Categories
ವಚನಗಳು / Vachanagalu

ಘಟ್ಟಿವಾಳಯ್ಯನ ವಚನಗಳು

ಅಂಗದಲ್ಲಿ ಅರ್ಪಿತವ ಮಾಡಿ ಪ್ರಸಾದಿ ನಾವೆಂಬವಂಗೆ
ಹಿಂಗದು ನೋಡಾ! ತನು ಸೂತಕ ಮನ ಸೂತಕ.
ಪ್ರಾಣದಲ್ಲಿ ಸಿಲುಕದು ತನುವಿನಲ್ಲಿರದು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./1
ಅಂಗವ ಬಂಧಿಸಿದಲ್ಲಿ ನಾ ನೊಂದುದಿಲ್ಲ.
ಅದು ಮಲದೇಹ, ಮಾಯೆಯ ಸೊಮ್ಮು.
ಲಿಂಗವ ತೆಗೆದೆಹೆನೆಂದಡೆ ಅದು ಜಗದ ಕುರುಹು;
ಅದು ನನ್ನದಲ್ಲ.
ಆ ಗುಣ ನಿಮ್ಮ ಸಂದೇಹಕ್ಕೊಳಗಾಯಿತ್ತು.
ಎನಗಿನ್ನಾವ ಉಭಯದ ಹಂಗಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./2
ಅಂಡಜ ಮುಗ್ಧೆಯ ಮಕ್ಕಳಿರಾ,
ಕೆಂಡದ ಮಳೆ ಕರೆವಲ್ಲಿ
ನಿಮ್ಮ ಹಿಂಡಿರು ಹಳುಹೊಕ್ಕು ಹೋದಿರಲ್ಲಾ!
ಜುಗಮವೆಂಬುದಕ್ಕೆ ನಾಚಿರಿ.
ನಿಮ್ಮ ಕಂಗಳ ಹಿಂಡಿರ ತಿಂಬಳೆಂಬುದನರಿಯಿರಿ.
ಅವಳು ಒಮ್ಮೆ ತಿಂಬಳು ಒಮ್ಮೆ ಕರುಣಿಸಿ ಬಿಡುವಳು.
ಅವಳು ತಿಂದು ತಿಂದು ಉಗುಳುವ ಬಾಯೊಳಗಣದೆಲ್ಲಾಜಂಗಮವೆ?
ಲೋಕವೆಲ್ಲಾ ಅವಳು.
ಅವಳು ವಿರಹಿತವಾದ ಜಂಗಮವಾರೈ ಬಸವಣ್ಣ?
ಅವಳು ವಿರಹಿತವಾದ ಭಕ್ತರಾರೈ ಬಸವಣ್ಣ?
ಅವಳ ಮಕ್ಕಳು ನಿನ್ನ ಕಯ್ಯಲ್ಲಿ
ಆರಾಧಿಸಿಕೊಂಬ ಜಂಗಮ ಕಾಣೈ ಬಸವಣ್ಣಾ!
ಅವಳು ವಿರಹಿತವಾದ ಚಿಕ್ಕಯ್ಯಪ್ರಿಯ ಸಿದ್ಧಲಿಂಗನಲ್ಲದಿಲ್ಲ,ನಿಲ್ಲು ಮಾಣು./3
ಅಖಂಡಿತ ಅಪ್ರತಿಮ ಅದ್ವಯ ಸತ್ಯನಿತ್ಯ
ಸಚ್ಚಿದಾನಂದ ಸ್ವರೂಪಮಪ್ಪ ಜ್ಯೋತಿರ್ಲಿಂಗದೊಳಗೆ
ತಾನೆಂಬ ಕುರುಹಳಿದು ಅನನ್ಯ ಪರಿಪೂರ್ಣವಾಗಿಪ್ಪ
ಮಹಾಮಹಿಮಂಗೆ ತಾನೆಂಬುದಿಲ್ಲ, ಇದಿರೆಂಬುದಿಲ್ಲ,
ಏನೆಂಬುದು ಮುನ್ನವೇ ಇಲ್ಲ.
ಆ ಭಾವ ನಷ್ಟವಾದಲ್ಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ನಾನೂ ಇಲ್ಲ, ನೀನೂ ಇಲ್ಲ./4
ಅನಿಮಿಷನ ಕೈಯ ಲಿಂಗವನಲ್ಲಮ ಕೊಂಡುದಿಲ್ಲಾಗಿ,
ಆದಿಯಲ್ಲಿ ಬಸವಣ್ಣಂಗೆ ಗುರುಲಿಂಗವಿಲ್ಲಾಗಿ,
ಬಸವ-ಚೆನ್ನಬಸವಂಗೆ ಕಾರಣವಿಲ್ಲಾಗಿ,
ಇವರಾರೆಂಬುದ ಕೇಳಿದ್ದು ಇಲ್ಲ ಇಲ್ಲಾ ಎಂದನು.
ಇವರಿಬ್ಬರ ಸಾಹಿತ್ಯ ಇಲ್ಲೆಂಬುದ ಕಂಡು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು./5
ಅಬ್ದಿಯ ಘೋಷವೆದ್ದು
ನಿರ್ಭರ ನಿರ್ವೆಗದಿಂದ ಅಬ್ಬರಿಸಿ ಬರುವಾಗ
ಅದನೊಬ್ಬರು ಹಿಡಿದ [ರುಂಟೆ]?
ಆಕಾಶದ ಸಿಡಿಲು ಆರ್ಭಟದಿಂದ ಬಡಿವಲ್ಲಿ
ತಾಕು ತಡೆಯುಂಟೆ?
ಮಹಾದ್ಭುತವಾದ ಅಗ್ನಿಯ ಮುಂದೆ
ಸಾರವರತ ತೃಣಕಾಷ್ಟವಿ [ದ್ದುದುಂ]ಟೆ?
ತಾ ಸರ್ವಮಯವಾದ ನಿಃಕಳಂಕ ನಿರಂಜನ ಐಕ್ಯಾನುಭಾವಿಗೆ
ಅಂಡ ಪಿಂಡ ಬ್ರಹ್ಮಾಂಡ ಅಬ್ದಿ ಆಕಾಶ ಆತ್ಮನೆಂದುಂಟೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./6
ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ,
ಬಹಿರಂಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲದ ಸುದ್ದಿಯ ಹೇಳಿ,
ದಶಾವತಾರದಾಟವ ತೊಟ್ಟಂತೆ ಗುರುಮುಖವಿಲ್ಲದೆ
ವಿಭೂತಿ ರುದ್ರಾಕ್ಷಿ ಶಿವಲಿಂಗ ಲಾಂಛನವ ಧರಿಸಿ,
ಒಳಗೆ ಶುದ್ಧವಿಲ್ಲದೆ ಬರಿದೆ
ಶಿವಪ್ರಸಾದದ ಸುದ್ಧಿಯ ಹೇಳುವವರಲ್ಲಿ
ಅಷ್ಟಾವರಣ ಪರಿಚಾರವಿಲ್ಲ ನೋಡ!
ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿರ್ಲಿಂಗವೆಂಬ ರಮಣನ
ಸದ್ಗುರುಮುಖದಿಂ ಕೂಡಿ ಎರಡಳಿದು,
ಆ ಲಿಂಗದ ಚಿಚ್ಚೆತನ್ಯವೆ ನಿರಂಜನ ಜಂಗಮವೆಂದು
ಆ ಜಂಗಮವೆ ತಾನೆಂದರಿದು,
ತನ್ನ ಚಿತ್ಕಳೆಯ ಚಿದ್ವಿಭೂತಿ-ರುದ್ರಾಕ್ಷಿ, ಲಾಂಛನ,
ತನ್ನ ಪರಮಾನುಭಾವನೆ ಮಹಾಮಂತ್ರ,
ತನ್ನ ನಿಜಾನಂದವೆ ಪಾದೋದಕ-ಪ್ರಸಾದ,
ತನ್ನ ಸತ್ಯ ಸದಾಚಾರ ನಡೆನುಡಿಯೆ ಪರಮ ಕೈಲಾಸ!
ಇಂತು ಪ್ರಮಥರು ಆಚರಿಸಿದ ಭೇದವ ತಿಳಿಯದೆ
ಬರಿದೆ ಅಹಂಕರಿಸಿ
ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ, ಶಿವಭಕ್ತ, ಶಿವಶರಣ,
ಶಿವಪ್ರಸಾದಿಗಳೆಂದು ವಾಗದ್ವೆ ತವ ನುಡಿವವರಲ್ಲಿ
ಪರತತ್ತ್ವಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಇಲ್ಲ ಇಲ್ಲ ಎಂದೆ!/7
ಅಯ್ಯಾ, ಅನಾದಿ ಭಕ್ತ ಜಂಗಮದ ವಿವರವೆಂತೆಂದಡೆ:
ಭಕ್ತನಂಗಮನಪ್ರಾಣಂಗಳೆಲ್ಲ ಭಸ್ಮ ಘಂಟಿಕೆಯಂತೆ!
ಜಂಗಮದಂಗ ಮನಪ್ರಾಣಂಗಳೆಲ್ಲ ರುದ್ರಾಕ್ಷಿಯಮಣಿಯಂತೆ!
ಭಕ್ತನಂಗತ್ರಯಂಗಳು ಪಂಚಲೋಹದಂತೆ!
ಜಂಗಮದಂಗತ್ರಯಂಗಳು ಮೃತ್ತಿಕಾಭಾಂಡದಂತೆ!
ಭಕ್ತನಂಗತ್ತಯಂಗಳು ಬಂಗಾರದಂತೆ!
ಜಂಗಮದಂಗತ್ರಯಂಗಳು ಮೌಕ್ತಿಕದಂತೆ!
ಭಕ್ತನಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ
ಪ್ರಾಯಶ್ಚಿತ್ತವುಂಟಲ್ಲದೆ
ಜಂಗಮದಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ
ಪ್ರಾಣವೆ ಪ್ರಾಯಶ್ಚಿತ್ತವಲ್ಲದೆ ಪೂಜೆ ಆಚಾರಕ್ಕೆ
ಯೋಗ್ಯವಲ್ಲ ಕಾಣಾ!
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ!/8
ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ
ನಿತ್ಯ ನಿರಂಜನ ಗುರು-ಲಿಂಗ-ಜಂಗಮ ಶಿವಶರಣರ
ಸತ್ಯ ಸನ್ಮಾರ್ಗದ ಗೊತ್ತಿನ ಮರ್ಯಾದೆಯನರಿಯದೆ
ಮತ್ರ್ಯದ ಜಡಜೀವಿ ಭವಿಪ್ರಾಣಿಗಳ ಹಾಂಗೆ
ಗುಹ್ಯಲಂಪಟಕಿಚ್ಛೆಸಿ ದಾಸಿ ವೇಶಿ ಸೂಳೆ ರಂಡೆ ತೊತ್ತುಗೌಡಿಯರ
ಪಟ್ಟ ಉಡಿಕೆ ಸೋವಿಯೆಂದು ಮಾಡಿಕೊಂಡು ಭುಂಜಿಸಿ,
ಷಟ್ಸ ್ಥಲ ಬ್ರಹ್ಮಾನುಭಾವವ ಕೇಳಿ ಹೇಳುವ
ಮೂಳ ಬೊಕ್ಕಿಯರ ಕಂಡು ಎನ್ನ ಮನ ನಾಚಿತ್ತು ಕಾಣೆ!
ಅವ್ವ ನೀಲವ್ವನ ಮೋಹದ ಮಗಳೆ!
ಅಪ್ಪ ಬಸವಣ್ಣನ ಸುಚಿತ್ತದ ಪು[ತ್ರಿಯೆ]!
ನಿಷ್ಕಳಂಕ ಸದ್ಗುರುಪ್ರಭುದೇವರ ಸತ್ಯದ ಸೊಸೆಯೆ!
ಅಣ್ಣ ಮಡಿವಾಳಪ್ಪನ ಭಾವ, ಚನ್ನಮಲ್ಲಿಕಾರ್ಜುನನರ್ಧಾಂಗಿಯೆ!
ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳೆ!
ಎನ್ನಕ್ಕ ಮಹಾದೇವಿ ಕೇಳವ್ವ!
ಮತ್ರ್ಯದ ಜಡಜೀವಿ ಭ್ರಷ್ಟರ ಬಾಳಿವೆ ಎಂದೆ!/9
ಅರಿವರಿವಿನ ಮುಂದಣ ಅರಿವು ಅದೇನೊ?
ಅರಿವಿನ ಎರಡರ ಅರಿವು ನಿಃಪತಿ!
ಮಾಯೆಯ ಮುಂದಡಗಿತ್ತಲ್ಲಾ!
ಅರಿದಡೆ ಹಿಂದಾಯಿತ್ತು, ಮರೆದಡೆ ಮುಂದಾಯಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿತ್ಯ ಸಾರಾ./10
ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ!
ನೆನಹಿಂಗೆ ಬಾರದುದ ಕಾಬುದು ಹುಸಿ.
ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./11
ಅರಿವೆಂಬ ಅಲಗಿಂಗೆ ಕುರುಹಿನ ಮೋಹಳ ನೋಡಾ!
ಒರೆ ಹರಿದು ಒಳಗನಿರಿಯಲು ಬಲ್ಲುವರಿಲ್ಲ.
ಶಂಕೆ ಸಮ್ಯಕ್ಕಿಲ್ಲಾಗಿ ಅಂತಿಂತೆನಲಿಲ್ಲ.
ಅಂಕವ ಕಾಣದೆ ಬೇಳುವೆಗೊಳಗಾದಿರಲ್ಲಾ
ನಿರ್ಲೆಪವಹ ಅಂಕಕ್ಕೆ ಹರಿವರಿವುದೆ ಗೆಲವು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂಬೆನು./12
ಅರ್ತಿಗೆ ಕಟ್ಟಿದ ಲಿಂಗ ಕೈಯೊಳಗಾಯಿತ್ತು.
ನಿಶ್ಚಯದ ಲಿಂಗ ಆರ ಗೊತ್ತಿಗೂ ಸಿಕ್ಕದು.
ಆ ಘನಲಿಂಗ ಉಳ್ಳನ್ನಕ್ಕ ನಾ ಜಂಗಮ, ನೀವು ಜಂಗುಳಿಗಳು.
ಎನಗಿನ್ನಾವ ಭೀತಿಯಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./13
ಅವನಿ ಅಂಬರ ಉದಯಿಸದಂದು
ಒಂದು ತುಂಬಿದ ಕೊಡನ ಕಂಡೆ.
ಆ ಕೊಡನನೆತ್ತಿದವರಿಲ್ಲ, ಇಳುಹಿದವರಿಲ್ಲ.
ಆ ಕೊಡ ತುಳುಕಿದಲ್ಲಿ ಒಂದು ಬಿಂದು ಕೆಲಕ್ಕೆ ಸಿಡಿಯಿತ್ತ ಕಂಡೆ.
ಆ ಬಿಂದುವಿನಲ್ಲಿ ಅನಂತ ದೇವತಾಮೂರ್ತಿಗಳು ಹುಟ್ಟಿತ್ತ ಕಂಡೆ
ಇದು ಕಾರಣ, ಚಿಕ್ಕಯ್ಯಪ್ರಿಯ ಸಿದ್ಧಲಿಂಗನ
ಲೀಲಾಮೂಲವ ಕಂಡು ಇಲ್ಲ ಇಲ್ಲವೆನುತಿರ್ದೆನು./14
ಅಷ್ಟವಿಧಾರ್ಚನೆ ಷೋಡಶೋಪಚಾರ ಹುಸಿ ಕಾಣಿರೇ.
ಗಾಣದೆತ್ತಿನಂತೆ ಮೆಟ್ಟಿದ ಹಜ್ಜೆಯ ಮೆಟ್ಟುವ
ಭಕ್ತನ ಪರಿಯ ನೋಡಾ!
ಕೊಂಬಲ್ಲಿ ಐದುವನು, ಕೊಡುವಲ್ಲಿ ನಾಲ್ಕುವನು
ಒಂಬತ್ತರಿಂದಲ್ಲಿ ಭಕ್ತಿಭಾಗಕ್ಕಿನ್ನೆಂತೋ?
ಮೂರ್ತಿವಿಡಿದು ಮೂರ್ತಿಯನರಿಯರು.
ಮಾರುವರು ಗುರುಲಿಂಗವನು ತ್ರಿವಿಧಕ್ಕೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./15
ಅಸ್ಥಿಗತರು ಚರ್ಮಗತರು ರುಧಿರಗತರು ಮಾಂಸಗತರು
ಗತವಾದರೊ ಗತವಾದರೊ!
ಅತಿಶಯದ ಅನುಪಮದ ನಿಜವನರಿಯದೆ!
ಮನ ಮುಟ್ಟದ ಲಿಂಗವ ಉಳಿ ಮುಟ್ಟಬಲ್ಲುದೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ. ಇಲ್ಲ./16
ಆ ಉದಯದಲ್ಲಿ ನಿಚ್ಚ ನಿಚ್ಚ ಹುಟ್ಟಿದ ಪ್ರಾಣಿ
ಅಸ್ತಮಾನದಲ್ಲಿ ನಿಚ್ಚ ನಿಚ್ಚ ಮರಣವಾಯಿತ್ತಲ್ಲಾ!
ಇದರಂತುವನರಿಯದೆ ಅಜ್ಞಾನಿಗಳಾಗಿ ಹೋದರಲ್ಲಾ! ಎಲ್ಲರು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./17
ಆಗಿ ಹೋಗದಿರ್ದಡೆ,
ಹೋಗಿ ಬಾರದಿರ್ದಡೆ,
ಸತ್ತು ಸಾಯದಿರ್ದಡೆ,
ಶಬುದ ನಿಃಶೂನ್ಯವ ಬಲ್ಲವರಾರು ಹೇಳಾ!
ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಉಂಟಿಲ್ಲೆಂಬೆಡೆಯ ಬಲ್ಲವರಾರು ಹೇಳಾ!/18
ಆಚಾರ್ಯ ಕುಟಿಲವ ಕೊಟ್ಟು ಹೋದನಲ್ಲಾ!
ಮಹೇಂದ್ರಜಾಲದೊಳಗೆ ಭ್ರಾಂತರಾದರೆಲ್ಲರು.
ಆಚಾರ್ಯನ ಸುಟ್ಟುರುಹಿದೆ, ಕುಟಿಲವ ಮೆಟ್ಟಿಯೊರಸಿದೆ!
ಎನಗೆ ಆಚಾರ್ಯನಿಲ್ಲದೆ ಹೋಯಿತು!
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./19
ಆಯತವಿಲ್ಲದ ಮಠದಲ್ಲಿ
ಅಗ್ನಿಯಿಲ್ಲದೆ ಬೋನವ ಮಾಡಿ
ಭಾವವಿಲ್ಲದೆ ಶಿವಕಾರ್ಯಂಗಳು
ಭೋಜನವಿಲ್ಲದೆ ಅರಿಸಿ ಕೊಟ್ಟಡೆ
ಆಪ್ಯಾಯನವಾರಿಗೂ ಅಡಸದಿರ್ದುದ ಕಂಡು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆನು./20
ಆರನೂ ಹಾರದ ಲಿಂಗವ ತೋರುವಾತ ಗುರುವಲ್ಲ.
ನೆಳಲಲಿಪಿಯ, ಕರಣಾದಿಗಳ ಲೀಯವ ಮುಂದೆ ಬಲ್ಲವರಾರೊ?
ಶಿಲೆಯ ಶಬುದದ ಉಲುಹಿನಂತುಟ ನಿಲಿಸಿ ತೋರಲು,ರೂಪನಲ್ಲ.
ಕಲುಮನದ ಅಶುದ್ಧಕಾರಿಗಳಿಗಿನ್ನೆಂತೊ?
ನಾಟಕ ಜನಂಗಳೆಲ್ಲ ಕಂಡೆವೆನುತ ಕೋಟಲೆಗೊಳುತ್ತಿದ್ದರು.
ಈ ನೋಟದೊಳಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಇಲ್ಲ ಇಲ್ಲ ಇಲ್ಲ ಇನ್ನೆಂತೊ?/21
ಆರು ಪರಿಯಲ್ಲಿ ಹೆಸರಿಟ್ಟುಕೊಂಡವರ ನೋಡ ಬಂದೆ!
ಆರೂಢವಿಲ್ಲದೆ ಲಿಂಗಾರ್ಚನೆಯ ಮಾಡುವರನೆನಬಂದೆ!
ಆರೂಢ ಲಿಂಗಾರ್ಚನೆಯ ಮಾಡಿ ಪ್ರಸಿದ್ಧಪ್ರಸಾದವ
ಗ್ರಹಿಸಲರಿಯದವರಿಗೆ
ರೂಢಿಯಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ
ಇಲ್ಲವೆನಬಂದೆ./22
ಆಸೆಗಾಗಿ ವೇಷವ ಹೊತ್ತು ತಿರುಗುವ ವೇಷದ ಗಂಡ,
ಈಷಣತ್ರಯಕ್ಕಾಗಿ ಈಶನ ಪೂಜಿಸುವ ದಾಸರ ಗಂಡ,
ಇಷ್ಟನರಿದು ತನುವಿಗೆ ಆಸೆಯ ಮಾಡುವ
ಭಾಷೆವಂತರ ಗಂಡ.
ನಾನಂಜುವೆ ತ್ರಿವಿಧದ ಹಂಗಳಿದವರಿಗೆ,
ನಾನವರಿಗಿಳಿದ ಬಂಟ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./23
ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ?
ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ?
ಕೂಟವ ಕೂಡಿ ಸಮಯ ನೊಂದಲ್ಲಿ ಅಜಾತನ ಬಲ್ಲರೆ?
ಎನಗೆ ನಿಮ್ಮೊಳಗಿನ್ನೇತರ ಮಾತು?
ವೇಷಧಾರಿಗಳಲ್ಲಿ ನಿಮ್ಮ ಕೂಟಕ್ಕೆ ಹೊರಗು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ./24
ಇರಿವುದು ಕಡಿವುದು ಕೊಲುವುದು
ಮಲದೇಹಿಗಳಿಗಲ್ಲದೆ ನಿರ್ಮಲದೇಹಿಗಳಿಗುಂಟೆ?
ಸಮಯ ಸಮುದ್ರದಂತಿರಬೇಕು.
ತಪ್ಪನರಸಿ ಶಿಕ್ಷಿಸುವನ್ನಬರ
ನರದೂತ ಕುಲಕ್ಕೆ ಪರಿಶಿವ ರೂಪುಂಟೆ?
ಆ ಹರವರಿಯ ನುಡಿದಡೆನಗೇನು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./25
ಇಷ್ಟ ಬಾಹ್ಯವಾಯಿತ್ತೆಂದು ಸಮಯ ಒಪ್ಪದಿದೆ ನೋಡಾ!
ಅರಿವು ಬಾಹ್ಯವಾಗಿ ತ್ರಿವಿಧಕ್ಕೆ ಕಚ್ಚಾಡಲೇತಕ್ಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./26
ಇಷ್ಟಲಿಂಗವ ತೆಕ್ಕೊಂಡಲ್ಲಿ ದೃಷ್ಟವಾಯಿತ್ತೆ ನಿಮಗೆ?
ಬಂಧಿಕಾರನ ಬಂಧನವ ಮಾಡೂದು
ಲಿಂಗದೇಹಿಗಳಿಗುಂಟೆ ಅಯ್ಯಾ.
ಜಗದಲ್ಲಿ ಉಂಡುಂಡು ಕೊಂಡಾಡುವವರಿಗೆ,
ಘನಲಿಂಗದ ಶುದ್ಧಿ ಏಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./27
ಇಹವೆಂಬುದೇನೊ ತಾನೆಂಬುದನಳಿದ ಪರಮಗಂಭೀರಂಗೆ.
ಪರವೆಂಬುದೇನೊ ಪರಾತ್ಪರವೆಂಬುದೇನೊ?
ಇಹವೂ ಇಲ್ಲ ಪರವೂ ಇಲ್ಲ ಪರಾತ್ಪರವೂ ಇಲ್ಲ.
ಇದೇನು! ಏನೂ ಇಲ್ಲದ ಬಯಲು!
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು./28
ಉತುಪಾತದ ಉತುಪತ್ಯದ ಬಹುಮುಖದ ಶಾಖೆಗಳೆಲ್ಲವೂ
ಮುಂದರಿಯದೆ ನಡೆಗೆಟ್ಟು ನಿಂದರಲ್ಲ.
ಹಿಂದರಿಯದೆ ಮುಂದರಿಯದೆ ಅಬ್ಬರದಬ್ಬರದವಂಗೆ
ಆರಿಗೆಯೂ ಅಳವಡದು ಭೀಕರ,
ನಿಷ್ಟತ್ತಿಗೆ ನಿರ್ಣಯ ಉಂಟು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./29
ಉತ್ತರಕ್ಕೆ ನುಡಿವನ್ನಬರ ನಾನು ಚಿತ್ತದ ಕಲೆಯವನಲ್ಲ.
ಮದಮತ್ಸರಕ್ಕೆ ಹೋರುವನ್ನಬರ ನಾನು
ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನಲ್ಲ.
ಮತ್ತೆ ಸಮಯದಲ್ಲಿ ಹೊತ್ತು ಹೋರಿಹೆನೆಂದಡೆ ನಾನು
ಸಂಸಾರದ ಕತ್ತಲೆಯವನಲ್ಲ.
ಎನ್ನ ನಿಶ್ಚಯದ ಗುಂಡು, ಎನ್ನ ಬಚ್ಚಬರಿಯ ಬಯಲಬೆಳಗು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./30
ಉದುಮದಾಕ್ಷರದಲ್ಲಿ ಉರಿದು ಸಾವ ಪ್ರಾಣಿಗಳು
ಅಖಂಡ ಪರಿಪೂರ್ಣಜ್ಞಾನವನವರೆತ್ತ ಬಲ್ಲರೊ?
ಕುಲುಮೆಯಾಕಾರಕ್ಕೆ ಬಾಯಿಗೆ ಬಹವರೆಲ್ಲಾ
ಕಾಲನ ಕಮ್ಮಟ್ಟಕ್ಕೆ ಗುರಿಯಾದರು.
ತತ್ವ ತೂರ್ಯಾತೀತದಿಂದತ್ತತ್ತಲಾದ ಅಘಟಿತ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತಿದ್ದನು./31
ಊದ್ರ್ಘಮುಖದ ಶಿವಾಲಯದೊಳಗೆ ಮಹಾದೇವರು.
ಆ ಮಹಾದೇವರ ಮುಂದಣ ನಂದಿಯ ನೋಟ
ವಿಪರೀತ ನೋಡಾ!
ಅದು ಬಂದು ಬಂದು ಪರಿವಾರದೇವತೆಗಳ
ಮೂಸಿಮೂಸಿ ನೋಡಿತ್ತು ನೋಡಾ!
ಆ ನಂದಿ ಆನಂದಲೀಲೆಯಾಡುತ್ತಿದ್ದುದು
ಆ ನಂದಿಯ ಆನಂದವ ಕಂಡು ಮಹಾದೇವರು ನಗುತ್ತಿರ್ದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು./32
ಎಂಟರ ಸೆರಗಿನಲ್ಲಿಲ್ಲ, ಆರರ ಮೂರರಲ್ಲಿಲ್ಲ.
ನಾಲ್ಕರ ಐದರಲ್ಲಿಲ್ಲ, ಒಂಬತ್ತರೊಳಗೆ ಮುನ್ನಿಲ್ಲ.
ಆಳತೆಯ ಅಳೆಯಲಿಲ್ಲ, ಗುಣಿತವ ಗುಣಿಸಲಿಲ್ಲ.
ಸೆಣಸುವಡೆ ಪ್ರತಿಯಿಲ್ಲ.
ಅಪ್ರತಿಮ ಅಪ್ರತಿಮನನಿಂತು ಜಗದೊಳುಂಟೆಂದು
ಭ್ರಮಿಸುವ ಜನ ಮರುಳಿನ ವಾತರ್ೆಯ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಇನ್ನೆಂತೊ?/33
ಎಂಬತ್ತು ನಾಲ್ಕು ಲಕ್ಷ ರತ್ನದ ವ್ಯವಹಾರಿಗಳು
ರತ್ನವ ಕೆಡಿಸಿ ಅರಸುತ್ತೆ ದಾರೆ ನೋಡಾ!
ರತ್ನ ಮಂಜಿನ ರಂಜನೆ, ಆಗರಕ್ಕೆ ಸಲ್ಲದು.
ಹುಟ್ಟಿ ಕೆಟ್ಟ ರತ್ನ ಕೆಟ್ಟ ಕೇಡಿಂಗಿನ್ನೆಂತೊ!
ಅಗುಹೋಗಿನ ನಿರ್ಣಯವನು ಸಾಗರ ನುಂಗಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ./34
ಎನಗೆ ಹಳ್ಳದ ಹೊಡೆಕೆಯೆ ಶಿವದಾರವಾಗಿ,
ಬೆಟ್ಟದ ಗುಂಡೆ ಲಿಂಗವಾಗಿ,
ಕಾಡಸೊಪ್ಪು ಹಾಕಿದ ಮಡಕೆಯ ಉದಕವೆ ಮಜ್ಜನವಾಗಿ
ಪೂಜಿಸುತ್ತಿದ್ದೆ.
ಬಸವನ ಮನೆಗೆ ಹೋಹ ವ್ರತಗೇಡಿಗಳ ನೋಡಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆ./35
ಎಲೆ ನಾಥಾ, ಎಲೆ ನಾಥಾ,
ಅಂಗದಾಶ್ರಯವ ಮಾಡಿಕೊಂಡೆಯಲ್ಲಾ,
ಯಂತ್ರವಾಹಕ ಸಂಚನಾದೆಯಲ್ಲಾ.
ನಿನ್ನ ಸಂಚವ ಹರಿಬ್ರಹ್ಮಾದಿಗಳರಿಯರು,
ದಾನವ ಮಾನವರರಿಯರು, ಸಮಸ್ತ ಮೂರ್ತಿಗಳರಿಯರು,
ಸುಭಾಷಿತರು ಶಿವನಾಮಿಗಳರಿಯರು,
ಅಷ್ಟವಿಧಾರ್ಚಕರರಿಯರು, ವೇಷಭಾಷಿತರರಿಯರು,
ಸುಳುಹು ನಿಂದವರರಿಯರು,
ಜಡೆಯ ಮುಡಿಯ ಬೋಳರರಿಯರು,
ಆರ ತೊಟ್ಟವನೆ ಮೂರ ಸುಟ್ಟವನೆ ನಾಕನೆಂದವನೆ
ಎಂಟು, ಐದು, ಹತ್ತರಲ್ಲಿ ನಿತ್ಯನಾದೆಯಲ್ಲಾ!
ಶತಪತ್ರ ಪದದಲ್ಲಿ ನಿವಾಸಿಯಾದೆಯಲ್ಲಾ!
ಎನ್ನ ನಿನ್ನೆಡೆಗೆ ಏನೂ ಭೇದವಿಲ್ಲ ಸಲಿಸ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./36
ಎಲೆ ಪಂಚವಕ್ತ್ರ ನೀನೆನ್ನ ಸಂಚವ ಹಂಚಿಕೊ ಬಾರೋ!
ನಾ ನನ್ನ ಭಾಗವ ದೇವರಿಗೆ ಕೊಟ್ಟೆನು.
ನಿನ್ನ ಭಾಗವ ಕೊಂಡಡೆ ಎಮ್ಮ ದೇವರು ಕೊಂಡಾರು.
ಎಮ್ಮಿಂದ ಕೆಟ್ಟೆವೆನಬೇಡ ಕಂಡಯ್ಯಾ.
ಇವರಿಬ್ಬರ ಕಲಹದ ನಡುವೆ ಅಬ್ಬರವಾದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./37
ಏನಕ್ಕೆ ಆಯಿತ್ತು ಏನಕ್ಕೆ ಹೋಯಿತ್ತು
ಮತ್ತೇನಕ್ಕೆ ಉಂಟೆ?
ನೇಮಕ್ಕೆ ನಿಜ ನೆಲೆಗೊಳ್ಳದು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./38
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ.
ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ?
ಹರಿದು ಹತ್ತುವುದೆ ಮರುಳೆ ಬಯಲು?
ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು.
ಇನ್ನೇನನರಸಲಿಲ್ಲ.
ಅದು ಮುನ್ನವೆ ತಾನಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./39
ಒಂದು ಎರಡು ಮೂರು ನಾಲ್ಕು ಐದು
ಆರು ಏಳು ಎಂಟು ಒಂಬತ್ತು ಹತ್ತೆಂಬ ಮಾತು
ನಿಮಗೇಕೆ ಹೇಳಿರೆ.
ನಾದ ಮುನ್ನ ಉತ್ಪತ್ಯವೊ?
ಬಿಂದು ಮುನ್ನ ಉತ್ಪತ್ಯವೊ?
ನಾದ ಬಿಂದುವಿನ ಕುಳ ಸ್ಥಳಗಳ ಬಲ್ಲರೆ ನೀವು ಹೇಳಿರೆ.
ಈಡಾ ಪಿಂಗಳ ಸುಷುಮ್ನಾನಾಡಿಗಳ ಭೇದವ ಬಲ್ಲಡೆ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./40
ಒಂದೆರಡು ಮೂರುವಿನ ಕುಂದು ಹೆಚ್ಚೆನಲಿಲ್ಲ.
ಸಂದೇಹವಳಿಯದೆ ಉಳಿದನು.
ನೊಂದು ನೋಯದ ನೋವು ಅಂದವಿಲ್ಲದ ಭೇದಿಗೆ ಇನ್ನ್ನೆಂತೊ!
ಅರಿಯದ ಮದ್ದನಾರನು ಬೇರೆ ಹೊರಗೇನೂ ಇಲ್ಲ ಇನ್ನೆಂತೊ!
ಮೂರು ಮಾತಿಂಗೆ ಸರಿ.
ಪ್ರತಿಯಿಲ್ಲದ ಪ್ರತಿಯ ಕಂಡೆನೆಂದು ಪದವಿಡುವವ ರೂಪನಲ್ಲ.
ಶ್ರುತಿಯಿಲ್ಲದ ಘನಕ್ಕಿನ್ನೆಂತೊ!
ಕಟ್ಟಾಳು ನಾಲ್ವರು ಬಿಟ್ಟಾಳು ಐವರ ದುಷ್ಟರೆಂದು
ಆರುವಿನ ದೆಸೆಯ ಹೊದ್ದ,
ಮುಟ್ಟನೇಳೆಂಟೊಂಬತ್ತರ ಸಂಗವನೊಲ್ಲ.
ಕೆಟ್ಟನಾ ಶರಣ, ಸಾಯದೆ ಸತ್ತನು!
ಮಡುವಿಲ್ಲದಗ್ಘವಣಿ ಕೊಡುವನಲ್ಲ ಶರಣ.
ಗಿಡುವೆಲ್ಲ ಪರಿಮಳ ಜ್ಞಾನಪುಷ್ಪ ಬಿಡದು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಉಂಟೆಂದು
ಬಡಿದರು ಕೈಕಾಲ ಭ್ರಾಂತಳಿಯದವರು./41
ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ?
ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ?
ಬದ್ಧ ಭವಿಗಳೆಂದು ಬಿಟ್ಟ ಮತ್ತೆ ಸಮಯದ ಹೊದ್ದಿಗೆ ಏಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./42
ಕಂಡು ಕಂಡು ಕಾಣಲುಂಟೆ ಅಯ್ಯಾ.
ಕೇಳಿ ಕಂಡಿಹೆನೆಂದಡೆ ಮನಸ್ಸು ನಾಚಿತ್ತು.
ನಾಚಿದ ಮನಸ್ಸಿಗೆ, ನೋಡಿದ ನೋಟಕ್ಕೆ
ಭಾವ ಬತ್ತಲೆಯಾಗದನ್ನಕ್ಕ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./43
ಕಟ್ಟಿದ ಕೊಟ್ಟಿಗೆಯಲ್ಲಿ ಗುಬ್ಬಿ ಗೂಡನಿಕ್ಕದೆ?
ತೋಡಿದ ಬಾವಿಯಲ್ಲಿ ತೊತ್ತು ನೀರ ತಾರಳೆ?
ರಾಜಮಾರ್ಗದಲ್ಲಿ ಆರಾರೆಡೆಯಾಡರು?
ಅಂತೆ ಎನಗಿವರ ಭ್ರಾಂತಿಯಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./44
ಕಯ್ಯ ಲಿಂಗ ಕಯ್ಯಲ್ಲಿ ಮಯ್ಯ ಲಿಂಗ ಮಯ್ಯಲ್ಲಿ
ತಲೆಯ ಲಿಂಗ ತಲೆಯಲ್ಲಿ
ಮತ್ತೆ ಹೊಲಬನರಸಲೇತಕ್ಕೆ?
ಹೊಲಬುದಪ್ಪಿ ಬಿದ್ದಿರಿ ಮೂರರ ಬಲೆಯಲ್ಲಿ.
ಬಲುಹೇತಕ್ಕೆ, ಸಾಕು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./45
ಕರವೂರ ನಿರಹಂಕಾರ-ಸುಜ್ಞಾನಿದೇವಿಯರ
ಬಸುರಲ್ಲಿ ಬಂದರೆನ್ನಬಹುದೆ ಪ್ರಭುದೇವರ?
ಮಂಡಗೆಯ ಮಾದಿರಾಜ- ಮಾದಲಾಂಬಿಕೆಯಮ್ಮನವರ
ಬಸುರಲ್ಲಿ ಬಂದರೆನ್ನಬಹುದೆ ಬಸವೇಶ್ವರನ?
ಅಕ್ಕನಾಗಲಾಂಬಿಕೆಯಮ್ಮನ ಬಸುರಲ್ಲಿ
ಬಂದರೆನ್ನಬಹುದೆ ಚೆನ್ನಬಸವೇಶ್ವರನ?
ಮೊರಡಿಯ ಮುದ್ದುಗೌಡ-ಸುಗ್ಗವ್ವೆಯ [ರ]
ಬಸುರಲ್ಲಿ ಬಂದೆರೆನ್ನಬಹುದೆ ಸಿದ್ಧರಾಮೇಶ್ವರನ?
ಇವರು ಒಬ್ಬರಿಂದಾದವರಲ್ಲ, ತಮ್ಮಿಂದ ತಾವಾದರು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ [ನಿಲ್ಲು] ಮಾಣು./46
ಕರ್ಮವನಳಿದ ನಿರ್ಮಳಂಗೆ
ಭಾವಿಸುವ ಭಾವವಿಲ್ಲ.
ಇಲ್ಲೆಂಬುದು ಉಂಟೆಂಬುದು ತಾನೆ
ಚಿಕ್ಕಿಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು/47
ಕಷ್ಟದೃಷ್ಟವ ಮುಟ್ಟುವಲ್ಲಿ ಮತ್ತೆ ಮೂವರ ಸಂಚವಿಲ್ಲಾಗಿ
ಅಟ್ಟಿ ಹರಿವ ಹರಿಯ ಹಿಡಿದುಕೊಡು
ಬಿಟ್ಟು ಕಳೆದೆನು ಬ್ರಹ್ಮನ;
ಕಟ್ಟಿಯಾಳಿದೆನು ರುದ್ರನ;
ಲಕ್ಷಿ ್ಮ ಸರಸ್ವತಿ ಗೌರಿಯರ ಹೋಗೆಂದು ಕಳೆದೆನು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆಂದು ಕಳೆದೆನು./48
ಕಾಮನೆ ದೇವ, ಸುಮಾಯೆವೆ ನಿರವಯ.
ಕಾಮಯ್ಯ ಕಾಮೇಶ ಕಾಮನೆನ್ನ ಕರಸ್ಥಲದಲ್ಲಿಪ್ಪ.
ಕಾಮನೆನ್ನ ಪ್ರಾಣಲಿಂಗ, ಕಾಮನ ಪ್ರಸಾದವೆನಗೆ.
ಇದು ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆನು./49
ಕಾಯ ಜೀವವನರಿದೆನೆಂಬವರೆಲ್ಲರೂ
ಹೋದರಲ್ಲಾ ಹೊಲಬುದಪ್ಪಿ.
ಹೆಣ್ಣು ಹೊನ್ನು ಮಣ್ಣಿಗೆ ಹೋರಾಡುವ ಅಣ್ಣಗಳೆಲ್ಲರೂ
ಬಸವಣ್ಣನ ಮನೆಯ ಬಾಗಿಲಲಿ
ಬಂಧಿಕಾರರಾಗಿ ಕಾಯ್ದು ಕೊಂಡಿದ್ದು
ಆ ಹೆಣ್ಣು ಹೊನ್ನು ಮಣ್ಣು ತಮ್ಮ ಕಣ್ಣ ಮುಂದಕೆ ಬಾರದಿದ್ದಡೆ
ತಮ್ಮ ಮನದಲ್ಲಿ ನೊಂದು ಬೆಂದು ಕುದಿದು ಕೋಟಲೆಗೊಂಡು
ಮತ್ತೆಯೂ ತಾವು ಅರುಹಿರಿಯರೆಂದು
ಬೆಬ್ಬನೆ ಬೆರತುಕೊಂಡಿಪ್ಪವರಿಗೆ
ನಮ್ಮ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./50
ಕಾಯವೆನ್ನ ಕಲ್ಪಿತವೆನ್ನ, ಅರಿವೆನ್ನ ಮರಹೆನ್ನ;
ಮಾಯಿಕ ನಿರ್ಮಾಯಿಕವೆನ್ನ;
ದೇವರೆನ್ನ ಭಕ್ತರೆನ್ನ ಬಯಲೆನ್ನ.
ಮುಂದೆ ಊಹಿಸುವುದಕ್ಕೆ ಒಡಲಿಲ್ಲವಾಗಿ
ನಿಂದ ನಿಲವು ತಾನೆ, ನಿರಾಳ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗಾ,
ಮುಂದೆ ಒಂದೂ ಇಲ್ಲ, ನಿಲ್ಲು ಮಾಣು./51
ಕಾಲನ ಕರೆದು ಕಪ್ಪೆಯ ಹೊಡೆದೆನು.
ಕಲ್ಪಿತವೆಂಬವನ ನೊಸಲಕ್ಕರವ ತೊಡೆದೆನು.
ಇನ್ನೇನೋ ಇನ್ನೇನೋ?
ಮುಂದೆ ಬಯಲಿಂಗೆ ಬಯಲು ಸನ್ನೆದೋರುತ್ತಿದೆ!
ಹಿಂದಿಲ್ಲ ಮುಂದಿಲ್ಲ; ಮತ್ತೇನೂ ಇಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./52
ಕಾಳಾಗ್ನಿ ಕಂಠವಿಲ್ಲದಂದಿನ ಸರವು
ಕಾಳಾಗ್ನಿ ಶಬ್ದವಿಲ್ಲದಂದಿನ ಸರವು
ಶಕ್ತಿ ಸಂಪುಟವಾಗಿ ನುಡಿಯದಂದಿನ ಸರವು.
ಧೃತವನತಿಗಳದೆಯಲ್ಲಾ ಎಲೆ ಸರವೆ
ಪದವ ಪತ್ರವೆಂದೆಯಲ್ಲಾ,
ಪತ್ರಕ್ಕೆ ಗಣನಾಥನ ತಂದೆಯಲ್ಲಾ ಎಲೆ ಸರವೆ.
ನಿಜದಲ್ಲಿ ನಿಂದು ಸಹಜವಾದೆಯಲ್ಲಾ
ಅನಾಥನ ತಂದೆಯಾದೆಯಲ್ಲಾ!
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./53
ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ
ಅಪ್ಯಾಯನವಡಗದು, ಸಂದೇಹ ಹಿಂಗದು
ಇದೇನೊ ಇದೇನೋ!
ಹಂದೆಗಳ ಮುಂದೆ ಬಂದು ಕಾಡುತಲಿದ್ದುದೆ
ಇದೇನೊ ಇದೇನೋ!
ಕಾಲಾಳು ಮೇಲಾಳುಗಳು ಬೇಳುವೆಗೊಳಗಾದರು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬರು./54
ಕೂಟವ ಕೂಡಿಹೆನೆಂದಡೆ ಸಮಯದವನಲ್ಲ.
ಮಾಟವ ಮಾಡಿಹೆನೆಂದಡೆ ಹಿಂದುಮುಂದಣ ದಂದುಗದವನಲ್ಲ.
ಸಮಯಕ್ಕೆ ಮುನ್ನವೆ ಅಲ್ಲ, ಆರಾದಡೂ ಎನಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./55
ಕೊಂಬಿನ ಮೇಲಣ ಬೇಡಂಗೆ ಶಿವರಾತ್ರಿಯನಿತ್ತನೆಂಬರು;
ಕಾಳಿದಾಸಂಗೆ ಕಣ್ಣನಿತ್ತನೆಂಬರು;
ಮಯೂರಂಗೆ ಮಯ್ಯನಿತ್ತನೆಂಬರು;
ಬಾಣಂಗೆ ಕಯ್ಯನಿತ್ತನೆಂಬುರು;
ಸಿರಿಯಾಳಂಗೆ ಮಗನನಿತ್ತನೆಂಬರು;
ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು;
ದಾಸಂಗೆ ತವನಿಧಿಯನಿತ್ತನೆಂಬರು.
ಆರಾರ ಮುಖದಲ್ಲಿ ಇದೇ ವಾತರ್ೆ ಕೇಳಲಾಗದೀ ಶಬ್ದವನು.
ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಅದು ನಿಲದ ವಾತರ್ೆ./56
ಗಂಭೀರವೆಂದೆನ್ನದೆ, ಗಂಭೀರಕ್ಕೆ ತಲೆದೋರದೆ
ಶರಣ ಶಬುದ, ನಾಭಿಯ ಉಸುರ
ದಾಸೋಹಿಯ ಮಂತ್ರ ಭಿನ್ನವಿಲ್ಲದೆ ಇಲ್ಲೆಂದಿತ್ತಲ್ಲಾ!
ಆ ಭಾವವು ಕಿಂಚಿತ್ತು ಇಲ್ಲೆಂದಿತ್ತಾಗಿ
ಜನಿಕನ ಮಂದಿರದ ಕುತಾವಾಹಿಯನು ಇಲ್ಲೆಂದಿತ್ತಲ್ಲಾ!
`ಹಿತವಾಹಿತವಾಹಿತಂ ಹತವಾಗಿ ನಿತಂ ನಿತಂ’
ಚಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದಿತ್ತಲ್ಲಾ!/57
ಗೋಕುಲರೆಲ್ಲರು ಕೂಡಿ
ಗೋಪತಿ ಅಣ್ಣನ ಮನೆಗೆ ಉಣ್ಣ ಬಂದರೆಲ್ಲರು.
ನಾ ವೀಸಕ್ಕೆ ಕೂಳ ಕೇಳೆ, ವೇಷಧಾರಿಗಳು
ಘಾಸಿ ಮಾಡಿದರೆನ್ನುವ ಜಗದೀಶ ನೀನೆ ಬಲ್ಲೆ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./58
ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ
ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು.
ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ!
ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ./59
ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ!
ಹೊಲಗೇರಿಯಲ್ಲಿ ಬಿತ್ತುವನೆ ನೋಡಿರೆ!
ಜಲಶೇಖರನ ಉದಕವನೆರದಡೆ
ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./60
ಚಿತ್ತುವಿನ ವರ್ತನೆಯ ಬಿಟ್ಟ ಶರಣ ನಿತ್ಯನೇಮವನರಿಯ,
ಕರ್ತೃಭೃತ್ಯತ್ವವನೇನೆಂದು ಅರಿಯ,
ಎಂತೆಂದು ಅರಿಯ, ಎಂತಿದ್ದುದಂತೆಯೆಂಬುದ ಮುನ್ನವೆ ಅರಿಯ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./61
ಚಿನ್ನವ ಕೊಂಬಲ್ಲಿ ಅದರ ಬಣ್ಣವ ಕಂಡು
ಬಣ್ಣವಾಸಿಯ ಕುರುಹಿಟ್ಟು
ಅದು ತನಗೆ ಚೆನ್ನಾದಡೆ ಕೊಂಬ ಅಲ್ಲದೊಡೊಲ್ಲ.
ಇದಕ್ಕೆ ಗೆಲ್ಲ ಸೋಲವೇಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎನುತಿರ್ದೆನು./62
ಜಂಗಮಕ್ಕೆ ಅರಿವ ಮರೆದಾಗಲೆ ಅಪಮಾನ ಹೋಯಿತ್ತು.
ಭಕ್ತಂಗೆ ಸತ್ಯ ಸದಾಚಾರವ ಬಿಟ್ಟಾಗಲೆ ಅಪಮಾನ ಹೋಯಿತ್ತು.
ಈ ಅಪಮಾನವಲ್ಲದೆ,
ದ್ವಾರ ಮಲಭಾಂಡಕ್ಕೆ ಹೋರಿಯಾಡುವರಿಗೇಕೆ ಚಿತ್ತಶುದ್ಧ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./63
ಜಂಗಮಲಿಂಗವನೊಂದೆಂದು ಕಾಬಡೆ ಭಂಗವಿಲ್ಲದೆ
ಭರಿತಂಗೆ ಭವ ಹೊದ್ದಲಿಲ್ಲ.
ಗುರು ಐವರು, ಶಿಷ್ಯನೊಬ್ಬ ಅರುಹಿರಿಯರಿಗೆ ದೃಷ್ಟ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲೆಂದಿತ್ತು./64
ಜಂಗಮವಾಗಿ ಜಂಗಮನ ಕೊಂದಾಗಲೆ ತನ್ನ ದೈವ ತನಗಿಲ್ಲ.
ಭಕ್ತನಾಗಿ ಭಕ್ತರ ಸ್ತುತಿ ನಿಂದ್ಯವ ಮಾಡಲಾಗಿಯೆ
ಸತ್ಯ ಸದಾಚಾರ ತನಗಿಲ್ಲ.
ದೇಹದ ವಿಹಂಗ ಮೃಗಗಳಂತೆ
ಕೊಡಲಿಯ ಕಾವು ಕುಲಕ್ಕೆ ಮಿತ್ತಾದಂತೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./65
ಜಂಗಮವಾಗಿ ಹುಟ್ಟಿದ ಮತ್ತೆ
ಹಿಂದಣ ಹಜ್ಜೆಯ ಮೆಟ್ಟಲುಂಟೆ?
ಜಂಗಮವೆಂಬ ಮಾತಿಂಗೊಳಗಾದಲ್ಲಿ
ಮೂರು ಮಲತ್ರಯವ ಹಿಂಗಿರಬೇಕು.
ಅನಂಗನ ಬಲೆಗೆ ಎಂದಿಗೂ ಸಿಲುಕದಿರಬೇಕು;
ಅದು ನಿಜದ ಸಂಗ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಈ ಗುಣ ಆರಿಗೂ ಇಲ್ಲ ಇಲ್ಲಎಂದೆ./66
ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ
ಅಡಗುವ ತೆರನ ಬಲ್ಲಡೆ ಬಲ್ಲೆ.
ಮಹೇಂದ್ರ ಜಾಲವು ಮರೀಚಿಕಾ ಜಲವು.
ಎಲ್ಲಿ ಹುಟ್ಟಿ ಎಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ.
ಮಹಾನಾದ ಸುನಾದ, ಸುನಾದಕ್ಕೆ ಕೈಗೈದು
ಆ ಸುನಾದವು ಮಹಾನಾದದೊಡನೆ ಮಥನಿಸಿ
ಇವೆರಡರ ಪ್ರಾಣ ಚೈತನ್ಯ ಒಂದಾಗಿ ಹುಟ್ಟಿ
ಅಡಗುವ ಭೇದವ ಬಲ್ಲೆನಾಗಿ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ./67
ಜೀವವೆಂಬುದಿಲ್ಲ, ಭಾವವೆಂಬುದಿಲ್ಲ, ಬಯಕೆಯೆಂಬುದಿಲ್ಲ.
ಮುಂದೆ ಪೂಜಿಸಿ ಕಂಡೆಹೆನೆಂಬುದಕ್ಕೆ ಮುನ್ನವೆ ಇಲ್ಲ.
ಪೂರ್ವ ಅಪೂರ್ವವೆಂಬುದಿಲ್ಲ.
ಇವಾವ ಬಂಧನವೂ ಇಲ್ಲದ
ಅವಿರಳಂಗೆ ಒಂದರ ತೋರಿಕೆಯೂ ಇಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲಾ ಇಲ್ಲ, ನಿಲ್ಲು ಮಾಣು./68
ತನು ತನ್ನ ಕಾಣದು, ಮನ ತನ್ನನರಿಯದು.
ಏನಯ್ಯ ತನು ಕೆಟ್ಟು ಮನ ನಷ್ಟವಾಯಿತ್ತು.
ಅನಾಗತವೆಂದಡೆ ಅನಾಹತವಾಯಿತ್ತು.
ಜೀವರಾಶಿಗಳೆಲ್ಲಾ ನಡೆಗೆಟ್ಟುಹೋದವು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಇಲ್ಲೆಂಬೆನು./69
ತನುವ ಮರೆಯಬೇಕೆಂದು ಗುರುವ ತೋರಿ,
ಮನವ ಮರೆಯಬೇಕೆಂದು ಲಿಂಗವ ತೋರಿ,
ಧನವ ಮರೆಯಬೇಕೆಂದು ಜಂಗಮವ ತೋರಿ,
ಲೇಸ ಮರೆದು ಕಷ್ಟಕ್ಕೆ ಕಡಿದಾಡುವ
ಭಾಷೆಹೀನರ ಕಂಡು ನಾಚಿಕೆಯಾಯಿತ್ತು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./70
ತನ್ನಿಂದ ಬಿಟ್ಟು ಗುರುವಿಲ್ಲ,
ತನ್ನಿಂದ ಬಿಟ್ಟು ಲಿಂಗವಿಲ್ಲ,
ತನ್ನಿಂದ ಬಿಟ್ಟು ಜಂಗಮವಿಲ್ಲ,
ತನ್ನಿಂದ ಬಿಟ್ಟು ಪ್ರಸಾದವಿಲ್ಲ,
ತನ್ನಿಂದ ಬಿಟ್ಟು ಪಾದೋಕವಿಲ್ಲ,
ತನ್ನಿಂದ ಬಿಟ್ಟು ಪರವಿಲ್ಲ,
ತನ್ನಿಂದ ಬಿಟ್ಟು ಇನ್ನೇನೂ ಇಲ್ಲ.
ಅನಾದಿಯೊಳಗಿಲ್ಲ, ಭೇದಾಭೇದದೊಳಗಿಲ್ಲ,
ಅದು ಇದು ಎಂಬುದಿಲ್ಲ,
ಇದಿರೆಂಬ ಬಯಕೆಯಿಲ್ಲ, ಆದ್ಯರ ಸಂಗವು ಇಲ್ಲ.
ಸುರಾಳ ನಿರಾಳವೆಂಬವು ತಾನೆ,
ತಾನೆ ಪರವಸ್ತುವೆಂಬುದಕ್ಕೆ ಮುನ್ನವೆಯಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./71
ತಪವೆಂಬುದು ಬಂಧನ.
ನೇಮವೆಂಬುದು ತಗಹು.
ಶೀಲವೆಂಬುದು ಸೂತಕ.
ಕಟ್ಟಿನ ವ್ರತದ ಭಾಷೆಯೆಂಬುದು ನಗೆಗೆಡೆಯಾಯಿತ್ತು ನೋಡಾ!
ನಗೆಹೊಗೆವಣ್ಣಿದಲ್ಲಿ ಹೊಗೆ ಜಗವಾದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ,
ನಿಲ್ಲು! ಮಾಣು!/72
ತಮ್ಮ ಮಲವ ತಾವು ಮುಟ್ಟವು ಆವ ಜಾತಿಯು.
ತ್ರಿವಿಧ ಮಲಕ್ಕೆ ಹೊರಗಾಗಿ ಮತ್ತೆ ಮಲತ್ರಯಕ್ಕೆ ಬೀಳುವ
ಮಲಭಾಂಡದೇಹಿಗೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಒಲವರವಿಲ್ಲ ಇಲ್ಲ ಎಂದೆ./73
ತಾನೆಂದಲ್ಲಿ ಓಯೆಂದುದದೇನೊ!
ಎಂದ ಸಂಕಲ್ಪವೆಲ್ಲಿಯಡಗಿತ್ತೊ!
ತಾನೆಂದು ಜಡವಿಡಿದ ಭೂತಪ್ರಾಣಿಗಳಿಗೆ ಲಿಂಗವೆಲ್ಲಿಯದೊ?
ಪೂಜಿಸಿ ಪೂಜಿಸಿ ಗತಿಗೆಟ್ಟರೆಲ್ಲರು.
ಗತಿಗೆಡದಲ್ಲಿಯೇ ಅಡಗಿತ್ತು!
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./74
ತೋರದೆ ತೋರಿದ ನೆಳಲಿನ ಬಿಂದುವ ನುಂಗಿ
ಬಾರದ ಬಯಲುವ ಕೂಡಿದ ಕಾರಣವೇನೊ?
ಬಂದುದ ಅಳಿದುದರಂದವ ಬಿಂದು ತಾನರಿಯದು.
ಅದು ಭೂತಪ್ರಭೆಯಲ್ಲಿ ನಿಃಪತಿಯೆಂಬುದರಿಯ ಬಂದು,
ಆಶ್ರಯವಿಲ್ಲದೆ ನಿಂದುದು ನಿರವಯವು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ!/75
ದಗ್ಧವಾದ ಮರ ಇದ್ದಿಲಲ್ಲದೆ ಕಾಷ್ಠಕ್ಕೆ ಹೊದ್ದಿಗೆ ಉಂಟೆ?
ಕಿಗ್ಗಯ್ಯ ನೀರು ತಟಾಕಕ್ಕೆ ಹೊದ್ದಿದುದುಂಟೆ?
ಅರಿದು ಮರೆದವಂಗೆ ಸಮಯದ ಹೊದ್ದಿಗೆ ಏನು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./76
ದೃಷ್ಟಿ ಕಷ್ಟವ ಮುಟ್ಟುವಲ್ಲಿ ಮೂವರ ಸಂಚವಿಲ್ಲಾಗಿ
ಅಟ್ಟಿ ಹರಿದು ಹರಿಯ ಹಿಮ್ಮಡಿಯ ಹಿಡಿದುಕೊಂಡು ಬಿಟ್ಟೆನು.
ಕಟ್ಟಿಯಾಳಿದ ರುದ್ರನೆಂಬನ,
ಗೌರಿ ಸರಸ್ವತಿ ಲಕ್ಷ್ಮಿಯ ಹೋಗೆಂದೆ,
ಬ್ರಹ್ಮನ ಕಳುಹಿದೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./77
ನಮ್ಮವರು ಭಕ್ತರಲ್ಲ
ನಮ್ಮವರಿಗೆ ದೇವರಿಲ್ಲ.
ನಮ್ಮವರು ಜಂಗಮಕ್ಕೆ ಮಾಡುವರಲ್ಲ
ನಮ್ಮವರು ಜಂಗಮದ ಕೈಯಲ್ಲಿ ಮಾಡಿಸಿಕೊಂಬರು.
ನಮ್ಮವರು ನಮ್ಮವರು ಎಂಬ ಶಬ್ದ ಸತ್ತಿತ್ತು.
ನಮ್ಮವರಾದ ಪರಿಯ ನಾನಿನ್ನೇನ ಹೇಳುವೆ? ಇದು ಕಾರಣ,
ನಮ್ಮವರಿಗೆಯೂ ಇಲ್ಲ, ನನಗಂತೂ ಇಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ!/78
ನಾ ನೀನೆಂಬುದಳಿದ ಪರಮಲಿಂಗೈಕ್ಯಂಗೆ
ಪರವೆಂಬುದಿಲ್ಲ, ಇಹವೆಂಬುದಿಲ್ಲ.
ಮರಹೆಂಬುದಿಲ್ಲ, ಅರಿವೆಂಬುದಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./79
ನಾದದೊಳಗಿಲ್ಲ, ಸುನಾದದೊಳಗಿಲ್ಲ.
ಆದಿಯೊಳಗಿಲ್ಲ, ಅನಾದಿಯೊಳಗಿಲ್ಲ.
ಭೇದಾಭೇದದೊಳಗಿಲ್ಲ.
ಅದು ಇದು ಎಂಬುದಿಲ್ಲ.
ಇದಿರೆಂಬ ಬಯಕೆಯಿಲ್ಲ.
ಆದ್ಯರ ಸಂಗವೂ ಇಲ್ಲ.
ಸುರಾಳ- ನಿರಾಳವೆಂಬ ಇವೆಲ್ಲವೂ ತಾನೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./80
ನಾನಾ ವೃಕ್ಷಂಗಳೊಳಗೆ ವಸ್ತು ತಾನೇ.
ನಾನಾ ಗಿರಿಪರ್ವತಂಗಳಲ್ಲಿಯೂ ತಾನೇ.
ಸಕಲ [ಸಮು]ದ್ರ ಆಕಾಶಾದಿ ಭುವನ
ಬ್ರಹ್ಮಾಂಡ ಪಿಂಡಂಗಳೆಲ್ಲವು ತಾನೆಂದರಿಯದೆ,
ಇದಿರಲ್ಲಿ ವಸ್ತು ಉಂಟೆಂಬ ಷಟ್ಸ್ಥಳಬ್ರಹ್ಮಿ ನೀ ಕೇಳಾ,
ಗಿರಿ…. ನೆವುಂಟೆ? ಲಿಂಗವಾಗಿ ಸಂಗವನರಸಲುಂಟೆ?
ಬೆಳಗೆಂಬ ಸಂದೇಹನ… ದ್ವಂದ್ವದ ಪ್ರಸಂಗವೆಲ್ಲಿಯದು ಹೇಳಾ.
ನಿಂದ ನಿಲವೆ ತಾನಾದ ಅಬದ್ಧಂಗೆ
ನಿರಾಳ ಸುರಾಳವೆಲ್ಲಿಯದು ಹೇಳಾ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./81
ನಾನೆಂದೆನಲಿಲ್ಲ, ನುಡಿದು ಹೇಳಲಿಕ್ಕಿಲ್ಲ.
ತನ್ನಲ್ಲಿ ಬಯಲ ಘನವನು
ಹರಿದು ಹತ್ತುವುದೆ ತನ್ನಲ್ಲಿ ತಾನಾದ ಬಯಲ ಘನವನು?
ಇನ್ನೇನನರಸಲಿಲ್ಲ, ಅದು ಮುನ್ನ ತಾನಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./82
ನಾಮಾನಾಮವೆಂದು ನೀನು ನಾಮಕ್ಕೆ ಬಳಲುವೆ.
ನಾಮವಾದ ಸೀಮೆಯೊಳಗಿಪ್ಪುದು ಹೇಳೆಲೆ ಮರುಳೆ?
ನಾಮವೂ ಇಲ್ಲ ಸೀಮೆಯೂ ಇಲ್ಲ,
ಒಡಲೂ ಇಲ್ಲ ನೆಳಲೂ ಇಲ್ಲ,
ನಾನೂ ಇಲ್ಲ ನೀನೂ ಇಲ್ಲ ಏನೂ ಇಲ್ಲ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ./83
ನಿಜವನರಿದವಂಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ;
ನಿತ್ಯವೂ ಇಲ್ಲ, ಅನಿತ್ಯವೂ ಇಲ್ಲ;
ಅದು ತಾ ಮುನ್ನವೆ ಇಲ್ಲ,
ಬಚ್ಚ ಬರಿಯ ನಿರಾಳ ತಾನೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ,
ನೀವು ಬಯಲು./84
ನಿನ್ನ ಪ್ರಾಣವಾದಡೆ ನಿನ್ನ ಹೇಳಿತ ಕೇಳದೆ?
ಲಿಂಗಪ್ರಾಣವಾದಡೆ ಅಂಗದಿಂದ ಅಳಿಯಲದೇಕೆ?
ನಿಜಪ್ರಾಣವಾದಡೆ ಪ್ರಾಣಭೀಕರವೇತಕ್ಕಯ್ಯಾ?
ಇಹಪ್ರಾಣದ ಪರಪ್ರಾಣದ ಭೇದ ನಿಮಗೇಕೆ?
ಪ್ರಾಣ ತಾರ್ಕಣೆಯ ಅನುವನು ಬಲ್ಲವರು ನೀವು ಹೇಳಿರೊ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಏನೂ ಇಲ್ಲ./85
ನಿರಾಳಲಿಂಗಕ್ಕೆ ನಿರೋಧ ಬಂದಿತ್ತಲ್ಲಾ!
ನಿರೂಪಿಂಗೆ ಭಂಗ ಹೊದ್ದಿತ್ತಲ್ಲಾ!
ದೇಹಾರವ ಮಾಡುವರಳಿದು
ದೇಹ ದೇಹಾರದೊಳಗಡಗದಿದೆಂತೊ?
ದೇಹಾರ ಆಹಾರವಾಗಿ ಅರ್ಪಿಸಲಿಲ್ಲದ ಪ್ರಸಾದಿ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಹುಸಿಯಲ್ಲಿ./86
ನೀರ ಕೊಳಗವ ಮಾಡಿ ನೆಳಲನಳೆದೆನೆಂಬ
ಗಾವಳಿಯ ನಾನೇನೆಂಬೆನಯ್ಯಾ.
ಸುಳಿದಳೆಯದ ಬೆಳಗಿನ,
ಅಳೆಯದ ರಾಶಿಯ ನರರು ಅಳೆವರಯ್ಯಾ.
ಅದು ಬಂದು ಆಶ್ರಯವಿಲ್ಲ, ನಿಂದು ನಿರವಯ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./87
ನೀರೊಳಗೆ ಕಿಚ್ಚಿರ್ದು ನೆಳಲ ಸುಟ್ಟಿತ್ತು!
ನೆಳಲ ಸುಟ್ಟ ಬೂದಿಯನಿಟ್ಟು ಕೊಂಡಡೆ ಭೂಮಿ ಸತ್ತಿತ್ತು!
ಆಕಾಶ ಹೊತ್ತಿತ್ತು! ದೇವನ ದೇವತ್ವ ಕೆಟ್ಟಿತ್ತು!
ದೇವಿಯ ಒಕತನ ಮುರಿಯಿತ್ತು!
ಕೇಳಬಾರದ ಠಾವಿನಲ್ಲಿ ಕಾಣಬಾರದ ಲಿಂಗ ಮೂರ್ತಿಗೊಂಡಿರೆ
ನೋಡಬಾರದ ಪೂಜೆಯಾಯಿತ್ತು!
ಚಿಕ್ಕಯ್ಯಪ್ರಿಯ ಸಿದ್ಧಲಿಂಗಾ
ಪ್ರಭುದೇವ [ರ] ನಿಲವ ಕಂಡು ಇಲ್ಲ ಇಲ್ಲವೆನುತಿರ್ದೆನು./88
ನೀರೊಳಗೊಂದು ನೆಳಲು ಸುಳಿಯಿತ್ತು
ನೆಳಲೊಳಗೊಂದು ಹೊಳೆವ ಶಬ್ದವು
ಅದು ನೆಮ್ಮಲ್ಲ ಸೊಮ್ಮಲ್ಲ
ಅಮ್ಮಿದಡಾಯಿತ್ತು ನೆಮ್ಮಿದಡರಳಿಯಿತ್ತು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಬಯಲು!/89
ಪರಮಂಗೆ ನಾನು ಮದವಳಿಗೆ.
ಆರುನೆಲೆಯ ಕರುಮಾಡವ ಮಾಡಿ,
ಎಂಟು ಗುಣವ ಸುನಿಗೆಯ ಮಾಡಿ,
ಎನ್ನ ನೊಸಲ ತಂಪನೆರೆದು
ಚಿಕ್ಕಯ್ಯಪ್ರಿಯ ಸಿದ್ಧಲಿಂಗಪ್ರಭುವಿಂಗೆ
ನಮೋ ನಮೋ ಎನುತಿರ್ದೆನು [ಕಾಣಾ]/90
ಪವನದ ಬಳಿಯಲಿ ಹರಿಯಲಿ ಹರಿಯಲಿ
ನೆನಹಿನ ಬಳಿಯಲಿ ಸುಳಿಯಲಿ ಸುಳಿಯಲಿ.
ತಾಗಿಲ್ಲದೆ ಬಾಗುವುದೆ?
ಉಂಟೆಂಬನ್ನಬರ ಬಳಸಲಿ.
ಎಲ್ಲವೂ ತೀದು, ಇಲ್ಲವೆಯಲ್ಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇನ್ನೇನ ಬಳಸಲುಂಟು?/91
ಪುರಹರ ಕ್ಷೇತ್ರದಲ್ಲಿ ಪುರಪತಿಯೊಡನೆ ಸಂಪಾದನೆ.
ಮಹಾಹರಕ್ಷೇತ್ರದಲ್ಲಿ ಕ್ಷೇತ್ರಪತಿಯೊಡನೆ ಸಂಪಾದನೆ.
ಅಮರ ಮಧ್ಯಸ್ಥಾನದಲ್ಲಿ ಅಮರಪತಿಯೊಡನೆ ಸಂಪಾದನೆ.
ಮಹಾಮಧ್ಯದ ನೆಲೆಯೊಳು ಮಹಾಪತಿಯೊಡನೆ ಸಂಪಾದನೆ.
ಮಹಾ ಪರಾಪರ ಎಂದುದಾಗಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./92
ಪೂಜಕರೆಲ್ಲರೂ ಪೂಜಿಸುತ್ತಿದ್ದರು.
ಭಾವುಕರೆಲ್ಲರೂ ಬಳಲುತ್ತಿದ್ದರು.
ದೇವ ದೇಹಾಕಾರವ ಮಾಡುತ್ತೈದಾನೆ,
ದೇವಿ ದೂಪ ನೈವೇದ್ಯವ ಮಾಡುತ್ತಿದ್ದಳು,
ಆನು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆನು./93
ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ
ಪಂಚಭೂತ ವಿಕಾರತನುಗಳು ಲಿಂಗಪೂಜೆಯ
ಬೆಬ್ಬನೆ ಬೆರವರು ಉಪದೇಶಮಾರ್ಗ.
ತನುಮನಧನವ ಪ್ರಾಣಾದಿಗಳ ಗುರುಲಿಂಗಕ್ಕೆ
ಕೊಟ್ಟೆವೆಂಬರು ನೋಡಾ! ನಾಚಿಕೆಯಿಲ್ಲದ
ಹೇಸಿಗೆಗೆಟ್ಟ ಉನ್ಮತ್ತರು.
ಲಿಂಗವಿದ್ದುದಕ್ಕೆ ಫಲವೇನೋ ಅಂಗವಿಕಾರವಳಿಯದನ್ನಕ್ಕ,
ಇಂದ್ರಿಯ ಸಂಗ ಮರೆಯದನ್ನಕ್ಕ ಪ್ರಸಾದವ
ಕೊಂಡೆವೆಂಬರು ನೋಡಾ ಬಹುಭಾಷಿಗಳು.
ನಿಧಾನವಿದ್ದ ನೆಲ ನುಡಿವುದು.
ಭೂತವಿಡಿದ ಮನುಷ್ಯ ತನ್ನ ತಾ ಮರೆದಿಹ.
ಲಿಂಗವಿದ್ದುದಕ್ಕೆ ಪ್ರಮಾಣವೇನೋ
ನಡೆತತ್ವ ನುಡಿ ಸಿದ್ಧಾಂತವಾಗಬೇಕು.
ಪಂಚೇಂದ್ರಿಯಂಗಳ ಉನ್ಮತ್ತವಡಗಬೇಕು.
ಸದಾಚಾರವೆಂತಳವಡುವದು
ಸದಾಚಾರ ತನ್ನಲ್ಲಿ ಸಾಹಿತ್ಯವಾಗದನ್ನಕ್ಕ.
ಇಹಪರವನರಸುವ ಸಂದೇಹಿಗಳಿಗೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./94
ಪ್ರಾಣಲಿಂಗವ ಪರಲಿಂಗವ ಮಾಡಿ
ಇಷ್ಟಲಿಂಗವ ಪೂಜಿಸುವರ ಕಷ್ಟವ ನೋಡಾ!
ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ
ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ?
ಬಯಲಾಸೆ ಹಾಸ್ಯವಾಯಿತ್ತು
ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲದ ಕಾರಣ!/95
ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು.
ಲಿಂಗಪ್ರಾಣವೆಂದಡೆ ತನ್ನಲ್ಲೆ ಹಿಂಗಿತ್ತು.
ಅದೇನೇನೆಂಬೆನೇನೆಂಬೆನು,
ಮೂರು ಲೋಕವೆಲ್ಲ ತೊಳಲಿ ಬಳಲುತ್ತಿದೆ.
ಉಭಯಲಿಂಗ ನಾಮ ನಷ್ಟವಾದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆ./96
ಬಂಧವಿಲ್ಲದ ಭಾವವಿಲ್ಲದ ಸಂದಿಲ್ಲದ ಸಮರಸವಿಲ್ಲದ,
ಸಾಧ್ಯವಿಲ್ಲದ ಭೇದ್ಯವಿಲ್ಲದ ಬೆಳಗಾದಿ ಬೆಳಗುಗಳೇನೊ ಇಲ್ಲದ,
ಉಳಿದ ಉಳುಮೆಯೆಂಬ ಹುಟ್ಟು ಹೊಂದಿಲ್ಲದ ನಿರಾಳಸುರಾಳವಿಲ್ಲದ
ಇವೇನೂ ಏನೂ ಇಲ್ಲದ ಏಕೋಭರಿತ ತಾನೆಯಾಯಿತ್ತಾಗಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು./97
ಬಯಲೊಳಗುಣ ಬಯಲು ನಿರ್ವಯಲ ನುಂಗಿತ್ತು.
ಬಯಲ ಬಯಲ ನಿರ್ವಯಲು;
ಮಹಾಬಯಲೊಳಗೆ ಬಯಲಾಗಿ ನಿರವಯಲಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ್ಲ, ನಿಲ್ಲು ಮಾಣು./98
ಬಸವ ಮಾಡಿಹನೆಂದು ಬಾಯಲ್ಲಿ ಬಸಿವ
ಲೊಳೆಯನರಿಯದೆ ಎಸಕದಿಂದ ಮಾಡುವ
ಹುಸಿಭಕ್ತಿಯನರಿಯದ ಈ ಕಿಸಿವಾಯರಿಗೇಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./99
ಬಾಯಕ್ಕಿಯ ಬೇಡುವರೆಲ್ಲರು
ಬಡಪಾಯಿವಂತರ ನೋವ ಬಲ್ಲರೆ?
ಹಿಡಿದ ವಿಹಂಗೆ ಪಶುವಿನ ನೋವ ಬಲ್ಲದೆ?
ಇಂತೀ ದೆಸೆಯ ಕಂಡು ನಾನಂಜಿದೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./100
ಭಕ್ತಿಯನರಿಯ ಭಾವವನರಿಯ,
ವಿಚಿತ್ರವನರಿಯ ಚಿತ್ರಾರ್ಥವನರಿಯ,
ತತ್ವವಿಚಾರವ ಮುನ್ನವೆ ಅರಿಯ.
ನಿತ್ಯ ನಿರಂಜನ ಪರವಸ್ತು ತಾನೆಯಾದ ಕಾರಣ
ತನ್ನಿಂದನ್ಯವಾಗಿ ಮುಂದೆ ತೋರುವ ತೋರಿಕೆ ಒಂದೂ ಇಲ್ಲ.
ನಿರಾಳ ನಿರವಯಲು ನಿರಾಕಾರ ಪರವಸ್ತು ತಾನಲ್ಲದೆ ಮತ್ತೇನೂ ಇಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗವೆಂಬುದಕ್ಕೆ
ಎಡೆಯೊಂದು ಇಲ್ಲ, ನಿಲ್ಲು ಮಾಣು./101
ಭೂಮಿ ಘನವೆಂಬೆನೆ ಪಾದಕ್ಕೊಳಗಾಯಿತ್ತು
ಗಗನ ಘನವೆಂಬೆನೆ ಕಂಗಳೊಳಗಾಯಿತ್ತು.
ಮಹವು ಘನವೆಂಬೆನೆ ಮಾತಿಂಗೊಳಗಾಯಿತ್ತು.
ಘನ ಘನವೆಂಬುದಿನ್ನೆಲ್ಲಿಯದೆಲವೊ!
ಅರಿವಿಂಗಾಚಾರವಿಲ್ಲ, ಕುರುಹಿಂಗೆ ನೆಲೆಯಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./102
ಮಜ್ಜನದ ಮಾರಿಯೆ ಪತ್ರೆಯ ತಾಪತ್ರಯ
ನಿ[ರ್ಮಾ]ಲ್ಯವ ಲಿಂಗಾರ್ಪಿತ ಮಾಡುವವನೇನೆಂಬೆ.
ರೂಪಿಲ್ಲದುದನೊಂದು ಶಾಪ ಬಂಧನಕ್ಕೆ ತಂದು
ಕೋಪದ ದೂಪದಾರತಿಯಾದ ತೆರನೆಂತೊ!
ಅದು ಬೇಕೆನ್ನದು, ಬೇಡೆನ್ನದು, ಸಾಕೆಂಬುದು ಮುನ್ನಿಲ್ಲವಾಗಿ.
ಈ ಪರಿಯ ಭ್ರಮಿತರಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./103
ಮನ್ಯ ಓಡಿ ಆಹಾ! ಮನ್ಯ ನಿಂದು
ಸರಹೆತ್ತ ಮನಕ್ಕೆ ಸರಾದಿವೊಡೆಯನಾಗಿ
ಸರಶಬ್ದದಾ ಮಥನದಾ ಮಥಂತಿ ಮಥನದಾಸರ
ಮಥನದಿಂದ ಲಿಂಗ ಉತ್ಪತ್ಯ, ಜಂಗಮ ಉತ್ಪತ್ಯ,ಅನುಭಾವ ಉತ್ಪತ್ಯ.
ಸರದಿಂದ ನಿರವಯ, ನಿರವಯದಿಂದ ಸರ.
ಸರವಯದಿಂದೆರಡರನ್ವಯದ ಆಧಾರವನು
ತನ್ನ ಹೃದಯಕ್ಕೆ ತಂದು ನಿಂದಿತ್ತೆ ನಿರವಯವು.
ಇಂತೆಂದಿತ್ತೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./104
ಮಹಾದೇವ ಹತಕ್ಕೆಡೆಯಾಡುವನೆ?
ಮಹಾದೇವ ಪರಾಪರ ಪರಿಪೂರ್ಣನಾಗಿ
ಮಹಾಸಂಗ ಸುಸಂಗ ನಿಸ್ಸಂಗ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ನಿಸ್ಸಂಗ./105
ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ,
ಲಿಂಗ ಕಳೆಯವೆ ಹೃದಯಕ್ಕಾಶ್ರಯವಾಗಿ,
ಹೃದಯದ ಕಳೆಯವೆ ಜ್ಞಾನಕ್ಕಾಶ್ರಯವಾಗಿ,
ಜ್ಞಾನದ ಕಳೆಯವೆ ನಿತ್ಯಕ್ಕಾಶ್ರಯವಾಗಿ,
ನಿತ್ಯನಿರವಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆನು./106
ಮಾಯೆ ಉಂಡವರೆಲ್ಲ ಮಹಂತ ಬೋದರು.
ದೇಹ ಉಂಡವರೆಲ್ಲ ದೇವರ ಪೂಜಿಸಿದರು.
ಪಂಕ್ತಿ ಉಂಡವರೆಲ್ಲ ಪಥಕ್ಕೊಳಗಾದರು.
ಸ್ಥಿರ ಉಂಡವರೆಲ್ಲ ಇರದೆ ಹೋದರು.
ಹಾಲುಂಡವರೆಲ್ಲ ಹಂಬಲಿಸುತ್ತೈದಾರೆ.
ನಾನು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./107
ಮುಂಡವ ಹೊತ್ತುಕೊಂಡು ಮಂಡಲಕ್ಕೆ ಬಂದಡೆ
ಮಂಡಲದ ಹೆಮ್ಮಕ್ಕಳು ಮುಂಡವ ನೋಡುತ್ತಿದ್ದರು,
ಇತ್ತ ತಾರು ಮಾಯಿತ್ತು ತೋರು ಮಾಯೆಯೆನುತ್ತ
ನೆರೆದು ಮುಂಡವ ಕೊಂಡಾಡುತ್ತಿದ್ದರು.
ಇದರ ತಲೆಯೆತ್ತ ಹೋಯಿತ್ತೆಂದಡಲ್ಲಿಯೇ ಅಡಗಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲೆಂದುದಾಗಿ./108
ಮುಟ್ಟಿ ಭಕ್ತನು ಮುನ್ನಲ್ಲ, ಬಿಟ್ಟ ಸೂತಕಿ ಬಳಿಕಲ್ಲ.
ನೆಟ್ಟನೆ ತಾನಾಗಿ ಆದಿ ಅಂತ್ಯ ಇಲ್ಲಾಗಿ
ಶರಣನು ಮುಟ್ಟಿ ಅಗ್ಘವಣಿಯ ಕೊಡನು.
ಹುಟ್ಟಿ ಹೊಂದುವ ಹೂವಿನ ಕಷ್ಟದ ಪೂಜೆಯನು ಮಾಡನು.
ಮಾಡಿಸಿಕೊಳ್ಳಲಿಲ್ಲವಾಗಿ ಮುಟ್ಟುವ ಮೂರುತಿ
ಮತ್ತೆಯೂ ನಷ್ಟವೆಂಬುದನರಿಯರು ಸೃಷ್ಟಿಯಲ್ಲಿ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಉಂಟೆಂಬರು./109
ಮುನ್ನವೆ ಆಚಾರಕ್ಕೆ ಹೊರಗು, ನಾನನಾಚರಿಯಾದ ಕಾರಣ,
ನಿಮ್ಮಂತಹವನಲ್ಲ.
ಸಮಯಕ್ಕೆ ಹೊರಗು ಜಗದೊಳಗು.
ಎನ್ನ ಅರಿಕೆ ಎನಗೆ, ನಿಮ್ಮ ಸಮಯ ನಿಮಗೆ.
ಓಗರವನಿಕ್ಕುವಾತನ ಮನೆಯ ಬಾಗಿಲು
ಮುಚ್ಚಿಹಿತು ಹೋಗಿರಣ್ಣಾ.
ಅನಾಚಾರಿಯ ಮುಖವ ಸದಾಚಾರಿಗಳು ನೋಡಿ ಕೆಡಬೇಡ, ಕೀಳ ತೆಣಕಲಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./110
ಮೂರ ಬಿಟ್ಟವಂಗಲ್ಲದೆ ಸತ್ಯವ ಸಾಧಿಸಬಾರದು.
ಆರ ಬಿಟ್ಟವಂಗಲ್ಲದೆ ಆದರಿಸಬಾರದು.
ಎಂಟ ಬಿಟ್ಟವಂಗಲ್ಲದೆ ಸಾಕಾರದ ಕಂಟಕವನರಿಯಬಾರದು.
ರಣದಲ್ಲಿ ಓಡಿ ಮನೆಯಲ್ಲಿ ಬಂಟತನವನಾಡುವನಂತೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./111
ಮೇಲನರಿತಲ್ಲಿ ಕೀಳಿಲ್ಲ,
ಕೀಳನರಿತಲ್ಲಿ ಮೇಲಿಲ್ಲ.
ಮೇಲು ಕೀಳೆಂಬ ಬೋಳು ಮಾಡಿ
ಧೂಳಾಗಬಲ್ಲರೆ ಹೇಳಲಿಲ್ಲ, ಕೇಳಲಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ,
ಮಿಗೆ ಮಿಗೆ ಬಯಲು./112
ಯೋಗದ ಹೊಲಬ ಸಾಧಿಸಬಾರದು.
ಯೋಗವೆಂಟರ ಹೊಲಬಲ್ಲ.
ಯೋಗ ಒಂಬತ್ತರ ನಿಲವಲ್ಲ.
ಯೋಗವಾರರ ಪರಿಯಲ್ಲ.
ಧರೆಯ ಮೇಲಣ ಅಗ್ನಿ ಮುಗಿಲ ಮುಟ್ಟದಿಪ್ಪಡೆ ಯೋಗ.
ಮನದ ಕಂಗಳ ಬೆಳಗು ಸಸಿಯ ಮುಟ್ಟಿದೆನೆನ್ನದೆ
ಘನವ ಮನವನೊಳಕೊಂಡಡದು ಯೋಗ.
ವನಿತೆಯರರಿವರನು ಪತಿಯೊಮ್ಮೆ ಕೂಡಿ
ತಳುವಳಿದಿರಬಲ್ಲಡದು ಯೋಗ.
ಘನಮಹಿಮ ಪ್ರಭುವಿನ ಸಮರಸ ಯೋಗವ ಕಂಡು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು./113
ರುದ್ರದೇವ ಮಹಾದೇವ ಇವರಿಬ್ಬರೂ ಬೀಗರಯ್ಯಾ.
ಒಬ್ಬರು ಹೆಣ್ಣಿನವರು, ಒಬ್ಬರು ಗಂಡಿನವರು.
ಹಂದರವಿಕ್ಕಿತ್ತು, ಮದುವೆ ನೆರೆಯಿತ್ತು,
ಶೋಬನವೆಂದಲ್ಲಿಯೇ ಅಳಿಯಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು./114
ರೋಗಿಗೆ ಹಾಲು ಸಿಹಿಯಪ್ಪುದೆ?
ಗೂಗೆಗೆ ರವಿ ಲೇಸಪ್ಪುದೆ?
ಚೋರಗೆ ಬೆಳಗು ಗುಣವಪ್ಪುದೆ?
ಭವಸಾಗರದ ಸಮಯದಲ್ಲಿದ್ದವರು
ನಿರ್ಭಾವನ ಭಾವವನೆತ್ತ ಬಲ್ಲರು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./115
ಲಿಂಗ ಜಂಗಮ, ಜಂಗಮ ಲಿಂಗವೆಂಬ ನಿಂದೆಯ ಮಾತು
ಇಂತು ನೋಡಾ!
ಅಂದಂದಿಗೆ ಬರು ಶಬ್ದವಯ್ಯಾ,
ಉಭಯಕುಳ ಲಿಂಗವಿಡಿದಾಡುವವರಿಗೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ./116
ಲಿಂಗದಿಂದಲಾದ ಕಾಯವ ಹಿಂಗಿ ಹೋಹ ತೆರನಿನ್ನೆಂತೊ!
ಅಳಿಯಲಾಗದು ಕಾಯವ, ಉಳಿಯಲಾಗದು ಪ್ರಾಣವ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂಬ ಭಂಗ ಹಿಂಗದಲ್ಲಾ./117
ಲಿಂಗವೆನ್ನೆ ಲಿಂಗೈಕ್ಯವೆನ್ನೆ.
ಸಂಗವೆನ್ನೆ ಸಮರಸವೆನ್ನೆ.
ಆಯಿತ್ತೆನ್ನೆ ಆಗದೆನ್ನೆ, ನೀನೆನ್ನೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಏನೆಂಬುದಕ್ಕೆ ಮುನ್ನವೆ ಇಲ್ಲ, ನಿಲ್ಲು[ಮಾಣು]/118
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ,
ಎನ್ನ ಅಂಗದೊಳಗಾಗು.
ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು.
ಆಗೆಂಬುದಕ್ಕೆ ಮುನ್ನವೆ ಆ ಗುಂಡು
ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ,
ಕಾಯವಡಗಿ, ಭಾವವೆಂಬ ಬಯಲಾಯಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ./119
ವಾಙ್ಮನಕ್ಕೆ ಬಾರದ ಅಪ್ರತಿಮಲಿಂಗವ ಕೂಡಿ
ಅಚಲಾನಂದದೊಳಿಪ್ಪ ಪರಮ ನಿರ್ಲೆಪಿಗೆ ಭಾವವಿಲ್ಲ.
ಭಾವವಿಲ್ಲವಾಗಿ ಜ್ಞಾನವಿಲ್ಲ.
ಜ್ಞಾನವಿಲ್ಲವಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./120
ವಾಯದ ರಾಸಿಗೆ ಮಾಯದ ಕೊಳಗ
ಅಳೆವುದು ನೆಳಲು, ಹೊಯಿವುದು ಬಯಲು.
ತುಂಬಿಹೆನೆಂದಡೆ ತುಂಬಲು ಬಾರದು.
ತುಂಬಿದ ರಾಸಿಯ ಕಾಣಲು ಬಾರದು.
ಅಳತೆಗೆ ಬಾರದು; ಹೊಯ್ಲಿಗೊಳಗಾಗದು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ಮಿಗೆ ಬಯಲು./121
ವೇದ ಶಾಸ್ತ್ರ ಪುರಾಣಗಳಿಂದ ಅರಿದೆವೆಂಬ
ಷಟ್ಸ್ಥಲಜ್ಞಾನಿಗಳು ನೀವು ಕೇಳಿರಣ್ಣಾ.
ನೀವು ಅರಿವ ಪರಿಯೆಂತುಟು ಹೇಳಿರಣ್ಣಾ.
ನಿಮ್ಮಸಂದೇಹ ನಿಮ್ಮ ನಿಮ್ಮ ತಿಂದು ತೇಗುಗು.
ನಿಮ್ಮ ಸಂಕಲ್ಪ ನಿಮ್ಮ ಕೊಂದು ಕೂಗುಗು.
ಅರಿವು ಸಂಬಂಧಿಗಳಿಂದ ಅರಿದೆವೆಂಬಿರಿ.
ಹೇಳುವ ಗುರು ಸಂದೇಹಿ, ಕೇಳುವ ಶಿಷ್ಯ ಸಂದೇಹಿ,
ಎನ್ನ ಅರಿವು ಬೇರೆ, ನಿಮ್ಮಾಚಾರ ಬೇರೆಯಾಗಿಪ್ಪುದು.
ನೀವೆನಗೆ ಕರ್ತರಾದ ಕಾರಣ ನಾ ನಿಮಗೆ ತೆತ್ತಿಗನಾದ ಕಾರಣ
ನಿಮ್ಮ ಸಂದೇಹ ಸಂಕಲ್ಪ ನಿವೃತ್ತಿಯ ಮಾಡುವನು ಕೇಳಿರಣ್ಣಾ.
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಲಿಂಗವು
ಆ ಲಿಂಗದ ವೃತ್ತ ಗೋಳಕ ಗೋಮುಖ
ಇಂತೀ ತ್ರಿವಿಧಸ್ಥಾನಂಗಳಲ್ಲಿ ಭಿನ್ನವಾಗಲು
ಲಿಂಗಧ್ಯಾನದಲ್ಲಿ ನಿಂದು ಲಿಂಗೈಕ್ಯರ ಸಂಗದಲ್ಲಿ
ಅಂಗವ ಬಯಲ ಮಾಡುವರು.|| ಸಾಕ್ಷಿ ||
ಸರ್ವಾಂಗಲಿಂಗದೇಹಸ್ಯ ಲಿಂಗಭಿನ್ನ ವಿವರ್ಜಯೇತ್|
ತದ್ದೇಹ ಪರಿತ್ಯಾಗಃ ಮದ್ಭಕ್ತಸ್ಯ ಸುಲಕ್ಷಣಂ||
ಇಂತೆಂದುದಾಗಿ, ಇದಕ್ಕೆ ಸಂದೇಹಬೇಡ.
ಇನ್ನೊಂದು ಪರಿಯನ್ನು ಹೇಳಿಹೆನು ಕೇಳಿರಣ್ಣಾ.
ಅಖಂಡ ಪರಿಪೂರ್ಣಲಿಂಗವ ಶ್ರೀಗುರು ಕೈಯಲ್ಲಿ ಕೊಟ್ಟರೆ
ಶಕ್ತಿ ಸಂಪುಟದಿಂದ ಉತ್ಕೃಷ್ಟಮುಖದೆ ಅಂಗವ ಬಯಲುಮಾಡಬೇಕು.
ಇನ್ನೊಂದು ಪರಿಯನ್ನು ಹೇಳಿಹೆನು ಕೇಳಿರಣ್ಣಾ.
ವೃತ್ತಗೋ[ಳಕ] ಗೋಮುಖಂಗಳಲ್ಲಿ ಮಂತ್ರಯುಕ್ತವಾಗಿ
ಮಾಯಾಬಂಧಗಳಿಂದ ಬಂಧಿಸಿ
ಅಖಂಡ ಲಿಂಗವೆಂದು ಕರಸ್ಥಲಕ್ಕೆ ಕೊಟ್ಟನಯ್ಯಾ ಶ್ರೀಗುರು.
ಶಕ್ತಿ ಸಂಪುಟದಿಂದ ಉತ್ಕೃಷ್ಟವಾಯಿತ್ತೆಂದು
ಸಂದೇಹವ ಮಾಡುವ ಸ್ವಾಮಿದ್ರೋಹಿಗಳ ಮುಖವನೋಡಲಾಗದು.
ಇದಕ್ಕೆ ಸಂದೇಹವಿಲ್ಲ. ಅದೆಂತೆಂದಡೆ: ವಿಯೋಗಾಚ್ಚಿವಶಕ್ತಿಶ್ಚನ ಶಂಕಾ ವೀರಶೈವಾನಾಂ|
ಮನೋಬಂಧಂ ತಥಾ ಕುರ್ಯಾತ್ ಲಿಂಗ ಧಾರಯೇತ್ಸುಧೀಃ||
ಇಂತೆಂದುದಾಗಿ,
ಮನೋರ್ಬಂಧಂಗಳಿಂದ ಬಂಧಿಸಿ ಆ ಲಿಂಗವನೆ ಧರಿಸೂದು.
ಭಕ್ತನಾದಡೂ, ಮಾಹೇಶ್ವರನಾದಡೂ, ಪ್ರಸಾದಿಯಾದಡೂ,
ಪ್ರಾಣಲಿಂಗಿಯಾದಡೂ, ಶರಣನಾದಡೂ, ಐಕ್ಯನಾದಡೂ
ಸಂದೇಹವಿಲ್ಲದೆ ಆ ಲಿಂಗವನು ಧರಿಸೂದು.
ಹಿಂಗಲ್ಲದೆ ಸಂದೇಹವುಂಟೆಂಬವರೆಲ್ಲರು
ಗುರುದ್ರೋಹಿಗಳು ಲಿಂಗದ್ರೋಹಿಗಳು ಜಂಗಮ ದ್ರೋಹಿಗಳು
ಪಾದೋದಕ ದ್ರೋಹಿಗಳು ಪ್ರಸಾದದ್ರೋಹಿಗಳು
ಇಂತಿವರಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗವು
ಸ್ವಪ್ನದಲ್ಲಿಯೂ ಸುಳಿಯನು./122
ವೇಷವೆಂಬ ರುದ್ರನ ಪಾಶವ ಹೊತ್ತು
ಈಷಣತ್ರಯಕ್ಕೆ ತಿರುಗಾಡುವ ವೇಷಧಾರಿಗಳಿಗುಂಟೆ
ಮಹಾಜ್ಞಾನದ ಸಂಪತ್ತಿನ ಸಂಬಂಧ?
ಸ್ವಾದೋದಕದಲ್ಲಿ ಉಂಟೆ ಕ್ಷಾರದ ವಾರಿ?
ಸಮಯದಲ್ಲಿ ಉಂಟೆ ನಿಜ ಶರಣರ ನೆಲೆ?
ಎನಗಾವ ಭ್ರಮೆಯಿಲ್ಲ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./123
ಶಿವ ಶಕ್ತಿಯಲ್ಲಿ ತೃಪ್ತರಾದವರು ನೀವು ಕೇಳಿರೆ.
ನಿಮ್ಮ ಗುರು ಶಕ್ತಿಯ ಮೇಲೆ ಸ್ವಾಯತವ ಮಾಡಿದನು.
ಶಿವನ ಮೇಲೆ ಸ್ವಾಯತವ ಮಾಡುವ ಗುರುವಿಲ್ಲ.
ಇಲ್ಲಿಯೆಲ್ಲಾ ಶಿವ ಶಕ್ತಿಯೆಂಬ ಶಬ್ದದೊಳಗಳಿಯಿತ್ತಲ್ಲಾ ಲೋಕವೆಲ್ಲಾ!
ಆಚಾರ್ಯನು ಕುಟಲವ ಕೊಟ್ಟು ಹೋದನಲ್ಲಾ ಲೋಕದ ಕೈಯಲ್ಲಿ!
ರೂಪಿಗಳು ಮಾಡಿದ ಶಬ್ದದೊಳಗಳಿಯಿತ್ತಲ್ಲಾ ಲೋಕವೆಲ್ಲಾ!
ಪಾಷಾಣ ದಂದುಗದ ಹೇಸಿಕೆಯೊಳಗೆ ಸತ್ತುದಲ್ಲಾ ಲೋಕವೆಲ್ಲಾ!
ಕೇಳಲಾಗದೀ ಶಬ್ದವ.
ಶಿವನ ಕರೆದು ಸ್ವಾಯತವ ಮಾಡಿದೆನು.
ಶಕ್ತಿಯ ಕರೆದೆನ್ನ ಮಠಕ್ಕೆ ಕಾಯಕವ ಮಾಡಿಸಿದೆನು, ಇವರಿಬ್ಬರ ಕೈಯಲ್ಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನಿಸಿದೆನು/124
ಸತ್ತ ಶವ ಕಿಚ್ಚ ಬಲ್ಲುದೆ?
ನಿಷ್ಠೆ ನಿಬ್ಬೆರಗಾದ ಕರ್ತೃ ಮತ್ರ್ಯರ ಬಲ್ಲನೆ?
ತೊಟ್ಟು ಬಿಟ್ಟ ಹಣ್ಣು ಮತ್ತೆ ಹತ್ತುವದೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./125
ಸತ್ತವಂಗೆ ಸಾಹಿತ್ಯ; ಇದ್ದವಂಗೆ ದೇವರು.
ಬುದ್ಧಿವಂತನೆಂಬುವ ಪ್ರಸಾದಗುಡನು.
ಈ ಮೂವರು ಮೂರು ಸುಸರವಾಯಿತ್ತು. ನಾನಿನ್ನೇನ ಮಾಡುವೆ!
ನಾ ಮಾಡದ ಮುಖದಲ್ಲಿ ಶೂನ್ಯಕ್ಕೆ ನಿಂದುದು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು./126
ಸಬಳದ ತುದಿಯಲ್ಲಿ ಬಿರುದ ಕಟ್ಟಿ
ಅದರ ತಲೆವಿಡಿಯತೊಡಗಿದಡೆ
ನಾನಲ್ಲ ಸಬಳಕ್ಕೆ ಬಿರುದೆಂಬವನಂತೆ!
ಹಾಗೆಂದ ಮತ್ತೆ ತೊಡಗುವನೆಗ್ಗ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./127
ಸರದ ಸಾರದ ನಿಸ್ಸಾರಾಯವ ನಿರುತವಲ್ಲೆಂದು
ಅರಿತು ಅರಿಯರು ಹಿರಿಯರೆನಿಸಿಕೊಂಬ ನರತರುಗಳು
ಇವರೆತ್ತ ಬಲ್ಲರು?
ಹಸಿವಿಲ್ಲದೆ ಮುನ್ನಲುಂಡ ಊಟವ
ನಸೆಯಿಲ್ಲದೆ ಆಪ್ಯಾಯನವರಿಯರು.
ಹುಸಿಯಲಿ ನುಸುಳುವರಿಗೆ ತನ್ನ ವಶಕೆ ತರಲಿನ್ನಿಲ್ಲವಿನ್ನೆಂತೊ?
ಭರಿತವೆಂಬರು ಭಾವಕ್ಕಿಂಬಿಲ್ಲ,
ಮರೆಯಲ್ಲಿ ಕುಲವ್ಯಸನ ಭ್ರಮೆಯವರರಿವಿನಲ್ಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಎಂಬರು./128
ಸರಿವಿಡಿಯೆ ಗುರುವಿಡಿಯೆ.
ಗುರುವಿಡಿದು ಲಿಂಗವಿಡಿಯೆ.
ಪರಿವಿಡಿಯೆ ಈ ಲೋಕದ ಬಳಕೆವಿಡಿಯೆ.
ಇಲ್ಲವೆಯ ತಂದೆನು ಬಲ್ಲವರು ಬನ್ನಿ ಭೋ!
ಶರಣಸತಿ ಲಿಂಗಪತಿಯೆಂಬುದ ಕೇಳಿ
ಉಂಟಾದುದ ಇಲ್ಲೆನಬಂದೆ.
ಇಲ್ಲದುದ ಉಂಟೆನಬಂದೆ.
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಕರ್ಮಿಗಳಿಗೆ
ನೆಟ್ಟನೆ ಗುರುವಿಲ್ಲೆನಬಂದೆ.
ಮುಟ್ಟಲರಿಯರು ಪ್ರಾಣಲಿಂಗವ.
ಅಟ್ಟಿ ಹತ್ತುವರೀ ಲೋಕದ ಬಳಕೆಯ
ಇಷ್ಟಲಿಂಗದ ಹಂಗು ಹರಿಯದ ಕಾರಣ
ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆನ ಬಂದೆ./129
ಸರ್ಪಂಗೆ ಪಿಕಂಗೆ ಒಪ್ಪದ ಮನೆ ಉಂಟೆ?
ಎನಗಾ ಹೆಚ್ಚು ಕುಂದೆಂಬ ಮಿಥ್ಯದ ಭಾವವಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./130
ಸರ್ವ ಲಯವು ತಾನೆ.
ಸರ್ವ ನಿಃಕಳಂಕ ಮಹಾಘನವಸ್ತುವು ತಾನೆ.
ನಿರ್ಮಳ ನಿರಾವರಣನು ತಾನೆ.
ನಿಗಮಾತೀತನು ತಾನೆ.
ನಿರಾಳ ಸುರಾಳವು ತಾನೆ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./131
ಸಾಧಕನವನೊಬ್ಬ ನೇತ್ರವಟ್ಟೆಯನುಟ್ಟುಕೊಂಡು
ಸೂತ್ರಧಾರಿಯನರಸುತ್ತ ಬಂದನಯ್ಯಾ!
ಕರೆಯಿರಯ್ಯಾ ಕರೆದು ತೋರಿಸಿರಯ್ಯಾ
ಕರೆಹಕ್ಕೆ ನೆರಹಕ್ಕೆ ಹೊರಗಾದನು,
ಹೋಗೋ ಬಾರೋ ಎಂದಲ್ಲಿಯೆ ಆಡಗಿತ್ತು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ./132
ಸಾರಂಗದ ತುದಿಯಲ್ಲಿ ಧಾರೋದ್ರಿಜವ ತುಂಬಿದರು.
ಮೇರು ಮಂದಿರದ ಮೇಲೆ ಮನೆಯ ಮಾಡಿದರಾರೋ?
ತಿದಿಯ ಹರಿವೆ, ಮನೆಯ ಸುಡುವೆ,
ನಿಲುವೆ ಹೊಸ ಪರಿಯರಿಯಾ!
ಎನ್ನ ಪರಿಯ ಹಿಂದೆ ಕೇಳಿದ್ದು
ಮನೆಯೊಳಗಣ ಬೂದಿಯ ಭಸ್ಮವಾಗಿ ಧರಿಸಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./133
ಸಾವಿರ ಪರಿಯಲಿ ಉದರವ ಹೊರೆವರೆ
ಸಾವರಲ್ಲದೆ ಸಮ್ಮಿಕರಾಗರಿದೇನೋ!
ಎಂತೆಂತು ಮಾಡಿದಡೆ ಅಂತಂತೆ ಲಯವು.
ಎಂತೆಂತು ನೋಡಿದಡೆ ಅಂತೆಂತು ಇಲ್ಲ.
ಇದೇನೊ ಇದೇನೋ! ಎಳಕುಳಿಜಾಲೆಯ ಕಳಾಕುಳ ಬಿಡದು,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಕಾರಣ./134
ಸುಳಿದಡೆ ಒಡಲಿಲ್ಲ, ನಿಂದಡೆ ನೆಳಲಿಲ್ಲ,
ನಡೆದಡೆ ಗಮನವಿಲ್ಲ, ನುಡಿದಡೆ ಶಬ್ದವಿಲ್ಲ.
ದಗ್ಧಪಟನ್ಯಾಯದ ಹಾಗೆ, ಉಂಡಡೆ ಉಪಾಧಿಯಿಲ್ಲ
ಉಣ್ಣದಿದ್ದಡೆ ಕಾಂಕ್ಷೆಯಿಲ್ಲ.
ಯಥಾಲಾಭ ಸಂತುಷ್ಟನಾಗಿ
ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ
ಅರಿವಿಲ್ಲ ಮರಹಿಲ್ಲ ತಾನೆಂಬ ನೆನಹಿಲ್ಲವಾಗಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಮುಂದೆ ಏನೂ ಎನಲಿಲ್ಲ, ನಿಲ್ಲು ಮಾಣು./135
ಸುಳುಹೆಂಬ ಸೂತಕವಡಗಿ,
ಅರಿವೆಂಬ ಮರಹು ನಷ್ಟವಾಗಿ,
ಅದು ಇದು ಎಂಬುದಿಲ್ಲ.
ಅದೇತರದೂ ಇಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು./136
ಸ್ಥಲನಲ್ಲ ಕುಳನಲ್ಲ ನಿಃಸ್ಥಲನಲ್ಲ!
ನಿರಾಧಾರ ನಿಶ್ಚಿಂತ ನಿಗಮಗೋಚರ ನಿಸ್ಸೀಮ ನಿರಾಲಂಬ
ಸರ್ವಶೂನ್ಯ ಸತ್ತು ಚಿತ್ತಾನಂದಾದಿಗಳಿಗೆ ನಿಲುಕುವನಲ್ಲ.
ತತ್ವಬ್ರಹ್ಮಾಂಡಾದಿ ಲೋಕಾಲೋಕಂಗಳ ಕಲ್ಪಿಸಿ ನುಡಿವವನಲ್ಲ.
ಇವೇನೂ ಇಲ್ಲದ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು./137
ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ.
ಚರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಇಷ್ಟಲಿಂಗ.
ಅರಿವಿನ ಮನದ ಕೊನೆಯಲ್ಲಿ ನಿತ್ಯನಿವಾಸವಾಗಿ
ಪೂಜಿಸಿಕೊಂಬುದು ವೀರಶೈವಲಿಂಗ
ಇಂತೀ ಲಿಂಗತ್ರಯದ ಆದಿ ಆಧಾರವನರಿಯದೆ
ಹೋದರಲ್ಲಾ ಹೊಲಬುದಪ್ಪಿ
ಇನ್ನಾರಿಗೆ ಹೇಳುವೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ/138
ಹಲವು ಬಣ್ಣದ ಹಕ್ಕಿ ಹಣ್ಣ ಮೆಲಬಂದಡೆ,
ಹಣ್ಣು ಹಕ್ಕಿಯ ನುಂಗಿ ಉಗುಳದಿನ್ನೆಂತೊ!
ಕಣ್ಣ ಕಾಣದ ಹಕ್ಕಿ ಹಣ್ಣ ಮೆಲಬಂದಡೆ,
ಹಣ್ಣು ಹಕ್ಕಿಯ ನುಂಗಿ ಉಗುಳದಿನ್ನೆಂತೊ!
ಸಣ್ಣ ಬಣ್ಣದ ಮಾತಿನ ಅಣ್ಣಗಳೆತ್ತ ಬಲ್ಲರೊ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದುದಾಗಿ./139
ಹಸಿದು ತಾರಕೆ ಊಟವ ಕೇಳಹೋದಡೆ
ಕೂಟವೆದ್ದು ಬಡಿದರು.
ಸಾಕಾರ ಮೊದಲು ಧಾತುಗೆಟ್ಟೆಯಲ್ಲಾ.
ಪರಶಿವ ಆತ್ಮನಾಗಿ ಇದೇತಕ್ಕೆ ಬಂದೆ ತನುವಿನಾಶೆಗಾಗಿ.
ಇದರಾಶೆಯ ಹೊಗದಿರು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./140
ಹಸೆಯಿಲ್ಲದ ಹಂದರದಲ್ಲಿ ನಿಬ್ಬಣವಿಲ್ಲದ ಮದುವೆಯ ಮಾಡಿ
ಮದುವಣಿಗನಿಲ್ಲದೆ ಸೇಸೆಯ ತುಂಬಿ
ಕಳವಳಗೊಂಡಿತು ಜಗವೆಲ್ಲ
ನಿಬ್ಬಣಿಗರು ಮದವಣಿಗನನರಿಯದೆ ಅಬ್ಬರದೊಳಗಿದ್ದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./141
ಹಾದಿಯ ಬೆಳ್ಳನ ಕಳ್ಳರು ತಾಕಿದಡೆ
ಇನ್ನಾರಿಗೆ ಮೊರೆಗೊಡುವ?
ತಾ ಸತ್ತ ಮತ್ತೆ ತನ್ನನರಿದವಂಗೆ
ಇನ್ನಾರಿಗೂ ಮಿಥ್ಯವೇಕೆ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು./142
ಹಿಂದೆ ಕೆಟ್ಟುದ ಮುಂದೆ ನೀನರಸುವೆ.
ಹಿಂದಕ್ಕೆ ನೀನಾರು ಹೇಳೆಲೆ ಮರುಳೆ!
ತಾ ಕೆಟ್ಟು ತನ್ನನರಸುವಡೆ ತಾನಿಲ್ಲ ತಾನಿಲ್ಲ.
ತಾನು ತಾನಾರೋ?
ಮುಂದಕ್ಕೆ ಮೊದಲಿಲ್ಲ, ಹಿಂದಕ್ಕೆ ಲಯವಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಬಯಲು./143
ಹುಟ್ಟಿದ ಮರ ನೆಟ್ಟ ಕಲ್ಲು
ಮತ್ತೇತರ ಇಷ್ಟದ ಒತ್ತಿದ ಲಿಂಗಮುದ್ರೆ ಇರಲಿಕ್ಕೆ?
ಕಿತ್ತುಕೊಂಡವ ದ್ರೋಹಿ ಎಂಬರು.
ದೃಷ್ಟದಲ್ಲಿ ಜಂಗಮಭಕ್ತರ ಕೊಲುತ್ತ
ಇಂತೀ ಉರುಳುಗಳ್ಳರ ಭಕ್ತರು ಜಂಗಮವೆಂದಡೆ ಒಪ್ಪನಯ್ಯಾ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./144
ಹೆಣ್ಣು ಹೊನ್ನು ಮಣ್ಣಿಗೆ ಹೊಡೆದಾಡುವನ್ನಬರ
ಅರುಹಿರಿಯರು ಎಂತಪ್ಪರೊ?
ತ್ರಿವಿಧ ಮಲಕ್ಕೆ ತ್ರಿವಿಧ ಅಮಲದಿಂದ ಮಲ ಹರಿದಲ್ಲದೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ./145
ಹೆಣ್ಣು ಹೊನ್ನು ಮಣ್ಣು ಕುರಿತು ಚರಿಸುವನ್ನಬರ ಉಭಯದ ಕೇಡು.
ವರ್ಮವನರಿಯದೆ ಮಾಡುವನ್ನಬರ ದ್ರವ್ಯದ ಕೇಡು.
ಇಂತೀ ಉಭಯದ ಭೇದವನರಿತು, ಚರಿಸಿ ಮಾಡಿ ಅರಿಯಬೇಕು,
ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ./146
ಹೊರಗಣ ಮಲತ್ರಯಕ್ಕೆ ಒಳಗಣ ಅರಿವ ನೀಗಾಡಲೇತಕ್ಕೆ?
ಅಲ್ಪ ಸುಖಕ್ಕೆ ಮಚ್ಚಿ ಕುಕ್ಕುರನಂತೆ ಸಿಕ್ಕಿಸಾಯಲೇತಕ್ಕೆ?
ನಿಶ್ಚಯವಾಗಿ ತಾ ಬಂದ ಆದಿ ಅನಾದಿಯೆಂಬ ವಸ್ತುವ ತಿಳಿದು ನೋಡಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗವನರಿಯಬಲ್ಲಡೆ ಇಲ್ಲ ಇಲ್ಲ ಎಂದೆ./147