Categories
ವಚನಗಳು / Vachanagalu

ಜಕ್ಕಣ್ಣಯ್ಯನ ವಚನಗಳು

ಅಂಗಕಳೆ ಲಿಂಗದಲ್ಲಿ ಅರತು, ಲಿಂಗಕಳೆ ಭಾವದಲ್ಲಿ ಅರತು,
ಆ ಭಾವಕ್ಕೆ ಬೆರಗಾಗಿ ತೋರುತಿದೆ ಒಂದು ಲಿಂಗ.
ಆ ಲಿಂಗದ ನೆನಹಿನಲ್ಲಿ ಅಡಗಿಪ್ಪ ಶರಣರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./1
ಅಂಗಕೆ ಆರುದಿನ, ಲಿಂಗಕೆ ಮೂರುದಿನ,
ಸಂಬಂಧಕೆ ಒಂದೇ ದಿನ ನೋಡಾ.
ಅಂಗಲಿಂಗಸಂಬಂಧವೆಂಬ ತ್ರಿವಿಧಭೇದವನರಿತು
ಉಪಮಾತೀತಲಿಂಗದಲ್ಲಿ ಕೂಡಿ
ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./2
ಅಂಗಕೆ ಗುರುವಾದನಯ್ಯ, ಪ್ರಾಣಕೆ ಲಿಂಗವಾದನಯ್ಯ,
ಭಾವಕೆ ಜಂಗಮವಾದನಯ್ಯ.
ಆ ಜಂಗಮದ ಪರಮಪ್ರಸಾದವ ಸ್ವೀಕರಿಸಬಲ್ಲಾತನೆ
ಅನಾದಿಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./3
ಅಂಗಕ್ಕೆ ಆಚಾರ ನೆಲೆಗೊಂಡಲ್ಲದೆ
ಲಿಂಗ ಸಾಧ್ಯವಾಗದು ನೋಡಾ.
ಲಿಂಗ ಸಾಧ್ಯವಾದಲ್ಲದೆ
ಜಂಗಮದ ಪ್ರಸಾದ ಸಾಧ್ಯವಾಗದು ನೋಡಾ.
ಜಂಗಮಪ್ರಸಾದ ಸಾಧ್ಯವಾದಲ್ಲದೆ
ಶುದ್ಧ ಸಿದ್ಧ ಪ್ರಸಿದ್ಧ ಸಾಧ್ಯವಾಗದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./4
ಅಂಗಕ್ಕೆ ಆರುದಿನವೆಂಬುದ ನೀನು ಬಲ್ಲೆಯಯ್ಯಾ?
ಲಿಂಗಕ್ಕೆ ಮೂರು ದಿನವೆಂಬುದ ನೀನು ಬಲ್ಲೆಯಯ್ಯಾ?
ಸಂಬಂಧಕ್ಕೆ ಒಂದು ದಿನವೆಂಬುದ ನೀನು ಬಲ್ಲೆಯಯ್ಯಾ?
ನಿನ್ನಿಂದ ಸಕಲ ಜಗಂಗಳು ಆದುದ ನೀನೇ ಬಲ್ಲೆಯಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./5
ಅಂಗಕ್ಕೆ ಲಿಂಗವೇ ಆಧಾರ, ಲಿಂಗಕ್ಕೆ ಸಂಬಂಧವೆ ಆಧಾರ,
ಸಂಬಂಧಕ್ಕೆ ಪರಬ್ರಹ್ಮವೆ ಆಧಾರವಾಗಿ
ತಾನು ತಾನಾಗಿಪ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./6
ಅಂಗಗುಣಾದಿಗಳನಳಿದು, ಲಿಂಗಸಾವಧಾನಿಯಾಗಿ,
ಮಂಗಳಾತ್ಮಕನ ಕೂಡಿ, ಮಂಗಳಮಯವನೈದಬಲ್ಲಾತನೆ
ನಿಜಲಿಂಗೈಕ್ಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ./7
ಅಂಗಡಿಯ ರಾಜಬೀದಿಯಲ್ಲಿ ಶಿಶುವಿಪ್ಪುದ ಕಂಡೆನಯ್ಯ.
ಆ ಶಿಶುವಿಂಗೆ ಮೂವರು ಮಕ್ಕಳು ಹುಟ್ಟಿದರು ನೋಡಾ !
ಈ ಮಕ್ಕಳ ಕೈ ಬಾಯೊಳಗೆ ಮೂರು ಲೋಕಂಗಳೆಲ್ಲ
ನಚ್ಚುಮಚ್ಚಾಗಿಪ್ಪವು ನೋಡಾ !
ಅದು ಕಾರಣ, ಆದಿಯಲ್ಲಿ ಗುರುನಿರೂಪಣವಂ ಪಡೆದು
ಚಿತ್ತಾಜ್ಞೆಪ್ರಭೆದೋರಲು ಮೂರು ನಚ್ಚುಮಚ್ಚುಗಳು ಕರಗಿ
ಮೂರು ಮಕ್ಕಳು ಬಿಟ್ಟುಹೋದವು ನೋಡಾ !
ಆ ಶಿಶುವಿಂಗೆ ನಿರಾಳವೆಂಬ ದಾರಿಯ ತೋರಿ, ಊರಿಂಗೆ ಹೋಗಲೊಡನೆ
ಅಲ್ಲಿ ಮಂಜಿನ ಕೊಡದ ಅಗ್ಗವಣಿಯ ಕಂಡು
ಲಿಂಗಕೆ ಮಜ್ಜನವ ನೀಡಿ, ನಿರಾವಲಂಬಲಿಂಗದೊಳು ಬೆರೆದು
ನಿಃಪ್ರಿಯವೆನಿಸಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./8
ಅಂಗದ ಕಳವಳವ ಲಿಂಗದಲ್ಲಿ ಅಳಿದು,
ಮನದ ಭ್ರಾಂತಿಯ ಭಾವದಲ್ಲಿ ಅಳಿದು,
ಇದು ಕಾರಣ, ಶಿವಜ್ಞಾನಿಯಾದ ಶರಣನು
ತನ್ನತಾನೇ ಬಲ್ಲನಯ್ಯ
ಝೇಂಕಾರ ನಿಜಲಿಂಗಪ್ರಭುವೆ./9
ಅಂಗದ ಗುಣಾದಿಗಳನಳಿದು ಲಿಂಗಸಂಗಿಯಾಗಿ
ಮಂಗಳಪ್ರಭೆಯಲ್ಲಿ ಕೂಡಿ
ಹಿಂಗದೆ ಪರಕ್ಕೆ ಪರವಾದ ಲಿಂಗವನಾಚರಿಸಬಲ್ಲಾತನೆ
ನಿಮ್ಮ ಶರಣನು ನೋಡಾ ಝೇಂಕಾರ ನಿಜಲಿಂಗಪ್ರಭುವೆ./10
ಅಂಗದ ಗುಣಾದಿಗಳನಳಿದು, ಭಾವ ಬೆಳಗಿನೊಳು ಕೂಡಿ,
ತ್ರಿಕೂಟದಲ್ಲಿ ನಿಂದು, ಪರಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು,
ಶಿಖಾಚಕ್ರವೆಂಬ ಮೇರುವೆಯಂ ಹತ್ತಿ,
ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯ ನೋಡಿ
ನಿರಾವಯವೆಂಬ ಕರಸ್ಥಲದ ಮೇಲೆ ನಿಃಶಬ್ದ ನಿರಾಳಲಿಂಗವಿಪ್ಪುದು ನೋಡಾ.
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./11
ಅಂಗದ ಮೇಲೆ ಶಿವಲಿಂಗವ ಧರಿಸಿ
ಲಿಂಗ ಜಂಗಮದ ಪ್ರಸಾದವ ಕೊಂಡು
ನಿರ್ಧರವಿಲ್ಲದ ಅನ್ಯದೈವಂಗಳಿಗೆ ಎರಗುವ ಭಂಗಹೀನರ
ಎನಗೊಮ್ಮೆ ತೋರದಿರಯ್ಯ,
ಝೇಂಕಾರ ನಿಜಲಿಂಗಪ್ರಭುವೆ./12
ಅಂಗದ ಮೇಲೆ ಶಿವಲಿಂಗವ ನೆಲೆಗೊಂಡು,
ಲಲಾಟದಲ್ಲಿ ಶ್ರೀ ವಿಭೂತಿಯಂ ಧರಿಸಿ,
ಗರಳದಲ್ಲಿ ರುದ್ರಾಕ್ಷಿಯ ಧರಿಸಿ, ಓಂ ನಮೋ ಶಿವಾಯವೆಂಬ ಮಂತ್ರ
ಅಷ್ಟಾವರಣಯುಕ್ತನಾಗಿ ಇರಬಲ್ಲವನೆ ನಿಮ್ಮ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./13
ಅಂಗದೊಳಗಿಪ್ಪ ಲಿಂಗವನು ಸಹಜಸಮ್ಯಕ್ಜ್ಞಾನದಿಂದ ತಿಳಿದು,
ಏಕೋಭಾವದಲ್ಲಿ ನಿಂದು, ನಿರ್ವಿಕಲ್ಪ ನಿತ್ಯಾತ್ಮಕವಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./14
ಅಂಗದೊಳಗೊಂದು ಮಂಗಳದ ಹಕ್ಕಿ ಕುಳಿತಿಪ್ಪುದ ಕಂಡೆನಯ್ಯ.
ಆ ಹಕ್ಕಿಯ ಹಿಡಿದು ಹೋಗದ ಮುನ್ನ
ಅದು ಗಗನಕ್ಕೆ ಹಾರಿತ್ತು ನೋಡಾ!
ಹಕ್ಕಿ ಹೋಯಿತ್ತು ಲಿಂಗದ ಗುಡಿಗೆ.
ಮತ್ತೆ ಕಂಡನು ಒಬ್ಬ ತಳವಾರನು.
ಆ ತಳವಾರನು ಗದೆಯ ತಕ್ಕೊಂಡು ಇಡಲೊಡನೆ
ಮಂಗಳನೆಂಬ ಹಕ್ಕಿ ಬಿತ್ತು ನೋಡಾ!
ಇದ ನೀವಾರಾದಡೆ ಹೇಳಿರಯ್ಯ,
ನಾನಾದರೆ ಅರಿಯೆನು ಝೇಂಕಾರ ನಿಜಲಿಂಗಪ್ರಭುವೆ./15
ಅಂಗದೊಳಹೊರಗಿಪ್ಪ ಲಿಂಗವನು ಅರಿತು
ಆ ಲಿಂಗದಲ್ಲಿ ಅಂಗವನಳಿದು ಲಿಂಗಸಂಗಿಯಾಗಿ ಇರಬಲ್ಲಡೆ
ಆತನೆ ನಿರಂಜನ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./16
ಅಂಗನೆಯರು ಆರುಮಂದಿ, ಸಂಗಸಮರಸದಿಂದ
ಹಿಂಗದೆ ಲಿಂಗಾರಾಧನೆಯಂ ಮಾಡಿ, ಮಂಗಳಪ್ರಭೆಯಲ್ಲಿ ನಿಂದು,
ಅತ್ತತ್ತಲೆ ನಿಸ್ಸಂಗ ನಿರಾಳ ತಾನುತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./17
ಅಂಗಪಟ್ಟಣದೊಳಗೆ ಭೃಂಗನಾಟ್ಯವನಾಡಿ,
ಸಂಗೀತ ಸ್ವರಂಗಳ ತಿಳಿದು, ಸಂಗಸುಖದೊಳುಳಿದು,
ನಿಸ್ಸಂಗವಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./18
ಅಂಗಪ್ರಕೃತಿಯನಳಿದು, ಲಿಂಗಧ್ಯಾನವ ಮಾಡಿ,
ಮಂಗಳಮಯದಲ್ಲಿ ಕೂಡಿ,
ನಿರ್ಮಲಜ್ಞಾನಿಯಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./19
ಅಂಗಪ್ರಕೃತಿಯನಳಿದು, ಲಿಂಗಸಮರಸವಾಗಿ,
ಹಿಂಗದೆ ಓಂಕಾರಲಿಂಗವ ಜಪಿಸಿ
ನಿಸ್ಸಂಗಿಯಾಗಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./20
ಅಂಗಲಿಂಗ ಸಮರಸವಾದಲ್ಲದೆ,
ಸಂಗವ ಮಾಡನಯ್ಯ ನಿಮ್ಮ ಶರಣನು.
ಶ್ರೋತ್ರಲಿಂಗ ಸಮರಸವಾದಲ್ಲದೆ,
ಶಬ್ದಾದಿಗಳ ಕೇಳನಯ್ಯ ನಿಮ್ಮ ಶರಣನು.
ತ್ವಕ್ಕುಲಿಂಗ ಸಮರಸವಾದಲ್ಲದೆ,
ಸ್ಪರುಶನಾದಿಗಳ ಮಾಡನಯ್ಯ ನಿಮ್ಮ ಶರಣನು.
ನೇತ್ರಲಿಂಗ ಸಮರಸವಾದಲ್ಲದೆ,
ರೂಪಾದಿಗಳ ನೋಡನಯ್ಯ ನಿಮ್ಮ ಶರಣನು.
ಜಿಹ್ವೆಲಿಂಗ ಸಮರಸವಾದಲ್ಲದೆ,
ಷಡುರುಚಿಯ ಕೇಳನಯ್ಯ ನಿಮ್ಮ ಶರಣನು.
ಪ್ರಾಣಲಿಂಗ ಸಮರಸವಾದಲ್ಲದೆ,
ಗಂಧವ ಕೇಳನಯ್ಯ ನಿಮ್ಮ ಶರಣನು.
ಇದು ಕಾರಣ, ಇಂತಪ್ಪ ಭೇದವನರಿತು,
ಮಹಾಲಿಂಗದ ಬೆಳಗಿನೊಳು ಕೂಡಿ
ಪರಿಪೂರ್ಣತ್ವದಿಂದ ಪರಾಪರಂ ನಾಸ್ತಿಯಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./21
ಅಂಗಲಿಂಗಸಂಬಂಧವ ಗರ್ಭಿಕರಿಸಿಕೊಂಡು
ಜೀವಾತ್ಮ ಅಂತರಾತ್ಮ ಪರಮಾತ್ಮವೆಂಬ ಭೇದವನರಿತು
ಅತ್ತತ್ತಲೆ ನಿಶ್ಚಿಂತ ನಿರಾಕುಳಲಿಂಗದಲ್ಲಿ
ನಿರ್ವಿಕಾರನಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./22
ಅಂಗಲಿಂಗಸಮರಸವಾದ ಬಳಿಕ ಕರಣದ ಹಂಗಿನ್ನ್ಯಾತಕಯ್ಯ?
ಮಹಾಜ್ಞಾನಸಂಬಂಧವಾದ ಬಳಿಕ ಮಾತಿನ ಹಂಗಿನ್ನ್ಯಾತಕಯ್ಯ?
ಭಾವನಿರ್ಭಾವವಾದ ಬಳಿಕ ನಾದಬಿಂದುಕಲೆಯ ಹಂಗಿನ್ನ್ಯಾತಕಯ್ಯ?
ನಿಷ್ಕಲಲಿಂಗದಲ್ಲಿ ತಾನುತಾನಾದ ಬಳಿಕ ಯಾತರ ಹಂಗಿನ್ನ್ಯಾತಕಯ್ಯ
ಝೇಂಕಾರ ನಿಜಲಿಂಗಪ್ರಭುವೆ?/23
ಅಂಗವಿಲ್ಲದ ನಾರಿಯ ಮನೆಯಲ್ಲಿ
ಆರುಮೂರು ಶಿವಾಲಯವ ಕಂಡೆನಯ್ಯ.
ಆರುಮೂರು ಶಿವಾಲಯದೊಳಗೆ
ಆರುಮೂರು ಲಿಂಗವಿಪ್ಪುವು ನೋಡಾ.
ಆರುಮೂರು ಲಿಂಗದ ಭೇದವನರಿತು
ಅಂಗವಿಲ್ಲದ ನಾರಿಯ ನೆರೆದು, ನಿಸ್ಸಂಗಿ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./24
ಅಂಗವಿಲ್ಲದ ನಾರಿಯು ಸಂಗವಿಲ್ಲದ ಪುರುಷನ ನೆರೆದು
ಸಕಲ ಜಗಂಗಳ ಗರ್ಭಿಕರಿಸಿಕೊಂಡು, ಪರವಶದಲ್ಲಿ ನಿಂದು,
ಪರಕೆಪರವಾದ ಸೋಜಿಗವ ನಾನೇನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./25
ಅಂಗವಿಲ್ಲದ ಪುರುಷನು ಲಿಂಗಾರ್ಚನೆಯಂ ಮಾಡಿ,
ಸಂಗಸಂಯೋಗದಲ್ಲಿ ನಿಂದು, ಮಂಗಳಪ್ರಭೆಯಲ್ಲಿ ಕೂಡಿ,
ಅಖಂಡತೇಜೋಮಯನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./26
ಅಂಗವಿಲ್ಲದ ಬಾಲೆಯು ಅಂಗಳದೊಳಗೆ ಕುಳಿತು
ಮಂಗಳಾರತಿಯ ಅಂಗಲಿಂಗ ಸಂಯೋಗವೆಂಬ ಲಿಂಗಕ್ಕೆ
ಬೆಳಗುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./27
ಅಂಗವಿಲ್ಲದ ಹಂಸಗೆ ಪಾದವೊಂದು, ಮುಖ ಮೂರು, ರೆಕ್ಕೆ ಆರು,
ಮೂವತ್ತಾರು ಗರಿಗಳಿಪ್ಪವು ನೋಡಾ.
ಆರುಮೂರು ದೇಶ ಮೀರಿ ನಿಂದು, ನಿರಾಲಂಬಲಿಂಗವ ಕೂಡಲಾಗಿ,
ಅಂಗವಿಲ್ಲದ ಹಂಸ ಉದಯದೋರಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./28
ಅಂಗವೆಂಬ ಗದ್ದುಗೆಯ ಮೇಲೆ
ಸಂಗಮೇಶ್ವರನೆಂಬ ಲಿಂಗವ ಕಂಡೆನಯ್ಯ.
ಆ ಲಿಂಗದ ಸುಳುವಿನಲ್ಲಿ ಮೂವರ ಕಂಡೆನಯ್ಯ.
ಒಬ್ಬ ಸತಿಯಳು ಇಪ್ಪತ್ತೈದು ಗ್ರಾಮಂಗಳ ಮೀರಿ
ಸಂಗಮೇಶ್ವರನೆಂಬ ಲಿಂಗವ ಪೂಜಿಸುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./29
ಅಂಗವೆಂಬ ದೈಗುಲದೊಳಗೆ ಒಬ್ಬ ಸತಿಯಳು ನಿಂದು
ಚಿಲ್ಲಿಂಗಾರ್ಚನೆಯಂ ಮಾಡಿ
ಚಿದ್ಘನಸ್ವರೂಪವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./30
ಅಂಗವೆಂಬ ಪಟ್ಟಣದೊಳಗೆ
ಮಂಗಳವಾದ ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಒಬ್ಬ ಚಿಚ್ಫಕ್ತಿ ಉದಯವಾದಳು ನೋಡಾ.
ಆ ಚಿಚ್ಫಕ್ತಿಯ ಸಂಗದಿಂದ ಪರಬ್ರಹ್ಮವ ಕೂಡಿ
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./31
ಅಂಗವೆಂಬ ಭೂಮಿಯಲ್ಲಿ ಸಂಗಸಮರಸವೆಂಬ ಪುರುಷನು
ಹಿಂಗದೆ ಪರಮಾನಂದ ಪ್ರಭೆಯಲ್ಲಿ ಕೂಡಿ
ಮಂಗಳಮಯವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./32
ಅಂಗವೆಂಬ ಶಿವಾಲಯದೊಳಗೆ
ಆನಾದಿಲಿಂಗವು ಚತುರ್ದಶ ಭುವನಂಗಳ ನುಂಗಿಕೊಂಡು
ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ.
ಆ ಸುಳುವಿನ ಭೇದವನರಿತು ಲಿಂಗಾರ್ಚನೆಯಂ ಮಾಡಿ
ಕೂಡಿ ಸಮರಸವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./33
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬದ ಮೇಲೆ
ಆಕಾಶವೆಂಬ ಚಪ್ಪರವನಿಕ್ಕಿ, ಮಹಾಜ್ಞಾನವೆಂಬ ಗದ್ದುಗೆಯ ನೆಲೆಯಂಗೊಳಿಸಿ,
ಚಂದ್ರ ಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ,
ನಿಃಕಲಪರಬ್ರಹ್ಮಲಿಂಗಕ್ಕೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./34
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಗುಣಂಗಳವಿಡಿದು
ಆತ್ಮನೆಂಬ ಬೆಳಗಿನೊಳು ನಿಂದು
ನಿಃಕಲಪರಬ್ರಹ್ಮಲಿಂಗವನಾಚರಿಸುವ ಶರಣನ
ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ./35
ಅಂತಃಕರಣಚತುಷ್ಟಯಂಗಳೆಂಬ
ನಾಲ್ಕು ಕಂಬದ ಗುಡಿಯ ಶಿಖರದ ಮೇಲೆ
ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತಯ್ಯ.
ಆ ಬೆಳಗಿನ ಸುಳುಹ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./36
ಅಂತರಂಗ ಬಹಿರಂಗ ಭೇದವನರಿತು
ಮಹಾಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಮಹಾಶರಣಂಗೆ
ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./37
ಅಂತರಂಗ ಬಹಿರಂಗ ಶುದ್ಧನಾದ ಶರಣನ ದಿಟಪುಟವ ನೋಡಿರಯ್ಯ.
ಅಂತಪ್ಪ ಶರಣನ ಕಂಡು ನಮೋ ನಮೋ ಎನುತಿರ್ದೆಯಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./38
ಅಂತರಂಗ ಬೆಳಗಿನ ಸುಳುವನರಿತು ಶಾಂತಲಿಂಗವ ಕೂಡಿ
ನಾನು ನೀನೆಂಬ ಉಭಯವನಳಿದು
ಲಿಂಗೈಕ್ಯದಲ್ಲಿ ನಿಂದ ನಿರ್ಮಳಜ್ಞಾನಿಯ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./39
ಅಂತರಂಗದ ಬೆಳಗಿನೊಳು ನಿಂತಾತನೆ ನಿರ್ಮಳಜ್ಞಾನಿ ನೋಡಾ.
ಆ ನಿರ್ಮಳಜ್ಞಾನಿಯ ಸಂಗದಿಂದ
ಅಗಮ್ಯ ಅಗೋಚರ ಅಘಟಿತ ಅಪ್ರಮಾಣ ಲಿಂಗವು
ತೋರಲುಪಟ್ಟಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./40
ಅಂತರಂಗದ ಬೆಳಗಿನೊಳು ಸದಮಲಜ್ಞಾನವನರಿತು,
ನಿತ್ಯವಿಡಿದು, ಆನಂದಪ್ರಭೆಯೊಳು ಕೂಡಿ,
ಚಿತ್ತದಿಂದ ಸ್ವಾನುಭವದೊಳು ಮೈಮರೆದು
ಅತ್ತತ್ತಲೆ ಘನಕ್ಕೆ ಘನವನಾಚರಿಸಿ ನಿರ್ಮುಕ್ತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./41
ಅಂತರಂಗದ ಬೆಳಗಿನೊಳು ಸದಮಲಜ್ಞಾನವನರಿತು
ತಾನು ತಾನಾಗಿ ಪರಕೆ ಪರವನಾಚರಿಸಬಲ್ಲಾತನೆ
ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ./42
ಅಂತರಂಗದ ಸುಳುವಿನ ಭೇದವ ಚಿತ್ತವೆಂಬ ಹಸ್ತದಲ್ಲಿ ಹಿಡಿದು,
ಈಡಾಪಿಂಗಳನಾಳದಲ್ಲಿ ಸುಷಮ್ನಸ್ವರವ ಬಲಿದು
ಶಾಂತಿಸಜ್ಜನಿತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./43
ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು,
ಬಹಿರಂಗದಲ್ಲಿ ಹಳಿದಾಡುವರೇನಯ್ಯ ?
ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು
ಅಂತರಂಗದಲ್ಲಿ ಹಳಿದಾಡುವರೇನಯ್ಯ ?
ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ
ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು
ಇಷ್ಟಲಿಂಗಕ್ಕೆ ಅರ್ಪಿಸಿ, ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ.
ಅಂತರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು
ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ.
ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು
ಝೇಂಕಾರ ನಿಜಲಿಂಗಪ್ರಭುವೆ./44
ಅಂತರಂಗದಲ್ಲಿ ಜ್ಞಾನಸಂಬಂಧವಾದ ಶರಣಂಗೆ
ಅಜ್ಞಾನದ ಭಯವುಂಟೇನಯ್ಯ ?
ಅಜ್ಞಾನಭಯವಳಿದು ನಿಶ್ಚಿಂತ ನಿರಾಕುಳಲಿಂಗದಲ್ಲಿ ಕೂಡಬಲ್ಲಾತನೆ
ಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ./45
ಅಂತರಂಗದಲ್ಲಿ ವಸ್ತುವ ಕಂಡೆನಯ್ಯ.
ಬಹಿರಂಗದಲ್ಲಿ ಆಚಾರವಿರಬೇಕಯ್ಯ.
ಆ ಆಚಾರವಿಡಿದು
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಬೇಕಯ್ಯ.
ಆ ಪಾದೋದಕ ಪ್ರಸಾದವನರಿತು
ಆ ವಸ್ತುವಿನಲ್ಲಿ ಕೂಡಬಲ್ಲಾತನೆ
ಒಳಗೆ ಲಿಂಗಮಯ, ಹೊರಗೆ ಲಿಂಗಮಯ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./46
ಅಂತರಂಗದಲ್ಲಿ ಶುದ್ಧವಾದ ಶಿವಭಕ್ತನು ನಿತ್ಯವಿಡಿದು,
ನಿರಾಲಂಬಲಿಂಗವನಾಚರಿಸಿ,
ನಿಶ್ಚಿಂತ ನಿರಾಕುಳ ನಿರ್ಭರಿತನಾದ ಭಕ್ತನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./47
ಅಂತಿರ್ದ ಬ್ರಹ್ಮದ ಅಂಗದಲ್ಲಿ ಜ್ಞಾನಚಿತ್ತು ಉದಯಿಸಿತ್ತು ನೋಡಾ.
ಆ ಜ್ಞಾನಚಿತ್ತುವಿನಿಂದ ಪರಶಿವರು ಹುಟ್ಟಿದರು ನೋಡಾ.
ಆ ಪರಶಿವರು ಹುಟ್ಟಿದಲ್ಲಿಗೆ ಸದಾಶಿವರು ಹುಟ್ಟಿದರು.
ಆ ಸದಾಶಿವರು ಹುಟ್ಟಿದಲ್ಲಿಗೆ ಈಶ್ವರರು ಹುಟ್ಟಿದರು.
ಆ ಈಶ್ವರರು ಹುಟ್ಟಿದಲ್ಲಿಗೆ ರುದ್ರರು ಹುಟ್ಟಿದರು.
ಆ ರುದ್ರರು ಹುಟ್ಟಿದಲ್ಲಿಗೆ ವಿಷ್ಣುಗಳು ಹುಟ್ಟಿದರು.
ಆ ವಿಷ್ಣುಗಳು ಹುಟ್ಟಿದಲ್ಲಿಗೆ ಬ್ರಹ್ಮರು ಹುಟ್ಟಿದರು.
ಆ ಬ್ರಹ್ಮರು ಹುಟ್ಟಿದಲ್ಲಿಗೆ ಲೋಕಾದಿಲೋಕಂಗಳು
ಸಚರಾಚರಂಗಳು ಹುಟ್ಟಿದವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./48
ಅಂಬರದ ಮನೆಯೊಳಗೆ ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ.
ಆಕೆಯ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಐದಂಗವ ಗರ್ಭಿಕರಿಸಿಕೊಂಡು
ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./49
ಅಂಬರದ ಮನೆಯೊಳಗೆ ಸಾವಿರೆಸಳಮಂಟಪವ ಕಂಡೆನಯ್ಯ!
ಆ ಮಂಟಪದೊಳಗೆ ಒಬ್ಬ ಸತಿಯಳು ನಿಂದು,
ಐವರ ಕೂಡಿಕೊಂಡು, ನಿರಂಜನದೇಶಕೆ ಹೋಗಿ
ನಿರ್ವಿಕಲ್ಪ ನಿತ್ಯನಿರಾಳವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ/50
ಅಂಬರದ ಮನೆಯೊಳಗೆ ಸ್ವಯಂಭೂಲಿಂಗವ ಕಂಡೆ ನೋಡಾ!
ಆ ಲಿಂಗದೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ!
ಆ ಬೆಳಗಿನೊಳು ಕೂಡಿ ತಾನು ತಾನಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./51
ಅಂಬರದ ಮನೆಯೊಳಗೆ
ತುಂಬಿತೋರುವ ಶಂಭುಲಿಂಗವ ಕಂಡೆನಯ್ಯ.
ಆ ಲಿಂಗದ ಕಿರಣದೊಳಗೆ ಅನಂತಕೋಟಿ ಚಂದ್ರಸೂರ್ಯಾದಿಗಳು
ಅಡಗಿಪ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./52
ಅಖಿಳಕೋಟಿ ಬ್ರಹ್ಮಾಂಡಗಳಲ್ಲಿ ಪರಾತ್ಪರೈಕ್ಯವಾದ ಲಿಂಗವು
ತಾನೊಂದೆ ನೋಡಿರಯ್ಯ.
ಆ ಲಿಂಗವನು ತನ್ಮಾರ್ಗದಿಂದ ಕಂಡು ನಿಶ್ಚೈಸಿ
ಆ ಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಮಹಾಶರಣಂಗೆ
ಇಹಲೊಕವೆಂದಡೇನಯ್ಯ? ಪರಲೋಕವೆಂದಡೇನಯ್ಯ?
ಇಹಪರಗಳಿಂದತ್ತತ್ತ ತಾನು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./53
ಅಗಮ್ಯ ಅಗೋಚರ ಅಪ್ರಮಾಣಲಿಂಗದಲ್ಲಿ
ಲಿಂಗಸಂಗಿಯಾದ ಮಹಾಶರಣರ ಪಾದವ ಹಿಡಿದು
ಆನು ಬದುಕಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./54
ಅಗ್ನಿಗಿರಿಯ ಪಟ್ಟಣದ ಚಂದ್ರಗಿರಿಯ ಪಟ್ಟಣದ ನಡುವೆ
ಎರಡೆಸಳ ಸ್ಥಾವರ ಗದ್ದುಗೆಯ ಕಂಡೆನಯ್ಯ.
ಆ ಗದ್ದುಗೆಯ ಮೇಲೆ ಸ್ಫಟಿಕವರ್ಣದ ಮೂರ್ತಿ
ನೆಲೆಯಂಗೊಂಡಿರ್ಪನು ನೋಡಾ.
ಆ ಸ್ಫಟಿಕವರ್ಣದಮೂರ್ತಿಯ ಕೂಡಿ
ಅಗ್ನಿಗಿರಿಯ ಪಟ್ಟಣಮಂ ಹೊಗಲು,
ಅಲ್ಲಿ ಆಚಾರಲಿಂಗದೇವರು, ಗುರುಲಿಂಗದೇವರು,
ಶಿವಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ.
ಅವರಿಗೆ ಸೂಚನೆಯ ಮುಟ್ಟಿಸಲು
ಆಚಾರಲಿಂಗದೇವರು ನಾಶಿಕಾಗ್ರದಲ್ಲಿ ನೆಲೆಯಂಗೊಂಡರು.
ಗುರುಲಿಂಗದೇವರು ಜಿಹ್ವಾಗ್ರದಲ್ಲಿ ನೆಲೆಯಂಗೊಂಡರು.
ಶಿವಲಿಂಗದೇವರು ನೇತ್ರಸ್ವಯದಲ್ಲಿ ನೆಲೆಯಂಗೊಂಡರು.
ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ
ಚಂದ್ರಗಿರಿಯ ಪಟ್ಟಣಮಂ ಪೊಗಲು
ಅಲ್ಲಿ ಜಂಗಮಲಿಂಗದೇವರು, ಪ್ರಸಾದಲಿಂಗದೇವರು,
ಮಹಾಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ.
ಅವರಿಂಗೆ ಸೂಚನೆಯಂ ಮುಟ್ಟಿಸಲು,
ಜಂಗಮಲಿಂಗದೇವರು ತ್ವಕ್ಕಿನ ಸ್ವಯದಲ್ಲಿ ನೆಲೆಯಂಗೊಂಡಿರ್ಪರು.
ಪ್ರಸಾದಲಿಂಗದೇವರು ಶ್ರೋತ್ರಸ್ವಯದಲ್ಲಿ ನೆಲೆಯಂಗೊಂಡಿರ್ಪರು.
ಮಹಾಲಿಂಗದೇವರು ಭಾವಸ್ವಯದಲ್ಲಿ ನೆಲೆಯಂಗೊಂಡಿರ್ಪರು.
ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ,
ಅಗ್ನಿಗಿರಿಯಪಟ್ಟಣ ಚಂದ್ರಗಿರಿಯ ಪಟ್ಟಣದ
ಮುಂದಳ ದಿಕ್ಕಿನಲ್ಲಿ ಸಾವಿರೆಸಳಮಂಟಪ ಕಂಡೆನಯ್ಯ.
ಆ ಮಂಟಪದೊಳಗೆ ಮಹಾಜ್ಞಾನಪ್ರಕಾಶವು ಹೊಳೆವುತಿರ್ಪುದು ನೋಡಾ.
ಆ ಬೆಳಗಿನೊಳು ಕೂಡಿ ತಾನುತಾನಾಗಿರ್ಪನಯ್ಯ
ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು./55
ಅಜನಸ್ಥಾನಗಳಿಂದ ನಾಭಿಯ ಪವನವತ್ತಿ
ನಾಶಿಕಾಗ್ರದಲ್ಲಿ ನಿಂದು, ರವಿ ಶಶಿಯ ಬೆಳಗನೊಳಕೊಂಡು,
ಉನ್ಮನಿಯ ಸ್ಥಾನದಲ್ಲಿ ನಿಂದು, ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./56
ಅಜಹರಿಸುರನಾರದರು ಮೊದಲಾದವರಿಂಗೆ
ಶಿವಜ್ಞಾನ ಅಗೋಚರವೆನಿಸಿತ್ತು ನೋಡಾ.
ಸ್ವಯಜ್ಞಾನ ಉದಯವಾದ ಶರಣಂಗೆ
ಆ ಶಿವಜ್ಞಾನ ಘಟಿಸುವುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./57
ಅಜ್ಞಾನವೆಂಬ ಕರ್ಮಕೋಟಲೆಯ ಹರಿದು
ಸುಜ್ಞಾನವೆಂಬ ಪಥದೊಳು ಕೂಡಿ
ಘನಕೆಘನವಾದ ಲಿಂಗದೊಳು ಆಚರಿಸಬಲ್ಲಡೆ
ಆತನೆ ನಿರ್ಮುಕ್ತ ಕಾಣಾ ಝೇಂಕಾರ ನಿಜಲಿಂಗಪ್ರಭುವೆ./58
‘ಅಣೋರಣಿಯಾನ್ ಮಹತೋಮಹೀಯಾನ್’ ಎಂಬ ಶ್ರುತಿಗಳಿಲ್ಲದಂದು,
ನಿರಾಮಯಲಿಂಗವು ತಾನೇ ನೋಡಾ.
ಆ ಲಿಂಗವು ನೆನೆದ ನೆನಹು ಒಂದೇ ಮೂರು ತೆರನಾಯಿತ್ತು;
ಮೂರೇ ಆರು ತೆರನಾಯಿತ್ತು.
ಆರು ಮೂರರ ಭೇದವನು ಮಹಾಜ್ಞಾನದಿಂದ ತಿಳಿದು
ನಿರಪೇಕ್ಷಲಿಂಗದಲ್ಲಿ ಕೂಡಿ, ನಿಸ್ಸಂಗಿ ನಿರಾಕುಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./59
ಅತ್ತೆಯ ಬಸುರಲಿ ಮಗಳು ಹುಟ್ಟಿ,
ಅಳಿಯಂಗೆ ಮದುವೆಯ ಮಾಡಲೊಡನೆ,
ಅಳಿಯ ಅತ್ತೆಯನಪ್ಪಿ, ಸೊಸೆ ಮಾವನನಪ್ಪಿ,
ಈ ನಾಲ್ವರು ನಿರ್ವಯಲಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./60
ಅನಂತಕೋಟಿಬ್ರಹ್ಮಾಂಡವ ನುಂಗಿಕೊಂಡಿರ್ಪುದಯ್ಯ ಒಂದು ಲಿಂಗ.
ಆ ಲಿಂಗವೇ ಒಂದು ಮೂರಾಯಿತ್ತಯ್ಯ,
ಮೂರೇ ಆರಾಯಿತ್ತಯ್ಯ, ಆರೇ ಮೂವತ್ತಾರಾಯಿತ್ತಯ್ಯ,
ಮೂವತ್ತಾರೇ ಇನ್ನೂರಹದಿನಾರಾಯಿತ್ತಯ್ಯ,
ಇನ್ನೂರಹದಿನಾರೇ ಎಪ್ಪತ್ತೆರಡುಸಾವಿರವಾಯಿತ್ತಯ್ಯ,
ಎಪ್ಪತ್ತೆರಡುಸಾವಿರವೇ ಅರವತ್ತುಆರುಕೋಟಿಯಾಯಿತ್ತಯ್ಯ,
ಅರವತ್ತುಆರು ಕೋಟಿ ಆದ ಸದಾಶಿವನು,
ಒಳಹೊರಗೆ ಪರಿಪೂರ್ಣವಾಗಿಪ್ಪ ನೋಡಾ.
ಅರವತ್ತು ಆರುಕೋಟಿ ಅರಿದು ಆಚರಿಸಿದಲ್ಲಿಗೆ ಎಪ್ಪತ್ತೆರಡು ಸಾವಿರವಾದ.
ಎಪ್ಪತ್ತೆರಡುಸಾವಿರವಾದಲ್ಲಿಗೆ ವ್ಯಾಪ್ತಿಯಾಗಿ ಲಿಂಗದ ಕಿರಣವಾದ.
ವ್ಯಾಪ್ತಿಯಾಗಿ ಲಿಂಗಕಿರಣವಾದಲ್ಲಿಗೆ ಇನ್ನೂರಹದಿನಾರಾದ.
ಇನ್ನೂರಹದಿನಾರಾದಲ್ಲಿಗೆ ಸುಜ್ಞಾನ ಉದಯವಾಯಿತ್ತು.
ಸುಜ್ಞಾನ ಉದಯದೋರಿದಲ್ಲಿಗೆ ಮೂವತ್ತಾರಾದ.
ಮೂವತ್ತಾರಾದಲ್ಲಿಗೆ ಮಹಾಜ್ಞಾನವು ಘಟಿಸಲು,
ಮಹಾಜ್ಞಾನವು ಘಟಿಸಿದಲ್ಲಿಗೆ ಆರಾದ.
ಆರಾದಲ್ಲಿಗೆ ಭಾವ ತಲೆದೋರಲು,
ಭಾವ ತಲೆದೋರಿದಲ್ಲಿಗೆ ಮೂರಾದ.
ಮೂರಾದಲ್ಲಿಗೆ ನಿಶ್ಚಿಂತನಾದ, ನಿಶ್ಚಿಂತನಾದಲ್ಲಿಗೆ ಒಂದೇ ಆದ,
ಒಂದಾದಲ್ಲಿಗೆ ಅನಂತ ಕೋಟಿ ಬ್ರಹ್ಮಾಂಡವ ನುಂಗಿಕೊಂಡಿದ್ದೆಯಯ್ಯ
ಝೇಂಕಾರ ನಿಜಲಿಂಗಪ್ರಭುವೆ./61
ಅನಂತಮುಖ, ಅನಂತಲೋಚನ, ಅನಂತಪ್ರಕಾಶ,
ಅನಂತಮಯ, ಅನಂತಸುಖ, ವಿಶ್ವಂಭರಿತ ನಿರಾಮಯಲಿಂಗವು
ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ./62
ಅನಾದಿ ಸದ್ಗುರುವೆ, ಎನ್ನ ಕರ್ಮದೋಷಂಗಳ ಪರಿಹಾರವಂ ಮಾಡಿ
ನಿರ್ಮಲವ ತೋರಿದೆಯಯ್ಯ.
ಆ ನಿರ್ಮಲದಿಂದ ಪರಂಜ್ಯೋತಿಯೆಂಬ ಲಿಂಗವ ನೋಡಿ
ಪರಕ್ಕೆ ಪರವಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./63
ಅನಾದಿಯ ಜಂಗಮವು ಶಿವಭಕ್ತನ ಮಠಕೆ ಬಂದು
‘ಭಿಕ್ಷೆ ಲಿಂಗಾರ್ಪಿತಾ’ ಎನಲು ಆ ಭಕ್ತನು ಜಂಗಮಕ್ಕೆ ಎರಗಿ,
ಸಿಂಹಾಸನದ ಗದ್ದುಗೆಯ ಮಾಡಿ, ಆ ಜಂಗಮವ ಮೂರ್ತಂಗೊಳಿಸಿ
ತನ್ನಲ್ಲಿರ್ದ ಪರಮಪ್ರಸಾದವ ಎಡೆಮಾಡಿ ನೀಡಲೊಡನೆ,
ಆ ಜಂಗಮವು ಸ್ವೀಕರಿಸಲು,
ಆ ಭಕ್ತನ ಕರ್ಮದೋಷವೆಲ್ಲ ಹಿಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./64
ಅನಾದಿಲಿಂಗವು ಕರಕ್ಕೆ ಬಂದಿತು ನೋಡಾ.
ಕರಕ್ಕೆ ಬಂದ ಕಾರಣ,
ಮನಸ್ಥಲಕ್ಕೆ ಅರುಹುದೋರಿತ್ತು ನೋಡಾ.
ಆ ಮನಸ್ಥಲಕ್ಕೆ ಅರುಹುದೋರಿದ ಕಾರಣ
ಪರಸ್ಥಲಕ್ಕೆ ಬೆರಗಾಯಿತ್ತು ನೋಡಾ.
ಆ ಪರಸ್ಥಲಕ್ಕೆ ಅರುಹುದೋರಿದ ಕಾರಣ
ಮನಸ್ಥಲಕ್ಕೆ ಹಂಗಿಲ್ಲ ನೋಡಾ.
ಆ ಮನಸ್ಥಲಕ್ಕೆ ಹಂಗಿಲ್ಲವಾದ ಕಾರಣ
ಕರಸ್ಥಲದ ಲಿಂಗವು ಕೈಸಾರಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./65
ಅಮಲಬ್ರಹ್ಮದಲ್ಲಿ ಸಕಲ ಬ್ರಹ್ಮಾಂಡಂಗಳು ಅಡಗಿಪ್ಪವಯ್ಯ.
ಆ ಸಕಲ ಬ್ರಹ್ಮಾಂಡಕೆ ಒಂದೇ ಲಿಂಗ ನೋಡಾ!
ಆ ಲಿಂಗವನು ಮಹಾಜ್ಞಾನದಿಂದ ತಿಳಿದು
ಪರಿಣಾಮಿಸಬಲ್ಲ ಹಿರಿಯರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./66
ಅರಿವು ಮರವ ನುಂಗಿತ್ತು ಅಯ್ಯಾ.
ಮರವು ಅರಿವ ನುಂಗಿತ್ತು ಅಯ್ಯಾ.
ಅರಿವು ಮರವನೊಳಕೊಂಡು ಪರಿಪೂರ್ಣವಾಗಿದ್ದೆನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./67
ಅರುವಿನ ಮನೆಯೊಳಗೆ ಕುರುವಾದ ಸೂಳಿಯು
ಐವರ ಕೂಡಿಕೊಂಡು ಒಂದು ಶಿವಾಲಯಕ್ಕೆ ಹೋಗಿ,
ಲಿಂಗಾರ್ಚನೆಯ ಮಾಡಿ ನಿಷ್ಪತಿಯಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./68
ಅಷ್ಟ ಮಂದಿಗಳೊಳಗೆ ಪುಟ್ಟಿರ್ದ ಈತನಾರಯ್ಯ?
ಕಟ್ಟಳೆಯವಿಡಿದು, ಹೊಟ್ಟು ಹಾರಿ, ಗಟ್ಟಿ ಉಳಿದಿತ್ತು ನೋಡಾ.
ಬಟ್ಟಬಯಲನೇರಿ, ಸ್ಫಟಿಕಜ್ಯೋತಿಯ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./69
ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆ ನೋಡಾ !
ಆ ಲಿಂಗವು ಬಟ್ಟಬಯಲನೊಳಕೊಂಡು
ಘಟ್ಟಿಯಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./70
ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ಒಬ್ಬ ಪುರುಷನು ಕಷ್ಟಕರ್ಮವನಳಿದು,
ಬಟ್ಟಬಯಲನೊಳಗೊಂಡು, ನಿಃಶಬ್ದವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./71
ಅಷ್ಟಕುಲಪರ್ವತದ ಮೇಲೆ ಮಹಾ ದೃಷ್ಟಲಿಂಗವ ಕಂಡೆನಯ್ಯ.
ಆ ಲಿಂಗವ ನೋಡಹೋಗದ ಮುನ್ನ, ಅದು ಎನ್ನ ನುಂಗಿತು.
ಅದಕ್ಕೆ ಮನಧ್ಯಾನ ಲಿಂಗಧ್ಯಾನ ಮಹಾಧ್ಯಾನ
ಇಂತೀ ತ್ರಿವಿಧ ಧ್ಯಾನಗಳಿಂದತ್ತತ್ತ ತಾನು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./72
ಅಷ್ಟದಳದ ಮೇಲೆ ನಲಿದಾಡುವ ಹಂಸನ
ಜ್ಞಾನದೃಷ್ಟಿಯ ಮೇಲೆ ನಿಲಿಸಿ,
ಬಟ್ಟಬಯಲ ನೋಡಿ ದೃಷ್ಟನಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./73
ಅಷ್ಟಮದಂಗಳ ಸುಟ್ಟು, ಕಷ್ಟಕರ್ಮವ ಹರಿದು,
ಬಟ್ಟಬಯಲಲ್ಲಿ ದೃಷ್ಟಲಿಂಗವ ಕಂಡು,
ಶ್ರೇಷ್ಠನಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./74
ಅಷ್ಟಾಂಗಯೋಗವ ದಾಂಟಿ,
ಇಷ್ಟ ಪ್ರಾಣ ಭಾವಗಳಿಂದತ್ತತ್ತ,
ಅಪರಂಪರ ಮಹಾಘನ ನಿರುಪಮ ತಾನು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./75
ಅಹಂಕಾರಗಳಿಲ್ಲದಂದು,
ಹಮ್ಮು ಬಿಮ್ಮುಗಳಿಲ್ಲದಂದು,
ಸತ್ವ ರಜ ತಮಗಳಿಲ್ಲದಂದು,
ಅಂತಃಕರಣಚತುಷ್ಟಯಂಗಳಿಲ್ಲದಂದು,
ಪಂಚೇಂದ್ರಿಯಂಗಳಿಲ್ಲದಂದು,
ಅರಿಷಡ್ವರ್ಗಂಗಳಿಲ್ಲದಂದು,
ಸಪ್ತವ್ಯಸನಂಗಳಿಲ್ಲದಂದು, ಅಷ್ಟಮದಂಗಳಿಲ್ಲದಂದು,
ದಶವಾಯುಗಳಿಲ್ಲದಂದು,
ಇವೇನೇನೂ ಇಲ್ಲದಂದು, ಅತ್ತತ್ತಲೆ.
ನಿರುಪಮ ಮಹಾಘನ ಅಘಟಿತಘಟಿತ ಅಪರಂಪರ ವಿಶ್ವಂಭರಿತ
ನಿರಾಳ ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./76
ಅಹಂಕಾರವೆಂಬ ಕೊಂಬ ಮುರಿದು
ನಾನು ನೀನುಗಳೆಂಬ ಉಭಯಗಳನಳಿದು ನಿಂದು
ಸ್ವಾನುಭಾವಸಿದ್ಧಾಂತದೊಳು ಮೈಮರೆದು ಆಚರಿಸಬಲ್ಲಾತನೆ
ನಿಮ್ಮ ಸಂಬಂಧಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ./77
ಆ ಜ್ಯೋತಿಯ ಬೆಳಗಿನೊಳಗೆ ಅನಂತಕೋಟಿಬ್ರಹ್ಮರು,
ಅನಂತಕೋಟಿ ವಿಷ್ಣುಗಳು, ಅನಂತಕೋಟಿ ರುದ್ರರು,
ಅನಂತಕೋಟಿ ಈಶ್ವರರು, ಅನಂತಕೋಟಿ ಸದಾಶಿವರು ಇರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./78
ಆಕಾರ ನಿರಾಕಾರವಿಲ್ಲದಂದಿನ
ಋತುವಡಗಿದ ಲಿಂಗವು ನೆನೆದ ಕಾರಣ,
ನಿರ್ಮಾಯವೆಂಬ ಸತಿಯಳು ಹುಟ್ಟಿದಳು ನೋಡಾ !
ಆಕೆಯ ಅಂಗದಲ್ಲಿ ಮೂವರು ಹುಟ್ಟಿದರು ನೋಡಾ !
ಆರು ದೇಗುಲವ ಕಟ್ಟಿಸಿ, ನವಗೃಹಗಳ ಮೀರಿ ನಿಂದಿರುವ ಸತಿಯಳ ಕಂಡು
ಎನ್ನ ಮನಕ್ಕೆ ನಿಶ್ಚಿಂತವಾಯಿತ್ತು ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./79
ಆಕಾರನಿರಾಕಾರವಿಲ್ಲದಂದು,
ಋತುವಡಗಿದ ಲಿಂಗವು, ನೆನವಂ ಬೆರೆಸಲು ಝೇಂಕಾರ ಪುಟ್ಟಿತ್ತು.
ಆ ನೆನವೆ ಆತ್ಮನಂ ಬೆರೆಸಲು ಆಕಾಶ ಪುಟ್ಟಿತ್ತು.
ಆ ನೆನವೆ ಮನವಂ ಬೆರೆಸಲು ವಾಯು ಪುಟ್ಟಿತ್ತು.
ಆ ನೆನವೆ ಬುದ್ಭಿಯಂ ಬೆರೆಸಲು ತೇಜ ಪುಟ್ಟಿತ್ತು.
ಆ ನೆನವೆ ಚಿತ್ತವಂ ಬೆರೆಸಲು ಅಪ್ಪು ಪುಟ್ಟಿತ್ತು.
ಆ ನೆನವೆ ಪೃಥ್ವಿಯಂ ಬೆರೆಸಲು ಅಹಂಕಾರ ಪುಟ್ಟಿತ್ತು.
ಆ ಅಹಂಕಾರವೇ ನಿವೃತ್ತಿ ಎನಿಸಿತ್ತು,
ಚಿತ್ತವೆ ಪ್ರತಿಷ್ಠೆ ಎನಿಸಿತ್ತು, ಬುದ್ಧಿಯೇ ವಿದ್ಯೆಯೆನಿಸಿತ್ತು,
ಮನವೇ ಶಾಂತಿಯೆನಿಸಿತ್ತು, ಆತ್ಮವೇ ಶಾಂತ್ಯತೀತವೆನಿಸಿತ್ತು.
ಶಬ್ದದಲ್ಲಿ ಶರಣನಾದ, ಸ್ಪರುಶನದಲ್ಲಿ ಪ್ರಾಣಲಿಂಗಿಯಾದ,
ರೂಪಿನಲ್ಲಿ ಪ್ರಸಾದಿಯಾದ, ರಸದಲ್ಲಿ ಮಹೇಶ್ವರನಾದ,
ಗಂಧದಲ್ಲಿ ಭಕ್ತನಾದ-ಇದು ಅಂಗಸಂಬಂಧ.
ಇನ್ನು ಇದಕ್ಕೆ ಲಿಂಗಸಂಬಂಧವು : ಶ್ರೋತ್ರದಲ್ಲಿ ಪ್ರಸಾದಲಿಂಗ, ತ್ವಕ್ಕಿನಲ್ಲಿ ಜಂಗಲಿಂಗ,
ನೇತ್ರದಲ್ಲಿ ಶಿವಲಿಂಗ, ಜಿಹ್ವೆಯಲ್ಲಿ ಗುರುಲಿಂಗ, ಘ್ರಾಣದಲ್ಲಿ ಆಚಾರಲಿಂಗ.
ಇಂತಪ್ಪ ಶರಣನು ಅಂಗಲಿಂಗಸಂಬಂಧವನೊಳಕೊಂಡು,
ಚಿತ್ತ ಆಶ್ರಯದೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./80
ಆಕಾರಲಿಂಗದ ಸಂಗದಿಂದ ನಿರಾಕಾರಲಿಂಗವ ಕಂಡೆನಯ್ಯ.
ಆ ನಿರಾಕಾರ ಲಿಂಗದ ಸಂಗದಿಂದ ನಿರಾಕುಳಲಿಂಗವ ಕಂಡೆನಯ್ಯ.
ಆ ನಿರಾಕುಳಲಿಂಗದ ಸಂಗದಿಂದ ನಿರಂಜನಲಿಂಗವ ಕಂಡೆನಯ್ಯ.
ಆ ನಿರಂಜನಲಿಂಗದ ಸಂಗದಿಂದ ನಿರಾಳಲಿಂಗವ ಕಂಡೆನಯ್ಯ.
ಆ ನಿರಾಳಲಿಂಗದ ಸಂಗದಿಂದ ನಿಃಕಲಲಿಂಗವ ಕಂಡೆನಯ್ಯ.
ಆ ನಿಃಕಲಲಿಂಗದ ಸಂಗದಿಂದ ಝೇಂಕಾರ ನಿಜಲಿಂಗಪ್ರಭುವೆ
ನಿಮ್ಮ ಕಂಡೆನಯ್ಯ./81
ಆಕಾರವಳಿದು ನಿರಾಕಾರವಾದ ಶರಣನು
ಏಕಮೇವ ಪರಬ್ರಹ್ಮಲಿಂಗವನಾಚರಿಸುತಿರ್ದನು ನೋಡಾ.
ಸಾಕಾರವಿಡಿದು, ಆ ಲಿಂಗದಲ್ಲಿ ಕೂಡಿ,
ನಿಶ್ಚಿಂತ ನಿರಾಕುಳನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./82
ಆಕಾಶಕ್ಕೆ ಬೈಗುಬೆಳಗುಂಟೇನಯ್ಯ ?
ಸೂರ್ಯನಂಗದಲ್ಲಿ ಕಪ್ಪು ಉಂಟೇನಯ್ಯ ?
ಹಾಲಸಾಗರದಲ್ಲಿ ವಿಷವುಂಟೇನಯ್ಯ ?
ಜ್ಞಾನಿಯಂತರಂಗದಲ್ಲಿ ಅಜ್ಞಾನ ಉಂಟೇನಯ್ಯ ?
ಝೇಂಕಾರ ನಿಜಲಿಂಗಪ್ರಭುವೆ./83
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ!
ಆ ಸೂಳೆಯ ಬಸುರಲಿ ಪಿಂಡಬ್ರಹ್ಮಾಂಡಗಳಿಪ್ಪವು ನೋಡಾ!
ಆ ಪಿಂಡಬ್ರಹ್ಮಾಂಡಗಳೊಳಗೆ ಒಂದು ಹಂಸನಿರ್ಪುದ ಕಂಡೆನಯ್ಯ!
ಆ ಹಂಸನು ಸಕಲ ಬಲೆಯಂಗಳ ಹರಿದು
ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ಇರುವುದು.
ಹಂಸನ ಕಾಣಬಲ್ಲಾತನೆ ನಿರ್ಮುಕ್ತಗಣೇಶ್ವರ
ಝೇಂಕಾರ ನಿಜಲಿಂಗಪ್ರಭುವೆ./84
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ.
ಆ ಸೂಳೆಯ ಗೃಹದಲ್ಲಿ ಸಾಸಿರದಳ ಕಮಲಮಂಟಪವ ಕಂಡೆನಯ್ಯ.
ಆದಿಯಲ್ಲಿ ಒಬ್ಬ ವಿಟನು, ಮೂವರು ಗೆಳೆಯರ ಕೂಡಿಕೊಂಡು,
ಹೃದಯದಲ್ಲಿರ್ದ ರತ್ನವ ತೆಗೆದು, ಆ ಸೂಳೆಗೆ ಒತ್ತೆಯಂ ಕೊಟ್ಟು,
ಸಂಗಸಂಯೋಗಮಂ ಮಾಡುವುದ ಮೂವರು ಗೆಳೆಯರು ಕಂಡು
ನಿರ್ವಯಲಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./85
ಆಕಾಶದ ಮೇಲೆ ಏಕಾಂತಮಂಟಪವ ಕಂಡೆನಯ್ಯ.
ಆ ಮಂಟಪದೊಳಗೆ ಅನಾದಿಜಂಗಮವ ಕಂಡೆನಯ್ಯ.
ಆ ಅನಾದಿ ಜಂಗಮದ ಪರಮಪ್ರಸಾದವ ನಾನು ಸ್ವೀಕರಿಸಿ ಬದುಕಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./86
ಆಕಾಶದ ಮೇಲೊಬ್ಬ ಸೂಳೆ ನಿಂದು
ಬೇಕುಬೇಡೆಂಬುಭಯವನಳಿದು ತೋರುತಿಪ್ಪಳು ನೋಡಾ.
ಆ ಸೂಳೆಯ ಅಂಗವ ಪೊಕ್ಕು
ನಿರವಯಲಿಂಗವನಾಚರಿಸುತಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./87
ಆಕಾಶವೆಂಬ ಲಿಂಗಕ್ಕೆ ಐದು ಮುಖಂಗಳು ತೋರಿದವು ನೋಡಾ !
ಒಂದು ಮುಖದಲ್ಲಿ ಲಿಂಗವ ಸಂಬಂಧಿಸಿ,
ಒಂದು ಮುಖದಲ್ಲಿ ಅಂಗವ ಸಂಬಂಧಿಸಿ,
ಒಂದು ಮುಖದಲ್ಲಿ ಸಂಬಂಧವ ಸಂಬಂಧಿಸಿ,
ಒಂದು ಮುಖದಲ್ಲಿ ನಾನು ಸಂಬಂಧಿಸಿ,
ಒಂದು ಮುಖದಲ್ಲಿ ನೀನು ಸಂಬಂಧಿಸಿ,
ನಾನೂ ಇಲ್ಲದೆ, ನೀನೂ ಇಲ್ಲದೆ, ನಿರಾಲಂಬಲಿಂಗದೊಳು
ನಿಃಪ್ರಿಯವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./88
ಆಚಾರ ಶುದ್ಧವಾದ ಭಕ್ತನ ಅಂತರಂಗದಲ್ಲಿ ಶಿವನಿಪ್ಪನು ನೋಡಾ.
ಆ ಶಿವನ ಅಂತರಂಗದಲ್ಲಿ ಒಬ್ಬ ಸತಿಯಳು ಹುಟ್ಟಿ
ಆರಾರು ಲಿಂಗಾರ್ಚನೆಯ ಮಾಡಿ
ಮೂರು ಮೇರುವೆಯ ದಾಂಟಿ ಪರಕೆಪರವನಾಚರಿಸುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./89
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗದಲ್ಲಿ ಪರಿಪೂರ್ಣವಾದ ಶರಣನು,
ಮನೋತೀತ ಅಗೋಚರ ಅಪ್ರಮಾಣ ನಿನರ್ಾಮ ನಿಗರ್ುಣ
ನಿರಾಮಯ ನಿತ್ಯ ನಿರಂಜನಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./90
ಆಚಾರಲಿಂಗ ಗುರುಲಿಂಗದಲ್ಲಿ ಅಡಗಿ ಶಿವಲಿಂಗವಾಯಿತ್ತಯ್ಯ.
ಶಿವಲಿಂಗ ಜಂಗಮಲಿಂಗದಲ್ಲಡಗಿ ಪ್ರಸಾದಲಿಂಗವಾಯಿತ್ತಯ್ಯ.
ಪ್ರಸಾದಲಿಂಗ ಮಹಾಲಿಂಗದಲ್ಲಿ ಅಡಗಿ,
ನಿಶ್ಚಿಂತ ನಿರಾಕುಳ ಲಿಂಗವು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./91
ಆಚಾರಲಿಂಗ ಗುರುಲಿಂಗದಲ್ಲಿ ಅಡಗಿ,
ಆಚಾರಲಿಂಗ ಗುರುಲಿಂಗ ಶಿವಲಿಂಗದಲ್ಲಡಗಿ,
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗದಲ್ಲಡಗಿ,
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗದಲ್ಲಿ ಅಡಗಿ,
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗದಲ್ಲಿ ಅಡಗಿ,
ಆಚಾರಲಿಂಗ ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ,
ಮಹಾಲಿಂಗ ನಿತ್ಯನಿಜದಲ್ಲಿ ಅಡಗಿ,
ಅತ್ತತ್ತತಾನೇ ಭಕ್ತನಾದನಯ್ಯಾ,
ತಾನೇ ಮಹೇಶ್ವರನಾದನಯ್ಯಾ,
ತಾನೇ ಪ್ರಸಾದಿಯಾದನಯ್ಯಾ,
ತಾನೇ ಪ್ರಾಣಲಿಂಗಿಯಾದನಯ್ಯಾ,
ತಾನೇ ಶರಣನಾದನಯ್ಯಾ,
ತಾನೇ ಐಕ್ಯನಾದನಯ್ಯಾ,
ತಾನೇ ಗುರುವಾದನಯ್ಯಾ,
ತಾನೇ ಲಿಂಗವಾದನಯ್ಯಾ,
ತಾನೇ ಜಂಗಮವಾದನಯ್ಯಾ,
ತಾನೇ ನಿಷ್ಕಲ ಕೇವಲ ಪರಬ್ರಹ್ಮವಾದನಯ್ಯಾ,
ತಾನೇ ನಿರವಯಲಿಂಗವಾದನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./92
ಆಚಾರಲಿಂಗದ ಬೆಳಗಿನೊಳು ಶಾಂತ ಸದಮಲಜ್ಞಾನವನರಿತು
ನಿತ್ಯಪರಿಪೂರ್ಣವಾದ ಲಿಂಗದಲ್ಲಿ ಸತ್ತುಹೋಹ ಶರಣರ
ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ./93
ಆಚಾರವನರಿತು ನಡೆವ ಭಕ್ತನು ಶಿವಾಚಾರಿಯೆಂಬೆನಯ್ಯ.
ಆ ಭಕ್ತನ ಅಂಗದ ಒಳಹೊರಗೆ ಲಿಂಗಮಯ ನೋಡಾ.
ಅಂತಪ್ಪ ಭಕ್ತನ ಅಂಗವ ಕಂಡು
ಎನ್ನ ಮನಕ್ಕೆ ಅಗೋಚರವೆನಿಸಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./94
ಆಜ್ಞೇಯಚಕ್ರದಲ್ಲಿ ಮಹಾಗೋಚರಲಿಂಗವ ಕಂಡೆನಯ್ಯ.
ಆ ಲಿಂಗದೊಳಗೆ ಅನಂತಕೋಟಿ ಕಿರಣಂಗಳು ಅಡಗಿಪ್ಪವು ನೋಡಾ.
ಆ ಲಿಂಗವ ನೋಡ ಹೋಗದ ಮುನ್ನ
ಲೆ ಚಿದ್ಘನ ಚಿದಾನಂದ ಚಿನ್ಮಯ ನಿಷ್ಕಳಂಕ
ನಿರವಯಲಿಂಗ ತಾನೆ ನೋಡಾ, ಝೇಂಕಾರ ನಿಜಲಿಂಗಪ್ರಭುವೆ./95
ಆಜ್ಞೇಯಚಕ್ರದಲ್ಲಿಪ್ಪ ಲಿಂಗವನು ಬ್ರಹ್ಮಚಕ್ರಕೆ ತಂದು,
ಬ್ರಹ್ಮಚಕ್ರದಲ್ಲಿಪ್ಪ ಲಿಂಗವನು ಶಿಖಾಚಕ್ರಕೆ ತಂದು,
ಶಿಖಾಚಕ್ರದಲ್ಲಿಪ್ಪ ಲಿಂಗವನು ಪಶ್ಚಿಮಚಕ್ರಕೆ ತಂದು,
ಪಶ್ಚಿಮಚಕ್ರದಲ್ಲಿಪ್ಪ ಲಿಂಗವನು ಅಣುಚಕ್ರಕೆ ತಂದು,
ಅಣುಚಕ್ರದಲ್ಲಿಪ್ಪ ಲಿಂಗವನು ನಿರವಯದಲ್ಲಿ ತಂದು,
ಪರವಶನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./96
ಆಜ್ಞೇಯಚಕ್ರದೊಳಗೆ ಗಂಭೀರನಿಪ್ಪ ಬೆಡಗ ನೋಡಾ.
ಆ ಗಂಬಿರನು ಐವರು ಶಕ್ತಿಯರ ಕೂಡಿಕೊಂಡು
ನಿರಾಲಂಬಲಿಂಗವನಾಚರಿಸುವುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./97
ಆಟವ ಮೀರಿದ, ನೀರಾಟವನಾಡಿದ,
ಘಾಟಿಸಿದ ಲಿಂಗಾಂಗಸಮರಸವ,
ಘಟತರವಾದ ಶರಣನು ಘಟೋತ್ಕರವಾದುದ ನಾನೇನೆಂಬೆನಯ್ಯ.
ಝೇಂಕಾರ ನಿಜಲಿಂಗಪ್ರಭುವೆ./98
ಆತ್ಮನೆಂಬ ಅಂಗಕ್ಕೆ ನಿರಾತ್ಮನೆಂಬ ಲಿಂಗವು ನೋಡಾ.
ಆತ್ಮನೆಂಬ ಅಂಗವನು, ನಿರಾತ್ಮನೆಂಬ ಲಿಂಗವನು
ಗರ್ಭಿಕರಿಸಿಕೊಂಡಿರುವ ಮಹಾಮಹಿಮನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./99
ಆತ್ಮನೆಂಬ ಅಂಗಕ್ಕೆ ನಿರಾತ್ಮನೆಂಬ ಲಿಂಗವು
ಒಳಹೊರಗೆ ಪರಿಪೂರ್ಣವಾಗಿ ಕಿರಣವ ಸೂಸುತಿರ್ಪುದು ನೋಡಾ !
ಆ ಕಿರಣವ ಆತ್ಮನು ನುಂಗಿ,
ನಿರಾತ್ಮನೆಂಬ ಲಿಂಗವ ನಿರ್ವಯಲು ನುಂಗಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./100
ಆತ್ಮನೆಂಬ ಅಂಗದಲ್ಲಿ ನಿರಾತ್ಮನೆಂಬ ಲಿಂಗವು ತೋರಿತ್ತು ನೋಡಾ.
ಆ ಲಿಂಗದಲ್ಲಿ ತನ್ನ ಸುಳುವ ತಾನೇ ನೋಡಿ
ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./101
ಆತ್ಮನೆಂಬ ಪ್ರಭೆಯಲ್ಲಿ ತ್ರಿಕೂಟಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೊಬ್ಬ ಪುರುಷನು
ಪವನಧ್ಯಾನ ಲಿಂಗಧ್ಯಾನವಂ ಮಾಡಿ
ರವಿ ಶಶಿಯ ಬೆಳಗನೊಳಕೊಂಡು ತಾನುತಾನಾಗಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./102
ಆತ್ಮನೆಂಬ ಪ್ರಭೆಯಲ್ಲಿ ನಿಂದು
ನಿತ್ಯವಾದ ಲಿಂಗವ ಹಿಡಿದು
ಅತ್ತತ್ತಲೆ ಪರಕೆ ಪರವನಾಚರಿಸಿ ನಿರ್ಮುಕ್ತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./103
ಆತ್ಮನೆಂಬ ಬೆಳಗಿನಿಂದತ್ತತ್ತ ನಿರಾತ್ಮನೆಂಬ ಲಿಂಗವು,
ಅನಂತಕೋಟಿ ಸೋಮಸೂರ್ಯರ ಬೆಳಗನೊಳಕೊಂಡು,
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣವೆಂಬ ಐದಂಗವ ಗರ್ಭಿಕರಿಸಿಕೊಂಡು
ಚಿದಾನಂದಸ್ವರೂಪ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./104
ಆತ್ಮನೆಂಬ ಬೆಳಗಿನೊಳು ನಿರಾತ್ಮನೆಂಬ ಉದಯದೋರಿ
ಅತ್ತತ್ತಲೆ ಘನಕೆ ಘನವ ತೋರಿ ನಿಂದಬಳಿಕಿನ್ನು ಎತ್ತ ಯೋಗ ಹೇಳಾ
ಝೇಂಕಾರ ನಿಜಲಿಂಗಪ್ರಭುವೆ./105
ಆದಿ ಅನಾದಿ ಇಲ್ಲದಂದು, ಸುರಾಳ ನಿರಾಳ ಇಲ್ಲದಂದು,
ಶೂನ್ಯ ನಿಃಶೂನ್ಯ ಇಲ್ಲದಂದು,
ನಾದ ಬಿಂದು ಕಲೆಗಳಿಲ್ಲದಂದು,
ನಾಮ ರೂಪ ಕ್ರಿಯೆಗಳಿಲ್ಲದಂದು,
ಇವೇನೇನೂ ಇಲ್ಲದಂದು, ಅತ್ತತ್ತಲೆ.
ನಿರವಯಲಿಂಗವು ತಾನೇ ನೋಡಾ.
ಆ ಲಿಂಗದ ಚಿದ್ವಿಲಾಸದಿಂದ ನಿರಂಜನನಾದ.
ಆ ನಿರಂಜನನ ಸಂಗದಿಂದ ನಿರಾಕುಳನಾದ.
ಆ ನಿರಾಕುಳವೆ ಚಿದ್ಬ್ರಹ್ಮವೆನಿಸಿತ್ತು.
ಆ ಚಿದ್ಬ್ರಹ್ಮ ಒಂದೇ ಮೂರು ತೆರನಾಯಿತ್ತು.
ಆ ಮೂರೇ ಆರು ತೆರನಾಯಿತ್ತು.
ಆರೇ ಮೂವತ್ತಾರು ತೆರನಾಯಿತ್ತು.
ಚಿದ್ಬ್ರಹ್ಮವೆ ಚಿತ್ತವೆನಿಸಿತ್ತು.
ಆ ಚಿತ್ತವೆ ಸತ್ತು ಚಿತ್ತಾನಂದನಿತ್ಯಪರಿಪೂರ್ಣವೆಂಬ
ಐದಂಗವನಂಗೀಕರಿಸಿಕೊಂಡು
ಪರವಶದಲ್ಲಿ ನಿಂದು, ಪರಕೆ ಪರವನೆಯ್ದಿದ
ಮಹಾಬ್ರಹ್ಮವೆನಿಸಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./106
ಆದಿ ಅನಾದಿಗಳಿಲ್ಲದಂದು,
ಸುರಾಳ ನಿರಾಳಗಳಿಲ್ಲದಂದು,
ಶೂನ್ಯ ನಿಃಶೂನ್ಯಗಳಿಲ್ಲದಂದು,
ನಾದ ಬಿಂದು ಕಲೆಗಳಿಲ್ಲದಂದು,
ನಾಮರೂಪಕ್ರಿಯೆಗಳಿಲ್ಲದಂದು,
ಇವೇನೇನೂ ಇಲ್ಲದಂದು, ಅತ್ತತ್ತಲೆ.
ಅಪರಂಪರ ನಿಷ್ಕಲಲಿಂಗ ತಾನೇ ನೋಡಾ!
ಆ ಲಿಂಗದ ಚಿದ್ವಿಲಾಸದಿಂದ ಉದಯವಾದ ಜಂಗಮಕ್ಕೆ
ಆದಿ ಅನಾದಿಯೆ ಹಾವುಗೆ, ಶುದ್ಧಸಿದ್ಧವೆ ಪಾದದ ಜಂಗು,
ಪ್ರಸಿದ್ಧವೆ ಗಮನ, ಮನೋಹರವೆ ಕಟಿ, ಸದಾಸನ್ನಹಿತವೆ ಕೌಪ,
ನಿಶ್ಚಿಂತವೆ ಯೋಗವಟ್ಟಿಗೆ, ನಿರಾಕುಳವೆ ಜೋಳಿಗೆ,
ನಿರ್ಭರಿತವೆ ದಂಡಕೋಲು, ಅಖಿಳಕೋಟಿ ಬ್ರಹ್ಮಾಂಡವೆ ಬಟ್ಟಲು,
ಪರಮಶಾಂತಿಯೆ ವಿಭೂತಿ, ನಿರಂಜನವೇ ರುದ್ರಾಕ್ಷಿ,
ಸುರಾಳ ನಿರಾಳವೆ ಕರ್ಣಕುಂಡಲ, ನಿಃಶೂನ್ಯವೆ ಕರಪಾತ್ರೆ, ನಿರಪೇಕ್ಷವೇ ಭಿಕ್ಷ,
ನಿರವಯವೆಂಬ ಮಠದಲ್ಲಿ ನಟಿಸಿಪ್ಪ ಜಂಗಮಕೆ
ಓಂ ನಮಃ ಓಂ ನಮಃ ಓಂ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./107
ಆದಿ ಅಪಾನದಲ್ಲಿ ಸೋಪಾನವಿಡಿದು ನಿಂದು
ತಾಪತ್ರಯಂಗಳನಳಿದು ಸೊಂಪಾಗಿ ಲಿಂಗದೊಳಗಿಪ್ಪ
ಬಾಗಿಲ ದಾಂಟಿ ಗಪ್ಪಾದನು ನೋಡಾ ಸ್ವಯಂಜ್ಯೋತಿಲಿಂಗದಲ್ಲಿ
ಝೇಂಕಾರ ನಿಜಲಿಂಗಪ್ರಭುವೆ./108
ಆದಿಯ ಬೀಜ ಶಿವಸಂಸ್ಕಾರಿ ಅನಾದಿಶರಣನಯ್ಯ.
ಆ ಶರಣನ ಅಂತರಂಗದಲ್ಲಿ ನಿರಾಳಘೋಷಲಿಂಗವಿಪ್ಪುದು ನೋಡಾ.
ಆ ನಿರಾಳಘೋಷಲಿಂಗದೊಳಗೆ ಅನಂತಕೋಟಿ ಕಿರಣಂಗಳು
ಒಳಹೊರಗೆ ಪರಿಪೂರ್ಣವಾಗಿಹುದು ನೋಡಾ.
ಅಂತಪ್ಪ ಅನಾದಿ ಶರಣನ ಕರಸ್ಥಲಕ್ಕೆ
ಇಷ್ಟಲಿಂಗವು ಕಾರುಣ್ಯವಾಗಿ ಬಂದಿತ್ತು ನೋಡಾ.
ಬಂದ ಕಾರಣ ಮನಸ್ಥಲದ ಪ್ರಾಣಲಿಂಗಕ್ಕೆ ಅರುಹುದೋರಿತ್ತು ನೋಡಾ.
ಆ ಮನಸ್ಥಲದ ಪ್ರಾಣಲಿಂಗಕ್ಕೆ ಅರುಹುದೋರಿದ ಕಾರಣ
ಪರಸ್ಥಲದ ಭಾವಲಿಂಗವು ಬೆರಗಾಯಿತ್ತು ನೋಡಾ.
ಆ ಪರಸ್ಥಲದ ಭಾವಲಿಂಗವು ಬೆರಗಾದ ಕಾರಣ
ಅಗಮ್ಯಸ್ಥಲದ ನಿರಾಳಘೋಷಲಿಂಗವು ಘೋಷಿಸುತಿಪ್ಪುದು ನೋಡಾ.
ಇದು ಕಾರಣ, ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳು
ನಿರಾಳಘೋಷಲಿಂಗದಲ್ಲಿ ಅಡಗಿಪ್ಪವು ನೋಡಾ.
ಇದು ಕಾರಣ, ಆ ನಿರಾಳಘೋಷಲಿಂಗದಲ್ಲಿ
ನಿಃಪ್ರಿಯವಾದ ಶರಣರ ಪಾದದಂಘ್ರಿಯ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./109
ಆದಿಯ ಲಿಂಗವು, ಆರು ಕಂಬದ ಶಿವಾಲಯವ ಪೊಕ್ಕು ನೋಡಲು,
ಆ ಶಿವಾಲಯದೊಳಗೊಂದು ಶಿಶು ಇಪ್ಪುದು ನೋಡಾ.
ಆ ಶಿಶುವು ಮೂರು ಮಂಟಪವನೇರಿ
ಆದಿಯ ಲಿಂಗವ ಕೂಡಿದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./110
ಆದಿಯ ಸಂಗದಿಂದ ಆದವನಲ್ಲ,
ಅನಾದಿಯ ಸಂಗದಿಂದ ಆದವನಲ್ಲ,
ಆದಿ ಅನಾದಿಯನೊಳಗೊಂಡು
ತಾನು ತಾನಾಗಿರ್ದನಯ್ಯ ಆ ಶರಣನು.
ಆಧಾರವಿಡಿದು ಭಕ್ತನಾಗಿ,
ಆಚಾರಲಿಂಗವ ನೆಲೆಯಂಗೊಂಡುದೆ ಆಚಾರಲಿಂಗವೆಂಬೆನಯ್ಯ.
ಸ್ವಾಧಿಷ್ಠಾನವಿಡಿದು ಮಹೇಶ್ವರನಾಗಿ
ಗುರುಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ.
ಮಣಿಪೂರಕವಿಡಿದು ಪ್ರಸಾದಿಯಾಗಿ
ಶಿವಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ.
ಅನಾಹತವಿಡಿದು ಪ್ರಾಣಲಿಂಗಿಯಾಗಿ
ಜಂಗಮಲಿಂಗವ ನೆಲೆಯಂಗೊಂಡುದೆ ಜಂಗಮಲಿಂಗವೆಂಬೆನಯ್ಯ.
ವಿಶುದ್ಧಿವಿಡಿದು ಶರಣನಾಗಿ
ಪ್ರಸಾದಲಿಂಗವ ನೆಲೆಯಂಗೊಂಡುದೆ ಪ್ರಸಾದಲಿಂಗವೆಂಬೆನಯ್ಯ.
ಆಜ್ಞೇಯವಿಡಿದು ಐಕ್ಯನಾಗಿ
ಮಹಾಲಿಂಗವ ನೆಲೆಯಂಗೊಂಡುದೆ ಮಹಾಲಿಂಗವೆಂಬೆನಯ್ಯ.
ಬ್ರಹ್ಮರಂಧ್ರವಿಡಿದು ಮಹಾಜ್ಞಾನಿಯಾಗಿ
ಚಿಲ್ಲಿಂಗವ ನೆಲೆಯಂಗೊಂಡುದೆ ಚಿಲ್ಲಿಂಗವೆಂಬೆನಯ್ಯ.
ಶಿಖಾವಿಡಿದು ಸ್ವಯಜ್ಞಾನಿಯಾಗಿ
ಚಿದಾನಂದಲಿಂಗವ ನೆಲೆಯಂಗೊಂಡುದೆ ಚಿದಾನಂದಲಿಂಗವೆಂಬೆನಯ್ಯ.
ಪಶ್ಚಿಮವಿಡಿದು ನಿರಂಜನನಾಗಿ
ಚಿನ್ಮಯಲಿಂಗವ ನೆಲೆಯಂಗೊಂಡುದೆ ಚಿನ್ಮಯಲಿಂಗವೆಂಬೆನಯ್ಯ.
ಅಣುಚಕ್ರವಿಡಿದು ಪರಿಪೂರ್ಣನಾಗಿ
ಓಂಕಾರಲಿಂಗವ ನೆಲೆಯಂಗೊಂಡುದೆ ಓಂಕಾರಲಿಂಗವೆಂಬೆನಯ್ಯ.
ನಿಷ್ಪತಿವಿಡಿದು ನಿಃಕಲನಾಗಿ
ನಿರವಯಲಿಂಗವ ನೆಲೆಯಂಗೊಂಡುದೆ ನಿರವಯಲಿಂಗವೆಂದೆಂಬೆನಯ್ಯ.
ಇಂತಪ್ಪ ಸುಖವ ನಿಮ್ಮಮಹಾಶರಣರೆ ಬಲ್ಲರಲ್ಲದೆ
ಉಳಿದಾದವರು ಇವರೆತ್ತ ಬಲ್ಲರಯ್ಯ,
ಝೇಂಕಾರ ನಿಜಲಿಂಗಪ್ರಭುವೆ./111
ಆದಿಯ ಸಂಗದಿಂದ ಮೂವರು ಹುಟ್ಟಿ,
ಆರು ಗ್ರಾಮವ ಪೊಕ್ಕು, ಒಂಬತ್ತು ಬೀದಿಯನೇರಿ ಬರಲು,
ಕಡೆಯ ಬಾಗಿಲಲ್ಲಿ ಸ್ವಯಂಪ್ರಕಾಶವೆಂಬ ಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ತನ್ನ ಮರೆದು ಮುಂದೆ ಕಾಣಬಲ್ಲಾತನೆ
ನಿಮ್ಮ ಶರಣನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./112
ಆದಿಯನರಿತು ಭಕ್ತನಾಗಿ,
ಆಚಾರಲಿಂಗವ ನೆಲೆಗೊಂಡುದೆ ಸದ್ಭಕ್ತಿಯೆಂಬೆನಯ್ಯ.
ಮಂತ್ರವನರಿತು ಮಹೇಶ್ವರನಾಗಿ,
ಗುರುಲಿಂಗವ ನೆಲೆಯಂಗೊಂಡುದೆ ನೈಷ್ಠಿಕಭಕ್ತಿಯೆಂಬೆನಯ್ಯ.
ಕ್ರೀಯವನರಿತು ಪ್ರಸಾದಿಯಾಗಿ,
ಶಿವಲಿಂಗವ ನೆಲೆಯಂಗೊಂಡುದೆ ಸಾವಧಾನಭಕ್ತಿಯೆಂಬೆನಯ್ಯ.
ಇಚ್ಫೆಯನರಿತು ಪ್ರಾಣಲಿಂಗಿಯಾಗಿ,
ಜಂಗಮಲಿಂಗವ ನೆಲೆಯಂಗೊಂಡುದೆ ಅನುಭಾವಭಕ್ತಿಯೆಂಬೆನಯ್ಯ.
ಜ್ಞಾನವನರಿತು ಶರಣನಾಗಿ,
ಪ್ರಸಾದಲಿಂಗವ ನೆಲೆಯಂಗೊಂಡುದೆ ಅನುಪಮಭಕ್ತಿಯೆಂಬೆನಯ್ಯ.
ಪರವನರಿತು ಐಕ್ಯನಾಗಿ,
ಮಹಾಲಿಂಗವ ನೆಲೆಯಂಗೊಂಡುದೆ ಸಮರಸಭಕ್ತಿಯೆಂಬೆನಯ್ಯ.
ಚಿತ್ತವನರಿತು ನಿಜಲಿಂಗವಾಗಿ,
ಪರಬ್ರಹ್ಮವು ನೆಲೆಯಂಗೊಂಡುದೆ ನಿಷ್ಪತಿಭಕ್ತಿಯೆಂಬೆನಯ್ಯ.
ಇದು ಕಾಣಾ, ಝೇಂಕಾರ ನಿಜಲಿಂಗಪ್ರಭುವೆ
ನಿಮ್ಮ ಶರಣನ ಆಚರಣೆಯು./113
ಆದಿಯಲ್ಲಿ ಉದಯವಾದ ದೇವನು,
ಮೂರಾರು ದೇಶವ ನೋಡಿ,
ಆರು ದೇಶದಲ್ಲಿ ಅಂಗವ ಸಂಬಂಧಿಸಿ,
ಮೂರು ದೇಶದಲ್ಲಿ ಲಿಂಗವ ಸಂಬಂಧಿಸಿ,
ಅಂಗಲಿಂಗಸಂಬಂಧವ ಗರ್ಭಿಕರಿಸಿಕೊಂಡು
ಪರವಶದಲ್ಲಿ ನಿಂದು, ಪರಕೆಪರವನೈದ ಮಹಾಬ್ರಹ್ಮವೆನಿಸಿದನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./114
ಆದಿಯಲ್ಲಿ ಒಂದು ಲಿಂಗ ಬೇರೆ ಮೃದಂಗವ ನುಡಿಸಾಡುತ್ತಿರಲು
ಆ ಲಿಂಗದ ಸಂತತಿಯಿಂದ ಆದ ಭಾವುಕನು ಬಂದು,
ಸತ್ತ ಹೆಣನ ಎತ್ತಿಕೊಂಡು ಮಸಣಕ್ಕೆ ಒಯ್ಯಲು,
ಆ ಹೆಣ ಎದ್ದು ಕುಳಿತು ಲಿಂಗಾರ್ಚನೆಯ ಮಾಡುವ ವ್ಯಾಳ್ಯದಲ್ಲಿ
ಭಾವುಕ ನುಂಗಿ ನಿರ್ವಯಲಾದ ಭೇದವು
ಸತ್ತವರಿಗೆ ಕಾಣಬಹುದು ಇದ್ದವರಿಗೆ ಕಾಣಬಾರದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./115
ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು
ಆರು ಕೇರಿಗಳ ಪೊಕ್ಕು ನೋಡಲು
ಆ ಕೇರಿಗಳಲ್ಲಿ ಆರು ಶಕ್ತಿಯರು ನಿಶಿಧ್ಯಾನವ ಮಾಡಿ
ಒಳಹೊರಗೆ ಪರಿಪೂರ್ಣವಾಗಿಹರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./116
ಆದಿಯಲ್ಲಿ ಒಬ್ಬ ಪುರುಷನು ಎಳೆಯ ಗನ್ನಕಿಯ ಕೈವಿಡಿಯಲು
ಆಕೆಯ ಬಸುರಲ್ಲಿ ಮೂವರು ಮಕ್ಕಳು ಹುಟ್ಟಿದರು ನೋಡಾ !
ಒಳಗಿನ ಆರು ಮಂದಿ ನೋಡಬಂದ ಬೆಡಗ ನೋಡಾ !
ಮೇಲಿಂದ ಒಬ್ಬ ಪುರುಷನು ಕೈ ಸೊನ್ನೆಯ ಮಾಡಲೊಡನೆ
ಮೂವರ ಮಕ್ಕಳ ಕೂಡಿಕೊಂಡು
ಬಂದಾರುಮಂದಿ ಹೆಂಡರಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./117
ಆದಿಯಲ್ಲಿ ಒಬ್ಬ ಶರಣನು ಮನೆಯ ಮಾಡಿ,
ಒಂದುದಿನ ಊರ ಮಾಡಿ, ಮೂರುದಿನ ಕೇರಿಯ ಮಾಡಿ,
ಆರು ದಿನ ಹೊಲವ ಮಾಡಿ,
ಮೂವತ್ತಾರು ದಿನ ಹೊಲದಲ್ಲಿ ಬೆಳೆಯಿಲ್ಲ,
ಕೇರಿಯಲ್ಲಿ ಮಾನವರು ಇಲ್ಲ, ಊರಲ್ಲಿ ತಂದೆ ತಾಯಿ ಇಲ್ಲ,
ಮನೆಯಲ್ಲಿ ಆರೂ ಇಲ್ಲ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./118
ಆದಿಯಲ್ಲಿ ಒಬ್ಬ ಶಿವಶರಣನು
ಮನೆಯ ಕಟ್ಟಿಸಲಿಕ್ಕೆ ಅನುವಂಗೈದನಯ್ಯ.
ಅದು ಹೇಗೆಂದಡೆ: ಒಂದಾಮೋದವ ಮಾಡಿ, ಮೂವತ್ತಾರು ಕಂಬಗಳ ಮಾಡಿ,
ಐವತ್ತೆರಡು ತೊಲೆ ಜಂತಿಗಳ ಹಮ್ಮಿ, ಇಪ್ಪತ್ತೈದು ಬೋದಂಗಳ ಭೇದಿಸಿ,
ಸಾಪಾಯವೆಂಬ ಮೇಲುಮುದ್ದಿಯ ಹಾಕಿ,
ಮನೆಯ ಕಟ್ಟಿದನಯ್ಯ ನಮ್ಮ ಶಿವಶರಣನು.
ಆ ಮನೆಯು ನಾ ಘನವೆಂದರೆ ನನ್ನ ನುಂಗಿತ್ತು, ನೀ ಘನವೆಂದರೆ ನಿನ್ನ ನುಂಗಿತ್ತು
ನಾನು ನೀನೆಂಬ ಕೊನೆಕೋಣೆಯಲ್ಲಿ ತಾನೇ ನೋಡಾ !
ತನ್ನೊಡನೆ ಒಬ್ಬ ಭಾಮಿನಿಯು ಹುಟ್ಟಿದಳು.
ಐದಗಲ ಮಾಡಿ ತಂದು,
ಪೃಥ್ವಿಗೆ ಒಂದು ಸಂಬಂಧಿಸಿ, ಅಪ್ಪುವಿಂಗೆ ಒಂದು ಸಂಬಂಧಿಸಿ,
ತೇಜಕ್ಕೆ ಒಂದು ಸಂಬಂಧಿಸಿ, ವಾಯುವಿಂಗೆ ಒಂದು ಸಂಬಂಧಿಸಿ,
ಆಕಾಶಕ್ಕೆ ಒಂದು ಸಂಬಂಧಿಸಿ,
ಈ ಐದಗಲ ಬಿಟ್ಟು ನೀಡಿದ ಭಾಮಿನಿಯ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./119
ಆದಿಯಲ್ಲಿ ಪರಬ್ರಹ್ಮವೆಂಬ ಮೂರ್ತಿಯು ಪಾತಾಳಲೋಕಕ್ಕೆ ಬಂದು
ನರಮುನೀಶ್ವರನ ಭಕ್ತನಂ ಮಾಡಿ
ಆತನ ಕರಸ್ಥಲಕ್ಕೆ ಆಚಾರಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಮರ್ತ್ಯಲೋಕಕ್ಕೆ ಬಂದು
ಸುರಮುನೀಶ್ವರನ ಮಹೇಶ್ವರನಂ ಮಾಡಿ
ಆತನ ಕರಸ್ಥಲಕ್ಕೆ ಗುರುಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಸ್ವರ್ಗಲೋಕಕ್ಕೆ ಬಂದು
ದೇವಮುನೀಶ್ವರನ ಪ್ರಸಾದಿಯಂ ಮಾಡಿ
ಆತನ ಕರಸ್ಥಲಕ್ಕೆ ಶಿವಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ತತ್ಪುರುಷಲೋಕಕ್ಕೆ ಬಂದು
ಮನುಮುನೀಶ್ವರನ ಪ್ರಾಣಲಿಂಗಿಯ ಮಾಡಿ
ಆತನ ಕರಸ್ಥಲಕ್ಕೆ ಜಂಗಮಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಈಶಾನ್ಯಲೋಕಕ್ಕೆ ಬಂದು
ಆತ್ಮಮುನೀಶ್ವರನ ಶರಣನಂ ಮಾಡಿ
ಆತನ ಕರಸ್ಥಲಕ್ಕೆ ಪ್ರಸಾದಲಿಂಗವ ಕೊಟ್ಟನಯ್ಯ.
ಆ ಪರಬ್ರಹ್ಮವೆಂಬ ಮೂರ್ತಿಯು ಅಂಬರಲೋಕಕ್ಕೆ ಬಂದು
ಮಹಾಮುನೀಶ್ವರನ ಐಕ್ಯನಂ ಮಾಡಿ
ಆತನ ಕರಸ್ಥಲಕ್ಕೆ ಮಹಾಲಿಂಗವ ಕೊಟ್ಟನಯ್ಯ.
ಇಂತಪ್ಪ ಆ ಪರಬ್ರಹ್ಮವೆಂಬ ಮೂರ್ತಿಗೆ
ನಮೋ ನಮೋ ಎಂಬೆನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./120
ಆದಿಯಲ್ಲಿ ಶಿವಾತ್ಮನು ಉದಯವಾದ ಕಾರಣ
ಮಹಾಲಿಂಗದ ಬೆಳಗು ತೋರಿತಯ್ಯ.
ಆ ಲಿಂಗದ ಬೆಳಗಿನೊಳಗೆ ತಾನು ತಾನೆಂಬುದ ಮರೆದು
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./121
ಆದಿಯಲ್ಲಿ ಸ್ವಯಜ್ಞಾನಿ ಉದಯವಾದ ಕಾರಣ,
ಪರಬ್ರಹ್ಮವೆಂಬ ಲಿಂಗವು ಭಾವಕ್ಕೆ ತೋರಿತ್ತು ನೋಡಾ.
ಆ ಲಿಂಗದಲ್ಲಿ ಇದ್ದ ಕಾರಣ, ಆ ಭಾವಕ್ಕೆ ಬೆರಗಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./122
ಆದಿಯಿಂದಲಾದ ಪುರುಷನು ಮೇದಿನಿಗೆ ಬಂದು,
ಐವರ ಸಂಗವ ಮಾಡಿ, ಅನಾದಿಯೆಂಬ ಕರಸ್ಥಲದಲಿ ನಿಂದು,
ಪರಕೆಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./123
ಆದಿಲಿಂಗದ ಸಂಗದಿಂದ ಒಬ್ಬ ಚಿದಂಗನೆಯ ಕಂಡೆನಯ್ಯ.
ಆ ಚಿದಂಗನೆಯ ಬಸುರಲ್ಲಿ ಮೂವರು ಮಕ್ಕಳು ಹುಟ್ಟಿ,
ಆರು ಕೇರಿಗಳಲ್ಲಿ ಇಪ್ಪರು ನೋಡಾ.
ಆರು ಕೇರಿಗಳಲ್ಲಿ ಆರು ಮೂರ್ತಿಗಳು
ಆರಾರ ಲಿಂಗಾರ್ಚನೆಯ ಮಾಡಿ
ಮಹಾಮೇರುವೆಯ ಪೊಕ್ಕು, ಪರಕ್ಕೆಪರವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./124
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯಯೆಂಬ
ಷಡುಸ್ಥಲಕ್ಕೆ ಷಡ್ವಿಧಮೂರ್ತಿಗಳಿಪ್ಪವು ನೋಡಾ.
ಅದು ಹೇಗೆಂದಡೆ : ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ,
ಸ್ವಾಧಿಷ್ಠಾನದಲ್ಲಿ ವಿಷ್ಣುವೆಂಬ ಮೂರ್ತಿ,
ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ,
ಅನಾಹತದಲ್ಲಿ ಈಶ್ವರನೆಂಬ ಮೂರ್ತಿ,
ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ,
ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ,
ಇಂತೀ ಭೇದವ ಮರೆತು ಇರಬಲ್ಲಾತನೆ ನಿಮ್ಮ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./125
ಆಧಾರಚಕ್ರದಲ್ಲಿ ಬ್ರಹ್ಮಜ್ಯೋತಿ,
ಸ್ವಾಧಿಷ್ಠಚಕ್ರದಲ್ಲಿ ವಿಷ್ಣುಜ್ಯೋತಿ,
ಮಣಿಪೂರಕ ಚಕ್ರದಲ್ಲಿ ರುದ್ರಜ್ಯೋತಿ,
ಅನಾಹತಚಕ್ರದಲ್ಲಿ ಈಶ್ವರಜ್ಯೋತಿ,
ವಿಶುದ್ಧಿಚಕ್ರದಲ್ಲಿ ಸದಾಶಿವಜ್ಯೋತಿ,
ಆಜ್ಞೇಯಚಕ್ರದಲ್ಲಿ ಪರಶಿವಜ್ಯೋತಿ,
ಬ್ರಹ್ಮರಂಧ್ರಚಕ್ರದಲ್ಲಿ ಮಹಾಜ್ಞಾನಜ್ಯೋತಿ,
ಶಿಖಾಚಕ್ರದಲ್ಲಿ ಸ್ವಯಜ್ಞಾನಜ್ಯೋತಿ,
ಪಶ್ಚಿಮಚಕ್ರದಲ್ಲಿ ನಿರಂಜನಜ್ಯೋತಿ,
ಅಣುಚಕ್ರದಲ್ಲಿ ಪರಬ್ರಹ್ಮಜ್ಯೋತಿ.
ಇಂತು ದಶಚಕ್ರಂಗಳನರಿತು ನಿಶ್ಚಿಂತ ನಿರಾಳನಾಗಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./126
ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ.
ಸ್ವಾಧಿಷ್ಠದಲ್ಲಿ ವಿಷ್ಣುವೆಂಬ ಮೂರ್ತಿ.
ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ
ಅನಾಹತದಲ್ಲಿ ಈಶ್ವರನೆಂಬ ಮೂರ್ತಿ
ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ
ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ
ಅಲ್ಲಿಂದತ್ತತ್ತಲೆ ನಿರವಯ ಪರಬ್ರಹ್ಮವು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./127
ಆಧಾರವೆಂಬ ಹಾವುಗೆಯ ಮೆಟ್ಟಿ,
ವಿಷಯ ವ್ಯಸನಂಗಳೆಂಬ ಸರ್ಪಳಿಯಂ ಹಾಕಿ,
ಜನನ ಮರಣಂಗಳೆಂಬ ಜಂಗವ ಕಟ್ಟಿ,
ಸಲಿಲವೆಂಬ ಕೌಪವ ಹಾಕಿ,
ನಿಧರ್ಾರವೆಂಬ ಕಟಿಯಂ ಧರಿಸಿ,
ಅಷ್ಟಮದಂಗಳೆಂಬ ಯೋಗವಟ್ಟಿಗೆಯಂ ಹಾಕಿ,
ಕುಂಡಲಿಯೆಂಬ ನಾಗಬೆತ್ತಮಂ ಪಿಡಿದು,
ಭಾವವೆಂಬ ಕಪನಿಯಂ ಧರಿಸಿ,
ಚಂದ್ರಸೂರ್ಯಾದಿಗಳೆಂಬ ಸರವ ಹಾಕಿ,
ಓಂಕಾರವೆಂಬ ಪಾವಡವ ಸುತ್ತಿ,
ಹೃದಯಧಾರಣವೆಂಬ ಸೆಜ್ಜೆಯಂ ಮಾಡಿ,
ಕಂಠಸ್ಥಾನವೆಂಬ ಶಿವದಾರವಂ ಮಾಡಿ,
ಮಹಾಲಿಂಗವೆಂಬ ಮೂರ್ತಿಯಂ ನೆಲೆಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನ ನೀಡಿ,
ಅಂತರಂಗದ ಬೆಳಗಿನ ಚಿದ್ವಿಭೂತಿಯಂ ಧರಿಸಿ,
ನಿರ್ಮಲವೆಂಬ ಗಂಧವನೊರೆದು,
ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ,
ನಿದ್ರ್ವಂದ್ವವೆಂಬ ಧೂಪವ ತೋರಿ,
ಆ ಲಿಂಗಕ್ಕೆ ಒಬ್ಬ ಸತಿಯಳು
ಭಕ್ತನೆಂಬ ಅಡ್ಡಣಿಗೆಯ ಮೇಲೆ ಮಾಹೇಶ್ವರನೆಂಬ ಹರಿವಾಣವನಿಕ್ಕಿ,
ಮಹಾಪ್ರಸಾದವ ನೆಲೆಯಂಗೊಂಡು,
ಪ್ರಾಣಲಿಂಗಿಯೆಂಬ ತುಪ್ಪವನೆರೆದು,
ಶರಣನೆಂಬ ಸಕ್ಕರೆಯಂ ತಳೆದು,
ಆ ಸತಿಯಳು ಆ ಲಿಂಗಕ್ಕೆ ನೈವೇದ್ಯವ ತೋರುತಿರ್ಪಳು ನೋಡಾ !
ಆ ಲಿಂಗಕ್ಕೆ ನಾದವಾಲಗವಂ ಮಾಡುವುದ ಕಂಡೆನಯ್ಯ.
ಅದು ಹೇಗೆಂದಡೆ- ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು,
ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ,
ಈ ಐವರು ನಾದದ ವಾಲಗವ ಮಾಡುವುದ ಕಂಡೆನಯ್ಯ.
ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ
ಈ ಐವರೂ ನಾಂಟ್ಯವನಾಡುತಿರ್ಪರು ನೋಡಾ !
ನವನಾಳದಲ್ಲಿ ನವಮೂರ್ತಿಗಳು
ನವದೀಪವ ನವಧೂಪವ ಬೆಳಗುತಿರ್ಪರು ನೋಡಾ !
ಸೋಪಾನವಿಡಿದು ಪ್ರಣವಬೆಳಗಿನೊಳು ಸುಳಿದಾಡುವ ಜಂಗಮಕ್ಕೆ
ಓಂ ನಮೋ ಓಂ ನಮೋ ಓಂ ನಮೋ
ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./128
ಆನೆ ಮೊದಲು ಇರುವೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯಲ್ಲಿ
ಸತ್ತು ಹುಟ್ಟಿ ಮಾಡಿದ ಪಾಪಂಗಳಿಗೆ ಕಡೆ ಇಲ್ಲವು ನೋಡಾ !
ಒಬ್ಬ ಶಿವನ ಅಂಗವ ಕಂಡೆನಾಗಿ ಹರಿದುಹೋಹವು ನೋಡಾ !
ಆ ಶಿವನ ತನು ಮನದ ಕೊನೆಯಲ್ಲಿ ನಿರಾಲಂಬಲಿಂಗವಿಪ್ಪದು ನೋಡಾ !
ಆ ಲಿಂಗವು ಒಂದೇ ಮೂರುತೆರನಾಯಿತ್ತು.
ಅದು ಹೇಗೆಂದಡೆ : ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು.
ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು.
ಅದು ಹೇಗೆಂದಡೆ : ಗುರುವಿಡಿದು ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು.
ಲಿಂಗವಿಡಿದು ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು.
ಜಂಗಮವಿಡಿದು ಶರಣ-ಐಕ್ಯನೆಂದು ಎರಡುತೆರನಾಯಿತ್ತು.
ಹೀಂಗೆ ಮೂರು ಆರುತೆರನಾಯಿತ್ತು.
ಅದು ಹೇಗೆಂದಡೆ;
ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು.
ಈ ಮೂರು ಒಂದೊಂದಾಗಿ ಎರಡೆರಡಾಗಿ ಆರುತೆರನಾಯಿತ್ತು.
ಅದು ಹೇಗೆಂದಡೆ;
ಇಷ್ಟಲಿಂಗವಿಡಿದು ಆಚಾರಲಿಂಗ-ಗುರುಲಿಂಗವೆಂದು ಎರಡುತೆರನಾಯಿತ್ತು.
ಪ್ರಾಣಲಿಂಗವಿಡಿದು ಶಿವಲಿಂಗ-ಜಂಗಮಲಿಂಗವೆಂದು ಎರಡುತೆರನಾಯಿತ್ತು.
ಭಾವಲಿಂಗವಿಡಿದು ಪ್ರಸಾದಲಿಂಗ-ಮಹಾಲಿಂಗವೆಂದು ಎರಡುತೆರನಾಯಿತ್ತು.
ಹೀಂಗೆ ಮೂರು ಆರುತೆರನಾಯಿತ್ತು.
ಅದು ಹೇಗೆಂದಡೆ: ಧ್ಯಾನ ಧಾರಣ ಸಮಾಧಿಯೆಂದು ಮೂರುತೆರನಾಯಿತ್ತು.
ಈ ಮೂರನೊಂದೊಂದು ಎರಡೆರಡಾಗಿ ಆರುತೆರನಾಯಿತ್ತು.
ಅದು ಹೇಗೆಂದಡೆ;
ಧ್ಯಾನವಿಡಿದು ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು.
ಧಾರಣವಿಡಿದು ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು.
ಸಮಾಧಿವಿಡಿದು ಪರಾಶಕ್ತಿ-ಚಿಚ್ಫಕ್ತಿಯೆಂದು ಎರಡುತೆರನಾಯಿತ್ತು.
ಇದಕ್ಕೆ ಭಕ್ತಿ ಆರುತೆರನಾಯಿತ್ತು.
ಅದು ಹೇಗೆಂದಡೆ: ಸದ್ಭಕ್ತಿ, ನೈಷ್ಠಿಕಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ,
ಸಮರಸಭಕ್ತಿಯೆಂದು ಆರುತೆರನಾಯಿತ್ತು.
ಒಬ್ಬ ನಿಃಕಲಶಿವನು ಒಂದೇ ಮೂರುತೆರನಾಯಿತ್ತು.
ಮೂರೇ ಆರುತೆರನಾಯಿತ್ತು.
ಆರೇ ಮೂವತ್ತಾರುತೆರನಾಯಿತ್ತು.
ಮೂವತ್ತಾರೇ ಇನ್ನೂರಹದಿನಾರುತೆರನಾಯಿತ್ತು.
ಇನ್ನೂರಹದಿನಾರಾದ ಶಿವನು ಮೂವತ್ತಾರಾದ.
ಮೂರಾದ ಶಿವನು ಆರಾದ.
ಆರಾದ ಶಿವನು ಮೂರಾದ, ಮೂರಾದ ಶಿವನು ಒಂದಾದ,
ಒಂದಾದ ಶಿವನು ಅಂಗಲಿಂಗಸಂಬಂಧ ಗರ್ಭಿಕರಿಸಿಕೊಂಡು
ತಾನು ತಾನಾಗಿರ್ಪನು ನೋಡಾ.
ಇಂತಪ್ಪ ನಿಃಕಲಶಿವನ ಮಹಾಮಹಿಮೆ ಕಂಡು
ನೆನೆದ ನೆನಹಿಂಗೆ ತೃಪ್ತಿಯಾಯಿತ್ತು ಕಾಣಾ,
ಅಂದವಾಗಿ ಎನ್ನ ಸಲಹಯ್ಯ
ಝೇಂಕಾರ ನಿಜಲಿಂಗಪ್ರಭುವೆ./129
ಆರ ಗೊಡವೆಯಿಲ್ಲದೆ ಗುರುವು ಹೇಳಿದಂತೆ
ವಾಕ್ಯವ ಪಿಡಿದುಕೊಂಡು ಇರುವುದು ಸುಖವಲ್ಲದೆ,
ಕುಳಿತಲ್ಲಿ ನಿಂತಲ್ಲಿ ಹೇಳಿಕೇಳಿದರೆ ಏನಾಗುವದು ಹೇಳಾ
ಝೇಂಕಾರ ನಿಜಲಿಂಗಪ್ರಭುವೆ./130
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ
ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ,
ಮಹಾಮಹಿಮನ ಕೂಡಿ,
ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./131
ಆರು ಕಂಬದ ದೇಗುಲದ ಮೇಲೆ
ಮೂರು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಒಬ್ಬ ಭಾಮಿನಿಯ ಕಂಡೆನಯ್ಯ.
ಆ ಭಾಮಿನಿಯು ಐವರ ಕೂಡಿಕೊಂಡು,
ಪರಕೆ ಪರವಾದ ಲಿಂಗವನಾಚರಿಸುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./132
ಆರು ಕಂಬದ ದೇಗುಲದೊಳಗೆ
ಮೂರು ಬಾಗಿಲ ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಘನಲಿಂಗವ ಕಂಡೆನಯ್ಯ.
ಆ ಘನಲಿಂಗದ ಸಂಗದಿಂದ ನಿರಂಜನದೇಶಕ್ಕೆ ಹೋಗಿ
ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ./133
ಆರು ಕಂಬದ ಮನೆಯೊಳಗೆ
ಮೂರು ಕೋಣೆಗಳಿಪ್ಪವು ನೋಡಾ.
ಆ ಮೂರು ಕೋಣೆಗಳಿಂದತ್ತತ್ತ
ಸಾವಿರೆಸಳ ಮಂಟಪವ ಕಂಡೆನಯ್ಯ.
ಆ ಸಾವಿರೆಸಳ ಮಂಟಪದೊಳಗೆ ಒಬ್ಬ ಸತಿಯಳು
ತನ್ನ ಗಮನವ ತಾನೇ ನೋಡುತಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./134
ಆರು ಕಂಬದ ಮೇಲೆ ಮೂರು ದೇಗುಲವ ಕಂಡೆನಯ್ಯ.
ಮೂರು ದೇಗುಲದ ಮೇಲೆ ಒಂದು ಶಿಖರವ ಕಂಡೆನಯ್ಯ.
ಆ ಶಿಖರವನೊಂದು ವಸ್ತು ಒಳಗೊಂಡಿರ್ಪುದು ನೋಡಾ.
ಆ ವಸ್ತುವಿನ ಕುರುಹ ನೀವಾರಾದರೆ ಹೇಳಿರಯ್ಯ; ನಾನೊಂದ ಅರಿಯೆನು.
ತಾನಾಗಿ ಕಾಣಬಲ್ಲವರಿಂಗೆ ಕಾಣಬಂದಿತ್ತಯ್ಯ.
ಕಾಣಲರಿಯದವರಿಂಗೆ ದೂರವಾಗಿತ್ತಯ್ಯ
ಝೇಂಕಾರ ನಿಜಲಿಂಗಪ್ರಭುವೆ./135
ಆರು ಕಂಬದ ಶಿವಾಲಯದ ಮೇಲೆ
ಮೂರು ಮಂಟಪವ ಕಂಡೆನಯ್ಯ!
ಆ ಮೂರು ಮಂಟಪದ ತುದಿಯಲ್ಲಿ
ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ!
ಆ ಲಿಂಗವ ನೋಡ ಹೋಗದ ಮುನ್ನ
ಅದು ಎನ್ನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ!/136
ಆರು ಕಂಬದ ಶಿವಾಲಯದ ಮೇಲೆ
ಸಾಸಿರದಳದ ಮಂಟಪವ ಕಂಡೆನಯ್ಯ.
ಆ ಮಂಟಪದೊಳಗೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ.
ಆ ಸತಿಯಳು ತನ್ನ ನಿಲವ ತಾನೆ ನೋಡಿ
ನಿಃಪ್ರಿಯವಾದಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./137
ಆರು ಕಾಲುಳ್ಳ ಗೋವಿಂಗೆ
ಮೂರು ಬಾಲುಳ್ಳ ಕರುವ ಕಂಡೆನಯ್ಯ.
ಆ ಕರುವಿಂಗೆ ಮುಖ ಒಂದು,
ಎರಡು ಕೊಂಬುಗಳಿಪ್ಪವು ನೋಡಾ.
ಆ ಕರುವ ಹಿಡಿದಾಡುವ ಹಿರಿಯರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./138
ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ.
ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ.
ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ
ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./139
ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ.
ಮೂರು ಗ್ರಾಮದ ಮುಂದೆ ಒಂದು ಲಿಂಗವ ಕಂಡೆನಯ್ಯ.
ಆ ಲಿಂಗವ ನೋಡ ಹೋಗದ ಮುನ್ನ
ಆರು ಕೇರಿ ಅಳಿದು, ಮೂರು ಗ್ರಾಮ ಹೋಗಿ,
ಮೀರಿ ಕಂಡೆನಯ್ಯ ಆ ಲಿಂಗವನು
ಝೇಂಕಾರ ನಿಜಲಿಂಗಪ್ರಭುವೆ./140
ಆರು ಕೋಟೆಯಮೇಲೆ ಮೂರು ಕೊತ್ತಳವ ಕಂಡೆನಯ್ಯ,
ಮೂರು ಕೊತ್ತಳದ ಮೇಲೆ
ಒಬ್ಬ ತಳವಾರನು ಆ ಊರ ಕಾವುತಿರ್ಪನು ನೋಡಾ,
ಆ ತಳವಾರನ ಹೆಜ್ಜೆಯತ್ತ ನೋಡಲು ಹೆಜ್ಜೆ ಹೋದವು
ಸಂಗಸಂಯೋಗವೆಂಬ ಲಿಂಗದ ಗುಡಿಗೆ,
ಆ ಹೆಜ್ಜೆಯನರಿವ ಶರಣರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./141
ಆರು ಚಕ್ರ, ಆರು ಮೂರ್ತಿಗಳು,
ಆರು ಶಕ್ತಿಯರು, ಆರು ಲಿಂಗವು, ಆರು ಹಸ್ತ, ಆರು ರುಚಿ,
ಆರರಿಂದತ್ತತ್ತ ಮೀರಿದ ಮಹಾಮಹಿಮನ ಕಂಡು ಧನ್ಯನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./142
ಆರು ಚಕ್ರಂಗಳಲ್ಲಿ ಆರು ಮೂರ್ತಿಗಳ ಕಂಡೆನಯ್ಯ,
ಆರು ಶಕ್ತಿಯರು ಆರಾರ ಲಿಂಗಾರ್ಚನೆಯಂ ಮಾಡಿ
ಆರರಿಂದತ್ತತ್ತ ಮೀರಿದ ಮಹಾಮಹಿಮನ ಕಂಡು ಧನ್ಯನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./143
ಆರು ಚಕ್ರಂಗಳಲ್ಲಿ ಆರು ಮೂರ್ತಿಗಳು
ಆರಾರ ಲಿಂಗಾರ್ಚನೆಯ ಮಾಡಿ,
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ
ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./144
ಆರು ದೇಶದ ಮೇಲೆ ಮೂರು ಮಂಡಲವ ಕಂಡೆನಯ್ಯ,
ಮೂರು ಮಂಡಲದ ಮೇಲೆ ಒಬ್ಬ ಪುರುಷನ ಕಂಡೆನಯ್ಯ.
ಆ ಪುರುಷನ ಸತಿಯಳು, ತತ್ಪುರುಷಲೋಕಕ್ಕೆ ಬಂದು,
ಈಶ್ವರನೆಂಬ ಮಗನ ಕೂಡಿಕೊಂಡು, ನಿಟಿಲವೆಂಬ ಘಟದಲ್ಲಿ ನಿಂದು,
ಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು,
ಶಿಖಾಚಕ್ರವೆಂಬ ಮೇರುವೆಯ ಹತ್ತಿ,
ಪಶ್ಚಿಮಚಕ್ರವೆಂಬ ನಿರಂಜನಜ್ಯೋತಿಯ ಕೂಡಿ,
ಅತ್ತತ್ತಲೆ ಪರಕ್ಕೆ ಪರವ ತೋರುತಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./145
ಆರು ನೆಲೆಯ ಮಂಟಪದ ಮುಂದೆ
ಮೂರು ಕೋಣೆಯ ಕಂಡೆನಯ್ಯ.
ಮೂರು ಕೋಣೆಯ ಮುಂದೆ ಸಾಸಿರದಳದ ಕಮಲವ ಕಂಡೆನಯ್ಯ.
ಆ ಸಾಸಿರದಳದ ಮುಂದೆ ಒಂದು ಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ತನ್ನ ಮರೆದು
ಮುಂದೆ ಕಾಣಬಲ್ಲಾತನೆ ನಿಮ್ಮ ಪ್ರಮಥ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./146
ಆರು ನೆಲೆಯ ಮಂಟಪದ ಮೇಲೆ
ಮೂರು ಕೋಣೆಯ ಕಂಡೆನಯ್ಯ.
ಆ ಮೂರು ಕೋಣೆಯ ಮೇಲೆ ಮೀರಿದ ಲಿಂಗವ ಕಂಡೆನಯ್ಯ.
ಆ ಮೀರಿದ ಲಿಂಗವು ತನ್ನ ತಾನೇ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./147
ಆರು ನೆಲೆಯ ಮಂಟಪದೊಳಗೆ ಸಾರುತಿರ್ದವಯ್ಯ ಶ್ರುತಿಗಳು.
ಆರು ನೆಲೆಗಳ ವಿೂರಿ, ಮೂರು ಕೋಣೆಗಳ ದಾಂಟಿ,
ನಾದ ಬಿಂದು ಕಳಾತೀತನಾಗಿ ನಿಂದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./148
ಆರು ಬಣ್ಣದ ಪಟ್ಟಣದೊಳಗೆ
ಮೂರು ಬಣ್ಣದ ಕೊತ್ತಳವ ಕಂಡೆನಯ್ಯ.
ಮೂರು ಬಣ್ಣದ ಕೊತ್ತಳದಿಂದತ್ತತ್ತ
ಸಾವಿರಕಂಬದ ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಪರಮಾನಂದ ಲಿಂಗವು
ತೊಳಗಿ ಬೆಳಗುತಿಪ್ಪುದು ನೋಡಾ.
ಆ ಬೆಳಗಿನೊಳು ಕೂಡಿ ಪರಿಪೂರ್ಣವಾದ ಶರಣನ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./149
ಆರು ಬಾಗಿಲ ಮುಂದೆ ಮೂರು ದೇಗುಲವ ಕಂಡೆನಯ್ಯ.
ಮೂರು ದೇಗುಲದ ಮುಂದೆ ಒಂದು ಲಿಂಗವ ಕಂಡೆನಯ್ಯ.
ಏಕೋ ಮನೋಹರನೆಂಬ ಪೂಜಾರಿಯು
ಐವತ್ತೆರಡು ಸೋಪಾನಂಗಳನ್ನೇರಿ,
ಆ ಲಿಂಗಾರ್ಚನೆಯ ಮಾಡುವುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./150
ಆರು ಬುಡದ ಮೇಲೆ ಮೂರು ಕೊನೆಯ ಕಂಡೆ ನೋಡಾ.
ಮೂರು ಕೊನೆಯ ಮೇಲೆ ಒಂದು ಹಣ್ಣು ಇರ್ಪುದು ನೋಡಾ.
ಆ ಹಣ್ಣ ಕಣ್ಣು ಇಲ್ಲದವ ಕಂಡು, ಕೈಯಿಲ್ಲದವ ಕೊಯ್ದು,
ಉಂಡ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./151
ಆರು ಮಂದಿರದೊಳಗೆ ಮೀರಿದ ಸತಿಯಳ ಕಂಡೆನಯ್ಯ.
ಆ ಸತಿಯಳ ಸಂಗದಿಂದ ಮೂರು ದೇಶವ ದಾಂಟಿ
ಪರವಶವೆಂಬ ಲಿಂಗಾರ್ಚನೆಯಂ ಮಾಡಿ
ನಿರ್ಮುಕ್ತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./152
ಆರು ಮತಗಳಿಲ್ಲದೆ, ತನ್ನ ಮನವ ತಾನೇ ಶುದ್ಧ ಮಾಡಿ,
ಸ್ವಯಜ್ಞಾನದಲ್ಲಿ ನಿಂದು, ನಿರಾಕುಳಲಿಂಗವನಾಚರಿಸಿ
ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./153
ಆರು ಮೂರು ಕೇರಿಯ ಮುಂದೆ ಸುಳಿದಾಡುವ
ತಾಯ ಅಂಗದಲ್ಲಿ ಒಬ್ಬ ಬಾಲಕ ಹುಟ್ಟಿ,
ನೆನವೆಂಬ ಸತಿಯಳ ಕೂಡಿಕೊಂಡು, ಸಪ್ತಸಾಗರವ ದಾಂಟಿ,
ಅಷ್ಟಕುಲಪರ್ವತವ ಮೆಟ್ಟಿ, ಒಂಬತ್ತು ಬಾಗಿಲ ಮುಂದೆ
ನಡೆದು ಹೋಗುವ ಕಳ್ಳನನಟ್ಟಿ
ಮುಂದಳ ಮೇರುವೆಯಲ್ಲಿ ಹಿಡಿದು ಒಪ್ಪಿಸಿಕೊಟ್ಟು
ಆ ನೆನವೆಂಬ ಸತಿಯಳ ಬಯಲು ನುಂಗಿ
ಆ ಬಾಲಕನು ತಾಯ ಅಂಗವ ಪೊಕ್ಕನು.
ಮೇಲೆ ಒಬ್ಬ ಪುರುಷನು ಹಿಡಿದುದ ಸೋಜಿಗವ ಕಂಡು
ಓಂ ನಮೋ ಓಂ ನಮೋ ಎನುತಿರ್ದನಯ್ಯ ನಿಮ್ಮ ಶರಣ
ಝೇಂಕಾರ ನಿಜಲಿಂಗಪ್ರಭುವೆ./154
ಆರು ಮೂರು ದೇಶದ ಮುಂದೆ
ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
ಆ ಪುರುಷಂಗೆ ಒಬ್ಬ ಸತಿ ಇಪ್ಪಳು ನೋಡಾ.
ಆ ಸತಿಯಳಿಗೆ ಒಂದು ಶಿಶು ಹುಟ್ಟಿ,
ಐವರ ಸಂಗವ ಮಾಡುತಿರ್ಪುದು ನೋಡಾ.
ಆ ಐವರ ಒಂದು ಇರುವೆ ನುಂಗಿತ್ತು ನೋಡಾ.
ಆ ಶಿಶುವು ಹೆತ್ತ ತಾಯ ನುಂಗಿ,
ತಂದೆಯೊಡನೆ ಇದರ್ುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./155
ಆರು ಮೂರು ಮಂಟಪದ ಮೇಲೆ
ಒಂದು ಕೋಗಿಲೆ ಕುಳಿತು ಕೂಗುತ್ತಿದೆ ನೋಡಾ.
ಆ ಕೋಗಿಲೆಯ ಸ್ವರವ ಕೇಳಿ, ಒಬ್ಬ ಬೇಂಟೆಕಾರನು
ಅರುಹೆಂಬ ಗದೆಯ ತಕ್ಕೊಂಡು ಇಡುವ
ಬೇಂಟೆಕಾರನ ಆ ಕೋಗಿಲೆ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./156
ಆರು ಮೂರ್ತಿಗಳ ಮೇಲೆ ಮೂರು ದೇವರ ಕಂಡೆನಯ್ಯ!
ಆ ಮೂರು ದೇವರ ಸಂಗದಿಂದ ನಿರಂಜನಗಣೇಶ್ವರನ ಕಂಡೆನಯ್ಯ!
ಆ ನಿರಂಜನಗಣೇಶ್ವರನ ಸಂಗದಿಂದ ಮಹಾನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./157
ಆರು ವರ್ಣದ ಅಂಗನೆಯು
ಮೂರು ಬಾಗಿಲ ಮಾಡಿಕೊಂಡು
ಬೇರೊಂದು ಸ್ಥಾನದಲ್ಲಿ ಲಿಂಗಧ್ಯಾನವ ಮಾಡುತಿರ್ಪಳು ನೋಡಾ.
ಆ ಲಿಂಗದ ಬೆಳಗಿನೊಳಗೆ ಪರಿಪೂರ್ಣವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./158
ಆರು ವರ್ಣದ ಪಕ್ಷಿ, ಮೂರು ಬಾಗಿಲವ ಪೊಕ್ಕು,
ಸಾವಿರೆಸಳ ಮಂಟಪದೊಳು ನಿಲ್ಲಲು,
ಅಲ್ಲಿ ಒಬ್ಬ ಚಿದಂಗನೆಯ ಕಂಡೆನಯ್ಯ.
ಆ ಚಿಂದಗನೆಯು ಆ ಪಕ್ಷಿಯ ಹಿಡಿದು
ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./159
ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ
ಮಹಾಲಿಂಗದ ಧ್ಯಾನವಂ ಮಾಡಿ,
ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./160
ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ.
ಆರು ಮುಖಂಗಳಲ್ಲಿ ಆರು ಲಿಂಗವ ಕಂಡೆನಯ್ಯ.
ಆರರಿಂದತ್ತ ಮೀರಿದ ಮಹಾಮಹಿಮನ ಕಂಡು
ನಿಶ್ಚಿಂತ ನಿರಾವಾಶಿಗಳಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./161
ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ.
ಆರು ಮೂರ್ತಿಗಳಲ್ಲಿ ಆರು ಲಿಂಗವ ಕಂಡೆನಯ್ಯ.
ಆರರಿಂದತ್ತತ್ತ ಮೀರಿದ ಮಹಾಘನಲಿಂಗವ ಕಂಡು,
ನಿರ್ವಿಕಲ್ಪ ನಿತ್ಯಾತ್ಮಕನಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./162
ಆರು ಸ್ಥಲದಲ್ಲಿ ಆರು ಮೂರ್ತಿಗಳು
ಆರು ಶಕ್ತಿಯರ ಸಂಗವ ಮಾಡಿ,
ಮೂರು ದೇಶವ ಮೀರಿ, ಸಾವಿರೆಸಳಮಂಟಪವ ಪೊಕ್ಕು,
ಸಾವಿರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./163
ಆರು ಸ್ಥಲದಲ್ಲಿ ಆರು ಲಿಂಗವ ಕಂಡೆನಯ್ಯ.
ಆರು ಲಿಂಗಸಂಗಸಮರಸದಿಂದ,
ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ
ನಿರಂಜನ ಪರಿಪೂರ್ಣ ನಿರವಯಲಿಂಗವು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./164
ಆರುತತ್ವದ ಮೇಲೆ ನಿತ್ಯತ್ವ ನಿಜಪರಬ್ರಹ್ಮಲಿಂಗವು ತಾನೇ ನೋಡಾ.
ಆ ಲಿಂಗದ ಸಂಗದಿಂದ ಒಬ್ಬ ಸತಿಯಳು
ಆರು ಮೂರು ದೇಶವ ನೋಡಿ ನಿರ್ದೆಶದಲ್ಲಿ ನಿಂದು
ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ./165
ಆರುಮಂದಿ ಅಂಗನೆಯರು ಮೂವರ ಸಂಗವ ಮಾಡಿ
ಒಂಬತ್ತು ನೆಲೆಯ ಮೆಟ್ಟಿ, ಹತ್ತನೆ ಮನೆಯಲ್ಲಿ ನಿಂದು,
ಬರಿದಾದ ಮನೆಗೆ ಹೋದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./166
ಆವು ಹೋಗಿ ಆರುದಿನವೆಂಬುದ ನಾನು ಬಲ್ಲೆನಯ್ಯ.
ಕರು ಹೋಗಿ ಮೂರು ದಿನವೆಂಬುದ ನೀನು ಬಲ್ಲೆಯಯ್ಯಾ.
ಮೀರಿದಮನೆಯಲ್ಲಿ ತಾನು ತಾನೆಂಬುದ ತಾನೆ ಬಲ್ಲನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./167
ಇಪ್ಪತ್ತೈದು ಕಂಬದ ಶಿವಾಲಯದೊಳಗೆ
ಒಬ್ಬ ಅಂಗನೆ, ಹದಿನೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ,
ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು
ಆ ಅಂಗನೆಯ ಕೈಹಿಡಿದು ಹದಿನೆಂಟು ಕೇರಿಗಳ ಕೆಡಿಸಿ
ಇಪ್ಪತ್ತೈದು ಕಂಬದ ಶಿವಾಲಯವ ಮೀರಿ
ನಿಶ್ಚಿಂತ ನಿರಾಳಲಿಂಗದಲ್ಲಿ ಬೆರೆದಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./168
ಇಪ್ಪತ್ತೈದು ಗ್ರಾಮದ ಮುಂದೆ
ಒಂದು ಗುಡಿಯ ಲಿಂಗವ ಕಂಡೆನಯ್ಯ.
ಐವರು ಮುತ್ತೈದೆಯರು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ !
ಮೇಲಿಂದ ಒಬ್ಬ ಪುರುಷನು ಐವರ ಕೂಡಿಕೊಂಡು
ಆ ಪುರುಷನು ಲಿಂಗದೊಳಡಗಿ ನಿಃಪ್ರಿಯವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./169
ಇಪ್ಪತ್ತೈದು ಗ್ರಾಮದ ಮೇಲೆ ಸುಳಿದಾಡುವ
ಪುಷ್ಪದತ್ತನ ಕಂಡೆನಯ್ಯ.
ಆ ಪುಷ್ಪದತ್ತನ ಕರಕಮಲದಲ್ಲಿ
ಸಾವಿರೆಸಳ ಪುಷ್ಪವಿಪ್ಪುದು ನೋಡಾ.
ಆ ಪುಷ್ಪದ ಪರಿಮಳವ ಅರುಹುವ ಹಿರಿಯರ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./170
ಇಪ್ಪತ್ತೈದು ತಲೆಯ ಮೇಲೆ ಸುಳಿದಾಡುತಿಪ್ಪ
ನಿರ್ವಾಣಿಯ ಕಂಡೆನಯ್ಯ.
ಆ ನಿರ್ವಾಣಿಯ ಕರಕಮಲದಲ್ಲಿ ನಿರಪೇಕ್ಷಲಿಂಗವಿಪ್ಪುದು ನೋಡಾ.
ಆ ಲಿಂಗದಲ್ಲಿ ತನ್ನ ಮರೆದು, ನಿರವಯಸ್ಥಲವನೈದಬಲ್ಲಾತನೆ
ನಿಮ್ಮ ನಿರಂಜನಗಣೇಶ್ವರ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./171
ಇಪ್ಪತ್ತೈದು ದೇಗುಲದ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಒಬ್ಬ ಪೂಜಕನು
ಲಿಂಗಾರ್ಚನೆಯ ಮಾಡುತಿರ್ಪನು ನೋಡಾ.
ಆ ಪೂಜಕನ ಹಿಡಿದು ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./172
ಇಪ್ಪತ್ತೈದು ದೇಶದ ಮೇಲೆ
ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ.
ಆ ಸತಿಯಳು ಸಾವಿರೆಸಳ ಮಂಟಪವ ಪೊಕ್ಕು
ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ.
ಏಕೋಮನೋಹರನೆಂಬ ಪೂಜಾರಿಯು ಆ ಸತಿಯಳ ಕೈವಿಡಿದು
ಆ ಲಿಂಗದಲ್ಲಿ ನಿಃಪ್ರಿಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./173
ಇಪ್ಪತ್ತೈದು ನೆಲೆಯ ಮೇಲೆ ಸುಪ್ಪಾಣಿಯ ಕಂಡೆನಯ್ಯ.
ಆ ಸುಪ್ಪಾಣಿಯ ಸಂಗದಿಂದ ಕೂಗುವ ಕಪ್ಪೆಯ ಕಂಡೆನಯ್ಯ.
ಆ ಕೂಗುವ ಕಪ್ಪೆ ಸರ್ಪನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./174
ಇಪ್ಪತ್ತೈದು ಶಿವಾಲಯದ ಮೇಲೆ
ಸುತ್ತಿಕೊಂಡಿಪ್ಪ ಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ಮೂವರು ಪೂಜಾರಿಗಳಿಪ್ಪರು ನೋಡಾ.
ಆ ಪೂಜಾರಿಗಳು ಆರು ದೇಶವ ಪೊಕ್ಕು,
ಭಕ್ತಾಂಗನೆಯ ಸಂಗವ ಮಾಡಿ,
ಮುಕ್ತಿಸಾಮ್ರಾಜ್ಯಕೆ ಹೋಗಿ
ನಿರ್ವಿಕಲ್ಪ ನಿತ್ಯಾತ್ಮಕರಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./175
ಇರುವೆಯ ಒಡಲಲ್ಲಿ ಐವರು ಹುಟ್ಟಿದುದ ಕಂಡೆನಯ್ಯ.
ಆ ಐವರು ಮೇರುವೆಯ ಗುಡಿಯ ಹತ್ತಿ
ಇರುವೆಯ ಒಡಲ ಹರಿದು ನಿರವಯದಲ್ಲಿ ಅಡಗಿದ್ದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./176
ಇರುವೆಯ ಮಸ್ತಕದ ಮೇಲೆ ಇರುತಿಪ್ಪ
ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಅಘಟಿತಲಿಂಗವಿಪ್ಪುದು ನೋಡಾ.
ಆ ಲಿಂಗದ ಕಿರಣದೊಳಗೆ ರಾಜಬೀದಿಯ ಕಂಡೆನಯ್ಯ.
ಆ ರಾಜಬೀದಿಯಲ್ಲಿ ಒಬ್ಬ ಪುರುಷನು
ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ,
ಅಘಟಿತ ಲಿಂಗಾರ್ಚನೆಯ ಮಾಡುತಿಪ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./177
ಇರುಳು ಹಗಲ ನುಂಗಿ, ಹಗಲು ಇರುಳ ನುಂಗಿ,
ಇರುಳು ಹಗಲಿಲ್ಲದೆ ಪರವಶದಲ್ಲಿ ನಿಂದು
ಪರಕ್ಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./178
ಇರುಳು ಹಗಲುಗಳೆಂಬ ಸಂದೇಹಗಳನಳಿದು ನಿಂದು
ನಿರುತನಿರಂಜನಲಿಂಗದೊಳು ಕೂಡಿ ಪರವಶನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./179
ಇರುಳು ಹಗಲೆಂಬೆರಡು ಮಹಾಘನಲಿಂಗದೊಳಡಗಿ
ಗರ್ಭಗತವಾಗಿಪ್ಪವು ನೋಡಾ.
ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ಐವರ ಕೂಡಿಕೊಂಡು,
ಚಿದುಲಿಂಗಾರ್ಚನೆಯಂ ಮಾಡಿ
ಚಿದ್ಘನಸ್ವರೂಪವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./180
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು,
ಇಷ್ಟಲಿಂಗಕ್ಕೆ ಗುರುವಾದನಯ್ಯ.
ಪ್ರಾಣಲಿಂಗಕ್ಕೆ ಲಿಂಗವಾದನಯ್ಯ,
ಭಾವಲಿಂಗಕ್ಕೆ ಜಂಗಮವಾದನಯ್ಯ.
ನಿರ್ಭಾವಕ್ಕೆ ಪರಿಪೂರ್ಣವಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./181
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು
ಪರಬ್ರಹ್ಮಲಿಂಗವನಾಚರಿಸಬಲ್ಲಾತನೆ ನಿರ್ಮುಕ್ತಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./182
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು
ಮಹಾಜ್ಞಾನದೃಷ್ಟಿಯೊಳು ನಿಂದು
ಪರಕೆಪರವಾದ ಲಿಂಗವನಾಚರಿಸುವ ಶರಣನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./183
ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗದಲ್ಲಿ ಕೂಡಿ,
ಭಾವಲಿಂಗದಲ್ಲಿ ಬೆರಗಾಗಿ ಪರಬ್ರಹ್ಮವನಾಚರಿಸಬಲ್ಲಾತನೆ
ನಿಮ್ಮ ಶರಣ ನೋಡಾ, ಝೇಂಕಾರ ನಿಜಲಿಂಗಪ್ರಭುವೆ./184
ಇಷ್ಟಲಿಂಗದ ಭೇದವನರಿತು
ಪ್ರಾಣಲಿಂಗದಲ್ಲಿ ಕೂಡಿ ಭಾವಲಿಂಗದಲ್ಲಿ ನಿಂದು
ಪರಕೆಪರವಾದ ಲಿಂಗವನಾಚರಿಸುತಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./185
ಇಷ್ಟಲಿಂಗದ ಭೇದವನರಿಯದೆ
ಪ್ರಾಣಲಿಂಗದ ಭೇದವ ಬಲ್ಲೆನೆಂಬ ಭ್ರಷ್ಟಾಚಾರಿಗಳು ನೀವು ಕೇಳಿರೋ.
ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗಸಂಬಂಧಿಯಾಗಿ,
ದೃಷ್ಟಲಿಂಗವ ಕಾಣಬಲ್ಲಾತನೆ ಅನಾದಿ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./186
ಇಷ್ಟಲಿಂಗದಲ್ಲಿ ಗುರುವಿಡಿದು, ಪ್ರಾಣಲಿಂಗದಲ್ಲಿ ಲಿಂಗವಿಡಿದು,
ಭಾವಲಿಂಗದಲ್ಲಿ ಜಂಗಮವಿಡಿದು
ಪರಮಪ್ರಸಾದವ ಸ್ವೀಕರಿಸಬಲ್ಲಾತನೆ ನಿಮ್ಮ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./187
ಇಷ್ಟಲಿಂಗದಲ್ಲಿ ಶುದ್ಧವಾಗಿ, ಪ್ರಾಣಲಿಂಗದಲ್ಲಿ ಸಿದ್ಧವಾಗಿ,
ಭಾವಲಿಂಗದಲ್ಲಿ ಪ್ರಸಿದ್ಧವಾಗಿ ಇರಬಲ್ಲಾತನೆ
ನಿರ್ಮಲಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ./188
ಇಷ್ಟಲಿಂಗವಿಡಿದು ಕಾಯ ಶುದ್ಧವಾಯಿತ್ತಯ್ಯ.
ಪ್ರಾಣಲಿಂಗವಿಡಿದು ಮನ ಶುದ್ಧವಾಯಿತ್ತಯ್ಯ.
ಭಾವಲಿಂಗವಿಡಿದು ಚಿತ್ತ ಶುದ್ಧವಾಯಿತ್ತಯ್ಯ.
ಹೀಂಗೆ ಮುಮ್ಮಯ್ಯ ಸಿರಿವಂತನಾಗಿ
ನಿಶ್ಚಿಂತ ನಿರಾಕುಳಲಿಂಗವನಾಚರಿಸುತಿಪ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./189
ಇಷ್ಟಲಿಂಗವಿಡಿದು ಗುರುಪ್ರಸಾದವ ಕಂಡೆನಯ್ಯ.
ಪ್ರಾಣಲಿಂಗವಿಡಿದು ಲಿಂಗಪ್ರಸಾದವ ಕಂಡೆನಯ್ಯ.
ಭಾವಲಿಂಗವಿಡಿದು ಜಂಗಮಪ್ರಸಾದವ ಕಂಡೆನಯ್ಯ.
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಂಗಳಲ್ಲಿ
ಒಳಹೊರಗೆ ಪರಿಪೂರ್ಣವಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./190
ಇಷ್ಟಲಿಂಗವು ಪ್ರಾಣಲಿಂಗದಲ್ಲಿ ಅಡಗಿ ಭಾವಲಿಂಗವಾಯಿತ್ತಯ್ಯ.
ಆ ಭಾವಲಿಂಗವು ಪರಬ್ರಹ್ಮದಲ್ಲಿ ಅಡಗಿ ನಿರ್ವಯಲಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./191
ಈ ಧರೆಯ ಮೇಲೆ ಭಕ್ತರೆಂದು ಗುರು ಲಿಂಗ ಜಂಗಮಕ್ಕೆ ನಡೆವರಯ್ಯ.
ಬಹಿರಂಗದ ಬಳಕೆಯನಳಿದು ಶಬ್ದಮುಗ್ಧನಾದರೆ, ಗುರುವೆಂಬೆನಯ್ಯ.
ಭ್ರಾಂತಿಸೂತಕವನಳಿದು ನಿಭ್ರಾಂತನಾದರೆ, ಲಿಂಗವೆಂದೆಂಬೆನಯ್ಯ.
ವಿಷಯವ್ಯಸನಗಳನಳಿದು ಶುದ್ಧ ಸಿದ್ಧ ಪ್ರಸಿದ್ಧವಾದರೆ, ಜಂಗಮವೆಂದೆಂಬೆನಯ್ಯ.
ಇಂತೀ ಗುರು ಲಿಂಗ ಜಂಗಮವನರಿತು
ಆ ಗುರು ಲಿಂಗ ಜಂಗಮಕ್ಕೆ ನಡೆಯಬಲ್ಲಾತನೆ ನಿರ್ಮಲಸ್ವರೂಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./192
ಈ ಧರೆಯ ಮೇಲೆ ಹುಟ್ಟಿ
ಕಲ್ಲದೈವಂಗಳಿಗೆ ಎರಗಿದರೆ ಭವ ಹಿಂಗುವುದೇ ?
ಹಿಂಗದು ನೋಡಾ.
ಅದೇನು ಕಾರಣವೆಂದಡೆ: ಮನದ ಗುಣಾದಿಗಳ ಶುದ್ಧಮಾಡಲರಿಯದೆ
ನಿಶ್ಚಿಂತ ನಿರ್ಮಲ ಲಿಂಗದಲ್ಲಿ ಕೂಡಲರಿಯದೆ
ಹಲವು ದೈವಂಗಳಿಗೆ ಅಡ್ಡಡ್ಡ ಬಿದ್ದು
ಎದೆ ದಡ್ಡಾಗಿ, ಹಣೆ ದಡ್ಡಾಗಿ, ಭವದ ಕುರಿಗಳಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./193
ಈ ಲೋಕದೊಳಗೆ ಶೀಲವಂತರೆಂದು ಪಾದೋದಕ ಪ್ರಸಾದವ ಕೊಂಬರಯ್ಯ.
ಬ್ರಹ್ಮನನಳಿದು ಭಕ್ತನಾಗಿ ಆಚಾರಲಿಂಗವ ನೆಲೆಯಂಗೊಂಡರೆ
ಪಾದಪೂಜೆಯೆಂದೆಂಬೆನಯ್ಯ.
ವಿಷ್ಣುವನಳಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡರೆ
ಪಾದೋದಕವೆಂದೆಂಬೆನಯ್ಯ.
ರುದ್ರನನಳಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡರೆ
ಮಹಾಪ್ರಸಾದಿಯೆಂದೆಂಬೆನಯ್ಯ.
ಇಂತೀ ಪಾದೋದಕ ಪ್ರಸಾದವನರಿತು,
ಆ ಪಾದೋದಕ ಪ್ರಸಾದವ ಕೊಳ್ಳಬಲ್ಲಾತನೆ ನಿಮ್ಮ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./194
ಈಡಾ ಪಿಂಗಳ ಸುಷಮ್ನನಾಳದಿಂದತ್ತತ್ತ
ಸಾವಿರೆಸಳಮಂಟಪವ ಕಂಡೆನಯ್ಯ,
ಆ ಮಂಟಪದೊಳಗೊಬ್ಬ ಸತಿಯಳು ನಿಂದು
ಚಿಲ್ಲಿಂಗಾರ್ಚನೆಯಂ ಮಾಡಿ,
ಚಿದ್ಘನಸ್ವಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./195
ಈರೇಳುಭುವನವ ಹದಿನಾಲ್ಕುಲೋಕವನೊಂದು ಇರುವೆ ನುಂಗಿತ್ತುನೋಡಾ.
ಆ ಇರುವೆಯ ತಲೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೆ ಒಬ್ಬ ಭಾಮಿನಿಯು
ತನ್ನ ಮನವ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./196
ಉಚ್ಫ್ವಾಸ ನಿಶ್ವಾಸಂಗಳ ಬ್ರಹ್ಮರಂಧ್ರದ ತನುಮನದ ಕೊನೆಯಲ್ಲಿ ಹಿಡಿದು
ಸಾಸಿರದಳಕಮಲವಂ ಪೊಕ್ಕು ನಿಃಪ್ರಿಯವೆನಿಸಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./197
ಉತ್ತಮಜ್ಞಾನದಿಂದ ಪರಮಾನಂದಲಿಂಗವ ನೋಡಿ,
ಆ ಲಿಂಗದೊಳಗೆ ಅನಂತಕೋಟಿ ಕಿರಣಂಗಳು ಅಡಗಿಪ್ಪವು ನೋಡಾ.
ಆ ಲಿಂಗದಲ್ಲಿ ಕೂಡಿ ಪರಿಪೂರ್ಣವಾದ ಮಹಾಶರಣರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./198
ಉದಯಕಾಲದಲ್ಲಿ ಒಬ್ಬ ಮದಲಿಂಗನು
ಹಸೆಯ ಜಗುಲಿಯ ಮೇಲೆ ಕುಳಿತು
ಐವರು ಸತಿಯರ ಕೂಡಿಕೊಂಡು,
ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು,
ಪರಕೆ ಪರವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./199
ಉಪ್ಪು ಅಪ್ಪು ಕೂಡಿದಂತೆ,
ಉರಿ ಕರ್ಪುರ ಕೂಡಿದಂತೆ,
ಮಾರುತ ಪರಿಮಳವ ಕೂಡಿದಂತೆ,
ಆಕಾಶ ಬಯಲ ಕೂಡಿದಂತೆ,
ತಾನು ತಾನಾದುದ ತಾನೇ ಕೂಡಿದಂತೆ
ಝೇಂಕಾರ ನಿಜಲಿಂಗಪ್ರಭುವೆ./200
ಉರಿಯ ಮೇಲೆ ಹರಿವ ಹಾವ ಕಂಡೆನಯ್ಯ.
ಗಾರುಡಿಗನು ಜಗವನೆಲ್ಲಾ ಜರೆದು
ನಾಗಸ್ವರದ ನಾದವ ಮಾಡಿ,
ಆ ಹಾವ ಹಿಡಿದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./201
ಉರಿಯೊಳಗಣ ಪ್ರಕಾಶದಂತೆ
ಮೊಗ್ಗೆಯೊಳಗಣ ಪರಿಮಳದಂತೆ
ಕ್ಷೀರದೊಳಗಣ ಘೃತದಂತೆ
ಭಾವದೊಳಗಣ ನಿರ್ಭಾವದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಝೇಂಕಾರ ನಿಜಲಿಂಗಪ್ರಭುವೆ
ನಿಮ್ಮ ಶರಣನ ಅನಾದಿಯ ಅರಿವು./202
ಉರೊಳಗಣ ಸೂಳೆಯು ಮೇರುವೆಯೊಳಗಣ ಪುರುಷನ ಕರೆದು
ಬೇರೊಂದು ಮನೆಗೆ ಹೋಗಿ ನಿರ್ವಯಲಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ/203
ಉಲುವಡಗಿದ ಮರದ ಮೇಲೆ ಒಬ್ಬ ಸತಿಯಳು ನಿಂದು
ಫಲವ ಮಾರುತಿಪ್ಪಳು ನೋಡಾ !
ಆ ಫಲವ ಕೊಳ್ಳಹೋಗದ ಮುನ್ನ, ಆತನ ನುಂಗಿ
ತನ್ನ ಸುಳುವ ತಾನೇ ತೋರುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./204
ಉಲುಹು ಅಡಗಿದ ವೃಕ್ಷದಲ್ಲಿ ಫಲವಾದ ಹಣ್ಣ ಸವಿದು
ಮೇಲುಗಿರಿಯ ಶಿವಾಲಯವ ಪೊಕ್ಕು,
ಚಿದ್ಬಿಂದುಕಳಾಸ್ವರೂಪನಾಗಿ,
ಬರಿಯ ಬಯಲಿಂಗೆ ಹೋಗಿ ಬರಿದಾದರು ನೋಡಾ
ಝೇಕಾರ ನಿಜಲಿಂಗಪ್ರಭುವೆ./205
ಉಲುಹುವಡಗಿದ ವೃಕ್ಷದ ಮೇಲೆ ಫಲಗಳಿಪ್ಪುದ ಕಂಡೆನಯ್ಯ.
ಆ ಫಲಗಳ ಸ್ವೀಕರಿಸಬಲ್ಲಡೆ ಆತನೆ ನಿರ್ಮುಕ್ತ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./206
ಉಸಿರು ಉನ್ಮನಿಗೆ ಸಿಲ್ಕಿದ ಬಳಿಕ ಪರಿಮಳದ ಹಂಗಿನ್ನ್ಯಾತಕಯ್ಯ?
ಶಬ್ದ ನಿಃಶಬ್ದವಾದ ಬಳಿಕ ಅನುಭಾವದ ಹಂಗಿನ್ನ್ಯಾತಕಯ್ಯ?
ಭಾವ ನಿರ್ಭಾವವಾದ ಬಳಿಕ ಲೋಕದ ಹಂಗಿನ್ನ್ಯಾತಕಯ್ಯ?
ಇದು ಕಾರಣ, ಇಂತೀ ತ್ರಿವಿಧ ಭೇದವನರಿತು ಇರಬಲ್ಲಡೆ
ಆತನೇ ಭಾವಲಿಂಗಸಂಬಂಧಿ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./207
ಊರ ಮುಂದಳ ಕಡೆಯ ಬಾಗಿಲಲ್ಲಿ
ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
ಆ ಪುರುಷನು ಚಿತ್ತಾಗ್ನಿಯೆಂಬ ಸತಿಯಳ ಸಂಗಸಂಯೋಗಮಂ ಮಾಡಲು
ಆಕೆಯ ಬಸುರಲ್ಲಿ ಐವರು ಮಕ್ಕಳು ಹುಟ್ಟಿದರು ನೋಡಾ.
ಆ ಮಕ್ಕಳ ಬಯಲು ನುಂಗಿ, ಆ ಸತಿಯ ನಿರ್ವಯಲು ನುಂಗಿ,
ಆ ಪುರುಷ ನಿಃಶಬ್ದವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./208
ಊರ ಮುಂದಳ ಕೇರಿಯಲ್ಲಿ ಐದು ಬೇರಿನ ಮರನ ಕಂಡೆನಯ್ಯ.
ಆ ಮರಕ್ಕೆ ಏಳೆಂಟು ಎಲೆಗಳು ಇಪ್ಪವು ನೋಡಾ.
ಹತ್ತು ವರ್ಣದ ಹಣ್ಣ ಸವಿದು, ಮೇರುವೆಯ ಪಟಕ ತೆಗೆದು,
ಮಹಾಲಿಂಗದೊಳು ಬೆರೆದಿದ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./209
ಊರ ಮುಂದಳ ದಾರಿಯಲ್ಲಿ ಸರ್ಪನು
ಬಾಲವ ಗಗನದಲ್ಲಿಟ್ಟು,
ಶಿರವ ನಾಗಲೋಕದಲ್ಲಿಟ್ಟು,
ಈರೇಳುಭುವನ ಹದಿನಾಲ್ಕು ಲೋಕಂಗಳ
ನುಂಗಿಕೊಂಡಿರ್ಪುದು ನೋಡಾ.
ಕಡೆಯ ಬಾಗಿಲಲ್ಲಿ ಗಾರುಡಿಗ ನಿಂದು,
ನಾಗಸ್ವರದ ನಾದವ ಮಾಡಲು
ಆ ನಾಗಸ್ವರವ ಕೇಳಿ ನಾಗಲೋಕದಿಂದ ಎದ್ದ ಸರ್ಪನು
ಆ ಗಾರುಡಿಗನ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./210
ಊರ ಮೇಲೆ ಆಡುವ ಗಿಳಿಯ ಕಂಡೆ ನೋಡಾ.
ಕೇರಿಯೊಳಗೆ ಹಾರುವ ಬೆಕ್ಕ ಕಂಡೆನಯ್ಯ.
ಬೆಕ್ಕಿಗೆ ತಲೆಯಿಲ್ಲ ನೋಡಾ, ಗಿಳಿಗೆ ಮೂಗಿಲ್ಲ ನೋಡಾ.
ಆ ಹಾರುವ ಬೆಕ್ಕಿಂಗೆ ತಲೆ ಬಂದಲ್ಲದೆ,
ಆಡುವ ಗಿಳಿಗೆ ಮೂಗು ಬಂದಲ್ಲದೆ,
ನಿಃಕಲಪರಬ್ರಹ್ಮ ಲಿಂಗವು ಕಾಣಬಾರದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./211
ಊರಮುಂದಳ ಗುಡಿಯಲ್ಲಿ ಕೋಳಿ ಕುಳಿತು ಕೂಗಲೊಡನೆ
ಕತ್ತಲೆ ಹರಿದು, ಸೂರ್ಯ ಉದಯವಾದ ನೋಡಾ.
ಆ ಕೋಗಿಲೆಯ ಇರುವೆ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./212
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ.
ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ
ವಿಷವನುಗುಳುತಿಪ್ಪುದು ನೋಡಾ.
ಆ ವಿಷವ ಕೆಡಿಸಿ, ಉರಗನ ಕೊಂದು,
ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./213
ಊರಿಗೆ ಹೋಗುವ ಮಾರ್ಗದಲ್ಲಿ ಒಬ್ಬ ನಿರ್ಮಲಗಿತ್ತಿ ಕುಳಿತು
ನಾಲ್ವರ ಕೂಡಿಕೊಂಡು
ಸೀಮೆಯ ದಾಂಟಿ ನಿಸ್ಸೀಮಕೆ ಹೋಗಿ
ನಿಜಸ್ವರೂಪವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./214
ಊರೊಳಗಣ ಕಪ್ಪೆ ಮತ್ತೆ ಸರ್ಪನ ನುಂಗುವುದ ಕಂಡೆನಯ್ಯ!
ನುಂಗಿ ಸಾಯದು, ಸತ್ತು ಕೂಗುವುದು,
ಭ್ರಾಂತಿದೋರದು, ಮತ್ತೆ ಬಾರದು.
ಒಬ್ಬಳ ಸಂಗದಿಂದ ಭಾವ ಮೈದುನ ಮಲಮಗ
ಈ ಮೂವರು ಕತ್ತಲೆ ಹರಿದರು ನೋಡಾ!
ಸತ್ತು ಚಿತ್ತುವೆಂಬ ಭಾಮಿನಿಯ ಮನೆಗೆ ಹೋಗಲಾಗಿ
ತನ್ನ ಗಮನವ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./215
ಊರೊಳಗಣ ನಾರಿಯು ಮೇರುವೆಯ ಗುಡಿಯ ಪೊಕ್ಕು
ಪರಬ್ರಹ್ಮಲಿಂಗದಲ್ಲಿ ಕೂಡಿ
ತಾನು ತಾನಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./216
ಊರೊಳಗಣ ಮಾನವನು
ಮೇರುವೆಯೊಳಗಣ ಸೂಳೆಯ ಸಂಗವ ಮಾಡಲು
ಆ ಸೂಳೆಯ ಬಸುರಲ್ಲಿ ಪಂಚಮುಖದ ಬಾಲಕ ಹುಟ್ಟಿ,
ನಿರವಯವೆಂಬ ಕರಸ್ಥಲದ ಮೇಲೆ ನಿಂದು
ರಾಜಿಸುತಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./217
ಊರೊಳಗಣ ಸೂಳೆಯ ಕರೆದು
ಮೂವರಿಗೆ ಒತ್ತೆಯ ಕೊಡುವುದು ಕಂಡೆನಯ್ಯ.
ಬೇರೆ ನಾಲ್ವರು ಬೇರೆ ಹುಯ್ಯಲು ಹೋಗುವರು ನೋಡಾ.
ಮೇಲಿಂದ ಒಬ್ಬ ಸತಿಯಳು ಐವರ ಹಿಡಿದು ನೋಡಲು
ಒತ್ತೆಯ ಕೊಟ್ಟ ಸೂಳೆಯ ಮನೆ ಒಡೆಯಿತ್ತು ನೋಡಾ !
ಬೇರೆ ನಾಲ್ವರು ಬೇರೆ ಮಡಿದರು ನೋಡಾ !
ಐವರ ಹೆಜ್ಜೆವಿಡಿದು ನೋಡಲು
ಆ ಹೆಜ್ಜೆಯೇ ಮಂಗಳ ಉದಯವೆಂಬ ಲಿಂಗದಲ್ಲಿ ಅಡಗಿಪ್ಪವಯ್ಯ.
ಆ ಸತಿಯಳ ಅಂಗವ ಕೂಡಿ ನಿರಂಜನವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./218
ಊರೊಳಗೆ ಆಡುವ ಹಕ್ಕಿಯ ಕಂಡೆನಯ್ಯ.
ಮೇರುವೆಯ ಮೇಲೆ ಕುಳಿತಿರುವ ಕಪ್ಪೆಯ ಕಂಡೆನಯ್ಯ.
ಆ ಕಪ್ಪೆಗೆ ಧ್ವನಿಯಿಲ್ಲಾ ನೋಡಾ,
ಆ ಹಕ್ಕಿಗೆ ಗರಿಯಿಲ್ಲ ನೋಡಾ!
ಹಕ್ಕಿಗೆ ಗರಿ ಬಂದಲ್ಲದೆ, ಕಪ್ಪೆಗೆ ಧ್ವನಿ ಬಂದಲ್ಲದೆ
ತಾನಾರು ಎಂಬುದು ಕಾಣಿಸದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./219
ಊರೊಳಗೆ ಆನೆಯ ಕಂಡೆನಯ್ಯ.
ಮೇರುವಿನೊಳಗೆ ಸಿಂಹರಾಜನ ಕಂಡೆನಯ್ಯ.
ಆ ಮೇರುವಿನೊಳಗಣ ಸಿಂಹರಾಜನು ಊರೊಳಗಣ ಆನೆಯ ಕೊಂಡು
ಮೇರುವೆಗೆ ಹಾರಿಹೋದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./220
ಊರೊಳಗೆ ಆರು ನೆಲೆಯ ಮಂಟಪವ ಕಂಡೆನಯ್ಯ.
ಮೇರುವೆಯೊಳಗೆ ಮೂರು ಶಿವಾಲಯವ ಕಂಡೆನಯ್ಯ.
ಬೇರೊಂದು ಸ್ಥಲದಲ್ಲಿ ಒಂದು ಲಿಂಗವು
ಸಕಲ ಬ್ರಹ್ಮಾಂಡಗಳ ಗರ್ಭಿಕರಿಸಿಕೊಂಡು ಇಪ್ಪುದು ನೋಡಾ.
ಆ ಲಿಂಗದ ಅರುವನರಿತು ಆಚರಿಸುವ ಶರಣನ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./221
ಊರೊಳಗೆ ಇರುವ ನಾರಿಯ ಕಂಡೆನಯ್ಯ.
ಮೇರುವೆಯೊಳಗೆ ಇರುವ ಪುರುಷನ ಕಂಡೆನಯ್ಯ.
ಊರೊಳಗಣ ನಾರಿಂಗೆ ಕಣ್ಣು ಇಲ್ಲ ನೋಡಾ.
ಮೇರುವೆಯೊಳಗಣ ಪುರುಷಂಗೆ ತಲೆಯಿಲ್ಲ ನೋಡಾ.
ಊರೊಳಗಣ ನಾರಿಂಗೆ ಕಣ್ಣು ಬಂದಲ್ಲದೆ,
ಮೇರುವೆಯೊಳಗಣ ಪುರುಷಂಗೆ ತಲೆ ಬಂದಲ್ಲದೆ
ನಾನಾರು ಎಂಬ ಭೇದವು ಕಾಣಿಸದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./222
ಊರೊಳಗೆ ಒಬ್ಬ ಮಾನವನ ಕಂಡೆನಯ್ಯ,
ಆ ಮಾನವನ ಕೈಯೊಳಗೆ ಒಂದು ರತ್ನವಿಪ್ಪುದ ಕಂಡೆನಯ್ಯ.
ಮೇಲಿಂದ ಸತಿಯಳು ಕಂಡು, ಆ ರತ್ನವ ತಕ್ಕೊಂಡು,
ಊರ ಮುಂದಳ ಗುಡಿಯಲ್ಲಿ ಆ ಮಾನವನ ಬಯಲುನುಂಗಿ,
ಆ ರತ್ನವ ನಿರ್ವಯಲು ನುಂಗಿ
ಆ ಸತಿಯಳು ಅಡಗಿದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭವೆ./223
ಊರೊಳಗೊಂದು ಮನೆಯ ಕಂಡೆನಯ್ಯ.
ಆ ಮನೆಯೊಳಗೊಂದು ಮಾಣಿಕ್ಯವ ಕಂಡೆನಯ್ಯ.
ಆ ಮಾಣಿಕ್ಯದೊಳಗೆ ಸಪ್ತೇಳುಸಾಗರಂಗಳು ಅಷ್ಟಕುಲಪರ್ವತಂಗಳು,
ಸ್ವರ್ಗ ಮರ್ತ್ಯ ಪಾತಾಳ, ಈರೇಳುಭುವನ ಹದಿನಾಲ್ಕು ಲೋಕಂಗಳು
ಆ ಮಾಣಿಕ್ಯದ ಬೆಳಗಿನೊಳಗೆ ಇಪ್ಪವು ನೋಡಾ.
ಗಗನದ ತುಟ್ಟ ತುದಿಯ ಮೇಲೆ ಇರುವ ಹಂಸನು
ಆ ಮಾಣಿಕ್ಯವ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ/224
ಊರೊಳಗೊಬ್ಬ ನಾರಿಯ ಕಂಡೆನಯ್ಯ!
ಆ ನಾರಿಯ ಬಸುರಲಿ ಐವರು ಮಕ್ಕಳು ಹುಟ್ಟಿ,
ತಮ್ಮ ನಿಜವ ತಾವೇ ತಿಳಿದು,
ಪರಂಜ್ಯೋತಿಯೆಂಬ ಲಿಂಗಾರ್ಚನೆಯ ಮಾಡಿ,
ನಿಷ್ಕ್ರಿಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./225
ಊರೊಳಗೊಬ್ಬ ನಾರಿಯು
ಆರುಮೂರು ಗ್ರಾಮವನೇರಿ ನಿಲ್ಲಲು
ಮೇಲುತುದಿಯಲ್ಲಿ ಒಬ್ಬ ಪುರುಷನು ಉದಯದೋರಲು,
ಆರು ಮೂರು ಗ್ರಾಮವಳಿದು, ಆ ನಾರಿಯ ಪುರುಷ ನುಂಗಿ,
ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./226
ಊರೊಳಗೊಬ್ಬ ಹಗಲುಗಳ್ಳನು ಮನೆಯ ಮಾಡಿಕೊಂಡು
ಐವರು ಇರುಳುಗಳ್ಳರ ಕೂಡಿಕೊಂಡು
ಅರಸಿನ ಅರಮನೆಯ ಕನ್ನವ ಕೊರೆದು
ಮಾಣಿಕ್ಯವ ಕದ್ದು ಐವರು ಕಳ್ಳರಿಗೆ ಕೊಟ್ಟ.
ಅರಸು ಎದ್ದು ಹಗಲುಗಳ್ಳನ ಹಿಡಿದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./227
ಋತುವಿಲ್ಲದ ಹಂಸನು ತತ್ತಿಯನಿಕ್ಕುವುದ ಕಂಡೆನಯ್ಯ.
ಆ ತತ್ತಿಯೊಳಗೆ ಒಂದು ವಿಚಿತ್ರವಿಪ್ಪುದು ನೋಡಾ.
ಅದು ಹೇಗೆಂದಡೆ; ಅದಕ್ಕೆ ಶಿರ ಒಂದು, ಮುಖ ಮೂರು.
ಆರು ಕಂಬದ ಶಿವಾಲಯದೊಳಗೆ ಒಬ್ಬ ಬಾಲಕನ ಕಂಡೆನಯ್ಯ.
ಆ ಬಾಲಕನು ಸಪ್ತಶರಧಿಯ ದಾಂಟಿ,
ಅಷ್ಟಕುಲಪರ್ವತದ ಮೇಲೆ, ಒಂಬತ್ತು ಬಾಗಿಲ ಗುಡಿಯ ಶಿಖರವ ಪೊಕ್ಕು,
ಆ ಶಿಖರದ ಮೇಲೆ ಸ್ವಯಜ್ಞಾನಪ್ರಕಾಶವು
ತೊಳಗಿ ಬೆಳಗುತಿರ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./228
ಎಂಟು ಮೇರುವೆಯ ಮೇಲೆ
ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ.
ಆ ಸತಿಯಳ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ,
ಈಶ್ವರನೆಂಬ ಗದ್ದುಗೆಯ ಮೇಲೆ ನಿಂದು,
ಬ್ರಹ್ಮ ವಿಷ್ಣು ರುದ್ರಾದಿಗಳು ಗುಣತ್ರಯಂಗಳನಳಿದು
ಜ್ಞಾನವೆಂಬ ಸತಿಯಳ ಕೂಡಿಕೊಂಡು.
ಸಾಸಿರದಳ ಕಮಲವಂ ಪೊಕ್ಕು
ಲಿಂಗಧ್ಯಾನವ ಮಾಡುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./229
ಎನ್ನ ನಾನರಿಯದಂದು
ನೀನೇ ಗುರುವಾಗಿ ಎನ್ನ ತೋರಿದೆಯಯ್ಯ.
ಎನ್ನ ತೋರಿದ ಕಾರಣ ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ,
ಶಿವಶಿವಾ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./230
ಏನೂ ಇಲ್ಲದಲ್ಲಿ ಒಂದು ಮರನ ಕಂಡೆನಯ್ಯ.
ಆ ಮರಕೆ ಬುಡವೊಂದು, ಕೊಲ್ಲೆ ಮೂರು,
ಆರು ಕವಲು ಇರ್ಪವು ನೋಡಾ!
ಆ ಮರದ ಭೇದವ ಬಲ್ಲರೆ ಆರಾದರೆ ಹೇಳಿರಯ್ಯ
ಝೇಂಕಾರ ನಿಜಲಿಂಗಪ್ರಭುವೆ./231
ಏನೇನೂ ಇಲ್ಲದಲ್ಲಿ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
ಆ ಪುರುಷಂಗೆ ಒಬ್ಬ ಸತಿಯಳು ಹುಟ್ಟಿದಳು ನೋಡಾ.
ಆ ಸತಿಯಳ ಅಂಗದಲ್ಲಿ ಮೂವರು ಮಕ್ಕಳು ಇರುವುದ ಕಂಡೆನಯ್ಯ.
ಆ ಮಕ್ಕಳು ಒಂದೊಂದು ಎರಡೆರಡಾಗಿ,
ಆರು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ.
ಆ ಕೇರಿಗಳನಳಿದು, ಮೂರು ಮಕ್ಕಳ ಬಿಟ್ಟು
ಆ ಸತಿಯಳ ಅಂಗವ ಕೂಡಿ, ಆ ಪುರುಷನಾಚರಿಸುತಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./232
ಐದರಿಂದತ್ತತ್ತ ಮಹಾಮಹಿಮನ ಕಂಡೆನಯ್ಯ,
ಆ ಮಹಾಮಹಿಮನ ಸಂಗದಿಂದ ಒಬ್ಬ ಸತಿಯಳು ಹುಟ್ಟಿ,
ಚಿಲ್ಲಿಂಗಾರ್ಚನೆಯಂ ಮಾಡಿ,
ಚಿದ್ಘನಸ್ವರೂಪವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./233
ಐದು ಎಲೆಯ ಮಂಟಪದ ಮೇಲೆ
ಒಂದು ಲಿಂಗದ ಗುಡಿಯ ಕಂಡೆನಯ್ಯ.
ಆ ಗುಡಿಯೊಳಗೆ ಒಬ್ಬ ಸತಿಯಳು ನಿಂದು
ತನ್ನ ಸುಳುವಿನ ಭೇದವ ತಾನೇ ನೋಡುತಿರ್ಪಳು ನೋಡಾ !
ಮೇಲಿಂದ ಒಬ್ಬ ಪುರುಷನು ಆ ಸತಿಯಳ ಕೈವಿಡಿದು
ನಿರ್ವಯಲಾದನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./234
ಐದು ಕಂಬದ ಗುಡಿಯ ಶಿಖರದ ಮೇಲೆ
ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತು ನೋಡಾ.
ಆ ಲಿಂಗದ ಬೆಳಗಿನೊಳಗೆ ತನ್ನ ಮರೆದು ನಿಃಪ್ರಿಯನಾದ ಶರಣನ
ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ./235
ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ,
ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ.
ಆ ಗುಡಿಯೊಳಗೊಬ್ಬ ಪುರುಷನು
ಲಿಂಗಾರ್ಚನೆಯ ಮಾಡುತಿರ್ಪನು ನೋಡಾ !
ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ
ನಿರ್ವಯಲಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./236
ಐದು ಕೇರಿಯ ಮೇಲೆ ಒಂದು ಗ್ರಾಮವಿರ್ಪುದು ನೋಡಾ.
ಆ ಗ್ರಾಮದೊಳಗೆ ಒಬ್ಬ ಪರಮಜ್ಞಾನಿಯ ಕಂಡೆನಯ್ಯ.
ಆ ಪರಮಜ್ಞಾನಿಯ ಅಂತರಂಗದೊಳಗೆ
ಅನಂತಕೋಟಿ ಬ್ರಹ್ಮಾಂಡಗಳು ಅಡಗಿರ್ದವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./237
ಐದು ತತ್ವ, ಐದು ಭೂತ, ಐದು ಅಂಗ,
ಐದು ಲಿಂಗ, ಐದು ಸುಗಂಧ,
ಐದರಿಂದತ್ತತ್ತ ಮಹಾಲಿಂಗದ ಬೆಳಗು.
ಆ ಬೆಳಗಿನೊಳು ಕೂಡಿ ತಾನು ತಾನಾಗಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./238
ಐದು ತತ್ವದ ಮೇಲೆ ಒಬ್ಬ ಸತಿಯಳು ಇಪ್ಪಳು.
ಆ ಸತಿಯಳು ಸಾವಿರ ಎಸಳ ಮಂಟಪವ ಪೊಕ್ಕು
ಪರಕ್ಕೆ ಪರವಾದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ./239
ಐದು ತಲೆಯ ಮೇಲೆ ಒಂದು ದೇಗುಲವ ಕಂಡೆನಯ್ಯ.
ಆ ದೇಗುಲದೊಳಗೆ ಒಬ್ಬ ಭಾಮಿನಿಯು ಲಿಂಗಾರ್ಚನೆಯ ಮಾಡಿ
ನಿಃಪ್ರಿಯವಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./240
ಐದು ದಾರಿಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
ಆ ಪುರುಷಂಗೆ ಒಬ್ಬ ಸತಿಯಳಿಪ್ಪಳು ನೋಡಾ.
ಆ ಸತಿಯಳ ಸಂಗದಿಂದ ಆರು ದೇಶವ ದಾಂಟಿ,
ಮೂರು ಗ್ರಾಮವ ಮೀರಿ,
ಪರಕೆಪರವನಾಚರಿಸುತಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./241
ಐದು ಮನೆಯೊಳಗೆ ಏಳುಮಂದಿ ಹೆಂಡರ ಕಂಡೆನಯ್ಯ.
ಆ ಏಳುಮಂದಿ ಹೆಂಡರು
ಎಂಟುಮಂದಿ ನೆಂಟರ ಸಂಗವ ಮಾಡುತಿಪ್ಪರು ನೋಡಾ.
ಕಂಟಕಂಗಳ ಗೆಲಿದ ಪುರುಷನು,
ಎಂಟುಮಂದಿ ನೆಂಟರ ಕೊಂದು,
ಏಳುಮಂದಿ ಹೆಂಡರ ಹಿಡಿದು,
ಐದು ಮನೆಯ ತೊರೆದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./242
ಐದು ಮೇರುವೆಯ ಮೇಲೆ ಐದಿಪ್ಪ ಸತಿಯಳ ಕಂಡೆನಯ್ಯ.
ಆ ಸತಿಯಳ ಸಂಗದಿಂದ ನಾನು ನೀನೆಂಬುದ ಮರೆದು
ತಾನುತಾನಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./243
ಐದು ಮೇರುವೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೊಂದು ಲಿಂಗವ ಕಂಡೆನಯ್ಯ.
ಊರೊಳಗಣ ಪುರುಷನು ಜ್ಞಾನಶಕ್ತಿಯ ಸಂಗವ ಮಾಡಿ
ಆ ಲಿಂಗದಲ್ಲಿ ಕೂಡಿ ನಿಃಪ್ರಿಯವನೈದಿದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./244
ಐದು ಮೇರುವೆಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
ಆ ಪುರುಷನು ತನ್ನ ನಿಲವ ತಾನೇ ನೋಡಿ
ಸಾವಿರ ಎಸಳ ಮಂಟಪವ ಪೊಕ್ಕು, ಶಿಖಾಚಕ್ರದಲ್ಲಿ ನಿಂದು,
ಪಶ್ಚಿಮಚಕ್ರದಲ್ಲಿಪ್ಪ ನಿರಂಜನಜ್ಯೋತಿಯ ಬೆಳಗನೊಳಕೊಂಡು
ಸಾಜಸಮಾಧಿಯಲ್ಲಿ ನಿಂದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./245
ಐದು ಮೇರುವೆಯ ಮೇಲೆ ಪರಮಲಿಂಗವ ಕಂಡೆನಯ್ಯ!
ಆ ಲಿಂಗದಲ್ಲಿ ಕೂಡಿ ನಿಲರ್ೆಪಕನಾದ ಶರಣನು,
ಸಕಲ ಭ್ರಮೆಯಂಗಳನಳಿದು ತಾನುತಾನಾಗಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./246
ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ.
ಆ ಮಾಣಿಕ್ಯವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ.
ಆ ಕೋಗಿಲೆಯ ಒಬ್ಬ ಬೇಂಟೆಕಾರ ಕಂಡು
ತಟ್ಟನೆ ಎಚ್ಚಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./247
ಐವತ್ತೆರಡು ಎಸಳ ತಾವರೆಯ ಗದ್ದುಗೆಯ ಮೇಲೆ
ಸ್ವಯಂಪ್ರಕಾಶವೆಂಬ ಲಿಂಗವು ತೊಳಗಿ ಬೆಳಗುತಿರ್ಪುದಯ್ಯ.
ಆ ಬೆಳಗಿನೊಳಗೆ ಐದು ರತ್ನಂಗಳಿಪ್ಪವು ನೋಡಾ !
ಒಬ್ಬ ಜಾಲಗಾರನು ಐದು ರತ್ನಂಗಳನಾಯ್ದುಕೊಂಡು
ಸ್ವಯಂಪ್ರಕಾಶವೆಂಬ ಲಿಂಗಕ್ಕೆ ಏರಿಸಿ
ಆ ಜಾಲಗಾರನ ನಿರ್ವಯಲು ನುಂಗಿದ್ದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./248
ಐವತ್ತೆರಡು ದೇಶವನು ಒಂದು ಕಪ್ಪೆ ನುಂಗಿ ಕೂಗುವುದ ಕಂಡೆನಯ್ಯ.
ಆ ಕೂಗ ಕೇಳಿ ಒಂದು ಸರ್ಪನು ಸ್ವರ್ಗ ಮರ್ತ್ಯ ಪಾತಾಳವನೊಡೆದು
ಆ ಕಪ್ಪೆಯ ನುಂಗಿದುದ ಕಂಡೆನಯ್ಯ.
ಹಂತೆಲಿರ್ದ ಕೋಳಿ ಮೂವರ ನುಂಗಿದುದ ಕಂಡೆನಯ್ಯ,
ಝೇಂಕಾರ ನಿಜಲಿಂಗಪ್ರಭುವೆ./249
ಐವತ್ತೆರಡು ಸೋಪಾನದ ಮೇಲೆ
ಪರವಾಸನಿಯೆಂಬ ಸತಿಯಳ ಕಂಡೆನಯ್ಯ.
ಆ ಸತಿಯಳ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ,
ಮೂವತ್ತಾರು ಕೇರಿಗಳಲ್ಲಿ ಸುಳಿದಾಡುತಿಪ್ಪನು ನೋಡಾ.
ಆ ಬಾಲಕನ ಇರುವೆ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./250
ಐವತ್ತೆರಡೆಸಳಿನ ಸ್ಥಾವರಗದ್ದುಗೆಯ ಮೇಲೆ
ಪರಂಜ್ಯೋತಿಲಿಂಗವ ಕಂಡೆನಯ್ಯ.
ಆ ಲಿಂಗದೊಳಗೆ ಅನಂತಕೋಟಿ ನೋಮಸೂರ್ಯರ ಬೆಳಗು ನೋಡಾ.
ಆ ಬೆಳಗ ನೋಡಹೋಗದ ಮುನ್ನ, ಅದು ಎನ್ನ ನುಂಗಿ,
ಬೆಳಗು ತನ್ಮಯವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./251
ಐವರು ಅಂಗನೆಯರು
ಒಂಬತ್ತು ಮನೆಯ ಬಾಗಿಲವ ಮಾಡಿಕೊಂಡು
ಕುಂಭಿನಿಯ ಶಿವಾಲಯಕ್ಕೆ ಹೋಗಿ
ಶಂಭುಲಿಂಗಾರ್ಚನೆಯ ಮಾಡಿ
ಗಗನಂಬರಗಿತ್ತಿಯರಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./252
ಐವರು ಕನ್ನೆಯರು ಮೇರುವೆಯ ಗುಡಿಯ ಹತ್ತಿ
ತಮತಮಗೆ ಲಿಂಗಾರ್ಚನೆಯ ಮಾಡುತಿರ್ಪರು ನೋಡಾ!
ಅವರಿಂಗೆ ಸ್ವಾನುಭಾವ ಉದಯದೋರಿ
ನಿಷ್ಪತಿಯಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./253
ಐವರು ನಾರಿಯರು ತ್ರಿಕೂಟದ ಗಿರಿಯನೇರಿ
ಚಿದಂಗನೆಯ ಸಂಗದಿಂದ
ನಿಶ್ಚಿಂತ ನಿರಾಕುಳ ನಿರ್ಭರಿತವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./254
ಐವರು ಭಾಮಿನಿಯರು ಐದು ಮುಖದಲ್ಲಿ ನಿಂದು,
ಬೇರೊಂದು ಸ್ಥಾನದಲ್ಲಿ ಒಬ್ಬ ಪುರುಷ ನಿಂದು,
ಸಕಲವನೊಳಕೊಂಡು, ನಿಃಕಲನಾಗಿಪ್ಪನು ನೋಡಾ,
ಆ ನಿಃಕಲವನರಿತು ಆಚರಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./255
ಒಂದು ಕಪ್ಪೆ ನವಗ್ರಹಗಳ ನುಂಗಿ ಕೂಗುತ್ತಿದೆ ನೋಡಾ.
ಆ ಕೂಗ ಕೇಳಿ ಒಂದು ಸರ್ಪನು ಸ್ವರ್ಗ ಮರ್ತ್ಯ ಪಾತಾಳವನೊಡೆದು
ನಿರ್ವಯಲೆಂಬ ಆದಿಯನೇರಿ ಆ ಕಪ್ಪೆಯ ನುಂಗಿದರ್ುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./256
ಒಂದು ಗುಡಿಯೊಳಗೆ ಮೂರು ಲಿಂಗವ ಕಂಡೆನಯ್ಯ.
ನವಗೃಹಂಗಳ ಮೀರಿ ನಿಂದಿರುವ ಪುರುಷನ ಕಂಡು
ಎನ್ನ ಮನದ ಭ್ರಾಂತು ಹಿಂಗಿತು ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./257
ಒಂದು ದಾರಿಯ ಮೇಲೆ ಎರಡು ಮಿಕವಿಪ್ಪವು ನೋಡಾ.
ಎರಡು ಮಿಕವಿಪ್ಪಲ್ಲಿ ಮೂರು ಕೇರಿಗಳಿಪ್ಪವು ನೋಡಾ.
ನಾಲ್ವರು ಪುರುಷರು ಐವರ ಸಂಗವ ಮಾಡಿ,
ಆರು ದೇಶವ ಪೊಕ್ಕು, ಏಳು ಸಾಗರವ ದಾಂಟಿ,
ಅಷ್ಟಕುಲ ಪರ್ವತವ ಮೆಟ್ಟಿ, ಒಂಬತ್ತು ದ್ವಾರಂಗಳ ದಾಂಟಿ,
ಹತ್ತನೆಯ ಮನೆಯಲ್ಲಿ ನಿಂದು,
ಬರಿದಾದ ಮನೆಗೆ ಹೋಗಿ ಬರುವ ಶರಣನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./258
ಒಂದು ಬಿಚ್ಚಿ ಮೂರಾದುದ ಕಂಡೆನಯ್ಯ.
ಮೂರು ಬಿಚ್ಚಿ ಆರಾದುದ ಕಂಡೆನಯ್ಯ.
ಆರು ಬಿಚ್ಚಿ ಮೂವತ್ತಾರಾದುದ ಕಂಡೆನಯ್ಯ.
ಮೂವತ್ತಾರರಲ್ಲಿ ಒಬ್ಬ ಸತಿಯಳಿಪ್ಪಳು.
ಆ ಸತಿಯಳು ಆರು ಕೇರಿಯ ಪೊಕ್ಕು, ಮೂರು ಬಾಗಿಲ ಮುಚ್ಚಿ,
ಮೀರಿದ ಲಿಂಗದಲ್ಲಿ ತಾನು ತಾನಾಗಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./259
ಒಂದು ಮುಳ್ಳುಮೊನೆಯ ಮೇಲೆ
ಅರವತ್ತು ಆರು ಕೋಟಿ ಪಟ್ಟಣಂಗಳು ಪುಟ್ಟಿಇದ್ದಾವು ನೋಡಾ !
ಪಾತಾಳಲೋಕದಲ್ಲಿ ಆಧಾರವೆಂಬ ಠಾಣ್ಯ; ಬ್ರಹ್ಮನೆಂಬ ಮುಜುಮದಾರ.
ಮರ್ತ್ಯಲೋಕದಲ್ಲಿ ಸ್ವಾಧಿಷ್ಠವೆಂಬ ಠಾಣ್ಯ; ವಿಷ್ಣುವೆಂಬ ಹುದ್ದೆಯದಾರ.
ಸ್ವರ್ಗಲೋಕದಲ್ಲಿ ಮಣಿಪೂರಕವೆಂಬ ಠಾಣ್ಯ; ರುದ್ರನೆಂಬ ಮಹಲದಾರ.
ತತ್ಪುರುಷಲೋಕದಲ್ಲಿ ಅನಾಹತವೆಂಬ ಠಾಣ್ಯ; ಈಶ್ವರನೆಂಬ ಗೌಡ .
ಈಶಾನ್ಯಲೋಕದಲ್ಲಿ ವಿಶುದ್ಧಿಯೆಂಬ ಠಾಣ್ಯ; ಸದಾಶಿವನೆಂಬ ಪ್ರಧಾನಿ.
ಅಂಬರಲೋಕದಲ್ಲಿ ಆಜ್ಞೇಯವೆಂಬ ಠಾಣ್ಯ; ಪರಶಿವನೆಂಬ ಅರಸು.
ನಾದಲಕ್ಷ ಬಿಂದುಲಕ್ಷ ಕಳಾಲಕ್ಷ ಇಂತೀ ತ್ರಿವಿಧಲಕ್ಷವನೊಳಕೊಂಡು
ಪರಶಿವನೆಂಬ ಅರಸು ಕೂಡಿ ವಿಶ್ವತೋ ಬೆಳಗಿಂಗೆ ಬೆಳಗಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./260
ಒಂದು ಲಿಂಗ ಮೂರಾಗಿತ್ತು ನೋಡಾ.
ಆ ಲಿಂಗವ ಒಬ್ಬ ಚಿದಂಗನೆ ಕಂಡು
ಮನೋಹರನೆಂಬ ಪೂಜಾರಿಂಗೆ ಹೇಳಲು
ಆ ಪೂಜಾರಿಯು ಸಾಸಿರದಳಮಂಟಪವ ಪೊಕ್ಕು
ಆ ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./261
ಒಂದು ಲಿಂಗಕ್ಕೆ ಮುನ್ನೂರು ಮುಖ,
ಆರುಸಾವಿರ ಹಸ್ತ, ಮೂವತ್ತಾರು ಲಕ್ಷ ಪಾದಂಗಳು,
ನವಕೋಟಿ ಮನೆಗಳಲ್ಲಿ ಸುಳಿದಾಡುತಿಪ್ಪನು ನೋಡಾ.
ಆ ನವಕೋಟಿಬಾಗಿಲ ಮುಚ್ಚಿ ನೋಡಲು,
ಕಡೆಯ ಬಾಗಿಲಲ್ಲಿ ಕಪ್ಪೆ ಕುಳಿತು ಕೂಗುತ್ತಿದೆ ನೋಡಾ.
ಆ ಕೂಗಿನ ಶಬ್ದವ ಕೇಳಿ, ಪಾತಾಳಲೋಕದಲ್ಲಿಪ್ಪ ಸರ್ಪನೆದ್ದು,
ಆ ಕಪ್ಪೆಯ ನುಂಗಿ, ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./262
ಒಂದು ಲಿಂಗದ ಸಂಗದಿಂದ ಒಬ್ಬ ಭಾಮಿನಿಯು ಹುಟ್ಟಿದಳು ನೋಡಾ!
ಆಕೆಯ ಒಡಲಲ್ಲಿ ಸ್ವರ್ಗ ಮರ್ತ್ಯ ಪಾತಾಳವ ಕಂಡೆನಯ್ಯ.
ಈರೇಳುಭುವನ ಹದಿನಾಲ್ಕು ಲೋಕಂಗಳ ಕಂಡೆನಯ್ಯ.
ಅಷ್ಟಕುಲಪರ್ವತವ ಕಂಡೆನಯ್ಯ.
ಸಪ್ತೇಳು ಸಾಗರವ ಕಂಡೆನಯ್ಯ.
ಹತ್ತು ಮೇರುವೆಯ ಮೀರಿ, ಕಡೆಯ ಬಾಗಿಲ ಮುಂದೆ ನಿಂದಿರುವುದ ಕಂಡೆನಯ್ಯ.
ಅಲ್ಲಿಂದತ್ತತ್ತ ತನ್ನ ಗಮನವ ತಾನೇ ನುಂಗಿ,
ನಿರ್ವಯಲಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./263
ಒಂದು ಲಿಂಗದ ಸಂಗದಿಂದ ಮೂವರು ಪುರುಷರು ಹುಟ್ಟಿದರು ನೋಡಾ!
ಅವರಿಂಗೆ ಆರು ಮಂದಿ ಅಂಗನೆಯರ ಮದುವೆಯ ಮಾಡಿ
ಒಬ್ಬ ಕುಂಟಿಣಿಗಿತ್ತಿಯು ಬಂದು
ಆರು ಮಂದಿ ಅಂಗನೆಯರ ಮೂವರು ಗಂಡರಿಗೆ ಕೊಟ್ಟು
ಆ ಕುಂಟಿಣಿಗಿತ್ತಿಯು ಲಿಂಗದೊಳು ಮಡಿದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./264
ಒಂದೊಂದಾಗಿ ಕೂಡಿದಲ್ಲಿಗೆ ಬಂದನಯ್ಯ ಒಬ್ಬ ವಿಶ್ವಾಸಘಾತಕನು.
ಒಂದು ಒಂದಾಗಿದರ್ುದ ಕೆಡಿಸಿ
ಛಂದವಾಯಿತೆಂದೆಂಬ ಮುದುಗುರಿಯ ಮುಖವ ನೋಡಲಾಗದು ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./265
ಒಂಬತ್ತು ತಲೆಯ ಮೇಲೆ ಶಂಭುಲಿಂಗದ ಗುಡಿಯ ಕಂಡೆನಯ್ಯ.
ಆ ಗುಡಿಯೊಳಗೆ ಒಬ್ಬ ಸತಿಯಳು
ತನ್ನ ಸುಳುವ ತಾನೆ ತೋರುತಿರ್ಪಳು ನೋಡಾ !
ಒಬ್ಬ ಮಾನವನು ಸುಳುವಿನ ಭೇದವನರಿತು
ನೆನವೆಂಬ ಸತಿಯಳ ಕೂಡಿಕೊಂಡು
ಆ ಗುಡಿಯ ಪೊಕ್ಕು ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./266
ಒಂಬತ್ತು ಬಾಗಿಲ ತ್ರಿಪುರದ ಮುಂದೆ
ಸ್ವಯಂಪ್ರಕಾಶವೆಂಬ ಲಿಂಗವ ಕಂಡೆನಯ್ಯ.
ಆ ಲಿಂಗದ ಕಿರಣದೊಳಗೆ ಐವರು ಶಕ್ತಿಯರ ಕಂಡೆನಯ್ಯ.
ಒಬ್ಬ ಪುರುಷನು ಪರಬ್ರಹ್ಮದ ನಿಲವಿಂಗೆ ಹೋದೇನು ಹೋಗೆನೆಂದರೆ
ತನ್ನ ಸುಳುವಿನ ಭೇದವ ತಾನೇ ನುಂಗಿ
ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./267
ಒಂಬತ್ತು ಬಾಗಿಲ ಪಟ್ಟಣದೊಳಗೆ
ಇಂಬುಗೊಂಡಿಪ್ಪ ತಳವಾರನ ಕಂಡೆನಯ್ಯ.
ಆ ತಳವಾರನ ಅತ್ತೆ ಅಳಿಯ ಮಾವ ಮೂವರೂ ಕೂಡಿಕೊಂಡು
ಬತ್ತಲೆಯಾದ ಭಾಮಿನಿಯ ಸಂಗವ ಮಾಡಲು
ಅತ್ತೆ ಅಳಿಯ ಮಾವ ಮೂವರೂ ಬಯಲಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./268
ಒಂಬತ್ತು ಬಾಗಿಲ ಮನೆಯೊಳಗೆ ಅಂಬರಗಿತ್ತಿಯ ಕಂಡೆನಯ್ಯ.
ಆ ಅಂಬರಗಿತ್ತಿಯು ಶಂಭುನಾರೇರ ಕೂಡಿಕೊಂಡು,
ಸಾವಿರೆಸಳಮಂಟಪಕೆ ಹೋಗಿ, ಚಿದುಲಿಂಗಾರ್ಚನೆಯ ಮಾಡಿ,
ಚಿದಾನಂದಸ್ವರೂಪವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./269
ಒಂಬತ್ತು ಬಾಗಿಲ ಮನೆಯೊಳಗೆ ಆರು ಮೂರು ಕೋಣೆಯ ಮುಂದೆ
ಒಂದು ಲಿಂಗವ ಕಂಡೆನಯ್ಯ.
ಆ ಲಿಂಗದ ಕಿರಣವ ಒಬ್ಬ ಸತಿಯಳು ಕಂಡು ತನ್ನ ಪುತ್ರಂಗೆ ಹೇಳಲು
ಆ ಪುತ್ರನು ನಿರಾಮಯವೆಂಬ ಕರಸ್ಥಲದಲ್ಲಿ ನಿಂದು ರಾಜಿಸುತಿರ್ಪ ನೋಡಾ !
ಆ ಕರಸ್ಥಲದ ಮೇಲೆ ಒಂದು ಲಿಂಗವ ಕಂಡೆನಯ್ಯ.
ಆ ಲಿಂಗದ ಸಂತತಿಯಲ್ಲಿ ಮೂವರು ಪೂಜಾರಿಗಳು
ಲಿಂಗಾರ್ಚನೆಯ ಮಾಡುತಿರ್ಪರು ನೋಡಾ !
ಊರೊಳಗಣ ಸತಿಯಳು ಒಂಬತ್ತು ಸೋಪಾನಂಗಳನೇರಿ
ಮಂಗಳಾರತಿಯನೆತ್ತಿ ಆ ಲಿಂಗಕ್ಕೆ ಬೆಳಗುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./270
ಒಂಬತ್ತು ಬಾಗಿಲ ಮನೆಯೊಳಗೆ
ಒಂದು ಪಕ್ಷಿ ಇಂಬನರಿತು ಗೂಡನಿಕ್ಕುವುದ ಕಂಡೆನಯ್ಯ.
ಅದು ಹೇಗೆಂದಡೆ: ಅದಕ್ಕೆ ಬುಡವೊಂದು, ಕೊನೆ ಮೂರು,
ಆರು ಕಂಬದ ಶಿವಾಲಯವ ರಚಿಸಿ,
ಇಪ್ಪತ್ತೈದು ಸೋಪಾನಂಗಳ ಮಾಡಿ,
ಐವತ್ತೆರಡು ಎಸಳಿನಿಂದ ರಚಿಸಿ ಆಡುವ ಹಂಸನ
ಒಬ್ಬ ಸತಿಯಳು ಹಿಡಿದು, ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./271
ಒಂಬತ್ತು ಬಾಗಿಲ ಮನೆಯೊಳಗೆ
ತುಂಬಿಕೊಂಡಿಪ್ಪ ಮಹಾಲಿಂಗವ ಕಂಡೆನಯ್ಯ.
ಆ ಲಿಂಗದ ಸಂಗದಿಂದ ನಾನುನೀನೆಂಬುದ ಮರೆದು
ಅವಿರಳಸ್ವಾನುಭಾವಸಿದ್ಧಾಂತವನರಿತು ನಿರಂಜನದೇಶಕೆ ಹೋಗಿ
ನಿರವಯವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./272
ಒಂಬತ್ತು ಮಂದಿರದೊಳಗೆ
ತುಂಬಿಕೊಂಡಿರ್ಪ ಮಹಾಘನಲಿಂಗವ ಕಂಡೆನಯ್ಯ.
ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ನಿಂದು,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭಿಕರಿಸಿಕೊಂಡು
ನಿತ್ಯನಿಜದಾರಂಭಕ್ಕೆ ಹೋಗಿ ಪರವಶವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./273
ಒಂಬತ್ತು ಮನೆಯೊಳಗೆ ಸುಳಿದಾಡುವ ಮಾನವಂಗೆ
ಐವರು ಮಕ್ಕಳು ಹುಟ್ಟಿದರು ನೋಡಾ !
ಮೇಲಿಂದ ಒಬ್ಬ ಸತಿಯಳು ಐವರು ಮಕ್ಕಳ ಕೂಡಿಕೊಂಡು
ಆ ಮಾನವನ ನುಂಗಿ, ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./274
ಒಂಬತ್ತು ಸೋಪಾನದ ಮೇಲೆ
ತುಂಬಿ ತೋರುತ್ತಿತ್ತಯ್ಯ ಒಂದು ಲಿಂಗ.
ಆ ಲಿಂಗದ ಕುರುಹು ಬ್ರಹ್ಮ ವಿಷ್ಣು ರುದ್ರಾದಿಗಳಿಗೆ
ಅಗೋಚರವೆನಿಸಿತ್ತು ನೋಡಾ.
ನಿಃಶಬ್ದ ನಿರಾಳವಾದ ಶರಣನು
ಆ ಲಿಂಗಧ್ಯಾನವ ಮಾಡುತಿರ್ಪನು ನೋಡಾ.
ಝೇಂಕಾರ ನಿಜಲಿಂಗಪ್ರಭುವೆ./275
ಒಬ್ಬ ಕನ್ನೆಯ ಮನೆಯೊಳಗೆ ಐವರು ಪುರುಷರ ಕಂಡೆನಯ್ಯ.
ಆ ಐವರು ಪುರುಷರ ಒಂದು ಇರುವೆ ನುಂಗಿತ್ತು ನೋಡಾ.
ಆ ಇರುವೆಯ ನಿರ್ವಯಲು ನುಂಗಿ ನಿಃಶಬ್ದವಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./276
ಒಬ್ಬ ಕನ್ನೆಯು ಐದು ಮುಖದ ಪಕ್ಷಿಯ ಸಂಗವ ಮಾಡಲು
ಮೇಲಿಂದ ಒಬ್ಬ ಪುರುಷನ ನೋಡಲು
ಪಕ್ಷಿಯು ಗಗನಕ್ಕೆ ಹಾರಿ ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./277
ಒಬ್ಬ ಪುರುಷನು ಐದು ಮುಖದ ಸೂಳೆಯ ಸಂಗವ ಮಾಡಲು
ಆ ಸೂಳೆಯ ಬಸುರಲ್ಲಿ ಒಬ್ಬ ಮಗ ಹುಟ್ಟಿ
ಆ ಪುರುಷನ ನುಂಗಿ, ಲಿಂಗಾರ್ಚನೆಯ ಮಾಡುವುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./278
ಒಬ್ಬ ಪುರುಷನು ಮೂರು ಶಿವಾಲಯವಂ ಪೊಕ್ಕು,
ಆರು ದೇಗುಲಕ್ಕೆ ಬಂದು, ಮೂವತ್ತಾರು ಲಿಂಗಾರ್ಚನೆಯಂ ಮಾಡಿ,
ಆರು ದೇಗುಲವಂ ಪೊಕ್ಕು, ಮೂರು ಶಿವಾಲಯವ ದಾಂಟಿ
ತನ್ನ ಮನೆಗೆ ಹೋಗುವುದ ತಾನೆ ಬಲ್ಲನಯ್ಯ
ಝೇಂಕಾರ ನಿಜಲಿಂಗಪ್ರಭುವೆ./279
ಒಬ್ಬ ಮಾನವನ ಕರಸ್ಥಲದಲ್ಲಿ ಮೂರು ಲಿಂಗವ ಕಂಡೆನಯ್ಯ.
ಮೂರು ಲಿಂಗದಲ್ಲಿ ಆರು ಕೇರಿಯ ಕಂಡೆನಯ್ಯ.
ಆರು ಕೇರಿಯಲ್ಲಿ ಒಂಬತ್ತು ದೇಗುಲವ ಕಂಡೆನಯ್ಯ.
ಆ ಒಂಬತ್ತು ದೇಗುಲದ ಮೇಲೆ ಒಂದು ಶಿವಾಲಯವಿರ್ಪುದು ನೋಡಾ.
ಆ ಶಿವಾಲಯವ ಪೊಕ್ಕು, ಆ ಮಾನವನ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./280
ಒಬ್ಬ ಶಿವನ ಕರಸ್ಥಲದಲ್ಲಿ ಐದು ಲಿಂಗವ ಕಂಡೆನಯ್ಯ.
ಐದು ಲಿಂಗಕ್ಕೆ ಇಪ್ಪತ್ತೈದು ಮುಖವ ಕಂಡೆನಯ್ಯ.
ಆ ಮುಖಂಗಳಲ್ಲಿ ಜ್ಞಾನಶಕ್ತಿ ಉದಯವಾದಳು ನೋಡಾ.
ಆ ಸತಿಯಳ ಅಂಗನು ಕೂಡೆ, ಆ ಶಿವನ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./281
ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ
ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ.
ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ,
ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ,
ಸುಜ್ಞಾನವೆಂಬ ರಂಗವಾಲಿಯ ತುಂಬಿ,
ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ,
ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./282
ಒಬ್ಬ ಸತಿಯಳು ಪಂಚಮುಖದ ಸರ್ಪನ ಸಾಕುವುದ ಕಂಡನಯ್ಯ.
ಮೇಲಿಂದ ಒಬ್ಬ ಗಾರುಡಿಗನು ನಾಗಸ್ವರವನೂದಲು
ಆ ಸರ್ಪ ನಾಗಸ್ವರದ ನಾದವ ಕೇಳಿ
ಆ ಗಾರುಡಿಗನ ನುಂಗಿ ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./283
ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು
ರಾಜಿಸುತಿಪ್ಪನು ನೋಡಾ!
ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು.
ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ.
ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ
ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ
ಝೇಂಕಾರ ನಿಜಲಿಂಗಪ್ರಭುವೆ./284
ಒಬ್ಬಳ ಬಸಿರಲಿ ಶಿಶುವು ಹುಟ್ಟಿ,
ಬ್ರಹ್ಮರಂಧ್ರವೆಂಬ ತೊಟ್ಟಿಲು ಕಟ್ಟಿ, ಆ ಶಿಶುವ ಮಲಗಿಸಿ,
ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಫಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿಚ್ಫಕ್ತಿ
ಈ ಶಕ್ತಿಯರು ಆ ಶಿಶುವಿಂಗೆ ಜೋಗುಳವ ಪಾಡುತಿರ್ದರು ನೋಡಾ!
ಆ ಶಿಶುವಿಂಗೆ ಹಡೆದ ತಾಯಿ ಬಂದು
ಚಂದ್ರ ಸೂರ್ಯರೆಂಬ ದೀವಿಗೆಯಂ ಮುಟ್ಟಿಸಿ,
ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಪಂಚದೀಪವನ್ನಿಕ್ಕಿ
ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳಯ್ಯ
ಝೇಂಕಾರ ನಿಜಲಿಂಗಪ್ರಭುವೆ./285
ಒಬ್ಬಳ ಸಂಗದಿಂದ ಐವರು ಮೊದಲಗಿತ್ತೇರು ಬಂದ ಬೆಡಗ ನೋಡಾ!
ಮಹಾ ಅರಿವುಯೆಂಬ ಗದ್ದುಗೆಯ ಮೇಲೆ, ಮದಲಿಂಗನ ಕುಳ್ಳಿರಿಸಿ,
ಕೆಂಡದ ಬಾಸಿಂಗ ಕಟ್ಟಿ, ಉರಿಯ ಹಚ್ಚಡ ಹೊಚ್ಚಿ,
ಆ ಮದಲಿಂಗನ ಬಸುರಲಿ ಬಂದ ಶಿಶುವು ನಲಿನಲಿದಾಡುತ್ತ ಇರಲು
ಅಲ್ಲಿ ಒಬ್ಬಳು ಕಂಡು ಎತ್ತಿಕೊಂಡು
ಗಮನಕ್ಕೆ ನಿರ್ಗಮನವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./286
ಒಲ್ಲೆನೆಂಬ ಭಾವವು ಎಲ್ಲರಿಗೂ ಸಲ್ಲದು ಬಿಡಿರೊ.
ಬಲ್ಲೆಬಲ್ಲೆನೆಂದು ನಾನಾ ದೇವ ದಾನವ ಮಾನವರು ಅಳಿದರು ನೋಡಾ.
ಇದು ಶಿವನೊಲಿದ ಜ್ಞಾನವು,
ಭಾವ ಬೆರಗಾದ ಕಾರಣ ಉದಯವಾಯಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./287
ಒಳಗ ಹೊರಗು ನುಂಗಿ, ಹೊರಗ ಒಳಗು ನುಂಗಿ,
ಒಳ ಹೊರಗೆ ಇಲ್ಲದೆ, ಬೆಳಗಿಂಗೆ ಬೆಳಗು ನುಂಗಿ,
ಬೆಳಗು ತನ್ಮಯವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./288
ಒಳಗೆ ನೋಡಿದರೆ ತಾನೇ, ಹೊರಗೆ ನೋಡಿದರೆ ತಾನೇ,
ಒಳಗು ಹೊರಗ ನುಂಗಿತ್ತು, ಹೊರಗು ಒಳಗ ನುಂಗಿತ್ತು,
ಒಳಗೆ ಹೊರಗೆ ಇಲ್ಲದೆ ತಾನು ತಾನಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./289
ಒಳಗೆ ನೋಡಿದರೆ ನಿರಾಕುಳಲಿಂಗವು.
ಹೊರಗೆ ನೋಡಿದರೆ ನಿರಾಕುಳಲಿಂಗವು.
ಒಳಹೊರಗೆ ಪರಿಪೂರ್ಣವಾದ ಶರಣಂಗೆ
ಇಹಲೋಕವೆಂದಡೇನಯ್ಯಾ? ಪರಲೋಕವೆಂದಡೇನಯ್ಯಾ?
ಇಹಪರವನೊಳಕೊಂಡು ತಾನು ತಾನಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./290
ಒಳಹೊರಗೆ ಪರಿಪೂರ್ಣವಾಗಿಹ ಮೂಲ ಪ್ರಣವವ ತಿಳಿದು
ಪರಮಾನಂದದೊಳು ಕೂಡಿ
ಅತ್ತತ್ತಲೆ ಪರಕೆಪರವಶವಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./291
ಒಳಹೊರಗೆ ಪರಿಪೂರ್ಣವಾಗಿಹ ಲಿಂಗದಲ್ಲಿ
ಸಂಗಸಂಯೋಗದಿಂದ ಸಮರಸವನೈದಿ
ನಿರ್ವಿಕಲ್ಪ ನಿತ್ಯಾತ್ಮನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./292
ಒಳಹೊರಗೆ ಪರಿಪೂರ್ಣವಾದ ನಿಃಕಲಪರಬ್ರಹ್ಮಲಿಂಗದೊಳು ಕೂಡಿ
ನಿಃಪ್ರಿಯವಾದ ಮಹಾಮಹಿಮನ ಕಂಡು
ನಿಶ್ಚಿಂತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./293
ಒಳಹೊರಗೆ ಪರಿಪೂರ್ಣವಾದ ನಿಜಬೆಳಗಿನೊಳಗೆ
ಮಹಾಮಹಿಮನ ಕಂಡು ನಿಶ್ಚಿಂತನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./294
ಒಳಹೊರಗೆ ಪರಿಪೂರ್ಣವಾದ ಮಹಾಶರಣನ ಸಂಗದಿಂದ
ನಿಶ್ಚಿಂತ ನಿರಾಕುಳ ನಿರ್ಭರಿತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./295
ಒಳಹೊರಗೆ ಪರಿಪೂರ್ಣವಾದ ಸ್ವಯಜ್ಞಾನಿ
ಕ್ರಿಯಾಮಯ ನಾನಯ್ಯ, ನಿಃಕ್ರಿಯ ನಾನಯ್ಯ,
ಶೈವ ನಾನಯ್ಯ, ವೀರಶೈವ ನಾನಯ್ಯ,
ಧರ್ಮವೇ ನಾನಯ್ಯ, ಅಧರ್ಮವೇ ನಾನಯ್ಯ,
ಬೇಕುವೆ ನಾನಯ್ಯ, ಬೇಡವೆ ನಾನಯ್ಯ,
ಅಹುದು ನಾನಯ್ಯ, ಅಲ್ಲವೆ ನಾನಯ್ಯ,
ನೀನು ನಾನಯ್ಯ, ನಾನುವೆ ನಾನಯ್ಯ, ಏನೇನುವೆ ನಾನಯ್ಯ
ಝೇಂಕಾರ ನಿಜಲಿಂಗಪ್ರಭುವೆ./296
ಓಂ ನಮಃ ಶಿವಾಯವೆಂಬ ಷಡಕ್ಷರಮಂತ್ರವ
ಮಹಾಜ್ಞಾನದಿಂದ ತಿಳಿದು,
ನಿರಪೇಕ್ಷಲಿಂಗದೊಳು ಕೂಡಿ
ನಿಸ್ಸಂಗಿ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./297
ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು.
ತಾನುತಾನೆಂಬುದು ಭಾವಕೆ ತೋರದಂದು.
ಎಂತಿರ್ದ ಬ್ರಹ್ಮವು ತಾನೇ ನೋಡಾ !
ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ.
ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ.
ಆ ಜ್ಞಾನಾತ್ಮನ ಭಾವದಿಂದ ಆಧ್ಯಾತ್ಮನಾದ.
ಆ ಆಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ.
ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ.
ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ.
ಆ ಬದ್ಧಾತ್ಮನ ಭಾವಕೆ ಭಕ್ತನಾದ.
ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ.
ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ
ಆ ಆಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ.
ಆ ಜ್ಞಾನಾತ್ಮನ ಭಾವಕೆ ಶರಣನಾದ.
ಆ ಚಿದಾತ್ಮನ ಭಾವಕೆ ಐಕ್ಯನಾದ.
ಆ ಐಕ್ಯನ ಕರಕಮಲಕೆ ಮಹಾಲಿಂಗನಾದ.
ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ.
ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ.
ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ.
ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ.
ಆ ಭಕ್ತನ ಕರಕಮಲಕೆ ಆಚಾರಲಿಂಗನಾದ.
ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ,
ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ,
ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ.
ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ
ಚಿದಾನಂದಸ್ವರೂಪವಾದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./298
ಓಂ ಪ್ರಥಮದಲ್ಲಿ ಲಜ್ಜೆಗೆಟ್ಟು ಕಳ್ಳನು ಐವರ ಕೂಡಿಕೊಂಡು
ಮಹಾಜ್ಞಾನವೆಂಬ ಕನ್ನಗಂಡಿಯ ಕೊರೆದು,
ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯವ ಕದ್ದು,
ಆರು ಕೇರಿಯ ದಾಂಟಿ, ಮೂರು ಗ್ರಾಮವ ವಿೂರಿ ಹೋದ ಕಳ್ಳನ
ಏಕೋಭಾವವೆಂಬ ಕಂಬಕ್ಕೆ ಕಟ್ಟಿ, ಕಂಬ ಕರಗಿ,
ಕಳ್ಳ ಅಡಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./299
ಓಂಕಾರವೆಂಬ ಉಲುಹಿನಲ್ಲಿ ಪ್ರಣವಸೋಹಂಕಾರವಿಡಿದು
ಆಚರಿಸುತಿದ್ದನಯ್ಯ ಆ ಶರಣನು.
ಆ ಶರಣಂಗೆ ಇಹಲೋಕವೆಂದಡೇನು? ಪರಲೋಕವೆಂದಡೇನು?
ಇಹಪರವನೊಳಕೊಂಡು ತಾನು ತಾನಾದ ಭೇದವ ತಾನೇ ಬಲ್ಲನಯ್ಯ
ಝೇಂಕಾರ ನಿಜಲಿಂಗಪ್ರಭುವೆ./300
ಓಂಕಾರವೆಂಬ ಮೂಲಮಂತ್ರದಲ್ಲಿ
ಲಿಂಗಸಂಗಿಯಾದ ಶರಣನು ಅನುಪಮ ಲಿಂಗೈಕ್ಯನು ನೋಡಾ.
ಅಂತಪ್ಪ ಲಿಂಗೈಕ್ಯಂಗೆ
ಓಂ ನಮೋ ಓಂ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./301
ಓಂಕಾರವೆಂಬ ಲಿಂಗದಲ್ಲಿ ನುಡಿದಾಡುವನಾರಯ್ಯ ?
ನೋಡುವನಾರಯ್ಯ? ಕೊಂಬುವನಾರಯ್ಯ ?
ಇಂತೀ ಭೇದವರಿತು ಸದಾಶಿವಲಿಂಗದಲ್ಲಿ ನೆಲೆಯಂಗೊಂಡು
ಐದು ಅಂಗವ ಗರ್ಭಿಕರಿಸಿಕೊಂಡು ಈಶ್ವರನೆಂಬ ಮೆಟ್ಟಿಗೆಯ ಮೆಟ್ಟಿ
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು
ಒಂಬತ್ತು ನೆಲೆಯ ಮೇಲೆ ನಡೆದು ಹೋಗುವ
ಗಂಭೀರ ನಿರವಯನೆಂಬ[ನ] ಸತಿಯಳುವಿಡಿದು
ಎಂತಿರ್ದಂತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ/302
ಓಣಿಯೊಳಗೆ ಒಬ್ಬ ಬಾಣತಿ ಕುಳಿತು ಏಳೆಂಟನೆಣಿಸುತಿರ್ಪಳು ನೋಡಾ!
ಆದಿಯಲ್ಲಿ ಒಬ್ಬ ಮೂರ್ತಿ ಬಂದು, ಏಳೆಂಟು ಕೆಡಿಸಿ
ಆ ಬಾಣತಿಯ ಒಡಲ ಸೀಳಿ, ಶಿಶುವ ತಕ್ಕೊಂಡು
ಸಾಸಿರಕಂಬದ ಮನೆಯೊಳಗಿಟ್ಟು ತಾನುತಾನಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./303
ಓಣಿಯೊಳಗೆ ಒಬ್ಬ ವಾಣಿಗಿತ್ತಿ ಕುಳಿತು
ಕಾಣದೆ ಮೂರು ಲೋಕಂಗಳಲ್ಲಿ ನಡೆದಾಡುತಿಪ್ಪಳು ನೋಡಾ.
ಆ ವಾಣಿಗಿತ್ತಿಯ ಕೊಂದು, ಮೂರು ಲೋಕವ ನುಂಗಿದಲ್ಲದೆ
ಪ್ರಾಣಲಿಂಗಸಂಬಂಧವು ಕಾಣಿಸದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./304
ಕಂಗಳ ಮುಂದಳ ರೂಪವನಳಿದು,
ಮಂಗಳಪ್ರಭೆಯಲ್ಲಿ ನಿಂದು
ಸಂಗಸಂಯೋಗವೆಂಬ ಲಿಂಗದಲ್ಲಿ
ಇರಬಲ್ಲಾತನೆ ನಿರ್ಮಲಜ್ಞಾನಿ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./305
ಕಂಗಳಾಟದ ಮಧ್ಯದಲ್ಲಿಪ್ಪ ಮಂಗಳಮಹಾಲಿಂಗವು
ಒಳಹೊರಗೆ ಪರಿಪೂರ್ಣವಾಗಿಪ್ಪನು ನೋಡಾ.
ಆ ಲಿಂಗದೊಳು ಕೂಡಿ ನಿಃಪ್ರಿಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./306
ಕಟ್ಟಕಡೆಯಲೊಂದು ಬಟ್ಟಬಯಲ ಮನೆಯ ಕಂಡೆನಯ್ಯ.
ಆ ಮನೆಯ ತುಟ್ಟತುದಿಯಲೊಂದು ಘಟ್ಟಿಲಿಂಗವ ಕಂಡೆನಯ್ಯ.
ಆ ಲಿಂಗದ ಕುಕ್ಷಿಯೊಳಗೆ ಅನಂತಕೋಟಿ ಬ್ರಹ್ಮಾಂಡಂಗಳು
ಅಡಗಿಪ್ಪವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./307
ಕಣ್ಣಮೇಲೆ ಕಣ್ಣು ಹುಟ್ಟಿ ಕಂಡೆನಯ್ಯ ಒಂದು ಲಿಂಗವ,
ಆ ಲಿಂಗದಲ್ಲಿ ಒಬ್ಬ ಸತಿಯಳು ಇರ್ಪಳು ನೋಡಾ.
ಆ ಸತಿಯಳ ಅಂಗದಲ್ಲಿ ಒಬ್ಬ ಬಾಲಕ ಹುಟ್ಟಿ, ನಾಲ್ಕು ದೇಶವನೊಂದುಮಾಡಿ
ಬಯಲಿಂಗೆ ಬಯಲು, ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./308
ಕಣ್ಣಿಲ್ಲದಂಧಕಂಗೆ ಮೂವರು ಮಕ್ಕಳು ಹುಟ್ಟಿ,
ಏಳೆಂಟು ಕೋಣೆಗಳಲ್ಲಿ ಬಡಿದಾಡುತಿಪ್ಪರು ನೋಡಾ.
ಇದು ಕಾರಣ, ಅಂಧಕಂಗೆ ಕಣ್ಣು ಬರಲೊಡನೆ ಮೂವರು ಮಕ್ಕಳು ಸತ್ತು,
ಏಳೆಂಟು ಕೋಣೆಗಳು ಬಯಲಾದವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./309
ಕಣ್ಣು ಇಲ್ಲದವ ಕಂಡನಯ್ಯ ಒಂದು ಲಿಂಗವ.
ಆ ಲಿಂಗಕ್ಕೆ ತಲೆ ಒಂದು, ಮುಖ ಮೂರು,
ಆರು ಹಸ್ತ, ಮೂವತ್ತಾರು ಪಾದಂಗಳು.
ಐವತ್ತೆರಡು ಎಸಳಿನ ಶಿವಾಲಯದೊಳಗೆ
ಪೂಜೆಗೊಂಬ ಲಿಂಗವನು
ಏಕೋಮನೋಹರನೆಂಬ ಪೂಜಾರಿಯು ಕಂಡು
ನವರತ್ನ ತೊಂಡಲಂಗಳ ಕಟ್ಟಿ
ಆ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./310
ಕತ್ತಲಕಾವುಳದ ಮನೆಯಲ್ಲಿ ಒಬ್ಬ ಪುರುಷನು ಸೀಮೆಯ ಪೊಕ್ಕು,
ಪರಿಪರಿಯ ಮಾಡುತಿಪ್ಪನು ನೋಡಾ.
ಇದು ಕಾರಣ, ಕತ್ತಲಕಾವುಳದ ಮನೆಯ ಕೆಡಿಸಿ, ಆ ಪುರುಷನ ಹಿಡಿದು,
ಸೀಮೆಯನಳಿದು ನಿಸ್ಸೀಮನಾಗಬಲ್ಲರೆ
ಆತನಿಗೆ ಭಾವಲಿಂಗಸಂಬಂಧಿಯೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./311
ಕತ್ತಲೆ ಕವಿದ ಮಾನವರಿಗೆ ಜ್ಞಾನದ ಪ್ರಭೆಯುಂಟೇನಯ್ಯ ?
ಅಂಗವ ಮರೆದು ನಿಂದವರಿಗೆ ಆವ ಚಿಂತೆ ಉಂಟೇನಯ್ಯ ?
ಒಳಹೊರಗೆ ಪರಿಪೂರ್ಣವಾದ ಶರಣಂಗೆ ಆವ ಭ್ರಾಂತಿ ಉಂಟೇನಯ್ಯ ?
ಇದು ಕಾರಣ, ತನ್ನ ನಿಲವ ತಾನೇ ತಿಳಿಯಬಲ್ಲಾತನೆ
ಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ./312
ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಿದರೆ
ಕತ್ತಲೆ ಹರಿದು ಬೆಳಗಾಯಿತ್ತು ನೋಡಾ.
ಸುಜ್ಞಾನದಿಂದ ಅಜ್ಞಾನವಳಿದು
ಅತ್ತತ್ತಲೆ ನಿರಂಜನಲಿಂಗದೊಳು
ನಿರ್ವಿಕಾರನಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./313
ಕತ್ತಲೆ ಮನೆಯೊಳಗೆ ಬೆಳಗುಂಟೇನಯ್ಯ ?
ಆ ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಲು
ಕತ್ತಲೆ ಹರಿದುಹೋಯಿತ್ತು ನೋಡಾ.
ಈ ಪರಿಯಾದಲ್ಲಿ ಮನವೆಂಬ ಕತ್ತಲೆಯಲ್ಲಿ
ಜ್ಞಾನವೆಂಬ ಜ್ಯೋತಿಯ ಮುಟ್ಟಿಸಲು
ಒಳಹೊರಗೆ ಪರಿಪೂರ್ಣವಾಗಿ ಬೆಳಗಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./314
ಕತ್ತಲೆಮನೆಯೊಳಗೆ ಒಬ್ಬ ಸೂಳೆ ನಾಲ್ವರ ಕೂಡಿಕೊಂಡು
ಹತ್ತೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ.
ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು
ಆ ಸೂಳೆಯ ಕೈವಿಡಿಯಲು,
ಹತ್ತೆಂಟು ಕೇರಿಗಳು ಅಳಿದುಹೋದವು ನೋಡಾ.
ನಾಲ್ವರು ಬಿಟ್ಟು ಹೋದರು ನೋಡಾ.
ಆ ಸೂಳೆಯ ಕೂಡಿಕೊಂಡು ಒಂಬತ್ತು ಬಾಗಿಲ ಮುಂದೆ ನಿಂದು
ಪರಕೆ ಪರವಾದ ಲಿಂಗವನಾಚರಿಸುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./315
ಕತ್ತಲೆಯ ಮನೆಯೊಳಗೊಂದು ಪಶುವಿಪ್ಪುದು ನೋಡಾ.
ಆ ಪಶುವಿಂಗೆ ಏಳೆಂಟು ಕೋಣಗಳು ಸ್ನೇಹವಾಗಿರ್ಪವು ನೋಡಾ.
ಆದಿಯಲ್ಲಿ ಮಹಾಜ್ಞಾನವುದೋರಲು
ಕತ್ತಲೆಮನೆ ಹರಿದು, ಪಶು ಬಯಲಾಯಿತ್ತು ನೋಡಾ.
ಏಳೆಂಟು ಕೋಣಗಳು ಅಡಗಿದವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./316
ಕಪ್ಪೆಯ ಒಡಲಲ್ಲಿ ಮುಪ್ಪಾಗಿ ಆರುಮಂದಿ ಸತ್ತಿರುವುದ ಕಂಡೆನಯ್ಯ.
ನಿಷ್ಪತಿಯಾಗಿ ಸತ್ತವರ ಕಂಡು, ಆ ಕಪ್ಪೆಯ ಹಿಡಿದಲ್ಲದೆ
ನಿಃಕಲಪರಬ್ರಹ್ಮಲಿಂಗವು ಕಾಣಿಸದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./317
ಕಪ್ಪೆಯ ನುಂಗಿದ ಕೋಗಿಲೆ ಸತ್ತು ಕೂಗುವುದ ಕಂಡೆನಯ್ಯ.
ತಿಪ್ಪೆಯ ಸೋಸಿದ ಸರ್ಪ ಮಾಣಿಕ್ಯವ ನುಂಗಿದುದ ಕಂಡೆನಯ್ಯ.
ಕಾಯ ಸತ್ತು, ಲಿಂಗವುಳಿದು,
ಆ ಲಿಂಗದ ಭೇದವ ಬಲ್ಲ ಹಿರಿಯರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./318
ಕರಿಯ ಮುಖದ ಸೂಳೆ ಹತ್ತೆಂಟು ಮುಖದೋರಿ
ಪರಿಪರಿ ಕೇರಿಯಲ್ಲಿ ಸುಳಿದಾಡಿ,
ಈ ಜಗವನೆಲ್ಲಾ ಏಡಿಸ್ಯಾಡುತಿಪ್ಪಳು ನೋಡಾ.
ಇದು ಕಾರಣ, ಪ್ರಥಮ ಕಾಲದಲ್ಲಿ ನಿರಂಜನ ಗಣೇಶ್ವರನು ಬಂದು
ಆ ಸೂಳೆಯ ಹಿಡಿದು ನೆರೆದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./319
ಕರ್ಮಕೋಟಲೆಯ ಹರಿದು, ಧರ್ಮದಲ್ಲಿ ನಿಂದು,
ನಿರ್ಮಳಾತ್ಮಕವಾಗಿ, ಪರಮಾನಂದದೊಳು ಕೂಡಿ,
ಪರಕೆಪರವನಾಚರಿಸಿ, ನಿರ್ಮುಕ್ತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./320
ಕರ್ಮದ ಕಂಡಣಿಯ ಹರಿದು,
ನಿರ್ಮಲಂಗವ ಪೊಕ್ಕು, ಧರ್ಮದ ಮಾರ್ಗದೊಳು ನಿಂದು,
ಪರಿಪೂರ್ಣಲಿಂಗವನಾಚರಿಸಿ, ಪರಕೆಪರವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./321
ಕರ್ಮದ ಕೋಟಲೆಯ ಹರಿದು, ನಿರ್ಮಲಂಗವ ಪೊಕ್ಕು,
ಪರಿಪೂರ್ಣಲಿಂಗವ ಕೂಡಿ
ಪರಕೆ ಪರವನಾಚರಿಸುತಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./322
ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ
ಸೀಮೆಯ ದಾಂಟಿ ನಿಸ್ಸೀಮನಾದ ಶರಣನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./323
ಕರ್ಮದ ಪಾಶವ ಹರಿದು ನಿರ್ಮಲಶರಣನಾಗಿ
ಪರಕ್ಕೆ ಪರವಾದ ಪರಂಜ್ಯೋತಿಯನಾಚರಿಸಿ
ನಿರ್ಮುಕ್ತನಾದ ಸ್ವಯಜ್ಞಾನಿಗೆ
ನಮೋ ನಮೋ ಎನುತಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./324
ಕರ್ಮದ ವಾಸನೆಗಳ ಹರಿದು, ಶಿವಧರ್ಮದಲ್ಲಿ ನಿಂದು
ಪರಮಾನಂದಪ್ರಭೆಯಲಿ ಕೂಡಿ
ನಿರಾಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./325
ಕರ್ಮದೋಷಂಗಳ ಪರಿಹಾರವಂ ಮಾಡಿ
ನಿರ್ಮಲ ಆತ್ಮವ ನೋಡಿ
ಪರಮಾನಂದ ಪ್ರಕೃತಿಯೊಳು ಕೂಡಿ
ಪರಕ್ಕೆ ಪರವನೈದಬಲ್ಲರೆ ಆತನೇ ನಿರ್ಮುಕ್ತ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./326
ಕರ್ಮದೋಷಂಗಳ ಹರಿದು, ಕನಸು ಕಳವಳಂಗಳನಳಿದು,
ನಿರ್ಮಲವ ಕೂಡಿ, ನಿಜವ ಲಾಲಿಸಿ,
ಪರಮಾನಂದದೊಳು ಕೂಡಿ, ನಿರ್ಮಳಾತ್ಮಕನ ಪಾಡಿ,
ಪರಬ್ರಹ್ಮಲಿಂಗದೊಳು ಕೂಡಿ,
ಪರಕೆ ಪರವನಾಚರಿಸಿದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./327
ಕರ್ಮವೆಂಬ ಕತ್ತಲೆಯಲ್ಲಿ ಒಬ್ಬ ಮಾನವನು
ವರ್ಮಗೆಟ್ಟು ಬಿದ್ದಿರುವುದ ಕಂಡೆನಯ್ಯ.
ಧರ್ಮವೆಂಬ ಗುರುವು ನಿರ್ಮಳವೆಂಬ ಚಬಕ ಹಾಕಲು,
ಕರ್ಮವೆಂಬ ಕತ್ತಲೆ ಹರಿದು, ವರ್ಮವೆಂಬ ದಾರಿಯನೇರಿ,
ಧರ್ಮವೆಂಬ ಗುರುವ ಕೂಡಿ
ನಿರವಯವೆಂಬ ಕರಸ್ಥಲದಲ್ಲಿ ನಿಂದಿರುವ ಬೆಡಗ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./328
ಕರ್ಮವೆಂಬ ಕತ್ತಲೆಯಲ್ಲಿ ವರ್ಮಗೆಟ್ಟು ಮೂವರು ಬಿದ್ದಿರ್ಪರು ನೋಡಾ.
ಅವರಿಂಗೆ ಐವರು ಹೆಂಡರು, ಏಳು ಮಂದಿ ಮಕ್ಕಳು,
ಎಂಟು ಮಂದಿ ನೆಂಟರು, ಹತ್ತು ಮಂದಿ ಬಾಂಧವರು ಇಪ್ಪರು ನೋಡಾ.
ಒಬ್ಬ ಸತಿಯಳು ಅಂಗಡಿ ಬೀದಿಯನಿಕ್ಕಿ,
ಭವಭಾರಂಗಳ ಮಾರುತಿಪ್ಪಳು ನೋಡಾ.
ಇದು ಕಾರಣ, ಮೇಲಣ ದೇಶದಿಂದ ನಿರಂಜನ ಗಣೇಶ್ವರ ಬಂದು,
ಅಂಗಡಿ ಬೀದಿಯ ಕೆಡಿಸಿ, ಕರ್ಮವೆಂಬ ಕತ್ತಲೆಯ ಹರಿದು,
ಪ್ರಾಣಲಿಂಗಸಂಬಂಧಿಯಾಗಿ, ಆತ್ಮನಿರಾತ್ಮನೆಂಬ ಬೆಳಗಿನೊಳು ನಿಂದು
ಪರಕೆಪರವ ತೋರುತಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ./329
ಕರ್ಮವೆಂಬ ಕೋಟಲೆಯ ಹರಿದು
ನಿರ್ಮಳವೆಂಬ ಆತ್ಮನ ಹೊಕ್ಕು
ಪರಬ್ರಹ್ಮವೆಂಬ ಲಿಂಗವನಾಚರಿಸುತಿದ್ದೆನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./330
ಕಳವಳಿಸುವ ಕರಣಂಗಳಿಗೆ ಮುಖಗೊಡದೆ
ಒಳಹೊರಗೆ ಪರಿಪೂರ್ಣವಾದ ಜ್ಞಾನವನರಿತು
ಪರಕೆಪರವಾದ ಲಿಂಗವನಾಚರಿಸಿ,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./331
ಕಾಡಾರಣ್ಯದೊಳಗೆ ಒಬ್ಬ ಸೂಳೆ ಕರೆದು
ಐವರಿಗೆ ಒತ್ತೆಯಕೊಡುವುದ ಕಂಡೆನಯ್ಯ !
ಊರೊಳಗಣ ಗೊಲ್ಲತಿ ಐವರ ಒಪ್ಪಿಸಿಕೊಟ್ಟು
ಸೂಳೆ ಗೊಲ್ಲತಿ ಒಂದಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./332
ಕಾಡುವ ಕರಣಂಗಳೇ ಮಕ್ಕಳು, ಬೇಡುವ ಮನವೇ ಭ್ರಾಂತಿ.
ಕಾಡುವ ಕರಣಂಗಳಿಗೆ ಸಿಲ್ಕದೆ, ಬೇಡುವ ಭ್ರಾಂತಿಗೆ ಸಿಲ್ಕದೆ
ತ್ರಿಕೂಟದಲ್ಲಿಪ್ಪ ಲಿಂಗವ ನೋಡಿ
ಭ್ರಮಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./333
ಕಾಡೊಳಗೆ ಒಬ್ಬ ಸೂಳೆ ಕುಳಿತು
ಆಡುವ ಮೂವರ ಕೂಡಿಕೊಂಡು
ಆರುಕೇರಿಯ ಹೊಕ್ಕು, ಮೂರು ಮಂಟಪವನೇರಿ,
ಪರಕೆಪರವಾದ ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./334
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳೆಂಬ
ಅರಿಷಡ್ವರ್ಗಂಗಳ ಗುರುನಿರೂಪಣದಿಂದ ಹರಿಯಲೊದ್ದು
ಪರವಾಸಿನಿಯೆಂಬ ಸತಿಯಳ ಸಂಗವ ಮಾಡಿ
ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./335
ಕಾಮದ ಕಳವಳವಳಿದು, ಸೀಮೆಯ ದಾಂಟಿ ನಿಸ್ಸೀಮನಾಗಿ,
ಮಹದರಿವಿನಂಬರವೆಂಬ ನಿರ್ವಯಲಲ್ಲಿ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರ ಕೂಡಿ
ನಿರವಯಲಿಂಗವನಾಚರಿಸುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./336
ಕಾಯ ನನ್ನದೆಂದು ನಚ್ಚಬೇಡಿರೋ,
ಜೀವ ನನ್ನದೆಂದು ನಚ್ಚಬೇಡಿರೋ.
ಕಾಯ ಜೀವವೆಂಬ ಪ್ರಕೃತಿಯನಳಿದು, ಶಿವಯೋಗದಲ್ಲಿ ನಿಂದು,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./337
ಕಾಯದ ಕರಣಂಗಳನಳಿದು ಗುರುಸಂಬಂಧಿಯಾದನಯ್ಯ.
ಜೀವದ ಕರಣಂಗಳನಳಿದು ಲಿಂಗಸಂಬಂಧಿಯಾದನಯ್ಯ.
ಪ್ರಾಣದ ಕರಣಂಗಳನಳಿದು ಜಂಗಮಸಂಬಂಧಿಯಾದನಯ್ಯ.
ಇಂತೀ ತ್ರಿವಿಧ ಸಂಬಂಧವನಳಿದು
ಮಹಾಸಂಬಂಧಿಯಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./338
ಕಾಯದ ಕರಣಂಗಳಿಗೆ ನಿಲ್ಲದೆ
ಮಾಯದ ಬಲೆಯ ಹರಿದು ನಿಂದು, ದೇವ ದೇವನನಚರ್ಿಸಿ,
ಸ್ವಯಜ್ಞಾನಿಯಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./339
ಕಾಯದ ಕರಣಂಗಳಿಗೆ ಸಿಲ್ಕಿ
ನಾನಾ ದೇವ ದಾನವ ಮಾನವರಳಿದರು ನೋಡಾ.
ನಾನು ನೀನೆಂಬ ಉಭಯಕ್ಕೆ ಸಿಲ್ಕದೆ
ಬಯಲಿಂಗೆ ಬಯಲು ನಿರ್ವಯಲು ಕೂಡಿ
ನಿಶ್ಚಿಂತನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ./340
ಕಾಯದ ಗುಣಗಳನಳಿದು, ಮಾಯದ ಬಲೆಗೆ ಸಿಲ್ಕದೆ.
ಮನೋಭಾವದೊಳು ಕೂಡಿ, ಆತ್ಮನೆಂಬ ಬೆಳಗಿನೊಳು ನಿಂದು
ಬಯಲಿಂಗೆ ಬಯಲು ಇದೆಯೆಂದು ಆಚರಿಸುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./341
ಕಾಯವಿಲ್ಲದ ಹಂಸನು ಗೂಡನಿಕ್ಕುವದ ಕಂಡೆನಯ್ಯ.
ಅದು ಹೇಗೆಂದಡೆ: ಅದಕ್ಕೆ ಬುಡ ಒಂದು, ಕೊನೆ ಮೂರು,
ಆರು ಕಡ್ಡಿಯ ಹೂಡಿ, ನಾದಬ್ರಹ್ಮವೆಂಬ ಕಟ್ಟ ಕಟ್ಟಿ,
ಒಂಬತ್ತು ಯಜ್ಞದ ಗೂಡಿನೊಳಗೆ ಇಪ್ಪ ಹಂಸನ
ಒಬ್ಬ ಸತಿಯಳು ಕಂಡು ಬೇಂಟೆಗಾರಂಗೆ ಹೇಳಲೊಡನೆ,
ಆ ಬೇಂಟೆಕಾರ ಗದೆಯ ತಕ್ಕೊಂಡು ಇಡಲೊಡನೆ,
ಸ್ವರ್ಗ ಮರ್ತ್ಯ ಪಾತಾಳವನೊಡೆದು
ಆಕಾಶ ನಿರಾಕಾಶವೆಂಬ ನಿರ್ಬಯಲಲ್ಲಿ ಬಿತ್ತು ನೋಡಾ!
ಆ ಬೇಂಟೆಕಾರ, ಆ ಗುರಿಯನೆತ್ತಲು
ಆ ಕಾಯವಿಲ್ಲದ ಹಂಸ ಆ ಗದೆಯ ಕಚ್ಚಿತ್ತು ನೋಡಾ!
ಇದೇನು ವಿಚಿತ್ರವೆಂದು ಬೆರಗಾಗುತಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು./342
ಕಾಯವಿಲ್ಲದ ಹೆಂಗೂಸು ಬಸುರಿಲ್ಲದ ಮಗನ ಹಡೆದು
ಅಂಗನೆಯರ ಆರು ಮಂದಿಯ ಕರೆದು
ಲಿಂಗವೆಂಬ ತೊಟ್ಟಿಲೊಳಗೆ ಆ ಮಗನ ಮಲಗಿಸಿ
ಜೋಗುಳಮಂ ಪಾಡುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./343
ಕಾಯವೆಂಬ ಹುತ್ತಿನಲ್ಲಿ
ಮಾಯವೆಂಬ ಸರ್ಪನು ಮನೆಯ ಮಾಡಿಕೊಂಡು
ತ್ರಿಜಗವನೆಲ್ಲ ನುಂಗಿಕೊಂಡಿರ್ಪುದು ನೋಡಾ.
ಕಡೆಯ ಬಾಗಿಲಲ್ಲಿ ಗಾರುಡಿಗ ನಿಂದು
ನಾಗಸ್ವರದ ನಾದವ ಮಾಡಲು
ಆ ನಾಗಸ್ವರದ ನಾದವ ಕೇಳಿ
ತ್ರಿಲೋಕದಿಂದ ಎದ್ದ ಸರ್ಪನ ತಲೆಯ ಮೇಲೆ
ರತ್ನವಿಪ್ಪುದು ನೋಡಾ.
ಆ ರತ್ನವ ಕಣ್ಣು ಇಲ್ಲದವ ಕಂಡು,
ಕೈಯಿಲ್ಲದವ ತಕ್ಕೊಂಡು
ಮಣ್ಣು ಇಲ್ಲದ ಹಾಳಿನಲ್ಲಿ ಇಟ್ಟು,
ಆ ರತ್ನವು ಮಹಾಲಿಂಗಕ್ಕೆ ಸಂದಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./344
ಕಾಲಕರ್ಮಿಗಳಿಗೆ ಸಿಲ್ಕದೆ ಲಿಂಗಾಂಗಸಮರಸವನರಿತು
ಪರಮಾನಂದದೊಳು ಕೂಡಿ
ಪರಿಪೂರ್ಣವಾದ ಮಹಾಮಹಿಮನ ಕಂಡು
ನಿಶ್ಚಿಂತ ನಿರಾವಾಸಿಯಾದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./345
ಕಾಲಿಲ್ಲದ ಪುರುಷನು ಕೈಯಿಲ್ಲದ ನಾರಿಯ ಸಂಗವ
ಮಾಡುತಿರ್ಪನು ನೋಡಾ.
ಆ ಕಾಲಿಲ್ಲದ ಪುರುಷನ, ಕೈಯಿಲ್ಲದ ನಾರಿಯ,
ಅವರಿಬ್ಬರನು ಕಪ್ಪೆ ನುಂಗಿ ಕೂಗುತಿದೆ ನೋಡಾ.
ಆ ಕೂಗಿನ ಶಬ್ದವ ಕೇಳಿ, ತ್ರಿಲೋಕದಿಂದ ಎದ್ದ ಸರ್ಪನ
ಇರುವೆ ನುಂಗಿತ್ತು ನೋಡಾ,
ಝೇಂಕಾರ ನಿಜಲಿಂಗಪ್ರಭುವೆ./346
ಕಾಳಮನವ ಪರಿಹರಿಸಿ, ತೊಳಲಿ ಬಳಲುವ ಜಲ್ಮವನಳಿದು,
ಬಳಲಿಕೆಯ ಕಳೆದುಳಿದು, ಅನಾದಿಲಿಂಗವನಾಚರಿಸಿ
ನಿಶ್ಚಿಂತ ನಿರಾಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./347
ಕಿಚ್ಚಿನ ಮನೆಯೊಳಗೆ ಒಬ್ಬ ಮಚ್ಚಗಾರ ಕುಳಿತು,
ಇಚ್ಚೆ ಇಚ್ಚೆಯಲ್ಲಿ ಹರಿದಾಡುವರನೆಲ್ಲ ಕೆಡಿಸಿ,
ಸುಟ್ಟು ಭಸ್ಮವ ಮಾಡಿ, ನಿಶ್ಚಿಂತನಿರಾಳದಲ್ಲಿ ನಿಂದು,
ಬಚ್ಚಬರಿಯ ಬಯಲಿಂಗೆ ಬಯಲಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./348
ಕುರುಡಂಗೆ ಕನ್ನಡಿಯ ತೋರಿದಡೆ
ಆ ಕುರುಡಂಗೆ ಮುಖ ಕಾಣಲಾರದು ನೋಡಾ.
ತುಡುಗಂಗೆ ಜ್ಞಾನವ ಹೇಳಿದರೆ
ಆ ತುಡುಗ ಗಡಣದ ಬೆಳಗ ಬಲ್ಲನೇನಯ್ಯ ?
ಪೊಡವಿಗೊಡೆಯ ಈಶ್ವರನು
ತನ್ನ ಮಾರ್ಗದಲ್ಲಿ ನಡೆವರ ಕಂಡು,
ಕೂಡಿಕೊಂಡಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./349
ಕುಲಛಲಕ್ಕೆ ಹೋರಿ ಆಡುವರೆಲ್ಲ ಶಿವಭಕ್ತರೆ ?
ಶಿವಭಕ್ತರಲ್ಲ ; ಅವರು ಕುಲದ ಪಾತಕರು.
ಅವರಿಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕ-ಪ್ರಸಾದವಿಲ್ಲ, ವಿಭೂತಿ-ರುದ್ರಾಕ್ಷಿಯಿಲ್ಲ,
ಓಂ ನಮಃ ಶಿವಾಯವೆಂಬ ಮಂತ್ರವಿಲ್ಲ.
ಇಂತೀ ಕುಲ ಛಲಂಗಳ ಬಿಟ್ಟು, ನಿರ್ಮಲಸ್ವರೂಪನಾಗಿ,
ಗುರುಕಾರುಣ್ಯದಿಂದ ಜ್ಞಾನಸಂಬಂಧಿಯಾಗಿ,
ಅಷ್ಟಾವರಣವನಾಚರಿಸಬಲ್ಲಾತನೆ ಭಕ್ತನೆಂಬೆನಯ್ಯ,ಮಹೇಶ್ವರನೆಂಬೆನಯ್ಯ,
ಪ್ರಸಾದಿಯೆಂಬೆನಯ್ಯ, ಪ್ರಾಣಲಿಂಗಿಯೆಂಬೆನಯ್ಯ,
ಶರಣನೆಂಬೆನಯ್ಯ, ಐಕ್ಯನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./350
ಕೂಗುವ ಕೋಗಿಲೆಯ ಒಡಲಲ್ಲಿ
ಇಪ್ಪತ್ತೈದು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೊಬ್ಬ ಪೂಜಕ ನಿಂದು
ಆರಾರ ಲಿಂಗಾರ್ಚನೆಯ ಮಾಡಿ
ನಿರ್ವಿಕಾರನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./351
ಕೊಂಬಿನ ತುದಿಯ ಮೇಲೆ ಎಂಟಾನೆ ಹುಟ್ಟಿದುದ ಕಂಡೆನಯ್ಯ.
ಅವಕ್ಕೆ ಏಳು ಬೀದಿ, ಆರು ಕೇರಿ,
ಐದು ಮನೆಗಳಲ್ಲಿ ಬೈಯುವ ನಾರಿಯ ಕಂಡೆನಯ್ಯ.
ಆ ನಾರಿಯ ಹಿಡಿದು ಕೊಂದಲ್ಲದೆ
ನಿಃಕಲಪರಬ್ರಹ್ಮಲಿಂಗವು ಕಾಣಿಸದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./352
ಕೊಂಬೆಕೊಂಬೆಗೆ ಹಾರುವ ಕೋಡಗನ ತಲೆಯ ಮೇಲೆ
ರತ್ನವಿರ್ಪುದು ನೋಡಾ.
ಆ ಕೊಂಬೆಗಳ ಮುರಿದು, ಕೋಡಗನ ಕೊಂದು
ಆ ರತ್ನವ ತಕ್ಕೊಂಡಲ್ಲದೆ ಲಿಂಗವ ಕಾಣಬಾರದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./353
ಕೋಣನ ಹಣೆಯ ಮೇಲೆ ಗಾಣಗಾರನ ಕಂಡೆನಯ್ಯ.
ಆ ಗಾಣಗಾರಂಗೆ ಐವರು ಹೆಂಡರು,
ಏಳುಮಂದಿ ಮಕ್ಕಳು, ಎಂಟುಮಂದಿ ನೆಂಟರು,
ಹತ್ತುಮಂದಿ ಬಾಂಧವರು ಇಪ್ಪರು ನೋಡಾ.
ಇದು ಕಾರಣ, ಆ ಕೋಣನ ಹಣೆ ಒಡೆದು,
ಗಾಣಗಾರ ಸತ್ತು, ಜ್ಞಾನ ಉದಯವಾಗಲೊಡನೆ
ಐವರು ಹೆಂಡರಡಗಿ, ಏಳುಮಂದಿ ಮಕ್ಕಳುಡುಗಿ,
ಎಂಟುಮಂದಿ ನೆಂಟರು ಹೋಗಿ,
ಹತ್ತುಮಂದಿ ಬಾಂಧವರು ಬಯಲಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./354
ಕೋಳಿ ಕೂಗಿದ ಕೂಗ ಕೇಳಿ ಒಬ್ಬ ತಳವಾರನು
ಐವರ ಕೂಡಿಕೊಂಡು ಆರು ಮೂರು ದಾರಿಯ ದಾಂಟಿ ವಿೂರಿ ಎಚ್ಚ.
ತಳವಾರನ ಕೋಳಿ ನುಂಗಿ ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./355
ಕೋಳಿಯ ಧ್ವನಿಯ ಕೇಳಿ ಒಬ್ಬಳು
ತಿಪ್ಪೆಯ ಸೋಸಿ ನೋಡುವ ವ್ಯಾಳ್ಯದಲ್ಲಿ,
ಒಂದು ಸರ್ಪನ ತಲೆಯ ಮೇಲೆ ರತ್ನವಿರ್ಪುದ ಕಂಡೆನಯ್ಯ !
ಆ ರತ್ನವ ಕಪ್ಪೆ ನುಂಗಿದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./356
ಗಿರಿಯ ತುದಿಯ ಮೇಲೆ ಹಾರುವ ಹಂಸನ ಕಂಡೆನಯ್ಯ.
ಆ ಹಂಸನು ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು
ಪರಿಪೂರ್ಣವಾದ ಲಿಂಗಕ್ಕೆ ಹಾರಿಹೋದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./357
ಗುಡ್ಡದೊಳಗೊಬ್ಬ ಮಡ್ಡ ಕುಳಿತು
ಕಡ್ಡತನವ ಮಾಡುತಿಪ್ಪ ನೋಡಾ.
ಇದು ಕಾರಣ, ಗುಡ್ಡದ ಕಸವ ತೆಗೆದು,
ಮಡ್ಡನ ಹಿಡಿದು, ಕಡ್ಡತನವ ಕೆಡಿಸಿದಲ್ಲದೆ
ದೊಡ್ಡ ಶರಣನಲ್ಲ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./358
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿಯದ
ಪಾತಕರ ಮುಖವ ನೋಡಲಾಗದಯ್ಯ.
ಅಂತಪ್ಪ ಪಾತಕರ ಮಾತ ಕೇಳಲಾಗದು, ಹೇಳಲಾಗದು.
ಅದೇನು ಕಾರಣವೆಂದರೆ;
ಗುರುವಿಡಿದು ಕಾಯ ಪಾವನವಾಯಿತ್ತಯ್ಯ.
ಲಿಂಗವಿಡಿದು ಜೀವ ಪಾವನವಾಯಿತ್ತಯ್ಯ.
ಜಂಗಮವಿಡಿದು ಪ್ರಾಣ ಪಾವನವಾಯಿತ್ತಯ್ಯ.
ಪಾದೋದಕ ಪ್ರಸಾದವಿಡಿದು ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./359
ಗುರು ಲಿಂಗ ಜಂಗಮವಿಲ್ಲದಂದು,
ಪಾದೋದಕ ಪ್ರಸಾದವಿಲ್ಲದಂದು,
ವಿಭೂತಿ ರುದ್ರಾಕ್ಷಿಗಳಿಲ್ಲದಂದು,
ಓಂ ನಮಃ ಶಿವಾಯವೆಂಬ ಮಂತ್ರಗಳಿಲ್ಲದಂದು,
ಅತ್ತತ್ತಲೆ, ತಾನೇ ನಿಃಶೂನ್ಯನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./360
ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸುವವರಿಂಗೆ
ಅಂತು ಇಂತು ಎಂದೊಡೆ
ನಾಯಕನರಕದೊಳು ಬೀಳುವರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./361
ಗುರುಲಿಂಗಜಂಗಮವೆಂಬ ತ್ರಿವಿಧಭೇದವನು ಏಕಾಗ್ರದಲ್ಲಿ ನೋಡಿ,
ಪರಕೆಪರವನಾಚರಿಸಿ, ನಿರ್ಮುಕ್ತನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./362
ಗುರುವಿಡಿದು ಕಾಯದ ಕರ್ಮವ ಹರಿದೆನಯ್ಯ.
ಲಿಂಗವಿಡಿದು ಜೀವದ ಕರ್ಮವ ಹರಿದೆನಯ್ಯ.
ಜಂಗಮವಿಡಿದು ಪ್ರಾಣದ ಕರ್ಮವ ಹರಿದೆನಯ್ಯ.
ಪ್ರಸಾದವ ಹಿಡಿದು ಸರ್ವಕರ್ಮವ ಹರಿದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./363
ಗುರುವಿನಲ್ಲಿ ಗುಣವನರಸಲಿಲ್ಲ,
ಲಿಂಗದಲ್ಲಿ ರೂಪವನರಸಲಿಲ್ಲ,
ಜಂಗಮದಲ್ಲಿ ಕುಲವನರಸಲಿಲ್ಲ,
ಇದು ಕಾರಣ, ಬೇರುಪಡಿಸಿ
ಗುರುವಿನಲ್ಲಿ ಗುಣವನರಸಿದೆನಾದೊಡೆ ಕರ್ಮಕೆ ಬೀಳುವೆನಯ್ಯ.
ಲಿಂಗದಲ್ಲಿ ರೂಪವನರಸಿದೆನಾದೊಡೆ ಭವಕೆ ಬೀಳುವೆನಯ್ಯ.
ಜಂಗಮದಲ್ಲಿಕುಲವನರಿಸಿದೆನಾದೊಡೆ ಅಘೋರ ನರಕದಲ್ಲಿಬೀಳುವೆನಯ್ಯ.
ಇದಕ್ಕೆ ಸಾಕ್ಷಿ-ಅಗ್ನಿಯಲ್ಲಿ ಸಕಲ ತರುವಾದಿಗಳ ತಂದು
ಸುಟ್ಟು, ಭಸ್ಮವ ಮಾಡಲೊಡನೆ
ಆ ಭಸ್ಮವ ಕುರುಹು ಇಟ್ಟು ನುಡಿಯಲಾಗದಯ್ಯ
ಝೇಂಕಾರ ನಿಜಲಿಂಗಪ್ರಭುವೆ./364
ಗುರುವು ಕಾಯಸುಖಿಯ ಮಾಡಿದನಯ್ಯ.
ಲಿಂಗವು ಜೀವಸುಖಿಯ ಮಾಡಿದನಯ್ಯ.
ಜಂಗಮವು ಪ್ರಾಣಸುಖಿಯ ಮಾಡಿದನಯ್ಯ.
ಇಂತೀ ತ್ರಿವಿಧ ಭೇದವನರಿತು, ಜ್ಞಾನಶಕ್ತಿಯ ಸಂಗವ ಮಾಡಿ,
ನಿತ್ಯವಾದ ಲಿಂಗದ ಗುಡಿಗೆ ಹೋಗಿ,
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭಿಕರಿಸಿಕೊಂಡು
ನಿರಪೇಕ್ಷಲಿಂಗದಲ್ಲಿ ಕೂಡಿ
ನಿಃಪ್ರಿಯವಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./365
ಘಟ್ಟದ ತುದಿಯ ಮೇಲೆ ಮುಟ್ಟಿ ಆಡುವ ಬೆಳ್ಳಕ್ಕಿಯ ಕಂಡೆನಯ್ಯ.
ಬೆಳ್ಳಕ್ಕಿಯ ಹಿಡಿಯಹೋದ ಬೇಂಟೆಕಾರನ
ನಿರ್ವಯಲು ನುಂಗಿತ್ತು ನೋಡಾ,
ಝೇಂಕಾರ ನಿಜಲಿಂಗಪ್ರಭುವೆ./366
ಘನದ ಮೇಲೊಂದು ಇರುವೆಯ ಕಂಡೆನಯ್ಯ.
ಆ ಇರುವೆಯೊಳಗೊಬ್ಬ ಭಾಮಿನಿಯ ಕಂಡೆನಯ್ಯ.
ಆ ಭಾಮಿನಿಯ ಸಂಗದಿಂದ ಒಬ್ಬ ಬೇಂಟೆಕಾರ ಹುಟ್ಟಿ,
ಇಪ್ಪತ್ತೈದು ಗ್ರಾಮಂಗಳ ಕಾಯ್ದುಕೊಂಡಿರ್ಪನು ನೋಡಾ !
ಆ ಬೇಂಟೆಕಾರನ ಬಯಲು ನುಂಗಿತ್ತು ನೋಡಾ !
ಆ ಭಾಮಿನಿಯ ನಿರ್ವಯಲು ನುಂಗಿತ್ತು ನೋಡಾ !
ಅಂಗವಿಲ್ಲದ ಬಾಲೆಯು ಇದೇನು ವಿಚಿತ್ರವೆಂದು ನೋಡುತಿರ್ಪಳಯ್ಯ
ಝೇಂಕಾರ ನಿಜಲಿಂಗಪ್ರಭುವೆ./367
ಚಿತ್ತಸುಖದಲ್ಲಿ ಪರಿಣಾಮವನೈದಿ
ಅಘಟಿತವಾದ ಭೇದವ ನೀವೇ ಬಲ್ಲಿರಿ ನೋಡಯ್ಯ!
ಅಂತಪ್ಪ ಪರಮಸ್ವರೂಪದಲ್ಲಿ ತಾನುತಾನಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./368
ಚಿತ್ಪ್ರಕಾಶಲಿಂಗದಲ್ಲಿ ಚಿದಾನಂದವಾದ ಶರಣನು
ಅನಂತಕೋಟಿ ಬ್ರಹ್ಮರ, ಅನಂತ ಕೋಟಿ ವಿಷ್ಣುಗಳ,
ಅನಂತಕೋಟಿ ರುದ್ರರ ಗರ್ಭಿಕರಿಸಿಕೊಂಡು
ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ನಿಂದು
ಪರಕೆ ಪರವನೈದಿದನಯ್ಯಾ, ಝೇಂಕಾರ ನಿಜಲಿಂಗಪ್ರಭುವೆ./369
ಚಿತ್ಪ್ರಕಾಶವಾದ ಲಿಂಗದಲ್ಲಿ ಚಿನ್ಮಯವಾದ ಶರಣನು
ಅನಂತಕೋಟಿಬ್ರಹ್ಮಾಂಡಗಳ ಗರ್ಭಿಕರಿಸಿಕೊಂಡು
ತಾನುತಾನಾಗಿರ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./370
ಚಿದ್ರೂಪ ಚಿದಾನಂದ ನಿರಾಮಯ
ನಿಶ್ಚಂತ ನಿರಾಕುಳ ನಿರ್ಭರಿತವಾದ ಶರಣನು,
ನಿತ್ಯನಿರಾಳದಲ್ಲಿ ನಿಂದು,
ನನ್ನನೂ ಅರಿಯದೆ, ನಿನ್ನನೂ ಅರಿಯದೆ,
ತಾನು ತಾನೆಂಬುದನರಿಯದೆ
ಅತ್ತತ್ತ ನಿರಾಮಯನೆನಿಸಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./371
ಚಿದ್ರೂಪ ಚಿದಾನಂದದಲ್ಲಿ
ಮಹಾಘನ ನಿರಾಕುಳ ನಿರಂಜನ ನಿರ್ಭರಿತ ನಿರವಯಲಿಂಗ
ತಾನು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ./372
ಚಿಪ್ಪಿನೊಳಗಣ ಮುತ್ತಿನಂತೆ, ಕಲ್ಲೊಳಗಣ ವಜ್ರದಂತೆ,
ನಿರೊಳಗಣ ಪ್ರತಿಬಿಂಬದಂತೆ, ಕ್ಷೀರದೊಳಗಣ ಘೃತದಂತೆ,
ಬೀಜದೊಳಗಣ ವೃಕ್ಷದಂತೆ, ಅಗ್ನಿಯೊಳಗಣ ಪ್ರಕಾಶದಂತೆ,
ಭಾವದೊಳಗಣ ನಿರ್ಭಾವದಂತೆ ನಿಮ್ಮ ಶರಣ ಸಂಬಂಧವು
ಝೇಂಕಾರ ನಿಜಲಿಂಗಪ್ರಭುವೆ. || /373
ಜಾಗ್ರಾವಸ್ಥೆಯ ಸ್ಥೂಲದಿಂದರಿದು ಭಕ್ತನಾದೆನಯ್ಯ.
ಸ್ವಪ್ನಾವಸ್ಥೆಯ ಸೂಕ್ಷ್ಮದಿಂದರಿದು ಮಹೇಶ್ವರನಾದೆನಯ್ಯ.
ಸುಷುಪ್ತಿಯವಸ್ಥೆಯ ಕಾರಣದಿಂದರಿದು ಪ್ರಸಾದಿಯಾದೆನಯ್ಯ.
ತೂರ್ಯಾವಸ್ಥೆಯ ಮಹಾಕಾರಣದಿಂದರಿದು ಪ್ರಾಣಲಿಂಗಿಯಾದೆನಯ್ಯ.
ತೂರ್ಯಾತೀತ ಅವಸ್ಥೆಯ ನಿಃಕಲಕಾರಣದಿಂದರಿದು ಶರಣನಾದೆನಯ್ಯ.
ನಿರಾವಸ್ಥೆಯ ಪರಿಪೂರ್ಣದಿಂದರಿದು ಐಕ್ಯನಾದೆನಯ್ಯ.
ನಿತ್ಯಾವಸ್ಥೆಯ ನಿರಾಕುಳದಿಂದರಿದು ಅಖಂಡತೇಜೋಮಯನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./374
ಜೀವಾತ್ಮ ಅಂತರಾತ್ಮ ಪರಮಾತ್ಮಯೆಂಬ ಭೇದವ ತಿಳಿದು
ನಿಶ್ಚಿಂತ ನಿರಾಕುಳದ ಮೇಲೆ ನಿಂದು ನೋಡಲು
ನಿರ್ವಯಲಿಂಗವು ಫ್ಸೊಷಿಸುತಿರ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./375
ಜ್ಞಾನ ಉಪಾಧಿಯಲ್ಲಿ ಮನವ ನಿಶ್ಚೈಸಿ, ಮಹಾಜ್ಞಾನದಲ್ಲಿ ನಿಂದು,
ಪರಕೆ ಪರವನಾಚರಿಸಬಲ್ಲಡೆ
ಆತನೆ ಪರಮಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ./376
ಜ್ಞಾನ ಜ್ಞಾತೃವಿನ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೊಬ್ಬ ಭಾಮಿನಿಯು
ಲಿಂಗಾರ್ಚನೆಯ ಮಾಡುತಿರ್ದಳು ನೋಡಾ.
ಆ ಭಾಮಿನಿಯ ಸಂಗದಿಂದ ನಿರಂಜನದೇಶಕೆ ಹೋಗಿ
ನಿಶ್ಚಿಂತ ನಿರಾಕುಳ ನಿರ್ಭರಿತನಾದ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./377
ಜ್ಞಾನ ತನ್ನೊಳಗಾದ ಬಳಿಕ ಲೋಕದ ಹಂಗಿನ್ನ್ಯಾತಕಯ್ಯ?
ಮಹಾಲಿಂಗ ತನ್ನೊಳಗಾದ ಬಳಿಕ ಇಹಪರದ ಹಂಗಿನ್ನ್ಯಾತಕಯ್ಯ?
ನಿಃಕಲನಿಜಲಿಂಗದಲ್ಲಿ ತಾನು ತಾನಾದ ಬಳಿಕ
ಸಕಲ ಬ್ರಹ್ಮಾಂಡದ ಹಂಗಿನ್ನ್ಯಾತಕಯ್ಯ?
ಇದು ಕಾರಣ, ಝೇಂಕಾರ ನಿಜಲಿಂಗಪ್ರಭುವೆ
ನಿಮ್ಮ ಶರಣನ ಸಂಬಂಧವು./378
ಜ್ಞಾನದ ಉಪಾಧಿಯಲ್ಲಿ ಸಂಗವನರಿತು
ನಿರ್ಮಲಜ್ಞಾನಿಯಾಗಿ, ಪರಕೆಪರವನಾಚರಿಸಿ
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./379
ಜ್ಞಾನವೆಂಬ ಗದ್ದುಗೆಯ ಮೇಲೆ ಸದಮಲವೆಂಬ ಪಾವಡವ ಹಾಸಿ,
ಪರಬ್ರಹ್ಮವೆಂಬ ಲಿಂಗನ ಮೂರ್ತಿಗೊಳಿಸಿ,
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಹರಹರಾ ಶಿವಶಿವಾಯೆಂದು ಅಚರ್ಿಸುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./380
ಜ್ಞಾನಶಕ್ತಿಯ ಸಂಗದಿಂದ ಅವಿರಳಸ್ವಾನುಭಾವಸಿದ್ಧಾಂತವನರಿತು
ನಿರ್ಮಲ ಸ್ವಯಜ್ಞಾನಿಯಾಗಿ,
ಅಖಂಡಪರಿಪೂರ್ಣಲಿಂಗದೊಳು ಬೆರೆಸಿಪ್ಪ ಪರಿಯ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./381
ಜ್ಞಾನಶಕ್ತಿಯ ಸಂಗದಿಂದ
ಅವಿರಳಸ್ವಾನುಭಾವಸಿದ್ಧಾಂತವನರಿತು
ಅತ್ತತ್ತಲೆ ಪರಕ್ಕೆ ಪರವಶನಾಗಿರ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./382
ಜ್ಞಾನಸಂಪನ್ನರಾದವರಿಂಗೆ ಹೀನವೃತ್ತಿವುಂಟೇನಯ್ಯ?
ಭಾವಬೆರಗಾದವರಿಂಗೆ ಲೋಕದ ಹಂಗುಂಟೇನಯ್ಯ?
ಶಿವಜ್ಞಾನ ಉದಯವಾದ ಬಳಿಕ ಮಾತಿನ ಹಂಗುಂಟೇನಯ್ಯ?
ತಾನುತಾನಾದ ಬಳಿಕ ಯಾರ ಹಂಗಿಲ್ಲವಯ್ಯ
ಝೇಂಕಾರ ನಿಜಲಿಂಗಪ್ರಭುವೆ./383
ಜ್ಞಾನಸಂಬಂಧವನರಿತು, ಸುಜ್ಞಾನದೊಳು ನಿಂದು
ಪರಕೆ ಪರವಾದ ಜ್ಯೋತಿಯ ಕೂಡಿ ಸ್ವಯಂಜ್ಞಾನಿಯಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./384
ತಂದೆ ಸತ್ತ ಮೇಲೆ ಆ ಲಿಂಗವ ತೆಗೆದು
ತಾನೇ ತನ್ನ ಕೈಯಲ್ಲಿ ಕಟ್ಟಿಕೊಂಡು ಶಿವಭಕ್ತರೆಂದು
ಈ ಮರ್ತ್ಯದಲ್ಲಿ ನಡೆದಾಡುವರು ನೋಡಾ.
ಅವರಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕ ಪ್ರಸಾದವಿಲ್ಲ.
ಇದು ಕಾರಣ, ಅವರು ಪಿತೃಲಿಂಗಸಂಸ್ಕಾರಿಗಳು ನೋಡಾ.
ಇಂತಪ್ಪ ನರಕಜೀವಿಗಳ ಮುಖವ ನೋಡಲಾಗದು
ಝೇಂಕಾರ ನಿಜಲಿಂಗಪ್ರಭುವೆ./385
ತಂದೆಯೊಡನೆ ಒಬ್ಬ ಮಗ ಹುಟ್ಟಿ ಐವರ ಸಂಗವ ಮಾಡುತ್ತಿರಲು,
ಆಡುತಾಡುತ ಒಬ್ಬ ಗೊಲ್ಲತಿಯು ಕಂಡು,
ಕುಂಟಿಣಿಗಿತ್ತಿಂಗೆ ಹೇಳಲು,
ಆ ಕುಂಟಿಣಿಗಿತ್ತಿಯು ಆ ಮಗನ ಪಿಡಿಯಲು,
ಈ ಐವರು ಹೆಂಡರಾದ ಬೆಡಗ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./386
ತಂದೆಯೊಡನೆ ಒಬ್ಬ ಮಗ ಹುಟ್ಟಿ
ಐದು ಕೇರಿಗಳೊಳಗೆ ಸುಳಿದಾಡುತಿರ್ಪನು ನೋಡಾ.
ಆ ಕೇರಿಗಳಲ್ಲಿ ಭಕ್ತಾಂಗನೆ ಉದಯವಾದಳು ನೋಡಾ.
ಭಕ್ತಾಂಗನೆಯ ಸಂಗದಿಂದ ಒಂಬತ್ತು ಸೋಪಾನಂಗಳನೇರಿ
ಕಡೆಯ ಬಾಗಿಲಲ್ಲಿ ನಿಂದು, ತನ್ನ ಗಮನವ ತಾನೇ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./387
ತತ್ವಮಸಿ ವಾಕ್ಯದಿಂದ ಪರಂಜ್ಯೋತಿಲಿಂಗವ ಕಂಡು,
ನಿತ್ಯ ನಿರಂಜನ ನಿರಾಳನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./388
ತತ್ವಮಸಿ ವಾಕ್ಯದಿಂದತ್ತತ್ತ ಸ್ವಯಂಜ್ಯೋತಿಲಿಂಗವಿಪ್ಪುದು ನೋಡಾ.
ಆ ಲಿಂಗದ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಐದಂಗವ ಗರ್ಭಿಕರಿಸಿಕೊಂಡು
ನಿತ್ಯನಿಜದಾರಂಭಕೆ ಹೋಗಿ ಪರವಶನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./389
ತನುಮನದ ಕೊನೆಯ ಮೇಲೆ ಅಘಟಿತಲಿಂಗವಿಪ್ಪುದು ನೋಡಾ!
ಆ ಲಿಂಗದ ಕಿರಣದೊಳಗೆ ಅನಂತಕೋಟಿ
ಸೋಮ ಸೂರ್ಯರ ಬೆಳಗು ನೋಡಾ!
ಆ ಬೆಳಗ ನೋಡ ಹೋಗದಮುನ್ನ
ಅದು ಎನ್ನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./390
ತನುಮನದ ಕೊನೆಯ ಮೇಲೆ ಮಹಾಘನಲಿಂಗವಿಪ್ಪುದು ನೋಡಾ.
ಆ ಘನಲಿಂಗದ ಸಂಗದಲ್ಲಿ
ಒಬ್ಬ ಸತಿಯಳು ಐವರ ಕೂಡಿಕೊಂಡು
ಆ ಲಿಂಗಾರ್ಚನೆಯಂ ಮಾಡಿ
ಪರಕೆಪರವಶವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./391
ತನುಮನದ ಕೊನೆಯ ಮೇಲೆ ಮಹಾಘನಲಿಂಗವಿಪ್ಪುದು ನೋಡಾ.
ಆ ಲಿಂಗದ ಕುಕ್ಷಿಯೊಳಗೆ ಅನಂತಕೋಟಿ
ಸೋಮಸೂರ್ಯರ ಬೆಳಗು ನೋಡಾ.
ಆ ಬೆಳಗ ನೋಡ ಹೋಗದ ಮುನ್ನ
ಬೆಳಗು ತನ್ಮಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./392
ತನುಮನದ ಕೊನೆಯ ಮೇಲೆ
ಅಘಟಿತಲಿಂಗವಿಪ್ಪುದು ನೋಡಾ.
ಆ ಲಿಂಗದ ಸಂತತಿಯಲ್ಲಿ ಒಬ್ಬ ಸತಿಯಳು ಐವರ ಸಂಗವ ಮಾಡಿ
ನಿರವಯವೆಂಬ ಕರಸ್ಥಲದಲ್ಲಿ ನಿಂದು
ಪರವಶವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./393
ತನುವಿನ ಗುಣಕ್ರಿಯಂಗಳಿಗೆ ಮುಖಗೊಡದೆ
ಲಿಂಗಸಂಬಂಧಿಯಾಗಿ, ಪರಮಾನಂದಪ್ರಭೆಯಲ್ಲಿ ಕೂಡಿ,
ಪರಕ್ಕೆ ಪರವನೈದಿದ ಮಹಾಶರಣಂಗೆ
ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./394
ತನುವಿನೊಳಗಿಪ್ಪ ಅನುಪಮ ಲಿಂಗವನು
ಘನದಿಂದ ಲಿಂಗಾರ್ಚನೆಯಂ ಮಾಡಿ,
ಚಿದ್ರೂಪಚಿನ್ಮಯನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./395
ತನ್ನ ತಾನೇ ತಿಳಿದು, ಗನ್ನಘಾತಕವನಳಿದು, ಸನ್ನಹಿತನಾಗಿ
ಅಘಟಿತಘಟಿತ ಪರಂಜ್ಯೋತಿಯ ಕಂಡು
ನಿಃಪ್ರಿಯವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./396
ತನ್ನಂತರಂಗದಲ್ಲಿ ಸಹಜ ಸಮ್ಯಕ್ಜ್ಞಾನವನರಿತು
ನಿತ್ಯ ಪರತತ್ವದಲ್ಲಿ ಕೂಡಿ ಪರಿಪೂರ್ಣವಾದ ಶರಣನು
ಅಖಂಡ ತೇಜೋಮಯಲಿಂಗ ತಾನೇ
ಝೇಂಕಾರ ನಿಜಲಿಂಗಪ್ರಭುವೆ./397
ತನ್ನಿಂದ ತಾನಾದವನು, ಉನ್ಮನಿಯ ಬಾಗಿಲ ಮುಂದೆ ನಿಂದು
ಬತ್ತಲೆಯಾದ ಭಾಮಿನಿಯ ಕರೆದು,
ಮಹಾಜ್ಞಾನವೆಂಬ ಹಸ್ತದಿಂದ ಹವಳ ನೀಲ ರತ್ನ ಪಚ್ಚೆ
ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ
ಮಹಾಲಿಂಗವೆಂಬ ಮೂರ್ತಿಯ ನೆಲೆಯಂಗೊಳಿಸಿ
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ,
ಅಂತರಂಗದ ಬೆಳಗಿನ ಮಹಾ ಚಿದ್ವಿಭೂತಿಯಂ ಧರಿಸಿ,
ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಭಕ್ತನೆಂಬ ಅಡ್ಡಣಿಗೆಯ ಮೇಲೆ,
ಮಹೇಶ್ವರನೆಂಬ ಹರಿವಾಣವನಿಕ್ಕಿ,
ಮಹಾಪ್ರಸಾದವ ನೆಲೆಯಂಗೊಂಡು
ಪ್ರಾಣಲಿಂಗಿಯೆಂಬ ತುಪ್ಪವನೆರೆದು
ಶರಣನೆಂಬ ಸಕ್ಕರೆಯ ತಳೆದು
ಆ ಲಿಂಗಕ್ಕೆ ತೃಪ್ತಿಯನೆಯ್ದಿಸುತಿರ್ಪಳು ನೋಡಾ!
ನವರತ್ನದ ಹರಿವಾಣದೊಳಗೆ ಸಪ್ತದ್ವೀಪಂಗಳ ರಚಿಸಿ
ಓಂ ನಮೋ ಓಂ ನಮೋ, ಓಂ ನಮೋ ಶಿವಾಯಯೆಂದು
ಬೆಳಗುತಿಪ್ಪಳು ನೋಡಾ.
ಝೇಂಕಾರ ನಿಜಲಿಂಗಪ್ರಭುವೆ./398
ತನ್ನೊಡನೆ ಒಬ್ಬ ಭಾಮಿನಿ ಪುಟ್ಟಿದಳು ನೋಡಾ.
ಆ ಭಾಮಿನಿಯ ಅಂಗದೊಳಗೆ ಐದು ಗ್ರಾಮಂಗಳು ಹುಟ್ಟಿದವು ನೋಡಾ.
ಆ ಗ್ರಾಮದೊಳಗೆ ಸುಳಿದಾಡುವ ಹಂಸನ ಕಂಡೆನಯ್ಯ.
ಆ ಹಂಸನ ಹಿಡಿಯಲಾಗಿ ಆ ಹಂಸ ಹಾರಿ
ಆ ಭಾಮಿನಿಯ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./399
ತನ್ನೊಳಗಿಪ್ಪ ಲಿಂಗದ ಭೇದವನು ಮಹಾಜ್ಞಾನದಿಂದ ತಿಳಿದು,
ಹೃದಯದಲ್ಲಿಪ್ಪ ಅಂಜನವ ತೆಗೆದು,
ನಿರಂಜನವೆಂಬ ಜ್ಯೋತಿಯ ಮುಟ್ಟಿಸಲು
ಆ ಜ್ಯೋತಿಯ ಬೆಳಗಿನೊಳಗೆ ಸುಳಿದಾಡುವ ಸುಳುವನರಿತ ಮಹಾತ್ಮರ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./400
ತನ್ನೊಳಗೆ ತಾನು ತಾನಾದ ಬಳಿಕ
ಭಿನ್ನಪ್ರಕೃತಿಗಳಿನ್ಯಾತಕಯ್ಯ.
ಸನ್ಮಾರ್ಗದೊಳು ನಿಂದು, ಪರಕೆ ಪರವನಾಚರಿಸಬಲ್ಲಡೆ
ಆತನೆ ಸ್ವಯಜ್ಞಾನಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ./401
ತನ್ನೊಳಗೆ ಮಹಾಲಿಂಗವಿಪ್ಪ ಸುಳುವಿನ ಭೇದವ
ಸಮರಸಭಾವದಿಂದ ತಿಳಿದು,
ನಿಶ್ಚಿಂತ ನಿರಾಕುಳದ ಮೇಲೆ ಒಂದು ಗುಡಿಯ ಕಂಡೆನಯ್ಯ.
ಆ ಗುಡಿಯ ಶಿಖರದ ಮೇಲೆ ತೊಳಗಿ ಬೆಳಗುತ್ತಿತ್ತಯ್ಯ
ಪರಬ್ರಹ್ಮದ ಪ್ರಕಾಶವು
ನೋಡಾ ಝೇಂಕಾರ ನಿಜಲಿಂಗಪ್ರಭುವೆ./402
ತನ್ನೊಳಿಹ ಮೂರು ಲೋಕವ ನುಂಗಿ
ಮುಂದೆ ತೋರುತಿಹ ಪರಬ್ರಹ್ಮ ಕಿರಣವು
ಆ ಕಿರಣದೊಳು ನೆನವನಡಗಿಸಿ
ಸುಷುಪ್ತಿಯ ನಿಲವ ಕಾಣಬಲ್ಲಾತನೆ ಪರಮ ಲಿಂಗೈಕ್ಯ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./403
ತಲೆ ಒಂದು, ಮುಖ ಮೂರು, ಹಸ್ತವಾರು,
ಮೂವತ್ತಾರು ಪಾದಂಗಳು,
ಒಂಬತ್ತು ಬಾಗಿಲ ಶಿವಾಲಯದೊಳಗೆ ಪೂಜೆಗೊಂಬ ಲಿಂಗವನು,
ಏಕೋಮನೋಹರನೆಂಬ ಪೂಜಾರಿಯು
ನವರತ್ನದ ತೊಂಡಲಂಗಳಂ ಕಟ್ಟಿ
ಲಿಂಗಾರ್ಚನೆಯ ಮಾಡುತಿರ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./404
ತಾನು ತಾನಾದ ಭೇದವ ಮಹಾಜ್ಞಾನದಿಂದ ತಿಳಿದು,
ನಿರಂಜನಲಿಂಗದಲ್ಲಿ ಕೂಡಿ ನಿರ್ವಿಕಲ್ಪ ನಿತ್ಯನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./405
ತಾನು ತಾನಾದಲ್ಲಿ ಒಬ್ಬ ಸತಿಯಳು
ನಿಶ್ಚಿಂತ ನಿರಾಕುಳನೆಂಬ ಲಿಂಗದಲ್ಲಿ
ನಿಷ್ಪತಿಯಾದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./406
ತಾಪತ್ರಯಂಗಳ ಕಳೆದು, ತತ್ವರೂಪಾದಿಗಳನರಿದು,
ಮಹಾಜ್ಞಾನಾದಿಗಳಲ್ಲಿ ನಿಂದು
ನಿರ್ವಯಲಿಂಗವನಾಚರಿಸಬಲ್ಲಾತನೆ ನಿರ್ಮುಕ್ತ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./407
ತಾಮಸ ತಮಂಧಗಳಿಲ್ಲದೆ, ನೇಮ ನಿತ್ಯಗಳಿಲ್ಲದೆ,
ಕಾಮ ಮೋಹಾದಿಗಳಿಲ್ಲದೆ, ಸೀಮೆ ನಿಸ್ಸೀಮಗಳಿಲ್ಲದೆ,
ನಾಮನಾಸ್ತಿಯಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./408
ತಾಮಸಕೆ ಸಿಲ್ಕಿ ಭ್ರಮಿತನಾಗಬೇಡ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವನಳಿದು
ಪರಬ್ರಹ್ಮಲಿಂಗದೊಳು ಕೂಡಿ ಉಪಮಾತೀತನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./409
ತಾಯ ಒಡಲಲ್ಲಿ ಒಂದು ಮರಿ ಹುಟ್ಟಿ,
ಆ ಮರಿ ತಾಯ ನುಂಗಿದರ್ುದ ಕಂಡೆನಯ್ಯ.
ಅರುಹು ಮರಹು ಪರವ ನುಂಗಿದರ್ುದ ಕಂಡೆನಯ್ಯ.
ಪರಕ್ಕೆ ಪರವ ತಾನು ತಾನೇ ನುಂಗಿದರ್ುದ ಕಂಡೆನಯ್ಯ.
ಇದು ಕಾರಣ ಇಂತಪ್ಪ ಭೇದವನರಿಯಬಲ್ಲರೆ
ನಿಮ್ಮ ಶರಣನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./410
ತಾಳಮರದ ಮೇಲೆ ಒಂದು ಕಪ್ಪೆ ಕುಳಿತು
ನವರತ್ನವ ನುಂಗಿ ಕೂಗುತಿದೆ ನೋಡಾ!
ಕೂಗಿ ಸಾಯದು, ಸತ್ತು ಕೂಗುವದು,
ಶಬ್ದವಡಗದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./411
ತುಟ್ಟತುದಿಯಲೊಂದು ಬಟ್ಟಬಯಲಾದ ಹಣ್ಣ
ಮುಟ್ಟಿ ನೋಡುವವರ ನಾನಾರನೂ ಕಾಣೆನಯ್ಯ.
ವೇದ ಶಾಸ್ತ್ರ ಪುರಾಣದಲ್ಲೂ ಕಂಡ ಕಾಣಿಕೆಯಿಲ್ಲ,
ಅದು ಶ್ರುತಜ್ಞಾನಸಮ್ಮತ.
ಹೇಗೆಂದರೆ: ಗುರು ನಿರೂಪಣದಿಂದ ಕಂಡದುದೆ ಕಾಣಿಕೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./412
ತ್ರಿಕೂಟದ ಶಿವಾಲಯದೊಳಗಿಪ್ಪ
ಉಪಮಾತೀತ ಲಿಂಗವನು ಮಹಾಜ್ಞಾನದಿಂದ ತಿಳಿದು
ನಿರವಯವೆಂಬ ಕರಸ್ಥಲದಲ್ಲಿ ನಿಂದು
ಪರಕೆಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./413
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು,
ಝೇಂಕಾರವು ಮೊನೆದೋರದಂದು,
ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ.
ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ.
ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ಪರಶಿವನಾದ.
ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ಸದಾಶಿವನಾದ,
ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ಈಶ್ವರನಾದ,
ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ರುದ್ರನಾದ,
ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ವಿಷ್ಣುವಾದ,
ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ಬ್ರಹ್ಮನಾದ,
ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ
ಧಾರೆಯನೆರೆದರಯ್ಯ.
ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./414
ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ,
ಆರು ಬಾಗಿಲು, ಮೂರು ಮಂಟಪವು,
ಮನೋಹರನೆಂಬ ಪೂಜಾರಿ, ನವರತ್ನವ ತೊಂಡಲಂಗಳ ಕಟ್ಟಿ,
ಗೋಪ್ಯದಿಂದ ಲಿಂಗಾರ್ಚನೆಯ ಮಾಡೆ,
ಅಂಗವಿಲ್ಲದಾಕಿ ಮಂಗಳಾರ್ತಿಯ ತಂದು
ಓಂ ನಮಃಶಿವಾಯವೆಂದು ಬೆಳಗುತಿರ್ಪಳಯ್ಯ
ಝೇಂಕಾರ ನಿಜಲಿಂಗಪ್ರಭುವೆ./415
ದೇಗುಲದೊಳಗಿರುವ ದೇವರ ಕಂಡೆನಯ್ಯ.
ಆ ದೇವಿ ದೇವರ ಸಂಗದಿಂ ಮಹಾಮಧುರಸ ತೊಟ್ಟಿಡುವುದ ಕಂಡೆನಯ್ಯ.
ಆ ಮಧುರಸವನುಂಡು, ಪರಿಪೂರ್ಣಜ್ಞಾನಿಯಾಗಿ,
ನಿಶ್ಚಿಂತ ನಿರಾಕುಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./416
ದೇಗುಲದೊಳಗೆ ಒಬ್ಬ ಗಂಡಂಗೆ ಐವರು ಹೆಂಡರಾಗಿಪ್ಪರು ನೋಡಾ.
ಕಂಡ ಕಂಡ ದಾರಿಯನಳಿದು ಮಂಡೆ ಬೋಳ ಮಾಡಿ
ಹೆಂಡರು ಆ ಗಂಡನ ಕೂಡಿದುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./417
ದೇಗುಲದೊಳಗೊಂದು ಲಿಂಗವಿಪ್ಪುದು ನೋಡಾ.
ಆ ಲಿಂಗದಲ್ಲಿ ಒಬ್ಬ ಚಿದಂಗನೆಯ ಕಂಡೆನಯ್ಯ.
ಆ ಚಿದಂಗನೆಯು ಐವರ ಕೂಡಿಕೊಂಡು
ಆ ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ
ಝೇಕಾರ ನಿಜಲಿಂಗಪ್ರಭುವೆ./418
ದೇವರ ನಿರೂಪದಿಂದ ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ,
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ಕೂಡಿ
ನಿಷ್ಕಲಪರಬ್ರಹ್ಮಲಿಂಗವನಾಚರಿಸಿ ನಿರ್ಮುಕ್ತನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./419
ದೇವರ ನಿರೂಪದಿಂದ ದೇವಿಯ ಸಂಗವ ಮಾಡಿ
ಸದಮಲ ಬೆಳಗಿನೊಳು ನಿಂದು,
ದೇವಿ ದೇವ ಅನಾದಿ ಪ್ರಸಿದ್ಧನ ಆಚರಿಸುತಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./420
ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು
ಕಂಡಕಂಡವರ ಹಾಸ್ಯ ಮಾಡುತಿಪ್ಪ ನೋಡಾ.
ಇದು ಕಾರಣ ಹೆತ್ತ ತಾಯ ಶಿಶುವು ನುಂಗಿ
ಆ ಭಾಷೆಗಳ್ಳನ ಕೊಂದು, ದೇಶಕ್ಕೆ ಹೋದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./421
ದೇಶದ ಮುಂದೆ ನಿರ್ದೆಶವ ಕಂಡೆನಯ್ಯ.
ಆ ನಿರ್ದೆಶನದ ಮುಂದೆ ಒಬ್ಬ ಮರುಳ ನಿಂದು,
ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಐದಂಗವನಂಗೀಕರಿಸಿಕೊಂಡು,
ಪರಿಪೂರ್ಣವೆಂಬ ಆಶ್ರಮಕ್ಕೆ ಹೋಗಿ,
ತಾನು ತಾನಾಗಿಪ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./422
ದೇಶದ ಮೇಲೆ ಒಂದು ಪರಿಪರಿಯ ಬಣ್ಣದ ಪಕ್ಷಿಯ ಕಂಡೆನಯ್ಯ.
ಆ ಪಕ್ಷಿ ಬ್ರಹ್ಮ ವಿಷ್ಣು ರುದ್ರಾದಿಗಳ ನುಂಗಿತ್ತು ನೋಡಾ!
ಇದು ಕಾರಣ, ನಿಮ್ಮ ಶಿವಶರಣರು
ಆ ಮಾಯೆಯ ಹಿಡಿದು ತಿಂದು ತೇಗಿದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./423
ದೇಹವೆಂಬ ದೇಗುಲದೊಳಗೆ
ಇಪ್ಪತ್ತೈದು ಶಿವಾಲಯವಿಪ್ಪುವು ನೋಡಾ.
ಆ ಶಿವಾಲಯದೊಳಗೊಬ್ಬ ಪೂಜಕನು ತ್ರಿಕೂಟದಲ್ಲಿ ನಿಂದು
ಪರಂಜ್ಯೋತಿಯೆಂಬ ಲಿಂಗವ ಕೂಡಿ
ಪರಿಪೂರ್ಣವಾದ ಶರಣನ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./424
ದೇಹವೆಂಬ ದೇಗುಲದೊಳಗೆ
ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ.
ಆ ಸತಿಯಳ ಸಂಗದಿಂದ ಅಂಗಲಿಂಗಸಂಬಂಧವ ಗರ್ಭಿಕರಿಸಿಕೊಂಡು
ನಿರಂಜನದೇಶಕೆ ಹೋಗಿ
ನಿಃಪ್ರಿಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./425
ದ್ವೈತ ಅದ್ವೈತಾನಂದದಲ್ಲಿ ಚಿದ್ರೂಪ ಚಿದಾನಂದಲಿಂಗವ ಕೂಡಿ
ಪರಿಪೂರ್ಣವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./426
ಧರೆ ಆಕಾಶವಿಲ್ಲದಂದು, ಅಪ್ಪು ವಾಯುಗಳಿಲ್ಲದಂದು,
ಅಗ್ನಿ ತಾಮಸವಿಲ್ಲದಂದು ಶೂನ್ಯನಳಿದು
ನಿಃಶೂನ್ಯ ನಿರಾಕುಳ ನಿರ್ಭರಿತನಾಗಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./427
ಧರೆ ಆಕಾಶವೆಂಬ ಅಂಡವನು ಒಂದು ಇರುವೆ ನುಂಗಿ,
ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ.
ಆ ಸುಳುವಿನ ಭೇದವನರಿತು ಆಚರಿಸುವ ಹಿರಿಯರ
ಎನಗೊಮ್ಮೆ ತೋರಿಸಯ್ಯ,
ಝೇಂಕಾರ ನಿಜಲಿಂಗಪ್ರಭುವೆ./428
ಧರೆಯ ಮೇಲೆ ಹರಡಿರುವ ಶಿಲೆಯ ತಂದು
ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ?
ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು
ದೀಕ್ಷೆ ಉಪದೇಶವಂ ಮಾಡಿ,
ಆ ಲಿಂಗವ ಧರಿಸಿಕೊಂಡು
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ,
ಶಿಲಾಲಿಖಿತವ ತೊಡೆದು ಕಲಾಭೇದವನರಿದು
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು
ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./429
ಧರೆಯಾಕಾಶದ ಮೇಲೆ ಒಬ್ಬ ಪುರುಷ ನಿಂದು
ಪರಕೆಪರವಾದ ಲಿಂಗವ ತೋರುತಿಪ್ಪ ನೋಡಾ.
ಆ ಲಿಂಗದಲ್ಲಿ ನಿಶ್ಚಿಂತ ನಿರಾವಾಸಿಯಾಗಿದ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./430
ಧರೆಯಾಕಾಶದ ಮೇಲೆ ಒಬ್ಬ ಸೂಳೆ ನಿಂದು,
ಪರಿಪರಿಯ ತೋರುತಿರ್ಪಳು ನೋಡಾ.
ಆ ಸೂಳೆಯ ಗೃಹದಲ್ಲಿ ಸಾಸಿರಕೋಟಿ ಕಿರಣವ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./431
ಧರೆಯಾಕಾಶವೆಂಬ ಅಂಡವ
ಒಂದು ಇರುವೆ ಕಚ್ಚಿ ಒಯ್ಯುವುದ ಕಂಡೆನಯ್ಯ !
ಆ ಇರುವೆ ಅಣೋರಣಿಯಾನ್ ಮಹತೋಮಹೀಯಾನ್ಯೆಂಬ
ನಿರ್ವಯಲನೊಳಕೊಂಡು ನಿಃಶಬ್ದವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./432
ಧರ್ಮವೆಂಬ ದಾರಿಯಲ್ಲಿ ಒಬ್ಬ ಸತಿಯಳು ನಿಂದು
ವರ್ಮವ ಮಾಡುತಿರ್ಪಳು ನೋಡಾ !
ಆ ವರ್ಮವ ಈ ಲೋಕದವರು ಆರಾರು ಕೇಳಬಲ್ಲರೆ ಅಯ್ಯಾ ?
ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ಅಯ್ಯಾ !
ಇದು ಕಾರಣ ನಿದ್ರ್ವಂದ್ವವಾದ ಶರಣನು ಆ ವರ್ಮವ ಕೊಳಬಲ್ಲನಯ್ಯ.
ಆ ವರ್ಮದ ದಾರಿಯ ನೆರೆ ಬಲ್ಲನಯ್ಯ
ಆ ಸತಿಯಳ ಅಂಗವ ಕೂಡಬಲ್ಲನಯ್ಯ
ನಿಷ್ಪತಿಲಿಂಗದಲ್ಲಿ ರಾಜಿಸಬಲ್ಲನಯ್ಯ
ಝೇಂಕಾರ ನಿಜಲಿಂಗಪ್ರಭುವೆ./433
ಧ್ಯಾನ ಮೌನವ ನುಂಗಿದರ್ುದ ಕಂಡೆನಯ್ಯ.
ಮೌನ ಧ್ಯಾನವ ನುಂಗಿದರ್ುದ ಕಂಡೆನಯ್ಯ.
ಧ್ಯಾನ ಮೌನಂಗಳು ಇಲ್ಲದೆ
ತಾನು ತಾನೆ ನುಂಗಿದರ್ುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./434
ನಕಾರ ಮಕಾರಗಳಿಲ್ಲದಂದು,
ಶಿಕಾರ ವಕಾರಗಳಿಲ್ಲದಂದು,
ಯಕಾರ ಓಂಕಾರಗಳಿಲ್ಲದಂದು,
ಪ್ರಣವ ನಿಃಪ್ರಣವಂಗಳಿಲ್ಲದಂದು,
ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./435
ನಡುವಿಲ್ಲದ ಬಾಲೆಯು ಕಣ್ಣಿಲ್ಲದ ಅಂಧಕನ ಕೂಡಿಕೊಂಡು
ನೀರಿಲ್ಲದ ಬಾವಿಗೆ ಹೋಗಿ ನೀರನೆ ಮೊಗೆದು
ಕಣ್ಣಿಲ್ಲದ ಅಂಧಕ ಬಿದ್ದ, ನಡುವಿಲ್ಲದ ಬಾಲೆಯು ಅಡಗಿಪ್ಪಳಯ್ಯ.
ಇದೇನು ವಿಚಿತ್ರವೆಂದು ಝೇಂಕಾರಪ್ರಭು ಬಂದು ವಿಚಾರಿಸಲು
ಮಕ್ಕಳಿಲ್ಲದಾಕಿ ಬಂದು, ಕಣ್ಣು ಇಲ್ಲದ ಅಂಧಕನ ಕೂಡಿಕೊಂಡು,
ನಡುವಿಲ್ಲದ ಬಾಲೆಯ ಕರೆದು
ಅವರಿಬ್ಬರನು ಮಹಾಲಿಂಗಕ್ಕೆ ಒಪ್ಪಿಸುತಿರ್ದಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./436
ನಡೆದು ನಡೆದು ಬಯಲಾದುದ ಕಂಡೆನಯ್ಯ.
ನುಡಿದು ನುಡಿದು ಬಯಲಾದುದ ಕಂಡೆನಯ್ಯ.
ನೋಡಿ ನೋಡಿ ಬಯಲಾದುದ ಕಂಡೆನಯ್ಯ.
ಮಾಡಿ ಮಾಡಿ ಬಯಲಾದುದ ಕಂಡೆನಯ್ಯ.
ಕೇಳಿ ಕೇಳಿ ಬಯಲಾದುದ ಕಂಡೆನಯ್ಯ.
ಬಯಲಿಂಗೆ ಬಯಲು ನಿರ್ವಯಲಾದುದ ಕಂಡೆನಯ್ಯ.
ಇಂತಪ್ಪ ಭೇದವನರಿತು ಇರಬಲ್ಲಡೆ ಆತನೇ ಭಾವಲಿಂಗಸಂಬಂಧಿ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./437
ನಯನದ ಸಂಚಲವನಳಿದವರ ಅಂಗವ ತೋರಿಸಯ್ಯ.
ಪ್ರಾಣದ ಪ್ರಕೃತಿಯ ಕಳೆದವರ ಲಿಂಗವ ತೋರಿಸಯ್ಯ.
ಶಬ್ದದ ಮೂಲವ ಬಲ್ಲವರ ಸಂಬಂಧವ ತೋರಿಸಯ್ಯ.
ಜಾತಿಯ ಆಶ್ರಯವನಳಿದವರ ಸಮರಸವ ತೋರಿಸಯ್ಯ.
ಅಂಗದ ಸಕೀಲವ ಬಲ್ಲವರ ಮಹಾಜ್ಞಾನವ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./438
ನವಗೃಹದ ಮೇಲೆ ನಿರ್ವಯಲೆಂಬ ಸತಿಯಳು
ನಿಂದಿರುವುದನ್ನು ಕಂಡೆನಯ್ಯ.
ಆಕಿಂಗೆ ಚಿದಾತ್ಮನೆಂಬ ಮಗ ಹುಟ್ಟಿ, ಐವರ ಸಂಗವ ಮಾಡಿ,
ಸಾಸಿರದಳಕಮಲವ ಪೊಕ್ಕು, ಶಿಖಾಚಕ್ರವೆಂಬ ಮೆಟ್ಟಿಗೆವಿಡಿದು,
ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯ ಕೂಡಿ
ನಿರವಯವೆಂಬ ಸತಿಯಳ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./439
ನವದ್ವಾರಬೀದಿಗಳಲ್ಲಿ ಸುಳಿದಾಡುವ ಹಂಸನ ಕೊರಳಲ್ಲಿ
ಇಪ್ಪತ್ತೈದು ಗ್ರಾಮಗಳ ಕಟ್ಟಿ ತೂಗುತದೆ ನೋಡಾ !
ಸಮುದ್ರವೆಂಬ ಘೋಷದಲ್ಲಿ ಒಂದು ಕಪ್ಪೆ ಕುಳಿತು
ಆ ಹಂಸನ ನುಂಗಿ ಕೂಗುತಿದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./440
ನವನಾಳಪಟ್ಟಣದೊಳಗೆ ನವಸ್ಥಳವ ಕಂಡೆನಯ್ಯ!
ನವಸ್ಥಳಂಗಳಲ್ಲಿ ನವಲಿಂಗವ ಕಂಡೆನಯ್ಯ!
ನವಲಿಂಗದಲ್ಲಿ ನವಪೂಜೆ ನವಜಪ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./441
ನವನಾಳಮಧ್ಯದಲ್ಲಿ ಅಷ್ಟದಳಪಟವ ಮೆಟ್ಟಿ ನಿಂದೆನಯ್ಯ.
ಹತ್ತು ವಾಜಿಯಂಗಳ ಏರಿ ಷೋಡಶ ಬಾಗಿಲ ದಾಂಟಿ
ನಾಡೊಳಗೆ ಏಕಲಿಂಗವ ಕಂಡು, ಭೇರಿ ಮೃದಂಗವ ನುಡಿಸಿ,
ನಿರಾಲಂಬಲಿಂಗದೊಳು ಬೆರದಿದ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./442
ನವಸಾಗರದ ಮುಂದೆ ಕಪ್ಪೆ ಕೂಗುತಿದೆ ನೋಡಾ !
ಆ ಕೂಗ ಕೇಳಿ ನಾಗಲೋಕದಲ್ಲಿರ್ದ ಸರ್ಪನು
ನವಸಾಗರವ ಹಾರಿ, ಆ ಕಪ್ಪೆಯನು ನುಂಗಿ,
ತನ್ನ ಸುಳುಹ ತಾನೇ ತೋರುತ್ತಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./443
ನಾದ ಬಿಂದು ಕಲೆಗಳು ಇಲ್ಲದ ಮುನ್ನ,
ಅತ್ತತ್ತಲೆ ಓಂಕಾರನೆಂಬ ಗಣೇಶ್ವರನಿರ್ಪ ನೋಡಾ.
ಆ ಓಂಕಾರಗಣೇಶ್ವರಂಗೆ ಒಬ್ಬ ಸತಿಯಳು ಇರ್ಪಳು ನೋಡಾ.
ಆ ಸತಿಯಳ ಅಂಗದಲ್ಲಿ ಐವರು ಮಕ್ಕಳು ಇರ್ಪರು ನೋಡಾ.
ಐವರು ಮಕ್ಕಳು ಇಪ್ಪತ್ತೈದು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ.
ಆ ಇಪ್ಪತ್ತೈದು ಕೇರಿಗಳ ಒಂದು ಇರುವೆ ನುಂಗಿತು ನೋಡಾ.
ಆ ಇರುವೆಯ ಒಬ್ಬ ಸತಿಯಳು ನುಂಗಿದಳು ನೋಡಾ.
ಆ ಸತಿಯಳ ಓಂಕಾರಗಣೇಶ್ವರನು ನುಂಗಿದನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./444
ನಾದ ಬಿಂದು ಕಳಾತೀತಲಿಂಗದಲ್ಲಿ ಒಬ್ಬ ಭಾಮಿನಿಯು
ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ
ಪರಕೆಪರನಾದ ಲಿಂಗಾರ್ಚನೆಯ ಮಾಡಿ
ತಾನು ತಾನಾಗಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./445
ನಾದಘೋಷವೆಂಬ ಲಿಂಗದಲ್ಲಿ ಪಾತ್ರ ಸತ್ಪಾತ್ರವನರಿತು,
ಆ ಲಿಂಗದಲ್ಲಿ ಕೂಡಿ ಪರಿಪೂರ್ಣವಾದ ಶರಣಂಗೆ,
ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯ?
ಇಹಪರವನೊಳಕೊಂಡು ತಾನು ತಾನಾದಲ್ಲಿಗೆ
ಶೂನ್ಯವಳಿದು ನಿಃಶೂನ್ಯ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./446
ನಾದದೊಳಗಣ ಚಿನ್ನಾದವ ತೋರಿಸಯ್ಯ.
ಬಿಂದುವೊಳಗಣ ಚಿದ್ಬಿಂದುವ ತೋರಿಸಯ್ಯ.
ಕಲೆಯೊಳಗಣ ಚಿತ್ಕಲೆಯ ತೋರಿಸಯ್ಯ.
ಪತಿಯೊಳಗಣ ಮಹಾನಿಷ್ಪತಿಯ ತೋರಿಸಯ್ಯ.
ಇಂತೀ ಚತುಭರ್ೆದವ ಬಲ್ಲ ಮಹಾಶರಣನ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./447
ನಾದದೊಳಗಣ ನಾದವ ತೋರಿಸಯ್ಯ.
ಕಂಗಳೊಳಗಣ ಮಂಗಳಪ್ರಭೆಯ ತೋರಿಸಯ್ಯ.
ಸೋಮಸೂರ್ಯರ ನುಂಗಿದ ಪರಮನ ತೋರಿಸಯ್ಯ.
ಇಂತೀ ತ್ರಿವಿಧವ ಬಲ್ಲ ಪರಮಶರಣನ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./448
ನಾದಬಿಂದುಕಲೆಗಳಿಂದತ್ತತ್ತ ಮಹಾಪುರುಷನ ಕಂಡೆನಯ್ಯ.
ಆ ಪರುಷನ ಸಂಗದಿಂದ ಒಬ್ಬ ಸತಿಯಳು ಹುಟ್ಟಿದಳು ನೋಡಾ.
ಆ ಸತಿಯಳ ಸಂಗದಲ್ಲಿ ಐವರು ಮಕ್ಕಳು ಹುಟ್ಟಿ,
ಇಪ್ಪತ್ತೈದು ಗ್ರಾಮಗಳಲ್ಲಿ ಸುಳಿದಾಡುತಿಪ್ಪರು ನೋಡಾ.
ಆ ಸುಳುವ ನಿಲವು ನುಂಗಿತು, ಆ ನಿಲವ ಇರುವೆ ನುಂಗಿತು,
ಆ ಇರುವೆಯ ಧೂಮ್ರ ನುಂಗಿತು,
ಆ ಧೂಮ್ರವ ನಿರ್ವಯಲು ನುಂಗಿತು,
ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./449
ನಾದಬಿಂದುಕಳಾತೀತಲಿಂಗವನು ಮಹಜ್ಞಾನದಿಂದ ತಿಳಿದು,
ವಿಶ್ವಂಭರಿತವಾದ ನಿರಪೇಕ್ಷಲಿಂಗದಲ್ಲಿ ಕೂಡಿ
ನಿಸ್ಸಂಗ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./450
ನಾದಬಿಂದುಕಳಾತೀತಲಿಂಗವನು ಮಹಾಜ್ಞಾನದಿಂದ ತಿಳಿದು,
ಚಿದಾನಂದಸ್ವರೂಪವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./451
ನಾದಬಿಂದುಕಳಾತೀತಲಿಂಗವನು,
ಒಬ್ಬ ಪುರುಷನು ಉನ್ಮನಿಯ ಬಾಗಿಲ ಮುಂದೆ ನಿಂದು
ಜಂಗಮರೂಪಿನಿಂದ ಲಿಂಗಧ್ಯಾನ ಮಹಾಧ್ಯಾನಮಂ ಮಾಡಿ,
ಪಶ್ಚಿಮದಿಕ್ಕಿನಲ್ಲಿ ನಿಂದು ಚಿತ್ರಿಕನಾಗಿ ಎರಡು ಕಮಲಂಗಳ ರಚಿಸಿ,
ಅಷ್ಟಕುಳಪರ್ವತದ ಮೇಲೆ ಲಿಂಗಾರ್ಚನೆಯಂ ಮಾಡಿ,
ನವಸ್ಥಲದ ಗುಡಿಯ ಶಿಖರವಿಡಿದಿರಲು,
ಒಸರುವ ಕೆರೆಬಾವಿಗಳು ಬತ್ತಿದವು ನೋಡಾ!
ಸಪ್ತದ್ವೀಪಂಗಳ ರಚಿಸಿದ ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದ ಮೇಲೆ
ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ!
ಆ ಲಿಂಗದ ಬೆಳಗಿನೊಳಗೆ ಅನಂತಕೋಟಿ
ಸೋಮಸೂರ್ಯರ ಬೆಳಗು ನೋಡಾ!
ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ,
ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ,
ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು,
ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ,
ಭಕ್ತನೆಂಬ ಅಡ್ಡಣಿಗೆ,ಮಹೇಶ್ವರನೆಂಬ ಹರಿವಾಣ,
ಪ್ರಸಾದಿಯೆಂಬ ನೈವೇದ್ಯ, ಪ್ರಾಣಲಿಂಗಿಯೆಂಬ ತೈಲ,
ಶರಣನೆಂಬ ಮೇಲೋಗರ, ಐಕ್ಯನೆಂಬ ಭೋಜಿಯನು
ಆ ಲಿಂಗಕ್ಕೆ ತೃಪ್ತಿಯನೆಯ್ದಿಸಿ,
ಮನಜ್ಞಾನವೆ ವೀಳ್ಯೆಯ, ಸುಜ್ಞಾನವೆ ಅಡಕಿ,
ಪರಮಜ್ಞಾನವೆ ಸುಣ್ಣ, ಮಹಾಜ್ಞಾನವೆ ತಾಂಬೂಲ,
ಅಜಾಂಡಬ್ರಹಾಂಡ್ಮವೆ ಕುಕ್ಷಿ, ಅಲ್ಲಿಂದತ್ತ ಮಹಾಲಿಂಗದ ಬೆಳಗು,
ಸ್ವಯಾನಂದದ ತಂಪು, ನಿರಂಜನದ ಸುಖ,
ಪರಿಪೂರ್ಣವೆಂಬ ಆಶ್ರಮದಲ್ಲಿ ತೊಳಗಿ ಬೆಳಗುವ ಮಹಾಮಹಿಮಂಗೆ
ಓಂ ನಮಃ ಓಂ ನಮಃ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./452
ನಾದಬಿಂದುಕಳಾತೀತವನು ಗರ್ಭಿಕರಿಸಿಕೊಂಡು ಇರಲ್ಪಟ್ಟಂಥಾ
ನಿಷ್ಕಲಲಿಂಗದಲ್ಲಿ ಪರಿಪೂರ್ಣವಾದ ಭಕ್ತನ ತೋರಿಸಯ್ಯ.
ಪರಿಪೂರ್ಣವಾದ ಮಹೇಶ್ವರನ ತೋರಿಸಯ್ಯ.
ಪರಿಪೂರ್ಣವಾದ ಪ್ರಸಾದಿಯ ತೋರಿಸಯ್ಯ.
ಪರಿಪೂರ್ಣವಾದ ಪ್ರಾಣಲಿಂಗಿಯ ತೋರಿಸಯ್ಯ.
ಪರಿಪೂರ್ಣವಾದ ಶರಣನ ತೋರಿಸಯ್ಯ.
ಪರಿಪೂರ್ಣವಾದ ಐಕ್ಯನ ತೋರಿಸಯ್ಯ.
ಪರಿಪೂರ್ಣವಾದ ಮಹಾಜ್ಞಾನಿಯ ತೋರಿಸಯ್ಯ.
ನಿಮ್ಮ ನೀವೇ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ./453
ನಾದಮೂರ್ತಿಗಳು ತಮ್ಮ ನಿಲವು ಕಾಣಬಾರದಂದಿಗೆ,
ಬಿಂದುಮೂರ್ತಿಗಳು ನೆಲೆಗೊಳ್ಳದಂದಿಗೆ,
ಕಲಾಮೂರ್ತಿಗಳು ತಮ್ಮ ಪ್ರಕಾಶದೋರದಂದಿಗೆ,
ಅತ್ತತ್ತಲೆ ತಾನೇ ಲಿಂಗವಾಗಿರ್ದನಯ್ಯ.
ತನ್ನ ನೆನವಿನಿಂದ ಒಬ್ಬ ಸತಿಯಳು ಪುಟ್ಟಿದಳು ನೋಡಾ !
ಆಕೆಯ ಸಂಗದಲ್ಲಿ ಐವರು ಕನ್ನೆಯರ ಕಂಡೆನಯ್ಯ.
ಆ ಐವರು ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ
ಏಕಾರ್ತಿಯನಿಕ್ಕಿ ಪಂಚದೀಪವ ರಚಿಸಿ,
ಆ ಲಿಂಗಕ್ಕೆ ಓಂ ನಮೋ ಓಂ ನಮೋ ಓಂ ನಮೋಯೆಂದು
ಮಂಗಳಾರ್ತಿಯನೆತ್ತಿ ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./454
ನಾದಲಕ್ಷ ಬಿಂದುಲಕ್ಷ ಕಳಾಲಕ್ಷದ ಮೇಲೆ
ನಿರ್ವಯ ಲಕ್ಷವ ಕಂಡೆನಯ್ಯ.
ಆ ನಿರ್ವಯ ಲಕ್ಷದೊಳಗೆ
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./455
ನಾದಲಕ್ಷವ ನೋಡಿದರೇನಯ್ಯ ?
ಬಿಂದುಲಕ್ಷವ ನೋಡಿದರೇನಯ್ಯ ?
ಕಲಾಲಕ್ಷವ ನೋಡಿದರೇನಯ್ಯ ?
ಇಂತಿವನೊಳಗೊಂಡು ಪರಬ್ರಹ್ಮವೆಂಬ ಲಕ್ಷವ ನೋಡಬಲ್ಲಾತನೆ
ನಿಮ್ಮ ಲಿಂಗೈಕ್ಯ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./456
ನಾದಲಕ್ಷವ ನೋಡಿದೆನೆಂದು, ಬಿಂದುಲಕ್ಷವ ಕಂಡೆನೆಂದು,
ಕಲಾಲಕ್ಷವ ಕಂಡೆನೆಂದು,
ಆತ್ಮದಳವನುಂಟುಮಾಡಿಕೊಂಡು ಪೂಜ್ಯರಾದೆವೆಂದು ನುಡಿದಾಡುವಿರಿ.
ಇದು ಅಲ್ಲ ಬಿಡಿರೊ.
ನಾದಬಿಂದುಕಲಾತೀತವೆಂಬ ಲಿಂಗದಲ್ಲಿ ಕೂಡಿ
ಪೂಜ್ಯನಾಗಬಲ್ಲಾತನೆ ನಿಮ್ಮ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./457
ನಾನಾ ದೇಶವ ತಿರುಗಿ ಒಂದು ಮುಳ್ಳುಮೊನೆಯ ಮೇಲೆ
ಒಬ್ಬ ಪುರುಷನು ನಿಂದಿರುವುದ ಕಂಡೆನಯ್ಯ.
ಆ ಪುರುಷನ ಸತಿಯಳು ಒಬ್ಬ ಮಗನ ಹಡೆದು
ಆರು ಮೂರು ಗ್ರಾಮವ ಕಟ್ಟಿಸಿ
ಆ ಶಿಶುವ ಆ ಪುರುಷಂಗೆ ಕೊಟ್ಟು
ಹೆಂಡತಿ ಬತ್ತಲೆಯಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./458
ನಾನು ಇಲ್ಲದಂದು, ನೀನು ಇಲ್ಲದಂದು,
ತಾನುತಾನೆಂಬುದು ನೆನಪಿಂಗೆ ಬಾರದಂದಿಗೆ
ಒಬ್ಬ ಮೂರ್ತಿ ಓಂ ಎಂಬ ದಾರಿ ಹಿಡಿದು ಬಂದು
ಸದಾಶಿವನೆಂಬ ಕಳ್ಳನ ನಿಟಿಲಮುಂದಳ ಚಾವಡಿಯಲ್ಲಿ ಹಿಡಿದು
ಲಿಂಗಧ್ಯಾನವ ಮಾಡುತಿರ್ಪನು ನೋಡಾ !
ಪಶ್ಚಿಮದಿಶೆಯಲ್ಲಿ ನಿರಂಜನಗಣೇಶ್ವರ ನಿಂದು,
ಒಳಹೊರಗೆ ಪರಿಪೂರ್ಣವಾಗಿ, ಕಿರಣವ ಸೂಸುತಿರ್ಪನು ನೋಡಾ !
ಆ ಕಿರಣದ ಸುಳುವಿನ ಭೇದವನರಿತು
ಸಪ್ತೇಳು ಸಾಗರವ ದಾಂಟಿ ಅಷ್ಟಕುಲಪರ್ವತವ ಮೆಟ್ಟಿ
ಒಂಬತ್ತು ಬಾಗಿಲ ದೇಗುಲವ ಸುತ್ತಿ, ಕಡೆಯ ಬಾಗಿಲಲ್ಲಿ ನಿಂದು,
ತನ್ನ ಮನವ ತಾನೇ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./459
ನಾನು ಇಲ್ಲದೆ ನೀನು ಇಲ್ಲದೆ
ತಾನು ತಾನೆಂಬುದು ಇಲ್ಲದೆ
ಏನೇನೂ ಇಲ್ಲದೆ ಹೋಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./460
ನಾನು ಇಲ್ಲದೆ, ನೀನು ಇಲ್ಲದೆ,
ಅದು ಎನ್ನ ನುಂಗಿ, ನಿರವಯವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./461
ನಾನು ನೀನೆಂಬುಭಯವನಳಿದು,
ಸ್ವಾನುಭಾವ ಸಿದ್ಧಾಂತದಿಂದ ತಾನು ತಾನೆಂಬುದನರಿದು,
ಅನಂತಕೋಟಿ ಬ್ರಹ್ಮಾಂಡವ ನುಂಗಿರ್ದ ಲಿಂಗಕೆ
ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./462
ನಾನೂ ಇಲ್ಲದೆ, ನೀನೂ ಇಲ್ಲದೆ,
ತಾನೆಯಾದ ಶಿವನ ಸಂಗದಿಂದ ಒಬ್ಬ ಸತಿಯಳು ಪುಟ್ಟಿ,
ಐವರ ಸಂಗವ ಮಾಡಿ, ನಿತ್ಯನಿಜದಲ್ಲಿ ನಿಂದು,
ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./463
ನಾನೆಂಬ ನಾದಗಳು ಇಲ್ಲದಂದು, ನೀನೆಂಬ ನಿನಾದಗಳಿಲ್ಲದಂದು,
ತಾನು ತಾನೆಂಬ ಅವಸ್ಥೆಗಳು ಇಲ್ಲದಂದು,
ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿರ್ದೆಯಯ್ಯ
ಝೇಂಕಾರ ನಿಜಲಿಂಗಪ್ರಭುವೆ./464
ನಾನೇಯೆಂದು ವಾದಿಸದಂದು, ಓಂಯೆಂದು ಓಂಕರಿಸದಂದು,
ಝೇಯೆಂದು ಝೇಂಕರಿಸದಂದು,
ಅತ್ತತ್ತಲೇ ಶೂನ್ಯ ನಿಃಶೂನ್ಯ ನಿರಾಳಭರಿತನಾಗಿದ್ದೆಯಯ್ಯ
ಝೇಂಕಾರ ನಿಜಲಿಂಗಪ್ರಭುವೆ./465
ನಾಮರೂಪಕ್ರಿಯೆಯಿಲ್ಲದ ಮೂರ್ತಿಯೊಬ್ಬ.
ಚಿದಂಗನೆಯು ಉನ್ಮನಿಯ ಬಾಗಿಲಮುಂದೆ ನಿಂದು,
ಓಂ ಎಂಬ ಶ್ರುತಿವಿಡಿದು ಪವನಧ್ಯಾನ ಲಿಂಗಧ್ಯಾನವ ಮಾಡುತಿರ್ಪಳು ನೋಡಾ!
ಇದು ಕಾರಣ ಇಪ್ಪತ್ತೈದು ಕಂಬದ ಶಿವಾಲಯದೊಳಗೆ
ಸುಳಿದಾಡುವ ಜಂಗಮವ ಕಂಡೆನಯ್ಯ.
ಆ ಜಂಗಮವು ಸಪ್ತೇಳುಸಾಗರಂಗಳ ದಾಂಟಿ,
ಅಷ್ಟಕುಲಪರ್ವತಂಗಳ ಮೆಟ್ಟಿ, ಒಂಬತ್ತು ಬಾಗಿಲ ಮುಂದೆ ನಿಂದು,
ತಲೆಯೋಡಿನಲಿ ತಿರಿದುಂಬ ಜಂಗಮದ ಪರಿಯೆಂತು ನೋಡಾ!
ಇದು ಕಾರಣ ಆ ಚಿದಂಗನೆಯ ಕೈವಿಡಿದು, ಪರಬ್ರಹ್ಮವಂ ಪೊಕ್ಕು
ನಿಷ್ಪತಿಲಿಂಗವೆ ನಿಮ್ಮ ಶರಣಸಂತತಿಗಳಲ್ಲದೆ ಉಳಿದಾದ ಮತ್ತಜ್ಞಾನಿಗಳು
ಇವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ./466
ನಾಲ್ಕು ಕಂಬದ ಗುಡಿಗೆ ಇಪ್ಪತ್ತೈದು ರತ್ನಂಗಳ ಕೆತ್ತಿಸಿ,
ಮಹಾಜ್ಞಾನವೆಂಬ ಶಿಖರವನಿಕ್ಕಿ,
ಪರಂಜ್ಯೋತಿಯೆಂಬ ಲಿಂಗಾರ್ಚನೆಯಂ ಮಾಡಿ
ಪರಕೆಪರವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./467
ನಾಲ್ಕು ಕಂಬದ ದೇಗುಲದೊಳಗೆ ಸುಳಿದಾಡುವ ಶಿಶುವ
ಒಬ್ಬ ಸತಿಯಳು ಹಿಡಿದು, ಸಾವಿರ ಕಂಬದ ಮಂಟಪಕ್ಕೆ ಒಯ್ದು,
ಚಿದ್ಘನದಿಂದ ನಿಃಪ್ರಿಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./468
ನಾಲ್ಕು ಕಂಬದ ಪೌಳಿಯ ಮೇಲೆ
ಆಕಾಶವರ್ಣದ ಸೂಳೆಯ ಕಂಡೆನಯ್ಯ.
ಆ ಸೂಳೆಯ ಅಂಗದಲ್ಲಿ ಒಬ್ಬ ಬಾಲಕ ಹುಟ್ಟಿ
ಇಪ್ಪತ್ತೈದು ಗ್ರಾಮಂಗಳನೊಂದು ಮಾಡಿ
ಮಹಾಮೇರುವೆಯ ಪೊಕ್ಕು ಗಮನಕ್ಕೆ ಗಮನ
ನಿರ್ಗಮನವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./469
ನಾಲ್ಕು ಕಾಲುಳ್ಳ ಪಕ್ಷಿಂಗೆ ಆರು ರೆಕ್ಕೆಗಳುಂಟು,
ಮೂರು ಮುಖ, ಒಂದು ಕಣ್ಣು,
ದ್ವಂದ್ವವಾಗಿ ಕಾಣಬಲ್ಲವರಿಗೆ ಕಾಣಬಂದಿತ್ತಯ್ಯ.
ಕಾಣಲರಿಯದವರಿಂಗೆ ದೂರವಾಗಿತ್ತಯ್ಯ ಆ ಪಕ್ಷಿ
ಝೇಂಕಾರ ನಿಜಲಿಂಗಪ್ರಭುವೆ./470
ನಾಲ್ಕು ಮುಖದ ಸೂಳೆಯು
ಅರವತ್ತಾರು ಕೋಟಿ ಕೇರಿಗಳಲ್ಲಿ ಸುಳಿಸುಳಿದಾಡುತಿರ್ಪಳು ನೋಡಾ.
ಆ ಸೂಳೆಯೊಳಗೆ ಬ್ರಹ್ಮ ವಿಷ್ಣು ರುದ್ರಾದಿಗಳು ಅಡಗಿರ್ಪರು ನೋಡಾ.
ಇದು ಕಾರಣ, ಆದಿಯಲ್ಲಿ ಶಿವಜ್ಞಾನ ಉದಯದೋರಲು
ಅರವತ್ತಾರು ಕೋಟಿ ಕೇರಿಗಳು ಅಳಿದು ಹೋದವು.
ಆ ಸೂಳೆಯ ಮುಖ ಮುರಿದು ನಿಂದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./471
ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ ?
ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ,
ಜ್ಞಾನಿಗಳೆಂದರಿಯದೆ, ಬಾಯಿಗೆ ಬಂದಂತೆ ನುಡಿವ ತರಕಿಮೂಳರ
ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ./472
ನಿಃಕಲನ ಸಂಗದಿಂದ ಝೇಂಕಾರನಾದನಯ್ಯ.
ಝೇಂಕಾರನ ಸಂಗದಿಂದ ನಿರಂಜನನಾದನಯ್ಯ.
ನಿರಂಜನನ ಸಂಗದಿಂದ ಸ್ವಯಜ್ಞಾನಿಯಾದನಯ್ಯ.
ಸ್ವಯಜ್ಞಾನಿಯ ಸಂಗದಿಂದ ಪರಮಜ್ಞಾನಿಯಾದನಯ್ಯ.
ಪರಮಜ್ಞಾನಿಯ ಸಂಗದಿಂದ ಮಹಾಜ್ಞಾನಿಯಾದನಯ್ಯ.
ಮಹಾಜ್ಞಾನಿಯ ಸಂಗದಿಂದ ಸುಜ್ಞಾನಿಯಾದನಯ್ಯ.
ಸುಜ್ಞಾನಿಯ ಸಂಗದಿಂದ ಮನಜ್ಞಾನಿಯಾದನಯ್ಯ.
ಮನಜ್ಞಾನಿಯ ಸಂಗದಿಂದ ನಿರ್ಮಲಜ್ಞಾನಿಯಾದನಯ್ಯ.
ನಿರ್ಮಲಜ್ಞಾನಿಯ ಸಂಗದಿಂದ ಬದ್ಧಜ್ಞಾನಿಯಾದನಯ್ಯ.
ಬದ್ಧಜ್ಞಾನಿಯ ಸಂಗದಿಂದ ಶುದ್ಧಜ್ಞಾನಿಯಾದನಯ್ಯ.
ಶುದ್ಧಜ್ಞಾನಿಯೇ ಭಕ್ತ, ಬದ್ಧಜ್ಞಾನಿಯೇ ಮಹೇಶ್ವರ,
ನಿರ್ಮಲಜ್ಞಾನಿಯೇ ಪ್ರಸಾದಿ, ಮನಜ್ಞಾನಿಯೇ ಪ್ರಾಣಲಿಂಗಿ,
ಸುಜ್ಞಾನಿಯೇ ಶರಣ, ಪರಮಜ್ಞಾನಿಯೇ ಐಕ್ಯ,
ಮಹಾಜ್ಞಾನಿಯೇ ಪರಬ್ರಹ್ಮ, ಸ್ವಯಜ್ಞಾನಿಯೇ ಚಿದ್ಘನ,
ನಿರಂಜನವೇ ಚಿನ್ಮಯ, ಝೇಂಕಾರವೇ ಅಣುಮಯ,
ನಿಃಕಲವೇ ತಾನು ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ./473
ನಿಃಕಲಪರಬ್ರಹ್ಮಲಿಂಗವನಾಚರಿಸಿದ ಶರಣನು
ಭಕ್ತನುವೆ ನಾನಯ್ಯ, ಮಹೇಶ್ವರನುವೆ ನಾನಯ್ಯ,
ಪ್ರಸಾದಿಯೆ ನಾನಯ್ಯ, ಪ್ರಾಣಲಿಂಗಿಯೇ ನಾನಯ್ಯ,
ಶರಣನೆ ನಾನಯ್ಯ, ಐಕ್ಯನೆ ನಾನಯ್ಯ.
ಏನೇನುವೆ ನಾನಯ್ಯ ಝೇಂಕಾರ ನಿಜಲಿಂಗಪ್ರಭುವೆ./474
ನಿಃಕಲಶಿವತತ್ವದಿಂದ ಜ್ಞಾನಚಿತ್ತು ಉದಯಿಸಿತ್ತು ನೋಡಾ.
ಆ ಜ್ಞಾನಚಿತ್ತುವಿನಿಂದ
ಅಕಾರ ಉಕಾರ ಮಕಾರವೆಂದು ಈ ಮೂರು ಬೀಜಾಕ್ಷರ;
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಲೆ.
ಈ ನಾದ ಬಿಂದು ಕಲೆಗೆ ಪ್ರಕೃತಿಯೇ ಆಧಾರ.
ಪ್ರಕೃತಿಗೆ ಪ್ರಾಣವೇ ಆಧಾರ, ಪ್ರಾಣಕ್ಕೆ ಲಿಂಗವೇ ಆಧಾರ.
ಲಿಂಗಕ್ಕೆ ಶಿವಶಕ್ತಿ ಆದಿಯಾಗಿ ಓಂಕಾರವಾಯಿತ್ತು ನೋಡಾ.
ಆ ಓಂಕಾರವೇ ಅಖಂಡ ಪರಿಪೂರ್ಣ ಗೋಳಕಾಕಾರ
ತೇಜೋಮಯವಪ್ಪ ಮಹಾಲಿಂಗ ತಾನೇ ನೋಡಾ,
ಝೇಂಕಾರ ನಿಜಲಿಂಗಪ್ರಭುವೆ./475
ನಿಟಿಲತಟದಲ್ಲಿ ಮಠವ ಮಾಡಿಕೊಂಡು,
ಘಟವ ಸಟೆಮಾಡಿ, ದಿಟವ ಪಿಡಿದು ನಟಿಸಿ
ನಿರಂಜನಲಿಂಗದಲ್ಲಿ ಘಟೋತ್ತರವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./476
ನಿತ್ಯನಿರಾಳದಲ್ಲಿ ಪರಿಪೂರ್ಣವನೈದಿದ ಮಹಾಶರಣಂಗೆ
ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯಾ?
ಇಹಪರಗಳಿಂದತ್ತತ್ತ ಅಪರಂಪರ ಮಹಾಘನ ಚಿತ್ಪ್ರಕಾಶಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./477
ನಿತ್ಯವನರಿತು, ಪಾತಕವ ಕಳೆದು,
ಜ್ಞಾನಸ್ವಯವನರಿತು, ತ್ರಿಕೂಟದಲ್ಲಿ ನಿಂದು,
ಪರಕೆಪರವನಾಚರಿಸಿ, ಲಿಂಗಪರಿಣಾಮಿಯಾಗಿರ್ದನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./478
ನಿತ್ಯವಾದ ಶರಣನು ಐವರ ಕೂಡಿಕೊಂಡು
ಪರಕೆ ಪರವಾದ ಲಿಂಗಾರ್ಚನೆಯಂ ಮಾಡಿ
ನಿರ್ವಿಕಲ್ಪ ನಿರಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./479
ನಿತ್ಯವಿಡಿದು ಮುಕ್ತನಾಗಿ,
ಮಹಾಜ್ಞಾನವನ್ನಾಚರಿಸಿ,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./480
ನಿತ್ಯವಿಡಿದು ಮುಕ್ತನಾಗಿ,
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣನಾಗಿ
ಅತ್ತತ್ತಲೆ ತಾನು ತಾನಾಗಿರ್ಪ ನೋಡಾ.
ಝೇಂಕಾರ ನಿಜಲಿಂಗಪ್ರಭುವೆ./481
ನಿರಂಜನದಿಂದತ್ತತ್ತ ಪರವಸ್ತು ತಾನೇ ನೋಡಾ.
ತನ್ನ ನೆನಹಿನಿಂದ ಓಂಕಾರವೆಂಬ ಪ್ರಣವ ಪುಟ್ಟಿತ್ತು.
ಓಂಕಾರವೆಂಬ ಪ್ರಣಮವೇ ಮೂರುತೆರನಾಯಿತ್ತು.
ಆ ಮೂರೇ ಆರುತೆರನಾಯಿತ್ತು.
ಆರು ಮೂರೆಂಬ ಉಭಯಸ್ಥಲವನು ಪರವಶದಲ್ಲಿ ಅರಿತು
ಪರಕೆ ಪರವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./482
ನಿರಂಜನದೇಶದಲ್ಲಿ ಮಹಾಮಹಿಮನ ಕಂಡೆನಯ್ಯ.
ಆ ಮಹಿಮನ ಸಂಗದಿಂದ ಒಬ್ಬ ಸತಿಯಳು
ಮೂರಾರ ದೇಶವ ನೋಡಿ, ತ್ರಿಕೂಟವೆಂಬ ಗಿರಿಯನೇರಿ,
ಸಾವಿರೆಸಳಮಂಟಪವ ಪೊಕ್ಕುದ ನಾನೇನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./483
ನಿರಂಜನಲಿಂಗದಲ್ಲಿ ನಿರಪೇಕ್ಷವಾದ ಶರಣನು,
ಅನಂತಕೋಟಿ ಸೋಮಸೂರ್ಯರ ಬೆಳಗನೊಳಕೊಂಡು
ವಿಶ್ವಂಭರಿತನಾದನಯ್ಯಾ ಝೇಂಕಾರ ನಿಜಲಿಂಗಪ್ರಭುವೆ./484
ನಿರಂಜನಸ್ಥಲದಲ್ಲಿ ನಿರಾವರಣವಾದ ಶರಣನು
ನಿರಾಕುಳ ನಿರಾಮಯ ನಿಃಶೂನ್ಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./485
ನಿರಪೇಕ್ಷಲಿಂಗದಲ್ಲಿ ನಿರ್ಭರಿತವಾದ ಸತಿಯಳು
ನಿರ್ಮಾಯವೆಂಬ ಪುರುಷನ ಸಂಗವ ಮಾಡಿ
ನಿರವಯವೆಂಬ ದೇಶಕ್ಕೆ ಹೋಗಿ
ನಿಃಶೂನ್ಯನಿಷ್ಪತಿಯಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./486
ನಿರಾಮಯವೆಂಬ ಭಕ್ತನ ಅಂಗದಲ್ಲಿ
ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ
ನಿರಂಜನವಾಯಿತ್ತು.
ಆ ನಿರಂಜನದೊಡನೆ ನಿರಾಕಾರವಾಯಿತ್ತು.
ಆ ನಿರಕಾರದೊಡನೆ ಆಕಾರಲಿಂಗವಾಗಿ,
ಮಂತ್ರಘೋಷವ ಘೋಷಿಸುತಿರ್ಪುದು ನೋಡಾ.
ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ
ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ
ಆರುತೆರನಾಯಿತ್ತು ನೋಡಾ.
ನಾದಪ್ರಭೆಯು ಭಕ್ತ-ಮಹೇಶ್ವರ,
ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ,
ಕಳಾಪ್ರಭೆಯು ಶರಣ-ಐಕ್ಯ.
ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು.
ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ.
ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು
ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್ಶಕ್ತಿ.
ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ.
ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ,
ಸಮರಸಭಕ್ತಿ.
ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ.
ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ,
ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ,
ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು.
ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ,
ಶಾಂತ್ಯತೀತೋತ್ತರ ಕಲೆ.
ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು.
ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ,
ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ.
ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು,
ಸ್ವಯಜ್ಞಾನದ ತಂಪು, ನಿರಂಜನದ ಸುಖ.
ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ
ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./487
ನಿರಾಳ ಝೇಂಕಾರ ನಿಜಲಿಂಗಪ್ರಭು ನುಡಿಸಿದರೆ ನುಡಿದೆನಲ್ಲದೆ,
ನಾನಾದರೆ ನುಡಿಯಲರಿಯೆನಯ್ಯ.
ಇದು ಕಾರಣ, ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ
ಹಾಡಿಸಿದರೆ ಹಾಡಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./488
ನಿರುತ ನಿರಂಜನ ನಿರ್ದೆಶದಲ್ಲಿ ನಿಜಶರಣನಿಪ್ಪ ನೋಡಾ.
ಆ ಶರಣನ ಸಂಗದಿಂದ ನಿರ್ವಿಕಲ್ಪ ನಿತ್ಯ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./489
ನಿರುತನಿಜಸ್ವರೂಪದಲ್ಲಿ ಪರಮಾನಂದ ಲಿಂಗವಿಪ್ಪುದು ನೋಡಾ.
ಆ ಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಶರಣನ ಅಂತರಂಗವ ಕಂಡು
ಆನು ಬದುಕಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ./490
ನಿರ್ಮಲಸ್ವರೂಪದಿಂದ ಜ್ಞಾನಸಂಬಂಧಿಯಾಗಿ,
ಮಹಾಲಿಂಗದೊಳು ನಿಂದು, ಪರಿಪೂರ್ಣಲಿಂಗದೊಳು ಕೂಡಿ,
ಅಖಂಡತೇಜೋಮಯಲಿಂಗವು ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./491
ನಿರ್ಮಲಸ್ವರೂಪನಾದ ಶರಣನು ನಿತ್ಯನಿಜದಲ್ಲಿ ನಿಂದು
ಮಹಾಲಿಂಗದ ಬೆಳಗಿನೊಳು ಕೂಡಿ
ಪರವಶವೆಂಬ ಸತಿಯಳ ಸಂಗವ ಮಾಡಿ
ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./492
ನಿರ್ಮಲಸ್ವರೂಪವಾದ ಶರಣನು ನಿತ್ಯನಿಜದಲ್ಲಿ ನಿಂದು
ಪರಂಜ್ಯೋತಿಲಿಂಗದಲ್ಲಿ ತೊಳಗಿಬೆಳಗಿ
ನಿಷ್ಪತಿಯಾದವರಿಗೆ ಶರಣು ಶರಣು ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./493
ನುಡಿಯಲ್ಲಿ ವಾಚಾಳತ್ವ, ಹೃದಯದಲ್ಲಿ ಕಮರ್ೆಂದ್ರಿ.
ಈ ಹೊಲೆಯ ಕಳೆಯಲರಿಯದೆ
ಭವಕ್ಕೆ ಗುರಿಯಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./494
ನೊಸಲಕಣ್ಣು, ಪಂಚಮುಖ, ದಶಭುಜ,
ತನುವೇಕ, ದ್ವೀಪಾದ, ಸ್ಫುಟಿಕವರ್ಣ,
ಈರೇಳುಭುವನ ಹದಿನಾಲ್ಕುಲೋಕಂಗಳ ಹೊತ್ತವನಯ್ಯ.
ರವಿ ಶಶಿಯ ಬೆಳಗನೊಳಕೊಂಡು
ಆಕಾಶ ನಿರಾಕಾಶವೆಂಬ ನಿರ್ವಯಲಲ್ಲಿ ನಿಂದು
ತೊಳಗಿಬೆಳಗುತಿಪ್ಪನು ನೋಡಾ !
ಆತಂಗೆ ಅತಳಾಧಾರವಿಲ್ಲ, ವಿತಳಾಧಾರವಿಲ್ಲ
ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ
ನಿರವಯಲಿಂಗ ತಾನೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./495
ಪಂಚತತ್ವದ ಮೇಲೆ ನಿತ್ಯಪರತತ್ವವ ಕಂಡು ನಿಲರ್ೆಪಕನಾದ ಶರಣನು
ಕಾಲನ ಬಾಧೆಗಳ ನೀಗಿ, ಸೀಮೆಯ ದಾಂಟಿ,
ನಿಸ್ಸೀಮನಾಗಿದರ್ು, ಕೇವಲ ಸ್ವಯಂಜ್ಯೋತಿಯಲ್ಲಿ ಕೂಡಿ
ತಾನು ತಾನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./496
ಪಂಚಮುಖದ ಮೇಲೆ ಮಿಂಚುವ ಶಿವಲಿಂಗವ ಕಂಡೆನಯ್ಯ.
ಆ ಲಿಂಗದಂಚಿನ ಬೆಳಗಿನೊಳಗೆ ಸುಳಿದಾಡುವ ಸತಿಯಳು
ತನ್ನ ಸುಳುವಿನ ಭೇದವ ತಾನೆ ನುಂಗಿ
ನಿರ್ವಯಲಾದುದ ಕಂಡೆ ನೋಡಾ,
ಝೇಂಕಾರ ನಿಜಲಿಂಗಪ್ರಭುವೆ./497
ಪಂಚಮುಖದ ಸರ್ಪನ ತಲೆಯ ಮೇಲೆ
ಒಂದು ಮಾಣಿಕ್ಯವ ಕಂಡೆನಯ್ಯ.
ಆ ಮಾಣಿಕ್ಯದ ಪ್ರಭೆಯಲ್ಲಿ ನಾನು ನೀನೆಂಬುದ ಮರೆದು
ಸ್ವಾನುಭಾವ ಸಿದ್ಧಾಂತವನಳವಟ್ಟು
ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ./498
ಪರತತ್ವದಲ್ಲಿ ಬೆರಸಿಪ್ಪ ಭೇದವನು ಸಹಜ ಸಮ್ಯಕ್ಜ್ಞಾನದಿಂದ ತಿಳಿದು,
ನಿರಂಜನದೇಶಕೆ ಹೋಗಿ, ನಿರಪೇಕ್ಷಲಿಂಗದಲ್ಲಿ ಕೂಡಿ
ನಿಃಸಂಗ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./499
ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು.
ಆ ಭಾವಲಿಂಗದಿಂದ ಪ್ರಾಣಲಿಂಗ ಉದಯವಾಯಿತ್ತು.
ಆ ಪ್ರಾಣಲಿಂಗದಿಂದ ಇಷ್ಟಲಿಂಗ ಉದಯವಾಯಿತ್ತು.
ಆ ಇಷ್ಟಲಿಂಗಕ್ಕೆ ಗುರು ಲಿಂಗ ಜಂಗಮ
ಪಾದೋದಕ ಪ್ರಸಾದವ ಅರ್ಪಿಸಬಲ್ಲಾತನೆ ನಿಮ್ಮ ಸದ್ಭಕ್ತ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./500
ಪರಮಚಿತ್ಕಲೆಯಲ್ಲಿ ಪರಿಣಾಮವನೆಯ್ದಿದ ಮಹಾಶರಣನು,
ಅವಿರಳಸ್ವಾನುಭಾವಸಿದ್ಧಾಂತವನರಿತು,
ಅಲ್ಲಿಂದತ್ತತ್ತ ಪರಮಜ್ಞಾನ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ
ನಿರಾಕುಳ ನಿಜಂಜನ ನಿರ್ಭರಿತ ನಿಃಶೂನ್ಯ ನಿರಪೇಕ್ಷ ನಿಷ್ಕಲಲಿಂಗ
ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ./501
ಪರಮಚಿದಂಶಿಕದಲ್ಲಿ ತತ್ಪರನಾದ ಶರಣನು,
ಮಹಾಘನ ಅಗಮ್ಯ ಅಗೋಚರ ಅಪ್ರಮಾಣ
ನಿರಾಕುಳ ನಿರ್ಭರಿತ ನಿಃಶೂನ್ಯ ನಿರಾಮಯನೆನಿಸಿದ ಶರಣನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./502
ಪರಮಸುಖದಿಂದ ಪರವಶವೆಂಬ ಸತಿಯಳ ಸಂಗವ ಮಾಡಿ,
ಪರಾಪರಜ್ಞಾನ ಅಗಮ್ಯ ಅಗೋಚರ ಅಪ್ರಮಾಣ
ನಿರಾಕುಳ ನಿರಂಜನ ನಿರಾವಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./503
ಪರಮಾನಂದ ಸುಖ, ಮಹಾಲಿಂಗದ ಬೆಳಗು,
ಅಗೋಚರ ಅಪ್ರಮಾಣ ನಿರಂಜನ ನಿರಾಮಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./504
ಪರಮಾನಂದದ ಪ್ರಭೆಯಲ್ಲಿ ನಿರ್ಮಲವಾದ ಶರಣನ ಸಂಗದಿಂದ
ಅವಿರಳಸ್ವಾನುಭವಸಿದ್ಧಾಂತವನರಿತು,
ಪರಕೆಪರವಾದ ಲಿಂಗವನಾಚರಿಸಿ,
ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./505
ಪರಮಾನಂದಪ್ರಭೆಯಲ್ಲಿ ಅಖಂಡವಾದ ಶರಣನು,
ಸಕಲ ಬ್ರಹ್ಮಾಂಡವನು, ಸಕಲಮಾಯವನು ಗಭರ್ೀಕರಿಸಿಕೊಂಡು
ತಾನು ತಾನಾಗಿಪ್ಪನಯ್ಯ, ಝೇಂಕಾರ ನಿಜಲಿಂಗಪ್ರಭುವೆ./506
ಪರಮಾನಂದಪ್ರಭೆಯಲ್ಲಿ ನಿರ್ಮಲವಾದ ಶರಣನು,
ನಿತ್ಯನಿರಂಜನದೇಶಕೆ ಹೋಗಿ ನಿರ್ವಿಕಲ್ಪ ನಿತ್ಯನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./507
ಪರಮಾನಂದಪ್ರಭೆಯೊಳಗೆ ಸುಜ್ಞಾನ ಮಹಾಜ್ಞಾನವೆಂಬ ಸತಿ ಪುರುಷರು
ಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು
ಶಿಖಾಚಕ್ರವೆಂಬ ಮೇಲುಪ್ಪುರಿಗೆಯಂ ತೆಗೆದು
ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯಂ ಕೂಡಿ,
ನಿರವಯವೆಂಬ ಕರಸ್ಥಲದ ಮೇಲೆ
ಝೇಂಕಾರವೆಂಬ ಲಿಂಗವು ಪೂಜೆಗೊಂಬುವುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./508
ಪರಮಾನಂದಸುಖದಲ್ಲಿ ಪರಿಣಾಮವನೆಯ್ದಿದ
ಮಹಾಜ್ಞಾನಿಗಳ ಸಂಗದಿಂದ
ನಿಶ್ಚಿಂದ ನಿರಾಕುಳ ನಿರ್ಭರಿತನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./509
ಪರಶಿವತತ್ವದಲ್ಲಿ ಪರಿಪೂರ್ಣವಾದ ಮಹಾಶರಣನು,
ಮನೋತೀತ ವಾಚಾತೀತ ಭಾವಾತೀತ
ಅಗೋಚರ ಅಪ್ರಮಾಣ ನಿಲರ್ೆಪ ನಿರಂಜನ
ನಿರ್ಭರಿತ ನಿಃಶೂನ್ಯ ನಿರಾಮಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./510
ಪರಶಿವತತ್ವದಿಂದ ಪರಮಜ್ಞಾನಿಯಾಗಿ,
ಆ ಪರಾಪರಜ್ಞಾನದಿಂದ ಅಗಮ್ಯ ಅಗೋಚರ
ಅಪ್ರಮಾಣ ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ.
ಝೇಂಕಾರ ನಿಜಲಿಂಗಪ್ರಭುವೆ./511
ಪಶುವಿನ ಒಡಲಲ್ಲಿ ಒಂದು ಶಿಶುವಿಪ್ಪುದ ಕಂಡೆನಯ್ಯ.
ಆ ಶಿಶುವ ಒಬ್ಬ ಸತಿಯಳು ಹಿಡಿದು
ಮಹಾಮೇರುವೆಗೆ ಹೋಗಿ ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./512
ಪಾತಕಾಂಗದವನಿಗೆ ನೀತಿ ನಿರ್ಮಳಲಿಂಗವು ಕಾಣಬರ್ಪುದೇನಯ್ಯಾ?
ಆ ಪಾತಕಂಗೆ ಅಹಂಕಾರವೆಂಬ ಕೋಣ ಹುಟ್ಟಿ
ಸ್ವಯಜ್ಞಾನಿಯೆಂದರಿಯದೆ
ಬಲ್ಲೆನೆಂದು ಗರ್ವಿತನಾಗಿ ನುಡಿದಾಡುವ
ಪಾತಕನ ಮುಖವ ನೋಡಲಾಗದು ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./513
ಪಿಂಡ ಬ್ರಹ್ಮಾಂಡಕೆ ನಿವಾಸವಾದ ಅಪರಂಪರಲಿಂಗದಲ್ಲಿ
ಮಹಾಸುಖಿಯಾಗಿರ್ದೆನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ. || /514
ಪಿಂಡಬ್ರಹ್ಮಾಂಡವ ಗರ್ಭಿಕರಿಸಿಕೊಂಡು
ಒಳಹೊರಗೆ ಪರಿಪೂರ್ಣವಾಗಿ,
ಅಖಂಡತೇಜೋಮಯವಾಗಿಪ್ಪ ನೋಡಾ.
ತನ್ನೊಡನೆ ಒಬ್ಬ ಭಾಮಿನಿಯು ಪುಟ್ಟಿದಳು.
ಆ ಭಾಮಿನಿಯ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ,
ಅವರ ಸಂಗವ ಮಾಡಿ, ನಿಶ್ಚಿಂತ ನಿರಾಕುಳದಲ್ಲಿ ನಿಂದು,
ನಿರ್ವಯಲಲಿಂಗವನಾಚರಿಸುತಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./515
ಪೂರ್ವದಲ್ಲಿ ಓಂಕಾರವೆಂಬ ಲಿಂಗದ ಸಂಗದಿಂದ
ಪ್ರಣವವೆ ಆದಿಯಾಯಿತ್ತು ನೋಡಾ.
ಆ ಆದಿಯ ಸಂಗದಿಂದ ಒಬ್ಬ ಶಿವನಾದ.
ಆ ಶಿವನ ಸಂಗದಿಂದ ಈಶ್ವರನಾದ.
ಆ ಈಶ್ವರನ ಸಂಗದಿಂದ ರುದ್ರನಾದ.
ಆ ರುದ್ರನ ಸಂಗದಿಂದ ವಿಷ್ಣುವಾದ.
ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ.
ಬ್ರಹ್ಮಂಗೆ ಸರಸ್ವತಿಯಾದಳು,
ವಿಷ್ಣುವಿಂಗೆ ಲಕ್ಷ್ಮಿಯಾದಳು,
ರುದ್ರಂಗೆ ಕ್ರಿಯಾಶಕ್ತಿಯಾದಳು,
ಈಶ್ವರಂಗೆ ಸ್ವಯಂಭೂಶಕ್ತಿಯಾದಳು,
ಸದಾಶಿವಂಗೆ ಜ್ಞಾನಶಕ್ತಿಯಾದಳು.
ಈ ಐವರ ಸಂಗದಿಂದ ನರರು ಸುರರು ದೇವಾದಿದೇವರ್ಕಳು
ಕಿನ್ನರಕಿಂಪುರುಷರು ಗರುಡಗಂಧರ್ವರು ಹುಟ್ಟಿದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./516
ಪೃಥ್ವಿ ಅಂಗವಾದ ಭಕ್ತನು, ಅಪ್ಪು ಅಂಗವಾದ ಮಹೇಶ್ವರನು,
ತೇಜ ಅಂಗವಾದ ಪ್ರಸಾದಿ, ವಾಯು ಅಂಗವಾದ ಪ್ರಾಣಲಿಂಗಿ,
ಆಕಾಶವೆ ಅಂಗವಾದ ಶರಣನು, ಆತ್ಮನೆ ಅಂಗವಾದ ಐಕ್ಯನು,
ನಿರಾತ್ಮನೆ ಅಂಗವಾದ ಉಪಮಾತೀತನು,
ಇಂತಪ್ಪ ಭೇದಾಭೇದವನರಿತು ಇರಬಲ್ಲಡೆ
ಆತನೆ ಮಹಾಜ್ಞಾನಸಂಬಂಧಿ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./517
ಪೃಥ್ವಿ ಅಪು ತೇಜ ವಾಯು ಆಕಾಶದಿಂದತ್ತತ್ತ ಮಹಾಲಿಂಗದ ಬೆಳಗು.
ಆ ಬೆಳಗಿನೊಳಗೆ ನಾನು ನೀನೆಂಬುದ ಮರೆದು,
ಅವಿರಳ ಸ್ವಾನುಭಾವಸಿದ್ಧಾಂತವನರಿತು,
ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ./518
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸೂರ್ಯ ಚಂದ್ರ ಆತ್ಮರೆಂಬ
ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡು
ಬಟ್ಟಬಯಲಲಿಂಗವನಾಚರಿಸುತಿರ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./519
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಐದು ಮನೆಯಲ್ಲಿ
ಒಬ್ಬ ಸತಿಯಳು ನಿಂದು,
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭಿಕರಿಸಿಕೊಂಡು
ಅತ್ತತ್ತಲೆ ಪರಕೆಪರವಾಗಿರ್ದಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./520
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೂತಂಗಳಿಂದತ್ತತ್ತ ನಿರಾಲಂಬಲಿಂಗವಿಪ್ಪುದು ನೋಡಾ!
ಆ ಲಿಂಗದಲ್ಲಿ ಕೂಡಿ, ಒಳಹೊರಗೆ ತೆರಹಿಲ್ಲದೆ
ಪರಿಪೂರ್ಣವಾದ ಶರಣನ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./521
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು,
ಆಕಾಶ ಆತ್ಮನಿಲ್ಲದಂದು, ರವಿ ಶಶಿಗಳಿಲ್ಲದಂದು,
ನಾದ ಬಿಂದು ಕಲೆಗಳಿಲ್ಲದಂದು,
ಓಂ ನಮಃ ಶಿವಾಯವೆಂಬ ಮಂತ್ರಗಳಿಲ್ಲದಂದು,
ಅತ್ತತ್ತಲೆ, ನಿಃಶೂನ್ಯನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./522
ಪೃಥ್ವಿ ಅಪ್ಪುಗಳಿಲ್ಲದಂದು,
ತೇಜ ವಾಯುಗಳಿಲ್ಲದಂದು,
ಆಕಾಶ ಆತ್ಮವಿಲ್ಲದಂದು,
ರವಿ ಶಶಿಗಳಿಲ್ಲದಂದು,
ಸಪ್ತೇಳುಸಾಗರವಿಲ್ಲದಂದು,
ಅಷ್ಟಕುಲಪರ್ವತಂಗಳಿಲ್ಲದಂದು,
ಇವೇನೇನೂ ಇಲ್ಲದಂದು, ಅತ್ತತ್ತಲೆ.
ನಿಶ್ಚಿಂತ ನಿರಾಕುಳ ನಿರಂಜನ ನಿರ್ಭರಿತ
ನಿಃಶೂನ್ಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./523
ಪೃಥ್ವಿ ಆಕಾಶದ ಮೇಲೆ ಏಕಾಂತಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ಏಕೋಮನೋಹರನೆಂಬ ಪೂಜಾರಿಯು
ಲಿಂಗಾರ್ಚನೆಯ ಮಾಡಿ
ನಿಃಪ್ರಿಯವಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./524
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮಗಳು ಇಲ್ಲದಂದು,
ಅತ್ತತ್ತಲೆ ನಿರಾಮಯಲಿಂಗವು ತಾನೇ ನೋಡಾ.
ಆ ಲಿಂಗವು ಮನೋತೀತ, ವಾಚಾತೀತ, ಭಾವಾತೀತ, ಉಪಮಾತೀತ,
ನಿಃಕಲಾತೀತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ./525
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ
ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ತನ್ನ ಮರೆದು ಮುಂದೆ ನಿಶ್ಚೈಸಬಲ್ಲಾತನೆ
ನಿಮ್ಮ ಪ್ರಮಥನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./526
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವಿಲ್ಲದಂದು,
ರವಿ-ಶಶಿ-ಆತ್ಮರಿಲ್ಲದಂದು, ನಾದ-ಬಿಂದು-ಕಲೆಗಳಿಲ್ಲದಂದು,
ಸಾಕ್ಷಿ-ಸಭೆಗಳಿಲ್ಲದಂದು, ಶೂನ್ಯ-ನಿಃಶೂನ್ಯವಿಲ್ಲದಂದು,
ಏನೇನೂ ಇಲ್ಲದಂದು ಅತ್ತತ್ತಲೆ, ಅಪರಂಪರ ನಿರಾಳ ತಾನೇ ನೋಡಾ.
ಆ ನಿರಾಳನ ಚಿದ್ವಿಲಾಸದಿಂದ ಪರಬ್ರಹ್ಮನಾದನಯ್ಯ.
ಆ ಪರಬ್ರಹ್ಮನ ಭಾವದಿಂದ ಪರಶಿವನಾದ.
ಆ ಪರಶಿವನ ಭಾವದಿಂದ ಸದಾಶಿವನಾದ.
ಆ ಸದಾಶಿವನ ಭಾವದಿಂದ ಈಶ್ವರನಾದ.
ಆ ಈಶ್ವರನ ಭಾವದಿಂದ ರುದ್ರನಾದ.
ಆ ರುದ್ರನ ಭಾವದಿಂದ ವಿಷ್ಣುವಾದ.
ಆ ವಿಷ್ಣುವಿನ ಭಾವದಿಂದ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರು.
ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರು.
ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಪರಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಪರಬ್ರಹ್ಮಕೆ ಚಿತ್ಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಇಂತೀ ಭೇದವನರಿತು ಇರಬಲ್ಲರೆ
ಅವರೇ ಪ್ರಾಣಲಿಂಗಸಂಬಂಧಿಗಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./527
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಐದಂಗವ
ಒಂದು ಹಂಸ ನುಂಗಿ ಸುಳಿದಾಡುತಿಪ್ಪುದು ನೋಡಾ!
ಆ ಹಂಸಂಗೆ ಮೂವರು ಮಕ್ಕಳು ಹುಟ್ಟಿ ಆರು ಕೇರಿಗಳಲ್ಲಿಪ್ಪರು ನೋಡಾ.
ಆ ಆರು ಕೇರಿಗಳಲ್ಲಿ ಹಾರಿ ಆಡುವ ಹಾರುವಿತಿಯ ಕೊಂದು,
ಏಕೋಮನೋಹರನೆಂಬ ಪೂಜಾರಿಯು ನಿಶ್ಚಿಂತ ನಿರಾಕುಳಲಿಂಗದಲ್ಲಿ ನಿಂದು
ತಾನು ತಾನಾಗಿ ಪೂಜೆಗೊಂಬ ಪರಿಯೆಂತು ಹೇಳಾ
ಝೇಂಕಾರ ನಿಜಲಿಂಗಪ್ರಭುವೆ./528
ಪೃಥ್ವಿಗುಣವಳಿದು ಭಕ್ತನಾದೆನಯ್ಯ,
ಅಪ್ಪುವಿನ ಗುಣವಳಿದು ಮಹೇಶ್ವರನಾದೆನಯ್ಯ.
ಅಗ್ನಿಗುಣವನಳಿದು ಪ್ರಸಾದಿಯಾದೆನಯ್ಯ.
ವಾಯುವಿನ ಗುಣವನಳಿದು ಪ್ರಾಣಲಿಂಗಿಯಾದೆನಯ್ಯ,
ಆಕಾಶದ ಗುಣವನಳಿದು ಶರಣನಾದೆನಯ್ಯ.
ಆತ್ಮನ ಗುಣವನಳಿದು ಐಕ್ಯನಾದೆನಯ್ಯ.
ತನ್ನ ತಾನೇ ಅಳಿದು ನಿರಾಳನಾದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./529
ಪೃಥ್ವಿಯೊಳಗಣ ಬಾಲಿಂಗೆ
ಇಪ್ಪತ್ತೈದು ಯುವತೇರು ವಿಶ್ವಾಸವಂ ಮಾಡುತಿಪ್ಪರು ನೋಡಾ !
ಅವರಿಂಗೆ ಹತ್ತೆಂಟು ಮುಖದೋರಿ
ಈ ಜಗವನೆಲ್ಲಾ ಏಡಿಸ್ಯಾಡುತಿರ್ಪರು ನೋಡಾ !
ಆದಿಯಲ್ಲಿ ಒಬ್ಬ ದೇವ ಬಂದು, ಹತ್ತೆಂಟು ಮುಖವ ಕೊಯ್ಯಲು,
ಇಪ್ಪತ್ತೈದು ಯುವತೇರು ಬಿಟ್ಟು ಹೋದರು ನೋಡಾ !
ಆ ಪೃಥ್ವಿಯೊಳಗಣ ಬಾಲೆಯ ಹಿಡಿದು
ಪೃಥ್ವಿಂಗೆ ವರಿಸಿ ಭೂಮಂಡಲದೇವನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./530
ಪ್ರಣವಪಂಚಾಕ್ಷರಿಯೆಂಬ ಕೊನೆಯ ಮೇಲೆ
ಅಣಿಮಾಯಾಲಿಂಗವು ಸರ್ವ ಬ್ರಹ್ಮಾಂಡವ ಗರ್ಭಿಕರಿಸಿಕೊಂಡು
ತನ್ನ ನಿಜವ ತಾನೇ ತೋರುತ್ತಿತ್ತು ನೋಡಾ !
ಆ ನಿಜವ ಈ ಲೋಕದವರು ಆರಾದಡೆಯು ಅರಿಯಬಲ್ಲರೇನಯ್ಯ ?
ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ನೋಡಾ.
ಇದು ಕಾರಣ ಅಂಗಕರಣವನಳಿದು ಲಿಂಗಕಿರಣವಾದ ಶರಣನು
ಆ ನೆನವನರಿಯಬಲ್ಲನಯ್ಯ; ಸರ್ವ ಬ್ರಹ್ಮಾಂಡವ ನೋಡಬಲ್ಲನಯ್ಯ;
ಅಣಿಮಾಯಾಲಿಂಗವ ಕೂಡಬಲ್ಲನಯ್ಯ,
ಝೇಂಕಾರ ನಿಜಲಿಂಗಪ್ರಭುವೆ, ನಿಮ್ಮ ಶಿವಶರಣನು./531
ಪ್ರಥಮ ಕಾಲದಲ್ಲಿ ಒಬ್ಬ ಶಿವಶರಣನಿಪ್ಪ ನೋಡಾ.
ಆ ಶಿವಶರಣನ ಅಂತರಂಗದಲ್ಲಿ ಮೂವರು ಕಂಡಿಕಾರರು ಇಪ್ಪರು ನೋಡಾ.
ಆರುಮಂದಿ ಪೂಜಾರಿಗಳು,
ಆರುಲಿಂಗಾರ್ಚನೆಯ ಮಾಡುತಿಪ್ಪರು ನೋಡಾ.
ಏಕೋಭಾಮಿನಿಯೆಂಬ ಸತಿಯಳು
ನವರತ್ನದ ಹರಿವಾಣಂಗಳಲ್ಲಿ
ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ,
ಓಂ ನಮೋ ಓಂ ನಮೋ ಓಂ ನಮೋ ಎಂದು ಬೆಳಗುತಿಪ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./532
ಪ್ರಥಮಕಾಲದಲ್ಲಿ ಅನಾದಿ ಜಂಗಮವು
ಸಾವಿರೆಸಳಮಂಟಪದಲ್ಲಿ ನಿಂದು,
ವಿಶ್ವತೋಮುಖವಾಗಿ ತೋರುತಿಪ್ಪನು ನೋಡಾ!
ಆ ಜಂಗಮದ ಚಿದ್ವಿಲಾಸದಿಂದ, ಭಕ್ತಾಂಗನೆ ಉದಯವಾದಳು ನೋಡಾ!
ಆ ಭಕ್ತಾಂಗನೆಯು ಒಂದಗಲನಿಡಲೊಡನೆ
ಆ ಜಂಗಮ ಉಂಡು ಒಕ್ಕುದ ನಾನುಂಡು ಮಹಾಧನ್ಯನಾದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./533
ಪ್ರಥಮಕಾಲದಲ್ಲಿ ಓಂಕಾರವೆಂಬ ಲಿಂಗಕ್ಕೆ ನಾದಮೂರ್ತಿಯಾದ.
ಆ ನಾದಮೂರ್ತಿಗೆ ಬಿಂದುಮೂರ್ತಿಯಾದ.
ಆ ಬಿಂದುಮೂರ್ತಿಗೆ ಕಳಾಮೂರ್ತಿಯಾದ.
ಆ ಕಳಾಮೂರ್ತಿಗೆ ಶಿವನಾದ, ಆ ಶಿವನಿಂಗೆ ಸದಾಶಿವನಾದ,
ಆ ಸದಾಶಿವಂಗೆ ಈಶ್ವರನಾದ, ಆ ಈಶ್ವರಂಗೆ ರುದ್ರನಾದ,
ಆ ರುದ್ರಂಗೆ ವಿಷ್ಣುವಾದ, ಆ ವಿಷ್ಣುವಿಂಗೆ ಬ್ರಹ್ಮನಾದ,
ಆ ಬ್ರಹ್ಮಂಗೆ ನರರು ಸುರರು ದೇವಾದಿದೇವರ್ಕಳಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./534
ಪ್ರಥಮಕಾಲದಲ್ಲಿ ನಿರಂಜನಗಣೇಶ್ವರನ ಸಂಗದಿಂದ
ಒಬ್ಬ ಸತಿಯಳು ಹುಟ್ಟಿದಳು ನೋಡಾ!
ಆ ಸತಿಯ ಗರ್ಭದೊಳಗೆ ಒಂಬತ್ತು ದೇಶವಿರ್ಪವು ನೋಡಾ!
ಆ ದೇಶವ ನೋಡಿ, ಸಾವಿರೆಸಳಮಂಟಪವ ಪೊಕ್ಕು
ಆ ನಿರಂಜನಗಣೇಶ್ವರನ ಪೂಜಿಸಬಲ್ಲ ಶರಣರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./535
ಪ್ರಥಮಕಾಲದಲ್ಲಿ ನಿರವಯನೆಂಬ ಸತಿಯಳಂಗದಲ್ಲಿ
ಒಬ್ಬ ಬಾಲಕ ಹುಟ್ಟಿ
ಮೂವತ್ತಾರು ಕೇರಿಯ ನೋಡಿ,
ಒಂಬತ್ತು ಬಾಗಿಲ ಸುತ್ತಿ,
ಕಡೆಯ ಬಾಗಿಲಲ್ಲಿ ನಿಂದು
ತನ್ನ ಸುಳುವ ತಾನೇ ನುಂಗಿದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./536
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು ನುಡಿವಿರಿ,
ಪ್ರಸಾದವಾವುದು ಹೇಳಿರೋ, ಅರಿಯದಿದ್ದರೆ ನೀವು ಕೇಳಿರೋ.
ಅದು ಹೇಗೆಂದಡೆ: ಸಾವಿರ ಕಂಬದ ಮಂಟಪದಲ್ಲಿ ಅನಾದಿಯ ಜಂಗಮವಿಪ್ಪುದು ನೋಡಾ
ಆ ಜಂಗಮದಲ್ಲಿ ಮನಪವನಾದಿಗಳ ನಿಲಿಸಿ
ತಲೆವೋಡಿನಲ್ಲಿ ಹೊತ್ತಿಪ್ಪ ಪರಮಪ್ರಸಾದವ ಸ್ವೀಕರಿಸಬಲ್ಲಡೆ
ಆತನೆ ನಿರಂಜನ ನೋಡಾ ಝೇಂಕಾರ ನಿಜಲಿಂಗಪ್ರಭುವೆ./537
ಬಟ್ಟಬಯಲನೊಳಕೊಂಡ ಶರಣನು
ದೃಷ್ಟಲಿಂಗಾರ್ಚನೆಯಂ ಮಾಡಿ
ಕಷ್ಟಕರ್ಮವನಳಿದು
ಶ್ರೇಷ್ಠನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ./538
ಬಟ್ಟಬಯಲಲಿ ಘಟಿತವಾದ ಲಿಂಗವನು
ತನ್ನ ಜ್ಞಾನನೇತ್ರದಿಂದ ತಿಳಿದು,
ಅಪರಂಪರ ಮಹಾಮಹಿಮನಾದ ಭೇದವನು
ನಿಮ್ಮ ನಿರಂಜನಗಣೇಶ್ವರನೇ ಬಲ್ಲ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./539
ಬತ್ತಲೆ ಬಯಲಾದ ಹೆಂಗಸು
ನಿತ್ಯವಾದ ಕೇರಿಗಳಲ್ಲಿ ಸುಳಿದಾಡುತಿಪ್ಪಳು ನೋಡಾ!
ಮೇಲಾದ ದಾರಿಯಲ್ಲಿ ಸಾಧಕನೆಂಬ ಮೂರ್ತಿ ಬಂದು
ಬತ್ತಲೆ ಬಯಲಾದ ಹೆಂಗಸ ನೆರೆದು
ನಿಶ್ಚಿಂತ ನಿರಾಕುಳವೆಂಬ ಲಿಂಗದಲ್ಲಿ ಅಡಗಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./540
ಬತ್ತಲೆಯಾದ ಭಾಮಿನಿಯ ಅಂಗದಲ್ಲಿ
ಇಪ್ಪತ್ತೈದು ಗ್ರಾಮವ ಕಂಡೆನಯ್ಯ.
ಆ ಗ್ರಾಮದೊಳಗೊಬ್ಬ ಪುರುಷನು ಹತ್ತೆಂಟು ಕೇರಿಗಳ ದಾಂಟಿ
ನಿರವಯಲಿಂಗವನಾಚರಿಸಿ ನಿರ್ಮುಕ್ತನಾದ ಶರಣನ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./541
ಬತ್ತಲೆಯಾದ ಭಾಮಿನಿಯ ಅಂಗದಲ್ಲಿ
ಇಪ್ಪತ್ತೈದು ಗ್ರಾಮವ ಕಂಡೆನಯ್ಯ.
ಆ ಗ್ರಾಮದೊಳಗೊಬ್ಬ ಪುರುಷನು
ಒಂಬತ್ತು ಬಾಗಿಲು ಶಿಖರದಲ್ಲಿ ನಿಂದು
ಪರಕೆ ಪರವನಾಚರಿಸುತಿಪ್ಪ ನೋಡಾ.
ಝೇಂಕಾರ ನಿಜಲಿಂಗಪ್ರಭುವೆ./542
ಬತ್ತಲೆಯಾದ ಭಾಮಿನಿಯು,
ನಿತ್ಯವಾದ ಲಿಂಗದ ಗುಡಿಗೆ ಹೋಗಿ
ಪರವಶವಾದ ಪುರುಷನ ಸಂಗವ ಮಾಡಿ,
ಪರಿಪೂರ್ಣವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./543
ಬದ್ಧಜ್ಞಾನಿಗಳು ಇಲ್ಲದಂದು,
ಶುದ್ಧಜ್ಞಾನಿಗಳು ಇಲ್ಲದಂದು,
ನಿರ್ಮಳಜ್ಞಾನಿಗಳು ಇಲ್ಲದಂದು,
ಮನಜ್ಞಾನಿಗಳು ಇಲ್ಲದಂದು,
ಸುಜ್ಞಾನಿಗಳಿಲ್ಲದಂದು,
ಪರಮಜ್ಞಾನಿಗಳಿಲ್ಲದಂದು,
ಮಹಾಜ್ಞಾನಿಗಳಿಲ್ಲದಂದು,
ಸ್ವಯಜ್ಞಾನಿಗಳಿಲ್ಲದಂದು, ಅತ್ತತ್ತಲೆ.
ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ
ನಿರಾಮಯ ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./544
ಬದ್ಧಜ್ಞಾನಿಯ ಸಂಗದಿಂದ ಅಭೇದ್ಯನಾದನಯ್ಯ.
ಶುದ್ಧಜ್ಞಾನಿಯ ಸಂಗದಿಂದ ಪ್ರಸಿದ್ಧನಾದನಯ್ಯ.
ನಿರ್ಮಲಜ್ಞಾನಿಯ ಸಂಗದಿಂದ ನಿಜಸ್ವರೂಪನಾದನಯ್ಯ.
ಮನಜ್ಞಾನಿಯ ಸಂಗದಿಂದ ಅಗಮ್ಯನಾದನಯ್ಯ.
ಸುಜ್ಞಾನಿಯ ಸಂಗದಿಂದ ಅಗೋಚರನಾದನಯ್ಯ.
ಪರಮಜ್ಞಾನಿಯ ಸಂಗದಿಂದ ಅವಿರಳನಾದನಯ್ಯ.
ಮಹಾಜ್ಞಾನಿಯ ಸಂಗದಿಂದ ಸ್ವಾನುಭವಸಿದ್ಧಾಂತನಾದನಯ್ಯ.
ಸ್ವಯಜ್ಞಾನಿಯ ಸಂಗದಿಂದ ನಿಶ್ಚಿಂತನಾದನಯ್ಯ.
ನಿರಂಜನನ ಸಂಗದಿಂದ ನಿರಾಕುಳನಾದನಯ್ಯ.
ಝೇಂಕಾರನ ಸಂಗದಿಂದ ನಿರ್ಭರಿತನಾದನಯ್ಯ.
ನಿರಾಮಯನ ಸಂಗದಿಂದ ತಾನು ತಾನೇಯಾಗಿರ್ದನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./545
ಬಯಲನೇರಿದ ಪಕ್ಷಿಂಗೆ ಮುಖ ಮೂರು, ಒಡಲಾರು,
ಮೂವತ್ತಾರು ಪಾದಂಗಳು, ಐವತ್ತೆರಡು ನಾಲಗೆಯು,
ಒಬ್ಬ ಬೇಂಟೆಕಾರನು ಅರಿವೆಂಬ ಬಿಲ್ಲು ಹಿಡಿದು,
ಕುರುಹೆಂಬ ಅಂಬು ತಕ್ಕೊಂಡು ಎಸೆವ.
ಆ ಬೇಂಟೆಕಾರನ ಆ ಪಕ್ಷಿ ನುಂಗಿ ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./546
ಬಯಲಲ್ಲಿ ಒಂದು ಪಕ್ಷಿ ಗೂಡನಿಕ್ಕುವುದ ಕಂಡೆನಯ್ಯ.
ಆ ಪಕ್ಷಿಯ ಒಡಲಲ್ಲಿ ಮೂರು ಹಂಸಗಳು ಹುಟ್ಟಿ,
ಒಂದು ಹಂಸ ಪಾತಾಳಲೋಕಕ್ಕೆ ಮರ್ತ್ಯಲೋಕಕ್ಕೆ ಹೋಯಿತ್ತು.
ಒಂದು ಹಂಸ ಸ್ವರ್ಗಲೋಕಕ್ಕೆ ತತ್ಪುರುಷಲೋಕಕ್ಕೆ ಹೋಯಿತ್ತು.
ಒಂದು ಹಂಸ ಈಶಾನ್ಯಲೋಕಕ್ಕೆ ಅಂಬರಲೋಕಕ್ಕೆ ಹೋಯಿತ್ತು.
ಆ ಪಕ್ಷಿಯ ನಿರ್ವಯಲು ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./547
ಬಯಲಿಂಗೆ ಬಯಲಾದ ಮನೆಯಲ್ಲಿ ಮೂವರು ಮಕ್ಕಳು
ಆರು ಕೇರಿಯ ಹೊಕ್ಕು, ಶಿವಾಲಯ ಕಟ್ಟಿಸುವುದ ಕಂಡೆನಯ್ಯ.
ಅದು ಹೇಗೆಂದಡೆ: ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲಿಸಿ
ಇಪ್ಪತ್ತೈದು ಬೋದಂಗಳ ಭೇದಿಸಿ,
ಮಹಾಜ್ಞಾನವೆಂಬ ತೊಲೆ ಜಂತಿಗಳ ಹಮ್ಮಿ,
ಸಾವಯವೆಂಬ ಮೇಲುಮುದ್ದಿಯ ಹಾಕಿ
ಪರಬ್ರಹ್ಮವೆಂಬ ಶಿಖರದ ಮೇಲೆ ನಿಷ್ಪತಿಲಿಂಗವಿಪ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./548
ಬಯಲಿಂಗೆ ಹಾರಿದ ಪಕ್ಷಿಯ ತಳವಾರನೆಸೆಯಲು,
ಆ ತಳವಾರನ ಸಿಂಹ ನುಂಗಿ,
ನಿರ್ವಯಲಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./549
ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ,
ಭಾವಕೆ ಸಂಬಂಧವಾಯಿತ್ತು ನೋಡಾ.
ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ,
ಭಾವಕ್ಕೆ ಬೆರಗಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./550
ಬಯಲೆ ಅಂಗವಾದ ಶರಣಂಗೆ ನಿರ್ವಯಲೆ ಲಿಂಗ ನೋಡಾ.
ಆ ನಿರ್ವಯಲೆಂಬ ಲಿಂಗದಲ್ಲಿ, ತಾನು ತಾನೆಂಬುದ ಮರೆದು
ನಿಶ್ಚಿಂತ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./551
ಬಯಲೆ ಅಂಗವಾದ ಶರಣಂಗೆ, ನಿರ್ವಯಲೇ ಲಿಂಗ ನೋಡಾ.
ಆ ಲಿಂಗಕ್ಕೆ ಒಂಬತ್ತು ಬಾಗಿಲ ಶಿವಾಲಯವಿಪ್ಪುದು ನೋಡಾ.
ಆ ಶಿವಾಲಯದೊಳಗೊಬ್ಬ ಸತಿಯಳು ನಿಂದು,
ಐವರ ಕೂಡಿಕೊಂಡು, ಆ ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./552
ಬಯಲೇ ಅಂಗವಾದ ಶರಣಂಗೆ
ನಿರ್ವಯಲೇ ಲಿಂಗವಾಗಿ ತೋರುತಿಪ್ಪುದು ನೋಡಾ.
ಆ ಲಿಂಗದ ಬೆಳಗಿನೊಳಗೆ ಆರು ಮೂರ್ತಿಗಳು
ಆರಾರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./553
ಬರಿಯಬಯಲಲ್ಲಿ ಬರಿದಾದ ಸತಿಯಳ ಕಂಡೆನಯ್ಯಾ!
ಆ ಸತಿಯಳ ಸಂಗದಿಂದ ನಾನು ನೀನೆಂಬುದ ಮರೆದು,
ತಾನು ತಾನಾದ ಭೇದವ ತಾನೇ ಬಲ್ಲನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ./554
ಬಿದುರಿನ ಮಲೆಯೊಳಗೆ ಚದುರೆರೊಂದೈವರು ಇಪ್ಪರು ನೋಡಾ.
ಅವರಿಂಗೆ ಏಳು ಮಂದಿ ಗಂಡರು ಹುಟ್ಟಿ,
ಅಂಗಡಿ ರಾಜಬೀದಿಗಳನಿಕ್ಕಿ
ಭವಭಾರಂಗಳ ಮಾರುತಿರ್ಪರು ನೋಡಾ.
ಇದು ಕಾರಣ ಆದಿಯಲ್ಲಿ ಒಬ್ಬ ದೇವ ಬರಲಾಗಿ
ಅಂಗಡಿ ರಾಜಬೀದಿಗಳ ಮುಚ್ಚಿ
ಏಳು ಮಂದಿ ಗಂಡರು ಬಿಟ್ಟುಹೋದರು ನೋಡಾ.
ಆ ಚದುರೆರೊಂದೈವರ ಹಿಡಿದು ಚಿದ್ರೂಪವಂ ಮಾಡಿ
ನಿರಾಲಂಬಲಿಂಗದೊಳು ಬೆರೆದಿದ್ದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./555
ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ!
ಆ ಕಂಬದ ಮೇಲೊಂದು ಕೋಗಿಲೆ ಕುಳಿತು ಕೂಗುತಿದೆ ನೋಡಾ!
ಆ ಕೋಗಿಲೆಯ ಹಿಡಿದು ನಿಶ್ಚೈಸಬಲ್ಲ ಹಿರಿಯರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./556
ಬೆಟ್ಟದ ತುದಿಯ ಮೇಲೆ ಘಟ್ಟಿಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ಒಬ್ಬ ಸತಿಯಳು ಕಷ್ಟಕರ್ಮವ ಹರಿದು
ಬಟ್ಟಬಯಲಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./557
ಬೆಟ್ಟದ ತುದಿಯ ಮೇಲೆ ತೊಟ್ಟಿಡುವ ಅಮೃತವ ಕಂಡೆನಯ್ಯ.
ಆ ಅಮೃತವ ಸ್ವೀಕರಿಸಿ ನಿರಂಜನ ದೇಶಕೆ ಹೋಗಿ
ನಿರ್ವಯಲ ಲಿಂಗವನಾಚರಿಸಿ ಪರಕೆಪರವಶನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./558
ಬೆಟ್ಟದ ತುದಿಯ ಮೇಲೆ
ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ.
ಆ ಕೋಗಿಲೆಯ ಇರುವೆ ನುಂಗಿ,
ಆ ಇರುವೆಯ ನಿರ್ವಯಲು ನುಂಗಿ,
ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./559
ಬೆಟ್ಟದ ತುದಿಯ ಮೇಲೆ
ಹುಟ್ಟಿ ಆಡುವ ಹಂಸನ ಕಂಡೆ ನೋಡಾ,
ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು,
ಮೂವತ್ತಾರು ಪಾದಂಗಳು,
ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ.
ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./560
ಬೆಟ್ಟದ ತುದಿಯ ಮೇಲೊಂದು ಬಟ್ಟಬಯಲ ಕಂಡೆನಯ್ಯ.
ಆ ಬಟ್ಟಬಯಲಲ್ಲಿ ಫ್ಸಟ್ಟಿಲಿಂಗವಿಪ್ಪುದು ನೋಡಾ.
ಆ ಲಿಂಗದಲ್ಲಿ ಕೂಡಿ ಶ್ರೇಷ್ಠವಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./561
ಬೇರು ಇಲ್ಲದ ಮರ ಹೋಗಿ ಆದಿಯ ಸೇರಿತ್ತಯ್ಯ,
ಆ ಮರಕ್ಕೆ ಐದು ಕೊಂಬೆಗಳು ಬೆಳೆದಿರ್ಪವು ನೋಡಾ.
ಬ್ರಹ್ಮವೊಂದನೇರಿದ, ವಿಷ್ಣುವೊಂದನೇರಿದ, ರುದ್ರವೊಂದನೇರಿದ,
ಈಶ್ವರನೊಂದನೇರಿದ, ಸದಾಶಿವನೊಂದನೇರಿದ-
ಈ ಐದು ಕೊಂಬೆಗಳ ಮೆಟ್ಟಿ
ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ !
ಆ ಹಣ್ಣ ಸವಿಯಲೊಡನೆ, ಹಣ್ಣಿನ ಒಡೆಯ ಬಂದು
ಸವಿದಾತನ ನುಂಗಿದ ನೋಡಾ, ಝೇಂಕಾರ ನಿಜಲಿಂಗಪ್ರಭುವೆ./562
ಬೇರೊಂದು ಸ್ಥಾನದಲ್ಲಿ ಒಬ್ಬ ಸತಿಯಳು ನಿಂದು,
ಮೂವರ ನುಂಗಿ, ಜೋಗುಳವ ಪಾಡುತಿಪ್ಪಳು ನೋಡು.
ಆಕೆಯ ಬಸುರಲ್ಲಿ ಆರುಮಂದಿ ಮಕ್ಕಳು ಹುಟ್ಟಿ
ಆರಾರ ಲಿಂಗಾರ್ಚನೆಯ ಮಾಡಿ
ಪರಿಪೂರ್ಣಲಿಂಗದೊಳು ಕೂಡಿ, ಪರವಶವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./563
ಬ್ರಹ್ಮ ವಿಷ್ಣು ಆದಿಗಳಿಲ್ಲದಂದು,
ರುದ್ರ ಈಶ್ವರರು ಇಲ್ಲದಂದು,
ಸದಾಶಿವ ಪರಶಿವರಿಲ್ಲದಂದು,
ಅತ್ತತ್ತಲೆ, ತಾನೇ ನಿಃಶೂನ್ಯನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./564
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವನಿಂದತ್ತತ್ತ,
ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ,
ಆ ಸುಖದೊಳು ಕೂಡಿ, ಪರಿಪೂರ್ಣವಾದ ಶರಣರ ತೋರಿಸಯ್ಯಝ
ಝೇಂಕಾರ ನಿಜಲಿಂಗಪ್ರಭುವೆ./565
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವನೆಂಬ
ಆರು ತತ್ವದ ಮೇಲೆ ಮೀರಿದ ಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ಒಬ್ಬ ಸತಿಯಳು ತನ್ನ ಸುಳುವ ತಾನೇ ನುಂಗಿ
ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./566
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವರೆಂಬ
ಷಡ್ವಿಧಮೂರ್ತಿಗಳನು ಮಹಾಜ್ಞಾನದಿಂದ ತಿಳಿದು,
ನಿರಪೇಕ್ಷಲಿಂಗದಲ್ಲಿ ಕೂಡಿ ನಿಃಸಂಗಿ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./567
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ಪರಶಿವರೆಂಬ ಷಡ್ವಿಧಮೂರ್ತಿಗಳಿಂದತ್ತತ್ತ,
ಅಗಮ್ಯ ಅಪ್ರಮಾಣ ಅಗೋಚರ ಅಘಟಿತ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./568
ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರನಿಪ್ಪ ನೋಡಾ.
ಆ ಈಶ್ವರನ ತನುಮನದ ಕೊನೆಯ ಮೇಲೆ ಒಬ್ಬ ಸತಿಯಳು
ಅನಂತಕೋಟಿ ಬ್ರಹ್ಮಾಂಡವ ಗರ್ಭಿಕರಿಸಿಕೊಂಡು
ತನ್ನ ಸುಳುವ ತಾನೇ ತೋರುತಿಪ್ಪಳು ನೋಡಾ.
ಆ ಸುಳುವಿನ ಭೇದವ ಅರುಹುವ ಹಿರಿಯರ ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ./569
ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರಲಿಂಗವ ಕಂಡೆನಯ್ಯ.
ಆ ಈಶ್ವರನ ಅಂಗವ ಪೊಕ್ಕು ಸದಾಶಿವನ ಕಂಡೆನಯ್ಯ.
ಆ ಸದಾಶಿವನ ಪೊಕ್ಕು ನಾನು ನೀನೆಂಬ ಉಭಯವಳಿದು
ನಿರ್ವಯಲಲಿಂಗವನಾಚರಿಸುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./570
ಬ್ರಹ್ಮ ವಿಷ್ಣು ರುದ್ರಾದಿಗಳನೊಳಗೊಂಡಿದ್ದಂತಾತನೇ ಈಶ್ವರ.
ಈಶ್ವರ ಸದಾಶಿವ ಪರಶಿವನೊಳಕೊಂಡಿದ್ದಂತಾತನೇ ಪರಬ್ರಹ್ಮವು.
ನಾದಬಿಂದುಕಲಾತೀತನನೊಳಕೊಂಡಿದ್ದಂತಾತನೇ ಬ್ರಹ್ಮವು ನೋಡಾ.
ಆ ಬ್ರಹ್ಮದ ಅಂಗವು ಹೇಗೆಂದಡೆ: ಜಾಗ್ರವು ಅಲ್ಲ, ಸ್ವಪ್ನವು ಅಲ್ಲ, ಸುಷುಪ್ತಿಯೂ ಅಲ್ಲ.
ಮರೆದೊರಗಿದ ಹಾಂಗೆ ನಿಷ್ಪತಿಯಾಗಿ ಕೂಡಬಲ್ಲರಿಗೆ ಕೂಡಿತ್ತು
ಕೂಡಲರಿಯದವರಿಂಗೆ ದೂರಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./571
ಬ್ರಹ್ಮ ವಿಷ್ಣು ರುದ್ರಾದಿಗಳಿಂದತ್ತತ್ತ
ಈಶ್ವರನ ಪುಣ್ಯಾಂಗನೆಯ ಕಂಡೆನಯ್ಯ.
ಆ ಈಶ್ವರನ ಪುಣ್ಯಾಂಗನೆಯ ಸಂಗದಿಂದ ಜ್ಞಾನಶಕ್ತಿಯ ಕಂಡೆನಯ್ಯ.
ಆ ಜ್ಞಾನಶಕ್ತಿಯ ಸಂಗದಿಂದ ಮಹಾಲಿಂಗದ ಗುಡಿಗೆ ಹೋಗಿ,
ಪರಮಾನಂದದ ಬೆಳಗಿನೊಳಗೆ ನಿಂದು,
ಪರಿಪೂರ್ಣವನೈದಿ, ನಿಶ್ಚಿಂತ ನಿರಾಕುಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./572
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು
ಕರಸ್ಥಲಕೆ ಇಷ್ಟಲಿಂಗವಾದನಯ್ಯ.
ಮನಸ್ಥಲಕೆ ಪ್ರಾಣಲಿಂಗವಾದನಯ್ಯ.
ಪರಸ್ಥಲಕೆ ಭಾವಲಿಂಗವಾದನಯ್ಯ.
ಇಂತೀ ಭೇದವನರಿತು,
ನಿಶ್ಚಿತ ನಿರಾಕುಳಲಿಂಗದಲ್ಲಿ
ನಿರ್ಭರಿತನಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./573
ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು
ಪ್ರಾಣಲಿಂಗಸಂಬಂಧಿಯಾಗಿ,
ಶರಣೈಕ್ಯರೆಂಬ ನಿಜಸ್ಥಲವನಂಗಂಗೊಂಡು,
ನಿಶ್ಚಿಂತ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ/574
ಬ್ರಹ್ಮ ವಿಷ್ಣುಗಳಿಲ್ಲದಂದು,
ರುದ್ರ ಈಶ್ವರ ಇಲ್ಲದಂದು,
ಸದಾಶಿವ ಪರಶಿವ ಇಲ್ಲದಂದು,
ಚಿಲ್ಲಿಂಗ ಚಿದಾನಂದಲಿಂಗವಿಲ್ಲದಂದು,
ಚಿನ್ಮಯಲಿಂಗ ಚಿತ್ಪ್ರಕಾಶಲಿಂಗವಿಲ್ಲದಂದು,
ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./575
ಬ್ರಹ್ಮ ವಿಷ್ಣುವಿನಲ್ಲಿ ಎಯ್ದಿ, ವಿಷ್ಣು ರುದ್ರನಲ್ಲಿ ಎಯ್ದಿ,
ರುದ್ರ ಈಶ್ವರನಲ್ಲಿ ಎಯ್ದಿ, ಈಶ್ವರ ಸದಾಶಿವನಲ್ಲಿ ಎಯ್ದಿ,
ಸದಾಶಿವ ಪರಶಿವನಲ್ಲಿ ಎಯ್ದಿ, ಪರಶಿವ ನಿತ್ಯನಿಜದಲ್ಲಿ ಎಯ್ದಿ,
ಅತ್ತತ್ತಲೆ, ನಿರಾಕುಳ ನಿರಂಜನ ನಿಷ್ಪತಿ ನಿರವಯ ತಾನೇ ನೋಡಾ.
ಮನೋಲಯವಾಯಿತ್ತು, ಭಾವ ನಿಃಶೂನ್ಯವಾಯಿತ್ತು
ನೆನಹು ನಿಷ್ಪತಿಯಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./576
ಬ್ರಹ್ಮಂಗೆ ಸರಸ್ವತಿಯಾಗಿ ವಿಷ್ಣುವಂ ಪೂಜೆಯಂ ಮಾಡಲು,
ವಿಷ್ಣುವಿಂಗೆ ಲಕ್ಷ್ಮಿಯಾಗಿ ರುದ್ರನ ಪೂಜೆಯ ಮಾಡಲು,
ರುದ್ರಂಗೆ ಕ್ರಿಯಾಶಕ್ತಿಯಾಗಿ ಈಶ್ವರನ ಪೂಜೆಯಂ ಮಾಡಲು,
ಈಶ್ವರಂಗೆ ಇಚ್ಫಾಶಕ್ತಿಯಾಗಿ ಸದಾಶಿವನ ಪೂಜೆಯಂ ಮಾಡಲು,
ಸದಾಶಿವಂಗೆ ಜ್ಞಾನಶಕ್ತಿಯಾಗಿ ಪರಶಿವನ ಪೂಜೆಯನ್ನು ಮಾಡಲು,
ಪರಶಿವಂಗೆ ಪರಾಶಕ್ತಿಯಾಗಿ ಪರಬ್ರಹ್ಮನ ಪೂಜೆಯ ಮಾಡಲು,
ಪರಬ್ರಹ್ಮಂಗೆ ಚಿತ್ಶಕ್ತಿಯಾಗಿ ಇಂತಿರ್ದ ಬ್ರಹ್ಮರ ಪೂಜೆಯಂ ಮಾಡುವುದ
ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ./577
ಬ್ರಹ್ಮನಿಲ್ಲದಂದು, ವಿಷ್ಣುವಿಲ್ಲದಂದು, ರುದ್ರನಿಲ್ಲದಂದು,
ಈಶ್ವರನಿಲ್ಲದಂದು, ಸದಾಶಿವನಿಲ್ಲದಂದು, ಪರಶಿವನಿಲ್ಲದಂದು,
ಅತ್ತತ್ತಲೆ ಪರಿಪೂರ್ಣಲಿಂಗವು ತಾನೇ ನೋಡಾ.
ಆ ಲಿಂಗವ ನೋಡಹೋಗದ ಮುನ್ನ, ಅದು ಎನ್ನ ನುಂಗಿತ್ತು.
ಅದಕ್ಕೆ ನಯನ ಒಂದು, ವದನ ಮೂರು, ಹಸ್ತವಾರು,
ಮೂವತ್ತಾರು ಪಾದಂಗಳು.
ಒಂಬತ್ತು ಬಾಗಿಲಮನೆಯೊಳಗೆ ಸುಳಿದಾಡುತಿಪ್ಪನು ನೋಡಾ.
ಆ ಸುಳುವಿನ ಸುಳುವ ಒಬ್ಬ ಸತಿಯಳು ಕಂಡು
ನಿರ್ಗತವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./578
ಬ್ರಹ್ಮರಂಧ್ರದಲ್ಲಿಪ್ಪ ಮಹಾಘನಲಿಂಗವನು
ಸಹಜಸಮ್ಯಕ್ಜ್ಞಾನದಿಂದ ತಿಳಿದು,
ನಿರಪೇಕ್ಷಲಿಂಗದೊಳು ಕೂಡ್ರಿಸಿ,
ನಿಸ್ಸಂಗ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./579
ಬ್ರಹ್ಮರಂಧ್ರದಲ್ಲಿಪ್ಪ ಮಹಾಜ್ಞಾನಲಿಂಗವೇ ಚಿನ್ನಾದ ನೋಡಾ.
ಶಿಖಾಚಕ್ರದಲ್ಲಿಪ್ಪ ಸ್ವಯಜ್ಞಾನಲಿಂಗವೇ ಚಿದ್ಬಿಂದು ನೋಡಾ.
ಪಶ್ಚಿಮದಲ್ಲಿಪ್ಪ ನಿರಂಜನಲಿಂಗವೇ ಚಿತ್ಕಳೆಯು ನೋಡಾ.
ಆ ಚಿತ್ಕಳೆಯೇ ಭಾವಲಿಂಗ ನೋಡಾ.
ಆ ಚಿದ್ಬಿಂದುವೆ ಪ್ರಾಣಲಿಂಗ ನೋಡಾ.
ಆ ಚಿನ್ನಾದವೆ ಇಷ್ಟಲಿಂಗ ನೋಡಾ.
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು,
ಸಾವಿರೆಸಳ ಮಂಟಪವ ಪೊಕ್ಕು, ಮುತ್ತಿನ ಗದ್ದುಗೆಯಲ್ಲಿ ನಿಂದು,
ಮಹಾಬೆಳಗ ನೋಡಿ, ಪರಿಪೂರ್ಣಲಿಂಗದೊಳು ತಾನು ತಾನಾಗಿಪ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./580
ಬ್ರಹ್ಮವಿಷ್ಣುರುದ್ರಾದಿಗಳಿಲ್ಲದಂದು,
ಈಶ್ವರಸದಾಶಿವ ಪರಶಿವರಿಲ್ಲದಂದು,
ನಾದಬಿಂದುಕಲಾತೀತವಿಲ್ಲದಂದು,
ಇಂತಿರ್ದ ಬ್ರಹ್ಮವು ತಾನೇ ನೋಡಾ!
ಆ ಬ್ರಹ್ಮದ ಚಿದ್ವಿಲಾಸದಿಂದ ಒಬ್ಬ ಶಿವನಾದ.
ಆ ಶಿವನಿಂಗೆ ವದನ ಒಂದು, ನಯನ ಮೂರು,
ಹಸ್ತ ಆರು, ಮೂವತ್ತಾರು ಪಾದಂಗಳು.
ಒಂಬತ್ತು ಬಾಗಿಲ ಮನೆಯೊಳಗೆ ಸುಳಿದಾಡುವ ಗಾರುಡಿಗನು.
ಕಡೆಯ ಬಾಗಿಲ ಮುಂದೆ ನಿಂದು ನಾಗಸ್ವರದ ನಾದವ ಮಾಡಲು
ಆ ನಾಗಸ್ವರವ ಕೇಳಿ ನಾಭಿಮಂಡಲದಿಂದ ಎದ್ದ ಸರ್ಪನು,
ಸಪ್ತೇಳು ಸಾಗರಂಗಳ ದಾಂಟಿ, ಅಷ್ಟಕುಲಪರ್ವತಂಗಳ ದಾಂಟಿ,
ಚತುರ್ದಶ ಭುವನಂಗಳ ಮೀರಿ ನಿಂದ.
ಸರ್ಪನ ತಲೆಯ ಮೇಲೆ ಒಂದು ರತ್ನವಿಹುದು ನೋಡಾ!
ಆ ರತ್ನದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ!
ಒಂದು ಶಿವಾಲಯಕ್ಕೆ ಆರು ಕಂಬ, ಮೂರು ಮೇರುವೆ,
ನಿಃಶೂನ್ಯವೆಂಬ ಕಳಸವನಿಕ್ಕಿ
ಆ ಶಿವಾಲಯವ ನಿಜಬ್ರಹ್ಮಲಿಂಗವು ಕಾಯ್ದುಕೊಂಡಿರ್ಪುದು ನೋಡಾ!
ಇದೇನು ವಿಚಿತ್ರವೆಂದು ನಿಶ್ಚಿಂತ ನಿರಾಳವಾಸಿಯಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./581
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರ ಮೇಲೆ
ಅನಾದಿಯ ಜಂಗಮವ ಕಂಡೆನಯ್ಯ,
ಆ ಜಂಗಮದ ಸಂಗದಿಂದ ಸಾಜಸಮಾಧಿಯ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./582
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ
ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ
ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ,
ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ,
ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ.
ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ
ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ,
ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ,
ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ.
ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ.
ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ,
ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ,
ಪರಾಶಕ್ತಿಗೆ ಸಮರತಿಭಕ್ತಿ, ಚಿತ್ಶಕ್ತಿಗೆ ಸಮರಸಭಕ್ತಿ.
ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ.
ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ,
ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ,
ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ.
ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ.
ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ,
ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ,
ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ,
ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ,
ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ.
ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ,
ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ,
ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ,
ಶಾಂತಿಕಲೆಗೆ ಮನಜ್ಞಾನವೇ ಸಂಬಂಧ,
ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ,
ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ.
ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ
ಅಗಮ್ಯ ಅಗೋಚರ ಅಪ್ರಮಾಣ
ನಿರಾಕುಳ ನಿರಂಜನಲಿಂಗ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./583
ಭಕ್ತ ಮಹೇಶ್ವರನಲ್ಲಿ ಅಡಗಿ ಪ್ರಸಾದಿಯಾದನಯ್ಯ.
ಪ್ರಸಾದಿ ಪ್ರಾಣಲಿಂಗಿಯಲ್ಲಿ ಅಡಗಿ ಶರಣನಾದನಯ್ಯ.
ಶರಣ ಐಕ್ಯನಲ್ಲಿ ಅಡಗಿ ನಿಃಕಲಪರಬ್ರಹ್ಮಲಿಂಗವನಾಚರಿಸುತಿರ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ./584
ಭಕ್ತ ಮಹೇಶ್ವರನಲ್ಲಿ ಅಡಗಿ,
ಮಹೇಶ್ವರ ಪ್ರಸಾದಿಯಲ್ಲಿ ಅಡಗಿ,
ಪ್ರಸಾದಿ ಪ್ರಾಣಲಿಂಗಿಯಲ್ಲಿ ಅಡಗಿ,
ಪ್ರಾಣಲಿಂಗಿ ಶರಣನಲ್ಲಿ ಅಡಗಿ,
ಶರಣ ಐಕ್ಯನಲ್ಲಿ ಅಡಗಿ,
ಐಕ್ಯ ನಿರಂಜನದಲ್ಲಿ ಅಡಗಿ ಅತ್ತತ್ತ
ನಿರಾಕಾರ ನಿರಾಕುಳ ನಿರಂಜನ ನಿಃಶೂನ್ಯ ನಿರವಯಲಿಂಗ ತಾನೇ ನೋಡಾ.
ಮನೋಲಯವಾಯಿತ್ತು, ಜ್ಞಾನ ನಿಃಶೂನ್ಯವಾಯಿತ್ತು,
ಭಾವ ನಿಷ್ಪತಿಯಾಯಿತ್ತು, ನೆನಹು ನಿರವಯವಾಯಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ./585
ಭಕ್ತ ಮಹೇಶ್ವರರಿಲ್ಲದಂದು,
ಪ್ರಸಾದಿ ಪ್ರಾಣಲಿಂಗಿಯಿಲ್ಲದಂದು,
ಶರಣ ಐಕ್ಯರಿಲ್ಲದಂದು, ಏನೇನೂ ಇಲ್ಲದಂದು,
ತಾನೇ ನಿಃಶೂನ್ಯನಾಗಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ./586
ಭಕ್ತ ಮಹೇಶ್ವರರು ಆರಾದರೂ ಆಗಲಿ
ಶಿವಗಣಂಗಳಲ್ಲಿ ಕುಲವನರಸಿದರೆ
ಅವರು ಕುಲಸೂತಕರೆಂದು ಶಿವನು ಯಮನ ಕೈಯಲ್ಲಿ ಕೊಟ್ಟು
ಅಘೋರ ನರಕದೊಳು ಹಾಕೆಂದನು ಕಾಣಾ
ಝೇಂಕಾರ ನಿಜಲಿಂಗಪ್ರಭುವೆ./587
ಭಕ್ತಗಣ, ಮಹೇಶ್ವರಗಣ, ಪ್ರಸಾದಿಗಣ,
ಪ್ರಾಣಲಿಂಗಿಗಣ, ಶರಣಗಣ, ಐಕ್ಯಗಣ, ಮಹಾಗಣದೊಳು ಕೂಡಿ
ಪರಿಪೂರ್ಣವನೈದಿದವರಿಗೆ ಶರಣು ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ./588
ಭಕ್ತನಾದರೇನಯ್ಯ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ
ತನ್ನ ಮನವ ಶುದ್ಧಮಾಡಿ, ಮಹಾಲಿಂಗದಲ್ಲಿ ಕೂಡಬಲ್ಲಾತನೇ
ಅನಾದಿಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ./589
ಭಕ್ತಿ-ಜ್ಞಾನ-ವೈರಾಗ್ಯದಿಂದತ್ತತ್ತ ಅಗಮ್ಯಲಿಂಗವ ಕಂಡೆನಯ್ಯ.
ಆ ಲಿಂಗದಲ್ಲಿ ಕೂಡಿ
ಅವಿರಳ ಸ್ವಾನುಭಾವಸಿದ್ಭಾಂತನಾದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ./590