Categories
ವಚನಗಳು / Vachanagalu

ಧರ್ಮ ಗುರು ಬಸವಣ್ಣನವರ ವಚನಗಳು

ಮಧ್ಯಪಿಂಡಂಗಳೆಲ್ಲವೂ ಶಿವನಿದ್ದೆಡೆಯನರಿಯವು,
ಪೂರ್ವಪಿಂಡಂಗಳೆಲ್ಲವೂ ಶಿವನಾದ್ಯಂತವನರಿಯವು,
ಕಾಲಪಿಂಡಗಳೆಲ್ಲವೂ ಶಿವನ ನಿಲುಕಡೆಯನರಿಯದೆ
ಕಾಲಚಕ್ರದೊಳಗಾದವೆಲ್ಲವು.
ಸಂಶಯಪಿಂಡಂಗಳೆಲ್ಲವ ಮರೆದು
ನಿಮ್ಮ ಶರಣರ ಸೇವೆಯಲ್ಲಿರಿಸಯ್ಯಾ, ಕೂಡಲಸಂಗಮದೇವಾ./1001
ಮನ ಮಜ್ಜನ, ತನು ಸಿಂಹಾಸನ,
ನೆನಹೆ ನಾಗವತ್ತಿಗೆಯಾಯಿತ್ತಾಗಿ
ಅರಿಯಲಿಲ್ಲ, ಮರೆಯಲಿಲ್ಲ ತೆರಹಿಲ್ಲದೆ ಇದ್ದುದಾಗಿ.
ಈಯನುವ ಅಲ್ಲಮ ತೋರಿದನು./1002
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ,
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ,
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ,
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ
ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ./1003
ಮನ ಮುಟ್ಟಿದ ಭಕ್ತಿಗೆ ತನುವೆ ಅರ್ಪಿತ,
ತನು ಮುಟ್ಟಿದ ಭಕ್ತಿಗೆ ಮನವೆ ಅರ್ಪಿತವಯ್ಯಾ,
ಎನ್ನ ತನುಮನವೆರಡೂ ನಿಮ್ಮ ಚರಣಕ್ಕೆ ವೇದ್ಯ ನೋಡಯ್ಯಾ.
ದೀರ್ಘದಂಡನಮಸ್ಕಾರಂ ನಿರ್ಲಜ್ಜಃ ಗುರುಸನ್ನಿಧೌ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನೀವೇದಯೇತ್ ಎಂದುದಾಗಿ ತ್ರಾಹಿ ತ್ರಾಹಿ ಶರಣಾರ್ಥಿ
ನೀವೇ ಬಲ್ಲಿರಿ ಕೂಡಲಸಂಗಮದೇವಾ./1004
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ !
ಕುಂದು-ಹೆಚ್ಚ ನುಡಿವೆ.
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ,
ಕೂಡಲಸಂಗನ ಶರಣರ ಎನ್ನಾಳ್ದರೆಂಬೆ./1005
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ
ಶಿರ ಹರಿದಡೇನು, ಕರುಳು ಕುಪ್ಪಳಿಸಿದಡೇನು
ಇಂತಪ್ಪ ಸಮಸ್ತವಸ್ತುವೆಲ್ಲವೂ ಹೋದಡೇನು
ಚಿತ್ತ ಮನ ಬುದ್ಧಿ ಒಂದಾದ ಮಚ್ಚು, ಬಿಚ್ಚಿ ಬೇರಾಗದಿದ್ದಡೆ
ಮೆಚ್ಚುವ ನಮ್ಮ ಕೂಡಲಸಂಗಮದೇವ. /1006
ಮನಕ್ಕೆ ಮನೋಹರವಲ್ಲದ ಗಂಡರು
ಮನಕೆ ಬಾರರು, ಕೇಳವ್ವಾ ಕೆಳದೀ,
ಪನ್ನಗಭೂಷಣರಲ್ಲದ ಗಂಡರು
ಇನ್ನೆನಗಾಗದ ಮೊರೆ, ನೋಡವ್ವಾ.
ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ./1007
ಮನದ ಕೊನೆಯ ಮೊನೆಯ ಮೇಲೆ
ಮನೆಯ ಮಾಡಿಕೊಂಡಿಪ್ಪನೊಬ್ಬ ದಾಸೋಹಿ.
ಆದಿವಿಡಿದು ಬಂದಾತನೆ ಭಕ್ತ,
ಆದಿವಿಡಿದು ಬಂದಾತನೆ ಜಂಗಮ.
ಆದಿ ಗುರು, ಅನಾದಿ ಶಿಷ್ಯ.
ಈ ಉಭಯ ಕುಳಸ್ಥಳವ ಬಲ್ಲಡೆ ಆತ ಲಿಂಗಸಂಬಂದಿ
ಕೂಡಲಸಂಗಮದೇವಾ. /1008
ಮನದೊಡೆಯ ಮನೆಗೆ ಬಂದಡೆ ಕನಕದ ತೋರಣವ ಕಟ್ಟಿ,
ಷಡುಸಮ್ಮಾರ್ಜನೆಯ ಮಾಡಿ, ರಂಗವಾಲಿಯನಿಕ್ಕಿ,
ಉಘೇ, ಚಾಂಗು, ಭಲಾ ಎಂಬೆನು.
ಕೂಡಲಸಂಗಮದೇವಾ,
ನಿಮ್ಮ ಶರಣ ಪ್ರಭುದೇವರು ಬಂದಡೆ
ಉಬ್ಬಿ ಕೊಬ್ಬಿ ನಲಿನಲಿದಾಡುವೆ./1009
ಮನವಂಚನೆಯೆ ಅನ್ಯಲಿಂಗಾರ್ಚನೆ.
ಅದು ನಿಜವಲ್ಲ ನಿಜವಲ್ಲ,
ಕೂಡಲಸಂಗಮದೇವನು ಮನದಂತರ್ಯಾಮಿ ತಾನಾಗಿ./1010
ಮನವು ಮಹದೊಳಗೆ ಲೀಯವಾಗಿ
ಘಟವಿಡಿದು ಸುಳಿದಾಡುವ ಮಹಾಮಹಿಮಂಗೆ ಅಹುದಾಗದೆಂಬ ಭ್ರಾಂತೇಕೊ
ಹಿಡಿತಹುದು, ಬಾರದಡೆ ಶಿರವನರಿದು ತಹುದು.
ಕೂಡಲಸಂಗಮದೇವರು ಬಲ್ಲಂತೆ ಮಾಡಲಿ. /1011
ಮನವೆ ಸರ್ಪ, ತನು ಹೇಳಿಗೆ :
ಹಾವಿನೊಡತಣ ಹುದುವಾಳಿಗೆ !
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ, ಕೂಡಲಸಂಗಮದೇವಾ./1012
ಮನವೆ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೆ !
ಲಿಂಗವ ನಂಬು ಕಂಡಾ, ಮನವೆ !
ಜಂಗಮವ ನಂಬು ಕಂಡಾ, ಮನವೆ !
ಕೂಡಲಸಂಗಮದೇವರ ಬಿಡದೆ ಬೆಂಬತ್ತು ಕಂಡಾ, ಮನವೆ !/1013
ಮನೆ ನೋಡಾ ಬಡವರು:ಮನ ನೋಡಾ ಘನ.
ಸೋಂಕಿನಲ್ಲಿ ಶುಚಿ:ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ :ಬಂದ ತತ್ಕಾಲಕೆ ಉಂಟು,
ಕೂಡಲಸಂಗನ ಶರಣರು ಸ್ವತಂತ್ರಧೀರರು./1014
ಮನೆದೈವ, ಕುಲದೈವ ಎನಗೆ ನಿಮ್ಮವರಯ್ಯಾ.
ತನು ವಿೂಸಲು, ಮನ ಮೀಸಲು, ನಯನ ವಿೂಸಲು ಎನ್ನ,
ಕೂಡಲಸಂಗಮದೇವಾ, ನಿಮ್ಮ ಶರಣರಿಗೆ./1015
ಮನೆಮನೆದಪ್ಪದೆ ಹಗಹದ ಬತ್ತ ಎನಗಿಲ್ಲೆಂದು ಬೆಂಬೀಳಲೇಕಯ್ಯಾ
ಶಿವಶರಣರೆಂಬ ಹಗಹದ ಬತ್ತ ಭವಭವದಲ್ಲಿ ಬಳಸಲುಂಟು.
ತವನಿದಿಯ ಹಡೆದ ನಮ್ಮ ದಾಸಯ್ಯನುಂಟು,
ಕೂಡಲಸಂಗಮದೇವಾ./1016
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ !
ಅಂಗವಿದ್ಯೆಯನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ,
ಕೈಯ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊಂದಲೀಯ.
ಇಂತೀ ಸರ್ವಾಂಗ ತಲೆದೊಳೆದ ಕಾರಣ,
ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ/1017
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ
ಇಲ್ಲ, ಕೂಡಲಸಂಗಮದೇವಾ./1018
ಮನ್ನಣೆ ತಪ್ಪಿದ ಬಳಿಕ ಅಲ್ಲಿರಬಹುದೆ
ಸಲಿಗೆ ತಪ್ಪಿದ ಬಳಿಕ ಸಲುವುದೆ ಮಾತು
ತಿವಿದು ತಪ್ಪಿದಡೆ ಸಾವೊಂದು ತಪ್ಪದು.
ಬರಿದೆ ಚಿಂತಿಸಿ ಬಳಲಿ ಕೆಡಬೇಡ ಮನವೆ.
ಅಹುದು ಆಗದೆಂಬ ಸಂದೇಹವುಳ್ಳಡೆ ಅಹುದೆ
ಕೂಡಲಸಂಗಯ್ಯ ಕೊಟ್ಟಲ್ಲದಿಲ್ಲ./1019
ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು./1020
ಮರಕ್ಕೆ ಬೇರು ಬಾಯಿಯೆಂದು ತಳುಂಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ./1021
ಮರದ ನೆಳಲಲಿದ್ದು ತನ್ನ ನೆಳಲನರಸಬಹುದೆ
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ
ಆನು ಭಕ್ತನೆಂಬ ನುಡಿ ಸುಡದೆ, ಕೂಡಲಸಂಗಮದೇವಾ /1022
ಮರನ ಹೂವ ಕೊಯಿದು ಮರಕ್ಕೇರಿಸಿ,
ನದಿಯುದಕವ ನದಿಗರ್ಪಿತವ ಮಾಡಿ,
ಕರುವನಗಲಿಸಿ, ತಾಯ ಮರುಗಿಸಿ
ಮೊಲೆವಾಲ ಕರೆದುಣಬೇಡವೋ !
ಕೂಡಲಸಂಗಮದೇವ ಮಾಡಿದ ಮಾಯೆ,
ಹಲಬರ ಬಾಯ ಟೊಣೆದೇ ಹೋಯಿತ್ತು./1023
ಮರನನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದ್ದೇನೆ,
ಬೆಂದ ಮನವ ನಾನೆಂತು ನಂಬುವೆನಯ್ಯಾ
ಎಂತು ನಚ್ಚುವೆನಯ್ಯಾ
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ./1024
ಮರಮರ ಮಥನದಿಂದ ಅಗ್ನಿ ಹುಟ್ಟಿ
ಆ ಮರನೆಲ್ಲವ ಸುಡದಿಪ್ಪುದೆ
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ
ಇದು ಕಾರಣ, ಮಹಾನುಭಾವರ ತೋರಿಸು
ಕೂಡಲಸಂಗಮದೇವಾ. /1025
ಮರಹಿಂದಲಾದ ಕುರುಹಿನ ಕಾಯವ ಧರಿಸಿಕೊಂಡು ಬಂದಡೆ,
ಅದು ಎನಗೆ ಕುಂದಲ್ಲ ನೋಡು ದೇವಾ !
ನಿಮ್ಮ ಲೀಲೆಯಿಂದ ಹಿಂದಾರು ಜನ್ಮದಲ್ಲಿ ಬಂದಡೆ,
ಅದು ನಿಮ್ಮ ಜಂಗಮಭಕ್ತಿಯಿಂದ ಕಳೆದೆ ನೋಡಯ್ಯಾ.
ಕಾಯವಿಲ್ಲದ ಜಂಗಮಕ್ಕೆ ಪ್ರಾಣವಿಲ್ಲದ ಮಾಟ,
ಒಲ್ಲೆನೆಂಬುದಕ್ಕೆ ಕಾರಣವೇನು ಹೇಳಾ, ಕೂಡಲಸಂಗಮದೇವಾ /1026
ಮರುಗದ ಗಿಡುವಿನಂತೆ ಹುಟ್ಟುತ್ತಲೆ ಪರಿಮಳ,
ಎರವಿನ ಬಣ್ಣದೊರೆಗೆಡಿಸಿದ ಪರಿಯ ನೋಡಾ.
ಹರನ ಪ್ರೇರಣೆಯೊಳಗೆ ಹಿರಿದೊಂದು ವಾರುಧಿ,
ವಾರುಧಿಯೊಳಗಣ ಕಮಲ ಬಾಡಿ,
ಕಮಲದೊಳಗೆ ಸುಳಿವ ಭ್ರಮರನ ಪಕ್ಕ ಮುರಿದು ಉರುಳಿದಡೆ ನಿರಂಜನವಾಯಿತ್ತು ನೋಡಾ.
ಹರಿಗೊಯಿದ ಮಿಂಚಿನ ಗೊಂಚಲ ನೆರೆವೋತು,
ಇಂದುಕೋಟಿಪ್ರಭೆಯ ಶಾಂತಿಯನೊಳಕೊಂಡು
ಕೂಡಲಸಂಗಮದೇವರ ನೆರೆವೋತ
ಪ್ರಭುದೇವರ ಶ್ರೀಪಾದದಲ್ಲಿ ಭೃಂಗನಾಗಿ ಬದುಕಿದೆನು./1027
ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ,
ಕರಿಯು ಕನ್ನಡಿಯೊಳಗಡಗಿದಂತಯ್ಯಾ !
ಗುಣಿ ಅವಗುಣಿಯೊಡನಾಡಿದಡೆ
ಅದೆ ಆತನ ಕರ್ಮದ ಫಲ ನೋಡಾ !
ಕೂಡಲಸಂಗನ ಶರಣರ ಅನುಭಾವ
ಭವದುಃಖಿಗಳಿಗೆ ವೇದ್ಯವಾಗದಯ್ಯಾ./1028
ಮರುಳ ಹಿಡಿದಿಹೆನೆಂಬವರು ಮರುಳಾಗಿ ಹಿಡಿಯಬೇಕು ಕೇಳಿರೆ.
ಬಹುಬುದ್ಧಿಯ ಜಡರಿಗೆ ಹಿಡಿಯಬಾರದು.
ನಿರವಯಲ ಬಯಲ ಹಿಡಿಯಬಹುದೆ
ಕೂಡಲಸಂಗಮದೇವರ ಭಾವಶಸ್ತ್ರದಿಂದ ಗೆಲಿದುಕೊಂಡು ಬನ್ನಿ. /1029
ಮರುಳುತಲೆ ಹುರುಳುತಲೆ ನೀನೆ ದೇವಾ,
ಹೆಂಗೂಸು ಗಂಡುಗೂಸು ನೀನೇ ದೇವಾ,
ಎಮ್ಮಕ್ಕನ ಗಂಡ ನೀನೇ ದೇವಾ.
ಕೂಡಲಸಂಗಮದೇವಾ,
ಭ್ರಾಂತಳಿದು ಭಾವನಿಂದುದಾಗಿ./1030
ಮರೆಯಲಾಗದು ಹರಿಯ ಮರೆಯಲಾಗದು ಬ್ರಹ್ಮನ !
ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ !
ನಮ್ಮ ಕೂಡಲಸಂಗಮದೇವರ ಮರೆಯಲಹುದು /1031
ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ
ಕರ್ಮಸ್ಥಿತಿ ಬೆನ್ನ ಬಿಡದು.
ಅನಂತಕೋಟಿ ಸನ್ಮಾನವ ಮಾಡಿದರೇನು
ನಿಮಿಷದ ಉದಾಸೀನ ಕೆಡಿಸಿತ್ತು.
ಕೂಡಲಸಂಗಮದೇವಾ
ನಿಮ್ಮ ನಂಬಿಯೂ ನಂಬದ ಡಂಬಕ ನಾನಯ್ಯಾ./1032
ಮಹಾಪ್ರಳಯದೊಳು
ಧರೆ ಜಲದಲ್ಲಡಗಿತ್ತು, ಬ್ರಹ್ಮ ವಿಷ್ಣುವಿನಲ್ಲಡಗಿದ,
ಜಲ ಅಗ್ನಿಯಲ್ಲಡಗಿತ್ತು, ವಿಷ್ಣು ರುದ್ರನಲ್ಲಡಗಿದ,
ಅಗ್ನಿ ವಾಯುವಿನಲ್ಲಡಗಿತ್ತು, ರುದ್ರ ಈಶ್ವರನಲ್ಲಡಗಿದ,
ವಾಯುವಾಕಾಶದಲ್ಲಡಗಿತ್ತು, ಈಶ್ವರ ಸದಾಶಿವನಲ್ಲಡಗಿದ,
ಆಕಾಶ ಅಕ್ಷರ ಮೂರೆಂಬ ಓಂಕಾರದಲ್ಲಡಗಿತ್ತು, ಸದಾಶಿವನತೀತನಲ್ಲಡಗಿದ,
ಅತೀತ ಆದಿಯಲ್ಲಡಗಿದ, ಆದಿ ಅನಾದಿಯಲ್ಲಡಗಿತ್ತು,
ಅನಾದಿ ನಿಜದ ಅಹಂಕಾರದಲ್ಲಿಳಿಯಿತ್ತು,
ನಿಜವು ತಾನು ತಾನು ಆಗಿದ್ದಿತು,
ಈ ಭೇದವ ಕೂಡಲಸಂಗನಲ್ಲಿ ಪ್ರಭುವೆ ಬಲ್ಲ ಕಾಣಾ ಚೆನ್ನಬಸವಣ್ಣಾ/1033
ಮಹಾಲಿಂಗದ ಸ್ಥಾನಂಗಳು
ಮಹಾಲಿಂಗದ ಪೆಸರಲ್ಲದೆ ಲಿಂಗ ಬೇರೆ ರೂಪು ನಿರೂಪಲ್ಲ.
ಲಿಂಗ ಬೇರೆ ಕಾಯಸಂಧಿಯಲ್ಲ,
ಲಿಂಗ ಬೇರೆ ಜೀವಸಂಧಿಯಲ್ಲ.
ಲಿಂಗ ಬೇರೆ ಮಹಾಘನದಿಂದತ್ತಲೆ
ಕೂಡಲಸಂಗಮನ ನಿಲವು ಆರಿಗೆಯೂ ಅರಿಯಬಾರದು./1034
ಮಹಾಲಿಂಗದ ಸ್ಥಾನಂಗಳು ಮಹಾಲಿಂಗದ ಹೆಸರಲ್ಲದೆ,
ಲಿಂಗ ಬೇರೆ ರೂಪುನಿರೂಪನಲ್ಲ,
ಲಿಂಗ ಬೇರೆ ಕಾಯಸಂಬಂಧಿಯಲ್ಲ,
ಲಿಂಗ ಬೇರೆ ಮಹಾಘನದಿಂದತ್ತತ್ತಲೆ.
ಕೂಡಲಸಂಗಮದೇವರ ನಿಲವು ಆರಿಗೆಯೂ ಅಳವಡದು. /1035
‘ಮಾಟ ಕೂಟ, ಫಲ ಪ್ರಾಪ್ತಿ’ ಎಂಬ ಮಾತ ಕೇಳಲಾಗದು ಶಿವಾಶಿವಾ !
ನಿಮ್ಮ ಭಕ್ತರಿಗೆ ಮಾಡಿದೆನೆನ್ನದಿರೆಂದು
ಶ್ರೀ ಗುರುಲಿಂಗವು ಕೃಪೆಯ ಮಾಡಿದ ಕಾರಣ.
ಅಲ್ಲಿ ಮಾಡುವವರೂ ಮಾಡಿಸಿಕೊಂಬವರೂ ನೀವೆ
ಕೂಡಲಸಂಗಮದೇವಾ./1036
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ:
ಹಾಗದ ಕೆರಹ ಹೊರಗೆ ಕಳೆದು,
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.
ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು.
ಕೂಡಸಂಗನ ಶರಣರಿಗೆ ಸವೆಸಲೇಬೇಕು./1037
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ./1038
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ./1039
ಮಾಡುವ ನೀಡುವ ಭಕ್ತನ ಕಂಡಡೆ
ನಿಧಿ ನಿಧಾನವ ಕಂಡಂತಾಯಿತ್ತು,
ಪಾದೋದಕ ಪ್ರಸಾದಜೀವಿಯ ಕಂಡಡೆ
ಹೋದ ಪ್ರಾಣ ಬಂದಂತಾಯಿತ್ತು.
ಅನ್ಯರ ಮನೆಗೆ ಹೋಗಿ, ತನ್ನ ಉದರವ ಹೊರೆಯದ
ಅಚ್ಚ ಶರಣರ ಕಂಡಡೆ
ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು./1040
ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು;
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದಡೆ
ಒಳಗೆ ಕೆಚ್ಚಿಲ್ಲದಿರಬೇಕು.
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು.
ಎನಗಿನ್ನಾವ ಭಯವಿಲ್ಲ ಕಾಣಾ,
ಕೂಡಲಸಂಗಮದೇವಾ./1041
ಮಾಡುವ ಮಾಡಿಸಿಕೊಂಬ ಎರಡರ ನಡುವೆ
ಸಂದುಭೇದ ಉಂಟೆ ದೇವಾ
ಕಾಯ ಪ್ರಾಣದ ಸಂಗದಂತೆ ಇದ್ದುದಲ್ಲದೆ.
ಬಲ್ಲಂತೆ ಮಾಡು, ಬಲ್ಲಂತೆ ನೀಡು,
ನಾನರಿಯೆನೆಂಬುದು ನಿಮಗುಚಿತವೆ
ಮಾಡುವಲ್ಲಿ ನೀಡುವಲ್ಲಿ ಹೇಳಿ ಮಾಡಿಸಿಕೊಂಬುದಲ್ಲದೆ.
ಕೈ ಕಲಸಿದಡೆ ಬಾಯಿಗೆ ಹಂಗುಂಟೆ
ಕೂಡಲಸಂಗಮದೇವಾ /1042
ಮಾಡುವಂತಿರಬೇಕು ಮಾಡದಂತಿರಬೇಕು.
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.
ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು./1043
ಮಾಡುವರಿಲ್ಲ, ನೀ ಮಾಡದೆ ನಿಲ ಸಾಲೆ.
ಬೇಡುವರಿಲ್ಲ, ನೀ ಬೇಡದೆ ನಿಲ ಸಾಲೆ.
ಕೂಡುವರಿಲ್ಲ, ನೀ ಕೂಡದೆ ನಿಲ ಸಾಲೆ.
ಕೂಡಲಸಂಗಮದೇವ
ತಾನು ತಾನಾಗಿ ನೀ ನೋಡದೆ ನಿಲ ಸಾಲೆ. /1044
ಮಾಡುವಲ್ಲಿ ಎನ್ನ ನಾನರಿದು ಮಾಡಿದೆನಾದಡೆ,
ನೀಡುವಲ್ಲಿ ಎನ್ನ ನಾನರಿದು ನೀಡಿದೆನಾದಡೆ,
ನೀಡುವಲ್ಲಿ ರುಚಿಗೆ ಮನವೆಳೆಸಿ ಹಾರೈಸಿದೆನಾದಡೆ,
ನಿಮಗಂದೆ ದ್ರೋಹವಯ್ಯಾ.
ಮಾಡುವಲ್ಲಿ ನೀಡುವಲ್ಲಿ ಕೂಡೆ ಶುದ್ಧನಲ್ಲದಿರ್ದಡೆ,
ನೀನಂದೆ ಮೂಗ ಕೊಯಿ ಕೂಡಲಸಂಗಮದೇವಾ. /1045
ಮಾಡುವಾತ ನಾನಲ್ಲಯ್ಯಾ, ನೀಡುವಾತ ನಾನಲ್ಲಯ್ಯಾ,
ಬೇಡುವಾತ ನಾನಲ್ಲಯ್ಯಾ, ನಿಮ್ಮ ಕಾರುಣ್ಯವಲ್ಲದೆ.
ಎಲೆ ದೇವಾ, ಮನೆಯ ತೊತ್ತು ಅಲಸಿದಡೆ ಒಡತಿ ಮಾಡಿಕೊಂಬಂತೆ,
ನಿನಗೆ ನೀ ಮಾಡಿಕೊ, ಕೂಡಲಸಂಗಮದೇವಾ./1046
ಮಾಣದೆ ಅರಳೆಯ ತಿಟ್ಟನೆ ತಿರುಗುವ ಗಾಣದೆತ್ತಿನಂತೆ,
ಪೂರ್ವಲಿಖಿತ ಮುಂದುಗಾಣಲೀಯದು.
ನೀವೆಲ್ಲ ವಾಯಕ್ಕೆ ಕೆಡಬೇಡ, ಮಾಣದೆ ಪೂಜಿಸು ಲಿಂಗವ.
ಹೆರರ ಗೋಣ ಕೊಯ್ದೆನೆಂದು ಮಂತ್ರವನೋದುವ
ನೇಣುಗಾರರ ಮೆಚ್ಚ ಕೂಡಲಸಂಗಮದೇವ. /1047
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ. /1048
ಮಾತಿನ ಮಾತಿನಲಪ್ಪುದೆ ಭಕ್ತಿ
ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ,
ಧನ ಸವೆಯದನ್ನಕ್ಕ ಅಪ್ಪುದೆ ಭಕ್ತಿ
ಕೂಡಲಸಂಗಮದೇವನೆಲುದೋರೆ ಸರಸವಾಡುವನು
ಸೈರಿಸದನ್ನಕ್ಕ ಅಪ್ಪುದೆ ಭಕ್ತಿ/1049
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ
ಮಾಡುವ ಸತ್ಕ್ರಿಯೆುಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ ಅಯ್ಯಾ.
ಕೂಡಲಸಂಗನ ಶರಣರ ಭಕ್ತಿಭಂಡಾರವು
ಎನಗೆಂತು ಸಾಧ್ಯವಪ್ಪುದು ಹೇಳೆನ್ನ ತಂದೆ./1050
ಮಾತಿಲ್ಲ ನುಡಿಯಿಲ್ಲ, ಏತಕ್ಕೆ ಮುನಿದಿರಿ
ಮಾತಾಡಿದಡೆ ಕೆಯ್ಯ ಬೆಳಸೆಂಬುದನರಿಯಿರೆ ಅಯ್ಯಾ
ಮಾತು ಕೆಟ್ಟಲ್ಲದೆ ತಾನಾಗಬಾರದು.
ಕೂಡಲಸಂಗಮದೇವಯ್ಯಾ
ಮಾತಿಂದ ಬರ್ಕು ಭವಭಾರಘೋರ./1051
ಮಾಯೆವಿಡಿದು ಜೀವಿಸುವ ಜೀವಕನಲ್ಲ,
ಅದೇನು ಕಾರಣ
ಆತ ಘನಲಿಂಗವಿಡಿದು ಜೀವಿಸುವ ಜೀವಕನಾಗಿ.
ವಿಷಯವಿಡಿದು ಭುಂಜಿಸುವ ಭುಂಜಕನಲ್ಲ,
ಅದೇನು ಕಾರಣ
ಆತ ಘನಲಿಂಗವಿಡಿದು ಮಹಾಪ್ರಸಾದ ಭುಂಜಿಸುವ ಭುಂಜಕನಾಗಿ.
ವೇಷವಿಡಿದು ರಂಜಿಸುವ ರಂಜಕನಲ್ಲ,
ಅದೇನು ಕಾರಣ
ಆತ ಸಹಜವಿಡಿದು ರಂಜಿಸುವ ರಂಜಕನಾಗಿ.
ಇಂತೀ ತ್ರಿವಿಧ ಒಂದೆಯೆಂದರಿದು ಪರಮಾರ್ಥದಲ್ಲಿ ಚರಿಸುವ ಶರಣಂಗೆ
ಶರಣೆನುತಿರ್ದೆನಯ್ಯಾ, ಕೂಡಲಸಂಗಮದೇವಾ./1052
ಮಾರಂಕನಿರಿವಲ್ಲಿ ಘಾಯಖಂಡೆಯ ತೋರಿದಾತನೆ ತೆತ್ತಿಗ,
ಕೈಯ ಕೈದು ಬಿದ್ದಲ್ಲಿ ಎತ್ತಿಕೊಟ್ಟಾತನೆ ಹಿತವ.
ಕೂಡಲಸಂಗನ ಶರಣ ಸೊಡ್ಡಳ ಬಾಚರಸರ ಕರುಣವುಳ್ಳನ್ನಕ್ಕರ
ಇನ್ನು ನಾನು ಅಂಜುವನಲ್ಲ ಕಾಣಾ, ಚೆನ್ನಬಸವಣ್ಣಾ./1053
ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.
ಮಾರಿಯೆಂಬುದೇನು
ಕಂಗಳು ತಪ್ಪಿ ನೋಡಿದಡೆ ಮಾರಿ,
ನಾಲಗೆ ತಪ್ಪಿ ನುಡಿದಡೆ ಮಾರಿ,
ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ. /1054
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು,
ಸಾಲಬಟ್ಟಡೆ ಮಾರಿಕೊಂಬರಯ್ಯಾ,
ಸಾಲಬಟ್ಟಡೆ ಅವರನೊತ್ತೆಯಿಟ್ಟು ಕೊಂಡುಂಬರಯ್ಯಾ.
ಮಾರುವೋಗನೊತ್ತೆಯೋಗ
ನಮ್ಮ ಕೂಡಲಸಂಗಮದೇವ. /1055
ಮಾವಿನಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ.
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ/1056
ಮಿಥ್ಯವನಳಿದುಳಿದ ಸತ್ಯಪ್ರಸಾದಿ,
ರಂಜನವಿಲ್ಲದ ನಿರಂಜನ ಪ್ರಸಾದಿ,
ದುಃಖವನಳಿದ ಘನಾನಂದಪ್ರಸಾದಿ,
ಅನಿತ್ಯವಿಲ್ಲದ ನಿತ್ಯಪ್ರಸಾದಿ,
ಖಂಡಿತವಿಲ್ಲದ ಅಖಂಡಿತಪ್ರಸಾದಿ,
ಕೂಡಲಸಂಗಮದೇವರಲ್ಲಿ ತಾನೆ ಪ್ರಸಾದಿ. /1057
ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು
ಮೂಗ ಹಿಡಿದು ಧ್ಯಾನಮಾಡುವರಯ್ಯಾ.
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ
ಕಣ್ಣ ಮುಚ್ಚಿ ಬೆರಳನೆಣಿಸುವರಯ್ಯಾ-
[ತ]ಮ್ಮ ಕೈಯಲಿ ಕಟ್ಟಿದ ದಭರ್ೆಯ ಹುಲ್ಲು
ಕೂಡಲಸಂಗನನರಿಯದೆ ಮೊರೆಯಿಡುವಂತೆ. /1058
ಮೀಸಲು ಬೀಸರವಾಗದ ಪರಿಯ ನೋಡಾ:
ಕಾಲು ತಾಗಿದ ಅಗ್ಘವಣಿ, ಕೈಮುಟ್ಟಿದ ಅರ್ಪಿತ,
ಮನಮುಟ್ಟಿದ ಆರೋಗಣೆಯನೆಂತು ಘನವೆಂಬೆನಯ್ಯಾ
ಬಂದ ಪರಿಯಲಿ ಪರಿಣಾಮಿಸಿ, ನಿಂದ ಪರಿಯಲಿ ನಿಜಮಾಡಿ,
ಆನೆಂದ ಪರಿಯಲಿ ಕೈಕೋ ಕೂಡಲಸಂಗಮದೇವಾ./1059
ಮುಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ
ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ.
ನಾಯಿಗೆ ನಾರಿವಾಣವಕ್ಕುವುದೆ
ಕೂಡಲಸಂಗಮದೇವಾ./1060
ಮುಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯಾ.
ಲಜ್ಜೆಗೆಟ್ಟಾದಡೂ ಲಿಂಗವನೊಲಿಸುವೆ,
ನಾಣುಗೆಟ್ಟಾದಡೂ ಲಿಂಗವನೊಲಿಸುವೆ,
ಕೆಲದ ಸಂಸಾರಿಗಳು ನಗುತಿರ್ದಡಿರಲಿ,
ಕೂಡಲಸಂಗಮದೇವಾ, ಶರಣಗತಿವೊಕ್ಕೆನಯ್ಯಾ./1061
ಮುಗಿಲ ಮರೆಯ ಮಿಂಚಿನಂತೆ, ಒಡಲ ಮರೆಯ ಆತ್ಮನಂತೆ,
ನೆಲದ ಮರೆಯ ನಿಧಾನದಂತೆ ಇಪ್ಪ,
ನಿಮ್ಮ ನಿಲವನಾರು ಬಲ್ಲರು ದೇವಾ
ನಿಮ್ಮ ನಿಲವ ಹಲಕಾಲದಿಂದ ಕಂಡು ಕಂಡು
ಕಡೆಗಣಿಸಿ, ಮರೆದು ಮತಿಗೆಟ್ಟು ಮರುಳಾದೆನು.
ಎನ್ನ ತಪ್ಪಿಂಗೆ ಕಡೆಯಿಲ್ಲ ಕಾಣಾ
ತ್ರಾಹಿ ತ್ರಾಹಿ ಕಾಯಯ್ಯಾ, ಕೂಡಲಸಂಗಮದೇವಾ./1062
ಮುತ್ತು ಉದಕದಲಾಗದು, ಉದಕ ಮುತ್ತಿನಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ,
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕ್ಕಲ್ಲದೆ.
ಕರ್ತೃ ಕೂಡಲಸಂಗಮದೇವರ ಒಲವಿನ ದಯದ
ಚಿತ್ತವಿಡಿದಂಗಲ್ಲದೆ, ಶಿವತತ್ತ್ವ ಸಾಹಿತ್ಯವಾಗದು./1063
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ
ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ,
ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ
ಆಚಾರದ್ರೋಹ ಪ್ರಸಾದದ್ರೋಹ.
ಇಂತೀ ಪಂಚಮಹಾಪಾತಕಂಗಳು
ಭಕ್ತಂಗಲ್ಲದೆ ಭವಿಗೆಲ್ಲಿಯದೊ
ಗುರುವಿದು, ಲಿಂಗವಿದು, ಜಂಗಮವಿದು
ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ
ಕುಂಬಿಪಾತಕ ನಾಯಕನರಕ
ಕೂಡಲಸಂಗಮದೇವಾ./1064
ಮುದ್ದ ನೋಡಿ, ಮುಖವ ನೋಡಿ,
ಮೊಲೆಯ ನೋಡಿ, ಮುಡಿಯ ನೋಡಿ,
ಕರಗಿ ಕೊರಗುವುದೆನ್ನ ಮನ,
ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ.
ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ.
ಎನ್ನ ತಂದೆ ಕೂಡಲಸಂಗಮದೇವಯ್ಯ ಒಲಿದು ಒಪ್ಪಗೊಂಡನಾದಡೆ,
ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ/1065
ಮುನಿದೆಯಾದಡೆ ಒಮ್ಮೆ ಜರೆದಡೆ ಸಾಲದೆ
ಅಕಟಕಟಾ, ಮದನಂಗೆ ಮಾರುಗೊಡುವರೆ
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ
ಕೂಡಲಸಂಗಮದೇವಾ/1066
ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ
ಇನ್ನು ಬಯಸಿದಡುಂಟೆ ?
ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದಡುಂಟೆ,
ಕೂಡಲಸಂಗಮದೇವರಲ್ಲಿ ಮುನ್ನ ವರವ ಹಡೆಯದನ್ನಕ್ಕ?/1067
ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ.
ಕಹಿ ಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ
ಸಿಹಿಯಾಗದೆ ಮೂರು ದಿವಸಕ್ಕಯ್ಯಾ
ಹಲವು ಕಾಲ ಕೊಂದ ಸೂನೆಗಾರನ ಕತ್ತಿಯಾದಡೇನು
ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ
ಲಲಾಟದಲ್ಲಿ ವಿಭೂತಿ ಬರೆಯಲಿಕೆ ಪಾಪ ಪಲ್ಲಟವಾಗದೆ
ಕೂಡಲಸಂಗಮದೇವಾ/1068
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ.
ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ.
ಒಳ್ಳಿಹ ಮೈಲಾರನ ಸಿಂಗಾರದಂತೆ,
ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ,
ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ. /1069
ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು
ಪರಿಪರಿಯಲಿ ಬಣ್ಣಿಸಿ ಹೇಳಲುಬಹುದಲ್ಲದೆ
ಆ ದಳವಿದಿರಾದಲ್ಲಿ ಬಿರಿದ ಪಚಾರಿಸಿ, ಕಾದಿ ತೋರಲುಬಾರದು.
ಮುನ್ನಿನ ಪುರುಷಬ್ರತಿಯರು ಒಲಿಸಿದ ಆಯತವ
ಪರಿಪರಿಯಲು ಬಣ್ಣಿಸಲು ಬಹುದಲ್ಲದೆ
ಪುರುಷನಿರ್ವಾಣಕ್ಕುರಿವಗ್ನಿಯ
ಬಂದು ಹೊಕ್ಕು ತೋರಲುಬಾರದು.
ಮುನ್ನಿನ ಪುರಾತನರೆಲ್ಲರು ತನುಮನಧನವನ್ನಿತ್ತು
ಮಾಡಿ, ನೀಡಿ ಲಿಂಗವ ಕೂಡಿದ ಪರಿಗಳನು
ಅನುಭವದಲಥರ್ೈಸಿ ಹೇಳಬಹುದಲ್ಲದೆ
ಮಾಡಿ, ನೀಡಿ ತೋರಲುಬಾರದು.
ಇಂತೀ ಅರೆಬಿರಿದಿನ ಬಂಟರು, ಪುರುಷಬ್ರತಿಯರು, ಪುರಾತನರು
ಬರಿಯ ಮಾತನಾಡಿ ಹೊರಗೆ ಮೆರೆವರಲ್ಲಾ !
ಪರೀಕ್ಷೆಯುಂಟಾಗಿಯಿದ್ದಡೆ ಒಳಗಣವರ ಹೆಸರ ಹಿಡಿದು
ಪರಿಪರಿಯಲು ಹೊಗಳುವರು.
ಶರೀರಮರ್ಥಪ್ರಾಣ ಗುರುಲಿಂಗಜಂಗಮಕ್ಕೆ ಪರೀಕ್ಷೆಯುಂಟಾಗಿಯೆ
`ಆತ ಮಹೇಶ್ವರ ಪುರಾತವಳಿ’ಯೆಂಬ
ಪರಮಬಂಧುಗಳಾತನ ನೆನೆನೆನೆದು ಬದುಕುವರು.
ಇಂತೀ ಅನುಭಾವದಲೋದಿ, ಅಕ್ಷರಾಭ್ಯಾಸವ ಸಾಧಿಸಿ
ತಕರ್ಿಸಿ ನಿಂದಿಸಲಾಗದು,
ಕೂಡಲಸಂಗನ ಶರಣರಿಗಲ್ಲದನುಭಾವವಿಲ್ಲ. /1070
ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ
ಕಾರಣ ಬಹುಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು.
ಎನಗೆ ಗುರುಪಥವ ತೋರಿದವರಾರು
ಲಿಂಗಪಥವ ತೋರಿದವರಾರು
ಜಂಗಮಪಥವ ತೋರಿದವರಾರು
ಪಾದೋದಕ ಪ್ರಸಾದಪಥವ ತೋರಿದವರಾರು
ತೋರುವ ಮನವೆ ನೀವೆಂದರಿತೆ.
ಎನಗಿನ್ನಾವ ಭವವಿಲ್ಲ,
ಕೂಡಲಸಂಗಮದೇವಾ. /1071
ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣಾ,
ಬಲ್ಲಾಳನ ವಧುವಿನೊಡನೆ ಸರಸವನಾಡಿದಂದಿಂದ ಭಯ ಕಾಣಿರಣ್ಣಾ,
ಸಿರಿಯಾಳನ ಮಗನ ಬೇಡಿದಂದಿಂದ ಭಯ ಕಾಣಿರಣ್ಣಾ.
ದಾಸನ ವಸ್ತ್ರವ ಸೀಳಿದಂದಿಂದ ಭಯ ಕಾಣಿರಣ್ಣಾ.
ಅಘಟಿತಘಟಿತರು, ವಿಪರೀತಚರಿತ್ರರು-
ಕೂಡಲಸಂಗನ ಶರಣರು ನಡೆದ ದಾರಿ ಭಯ ಕಾಣಿರಣ್ಣಾ./1072
ಮುನ್ನೂರ ಅರುವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳು ತಂದೆ.
ಎಲ್ಲವಕ್ಕೆ ಬಾಯ ಬಿಟ್ಟಡೆ ತಾನೆಲ್ಲಿಯ ಮುತ್ತಪ್ಪುದು
ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು
ಕರಣಾದಿ ಗುಣಂಗಳ ಮರೆದರು,
ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ. /1073
ಮುನ್ನೂರರುವತ್ತು ದಿನ ಶ್ರವವ ಮಾಡಿ,
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ.
ಎನಿಸು ಕಾಲ ಲಿಂಗಾರ್ಚನೆಯ ಮಾಡಿ,
ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ
ಕೊಡನ ತುಂಬಿದ ಹಾಲ ಕೆಡಹಿ,
ಉಡುಗಲೆನ್ನಳವೆ, ಕೂಡಲಸಂಗಮದೇವಾ/1074
ಮೂಗ ಕಂಡ ಕನಸಿನಂತಾಯಿತೆನ್ನ ಭಕ್ತಿ;
ಗುಣವ ಹೇಳಬಾರದಾರಿಗೆಯೂ, ಕೇಳಲೆಂತೂ ಬಾರದು.
ಎನ್ನ ಹೇಗತನವ ಮಾಣಿಸು, ಕೂಡಲಸಂಗಮದೇವಾ./1075
ಮೂಗಿಲ್ಲದ ಮುಖಕ್ಕೆ ಶೃಂಗಾರವೆ
ವಿಕೃತವೇಷಧಾರಿಯಾನು, ಭಂಡನು ! ಲಜ್ಜೆಭಂಡನು !
ಕೂಡಲಸಂಗನ ಶರಣರಲ್ಲಿ
ಹಾವ ತೋರಿ ಹವಿಯ ಬೇಡುವಂತೆ/1076
ಮೂರರಪ್ಯಾಯನ ಐದು ಬೆಟ್ಟವನಿಂಬುಗೊಂಡು,
ಅಕಟಕಟಾ, ಮಾಡಿ ಕೆಟ್ಟರು. ಮಾಡದೆ ಕೆಟ್ಟರು,
ನೀಡಿ ಕೆಟ್ಟರು, ನೀಡದೆ ಕೆಟ್ಟರು.
ಕೂಡಲಸಂಗಮದೇವನ ಬಸಿರ ಮಧ್ಯದ
ಬಯಲ ಸಮಾಧಿಯಲಿಕ್ಕದೆ ಕೆಟ್ಟರು. /1077
ಮೂರ್ತಿಯ ಮುಂದಣ ಮೂವರದೇನೊ
ಸನಕ ಸನಂದಾದಿಗಳಿಂದತ್ತತ್ತಲು ನೋಡಾ.
ಕೂಡಲಸಂಗಮದೇವಾ,
ನಾನಾಳು, ನೀನಾಳ್ದ ಕಂಡಯ್ಯಾ./1078
ಮೆಲ್ಲಮೆಲ್ಲನೆ ಭಕ್ತನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಮಾಹೇಶ್ವರನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಪ್ರಸಾದಿ ಎನಿಸಿಕೊಂಬೆ,
ಮೆಲ್ಲಮೆಲ್ಲನೆ ಪ್ರಾಣಲಿಂಗಿ ಎನಿಸಿಕೊಂಬೆ,
ಮೆಲ್ಲಮೆಲ್ಲನೆ ಶರಣನೆನಿಸಿಕೊಂಬೆ,
ಮೆಲ್ಲಮೆಲ್ಲನೆ ಐಕ್ಯನೆನಿಸಿಕೊಂಬೆ.
ಮೆಲ್ಲಮೆಲ್ಲನೆ ಷಟ್ಸ್ಥಲವ ಮೀರಿ
ನಿರವಯಸ್ಥಲವನೆಯ್ದುವೆನಯ್ಯಾ,
ಕೂಡಲಸಂಗಮದೇವಾ./1079
ಮೇರುಗುಣವನರಸುವುದೆ ಕಾಗೆಯಲ್ಲಿ
ಪರುಷಗುಣವನರಸುವುದೆ ಕಬ್ಬುನದಲ್ಲಿ
ಸಾಧುಗುಣವನರಸುವುದೆ ಅವಗುಣಿಯಲ್ಲಿ
ಚಂದನಗುಣವನರಸುವುದೆ ತರುಗಳಲ್ಲಿ
ಸರ್ವಗುಣಸಂಪನ್ನ ಲಿಂಗವೆ, ನೀನೆನ್ನಲ್ಲಿ
ಅವಗುಣವನರಸುವರೆ ಕೂಡಲಸಂಗಮದೇವಾ/1080
ಮೇಲಾಗಲೊಲ್ಲೆನು ಕೀಳಾಗಲಲ್ಲದೆ,
ಕೀಳಿಂಗಲ್ಲದೆ ಹಯನು ಕರೆವುದೆ
ಮೇಲಾಗಿ ನರಕದಲೋಲಾಡಲಾರೆನು.
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ./1081
ಮೈಗೆ ಕಾಹ ಹೇಳುವರಲ್ಲದೆ, ಮನಕ್ಕೆ ಕಾಹ ಹೇಳುವರೆ
ಅಣಕದ ಮಿಂಡನ ಹೊಸ ಪರಿಯ ನೋಡಾ !
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು./1082
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು
ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು
ಭಾಷೆ ತಪ್ಪಿದ ಬಳಿಕ ದೇವಾ, ಬಲ್ಲಿದ ಭಕ್ತನೇನ ಮಾಡುವನಯ್ಯಾ
ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದಡೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವಾ./1083
ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು,
ಕುರಿ ಸತ್ತು ಕಾವುದೆ ಹರ ಮುಳಿದವರ
ಕುರಿ ಬೇಡ ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ. /1084
ಮೊರಹಾರ ನೀಡಿದಡೆ ತೆರಹಾರ ಕೊಳುತ್ತೈದಾನೆ,
ಅಹುದಹುದು, ಮತ್ತೇನು
ದೇವರ ಹಸಿವು ನಮಗೆ ಹೊಸತಲಾ !
ದೆಸೆದಿಕ್ಕೆಲ್ಲಾ ವಿಶ್ವತೋಮುಖದ ಕೂಡಲಸಂಗಮದೇವಂಗೆ,
ದೆಸೆದೆಸೆಯಲ್ಲಿ ನೀಡಿ./1085
ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು.
ನಮ್ಮ ಕೂಡಲಸಂಗನ ಶರಣರ ಮುಂದೆ
ನಾನು ಭಕ್ತನೆಂಬ ನಾಚಿಕ್ಕೆ ಸಾಲದೆ/1086
ಮೌನದಲುಂಬುದು ಆಚಾರವಲ್ಲ.
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡಡೆ./1087
ಯಸ್ಯ ಕ್ರಿಯಾ ತಸ್ಯ ಭವತಿ ಎಂದು ಕಟ್ಟಾಚಾರದಲು ಇದ್ದು,
ನಾನು ಅನುಸರಿಸಿಕೊಂಡು ನಡೆವನ್ನಕ್ಕ ಕರ್ಮಕಾಂಡಿಯಲ್ಲ.
ಉತ್ಪತ್ತಿ-ಸ್ಥಿತಿ-ಭೋಗ-ಭುಕ್ತಿ ಕಾಯವುಳ್ಳನ್ನಕ್ಕ ಭಕ್ತಿಕಾಂಡಿಯಲ್ಲ,
ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೀರಿ ನಡೆವೆನು.
ಪರತತ್ವವನರಿದೆಹೆನೆಂಬನ್ನಕ್ಕ ಜ್ಞಾನಕಾಂಡಿಯಲ್ಲ.
ಇನ್ನು ಕರ್ಮಕಾಂಡ, ಭಕ್ತಿಕಾಂಡ, ಜ್ಞಾನಕಾಂಡ
ಈ ತ್ರಿವಿಧದಲ್ಲಿ ವಂಚಕನಾದಡೆ
ಈಸು ವಿಧದೊಳಗೆ ಅಂಗವಿಲ್ಲ,
ಮೇಲೆ ಸತ್ಪುರುಷರ ಸಂಗವಿಲ್ಲ,
ಯುಕ್ತಿಯಿಲ್ಲ, ಭಕ್ತಿಯೆಂತಹುದಯ್ಯಾ
ಬಲ್ಲವರ ಬೆಸಗೊಂಡಡೆ ಎನ್ನ ಬಿಮ್ಮು ಕೆಟ್ಟಿಹುದೆಂದು
ಮೆಲ್ಲನೆ ಪ್ರಸಂಗದಿಂದ ತಿಳಿದು ನೋಡುವೆ.
ಕೂಡಲಸಂಗಮದೇವಾ,
ಎನ್ನ ಗುಣವ ನೋಡದೆ
ಶಿವರಾತ್ರಿಯ ಸಂಕಣ್ಣಗಳಿಗೆ ಕರುಣಿಸಿದಂತೆ
ಎನಗೆ ಕೃಪೆಮಾಡಯ್ಯಾ. /1088
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಕೂಡಲಸಂಗಮದೇವನಲ್ಲದೆ ತಲೆದೋರುವ
ದೈವಂಗಳನಂದೂ ಕಾಣೆನಿಂದೂ ಕಾಣೆ. /1089
ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು,
ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು,
ನಡೆದು ನುಡಿದು ತೋರುವರು ಎಮ್ಮೆ ಶರಣರು,
ಗುರುಲಿಂಗಜಂಗಮ ಈ ತ್ರಿವಿಧವನು.
ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು,
ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು,
ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ,
ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು,
ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ,
ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು,
ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ./1090
ರಂಗವಾಲೆಯೆಂದಡೆ ಅಂಗವಿಸದಯ್ಯಾ ಎನ್ನ ಮನವು,
ಷಡುಸಮ್ಮಾರ್ಜನೆಯೆಂದಡೆ ಸೊಗಸದಯ್ಯಾ ಎನ್ನ ಮನಕ್ಕೆ.
ಅದೇನು ಕಾರಣವೆಂದಡೆ, ಭಕ್ತರಂಗಳ ವಾರಣಾಸಿಯೆಂದುದಾಗಿ.
ತಾ ಹುಟ್ಟಿ ತಮ್ಮವ್ವೆಯ ಬಂಜೆಯೆನ್ನಬಹುದೆ
ಕೂಡಲಸಂಗಮದೇವಾ /1091
ರಕ್ಕಸಿಯ ಮನೆಯಲು ಭೋಜನವನುಂಡು
ತೃಪ್ತಿಯಾಯಿತ್ತೆಂದು ಬೆಸಗೊಂಡಡೆ ಹೇಳಿಹೆನು;
ನೀರ ಕೈಯಲು ಕಿಚ್ಚ ಬಯ್ಕೆಯ ಕೊಟ್ಟಂತೆ
ಸಾಯುಜ್ಯಪದವಿಯನವರೆತ್ತ ಬಲ್ಲರು
ಮಹಾದಾನಿ ಕೂಡಲಸಂಗಮದೇವರ
ಸಮರಸದ ಸುಖವನವರೆತ್ತ ಬಲ್ಲರು/1092
ರಚ್ಚೆಯ ನೆರವಿಗೆ ನಾಣುನುಡಿ ಇಲ್ಲದಿಹುದೆ
ಅದರಂತೆನಬಹುದೆ ಸಜ್ಜನ ಸ್ತ್ರೀಯ
ಅದರಂತೆನಬಹುದೆ ಭಕ್ತಿರತಿಯ
ಕರುಳಕಲೆ ಪ್ರಕಟಿತವುಂಟೆ,
ಕೂಡಲಸಂಗಮದೇವಾ /1093
ರತ್ನೇ ಪ್ರಸಾದವನಾರಾಧಿಸುತ್ತಿರಲು
ಆ ಪ್ರಸಾದ[ವ]ಲ್ಲಿ ಬೀಳುತ್ತ ಆಳುತ್ತಲಿದ್ದಿತ್ತು. ನೋಡಾ.
ಅದ ಹಲಬರು ನೋಡಿ ನೋಡಿ ಹೋರುತ್ತಿದ್ದಾರು,
ಆ ಪ್ರಸಾದ ತಾನೇ ಬಂದು ಎನ್ನ ಸುತ್ತಿಕೊಂಡಿತ್ತು.
ಇದರ ಪದಾರ್ಥವ ಮಾಡಿಕೊಡಯ್ಯಾ ಕೂಡಲಸಂಗಮದೇವಾ. /1094
ರಿಣ ತಪ್ಪಿದ ಹೆಂಡಿರಲ್ಲಿ, ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೊ
ಆಳ್ದನೊಲ್ಲದಾಳಿನಲ್ಲಿ, ಸಿರಿ ತೊಲಗಿದರಸಿನಲ್ಲಿ,
ವರವಿಲ್ಲದ ದೈವದಲ್ಲಿ ಫಲವೇನೋ
ಕಳಿದ ಹೂವಿನಲ್ಲಿ ಕಂಪನುಳಿದ ಸೂಳೆಯಲ್ಲಿ ಹೆಂಪ,
ಕೊಳಚೆಯ ನೀರಿನಲ್ಲಿ ತಂಪನರಸುವಿರಿ ಮರುಳೆ.
ವರಗುರು ವಿಶ್ವಕ್ಕೆಲ್ಲ ಗಿರಿಜಾಮನೋವಲ್ಲಭ_
ಪರಮ ಕಾರಣಿಕ ನಮ್ಮ ಕೂಡಲಸಂಗಮದೇವ. /1095
ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ,
ಜಂಘೆಯಲ್ಲಿ ಅಜ ಜನನವೊ.
ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ,
ಚಕ್ಷುವಿನಲ್ಲಿ ಸೂರ್ಯ ಜನನವೊ.
ಮುಖದಲ್ಲಿ ಅಗ್ನಿಯು ಪ್ರಾಣದಲ್ಲಿ ವಾಯು
ನಾಬಿಯಲ್ಲಿ ಅಂತರಿಕ್ಷವೊ.
ಸಿರದಲುದಯ ತೆತ್ತೀಸಕೋಟಿ ದೇವತೆಗಳು
ಪಾದತಳದಲ್ಲಿ ಭೂಮಿ ಜನನವೊ.
ಶ್ರೋತ್ರದಲ್ಲಿ ದಶದಿಕ್ಕುವೊ.
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ, ಅಕ್ಷಯನಗಣಿತನು.
ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ.
ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ./1096
ರೂಪು ಅರೂಪಿನಲ್ಲಿ ನಿಂದಿತ್ತು,
ಅರೂಪು ನಿಜರೂಪವನವಗ್ರಹಿಸಿತ್ತು.
ನಿಜರೂಪು ನಿರ್ಣಯದಲ್ಲಿ ನಿಷ್ಪತ್ತಿಯಾಯಿತ್ತು,
ನಿಷ್ಪತ್ತಿಯಾದ ನಿಜಶರಣರ ನಿಲವು
ಕಾಯವಿಡಿದು ಕಂಡೆಹೆನೆಂದಡೆ ಕಾಣಬಹುದೆ !
ಕೂಡಲಸಂಗಮದೇವರ ಶರಣ ಪ್ರಭುದೇವರ ನಿಲವು
ಎನಗೆ ಸಾಧ್ಯವಪ್ಪುದೆ !/1097
ರೂಹಿಲ್ಲದ ಸಯದಾನವ ನೀಡುವೆ,
ರುಚಿಯಿಲ್ಲದ ಪದಾರ್ಥವ ಮಥನಿಸದೆ ನೀಡುವೆ, ಲಿಂಗಕ್ಕೆಂದು.
ಲಿಂಗಪದಾರ್ಥವನಂಗಮುಖವ ಮರೆದು ನಿಮಗೆ ನೀಡುವೆ.
ಕಾಮಿಸದೆ ಕಲ್ಪಿಸದೆ ಭಾವಿಸದೆ ಭ್ರಮಿಸದೆ ನಿಮ್ಮ ಪರಿಯಾಣಕ್ಕೆ ನೀಡುವೆ.
ಸುಚಿತ್ತ ಸಮಾಧಾನದಿಂದ ಅವಧರಿಸಬೇಕಯ್ಯಾ
ಕೂಡಲಸಂಗಮದೇವಯ್ಯಾ./1098
ರೂಹಿಲ್ಲದಂಗೆ ಒಲಿದವರಿಗೆ ತನುವಿನ ಹಂಗುಂಟೆ !
ಮನವಿಲ್ಲದವಂಗೆ ಮಚ್ಚಿದವರಿಗೆ ಅಭಿಮಾನದ ಹಂಗುಂಟೆ !
ದಿಗಂಬರಂಗೆ ಒಲಿದವರಿಗೆ ಕೌಪೀನದ ಹಂಗುಂಟೆ !
ಕೂಡಲಸಂಗಮದೇವಯ್ಯಾ,
ಮಹಾದೇವಿಯಕ್ಕನೆಂಬ ಭಕ್ತೆಗೆ,
ಅವ ಹೊರೆಯೂ ಇಲ್ಲ ನೋಡಾ, ಪ್ರಭುವೆ./1099
ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನ
ನಿತ್ಯಭಂಡಾರಕ್ಕೆ ಸಂದಿತ್ತಯ್ಯಾ.
ಬೆಟ್ಟಕ್ಕೆ ಬಳ್ಳು ಬಗುಳಿದಂತಾಯಿತ್ತಯ್ಯಾ.
ಕ[ರೆದು]ಕೊಳ್ಳಯ್ಯಾ, ಕ[ರೆದು]ಕೊಳ್ಳಯ್ಯಾ,
ಓ ಎನ್ನಯ್ಯಾ, ಓ ಎನ್ನಯ್ಯಾ,
ಕೂಡಲಸಂಗಮದೇವಾ./1100
ಲಗ್ನವೆಲ್ಲಿಯದೊ, ವಿಘ್ನವೆಲ್ಲಿಯದೊ, ಸಂಗಯ್ಯಾ
ದೋಷವೆಲ್ಲಿಯದೊ, ದುರಿತವೆಲ್ಲಿಯದೊ, ಸಂಗಯ್ಯಾ
ನಿಮ್ಮ ನೆನೆವಂಗೆ ಭವಕರ್ಮವೆಲ್ಲಿಯದೊ
ಕೂಡಲಸಂಗಯ್ಯಾ /1101
ಲಜ್ಜೆಗೆಟ್ಟೆನು, ನಾಣುಗೆಟ್ಟೆನು.
ಕುಲಗೆಟ್ಟೆನು, ಛಲಗೆಟ್ಟೆನು.
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯಾ.
ಕೂಡಲಸಂಗಮದೇವಯ್ಯಾ
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯಾ./1102
ಲಾಂಛನ ಹೊರಗೆ ಬಂದಿರಲು, ಒಳಗೆ ಲಿಂಗಾರ್ಚನೆಯೆಂತಯ್ಯಾ
ಮುಖದಲ್ಲಿ ಕಟ್ಟಿದ ಕನ್ನಡಿ, ಮೂಗಿನ ಮೇಲಣ ಕತ್ತಿ !
ಸಮಯಾಚಾರವೆಂತುಟಯ್ಯಾ ರಿ ಕೂಡಲಸಂಗಮದೇವಯ್ಯಾ./1103
ಲಾಂಛನವ ಕಂಡು ನಂಬುವೆ, ಅವರಂತರಂಗವ ನೀನೇ ಬಲ್ಲೆ.
ತೊತ್ತಿಂಗೆ ತೊತ್ತುಗೆಲಸವಲ್ಲದೆ, ಅರಸರ ಸುದ್ದಿ ಎಮಗೇಕಯ್ಯಾ
ರತ್ನಂವಕ್ತಿಕದಚ್ಚು,
ಕೂಡಲಸಂಗಮದೇವಾ ನಿಮ್ಮ ಶರಣರು./1104
ಲಿಂಗ ಜಂಗಮ ಒಂದೆ ಎಂದು ನಂಬಿದ ಬಳಿಕ
ಅವರಂಗನೆಯರು ಲಿಂಗದ ರಾಣಿವಾಸ.
ಅಲ್ಲಿಯೂ ಮೇಳ, ಇಲ್ಲಿಯೂ ಮೇಳ,
ಚೌಡೇಶ್ವರಿಯಲ್ಲಿಯೂ ಮೇಳವೇ
ಮೊಲೆಯುಂಬ ಭಾವ ತಪ್ಪಿ ಅಪ್ಪಿದವರ
ತಲೆಯ ಕೊಂಬ ಕೂಡಲಸಂಗಮದೇವ. /1105
ಲಿಂಗ ಜಂಗಮ, ಜಂಗಮ ಲಿಂಗವೆಂಬುದ
ಎನಗೆ ತೋರಿದವರಾರಯ್ಯಾ
ಲಿಂಗವ ಪೂಜಿಸಿದಡೆ ಭವ ಹರಿಯದೆಂದು,
ಜಂಗಮಮುಖ ಲಿಂಗವಾಗಿ ಬಂದು ಶಿಕ್ಷಿಸಿ, ರಕ್ಷಿಸಿ,
ಎನ್ನ ಆದಿ ಅನಾದಿಯ ತೋರಿ,
ಪ್ರಾಣಲಿಂಗ ಜಂಗಮವೆಂದು ಎನಗೆ ಪ್ರತಿಷ್ಠಿಸಿ ತೋರಿದಿರಾಗಿ,
ಕೂಡಲಸಂಗಮದೇವಾ,
ನಿಮ್ಮಿಂದಲಾನು ಬದುಕಿದೆನು ಕಾಣಾ, ಪ್ರಭುವೆ./1106
ಲಿಂಗ ಜಂಗಮದ ಪ್ರಸಾದವಲ್ಲದೆ, ಭೂತದ್ರವ್ಯವ ಮುಟ್ಟಬಾರದು,
ಶಿಷ್ಟೋದನವಲ್ಲದುದ ಕೊಳ್ಳಬಾರದು.
ಅದೆಂತೆಂದಡೆ,
ಶೂದ್ರಾನ್ನಂ ಸೂತಕಸ್ಯಾನ್ನಂ ನೈವೇದ್ಯಂ ಶ್ರಾದ್ಧಮೇವ ಚ
ಪತಿತಾನ್ನಂ ಸಮೂಹಾನ್ನಂ ರಾಜಾನ್ನಂ ಚೈವ ವರ್ಜಯೇತ್ಶ
ಎಂಬೀ ಮನುಸ್ಮೃತಿಯಲ್ಲಿ ಹೇಳುವ ಅನ್ನವಾವುವೆಂದೊಡೆ;
ಶಿವೋಪದೇಶವಿಲ್ಲದವರಲ್ಲಿಯ[ದು] ಶೂದ್ರಾನ್ನ,
ಹೊಲೆಗಳೆವುದಕ್ಕೆ ಮಾಡಿದು[ದು] ಸೂತಕಾನ್ನ, ಸ್ಥಾವರನಿಮಿತ್ತವಾದುನದುಫ ನೈವೇದ್ಯಾನ್ನ,
ಪಿತೃಕಾರ್ಯಕ್ಕಾದುದು ಶ್ರಾದ್ಧಾನ್ನ,
ಬಲಿಗೆ ಹಾಕಿದುದು ಪತಿತಾನ್ನ,
ಪರ್ವಕ್ಕೆ ಮಾಡಿದುದು ಸಮೂಹಾನ್ನ,
ಆವುದೊಂದು ಸಿರಿಗರ ಹೊಡೆದಲ್ಲಿ ಪಾಕಭೇದವಾಗಿ
ಟೊಂಬರಕ್ಕೆ ಬೇರೆ ಮಾಡಿದುದು ರಾಜಾನ್ನ.
ಇಂತೀ ಸಪ್ತವಿಧದನ್ನವ ಬಿಟ್ಟು
`ನ ಜಾತಿಭೇದೋ ಲಿಂಗಾರ್ಚೇ ಸರ್ವೆ ರುದ್ರಗಣಾಃ ಸ್ಮೃತಾಃ
ಎಂಬುದನರಿದು ಜಾತಿಭೇದವ ಮರೆದು,
ಶಿವಭಕ್ತರ ಮನೆಯ ಅನ್ನವ ಶಿವಪ್ರಸಾದವೆಂದು ಕೊಂಡು
ಸರ್ವ ಬವರವ ಜಯಸಿದರೆಂಬುದಕ್ಕೆ
ಬ್ರಹ್ಮಾಂಡಪುರಾಣೇ;
ಆಧಿವ್ಯಾದಿವಿನಾಶಾಯ ಚರೋಚ್ಚಿಷ್ಟಂ ತು ಸೇವಯೇತ್
ಮಾರ್ಗಾದಿಷು ಚ ಶೈವಾನಾಂ ಚ ಪುಣ್ಯತೀರ್ಥಂ ಸುದರ್ಶನಂ
ಎಂದುದಾಗಿ
ಶೈವಾದಿಗಳು ಜಂಗಮಪ್ರಸಾದವ ಕೊಂಡು ಮುಕ್ತರಾದರಲ್ಲದೆ,
ಜಂಗಮಪ್ರಸಾದದಲ್ಲಿ ವಿಶ್ವಾಸಹೀನರನೇನೆಂಬೆನಯ್ಯಾ
ಕೂಡಲಸಂಗಮದೇವಾ/1107
ಲಿಂಗಕ್ಕಲ್ಲದೆ ಮಾಡೆನೀ ಮನವನು,
ಜಂಗಮಕ್ಕಲ್ಲದೆ ಮಾಡೆನೀ ಧನವನು,
ಪ್ರಸಾದಕ್ಕಲ್ಲದೆ ಮಾಡೆನೀ ತನುವನು,
ಲಿಂಗಜಂಗಮಪ್ರಸಾದಕ್ಕಲ್ಲದೆ ಬಾಯ್ದೆರೆಯೆನೆಂಬುದೆನ್ನ ಭಾಷೆ.
ಅನರ್ಪಿತವಾದಡೆ ತಪ್ಪೆನ್ನದು,
ಮೂಗ ಕೊಯಿ, ಕೂಡಲಸಂಗಮದೇವಾ./1108
ಲಿಂಗಗಂಭೀರ ಗಮನಗೆಟ್ಟುದಲ್ಲಾ,
ಜಂಗಮಗಂಭೀರ ಸುಳುಹುಗೆಟ್ಟುದಲ್ಲಾ,
ಪ್ರಸಾದಗಂಭೀರ ರೂಪುಗೆಟ್ಟುದಲ್ಲಾ,
ಆಚಾರಗಂಭೀರ ಅವಯವಗೆಟ್ಟುದಲ್ಲಾ,
ಜ್ಞಾನಗಂಭೀರ ನಡೆಗೆಟ್ಟುದಲ್ಲಾ,
ಕೂಡಲಸಂಗಮದೇವರಲ್ಲಿ ಪ್ರಭುದೇವರು ನಿಜವನೈದಲು
ಸಂಗನಬಸವಣ್ಣನ ಪ್ರಾಣ ಒಡನೆ ಬಳಿಸಂದಿತ್ತಲ್ಲಾ./1109
ಲಿಂಗಗಂಭೀರದೊಳಗೆ ಜಗ ಹುಟ್ಟಿದಡೇನು,
ಆ ಲಿಂಗದಿಂದ ಘನವೆ
ಶಿವಲಿಂಗದೊಳಗೆ ಜಗ, ಜಗದೊಳಗೆ ಶಿವಲಿಂಗ,
ಲೋಕಾದಿ ಲೋಕಂಗಳಿಗೆ ನೀನು
ಭಕ್ತಿಯ ಕಂದೆರೆದು ತೋರಿದೆ,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಾ,
ನಿನ್ನ ಶ್ರೀಪಾದಕ್ಕೆ ನಮೋ ನಮೋ ಎನುತ್ತಿರ್ದೆನು./1110
ಲಿಂಗಜಂಗಮಪ್ರಸಾದವೆಂಬರು;
ಲಿಂಗವೆಂದಡೆ ಅಂಗದೊಳಗಾಯಿತ್ತು,
ಜಂಗಮವೆಂಬೆನೆ ವಾಸಿಗೊಳಗಾಯಿತ್ತು,
ಪ್ರಸಾದವೆಂಬೆನೆ ವಿಷದೊಳಗಾಯಿತ್ತು,
ಇಂತೀ ತ್ರಿವಿಧವು ನಷ್ಟ.
ಇವರ ಮೇಲಣ ಅಂಕುರಿತವ ಬಲ್ಲ
ಜಂಗಮವ ತೋರಾ ಕೂಡಲಸಂಗಮದೇವಾ./1111
ಲಿಂಗದ ಉಂಡಿಗೆಯ ಪಶುವಾನಯ್ಯಾ,
ವೇಷಧಾರಿಯಾನು, ಉದರಪೋಷಕ ನಾನಯ್ಯಾ,
ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ,
ನೀವೆ ಬಲ್ಲಿರಿ ಕೂಡಲಸಂಗಮದೇವಾ !/1112
ಲಿಂಗದ ಪ್ರಾಣದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು,
ಪ್ರಾಣನದಫ ಲಿಂಗದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು.
ಹೂಸಿ ಹುಂಡನ ಮಾಡಿ, ಹೊರಗನೆ ಪೂಜಿಸಿ
ವೃಥಾ ದಿನಂಗಳು ಸವೆದುಹೋದವು.
ಕೂಡಲಸಂಗಮದೇವರಲ್ಲಿ,
ಎನ್ನ ಪ್ರಾಣ ನಿಕ್ಷೇಪವಹ ಭೇದವ ತೋರಾ ಚೆನ್ನಬಸವಣ್ಣಾ./1113
ಲಿಂಗದರ್ಶನ ಕರಮುಟ್ಟಿ, ಜಂಗಮದರ್ಶನ ಶಿರಮುಟ್ಟಿ,
ಆವುದ ಘನವೆಂಬೆ, ಆವುದ ಕಿರಿದೆಂಬೆ
ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದಡೆ,
ಅರ್ಪಣ ಮುನ್ನವೆ ಇಲ್ಲ, ಗಮನ ನಿರ್ಗಮನವಾುತ್ತು.
ಈ ಉಭಯ ಭೇದವನರಿಯರಾಗಿ,
ಜಂಗಮವೇ ಲಿಂಗ ಕೂಡಲಸಂಗಮದೇವಾ./1114
ಲಿಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ,
ಅಂಗವ ಲಿಂಗದಲ್ಲಿ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ
ಪ್ರಾಣವ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ,
ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿಯೆಂತು ಹೇಳಯ್ಯಾ ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯರಾಗಿಪ್ಪುದ ಹೇಳಯ್ಯಾ,
ನಿಮ್ಮ ಧರ್ಮ, ನಿಮ್ಮ ಧರ್ಮ/1115
ಲಿಂಗದಲ್ಲಿ ಕಠಿಣವುಂಟೆ ಜಂಗಮದಲ್ಲಿ ಕುಲವುಂಟೆ
ಪ್ರಸಾದದಲ್ಲಿ ಆರುಚಿಯುಂಟೆ
ಈ ತ್ರಿವಿಧದಲ್ಲಿ ಭಾವಭೇದವನರಸುವೆನು,
ಕೂಡಲಸಂಗಮದೇವಾ, ಧಾ[ರಾ]ವಟ್ಟಲೆನ್ನ ಭಕ್ತಿ/1116
ಲಿಂಗದಲ್ಲಿ ದಿಟವನರಸುವಡೆ ಜಂಗಮವ ನೆರೆ ನಂಬುವುದು.
ನಡೆಲಿಂಗ, ನುಡಿಲಿಂಗ, ಮುಖಲಿಂಗವೆಂದೆ ನಂಬೋ !
`ಯತ್ರ ಮಾಹೇಶ್ವರಸ್ತತ್ರಸನ್ನಿಹಿತನಾಗಿ
ಅಧರ ತಾಗಿದ ರುಚಿಯನುದರ ತಾಗಿದ ಸುಖವ
ಉಂಬ ಉಡುವ ಕೂಡಲಸಂಗಮದೇವ, ಜಂಗಮಮುಖದಲ್ಲಿ./1117
ಲಿಂಗದಲ್ಲಿ ಸಮ್ಯಕ್ಕರು, ಲಿಂಗದಲ್ಲಿ ಸದರ್ಥರು,
ಲಿಂಗದ ಸೊಮ್ಮು ಸಂಬಂಧವರಿತ ಸ್ವಾಮಿಭೃತ್ಯರೆಲ್ಲರು
ನಿಮ್ಮ ಬೇಡೆನಂಜದಿರಿ.
ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು.
ಇದು ಕಾರಣ, ಕೂಡಲಸಂಗಮದೇವರ ಲೋಕವ
ಹಂಚಿಕೊಳ್ಳಿ ನಿಮನಿಮಗೆ. #
ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ
ಅಂದವ ಕೆಡಿಸಲರಿಯದ ಅಂಧಕರ ನೋಡಾ.
ಸಮರಸವಿಲ್ಲದೆ ನೆರಹಿ ಮಾಡಿ, ಭಕ್ತರಾದೆವೆಂಬವರನೇನೆಂಬೆ
ಆಚಾರವಂಚಕರ ಎನಗೆ ತೋರದಿರು
ಕೂಡಲಸಂಗಮದೇವಾ, ನಿಮ್ಮ ಧರ್ಮ ! /1118
ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ
ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ.
ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ,
ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ./1119
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು,
[ಜಂಗಮ]ನಿಷ್ಠೆ ತ್ಯಾಗದಲ್ಲಿ ಬೀಯವಾಯಿತ್ತು,
ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಗಿತ್ತು.
ಒಂದೊಂದರ ನಿಷ್ಠೆ ಅಂದಂದಿಗೆ ಬೀಯವಾಗಿತ್ತು,
ಕೂಡಲಸಂಗಮದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು. /1120
ಲಿಂಗಪ್ರಸಾದಿಗಳಲ್ಲದವರ ಸಂಗ
ಭಂಗವೆಂದುದು ಗುರುವಚನ.
ಲಿಂಗಪ್ರಸಾದಿಗಳಲ್ಲದವರ ಸಂಗಗ
ಪಂಚಮಹಾಪಾತಕವೆಂದುದು ಲಿಂಗವಚನ.
ಆಸನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ ಕೂಡಲಸಂಗಮದೇವಾ,
ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ. /1121
ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದಡೆ
ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ.
ಲಿಂಗಾರ್ಪಿತವಲ್ಲದೆ ಹಲ್ಲುಕಡ್ಡಿಯ ಕೊಂಡಡೆ
ಬಲ್ಲೆ, ಮುಂದೆ ಭವ ಘೋರನರಕವೆಂಬುದ.
ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು.
ಅಳವರಿಯದೆ ನುಡಿದೆನು.
ಕಡೆ ಮುಟ್ಟಿ ಸಲೆಸದಿದ್ದಡೆ ತಲೆದಂಡ, ತಲೆದಂಡ,
ಕೂಡಲಸಂಗಮದೇವಾ. /1122
ಲಿಂಗವ ನಚ್ಚದೀ ಮನವು, ಜಂಗಮವ ನಂಬದೀ ಮನವು,
ಕೂಪರ ಕಂಡಡೆ ಒಲ್ಲದೀ ಮನವು. ಈ ಮನದ ಭ್ರಮೆಯನೆಲ್ಲವ ಮರೆಸಿ,
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು
ಕೂಡಲಸಂಗಮದೇವಾ./1123
ಲಿಂಗವ ಪೂಜಿಯ ಮಾಡಿ, ಜಂಗಮವ ಕಂಡು ಉದಾಸೀನವ ಮಾಡಿದಡೆ,
ಆ ಲಿಂಗಪೂಜಕರಿಗೆ ಮಾಡಿದ, ಶಿವದೂತರ ದಂಡವೆಂಬುದ.
ಲೋಕದ ಕರ್ಮಿಗಳಿಗೆ ಮಾಡಿದ, ಯಮದೂತರ ದಂಡವೆಂಬುದ.
ಇದು ಕಾರಣ ಲಿಂಗ ಜಂಗಮವನೊಂದೆಂದರಿಯದವರ ಎನಗೆ
ತೋರದಿರಯ್ಯಾ, ಕೂಡಲಸಂಗಮದೇವಾ./1124
ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ /1125
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕೆ ಅಂಜಲೇಬೇಕು,
ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ.
ಬೀಗಿ ಬೆಳೆದ ಕೊನೆವಾಳೆಯಂತೆ ಬಾಗಿಕೊಂಡಿದ್ದಡೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ./1126
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ
ಸುಖವ ಕೊಡು, ಕಂಡಾ ಲಿಂಗವೆ,
ಪರಮಸುಖವ ಕೊಡು, ಕಂಡಾ ಲಿಂಗವೆ.
ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ./1127
ಲಿಂಗವಲ್ಲದನ್ಯವರಿನಯೆ, ಶಿವಲಿಂಗವಲ್ಲದನ್ಯವ ನೆನೆಯೆ,
ಜಂಗಮವಲ್ಲದನ್ಯಕ್ಕೆರಗೆ, ಪ್ರಸಾದವಲ್ಲದನ್ಯವ ಕೊಳ್ಳೆ,
ಶಿವಗಣಂಗಳಲ್ಲದನ್ಯರ ಬೆರೆಯೆ.
ಕೂಡಲಸಂಗಮದೇವರು ಸಾಕ್ಷಿಯಾಗಿ
ನಾನಾವ ತೀರ್ಥಯಾತ್ರೆಗಳನರಿಯೆ./1128
ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ. /1129
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ,
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ,
ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ.
ಇಂತೀ ತ್ರಿವಿಧ ಗುಣವನರಿದಾತನು
ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ. /1130
ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು,
ಅವರೆಂತಿದ್ದಡೇನು ಹೇಗಿದ್ದಡೇನು ಲಿಂಗವಂತರವರು,
ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು./1131
ಲಿಂಗವಿರದೆ ಸೀಮೆಯ ಕಲ್ಲಿನಲ್ಲಿ
ಲಿಂಗವಿರದೆ ಪಶುವಿನ ತೊಡೆಯಲ್ಲಿ
ಕಲ್ಲ ತೆಕ್ಕೊಂಡು ಮೆಳೆಯ ಮೇಲೆ ಇಟ್ಟಡೆ,
ಆ ಕಲ್ಲು ಮೆಳೆಯಲ್ಲಿ ಸಿಕ್ಕಿದಡೆ ಆ ಮೆಳೆ ಭಕ್ತನಾಗಬಲ್ಲುದೆ
ಇದು ಕಾರಣ ಸತ್ಯ, ಸಹಜ, ಸದ್ಭಾವ, ಸದ್ವರ್ತನೆ ಉಳ್ಳಡೆ ಸದ್ಭಕ್ತ,
ಇಲ್ಲದಿದ್ದಡೆ ಆ ಮೆಳೆಯೊಳಗೆ ಸಿಕ್ಕಿ ಕಲ್ಲಿನಂತೆ
ಕಾಣಾ ಕೂಡಲಸಂಗಮದೇವಾ./1132
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ
-ಲಿಂಗವಿಲ್ಲದೆ ಉಗುಳ ನುಂಗಿದಡೆ
ಅಂದಂದಿಗೆ ಕಿಲ್ಬಿಷವಯ್ಯಾ_
ಏನೆಂಬೆನೇನೆಂಬೆನಯ್ಯಾ
ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ ಮುಟ್ಟಲಾಗದು.
ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು.
ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ
ಕೂಡಲಸಂಗಮದೇವಾ. /1133
ಲಿಂಗವೆ ಅಂಗ, ಅಂಗವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ.
ಲಿಂಗವೆ ಪ್ರಾಣ, ಪ್ರಾಣವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ.
ಉಂಟೆಂದು ತೋರಲಿಲ್ಲ, ಇಲ್ಲವೆಂದು ಅರಸಲಿಲ್ಲ,
ಕೂಡಲಸಂಗಮದೇವಾ, ಲಿಂಗ ನಿರಂತರವಲ್ಲಿಯೇ./1134
ಲಿಂಗವೆಂತಿಪ್ಪುದೆಂದರಿಯೆನು,
ಲಿಂಗದ ನಿಲವೆಂತುಟೆಂಬುದ ಹೋದ ಹೊಲಬನರಿಯೆನು,
ಲಿಂಗಾರ್ಚನೆಯ ಮಾತು ಎನಗೇಕಯ್ಯಾ
ಜಂಗಮಲಿಂಗವಾಗಿ ಬಂದು ನೀವಿರುತ್ತಿರಲು,
ಸ್ಥಾವರಕ್ಕೆ ಮಚ್ಚಿ ಮರುಳಾದೆನು
ಕೂಡಲಸಂಗಮದೇವಾ,
ಎನ್ನ ತಪ್ಪನೆ ಎಣಿಸಿಹೆನೆಂದಡೆ ಕಡೆಯಿಲ್ಲ./1135
ಲಿಂಗಶಿವಾಲಯದ ಮುಂದೆ ಸಿಂಹ ಶೂದ್ರಿಕನಲ್ಲದಿಲ್ಲ,
ನಂದಿಕೇಶ್ವರ ಭೃಂಗಿನಾಂಟ್ಯ ನಮ್ಮ ಲಿಂಗನ ಮುಂದೆ.
ಇದಕ್ಕೆ ದಿಷ್ಟದೀವಿಗೆ, ನಮ್ಮ ಲಿಂಗನ ಮುಂದೆ
ಅನ್ಯದೈವವೆಂಬುದ ತೋರಿಯೂ ಕಾಣಬಾರದು.
ನೊಸಲಕಣ್ಣ ಅಭವನೊಬ್ಬನೆ ದೈವ ಕೂಡಲಸಂಗಮದೇವ. /1136
ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ
ಕಂಡಡೆ ನಾಚುವೆ.
ಅವರ ನುಡಿ ಎನಗೆ ಸಮನಿಸದಯ್ಯಾ ಕೂಡಲಸಂಗಮದೇವಾ,
ನೀನು ಅಲ್ಲಿ ಇಲ್ಲದ ಕಾರಣ./1137
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
`ಸಂಬೋಳಿ ಸಂಬೋಳಿ ಎನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು./1138
ಲಿಂಗಾರ್ಪಿತವ ಮಾಡುವ ಅವಧಾನವೆಂತೆಂದಡೆ;
ಅನ್ಯಾಯವು ಸೋಂಕಲೀಯದವಧಾನವು,
ಅರಿಷಡ್ವರ್ಗಂಗಳು ಮುಟ್ಟಲೀಯದವಧಾನವು.
ಪಂಚಭೂತದ ಭವಿತ್ವವ ಕಳೆದು
ಪ್ರಸಾದಕಾಯವಾಗಿಪ್ಪ ಪರಿಯ ನೋಡಾ.
ಪಂಚೇಂದ್ರಿಯಂಗಳ ಗುಣವ ಕಳೆದು
ಪಂಚವಿಂಶತಿ ತತ್ವದಲ್ಲಿ ಪರಿಣಾಮಿ,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು./1139
ಲಿಂಗಾರ್ಪಿತವಿಲ್ಲದೆ ಬೋನ ಪದಾರ್ಥವ ಕೊಂಡಡೆ,
ಮಕ್ಕಳಡಗು ನರಮಾಂಸವಯ್ಯಾ.
ಲಿಂಗಾರ್ಪಿತವಿಲ್ಲದೆ ಉದಕವ ಮುಕ್ಕುಳಿಸಿದಡೆ
ನಾಯ ಮೂತ್ರವ ಮುಕ್ಕಳಿಸಿದುದಯ್ಯಾ.
ಲಿಂಗಾರ್ಪಿತವಿಲ್ಲದೆ ಹಲುಕಡ್ಡಿಯನಿರಿದಡೆ
ನಾಯ ಎಲುಬಿದ್ದ ಮಲಕ್ಕೆ ಬಾಯಿದೆರೆದು.
ನಿಮಗೆತ್ತಿದ ಕರವ ಅನ್ಯರಿಗೆ ಮುಗಿದಡೆ
ಅಘೋರ ನರಕವಯ್ಯಾ.
ಈ ಭಾಷೆಗೆ ತಪ್ಪಿದಡೆ ತಲೆದಂಡ ತಲೆದಂಡ,
ಅಳವರಿಯದೆ ನುಡಿದೆನು, ಕಡೆಮುಟ್ಟಿ ನಡಸಯ್ಯಾ.
ಪ್ರಭುವೆ ಕೂಡಲಸಂಗಮದೇವಾ./1140
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ.
ತಾಳಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ.
ಕೂಡಲಸಂಗಮದೇವಾ ಕೇಳಯ್ಯಾ,
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ !/1141
ಲೇಸೆನಿಸಿಕೊಂಡು ಅಯ್ದು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ನಾಲ್ಕು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ಮೂರು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ಎರಡು ದಿವಸ ಬದುಕಿದಡೇನು
ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ
ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ
ಎಂದುದಾಗಿ ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ !/1142
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ./1143
ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ,
ಲೋಕವಿರಹಿತ ಶರಣ, ಶರಣವಿರಹಿತ ಲೋಕವೆಂಬುದು
ಕಾಣಬಂದಿತ್ತು ನೋಡಾ.
ಲಿಂಗವೆ ಗೂಡಾಗಿ, ಜಂಗಮವೆ ಸ್ವಾಯತವಾಗಿ
ಪ್ರಸಾದವೆ ಪ್ರಾಣವಾಗಿ ಪರಿಣಾಮದಲ್ಲಿ ಇಪ್ಪ ನೋಡಯ್ಯಾ.
ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ
ನಮೋ ನಮೋ ಎಂಬೆನು./1144
ಲೋಕಾದಿ ಲೋಕಂಗಳೆಲ್ಲಾ ಚೆನ್ನಯ್ಯನ ಮಕ್ಕಳು,
ಬ್ರಹ್ಮವಿಷ್ಣುರುದ್ರರೆಲ್ಲಾ ಚೆನ್ನಯ್ಯನ ಮಕ್ಕಳು,
ಸನಕ ಸನಂದ ಸನಾದಿಗಳೆಲ್ಲಾ ಚೆನ್ನಯ್ಯನ ಮಕ್ಕಳು,
ಕಿನ್ನರ ಕಿಂಪುರುಷರೆಲ್ಲಾ ಚೆನ್ನಯ್ಯನ ಮಕ್ಕಳು,
ಗರುಡ ಗಾಂಧರ್ವರೆಲ್ಲಾ ಚೆನ್ನಯ್ಯನ ಮಕ್ಕಳು,
ಸಿದ್ಧವಿದ್ಯಾಧರರುಗಳೆಲ್ಲಾ ಚೆನ್ನಯ್ಯನ ಮಕ್ಕಳು,
ಏಕಾದಶರುದ್ರರು ದ್ವಾದಶಾದಿತ್ಯರು ಚೆನ್ನಯ್ಯನ ಮಕ್ಕಳು,
ನವಬ್ರಹ್ಮರು ಚೆನ್ನಯ್ಯನ ಮಕ್ಕಳು,
ತ್ರೈತ್ರಿಂಶಕೋಟಿ ದೇವತೆಗಳೆಲ್ಲಾ ಚೆನ್ನಯ್ಯನ ಮಕ್ಕಳು,
ಅಂತರಂತರ ಸಂತರೆಲ್ಲಾ ಚೆನ್ನಯ್ಯನ ಮಕ್ಕಳು,
ಭಾವ ಭಾಳೇಕ್ಷಣರೆಲ್ಲಾ ಚೆನ್ನಯ್ಯನ ಮಕ್ಕಳು.
ನನ್ನ ನಿನ್ನಂತಹವರೆಲ್ಲಾ ಚೆನ್ನಯ್ಯನ ಮಕ್ಕಳು.
ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ./1145
ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ.
ಮನದ ತಾಮಸ ಬಿಡದು, ಮನದ ಕಪಟ ಬಿಡದು,
ಶಿವಶರಣೆಂಬುದು ಅಳವಡದಯ್ಯಾ.
ಎನ್ನ ಮನದಲ್ಲಿ ಎರಡುಳ್ಳನ್ನಕ್ಕ
ಕೂಡಲಸಂಗಮದೇವನೆಂತೊಲಿವ/1146
ಲೋಹ ಪರುಷವ ಮುಟ್ಟುವುದಲ್ಲದೆ
ಪರುಷ ಪರುಷವ ಮುಟ್ಟುವುದೆ ಅಯ್ಯಾ
ಅಂಗವಿಡಿದಂಗೆ ಲಿಂಗವುಂಟಲ್ಲದೆ, ಲಿಂಗವಿಡಿದಂಗೆ ಲಿಂಗವುಂಟೆ
`ಆಣೋರಣೀಯಾನ್ ಮಹತೋ ಮಹೀಯಾನ್
ಹಿರಿದಕ್ಕೆ ಹಿರಿದು, ಕಿರಿದಿಂಗೆ ಕಿರಿದು, ವಾಙ್ಮನಕ್ಕಗೋಚರ
ಕೂಡಲಸಂಗಮದೇವಾ
ಸ್ವರೂಪು ಪ್ರಸಾದ, ನಿರೂಪು ಲಿಂಗೈಕ್ಯ. /1147
ಲೌಕಿಕದನುಸಂಧಾನ ಸಮನಿಸದೆ ಅನ್ಯವ ಸುಟ್ಟರು
ಎನ್ನ ಹೃದಯದ ಕಂಗಳು ಲಿಂಗದಲ್ಲಿ ನಟ್ಟು ಬಗೆಯಲಾರಳವು.
ಅಲ್ಲದೆ, ನಿಷ್ಠೆ ಒಲಿದು ಗಟ್ಟಿಗೊಂಡು ಅಂಗಶಂಕೆಯೆಂಬ ಭಂಗವಿನ್ನೆಲ್ಲಿಯದೊರಿ
ಹಾಲು ಬೆರಸಿದ ನೀರ ಹಂಸೆ[ಗಾ]ಗದಂತೆ
ಪಾವಕನಾದನಯ್ಯಾ ಕೂಡಲಸಂಗಮದೇವಾ ನಿಮ್ಮ ಶರಣು./1148
ಲೌಕಿಕರ ಕಂಡು ಆಡುವೆ, ಹಾಡುವೆ.
ತಾರ್ಕಿಕರ ಕಂಡು ಆಡುವೆ, ಹಾಡುವೆ.
ಸಹಜಗುಣವೆನ್ನಲಿಲ್ಲಯ್ಯಾ, ನಿಜಭಕ್ತಿಯೆನಗಿಲ್ಲ, ತಂದೆ.
ಏಕೋಭಾವ ಎನಗುಳ್ಳಡೆ, ಏಕೆ ನೀ ಕರುಣಿಸೆ
ಕೂಡಲಸಂಗಮದೇವಾ./1149
ವಚನದ ಹುಸಿ ನುಸುಳೆಂತು ಮಾಬುದೆನ್ನ
ಮನದ ಮರ್ಕಟತನವೆಂತು ಮಾಬುದೆನ್ನ
ಹೃದಯದ ಕಲ್ಮಷವೆಂತು ಮಾಬುದೆನ್ನ
ಕಾಯವಿಕಾರಕ್ಕೆ ತರಿಸಲುವೋದೆನು,
ಎನಗಿದು ವಿದಿಯೇ, ಕೂಡಲಸಂಗಮದೇವಾ/1150
ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕಿವಿಯಲ್ಲಿ ಕೀರುತಿ ತುಂಬಿ.
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ./1151
ವಚನನಾನುಭವವ ಮಾಡುವಯ್ಯಗಳಿರಾ,
ನಿಮಗೆ ವಚನ ಪ್ರಾಣಲಿಂಗವೊ ಅಲ್ಲ, ದಾಸೋಹ ಪ್ರಾಣಲಿಂಗವೊ !
ಆರೂಢವನೆ ಕಲಿತು ಅಂಗಸಂಗದಲಿಪ್ಪ
ಆರೂಢ ಪ್ರಾಣಲಿಂಗವೊ ಅಲ್ಲ, ದಾಸೋಹ ಪ್ರಾಣಲಿಂಗವೊ !
ಬ್ರಹ್ಮವಿದ್ಯೆಯನೆ ಕಲಿತು ಭ್ರಮೆಯೆಂಬ ಶೂಲದ ಮೇಲೆ ಕುಳ್ಳಿರ್ದು,
ಆ ಬ್ರಹ್ಮವಿದ್ಯೆಯೆ ಪ್ರಾಣಲಿಂಗವೊ ಅಲ್ಲ, ದಾಸೋಹವೆ ಪ್ರಾಣಲಿಂಗವೊ !
ಎಲ್ಲ ಮಾತುಗಳ ಹಲ್ಲಣಿಸಿಕೊಂಡು, ಬಲು ಹುಲಿಯ ಬೆನ್ನಲಿ ಬಪ್ಪತೆರನಂತೆ.
ಬಲ್ಲವರಿಗೆ ಬಲ್ಲವರು ನಮ್ಮ ಜಂಗಮದಾಸೋಹಿಗಳು.
ಕೂಡಲಸಂಗಮದೇವರರಿತಡೆ ನಿಮ್ಮ ಹಲ್ಲ ಕಳೆವ ಕಾಣೆ ! /1152
ವನದ ಕೋಗಿಲೆ, ಮನೆಗೆ ಬಂದಡೆ
ತನ್ನ ವನವ ನೆನೆವುದ ಮಾಣ್ಬುದೆ
ಮಲೆಯ ಗಜ ಮನೆಗೆ ಬಂದಡೆ
ತನ್ನ ಮಲೆಯ ನೆನೆವುದ ಮಾಣ್ಬುದೆ
ಕೂಡಲಸಂಗನ ಶರಣರು ಮತ್ರ್ಯಕ್ಕೆ ಬಂದಡೆ
ತಮ್ಮ ಆದಿಮಧ್ಯಾಂತರಂಗದ ಲಿಂಗವ ನೆನೆವುದ ಮಾಣ್ಬರೇ/1153
ವರಂ ಪ್ರಾಣಪರಿತ್ಯಾಗಶ್ಚೇದನಂ ಶಿರಸೋಡಿಪಿ ವಾಶ
ನತ್ವನಭ್ಯಚ್ರ್ಯ ಭುಂಜೀಯಾತ್ ಭಗವಂತಂ ತ್ರಿಲೋಚನಂ
ಎಂದುದಾಗಿ, ಧೇಹಧರ್ಮ ತನ್ನ ಆದಂತೆ ಆಗಲಿ,
ಕೂಡಲಸಂಗನ ಪೂಜಿಸಿದಲ್ಲದೆ ನಿಲಲಾರೆನು./1154
ವಶ್ಯವ ಬಲ್ಲೆವೆಂದೆಂಬಿರಯ್ಯಾ,
ಬುದ್ಧಿಯನರಿಯದ ಮನುಜರು ಕೇಳಿರಯ್ಯಾ.
ವಶ್ಯವಾವುದೆಂದರಿಯದೆ ಮರುಳುಗೊಂಬಿರಿ,
ಎಲೆ ಗಾವಿಲ ಮನುಜರಿರಾ.
ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ
ಕೂಡಲಸಂಗಮದೇವಾ./1155
ವಾರವೆಂದರಿಯೆ, ದಿನವೆಂದರಿಯೆ,
ಏನೆಂದರಿಯೆನಯ್ಯಾ.
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ.
ನಿಮ್ಮ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ./1156
ವಾಸನೆ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು,
ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ,
ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ, ಕೂಡಲಸಂಗಮದೇವಾ./1157
ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ,
ಮತಿಗೆಟ್ಟೆನು ಮನದ ವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಶರಣುವೊಕ್ಕೆನು ಕೂಡಲಸಂಗಮದೇವಯ್ಯಾ./1158
ವಿಪ್ರರ ಕರೆದು `ನೃಪರುಗಳು ಇಪ್ಪರೆ
ತಮ್ಮ ಶಿಶುವಿನೊಡನೆ’ಂದು ಬೆಸಗೊಂಡಡೆ,
`ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ ತಾವು ಉಣ್ಣದವರುಂಟೆ
ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು.
ಅಂತೆಂದ ಮಾತ ಶಿಶು ಕೇಳಿ,
ಕೆಟ್ಟೋಡಿ ಬಂದು, ಲಿಂಗದ ಹೊಟ್ಟೆಯ ಹೊಗಲು,
ಅಟ್ಟಿಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು,
ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು,
ಘಟಸರ್ಪನ ತುಡುಕಿ ನಾಗನಾಥನಾಗಿ,
ಇಪ್ಪತ್ತೇಳು ಬಸದಿಯನೊಡೆಯನೆ
ಆಗಳಂತೆ ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು.
ಮುನ್ನೊಬ್ಬ ಕೆಡಿಸಿಹನೆಂದು ಬಂದು ತುತ್ತನಿಟ್ಟು
ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ
ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು.
ಕೂಡಲಸಂಗಮದೇವ ಸಾಕ್ಷಿಯಾಗಿ
ಮಕರಭೋಜನವಾಗನೆ ವಿನಾಶಕ್ತಿರಾಯನು. /1159
ವಿಶ್ವಜಿತನು, ದನುಜಿತನು, ಸರ್ವಜಿತನು,
ಸುತ್ರಾಮಜಿತನು, ನೃಜಿತನು, ಅಶ್ವಜಿತನು, ಗೋಜಿತನು,
ಅರ್ಜೀತನು, ಸ್ವಸಂವೇದ್ಯನು, ವೇದನಾದಾತೀತನು.
ತೂರ್ಯಪರಮಾನಂದ ನಿರವಯ,
ಸೂರ್ಯಕೋಟಿಪ್ರಭೆಯ ಬೆಳಗಿನ
ಸಹಸ್ರಕಿರಣದ ಅಗ್ರಪಟಲದ ಬೆಳಗು ಕೂಡಲಸಂಗಯ್ಯ./1160
ವಿಶ್ವಾಧಿಕೋ ರುದ್ರನ ಹೊಗಳುವ ಶ್ರುತಿಗಳು
`ವಿಶ್ವರೂಪಾಯ ವೈ ನಮಃ
`ಪರಮರೂಪನೆ ನಮೋ, ಪರತತ್ವನೆ ನಮೋ,
ಆದಿಯಾರೂಢಭಯಂಕರನೆ ನಮೋ,
ಹರಿಯನು ಹರಿಸಿದನೇ’ ಎಂದು ಶ್ರುತಿ ಸಾರುತ್ತಿರಲು
ಸಂಹಾರಕಾರಣನೆ ನಮೋ, ನಮ್ಮ ಕೂಡಲಸಂಗ
ಮಹದ್ ಮಹದ್ಭ್ಯೋ ನಮಃ. /1161
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ.
ಪಶುವೇನ ಬಲ್ಲುದು ಹಸುರೆಂದೆಳಸುವುದು.
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ,
ಸುಬುದ್ಧಿಯೆಂಬ ಉದಕವನೆರೆದು,
ನೋಡಿ ಸಲಹಯ್ಯಾ, ಕೂಡಲಸಂಗಮದೇವಾ./1162
ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ:ಕ್ರಮವನರಿಯದೆ ನುಡಿವಿರೊ !
ವೇದಶ್ರುತಿಗಳ ತಿಳಿಯಲರಿಯದೆ ವಾದುಮಾಡುವರೆಲ್ಲ ಕೇಳಿ:
ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ,
ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ !
ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ
ಇಂದ್ರಸ್ಯ ಯುಜ್ಯಃ ಸಖಾ
ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ
ದಿವೀವ ಚಕ್ಷುರಾತತಂ
ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ !
ವಿಷ್ಣೋರ್ಯತ್ಪರಮಂ ಪದಂ
ಎಂಬ ಶ್ರುತಿವಚನವ ತಿಳಿಯಿಂ ಭೋ !
ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ;
ನಿಮ್ಮ ಕರ್ಮವು ಅತ್ಯತಿಷ್ಠದ್ದಶಾಂಗುಲದಿಂದತ್ತತ್ತಲೆ,
ಕೂಡಲಸಂಗಮದೇವಾ. /1163
ವಿಷ್ಣು ಬಲ್ಲಿದನೆಂಬೆನೆ
ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ.
ಬ್ರಹ್ಮ ಬಲ್ಲಿದನೆಂಬೆನೆ
ಶಿರ ಹೋಗಿ ನಾನಾ ವಿಧಿಯಾದ.
ವೇದ ಬಲ್ಲಿತ್ತೆಂಬೆನೆ
ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ
ಲಿಂಗದ ನಿಲುಕಡೆಯ ಕಾಣದು.
ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ.
ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ.
ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು.
ಇದು ಕಾರಣ ಕೂಡಲಸಂಗಯ್ಯನೆ ನಿತ್ಯ,
ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ. /1164
ವಿಷ್ಣು ವರಾಹವತಾರದಲ್ಲಿ ಹಂದಿಯಂ ತಿಂಬುದಾವಾಚಾರವೋ
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೋ
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೋ
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ ಹೋತನ ಕೊಂದು
ತಿಂಬುದಾವಾಚಾರದೊಳಗೋ
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯುವೆ ಬಾಲಹುಳುಗಳು /1165
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ,
ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ,
ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ,
ನಮ್ಮ ಕೂಡಲಸಂಗನ ಪೂಜಿಸಿ ದೇವಾ,
ಭಕ್ತರೆನಿಸಿಕೂಂಬುದ ಕಂಡೆ. /1166
ವೀರದನುಜರೆಲ್ಲಾ ಧಾರುಣಿಯೆಂಬುದರೊಳಗೆ
ಸಾಗರವಾಗಿದ್ದುದನಾರೂ ಅರಿಯರಲ್ಲಾ,
ದ್ವಾರಾವತಿಯಪುರದೊಳಗೆ ಪರವು ಬಂದಿದ್ದಡೆ
ಶರೀರಸಂಬಂಧವ ಮಾಡಲರಿಯರಲ್ಲಾ.
ಕರಗಸವ ಕಳೆದುಕೊಂಡು, ಪರಶುರಾಮನ ಗೆಲಿದು,
ಸುರರೊಳಗೆ ಸುಳಿದಾಡಲರಿಯರಲ್ಲಾ.
ವಾರುಧಿಯ ಸೇರಿಕೊಂಡು, ಮರಣವೆಂಬುದ ನಿಲಿಸಿ,
ತ್ರಿಪುರವ ಮೂರ್ತಿಗೊಳಿಸಲರಿಯರಲ್ಲಾ.
ಮೇರುವೆಂಬುದ ಹೊಕ್ಕು ನೂರೆಂಟನೆಣಿಸಿಕೊಂಡು
ನಿರಾಕಾರದಲಡಗುವರಿನ್ನಾರು ಹೇಳಾ
ಸಾಸಿರದ ಮೇಲೆ ನೂರೆಂಬತ್ತೆಂಟು ರಾಶಿ
ಪರುಷವೇಧಿಗಳಾಗಲರಿಯರಲ್ಲಾ.
ಕೂಡಲಸಂಗನ ಶರಣರ ಸಂಬಂಧವು
ಪ್ರಭುವಿಂಗಲ್ಲದೆ ಮತ್ತಾರಿಗೆಯೂ ಅಳವಡದು./1167
ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ;
ವೀರನಾದಡೆ ವೈರಿಗಳು ಮೆಚ್ಚಬೇಕು,
ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದಡೆ ಜಂಗಮವೆ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ./1168
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !
ತರ್ಕ ತಕರ್ಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !
ಆಗಮ ಹೆರತೊಲಗಿ ಅಗಲಿದ್ದಿತಯ್ಯಾ !
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ./1169
ವೇದ ವೇದಾಂತಗಳಿಗೆ ಅಸಾಧ್ಯವಾದ
ಅನುಪಮಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ.
ನಾದಬಿಂದು ಕಳೆಗೆ ಅಭೇದ್ಯವಾದ
ಅಚಲಿತ ಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ.
ವಾಙ್ಮನಕ್ಕಗೋಚರವಾದ
ಅಖಂಡಿತ ಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ,
ಇನ್ನು ನಾನು ಬದುಕಿದೆನು, ನಾ ಬಯಸುವ ಬಯಕೆ ಕೈಸಾರಿತ್ತಿಂದು ಕೂಡಲಸಂಗಮದೇವಾ./1170
ವೇದ ವೇಧಿಸಲರಿಯದೆ ಅಭೇದ್ಯಲಿಂಗವೆಂದು ನಡನಡುಗಿತ್ತು.
ಶಾಸ್ತ್ರ ಸಾಧಿಸಲರಿಯದೆ ಅಸಾಧ್ಯಲಿಂಗವೆಂದು ಸಾರುತ್ತೈದಾವೆ.
ತರ್ಕ ತರ್ಕಿಸಲರಿಯದೆ ಅತಕ್ರ್ಯಲಿಂಗವೆಂದು ಮನಂಗೊಳ್ಳವು.
ಆಗಮ ಗಮಿಸಲರಿಯದೆ ಅಗಮ್ಯಲಿಂಗವೆಂದು ಹೋದವು.
ನರರು ಸುರರು ಅಂತುವ ಕಾಣರು,
ನಮ್ಮ ಕೂಡಲಸಂಗನ ಪ್ರಮಾಣ ಶರಣ ಬಲ್ಲ. /1171
ವೇದ ಸ್ವಯಂಭು’ವೆಂಬ ವಾದಿ ಕೇಳೆಲವೋ.
`ಏಕೋ ದೇವೋ ರುದ್ರೋ ನ ದ್ವಿತೀಯಃ
ಎಂದು ನಂಬುವುದು ಕಾಣಿರಣ್ಣಾ.
`ಚಕಿತಮಭಿಧತ್ತೇ ಎಂದು ಶ್ರುತಿ ಸಾರುತ್ತೈದಾವೆ
ಜಗದ ಕರ್ತ ಕೂಡಲಸಂಗಮದೇವನೊಬ್ಬನೆ ಕಾಣಿರಣ್ಣಾ. /1172
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ. /1173
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ.
ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ
ಸತ್ತವರೊಳರೆ ಅಯ್ಯಾ
ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ./1174
ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
`ಭಗರ್ೊ ದೇವಸ್ಯ ಧೀಮಹಿ’ ಎಂಬರು,
ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ
ಕೂಡಲಸಂಗಮದೇವಾ. /1175
ವೇದವನೋದಿದಡೇನು ಶಾಸ್ತ್ರವ ಕೇಳಿದಡೇನಯ್ಯಾ
ಜಪವ ಮಾಡಿದಡೇನು ತಪವ ಮಾಡಿದಡೇನಯ್ಯಾ
ಏನ ಮಾಡಿದಡೇನು
ನಮ್ಮ ಕೂಡಲಸಂಗಯ್ಯನ ಮನಮುಟ್ಟದನ್ನಕ್ಕ /1176
ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ,
ಇವರು ಹಿರಿಯರುಗಳೇ
ಯಾಗನಟ್ಟುವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ
ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ,
ನಮ್ಮ ಕೂಡಲಸಂಗನ ಶರಣರು ಸಾದಿಸಿದ ಸಾಧನೆಯನೆ
ಸಾಧಿಸುವುದು. /1177
ವೇದಾಗಮಂಗಳು ಹೇಳಿದ ಹಾಗೆ ನಡೆವುದು, ಹೇಳಿದಂತೆ ನುಡಿವುದು,
ಮೀರಿ ನಡೆಯಲಾಗದು, ಮೀರಿ ನುಡಿಯಲಾಗದು,
ಮುಕ್ತಿಪದವೈದುವಾತ.
ಅಪಹಾಸ್ಯಕ್ಕೆ ಬಾರದೆ ಆಚಾರಮಾರ್ಗದಲ್ಲಿರಬಲ್ಲಡೆ
ಕೂಡಲಸಂಗಮದೇವನೀಗಲೆ ಒಲಿವ./1178
ವೇದಾತೀತ, ಷಡುವರ್ಣರಹಿತ, ಅಷ್ಟತ್ರಿಂಶತ್ಕಳಾತೀತ,
ವ್ಯೋಮಾತೀತ, ಕೂಡಲಸಂಗಮದೇವ. /1179
ವೇದಾದಿ ನಾಮ ನಿರ್ನಾಮ ಮಹತ್ತತ್ತ್ಜಂ ಮದೀಶ್ವರಃ
ಗುರೂಕ್ತಮಂತ್ರಮಾರ್ಗೆಣ ಇಷ್ಟಲಿಂಗಂ ತು ಶಾಂಕರಿ
ಎಂದುದಾಗಿ, ವಚನಪಾತಕವೆನ್ನ, ವಚನದೋಷಂಗಳೆನ್ನ,
ಕಾಡಿ ಕಾಡಿ ಕೆಡಿಸಿಹವೆನ್ನ ! ಕೂಡಲಸಂಗಮದೇವಾ `ಅಹಂ ಎಂಬ ಅಹಂಕಾರವೆನ್ನ./1180
ವೇಷ ಅವಿಚಾರದಲ್ಲಿ ನಡೆುತ್ತೆಂದು
ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ :
ಹರಿಯನೆ ದಾಸನ ವಸ್ತ್ರವ:ಉಣ್ಣನೆ ಚೆನ್ನಯ್ಯನ ಸಂಗಾತ
ಪರವಧುವ ಕೊಳ್ಳನೆ ಸಿಂಧುಬಲ್ಲಾಳನ:ಬೇಡನೆ ಸಿರಿಯಾಳನ ಮಗನ
ನಡೆವುದು ನುಡಿವುದು ಅವಿಚಾರವೆಂದು,
ಭಾವ ವಿಭಾವವೆಂದು ಕಂಡೆನಾದಡೆ ತಪ್ಪೆನ್ನದು, ಮೂಗ ಕೊಯು,
ಕೂಡಲಸಂಗಮದೇವಾ./1181
ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ,
ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.
ಮೊಲನಿಂದ ಕರಕಷ್ಟ ನರನ ಬಾಳುವೆ,
ಸಲೆ ನಂಬೊ ನಮ್ಮ ಕೂಡಲಸಂಗಮದೇವನ./1182
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ ! ಕುಲದಿಂದ ಮುನ್ನೇನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
ಕಾಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ ! /1183
ಶಕುನವೆಂದೆಂಬೆ, ಅವಶಕುನವೆಂದೆಂಬೆ.
ನಿಮ್ಮವರು ಅಳಲಿಕೆ ಅಂದೇಕೆ ಬಂದೆ
ನಿಮ್ಮವರು ಅಳಲಿಕೆ ಇಂದೇಕೆ ಹೋದೆ
ನೀ ಹೋಹಾಗಳಕ್ಕೆ ! ಬಾಹಾಗಳಕ್ಕೆ !
ಅಕ್ಕೆ ಬಾರದ ಮುನ್ನ ಪೂಜಿಸು
ಕೂಡಲಸಂಗಮದೇವನ./1184
ಶಬ್ದಸಂಭಾಷಣೆಯ ನುಡಿಯ ವರ್ತಿಸಿ ನುಡಿವೆ,
ತೊಡಹದ ಕೆಲಸದ ಬಣ್ಣದಂತೆ
ಕಡಿಹಕ್ಕೆ ಒರೆಗೆ ಬಾರದು, ನೋಡಾ.
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ.
ಕೂಡಲಸಂಗಮದೇವಾ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯಾ/1185
ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ ಮಾತನೆ ಕೊಟ್ಟು, ಕೆಟ್ಟೆನಯ್ಯಾ !
ಅನುಭಾವದ ಅಕ್ಕವೆಯಾಗದೆ, ಬಿಬ್ಬನೆ ಬಿರಿದೆನಯ್ಯಾ !
ಅಮೃತದ ಕೊಡನ ತುಂಬಿ, ಒಡೆಯ ಹೊಯ್ದು, ಅರಸಲುಂಟೇ
ಸ್ವಾಮಿಭೃತ್ಯಸಂಬಂಧವೇ ಎನ್ನ ಭಕ್ತಿ, ಪ್ರತ್ಯುತ್ತರ ನಾಯಕನರಕ ಕೂಡಲಸಂಗಮದೇವಾ./1186
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ. /1187
ಶರಣ ಮನಬಂದಂತೆ ಮಾಡುವ;
ಅರಸಿ ಸಕಳಾಗಮಚಾರ್ಯನಪ್ಪ,
ಅಹುದಾಗದೆಂಬ ಪರಿಯಲ್ಲ ನೋಡಾ.
ಕೂಡಲಸಂಗನ ಶರಣ ಸಂಗಿಯಲ್ಲ, ನಿಸ್ಸಂಗಿಯಲ್ಲ./1188
ಶರಣ ಲಿಂಗದಲ್ಲಿ ಕೂಡಲು ಮಹಾಪಥವಯ್ಯಾ !
ದೃಢದೃಢಾಂಗಮಧ್ಯಸ್ಥನಾಗಿ,
ಕೂಡಲಸಂಗಮದೇವರ ನಾಮವತಿಸುಖವೆಂದುದು./1189
ಶರಣ ಸಂಬಂಧವನರಿದ ಬಳಿಕ
ಮರಳಿ ಭವಿಯ ಬೆರಸಲಾಗದು.
ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ
ಪಂಚಮಹಾಪಾತಕದಿಂದಧಿಕ ನೋಡಾ.
ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ
ಕೂಡಲಸಂಗಮದೇವಾ./1190
ಶರಣ, ನಿಚ್ಚನಿಚ್ಚ ಪೂಜಿಸುವಂಗೆ ಇದಕ್ಕಿದೆ ದೃಷ್ಟದೀವಿಗೆ-
ಪಾದೋದಕ; ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ.
ಮಜ್ಜನಕ್ಕೆರೆವುದು ಲಿಂಗ; ಕರಸ್ಥಲದಿಬ್ಯ.
ಗುರುವಚನ; ಭಾಷಾಪತ್ರ ಶಿವಕರದಲ್ಲಿ.
ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ
ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ.
ಲಿಂಗವ ಪೂಜಿಸಿ ಮರಳಿ ಅನ್ಯಾಯಕ್ಕೆರಗಿದಡೆ
ಕೂಡಲಸಂಗಮದೇವನವರ ಹಲ್ಲ ಕಳೆವ. /1191
ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ.
ತಾಗಲಿ, ತಪ್ಪಲಿ ಗೆಲವೆನ್ನದೆಂಬೆನಯ್ಯಾ.
ಕಳನಿಂದ ಕಡೆಗಳಕ್ಕೆ ಓಡುವೆ,
ಕೂಡಲಸಂಗಯ್ಯಾ. /1192
ಶರಣಸನ್ನಿಹಿತ ಐಕ್ಯವಹಲ್ಲಿ
ಹರಿಬ್ರಹ್ಮಾದಿಗಳು ಮೊದಲಾದ ತೆತ್ತೀಸಾದಿ ದೇವರ್ಕಳುಘೇ ಉಘೇ ಎನ್ನುತ್ತಿರಲು
ಐಕ್ಯ ಬಸವಣ್ಣಂಗೆಠಾವಾವುದಯ್ಯಾ ಎಂದಡೆ;
ಅಂಗದ ಬಲದಲ್ಲಿ ಬ್ರಹ್ಮನ ಸ್ಥಾನ,
ಎಡದಲ್ಲಿ ನಾರಾಯಣನ ಸ್ಥಾನ, ಒಲ್ಲೆನಯ್ಯಾ.
ಕೊರಳು ಗರಳದ ಸ್ಥಾನ, ಬಾಯಿ ಅಪ್ಪುವಿನ ಸ್ಥಾನ,
ನಾಸಿಕ ವಾಯುವಿನ ಸ್ಥಾನ, ಕಣ್ಗಳು ಅಗ್ನಿಯ ಸ್ಥಾನ,
ಜಡೆ ಗಂಗೆಯ ಸ್ಥಾನ, ನೊಸಲು ಚಂದ್ರನ ಸ್ಥಾನ,
ಹಿಂದು ಸೂರ್ಯನ ಸ್ಥಾನ, ಚರಣಂಗಳು ಅಷ್ಟದಿಕ್ಪಾಲಕರ ಸ್ಥಾನ,
ಗುಹ್ಯ ಕಾಮನ ಸ್ಥಾನ,
ಹಸ್ತಂಗಳು ಕಪಾಲ ಖಟ್ವಾಂಗ ತ್ರಿಶೂಲ ಡಮರುಗ ಸ್ಥಾನ,
ದೇಹ ರುಂಡಮಾಲೆಯ ಸ್ಥಾನ, ಕರ್ಣ ನಾಗೇಂದ್ರನ ಸ್ಥಾನ,
ಇಂತೀ ಸ್ಥಾನಂಗಳ ನಾನೊಲ್ಲೆನಯ್ಯಾ.
ಹೃದಯಮಧ್ಯದ ಅಂತರಾಳದ
ಏಕಪೀಠದ ಸಿಂಹಾಸನವ ತೆರಪ ಕೊಡು
ಕೂಡಲಸಂಗಮದೇವಾ./1193
ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ,
ಸತ್ವ ರಜ ತಮ ಕ್ರೋಧ ಬಿಡದನ್ನಕ್ಕ
ಅನುಭಾವವೆಲ್ಲಿಯದೊ
ಆತ್ಮಸ್ತುತಿ ಪರನಿಂದೆಯ ಬಿಡದನ್ನಕ್ಕ,
ಅರಿಷಡ್ವರ್ಗ ದಶವಾಯು ಬೆರೆಸಿಪ್ಪ
ಕಳಂಕವಪ್ಪ ತನುವ ಬಿಡದನ್ನಕ್ಕ.
ಸಂಸಾರ ಮಾದಲ್ಲದೆ
ಶರಣಸಜ್ಜನಿಕೆ, ಸಮಯಾಚಾರ, ನಿಜವ್ರತವು
ದುರಾಚಾರಿಗಳಿಗಳವಡದು,
ನಮ್ಮ ಕೂಡಲಸಂಗನ ಶರಣರಿಗಲ್ಲದೆ./1194
ಶರಣೆಂದು ಕರ ಸಂತೋಷವ ಮಾಡಿ,
ಮುರಿದು ಮುಂಜೆರಗ ಗಂಟಿಕ್ಕಿ,
ನೆಲನ ಹೊಯಿದ ಕೈ ತಪ್ಪುವುದಲ್ಲದೆ,
ಆದಿ ಶರಣರ ನುಡಿ ತಪ್ಪುವುದೆ
ಕೂಡಲಸಂಗಮದೇವರು ಸಾಕ್ಷಿಯಾಗಿ
ಕಟ್ಟುವೆ ಗುಡಿಯನೆತ್ತುವೆನು ಧ್ವಜವ./1195
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು,
ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು,
ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ.
ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ,
ಗುರುವೆ, ಎನ್ನ ಪರಮಗುರುವೆ ಬಾರಯ್ಯಾ,
ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ /1196
ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ.
ಸೀತಾಳದಾಪ್ಯಾಯನವಾಯಿತೆಂದಡೆ
ಪರಹಿತಾರ್ಥವೆಂದು ತೋರಿದೆನೆನ್ನ ಪ್ರಾಣಲಿಂಗವನು
ನೇಮವ ಮಾಡಲೆಂದು ಕೊಟ್ಟಡೆ
ಕೊಂಡೋಡಿ ಹೋದನು ಅನಿಮಿಷನು.
ಅಭವನ ಮಹಾಮನೆಯ ಹೊಕ್ಕಡೆ
ಎನಗೆ ಹೇಯವನೊಡ್ಡಿ ಅರಸೆಂದು ಕಳುಹಿದನು.
ಅಳಲಿ ಬಳಲಿ ತೊಳಲಿ ಆಡಿಹಾಡಿ ಹಂಬಲಿಸಿ,
ಅನಂತ ಅವಸ್ಥೆಯಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನವ ಹಾಡಿ
ಆಚಾರ ವಿಚಾರದಿಂದ
ವಿಚಿತ್ರನಭೆಯವ ಕೊಟ್ಟು ಕಳುಹಿಸಿದನಯ್ಯಾ.
ಗೊಹೇಶ್ವರನ ಶರಣ ತೋರಿದಡರಿದನು ಕೂಡಲಸಂಗಮದೇವರ./1197
ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ./1198
ಶಿವಚಿಂತೆ ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ
ಆಚಾರ ಶಿವಚಾರ ತಮತಮಗೆ ಸೂರೆಯೆ
ಕೂಡಲಸಂಗಮದೇವನ ಪೂಜಿಸಿದವಂಗಲ್ಲದೆ./1199
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ
ಕಾಡ ಮೃಗವೊಂದಾಗಿರಲಾಗದೆ, ದೇವಾ
ಊರ ಮೃಗವೊಂದಾಗಿರಲಾಗದೆ, ಹರನೆ
ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ-
ವನವಾಸ, ನರವಿಂಧ್ಯ ಕಾಣಿರಣ್ಣಾ./1200
ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,
ತನ್ನ ಅಂಗದ ಮೇಲೆ ಲಿಂಗವಿರುತಿರಲು,
ಅನ್ಯರನೆ ಹಾಡಿ, ಅನ್ಯರನೆ ಹೊಗಳಿ,
ಅನ್ಯರ ವಚನವ ಕೊಂಡಾಡಲು, ಕರ್ಮ ಬಿಡದು, ಭವಬಂಧನ !
ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು !
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರಿಗೆ
ಮಳಲ ಗೋಡೆಯನಿಕ್ಕಿ, ನೀರಲ್ಲಿ ತೊಳೆದಂತಾಯಿತ್ತಯ್ಯಾ./1201
ಶಿವನೆ ಜಗತ್ರಯಕ್ಕೊಡೆಯನೆಂದುದು ವೇದ,
ಉತ್ಪತ್ತಿ ಸ್ಥಿತಿ ಲಯಕಾರಣನೆಂದುದು ವೇದ,
`ಈಶಃ ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್’ ಎಂದುದು ಶ್ರುತಿ
ಇದು ಕಾರಣ,
ಕೂಡಲಸಂಗಮದೇವನೊಬ್ಬನೆ ದೇವನು./1202
ಶಿವಭಕ್ತನಾಗಿ ತನ್ನ ಹಿಡಿದೆಹೆನೆಂದು ಹೋದಡೆ;
ನುಗ್ಗು ಮಾಡುವ, ನುಸಿಯ ಮಾಡುವ,
ಮಣ್ಣ ಮಾಡುವ, ಮಸಿಯ ಮಾಡುವ.
ಕೂಡಲಸಂಗಮದೇವರ ನೆರೆ ನಂಬಿದನಾದಡೆ;
ಕಡೆಗೆ ತನ್ನಂತೆ ಮಾಡುವ. /1203
ಶಿವಭಕ್ತರೆ ಅಧಿಕರು ನೋಡಯ್ಯಾ.
ಇದಕ್ಕೆ ಅಧಿಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆ,
ಕೂಡಲಸಂಗಮದೇವಾ./1204
ಶಿವಮಯ ವಿಷ್ಣುವಲ್ಲ, ವಿಷ್ಣುಮಯ ಶಿವನಲ್ಲ, ನುಡಿಯದಿರಿಂ ಭೋ !
ನಾರಾಯಣ ಹರನಲ್ಲ ನುಡಿಯದಿರಿಂ ಭೋ !
ಶಿವನು ವಿಷ್ಣುವಲ್ಲ ನುಡಿಯದಿರಿಂ ಭೋ !
ನಮ್ಮ ಕೂಡಲಸಂಗಯ್ಯನನರಿಯದ ಸೂನೆಗಾರರೆಲ್ಲ
ನುಡಿಯದಿರಿಂ ಭೋ ! /1205
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ,
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ.
ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ;
ಕೂಡಲಸಂಗಯ್ಯನೊಬ್ಬನೆ ದೈವವೆಂದು. /1206
ಶಿವಶಿವಾ ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ.
ಸತ್ಯ[ಶುದ್ಧ]ವುಳ್ಳವಂಗೆ ಗುರುವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಲಿಂಗವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಜಂಗಮವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಪ್ರಸಾದವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಗಣತ್ವವಿಲ್ಲ ಕೇಳಿರೆ.
ಸತ್ಯಶುದ್ಧ ದೇವರಿಗೆ ಉಪಚಾರವುಂಟು,
ಸತ್ಯಶುದ್ಧ ದೇವರಿಗೆ ಧ್ಯಾನಮೌನ ಅನುಷ್ಠಾನವುಂಟು,
ಸತ್ಯಶುದ್ಧ ಉಪದೇಶಕ್ಕೆ ಜಪ ತಪ ಸಂಜೆ ಸಮಾಧಿ
ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು.
ಸತ್ಯಶುದ್ಧ ದೇವರಿಗೆ ಉಪಚಾರವುಂಟಾದ ಕಾರಣ
ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ.
ಇವರೆಲ್ಲರು ಬ್ರಹ್ಮನ ಮಕ್ಕಳು.
ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಆವ ಸಹಜವೂ ಇಲ್ಲದ ಲಿಂಗೈಕ್ಯ ಕಾಣಾ
ಕೂಡಲಸಂಗಮದೇವಾ. /1207
ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಹರ ಹರಾ ಎಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಶ್ರೀ ವಿಭೂತಿ ರುದ್ರಾಕ್ಷಿ ಭಕುತಿಯ ಮುಕುತಿಗೆ ಸಾಧನವೋ ಎನ್ನ ತಂದೆ,
ಎನಗಿದೆ ಗತಿಮತಿ ಚೈತನ್ಯ, ಕೂಡಲಸಂಗಮದೇವಯ್ಯಾ,
ನಿಮ್ಮ ನಾಮದ ರುಚಿ ತುಂಬಿತ್ತೊ ಎನ್ನ ತನುವ./1208
ಶಿವಾಚಾರವೆಂಬುದೊಂದು ಬಾಳಬಾಯ ಧಾರೆ;
ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು,
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದಡೆ ಮೆಚ್ಚ ನಮ್ಮ ಕೂಡಲಸಂಗಮದೇವ/1209
ಶಿಶುವೆನ್ನಬಹುದೆ, ನಂಬಿಯಣ್ಣನ
ಸೂಕ್ಷ್ಮನೆನಬಹುದೆ ರವಿಯನು, ಜಗವ ಬೆಳಗುವ
ದೃಷ್ಟಿ ಕಿರಿದೆನ್ನಬಹುದೆ, ಸೃಷ್ಟಿಯನು ಕಾಣ್ವ
ಭಾವ ಕಿರಿದೆನ್ನಬಹುದೆ, ಬಳ್ಳ ಲಿಂಗವಾದುದನು
ಕೂಡಲಸಂಗಮದೇವಯ್ಯಾ,
ಯುಗಜುಗವೆಲ್ಲವನೂ ಮೀರಿದ ಶರಣನ
ಕಿರಿದೆನಬಹುದೆ, ಚೆನ್ನಬಸವಣ್ಣನ /1210
ಶುದ್ಧವ ಗುರುವಿಂಗೆ ಕೊಟ್ಟು, ಶುದ್ಧವಾಯಿತ್ತೆಂಬೆನಯ್ಯಾ,
ಸಿದ್ಧವ ಲಿಂಗಕ್ಕೆ ಕೊಟ್ಟು, ಸಿದ್ಧವಾಯಿತ್ತೆಂಬೆನಯ್ಯಾ,
ಪ್ರಸಿದ್ಧವ ಜಂಗಮಕ್ಕೆ ಕೊಟ್ಟು, ಪ್ರಸಿದ್ಧವಾಯಿತ್ತೆಂಬೆನಯ್ಯಾ.
ಗುರುಲಿಂಗಜಂಗಮವ ಏಕತ್ರಯವಾಗಿ ಕಾಣಲರಿಯದಿದ್ದಡೆ
ಶುದ್ಧ ಸಿದ್ಧ ಪ್ರಸಿದ್ಧ ಒಡನೆ ನಗುತ್ತೈದಾವೆ.
ತನುಮನಧನವ ನಿವೇದಿಸಲರಿಯೆನಾಗಿ
ಕೂಡಲಸಂಗಮದೇವ, ಒಲಿ ಎಂದಡೆಂತೊಲಿವ /1211
ಶುದ್ಧವಾಯಿತ್ತೆಂಬೆನೆ ಸುಯಿಧಾನಿ ನಾನಲ್ಲ,
ಅನುವಾಯಿತ್ತೆಂಬೆನೆ ಅವಧಾನಿ ನಾನಲ್ಲ,
ಸುಯಿಧಾನ ಅವಧಾನ ಅರ್ಪಿತವ ನಾನರಿಯೆ.
ಇದ್ದ ಪರಿಯಲಿ ನೀಡಿದಡೆ, ಬಂದ ಪರಿಯಲಿ ಕೈಕೋ
ಕೂಡಲಸಂಗಮದೇವಾ. /1212
ಶುದ್ಧಾತ್ಮ ಪರಮಾತ್ಮರಿಬ್ಬರೂ
ಒಂದು ರತ್ನಕ್ಕೆ ಹೆಣಗಾಟವನಾಡಿಹರು.
ಅವರ ಹೆಣಗಾಟವ ನೋಡಿ ಆ ರತ್ನವ ಸೆಳೆದುಕೊಂಡಡೆ
ಕೂಡಲಸಂಗಮದೇವಂಗಾರೋಗಣೆಯಾಯಿತ್ತು./1213
ಶೂಲದ ಮೇಲಣ ವಿಭೋಗವೇನಾದಡೇನೊ ?
ನಾನಾ ವರ್ಣದ ಸಂಸಾರ ಹಾವು ಹಾವಡಿಗನ ಸ್ನೇಹದಂತೆ !
ತನ್ನಾತ್ಮ ತನಗೆ ಹಗೆಯಾದ ಮತ್ತೆ
ಬಿನ್ನಾಣವುಂಟೆ, ಮಹಾದಾನಿ ಕೂಡಲಸಂಗಮದೇವಾ/1214
ಶ್ರೀ ರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ,
ಶ್ರೀ ರುದ್ರಾಕ್ಷಿಯ ಧರಿಸದ ಅಧಮರನೆ ಭವಿಯೆಂಬೆ,
ಕೂಡಲ ಸಂಗಮದೇವಯ್ಯಾ
ಶ್ರೀ ರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ. /1215
ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ,
ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ,
ಚತುರ್ವಿಧಫಲಪದಪುರುಷಾರ್ಥವ ಪಡೆದು,
ಆ ಪರಿಭವಕ್ಕೆ ಬರಲೊಲ್ಲದೆ,
ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ.
ಆ ನಿಧಾನದ ಹೆಸರಾವುದೆಂದಡೆ;
ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು.
ಆ ಚರಲಿಂಗದ ಪಾದಾಂಬುವ ತಂದೆನ್ನ
ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ.
ಅದೆಂತೆಂದೆಡೆ;
ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ
ತದುಪೇಕ್ಷಕಭಕ್ತಶ್ಚ ರಾರವಂ ನರಕಂ ವ್ರಜೇತ್ ಎಂದುದಾಗಿ,
ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ
ಅದೆಂತೆಂದೆಡೆ;
ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ
ಮತ್ತಂ,
ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಬಿಷೇಚನೇ
ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ,
ಆ ಲಿಂಗವೆ ಅಂಗ, ಅಂಗವೆ ಲಿಂಗ,
ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು.
ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು.
ಕೂಡಲಸಂಗಮದೇವಯ್ಯಾ.
ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ./1216
ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ
ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ
ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ ಮಚ್ಚಿ ಹರುಷದೊಳೋಲಾಡಿದೆ
ಅದೆಂತೆಂದಡೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ
ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ./1217
ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ,
ಇಲ್ಲದವರ ಭವಿಯೆಂಬೆ.
ಕೂಡಲಸಂಗಮದೇವಾ,
ಸದುಭಕ್ತರ ನೀನೆಂಬೆ./1218
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ ಆ ತಪಃಸಿದ್ಧಿ ಬಯಲು,
ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ ಆ ದೀಕ್ಷೆ ಬಯಲು,
ಶ್ರೀವಿಭೂತಿಯ ಬಿಟ್ಟು ಮಂತ್ರಗಳ ಸಾಧಿಸಿದಡೆ ಆ ಮಂತ್ರಸಿದ್ಧಿ ಬಯಲು,
ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ ಆ ಯಜ್ಞಸಿದ್ಧಿ ಬಯಲು,
ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ ಆ ದೇವತಾರ್ಚನೆಬಯಲು
ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ ಆ ವಿದ್ಯಾಸಿದ್ಧಿ ಬಯಲು.
ಹಲವು ಕಾಲ ಕೊಂದ ಸೂನೆಗಾರನ ಕೈಯ್ಯ ಕತ್ತಿಯಾದಡೇನು
ಪರುಷ ಮುಟ್ಟಲು ಹೊನ್ನಾಗದೇ ಅಯ್ಯಾ
ಲಲಾಟದಲ್ಲಿ ವಿಭೂತಿಯ ಧರಿಸಲ್ಕೆ,
ಪಾಪಂಗಳು ಬೆಂದು ಹೋಗದಿಹವೇ ಕೂಡಲಸಂಗಮದೇವಾ /1219
ಶ್ರೀವಿಭೂತಿಯ ಹೂಸದವರ,
ಶ್ರೀರುದ್ರಾಕ್ಷಿಯ ಧರಿಸದವರ,
ನಿತ್ಯಲಿಂಗಾರ್ಚನೆಯ ಮಾಡದವರ,
ಜಂಗಮವೇ ಲಿಂಗವೆಂದರಿಯದವರ,
ಸದ್ಭಕ್ತರ ಸಂಗದಲ್ಲಿರದವರ ತೋರದಿರು.
ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು./1220
ಶ್ರುತಿಗಗಮ್ಯ ದ್ವಾದಶಾದಿತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ
`ಸೋಮಃ ಪವತೇ’ ಎಂಬ ಶ್ರುತಿಯನರಿತು
`ಶಿವನೇಕೋದೇವ ರುದ್ರನದ್ವಿತೀಯ’ನೆಂದು
ನಂಬುವುದು ಕಾಣಿರಣ್ಣಾ.
ಕೂಡಲಸಂಗಮದೇವನಲ್ಲದೆ ಇಲ್ಲವೆಂದು ಎತ್ತಿದೆ ಬಿರಿದ,
ಜಗವೆಲ್ಲರಿಯಲು. /1221
ಶ್ರುತಿತತಿಯ ಶಿರದ ಮೇಲೆ ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯಾ
ಘನಕ್ಕೆ ಘನಮಹಿಮನ ಮನಕ್ಕಗೋಚರನ !
`ಅಣೋರಣೀಯಾನ್ ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ. /1222
ಶ್ರೋತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ತ್ವಕ್ಕಿನಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ನೇತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ಜಿಹ್ವೆಯಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ನಾಸಿಕದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು.
ಇಂತೀ ಪಂಚೇಂದ್ರಿಯಂಗಳಲ್ಲಿ ಬ್ರಹ್ಮಚಾರಿಯಾಗಿ,
ಕೂಡಲಸಂಗಮದೇವರಲ್ಲಿ ಎನ್ನನಾಗುಮಾಡಲಿಕೆ
ಬ್ರಹ್ಮಚಾರಿಯಾದರು ಪ್ರಭುದೇವರು./1223
ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದಡೆ ಸಂದೇಹಿ, ನೋಡಾ.
ಕಟಿದಡೇನು, ಮುಟಿದಡೇನು, ಹೂಸಿದಡೇನು ಮನಮುಟ್ಟದನ್ನಕ್ಕ
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಮದೇವ ಒಲಿದಂಗಲ್ಲದೆ. /1224
ಶ್ವಾನ ಮಡಕೆಯನಿಳುಹಿ ಬೋನವನುಂಡು
ಮಡಕೆಯನೇರಿಸಲರಿಯದಂತೆ
ನಾನು ಷಟ್ಸ್ಥಲವನೋದಿ ಏನ ಮಾಡುವೆನಯ್ಯಾ,
ಅವಗುಣಂಗಳೆನ್ನ ಬೆನ್ನ ಬಿಡದನ್ನಕ್ಕರ
ಕಾರ್ಯವುಳ್ಳ ಕರ್ತ ಜಂಗಮಲಿಂಗದಲ್ಲಿ
ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು,
ಕೂಡಲಸಂಗಮದೇವಾ./1225
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇನಾದುವು
ಕೂಡಲಸಂಗಮದೇವಾ
ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ. /1226
ಸಂಗಸಹಿತ ಶರಣರು ಬಂದರೆ
ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು.
ಹಾವು ನೇಣೆಂಬ ಭ್ರಾಂತುಳ್ಳನ್ನಕ್ಕ ನಾನು ಭಕ್ತನೆಂತಪ್ಪೆನು
ಅಂಗಲಿಂಗ ಸನ್ನಿಹಿತವಾಗಿ ಬಂದಡೆ, ಸಂಗ ನೀನೆಂದು,
ಮತ್ತೆ ಮನದಲ್ಲಿ ಸಂದೇಹ ಹೊಳೆದಡೆ
ಬೆಂದೆನಲ್ಲಾ ನಾನು, ಕೂಡಲಸಂಗಮದೇವಾ./1227
ಸಂಚಲವಿಲ್ಲದ, ಭಕ್ತಿವಂಚನೆಯಿಲ್ಲದ ಮಹಾಂತರ ತೋರಾ.
ತನುಶುಚಿ ಮನಶುಚಿಗಳನು ತೋರಾ,
ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು,
ಕೂಡಲಸಂಗಮದೇವಾ. /1228
ಸಂಚಲವಿಲ್ಲದ, ಭಕ್ತಿವಂಚನೆುಲ್ಲದ ಮಹಾಂತರ ತೋರಾ.
ತನುಶುಚಿ ಮನಶುಚಿಗಳನು ತೋರಾ,
ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು,
ಕೂಡಲಸಂಗಮದೇವಾ./1229
ಸಂಜೆಯ ಮಂಜಿನ ಕಪ್ಪು-
ಅಂಜಿದಡೆ ಶಂಕೆ ತದ್ರೂಪವಾಗಿ ನಿಂದಿತ್ತು.
ತನ್ನ ಭಾವದ ನಟನೆ ನಡೆವನ್ನಕ್ಕ ನಡೆಯಿತ್ತು,
ಅದು ನಿಂದಲ್ಲಿಯೇ ನಿಂದಿತ್ತು.
ಅದರಂತುವನರಿದಡೆ
ಹಿಂದೆ ಹುಸಿ, ಮುಂದೆ ಕೂಡಲಸಂಗಮದೇವನ ನಿಲವು ತಾನೆ ! /1230
ಸಂತವಿದ್ದ ಮನೆಗೆ ಕೊಂತವ ತಂದಂತೆ
ಇದನೆಂತು ಸಂತೈಸುವೆನು
ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ
ಕೂಡಲಸಂಗಮದೇವರ ಮಹತ್ತು
ಆರಿಗೂ ಆಳವಡದು./1231
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯಾ
ನಗುವುದು ನುಡಿವುದು ಶಿವಭಕ್ತರೊಡನೆ.
ಸುಮ್ಮಾನ ಹಮ್ಮು ಬಿಮ್ಮಾಗಿರಲೇಕಯ್ಯಾ
ಅಭ್ಯಾಸೇನ ವಿಹೀನಸ್ಯ ತಸ್ಯ ಜನ್ಮ ನಿರರ್ಥಕಂ
ಗುರುಣಾಪಿ ಸಮಂ ಹಾಸ್ಯಂ ಕರ್ತವ್ಯಂ ಕುಟಿಲಂ ವಿನಾ
ನಮ್ಮ ಕೂಡಲಸಂಗನ ಶರಣರೊಡನೆ
ಮನದೆರೆದು ಮಾತನಾಡುವುದಯ್ಯಾ./1232
ಸಂಸಾರವೆಂಬ ಶ್ವಾನನಟ್ಟಿ, ಮೀಸಲ ಬೀಸರವ ಮಾಡದಿರಯ್ಯಾ,
ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ.
ನೀವಲ್ಲದೆ ಮತ್ತೇನನೂ ಅರಿಯೆನು.
ಕನ್ಯೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು.
ಮನ್ನಿಸು ಕಂಡಾ, ಮಹಾಲಿಂಗವೆ.
ಸತಿಯಾನು, ಪತಿ ನೀನಯ್ಯಾ.
ಮನೆಯೊಡೆಯ ಮನೆಯ ಕಾ್ದುಪ್ಪಂತೆ
ನೀವೆನ್ನ ಮನವ ಕಾ್ದುಪ್ಪ ಗಂಡನು.
ನಿಮಗೋತ ಮನವನನ್ಯಕ್ಕೆ ಹರಿಸಿದಡೆ
ನಿಮ್ಮ ಅಭಿಮಾನ ಹಾನಿ, ಕೂಡಲಸಂಗಮದೇವಾ./1233
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯ ವಿಷಯವೆಂಬ ವಿಷದಿಂದ
ಆನು ಮುಂದುಗೆಟ್ಟೆನಯ್ಯಾ,
ಆನು ಹೊರಳಿ ಬೀಳುತ್ತಿದ್ದೆನಯ್ಯಾ !
`ಓಂ ನಮಃ ಶಿವಾಯ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯಾ,
ಕೂಡಲಸಂಗಮದೇವಾ./1234
ಸಂಸಾರವೆಂಬಡವಿಯಲ್ಲಿ ಹುಲಿಯುಂಟು, ಕರಡಿಯುಂಟು.
ಶರಣನಂಜನಂಜ, ಮಹಾಧೀರ ಶರಣನಂಜನಂಜ,
ಕೂಡಲಸಂಗನ ಶರಣಂಗೆ ನಿರ್ಭಯ./1235
ಸಂಸಾರವೆಂಬುದೊಂದು ಗಾಳಿಯ ಸೊಡರು,
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ.
ಇದ ನಚ್ಚಿ ಕೆಡಬೇಡ.
ಸಿರೆಯೆಂಬುದ ಮರೆಯದೆ, ಪೂಜಿಸು ನಮ್ಮ ಕೂಡಲಸಂಗಮದೇವನ./1236
ಸಂಸಾರಸರ್ಪನ ಹೇಳಿಗೆಯ ಬಿಡಿಸಲು ಬಾರದು,
ಬಿಟ್ಟಡೆ ಕಟ್ಟಲು ಬಾರದು ನೋಡಾ.
ಬಿಡಿಸುವ ಬೆಡಗಿನ್ನೆಂತೊ !
ಕಾಮಕ್ರೋಧಲೋಭಮೋಹಮದಮತ್ಸರವೆಂಬ
ವಿಷದ ಹಲ್ಲಿಂಗಾವುದು ಗಾರುಡವಯ್ಯಾ,
ಮಹಾದಾನಿ ಕೂಡಲಸಂಗಮದೇವಾ /1237
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆವುತ್ತಲಿದೆ,
ಸಂಸಾರಸಾಗರ ಉರದುದ್ದವೆ ಹೇಳಾ !
ಸಂಸಾರಸಾಗರ ಕೊರಳುದ್ದವೆ ಹೇಳಾ !
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ !
ಅಯ್ಯಾ ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ ನಾನೇವೆನೇವೆನಯ್ಯಾ ! #
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ,
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ.
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು,
ಇನ್ನೆಂದಿಂಗೆ ಮೋಕ್ಷವಹುದೊ ಕೂಡಲಸಂಗಮದೇವಾ #
ಇಲಿ ಗಡಹನೊಡ್ಡಿದಲ್ಲಿ ಇಪ್ಪಂತೆ ಎನ್ನ ಸಂಸಾರ,
ಕೆಡೆವನ್ನಕ್ಕ ಮಾಣದು
ಹೆರರ ಬಾದಿಸುವುದನು ತನು ಕೆಡೆವನ್ನಕ್ಕ ಮಾಣದು,
ಹೆರರ ಛಿದ್ರಿಸುವುದನು ಮನ ಕೆಡೆವನ್ನಕ್ಕ ಮಾಣದು.
ಅಕಟಕಟಾ, ಸಂಸಾರಕ್ಕೆ ಆಸತ್ತೆ ಕೂಡಲಸಂಗಮದೇವಾ./1238
ಸಕಲಕ್ರಿಯೆಗಳಿಗಿದು ಕವಚ,
ಸಕಲವಶ್ಯಕ್ಕಿದು ಶುಭತಿಲಕ,
ಸಕಲಸಂಪದಕ್ಕೆ ತಾಣವಿದು,
ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ.
ಅಣುಮಾತ್ರ ವಿಭೂತಿಯ ಪಣಿಯೊಳಿಡೆ
ಎಣಿಕೆಯಿಲ್ಲದ ಭವಪಾಶ ಪರಿವುದು.
ತ್ರಿಣಯ ನೀನೊಲಿದು ಧರಿಸಿದೆಯೆಂದೆನೆ,
ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ./1239
ಸಕಲದಲ್ಲಿ ಸನ್ನಿಹಿತರಲ್ಲದವರು
ನಿಷ್ಕಲದಲ್ಲಿ ನಿಜವನೈದುವ ಪರಿ ಎಂತಯ್ಯಾ
ಲಿಂಗವ ಹೋಗಾಡಿದೆನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು
ಲಿಂಗೈಕ್ಯವೆಂತಪ್ಪುದು ಹೇಳಾ
ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು
ಎನ್ನ ಮನ ತಾರ್ಕಣೆಯಲ್ಲಿಪ್ಪಂತೆ
ನಿಮ್ಮಲ್ಲಿ ಐಕ್ಯವ ಮಾಡಾ
ಕೂಡಲಸಂಗಮದೇವಪ್ರಭುವೆ./1240
ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ
ಸಕಳ ನೀನೇ, ನಿಷ್ಕಳ ನೀನೇ ಕಂಡಯ್ಯಾ.
`ವಿಶ್ವತಶ್ಚಕ್ಷು’ ನೀನೇ ದೇವಾ, `ವಿಶ್ವತೋಮುಖ’ ನೀನೇ ದೇವಾ,
`ವಿಶ್ವತೋಬಾಹು’ ನೀನೇ ದೇವಾ, ಕೂಡಲಸಂಗಮದೇವಾ.ಶ /1241
ಸಕ್ಕರೆಯ ಕೊಡನ ತುಂಬಿ ಹೊರಗೆ ಸವಿದಡೆ ರುಚಿಯುಂಟೇ
ತಕ್ಕೃಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ
ಅಕ್ಕಟಾ ಸಂಸಾರ ವೃಥಾಯ ಹೋಯಿತ್ತಯ್ಯಾ.
ಅದೇತರ ಭಕ್ತಿ ಅದೇತರ ಯುಕ್ತಿ
ಕೂಡಿಕೋ, ಕೂಡಲಸಂಗಮದೇವಾ./1242
ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ
ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ,
ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ.
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ
ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ/1243
ಸಜ್ಜನ ಶರಣರ ಕಂಡು ಎನ್ನ ಮನ ಉಬ್ಬಿತ್ತು ನೋಡಿರಯ್ಯಾ.
ಶ್ರೀಗುರುಪಾದವ ಹಿಡಿದು ಪಾವನನಾದೆನಯ್ಯಾ.
ಪಾದೋದಕ ಪ್ರಸಾದದಿಂದ ಭವಗೆಟ್ಟೆನು,
ಕೂಡಲಸಂಗಮದೇವಾ. /1244
ಸಟೆಯಿಲ್ಲದಂತೆ, ಪ್ರಪಂಚವಿಲ್ಲದಂತೆ, ವೈಶಿಕವಿಲ್ಲದಂತೆ,
ನಡೆಸಯ್ಯಾ ಲಿಂಗತಂದೆ.
ಒಂದು ನಿಮಿಷವಾದಡೆಯೂ ನಿಮ್ಮ ಶರಣರ ಸಂಗದಲ್ಲಿರಿಸಯ್ಯಾ.
ಬೇರೆ ಮತ್ತೆ ಅನ್ಯವ ತೋರದಿರಯ್ಯಾ.
ಹೊಲಬುಗೆಟ್ಟೆನಯ್ಯಾ, ಕೂಡಲಸಂಗಮದೇವಾ./1245
ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ
ಅದೆ ಮಾಟ,
ಕೂಡಲಸಂಗಮದೇವರ ಕೂಡುವ ಕೂಟ./1246
ಸತ್ತು ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ
ಆಕಾರ ನಿರಾಕಾರ ನೋಡಯ್ಯಾ !
ಕಾಯವಂಚಕನಲ್ಲ, ಜೀವವಂಚಕನಲ್ಲ
ನಿರಂತರ ಸಹಜ ನೋಡಯ್ಯಾ !
ಶಂಕೆಯಿಲ್ಲದ ಮಹಿಮನು ನೋಡಯ್ಯಾ,
ಕೂಡಲಸಂಗನ ಶರಣನುಪಮಾತೀತ ನೋಡಯ್ಯಾ./1247
ಸತ್ಯ ಶೌಚ ನಿತ್ಯನೇಮವ ತಪ್ಪದೆ ಮಾಡಬಲ್ಲಡೆ ಅದು ಲೇಸು.
ಮತ್ಸ್ಯ ಕೂರ್ಮ ಮಂಡೂಕ ಜಲದೊಳಗಿರ್ದಲ್ಲಿ ಫಲವೇನು
ಚಿತ್ತಮಂತರ್ಗತಂ ದೃಷ್ಟ್ವಾ ತೀರ್ಥಸ್ನಾನಾನ್ನ ಶುಧ್ಯತಿ
ಶತಕುಂಭಜಲೇ ಶೌಚಂ ಸುರಾಭಾಂಡಮಿವಾ ಶುಚಿಃ
ಆಗಡವ ಮಾಡಿ ಮಾಗುಡವ ಮಿಂದಡೆ,
ತಾ [ಕೂ]ಡಬಲ್ಲನೆ ಕೂಡಲಸಂಗಮದೇವ /1248
ಸತ್ಯ ಸದಾಚಾರ ಸಂಬಂಧವಾದ ಭೃತ್ಯಾಚಾರ ಎನಗಿಲ್ಲಯ್ಯಾ,
ಆನು ನಿಮ್ಮ ನೆನೆಯಲು ಎನಗೆ ಭಕ್ತಿಯಿಲ್ಲಯ್ಯಾ,
ಕರುಣದಿಂ ಕೃಪೆ ಮಾಡಾ, ಕೂಡಲಸಂಗಮದೇವಾ./1249
ಸತ್ಯಮುಕ್ತಿಯ ಕಳೆಯ ನೋಡಾ,
ನಿತ್ಯತತ್ವದ ಇರವ ನೋಡಾ,
ಮೂರೊಂದಾದ ಆರೂಢನ ನೋಡಾ,
ಕೂಡಲಸಂಗಮದೇವರಲ್ಲಿ ತದ್ಗತನಾಗಿಪ್ಪ
ಮರುಳಶಂಕರದೇವರ ನಿಲವ
ಪ್ರಭು ಸಿದ್ಧರಾಮಯ್ಯದೇವರಿಂದ ಕಂಡು ಬದುಕಿದೆನು/1250
ಸತ್ಯವಿದೆ, ಸಮಾಧಾನವಿದೆ, ಮನಕ್ಕೆ ಬಾರದಿದೇನಯ್ಯಾ
ಸರ್ವಸನುಮತವೆಂಬ ಸುಖವಿದೆ, ಮನಕ್ಕೆ ಸೋಂಕದಿದೇನಯ್ಯಾ
ಆನೀನೆಂಬುದೊಂದು ಘನವಿದೆ,
ಕೂಡಲಸಂಗಮದೇವಾ, ಭ್ರಮೆಯೋ /1251
ಸತ್ಯವುಳ್ಳ ಭಂಡವ ತುಂಬುವುದಯ್ಯಾ.
ಸುುಧಾನವಯ್ಯಾ, ಸುುಧಾನವಯ್ಯಾ, ಮನ ಧಾರೆವಟ್ಟಲು.
ಕೂಡಲಸಂಗನ ಶರಣರು ಹಿಡಿಯದ ಭಂಡವನು
ಆರಾದಡಾಗಲಿ ಹೋಗಲೀಯರಯ್ಯಾ./1252
ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ.
ಅನುದಿನ ನಿಮ್ಮ ನೆನೆಯಲು ಭಕ್ತಿಯುಲ್ಲವಯ್ಯಾ ಎನಗೆ.
ಕೂಡಲಸಂಗಮದೇವಾ, ಕರುಣಿ, ಕೃಪೆಯ ಮಾಡಯ್ಯಾ./1253
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ,
ಅವರಾರಾಧನೆ ದಂಡ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಮದೇವ, ಭೂಮಿಭಾರಕರ. /1254
ಸದಾಚಾರವ ಕಂಡು, ಲಾಂಛನಪಕ್ಷವನಾ[ಡಿ]ದವರಿಗೆ,
ಇಹದೊಳು ಪರದೊಳು ಗತಿಯಿಲ್ಲ, ಕಾಣಿರೋ.
ಮಣ್ಣೆತ್ತಾದಡೇನು, ತನ್ನೆತ್ತು ಗೆಲಬೇಕೆಂಬುದಕ್ಕೊಲಿವ
ನಮ್ಮ ಕೂಡಲಸಂಗಯ್ಯ. /1255
ಸದ್ಗುರುಮಾರ್ಗಾಚಾರದ ನೆಲೆಕಲೆಯನರಿಯದೆ,
ಸದಾಚಾರಸದ್ಭಕ್ತನಲ್ಲಿ ಆಡಂಬರಲಾಂಛನದ ವೇಷವ ಧರಿಸಿ,
ಗ್ರಾಸವ ಹೊರೆದು, ಗುಹ್ಯಲಂಪಟ ಹೆಚ್ಚಿ,
ಆ ಭಕ್ತನ ಕ್ರಿಯಾಶಕ್ತಿಗೆ ಭ್ರಮಿಸುವನೊಬ್ಬ ಚರಪ್ರಾಣಿಯ
ಜಡಜಂತುವೆಂಬೆನಯ್ಯಾ.
ಅಂಥ ಕಾಮವಿಕಾರಭ್ರಾಂತನ ಕಾಮವ ಪರಿಹರಿಸಿ,
ಲಿಂಗಾಂಗನಿಷ್ಠಾಪರತ್ವವ ಹೇಳದೆ,
ತಾ ಭೋಗಿಸುವ ಸ್ತ್ರೀಯಳ ಕೊಡುವನೊಬ್ಬ ಸ್ಥಾವರಪ್ರಾಣಿಯ
ಕ್ರಿಮಿಕೀಟಕಪ್ರಾಣಿಯೆಂಬೆನಯ್ಯಾ.
ಇಂತು ತನುಮನಧನಂಗಳ ಕೊಟ್ಟುಕೊಂಬ ವಿಚಾರವನರಿಯದೆ
ಬಿಂದುವೆ ನಿಜಶೇಷವೆಂದು ತಿಳಿಯದ
ಮೂಳನಿಗೆಲ್ಲಿಯದೊ ತ್ರಿವಿಧಪ್ರಸಾದ
ಸ್ಥಲದಿಂದ ಸ್ಥಲವನರ್ಪಿಸುವುದು ಒಡಲ ಗುಣ,
ನಿಃಸ್ಥಲದಿಂದ ನಿಃಸ್ಥಲವನರ್ಪಿಸುವುದು ಪ್ರಾಣನ ಗುಣ,
ನೋಡಿ ಆರೈವುದೆ ಅರ್ಪಿತ ಗುಣ,
ಇಂಥ ಮಹಾಂತರ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ./1256
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ
ಶಾಸ್ತ್ರದ ಸದಗರು ನೀವು ಕೇಳಿರೋ.
ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ, ಅರಿದು ಮರೆಯದಿರಿ,
ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ,
ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ
ಮರೆಯದೆ ವಿಚಾರಿಸಿ ನೋಡಿ, ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ.
ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ.
ಬೇರ್ಪಡಿಸಿ ನುಡಿಯಲುಂಟೆ
ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ.
ಅದೆಂತೆಂದಡೆ;
ಮೆಟ್ಟುವ ರಕ್ಷೆ, ಮುಟ್ಟುವ ಯೋನಿ, ಅಶನ, ಶಯನ, ಸಂಯೋಗ,
ಮಜ್ಜನ, ಭೋಜನ ಇಂತಿವನು
ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ
ನಾನು ನಮೋ ನಮೋ ಎಂಬೆನು.
ಅದೆಂತೆಂದಡೆ;
ಅರ್ಥಪ್ರಾಣಾಭಿಮಾನಂ ಚ ಗುರಾ ಲಿಂಗೇ ಚ ಜಂಗಮೇಶ
ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್ ಎಂದುದಾಗಿ,
ಇದನರಿದು ಅರ್ಥವನೂ ಪ್ರಾಣವನೂ ಅಭಿನವನೂ
ಗುರುಲಿಂಗಜಂಗಮಕ್ಕೆ ಸಮರ್ಪಿಸಿ
ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ
ಆ ಗುರುಲಿಂಗಜಂಗಮಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ,
ಭಿನ್ನಭಾಜನ ಭಿನ್ನಭೋಜನವುಂಟೆ _ಇಲ್ಲವಾಗಿ,
ಅದೇನು ಕಾರಣವೆಂದಡೆ;
ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ
ಇದನರಿದು ಬೇರೆ ಮಾಡಿ ನುಡಿಯಲಾಗದು.
ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ
ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ
ಭಕ್ತದೇಹಿಕ ದೇವನಾದ ಕಾರಣ.
ಅದೆಂತೆಂದಡೆ;
ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ
ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಂ
ಇಂತೆಂಬ ಪುರಾಣವಾಕ್ಯವನರಿದು
ಸದ್ಭಕ್ತನೂ ಗುರುಲಿಂಗಜಂಗಮವೂ ಈ ನಾಲ್ವರೂ
ಒಂದೆ ಭಾಜನದಲ್ಲಿ ಸಹಭೋಜನಮಾಡುವರಿಂಗೆ
ಇನ್ನೆಲ್ಲಿಯ ಸಂಕಲ್ಪವೊ, ಇನ್ನೆಲ್ಲಿಯ ಸೂತಕವೋ,
ಇನ್ನೆಲ್ಲಿಯ ಪಾತಕವೋ ಕೂಡಲಸಂಗಮದೇವಾ./1257
ಸಬಳದ ತುದಿಯಲ್ಲಿ ಕಟ್ಟಿದ ಗಂಟೆಯಂತೆ,
ಮಾತು ಲಿಂಗಾ ಲಿಂಗಾ ಎನುತ್ತ
ಮೊನೆ ಇರಿವಂತೆ ಬೇಡವಯ್ಯಾ, ಹುಸಿ.
ಮಾತಿನಲ್ಲಿ ದಿಟ, ಮನದಲ್ಲಿ ಸಟೆ
ಬೇಡವಯ್ಯಾ.
ಮನ ವಚನ ಕಾಯ ಒಂದಾಗದಿದ್ದರೆ
ಕೂಡಲಸಂಗಯ್ಯನೆಂತೊಲಿವನಯ್ಯಾ /1258
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು,
ಶರಣಾಥರ್ಿಯೆಂಬ ಶ್ರವಗಲಿತಡೆ,
ಆಳುತನಕ್ಕೆ ದೆಸೆಯಪ್ಪೆ ನೋಡಾ.
ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆತ್ತಿ ನಡೆವುದು,
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ !/1259
ಸಮತೆ ಸನ್ಮತದಿಂದ ನಿಜಗುಣಕಾರಣದಿಂದ
ಸತ್ವರಜಸ್ತಮದ ಕ್ರೋಧ ಉಳಿಯದನ್ನಕ್ಕರ
ಅನುಭಾವವೆಲ್ಲಿಯದೊ
ಆತ್ಮಸ್ತುತಿ, ಪರನಿಂದೆ, ಅಸಹ್ಯ, ಅನೃತ, [ಕು]ತರ್ಕ
ಉಡುಗದನ್ನಕ್ಕರ ಅನುಭಾವವೆಲ್ಲಿಯದೊ
ಅರಿಷಡ್ವರ್ಗ ದಶವಾಯುಗಳ ವಿಕಳ ಅಪಾನ ಬಿಡದನ್ನಕ್ಕರ
ಅನುಭಾವವೆಲ್ಲಿಯದೊ
ಮದ ಮತ್ಸರ ವೈತಾಳ ಸಂವಾದವಲ್ಲದೆ
ಅನುಭಾವವೆಲ್ಲಿಯದೊ
ಸಮತೆ, ಸಜ್ಜನಿಕೆ, ಸಮಯಾಚಾರದ ನಿಜಪದವು
ದುರಾಚಾರಿಗಳಿಗಳವಡುವುದೆ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಅನುಭಾವವೆಲ್ಲರಿಗೆಲ್ಲಿಯದೊ /1260
ಸಮಯವಿರುದ್ಧಕಂಜಿ ವಿನಯವ ನುಡಿವೆ,
ಕೊಂದಡೆ ಕೊಲ್ಲು, ಕಾಯ್ದಡೆ ಕಾಯಿ. ಎ
ನ್ನವರೆಂದು ಮನ ಹಿಡಿಯದು, ಕೂಡಲಸಂಗಮದೇವಾ./1261
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು.
ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು
ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ
ಅದು ಪ್ರಸಾದವಲ್ಲ, ಕಿಲ್ಬಿಷ.
ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ
ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ.
ಇದು ಕಾರಣ, ಕೂಡಲಸಂಗಮದೇವಾ,
ಇಂತಪ್ಪ ಸದಾಚಾರಿಗಳನೆನಗೆ ತೋರಾ/1262
ಸಮರತಿ ಸಮಸಂಧಾನದ ಸಂಗಸುಖವು
ನಿನ್ನಿಂದಲೆನಗೆ ಸಾಧ್ಯವಾಯಿತ್ತಲ್ಲದೆ,
ಎನಗೆ ತೋರಿದಪರಾರು ಹೇಳಾ ಲಿಂಗೈಕ್ಯದ ಹೊಲಬ
ಕೂಡಲಸಂಗಮದೇವರ ಶರಣ ಪ್ರಭುದೇವರಲ್ಲಿ
ನೀನೆನ್ನನಿರಿಸದನ್ನಕ್ಕರ, ನಾನು ಬಲ್ಲನೆ ಹೇಳಾ./1263
ಸಮರತಿ, ಸಮಕಳೆ, ಸಮಸುಖ, ಸ್ವಾನುಭಾವ
ಹಿರಿದು ಕಿರಿದಾದುದನಾರೂ ಅರಿಯರು.
ಪಾಷಾಣಪರೀಕ್ಷೆವಂತನಂತೆ
ಗುರುವಿಲ್ಲದವರಂತಿರಲಿ.
ಕೂಡಲಸಂಗಮದೇವಯ್ಯಾ,
ಗುರುವುಳ್ಳವರ ನಿಜವಿಂತುಟು. /1264
ಸಮಸ್ತ ಕತ್ತಲೆಯ ಮಸಕವ ಕಳೆದಿಪ್ಪ ಇರವ ನೋಡಾ !
ಬೆಳಗಿಗೆ ಬೆಳಗು ಸಿಂಹಾಸನವಾಗಿ,
ಬೆಳಗು ಬೆಳಗ ಕೂಡಿದ ಕೂಟವ
ಕೂಡಲಸಂಗಯ್ಯ ತಾನೆ ಬಲ್ಲ ! /1265
ಸಮುದ್ರ ಘನವೆಂಬೆನೆ ! ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ ! ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು,
ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಯಿತ್ತು.
ಅಂತಹ ಪಾರ್ವತಿ ಘನವೆಂಬೆನೆ ಪರಮೇಶ್ವರನ ಅರ್ಧಾಂಗಿಯಾದಳು,
ಅಂತಹ ಪರಮೇಶ್ವರ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು. /1266
ಸಮುದ್ರಕ್ಕೆ ಚಂದ್ರಮನ ಬರವೆ ಜೀವಾಳವಯ್ಯಾ,
ಬತ್ತಿದ ಕೆರೆಯ ಕಮಲಕ್ಕೆ ಉದಕವೆ ಜೀವಾಳವಯ್ಯಾ,
ಚಕೋರಂಗೆ ಚಂದ್ರಮನ ಬರವೆ ಜೀವಾಳವಯ್ಯಾ.
ಕೂಡಲಸಂಗಮದೇವಾ,
ಎನಗೆ ನಿಮ್ಮ ಶರಣರ ಬರವೆ ಜೀವಾಳವಯ್ಯಾ./1267
ಸಮುದ್ರದೊಳಗಣ ಸಿಂಪಿನಂತೆ
ಬಾಯ ಬಿಡುತ್ತಿದ್ದೇನಯ್ಯಾ.
ನೀವಲ್ಲದೆ ಮತ್ತಾರು ಎನ್ನನರಿವರಿಲ್ಲ ನೋಡಯ್ಯಾ.
ಕೂಡಲಸಂಗಮದೇವಾ
ನೀನಲ್ಲದೊಳಕೊಂಬವರಿಲ್ಲಯ್ಯಾ./1268
ಸಯದಾನ ಸವೆಯಿತ್ತೆಂದು ಬೆದರಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಪಡಿಪದಾರ್ಥಂಗಳು ಅವಸರಕ್ಕೆ ಒದಗದೆ ಇದ್ದಲ್ಲಿ
ಮನವಳುಕಿ ಬೆದರಿದೆನಾದಡೆ ನಿಮ್ಮ ಭಕ್ತರಿಗೆ ಸಲ್ಲೆನು,
ಒಡವೆ ಸವೆದಡೆ ಒಡಲನೆ ಸಲಿಸುವೆನು.
ಕಡೆಮುಟ್ಟ ಪೂರೈಸದಿದ್ದೆನಾದಡೆ
ಮಡಿವಾಳ ಮಾಚಿತಂದೆಯ ಪಾದಸಾಕ್ಷಿಯಾಗಿ
ಕೂಡಲಸಂಗಮದೇವರಿಗೆ ದೂರವಹೆನು./1269
ಸಯದಾನವ ತಂದು ನೀಡುವೆನಲ್ಲದೆ
ಸಂಬಂದಿ ನಾನಲ್ಲಯ್ಯಾ.
ಕರ್ತಂಗೆ ಭೃತ್ಯಾಚಾರವ ಮಾಡಿ
ಒಕ್ಕುದ ಕೊಂಡಿಪ್ಪೆನಯ್ಯಾ.
ಭೋಗಾದಿಭೋಗವ ಸಮವಾಗಿ ಭೋಗಿಸಲು
ಅಘೋರನರಕದಲ್ಲಿಕ್ಕುವ ಕೂಡಲಸಂಗಮದೇವ. /1270
ಸರ್ಪನ ಸಂಯೋಗ, ಜ್ಯೋತಿ ಪತಂಗನ ಬೆಸನದಂತೆ;
ಮನದ ಮದವರಿಯದೆ ನಿಮ್ಮ ಕೃಪೆಯಿಂದೆ ನಿಮ್ಮ ನೆನೆವೆ.
ಎನ್ನ ಭಾವದ ಕೊನೆಯ ಮೊನೆಯ ಮೇಲೆ
ಮನೆಯ ಮಾಡಿಕೊಂಡಿಪ್ಪೆಯಯ್ಯಾ,
ಕೂಡಲಸಂಗಮದೇವಾ, ನೀನೆನ್ನ ಪ್ರಾಣನಾಥನಾಗಿ. /1271
ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ ಹೋಗದು,
ತನುಮನಧನವ ಸವೆಸಲೇಬೇಕು.
ನಮ್ಮ ಕೂಡಲಸಂಗನ ಶರಣರಿಗೆ ಅಂಜಲೇಬೇಕು/1272
ಸರ್ವಾವಧಾನಿ ಸಮಯಪ್ರಸಾದಿ ನೋಡಯ್ಯಾ,
ಲಿಂಗಾರ್ಪಿತದಲ್ಲಿ ಸರ್ವಾವಧಾನಿ ನೋಡಯ್ಯಾ,
ಅಯ್ಯಾ, ಅನಾಹತಂಗಳ ಮುನ್ನವೆ ಇರಲೀಯ,
ಕೂಡಲಸಂಗಮದೇವರಲ್ಲಿ
ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು./1273
ಸಸಿಯ ಮೇಲೆ ಸಾಗರವರಿದಂತಾಯಿತ್ತಯ್ಯಾ, ಎನ್ನ ಭಕ್ತಿ.
ಆನಂದದಿಂದ ನಲಿನಲಿದಾಡುವೆನು.
ಆನಂದದಿಂದ ಕುಣಿಕುಣಿದಾಡುವೆನು.
ಕೂಡಲಸಂಗನ ಶರಣರು ಬಂದಡೆ,
ಉಬ್ಬಿ, ಕೊಬ್ಬಿ, ಹರುಷದಲೋಲಾಡುವೆ./1274
ಸಹಸ್ರಶೀರ್ಷನಾದಿಪುರುಷನು.
ವೇದಪುರುಷನೊಬ್ಬ ಪುರುಷನು.
ತ್ರಿಪಾದ ಊಧ್ರ್ವನೊಬ್ಬ ಪುರುಷನು.
ಉದನ್ಮುಖನೊಬ್ಬ ಪುರುಷನು.
ಉದಯಪುರುಷನೊಬ್ಬ ಪುರುಷನು.
ವಿರಾಟ್ಪುರುಷನೊಬ್ಬ ಪುರುಷನು.
ಆದಿಪುರುಷನೊಬ್ಬ ಪುರುಷನು.
ವಿಯತ್ಪುರುಷನೊಬ್ಬ ಪುರುಷನು.
ತದ್ವಿಯತ್ಪುರುಷ ಪುರುಷರಿಲ್ಲದ ಪ್ರಭೆ ನೋಡಿದರೆ,
ವೇದನಾದಾತೀತ ತೂರ್ಯಪರಮಾನಂದ ನಿರವಯ
ಷಟ್ತ್ರಿಂಶತ್ಪ್ರಭಾಪಟಲಪ್ರಭೆಯ ಬೆಳಗಿದೆ ನೋಡಿರೆ.
ಬೆಳಗಿನೊಳಗಣ ಮಹಾಬೆಳಗಿನ ಬೆಳಗು ಕೂಡಲಸಂಗಯ್ಯ./1275
ಸಾಕಾರ ನಿರಾಕಾರದೊಳಗೆ ನಿರವಯಾಂಗನಾಗಿ ಸುಳಿದು,
ಭಕ್ತರ ಭವವ ಹರಿಯಲೆಂದು ಬಂದ ಜಂಗಮದ ಪರಿಯ ನೋಡಾ.
ಉಳಲುಡಲು ಬಂದವನಲ್ಲ ಪ್ರಭುದೇವರು,
ತ್ರಿವಿಧದಾಸೆ ಮುನ್ನವೆಯಿಲ್ಲ, ಪ್ರಭುದೇವರಿಗೆ.
ಭಕ್ತನೆಂಬ ತನ್ನಂಗವ ತನ್ನೊಳೈಕ್ಯವ ಮಾಡಿಕೊಂಡು,
ನಿರವಯವಾಗ ಬಂದ ನಿರವಯನಯ್ಯಾ,
ಕೂಡಲಸಂಗಮದೇವರಲ್ಲಿ ಪ್ರಭುದೇವರು./1276
ಸಾಕಾರ ಸಂಗನಲ್ಲಿ ನಿರಾಕಾರವಿಲ್ಲೆಂದು
ನಿರಾಕರ ಸಂಗವನರಸಿ ತೊಳಲಿ ಬಳಲಿದೆನಯ್ಯಾ.
ನಿಶ್ಚಿಂತ ನಿಜಭಜನೆ ನೆಲೆಗೊಳ್ಳದೆನಗೆ,
ಭ್ರಾಂತು ಭ್ರಮೆಯಿಲ್ಲದಂತೆ ಎಂದಪ್ಪುದೋ ಎನಗೆ
ಕೂಡಲಸಂಗಮದೇವಾ, ಕೇಳಯ್ಯಾ. /1277
ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ.
ಸಂಗವೆರಡುಂಟು:ಒಂದ ಹಿಡಿ, ಒಂದ ಬಿಡು,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ./1278
ಸಾರ: ಸಜ್ಜನರ ಸಂಗವ ಮಾಡೂದು,
ದೂರ ದುರ್ಜನರ ಸಂಗ ಬೇಡವಯ್ಯಾ.
ಆವ ಹಾವಾದಡೇನು:ವಿಷವೊಂದೆ,
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ./1279
ಸಿಂಗದ ನಡು ಮುರಿಯಲಾ ಸಿಂಗವೇನು ಬಾತೆ
ಸುಂಡಿಲು ಮುರಿಯಲು ಗಜವೇನು ಬಾತೆ
ಸಂಗ್ರಾಮದಲ್ಲಿ ವೀರನುಳಿಯಲದೇನು ಬಾತೆ
ಶೃಂಗಾರದ ಮೂಗು ಹೋದಡೆ ಶೃಂಗಾರವೇನು ಬಾತೆ
ನಿಜ ತುಂಬಿದ ಭಕ್ತಿ ತುಳುಕಾಡದವರ ಸಂಗವೇನು ಬಾತೆ
ಕೂಡಲಸಂಗಮದೇವಾ./1280
ಸಿನೆ ಬಂಜೆಯರಿಬ್ಬರಿಗೊಬ್ಬ ಮಗ ಹುಟ್ಟಿ,
ಅವನೆನ್ನ ರಿಣಕ್ಕೊಡೆಯನಾದ,
ಅವನೆನ್ನ ಧನಕ್ಕೊಡೆಯನಾದ,
ಆನು ಗಳಿಸಿದ ಒಮ್ಮನಕ್ಕೆ ಅಗಲದೆ ಮೋಹಿತನಾದ.
ಕೂಡಲಸಂಗಮದೇವನಂತಪ್ಪ ಮಗ ಹುಟ್ಟಿದಡೆ,
ಇದ್ದನಯ್ಯಾ ಕಾಯ ಮಾತೆಯಾಗಿ, ಜೀವ ಪಿತನಾಗಿ
ನಾನಿರಿಸಿದಂತೆ. /1281
ಸಿರಿಯಾಳನ ಮಗನ ಬಾಣಸವ ಮಾಡಿಸಿ ಉಣಲೊಲ್ಲದೆ, ಕಾಡಿದೆ.
ಚೋಳನ ಮನೆಯಲು ಉಣಲೊಲ್ಲದೆ, ಚೆನ್ನನ ಮನೆಯಲುಂಡೆ.
ಒಬ್ಬರಿಗೊಂದು ಪರಿಯ ಮಾಡಿದೆ, ಕೂಡಲಸಂಗಮದೇವಾ. /1282
ಸುಖ ಬಂದಡೆ ಪುಣ್ಯದ ಫಲವೆನ್ನೆನು,
ದುಃಖ ಬಂದಡೆ ಪಾಪದ ಫಲವೆನ್ನೆನು.
ನೀ ಮಾಡಿದಡಾಯಿತ್ತೆಂದೆನ್ನೆನು,
ಕರ್ಮಕೆ ಕರ್ತುವೆ ಕಡೆಯೆಂದೆನ್ನೆನು,
ಉದಾಸೀನವಿಡಿದು ಶರಣೆನ್ನೆನು.
ಕೂಡಲಸಂಗಮದೇವಾ, ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ-
ಸಂಸಾರವ ಸವೆಯೆ ಬಳಸುವೆನು. /1283
ಸುಖವಾದಡುಂಡು, ದುಃಖ ಬಂದಲ್ಲಿ ಬಳಲಿದಡಹುದೆ !
ತುಯ್ಯಲೆಂದಡುಂಡು, ಹುಯ್ಯಲೆಂದ[ಡೋಡಿದೊ]ಡಹುದೆ !
ಕೇಳಯ್ಯಾ ಕೂಡಲಸಂಗಮದೋವಯ್ಯಾ
ನೀ ಮಾಡಿದ ಮಾಟಕ್ಕಾಡಿದಡಹುದೆ !/1284
ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನ,
ಎಂತಯ್ಯಾ ಎನಗಿನ್ನಾವುದು ಗತಿ
ಎಂತಯ್ಯಾ ಎನಗಿನ್ನಾವುದು ಮತಿ
ಎಂತಯ್ಯಾ ಹರಹರಾ, ಕೂಡಲಸಂಗಮದೇವಾ
ಮನದ ಸಂತೈಸೆನ್ನ./1285
ಸುಡಲೀ ಮನವೆನ್ನನುಡುಹನ ಮಾಡಿತ್ತು,
ನಡೆವಲ್ಲಿ ನುಡಿವಲ್ಲಿ ಅದಿಕನೆಂದೆನಿಸಿತ್ತು.
ಬೆಡಗಿನ ಕೀಲು ಕಳೆದು ಕೆಡೆದ ಬಳಿಕ
ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು,
ಒಡಲನುರಿಕೊಂಬುದು, ಒಡವೆಯನರಸ ಕೊಂಬ,
ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ
ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ,
ಇನ್ನು ಮಾಡಿದರಳವೆ ಕೂಡಲಸಂಗಮದೇವಾ/1286
ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ
ಸೋಡಿಹಂ ಸೋಡಿಹಂ ಎಂದೆನ್ನುತ್ತಿದ್ದಿತ್ತು.
ಕೋಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ
ಇಂತೆಂದುದಾಗಿ,
ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ./1287
ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ,
ತತ್ತ್ವಮಸಿ ಎಂಬುದನರಿದು ಕತ್ತಲೆಗೆ ಓಡುವಿರಯ್ಯಾ.
ವೇದವಿಪ್ರರ ವಿಚಾರಿಸಿ ನೋಡಲು,
ಉಪದೇಶಪರೀಕ್ಷೆ ನರಕವೆಂದುದು
ಕೂಡಲಸಂಗನ ವಚನಸೂಚನೆ./1288
ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದಡೆ,
ತಪ್ಪುವುದು ಅಪಮೃತ್ಯು, ಕಾಲಕರ್ಮಂಗಳಯ್ಯಾ.
ದೇವಪೂಜೆಯ ಮಾಟ, ದುರಿತಬಂಧನದೋಟ.
ಶಂಭು ನಿಮ್ಮ ನೋಟ, ಹಿಂಗದ ಕಣ್ಬೇಟ.
ಸದಾ ಸನ್ನಿತನಾಗಿ ಶರಣೆಂಬುದು, ನಂಬುವುದು.
ಜಂಗಮಾರ್ಚನೆಯ ಮಾಟ, ಕೂಡಲಸಂಗನ ಕೂಟ./1289
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ ಬರೆದ ಧೃತಿಗೆಡಬೇಡ ಮನವೆ !
ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೆ !
ಕೂಡಲಸಂಗಮದೇವ[ನ]ಲ್ಲದೆ, ಆರ ಬೇಡಿದಡಿಲ್ಲ ಮನವೆ !/1290
ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು
ಎನ್ನ ಚಿತ್ತವು ನಿಮ್ಮ ಮೇಲೆ ಸಂಗಯ್ಯಾ,
ಎನ್ನ ಚಿತ್ತವು ನಿಮ್ಮ ಮೇಲೆ ಲಿಂಗಯ್ಯಾ.
ಕೂಡಲಸಂಗಮದೇವಾ
ಅನ್ಯವೆಂಬುದನರಿಯೆನಯ್ಯಾ./1291
ಸೂತ್ರಧಾರಿ ಮನದ ಮೈಲಿಗೆಯ ಕಳೆಯಬಂದನಯ್ಯಾ ಮಡಿವಾಳನು.
ಎನ್ನ ಕಾಯದ ಮೈಲಿಗೆಯ ತಂದು ತನ್ನ ಮುಂದೆ ಇರಿಸಿದೆಡೆ
ಸಮತೆಯೆಂಬ ಕೂಪತೋಹಿನಲ್ಲಿ ಅದ್ದಿ, ಕಟ್ಟಿ ಹಿಳಿದನಯ್ಯಾ.
ಪಂಚೇಂದ್ರಿಯವರ್ಗಂಗಳ ಜ್ಞಾನವೆಂಬ ನಿರ್ಮಲಜಲದಲ್ಲಿ
ಅಲುಬಿ ಸೆಳೆದನಯ್ಯಾ.
ರವಿಶಶಿಶಿಖಿಯ ತೇಜದಲ್ಲಿ ಆರಿಸಿದನು,
ಚತುರ್ದಶ ಷೋಡಶವೆಂಬ ಘಳಿಗೆಯ ಮಾಡಿದನು.
ಸಮಾಧಾನವೆಂಬ ಅಡ್ಡೆಯ ಮೇಲಿರಿಸಿ ಸಮಗುಣವೆಂಬ
ಕೊಡತಿಯಲ್ಲಿ ಘಟ್ಟಿಸಿದನು.
ಹರಿಯಿತ್ತಯ್ಯಾ ಸೆರಗು ಮೂರಾಗಿ.
ಆ ಮೂರರಿವೆಯ ಕೊಟ್ಟನಯ್ಯಾ, ಎನ್ನ ಕೈಯಲ್ಲಿ,
ಆ ಅರಿವೆಯ ಗುರುವಿಂಗೊಂದ ಕೊಟ್ಟೆನು,
ಲಿಂಗಕ್ಕೊಂದ ಕೊಟ್ಟೆನು, ಜಂಗಮಕ್ಕೊಂದ ಕೊಟ್ಟೆನು.
ಎನಗೆ ಕೊಟ್ಟ ಮೂರರಿವೆಯನೂ
ಒಂದುಮಾಡಿ
ಹೊದೆದುಕೊಂಡು ನಿಶ್ಚಿಂತನಾಗಿ,
ಮಡಿವಾಳನ ಕೃಪೆಯಿಂದಲಾನು ಬದುಕಿದೆನು
ಕಾಣಾ, ಕೂಡಲಸಂಗಮದೇವಾ. /1292
ಸೂರ್ಯನ ಉದಯ ತಾವರೆಗೆ ಜೀವಾಳ,
ಚಂದ್ರಮನುದಯ ನೆ್ದುಲೆಗೆ ಜೀವಾಳ.
ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ,
ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ.
ಕೂಡಲಸಂಗನ ಶರಣರ
ಬರವೆನಗೆ ಪ್ರಾಣ ಜೀವಾಳವಯ್ಯಾ./1293
ಸೂಳೆಗೆ ಮಚ್ಚಿ ಸೂಳೆಯ ಬಂಟರೆಂಜಲ ತಿಂಬುದೀ ಲೋಕ.
ಅಡಗ ಮಚ್ಚಿ ಸೊಣಗನೆಂಜಲ ತಿಂಬುದೀ ಲೋಕ.
ಲಿಂಗವ ಮಚ್ಚಿ ಜಂಗಮಪ್ರಸಾದವ ಕೊಂಬವರ ನೋಡಿ ನಗುವವರ
ಕುಂಭಿಪಾತಕ ನಾಯಕನರಕದಲ್ಲಿಕ್ಕುವ
ಕೂಡಲಸಂಗಮದೇವ. /1294
ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದಡೆಯೂ `ಅಯ್ಯಾ, ಅಯ್ಯಾ ಎನಲಾರೆ.
ಚೆನ್ನಯ್ಯನೆಮ್ಮಯ್ಯನು, ಚೆನ್ನಯ್ಯನ ಮಗ ನಾನು.
ಕೂಡಲಸಂಗನ ಮಹಾಮನೆಯಲಿ
ಧರ್ಮಸಂತಾನಿ ಭಂಡಾರಿ ಬಸವಣ್ಣನು./1295
ಸೆಟ್ಟಿಯೆಂದೆನೆ ಸಿರಿಯಾಳನ
ಮಡಿವಾಳನೆಂಬೆನೆ ಮಾಚಯ್ಯನ
ಡೋಹರನೆಂಬೆನೆ ಕಕ್ಕಯ್ಯನ
ಮಾದಾರನೆಂಬೆನೆ ಚೆನ್ನಯ್ಯನ
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ./1296
ಸೋಲಬಲ್ಲರು ಅವರು, ಗೆಲಲರಿಯರಯ್ಯಾ.
ತನು ಮನ ಧನದಲ್ಲಿ ವಂಚನೆಯನರಿಯರಯ್ಯಾ,
ದಾಸ ಸಿರಿಯಾಳನವರು.
ಕೂಡಲಸಂಗ ಶರಣರು ಉಪಚಾರವನರಿಯರಯ್ಯಾ./1297
ಸ್ಥಾವರ ಜಂಗಮ ಒಂದೆಯೆಂದು ಇದಿರ ನುಡಿದು ನಾನೆಡಹುತಿಪ್ಪೆ.
ಸಹಜನಲ್ಲಯ್ಯಾ,
ಆನು ಸಮ್ಯಕ್ಕನಲ್ಲಯ್ಯಾ.
ಆನುಭಯಲಿಂಗಸಂಗಿಯೆಂಬೆನು,
ಈ ನುಡಿ ಸುಡದಿಹುದೆ, ಕೂಡಲಸಂಗಮದೇವಾ/1298
ಸ್ಥಾವರ ಜಂಗಮವೆಂಬ ಉಭಯ ಪಕ್ಷ ಒಂದೆ;
ಆವ ಮುಖದಲಿ ಬಂದಡೂ ತೃಪ್ತಿಯೊಂದೆ,
ಕೂಡಲಸಂಗಮದೇವರ ಆಪ್ಯಾಯನವೊಂದೆ. /1299
ಸ್ಥಾವರಭಕ್ತಂಗೆ ಸೀಮೆಯಲ್ಲದೆ
ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು
ಅಂಬುದಿಗೆ ಸೀಮೆಯಲ್ಲದೆ
ಹರಿವ ನದಿಗೆ ಸೀಮೆಯೆಲ್ಲಿಯದು
ಭಕ್ತಂಗೆ ಸೀಮೆಯಲ್ಲದೆ
ಜಂಗಮಕ್ಕೆ ಸೀಮೆಯುಂಟೆ
ಕೂಡಲಸಂಗಮದೇವಾ./1300
ಸ್ಥೂಲತನುವೆಂಬ ಭಾಂಡದಲ್ಲಿ ಸರ್ವಾಚಾರವೆಂಬ ಸಯದಾನವ ತುಂಬಿದೆ
ತುಂಬಲೊಡನೆ ಅಗ್ನಿಯಿಲ್ಲದ ಮುನ್ನ ಪಾಕವಾಯಿತ್ತು,
ಮೇಲು ಸಾಧನವಿಲ್ಲದ ಮುನ್ನ ರುಚಿ ಪಕ್ವವಾಯಿತ್ತು.
ಅದನು ಸೂಕ್ಷ್ಮತನುವೆಂಬ ಭಾಂಡದಲ್ಲಿ ಬರಿಕೆಯ್ದು,
ಕಾರಣತನುವಿನಲ್ಲಿ ಕುಳ್ಳಿರ್ದು ಊಡೆಹೆನೆಂದನುಮಾಡಲು,
ಪ್ರಕೃತಿಯಳಿದು ಒಂದೆ ಭಾಂಡವಾದುದ ಕಂಡು
ಉಣಲೊಲ್ಲದೆ ಅನ್ಯರಿಗಿಕ್ಕದೆ,
ಎನ್ನದೆನ್ನದೆ, ಸಯದಾನಂಗಳ ತೆಗೆದುಕೊಳ್ಳದೆ,
ಬೀಸರವೋಗದೆ, ಒಂದರೊಳಗೊಂದಿತ್ತೆನ್ನದೆ
ಉಂಡು ಸುಖಿಯಾದೆನಯ್ಯಾ, ಕೂಡಲಸಂಗಮದೇವಾ./1301
ಸ್ನೇಹ ತಪ್ಪಿದಠಾವಿನಲ್ಲಿ ಗುಣವನರಸುವರೆ ಅಯ್ಯಾ
ಹೂ ಬಾಡಿದಲ್ಲಿ ಪರಿಮಳವನರಸುವರೆ ಅಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ
ತೊರೆ ಇಳಿದಡೆ ಅಂಬಿಗಂಗೇನುಂಟು/1302
ಸ್ವಯಲಿಂಗದನುಭಾವ ತನಗೆ ದೊರೆಕೊಂಡ ಬಳಿಕ
ದೇವಲೋಕವೆಂಬುದೇನೋ
ಮತ್ರ್ಯಲೋಕವೆಂಬುದೇನೋ ಆವುದರಲ್ಲಿಯೂ ಭೇದವೇನಯ್ಯಾ,
ಕೂಡಲಸಂಗಮದೇವನೊಲಿದ ಬಳಿಕ ಆಲಸ್ಯವುಂಟೆ /1303
ಸ್ವಾಮಿ ನೀನು, ಶಾಶ್ವತ ನೀನು,
ಎತ್ತಿದೆಬಿರಿದ ಜಗವೆಲ್ಲರಿಯಲು,
ಮಹಾದೇವ, ಮಹಾದೇವ,
ಇಲ್ಲಿಂದ ಮೇಲೆ ಶಬ್ದವಿಲ್ಲ.
ಪಶುಪತಿ ಜಗಕ್ಕೇಕೋದೇವ
ಸ್ವರ್ಗ ಮತ್ರ್ಯ ಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ./1304
ಸ್ವಾಮಿಭೃತ್ಯಸಂಬಂಧಕ್ಕೆ ಆವುದು ಪಥವೆಂದಡೆ:
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲಸಂಗಮದೇವ./1305
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.
ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆ
ಕೂಡಲಸಂಗಮದೇವನಲ್ಲದೆ/1306
ಹಗಲಾಯಿತ್ತು [ಹೊತ್ತು] ಹೋಗದು, ಇರುಳಾಯಿತ್ತು ನಿದ್ರೆಬಾರದು,
ಉಳಿದವರ ಮಾತು ಸಾಗದು, ಉಳಿದವರ ಮಾತು ಸಾಗದು.
ಕೂಡಲಸಂಗಯ್ಯನಲ್ಲದೆ ಒಲ್ಲದು ಮನ./1307
ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಕುವರೆ
ಕೋಳದ ಮೇಲೆ ಸಂಕೋಲೆಯನಿಕ್ಕುವರೆ
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ/1308
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆರಡು ಲೇಸು.
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ. ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು./1309
ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ
ನಡೆಸಿಹೆವೆಂಬವರ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೊ
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
ಎನ್ನಿಂದಲೆ ಆಯಿತ್ತು, ಎನ್ನಿಂದಲೆ ಹೋುತ್ತು ಎಂಬವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಕೂಡಲಸಂಗಮದೇವ/1310
ಹತ್ತುಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ್ಕ
ಕಟ್ಟಿದಡೇನು ಬಿಟ್ಟಡೇನು
ಮನವು ಲಿಂಗದಲ್ಲಿ ಮುಟ್ಟದನ್ನಕ್ಕ
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆಹೆನೆಂಬ
ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ. /1311
ಹದಿನಾರಿದ್ದಡೆ ಎಂಟಮಾಡುವ ಸಂಗಯ್ಯದೇವರು,
ಎಂಟಿದ್ದಡೆ ನಾಲ್ಕಮಾಡುವ ಸಂಗಯ್ಯದೇವರು,
ನಾಲ್ಕಿದ್ದಡೆ ಎರಡಮಾಡುವ ಸಂಗಯ್ಯದೇವರು,
ಎರಡಿದ್ದಡೆ ಒಂದಮಾಡುವ ಸಂಗಯ್ಯದೇವರು,
ಆ ಒಂದ ಇಲ್ಲವೆಯ ಮಾಡುವ ಸಂಗಯ್ಯದೇವರು,
ತಿರಿಕನ ಶೋಭಿತನ ಮಾಡುವ ಸಂಗಯ್ಯದೇವರು,
ತಿರಿ [ತಿ]ನಹೋದಡೆ ಹುಟ್ಟದೆನಿಸುವ ಸಂಗಯ್ಯದೇವರು.
ಇದಾವುದಕ್ಕೂ ಸೆಡೆಯದಿದ್ದಡೆ
ಕೂಡಲಸಂಗಮದೇವರು ತನ್ನಂತೆ ಮಾಡುವ./1312
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇುತ್ತು.
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆವುತ್ತಲದೆ.
ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು.
ಕೊಂದವರುಳಿವರೆ ಕೂಡಲಸಂಗಮದೇವಾ./1313
ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು,
ಏನ ಮಾಡಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ
ಏನ ಹಮ್ಮಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ
ಎನ್ನ ಪುಣ್ಯದ ಫಲ, ಕೂಡಲಸಂಗಮದೇವಾ,
ಬಾಯಿನದುಂಡೆಗೆ ತೋಯನಟ್ಟಂತಾಯಿತ್ತು./1314
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು,
ವರ್ಮವನರಿಯದ ಮಾಟ ಸುದಾನದ ಕೇಡು.
ಬಂದ ಸಮಯೋಚಿತವನರಿಯದಿದ್ದಡೆ
ನಿಂದಿರಲೊಲ್ಲ ಕೂಡಲಸಂಗಮದೇವ./1315
ಹರ[ಹಿ] ಮಾಡುವುದು ಹರಕೆಯ ಕೇಡು,
ನೆರಹಿ ಮಾಡುವುದು ಡಂಬಿನ ಭಕ್ತಿ.
ಹರ[ಹ]ಬೇಡ, ನೆರಹಬೇಡ
ಬಂದ ಬರವನರಿತು ಮಾಡಬಲ್ಲಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವ./1316
ಹರಗಣಪಙ್ತಯ ನಡುವೆ ಕುಳ್ಳಿರ್ದು
ನಾನು ಒಡೆತನದ ನಾಯಿತೇಜವ ಹೊತ್ತುಕೊಂಡು,
ಮಡದಿಯೆನ್ನಗಲೊಳಗೆ ಸಕಲದೇವಾನ್ನವ
ಒಡೆಯರಿಂದವೂ ಮಿಗಿಲಾಗಿ ಇಕ್ಕಲು, ತೆಗೆದಿರಿಸಿದೆನು.
ಈ ಪರಿಯ ಆಯ ಕಣ್ಗೆ ತೋರಲು ಕಿಲ್ಬಿಷವಾದವು.
ಕರುಣಿ ಚನ್ನಬಸವಣ್ಣಾ, ಮರೆದು ಕೊಂಡೆನಾದಡೆ,
ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ./1317
ಹರನ ಕೊರಳಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳ ತಂಡಗಳು ಓದಿ ನೋಡಲು,
ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ
ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು,
ಹರ ಮುಕುಳಿತನಾಗಿ ನಕ್ಕ, ನಮ್ಮ ಕೂಡಲಸಂಗಮದೇವ. /1318
ಹರನ ಭಜಿಸುವುದು,
ಮನಮುಟ್ಟಿ ಭಜಿಸಿದೆಯಾದಡೆ ತನ್ನ ಕಾರ್ಯ ಘಟ್ಟಿ.
ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವುದು,
ವಿಧಿ ಹೆಡಗಯ್ಯ ಕಟ್ಟಿ ಕುಟ್ಟುವುದು.
ಕೂಡಲಸಂಗನ ಶರಣರ ದೃಷ್ಟಿಯವನ ಮೇಲೆ ಬಿದ್ದವ ಜಗಜಟ್ಟಿ. /1319
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯು, ಕೆರೆ ತುಂಬಿದಂತಯ್ಯಾ,
ನೆರೆಯದ ವಸ್ತು ನೆರೆವುದು ನೋಡಯ್ಯಾ,
ಅರಸು ಪರಿವಾರ ಕೈವಾರ ನೋಡಯ್ಯಾ.
ಪರಮ ನಿರಂಜನನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲುಕೊಂಡಂತೆ,
ಕೂಡಲಸಂಗಮದೇವಾ./1320
ಹರನು ಮೂಲಿಗನಾಗಿ, ಪುರಾತರೊಳಗಾಗಿ,
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ.
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ.
ಮಾದಾರನ ಮಗ ನಾನಯ್ಯಾ.
ಪನ್ನಗಭೂಷಣ ಕೂಡಲಸಂಗಯ್ಯಾ,
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ./1321
ಹರಬೀಜವಾದಡೆ ಹಂದೆ ತಾನಪ್ಪನೆ
ಒರೆಗಟ್ಟಿ ಇರಿಯದವರ ಲೋಕ ಮೆಚ್ಚುವುದೆ
ಉಟ್ಟ ಚಲ್ಲಣ ಕೈಯ ಪಟ್ಟೆಯವಿಡಿದು,
ಗರುಡಿಯ ಕಟ್ಟಿ ಶ್ರವವ ಮಾಡುವಂತೆ
ತನ್ನ ತಪ್ಪಿಸಿಕೊಂಡಡೆ ಶಿವ ಮೆಚ್ಚುವನೆ
ಅರಿಯದವರಿಗೆ ಒಳ್ಳೆ ಹೆಡೆಯನೆತ್ತಿಯಾಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವಾ. /1322
ಹರವ ನದಿಯ ತೆರನ ಹೋಲಬಲ್ಲಡೆ ಭಕ್ತಿ,
ಕೂಡೆ ಸಯದಾನವ ನೀಡಬಲ್ಲಡೆ ಭಕ್ತಿ,
ನೀಡಿ ಮಿಕ್ಕುದ ಕಾಯ್ದುಕೊಂಡಿರಬಲ್ಲಡೆ
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ/1323
ಹರಶಕ್ತಿಗಳಲ್ಲಿ ಹುಟ್ಟಿದ ಬೆನಕ ಭೈರವ ಷಣ್ಮುಖರ
ಮಹಾಹರನ ಮಕ್ಕಳೆಂಬ ಪಾತಕ ನೀ ಕೇಳೊ.
ಹರಿಹರನು ಒಂದೆಂಬ ಶಿವದ್ರೋಹಿ ನೀ ಕೇಳೊ.
ಹರಿ ಸಹಿತಾರರಿಂದತ್ತ ಅಜಾತನಚರಿತ್ರ ಅಪ್ರತಿಮಮಹಿಮ
ಕೂಡಲಸಂಗಮದೇವನೊಬ್ಬನೆ ಕಾಣಿ ಭೋ./1324
ಹರಿ ಹರನೊಂದೆ ಎಂದಡೆ, ಸುರಿಯುವೆ ಬಾಯಲಿ ಬಾಲಹುಳುಗಳು
ಹರಿಗೆ ಹತ್ತು ಪ್ರಳಯ, ಬ್ರಹ್ಮಂಗನಂತ ಪ್ರಳಯ,
ಹರಂಗೆ ಪ್ರಳಯ ಉಂಟೆಂಬುದ ಬಲ್ಲಡೆ ನೀವು ಹೇಳಿರೆ
ಪ್ರಳಯ ಪ್ರಳಯ ಅಂದಂದಿಂಗೆ
ಹಳೆಯ, ನಮ್ಮ ಕೂಡಲಸಂಗಮದೇವ. /1325
ಹರಿಯ ಬೇಡುವಡೆ ಅವಗೆ ಬಲೀಂದ್ರ ದಾನವನಿಕ್ಕಿದನು,
ಬ್ರಹ್ಮನ ಬೇಡುವಡೆ ಅವಗೆ ಶಿರವಿಲ್ಲ,
ಚೌದ್ಧನ ಬೇಡುವಡೆ ಅವಗೆ ಬುದ್ಧಿ ಸಮನಿಸದು,
ಜಿನನ ಬೇಡುವಡೆ ಅವಗೆ ಉಡಲಿಲ್ಲ,
ಬೆನಕನ ಬೇಡುವಡೆ ಅವಗೆ ಕೋಡು ಮುರಿಯಿತ್ತು,
ಭೈರವನ ಬೇಡುವಡೆ ಅವ ಉಟ್ಟುದನಿಕ್ಕಿ ಆಡುತ್ತಿರ್ದನು.
ಅಭಯಂಕರ ಜಗಕ್ಕೆಲ್ಲ ! ಜಗದಾನಿಯ ಬೇಡುವೆನು
ಕೂಡಲಸಂಗಯ್ಯನ./1326
ಹರಿಯಜ ಮುನಿಗಳೆಲ್ಲರು, ನಿಚ್ಚ ನಿಮ್ಮ ಬಾಗಿಲ ಕಾಯ್ದಿಹರು,
ಏನು ಕಾರಣ ನೀವು ಬಾಣನ ಬಾಗಿಲ ಕಾಯ್ದಿರಿ
ಡಿಂಗರಿಗನ ಮನೆಗೆ ಅಂಗಜಾಹವಕ್ಕೆ ಹೋಗಿ ಇದ್ದವರೊಳರೆ
ಕೂಡಲಸಂಗಮದೇವಾ /1327
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ.
ಮುನ್ನಂಜದ ರಾವಳನೇವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ./1328
ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ ನೋಡಾ;
ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ.
ನಾಕಡಿಯನೈದೂದು, ಲೋಕದ ಕಡೆಯನೆ ಕಾಬುದು,
ಸೂಕ್ಷ್ಮಪಥದಲ್ಲಿ ನಡೆವುದು, ತನಗೆ ಬೇರೆ ಒಡಲಿಲ್ಲ.
ಅಹಮೆಂಬ ಗಾರುಡಿಗನ ನುಂಗಿತ್ತು
ಕೂಡಲಸಂಗನ ಶರಣರಲ್ಲದುಳಿದವರ./1329
ಹಲವು ಕೊಂಬಿಂಗೆ ಹಾಯಲುಬೇಡ,
ಬರುಕಾಯಕ್ಕೆ ನೀಡಲುಬೇಡ,
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ.
ಆಚಾರವೆಂಬುದು ಹಾವಸೆಗಲ್ಲು,
ಭಾವತಪ್ಪಿದ ಬಳಿಕ ಏಗೈದಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು,
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ. /1330
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಹೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ,
ಉಂಡು, ತಂಬುಲಗೊಂಡು ಹೋಹುದಲ್ಲ.
ತನು ಮನ ಧನವ ಸಮರ್ಪಿಸದವರ
ಕೂಡಸಂಗಮದೇವರೆಂತೊಲಿವ/1331
ಹಲವುಕಾಲ ಧಾವತಿಗೊಂದು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ,
ಸಲೆ ನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು.
[ಸು]ಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ-
ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದಡೆ,
ತನ್ನ ಭಕ್ತಿ ತನ್ನನೆ ಕೆಡಿಸುವುದು ಕೂಡಲಸಂಗಮದೇವಾ !/1332
ಹಲ್ಲು ಹತ್ತಿ ನಾಲಗೆ ಹೊರಳದಿದ್ದಲ್ಲಿ
ಮನವೆರಡಾದಡೆ ಆಣೆ, ನಿಮ್ಮಾಣೆ.
ಮಾಡುವ ನೇಮಕ್ಕೆ ಛಲವಿಲ್ಲದಿದ್ದಡೆ ಆಣೆ, ನಿಮ್ಮಾಣೆ.
ಕೂಡಲಸಂಗಮದೇವ ಎನ್ನ ಮನವ ನೋಡಲೆಂದಟ್ಟಿದಡೆ
ಪ್ರಸಾದವಲ್ಲದೆ ಕೊಂಡೆನಾದಡೆ ಆಣೆ, ನಿಮ್ಮಾಣೆ ! /1333
ಹಸಿದಳುವ ಶಿಶುವಿಂಗೆ ತಾಯಿ ಮೊಲೆಯ ಕೊಟ್ಟಡೆ,
ಆ ಶಿಶು ಜೀವಿಸದಿಪ್ಪುದೆ ಹೇಳಾ, ಅಯ್ಯಾ
ಪ್ರಾಣವಲ್ಲಭನ ಅಗಲಿಕೆಯಿಂದ ಪ್ರಾಣವಿಯೋಗವಾಗಿಹ
ಹೆಂಗೂಸಿಂಗೆ ಆ ಪ್ರಾಣವಲ್ಲಭ ಬಂದಡೆ
ವಿರಹ ಸಂತವಿಸದಿಪ್ಪುದೆ ಹೇಳಾ, ಅಯ್ಯಾ
ಕೂಡಲಸಂಗಮದೇವರು ಸಾಕ್ಷಿಯಾಗಿ
ಪ್ರಭುವೆನ್ನ ಮನೆಗೆ ಬಂದಡೆ ಎನ್ನ ಬಯಕೆ ಕೈಸಾರಿ
ಚೆನ್ನಬಸವಣ್ಣನ ಕರುಣದ ಕಂದನಾಗಿ
ಉಳಿದೆನು ಕಾಣಾ, ಮಡಿವಾಳಯ್ಯಾ./1334
ಹಸಿದು ಎಕ್ಕೆಯ ಕಾಯ ಮೆಲಬಹುದೆ
ನೀರಡಿಸಿ ವಿಷವ ಕುಡಿಯಬಹುದೆ
ಸುಣ್ಣದ, ತುಯ್ಯಲ[ದ] ಬಣ್ಣವೊಂದೆ ಎಂದಡೆ
ನಂಟುತನಕ್ಕೆ ಉಣಬಹುದೆ
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮದೇವರೆಂತೊಲಿವ/1335
ಹಸಿದು ಬಂದ ಗಂಡಂಗೆ ಉಣಲಿಕ್ಕದೆ,
ಬಡವಾದನೆಂದು ಮರುಗುವ ಸತಿಯ ಸ್ನೆಹದಂತೆ
ಬಂದುದನರಿಯಳು, ಇದ್ದುದ ಸವಸಳು.
ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ
ಕೂಡಲಸಂಗಮದೇವಾ./1336
ಹಸಿವಾದಡುಂಬುದನು, ಸತಿಯ ಸಂಭೋಗವನು
ಆನಾಗಿ ನೀ ಮಾಡೆಂಬವರುಂಟೆ
ಮಾಡುವುದು, ಮಾಡುವುದು ಮನಮುಟ್ಟಿ,
ಮಾಡುವುದು, ಮಾಡುವುದು ತನುಮುಟ್ಟಿ,
ತನುಮುಟ್ಟಿ ಮನಮುಟ್ಟದಿರ್ದಡೆ
ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ./1337
ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ,
ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ,
ಹಸಿವು ತೃಷೆ ವಿಷಯಕ್ಕೆ ಬಳಲುವರಯ್ಯಾ.
ಹಸಿವಾಯಿತ್ತೆಂದು ಅರ್ಪಿತವ ಮಾಡಲಿಲ್ಲ,
ತೃಷೆಯಾಯಿತ್ತೆಂದು ಮಜ್ಜನಕ್ಕೆರೆಯಲಿಲ್ಲ,
ಇದು ಕಾರಣ ಕೂಡಲಸಂಗಮದೇವ ಪೂಜಿಸಿ,
ಪ್ರಸಾದವ ಹಡೆವರೊಬ್ಬರೂ ಇಲ್ಲ. /1338
ಹಸಿವು, ತೃಷೆ, ನಿದ್ರೆ, ವಿಷಯಂಗಳ ಮರೆದೆ,
ನೀವು ಕಾರಣ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಮರೆದೆ,
ನೀವು ಕಾರಣ !
ಪಂಚೇಂದ್ರಿಯ, ಸಪ್ತಧಾತು, ಅಷ್ಟಮದಂಗಳ ಮರೆದೆ.
ನೀವು ಕಾರಣ !
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರಿಗೆ ಅಪ್ಯಾಯನವಾದಡೆ
ಎನಗೆ ತೃಪ್ತಿಯಾಯಿತ್ತು. /1339
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ./1340
ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ
ರುದ್ರಾಕ್ಷಿಯ ಧರಿಸಿಪ್ಪ ಸದ್ಭಕ್ತನೆ ರುದ್ರನು ನೋಡಾ.
ಅದೆಂತೆಂದಡೆ;
ಹಸ್ತೇ ಚೋರಸಿ ಕಂಠೇ ವಾ ಮಸ್ತಕೇ ವಾಪಿ ಧಾರಯೇತ್
ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರ ಸಂಶಯಃ
ಇಂತೆಂದುದಾಗಿ,
ಸಮಸ್ತ ಪಾಪಂಗಳ ಕಳೆದು, ಕೂಡಲಸಂಗಯ್ಯ ತನ್ನಂತೆ ಮಾಡುವನು/1341
ಹಸ್ತಕಡಗ ಕೈಗಧಿಕ ನೋಡಾ; ಕೊಡಲಹುದು ಕೊಳಲಾಗದು,
ಬಾಹುಬಳೆ ತೋಳಿಗಂಧಿಕ ನೋಡಾ; ಪರವಧುವನಪ್ಪಲಾಗದು,
ಕರ್ಣಕುಂಡಲ ಕಿವಿಗಧಿಕ ನೋಡಾ; ಶಿವನಿಂದೆಯ ಕೇಳಲಾಗದು,
ಕಂಠಮಾಲೆ ಕೊರಳಿಂಗಧಿಕ ನೋಡಾ; ಅನ್ಯದೈವಕ್ಕೆ ತಲೆವಾಗಲಾಗದು.
ಆಗಳೂ ನಿಮ್ಮುವ ನೆನೆದು, ಕೂಡಲಸಂಗಮದೇವಾ,
ನಿಮ್ಮುವನೆ ಪೂಜಿಸಿ ಸದಾ ಸನ್ನಿಹಿತನಾಗಿಪ್ಪನು ಲಿಂಗಶಿಖಾಮಣಿಯಯ್ಯಾ./1342
ಹಳಿವವರ ಲೆಂಕ, ಮತ್ಸರಿಸುವವರ ಡಿಂಗರಿಗ,
ಸಲೆಯಾಳಿಗೊಂಬವರ ತೊತ್ತಿನ ಮಗ.
ಜರಿದು [ಮತ್ಸರಿ]ಸಿ, ಹೊಯ್ದು ಬೈದು ಅದ್ದಲಿಸಿ
ಬುದ್ಧಿಯ ಹೇಳುವ ಹಿರಿಯರಾದ
ಡೋಹರ ಕಕ್ಕಯ್ಯಗಳ ಪಾದರಕ್ಷೆಯ ಕಿರುಕುಣಿಕೆಯಲ್ಲಿ
ಎ[ನ್ನನ್ನಿ]ಡು ಕೂಡಲಸಂಗಮದೇವಾ./1343
ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ./1344
ಹಾದರಕ್ಕೆ ಹೋದಡೆ, ಕಳ್ಳದಮ್ಮವಾಯಿತ್ತು;
ಹಾಳು ಗೋಡೆಗೆ ಹೋದಡೆ, ಚೇಳೂರಿತ್ತು;
ಅಬ್ಬರವ ಕೇಳಿ ತಳವಾರ ಉಟ್ಟ ಸೀರೆಯ ಸುಲಿದ;
ನಾಚಿ ಹೋದಡೆ ಮನೆಯ ಗಂಡ ಬೆನ್ನ ಬಾರನೆತ್ತಿದ,
ಅರಸು ಕೂಡಲಸಂಗಮದೇವ ದಂಡವ ಕೊಂಡ./1345
ಹಾದರದ ಮಿಂಡನ ಹತ್ತಿರ ಮಡಗಿಕೊಂಡು,
ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ
ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು
ಮತ್ತೆ ಬಿನ್ನಶೈವಕ್ಕೆರಗುವುದೆ ಹಾದರ,
ಕೂಡಲಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ/1346
ಹಾರುವ ಹಾರುವನಪ್ಪೆ ನಾನು, ಸದ್ಭಕ್ತರೆನ್ನವರೆನ್ನವರೆಂದು
ಹಾರು[ವೆ] ಹಾರು[ವೆ]ನವ್ವಾ ನಾನು, ಶರಣರು ಎನ್ನವರೆನ್ನವರೆನ್ನವರೆಂದು,
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು./1347
ಹಾರುವನ ಭಕ್ತಿ ಓಡಿನೊಳಗೆ ಅಗೆಯ ಹೊಯ್ದಂತೆ
ಕೆಳಯಿಂಕೆ ಬೇರೂರದು, ಮೇಲೆ ಫಲವಾಗದು.
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು
`ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ ಎಂಬ
ಕರ್ಮಿಗಳನೇನೆಂಬೆ, ಕೂಡಲಸಂಗಮದೇವಾ. /1348
ಹಾರುವರೆಲ್ಲರೂ ನೆರೆದು ಶೂದ್ರನ ಹಾರುವನ ಮಾಡುವಲ್ಲಿ
ನಂದಿಮುಖವಿಲ್ಲದೆ ಮತ್ತೇನನೂ ಮಾಡಲಾಗದು.
ವಿಭೂತಿ[ಯಿ]ಲ್ಲದೆ ಮತ್ತೇನನೂ ಮಾಡಲಾಗದು.
‘ಭರ್ಗೋ ದೇವ:’ ಎಂಬ ಮಂತ್ರ[ವಿ]ಲ್ಲದೆ ಮತ್ತೇನನೂ ಮಾಡಲಾಗದು.
ನಿಮ್ಮಿಂದ ಕುಲಜರಾಗಿ ಮತ್ತೆ ಅನ್ಯದೈವಕ್ಕೆರಗುವ
ಜಗದನ್ಯಾಯಿಗಳನೇನೆಂಬೆ, ಕೂಡಲಸಂಗಮದೇವಾ !/1349
ಹಾಲ ಕಂದಲು, ತುಪ್ಪದ ಮಡಕೆಯ
ಬೋಡು ಮುಕ್ಕೆನಬೇಡ.
ಹಾಲು ಸಿಹಿ, ತುಪ್ಪ ಕಮ್ಮನೆ :ಲಿಂಗಕ್ಕೆ ಬೋನ.
ಕೂಡಲಸಂಗನ ಶರಣರ
ಅಂಗಹೀನರೆಂದಡೆ ನಾಯಕನರಕ ./1350
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ./1351
ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ,
ಅಂಬಲಿಯ ನೇಮದವರನಾರನೂ ಕಾಣೆ.
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ./1352
ಹಾಲೆಂಜಲು ಪೆ[ಯ್ಯ]ನ, ಉದಕವೆಂಜಲು ಮತ್ಸ್ಯದ,
ಪುಷ್ಪವೆಂಜಲು ತುಂಬಿಯ,
ಎಂತು ಪೂಜಿಸುವೆ ಶಿವಶಿವಾ, ಎಂತು ಪೂಜಿಸುವೆ
ಈ ಎಂಜಲನತಿಗಳೆವಡೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲಸಂಗಮದೇವಾ. /1353
ಹಾವಡಿಗನು ಮೂಕೊರತಿಯು:
ತನ್ನ ಕೈಯಲ್ಲಿ ಹಾವು,
ಮಗನ ಮದುವೆಗೆ ಶಕುನವ ನೋಡಹೋಹಾಗ
ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು,
ಶಕುನ ಹೊಲ್ಲೆಂಬ ಚದುರನ ನೋಡಾ.
ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು,
ತಾನು ಮೂಕೊರೆಯ.
ತನ್ನ ಭಿನ್ನವನರಿಯದೆ ಅನ್ಯರನೆಂಬ
ಕುನ್ನಿಯನೇನೆಂಬೆ ಕೂಡಲಸಂಗಮದೇವಾ/1354
ಹಾವಸೆಗಲ್ಲ ಮೆಟ್ಟಿ ಹರಿದು, ಗೊತ್ತ ಮುಟ್ಟಬಾರದಯ್ಯಾ,
ನುಡಿದಂತೆ ನಡೆಯಲು ಬಾರದಯ್ಯಾ.
ಕೂಡಲಸಂಗನ ಶರಣರ ಭಕ್ತಿ, ಬಾಳ ಬಾಯಧಾರೆ./1355
ಹಾವಿನ ಡೊಂಕು ಹುತ್ತಕ್ಕೆ ಸಸಿನ,
ನದಿಯ ಡೊಂಕು ಸಮುದ್ರಕ್ಕೆ ಸಸಿನ,
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ./1356
ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆಮಾಡುವಂತೆ,
ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು
ಮೇಲೇಸುಕಾಲ ಬದುಕುವನೊ
ಕೆಡುವೊಡಲ ನಚ್ಚಿ, ಕಡುಹುಸಿಯನೆ ಹುಸಿದು, ಒಡಲ ಹೊರೆವರ
ಕೂಡಲಸಂಗಮದೇವಯ್ಯನೊಲ್ಲ, ಕಾಣಿರಣ್ಣಾ./1357
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ,
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ./1358
ಹಾವು ತಿಂದವರ ನುಡಿಸಬಹುದು,
ಗರ ಹೊಡೆದವರ ನುಡಿಸಬಹುದು,
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ.
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ./1359
ಹಾವು ಹದ್ದು ಕಾಗೆ ಗೂಗೆ ಅನಂತಕಾಲ ಬದುಕವೆ
ಬೇಡವೋ ಮಾನವಾ, ಲೇಸೆನಿಸಿಕೊಂಡು ಬದುಕು,
ಓ ಮಾನವಾ ಶಿವಭಕ್ತನಾಗಿ.
ಅದೆಂತೆಂದಡೆ;
ಜೀವಿತಂ ಶಿವಭಕ್ತಾನಾಂ ವರಂ ಪಂಚದಿನಾನಿ ಚ
ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ
ಎಂದುದಾಗಿ,
ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು,
ಐದು ದಿವಸವಾದಡೂ ಬದುಕಿದಡೆ ಸಾಲದೆ/1360
ಹಾವು, ಕಿಚ್ಚ ಮುಟ್ಟಿಹ ಶಿಶುವೆಂದು
ಹೆತ್ತತಾಯಿ ಮಗನ ಬೆಂಬತ್ತಿ ಬಪ್ಪಂತೆ ಇಪ್ಪ ನೋಡಾ,
ಎನ್ನೊಡನೊಡನೆ ಕೂಡಲಸಂಗಮದೇವ ಕಾಯ್ದುಕೊಂಡಿಪ್ಪನಾಗಿ./1361
ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡು ಮರಂಗಳಲ್ಲಿ
ಗ್ರಾಮಮಧ್ಯಂಗಳಲ್ಲಿ ಜಲಪಥ ಪಟ್ಟಣಪ್ರವೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ
ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ /1362
ಹಿಂದೆ ಎನ್ನ ಗುರುವನುಮಿಷಂಗೆ ನೀನು ಲಿಂಗವ ಕೊಟ್ಟೆನೆಂಬ ಸೂತಕ ಬೇಡ,
ಅಂದು ಅನುಮಿಷ ನಿನ್ನ ಕೈಯಲ್ಲಿ ಕೊಂಡನೆಂಬ ಸಂಕಲ್ಪ ಬೇಡ,
ಹಿಂದು ಮುಂದೆಂಬ ಸಂದಳಿದು ನಿಂದಲ್ಲಿ ಭರಿತನಾದ ಬಳಿಕ
ಕೊಡಲುಂಟೆ, ಕೊಳಲುಂಟೆ ಹೇಳಾ !
ಹಿಡಿದಡೆ ಸಿಕ್ಕದು, ಕೊಡುವಡೆ ಹೋಗದು, ಎಡೆಯಾಟದ ಜೀವಪರಿಯೆಂತಯ್ಯಾ
ಲಿಂಗವ ಹೋಗಾಡಿದನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು
ಲಿಂಗೈಕ್ಯವೆಂತಪ್ಪುದು ಹೇಳಾ !
ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು,
ಎನ್ನ ಮನ ಮನ ತಾರ್ಕಣೆಯಪ್ಪಂತೆ
ನಿಮ್ಮಲ್ಲೈಕ್ಯವ ಮಾಡಾ, ಕೂಡಲಸಂಗಮದೇವಾ./1363
ಹಿಂದೆ ಸಂದ ಭಕ್ತರಂತಾನೊಂದೊಂದ ಬೇಡಿ ಕಾಡುವನಲ್ಲ,
ಹಿಂದೆ ಬೆನ್ನಲಿ ಬಂದು ಬಳಲಿದೆ.
ಇನ್ನೊಂದ ಬೇಡೆನಂಜದಿರಂಜದಿರಯ್ಯಾ,
ಆಶಾಪಾಶ ಎನ್ನಲ್ಲುಳ್ಳಡೆ ಕೂಡಲಸಂಗಾ ನಿಮ್ಮಾಣೆ./1364
ಹಿಡಿವೆಡೆಯನೆ ಕಾಸಿ ಹಿಡಿವ,
ಕೈಬೆಂದು ಮಿಡುಮಿಡನೆ ಮಿಡುಕುವ,
ಮರುಳ ಮಾನವನೇ
ಬಡವರೆಂದೆನಬೇಡ ಲಾಂಛನಧಾರಿಯನು,
ಕಡುಸ್ನೇಹದಿಂದವರ ಪೂಜೆಮಾಡುವುದು.
ನಿಜವಡಗಿದ ರೂಪು, ನಿರ್ವಯಲಸ್ಥಾನ,
ನಡೆಲಿಂಗ ಜಂಗಮ ಶಕೂಡಲಸಂಗಮದೇವ./1365
ಹಿರಿಯಯ್ಯ ಶ್ವಪಚಯ್ಯ,
ಕಿರಿಯಯ್ಯ ಡೋಹರ ಕಕ್ಕಯ್ಯ,
ಅಯ್ಯಗಳಯ್ಯ ನಮ್ಮ ಮಾದಾರ ಚೆನ್ನಯ್ಯ.
ಕೂಡಲಸಂಗಮದೇವಾ,
ನಿಮ್ಮ ಶರಣರು ಎನ್ನ ಸಲಹುವರಾಗಿ./1366
ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದಡೆ
ತಪ್ಪದು ನೋಡಯ್ಯಾ.
ಎನಗಿನ್ನೆಂತೊ, ಎನಗಿನ್ನೆಂತೊ, ಎನಗಿನ್ನೆಂತೆಂದೆನಬೇಡಯ್ನಾ.
`ನಾಭುಕ್ತಂ ಕ್ಷೀಯತೇ ಕರ್ಮ’ ಎಂಬ ಶ್ರುತಿ ತಪ್ಪದು,
ಕೂಡಲಸಂಗಮದೇವಾ. /1367
ಹುಟ್ಟಿದ ಮಕ್ಕಳೆಲ್ಲ ಅರ್ಥ ಪ್ರಾಣ ಅಬಿಮಾನಕ್ಕೆ
ಒಡೆಯರಾದ ಪರಿಯ ನೋಡಾ.
ಅಟ್ಟ ಅಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ !
ಕೂಡಲಸಂಗಮದೇವಯ್ಯಾ, ನಿಮಗೆಂದಟ್ಟಡಿಗೆಯ
ನೀಡ ಕಲಿಸಿದಾತ ಕೆಂಭಾವಿಯ ಭೋಗಯ್ಯ./1368
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ,
ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ
ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ./1369
ಹುಟ್ಟುತ್ತ ದ್ರವ್ಯವನರಿಯದವಂಗೆ ಐಶ್ವರ್ಯವಂತ ಮಗನಾದಡೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಪಡಿಸುವಂತೆ,
ಕಾಳೆಗಮುಖವಾವುದೆಂದರಿಯದ ಹಂದೆ ನೃಪಂಗೆ
ಒಬ್ಬ ಕ್ಷತ್ರಿಯನಹ ಕುಮಾರ ಹುಟ್ಟಿ, ಕಿಗ್ಗಡಲ ರಕ್ತದ ಹೊನಲಲ್ಲಿ
ಕಡಿದು ಮುಳುಗಾಡುವ ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯಾ, ಕೂಡಲಸಂಗಮದೇವಾ
ನೀವು ಬಂದೆನ್ನ ಬೇಡಿದಡೆ. /1370
ಹುಟ್ಟುವಲ್ಲಿ ಭವಿ, ಮರಳಿ ಭಕ್ತನ ಮಾ[ಡೆ] , ಪೂರ್ವಾಶ್ರಯವ ಕಳೆದು,
ಹೊಂದುವಲ್ಲಿ ಭವಿಯಾಗಿ ಹೋಹರ ಮುಟ್ಟಲಾಗದು.
ಅವನ ಮುಟ್ಟಿದವ ಮುನ್ನವೆ ವ್ರತಗೇಡಿ.
ಅವನ ಶ್ರಾದ್ಧಕಾಲವೆ ಶ್ವಾನಮಾಂಸ,
ಕ್ರಿಯಾಕಾಲವೆ ಕ್ರಿಮಿಗಳು, ತದ್ದಿನವೆ ಮದ್ಯಮಾಂಸ.
ಇದು ಕಾರಣ, ಕೂಡಲಸಂಗಮದೇವಾ,
ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ./1371
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟಡೆ
ನಿಮ್ಮ ನಗುವರಯ್ಯಾ.
ಶಿವಬಟ್ಟೆಯಲೆನ್ನನು ಇರಿಸಯ್ಯಾ ಹರನೆ,
ಹೊಲಬುಗೆಟ್ಟೆನು ಬಟ್ಟೆಯ ತೋರಯ್ಯಾ.
ಹುಯ್ಯಲಿಟ್ಟೆನು, ಗಣಂಗಳು ಕೇಳಿರಯ್ಯಾ.
ಕೂಡಲಸಂಗಮದೇವಯ್ಯ ಎನ್ನ ಕಾಡಿಹನಯ್ಯಾ./1372
ಹುತ್ತಕ್ಕೆ ಏಸು ಬಾಯಾದಡೇನು ಸರ್ಪನಿಪ್ಪುದು ಒಂದೇ ಸ್ಥಾನ !
ಭಾವ ಭಾವಿಸಿ ಭ್ರಮೆಯಳಿದು ನೋಡಾ;
ಆ ಭಾವ ಭಾವಿಸಲು ನಿರ್ಭಾವ ಕೂಡಲಸಂಗಮದೇವಾ./1373
ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು,
ದರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು.
ಕೂಡಲಸಂಗಮದೇವಯ್ಯಾ,
ಶಂಕಿತಂಗೆ ಪ್ರಸಾದ ಸಿಂಗಿ, ಕಾಳಕೂಟವಿಷವು./1374
ಹುತ್ತವ ಕಂಡಲ್ಲಿ ಹಾವಾಗಿ, ನೀರ ಕಂಡಲ್ಲಿ [ಒಳ್ಳೆ]ಯಾದವನ ಮಚ್ಚುವನೆ
ಬಾರದ ಭವಂಗಳಲ್ಲಿ ಬರಿಸುವನಲ್ಲದೆ ಮಚ್ಚುವನೆ
ಅಘೋರನರಕವನುಣಿಸುವನಲ್ಲದೆ, ಮಚ್ಚುವನೆ
ಅಟಮಟದ ಭಕ್ತರ ಕಂಡಡೆ, ಕೋಟಲೆಗೊಳಿಸುವ ಕೂಡಲಸಂಗಮದೇವ. /1375
ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ ಅಯ್ಯಾ
ಅಘೋರ ತಪವ ಮಾಡಿದಡೇನು
ಅಂತರಂಗ ಆತ್ಮಶುದ್ಧಿುಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮದೇವ/1376
ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು,
ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರೆ ಕೊಯ್ವ
ಕೂಡಲಸಂಗಮದೇವ./1377
ಹುಸಿಯಿಂದೆ ಜನಿಸಿದೆನಯ್ಯಾ ಮತ್ರ್ಯಲೋಕದೊಳಯಿಂಕೆ.
ಹುಸಿಯಿಂದೆ ಲಿಂಗವ ಹೆಸರುಗೊಂಡು ಕರೆದೆನಯ್ಯಾ,
ಅದು ಎನಗೆ ಭಾವವೂ ಅಲ್ಲ, ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯಾ.
ಅದರ ಅವಯವಂಗಳೆಲ್ಲವು ಜಂಗಮವಯ್ಯಾ,
ಅದಕ್ಕೆ ಎನ್ನಲ್ಲುಳ್ಳ ಸಯದಾನ ಮಾಡಿ ನೀಡಿದೆನಯ್ಯಾ.
ಆ ಪ್ರಸಾದಕ್ಕೆ ಶರಣೆಂದೆನಯ್ಯಾ,
ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲ.
ಆ ಪ್ರಸಾದದಲ್ಲಿ ನಾನೇ ತದ್ಗತನಾದೆ ಕಾಣಾ,
ಕೂಡಲಸಂಗಮದೇವಾ. /1378
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ./1379
ಹೆಂಗೂಸಿನಂಗವ ನೋಡಿರೆ ಪುರಾತನರು,
ಬಾಲತನದಂಗವ ನೋಡಿರೆ ಪುರಾತನರು,
ಬ್ರಹ್ಮವನಾಚರಿಸಿ ತನ್ನ ಮರೆದಿಪ್ಪುದ ನೋಡಿರೆ ಲಿಂಗವಂತರು.
ತನ್ನಲ್ಲಿ ತಾನು
ಶ್ಚಯವಾಗಿ ಭಾಷೆ ಬೀಸರವೋಗ
ದೆಯಿಪ್ಪಇರವು ಕೂಡಲಸಂಗಮದೇವರಲ್ಲಿ ನಮ್ಮ ಮಹದೇವಿಯಕ್ಕಂಗಾಯಿತ್ತು. /1380
ಹೇಡಿ ಬಿರಿದ ಕಟ್ಟಿದಂತೆ ಆಯಿತೆನ್ನ ವೇಷ:
ಕಾದಬೇಕು, ಕಾದುವಡೆ ಮನವಿಲ್ಲ-
ಆಗಳೆ ಹೋುತ್ತು ಬಿರಿದು,
ಹಗರಣ ನಗೆಗೆಡೆಯಾುತ್ತು.
ಮಾರಂಕ ಜಂಗಮ ಮನೆಗೆ ಬಂದಡೆ
ಕಾಣದಂತಡ್ಡ ಮುಸುಡಿಟ್ಟಡೆ
ಕೂಡಲಸಂಗಮದೇವ ಜಾಣ, ಹಲುದೋರೆ ಮೂಗ ಕೊಯ್ವ./1381
ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ !
ದೇವಾ ನೀನೊಲಿದವನ, ಸ್ವಾಮೀ ನೀ ಹಿಡಿದವನ ಕುಲವೇನೋ !
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,
ನಿಮ್ಮಿಂದದಿಕ ಕೂಡಲಸಂಗಮದೇವಾ./1382
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ,
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ-ಮಕ್ಕಳಿಗೆಂದು,
ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ.
ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಎಂಬ ಶ್ರುತಿಯ ಬಸವಣ್ಣನೋದುವನು,
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನೆ ಉತ್ತರವನವರಿಗೆ ಕೊಡಲಮ್ಮೆ.
ಹೊಲೆಹೊಲೆಯರ ಮನೆಯ ಹೊಕ್ಕಾದಡೆಯೂ
ಸಲೆ ಕೈಕೂಲಿಯ ಮಾಡಿಯಾದಡೆಯೂ,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ
ತಲೆದಂಡ ಕೂಡಲಸಂಗಮದೇವಾ ! /1383
ಹೊತ್ತಾರೆ ಎದ್ದು ಶಿವಲಿಂಗದೇವನ
ದೃಷ್ಟವಾರಿ ನೋಡದವನ ಸಂಸಾರವೇನವನ
ಬಾಳುವೆಣನ ಬೀಳುವೆಣನ ಸಂಸಾರವೇನವನ
ನಡೆವೆಣನ ನುಡಿವೆಣನ ಸಂಸಾರವೇನವನ
ಕರ್ತು ಕೂಡಲಸಂಗಾ
ನಿಮ್ಮ ತೊತ್ತುಗೆಲಸ ಮಾಡದವನ ಸಂಸಾರವೇನವನ/1384
ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ./1385
ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ
ಕರ್ಪುರದ ಮರನ ತರಿದು ಕಳ್ಳಿಗೆ ಬೇಲಿಯನಿಕ್ಕುವರೆ
ಶ್ರೀಗಂಧದ ಮರನ ತರಿದು ಬೇವಿಂಗೆ ಅಡೆಯನಿಕ್ಕುವರೆ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಬೇರೆ ಇಚ್ಛಾಭೋಜನವನಿಕ್ಕಿದಡೆ
ಕಿಚ್ಚಿನೊಳಗೆ ಉಚ್ಚೆಯ ಹೊಯಿದು ಹವಿಯ ಬೇಳ್ದಂತಾಯಿತ್ತು./1386
ಹೊನ್ನ ಹಾವುಗೆಯ ಮೆಟ್ಟಿದವನ !
ಮಿಡಿಮುಟ್ಟಿದ ಕೆಂಜೆಡೆಯವನ !
ಮೈಯಲ್ಲಿ ವಿಭೂತಿಯ ಹೂಸಿದವನ !
ಕರದಲ್ಲಿ ಕಪಾಲವ ಹಿಡಿದವನ !
ಅರ್ಧನಾರಿಯಾದವನ !
ಬಾಣನ ಬಾಗಿಲ ಕಾಯ್ದವನ !
ನಂಬಿಗೆ ಕುಂಟಣಿಯಾದವನ !
ಚೋಳಂಗೆ ಹೊನ್ನಮಳೆಯ ಕರೆದವನ !
ಎನ್ನ ಮನಕ್ಕೆ ಬಂದವನ
ಸದ್ಭಕ್ತರ ಹೃದಯದಲಿಪ್ಪವನ !
ಮಾಡಿದ ಪೂಜೆಯಲೊಪ್ಪುವನ !
ಕೂಡಲಸಂಗಯ್ಯನೆಂಬವನ !!/1387
ಹೊನ್ನಿನ ಆಪ್ಯಾಯನಕ್ಕೆ ಬೋಳಾದವನಲ್ಲ,
ಮಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ,
ಹೆಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ.
ಕೂಡಲಸಂಗಮದೇವರಲ್ಲಿ ಎನಗಾರು ಇಲ್ಲವೆಂದು
ಬೋಳಾದನೆನ್ನ ಪ್ರಭುದೇವರು./1388
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣಿ.
ನಿಮ್ಮ ಶರಣರಿಗಲ್ಲದೆಮತೊಂದನರಿಯೆ
ಕೂಡಲಸಂಗಮದೇವಾ./1389
ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ,
ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,
ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,
ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ,
ಅಶುದ್ಧನ ಶುದ್ಧನ ಮಾಡಿದನಾಗಿ./1390
ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ,
ಜರಿದವರೆನ್ನ ಜನ್ಮಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಕೂಡಲಸಂಗಮದೇವಾ./1391
ಹೊಯ್ದಡೆ ಹೊಯ್ಗಳು ಕೈಯ ಮೇಲೆ,
ಬೈದಡೆ ಬೈಗಳು ಕೈಯ ಮೇಲೆ.
ಹಿಂದಣ ಜನನವೇದಡಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯಾ
ನಿಮ್ಮ ಪೂಜಿಸಿದ ಫಲ ಕೈಯ ಮೇಲೆ./1392
ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಿಲ್ಲದನ್ನಕ್ಕ
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ
ನೂರನೋದಿ ಏವೆನಯ್ಯಾ,
ನಮ್ಮ ಕೂಡಸಂಗಮದೇವರ ಮನಮುಟ್ಟದನ್ನಕ್ಕ/1393
ಹೊರಿಸಿಕೊಂಡು ಹೋದ ನಾಯಿ, ಮೊಲನನೇನ ಹಿಡಿವುದಯ್ಯಾ
ಇರಿಯದ ವೀರ, ಇಲ್ಲದ ಸೊಬಗುವ ಹೇಳುವುದೆ ನಾಚಿಕೆ.
ಆನು ಭಕ್ತನೆಂತೆಂಬೆನಯ್ಯಾ, ಕೂಡಲಸಂಗಮದೇವಾ/1394
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು.
ಬಯಸುತ್ತಿರ್ದೆನಯ್ಯಾ ನಿಮ್ಮ ಭಕ್ತರ ಬರವನು.
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ./1395
ಹೊಲಬುಗೊಂಡರಸಬೇಡ, ಬಿಲಿತು ತರಬೇಡ,
ಒಲಿದೊಮ್ಮೆ ಶಿವಶರಣೆನ್ನಿರಯ್ಯಾ.
ಒಂದು ಸೊಲ್ಲಿಂಗೆ ಮುಕ್ತಿ ಸಿದ್ಧಿ,
ಕೂಡಲಸಂಗಮದೇವ ಭಕ್ತಿಲಂಪಟನಾಗಿ./1396
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ
ಕುಲಜನೆಂಬುದಕ್ಕೆ ಆವುದು ದೃಷ್ಟ
ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು. /1397
ಹೊಲೆಯ ಮಾದಿಗ ಭಕ್ತನಾದಡೆ ಆತನ ಮನೆಯ ಸೊಣಗಂಗೆ
ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ
ನೆಲನನುಗ್ಘಡಿಸಿ ಉಘೇ ಚಾಂಗು ಭಲಾ ಎಂದು !
ಕುಲಕಧಿಕ ಹಾರುವಂಗೆ ಸಿದ್ಧಿಗೆ ಎಯಿಸಲೆ !
ನಿಮ್ಮ ಶರಣರ ಮಹಿಮೆ ಘನಕ್ಕೆ ಘನ.
ಎಲೆ ಎಲೆ ಕೂಡಲಸಂಗಮದೇವಾ, ನಿಮ್ಮ ನಂಬದವ ಹೊಲೆಯ. /1398
ಹೊಲೆಯ ಹೊಲಬಿಗನಾದಡೆ,
ಅವನ ಹೊರೆಯಲಿಪ್ಪುದು ಲೇಸು ಕಂಡಯ್ಯಾ.
ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ.
ಹೊಲಬುಗೆಡಬೇಡ, ಶಿವ ಶರಣೆನ್ನಿರಯ್ಯಾ.
ನಮ್ಮ ಕೂಡಲಸಂಗನ ಮಹಾಮನೆಯಲು
ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ./1399
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ
ಕುಲವುಂಟೆ ಜಂಗಮವಿದ್ದೆಡೆಯಲ್ಲಿ
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲ./1400
ಹೊಲೆಯೊಳಗೆ ಹುಟ್ಟಿ ಕುಲವನರಸುವೆ,
ಎಲವೊ, ಮಾತಂಗಿಯ ಮಗ ನೀನು.
ಸತ್ತುದನೆಳೆವನೆತ್ತಣ ಹೊಲೆಯ
ಹೊತ್ತು ತಂದು ನೀವು ಕೊಲುವಿರಿ.
ಶಾಸ್ತ್ರವೆಂಬುದು ಹೋತಿಂಗೆ ಮಾರಿ,
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು.
ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು.
ಅವರಿಗೆ ತೋರಲು ಪ್ರತಿಯಿಲ್ಲವೋ./1401
ಹೊಸತಿಲ ಪೂಜಿಸಿ ಹೊಡವಂಟು ಹೋದ
ಒಕ್ಕಲಿತಿಯಂತಾಯಿತ್ತೆನ್ನ ಭಕ್ತಿ.
ಜಂಗಮವೆನ್ನೊಡೆಯರೆಂದು ಒಕ್ಕುದ ಕೊಂಡು
ಉದಾಸೀನವ ಮಾಡಿದಡೆ,
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ಕೂಡಲಸಂಗಮದೇವ ಅಘೋರನರಕದಲ್ಲಿಕ್ಕುವ./1402
ಹೋಗಬಿಟ್ಟು, ಮರಳಿ ಹಿಂದೆ ನೋಡಿ,
ಮತ್ತಾಗಬೇಕೆಂಬ ಸಂದೇಹವುಳ್ಳನ್ನಕ್ಕ
ಅದೆ ಪರದ್ವಾರ ನಾಯಕನರಕ, ತಪ್ಪದು.
ಅನ್ಯವಧುವೆಂಬುದು ನಿಮ್ಮ ರಾಣಿವಾಸ,
ಇದೇ ದಿಬ್ಯ ಕೂಡಲಸಂಗಮದೇವಾ./1403