Categories
ವಚನಗಳು / Vachanagalu

ದಶಗಣ ಸಿಂಗಿದೇವಯ್ಯ ವಚನಗಳು

1050
ಪೂರ್ವಕರ್ಮವ ಕೆಡಸಿದನೆನ್ನ ಗುರು
ಉಭಯ ಕರ್ಮವ ಬಿಡಿಸಿ ತೋರಿದ ಶರಣರ.
ಅವರಿಂದ ಬದುಕಿದೆನು.
ತೋರಿದ ಸದುಭಕ್ತರ;
ಅವರಿಂದ ಬದುಕಿದೆನು.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?
1051
ಮುಂಚಿದೆನಯ್ಯಾ ಪರಬ್ರಹ್ಮವ
ಮುಂಚಿದೆನಯ್ಯಾ ಸಾಲೋಕ್ಯ ಸಾಮೀಪ್ಯ
ಸಾರೂಪ್ಯ ಸಾಯುಜ್ಯ ಪದವಿಯ,
ಮುಂಚಿದೆನಯ್ಯಾ ನಾಚಯ್ಯಪ್ರಿಯ ಮಲ್ಲಿನಾಥಾನಿಮ್ಮಿಂದ.
1052
ಸತಿ ಸುತ ಮಾತಾಪಿತರಿಗೆಂದು ಪಡೆದಡೆ ನಿಮ್ಮಾಣೆ ಕಂಡಯ್ಯಾ.
ಮಾನವರ ಸೇವೆಯ ಮಾಡಿದಡೆ ನಿಮ್ಮಾಣೆ ಕಂಡಯ್ಯಾ.
ನೀವಲ್ಲದನ್ಯಕ್ಕೆರಗಿದಡೆ ನಿಮ್ಮಾಣೆ ಕಂಡಯ್ಯಾ.
ಎನ್ನ ಸತಿಯಲ್ಲದನ್ಯ ಸತಿಗಳುಪಿದಡೆ ನಿಮ್ಮಾಣೆ ಕಂಡಯ್ಯಾ.
ತನು ಮನ ಧನ ವಂಚನೆಯಾದಡೆ
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ, ನಿಮ್ಮಾಣೆ ಕಂಡಯ್ಯಾ.

1053
ಹೆಂಡಿರೆನ್ನದ ಮಕ್ಕಳೆನ್ನದ ತೊತ್ತಿರೆನ್ನದ
ಬಂಟರೆನ್ನದ ಹಗೆಗಳೆನ್ನದ ತಪ್ಪೆನ್ನದಯ್ಯಾ.
ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿ ತಪ್ಪೆನ್ನದಯ್ಯಾ.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ನೀನಿರ್ದವರ ನೀನೆನ್ನದ ತಪ್ಪೆನ್ನದಯ್ಯಾ.