Categories
ವಚನಗಳು / Vachanagalu

ಧರ್ಮ ಗುರು ಬಸವಣ್ಣನವರ ವಚನಗಳು

ಕಾಣದುದನೆಲ್ಲವ ಕಾಣಲಾರೆನಯ್ಯಾ,
ಕೇಳದುದನೆಲ್ಲವ ಕೇಳಲಾರೆನಯ್ಯಾ.
ದ್ರೋಹವಿಲ್ಲ ಎಮ್ಮ ಶಿವನಲ್ಲಿ, ಸೀಮೆಯಯ್ಯಾ.
ಒಲೆಯ ಮುಂದಿದ್ದು ಮಾಡದ ಕನಸ ಕಾಂಬವರನೊಲ್ಲನಯ್ಯಾ
ಕೂಡಲಸಂಗಮದೇವ./501
ಕಾಣಬಹುದೆ ಪರುಷದ ಗಿರಿ ಅಂಧಕಂಗೆ
ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ
ತೆಗೆಯಬಹುದೆ ಕಡವರವು ದಾರಿದ್ರಂಗೆ
ಕರೆಯಬಹುದೆ ಕಾಮಧೇನು ಅಶುದ್ಧಂಗೆ
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣು ಮಾಡಿಕೊಂಡಡೆ ಹೋಲಬಹುದೆ
ಎನ್ನೊಡೆಯ ಕೂಡಲಸಂಗನ ಶರಣರನು
ಪುಣ್ಯವಿಲ್ಲದೆ ಕಾಣಬಹುದೆ/502
ಕಾಣಬಾರದ ಘನವ ಕರಸ್ಥಲದಲ್ಲಿ ತೋರಿದ,
ಹೇಳಬಾರದ ಘನವ ಮನಸ್ಥಲದಲ್ಲಿ ತೋರಿದ,
ಉಪಮಿಸಬಾರದ ಘನವ ನಿಮ್ಮ ತೃಪ್ತಿಯ ಮುಖದಲ್ಲಿ ತೋರಿದ.
ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ
ಚೆನ್ನಬಸವಣ್ಣನು ತೋರಿದನಾಗಿ ಆನು ಬದುಕಿದೆನು ಕಾಣಾ
ಕೂಡಲಸಂಗಮದೇವಾ./503
ಕಾಣಬಾರದ ವಸ್ತು ಕೈಗೆ ಸಾರಿತ್ತಯ್ಯಾ,
ಆನಂದದಿಂದ ಆಡುವೆ ಹಾಡುವೆನಯ್ಯಾ,
ಎನ್ನ ಕಣ್ಣ ತುಂಬಿ ನೋಡುವೆ
ಎನ್ನ ಮನವೊಲಿದು ಭಕ್ತಿಯ ಮಾಡುವೆ
ಕೂಡಲಸಂಗಯ್ಯಾ ನಿನಗೆ./504
ಕಾಣಿಯ ಲೋಭ ಕೋಟಿಯ ಲಾಭವ ಕೆಡಿಸಿದುದ ನಾನರಿಯೆನಯ್ಯಾ.
ಭಕ್ತಿಯ ಕುಳವನರಿಯದೆ ಮತಿಗೆಟ್ಟ ಪರಿಯ ನಾನರಿಯೆನಯ್ಯಾ.
ಕೂಡಲಸಂಗನ ಶರಣರ ಸಂಗದಿಂದ ಅರಿದಡೆ
ನಾನು ಬದುಕುವೆನಯ್ಯಾ./505
ಕಾಣುತ್ತ ಕಡೆಗಣಿಸಿ, ಕೆಡಿಸಿ, ಅರಸುವ ಮತಿಭ್ರಷ್ಟ ನಾನು ಲಿಂಗಯ್ಯಾ.
ತನುಲೋಭ ಮನಲೋಭ ಧನಲೋಭ ಮುಂದುಗೆಡಿಸಿ ಕಾಡಿಹವೆನ್ನ.
ತನು ಮನ ಧನವ ನಿವೇದಿಸಿದವರ ಮನೆಯ ಮಗ ನಾನಯ್ಯಾ,
ಕೂಡಲಸಂಗಮದೇವಾ./506
ಕಾಮದಹನವ ಮಾಡಿದನು,
ದಕ್ಷನ ಯಜ್ಞವ ಕೆಡಿಸಿದನು,
ಒಳ್ಳೆಯ ತ್ರಿಪುರವನುರುಹಿದನು,
ಹಾಳಾಹಳವನೊಮ್ಮೆ ಧರಿಸಿದನು,
ನಮ್ಮ ಕೂಡಲಸಂಗಮದೇವನು./507
ಕಾಮಧೇನು ನಿಮ್ಮ ಸಾರಿರಲು ಪರರ ಬೇಡಲಾರೆನಯ್ಯಾ.
ನಿಮ್ಮುವ ಪೂಜಿಸಿ ಭವಬಂಧನ ಬಿಡದೇಕಯ್ಯಾ ಹಿಂದಣ ಜನ್ಮದ ಚಿಹ್ನೆ ಬಿಡದನ್ನಕ್ಕ
ನಿಮ್ಮ ಪೂಜಿಸಿ ಏವೆನಯ್ಯಾ ಎನ್ನ ಮನದ ಅವಗುಣವ ಕಳೆದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಸಂಗಮದೇವಾ./508
ಕಾಮವ ತೊರೆದಾತ, ಹೇಮವ ಜರೆದಾತ,
ಭಾನುವಿನ ಉದಯಕ್ಕೆ ಒಳಗಾಗದ ಶರಣನು.
ಆಗಳೂ ನಿಮ್ಮ ಮಾಣದೆ ನೆನೆವರ ಮನೆಯಲು ಶ್ವಾನನಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ./509
ಕಾಮವೇಕೊ, ಲಿಂಗಪ್ರೇಮಿಯೆನಿಸುವಂಗೆ
ಕ್ರೋಧವೇಕೊ, ಶರಣವೇದ್ಯನೆನಿಸುವಂಗೆ
ಲೋಭವೇಕೊ, ಭಕ್ತಿಯ ಲಾಭವ ಬಯಸುವಂಗೆ
ಮೋಹವೇಕೊ ಪ್ರಸಾದವೇದ್ಯನೆನಿಸುವಂಗೆ
ಮದಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ./510
ಕಾಮಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು,
ಶಿವಂಗೆ ಮಿಗೆ ಒಲಿದವರನು ನಾನು ಆಗಲಲಾರೆನು ಕಾಣಾ,
ಕೂಡಲಸಂಗಮದೇವಾ./511
ಕಾಮ್ಯ ಕಲ್ಪಿತಂಗಳಿಲ್ಲದೆ, ನಿಮ್ಮಿಂದ ನೀವೆ ಸ್ವಯಂಭುವಾಗಿದ್ದಿರ[ಲ್ಲಾ],
ನಿಮ್ಮ ಪರಮಾನಂದದ ಪ್ರಭಾಪರಿಣಾಮದಲ್ಲಿ ಒಂದನಂತಕಾಲವಿದ್ದಿರಲ್ಲಾ,
ನಿಮ್ಮಾದ್ಯಂತವ ನೀವೆ ಅರಿವುತಿದ್ದಿರಲ್ಲಾ,
ನಿಮ್ಮ ಸ್ವಭಾವದುದಯವ ನೀವೆ ಬಲ್ಲಿರಿ, ಕೂಡಲಸಂಗಮದೇವಾ. /512
ಕಾಯದ ಕಪಟವು ಬಿಡದೆನಗಿನ್ನೆಂತಯ್ಯಾ
ಮಾಯಾಪ್ರಪಂಚಿನ ಬಲೆಯೊಳಗೆ ಸಿಲುಕಿದೆ,
ವಾಯದ ಸಂಭ್ರಮವದಿಕ ಹಿರಿದೆನಗೆ,
ಇದಾವ ಭಾವದ ಮುಖವೆಂದರಿಯದೆ,
ಜ್ಞಾನಶೂನ್ಯವಾಗಿರ್ದೆನಯ್ಯಾ.
ಅಷ್ಟಮದಂಗಳನು ಸೃಷ್ಟಿಸಿಯಿದ್ದಿರಾಗಿ
ಕಟ್ಟುಗ್ರದಿಂದ ನಿಮ್ಮ ಕಾಣಲೀಯವು.
ಎನ್ನ ತನುವಿನ ಅವಗುಣ, ಮನದ ಮರ್ಕಟತನ ಬಿಡದು,
ನೀನೇ ಗತಿ ಕೂಡಲಸಂಗಮದೇವಾ,
ನಿಮ್ಮ ಶರಣರ ಇರವನರಿಯದೆ ಭವದುಃಖಿಯಾದೆನಯ್ಯಾ./513
ಕಾಯದ ಕರಣದ ಕೈಯಲು ಪದಾರ್ಥವ ಹಿಡಿವಲ್ಲಿ
ನಿಮಗೆ ಕೊಡುವ ಭರದ ಬಿತಿಯಿಂದ ಆನರಿಯದಿಪ್ಪೆನಾಗಿ,
ಎನ್ನ ನೀನರಿದು ಸಲಹುತ್ತಿಯಯ್ಯಾ,
ಕೂಡಲಸಂಗಮದೇವಾ. /514
ಕಾಯದ ಕಳವಳಕ್ಕಂಜಿ, `ಕಾಯಯ್ಯಾ’ ಎನ್ನೆನು,
ಜೀವನೋಪಾಯಕ್ಕೆ `ಈಯಯ್ಯಾ’ ಎನ್ನೆನು.
`ಯದ್ ಭಾವಂ ತದ್ ಭವತಿ’ ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯಾ.
ಆ ನಿಮ್ಮ ಹಾರೆನು, ಮಾನವರ ಬೇಡೆನು.
ಆಣೆ ನಿಮ್ಮಾಣೆ, ಕೂಡಲಸಂಗಮದೇವಾ. /515
ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂ[ತವರಿ]ರಲಿ,
ಷಡು ಮಹಾವೇದ ಶಾಸ್ತ್ರಗಮಪುರಾಣದರ್ಥವನೋದಿ
ಲಿಂಗ ಉಂಟು, ಇಲ್ಲೆಂಬ ಅಜ್ಞಾನಿಗಳಂತಿರಲಿ.
ಷಡುಶೈವರು ಹಂಚಾಗಿ ಹೋದರು.
ಎಂತು ನಿಜಲಿಂಗವಂತಂಗೆ ಸರಿಯೆಂಬೆ
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ಧಿತಪ್ಪಿಕ್ರಮಗೆಟ್ಟು ಹೋದರು,
ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು,
ಬ್ರಹ್ಮಾದಿದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು,
ಹಮ್ಮಿಲ್ಲದ ಕಾರಣ
ಕೂಡಲಸಂಗನ ಶರಣರು ಜಂಗವಂದ್ಯರಾದರು./516
ಕಾಯದ ಕುರುಹುವಿಡಿದು ಬಂದೆನೆಂಬ
ಆ ಭಾವದ ಇರವೇತಕ್ಕೆ ನಿಮಗೆ
ಅಂಬರದ ಚಾಪ ಮುಗಿಲೊಳಗೆ ಹೊಂದಿತ್ತೆ
ಬೇರೊಂದರಲ್ಲಿ ಸಂದಿತ್ತೆ ಅದರಂಗದ ಛಾಯೆ.
ಪ್ರಭುದೇವರ ನಿಂದ ಸುಳುಹು
ಕೂಡಲಸಂಗಮದೇವರಲ್ಲಿ
ಭಿನ್ನವಿಲ್ಲದೆ ನಿಂದ ಕಾಯದಂನದಫ./517
ಕಾಯದ ಕೈಯಲ್ಲಿ ಕರಸ್ಥಲ,
ಪ್ರಾಣದ ಕೈಯಲ್ಲಿ ಜಂಗಮಸ್ಥಲ,
ಈ ಉಭಯಭಾವದ ಶಿವಲಿಂಗಾರ್ಚನೆ ಪರಮಾನಂದಸುಖಸ್ಥಲ.
ಕಾಯ ಭಕ್ತ, ಪ್ರಾಣ ಜಂಗಮ,
ಆವುದ ಘನವೆಂಬೆನಾವುದ ಕಿರಿದೆಂಬೆ
ಕೂಡಲಸಂಗನ ಶರಣರು ಬಂದಡೆ ಉಪಚಾರಕ್ಕೆ ಇಂಬಿಲ್ಲ,
ಕರುಣದಿಂದ ಬರಹೇಳಾ, ಅಪ್ಪಣ್ಣಾ./518
ಕಾಯದ ಗಡಣ ಕೆಲಬರಿಗುಂಟು,
ಜೀವದ ಗಡಣ ಕೆಲಬರಿಗುಂಟು,
ಭಾವದ ಗಡಣ ಕೆಲಬರಿಗುಂಟು,
ವಚನದ ಗಡಣ ಕೆಲಬರಿಗುಂಟು.
ಪ್ರಾಣಲಿಂಗದ ಗಡಣ ಆರಿಗೂ ಇಲ್ಲ,
ಕೂಡಲಸಂಗನ ಶರಣರೊಳಗೆ
ತಂಗಟೂರ ಮಾರಯ್ಯಂಗಲ್ಲದೆ. /519
ಕಾಯದ ಲಜ್ಜೆಯ ಕಲ್ಪಿತವ ಕಳೆದು,
ಜೀವದ ಲಜ್ಜೆಯ ಮೋಹವನಳಿದು,
ಮನದ ಲಜ್ಜೆಯ ನೆನಹ ಸುಟ್ಟು,
ಭಾವದ ಕೂಟ ಬತ್ತಲೆಯೆಂದರಿದು,
ತವಕದ ಸ್ನೇಹ ವ್ಯವಹಾರಕ್ಕೆ ಹುಗದು.
ಕೂಡಲಸಂಗಮದೇವಯ್ಯಾ,
ಎನ್ನ ಹೆತ್ತ ತಾಯಿ ಮಹದೇವಿಕ್ಕನ ನಿಲವ ನೋಡಯ್ಯಾ ಪ್ರಭುವೆ./520
ಕಾಯವಿಕಾರ ಕಾಡಿಹುದಯ್ಯಾ,
ಮನೋವಿಕಾರ ಕೂಡಿಹುದಯ್ಯಾ.
ಇಂದ್ರಿಯ ವಿಕಾರ ಸುಳಿವುದಯ್ಯಾ !
ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ !
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ.
ಅನುಪಮಸುಖಸಾರಾಯ ಶರಣರಲ್ಲಿ-
ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ./521
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯದಾನ,
ಸಮತೆ ಎಂಬ ಜಲ ಕರಣಾದಿಗಳೆ ಶ್ರಪಣ.
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಕದಲ್ಲಿ ಘಟ್ಟಿಸಿ, ಪಾಕಕ್ಕೆ ತಂದು,
ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದಡೆ
ಕೂಡಲಸಂಗಮದೇವಂಗಾರೋಗಣೆಯಾಯಿತ್ತು. /522
ಕಾಯಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ.
ಮಿಗೆ ಒಲಿದೆನಾಗಿ ಅಗಲಲಾರೆ.
ನಗೆಮೊಗದರಸ, ಅವಧಾರು.
ಕೂಡಲಸಂಗಮದೇವಾ,
ಬಗಿದು ಹೊಗುವೆನು ನಾ ನಿಮ್ಮ ಮನವನು./523
ಕಾಲ ಮುಟ್ಟಲಮ್ಮದ ಸಯದಾನ, ಕಲ್ಪಿತವಿಲ್ಲದ ಸಯದಾನ.
ಅನಂತರತಿ ಎಂಬ ಹೆಂಗೂಸ ಮುಟ್ಟದ ಸಯದಾನ.
ಭಾಳಲೋಚನನೆಂಬ ಜಂಗಮ ಮುಟ್ಟದ ಸಯದಾನ.
ಎಲ್ಲಿಯೂ ಮುಟ್ಟದ ಸಯದಾನವ ನಿಮಗರ್ಪಿಸಿದೆನು
ಆರೋಗಿಸಯ್ಯಾ ಪ್ರಭುವೆ, ಕೂಡಲಸಂಗಮದೇವಾ./524
ಕಾಲದಿಂದ ಕಡೆಮುಟ್ಟ ಮಾಡಿದ ಲೇಸು
ಒಂದು ದಿನ ಉದಾಸೀನವ ಮಾಡಿದಡೆ
ಅದೆಲ್ಲವು ವ್ಯರ್ಥವಾಗಿ ಹೋಹುದು ಕೇಳಯ್ಯಾ.
ಸಾವಿರ ನೋಂಪಿಯ ನೋಂತು ಒಂದು ಬಾರಿ ಹಾದರವನಾಡಿದಡೆ
ಆ ನೋಂಪಿಯೆಲ್ಲವು ನೀರಲ್ಲಿ ನೆರೆದು ಹೋಹಂತೆ ಕೇಳಯ್ಯಾ.
ನಾನು ಎಷ್ಟು ಭಕ್ತಿಯ ಮಾಡಿದಡೇನು
ನಿಮ್ಮ ಶರಣರ ಮನವೆಳ್ಳನಿತು ನೊಂದಡೆ,
ಎನ್ನ ಭಕ್ತಿಯಭಿಮಾನ ಹೋಯಿತ್ತಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಮುನಿಸನಾವಪರಿಯಲ್ಲಿ ತಿಳುಹುವೆ
ಹೇಳಾ, ಎಲೆ ಪ್ರಭುವೆ./525
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ, ಕೂಡಲಸಂಗಯ್ಯಾ./526
ಕಾಲಲೊದೆದು ಬಡಿದು ಜಡಿವರಯ್ಯಾ, ಭಕ್ತಿಯೆಯ್ದದೆಂದೆನ್ನ.
ಜರೆವರಯ್ಯಾ, ನುಡಿವರಯ್ಯಾ,
ಕೂಡಲಸಂಗನ ಶರಣರೊಡೆಯರಾಗಿ/527
ಕಾಲಾಗ್ನಿರುದ್ರನ ಮೇಳಾಪವನರಿಯದವರು
ಕಾಳುಬೇಳೆನುತಿಪ್ಪರಯ್ಯಾ.
ಕಾನನದಡವಿಯಲ್ಲಿ ಕಿಚ್ಚು [ಬೇ]ಳುವೆಯಾಗಿ
ಮಿಕ್ಕಡೊರಲುವ ಬಳ್ಳುವಿನಂತೆ ಇಪ್ಪರಯ್ಯಾ,
ಮನುಜರು ನರವಿಂಧ್ಯದೊಳಗೆ.
ತತ್ಕಾಲಪ್ರೇಮವನರಿಯದೆ ವಿಭವಕ್ಕೆ ಮಾಡಿದ ಭಕ್ತಿ
ಇರುಳು ಸತ್ತಿಗೆಯ ಹಿಡಿುಸಿಕೊಂಬಂತೆ ಕೂಡಲಸಂಗಮದೇವಾ./528
ಕಾಲಿಲ್ಲದೆ ನಡೆವನು, ಕೈಯಿಲ್ಲದೆ ಹಿಡಿವನು,
ಕಣ್ಣಿಲ್ಲದೆ ನೋಡುವನು ಸಹಜವಾಗಿ.
ಮೈಯಿಲ್ಲದ ಬಣ್ಣ, ಮಥನವಿಲ್ಲದ ಕೂಟ.
ಸೈವೆರಗಾಗಿ, ಸಿಡಿಯ ಮೇಲೆ ಒಡಲು ತನ್ನನರಿಯದು,
ಒಡಲ ತಾನರಿಯನು
ಬಿಡದೆ ಎನ್ನ ಬೆಂಬತ್ತಿ ಬಂದ ಪರಿಯ ನೋಡಾ.
ಜಡವಿಡಿದ ಎನ್ನ ಕಾಯದ ಕಳವಳವ ತಿಳುಹಲೆಂದು,
ಅಡಿಗಡಿಗೆ ಅನುಭಾವವ ತೋರುತ್ತಲಿದ್ದಾನೆ.
ಕುಳ್ಳಿತ್ತೆಡೆಯಲ್ಲಿ ಕುಂಟ, ನಿಂದಿದ್ದೆಡೆಯಲ್ಲಿ ಹೆಳವ.
ಎಲ್ಲಿ ನೋಡಿದಡಲ್ಲಿ ಪರಿಪೂರ್ಣನು.
ಮೆಲ್ಲಮೆಲ್ಲನೆ ಒಳಗ[ನ]ರಿದು ತೋರುತ್ತೈದಾನೆ.
ಬಲ್ಲವರೆಲ್ಲಾ ಬದುಕಿಯೆಂದು
ಝಲ್ಲರಿಯ ಮೇಲೊಂದು ಬೆಳುಗೊಡೆಯ ಹಿಡಿದು
ಬಲ್ಲಿದನಾನೆಯ ತಡೆದು ನಿಲ್ಲಿಸಬಲ್ಲನು.
ಕೂಡಲಸಂಗಮದೇವರ ಮಹಾಮನೆಯಲ್ಲಿ
ಪ್ರಭುದೇವರ ಮೊರೆಯ ಹೊಕ್ಕು ಬದುಕಿದೆನು./529
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ,
ನಂಬಿ ಕರೆದಡೋ ಎಂದೆ,
ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ,
ಕೂಡಲಸಂಗಮದೇವಾ
ಎನ್ನನೇಕೆ ಒಲ್ಲೆಯಯ್ಯಾ/530
ಕಾಳಿಯ ಕಂಕಾಳದಿಂದ ಮುನ್ನ,
ತ್ರಿಪುರಸಂಹಾರದಿಂದ ಮುನ್ನ,
ಹರಿ ವಿರಿಂಚಿಗಳಿಂದ ಮುನ್ನ,
ಉಮೆಯ ಕಲ್ಯಾಣದಿಂದ ಮುನ್ನ,
ಮುನ್ನ ಮುನ್ನ ಮುನ್ನ-
ಅಂದಿಂಗೆಳೆಯ ನೀನು, ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವಾ. #
ಆಸತ್ತೆ ಅಲಸಿದೆನೆಂದಡೆ ಮಾಣದು,
ಬೇಸತ್ತೆ ಬೆಂಬಿದ್ದೆನೆಂದಡೆ ಮಾಣದು,
ಏವೆನೇವೆನೆಂದಡೆ ಮಾಣದು,
ಕಾಯದ, ಕರ್ಮದ ಫಲಭೋಗವು !
ಕೂಡಲಸಂಗನ ಶರಣರು ಬಂದು
ಹೋ ಹೋ, ಅಂಜದಿರೆಂದಡಾನು ಬದುಕುವೆನು./531
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು. /532
ಕಿವಿಯ ಸೂತಕ ಹೋಯಿತ್ತು, ಸದ್ಗುರುವಿನ ವಚನದಿಂದ,
ಕಂಗಳ ಸೂತಕ ಹೋಯಿತ್ತು, ಸದ್ಭಕ್ತರ ಕಂಡೆನಾಗಿ.
ಕಾಯದ ಸೂತಕ ಹೋಯಿತ್ತು, ನಿಮ್ಮ ಚರಣವ ಮುಟ್ಟಿದೆನಾಗಿ.
ಬಾಯ ಸೂತಕ ಹೋಯಿತ್ತು. ನಿಮ್ಮ ಒಕ್ಕುದ ಕೊಂಡೆನಾಗಿ.
ನಾನಾ ಸೂತಕ ಹೋಯಿತ್ತು, ನಿಮ್ಮ ಶರಣರ ಅನುಭಾವಿಯಾಗಿ.
ಕೂಡಲಸಂಗಮದೇವಾ ಕೇಳಯ್ಯಾ
ಎನ್ನ ಮನದ ಸೂತಕ ಹೋಯಿತ್ತು, ನೀವಲ್ಲದಿಲ್ಲೆಂದರಿದೆನಾಗಿ./533
ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ
ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ
ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆ ಇಲ್ಲ, ನೂತವರಾರೋ
ತನ್ನೊಡಲ ನೂಲ ತೆಗೆದು ಪಸರಿಸಿ, ಅದರೊಳು ಪ್ರೀತಿಯಿಂದೊಲಿದಾಡಿ,
ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ,
ತನ್ನಿಂದಾದ ಜಗವ ತನ್ನೊಳಗೈದಿಸಿಕೊಳಬಲ್ಲ
ನಮ್ಮ ಕೂಡಲಸಂಗಮದೇವರು./534
ಕುಂಡಲಿಗನೊಂದು ಕೀಡೆಯ ತಂದು
ತನ್ನಂತೆ ಮಾಡಿತಲ್ಲಾ, ಎಲೆ ಮಾನವಾ,
ಕೇಳಿ ನಂಬಯ್ಯಾ, ನೋಡಿ ನಂಬಯ್ಯಾ,
ಎಲೆ ಮಾನವಾ.
ತ್ವಚ್ಚಿಂತಯಾ ಮಹಾದೇವ ತ್ವಾಮೇವೈತಿ ನ ಸಂಶಯಃ
ಭ್ರಮದ್ಭ್ರಮರಚಿಂತಾಯಾಂ ಕೀಟೋಡಿಪಿ ಭ್ರಮರಾಯತೇ
ಕೂಡಲಸಂಗನ ಶರಣರ ಅನುಭಾವ
ಇದರಿಂದ ಕಿರುಕುಳವೆ,
ಎಲೆ ಮಾನವಾ /535
ಕುಂಬಳದ ಕಾುಗೆ ಕಬ್ಬುನದ ಕಟ್ಟ ಕೊಟ್ಟಡೆ
ಕೊಳೆವುದಲ್ಲದೆ ಬಲುಹಾಗಬಲ್ಲುದೆ
ಅಳಿಮನದವಂಗೆ ದೀಕ್ಷೆಯ ಕೊಟ್ಟಡೆ
ಭಕ್ತಿಯೆಂತಹುದು ಮುನ್ನಿನಂತೆ.
ಕೂಡಲಸಂಗಯ್ಯಾ
ಮನಹೀನನ ಮೀಸಲ ಕಾ್ದುರಿಸಿದಂತೆ./536
ಕುದುರನೇಸ ತೊಳೆದಡೆಯೂ ಕೆಸರು ಮಾಬುದೆ
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ.
ಕಂಬಳಿಯಲ್ಲಿ ಕಣಕವ ನಾದಿದಂತೆ ಕಾಣಿರೇ ಎನ್ನ ಮನ.
ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ ಕಾಣಯ್ಯಾ./537
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು,
ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ’ ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡಗೆಡಹಿ ಮೂಗ ಕೊಯ್ಯದೆ ಮಾಬನೆ/538
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-
ತೆರನನರಿಯದೆ ತನಿರಸದ-
ಹೊರಗಣ ಎಲೆಯನೆ ಮೆಲಿದುವು !
ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ ಕೂಡಲಸಂಗಮದೇವಾ /539
ಕುರುಹಿಲ್ಲ ಕುರುಹಿಲ್ಲ ಲಿಂಗವೆಂದೆಂಬಡೆ,
ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬಡೆ.
ಇದೆ ನೋಡಾ ಶಿವಾಚಾರ, ಇದೆ ನೋಡಾ ಶಿವದೊಡಕು !
ಆತ್ಮನಾಂ ಪ್ರಕೃತಿಃ ಸ್ವಭಾವ’ ಎಂದುದಾಗಿ
ಮುಟ್ಟಬಾರದಠಾವ ಮರೆಗೊಂಡಿರ್ಪ
ಮಮಕರ್ತ ಕೂಡಲಸಂಗಮದೇವ. /540
ಕುರುಳು ಬೆರಳು ಮುಡುಹು ಮುಂಬಲ್ಲ ಕೊಳ್ಳಾ,
ನಿರಿಯನಿಕ್ಕಿ ದಾಂಟಿದಡೆ ಅಂತೆನ್ನ ನಂಬಾ,
ಪರಪುರುಷರ ಮುಖವ ನೋಡದಂತೆ ಮಾಡಾ,
ಬಳಿಕ ನೀನೆಹಗೆ ಇರಿಸಿದಂತಿರಿಸಾ,
ಎನ್ನ ಉರದಲ್ಲಿ ಕೂಡಲಸಂಗಯ್ಯನೆಂದು ಬರೆಯಾ,
ಹರಿಬ್ರಹ್ಮರಿಗೆ ಎರಗದಂತೆ ಬಳಿನೀರನೆರೆಯಾ./541
ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು,
ಛಲಗೆಟ್ಟಡೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು,
ಭಕ್ತಿಯ ಅನು ಕೆಟ್ಟಡೆ ಕೆಡಬಹುದಲ್ಲದೆ ಆಯತ ಕೆಡಬಾರದಯ್ಯಾ,
ಆಯತ ಕೆಟ್ಟಡೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ.
ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು,
ಇನ್ನು ಮುಟ್ಟಿದೆನಾದಡೆ ನಿಮ್ಮ ರಾಣಿವಾಸದಾಣೆ./542
ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನು
ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು.
ಸರಿಯೆ ದೇವಭಕ್ತಂಗಿವನು
ಸರಿಯೆ ಲಿಂಗಭಕ್ತಂಗಿವನು
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನ ಕಪಿಲೆಯ ರವಣಶಾಖದ ಉಚ್ಛಿಷ್ಟದ ಹಾಲಿನಿಂದ
ಕೂಳನಟ್ಟುಂಬವರನೇನೆಂಬೆ
ಕೂಡಲಸಂಗಮದೇವಾ. /543
ಕುಲಮದಕ್ಕೆ ಹೋರಿ ಜಂಗಮಭೇದವ ಮಾಡುವೆ, ಫಲವೇನು
ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ.
ಛಲಮದಕ್ಕೆ ಹೋರಿ ಲಿಂಗಭೇದವ ಮಾಡುವೆ,
ಜಂಗುಳಿಯ ಕಾವ ಗೋವ ಹಲವು ಪಶುವ ನಿವಾರಿಸುವಂತೆ
ತನು ಭಕ್ತನಾಯಿತ್ತು, ಎನ್ನ ಮನ ಭವಿ
ಕೂಡಲಸಂಗಮದೇವಾ./544
ಕುಲಮದವಳಿಯದನ್ನಕ್ಕ ಶರಣನಾಗಲೇಕೆ
ವಿಧಿವಶ ಬಿಡದನ್ನಕ್ಕ ಭಕ್ತನಾಗಲೇಕೆ
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕಿಲ ಕಿಂಕಿಲ ಕಿಂಕಿಲನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಪ್ಪಂತೆ ಇಪ್ಪರು
ಕೂಡಲಸಂಗಮದೇವಾ ನಿಮ್ಮ ಶರಣರು./545
ಕುಲವ ನೋಡದೆ, ಛಲವ ನೋಡದೆ,
ನಿಲವ ನೋಡದೆ ಕೂಡಿದ ಬಳಿಕ,
ಅಲ್ಲಿ ಹೆಚ್ಚು ಕುಂದನರಸಲುಂಟೆ
ಮುಂದುವರಿದು ಜಂಗಮಕ್ಕೆ ಭಕ್ತಿಯ ಮಾಡೆಂದು
ನಿಮ್ಮ ಕಾರುಣ್ಯವನುಪದೇಶವ ಮಾಡಿದ ಬಳಿಕ
ಬಂದುದ ಬಂದಂತೆ ಸಮನಿಸಿಕೊಳ್ಳಬೇಕಲ್ಲದೆ
ಅಂತಿಂತೆನಬಾರದು ಕೇಳಯ್ಯಾ.
ನೀನು ನಿರಾಕಾರ, ಸಾಕಾರವೆಂಬೆರಡು
ಮೂರ್ತಿಯ ಧರಿಸಿಪ್ಪೆಯಾಗಿ,
ಒಂದ ಜರೆದು ಒಂದ ಹಿಡಿದಿಹೆನೆಂದಡೆ
ಅದೆ ಕೊರತೆ ನೋಡಾ ಪ್ರಭುವೆ, ಕೂಡಲಸಂಗಮದೇವಾ./546
ಕುಲವನರಸುವರೆ ಇದರೊಳು ಛಲವನರಸುವರೆ
ಹೊಲೆಗೇರಿಯಲೊಂದು ಎಲುವಿನ ಮನೆಗಟ್ಟಿ
ತೊಗಲಹೊದಿಕೆ, ನರವಿನ ಹಂಜರ
ಕುಲವನರಸುವರೆ ?
ಹೊಲತಿ ಹೊಲೆಯ[ನು] ಹೋಗಿ
ಹೊಲೆಯಲ್ಲಿ ಮಿಂದಡೆ
ಹೊಲೆ ಹೋಯಿ[ತ್ತಿ]ಲ್ಲ, ಕುಲ ಹೋಗಲಿಲ್ಲ.
ಕಂಬಳಿಯೊಳಗೆ ಕೂಳಕಟ್ಟಿ ಕೂದಲನರಸುವರೆ
ಇಂಥ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ./547
ಕುಳ್ಳಿರ್ದು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ;
ಬೆಳ್ಳೆ ಎತ್ತಿನ ಮರೆಯಲಿರ್ದು ಹುಲ್ಲೆಗಂಬ ತೊಡುವಂತೆ
ಕಳ್ಳ ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ. /548
ಕೂಪವರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲವ,
ಕೂರದವರಿಗೆ ಹೇಳಿ ನಾನೇವೆನು ಶಿವನೆ
ಕರಲ ಭೂಮಿಯಲ್ಲಿ ಕರೆದ ವ್ಟೃಯ ತೆರನಂತೆ
ಅವರೆತ್ತ ಬಲ್ಲರೆನ್ನ ಸುಖ-ದುಃಖವನು
ಅಂಗತವಿಲ್ಲದ ಸಂಗವು ಅಳಲಿಲ್ಲದ ಹುಯ್ಯಲಂತ,
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ ಬಾುದೆರೆಯೆನು./549
ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ
ಕೂಸಿಂಗಲ್ಲ, ಬೊಜಗಂಗಲ್ಲ.
ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.
ಧನದಾಸೆ ಬಿಡದು ಕೂಡಲಸಂಗಮದೇವಾ./550
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು
ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ
ಅನಂತ ಕೋಟ್ಯನುಕೋಟಿ ಯುಗಂಗಳು
ಮಡಿದುಹೋದವು,
ಅನಂತ ಜಲಪ್ರಳಯಂಗಳು
ಸುರಿದು ಹೋದವು.
ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ
ಲಯವಾಗಿ ಹೋದವು.
ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ
ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ
ಗಂಗೆ ಗೌರೀವಲ್ಲಭರು ಮೊದಲಾದ
ಅನಂತಕೋಟಿ ರುದ್ರಾದಿಗಳೆಲ್ಲರೂ
ಪ್ರಾಣಲಿಂಗಸಂಬಂಧದ ಹೊಲಬನರಿಯದೆ
ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು.
ಶಿವಾಚಾರದ ವಿಚಾರವನರಿಯದೆ
ಜಗವು ಕೆಟ್ಟುಹೋಹುದೆಂದು
ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ ಅವತರಿಸಿ,
ಗುರುಲಿಂಗಜಂಗಮಪಾದೋದಕಪ್ರಸಾದವೆಂಬ
ಪಂಚಾಚಾರಸ್ಥಲವ ನೆಲೆಗೊಳಿಸಿ,
ಷಡುಸ್ಥಲವೆಂಬ ಮಹಾನುಭಾವಮಂ
ಕರತಳಾಮಳಕವಾಗಿ ಸ್ಥಿತಗೊಳಿಸಿ,
ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ,
ಎನ್ನ ಭ್ರಾಂತಿಸೂತಕವ ಬಿಡಿಸಿ,
ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ
ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು.
ಕೂಡಲಸಂಗಮದೇವರು ಸಾಕ್ಷಿಯಾಗಿ
ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ./551
ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ,
ತ್ರೇತಾಯುಗದಲ್ಲಿ ವಾರಣಾಸಿಯೆಂಬ ಮೂಲಸ್ಥಾನ,
ದ್ವಾಪರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ,
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ-
ಈ ನಾಲ್ಕು ಮೂಲಸ್ಥಾನ.
ನಾನಾ ಸ್ಥಾನವ ಮುಟ್ಟದೆ ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ./552
ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ !
ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ. /553
ಕೆಂಡದಲ್ಲಿಟ್ಟಡೆ ಮೆರ್ಐ ಬೆಂದುದೆಂಬರು.
ಕೊಂಡಿಟ್ಟವನ ಕೈ ಮುನ್ನವೆ ಬೆಂದೂದು.
ನೊಂದೆ, ನಾನು ನೊಂದೆನಯ್ಯಾ. ಬೆಂದೆ, ನಾನು ಬೆಂದೆನಯ್ಯಾ.
ಕೂಡಲಸಂಗನ ಶರಣರ ಕಂಡು ಕಾಣದಂತಿದ್ದಡೆ
ಅಂದೇ ಬೆಂದೆನಯ್ಯಾ./554
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ
ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ
ತಾನು ಏನ ಬೇಡಿದುದನೀವನಾಗಿ,
ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ, ಕೂಡಲಸಂಗಮದೇವಾ./555
ಕೆದರಿದ ತಲೆಯ, ತೊನೆವ ನಡೆಯ, ಹಣೆಯ ಬುಗುಟಿನ,
ಕರಸ್ಥಲದ ಅನಿಮಿಷದಿಂದ ಬಹಿರಂಗದ[ವಧಾ]ನ ತಪ್ಪಿ,
ಇದಿರುಗೊಯಿಲು ತಾಗಿ ಪುರ್ಬೊಡೆದು,
ಕಣ್ಣು ತರಿದು, ಕಿವಿ ಹರಿದು,
ಜೋಲುವ ರಕ್ತಧಾರೆಯ, ಗಾಳಿಯ ಧೂಳಿಯ ಮಳೆಯ ಜೋರಿನ,
ಬೆನ್ನ ಬಾಸುಳದ, ಎಡಬಲದ ಬರಿಯ ತದ್ದಿನ,
ಮುಳ್ಳುದರಹಿನ, ಕಂಕುಳ ಸೀಳ ಕಂಡು
ನೋಡುವ ಜನರು ಬೆರಗಾಗೆ_
ಪೊರವಾರಿನ ಮರೆಯ ದಿಗಂಬರದ ಬಣಗು ಸುರಿವುತ್ತ,
ಆಪ್ಯಾಯನವರತು, ಬಿದ್ದು ಮೊಳಕಾಲೊಡೆದು,
ಹೊಸ ಹುಣ್ಣಿನ ರಕ್ತದ ಜೋರು ಹರಿದು,
ಮುಂಗಾಲ ಕಣೆ [ಒ]ಳೆದು, ಕಣಕಾಲ ಸಂದು ತಪ್ಪಿ,
ಕಿರುಬೆರಳು ಎಡಹಿ, ಹೆಬ್ಬೊಟ್ಟೆಡೆದ ಗಾಯದ,
ಉರುಗು ಟೊಂಕದ, ಪೆರಚು ಗುಂಟನ
ನೋಡಾ ಚೆನ್ನಬಸವಣ್ಣಾ.
ಅತ್ಯಂತ ಮಲಿನ ಕೂಡಲಸಂಗಮದೇವರ ಕುರುಹು ವಿಪರೀತ,
ನೋಡುವಡೆ ಭಯಂಕರವಾಗಿದೆ ನೋಡಯ್ಯಾ. /556
ಕೆರೆ ಹಳ್ಳ ಬಾವಿಗಳು ಮೈದೆಗೆದಡೆ
ಗುಳ್ಳೆ ಗೊರಜೆ ಚಿಪ್ಪು ಕಾಣಬಹುದು.
ವಾರುಧಿ ಮೈದೆಗೆದಡೆ
ರತ್ನಮುತ್ತುಗಳ ಕಾಣಬಹುದು.
ಕೂಡಲಸಂಗನ ಶರಣರು ಮನದೆರೆದು ಮಾತನಾಡಿದಡೆ
ಲಿಂಗವ ಕಾಣಬಹುದು. /557
ಕೆರೆಯ ತೂಂಬಿನಾಪ್ಯಾಯನದಂತೆ,
ಪ್ರಭುದೇವಾ ನಿಮ್ಮ ಆಪ್ಯಾಯನವು.
ಕೆರೆಯ ತೂಂಬ ಬಿಡಲೊಡನೆ ಹಲವು ಕದಳಿಗಳೆಲ್ಲಾ ನತಫಣಿದವಯ್ಯಾ.
ಪರಿಣಾಮವೆಂಬ ಕೆರೆಗೆ ಪ್ರಭುವೆಂಬ ತೂಂಬನುಚ್ಚಲು,
ಅಸಂಖ್ಯಾತರೆಂಬ ಕದಳಿಗಳೆಲ್ಲಾ [ತ]ಣಿದವಯ್ಯಾ.
ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರು
ಸರ್ವಜೀವದಯಾಪಾರಿಗಳೆಂಬುದು ಇಂದೆನಗೆ ಅರಿಯ ಬಂದಿತಯ್ಯಾ. /558
ಕೆಲಕ್ಕೆ ಶುದ್ಧನಾದೆನಲ್ಲದೆ, ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ
ಕೈಮುಟ್ಟಿ ಪೂಜಿಸುವಡೆ, ಎನ್ನ ಕೈ ಶುದ್ಧವಲ್ಲಯ್ಯಾ.
ಮನಮುಟ್ಟಿ ಪೂಜಿಸುವಡೆ, ಎನ್ನ ಮನ ಶುದ್ಧವಲ್ಲಯ್ಯಾ.
ಭಾವ ಶುದ್ಧವಾದಡೆ, ಕೂಡಲಸಂಗಯ್ಯನು
ಇತ್ತ ಬಾಯೆಂದತ್ತಿಕೊಳ್ಳನೇಕಯ್ಯಾ/559
ಕೆಸರಲ್ಲಿ ಬಿದ್ದ ಪಶುವಿನಂತೆ
ಆನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ, ಅಯ್ಯಾ.
ಆರೈವವರಿಲ್ಲ, ಅಕಟಕಟ !
ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ./560
ಕೆಳಗೇಳು ಲೋಕ, ಮೇಲೇಳು ಲೋಕ-
ಇಂತೀ ಹದಿನಾಲ್ಕು ಲೋಕಕ್ಕೆ ನೀನೊಡೆಯ,
ನಿನಗೆನ್ನ ಪಾಲಕರು ಭಕ್ತರೊಡೆಯರು.
ನಮ್ಮವರಿಂದ ನಿನ್ನ ಸೂತಕ ಹೋಯಿತ್ತಲ್ಲದೆ
ನಿನ್ನಿಂದ ಒಂದು ತೃಣ ಮಡಿಯದು ಕಾಣಾ,
ಕೂಡಲಸಂಗಮದೇವಾ./561
ಕೇಶವನಲ್ಲದೆ ಅತಃಪರದೈವವಿಲ್ಲೆಂದು
ವೇದವ್ಯಾಸಮುನಿ ಭಂಗಬಟ್ಟುದನರಿಯಿರೆ !
`ಅಹಂ ಸರ್ವಜಗತ್ಕತರ್ಾ ಮಮ ಕತರ್ಾ ಮಹೇಶ್ವರಃ
ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ !
ಕೂಡಲಸಂಗಮದೇವನು
ದಕ್ಷನ ಯಜ್ಞವ ಕೆಡಿಸಿದುದ ಮರೆದಿರಲ್ಲಾ !/562
ಕೇಳಿ ಭೋ ! ಕೇಳಿ ಭೋ ! ವಿಪ್ರರೆಲ್ಲರೂ
ಬ್ರಹ್ಮಾಂಡಪುರಾಣದಲ್ಲಿ ನಿಮ್ಮ ಬ್ರಹ್ಮ ನುಡಿದ ವಾಕ್ಯವು;
ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞಾನವೇದಿನಾಂ
ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಬಭೂ ಎಂದುದಾಗಿ
ನಂಬಿ ಧರಿಸಿ ಭೋ ! ವಿಪ್ರರೆಲ್ಲರೂ ಶ್ರೀಮಹಾಭಸಿತವ.
ಇದ ನಂಬಿಯೂ ನಂಬದೆ ಅಜ್ಞಾನದಿಂದ ಶ್ರೀಮಹಾಭಸಿತವ ಬಿಟ್ಟು,
ಮಣ್ಣು ಮಸಿ ಮರದ ರಸಂಗಳ
ಮೋಹದಿಂದ ನಿಮ್ಮ ಹಣೆಯಲ್ಲಿ ಬರೆದುಕೊಂಡಿರಾದಡೆ
ನಮ್ಮ ಕೂಡಲಸಂಗಮದೇವರಲ್ಲಿ,
ನಿಮ್ಮ ಅಧಿದೈವವೇ ನಿಮ್ಮ ಕಿವಿ ಮೂಗ ಕೊಯಿದು,
ಇಟ್ಟಿಗೆಯಲೊರಸಿ, ಕನ್ನಡಿಯ ತೋರಿ,
ನಡೆಸಿ ನರಕದಲ್ಲಿ ಕೆಡುಹದೆ ಬಿಡ ಕಾಣಿ ಭೋ !
ಇದನರಿದು ಮರೆಯದೆ ಧರಿಸಿ ಭೋ !
ಕೆಡಬೇಡ, ಕೆಡಬೇಡ,
ಮಹತ್ತಪ್ಪ ಶ್ರೇಮಹಾಭಸಿತವ ಧರಿಸಿ ಮುಕ್ತರಾಗಿರೇ./563
ಕೇಳಿರೆ ಕೇಳಿರೆ ಹಿರಿಯರು, ಗುರುವಿನ ಉಪದೇಶವನು;
ಒಂದು ಗೀಜಗನ ಉಪದೇಶದಿಂದ
ಪೌಲಸ್ತ್ಯನಂದು ಹಡೆಯನೆ ದಶಮುಖನ
ಶಿರವ ಹರಿದಿಕ್ಕೆ ಪರಮನಿದ್ದೆಡೆಯು ಕಾಣದೇನಿಳೆಯಲ್ಲಿ
ಕರುಳ ತಂತಿಯ ಉಪದೇಶದಿಂದ
ಅಸುರನಂದು ಹಡೆಯನೆ ಸುರಪದವ
ತರುಣಿ ಹರಿಣಿಯ ಹಿತೋಪದೇಶದಿಂದ ಗತಿಮುಕ್ತಿಯ ಪಡೆದು
ಬಟ್ಟೆಯ ಹತ್ತನೆ ವಿನಾಶಕ್ತಿರಾಯನು
ರಂಭೆಯ ಉಪದೇಶದಿಂದ
ಶಂಭುವಿನೋಲಗದಲ್ಲಿ ಕುಳ್ಳಿರನೆ ಶ್ವೇತನು
ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ
ದುರಿತ ಪಾಪಂಗಳು ಬಿಟ್ಟುಹೋಗಿ,
ಮನ ನಿರುತರಾಗಿಪ್ಪರಾ ಲಿಂಗದಲ್ಲಿ. /564
ಕೈಯ ಬೋಹರಿಗೆ, ಮಂಡೆಯ ಮೇಲೆ ಸಿಂಬೆ,
ಸಿಂಬಕನ ಮನೆಯ ಮಗ ನಾನಯ್ಯಾ.
ಕೂಡಲಸಂಗಮದೇವರ ಮಂಚದ ಕೋಡೇರಿ ಬಂದ
ತೊತ್ತಿನ ಮಗ ನಾನಯ್ಯಾ./565
ಕೈಯಲ್ಲಿ ಮುಟ್ಟಿದ ಪದಾರ್ಥ ಕೈಯೊಳಗೆ ಐಕ್ಯ,
ಕಂಗಳು ತಾಗಿದ ಪದಾರ್ಥ ಕಂಗಳೊಳೈಕ್ಯ,
ನಾಲಗೆ ತಾಗಿದ ಪದಾರ್ಥ ನಾಲಗೆಯೊಳಗೈಕ್ಯ.
ನೀಡುವ ಪರಿಚಾರಕರು ಬೇಸತ್ತರಲ್ಲದೆ
ಆರೋಗಣೆಯ ಮಾಡುವ ದೇವನೆತ್ತಲೆಂದರಿಯನು.
ಬ್ರಹ್ಮಾಂಡವನೊಡಲೊಳಗಡಗಿಸಿಕೊಂಡು ಬಂದ ದೇವಂಗೆ
ಆರೋಗಣೆಯ ಮಾಡಿಸಿಹೆನೆಂಬ ಅಹಂಕಾರದಲ್ಲಿ ಇದ್ದೆನಾಗಿ,
ನಾನು ಕೆಟ್ಟ ಕೇಡನೇನೆಂಬೆನಯ್ಯಾ
ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಾ
ಮಡಿವಾಳ ಮಾಚಯ್ಯ./566
ಕೊಂಡುದಿಲ್ಲ ಕೊಟ್ಟುದಿಲ್ಲ, ಲಗ್ಗವಿಲ್ಲ ವಿಲಗ್ಗವಿಲ್ಲ,
ನಮಗೆ ನಿಮಗೆ ಸಂಬಂಧವಿಲ್ಲ,
ನಮಗೆ ನಿಮಗೆ ಭಾವಭೇದವಿಲ್ಲ,
ಕೂಡಲಸಂಗಮದೇವಾ, ಇರು, ಇರದೆ ಮಾಣು./567
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ./568
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೊ.
ನರಮಾನವರು ಕೊಡುವರೆಂಬವರ ಬಾಯಲಿ
ಬಾಲಹುಳುಗಳು ಸುರಿಯವೆ
ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ
ಕಾಣಿರೆಲವೊ. /569
ಕೊಡೆವಿಡಿಯೆ, ಕುದುರೆಯ ದೃಢವುಳ್ಳ ರಾವುತನೇರೆ,
ಕೊಡೆ ಕೋಟಿ, ಶೂರರು ಹನ್ನಿಬ್ಬರಯ್ಯಾ !
ಚಂದ್ರಕಾಂತದ ಗಿರಿಯ ಬಂದು ಗಜ ಮೂದಲಿಸೆ
ಅರಿದು ಕೊಲುವೊಡೆ ರಿಪುಗಳ ಕಲಿತನವ ನೋಡಾ !
ಆವಿಗೆಯಲೊದಗಿದ ಪುತ್ಥಳಿಯ ರೂಹಿನಂತೆ ಆಯಿತ್ತು
ಕೂಡಲಸಂಗಮದೇವಾ, ನಿನ್ನ ಹೆಸರಿಲ್ಲದ ಹೆಸರು !/570
ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ
ಕುಲವೇನೊ ಅವದಿರ ಕುಲವೇನೊ !
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು. /571
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.
ಬಳ್ಳದ ಬಾಯಂತೆ ಒಂದೆ ಮನ ಮಾಡಿ
ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ./572
ಕೋಟಿ ರುದ್ರರು ಮಡಿದರು,
ಅನಂತಕೋಟಿ ಬ್ರಹ್ಮವಿಷ್ಣುಗಳು ಮಡಿದರು,
ನರರು, ಸುರರು, ಗರುಡ ಗಂಧರ್ವರು ಮಡಿದರು.
ಅವರ ಮಡಿಯೊಳಗೆ ತಾನಾಗದೆ,
ತಾನೊಂದು ಹೊಸ ಬಿಳಿದ ಮಡಿಮಾಡಿ
ಎನಗುಡಕೊಟ್ಟು ಎನ್ನ ಬದುಕಿಸಿಕೊಂಡಾತ,
ಮಡಿವಾಳ ಕಾಣಾ, ಕೂಡಲಸಂಗಮದೇವಾ./573
ಕೋಟ್ಯನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲದೇಕೆ ಮನವೆ
ಕಿಂಚಿತು ಗೀತವೊಂದನಂತಕೋಟಿ ಜಪ.
ಜಪವೆಂಬುದೇಕೆ, ಮನವೆ
ಕೂಡಲಸಂಗನ ಶರಣರ ಕಂಡು,
ಆಡಿ ಹಾಡಿ ಬದುಕು ಮನವೆ./574
ಕೋಡಗವೇಡಿಸಬೇಡೆಂದಡೆ ಮಾಣದಯ್ಯಾ,
ತೋಡುವ ಹೆಗ್ಗಣ ಮಾಳಿಗೆ ಎಂದಡೆ ಮಾಣದಯ್ಯ,
ಗಾಡಿಗ ದೂಷಕನವರವರನಾಡುವುದೆ ನೇಮ.
ಕೂಡಲಸಂಗಮದೇವಾ, ಇದವರ ಕಾಯಕವಯ್ಯಾ./575
ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ
ತಾವೂ ನಂಬರು, ನಂಬುವರನೂ ನಂಬಲೀಯರು,
ತಾವೂ ಮಾಡರು, ಮಾಡುವರನೂ ಮಾಡಲೀಯರು.
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ./576
ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ,
ಪಾಪಿ ಹೂವನೇರಿಸಿದಡೆ ಮಸೆದಡ್ಡಾಯುಧದ ಗಾಯ.
ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ,
ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ,
ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ.
ನಿನ್ನಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ. /577
ಕ್ರಿಯಾಚಾರವಿಲ್ಲದ ಗುರುವಿನ ಕೈಯಿಂದ
ದೀಕ್ಷೆ, ಉಪದೇಶವ ಕೊಳ್ಳಲಾಗದು.
ಕ್ರಿಯಾಚಾರವಿಲ್ಲದ ಶಿಲೆಯ ಲಿಂಗವೆಂದು ಪೂಜಿಸಲಾಗದು.
ಕ್ರಿಯಾಚಾರವಿಲ್ಲದ ಭೂತಪ್ರಾಣಿಗಳಲ್ಲಿ
ಜಂಗಮವೆಂದು ಪಾದೋದಕ ಪ್ರಸಾದವ ಕೊಳಲಾಗದು.
ಇಂತಪ್ಪ ಆಚಾರವಿಲ್ಲದ, ಅನಾಚಾರವ ಬಳಸುವ ದುರಾಚಾರಿಗಳಲ್ಲಿ
ಉಪದೇಶವ ಹಡೆದು, ಪಾದೋದಕಪ್ರಸಾದವ ಕೊಂಡವಂಗೆ
ಅಘನಾಸ್ತಿಯಾಗದು, ಮುಂದೆ ಅಘೋರ ನರಕ ತಪ್ಪದು
ಕಾಣಾ, ಕೂಡಲಸಂಗಮದೇವಾ./578
ಕ್ರಿಯಾಜ್ಞಾನಸಂಬಂಧವೆಂದು ನುಡಿವರು_
ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು.
ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು,
ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು.
ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು,
ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು.
ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ
ಕ್ರಿಯೆಯೆ ತನು, ಜ್ಞಾನವೆ ಪ್ರಾಣ.
ತನು ಲಿಂಗವಾಗಿ, ಪ್ರಾಣ ಜಂಗಮವಾಗಿ,
ತನುವ ಸಯಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ,
ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ
ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ./579
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತೆ.
ಗಂಡ ಕೊಂಬುದು ಪಾದೋದಕ-ಪ್ರಸಾದ,
ಹೆಂಡತಿ ಕೊಂಬುದು ಸುರೆ-ಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವಾ./580
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ,
ಇದ್ದಡೇನೊ ಶಿವ ಶಿವಾ ಹೋದಡೇನೊ
ಕೂಡಲಸಂಗಮದೇವಯ್ಯಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ./581
ಗರಿ ತೋರೆ ಗಂಡರೆಂಬವರ ಕಾಣೆ,
ನಿರಿ ಸೋಂಕೆ ಮುನಿ[ಯ]ಲ್ಲ ನೋಡಯ್ಯಾ.
ನಂಟುತನವೇನವನ ಬಂಟತನವೇನವನ
ಹುಲ್ಲುಕಿಚ್ಚು, ಹೊಲೆಯನ ಮೇಳಾಪ-
ಅಲ್ಲಿ ಹುರುಳಿಲ್ಲ, ಕೂಡಲಸಂಗಮದೇವಾ./582
ಗರುಡಿಯ ಕಟ್ಟಿ ಅರುವತ್ತುನಾಲ್ಕು ಕೋಲ ಅಭ್ಯಾಸವ ಮಾಡಿದೆನಯ್ಯಾ.
ಇರಿವ ಘಾಯ, ಕಂಡೆಯ ಭೇದವಿನ್ನೂ ತಿಳಿಯದು.
ಪ್ರತಿಗರುಡಿಕಾರ ಬಿರಿದ ಪಾಡಿಂಗೊದನಗೆಫ
ವೀರಪ[ಟ್ಟವ] ಕಟ್ಟಿ, ತಿಗುರನೇರಿಸಿಕೊಂಡು,
ಗುರು ಕಳನನೇರಿ, ಕಠಾರಿಯ ಕೊಂಡಲ್ಲಿ
`ಹೋಯಿತ್ತು ಗಳೆ’ ಎಂದಡೆ
ಎನ್ನ ನಿನ್ನಲ್ಲಿ ನೋಡು, ಕೂಡಲಸಂಗಮದೇವಾ. /583
ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ
ಲಿಂಗವ ಪೂಜಿಸಬೇಕು.
ಊರ ಕೋಳಿ ಕೂಗದ ಮುನ್ನ, ಕಾಡ ನವಿಲು ಒದರದ ಮುನ್ನ,
ಲಿಂಗವ ಪೂಜಿಸಬೇಕು.
ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ,
ತುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ
ಲಿಂಗವ ಪೂಜಿಸಬೇಕು.
ಅದೆಂತೆಂದಡೆ;
ಯೋ ಲಿಂಗಮರ್ಧರಾತತ್ರಾ ತು ಶುಚಿರ್ಭೂತ್ವಾ ಪ್ರಪೂಜಯೇತ್
ಅಗ್ನಿಷ್ಟೋಮಸಹಸ್ರಸ್ಯ ಧರ್ಮಸ್ಯ ಲಭತೇ ಫಲಂ
ಎಂದುದಾಗಿ,
ಶುದ್ಧಾಂತಃಕರಣನಾಗಿ ಶಿವಪೂಜೆಯ ಮಾಡಬೇಕು,
ಆತಂಗೆ ಅಗ್ನಿಷ್ಟೋಮ ಸಹಸ್ರಫಲವಹುದು.
ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆವ
ಸದ್ಭಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ./584
ಗಾಡಿಗ ಡಿಂಬುಗಂಗೆ
ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ,
ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ,
ಈಡಾಡಿದ ಕೂಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ,
ಕೂಡಲಸಂಗಮದೇವರ ನೆರೆನಂಬುವುದೆಲವೊ./585
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
ಶ್ರೀಗಂಧದ ಸನ್ನಿಧಿಯಲು ಪರಿಮಳವಾಗವೆ
ಲಿಂಗವಂತನ ಸನ್ನಿಧಿುಂದ ಹಿಂದಣ ದುಸ್ಸಂಗವು ಕೆಡುವುದು.
ಕೂಡಲಸಂಗಮದೇವಯ್ಯಾ,
ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ/586
ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ
ಸವೆದ ಪಾಷಾಣ !
ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು
ಏಸು ಕಾಲವಿರ್ದಡೇನು, ಅದರಂತು ಕಾಣಿರಣ್ಣಾ./587
ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ
ಬರವ ಹಾರುತ್ತಿದ್ದೆನೆಲೆಗವ್ವಾ.
ತರಗೆಲೆ ಗಿರಿಕೆಂದಡೆ ಹೊರಗನಾಲಿಸುವೆ;
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ.
ಕೂಡಲಸಂಗಮದೇವನ ಶರಣರು ಬಂದು, ಬಾಗಿಲ ಮುಂದೆ ನಿಂದು
`ಶಿವಾ’ ಎಂದಡೆ, ಸಂತೋಷ ಪಟ್ಟೆನೆಲೆಗವ್ವಾ./588
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ./589
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲ ಬಿದ್ದಿನಂತೆ ಜೂಜುಗಾರನ ಮಾತು.
ಬೀದಿಯ ಗುಂಡನ ಸೊಬಗು
ಓಡಿನೊಳಗಗೆಯ ಹೊಯ್ದಂತೆ ಕಾಣಿರೋ.
ಶಿವನಾದಿ ಅಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ, ಕೂಡಲಸಂಗಮದೇವಾ./590
ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ.
ಜಾಣನು ಜಾಣನು, ಆತ ಜಾಣನು
ಲಿಂಗವ ನೆರೆ ನಂಬಿದಾತ ಜಾಣನು,
ಜಂಗಮಕ್ಕೆ ಸವೆಸುವಾತ ಆತ ಜಾಣನು,
ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು,
ನಮ್ಮ ಕೂಡಲಸಂಗನ ಶರಣರನು./591
ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು,
ವೇದವೇದಾಂತವ ನೋಡಿದಡೇನು
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು
ಎಲ್ಲರಲ್ಲಿ [ಪ್ರಾ]ಜ್ಞರಾದಡೇನು
ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ./592
ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದಡೆ,
ಗುಡಿಯ ದಡಿಗೆ ಬಿದ್ದು ಹಲ್ಲು ಹೋಹುದು, ನೋಡಾ,
ಪೊಡವಿಗೀಶ್ವರನ ಗರ್ಭಾವಾಸದೊಳಗಿರ್ದು ನುಡಿವರು
ಮತ್ತೊಂದು ದೈವವುಂಟೆಂದು.
ತುಡುಗುಣಿನಾಯನು ಪಿಡಿತಂದು ಸಾಕಿದಡೆ
ತನ್ನೊಡೆಯಂಗೆ ಬಗಳುವಂತೆ ಕಾಣಾ
ಕೂಡಲಸಂಗಮದೇವಾ. /593
ಗುಮ್ಮಡಿಯಂತಪ್ಪ ತಾಯಿ ನೋಡೆನಗೆ,
ಕಲಕೇತನಂತಪ್ಪ ತಂದೆ ನೋಡೆನಗೆ.
ಮೋಟನಂತಪ್ಪ ಗಂಡ ನೋಡೆನಗೆ,
ಮರಗಾಲಲಟ್ಟಟ್ಟಿ ಸದೆದ ನೋಡಯ್ಯಾ.
ಇಂದೆನ್ನ ಒಕ್ಕತನ ಹೋದಡೆ ಹೋಗಲಿ
ಮರಗಾಲ ಬಿಟ್ಟಡೆ, ಸಂಗಾ ನಿಮ್ಮಾಣೆ. /594
ಗುರಿಯನೆಚ್ಚವನೇ ಬಿಲ್ಲಾಳು,
ಇರಿದು ರಣದಲ್ಲಿ ತಿನರುಗದವಫನೇ ಮಾಸಾಳು,
ದಾರಿದ್ರ್ಯನವಫನೆ ಪರಿದವನೇ ದಯಾಳು,
ಗುರುಪಾದಭಕ್ತಿಯುಳ್ಳವನದೇ ಬಾಳು,
ಕೂಡಲಸಂಗಮದೇವನ ಶರಣರಾಳು./595
ಗುರು ಉಪದೇಶ ಮಂತ್ರವೈದ್ಯ, ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ. /596
ಗುರು ತೋರಿದ ಲಿಂಗವು ಮನಸ್ಥಲವಾಗಿರಲು
ಪವನಭೇದದಿಂದ ಅರಿದೆಹೆನೆಂದಡೆ, ಅದೆ ದ್ರೋಹ.
ಇಡಾ ಪಿಂಗಳಾ ಸುಷುಮ್ನಾನಾಳವಿಡಿದು ಅರಿದೆಹೆನೆಂದಡೆ
ಕೂಡಲಸಂಗಮದೇವ ಮೂಗಕೊಯ್ಯದೆ ಮಾಬನೆ /597
ಗುರು ಮುಂತಾಗಿ ಕೊಂಡುದು ಪ್ರಸಾದವಲ್ಲ,
ಲಿಂಗ ಮುಂತಾಗಿ ಕೊಂಡುದು ಪ್ರಸಾದವಲ್ಲ,
ಜಂಗಮ ಮುಂತಾಗಿ ಕೊಂಡುದು ಪ್ರಸಾದವಲ್ಲ,
ಪ್ರಸಾದ ಮುಂತಾಗಿ ಕೊಂಡುದು ಪ್ರಸಾದವಲ್ಲ,
ಅಂತಪ್ಪ ಪ್ರಸಾದವೆ ಬೇಕು.
ಅಂತಪ್ಪ ಪ್ರಸಾದವ ತೋರಿ
ಬದುಕಿಸಯ್ಯಾ, ಕೂಡಲಸಂಗಮದೇವಾ./598
ಗುರು ಮುನಿದಡೆ ಒಂದು ದಿನ ತಾಳುವೆ,
ಲಿಂಗ ಮುನಿದಡೆ ದಿನವರೆ ತಾಳುವೆ.
ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ. /599
ಗುರು ಲಿಂಗ ಜಂಗಮದಿಂದ ಪಾದೋದಕ ಪ್ರಸಾದವಾುತ್ತು.
ಆ ಭಾವವೆ ಮಹಾಪ್ರಸಾದವಾಗಿ
ಎನಗೆ ಬೇರೆ ಪ್ರಸಾದವೆಂಬುದಿಲ್ಲ
ಕೂಡಲಸಂಗಮದೇವಾ./600
ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ,
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ,
ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ.
ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ,
ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ,
ಕೂಡಲಸಂಗಮದೇವಾ./601
ಗುರುಕಾರುಣ್ಯವಿಡಿದು ಬಂದ ತನ್ನ ಕರಸ್ಥಲದ ಇಷ್ಟಲಿಂಗದಲ್ಲಿ ದೃಷ್ಟಿ ನಟ್ಟು,
ಭಾವಸಂಪನ್ನನಾಗಿ ನಿಂದು, ನಿಜವನೈದಲರಿಯದೆ
ಪವನಮುಖದಿಂದ ಲಿಂಗವನರಿದೆನೆಂಬುದೆ ದ್ರೋಹ.
ಇಡಾ ಪಿಂಗಳ ಸುಷುಮ್ನಾನಾಳವ ಬಲಿದು
ಲಿಂಗವ ಕಂಡೆಹೆನೆಂಬ ಕ್ರೂರಕರ್ಮಿಗಳನು ಕೂಡಲಸಂಗಯ್ಯ
ಕೆಡಹಿ ಮೂಗಕೊಯ್ವ ಕಾಣಿರೊ./602
ಗುರುಕಾರುಣ್ಯವೆ ಸದಾಚಾರ, ಗುರುಕಾರುಣ್ಯವೆ ಸದಾಚಾರ,
ಗುರುಕಾರುಣ್ಯವೆ ಪ್ರಸಾದರುಚಿ.
ಮುಂದೆ ಗುರು, ಹಿಂದೆ ಲಿಂಗ ಕೂಡಲಸಂಗಮದೇವಾ./603
ಗುರುಭಕ್ತಿಯ ಮಾಡಬಹುದಲ್ಲದೆ, ಲಿಂಗಭಕ್ತಿಯ ಮಾಡಬಾರದು.
ಲಿಂಗಭಕ್ತಿಯ ಮಾಡಬಹುದಲ್ಲದೆ, ಜಂಗಮಭಕ್ತಿಯ ಮಾಡಬಾರದು.
ಜಂಗಮಭಕ್ತಿಯ ಮಾಡಬಹುದಲ್ಲದೆ, ಸಮಯಭಕ್ತಿಯ ಮಾಡಬಾರದು. ಸಮಯಭಕ್ತಿಯ
ಮಾಡಬಹುದಲ್ಲದೆ, ಸಮಯ ಸಂತೋಷವ ಮಾಡಬಾರದು ಇವೆಲ್ಲವನು ಮಾಡಬಹುದಲ್ಲದೆ, ತನ್ನ ತಾನರಿಯಬಾರದು !
ತನ್ನ ತಾನರಿದೆಹೆನೆಂಬ ಅಹಂಕಾರವುಳ್ಳಡೆ ನಿಮ್ಮವರಿಗೆ ದೂರ.
ಎಲೆ ದೇವಾ, ಅನ್ಯಕ್ಕೆ ಆಸೆ ಮಾಡಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಕೂಡಲಸಂಗಮದೇವಾ. /604
ಗುರುಲಿಂಗಜಂಗಮದ ಘನಪ್ರಸಾದವ ಪಡಕೊಂಡು,
ಅಂಗವಿಕಾರಕ್ಕೆ ಭುಂಜಿಸುವ ಅವಿಚಾರಿಗಳ ವಿವರವೆಂತೆಂದಡೆ;
ಆದಿಸ್ವಾದಿ ಅನಾಹತ ಹೃದಯ ದೀನಸ್ಥಿತಿಯ ತಿಳಿಯದೆ,
ಆದಿ ಅನಾದಿಯ ಭೇದಿಸಲರಿಯದೆ,
ಆದಿಪ್ರಸಿದ್ಧವಾದ ಪರಮಗುರುವಿನಲ್ಲಿ
ಸಮಯದ ಹಂಗಿಂಗೆ ಗಡಣಿಸಿಕೊಂಡು, ಬಲಭಿಚಾರಿಗಳು
ನುಗ್ಗಿಯ ಬೀಜ, ಮಾವಿನ ಬೀಜ, ದಂಟುದಡಿ ಮೊದಲಾದ ನಾನಾ ಕಠಣಂಗಳನು
ಅಂಗವಿಕಾರಕ್ಕೆ ಭುಂಜಿಸುವ ಭಕ್ಷಿಸುವ ಭವಕರ್ಮಿಗಳು.
ಅಂಗವಿಕಾರಕ್ಕೆ ಭೂತನಂತೆ ಒಟ್ಟಿಕೊಂಡು,
ಕರಿ ಸೂಕರನಂತೆ ಅಗ್ನಿಯಲ್ಲಿ ಸುಡು ಎಂಬ ಲಿಂಗದ್ರೋಹಿಗೇಕೊ ಪ್ರಸಾದ
ಅಂತಪ್ಪ ಪರಮಪಾತಕರಿಗೆ ಪಾದೋದಕ ಪ್ರಸಾದವ ಕೊಡಲಾಗದು.
ಇಂತಪ್ಪ ಪ್ರಸಾದದಿಂದೊಗೆದ ಕಠಣವನು ಅಗ್ನಿಯಲ್ಲಿ ದಗ್ಧವ ಮಾಡಲಾಗದು.
ಬೆಂಕಿಯಲ್ಲಿ ಸುಡು ಎಂಬುದಕ್ಕೆ ಕುರಿಯ ಹೋಮವೆ
ಮಾತಂಗಿಯ ಮಕ್ಕಳ ಸಂತಾನವೆ
ಸತ್ತರೆ ಸುಡಿಸಿಕೊಂಬ ಶ್ವಪಚ ಮಾತಂಗಿಯ
ಮಕ್ಕಳ ಸಂತಾನವನೇನೆಂಬೆನಯ್ಯಾ !
ಆ ಶಿವನ ಪ್ರಸಾದವ ಸುಡುವರೆ
ಸತ್ತ ಹಾರುವನ ಅಗ್ನಿಯಲ್ಲಿ ಸುಡು ಎಂಬ ದ್ರೋಹಿಗೇಕೊ ಪ್ರಸಾದ
ಅರಿಯದುದೆಲ್ಲ ಜ್ಞಾನದೊಳು ಅರಿದು,
ಅರುಹಿಸಿಕೊಂಡ ಬಳಿಕ ತಿಳಿದಾಚರಿಸುವುದು,
ಭಕ್ತಿಜ್ಞಾನವೈರಾಗ್ಯವಿಡಿದಾಚರಿಸುವುದೆ ಗುರುಭಕ್ತಿ.
ಇಂತಪ್ಪ ಗುರುಮಾರ್ಗಾಚಾರವಸಾಧ್ಯವೆಂಬವರಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ.
ಆ ಪ್ರಸಾದವಿಲ್ಲದವಂಗೆ ಪಂಚಾಚಾರವಿಲ್ಲ,
ಆ ಪಂಚಾಚಾರವಿಲ್ಲದವಂಗೆ ಪ್ರಸಾದವಿಲ್ಲ.
ಇಂತಪ್ಪ ಪ್ರಸಾದವಿಲ್ಲದವಂಗೆ ಯುಕ್ತಿಯೆಂಬುದು ಎಂದೆಂದಿಗೂ ಇಲ್ಲ.
ಅವಂಗೆ ಇಹವಿಲ್ಲ, ಪರಕ್ಕೆ ಸಲ್ಲನೆಂಬ ಗುರುವಚನವುಂಟು,
ಪ್ರಭುವೆ ನಿಮ್ಮಾಣೆ, ಕೂಡಲಸಂಗಮದೇವಾ. /605
ಗುರುಲಿಂಗಜಂಗಮದ ಹೆಸರಿನಿಂದ ಕಾಯಕವ ಮಾಡಿ,
ಗುರು ಚರಕೆ ವಂಚಿಸಿ,
ತಾಯಿ ತಂದೆ, ಬಂಧುಬಳಗ, ಹೆಂಡತಿ, ಒಡಹುಟ್ಟಿದವರು
ಎಂದು ಸಮಸ್ತಪದಾರ್ಥವ ಚಾಗೆಯ ಮಾಡುವನೊಬ್ಬ
ಭಕ್ತದ್ರೋಹಿ ನೋಡಾ, ಕೂಡಲಸಂಗಮದೇವಾ./606
ಗುರುಲಿಂಗಜಂಗಮದಿಂದ ಪಾದೋದಕ ಪ್ರಸಾದವಾಯಿತ್ತು.
ಆ ಭಾವವೇ ಮಹಾನುಭಾವವಾಗಿ,
ಎನಗೆ ಮತ್ತೆ ಬೇರೆ ವ್ರಸಾದವೆಂಬುದಿಲ್ಲ,
ಕೂಡಲಸಂಗಮದೇವಾ. /607
ಗುರುಲಿಂಗಜಂಗಮವ ನಂಬಿ ಕರೆದಡೆ, ಓ ಎಂಬ ಶಿವನು.
ನಂಬದೆ ಕರೆದಡೆ ಓ ಎಂಬನೇ ಶಿವನು
ನಂಬಲರಿಯರು, ನಚ್ಚಲರಿಯರು ಡಂಭಿನ ಭಕ್ತರು.
ನಂಬದೆ ನಚ್ಚದೆ ಬರಿದೆ ಕರೆದಡೆ ಶಂಭು ಮೌನದಲ್ಲಿಪ್ಪ
ನಮ್ಮ ಕೂಡಲಸಂಗಮದೇವರು. /608
ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಲಿಂಗವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಜಂಗಮವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ,
ಪ್ರಸಾದವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಇಂತೀ ಚತುರ್ವಿಧ ಸಂಪನ್ನ ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು./609
ಗುರುವಚನವಲ್ಲದೆ ಲಿಂಗವೆಂದೆನಿಸದು,
ಗುರುವಚನವಲ್ಲದೆ ಜಂಗಮವೆಂದೆನಿಸದು,
ಗುರುವಚನವಲ್ಲದೆ ನಿತ್ಯವೆಂದೆನಿಸದು,
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ
ಭಯ ಭ್ರಷ್ಟರ ಮೆಚ್ಚುವನೆ,
ನಮ್ಮ ಕೂಡಲಸಂಗಮದೇವ/610
ಗುರುವಿಂಗೆ ಕೊಡುವುದು ಅರ್ಪಿತವೆ
ಅರ್ಪಿತ ಅರ್ಪಿತವೆಂದೆನುತ್ತಿಹಿರಿ
ಸವಿಸವಿದು ಕೊಡಬೇಕಲ್ಲದೆ.
ಅರ್ಪಿತ ಅರ್ಪಿತವೆಂದೆನುತ್ತಿಹಿರಿ
ಲಿಂಗಕ್ಕೆ ಕೊಡುವುದು ಅರ್ಪಿತವೆ
ಸವಿಸವಿದು ಕೊಡಬೇಕಲ್ಲದೆ.
ಅರ್ಪಿತ ಅರ್ಪಿತವೆನುತ್ತಿಹರೆಲ್ಲರು
ಅರ್ಪಿತಮುಖವನರಿಯರು ನೋಡಾ.
ಜಂಗಮಕ್ಕೆ ನೀಡಿ ಜಂಗಮಪ್ರಸಾದವ ಕೊಂಡಡೆ
ನಿನಗರ್ಪಿತ ಕಾಣಾ, ಕೂಡಲಸಂಗಮದೇವಾ. /611
ಗುರುವಿಂಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು,
ಜಂಗಮಕ್ಕೆ ಧನವ ಕೊಟ್ಟು,
ಇಂತೀ ತ್ರಿವಿಧಕ್ಕೆ ತ್ರಿವಿಧವ ಕೊಟ್ಟು ನಾನು ಶುದ್ಧನಾದೆನು
ಕಾಣಾ, ಕೂಡಲಸಂಗಮದೇವಾ./612
ಗುರುವಿಂಗೆ ನೀನೆ ಕರ್ತ, ಲಿಂಗಕ್ಕೆ ನೀನೆ ಕರ್ತ, ಜಂಗಮಕ್ಕೆ ನೀನೆ ಕರ್ತ,
ಪ್ರಸಾದಕ್ಕೆ ನೀನೆ ಕರ್ತ, ಉಪದೇಶಕ್ಕೆ ನೀನೆ ಕರ್ತ.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಎನಗೆಯೂ ನೀನೆ ಕರ್ತನಾದ ಕಾರಣ, ನಾನು ಬೇಕೆನಲಮ್ಮೆ ಬೇಡೆನಲಮ್ಮೆ
ಕಾಣಾ, ಚೆನ್ನಬಸವಣ್ಣಾ./613
ಗುರುವಿನಲ್ಲಿ ಸದಾಚಾರ; ಲಿಂಗದಲನುದಿನ ವೇಳೆ.
ಜಂಗಮದಲ್ಲನುಭಾವ ಸಮಯಾಚಾರ; ಲಿಂಗದಲನುದಿನ ವೇಳೆ.
ಈ ಉಭಯಾಚಾರದಿಂದ ತಿಳಿದ ತಿಳಿವು ಲಿಂಗದಲ್ಲಿ ಅನುದಿನ ವೇಳೆ.
ಬೇರೆ ತೋರಲಿಲ್ಲ.
ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ.
ಇದು ಕಾರಣ ಕೂಡಲಸಂಗಮದೇವಾ.
ಲಿಂಗದಲನುದಿನ ವೇಳೆ./614
ಗುರುವಿನಲ್ಲಿ ಸ್ವಾಯತ,
ಲಿಂಗದಲ್ಲಿ ಸನ್ನಿಹಿತ,
ಜಂಗಮದಲ್ಲಿ ಸದರ್ಥನು,
ಪ್ರಸಾದದಲ್ಲಿ ಪರಿಣಾಮಿ.
ಇಂತೀ ಚತುರ್ವಿಧದಲ್ಲಿ ಸನ್ಮತನು,
ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು./615
ಗುರುವುಪದೇಶವುಳ್ಳವರ ಗುರುವೆಂದೆ ಕಾಬೆನು,
ಲಿಂಗಾಂಗಸಂಗಿಗಳ ನಿಜಲಿಂಗವೆಂದೆ ಕಾಬೆನು,
ಜಂಗಮಾರ್ಚಕರ ಸರ್ವಾಂಗಲಿಂಗಿಗಳೆಂದೆ ಕಾಬೆನು.
ಕೂಡಲಸಂಗಮದೇವರಲ್ಲಿ ಸಹಜಭಕ್ತರ ಕಂಡಡೆ,
ಅವರ ನೀನೆಂದೇ ನಚ್ಚಿ ಮೆಚ್ಚಿ
ಅಚ್ಚೊತಿದಂತಿಪ್ಪೆನಯ್ಯಾ ಚೆನ್ನಬಸವಣ್ಣಾ./616
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ;
ಹಿಂದ ಬಿಟ್ಟು ಮುಂದ ಹಿಡಿಯಲೇಬೇಕು.
ಕೂಡಲಸಂಗಮದೇವ ಕೇಳಯ್ಯಾ,
ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು./617
ಗೋತ್ರನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ
ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು,ಕೂಡಲಸಂಗಯ್ಯಾ./618
ಗ್ರಹ ಬಂದು ಆವರಿಸಲೊಡನೆ ತನ್ನ ಮರೆಸುವುದು,
ಮತ್ತೊಂದಕ್ಕೆ ಇಂಬುಗೊಡಲೀಯದಯ್ಯಾ.
ಕೂಡಲಸಂಗಮದೇವನ ಅರಿವು ಅನುಪಮವಾಗಲೊಡನೆ
ಬೆವಹಾರದೊಳಗಿರಲೀಯದಯ್ಯಾ./619
ಘನಗಂಬಿರ ಮಹಾಘನದೊಳಗೆ
ಘನಕ್ಕೆ ಘನವಾಗಿದ್ದೆನಯ್ಯಾ.
ಕೂಡಲಸಂಗಮದೇವಯ್ಯನೆಂಬ
ಮಹಾಬೆಳಗಿನ ಬೆಳಗಿನೊಳಗಿದ್ದೇನೆಂಬ ಶಬ್ದ
ಮುಗ್ಧವಾದುದೆನೇನೆಂಬೆನಯ್ಯಾ /620
ಘನಗಂಬಿರವಾರುಧಿಯೊಳಗೆ ತೋರುವ ವೀಚಿಗಳು
ಆ ವಾರುಧಿಯ ಬಿಟ್ಟು ತೋರಬಲ್ಲವೆ
ತೋರಿದಡೆ ಆ ವಾರುಧಿ ತನ್ನ ತಾ ಜರೆದುಕೊಂಬುದೆ
ನಿಮ್ಮೊಳಡಗಿದ ಪ್ರಮಥರೆಲ್ಲರ ಗುಣಾದಿಗುಣಂಗಳೆಲ್ಲವನು
ನಿಮ್ಮಡಿಗಳೆತ್ತಲುಂಟೆ ಜಗದೊಳಗೆ ಕೂಡಿ ಪರಿಪೂರ್ಣನಾದ ಬಳಿಕ,
ಇದಿರ ನೋಡಿ ಜರೆದು ನುಡಿವಠಾವಾವುದು ಹೇಳಯ್ಯಾ
ಕೂಡಲಸಂಗಮದೇವಯ್ಯಾ,
ನಿಮ್ಮ ನೀವು ಪರಿಣಾಮಿಸಿಕೊಂಬುದಲ್ಲದೆ ಭಿನ್ನವ ಮಾಡಲುಂಟೆ /621
ಘನವನರಿದು ಘನವ ವೇಧಿಸಿ
ಘನಗುರುವ ತನ್ನೊಳಗೆ ಬೈಚಿಟ್ಟ ಪರಿಣಾಮಿಯ ನೋಡಾ !
ಗುರುಲಿಂಗಜಂಗಮದಲ್ಲಿ ತನುಮನಧನವ ವೇದಿಸುವ ಪರಿಯ ನೋಡಾ !
ಕಾಯಪ್ರಸಾದದಲ್ಲಿ ಸ್ವಾಯತವ ಮಾಡಿಕೊಂಡಿಪ್ಪ ಪರಿಯ ನೋಡಾ !
ಷಡುಸ್ಥಲದಲ್ಲಿ ಸ್ವಾಯತವಾದ,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು./622
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ್ಕ
ಶೈತ್ಯವ ತೋರುವ ಪರಿಯೆಂತೋ
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ್ಕ
ಉಷ್ಣವ ತೋರುವ ಪರಿಯೆಂತೋ
ಶರಣಂಗೆ ಭಕ್ತಿಕಾಯವಿಲ್ಲದನ್ನಕ್ಕ
ಕೂಡಲಸಂಗಯ್ಯನನರಿವ ಪರಿಯೆಂತೋ /623
ಚಂದ್ರನ ಶೈತ್ಯದಲು ಬೆಳೆವ ಕಾಯಕ್ಕೆ
ಬೆಳುದಿಂಗಳು ಬಯಸುವ ಹಂಗೇಕಯ್ಯಾ
ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ
ಕೂಡಲಸಂಗನ ಶರಣರು ಬಂದು ತಮ್ಮವನೆಂದಡೆ ಸಾಲದೆ ಅಯ್ಯಾ/624
ಚಂದ್ರನು ಅಮೃತಕರನಾದಡೇನಯ್ಯಾ,
ಒಳಗಣ ಕಳಂಕ ಬಿಡದನ್ನಕ್ಕರ
ಸೂರ್ಯ ಮಹಾಪ್ರಕಾಶನಾದಡೇನಯ್ಯಾ,
ಅಸ್ತಮಾನಕ್ಕೆ ಅಸ್ತಂಗತನೆಂಬ ಹೀನ ಬಿಡದನ್ನಕ್ಕರ
ಆನು ನಿಮ್ಮ ಕೃಪೆಯ ಹಡೆದು ಫಲವೇನಯ್ಯಾ,
ನಿಮ್ಮ ಶರಣರು ಎನ್ನ ಮೇಲೆ ಮುನಿದು ಹೋದ ಬಳಿಕ
ಕೂಡಲಸಂಗಮದೇವಯ್ಯಾ, ನಿಮ್ಮ ಶರಣರ ಮನದಲ್ಲಿ
ಎನ್ನ ಮೇಲೆ ಕರುಣ ಹುಟ್ಟಿಬಪ್ಪಂತೆ ಮಾಡಯ್ಯಾ./625
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ,
ಇಡಾಪಿಂಗಳ ಮಧ್ಯದಲ್ಲಿ ಅನಿಲ ತುಂಬಿ,
ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು.
ಅರಿವಡೆ ತಲೆಯಿಲ್ಲ, ಹಿಡಿವಡೆ ಒಡಲಿಲ್ಲ,
ಕೂಡಲಸಂಗಮದೇವಾ,
ನಿಮ್ಮ ಶರಣನ ಪರಿ ಇಂತುಟು, ಅರಿದರಿದು./626
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ,
ಚಂದ್ರ ಕುಂದೆ, ಕುಂದುವುದಯ್ಯಾ.
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೆ ಅಯ್ಯಾ
ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ, ಅಯ್ಯಾ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ,
ಜಗದ ನಂಟ ನೀನೆ, ಅಯ್ಯಾ,
ಕೂಡಲಸಂಗಮದೇವಯ್ಯಾ !
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !/627
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ./628
ಚತುವರ್ೇದಿಯಾದಡೇನು! ಲಿಂಗವಿಲ್ಲದವನೆ ಹೊಲೆಯ!
ಶ್ವಪಚನಾದಡೇನು ಲಿಂಗವಿದ್ದವನೆ ವಾರಣಾಸಿ !
ಆತನ ನುಡಿಗಡಣ ಲೇಸು, ಆತ ಜಗಕ್ಕೆ ಪಾವನ,
ಆತನ ಪ್ರಸಾದವೆನಗೆ ಅಮೃತಸೇವನೆ.
ನ ಮೇ ಪ್ರಿಯಶ್ಚತುವರ್ೇದೀ ಮದ್ಭಕ್ತಃ ಶ್ವಪಚೋಪಿ ವಾ|
ತಸ್ಮೈ ದೇಯಂ ತತೋ ಗ್ರಾಹ್ಯಂ ಸ ಚ ಪೂಜ್ಯೋ ಯಥಾಹ್ಯಹಂ|| ಎಂಬುದಾಗಿ
ಕೂಡಲಸಂಗಮದೇವರನರಿದು ಪೂಜಿಸಿದಾತ
ಷಡುದರುಶನಕ್ಕಧಿಕ, ಜಗಕ್ಕೆ ಪಾವನ ನೋಡಾ. /629
ಚಿಕ್ಕ ಒಂದು ಹೊತ್ತಗೆ, ಬೆನಕನ ಕರಡಗೆಯಯ್ಯಾ,
ನೀ ಡುಂಡುಟಿ ಗೊರವನಯ್ಯಾ,
ಪುಣ್ಯವೇನಾದಡಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯದೈವ ಉಂಟೆನ್ನದಿರು ಕಂಡಾ !/630
ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ,
ಎನ್ನ ಹೃದಯಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ,
ಎನ್ನ ಕರಸ್ಥಲಕ್ಕನುವಾದ ಧರ್ಮಿ,
ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ,
ಕೂಡಲಸಂಗಮದೇವಯ್ಯಾ./631
ಚೆನ್ನ ಚೇರಮನ ಬಂಟ ನಾನಯ್ಯಾ,
ಎನ್ನ ಚಾಗುಬೊಲ್ಲನ ಕಾವ ಗೋವನೆಂಬರು.
ಕೂಡಲಸಂಗನ ಶರಣರೊಡೆಯರಾಗಿ
ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು/632
ಚೆನ್ನಬಸವರಾಜದೇವರೆನ್ನ ಶಿಷ್ಯನಾದನೆಂದಡೆ ಎನಗಾದ ಘನವೇನಯ್ಯಾ !
ಆದಿಯ ತೋರಿದ ಚೆನ್ನಬಸವನು,
ಅನಾದಿಯ ತೋರಿದ ಚೆನ್ನಬಸವನು,
ಆದಿಯನಾದಿಯಿಂದತ್ತತ್ತಲಾದವರನೆ ತೋರಿದ ಚೆನ್ನಬಸವನು.
ಕೂಡಲಸಂಗಮದೇವಾ, ಚೆನ್ನಬಸವರಾಜದೇವರೆನ್ನ
ಮಾತಾಪಿತರಯ್ಯಾ./633
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ./634
ಚೇಳಿಂಗೆ ಬಸುರಾಯಿತ್ತೆ ಕಡೆ ! ಬಾಳೆಗೆ ಫಲವಾಯಿತ್ತೆ ಕಡೆ !
ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ !
ಮಾಡುವ ಭಕ್ತಂಗೆ ಮನಹೀನವಾದಡೆ ಅದೇ ಕಡೆ
ಕೂಡಲಸಂಗಮದೇವಾ. /635
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ./636
ಜಂಗಮಕ್ಕೆ ಮಾಡಿ ಗತಿಯ ಪಡೆದೆಹೆನೆಂಬ
ಬೆವಹಾರದ ಭಕ್ತರು ನೀವು ಕೇಳಿರಯ್ಯಾ.
ಜಂಗಮಕ್ಕೆ ಮಾಡಿ, ಗತಿಯ ಪಡೆದೆಹೆನೆಂಬ,
ಭಕ್ತಿವ್ಯರ್ಥರು ನೀವು ಕೇಳಿರಯ್ಯಾ.
ಅಗ್ನಿಮುಖದಲ್ಲಿ ಪಾಕವಾದ ಸಸಿ ತೆನೆಯಪ್ಪುದೆ
ಶಶಿಧರಂಗೆ ಮಾಡಿದಡೆ ಫಲವಪ್ಪುದು,
ಆ ಫಲದಾಯಕನೆ ಮರಳಿ ಭವಕ್ಕೆ ಬಹನು.
ಜಂಗಮಕ್ಕೆ ಮಾಡಿದಡೆ ಫಲವಿಲ್ಲ, ಮರಳಿ ಭವವಿಲ್ಲ.
ಕಿಚ್ಚಿನ ಕಣಜದಲ್ಲಿ ಬೀಜವ ತುಂಬಿ
ಬಿತ್ತುವ ದಿನಕ್ಕರೆಸಿದಡುಂಟೆ, ಕೂಡಲಸಂಗಮದೇವಾ /637
ಜಂಗಮದ ಮನ-ಭಾವದಲ್ಲಿ ಭಕ್ತನೆ ಭೃತ್ಯನೆಂದು,
ಭಕ್ತನ ಮನ-ಭಾವದಲ್ಲಿ ಜಂಗಮವೆ ಕರ್ತನೆಂದು ಇದ್ದ ಬಳಿಕ,
ಬಂದಿತ್ತು-ಬಾರದು, ಇದ್ದತ್ತು-ಹೋುತ್ತೆಂಬ ಸಂದೇಹವಿಲ್ಲದಿರಬೇಕು.
ಹೋಯಿತ್ತೆಂಬ ಗುಣವುಳ್ಳನ್ನಕ್ಕ
ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ,
ಶಿವಾಚಾರಕ್ಕಲ್ಲಿಂದತ್ತ ದೂರ.
ಜಂಗಮದ ಹರಿದ ಹರಿವು, ಜಂಗಮದ ನಿಂದ ನಿಲವು,
ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ
ನೀನಂದ ಮೂಗ ಕೊಯ್ ಕೂಡಲಸಂಗಮದೇವಾ./638
ಜಂಗಮದ ಸನ್ನಿದಿಯಲ್ಲಿ ವಾಹನವನೇರಲಮ್ಮೆ :
ಏರಿದರೆ ಭವ ಹಿಂಗದು.
ಏನು ಕಾರಣ ಮುಂದೆ ಸೂಲವನೇರುವ ಪ್ರಾಪ್ತಿಯುಂಟಾದ ಕಾರಣ,
ಜಂಗಮ ಬರಲಾಸನದಲ್ಲಿ ಇರಲಮ್ಮೆ :
ಇದ್ದರೆ ಭವ ಹಿಂಗದು.
ಏನು ಕಾರಣ ಮುಂದೆ ಕಾಯ್ದ ಇಟ್ಟಿಗೆಯ ಮೇಲೆ
ಕುಳ್ಳಿರುವ ಪ್ರಾಪ್ತಿಯುಂಟಾದ ಕಾರಣ.
ಜಂಗಮದ ಮುಂದೆ ದಿಟ್ಟತನದಲ್ಲಿ ಬೆರೆತು ನಿಂದಿರಲಮ್ಮೆನು
ನಿಂದಡೆ ಭವ ಹಿಂಗದಾಗಿ.
ಏನು ಕಾರಣ:ಮುಂದೆ ಹೆಡಗುಡಿಯ ಕಟ್ಟಿ
ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ.
ಇಂತೀ ಬಾಧೆ ಭವಂಗಳಿಗಂಜುವೆನಯ್ಯಾ.
ನಿಮ್ಮವರ ಸುಳುಹು ನೀವೆಂದೇ ಭಾವಿಸಿ,
ತೊತ್ತು-ಭೃತ್ಯನಾಗಿಪ್ಪೆನಯ್ಯಾ, ಕೂಡಲಸಂಗಮದೇವಾ./639
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಆಂಗವಣಿಯೆಂತೊರಿ
ಶಿವಾ ಶಿವಾ ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು.
ಗುರುವಿನ ಗುರು ಜಂಗಮ-
ಇಂತೆಂದುದು ಕೂಡಲಸಂಗನ ವಚನ./640
ಜಂಗಮವ ಕೂಡಿಕೊಂಡು
ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಭಕ್ತಂಗೆ.
ಆ ಭಕ್ತನ ಕೂಡಿಕೊಂಡು
ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಜಂಗಮಕ್ಕೆ.
ಆ ಜಂಗಮದ ಕರ್ತೃತ್ವವೆ ಭಕ್ತಂಗೆ ದಾಸೋಹ,
ಆ ಭಕ್ತನ ಕಿಂಕಲವೆ ಆ ಜಂಗಮಕ್ಕೆ ದಾಸೋಹ.
ಆ ಭಕ್ತರೊಳಗೆ ಆ ಜಂಗಮವಡಗಿ,
ಆ ಜಂಗಮದೊಳಗೆ ಆ ಭಕ್ತನಡಗಿ,
ಇದನೇನೆಂದು ಹವಣಿಸುವೆನಯ್ಯಾ, ಎರಡೊಂದಾದ ಘನವ ?
ಇದನೇನೆಂದುಪಮಿಸುವೆನಯ್ಯಾ, ತೆರಹಿಲ್ಲದ ಘನವ ?
ಈ ಎರಡಕ್ಕೆ ಭವವಿಲ್ಲೆಂದು ಕೂಡಲಸಂಗಯ್ಯಾ,
ನಿಮ್ಮ ಶ್ರುತಿಗಳು ಹೇಳಿದವಾಗಿ,
ನಿಮ್ಮ ಕರುಣವೆನಗೆ ಆಯಿತ್ತು./641
ಜಂಗಮವಿರಹಿತ ಲಿಂಗಾರ್ಚನೆ :ಓಡ ಬಿಲಲೆರೆದ ಜಲದಂತೆ.
ಜಂಗಮಸನ್ನಿಹಿತ ಲಿಂಗಾರ್ಚನೆ :ಇದೆ ಭಕ್ತಿಗೆ ಪಥವಯ್ಯಾ
ಜಂಗಮಪ್ರಸಾದಭೋಗೋಪಭೋಗವು :ಎನಗಿದೇ ಲಿಂಗಾರ್ಚನೆ.
ಬೇರೆ ಮತ್ತೊಂದನರಿದೆನಾದಡೆ,
ಕೂಡಲಸಂಗಮದೇವ ನರಕದಲ್ಲಿಕ್ಕುವ./642
ಜಂಗಮವಿಲ್ಲದ ಮಾಟ ಕಂಗಳಿಲ್ಲದ ನೋಟ,
ಹಿಂಗಿತ್ತು ಶಿವಲೋಕ ಇನ್ನೆಲ್ಲಿಯದಯ್ಯಾ.
ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ,
ಸಮಯೋಚಿತವನರಿಯದೆ ಉದರವ ಹೊರೆವವರ
ನರಕದಲ್ಲಿಕ್ಕದೆ ಮಾಬನೆ ಕೂಡಲಸಂಗಮದೇವ/643
ಜಂಗಮವೆ ಜ್ಞಾನರೂಪು, ಭಕ್ತನೆ ಆಚಾರರೂಪವೆಂಬುದು
ತಪ್ಪದು ನೋಡಯ್ಯಾ.
ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯಾ, ಜ್ಞಾನವಿಲ್ಲದನ್ನಕ್ಕರ
ತಲೆಯಿಲ್ಲದ ಮುಂಡದಂತೆ.
ಜ್ಞಾನ ಉದಯವಾಗದ ಮುನ್ನವೆ ತಲೆದೋರುವ ಆಚಾರವುಂಟೆ ಜಗದೊಳಗೆ
ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ, ಜ್ಞಾನದಿಂದ ಪ್ರಸಾದವಲ್ಲದೆ,
ಜ್ಞಾನವನುಳಿದು ತೋರುವ ಘನವ ಕಾಣೆನು.
ಎನ್ನ ಆಚಾರಕ್ಕೆ ನೀನು ಜ್ಞಾನರೂಪಾದ ಕಾರಣ
ಸಂಗನಬಸವಣ್ಣನೆಂಬ ಹೆಸರುವಡೆದೆನು.
ಅನಾದಿ ಪರಶಿವನು ನೀನೆ ಆಗಿ,
ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ,
ನಾನೆತ್ತ, ಶಿವತತ್ತ್ವವೆತ್ತಯ್ಯಾ
ಕೂಡಲಸಂಗಮದೇವರು ಸಾಕ್ಷಿಯಾಗಿ,
ನಾನು ಪ್ರಭುದೇವರ ತೊತ್ತಿನ ಮಗನೆಂಬುದ
ಮೂರು ಲೋಕವೆಲ್ಲವೂ ಬಲ್ಲುದು ಕಾಣಾ, ಪ್ರಭುವೆ./644
ಜಂಗಮವೆ ತನ್ನ ಪ್ರಾಣಲಿಂಗವೆಂದರಿದ ಸದ್ಭಕ್ತಂಗೆ
ಜಂಗಮದ ಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊಳಲಾಗದು,
ಜಂಗಮದ ಪ್ರಸಾದವು ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು.
ಅದೆಂತೆಂದಡೆ, ವೀರಾಗಮದಲ್ಲಿ;
ಜಂಗಮಾದಿಗುರೂಣಾಂ ಚ ಅನಾದಿ ಸ್ವಯಲಿಂಗವತ್
ಆದಿಪ್ರಸಾದವಿರೋಧೇ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂಶ ಎಂದುದಾಗಿ
ಪ್ರಾಣ ಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು.
ಈ ಭೇದವನರಿದು ಜಂಗಮದ ಪ್ರಸಾದವಿಲ್ಲದೆ
ಲಿಂಗದ ಪ್ರಸಾದವ ಕೊಳಲಾಗದು ವೀರಮಾಹೇಶ್ವರರು,
ಕೂಡಲಸಂಗಮದೇವಾ./645
ಜಂಗಮವೆ ಲಿಂಗವೆಂಬ ಭಾವ ಫಲಿಸಿದಡೆ ಇಂದಿನ ಪುಣ್ಯಕ್ಕೆ ಸರಿಯುಂಟೆ
ಲಿಂಗದ ಒಡಲ ಮನೆಮಾಡಿಪ್ಪ ಜಂಗಮವೆನ್ನ ಕಣ್ಣಮುಂದೆ ಸುಳಿದಡೆ
ಇಂದೆನ್ನ ಭಾಗ್ಯಕ್ಕೆ ಕಡೆಯಿಲ್ಲ.
ಆ ಜಂಗಮವೆ ದಿಟಕ್ಕೆನ್ನ ಮನೆಗೆ ಬಂದಡೆ
ಸಲುಗೆಯ ವರವ ಹಡೆವೆನು ಕಾಣಾ,
ಕೂಡಲಸಂಗಮದೇವರಲ್ಲಿ
ಚೆನ್ನಬಸವಣ್ಣಾ, ನೀನಹುದೆನಲಿಕೆ./646
ಜಂಗಮವೆ ಲಿಂಗವೆನಗೆ, ಜಂಗಮವೆ ಪ್ರಾಣವೆನಗೆ.
ಕೂಡಲಸಂಗಮದೇವಯ್ಯಾ,
ಎನಗೆಯೂ ನಿನಗೆಯೂ ಜಂಗಮಪ್ರಸಾದವೆ ಪ್ರಾಣ. /647
ಜಂಗಮಸೇವೆಯೆ ಗುರುಪೂಜೆಯೆಂದರಿದ,
ಜಂಗಮಸೇವೆಯೆ ಲಿಂಗಪೂಜೆಯೆಂದರಿದ,
ಜಂಗಮಸೇವೆಯೆ ತನ್ನಿರವೆಂದರಿದ,
ಜಂಗಮಸೇವೆಯೆ ತನ್ನ ನಿಜವೆಂದರಿದ,
ಜಂಗಮಸೇವೆಯೆ ಸ್ವಯವೆಂದರಿದ,
ಜಂಗಮಸೇವೆಯೆ ನಿತ್ಯಪದವೆಂದರಿದ.
ಇದು ಕಾರಣ, ನಮ್ಮ ಕೂಡಲಸಂಗಮದೇವರಲ್ಲಿ
ಜಂಗಮಪ್ರಾಣಿಯಾದ ಚಂದಯ್ಯನ ಹಳೆ ಮಗನಾಗಿ,
ಆತನ ಶ್ರೀಚರಣಕ್ಕೆ ಶರಣೆಂದು ಶುದ್ಧನು,
ಆ ಮಹಾಮಹಿಮನ ಘನವ ನಾನೆತ್ತ ಬಲ್ಲೆನಯ್ಯಾ ಪ್ರಭುವೆ /648
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ. /649
ಜಗತ್ತೆಂಬ ಯಂತ್ರದ ಹಾಹೆ ಹೇಂಗೆಂದರಿಯಲು
ಅಜ್ಞಾನವೆಂಬ ತುಷದ ಚೋಹವ ತೊಡಿಸಿ,
ಅಹಂ ಮಮತೆಯೆಂಬ ಸೊಕ್ಕನಿಕ್ಕಿ, ಬಾರದ ಭವದ ಬಟ್ಟೆಯಲ್ಲಿ ಬರಿಸಿ,
ಕಾಣದ ಕರ್ಮ ದುಃಖವ ಕಾಣಿಸಿ, ಉಣ್ಣದ ಅಪೇಯವನುಣಿಸಿ,
ಮಾರಾರಿ ವಿನೋದಿಸಿದೆಯಯ್ಯಾ, ಕೂಡಲಸಂಗಮದೇವಾ./650
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು.
ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ;
ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ
ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್
ಎಂದುದಾಗಿ. ಅದಕ್ಕೆ ಮತ್ತೆಯು;
ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ
ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿದಿಯತೇ ಎಂದುದಾಗಿ,
ಯಥಾ ಉದಕದಿಂದಲಿ ಅಗ್ನಿಯಿಂದಲಿ
ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು
ಜೀವಮಯವೆಂದು ಹೇಳುತಿರ್ದವಾಗಿ,
ಆ ದೋಷದಿಂದಲಾದ ಭೋಜನವನು
ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ;
ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು
ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ
ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು,
ಹೇಗೆ ಹೋಹುದಯ್ಯಾ ಎಂದಡೆ:
ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು,
ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು.
ಇದು ಕಾರಣ, ಈ ವರ್ಮ ಸಕೀಲವು
ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ
ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ./651
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ./652
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ.
ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ.
ಕರಿಯು ಕನ್ನಡಿಯೊಳಗಡಗಿದಂತಯ್ಯಾ,
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ./653
ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು,
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಮದೇವಯ್ಯಾನಂತಪ್ಪ ಎನಗೊಬ್ಬ ಗಂಡನುಂಟು./654
ಜಜ್ಜನೆ ಜರಿದೆನು, ಜಜ್ಜನೆ ಜರಿದೆನು, ಜಜ್ಜನೆ ಜರಿದೆ ನೋಡಯ್ಯಾ,
ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆ ನೋಡಯ್ಯಾ.
ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆನು,
ನಾನೊಬ್ಬನೆ ಉಳಿದೆ ನೋಡಯ್ಯಾ.
ಕೂಡಲಸಂಗಮದೇವಾ, ನಿಮ್ಮ ಶರಣರನಗಲಿದ ಕಾರಣ./655
ಜನನವಿಲ್ಲದ ಜನಿತನು ನೀನು ನೋಡಯ್ಯಾ,
ಜನಿಯಿಸಿ ಸಂಸಾರವನರಿಯದ ನಿರ್ವಿಕಾರಿ ನೀನು ನೋಡಯ್ಯಾ,
ಭವಬಂಧನಗಳಿಲ್ಲದ ನಿತ್ಯನಿಜತತ್ವವು ನೀನು ನೋಡಯ್ಯಾ,
ನಿನ್ನ ಚರಣಸೇವೆಯ ಮಾಡಿ, ಎನ್ನ ಭವ ಹರಿಯಲೆಂದಿಪ್ಪೆನಲ್ಲದೆ,
ನಿಮ್ಮ ಘನವೆಂತೆಂದು ಅರಿಯೆ ನೋಡಯ್ಯಾ.
ಕೂಡಲಸಂಗಮದೇವಾ,
ನೀನು ಕೊಂಡಾಡಲಾನು ಪ್ರಾಪ್ತನೆ ಹೇಳಾ ಪ್ರಭುವೆ./656
ಜನನಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕ
ಎಂಬಿವಾದಿಯಾದ ಸರ್ವಸೂತಕಂಗಳು
ಅಂಗಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ, ಅದೆಂತೆಂದೊಡೆ;
ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಂ
ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್ ಎಂದುದಾಗಿ
ಪೂರ್ವಾಚಾರವನಳಿದು ಪುನರ್ಜಾತನಾಗಿ,
ಅಂಗದ ಮೇಲೆ ಲಿಂಗಸಾಹಿತ್ಯನಾದ ಭಕ್ತಂಗೆ
ಜನನಸೂತಕವೆಂಬುದೆ ಪಾತಕ ನೋಡಾ.
ಶಿವಭಕ್ತರಾದ ಬಳಿಕ ಭವಿನೇಮಸ್ತರ ಕಳೆದು
ಶಿವಕುಲವೆ ಕುಲವಾದ ಭಕ್ತರಿಗೆ ಕುಲಸೂತಕವೆಂಬುದೆ ಪಾತಕ ನೋಡಾ.
ಗುರುಪಾದತೀರ್ಥ, ಲಿಂಗಪಾದತೀರ್ಥ, ಜಂಗಮಪಾದತೀರ್ಥ ಆದಿಯಾದ
ಲಿಂಗೋದಕ, ಪಾದೋದಕ, ಪ್ರಸಾದೋದಕ ಎಂಬ ತ್ರಿವಿಧೋದಕದಲ್ಲಿ
ಸರ್ವಪಾಕಪ್ರಯತ್ನ, ನಾನಾ ಕ್ರಿಯಾವಿಧಾನ, ಸ್ನಾನಪಾನಂಗಳಿಂದ
ಬಾಹ್ಯಾಭ್ಯಂತರಂ ಶುಚಿಯಾದ, ಶುದ್ಧನಿರ್ಮಲದೇಹಿಯಾದ ಭಕ್ತಂಗೆ ರಜಃಸೂತಕವೆಂಬುದೆ ಪಾತಕ ನೋಡಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯುಕ್ತವಾದ ಸದಾಸನ್ನಹಿತ ಭಕ್ತಂಗೆ
ಎಂಜಲಸೂತಕವೆಂಬುದೆ ಪಾತಕ ನೋಡಾ.
ಗುರುವಿನಿಂ ಜನನ, ಚರಲಿಂಗದಿಂ ಸ್ಥಿತಿ,
ಪರಮಪಾವನ ಘನಮಹಾಲಿಂಗದೊಳೈಕ್ಯ. ಅದೆಂತೆಂದೊಡೆ;
ಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಂ
ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮಂ ಎಂದುದಾಗಿ,
ನಿಜಲಿಂಗೈಕ್ಯವಾದ ಸದ್ಭಕ್ತಂಗೆ
ಪ್ರೇತಸೂತಕವೆಂಬುದೆ ಪಾತಕ ನೋಡಾ.
ಇಂತೀ ಪಂಚಸೂತಕವನುಳ್ಳ ಪಾತಕಂಗಳ
ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ
ಪಂಚಮಹಾಪಾತಕರ ಅಘೋರ ನರಕದಲ್ಲಿಕ್ಕುವ ಕೂಡಲಸಂಗಯ್ಯ. /657
ಜನ್ಮ ಜನ್ಮಕ್ಕೆ ಹೊಗಲೀಯದೆ,
ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ.
ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ
ಕೂಡಲಸಂಗಮದೇವಾ./658
ಜನ್ಮ ಜನ್ಮಕ್ಕೆ ಹೋಗಲೀಯದೆ,
`ಸೋಹಂ ಎಂದೆನಿಸದೆ `ದಾಸೋಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ ಧರ್ಮ./659
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು.
ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು.
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು.
ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ,
ಕೂಡಲಸಂಗಮದೇವಾ/660
ಜಪತಪ ನಿತ್ಯನೇಮವೆನಗುಪದೇಶ,
ನಿಮ್ಮ ನಾಮವೆನಗೆ ಮಂತ್ರ,
ಶಿವನಾಮವೆನಗೆ ತಂತ್ರ,
ಕೂಡಲಸಂಗಮದೇವಯ್ಯಾ
ನಿಮ್ಮ ನಾಮವೆನಗೆ ಕಾಮಧೇನು./661   
ಜಲ ಕೂರ್ಮ ನಾಗ ಮೇದಿನಿ ಸಪ್ತಸಾಗರ
ಅಜಾಂಡ ಹರಿವಿರಂಚಿಗಳು
ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ.
ಕೂಡಲಸಂಗನ ಮಹಾಮನೆಯಲ್ಲಿ ಅಸ್ತಿಗ್ರಾಹಕನೆಂಬ ಗಣೇಶ್ವರನ
ಇಚ್ಛಾಮಾತ್ರದಿಂದ ಜಗಜುಗವಯ್ಯಾ./662
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ,
ಗಣತಿಂತಿಣಿಯೊಳಗಿರಿಸೆನ್ನ ಲಿಂಗವೆ.
ಶಿವ ಶಿವಾ, ಕೂಡಲಸಂಗಮದೇವಾ,
ಸೆರಗೊಡ್ಡಿ ಬೇಡುವೆನು./663
ಜಲವ ನುಂಗಿತ್ತಯ್ಯಾ ಎನ್ನ ಕರವು,
ಪತ್ರೆಯ ನುಂಗಿತ್ತಯ್ಯಾ ಎನ್ನ ಶಿಖೆ,
ಎನ್ನಯ ಮಂತ್ರ ಭಿನ್ನವಾಯಿತ್ತು.
ಇಂತೀ ದ್ವಿವಿಧ ಒಂದಾಗದ ಮುನ್ನ
ಕೂಡಲಸಂಗಮದೇವರು ಪೂಜೆಗೊಂಡರು. /664
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ !
ಹುಸಿಯಾದಡೆ, ದೇವಾ ತಲೆದಂಡ, ತಲೆದಂಡ !
ಕೂಡಲಸಂಗಮದೇವಾ,
ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ, ತಲೆದಂಡ !/665
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ !
ಇದೇಕೊ ಮರುಳುಮಾನವಾ
ಜಾತಿಯಲ್ಲಿ ಅಧಿಕನೆಂಬೆ !
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ
`ಭಕ್ತನೆ ಶಿಖಾಮಣ’ ಎಂದುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
ಕೆಡಬೇಡ ಮಾನವಾ. /666
ಜಿಹ್ವೆ ಗುರು, ಕಂಗಳು ಲಿಂಗ, ನಾಸಿಕವಾಚಾರ,
ಹಸ್ತ ಜಂಗಮ, ಶ್ರೋತ್ರ ಪ್ರಸಾದ.
ಈ ಪಂಚಾಚಾರಸಂಜ್ಞೆಯನು,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯೋಗಸಂಜ್ಞೆಯನೆನಗೆ
ನೀ ಕರುಣಿಸಲಾಯಿತ್ತು, ಕೂಡಲಸಂಗಮದೇವಾ./667
ಜೀವಾತ್ಮ ಅಂತರಾತ್ಮನ ಸುದ್ದಿಯ ಬೆಸಗೊಂಬಡೆ ಹೇಳಿಹೆ ಕೇಳಿ ಭೋಃ
ಹುಸಿಯ ಸಂಕಲೆಯಾಗಿದ್ದಲ್ಲಿ ಕಾದುಕೊಂಡಿದ್ದನೊಬ್ಬ.
ಕಥೆ ಕನಸ ಮಾಡಿ ಹೇಳುತ್ತಿದ್ದನೊಬ್ಬ.
ಪರಾಪರಕ್ಕೆ ಹೋಗಿ ಪರಮನ ಸುದ್ದಿಯ ಕೊಂಡುಬರುತ್ತಿಪ್ಪ
ಅವರಿಬ್ಬರನೂ ಕೆಡೆಮೆಟ್ಟಿ ಹೋಹಾಗ,
ಲೋಕ ನಿರ್ಬುದ್ಧಿಗೊಂಡಿತ್ತು, ಕೂಡಲಸಂಗಮದೇವಾ. /668
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ. /669
ಜ್ಞಾನದ ಗಮನವ ಸಹಜದ ಉದಯದಲ್ಲಿ ಏನೆಂದರಿಯೆನು.
ಲಿಂಗದ ಬೆಳಗು ಒಳಕೊಂಡುದಾಗಿ ಏನೆಂದರಿಯೆನು.
ಕೂಡಲಸಂಗಮದೇವನ ಧ್ಯಾನದಿಂದ ಏನೆಂದರಿಯೆನು. /670
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ. /671
ಡಂಬೂ ಡಳುಹೂ ಎನ್ನದಯ್ಯಾ, ಡಂಬಕನೆಂಬವ ನಾನಯ್ಯಾ.
ನಿಮ್ಮ ನಂಬಿದ ಶರಣರ [ನಂಬದ] ಡಿಂಗರಿಗ ನಾನು,
ಕೂಡಲಸಂಗಮದೇವಾ/672
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು./673
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ./674
ತತ್ವವನರಿದೆಹೆನೆಂದು ಮೃತ್ಯುವ ಕರೆಕೊಂಡೆನಯ್ಯಾ.
ನಾನೆತ್ತ ಬಲ್ಲೆ ನಿಮ್ಮ ಶರಣರಂತುವನು
ನಾನೆತ್ತ ಬಲ್ಲೆ ನಿಮ್ಮ ಪ್ರಮಥರಂತುವನು
ಸರ್ವಾಪರಾಧಿ ನಾನು.
ಎನ್ನ ಮನದ ಕೊನೆಯ ಸೂತಕ ಹಿಂಗದು,
ಕೂಡಲಸಂಗಮದೇವಾ./675
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ./676
ತನು ದೊರೆಕೊಂಡಡೆ ಮನ ದೊರೆಕೊಳ್ಳದು,
ಮನ ದೊರೆಕೊಂಡಡೆ ತನು ದೊರೆಕೊಳ್ಳದು,
ತನುಮನ ದೊರೆಕೊಂಡಡೆ ಧನ ದೊರೆಕೊಳ್ಳದು,
ತನುಮನಧನ ದೊರೆಕೊಂಡಡೆ ಸತಿಸುತರೆಡೆಯಾಟ ದೊರೆಕೊಳ್ಳದು,
ಸತಿಸುತರೆಡೆಯಾಟ ದೊರೆಕೊಂಡಡೆ
ಜಂಗಮಕ್ಕೆ ಮಾಡುವ ವರ್ಮ ದೊರೆಕೊಳ್ಳದಯ್ಯಾ,
ಕೂಡಲಸಂಗಮದೇವಾ./677
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ,
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ,
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ,
ಇಂತೀ ತ್ರಿವಿಧವು ನಿಮ್ಮದೆಂದರಿದ ಬಳಿಕ
ಎನಗೆ ಬೇರೆ ವಿಚಾರವುಂಟೆ, ಕೂಡಲಸಂಗಮದೇವಾ/678
ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ
ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ./679
ತನು ಮನ ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು
ಒಳಲೊಟೆಯ ನುಡಿವವರು ನೀವೆಲ್ಲರೂ ಕೇಳಿರೆ.
ತಲಹಿಲ್ಲದ ಕೋಲು ಹೊಳ್ಳು ಹಾರುಹುದಲ್ಲದೆ
ಗುರಿಯ ತಾಗಬಲ್ಲುದೆ
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯಾ/680
ತನು ಶುಚಿಯಿಲ್ಲದವನ ದೇಹಾರವೇಕೆ
ದೇವರು ಕೊಡನೆಂಬ ಭ್ರಾಂತದೇಕೆ
ಮನಕ್ಕೆ ಮನವೆ ಸಾಕ್ಷಿ, ಸಾಲದೆ ಲಿಂಗ ತಂದೆ
ಹೇಂಗೆ ಮನ ಹಾಂಗೆ ಘನ ತಪ್ಪದು,
ಕೂಡಲಸಂಗಮದೇವಾ. /681
ತನುಮನಧನವೆಂಬ ಕನ್ನಡಿ ನೋಡಿಯ್ಯಾ,
ಎನ್ನದೂ ಅಲ್ಲ, ನಿನ್ನದೂ ಅಲ್ಲ, ಬರಿಯ ಭ್ರಮೆಯ ಮಾತು.
ಆ ಭ್ರಮೆಗೊಳಗಾಗೆ, ನಿಮ್ಮ ಶ್ರೀಚರಣವ ಬಿಡೆ,
ಕೂಡಲಸಂಗಮದೇವಾ. /682
ತನು-ಮನ-ಧನವೆಂಬ ಮೂರು ಕತ್ತಿುವೆ,
ಸಲೆ ಮೂಗಿನ ಮೇಲೆ ಅಯ್ಯಾ,
ಲಿಂಗ ಜಂಗಮಕ್ಕೆ ಮಾಡಿಹೆನೆಂಬವಂಗೆ
ಇದು ಕಾರಣ, ಕೂಡಲಸಂಗನ ಶರಣರಿಗೆ ಅಂಜಲೇಬೇಕು./683
ತನುಮುಟ್ಟಿದ ಭಕ್ತಿಗೆ ತನುವೆ ಅರ್ಪಿತ,
ಮನಮುಟ್ಟಿದ ಭಕ್ತಿಗೆ ಮನವೆ ಅರ್ಪಿತವಯ್ಯಾ,
ಎನ್ನ ತನುಮನವೆರಡು ನಿಮ್ಮ ಚರಣಕ್ಕೆ ವೇದ್ಯ ನೋಡಯ್ಯ.
ಅದೆಂತೆಂದಡೆ;
ದೀರ್ಘದಂಡನಮಸ್ಕಾರಂ ನಿರ್ಲಜ್ಜೋ ಗುರುಸನ್ನಿಧೌ
ಶರೀರಮರ್ಥಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್
ಎಂದುದಾಗಿ, ತ್ರಾಹಿ ತ್ರಾಹಿ ಶರಣಾರ್ಥಿ ಶರಣಾರ್ಥಿ
ನೀವೆ ಬಲ್ಲಿರಿ, ಕೂಡಲಸಂಗಮದೇವಪ್ರಭುವೆ. /684
ತನುವ ಕೊಟ್ಟು ಗುರುವನೊಲಿಸಬೇಕು,
ಮನವ ಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮವನೊಲಿಸಬೇಕು.
ಈ ತ್ರಿವಿಧವ ಹೊರಗು ಮಾಡಿ,
ಹರೆಯ ಹೊುಸಿ, ಕುರುಹ ಪೂಜಿಸುವ ಗೊರವರ ಮೆಚ್ಚ
ಕೂಡಲಸಂಗಮದೇವ./685
ತನುವ ಕೊಟ್ಟೆನೆಂದು ನುಡಿದು, ಗುರುವಚನಕ್ಕೆ ದೂರವಾದೆ,
ಮನವ ಕೊಟ್ಟೆನೆಂದು ನುಡಿದು, ಲಿಂಗಮುಖಕ್ಕೆ ದೂರವಾದೆ,
ಧನವ ಕೊಟ್ಟೆನೆಂದು ನುಡಿದು, ಜಂಗಮಮುಖಕ್ಕೆ ದೂರವಾದೆ,
ಕೂಡಲಸಂಗಮದೇವಯ್ಯಾ,
ನಿಮಗೆ ಮಾಡಿದೆನೆಂದು ನುಡಿದು ಕೆಟ್ಟ ಕೇಡಿಂಗೆ ಕಡೆಯಿಲ್ಲ./686
ತನುವ ನೋುಸಿ, ಮನವ ಬಳಲಿಸಿ,
ನಿಮ್ಮ ಪಾದವಿಡಿದವರೊಳರೆ ಈ ನುಡಿ ಸುಡದಿಹುದೆ
ಕೂಡಲಸಂಗಮದೇವಾ,
ಶಿವಭಕ್ತರ ನೋವೇ ಅದು ಲಿಂಗದ ನೋವು./687
ತನುವ ಬಂದು ಅಲೆವರಯ್ಯಾ ಎನ್ನ,
ಮನವ ಬಂದು ನೋಡುವರಯ್ಯಾ ಎನ್ನ,
ಧನವ ಬಂದು ಸೂರೆಗೊಂಬರಯ್ಯಾ ಜಂಗಮವನವರತ.
ಕೂಡಲಸಂಗಮದೇವಾ,
ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ. /688
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ ನಿಮ್ಮ ಶರಣಂಗೆ.
ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ
ಘನಮಹಿಮ, ನಿಮ್ಮ ಪಾದದಾಣೆ.
ಮನ ವಚನ ಕಾಯದಲ್ಲಿ ನೀವಲ್ಲದೆ ಮತ್ತೊಂದನರಿದಡೆ
ಕೂಡಲಸಂಗಮದೇವಾ, ಭವ ಘೋರದಲ್ಲಿಕ್ಕಯ್ಯಾ./689
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ,
ಬೇಡು, ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ,
ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ,
ನಿಮ್ಮ ಪುರಾತರ ಮನೆಯಲ್ಲಿ. /690
ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು ಪ್ರಾಣ,
ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರು.
ಇಂತೀ ಗುರುಲಿಂಗಜಂಗಮಪ್ರಸಾದವ
ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ
ಸಂದೇಹಿ ವ್ರತಗೇಡಿಗಳನೇನೆಂಬೆ
ಅಂತವರ ಮುಖವ ತೋರದಿರು ಕೂಡಲಸಂಗಮದೇವಾ./691
ತನುವಿನಲೊಂದಿಟ್ಟು ಮನದಲೆರಡಿಟ್ಟಡೆ,
ಬಲ್ಲನೊಲ್ಲನಯ್ಯಾ, ಲಿಂಗವು ಬಲ್ಲನೊಲ್ಲನಯ್ಯಾ.
ಪರಚಿಂತೆಯನೊಲ್ಲನೊಲ್ಲ
ಕೂಡಲಸಂಗಮದೇವ./692
ತನುವೆಂತಿರ್ದಡೇನಯ್ಯಾ ಮನ ನಿರ್ಮಳವಾಗಿರ್ದಡೆ ಸಾಲದೆ
ಎಂತಿರ್ದಡೇನು ಲಿಂಗಭಕ್ತ ಎಂತಿರ್ದಡೇನು ಲಿಂಗಶರಣ
ಎಂತಿರ್ದಡೇನು ನೋಡಯ್ಯಾ.
ಶಿಶು ನೊಂದಡೆ ತಾಯಿ ನೊಂದಂತೆ ಕೂಡಲಸಂಗಮದೇವಾ./693
ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಭಾವಸಾರಾಯರ ಭಕ್ತಿಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಕೂಡಲಸಂಗಮದೇವಯ್ಯಾ
ನಿಮ್ಮನರಿಯದ ಅವಗುಣಿಗಳ
ತೋರದಿರಯ್ಯಾ, ನಿಮ್ಮ ಧರ್ಮ./694
ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಭಾವಸಾರಾಯರ ಭಕ್ತಿಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಕೂಡಲಸಂಗಮದೇವಯ್ಯಾ
ನಿಮ್ಮನರಿಯದ ಅವಗುಣಿಗಳ
ತೋರದಿರಯ್ಯಾ, ನಿಮ್ಮ ಧರ್ಮ. /695
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು.
ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು.
ಕೂಡಲಸಂಗಮದೇವನ ಶರಣರ
ನಚ್ಚದ ಮಚ್ಚದ ಬೆಂದ ಮನವನು./696
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ./697
ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು,
ಇದಿರಿಚ್ಚೆಯ ನುಡಿದಡೆ ಮೆಚ್ಚದೀ ಮನವು.
ಕೂಡಲಸಂಗನ ಶರಣರ
ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು./698
ತಮತಮಗೆಲ್ಲ ನೊಸಲಕಣ್ಣವರು, ತಮತಮಗೆಲ್ಲ ನಂದಿವಾಹನರು,
ತಮತಮಗೆಲ್ಲ ಖಟ್ವಾಂಗಕಪಾಲತ್ರಿಶೂಲಧರರು.
ದೇವರಾರು ಭಕ್ತರಾರು ಹೇಳಿರಯ್ಯಾ !
ಕೂಡಲಸಂಗಮದೇವಾ, ನಿಮ್ಮ ಶರಣರು ಸ್ವತಂತ್ರರು,
ಎನ್ನ ಬಚ್ಚಬರಿಯ ಬಸವನೆನಿಸಯ್ಯಾ./699
ತಾ ಸವಿದಲ್ಲದೆ ಆ ಸವಿಯ ಲಿಂಗಕ್ಕರ್ಪಿಸಲಾಗದು.
ಅದೇನು ಕಾರಣವೆಂದಡೆ,
ಆ ಲಿಂಗವು ಕಹಿ-ಸಿಹಿಯರಿಯದಾಗಿ.
ಇದು ಕಾರಣ,
ಕಹಿ ಎಂದು ಕಳೆದು, ಸಿಹಿ ಎಂದು ಕೊಂಡಡೆ,
ಕೊಂಡುದು ಕಿಲ್ಬಿಷ, ಕೂಡಲಸಂಗಮದೇವಾ./700
ತಾಗು ನಿರೋಧದ, ಆಗುಹೋಗನರಿಯದ
ಶರಣನ ಚರಿತ್ರವ ನೋಡಿ ನೋಡಿ ಬೆರಗಾದೆನಯ್ಯಾ,
ಕೂಡಲಸಂಗಮದೇವಯ್ಯನಲ್ಲಿ ತಾನು ಸುಯಿಧಾನಿಯಾ[ಗೆ] /701
ತಾನಿಲ್ಲದೆ ತಾ ಮಾಡುವ ಸಹಜನು, ತಾನಿಲ್ಲದೆ ತಾ ನೀಡುವ ಸಹಜನು,
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು.
ಏನೊಂದರ ಹಮ್ಮಿಲ[ದ] ಸಹಜ ಸುಜ್ಞಾನಿಯ
ಮಾಟದ ಕೂಟದ ಸ್ಥಲದೊಳು ಕೂಡಿಹ
ಕೂಡಲಸಂಗನನದೇನೆಂದುಪಮಿಸುವೆ. /702
ತಾಪತ್ರಯವೆಂದಡೆ ರೂಪ ಕಾಣುತ್ತ ಕನಲಿದ,
ಕೋಪದಲ್ಲಿ ಶಿವಕಳೆಯದ ಕರಡಿಗೆಯನೆ ಮುರಿದ,
ಧೂಪದ ಗುಂಡಿಗೆಯನೊಡೆದ, ದೀಪಾರತಿಯ ನಂದಿಸಿದ,
ಬಹ ಪರಿಯಾಣದೋಗರವ ತುಡುಕಿದ,
ಪಾಪಕರ್ಮಸಂಹರನು ಕೂಡಲಸಂಗಮದೇವಾ, ನಿಮ್ಮ ಶರಣ./703
ತಾಮಸ ಮುಸುಕಿ ಕಂಗಳ ಕೆಡಿಸಿತ್ತೆನ್ನ, ಭಕ್ತಿ.
ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ, ಭಕ್ತಿ.
ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ, ಭಕ್ತಿ.
ಇದಿರನಾಶ್ರುಸಲು ಹೋುತ್ತೆನ್ನ, ಭಕ್ತಿ.
ಹೆಣಮೂಳನು ನಾನು ಕೂಡಲಸಂಗಮದೇವಾ,
ಕ್ಷಣ ಹದುಳವಿರದೆ ಬಾಯ ಟೊಣೆದು ಹೋುತ್ತೆನ್ನ, ಭಕ್ತಿ./704
ತಾಳಮರದ ಕೆಳಗೆ ಒಂದು ಹಾಲ ಹರಮಿದ್ದಡೆ
ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು.
ಈ ಭಾವನಿಂದೆಯ ಮಾಣಿಸಾ
ಕೂಡಲಸಂಗಮದೇವಾ./705
ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ./706
ತಿಂಬ ಗಂದೆಯ ಮೇಲೆ ಉಗುರು ಬಿದ್ದಂತಾಯಿತು,
ಎನ್ನ ಹಿಂದನೆಚ್ಚರಿಸಿ, ಮುಂದಣ ಸ್ಥಿತಿಗತಿಯನರುಹಿ,
ಸಂದೇಹವ ಬಿಡಿಸಿದೆ.
ಎನ್ನ ಕಂದುಕಲೆಯ ಕಳೆವ ತಂದೆ ನೀನಿರುತ್ತಿರಲು,
ಎನಗಿನ್ನಾವ ದಂದುಗವೂ ಇಲ್ಲ ನೋಡಾ.
ಬಂದ ಕಾರ್ಯದ ಹದನಿನ್ನೆಂದು ಸಯವಪ್ಪುದು
ಕೂಡಲಸಂಗಮದೇವರು ಎನ್ನನಿತ್ತ ಬಾರೆಂಬ
ಕಾಲವ ತಿಳುಹಾ, ಚೆನ್ನಬಸವಣ್ಣಾ./707
ತಿರುಕರೆನ್ನದಿರಿ ಭೋ ! ಎನ್ನ ತಂದೆಗಳನು,
ತಿರುಕರೆನ್ನದಿರಿ ಭೋ ! ಎನ್ನ ಬಂಧುಗಳನು,
ತಿರುಕರೆನ್ನದಿರಿ ಭೋ ! ಎನ್ನ ದೇವರನು,
ತಿರುಕರೆನ್ನದಿರಿ ಭೋ ! ಎನ್ನ ಒಡೆಯರನು.
ದೇಹಿ ಎಂದಡೆ ನಾಸ್ತಿ ಎಂಬವರ
ಬೇಹು ನೋಡಬಂದ ಕಾಣಾ, ಕೂಡಲಸಂಗಮದೇವ./708
ತೆರನನರಿವುದು ಅಪೂರ್ವ, ಅರಿದು ಮರೆವುದು ಅಪೂರ್ವ,
ಕೂಡೆ ಶರಣೆಂಬುದು ಅಪೂರ್ವ.
ಕೂಡಲಸಂಗಮದೇವನ ಭಕ್ತಿ ಅಭಿಮಾನಿಯ ಜವ್ವನದಂತೆ. /709
ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
ತೆರಹಿಲ್ಲದ ಸಂಭಾಷಣೆ ಸುಖವು.
ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು,
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ
ಕೂಡಲಸಂಗಮದೇವಾ, ನಿಮ್ಮ ಶರಣಂಗೆ ! /710
ತೊಂಡಿಲ ಮುಡಿದುಕೊಂಡು
ತಮ್ಮ ತಮ್ಮ ಗಂಡರ ಹಿಂದುಗೊಂಡು
ನಾಡ ಮಿಂಡರ ನೋಡುತ್ತಲಿ,
ಇಂದು ನಮ್ಮ ಹುಲಿ ಹೋಯಿತ್ತು ಬನ್ನಿರೆ.
ಗಂಡರ ಗಂಡನವ್ವಾ ಕೂಡಲಸಂಗ,
ಕಂಡಡೆ ಮೂಗ ಕೊಯಿವಾ./711
ತೊತ್ತಿಂಗೆ ಬಲ್ಲಹನೊಲಿದಡೆ ಪದವಿಯ ಮಾಡದೆ ಮಾಬನೆ
ಜೇಡರ ದಾಸಯ್ಯಂಗೊಲಿದಾತ ಮತ್ತೊಬ್ಬ ದೇವನೆ, ಅಯ್ಯಾ
ಮಾದಾರ ಚೆನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,
ತೆಲುಗು ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ
ಎನ್ನ ಮನದ ಪಂಚೇಂದ್ರಿಯ ನಿಮ್ಮತ್ತಲಾದಡೆ
ತನ್ನತ್ತ ಮಾಡುವ ಕೂಡಲಸಂಗಮದೇವಯ್ಯ./712
ತೊತ್ತಿಂಗೆ ಲಕ್ಷಣವೇಕಯ್ಯಾ
ಅವರೊಕ್ಕುದನುಂಡು ಮಿಕ್ಕುದ ಕಾ್ದುಪ್ಪುದು.
ಸಾರೆ ಹೊರಸೇಕೆ, ಅವಳಿಗೆ ಮಾರುತ್ತರವೇಕೆ
ಕೂಡಲಸಂಗನ ಶರಣರೊಡನೆ
ಇದಿರುತ್ತರವೇಕೆ ಸಿಂಬಕಂಗೆ/713
ತೊತ್ತಿಂಗೇಕೆ ಲಕ್ಷಣ ಬಂಟಂಗೇಕೆ ಆಚಾರ
ಆಗಮವೇಕೆ ಡಿಂಗರಿಗಂಗೆ
ಒಕ್ಕುದನುಂಬುವಂಗಯ್ಯಾ, ಕೂಡಲಸಂಗಮದೇವಾ
ನಿಮ್ಮ ನಂಬುವುದಾಚಾರವಯ್ಯಾ./714
ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ ಸಿಂಗಾರವ ಮಾಡಿದಂತೆ
ಕುಚಿತರ ಸಂಗ, ಸುಸಂಗಿಗೆ ಸಂಗಡವಿಲ್ಲ !
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ,
ಕೂಡಲಸಂಗಮದೇವಾ /715
ತೊತ್ತಿನ ತೊತ್ತಿನ ಮರುದೊತ್ತಿನೊಡನೆ
ಮುನಿವುದು ನಿಮಗೆ ಗುಣವೆ
ಅಯ್ಯಾ ಅಯ್ಯಾ, ನಿಮ್ಮ ಧರ್ಮದವ ನಾನಯ್ಯಾ.
ಒಮ್ಮಿಂಗೆ ಕೃಪೆ ಮಾಡಿ ಕರುಣಿಸಯ್ಯಾ.
ಕೂಡಲಸಂಗಮದೇವಾ,
ಇಲಿಗಂಜಿ ಮನೆ ಸುಡುವರುಂಟೆ/716
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ, ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ !
ಪರಧನದಾಮಿಷವ ತೊರೆಯಿಂ ಭೋ !
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು, ಕೂಡಲಸಂಗಮದೇವಾ. /717
ತೊರೆಯುದಕವ ಕೆರೆಯುಂಡು ತೃಪ್ತವಾಗಲು
ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು ತೃಪ್ತಿವಡೆವಂತೆ,
ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು ನೋಡಾ.
ಬಸುರುವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ,
ಸಚರಾಚರವೆಲ್ಲವು ತೃಪ್ತಿಯಾದವು ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ
ನಮೋ ನಮೋ ಎಂಬೆನು./718
ತೋರಲಿಲ್ಲದ ಸಿಂಹಾಸನದ ಮೇಲೆ
ಹೇಳಬಾರದ ಘನವು ಬಂದೆರಗಿದಡೆ,
ತೋರಿ ಮೆರೆವ ಸಂಗಮನಾಥನು ಎದ್ದು ಹೋದನು.
ನೀಡ ನೀಡ ಸಯದಾನವೆಲ್ಲವೂ ನಿರ್ವಯಲಾಯಿತ್ತು,
ಮಾಡ ಮಾಡ ಸಯದಾನವ ಮರಳಿ ನೋಡಲಿಲ್ಲ.
ಇದನೇನ ಹೇಳುವೆ ಅನಿಯಮ ಚರಿತ್ರವನು
ಇದೆಂತುಪಮಿಸುವೆನು ವಿಸ್ಮಯವನು
ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ
ಹೇಳಯ್ಯಾ, ಚೆನ್ನಬಸವಣ್ಣಾ./719
ತೋರುವನಯ್ಯಾ ಶಿವನು, ಅಡಗುವನಯ್ಯಾ ಶಿವನು.
ಕಂಗಳ ಮುಂದೆ ಕಾಯಗೊಂಡು,
ಮನದ ಮುಂದೆ ಕನಸಾಗಿ ಕಾಡುವನಯ್ಯಾ ಶಿವನು,
ಒಂದೆಡೆಯಲ್ಲಿದ್ದು ಹಲವೆಡೆಯಲ್ಲಿ ತೋರುವನು,
ಹಲವೆಡೆಯಲ್ಲಿದ್ದು ಒಂದೆ ರೂಪಾಗಿಪ್ಪನು.
ಕೂಡಲಸಂಗಮದೇವನು ಚಿನುಮಯನಾಗಿ,
ಎನಗೆ ಅಸಾಧ್ಯವಾದನು./720
ತ್ರಿವಿಧ ತ್ರಿವಿಧದಲ್ಲಿ ತಪ್ಪಿದ ತಪ್ಪುಕ ನಾನಯ್ಯಾ,
ಒಮ್ಮಿಂಗೆ ಕರುಣಿಸಯ್ಯಾ.
ಇದನರಿದು ಇನ್ನು ತಪ್ಪಿದೆನಾದಡೆ
ನೀವು ಮಾಡಿತ್ತೆ ಸಲುವುದು, ಕೂಡಲಸಂಗಮದೇವಾ./721
ತ್ರಿವಿಧಪ್ರಸಾದವೆಂದೆಂಬರು, ಅದೆಂತಹುದೋ
ಶುದ್ಧಪ್ರಸಾದ ಗುರುವಿನದು, ಸಿದ್ಧಪ್ರಸಾದ ಲಿಂಗದದು,
ಪ್ರಸಿದ್ಧಪ್ರಸಾದ ಜಂಗಮದದು.
ಇಂತೀ ತ್ರಿವಿಧ ಒಂದಾದವರ ತೋರಾ
ಕೂಡಲಸಂಗಮದೇವಾ. /722
ತ್ರಿವಿಧವನಿತ್ತು, ರೂಹು ಮಾತು ಬಳಿಕುಂಟೆ ಅಯ್ಯಾ
ತನುವ ಕೊಡೆನಾಗಿ ಇದಿರುತ್ತರವಿದೆ,
ಮನವ ಕೊಡೆನಾಗಿ ಆನೆಂಬಹಂಕಾರವಿದೆ,
ಧನವ ಕೊಡೆನಾಗಿ ಪ್ರಪಂಚಿನ ಬಳಕೆಯಿದೆ.
ಕೂಡಲಸಂಗಮದೇವಯ್ಯಾ, ಎಂತು ಭಕ್ತನಪ್ಪೆನು !/723
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ :
ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ ನೋಡಾ.
ಬೆಂದ ಕರಣಾದಿಗಳು ಒಂದೆ ಪಥವನರಿಯವು,
ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ,
ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು./724
ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ ಸುರರೆಲ್ಲ
ನೆರೆದು ಬಂದ ಬಾಯ ನೋಡಾ.
ಬಾಯ ತಪ್ಪಿಸಿ ಉಣಬಂದ ದೈವದ ಬೆಂದ ಬಾಯ ನೋಡಾ.
ಉಣ್ಣದೆ ಉಡದೆ ಹೊಗೆಯ ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ
ಕೂಡಲಸಂಗಮದೇವಾ. /725
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ./726
ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ,
`ಲಿಂಗಮಧ್ಯೇ ಜಗತ್ ಸರ್ವಂ’ ಎಂಬುದ ನಾನರಿಯೆನಯ್ಯಾ,
ಲಿಂಗಸೋಂಕಿನ ಸುಖದೊಳಗೆ.
ಕೂಡಲಸಂಗಮದೇವಯ್ಯಾ, ಅಂಬುದಿಯೊಳಗೆ ಬಿದ್ದಾಲಿಕಲ್ಲಿನಂತೆ
ಬಿನ್ನಭಾವವನರಿಯದೆ `ಶಿವಶಿವಾ’ ಎನುತ್ತಿದ್ದೆ ನಾನು. /727
ದಶವಿಧಪಾದೋದಕವೆಸಗಿದ[ರೆಸ]ಕ ಎಂತೆಂದಡೆ;
ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ
ರುದ್ರಾಕ್ಷಿ ಪಂಚಾಕ್ಷರಿ ಗಣವ್ರತನೇಮ ಆಚಾರ
ಶೀಲ ಸಂಬಂಧದೊಳಗು ಹೊರಗು ತ್ರಿವಿಧ ಸಂಪೂರ್ಣವಾದ ಕಾರಣ
ನಿತ್ಯಪಾದೋದಕವೆನಿಸಿತ್ತು ಕೂಡಲಸಂಗಮದೇವಪ್ರಭುವೆ./728
ದಾಸನ ವಸ್ತ್ರವ ಬೇಡದ ಮುನ್ನ
ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ.
ಸಿರಿಯಾಳನ ಮಗನ ಬೇಡದ ಮುನ್ನ
ಕಂಚಿಯಪುರವ ಕೈಲಾಸಕ್ಕೊಯ್ದಡೆ ನಿಮ್ಮ ದೇವರೆಂಬೆ.
ಬಲ್ಲಾಳನ ವಧುವ ಬೇಡದ ಮುನ್ನ
ಸ್ವಯಲಿಂಗವ ಮಾಡಿದಡೆ ನಿಮ್ಮ ದೇವರೆಂಬೆ.
ದೇಹಿ ನೀನು, ವ್ಯಾಪಾರಿಗಳು ನಮ್ಮವರು.
ಬೇಡು, ಕೂಡಲಸಂಗಮದೇವಾ, ಎಮ್ಮವರ ಕೈಯಲು./729
ದಾಸನಂತೆ ತವನಿಧಿಯ ಬೇಡುವನಲ್ಲ,
ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ,
ಅಂಜದಿರು ಅಂಜದಿರು ಅವರಂದದವ ನಾನಲ್ಲ.
ಎನ್ನ ತಂದೆ, ಕೂಡಲಸಂಗಮದೇವಾ,
ಸದ್ಭಕ್ತಿಯನೆ ಕರುಣಿಸೆನಗೆ. /730
ದಾಸಿದೇವ ತನ್ನ ವಸ್ತ್ರವನಿತ್ತು ತವನಿಧಿಯ ಪ್ರಸಾದವ ಪಡೆದ.
ಸಿರಿಯಾಳ ತನ್ನ ಮ ಗನನಿತ್ತು ಪ್ರಾಣಪ್ರಸಾದವ ಪಡೆದ.
ಬಲ್ಲಾಳದೇವ ತನ್ನ ವಧುವನಿತ್ತು ಸಮತೆಪ್ರಸಾದವ ಪಡೆದ.
ಇವರೆಲ್ಲರೂ ತಮತಮಗೆ ಮಾಡಿ ಹಡೆದರು ಸಮ್ಯಕ್ಪದವಿಯನು.
ನಾನೇನನೂ ಅರಿಯದ ಭಕ್ತಿಯ ಬಡವಂಗೆ ಕರುಣಿಸು
ಕೂಡಲಸಂಗಮದೇವಾ./731
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ
ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು.
ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು `ಇತ್ತ ಬಾ ಎಂದು ಎತ್ತಿಕೊಂಡನು./732
ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ./733
ದಾಸೋಹವೆಂಬ ಸೋಹೆಗೊಂಡು ಹೋಗಿ,
ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ.
ಇಂತೀ ಚತುರ್ವಿಧಸಂಪನ್ನನಾದೆ ಕಾಣಾ,
ಕೂಡಲಸಂಗಮದೇವಾ./734
ದಿಟ ಪುಟ ಭಕುತಿಸಂಪುಟ ನೆಲೆಗೊಳ್ಳದಾಗಿ
ಟಿಂಬನನಾಡಿಸುತ್ತಿದ್ದಿತ್ತಯ್ಯಾ ನಿನ್ನ ಮಾಯೆ,
ಟೀವಕ ಟಿಂಬನನಾಡಿಸುತ್ತಿದ್ದಿತ್ತಯ್ಯಾ ನಿನ್ನ ಮಾಯೆ,
ಕೂಡಲಸಂಗಮದೇವಯ್ಯಾ,
ಹೊನ್ನು ಹೆಣ್ಣು ಮಣ್ಣು ತೋರಿ !/735
ದಿಟವ ನುಡಿವುದು, ನುಡಿದಂತೆ ನಡೆವುದು.
ಹುಸಿಯ ನಡೆದು ತಪ್ಪುವ ಪ್ರಪಂಚಿಯನೊಲ್ಲ
ಕೂಡಲಸಂಗಮದೇವ./736
ದಿಟವ ಮಾಡಿ ಪೂಜಿಸಿದಡೆ ಸಟೆಯ ಮಾಡಿ ಕಳೆವೆ.
ಸಟೆಯ ಮಾಡಿ ಪೂಜಿಸಿದಡೆ ದಿಟವ ಮಾಡಿ ಕಳೆವೆ.
ಎನೆಂಬೆ ಎಂತೆಂಬೆ
ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ,
ಆನು ಮಾಡಿದ ಭಕ್ತಿ ಎನಗಿಂತಾಯಿತ್ತು, ಕೂಡಲಸಂಗಮದೇವಾ. /737
ದುರ್ವ್ಯಸನಿ ದುರಾಚಾರಿ ಎಂದೆನಿಸದಿರಯ್ಯಾ,
ಎನ್ನ. ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ,
`ಅವಶ್ಯಮನುಭೋಕ್ತವ್ಯಂ’ ಎಂದೆನಿಸದಿರಯ್ಯಾ ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು./738
ದೂರದಿಂದ ಬಂದ ಜಂಗಮವನಯ್ಯಗಳೆಂದು,
ಸಾರಿದ್ದ ಜಂಗಮವ ಪರಿಚಾರಕರೆಂಬ ಕೇಡಿಂಗೆ ಬೆರಗಾದೆನಯ್ಯಾ.
ಸಾರಿದ್ದವರು, ದೂರದವರೆಂದು ಬೇರೆ ಮಾಡಿ ಕಂಡಡೆ,
ಕೂಡಲಸಂಗಮದೇವ ಸಿಂಗಾರದ ಮೂಗ ಕೊಯ್ಯದೆ ಮಾಬನೆ/739
ದೂಷಕನವನೊಬ್ಬ ದೇಶವ ಕೊಟ್ಟಡೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದಡೆ,
ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ,
ತೊತ್ತಾಗಿಪ್ಪುದು ಕರ ಲೇಸಯ್ಯಾ.
ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು,
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ./740
ದೇವ ದೇವ ಮಹಾಪ್ರಸಾದ !
ಅವಧರಿಸು ದೇವಾ ಎನ್ನ ಬಿನ್ನಹವ;
ಕಾಯದ ಮಾಯದ ಸಡಗರದಲ್ಲಿ ಹುಟ್ಟಿಸಿದಿರಿ ಎನ್ನ,
ಅದು ನಿಮ್ಮ ಲೀಲಾವಿನೋದ.
ಆ ಕಾಯದ ಮಾಯದ ತಲೆಯ ಚಿವುಟಿ ಶ್ರೀಗುರುಕಾರುಣ್ಯವ ಮಾಡಿ
ಗುರುಲಿಂಗಜಂಗಮ ತ್ರಿವಿಧಭಕ್ತಿಯ ಘನವ ತೋರಿ
ನಿಮ್ಮ ಪಾದೋದಕ ಪ್ರಸಾದವನಿತ್ತು ರಕ್ಷಿದಿರಿ,
ಅದು ನಿಮ್ಮ ಲೀಲಾವಿನೋದ.
ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ
ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ,
ಮೂವತ್ತಾರು ಕೊಂಡೆಯರ ಪರಿಹರಿಸಿ,
ಎಂಬತ್ತೆಂಟು ಪವಾಡವ ಮೆರೆದಿರಿ,
ಅದು ನಿಮ್ಮ ಲೀಲಾವಿನೋದ.
ಎನ್ನ ಮನದ ಮಲಿನವ ತೊಳೆಯಲೆಂದು ಬಂದು,
ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡು,
ನಿಮ್ಮ ನಿಜ ಮಹಿಮೆಯನೆಲ್ಲಾ ಪ್ರಮಥರ ಮುಂದೆ ತೋರಿ,
ಎನ್ನ ಪಾವನವ ಮಾಡಿ,
ಷಡುಸ್ಥಲಮಂ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ,
ಎನ್ನ ನಿಮ್ಮಂತೆ ಮಾಡಿದಿರಿ,
ಅದು ನಿಮ್ಮ ಲೀಲಾವಿನೋದ.
ಕೂಡಲಸಂಗಮದೇವಾ,
ಎನ್ನ ವರ್ಮದ ಸಕೀಲವ ನೀವೆ ಬಲ್ಲಿರಾಗಿ
ಎನಗೊಮ್ಮೆ ತಿಳುಹಿಕೊಟ್ಟು ಎನ್ನನುಳುಹಿಕೊಳ್ಳಾ ಪ್ರಭುವೆ./741
ದೇವ ದೇವ ಮಹಾಪ್ರಸಾದ !
ನಿಮ್ಮಡಿಗಳೆಂದಂತೆಯಲ್ಲದೆ ಎನಗೆ ಬೇರೆ ಸ್ವತಂತ್ರವುಂಟೆ
ದರ್ಪಣದೊಳಗಣ ಪ್ರತಿಬಿಂಬವ ನೋಡುವ ಮುಖಕ್ಕೆ
ಭಿನ್ನಭಾವವುಂಟೆ
ಚರಿಸಿ ಬಪ್ಪ ಅನಂತ ಸುಳುಹಿನೊಳಗೆ ನೀನೊಬ್ಬನೆ,
ನಿನ್ನೊಳಗೆ ಅನಂತ ಸುಳುಹು ಅಡಗಿದವು.
ನಿಮಗೆ ಮಾಡಿದ ಸಯದಾನವ ನಿಮಗೆ ನೀಡುವೆನು,
ಅವಧರಿಸಬೇಕಯ್ಯಾ, ಕೂಡಲಸಂಗಮದೇವಾ./742
ದೇವ ದೇವ ಮಹಾಪ್ರಸಾದ !
ನೀವೆಂದಂತೆ ನಿಮ್ಮ ಚರಣದಲ್ಲಿ ಸಂದು ಭೇದವಿಲ್ಲದೆ ಇಪ್ಪೆನಲ್ಲದೆ
ಬೇರೆ ಬಿನ್ನವಾಗಿರ್ದೆನಾದಡೆ ನೀವೆ ಸಾಕ್ಷಿ,
ನಿಮ್ಮ ಶ್ರೀಪಾದದ ಕಂಡೆನ್ನ ಭವಂ ನಾಸ್ತಿಯಾಯಿತ್ತು.
ಕೂಡಲಸಂಗಮದೇವಾ,
ನಿಮ್ಮಿಂದೊಂದಾಶ್ಚರ್ಯವಿಲ್ಲವೆಂದು ಶ್ರುತಿಗಳು ಹೊಗಳುತ್ತಿರಲಾಗಿ
ನೀವು ಕಂಡ ಆಶ್ಚರ್ಯವಾವುದೆನಗೊಮ್ಮೆ ನಿರೂಪಿಸಾ ಪ್ರಭುವೆ. /743
ದೇವ ದೇವ ಮಹಾಪ್ರಸಾದ, ಅವಧರಿಸಯ್ಯಾ ಎನ್ನ ಬಿನ್ನಹವ;
ಅತಳ, ವಿತಳ, ಸುತಳ, ರಸಾತಳ, ತಳಾತಳ,
ಮಹಾತಳ, ಪಾತಾಳಾದಿ ಲೋಕದಿಂದತ್ತತ್ತ ನಿಮ್ಮ ಶ್ರೀಚರಣ.
ಭೂಲೋಕ ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ,
ಜನರ್ಲೋಕ, ತಪೋಲೋಕ, ಸತ್ಯಲೋಕದಿಂದತ್ತತ್ತ ನಿಮ್ಮ ಉತ್ತಮಾಂಗ,
ತರುವಿನೊಳಗೆ ಅನಲ ಭರಿತನಾಗಿರ್ದು
ಮಥನದಿಂದ ತೋರಿ ಆಹುತಿಗೊಂಬಂತೆ,
ಸರ್ವಕರ್ತೃ ನಿತ್ಯಾನಂದಮಯನೆ, ಭಕ್ತಿಲೀಲಾವಿನೋದನೆ,
ಕೂಡಲಸಂಗಮದೇವಾ,
ಸುಚಿತ್ತದಲ್ಲಿ ಮನಮೀಸಲ ಬೋನವನಾರೋಗಿಸಯ್ಯಾ./744
ದೇವ, ದೇವಾ ಬಿನ್ನಹ ಅವಧಾರು;
ವಿಪ್ರ ಮೊದಲು, ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲನೊಂದೆ ಎಂಬೆ.
ಹಾರುವ ಮೊದಲು, ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನೊಂಬೆ ಎಂಬೆ.
ಹೀಂಗೆಂದು ನಂಬೂದೆನ್ನ ಮನ.
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ
ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ./745
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ಬಲ್ಲಾಳನ ವಧುವ ಬೇಡಿದಾತನೀ ದೇವ.
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ದಾಸನ ವಸ್ತ್ರವ ಬೇಡಿದಾತನೀ ದೇವ.
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ಸಿರಿಯಾಳನ ಮಗನ ಬೇಡಿದಾತನೀ ದೇವ.
ಕೂಡಲಸಂಗಮದೇವ ಜಂಗಮಮುಖಲಿಂಗವಾಗಿ
ಕಾಡಿ ನೋಡುವ, ಬೇಡಿ ನೋಡುವ./746
ದೇವನೊಬ್ಬ, ನಾಮ ಹಲವು,
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು.
ಹಲವು ದೈವದ ಎಂಜಲ ತಿಂಬವರನೇನೆಂಬೆ,
ಕೂಡಲಸಂಗಮದೇವಾ ! /747
ದೇವನೊಳ್ಳಿದನೆಂದು ಮುಯ್ಯಾನಲು ಬೇಡ,
ತರಕಟಗಾಡಿದನೊಳ್ಳಿದನೆ
ಅಳಿಸುವ ನಗಿಸುವನೊಳ್ಳಿದನೆ
ಬೆಚ್ಚದೆ ಬೆದರದೆ ತೊತ್ತುತನವ ಮಾಡಲು,
ತನ್ನನೀವ ಕೂಡಲಸಂಗಮದೇವ./748
ದೇವರ ದೇವಾ ಮಲಯಜದಿಂದ ಮೇಲೆ ಮಲಯಜವುಂಟೆ
ಪರುಷದಿಂದ ಮೇಲೆ ಪರುಷವಾವುದುಂಟೆ
ಅಯ್ಯಾ ಅಮೃತಾಹಾರದಿಂದಂ ಮೇಲೆ ಭೋಜನವಾವುದುಂಟೆ
ಅಯ್ಯಾ, ನಿಮ್ಮಿಂದೊಂದಾಶ್ಚರ್ಯವ ಕಂಡೆನೆಂಬುದ
ಎನಗೆ ನಿರೂಪಿಸಾ ಕೂಡಲಸಂಗಮದೇವಾ, ಪ್ರಭುವೆ./749
ದೇವರ ಪಾದಕ್ಕೆ ಸಂದಲ್ಲಿ
ಆತನ ಶರೀರವ ಸಮಾಧಿಯಲ್ಲಿ ನಿಕ್ಷೇಪವಂ ಮಾಡಿ
ಲಿಂಗಭಕ್ತರಿಗೆ ವಿಭೂತಿವೀಳೆಯವಂ ಕೊಡುವುದೆ ಸ[ದಾಚಾರ].
ಹೀಂಗಲ್ಲದೆ,
ಹೆಣ ಶೃಂಗಾರವ ಮಾಡಿಸಿ, ಹರೆ ಕಹಳೆ ಸಹಿತ
ವಿಮಾನದಲ್ಲಿ ಕೊಂಡುಹೋಗಿ, ಹೂಳಿ,
ಶ್ರಾದ್ಧ ಕೂಳ ಮಾಡು[ವರು] ಸದಾಚಾರಕ್ಕೆ ದೂರವಯ್ಯಾ
ಕೂಡಲಸಂಗಮದೇವಾ./750
ದೇವರು ಕಾಮನ ಕೊಂದನೆಂಬರು, ದೇವಂಗಿಬ್ಬರು ಹೆಂಡಿರುಂಟು,
ದೇವರು ಕಾಮನ ಕೊಂದುದಿಲ್ಲ ಕಾಣಿ ಭೋ !
ಕಾಮವೈರಿಗಳು, ಕಾಮನ ಕೊಂದ ಮೂವರಿತ್ತಲೈದಾರೆ-
ಕೂಡಲಸಂಗಯ್ಯನಲ್ಲಿ
ಶುಕನು, ಸೊನ್ನಲಿಗೆಯ ಸಿದ್ಧರಾಮಯ್ಯನು, ಹನುಮಂತನು./751
ದೇವಲೋಕ ಮತ್ರ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ. /752
ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು./753
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ
ಈ ಲೋಕದೊಳಗೆ ಮತ್ತೆ ಅನಂತಲೋಕ
ಶಿವಲೋಕ, ಶಿವಾಚಾರವಯ್ಯಾ.
ಶಿವಭಕ್ತನಿದ್ದಠಾವೆ ದೇವಲೋಕ,
ಭಕ್ತನಂಗಳವೆ ವಾರಣಾಸಿ, ಕಾಯವೆ ಕೈಲಾಸ,
ಇದು ಸತ್ಯ, ಕೂಡಲಸಂಗಮದೇವಾ./754
ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ !
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ./755
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು,
ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು,
ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ.
ನೀನೊಲಿದ ಕುಲಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ
ಶ್ವಪಚೋಪಿ ಮುನಿಶ್ರೇಷ್ಠೋ ಯಸ್ತು ಲಿಂಗಾರ್ಚನೇ ರತಃ
ಶಲಿಂಗಾರ್ಚನವಿಹೀನೋಪಿ ಬ್ರಾಹ್ಮಣಃ ಶ್ವಪಚಾಧಮಃಶ ಎಂದುದಾಗಿ,
ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು
ಆತನೇ ಹೊಲೆಯ, ಕೂಡಲಸಂಗಮದೇವಾ. /756
ದೇಹವೆಂಬೆರಡಕ್ಕರವನು ಜೀವವೆಂದರಿದೆನಯ್ಯಾ,
ಜೀವವೆಂಬೆರಡಕ್ಕರವನು ಹಂಸನೆಂಬ ದಳಕ್ಕೆ ವಿಭಾಗಿಸಿದೆನಯ್ಯಾ.
ಹಂಸವೆಂಬೆರಡಕ್ಕರವನು ಜ್ಞಾನಚಕ್ಷುವಿನ
ಭ್ರೂಮಧ್ಯದಲ್ಲಿ ವಿಭಾಗಿಸಿದೆನಯ್ಯಾ.
ಒಂದು ದಳವ ಕರ್ತನ ಮಾಡಿ
ಒಂದು ದಳವ ಭೃತ್ಯನ ಮಾಡಿ
ಈ ಎರಡು ದಳದ ನಡುವಿರ್ಪ ಪರಂಜ್ಯೋತಿಯನು
ತ್ರಿಕೂಟವೆಂದರಿದು ಕೂಡಿದೆನಯ್ಯಾ.
ಇಂತು ಕೂಡಿದಲ್ಲಿ ಪರಿಚರ್ಯವ ಮಾಡುತಿರ್ದೆನಯ್ಯಾ.
ಮೊದಲ ಪರಿಚರ್ಯದಲ್ಲಿ ನಿರ್ಮಳೋದಕವ ತುಂಬಿದೆ,
ಒಂದು ದಳದೊಳಗೆ. ಎರಡನೆಯ ಪರಿಚರ್ಯದಲ್ಲಿ ಒಂದು ದಳದಲ್ಲಿ
ಆ ಉದಕವ ಗಡಣಿಸುತಿರ್ದೆನಯ್ಯಾ.
ಇರಲಿರಲು ಎರಡು ದಳವು ಅಳಿದು ಜಲ ಮೇರೆದಪ್ಪಲು
ಮನ ಮೇರೆದಪ್ಪಿ ಆರೋಗಿಸಿದೆನಯ್ಯಾ.
ಆರೋಗಿಸಿದ ತೃಪ್ತಿಯ ನೀನೆ ಬಲ್ಲೆ,
ಕೂಡಲಸಂಗಮದೇವಾ. /757
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು,
ಉದ್ಧರಿಸುವನೊಬ್ಬ, ಶಿವಶರಣ ಸಾಲದೆ
ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ,
ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ.
ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ,
ಕೊಟ್ಟ ದಾಸ ತವನಿಧಿಯ ಪಡೆದ.
ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ,
ಕೊಟ್ಟ ಕರ್ಣ ಕಳದಲ್ಲಿ ಮಡಿದ.
ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ,
ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ.
ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ,
ಕೊಟ್ಟ ನಾಗಾರ್ಜುನನ ಶಿರಹೋಯಿತ್ತು.
ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ,
ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ.
ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು;
ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ. /758
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ
ನಮ್ಮ ಶರಣರಿಗುರಿ[ಯ]ರಗಾಗಿ ಕರಗದನ್ನಕ್ಕ,
ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ.
ಕೂಡಲಸಂಗಮದೇವಾ,
ಬರಿಯ ಮಾತಿನ ಮಾಲೆಯಲೇನಹುದು/759
ಧನ ಸವೆದಡೆ ತನುವನರ್ಪಿಸುವೆನು,
ತನು ಸವೆದಡೆ ಮನವನರ್ಪಿಸುವೆನು,
ಮನ ಸವೆದಡೆ ಭಾವವನರ್ಪಿಸುವೆನು,
ಭಾವ ಸವೆದಡೆ ನಿರ್ಭಾವವನರ್ಪಿಸುವೆನು.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣ ತೆತ್ತಿಗನಾದ ಬಳಿಕ,
ನಾನು ನಿಮ್ಮಲ್ಲಿ ಕೂಡಿಯರ್ಪಿಸಿ ಶುದ್ಧನಪ್ಪೆನಯ್ಯಾ./760
ಧನ ಹೋಯಿತ್ತೆಂದಡೆ, ಮನಸು ಬೆದರಿದಡೆ, ಚಿತ್ತ ಹೆದರಿದಡೆ,
ತನು ತೆರಳಿದಡೆ, ಭಾವ ಓಸರಿಸಿದಡೆ,
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ತನುಮನಧನವನಲ್ಲಾಡಿಸಿ ನೋಡುವ ಒಡೆಯನು ನೀನೆ,
ಹರಣದ ಮೇಲೆತ್ತಡೆ ಕಳವಳವೆ, ಕೂಡಲಸಂಗಮದೇವಾ/761
ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು
ತನು, ಮನ, ಧನವ ಮೀರಿ ಮಾತಾಡಬಲ್ಲಡೆ
ಆತ ನಿಸ್ಸೀಮನು, ಆತ ನಿಜೈಕ್ಯನು.
ತನು, ಮನ, ಧನವನುವಾದಡೆ
ಕೂಡಲಸಂಗಮದೇವನೊಲಿವ./762
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ;
ಇದಾವಂಗಳವಡುವುದಯ್ಯಾ
ನಿಧಾನ ತಪ್ಪಿಬಂದಡೆ ಒಲ್ಲೆನೆಂಬವರಿಲ್ಲ,
ಪ್ರಮಾದವಶ ಬಂದಡೆ ಹುಸಿಯೆನೆಂಬವರಿಲ್ಲ,
ನಿರಾಶೆ, ನಿರ್ಭಯ ಕೂಡಲಸಂಗಮದೇವಾ
ನೀನೊಲಿದ ಶರಣಂಗಲ್ಲದಿಲ್ಲ. /763
ಧನಮದದಿಂದ, ಸಯದಾನಮದದಿಂದ ಮಾಡಿದೆನೆಂಬುದು
ಕಡೆಮುಟ್ಟದೆ ಹೋಯಿತ್ತು.
ಹಸ್ತಪರುಷದಿಂದ ಮುಟ್ಟಿ ಮಾಡಿದುದೆಲ್ಲವು ಸವೆಯಿತ್ತು.
ದೃಷ್ಟಿಪರುಷದಿಂದ ನೋಡಿ ಮಾಡಿದೆನೆಂಬುದೆಲ್ಲವು ಹೆಚ್ಚಿತ್ತು.
ವಾಕ್ಪರುಷದಿಂದ ನುಡಿದು ಮಾಡಿದುದೆಲ್ಲವು ಅಂತರಿಸಿತ್ತು.
ಮನಪರುಷದಿಂದ ನೆನೆದು ಮಾಡಿದುದೆಲ್ಲವು ನಿಂದಿತ್ತು.
ಭಾವಪರುಷದಿಂದ ಭಾವಿಸಿದ ಪದಾರ್ಥವೆಲ್ಲವು ನಿರ್ಭಾವದತ್ತವೇಧಿಸಲಾಯಿತ್ತು
ಇಂತೀ ಪಂಚಪರುಷದಿಂದ ಮುಟ್ಟಿ ನೀಡಿದ ಪದಾರ್ಥವೆಲ್ಲವು
ತೋರದ ಮುನ್ನ ಅಮಳೋಕ್ಯವಾದವು.
ಕೂಡಲಸಂಗಮದೇವರ ತೃಪ್ತಿಯನರಿದಿಹೆನೆಂದು ಕೆಟ್ಟೆನು. /764
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ./765
ಧರೆ ರಸಾತಳಕ್ಕಿಳಿವಂದು, ಹರಿಬ್ರಹ್ಮಾದಿಗಳಳಿವಂದು,
ಮಹಾದೇವ ಮಹಾದೇವ ಎನುತ್ತಿರ್ದೆನು ಅದೆಂತೆಂದಡೆ;
ಬ್ರಹ್ಮಾಂಡಾನಾಮಸಂಖ್ಯಾನಾಂ ಬ್ರಹ್ಮವಿಷ್ಣುಮಹಾತ್ಮನಃಶ
ಯತ್ರೋದಯಂ ಲಯಂ ಯಾಂತಿ ಮಹಾದೇವ ಇತಿ ಸ್ಮೈತಃ
ಎಂದುದಾಗಿ
ಅಗ್ರದ ಕೊನೆಯ ತುದಿಯಿಂದತ್ತತ್ತ
ತತ್ತ್ವಮಸಿಯ ಮೀರಿದ ನಮ್ಮ ಕೂಡಲಸಂಗಮದೇವ./766
ಧರೆಯಾಕಾಶದ ನಡುವೆ ಒಂದು ಮಾಮರ ಹುಟ್ಟಿತ್ತು.
ಆ ಮರಕ್ಕೆ ಕೊಂಬೆರಡು, ಎಲೆ ಮೂರು,
ಮೂವತ್ತಾರು ಪುಷ್ಪ, ಕಾಯಿ ಒಂದೆ,
ಹಣ್ಣು ರಸ ತುಂಬಿದಲ್ಲಿ ಏನನೂ ಕಾಣೆ,
ಎಲೆ ಉದುರಿದಡೆ ಹಣ್ಣು ತೊಟ್ಟಬಿಟ್ಟು ಬಿದ್ದಿತ್ತು,
ನಿಜದಲ್ಲಿ ನಿರ್ವಯಲಾದರು.
ಪ್ರಭುವಿನ ಕಾರುಣ್ಯಪ್ರಸಾದವ ನಾನು ಕೊಂಡೆನಾಗಿ,
ಕೂಡಲಸಂಗಮದೇವರು ಇತ್ತ ಬಾರೆಂದು
ತಮ್ಮ ಹೃದಯಕಮಲದಲ್ಲಿ ಇಂಬಿಟ್ಟುಕೊಂಡರು./767
ಧೃತಿಗೆಟ್ಟು ಅನ್ಯರ ಬೇಡದಂತೆ,
ಮತಿಗೆಟ್ಟು ಪರರುವ ಹೊಗಳದಂತೆ,
ಪರಸತಿಯರ ರತಿಗೆ ಮನ ಹಾರದಂತೆ,
ಶಿವಪಥವೊಲ್ಲದವರೊಡನಾಡದಂತೆ,
ಅನ್ಯಜಾತಿಯ ಸಂಗವ ಮಾಡದಂತೆ,
ಎನ್ನ ಪ್ರತಿಪಾಲಿಸು, ಕೂಡಲಸಂಗಮದೇವಾ./768
ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ ಮುಖ್ಯವಯ್ಯಾ,
ಪೂಜೆಗೆ ನಿಮ್ಮ ಶ್ರೀಪಾದವೆ ಮುಖ್ಯವಯ್ಯಾ.
ಮಂತ್ರಕ್ಕೆ ನಿಮ್ಮ ನಾಮಾಮೃತವೆ ಮುಖ್ಯವಯ್ಯಾ,
ಮುಕ್ತಿಗೆ ನಿಮ್ಮ ಘನಕೃಪೆಯೆ ಮುಖ್ಯವಯ್ಯಾ.
ನಿಮ್ಮಿಂದದಿಕರನಾರನೂ ಕಾಣೆನಯ್ಯಾ
ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ./769
ಧ್ಯಾನಕ್ಕೆ ಮೋನವೆಂಬ ಶಸ್ತ್ರವ ಪಿಡಿಯಲರಿಯದೆ
ಅಹಂಕಾರದ ಧಾರೆಯ ಮೊನೆಯಲಗೆಂಬ ಶಸ್ತ್ರವ ಪಿಡಿದು ಕೆಟ್ಟೆನಯ್ಯಾ ಅಂಜುವೆನಂಜುವೆನಯ್ಯಾ,
ಜಂಗಮಲಿಂಗವೆಂಬ ಭಾಷೆ ಪಲ್ಲಟವಾಯಿತ್ತು.
ಇನ್ನು ಜಂಗಮವೆಂಬ ಶಿಕ್ಷಾಶಸ್ತ್ರದಲ್ಲಿ ಎನ್ನ ಹೊಯ್ದು ಬಯ್ದು
ರಕ್ಷಿಸುವುದು ಕೂಡಲಸಂಗಮದೇವಾ/770
ನಂಬರು ನಚ್ಚರು ಬರಿದೆ ಕರೆವರು,
ನಂಬಲರಿಯರೀ ಲೋಕದ ಮನುಜರು,
ನಂಬಿ ಕರೆದಡೋ ಎನ್ನನೆ ಶಿವನು
ನಂಬದೆ ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ/771
ನಂಬಿದ ಹೆಂಡತಿಗೆ ಗಂಡನೊಬ್ಬನೆ ಕಾಣಿರೋ,
ನಂಬಬಲ್ಲ ಭಕ್ತಂಗೆ ದೇವನೊಬ್ಬನೆ ಕಾಣಿರೋ.
ಬೇಡ ಬೇಡ, ಅನ್ಯ ದೈವದ ಸಂಗ ಹೊಲ್ಲ !
ಬೇಡ ಬೇಡ, ಪರದೈವದ ಸಂಗ ಹೊಲ್ಲ !
ಬೇಡ ಬೇಡ, ಅನ್ಯ ದೈವವೆಂಬುದು ಹಾದರ ಕಾಣಿರೋ,
ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೊ. /772
ನಂಬಿದಡೆ ಪ್ರಸಾದ; ನಂಬದಿದ್ದಡೆ ವಿಷವು.
ತುಡುಕಬಾರದು ನೋಡಾ, ಲಿಂಗನ ಪ್ರಸಾದ,
ಕೂಡಲಸಂಗನ ಪ್ರಸಾದ ಸಿಂಗಿ, ಕಾಳಕೂಟ ವಿಷವು./773
ನಂಬಿದೆನಯ್ಯಾ ನಾನು, ನಚ್ಚಿದೆನಯ್ಯಾ ನಾನು,
ಬದುಕಿದೆನಯ್ಯಾ ನಾನು ನಿಮ್ಮ ಕೃಪೆಯಿಂದಲಿ,
ಹಾಳು ಕುಳಿಯಲ್ಲಿ ಬಿದ್ದ ಪಶುವಿನ ಕರುವ ತೆಗೆದು
ತಾಯ ಮುಖವ ತೋರುವಂತೆ, ಪಾಪಕೂಪದಲ್ಲಿ ಬಿದ್ದವನನೆಬ್ಬಿಸಿ
ಕೂಡಲಸಂಗನ ಶರಣರ ಚರಣವ ತೋರಿ, ಎನ್ನನುಳುಹಿದನು.
ಹೋದ ಜೀವಕ್ಕೆ ತನ್ನ ಕರುಣವೆಂಬ
ಮರುಜವಣಿಯ ಹಿಂಡಿ ಎತ್ತಿದನು,
ಚೆನ್ನಬಸವಣ್ಣನಿಂದಲೆಂತಕ್ಕೆ ಬದುಕಿದೆನು./774
ನಚ್ಚಿದೆನೆಂದಡೆ ಮಚ್ಚಿದೆನೆಂದಡೆ, ಸಲೆ ಮಾರುವೋದೆನೆಂದಡೆ
ತನುವನಲ್ಲಾಡಿಸಿ ನೋಡುವೆ ನೀನು.
ಮನವನಲ್ಲಾಡಿಸಿ ನೋಡುವೆ ನೀನು.
ಧನವನಲ್ಲಾಡಿಸಿ ನೋಡುವೆ ನೀನು.
ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ./775
ನಚ್ಚು ಮಚ್ಚಿನ ಶರಣರೆನ್ನ ಕಣ್ಣಮುಂದೆ ಬಂದು ನಿಂದಿರಲು
ಎನ್ನ ತನುವ ಬಗಿದು ಎನ್ನ ತನುವಿನೊಳಗಿಂಬಿಟ್ಟುಕೊಂಬೆನು,
ಎನ್ನ ಮನವ ಬಗಿದು ಎನ್ನ ಮನದೊಳಗಿಂಬಿಟ್ಟುಕೊಂಬೆನು,
ಎನ್ನ ಕಂಗಳ ಬಗಿದು ಎನ್ನ ಕಂಗಳೊಳಗಿಂಬಿಟ್ಟುಕೊಂಬೆನು.
ಕೂಡಲಸಂಗನ ಶರಣರೆನ್ನ ಒಡೆಯರಾಗಿ
ಎನ್ನ ಭಾವಕ್ಕೆ ಬಂದ ಭಕ್ತಿಯ ಮಾಡುವೆನು./776
ನಡುದೊರೆಯೊಳಗೆ ಹರುಗೋಲನಿಳಿದಂತಾಯಿತ್ತೆನ್ನ ಭಕ್ತಿ,
ಮರನನೇರಿ ಕೈಯ ಬಿಟ್ಟಂತಾಯಿತ್ತೆನ್ನ ಭಕ್ತಿ.
ಶಿವಶಿವಾ, ಕೆಟ್ಟೆನಲ್ಲಾ ಗುರುವೆ, ಕೂಡಲಸಂಗಮದೇವಾ,
ಈ ಮರುಳಶಂಕರದೇವರ ಕೃಪೆ
ಎನಗಿನ್ನೆಂದಪ್ಪುದು ಹೇಳಾ, ಪ್ರಭುವೆ./777
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡಲ್ಲಿ ಚೆನ್ನ,
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ.
ಸವಿದು ನೋಡಿ ಅಂಬಲಿ
ರುಚಿಯಾಯಿತ್ತೆಂದು
ಕೂಡಲಸಂಗಮದೇವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ. /778
ನಡೆಯ ಕಂಡಾ ನಂಬಿ, ನುಡಿಯೆಲ್ಲಾ ಉಪಚಾರ !
ಮಿಗಿಲೊಂದು ಮಾತು ಬಂದಡೆ ಸೈರಿಸಲಾರೆನು.
ತುಯ್ಯಲಾದಡೆ ಉಂಬೆ, ಹುಯ್ಯಲಾದಡೆ ಓಡುವೆ,
ಆಳು ಬೇಡಿದಡೆ ಆಳ್ದನೇನನೀವನಯ್ಯಾ ಆಳಾಗಿ ಹೊಕ್ಕು ಅರಸಾಗಿ ನಡೆದಡೆ,
ಆಳಿಗೊಂಡಿತೆನ್ನ ಕೂಡಲಸಂಗನ ಭಕ್ತಿ./779
ನಡೆಯ ಚೆನ್ನ ನುಡಿದು ತೋರಿ,
ನುಡಿಯ ಚೆನ್ನ ನಡೆದು ತೋರಿ,
ಆ ನಡೆನುಡಿ ಎರಡರ ಚೆನ್ನ ಮೃಡ ನಿಮ್ಮೊಳಗಡಗಿಸಿ,
ತಾವೆಡೆಯಿಲ್ಲದೆ ಪರಿಪೂರ್ಣರಾದವರ ಪಡುಗವ ಹೊರುವೆ,
ಪಾದರಕ್ಷೆಯಹಿಡಿವೆ, ಎನಗಿದೆ ಮಾಟ, ಬಯಸುವ ಬೇಟ.
ಕೂಡಲಸಂಗಮದೇವಾ,
ಇದು ನಿಮ್ಮ ಕೂಡುವ ಕೂಟ./780
ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು ! ಫಲವೇನು !
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ./781
ನಡೆವರಯ್ಯಾ ಒಡೆಯರು ತನು-ಮನ-ಧನದ ಮೇಲೆ,
ನುಡಿವರಯ್ಯಾ ಒಂದು ನಿಮಿಷ ಬಾರದಿರ್ದಡೆ,
ಜರೆವರಯ್ಯಾ ಒಡೆಯರು ಮನಬಂದ ಪರಿಯಲು.
ಶಿವಾ ಶಿವಾ ! ಅಣಿವರಯ್ಯಾ ಮಂಡೆಯನೂರಿ.
ಪ್ರಾಣದ ಒಡೆಯರಯ್ಯಾ,
ಕೂಡಲಸಂಗಮದೇವಾ, ನಿಮ್ಮ ಶರಣರು./782
ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ
ಶರಣೆಂದಿತ್ತು ಲಲಾಟಲಿಖಿತ,
ಬರೆದ ಬಳಿಕ ಪಲ್ಲಟವ ಮಾಡಬಾರದು.
ಎನ್ನ ಉರದ ಉಂಡಿಗೆ, ಶಿರದ ಅಕ್ಷರ
ಕೂಡಲಸಂಗಯ್ಯಾ ಶರಣೆಂದಿತ್ತು./783
ನಯನದಾಹಾರವ ಜಂಗಮವ ನೋಡಿಸುವೆನು,
ಶ್ರೋತ್ರದಾಹಾರವ ಜಂಗಮವ ಕೇಳಿಸುವೆನು,
ಘ್ರಾಣದಾಹಾರವ ಜಂಗಮವ ವಾಸಿಸುವೆನು,
ಜಿಹ್ವೆಯಾಹಾರವ ಜಂಗಮವನೂಡಿಸುವೆನು,
ಕವಚದಾಹಾರವ ಜಂಗಮಕ್ಕೆ ಹೊದ್ದಿಸುವೆನು,
ಅಧಿಕ ಪ್ರೇಮ ಪರಿಣಾ[ಮ]ವ ಮಾಡುವೆನು,
ಸಕಲಪದಾರ್ಥಂಗಳ ನೀಡುವೆನು,
ಕೂಡಲಸಂಗಾ ನಿಮ್ಮ ಶರಣರಿಗೆ./784
ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ,
ಅರಳಂಬಿನಲೆಚ್ಚ ಕಾಮನನುರುಹಿದೆ.
ಇರುಳು ಹಗಲೆನ್ನದೆ ಪ್ರಾಣಘಾತಕವ ಮಾಡಿದ
ಬೇಡನ ಕೈಲಾಸಕೊಯ್ದೆಯಯ್ಯಾ,
ಎನ್ನನೇತಕೊಲ್ಲೆ ಕೂಡಲಸಂಗಮದೇವಾ/785
ನರಜನ್ಮದಲ್ಲಿ ಹುಟ್ಟಿ ಲಿಂಗಮುಖವನರಿಯದೆ
ಉದಮದ ಸೊಕ್ಕಿ ತಲೆಗೇರಿತ್ತೆ ಅಯ್ಯಾ
`ಜೀವೋ ಜೀವೇನ ಭಕ್ಷ್ಯತೇ ಕರ್ಮಕರ್ಮದಲಿಪ್ಪೆಯಯ್ಯಾ.
ಅಂದೊಮ್ಮೆ ದಕ್ಷನು ಹೋತನ ಕೊಂದಲ್ಲಿ
ಘೋಳಿಡಲಿ ಘೋಳಿಡಲಿ ತಂದಿಕ್ಕಿತ್ತೆ ವೇದ
ಶಾಸ್ತ್ರಂಗಳು ಮೂರುತಿಗೊಂಡಲ್ಲಿ
ಚತುರ್ವೆದಿಗಳಿಗೊಮ್ಮೆ ಅಕ್ಕಿತ್ತೆ ಅಯ್ಯಾ !
ನಮ್ಮ ಕೂಡಲಸಂಗಮದೇವನನರಿಯದ ಕಾರಣ
ನಾಯಕನರಕದಲ್ಲಿಕ್ಕಿತ್ತಯ್ಯಾ./786
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ,
ಶಿವ ಶಿವಾ ಎಂದೋದಿಸಯ್ಯಾ.
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು,
ಕೂಡಲಸಂಗಮದೇವಾ./787
ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ/788
ನಾ ನಡೆವುದೆಲ್ಲಾ ಅನಾಚಾರ, ನಾ ನುಡಿವುದೆಲ್ಲಾ ಅವಿಚಾರ,
ನಡೆನುಡಿ ಶುದ್ಧವಿಲ್ಲದ ಅಪವಿತ್ರನ ತಂದು
ನಿಮ್ಮೊಕ್ಕುದನಿಕ್ಕಿ ಸಲಹಿದಿರಾಗಿ, ಎನಗಿನ್ನಾವ ಭಯವೂ ಇಲ್ಲ.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಆಯ್ದಕ್ಕಿಯ ಮಾರಯ್ಯನ ಮನೆಯ ಮಗ ನಾನು./789
ನಾ ನಿಮ್ಮ ನೆನೆವನು, ನೀವೆನ್ನನರಿುರಿ.
ನಾ ನಿಮ್ಮನೋಲೈಸುವೆನು, ನೀವೆನ್ನ ಕಾಣಿರಿ.
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ
ಕೂಡಲಸಂಗಮದೇವಾ,
ಎನಗೆ ನೀವೆ ಪ್ರಾಣ ಗತಿ ಮತಿ, ನೋಡಯ್ಯಾ./790
ನಾಗಂಗೆ ಹೊಸತನಿಕ್ಕಿಹೆವೆಂಬರು,
ನಾಗ ಬಂದಡೆ ಕೋಲ ಕಳೆದುಕೊಂಬರು.
ಆಗದಯ್ಯಾ, ಜಂಗಮಲಿಂಗವೆಂಬ ಶಬ್ದವಾಗದಯ್ಯಾ,
ಕೂಡಲಸಂಗಮದೇವನಲ್ಲಿ ಸಿಂಧುಬಲ್ಲಾಳಂಗಲ್ಲದೆ ಆಗದಯ್ಯಾ./791
ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ.
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ.
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ./792
ನಾನಾ ಭವದುಃಖದಲ್ಲಿ ಹುಟ್ಟಿದ ಪ್ರಾಣಿಯಲ್ಲಿ ತಂದೆ;
ಇನ್ನು ಹುಟ್ಟಲಾರೆನು, ಹೊಂದಲಾರೆನು,
ಜನನ ಮರಣವೆಂಬೆರಡಕ್ಕೆ ಹೊರಗಾದೆನಯ್ಯಾ.
ನೀವು ಹೇಳಿದ ಮಣಿಹವ ಮಾಡಿದೆ,
ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ./793
ನಾನಾ ಯುಗಂಗಳಲ್ಲಿ ಬಂದಲ್ಲಿ
ಇಂತಪ್ಪ ನಿಲವ ಕಂಡುದಿಲ್ಲವಯ್ಯಾ.
ಅಂಗಮನಭಾವಕರಣಂಗಳು ಮಾದು
ಕೂಡಲಸಂಗಮದೇವರ ನಿಲವನೊಳಕೊಂಡ
ಮರುಳುಶಂಕರದೇವರ ನಿಲವ ನಿಮ್ಮಿಂದ ಕಂಡು
ಬದುಕಿದೆನು ಕಾಣಾ, ಕಿನ್ನರಿ ಬ್ರಹ್ಮಯ್ಯಾ. /794
ನಾನಾ ಸ್ಥಾನದಲ್ಲಿ ಬಂದು ತೊಳಲಿ ಬಳಲಿ ಅಳಿದುಳಿದು ನಿಂದ ನಿಲದವನಲ್ಲ,
ಮತ್ರ್ಯಲೋಕದಲ್ಲಿ ಶಿವಾಚಾರದ ಘನವುಹೂಳಿಹೋಯಿತ್ತೆಂದು
ಕರ್ತನು ತಾನೆ ಮಹಾಪ್ರಸಾದಿಯಾಗಿ ಉದಯವಾದನು.
ಹಸ್ತಮಸ್ತಕ ಸಂಯೋಗವಿಲ್ಲದ ಮುನ್ನವೆ
ಆದಿಗುರು ಅನಾದಿಶಿಷ್ಯನೆಂಬುದ ನೆಲೆಮಾಡಿ,
ಸಂಗಮನಾಥನೆಂಬ ಲಿಂಗವನೆನ್ನ ಕೈಯಲ್ಲಿ ಕೊಟ್ಟು,
ಸಾಮದಿಂದ ಅನುಗ್ರಹಿಸಿಕೊಂಡನು.
ಎನ್ನ ಹಿಂದಣ ಪೂರ್ವಾಪರವನೆತ್ತಿ ತೋರಿ ತನ್ನತ್ತ ತೆಗೆದುಕೊಂಡನು
ಕೂಡಲಸಂಗಮದೇವರಲ್ಲಿ ಜೆನ್ನಬಸವಣ್ಣನು./795
ನಾನಾರಿದೆಲ್ಲಿಯ ಪಾಶವಿದೆತ್ತಣ ಮರವೆ
ಅಕಟಕಟಾ ತಾಮಸಕ್ಕೆ ಗುರಿಮಾಡಿದೆಯಲ್ಲಾ.
ಎಲೆ ಕರುಣಾಂಬುನಿಧಿಯೆ, ದಯಾಪಾರಿಯೆ,
ನೀನು ವಿಚಾರಿಸದಿರ್ದಡಾನೆಂತುಳಿವೆನಯ್ಯಾ.
ನಿಮ್ಮ ಕೃಪಾದೃಷ್ಟಿಯಿಂ ನಿರೀಕ್ಷಿಸಿ ನಿಮ್ಮತ್ತ ಸಾರುವಂತೆ ಮಾಡಾ
ಕೂಡಲಸಂಗಮದೇವಾ./796
ನಾನಾಸ್ಥಾನಂಗಳಲ್ಲಿ ಬಂದು ಕುಳ್ಳಿರ್ದುದು ತೆರಳುವುದೆ, ಅಯ್ಯಾ;
ಉಭಯಕುಳಕ್ಕಲ್ಲದೆ ತೆರಳದು.
ಬೀದಿಯಲ್ಲಿ ಬಿದ್ದ ಶಿಶುವನು
ಹೆತ್ತ ತಾಯಿ ಹತ್ತಿರೆ ಬಂದು ಎತ್ತುವಂತೆ,
ಎನ್ನನಾರು ಜನ್ಮಕ್ಕೆ ತಂದು ಅಘೋರನರಕದಲ್ಲಿಕ್ಕಿದುದ ನಾನು ಬಲ್ಲೆ.
ಕೂಡಲಸಂಗಮದೇವಾ ನಿಮ್ಮ ಹಂಗೇನು ಹರಿಯೇನು
ಉಭಯ ಲಿಂಗ ಜಂಗಮದ ಮೊರೆಹೊಕ್ಕು ಬದುಕಿದೆನು./797
ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ. /798
ನಾನು ಭಕ್ತ, ನಾನು ಪ್ರಸಾದಿ ಎಂದು
ವಿಪ್ರಕರ್ಮವ ಮಾಡುವೆ ಕರ್ಮೇ:
ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು
ವಿಪ್ರನ ಕಾಲ ತೊಳೆವಡೆ
ಲಿಂಗೋದಕ ಹೃದಯದಲ್ಲಿ,
ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ !
ಶ್ರುತ್ಯತ್ಕಟದುರಾಚಾರೀ ಯಜ್ಞಕೂಪಸಘಾತಕಃ
ಉದ್ರೇಕೇಣ ಕೃತೇ ಶಾಂತೇ ವಿಪ್ರರೂಪೇಣ ರಾಕ್ಷಸಃ
ಇದು ಕಾರಣ ಕೂಡಲಸಂಗಮದೇವಾ,
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು. /799
ನಾನು ಭಕ್ತನಲ್ಲಯ್ಯಾ, ನಾನು ಯುಕ್ತನಲ್ಲಯ್ಯಾ, ನಾನು ಮುಕ್ತನಲ್ಲಯ್ಯಾ
ಕಪಟವೇಷದ ಡಂಭಕ ನಾನು.
ಕೂಡಲಸಂಗಮದೇವಾ,
ಎನ್ನ ಭಕ್ತಿ ಒಳಲೊಟ್ಟೆ ಎಂಬುದ ನೀವು ತೋರಬಂದಿರಾಗಿ
ಎನಗಿಂದರಿಯ ಬಂದಿತ್ತು./800
ನಾನು ಹೊತ್ತ ಹುಳ್ಳಿಯನಂಬಲಿಗೆ ಕೊಂಬುವರಿಲ್ಲ ನೋಡಯ್ಯಾ.
ಆನು ನಿಮ್ಮ ಶರಣರ ಒಕ್ಕುದನುಂಡು ಬದುಕುವೆನಯ್ಯಾ.
ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು
ಕೂಡಲಸಂಗಮದೇವಾ./801
ನಾನೆಂಬುದೆಲ್ಲಿಯದಯ್ಯ ಲಿಂಗವೆಂಬ ಮಹಾತ್ಮಂಗೆ,
ಶರಣನೊಡಲುಗೊಂಡಡೇನು ಸಾಮಾನ್ಯನೆ
ಪ್ರಕೃತಿಗುಣವಿಡಿದು ಭಿನ್ನಭಾವಿಯಲ್ಲ.
ಕೂಡಲಸಂಗನ ಶರಣರ ಪರಿ ಬೇರೆ./802
ನಾನೊಂದು ಕಾರಣ ಮತ್ರ್ಯಕ್ಕೆ ಬಂದೆನು,
ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು,
ಇನ್ನು ಬಾರದಂತೆ ಪ್ರಭುದೇವರು ಬಂದರು,
ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿತಂದೆ ಬಂದನು.
ನಾನಿನ್ನಾರಿಗಂಜೆನು, ಬದುಕಿದೆನು
ಕಾಣಾ ಕೂಡಲಸಂಗಮದೇವಾ./803
ನಾನೊಮ್ಮೆ ಬೇಂಟೆಯ ಹೋದಡೆ ಭಸಿತಕ್ಕಾಹುತಿಯನಿಕ್ಕಿಹೆನೆಂದು
ಸಾಸಿರದೇಳುನೂರು ವರುಷ ಒಬ್ಬ ರಾಜನ ಕೊಂದೆನು.
ಅವನ ಹೆಂಡತಿ ಐವತ್ತೆರಡು ಕಣ್ಣವಳು,
ಅವಳು ತನ್ನ ಹೂಮುಡಿಯ ಬಿಟ್ಟು ಅತ್ತಳು.
ಅವಳ ಬಾಯಲ್ಲಿ ಅಜ ಬಿದ್ದ, ಕಂಗಳಲ್ಲಿ ಧೂಮಕೇತು ಬಿದ್ದ.
ಕೂಡಲಸಂಗಮದೇವರ ದೇವತ್ವ ಕೆಟ್ಟಿತ್ತು./804
ನಾರಗೋಣಿಯ ಮೂಲೆಯ ಹೊಲಿದು,
ನೀರ ಭಂಡವ ತುಂಬಿದರಯ್ಯಾ,
ಊರೊಳಗೈವರು ಕಳ್ಳರು ಸಾರಲೀಯರು, ಧರ್ಮವಿಲ್ಲಯ್ಯಾ.
ಊರ[ಸೂರೆ]ಗೊಳ್ಳದ ಮುನ್ನ
ಕೂಡಿಕೊಳ್ಳಿ ಕೂಡಲಸಂಗಮದೇವನ./805
ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ.
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು. /806
ನಾರುಳಿಯ ಹಣಿದವನಾರಾದಡೆಯೂ ಆಡರೆ
ನಾರುಳಿದಡೆ ಮುಂದೆ ಅಂಕುರಿತ ಫಲ ತಪ್ಪದು.
ಮಾಡುವನ್ನಕ್ಕ ಫಲದಾಯಕ !
ಮಾಟವರತು ನಿಮ್ಮಲ್ಲಿ ಸಯವಾದಡೆ
ಆತನೆ ಅಚ್ಚ ಶರಣನಯ್ಯಾ, ಕೂಡಲಸಂಗಮದೇವಾ. /807
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ, ಸಾಲದೆ ಅಯ್ಯಾ
ಮಾಲೆಗಾರನ ಕೇಳಿ ನನೆಯರಳುವುದೆ
ಆಗಮವನಿದಿರಿಂಗೆ ತೋರುವುದು ಆಚಾರವೆ ಅಯ್ಯಾ
ನಮ್ಮ ಕೂಡಲಸಂಗನ ಕೂಡಿದ ಕೂಟದ ಕರುಳ ಕಲೆಯನಿದಿರಿಂಗೆ
ತೋರುವುದು ಆಚಾರವೆ ಅಯ್ಯಾ /808
ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ. /809
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.
ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು./810
ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ ಕುಲವನರಸಲದೇಕೆ
ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೊ
ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ
ಮೋಹವುಳಠಾವಿನಲ್ಲಿ ಲಜ್ಜೆಯನರಸಲೇಕೆಯೊ
ಮಹಾದಾನಿ ಕೂಡಲಸಂಗಯ್ಯನೊಲಿದು
ಮಾದಾರ ಚೆನ್ನಯ್ಯನ ಮನೆಯಲುಂಡ.
ವೇದವನೋದಿದವರು ಲಿಂಗವನೊಲಿಸಿ ತೋರಿರೋ. /811
ನಿಜರೂಪು ರೂಪಿನಿಂದ ನಿಂದಿತ್ತು,
ಆ ರೂಪು ನಿಜರೂಪವನವಗ್ರಹಿಸಿತ್ತು.
ನಿಜರೂಪು ನಿರ್ಣಯದಲ್ಲಿ ನಿಂದ ನಿಜಶರಣರ ನಿಲವ
ಕಾಯವಿಡಿದು ಕಂಡಹೆನೆಂದಡೆ ಕಾಣಬಹುದೆ
ಕೂಡಲಸಂಗಮದೇವಾ ನಿಮ್ಮ ಶರಣರ ನಿಲವು,
ಎನಗೆ ಸಾಧ್ಯವಪ್ಪುದೆ /812
ನಿತ್ಯನಿರಂಜನ ಪರಂಜ್ಯೋತಿವಸ್ತು:
ಉಪದೇಶವ ಕೊಟ್ಟು ಗುರುವಾದ,
ಕರಸ್ಥಲಕ್ಕೆ ಬಂದು ಲಿಂಗವಾದ,
ಹಸರವಾದ ಪ್ರಪಂಚನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ,
ಇಂತೀ ಗುರುಲಿಂಗಜಂಗಮ ಒಂದೆಯಲ್ಲದೆ ಭಿನ್ನವಿಲ್ಲ.
ಈ ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ,
ಆತ ಪ್ರಸಾದಕಾಯನಯ್ಯಾ, ಕೂಡಲಸಂಗಮದೇವಾ./813
ನಿಧಾನವನರಸಿಹೆನೆಂದು ಹೋದಡೆ, ವಿಘ್ನಬಪ್ಪುದು ಮಾಬುದೆ
ಸದಾಶಿವನೆಂದಡೆ, ಬೆದರಟ್ಟಿ ಸುಡುವುದು ಮಾಬುದೆ
ಹದುಳಿಗನಾಗಿ ಉಳಿದಡೆ ಪದವನೀವ ಕಾಣಾ
ಕೂಡಲಸಂಗಮದೇವ. /814
ನಿನಗೆ ಮಜ್ಜನಕ್ಕೆರೆವುದಕ್ಕೆ ಮೂಚುಟಾಗಿ
ಶ್ರೀಗುರುವಿನ ಪಾದೋದಕವ ಕೊಂಬೆ,
ನಿನಗಾರೋಗಣೆಯ ಮಾಡಿಸುವುದಕ್ಕೆ ಮೂಚುಟಾಗಿ
ಶ್ರೀಗುರುವಿನ ಪ್ರಸಾದವ ಕೊಂಬೆ.
ಎನಗೆಯೂ ನಿನಗೆಯೂ ಸಹಭೋಜನ,
ಎನಗೆಯೂ ನಿನಗೆಯೂ ಏಕಾರ್ಥಶಯನ,
ನೀನೆನಗೆ ಚಿಕ್ಕ ತಮ್ಮ, ಕೂಡಲಸಂಗಮದೇವಾ./815
ನಿನ್ನ ಜನ್ಮದ ಪರಿಭವವ ಮರದೆಯಲ್ಲಾ ಮನವೆ,
ಲಿಂಗವ ನಂಬು ಕಂಡಾ ಮನವೆ,
ಜಂಗಮವ ನೆರೆ ನಂಬು ಕಂಡಾ, ಎಲೆ ಮನವೆ,
ಕೂಡಲಸಂಗಮದೇವರ ಬೆಂಬತ್ತು ಕಂಡಾ, ಎಲೆ ಮನವೆ./816
ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ./817
ನಿನ್ನಾಳಿ ಕುಂಬಾರನ ಕೆಲಸದೋಪಾದಿ;
ಉದಕದ ಶೈತ್ಯವನೆ ಕೊಟ್ಟು,
ನೂಲೆಳೆಯಲ್ಲಿ ಗೋಣ ಕೊಯ್ದು,
ವಾಯುವಿನ ಶೈತ್ಯದಲ್ಲಿ ಆರಿಸಿ,
ಅಗ್ನಿಮುಖದಲ್ಲಿ ಬೇರೆ ಭಾಂಡವೆಂದೆನಿಸಿದಂತೆ
ಕೂಡಲಸಂಗಮದೇವಾ. /818
ನಿಮಿಷದ ನಿಮಿಷಂ ಭೋ, ಕ್ಷಣದೊಳಗರ್ಧಂ ಭೋ,
ಕಣ್ಣುಮುಚ್ಚಿ ಬಿಚ್ಚುವಿನಿಸು ಬೇಗಂ ಭೋ,
ಸಂಸಾರದಾಗುಂ ಭೋ, ಸಂಸಾರದ ಹೋಗುಂ ಭೋ,
ಸಂಸಾರಂ ಭೋ :
ಕೂಡಲಸಂಗಮದೇವ ಮಾಡಿದ
ಮಾಯಂ ಭೋ, ಅಭ್ರಚ್ಛಾಯಂ ಭೋ./819
ನಿಮ್ಮ ಕಂಡು, ಕೈಮುಗಿದು, ನಿಮಗೆ ಭಕ್ತನಾದೆನಲ್ಲದೆ,
ನಿಮ್ಮ ಕಾಣದಲೆ ಕೈಮುಗಿವ ಭಕ್ತಿಯುಂಟೆ ಅಯ್ಯಾ
ನಿಮ್ಮ ಮುಟ್ಟಿ ಪೂಜಿಸಿ ಆಚಾರಿಯಾದೆನಲ್ಲದೆ,
ನಿಮ್ಮ ಮುಟ್ಟದಲೆ ಎನಗಾಚಾರವೆಲ್ಲಿಯದಯ್ಯಾ
ನಿಮ್ಮ ಘನವನು ಮನದಲ್ಲಿ ನೆನೆದು ಧರಿಸಿದ ಕಾರಣ
ಜ್ಞಾನೋದಯವಾಯಿತ್ತಲ್ಲದೆ,
ನೀವಿಲ್ಲದಡೆ ಎನಗೆ ಜ್ಞಾನವೆಲ್ಲಿಯದಯ್ಯಾ
ಇಂತು ಆವ ಮುಖದಲ್ಲಿಯೂ ಎನ್ನನಾಗುಮಾಡಲೆಂದು
ನೀವು ಮುಂದುಗೊಂಡಿದ್ದ ಕಾರಣ,
ನಿಮ್ಮ ಸನ್ನಿಧಿಯಲಾನು ಸದಾಚಾರಿಯಾದಡೆ,
ನಿಮಗಾನು ಸರಿಯೆ ಕೂಡಲಸಂಗಮದೇವಾ,
ಜಂಗಮಮುಖದಿಂದ ಸಂಗನಬಸವಣ್ಣ ಬದುಕಿದನೆಂಬುದ
ಮೂರು ಲೋಕವೆಲ್ಲವೂ ಬಲ್ಲುದು ಕಾಣಾ ಪ್ರಭುವೆ./820
ನಿಮ್ಮ ನೋಟವನಂತಸುಖ, ನಿಮ್ಮ ಕೂಟ ಪರಮಸುಖ.
ಅವಟುಕೋಟಿ ರೋಮಂಗಳು ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ
ಮನದಲ್ಲಿ ರತಿಹುಟ್ಟಿ, ನಿಮಿರ್ದವೆನ್ನ ಕಳೆಗಳು./821
ನಿಮ್ಮ ನೋಡ ನೋಡಲೆನ್ನ ಹರಣವಿದ್ದುದ ಕಂಡೆ,
ನಿಮ್ಮನಗಲಲೊಡನೆ ಎನ್ನ ಹರಣವಿಲ್ಲಯ್ಯಾ.
ಇರುಳೊಂದು ಜುಗ ಮೇಲೆ ಕೆಡೆದಂತೆ, ಆಳವಾಡಿ ಕಳೆವೆನಯ್ಯಾ,
ಹಗಲೆಲ್ಲ ಹಂಬಲಿಸಿ ಹಲುಬಲೇನಯ್ಯಾ,
ಕೂಡಲಸಂಗನ ಶರಣರನಗಲುವ ಧಾವತಿಯಿಂದ,
ಮರಣವೇ ಲೇಸಯ್ಯಾ. /822
ನಿಮ್ಮ ಭಕ್ತಿಯಲ್ಲಿ ಧರಧುರನೆಂಬೆ.
ದಿಟಕ್ಕೆ ಬಂದಡೆ ಅಡ್ಡ ಮುಖವನಿಕ್ಕುವೆ-
ಗರುಡಂಗೆ ಘಟಸರ್ಪನ ತೋರುವಂತೆ !
ಶಿವಶರಣೆಂದಡೆ ಕಿವಿ ಕೇಳದಂತಿಹೆನು,
ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ./823
ನಿಮ್ಮ ವಚನವೆನ್ನ ಪುಣ್ಯವೆಂಬುದು.
ಹುಸಿಯಾಯಿತ್ತು ನೋಡಾ ಶಾಸ್ತ್ರದ ವಚನ ಹೋತಿಂಗೆ ಮಾರಿ,
ಎಂತು ನಂಬುವೆನಯ್ಯಾ ?
ನಾನು ಕೊಲ್ಲೆನು, ನೇಣು ಕೊಂದಿತೆಂಬ ಸೂನೆಗಾರರನೇನೆಂಬೆ
ಕೂಡಲಸಂಗಮದೇವಾ. /824
ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ, ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ !/825
ನಿಮ್ಮ ಶ್ರೀಪಾದವ ಮುಟ್ಟಿ ಕರ್ಮ ಹರಿಯಿತ್ತು.
ನಿಮ್ಮ ಪ್ರಸಾದದಿಂದ ಭವಗೆಟ್ಟೆ ನೋಡಯ್ಯಾ !
ಮನಪರುಷ, ದೃಷ್ಟಿಪರುಷ, ಭಾವಪರುಷ; ಲಿಂಗಗಣಂಗಳು.
ಕೂಡಲಸಂಗಮದೇವಾ,
ನಿಮ್ಮ ಶರಣರ ಅನುಭಾವದಿಂದ ಸುಖಿಯಾದೆನು. /826
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು !
ನಿಮಗೆರಗದ ಕಾರಣ ಕೊರಳಲ್ಲಿ ನೇಣು !
ಹಿಂಡಲೇಕೋ ತೊಳೆಯಲೇಕೋ !
ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ !
ಕೂಡಲಸಂಗನ ಶರಣರಲ್ಲಿ
ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ /827
ನಿರಹಂಭಾವದೊಳಗೆ ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ,
ಎರಡರಿಯದೆ ನಿಜಪರಮಾನಂದದೊಳಿಪ್ಪೆನು,
ಕೂಡಲಸಂಗಯ್ಯಾ./828
ನಿರ್ಲೆಪವಾದ ನಿಜಗುಣಿ ನೋಡಯ್ಯಾ,
ಕಾಮಿಸದ ಕಲ್ಪಿಸದ ಪ್ರಸಾದಿ ನೋಡಯ್ಯಾ.
ಬಯಸಲಿಲ್ಲದ ಪ್ರಸಾದಿ
ಗುರುವಿನ ಮುಖದಿಂದ ಬಂದ ಪ್ರಸಾದವಲ್ಲದೆ
ಮತ್ತೇನನೂ ಮುಟ್ಟಲೀಯನು,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು./829
ನಿಷ್ಠೆಯಿಂದ ಲಿಂಗವ ಪೂಜಿಸಿ
ಮತ್ತೊಂದು ಪಥವನರಿಯದ ಶರಣರು
ಸರ್ಪನ ಹೆಡೆಯ ಮಾಣಿಕದಂತೆ ಇಪ್ಪರು, ಭೂಷಣರಾಗಿ !
ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು
ಕೂಡಲಸಂಗಮದೇವಾ, ನಿಮ್ಮ ಶರಣರು. /830
ನಿಸ್ಸೀಮ ಗುಗ್ಗುಳವನಿಕ್ಕಿದವನೊಬ್ಬ ಶರಣ,
ಉಘೇ ಚಾಂಗು ಭಲಾ ಎಂಬ ಹೊಗೆ ಗಗನವ ತೀವೆ.
ಓಹಿಲನ ಮೆರೆದ ಸೌರಾಷ್ಟ್ರಮಂಡಲದಲ್ಲಿ,
ಕೂಡಲಸಂಗಮದೇವ ಭಕ್ತಿವತ್ಸಲನಾಗಿ. /831
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ./832
ನೀನಲ್ಲದನ್ಯದೈವವುಂಟೆಂಬವನ ಬಾಯ,
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ.
ಎನ್ನ ಕೋಪವಡಗದಯ್ಯಾ.
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ. /833
ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ
ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ.
ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು
ತುಡುಗುಣಿತನವ ಬಿಡಿಸಯ್ಯಾ.
ಜಂಗಮ ಮನೆಗೆ ಬಂದಲ್ಲಿ ಓಸರಿಸಿದಡೆ
ಹಿಡಿದು ಮೂಗ ಕೊಯ್ಯಯ್ಯಾ
ಕೂಡಲಸಂಗಮದೇವಾ./834
ನೀನೊಲಿದಡೆ ಒಲಿ, ಒಲಿಯದಿದ್ದಡೆ ಸಮವೇದಿಸಿಕೊಳ್ಳಯ್ಯಾ,
ಲಿಂಗದ ಬೆಳಗನೊಳಕೊಂಡು ಸಮವೇದಿಸಿಕೊಳ್ಳಯ್ಯಾ.
ಕೂಡಲಸಂಗಮದೇವನಲ್ಲಿ ತದ್ಗತನಾದೆನಯ್ಯಾ. /835
ನೀನೊಲಿದಡೆ ಕೊರಡು ಕೊನರುವುದಯ್ಯಾ,
ನೀನೊಲಿದಡೆ ಬರಡು ಹಯನಹುದಯ್ಯಾ,
ನೀನೊಲಿದಡೆ ವಿಷವೆಲ್ಲ ಅಮತವಹುದಯ್ಯಾ,
ನೀನೊಲಿದಡೆ ಸಕಲ ಪಡಿಪದಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ./836
ನೀನೊಲಿುತ್ತೆ ಪುಣ್ಯ, ನೀನೊಲ್ಲದುವೆ ಪಾಪ,
ಸಕಲ ಜಗದೊಳಗೆ ಅನುಶ್ರುತನಾಗಿಪ್ಪೆಯಯ್ಯಾ.
ನೀನೊಲಿದವನೆ ನಿಮ್ಮನರಿದವನು.
ಪ್ರಸಾದಾದ್ದೇವತಾಭಕ್ತಿಃ ಪ್ರಸಾದೋ ಭಕ್ತಿಸಂಭವಃ
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರಃ
ನೀನೊಲಿದವನೆ ಧನ್ಯ, ಜಗಕ್ಕೆ ಪಾವನ ಕೂಡಲಸಂಗಮದೇವಾ./837
ನೀರ ಒರಳ ಮಾಡಿ, ನೆರಳ ಒನಕೆಯ ಮಾಡಿ,
ಆಕಾರವಿಲ್ಲದಕ್ಕಿಯ ಥಳಿಸುತ್ತಿರಲು,
ಮೇರುಗಿರಿಯಾಕಳ ಕರೆದ ಕ್ಷೀರದಲ್ಲಿ ಅಡಿಗೆಯ ಮಾಡಿ
ನಾರಿಯ ಬಸುರೊಳಗೆ ಗಂಡ ಬಂದು ಕುಳ್ಳಿರಲು,
ಮಾಡಿದಡಿಗೆಯ ಮನವುಂಡು ಹೋಗಲು,
ಮೇಲು ಕೈ ತಲೆ ಹಿಡಿದು ಸಂತೋಷದಿಂದ,
ಪ್ರಾಣಸಖಿ ತನ್ನ ಗಂಡಂಗೆ ನೀಡುತ್ತಿರಲು,
ಅರಳ ಹುಟ್ಟಿಗೆಯಲ್ಲಿ ಹೊರಳಿ ಕೂಡುವ ಭೇದ,
ಮರಳಿ ಕೂಡಲಿಕೆಂತು ಪಣವಿಲ್ಲ.
ಕೆರಳಿ ಮುನಿದು ಘುಡುಘುಡಿಸಿ ಗರ್ಜೀಸಲೊಡನೆ
ಕೆರಳಲಮ್ಮದೆ ಅಂಜಿ ಒಳಗಡಗಿದ,
ಶರಣಸತಿ ಲಿಂಗಪತಿಯೆಂಬ ಭಾಷೆ.
ನೀನು ಹರನ ಬಟ್ಟೆಯ ನೋಡಿ ಸುಯ್ಯಬೇಡ,
ಜನನ ಮರಣವಿರಹಿತ ಕೂಡಲಸಂಗನ ಅನುಭಾವ,
ಪ್ರಭುವಿನ ಶ್ರೀಪಾದದೊಳಗಿದ್ದು ಸುಖಿಯಾದೆನು./838
ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ.
ಬತ್ತುವ ಜಲವ, ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ. /839
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟುಕೊಟ್ಟು
ರಕ್ಷಿತವ ಮಾಡುವ ಭರವ ನೋಡಾ.
ಮಹಾದಾನಿ ಕೂಡಲಸಂಗಯ್ಯನ ಪೂಜಿಸಿ
ಬದುಕೋ ಕಾಯ ನಿಶ್ಚೈಸದೆ./840
ನೀರಿಂಗೆ ನೈದಿಲೆಯೆ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ./841
ನೀಲದ ಮಣಿಯೊಂದು ಮಾಣಿಕವ ನುಂಗಿದಡೆ,
ವಜ್ರ ಬಂದು ಅದು ಬೇಡವೆಂದುಗುಳಿಸಿತ್ತು ನೋಡಾ,
ಅಡಗಿದ ಮಾಣಿಕ್ಯ ನೀಲದ ತಲೆಯ ಮೆಟ್ಟಿ,
ಆನಂದನಾಟ್ಯವನಾಡುತ್ತಿದ್ದಿತ್ತು.
ಅಂಬರದೊಳಗಣ ಮುಗ್ಧೆ ಕಂಗಳ ಮುತ್ತಿನ ಮಣಿಯ
ಮಥನವಿಲ್ಲದೆ ನುಂಗಿ ಉಗುಳುತ್ತಿದ್ದಳು.
ಲಿಂಗ ಜಂಗಮವೆಂಬುದ ಇಂದರಿದು ಸುಖಿಯಾದೆನು,
ಕೂಡಲಸಂಗಮದೇವರಲ್ಲಿ
ಪ್ರಭುವಿನ ಕೃಪೆಯಿಂದ ನಾನು ಬದುಕಿದೆನು./842
ನೀವಿರಿಸಿದ ಮನದಲ್ಲಿ ನಾನಂಜೆನಯ್ಯಾ,
ಮನವು ಮಹಾಘನಕ್ಕೆ ಶರಣುಗತಿವೊಕ್ಕುದಾಗಿ.
ನೀವಿರಿಸಿದ ಧನದಲ್ಲಿ ನಾನಂಜೆನಯ್ಯಾ,
ಧನವು ಸತಿಸುತಮಾತಾಪಿತರಿಗೆ ಸವೆಯದಾಗಿ.
ನೀವಿರಿಸಿದ ತನುವಿನಲ್ಲಿ ನಾನಂಜೆನಯ್ಯಾ,
ತನುವು ಸರ್ವಾರ್ಪಿತದಲ್ಲಿ ನಿಯತಪ್ರಸಾದಭೋಗಿಯಾಗಿ.
ಇದು ಕಾರಣ, ವೀರಧೀರಸಮಗ್ರನಾಗಿ
ನಿಮಗಾನಂಜೆ, ಕೂಡಲಸಂಗಮದೇವಾ. /843
ನೀವು ಹಿರಿಯರೆಂಬಿರಿ, ಕರ್ಮಿಗಳು, ನೀವು ಕೇಳಿರಿ,
ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು
`ಓಂ ದ್ಯಾವಾ ಭೂಮೀ ಜನಯನ್ ದೇವ ಏಕಃ’
ಎಂದು ಶ್ರುತಿ ಸ್ಮೃತಿಗಳು ಸಾರುತ್ತಿದ್ದಾವು.
`ವರ್ಣಾನಾಂ ಬ್ರಾಹ್ಮಣೋ ಗುರುಃ’ ಎಂಬುದು ಹುಸಿ,
`ವರ್ಣಾನಾಂ ಗುರುಃ’ ನಮ್ಮ ಕೂಡಲಸಂಗನ ಶರಣರು. /844
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ/845
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವನೆ ದಿಬ್ಯವೊ ಅಯ್ಯಾ.
ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ./846
ನೂರನೋದಿ ನೂರ ಕೇಳಿ ಏನು
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ./847
ನೆರೆ ನಂಬೋ ನೆರೆ ನಂಬೋ ಧರಧುರವಿಲ್ಲದೆ ಸಾಮವೇದಿಗಳಂತೆ,
ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿರಿಯಾಳ-ಚಂಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿಂಧು-ಬಲ್ಲಾಳನಂತೆ,
ನೆರೆ ನಂಬಿದೆಯಾದಡೆ ತನ್ನನೀವ ಕೂಡಲಸಂಗಮದೇವ./848
ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ:ಶೌಚಾಚಮನಕ್ಕೆ,
ಕುಲವೊಂದೆ:ತನ್ನ ತಾನರಿದವಂಗೆ,
ಫಲವೊಂದೆ:ಷಡುದರುಶನ ಮುಕ್ತಿಗೆ,
ನಿಲವೊಂದೆ:ಕೂಡಲಸಂಗಮದೇವಾ, ನಿಮ್ಮನರಿದವಂಗೆ./849
ನೆಲ್ಲ ಗಿಡುವಿನೊಳಗೆ ನಾನೊಂದು ಹುಲ್ಲಾಗಿ ಹುಟ್ಟಿದೆನಯ್ಯಾ.
ಆನು ಭಕ್ತನೆಂದೆಂಬೆನೆ, ಆನು ಯುಕ್ತನೆಂದೆಂಬೆನೆ
ಆನು ಕೂಡಲಸಂಗನ ಶರಣರೊಕ್ಕುದನುಂಡಡೆ,
ಪಾದರಕ್ಷೆಗೆ ಸರಿಯಹೆನೆ /850
ನೇಹದ ಸುಖವ ನೋಟ ನುಂಗಿತ್ತು,
ನೋಟದ ಸುಖವ ಕೂಟ ನುಂಗಿತ್ತು,
ಕೂಟದ ಸುಖವ ಆಲಿಂಗನ ನುಂಗಿತ್ತು,
ಆಲಿಂಗದ ಸುಖವ ಸಂಗ ನುಂಗಿತ್ತು,
ಸಂಗದ ಸುಖವ ಪರವಶ ನುಂಗಿತ್ತು,
ಪರವಶದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ./851
ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ.
ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ.
ಒಂದಾಸೆಗೆ ಸಾಸಿರ ವರುಷ ನರಕದಲದ್ದುವ
ಕೂಡಲಸಂಗಮದೇವ. /852
ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು./853
ನೋಡಿ ನೋಡಿ ಲಿಂಗಧ್ಯಾನವೆನ್ನ ಮನ !
ರಾಗರಂಜನೆಯ ಉತುಪತಿ ಸ್ಥಿತಿಲಯ ನಿನಗೆಂದಾದುವು.
ರಾಗರಂಜನೆಯ ಪೂಜೆ ಎನ್ನ ಮನ !
ಕೂಡಲಸಂಗಮದೇವಾ, ಅಹಾ, ಎನ್ನ ಮನ !/854
ನೋಡಿರೇ ನೋಡಿರೇ ಪೂರ್ವದತ್ತವ;
ವರುಣ ಹೆಳವ, ರವಿ ಕುಷ್ಟ, ಶುಕ್ರನಂಧಕ,
ಶನಿಗೆ ಸಂಕಲೆ, ಬಲಿಗೆ ಬಂಧನ, ಸೀತೆಗೆ ಧ್ರೌಪದಿಗೆ ಸೆರೆ,
ಹರಿ ಹಂದಿಯಾದ, ಅರುಹಂಗೆ ಲಜ್ಜೆ,
ಬ್ರಹ್ಮನ ಶಿರಹೋಯಿತ್ತು,
ಬಲ್ಲಿದನೆಂಬವನ ಕೊಡೆವಿಡಿಸದೆ ವಿಧಿ
ಜತ್ತಕನೆಂಬವನ ಕತ್ತೆಯ ಮಾಡಿತ್ತು.
ದಶಮುಖನ ನಾಯ ಡೋಣಿಯಲ್ಲಿ ಉಣಿಸಿತ್ತು.
ದೇವೇಂದ್ರನ ಮೈಯ್ಯ ನಾಣುಗೆಡಿಸಿತ್ತು.
ಶೂದ್ರಕನ ತಲೆ ಕಂಚಿಯಾಲದಲ್ಲಿ ನೇರಿತ್ತು.
ಕೂಡಲಸಂಗಮದೇವಯ್ಯಾ,
ನೀ ಮಾಡಿದ ಮಾಯೆಯನಂತರನಾಳಿಗೊಂಡಿತ್ತು./855
ನೋಡುವರುಳ್ಳಡೆ ಮಾಡುವೆ ದೇಹಾರವ.
ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿುಲ್ಲ.
ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು,
ಕೂಡಲಸಂಗಮದೇವಾ./856
ನ್ಯಾಯನಿಷ್ಠುರಿ:ದಾಕ್ಷಿಣ್ಯಪರ ನಾನಲ್ಲ,
ಲೋಕವಿರೋದಿ:ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. /857
ಪಂಚಬ್ರಹ್ಮವ ಕೆಡಿಸಿತ್ತು, ಪ್ರಣವಮಂತ್ರವನೀಡಾಡಿತ್ತಲ್ಲಾ.
ಕರ್ಮಂಗಳನೆ ಕಳೆಯಿತ್ತು, ಕ್ರೀಗಳನೆ ಮೀರಿತ್ತಲ್ಲಾ.
ಆಗಮದ ಹಲ್ಲನೆ ಕಳೆಯಿತ್ತು
ಕೂಡಲಸಂಗಯ್ಯನ ಭಕ್ತಿಗಜ ಹೋ ! /858
ಪಂಚಬ್ರಹ್ಮಾತ್ಮಕದಿಂದುದಯವಾದ,
ಪಂಚಗವ್ಯ ಗೋಮಯವನು
ಆಗಮಮತದಿಂದ ದಹಿಸಿ, ಸಮಸ್ತ ಜನಂಗಳು ಧರಿಸುವ
ಭಸಿತವಿದು ನೋಡಾ ಕೂಡಲಸಂಗಯ್ಯಾ./859
ಪಂಚಮುಖವ ಪೂಜಿಸುವಯ್ಯಗಳು ನೀವು ಕೇಳಿರಯ್ಯಾ;
ಪಂಚಲಿಂಗವಾವುದೆಂಬುದ ನೀವು ಕೇಳಿರೆ !
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ
ಈ ಐದರಲ್ಲಿ ನೊಂದುಬೆಂದಯ್ಯಗಳು ನೀವು ಕೇಳಿರೆ !
ನಾನವನೊಲ್ಲೆ, ನಾನವನಂಗವಿಸುವನಲ್ಲ, ನಾನವ ಹಿಡಿವನಲ್ಲ,
ಸನ್ಯಾಸದೊಳಗಾಡಿ ಸಮೀಪಕ್ಕೆ ಬಾಹಾತನಲ್ಲ,
ಕ್ಷಪಣರೊಳಗಾಡಿ ಲಜ್ಜೆದೋರುವವನಲ್ಲ,
ಲಿಂಗದೊಳಗಾಡಿ ಅಂಗವ ಬಿಡುವವನಲ್ಲ,
ಸರ್ವದೊಳಗಾಡಿ ಅಧೋಗತಿಗಿಳಿವವನಲ್ಲ.
ನಾನು ಜಂಗಮದಾಸೋಹದೊಳಗಾಡಿ ನಿಮ್ಮ ಕಂಡೆ
ಕೂಡಲಸಂಗಮದೇವಾ./860
ಪಂಚಾಮೃತದಲ್ಲಿ ಉಂಡರೇನು !
ಮಲಮುತ್ರ ವಿಷಯ ಘನವಕ್ಕು.
ಭ್ರಾಂತು ಬೇಡ ಮರುಳೆ
ಬೇಡದು ಕಾಯಗುಣ.
ಆಸೆಯಾಮಿಷ ತಾಮಸ ಹಸಿವು ತೃಷೆ
ವ್ಯಸನ ವಿಷಯಾದಿಗಳಲ್ಲಿ
ಹಿರಿಯರು, ಗರುವರುಂಟೆ !
ಭ್ರಾಂತು ಬೇಡ ಮರುಳೆ !
ಬೇಡದು ಕಾಯಗುಣ.
ಈ ಭೇದವ ಭೇದಿಸಬಲ್ಲಡೆ
ಕೂಡಲ ಸಂಗನ ಶರಣರ ಸಾಣಿಯಲ್ಲಿ ಸವೆದ
ಶ್ರೀಗಂಧದಂತಿರಬೇಕು ಶರಣ./861
ಪಂಚೇಂದ್ರಿಯಂಗಳರತು ತನುಮನವ ನಿಲಿಸಬಲ್ಲಡೆ
ಚೆನ್ನನ ಪ್ರಸಾದ ಲಿಂಗಕ್ಕೋಗರವಾಗದೆ
ನಾಲಗೆಯ ರುಚಿಯ ನಾಣಕ್ಕೆ ತಂದು ಮರಳಿ ಲಿಂಗಾರ್ಪಿತವ ಮಾಡಿದಡೆ,
ಮನದ ಭಾವವ ಕೈಕೊಂಡ ಕಾರಣ,
ನಮ್ಮ ಕೂಡಲಸಂಗಮದೇವನಿಗೆ ಕೊಡಬಹುದು ಕಾಣಾ, ಪ್ರಭುವೆ. /862
ಪಂಚೇಂದ್ರಿಯಂಗಳೆಂಬ ಪಂಚವಿಷಯವೆಂಬ
ವಿಷಯದೊಳಗೆ ಆಳುತ್ತ ಏಳುತ್ತ ಬೀಳುತ್ತಲಿದೇನೆ,
ಓಂ ನಮಃ ಶಿವಾಯ, ಓಂ ನಮಃ ಶಿವಾಯನೆಂಬುತಿದೇನೆ,
ಕೂಡಲಸಂಗಮದೇವಾ, ಪರಿಹರಿಸುವರ ಕಾಣೆ./863
ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ ಉಂಡಲ್ಲದೆ ಮಾಣದು,
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು
ಶ್ರುತಿ ಸಾರುತ್ತೈದಾವೆ ನೋಡಾ.
ತಾನಾವಾವ ಲೋಕದೊಳಗಿದ್ದಡೆಯೂ ಬಿಡದು,
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೆ ಧನ್ಯ. /864
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ
ಲಿಂಗದೇವನ ಪೂಜಿಸಿ ಕುಲವನರಸುವರೆ, ಅಯ್ಯಾ
ಕೂಡಲಸಂಗಮವೇವ
ಭಕ್ತಕಾಯ ಮಮಕಾಯವೆಂದನಾಗಿ./865
ಪರ ಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ
ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ
ಹಾಸಲುಂಟು, ಹೊದೆಯಲುಂಟು./866
ಪರಮತತ್ವದ ನಿಜಸಂಯುಕ್ತರ,
ಆನು ನೀನೆಂಬ ಶಬ್ದಸುಖಿಗಳ ತೋರಾ ಎನಗೆ.
ಮಹಾನುಭಾವರ ತೋರಾ ಎನಗೆ.
ಲಿಂಗೈಕ್ಯರ, ಲಿಂಗಸುಖಿಗಳ, ಲಿಂಗಗೂಡಾಗಿಪ್ಪರ,
ಲಿಂಗಾಭಿಮಾನಿಗಳ ತೋರಾ ಎನಗೆ.
ಅಹೋರಾತ್ರಿ ನಿಮ್ಮ ಶರಣರ ಸೇವೆಯಲ್ಲಿರಿಸು
ಕೂಡಲಸಂಗಮದೇವಾ. /867
ಪರಮಪ್ರಭುವೇ, ನೀ ಮುನಿದೆನ್ನ ಮತ್ರ್ಯಲೋಕದೊಳಗಿರಿಸಿದಡೆ
ಆನು ಸೈರಿಸಿದೆನಯ್ಯಾ,
ಕುಲಮದ ಛಲಮದವಿದೇನಯ್ಯಾ
ದರುಶನಭ್ರಾಂತಿಯಿದೇನಯ್ಯಾ !
ಕ್ರಿಯಾಕರ್ಮಸೂತಕವಿದೇನಯ್ಯಾ
ಯದ್ಯಪಿ ಸ್ಯಾತ್ ತ್ರಿಕಾಲಜ್ಞಃ ತ್ರೈಲೋಕ್ಯಾಕರ್ಷಣಕ್ಷಮಃ
ತಥಾಪಿ ಲೌಕಿಕಾಚಾರಂ ಮನಸಾಪಿ ನ ಲಂಘಯೇತ್
ಇಂತೆಂಬುದ ಮೀರಿದೆನಾಗಿ, ಲಿಂಗಯ್ಯಾ ನಿಮ್ಮ ನಂಬಿದೆನಯ್ಯಾ.
ಇನ್ನು ಕಲಿಯುಗದಲ್ಲಿ ಬಳಸಿದಡೆ
ಕೂಡಲಸಂಗಮದೇವಾ, ನಿಮ್ಮ ರಾಣಿವಾಸದಾಣೆ./868
ಪರಿಮಿತಕೆ ನಡೆತಂದು ಪರುಷದ ಸಿಂಹಾಸನದ ಮೇಲೆ
ಪರಮಗುರು ಮೂರ್ತಿಗೊಂಡಿರಲು,
ಪರಮಾನಂದಜಲದಿಂದ ಪಾದಾರ್ಚನೆಯಂ ಮಾಡಿ,
ದಿವ್ಯಸುಗಂಧಮಂ ಲೇಪಿಸಿ, ಅಕ್ಷಯವೆಂಬ ಅಕ್ಷತೆಯನಿಟ್ಟು,
ಹೃದಯಕಮಲದ ಪುಷ್ಪದಿಂದ ಪೂಜೆಯ ಮಾಡಿ,
ಸುಜ್ಞಾನವಾಸನೆಯೆಂಬ ಧೂಪಮಂ ಬೀಸಿ,
ಭಕ್ತಿಸಾರಾಯವೆಂಬ ನೈವೇದ್ಯಮಂ ಸಮರ್ಪಿಸಿ,
ಪರಮಹರುಷವನೆ ಹಸ್ತಮಜ್ಜನಕ್ಕೆರೆದು,
ತ್ರಿಕರಣಶುದ್ಧವೆಂಬ ತಾಂಬೂಲಮಂ ಕೊಟ್ಟು,
ಸಮರಸಸಂಗದಿಂದ ಕೂಡಲಸಂಗಮದೇವರ ಶರಣ
ಪ್ರಭುದೇವರ ಕರುಣವೆನಗಾಯಿತ್ತು./869
ಪರಿಯಾಣವೆ ಭಾಜನವೆಂಬರು; ಪರಿಯಾಣ ಭಾಜನವಲ್ಲ,
ಲಿಂಗಕ್ಕೆ ತನ್ನ ಮನವೆ ಭಾಜನ.
ಪ್ರಾಣವನು ಬೀಸರವೋಗಲೀಯದೆ ಮೀಸಲಾಗರ್ಪಿಸಬಲ್ಲಡೆ
ಕೂಡಿಕೊಂಡಿಪ್ಪ, ನಮ್ಮ ಕೂಡಲಸಂಗಮದೇವ. /870
ಪರುಷ ಮುಟ್ಟಿದ ಬಳಿಕ ಕಬ್ಬುನವಾಗದು ನೋಡಾ,
ಲಿಂಗ ಮುಟ್ಟಿದ ಬಳಿಕ ಕುಚಿತ್ತಾಚಾರವಾಗದು ನೋಡಾ,
ಕೂಡಲಸಂಗನ ಶರಣರು ಅನ್ಯವನರಿಯರಾಗಿ./871
ಪರುಷದ ಹೊರೆಯಲ್ಲಿ ಕಬ್ಬುನವಿದ್ದು ಹೊನ್ನಾಯಿತ್ತು, ನೋಡಿರೆ !
ಅವ್ವಾ ಚಂಗಳೆ, ನೀನಿದ್ದೇಳು ಕೇರಿಯವರು
ಲಿಂಗದ ನೋಂಪಿಯ ನೋಂತರೆ, ಹೇಳಾ
ಕೂಡಲಸಂಗಮದೇವಂಗೆ
ಚೀಲಾಳನೆಂಬ ಬಾುನವನಿಕ್ಕಿದರೆ ಹೇಳಾ/872
ಪವಿತ್ರಲಿಂಗಕ್ಕೆ ಅಪವಿತ್ರವ ಕೊಡಲೊಲ್ಲೆನೆಂಬುದೆನ್ನ ಭಾಷೆ,
ಧರೆಯೊಳು ಬೆಳೆದುವೆಲ್ಲಾ ಅಪವಿತ್ರವೆಂಬುದ ಬಲ್ಲೆನಾಗಿ ನಾನವನೊಲ್ಲೆ,
ಪಾಚಿಗೆಟ್ಟ ಹೊಲದಲ್ಲಿ ಒಂದು ಲಿಂಗಮೂರ್ತಿದೋರಿದಡೆ ಅದು ದಿವ್ಯಕ್ಷೇತ್ರ,
ಅಲ್ಲಿದ್ದವರೆಲ್ಲರೂ ಪವಿತ್ರಕಾಯರು.
ಇದು ಕಾರಣ ಅನಘ ಅನಾದಿ ಜಂಗಮಮುಖದಿಂದೊಗೆದ ಪ್ರಸಾದ,
ಕೂಡಲಸಂಗಯ್ಯಾ, ನಿಮಗೆ ನೈವೇದ್ಯವೆನಗೆ ಪ್ರಸಾದ ತಪ್ಪದು,
ನಿಮ್ಮವರು ಸವಿದ ಸವಿಯ ಕೈಯಾಂತು ಕೊಂಡುದ ನಾ ಬಲ್ಲೆನಾಗಿ./873
ಪಶ್ಚಿಮಪದ್ಮಾಸನದಲ್ಲಿ ಕುಳ್ಳಿತ್ತು ನಿಟ್ಟೆಲುವ ಮುರಿದು
ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ !
ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ ಕ[ಟ್ಟೆ] ಗುಡಿಯ,
ಕೂಡಲಸಂಗಮದೇವ ಹಿಡಿವಡೆದ. /874
ಪಾತಕ ಮಹಾಪಾತಕವ ಮಾಡಿದವನು
ಸದ್ಭಕ್ತರ ಮನೆಗೆ ಹೋಗಿ,
ಅವರೊಕ್ಕ ಪ್ರಸಾದವನಾಯ್ದುಂಡಡೆ,
ಸಕಲ ಬ್ರಹ್ಮಹತ್ಯಾದಿ ಪಾತಕ ಪರಿಹಾರ.
ಒಮ್ಮೆ ಬೇಡಿಕೊಂಡುಂಡಡೆ !
ಪಾತಕೇ ಸಮನುಪ್ರಾಪ್ತೇ ಶಿವಭಕ್ತಗೃಹಂ ವ್ರಜೇತ್
ಯಾಚಯೇದನ್ನಮಮೃತಂ ತದಲಾಭೇ ಜಲಂ ಪಿಬೇತ್
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಸದ್ಭಕ್ತರಿಗೆ ನಮೋ ನಮೋ ಎಂಬೆನು./875
ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ ಹಂಗಿಗೆ.
ಶರಣಾರ್ಥಿಯೆಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ.
ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು ನೋಡಾ, ಭಕ್ತಿ.
ಕೂಡಲಸಂಗನ ಶರಣರ ನಿಲವನರಿಯದೆ,
ಮುಯ್ಯಿಗೆ ಮುಯ್ಯಾಗಿ ಕೆಟ್ಟಿತ್ತಯ್ಯಾ ಎನ್ನ ಭಕ್ತಿ. /876
ಪಾದೋದಕವ ಕೊಂಬೆ, ಪ್ರಸಾದವ ಕೊಂಬೆ,
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ.
ರಾತ್ರಿಯಲೊತ್ತೆಯ ಕೊಂಬ ಪಾತಕ ಸೂಳೆಯಂತೆ,
ಬರಿ ಮಾತಿಂಗೊಲೆವನೆ ನಮ್ಮ ಕೂಡಲಸಂಗಮದೇವ/877
ಪಾಪಿಗೆ ಕೋಪಿಗೆ ಭಕ್ತಿಯಾಗೆಂದಡಪ್ಪುದೆ
ನಾರಿವಾಣವಕ್ಕುದೆ ನಾಯಿಗೆ
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಭಕರಿಗೆ. /878
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ./879
ಪಿಂಡವೇ ಆದಿಯಾಗಿ, ಜ್ಞಾನವೇ ಶೂನ್ಯವಾಗಿ,
ಆದಿ ಅಂತ್ಯಗಳೆರಡು ಮಧ್ಯದಲ್ಲಿ ನಿಲ್ಲಲು
ನೂರು ಒಂದರ ಮೇಲೆ ನಿಂದು
ಒಂದೇ ನೂರಾಗಿ ನಿಂದ ಮೇಲೆ
ನೂರೊಂದೆಂಬುದಿಲ್ಲವಾಗಿ
ಕೂಡಲಸಂಗಮದೇವನೆಂಬ ಸೊಲ್ಲು ಇಲ್ಲ. /880
ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು,
ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು,
ಪುಣ್ಯಗಳಹ ಕಾಲಕ್ಕೆ ಹಾವು ಲೇವಳವಹುದು,
ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು.
ಇಂತಪ್ಪ ಪುಣ್ಯಂಗಳೆಲ್ಲವೂ ಭಕ್ತಿಯಿಂದಹುದು,
ಭಕ್ತಿ ಕೆಟ್ಟಡೆ ಪುಣ್ಯವು ಕೆಡುವುದು.
ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಗುಂಟಾಗಿ,
ನಾನು ಬದುಕಿದೆನಯ್ಯಾ, ಕೂಡಲಸಂಗಮದೇವಾ./881
ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,
`ಅಯ್ಯಾ ಎಂದಡೆ ಸ್ವರ್ಗ, `ಎಲವೊ ಎಂದಡೆ ನರಕ.
ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ
ಕೈಲಾಸವೈದುವುದೆ ಕೂಡಲಸಂಗಮದೇವಾ./882
ಪುಣ್ಯಪಾಪವೆಂಬ ಉಭಯಕರ್ಮವನಾರು ಬಲ್ಲರಯ್ಯಾ
ಇವನಾರುಂಬರು
ಕಾಯ ತಾನುಂಬಡೆ ಕಾಯ ತಾ ಮಣ್ಣು,
ಜೀವ ತಾನುಂಬಡೆ ಜೀವ ತಾ ಬಯಲು,
ಈ ಉಭಯನಿರ್ಣಯವ ಕೂಡಲಸಂಗಮದೇವಾ,
ನಿಮ್ಮ ಶರಣ ಬಲ್ಲ./883
ಪುಣ್ಯವೆಂದರಿಯೆ, ಪಾಪವೆಂದರಿಯೆ,
ಸ್ವರ್ಗವೆಂದರಿಯೆ ನರಕವೆಂದರಿಯೆ,
ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ,
ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ./884
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
ಮಾಟವುಳ್ಳನ್ನಬರ ಜಂಗಮವ ಹಾಡಿದೆ,
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ.
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ,
ಕೂಡಲಸಂಗಮದೇವಾ. /885
ಪೂರ್ವಜನ್ಮನಿವೃತ್ತಿಯಾಗಿ ಗುರುಕರುಣವಿಡಿದಂಗೆ
ಬಂಧನವೆಲ್ಲಿಯದೊ
ಭವಬಂಧನವೆಲ್ಲಿಯದೊ
ಸಂಕಲ್ಪ-ವಿಕಲ್ಪವೆಂಬ ಸಂದೇಹ ಕಳೆದುಳಿದಂಗೆ
ಕೂಡಲಸಂಗಮದೇವರ ತ್ರಿಸಂಧ್ಯಾಕಾಲದಲ್ಲಿ ಮಾಣದೆ ನೆನೆವಂಗೆ ! /886
ಪೂರ್ವಬೀಜ ವಾಯುಪ್ರಾಣಿಯಲ್ಲ,
ಲಿಂಗಪ್ರಾಣಿಯಾ ಶರಣನು.
ಏಕೋಗ್ರಾಹಿ ಭಾವಭೇದವಿಲ್ಲವಾಗಿ
ಮನಃಪ್ರವೇಶಿಯಾ ಶರಣನು.
ನಿಮ್ಮುವ ಪೂಜಿಸಿ ತನುಧರ್ಮವ ಮರೆದು
ನಿಮ್ಮ ಪ್ರತಿಬಿಂಬದಂತಿಪ್ಪ
ಕೂಡಲಸಂಗಮದೇವಾ, ನಿಮ್ಮ ಶರಣನು. /887
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ನಿರಂಜನದೇವಾ,
ನಿಮ್ಮ ಮಹಿಮೆಯ ಪ್ರಣವಸ್ವರೂಪಂಗಲ್ಲದೆ
ಕಾಣಲಾರಿಗೆಯೂ ಬಾರದಯ್ಯಾ.
ಜ್ಞಾನಜ್ಯೋತಿಧ್ಯಾನದಿಂದ ನಾಳಶುದ್ಧದ್ವಾರವಾಗಿ
ಆರಾಧಿಸಿ ಕಂಡೆ, ನಮ್ಮ ಕೂಡಲಸಂಗಮದೇವನ. /888
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ
ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು.
`ಪ್ರಣವ ಓಂ ನಮಃ ಶಿವಾಯ’ ಪ್ರಣವ ಓಂ ನಮಃ ಶಿವಾಯ,
ಪ್ರಣವ ಓಂ ನಮಃ ಶಿವಾಯ’ ಎಂದುವು ಶ್ರುತಿಗಳೆಲ್ಲಾ.
`ಪ್ರಣವ ಓಂ ಭಗರ್ೋ ದೇವ’ ಎಂದುವು ಶ್ರುತಿಗಳೆಲ್ಲಾ.
ಕೂಡಲಸಂಗಯ್ಯನನರಿಯದ ದ್ವಿಜರೆಲ್ಲಾ ಭ್ರಮಿತರು. /889
ಪ್ರಣವಾರೂಢನು, ಪ್ರಣವಪ್ರಕೃತಿಸಂಜ್ಞನು,
ಪ್ರಣವಸಂಗಸಮರಸ,
ನಮ್ಮ ಕೂಡಲಸಂಗಮದೇವರು. /890
ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯನು
ಏನೆಂದುಪಮಿಸುವೆನು
ಏನೆಂದು ಸ್ತುತಿಸುವೆನಯ್ಯಾ,
ಮಹಾಪ್ರಸಾದಿಗೆ ಮಹಾಘನಪ್ರಸಾದವಾದ ಪ್ರಸಾದಿಯನು
ಅಗಮ್ಯಪ್ರಸಾದದಲ್ಲಿ ಸ್ವಾಯತವಾದ
ಕೂಡಲಸಂಗಮದೇವಾ,
ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು./891
ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ,
ಲಿಂಗವಿರಹಿತನಾಗಿ ನಡೆವ ಪರಿಯೆಂತೊ
ಲಿಂಗವಿರಹಿತನಾಗಿ ನುಡಿವ ಪರಿಯೆಂತೊ
ಪಂಚೇಂದ್ರಿಯ ಸುಖವನು ಲಿಂಗವಿರಹಿತನಾಗಿ ಭುಂಜಿಸಲಾಗದು,
ಲಿಂಗವಿರಹಿತವಾಗಿ ಉಗುಳ ನುಂಗಲಾಗದು,
ಇಂತೆಂದುದು ಕೂಡಲಸಂಗನ ವಚನ./892
ಪ್ರಾಣಲಿಂಗ ಪ್ರವೇಶಿತನಾಗಿ ಪ್ರಸಾದದಲ್ಲಿ ಸನ್ನಹಿತನಯ್ಯಾ,
ಲಿಂಗಾರ್ಪಿತವಲ್ಲದೆ ಅನರ್ಪಿತವ ಮುಟ್ಟಲೀಯನಯ್ಯಾ,
ಅಂಗಗುಣಂಗಳೆಲ್ಲವನತಿಗಳೆದು ಪ್ರಸಾದದಲ್ಲಿ
ಬ್ರಹ್ಮಚಾರಿಯಾದನು ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು./893
ಫಲವ ಸಲಿಸುವನ್ನಬರ ಬಿತ್ತು ಸಿಪ್ಪೆ ಉಭಯವು ಇರಬೇಕು.
ಸಾರವ ಸಲಿಸಿದಲ್ಲಿ ಸಮಯ ಉಳಿಯಿತ್ತು.
ನಮ್ಮ ಕೂಡಲಸಂಗಮದೇವರಲ್ಲಿ
ಹಾಗರಿಯಬೇಕು, ಎಲೆ ಘಟ್ಟಿವಾಳಯ್ಯಗಳೆ./894
ಬಂಜೆ ಬೇನೆಯನರಿಯದಂತೆ
ಒಬ್ಬರೊಂದ ನುಡಿವಿರಿ, ಕೇಳಿರಯ್ಯಾ.
ಎನಗೆ ಆಯುಷ್ಯ ಭವಿಷ್ಯ, ಎನ್ನ ಭಕ್ತರು.
ಎನಗೆ ಆಯುಷ್ಯ ಭವಿಷ್ಯ, ಎನ್ನ ಪ್ರಮಥರು ಕಂಡಯ್ಯಾ.
ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ./895
ಬಂಡಿ ತುಂಬ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಿ.
ತಾಪತ್ರಯವ ಕಳೆದು ಪೂಜಿಸಿ, ತಾಪತ್ರಯವ ಲಿಂಗನೊಲ್ಲ.
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ/896
ಬಂದ ಯೋನಿಯನರಿದು ಸಲಹೆನ್ನ ತಂದೆ.
ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು,
ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು,
ಎನ್ನ ತಂದೆ ಕೂಡಲಸಂಗಮದೇವಾ, ಮಾಣಿಸು ನಿಮ್ಮ ಧರ್ಮ./897
ಬಂದು ಬಲ್ಲಹ ಬಿಡಲು ಹೊಲೆಗೇರಿ ಎಂಬ ಹೆಸರೊಳವೆ ಅಯ್ಯಾ
ಲಿಂಗವಿದ್ದವರ ಮನೆ ಕೈಲಾಸವೆಂದು ನಂಬಬೇಕು,
ಚಾಂಡಾಲವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋ ಯದಿ
ತತ್ಶ್ರೇಣಿಃ ಶಿವಲೋಕಸ್ಯ ತದ್ ಗೃಹಂ ಶಿವಮಂದಿರಮ್ ಎಂದುದಾಗಿ,
ಲೋಕದ ಡಂಬಕರ ಮಾತು ಬೇಡ,
ಕೂಡಲಸಂಗನಿದ್ದುದೇ ಕೈಲಾಸ. /898
ಬಂದುದ ಕೈಕೊಳ್ಳಬಲ್ಲಡೆ ನೇಮ,
ಇದ್ದುದ ವಂಚನೆಯ ಮಾಡದಿದ್ದಡೆ ನೇಮ.
ನಡೆದು ತಪ್ಪದಿದ್ದಡೆ ಅದು ನೇಮ,
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದಡೆ
ಒಡೆಯರಿಗೊಡವೆಯನೊಪ್ಪಿಸುವುದೆ ನೇಮ./899
ಬಂದೆಹೆನೆಂದು ಬಾರದೆ ಇದ್ದಡೆ, ಬಟ್ಟೆಗಳ ನೋಡುತ್ತಿದ್ದೇನಯ್ಯಾ.
ಇನ್ನಾರನಟ್ಟುವೆ, ಇನ್ನಾರನಟ್ಟುವೆ, ಇನ್ನಾರ ಪಾದವ ಹಿಡಿವೆನಯ್ಯಾ
ಕೂಡಲಸಂಗನ ಶರಣರು ಬಾರದಿದ್ದಡೆ
ಅಟ್ಟುವೆನೆನ್ನ ಪ್ರಾಣವನು./900
ಬಚ್ಚಲ ನೀರು ತಿಳಿದಡೇನು
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು
ಆಕಾಶದ ಮಾವಿನ ಫಲವೆಂದಡೇನು
ಕೊಯ್ಯಲಿಲ್ಲ, ಮೆಲ್ಲಲಿಲ್ಲ.
ಕೂಡಲಸಂಗನ ಶರಣರ ಅನುಭಾವವಿಲ್ಲದವ
ಎಲ್ಲಿದ್ದಡೇನು, ಎಂತಾದಡೇನು/901
ಬಟ್ಟಬಯಲಲ್ಲಿ ಒಂದು ತಲೆಯಿಲ್ಲದ ಆನೆಯಿದ್ದಿತ್ತು,
ಆನೆ ಬಂದು ಆನೆಯ ನುಂಗಿ ತಾನೆ ಅಳಿಯಿತ್ತು,
ಅಂತರವಿಲ್ಲದ ಒಳಗು, ಅವಲಂಬನವಿಲ್ಲದ ಹೊರಗು ನೋಡಾ.
ದಳವಿಲ್ಲದ ಕುಸುಮದ ಗದ್ದುಗೆಯಲ್ಲಿ ಒಡಲಿಲ್ಲದ ಘನವು ಮೂರ್ತಿಗೊಂಡು,
ವಿಚಿತ್ರವಾಯಿತ್ತು ಜಗವೆಲ್ಲ.
ಕೂಡಲಸಂಗಮದೇವರ ಶರಣ ಪ್ರಭುದೇವರ ಶ್ರೀಪಾದಕ್ಕೆ
ಆನು ನಮೋ ನಮೋ ಎಂಬೆನು./902
ಬಡಗವಾಗಿಲ ಪಾಳಿಯ ಭರವಸದಿಂ ಪೊಕ್ಕು,
ಪಶ್ಚಿಮದ್ವಾರದ ಧವಳಾರಮಂ ಪಶ್ಚಿಮದಿ ಪೊಕ್ಕು,
ತ್ರಿವಿಧಗತಿಯ ಶೂನ್ಯಸಿಂಹಾಸನದ ಮೇಲೆ ತರಹರವಾದಡೆ
ನಂಬುವುದೆನ್ನ ಮನವು.
ಕೂಡಲಸಂಗಮದೇವರು ಸಾಕ್ಷಿಯಾಗಿ,
ನೀನು ನಮ್ಮ ಕೋಪಿಸಿದಡೆ ಕೋಪಿಸು, ಚೆನ್ನಬಸವಣ್ಣಾ./903
ಬಡಪಶು ಪಂಕದಲ್ಲಿ ಬಿದ್ದಡೆ
ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ
ಶಿವ ಶಿವ ಹೋದೆಹೆ, ಹೋದೆಹೆನಯ್ಯಾ.
ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ.
ಪಶುವಾನು, ಪಶುಪತಿ ನೀನು,
ತುಡುಗುಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ
ಒಡೆಯಾ ನಿಮ್ಮ ಬಯ್ಯದಂತೆ ಮಾಡು,
ಕೂಡಲಸಂಗಮದೇವಾ./904
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ !
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ !
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ !
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ !
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ./905
ಬಣ್ಣವನಿಟ್ಟು ಮೆರೆವ ಅಣ್ಣನ ಭಕ್ತಿ
ಸುಣ್ಣದ ಕಲ್ಲ ಕಟ್ಟಿ ಮಡುವ ಬಿದ್ದಂತೆ ಆಯಿತ್ತು.
ತನ್ನ [ಬಣ್ಣ ತನ್ನ ಸು]ಡುವುದು,
ತನ್ನ ಸುಡದ ಹಾಗೆ ನೆನೆಯಾ, ಕೂಡಲಸಂಗಮದೇವನ./906
ಬತ್ತೀಸಾಯುಧದಲಿ ಅಭ್ಯಾಸವ ಮಾಡಿದಡೇನು
ಹಗೆಯ ಕೊಲುವಡೆ, ಒಂದಲಗು ಸಾಲದೆ
ಲಿಂಗವ ಗೆಲುವಡೆ, `ಶರಣಸತಿ ಲಿಂಗವತಿಯೆಂಬಲಗು ಸಾಲದೆ
ಎನಗೆ ನಿನಗೆ ಜಂಗಮಪ್ರಸಾದವೆಂಬ ಅಲಗು ಸಾಲದೆ
ಕೂಡಲಸಂಗಮದೇವಾ./907
ಬನ್ನಿರೇ ಅಕ್ಕಗಳು, ಹೋಗಿರೇ ಆಲದ ಮರಕ್ಕೆ.
ಕಚ್ಚುವುದೇ ನಿಮ್ಮ, ಚಿಪ್ಪಿನ ಹಲ್ಲುಗಳು.
ಬೆಚ್ಚಿಸುವುವೇ ನಿಮ್ಮ, ಬಚ್ಚಣಿಯ ರೂಹುಗಳು.
ನಮ್ಮ ಕೂಡಲಸಂಗಮದೇವನಲ್ಲದೆ
ಪರದೈವಂಗಳು ಮನಕ್ಕೆ ಬಂದವೆ
ಬಿಕ್ಕನೆ ಬಿರಿವ ದೈವಂಗಳು. /908
ಬಯಲ ರೂಪ ಮಾಡಬಲ್ಲಾತನೆ ಶರಣನು,
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ /909
ಬರಬರ ಭಕ್ತಿ ಅರೆಯಾುತ್ತು ಕಾಣಿರಣ್ಣಾ :
ಮೊದಲದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ,
ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದಡೆ ಕಡೆಗೆ ಚಾಚುವ,
ಅಲ್ಲದಿದ್ದಡೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ./910
ಬಲಿಯ ಭೂಮಿ, ಕರ್ಣನ ಕವಚ, ಖಚರನ ಆಸ್ಥಿ,
ಶಿಬಿಯ ಮಾಂಸ ವೃಥಾ ಹೋುತ್ತಲ್ಲಾ,
ಶಿವಭಕ್ತಿಮತಿಕ್ರಮ್ಯ ಯದ್ದಾನಂ ಚ ವಿಧೀಯತೇ
ನಿಷ್ಫಲಂ ತು ಭವೇದ್ದಾನಂ ರೌರವಂ ನರಕಂ ವ್ರಜೇತ್
ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ
ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋುತ್ತಲ್ಲಾ./911
ಬಲೆಗೆ ಸಿಲ್ಕಿದ ಮೃಗದಂತೆ ನಾನಯ್ಯಾ,
ಮರಿದಪ್ಪಿದ ಹುಲ್ಲೆಯಂತೆ ದೆಸೆದೆಸೆಗೆ ಬಾಯಿಬಿಡುತ್ತಿದ್ದೇನೆ.
ನಾನಾರ ಸಾರುವೆನಯ್ಯಾ, ತಾಯಾಗಿ ತಂದೆಯಾಗಿ ನೀನೇ,
ಸಕಲ ಬಂಧುಬಳಗ ನೀನೇ ಕೂಡಲಸಂಗಮದೇವಾ./912
ಬಲ್ಲಿದರೊಡನೆ ಬವರವಾದಡೆ ಗೆಲಲುಂಟು, ಸೋಲಲುಂಟು,
ಕ[ಳ]ನೊಳಗೆ ಭಾಷೆ ಪೂರಾಯವಯ್ಯಾ.
ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ
ಧನ ಸವೆದು ಬಡವನಾದಡೆ
ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು./913
ಬಸವ ಬಾರೈ, ಮತ್ರ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯಾ
“ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ.
ನಾನೊಬ್ಬನೆ ಭಕ್ತನು,
ಮತ್ರ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ,
ಲಿಂಗ ನೀನೇ ಅಯ್ಯಾ ಕೂಡಲಸಂಗಮದೇವಾ./914
ಬಸವನಿದ್ದಂತೆ ಊರ ಪಶುವನೊಯಿವರೆ ಸಂಗಯ್ಯಾ
ಕಗ್ಗಾಯಿಯಿದ್ದಂತೆ ಹೂಮಿಡಿಯನೊಯಿವರೆ ಸಂಗಯ್ಯಾ
ನಾನಿದ್ದಂತೆ ನನ್ನ ಶಿಶು ಸಂಗಯ್ಯನನೊಯಿವರೆ
ಕೂಡಲಸಂಗಯ್ಯಾ /915
ಬಸುರ ಬಾಳುವೆಗೆ, ನಿಮ್ಮಲ್ಲಿ ಮಸಿಯ ಹೂಸಿ ನೇರಿಲಹಣ್ಣ ಮಾರುವಂತೆ,
ಕಾಲ ಸಾಲ ದಾರಿದ್ರ್ಯಕ್ಕಂಜಿ
ನಿಮ್ಮ ಮರೆಹೊಕ್ಕೆನಯ್ಯಾ.
ಆವುದ ಹುಸಿಯೆಂಬೆ ಆವುದ ಕಿರಿದೆಂಬೆ
ಇದ ನೀನೆ ಬಲ್ಲೆಯಯ್ಯಾ,
ಕೂಡಲಸಂಗಮದೇವಾ, ನಾನು ಉದರಪೋಷಕನಯ್ಯಾ./916
ಬಸುರೆ ಬಾಯಾಗಿ, ಬಾಯಿ ಬಸುರಾಗಿಪ್ಪುದ ತೊಡೆದ,
ಕಣ್ಣೆ ತಲೆಯಾಗಿ, ತಲೆಯೆ ಕಣ್ಣಾಗಿರಿಸಿದ,
ಕಾಲೆ ಕೈಯಾಗಿ, ಕೈಯೆ ಕಾಲಾಗಿ ನಡೆಸಿದ,
ನೆಳಲನುಟ್ಟು ಸೀರೆಯನೆನಗೆ ಉಡುಗೊರೆಯ ಕೊಟ್ಟನು,
ಮಥನವಿಲ್ಲದ ಸಂಗಸುಖವನೆನಗೆ ತೋರಿದನು.
ಕೂಡಲಸಂಗಮದೇವಾ,
ಪ್ರಭುವಿನ ಶ್ರೀಪಾದಕ್ಕೆ ಶರಣೆನುತ್ತಿರ್ದೆನು./917
ಬಾಗಿಲ ಮುಂದೆ ಬಾಳೆ ಬಿತ್ತುವುದಯ್ಯಾ.
ಬಾಳೆಗೊನೆವಾಗದ ಮುನ್ನ
ಕೂಡಿಕೊಳ್ಳಿ ಕೂಡಲಸಂಗಮದೇವನ./918
ಬಾಣ ಮಯೂರನಂತೆ ಬಣ್ಣಿಸಬಲ್ಲೆನೆ
ಸಿರಿಯಾಳನಂತೆ ಊಣಲಿಕ್ಕಬಲ್ಲೆನೆ
ದಾಸಿಮಯ್ಯನಂತೆ ಉಡಕೊಡಬಲ್ಲೆನೆ
ಉಂಡು ಉಟ್ಟು, ಕೊಟ್ಟಡೆ ಮು್ಯುಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟಡೆ ಧರ್ಮವೆನಿಸಿತ್ತು,
ಕೂಡಲಸಂಗಮದೇವಾ./919
ಬಾರದು ಬಾರದು, ಭಕ್ತಂಗೆ ಪರಧನ ಪರಸತಿ,
ಬಾರದು ಬಾರದು, ವಿಷಯಿಗೆ ಪಶುಪತಿಬ್ರತವು,
ಬಾರದು ಬಾರದು, ಭವಭಾರಿಗೆ
ಕೂಡಲಸಂಗಮದೇವನ ಒಕ್ಕುದ ಕೊಳಬಾರದು./920
ಬಾಲಾಭ್ಯಾಸವ ಮಾಡಹೋದಡೆ ಎನ್ನ ಸುರಗಿ ಎನ್ನ ನಟ್ಟಿತು,
ಎಂತಯ್ಯಾ ಕಲಿಯೊಡನೆ ಶ್ರವವ ಮಾಡುವೆನು
ರಾಯ ರಾಜಗುರು ಜಗದ ಬಿನ್ನಾಣಿಯ ತೊಡಕ ಬಿಡಿಸಬಾರದು.
ಸರಸದ ಮೇಲೆ ಹಿಡಿಯ ಹೋದಡೆ
ಚದುರಂಗದ ಮೇಲೆ ಮಸಿಯ ತೋರಿದ ಕೂಡಲಸಂಗಮದೇವ. /921
ಬಾಳತ್ವಕ್ಕೆಂದು ಮಧುವ ತಂದು
ಕೊಡನ ತುಂಬಿದ ಜೇನಹುಳುವಿನಂತೆ ತಾನುಂಬುದು,
ತನ್ನೆಂಜಲ ಜಗವುಂಬುದು ನೋಡಯ್ಯಾ.
ಶಿವಭಕ್ತನಾಗಿ ಶಿವಾನ್ನವನೆ ಕೊಂಡು,
ಒಕ್ಕಮಿಕ್ಕ ವಸ್ತುವ ಜಂಗಮಕ್ಕಿಕ್ಕುವಾತನೆ ಭಕ್ತ,
ಕೊಂಡಾತನೆ ಜಂಗಮ.
ನಡುವೆ ನೀ ಬಂದು ಭಂಡು ಮಾಡದಿರೈ
ಕೂಡಲಸಂಗಮದೇವಾ./922
ಬಿಡದೆ ಬಾಗಿಲ ಎಂಜಲ ಕಾ್ದುಪ್ಪೆನು, ಕಿಂಕರನು.
ಕಿಂಕರರ ಮನೆಯಲ್ಲಿ ಕಿಂಕಿಲವನು ಆನು ಹಾರುತ್ತಿಪ್ಪೆನು,
ನಮ್ಮ ಕೂಡಲಸಂಗನ ಶರಣರ
ಒಕ್ಕುದ ಮಿಕ್ಕುದನುಂಬ ಕಿಂಕರ ನಾನು./923
ಬಿತ್ತದೆ ಬೆಳೆಯದೆ ಬೆಳೆದ ಹೆಬ್ಬೆಳಸಿನ ರಾಶಿಯ ನೋಡಾ,
ಸುಗಂಧ ಬಂಧುರದಂತೆ ಹುಟ್ಟುತ್ತವೆ ಪರಿಮಳ !
ಆದಿ ಅನಾದಿಯಿಲ್ಲದ ಮುನ್ನ ತನ್ನಿಂದವೆ ತಾನಾಗಿರ್ದ ಕಾರಣ
ಮುಟ್ಟದೆ ತಟ್ಟದೆ ಗುರುಕಾರುಣ್ಯವ ಪಡೆದು, ಲಿಂಗ ಸಯವಾಗಿ,
ಎನಗೆ ಗತಿಪಥವ ತೋರಿಸಬೇಕೆಂದು ಆಗಾದನು,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು./924
ಬಿತ್ತಿಯಿಲ್ಲದ ಚಿತ್ತಾರದಂತೆ
ಭಕ್ತಿಯಿಲ್ಲದ ಪ್ರಮಥನಾಗಿದ್ದೆನಯ್ಯಾ
ಸತ್ಯವಿಲ್ಲದ ಶರಣನಾಗಿದ್ದೆನಯ್ಯಾ
ಗೆರೆಯಿಲ್ಲದ ಕೋಲಲ್ಲಿ ಉದ್ದರೆಯನಿಕ್ಕಿದ
ಭಂಡದ ಹರದನಂತಾದೆನಯ್ಯಾ ಕೂಡಲಸಂಗಮದೇವಾ./925
ಬಿತ್ತಿುಲ್ಲದೆ ಬರೆಯಬಹುದೆ ಚಿತ್ತಾರವ
ಬಿತ್ತಿ ಬೆಳೆಯಬಹುದೆ ಧರೆುಲ್ಲದೆ
ಜಂಗಮವಿಲ್ಲದೆ ಲಿಂಗಾರ್ಚನೆಯ ಮಾಡಬಹುದೆ
ರೂಢೀಶ್ವರನ ಭೇದಿಸಬಹುದೆ ! ಒಡಲಿಲ್ಲ[ದೆ].
ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖವಾದನಾಗಿ ಮತ್ತೊಂದನರಿಯೆನಯ್ಯಾ./926
ಬಿತ್ತು ಬೆಳೆಯಿತ್ತು, ಕೆಯ್ಯ ಕೊಯ್ಯಿತ್ತು, ಗೂಡು ಮುರಿಯಿತ್ತು,
ಕುತ್ತುರಿಯೊಟ್ಟಿತ್ತು, ಒಕ್ಕಿತ್ತು ತೂರಿತ್ತು ಅಳೆಯಿತ್ತು, ಸಲಗೆ ತುಂಬಿತ್ತು.
ಕೂಡಲಸಂಗಮದೇವಯ್ಯಾಮೇಟಿ ಕಿತ್ತಿತ್ತು, ಕಣ ಹಾಳಾಯಿತ್ತಯ್ಯಾ./927
ಬಿದಿರಲಂದಣವಕ್ಕು, ಬಿದಿರೆ ಸತ್ತಿಗೆಯಕ್ಕು,
ಬಿದಿರಲ್ಲಿ ಗುಡಿಯು ಗೂಡಾರವಕ್ಕು,
ಬಿದಿರಲ್ಲಿ ಸಕಲಸಂಪದವೆಲ್ಲವು,
ಬಿದಿರದವರ ಮೆಚ್ಚ ಕೂಡಲಸಂಗಮದೇವ./928
ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ,
ರಸವ ಹಡೆಯಲು ಬಾರದು,
ಮಳಲ ಹೊಸೆದಡೆ ಹೊಸೆದಂತಲ್ಲದೆ,
ಸರವಿಯ ಹಡೆಯಲುಬಾರದು.
ನೀರ ಕಡೆದಡೆ ಕಡೆದಂತಲ್ಲದೆ,
ಬೆಣ್ಣೆಯ ಹಡೆಯಲುಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯದೈವಕ್ಕೆರಗಿದಡೆ
ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಆಯಿತ್ತಯ್ಯಾ./929
ಬಿಳಿಯ ಕರಿಕೆ, ಕಣಿಗಿಲೆಲೆಯ,
ತೊರೆಯ ತಡಿಯ ಮಳಲ ತಂದು,
ಗೌರಿಯ ನೋನುವ ಬನ್ನಿರೆ.
ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು
ಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು.
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
ಪಾತಕ ಶತಕೋಟಿಯನೊರಸಲು
ಸಾಲದೆ ಒಂದು ಶಿವನ ನಾಮ
ಸಾಲದೆ ಒಂದು ಹರನ ನಾಮ
ಕೂಡಲಸಂಗಮದೇವಾ
ನಿಮ್ಮ ಉಂಡಿಗೆಯ ಪಶುವ ಮಾಡಿದೆಯಾಗಿ.
ನಾನೊಂದ ನೆನೆದಡೆ ತಾನೊಂದ ನೆನೆವುದು,
ನಾನಿತ್ತಲೆಳೆದಡೆ ತಾನತ್ತಲೆಳೆವುದು.
ತಾ ಬೇರೆ ಎನ್ನನಳಲಿಸಿ ಕಾಡಿತ್ತು,
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು.
ಕೂಡಲಸಂಗನ ಕೂಡಿಹೆನೆಂದಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ./930
ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ,
ಪಾಪದ ಬಲೆಯ ತಂದು ಮುಂದೆ ಒಡ್ಡಿದಿರಯ್ಯಾ,
ಬೇಟೆಗಾರನು ಮೃಗವನಟ್ಟಿ ಬರಲು ಮೃಗವು ಗೋರಿಗೊಳಗಾಗದಯ್ಯಾ.
ಹರನೊಡ್ಡಿದ ಬಲೆಯಲ್ಲಿ ಸಿಲುಕಿದ ಮೃಗವು
ಕೂಡಲಸಂಗಮದೇವಂಗೆ ಓಗರವಾಯಿತ್ತು./931
ಬೆಟ್ಟದ ಕಲ್ಲು ಸೋರೆಯ ಕೂಡೆ ಆಡಿದಂತಾಯಿತ್ತಯ್ಯ,
ಜಾತಿಯಲ್ಲದ ಜಾತಿಯ ಕೂಡಿ
ಅದರ ಪರಿಯಂತೆ,
ಸಂಗವಲ್ಲದ ಸಂಗವ ಮಾಡಿದಡೆ ಭಂಗತಪ್ಪದು, ಕೂಡಲಸಂಗಮದೇವಾ./932
ಬೆದಕದಿರು ಬೆದಕದಿರು, ಬೆದಕಿದಡೆ ಹುರುಳಿಲ್ಲ,
ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಯ್ಯಾ
ನಿಮ್ಮ ಉತ್ತಮಿಕೆಯ ಪೂರೈಸುವುದು
ಕೂಡಲಸಂಗಮದೇವಾ./933
ಬೆದರಿಸುವ, ಬೆಚ್ಚಿಸುವ, ಮುಯ್ಯಾನುವ,
ಮೇಳವಾಡುವ, ಆಳಿಗೊಳಿಸುವ,
ಆಳಲಿ ನುಡಿಸುವ, ಬಳಲಿಸುವನೊತ್ತಿ ನೋಡುವ,
ಒಳಹೊರಗೆ ಹೊಳದು ಹೋಹ, ಕೇಳದೆ ಬಹ,
ಬೇಳು ಮಾಡುವನಾಳವಾಡುವ, ಹೊಳೆದು ಹೋಹ,
ನಾ ಇದಕ್ಕಂಜೆ ಕೂಡಲಸಂಗಮದೇವಾ./934
ಬೆಲ್ಲವ ತಿಂದ ಕೋಡಗದಂತೆ ಸಿಹಿಯ ನೆನೆಯದಿರಾ, ಮನವೆ,
ಕಬ್ಬ ತಿಂದ ನರಿಯಂತೆ ಹಿಂದಕ್ಕೆಳಸದಿರಾ, ಮನವೆ.
ಗಗನವನಡರಿದ ಕಾಗೆಯಂತೆ ದೆಸೆದಸೆಗೆ ಹಂಬಲಿಸದಿರಾ, ಮನವೆ.
ಕೂಡಲಸಂಗನ ಶರಣರ ಕಂಡು ಲಿಂಗವೆಂದೆ ನಂಬು, ಮನವೆ./935
ಬೆಳಗಿನೊಳಗಣ ಬೆಳಗು ಮಹಾಬೆಳಗು !
ಶಿವ ಶಿವಾ ! ಪರಮಾಶ್ರಯವೆ ತಾನಾಗಿ
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಃಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ. /936
ಬೆಳಗಿನೊಳಗಣ ಬೆಳಗು ಮಹಾಬೆಳಗೆಂಬ
ಪ್ರಸಾದದಲ್ಲಿ ಒದಗಿದ ಪ್ರಸಾದಿಯ ಪರಿಣಾಮದ
ಪರಮಾನಂದವನೇನೆಂದುಪಮಿಸುವೆನಯ್ಯಾ
ಪರಮಾಶ್ರಯವೇ ತಾನಾಗಿ, ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನೆಂಬ ಮಹಾಪ್ರಸಾದಿ
ಎನ್ನ ವಾಙ್ಮನಕ್ಕಗೋಚರನಾ[ಗೆ], ನಾನೇನೆಂಬೆನಯ್ಯಾ./937
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ./938
ಬೇಡದಿರು ಶಿವಭಕ್ತರಲ್ಲದವರ, ಬೇಡಿ ಬೋಡಾಗದಿರು,
ಬೇಡಿದಡೆ ಹುರುಳಿಲ್ಲ.
ಬೇಡಿದ ಕೈಗೆ ಕಡೆಯಿಲ್ಲದೆ ಕೊಡಬಲ್ಲರು
ಕೂಡಲಸಂಗನ ಶರಣರು./939
ಬೇರೂರಲಿದ್ದು ಬಂದ ಜಂಗಮವೆ ಲಿಂಗವೆಂದು,
ಮನೆಯಲಿದ್ದ ಜಂಗಮವನುದಾಸೀನವ ಮಾಡಿದಡೆ
ನಾನು ಬೆಂದೆನಯ್ಯಾ.
ಆನು ಬೆಂದ ಬೇಗೆಯನರಿಯೆ, ಕಾಣಾ
ಕೂಡಲಸಂಗಮದೇವಾ./940
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ. /941
ಬ್ರಹ್ಮಂಗೆ ವಾಕ್ಪರುಷ, ವಿಷ್ಣುವಿಂಗೆ ನಯನಪರುಷ,
ರುದ್ರಂಗೆ ಹಸ್ತಪರುಷ,
ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ !/942
ಬ್ರಹ್ಮನೆಂದೆನ್ನೆ ಬ್ರಹ್ಮುಗನೆಂದೆನ್ನೆ, ನಾರಣನೆಂದೆನ್ನೆ ನಾರುಗನೆಂದೆನ್ನೆ
ಜಿನನೆಂದೆನ್ನೆ, ಜಿನುಗನೆಂದನ್ನೆ, ಭೈರವನೆಂದೆನ್ನೆ ಭೈರುಗನೆಂದೆನ್ನೆ.
ವೀರಭದ್ರ ಕೊಲುವಲ್ಲಿ, ವಿಷವಟ್ಟಿ ಸುಡುವಲ್ಲಿ
ಕೂಡಲಸಂಗಮದೇವಾ, ಶಿವಧೋ ಶಿವಧೋ./943
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲೆ.
ನಾನು ಮತ್ತಾವ ಪದವಿಯನೊಲ್ಲೆನಯ್ಯಾ.
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ./944
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು,
ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು-
ತಮ್ಮ ದೈವವ ಬಿಡುವುದಾವುದುಚಿತ
ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು
ಶಿವಭಕ್ತಿಯಿಂದ.
ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ !
ಮುಟ್ಟರೊಂದುವನು ಮೂವಿದಿಬಟ್ಟರೊ !
ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ.
ಹುಸಿದಜನ ಶಿರ ಹೋಯಿತ್ತಾದಿಯಲ್ಲಿ,
ಎಸವೋದ ಕಿರುಪಶುವನುಸರಲೀಯದೆ
ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ.
ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ,
ಕೇಳಿಯೂ ಏಕೆ ಮಾಣಿರೊ
ಮಮಕರ್ತ ಕೂಡಲಸಂಗನ ಶರಣರು ಅಕ್ಷಯರಧಿಕರು,
ವಿಪ್ರರು ಕೀಳು ಜಗವೆಲ್ಲರಿಯಲು ! /945
ಬ್ರಾಹ್ಮಣನೆ ದೈವನೆಂದು ನಂಬಿದ ಕಾರಣ
ಗೌತಮಮುನಿಗೆ ಗೋವೇಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ, ಭಕ್ತನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು. /946
ಭಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು.
ಲಿಂಗಸಂಬಂಧಿಯಾದಡೆ ಜಂಗಮಪ್ರೇಮಿ ನೀನಾಗು,
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ,
ಜಂಗಮದಲ್ಲಿ ನಿರುತ ಭರಿತ, ಕೂಡಲಸಂಗಮದೇವ./947
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು.
ಕಳ್ಳನಾಣ್ಯ ಸಲುಗೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯಾ.
ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ
ಕೂಡಲಸಂಗಮದೇವಾ./948
ಭಕುತಿರತಿಯ ವಿಕಳತೆಯ ಯುಕುತಿಯನೇನ ಬೆಸಗೊಂಬಿರಯ್ಯಾ!
ಕಾಮಿಗುಂಟೆ ಲಜ್ಜೆ ನಾಚಿಕೆ
ಕಾಮಿಗುಂಟೆ ಮಾನಾಪಮಾನವು
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯಾ/949
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು.
ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ./950
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು
ಮೆಲ್ಲ ಮೆಲ್ಲನೆ ಆದೆಹೆನೆಂಬನ್ನಬರ ನಾನು ವಜ್ರದೇಹಿಯೆ
ನಾನೇನು ಅಮೃತವ ಸೇವಿಸಿದೆನೆ
ಆನು ಮರುಜವಣಿಯ ಕೊಂಡೆನೆ
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ಎನ್ನ ಮನವನಿಂಬುಗೊಳ್ಳದಿದ್ದಡೆ,
ಸುಡುವೆನೀ ತನುವ ಕೂಡಲಸಂಗಮದೇವಾ./951
ಭಕ್ತದೇಹಿಕನಪ್ಪ ದೇವನು ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲಿಪ್ಪುದು ಗುಣವೇ ಹೇಳಾ.
ಕೂಡಲಸಂಗಮದೇವಾ,
ಜಂಗಮರೂಪಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ./952
ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ,
ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ.
ಭಕ್ತನಲ್ಲಿಯೂ ಭಕ್ತಜಂಗಮವೆರಡೂ ಸನ್ನಹಿತ,
ಜಂಗಮದಲ್ಲಿಯೂ ಜಂಗಮಭಕ್ತವೆರಡೂ ಸನ್ನಹಿತ,
ಜಂಗಮಕ್ಕಾದಡೂ ಭಕ್ತಿಯೆ ಬೇಕು,
ಭಕ್ತಂಗೆ ಭಕ್ತಿಸ್ಥಲವೆ ಬೇಕು.
ಭಕ್ತನ ಅರ್ಥಪ್ರಾಣಾಭಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ
ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು, ತನುಮನಧನಂಗಳೆಲ್ಲವನೊಳಕೊಂಡು,
ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ.
ಆ ಜಂಗಮದ ಗಳಗರ್ಜನೆಗೆ ಸೈರಿಸಿ,
ಮುಡುಹಿಂಗ ಮುನ್ನೂರು ಪಟ್ಟವ ಕಟ್ಟಿದಡೆ
ಆತ ಭಕ್ತನೆಂಬೆ.
ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ
ಕೂಡಲಸಂಗನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು
ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ./953
ಭಕ್ತನ ಮಠವೆಂದು ಜಂಗಮ ನಡೆದು ಬಂದಲ್ಲಿ,
ಆ ಭಕ್ತನು ಕಾಣುತ್ತ, ಆಸನ ತ್ಯಜತೆಯ ಮಾಡುತ್ತ,
ಕೊಂಕುತ್ತ, ಕೈಮುಗಿದು ನಿಂದಿರ್ದು, ಬಾಗಿ ಬಳುಕುತ್ತ, `
`ಬಿಜಯಂ ಮಾಡಿ, ದೇವಾ ಎಂದು ಕರೆದು, ಕುಳ್ಳಿರಿಸಿ,
ಪಾದಾರ್ಚನೆಯಂ ಮಾಡಿ, ಪಾದೋದಕಮಂ ಕೊಂಡು,
ವಿಭೂತಿ-ವೀಳೆಯಮಂ ಕೊಟ್ಟು,
ಕಂಗಳು ತುಂಬಿ ನಿರೀಕ್ಷಿಸಿ, ಶ್ರೋತ್ರ ತುಂಬಿ ಹಾರೈಸಿ,
ಬಾಯಿ ತುಂಬಿ ಮಾತಾಡಿ, `ಏಗೂದು ಏ ಬೆಸನೆಂದು
ತನು ಕರಗಿ ಮನ ಕರಗಿ ನೋಡಿ, ಮಾಡುವುದು ಭಕ್ತಿಸ್ಥಲ.
ಬಡವನಾಗಲಿ, ಬಲ್ಲಿದನಾಗಲಿ, ಇನಿತು ಮುಖ್ಯವಾಗಿ
ಮಾಡಿಸಿಕೊಂಬುದು ಜಂಗಮಸ್ಥಲ.
ಈ ಎರಡೊಂದಾದ ಘನವನಂತಿಂತೆಂದುಪಮಿಸಬಾರದಂತಿರಲಿ !
ಇನಿತಲ್ಲದೆ ಮಾಡಿದ ಮಾಟ ಭಕ್ತಿಸ್ಥಲಕ್ಕೆ ಸಲ್ಲದು,
ಫಲದಾಯಕ[ವೈ]ಸೆ !
ಇನಿತಲ್ಲದೆ ಮಾಡಿಸಿಕೊಂಬುದು ಜಂಗಮಸ್ಥಲಕ್ಕೆ ಸಲ್ಲದು,
ಉಪಜೀವಿತ[ವೈ]ಸೆ.
ಈ ಎರಡಕ್ಕೆಯೂ ಭವ ಹಿಂಗದು, ಕಾಣಾ,
ಕೂಡಲಸಂಗಮದೇವಾ. /954
ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು,
ಭಕ್ತದೇಹಿಕ ದೇವ ಅನಿಮಿಷನಾಗಿ !
ಕೂಡಲಸಂಗಮದೇವ
ಭಕ್ತನ ನುಡಿಯ ನಡುವೆ ರಾಶಿಯಾಗಿಪ್ಪನು./955
ಭಕ್ತನಾಗಿ ಲಿಂಗ ಜಂಗಮವ ಪೂಜಿಸಬೇಕು.
ಭಕ್ತನಾಗಿ ತನ್ನ ತಾ ಪೂಜಿಸಿಕೊಂಬುದು ಎಂತಯ್ಯಾ
ಸ್ವಾಮಿಭೃತ್ಯಸಂಬಂಧವು ಎಂತಯ್ಯಾ ಪೂರುಸುವುದು
ಕೂಡಲಸಂಗಮದೇವಾ, ಕಣ್ಣಕಟ್ಟಿ ಕನ್ನಡಿಯ ತೋರುವಂತೆ !/956
ಭಕ್ತನಾಯಿತ್ತೆ ಭಕ್ತಿದಾಸೋಹ, ಯುಕ್ತನಾಯಿತ್ತೆ ಯುಕ್ತಿದಾಸೋಹ,
ಐಕ್ಯನಾಯಿತ್ತೆ ಮಮಕಾರ ದಾಸೋಹ,
ಸರ್ವದಲೆ ದಾಸೋಹವೇ ಬೇಕು.
ಈ ದಾಸೋಹದ ಅನುವ ಕೂಡಲಸಂಗಯ್ಯ ತಾನೆ ಬಲ್ಲ. /957
ಭಕ್ತನೆಂತೆಂಬೆನಯ್ಯಾ ಭವಿಯ ಸಂಗ ಬಿಡದನ್ನಕ್ಕ
ಮಾಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ.
ಪ್ರಸಾದಿಯೆಂತೆಂಬೆನಯ್ಯಾ ಆಧಿವ್ಯಾದಿ ನಷ್ಟವಾಗದನ್ನಕ್ಕ.
ಪ್ರಾಣಲಿಂಗಿಯೆಂತೆಂಬೆನಯ್ಯಾ ಪ್ರಾಣ ಸ್ವಸ್ಥಿರವಾಗದನ್ನಕ್ಕ.
ಶರಣನೆಂತೆಂಬೆನಯ್ಯಾ ಪಂಚೇಂದ್ರಿಯ ನಾಶವಾಗದನ್ನಕ್ಕ.
ಐಕ್ಯನೆಂತೆಂಬೆನಯ್ಯಾ ಜನನ ಮರಣ ವಿರಹಿತವಾಗದನ್ನಕ್ಕ.
ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ,
ಅಘಟಿತಘಟಿತ ವರ್ತಮಾನದ ನಾನರಿಯೆನಯ್ಯಾ.
ನಿಮ್ಮ ಶರಣರ ತೊತ್ತು-ಭೃತ್ಯಾಚಾರವ ಮಾಡುವೆ
ಕೂಡಲಸಂಗಮದೇವಾ./958
ಭಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ,
ಯುಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ,
ಸಾರಿ ಶರಣನೆನಿಸುವೆನಯ್ಯಾ ಮೆಲ್ಲಮೆಲ್ಲನೆ,
ಎಡಹುಗುಳಿಗಳ ದಾಂಟಿ ಬರಬರ ಲಿಂಗೈಕ್ಯನೆನಿಸುವೆನಯ್ಯಾ.
ಕೂಡಲಸಂಗಮದೇವಾ, ನಿಮ್ಮಿಂದಧಿಕನೆನಿಸುವೆನಯ್ಯಾ./959
ಭಕ್ತರ ಕಂಡಡೆ ಬೋಳರಪ್ಪಿರಯ್ಯಾ,
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ,
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ,
ಅವರವರ ಕಂಡಡೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯಾ.
ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ./960
ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ,
ಭಕ್ತರಿಗಲ್ಲದೆ ಕೈಯಾನೆವೆಂಬಿರಿ,
ಇದೇನ ಮಾಡುವಿರಿ ಇದೆಲ್ಲಿಗೊಯ್ಯುವಿರಿ
ಪಾವನವಾದುದನು ಲಿಂಗಕ್ಕೆ ಮಾಡುವುದೆ ಆಚಾರ.
ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ
ಕೂಡಲಸಂಗನಶರಣರ ಒಡೆವೆಯ. /961
ಭಕ್ತರೇ ಸಮರ್ಥರು, ಅಸಮರ್ಥರೆಂದನಲುಂಟೆ
ಚೆನ್ನನೆತ್ತ, ಚೋಳನೆತ್ತ !
ಚೆನ್ನನೊಡನುಂಡ ಶಿವ ಆಹಾ ! ಅಯ್ಯಾ !
ಚೆನ್ನ, ಚೋಳನ ಮನೆಯ ಕಂಪಣಿಗನಯ್ಯಾ !
ಕೂಡಲಸಂಗಮದೇವ ಭಕ್ತಿಲಂಪಟನಯ್ಯಾ ! /962
ಭಕ್ತಿ ಎಂತಹದಯ್ಯಾ
ದಾಸಯ್ಯ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಸಿರಿಯಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ನಮ್ಮ ಬಲ್ಲಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಕೂಡಲಸಂಗಮದೇವಾ, ನೀ ಬಾಣನ ಬಾಗಿಲ ಕಾದಂತಹದಯ್ಯಾ. |/963
ಭಕ್ತಿ ಎಳ್ಳನಿತಿಲ್ಲ, ಯುಕ್ತಿಶೂನ್ಯನಯ್ಯಾ ನಾನು.
ತನುವಂಚಕ, ಮನವಂಚಕ, ಧನವಂಚಕ ನಾನಯ್ಯಾ.
ಕೂಡಲಸಂಗಮದೇವಾ, ಒಳಲೊಟ್ಟೆ ಎನ್ನ ಮಾತು./964
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ./965
ಭಕ್ತಿಯುಕ್ತಿಯನರಿಯೆ, ಷೋಡಶೋಪಚಾರವನರಿಯೆ,
ಭಾವನಿರ್ಭಾವವನರಿಯೆ, ಜ್ಞಾನಮಹಾಜ್ಞಾನವನರಿಯೆ,
ಕೂಡಲಸಂಗಮದೇವಯ್ಯಾ,
ಮಡಿವಾಳತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು./966
ಭಕ್ತಿಯೆಂಬ ನಿಧಾನವ ಸಾಧಿಸುವಡೆ
ಶಿವಪ್ರೇಮವೆಂಬ ಅನಂಜನವನೆಚ್ಚಿಕೊಂಬುದು,
ಭಕ್ತನಾದವಂಗೆ ಇದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ./967
ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು
ಎನ್ನ ಮನ ನಾಚಿತ್ತು, ನಾಚಿತ್ತು.
ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ,
ಆ ಪೃಥ್ವಿಗೆ ಲಯವುಂಟು, ಆ ಮೊರಡಿಗೆಯು ಲಯವುಂಟು,
ಅಲ್ಲಿರ್ಪ ಗಂಗೆವಾಳುಕಸಮರುದ್ರರಿಗೂ ಲಯವುಂಟು,
ಇದು ಕಾರಣ,
`ಯದ್ಧೃಷ್ಟಂ ತನ್ನಷ್ಟಂ’ ಎಂಬ ಶ್ರುತಿಯ ನೋಡಿ ತಿಳಿದು,
ಬಟ್ಟಬಯಲು ತುಟ್ಟತುದಿಯ ಮೆಟ್ಟಿನಿಂದ
ಕೂಡಲಸಂಗಾ, ನಿಮ್ಮ ಶರಣ. /968
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ./969
ಭಕ್ತಿಯೆಂಬುದ ಮಾಡಬಾರದು,
ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೆ
ಕೂಡಲಸಂಗಮದೇವಾ/970
ಭಕ್ತಿಯೆಂಬುದು ಅನಿಯಮ ನೋಡಯ್ಯಾ,
ಅದು ವಿಷದ ಕೊಡ; ತುಡುಕಬಾರದು,
ಅಂಗಕ್ಕೆ ಹಿತವಲ್ಲ, ಸಿಂಗಿ ನೋಡಯ್ಯಾ,
ಅದು ವಿಚಿತ್ರ, ವಿಸ್ಮಯ ಕೂಡಲಸಂಗಮದೇವಾ./971
ಭಕ್ತಿರತಿಯೆಂಬ ಮದುವೆಗೆ-
ಕಣಗಿಲೆಲೆಯ ಉಂಗುರವನಿಕ್ಕಿ,
ಮೊಲ್ಲೆಮಲ್ಲಿಗೆಯ ತೆರೆಯ ಕಟ್ಟಿ,
ಸೇವಂತಿಗೆಯ ಚಪ್ಪರವನಿಕ್ಕಿ,
ಪುಷ್ಪಜಾತಿಗಳೆಲ್ಲಾ ನಿಬ್ಬಣವ ಬನ್ನಿರೇ.
ನಮಗೆಯು ನಮ್ಮ ಕೂಡಲಸಂಗಮದೇವಂಗೆಯು ಮದುವೆ./972
ಭಕ್ತಿವಿಶೇಷವ ಮಾಡುವಡೆ ಹತ್ತು ಬೆರಳುಂಟು,
ಹಾಸಿ ದುಡಿವಡೆ ತನಗುಂಟು, ತನ್ನ ಪ್ರಮಥರಿಗುಂಟು.
ಮಾರಿತಂದೆಗಳಂತೆ ಎನಗೇಕಹುದಯ್ಯಾ
ರತ್ನದ ಸಂಕಲೆಯನಿಕ್ಕಿ ಕಾಡಿಹ ಕೂಡಲಸಂಗಮದೇವ,
ಶಿವಧೋ ಶಿವಧೋ !/973
ಭಕ್ತಿಹೀನನ ದಾಸೋಹವ ಸದ್ಭಕ್ತರು ಸವಿಯರು;
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ ಕೋಗಿಲೆಗೆ ಮೆಲಬಾರದು.
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು. /974
ಭಕ್ತಿುಲ್ಲದ ಬಡವ ನಾನಯ್ಯಾ:
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ,
ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಬಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ./975
ಭವಕ್ಕೆ ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ,
ಆಕಾರ ನಿರಾಕಾರನಲ್ಲ ನೋಡಯ್ಯಾ.
ಕಾಯವಂಚಕನಲ್ಲ, ಜೀವವಂಚಕನಲ್ಲ,
ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ.
ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ./976
ಭವಬಂಧನ ಭವಪಾಶವಾದ ಕಾರಣವೇನಯ್ಯಾ
ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ,
ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ.
ಅರಿದಡೀ ಸಂಸಾರವ ಹೊದ್ದಲೀವೆನೆ,
ಕೂಡಲಸಂಗಮದೇವಾ #
ಭವಬಂಧನ ದುರಿತಂಗಳ ಗೆಲುವಡೆ
ಓಂ ನಮಃ ಶಿವಶರಣೆಂದಡೆ ಸಾಲದೆ
ಹರ ಹರ ಶಂಕರ, ಶಿವ ಶಿವ ಶಂಕರ,
ಜಯ ಜಯ ಶಂಕರ ಶರಣೆನುತ್ತಿದ್ದೇನೆ.
ಎನ್ನ ಪಾತಕ ಪರಿಹರ,
ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ./977
ಭವಭವದಲ್ಲಿ ಎನ್ನ ಮನವು ಸಿಲುಕದೆ
ಭವಭವದಲ್ಲಿ ಎನ್ನ ಮನವು ಕಟ್ಟದೆ
ಭವಸಾಗರದಲ್ಲಿ ಮುಳುಗದೆ
ಭವರಾಟಳದೊಳು ತುಂಬದೆ ಕೆಡಹದೆ
ಭವವಿರಹಿತ ನೀನು, ಅವಧಾರು
ಕರುಣಿಸು ಕೂಡಲಸಂಗಮದೇವಾ./978
ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯಾ.
ಅವರುಂಡು ಮಿಕ್ಕುದ ಉಡುಗಿ,
ಒಕ್ಕಪ್ರಸಾದವನಾಯ್ದುಕೊಂಬ ಮರುಳ ನಾನಯ್ಯಾ.
ನಮ್ಮ ಕೂಡಲಸಂಗನ ಶರಣರ ರಿಣವ ನಾ ಹಿಂಗಲಾರೆ./979
ಭವಭವದಲ್ಲಿ ಭಕ್ತನಾದಡೆ ಆ ಭವವೆ ಲೇಸು ಕಂಡಯ್ಯಾ.
ಲಿಂಗಾರಾಧನೆ, ಜಂಗಮಾನುಭವ ಅಂದಂದಿಗೆ ಪರಮಸುಖವಯ್ಯಾ.
ಎಂದೆಂದೂ ನಾನಿದನೆ ಬಯಸುವೆ ತಂದೆ, ಕರುಣಿಸಯ್ಯಾ ಕೂಡಲಸಂಗಮದೇವಾ./980
ಭವರೋಗವೈದ್ಯನೆಂದು ನಂಬಿದೆ ನಾನು,
ಒಮ್ಮಿಂಗೆ ಕರುಣಿಸಯ್ಯಾ ಭಕ್ತಿಫಲಪ್ರದಾಯಕ.
ನೀನು ಒಮ್ಮಿಂಗೆ ಕರುಣಿಸಯ್ಯಾ
ಜಯ ಜಯ ಶ್ರೀ ಮಹಾದೇವ ಎನುತಿರ್ದೆನು.
ಕೂಡಲಸಂಗಮದೇವಯ್ಯಾ,
ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು./981
ಭವರೋಗವೈದ್ಯನೆಂದು ನಾ ನಿಮ್ಮ ಮರೆಹೊಕ್ಕೆ,
ಭಕ್ತಿದಾಯಕ ನೀನು ಕರುಣಿಸು ಲಿಂಗತಂದೆ.
ಜಯ ಜಯ ಶ್ರೀ ಮಹಾದೇವ, ಜಯ ಜಯ ಶ್ರೀ ಮಹಾದೇವ,
ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು.
ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು./982
ಭವವಿಲ್ಲದಡೇನು, ಬಂಧನವಿಲ್ಲದಡೇನು,
ಶಿವಗಣಂಗಳೆಲ್ಲರ ಮನಕ್ಕೆ ಬಾರದುದೆ ಭವಬಂಧನ ನೋಡಾ.
ಪರಹಿತಾರ್ಥವಾಗಬೇಕೆಂದು ಲಿಂಗವ ಕೊಟ್ಟಡೆ
ನಿಮ್ಮ ಪ್ರಮಥರ ಮುಂದೆ ಶಿವ ಮುನಿದು ಮತ್ರ್ಯಲೋಕಕ್ಕೆ ಕಳುಹಿಸಿದನು.
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದು ನಂಬಿದಲ್ಲಿ
ನಿಮ್ಮ ಪ್ರಮಥರೆನ್ನನೊಳಗಿಟ್ಟುಕೊಂಡರು.
ಜಂಗಮಮುಖದಲ್ಲಿ ಲಿಂಗವನರಿಸಿಕೋ ಎಂದಡೆ
ದಾಸೋಹವೆಂಬ ಪಸರವನಿಕ್ಕಿದೆನು.
ಕೂಡಲಸಂಗಮದೇವರ ಮುಂದೆ
ಜಂಗಮಮುಖದಲ್ಲಿ
ಎಂದು ಸುಖಿಯಪ್ಪೆನು ಹೇಳಾ, ಚೆನ್ನಬಸವಣ್ಣಾ./983
ಭವಿರಹಿತ ಭಕ್ತನಾದ ಬಳಿಕ,
ಭಕ್ತಿಭಾಜನದಲ್ಲಿ ಮಾಡಿ ಭವಿಗಿಕ್ಕಲಾಗದಯ್ಯಾ.
ಯುಕ್ತಿಶೂನ್ಯರಿಗೆ ಮುಂದೆ ಪ್ರಸಾದ ದೂರ,
ಮುಕ್ತಿುಲ್ಲ-ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು ಪೃಥ್ವಿಯೊಳಗೆ.
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ
ಅನಾಚಾರಕ್ಕೆಲ್ಲಿಯದೊ/984
ಭವಿಸಂಗವನೊಲ್ಲೆನೊಲ್ಲೆ-
ಆ ಸಂಗ ಮುಂದೆ ಅನಂತ ಭವಂಗಳಲ್ಲಿ ಬರಿಸುವುದಾಗಿ,
ಅನ್ಯ ದೈವದ ಭಜನೆಯನೊಲ್ಲೆನೊಲ್ಲೆ-
ಆ ಭಜನೆ ಮುಂದೆ ಅನಂತ ಘೋರವನುಣಿಸುವುದಾಗಿ,
ಈ ಉಭಯ ಜಡತೆಯ ಹೊದ್ದದೆ ಹಿಂಗಿ ನಿಂದೆ,
ಕೂಡಲಸಂಗಮದೇವಾ./985
ಭೂ ತೋಯ ಪಾವಕ ಸಮೀರಣ ಅಂಬರಾದಿಗಳೆಲ್ಲ
ಆದಿಯಾಧಾರದ ಪರಮಾತ್ಮಲಿಂಗದಲ್ಲಿ !
ಆದಿ ಮಧ್ಯ ಅವಸಾನವನರಿಯದ
ಅಗಮ್ಯ ವೇದಾದಿಸಕಲಶಾಸ್ತ್ರಪ್ರಮಾಣರು
ಅದನಂತಿಂತೆಂದುಪಮಿಸಲಿಲ್ಲ,
ಮಹಾಂತ ಕೂಡಲಸಂಗಮದೇವಾ./986
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ ಆತ್ಮನ ಗುಣವುಂಟೆ
ಗುರುಕಾರುಣ್ಯವಾಗಿ ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೆ ಗತಿಯಾಗಿ ಇದ್ದೆ,
ಕೂಡಲಸಂಗಮದೇವಾ. /987
ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ
ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ;
ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ.
ಅಯ್ಯಾ, ಭೂತ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ
ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ./988
ಭೂಮಿಯ ಸಾರಾಯದಲೊಂದು ತರು ಬೆಳೆಯಿತ್ತು,
ನವರಸಫಲವನಿತ್ತಿತ್ತು ನೋಡಾ.
ಏನೆಂದರಿಯದೆ ಎಂತೆಂದರಿಯದೆ ಮರುಳಾದೆನು,
ನಾನು ಮಾರಾರಿಯ ಬಲೆಯಲ್ಲಿ ಸಿಲುಕಿದೆನಯ್ಯಾ.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನಿಂದಲಾನು ಬದುಕಿದೆನು. /989
ಭೂಮಿಯೊಳಗೆ ನಿಧಾನವಿದ್ದುದ
ಅಂಜನವುಳ್ಳವರು ತೋರಿರಯ್ಯಾ.
ಅಂಜಲುಬೇಡ ಕಂಡಾ, ಮನದಲ್ಲಿ ಸಂದೇಹವ ಮಾಡದಿರಾ.
ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳಡೆ
ತೋರುವ ಕೂಡಲಸಂಗಯ್ಯ./990
ಭೇರುಂಡನ ಪಕ್ಷಿಗೆ ದೇಹ ಒಂದೆ,
ತಲೆಯೆರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ. /991
ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ !
ಎನ್ನಲ್ಲೇನನರಸುವೆ
ನಂಬಿಯೂ ನಂಬದ ಡಂಬಕ ನಾನಯ್ಯಾ,
ಹಾವ ತೋರಿ ಹವಿಯ ಬೇಡುವಂತೆ-
ಕೂಡಲಸಂಗಮದೇವಾ./992
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ. /993
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು./994
ಮಡಿವಾಳ ಮಡಿವಾಳನೆಂಬರು, ಮಡಿವಾಳನೆಂಬುದನಾರೂ ಅರಿಯರು,
ಎನ್ನ ಮಲಯದಲ್ಲಿ ಹೊದಕುಳಿಗೊಂಡ ಮನದ ಮೈಲಿಗೆಯ ತಂದು,
ತನ್ನ ಮನೆಗೆ ಕೊಂಡುಹೋಗಿ ಹಾಯ್ಕಿದಡೆ,
ಕೈಮುಟ್ಟಿದಡೆ ಆಗದೆಂದು ತನ್ನ ಪಾದದೊಳಗೆ ಮೆಟ್ಟಿ, ಅಲುಬಿ ಸೆಳೆದನಯ್ಯಾ.
ತನ್ನ ನಿರ್ಮಲವ ಕೊಟ್ಟನೆನಗೆ,
ಆ ಕೊಟ್ಟ ಬೀಳುಡಿಗೆಯ ಹೊದೆದುಕೊಂಡೆನಾಗಿ,
ಮಡಿವಾಳ ಮಾಚಿತಂದೆಯ ಕೃಪೆಯಿಂದಲಾನು ಬದುಕಿದೆನಯ್ಯಾ,
ಕೂಡಲಸಂಗಮದೇವಾ./995
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನ ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು,
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು./996
ಮತಿಗೆಟ್ಟು ಧೃತಿಗುಂದಿ ಬೇಳಾದೆನಯ್ಯಾ,
ಗತಿಗೆಟ್ಟು ವ್ರತಗೆಟ್ಟು ಧಾತುಗೆಟ್ಟ ಬಾಹಿರ ನಾನಯ್ಯಾ,
ಕಹಿಸೋರೆ ಮುತ್ತಂತಾಯಿತ್ತೆನ್ನ ಭಕ್ತಿ.
ನಡೆಲಿಂಗ ಜಂಗಮ ಮನೆಗೆ ಬರಲು
ಇಂಬುಗೊಳಲರಿಯದೆ ಕೆಟ್ಟ ಕೇಡನೇನೆಂದುಪಮಿಸುವೆನಯ್ಯಾ,
ನವರತ್ನವ ಕಿತ್ತು ಮಡುವಿನೊಳಗೆ ಹಾಯ್ಕಿದ ಕಪಿಯಂತಾಯಿತ್ತೆನ್ನ ಭಕ್ತಿ ಕೂಡಲಸಂಗಮದೇವರ ತಂದುಕೊಟ್ಟಡೆ
ನಿಮ್ಮ ಚಮ್ಮಾವುಗೆಯ ಹೊತ್ತು ಕುಣಿದಾಡುವೆನು
ಕಾಣಾ, ಚೆನ್ನಬಸವಣ್ಣಾ. /997
ಮತಿಮಂದನಾಗಿ ಗತಿಯ ಕಾಣದೆ ಇದ್ದೆನಯ್ಯಾ :
ಹುಟ್ಟುಗುರುಡನ ಕೈಯ ಕೋಲ ಕೊಟ್ಟು ನಡೆಸುವಂತೆ
ನಡೆಸಯ್ಯಾ ಎನ್ನ. ನಿಮ್ಮ ಅಚ್ಚ ಶರಣರ ಒಕ್ಕುದ ಮಿಕ್ಕುದ ನಚ್ಚಿಸು, ಮಚ್ಚಿಸು,
ಕೂಡಲಸಂಗಮದೇವಾ./998
ಮತ್ತೊಂದ ಕಾಣದೆ, ಮತ್ತೊಂದ ಕೇಳದೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ
ಇರಿಸಯ್ಯಾ, ಕೂಡಲಸಂಗಮದೇವಾ./999
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ./1000