಥವ ಶೈವ-ವೀರಶೈವ ಉಭಯಮಾರ್ಗದ
ಅಪಶೈವರಿಗೆ ತೋರಿ ಅನುಭಾವವ ಮಾಡಲಾಗದು.
ಪಂಚಮಹಾಪಾತಕ ಸೂತಕರಿಗೆ ಬೋಧಿಸಲಾಗದು.
ಋಣಪಾತಕ, ಆಚಾರಭ್ರಷ್ಟ, ಗುರುದೀಕ್ಷಾಹೀನ,
ಗುರುಲಿಂಗಜಂಗಮದ್ರೋಹಿಗಳಿಗೆ ಹೇಳಲಾಗದು.
ಸ್ತ್ರೀಹತ್ಯ, ಶಿಶುಹತ್ಯ, ಮಾತೃಪಿತೃದ್ರೋಹಿಗಳೊಡನೆ ಪ್ರಸಂಗಿಸಲಾಗದು.
ಇಷ್ಟಲಿಂಗಬಾಹ್ಯರು ಕೇಳುವಂತೆ ಓದಿ
ಅರ್ಥ-ಅನ್ವಯ-ಆಕಾಂಕ್ಷೆಗಳ ಮಾಡಿ
ಸ್ವರೂಪಾರ್ಥ-ಸಂಬಂಧಾರ್ಥ-ನಿಶ್ಚಯಾರ್ಥಂಗಳಿಂದ
ಶರಣಗಣಂಗಳ ನಡೆ-ನುಡಿಯ ಪ್ರಕಟಿಸಲಾಗದು.
ಇಂತು ಗುರುವಾಕ್ಯವ ಮೀರಿ
ಮಹಾನುಭಾವ ಮಂತ್ರಾರ್ಥವ ಬಹಿಷ್ಕರಿಸಿದವರು
ಜನ್ಮ-ಜರೆ-ಮರಣಕ್ಕೊಳಗಾಗಿ, ಭವಪಾಶದಲ್ಲಿ ಬಿದ್ದು
ಶುನಿ-ಸೂಕರಾದಿ ಜನಿತರಾಗಿ ಪ್ರಳಯಾದಿಗಳಿಗೆ ಒಳಗು ನೋಡ
ಸಂಗನಬಸವೇಶ್ವರ./12
ಅಯ್ಯ, ಇಂತು ಶಿಖಿ ಕರ್ಪೂರಸಂಯೋಗದಂತೆ
ನಿಜಶಿವಯೋಗಾಚರನುಸಂಧಾನವ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗದೊಡನೆ
ಚನ್ನಬಸವ ಪ್ರಮಥಗಣಸಾಕ್ಷಿಯಿಂದ ಮಹಾಪ್ರಭುಸ್ವಾಮಿಗಳ
ಕರುಣಕಟಾಕ್ಷೆಯಿಂದ ಬೆಸಗೊಂಡು
ಸರ್ವಾಂಗಲಿಂಗಸಂದಾನದಿಂದ ಬೆರದು
ಬಯಲಾದರು ಸಿದ್ಧರಾಮದೇಶಿಕೇಂದ್ರನು ನೋಡ
ಸಂಗನಬಸವೇಶ್ವರ. /13
ಅಯ್ಯ, ಇದೆ ಮಹಾಪ್ರಭುವಿನ
ಮಹಾಪ್ರಸಾದನುಸಂಧಾನದಿಂದ
ಶಾಂಭವಲೋಕದ ಶಾಂಭವಗಣಂಗಳು,
ಶಿವಲೋಕದ ಶಿವಗಣಂಗಳು,
ರುದ್ರಲೋಕದ ರುದ್ರಗಣಂಗಳು,
ನಾಗಲೋಕದ ನಾಗಗಣಂಗಳು
ದೇವಲೋಕದ ದೇವಗಣಂಗಳು,
ಮತ್ರ್ಯಲೋಕದ ಮಹಾಗಣಂಗಳು
ಮುಂತಾಗಿ ನಿಜಾಚರಣೆ ಲಿಂಗಲೋಲುಪ್ತರಾಗಿ,
ಬಯಲೊಳಗೆ ಮಹಾಬಯಲಾದರು ನೋಡ
ಸಂಗನಬಸವೇಶ್ವರ./14
ಅಯ್ಯ, ಇನ್ನು ಪ್ರವೃತ್ತಿ-ನಿವೃತ್ತಿ ಅಧೋಕುಂಡಲಿ-ಊಧ್ರ್ವಕುಂಡಲಿಗಳೆಂಬ
ಉಭಯಮಾರ್ಗವ ಶಿವಾಜ್ಞೆಯಿಂದ ತೀರ್ಚಿಸಿ,
ಶಿವಯೋಗ, ಶಿವಾಚಾರ, ಶಿವಭಕ್ತಿ, ಶಿವಾನಂದಪರಿಣಾಮದಲ್ಲಿ ಚರಿಸುವ
ಮಧ್ಯಕುಂಡಲಿಸ್ವರೂಪವಾದ ಮಹಾಶೇಷನ ಭೇದವೆಂತೆಂದಡೆ : ಷೋಡಶ ವರ್ಣವೆ ಅಂಗವಾಗಿರ್ಪುದಯ್ಯ.
ಸರ್ವಾಚಾರಸಂಪತ್ತಿನಾಚರಣೆಯ ಪ್ರಾಣವಗಿರ್ಪುದಯ್ಯ.
ಚತುರ್ದಶಪ್ರಣಮಂಗಳೆ ತತ್ಸಂಗವಾಗಿರ್ಪುದಯ್ಯ.
ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲವೆ ವಸ್ತ್ರಾಭರಣವಾಗಿರ್ಪುದಯ್ಯ.
ಹರಗುರುವಾಕ್ಯವೆ ನಡೆನುಡಿಯಾಗಿರ್ಪುದಯ್ಯ.
ಪಂಚಾಚಾರಂಗಳೆ ವಾಹನವಾಗಿರ್ಪುದಯ್ಯ.
ಕರುಣ-ವಿನಯ-ಸಮತಾ-ಶುದ್ಧ-ಸಿದ್ಧ-ಪ್ರಸಿದ್ಧವೆ
ಪಿತಮಾತೆಯಾಗಿರ್ಪುದಯ್ಯ.
ಚತುರ್ವರ್ಣ ಮೊದಲಾಗಿ ಬಾವನ್ನವರ್ಣಂಗಳೆ
ಬಂಧುಬಳಗವಾಗಿರ್ಪುದಯ್ಯ.
ಷಡಕ್ಷರಮಂತ್ರ ಮೊದಲಾಗಿ ನೂರೆಂಟು ಮಂತ್ರಮಾಲಿಕೆಯ
ಒಡಹುಟ್ಟಿದರಾಗಿರ್ಪುದಯ್ಯ.
ಸಪ್ತಕೋಟಿ ಮಹಾಮಂತ್ರಂಗಳೆ ನಂಟರಾಗಿರ್ಪುದಯ್ಯ.
ಷೋಡಶಭಕ್ತಿಗಳೆ ಅಧರ್ಾಂಗಿಯಾಗಿರ್ಪುದಯ್ಯ.
ನೂರೆಂಟು ಸಕೀಲು ಮೊದಲಾಗಿ ಸಮಸ್ತಸಕೀಲಂಗಳೆ
ಮಂದಿರವಾಗಿರ್ಪುದಯ್ಯ.
ಸ್ವಾನುಭಾವಸೂತ್ರವೆ ನಿತ್ಯತೃಪ್ತಿಯಾಗಿರ್ಪುದಯ್ಯ.
ಮಹಾಪ್ರಕಾಶಸ್ವರೂಪವಾದ ಚಿದ್ಬೆಳಗೆ ದೈವವಾಗಿರ್ಪುದಯ್ಯ.
ಷೋಡಶಾವಧಾನಂಗಳೆ ಅವಯವಂಳಾಗಿರ್ಪುದಯ್ಯ.
ನಿಜನೈಷ್ಠೆ, ನಿರ್ಲಜ್ಜೆ, ನಿರಾಸೆಯೆಂಬ ನಿಷ್ಪ್ರಪಂಚವೆ
ಧನಧಾನ್ಯವಾಗಿರ್ಪುದಯ್ಯ.
ಇಂತು ನಿಷ್ಕಳಂಕ ಪರಮಾನಂದವೆಂಬ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪದಿಂದ
ಕನ್ನಡಿಯ ಪ್ರತಿಬಿಂಬದಂತೆ, ಇಹಪರಗಳೆಂಬ
ಅಧೋಕುಂಡಲಿ ಊಧ್ರ್ವಕುಂಡಲಿಯೆಂಬ
ಉಭಯಮಧ್ಯದಲ್ಲಿ ನೆಲಸಿರ್ಪ ಪರತತ್ವವೆ
ಶಿವಭಕ್ತನೆಂಬ ಮಧ್ಯನಾಮವುಳ್ಳ ಮಹಾಶೇಷ ನೋಡ
ಸಂಗನಬಸವೇಶ್ವರ. /15
ಅಯ್ಯ, ಇನ್ನು ಹಠಯೋಗವ ಮರದು
ಶಿವಯೋಗದಲ್ಲಿ ನಿಂತ ಭೇದವೆಂತೆಂದಡೆ : ಆ ನಿಲುಕಡೆಯ ಶ್ರೀಗುರುಕರುಣಕಟಾಕ್ಷೆಯಿಂದ ನಿರೂಪಿಸೇವು
ಕೇಳಯ್ಯ, ವರಕುಮಾರದೇಶಿಕೋತ್ತಮನೆ.
ವಾಮಭಾಗದ ಚಂದ್ರನಾಳ, ಚಂದ್ರನೇತ್ರ, ವಾಮಕರ್ಣದ್ವಾರಂಗಳು
ಇವು ಮೂರು ಈಡನಾಡಿಯೆನಿಸುವುದಯ್ಯ.
ದಕ್ಷಿಣಭಾಗದ ಸೂರ್ಯನಾಳ, ಸೂರ್ಯನೇತ್ರ, ದಕ್ಷಿಣ ಕರ್ಣದ್ವಾರಂಗಳು
ಇವು ಮೂರು ಪಿಂಗಳನಾಡಿಯೆನಿಸುವುದಯ್ಯ.
ಅಧೋದ್ವಾರ, ಗುಹ್ಯದ್ವಾರ, ಜೀಹ್ವಾದ್ವಾರ
ಇವು ಮೂರು ಸುಷುಮ್ನನಾಡಿಯೆನಿಸುವುದಯ್ಯ.
ಮಣಿಪೂರಕನಾಭಿ, ವಿಶುದ್ಧಿನಾಭಿ, ಬ್ರಹ್ಮನಾಭಿ
ಇವು ಮೂರು ಇಪ್ಪತ್ತೆರಡುಸಾವಿರನಾಡಿಗಳಿಗೆ ಮೂಲಸೂತ್ರವಾದ
ಮಧ್ಯನಾಡಿಯೆನಿಸುವುದಯ್ಯ.
ಇಂತೀ ದ್ವಾದಶದ್ವಾರಂಗಳಲ್ಲಿ ಚರಿಸುವ ಮನ್ಮಥವಿಕಾರಮಂ
ಗುರೂಪಾವಸ್ತೆಯಿಂದ ಹಿಂದುಮಾಡಿ, ತನ್ನ ಸತ್ಯವೆ ಮುಂದಾಗಿ,
ತನ್ನ ನಡೆನುಡಿಗಳ ತನ್ನ ತಾನೆ ವಿಚಾರಿಸಿ,
ಸದ್ಗುರುಲಿಂಗಜಂಗಮದಿಂದ ಶಿವದೀಕ್ಷೆಯ ಪಡದು
ಲಿಂಗಾಂಗಸಂಬಂಧಿಯಾಗಿ,
ಆ ಲಿಂಗಾಂಗಚೈತನ್ಯಸ್ವರೂಪವಾದ ಪಾದೋದಕ ಪ್ರಸಾದ ಮಂತ್ರದಿಂದ
ಆ ತ್ರಿವಿಧನಾಡಿಗಳು ಮೊದಲಾಗಿ ದ್ವಾದಶನಾಡಿಗಳೆ ಕಡೆಯಾದ
ಸಮಸ್ತನಾಡಿಗಳೆಲ್ಲ ಪವಿತ್ರಸ್ವರೂಪವಾಗಿ,
ಸರ್ವಾವಸ್ಥೆಯಲ್ಲಿ ಚಿದ್ಘನಮಹಾಲಿಂಗವ
ಅಷ್ಟವಿಧಾರ್ಚನೆ, ಷೋಡಶೋಪಚಾರವನೊಡಗೂಡಿ,
ಪರಿಪರಿಯಿಂದರ್ಚಿಸಿ, ಆಚಾರಭ್ರಷ್ಟರ ತ್ರಿಕರಣಂಗಳಿಂದ ಸೋಂಕದೆ,
ಅಂಗ ಕರಣಂಗಳೆಲ್ಲ ಲಿಂಗಕಿರಣಂಗಳಾಗಿ,
ಸತ್ಕ್ರಿಯಾಜ್ಞಾನಾನಂದವೆ ಪ್ರಭಾವಿಸಿ,
ಶ್ರೀಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ
ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸದ್ವರ್ತನೆಯೆಂಬ
ಚಿದೈಶ್ವರ್ಯದಲ್ಲಿ ಸಂತೃಪ್ತರಾಗಿ, ನಿಂದ ನಿಲುಕಡೆಯಲ್ಲಿ
ಪೂರ್ಣಸ್ವರೂಪ ನಿಜಶಿವಯೋಗಿಗಳು ನಿಮ್ಮ ಶರಣರು ನೋಡ
ಸಂಗನಬಸವೇಶ್ವರ./16
ಅಯ್ಯ, ಎನ್ನ ಕರ-ಮನ-ಭಾವ-ಕಂಗಳ ಕೊನೆಯಲ್ಲಿ
ಬೆಳಗುವ ಪರಂಜ್ಯೋತಿಮೂರ್ತಿ ಕೇಳ !
ನಿತ್ಯನಿಜಾನಂದ ಪರಿಪೂರ್ಣದರಿವೆ!
ಆದಿಯಲ್ಲಿ ಪ್ರಸಾದವಯ್ಯ, ಅಂತ್ಯದಲ್ಲಿ ಪ್ರಸಾದವಯ್ಯ,
ಮಧ್ಯದಲ್ಲಿ ಪದಾರ್ಥವಯ್ಯ.
ಈ ಪ್ರಸಾದ-ಪದಾರ್ಥವನರಿಯದವರೆಲ್ಲ ಹುಟ್ಟಂಧಕರೆಂಬೆನಯ್ಯ.
ಈ ಪ್ರಸಾದ-ಪದಾರ್ಥವ ಭೇದಿಸಿ ಬಸವಣ್ಣ ಬಯಲಾದ.
ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ, ಅಜಗಣ್ಣ, ಮರುಳಶಂಕರ,
ನೀಲಲೊಚನೆ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ
ಮಹಾಚಿದ್ಘನಗಣಂಗಳೆಲ್ಲ ಜ್ಯೋತಿರ್ಮಯಾದರು ನೋಡ.
ಮತ್ತಂ, ಸಚ್ಚಿದಾನಂದನಿಜದಿಂದ ಭೇದಿಸಿ,
ಹರುಷಾನಂದಿಜಲವುಕ್ಕಿ, ಅತಿಮೋಹದಿಂದ
ಪದವನೆ ನೂರೆಂಟೆಳೆಯದಾರವ ಮಾಡಿ,
ಅರ್ಥವನೆ ನವವರ್ಣಯುಕ್ತವಾದ ಮಣಿಯ ಮಾಡಿ,
ಮಹಾಪರಿಪೂರ್ಣಜ್ಞಾನವೆಂಬ ರಂಧ್ರ್ರವ ರಚಿಸಿ,
ಮಹಾಚಿದ್ಘನಪ್ರಕಾಶವೆಂಬ ಬಣ್ಣವನ್ನಿಟ್ಟು,
ಒಂದು ದಾರದಲ್ಲಿ ಹನ್ನೆರಡು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಮೂವತ್ತಾರು ಮಣಿಯ ಪವಣಿಸಿದರಯ್ಯ.
ಮಿಗಿಲೊಂದು ದಾರದಲ್ಲಿ ನಾಲ್ವತ್ತೆಂಟು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಅರುವತ್ತು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಎಪ್ಪತ್ತೆರಡು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಎಂಬತ್ತುನಾಲ್ಕು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ತೊಂಬ್ತಾರು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ನೂರೆಂಟು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಇನ್ನೂರಹದಿನಾರು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ನಾಲ್ಕುನೂರಮೂವತ್ತೆರಡು ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಎಂಟುನೂರ ಅರುವತ್ತುನಾಲ್ಕು
ಮಣಿಯ ಪವಣಿಸಿದರಯ್ಯ.
ಮತ್ತೊಂದು ದಾರದಲ್ಲಿ ಸಾವಿರದಏಳೂನೂರ
ಇಪ್ಪತ್ತೆಂಟು ಮಣಿಯ ಪವಣಿಸಿದರಯ್ಯ.
ಈ ಪ್ರಕಾರದಿಂದ ಹದಿಮೂರೆಳೆಯ ಮಣಿಗಳ ಸರಗೊಳಿಸಿ,
ಆಯಾಯ ಸರದ ಎಸಳುಗಳ ಮಧ್ಯದಲ್ಲಿ
ಮುತ್ತು ಮಾಣಿಕ್ಯ ನವರತ್ನಪ್ರಕಾಶಕ್ಕೆ ಮಿಗಿಲಾದ
ಮಹಾಜ್ಯೋತಿರ್ಮಯ ಶ್ರೀಗುರುಲಿಂಗಜಂಗಮವೆಂಬ
ಮಹಾಪ್ರಸಾದವ ಪದಕವ ಮಾಡಿ ರಚಿಸಿ,
ಅಂಗ-ಲಿಂಗ, ಪ್ರಾಣ-ಲಿಂಗ, ಭಾವ-ಲಿಂಗವೆಂಬ ಉಭಯಚಿಹ್ನವಳಿದು
ಮಹಾಬೆಳಗಿನೊಳಗೆ ನಿಂದು, ಸರ್ವಾವಸ್ಥೆಗಳಿಲ್ಲದೆ ಕಂಠಾಭರಣವ ಮಾಡಿ ಧರಿಸಿ
ಮಹಾಪರಿಪೂರ್ಣಪ್ರಕಾಶವೆಂಬ ಮಹಾಚಿದ್ಘನ
ಪ್ರಸಾದಭಾಜನದಲ್ಲಿ ಪರಿಪೂರ್ಣರಾಗಿ,
ಸತ್ಯ ಸದಾಚಾರ ಸತ್ಕಾಯಕ ಸದ್ಭಕ್ತಿಯಾನಂದ ಸತ್ಕ್ರಿಯಾ ಸಮ್ಯಜ್ಞಾನದ
ಬೆಳಗಿನೊಳಗಣ ಮಹಾಬೆಳಗ ಸಾಧಿಸಿ,
ಆನಾದಿಬಯಲೊಳಗಣ ಮಹಾಬಯಲೊಳಗೆ ಜನಿತರಾಗಿ,
ಚತುರ್ಮುಖನ ಜಡಸಂಸಾರಕ್ಕೊಳಗಾಗದೆ,
‘ಯದೃಷ್ಟಂ ತನ್ನಷ್ಟಂ’ ಎಂದುದಾಗಿ,
ಮತ್ತಂ ಮರಳಿ ಬಯಲೊಳಗಣ ಮಹಾಬಯಲಾದರು ನೋಡ,
ಸಂಗನಬಸವೇಶ್ವರ./17
ಅಯ್ಯ, ಏಕವಿಂಶತಿದೀಕ್ಷೆಯ ನಿಲುಕಡೆ,
ದ್ವಾದಶಾಚಾರ ಮೊದಲಾಗಿ ಸರ್ವಾಚಾರಸಂಪತ್ತಿನಾಚರಣೆಯ
ಅರ್ಪಿತಾವಧಾನವನರಿದಾಚರಿಸಿದಡೆ
ನಿನ್ನ ಸರ್ವಾಂಗವೆಲ್ಲ ಪಾದೋದಕಪ್ರಸಾದ ಮಂತ್ರಮಯ
ಪರಬ್ರಹ್ಮಸ್ವರೂಪು ನೋಡ.
ಅದರ ವಿಚಾರವೆಂತೆಂದಡೆ : ನಿನ್ನ ಕಾಯದ ಮಧ್ಯದಲ್ಲಿ ಅನಾದಿಗುರು ಬಸವೇಶ್ವರಸ್ವಾಮಿಗಳೆ
ಇಷ್ಟಲಿಂಗಮಂತ್ರ, ಚಿದ್ವಿಭೂತಿ, ರುದ್ರಾಕ್ಷೆ,
ದೀಕ್ಷಪಾದೋದಕ, ಶೂದ್ಧಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಮನದ ಮಧ್ಯದಲ್ಲಿ ಅನಾದಿಚರರೂಪ ಚನ್ನಬಸವೇಶ್ವರಸ್ವಾಮಿಗಳೆ
ಪ್ರಾಣಲಿಂಗ, ಸಪ್ತಕೋಟಿ ಮಹಾಮಂತ್ರ,
ಶಿಕ್ಷಾಪಾದೋದಕ, ಸಿದ್ಧಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಭಾವದ ಮಧ್ಯದಲ್ಲಿ ಅನಾದಿಪರಶಿವಸ್ವರೂಪ ಅಲ್ಲಮಪ್ರಭುಸ್ವಾಮಿಗಳೆ
ಭಾವಲಿಂಗ, ಅಗಣಿತಮಂತ್ರ,
ಜ್ಞಾನಪಾದೋದಕ, ಪ್ರಸಿದ್ಧಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಆಧಾರಚಕ್ರದ ಮಧ್ಯದಲ್ಲಿ
ಆಚಾರಮೂರ್ತಿ ಮಡಿವಾಳಸ್ವಾಮಿಗಳೆ
ಪಂಚಾಚಾರಮೂರ್ತಿ, ಆಚಾರಲಿಂಗಮಂತ್ರ,
ಸ್ಪರ್ಶನೋದಕ, ಆಪ್ಯಾಯನಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಸ್ವಾದಿಷ್ಠಾನಚಕ್ರದ ಮಧ್ಯದಲ್ಲಿ
ಸತ್ಕ್ರಿಯಾಮೂರ್ತಿ ಮರುಳಶಂಕಸ್ವಾಮಿಗಳೆ
ಮಂತ್ರಮೂರ್ತಿ, ಗುರುಲಿಂಗಮಂತ್ರ,
ಅವಧಾರೋದಕ, ಸಮಯಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಮಣಿಪೂರಕಚಕ್ರದಮಧ್ಯದಲ್ಲಿ
ಸಮ್ಯಜ್ಞಾನಮೂರ್ತಿ ಸಿದ್ಧರಾಮೇಶ್ವರಸ್ವಾಮಿಗಳೆ
ನಿರೀಕ್ಷಣಮೂರ್ತಿ, ಶಿವಲಿಂಗಮಂತ್ರ,
ಆಪ್ಯಾಯನೋದಕ, ಪ್ರಸಾದಿಯ ಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಅನಾಹತಚಕ್ರದಮಧ್ಯದಲ್ಲಿ
ಷಡ್ಗುಣೈಶ್ವರ್ಯ ಸಂಪನ್ನೆ ನೀಲಲೋಚನೆತಾಯಿಗಳೆ
ಯಜನ ಸ್ವರೂಪಮೂರ್ತಿ, ಜಂಗಮಲಿಂಗಮಂತ್ರ,
ಹಸ್ತೋದಕ, ಪಂಚೇಂದ್ರಿಯವಿರಹಿತಪ್ರಸಾದವಾಗಿ ನೆಲಸಿರ್ಪರು, ನೋಡ.
ನಿನ್ನ ವಿಶುದ್ಧಿಚಕ್ರದಮಧ್ಯದಲ್ಲಿ ಪರಮವಿರಾಗತವನ್ನುಳ್ಳ
ಮಹಾದೇವಿತಾಯಿಗಳೆ ಈಳನಾಸ್ವರೂಪವಾದ ಪ್ರಸಾದಲಿಂಗಮಂತ್ರ,
ಪರಿಣಾಮೋದಕ, ಕರಣಚತುಷ್ಟಯವಿರಹಿತ ಪ್ರಸಾದವಾಗಿ ನೆಲಸಿರ್ಪರು, ನೋಡ.
ನಿನ್ನ ಆಜ್ಞಾಚಕ್ರದ ಮಧ್ಯದಲ್ಲಿ ಷಟ್ಸ್ಥಲ ಸಂಪನ್ನೆಯಾದಂಥ
ಅಕ್ಕನಾಗಲಾಂಬಿಕೆ ತಾಯಿಗಳೆ ವೇಧಾಸ್ವರೂಪವಾದ ಮಹಾಲಿಂಗಮಂತ್ರ,
ನಿರ್ನಾಮೋದಕ, ಸಮತಾಪ್ರಸಾದವಾಗಿ, ನೆಲಸಿರ್ಪರು ನೋಡ.
ನಿನ್ನ ಬ್ರಹ್ಮರಂಧ್ರಚಕ್ರದ ಮಧ್ಯದಲ್ಲಿ ಸರ್ವಾಚಾರಸಂಪನ್ನೆಯಾದಂಥ
ಮುಕ್ತಾಯಕ್ಕಗಳೆ ನಿರಾಲಂಬಮೂರ್ತಿಯಾದಂಥ, ನಿಃಕಳಲಿಂಗಮಂತ್ರ,
ಸತ್ಯೋದಕ, ಸದ್ಭಾವಪ್ರಸಾದ-ಜ್ಞಾನಪ್ರಸಾದವಾಗಿ ನೆಲಸಿರ್ಪರು ನೋಡ.
ನಿನ್ನ ಶಿಖಾಪಶ್ಚಿಮಚಕ್ರದಮಧ್ಯದಲ್ಲಿ ಪರಿಪೂರ್ಣನಂದಮೂರ್ತಿ
ಅಜಗಣ್ಣತಂದೆಗಳೆ ನಿಃಪ್ರಪಂಚಮೂರ್ತಿ ಶೂನ್ಯನಿರಂಜನಲಿಂಗಮಂತ್ರ,
ಕರುಣಜಲ-ವಿನಯಜಲ-ಸಮತಾಜಲ,
ಚಿತ್ಕಲಾಪ್ರಸಾದ-ನಿಜಪ್ರಸಾದ-ಚಿದ್ರೂಪಪ್ರಸಾದವಾಗಿ ನೆಲಸಿರ್ಪರು ನೋಡ.
ಇಂತು ನಿನ್ನ ಪ್ರಾಣಕಳಾಚೈತನ್ಯವಾಗಿ ನಿನ್ನ ಸರ್ವಾಂಗವೆಲ್ಲ
ಪ್ರಮಥಗಣ ಪಾದೋದಕ ಪ್ರಸಾದಲಿಂಗ ಮಂತ್ರವಾಗಿರ್ಪುದು ನೋಡ
ಸಂಗನಬಸವೇಶ್ವರ./18
ಅಯ್ಯ, ಒಂದು ಜೀವಾತ್ಮನೆ ನಾಲ್ಕು ತೆರನಾಗಿಪರ್ುದಯ್ಯ.
ಅದೆಂತೆಂದಡೆ : ಒಂದು ಜೀವನೆ ಅಂಡಜಪ್ರಾಣಿಯಾಗಿಪರ್ುದಯ್ಯ.
ಮತ್ತೊಂದು ಜೀವನೆ ಪಿಂಡಜಪ್ರಾಣಿಯಾಗಿಪರ್ುದಯ್ಯ.
ಮಿಗಿಲೊಂದು ಜೀವನೆ ಉದ್ಬಿಜಪ್ರಾಣಿಯಾಗಿಪರ್ುದಯ್ಯ.
ಮತ್ತೊಂದು ಜೀವನೆ ಜರಾಯುಜಪ್ರಾಣಿಯಾಗಿಪರ್ುದಯ್ಯ.
ಈ ಚತುರ್ವಿಧ ಜೀವನೊಳಗೆ ಏಳುಲಕ್ಷ ಮಲಜೀವನಯ್ಯ,
ಏಳುಲಕ್ಷ ಜಡಜೀವನಯ್ಯ, ಏಳುಲಕ್ಷ ಕುಜೀವನಯ್ಯ,
ಏಳುಲಕ್ಷ ದುಜರ್ಿವನಯ್ಯ, ಏಳುಲಕ್ಷ ಕಪಟಜೀವನಯ್ಯ,
ಏಳುಲಕ್ಷ ಸಂಚಲಜೀವನಯ್ಯ, ಏಳುಲಕ್ಷ ವಂಚಕಜೀವನಯ್ಯ,
ಏಳುಲಕ್ಷ ನಿರ್ಮಲಜೀವನಯ್ಯ, ಏಳುಲಕ್ಷ ಅಜಡಜೀವನಯ್ಯ,
ಏಳುಲಕ್ಷ ಸುಜೀವನಯ್ಯ, ಏಳುಲಕ್ಷ ಸಂಜೀವನಯ್ಯ,
ಏಳುಲಕ್ಷ ಪರಮಜೀವನಯ್ಯ.
ಈ ತೆರನಾಗಿ ಎಂಬತ್ತುನಾಲ್ಕುಲಕ್ಷ ಜೀವಪ್ರಾಣಿಗಳೆಲ್ಲ
ಶಿವನ ಪೂರ್ವಭಾಗದ ಪ್ರವೃತ್ತಿಮಾರ್ಗದ ಕಮರ್ೆಂದ್ರಿಯ,
ಜ್ಞಾನೇಂದ್ರಿಯವೆಂಬ ದ್ವಾದಶೇಂದ್ರಿಯಂಗಳಲ್ಲಿ ಜೀವಿಸುತಿರ್ಪವಯ್ಯ.
ಆ ದ್ವಾದಶ ಜೀವನ ವರ್ತನಾಭೇದದಿಂದ
ಒಂದು ಜೀವನೆ ಹನ್ನೆರಡು ತೆರನಾಗಿಪರ್ುದಯ್ಯ.
ಅದರ ಗುಣಭೇದವೆಂತೆಂದಡೆ : ಉಚ್ಫಿಷ್ಟವ ತಿಂದು ಬದುಕುವ ಜೀವನೆ ಮಲಜೀವನೆನಿಸುವುದಯ್ಯ.
ಮಾಂಸಭಕ್ಷಣೆಯಿಂದ ಬದುಕುವ ಜೀವನೆ ಜಡಜೀವನೆನಿಸುವುದಯ್ಯ.
ಚಾಡಿ ಕ್ಷುದ್ರತನದಿಂದ ಒಡಲ ಹೊರವ ಜೀವನೆ ದುಜರ್ಿವನೆನಿಸುವುದಯ್ಯ.
ಕಡಿದು, ಹೊಡದು, ಬಡಿದು, ಬಂಧಿಸಿ ಒಡಲ ಹೊರವ ಜೀವನೆ
ಕಪಟಜೀವನೆನಿಸುವುದಯ್ಯ.
ಗಾರುಡಿಗವಿದ್ಯದಿಂದ ಒಡಲಹೊರವಜೀವನೆ
ಸಂಚಲಜೀವನೆನಿಸುವುದಯ್ಯ.
ದೇಶಕ್ಕೊಂದು ಭಾಷೆ, ದೇಶಕ್ಕೊಂದು ವೇಷವ ಧರಿಸಿ,
ಅಜಾತತನದಿಂದ ಒಡಲ ಹೊರವ ಜೀವನೆ
ವಂಚಕಜೀವನೆನಿಸುವುದಯ್ಯ.
ಷಟ್ಕೃಷಿ ವ್ಯಾಪಾರದೊಳಗೆ ಆವುದಾದರೂ ಒಂದು ವ್ಯವಹಾರವ ಮಾಡಿ,
ಸತ್ಯದಿಂದ ಬಾಳುವವನೆ ನಿರ್ಮಲಜೀವನೆನಿಸುವುದಯ್ಯ.
ಆವ ಮತವಾದರೇನು ? ಆವ ಜಾತಿಯಾದರೇನು ?
ಮಲಮಾಯಾ ಸಂಸಾರಬಂಧಮಂ ತ್ಯಜಿಸಿದ
ಅಷ್ಟಾಂಗಯೋಗಾಭ್ಯಾಸಿಯೆ ಅಜಡಜೀವನೆನಿಸುವುದಯ್ಯ.
ಅಷ್ಟಾಂಗಯೋಗವ ತ್ಯಜಿಸಿ ಶ್ರೀಗುರುಪರಮಾರಾಧ್ಯನ
ಉಪಾವಸ್ತೆಯಂ ಮಾಡುವವನೆ ಸುಜೀವನೆನಿಸುವುದಯ್ಯ.
ಮಹಾಚಿದ್ಘನ ಗುರುದೇವನ ಪ್ರತ್ಯಕ್ಷವಮಾಡಿಕೊಂಡು
ಘನಗುರುಭಕ್ತಿಯಲ್ಲಿ ನಿಷ್ಠೆಯುಳ್ಳಾತನೆ ಸಜ್ಜೀವನೆನಿಸುವುದಯ್ಯ.
ಶ್ರೀಮದ್ಘನ ಗುರುವ ಮೆಚ್ಚಿಸಿ ಇಷ್ಟ-ಪ್ರಾಣ-ಭಾವಲಿಂಗವ
ಪಡದಾತನೆ ಪರಾತ್ಪರಮಜೀವನೆನಿಸುವುದಯ್ಯ.
ಇಂತೀ ಜೀವನ ಬುದ್ಧಿಯ ಗುರುಕಟಾಕ್ಷದಿಂದ ನಿವೃತ್ತಿಯಮಾಡಿ,
ತ್ರಿವಿಧಾಂಗವೆಲ್ಲ ದೀಕ್ಷಾತ್ರಯಂಗಳಿಂದ ಶುದ್ಧಪ್ರಸಾದವಾಗಿ,
ಭಾವತ್ರಯಂಗಳೆಲ್ಲ ಮೋಕ್ಷತ್ರಯಂಗಳಿಂದ ಪ್ರಸಿದ್ಧಪ್ರಸಾದವಾಗಿ,
ಸತ್ಯವಾಣಿ, ಸತ್ಯಪ್ರಾಣಿ, ಸತ್ಯಮಾಣಿ, ಉಳಿದವಯವಂಗಳೆಲ್ಲ
ಸತ್ಯವನೆ ಹಾಸಿ, ಸತ್ಯವನೆ ಹೊದ್ದು,/19
ಅಯ್ಯ, ಕುಂಡಲಾಕೃತಿ, ಶಿಕಾರಪ್ರಣಮ, ಭೇರಿನಾದ,
ಮಣಿಪೂರಚಕ್ರ, ಹರಿತವರ್ಣ, ಪ್ರಸಾದಿಸ್ಥಲ, ಕಾರಣತನು,
ನಿರಹಂಕಾರಹಸ್ತ, ಶಿವಲಿಂಗ, ನೇತ್ರಮುಖ, ಸಾವಧಾನಭಕ್ತಿ,
ಸುರೂಪುಪದಾರ್ಥ, ಸುರೂಪಪ್ರಸಾದ, ರುದ್ರಪೂಜಾರಿ, ರುದ್ರನಧಿದೇವತೆ,
ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ,
ಶರೀರಸ್ಥವೆಂಬ ಸಂಜ್ಞೆ, ಉತ್ತರದಿಕ್ಕು, ಸಾಮವೇದ, ಅಗ್ನಿಯ ಅಂಗ,
ಪರಮಾತ್ಮ, ಇಚ್ಛಾಶಕ್ತಿ, ವಿದ್ಯಾಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕುಂಡು
ಎನ್ನ ಮಣಿಪೂರಕಚಕ್ರವೆಂಬ ಪಂಪಾಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ
ನಿರೀಕ್ಷಣಸ್ವರೂಪವಾದ ಶಿವಲಿಂಗನೆ ಶ್ರೀವಿರೂಪಾಕ್ಷಲಿಂಗವೆಂದು
ಆತ್ಮತ್ರಯನ ಮಡಿಮಾಡಿ, ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರದು,
ಅಗ್ನಿ ನಿವೃತ್ತಿಯಾದ ಗಂಧವ ಧರಿಸಿ,
ಅಹಂಕಾರ ನಿರಹಂಕಾರವಾದಕ್ಷತೆಯನಿಟ್ಟು,
ಅಲ್ಲಿಹ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಹರಿತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ಸುಷುಪ್ತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ,
ನಿಲರ್ೋಭವೆಂಬಾಭರಣವ ತೊಡಿಸಿ,
ಸುರೂಪವೆಂಬ ನೈವೇದ್ಯವನರ್ಪಿಸಿ,
ಸಾವಧಾನವೆಂಬ ತಾಂಬೂಲವನಿತ್ತು,
ಇಂತು ಶಿವಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಶಿವಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು
ಆ ಶಿವಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ
ಶಿಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಶಿವಲಿಂಗವೆ ತಾನೆಂದರಿದು ಕೂಡಿ ಎರಡಳಿದು
ನಿಃಕಳಂಕನಾಗಿ ಆಚರಿಸಬಲ್ಲಾತನೆ
ಸಾವಧಾನಭಕ್ತಿಯನುಳ್ಳ ಶಿವಪ್ರಸಾದಿ ನೋಡ
ಸಂಗನಬಸವೇಶ್ವರ./20
ಅಯ್ಯ, ಕೇಳ, ಪ್ರಮಥಗಣಂಗಳೆಲ್ಲ
ಷಡ್ವಿಧಭಕ್ತಿಯೆಂಬ ಪರಮಾಮೃತವ ಸೇವಿಸಿ,
ಪ್ರವೃತ್ತಿಮಾರ್ಗದಲ್ಲಿ ಚರಿಸುವ ಆರು ವೈರಿಗಳ ಸಂಗವ ತ್ಯಜಿಸಿ,
ನಿವೃತ್ತಿ ಮಾರ್ಗದಲ್ಲಿ ಚರಿಸುವ ಷಡ್ಗುಣಗಳ ಸಂಗವ ಸಾಧಿಸಿ,
ಜಂಗಮದ ಆಚಾರ ವಿಚಾರವ ತಿಳಿದು,
ಷಟ್ಸ್ಥಲಮಾರ್ಗದಲ್ಲಿ ನಿಂದು,
ಭಕ್ತಿ-ಜ್ಞಾನ-ವೈರಾಗ್ಯದಲ್ಲಾಚರಿಸಿದ ವಿಚಾರವೆಂತೆಂದಡೆ : ಅನಾದಿನಿರಂಜನ-ಅಕಾಯಚರಿತ್ರ-ನಿರಾಲಂಬ-ಪರಶಿವಮೂರ್ತಿ
ಸಾಕ್ಷಾತ್ ಶ್ರೀಗುರುದೇವನಿಂದ
ಏಕವಿಂಶತಿ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡದು,
ತನ್ನ ತಾನರ್ಚಿಸಿ, ಆ ಶ್ರೀಗುರುದೇವನ
ಲಿಂಗಜಂಗಮಲೀಲೆ ಹೇಗುಂಟೋ ಹಾಂಗೆ,
ಭಕ್ತಿಯ ಮಾಡಿ, ಶ್ರೀಗುರು-ಲಿಂಗ-ಜಂಗಮದಂತಃಕರಣವೆಂಬ
ಪರಮಾತೃತಸುಧೆಯೊಳಗೆ ಲೋಲುಪ್ತರಾಗಿ,
ನಿರಾವಯ ಸಮಾಧಿಯಲ್ಲಿ ಬಯಲಾದರು ನೋಡ.
ಅದರ ವಿಚಾರವೆಂತೆಂದಡೆ : ಭಕ್ತಿಸ್ಥಲಕ್ಕೆ ಕಾರಣವಾದ ಬಸವಣ್ಣನೆ ಲಿಂಗಲಾಂಛನಗಳ ನೋಡಿ,
ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ !
ಮಹೇಶಸ್ಥಲಕ್ಕೆ ಕಾರಣವಾದ ಮಡಿವಾಳದೇಶಿಕೇಂದ್ರನೆ
ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಪಂಚಾಚಾರವ ನೋಡಿ
ತನುಮನಧನವನೊಪ್ಪಿಸಿ ಶರಣೆಂದರಯ್ಯ.
ಪ್ರಸಾದಿಸ್ಥಲಕ್ಕೆ ಕಾರಣವಾದ ಮರುಳಶಂಕರದೇವನೆ
ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಮಂತ್ರ
ಪಂಚಾಚಾರದಾಚರಣೆ, ಸಪ್ತಾಚಾರದ ಸಂಬಂಧದ ನಡೆನುಡಿಯ ವಿಚಾರಿಸಿ,
ತನುಮನಧನವನೊಪ್ಪಿಸಿ ಶರಣೆಂದರಯ್ಯ.
ಪ್ರಾಣಲಿಂಗಿಸ್ಥಲಕ್ಕೆ ಕಾರಣವಾದ ಸಿದ್ಧರಾಮೇಶ್ವರನೆ
ಲಿಂಗಲಾಂಛನ, ಶ್ರೀವಿಭೂತಿ, ರುದ್ರಾಕ್ಷೆ, ಪಂಚಮಂತ್ರ,
ದ್ವಾದಶಾಚಾರ ಮೊದಲಾದ ಸರ್ವಾಚಾರ ಸಂಪತ್ತಿನಾಚರಣೆ
ಸರ್ವಾಂಗದಲ್ಲಿ ನೂನು ಕೂನುಗಳಿಲ್ಲದೆ, ನಡೆನುಡಿಗಳು ಹೊದ್ದಲ್ಲದೆ,
ನಿರಾಭಾರಿ ವೀರಶೈವವ ನೋಡಿ ಇದೆ ಪರವಸ್ತುವೆಂದು
ತನುಮನಧನವನೊಪ್ಪಿಸಿ ಶರಣೆಂದರಯ್ಯ.
ಶರಣಸ್ಥಲಕ್ಕೆ ಕಾರಣವಾದ ಚೆನ್ನಬಸವೇಶ್ವರನೆ
ಇಂತು ಚತುರ್ವಿಧಮೂರ್ತಿಗಳು ವಿಚಾರಿಸಿದ ಆಚರಣೆಯ ನೋಡಿ,
ಗುರು-ಸೂತ್ರ-ಗೋತ್ರ-ಸಂಪ್ರದ ದೀಕ್ಷೆಯ ವಿಚಾರಿಸಿ,
ಲಿಂಗಾಂಗ ಷಟ್ಸ್ಥಾನಂಗಳ ನೋಡಿ,
ಗುರುಮಾರ್ಗಾಚಾರ ನಡೆನುಡಿಗಳ ವಿಚಾರಿಸಿ,
ಸ್ವಾನುಭಾವ ಸಕೀಲದ ಗೊತ್ತ ತಿಳಿದು,
ಲಾಂಚನವ ನೋಡಿ ಮನ್ನಿಸಿ,
ತನುಮನಧನವನೊಪ್ಪಿಸಿ ಶರಣೆಂದರಯ್ಯ.
ಐಕ್ಯಸ್ಥಲಕ್ಕೆ ಕಾರಣವಾದ ಅಜಗಣ್ಣಗಳೆ
ಬಸವ, ಮಡಿವಾಳ, ಮರುಳುಶಂಕರ, ಸಿದ್ಧರಾಮ, ಚೆನ್ನಬಸವ
ಮೊದಲಾದ ಮಹಾಗಣಂಗಳು
ಅರ್ತಿ-ಉತ್ಸಾಹದಿಂದ ಭಕ್ತಿಯ ಮಾಡಿದ ಜಂಗಮವೆ
ನನಗೆ ಮಹಾಪ್ರಸಾದವೆಂದು ಅವರಡಿಗಳಿಗೆ ವಂದಿಸಿ,
ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ.
ನಿರವಯಸ್ಥಲಕ್ಕೆ ಕಾರಣವಾದ ಪ್ರಭುದೇವನೆ
ಆವ ಮತವೆಂದು ನೋಡದೆ,
ಬಾಲಬ್ರಹ್ಮಿ-ಬಳಸಿಬ್ರಹ್ಮಿಯೆಂಬ ಸಂಸಾರ ಸಂಕಲ್ಪಸೂತಕವನೆಣಿಸದೆ,
ಸರ್ವಾಂಗದವಯವಂಗಳ ನೋಡಿ, ಸರ್ವಸಂಗಪರಿತ್ಯಾಗದಿಂದ,
ದ್ವಾದಶ ಮಲಂಗಳ ತ್ಯಜಿಸಿ, ಭಕ್ತಿ-ಜ್ಞಾನ-ವೈರಾಗ್ಯದಿಂದ
ಸಮಸ್ತವಾದ ಭೋಗಯೋಗಾದಿಗಳಿಗೆ ಹೇವರಿಸಿ,
ನಿರಾಸಕತ್ವದಿಂದ ಶಿವಧೋ ಎಂದು ಗುರೂಪಾವಸ್ತೆಯಂ ಮಾಡುವ
ಜ್ಞಾನಕಲಾತ್ಮಂಗೆ ಜಂಗಮಾಕೃತಿಯಿಂದ ಪ್ರತ್ಯಕ್ಷವಾಗಿ,
ಆ ಜ್ಞಾನಕಲಾತ್ಮನ ಉಪಾವಸ್ತೆಯನೊಂದಿಸಿ,
ಆತಂಗೆ ಅಂಜಬೇಡವೆಂದು ಅಭಯಹಸ್ತವನಿತ್ತು.
ರೇವಣಸಿದ್ಧೇಶ್ವರ ಮೊದಲಾದ ಗಣಾಚಾರ್ಯರ ಮಧ್ಯದಲ್ಲಿ
ಈ ಜ್ಞಾನಕಲಾತ್ಮನನೊಪ್ಪಿಸಿ, ಅವರಿಂದ ನಿರಾಕಾರವಾದ
ಪ್ರಾಣಲಿಂಗವ ಬಷ್ಕರಿಸಿ, ಪಂಚಕಲಶಸೂತ್ರದಿಂದ
ಪ್ರಮಥಗಣ ಸಾಕ್ಷಿಯಾಗಿ ಆತನ ಷಡ್ವಿಧಸ್ಥಾನದಲ್ಲಿ ಸ್ಥಿರಗೊಳಸಿ,
ಅಂತರಂಗ ಬಹಿರಂಗದಲ್ಲಿ ಅಷ್ಟವಿಧಾರ್ಚನೆ, ಷೋಡಶೋಪಚಾರ
ಭಕ್ತಿಗಳನರುಪಿ, ಆ ಪರಶಿವಲಿಂಗದಲ್ಲಿ ನೈಷ್ಠೆಯ ನೋಡಿ,
ಪ್ರಮಥಗಣರಾಧ್ಯ ಭಕ್ತ ಮಹೇಶ್ವರರೊಡಗೂಡಿ,
ಏಕವಿಂಶತಿ ದೀಕ್ಷೆ ಮೊದಲಾಗಿ, ಪ್ರಮಥರು ನುಡಿದ
ಎರಡೆಂಬತ್ತು ಕೋಟಿ ವಚನಾನುಭಾವದ
ಉದಾಹರಣೆಯ ಬೋಧಿಸಿ, ಸ್ವಸ್ವರೂಪು ನಿಲುಕಡೆಯ ಬೋಧಿಸಿ,
ನಾನು ನೀನು ಎಂಬ ಭಿನ್ನಭಾವವನಳಿದು,
ಏಕಸ್ವರೂಪವೆಂಬ ಅಭಿನ್ನಲೀಲೆಯಿಂದ
ಪಾದೋದಕ ಪ್ರಸಾದದಲ್ಲಿ ಏಕಭಾಜನವ ಮಾಡಿದಮೇಲೆ,
ಶ್ರೀಗುರು ಬಸವ ಮೊದಲಾದ ಸಕಲಪ್ರಮಥಗಣಾರಾಧ್ಯರ ಕರದು,
ಇಲ್ಲೊಂದು ನಿಜವಸ್ತು ಉಂಟೆಂದು ಹೇಳಿ,
ತಾವು ಮೊದಲು ಶರಣು ಹೊಕ್ಕು,
ತಮ್ಮ ಹಿಂದೆ ಶರಣಗಣಂಗಳೆಲ್ಲ ಶರಣುಹೊಕ್ಕು.
ಅಡಿ ಮುಡಿಯಿಂದ ವಸ್ತುವ ಬೆಸಗೊಂಡು
ಆ ಲಿಂಗಜಂಗಮದೇವರೂಪಡಗೂಡಿ
ಬಯಲೊಳಗೆ ಮಹಾಬಯಲಾದರು ನೋಡ
ಸಂಗನಬಸವೇಶ್ವರ./21
ಅಯ್ಯ, ಗುರು ಜಂಗಮದ ಪಾದೋದಕ ಪ್ರಸಾದವ
ಚಿದ್ಘನಲಿಂಗಕ್ಕೆ ಅರ್ಪಿತವ ಮಾಡಿಕೊಂಬಲ್ಲಿ
ಆ ಲಿಂಗ ಮೊದಲೊ? ಗುರುಚರ ಮೊದಲೊ?
ಆ ವಿಚಾರವೆಂತೆಂದಡೆ :ಅನಾದಿಬೀಜಲಿಂಗ ಆದಿಬೀಜ ಗುರುಚರ,
ಇಂತೀ ಉಭಯವನರಿತಲ್ಲಿ ಗುರುಚರಕ್ಕೆ ಚಿದ್ಘನಲಿಂಗವೆ ಆದಿಯನಾದಿ,
ಚಿದ್ಘನಲಿಂಗಕ್ಕೆ ಗುರುಚರವೆ ಆದಿ ಅನಾದಿ.
ಇಂತೀ ವಿಚಾರವ ತಿಳಿದಲ್ಲಿ ಚಿದ್ಘನಲಿಂಗವ ಬಿಟ್ಟು ಗುರುಚರವುಂಟೆ?
ಗುರುಚರವ ಬಿಟ್ಟು ಚಿದ್ಘನಲಿಂಗವುಂಟೆ?
ಇವು ಮೂರು ಒಂದೆ ವಸ್ತುವಯ್ಯ.
ಅದರಿಂದ ಆಚರಣೆಗೋಸ್ಕರ ಗುರುಭಕ್ತನಾಗಿ ಪೂಜೆಗೆ ನಿಂತಿರ್ಪುದಯ್ಯ.
ಲಿಂಗಜಂಗಮವಾಗಿ ಪೂಜ್ಯಕ್ಕೆ ನಿಂತಿರ್ಪುದಯ್ಯ.
ಗುರುಭಕ್ತನಾಗಿರ್ಪುದಯ್ಯ ; ಲಿಂಗಜಂಗಮವಾಗಿರ್ಪುದಯ್ಯ.
ಇಚ್ಛೆ-ಅನಿಚ್ಛೆ, ಬೇಕು-ಬೇಡೆಂಬುದೆ ಗುರುಭಕ್ತರೂಪು.
ಇಚ್ಛೆ-ಅನಿಚ್ಛೆ, ಬೇಕು-ಬೇಡೆನ್ನದೆ
ಗುರುಭಕ್ತರಿಂದ ಬಂದುದ ಕೈಕೊಂಡು
ಸಂತೃಪ್ತಿಯಲ್ಲಿರ್ಪುದೆ ಲಿಂಗಜಂಗಮ.
ಇದನರಿದ ಮೇಲೆ ಮತ್ತೊಂದು ಪ್ರಕಾರ
ಚಿಕ್ಕದಂಡನ ಪ್ರಸಾದವಾಕ್ಯವುಂಟು !
ಅದರ ವಿಚಾರವೆಂತೆಂದಡೆ-ಗುರು ಮುಟ್ಟಿದ್ದು ಪ್ರಸಾದವೆಂಬೆನೆ? ಅಲ್ಲಲ್ಲ.
ಅದೇನು ಕಾರಣವೆಂದಡೆ, ಅನಾದಿಲಿಂಗವ ತೋರಲರಿಯನಾಗಿ,
ಲಿಂಗ ಮುಟ್ಟಿದ್ದು ಪ್ರಸಾದವೆಂಬೆನೆ? ಅಲ್ಲಲ್ಲ.
ಅದೇನು ಕಾರಣವೆಂದಡೆ,
ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೆ ಒಳಗಾಯಿತ್ತಾಗಿ.
ಮತ್ತೆಂತುಂಟು ಗುರುಲಿಂಗ ಜಂಗಮಪ್ರಸಾದ?
ಅನಾದಿಲಿಂಗವನರಿತು ಅಷ್ಟತನುವೆ ಅಷ್ಟವಿಧಾರ್ಚನೆಯಾಗಿ,
ಮಲಮಾಯಪಾಶದಾಸೆಯ ನೀಗಿ ನಿಂದಡೆ ಗುರು-ಲಿಂಗ-ಜಂಗಮ !
ಆತ ತಟ್ಟಿದ್ದು ಮುಟ್ಟಿದ್ದೆಲ್ಲ ಮಹಾಪ್ರಸಾದ ನೋಡ.
ಲಿಂಗವಿಲ್ಲದ ಜಂಗಮ, ಜಂಗಮವಿಲ್ಲದ ಲಿಂಗ ;
ಈ ಲಿಂಗಜಂಗಮ ಜಂಗಮಲಿಂಗವೆಂಬ
ವಿಚಾರವನರಿಯದೆ ಗುರುಭಕ್ತರೆಂತಹುದೊ? ಮರುಳೆ!
ಲಿಂಗಜಂಗಮದಲ್ಲಿ ಚಿದ್ಘನತೀರ್ಥವ ಕೊಂಡು,
ಜಂಗಮಲಿಂಗದಲ್ಲಿ ಚಿದ್ಘನಪ್ರಸಾದವ ಮುಗಿಯಬಲ್ಲಾತನೆ
ಆದಿ ಅನಧಿಯಿಂದತ್ತತ್ತ ಮೀರಿ ತೋರುವ ಗುರುಭಕ್ತಶರಣ.
ಪ್ರಸಾದಲಿಂಗಮೂರ್ತಿ ತಾನೆ ನೋಡ ಸಂಗನಬಸವೇಶ್ವರ. /22
ಅಯ್ಯ, ಗುರುಕರಜಾತನಾಗಿ
ಪ್ರಮಥರಾಚರಿಸಿದ ಸನ್ಮಾರ್ಗದಲ್ಲಾಚರಿಸಿ,
ಮಹಾಲಿಂಗೈಕ್ಯಾನುಭಾವಿಯಾದ ಮೇಲೆ
ಆಯುಃ ಕರ್ಮ [ಚ] ವಿತ್ತಂ ಚ ಎಂದು
ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತಿ ಮನವ ನೋಡ.
ಆಯುಷ್ಯವೆ ಚಿದ್ಘನಮಹಾಲಿಂಗ, ಶ್ರೀಯೆ ಚಿದ್ಘನಮಹಾಜಂಗಮ,
ನಿಧಿನಿಧಾನವೆ ಚಿದ್ಘನ ಮಹಾಪ್ರಮಥಗನ ಶರಣರ ಭೃತ್ಯಭಕ್ತಿ
ವಿದ್ಯವೆ ಪಂಚಾಕ್ಷರ-ಷಡಾಕ್ಷರ ಮೊದಲಾದ ಮಹಾಶಿವಯಂತ್ರ.
ದೇಹವೆ ಗುರುಚರಪರಕ್ಕೆ ಅಷ್ಟವಿಧಾರ್ಚನೆ-ಷೋಡಶೋಪಚಾರವಾಗಲೆಂದು
ಶ್ರೀಗುರುಬಸವಲಿಂಗ ಬರದನಾಗಿ ಹೊಟ್ಟೆಯ ಶಿಶುವಿಂಗೆ
ಬೇರೆ ನೈವೇದ್ಯವುಂಟೇನೋ? ಶಾಂತಚಿದ್ಘನಮಹಾಲಿಂಗದಲ್ಲಿ
ಸಂತೃಪ್ತನಾದ ಅಯೋನಿಸಂಭವ ನಿಜಶರಣ ನಿತ್ಯಮುಕ್ತಂಗೆ ನೋಡ
ಸಂಗನಬಸವೇಶ್ವರ./23
ಅಯ್ಯ, ಘನಮಹಾ ಇಷ್ಟಲಿಂಗವೆ
ನಿನ್ನ ನಾದ-ಬಿಂದು-ಕಳೆಗಳಿಗೆ ಚೈತನ್ಯಸ್ವರೂಪು ನೋಡ.
ಈ ಲಿಂಗದ ವೃತ್ತದಲ್ಲಿ ಸಕಲಲೋಕಂಗಳು,
ಸಕಲಮನುಗಳು ಅಡಗಿರ್ಪವು ನೋಡ.
ಈ ಲಿಂಗವೆ ನಿನ್ನ ಹರಕಿರಣ ಚೈತನ್ಯಸ್ವರೂಪು ನೋಡ.
ಈ ಲಿಂಗವೆ ನಿನ್ನ ಸಂಜೀವನ-ಕಾಮಧೇನು-ಕಲ್ಪವೃಕ್ಷ ನೋಡ.
ಇಂತು ನಿನ್ನ ಕರಸ್ಥಲದಲ್ಲಿ ರಾಜಿಸುವ ಪರಶಿವಲಿಂಗದೇವಂಗೆ
ಜಂಗಮದ ಪಾದೋದಕ ಪ್ರಸಾದವೆ ಪರಮಚಿದೈಶ್ವರ್ಯ ನೋಡ.
ಇಂತು ಜಂಗಮಕ್ಕೆ ಭೃತ್ಯಾಚಾರಮೂರ್ತಿಲಿಂಗದೇವನ
ಒಕ್ಕು ಮಿಕ್ಕ ಕರುಣಜಲ ಕರುಣಪ್ರಸಾದವೆ ನಿನಗರ್ಪಿತವಯ್ಯ.
ನಿನ್ನ ಪರಿಣಾಮ ಸಂತೋಷವೆ ಲಿಂಗಾರ್ಪಿತವಯ್ಯ.
ಇಂತಪ್ಪ ಲಿಂಗದೇವನ ನಿನ್ನ ಷಟ್ಸ್ಥಾನಂಗಳಲ್ಲಿ ಧರಿಸಿ,
ಲಿಂಗವೆ ನಿನಗೆ ಪ್ರಾಣವಾಗಿ, ನೀನೆ ಲಿಂಗಕ್ಕೆ ಪ್ರಾಣವಾಗಿ,
ಸತ್ಯದಿಂದ ಬಂದ ಪದಾರ್ಥವ ದಾಸೋಹಂ ಭಾವದಿಂದ
ಸಮುದ್ರದುದಕವ ಸಮುದ್ರಕ್ಕೆ ಅರ್ಪಿಸಿದಂತೆ,
ಧಾನ್ಯದ ರಾಶಿಯ ಒಳಗಣ ಧಾನ್ಯದ ತಂದು ಪಾಕವಮಾಡಿ
ಮತ್ತಾ ರಾಶಿಗೆ ಅರ್ಪಿಸಿದಂತೆ,
ಆ ಲಿಂಗಜಂಗಮದ ಪಾದೋದಕ ಪ್ರಸಾದವ
ಮತ್ತಾ ಲಿಂಗಜಂಗಮಕ್ಕೆ ಸಮರ್ಪಿಸಿ,
ಆ ಲಿಂಗಜಂಗಮದ ಪರಿಣಾಮ ಮಹಾಪ್ರಸಾದದಲ್ಲಿ
ನಿತ್ಯ ಸಂತೃಪ್ತನಾಗಿರುವಂಥಾದೆ ಲಿಂಗಸ್ವಾಯತದೀಕ್ಷೆ.
ಇಂತುಟೆಂದು ಶ್ರೀ ಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ. /24
ಅಯ್ಯ, ಚಿದ್ಘನತೀರ್ಥವ
ಇಷ್ಟಲಿಂಗಾರ್ಪಿತವ ಮಾಡುವ ವಿಚಾರವೆಂತೆಂದಡೆ : ಗುರುಲಿಂಗಮುಖದಲ್ಲಿ ಅಚ್ಚಪ್ರಸಾದಸ್ವರೂಪವಾದ
ಇಷ್ಟಲಿಂಗಕ್ಕೆ ಅರ್ಪಿತವಯ್ಯ.
ಗುರುಲಿಂಗ ಶಿವಲಿಂಗಮುಖದಲ್ಲಿ ಆಚರಣೆಸಂಬಂಧದಿಂದ
ನಿಚ್ಚಪ್ರಸಾದ ಸಮಯಪ್ರಸಾದದಸ್ವರೂಪವಾದ
ಇಷ್ಟಲಿಂಗಕ್ಕೆ ಅರ್ಪಿತವಯ್ಯ.
ಗುರುಲಿಂಗ-ಶಿವಲಿಂಗ-ಜಂಗಮಲಿಂಗಮುಖದಲ್ಲಿ
ತ್ರಿವಿಧಾಚರಣೆಯ ಕರ್ತುವಾದುದರಿಂ ಸ್ವಯಚರಪರ ಗುರುಚರಮೂರ್ತಿ
ಚಿತ್ಕಲಾಪ್ರಸಾದಸ್ವರೂಪವಾದ ಇಷ್ಟಲಿಂಗದೇವಂಗರ್ಪಿತವಯ್ಯ.
ಆ ನಿಲುಕಡೆಯೆಂತೆಂದಡೆ : ಶ್ರೀಗುರುಲಿಂಗಜಂಗಮವು ಹಸ್ತಮಸ್ತಕಸಂಯೋಗವಮಾಡಿ,
ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಕರುಣಿಸುವಲ್ಲಿ,
ಕರಕಮಲದ ದಶಾಂಗುಲ ಮಧ್ಯ ಮೊದಲಾಗಿ
ದ್ವಾದಶಪ್ರಣಮಲಿಂಗಮೂರ್ತಿಗಳ
ಛತ್ತೀಶಪ್ರಣಮರೂಪಿನಿಂದ ಸಂಬಂಧಿಸಿರ್ಪರಯ್ಯ.
ಇಂತು ಸಂಬಂಧವ ಗುರುಕಟಾಕ್ಷೆಯಿಂ ತಿಳಿದು
ಷಡಾಕ್ಷರ ಮಂತ್ರಸ್ವರೂಪವಾದ ದಕ್ಷಿಣಹಸ್ತದಿಂದ
ಷಡಾಕ್ಷರ ಮಂತ್ರಸ್ವರೂಪವಾದ ವಾಮಹಸ್ತಕಮಲಮಧ್ಯದಲ್ಲಿ ನೆಲಸಿರ್ಪ
ಚಿದ್ಘನಮಹಾ ಇಷ್ಟಲಿಂಗದೇವಂಗೆ ಆಯಾಯಸ್ಥಲ ಬಂದು ಒದಗಿದಲ್ಲಿ
ಮಕಾರ-ಶಿಕಾರ-ವಕಾರ ; ಅನಾಮಿಕ-ಮಧ್ಯಾಂಗುಲ-ತರ್ಜನಿ
ಮೊದಲಾದ ತ್ರಿವಿಧಂಗುಲಿಗಳಲ್ಲಿ, ತ್ರಿವಿಧಲಿಂಗಮಂತ್ರಗಳಿಂದ
ಇಷ್ಟಮಹಾಲಿಂಗಾರೋಪಿತವ ಮಾಡಿ ಭೋಗಿಸಬಲ್ಲಡೆ
ಅಚ್ಚ ಸ್ವಯಂಭು ಪ್ರಸಾದಲಿಂಗ ಶರಣನೆಂಬೆ ನೋಡ
ಸಂಗನಬಸವೇಶ್ವರ. /25
ಅಯ್ಯ, ಜ್ಯೋತಿರಾಕೃತಿ, ಓಂಕಾರ ಪ್ರಣಮ, ಸಿಂಹನಾದ,
ಆಜ್ಞಾಚಕ್ರ, ಮಾಣಿಕ್ಯವರ್ಣ, ಐಕ್ಯಸ್ಥಲ, ಶುದ್ಧತನು,
ಸದ್ಭಾವಹಸ್ತ, ಮಹಾಲಿಂಗ ಹೃದಯವೆಂಬ ಮುಖ, ಸಮರಸಭಕ್ತಿ,
ಸುತೃಪ್ತಿಪದಾರ್ಥ, ಸುತೃಪ್ತಿಪ್ರಸಾದ, ಮಹಾದೇವ ಪೂಜಾರಿ,
ಮಹಾದೇವನಧಿದೇವತೆ, ಮಹಾಸಾದಾಖ್ಯ,
ಅಖಂಡವೆಂಬ ಲಕ್ಷಣ, ಮಹವೆಂಬ ಸಂಜ್ಞೆ, ಪಾತಾಳದಿಕ್ಕು,
ಗಾಯತ್ರಿವೇದ, ಆತ್ಮನೆ ಅಂಗ ಜ್ಞಾನಾತ್ಮ,
ಚಿಚ್ಛಕ್ತಿ, ಶಾಂತ್ಯತೀತೋತ್ತರ ಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಎನ್ನ ಆಜ್ಞಾಚಕ್ರವೆಂಬ ತ್ರಿಕೂಟಸಂಗಮಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ, ಬೋಧಾಸ್ವರೂಪವಾದ
ಮಹಾಲಿಂಗವೆ ಸಂಗಮೇಶ್ವರಲಿಂಗವೆಂದು,
ಅವಸ್ಥಾತ್ರಯವ ಮಡಿಮಾಡಿ,
ಸಂತೋಷವೆಂಬ ಜಲದಿಂ ಮಜ್ಜನಕ್ಕೆರದು,
ಆತ್ಮನಿವೃತ್ತಿಯಾದ ಗಂಧವ ಧರಿಸಿ,
ಭಾವ ಸದ್ಭಾವವಾದದಕ್ಷತೆಯನಿಟ್ಟು,
ಅಲ್ಲಿಹ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಮಾಣಿಕ್ಯ ವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ನಿರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ನಿರ್ಮಲವೆಂಬಾಭರಣವ ತೊಡಿಸಿ,
ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ,
ಸಮರಸವೆಂಬ ತಾಂಬೂಲವನಿತ್ತು,
ಇಂತು ಮಹಾಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಮಹಾಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು,
ಆ ಮಹಾಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ಓಂ ಓಂ ಓಂ ಓಂ ಓಂ ಎಂಬ
ಓಂಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಮಹಾಲಿಂಗವೆ ತಾನೆಂದರಿದು ಕೂಡಿ ಎರಡಳಿದು
ನಿತ್ಯತೃಪ್ತನಾಗಿ ಆಚರಿಸಬಲ್ಲಾತನೆ
ಸಮರಸಭಕ್ತಿಯನುಳ್ಳ ಲಿಂಗೈಕ್ಯ ನೋಡ
ಸಂಗನಬಸವೇಶ್ವರ./26
ಅಯ್ಯ, ತಾರಕಾಕೃತಿ ಮೊದಲಾಗಿ ನವಾಕೃತಿಗಳು,
ಅಯ್ಯ, ನಕಾರಪ್ರಣಮ ಮೊದಲಾಗಿ ನವಪ್ರಣಮಗಳು,
ಅಯ್ಯ, ಭ್ರಮರನಾದ ಮೊದಲಾಗಿ ನವನಾದಗಳು,
ಆಧಾರಚಕ್ರ ಮೊದಲಾಗಿ ನವಚಕ್ರಗಳು,
ಪೀತವರ್ಣ ಮೊದಲಾಗಿ ನವವರ್ಣಗಳು,
ಭಕ್ತಿಸ್ಥಲ ಮೊದಲಾಗಿ ನವಸ್ಥಲಗಳು,
ಸ್ಥೂಲತನು ಮೊದಲಾಗಿ ನವತನುಗಳು,
ಸುಚಿತ್ತಹಸ್ತ ಮೊದಲಾಗಿ ನವಹಸ್ತಗಳು,
ಅಚಾರಲಿಂಗ ಮೊದಲಾಗಿ ನವಲಿಂಗಗಳು,
ಘ್ರಾಣಮುಖ ಮೊದಲಾಗಿ ನವಮುಖಗಳು,
ಶ್ರದ್ಧಾಭಕ್ತಿ ಮೊದಲಾಗಿ ನವಭಕ್ತಿಗಳು,
ಸುಗಂಧಪದಾರ್ಥ ಮೊದಲಾಗಿ ನವಪದಾರ್ಥಗಳು,
ಸುಗಂಧಪ್ರಸಾದ ಮೊದಲಾಗಿ ನವಪ್ರಸಾದಗಳು,
ಬ್ರಹ್ಮಪೂಜಾರಿ ಮೊದಲಾಗಿ ನವಪೂಜಾರಿಗಳು,
ಬ್ರಹ್ಮ ಅಧಿದೇವತೆ ಮೊದಲಾಗಿ ನವ ಅಧಿದೇವತೆಗಳು,
ಕರ್ಮಸಾದಾಖ್ಯ ಮೊದಲಾಗಿ ನವಸಾದಾಖ್ಯಗಳು,
ಸತ್ತುವೆಂಬ ಲಕ್ಷಣ ಮೊದಲಾಗಿ ನವಲಕ್ಷಣಗಳು,
ಪರವೆಂಬ ಸಂಜ್ಞೆ ಮೊದಲಾಗಿ ನವಸಂಜ್ಞೆಗಳು,
ಪೂರ್ವದಿಕ್ಕು ಮೊದಲಾಗಿ ನವದಿಕ್ಕುಗಳು,
ಋಗ್ವೇದ ಮೊದಲಾಗಿ ನವವೇದಗಳು,
ಚಿತ್ಪೃಥ್ವಿ ಮೊದಲಾಗಿ ನವ ಅಂಗಗಳು,
ಜೀವಾತ್ಮ ಮೊದಲಾಗಿ ನವ ಆತ್ಮರು,
ಕ್ರಿಯಾಶಕ್ತಿ ಮೊದಲಾಗಿ ನವಶಕ್ತಿಯರು,
ನಿವೃತ್ತಿಕಲೆ ಮೊದಲಾಗಿ ನವಕಲೆಗಳು,
ಇಂತು ಇಪ್ಪತ್ತುನಾಲ್ಕು ಸಕೀಲಂಗಳು
ನವವಿಧ ತೆರದಿಂದ ಇನ್ನೂರ ಹದಿನಾರು ಸಕೀಲು ಮೊದಲಾದ
ಸಮಸ್ತ ಕ್ಷೇತ್ರಂಗಳನೊಳಕೊಂಡು
ಎನ್ನ ಅಣುಚಕ್ರವೆಂಬ ಪರಮಕೈಲಾಸ ಚಿದಾಕಾಶಮಂಡಲದ
ವರ ಚೌಕಮಂಟಪ ನವರತ್ನ ಖಚಿತ ಶೂನ್ಯಸಿಂಹಾಸನಪೀಠದಲ್ಲಿ
ಮೂರ್ತಿಗೊಂಡಿರ್ದ ಪರಾತ್ಪರ ನಿಜಜಂಗಮಲಿಂಗಸ್ವರೂಪ
ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗಜಂಗಮವೆ
ಪರತತ್ವ ನಿಃಕಲಪರಬ್ರಹ್ಮಮೂರ್ತಿ ಲಿಂಗಜಂಗಮಪ್ರಸಾದವೆಂದು
ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ,
ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ,
ಕರಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ,
ಕರಣತ್ರಯ, ಹಂಸತ್ರಯಂಗಳ ಪೂರ್ಣ ಮಡಿಮಾಡಿ,
ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರದು,
ನಿಃಕರಣವೆಂಬ ಗಂಧವ ಧರಿಸಿ, ನಿಃಸಂಗವೆಂಬಕ್ಷತೆಯನಿಟ್ಟು,
ನಿಃಪರಿಪೂರ್ಣವೆಂಬ ಪುಷ್ಪದಮಾಲೆಯ ಧರಿಸಿ,
ನಿರುಪಾಧಿಕವೆಂಬ ಧೂಪವ ಬೀಸಿ, ನಿಃಕಳೆಯೆಂಬ ಜ್ಯೋತಿಯ ಬೆಳಗಿ,
ನಿಶ್ಚಲವೆಂಬ ವಸ್ತ್ರವ ಹೊದ್ದಿಸಿ, ಪರಮನಿಜಾಭರಣವ ತೊಡಿಸಿ,
ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ,
ನಿರಾವಯವೆಂಬ ತಾಂಬೂಲವನಿತ್ತು,
ಇಂತೀ ಅಣುಲಿಂಗಜಂಗಮಪ್ರಸಾದಕ್ಕೆ
ಅಷ್ಟವಿಧಾರ್ಚನೆಯಂ ಮಾಡಿ,
ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆಯಂತೆ ಬೆಳಗುವ,
ಅಣುಲಿಂಗಜಂಗಮಪ್ರಸಾದವನ್ನು ಅನುಮಿಷದೃಷ್ಟಿಯಿಂ ನಿರೀಕ್ಷಿಸಿ,
ಉನ್ಮನಾಗ್ರದಲ್ಲಿ ಸಂತೋಷಂಗೊಂಡು
ಆ ಅಣುಲಿಂಗಜಂಗಮಪ್ರಸಾದಪೂಜೆಯ ಸಮಾಪ್ತವ ಮಾಡಿ,
ಅನಂತಕೋಟಿ ಮಹಾಮಂತ್ರಂಗಳಿಂದ ನಮಸ್ಕರಿಸಿ,
ಆ ಅಣುಲಿಂಗಜಂಗಮಪ್ರಸಾದವೆ ತಾನೆಂದರಿದು ಏಕತ್ವದಿಂ,
ನಿಶ್ಚಲಚಿತ್ತದೊಳ್ ಕೂಡಿ ಉಭಯವಳಿದು ಇಹಪರಂಗಳ ಹೊದ್ದದೆ,
ಕನ್ನಡಿಯ ಪ್ರತಿಬಿಂಬದಂತೆ ಸರ್ವಸಂಗಪರಿತ್ಯಾಗವಾಗಿ,
ನಿಜಾಚರಣೆಯಲ್ಲಿ ಆಚರಿಸಬಲ್ಲಾತನೆ ದಶವಿಧಲಿಂಗಜಂಗಮಸಂಗ
ಭಕ್ತಿಪ್ರಸಾದವುಳ್ಳ ಅನಾದಿ ಅಖಂಡ ಚಿಜ್ಜ್ಯೊತಿ ಸದ್ಭಕ್ತ ಜಂಗಮ ನೋಡ
ಸಂಗನಬಸವೇಶ್ವರ./27
ಅಯ್ಯ, ತಾರಕಾಕೃತಿ, ನಕಾರಪ್ರಣಮ, ವೇಣುನಾದ,
ಆಧಾರಚಕ್ರ, ಪೀತವರ್ಣ, ಭಕ್ತಿಸ್ಥಲ, ಸ್ಥೂಲತನು, ಸುಚಿತ್ತಹಸ್ತ,
ಆಚಾರಲಿಂಗ, ಘ್ರಾಣಮುಖ, ಶ್ರದ್ಧಾಭಕ್ತಿ, ಸುಗಂಧ ಪದಾರ್ಥ,
ಸುಗಂಧಪ್ರಸಾದ, ಬ್ರಹ್ಮಪೂಜಾರಿ, ಬ್ರಹ್ಮನಧಿದೇವತೆ,
ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ,
ಪೂರ್ವದಿಕ್ಕು, ಋಗ್ವೇದ, ಪೃಥ್ವಿಯ ಅಂಗ, ಜೀವಾತ್ಮ,
ಕ್ರಿಯಾಶಕ್ತಿ, ನಿವೃತ್ತಿಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಎನ್ನಧಾರಚಕ್ರವೆಂಬ ಶ್ರೀಶೈಲಪರ್ವತ ಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ ಪಂಚಾಚಾರಸ್ವರೂಪವಾದ
ಆಚಾರಲಿಂಗವೆ ಮಲ್ಲಿಕಾರ್ಜುನಲಿಂಗವೆಂದು
ತನುತ್ರಯವ ಮಡಿಮಾಡಿ, ಶಿವಾನಂದವೆಂಬ ಜಲದಿಂ ಮಜ್ಜನಕ್ಕೆರದು,
ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ ಚಿತ್ತ ಸುಚಿತ್ತವಾದಕ್ಷತೆಯನಿಟ್ಟು,
ಅಲ್ಲಿಹ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಹ ಕಮಲ ಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಪೀತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ಜಾಗ್ರವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ನಿಃಕಾಮವೆಂಬಾಭರಣವ ತೊಡಿಸಿ,
ಸುಗಂಧವೆಂಬ ನೈವೇದ್ಯವನರ್ಪಿಸಿ,
ಶ್ರದ್ಧೆಯೆಂಬ ತಾಂಬೂಲವನಿತ್ತು,
ಇಂತು ಆಚಾರಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಆಚಾರಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು,
ಆ ಆಚಾರಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ನಂ ನಂ ನಂ ನಂ ನಂ ನಂ ಎಂಬ ನಕಾರ ಷಡ್ವಿಧಮಂತ್ರಗಳಿಂದ
ನಮಸ್ಕರಿಸಿ,
ಈ ಲಿಂಗವೆ ತಾನೆಂದರಿದು ಕೂಡಿ ಎರಡಳಿದು
ನಿಬ್ಬೆರಗಿನಿಂದ ಆಚರಿಸಬಲ್ಲಾತನೆ ಶ್ರದ್ಧಾಭಕ್ತಿಯನುಳ್ಳ ಸದ್ಭಕ್ತ ನೋಡ,
ಸಂಗನಬಸವೇಶ್ವರ./28
ಅಯ್ಯ, ದಂಡಾಕೃತಿ, ಮಕಾರಪ್ರಣಮ, ಘಂಟಾನಾದ,
ಸ್ವಾಧಿಷ್ಠಾನಚಕ್ರ, ಶ್ವೇತವರ್ಣ, ಮಹೇಶ್ವರಸ್ಥಲ, ಸ್ಥೂಲತನು,
ಸುಬುದ್ಧಿಹಸ್ತ, ಗುರುಲಿಂಗ, ಜಿಹ್ವೆಮುಖ, ನೈಷ್ಠಿಕಾಭಕ್ತಿ,
ಸುರಸಪದಾರ್ಥ, ಸುರಪ್ರಸಾದ, ವಿಷ್ಣುಪೂಜಾರಿ, ವಿಷ್ಣುವಧಿದೇವತೆ,
ಕತೃಸಾದಾಖ್ಯ, ಚಿತ್ತವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ,
ಪಶ್ಚಿಮದಿಕ್ಕು, ಯಜುವರ್ೇದ, ಅಪ್ಪುವೆ ಅಂಗ, ಅಂತರಾತ್ಮ,
ಜ್ಞಾನಶಕ್ತಿ, ಪ್ರತಿಷ್ಠೆಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಎನ್ನ ಸ್ವಾಧಿಷ್ಠಾನಚಕ್ರವೆಂಬ ಸೇತುಬಂಧಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ ಮಂತ್ರಮೂರ್ತಿಸ್ವರೂಪವಾದ
ಗುರುಲಿಂಗವೆ ರಾಮೇಶ್ವರಲಿಂಗವೆಂದು
ತನುತ್ರಯವ ಮಡಿಮಾಡಿ, ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರದು,
ಅಪ್ಪು ನಿವೃತ್ತಿಯಾದ ಗಂಧವ ಧರಿಸಿ,
ಬುದ್ಧಿ ಸುಬುದ್ಧಿಯಾದಕ್ಷತೆಯನಿಟ್ಟು,
ಅಲ್ಲಿಹ ಷಡ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಶ್ವೇತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ಸ್ವಪ್ನಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ನಿಃಕ್ರೋಧವೆಂಬಾಭರಣವ ತೊಡಿಸಿ,
ಸುರುಚಿಯೆಂಬ ನೈವೇದ್ಯವನರ್ಪಿಸಿ,
ನೈಷ್ಠೆಯೆಂಬ ತಾಂಬೂಲವನಿತ್ತು.
ಇಂತು ಗುರುಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಗುರುಲಿಂಗಮೂರ್ತಿಯನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು
ಆ ಗುರುಲಿಂಗ ಪೂಜೆಯ ಸಮಾಪ್ತವ ಮಾಡಿ
ಓಂ ಮಂ ಮಂ ಮಂ ಮಂ ಮಂ ಮಂ ಎಂಬ
ಮಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಶ್ಚಿಂತದಿಂದ
ಬೆರಸಬಲ್ಲಾತನೆ ನೈಷ್ಠಾಭಕ್ತಿಯನುಳ್ಳ ವೀರಮಾಹೇಶ್ವರ ನೋಡ
ಸಂಗನಬಸವೇಶ್ವರ./29
ಅಯ್ಯ, ನಾದ ನಾಳಂಗಳು ಬಲಿದು
ಪರಿಪೂರ್ಣ ಚಿಜ್ಜ್ಯೋತಿರ್ಲಿಂಗಧ್ಯಾನದಲ್ಲಿ ನಿಂದು
ನಿಜಹೃದಯ ಚಿದ್ಭಾವದೃಕ್ಕಿನಿಂದ ನವಲಿಂಗಂಗಳ ನಿರೀಕ್ಷಿಸಿ,
ಸುಚಿತ್ತ-ಸುಬುದ್ಧಿ-ನಿರಹಂಕಾರ-ಸುಮನ-ಸುಜ್ಞಾನ-ಸದ್ಭಾವ
ನಿರುಪಾಧಿಕ-ನಿಃಕಳಂಕ-ನಿರಾಲಂಬ ಹಸ್ತದಿಂದ ಅರ್ಚಿಸಿ
ಎರಡಳಿದು ನಿರಾವಯಸಮಾಧಿಯಲ್ಲಿ ಕೂಡುವ ನಿಜದಿರವ ನೋಡ
ಸಂಗನಬಸವೇಶ್ವರ./30
ಅಯ್ಯ, ನಿಃಕಲಾಕೃತಿ, ಓಂಕಾರಪ್ರಣಾಮ, ಭ್ರಮರನಾದ,
ಬ್ರಹ್ಮಚಕ್ರ, ಜ್ಯೋತಿವರ್ಣ, ನಿಃಕಳಂಕಸ್ಥಲ, ಚಿದ್ರೂಪತನು,
ಸ್ವತಂತ್ರಹಸ್ತ, ನಿಃಕಳಂಕಲಿಂಗ, ಬ್ರಹ್ಮರಂದ್ರಮುಖ,
ಸದ್ಭಾವಭಕ್ತಿ, ಪರಮಾನಂದಪದಾರ್ಥ, ಪರಮಾನಂದಪ್ರಸಾದ,
ಶ್ರೀಗುರು ಪೂಜಾರಿ, ಶ್ರೀಗುರು ಅಧಿದೇವತೆ, [?ಸಾದಾಖ್ಯ]
ಅಗಮ್ಯವೆಂಬ ಲಕ್ಷಣ, ಅಪ್ರಾಮಣವೆಂಬ ಸಂಜ್ಞೆ,
ಹೃತ್ಕಮಲದಿಕ್ಕು, ಧನುವರ್ೇದ, ಚಿತ್ಸೂರ್ಯನೆ ಅಂಗ, ಮಹಾ ಆತ್ಮ,
ಅನಾಮಯಶಕ್ತಿ, ನಿರ್ವಂಚಕ ಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಎನ್ನ ಬ್ರಹ್ಮರಂಧ್ರಚಕ್ರವೆಂಬ ರಜತಾದ್ರಿಪರ್ವತಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ ಶಿವದೀಕ್ಷಾಸ್ವರೂಪವಾದ
ನಿಃಕಲಲಿಂಗವೆ ರಜತೇಶ್ವರಲಿಂಗವೆಂದು
ಗುಣತ್ರಯವ ಮಡಿಮಾಡಿ, ಸ್ವತಂತ್ರವೆಂಬ ಜಲದಿಂ ಮಜ್ಜನಕ್ಕೆರದು,
ಸೂರ್ಯ ನಿವೃತ್ತಿಯಾದ ಗಂಧವ ಧರಿಸಿ,
ಪರತಂತ್ರ ಸ್ವತಂತ್ರವಾದಕ್ಷತೆಯನಿಟ್ಟು,
ಅಲ್ಲಿಹ ಸಹಸ್ರದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ.
ಅಲ್ಲಿಹ ನಿಃಕಳಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ನಿರಾಭಾರವೆಂಭಾಭರಣವ ತೊಡಿಸಿ,
ಪರಮಾನಂದವೆಂಬ ನೈವೇದ್ಯವನರ್ಪಿಸಿ,
ಸದ್ಭಾವವೆಂಬ ತಾಂಬೂಲವನಿತ್ತು,
ಅಂತು ನಿಃಕಳಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ದಶಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ನಿಃಕಳಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು,
ಆ ನಿಃಕಳಲಿಂಗದ ಪೂಜೆಯ ಸಮಾಪ್ತವ ಮಾಡಿ,
ಕ್ರಿಯಾಜಪವೆಂಬ ದ್ವಾದಶಪ್ರಣವಮಂತ್ರಂಗಳಿಂದೆ ನಮಸ್ಕರಿಸಿ,
ಆ ನಿಃಕಳಲಿಂಗವೆ ತಾನೆಂದರಿದು ಕೂಡಿ ಎರಡಳಿದು ಸ್ವತಂತ್ರನಾಗಿ
ಆಚರಿಸಬಲ್ಲಾತನೆ ಸದ್ಭಾವಭಕ್ತಿಯನುಳ್ಳ ನಿಃಕಳಂಕ ನೋಡ
ಸಂಗನಬಸವೇಶ್ವರ./31
ಅಯ್ಯ, ನಿಃಶೂನ್ಯಾಕೃತಿ, ಕ್ಷಕಾರ ಪ್ರಣಮ,
ದಿವ್ಯನಾದ, ಶಿಖಾಚಕ್ರ, ಮಹಾಜ್ಯೋತಿವರ್ಣ, ನಿರಾಲಂಬಸ್ಥಲ,
ಚಿನುಮಯ ತನು, ನಿರಾಳ ಹಸ್ತ, ಶೂನ್ಯಲಿಂಗ,
ಉನ್ಮನಿಮುಖ, ನಿರಹಂಕಾರ ಭಕ್ತಿ, ಪರಿಪೂರ್ಣಪದಾರ್ಥ,
ಪರಿಪೂರ್ಣಪ್ರಸಾದ, ಪರಶಿವ ಪೂಜಾರಿ, ಪರಶಿವನಧಿದೇವತೆ,
ಅವಿರಳ ಸಾದಾಖ್ಯ, ಆಗಮವೆಂಬ ಲಕ್ಷಣ,
ನಿರ್ಮಾಯವೆಂಬ ಸಂಜ್ಞೆ, ದಿವ್ಯನಾದ, ಘೋಷದಿಕ್ಕು,
ಮನೋರ್ಲಯ ವೇದ, ಚಿಚ್ಚಂದ್ರನೆ ಅಂಗ, ದಿವ್ಯಾತ್ಮ,
ನಿಭ್ರಾಂತಿ ಶಕ್ತಿ ಅನಂತಕಲೆ
ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು
ಎನ್ನ ಶಿಖಾಚಕ್ರವೆಂಬ ಹೇಮಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ
ಶಿವಮಂತ್ರ ಶಿಕ್ಷಾಕರ್ತೃಸ್ವರೂಪವಾದ ಶೂನ್ಯಲಿಂಗವೆ
ಹಿರಣ್ಯೇಶ್ವರಲಿಂಗವೆಂದು ಕರಣತ್ರಯವ ಮಡಿಮಾಡಿ,
ಅನುಪಮವೆಂಬ ಜಲದಿಂ ಮಜ್ಜನಕ್ಕೆರದು,
ಚಂದ್ರ ನಿವೃತ್ತಿಯಾದ ಗಂಧವ ಧರಿಸಿ,
ವಿರಳ ಅವಿರಳವಾದಕ್ಷತೆಯನಿಟ್ಟು,
ಅಲ್ಲಿಹ ತ್ರಿದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಮಹಾಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ನಿಃಸಂಸಾರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ,
ಸದಾನಂದವೆಂಬಾಭರಣವ ತೊಡಿಸಿ,
ಪರಿಪೂರ್ಣವೆಂಬ ನೈವೇದ್ಯವನರ್ಪಿಸಿ,
ನಿರಹಂಕಾರವೆಂಬ ತಾಂಬೂಲವನಿತ್ತು,
ಇಂತು ಶೂನ್ಯಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಶತಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು,
ಆ ಶೂನ್ಯಲಿಂಗವ ಪೂಜೆಯ ಸಮಾಪ್ತವ ಮಾಡಿ,
ಜ್ಞಾನ ಜಪವೆಂಬ ದ್ವಾದಶ ಪ್ರಣಮ ಮಂತ್ರಗಳಿಂದೆ ನಮಸ್ಕರಿಸಿ,
ಆ ಶೂನ್ಯಲಿಂಗದ ತಾನೆಂದರಿದು,
ಕೂಡಿ ಎರಡಳಿದು ನಿಸ್ಸಂಸಾರಿಯಾಗಿ ಆಚರಿಸಬಲ್ಲಾತನೆ
ನಿರಹಂಕಾರ ಭಕ್ತಿಯನುಳ್ಳ ನಿರಾತಂಕ ನೋಡ
ಸಂಗನಬಸವೇಶ್ವರ./32
ಅಯ್ಯ, ನಿನ್ನ ಚಿದಂಗದ ಷಟ್ಸ್ಥಾನಂಗಳಲ್ಲಿ
ಎಪ್ಪತ್ತೈದು ತತ್ತ್ವಂಗಳು ಅಡಗಿರ್ಪವಯ್ಯ.
ಚಿದ್ಘನಲಿಂಗದ ಷಟ್ಸ್ಥಾನಂಗಳಲ್ಲಿ
ಹದಿನೆಂಟು ತತ್ತ್ವಂಗಳು ಅಡಗಿರ್ಪವಯ್ಯ.
ಆ ಚಿದಂಗ ಚಿದ್ಘನಲಿಂಗದ ಮಧ್ಯದಲ್ಲಿ ಬೆಳಗುವ
ಅಖಂಡ ಮಹಾಜ್ಯೋತಿಪ್ರಣಮದ ಷಟ್ಸ್ಥಾನಂಗಳಲ್ಲಿ
ಅಷ್ಟವಿಧತತ್ವಂಗಳು ಅಡಗಿರ್ಪವಯ್ಯ.
ಆ ತತ್ವಂಗಳ ವಿಭಾಗೆಯೆಂತೆಂದಡೆ: ಪೃಥ್ವೀತತ್ತ್ವ ಇಪ್ಪತ್ತೈದು, ಅಪ್ಪುತತ್ತ್ವ ಇಪ್ಪತ್ತು,
ಅಗ್ನಿತತ್ತ್ವ ಹದಿನೈದು, ವಾಯುತತ್ವ ಹತ್ತು, ಆಕಾಶತತ್ತ್ವ ಐದು.
ಇಂತು ಎಪ್ಪತ್ತೈದು ತತ್ತ್ವಂಗಳು ಆತ್ಮತತ್ವ ಒಂದರಲ್ಲಿ ಅಡಗಿ,
ಇಂಥ ಅನಂತ ಅನಂತ ಆತ್ಮರು ಔದುಂಬರ ವೃಕ್ಷಕ್ಕೆ
ಫಲ ತೊಂತಿದೋಪಾದಿಯಲ್ಲಿ
ಆ ಚಿದಂಗಕ್ಕೆ ಅನಂತ ಆತ್ಮತತ್ತ್ವಂಗಳು ತೊಂತಿಕೊಂಡಿರ್ಪವು ನೋಡ.
ಅಂಥ ಚಿದಂಗ ಹದಿನೆಂಟು ಪ್ರಣಮರೂಪಿನಿಂದ
ಚಿದ್ಘನಲಿಂಗವನಾಶ್ರೈಸಿರ್ಪುದು ನೋಡ.
ಆ ಚಿದ್ಘನಲಿಂಗವು ಅಷ್ಟವಿಧಸಕೀಲಂಗಳಿಂದ
ಅಖಂಡ ಮಹಾಜ್ಯೋತಿಪ್ರಣಮವನಾಶ್ರೈಸಿರ್ಪುದು ನೋಡ.
ಇಂತು ನೂರೊಂದು ಸಕೀಲಂಗಳ ತತ್ವರೂಪಿನಿಂದ ತಿಳಿದು
ಅಂತು ಅಂಗಲಿಂಗಸಂಗದಲ್ಲಿ ಅಡಗಿರುವ
ನೂರೊಂದುತತ್ವ ಸಕೀಲಂಗಳ ನೂರೊಂದುಸ್ಥಲದಲ್ಲಿ ನೆಲೆಗೊಳಿಸಿ
ಪರತತ್ವ ಲಿಂಗಲೀಲೆಯಿಂದ ನಿಂದ ನಿಲುಕಡೆಯ ಅನುಗ್ರಹದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಸ್ವತಂತ್ರಮೂರ್ತಿ
ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ. /33
ಅಯ್ಯ, ನಿನ್ನ ಷಟ್ಚಕ್ರಂಗಳಲ್ಲಿ ಅನಾದಿ ನಿಷ್ಕಳಂಕ
ಚಿದ್ಘನ ಇಷ್ಟಮಹಾಲಿಂಗವೆ ಷಡ್ವಿಧಲಿಂಗವಾಗಿ ನೆಲಸಿರ್ಪರು ನೋಡ,
ಅದೆಂತೆಂದಡೆ: ಆಧಾರಚಕ್ರದ ನಾಲ್ಕೆಸಳಮಧ್ಯದಲ್ಲಿ ನಕಾರಮಂತ್ರಮೂರ್ತಿ
ಆಚಾರಲಿಂಗವಾಗಿ ನೆಲಸಿರ್ಪರು ನೋಡ.
ಸ್ವಾಧಿಷ್ಠಾನಚಕ್ರದ ಆರೆಸಳಮಧ್ಯದಲ್ಲಿ ಮಕಾರಮಂತ್ರಮೂರ್ತಿ
ಗುರುಲಿಂಗವಾಗಿ ನೆಲಸಿರ್ಪರು ನೋಡ.
ಮಣಿಪೂರಕಚಕ್ರದ ಹತ್ತೇಸಳಮಧ್ಯದಲ್ಲಿ ಶಿಕಾರಮಂತ್ರಮೂರ್ತಿ
ಶಿವಲಿಂಗವಾಗಿ ನೆಲಸಿರ್ಪರು ನೋಡ.
ಅನಾಹತಚಕ್ರದ ಹನ್ನೆರಡೆಸಳಮಧ್ಯದಲ್ಲಿ ವಕಾರಮಂತ್ರಮೂರ್ತಿ
ಚರಲಿಂಗವಾಗಿ ನೆಲಸಿರ್ಪರು ನೋಡ.
ವಿಶುದ್ಧಿಚಕ್ರದ ಹದಿನಾರೆಸಳಮಧ್ಯದಲ್ಲಿ ಯಕಾರಮಂತ್ರಮೂರ್ತಿ
ಪ್ರಸಾದಲಿಂಗವಾಗಿ ನೆಲಸಿರ್ಪರು ನೋಡ.
ಆಜ್ಞಾಚಕ್ರದ ಎರಡೆಸಳ ಮಧ್ಯದಲ್ಲಿ ಓಂಕಾರಮಂತ್ರಮೂರ್ತಿ
ಮಹಾಲಿಂಗವಾಗಿ ನೆಲಸಿರ್ಪರು ನೋಡ.
ಇಂತು ಷಟ್ಚಕ್ರಂಗಳಮಧ್ಯದಲ್ಲಿ ನೆಲಸಿ,
ನಿನ್ನ ಷಡ್ವಿಧಭೋಗಂಗಳ ಕೈಕೊಂಡು,
ಆ ಪರಿಣಾಮವ ನಿನಗೆ ಸಂತೃಪ್ತಿಯ ಮಾಡಿ,
ಶರಣಸತಿ ಲಿಂಗಪತಿ ಭಾವದಿಂದ
ಮೇಲುಗಿರಿಮಂಟಪದ ನವರತ್ನ ಖಚಿತ ಸಹಸ್ರದಳ ಪದ್ಮಯುಕ್ತವಾದ
ಪರಿಯಂಕದ ಮೇಲೆ ಲಿಂಗಾನುಭಾವರತಿಸುಖಾನಂದದಿಂದ
ಶೋಭಿಸುವಂಥದೆ ಆಧ್ಯಾತ್ಮ ದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕಮೂರ್ತಿ
ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ. /34
ಅಯ್ಯ, ನಿನ್ನ ಸ್ವಾತ್ಮಜ್ಞಾನದಿಂದ
ಶ್ರುತಿಗುರುಸ್ವಾನುಭಾವವಿಡಿದು,
ನಿನ್ನ ತನು-ಮನ-ಕರಣ-ಇಂದ್ರಿಯಂಗಳ ಪರಿಪಕ್ವವ ಮಾಡಿ,
ಆ ತನು-ಮನ-ಕರಣ-ಇಂದ್ರಿಯಂಗಳ ಆಶ್ರೈಸಿದ
ಅರ್ಥಪ್ರಾಣಾಭಿಮಾನಂಗಳ
ಶ್ರೀಗುರುಲಿಂಗಜಂಗಮ ಭಕ್ತಮಾಹೇಶ್ವರ ಶರಣಗಣಂಗಳಿಗರ್ಪಿತವಮಾಡಿ,
ನಿರ್ವಂಚಕಬುದ್ಧಿ ಮುಂದುಗೊಂಡು,
ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಇಷ್ಟಲಿಂಗವ ತೃಪ್ತಿಮಾಡಿ,
ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ ಪ್ರಾಣಲಿಂಗವ ತೃಪ್ತಿಮಾಡಿ,
ಮನೋರ್ಲಯ ನಿರಂಜನ ಪೂಜಾಕ್ರಿಯೆಗಳಿಂದ ಭಾವಲಿಂಗವ ತೃಪ್ತಿಮಾಡಿ,
ಗುರುಲಿಂಗಜಂಗಮದ ಪಾದೋದಕ ಪ್ರಸಾದದಿಂದ ಮತ್ತಾ
ಗುರುಲಿಂಗಜಂಗಮದ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ಮೊದಲಾದ ಮಹಾಪ್ರಮಥಗಣಂಗಳ ತೃಪ್ತಿಮಾಡಿ,
ತನಗೊಂದಾಶ್ರಯಂಗಳಿಲ್ಲದೆ,
ಚಿದ್ಘನಲಿಂಗದಲ್ಲಿ ಅವಿರಾಳನಂದದಿಂದ ಕೂಟಸ್ಥನಾಗಿರುವಂದೆ ನಿಸ್ಸಂಸಾರದೀಕ್ಷೆ.
ಇಂತುಂಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ
ನಿರಾಲಂಬ ನಿಷ್ಕಾಮ ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು
ನೋಡ ಸಂಗನಬಸವೇಶ್ವರ./35
ಅಯ್ಯ, ನಿರಂಜನಾಕೃತಿ, ವ್ಯಂಜನ ಹಕಾರಪ್ರಣಮ,
ಮಹಾನಾದ, ಪಶ್ಚಿಮಚಕ್ರ, ಅಖಂಡಮಹಾಜ್ಯೋತಿವರ್ಣ,
ನಿರಾತಂಕಸ್ಥಲ, ನಿಮರ್ುಕ್ತಿತನ, ನಿರ್ಮಾಯಹಸ್ತ,
ನಿರಂಜನ ಲಿಂಗ, ಪಶ್ಚಿಮವೆಂಬ ಮುಖ, ಅಪ್ರಮಾಣ ಭಕ್ತಿ,
ಅವಿರಳ ಪದಾರ್ಥ, ಅವಿರಳ ಪ್ರಸಾದ, ಪರಮೇಶ್ವರ ಪೂಜಾರಿ,
ಪರಮೇಶ್ವರನಧಿದೇವತೆ, ನಿಶ್ಚಲಸಾದಾಖ್ಯ,
ನಿರ್ವಂಚಕವೆಂಬ ಲಕ್ಷಣ, ಅವಿರಳವೆಂಬ ಸಂಜ್ಞೆ,
ನಿರಾಳದಿಕ್ಕು, ಅಗಮ್ಯವೇದ, ಶಿವಯೋಗಿಯೆ ಅಂಗ,
ಚಿನ್ಮಯಾತ್ಮ, ನಿರ್ವಯಶಕ್ತಿ, ಅನಂತಕಲೆ
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು,
ಎನ್ನ ಪಶ್ಚಿಮಚಕ್ರವೆಂಬ ಮಹಾ ಮೇರುಪರ್ವತಕ್ಷೇತ್ರದಲ್ಲಿ
ಮೂರ್ತಿಗೊಂಡಿರ್ದ ನಿಜಮೋಕ್ಷ ಕರ್ತುಸ್ವರೂಪವಾದ
ನಿರಂಜನಲಿಂಗವೆ ಶಾಂಭವಮೂರ್ತಿಲಿಂಗವೆಂದು
ಹಂಸತ್ರಯವ ಮಡಿಮಾಡಿ, ನಿಭರ್ಾವವೆಂಬ ಜಲದಿಂ ಮಜ್ಜನಕ್ಕೆರದು,
ನಿರ್ಜಾತವೆಂಬ ಗಂಧವ ಧರಿಸಿ, ನಿರ್ಜಡವೆಂಬಕ್ಷತೆಯನಿಟ್ಟು,
ನಿದ್ರ್ವಂದ್ವವೆಂಬ ಪುಷ್ಪದ ಮಾಲೆಯಂ ಧರಿಸಿ,
ನಿರ್ಲಜ್ಜವೆಂಬ ಧೂಪವ ಬೀಸಿ,
ನಿರಾಲಂಬವೆಂಬ ಜ್ಯೋತಿಯ ಬೆಳಗಿ,
ನಿರಾವಯವೆಂಬ ವಸ್ತ್ರವ ಹೊದ್ದಿಸಿ,
ನಿಸ್ಪೃಹವೆಂಬಾಭರಣವ ತೊಡಿಸಿ,
ನಿರಾಳವೆಂಬ ನೈವೇದ್ಯವನರ್ಪಿಸಿ, ನಿರಾವರಣವೆಂಬ ತಾಂಬೂಲವನಿತ್ತು,
ಇಂತು ನಿರಂಜನಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಸಹಸ್ರಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ನಿರಂಜನಲಿಂಗವನ್ನು
ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು,
ಆ ನಿರಂಜನಲಿಂಗದ ಪೂಜೆಯ ಸಮಾಪ್ತವ ಮಾಡಿ,
ಮಹಾಜ್ಞಾನಜಪವೆಂಬ ದ್ವಾದಶಪ್ರಣಮಮಂತ್ರಂಗಳಿಂದೆ ನಮಸ್ಕರಿಸಿ,
ಈ ನಿರಂಜನಲಿಂಗವೆ ತಾನೆಂದರಿದು ಕೂಡಿ
ಎರಡಳಿದು ನಿಜಾಂತರ್ಯಾಮಿಯಾಗಿ ಆಚರಿಸಬಲ್ಲಾತನೆ
ಅಪ್ರಮಾಣಭಕ್ತಿಯನ್ನುಳ್ಳ ನಿಜಮೋಕ್ಷಸ್ವರೂಪ ನೋಡ
ಸಂಗನಬಸವೇಶ್ವರ./36
ಅಯ್ಯ, ನಿರಾಲಂಬ ನಿಃಕಳಂಕ ನಿಃಪ್ರಪಂಚತ್ವದಿಂದ
ನಾಲ್ವತ್ತೆಂಟು ಪ್ರಣಮಸ್ಮರಣೆಯಿಂದ
ಏಕಾದಶಲಿಂಗಂಗಳಿಗೆ ಏಕಾದಶಪ್ರಸಾದವ ಸಮರ್ಪಿಸಿ,
ತಾನಾ ಸಂತೃಪ್ತಿಮಹಾಪ್ರಸಾದದಲ್ಲಿ ಲೋಲುಪ್ತನಾದಡೆ
ನಿಜಪ್ರಸಾದಿಯೆಂಬೆ ನೋಡ.
ಅದರ ವಿಚಾರವೆಂತೆಂದಡೆ : ನಾಲ್ವತ್ತೆಂಟು ಪ್ರಣವದೊಳಗೆ ದ್ವಾದಶಪ್ರಣಮಸ್ಮರಣೆಯಿಂದ
ಆಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದವ
ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ
ಸುಚಿತ್ತ, ಸುಬುದ್ಧಿ, ನಿರುಪಾಧಿಕಹಸ್ತದಿಂದ ಸಮರ್ಪಿಸಿ,
ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ
ಅನಾದಿನಿಃಕಳಂಕ ಗುರುಬಸವರಾಜನೆಂಬೆ ನೋಡ.
ಛತ್ತೀಶಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ
ಪಂಚೇಂದ್ರಿಯವಿರಹಿತಪ್ರಸಾದ, ಕರಣಚತುಷ್ಟಯವಿರಹಿತಪ್ರಸಾದ,
ಲಿಂಗಪ್ರಸಾದವ ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ
ನಿರಹಂಕಾರ, ಸುಮನ, ನಿರಾಲಂಬಹಸ್ತದಿಂದ ಸಮರ್ಪಿಸಿ,
ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ
ಅನಾದಿ ನಿಃಕಾಮ ಶೂನ್ಯಲಿಂಗಸ್ವರೂಪ ಚೆನ್ನಬಸವರಾಜನೆಂಬೆ ನೋಡ !
ಇಪ್ಪತ್ತುನಾಲ್ಕು ಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ
ಸಮತಾಪ್ರಸಾದ-ಪ್ರಸಾದಿಯಪ್ರಸಾದ-ಜಂಗಮಪ್ರಸಾದವ
ಪ್ರಸಾದಲಿಂಗ-ಮಹಾಲಿಂಗ-ಭಾವಲಿಂಗದೇವಂಗೆ
ಸುಜ್ಞಾನ, ಸದ್ಭಾವ, ನಿಃಪ್ರಪಂಚಹಸ್ತದಿಂದ ಸಮರ್ಪಿಸಿ,
ಆ ಪರಿಣಾಮಲೋಲುಪ್ತಿಯಲ್ಲಿ ತಾನಾದಡೆ
ಅನಾದಿ ನಿರಂಜನ ಜಂಗಮ ಸ್ವರೂಪ ಪ್ರಭುದೇವರೆಂಬೆ ನೋಡ.
ಇನ್ನು ಉಳಿದ ದ್ವಾದಶಪ್ರಣಮಸ್ಮರಣೆಯಿಂದ
ಸದ್ಭಾವಪ್ರಸಾದ-ಜ್ಞಾನಪ್ರಸಾದವ
ಇಂತು ನವಲಿಂಗಪ್ರಸಾದ ಪಾದೋದಕಂಗಳ
ಸಂತೃಪ್ತಿಯಲ್ಲಿ ಸಾಕಾರ ನಿರಾಕಾರನಾದ
ಪರತತ್ವಜ್ಯೋತಿರ್ಮಯಲಿಂಗದೇವಂಗೆ
ನಿಜಾನಂದಹಸ್ತದಿಂದ ಸಮರ್ಪಿಸಿ,
ಮತ್ತಾ ಅನಾದಿಕುಳಸನ್ಮತನಾದ ದಶವಿಧಪಾದೋದಕ,
ಏಕಾದಶಪ್ರಸಾದದಲ್ಲಿ ಕೂಡಿ, ಘನಸಾರದಂತಾದಡೆ
ಅನಾದಿಪೂರ್ಣಮಯ ನಿಜವಸ್ತು ತಾನೆ ನೋಡ,
ಸಂಗನಬಸವೇಶ್ವರ./37
ಅಯ್ಯ, ನಿರ್ವಂಚಕತ್ವದಿಂದ ದಶವಿಧಲಿಂಗಗಳಿಗೆ
ಏಕವಿಂಶತಿ ಮಂತ್ರಸ್ಮರಣೆಯಿಂದ ದಶವಿಧಪಾದೋದಕವನರ್ಪಿಸಿ,
ಸಂತೃಪ್ತಾನಂದಜಲದಲ್ಲಿ ಪರಿಣಾಮಿಸಬಲ್ಲಡೆ ನಿಜಪ್ರಸಾದಿಯೆಂಬೆನಯ್ಯ.
ಅದರ ವಿಚಾರವೆಂತೆಂದಡೆ : ಏಕವಿಂಶತಿ ಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ
ಸ್ವರ್ಶನೋದಕ ಅವಧಾರೋದಕ-ಗುರುಪಾದೋದಕವ
ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ ಅರ್ಪಿಸಿ,
ತಾನಾ ಪರಿಣಾಮದಲ್ಲಿ ಲೋಲುಪ್ತನಾದಡೆ
ಅನಾದಿಗುರುಲಿಂಗಸ್ವರೂಪ ಬಸವಣ್ಣನೆಂಬೆ ನೋಡ.
ದಶಪಂಚಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ
ಆಪ್ಯಾಯನೋದಕ-ಹಸ್ತೋದಕ-ಲಿಂಗಪಾದೋದಕವ
ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ ಸಮರ್ಪಿಸಿ
ತಾನಾ ಪರಿಣಾಮದಲ್ಲಿ ಲೋಲುಪ್ತನಾದಡೆ
ಅನಾದಿಲಿಂಗಸ್ವರೂಪ ಚೆನ್ನಬಸವಣ್ಣನೆಂಬೆ ನೋಡ.
ನವವಿಧಪ್ರಣಮದೊಳಗೆ ಷಡ್ವಿಧಪ್ರಣಮಸ್ಮರಣೆಯಿಂದ
ಪರಿಣಾಮೋದಕ-ನಿರ್ನಾಮೋದಕ-ಜಂಗಮಪಾದೋದಕವ
ಪ್ರಸಾದಲಿಂಗ-ಮಹಾಲಿಂಗ ಭಾವಲಿಂಗದೇವಂಗೆ ಸಮರ್ಪಿಸಿ,
ತಾನಾ ಸಂತೃಪ್ತಿಯಲ್ಲಿ ಲೋಲುಪ್ತನಾದಡೆ
ಅನಾದಿಜಂಗಮಸ್ವರೂಪ ಅಲ್ಲಮಪ್ರಭುರಾಯನೆಂಬೆ ನೋಡಾ.
ಇನ್ನು ಉಳಿದ ತ್ರಿವಿಧಪ್ರಣಮಸ್ಮರಣೆಯಿಂದ
ನವವಿಧೋದಕವನೊಳಕೊಂಡ ಸತ್ಯೋದಕವ
ನವವಿಧಲಿಂಗಕ್ಕೆ ಮಾತೃಸ್ವರೂಪವಾದ ನಿಃಕಲಪರತತ್ವಲಿಂಗದೇವಂಗೆ ಸಮರ್ಪಿಸಿ,
ನಿತ್ಯತೃಪ್ತತ್ವದಿಂದ ಸರ್ವಾವಸ್ಥೆಯ ನೀಗಬಲ್ಲಡೆ
ಅನಾದಿಶರಣಪ್ರಸನ್ನ ಮೂರ್ತಿಯೆಂಬೆ ನೋಡ
ಸಂಗನಬಸವೇಶ್ವರ./38
ಅಯ್ಯ, ನಿವೃತ್ತಿಮಾರ್ಗದಲ್ಲಿ ಚರಿಸುವ
ಊಧ್ವಕುಂಡಲಿ ಭೇದವೆಂತೆಂದಡೆ : ಕಿಂಕುರ್ವಾಣಭಕ್ತಿಯೆ ಅಂಗವಾಗಿರ್ಪುದಯ್ಯ.
ಸದ್ಗುಣವೆ ಪ್ರಾಣವಾಗಿರ್ಪುದಯ್ಯ.
ಸದ್ಧರ್ಮವೆ ಸಂಗವಾಗಿರ್ಪುದಯ್ಯ.
ಸಚ್ಚಿದಾನಂದವೆ ವಸ್ತ್ರಾಭರಣವಾಗಿರ್ಪುದಯ್ಯ.
ಸನ್ಮಾರ್ಗಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ.
ಸುಸತ್ಯವೆ ವಾಹನವಾಗಿರ್ಪುದಯ್ಯ.
ದಯಾಂತಃಕರಣವೆ ಪಿತಮಾತೆಯಾಗಿರ್ಪುದಯ್ಯ.
ಸುಚಿತ್ತಂಗಳೆ ಬಂಧುಬಳಗವಾಗಿರ್ಪುದಯ್ಯ.
ಸುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ.
ನಿರಹಂಕಾರಂಗಳೆ ನಂಟರಾಗಿರ್ಪುದಯ್ಯ.
ಸುಮನವೆ ಸ್ತ್ರೀಯಳಾಗಿರ್ಪುದಯ್ಯ.
ಸುಜ್ಞಾನವೇ ಮಂದಿರವಾಗಿರ್ಪುದಯ್ಯ.
ಸದ್ಭಾವವೆ ಆಹಾರವಾಗಿರ್ಪುದಯ್ಯ.
ನಿತ್ಯನಿಜವೇ ದೈವವಾಗಿರ್ಪುದಯ್ಯ.
ನಿರಾಸೆಯೆ ಅವಯವಂಗಳಾಗಿರ್ಪುದಯ್ಯ.
ನಿಷ್ಕಾಮಂಗಳೆ ಧನಧಾನ್ಯಂಗಳಾಗಿರ್ಪುದಯ್ಯ.
ಇಂತು ನಿಸ್ಸಂಸಾರವೆಂಬ ಅವಿರಳಾನದಿಂದ
ಸದ್ಗುರು ಉಪಾವಸ್ತೆಯ ಮಾಡುವ ಸಜ್ಜೀವನೆ
ಊಧ್ರ್ವಕುಂಡಲಿಸರ್ಪವೆನಿಸುವುದಯ್ಯ.
ಆ ಸರ್ಪನೆ ಮಾಯಾಪ್ರಪಂಚ ಹೇವರಿಸಿ ಅನಂತಮುಖದಿಂದ
ನಿರ್ಮಾಯಸ್ವರೂಪವಾದ ಮಹಾಪ್ರಮಥಗಣಂಗಳತ್ತ ಅಭಿಮುಖವಾಗಿರ್ಪುದಯ್ಯ.
ಈ ಸರ್ಪಂಗೆ ಬೇಕುಬೇಡವೆಂಬ ಜೀಹ್ವಾಲಂಪಟ-ಗುಹ್ಯಲಂಪಟವಿಲ್ಲ ನೋಡ,
ಸಂಗನಬಸವೇಶ್ವರ./39
ಅಯ್ಯ, ನಿಷ್ಕಲ ಪರಶಿವತತ್ವ ಮಹಾಘನಚಿದಾವರಣಸ್ವರೂಪ
ಮಹಾಘನಪರಶಿವಲಿಂಗವ ಸದ್ಗುರುಮುಖದಿಂ
ತಮ್ಮ ಭಾವ-ಮನ-ಹೃದಯ-ಶ್ರೋತ್ರ-ತ್ವಕ್ಕು-ನೇತ್ರ-
ಜಿಹ್ವೆ-ಘ್ರಾಣ-ಕರಕಂಜಮಧ್ಯದಲ್ಲಿರಿಸಿ ಪರಿಪರಿಯಿಂದಚರ್ಿಸಿ,
ನಿರ್ವಂಚಕತ್ವದಿಂದ ಅರ್ಥ ಪ್ರಾಣಾಭಿಮಾನಂಗಳಂ ಸಮರ್ಪಿಸಿ,
ಸರ್ವಾಚಾರಸಂಪತ್ತಿನಾಚರಣೆಯಲ್ಲಿ ದೃಢಚಿತ್ತದಿಂದ ನಿಂದ
ಮಹಾ ಸದ್ಭಕ್ತ ಶಿವಶರಣನಿರ್ದ ಲೋಕವೆ
ರುದ್ರಲೋಕ, ಶಿವಲೋಕ, ದೇವಲೋಕ, ನಾಗಲೋಕ,
ಶಾಂಭವಲೋಕವಯ್ಯ.
ಆತನ ಭಕ್ತಿಪ್ರಿಯರೆ ರುದ್ರಗಣಂಗಳು, ಶಿವಗಣಂಗಳು,
ದೇವಗಣಂಗಳು, ನಾಗಗಣಂಗಳು, ಶಾಂಭವಗಣಂಗಳು ನೋಡ.
ಆತನಿರ್ದ ಊರೇ ಶಾಂಭವಪುರ, ಉಳುವೆ, ಮಹಾಕಲ್ಯಾಣವಯ್ಯ.
ಆತನ ಗೃಹವೆ ಶಿವಮಂದಿರ-ಶಿವಾಲಯ-ಶಿವಕ್ಷೇತ್ರವಯ್ಯ.
ಆತನ ನಡೆ-ನುಡಿ-ಸತ್ಕ್ರಿಯಾಚಾರದಲ್ಲೊಡವೆರದ
ಸತ್ಕ್ರಿಯಾಶಕ್ತಿಯೆ ನಾಗಕನ್ನೆ, ದೇವಕನ್ನೆ, ರುದ್ರಕನ್ನೆಯಯ್ಯ.
ಆತನ ಅರ್ಚನಾರ್ಪಣಸ್ಥಲವೆ ಮಹಾಘನಶೂನ್ಯ ಸಿಂಹಾಸನ ನೋಡ.
ಆತನಾಚರಣೆ ಸೋಂಕಿನಿಂದಡಿಯಿಟ್ಟ ಜಲವೆ
ದೇವಗಂಗಾ, ಶಿವಗಂಗಾ, ಪರಮಗಂಗಾ, ನಿಜಪಾವನಗಂಗಾ,
ಪರಿಪೂರ್ಣಗಂಗಾಸ್ವರೂಪಾದ ಮಹಾಗಂಗಾತೀರ್ಥ ನೋಡ.
ಆತನು ದಯವಿಟ್ಟು ಪರುಷದೃಷ್ಟಿಯಿಂದ ನೋಡಿದ್ದು,
ತಟ್ಟು ಮುಟ್ಟು ಸೋಂಕುಗಳೆಲ್ಲ ನಿಜಮೋಕ್ಷ ಸ್ವರೂಪ ನೋಡ.
ಸದ್ಭಕ್ತ ಶಿವಶರಣನ ಅಂಗಳವೆ ನನಗೂ ನಿನಗೂ
ನಿಜಮೋಕ್ಷ ನೋಡ ಸಂಗನಬಸವೇಶ್ವರ./40
ಅಯ್ಯ, ಪರಮ ಪತಿವ್ರತೆಗೆ
ಹರಗಣ ಸಾಕ್ಷಿಯಾಗಿ ಕಂಕಣದ ಕಟ್ಟಿದ ಪುರುಷಂಗೆ
ತನ್ನ ತನುಮನವ ಮೀಸಲ ಮಾಡಿ,
ತನ್ನ ಪಿತ-ಮಾತೆ-ಪುತ್ರ-ಮಿತ್ರರ ಸಂಗವ ಸೋಂಕದೆ,
ಅವರೊಡವೆಗಿಚ್ಛೈಸಿ ನಡೆನುಡಿಗಳಾಲಿಸದೆ,
ತನ್ನ ರಮಣನ ದ್ರವ್ಯಾಭರಣವ ಹಾರೈಸಿ,
ಆತನ ನುಡಿಯೆ ಮಹಾಪ್ರಸಾದವೆಂದು ಪ್ರತಿನುಡಿಯ ನುಡಿಯದೆ,
ಸರ್ವಾವಸ್ಥೆಯಲ್ಲಿ ಆ ರಮಣನ ರತಿಸಂಯೋಗಾನುಸಂಧಾನದಿಂದ
ಎರಡಳಿದಿರುವ ಸತ್ಯಾಂಗನೆಯಂತೆ
ಶ್ರೀ ಗುರುವಿನ ಕರಗರ್ಭಮಧ್ಯದಲ್ಲಿ ಜನಿತವಾದ ಲಿಂಗಭಕ್ತಗಣ
ಸತಿ ಸುತ ಪಿತ ಮಾತೆ ಬಂಧು ಬಳಗ ಒಡಹುಟ್ಟಿದವರು ಮೊದಲಾಗಿ
ಪರಶಿವಲಿಂಗ ಜಂಗಮತೀರ್ಥಪ್ರಸಾದ ಮಂತ್ರದಲ್ಲಿ ಮುಳುಗಿ,
ಲೋಕದ ಶೈವಮಾಗರ್ಿಗಳಂತೆ
ಹಲವು ಕ್ಷೇತ್ರ, ಹಲವು ತೀರ್ಥ, ಹಲವು ನೇಮ ವ್ರತಗಳಿಗೆ ಅಡಿಯಿಡದೆ
ವಾಚಕ-ಮಾನಸ-ಕಾಯಕ ಮೊದಲಾದ ಸಮಸ್ತತತ್ವಂಗಳ
ಸ್ವಪಾಕವ ಮಾಡಿ ನಿಷ್ಕಳಂಕ ಪರಶಿವಲಿಂಗಜಂಗಮಕ್ಕೆ ಸಮರ್ಪಿಸಿ,
ಅವರೊಕ್ಕುಮಿಕ್ಕ ಹರುಷಾನಂದ ಮಹಾಪ್ರಸಾದದಲ್ಲಿ ಸಂತೃಪ್ತನಾಗಿ,
ಇಷ್ಟಲಿಂಗಬಾಹ್ಯವಾದ ಜಡಶೈವ ನಡೆನುಡಿಗಳ
ಆಲಿಸದಿಪ್ಪುದೆ ಏಕಾಗ್ರಚಿತ್ತದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಟ್ಸ್ಥಲನಾಯಕ
ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ./41
ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು
ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ
ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ,
ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ
ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ
ಜಂಗಮದೀಕ್ಷಾಪಾದೋದಕವ ತುಂಬಿ,
ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ,
ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ,
ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ
ಷೋಡಶೋಪಚಾರಂಗಳಿಂದೊಪ್ಪುವ
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ
ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ
ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ,
ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ,
ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ
ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ,
ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ
ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ,
ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ
ಗಣಸಾಕ್ಷಿಯಾಗಿ ಶ್ರೀ ಗುರುದೇವನು
ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ,
ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ,
ಆ ಪಂಚಕಲಶಂಗಳಲ್ಲಿ ಶೋಭಿಸುವಂಥ ದೇವಗಂಗಾಜಲಸ್ವರೂಪವಾದ
ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ
ಆ ಕಲಶಂಗಳೈದರಲ್ಲಿ ತೆಗೆದುಕೊಂಡು
ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ
ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ,
ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ
ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು,
ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ
ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ
ಮಾಡುವಂಥಾದೆ ಕಲಶಾಭಿಷೇಕದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./42
ಅಯ್ಯ, ಪ್ರಥಮದಲ್ಲಿ ಇಪ್ಪತ್ತೊಂದು ತೆರದ ದೀಕ್ಷೆಯ
ಕರುಣಿಸೇವು ನೋಡ.
ಅದರ ವಿಚಾರವೆಂತೆಂದಡೆ
ಅಷ್ಟತನು, ಅಷ್ಟಭೋಗಂಗಳ ಅಭಿಲಾಷೆಯ ನೀಗಿ,
ಸರ್ವಸಂಗ ಪರಿತ್ಯಾಗತ್ವದಿಂದ ನಿಜನೈಷ್ಠ ಕರಿಗೊಂಡು
ಸಚ್ಚಿದಾನಂದದಿಂದ ನಿಂದ ನಿಜೋತ್ತಮಂಗೆ
ಶ್ರೀಗುರುಲಿಂಗಜಂಗಮವು ಕೃಪಾದೃಷ್ಟಿಯಿಂದ ನೋಡಿ
ಜನ್ಮ-ಜರೆ-ಮರಣಂಗಳಿಗಂಜಬೇಡವೆಂದು
ಅಂಗ ಮನ ಪ್ರಾಣಂಗಳ ಮೇಲೆ ಅಭಯಹಸ್ತವಿತ್ತು.
ಸಂಸಾರ ಪ್ರಪಂಚಿಗೊಳಗಾದ ಪಂಚಮಹಾಪಾತಕರಂತೆ
ನಡೆಯಬೇಡವೆಂದು ಪಾದಕ್ಕೆ ಆಜ್ಞೆಯ ಮಾಡಿದರಯ್ಯ.
ಜಡಮತ್ರ್ಯರು ನುಡಿದಂತೆ, ನುಡಿಯಬೇಡವೆಂದು ವಾಣಿಗೆ
ಆಜ್ಞೆಯ ಮಾಡಿದರಯ್ಯ.
ಪರದೈವ-ಪರದ್ರವ್ಯ-ಪರಸ್ತ್ರೀಯರ-ಮುಟ್ಟಬೇಡವೆಂದು
ಪಾಣಿಗೆ ಆಜ್ಞೆಯ ಮಾಡಿದರಯ್ಯ.
ಯೋನಿದ್ವಾರವ ಹೊಕ್ಕಡೆ ಅದರಲ್ಲಿ ಜನಿತ ತಪ್ಪದೆಂದು
ಅದರಿಂದ ಬಿಟ್ಟು ಹುಳುಗೊಂಡವಿಲ್ಲವೆಂದು
ಮಾಣಿಗೆ ಆಜ್ಞೆಯ ಮಾಡಿದರಯ್ಯ.
ಇಂತು ಭವಿಮಾರ್ಗವನುಳಿದು
ಸತ್ಯನಡೆ, ಸತ್ಯನುಡಿ, ಸತ್ಯಪಾಣಿ, ಸತ್ಯಮಾಣಿಯಾದಡೆ
ನಿನ್ನ ಪಾದ ಮೊದಲಾಗಿ ಮಾಣಿಯ ಅಂತ್ಯವಾದ ಸರ್ವಾಂಗದಲ್ಲಿ
ಚತುರ್ವಿಧ ಸಾರಾಯಸ್ವರೂಪ ಗುರುಲಿಂಗಜಂಗಮಪ್ರಸಾದವಾಗಿ
ಕ್ಷೀರದೊಳಗೆ ಘೃತವಡಗಿದಂತೆ ಏಕಸ್ವರೂಪಿನಿಂದ
ನಿಮಿಷಾರ್ಧವಗಲದೆ ನಿಜವಸ್ತು ಬೆರದಿರ್ಪುದು ನೋಡ.
ಎಂದು ಅನುಭಾವಮಂಟಪದಲ್ಲಿ
ಶ್ರೀಗುರು ನಿಷ್ಕಳಂಕ ಚಿನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಗಣಸಾಕ್ಷಿಯಾಗಿ
ಆಜ್ಞೋಪದೀಕ್ಷೆಯ ಮಾಡಿದರು ಸಂಗನಬಸವೇಶ್ವರ./43
ಅಯ್ಯ, ಪ್ರವೃತ್ತಿಮಾರ್ಗದಲ್ಲಿ ಚರಿಸುವ
ಅಧೋ ಕುಂಡಲಿ ಭೇದವೆಂತೆಂದಡೆ : ದ್ವಾದಶಮಲಂಗಳೆ ಅಂಗವಾಗಿರ್ಪುದಯ್ಯ.
ಷೋಡಶಮದಂಗಳೆ ಪ್ರಾಣವಾಗಿರ್ಪುದಯ್ಯ.
ಸಪ್ತವ್ಯಸನಂಗಳೆ ಸಂಗವಾಗಿರ್ಪುದಯ್ಯ.
ದುರ್ಗಣಂಗಳೆ ವಸ್ತ್ರಾಭರಣವಾಗಿರ್ಪುದಯ್ಯ.
ಅನಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ.
ಅಸತ್ಯವೆ ವಾಹನವಾಗಿರ್ಪುದಯ್ಯ.
ಕುಂಭಾವಂಗಳೆ ಪಿತಮಾತೆಯಾಗಿರ್ಪುದಯ್ಯ.
ಕುಚಿತ್ತಗಳೆ ಬಂಧುಬಳಗವಾಗಿರ್ಪುದಯ್ಯ.
ಕುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ.
ದುರಹಂಕಾರಗಳೆ ನೆಂಟರಾಗಿರ್ಪುದಯ್ಯ.
ಕುಮನವೆ ಸ್ತ್ರೀಯಳಾಗಿರ್ಪುದಯ್ಯ.
ಅಜ್ಞಾನವೆ ಮಂದಿರವಾಗಿರ್ಪುದಯ್ಯ.
ದುಭರ್ಾವವೆ ಆಹಾರವಾಗಿರ್ಪುದಯ್ಯ.
ಅರಿಷಡ್ವರ್ಗವೆ ದೈವವಾಗಿರ್ಪುದಯ್ಯ.
ಷಡ್ಭಾವವಿಕಾರಂಗಳೇ ಅವಯವಂಗಳಾಗಿರ್ಪುದಯ್ಯ.
ಆಸೆಯೆ ಧನಧಾನ್ಯವಾಗಿರ್ಪುದಯ್ಯ.
ಇಂತು ಸಂಸಾರವೆಂಬ ಪಾಶದಲ್ಲಿ
ಜನ್ಮ-ಜರೆ-ಮರಣಂಗಳಿಂದ ತಿರುಗುವ ಜೀವನೆ
ಅಧೋಕುಂಡಲಿಸರ್ಪನೆನಿಸುವುದಯ್ಯ.
ಆ ಸರ್ಪನೆ ಮೂಲಹಂಕಾರವೆಂಬ ಪಟ್ಟಣವ ರಚಿಸಿ
ಜಿಹ್ವಾಲಂಪಟ-ಗುಹ್ಯಲಂಪಟದಲ್ಲಿ ಮುಳುಮುಳುಗಿ ತೇಲುತ್ತಿರ್ಪುದು ನೋಡ
ಸಂಗನಬಸವೇಶ್ವರ. /44
ಅಯ್ಯ, ಮತ್ರ್ಯದ ಮಧ್ಯದಲ್ಲಿ ಶ್ರೀಗುರುಕರಜಾತನಾದ ಮೇಲೆ
ಹೊನ್ನು, ಹೆಣ್ಣು, ಮಣ್ಣು, ಅನ್ನ, ನೀರು, ವಸ್ತ್ರ, ಆಭರಣ, ವಾಹನ,
ಪುತ್ರ, ಮಿತ್ರ, ಅನಾಚಾರ, ದುಸ್ಸಂಗವೆಂಬ
ದ್ವಾದಶಮಲಂಗಳ ಬಲೆಗೆ ಸಿಲ್ಕದೆ,
ಇಹಲೋಕದ ಭೋಗ, ಪರಲೋಕದ ಮೋಕ್ಷಂಗಳಿಗೆ ಇಚ್ಛೈಸದೆ,
ಸಿರಿ-ಹರುಷ-ಮಿತ್ರ-ದರಿದ್ರ-ಚಿಂತೆ-ಶತ್ರುತ್ವಂಗಳ ಸಮಾನಂಗೊಂಡು
ಲಿಂಗಾಣತಿಯಿಂದ ಉಪವಾಸ-ತೃಪ್ತಿಗಳು ಬಂದು ತಟ್ಟಿದಲ್ಲಿ ಸಂತೃಪ್ತನಾಗಿ,
ಆಧಿ ವ್ಯಾಧಿಗಳು ಬಂದು ತಟ್ಟಿದಲ್ಲಿ ಪಾದೋದಕ -ಪ್ರಸಾದದಲ್ಲಿ ಕೂಡಿಸಿ,
ಸಮಭಾಜನವ ಮಡಿ, ಲಿಂಗಭೋಗೋಪಭೋಗಿಯಾಗಿ,
ಅವಿರಳಾನಂದದಿಂದ ಹಿಂದಣ ಪಾಪ, ಮುಂದಣ ಪುಣ್ಯಗಳಿಗೆ ಹೊರತಾಗಿ,
ಅವ ತನ್ನೊಳಗೆಮಾಡಿಕೊಂಡು, ಮನದ ಬಯಕೆಯ ನೀಗಿ,
ಕಾಳಹರ-ಕರ್ಮಹರ-ದುರಿತಹರ-ಪಾಪಹರಲೀಲೆಯಿಂದ
ಮತ್ರ್ಯದಲ್ಲಿ ಇದ್ದು ಇಲ್ಲದಂತೆ ಸಚ್ಚಿದಾನಂದನಾಗಿ ಆಚರಿಸುವಂಥ
ನಿಜನೈಷ್ಠೆಯೇ ನಿರ್ವಾಣದೀಕ್ಷೆ.
ಇಂತುಂಟೆಂದು ಶ್ರೀಗುರುನಿಷ್ಕಳಂಕ ಪರಮಾನಂದಮೂರ್ತಿ
ಚಿಕ್ಕದಂಡನಾಥ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ
ಕೊಡುತಿರ್ದರು ನೋಡ ಸಂಗನಬಸವೇಶ್ವರ./45
ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ !
ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ
ಬಸವ ಮೊದಲಾದ ಪ್ರಮಥರೆಲ್ಲ
ಚೆನ್ನಬಸವರಾಜೇಂದ್ರಂಗೆ ಅಭಿವಂದಿಸಿ,
ಮಹಾಲಿಂಗೈಕ್ಯಾನುಭಾವವ ಬೆಸಗೊಳಲು
ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ,
ಸಂಗನಬಸವೇಶ್ವರ./46
ಅಯ್ಯ, ವರಕುಮಾರದೇಶಿಕೇಂದ್ರನೆ ಕೇಳಾ,
ಚಿದ್ಘನಶರಣ ಪ್ರಸಾದಲಿಂಗವಾಗಿ ನಿಂದ ನಿಜಾಚರಣೆಯ ನಿಲುಕಡೆಯ,
ಕಲ್ಯಾಣಪಟ್ಟಣದ ಅನುಭಾವ ಮಂಟಪದ ಶೂನ್ಯಸಿಂಹಾಸನದಲ್ಲಿ,
ಬಸವ, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ
ಮೊದಲಾದ ಸಕಲಮಹಾಪ್ರಮಥಗಣಂಗಳೆಲ್ಲ
ಮಹಾಪ್ರಭುಸ್ವಾಮಿಗಳಿಗೆ ಅಭಿವಂದಿಸಿ ಹಸ್ತಾಂಜಲಿತರಾಗಿ
ಎಲೆ ಮಹಾಪ್ರಭುವೆ ನಿನ್ನ
ಅನಾದಿ ಷಟ್ಸ್ಥಲ ನಿರಭಾರಿವೀರಶೈವಶರಣನ ನಿಜಾಚರಣೆಯ ನಿಲುಕಡೆಯ
ದಯವಿಟ್ಟು ಕರುಣಿಸಬೇಕಯ್ಯ ಮಹಾಗುರುವೆ
ಎಂದು ಬೆಸಗೊಂಡಲ್ಲಿ ಆಗ ಮಹಾಪ್ರಭುವು
ಲಿಂಗಾಂಗಕ್ಕೆ ಭಿನ್ನವಿಲ್ಲದೆ ಹಸ್ತಮಸ್ತಕಸಂಯೋಗವ ಮಾಡಿ,
ವೇಧಾ-ಮಂತ್ರ-ಕ್ರಿಯಾದೀಕ್ಷೆಯನಿತ್ತು.
ಇಪ್ಪತ್ತೊಂದು ತೆರದ ವಿಚಾರವನರುಪಿ,
ನೂರೊಂದುಸ್ಥಲದಾಚರಣೆಯ, ಇನ್ನೂರಹದಿನಾರು ಸ್ಥಲದ ಸಂಬಂಧವ ತೋರಿ,
ಸರ್ವಾಚಾರ ಸಂಪತ್ತಿನಾವರಣದ ಸ್ವಸ್ವರೂಪು ನಿಲುಕಡೆಯ ತೋರಿಸಿ,
ಸಾಕಾರನಿರಾಕಾರದ ನಿಜದ ನಿಲುಕಡೆಯನರುಪಿ,
ನಿಜಶಿವಯೋಗದ ನಿರ್ಣಯದ ಕರಿಣಿಸಿ,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ
ತಾವೆಂದರುಪಿದ ನೋಡ.
ಇಂತು ಚೆನ್ನಬಸವೇಶ್ವರಸ್ವಾಮಿಗಳು ಬೆಸಗೊಂಡು
ತಮ್ಮ ಚಿದಂಗಸ್ವರೂಪರಾದ ಚಿದ್ಘನರಶರಣ
ನಿರ್ಲಜ್ಜಶಾಂತಯ್ಯನೆಂಬ ಶಿವಶರಣನ ಮುಖದಲ್ಲಿ
ಮೋಳಿಗಯ್ಯ ಮೊದಲಾದ ಸಕಲಪ್ರಮಥರ್ಗೆ ಬೋಧಿಸಿದರು ನೋಡ.
ಅದೇ ಪ್ರಸಾದವನ್ನೆ ನಿರ್ಲಜ್ಜಶಾಂತಯ್ಯನೆಂಬ ದೇಶಿಕೇದ್ರನು
ಚಂಗಣಗಿಲಮಂಟಪದ ರೇವಣಸಿದ್ದೇಶ್ವರಂಗೆ ಬೋಧಿಸಿದರು ನೋಡ.
ಅದೇ ಪ್ರಸಾದವನ್ನೆ ರೇವಣಸಿದ್ದೇಶ್ವರನೆಂಬ ದೇಶಿಕೇಂದ್ರನು
ಜ್ಞಾನೋದಯರಾಗಿ ತಮ್ಮಡಿಗೆರಗಿ ಬಂದ ಶಿಷ್ಯೋತ್ತಮ ಶಿವಶರಣರ್ಗೆ
ಸ್ವಾನುಭಾವಸೂತ್ರವ ಬೋಧಿಸುತ್ತಿರ್ದರು ನೋಡ.
ಅದೇ ಮಹಾಪ್ರಸಾದವ ನಿನ್ನ ಶ್ರೋತ್ರಮುಖದಲ್ಲಿ
ಮಹಾಮಂತ್ರಮೂರ್ತಿಯಾಗಿ ನೆಲೆಗೊಂಡಿರ್ಪ
ಪ್ರಸಾದಲಿಂಗಮುಖದಲ್ಲಿ ಅರುಹಿಸಿ ಕೊಟ್ಟೇವು ಕೇಳಿ,
ಮಹಾಲಿಂಗಮುಖದಲ್ಲಿ ಸಂತೃಪ್ತನಾಗಿ,
ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿ,
ಎನ್ನ ಜ್ಞಾನಮಂಟಪದಲ್ಲಿ ಮೂರ್ತಿಗೊಂಡಿರುವ ಸಂಗನಬಸವೇಶ್ವರ./47
ಅಯ್ಯ, ವರಕುಮಾರದೇಶಿಕೇಂದ್ರನೆ,
ನೀನು ಅಷ್ಟಭೋಗಂಗಳಂ ತ್ಯಜಿಸಿ,
ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ
ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು.
ಅದೆಂತೆಂದಡೆ :ಮಹಾಜ್ಞಾನ ತಲೆದೋರಿ
ಸರ್ವಸಂಗ ಪರಿತ್ಯಾಗವ ಮಾಡಿ,
ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ
ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ
ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ,
ಅಂಗಲಿಂಗದ ಪೂರ್ವಾಶ್ರಯವ ಕಳೆದು,
ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ,
ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ,
ತಮ್ಮ ಕೃಪಾಹಸ್ತವನ್ನಿಟ್ಟು,
ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ,
ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ,
ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ,
ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ
ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ
ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು,
ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ,
ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ,
ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ,
ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ,
ಏಕಲಿಂಗನೈಷ್ಠೆಯಿಂದ ಸಾವಧಾನಭಕ್ತಿ ಕರಿಗೊಂಡು,
ಆ ಲಿಂಗಾಂಗದ ಭಾಳದ ಪೂರ್ವಲಿಖಿತವ
ಜಂಗಮದ ಚರಣೋದ್ಧೂಳನದಿಂದ ತೊಡದು,
ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ,
ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ,
ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ,
ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ,
ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು,
ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ.
ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ,
ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ
ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ.
ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ
ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ
ತೃತೀಯದಲ್ಲಿ ಜಂಗಮಪ್ರಸಾದ ನೋಡ.
ಅದರಿಂದತ್ತ ಲಿಂಗಾಂಗವೆರಡಳಿದು,
ಸರ್ವಾಚಾರಸಂಪತ್ತಿನಾಚರಣೆಯ ತೋರಿ,
ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ,
ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ
ಚತುರ್ಥದಲ್ಲಿ ನಿಜಪ್ರಸಾದ ನೋಡ.
ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು,
ಇನ್ನಾವ ಭಯಕ್ಕೆ ಹೆದರಬೇಡಯ್ಯ!
ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ,
ಬಂದುದು ಕೊಂಡು, ಬಾರದುದನುಳಿದು
ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ. /48
ಅಯ್ಯ, ವರವೀರಶೈವ ಷಟ್ಸ್ಥಲಾಚಾರ್ಯ,
ಘನಲಿಂಗಚಕ್ರವರ್ತಿಯಪ್ಪ ಶ್ರೀ ಗುರುಲಿಂಗದೇವನು
ತನ್ನ ತೊಡೆಯಮೇಲೆ ಮೂರ್ತಿಗೊಂಡಿರುವ
ಕುಮಾರ ಇಷ್ಟಲಿಂಗದೇವಂಗೆ ಪ್ರಾಣಲಿಂಗ-ಭಾವಲಿಂಗಸ್ವರೂಪವಾದ
ಶರಣನ ಚಿದಂಗವೆ ನಿನಗೆ ನಿಜಮೋಕ್ಷಮಂದಿರವೆಂದು
ಅರುಹಿದ ಮೇಲೆ ನಿಮಿಷಾರ್ಧವಗಲಿರದೆ
ನಮ್ಮ ಪ್ರಮಥಗಣಾಚಾರಕ್ಕೆ ಹೊರಗುಮಾಡಿ,
ಭವಕ್ಕೆ ನೂಂಕೇವೆಂದು ಪ್ರತಿಜ್ಞೆಯನಿಟ್ಟು,
ಆ ಶರಣನ ಕರಸ್ಥಲಕ್ಕೆ ಪ್ರಾಣಕಳಾಚೈತನ್ಯಮೂರ್ತಿಲಿಂಗದೇವನ
ಮುಹೂರ್ತವ ಮಾಡಿಸಿ,
ಆ ಲಿಂಗದೇವಂಗೆ ಪ್ರಮಥಗಣಾರಾಧ್ಯ
ಭಕ್ತಮಹೇಶ್ವರರರೆಲ್ಲ ಅಭಯಹಸ್ತವಿತ್ತು,
ಆಮೇಲೆ ಚಿದಂಗಸ್ವರೂಪವಾದ ಶರಣಂಗೆ
ಈ ಲಿಂಗದೇವನ ನಿಮಿಷಾರ್ಧವಗಲಿರದೆ
ನಿನಗೂ ಅದೇ ಪ್ರತಿಜ್ಞೆ ಬಂದೀತೆಂದು ಆಜ್ಞಾಪನವ ಮಾಡಿ,
ಹೃದಯಕಮಲಮಧ್ಯದಲ್ಲಾಡುವ
ಸಹಸ್ರಹೆಡೆಯ ಕುಂಡಲೀಸರ್ಪಂಗೆ ಮುಸುಕಿರುವ
ಅಜ್ಞಾನ ಮಾಯಾಮರವೆಯನ್ನು
ಅನಾಹತದ್ವಾರದಿಂದ ಅನಾದಿಮೂಲಮಂತ್ರವನ್ನು ಉಸುರಿ
ಕುಂಡಲೀಸರ್ಪನ ಹೆಡೆಯ ಎತ್ತಿಸಿ,
ಚಿದಗ್ನಿಯ ಪುಟವ ಮಾಡುವಂಥಾದೆ ಲಿಂಗಾಯತದೀಕ್ಷೆ.
ಇಂತುಟೆಂದು ಶ್ರೀ ಗುರುನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./49
ಅಯ್ಯ, ಶರಣಸತಿ-ಲಿಂಗಪತಿ ಭಾವದಿಂದ
ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ,
ನಿರುಪಾಧಿಕ, ನಿಷ್ಕಳಂಕ, ನಿರಾಳವೆಂಬ ನವವಿಧ ಹಸ್ತಗಳಿಂದ
ನವವಿಧ ಪದಾರ್ಥವನ್ನು ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ-
ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ
ಪ್ರಸಾದಲಿಂಗ-ಮಹಾಲಿಂಗವೆಂಬ ನವವಿಧಲಿಂಗಗಳಿಗೆ
ಶ್ರದ್ಧಾಭಕ್ತಿ ಮೊದಲಾಗಿ ನವವಿಧ ಭಕ್ತಿಗಳಿಂದ
ಸಮರ್ಪಿಸುವ ಕ್ರಮವೆಂತೆಂದಡೆ : ತನುಸಂಬಂಧವಾದ ರೂಪುಪದಾರ್ಥವನ್ನು
ಇಷ್ಟಲಿಂಗಕ್ಕೆ ಸಮರ್ಪಿಸಿ,
ಮನಸಂಬಂಧವಾದ ರುಚಿಪದಾರ್ಥವನ್ನು
ಪ್ರಾಣಲಿಂಗಕ್ಕೆ ಸಮರ್ಪಿಸಿ,
ಧನಸಂಬಂಧವಾದ ತೃಪ್ತಿ ಪದಾರ್ಥವನ್ನು
ಭಾವಲಿಂಗಕ್ಕೆ ಸಮರ್ಪಿಸಿ,
ಸುಗಂಧಪದಾರ್ಥವನ್ನು ಆಚಾರಲಿಂಗಕ್ಕೆ ಸಮರ್ಪಿಸಿ,
ಸುರಸಪದಾರ್ಥವನ್ನು ಗುರುಲಿಂಗಕ್ಕೆ ಸಮರ್ಪಿಸಿ,
ಸುರೂಪುಪದಾರ್ಥವನ್ನು ಶಿವಲಿಂಗಕ್ಕೆ ಸಮರ್ಪಿಸಿ,
ಸ್ಪರ್ಶನಪದಾರ್ಥವನ್ನು ಜಂಗಮಲಿಂಗಕ್ಕೆ ಸಮರ್ಪಿಸಿ,
ಸುಶಬ್ದಪದಾರ್ಥವನ್ನು ಪ್ರಸಾದಲಿಂಗಕ್ಕೆ ಸಮರ್ಪಿಸಿ,
ಸುತೃಪ್ತಿಪದಾರ್ಥವನ್ನು ಮಹಾಲಿಂಗಕ್ಕೆ ಸಮರ್ಪಿಸಿ,
ಘ್ರಾಣ, ಚಿಹ್ನೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯಂಗಳು ಮೊದಲಾದ
ಸಮಸ್ತ ಮುಖಂಗಳಲ್ಲಿ ಬರುವ ಪದಾರ್ಥಂಗಳ ಸಮಸ್ತಲಿಂಗಂಗಳಿಗೆ
ಮಿಶ್ರಾಮಿಶ್ರಂಗಳೊಡನೆ ಸಮರ್ಪಿಸಿ,
ಆ ಲಿಂಗಂಗಳ ಸಂತೃಪ್ತಿ ಪರಿಣಾಮಪ್ರಸಾದದಲ್ಲಿ
ಲೋಲುಪ್ತವಾಗಿರುವಂಥಾದೆ ಪಂಚೇಂದ್ರಿಯಾರ್ಪಿತದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ
ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ. /50
ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ
ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ
ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ
ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ,
ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ,
ಇಂತು ಶ್ರೀಗುರುವಾಕ್ಯವ ನಿಜನೈಷ್ಠಯಿಂದರಿದು,
ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ
ಸ್ವಪಾಕವಾದಡು ಸರಿಯೆ,
ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ
ಪದಾರ್ಥವಾದಡು ಸರಿಯೆ,
ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ,
ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ,
ನಿರ್ವಂಚಕತ್ವದಿಂದ ಸಂಚಲಚಿತ್ತವನಳಿದು,
ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು,
ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ
ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ
ದ್ವಿತೀಯ ಕೈಲಾಸ ಶಿವಮಂದಿರವೆಂದು
ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು,
ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ
ಷಡ್ಗುಣೈಶ್ವರ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು,
ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ
ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು
ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./51
ಅಯ್ಯ, ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ
ಉತ್ಪತ್ಯವಾಗಿ ನಿರ್ಮಾಯಕಂಥೆಯ ಧರಿಸಿದ ಶಿವಶರಣಂಗೆ
ಅನಂತ ಲೀಲೆಯಲ್ಲಿ ಬೆಂಬತ್ತಿ ಬಂದ ಮಹಾಪಾಪವೆ ಒಂದುರೂಪಾಗಿ,
ಮಾಯಾಜಡಜೀವಿಶರೀರವ ಧರಿಸಿ ಪರಿಪರಿಯಿಂದ
ನಿಂದ್ಯ ಕುಂದು ಅಪಮೃತ್ಯುಗಳು ಬಂದು ತಟ್ಟಿದಲ್ಲಿ
ಅರ್ಪಿತಾವಧಾನ ಸುಖದುಃಖಂಗಳು ಬಂದು ಸೋಂಕಲೊಡನೆ
ಶಿವಶರಣನು ತನ್ನ ಸ್ವಾತ್ಮ ಜ್ಞಾನದಿಂದರಿದು ನೋಡಿದಲ್ಲಿ
ಈ ಮಾಯಾಜಡಜೀವಾತ್ಮರಿಗೆ ಸೂತ್ರಧಾರಿ ಶಿವನು
ಕಪಟನಾಟಕ ಲೀಲೆಯ ಧರಿಸಿ ಸಕಲಜೀವಾತ್ಮರ ಮಧ್ಯದಲ್ಲಿ
ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ,
ಆ ಜೀವನೆಂಬ ವಿಧಿಗೆ ಸ್ತುತಿ-ನಿಂದ್ಯ, ಪುಣ್ಯ, ಪಾಪ,
ಸಂಕಲ್ಪ-ವಿಕಲ್ಪವೆಂಬ ಕುಟಿಲವ್ಯವಾಹರವ ಕಲ್ಪಿಸಿ,
ಆ ಜೀವನಿಂದ ಭಕ್ತಗಣಂಗಳಲ್ಲಿ
ಅಷ್ಟಾವರಣದ ನಿಷ್ಠಾಪರತ್ವವ ನೋಡಬೇಕೆಂದು
ಅನಂತ ಬಾಧೆಗಳಿಂದ ಬಾಧಿಸಿದಲ್ಲಿ
ಶಿವಶರಣಗಣಂಗಳು ಆ ಬಾಧೆಗೆ ಅಳುಕದೆ
ಚಿಂತಿಸದೆ ಅಷ್ಟಾವರಣಭರಿತರಾಗಿ
ದೇಹಾಭಿಮಾನದ ಹಸಿವು, ತೃಷೆ, ನಿದ್ರೆ, ಆಲಸ್ಯ, ಕುಸುಂಗವೆಂಬ
ಕಾಲ-ಕಾಮರ ಪಾಶದಲ್ಲಿ ಬೀಳದೆ,
ಭವಿ ಭಕ್ತನೆಂಬ ವಿಚಾರವನರಿಯದ ದುಷ್ಟರ ಕಂಡರೆ ದೂರದಲ್ಲಿರಬೇಕೆಂಬ
ಗುರುವಾಕ್ಯವ ತಿಳಿದು ಅವರ ಸಂಭಾಷಣೆ-ಸಂಸರ್ಗವಮಾಡದೆ
ಅವರ ಸ್ತುತಿ ನಿಂದ್ಯಾದಿಗಳನಾಲಿಸದೆ,
ನಿಷ್ಕಳಂಕ ಪರಬ್ರಹ್ಮ ಪರಶಿವಲಿಂಗದಲ್ಲಿ
ಸದಾಚಾರಿ-ಸನ್ಮಾಗರ್ಿ-ಸುಸಂಗಿಗಳಿಂದ ಶ್ರದ್ಧಾತುರ ಪರಿಣಾಮದಲ್ಲಿ
ಬಂದು ತಟ್ಟಿದ ಪರಿಣಾಮ ಪಾದೋದಕ ಪ್ರಸಾದದಲ್ಲಿ ಲೋಲುಪ್ತರಾಗಿ,
ತಮ್ಮ ನಡೆನುಡಿಗಳ ಸ್ವಾತ್ಮಜ್ಞಾನದಿಂದ ವಿಚಾರಿಸಿ,
ಪಕ್ವವ ಮಾಡುವಂಥ ನಿಂದ ನಿಲುಕಡೆಯ ಅಹಿಂಸೆದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಸಚ್ಚಿದಾನಂದಮೂರ್ತಿ
ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./52
ಅಯ್ಯ, ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ
ಮತ್ತಾ ಗುರುಲಿಂಗಜಂಗಮಸ್ವರೂಪವಾಗಿ,
ನಿಜಾಚರಣೆಯಲ್ಲಿ ನಿಂದು, ಅಸತ್ಯವನಳಿದು ಸುಸತ್ಯದಲ್ಲಿ ನಿಂದು,
ಅನಾಚಾರವನುಳಿದು ಶಿವಾಚಾರಸನ್ಮಾರ್ಗದಲ್ಲಿ ನಿಂದು,
ಭವಿ ನಡೆನುಡಿಗಳನುಳಿದು ಭಕ್ತನ ನಡೆನುಡಿಗಳಲ್ಲಿ ನಿಂದು,
ಅಯೋಗ್ಯವಾದ ಭೋಗವನುಳಿದು
ಯೋಗ್ಯವಾದ ಭೋಗದಲ್ಲಿ ನಿಂದು,
ತನ್ನಾದಿ ಮಧ್ಯಾವಸಾನವ ತಿಳಿದು,
ತನ್ನ ನಿಜಾಚರಣೆ ಲೀಲಾವಿನೋದದಿಂದ
ತನ್ನ ತಾನರ್ಚಿಸುವ ನಿಲುಕಡೆಯ ವಿಚಾರವ ನೋಡ
ಸಂಗನಬಸವೇಶ್ವರ./53
ಅಯ್ಯ, ಶ್ರೀಗುರುಲಿಂಗಜಂಗಮವೇ
ರುದ್ರಲೋಕದ ರುದ್ರಗಣಂಗಳಿಗೆ, ಶಾಂಭವಲೋಕದ ಶಾಂಭವಗಣಂಗಳಿಗೆ,
ನಾಗಲೋಕದ ನಾಗಗಣಂಗಳಿಗೆ, ದೇವಲೋಕದ ದೇವಗಣಂಗಳಿಗೆ,
ಮರ್ತೃಲೋಕದ ಮಹಾಗಣಂಗಳಿಗೆ
ಅವರವರ ಮನ-ಭಾವ-ಕಾರಣಂಗಳು ಹೇಗುಂಟೊ ಹಾಂಗೆ
ಆಯಾಯ ಪ್ರಸನ್ನೇತಿ ಪ್ರಸಾದವಾಗಿರ್ಪರು ನೋಡ.
ಸ್ವರ್ಗ-ಮರ್ತೃ-ಪಾತಾಳಲೋಕದಲ್ಲಿ ಚರಿಸುವ
ಹರಿಸುರಬ್ರಹ್ಮಾದಿ ದೇವದಾನವಮಾನವ ಮನಮುನಿಗಳೆಲ್ಲ
ಅತ್ಯತಿಷ್ಠದ್ದಶಾಂಗುಲವೆಂದು ಹೊಗಳುವ ಶ್ರುತಿಯಂತೋ ಹಾಂಗೆ
ಅವರವರ ಮನದಂತೆ ಮಹಾದೇವನಾಗಿ ಫಲಪದಂಗಳ ಕೊಟ್ಟು,
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕತ್ವದಿಂದ ಸರ್ವಲೋಕಂಗಳಿಗೆಲ್ಲ
ಸೂತ್ರಧಾರಿಗಳಾಗಿರ್ಪರು ನೋಡ.
ಇಂತು ಏಕಮೇವ ಪರಬ್ರಹ್ಮವೆಂಬ ಶ್ರುತಿಯ ದಿಟವಮಾಡಿ
ಪರಮಸ್ವಸ್ಥಿರದ ಮಂಡಲದ ಮೇಲೆ ಶಿವ-ಶಕ್ತಿ, ಅಂಗ-ಲಿಂಗವೆಂಬ
ಉಭಯನಾಮವಳಿದು ಶಿಷ್ಯರೂಪಿನಿಂದ ಕುಳ್ಳಿರಿಸಿ
ದೀಕ್ಷಾಪಾದೋದಕ ಮಿಶ್ರವಾದ ಗೋಮೂತ್ರದಿಂದ
ಸಪ್ತವ್ಯಸನ ಸಂಬಂಧವಾದಂಗ, ಸಪ್ತಧಾತುಸಂಬಂಧವಾದ ಲಿಂಗ,
ಇಂತು ಅಂಗದ ಮಲಿನಭಾವ, ಲಿಂಗದ ಶಿವಭಾವವ ಕಳದು,
ಕ್ಷೀರ, ಘೃತ, ರಂಭಾ, ಇಕ್ಷು, ಮಧುಯುಕ್ತವಾದ ರಸಪಂಚಾಮೃತವ
ಜಂಗಮಚರಣೋದಕ ಮಿಶ್ರದಿಂದ ಅಭಿಷೇಕಮಾಡಿಸಿ,
ಅದರಿಂ ಮೇಲೆ ಗುರುಪಾದೋದಕದಲ್ಲಿ ಶರಣಗಣಂಗಳು
ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ,
ಪುಷ್ಪೋದಕವೆಂಬ ಪಂಚಪರಮಾನಂದ ಜಲದಿಂದ ಅಭ್ಯಂಗಸ್ನಾನ ಮಾಡಿಸಿ,
ಹಿಂದು-ಮುಂದಣ ಕಾಲಕಾಮರ ಭಯಕ್ಕೆ ಅಂಜಬೇಡವೆಂದು
ತ್ರಿವಿಧಂಗುಲಪ್ರಮಾಣವಾದ ದಭರ್ೆಯ ಅಂತು ಮಾಡಿ
ತ್ರಿವಿಧಮಂತ್ರಸ್ಮರಣೆಯಿಂದ ಕಟಿಯಲ್ಲಿ ಧರಿಸಿದರಯ್ಯ.
ಆರುವೈರಿಗಳಿಗೆ ಒಳಗಾಗಬೇಡವೆಂದು ಷಡಂಗುಲಪ್ರಮಾಣವಾದ
ರಂಭಾಪಟ್ಟೆಯ ಕೌಪೀನವ ಮಾಡಿ ಷಡಕ್ಷರಮಂತ್ರಸ್ಮರಣೆಯಿಂದ
ಹರಿಯಜದ್ವಾರಗಳ ಬಂಧಿಸಿದರಯ್ಯ.
ಅದರಿಂದ ಮೇಲೆ ನಾರಂಗಶಾಟಿಯ ಪವಿತ್ರತೆಯಿಂ ಹೊದ್ದಿಸಿ,
ಶ್ರೀ ಗುರುದೇವನ ಚರಣಕಮಲಕ್ಕೆ ಅಷ್ಟಾಂಗಪ್ರಣಿತನ ಮಾಡಿಸಿ,
ಶಿವಶರಣ ಭಕ್ತ ಮಾಹೇಶ್ವರರುಗಳಿಗೆ ಹುಸಿಯ ನುಡಿಯದೆ, ದಿಟವ ಬಿಡದೆ,
ಆಪ್ತತ್ವದಿಂದ ನಡೆ-ನುಡಿ, ಕೊಟ್ಟುಕೊಂಬ ವಿಚಾರಂಗಳ ಶ್ರುತಮಾಡಿದಲ್ಲಿ
ಶ್ರೀ ಗುರುದೇವನು ಶರಣಗಣ ಒಪ್ಪಿಗೆಯಿಂದ
ಶಿಷ್ಯನ ಮಸ್ತಕದ ಮೇಲೆ ಅಭಯಹಸ್ತವನ್ನಿಟ್ಟು, ಗುರುಶಿಷ್ಯಭಾವವಳಿದು,
ಗುರುವಿನ ಸೂತ್ರದ ಶಿಷ್ಯಹಿಡಿದು, ಶಿಷ್ಯನ ಸೂತ್ರವ ಗುರುವು ಹಿಡಿದು,
ಅಂತರಂಗಬಹಿರಂಗದಲ್ಲಿ ಶಿವಯೋಗಾನುಸಂಧಾನದಿಂದ ಏಕರೂಪವಾಗಿ
ಭೃತ್ಯರಿಂದ ಕಳಸಾರ್ಚನೆಯ ರಚಿಸಿ,
ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ನವರತ್ನಖಚಿತವಾದ
ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡಿರುವಂಥ ಮಂತ್ರಮೂರ್ತಿ
ನಿರಂಜನಜಂಗಮಕ್ಕೆ ವಿಭೂತಿ ವೀಳ್ಯ, ಸುವರ್ಣಕಾಣಿಕೆ,
ದಶಾಂಗಘನಸಾರ, ಪುಷ್ಪದಮಾಲೆ, ವಸ್ತ್ರಾಭರಣ ಮೊದಲಾಗಿ
ಸಪ್ತಪದಾರ್ಥಂಗಳ ಪ್ರಮಥಗಣಾರಾಧ್ಯ
ಭಕ್ತಮಾಹೇಶ್ವರ ಮಧ್ಯದಲ್ಲಿ ಇಟ್ಟು
ಅಷ್ಟಾಂಗಯುಕ್ತರಾಗಿ ಸ್ವಸ್ಥದೃಢಚಿತ್ತದಿಂದ
‘ಬಹು ಪರಾಕು ಭವರೋಗ ವೈದ್ಯನೆ’
ಎಂದು ತ್ರಿಕರಣಶುದ್ಧತಿಯಿಂದ ಅಭಿವಂದಿಸುವಂಥಾದ್ದೆ
ಸ್ವಸ್ತಿಕಾರೋಹಣದೀಕ್ಷೆ.
ಇಂತುಟೆಂದು ಶ್ರೀ ಗುರುನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ. /54
‘ಅಯ್ಯ, ಷೋಡಶಕಮಲಂಗಳಲ್ಲಿ ನೆಲಸಿರ್ಪ
ಲಿಂಗಗಳಭಿದಾನವ ಕರುಣಿಸಬೇಕಯ್ಯ ಶ್ರೀಗುರನಾಥನೆ’
‘ಕೇಳಯ್ಯ ಎನ್ನ ಕಂಗಳ ಹೃದಯದಲ್ಲಿ ನೆಲಸಿರ್ಪ
ವರಕುಮಾರ ಶಿಷ್ಯೋತ್ತಮನೆ’
ಸುಚಿತ್ತಕಮಲದಲ್ಲಿ ಆಚಾರಲಿಮಂಗವಾಗಿ ನೆಲಸಿರ್ಪರಯ್ಯ.
ಸುಬುದ್ಧಿಕಮಲದಲ್ಲಿ ಗುರುಲಿಂಗವಾಗಿ ನೆಲಸಿರ್ಪರಯ್ಯ.
ನಿರಹಂಕಾರಕಮಲದಲ್ಲಿ ಶಿವಲಿಂಗವಾಗಿ ನೆಲಸಿರ್ಪರಯ್ಯ.
ಸುಮನಕಮಲದಲ್ಲಿ ಜಂಗಮಲಿಂಗವಾಗಿ ನೆಲಸಿರ್ಪರಯ್ಯ.
ಸುಜ್ಞಾನಕಮಲದಲ್ಲಿ ಪ್ರಸಾದಲಿಂಗವಾಗಿ ನೆಲಸಿರ್ಪರಯ್ಯ.
ಸದ್ಭಾವಕಮಲದಲ್ಲಿ ಮಹಾಲಿಂಗವಾಗಿ ನೆಲಸಿರ್ಪರಯ್ಯ.
ನಿರುಪಾಧಿಕಕಮಲದಲ್ಲಿ ಚಿದ್ಘನಲಿಂಗವಾಗಿ ನೆಲಸಿರ್ಪರಯ್ಯ.
ನಿಷ್ಪ್ರಪಂಚಕಮಲದಲ್ಲಿ ಚಿತ್ಪ್ರಾಣಲಿಂಗವಾಗಿ ನೆಲಸಿರ್ಪರಯ್ಯ.
ಇಂತೀ ಸಾಕಾರವಾದ ಅಷ್ಟದಳಕಮಲದಲ್ಲಿ
ಅಷ್ಟವಿಧಲಿಂಗಂಗಳಾಗಿ ನೆಲಸಿಪರ್ಾತನು ತಾನೆ ನೋಡ.
ಇನ್ನು ನಿರಾಕಾರವಾದ ಅಷ್ಟದಳಕಮಲಂಗಳಲ್ಲಿ ನೆಲಸಿರ್ಪ
ಲಿಂಗಂಗಳಾವಾವೆಂದಡೆ : ನಿರಾಲಂಬಕಮಲಲದಲ್ಲಿ ನಿಷ್ಕಳಂಕಲಿಂಗವಾಗಿ ನೆಲಸಿರ್ಪಯ್ಯ.
ನಿರಾತಂಕಕಮಲದಲ್ಲಿ ನಿಶ್ಶೂನ್ಯಲಿಂಗವಾಗಿ ನೆಲಸಿರ್ಪರಯ್ಯ.
ನಿಷ್ಕಾಮಕಮಲದಲ್ಲಿ ನಿರಂಜನಲಿಂಗವಾಗಿ ನೆಲಸಿರ್ಪರಯ್ಯ.
ನಿಷ್ಪ್ರಪಂಚಕಮಲದಲ್ಲಿ ನಿಷ್ಪ್ರಪಂಚಲಿಂಗವಾಗಿ ನೆಲಸಿರ್ಪರಯ್ಯ.
ಸಚ್ಚಿದಾನಂದಕಮಲದಲ್ಲಿ ಸಚ್ಚಿದಾನಂಲಿಂಗವಾಗಿ ನೆಲಸಿರ್ಪರಯ್ಯ.
ನಿರ್ನಾಮಕಮಲದಲ್ಲಿ ನಿರ್ನಾಮಲಿಂಗವಾಗಿ ನೆಲಸಿರ್ಪರಯ್ಯ.
ನಿರಾಳಕಮಲದಲ್ಲಿ ನಿರಾಳಲಿಂಗವಾಗಿ ನೆಲಸಿರ್ಪರಯ್ಯ.
ಸುರಾಳಕಮಲದಲ್ಲಿ ಸುರಾಳಲಿಂಗವಾಗಿ ನೆಲಸಿರ್ಪರು ನೋಡ.
ಇಂತು ಸಾಕಾರ-ನಿರಾಕಾರಲೀಲೆಯಿಂದ
ತಿಳಿದುಪ್ಪ ಹೆರೆದುಪ್ಪದೋಪಾದಿಯಲ್ಲಿ
ಷೋಡಶಕಮಲದಲ್ಲಿ ಷೋಡಶಲಿಂಗಂಗಳಾಗಿ ನೆಲಸಿರ್ಪ
ಅನಾದಿ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗಪ್ರಭು ತಾನೆ ನೋಡ
ಸಂಗನಬಸವೇಶ್ವರ./55
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ
ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ
ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ
ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ
ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ
ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ
ಭೃಂಗ ಕೀಡಿಯೋಪಾದಿಯಲ್ಲಿ
ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಭಿನ್ನಭೇದವನಳಿದು
ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ
ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ
ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ,
ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ
ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು,
ಶರಣೆಂದು ಮನ್ನಣೆಯ ಕೊಡದೆ,
ಭೂತಸೋಂಕಿದ ಮನುಜನೋಪಾದಿಯಲ್ಲಿ
ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ
ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ,
ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ
ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠದೀಕ್ಷೆ.
ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ
ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./56
ಅಯ್ಯ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಪಂಚಾಂಗವನಂಗೀಕರಿಸಿಕೊಂಡಿರುತ್ತಿಹ ಪರಬ್ರಹ್ಮಲಿಂಗದಲ್ಲಿ
ಸಮರಸಸಂಗದಿಂದ ಕೂಟವ ಕೂಡಿದ
ಅವಿರಳ ಪರಂಜ್ಯೋತಿಸ್ವರೂಪ ಶರಣನ ನಿಲುಕಡೆ ಎಂತೆಂದಡೆ: ಅಣುಮಾತ್ರ ಸತ್ಯನಡೆನುಡಿಗಳ ತೊಲಗನಯ್ಯ.
ದೃಢಚಿತ್ತದಿಂದ ಕೊಟ್ಟ ಭಾಷೆಗಳ ಬಡಮನದ ಸಂಗವಮಾಡಿ
ಹುಸಿ ನುಡಿಯ ನುಡಿಯನಯ್ಯ.
ನಿಜನೈಷ್ಠಾಪರತತ್ವದಿಂದ ಸತ್ಕಾಯಕ, ಸತ್ಪಾತ್ರಭಕ್ತಿ,
ಸತ್ಕ್ರಿಯಾಜ್ಞಾನಾಚಾರಂಗಳ ಅವಾಂತರದಲ್ಲಿ
ನಿಂದ್ಯ ಕುಂದು ದರಿದ್ರ ರೋಗ ರುಜಿ ವಿಪತ್ತು
ಹಾಸ್ಯ ರೋಷಂಗಳು ಬಂದು ತಟ್ಟಿದಲ್ಲಿ
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ
ಬಂದುದ ಮಹಾಪ್ರಸಾದವೆಂದು ಲಿಂಗಭೋಗಿಯಾಗಿರುವನಲ್ಲದೆ
ಶೈವ ಜಡಕರ್ಮಭೂತಪ್ರಾಣಿಗಳಂತೆ
ಸತ್ಕಾಯಕ, ಸತ್ಪಾತ್ರಭಕ್ತಿ, ಸತ್ಕ್ರಿಯಾ, ಜ್ಞಾನ ಆಚಾರಂಗಳ
ನಿಮಿಷಾರ್ಧವಗಲುವನಲ್ಲ ನೋಡ.
ಕುಲಛಲಕ್ಕಾಡದೆ, ಶಿವಶರಣರಲ್ಲಿ ಜಾತಿ ಸೂತಕವ ಬಳಸದೆ,
ದುಷ್ಕಾಯಕ, ಅಕ್ರಿಯಾ, ಅಜ್ಞಾನ,
ಅನಾಚಾರಂಗಳನನುಕರಿಸಿ, ಉದರಪೋಷಣಕ್ಕೆ,
ಲಾಂಛನದಿಚ್ಛೆಗೆ ನುಡಿದು, ಸಮಪಙ್ತಿಯ ಮಾಡದೆ,
ಪರಮಾನಂದ ಸುಖಾಬ್ಧಿಯಲ್ಲಿ ಮುಳುಗಿ, ಅಷ್ಟಾವಧಾನ ಎಚ್ಚರಗುಂದದೆ,
ಮನಪ್ರಾಣಲಿಂಗವಾದುದೀಗ ಸತ್ಯಶುದ್ಧದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಾನಂದಮೂರ್ತಿ
ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ. /57
ಅಯ್ಯ, ಸತ್ಯ ಸದಾಚಾರ ಸದ್ಭಕ್ತಿ ಜ್ಞಾನ ವೈರಾಗ್ಯ
ಸತ್ಕ್ರಿಯಾ ಸತ್ಕಾಯಕ ಸತ್ಪಾತ್ರಭಿಕ್ಷ ಲೀಲೆಯ ಧರಿಸಿ,
ಲೋಕಪಾವನಾರ್ಥವಾಗಿ ಇಚ್ಛೆಯ ನುಡಿಯದೆ,
ನಡೆನುಡಿ ಹೀನವಾದ ಸೂತಕ ಪಾತಕರ ಸಂಗವೆ ಹೊದ್ದದೆ,
ಗುರುಮಾರ್ಗಾಚಾರಕ್ಕೆ ಕುಂದು ಕೊರತೆಗಳ ತಾರದೆ,
ಸನ್ಮಾರ್ಗದಲ್ಲಾಚರಿಸುವ ಗುರುಲಿಂಗಜಂಗಮ ಸದ್ಭಕ್ತಿ ಚಾರಿತ್ರವನುಳ್ಳ
ಶಿವಶರಣ ಗಣಂಗಳಲ್ಲಿ ಕುಂದು ನಿಂದ್ಯಗಳ ಕಲ್ಪಿಸದೆ
ಎಚ್ಚರದಪ್ಪಿದಲ್ಲಿ ಬಹುಪರಾಕು ಸ್ವಾಮಿ
ಶರಣಗಣಂಗಳು ಹೋದ ಮಾರ್ಗವಿದಲ್ಲವೆಂದು
ಭೃತ್ಯಭಕ್ತಿಯಿಂದ ಹೇಳಿ, ಅಜ್ಞಾನ-ಅಕ್ರಿಯ-ಅನಾಚಾರವೆಂಬ
ಮಾಯಾಶರಧಿಯಲ್ಲಿ ಮುಳುಗಿ ಹೋಗುವ
ಇಷ್ಟಲಿಂಗಧಾರಕ ಭಕ್ತಗಣಂಗಳ ಕಂಡು
ಅಗಸ ತನ್ನ ಮಡಿ ಮೈಲಿಗೆ ಹೊರುವ ಕತ್ತೆಯು
ಜಿಹ್ವಾಲಂಪಟ ಗುಹ್ಯಲಂಪಟದಿಚ್ಛೆಗೆ ಹೋಗಿ
ಹಳ್ಳ ಕೊಳ್ಳ ಕೆರೆ ಬಾವಿಯೊಳಗೆ ಬಿದ್ದು ಹೋಗುವದ ಕಂಡು
ಕಿವಿಯ ಹಿಡಿದು ಎಳದುಕೊಂಡೋಪಾದಿಯಲ್ಲಿ
ಹಸ್ತ-ಪಾದವ ಹಿಡಿದು ಕಡೆಗಳೆದು
ಶ್ರುತಿ-ಗುರು-ಸ್ವಾನುಭಾವವ ತೋರಿ,
ಮತ್ತವರ ಕರುಣವ ಹಡದು, ಏಕಮಾರ್ಗದಲ್ಲಿ ಆಚರಿಸಿ,
ನಿಷ್ಕಲಪರಶಿವಲಿಂಗದಲ್ಲಿ ಶಿಖಿ-ಕರ್ಪುರದಂತೆ
ರತಿ ಸಂಯೋಗವುಳ್ಳಂಥಾದೆ ಮನೋರ್ಲಯದೀಕ್ಷೆ.
ಇಂತುಟೆಂದು ಶ್ರೀಗುರು ನಿರಾಲಂಭಮೂರ್ತಿ
ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./58
ಅಯ್ಯ, ಸತ್ಯಸದಾಚಾರಲಿಂಗ ಧರಿಸಿದ ಲಿಂಗಭಕ್ತಂಗೆ
ದೀಕ್ಷಾಗುರುವೆ ಕುಲದೈವ, ಶಿಕ್ಷಾಗುರುವೆ ಮನೆದೈವ,
ಜ್ಞಾನಗುರುವೆ ಮನದ ಮಧ್ಯದಲ್ಲಿ ಬೆಳಗುವ ಪರಂಜ್ಯೋತಿಲಿಂಗವೆಂದು
ಕುಲದುಂಬಿ, ಮನೆದುಂಬಿ, ಮನದುಂಬಿ, ಮತ್ತೊಂದು ಇತರ ವಾದಿಗಳಂತೆ,
ಅನ್ಯಾರ್ಚನೆ, ಅನ್ಯಶಾಸ್ತ್ರ, ಅನ್ಯಮಂತ್ರ, ಅನ್ಯಪಾಕವ ಮುಟ್ಟದೆ,
ಸ್ವಪಾಕವ ಮಾಡಿ ಹರಗಣಗುರುಚರಪರಮಕ್ಕೆ ಸಮರ್ಪಿಸಿ,
ಬಂದ ಬರವ, ನಿಂದ ನಿಲುಕಡೆಯ ತಿಳಿದು,
ತನುವೆಲ್ಲ ದೀಕ್ಷಾಗುರುವಿನ ದೀಕ್ಷಾಪಾದೋದಕ
ಶುದ್ಧಪ್ರಸಾದವೆಂದರಿದ ನಿಜವೆ ಆದಿಪ್ರಸಾದಿಸ್ಥಲ ನೋಡ.
ಮನವೆಲ್ಲ ಶಿಕ್ಷಾಗುರುವಿನ ಶಿಕ್ಷಾಪಾದೋದಕ
ಸಿದ್ಧಪ್ರಸಾದವೆಂದರಿದ ನಿಜವೆ ಅಂತ್ಯಪ್ರಸಾದಿಸ್ಥಲ ನೋಡ.
ಭಾವವೆಲ್ಲ ಜ್ಞಾನಗುರುವಿನ ಜ್ಞಾನಪಾದೋದಕ
ಪ್ರಸಿದ್ಧಪ್ರಸಾದವೆಂದರಿದ ನಿಜವೆ ಸೇವ್ಯಪ್ರಸಾದಿಸ್ಥಲ ನೋಡ.
ಇಂತು ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಸ್ವರೂಪವಾದ
ಲಿಂಗಜಂಗಮದ ಪಾದೋದಕ ಪ್ರಸಾದ
ಒದವಿದಲ್ಲಿ ಆಚರಣೆ, ಸಾಮಾನ್ಯದಲ್ಲಿ ಸಂಬಂಧವಿಟ್ಟುಕೊಂಡು
ಕೊಟ್ಟು ಕೊಳಬಲ್ಲಾತನೆ ನಿಚ್ಚಪ್ರಸಾದಿಯಯ್ಯ.
ಲಿಂಗಜಂಗಮದ ಪಾದೋದಕ ಪ್ರಸಾದವನುಳಿದು
ಜಂಗಲಿಂಗಮದ ಪ್ರಸಾದ ಪಾದೋದಕ ಪ್ರಸನ್ನ ಪ್ರಸಾದವ
ದಿವಾರಾತ್ರಿಗಳೆನ್ನದೆ ಆಚರಣೆಯ ಪ್ರಾಣವಾಗಿ
ಕೊಟ್ಟು ಕೊಳಬಲ್ಲಾತನೆ ಅಚ್ಚಪ್ರಸಾದಿಯಯ್ಯ.
ಇವರಿಬ್ಬರಲ್ಲಿ ಅತಿಭೃತ್ಯನಾಗಿ,
ಇವರಿಬ್ಬರಾಚರಣೆಯಲ್ಲಿ ದೃಢಚಿತ್ತದಿಂದ
ಕೊಟ್ಟು ಕೊಳಬಲ್ಲಾತನೆ ಸಮಯಪ್ರಸಾದಿ ನೋಡ.
ಇಂತು ಸರ್ವಾಚಾರ ಸಂಪತ್ತಿನಾಚರಣೆಯ ಸಾಕಾರಲೀಲೆ,
ಅರ್ಪಿತಾವಧಾನ, ಚೇತನಪರಿಯಂತರವು
ಆಚರಿಸುವಂಥದೆ ದೃಢವ್ರತದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ./59
ಅಯ್ಯ, ಸದ್ಗುರು ಬಸವಣ್ಣನೆ ಜಗತ್ಪಾವನ ನಿಮಿತ್ಯಾರ್ಥವಾಗಿ
ಮಾದಲಾಂಬಿಕೆಯ ಹೃನ್ಮಂದಿರದಲ್ಲಿ ನೆಲಸಿರುವ
ನಿಷ್ಕಲ ಕೂಡಲಸಂಗಮೇಶ್ವರಲಿಂಗದ ಚಿದ್ಗರ್ಭದಿಂದ
ಸ್ವಾನುಭಾವ ಸದ್ವಾಸನೆಯನೆ ಬೀರುತ್ತ
ದವನದ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ.
ಅಯ್ಯ, ಚೆನ್ನಬಸವರಾಜದೇವನೆ ಪ್ರಮಥಗಣನಿಮಿತ್ಯಾರ್ಥವಾಗಿ
ಅಕ್ಕನಾಗಲೆದೇವಿಯ ಚಿದಾಕಾಶದ ವರಚೌಕಮಧ್ಯದಲ್ಲಿ ನೆಲಸಿರ್ಪ
ನಿಶ್ಶೂನ್ಯ ಕೂಡಲಚೆನ್ನಸಂಗನ ಚಿದ್ಗರ್ಭದಿಂದ
ಸ್ವಾನುಭಾವಸದ್ವಾಸನೆಯನೆ ಬೀರುತ್ತ
ಮರುಗದ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ.
ಅಯ್ಯ, ಪ್ರಭುಸ್ವಾಮಿಗಳೆ ಇವರಿಬ್ಬರ ಪರಿಣಾಮಕ್ಕೋಸ್ಕರವಾಗಿ
ಕರವೂರ ಸುಜ್ಞಾನಿಗಳ ಪಶ್ಚಿಮಸ್ಥಾನದಲ್ಲಿ ನೆಲಸಿರುವ
ನಿರಂಜನ ಗುರುಗುಹೇಶ್ವರನ ಚಿದ್ಗರ್ಭದಿಂದ
ಸ್ವಾನುಭಾವ ಸದ್ವಾಸನೆಯನೆ ಬೀರುತ್ತ
ಪಚ್ಚೇದ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ.
ಅಯ್ಯ, ನೀಲಲೋಚನೆ, ಮುಕ್ತಾಯಕ್ಕಗಳು,
ಮಹಾದೇವಿಯಕ್ಕಗಳು ಮತ್ರ್ಯಲೋಕದ ಮಹಾಗಣಂಗಳಿಗೆ
ಭಕ್ತಿಜ್ಞಾನವೈರಾಗ್ಯ ಸತ್ಕ್ರಿಯಾ ಸದಾಚಾರದ
ಪರಿವರ್ತನೆಯ ತೋರಬೇಕೆಂದು ಪರಶಿವಲಿಂಗದ ಚಿದ್ಗರ್ಭದಿಂದ
ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ
ಸ್ವಾನುಭಾವ ಸದ್ವಾಸನೆಯನೆ ಬೀರುತ್ತ
ಕಸ್ತೂರಿ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮದ ಲೀಲೆಯಿಂದ ಮತ್ರ್ಯಕ್ಕವತರಿಸಿದರು ನೋಡಾ.
ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳ ಶರಣ,
ಮೋಳಿಗೆಮಾರಯ್ಯ ಶರಣ ಮೊದಲಾದ
ಸಮಸ್ತ ಪ್ರಮಥಗಣಂಗಳೂ ಜಗತ್ಪಾವನಾರ್ಥ
ಮಹಿಮಾ ಷಟ್ಸ್ಥಲಮಾರ್ಗ ನಿಮಿತ್ಯಾರ್ಥವಾಗಿ,
ಬಸವೇಶ್ವರಸ್ವಾಮಿಗಳ ಆಜ್ಞಾಮಂಟಪ
ತ್ರಿಕೂಟಸಂಗಮ ಸಿಂಹಾಸನದ ಮಧ್ಯದಲ್ಲಿ ನೆಲಸಿರ್ದ
ಚಿದ್ಘನಮಹಾಲಿಂಗದ ಚಿದ್ಬೆಳಗಿನೊಳಗೆ
ಅನಂತಕೋಟಿ ಬರಸಿಡಿಲೊಗೆದೋಪಾದಿಯಲ್ಲಿ
ಸ್ವಾನುಭಾವ ಸದ್ವಾಸನೆಯ ಪ್ರಕಾಶದಿಂದ
ಸಂಪಿಗೆ, ಮೊಲ್ಲೆ, ಮಲ್ಲಿಗೆ, ಜಾಜಿ, ಬಕುಳ,
ಕರವೀರ, ಸುರಹೊನ್ನೆ, ಪಾರಿಜಾತ, ತಾವರೆ, ನೈದಿಲು
ಮೊದಲಾದ ಸಮಸ್ತ ಪುಷ್ಪಂಗಳುದಯದಂತೆ, ಬಳಸಿ ಬ್ರಹ್ಮವಾಗಿ
ಪರಶಿವನಪ್ಪಣೆವಿಡಿದು ಮತ್ರ್ಯಲೋಕಕ್ಕವತರಿಸಿದರು ನೋಡ.
ಅಯ್ಯ, ವರಕುಮಾರದೇಶಿಕೇಂದ್ರನೆ, ಗುರುಬಸವೇಶ್ವರಸ್ವಾಮಿಗಳೆ
ನಿಮ್ಮ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ಚೆನ್ನಬಸವಸ್ವಾಮಿಗಳೆ ನಿಮ್ಮ ಮನಸ್ಥಲದಲ್ಲಿ
ಪ್ರಾಣಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ಅಲ್ಲಮಪ್ರಭುವೆ ನಿಮ್ಮ ಭಾವಸ್ಥಲದಲ್ಲಿ
ಭಾವಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ನೀಲಾಂಬಿಕೆ-ಮುಕ್ತಾಯಕ್ಕ-ಮಹಾದೇವಿಯಕ್ಕಗಳೆ
ನಿಮ್ಮ ತ್ರಿವಿಧಚಕ್ಷುವಿನಲ್ಲಿ ಕರುಣಾಜಲ-ವಿನಯಜಲ-ಸಮತಾಜಲ
ಮೊದಲಾದ ಹತ್ತುತೆರದಿಂದ ಪರಮಗಂಗಾತೀರ್ಥವಾಗಿ
ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳಯ್ಯ, ಶರಣ ಮೋಳಿಗಪ್ಪ
ಮೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ
ನಿನ್ನ ಹೃದಯಕಮಲ ಮಧ್ಯದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ
ಮೊದಲಾದ ಹನ್ನೊಂದು ತೆರದಿಂದ ಮಹಾಚಿದ್ಘನ ಪ್ರಸಾದವಾಗಿ
ಚುಳಕಮಾತ್ರದಿಂದ ನೆಲಪಿರ್ಪರು ನೋಡ
ಸಂಗನಬಸವೇಶ್ವರ./60
ಅಯ್ಯಾ, ಒಂದು ಅನಾದಿ ಮೂಲಪ್ರಣಮವೆ
ಸಾಕಾರಲೀಲೆಯಧರಿಸಿ, ಚಿದಂಗ-ಚಿದ್ಘನಲಿಂಗವಾಗಿ,
ಆ ಒಂದಂಗ-ಲಿಂಗವೆ ತ್ರಿವಿಧಾಂಗ ತ್ರಿವಿಧಲಿಂಗವಾಗಿ,
ಆ ತ್ರಿವಿಧಲಿಂಗಾಂಗವೆ ಷಡ್ವಿಧಲಿಂಗಾಂಗವಾಗಿ,
ಆ ಷಡ್ವಿಧಲಿಂಗಾಂಗವೆ ಛತ್ತೀಸಲಿಂಗಾಂಗವಾಗಿ,
ಆ ಛತ್ತೀಸ ಲಿಂಗಂಗಳನೆ ಶ್ರದ್ಧಾದಿ ಛತ್ತೀಸಭಕ್ತಿಗಳಲ್ಲಿ
ಕೂಟವ ಮಾಡಿ,
ಇಂತು ಲಿಂಗಾಂಗ ಭಕ್ತಿಗಳನೆ ಸತ್ಕ್ರಿಯಾ, ಸಮ್ಯಜ್ಞಾನ,
ಸತ್ಕಾಯಕ, ಸತ್ಪಾತ್ರಭಿಕ್ಷದಲ್ಲಿ ಸಮರಸವ ಮಾಡಿ,
ಆ ಮಹಾಜ್ಞಾನವ ಸಾಧಿಸಿ, ಆ ಮಹಾಜ್ಞಾನದ ಬಲದಿಂದ
ಪೃಥ್ವೀಸಂಬಂಧವಾದ ಕರ್ಮೇಂದ್ರಿಯಂಗಳು,
ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಯಂಗಳು,
ಅಗ್ನಿತತ್ವಸಂಬಂಧವಾದ ವಿಷಯಂಗಳು.
ವಾಯುತತ್ವಸಂಬಂಧವಾದ ಪ್ರಾಣವಾಯುಗಳು,
ಆಕಾಶತತ್ವಸಂಬಂಧವಾದ ಕರಣಂಗಳು,
ಭಾನುತತ್ವಸಂಬಂಧವಾದ ಉದರವೆಂಬ ಭುತಂಗಳು,
ಶಶಿತತ್ವಸಂಬಂಧವಾದ ಶ್ವೇತವರ್ಣ ಮೊದಲಾದ ವರ್ಣಂಗಳು,
ಆತ್ಮತತ್ವಸಂಬಂಧವಾದ ಸಮಸ್ತನಾದಂಗಳು
ಇಂತು ಸಮಸ್ತತತ್ವಂಗಳು ಕೂಡಲಾಗಿ ನಾಲ್ವತ್ತುತತ್ವವೆನಿಸುವವು.
ಈ ತತ್ವಂಗಳ ಶಿವತತ್ವ, ಅನಾದಿಶಿವತತ್ವ,
ಅನಾದಿನಿಷ್ಕಲಪರಶಿವತತ್ವ, ಅನಾದಿ ನಿಷ್ಕಲಪರಾತ್ಪರಶಿವತತ್ವವೆಂಬ,
ಚತುರ್ವಿಧ ತತ್ವಸ್ವರೂಪ ಗುರು-ಲಿಂಗ-ಜಂಗಮ-ಪ್ರಸಾದವ ಕೂಡಿಸಿ,
ಆ ಮಹಾಜ್ಞಾನದಿಂ ನೋಡಿದಲ್ಲಿ ನಾಲ್ವತ್ತುನಾಲ್ಕು ತತ್ವಸ್ವರೂಪಿನಿಂದ
ಒಂದು ಚಿದಂಗವೆನಿಸುವುದಯ್ಯ.
ಆ ಚಿದಂಗದ ಷಟ್ಚಕ್ರಂಗಳಲ್ಲಿ ಶ್ರೀಗುರುಲಿಂಗಜಂಗಮ ಕೃಪೆಯಿಂದ
ಮೂರ್ತಿಗೊಂಡಿರುವ ಐವತ್ತಾರು ಪ್ರಣಮಂಗಳೆ
ಸಾಕಾರಲೀಲೆಯಧರಿಸಿ, ನವಕೃತಿಸಂಬಂಧವಾದ
ಅನಾದಿಮೂಲಪ್ರಣಮವ ಕೂಡಿ ಏಕಸ್ವರೂಪಿನಿಂದ
ಐವತ್ತೇಳುಲಿಂಗಸ್ವರೂಪಪ್ರಣಮವನೊಳಕೊಂಡು
ಒಂದು ಚಿದ್ಘನಲಿಂಗವೆನಿಸುವುದಯ್ಯ.
ಇಂತು ಅಂಗಲಿಂಗವೆಂಬ ನೂರೊಂದು ಸ್ಥಲಕುಳಂಗಳ ವಿಚಾರಿಸಿ,
ಶರಣರೂಪಿನಿಂದ ತನ್ನಾದಿ ಮಧ್ಯಾವಸಾನವ ತಿಳಿದು,
ಕರ್ತುಭೃತ್ಯತ್ವದ ಸದ್ಭಕ್ತಿಯ ವಿಚಾರವನರಿದು,
ದ್ವಾದಶಾಚಾರದ ವರ್ಮವನರಿದು,
ಕರ್ತುಭೃತ್ಯತ್ವಾಚಾರ ಸದ್ಭಕ್ತಿಯೆಂಬ ನಿಜಸಮಾಧಿಯಲ್ಲಿ ನಿಂದು,
ನಿರವಯಲ ಕೂಡುವಂಥಾದೆ ತತ್ತ್ವದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಚೈತನ್ಯಮೂರ್ತಿ
ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ./61
ಆ ಇಷ್ಟಮಹಾಲಿಂಗವೆ ಅನಾದಿಶರಣನ ಆಧಾರಚಕ್ರದಲ್ಲಿ
ನಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಆ ಮಹಾಲಿಂಗವೆ ಸ್ವಾಧಿಷ್ಠಾನಚಕ್ರದಲ್ಲಿ
ಮಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಆ ಮಹಾಲಿಂಗವೆ ಮಣಿಪೂರಕಚಕ್ರದಲ್ಲಿ
ಶಿಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಅನಾಹತಚಕ್ರದಲ್ಲಿ ವಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ವಿಶುದ್ಧಿಚಕ್ರದಲ್ಲಿ ಯಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಆಜ್ಞಾಚಕ್ರದಲ್ಲಿ ಓಂಕಾರಮಂತ್ರಮೂರ್ತಿಯಾಗಿ ನೆಲಸಿಪರ್ುರು ನೋಡ!
ಬ್ರಹ್ಮರಂಧ್ರದಲ್ಲಿ ಬಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಶಿಖಾಚಕ್ರದಲ್ಲಿ ಕ್ಷಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಪಶ್ಚಿಮಚಕ್ರದಲ್ಲಿ ವ್ಯಂಜನ ಹಕಾರಮಂತ್ರಮೂರ್ತಿಯಾಗಿ ನೆಲಸಿಪರ್ುದು ನೋಡ!
ಈ ಪ್ರಕಾರದಿಂದ ಅನಾದಿಶರಣನ ಸರ್ವಾಂಗದಲ್ಲಿ
ಕಿಷ್ಕಿಂದಮಯವಾಗಿ ತುಂಬಿಕೊಂಡಿಪರ್ುದು.
ಇಂತಪ್ಪ ಪರಂಜ್ಯೋತಿ ಚಿದ್ಘನ ಮಹಾಲಿಂಗ
ಪ್ರಮಾಣಿಸಿ ನೋಡೆನೆಂದವರಿಗೆ ಅತ್ಯತಿಷ್ಠದ್ದಶಾಂಗುಲವಾಗಿಪರ್ುದು
ನೋಡ ಸಂಗನಬಸವೇಶ್ವರ./62
ಆ ಮಹಾಲಿಂಗವೆ ಚಿನ್ನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪರನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪ್ರಣಮನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಮಹಾನಾದಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಚಿದ್ಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪರಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪ್ರಣಮಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಮಹಾಬಿಂದುಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಚಿತ್ಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪರಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪ್ರಣಮಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಪೂರ್ಣಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಮಹಾಕಳಾಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಗೋಳಕಾಕಾರಪ್ರಣಮಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಅಖಂಡಗೋಳಕಾಕಾರ ಪ್ರಣಮಮೂರ್ತಿ ನೋಡಯ್ಯ.
ಆ ಮಹಾಲಿಂಗವೆ ಅಖಂಡ ಮಹಾಗೋಳಕಾಕಾರಪ್ರಣಮಮೂರ್ತಿ ನೋಡಯ್ಯ.
ಆ ಮಹಾಲಿಂಗದ ಮಹಿಮೆ ಗಣಿತಕ್ಕಗಣಿತ ನೋಡ !
ಆ ಚಿದ್ಘನಮಹಾಲಿಂಗವೆ ಮಂತ್ರಮೂರ್ತಿ ನೋಡ, ಸಂಗನಬಸವೇಶ್ವರ/63
ಆಚಾರ-ಅರುಹಿನಲ್ಲಿ ಸತ್ಕ್ರಿಯಾಸುಜ್ಞಾನ ಗುರುವ
ಸಂಬಂಧವ ಮಾಡಿಕೊಂಡು,
ಪಾಣಿ-ಪ್ರಾಣದಲ್ಲಿ ಸತ್ಕ್ರಿಯಾಸುಜ್ಞಾನಲಿಂಗವ
ಸಂಬಂಧವ ಮಾಡಿಕೊಂಡು,
ಆಚರಣೆ-ಸಂಬಂಧಂಗಳಲ್ಲಿ ಸತ್ಕ್ರಿಯಾಸುಜ್ಞಾನಜಂಗಮವ
ಸಂಬಂಧವ ಮಾಡಿಕೊಂಡು,
ನಡೆ-ನುಡಿಗಳಲ್ಲಿ ಸತ್ಕ್ರಿಯಾಸುಜ್ಞಾನ ಪಾದೋದಕವ
ಸಂಬಂಧವ ಮಾಡಿಕೊಂಡು,
ಜಿಹ್ವೆ-ನಾಸಿಕಂಗಳಲ್ಲಿ ಸತ್ಕ್ರಿಯಾಸುಜ್ಞಾನ ಪ್ರಸಾದವ
ಸಂಬಂಧವ ಮಾಡಿಕೊಂಡು,
ಸರ್ವಾಂಗ-ಸುಮನದಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ವಿಭೂತಿಯ
ಸಂಬಂಧವ ಮಾಡಿಕೊಂಡು,
ತತ್ಸ್ಥಾನ-ಚಿದೃಕ್ಕಿನಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ರುದ್ರಾಕ್ಷಿಯ
ಸಂಬಂಧವ ಮಾಡಿಕೊಂಡು,
ಕ್ರಿಯಾಕಾಶ-ಜ್ಞಾನಾಕಾಶಂಗಳಲ್ಲಿ ಸತ್ಕ್ರಿಯಾಸುಜ್ಞಾನ ಚಿನ್ಮಂತ್ರವ
ಸಂಬಂಧವ ಮಾಡಿಕೊಂಡರು ನೋಡ-
ಸೂಕ್ಷ್ಮಕಂಥೆಯ ಧರಿಸಿ, ಸಚ್ಚಿದಾನಂದ ಲೀಲಾಮೂರ್ತಿಗಳಾಗಿ
ಇಂತು ಉಭಯ ವಿಚಾರವಿಡಿದು ಆಚರಿಸುವರೆ
ಆದಿಸದ್ಭಕ್ತ ಶಿವಶರಣಗಣಂಗಳು ನೋಡ
ಸಂಗನಬಸವೇಶ್ವರ./64
ಇಂತೀ ಅಷ್ಟಾವರಣವ ಸದ್ಗುರುಮುಖದಿಂ
ಚಿದಂಗಚಿದ್ಘನಲಿಂಗದ ಮಧ್ಯದಲ್ಲಿ ಸಂಬಂಧವಿಟ್ಟು,
ಏಕಲಿಂಗನಿಷ್ಠಾಪರತ್ವದಿಂದ ಸ್ಥೂಲಕಂಥೆಯ ಧರಿಸಿ
ಸತ್ಕಾಯಕ-ಸತ್ಕ್ರಿಯಾ-ಸಮ್ಯಜ್ಞಾನ-ಸದ್ಭಕ್ತಿ-
ಸದಾಚಾರಸನ್ನಿಹಿತರೆ ನೂತನಗಣಂಗಳೆನಿಸುವರು ನೋಡ.
ಅದರಿಂ ಮೇಲೆ ಚಿದಂಗ-ಚಿತ್ಪ್ರಾಣಾಂಗದ ಮಧ್ಯದಲ್ಲಿ
ಚಿದ್ಘನಲಿಂಗ-ಚಿತ್ಪ್ರಾಣಲಿಂಗವ
ಸದ್ಗುರುಮುಖದಿಂ ಸಂಬಂಧವಿಟ್ಟು ಆ ಲಿಂಗದ ಮಧ್ಯದಲ್ಲಿ
ಸಾಕಾರ-ನಿರಾಕಾರವಾದ ಷೋಡಶಾವರಣವ
ಸಂಪೂರ್ಣವಮಾಡಿಕೊಂಡು, ಸೂಕ್ಷ್ಮತನುವೆಂಬ ಕಂಥೆಯ ಧರಿಸಿ
ಕಂಗಳಾಲಯದ ಜ್ಯೋತಿಲರ್ಿಂಗದ ಮಧ್ಯದಲ್ಲಿ ಮನವ ಮುಳುಗಿಸುವರೆ
ಆದಿಗಣಂಗಳೆನಿಸುವರು ನೋಡ.
ಅದರಿಂ ಮೇಲೆ, ಚಿದ್ಘನ ತ್ರಿವಿಧಾಂಗ-ಚಿದ್ಘನ ತ್ರಿವಿಧಲಿಂಗವ
ಸದ್ಗುರುಮುಖದಿಂ ಸಂಬಂಧಿಸಿಕೊಂಡು
ಆ ಲಿಂಗಾಂಗದ ಮಧ್ಯದಲ್ಲಿ
ಕ್ರಿಯಾಷ್ಟಾವರಣ-ಜ್ಞಾನಾಷ್ಟಾವರಣ-ಮಹಾಜ್ಞಾನಾಷ್ಟಾವರಣವ
ಸಂಬಂಧವಿಟ್ಟು, ಕಾರಣತನುವೆಂಬ ಕಂಥೆಯ ಧರಿಸಿ,
ಹೃತ್ಕಮಲಮಧ್ಯದಲ್ಲಿ ಬೆಳಗುವ ಪರಂಜ್ಯೋತಿಲರ್ಿಂಗಮಧ್ಯದಲ್ಲಿ
ಭಾವವ ಮುಳುಗಿಸಿ ಬಚ್ಚಬರಿಯಾನಂದದಲ್ಲಿ
ಪರಿಪೂಣರ್ಾನಂದದಿಂದಾಚರಿಸುವರೆ ಅನಾದಿಗಣಂಗಳೆನಿಸುವರು ನೋಡ.
ಅದರಿಂ ಮೇಲೆ, ಚಿದ್ಘನ ಅಷ್ಟಾಂಗದ ಮಧ್ಯದಲ್ಲಿ
ಚಿದ್ಘನ ಅಷ್ಟಲಿಂಗಂಗಳ ಸದ್ಗುರುಮುಖದಿಂ ಧರಿಸಿ,
ಆ ಲಿಂಗಾಂಗದ ಮಧ್ಯದಲ್ಲಿ
ಅರುವತ್ತುನಾಲ್ಕು ತೆರದಾವರಣವ ಸಂಬಂಧಿಸಿಕೊಂಡು
ತಮ್ಮ ಸರ್ವಾಂಗದಲ್ಲಿ ಅಷ್ಟವಿಧಕಮಲಂಗಳ ಕಂಡು,
ಆ ಕಮಲಮಧ್ಯದಲ್ಲಿ ನೆಲಸಿರ್ಪ
ಚತುರ್ವಿಧ ಬಿಂದುಲಿಂಗ, ಷಡ್ವಿಧ ಧಾತುಲಿಂಗ,
ದಶವಿಧ ಕ್ಷೇತ್ರಲಿಂಗ, ದ್ವಾದಶ ವಿಕೃತಿಲಿಂಗ,
ಷೋಡಶ ಕಳಾಲಿಂಗ, ದ್ವಿವಿಧ ವಿದ್ಯಾಲಿಂಗ,
ಸಹಸ್ರ ಶಿವಕಳಾಲಿಂಗ, ತ್ರಿವಿಧ ವಿವೇಕಲಿಂಗ
ಇಂತೀ ಅಷ್ಟವಿಧಕಮಲಂಗಳ ಮಧ್ಯದಲ್ಲಿ ನೆಲಸಿರ್ಪ
ಅಷ್ಟವಿಧಲಿಂಗಗಳ ಅಷ್ಟವಿಧ ಹಸ್ತಗಳಿಂದ,
ಅಷ್ಟವಿಧಾರ್ಚನೆ, ಷೋಡಶೋಪಚಾರಂಗಳ ಮಾಡಿ,
ಎರಡಳಿದು ಏಕರೂಪವಾಗಿ ನಿರಾವಯ ಕಂಥೆಯ ಧರಿಸಿ,
ಪರತತ್ವ ಜ್ಯೋತಿರ್ಮಯಲಿಂಗದೊಳಗೆ
ಉರಿಯುಂಡ ಕಪರ್ುರದಂತೆ ಸಮರಸವಾದರು ನೋಡ.
ಅವರಾರೆಂದಡೆ : ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು,
ದೇವಲೋಕದ ದೇವಗಣಂಗಳು, ನಾಗಲೋಕದ ನಾಗಗಣಂಗಳು,
ಶಾಂಭವಲೋಕದ ಶಾಂಭವಗಣಂಗಳು ಮುಂತಾದವರು
ಬಯಲೊಳಗೆ ಮಹಾಬಯಲು ಬೆರದಂತಾದರು ನೋಡ.
ಇಂತೀ ಸರ್ವಾಚಾರಸಂಪತ್ತಿನಾಚರಣೆಯನಾಚರಿಸುವರೆ
ನಿರಾವಯಗಣಂಗಳೆನಿಸುವರು ನೋಡ, ಸಂಗನಬಸವೇಶ್ವರ./65
ಇಂತು ಸದ್ಗುರುಕರಜಾತರು
ಪಂಚಪಾತಕ, ಪಂಚಸೂತಕವ ಹೊದ್ದಲಾಗದು ;
ಶೈವಮಾರ್ಗವ ಮೆಟ್ಟಲಾಗದು;
ಪ್ರಮಥರಾಚರಿಸಿದ ಸನ್ಮಾರ್ಗವನುಳಿದು ಶೈವ ಜಡಜೀವಿಗಳ ಮಾರ್ಗದ
ಸೋಂಕಿನಲ್ಲಿ ಅರ್ಚನಾರ್ಪಣಕ್ರಿಯಗಳನಾಚರಿಸಲಾಗದು.
ದಾಕ್ಷಿಣ್ಯದಿಂದ ಅನಾಚಾರ ದುರ್ಜಿವಿಗಳ ಸಮಪಙ್ತಿಯಲ್ಲಿ
ಅರ್ಪಿತವ ಮಾಡಲಾಗದು.
ಷಡ್ವಿಧ ಶೀಲವ್ರತಾಚಾರಹೀನರಲ್ಲಿ
ಪಾದೋದಕ-ಪ್ರಸಾದವ ಕೊಳಲಾಗದು.
ಪ್ರಮಥರಾಚರಿಸಿದ ಪೂಜಾಪೂಜಕತ್ವದಲ್ಲಿ ತಿಳಿದಾತನೆ
ತ್ರಿಕೂಟಗಿರಿಸಂಗಮದಲ್ಲಿ ನೆಲಸಿರ್ಪ ಮಹಾಪ್ರಭು ತಾನೆ ನೋಡ
ಸಂಗನಬಸವೇಶ್ವರ./66
ಇಂದ್ರಿಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ
ಬ್ರಹ್ಮನುತ್ಪತ್ಯಕ್ಕೆ ಹೊರಗಾಗಿ
ಶ್ರೀಗುರುವಿನಿಂದ ಸರ್ವಾಂಗವೆಲ್ಲ ಶುದ್ಧಪ್ರಸಾದವಾಗುವುದಯ್ಯ.
ಸಮಸ್ತವಿಷಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ
ವಿಷ್ಣುವಿನ ಸ್ಥಿತಿಗೆ ಹೊರಗಾಗಿ
ಚಿದ್ಘನಮಹಾಲಿಂಗದಿಂದ ಸರ್ವಾಂಗವೆಲ್ಲ ಸಿದ್ಧಪ್ರಸಾದವಾಗುವುದಯ್ಯ.
ಸಮಸ್ತಕರಣಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ
ರುದ್ರನ ಲಯಕ್ಕೆ ಹೊರಗಾಗಿ
ನಿರಾಲಂಬ ನಿಷ್ಕಳಂಕ ಜಂಗಮದಿಂದ
ಸರ್ವಾಂಗೆಲ್ಲ ಪ್ರಸಿದ್ಧ ಪ್ರಸಾದವಾಗುವುದಯ್ಯ.
ಇಂತು ಇಂದ್ರಿಯ ವಿಷಯ ಕರಣಗುಣಧರ್ಮಗಳಳಿದು,
ಲಿಂಗೇಂದ್ರಿಯ ವಿಷಯ ಕರಣಂಗಳಾಗಿ
ಬ್ರಹ್ಮನುತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೆ ಹೊರಗಾದಲ್ಲದೆ
ಮಹಾಪ್ರಸಾದಿಸ್ಥಲದೊಳಗಣ ಷಟ್ಸ್ಥಲ ದೊತೆಯದು ನೋಡ
ಸಂಗನಬಸವೇಶ್ವರ. ! /67
ಎಲೆ ವರಕುಮಾರದೇಶಿಕೇಂದ್ರನೆ,
ನನಗೂ ನಿನಗೂ ಚಿನ್ನ-ಬಣ್ಣ, ಪುಷ್ಪ-ಪರಿಮಳದೋಪಾದಿಯಲ್ಲಿ
ಭಿನ್ನವಿಲ್ಲವಯ್ಯ.
ನಾನು-ನೀನು ಒಂದೇ ವಸ್ತು ನೋಡ!
ನನಗೂ ನಿನಗೂ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುವೆ
ಸದ್ಗುರು ಬಸವೇಶ್ವರಸ್ವಾಮಿಗಳಯ್ಯ.
ನನಗೂ ನಿನಗೂ ಕ್ರಿಯಾಲಿಂಗ, ಜ್ಞಾನಲಿಂಗ, ಮಹಾಜ್ಞಾನಲಿಂಗವೆ
ಚೆನ್ನಬಸವೇಶ್ವರಸ್ವಾಮಿಗಳಯ್ಯ.
ನನಗೂ ನಿನಗೂ ಕ್ರಿಯಾಜಂಗಮ-ಜ್ಞಾನಜಂಗಮ-ಮಹಾಜ್ಞಾನಜಂಗಮವೆ
ಮಹಾಪ್ರಭುಸ್ವಾಮಿಗಳಯ್ಯ.
ನನಗೂ ನಿನಗೂ ದೀಕ್ಷಾಗುರು ಪಾದೋದಕ, ಶಿಕ್ಷಾಗುರು ಪಾದೋದಕ,
ಜ್ಞಾನಗುರು ಪಾದೋದಕವೆ ನೀಲಲೋಚನೆ ತಾಯಿಗಳಯ್ಯ.
ನನಗೂ ನಿನಗೂ ಶುದ್ಧಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧಪ್ರಸಾದವೆ
ಮರುಳಶಂಕರದೇವರಯ್ಯ.
ನನಗೂ ನಿನಗೂ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತವೆ
ಮಹಾದೇವಿಯಕ್ಕಗಳಯ್ಯ.
ನನಗೂ ನಿನಗೂ ತ್ರಿವಿಧವರ್ಣದ ರುದ್ರಾಕ್ಷಿಯೆ
ಮಡಿವಾಳಸ್ವಾಮಿಗಳಯ್ಯ.
ನನಗೂ ನಿನಗೂ ತ್ರ್ಯಕ್ಷರ-ಪಂಚಾಕ್ಷರ-ಷಡಕ್ಷರ ಮಂತ್ರವೆ
ಸಿದ್ಧರಾಮಸ್ವಾಮಿಗಳಯ್ಯ.
ನನಗೂ ನಿನಗೂ ಸಮಸ್ತ ಪ್ರಮಥಗಣಂಗಳ ಸ್ಮರಣೆಯೆ
ಸರ್ವಾಚಾರಸಂಪತ್ತಿನಾಚರಣೆಯಯ್ಯ.
ನನಗೂ ನಿನಗೂ ಘನಗುರುಶಾಂತಮಲ್ಲೇಶ್ವರ,
ಚೆನ್ನನಂಜೇಶ್ವರ, ಸ್ವತಂತ್ರಸಿದ್ಧಲಿಂಗೇಶ್ವರನ ಕೃಪೆಯೆ
ಮಹಾಪ್ರಸಾದ ನೋಡ, ಸಂಗನಬಸವೇಶ್ವರ./68
ಕಾಳಿಕಾದೇವಿ, ಚಾಮುಂಡಿ, ಗಂಗೆ ಗೌರಿ, ಬನಶಂಕರಿ, ಎಲ್ಲಿ,
ಏಕಲಾತಿ, ಹುಲಗಿ, ಹೊಸೂರಿ, ಸತ್ತವರು, ಹೆತ್ತವರು
ಇಂತೀ ಹಲವು ಪಿಶಾಚಿಗಳ ಹೆಸರಿಂದ ಇದಿರಿಟ್ಟು ಆರಾಧಿಸಿ,
ಅದರ ನೈವೇದ್ಯವೆಂದು ಶ್ರೀಗುರುವಿತ್ತ ಲಿಂಗಕ್ಕೆ ತೋರಿ
ಭುಂಜಿಸುವ ಶಿವದ್ರೋಹಿಗೆ ಗುರುವಿಲ್ಲ, ಲಿಂಗವಿಲ್ಲ,
ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ ಕಾಣಾ
ಸಂಗನಬಸವೇಶ್ವರ./69
ಕಿಂಕರತ್ವದಿಂದ ಬಹುಜನ್ಮದ ಪಾಪದಲತೆ ಕಡಿವುದಯ್ಯ.
ಕಿಂಕರತ್ವದಿಂದ ಬಹುಜನ್ಮದ ನಿಂದ್ಯಕುಂದ್ಯಗಳು
ಹರಿದು ಹೋಗುವವಯ್ಯ.
ಕಿಂಕರತ್ವದಿಂದ ಬಹುಜನ್ಮದ ಭ್ರೂಣಹತ್ಯ ಮೊದಲಾಗಿ
ಮಹಾದ್ರೋಹಂಗಳು ದಗ್ಧವಾಗುವವಯ್ಯ.
ಕಿಂಕರತ್ವದಿಂದ ಮಹಾಪದವಾಗುವುದಯ್ಯ.
ಕಿಂಕರತ್ವದಿಂದ ಮಹಾಪಾಪದಗ್ಧವಾಗುವುದಯ್ಯ.
ಕಿಂಕರತ್ವದಿಂದ ಸತ್ಕಾಯಕ ದೊರವುದಯ್ಯ.
ಕಿಂಕರತ್ವದಿಂದ ಸತ್ಯರ ಸಂಗದೊರವುದಯ್ಯ.
ಕಿಂಕರತ್ವದಿಂದ ಬಹುರಾಜಮನ್ನಣೆಯಾಗುವುದಯ್ಯ.
ಕಿಂಕರತ್ವದಿಂದ ಅಷ್ಟಾವರಣ ಪ್ರತ್ಯಕ್ಷವಾಗುವುದಯ್ಯ.
ಕಿಂಕರತ್ವದಿಂದ ಪಂಚಪರುಷ ದೊರವುದಯ್ಯ.
ಕಿಂಕರತ್ವದಿಂದ ನಡೆನುಡಿ ಶುದ್ಧಸಿದ್ಧವಾಗುವುದಯ್ಯ.
ಕಿಂಕರತ್ವದಿಂದ ಸಮಸ್ತರು ಗಣಪದಕ್ಕೆ ಯೋಗ್ಯವಾದರು ನೋಡ.
ಕಿಂಕರನೆ ಸದ್ಗುರುಶಂಕರ ನೋಡ ಸಂಗನಬಸವೇಶ್ವರ./70
ಗುರುವೆ ಸರ್ವಲೋಕಜನಕನಯ್ಯ.
ಗುರುವೆ ಸರ್ವಲೋಕ ಜನನಿಯಯ್ಯ.
ಗುರುವೆ ಸಮಸ್ತ ಕುಟುಂಬಿಯಯ್ಯ.
ಗುರುವೆ ಸ್ವತಂತ್ರನಯ್ಯ.
ಗುರುವೆ ಘನಮಹಿಮನಯ್ಯ.
ಗುರುವೆ ಮುಕ್ತಿಗೆ ಮೂಲಾಧಾರನಯ್ಯ.
ಗುರುವೆ ಸುರಚಿರಭೇದ್ಯನಯ್ಯ.
ಗುರುವೆ ಸತ್ಕ್ರಿಯಾಜ್ಞಾನಕ್ಕೆ ಮಂದಿರನಯ್ಯ.
ಗುರುವೆ ಕಾಲಹರನಯ್ಯ.
ಗುರುವೆ ಕರ್ಮಹರನಯ್ಯ.
ಗುರುವೆ ದುರಿತಹರನಯ್ಯ.
ಗುರುವೆ ಪಾಪಹರನಯ್ಯ.
ಗುರುವೆ ದೀಕ್ಷಾಕಾರಣನಯ್ಯ.
ಗುರುವೆ ಶೀಕ್ಷಾಕಾರಣನಯ್ಯ.
ಗುರುವೆ ಮೋಕ್ಷಕಾರಣನಯ್ಯ.
ಗುರುವೆ ಪರಮಾಮೃತ ಸುಧಾರಸನಯ್ಯ.
ಗುರುವೆ ಭಕ್ತಿಗೆ ಬೀಜಾಂಕುರನಯ್ಯ.
ಗುರುವೆ ಅನಾಚಾರಸಂಹಾರನಯ್ಯ.
ಗುರುವೆ ದುಷ್ಟನಿಗ್ರಹನಯ್ಯ.
ಗುರುವೆ ಶಿಷ್ಟಪ್ರತಿಪಾದಕನಯ್ಯ.
ಗುರುವೆ ಸ್ತುತಿನಿಂದ್ಯರಹಿತನಯ್ಯ.
ಗುರುವೆ ಅಪ್ರಮಾಣನಯ್ಯ.
ಗುರುವೆ ಅಗಮ್ಯನಯ್ಯ; ಗುರುವೆ ಅಗೋಚರನಯ್ಯ.
ಗುರುವೆ ಕಾಮಧೇನು – ಕಲ್ಪವೃಕ್ಷ ನೋಡ !
ಗುರುವಿನಿಂದ ಪೆರತೊಂದಧಿಕ ವಸ್ತುವಿಲ್ಲ ನೋಡ
ಸಂಗನಬಸವೇಶ್ವರ./71
ಗುರುವೆ ಸುಜ್ಞಾನಮೂರ್ತಿಯಯ್ಯ.
ಗುರುವೆ ಮಹಾಜ್ಞಾನಮೂರ್ತಿಯಯ್ಯ.
ಗುರುವೆ ಪರಿಪೂರ್ಣಜ್ಞಾನಮೂರ್ತಿಯಯ್ಯ.
ಗುರುವೆ ಅಂತರಂಗಪರಿಪೂರ್ಣನಯ್ಯ.
ಗುರುವೆ ಬಹಿರಂಗಪರಿಪೂರ್ಣನಯ್ಯ.
ಗುರುವೆ ಮಾಯಾರಹಿತನಯ್ಯ.
ಗುರುವೆ ನಿತ್ಯತೃಪ್ತನಯ್ಯ.
ಗುರುವೆ ಆದಿಮಧ್ಯಾಂತರಹಿತನಯ್ಯ.
ಗುರುವೆ ಭವರೋಗವೈದ್ಯನಯ್ಯ.
ಗುರುವೆ ಸಕಲಶಾಸ್ತ್ರಾತೀತನಯ್ಯ.
ಗುರುವೆ ನಿಜಾನಂದಮೂರ್ತಿಯಯ್ಯ.
ಗುರುವೆ ಪರತರಪರಬ್ರಹ್ಮವಯ್ಯ.
ಗುರುಭಕ್ತಿಯಿಂದ ಮಿಗಿಲು ಸುಖವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ಮೋಕ್ಷವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ನಿಜವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ಐಶ್ವರ್ಯವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ಪರಿಣಾಮವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ಕೈವಲ್ಯವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ಧರ್ಮವಿಲ್ಲವಯ್ಯ.
ಗುರುಭಕ್ತಿಯಿಂದ ಮಿಗಿಲು ಪುಣ್ಯವಿಲ್ಲವಯ್ಯ.
ಗುರುಭಕ್ತಿಯಿಂದ ಗುರುಭಕ್ತಯ್ಯ ಮೊದಲಾದವರು
ನಿಜನೈಷ್ಠೆಯಿಂದ ಸಮರಸೈಕ್ಯರಾದರಯ್ಯ.
ಗುರುವಿನಿಂದಧಿಕ ಪರವಿಲ್ಲ ನೋಡ!
ಸಮಸ್ತ ಪದಕ್ಕೆ ಶ್ರೀಗುರುವೆ ಕಾರಣ ನೋಡ,
ಸಂಗನಬಸವೇಶ್ವರ./72
ಜಂಗಮವೆ ಮಂತ್ರಮೂರ್ತಿ ನೋಡಯ್ಯ.
ಜಂಗಮವೆ ಮೂಲಪ್ರಣವಸ್ವರೂಪಮೂರ್ತಿ ನೋಡಯ್ಯ.
ಜಂಗಮವೆ ತ್ರಿಯಾಕ್ಷರ-ಪಂಚಾಕ್ಷರ-ಷಡಕ್ಷರಂಗಳಿಗೆ
ಮೂಲಾಧಾರಮೂರ್ತಿ ನೋಡಯ್ಯ.
ಜಂಗಮವೆ ಸಪ್ತಕೋಟಿ ಮಹಾಮಂತ್ರಂಗಳಿಗೆ ಜನನಿಜನಕ ನೋಡಯ್ಯ.
ಜಂಗಮವೆ ಆದಿಪುರಾತನಗಣ ತಿಂಥಿಣಿಗೆ ಪರಮಾಮೃತಸುಧೆ ನೋಡಯ್ಯ.
ಜಂಗಮವೆ ಅನಾದಿ ಪುರಾತನಗಣಸಮೂಹಕ್ಕೆ
ಮಹಾಪರುಷಸ್ವರೂಪ ನೋಡಯ್ಯ.
ಜಂಗಮವೆ ನೂತನ ಪುರಾತನ ಗಣಂಗಳಿಗೆ
ಮಹಾಕಲ್ಯಾಣಸ್ವರೂಪ ನೋಡಯ್ಯ.
ಜಂಗಮವೆ ಶಿವಲಾಂಛನ ಪಂಚಮುದ್ರಾಂಕಿತ ನೋಡಯ್ಯ.
ಜಂಗಮವೆ ಕೃಪಾಸಮುದ್ರ ನೋಡಯ್ಯ.
ಜಂಗಮವೆ ಬತ್ತೀಸ ಕಳಾಭರಿತಮೂರ್ತಿ ನೋಡಯ್ಯ.
ಜಂಗಮವೆ ಷಡ್ವಿಧಶೀಲವ್ರತಾಚಾರಪೂರಿತ ನೋಡಯ್ಯ.
ಜಂಗಮವೆ ಬಸವ ಚನ್ನಬಸವ ನೀಲಲೋಚನೆ
ಅಕ್ಕಮಹಾದೇವಿ ಮೊದಲಾದ
ಪ್ರಮಥಗಣಂಗಳ ಪ್ರಾಣಲಿಂಗಮೂರ್ತಿ ನೋಡಯ್ಯ.
ಜಂಗಮವೆ ದಿಗಂಬರ ನಿರಾವಯಮೂರ್ತಿ ನೋಡಯ್ಯ.
ಜಂಗಮವೆ ನಿಷ್ಪ್ರಪಂಚ ನಿರಾಲಂಬ ನಿಗರ್ುಣ ನಿರಾತಂಕ
ನಿಶ್ಚಿಂತ ನಿಷ್ಕಾಮ ನಿಶ್ಶೂನ್ಯ ನಿರಂಗ ನಿರಂಜನಮೂರ್ತಿ
ಪರಮಾನಂದ ಪರಿಪೂರ್ಣ ಮಹಾಂತ ತಾನೆ ನೋಡ
ಸಂಗನಬಸವೇಶ್ವರ./73
ಜಂಗಮವೆ ಮಹಾರುದ್ರಸ್ವರೂಪ ನೋಡಯ್ಯ.
ಜಂಗಮವೆ ಪರಮಪಾವನ ಕರ್ತ ನೋಡಯ್ಯ.
ಜಂಗಮವೆ ಷಟ್ಸ್ಥಲಬ್ರಹ್ಮ ನೋಡಯ್ಯ.
ಜಂಗಮವೆ ಶರಣಚಿಂತಾಮಣಿ ಸಂಜೀವನ ನೋಡಯ್ಯ.
ಜಂಗಮವೆ ಭವರೋಗವೈದ್ಯ ನೋಡಯ್ಯ
ಜಂಗಮವೆ ಸಕಲೈಶ್ವರ್ಯ ನೋಡಯ್ಯ.
ಜಂಗಮವೆ ಸಮರಸ ಸುಖಭೋಗಮೂರ್ತಿ ನೋಡಯ್ಯ.
ಜಂಗಮವೆ ಕಾಯಾನುಗ್ರಹಮೂರ್ತಿ ನೋಡಯ್ಯ.
ಜಂಗಮವೆ ಇಂದ್ರಿಯಾನುಗ್ರಹಮೂರ್ತಿ ನೋಡಯ್ಯ.
ಜಂಗಮವೆ ಪ್ರಾಣಾನುಗ್ರಹಮೂರ್ತಿ ನೋಡಯ್ಯ.
ಜಂಗಮವೆ ಸರ್ವಾನುಗ್ರಹಮೂರ್ತಿ ನೋಡಯ್ಯ.
ಜಂಗಮವೆ ಪಾಪಪುಣ್ಯ ದೋಷರಹಿತ ನೋಡಯ್ಯ.
ಜಂಗಮವೆ ಪರಿಪೂರ್ಣಚಿದೈಶ್ವರ್ಯ ನೋಡಯ್ಯಾ.
ಜಂಗಮವೆ ನಿತ್ಯತ್ವಮೂರ್ತಿ ನೋಡಯ್ಯಾ.
ಜಂಗಮವೆ ಜಯಮಂಗಳಸ್ವರೂಪ ನೋಡಯ್ಯ.
ಜಂಗಮವೆ ಶುಭಮಂಗಳ ಸ್ವರೂಪ ನೋಡಯ್ಯ.
ಜಂಗಮವೆ ಪಾವನಮೂರ್ತಿ ನೋಡಯ್ಯ.
ಜಂಗಮವೆ ಪರುಷದ ಕಣಿ ನೋಡಯ್ಯ.
ಜಂಗಮವೆ ನಿಜವಸ್ತು ನೋಡಯ್ಯ.
ಜಂಗಮವೆ ಚಿತ್ಕಾರಣಾವತರ್ಯಮೂರ್ತಿ ನೋಡ
ಸಂಗನಬಸವೇಶ್ವರ./74
ತನುತ್ರಯಂಗಳಲ್ಲಿ
ಕ್ರಿಯಾಗುರು-ಜ್ಞಾನಗುರು-ಮಹಾಜ್ಞಾನಗುರುವ
ಸಂಬಂಧವ ಮಾಡಿಕೊಂಡು,
ಮನತ್ರಯಂಗಳಲ್ಲಿ
ಕ್ರಿಯಾಲಿಂಗ-ಜ್ಞಾನಲಿಂಗ-ಮಹಾಜ್ಞಾನಲಿಂಗವ
ಸಂಬಂಧವ ಮಾಡಿಕೊಂಡು,
ಭಾವತ್ರಯಂಗಳಲ್ಲಿ
ಕ್ರಿಯಾಜಂಗಮ-ಜ್ಞಾನಜಂಗಮ-ಮಹಾಜ್ಞಾನಜಂಗಮವ
ಸಂಬಂಧವ ಮಾಡಿಕೊಂಡು
ಆತ್ಮತ್ರಯಂಗಳಲ್ಲಿ
ಕ್ರಿಯಾಪಾದೋದಕ-ಜ್ಞಾನಪಾದೋದಕ-ಮಹಾಜ್ಞಾನಪಾದೋದಕವ
ಸಂಬಂಧವ ಮಾಡಿಕೊಂಡು,
ಅವಸ್ಥಾತ್ರಯಂಗಳಲ್ಲಿ
ಕ್ರಿಯಾಪ್ರಸಾದ-ಜ್ಞಾನಪ್ರಸಾದ-ಮಹಾಜ್ಞಾನಪ್ರಸಾದವ
ಸಂಬಂಧವ ಮಾಡಿಕೊಂಡು,
ಕರಣತ್ರಯಂಗಳಲ್ಲಿ
ಕ್ರಿಯಾಭಸಿತ-ಜ್ಞಾನಭಸಿತ-ಮಹಾಜ್ಞಾನಭಸಿತವ
ಸಂಬಂಧವ ಮಾಡಿಕೊಂಡು,
ಜೀವತ್ರಯಂಗಳಲ್ಲಿ
ಕ್ರಿಯಾರುದ್ರಾಕ್ಷಿ-ಜ್ಞಾನರುದ್ರಾಕ್ಷಿ-ಮಹಾಜ್ಞಾನರುದ್ರಾಕ್ಷಿಗಳ
ಸಂಬಂಧವ ಮಾಡಿಕೊಂಡು,
ಗುಣತ್ರಯಂಗಳಲ್ಲಿ
ಕ್ರಿಯಾಮಂತ್ರ-ಜ್ಞಾನಮಂತ್ರ-ಮಹಾಜ್ಞಾನಮಂತ್ರವ
ಸಂಬಂಧವ ಮಾಡಿಕೊಂಡರು ನೋಡ.
ಕಾರಣ ಕಂಥೆಯ ಧರಿಸಿ ತ್ರಿವಿಧವಿಚಾರವಿಡಿದು ಆಚರಿಸುವರೆ
ಅನಾದಿಸದ್ಭಕ್ತ ಶಿವಶರಣಗಣಂಗಳು ನೋಡ
ಸಂಗನಬಸವೇಶ್ವರ./75
ದೀಕ್ಷಾತ್ರಯಂಗಳಲ್ಲಿ ನಿಜಗುರುವ ಸಂಬಂಧವ ಮಾಡಿಕೊಂಡು,
ಪೂಜಾತ್ರಯಂಗಳಲ್ಲಿ ನಿಜಲಿಂಗವ ಸಂಬಂಧವ ಮಾಡಿಕೊಂಡು,
ಭೋಗತ್ರಯಂಗಳಲ್ಲಿ ನಿಜಜಂಗಮವ ಸಂಬಂಧವ ಮಾಡಿಕೊಂಡು,
ಕ್ರಿಯಾತ್ರಯಂಗಳಲ್ಲಿ ನಿಜಪಾದೋದಕವ ಸಂಬಂಧವ ಮಾಡಿಕೊಂಡು,
ಜ್ಞಾನತ್ರಯಂಗಳಲ್ಲಿ ನಿಜಪ್ರಸಾದವ ಸಂಬಂಧವ ಮಾಡಿಕೊಂಡು,
ಆಚಾರತ್ರಯಂಗಳಲ್ಲಿ ನಿಜಚಿದ್ಭಸಿತವ ಸಂಬಂಧವ ಮಾಡಿಕೊಂಡು,
ಸರ್ವಾಂಗದಲ್ಲಿ ನಿಜರುದ್ರಾಕ್ಷಿಗಳ ಸಂಬಂಧವ ಮಾಡಿಕೊಂಡು,
ಪಂಚಾಕ್ಷರ ಷಡಕ್ಷರಂಗಳೆ ನಡೆನುಡಿಯಾಗಿ,
ಸಕಲ ಶಾಸ್ತ್ರಾಗಮ ಪುರಾಣಂಗಳೆ ಹಸ್ತಪಾದಂಗಳಾಗಿ,
ಎರಡೆಂಬತ್ತೆಂಟು ಕೋಟಿ ವಚನಂಗಳೆ ಮಹಾಮಂತ್ರಂಗಳಾಗಿ
ಸಂಬಂಧವ ಮಾಡಿಕೊಂಡರು ನೋಡ.
ಪರಹಿತಾರ್ಥಕ್ಕೋಸ್ಕರವಾಗಿ ಸ್ಥೂಲಕಂಥೆಯ ಧರಿಸಿ
ನಿರ್ವಂಚಕಲೀಲಾಮೂರ್ತಿಗಳಾಗಿ,
ಇಂತೀ ಏಕಲಿಂಗನಿಷ್ಠಾಪರತ್ವದಿಂದ ಅರಿದಾಚರಿಸುವರೆ
ನೂತನ ಸದ್ಭಕ್ತ ಶಿವಶರಣಗಣಂಗಳು ನೋಡ
ಸಂಗನಬಸವೇಶ್ವರ./76
ನಿಚ್ಚಪ್ರಸಾದ ಅಚಲನಿರ್ವಯಲಕ್ಕೆ ಪೆಸರು.
ಅಚ್ಚಪ್ರಸಾದ ಅಚಲ-ಅದ್ವಯ-ಅಭಿನ್ನ-ಅಪ್ರಮಾಣಕ್ಕೆ ಪೆಸರು.
ಈ ಉಭಯಸಂಬಂಧವೇ ಸುಮಯವೆನಿಸುವುದು.
ಆ ಸಮಯಪ್ರಸಾದವೆ ಸಚ್ಚಿದಾನಂದ, ಸಮ್ಯಜ್ಞಾನ,
ಸತ್ಕ್ರಿಯಾ ಸದಮಲಾನಂದಕ್ಕೆ ಪೆಸರು.
ಈ ವಿಚಾರವ ಶ್ರುತಿ-ಗುರು-ಸ್ವಾನುಭಾವದಿಂದರಿದು
ಈ ತ್ರಿವಿಧಪ್ರಸಾದವ ಭೋಗಿಸುವ ಶರಣನೆ ನಿಜಪ್ರಸಾದ ನೋಡ.
ಈ ಚತುರ್ವಿಧಪ್ರಸಾದವ ಭೋಗಿಸಬಲ್ಲಾತನೆ
ಸದ್ಗುರುಲಿಂಗಜಂಗಮ ಸ್ವರೂಪು.
ಈ ಸ್ವರೂಪದಿಂದ ಪಡದನುಭವಿಸಬಲ್ಲಾತನೆ
ಆದಿಪ್ರಸಾದಿ, ಅಂತ್ಯಪ್ರಾದಿ, ಸೇವ್ಯಪ್ರಸಾದಿ, ಮಹಾನಿಜಪ್ರಸಾದಿ ನೋಡ.
ಈತನೇ ಪಿಂಡಬ್ರಹ್ಮಾಂಡ ಸಕಲಲೋಕಂಗಳಿಗೆ, ಸಕಲತತ್ವಂಗಳಿಗೆ
ಸಕಲಾಗಮಶಾಸ್ತ್ರಂಗಳಿಗೆ, ಏಕಮೇವಪರಬ್ರಹ್ಮ ಸ್ವರೂಪ ನೋಡ.
ಅವರಾರೆಂದಡೆ :ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು,
ಮರುಳಶಂಕರ, ಸಿದ್ಧರಾಮಯ್ಯ, ಅಜಗಣ್ಣ ಮುಖ್ಯವಾದ
ಅಸಂಖ್ಯಾತಮಹಾಗಣಂಗಳು ನೋಡಾ, ಸಂಗನಬಸವೇಶ್ವರ./77
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮರುಳಶಂಕರ,
ಸಿದ್ಧರಾಮಯ್ಯ, ಅಜಗಣ್ಣ, ಅಕ್ಕನಾಗಲೆ, ನೀಲಲೋಚನೆ, ಮುಕ್ತಾಂಗನೆ,
ಮಹಾದೇವಿಯಕ್ಕ ಮೊದಲಾದ ಮಹಾಪ್ರಮಥಗಣಂಗಳೆಲ್ಲ.
ಸುಗಂಧದೊಳಗಣ ಮಹಾಗಂಧಪ್ರಸಾದವ ಕೊಂಡರಯ್ಯ.
ಸುರಸದೊಳಗಣ ಮಹಾರಸಪ್ರಸಾದವ ಕೊಂಡರಯ್ಯ.
ಸುರೂಪಿನನೊಳಗಣ ಮಹಾರೂಪಪ್ರಸಾದವ ಕೊಂಡರಯ್ಯ.
ಸುಸ್ಪರ್ಶನದೊಳಗಣ ಮಹಾಸ್ಪರ್ಶನಪ್ರಸಾದವ ಕೊಂಡರಯ್ಯ.
ಸಶಬ್ದದೊಳಗಣ ಮಹಾಶಬ್ದಪ್ರಸಾದವ ಕೊಂಡರಯ್ಯ.
ಇಂತೀ ಸುಗಂಧ, ಸುರಸ, ಸುರೂಪು, ಸುಸ್ಪರ್ಶನ, ಸುಶಬ್ದವ
ಸತ್ತುಚಿತ್ತಾನಂದಮೂರ್ತಿ ಶ್ರೀಗುರುಲಿಂಗಜಂಗಮಕ್ಕೆ
ಪವಿತ್ರಮುಖದಿಂದ ಸಮರ್ಪಿಸಿ,
ಅವರೊಕ್ಕುಮಿಕ್ಕ ಮಹಾಪ್ರಸದವ ಹಾರೈಸಿ,
ಪರತತ್ವಲಿಂಗಮುಖದಲ್ಲಿ ನಿಜಪ್ರಸಾದವೆಂದು ಸಂಬಂಧಿಸಿ
ನಿರಾವಯ ಸಮಾಧ್ಯಸ್ತರಾದರು ನೋಡ.
ಅಂದಿನ ಮಹಾಗಣಂಗಳ ಚಿತ್ಪ್ರಭೆಯೆ
ಇಂದಿನ ಗುರುಲಿಂಗಜಂಗಮ ಪಾದೋದಕ ಪ್ರಸಾದವೆಂದು
ನಿರ್ವಂಚಕತ್ವದಿಂದ ಪ್ರಸಾದದೊಳಗಣ ಮಹಾಪ್ರಸಾದವೆಂದರಿದು
ಆಚರಿಸುವ ನಿತ್ಯತೃಪ್ತಿಯೇ ಘನಪ್ರಸಾದ !
ಆ ಪ್ರಸಾದವೆ ಪರಮಾನಂದ !
ಈ ವಿಚಾರವನರಿದು ಕೊಂಡು ಕೊಡಬಲ್ಲಾತನೆ
ಸದ್ಗುರುಲಿಂಗ-ಜಂಗಮ-ಪಾದೋದಕ-ಪ್ರಸಾದ !
ಈ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದವನರಿದು,
ಕೊಳಬಲ್ಲಾತನೆ ಸದ್ಭಕ್ತ-ಪ್ರಸಾದಿ-ಶಿವಶರಣ ನೋಡ.
ಈ ವಿಚಾರವನರಿಯದೆ ಕೊಟ್ಟು ಕೊಂಬ ಭ್ರಷ್ಟರನೇನೆಂಬೆನಯ್ಯ !
ಆದಿ-ಅನಾದಿಯಿಂದತ್ತತ್ತ ಮೀರಿ ತೋರುವ ಸದ್ಗುರುಲಿಂಗಜಂಗಮದಿಂದ
ಸದ್ಗುರು, ಲಿಂಗ, ಜಂಗಮ, ಭಕ್ತ, ಪ್ರಸಾದಿ, ಶರಣತ್ವದ ವಿಚಾರವ ತಿಳಿದ
ಮಹಾಗಣಂಗಳಿಗೆ ಸೂತಕ, ಪಾತಕ, ದರಿದ್ರ, ದುಃಖಂಗಳು ಬಂದು ತಟ್ಟಲುಂಟೆ?
ಅಗ್ನಿಯಲ್ಲಿ ದಗ್ಧವಾದ ಕಾಷ್ಠಂಗಳಿಗೆ ಮರಳಿ ಅಗ್ನಿ ಉಂಟೆ?
ಕ್ಷೀರವಳಿದು ಘೃತವಾದ ಮೇಲೆ ಮರಳಿ ಕ್ಷೀರವಪ್ಪುದೆ?
ಜ್ಯೋತಿಯಲ್ಲಿ ಬಯಲಾದ ಘನಸಾರ ಮರಳಿ ಸಾಕಾರವಪ್ಪುದೆ?
ಸರ್ವಾವಸ್ಥೆಯಲ್ಲಿ ಪರತತ್ವಮೂರ್ತಿಯಲ್ಲಿ ಕೂಡಿದ
ಸದ್ಭಕ್ತನು ಮರಳಿ ಭವಿಯಪ್ಪನೆ?
ಜಾತಿ-ಸೂತಕ-ಪಾತಕವಳಿದ ಸದ್ಭಕ್ತಶರಣಗಣಂಗಳ
ಭಾವ-ಮನ-ದೃಷ್ಟಿ-ಅವಸ್ಥೆಗಳೆಲ್ಲ ಪರಶಿವಲಿಂಗಪ್ರಕಾಶ ನೋಡ.
ಅಂದು-ಇಂದು ಎಂಬ ಸಂದೇಹವನಳಿದು,
ಶ್ರುತಿ-ಗುರು-ಸ್ವಾನುಭಾವದಿಂದ
ಅಂಗಲಿಂಗವೆಂಬ ಉಭಯಭಾವವಳಿದು,
ತ್ರಿವಿಧದೀಕ್ಷೆ, ತ್ರಿವಿಧಸ್ವಸ್ವರೂಪು ನಿಲುಗಡೆ,
ತ್ರಿವಿಧ ಚಿದ್ವಿಭೂತಿ-ರುದ್ರಾಕ್ಷಿ-ಮಂತ್ರ,
ತ್ರಿವಿಧಾಚಾರ ಭಕ್ತಿ-ಜ್ಞಾನ-ವೈರಾಗ್ಯವಿಡಿದಾಚರಿಸುವ
ಭಕ್ತಗಣಂಗಳ ಕಾಯವೆ ಚಿತ್ಕಾಯ.
ಅವರಂಗ-ಮನ-ಪ್ರಾಣ-ಭಾವಂಗಳೆ
ಮಹಾಘನನಿಜಪ್ರಸಾದ ಪಾದೋದಕ ನೋಡಾ, ಸಂಗನಬಸವೇಶ್ವರ. /78
ಭೃತ್ಯತ್ವದಿಂದ ಕಾಯ ಶುದ್ಧಮಾಗುವುದಯ್ಯ.
ಭೃತ್ಯತ್ವದಿಂದ ಮನ ಸಿದ್ಧವಾಗುವುದಯ್ಯ.
ಭೃತ್ಯತ್ವದಿಂದ ಭಾವ ಪ್ರಸಿದ್ಧವಾಗುವುದಯ್ಯ.
ಭೃತ್ಯತ್ವದಿಂದ ಪ್ರಾಣ ಪರಬ್ರಹ್ಮವನೊಡಗೂಡುವುದಯ್ಯ.
ಭೃತ್ಯತ್ವದಿಂದ ಕಾಮ ನಿಷ್ಕಾಮವಾಗುವುದಯ್ಯ.
ಭೃತ್ಯತ್ವದಿಂದ ಕ್ರೋಧ ನಿಷ್ಕೋಧವಾಗುವುದಯ್ಯ.
ಭೃತ್ಯತ್ವದಿಂದ ಲೋಭ ನಿಲರ್ೊಭವಾಗುವುದಯ್ಯ.
ಭೃತ್ಯತ್ವದಿಂದ ಮೋಹ ನಿಮರ್ೊಹವಾಗುವುದಯ್ಯ.
ಭೃತ್ಯತ್ವದಿಂದ ಮದ ನಿರ್ಮದವಾಗುವುದಯ್ಯ.
ಭೃತ್ಯತ್ವದಿಂದ ಮತ್ಸರ ನಿರ್ಮತ್ಸರವಾಗುವುದಯ್ಯ.
ಭೃತ್ಯತ್ವದಿಂದ ಆಸೆ ನಿರಾಸೆಯಾಗುವುದಯ್ಯ.
ಭೃತ್ಯತ್ವದಿಂದ ಕುಚಿತ್ತ ಸುಚಿತ್ತವಾಗುವುದಯ್ಯ.
ಭೃತ್ಯತ್ವದಿಂದ ಕುಬುದ್ಧಿ ಸುಬುದ್ಧಿಯಾಗುವುದಯ್ಯ.
ಭೃತ್ಯತ್ವದಿಂದ ಅಹಂಕಾರ ನಿರಹಂಕಾರವಾಗುವುದಯ್ಯ.
ಭೃತ್ಯತ್ವದಿಂದ ಕುಮನ ಸುಮನವಾಗುವುದಯ್ಯ.
ಭೃತ್ಯತ್ವದಿಂದ ಅಜ್ಞಾನ ಸುಜ್ಞಾನವಾಗುವುದಯ್ಯ.
ಭೃತ್ಯತ್ವದಿಂದ ದುಭರ್ಾವ ಸದ್ಭಾವವಾಗುವುದಯ್ಯ.
ಭೃತ್ಯತ್ವದಿಂದ ನಿಜನೈಷ್ಠೆ ದೊರವುದು ನೋಡ
ಗುರುಹಿರಿಯರಲ್ಲಿ ಭೃತ್ಯತ್ವವುಳ್ಳಾತನೆ
ಸಾಕ್ಷಾತ್ಪರತತ್ವಲಿಂಗ ನೋಡ, ಸಂಗನಬಸವೇಶ್ವರ./79
ಶ್ರೀ ಗುರುಲಿಂಗಜಂಗಮದ ಪಾದೋದಕದಿಂದ
ತನುವಿನ ಜಡತ್ವವಳಿದು ಶಿವಭಕ್ತಿಯ ಪಥವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಇಂದ್ರಿಯಂಗಳ ಜಡತ್ವವಳಿದು ಲಿಂಗೇಂದ್ರಿಯಂಗಳ ಮಾಡುವುದಯ್ಯಾ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಕರಣಂಗಳ ಕಾಮವಿಕಾರವಳಿದು
ಲಿಂಗನಡೆ, ಲಿಂಗನುಡಿ, ಲಿಂಗನೋಟ, ಲಿಂಗಕೂಟ,
ಲಿಂಗಭೋಗ, ಲಿಂಗಾಚಾರವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಪ್ರಾಣನ ಪ್ರಪಂಚು ಸಂಚಲಗುಣವಳಿದು ಮಂತ್ರಧ್ಯಾನದಲ್ಲಿ ನಿಲಿಸುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಅಜ್ಞಾನದ ಜಡತ್ವವಳಿದು ಸುಜ್ಞಾನಸುಖವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ದುರ್ವರ್ತನೆ ಗುಣವಳಿದು ಸದ್ವರ್ತನೆಗುಣವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ದುರಾಚಾರ ದುರ್ಮಾರ್ಗವ ಹರಿದು
ಸರ್ವಾಚಾರ ಸಂಪತ್ತಿನಾಚರಣೆಯ ಮಾರ್ಗವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಬಹುಜನ್ಮದ ಪರಮಪಾತಕದ ಮಹಾಪಾಪವ ತೊಳದು
ನಿರ್ಮಲ ಲಿಂಗಶರೀರವೆನಿಸುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಜೀವನ ಜಡತ್ವವಳಿದು ಅಜಡಸ್ವರೂಪವ ಮಾಡಿ,
ಗಣ ಸಮ್ಮೇಳನದಲ್ಲಿರಿಸುವುದಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಮಲ ಮಾಯಾ ಕರ್ಮಪಾಶವ ಹರಿದು
ನಿರ್ಮಲ ನಿರ್ಮಾಯ ನಿಷ್ಕರ್ಮ ಸ್ವರೂಪವ ಮಾಡಿ, ಚಿಜ್ಜ್ಯೋತಿಸ್ವರೂಪವೆಂದೆನಿಸುವುದು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಪರಾತ್ಪರ ದೇವಲೋಕದ ದೇವಗಂಗಾಜಲ,
ಶಿವಲೋಕದ ಶಿವಗಂಗಾಜಲ, ಶಾಂಭವಲೋಕದ
ಪರಮಗಂಗಾಜಲವಾಗಿ ನೆಲಸಿಪರ್ುದು ನೋಡ
ಸಂಗನಬಸವೇಶ್ವರ./80
ಶ್ರೀ ಮಹಾಚಿನ್ಮಯ ಚಿಂತಾಮಣಿ ಮಂತ್ರಮಾಲಿಕೆಯ
ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ಧರಿಸಿದಾತಂಗೆ
ಬ್ರಹ್ಮಹತ್ಯ, ಪುಶುಹತ್ಯ, ಶಿಶುಹತ್ಯ, ಸ್ತ್ರೀಹತ್ಯ
ಭ್ರೂಣಹತ್ಯ, ಮಾತೃದ್ರೋಹ, ಪಿತೃದ್ರೋಹ ಮೊದಲಾದ
ಮಹಾಪರಮಪಾತಕಂಗಳು ದೂರವಾಗುವವಯ್ಯ.
ಶ್ರೀ ಮಹಾರುದ್ರಾಕ್ಷಿಯ ಶ್ರೀಗುರುಲಿಂಗಜಂಗಮಕ್ಕೆ
ಅರ್ಥಪ್ರಾಣಾಭಿಮಾನಗಳ ಸಮರ್ಪಿಸಿ,
ಅವರ ಕರುಣಕಟಾಕ್ಷ ನಿರ್ಮಾಲ್ಯ ಮಂತ್ರಮಾಲಿಕೆ
ಪ್ರಸಾದ ರುದ್ರಾಕ್ಷಿಯ ಬೆಸಗೊಂಡಾತಂಗೆ
ಇಹಲೋಕದಲ್ಲಿ ಪರಶಿವಲಿಂಗಭೋಗಿಯಾಗಿ
ಪರಲೋಕದಲ್ಲಿ ಪರಶಿವಜಂಗಮದೊಳಗೆ ಐಕ್ಯತ್ವ ದೊರವುದು ನೋಡ.
ಶ್ರೀ ಮಹಾರುದ್ರಾಕ್ಷಿಯ ಗುರುವಚನೋಕ್ತಿಯಿಂದ
ಅದರಾದಿ ಅಂತ್ಯವ ತಿಳಿದು,
ಆಯಾಯ ಸ್ಥಾನಂಗಳಲ್ಲಿ ಆಯಾಯ ಮಂತ್ರಸ್ಮರಣೆಗಳಿಂದ
ಆಯಾಯ ಮುಖಗಳ ಆಯಾಯ ವರ್ಣಗಳ ತಿಳಿದು
ಹೆರೆಹಿಂಗದೆ ಧರಿಸಿದ ಮಹಾಭಕ್ತಜಂಗಮಶರಣಗಣಂಗಳೆಲ್ಲ
ಜ್ಯೋತಿಮಯವಪ್ಪುದು ತಪ್ಪದು ನೋಡ.
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷ ಚಿತ್ಪ್ರಭಾಪುಂಜರಂಜಿತವಾದ
ಶ್ರೀ ಮಹಾರುದ್ರಾಕ್ಷಿಯೆ ಪರಮ ಚಿದೈಶ್ವರ್ಯ ನೋಡ
ಸಂಗನಬಸವೇಶ್ವರ./81
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಮತ್ರ್ಯಲೋಕ ಮೊದಲಾಗಿ
ಆವ ಲೋಕದಲ್ಲಿ ಹೋದರು ಸಮಸ್ತಲಿಂಗಭೋಗ ದೊರವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಮಸ್ತಲೋಕದಲ್ಲಿ
ಸತ್ಯ ಸಾತ್ವಿಕ ಪರೋಪಕಾರ ಸುಗುಣ ದೊರವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಪರಮವಿರಕ್ತಿ ದೊರವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಾರಸದ್ಭಕ್ತಿ ದೊರವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ
ಶಮೆ ದಮೆ ಶಾಂತಿ ಸೈರಣೆ ಸತ್ಕ್ರಿಯಾ ಸಮ್ಯಜ್ಞಾನ
ಸದಾಚಾರ ದೊರವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ನಿಜಶಿವಯೋಗ ದೊರವುದು ನೋಡ.
ಶ್ರೀ ಮಹಾಮಂತ್ರವೆ ಸಕಲಕಾರಣಕ್ಕೆ ಮೂಲಚೈತನ್ಯ ನೋಡ
ಸಂಗನಬಸವೇಶ್ವರ./82
ಶ್ರೀ ಮಹಾಮಂತ್ರವ ಜಪಿಸಿದಾತಂಗೆ
ಕಾಯದ ಕಾಮವಿಕಾರವಳಿದು ಲಿಂಗಕಾಯವೆನಿಸುವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ
ಮನದ ಮರವೆಯಳಿದು ಲಿಂಗಮನವಾಗುವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ
ಪ್ರಾಣನ ಪ್ರಪಂಚಳಿದು ಲಿಂಗಪ್ರಾಣವೆಂದೆನಿಸುವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ
ಭಾವದ ಭ್ರಮೆಯಳಿದು ಲಿಂಗಭಾವವೆಂದೆನಿಸುವುದಯ್ಯ.
ಶ್ರಿ ಮಹಾಮಂತ್ರವ ಜಪಿಸಿದಾತಂಗೆ
ಕಾಲ-ಕಾಮ-ಮಾಯಾ-ಮರವೆಗಳೆಲ್ಲ ದಗ್ಧವಾಗಿ ಹೋಗುವುದಯ್ಯ.
ಶ್ರೀ ಮಹಾಮಂತ್ರವ ಜಪಿಸಿದಾತಂಗೆ
ಸತ್ವರಜತಮೋಗುಣವಳಿದು
ಸಗುಣ ನಿಗರ್ುಣ ನಿಜಗುಣ ಶಿವಯೋಗ ದೊರವುದಯ್ಯ.
ಆ ಮಹಾಮಂತ್ರವ ತೆರಹಿಲ್ಲದೆ ಜಪಿಸಿದ ಭಕ್ತಗಣಂಗಳೆಲ್ಲ
ಚಿನ್ನಾದ-ಪರನಾದ-ಮಹಾನಾದಂಗಳ ಮೀರಿ ತೋರುವ
ನಿಷ್ಕಲ-ನಿಶ್ಯಬ್ದ-ನಿಷ್ಪ್ರಪಂಚ-ನಿರಾಲಂಬ ಇಷ್ಟ ಮಹಾಚಿದ್ಘನಲಿಂಗದಲ್ಲಿ
ಕ್ಷೀರ ಕ್ಷೀರ ಬೆರದಂತೆ ಅವಿರಳಾನಂದದಿಂದ ಬೆರದು
ಮಹಾ ಬಯಲಪ್ಪುದು ತಪ್ಪದು ನೋಡ.
ಸರ್ವಾಚಾರ ಸಂಪದಕ್ಕೆ ಶ್ರೀ ಮಹಾಮಂತ್ರವೆ
ಪರಮಾಮೃತಸುಧೆ ನೋಡ, ಸಂಗನಬಸವೇಶ್ವರ./83
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ
ಮಂತ್ರಮಣಿಯೆ ಶ್ರೀಮಹದೈಶ್ವರ್ಯ ಸ್ವರೂಪ ನೋಡ.
ಶ್ರೀ ಮಹದೈಶ್ವರ್ಯ ಮಹಾರುದ್ರಾಕ್ಷಿಯ ಸಂಗದಿಂದ
ಪರಮಚಿದೈಶ್ವರ್ಯ ದೊರವುದಯ್ಯ.
ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಶಿವಗಣಂಗಳ
ಭೃತ್ಯಾಚಾರ ಸದ್ಭಕ್ತಿ ದೊರವುದಯ್ಯ.
ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ
ನಿಷ್ಕಲಮಹಾಲಿಂಗದ ರತಿಸಂಯೋಗ ದೊರವುದಯ್ಯ.
ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ
ಚತುರ್ವಿಧ, ಷಡ್ವಿಧ, ದಶವಿಧ, ದ್ವಾದಶವಿಧ,
ಷೋಡಶ ತೆರದ ಭಕ್ತಿ ಮೊದಲಾಗಿ
ನಾಲ್ವತ್ತೆಂಟು ತೆರದ ಸದ್ಭಕ್ತಿ ದೊರವುದಯ್ಯ.
ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಕೈವಲ್ಯಪದ ದೊರವುದಯ್ಯ.
ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಮೋಕ್ಷದೊರವುದಯ್ಯ.
ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ
ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು
ಶಾಂಭವಲೋಕದ ಶಾಂಭವಗಣಂಗಳು, ನಾಗಲೋಕದ ನಾಗಗಣಂಗಳು,
ದೇವಲೋಕದ ದೇವಗಣಂಗಳು,
ಮತ್ರ್ಯಲೋಕದ ಮಹಾಗಣಂಗಳು ಪ್ರತ್ಯಕ್ಷವಾಗಿ
ಅವರ ಪಾದೋದಕ ಪ್ರಸಾದಕ್ಕೆ ಯೋಗ್ಯವೆಂದೆನಿಸುವುದಯ್ಯ.
ಶ್ರೀ ಮಹಾರುದ್ರಾಕ್ಷಿಯೇ ಘನಕ್ಕೆ ಘನ ಮಹದೈಶ್ವರ್ಯ ನೋಡ
ಶ್ರೀ ಗುರುಲಿಂಗಜಂಗಮದ ಕರುಣ ಕಟಾಕ್ಷಮಣಿಯೆ
ಪರಮಚಿದಾಭರಣ ನೋಡ, ಸಂಗಬಸವೇಶ್ವರ./84
ಶ್ರೀಗುರುಲಿಂಗಜಂಗಮದ ಚರಣ ಸೋಂಕಿನಿಂ ಪವಿತ್ರವಾದ
ಚಿದ್ಭಸಿತವ ಧರಿಸಿದವರಿಗೆ ಬಹುಜನ್ಮ ಪಾಪದೋಷವ ತೊಡವುದಯ್ಯ.
ಶ್ರೀ ವಿಭೂತಿಯ ಧರಿಸಿದವರಿಗೆ ಅಜ್ಞಾನದ ಪಾಶವ ಹರಿವುದಯ್ಯ.
ಶ್ರೀ ವಿಭೂತಿಯ ಧರಿಸಿದವರಿಗೆ
ಸಮಸ್ತ ಜನವಶ್ಯ ರಾಜವಶ್ಯವ ಕೊಡುವುದಯ್ಯ.
ಶ್ರೀ ವಿಭೂತಿಯ ಧರಿಸಿದವರಿಗೆ
ಸದಾಚಾರ ಸದ್ಭಕ್ತಿಸಾರದುನ್ನತಿಯ ಬೆಳಗ ತೋರುವುದಯ್ಯ.
ಶ್ರೀ ವಿಭೂತಿಯ ಧರಿಸಿದವರಿಗೆ
ಜನನ-ಮರಣದ ಭಯವ ತೊಡವುದಯ್ಯ.
ಶಿವನಿಂದ ಅಗಸ್ತ್ಯ, ಕಸ್ಯಪ, ಜಮದಗ್ನಿ, ಗೌತಮ, ವಶಿಷ್ಠ
ಮೊದಲಾದ ಋಷಿ ಸಮೂಹಗಳೆಲ್ಲ ಶ್ರೀ ವಿಭೂತಿಯ ಪಡೆದು ಧರಿಸಿ,
ಸದ್ಭಕ್ತಿಪಥವ ಸೇರಿದರಯ್ಯ.
ನಮ್ಮ ಶರಣಗಣಂಗಳು ಆ ಶಿವನ ಚಿತ್ಕಾಂತಿಯ ಬಹಿಷ್ಕರಿಸಿ,
ಶ್ರೀಗುರುಲಿಂಗಜಂಗಮದ ಚಿದ್ಬೆಳಗನೆ ಹೆಪ್ಪಹಾಕಿ,
ಚಿದಾಂಡವೆಂಬ ಘಟ್ಟಿಯ ಮಾಡಿ,
ನಿಷ್ಕಲ ನಿಶ್ಶೂನ್ಯಮೂರ್ತಿಯ ಚರಣಜಲವ ವೇಧಿಸಿ,
ಮಹಾಮಂತ್ರವ ಸ್ಥಾಪಿಸಿ,
ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ತತ್ವಸ್ಥಾನಂಗಳಲ್ಲಿ
ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು,
ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು,
ಶಾಂಭವಲೋಕದ ಶಾಂಭವಗಣಂಗಳು,
ಮತ್ರ್ಯಲೋಕದ ಮಹಾಗಣಂಗಳೆಲ್ಲ ಧರಿಸಿ
ಜ್ಯೋತಿರ್ಮಯವಾದರು ನೋಡ.
ಶ್ರೀಗುರುಲಿಂಗಜಂಗಮದ ಚಿತ್ಪ್ರಭಾಭೂತಿಯೆ
ಸರ್ವಾಚಾರಸಂಪದಕ್ಕೆ ಮೋಕ್ಷದ ಕಣಿ ನೋಡ
ಸಂಗನಬಸವೇಶ್ವರ./85
ಶ್ರೀಗುರುಲಿಂಗಜಂಗಮದ ದೀಕ್ಷಾಭಸಿತವ ನಂಬುಗೆಯಿಂದ
ಅಷ್ಟೈಶ್ವರ್ಯವಿದೆಂದು ಶ್ರೀಗುರುಸ್ಮರಣೆಯಿಂದ ಲಲಾಟದಲ್ಲಿ ಧರಿಸಿದಾಕ್ಷಣವೆ
ಬ್ರಹ್ಮನ ಆಜ್ಞೆಯಿಂದ ವಿಧಿಬರೆದ ಲಿಖಿತವ ತೊಡದು
ಶಿವಲಿಖಿತವ ಲಿಖಿಸುವುದಯ್ಯ.
ಶ್ರೀಗುರುಲಿಂಗಜಂಗಮದ ದೀಕ್ಷಾಭಸಿತವ
ಅಷ್ಟವಿಧಸ್ಥಾನ, ಷೋಡಶಸ್ಥಾನ, ಇಪ್ಪತ್ತುನಾಲ್ಕು ಸ್ಥಾನಂಗಳಲ್ಲಿ ಧರಿಸಿದವರಿಗೆ
ಗುರುತ್ವವ ಕೊಟ್ಟು ಲಿಂಗನಿಷ್ಠಾಪರಭಕ್ತಿಯ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ದೀಕ್ಷಾ-ಶಿಕ್ಷಾ-ಜ್ಞಾನಭಸಿತವ
ಸರ್ವಾಂಗದಲ್ಲಿ ಸ್ನಾನಧೂಳನವ ಮಾಡಿ
ನಾಲ್ವತ್ತೆಂಟು ತತ್ವಸ್ಥಾನಂಗಳಲ್ಲಿ ಮಂತ್ರಸ್ಮರಣೆಯಿಂದ ಧರಿಸಿದ
ಲಿಂಗಶರಣರಿಗೆ ಸರ್ವಾಚಾರಸಂಪತ್ತಿನ
ಜಂಗಮಾನುಭಾವವ ತೋರುವುದಯ್ಯ.
ಸಕಲಕ್ರಿಯೆಗಳಿಗೆ ಈ ಕ್ರಿಯಾಚಿದ್ಭಸಿತವೆ ಕಾರಣಸ್ವರೂಪವಯ್ಯ.
ಸಕಲಾಚಾರಂಗಳಿಗೆ ಈ ಕ್ರಿಯಾ ಚಿದ್ಭಸಿತವೆ ಶುಭತಿಲಕವಯ್ಯ.
ಇಂಥ ಶ್ರೀಗುರುಲಿಂಗಜಂಗಮದ ಪಾದೋದಕ ಪ್ರಸಾದ
ಕ್ರಿಯಾ ಚಿದ್ಭಸಿತಕಿಂದ ಪರವಸ್ತುವಿಲ್ಲ ನೋಡ.
ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶ ಚಿದ್ಭಸಿತವೆ
ಪರಾತ್ಪರವಸ್ತು ನೋಡಾ, ಸಂಗನಬಸವೇಶ್ವರ. /86
ಶ್ರೀಗುರುಲಿಂಗಜಂಗಮದ ಧೂಳಪಾದೋದಕದಿಂದ
ಸಮಸ್ತಲೋಕದ ಪ್ರಾಣಿಗಳನೆಲ್ಲವ ಭವತ್ವವಳಿದು
ಭೃತ್ಯಭಕ್ತಿಮಾರ್ಗವ ತೋರುವುದಯ್ಯ,
ಶ್ರೀಗುರುಲಿಂಗಜಂಗಮದ ದೀಕ್ಷಾಪಾದೋದಕದಿಂದ
ಸಮಸ್ತ ಪದಾರ್ಥಂಗಳೆಲ್ಲವ ಶಿವಗಣಪದಕ್ಕೆ
ಯೋಗ್ಯವಾಗುವಂತೆ ಮಾಡುವುದಯ್ಯ.
ಶ್ರೀಗುರುಲಿಂಗಜಂಗಮದ ಶಿಕ್ಷಾಪಾದೋದಕದಿಂದ
ಬ್ರಹ್ಮನ ಉತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯ,
ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹ ತೊಡದು
ಶಿವಶರಣಗಣಂಗಳ ನಿಜನಿವಾಸವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಪಾದೋದಕದಿಂದ
ಷಡ್ವಿಧ ದೀಕ್ಷಾತ್ರಯವ ಕರುಣಿಸಿ, ಷಟ್ಸ್ಥಲಮಾರ್ಗವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಸ್ಪರ್ಶನೋದಕ, ಅವಧಾನೋದಕ,
ಆಪ್ಯಾಯನೋದಕದಿಂದ ತ್ರಿವಿಧಲಿಂಗಾಂಗ ಸಮರಸದ
ಸನ್ಮಾಗರ್ಾಚಾರಕ್ರಿಯಾಜ್ಞಾನವ ತೋರುವುದಯ್ಯ.
ಶ್ರಿಗುರುಲಿಂಗಜಂಗಮದ ಹಸ್ತೋದಕ-ಪರಿಣಾಮೋದಕ-ನಿನರ್ಾಮೋದಕದಿಂದ
ಷಡ್ವಿಧಲಿಂಗಾಂಗ ಸಮರಸಾಚರಣೆಯ ಮಾರ್ಗದ,
ಮೀರಿದ ಕ್ರಿಯಾಜ್ಞಾನವ ತೋರುವುದಯ್ಯ.
ಶ್ರೀಗುರುಲಿಂಗಜಂಗಮದ ಸತ್ಯೋದಕ-ಕರುಣಜಲ-
ವಿನಯಜಲ-ಸಮತಾಜಲದಿಂದ
ಸಮಸ್ತಪ್ರಮಥಗಣಂಗಳೆಲ್ಲ ಜ್ಯೋತಿರ್ಮಯವಾದರು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಪರಮಾರಾಧ್ಯ ಶರಣಗಣಂಗಳಾಚಾರಸಂಪದಕ್ಕೆ
ಪರಬ್ರಹ್ಮ ಜ್ಯೋತಿರ್ಮಯವಸ್ತು ನೋಡ
ಸಂಗನಬಸವೇಶ್ವರ./87
ಶ್ರೀಗುರುಲಿಂಗಜಂಗಮದ ನೋಟಪರುಷ ಪ್ರಸಾದದಿಂದ
ಸಮಸ್ತಲೋಕದ ಮನು-ಮುನಿ-ಋಷಿಗಳೆಲ್ಲ ಪರಮ ಸುಖಿಗಳಾದರಯ್ಯ.
ಶ್ರೀಗುರುಲಿಂಗಜಂಗಮದ ಹಸ್ತಪರುಷದಿಂದ ಪವಿತ್ರವಾದ
ಶುದ್ಧಪ್ರಸಾದದಿಂದ ತನುವಿನ ಕಾಮವಿಕಾರವಳಿವುದಯ್ಯ.
ಶ್ರೀಗುರುಲಿಂಗಜಂಗಮದ ಸಿದ್ಧಪ್ರಸಾದದಿಂದ ಮನದಕಾಂಕ್ಷೆ ಹರಿವುದಯ್ಯ,
ಶ್ರೀಗುರುಲಿಂಗಜಂಗಮದ ಪ್ರಸಿದ್ಧ ಪ್ರಸಾದದಿಂದ
ಭಾವದ ಭ್ರಮೆಯಳಿದು ಕೆಡುವುದಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದಿ ಪ್ರಸಾದದಿಂದ
ಪ್ರಾಣನ ಪ್ರಪಂಚು ನಷ್ಟವಾಗುವುದಯ್ಯ.
ಶ್ರೀಗುರುಲಿಂಗಜಂಗಮದ ಘನಾಪ್ಯಾಯನ ಪ್ರಸಾದದಿಂದ
ಇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾಗುವವಯ್ಯ.
ಶ್ರೀಗುರುಲಿಂಗಜಂಗಮದ ಸಮಯಪ್ರಸಾದದಿಂದ
ವಿಷಯಂಗಳೆಲ್ಲ ಲಿಂಗವಿಷಯಂಗಳಾಗುವವಯ್ಯ.
ಶ್ರೀಗುರುಲಿಂಗಜಂಗಮದ ಪಂಚೇಂದ್ರಿಯವಿರಹಿತಪ್ರಸಾದದಿಂದ
ಕರಣಂಗಳೆಲ್ಲ ಲಿಂಗಕರಣಂಗಳಾಗುವವಯ್ಯ.
ಶ್ರೀಗುರುಲಿಂಗಜಂಗಮದ ಕರಣಚತುಷ್ಟಯವಿರಹಿತಪ್ರಸಾದ,
ಸಮತಾಪ್ರಸಾದ, ಸದ್ಭಾವಪ್ರಸಾದ, ಜ್ಞಾನಪ್ರಸಾದದಿಂದ
ಸರ್ವಸಂಗ ಪರಿತ್ಯಾಗರಾಗಿ, ಬಯಲನೆ ಹಾಸಿ, ಬಯಲನೆ ಹೊದ್ದು,
ಬಯಲನೆ ಅಚರ್ಿಸಿ, ಬಯಲನೆ ಭೋಗಿಸಿ
ಬಸವ ಮೊದಲಾದ ಪ್ರಮಥಗಣಂಗಳೆಲ್ಲ
ಬಯಲೊಳಗೆ ಮಹಾಬಯಲಾದರು ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ ಪರಮಾಮೃತಸುಧೆ
ಜ್ಯೋತಿರ್ಮಯಲಿಂಗ ನೋಡ, ಸಂಗನಬಸವೇಶ್ವರ. /88
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ನಿಜವೀರಪರಾಕ್ರಮ ಉಂಟಾಗುವುದಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಪ್ರಮಥಗಣಂಗಳ ಸದ್ಭಕ್ತಿ ದಾಸೋಹ ದೊರವುದಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಸದಾಚಾರ ಲಿಂಗನಡೆ-ಲಿಂಗನುಡಿ ದೊರವುದಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಕಾಲ ಕಾಮರು ಹೊದ್ದಲಮ್ಮರಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಉರಗ ವೃಶ್ಚಿಕ ವ್ಯಾಘ್ರ ಭಲ್ಲೂಕ ಗಜ ಗರುಡ
ಸಿಂಹ ಶಾದರ್ೂಲ ಸೋಂಕಲಮ್ಮವಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಕುಷ್ಠರೋಗ ಮೊದಲಾಗಿ ಸಮಸ್ತವ್ಯಾಧಿಗಳು
ಪಾವನಸ್ವರೂಪವಾಗುವವಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಸತ್ಕ್ರಿಯಾ ಸಮ್ಯಜ್ಞಾನದ ಚಿತ್ಕಾಂತಿ ಹೆಚ್ಚುವುದಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಮಹಾಪಾತಕಂಗಳು ಬಿಟ್ಟೋಡುವವಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ರುದ್ರಲೋಕದ ರುದ್ರಗಣಂಗಳೆಲ್ಲ ಶಿಖಿಕಪರ್ೂರ ಬೆರೆದಂತಾದರಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಶಿವಲೋಕದ ಶಿವಗಣಂಗಳೆಲ್ಲ ಕ್ಷೀರ ಕ್ಷೀರ ಬೆರೆದಂತಾದರಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ದೇವಲೋಕದ ಶಿವಗಣಂಗಳು, ನಾಗಲೋಕದ ನಾಗಗಣಂಗಳು,
ಶಾಂಭವಲೋಕದ ಶಾಂಭವಗಣಂಗಳೆಲ್ಲ
ಜ್ಯೋತಿ ಜ್ಯೋತಿ ಬೆರದಂತಾದರಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದದಿಂದ
ಮತ್ರ್ಯಲೋಕದ ಮಹಾಗಣಂಗಳೆಲ್ಲ ನಿಶ್ಚಿಂತ-ನಿಷ್ಕಾಮ-ನಿಷ್ಪ್ರಪಂಚಿಗಳಾಗಿ
ಬಯಲು ಬಯಲು ಬೆರೆದಂತಾದರಯ್ಯ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿತ್ಯನಿಷ್ಕಲಲಿಂಗ ತಾನೆ ನೋಡ ಸಂಗನಬಸವೇಶ್ವರ./89
ಶ್ರೀಗುರುವಿನ ಕರ ಕಂಗಳು ಹೃದಯಮಧ್ಯದಲ್ಲಿ
ಉದಯವಾದ ಇಷ್ಟಮಹಾಲಿಂಗವೆ ಪರಮಪಾವನವಯ್ಯ.
ಆ ಮಹಾಲಿಂಗವೆ ಪರಮಪ್ರಕಾಶವಯ್ಯ.
ಆ ಮಹಾಲಿಂಗವೆ ಪರಂಜ್ಯೋತಿಸ್ವರೂಪನಯ್ಯ.
ಆ ಮಹಾಲಿಂಗವೆ ಪರತತ್ವಬ್ರಹ್ಮವಯ್ಯ.
ಆ ಮಹಾಲಿಂಗವೆ ಪರಮಾಚಾರಸ್ವರೂಪನಯ್ಯ.
ಆ ಮಹಾಲಿಂಗವೆ ಪರಮನಿಷ್ಕಳಂಕನಯ್ಯ.
ಆ ಮಹಾಲಿಂಗವೆ ಚಿದ್ಘನವಸ್ತುವಯ್ಯ.
ಆ ಮಹಾಲಿಂಗವೆ ಚಿನ್ಮಯಸ್ವರೂಪನಯ್ಯ
ಆ ಮಹಾಲಿಂಗವೆ ಚಿದಾನಂದಮೂರ್ತಿಯಯ್ಯ
ಆ ಮಹಾಲಿಂಗವೆ ಚಿತ್ಪ್ರಕಾಶಮೂರ್ತಿಯಯ್ಯ.
ಆ ಮಹಾಲಿಂಗವೆ ಚಿದ್ರೂಪಮೂರ್ತಿಯಯ್ಯ.
ಆ ಮಹಾಲಿಂಗವೆ ಸಹಜಸನ್ಮಾರ್ಗಸ್ವರೂಪನಯ್ಯ.
ಆ ಮಹಾಲಿಂಗವೆ ಸತ್ತುಚಿತ್ತಾನಂದಮೂರ್ತಿಯಯ್ಯ.
ಆ ಮಹಾಲಿಂಗವೆ ಸರ್ವಸಾಕ್ಷಿಕಮೂರ್ತಿಯಯ್ಯ.
ಆ ಮಹಾಲಿಂಗವೆ ಸರ್ವಚೈತನ್ಯಮೂರ್ತಿಯಯ್ಯ.
ಆ ಮಹಾಲಿಂಗವೆ ಸರ್ವಾಂತರ್ಯಾಮಿ ನೋಡ!
ಇಷ್ಟಮಹಾಚಿದ್ಘನಲಿಂಗವೆ ಸರ್ವತತ್ವಂಗಳಿಗೆ
ಮೂಲಾಧಾರಮೂರ್ತಿ ನೋಡ, ಸಂಗನಬಸವೇಶ್ವರ/90
ಹರಹರ ಶಿವಶಿವ ಜಯಜ ಕರುಣಾಕರ
ಮತ್ಪ್ರಾಣಕಳಾಚೈತನ್ಯಸ್ವರೂಪ ಮಹಾಪ್ರಭು
ಶ್ರೀಗುರುಲಿಂಗಜಂಗಮದ ಮಹಾಪ್ರಸಾದವೆ
ಪರಬ್ರಹ್ಮ ಪರಮಕಳಾಚೈತನ್ಯ ಚಿತ್ಸ್ವರೂಪ
ಅನಾದಿ ನಿಷ್ಕಲ ಪರಶಿವಲಿಂಗಸ್ವರೂಪ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿಜಚೈತನ್ಯಸ್ವರೂಪು ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ಶಿವಾನುಭಾವದ ಶುದ್ಧಿನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿರುಪಮ ನಿರಾಲಂಬ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿತ್ಯ ಚಿದೈಶ್ವರ್ಯ ಚಿತ್ಕಾಂತಿ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿಜಮೋಕ್ಷದ ಕಣಿ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ಭವರೋಗವೈದ್ಯ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿಗರ್ುಣ ನಿಷ್ಕಳಂಕ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ಅಪ್ರಮಾಣ ಅಗೋಚರ ನಿಜಚಿನ್ಮಯರೂಪು ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ಅಗಣಿತ ನಿರಾತಂಕ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿರಾವಯ ನಿಶ್ಶೂನ್ಯ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ನಿರ್ಮಾಯ ನಿಷ್ಕಾಮ್ಯ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ಚಿದ್ಬೆಳಗು ತಾನೆ ನೋಡ.
ಶ್ರೀಗುರುಲಿಂಗಜಂಗಮದ ಪ್ರಸಾದವೆ
ಚಿದ್ಘನಮಹಾಲಿಂಗ ತಾನೆ ನೋಡ ಸಂಗನಬಸವೇಶ್ವರ./91
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ
ಸರ್ವಲೋಕಪಾವನಾವರ್ತಯ ಪರಬ್ರಹ್ಮ ಮಹಾಪ್ರಭು
ಅನಾದಿ ಶ್ರೀಗುರುಲಿಂಗಜಂಗಮದ ಚರಣಸೋಂಕಿನಿಂ ಪವಿತ್ರವಾದ
ಪರಮಪಾದೋದಕವೆ ಪರಿಪೂರ್ಣಪಾವನಸ್ವರೂಪು ನೋಡಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾನಂದ ಪರಿಪೂರ್ಣ
ಅಷ್ಟಾಷಷ್ಠಿ ತೀರ್ಥಂಗಳಿಗೆ ಮೂಲಚೈತನ್ಯಸ್ವರೂಪ ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ ಸರ್ವಲೋಕಪಾವನವಯ್ಯ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಪರಮಾನಂದ ಪರಿಪೂರ್ಣ ಪರಬ್ರಹ್ಮಾಮೃತ ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಸಕಲಪ್ರಮಥಗಣಂಗಳಿಗೆ ಆಚಾರಶುದ್ಧಿ ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಶ್ರೀಗುರುಲಿಂಗಜಂಗಮದ ಪಾದೋದಕವೆ
ಚಿದೈಶ್ವರ್ಯ ಸಂಪತ್ತು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಪರಮ ಕೈವಲ್ಯಪದ ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಸದ್ಭಕ್ತಿ ಸದಾಚಾರ ದೊರವುದು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಸತ್ಕ್ರಿಯಾ ಸಮ್ಯಜ್ಞಾನ ದೊರವುದು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ಸದ್ವರ್ತನೆ ಸತ್ಪಥ ದೊರವುದು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕದಿಂದ
ನಿಜಮೋಕ್ಷವಾಗುವುದು ನೋಡ.
ಶ್ರೀಗುರುಲಿಂಗಜಂಗಮದ ಪಾದೋದಕವೆ
ಚಿತ್ಸುಧಾರಸ ನೋಡ ಸಂಗನಬಸವೇಶ್ವರ./92
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಅನಾದಿ ಮಹಾಪ್ರಭು
ಶ್ರೀಗುರುಲಿಂಗಜಂಗಮದ ಚರಣೋದ್ಧೊಳನವೆ
ಚಿದ್ಬ್ರಹ್ಮ ಚಿದೈಶ್ವರ್ಯ ನೋಡ.
ಶ್ರೀಗುರುಲಿಂಗಜಂಗಮದ ಕ್ರಿಯಾಚಕ್ಷುವಿನ
ಕ್ರಿಯಾ ಪ್ರಕಾಶವೆ ಕ್ರಿಯಾಭಸಿತವಾಗಿಪರ್ುದಯ್ಯ.
ಶ್ರೀಗುರುಲಿಂಗಜಂಗಮದ ಜ್ಞಾನಚಕ್ಷುವಿನ
ಜ್ಞಾನಪ್ರಕಾಶವೆ ಜ್ಞಾನಭಸಿತವಾಗಿಪರ್ುದಯ್ಯ.
ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಚಕ್ಷುವಿನ
ಮಹಾಜ್ಞಾನಪ್ರಕಾಶವೆ ಮಹಾಜ್ಞಾನಭಸಿತವಾಗಿಪರ್ುದಯ್ಯ.
ಇಂಥ ಚಿತ್ಪ್ರಕಾಶಸ್ವರೂಪವಾದ ಚಿದ್ಭಸಿತವ ಅನಾದಿ ಬಸವದಂಡಪ್ರಮಥರು
ತಮ್ಮ ಗೋಪ್ಯಮುಖದಲ್ಲಿ ಸಕಲಕ್ರಿಯೆಗಳ ಆಚರಿಸುತ್ತಿರಲು
ಆಗ ಶಿವನು ತನ್ನ ಪಂಚಮುಖದಿಂದ ಪಂಚವರ್ಣದ ಗೋವ ನಿರ್ಮಿಸಿ,
‘ಎಲೈ ಎನ್ನ ಚಿಚ್ಚೈತನ್ಯಮೂರ್ತಿ ಬಸವದಂಡನಾಯಕರೆ
ಈ ಪಂಚಗೋವುಗಳ ಈರೇಳುಲೋಕಕ್ಕೆ ಪಾವನಸ್ವರೂಪವ ಮಾಡಿ,
ನಿಮ್ಮ ಶರಣಗಣಂಗಳಿಗರ್ಪಿತವಾಗುವಂತೆ ಮಾಡಿರಯ್ಯ.’
ಎಂದು ಅಭಿವಂದಿಸಲು,
ಆಗ ಬಸವದಂಡಪ್ರಮಥರು ಆ ಗೋವಿನ ಸಗಣವ ಕ್ರಿಯಾಗ್ನಿಯಿಂದ ದಹಿಸಿ,
ಶ್ರೀಗುರುಲಿಂಗಜಂಗಮದ ಚಿತ್ಪ್ರಭೆಯ ವೇಧಿಸಿ
ಸಕಲಲೋಕಂಗಳಿಗೆ ಸಕಲ ಮುನಿಜನಕ್ಕೆಲ್ಲ
ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತ,
ಪಾಪಹರಭಸಿತವೆನಿಸಿಕೊಟ್ಟರು ನೋಡ.
ಆ ಗೋವಿನ ಜಲಮಲ ವೀರ್ಯದಿಂದ ಭೂಮಿಯ ಸಮ್ಮಾರ್ಜನೆಗೆ
ಯೋಗ್ಯವೆಂದೆನಿಸಿದರಯ್ಯ.
ಆ ಗೋವಿನ ಕುಚಕ್ಷೀರವ ಸರ್ವಲೋಕಂಗಳಿಗೆ
ಪಂಚಾಮೃತವೆಂದೆನಿಸಿದರಯ್ಯ.
ಆ ಗೋವಿನ ಪುತ್ರನಿಂದ ಸಕಲಪ್ರಾಣಿಗಳು ಬದುಕುವಂತೆ ಮಾಡಿದರಯ್ಯ.
ಆ ಗೋವಿನ ಮಾಂಸವ ದುರಾಚಾರಭವಿಜನ್ಮಾತ್ಮರು
ಭುಂಜಿಸುವಂತೆ ಮಾಡಿದರಯ್ಯ.
ಆ ಗೋವಿನ ಚರ್ಮವ ಶಿವಗಣಂಗಳ ಪಾದರಕ್ಷೆಯೆಂದೆನಿಸಿದರು ನೋಡಯ್ಯ.
ಇತ್ತಲಾಗಿ ಸಕಲಪ್ರಮಥಗಣಂಗಳೆಲ್ಲ
ಶ್ರೀ ಬಸವೇಶ್ವರಸ್ವಾಮಿಗಳ ಚಿತ್ಪ್ರಕಾಶಭಸಿತವ ಬೆಸಗೊಂಡು
ಆ ವಿಭೂತಿಯ ಶ್ರೀ ಗುರುಲಿಂಗಜಂಗಮದ
ದೀಕ್ಷಾಜಲ-ಶಿಕ್ಷಾಜಲದಿಂದ ಸಮ್ಮಿಶ್ರವ ಮಾಡಿ,
ಇಪ್ಪತ್ತೊಂದು ದೀಕ್ಷಾಸ್ವರೂಪವಾದ ಮಹಾಪ್ರಣಮವ ಸ್ಥಾಪಿಸಿ,
ಸಕಲಾಚಾರಕ್ರಿಯೆಗಳಿಗೆ ಶುಭತಿಲಕವಿದೆ
ಚಿದ್ವಿಭೂತಿಯಿದೆಂದು ನಿರಂತರ
ಸ್ನಾನ ಧೂಳನ-ಧಾರಣವ ಮಾಡಿದರು ನೋಡ.
ಅದರಿಂ ಮೇಲೆ ಆ ಗೋವಿನ ಕುಚಕ್ಷೀರವ
ಈ ಭಸಿತದಿಂದ ಪಾವನವ ಮಾಡಿ, ಪರಮಾಮೃತವೆನಿಸಿ,
ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ,
ಅವರೊಕ್ಕುಮಿಕ್ಕ ಪರಮಾಮೃತ ಶೇಷಪ್ರಸಾದವ
ನಿಜನಿಷ್ಠೆಯಿಂದ ಲಿಂಗಾರ್ಪಿತವ ಮಾಡಿದರು ನೋಡ.
ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶಭಸಿತವ ಬಹಿಷ್ಕರಿಸಿ
ಸಕಲಪ್ರಮಥಗಣಂಗಳಿಗೆ ಪರಮಪದ ಮೋಕ್ಷದ ಕಣಿಯೆಂದು
ಬೋಧಿಸಿದಂಥ ಬಸವದಂಡನಾಥನ ಚರಣಕ್ಕೆ
ನಮೋ ನಮೋ ಎಂಬೆ ನೋಡ ಸಂಗನಬಸವೇಶ್ವರ. /93
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ
ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ
ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು,
ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ
ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ,
ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ
ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ
ಮಹಾಪ್ರಭುನಿರಂಜನಜಂಗಮವ ಮೂರ್ತವ ಮಾಡಿಸಿ,
ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ
ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು,
ಅನಾದಿಪ್ರಣಮವ ಸಂಬಂಧವ ಮಾಡಿ,
ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ,
ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ,
ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ,
ಕಡಗ-ಕಂಠಮಾಲೆ-ಕಣರ್ಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ,
ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ,
ಷೋಡಶಗಣ, ತೇರಸಗಣ, ದಶಗಣ,
ಮತ್ರ್ಯಲೋಕದ ಮಹಾಗಣ ಸಮೂಹಕ್ಕೆಲ್ಲ
ಒರದು ಬೋಧಿಸಿದರು ನೋಡ.
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ
ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ
ಸಂಗನಬಸವೇಶ್ವರ./94
ಹರಹರ ಶಿವಶಿವ ಜಯಜಯ ಕರುಣಾಕರ
‘ಮತ್ಪ್ರಾಣನಾಥ ಮಹಾಪ್ರಭು ಚಿದ್ಘನ ಶ್ರೀಗುರುಲಿಂಗಜಂಗಮವೆ,
ನಿಮ್ಮ ಶರಣಗಣಂಗಳೆಲ್ಲ ನಿರವಯಸಮಾಧಿಯಲ್ಲಿ ಹೋದ ಮಾರ್ಗವ
ನಿಮ್ಮ ಕರುಣಕಟಾಕ್ಷೆಯಿಂದ ದಯವಿಟ್ಟು ರಕ್ಷಿಸಯ್ಯ ತಂದೆ,
ಕೇಳಯ್ಯ ವರಕುಮಾರದೇಶಿಕೇಂದ್ರನೆ
ಶಿವಗಣಂಗಳೆಲ್ಲ ಪರಶಿವಲಿಂಗಕ್ಕು ತಮಗು ಭಿನ್ನವಿಲ್ಲದೆ
ಅಭಿನ್ನಸ್ವರೂಪದಿಂದ ಎರಡಳಿದು ಏಕರಸವಾಗಿ
ಪುಷ್ಪ ಪರಿಮಳದಂತೆ, ಬಾವನ್ನಕೋಶ ಬಂಗಾರದ ತೆರದಿ,
ಪಂಚಾಗ್ನಿಗಳ ಮೂಲ ಚಿತ್ಸ್ವರೂಪವಾದ ಚಿದಗ್ನಿಯಲ್ಲಿ ಸಮರಸವ ಮಾಡಿ,
ಸರ್ವಾಚಾರಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯೆ
ದ್ವಿತೀಯ ಕೈಲಾಸವೆಂದು, ಸತ್ಯ ನಡೆನುಡಿಯೆ ನಿಜಶಿವಮಂದಿರವೆಂದು,
ತನ್ನ ದೀಕ್ಷಾಕತರ್ುವಾದ ಗುರು ಮೊದಲಾಗಿ ಸಮಸ್ತರೆಲ್ಲ
ಶಿವಪಥಕ್ಕೆ ಯೋಗ್ಯವಾಗಿ ಬಂದಡೆ ಒಡಗೂಡಿ ಕೊಂಡು,
ಶಿವಪಥಕ್ಕೆ ಅಯೋಗ್ಯವಾದಡೆ ತ್ಯಜಿಸಿ,
ಪರಿಪೂರ್ಣ ಪರಂಜ್ಯೋತಿ ಸ್ತಂಭಾಕಾರವೆಂಬ
ನಿಷ್ಕಲ ಪರಶಿವಬಿಂದುಸ್ವರೂಪವಾದ
ಷೋಡಶವರ್ಣದ ಚಿದ್ಬೆಳಗಿನೊಳಗೆ ಉರಿ-ಕಪರ್ೂರಂದತೆ
ನಿಜಶಿವಸಮಾಧಿಯಲ್ಲಿ ಬೆರೆದು ಹೋದರು ನೋಡ.
ಇಂತೀ ಪ್ರಕಾರದಿಂದ ರಾಜಹಂಸನೋಪಾಯದಿಯಲ್ಲಿ
ಒಳಗು ಹೊರಗು ಅನಾಚಾರವ ತ್ಯಜಿಸಿ,
ಶಿವಾಚಾರಸಮರತಿಯಿಂದ ಕೂಡಿದರು ನೋಡ.
ಆಚಾರವೆಪ್ರಾಣವಾಗಿ ಸಕಲಪ್ರಮಥಗಣವೆಲ್ಲ
ಚಿದ್ಘನಮಹಾಲಿಂಗದಲ್ಲಿ ಕೂಟಸ್ಥರಾದರು ನೋಡ
ಸಂಗನಬಸವೇಶ್ವರ./95
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಪ್ರಭು
ಜಂಗಮವೆ ಸರ್ವಾಧಾರಪರಬ್ರಹ್ಮ ಘನಗಂಭೀರ ಪರತತ್ವಮೂರ್ತಿ ನೋಡ.
ಜಂಗಮವೆ ನಿರುಪಮ ನಿರಾವಯವಸ್ತು ನೋಡ.
ಜಂಗಮವೆ ನಿಷ್ಕಳಂಕ ನಿಶ್ಚಿಂತ ನೋಡಯ್ಯ.
ಜಂಗಮವೆ ಸ್ವಯಚರಪರವಸ್ತು ನೋಡಯ್ಯ.
ಜಂಗಮವೆ ಭೂರುದ್ರಮೂರ್ತಿ ನೋಡಯ್ಯ.
ಜಂಗಮವೆ ಸತ್ಯಸದಾಚಾರಮೂರ್ತಿ ನೋಡಯ್ಯ.
ಜಂಗಮವೆ ಸತ್ಕಿಯಾಸಮ್ಯಜ್ಞಾನಮೂರ್ತಿ ನೋಡಯ್ಯ.
ಜಂಗಮವೆ ಸದ್ಭಕ್ತಿಪ್ರಿಯ ನೋಡಯ್ಯ.
ಜಂಗಮವೆ ಗುರುಲಿಂಗಭಕ್ತರಿಗೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ.
ಜಂಗಮವೆ ಪರಮಾನಂದ ಪರಿಣಾಮಿ ನೋಡಯ್ಯ.
ಜಂಗಮವೆ ಸಚ್ಚಿದಾನಂದಭರಿತ ನೋಡಯ್ಯ.
ಜಂಗಮವೆ ಜಗತ್ಪಾವನಮೂರ್ತಿ ನೋಡಯ್ಯ.
ಜಂಗಮವೆ ಕಾರಣಾವತಾರಮೂರ್ತಿ ನೋಡಯ್ಯ.
ಜಂಗಮವೆ ಅಂಗಲಿಂಗವೆರಡಕ್ಕೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ.
ಜಂಗಮವೆ ಸದ್ಭಕ್ತ ಮಾಹೇಶ್ವರರ ಸದ್ಧರ್ಮಸರ್ವಾಚಾರ ಸಂಪತ್ತಿನಾಚರಣೆಗೆ
ಕಾರಣಕರ್ತ ನೋಡ ಸಂಗನಬಸವೇಶ್ವರ./96
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಮಂತ್ರಸ್ವರೂಪ ಅನಾದಿ ಮಹಾಪ್ರಭು
ಶ್ರೀ ಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ
ಮಹಾಪ್ರಣಮವೆ ನಿಜವಸ್ತು ನೋಡ.
ಆ ಮಹಾಪ್ರಣಮದಿಂದುದಯವಾದ
ತ್ರಿಯಕ್ಷರ-ಪಂಚಾಕ್ಷರ-ಷಡಕ್ಷರಂಗಳೆ ಮಹಾಮಂತ್ರಂಗಳು ನೋಡ.
ಆ ಮಹಾಮಂತ್ರಂಗಳೆ ಸಕಲ ಉಪಮಂತ್ರಂಗಳಿಗೆ ಮಾತೆಪಿತ ನೋಡ.
ಆ ಮಹಾಮಂತ್ರಂಗಳೆ ಸಕಲ ಶಾಸ್ತ್ರಾಗಮ ಪುರಾಣಂಗಳಿಗೆ ಜನನಿ ಜನಕ ನೋಡ.
ಆ ಮಹಾಮಂತ್ರವೆ ನಿಷ್ಕಲ ನಿಶ್ಯೂನ್ಯ ನಿರಂಜನ,
ಗುರು-ಲಿಂಗ-ಜಂಗಮ, ಪಾದೋದಕ-ಪ್ರಸಾದ,
ಚಿದ್ವಿಭೂತಿ ರುದ್ರಾಕ್ಷಿಗಳಿಗೆಲ್ಲ ಮೂಲಬೀಜಾಂಕುರ ನೋಡ.
ಆ ಮಹಾಮಂತ್ರವೆ ಅನಾದಿ ಶರಣನ ಚಿದೈಶ್ವರ್ಯ ಚಿದಾಭರಣ ನೋಡ.
ಆ ಮಹಾಮಂತ್ರವೆ ಸಕಲಾಚಾರ ಕ್ರಿಯಾಜ್ಞಾನಂಗಳಿಗೆ
ಸಂಜೀವನ ನೋಡ, ಸಂಗನಬಸವೇಶ್ವರ./97
ಹರಹರ ಶಿವಶಿವ ಜಯಜಯ
ಹರಗಣಂಗಳಾಚರಿಸಿದ ಸತ್ಕಾಯಕದಿಂದ
ಬಹುಜನ್ಮದ ದೋಷ ತೊಲಗುವುದಯ್ಯ.
ಸತಿ್ಕೃಯದಿಂದ ಕಾಲಕಾಮರ ಭಯ ಹರಿವುದಯ್ಯ.
ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ.
ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ.
ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ.
ಸದಾಚಾರದಿಂದ ಮನ ಸಿದ್ಧವಾಗುವುದಯ್ಯ.
ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ.
ಗಣಾಚಾರದಿಂದ ನಡೆ ಪರುಷವಾಗುವುದಯ್ಯ.
ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ.
ಕ್ರಿಯಾಚಾರದಿಂದ ಕಮರ್ೆಂದ್ರಿಯಂಗಳು ಪವಿತ್ರವಾಗುವವಯ್ಯ.
ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ.
ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ.
ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ.
ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ.
ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ.
ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ.
ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ
ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು,
ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು
ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ
ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ
ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ,
ಸಂಗನಬಸವೇಶ್ವರ./98
ಹರಹರ, ಶಿವಶಿವ, ಜಯಜಯ, ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುವೆ ನಿಷ್ಕಲ ಪರಶಿವತತ್ವವಯ್ಯ.
ಗುರುವೆ ಸಕಲಾಗಮಂಗಳ ಮೂರ್ತಿಯಯ್ಯ.
ಗುರುವೆ ಅಜ್ಞಾನವೆಂಬ ಕಾವಳಕ್ಕೆ ಚಿತ್ಸೂರ್ಯನಯ್ಯ.
ಗುರುವೆ ನಂಬಿದ ಭಕ್ತರ ವಿಷಯವೆಂಬ ವನಾಂತರಕ್ಕೆ ಚಿಚ್ಚಂದ್ರನಯ್ಯ.
ಗುರುವೆ ಆಸೆಯೆಂಬ ಪಾಶವ ದಹಿಸುವುದಕ್ಕೆ ಚಿದಗ್ನಿಯಯ್ಯ.
ಗುರುವೆ ಪರಾತ್ಪರಮೂರ್ತಿಯಯ್ಯ.
ಗುರುವೆ ಸಕಲಾಧಾರಮೂರ್ತಿಯಯ್ಯ.
ಗುರುವೆ ಸಚ್ಚಿದಾನಂದಮೂರ್ತಿಯಯ್ಯ.
ಗುರುವೆ ಸರ್ವಲೋಕ ಸೂತ್ರಾಧಾರಮೂರ್ತಿಯಯ್ಯ.
ಗುರುವೆ ಪರಬ್ರಹ್ಮವಸ್ತುವಯ್ಯ.
ಗುರುವೆ ನಿತ್ಯನಿರುಪಮನಯ್ಯ.
ಗುರುವೆ ನಿಷ್ಕಳಂಕ ನಿಷ್ಪ್ರಪಂಚನಯ್ಯ
ಗುರುವೆ ನಿರುಪಾಧಿಕ ನಿಶ್ಚಿಂತನಯ್ಯ
ಗುರುವೆ ಆದಿ ಅನಾದಿಯಿಂದತ್ತತ್ತಲಾದ ನಿರವಯಮೂರ್ತಿಯಯ್ಯ.
ಗುರುವೆ ಶಾಂತ ಸರ್ವಜ್ಞಸ್ವರೂಪನಯ್ಯ.
ಗುರುವೆ ನಿರಾಳ ನಿಷ್ಕಾಮ ನೋಡ.
ಶ್ರೀಗುರುವೆ ಸಗುಣಾನಂದಮೂರ್ತಿ ನೋಡ !
ಸಂಗನಬಸವೇಶ್ವರ./99
ಹರಹರ, ಶಿವಶಿವ, ಜಯಜಯ
ಶ್ರೀಗುರುಲಿಂಗಜಂಗಮ ಶರಣಗಣಂಗಳಲ್ಲಿ
ಕಿಂಕರ ಭೃತ್ಯಭಾವಸದ್ಭಕ್ತಿಯೆ ನಿಜಶಿವಯೋಗವಯ್ಯ.
ಸದ್ಭಕ್ತಿಯೆ ನಿಜಕೈವಲ್ಯಪದವಯ್ಯ.
ಸದ್ಭಕ್ತಿಯೆ ಪರಮಕೈಲಠಸವಯ್ಯ.
ಸದ್ಭಕ್ತಿಯೆ ನಿಜಮೋಕ್ಷಮಂದಿರವಯ್ಯ.
ಸದ್ಭಕ್ತಿಯೆ ರುದ್ರಲೋಕವಯ್ಯ.
ಸದ್ಭಕ್ತಿಯೆ ಶಿವಲೋಕ ಶಾಂಭವಲೋಕವಯ್ಯ.
ಸದ್ಭಕ್ತಿಯೆ ನಾಗಲೋಕ ದೇವಲೋಕವಯ್ಯ.
ಸದ್ಭಕ್ತಿಯೆ ಕಾಮಧೇನು – ಕಲ್ಪವೃಕ್ಷ – ಚಿಂತಾಮಣಿಯಯ್ಯ.
ಸದ್ಭಕ್ತಿಯೆ ಸಂಜೀವನ ಪರಮಾಮೃತವಯ್ಯ.
ಸದ್ಭಕ್ತಿಯೆ ನಿತ್ಯತ್ವ ಪರಮಪದವಯ್ಯ.
ಸದ್ಭಕ್ತಿಯೆ ಚಿದೈಶ್ವರ್ಯ ಚಿದಾಭರಣವಯ್ಯ.
ಸದ್ಭಕ್ತಿಯೆ ಮಹಾತೀರ್ಥವಯ್ಯ.
ಸದ್ಭಕ್ತಿಯೆ ಮಹಾಶಿವಕ್ಷೇತ್ರವಯ್ಯ.
ಸದ್ಭಕ್ತಿಯಿಂದ ಮಹಾಪಾಪಂಗಳು ಕುಸಿದು ಹೋಹವಯ್ಯ.
ಸದ್ಭಕ್ತಿಯಿಂದ ಸಕಲಲೋಕಪಾವನವಯ್ಯ.
ಸದ್ಭಕ್ತಿಯಿಂದ ಸದ್ಯೋನ್ಮುಕ್ತಿಯಯ್ಯ.
ಸದ್ಭಕ್ತಿಯಿಂದ ಅನಂತರು ಮುಕ್ತರಾದರಯ್ಯ.
ಸದ್ಭಕ್ತಿಯೆ ಮಹಾಜ್ಞಾನದರ್ಪಣ ನೋಡ ಸಂಗನಬಸವೇಶ್ವರ./100

ಹೀಂಗೆ ಪೂರ್ವಪುರಾತನರು ಸದ್ಗುರು ವಚನೋಕ್ತಿಯಿಂದ ತಿಳಿದು
ರೇವಣಸಿದ್ಭೇಶ್ವರ, ಮರುಳಸಿದ್ಧೇಶ್ವರ, ತೋಂಟದಸಿದ್ಧೇಶ್ವರ
ನೂರೊಂದು ವಿರಕ್ತರು ಮೊದಲಾದ ಮತ್ರ್ಯಲೋಕದ ಮಹಾಗಣಂಗಳೆಲ್ಲ
ಸರ್ವಾಚಾರ ಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ
ಸದ್ಭಕ್ತಿಯ ಸದ್ಗುರುಮುಖದಿಂದ ಬೆಸಗೊಂಡು
ನಿಜಪ್ರಸಾದವೆಂದು ಸದ್ಭಾವದಿಂದ ಭಾವಿಸಿ
ನಡೆದಂತೆ ನುಡಿದು, ನುಡಿದಂತೆ ನಡೆದು, ಹರುಕಿಲ್ಲದೆ
ಹರಿ ಅಜ ಸುರ ಮನು ಮುನಿ ದೇವ ದಾನವ ಮಾನವರೆಲ್ಲ ಮುಳುಗಿಹೋದ
ಹೊನ್ನು-ಹೆಣ್ಣು-ಮಣ್ಣು-ಅನ್ನ-ನೀರು-ವಸ್ತ್ರ-ಆಭರಣ-ವಾಹನವೆಂಬ
ಮಾಯಾಪಾಶ ಕಡವರವ ದಾಂಟಿದರು ನೋಡ.
ಮಾಯಾಭೋಗವಿರಹಿತರಾಗಿ ಲಿಂಗಭೋಗಸಂಪನ್ನರಾದರು ನೋಡ
ಸಂಗನಬಸವೇಶ್ವರ./101