Categories
ವಚನಗಳು / Vachanagalu

ಢಕ್ಕೆಯ ಬೊಮ್ಮಣ್ಣ ವಚನಗಳು

ಅಂಗವುಂಟಾದಲ್ಲಿ ಲಿಂಗವನರಿಯಬೇಕು.
ಲಿಂಗವುಂಟಾದಲ್ಲಿ ಚೇತನ ಭೂತಹಿತವನರಿಯಬೇಕು.
ಆ ಅರಿವು ನೆಲೆಗೊಂಡಲ್ಲಿ ಒಳಗು ಹೊರಗ ವಿಚಾರಸಲಿಲ್ಲ.
ಮಹಾರ್ಣವ ಬಲುಜಲವನಿಂಬಿಟ್ಟುಕೊಂಡಂತೆ.
ಶರಣಸತಿಯಲ್ಲಿ ಲಿಂಗಕುಲದಲ್ಲಿ ಜಂಗಮಪದದಲ್ಲಿ ಗುರುಸ್ಥಲದಲ್ಲಿ
ಕಂಗಳ ಮುಂದೆ ಮಹೇಂದ್ರಜಾಲ ನಿಂದಂತೆ,
ನಿಂದ ನಿಲವೆ ಸದ್ಭಕ್ತನಿರವು;
ಕಾಲಾಂತಕ ಭೀಮೇಶ್ವರಲಿಂಗದ ನಿಜವಾಸದ ಬೆಳಗು./1
ಅಂಗವೆಂಬ ಮೊರದಲ್ಲಿ ವಿಕಾರವೆಂಬ ಕೋಣನನೇರಿ
ತಾಯಿ ಬಂದಳಯ್ಯಾ ಮೂರು ಮುಖವಾಗಿ.
ಮೂರು ಮುಖದವ್ವೆಯ ಬಾಗಿಲಲ್ಲಿ
ಬಾಧೆಬಡುವರೆಲ್ಲರೂ ಹೋದರು ಹೊಲಬುದಪ್ಪಿ
ಕಾಲಾಂತಕ ಭೀಮೇಶ್ವರಲಿಂಗವನರಿಯದೆ./2
ಅಂಗಸ್ಥಲವಾರು ಲಿಂಗಸ್ಥಲ ಮೂರು ಪ್ರಾಣಲಿಂಗಸ್ಥಲ ಎರಡು
ಕೂಡಿ ಏಕಾದಶವಾಯಿತ್ತು.
ದಶಗುಣವೊಂದರಲ್ಲಿ ಅಡಗಿ
ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು./3
ಅಪ್ಪುಮಯವೆಲ್ಲವು ಶಕ್ತಿರೂಪು;
ಅಸ್ಥಿಮಯವೆಲ್ಲವು ವಸ್ತುರೂಪೆಂಬರು.
ಆ ಅಪ್ಪುಮಯದಲ್ಲಿ ಅಸ್ಥಿ ಬಲಿದು ಗಟ್ಟಿಗೊಂಡ ಮತ್ತೆ,
ವಸ್ತುಮಯ ಏತರಿಂದಾಯಿತ್ತು?
ಇದರ ಬಿನ್ನಾಣದ ಬೆಡಗ ಅಹುದೆನಬಾರದು,
ಅಲ್ಲಾಯೆಂದೆನಬಾರದು.
ಉದಕದ ಬಹುವರ್ಣದಂತೆ,
ಮಾರುತನ ಜೀವದಂತೆ,
ಅನಲನ ಕಾಲು ನಾಲಗೆಯಂತೆ,
ಹೆರೆಹಿಂಗದ ಮಾಯೆ ಭಾವಿಸಿದಲ್ಲಿಯೆ ನಿಂದಿತ್ತು.
ಕಾಲಾಂತಕ ಭೀಮೇಶ್ವರಲಿಂಗವೆಂದಲ್ಲಿ ಹೆರೆಹಿಂಗಿತ್ತು ಮಾಯೆ./4
ಅಪ್ಪುವಿನಿಂದ ಸಕಲ ಮಯವೆಲ್ಲವು ಕಲ್ಪಿಸಿ,
ಅಪ್ಪುವಿನಿಂದ ಮಲ ನಿರ್ಮಲವೆಂಬುದಾಯಿತ್ತು.
ವಸ್ತುವಿನಿಂದ ರೂಪು ನಿರೂಪೆಂಬುದಾಯಿತ್ತು.
ಜಲದಿಂದಾದ ಪಂಕವ ಜಲ ತೊಳೆದು ನಿರ್ಮಲವಾದಂತೆ,
ನಿರೂಪು ಸ್ವರೂಪನಾಗಿ ಸ್ವರೂಪು ನಿರೂಪನಾಗಿ ಉಭಯವು ನೀನಾಗಿ,
ನಾ ಕಂಡು ನುಡಿವುದಕ್ಕೆ ಎನಗೊಂದೆಡೆಯಿಲ್ಲ,
ಕಾಲಾಂತಕ ಭೀಮೇಶ್ವರಲಿಂಗವು ನೀನೆಯಾಗಿ./5
ಅರಿವುಳ್ಳವಂಗೆ ಆರನರಿದೆಹೆನೆಂಬುದೆ ಮಾಯೆ.
ಮೂರ ಮರೆದು ಬೇರೊಂದ ಕಂಡೆಹೆನೆಂಬುದೆ ಮಾಯೆ.
ನುಡಿಯ ನುಡಿವವರಲ್ಲಿ ಎಡೆ ಮಾತನಾಡಿ
ಬೇರೊಂದೆಡೆವುಂಟೆಂಬುದೆ ಮಾಯೆ.
ಘಟಮಟವೆಂಬ ಮನೆಯಲ್ಲಿ ಮರವೆಯೆಂಬ ಮಾರಿಯ ಹೊತ್ತು
ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ.
ಡಕ್ಕೆಯ ಡಾವರಕ್ಕೆ ಸಿಕ್ಕಿ ನೊಂದೆನು.
ಇದರಚ್ಚುಗವ ಬಿಡಿಸು,
ಕಾಲಾಂತಕ ಭೀಮೇಶ್ವರಲಿಂಗ./6
ಅರ್ಚಿಸಿ ಪೂಜಿಸುವುದಕ್ಕೆ ಅಂಗವಾಗಿ,
ಮನ ನೆನೆವುದಕ್ಕೆ ಘನತರವಾಗಿ,
ಪೂಜಿಸುವುದಕ್ಕೆ ಪುಣ್ಯಮೂರ್ತಿಯಾಗಿ,
ಭಾವ ನೆನೆವುದಕ್ಕೆ ಭವಗೇಡಿಯಾಗಿ,
ಉಭಯದಂಗವ ತಾಳಿ ನಿಂದ ಕಾಲಾಂತಕ ಭೀಮೇಶ್ವರಲಿಂಗವು ತಾನೆ./7
ಅಲಗಿನ ಮೊನೆ ಆಯದಲ್ಲಿ ಬಿದ್ದ ಮತ್ತೆ
ನೆಲೆಗೊಳ್ಳಬಲ್ಲುದೆ ಪ್ರಾಣ?
ಅರಿದು ಮಾಡುವ ಮಾಟ ಅನುಸರಣೆಯಾದಲ್ಲಿ
ಅಲಗು ಜಾರಿ ಒರೆ ತಾಗಿದಂತೆ.
ಭಕ್ತಿ ಬರುದೊರೆ ಹೋಯಿತು
ಕಾಲಾಂತಕ ಭೀಮೇಶ್ವರಲಿಂಗಕ್ಕೆ ದೂರವಾಯಿತ್ತು./8
ಅಹಂಕಾರವರತು ಗುರುವಾಗಿ,
ಜಗವರತು ಲಿಂಗವಾಗಿ,
ತ್ರಿವಿಧವರತು ಜಂಗಮವಾಗಿ,
ಸಕಲೇಂದ್ರಿಯದ ಲಂಪಟವರತು ಭಕ್ತನಾಗಿ
ಸಂಸಾರವೆಂಬ ಗಡಬಡೆಯಲ್ಲಿ ಸಿಲುಕದೆ,
ಆವ ಸ್ಥಲದಲ್ಲಿ ನಿಂದು ನೋಡಿದಡೂ ಭಾವಶುದ್ಧವಾಗಿ
ಗುರುವಿಂಗೆ ಗುರುವಾಗಿ, ಲಿಂಗಕ್ಕೆ ಲಿಂಗವಾಗಿ
ಜಂಗಮಕ್ಕೆ ಜಂಗಮವಾಗಿ
ಭಕ್ತರ ಯುಕ್ತಿಯ ಮಾರಿಕೊಂಡಿಪ್ಪ ಸದ್ಭಕ್ತ
ಕಾಲಾಂತಕ ಭೀಮೇಶ್ವರಲಿಂಗವು ತಾನೆ./9
ಆತ್ಮನಂಗ ಪೃಥ್ವಿಯಂತಿರ್ಪುದೊ?
ಆತ್ಮನಂಗ ಅಪ್ಪುವಿನಂತಿರ್ಪುದೊ?
ಆತ್ಮನಂಗ ವಾಯುವಿನಂತಿರ್ಪುದೊ?
ಆತ್ಮನಂಗ ಆಕಾಶದಂತಿರ್ಪುದೊ?
ಪಂಚಭೂತಿಕಂಗಳ ಮೀರಿ ಬೇರೊಂದು ನೆಲೆಯಾಗಿರ್ಪುದೊ?
ತತ್ವಮನಿಯೆಂಬಲ್ಲಿ ಪಶುಪತಿ ನೀನಾದೆಯಲ್ಲಾ,
ಕಾಲಾಂತಕ ಭೀಮೇಶ್ವರಲಿಂಗವೆ./10
ಆತ್ಮವುಳ್ಳನ್ನಕ್ಕ ಘಟ ವೈಭವವಾಗಿದ್ದಿತ್ತು.
ವಸ್ತು ಕಳೆ ಉಳ್ಳನ್ನಕ್ಕ ಶಿಲಾಮೂರ್ತಿ ಲಿಂಗ ಕಳೆಯಾಯಿತ್ತು.
ಗಂಧವಿಲ್ಲದಿರೆ ಚಂದನವೆಂಬ ನಾಮವಡಗಿ
ಸ್ಥಾವರವೆಲ್ಲವು ಸರಿಯಾಯಿತ್ತು.
ಕಳೆಯಿಲ್ಲದಿರೆ ಮಾಡಿದ ಗೂಡು ಸರಿ,
ನಿಂದ ಶಿಲೆಯೂ ಸರಿಯಾಯಿತ್ತು.
ವಿಶ್ವಾಸದೆರಕ ಕಳಾಮೂರ್ತಿಯ ಬೆಳಗು ಒಡಗೂಡಲಾಗಿ
ಕಾಲಾಂತಕ ಭೀಮೇಶ್ವರಲಿಂಗವಾಯಿತ್ತು./11
ಆರು ದರುಶನ ಹದಿನೆಂಟು ಜಾತಿವೊಳಗಾದ ಜೀವನಂಗಳಿಗೆ,
ಕುಡಿವ ನೀರು, ಬೇಯಿಸುವ ಬೆಂಕಿ, ಅಡಗುವ ಧರೆ ಒಂದೆನಬಹುದೆ?
ಸುಕ್ಷೇತ್ರ ವಾಸಂಗಳಲ್ಲಿ ಮೌಕ್ತಿಕರತ್ನ ಮಲಯಜ ಹಿಮಜಲ
ಮುಂತಾದ ಅಚೇತನ ಚೇತನ ವಸ್ತು ಕುಂಭಿನಿಯಲ್ಲಿ
ವಿಶೇಷ ವಾಸಂಗಳಲ್ಲಿ ಹುಟ್ಟಿದುದ ಕಂಡುಕೊಂಡು,
ಮತ್ತೆ ಮನೆಮಾರಿ ಒಡೆಯಂಗೆ ಸರಿಯಿಲ್ಲಾ ಎಂದು
ಅಕ್ಕನ ಕೊಂಡುಬಂದು ಡಕ್ಕೆಯ ಬಾರಿಸುತ್ತಿದ್ದೇನೆ,
ಕಾಲಾಂತಕ ಭೀಮೇಶ್ವರಲಿಂಗವಲ್ಲದೆ ಇಲ್ಲಾ ಇಲ್ಲಾಎಂದು./12
ಆವ ಸ್ವಕಾಯದಿಂದಾದಡು ಆಗಲಿ
ಭಾವಶುದ್ಧವಾಗಿ ಮಾಡುವ ಜಂಗಮ ಪೂಜೆ,
ಸೂರ ಹುಲ್ಲು ಚುಳುಕೋದಕ ನೇಮ ಕ್ರೀ ತಪ್ಪದೆ ಮಾಡುವುದೆದೇವಪೂಜೆ.
ಆವ ಪ್ರಸಂಗ ಬಂದಡೆ ಖಂಡಸಿ ನುಡಿವುದೆ ಪಂಡಿತನಿರವು.
ತ್ರಿವಿಧ ಬಂದು ಮುಂದಿರಲಿಕ್ಕೆ
ಅದರಂದವ ನೋಡದಿಪ್ಪುದೆ ನಿಸ್ಸಂಗ ಸುಸಂಗಿಯ ಇರವು.
ಇಂತೀ ವಿಚಾರವನರಿದಲ್ಲಿ ಡಕ್ಕೆಯ ದನಿ ಹೊರಗಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗವು ಒಳಗಾಯಿತ್ತು./13
ಆಶನ ಹಸಿದು ಮನುಷ್ಯರ ನುಂಗುವಾಗ
ಅಸು ಆರಿಗೆಂದು ಪ್ರಮಾಣಿಸಬಹುದೆ?
ಉದಕದೊಳಗೆ ಮುಳುಗುತ್ತ ತಾ ಗತಿಗೆಡುತ್ತ
ಆಸೆ ದೆಸೆಯನರಿಯದೆ ಲಘುವಿನ ಮೇಲೆ
ಸಾಗುತಿರ್ಪ ಸಾಧನೆವಂತರ ಸಾಗಿಸಿ ಬದುಕು;
ಕ್ರೀ ನಿಃಕ್ರೀಯೆಂಬುಭಯವ ಘಟಿಸಿ ಬದುಕು,
ಕಾಲಾಂತಕ ಭೀಮೇಶ್ವರಲಿಂಗ/14
ಇಕ್ಕಿಕ್ಕುವ ಠಾವಿನಲ್ಲಿ ಮಕ್ಕಳಂತೆ ತಳಿಗೆಯ ತೆಗೆಯದೆ,
ಕೊಟ್ಟಹ ಕೊಟ್ಟಹರೆಂದು ಭಟ್ಟರಂತೆ ಅಟ್ಟಳಿಗೊಳಗಾಗದೆ,
ಕೊಂಬತೆರದಲ್ಲಿ ಕೊಂಡು ಭಕ್ತಿಯಿಂದ ಬಂದ ತೆರದಲ್ಲಿ ಅನುಕರಿಸಿ,
ಪ್ರಸಂಗವ ಕಂಡಕಂಡವರಲ್ಲಿ ಕೊಂಡಾಡದೆ,
ಈ ಗುಣ ಹಿಂಗಿ ನಿಂದುದು ಗುರುಚರ ಭಾವ,
ಆತ ತಾನೆ ಕಾಲಾಂತಕ ಭೀಮೇಶ್ವರಲಿಂಗವು./15
ಇಕ್ಷುದಂಡದ ಸಂಪರ್ಕದಲ್ಲಿ ದುತ್ತೂರ ಪಾಮರ ತರು ಬೆಳೆಯಲಿಕ್ಕೆ
ಆ ಇಕ್ಷುದಂಡದ ಸಾರವ ಸಾಗಿಸಬಲ್ಲುದೆ?
ಮದೋನ್ಮತ್ತನಲ್ಲಿ ಶ್ರುತಿ ಸ್ಮತಿತತ್ವ
ಸರ್ವಸಾರಯುಕ್ತಿಯ ಲೇಖವಿದ್ಧಡೇನು?
ಕ್ರೀ ಶುದ್ಧತೆಯಿಲ್ಲದವನ ವಾಚಾಯುಕ್ತಿ
ಮೃತ್ತಿಕೆಯ ತೆಪ್ಪವ ಮಚ್ಚಿ ಕೆಟ್ಟವನಿರವಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗವನರಿಯದವನ ಯುಕ್ತಿ./16
ಈಶ್ವರನು ಅಲಂಕೃತರೂಪಾಗಿ ಜಗವ ತಾಳಿ ಬಂದಲ್ಲಿ
ಮಾಯೆಯೆಂಬ ಶಕ್ತಿ ಜ್ಯೋತಿ ಕಾಣದ ಮರೆಯಲ್ಲಿ
ತಮವಡಗಿಪ್ಪ ಭೇದದಂತೆ.
ಚಿತ್ತಶುದ್ಧವಿಲ್ಲದವರ ಕರ್ತೃ ಭೃತ್ಯ ಸಂಬಂಧ ಉಭಯಕ್ಕೂಸರಿ.
ಅರಿದು ಮಾಡುವಲ್ಲಿ ಅವನ ಅನುವನರಿದು ಮಾಡಿಸಿಕೊಂಬಲ್ಲಿ
ಲಾಗಿನ ಪಶುವಿನಂತೆ ಉಭಯಗುಣ ಭೇದ.
ಉಭಯಸ್ಥಲ ನಿರತ ಕಾಲಾಂತಕ ಭೀಮೇಶ್ವರಲಿಂಗವು ತಾನೆ./17
ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ.
ಉಕ್ಕುದನಿಕ್ಕಿದಲ್ಲಿ ಅವನ ಅರ್ಥಪ್ರಾಣ ಅಭಿಮಾನಕ್ಕೆ ತಪ್ಪುವನಾದಡೆ
ಕರ್ತೃತ್ವ ಮೊದಲೆ ಕೆಟ್ಟಿತ್ತು,
ಜಂಬುಕಫಲದ ನೇಮವ ಹಿಡಿದಂತಾಯಿತ್ತು,
ಅದರಂಗವ ಕಂಡು ನಿಂದಿಸಿದ ಭಕ್ತಂಗೆ.
ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ.
ನೆರೆ ನಂಬು ಏನ ಹಿಡಿದಲ್ಲಿ,
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ./18
ಉದಕವ ಬೆರೆಸಿದ ಕುಂಪಟಿಯಂತೆ,
ಬಹುಗಂಧವ ಕೂಡಿದ ವಾಯುವಿನಂತೆ,
ಗುಣ ದೋಷಂಗಳ ವಿಚಾರಿಸದಿಪ್ಪುದು ಸದ್ಭಕ್ತನಿರವು,
ಮಾಡುವ ಭೇದ ಸ್ಥಲ; ಸರಮೃತ್ತಿಕೆಯಲ್ಲಿ ಒಸರಲಿಲ್ಲದೆ ನಿಂದಂತೆ;
ಈಶ್ವರನ ಶರಣರಿಗೆ ಭಕ್ತಿಯ ಮಾಡುವ ದಾಸೋಹದ ಸದ್ಭಕ್ತನ ಇರವು.
ಅದು ಸುಕ್ಷೇತ್ರವಾಸ, ಕಾಲಾಂತಕ ಭೀಮೇಶ್ವರಲಿಂಗನತೆರಪಿಲ್ಲದ ಸುಖವಾಸ./19
ಉಪ್ಪಿನ ನೀರಿಂಗೆ ಪುನನಾಮ ಬಪ್ಪುದಲ್ಲದೆ
ಮುತ್ತಿನ ನೀರಿಂಗೆ ಪುನನಾಮವುಂಟೆ?
ಪೂರ್ವವನಳಿದು ಪುನರ್ಜಾತನಾದಲ್ಲಿ ಮತ್ತೆ ಲೌಕಿಕವ ಬೆರಸಬಹುದೆ?
ರುಂದಿಯ ಫಳದಂತೆ ಸಂದೇಹ ನಾಮವಾಯಿತ್ತು.
ಭಕ್ತಜಂಗಮವಾಗಿ ಮತ್ರ್ಯರು ಎನ್ನವರೆಂದಡೆ
ಕರ್ತೃತ್ವ ಭಕ್ತಿಯಿತ್ತಲೆ ಉಳಿಯಿತ್ತು.
ಕಾಲಾಂತಕ ಭೀಮೇಶ್ವರಲಿಂಗನು ಅವರಿಗೆ
ಕತ್ತಲೆಯಾಗಿರ್ಪನು./20
ಉರಿಯ ಶ್ರೇಷ್ಠಕ್ಕೆ ವಾಯುವೆ ಪ್ರಾಣ,
ಉರಿಯ ನಂದಿಸುವುದಕ್ಕೆ ವಾಯುವೆ ಯಮ.
ಉಭಯವನರಿದು ಮರೆವುದಕ್ಕೆ ಆತ್ಮನೆ ಬೀಜ.
ಆತ್ಮನ ಆತ್ಮನನರಿವುದಕ್ಕೆ ಕಾಲಾಂತಕ ಭೀಮೇಶ್ವರ ಲಿಂಗವೆಪ್ರಾಣ./21
ಎಂದಿದ್ದು ಶರೀರ ಹುಸಿಯೆಂಬುದನರಿದ ಮತ್ತೆ,
ತ್ರಿವಿಧಕ್ಕೆ ಕೊಂಡಾಡಲೇತಕ್ಕೆ?
ಇದಿರಿಟ್ಟು ಮಾಡುವ ಮಾಟದಲ್ಲಿ
ಶ್ರುತ ದೃಷ್ಟ ಅನುಮಾನದಲ್ಲಿ ಅರಿದ ಮತ್ತೆ
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನವ ಕೊಟ್ಟು
ನಿರ್ಮುಕ್ತನಾಗಿರ್ಪ ಭಕ್ತನೆ ಕಾಲಾಂತಕ ಭೀಮೇಶ್ವರಲಿಂಗವುತಾನೆ./22
ಎನ್ನ ಮನವೆ ಬಸವಣ್ಣನು.
ಎನ್ನ ಬುದ್ಧಿಯೆ ಚನ್ನಬಸವಣ್ಣನು.
ಎನ್ನ ಚಿತ್ತವೆ ಸಿದ್ಧರಾಮಯ್ಯನು.
ಎನ್ನ ಅಹಂಕಾರವೆ ಮಡಿವಾಳಯ್ಯನು.
ಎನ್ನ ಕ್ಷಮೆಯೆ ನಿಜಗುಣದೇವರು.
ಎನ್ನ ದಮೆಯೆ ಘಟ್ಟಿವಾಳಯ್ಯನು.
ಎನ್ನ ಶಾಂತಿಯೆ ಅಜಗಣ್ಣನು.
ಎನ್ನ ಸೈರಣೆಯೆ ಪ್ರಭುದೇವರು.
ಎನ್ನ ಹರುಷವೆ ಏಳುನೂರೆಪ್ಪತ್ತು ಅಮರಗಣಂಗಳು.
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ,
ಕಾಲಾಂತಕ ಭೀಮೇಶ್ವರಲಿಂಗವೆ./23
ಕವಿಯ ಹುಗತೆ, ಗಮಕಿಯ ಸಂಚ,
ವಾದಿಯ ಚೊಕ್ಕೆಹ, ವಾಗ್ಮಿಯ ಚೇತನ,
ಇಂತೀ ಚತುಷ್ಟಯದಲ್ಲಿ ಯುಕ್ತಿವಂತನಾದಡೇನು?
ಭಕ್ತಿಯನರಿಯಬೇಕು, ಸತ್ಯದಲ್ಲಿ ನಡೆಯಬೇಕು,
ವಿರಕ್ತಿಯಲ್ಲಿ ವಿಚಾರಿಸಿ ನಿಲ್ಲಬೇಕು.
ಈ ಗುಣ ಡಕ್ಕೆಯ ಬೊಮ್ಮನ ಭಕ್ತಿ
ಕಾಲಾಂತಕ ಭೀಮೇಶ್ವರಲಿಂಗವನರಿವವನ ಸದ್ಭಕ್ತಿಯುಕ್ತಿ./24
ಕಾಯಕ್ಕೆ ಲಿಂಗವ ಸಾಹಿತ್ಯವ ಮಾಡುವಾಗ
ಕರಣಂಗಳು ಮುಂಚು, ಕಾಯ ಹಿಂಚಾಗಿರಬೇಕು.
ಆತ್ಮನನರಿವಾಗ ಕುರುಹಿನ ಭಾವವೆಲ್ಲಿದ್ದಿತ್ತು?
ಅಂಗನಿರಂಗವ ಕೂಡಿ ಸಂಘಟಿಸುವಾಗ
ಚಂದನ ಗಂಧದಂತೆ ಕ್ರೀ ಜ್ಞಾನ ಭೇದ.
ಅದರಂಗವ ತಿಳಿದಲ್ಲಿ ಕಾಲಾಂತಕ ಭೀಮೇಶ್ವರ
ಲಿಂಗವನರಿದುದು./25
ಕಾಯನೆಂಬ ಡಕ್ಕೆ, ಕ್ರೀ ಭಾವವೆಂಬ ಹೊದಕೆ.
ಅರಿವೆಂಬ ನೇಣಿನಲ್ಲಿ ಸ್ಥೂಲಸೂಕ್ಷ ್ಮವೆಂಬ ಹೊಡೆಚೆಂಡು ಕಟ್ಟಿ
ಹೊಯ್ವುತ್ತಿದೆ ಡಕ್ಕೆ, ಕಾಲಾಂತಕಭೀಮೇಶ್ವರಲಿಂಗವಲ್ಲದಿಲ್ಲಾಎಂದು./26
ಕಾಯವೆಂಬ ಡಕ್ಕೆಯ ಮೇಲೆ
ಜೀವವೆಂಬ ಹೊಡೆಚೆಂಡು ಬೀಳೆ
ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ.
ಇಂತೀ ಉಲುಹಿನ ಭೇದದಲ್ಲಿ
ಹೊಲಬುದ್ಧಪ್ಪದೆ ಗೆಲಬೇಕು ಕಾಲವೆಂಬ ಮಾರಿಯ,
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ./27
ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.
ಕಾಲವೆಂಬ ಕಾಯವನರಿದು,
ಮನವೆಂಬ ಮಾರಿಯ ಭವಗೆಡಿಸಿ
ನಾ ತಂದೆ ಜ್ಞಾನಶಕ್ತಿಯ.
ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆ
ಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆಹಿಂಗದಿಪ್ಪನು./28
ಕಾಲವಂಚಕನಾಗಿ ಗುರುವಿಂಗೆ ಮಾಡಲಿಲ್ಲ.
ಕರ್ಮವಂಚಕನಾಗಿ ಲಿಂಗಕ್ಕೆ ಮಾಡಿಲಿಲ್ಲ.
ಧನವಂಚಕನಾಗಿ ಜಂಗಮಕ್ಕೆ ಮಾಡಲಿಲ್ಲ. ತ್ರಿವಿಧ ನಿರತಂಗೆ,
ಮನ ವಚನ ಕಾಯ ತ್ರಿಕರಣದಲ್ಲಿ ಶುದ್ಧವಾಗಿರ್ಪ ಸದ್ಭಕ್ತ
ಕಾಲಾಂತಕ ಭೀಮೇಶ್ವರಲಿಂಗವು ತಾನೆ./29
ಕೈ ಕೈದ ಹಿಡಿದು ಕಾದುವಾಗ,
ಕೈದೊ ಕೈಯೊ ಮನವೊ?
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ,
ಅಂಗವೊ ಲಿಂಗವೊ ಆತ್ಮನೊ?
ಈ ಮೂರಂಗವನರಿದಲ್ಲಿ ಕಾಲಾಂತ ಭೀಮೇಶ್ವರಲಿಂಗವನರಿದುದು./30
ಕ್ರಿಯಾಶಕ್ತಿ ಬ್ರಹ್ಮಂಗೆ ಹಿಂಗಿ,
ಇಚ್ಛಾಶಕ್ತಿ ವಿಷ್ಣುವಿಂಗೆ ಹಿಂಗಿ,
ಜ್ಞಾನಶಕ್ತಿ ರುದ್ರಂಗೆ ಹಿಂಗಿ,
ಉತ್ಪತ್ತಿ ಸ್ಥಿತಿ ಲಯವೆಂಬುದಕ್ಕೆ
ಮಾಯಾದೇವಿವೊಂದೆ ಗೊತ್ತಾಗಿ
ಬಲ್ಲ ಬಲ್ಲವರೆಲ್ಲರ ತನ್ನಲ್ಲಿಯೇ ಅಡಗಿಸುತ್ತ
ಅರಿದವರಿಗೆ ದೇವಿಯಾಗಿ,
ಮರೆದವರಿಗೆ ಮಾರಿಯಾಗಿ,
ಮೊರದೊಳಗೆ ಕೊಂಡು ಬಂದಿದ್ದೇನೆ.
ಮೊರಕ್ಕೆ ಮೂರು ಗೋಟು,
ತಾಯಿಗೆ ಅಯಿದು ಬಾಯಿ,
ಬೇಡುವಾತನ ಬಾಯಿವೊಂದೆಯಾಯಿತ್ತು.
ಡಕ್ಕೆಯ ದನಿಯ ಕೇಳಿ ಬೆಚ್ಚುವುದಕ್ಕೆ ಮುನ್ನವೆ
ಕಾಲಾಂತಕ ಭೀಮೇಶ್ವರಲಿಂಗವನರಿಯಿರಣ್ಣಾ./31
ಜಂಗಮವೆಂದು ಭಕ್ತನಾಶ್ರಯಕ್ಕೆ ಹೋದಲ್ಲಿ
ಉಪಾಧಿಕನಂಗೀಕರಿಸಿ ಮಜ್ಜನ ಭೋಜನ ಪರಿಮಳಂಗಳಲ್ಲಿ ಕೀಳಾಗಿ
ಪೂಜಿಸುವಲ್ಲಿ ಮೇಲಾದ ಪರಿಯಿನ್ನೆಂತಯ್ಯಾ?
ಆತ ಮಾಡುವುದಕ್ಕೆ ಮುನ್ನವೆ ಬೇಡದಿಪ್ಪುದೆ ವಸ್ತುಗುಣ.
ಆತ ಕಾಡುವುದಕ್ಕೆ ಮುನ್ನವೆ ಮಾಡುತ್ತಿಪ್ಪುದೆ ಭಕ್ತಿಗುಣ.
ಉಭಯದಾರೈಕೆಯನರಿದು ಆರೈದಾಗಲೆ ಉಭಯಸ್ಥಲ ನಿರುತ.
ಆ ಗುಣವಾದಲ್ಲಿ ಉಭಯ ಏಕೀಕರವಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ./32
ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ,
ಆ ಜಲ ನಿಲೆ ಮಣ್ಣು ಮುನ್ನಿನ ಅಂಗವ ಬೆರಸಿದಂತೆ.
ಆ ಕುರುಹಿಂಗೆ ಅರಿವೆ ಆಶ್ರಯವಾಗಿ,
ಆ ಅರಿವಿಂಗೆ ಕರುಹಿನ ವಾಸ ಅವಗವಿಸಿದ ಮತ್ತೆ,
ಬೇರೊಂದೆಡೆಯಿಲ್ಲ, ಕಾಲಾಂತಕ ಭೀಮೇಶ್ವರಲಿಂಗವುತಾನೆ./33
ಜಾಗ್ರಾವಸ್ಥೆಯಲ್ಲಿ ಸುಳಿಹುದೋರಿದ ಶಕ್ತಿ
ಸ್ವಪ್ನಾವಸ್ಥೆಗೆ ತಲೆದೋರಿದ ಮತ್ತೆ
ಬೇರೊಂದುಭಯಕ್ಕೆ ಕಟ್ಟುಂಟೆ?
ಆಸೆಯೆಂಬುದೆ ಮಾರಿ, ನಿರಾಸೆಯೆಂಬುದೆ ದೇವಪದ.
ದೇವನ ನೆನೆದು ಕಾಯಕವ ಮಾಡಿದಲ್ಲಿ ಆವ ಪದಕ್ಕೂ ಸುಖ,
ಕಾಲಾಂತಕ ಭೀಮೇಶ್ವರಲಿಂಗವ ಕುರಿತು ಮಾಡಿದಲ್ಲಿ./34
ತನಗೆ ಇದಿರಿಟ್ಟು ಕಾಬುದೆಲ್ಲವು ತನಗೆ ಅನ್ಯದೈವ.
ತಾ ಕುರುಹಳಿದು ತನಗೆ ಅನ್ಯವೆಂಬುದೊಂದಿಲ್ಲವಾಗಿ
ಅದು ತನಗೆ ಭಿನ್ನವಿಲ್ಲದ ದೈವ.
ಅಹಂಕಾರವೆಂಬ ಆತ್ಮಘಟದ ಮಾರಿಯ ಹೊತ್ತು
ಉಲುವೆಂಬ ಡಕ್ಕೆಯ ಹಿಡಿದು
ಭವಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ,
ಡಕ್ಕೆಯ ದನಿಯ ಬಿಡಿಸು,
ಕಾಲಾಂತಕ ಭೀಮೇಶ್ವರಲಿಂಗ./35
ತನುವೆಂಬ ಮೊರದಲ್ಲಿ ಮಾಯಾಗುಣವೆಂಬ ಮಾರಿಯ ಹಿಡಿದು
ರಾಜಸ ತಾಮಸವೆಂಬ ಬಾಳು ಬಟ್ಟಲು ಕೈಯಲ್ಲಿ.
ಪ್ರಳಯ ಸಂಹಾರವೆಂಬ ಬಳೆಯ ಕೈಯಲಿಕ್ಕಿ,
ಅಂಗದ ಮನೆಯ ಬಾಗಿಲಲ್ಲಿ ಕೊಂಡು ಬಂದಿದೇನೆ.
ಬಲ್ಲವರಿಕ್ಕಿ, ಅರಿಯದವರೆಲ್ಲರೂ ಸುಮ್ಮನಿರಿ.
ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ಸಿ,
ನಿಜತತ್ವವನರಿ, ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ./36
ತನುವೆಂಬಂಗವ ತಾಳಿ ಬಂದಾಗವೆ
ಮನವೆಂಬ ಮಾರಿ ಒಡಲ ಹೊಕ್ಕಿತ್ತು.
ಉಭಯದೊಡಲ ಕೊಂಡು ಬಂದೆ.
ಬಲದ ಕೈಯಲ್ಲಿ ಜಗ ಪೂಜಿಸುವ ಶಕ್ತಿ.
ಎನ್ನ ಮನದ ಕೊನೆಯಲ್ಲಿ
ಕಾಲಾಂತಕ ಭೀಮೇಶ್ವರಲಿಂಗವಲ್ಲದಿಲ್ಲಾ ಎಂಬ ಭಾಷೆ./37
ತನ್ನ ಪರಿಸ್ಪಂದವ ಸಾಕುವುದಕ್ಕೆ
ಗುರು ಲಿಂಗಜಂಗಮಕ್ಕೆಂದು ಬೇಡಿ ಒಡಲ ಹೊರೆವ ಪರಿ.
ಇನ್ನೆಂತುಂಟಯ್ಯಾ?
ಗುರುವಿಂಗೆಂದಲ್ಲಿ ಅಂಗದಾಸೆಯಿಲ್ಲದೆ,
ಲಿಂಗಕ್ಕೆಂದಲ್ಲಿ ಸಂದು ಸಂಶಯವಿಲ್ಲದೆ,
ಜಂಗಮಕ್ಕೆಂದಲ್ಲಿ ಇಂದು ನಾಳೆಯೆಂಬ
ಸಂದೇಹವ ಹರಿದು ಮಾಡುವನ ಇರವೆ
ಷಡುಸ್ಥಲ ಬ್ರಹ್ಮಮೂರ್ತಿ.
ಆತ ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ,
ಆತ ಕಾಲಾಂತಕಲಿಂಗವು ತಾನೆ./38
ತರುವಾಗ ಹುಟ್ಟಿ ವಾಯುವಿಗೆ ಎಡೆಗೊಡದಿರಬಹುದೆ?
ತನುವೆಂಬುದ ಹೊತ್ತು ಲಿಂಗವ ಪೂಜಿಸದಿರಬಹುದೆ?
ಅಂಗವಿಲ್ಲದ ಸಂಗವಂಟೆ? ಸಂಗವಿಲ್ಲದ ಸುಖವುಂಟೆ?
ಸುಖವಿಲ್ಲದ ಕಳೆ ರಸವುಂಟೆ?
ಇಂತೀ ಅಂಗದಲ್ಲಿದ್ದಂತೆ ಲಿಂಗವನರಿದು,
ಲಿಂಗದಲ್ಲಿದಂತೆ ಸಕಲ ಪ್ರಪಂಚಿಕವ ಮುರಿದು ನಿಂದಲ್ಲಿ
ಕಾಲಾಂತಕ ಭೀಮೇಶ್ವರಲಿಂಗವು ತಾನೆ./39
ತಾತಂದ ತನುವೆಲ್ಲವು ದೋಷ,
ಆ ತನುವಿನಲ್ಲಿ ಬಂದ ಮನವೆಲ್ಲವು ಪ್ರಕೃತಿ.
ಅದಕ್ಕೆ ಇದಿರಿಟ್ಟು ತೋರಿದ ತ್ರಿವಿಧ ಮೂರ್ತಿಯ
ಪರುಷ ಪಾಷಾಣವನಿದಿರಿಟ್ಟಂತೆ
ತಮ ಜ್ಯೋತಿಯನಿದಿರಿಟ್ಟಂತೆ
ಅರಿವು ಮರವೆಯನರಿವುದಕ್ಕೆ ಇದಿರಿಟ್ಟುಕುರುಹ ಕೊಂಡು ಬಂದೆ.
ಮರೆಯದಿರಕ್ಕನೆ, ಮರವೆಯಲ್ಲಿ ಡಕ್ಕೆ ಧಿಕ್ಕರಿಸುತ್ತದೆ.
ಕಾಲಾಂತಕ ಭೀಮೇಶ್ವರಲಿಂಗವನರಿಯಹೇಳಿ./40
ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ.
ಅದು ಜಗದ ಹುದುಗು.
ತಾನರಿದು ಅಲ್ಲ ಅಹುದೆಂದು ಎಲ್ಲರಿಗೆ ಹೇಳಿ
ಪರಧನದಲ್ಲಿ ಪರಸತಿಯಲ್ಲಿ ಅನ್ಯರ ನಿಂದೆಯಲ್ಲಿ ವ್ರತಾಚಾರಭಂಗಿತರಲ್ಲಿ
ಇದನರಿದು ಅನುಸರಣೆಯ ಮಾಡಿದಡೆ
ಕುಂಭೀನರಕದಲ್ಲಿ ಹಿಂಗದಿರ್ಪನು.
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು./41
ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ
ಬೆಂಬಳಿಯಲ್ಲಿ ಹೋಹರಂತೆ
ಸಕಲೇಂದ್ರಿಯವೆಂಬ ಅಂಗದ ಹರಿಗುಲದಲ್ಲಿ
ಲಿಂಗವೆಂಬ ಅಂಬಿಗನ ದೆಸೆಯಲ್ಲಿ ಹೋಹ ಬೆಂಬಳಿಯತೋರಯ್ಯಾ,
ಕಾಲಾಂತಕ ಭೀಮೇಶ್ವರಲಿಂಗವೆ./42
ತ್ರಿವಿಧ ದೇವ ಕುಲಜಾತಿಗಾದಡೂ ಆಗಲಿ
ಪಂಡಿತ ವಿದಗ್ಧ ಜಾಣ ಗಾಂಭೀರ ಸಂಪದನಾದಡೂ ಆಗಲಿ
ಯಾಚಕತನದಲ್ಲಿ ಘಾತಕತನದಿಂದ ಬೇಡುವುದೆ ಜೀವನ.
ಆ ಜೀವನವ ಮರೆದು ಒರಗಿದುದೆ ಮಾರಿ.
ಆ ಮರವೆಯ ಹರಿದುದೆ ಕಾಲಾಂತಕ ಭೀಮೇಶ್ವರಲಿಂಗವು./43
ದಿವಕ್ಕೆ ಪರಬ್ರಹ್ಮ ರಾತ್ರಿಗೆ ಕೌಗ್ರ ಬ್ರಹ್ಮ.
ಅಧರಪಾನ ಒಳಗಾಗಿದ್ದ ಬಹು ಚೇಷ್ಟೆಗಳಲ್ಲಿ
ಸಂಚಾರಿಸುತ್ತ ಇಪ್ಪುದು ದೇವಪದಕ್ಕೆ ಹೊರಗು.
ಕಾಲಾಂತಕ ಭೀಮೇಶ್ವರಲಿಂಗವು ಒಪ್ಪದ ಭಾವ./44
ದೇಹವುಳ್ಳನ್ನಕ್ಕ ಲಿಂಗಪೂಜೆಯ ಮಾಡಬೇಕು.
ಅಂಜಿಕೆ ಉಳ್ಳನ್ನಕ್ಕ ಅಂಗ ಸುಯಿಧಾನಿಯಾಗಿರಬೇಕು.
ಗಡಿತಡಿಗೆ ಉಕ್ಕಡದ ಎಚ್ಚರಿಕೆಯಂತೆ ಅರಿದು ಪೂಜಿಸುವುದು
ಕಾಲಾಂತಕ ಭೀಮೇಶ್ವರಲಿಂಗವ./45
ಧ್ಯಾನದಿಂದ ವಸ್ತು, ವಿಷಯದಿಂದ ಮೋಹ, ಭಾವಶುದ್ಧದಿಂದ ಗುರು,
ದ್ವಂದ್ವವಳಿದು ನಿಂದುದು ಲಿಂಗ,
ತ್ರಿವಿಧದ ಸಂದನಳಿದು ಸಲೆ ಸಂದುದು ಜಂಗಮ.
ಈ ಸ್ಥಲದ ಅಂಗವನರಿದು ಉಭಯ ಭಂಗವಿಲ್ಲದೆ
ಸುಸಂಗದಿಂದ ಮಾಡುವುದು ಭಕ್ತಿಸ್ಥಲ.
ನಿಶ್ಚಯವಾಗಿ ನಿಂದುದು ಕಾಲಾಂತಕ ಭೀಮೇಶ್ವರಲಿಂಗಕ್ಕೆ
ನಿಶ್ಚೆ ಸಿದ ಉಭಯ ಭಾವ./46
ನಾಡೆಲ್ಲರೂ ಮುಟ್ಟಿ ಪೂಜಿಸುವುದು ಸಿರಿದೇವಿ.
ಸತ್ಯರೆಲ್ಲರೂ ಮುಟ್ಟಿ ಪೂಜಿಸುವುದು ಮೂದೇವಿ.
ನಾ ಮೊರದಲ್ಲಿ ಹೊತ್ತಾಡುವುದು ಉರಿಮಾರಿ.
ಸಿರಿ ಮೂದೇವಿ ಉರಿ ಮೊರದ ಗೋಟಿಗೊಳಗಾಯಿತ್ತು.
ಡಕ್ಕೆಯ ದನಿಗೆ ಮುನ್ನವೆ ಸಿಕ್ಕದಿರು
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ./47
ನಾರೀಕೇಳ ಹುಟ್ಟಿದ ಸುಜಲವ ಅಲ್ಲಿಗೆ ಎಯ್ದಿಸಿ ಎರೆದವರಿಲ್ಲ
ಅದು ಬಲಿದು ಅಲ್ಲಿಯೇ ಅರತಾಗ ಬೇರೊಂದು ಕೊಂಡುದಿಲ್ಲ.
ಅಪ್ಪುವರತು ತುಪ್ಪ ತನ್ನಲ್ಲಿಯೆ ಒದಗಿದಂತೆ
ನಿಶ್ಚೆ ಸಿದ ಮನ ವಸ್ತುವಿನಲ್ಲಿ ಕೂಡಿ
ಕಾಯದ ಕರಂಡದಲ್ಲಿ ಕರಣಂಗಳರತು
ಜೀವ ಕೆಟ್ಟು ಪರಮನಾದಂತೆ.
ಈ ಭೇದವನರಿದು ಕಾಲನ ಗೆದ್ದು
ಕಾಲಾಂತಕ ಭೀಮೇಶ್ವರಲಿಂಗವು ತಾನಾದನು./48
ಪರ್ಣದ ಮರೆಯ ಫಲದಂತೆ,
ಬಣ್ಣದ ಮರೆಯ ಬಂಗಾರದಂತೆ,
ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ.
ಕಾಯದಲ್ಲಿ ಸುಳುಹುದೋರುತ್ತ.
ಭಾವದಲ್ಲಿ ಪರವನಾಚರಿಸುತ್ತ
ಕಾಯದ ಮರೆಯಲ್ಲಿ ತಿರುಗಾಡುವ ಭಾವಶುದ್ಧಾತ್ಮ ಉಭಯಕ್ಕೆ
ಕಾಲಾಂತಕ ಭೀಮೇಶ್ವರಲಿಂಗವು ಅವರ ಬಾಗಿಲಲ್ಲಿಬಳಸಾಡುತಿಪ್ಪನು./49
ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಬಹುದೆ
ದಿವರಾತ್ರೆ ಉಳ್ಳನ್ನಕ್ಕ?
ಉತ್ತಮ ಕನಿಷ್ಠ ಮಧ್ಯಮವೆಂಬುದನರಿವನ್ನಕ್ಕ
ಕಾಲ ವೇಳೆಯನರಿದು ಶಿವಲಿಂಗಾರ್ಚನೆಯ ಮಾಡಬೇಕು.
ವಾರ ನೇಮ ಸ್ಥಿತಿ ಲಗ್ನಂಗಳಲ್ಲಿ ಹರಶರಣರಿಂದ
ಪರಿಹರಿಸಿಕೊಳ್ಳಬೇಕು. ಅದೆಂತೆಂದಡೆ: ತನ್ನ ಒಡಲೆಂಬನ್ನಕ್ಕ, ತನ್ನ ಗುರುವೆಂಬನ್ನಕ್ಕ, ತನ್ನ ಜಂಗಮವೆಂಬನ್ನಕ್ಕ,
ಶೀತ ಉಷ್ಣಮೃದು ಕಠಿಣಂಗಳನರಿವನ್ನಕ್ಕ,
ಕಾಲಾಂತಕ ಭೀಮೇಶ್ವರಲಿಂಗವೆಂದು ಪೂಜಿಸಬೇಕು./50
ಪಾಷಾಣ ಘಟ್ಟಿಯಾದಲ್ಲಿ ಪ್ರಭೆ ಪ್ರಜ್ವಲಿಸಿತ್ತು.
ಪಾಷಾಣದ ಘಟವಡಗಲಾಗಿ ಪ್ರಭೆ ಪ್ರಕಟಿಸುವುದಿಲ್ಲ.
ಕ್ರೀ ಭಿನ್ನವಾದಲ್ಲಿ ಜ್ಞಾನಕ್ಕೆ ಸುಳುಹಿಲ್ಲ.
ಅದು ಮುಕುರವ ತೊಡೆದ ಮಲದಂತೆ.
ಮಲಕ್ಕೆ ಬೆಳಗುಂಟೆ ಮುಕುರಕ್ಕಲ್ಲದೆ
ಮುಕುರಕ್ಕೆ ಛಾಯೆ, ಮಲಕ್ಕೆ ತಮ್ಮ;
ಉಭಯದೊದಗನರಿದಲ್ಲಿ ಇಷ್ಟ ಪ್ರಾಣ ಮುಕ್ತಿ.
ಅಂಗದ ಮೊರದ ಮಾರಿಯ ಹೊತ್ತು ಬಂದವನ ಯುಕ್ತಿ
ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಇಕ್ಕಿದಗೊತ್ತು./51
ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ?
ಶಿಶುವೆ ಬಸುರಿನಲ್ಲಿ ತಾಯಿ ಅಸುವ ನುಂಗಿದ ಮತ್ತೆ
ಶಿಶು ತಾಯ ಉಭಯನಾಮವಡಗಿತ್ತು.
ಕ್ರೀಯೆ ತಾಯಿ, ಅರಿವೆ ಶಿಶುವಾಗಿ
ಮೂರು ಮೊರದ ಗೋಟಿನಲ್ಲಿ ತಿರುಗಾಡುತ್ತಿದ್ದೇನೆ
ಆ ಮರವೆಗೆ ತೆರನ ಹೇಳಾ,
ಕಾಲಾಂತಕ ಭೀಮೇಶ್ವರಲಿಂಗವೆ./52
ಬಂದ ಬಂದವರೆಲ್ಲರೂ ತಾವು ಬಂದಂಗದಲ್ಲಿ ಸುಖಿಗಳು.
ಕಂಡಕಂಡವರೆಲ್ಲರೂ ತಾವು ನಿಂದ ಲಿಂಗದಲ್ಲಿಯೆ ಸುಖಿಗಳು.
ತನು ಕಾಯಕ ಮನ ಲಿಂಗದಾಸೋಹ ಜಂಗಮದಲ್ಲಿ
ನಾನೆಂಬುದನಳಿದು ಮಾಡುವುದು.
ಕಾಯಕವೇನಾದಡೂ ಆಗಲಿ,
ಆ ಗುಣ ಕಾಲಾಂತಕ ಭೀಮೇಶ್ವರಲಿಂಗಕ್ಕೆ ಅರ್ಪಿತ./53
ಬೆಂದ ಮಣ್ಣಿನಂತೆ, ವಿಚ್ಛಂದವಾದ ಪಯ ಅನ್ನದಂತೆ,
ತಂತ್ರವ ಜಾರಿದ ಸೂತ್ರದಂತೆ, ಚೇತನವಿಲ್ಲದ ಡಿಂಬಂಗಳಂತೆ,
ಏತಕ್ಕೂ ಸುಳುಹಿಲ್ಲದೆ ನಿಂದ ನಿಲವು
ಕಾಲಾಂತಕ ಭೀಮೇಶ್ವರಲಿಂಗವನರಿದುದು./54
ಬ್ರಹ್ಮಂಗೆ ಅಂಡವ ಕೊಟ್ಟು
ವಿಷ್ಣುವಿಂಗೆ ಪಿಂಡವ ಕೊಟ್ಟು
ರುದ್ರಂಗೆ ಪ್ರಾಣವ ಕೊಟ್ಟು
ನೀ ಹೊದ್ದದಿದ್ದ ಪರಿಯ ಹೇಳಾ
ಕಾಲಾಂತಕ ಭೀಮೇಶ್ವರಲಿಂಗವೆ./55
ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ.
ವಿಷ್ಣುವಿಂಗೆ ಲಕ್ಷಿ ್ಮಯಾಗಿ ಭವಕ್ಕೆ ತಿರುಗಿದಳು ಮಾಯೆ.
ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳುಮಾಯೆ.
ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಗೆ ಗಂಧವಾಗಿ,
ಅವರವರಂಗದಲ್ಲಿ ಹಿಂಗದ ಪ್ರತಿರೂಪಾಗಿ
ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ.
ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ಸಿಕೊಳ್ಳಿ,
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ./56
ಬ್ರಹ್ಮಪ್ರಳಯವಾದಲ್ಲಿ ತಾ ಕೆಟ್ಟುದಿಲ್ಲ ಮಾರಿ.
ವಿಷ್ಣು ಮರಣವಹಲ್ಲಿ ತಾ ಸತ್ತುದಿಲ್ಲ ಮಾರಿ.
ರುದ್ರ ಯುಗ ಜುಂಗಂಗಳ ಗೆಲುವಲ್ಲಿ ಮಾಯೆ
ಮನಸಿಜನ ಮನವೆಲ್ಲಿತ್ತು ಅಲ್ಲಿದ್ದಳು.
ಇಂತೀ ತ್ರಿವಿಧ ಮೂರ್ತಿಗಳಲ್ಲಿ
ಮರವೆಯ ದೆಸೆಯಿಂದ ಮಾರಿಯಾಯಿತ್ತು.
ಆ ಮಾರಿಯ ಹೊತ್ತು ಭವದ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ.
ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ
ಭಕ್ತಿ ಮುಕ್ತಿಯನರಿದು ನಿಶ್ಚಯರಾಗಿ
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ./57
ಬ್ರಹ್ಮಾಂಡದಲ್ಲಿ ತೋರುವ ಗುಣ ಅಂಡದಲ್ಲಿ ಕಲೆನಿಲುವಂತೆ,
ಅಂಡದಲ್ಲಿ ಜನಿಸುವ ಗುಣ ಪಿಂಡದಲ್ಲಿ ಪ್ರಮಾಣಿಸುವಂತೆ,
ಪಿಂಡದಲ್ಲಿ ಪ್ರಮಾಣಿಸುವ ಗುಣ ಸರ್ವಚೇತನದಲ್ಲಿಚೇತರಿಸುವಂತೆ,
ಚೈತನ್ಯಾತ್ಮಕ ನೀನೇ, ಕಾಲಾಂತಕ ಭೀಮೇಶ್ವರಲಿಂಗವು ತಾನೆ./58
ಭಕ್ತನ ಭಕ್ತ, ಮಾಹೇಶ್ವರನ ಮಾಹೇಶ್ವರ, ಪ್ರಸಾದಿಯ ಪ್ರಸಾದಿ,
ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯ.
ಒಳಗಿನ ಸ್ಥಲವ ಹೊರಹೊಮ್ಮುವಾಗ
ಬಿಂಬಕ್ಕೆ ಬಿಂಬದ ಪ್ರತಿಬಿಂಬವ ಕಾಬಂತೆ.
ಅದರ ಸಂಗವ ಘಟಿಸಿದಲ್ಲಿ ಷಡುಸ್ಥಲ ಬ್ರಹ್ಮವಾಯಿತ್ತು
ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ./59
ಭಕ್ತನಾಗಿದ್ದಲ್ಲಿ ಪೃಥ್ವಿಯಂಗವೆ ಮಾಯೆ.
ಮಾಹೇಶ್ವರನಾಗಿದ್ದಲ್ಲಿ ಅಪ್ಪುವಿನಂಗವೆ ಮಾಯೆ.
ಪ್ರಸಾದಿಯಾಗಿದ್ದಲ್ಲಿ ಅಗ್ನಿಯಂಗವೆ ಮಾಯೆ.
ಪ್ರಾಣಲಿಂಗಿ ಶರಣೈಕ್ಯನೆಂಬಲ್ಲಿ
ಭಾವದ ಕಲೆಯ ವಿಚಾರಿಸುವುದೆ ಮಾಯೆ.
ಕಾಯದ ಭಾವವುಳ್ಳನ್ನಕ್ಕ
ಮರವೆಯೆಂಬ ಮಾರಿಯ ಹೊತ್ತು ತಿರುಗಾಡುತ್ತಿದ್ದೇನೆ
ಮಾರಿಯ ಮರಣದಲ್ಲಿ ಮರವೆಯ ಮಾಡದೆ ಎನ್ನನಾರೈದುಕೊ,
ಕಾಲಾಂತಕ ಭೀಮೇಶ್ವರಲಿಂಗ./60
ಭಕ್ತಸ್ಥಲ ಸಂಗನ ಬಸವಣ್ಣಂಗಾಯಿತ್ತು.
ಮಾಹೇಶ್ವರ ಸ್ಥಲ ಮಡಿವಾಳಯ್ಯಂಗಾಯಿತ್ತು.
ಪ್ರಸಾದಿಸ್ಥಲ ಚನ್ನಬಸವಣ್ಣಂಗಾಯಿತ್ತು.
ಪ್ರಾಣಲಿಂಗಿಸ್ಥಲ ಚಂದಯ್ಯಂಗಾಯಿತ್ತು.
ಶರಣಸ್ಥಲ ಘಟ್ಟಿವಾಳಯ್ಯಂಗಾಯಿತ್ತು.
ಐಕ್ಯಸ್ಥಲ ಅಜಗಣ್ಣಂಗಾಯಿತ್ತು.
ಇಂತೀ ಷಡುಸ್ಥಲಬ್ರಹ್ಮಿಗಳೆಲ್ಲರೂ
ಎನ್ನಂಗದ ಮೊರದ ಮಾರಿಯ ಸಂಗಾತದಲೈದಾರೆ.
ಆರಂಗದ ಮೂರು ಸಂಗದ ತೋರಿಕೆಯ ತೋರಾ,
ಕಾಲಾಂತಕ ಭೀಮೇಶ್ವರಲಿಂಗವೆ./61
ಭೂರಿ ಅವಾರಿಗಳಲ್ಲಿ ಮಾಡುವುದೆ ರಾಜತ್ವ.
ಆ ಠಾವಿನಲ್ಲಿ ಕೂಡಿ ಆಡುವುದೆ ಸಮಯಭೇದ.
ರಾಜಸವನರಿವನ್ನಕ್ಕ ತಾಮಸದಲ್ಲಿ ಪೂಜಿಸಿಕೊಳಬೇಕು.
ಆ ಗುಣ ವಿಷವ ಕಡೆದು ಅಮೃತವ ಕಾಬಂತೆ.
ಉಭಯದ ಸಿಕ್ಕು, ಕಾಲಾಂತಕ ಭೀಮೇಶ್ವರಲಿಂಗವನುಒಪ್ಪದ ಭಕ್ತಿ./62
ಭ್ರಾಮಕದಲ್ಲಿ ಮಾಡದೆ, ಆಢ್ಯತನಕ್ಕೆ ಮಚ್ಚದೆ
ಸ್ತುತಿ ನಿಂದೆಗಳ ಗುರುಲಿಂಗ ಜಂಗಮದಲ್ಲಿ ವಿಚಾರಿಸದೆ
ತಾ ಮಾಡುವ ದ್ರವ್ಯಕ್ಕೆ ವಿಶ್ವಾಸದ ಚಿತ್ತಕ್ಕೆ
ಉಭಯವನರಿದು ಮಾಡುವ ಭಕ್ತನ ಬಾಗಿಲೆ
ಕಾಲಾಂತಕ ಭೀಮೇಶ್ವರಲಿಂಗದ ಆಶ್ರಯ./63
ಮತ್ತಾರನೂ ನುಡಿಯದೆ ತಾನಾರೈದು ಮಾಡುವ ಪರಿಯಿನ್ನೆಂತು?
ಸಜ್ಜನ ಶರಣರಲ್ಲಿ ಭಕ್ತಿ, ಅಸಜ್ಜನ ದುವರ್ೃತ್ತರಲ್ಲಿ ಧಿಕ್ಕಾರ.
ಬಿಡುಮುಡಿಯಲ್ಲಿ ನಿಜತತ್ವವನರಿದು ಮಾಡುವುದುಮಾಡಿಸಿಕೊಂಬುದು
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಮರ್ಪಿತ./64
ಮರವೆಗೆ ಅರಿವು ಸಂಬಂಧವಹಲ್ಲಿ
ಮನ ತುಂಬಿದ ತಮಕ್ಕೆ ಜ್ಯೋತಿ ಒಂದೆ ಅವಗವಿಸಿದಂತೆ,
ಪ್ರಕೃತಿ ಚಿತ್ತವನರಿವುದಕ್ಕೆ ಮತ್ತಗಜವ ಹಾರೆಯಲ್ಲಿ ಒತ್ತೆ,
ಮೇಲಿದ್ದವನ ಚಿತ್ತನರಿದಡಗುವಂತೆ
ಸಂಸಾರಯುಕ್ತಿಯನರಿವವನ ಮಥನ.
ಲೋಹ ಘನವಾಗಿ, ಸಿದ್ದಿಯ ಸಾರ ಅಲ್ಪವಾಗಿ ವೇಧಿಸುವಂತೆ
ಘನ ಶೈಲಕ್ಕೆ ಅಂಗುಲದೊಳಗಡಗಿದ ಕುಲಿಶದಂತೆ,
ಮರೆದಲ್ಲಿ ಅರಿದು ಎಚ್ಚತ್ತು ಅರಿವವನ ವಿವರ;
ಪೂಜಿಸಿ ಪುಣ್ಯವನರಿವ ಭಾವಶುದ್ಧಾತ್ಮನ ಭಾವಸ್ಥಲ;
ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಉಭಯ ನಾಮತೆರನಿಲ್ಲದ ತೆರ./65
ಮರೆದವರ ಮನದಲ್ಲೆಲ್ಲವೂ ಮಾರಿ.
ಅರಿದವರ ಮನದಲ್ಲೆಲ್ಲವೂ ಸ್ವಯಂಜ್ಯೋತಿ.
ಡಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚೆ ಸಿಕೊಳ್ಳಿ,
ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ./66
ಮರೆಯಲ್ಲಿದ್ದ ಸಂಚ ತೆರ ದರುಶನವಾಗಲಾಗಿ
ಆಶ್ಚರಿಯೆಂಬುದು ಬಿಟ್ಟಿತ್ತು.
ಅಂಗದ ಮೇಲಣ ಲಿಂಗ ನೆನಹಿಂಗೆ ನಿಲಲಾಗಿ ಕುರುಹೆಂಬಭಾವವಡಗಿತ್ತು.
ಸರ್ವೆಂದ್ರಿಯಂಗಳು ಹಿಂಗಿ
ಏಕಭಾವ ಸಲೆಸಂದು ಉಭಯದಂಗ ಲೇಪವಾದುದು
ಕಾಲಾಂತಕ ಭೀಮೇಶ್ವರಲಿಂಗ ದ್ವಂದ್ವವಳಿದು ನಿಂದಸ್ಥಲ./67
ಮಲ ಅಮಲವೆಂಬ ಉಭಯವ ವಿಚಾರಿಸುವಲ್ಲಿ,
ಕ್ರೀ ನಿಃಕ್ರೀಯೆಂದು ಭಾರಿಸುವಲ್ಲಿ,
ಅಳಿವುದೇನು ಉಳಿದೇನು ಎಂಬುದ ತಾನರಿದಲ್ಲಿ,
ಅಂಗದ ಮೇಲೊಂದು ಲಿಂಗವುಂಟೆಂದು
ಮನದ ಮೇಲೊಂದು ಲಿಂಗವುಂಟೆಂದು
ಭಿನ್ನಭಾವದಿಂದ ಕಾಬಲ್ಲಿ
ಅಂಗಕ್ಕೂ ಮನಕ್ಕೂ ಲಿಂಗವೊಂದಲ್ಲದೆ,
ಆತ್ಮ ಹಲವಿಲ್ಲ ಲಿಂಗ ಕೆಲವಿಲ್ಲ.
ಗಿಂಡೆಯ ಉದಕ ಉಭಯ ಸಂಧಿಯಲ್ಲಿ ಬಾಹಂತೆ,
ತುಂಬುವ ಘಟವೊಂದು ಸೂಸುವ ಜೂಳಿ ಬೇರಾದಂತೆ,
ಅಂಗ ಪ್ರಾಣಲಿಂಗ ಸಂಬಂಧಯೋಗ ಸಂಭವವಾದಲ್ಲಿ
ಕಾಲಾಂತಕ ಭೀಮೇಶ್ವರಲಿಂಗವು ತಾನೆ./68
ಮಹಾಕಾಳಾಂಧರ ಹಿಂಗಿ ಕಾಲಂಗಳಹಾಗ
ಮಾಯಾಂಗನೆ ಮಹಾದೇವನ ಮರೆದವರಿಗೆ ಮಾರಿಯಾದಳು.
ಸತ್ಕಿ ್ರಸಜ್ಜನಯುಕ್ತಿಯಿಂದ
ಸದಾಶಿವನನರಿಯಲಾಗಿ ಉಮಾದೇವಿಯಾದಳು.
ಇಂತೀ ಗುಣವ ಮರೆದಡೆ ಮಾಯೆಯಾಗಿ
ಅರಿದಡೆ ಸ್ವಯವಾಗಿ ತನ್ನಲ್ಲಿ ಅನ್ಯಭಿನ್ನವಿಲ್ಲದೆ
ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ
ಕಾಲಾಂತಕ ಭೀಮೇಶ್ವರಲಿಂಗವನರಿಯಬೇಕು./69
ಮಾತ ಅಲೇಖದ ಮೇಲಕೆ ಕುರುಹಿಟ್ಟಲ್ಲದೆ
ನೀತಿಲಕ್ಷಣವ ಕಾಣಬಾರದು.
ಚಿತ್ತ ತಾ ಪೂಜಿಸುವ ವಸ್ತುವಿನಲ್ಲಿ ಲಕ್ಷಿಸಿಯಲ್ಲದೆ
ಮೇಲಣ ಅಲಕ್ಷವ ಕಾಣಬಾರದು.
ಕಾಬನ್ನಕ್ಕ, ಉಭಯದ ಆಚರಣೆ ತಾನುಳ್ಳನ್ನಕ್ಕ,
ಕಾಲಾಂತಕ ಭೀಮೇಶ್ವರಲಿಂಗವ ಪೂಜಿಸಬೇಕು./70
ಮಾಯಾಗುಣ ರೂಪಾದಲ್ಲಿ ಮಲಕ್ಕೊಡಲಾಯಿತ್ತು
ಮಲಸ್ಥರೂಪವಾಗಿ ನಿಂದಲ್ಲಿ
ಬಲವಂತರೆಲ್ಲರು ಮಲದ ಬೆಂಬಳಿಯಲ್ಲಿ ಮರುಳಾದರು.
ಮರುಳಾಟದಲ್ಲಿ ಮಾರಿ ಒಲವರವಾಗಿ
ಮನ ಶುದ್ಧವಿಲ್ಲದವರ ಮನೆ ಮನೆಯಲ್ಲಿ
ತನುವಿಕಾರವನಾಡಿಸುತ್ತೈದಾಳೆ.
ಮಾರಿಯ ಮುರಿದು ದಾರಾವತಿಯ ಕೆಡಿಸಿ
ಕೈಯ ಡಕ್ಕೆಯ ಗತಿಯ ಹಿಂಗಿ
ಮಾಯೆಯ ಬಾಗಿಲ ಭ್ರಾಂತಿಯ ಬಿಟ್ಟಲ್ಲಿ
ಕಾಲಾಂತಕ ಭೀಮೇಶ್ವರಲಿಂಗವನರಿದುದು./71
ಮೂರವಸ್ಥೆಯಲ್ಲಿ ತೋರುವುದು ಸತ್ವಗುಣ.
ಆರವಸ್ಥೆಯಲ್ಲಿ ತೋರುವುದು ರಜೋಗುಣ.
ಏಳವಸ್ಥೆಯಲ್ಲಿ ತೋರುವುದು ತಮೋಗುಣ.
ಇಂತೀ ತ್ರಿವಿಧಾವಸ್ಥೆಯಲ್ಲಿ ತೋರುವವೆಲ್ಲವೂ ಅಪ್ಪುವಿನ
ಸಂಚಾರಗುಣ.
ಸತ್ವ ರಜ ತಮಂಗಳಲ್ಲಿ ನಿಶ್ಚೆ ಸಿ ನಿಂದುದು
ಕಾಲಾಂತಕ ಭೀಮೇಶ್ವರಲಿಂಗದಲ್ಲಿ ಸಲೆ ಸಂದುದು./72
ರತ್ನ ಪಾಷಾಣದ ಕುಲದಲ್ಲಿದ್ದು ಸ್ವಜಾತಿಗೆ ಸಿಕ್ಕದಂತೆ,
ಗಂಧ ಕುಸುಮದಲ್ಲಿದ್ದು ಅದರೊಳಗೆ ಬಂಧಿತವಾಗದಂತೆ,
ವಾಯುಸಕಲ ಚೇತನದೊಳಗಿದ್ದು
ರೂಪಿಂಗೊಡಲಿಲ್ಲದೆ ಅಲೆಯಲಿಕ್ಕೆ ಉಂಟಾಗಿ,
ಆ ತೆರದಂತೆ, ಹಿಡಿವಲ್ಲಿ ಬಿಡುವಲ್ಲಿ ಒಡಗೂಡುವ ಸುಖವನರಿತಡೆ;
ಕಾಲಾಂತಕ ಭೀಮೇಶ್ವರಲಿಂಗವು ತಾನೆ./73
ರಸೇಂದ್ರಿಯ ಗಂಧೇಂದ್ರಿಯ ರೂಪೇಂದ್ರಿಯ
ಶಬ್ದೇಂದ್ರಿಯ ಸ್ವರ್ಶನೇಂದ್ರಿಯ
ಪಂಚೇಂದ್ರಿಯಂಗಳಲ್ಲಿ ಸಲೆ ಸಂದು
ಒಂದರ ಗುಣವ ಒಂದರಿಯದಂತೆ
ಮತ್ತೆ ಏಕೇಂದ್ರಿಯವೆಂದು ಸಂಧಿಸಿ ಅರ್ಪಿಸುವ ಪರಿಯಿನ್ನೆಂತೊ?
ಆ ಗುಣದ ಸಂಗವನರಿದಲ್ಲಿ
ಇಂದ್ರಿಯಂಗಳ ಮುಖದಲ್ಲಿ ಲಿಂಗವನರಿದುದು.
ಹುಟ್ಟಿನ ದೆಸೆಯಿಂದ ಹಸ್ತಕ್ಕೆ ಬಂದು
ಮತ್ತೆ ಜಿಹ್ವೆ ಅರಿದಂತೆ ಅರ್ಪಿತದ ಭೇದ.
ಇಷ್ಟ ಪ್ರಾಣಸಂಗ ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ
ಅರ್ಪಿತ ಅವಧಾನಿಯ ಇರವು./74
ಲಿಂಗ ಪ್ರಾಣವಾದಲ್ಲಿ ಜಾಗ್ರ ಸ್ವಪ್ನ ಸುಷಪ್ತಿಯಲ್ಲಿ ಉಭಯಭ್ರಾಂತಿಲ್ಲದೆ
ದೃಷ್ಟದಲ್ಲಿ ಕಂಡುದಕ್ಕೆ ಆ ಜ್ಞಾನದಲ್ಲಿ ಭಾವಿಸುವುದಕ್ಕೆ
ಆ ಜ್ಞಾನ ಉಭಯದೋರದೆ ಸ್ವಯವಾದುದು.
ಉಭಯಗುಣ ನಾಸ್ತಿ ಪ್ರಾಣಲಿಂಗಸಂಬಂಧ
ಕಾಲಾಂತಕ ಭೀಮೇಶ್ವರಲಿಂಗದಲ್ಲಿ./75
ಲಿಂಗಕ್ಕೆ ಮಲಿನವಾದಲ್ಲಿ ಒರಸಿ ತೊಳೆದಡೆ ದೋಷವ ಕಟ್ಟಬಹುದೆ?
ಗುರು ಚರ ಭಕ್ತರಲ್ಲಿ ಭ್ರಾಮಕದಿಂದ ಮರೆದಿರೆ
ಅರುಪಲಿಕ್ಕೆ ದೂಷಣೆ ಉಂಟೆ?
ತನ್ನಂಗದ ಕಲೆವ ತಾ ಹಿಂಗಿಸುವುದಕ್ಕೆ ನಿಂದೆ ಗುಣದೋಷಂಗಳುಂಟೆ?
ಇದು ಕಾರಣದಲ್ಲಿ ಒಡೆಯನ ಹರವರಿ ಬಂಟಂಗೆ ಲಾಭವಹಂತೆ,
ಉಭಯಕ್ಕೆ ಕೇಡಿಲ್ಲದಿರ್ಪ ಭಕ್ತಿಸತ್ಯ.
ಕಾಲಾಂತಕ ಭೀಮೇಶ್ವರಲಿಂಗನು ಉಭಯದ ತಪ್ಪನೊಪ್ಪನಾಗಿ./76
ಲೇಸೆನಿಸುವ ವಸ್ತುವ ಬೈತಿಡುವುದಕ್ಕೊಂದಾಶ್ರಯ ಬೇಕು.
ಮನ ಘನವನಾಶ್ರಯಿಸುವುದಕ್ಕೆ, ಅನುವನರಿದು ನೆಮ್ಮುವುದಕ್ಕೆ,
ಚಿದ್ಘನಲಿಂಗವೆಂಬ ಕುರುಹು ಬೇಕು.
ಇದರಿಂದ ಬೇರೆ ಕಾಬ ಅರಿವಿಲ್ಲ.
ಆ ಕುರುಹೆ ಅರಿವಿಗೆ ಆಶ್ರಯವಾದ ಕಾರಣ,
ಕಾಲಾಂತಕ ಭೀಮೇಶ್ವರಲಿಂಗವುಕುರುಹುಗೊಂಡಿತ್ತು./77
ವಿಶ್ವತೋಮುಖ ಲಿಂಗವೆಂದರಿದಲ್ಲಿ ಪಂಚವಕ್ತ್ರವೆಂದು ನುಡಿಯಲಿಲ್ಲ.
ಪರಿಪೂರ್ಣವೆಂದರಿದಲ್ಲಿ ಕಾಲವೇಳೆಯೆಂದು ಪ್ರಮಾಣಿಸಲಿಲ್ಲ.
ಜ್ಯೋತಿಯ ಬೆಂಬಳಿಯಲ್ಲಿ ಜ್ಯೋತಿ ಬರಲಾಗಿ
ಅದೇತರ ತನುವೆಂದು ಲಕ್ಷಿಸಲಿಲ್ಲ,
ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ,/78
ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತು
ಆತ್ಮಸತಿ ಅರಿವು ಪುರುಷನಾದಲ್ಲಿಯೇ ಜೀವಗುಣ ನಿಂದಿತ್ತು.
ನೀನೆಂಬುದ ಭಾವಿಸಿ ಮಾಡಿದಾಗವೆ ಕಾಯಕ ಶುದ್ಧವಾಯಿತ್ತು.
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು./79
ಶಿಲೆ ಭಾವ ಹಿಂಗಿ ಕುರುಹಾಯಿತ್ತು, ಕಾರುಕನ ಕೈಯಲ್ಲಿ,
ಪಾಷಾಣ ಭಾವ ಹಿಂಗಿ ಕಳೆಯಾಯಿತ್ತು. ಆಚಾರ್ಯನ ಕೈಯಲ್ಲಿ.
ಕಳೆ ನೆಲೆಯಾಯಿತ್ತು, ಪೂಜಿಸುವಾತನ ಚಿತ್ತದಲ್ಲಿ.
ಚಿತ್ತ ವಸ್ತುವಿನಲ್ಲಿ ಬೆರೆದು ಕಾಲಾಂತಕ
ಭೀಮೇಶ್ವರಲಿಂಗವಾಯಿತ್ತು/80
ಶ್ವೇತಾಂಗ ಬಹುವರ್ಣವ ಬೆರಸಿದಂತೆ
ಆತ್ಮನೊಂದಾಗಿ ಪ್ರಕೃತಿ ಹಲವ ಧರಿಸಿದಂತೆ
ತಾ ಬಂದ ಗುಣವನರಿದು,
ಇದ್ದ ಇರವಿನ ಸದ್ವರ್ತನೆಯಿಲ್ಲದೆ
ಆಚರಣೆಗೆ ಅನುಸರಣೆಯಿಲ್ಲದೆ
ಅರಿವನರಿದು ಅಮಂಗಲಕ್ಕೊಳಗಾಗದೆ
ನಿರ್ಮಲತರಂಗವನೆಯ್ದಿ ಸಂದುದು
ಕಾಲಾಂತಕ ಭೀಮೇಶ್ವರಲಿಂಗದಂಗ./81
ಷಡುಸ್ಥಲದಲ್ಲಿ ಕಂಡೆಹೆನೆಂದಡೆ ಕ್ರೀಶುದ್ಧೆತೆಯಿಲ್ಲ.
ತ್ರಿವಿಧ ಸ್ಥಲದಲ್ಲಿ ಕಂಡೆಹೆನೆಂದಡೆ ಭಾವಶುದ್ಧವಿಲ್ಲ.
ಇದು ಮೀರಿ ಬೇರೊಂದನರಿದೆಹೆನೆಂದಡೆ ಆರರಿವಿಂಗೆ ಕುರುಹಿಲ್ಲ.
ಈ ತೆರನನರಿದಡೆ ಅರಿವು ಕುರುಹು ಏಕವಾಯಿತ್ತು
ಕಾಲಾಂತಕ ಭೀಮೇಶ್ವರಲಿಂಗವನರಿಯಲಾಗಿ./82
ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ
ಸಿದ್ಧರಸದಲ್ಲಿ ಪ್ರಸಿದ್ಧರಸ ಕೂಡೆ
ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ
ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ,
ಸಂಗಂಧದ ಮಂದಿರದಲ್ಲಿ ಸಂಧಿಸಿದಂತೆ
ಉಭಯ ಭಾವಕ್ಕೆ ಮಾಟಕೂಟಕ್ಕೆ ಚಿತ್ತಕ್ಕೆ ಭಿನ್ನವಿಲ್ಲದೆ ನಿಂದುದು
ಕಾಲಾಂತಕ ಭೀಮೇಶ್ವರಲಿಂಗವ ಸಲೆ ಸಂದಿಲ್ಲದೆಅರಿದುದು./83
ಸಕಲ ಸ್ಥಾವರ ಸಕಲ ಬುದ್ಬುದಂಗಳಲ್ಲಿ
ಸಕಲ ಚರಾದಿಗಳಲ್ಲಿ, ಸಕಲ ಅಂಡಪಿಂಡಗಳಲ್ಲಿ
ತೋರುವ ತೋರಿಕೆ, ಕಾಣದ ಅಚ್ಚರಿಯ ಕಂಡೆ ಕಾಣೆನೆಂಬುದ ಒಂದೆ ಭಾವ.
ಆ ಭಾವದ ಭ್ರಮೆಯಡಗಿ ಇಷ್ಟಲಿಂಗದಲ್ಲಿ ಆರ್ಚನೆ ಪೂಜನೆ
ಭಾವಲಿಂಗದಲ್ಲಿ ಭ್ರಮೆಯಡಗಿ
ಉಭಯಕ್ಕೆ ಠಾವಿಲ್ಲದೆ ತಲೆದೋರದೆ ನಿಂದುದು
ಕಾಲಾಂತಕ ಭೀಮೇಶ್ವರಲಿಂಗವೆಂಬುದಕ್ಕೆ
ಪ್ರಮಾಣವಾಯಿತ್ತು./84
ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?
ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?
ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ
ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು./85
ಸರವಿ ಮಚ್ಚಿದ ವಾಯಪೋಷನ ಇರವಿನಂತೆ,
ಗುಮತಿಯಲ್ಲಿದ್ದ ಅಸಿಯ ಮರೆಯಂತೆ,
ಬೇರಿನ ಮರೆಯಲ್ಲಿದ್ದ ವಿಷನಾಭಿಯಂತೆ,
ನೋಡಿದಡೆ ಭಕ್ತನಾಗಿ, ಒಳಹೊಕ್ಕು ವಿಚಾರಿಸಿದಲ್ಲಿ ಭರಿಯಾಗಿ,
ಸುಣ್ಣದ ಮಣ್ಣಿನಂತೆ, ಅಹಿ ಫಳದ ರೇಖೆಯಂತೆ,
ಕಪಟಕ್ಕೊಳಗಾಗಿ ಇಪ್ಪುದು ಭಕ್ತಿಸ್ಥಲವೆ?
ಮಧುರ ಚೂರ್ಣದಂತೆ ತನ್ಮಯವಾಗಿಪ್ಪುದೆ ಸದ್ಭಕ್ತನಿರವು,
ಕಾಲಾಂತಕ ಭೀಮೇಶ್ವರಲಿಂಗದ ನಿಜ ತತ್ವವಾಸ./86
ಸೌಭಾಗ್ಯದಿಂದ ಮಾಡುವರೆಲ್ಲರೂ ಸಂತೋಷಭಾವಿಗಳು.
ಭಕ್ತಿಯಿಂದ ಮಾಡುವರೆಲ್ಲರೂ ತ್ರಿವಿಧಭಾವಿಗಳು.
ಒಂದೆಂದು ಹಿಂಗಿ ಮಾಡುವನ್ನಬರ ರುದ್ರನ ಉರಿಗೊಡಲಾಯಿತ್ತು.
ಬಂದುದ ನೇತಿಗಳೆಯದೆ ಬಾರದುದಕ್ಕೆ ದೋಟಿಯನಿಕ್ಕದೆ
ಬಂದುದಕ್ಕೆ ಮನಮುಕ್ತನಾಗಿ ಸಂದುದು
ಕಾಲಾಂತಕ ಭೀಮೇಶ್ವರಲಿಂಗಕ್ಕರ್ಪಿತವಾಯಿತ್ತು./87
ಸ್ಥೂಲ ಸೂಕ್ಷ ್ಮ ಕಾರಣಮಯಂಗಳಲ್ಲಿ,
ಇಷ್ಟ ಪ್ರಾಣ ಭಾವಂಗಳಲ್ಲಿ,
ಉಚಿತವನರಿದು ಕೂಡುವುದೆ ಯೋಗ.
ಆ ಯೋಗವ ಪ್ರಯೋಗಿಸಿ ನಿಂದುದೆ
ಕಾಲಾಂತಕ ಭೀಮೇಶ್ವರಲಿಂಗವು ಉಭಯವನಳಿದಭಾವ./88
ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿ
ಒಂದು ಠಾವಿನಲ್ಲಿ ನದಿ ನಾಮವಾಯಿತ್ತು.
ನಾನಾಭಾವಂಗಳಲ್ಲಿ ನೊಂದು ಬಂದ ಜೀವ
ಒಂದು ನೆಲೆಯಲ್ಲಿ ನಿಂದು ಸಂದೇಹವ ಬಿಡಲಾಗಿಪರಮನಾಯಿತ್ತು.
ಪ್ರಕಾಶವ ಕಂಡು ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು./89
ಹುಸಿದು ಮಾಡಿದವರುಂಟು.
ಅಸಿಯಲ್ಲಿ ದೆಸೆಗೆಡಿಸಿ ಮಾಡಿದವರುಂಟು.
ಪಶುಗಳ ಕೊಂದು ಪಿಸಿತವ ಮಾರಿ ಮಾಡಿದವರುಂಟು.
ಅದು ತನ್ನಯ ಅಸುವಿಂಗಲ್ಲದೆ,
ಅದು ತನ್ನಯ ಶಿಶುವಿಂಗಲ್ಲದೆ,
ಅದು ತನ್ನಯ ವಿಷಯದ ಲಂಪಟದ ಶಕ್ತಿಗಲ್ಲದೆ
ದೇವಂಗೆಂದು ಕುರಿತು ಆವ ಕಾಯಕವ ಮಾಡಿದಡೂ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಅರ್ಪಿತವು./90