Categories
ವಚನಗಳು / Vachanagalu

ಜಗಳಗಂಟ ಕಾಮಣ್ಣನ ವಚನಗಳು

706
ಅಯ್ಯಾ, ತನ್ನ ತಾನರಿದಡೆ ತನ್ನರುಹೆ ಗುರು;
ಆ ಅರಿದ ನಿಶ್ಚಯವೆ ಲಿಂಗ;
ಆ ಅರುಹಿನ ನಿಶ್ಚಯ ನಿಷ್ಟತ್ತಿಯೆ ಜಂಗಮ;
ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರಲಿಂಗವು ತಾನೆ!
ಇಂತು ಪ್ರಮಥರ ಸಚ್ಚಿದಾನಂದಲೀಲೆಯ
ಅರಿದಾನಂದಿಸ! ಸಂಗನ ಬಸವೇಶ್ವರ!

707
ಒಂದಲ್ಲ ಹತ್ತಲ್ಲ ನೂರಲ್ಲ ಸಹಸ್ರವಲ್ಲ
ಲಕ್ಷವಲ್ಲ ಕೋಟಿಯಲ್ಲ
ನಾನಾ ಯೋನಿಯಲ್ಲಿ ಬಂದುದಕ್ಕೆ ಕಡೆಯಿಲ್ಲ.
ಬಂದ ಬರವ ನಿಂದ ನಿಲವ ತಿಳಿದಡೆ,
ತಂದೆ ಕಾಮೇಶ್ವರ ಬೇರಿಲ್ಲಾ.

708
ಸಾವ ದೇವರನೊಲ್ಲೆ ಭಾವವಳಿಯದ ಭಕ್ತಿಯನೊಲ್ಲೆ,
ಆವಾವ ಪರಿಯಲ್ಲು ವಿಧಿಯನೊಲ್ಲೆ,
ಕಾಮೇಶ್ವರನೆಂಬುದನೊಂದನೆ ಬಲ್ಲೆ.

709
ಕಾಮ ನಿಃಕಾಮವಾದವರ ತೋರಾ|
ನೇಮವಳಿದು ನಿತ್ಯರಾದವರನಲ್ಲದೊಲ್ಲೆ,
ಅಂಗದ ಗುಣಾವಳಿಯ ಲಿಂಗದಲ್ಲಿದ್ದವರನಲ್ಲದೊಲ್ಲೆ,
ಕಾಮೇಶ್ವರಾ.