Categories
ವಚನಗಳು / Vachanagalu

ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ

1231
ಇಷ್ಟಲಿಂಗವೆ ಬಸವಣ್ಣನೆಂದರಿದು,
ತಮ್ಮ ಇಷ್ಟಲಿಂಗದಲ್ಲಿ ನಿರವಯನೈದಿದರು ಅಕ್ಕನಾಗಲಾಂಬಿಕೆಯಮ್ಮನವರು.
ಜಂಗಮಪ್ರಸಾದವೆ ಬಸವಣ್ಣನೆಂದರಿದು,
ತಮ್ಮ ಜಂಗಮಪ್ರಸಾದದಲ್ಲಿ ನಿರವಯನೈದಿದರು ಅಕ್ಕಮಹಾದೇವಿಯಮ್ಮನವರು.
ಪ್ರಸಾದಲಿಂಗವೆ ಬಸವಣ್ಣನೆಂದರಿದು,
ತಮ್ಮ ಪ್ರಸಾದಲಿಂಗದಲ್ಲಿ ನಿರವಯನೈದಿದರು ಮುಕ್ತಾಯಕ್ಕಗಳು.
ಆಚಾರಲಿಂಗವೆ ಬಸವಣ್ಣನೆಂದರಿದು,
ತಮ್ಮ ಆಚಾರಲಿಂಗದಲ್ಲಿ ನಿರವಯನೈದಿದರು ಅಸಂಖ್ಯಾತ ಮಹಾಗಣಂಗಳೆಲ್ಲರು.
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ,
ಬಸವಣ್ಣನಿಂದ ನಿರವಯಲ ಲಿಂಗವ ಕಂಡೆನು.

1233
ಬಸವಣ್ಣನ ಏಕಾಕ್ಷರದಿಂದ ಷಡಾಕ್ಷರ ಪುಟ್ಟಿತ್ತು.
ಇನ್ನು ಬಸವಣ್ಣನ ಏಕಾಕ್ಷರ, ತ್ರಯಾಕ್ಷರ, ಪಂಚಾಕ್ಷರ,
ಷಡಾಕ್ಷರವೆನ್ನ ಸರ್ವಾಮಗದಲ್ಲಿ ತುಂಬಿ ಅಕ್ಷರಮಯವಾಯಿತ್ತು,
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ,
ಬಸವಪ್ರಿಯ ಕೂಡಲಸಂಗಮದೇವಾ ಬಸವಣ್ಣನ ಕಾರಣ್ಯದಿಂದ.

1234
ಬಸವಣ್ಣನ ನೆನೆವುತ್ತ ನೆನೆವುತ್ತ ಗುರುವ ಕಂಡೆ.
ಬಸವಣ್ಣನ ನೆನೆವುತ್ತ ನೆನೆವುತ್ತ ಲಿಂಗವ ಕಂಡೆ,
ಬಸವಣ್ಣನ ನೆನೆವುತ್ತ ನೆನೆವುತ್ತ ಜಂಗಮವ ಕಂಡೆ.
ಬಸವಣ್ಣನ ನೆನೆವುತ್ತ ನೆನೆವುತ್ತ ಪ್ರಸಾದವ ಕಂಡೆ.
ಬಸವಣ್ಣನ ನೆನೆವುತ್ತ ನೆನೆವುತ್ತ ಪಾದೋದಕವ ಕಂಡೆ.
ಬಸವಣ್ಣನ ನೆನೆವುತ್ತ ನೆನೆವುತ್ತ ಪಂಚಾಚಾರವ ಕಂಡೆ,
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ ಬಸವಣ್ಣನ ನೆನೆದ ಕಾರಣದಿಂದ.

1235
ಬಸವಣ್ಣನೆಂಬ ಆಚಾರಲಿಂಗವ ಪಿಡಿದು ಅನಿಮಿಷಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಗುರುಲಿಂಗವ ಪಿಡಿದು ಮಡಿವಾಳಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಶಿವಲಿಂಗವ ಪಿಡಿದು ಚೆನ್ನಬಸವಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಜಂಗಮಲಿಂಗವ ಪಿಡಿದು ಸಿದ್ಧರಾಮಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಪ್ರಸಾದಲಿಂಗವ ಪಿಡಿದು ಘಟ್ಟಿವಾಳಯ್ಯ ಬಸವಣ್ಣನಂತಾದ.
ಬಸವಣ್ಣನೆಂಬ ಮಹಾಲಿಂಗವ ಪಿಡಿದು ಅಜಗಣ್ಣ ಬಸವಣ್ಣನಂತಾದ.
ಬಸವಣ್ಣನೆಂಬ ಗುಹೇಶ್ವರಲಿಂಗವ ಪಿಡಿದು ಪ್ರಭುದೇವರು ಜ್ಯೋತಿರ್ಮಯನಾದ.
ಅಸಂಖ್ಯಾತ ಮಹಾಗಣಂಗಳೆಲ್ಲರೂ ಬಸವಣ್ಣನೆಂಬ
ನಿರವಯಲಿಂಗವ ಪಿಡಿದು, ಶರಣಸತಿ ಲಿಂಗಪತಿಯಾದರು.
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ,
ಬಸವಪ್ರಿಯ ಕೂಡಲಸಂಗಮದೇವಾ,
ಬಸವಣ್ಣನ ಶ್ರೀಪಾದಕ್ಕೆ ನಮೋ ನಮಃ ಎನುತಿರ್ದೆನು.

1236
ಬಸವಣ್ಣನೆ ಗುರುವೆಂದರಿಯರಲ್ಲ, ಬಸವಣ್ಣನೆ ಲಿಂಗವೆಂದರಿಯರಲ್ಲ,
ಬಸವಣ್ಣನೆ ಕಾರಣವೆಂದರಿಯರಲ್ಲ, ಬಸವಣ್ಣನೆ ಪ್ರಸಾದವೆಂದರಿಯರಲ್ಲ.
ಬಸವಣ್ಣನೆ ಗುರುವೆಂದು ಅನುಮಿಷನರಿದ.
ಬಸವಣ್ಣನೆ ಲಿಂಗವೆಂದು ಚೆನ್ನಬಸವಣ್ಣನರಿದ.
ಬಸವಣ್ಣನೆ ಜಂಗಮವೆಂದು ಪ್ರಭುದೇವರರಿದರು.
ಬಸವಣ್ಣನೆ ಪ್ರಸಾದವೆಂದು, ಮರುಳಶಂಕರದೇವರು ಅರಿದು ಆಚರಿಸಿದರು.
ಇದು ಕಾರಣ, ಬಸವಣ್ಣನೆ ಗುರು, ಬಸವಣ್ಣನೆ ಲಿಂಗ,
ಬಸವಣ್ಣನೆ ಜಂಗಮ, ಬಸವಣ್ಣನೆ ಪ್ರಸಾದವೆಂದರಿಯದ
ಅನಾಚಾರಿಗಳ ಎನಗೆ ತೋರದಿರಯ್ಯ,
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ.

-##: ಈ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.