Categories
ವಚನಗಳು / Vachanagalu

ಜೋದರ ಮಾಯಣ್ಣನ ವಚನಗಳು

886
ಎನ್ನ ಪ್ರಾಣ ಮನ ಬುದ್ಧಿ ಚಿತ್ತಂಗಳು ನಿಮ್ಮ ತೊತ್ತಿರಯ್ಯಾ.
ಸತ್ವ ರಜ ತಮಂಗಳು ನಿಮ್ಮ ಭೃತ್ಯರಯ್ಯಾ.
ಅಂತಃಕರಣ ಚತುಷ್ಟಯಂಗಳು ನಿಮ್ಮ ಮಂತ್ರಿಗಳಯ್ಯಾ.
ಪಂಚೇಂದ್ರಿಯಂಗಳು ನಿಮ್ಮ ಪಡಿಹಾರರಯ್ಯಾ.
ಅರಿಷಡ್ವರ್ಗಂಗಳು ನಿಮ್ಮ ಲೆಂಕರಯ್ಯಾ.
ಸಪ್ತಧಾತುಗಳು ನಿಮ್ಮ ಬಾಣಸಿಗರಯ್ಯಾ.
ಅಷ್ಟಮದಂಗಳು ನಿಮ್ಮ ಭಂಡಾರಿಗಳಯ್ಯಾ.
ನವರಸಂಗಳು ನಿಮ್ಮ ಭಂಡಾರಿಗಳಯ್ಯಾ.
ದಶವಾಯಗಳು ನಿಮ್ಮ ಛತ್ರ ಚಾಮರ ಸೀಗುರಿಗಳಯ್ಯಾ.
ಷೋಡಶಕಳೆಗಳು ನಿಮ್ಮ ರಾಣಿವಾಸವಯ್ಯಾ.
ಶಂಭು ಸೋಮನಾಥಲಿಂಗ,
ನಿಮಗೆನ್ನ ಕಾಯ ಮುಂತಾಗಿ ಬಾಹತ್ತರ ಡಿಂಗರಿಗರಯ್ಯಾ!

887
ಕಾಮ ಹೊದ್ದಲಮ್ಮದು ಬಲ್ಲಾಳನ ನೆನೆದಡೆ
ಕ್ರೋಧ ಹೊದ್ದಲಮ್ಮದು ಪುರಾತನರ ನೆನೆದಡೆ
ಇವಾವೂ ಹೊದ್ದಲಮ್ಮವು
ಶಂಭು ಸೋಮನಾಥಲಿಂಗ ಶರಣೆಂಬವಂಗೆ!

888
ನಡೆಯಿಂದ ನುಡಿ ಗಡಣಿಸಿತ್ತು ಮನವೆ
ಬೆಡಗು ಬಿನ್ನಾಣವನಾಡದಿರು ಮನವೆ.
ಎನ್ನೊಡೆಯ ಶಂಭು ಸೋಮನಾಥಲಿಂಗ ಭಾಷೆ ಪರಿಪಾಲಕನಾಗಿ
ಹಿಡಿದುದ ಬಿಡೆನೆಂಬ ನುಡಿಗೊರೆಯಾದುದನರಿಯಾ.

889
ಮುನ್ನ ಪರಸತಿ ಪಾರ್ವತಿಯೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ಬಳಿಕ ಎನ್ನ ಶರಣಸತಿಯೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ಇನ್ನು ಸತಿಯರೆಲ್ಲಾ ಗುರುಸತಿಯರೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ನಡೆದುದು ತಪ್ಪದೆ ನುಡಿದುದು ಹುಸಿಯದೆ
ನಡೆಸಿತ್ತು ನುಡಿಸಿತ್ತು ಗುರುವಚನ.
ಅಚ್ಚಿಗವಿಲ್ಲದೆ ಮಚ್ಚಿದ ಮನವನು
ನಿಶ್ಚಿಂತ ಮಾಡಿತ್ತು ಗುರುವಚನ.
ಶಂಭು ಸೋಮನಾಥಲಿಂಗ
ಸಂಗ ಸುಸಂಗವ ಮಾಡಿತ್ತು ಗುರುವಚನ.

890
ಲಿಂಗಭ್ರಮೆ ಲಿಂಗವಿಕಳಗೊಂಡು
ಲಿಂಗ ಜಂಗಮವೆಂಬೆ,
ಜಂಗಮ ಲಿಂಗವೆಂಬೆ,
ಪ್ರಸಾದವ ನೈವೇದ್ಯವೆಂಬೆ,
ಶಂಭು ಸೋಮನಾಥಲಿಂಗಾ,
ನೀವು ರುಚಿಸುವ ಕಾರಣ.