Categories
ವಚನಗಳು / Vachanagalu

ತಳವಾರ ಕಾಮಿದೇವಯ್ಯನ ವಚನಗಳು

987
ಎತ್ತಾಗಿದ್ದು ಹೆಗಲ ಕೊಡೆನೆಂದಡೆ ನಿಶ್ಚಯವೆ?
ತೊತ್ತಾಗಿದ್ದು ಹೇಳಿದುದ ಕೇಳೆನೆಂದಡೆ ಮೆಚ್ಚುವರೆ?
ಭಕ್ತನಾಗಿದ್ದು ಭಾರಣೆಯನಾದರಿಸದಿದ್ದಡೆ ಅದು ಅಚ್ಚಿಗವೆಂದೆ,
ಕಾಮಹರಪ್ರಿಯ ರಾಮನಾಥ.

988
ಕಾಲವಂಚಕನಾಗಿ ಜಂಗಮಕಿಕ್ಕಿದಡೆ ಕರ್ಮವೆ ತಿಂಬುದು.
ಉಪಚರಿಸಿಕೊಂಬವನಾಗಿ ತ್ರಿಸಂಧಿಯಲ್ಲಿ ಲಿಂಗಪೂಜೆಯ ಮಾಡಿದಡೆ
ಅದು ಹಸಿವಿಲ್ಲದ ಗ್ರಾಸ, ಅಸಮಾಕ್ಷನ ಮುಟ್ಟದು.
ಇವು ಹುಸಿಯಲ್ಲವೆಂದೆ, ಕಾಮಹರಪ್ರಿಯ ರಾಮನಾಥಾ.

989
ಮನವನೊಪ್ಪಿಸುವ ಠಾವಿನಲ್ಲಿ ಹೆಣ್ಣ ಬೇಡಿದಡೆ ನೋಯಲೇಕೆ?
ಧನವನೊಪ್ಪಿಸುವ ಠಾವಿನಲ್ಲಿ ನಿಷ್ಠುರ ಬಂದಡೆ ತಾಳಬೇಕು.
ತನುವನೊಪ್ಪಿಸುವ ಠಾವಿನಲ್ಲಿ ಅಸಿಯಲ್ಲಿ ಕುಸಿಕಿರಿದಡೆ
ಹುಸಿಯೆನ್ನದಿರ್ದಡೆ ಇವೆಲ್ಲವೂ ಕಸರಜದ ಗುಣ,
ಭಕ್ತಿಯ ಸತ್ವದ ನಿತ್ಯತ್ವವಿಲ್ಲೆಂದೆ,
ಕಾಮಹರಪ್ರಿಯ ರಾಮನಾಥಾ.

990
ಮನೆಯನೊಪ್ಪಿಸಿ ಕೊಟ್ಟುವಂಗೆ ಹಿಂದೆಸೆಯ ಹಂಗೇಕೆ?
ಮಾಡಿಹೆನೆಂಬ ಮಾಟವುಳ್ಳವಂಗೆ ಅವರಿವರಾಡಿಹರೆಂಬ ಸಂದೇಹವೇಕೆ?
ಗುಡಿಯ ಕಟ್ಟಿದ ಮತ್ತೆ ಹಡಹಲ್ಲದೆ ಅವರಡಿಯನರಸಲೇಕೆ?
ಕಾಮಹರಪ್ರಿಯ ರಾಮನಾಥಾ.

991
ಮೂರ ಮುದುಡಿಸಿ ಆರನಡಗಿಸಿ
ಎಂಟ ಗಂಟಿಕ್ಕಿ ನಾಲ್ಕು ಸೆರಗ ಹಾಸಿ
ಎರಡರಲ್ಲಿ ಬಂಧಿಸಿ ಒಂದುಗೂಡಿ
ಮಂಡೆಯ ಮೇಲೆತ್ತಿದವಂಗೆ ಮತ್ತೆ ಅವು ಹಿಂಗುವ ಠಾವಿಲ್ಲ,
ಕಾಮಹರಪ್ರಿಯ ರಾಮನಾಥಾ.

992
ವ್ಯವಹಾರವ ಮಾಡಿದಲ್ಲಿ ಲಾಭವ ಕಾಣದಿರ್ದಡೆ
ಆ ವ್ಯವಹಾರವೇತಕ್ಕೆ?
ಗುರುಲಿಂಗ ಜಂಗಮಕ್ಕೆ ಖ್ಯಾತಿಗೆ ಮಾಡಿದಡೆ
ಮೊದಲು ತಪ್ಪಿ ಲಾಭವನರಸುವಂತೆ,
ಕಾಮಹರಪ್ರಿಯ ರಾಮನಾಥಾ.

993
ಹಸಿವು ಮುಂತಾಗಿ ಬಹಾತನ ಮನೆಯೊದವ ಬಲ್ಲನೆ?
ವಿಷಯವಾವರಿಸಿದಾತ ಸ್ತುತಿ ನಿಂದ್ಯಾದಿಗಳ ಬಲ್ಲನೆ?
ಖ್ಯಾತಿಯ ಲಾಭಕ್ಕೆ ಮಾಡುವಾತ ಭ್ರಾಂತಳಿದಿರಬಲ್ಲನೆ?
ಇಂತಿವನರಿದು ಮಾಡುವ ಭಕ್ತರು
ಆಪ್ಯಾಯನಕ್ಕೆ ಅನ್ನ ಅಶಕಂಗೆ ಹೊನ್ನು ವಿಷಯಾದಿಗೆ ಹೆಣ್ಣು
ಇಚ್ಛೆಯನರಿದು ಒದಗಿದಲ್ಲಿ ಕೊಟ್ಟು
ಈ ತ್ರಿವಧಕುಚಿತವೆಂದವರನರಿಯಬೇಕು.
ಕಾಮಹರಪ್ರಿಯ ರಾಮನಾಥಾ.

994
ಹಾದರವನಾಡುವನೆ ಸದ್ಭಕ್ತ?
ಹಾದಿಯ ಕಟ್ಟುವನೆ ನಿಜಶರಣ?
ಹಸುಗೊಲೆಯ ಕೊಲುವನೆ ಅಸುವಿನ ಕಲೆಯ ಬಲ್ಲವ?
ಇಂತಿವರ ನೀ ಬಲ್ಲೆ, ನಾನರಿಯೆ
ಕಾಮದಹನಪ್ರಿಯ ರಾಮನಾಥಾ.

995
ಹಾದರ ಹಸುಗೊಲೆ ವಿಷಯಂಗಳಲ್ಲಿ ಆದರಿಸಬೇಕು.
ಬಲ್ಲವರಲ್ಲಿದ್ದು ಸಾಧನೆಯಾಯಿತ್ತು.
ಎಲ್ಲರೂ ಕಲಿತ ಕಲಿಕೆಯಲ್ಲಿ ಇದನು ಭೇದಿಸಲರಿಯೆ
ಕಾಮಹರಪ್ರಿಯ ರಾಮನಾಥಾ.

996
ಹುಟ್ಟುವ ಜೀವಿಗಳೆಲ್ಲರೂ ಹಲವು ತೆರದ ಘಟದಲ್ಲಿ ಬಂದು
ತಮ್ಮ ಕ್ಷುತ್ತುವ ಕೊಂಬಂತೆ
ಮರ್ತ್ಯದಲ್ಲಿ ಬಂದವರೆಲ್ಲರೂ ನಿಶ್ಚಯರಪ್ಪರೆ?
ಬಚ್ಚತ ಹರಿಯಜ ರುದ್ರರು ಮೊದಲಾದವರೆಲ್ಲರೂ
ಸಿಕ್ಕಿದರೇಕೆ ಮಾಯೆಗೆ?
ಇದರಚ್ಚಿಗವ ಕಂಡು ನಾನು ಭಕ್ತನೆಂದಡೆ ತಪ್ಪ ಸಾಧಿಸುವ
ಕಾಮಹರಪ್ರಿಯ ರಾಮನಾಥಾ.