Categories
ವಚನಗಳು / Vachanagalu

ಜೇಡರ ದಾಸಿಮಯ್ಯ ವಚನಗಳು

ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು,
ಹಿಂಗಲಾಪುದೆ ಹೇಳು ಅಜ್ಞಾನವ!
ಸಂಗಸುಖಮಥನದ ಅಸಂಗದಿಂದದನರಿದು
ಹಿಂಗಲಿಕೆ ಹೆಸರೇನು? ರಾಮನಾಥ./1
ಅಂತರಂಗ ಬಹಿರಂಗದಲ್ಲಿ
ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ
ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ
ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ
ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ
ಅಂತರಂಗದ ಜಪವ ಹೇಳುವನೊಬ್ಬ
ಆಚಾರದ್ರೋಹಿ ನೋಡಾ, ರಾಮನಾಥ./2
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ,
ಉಂಬ ಸದುಭಕ್ತನ ಮನೆಯಾಗಿ,
ಲೋಕದ ಡಂಭಕರ ಮನೆ ಬೇಡ, ರಾಮನಾಥ/3
ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥ/4
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ;
ಮಟ್ಟ ಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ./5
ಅಡಗ ತಿಂಬರು; ಕಣಿಕದ ಅಡಿಗೆಯಿರಲಿಕೆ.
ಕುಡಿವರು ಸುರೆಯ! ಹಾಲಿರಲಿಕೆ.
ಹಡದುಂಬ ವೇಶಿಯನೊಲ್ಲದೆ ಹೆರರ ಮಡದಿಗಳುಪುವ
ಸತ್ತ ನಾಯ ತಿಂಬ ಹಡ್ಡಿಗರನೇನೆಂಬೆನೈ! ರಾಮನಾಥ./6
ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು
ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ.
ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ
ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ! ರಾಮನಾಥ./7
ಅಡವಿ ಅರಣ್ಯದಲಿ ಮಡಿವನಕ ತಪವಿದ್ದು
ಮಡಿವಾಗ ಮೃಡನ ಮರದಡೆ,
ತುಂಬಿದ ಸಕ್ಕರೆಯ ಮಡುವಿನೊಳಗೊಕ್ಕಂತೆ! ರಾಮನಾಥ./8
ಅಡವಿಯಂಗಡಿಯಕ್ಕು, ನಡುಗಡಲು ನೆಲೆಯಕ್ಕು.
ತೊಡಕುವ ಮಾರಿಯಪಮೃತ್ಯ
ಶಿವಭಕ್ತರ ಒಡಲು ನಿನ್ನೊಡಲೆಂದು
ಮುಟ್ಟಲಮ್ಮವು ಕಾಣಾ! ರಾಮನಾಥ./9
ಅಣುರೇಣು ಮಧ್ಯದ ಪ್ರಣವದಾಧಾರ
ಭುವನಾಧೀಶನೊಬ್ಬನೆಯಯ್ಯ.
ಇದೆ ಪರಿಪೂರ್ಣವೆಂದೆನ್ನದನ್ಯ ದೈವವ ಸ್ಮರಿಸುವ
ಭವಿಯನೆಂತು ಭಕ್ತನೆಂಬೆನೈ? ರಾಮನಾಥ./10
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ.
ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ.
ಅನುಭಾವ ಉಳ್ಳವರ ಕಂಡು
ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ
ನರಕದಲ್ಲಿಕ್ಕಯ್ಯಾ! ರಾಮನಾಥ./11
ಅನುಭಾವವಿಲ್ಲದೆ ಈ ತನು ಎಳತಟವಾದುದಯ್ಯಾ.
ಅನುಭಾವವೀ ತನುವಿಂಗೆ ಆಧಾರ.
ಅನುಭಾವರ ಅನುಭಾವವನು
ಮನವಾರೆ ವೇದಿಸಿದವರಿಗೆ ಜನನವಿಲ್ಲ ಕಾಣಾ!ರಾಮನಾಥ./12
ಅನ್ಯಜಾತಿಯ ಮನೆಯ ಅನ್ನಪಾನಾದಿಗಳು
ತನ್ನ ಉದರದಲ್ಲಿ ಇಕ್ಕುವವ ಶಿವದ್ರೋಹಿ, ಶಿವವಂಚಕನು.
ಅವ ನಿಮ್ಮ ಓ ಎನಿಸಿದಡೆ ಎನಿಸಲಿ
ಅವನ ಎನ್ನತ್ತ ತಾರದಿರಾ, ರಾಮನಾಥ./13
ಅರುಹ ಅರಿಯಲೆಂದು
ಕುರುಹ ಕೈಯಲ್ಲಿ ಕೊಟ್ಟ!
ಅರುಹನೆ ಮರದು ಕುರುಹನೆ ಹರಿದ!
ಈ ಕುರುಂಬರಿಗಿನ್ನೆತ್ತಣ ಮುಕ್ತಿಯೊ? ರಾಮನಾಥ./14
ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ
ತೊತ್ತಿನ ಕೂಟ, ತೊರೆಯನ ಮೇಳದಂತೆ.
ತನು-ಮನ-ಧನದಲ್ಲಿ ವಂಚನೆಯುಳ್ಳ
ಪ್ರಪಂಚಿಯ ಮನೆಯ ಕೂಳು
ಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಾಣಾ ! ರಾಮನಾಥ./15
ಆಚಾರಸಹಿತವಿದ್ದಡೆ ಗುರುವೆಂಬೆ.
ಆಚಾರಸಹಿತವಿದ್ದಡೆ ಲಿಂಗವೆಂಬೆ.
ಆಚಾರಸಹಿತವಿದ್ದಡೆ ಜಂಗಮವೆಂಬೆ.
ಸದಾಚಾರಸಹಿತವಿರದೆ
ಅನ್ಯದೈವ ಭವಿಮಾಟಕೂಟವ ಮಾಡುವನ ಮನೆಯಲ್ಲಿ
ಲಿಂಗಾರ್ಚನೆಯ ಮಾಡಿದನಾದಡೆ
ನಿಮಗಂದೆ ದೂರವಯ್ಯಾ, ರಾಮನಾಥ./16
ಆಡಬಾರದ ಬಯಲು
ಸೂಡಬಾರದ ಬಯಲು
ನುಡಿಯಬಾರದ ಬಯಲು
ಹಿಡಿಯಬಾರದ ಬಯಲು
ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ
ಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ./17
ಆದಿ ಆರರ ಭೇದ
ತನುಗುಣ ಮೂವತ್ತಾರ ಮೀರಿ
ತೋರಿದುದ ತೋರಿ ಮತ್ತೆ ಆರೂಢವಾದರೆ
ಮೇಲೆ ನಿನ್ನಿಚ್ಛೆ ಕಾಣಾ! ರಾಮನಾಥ./18
ಆದಿ ಪ್ರಕೃತಿಯ ಮಕ್ಕಳು ಅಂದಿನವರು
ಆದಿ ಪ್ರಕೃತಿಯ ಮಕ್ಕಳು ಇಂದಿನವರು
ಆದಿಪ್ರಕೃತಿಯ ಜೀವ ಪ್ರಕೃತಿಯ
ಭೇದವ ಬಲ್ಲವರ ಪಾದವೆ ಗತಿಯೆನಗೆ ರಾಮನಾಥ./19
ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು.
ಆಶ್ರಯದ ನಿದ್ರೆ ಕೆಟ್ಟಿತ್ತು.
ಗ್ರಾಸ ಮೆಲ್ಲನಾಯಿತ್ತು.
ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು.
ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ!ರಾಮನಾಥ./20
ಇಂತೆಂದ ಭೂಮಿಯ; ಇಂತೆಂದ ಗಗನವ.
ಇಂತೆಂದ ಸಪ್ತಸಾಗರವ.
ಇಂತೀ ಲೋಕದೊಳಗೆ ತಿಂಥಿಣಿಯಾಗಿಪ್ಪ
ಅಚಿಂತನನವರಾರು ಬಲ್ಲರೈ ರಾಮನಾಥ./21
ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ?
ತಂದಿಕ್ಕುವ ಶಿವಂಗೆ ಬಡತನವೆ? ರಾಮನಾಥ./22
ಇತ್ತ ಬಾ ಎನ್ನದವನ ಹತ್ತೆ ಹೊದ್ದಲು ಬೇಡ.
ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲ
ಹತ್ತಿಪ್ಪೆ ಕಾಣಾ! ರಾಮನಾಥ./23
ಇರುಹೆಯ ತೆರನೇನು ನೆರೆ ಛಲವಿಲ್ಲದೆ
ಮಾಡಿದವನ ಭಕ್ತ ಇರುಹೆಯಿಂದ ಕರಕಷ್ಟ ಕಾಣಾ! ರಾಮನಾಥ./24
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ./25
ಇಳೆಯನಾಧಾರ ಮಾಡಿ, ಜಳವ ಜೀವನ ಮಾಡಿ
ಒಳಗಿಪ್ಪ ಭೇದವನು
ವಾಯುವ ಕಂಬವ ಮಾಡಿ, ನಳನ ಚಂದ್ರಮನ ಮಡಗಿ
ಆಕಾಶವನು ಗಳನೆ ಮುಚ್ಚಿದ ಬೆಳಗಿಗೆ
ಆನು ಬೇಡಿಕೊಂಬೆ, ರಾಮನಾಥ./26
ಈಶ! ನಿಮ್ಮ ಪೂಜಿಸಿದ ಬಳಿಕ
ಅನ್ಯ ದೈವಂಗಳಿಗೆ ಹೇಸಲೇ ಬೇಕು.
ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ
ಅವ ನಮ್ಮ ಈಶ್ವರಂಗೆ ಹೊರಗು.
ದೋಷರಹಿತ ಭಕ್ತರು ಅವಂಗೆ ಕುಲವೆಂದು
ಕೂಸ ಕೊಟ್ಟು ಕೂಡುಂಡಡೆ
ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ!ರಾಮನಾಥ./27
ಈಶನ ಶರಣರು ವೇಶಿಯ ಹೋದಡೆ
ಮೀಸಲೋಗರವ ಹೊರಗಿರಿಸಿದಡೆ
ಹಂದಿ ಮೂಸಿ ನೋಡಿದಂತೆ ರಾಮನಾಥ./28
ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.
ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ./29
ಉಣ್ಣಿ ಕೆಚ್ಚಲ ಹತ್ತಿ ಉಂಬುದೆ ನೊರೆವಾಲ?
ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು
ಆ ಉಣ್ಣಿಯಿಂದ ಕರಕಷ್ಟ! ರಾಮನಾಥ./30
ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದಡೆ
ಆ ತೃಣವನ್ನು ಆ ಕೆಂಡ ನುಂಗುವಂತೆ
ಗುರುಚರಣದ ಮೇಲೆ ತನುತೃಣವನಿರಿಸಿದಡೆ
ಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ./31
ಉಳುವನ ಹೆಳೆವನ ಉಳುವವನ ಕೊಲುವ
ಬೇಡನ, ಹಿಳಿಲಿನಿಕ್ಕಿ ಕರದುಂಬ ಭಕ್ತನ
ಒಳುಹನೇನೆಂಬೆ, ರಾಮನಾಥ./32
ಊರ ಮಾಡುವನ ಭಕ್ತಿ ದೂರದ ಹೊಲನಂತೆ
ದೂರದಿಂ ಬಂದು ಅದು ನಿಂದು
ಮುಂದೆ ಸಾಗರವಾಗಲರಿಯದು, ರಾಮನಾಥ./33
ಎಂಜಲ ತಿಂಬರೆ ಅಂಜದೆ ಅಳುಕದೆ ತಿನಬೇಕು.
ಅಂಜುತ ಅಳುಕುತ ತಿಂದರೆ
ಅದು ನಂಜಿನಂತಕ್ಕು ಕಾಣಾ! ರಾಮನಾಥ./34
ಎಡರಡಸಿದಲ್ಲಿ ಮೃಡ! ನಿಮ್ಮ ನೆನವರು.
ಎಡರಡಸಿದ ವಿಪತ್ತು ಕಡೆಯಾಗಲೊಡನೆ
ಮೃಡ! ನಿಮ್ಮನೆಡಹಿಯೂ ಕಾಣರು! ರಾಮನಾಥ./35
ಎಣ್ಣೆಯಿದ್ದು ಎಳ್ಳು ನನೆಯದ ಭೇದವ
ಕಿಚ್ಚಿದ್ದು ಕಲ್ಲು ಸಿಡಿಯದೆ ಭೇದವ
ಕಾಮವಿದ್ದು ಕನ್ನೆಯನನುಭವಿಸದ ಭೇದವ
ಪರವಿದ್ದು ಪ್ರಾಣನ ಪ್ರಕೃತಿಯ ಹರಿಯದ ಭೇದವ
ನರರೆತ್ತ ಬಲ್ಲರೈ? ರಾಮನಾಥ./36
ಎತ್ತನೇರಿದ ಕರ್ತನೊಬ್ಬನೆ ಜಗಕ್ಕೆಲ್ಲ
ಎತ್ತು ಬೆಳೆದ ಧಾನ್ಯವನುಂಬ
ದೇವರ್ಕಳೆಲ್ಲ ನಿಮ್ಮ ತೊತ್ತಿನ ಮಕ್ಕಳು ಕಾಣಾ!
ರಾಮನಾಥ./37
ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ.
ಕರ್ತಾರ! ನಿನಗೆ ಕರವೆತ್ತಿ ಹೊಡವಡುವ
ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ,ರಾಮನಾಥ./38
ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ.
ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ಹೇಳ? ರಾಮನಾಥ./39
ಎನ್ನ ನಾನರಿವುದಕ್ಕೆ ಮುನ್ನ ಎಲ್ಲಿದ್ದೆಯಯ್ಯ?
ಎನ್ನೊಳಗೆ ಇದ್ದೆಯಯ್ಯ!
ಎನ್ನ ನಾನರಿಯಲು ಮುಂದೆ ಬಂದು ಗುರುರೂಪಾಗಿ
ಎನ್ನೊಳಗೆ ಅಡಗಿದ್ದೆಯಲ್ಲ! ರಾಮನಾಥ./40
ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ?
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ?
ಅದು ಎನ್ನೊಡಲೂ ಅಲ್ಲ, ನಿನ್ನೊಡಲೂ ಅಲ್ಲ.
ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ!ರಾಮನಾಥ./41
ಎಳ್ಳಿಲ್ಲದ ಗಾಣದಲ್ಲಿ ಎಣ್ಣೆಯುಂಟೆ?
ಜಳ್ಳ ತೂರಿದಲ್ಲಿ ಬತ್ತವುಂಟೆ?
ಕಳ್ಳ ಹಾದರಿಗರ ಸಂಪಾದನೆ
ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಕಾಣಾ!
ರಾಮನಾಥ./42
ಒಂದರಿವು ಒಂದು ನಡೆ ಒಂದು ಸ್ಥಾನದೊಳಗೆ ಒಂದು
ಮುಂದೆ ಪ್ರಸಾದದಂತುವನರಿದಡೆ
ನಿಶ್ಚಿಂತ ಪರಶಿವನು, ರಾಮನಾಥ./43
ಒಂದಾಗಿಹವೈದು ಭೂತ
ಚಂದ್ರ ಸೂರ್ಯರು ನಂದಿವಾಹನ ನಿಮ್ಮ ತನುವಲ್ಲವೆ?
ನಿಂದು ನೋಡಲು ಜಗವಂದ್ಯನಾಗಿಪ್ಪೆ,
ಇನ್ನು ನಿಂದಿಸುವೆನಾರನಯ್ಯ? ರಾಮನಾಥ./44
ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ.
ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ.
ತರ್ಕೈಸಿ ನಿಮ್ಮವನಪ್ಪಿಕೊಂಡಡೆ
ಅದು ನಿಶ್ಚಯಪ್ರಸಾದ ಕಾಣಾ!
ರಾಮನಾಥ./45
ಒಡಲಿಚ್ಛೆಗೆ ಭವಿಯ ಒಡಗೂಡಿಕೊಂಡು ಉಂಡು
ಹಡಿಕೆಯ ತಿಂದ ನಾಯಿ ಮುಂದುಡೆ ಬಗುಳುವಂತೆ
ಮೃಡನಿಲ್ಲದವನ ಮನೆಯ ಕೂಳು
ಹೊಲೆಯರ ಮನೆಯ ಅಡಗಿಂದ ಕರಕಷ್ಟ ಕಾಣಾ!
ರಾಮನಾಥ./46
ಒಡಲುಗೊಂಡವ ನಾನು; ಪ್ರಾಣವಿಡಿದವ ನೀನು.
ಎನ್ನೊಡಲು ಸಂಚುವ ನೀ ಬಲ್ಲೆ!
ನಿನ್ನ ಪ್ರಾಣದ ಸಂಚುವ ನಾ ಬಲ್ಲೆ!
ಇದು ಕಾರಣ,
ಇದು ಎನ್ನೊಡಲಲ್ಲ ನಿನ್ನೊಡಲು.
ನಿನ್ನ ಪ್ರಾಣವೆನ್ನಲ್ಲಿ ಅಡಗಿದ ಭೇದವ
ನೀ ಬಲ್ಲೆ, ನಾ ಬಲ್ಲೆನೈ, ರಾಮನಾಥ./47
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ./48
ಒಡಲುಗೊಂಡೆನಾಗಿ ಮೃಡ! ನಿಮಗೆ ಹಗೆಯಾದೆನಯ್ಯ.
ಆನು ಒಡಲುಗೊಂಡಡೇನು?
ಕಡಲೊಳಗಣ ಬೊಬ್ಬಳಿಕೆ ಕಡಲೊಳಗೆ ಆಳಿವಂತೆ
ಎನ್ನ ಒಡಲಳಿದು ಹೋದಡೇನು?
ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ,ರಾಮನಾಥ./49
ಒಡಲೊಳಗಣ ಕಿಚ್ಚು ಒಡಲ ಸುಡದ ಭೇದವ
ಕುಡಿದ ಉದಕದಲ್ಲಿ ಆ ಕಿಚ್ಚು ನಂದದ ಭೇದವ
ಮೃಢ! ನೀ ಪ್ರಾಣ ಪ್ರಕೃತಿಯೊಳಗೆ ಅಡಗಿದ ಭೇದವ
ಲೋಕದ ಜಡರೆತ್ತ ಬಲ್ಲರೈ? ರಾಮನಾಥ./50
ಒಡೆಯರನೊಡಗೊಂಡು ಬಂದು
ಕೈಗಡಿಗೆಯ ನೀರ ಕಯ್ಯಲ್ಲಿ ಕೊಟ್ಟು
`ಒಡೆಯರೆ! ಕಾಲ ತೊಳಕೋ!’
ಎಂಬುವನ ಮನೆಗೆ ಅಡಿಯಿಡಲಾಗದಯ್ಯಾ ಮೃಡಶರಣರು.
ಒಡಲಿಚ್ಛೆಗೆ ಬಡಮನವ ಮಾಡಿ
ಹೊಕ್ಕುಂಬವರ ಎನ್ನೆಡೆಗೆ ತೋರದಿರಾ, ರಾಮನಾಥ./51
ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು?
ಅರವಟಿಗೆ ಛತ್ರವು ತಮ್ಮದೆಂಬರು!
ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ,
ಅವರೇತರಲ್ಲಿ ನೀಡುವರಯ್ಯಾ!
ರಾಮನಾಥ./52
ಒಲವರವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ,
ಸಲೆ ನಿಮ್ಮ ನಂಬಿಯೂ ನಂಬದವನ ಬಾಳುವೆ,
ಹೊಲೆಯರ ನಾಯ ಹುಲುಸರವಿಯಿಂದ ಕರಕಷ್ಟ ಕಾಣಾ!
ರಾಮನಾಥ./53
ಒಳಗರಿದ ಭಕ್ತನ ಒಳಗಾದ ಲಿಂಗವು
ಒಳಗಾದ ಲಿಂಗದೊಳಗಾದ ಭಕ್ತನ
ಹೊರಗಾದ ಲಿಂಗವ ಒಳಗೆ ತಂದಿರಿಸಿ
ಆ ಭಕ್ತನ ತನುವಿನ ವಳೆಯವನಿನ್ನೇನ ಹೇಳುವೆ!
ರಾಮನಾಥ./54
ಕಂಚುಮುಟ್ಟು ಕಲ್ಲುಗುಂಡುಗಳೇರುವಣ್ಣಗಳು ನೀವು ಕೇಳಿರೆ!
ಘಂಟೆಯ ನುಡಿಸಿ ಶಿವನನುಂಟುಮಾಡಿಕೊಂಡಿಹೆನೆಂಬಿರಿ.
ಆ ಘಂಟೆಯ ಧ್ವನಿಗೆ ಒಂದು ಗೋಟಡಕೆಯ ಸೋಲ,
ಗುರು ರಾಮನಾಥನು./55
ಕಡಿಗಳ ಹದಿನೆಂಟನೊಡಗೂಡಿ ಸಂಧಿಸಿ
ತೊಡಚಿ ಕಟ್ಟಿದೆ ನರರ ಬಂಧನದಲ್ಲಿ.
ಈ ತೊಡಹದ ನಾಯ ನಿಚ್ಚ ನೀನಿಕ್ಕಿ
ಕೆಡಿಸಿದೆಯಯ್ಯಾ, ರಾಮನಾಥ./56
ಕಡುಭಸಿತವ ಹೂಸಿ,
ಮುಡಿಯಲ್ಲಿ ಲಿಂಗವ ಧರಿಸಿ,
ಮಂತ್ರಮೂರ್ತಿಯ ಮನವಾರೆ ಪೂಜಿಸಿ,
ಭಕ್ತಿ ವೇಷವ ಹೊತ್ತು ಭಕ್ತನೆನಿಸಿದ ಬಳಿಕ
ಭವಿಯ ಮನೆಯನ್ನವ
ನಾಯಡಗು, ನರರು ಹೇಸಿದ ಅಮೇಧ್ಯವೆಂದೆ ಕಾಣಬೇಕು.
ಹೀಗಲ್ಲದೆ ಒಡಲಿಚ್ಛೆಗೆ ತುಡುಗಣಿ ನಾಯಂತೆ
ಒಡಲ ಹೊರೆವವರ ಮೆಚ್ಚ, ನಮ್ಮ ರಾಮನಾಥ./57
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ.
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ!
ರಾಮನಾಥ./58
ಕಣ್ಣು ಮೀಸಲು ಶಿವನು; ಕೈ ಮೀಸಲು ಶಿವನ.
ಕಾಲು ಮೀಸಲು ಶಿವನ; ನಾಲಗೆ ಮೀಸಲು ಶಿವನ.
ಕಿವಿ ಮೀಸಲು ಶಿವನ; ನಾಸಿಕ ಮೀಸಲು ಶಿವನ.
ತನು ಮನವೆಲ್ಲಾ ಮೀಸಲು ಶಿವನ.
ಈ ಮೀಸಲು ಬೀಸರವಾಗದಂತಿರ್ದಡೆ
ಆತನೇ ಜಗದೀಶ ಕಾಣಾ!
ರಾಮನಾಥ./59
ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ?
ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ?
ಭಕ್ತಿಯನರಿಯದ ವ್ಯರ್ಥಜೀವಿಗಳು
ನಿಮ್ಮವರನೆತ್ತ ಬಲ್ಲರೈ? ರಾಮನಾಥ./60
ಕರಸ್ಥಲದ ಜ್ಯೋತಿಯಿದು.
ಕರುವಿಟ್ಟ ಎರಕವಿದು.
ಇದರ ನೆಲೆಯ ತಿಳಿದು ನೋಡಿದಡೆ ನಿಜದಾನಂದವು.
ಹೊಲಬುದೋರದ ನಿಸ್ಸಂಗದ ಹೊಲಬನರಿದು
ಕೂಡಿದಾತನೆ ಶರಣ ಕಾಣಾ!
ರಾಮಾನಾಥ./61
ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ
ಮಹಾಘನಲಿಂಗ ನಿಕ್ಷೇಪವಾಗಿದೆ!
ಈ ದಿವ್ಯ ನಿಕ್ಷೇಪವ ಸಾಧಿಸುವಡೆ
ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು.
ಲಿಪಿಯಿಲ್ಲದೆ ತೆಗೆವಡಸದಳ.
ಆ ಲಿಪಿಯ ವ್ರಯವ ಷಟ್ತತ್ವದ ಮೇಲೆ ನಿಶ್ಚಯಿಸಿ.
ಆ ನಿಶ್ಚಯದೊಳಗೆ ಈ ನಿಕ್ಷೇಪದ ಕರ್ತೃವಿನ ಹೆಸರೋದಿತ್ತು.
ತಿಳಿಯಲೋದುವನ್ನಬರ ಆತ
ನಮ್ಮ ಹೆತ್ತಯ್ಯನೆಂಬ ಹೆಸರೋದಿತ್ತು.
ಆ ಓದಿಕೆಯ ಕಡೆಯಕ್ಕರದೊಳಗೆಅಂಜನಸಿದ್ಧಿ ಹೇಳಿತ್ತು.
ಅದಾವ ಪರಿಕ್ರಮದ ಅಂಜನವೆಂದಡೆ
ಅದೆಮ್ಮ ಹೆತ್ತಯ್ಯ ಜಗದ್ವಿಲಾಸ ತದರ್ಥವಾಗಿ
ಆ ತನ್ನ ಮೂಲಶಕ್ತಿ ಸಂಭೂತವಾದುದು.
ಅಲ್ಲಿ ಹುಟ್ಟಿದ ದಿವ್ಯ ಚಿತ್ಕಳೆಯಿಂದೊಗೆದ ದಿವ್ಯಭಸಿತವೆಂದಿತ್ತು.
ಆ ದಿವ್ಯ ಭಸಿತವೆಂಬ ದಿವ್ಯಾಂಜನವ ತಳೆದುಕೊಂಡು
ಅತಿ ವಿಶ್ವಾಸದಿಂದ ನಾನೆನ್ನ ಹಣೆಯೆಂಬ ಕಣ್ಣಿಂಗೆಚ್ಚಿ
ಸರ್ವಾಂಗವ ತೀವಲೊಡನೆ
ಕರಸ್ಥಲದೊಳಗಣ ನಿಕ್ಷೇಪ ಕಣ್ದೆರವಾಯಿತ್ತು.
ಆ ಕಣ್ದೆರವಾದ ನಿಕ್ಷೇಪವ ಮುಟ್ಟಹೋದಡೆ
ಅಲ್ಲಿ ನಮ್ಮ ಹೆತ್ತಯ್ಯನ ಹೊಳಹ ಕಂಡು ತಳವೆಳಗಾದೆ ಕಾಣಾ!
ರಾಮನಾಥ./62
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ.
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ.
ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ
ನಿನ್ನನಿತ್ತೆ ಕಾಣಾ!
ರಾಮನಾಥ./63
ಕಲಿವೀರ ಕಡಿವಲ್ಲಿ, ಬಲುವಿಷವು ಸುಡಿವಲ್ಲಿ
ನೆಲೆಗೆಟ್ಟು ಮೊರೆಯೊ! ಎಂಬಲ್ಲಿ
ನಿಮ್ಮ ತಲೆಗಾದು ರಕ್ಷಸಿದ ಸುಲಭನನರಿಯಿರೆ ಹೊಲೆಯರಿರ!
ಸಲೆ ನಂಬಿ ಬದುಕಿರೊ, ರಾಮನಾಥನ./64
ಕಷೃಜಾತಿಗಳು ಲಿಂಗವ ಮುಟ್ಟಿ ಪೂಜಿಸಲಾಗದು.
ಮುಟ್ಟಿದಡೆ ಮುಟ್ಟಿದಂತಿರಬೇಕು.
ನಿಮ್ಮ ಮುಟ್ಟಿಯೂ ಹಿಂದಣ ಕುಲವ ಕೂಡಿದರಾದಡೆ
ಮುಂದೆ ಹೊಲೆಯರ ಮನೆಯ
ಹುಳಿತ ನಾಯ ಬಸುರಲಿ ಬಪ್ಪುದು ತಪ್ಪದು ಕಾಣಾ!
ರಾಮನಾಥ./65
ಕಳದೊಳಗಣ ಕಳವೆಯನೊಕ್ಕುವರೊಳಗದೆ ಶಿವಲಿಂಗ
ಮುಕ್ಕಣ್ಣ! ನೀನೊಲಿದ ಸದ್ಭಕ್ತನ ಅಕ್ಕುಲಿಜನೆಂದಡೆ
ಅಕ್ಷಯನರಕದಲ್ಲಿಕ್ಕುವ ಕಾಣಾ!
ರಾಮನಾಥ./66
ಕಾಯ ನಿಮ್ಮ ದಾನ; ಜೀವ ನಿಮ್ಮದಾನ.
ಕಾಯ ಜೀವ ಉಳ್ಳಲ್ಲಿಯೇ ನಿಮ್ಮ ಪೂಜಿಸದ
ನಾಯಿಗಳನೇನೆಂಬೆ ಹೇಳ? ರಾಮನಾಥ./67
ಕೀಳು ಡೋಹರ ಕಕ್ಕ; ಕೀಳು ಮಾದರ ಚೆನ್ನ.
ಕೀಳು ಓಹಿಲದೇವ; ಕೀಳು ಉದ್ಭಟಯ್ಯ.
ಕೀಳಿಂಗಲ್ಲದೆ ಹಯನು ಕರೆಯದು ಕಾಣಾ!
ರಾಮನಾಥ./68
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ
ತಲೆವಾಗುವೆ ನಾನು ಕುಲಜರೆಂದು.
ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ
ತಲೆವಾಗದವನ ತಲೆ ಶೂಲದ ಮೇಲಣ ತಲೆ ಕಾಣಾ!
ರಾಮನಾಥ./69
ಕುಲಸ್ವಾಮಿ ನಿಮ್ಮವ ಒಲಿವುದ ಕಂಡಡೆ
ತಲೆವಾಗುವೆ ಕಾತ ಕಳವೆಯಂತೆ
ಕುಲಜ ನಾನೆಂದು ತಲೆವಾಗದಿದ್ದಡೆ ಸಲೆ
ಶೂಲದ ತಲೆಯಯ್ಯಾ, ರಾಮನಾಥ./70
ಕುಲಸ್ವಾಮಿ ನೀ ನಿಂದ ಹಜ್ಜೆಯಲ್ಲದೆ
ನಾನೊಂದು ಹೆಜ್ಜೆಯನಿಡೆನಯ್ಯ; ಎಗಗೊಂದು ಹಜ್ಜೆಯಿಲ್ಲ.
ನಿನ್ನ ಹೆಜ್ಜೆ ಎನ್ನ ಹೆಜ್ಜೆ ಒಂದಾದ ಭೇದವ
ಜಗದನ್ಯಾಯಿಗಳೆತ್ತ ಬಲ್ಲರೈ? ರಾಮನಾಥ./71
ಕೆಡಹಿದ ಚಿನ್ನದ ಎಡೆಯಣ ಮಣ್ಣವ
ಹೆಡೆಗೆದುಂಬಲಾ ಚಿನ್ನದೋರಿ
ಮೃಡ! ನಿಮ್ಮ ಶರಣರ ಎಡೆಗಳನರಿದ ಬಳಿಕ
ಉಡುಗಿದ ಮಣ್ಣೇಕೆ? ರಾಮನಾಥ./72
ಖಂಡಿತವಿಲ್ಲದ ಅಖಂಡಿತ ನೀನೆ.
ನಿಮ್ಮ ಕಂಡವರುಂಟೆ? ಹೇಳಯ್ಯ.
ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು
ನೀ ನಿಂದ ಹಜ್ಜೆಯ ಕೆಳಗೆ
ಒಂದು ಬಿಂದು ಹುಟ್ಟಿ ಬೆಳಗುವ ಛಂದವ ಕಂಡು
ಕಣ್ದೆರೆದೆ ಕಾಣಾ!
ರಾಮನಾಥ./73
ಗಂಡ ಭಕ್ತನಾಗಿ, ಹೆಂಡತಿ ಭವಿಯಾದಡೆ
ಉಂಡ ಊಟ ಇಬ್ಬರಿಗೂ ಸರಿಭಾಗ!
ಸತ್ತ ನಾಯ ತಂದು ಅಟ್ಟದ ಮೇಲಿಳುಹಿ
ಒಬ್ಬರೊಪ್ಪಚ್ಚಿಯ ಹಂಚಿಕೊಂಡು ತಿಂಬಂತೆ!
ರಾಮನಾಥ./74
ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ
ಭೂಮಂಡಳಕ್ಕೆ ಅರಸಾಗಿ ಹುಟ್ಟುವನಾತನು.
ಗಂಡನುಳ್ಳಮ್ಮನ ಕಂಡು ಒಡವೆರದಾತ
ನರಕದಲ್ಲಿ ದಿಂಡುಗೆಡದಿಪ್ಪನೈ, ರಾಮಾನಾಥ./75
ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ?
ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ?
ಸರಿಯಿಲ್ಲ ನೋಡಾ
ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ!
ಪರುಷಕ್ಕೆ ಪಾಷಾಣ ಸರಿಯೆ?
ಮರುಜವಣಿಗೆ ಔಷಧ ಸರಿಯೇ?
ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ
ನರಕ ತಪ್ಪದಯ್ಯಾ, ರಾಮಾನಾಥ./76
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು.
ಮಾಯಾ ಪ್ರಪಂಚು ಬಿಟ್ಟಿತ್ತು.
ಮುಂದಣ ಹುಟ್ಟರತು ಹೋಯಿತ್ತು.
ನೆಟ್ಟಗೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ!
ರಾಮನಾಥ./77
ಗುರು ನಿರೂಪವ ಮರದು
ಪರವಧುವ ನೆರವರು; ಪರವಧುವನಳುಪುವರು.
ಗುರುವಿಲ್ಲವವರಿಗೆ! ಪರವಿಲ್ಲವವರಿಗೆ!
ಇಂತಪ್ಪ ನರಕಿಗಳನೆನೆಗೊಮ್ಮೆ ತೋರದಿರಾ,ರಾಮನಾಥ./78
ಗುರು ಲಿಂಗ ಒಂದೆಂಬರು.
ಗುರು ಲಿಂಗ ಒಂದಾದ ಠಾವ ತಿಳಿದು ನೋಡಿರೆ.
ಗುರು ಕಾರುಣ್ಯವಾದ ಬಳಿಕ
ಅಂಗದ ಮೇಲೆ ಲಿಂಗವಿರಬೇಕು.
ಲಿಂಗವಿಲ್ಲದ ಗುರುಕಾರುಣ್ಯವು
ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತದಂತೆ ಕಾಣಾ!ರಾಮನಾಥ./79
ಗುರುಭಕ್ತನಾದಲ್ಲಿ ಘಟಧರ್ಮವಳಿದು
ಲಿಂಗಭಕ್ತನಾದಲ್ಲಿ ಮನಸಂಚಲ ನಿಂದು
ಜಂಗಮಭಕ್ತಿಯಲ್ಲಿ ಧನದಾಸೆಯಳಿದು
ತ್ರಿವಿಧಾಂಗ ಸಲೆ ಸಂದು ತ್ರಿಕರಣ ಶುದ್ಧನಾಗಿದ್ದವಂಗೆ
ಮತ್ರ್ಯ ಕೈಲಾಸವೆಂಬ ಕಾಳುಮಾತಿಲ್ಲ
ಆತ ನಿಶ್ಚಿಂತ ನಿಜಮುಕ್ತನಯ್ಯಾ, ರಾಮನಾಥ./80
ಘಟದೊಳಗೆ ತೋರುವ ಸೂರ್ಯನಂತೆ
ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು.
ಇದ್ದರೇನು? ಅದ ಕೂಡುವರೆ
ಗುರುವಿನಿಂದಲ್ಲದಾಗದು ಕಾಣಾ!
ರಾಮನಾಥ./81
ಘಟವನೊಡದು ಬಯಲ ನೋಡಲದೇಕೆ?
ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಆ ಪಟವೆ ತಂತುವೆಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ?
ಆ ಕಟಕವೆ ಕಾಂಚನವೆಂದರಿದಡೆ ಸಾಲದೆ?
ತನ್ನನಳಿದು ಘನದ ನೋಡಲದೇಕೆ?
ತಾನೆ ಘನವೆಂದರಿದಡೆ ಸಾಲದೆ? ಹೇಳಾ!
ರಾಮನಾಥ./82
ಚಿನ್ನದೊಳಗಣ ಬಣ್ಣವ ಆ ಚಿನ್ನ ತನ್ನ ತಾನರಿವುದೆ?
ಕಬ್ಬು ರುಚಿಸಬಲ್ಲುದೆ ತನ್ನ ತಾನೆ?
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ?ರಾಮನಾಥ./83
ಜಂಬೂದ್ವೀಪವನೆಲ್ಲ ತಿರಿಗಿದಡೇನು?
ಜಂಬುಕ ಶಂಭುದ್ಯಾನದಲ್ಲಿ ಸೈವೆರಗಪ್ಪುದೆ?
ಕುಂಭಿನಿಯ ತಿರಿಗಿ ಕೋಟಿ ತೀರ್ಥವ ಮಿಂದಡೇನು?
ಶಂಭು! ನಿಮ್ಮಲ್ಲಿ ಸ್ವಯವಾಗದವನು
ಕುಂಭಿನಿಯ ತಿರಿಗಿದ ಡೊಂಬನಂತೆ ಕಾಣಾ!ರಾಮನಾಥ./84
ಜಗದೊಳಗಣ ಮನುಜರು ಸೋಗೆಗನಂತಿಪ್ಪರು.
ಸೋಗೆಗನಾಡಿಸುವ ಓಜೆ ಬೇರೈ.
ಸೋಗೆಗಳನೀಡಾಡಿ ಓಜ ತಾ ಹೋದರೈ
ಸೋಗೆಗ ನುಡಿಯಬಲ್ಲದೆ? ರಾಮನಾಥ./85
ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವದೆ?
ಭವಜನ್ಮದಲ್ಲಿ ಬರುವ ಕ್ರೂರಕರ್ಮಿಗಳಿಗೆ
ಶಿವಾಚಾರವ ಹೇಳಿದಡೆ
ಹಗೆಯ ಮಾಡುವರು ಕಾಣಾ! ರಾಮನಾಥ./86
ಜ್ವರ ಬಡಿದ ಬಾಯಿಗೆ ನೊರೆವಾಲು ಉರಸುವದೆ?
ನರಕದಲ್ಲಿ ಬೀಳುವ ಮನುಜರಿಗೆ
ಶಿವಭಕ್ತಿಯೆಂಬುದು ಕಿರುಗಹಿ ಕಾಣಾ! ರಾಮನಾಥ./87
ತನು ತನ್ನ ದೆಸೆಯಲೇಸು ದಿನವಿರ್ದಡೇನು?
ಮನ ತನ್ನ ಹರಿದತ್ತ ಹರಿದ ಬಳಿಕ.
ಕೆನೆಯಿಲ್ಲದ ಮೊಸರ ಕಡೆದಡೆ
ಅಲ್ಲಿ ಒಂದು ಹನಿ ತುಪ್ಪವಿಲ್ಲ ಕಾಣಾ! ರಾಮನಾಥ./88
ತನ್ನೊಳಗಣ ಅರಿವು ತನ್ನಲ್ಲಿಯೇ ತೋರಿದಲ್ಲದೆ
ಅನ್ಯರಲ್ಲಿ ತೋರಬಲ್ಲದೆ?
ತನ್ನಲ್ಲಿ ತಾನೆ ಇದ್ದಿತ್ತು.
ತನ್ನ ತಾನೆ ಪಕ್ಷಕ್ಕೆ ಬಂದು
ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನೇನೆಂಬೆನಯ್ಯಾ ರಾಮನಾಥ./89
ತಲೆಯಿಲ್ಲದ ಗುರು, ಕಾಲಿಲ್ಲದೆ ನಿಂದ ನೋಡ!
ಒಡಲಿಲ್ಲದ ಶಿಷ್ಯನಾದ ಪರಿಯ ನೋಡ!
ಗುರುವಿನ ಒಡಲ ಬಗೆಯ ಹುಟ್ಟಿದಾತ
ಒಡನೆ ಗುರುಸಹಿತ ನಿಂದ ನಿಲವನೇನೆಂಬೆನಯ್ಯಾ!ರಾಮನಾಥ./90
ತಾಯ ಗರ್ಭದ ಶಿಶು ತಾಯ ಕುರುಹನರಿಯದು.
ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.
ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು.
ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ! ರಾಮನಾಥ./91
ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ?
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ?
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ.
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ?ರಾಮನಾಥ./92
ತೊಡೆಯಲ್ಲಿ ಮುದ್ರೆಯನೊತ್ತಿದಡೇನು?
ಅದು ನಡೆಯಲ್ಲಿ ಶುಚಿಯಾಗಬಲ್ಲುದೆ?
ಮಡಿಲಲ್ಲಿ ಲಿಂಗವ ಕಟ್ಟಿದಡೇನೊ?
ಲೋಕದ ಆಜ್ಞಾನಿತನ ಬಿಡುವುದೆ?
ನಡೆ ನುಡಿ ಸತ್ಯಸದಾಚಾರಿಗಳು
ಎಡೆಯೆಡೆಗೊಬ್ಬರು ಕಾಣಾ! ರಾಮನಾಥ./93
ದರುಶನ ತಪ್ಪುಕ ಪ್ರಥಮ ಪಾತಕ.
ಪರುಶನ ತಪ್ಪುಕ ದ್ವಿತೀಯ ಪಾತಕ.
ಗುರು ತಪ್ಪುಕ ತೃತೀಯ ಪಾತಕ.
ಪಾರದ್ವಾರಿ ಚತುರ್ಥ ಪಾತಕ.
ಮಾಂಸಾಹಾರಿ ಪಂಚಮ ಮಹಾ ಪಾತಕ.
ಈ ಅಯ್ವರೊಡನೆ ನುಡಿಯಲಿಲ್ಲಯ್ಯ ರಾಮನಾಥ./94
ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ.
ಆಸೆ ಮಾಡ, ನೋಡ ಅನ್ಯದೈವಂಗಳಿಗೆ.
ದೇಶದ ಪಿಶಾಚಿಗಳಿಗೆ ಆಶೆ ಮಾಡ ನೋಡ!
ಆಶೆ ಮಾಡಿದನಾದಡೆ ಅವ ದಾಸನ ಕುಲವಲ್ಲ
ಅವ ಅನ್ಯಕುಲ ಕಾಣಾ! ರಾಮನಾಥ./95
ದಾಸಿ ವೇಶಿ ಮದ್ದು ಮಾಂಸ ಸುರೆ ಭಂಗಿ ಹೊಗೆ
ಅನ್ಯದೈವ ಭವಿಸಂಗ-ಇಷ್ಟುಳ್ಳನ್ನಕ್ಕ ಅವ ಭಕ್ತನಲ್ಲ, ಜಂಗಮನಲ್ಲ.
ಅವರಿಬ್ಬರ ಮೇಳಾಟವೆಂತೆಂದಡೆ
ಹೀಹಂದಿ ಹಡಿಕೆಯ ತಿಂದು
ಅವು ಒಂದರ ಮೋರೆಯನೊಂದು
ಮೂಸಿದಂತೆ ಕಾಣಾ! ರಾಮನಾಥ./96
ದೇಹಗೊಂಡು ಹುಟ್ಟಿದವರು
ಒಪ್ಪಚ್ಚಿದೇಹಾರವ ಮಾಡುವಿರಯ್ಯ.
ದೇಹಾರವ ಮಾಡಿ ಲಿಂಗಾರ್ಪಿತವ ಮಾಡದೆ
ಆಹಾರವ ಕೊಂಡಡೆ
ಕೋಳಿ ಹುಳವನಾಯ್ದುತಿಂದಂತೆ ಕಾಣಾ! ರಾಮನಾಥ./97
ಧರಣಿಯ ಪಸರಿಸಿ, ಉರಗನನಡಿಯಿಟ್ಟು
ಶರಧಿಯೇಳಕ್ಕೆ ಎರದನೊಕ್ಕುಡಿತೆ ಉದಕವ
ಹರಿಯಜ ಸುರರಿಗೆ ಪರಿಪರಿಯ ಲೋಕವ ಕೊಟ್ಟು
ಅರಿದಂತಿರ್ದ ಕಾಣಾ! ರಾಮನಾಥ/98
ಧರ್ಮವನೆತ್ತುವವರ ಮಹಾಧರ್ಮಿಗಳೆಂದೆಂಬಿರಿ.
ನಿಮ್ಮ ಧರ್ಮವನಾರು ಅರಿದವರಿಲ್ಲ!
ಧರ್ಮಗಳಿನಿಕ್ಕಿ ಉತ್ತ ಭೂಮಿಯೆ ಡೊಣಿ
ನೀನೆಮ್ಮನೆಲ್ಲರ ನೋಡಿ ಸಲಹಿದೈ, ರಾಮನಾಥ./99
ನಂಬಿ ನಚ್ಚಿದೆನೆಂದು ಮನವನಿಂಬುಗೊಡದಿರು.
ಕಾಯದ ಮಾಯದ ಕಪಟ ಕರ್ಮ ಸಂಸಾರಕ್ಕೆ
ತನು ಮನ ಧನದಲ್ಲಿ ನೆನಹುಳ್ಳವರ
ಕನಸಿನಲ್ಲಿ ಅರಿಯ, ನಮ್ಮ ರಾಮನಾಥ./100
ನಂಬಿದ ಚೆನ್ನನ ಅಂಬಲಿಯನುಂಡ.
ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ.
ಕುಂಭದ ಗತಿಗೆ ಕುಕಿಲಿರಿದು ಕುಣಿದ.
ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ./101
ನಡೆ ನೋಟ ಸೊಲ್ಲೆಡೆಯಲ್ಲಿ ಒಂದು ಕಿಚ್ಚು.
ಮಡದಿ ಪುರುಷರೆಡೆಯಲ್ಲಿ ಒಂದು ಕಿಚ್ಚು.
ತಡದುಂಬೆಡೆಯಲ್ಲಿ ಒಂದು ಕಿಚ್ಚು.
ಪಡೆದರ್ಥ ಕೆಟ್ಟೆಡೆಯಲ್ಲಿ ಒಂದು ಕಿಚ್ಚು.
ಕೂಡಿದ ವ್ಯಾಮೋಹದೆಡೆಯಲ್ಲಿ ಒಂದು ಕಿಚ್ಚು.
ಇಂತೀ ಐದು ಕಿಚ್ಚನಿಕ್ಕಿ
ಬಾಯಲ್ಲಿ ಮಣ್ಣಹೊಯಿದು ಕೆಡಿಸಿದೆ! ರಾಮನಾಥ./102
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ./103
ನಿಜವುಂಡ ನಿರ್ಮಲದಲೊದಗಿದ ಜ್ಯೋತಿಯನು
ಮರಳಿ ಪ್ರಸಾದರೂಪು ತಾನಾಗಿ
ನಿಜ ನಿಂದು ಬ್ರಹ್ಮಾಂಡ ಬೆಳಗಿ ತೋರುತ್ತದೆ
ಮಹಾಪ್ರಸಾದಿಯಲ್ಲಿ ರಾಮನಾಥ./104
ನಿಡಿದೊಂದು ಕೋಲುವನು ಕಡಿದು ಎರಡ ಮಾಡಿ
ಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿ
ನಡುವೆ ಹೊಸದಡೆ ಹುಟ್ಟಿದ ಕಿಚ್ಚು ಹೆಣ್ಣೊ ಗಂಡೊ?
ರಾಮನಾಥ./105
ನಿಷ್ಠೆಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು?
ಅದು ಪಟ್ಟಣವೆಂದೆನಿಸೂದು!
ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದಡೂ
ಅದು ನಟ್ಟಡವಿ ಕಾಣಾ! ರಾಮನಾಥ./106
ನೀನೀಶನೀಯದೆ ಮಾನಿಸನೀವನೆ?
ನೀನೀಸುವ ಕಾರಣ ಮಾನಿಸನೀವನು.
ಆ ಮಾನಿಸನ ಹೃದಯದೊಳು ಹೊಕ್ಕು
ನೀನೀಸುವ ಕಾರಣದಿಂದ
ನೀನೆ ಶರಣೆಂಬೆನಯ್ಯಾ, ರಾಮನಾಥ./107
ನೆರೆ ನಂಬಿ-ಕರೆದಡೆ ನರಿ ಕುದುರೆಯಾಗಿ ಹರಿವೆ?
ಜಗವೆಲ್ಲಾ ಅರಿಯಲು ತೊರೆಯೊಳಗೆ ಬಿದ್ದ ಲಿಂಗ
ಕರೆದಡೆ ಬಂದುದು ಕರಸ್ಥಲಕ್ಕೆ.
ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ./108
ನೆರೆದರೆ ಗಣಂಗಳು! ಹರದಡೆ ಕಂಚುಗಾರರು!
ಲಿಂಗವ ಮಾರಿ ಉಂಬ ಭಂಗಾರರು!
ತಮ್ಮ ತಳಿಗೆಯ ಕೊಂಡು ಹೋಗಿ
ಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ?ರಾಮನಾಥ./109
ಪರವಧುವ ನೆರೆಯದೆ; ಪರಧನವ ತುಡುಕದೆ.
ಪರದೈವದಿಚ್ಚೆವಡೆಯದೆ
ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ
ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ./110
ಪ್ರಾಣನ ಕಳೆ ಪ್ರಕೃತಿಯಲ್ಲಿ ಅಡಗಿ
ಪ್ರಕೃತಿಯ ಕಳೆ ಪ್ರಾಣನಲ್ಲಿ ಅಡಗಿ
ಲಿಂಗವೆಂದರಿದು ಅಂಗೈಸಿ ಅನುಭವಿಸಬಲ್ಲವರ
ಲೆಂಗಿ ನಾನಪ್ಪೆನೈ, ರಾಮನಾಥ./111
ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ!ರಾಮನಾಥ./112
ಬಯಲ ಬಣ್ಣವ ಮಾಡಿ;
ಸ್ವಯವ ನಿಲವ ಮಾಡಿ
ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!/113
ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ.
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು ಕಾಣಾ! ರಾಮನಾಥ./114
ಬಿಂದುವಿನೊಳಗೆ ನಾದ ಹೊಂದಿರ್ದ ಭೇದವನು
ಲಿಂಗದೊಳಗೆ ಶರಣ ಸಂದಿರ್ದ ಭೇದವನು
ಲೋಕದ ಸಂದೇಹಿಗಳೆತ್ತ ಬಲ್ಲರೈ! ರಾಮನಾಥ./115
ಬೆಕ್ಕು ನಾಯಿ ಶಿವಭಕ್ತರೊಕ್ಕು ಮಿಕ್ಕುದ ಕೊಂಡಡೆ
ಸದಾಚಾರಿಯಾಗಬಲ್ಲುದೆ? ಭೃತ್ಯಾಚಾರಿಯಾಗಬಲ್ಲುದೆ?
ಜಂಗಮಲಿಂಗದಲ್ಲಿ ನಂಬುಗೆಯಿಲ್ಲದೆ
ಒಕ್ಕು ಕೊಂಡ ಪ್ರಸಾದ
ಬೆಕ್ಕು ನಾಯಿ ತಿಂದಂತೆ ಕಾಣಾ! ರಾಮನಾಥ./116
ಭಂಜಿಸಿಹೆನೆಂದೆಂಬೆ ಹಲಬರು
ಭಂಜನೆಗೆ ಸಿಲುಕುವವು ಪ್ರಾಣಿಗಳಲ್ಲದೆ
ಲಿಂಗವು ಭಂಜನೆಗೆ ಸಿಲುಕುವನೆ? ತಾತ್ಪರ್ಯಕ್ಕಲ್ಲದೆ.
ಆ ಲಿಂಗದೆಂಬಲ ತಿಂದು ವೈಸಿಕವ ಮಾಡಿದಡೆ
ಅದು ನಂಜಾಗಿ ಕಾಡುವದು ಕಾಣಾ! ರಾಮಾನಾಥ./117
ಭಕ್ತನ ಮಠವೆಂದು ಭಕ್ತಹೋದಡೆ
ಆ ಭಕ್ತ ಭಕ್ತಂಗೆ ಅಡಿಯಿಟ್ಟು ಇದಿರೆದ್ದುನಡೆದು
ಹೊಡೆಗೆಡೆದು ಒಡಗೊಂಡು ಬಂದು
ವಿಭೂತಿ ಮೀಳ್ಯವನ್ನಿಕ್ಕಿ ಪಾದಾರ್ಚನೆಯಂ ಮಾಡಿಸಿ
ಒಕ್ಕುದಕೊಂಡು ಓಲಾಡುತ್ತಿಪ್ಪುದೆ ಭಕ್ತಿ.
ಹೀಂಗಲ್ಲದೆ ಬೆಬ್ಬನೆ ಬೆರತು, ಬಿಬ್ಬನೆ ಬೀಗಿ
ಅಹಂಕಾರಭರಿತನಾಗಿಪ್ಪವನ ಮನೆಯ
ಲಿಂಗಸನುಮತರು ಹೊಗರು ಕಾಣಾ! ರಾಮನಾಥ./118
ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ
ನಂಬುವರು, ನಚ್ಚುವರು, ಮಚ್ಚುವರು.
ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ
ಸತ್ಯ ಸದಾಚಾರವ ಹೇಳಿದಡೆ
ಕಚ್ಚುವರು, ಬಗುಳುವರು ಕಾಣಾ! ರಾಮನಾಥ./119
ಭಕ್ತಿಯ ಬಲ್ಲವರು ನಚ್ಚಿ ಮೆಚ್ಚಿ ಮನವನೊಚ್ಚತಗೊಡುವರು.
ಭಕ್ತಿಯನರಿಯದ ಬಲುಪಾಪಿ ಜೀವಿಗಳು
ಕಚ್ಚುವರು ಬಗುಳುವರು, ರಾಮನಾಥ./120
ಭವಿಯ ಕಳೆದು ಭಕ್ತನಾದ ಬಳಿಕ
ಭವಿ ನಂಟನೆಂದು ಹೊಗಿಸಲಾಗದು.
ನಂಟುತನಕ್ಕೆ ಆತ್ಮನಿಚ್ಛೆಗೆ ಅಳುಪಿ ಭವಿಯೊಡನುಂಡಡೆ
ಹಂದಿಯ ಬಾಯ ತುತ್ತ ನಾಯಿ ಸೆಳತಿಂದಂತೆ ಕಾಣಾ!ರಾಮನಾಥ./121
ಭವಿಯ ಮನೆಯ ಅನ್ನಸವಿಯಾಯಿತ್ತೆಂಬ ಭಕ್ತಂಗೆ ಭವಿಪಾಕ ನರಕ.
ಆಗಳಂತೆ ಭವಿಗೆ ಮಾಡಿದ ಹುಳುಗುಂಡ ಭಕ್ತಂಗಪ್ಪುದು ತಪ್ಪದು
ಆ ಭವಿಗೆ ಭವಂ ನಾಸ್ತಿ ಕಾಣಾ! ರಾಮನಾಥ./122
ಮಂಡೆಯ ಬೋಳಿಸಿಕೊಂಡು
ಮಡಿದು ಗೋಸಿಯ ಕಟ್ಟಿದಡೇನು?
ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ
ಭಂಡರನೊಲ್ಲನೆಮ್ಮ ರಾಮನಾಥ./123
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ?
ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ?
ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ./124
ಮಣಿಗಣ ಸೂತ್ರದಂತೆ ತ್ರಿಣೆಯ ನೀನಿಪ್ಪೆಯಯ್ಯ.
ಎಣಿಸುವಡೆ ತನ್ನ ಭಿನ್ನ ಆತ್ಮನೊಬ್ಬನೆ.
ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು
ಮಣಿಯುತಿಪರ್ೆನಯ್ಯಾ, ರಾಮನಾಥ./125
ಮಣಿವಡೆ ಶಿವಭಕ್ತ ಮಣಿಯ ಕಟ್ಟಲೆ ಬೇಕು.
ಮಣಿಯದಿರ್ದಡೇನು? ಶಬುದಗುಂಡಿಗೆ!
ಫಣಾಮಣಿದೇವರ ಮಣಿಮಕುಟದಲ್ಲದೆ,
ಅದು ಮಣಿಯಲ್ಲದೇನು? ಹೇಳು ರಾಮನಾಥ./126
ಮನಮುಟ್ಟಿ ನೆನವಲ್ಲಿ ತನು ನಿಮ್ಮದಾಯಿತ್ತು.
ತನುಮುಟ್ಟಿ ಅಪ್ಪಿ, ಮನಮುಟ್ಟಿ ನೆರದು
ವನಿತೆಯರ ಕೂಟಕ್ಕೆ ತೆರಪಿಲ್ಲವಾಯಿತ್ತು.
ಜನನ ಮರಣದ ಬಾಧೆ ಹರಿಯಿತ್ತು.
ಈಶ್ವರ! ನಿಮ್ಮ ಪಾದಸೇವೆಯಿಂದ ಕಾಣಾ!ರಾಮನಾಥ./127
ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ?
ಕೈಮುಟ್ಟಿ ಉಣ್ಣದನ್ನಕ್ಕರ!
ತಾನು ವಚನಾಗಮದ ಪ್ರಸಂಗವ ಬಲ್ಲನೆಂದಡೆ
ಬಲ್ಲವರಾರೂ ಇಲ್ಲವೆಂದಡೆ
ಆತ ತನ್ನ ನುಡಿಗೆ ಸಿಲುಕುವನೆ?
ಇಲ್ಲ ಕಾಣಾ! ರಾಮನಾಥ./128
ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ
ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ
ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ!ರಾಮನಾಥ./129
ಮಹಾಘನವಪ್ಪ ಬೋನವನು
ಒಂದನುವಿನ ಪರಿಯಾಣದಲ್ಲಿ ಹಿಡಿದು
ಗುರುಲಿಂಗವು ಒಳಗಾದ ಲಿಂಗವಾರೋಗಣೆಯ ಮಾಡಿ
ಮಿಕ್ಕುದು ಪ್ರಸಾದವೆ? ಅಲ್ಲಲ್ಲ.
ಮಹಾಘನವಪ್ಪ ಲಿಂಗವ ಒಂದನುವಿನಲ್ಲಿ ತಂದಿರಿಸಿದ ಆತನ
ಮನವೆ ಪ್ರಸಾದ ಕಾಣಾ! ರಾಮನಾಥ./130
ಮಾಡಿದ ಕರ್ಮವನೂಡಯ್ಯ ಎನ್ನ ಮನದಣಿವನ್ನಕ್ಕ.
ಬೇಡೆನ್ನೆನು, ಮಾಕರ್ೊಳ್ಳೆನು.
ಎಲೆ ರೂಢಿಗೀಶ್ವರನ ಕೂಡುವೆನು ನೀರಡಸಿದಂತೆ,ರಾಮನಾಥ./131
ಮಾಡಿದಲ್ಲದೆ ಮನೆಯೊಳಗಾಗದು ಬಯಲು
ಕಣ್ಣು ಕಂಡಲ್ಲದೆ ಪರವಾಗದು
ಮನ ಪರವೆಂದಲ್ಲದೆ ಪರವಾಗದು
ಈ ಪರಿಯ ನರರೆತ್ತ ಬಲ್ಲರೈ? ರಾಮನಾಥ./132
ಮಾರಿಯ ಪೂಜಿಸಿ, ಮಸಣಕ್ಕೆ ಹೋಗಿ
ಗೋರಿಗೊಳಿಸಿ ಕುರಿಯ ಕೊರಳನೆ ಕೊಯ್ದುಂಬ
ಕ್ರೂರಕರ್ಮಿಗಳನವರ ಶಿವಭಕ್ತರೆನಬಹುದೆ?
ಆರೈಯದೆ ಅವನ ಮನೆಯಲುಂಡ ಭಕ್ತ
ಅಘೋರನರಕಕ್ಕಿಳಿವ ಕಾಣಾ! ರಾಮನಾಥ./133
ಮುಂಡೆಗೆ ಮುಡಿಕಟ್ಟೇಕೊ?
ಗುಂಡಂಗೇಕೊ ಗುರುಪದ ಭಕ್ತಿ?
ಚಂಡಿಕೆಯ ತಲೆಯ ಚಾಂಡಾಲಂಗೆ
ಅಖಂಡಿತ ಲಿಂಗದ ಅನುವೇಕೆ? ಹೇಳ! ರಾಮನಾಥ./134
ಮೆಳೆಯ ಮೇಲಣ ಕಲ್ಲು ಜಗದೆರೆಯನಾಗಬಲ್ಲುದೆ?
ಮೆಳೆ ಶಿವಭಕ್ತನಾಗಬಲ್ಲುದೆ?
ನಿಮ್ಮ ತನುಮನಧನವನರಿಯದಿದ್ದಡೆ
ಸದುಭಕ್ತರಹರೆ? ರಾಮನಾಥ./135
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ./136
ವಿಷಯದ ಪಿತ್ತ ತಲೆಗೇರಿದಲ್ಲಿ
ವಿವೇಕವೆಂಬ ದೃಷ್ಟಿ ನಷ್ಟವಾಗಿ
ಪಶುಪತಿಯ ನೆನಹುಗೆಟ್ಟು ಮತಿಮಂದನಾದಲ್ಲಿ
ಮಂತ್ರ ನೆನಹುಂಟೆ! ಹೇಳ! ರಾಮನಾಥ./137
ವೇಶಿಯ ಎಂಜಲ ತಿಂದು
ಈಶ್ವರಪ್ರಸಾದವ ಭುಂಜಿಸಿದಡೆ
ಓಸರಿಸಿತ್ತಯ್ಯ ಲಿಂಗವು ಆ ದ್ರೋಹಿಗೆ!
ಭಾಷೆ ತಪ್ಪುವನು! ಭವದಲ್ಲಿ ಬಳಲುವನೆಂದವನ ಕಂಡು
ಹೇಸಿ ಕಡೆಗೆ ತೊಲಗಿದೆನು ಕಾಣಾ! ರಾಮನಾಥ./138
ವೇಷಕ್ಕೆ ಅಂಜುವೆ ದೋಷಕ್ಕೆ ಹೇಸುವೆ!
ಈಶ್ವರನಾಗಿ ಎನ್ನ ಕೈಯಲ್ಲಿ ತನ್ನ ಆರಾಧಿಸಿಕೊಳಲೊಲ್ಲದೆ
ಹದಿನೆಂಟು ಜಾತಿಯ ಹೇಸಿಕೆಯ ಕೂಳ ತಿಂಬವರನೇನೆಂಬೆನೈ,ರಾಮನಾಥ./139
ವೇಷದ ಕೂಡೆ ವಾಸಿಗೆ ಹೋರುವವನು ಈಶ್ವರದ್ರೋಹಿ.
ವೇಷವ ಈಶ್ವರನೆಂದು ತಿಳಿಯದವ
ಪಾಶಕ್ಕೆ ಸಿಕ್ಕದ ಪಶುವಿನಂತೆ ಕಾಣ, ರಾಮನಾಥ./140
ವೇಷದ ಹೊತ್ತ ಹಿರಿಯರು ಈಶ್ವರಧ್ಯಾನದಲ್ಲಿರಬೇಕು.
ವೇಷವ ತೋರಿ ಗ್ರಾಸಕ್ಕಾಗಿ ಆಸೆಮಾಡಿ
ಲೋಗರ ಮನೆಯ ಕಾದು
ಗ್ರಾಸವ ಪಡೆದು ಉದರವ ಹೊರೆವ ವೇಷವು
ವೇಶಿಯಿಂದವು ಕರಕಷ್ಟ! ರಾಮನಾಥ./141
ವೇಷವ ಹಲ್ಲಣಿಸುವ ಹಿರಿಯಣ್ಣಂಗೇನು?
ವೇಷವ ಹೊತ್ತು ದೋಷದಲ್ಲಿ ನಡೆವ ರಾಶಿಮಾ (ನವ)
ವೇಷಗಳ್ಳರ ಕಂಡು ವೇಶಿಯೆಂದ, ರಾಮನಾಥ./142
ವೇಷವ ಹೊತ್ತು ದೋಷದಲ್ಲಿ ನಡೆದಡೆ
ದೋಷಕ್ಕೆ ವೇಷ ಭಂಡ.
ಮೊದಲೆ ವೇಷವ ಕಂಡು ಲೇಸೆಂದು ಕೊಂಡಾಡುವ ದೋಷಿಗಳ
ನರಕದಲ್ಲಿಕ್ಕುವ ಕಾಣಾ! ರಾಮನಾಥ./143
ವೇಷವನೂ ವೇಶಿಯನೂ ಸರಿಯೆಂಬೆ.
ವೇಷವು ಲೋಕವ ಹಾರುವದು.
ವೇಶಿಯೂ ಲೋಕವ ಹಾರುವಳು.
ವೇಷವ ಹೊತ್ತು ಲೋಕವ ಹಾರದಿರ್ದಡೆ
ಆತನ ಈಶ್ವರನೆಂಬೆ ಕಾಣಾ! ರಾಮನಾಥ./144
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ!
ಅಂಬರಕ್ಕೆ ಗಡಿಗೆ ಬೋದಿಗೆಯಿಲ್ಲದಂತಿರಿಸಿದೆ!
ಎಲೆ ಮೃಡನೆ! ನೀನಲ್ಲದೆ ಉಳಿದ ದೈವಂಗಳಿಗಹುದೆ?ರಾಮನಾಥ./145
ಶಿವಪೂಜೆಯೆತ್ತ, ವಿಷಯದ ಸವಿಯೆತ್ತ;
ಆ ವಿಷಯದ ಸವಿ ತಲೆಗೇರಿ ಶಿವಪೂಜೆಯ ಬಿಟ್ಟು
ವೇಶಿಯರ ಎಂಜಲ ಹೇಸದೆ ತಿಂಬ
ದೋಷಿಗಳನೇನೆಂಬೆನೈ, ರಾಮನಾಥ./146
ಶಿವಭಕ್ತನು ಹೋಗಿ ತನ್ನೊಡಲಿಚ್ಛೆಗೆ ಭವಿಯ
ಮನೆಯಲುಂಡನಾದಡೆ
ಮಡೆಕೆಯ ಕೂಳ ತಿಂದ ತುಡುಗಣಿ ನಾಯಂತೆ ಆ ಭಕ್ತ.
ಮೃಢ! ನೀನಿಲ್ಲದ ಮನೆಯ ಕೂಳು
ಹೊಲೆಯರ ಮನೆಯ ಅಡಗಿನಿಂದ ಕರಕಷ್ಟ ಕಾಣಾ,
ರಾಮನಾಥ./147
ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದಡೆ
ಅವರರಸಿಯ ಪಾರ್ವತಿಯ ಸತಿಯೆಂದು ಕಾಣಬೇಕು.
ಅಲ್ಲಿ ಅನುಸರಣೆಯ ಕೊಟ್ಟು ಬೆರಸಿ
ಮಾತನಾಡುವ ನರಕಿಗಳನೇನೆಂಬೆ, ರಾಮನಾಥ./148
ಶ್ರೀ ಗುರು ಲಿಂಗ ಜಂಗಮಕ್ಕೆ
ಅರ್ಥ ಪ್ರಾಣಾಭಿಮಾನವ ಕೊಟ್ಟು
ಅಹಂಕಾರವಳಿದಿಜಹಂತು ಪುರಾತನರ ಮನೆಯಲ್ಲಿ
ಎತ್ತಾಗಿ ಹುಟ್ಟಿಸಯ್ಯಾ.
ತೊತ್ತಾಗಿ ಹುಟ್ಟಿಸಯ್ಯಾ,
ಬಾಗಿಲ ಕಾಯ್ದಿಪ್ಪಂತೆ ಸೊಣಗನಾಗಿ ಹುಟ್ಟಿಸಯ್ಯಾ,
ಜಂಗಮಲಿಂಗವೇ ಶಿವನೆಂದು ನಂಬಿ ನಮಸ್ಕರಿಸುವ
ಪುರಾತನರ ಮನೆಯ ಬೇಲಿಯಾಗಿ ಹುಟ್ಟಿಸಯ್ಯಾ.ರಾಮನಾಥ./149
ಸಣ್ಣ ನನೆಯೊಳಗಣ ಪರಿಮಳವ
ಹೊರಸೂಸಿ ಇದಿರಿಂಗೆ ಅರುಹಿಸಬಲ್ಲುದೆ ವಾಯು?
ಕೊಡಗೂಸಿನೊಳಗಣ ಮೊಲೆ ಮುಡಿಯ
ಹಡೆದ ತಾಯಿ-ತಂದೆಗಳೆಂದಡೆ
ಕಾಣಿಸಿಕೊಡಬಲ್ಲರೆ ಕಾಬವರ ಕಣ್ಣಿಗೆ?
ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು ಕಾಣಾ!ರಾಮನಾಥ./150
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ./151
ಸತಿಯರ ಸಂಗವನು ಅತಿಶಯ ಗ್ರಾಸವನು
ಪೃಥ್ವಿಗೀಶ್ವರನ ಪೂಜೆಯನು
ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ!/152
ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ,
ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ,
ಹರಿವ ನದಿ ಎತ್ತಣಾ ತೀರ್ಥ! ರಾಮನಾಥ./153
ಸರ್ಪನೂ ಕೂರ್ಮನೂ ದಿಕ್ಕರಿಗೆಳೆಂಟೂ
ಭೂಮಿಯ ಹೊತ್ತಿರ್ದಪರೆಂದು
ಅನಿಶಾ ಹೊತ್ತಿಪ್ಪವರಿಗೆ ಅತ್ತಲಾಧಾರ ಇತ್ತಲಾಧಾರ.
ಉತ್ತರಗುಡುವವರಿಗೆ ಇಕ್ಕುವೆ ಮುಂಡಿಗೆಯ.
ಎತ್ತುವರುಳ್ಳಡೆ ತೋರಿರೈ, ರಾಮನಾಥ./154
ಸರ್ವಜ್ಞಾನಿಗಳಾಗಿ ಅಚ್ಚುಗ ಬಡುವಡೆ,
ಹಬ್ಬಿದ ಪಾಪದ ಫಲ ಉಂಬಡೆ,
ಒಬ್ಬಳ್ಳವನೆ ಬಿತ್ತಿ ಆ ಒಬ್ಬಳ್ಳವನೆ ಬೆಳೆವಡೆ,
ಕಬ್ಬುನ ಹುಳಿವಡೆ ಇನ್ನೇವೆ, ರಾಮನಾಥ./155
ಸಾಗರದೊಳಗಣ ಕಿಚ್ಚಿನ ಸಾಕಾರದಂತೆ,
ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ,
ಮನವ ಮರೆಯ ಮಾತು
ನೆನಹಿನಲ್ಲಿ ಅರಿದು, ನಾಲಗೆಯ ನುಡಿವಾಗಲಲ್ಲದೆ
ಕಾಣಬಾರದು, ಕೇಳಬಾರದು
ಒಂದಂಗದೊಳಗಡಗಿದ ನೂರೊಂದರ ಪರಿ,ರಾಮನಾಥ./156
ಸಾಸಿವೆಯಷ್ಟು ಭಕ್ತಿಯಳ್ಳನ್ನಕ್ಕ
ವೇಶಿಯ ಮುಟ್ಟಿದಡೆ
ಹೊಲೆಯರ ಮನೆಯ ಮುರುಹ ಹೊರಗಿರಿಸಿದಡೆ
ಹಂದಿ ಬಂದು ಮೂಸಿ ಮೇದಂತೆ ಕಾಣಾ! ರಾಮನಾಥ./157
ಸೊಡರು ಕೆಟ್ಟಡೆ ದೃಷ್ಟಿಯಡಗಿಪ್ಪ ಭೇದವನು
ಒಡಲು ಕೆಟ್ಟಡೆ ಜೀವವಾವೆಡೆಯಲಡಗೂದು?
ಈ ಮರೆಯೆಡೆಯಣ ಭೇದವ ಭೇದಿಸಬಲ್ಲಡೆ
ಪೊಡವಿಗೆ ಗುರುವಪ್ಪನೆಂದು
ಮುಡಿಗೆಯನಿಕ್ಕಿದೆ ಪರಸಮಯಕ್ಕೆಂದು, ರಾಮನಾಥ./158
ಸ್ವಸ್ತಿಕಾಸನದಲ್ಲಿದ್ದು ಅತ್ತಿತ್ತ ಚಲಿಸದೆ
ನೆಟ್ಟೆಲುವ ನೆಟ್ಟನೆ ಮಾಡಿ,
ಅಧೋವಾಯುವನೂಧ್ರ್ವಮುಖಕ್ಕೆ ತಂದು,
ಕಂಠ ಸಂಕೋಚದಿಂದ ಊಧ್ರ್ವವಾಯುವ ನಿಲ್ಲೆಂದು ನಿಲಿಸಿ,
ಮನವ ತೊಡರಿಸಿ,
ಉನ್ಮನಿಯ ಸ್ಥಾನದಲ್ಲಿ ಬಂಧವನವಂ ಮಾಡಿ,
ಅಂತಬರ್ಾಹ್ಯ ವ್ಯಾಪಾರವಳಿದು ನಿಂದುದೆ ಯೋಗ,ರಾಮನಾಥ./159
ಹಂದಿ ಶ್ರೀಗಂಧವ ಹೂಸಿದಡೇನು?
ಗಂಧರಾಜನಾಗಬಲ್ಲುದೆ?
ನವಿಲು ನಲಿಯಿತ್ತೆಂದಡೆ
ಕಾಕೋಳಿ ಪುಕ್ಕವ ತರಕೊಂಡಂತೆ
ಕರ್ಮಿಗಳ ಭಕ್ತಿ!
ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು
ತೆರನನರಿದು ಮರವೆಯ ಕಳದು
ಮಾತಿನಂತೆ ನೀತಿಯುಳ್ಳಡೆ
ಅವರ ಅಜಾತರೆಂಬೆ ಕಾಣಾ! ರಾಮನಾಥ./160
ಹಂದಿ ಶ್ರೀಗಂಧವನೆಂದೂ ಒಲ್ಲದು.
ಕುಂದದೆ ಹರಿವುದು ಅಮೇಧ್ಯಕ್ಕೆ.
ಶಿವಭಕ್ತನಾಗಿರ್ದು ಹಿಂದ ಬೆರಸಿದಡೆ
ಆ ಹಂದಿಗಿಂದವು ಕರಕಷ್ಟ ಕಾಣಾ! ರಾಮನಾಥ./161
ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಮಿಸುನಿಯ ಚಿನ್ನದಂತೆ.
ಅರೆದು ನೋಡುವ ಚಂದನದಂತೆ.
ಅರಿದು ನೋಡುವ ಕಬ್ಬಿನ ಕೋಲಿನಂತೆ.
ಬೆದರದೆ ಬೆಚ್ಚದೆ ಇರ್ದಡೆ
ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥನು./162
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ.
ಇರುಳೆಲ್ಲಾ ನಡೆದನಾ ಸುಂಕಕಂಜಿ.
ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು!
ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ./163
ಹಸಿವಿನಲ್ಲಿ ವಿಷಯದಲ್ಲಿ ಭವಿಯ ಬೆರಸಿದೆನಾದಡೆ
ಅವ ವಿಷಮಾಕ್ಷ! ನಿಮಗೆ ದೂರ.
ದಶ ಶತಕೋಟಿ ವರುಷ ನರಕದೊಳಗಿಹ ಕಾಣಾ!ರಾಮನಾಥ./164
ಹಸಿವಿಲ್ಲದ ಬೊಂಬೆಗೆ ತೃಷೆಯಿಲ್ಲದ ನೀರೆರೆದು
ಮಸಕವಿಲ್ಲದ ಮಾತ ಮನದಲ್ಲಿ ಹೇಳಿ
ಹೆಸರಿಲ್ಲದೆ ಕರೆದಡೆ ಓ! ಎಂದವ ನೀನೊ ನಾನೋ!ರಾಮನಾಥ./165
ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ
ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ.
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ! ರಾಮನಾಥ./166
ಹಸ್ತಾಬ್ಜ ಮಥನದಿಂದೊತ್ತಿ ಭಸ್ಮವ ಮಾಡಿ
ಮತ್ತೆ ಪಂಚಾಕ್ಷರಿಯ ಜಪಾವಳಿಯ
ಚಿತ್ತ ಶ್ರೊತ್ರದೊಳು ಮತ್ತೆ ಧಾರೆಯನೆರೆಯೆ
ಸತ್ಯವದು ನಿನ್ನಂತೆ, ರಾಮನಾಥ./167
ಹಾಸೇಕೆ ಹೊರಸೇಕೆ? ಲೇಸೇಕೆ ಹೊಲ್ಲೆಹವೇಕೆ?
ನಿಮ್ಮ ಸಾತ್ವಿಕರಿದಿರಲ್ಲಿ ನಾನೇಕೆ?
ಸರಿಹೊರಸು ನಿಮ್ಮ ಸರಿಪಂತಿಯೆಂಬ ಹೇಸಿಕೆಯುಂಟೆ?ರಾಮನಾಥ./168
ಹಿರಿದಪ್ಪ (ಆ) ಹಾರವ ಕೊಂಡು
ಸ್ವರವು ಬಿಂದುವಿನಿಚ್ಛೆಯಲ್ಲಿ ಹರಿದಾಡುವವರು ಯೋಗಿಗಳೆ?
ಅಲ್ಲಲ್ಲ ನಿಲ್ಲು!
ಸ್ವರವು ಸುಸ್ವರವಾಗಿ
ಬಿಂದು ತರಹರವಾಗಿರಬಲ್ಲಾತನೆ ಯೋಗಿ ಕಾಣಾ!ರಾಮನಾಥ./169
ಹೂವಿನೊಳಗಣ ಕಂಪ ಹೊರಸೊಸಿ ಸುಳಿವ ಅನಿಲನಂತೆ
ಅಮೃತದೊಳಗಣ ರುಚಿಯ ನಾಲಿಗೆಯ ತುದಿಯಲ್ಲಿ
ಅರಿವನ ಚೇತನದಂತೆ
ನಿಲ್ಲವಿಲ್ಲದ ರೂಪ ಕಳೆಯಲ್ಲಿ ವೇದಿಸುವವನ ಪರಿ!ರಾಮನಾಥ./170
ಹೆಂಬೇಡಿಗೆ ಹಿಡಿಯಬಹುದೆ ಹೇಳಿಗೆಯೊಳಗಣ ಹಾವ?
ತೊರೆಯಬಹುದೆ ಹೊನ್ನು ಹೆಣ್ಣು ಮಣ್ಣ
ನಿನ್ನನರಿಯದ ನರಗುರಿಗಳಿಗೆ! ರಾಮನಾಥ./171
ಹೆಣ್ಣ ಕಂಡು ಹೆಚ್ಚಿ ಹೆಕ್ಕಳಬಡುವಂತೆ
ಕಣ್ಣಿಟ್ಟು ನೋಡಿರೋ ಶಿವಲಿಂಗದೇವನ
ಕರಣದಿಚ್ಛೆಗೆ ಹರಿದು, ನರಕದಲ್ಲಿ ನೆರದು
ಬರುದೊರೆ ಹೋಗದೆ ಮರೆಯದೆ ಪೂಜಿಸಿ,
ನಮ್ಮ ರಾಮನಾಥನ./172
ಹೇಳಬಲ್ಲಡೆ ಬೋಳು ಕೇಳಬಲ್ಲಡೆ ಬೋಳು
ಹೇಳಲು ಕೇಳಲು ಅರಿಯದಿದ್ದಡೆ
ಇವೆಲ್ಲ ಜಾಳು ಬೋಳು ಕಾಣಾ! ರಾಮನಾಥ./173
ಹೇಳಿತ್ತ ಕೇಳುವನ ಕೀಳಿನೊಳಗಿರೆ ಲೇಸು!
ಹೇಳಿತ್ತ ಕೇಳದ ಕಡುಮೂರ್ಖನ
ಕೋಣೆಯಲ್ಲಿರಲಾಗದು! ರಾಮನಾಥ./174
ಹೊಲಬನರಿಯದ ಗುರು
ಸುಲಭನಲ್ಲದ ಶಿಷ್ಯ
ಕೆಲಬಲನ ನೋಡದುಪದೇಶ
ಅಂಧಕನ ಲಾಭ ಹೊಕ್ಕಂತೆ ಕಾಣಾ! ರಾಮನಾಥ./175
ಹೊಲೆಯರ ಬಾವಿಯಲೊಂದು ಎಲುನಟ್ಟಿದ್ದಡೆ
ಹೊಲೆಯೆಂಬುದು ಲೋಕವೆಲ್ಲ.
ಹಲವೆಲುವಿದ್ಧಬಾಯಿ ಒಲವರವ ನುಡಿದಡೆ
ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ! ರಾಮನಾಥ./176