Categories
ಶರಣರು / Sharanaru

ತೆಲುಗೇಶ ಮಸಣಯ್ಯ

ಅಂಕಿತ: ತೆಲುಗೇಶ್ವರ’
ಕಾಯಕ: ಪಶುಪಾಲಕ (ಗೋವುಗಳನ್ನು ಕಾಯುವ ಕಾಯಕ)

೧೦೪೬
ತಲೆಯ ಮೇಲೆ ತಲೆಯುಂಟೆ?
ಗಳದಲ್ಲಿ ವಿಷವುಂಟೆ?
ಹಣೆಯಲ್ಲಿ ಕಣ್ಣುಂಟೆ?
ದೇವರೆಂಬವರಿಗೆಂಟೊಡಲುಂಟೆ?
ತಂದೆ ಇಲ್ಲದವರುಂಟೆ?
ತಾಯಿ ಇಲ್ಲದವರುಂಟೆ?
ಎಲೊ! ನಿನ್ನ ನೊಸಲಲ್ಲಿ ನೇಸರು ಮೂಡದೆ?
ಶಂಭು ತೆಲುಗೇಶ್ವರಾ,
ನಿನಗಲ್ಲದುಳಿದ ದೈವಂಗಳಿಗುಂಟೆ ಕಾಲೊಳು ಕಣ್ಣು?

ಗೋವುಗಳನ್ನು ಕಾಯುವ ಕಾಯಕವನ್ನು ಕೈಕೊಂಡ ಈತನ ಕಾಲ ೧೧೬೦. ಈ ಹೆಸರಿನ ಜೊತೆಯ ‘ತೆಲುಗೇಶಲಿಂಗ’ವನ್ನು ಕುರಿತುದಾಗಿರಬೇಕು. ‘ತೆಲುಗೇಶ್ವರ’ ಅಂಕಿತದಲ್ಲಿ ೭ ವಚನ ದೊರೆತಿವೆ. ಗೋವಳನ ವೇಷ ಭೂಷಣ, ಆತ ಊದುವ ಕೊಳಲಿನ ವರ್ಣನೆ ಕಣ್ಣಿಗೆ ಕಟ್ಟುವಂತಿವೆ. ಶರಣರ ಮಹಿಮಾತಿಶಯಗಳನ್ನು ಹೇಳುವ ಮಾತುಗಳು ಸುಂದರವಾಗಿವೆ. ನೂತನ ಕಲ್ಪನೆಯಿಂದ ಕೂಡಿವೆ.

೧೦೪೭
ಧರೆ ಗಿರಿಯನಂಬರವ ಖರಕಿರಣನ ಪ್ರಭೆಯ,
ಸುರಿವ ಮಳೆ ಉರಿವಗ್ನಿ ಮಾರುತನನು,
ಹರಿವಿರಂಚಿಗಳ ಕುಬೇರ ಇಂದ್ರ ಚಂದ್ರಾಮರರನು,
ಹರನು ಹಡದಲ್ಲಿ ನೆರವಾದವರೊಳರೆ?
ಕರಕಷ್ಟದ ಮಾನವರು ಪರಪುಟ್ಟದ ಮರಿಯಂತೆ
ಹರನ ದಾನವನುಂಡು ಬೇರೆ ಪರದೈವವುಂಟೆಂದು ಬೆಸಕೈವರು.
ಎರಡೇಳು ಲೋಕಕ್ಕೆ ಪರಮಪ್ರಭು
ತೆಲುಗೇಶ್ವರನೊಬ್ಬನೇ ಎಂದೆನ್ನದವನ ಬಾಯಲ್ಲಿಪಾಕುಳ.

ಒಂದು ವಚನದಲ್ಲಿ ಗೋವಳನ ವಸ್ತ್ರ ಭೂಷಣಾದಿಗಳ ಚಿತ್ರ ನೀಡಿರುವನು. ಶಿವನ ಒಂದು ವರ್ಣನೆ ಅದ್ಭುತವಾಗಿದೆ. ಗುರು ಕರುಣದ ಬಗೆಗೆ ಹೇಳುತ್ತ ಲಿಂಗಧಾರಣೆ ಹೊಂದುವುದೇ ಸದಾಚಾರ ಇಲ್ಲದಿದ್ದರೆ ಅನಾಚಾರ ಎಂದಿರುವನು.

೧೦೪೯
ಹಳದಿಯ ಸೀರೆಯನುಟ್ಟು,
ಬಳಹದೋಲೆಯ ಕಿವಿಯಲಿಕ್ಕಿ
ಮೊಳಡಂಗೆಯ ಪಿಡಿದು, ಗುಲಗಂಜಿ ದಂಡೆಯ ಕಟ್ಟಿ
ತುತ್ತುರುತುರು ಎಂಬ ಕೊಳಲ ಬಾರಿಸುತ
ಅಪಳ ಚಪಳನೆಂಬ ಉಲಿವ ಗಂಟೆಯ ಕಟ್ಟಿ
ತುತ್ತುರು ಜಂಗುಳಿ ದೈವಗಳನೆಲ್ಲವ ಹಿಂಡುಮಾಡಿ
ಕಾವ ನಮ್ಮ ಶಂಭು ತೆಲುಗೇಶ್ವರನು ಮನೆಯ ಗೋವಳನೀತ.

ಹಳದಿಯ ಸೀರೆಯನ್ನು ಉಟ್ಟುಕೊಂಡು, ಬಹಳದೋಲೆಯನ್ನು ಕಿವಿಗೆ ಧರಿಸಿಕೊಂಡು, ಗುಲಗಂಜಿ ದಂಡೆಯನ್ನು ಕಟ್ಟಿಕೊಂಡು ಕೊಳಲು ನುಡಿಸುವ ಗೋವಳಿಗನ ಬಗ್ಗೆ ಇವರು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಚನದ ಮೂಲಕ 12ನೇ ಶತಮಾನದ ದನ ಕಾಯುವ ಕಾಯಕ ಮಾಡುವವರ ಉಡುಪುಗಳು ನಮ್ಮ ಕಣ್ಣ ಮುಂದೆ ಬರುತ್ತದೆ.

ಕಾಮ ಸನ್ನಿಭನಾಗಿ ತಾ ಚೆಲುವನಾದಡೆ
ಕಾಮಿನೀಜನವೆಲ್ಲಾ ಮೆಚ್ಚಬೇಕು.
ದಾನಗುಣದವನಾಗಿ ಕರೆದೀವನಾದಡೆ
ಯಾಚಕಜನವೆಲ್ಲಾ ಮೆಚ್ಚಬೇಕು.
ವೀರನಾದಡೆ ವೈರಿಗಳು ಮೆಚ್ಚಬೇಕು.
ಖೂಳನಾದಡೆ ತನ್ನ ತಾ ಮೆಚ್ಚಿಕೊಂಬ.
ಎನ್ನ ದೇವ ತೆಲುಗೇಶ್ವರನಲ್ಲಿ ತಾನು ಭಕ್ತನಾದಡೆ,
ದೇವರು ಮೆಚ್ಚಿ ಜಗವು ತಾ ಮೆಚ್ಚುವುದು.

ಕಾಯಕ ಮಾಡುವವರಿಗೆ ಆ ಕೆಲಸ ಈ ಕೆಲಸ ಎಂಬ ತಾರತಮ್ಯವಿಲ್ಲ. ತಮಗಿಷ್ಟವಾದ ಕಾಯಕದ ಮೂಲಕ ಶಿವ ಮೆಚ್ಚುವ ಕೆಲಸದ ಮೂಲಕ ಕೈಲಾಸವು ಸಾಧ್ಯ ಎಂದು ವಿಶ್ವಕ್ಕೆ ಆದರ್ಶದ ದಾರಿಯನ್ನು ತೋರಿಸಿದ್ದಾರೆ. ಅಂತಹ ಶರಣರಲ್ಲಿ ತೆಲುಗೇಶ ಮಸಣಯ್ಯ ಶರಣರೂ ಒಬ್ಬರಾಗಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.

ಕಾಯಕದಲ್ಲಿ ಮೇಲು-ಕೀಳು ಎಂಬುದೇ ಇಲ್ಲ. ಯಾವುದೇ ಕಾಯಕ ಮಾಡಿದರೂ ಅದನ್ನು ಪ್ರೀತಿಯಿಂದ ಮಾಡಬೇಕು. ಅದರಲ್ಲಿ ತನ್ನತನ ಕಾಣಬೇಕು. ಶರಣರು ಪ್ರೀತಿಯಿಂದ ಕಾಯಕ ಮಾಡಿಕೊಂಡು ಬದುಕನ್ನು ಸಾಗಿಸಿದ್ದಾರೆ. ಇಂತಹ ಪವಿತ್ರ ಬದುಕಿನಂತೆ ನಾವುಗಳು ನಡೆಯುವುದು ಈ ಮಾನವ ಜನ್ಮಕ್ಕೆ ಕ್ಷೇಮವಾಗಿದೆ.

ತೆಲುಗೇಶ ಮಸಣಯ್ಯನವರು ಸಾಮಾನ್ಯ ಶರಣರಂತೆ ಕಂಡರೂ ಇವರ ವಚನಗಳನ್ನು ಗಮನಿಸಿದಾಗ ಅನುಭಾವ ಗಳಿಕೆಯಲ್ಲಿ ಸಿರಿವಂತರೆಂದು ತಿಳಿಯಬಹುದು. ದನ ಕಾಯುವ ಕೆಲಸ ಮಾಡಿದರೂ ಲಿಂಗಾನುಭವಿಯಾಗಿರುವುದು ಕಂಡು ಬರುತ್ತದೆ. ಅಂಗದ ಮೇಲೆ ಲಿಂಗವನ್ನು ಕಟ್ಟಿಕೊಳ್ಳಬೇಕೆಂದು ಹೇಳಿದ್ದಾರೆ. ಇಷ್ಟಲಿಂಗ ಸಂಸ್ಕಾರವನ್ನು ಪಡೆಯದೆ ಗುರುಕಾರುಣ್ಯವನ್ನು ಪಡೆದಂತಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗೆ ಇವರು ತಮ್ಮ ವಚನದಲ್ಲಿ ಲಿಂಗಧಾರಣೆಯ ಮಹತ್ವವನ್ನು ತಿಳಿಸಿದ್ದಾರೆ. ಮಸಣಯ್ಯನವರು ಶ್ರೇಷ್ಠ ಸದಾಚಾರಿ, ಶಿವಾನುಭವಿಯಾಗಿದ್ದರು. ಇವರ ವಚನಗಳು ತುಂಬಾ ಸರಳವಾಗಿದ್ದು, ಇದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಲಿಂಗನಿಷ್ಠೆ, ಗುರುನಿಷ್ಠೆ ಹೊಂದಿದ ಇವರು ಒಬ್ಬ ಶ್ರೇಷ್ಠ ಶರಣರಾಗಿದ್ದರೆಂಬುದು ಸತ್ಯವಾಗಿದೆ.