Categories
ವಚನಗಳು / Vachanagalu

ಗುಹೇಶ್ವರಯ್ಯ ವಚನಗಳು

ಅಂಗಗರಡಿಯೊಳು ನಿಜಲಿಂಗದ ಸಾಧನವ ಬಲ್ಲಡೆ
ಹಂಗಿನ ಮನುಜಂಗೆ ಅರಿವುಂಟೆ ?
ಡಂಗುರದೊಳು ಸ್ವಯವಿಲ್ಲದೆ ಕೆಟ್ಟತ್ತು.
ಡಿಂಗರಿಗನೆಂದಲ್ಲಿ ಮುಕ್ತಿ ಕಂಡಿತ್ತು
ಗೊಹೇಶ್ವರಪ್ರಿಯ ನಿರಾಳಲಿಂಗ./1
ಅಕ್ಷರದ ಆದಿಮೂಲವನರಿಯಬಲ್ಲರೆ
ಪ್ರಾಣಲಿಂಗದ ಅಕ್ಷರದ ಹುಟ್ಟಾವಳಿಯು ಸ್ಥೂಲದಲ್ಲಿಹುದು.
ಅಕ್ಷರದ ನಿಲವು ಸೂಕ್ಷ್ಮದಲ್ಲಿಹುದು.
ಮಾತಿಗೆ ಮೊದಲು ಶಬ್ದಮುಗ್ಧವಾಗಿರಲು
ಕಾರಣದಲ್ಲಿಹುದು.
ಇಂತೀ ತ್ರಿವಿಧಪರಿಯ ಭೇದಾಭೇದಂಗಳ ಸಂಬಂಧಿಸಿಕೊಂಡು
ಪ್ರಾಣಲಿಂಗಸಾಹಿತ್ಯವಾದ ಕಾರಣ ಭಕ್ತರ ಶ್ರೀಚರಣಕ್ಕೆ
ನಮೋ ನಮೋ ಎನುತಿರ್ನೆ ಕಾಣಾ
ಗೊಹೇಶ್ವರಪ್ರಿಯ ನಿರಾಳಲಿಂಗ. /2
ಅರಿವಿನ ನಡೆ, ಅರಿವಿನ ನುಡಿ,
ಭಕ್ತಿಯ ಮೂಲವನರಿತ ಶರಣರ ಚರಣದೊಳೆನ್ನನಿಟ್ಟು
ಸಲಹಯ್ಯ, ಗೊಹೇಶ್ವರಪ್ರಿಯ ನಿರಾಳಲಿಂಗಾ./3
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ
ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ,
ಕಾಲಕರ್ಮಂಗಳ ದಂಡಿಸಿದಡಿಲ್ಲ,
ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ.
ಜಲಸಮಾಧೀಯಲ್ಲಿ ಕುಳಿತಡಿಲ್ಲ,
ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ |
ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ ||
ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ
ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು
ಮತ್ತೆ ಅರಸಲುಂಟೇನಯ್ಯಾ?
ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ
ಚಿತ್ತ ಸಮಾಧನವುಳ್ಳ ಪುರುಷಂಗೆ ?
ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ
ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?/4
ಆಕಾಶದಲ್ಲಿ ಹಾರಿಹೋಹ ಪಕ್ಷಿಯ ಮಾರ್ಗವನು
ಹಿಂದೆ ಬಪ್ಪ ಪಕ್ಷಿ ಬಲ್ಲುದಲ್ಲದೆ, ಕೆಳಗಾಡುವ ಕುಕ್ಕುಟ ಬಲ್ಲುದೆ?
ಆ ಲಿಂಗದ ಸಂಗದ ಸುಖವನು ಪ್ರಾಣಲಿಂಗಿಗಳೆ ಬಲ್ಲರಲ್ಲದೆ,
ಮರವೆಯಲ್ಲಿ ಮಾತಾಡುವ ನರಗುರಿಗಳು
ನಿಮ್ಮ ಹೊಲಬನವರೆತ್ತ ಬಲ್ಲರಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗ ?/5
ಆದಿ ಅನಾದಿಗಳಿಲ್ಲದಂದಿನ ಕೂಗು,
ನಾದಬಿಂದುಕಳೆಗಳಿಲ್ಲದಂದಿನ ಕೂಗು,
ಇಡಾ ಪಿಂಗಳ ಸುಷಮ್ನನಾಳಾದ ಮಧ್ಯದ ಕೂಗು,
ಕಂಡು ಕೂಗಿದೆ, ಅರಸು ಬಾರಯ್ಯ
ಕಡಿಯ ಹೊಲಕೆ ಗೊಹೇಶ್ವರಪ್ರಿಯ ನಿರಾಳಲಿಂಗ./6
ಆರು ಗುಣವೆಂಬೊ ಅರಿಕೆಯನೈದೆವೆಂಬ
ಅರುಹಿರಿಯರು ನೀವು ಕೇಳಿರೋ.
ಅರುವೆಂಬುದನೆ ಅರಿದು,
ಮರಬೆಂಬುದನೆ ಮರದು,
ಪರಶಿವಗುರುಮೂರ್ತಿಯೆಂದು ಗುರುವ ಕೊಂಡಾಡುತ್ತ
ಆ ಗುರುಮೂರ್ತಿ ಗುರುದೀಕ್ಷವನೆ
ಶಿರದಮೇಲಿಹ ಹಸ್ತವನು
ಆ ತತ್ಕ್ಷಣದಲ್ಲಿ ಕಾರುಣ್ಯದಿಂದಲಿ
ಪರಮಪ್ರಸಾದವ ಸಾರಾಯವ ಕೊಂಡದನು ಅರಿತು,
ಮನದಲ್ಲಿ ಆಧಾರಚಕ್ರವಂ ಬಲಿದು
ಇಡಾ ಪಿಂಗಳ ಸುಷುಮ್ನವೆಂಬ ಸಂದೇಹವನಳಿದು,
ಏಕನಾಳವ ಕೂಡುತ್ತ ಮೂರುಪುರದ ಬಾಗಿಲಂಗಳ ಪೊಕ್ಕು
ಪರಮಪ್ರಸಾದವ ಕೊಡುತಿರ್ದ ಘನಲಿಂಗವ ಕೊಡಬಲ್ಲರೆ
ಅದೇ ಅರುವು ಹಿರಿಯತನ.
ಇದನರಿಯದೆ ಅರುಹಿರಿಯರೆಂದು ತಿರುಗುವ
ಬೂಟಕರಿಗೆ ನಾನೇನೆಂಬೆನಯ್ಯಾ
ಗೊಹೇಶ್ವರಪ್ರಿಯ ನಿರಾಳಲಿಂಗಾ !/7
ಆರು ಚಕ್ರದಲ್ಲಿ ಅರಿತೆನೆಂದು ನುಡಿವ
ಅರಿವುಗೇಡಿಗಳು ನೀವು ಕೇಳಿರೋ.
ಆಧಾರಚಕ್ರ ಪೃಥ್ವಿಗೆ ಸಂಬಂಧ ;
ಅಲ್ಲಿಗೆ ಬ್ರಹ್ಮ ಅಧಿದೇವತೆ,
ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ.
ಸ್ವಾಧಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅಧಿದೇವತೆ,
ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ.
ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ ;
ಅಲ್ಲಿಗೆ ರುದ್ರನಧಿದೇವತೆ,
ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ.
ವಿಶುದ್ಧಿಚಕ್ರ ವಾಯುವಿಗೆ ಸಂಬಂಧ ;
ಅಲ್ಲಿಗೆ ಸದಾಶಿವನಧಿದೇವತೆ,
ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ.
ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ ;
ಅಲ್ಲಿಗೆ ಪರಶಿವನಧಿದೇವತೆ,
ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ.
ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ.
ಆ ಲಿಂಗವು ನಿಮಗೆ ತಪ್ಪಿದವು,
ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ
ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು
ನಾಚಿತ್ತು ಎನ್ನ ಮನವು
ಗೊಹೇಶ್ವರಪ್ರಿಯ ನಿರಾಳಲಿಂಗಾ/8
ಆರುಲಿಂಗದಲ್ಲಿ ಅರತೆನೆಂಬ ಅರಿವುಗೇಡಿಗಳು ನೀವು ಕೇಳಿರೊ.
ಆರುಲಿಂಗ ನಿಮಗೆಂತಪ್ಪವು?
ಆಚಾರಲಿಂಗ ಬ್ರಹ್ಮಂಗೆ ಸಂಬಂಧವಾಯಿತ್ತು.
ಗುರುಲಿಂಗ ವಿಷ್ಣುವಿಂಗೆ ಸಂಬಂಧವಾಯಿತ್ತು.
ಶಿವಲಿಂಗ ರುದ್ರಂಗೆ ಸಂಬಂಧವಾಯಿತ್ತು.
ಜಂಗಮಲಿಂಗ ಈಶ್ವರಂಗೆ ಸಂಬಂಧವಾಯಿತ್ತು.
ಪ್ರಸಾದಲಿಂಗ ಸದಾಶಿವಂಗೆ ಸಂಬಂಧವಾಯಿತ್ತು.
ಮಹಾಲಿಂಗ ಪರಶಿವಂಗೆ ಸಂಬಂಧವಾಯಿತ್ತು.
ಇಂತೀ ಆರುದರುಶನಕ್ಕೆ ಸಂಬಂಧವಾಯಿತ್ತು.
ನಿಮ್ಮ ಸಂಬಂಧವ ಬಲ್ಲರೆ ಹೇಳಿರೊ?
ಗುರುಲಿಂಗಜಂಗಮವೆಂಬ ತ್ರಿವಿಧಸಂಬಂಧ;
ಆರು ಪರಿಯ ಶಿಲೆಯ ಮೆಟ್ಟಿ ಮುಂಬಾಗಿಲವ ತೆರೆದು
ಶ್ರೀಗುರುವಿನ ಪ್ರಸಾದವ ಸವಿದು
ಮುಂದಿರ್ದ ಲಿಂಗಸಂಗದ ಅರ್ಪಿತ ದರುಶನವೆಂಬೊ
ಜಂಗಮವ ನೋಡುತ್ತ ನೋಡುತ್ತ
ನಿಬ್ಬೆರೆಗಾದರು ನೋಡಾ.
ಆರನು ಮೀರಿ, ಮೂರನು ಮೆಟ್ಟಿ, ತಟ್ಟುಮುಟ್ಟುಗಳೆಂಬ
ಭ್ರಮೆಗಳನೊಲ್ಲದೆ ಐವತ್ತೆರಡರೊಳಗಾಗಿ
ಅರಿಯಲಾರದೆ ಮೀರಿಹೋದರು
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./9
ಆರುಸ್ಥಲದಲ್ಲಿ ಅರತೆನೆಂದು ಸಹಭೋಜನದಲ್ಲಿ
ಉಂಬುವ ಅಣ್ಣಗಳು ನೀವು ಕೇಳಿರೋ.
ಅಂಗದ ಮೇಲೆ ಲಿಂಗವಿರ್ದಡೇನಯ್ಯಾ,
ಲಿಂಗವ ಪ್ರಾಣಕ್ಕೆ ಅವಧರಿಸದನ್ನಕ್ಕ?
ಲಿಂಗದ ಅಷ್ಟವಿಧಾರ್ಚನೆಯ ಬಲ್ಲ[ರೇ]ನಯ್ಯಾ,
ಅಷ್ಟ [ಮದಂಗಳ] ನಷ್ಟವ ಮಾಡಿ,
ಪಂಚೇಂದ್ರಿಯಂ[ಗಳ ಬಂಧಿಸಿ],
ಲಿಂಗದ ಮುಖ ನೋಡದನ್ನಕ್ಕ?
ಇಂತಪ್ಪ ವರ್ಮಾದಿವರ್ಮಂಗಳ ಭೇದವನರಿಯದೆ,
ಕರಸ್ಥಲದಿ ಲಿಂಗವ ಪಿಡಿದು ಸಹಭೋಜನವೆಂದು
ಒಂದಾಗಿ ಉಂಬುವ ಆ ಲಿಂಗದ್ರೋಹಿಗಳ ನೋಡಿ,
ನಗುತಿರ್ದ, ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./10
ಇಂದ್ರದಳದಲ್ಲಿ ಪುಣ್ಯ, ಅಗ್ನಿದಳದಲ್ಲಿ ಪಾಪ,
ಯಮದಳದಲ್ಲಿ ಗಮನ, ನೈರುತ್ಯದಳದಲ್ಲಿ ನಿರ್ಗಮನ,
ವರುಣದಳದಲ್ಲಿ ಅಸನ, ವಾಯುವ್ಯದಳದಲ್ಲಿ ವ್ಯಸನ,
ಕುಬೇರದಳದಲ್ಲಿ ವಿಷಯ, ಈಶಾನ್ಯದಳದಲ್ಲಿ ನಿದ್ರೆ,
ಮಧ್ಯದಳದಲ್ಲಿ ಗುಣಭರಿತನಾಗಿಹನು.
ಊಧ್ರ್ವದಳದಲ್ಲಿ ಸುಜ್ಞಾನಭರಿತನು
ತಾನೆ [ಗೊಹೇಶ್ವರ]ಪ್ರಿಯ ನಿರಾಳಲಿಂಗ. /11
ಇದಕ್ಕೆ ನಿರ್ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳ ಮರ್ದಿಸಿ,
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿಯ ಸೂರೆಗೊಂಡು,
ಸಪ್ತವ್ಯಸನಂಗಳೆಂಬ ಏಳುಬೆಕ್ಕಿನ ಮೂಲವಂ ಕೆಡಿಸಿ,
ಹಸಿವು ತೃಷೆ ನಿದ್ರೆ ಜಾಡ್ಯವೆಂಬ ಸೂಕರಂಗಳ ಕೊಂದು,
ಪಂಚವರ್ಣದ ಹುಲಿಯ ಆರ್ಭಟವಂ ಮುರಿದು,
ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರ ಸೂತಕವಂ ಕಳೆದು,
ನಾನು ನೀನೆಂಬ ಅಹಾಂಕರವ ನಷ್ಟವ ಮಾಡಿ,
ಸುಜ್ಞಾನವೆಂಬ ಜಾಗಟೆಯ ಪಿಡಿದು
ಅರಿವೆಂಬ ಕುಡಿಯಲ್ಲಿ ನುಡಿಸಿ, ಪರಮ ಪರಿಣಾಮವೆಂಬ
ನಾದದ ಮರೆಯಲ್ಲಿ ಪ್ರಸಾದವಂ ಕೊಂಡು ಸುಖಿಸುವ
ಸರ್ವಕಾರರ ನೋಡಿ ಅಹುದಹುದೆಂದು
ಅಭಯಹಸ್ತವ ಕೊಡುತ್ತಿದ್ದ
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./12
ಇದಕ್ಕೆ ಸಾಕ್ಷಿ-ಶ್ಲೋಕ: ಅಷ್ಟವಿಧಾರ್ಚನಂ [ಕೃತ್ವಾ] ಅಷ್ಟಲಿಂಗಸ್ಯ ಪೂಜನಂ
ಎಂದುದಾಗಿ, ಚಪಳೆ ಕೊಡನ ಹೊತ್ತು,
ಕೈಯ ಮರದಿರ್ದಡೇನಯ್ಯಾ!
ಆ ಚಿತ್ತ ಕೊಡನೊಳು ಜಡಿಗಿಡಿತವಾಗಿ ಇರದನ್ನಕ್ಕ?
ಇದು ಕಾರಣ, ಪ್ರಾಣಲಿಂಗವನರಿದ ಶರಣರು
ಇಷ್ಟಲಿಂಗದ ಕ್ರೀಯವನರಿ[ಯ]ದಿರ್ದರೇನಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗ? /13
ಇದರ ನಿರ್ವಚನ : ಬ್ರಹ್ಮೇಶ್ವರಿ ವಿಷ್ಣೇಶ್ವರಿ ರುದ್ರೇಶ್ವರಿ
ಮಹೇಶ್ವರಿಯೆಂಬ ಆ ರುದ್ರಶಕ್ತಿಸಹ
ಸಪ್ತವ್ಯಸನಗಳೆಂಬ ಮೆಟ್ಟನಿಕ್ಕಿ,
ಪ್ರಣಮವೆಂಬ ವೀಣೆಯ ವಿಸ್ತರಿಸಿ,
ಸಪ್ತಸ್ಥಾನದಲ್ಲಿ ಎಳೆಯಂ ಬಿಗಿದು,
ಹಂಸ ಹಂಸವೆಂಬ ಬೆರಳಲ್ಲಿ ನುಡಿಸುತ್ತ
ಗೊಹೇಶ್ವರನಾಳದಲ್ಲಿ ಮಹಾ ಮಹಾತ್ಮನೆಂಬ
ವಚನವ ಪಾಡುತ್ತ ಉರಿಗೆಂಡದ ಕಣ್ಣತೆರೆದು,
ವಕ್ರಂಗಳ ವಿಸರ್ಜಿಸಿ, ಕಂಗಳ ಮುಚ್ಚಿ,
ಸದೈಶ್ವರಿಯ ಸರವಿಗೈದು ಪರಸ್ಥಾನದಲ್ಲಿ
ಒಲದಾಡುತಿರ್ದ ಜೋಗಿಯ ಕಂಡು, ಸಾರಾಯ ಸಂತೋಷಮಂ
ಮಾಡುತ್ತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./14
ಇನ್ನು ಗುರುಸ್ಥಲದ ವಚನ : ಗುರುಹೃದಯ ಚಿನ್ಮಯಯೆನಲಂಜುವೆನಯ್ಯ!
ಗುರುವೆನ್ನ ಆತ್ಮದಿಂದ ಮೊಳೆಯದೋರಿದನಾಗಿ.
ನಾನು ಪಾವನವೆಂಬೆನಯ್ಯ, ಎನ್ನ ಪಾಪಕಂಜುವೆನಯ್ಯ,
ಆ ಗುರುವಿನ ಕರಸ್ಥಳದಿಂದ ಉದುಭವಿಸಿದೆನಾಗಿ.
ಇಂತೀ ಉಭಯದ ಉತ್ಪತ್ಯ ಸಂಗನ ಶರಣ
ಬಸವಣ್ಣನ ಸಂತತಿಗಳಿಲ್ಲದೆ ಶಬ್ದಪಾಠಕರಿಗೆ
ಅರಿಯಬಾರದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ./15
ಇನ್ನು ಪ್ರಾಣಲಿಂಗಿಸ್ಥಲದ ವಚನ:
ಪ್ರಾಣಲಿಂಗವ ಬಲ್ಲೆವೆಂಬ ಅಣ್ಣಗಳು ನೀವು ಕೇಳಿರೊ.
ಪವನದ ಮೂಲವನರಿಯಬಲ್ಲರೆ ಭಕ್ತನೆಂದೆನಿಸಬಹುದು.
ಪ್ರಾಣನಿದ್ದ ನೆಲೆಯನರಿತು
ಪ್ರಣಮದ ಸಂಬಂಧದ ಮಾಡಬಲ್ಲರೆ
ಪ್ರಾಣಲಿಂಗಿಯೆಂದೆನಸಿಬಹುದು.
ಹಿಂದಣ ದ್ವಾರವಂ ತೆರೆದು, ಮುಂದಣ ಮುಪ್ಪುರದ ಬಟ್ಟೆಯಂ ಮೆಟ್ಟಿ,
ತ್ರಿಕೂಟವೆಂಬ ಸಂದಿಯಲ್ಲಿ ಹೊಕ್ಕು,
ಮಹಾಲಿಂಗವ ನಿರೀಕ್ಷಣವ ಮಾಡಿ,
ಶ್ರೀಗುರುವಿನ ಚರಣಾಂಬುಜವ ನೋಡಲಿಕ್ಕಾಗಿ
ಮಹಾಜ್ಯೋತಿರ್ಮಯವೆಂಬ ಜಂಗಮವು ಸಿಕ್ಕಿತಯ್ಯಾ.
ಆ ಜಂಗಮದ ಒಕ್ಕುಮಿಕ್ಕ ಪ್ರಸಾದವಂ ಸವಿದು
ನಿತ್ಯಶರಣರ ಚರಣಕ್ಕೆ ನಮೋ ನಮೋ ಎನುತಿರ್ನೆ ಕಾಣಾ
ಗೊಹೇಶ್ವರಪ್ರಿಯ ನಿರಾಳಲಿಂಗ./16
ಇನ್ನು ಭಕ್ತಸ್ಥಲದ ವಚನ: ಪೃಥ್ವಿಯ ಮೂಲವನಳಿದು
ಅಪ್ಪುವಿನೊಳು ಕೂಡಬಲ್ಲರೆ ಭಕ್ತ.
ಅಪ್ಪುವಿನ ಭಯವ ನಿಲ್ಲಿಸಿ
ಅಗ್ನಿಯ ಕೂಡಬಲ್ಲರೆ ಮಾಹೇಶ್ವರ.
ಅಗ್ನಿಯ ಆರ್ಭಟವನಳಿದು
ವಾಯುವ ಕೂಡಬಲ್ಲರೆ ಪ್ರಸಾದಿ.
ವಾಯುವಿನ ಚಂಚಲವ ನಿಲ್ಲಿಸಿ
ಆಕಾಶವ ಕೂಡಬಲ್ಲರೆ ಪ್ರಾಣಲಿಂಗಿ,
ಆಕಾಶದ ಅಂಕವನಳಿದು
ನಿರಂಕಸ್ಥಳದಲ್ಲಿ ಕೂಡಬಲ್ಲರೆ ಶರಣ.
ಆಕಾಶಹಂಕೃತಿಯನಳಿದು
ನಿತ್ಯಸ್ಥೂಲವ ಕೂಡಬಲ್ಲರೆ ಐಕ್ಯ.
ಇಂತೀ ಆರು ಆರುಪರಿಯ ಬಣ್ಣದ ಪರತತ್ವದೊಳು ಕೂಡಿ
ಸಂಬಂಧವಾದ ನಿಜಸಾಹಿತ್ಯವುಳ್ಳ
ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ನೆ ಕಾಣಾ
ಗೊಹೇಶ್ವರಪ್ರಿಯ ನಿರಾಳಲಿಂಗ./17
ಇಷ್ಟಲಿಂಗವೆಂಬ ಭ್ರಾಂತಿಗೇಡಿಗಳು ನೀವು ಕೇಳಿರೋ
ಇಷ್ಟಲಿಂಗದ ಪೂಜೆಯ ನಿಷ್ಠೆಯಲ್ಲಿ ಮಾಡಿದರೆ
ಅಷ್ಟೈಶ್ವರ್ಯ ದೊರಕೊಂಬುದೇನಯ್ಯ?
ಪ್ರಾಣಲಿಂಗದ ನೆಲೆಯನರಿತು ಪೂಜೆಯಂ ಮಾಡಲು
ಸಕಲ ಭವಬಂಧನಗಳು ಬಿಟ್ಟು ಚತುರ್ವಿಧ ಫಲಂಗಳು
ಆ ಶರಣನ ಬಟ್ಟೆಯ ಸೋಂಕಲೊಲ್ಲವು.
ಇದು ಕಾರಣ ಅಂಗಸಂಗವಾಗಿರ್ದ ಪ್ರಾಣ ಬಿಟ್ಟುಹೋಗುವಾಗ
ಅಂಗವೊಂದೆಸೆಯಾಗಿ ಪ್ರಾಣವೊಂದೆಸೆಯಾಗಿ ಬಿದ್ದು
ಹೋಗುವುದ ಕಂಡು ನಾಚಿತ್ತು ಎನ್ನ ಮನವು.
ಇದು ಕಾರಣ ಪ್ರಾಣಲಿಂಗದ ಸಂಬಂಧದ ಭೇದವ
ನಮ್ಮ ಪೂವಾಚಾರ್ಯ ಸಂಗನಬಸವಣ್ಣನ ಸಂತತಿಗಳಿಗಲ್ಲದೆ
ಉಳಿದಂಥ ತಾಮಸದೇಹಿಗಳಿಗೆ ಅರಿಯಬಾರದಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗಾ. /18
ಈಶ್ವರಗಂಗೆ ಗುಹೇಶ್ವರದೇವರು ಹೇಳುತಿರ್ದ, ಸಾಕ್ಷಿ :
ಶ್ಲೋಕ-ಏಕವೃಕ್ಷ ತವೇವರ್ಣಥೌ ನವೇಫಲ ಸೇವಿತಂ |
ಮುಖ ಪದ್ಮದೃಷ್ಟಂ ದೇವ ಸರ್ವಪಾಪಂ ವಿನಶ್ಯತಿ (?) ||
ಇನ್ನು ಈಶ್ವರ ಲಿಂಗಾರ್ಪಿತವಂ ಮಾಡಬೇಕೆಂದು ಕೇಳಲು
ಹೇಳಿದ ಪ್ರಸ್ತಾವದ ವಚನ : ಷಡುವರ್ಗವೆಂಬ ಸಮ್ಮಾರ್ಜನೆಯಂ ಮಾಡಿ,
ಅಷ್ಟಮದಂಗಳ ಹಿಟ್ಟುಗುಟ್ಟಿ ರಂಗವಾಲಿಯನಿಕ್ಕಿ,
ಸಪ್ತವ್ಯಸಗಳೆಂಬ ಉಪಕರಣಂಗಳ ಲಿಂಗಸೋಹಕ್ಕೆ ತಂದು,
ತನುವೆಂಬ ಅಟ್ಟಣೆಯಲ್ಲಿ
ಮನವೆಂಬ ಹಸ್ತದಿಂದ ಮಜ್ಜನಕ್ಕೆರೆದು
ಮೂಲಗುಂಡಿಗೆಯೊಳಗಣ ಜ್ಯೋತಿಯನೆಬ್ಬಿಸಿ
ಸಗುಣವೆಂಬ ಶ್ರೀಗಂಧವನಿಟ್ಟು,
ಪ್ರಣಮಮೂಲವೆಂಬ ಅಕ್ಷತೆಯ ಧರಿಸಿ
ಅಷ್ಟದಳದಲ್ಲಿ ಪೂಜೆಯ ಮಾಡಿ,
ಸುಖಸದ್ವ್ಯಸನವೆಂಬ ಧೂಪವನ್ನು ಅಳವಡಿಸಿ
ಪಂಚತತ್ವಗಳೆಂಬ ಪಂಚಾರತಿಯ ಬೆಳಗಿ
ಸುಷುಮ್ನವೆಂಬ ಹರಿವಾಣದಲ್ಲಿ ಪರಮಭೋಜನವೆಂಬ
ಬೋನವಂ ಗಡಣಿಸಿ,
ಸರ್ವಶುದ್ಧವೆಂಬ ತುಪ್ಪವಂ ನೀಡಿ,
ನಿರ್ಮಳಾತ್ಮಕವೆಂಬ ಬೆಳ್ಳಿಯ ನಿರ್ಮಿಸಿ,
ಶುಚಿಭರ್ೂತವೆಂಬ ಹಸ್ತದಲ್ಲಿ
ಮಹಾಲಿಂಗಕ್ಕೆ ನೈವೇದ್ಯವಂ ಕೊಟ್ಟು
ಅರಿವು ಮರವೆಂಬ ಅಡಕೆಯನೊಡದು,
ಶತಶಾಂತವೆಂಬ ಎಲೆಯಂ ಕೊಯಿದು,
ನಿರ್ಗುಣವೆಂಬ ಸುಣ್ಣವಂ ನೀಡಿ, ಲಿಂಗಾರ್ಪಿತವಂ ಮಾಡಿ,
ಪ್ರಸಾದವ ಸವಿವ ಲಿಂಗಾರ್ಚಕರ ಚರಣವ ತೋರಿ
ಎನ್ನ ಸಲಹಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ./19
ಓಡು ಗುಂಡುಗಳಿಗೆ ರೂಢೀಶ ಶಿವನೆಂದು
ಓಡಾಡುವ ನರಗುರಿಗಳು ನೀವು ಕೇಳಿರೊ.
ಕಾಡ ಹೊಗದಿರಿ ನೀವು, ಮೃಡನಿದ್ದ ನೆಲೆಯನರಿಯದೆ.
ಬಟ್ಟೆ ತಪ್ಪಿ ಕಾನನದೊಳು ಬಿದ್ದು,
ನಾನು ನೀನೆಂಬ ವ್ಯಾಘ್ರನಡ್ಡಗಟ್ಟಿತ್ತಯ್ಯ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಸಿಂಹ ಘರ್ಜಿಸಿತ್ತಯ್ಯ.
ರೂಪು ರುಚಿ ಸ್ಪರ್ಶ ಶಬ್ದ ಗಂಧ ಈ ಐದು ಮೊರೆದೆದ್ದವಯ್ಯ.
ಕಾಲ ಕರ್ಮ ಗುಣದೋಷವೆಂಬ ಮಾರಿ
ಬಾಯಿದೆರದು ನುಂಗಿತಯ್ಯ.
ಇಡಾ ಪಿಂಗಳ ಸುಷುಮ್ನನೆಂಬ ಪಿಶಾಚಿಯು
ಮದವ ಮಾಡುವದ ಕಂಡೆನಯ್ಯ.
ಇಂತರಿತು ಪಾಪಿಯ ಮಗನೆಂದು ಕರವಿಡಿದು,
ಗುರುವಿನ ವಾಕ್ಯವ ಕೇಳದೆ, ಪತಿವ್ರತತನದಲ್ಲಿದ್ದ ಸತಿ
ಜಾರತನಮಾಡಿರ್ದುದ ಕಂಡು,
ಪುರುಷನು ಮೂಗನರಿದಂತೆ ಆಯಿತ್ತು ಕಾಣಾ,
ಗೊಹೇಶ್ವರಪ್ರಿಯ ನಿರಾಳಲಿಂಗಾ. /20
ಕಲಿಯುಗ ಮೊದಲಾದ ಇಪ್ಪತ್ತೊಂದು ಯುಗದಲ್ಲಿ
ದಾವರೂಪವಾಗಿ ಇದ್ದನಯ್ಯಾ ಬಸವಣ್ಣ!
ಬಲ್ಲರೆ, ಹೇಳಿ, ಅರಿಯದಿದ್ದರೆ ನೀವು ಕೇಳಿ.
ಅದು ಎಂತೆಂದಡೆ: ಆದಿಯುಗದಲ್ಲಿ ಶರಣನೆಂಬ ಬಸವಣ್ಣ;
ಜಂಗಮವೆಂಬ ನಿರಂಜನ.
ಅನಾದಿಯೆಂಬ ಯುಗದಲ್ಲಿ ಬಸವಣ್ಣನೆ ಭಕ್ತ;
ಜಂಗಮನೆ ಸದಾಶಿವಲಿಂಗ.
ಅವ್ಯಕ್ತನೆಂಬ ಯುಗದಲ್ಲಿ ಬಸವನೆ ಅಲ್ಲಮ;
ಜಂಗಮನೆ ಪೀಠಾಧಾರವೆಂಬಲಿಂಗ.
ವ್ಯಕ್ತನೆಂಬ ಯುಗದಲ್ಲಿ ಬಸವನೆ ಬೊಮ್ಮಣ್ಣ;
ಜಂಗಮನೆ ಭೂತೇಶ್ವರಲಿಂಗ.
ಮಣಿರಣನೆಂಬ ಯುಗದಲ್ಲಿ ಬಸವನೆ ಆರೋಗ್ಯಕ್ಕೆ ವೈದ್ಯನಾದ.
ಜಂಗಮನೆ ಪ್ರಂಚವಕ್ತ್ರನೆಂಬಲಿಂಗ.
ವಿಶ್ವಾರಣನೆಂಬ ಯುಗದಲ್ಲಿ ಬಸವನೆ ಪೀತಶಂಭು;
ಜಂಗಮನೆ ಏಕಭರಿತನೆಂಬಲಿಂಗ.
ಅಲಂಕೃತನೆಂಬ ಯುಗದಲ್ಲಿ ಬಸವನೆ ಪ್ರಭುದೇವರು;
ಜಂಗಮವೆ ಸವರ್ೇಶ್ವರಲಿಂಗ.
ಕೃತಯುಗದಲ್ಲಿ ಬಸವನೆ ಗಜ್ಜಯ್ಯನಾದ;
ಜಂಗಮವೆ ತ್ರಿಪುರಾಂತಕಲಿಂಗ.
ತ್ರೇತಾಯುಗದಲ್ಲಿ ಬಸವನೆ ಬ್ರಾಹ್ಮಣನಾದ;
ಜಂಗಮನೆ ಲೋಕೇಶ್ವರನೆಂಬಲಿಂಗ.
ದ್ವಾರಪರಯುಗದಲ್ಲಿ ಬಸವನೆ ಶ್ರೀಧರಪಂಡಿತನಾದ;
ಜಂಗಮವೆ ಶ್ರೀಶೈಲ ಮಲ್ಲಿಕಾರ್ಜುನನಾದ.
………….ಕರುಣ ಬಸವನೆಂಬ ವೃಷಭ,
ಜಂಗಮವೆ ಗೊಹೇಶ್ವರ.
ಪ್ರಾಳಿಯೆಂಬ ಯುಗದಲ್ಲಿ ಬಸವನೆ ಭೃಂಗೀಶ್ವರ;
ಜಂಗಮವೆ ಸದಾಶಿವ.
ಅಭರ್ೂತನೆಂಬ ಯುಗದಲ್ಲಿ ಬಸವನೆ ರಾಮಚಂದ್ರ: ಜಂಗಮವೆ ಅನಾದಿಲಿಂಗ.
ತಮಂಧನೆಂಬ ಯುಗದಲ್ಲಿ ಬಸವನೆ ಕಾಲರುದ್ರ;
ಜಂಗಮವೆ ಊಧ್ರ್ವಪೀಠೇಶ್ವರ.
ತಂಡಜನೆಂಬ ಯುಗದಲ್ಲಿ ಬಸವನೆ ಶಂಕರ;
ಜಂಗಮವೆ ಸವರ್ೇಶ್ವರಲಿಂಗ.
ಭಿನ್ನಜನೆಂಬ ಯುಗದಲ್ಲಿ ಬಸವನೆ ಪಶುಪತಿ;
ಜಂಗಮವೆ ಮೂಕೇಶ್ವರಲಿಂಗ.
ಇಂತೀ ಬಸವನೆಂಬ ರೂಪೇ ಭಕ್ತ.
ಭಕ್ತನ ಮನದ ಕೊನೆಯ ಮೇಲೆ ಸೋಂಕಿ ಸುಳಿವಾತನೆ ಜಂಗಮ.
ಇಂತೀ ಉಭಯವ ಏಕವಂ ಮಾಡುವ
ನಂದಿನಿಯನಿದಿರಿಟ್ಟು ಪೂಜೆಯ ಮಾಡುವ
ದ್ರೋಹಿಗಳಿಗೆ ನಾನೇನೆಂಬೆನಯ್ಯಾ
ಗೊಹೇಶ್ವರಪ್ರಿಯ ನಿರಾಳಲಿಂಗಾ./21
ಕವಿಗಳ ತರ್ಕದ ಪ್ರಸ್ತಾವನ ವಚನ:
ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ.
ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು
ಆ ನಾಗಲೋಕದ ಸರ್ಪನ ಎಬ್ಬಿಸಿ,
ಆಕಾಶಮೂಲಕ್ಕೆ ನಡೆಸಬಲ್ಲಡೆ
ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು.
ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ
ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ,
ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ
ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ
ಆತ ಪ್ರಾಸವ ಬಲ್ಲವನೆಂದೆನಿಸಬಹುದು.
ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ,
ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ
ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ
ಆತ ಗಣವ ಬಲ್ಲವನೆಂದೆನಿಸಬಹುದು.
ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು
ಪಂಚಮಹಾಕಾವ್ಯಂಗಳುಯೆಂಬ ಮಡಕಿಯ
ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ
ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ
ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು
ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./22
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ
ಅಣ್ಣಗಳು ನೀವು ಕೇಳಿರೊ.
ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು
ಅಲ್ಲಿದ್ದ ವಿಮಳವಾದ ಗಂಟ ಕೊಯಿದು,
ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ
‘ಕ’ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು.
ಪರಬ್ರಹ್ಮನ ಆಶ್ರೈಸಬಲ್ಲಡೆ ‘ವಿ’ ಎಂಬ
ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು,
ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ
ಗುರುಗುಡುವುದು ಕಾರಣವಲ್ಲ.
ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ.
ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ
ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?)
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./23
ಕಳ್ಳಆಡಿನ ಕಾಲ ಕಡಿದು, ಕೋಡಗನ ಹಲ್ಲುಕ್ಕಿತ್ತು,
ಓಡ್ಯಾಡುವ ಎರಳೆಯ ತಿರುಳ ತಿಂದು,
ಉಡುವಿನ ಕುಡಿನಾಲಗೆಯ ಕೂಡೆವೆಡವರಿದು ತಿಂದು,
ದಿನವ ಕಳಿದುಳಿದಾತ ಎನ್ನ ಗುರುವು.
ಯಾತಕೆಂದರೆ ಅರಿಕೇಶ್ವೆಲಿಂಗವನರಿವುದಕ್ಕೆ ತೆರಪಾಗಿರಣ್ಣಾ
ಗೊಹೇಶ್ವರಪ್ರಿಯ ನಿರಾಳಲಿಂಗ./24
ಗುರುಲಿಂಗ ಉಪದೇಶ ಲಿಂಗಧಾರಣವೆಂದು
ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ.
ಸರ್ವಾಂಗಭೇದವನು ಕಮಲಪ್ರಕಾಶವನರಿದು ನುಡಿವಿರಿ.
ಪದ್ಮಸ್ಥಾನದಲ್ಲಿ ಕಮಲಕ್ಕೆ ನಾಲ್ಕು ಎಸಳು,
ಅದಕ್ಕೆ ಶ್ವೇತ ಕಪೋತ ಹರಿತ ಮಾಂಜಿಷ್ಟ ನೀಲವರ್ಣವೆಂಬರಿ.
ಈ ನಾಲ್ಕರ ಭೇದವ ಬಲ್ಲರೆ ಭಕ್ತನೆಂದೆನಿಸಬಹುದು.
ಈ ನಾಲ್ಕು ಎಸಳನು ಒಂದುಮಾಡಿ
ಅದರೊಳು ಕೂಡಬಲ್ಲರೆ ಮಾಹೇಶ್ವರನೆಂದೆನಿಸಬಹುದು.
ಪೃಥ್ವಿ ಅಪ್ಪುವಿನ ಗುಣಂಗಳನಳಿದು ದಶಕಮಲದಲ್ಲಿ
ಬೆರೆಸಬಲ್ಲರೆ ಪ್ರಸಾದಿಯೆಂದೆನಿಸಬಹುದು.
ಈ ತ್ರಿವಿಧ ಗುಣಂಗಳ ಶಕ್ತಿಯ ನಿಲ್ಲಿಸಿ
ಅಂತರಂಗದ ಹೃದಯಕಮಲದಿ ನಿಂತಿಹ ರಾಜನ
ಸಂದರುಶನವ ಮಾಡಿ,
ಮನ ಬುದ್ಧಿ ವಿತ್ತ ಅಹಂಕಾರವೆಂಬ
ಚತುರ್ವಿಧ ಪ್ರಧಾನಿಗಳ ಬುದ್ಧಿಯ ಮೀರಿ
ಹದಿನಾರು ಎಸಳಲ್ಲಿ ನಿಂದು,
ಆಕಾಶ ತತ್ವವ ನಿರೀಕ್ಷಿಸಿ
ಪಂಚತತ್ವದ ಪರಿಯ ನೋಡುತ್ತ ಬಂದು,
ಆಮುಂದಿರ್ದ ಮುಪ್ಪುರದ ಹೆಬ್ಬಾಗಿಲ ಪೊಕ್ಕು
ಶ್ರೀ ಗುರುವಿನ ಶ್ರೀಪಾದವೆಂಬ
ಉಭಯಕಮಲವ ನಿರೀಕ್ಷಣವ ಮಾಡಿ,
ಶ್ರೀಗುರುವಿನ ಶ್ರೀಪಾದಪದ್ಮಕಾರುಣ್ಯ ಜ್ಞಾನವ ಪಡದು,
ಮುಂದೆ ನೋಡಲಾಗಿ ಸಹಸ್ರದಳದ ಕಮಲವ ಕಂಡೆನಯ್ಯ.
ಆ ಕಮಲದ ಅಗ್ರದ ತುದಿಯಲ್ಲಿ ಇರುವ ಲಿಂಗವ ಕಂಡು
ತನ್ನ ಸಂಬಂಧವಾಗಬೇಕೆಂದು ಮೇಲಕ್ಕೆ ನೋಡಲು
ಏಕದಳದ ಪದ್ಮವ ಕಂಡೆನಯ್ಯ.
ಆ ಪದ್ಮ ಸಿಂಹಾಸನದ ಮೇಲೆ
ನಿರಂಜನನೆಂಬ ಜಂಗಮವ ಕಂಡೆ.
ಆ ಜಂಗಮದ ಚರಣಾಂಬುಜಕ್ಕೆ ಎರಗಿದ ಕಾರಣ
ಆ ಚಿತ್ಕಳೆಯೆಂಬ ಲಿಂಗ ಎನ್ನ ಸಂಬಂಧವಾಯಿತ್ತಲ್ಲಯ್ಯ.
ಇಂತೆಸವಂಗಭೇದವನರಿಯದೆ ಉಪದೇಶವೆಂದು ನುಡಿವ
ನರಗುರಿಗಳ ನೋಡಿ ನಗುವ
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./25
ಗುರುಲಿಂಗಜಂಗಮದ ತ್ರಿವಿಧಭಕ್ತನೆನಿಸಿಕೊಂಬ
ಅಣ್ಣಗಳು ನೀವು ಕೇಳಿರೋ.
ಸ್ಥೂಲ ಸೂಕ್ಷ್ಮ ಕಾರಣವೆಂಬ ತ್ರಿವಿಧವ ತಿಳಿಯಬಲ್ಲರೆ
ತ್ರಿವಿಧಭಕ್ತನೆಂದೆಸಬಹುದು.
ಸ್ಥೂಲ ಸೂಕ್ಷ್ಮ ಕಾರಣದಲ್ಲಿ ದಶವಾಯುಗಳುಂಟು.
ಅಲ್ಲಿದ್ದ ತ್ರಿವಿಧಪತಿಗಳಿಗೆ ನಾಲ್ಕು ಮುಖಗಳುಂಟು.
ಉತ್ತರ ದಕ್ಷಿಣ ಪೂರ್ವ ಪಶ್ವಿಮವುಂಟು.
ಪವನ ನಾಲ್ಕು ಮೂಲವುಂಟು.
ಅಲ್ಲಿ ಸಕಲ ಆಚಾರ್ಯರ ಕ್ರೀಯ ಸಂಬಂಧವುಂಟುಶ್ರೀ
ಇಂತೀ ಸ್ಥಳದಲ್ಲಿ ಸಂಬಂಧವನರಿಯಬಲ್ಲರೆ
ಭಕ್ತನೆಂದೆಸಬಹುದು.
ನಿಷ್ಠೆ ನಿಜ ಸತ್ಯ ಸದಾಚಾರ ಸದ್ಭಾವ ಜೀವನವಿದ್ದ ಬಿಡಾರವ ನೋಡಿ : ಅಲ್ಲಿದ್ದ ಅಧಿಪತಿಗೆ ಮುಖವುಂಟು.
ಸಕಲ ವೈಪತಿಗಳ ಮರದು ಜಂಗಮಲಿಂಗವ
ನಿರೀಕ್ಷಣವ ಮಾಡಬಲ್ಲರೆ ಸೂಕ್ಷ್ಮ ಶರಣನೆಂದೆನಿಸಬಹುದು.
ಪುರದ ಜನರುಗಳೆಲ್ಲರನು ಮೈಮರೆಸಿ
ನಿರ್ಭವಿಗಳಂ ಮಾಡಿ ಕೆಡಹಿ,
ಚಿತ್ರಮಂಟಪದ ಬಾಗಿಲೊಳು ಹೊಕ್ಕು
ಎರಡು ಮುಖದ ಅಧಿಪತಿಯ ನಿರೀಕ್ಷಣವಂ ಮಾಡಿ
ಆದಿಪುರದ ಸುಖಂಗಳ ಹಿಂದುಗಳೆದು
ಬಾರದ ಬಟ್ಟೆಯ ಮೆಟ್ಟಿ, ಸೋಸದ ಜಲವ ಕೊಳಬಲ್ಲಡೆ
ಕಾರಣೈಕ್ಯನೆಂದೆನಿಸಬಹುದು.
ಇದನರಿಯದೆ ಸ್ಥೂಲ ಸೂಕ್ಷ್ಮ ಕಾರಣವೆಂದು ನುಡಿವ
ಮರವೀಯ ಮರಳುಗಳ ನೋಡಿ ನಗುತಿರ್ದ
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./26
ಗುರುಲಿಂಗಜಂಗಮವೆಂದು ನುಡಿವ
ಬಹುವಾಕ್ಯರು ನೀವು ಕೇಳಿರೊ.
ಗುರುವಾವುದು? ಲಿಂಗವಾವುದು? ಜಂಗಮವಾವುದು?
ಲಿಂಗವೆಂದವರ ಕರಸ್ಥಲದಲ್ಲಿ ಜಂಗಮವೊಂದೆಂದರಿಯದಿರದೆ ಚರಿಸಿದ
ಗುರುಸ್ಥಲದ ಹೊಲಬನರಿಯದೆ ಗುರುಭಕ್ತರೆನ್ನಿಸುವ
ಗುರುದ್ರೋಹಿಗಳ ಮಾತ ಕೇಳಲಾಗದಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗಾ./27
ಗುಹೇಶ್ವರ ಎಂಬ ಅಕ್ಷರದ ಭೇದವು :
ವರಕಂಬವೆ ಕಾಲು, ತೊಡಿಯೇ ಬೋದಿಗೆ,
ಸಾರಣ ಚರ್ಮ, ಕರಯೆರಡು ಮದನಧ್ವಜಯೆರಡು,
ಸ್ತುತಿಬಾಯಿ ಬಾಗಿಲು,
ಎರಡು ಶ್ರೋತ್ರವೇ ಬೆಳಕಂಡಿಯು,
ಮೂಗೇ ಜಾಳಿಂದ್ರ, ಆಲಿಗಳೆ ಸೋಪಾನ,
ಶಿರವೇ ಕಲಶ, ಭಸಿತವೆ ಪತಾಕೆ |
ಇಂತೀ ಪಂಚಗುಹೇಶ್ವರನೆಂಬ ದೇಗುಲ.
ಇನ್ನು ಅದಕ್ಕೆ ಸ್ವರವಾವುದೆಂದಡೆ : ಗುಹೇಶ್ವರನೆ ಸ್ವರ,
ಆ ದೇಗುಲಕ್ಕೆ ಲಿಂಗವೇ ಪೀಠ.
ಪಂಚವಿಷಯವೆಂಬ ಪೂಜೆ,
ಜ್ಞಾನವೆಂಬುದ ಹಿಡಿದು ಅಜ್ಞಾನವ ದೂಡಿ,
ತಾನೆ ತನ್ನೊಳು ತಿಳಿದುದೆ ಭಂಡಾರ.
ಅದಕ್ಕೆ ಮನವೆ ಕಿವಿ,
ನಿರ್ಮನವೆಂಬ ಕದವ ತೆರೆದು
ಸುಖವೆಂಬುದೆ ನೈವೇದ್ಯ,
ಜಿಹ್ವೆಯೇ ಪೂಜಾರಿ,
ನಿತ್ಯವೇ ಪ್ರಸಾದ, ಮನದಿಚ್ಛೆಗೆ ಪೊಸಪಂಚಾಕ್ಷರಿಯ ಗಸಣೆ,
ಷಡಾಕ್ಷರವೆ ಶ್ರೀಗಂಧ, ಜ್ವಾಲೆಯೇ ಧೂಪ, ಸ್ಥಳವೇ ಹರಿವಾಣ,
ಬೋನವು ತಾನೆ, ಪೂಜಿಸುವಾತನು ತಾನೆ, ಪುಜೆಗೊಂಬಾತನು ತಾನೆ.
ಇಂತೀ ಪರಮಾನಂದವೆಂಬ ಸಂಗಗಳ ಕೂಡಲಂದೆ
ಚಿತ್ಸೂರ್ಯರ ಕೋಟಿಪ್ರಕಾಶವಾಗಿ ತೋರುತ್ತಿಹ
ಗೊಹೇಶ್ವರಪ್ರಿಯ ನಿರಾಳಲಿಂಗ./28
ಜ್ಯೋಗಿಯ ತರ್ಕದ ಪ್ರಸ್ತಾವದ ವಚನ :
ಬಿದಿರ ಲಳಿಗೆಯ ತಂದು, ಮೂಸೋರೆಯ ಕಾಯಂ ಕಟ್ಟಿ,
ಮೇಣದ ಮೆಟ್ಟನಿಕ್ಕಿ, ಕಭ್ಬಿಣದ ಸರಿಗಿಯ ತಂದು
ಕಟ್ಟಿಗೆಗೆ ಸುತ್ತಿ ಬಿಗಿದು ಶುದ್ಧೈಸಿ
ತ್ರಿವಿಧಗತಿಯಲ್ಲಿ ಹರಿತವಿಕ್ಕಿ, ರಾಜವೀಥಿಯೊಳು
ಆ ಕಿನ್ನರಿಯ ನುಡಿಸುತ್ತ ಬೆರೆದಾಡುವ ಜೋಗಿಯ ಕಂಡು
ಕೆಟ್ಟು ಹೋದರು ನೋಡಾ ಎಂದು ಬೆರಗಾದ
ಗೊಹೇಶ್ವರಪ್ರಿಯ ನಿರಾಳಲಿಂಗ./29
ತಾರಿ ತಂಡಸಿ ತೇಗು ಬೊಬ್ಬುಲಿಯ ಕೊರಡು
ಶ್ರೀಗಂಧವಾಗಬಲ್ಲುದೆ?
ಅದೆಂತೆಂದಡೆ: ಆರುಸ್ಥಲದಲ್ಲಿ ಐಕ್ಯವನರಿತು,
ಮೂರುಲಿಂಗದಲ್ಲಿ ತೃಪ್ತಿಯನೈದಿಸಿ,
ಪ್ರಸಾದವ ಸವಿವ ಸುಸಂಗವಾದ ಶರಣರ
ಚರಣದೊಳೆನ್ನನಿಟ್ಟು ಸಲಹಯ್ಯಾ,
ಗೊಹೇಶ್ವರಪ್ರಿಯ ನಿರಾಳಲಿಂಗ./30
ದಾನಿಯಾದಡೇನು?
ಅವನ ಬೇಡಿದಲ್ಲದೆ ಅರಿಯಬಾರದು.
ರಣರಂಗ ಧೀರನಾದಡೇನು ?
ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು.
ಗೆಳೆಯನಾದಡೇನು ?
ಅಗಲಿದಲ್ಲದೆ ಅರಿಯಬಾರದು.
ಹೇಮವಾದಡೇನು ?
ಒರೆಗಲ್ಲುಯಿಲ್ಲದೆ ಅರಿಯಬಾರದು.
ನಿನ್ನನರಿದೆಹೆನೆಂದಡೆ : ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣಾ
ಗೊಹೇಶ್ವರಪ್ರಿಯ ನಿರಾಳಲಿಂಗ./31
ನಾನು ಭಕ್ತ, ನಾನು ಶರಣ, ನಾಣು ಐಕ್ಯನೆಂಬೊ
ಅಣ್ಣಗಳು ನೀವು ಕೇಳಿರೊ.
ಒಂದೇ ಮರದಲ್ಲಿ ಒಂಬತ್ತು ಪ್ರಮಾಣದ ಹಣ್ಣು;
ಆ ಹಣ್ಣನು ಅರಿವ ಪರಿಯೆಂತೆಂದಡೆ;
ಆಧಾರಚಕ್ರಮಂ ಬಲಿದು, ಇಡಾ ಪಿಂಗಳ ಸುಷುಮ್ನನಾಳವ ಒಂದುಗೂಡಿ
ಊಧ್ರ್ವಮುಖದಲ್ಲಿ ಎತ್ತಿ ನಿಂದು, ಆ ಹಣ್ಣ ಸವಿಯಬಲ್ಲಡೆ ಆತನೇ ಭಕ್ತ.
ಆತನೇ ಶರಣ, ಆತನೇ ಐಕ್ಯ.
ಇದನರಿಯದೆ ಹುಸಿಯ ನುಡಿವವರ ಕಂಡು ನಗುತಿರ್ದ
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ. /32
ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು
ಹೆಸರಿಟ್ಟುಕೊಂಬುವ ಅಣ್ಣಗಳು ನೀವು ಕೇಳಿರೋ.
ತನ್ನಲಿದ್ದ ಮೂಲಚಕ್ರದ ಮೂಲಭೇದವನರಿಯಬಲ್ಲಡೆ,
ಭಕ್ತನಿಂದೆನಿಸಬಹುದು.
ಅಷ್ಟದಳಕಮಲದಲ್ಲಿ ನಿಟ್ಟಿಸಿದ್ದ
ಪ್ರಾಣದ ನೆಲೆಯನರಿಯಬಲ್ಲಡೆ,
ಶರಣ[ನೆಂ]ದೆನಿಸಬಹುದು.
ಇಡಾ ಪಿಂಗಳ ಸುಷುಮ್ನ ತ್ರಿವಿಧವನೊಂದುಗೂಡಿ,
ಏಕನಾಳದೊ[ಳು] ತುಂಬಿ.
ಯಜ್ಜಯಿಲ್ಲದೆ ಮಣಿಯ ಆ ಹುರಿಯಲ್ಲಿ ಪೋಣಿಸಿ,
ಊಧ್ರ್ವಮುಖದಲ್ಲಿ ಎತ್ತಿ, ಪಂಚದ್ವಾರದ ಕದವ ತೆರದು,
ತ್ರಿಕೂಟದಲ್ಲಿರ್ದ ಮಹಾಲಿಂಗವ ನಿರೀಕ್ಷಣವಮಾಡಬಲ್ಲಡೆ,
ಐಕ್ಯನೆಂದೆನಿಸಬಹುದು.
ಇಂತಪ್ಪ ಭೇದಂಗಳನರಿಯದೆ,
ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು
ಹುಸಿಯ ನುಡಿವವರ ನೋಡಿ ಬೆರಗಾದ,
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ. /33
ಪೃಥ್ವಿಯ ಮಧ್ಯದಲ್ಲೊಂದು
ಬೀಜವಲ್ಲದ ವೃಕ್ಷ ಹುಟ್ಟಿತ್ತು.
ಆ ವೃಕ್ಷಕ್ಕೆ ಒಂದು ಪೂರ್ವಭಾಗವೆಂಬ ಗೊನೆ ಹುಟ್ಟಿತ್ತು.
ಆ ಕಮಲದ ಎಸಳು ಮತ್ರ್ಯಮುಖ : ಅದರ ಪೂರ್ವಮುಖವೇ ಆಕಾಶ.
ಆ ಕಮಲಕ್ಕೆ ನವಪರಿ ಕಾಯಿ ನಾಲ್ಕರಲಿ
ರಸತುಂಬಿ ಹಣ್ಣಾಯಿತ್ತು.
ನಾಲ್ಕು ಆರು ಹತ್ತು ಹನ್ನೆರಡು ಹದಿನಾರು
ಇಂತೀ ನಾಲ್ವತ್ತೆಂಟು ಮಂದಿ ಆ ಹಣ್ಣಿನ ಗ್ರಾಹಕರು.
ಆ ಹಣ್ಣ ಮಾರುವವರು ಸಾವಿರಾಳಿನ ನಾಯಕರು.
ಆ ಹಣ್ಣಿನ ಗ್ರಾಹಕರು,
ಆ ಹಣ್ಣ ಮೂರು ರತ್ನಕ್ಕೆ ಬೆಲೆಯನಿಟ್ಟರು.
ಮೂರು ರತ್ನಕ್ಕೆ ಕೊಡಬಹುದೆ?
ಎಂದು ಆ ಸಾವಿರಾಳಿನ ನಾಯಕರು
ಹಿಡಿದು ಶಿಕ್ಷೆಯ ಮಾಡಿದರು.
ಮೂರುಪುರದ ಅರಸು ಅಶ್ವಾರೋಹಿ
ಸಾವಿರಾಳಿನ ನಾಯಕರು ಆ ಹಣ್ಣ ಕೊಂಡು
ಮೇಲುಗಿರಿಯ ಕೈಲಾಸದ ಅರಸನ ಸಂದರುಶನವ ಮಾಡಿದರು.
ಆ ಗಿರಿರಾಜನು ಆ ಹಣ್ಣ ಕಂಡು ಬೆರಗಾದ.
ಆ ಹಣ್ಣಿನ ಸವಿಯ ಬಲ್ಲವರ ತೋರಿಸಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗ./34
ಫಲವನಳಿದವಂಗೆ ಕುಲದ ಹಂಗೇತಕಯ್ಯಾ?
ಗುರುಭಕ್ತನಾದ ಮೇಲೆ ಜಂಗಮದ ಹಂಗೇತಕಯ್ಯಾ?
ಪ್ರಾಣಲಿಂಗದ ಹೊಲಬನರಿತವಂಗೆ ಇಷ್ಟಲಿಂಗದ ಹಂಗೇತಕಯ್ಯಾ?
ಇಂತೀ ಕರಣಂಗಳನರಿಯದ ಉದಾಸೀನವೆಂದು ಚರಿಸುವ
ಬೂಟಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./35
ಬರಿದೆ ಶಿವಶಿವಯೆಂದಡೆ ಭವಹಿಂಗಿತೆಂಬುವ
ಅರಿವುಗೇಡಿಯ ಮಾತ ಕೇಳಲಾಗದು.
ಅದೇನು ಕಾರಣವೆಂದಡೆ : ಕತ್ತಲಮನೆಯಲ್ಲಿ ಜ್ಯೋತಿಯ ನೆನೆದರೆ
ಪ್ರಕಾಶವಾಗಬಲ್ಲುದೆ?
ಕಾಮಜ್ವರದವರು ರಂಭೆಯ ನೆನದರೆ
ಕಾಮಜ್ವರ ತಂಬಿಸಬಲ್ಲುದೆ?
ಇಂತೀ ನರಗುರಿಗಳಾಡಿದುದ ಕಂಡು
ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./36
ಬ್ರಹ್ಮ, ಗುರು, ವಿಷ್ಣು, ಲಿಂಗ, ರುದ್ರ ಜಂಗಮವೆಂಬ
ವ್ರತಗೇಡಿಗಳು ನೀವು ಕೇಳಿರೊ.
ಬ್ರಹ್ಮನ ಶಿರ ಹೋಯಿತ್ತು.
ವಿಷ್ಣುವಿಗೆ ಹತ್ತು ಪ್ರಳಯವಾಯಿತ್ತು.
ರುದ್ರನು ಧ್ಯಾನಾರೂಢನಾದ.
ಆ ರುದ್ರಂಗೆ ಪರತ್ರಯ, ಈಶ್ವರಂಗೆ ಪರತ್ರಯ,
ಸದಾಶಿವಂಗೆ ಪರತ್ರಯ, ಪರಶಿವಂಗೆ ಪರತ್ರಯ,
ಇಂತಿವರು ಆರುಮಂದಿ ಕೂಡಿ
ಗುರುವಿನ ಧ್ಯಾನದಲ್ಲಿ ಪರವಶವಾಗಿ,
ಆ ಶ್ರೀಗುರುವಿದ್ದ ನೆಲೆ ಎಂತೆಂದಡೆ : ಸಪ್ತಸ್ಥಾನ ಸಹಸ್ರದಳಕಮಲದ ಜ್ಯೋತಿವರ್ಣದ ಗುರು.
ಆ ಗುರುವಿಂಗೆ ಪರತ್ರಯಲಿಂಗ, ಆ ಲಿಂಗಕ್ಕೆ ಪರತ್ರಯಜಂಗಮ.
ಇಂತೀ[ಅ]ನೂನಸ್ಥಳದಲ್ಲಿದ್ದ ಜಂಗಮನ
ಮಣಿಪೂರಕದಲ್ಲಿದ್ದ ರುದ್ರಂಗೆ ಸರಿಯೆಂಬ
ಜಂಗಮದ್ರೋಹಿಗಳ ಮಾತ ಕೇಳಲಾಗದು ಕಾಣಾ
ಗೊಹೇಶ್ವರಪ್ರಿಯ ನಿರಾಳಲಿಂಗಾ./37
ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು
ನುಡಿವ ಅಣ್ಣಗಳು ನೀವು ಕೇಳಿರೊ.
ಪವನದ ಉತ್ಪತ್ಯದಲ್ಲಿದ್ದ ಮೂಲವನರಿದು
ಆ ನಾಲ್ಕು ಪವನ ಒಂದುಗೂಡಿ
ಪೃಥ್ವಿಯ ಗುಣವನರಿಯಬಲ್ಲರೆ
ಭಕ್ತಯೆಂದೆನಿಸಬಹುದು.
ಎಂಟಸಳ ಕಮಲದಲ್ಲಿ ಮೆಟ್ಟಿ ಆಡುವ
ಹಂಸನ ಸ್ಥಳವನರಿಯದೆ
ಪಟ್ಟಗಟ್ಟಿದರಸನ ಸಂದರುಶನವ ಮಾಡಬಲ್ಲರೆ
ಜ್ಞಾನಿಯೆಂದೆಸಬಹುದು.
ಮಾರ್ಗ ಇಲ್ಲದೆ ಹಾದಿಯ ನಡದು
ಇಪ್ಪತ್ತೊಂದುಮಣಿಯ ಯಜ್ಜನಮಾಡಿ ಪೋಣಿಸಿ
ಸುಮಾರ್ಗದಲ್ಲಿ ಬೆರಸ್ಯಾಡುತಿರ್ದ
ತ್ರಿವಿಧಮಣಿಯ ಮೇರುವೆಯಂ ಕಟ್ಟಿ
ಜಪವ ಮಾಡಬಲ್ಲರೆ, ಜಪವು ಬಲಿದು
ಸ್ಥೂಲಕರ್ಮವೆಂಬ ಜಾಡ್ಯವನಳಿದುದು
ವೈರಾಗ್ಯವಲ್ಲದೆ, ಇಂತೀ ಭೇದಂಗಳನರಿಯದೆ
ಕುಲುಮದ, ಧನಮದ, ವಿದ್ಯಾಮದ,
ಪ್ರಾಯಮದವೆಂಬ ಮದಂಗಳೊಳು ಮುಳುಗಿ
ಕ್ರೋಧ, ಇಂದ್ರಿಯ ಕಪಟ, ವ್ಯಸನದಲ್ಲಿ
ವೈರಾಗ್ಯವೆಂದೆನಿಸುವ ದ್ರೋಹಿಗಳಿಗೆ ನೋಡಿ
ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ./38
ಭಕ್ತಿಯ ನಡೆ, ಭಕ್ತಿಯ ನುಡಿ,
ಭಕ್ತಿಯ ಮೂಲವನರಿತ ಶರಣರ ಒತ್ತಿಲಿ ಎನ್ನನ್ನಿಟ್ಟು
ಚಿತ್ತದಲ್ಲಿ ಸಲಹೊ, ಗುರುವೆ [ಗೊಹೇಶ್ವರಪ್ರಿಯ]ನಿರಾಳಲಿಂಗ. /39
ಮಕರತರ್ಕದ ಪ್ರಸ್ತಾವನ ವಚನ :
ಅರಿಷಡ್ವರ್ಗವೆಂಬ ಆರು ನಾಯಿಗಳು ಬೊಗಳುತ್ತಿರೆ,
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿ ಕೂಗುತ್ತಿರೆ,
ಹಸಿವು ತೃಷೆ ನಿದ್ರೆ ಜಾಡ್ಯವೆಂಬ
ನಾಲ್ಕು ಸೂಕರ ಮುತ್ತಿಕೊಂಡಿರೆ,
ಸಪ್ತವ್ಯಸನಗಳೆಂಬ ಏಳು ಬೆಕ್ಕು ಸುಳಿವುತ್ತಿರೆ,
ಪಂಚೇಂದ್ರಿಯವೆಂಬ ಐದು ವರ್ಣದ ಹುಲಿ ನುಂಗುತ್ತಿರೆ,
ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರು ಮುಟ್ಟಿ
ತನ್ನಂಗದೊಳು ನಾನು ನೀನೆಂಬ ಅಹಂಕಾರದ ಜಾಗಟೆಯ ಪಿಡಿದು
ಅಜ್ಞಾನವೆಂಬ ಕುಡಿಯಲ್ಲಿ ಬಾರಿಸಿ,
ಇಂತಪ್ಪ ಪರಿಯಲ್ಲಿದ್ದ ಸೂತಕಂಗಳ ಪರಿಯದೆ
ಹೊರಮಾತ ಕೇಳಬಾರದೆಂದು ಜಾಗಟೆಯ ಹೊಯ್ಸಿ
ನಾದದ ಮರೆಯಲ್ಲಿ ಆಹಾರವ ಕೊಂಬ ಸೇವಕರ ನೋಡಿ
ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ. /40
ಮನಹೀನ ಬಂಟನ ಕೈಯಲ್ಲಿ ಬತ್ತೀಸಾಯುಧವಿದ್ದರೇನಯ್ಯ?
ಜಾರಸ್ತ್ರೀ ಸರ್ವಾಭರಣವನಿಟ್ಟಿದ್ದರೇನಯ್ಯ?
ಕುರುಡನ ಕೈಯಲ್ಲಿ ದರ್ಪಣವಿದ್ದರೇನಯ್ಯ?
ಧರ್ಮವನರಿಯದವನ ಕೈಯಲ್ಲಿ ಹಣವಿದ್ದರೇನಯ್ಯ?
ಜ್ಞಾನಹೀನ ರೂಪಧರಿಸಿದ್ದರೇನಯ್ಯ?
ಪ್ರಾಣಲಿಂಗವನರಿಯದ ನರಗುರಿಗಳು ಅಂಗದ ಮೇಲೆ
ಲಿಂಗವ ಕಟ್ಟಿದ್ದರೇನಯ್ಯ?
ಇಂತೀ ಷಡ್ವಿಧ ಭೇದವನರಿಯದ ಭವಿಗಳು
ನಿಮ್ಮ ಹೊಲಬನವರೆತ್ತಬಲ್ಲರಯ್ಯ?
ಇಟ್ಟು ಪೂಜೆಯ ಮಾಡುವ ಆ ದ್ರೋಹಿಗಳಿಗೆ
ನಾನೇನೆಂಬೆನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ./41
ಮೇರುಗಿರಿ ಉದಯಗಿರಿ ನೀಲಗಿರಿ ಹೇಮಗಿರಿ ರಜತಗಿರಿ
ಇಂತೀ ಗಿರಿಗಳಿಗೆ ಛಳಿಯಾದರೆ
ಹೊದ್ದಿಸುವರುಂಟೇನಯ್ಯಾ?
ಆ ಗಿರಿಯ ಕೆಳಗೆ ಗಗನವುಂಟು ;
ಆ ಗಗನಕ್ಕೆ ಗಬಸಣಿಗೆಯಿಕ್ಕುವರುಂಟೇನಯ್ಯ?
ಆ ಗಗನದ ಕೆಳಗೆ ಸಪ್ತಸಮುದ್ರಗಳುಂಟು.
ಅವುಗಳ ನೀರುಡುಗಿದರೆ
ಆ ನೀರ ಕೂಡಿಸುವರುಂಟೇನಯ್ಯಾ?
ಆ ಸಮುದ್ರಂಗಳ ಕೆಳಗೆ ಒಂದು ಮದಸೊಕ್ಕಿದ ಇಲಿ,
ಆ ಇಲಿಯ ತಿಂದೆನೆಂದು ಒಂದು ಮಾರ್ಜಲ ಬರಲು,
ಆ ಮಾರ್ಜಾಲನು ಆ ಇಲಿಯ ಕಂಡು ನಿಬ್ಬೆರಗಾಯಿತ್ತು.
ಆ ಇಲಿಯು ಬಂದು ಆ ಮಾರ್ಜಾಲನ ಕಿವಿಯ ತಿಂಬೋದು.
ಆದ ಕಂಡು ಬೆರಗಾದ ನಮ್ಮ
ಗೊಹೇಶ್ವರಪ್ರಿಯ ನಿರಾಳಲಿಂಗ./42
ಲಿಂಗದ ನಡೆ, ಲಿಂಗದ ನುಡಿ,
ಲಿಂಗದ ಸಂಗ ಮಾಡುವ ಶರಣರ ಅಣಗಳವ ಕಾಯ್ದು,
ಎನ್ನನು ಹಿಂಗದೆ ಸಲಹಯ್ಯ,
ಗೊಹೇಶ್ವರಪ್ರಿಯ ನಿರಾಳಲಿಂಗಾ.
/43