Categories
ವಚನಗಳು / Vachanagalu

ನಂಜುಂಡಶಿವ ## ವಚನಗಳು

ಅಕಾರ ಉಕಾರ ಈ ಎರಡೂ ಕೂಡಿ ಓಕಾರವಾಯಿತ್ತು .
ಮಕಾರವೆಂಬ ಬಿಂದು ಕೂಡಲು ಒಂ ಎಂಬುವನ್ಯೋದ್ಧಾರಣವಾಯಿತ್ತು .
ಆ ವರ್ಣವೆ ಪಂಚಾವಯವನುಳ್ಳ ಪರಬ್ರಹ್ಮವೆಂದು
ಸಮಸ್ತಯೋಗೀಶ್ವರರು ಹೇಳುತ್ತಲಿಹರು.
ಅದೆಂತೆಂದಡೆ : ಅಕಾರೋಕಾರ ಸಂಯೋಗದೋಕಾರಃ ಸ್ವರ ಉಚ್ಯತೇ |
ಓಮಿತ್ಯೇಕಾಕ್ಷರಂ ಬ್ರಹ್ಮವದಂತಿ ಸರ್ವಯೋಗಿನಃ ||
ಸರ್ವವ್ಯಾಪಿ ನಮೋಕಾರಂ ಮತ್ವಾಧಿರೋ ನ ಶೋಚತಿ |
ಪ್ರಣವೋಹಿ ಪರಬ್ರಹ್ಮ ಪ್ರಣವಃ ಪರಮಂ ಪದಂ ||
ಎಂದುದಾಗಿ, ಆ ಪಂಚಾವಯವನುಳ್ಳ ಪ್ರಣಮದ
ತಾರಕಾಕೃತಿಯಲ್ಲಿ ಯಕಾರ ಜನಿಸಿತ್ತು .
ಆ ಪ್ರಣಮದ ದಂಡಾಕೃತಿಯಲ್ಲಿ ವಕಾರ ಹುಟ್ಟಿತ್ತು .
ಆ ಪ್ರಣಮದ ಕುಂಡಲಿಯಲ್ಲಿ ಶಿಕಾರ ಉದಯವಾಯಿತ್ತು .
ಆ ಪ್ರಣಮದ ಅರ್ಧಚಂದ್ರಾಕೃತಿಯಲ್ಲಿ ಮಕಾರ ಹುಟ್ಟಿತ್ತು .
ಆ ಪ್ರಣಮಕ್ಕೆ ಮುಖವಾದ ಬಿಂದುವಿನಲ್ಲಿ ನಕಾರ ಜನನವಾಯಿತ್ತು .
ಅದೆಂತೆಂದಡೆ : ಯಕಾರಂ ತಾರಕಂ ಜ್ಞೇಯಂ ವಕಾರಂ ದಂಡ ಉಚ್ಯತೇ |
ಶಿಕಾರಂ ಕುಂಡಲಂ ಪ್ರೋತ್ತಂ ಮಕಾರಂ ಚೌರ್ಧಚಂದ್ರಕಂ |
ನಕಾರಂ ಬಿಂದು ಸಂಪ್ರೋತ್ತಂ ಪ್ರಣವಃ ಪಂಚವರ್ಣಜಃ ||
ಎಂದುದಾಗಿ, ಮತ್ತಂ ನಕಾರದಿಂ ಕರ್ಮೆಂದ್ರಿಯಂಗಳು ಹುಟ್ಟಿದವು.
ಮಕಾರದಿಂ ವಿಷಯಂಗಳು ಜನನವಾದವು.
ಶಿಕಾರದಿಂ ಜ್ಞಾನೇಂದ್ರಿಯಂಗಳುತ್ಪತ್ತಿ .
ವಕಾರದಿಂ ವಾಯುಗಳು ಹುಟ್ಟಿದವು.
ಯಕಾರದಿಂ ಕರಣಂಗಳು ಜನನವಾದವು.
ಒಂಕಾರವೆ ಸರ್ವಚೇತನಾತ್ಮಕವಾಯಿತ್ತು.
ಅದೆಂತೆಂದಡೆ : ನಕಾರಂ ಕರ್ಮಸಂಜಾತಮಕಾರೋ ವಿಷಯೋದ್ಭವಃ |
ಶಿಕಾರಮಿಂದ್ರಿಯಂ ಪ್ರೋತ್ತಂ ವಕಾರಂ ವಾಯುರುಚ್ಯತೇ ||
ಯಕಾರಂ ಕರಣೋತ್ಪತ್ತಿ ಒಂಕಾರಂ ಚೇತನಾತ್ಮಕಃ |
ಮಂತ್ರಮೂರ್ತಿಮಿದಂ ದೇವಿ ಏವಂ ಜ್ಞಾತ್ವಾ ವಿಚಕ್ಷಣಃ ||
ಎಂದುದಾಗಿ, ಇಂತಪ್ಪ ಮಂತ್ರಮೂರ್ತಿಯಾದ ಚೇತನಾತ್ಮಕ ತಾನೆ,
ಪರಮಗುರುವೆ ನಂಜುಂಡಶಿವಾ./1
ಅತಳ ವಿತಳ ಸುತಳ ನಿರಾತಳ ತಳಾತಳ
ರಸಾತಳ ಪಾತಾಳ ಭೂಲೋಕ ಭುವರ್ಲೊಕ ಸ್ವರ್ಗಲೋಕ
ಮಹರ್ಲೊಕ ಜನಲೋಕ ತಪರ್ಲೊಕ ಸತ್ಯಲೋಕವೆಂದಿಂತು
ಈರೇಳುಲೋಕಂಗಳು.
ಮೇರು ಮಂದರ ಕೈಲಾಸ ಹಿಮಾಲಯ ನಿಷಾಧ ಗಂಧ
ಮಾಧವವೆಂದಿಂತು ಸಪ್ತಕುಲಪರ್ವತಂಗಳು.
ಜಂಬು ಶಾಖ ಕುಶ ಕ್ರೌಂಚ ಶಾಲ್ಮಲಿ ಗೋಮೇಧ
ಪುಷ್ಕರವೆಂದಿಂತು ಸಪ್ತದ್ವೀಪಂಗಳು.
ಕ್ಷಾರ ಕ್ಷೀರ ದಧಿ ಸರ್ಪಿ ಇಕ್ಷು ಮಧು ಸ್ವಾದೋದಕವೆಂದಿಂತು
ಸಪ್ತಸಮುದ್ರಂಗಳು.
ಆದಿತ್ಯ ಸೋಮ ಮಂಗಳ ಬುಧ ಬೃಹಸ್ಪತಿ ಶುಕ್ರ ಶನಿ ರಾಹು
ಕೇತುಗಳೆಂದಿಂತು ನವಗ್ರಹಂಗಳು.
ಇಂತಿವೆಲ್ಲವು ಪಿಂಡಮಧ್ಯದಲ್ಲಿ ಇರುತ್ತಿಹವು.
ಅದೆಂತೆಂದಡೆ : ವಾತಾಳು ಭೂಧರಂ ಲೋಕೆ ತವಾನ್ಯೇ ದ್ವೀಪಸಾಗರಾಃ |
ಆದಿತ್ಯಾದಿಗ್ರಹಾ ಸರ್ವೆಪಿಂಡಮಧ್ಯೇ ವ್ಯವಸ್ಥಿತಾಃ ||
ಪಾದಾಧಸ್ತತಳಂ ವಿಂಧ್ಯಾತ್ ಪಾದೋಧ್ವೆ ವಿತಳಂ ಭರ್ವೆತ್|
ಜಾನುಭ್ಯಾಂ ಸುತಳಂ ಜ್ಞೇಯಂ ನಿತಳ ಸಂಧಿ ಬಂಧನೇ |
ತಳಾತಳಮದೂರೂಭ್ಯಂ ಗುಹ್ಯಸ್ಥಾನೇ ರಸಾತಳಂ |
ಪಾತಾಳಂ ಕಟಿಸಂಧಿಸ್ತು ಪಾದಾದೌ ಲಕ್ಷಯೇದ್ಬುಧಃ ||
ಭೂಲೋಕಂ ನಾಭಿಮಧ್ಯೇತು ಭುವರ್ಲೊಕಂ ಚ ಕುಕ್ಷಯೋಃ |
ಹೃದಯ ಸ್ವರ್ಗಲೋಕಂ ಚ ಮಹರ್ಲೊಕಂತು ಕಂಠಕೇ ||
ಜನರ್ಲೊಕೆ ತದೂಧ್ವೆತು ತಪರ್ಲೊಕೋ ಲಲಾಟಕೇ |
ಸತ್ಯರ್ಲೊಕಂ ಭವೇನ್ಮೂರ್ಧ್ನಿಭುವನಾನಿ ಚತುರ್ದಶಃ ||
ತ್ರಿಕೋಣೇ ಸಂಸ್ಥಿತೋ ಮೇರು ಅಧಃಕೋಣೇತು ಮಂದರಃ |
ಕೈಲಾಸದಕ್ಷಿಣೇ ಕೋಣೇ ವಾಮಕೋಣೇ ಹಿಮಾಲಯಃ ||
ನಿಷಾಧವೋಧ್ರ್ವ ಭಾಗೇ ಚ ದಕ್ಷಿಣೇ ಗಂಧ ಮಾಧವಃ |
ರೋಮಕಂ ರೋಮರೇಖಾಯಾಂ ಸಪ್ತೈತೇ ಕುಲಪರ್ವತಾಃ ||
ಅಸ್ಥಿಸ್ಥಾನೇ ಸ್ಥಿತೋ ಜಂಬುಮಜ್ಜಾಶಾಖಾಕಾವ್ಯವಸ್ಥಿತಃ |
ಕುಶದ್ವೀಪಸ್ತಥಾಮಾಂಸೇ ಕ್ರೌಂಚದ್ವೀಪಂ ರಸೇಷು ಚ ||
ತ್ವಚಾಯಾಶಾಲ್ಮಲೀ ದ್ವೀಪೋ ಗೋಮೇದೋರೋಮಸಂಚಯಃ ||
ನಭಸ್ಥಂ ಪುಷ್ಕರಂ ವಿಂಧ್ಯಾತ್ ಸಾಗರಂ ತದನಂತರಂ |
ಕ್ಷಾರೋದಶ್ಚ ತಥಾ ಮೂತ್ರಂ ಕ್ಷಿರೇಕ್ಷಿರೋದ ಸಾಗರಃ ||
ದಧಾರ್ಣವ ತಥಾ ಶ್ಲೇಷ್ಮೇ ಮಜ್ಜಾಯಾಂ ಸರ್ಪಿಸಾಗರಃ |
ತಸ್ಮಾದಿಕ್ಷುರಸಾಂತೇ ಚ ಶ್ರೋಣಿತೇ ಮಧುರಿತ್ಯಪಿ |
ಸ್ವಾದೋದಕಲಂಬಕಸ್ಥಾನೇ ಗರ್ಭೊದಂ ಸಪ್ತಸಾಗರೇ ||
ನಾದಚಕ್ರೇಸ್ಥಿತೋ ಸೂರ್ಯಃ ಬಿಂದು ಚಕ್ರೇ ಚ ಚಂದ್ರಮಾಃ |
ಲೋಚನಾಭ್ಯಾಂ ಕುಂಜೋ ಜ್ಞೇಯೋ ಹೃದಯೇ ಚ ಬುಧಃ ಸ್ಮೃತಃ ||
ಎಂದುದಾಗಿ, ಇಂತೀ ಈರೇಳುಲೋಕ ಒಳಗಾದ ಚರಾಚರವನೊಳಕೊಂಡ
ಪರಿಪೂರ್ಣಬೋಧ ತಾನೆ, ನಮ್ಮ ಪರಮಗುರು ನಂಜುಂಡಶಿವನು./2
ಅಷ್ಟದಳಕಮಲದಲ್ಲಿ ಚರಿಸುವ ಆತ್ಮನ
ಗತಿಭೇದವನರಿದು, ಪ್ರಾಣಲಿಂಗಸಂಬಂಧಿಯಾಗಿ
ಲಿಂಗಾರ್ಚನೆಯ ಮಾಡುವ ಪರಿ ಎಂತೆಂದಡೆ : ಪೂರ್ವದಳದಲ್ಲಿ ಭಕ್ತನಾಗಿಹ, ಆಗ್ನೆದಳದಲ್ಲಿ ಷಡ್ರಸಾಪೇಕ್ಷಿತನಾಗಿಹ,
ಯಮದಳದಲ್ಲಿ ಕ್ರೋಧಿಯಾಗಿಹ, ನೈರುತ್ಯದಳದಲ್ಲಿ ಸತ್ಯನಾಗಿ
ಸದಾಚಾರ ವರ್ತನೆಯಲ್ಲಿಹ,
ವರುಣದಳದಲ್ಲಿ ಪರವಶನಾಗಿಹ, ವಾಯವ್ಯದಳದಲ್ಲಿ ಗಮನಿಯಾಗಿಹ,
ಉತ್ತರದಳದಲ್ಲಿ ಧರ್ಮಶೀಲನಾಗಿಹ, ಈಶಾನ್ಯದಳದಲ್ಲಿ ಮುಕ್ತಿಯ ನಿಶ್ಚೈಸಿ
ಧ್ಯಾನ ಧಾರಣ ಸಮಾಧಿಯೆಂಬ ಸತ್ಕರ್ಮವಿಷಯಿಯಾಗಿಹ.
ಇಂತೀ ಅಷ್ಟದಳಂಗಳಂ ಮೀರಿ ನಿಜಸ್ಥಾನದಲ್ಲಿ ನಿಂದಾಗ,
ಸಚ್ಚಿದಾನಂದಸ್ವರೂಪನಾಗಿ ಚಲನೆಯಿಲ್ಲದಿಹ.
ಅದಂತೆಂದಡೆ : ಪೂರ್ವದಳೇ ಭವೇದ್ಭಕ್ತಾ ಅಗ್ನಶ್ಚಕ್ಷುದಮೇವ ಚ |
ದಕ್ಷಿಣಂ ಕ್ರೋಧಮುತ್ಪನ್ನಂ ನೈರುತ್ಯಂ ಸತ್ಯಮೇವ ಚ |
ಪಶ್ಚಿಮಂತು ಭವೇನಿದ್ರಾ ವಾಯವ್ಯಂ ಗಮನಂ ಸ್ತಥಾ |
ಉತ್ತರಂ ಧರ್ಮಶೀಲಾಯ ಈಶಾನ್ಯಂ ವಿಷಯಂ ಸ್ತಥಾ |
ಅಷ್ಟಕರ್ನಿಕೇ ಮಧ್ಯಸ್ಥಂ ಆನಂದಮಾಚಲಂ ಶಿವಃ |
ಪರಾನಂದಾತ್ಮಕಂ ಸೂಕ್ಷಂ ಕೇವಲ ಸನ್ನಿರಂಜನ |
ಜ್ಞಾನಾಶ್ರಿತ ಪರಂ ಲಿಂಗಂ ಯೋಗಿನಾಂ ಹೃದಯೇಸ್ಥಿತಂ |
ಯದೇವಬಿಂಬಂ ಹೃದಯಾವಲಿಪ್ತಂ |
ತೇಜೋಮಯಭ್ರಾಜಯತೇ ಸುಧಾಂತಂ |
ತದಾತ್ಮತ್ವಂ ಪ್ರಸಮಿಕ್ಷ್ಯದೇಹಿ |
ಏಕಃ ಕೃತಾರ್ಥೊ ಭವತೇ ವಿಶೋಕಃ ||
ಆತ್ಮಾತ್ವಂ ಗಿರಿಜಾಮತಿಃ ಪರಿಚರಾಃ ಪ್ರಾಣಃ ಶರೀರಂ ಗೃಹಂ |
ಪೂಜಾತೇ ವಿಷಯೋಪಭೋಗರಚನಾ ನಿದ್ರಾಸಮ್ಯಕ್ಸಮಾಧಿಸ್ಥಿತಿಃ ||
ಸಂಚಾರಃ ಪದಯೋಃ ಪ್ರದಕ್ಷಣವಿಧಿಃ ಸ್ತೋತ್ರಾಣಿ ಸರ್ವಾಗಿರಃ |
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ ||
ಯಥಾಪ್ರಾಸ್ಯ ಲಿಂಗಸ್ಯ ಸಂಯೋಗೋ ವಿಧಿತತ್ಪರಃ ||
ತಥೈವ ಶರಣಂ ಸಾಕ್ಷಾದ್ಭವತ್ಯೇವಂ ನ ಸಂಶಯಃ ||
ಇಂತೆಂದುದಾಗಿ, ಪ್ರಾಣದ ಲಿಂಗದ ಸಂಗದ ಸಮರಸದರಿವರತು
ನಿಂದ ನಿಲುವನುಪಮಿಸಬಾರದು.
ಅದೆಂತೆಂದಡೆ : `ಯತೋ ವಾಚೋ ನಿವರ್ತಂತೇ ಆಪ್ರಾಪ್ಯಮನಸಾ ಸಃ’
ಎಂದುದು ಶ್ರುತಿ, ಪರಮಗುರುವೆ ನಂಜುಂಡಶಿವಾ./3
ಆತ್ಮಂಗೆ ಬಂಧ ಮೋಕ್ಷಂಗಳಾವ ತೆರದಿಂದಲಾಹವೆಂದಡೆ
ಆಕಾಶಾದಿ ಭೂತಂಗಳೈದು, ಪ್ರಾಣಾದಿ ವಾಯುಗಳೈದು,
ಶ್ರೋತ್ರಾದಿ ಇಂದ್ರಿಯಂಗಳೈದು. ಶಬ್ದಾದಿ ವಿಷಯಂಗಳೈದು,
ಮನಸಾದಿ ಕರಣ ನಾಲ್ಕು. ಇಂತಿವೆಲ್ಲವೂ ಕೂಡಿ ಸ್ಥೂಲತನುವಾಯಿತ್ತು .
ಅದೆಂತೆಂದಡೆ : ಭೌತಿಪಂಚಭಿಃ ಪ್ರಾಣೈಃ ಚತುರ್ದಶಭಿರಿಂದ್ರಿಯೈಃ |
ಚತುರ್ವಿಂಶತಿ ದೇಹಾನಿ ಸಾಂಖ್ಯಶಾಸ್ತ್ರೋ ವಿದೋ ವಿಧುಃ ||
ಎಂದುದಾಗಿ, ಇಂತೀ ಇಪ್ಪತ್ತುನಾಲ್ಕು ತತ್ವದಿಂದಾದುದು ದೇಹವು.
ತಾನೆಂಬುದೇ ಅವಿದ್ಯೆ, ಅವಿದ್ಯೆಯೇ ಅಹಂಕಾರ, ಅಹಂಕಾರವೇ ಬಂಧ.
ಅದು ಕಾರಣ, ದೇಹವು ಆತ್ಮನಲ್ಲ.
ದೇಹವ ವ್ಯತಿರಿಕ್ತವಾಗಿ ಅರಿವುತಿಪ್ಪ ನಾಸ್ತಿಕನೇ ಆತ್ಮ.
ಅದೆಂತೆಂದೆಡೆ : ಘಟದ್ರಷ್ಟಾ ಘಟಾದ್ಭಿನ್ನಃ ಸರ್ವಥಾನ ಘಟೋಯಥಾ |
ದೇಹದ್ರಷ್ಟಾ ತಥಾದೇಹೋ ನಾಹಮಿತ್ಯವಧಾರಯಃ ||
ಎಂದುದಾಗಿ, ದೇಹವಾತ್ಮನಲ್ಲೆಂಬುದೆ ಅವಿದ್ಯನಾಶ.
ಅವಿದ್ಯನಾಶವೆ ಹಮ್ಮಿನ ಲಯ, ಹಮ್ಮಿನ ಲಯದೆ ಮೋಕ್ಷ.
ಅದೆಂತೆಂದಡೆ : ಅನಾತ್ಮ ಭೂತದೇಹಾದೌ ಆತ್ಮ ಬುದ್ಧಿಸ್ತು ದೇಹಿನಾಂ |
ಸಾಠವಿದ್ಯಾ ತತ್ಕೃತೊ ಬಂಧಸ್ತನ್ನಾಶೋ ಮೋಕ್ಷಂ ಉಚ್ಯತೇ ||
ನಿದ್ರಾದೌ ಜಾಗರಸ್ಯಾಂತಯೋಭಾವ ಉಪಚಾಯತೇ |
ತಂ ಭಾವಂ ಭಾವಯೇದ್ರಾವ ಮುಕ್ತಿರೇವ ನ ಸಂಶಯಃ ||
ಅನಾಖ್ಯೇತು ನಿರಾಲಂಬೇ ಚೌಗ್ರಾಹ್ಯೇಮ ನ ವರ್ಜಿತೇ ||
ನಿಸ್ತತ್ವೇ ಯೋಜಿತೋ ಮುಕ್ತಃ ಇತಿ ಶಾಸ್ತ್ರೇಷು ನಿಶ್ಚಯಃ ||
ಎಂದುದಾಗಿ, ಬಂಧವ ಹರಿದು ಮುಕ್ತರಾಗಿಪ್ಪ ನಿಜಶರಣರ ಘನವ
ನೀವೇ ಬಲ್ಲಿರಿ, ಪರಕಮಗುರುವೆ ನಂಜುಂಡಶಿವಾ./4
ಆದಿಯನರಿದರು ಮಧ್ಯವನರಿಯರು ಮಧ್ಯವನರಿದರು ಅವಸಾನವನರಿಯರು.
ಅವಸಾನವನರಿದರು ಆದಿಯನರಿಯರು.
ಇಂತಿವರೊಳಗೊಂದನರಿದರು ಒಂದನರಿಯದರೊಂದಜ್ಞಾನಿಗಳಾಗಿ
ಸಂದೇಹಕ್ಕೊಳಗಾದ ಮಂದಮತಿಗಳ ನಾನೆಂತು ನಿಮ್ಮ ಶರಣರಿಗೆಣೆಯೆಂಬೆ,
ಪರಮಗುರುವೆ ನಂಜುಂಡಶಿವಾ ? /5
ಎನ್ನ ತನುವ ತನ್ನ ತನುವಿನಿಂದ ಅಪ್ಪಿದನವ್ವಾ.
ಎನ್ನ ಮನವ ತನ್ನ ಮನದಿಂದ ಆಲಿಂಗಿಸಿದವನವ್ವಾ.
ಎನ್ನ ಅರಿವ ತನ್ನ ಅರಿವಿಂದ ಅವಗವಿಸಿದನವ್ವಾ.
ಇಂತಾದ ಬಳಿಕ ಎನ್ನ ವಿಷಯವೆಲ್ಲವೂ ತನ್ನ ನಿಮಿತ್ಯ,
ತನ್ನ ವಿಷಯವೆಲ್ಲ ನನ್ನ ನಿಮಿತ್ಯವಾಗಿ,
ಆನಳಿದು ತಾನುಳಿದು, ತಾನಳಿದು ಆನುಳಿದು,
ತಾನು ತಾನಾದ ನಿಜಸುಖದ ಸುಗ್ಗಿಯನೇನೆಂಬೆ,
ಪರಮಗುರುವೆ ನಂಜುಂಡಶಿವಾ !/6
ಏಕಮೇವನದ್ವಿತೀಯನಪಾರನ ನೋಡಾ !
ಆಕಾರ ನಿರಾಕಾರರಹಿತನ ನೋಡಾ !
ಭಕುತಿಯುಕುತಿಗೊಲಿವ ನಿಖಿಳೇಶನ ನೋಡಾ !
ಅಖಿಳಾಲಯ ಸುಖಮಯನಕಳಂಕ,
ನಮ್ಮ ಪರಮಗುರು ನಂಜುಂಡಶಿವನ ನೋಡಾ./7
ಕಂಡೆನವಿರಳನ ದೃಕ್ಕಿನಲ್ಲಿ , ಕಂಡೆನಪಾರನ ತ್ವಕ್ಕಿನಲ್ಲಿ ,
ಕಂಡೆನುಪಮಾತೀತನ ಶ್ರೋತ್ರದಲ್ಲಿ, ಕಂಡೆ
ವಾಙ್ಮನಕ್ಕಗೋಚರನ ಘ್ರಾಣದಲ್ಲಿ ,
ಕಂಡೆನನಘನತಕ್ರ್ಯನ ಜಿಹ್ವೆಯಲ್ಲಿ , ಕಂಡೆನೇಕಯೇವನದ್ವಿತೀಯನ ಹೃತ್ಕಮಲದಲ್ಲಿ ,
ನಮ್ಮ ಪರಮಗುರು ನಂಜುಂಡಶಿವನ./8
[ಕರ]ಣೇಂದ್ರಿಯದಿಚ್ಛೆಯಂ ಪರಿದು,
ಕಂಥೆ ಕಟ್ಟಿಗೆ ಜಡೆ ಕರ್ಪರ ಕಮಂಡಲು ಕಾಮಾಕ್ಷಿ
ಭಸ್ಮಾಧಾರವನಳವಡಿಸಿಕೊಂಡು ದಂಗಮವೆಂದೆನಿಸಿದ ಬಳಿಕ
ಪಸಿವಡಗಿಸಿ, ಒಡಲ ಗಿಡಗರವ ತುಂಬಿದಡದು
ಜಗದ ಸುಳುಹೆಂದೆ ಕಾಣಾ, ಪರಮಗುರುವೆ ನಂಜುಂಡಶಿವಾ./9
ಕಂಡೆನು ಕರುಣಾಕರನ, ಕಂಡೇಂದುಮೌಳಿಯ.
ಕಂಡೆನು ಹರಿಯಜ ಸುರವಂದ್ಯನಡಿಯುಗಳವ.
ಕಂಡೆನು ಶಶಾಂಕಸೂರ್ಯಾಗ್ನಿ ಲೋಚನ ಶ್ರೀಮೂರ್ತಿಯ.
ಕಂಡೆನತ್ಯತಿಷ್ಠದ್ದಶಾಂಗುವ ನಮ್ಮ ಪರಮಗುರು ನಂಜುಂಡಶಿವನ./10
ಗುರುಲಿಂಗಜಂಗಮ ತ್ರಿವಿಧಪ್ರಸಾದವ
ಕೊಂಡೆವೆಂದುಲಿವ ಅಜ್ಞಾನಿಗಳು ನೀವು ಕೇಳಿರೆ.
ಗುರುಪ್ರಸಾದವ ಕೊಂಡಲ್ಲಿ ಮಲತ್ರಯದೋಷವಳಿಯಬೇಕು.
ಲಿಂಗಪ್ರಸಾದವ ಕೊಂಡಲ್ಲಿ ಇಂದ್ರಿಯ ವಿಷಯಸೂತಕವಳಿಯಬೇಕು.
ಜಂಗಮಪ್ರಸಾದವ ಕೊಂಡಲ್ಲಿ ಸರ್ವಸಂಕಲ್ಪ ಸಂಶಯವಳಿಯಬೇಕು.
ಇಂತೀ ತ್ರಿದೋಷವಳಿಯದೆ ಆದ್ಯರ ವಚನವ ಕಲಿತು,
ಮನಬಂದಂತೆ ಉಲಿವುತಿಪ್ಪ ದುಶ್ಶೀಲರನೊಲ್ಲ ,
ನಮ್ಮ ಪರಮಗುರು ನಂಜುಂಡಶಿವನು./11
ಗುರುಲಿಂಗಭಕ್ತನಾದರೆ ಪಾಶತ್ರಯ ವಿರಹಿತನಾಗಿರಬೇಕು.
ಗುರುಲಿಂಗನಿಷ್ಠನಾದರೆ ಅನ್ಯಭಜನೆಯಿಲ್ಲದಿರಬೇಕು.
ಗುರುಲಿಂಗಪ್ರಸಾದಿಯಾದರೆ ಅನ್ಯರಲ್ಲಿ ಕೈಯಾನದಿರಬೇಕು.
ಗುರುಲಿಂಗಪ್ರಾಣಿಯಾದರೆ ಅರ್ಪಿಸಿದಲ್ಲದ ಕೊಳ್ಳದಿರಬೇಕು.
ಗುರುಲಿಂಗಸಮರಸನಾದರೆ ಅನ್ಯರಿಗೆರಗದಿರಬೇಕು.
ಗುರುಲಿಂಗಶರಣನಾದರೆ ಇಹಪರವೆಂಬ ಇದ್ದೆಸೆಗೆಡಬೇಕು.
ಇಂತು ಷಟ್ಸ್ಥಲವಿಡಿದಾಚರಿಸಿ ಗುರುಲಿಂಗದಲ್ಲಿ ಎರಡಳಿದುಳಿದ
ನಿಜಜ್ಞಾನಿ ತಾನೆ. ನಮ್ಮ ಪರಮಗುರು ನಂಜುಂಡಶಿವನು./12
ಜಂಗಮ ಜಂಗಮವೆಂಬ ನುಡಿಗೆ ನಾಚರು ನೋಡಯ್ಯ.
ಜಂಗಮ ಮಲತ್ರಯ ಈಷಣತ್ರಯ ಪಾಶತ್ರಯ ತನುತ್ರಯ
ಜೀವತ್ರಯ ಅವಸ್ಥಾತ್ರಯ ಗುಣತ್ರಯವಿರಹಿತ ನೋಡಯ್ಯ.
ಜಂಗಮ ಧರ್ಮಾರ್ಥಕಾಮಮೋಕ್ಷ ಸಾಲೋಕ್ಯ ಸಾಮೀಪ್ಯ
ಸಾರೂಪ್ಯ ಸಾಯುಜ್ಯವೆಂಬ ಜಡಕರ್ಮವಿರಹಿತ ನೋಡಯ್ಯ.
ಜಂಗಮ ಜನನಮರಣವಿರಹಿತನದೆಂತೆಂದಡೆ : ಜಕಾರಂ ಜನನಂ ದೂರಂ ಗಕಾರಂ ಗಮನವರ್ಜಿತಃ |
ಮಕಾರಂ ಮರಣಂ ನಾಸ್ತಿ ತ್ರಿವರ್ಣಮಭಿಧೀಯತೇ ||
ಆದ್ಯಂತರಹಿತಂ ಶೂನ್ಯಂ ಸರ್ವಾನಂದಮಯಂ ವಿಭುಃ |
ಅನಾದಿ ಜಂಗಮೋ ದೇವಿ ಬ್ರಹ್ಮ ವಿಷ್ಣೆ ್ವಂದ್ರ ಪೂಜಿತಃ ||
ಲೋಷ್ಠಹೇಮ ಸಮಾನಶ್ಚಯೋ ಹಿತಾಹಿತಯೋ ಸಮಃ |
ಸಂತುಷ್ಟಶ್ಚಾಪಮಾನೇಷು ಸ್ವತಂತ್ರಂ ಜಂಗಮಸ್ಥಲಂ ||
ಎಂದುದಾಗಿ, ಆದ್ಯಂತರಹಿತ ಸ್ವತಂತ್ರ ಘನಮಹಿಮ ನೋಡಯ್ಯ.
ಜಂಗಮ ಸಚ್ಚಿದಾನಂದ ನಿತ್ಯಪರಿಪೂರ್ಣ.
ಇಂತಪ್ಪ ಜಂಗಮದ ನಿಲುವಿಂಗೆ ನಮೋ ನಮೋ ಎಂಬೆ ಕಾಣಾ.
ಪರಮಗುರುವೆ ನಂಜುಂಡಶಿವಾ./13
ತನ್ನ ತನ್ನಿಂದ ತಾನರಿವ ಪರಿಯೆಂತುಟಯ್ಯಾಯೆಂದರೆ
ಪೃಥ್ವಿಯಪ್ಪು ತೇಜ ವಾಯು ಆಕಾಶವೆಂಬ
ಪಂಚಭೂತಂಗಳು ತಾನಲ್ಲ.
ಪ್ರಾಣೋಪಾನ ವ್ಯಾನೋದಾನ ಸಮಾನವೆಂಬ
ಪಂಚಪ್ರಾಣವಾಯುಗಳು ತಾನಲ್ಲ .
ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣವೆಂಬ
ಪಂಚಜ್ಞಾನೇಂದ್ರಿಯಂಗಳು ತಾನಲ್ಲ .
ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚವಿಷಯಂಗಳು ತಾನಲ್ಲ .
ಚಿತ್ತಬುದ್ಧಿಯಹಂಕಾರ ಮನ ಜೀವವೆಂಬ ಪಂಚಕರಣಂಗಳು ತಾನಲ್ಲ .
ತಾನಾರಾಯ್ಯಾಯೆಂದಡೆ, ಎಲ್ಲಾ ತತ್ವಂಗಳ ಕಳೆದುಳುಮೆಯೆ ತಾನು.
ಅದೆಂತೆಂದಡೆ : ನೇತಿ ನೇತೀತಿ ನೇತಿ ಶೇಷಿತಂ ಯತ್ಪರಂ ಪದಂ |
ನಿರಾಕರ್ತುಮಶಕ್ಯತ್ವಾತ್ತದಸ್ಮೀತಿ ಸುಖೀಭವಃ ||
ಪಂಚವಿಂಶತಿ ಪರ್ಯಂತಂ ಸಮಸ್ತಂ ನೇತಿ ನೇತಿ ಚ |
ಹಿತ್ವಾ ಷಡ್ವಿಂಶತಿ ಚೈವ ಸೋಹಂ ಬ್ರಹ್ಮೇತಿ ಪಶ್ಯತಿ ||
ಮನಃ ಚತುರ್ವಿಂಶಕಶ್ಚ ಜ್ಞಾತೃತ್ವಂ ಪಂಚವಿಂಶಕಃ |
ಆತ್ಮಾಃ ಷಡ್ವಿಂಶಕಶ್ಚೆ ವ ಪರಮಾತ್ಮಾ ಸಪ್ತವಿಂಶಕಃ |
ಚತುರ್ವಿಧಂತು ಮಾಯಾಂಶಂ ನಿರ್ಗುಣಃ ಪರಮೇಶ್ವರಃ ||
ಎಂದುದಾಗಿ, ಇಂತೀ ಇಪ್ಪತ್ತೇಳು ತತ್ವಂಗಳ ಕೊಂಡುನಿಂದ ನಿಜವು
ತಾನೆ ನಮ್ಮ ಪರಮಗುರು ನಂಜುಂಡಶಿವಾ./14
ತಾನೆಂಬ ತೋರಿಕೆ ತನಗಿಲ್ಲವಾಗಿ,
ತನ್ನಿಂ ತೋರುವ ವಿಶ್ವಪ್ರಪಂಚವೇನೂ ಇಲ್ಲದನಿರ್ವಾಚ್ಯವಾಗಿರ್ದ
ಪರಬ್ರಹ್ಮವು, ತನ್ನ ಲೀಲೆಯಿಂ
ತಾನೆಯಖಂಡಗೋಳಕಾಕಾರಮಪ್ಪ ಸ್ವಯಂಭುಲಿಂಗವಾಯಿತ್ತು .
ಆ ಲಿಂಗದಿಂದಾಯಿತ್ತು ಸಕಲ ನಿಃಕಲ ಶಿವಶಕ್ತ್ಯಾತ್ಮಕವಪ್ಪ ಸದಾಶಿವ.
ಆ ಸದಾಶಿವನ ಪಂಚಮುಖದಿಂದಾದವು ಪಂಚಭೌತಿಕ.
ಆ ಪಂಚಭೌತಿಕದಿಂದಾದವು ಪಂಚವಿಂಶತಿತತ್ವಂಗಳು.
ಅದೆಂತೆಂದಡೆ : ಅನಿರ್ವಾಚ್ಯಪದಂ ವಸ್ತುಸ್ವಲೀಲಾನಂದ ಕಾರಣಂ |
ಸ್ವಯಮೇವ ಸ್ವಯಂಭೂತ್ವಾಸ್ಸ್ವಯಮೇಮದ್ವಿಧಾ ಭವೇತ್ ||
ಶಿವಂ ಬ್ರಹ್ಮೇತಿಪ್ರಾಹುಃ ಶಕ್ತಿಸ್ಚೈವಾಂಗಮುಚ್ಯತೇ |
ಶಿವಶಕ್ತಿ ಸಮಾಯೋಗಂ ಜಗತ್ಸೃಷ್ಟ್ಯಾರ್ಥಕಾರಣಂ ||
ಈಶಾನಾದ್ಯೋಮಸಂಭೂತಿಸ್ತತ್ಪುರ್ಷಾದ್ವಾಯ ಸಂಭವಃ |
ಅಘೋರಾದ್ವಹ್ನಿರಿತ್ಯುಕ್ತಂ ವಾಮದೇವಾದ್ಜಲಸ್ತಥಾ ||
ಸದ್ಯೋಜಾತಾದಿಯಂ ಪೃಥ್ವೀ ಶಿವವಕ್ತ್ರಾದ್ವಿನಿರ್ಗತಾ |
ಕರ್ಮಾಖ್ಯಪೃಥ್ವಿ ಸಂಭೂತಿರ್ವಿಷಯಾಃ ಜಲಸಂಭವಃ ||
ಅಗ್ನಿಜಾತೇಂದ್ರಿಯಂ ಜ್ಞೇಯಂ ಮರುನ್ಮಾರುತಪಂಚಕಃ |
ನಭಾತ್ಕರಣ ಸಂಜಾತಮಿತಿ ಜ್ಞಾತ್ಪಂಚವಿಂಶತಿಃ |
ಎಂದುದಾಗಿ,
ಆ ಪಂಚವಿಂಶತಿತತ್ವವೇ ದೇಹದೇಹಿಗಳೆಂಬ ನಾಮದಿಂ ಪಿಂಡವಾಯಿತ್ತು .
ಆ ಪಿಂಡಮಧ್ಯದಲ್ಲಿ ಮರದೊರದಿರವನೆಚ್ಚತ್ತಂತೆ ವಿವೇಕ ತಲೆದೋರಲು,
ಆ ವಿವೇಕದಿಂ ತಾನಾರಿದೆಲ್ಲಿಯದೆತ್ತಣ ಮರವೆಯೆಂದು ವಿಚಾರಿಸಿ.
ಅದೆಂತೆಂದಡೆ : ಯಥಾ ಪೂರ್ವಂ ಜಾಗ್ರತೀತಃ ಪಶ್ಚಾತ್ಸುಪ್ತಿಮನುಭೂಯ |
ಪಶ್ಚಾತ್ಜಾಗರಣಮೇವಾನು ಸಂಧತ್ತೇ ತಥಾಪಿಂಡಭೂತೇ |
ಸ್ವಸ್ಮಿನೇದ ವಿಚಾರ ಜ್ಞಾನಮುತ್ಪದ್ಯತೇ ಇತಿ ||
ಕೋಹಂ ಕಥಮಯಂ ದೋಷಸ್ಸಂಸಾರಾಖ್ಯ ಉಪಾಗತಃ |
ನೇತಿ ನೇತಿ ಪರಾಮರ್ಶೊ ವಿಚಾರಯಿತಿ ಕಥತೇ ||
ಮನೋವಿಲಾಸ ಸಂಸಾರ ಇತಿ [ಏನ] ಪ್ರಕೀರ್ತತೇ |
ಪುತ್ರದಾರಾದಿ ಸಂಸಾರಃ ಪುಂಸಾಂ ಸಂಮೂಢ ಚೇತಸಾಂ ||
ಜ್ಞಾತೇ ಸಂಸಾರ ಪಿಂಡೇಸ್ಮಿನ್ ಜಿಗುಪ್ಸಾದೋಷದರ್ಶನಾತ್ |
ವೈರಾಗ್ಯಪ್ರಾಪ್ತ ಮೋಕ್ಷಸ್ಯ ಸಂಸಾರೋ ಹೇಯವಾನ್ ಭವೇತ್ ||
ಎಂದುದಾಗಿ, ಪಿತ ಮಾತೆ ಸತಿ ಸುತ ಸೋದರ ಮೊದಲಾದ
ಸರ್ವಸಂಸಾರಮಂ ನಿವೃತ್ತಿಯಂ ಮಾಡಿ, ಗುರುಸನ್ನಿಧಿಯಲ್ಲಿ
`ಯದಿ ಅಹಂ ಕಃ’ ಎಲೆ ಶ್ರೀಗುರುವೆ ಎನೆ,
`ತ್ವಂ ತತ್ತ್ವಮಸಿ’ ಎಂಬ ಗುರುವಚನಮಂ ತಿಳಿದು.
ಅದೆಂತೆಂದಡೆ : ಕೋಹಮಿತ್ಯಬ್ರವಿದ್ದೇಹಿ ಗುರುಂ ಪರಮಕಾರಣಂ |
ಗುರುಸ್ತತ್ತ್ವಮಸೀತ್ಯಾಹ ಸತ್ಯಾರ್ಥಂ ಕರುಣಾನಿಧಿಃ |
ತತ್ಪದಂ ಲಿಂಗಮಾಖ್ಯಾತಮಂಗಂ ತ್ವಂ ಪದಮೀರಿತಂ |
ಸಂಯೋಗೋಸಿಪದಂ ಪ್ರೋಕ್ತಮನಯೋರಂಗಲಿಂಗಯೋಃ ||
ಎಂದುದಾಗಿ, ತತ್ ಲಿಂಗ, ತ್ವಂ ಅಂಗ, ಅಸಿಯೆಂದು ಸಮರಸ.
ಇಂತೀ ತ್ರಿವಿಧಮನರಿದರಿವಿನಗ್ರದ ಕೊನೆಯ ಮೊನೆಯಬೆಳಗು ತಾನೆ,
ನಮ್ಮ ಪರಮಗುರು ನಂಜಂಡಶಿವನು./15
ದೃಷ್ಟ ದರ್ಶನ ದೃಶ್ಯವೆಂತಾದವಯ್ಯಾಯೆಂದಡೆ
ದೃಷ್ಟವೀಗ ಅರಿವಾತ, ದರ್ಶನವೆಂಬುದು ಜ್ಞಾನ.
ದೃಶ್ಯವೆಂದು ಅರುಹಿಸಿಕೊಂಬುದೀಗ.
ಈ ಮೂರರ ವಾಸನಾ ತ್ಯಾಗವ ಮಾಡುವ
ತುರೀಯದ ಮೊದಲಲ್ಲಿ ಆಶ್ರಯವಾಗಿ ಇದ್ದಂಥ
ಆವುದಾನೊಂದು ಜ್ಞಪ್ತಿಯುಂಟು, ಅದನೆ ತಾನೆಂದರಿವುದು.
ಅದೆಂತೆಂದಡೆ.
ದೃಷ್ಟಂ ದರ್ಶನದೃಶ್ಶಾನಾಂ ತ್ಯಕ್ತ್ವಾ ವಾಸನಯಾ ಸಹಾ |
ದರ್ಶನ ಪ್ರಥಮಾಭಾಸ ಆತ್ಮಾನಂ ಸಮುಪಾಸ್ಮಹೇ ||
ಅಭೇದ ಜ್ಞಾನರೂಪೇಣ ಆನಂದಮಮಲಂ ಧೃವಂ |
ಅತಕ್ರ್ಯಮದ್ವಯಂ ಪೂರ್ಣಬ್ರಹ್ಮೆ ವಾಸ್ಮಿನ ಸಂಶಯಃ ||
ಎಂದುದಾಗಿ, ಸತ್ಯಜ್ಞಾನಾನಂದಾದ್ವಯಮಲ ತಾನೆ,
ಪರಮಗುರು ನಂಜುಂಡಶಿವ. /16
ನನೆಯೊಳಗಣ ಪರಿಮಳದಂತೆ, ಶಿಲೆಯೊಳಗಣ ಪಾವಕನಂತೆ,
ಬೀಜದೊಳಗಣ ವೃಕ್ಷದಂತೆ, ಕ್ಷೀರದೊಳಗಣ ಘೃತದಂತೆ,
ತಿಲದೊಳಗಣ ತೈಲದಂತೆ, ಸುಪ್ತಿಯೊಳಗಣ ಎಚ್ಚರಿನಂತೆ
ನೀನಿದ್ದುದನಾರು ಬಲ್ಲರು ಹೇಳಾ. ಪರಮಗುರು ನಂಜುಂಡಶಿವಾ ?/17
ಪೃಥ್ವಿಯಪ್ಪು ಈ ಎರಡೂ ಸ್ಥೂಲತನು.
ಅಧಿಕಾರಿ ವಿಶ್ವನೆಂಬ ಪುರುಷ ಜಾಗ್ರಾವಸ್ಥೆ.
ಆತಂಗೆ ಸಾಕಾರಮಪ್ಪ ಇಷ್ಟಲಿಂಗ ಸಂಬಂಧವ
ಕ್ರಿಯಾದೀಕ್ಷೆಯಿಂ ಮಾಡಿದಾತ ದೀಕ್ಷಾಗುರು.
ಅಗ್ನಿ ವಾಯು ಇವೆರಡೂ ಸೂಕ್ಷ್ಮತನು.
ಅಧಿಕಾರಿ ತೈಜಸನೆಂಬ ಪುರುಷ ಸ್ವಪ್ನಾವಸ್ಥೆ.
ಆತಂಗೆ ಸಕಲ ನಿಃಕಲಮಪ್ಪ ಪ್ರಾಣಲಿಂಗಸಂಬಂಧವ
ಮಂತ್ರದೀಕ್ಷೆಯಿಂ ಮಾಡಿದಾತ ಶಿಕ್ಷಾಗುರು.
ಆಕಾಶ ಆತ್ಮ ಇವೆರಡೂ ಕಾರಣತನು.
ಅಧಿಕಾರಿ ಪ್ರಾಜ್ಞನೆಂಬ ಪುರುಷ ಸುಷುಪ್ತಾವಸ್ಥೆ.
ಆತಂಗೆ ನಿಃಕಲಮಪ್ಪ ಭಾವಲಿಂಗಸಂಬಂಧವ
ವೇಧಾದೀಕ್ಷೆಯಿಂ ಮಾಡಿದಾತ ಮೋಕ್ಷಾಗುರು.
ಅದೆಂತೆಂದಡೆ : ಸಾದೀಕ್ಷಾ ಪರಮಾಶೈವೀ ತ್ರಿಧಾ ಭವತಿ ನಿರ್ಮಲಾ |
ಏಕಾವೇಧಾತ್ಮಿಕಾ ಸಾಕ್ಷಾದನ್ಯಮಂತ್ರಾತ್ಮಿಕಾ ಮತಾ ||
ಕ್ರಿಯಾತ್ಮಿಕಾ ಪರಾಕಾಚಿತ್ ದೇವ ಏವ ತ್ರಿಧಾಭವೇತ್ |
ಸ್ಥೂಲಾಂಗೇ ಇಷ್ಟಲಿಂಗಂ ಚ ಸೂಕ್ಷ್ಮಾಂಗೇ ಪ್ರಾಣಲಿಂಗಕಂ ||
ಕಾರಣೇ ಭಾವಲಿಂಗಂ ಚ ಸುಪ್ರತಿಷ್ಠಿತಮಾತ್ಮನಿ |
ವಿಶ್ವೋ ಜಾಗ್ರದವಸ್ಥಾಯಾಂ ಸ್ವಪ್ನಾಖ್ಯಾಯಾಂತು ತೈಜಸಃ ||
ಪ್ರಾಜ್ಞಃ ಸುಷುಪ್ತವಾಸ್ಥಾಯಾಂ ಲಿಂಗತ್ರಯಮುಪಾಸತೇ |
ದೀಕ್ಷಾ ಶಿಕ್ಷಾ ಚ ಮೋಕ್ಷಂ ಚ ಮಾಚಾರ್ಯಃ ತ್ರಿವಿಧೋ ಭವೇತ್ ||
ಎಂದುದಾಗಿ, ಇನ್ನು ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡೂದು.
ಪ್ರಾಣಲಿಂಗಕ್ಕೆ ಮನನ ಪೂಜೆಯಂ ಮಾಡೂದು.
ಭಾವಲಿಂಗಕ್ಕೆ ಮನೋಲಯವೇ ಪೂಜೆ.
ಅದೆಂತೆಂದಡೆ : ಅಷ್ಟವಿಧಾರ್ಚನಂ ಕುರ್ಯಾದಿಷ್ಟಲಿಂಗಸ್ಯ ಪೂಜನಂ |
ತಲ್ಲಿಂಗಮನುತೇಯಸ್ತು ಪ್ರಾಣಲಿಂಗಸ್ಯ ಪೂಜನಂ ||
ಮನೋಲಯೋ ನಿರಂಜನ್ಯೇ ಭಾವಲಿಂಗಸ್ಯ ಪೂಜನಂ |
ಏತಲ್ಲಿಂಗಾರ್ಚನಂ ಜ್ಞಾತ್ವಾ ವಿಶೇಷಂ ಶ್ರುಣು ಪಾರ್ವತಿ ||
ಎಂದುದಾಗಿ, ಇನ್ನು ಇಷ್ಟಲಿಂಗಕ್ಕೆ ಕಾಯದ ಕೈ ಮುಟ್ಟಿ,
ಪದಾರ್ಥಂಗಳ ರೂಪನರ್ಪಿಸೂದು.
ಪ್ರಾಣಲಿಂಗಕ್ಕೆ ಮನದ ಕೈಮುಟ್ಟಿ, ಪದಾರ್ಥಂಗಳ ರುಚಿಯನರ್ಪಿಸೂದು.
ಭಾವಲಿಂಗಕ್ಕೆ ಭಾವದ ಕೈ ಮುಟ್ಟಿ, ಪದಾರ್ಥಂಗಳ ತೃಪ್ತಿಯನರ್ಪಿಸೂದು.
ಅದೆಂತೆಂದಡೆ : ಲಿಂಗೇ ಸಮರ್ಪಿತಂ ರೂಪಂ ರುಚಿಶ್ಚ ಜಂಗಮಾರ್ಪಿತಾ |
ರುಚಿ ರೂಪ ಸಮಾಯುಕ್ತಂ ಗುರೋರರ್ಪಣಮುಚ್ಯತೇ ||
ರೂಪಂ ಸಮಾಗತಂ ಶುದ್ಧಂ ರುಚಿಸ್ಸ್ಯಾತ್ಸಿದ್ಧ ಸಂಜ್ಞಕಂ |
ತನ್ಮಿಶ್ರಾರ್ಪಣಂ ಶಂಭೋಃ ಪ್ರಸಾದಂ ಚ ಪ್ರಸಿದ್ಧಕಂ ||
ಎಂದುದಾಗಿ, ರೂಪ ರುಚಿ ತೃಪ್ತಿಗಳನರ್ಪಿಸಿ,
ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವನು
ವಿಶ್ವ ತೈಜಸ ಪ್ರಾಜ್ಞರೆಂಬ ಆತ್ಮತ್ರಯಕ್ಕೆ ಸಂಬಂಧಿಸೂದು.
ಇಂತೀ ಲಿಂಗಾರ್ಚನಾರ್ಪಿತದ ಭೇದಂಗಳೆಲ್ಲ
ತಿಳಿವ ತಿಳಿವಿನೊಳಗೆ ತೆರಹಿಲ್ಲದ ಕುರುಹಿಲ್ಲದ ಬರಿಯ ಬೆಳಗು ತಾನೆ,
ನಮ್ಮ ಪರಮಗುರು ನಂಜುಂಡಶಿವನು./18
ಪ್ರಾಣಾಪಾನವ್ಯಾನೋದಾನ ಸಮಾನ ನಾಗ ಕೂರ್ಮ
ಕೈಕಲ ದೇವದತ್ತ ಧನಂಜಯವೆಂಬ ದಶವಾಯುಗಳ
ಪ್ರವರ್ತನೆ ಆ[ವುದ]ದಯ್ಯಾಯೆಂದಡೆ : ಪ್ರಾಣವಾಯು ಹೃದಯಸ್ಥಾನದಲ್ಲಿದು ಶ್ವಾಸ ನಿಶ್ವಾಸಂಗಳಂ ಮಾಡೂದು.
ಅಪಾನವಾಯು ಗುದಸ್ಥಾನದಲ್ಲಿದು ಮಲಮೂತ್ರಂಗಳಂ
ಅಧೋಮುಖವಾಗಿ ಮಾಡೂದು.
ವ್ಯಾನವಾಯು ಕಂಠಸ್ಥಾನದಲ್ಲಿದು ಕ್ಷುಧೆನಿಮಿತ್ತ
ಆವುದಾನೊಂದು ದ್ರವ್ಯಾಪೇಕ್ಷೆಯಂ ಮಾಡೂದು.
ಸಮಾನವಾಯು ನಾಭಿಸ್ಥಾನದಲ್ಲಿದು ಉದ್ದೀಪನ ಪ್ರಕಾಶವಂ
ಮಾಡಿಕೊಂಡಂಥ ಅನ್ನವ ದಹಿಸೂದು.
ಉದಾನವಾಯು [ಜಿಹ್ವೆ] ಸ್ಥಾನದಲ್ಲಿದು ನುಂಗೂದು
ಉಗುಳೂದಂ ಮಾಡೂದು.
ನಾದವಾಯು ಸರ್ವಾಂಗಮಂ ವ್ಯಾಪಿಸಿಕೊಂಡಿಹುದು.
ಕೂರ್ಮವಾಯು ನೇತ್ರಸ್ಥಾನದಲ್ಲಿದ್ದು ಉನ್ಮಿಷ ನಿಮಿಷಂಗಳಂ ಮಾಡೂದು.
ಕೃಕರವಾಯು ಘ್ರಾಣಸ್ಥಾನದಲ್ಲಿದ್ದು
ಸುಗಂಧದುರ್ಗಂಧಂಗಳಂ ಅರಿದು ಮಾಡೂದು.
ಧನಂಜಯವಾಯು ಬ್ರಹ್ಮರಂಧ್ರದಲ್ಲಿದ್ದು,
ಷೋಡಶಕಲಾಪ್ರಕಾಶವಂ ಮಾಡೂದು.
ದೇವದತ್ತವಾಯು ಮುಖದಲ್ಲಿದ್ದು ಹಾಸ ವಿವರ್ಧನವಂ ಮಾಡೂದು.
ಹೀಂಗೆ ದಶವಾಯುಗಳು ದಶಸ್ಥಾನದಲ್ಲಿ ದಶಗುಣ ವರ್ತನವಂ ಮಾಡುವವು.
ಅದೆಂತೆಂದಡೆ : ಹೃದಿಸ್ಥಿತೋ ಪ್ರಾಣವಾಯು ಶ್ವಾಸನಿಶ್ವಾಸಕಾರಕಃ |
ಗುದೇ ಅಪಾನವಾಯುಶ್ಚ ನೇತ್ರಾಣಾಂ ನಿಮಿಷೋನ್ಮೇಷಕಾರಕಃ ||
ಕೃಕಲೋಘ್ರಾಣಗಂಧಂ ಚ ಧನಂಜಯಾಶ್ಚ ತೇಜಸಾ |
ದೇವದತ್ತೋ ಮುಖಂಚೈವ ಜಿಹ್ವಾಹಾಸ್ಯವಿವರ್ಧನಃ ||
ಏತಾನಿ ದಶವಾಯುಶ್ಚ ಸ್ಥಾನಸಂಖ್ಯಾ ಪ್ರಕೀರ್ತಿತಾ |
ಯೋ ಜಾನಾತಿ ಸಂಯೋಗೀಂದ್ರೋ ಅಪರೋ ನಾಮಧಾರಕಾಃ ||
ಎಂದುದಾಗಿ, ಇಂತೀ ದಶವಾಯುಗಳ ಸಂಚಾರವನರಿದು,
ಪ್ರಾಣಲಿಂಗಿಸಂಬಂಧಿಯಾದರೆ ಯೋಗೀಶ್ವರ.
ಹೀಂಗಲ್ಲದೆ ಉಳಿದ ನಾಮಧಾರಕರನೊಲ್ಲ ,
ನಮ್ಮ ಪರಮಗುರು ನಂಜುಂಡಶಿವನು./19
ಮಲತ್ರಯದ ಸಂಗ ಬಿಡದನ್ನಕ್ಕ ಭಕ್ತರೆಂದೆನಬಾರದು.
ಅನ್ಯದೈವದ ಭಜನೆಯಳಿದನ್ನಕ್ಕ ಮಾಹೇಶ್ವರರೆಂದೆನಬಾರದು.
ಅರ್ಪಿತ ಹೊಲಬನರಿಯದನ್ನಕ್ಕ ಪ್ರಸಾದಿಗಳೆಂದೆನಬಾರದು.
ಲಿಂಗಪ್ರಾಣ ಪ್ರಾಣಲಿಂಗವೆಂಬುಭಯದ ಸಂಬಂಧವನರಿಯದನ್ನಕ್ಕ
ಪ್ರಾಣಲಿಂಗಿಗಳೆಂದೆನಬಾರದು.
ಬಂಧ ಮೋಕ್ಷದ ದಂದುಗವಳಿಯದನ್ನಕ್ಕ ಶರಣನೆಂದೆನಬಾರದು.
ತತ್ತ್ವಮಸಿ ಪದಾರ್ಥದರ್ಥವನರಿಯದನ್ನಕ್ಕ ಐಕ್ಯರೆಂದೆನಬಾರದು.
ಇಂತೀ ಷಟ್ಸ್ಥಲವಿಡಿದು ಷಡಂಗ ಶುದ್ಧವಾಗದ
ಬರಿಯ ವೇಷದ ಭಕ್ತಿಯ ಡಂಭಕರ ಮೆಚ್ಚ,
ನಮ್ಮ ಪರಮಗುರು ನಂಜುಂಡಶಿವನು./20
ವಾಯುವಿಲ್ಲದ ಅಂಬುಧಿಯಲ್ಲಿ ಬುದ್ಬುದ ಸ್ಫುರಿಸುತ್ತಿಹುದು ಹೇಗೆ ಹಾಂಗೆ,
ನಿವಾತಸ್ಥಾನದ ದೀವಿಗೆಯಲ್ಲಿ ಚಲನತ್ವ ಹೇಗೆ ಹಾಂಗೆ,
ನಿತ್ಯನಿರವಯಖಂಡ ಪರಿಪೂರ್ಣ ಪರಬ್ರಹ್ಮದ
ಕಿಂಚಿತ್ ಲೀಲಾಸ್ಫುರಣೆಯೇ ಜೀವನು.
ಅದೆಂತೆಂದಡೆ : ಬ್ರಹ್ಮಣಸ್ಫುರಣಂ ಕಿಂಚಿತ್ ಅವಾತಾಂಬುಧೇರೇವವಾ |
ದೀಪಸ್ಯಾಪ್ಯ ನಿವಾತಸ್ಯ ತಂ ಜೀವಂ ವಿದ್ಧಿರಾಘವ ||
ಎಂದುದಾಗಿ, ಆ ಜೀವನೂ ಪರಮನೂ ಉಪಾಸ್ಯ ಉಪಾಸಕರೆಂದು
ಪೂಜ್ಯಪೂಜಕರೆಂದು, ಸಾಧ್ಯಸಾಧಕರೆಂದು, ಗುರುಶಿಷ್ಯರೆಂದು
ಶಿವಾತ್ಮರೆಂದು ಹೀಂಗೆ ಅನಂತ ಭೇದಾಭೇದಂಗಳಂ
ಕೂಡಿಕೊಂಡು ವಿನೋದಿಸುತ್ತಿಹರು.
ಅದೆಂತೆಂದಡೆ : ಉಪಾಸ್ಯೋಪಾಸಕೌ ಪೂಜ್ಯಪೂಜಕೌ ಸಾಧ್ಯಸಾಧಕೌ |
ಗುರುಶಿಷ್ಯೌ ಶಿವಾತ್ಮನೌ ನಿಗದ್ಯೋತೇ ಮಹಾತ್ಮಭಿಃ ||
ಎಂದುದಾಗಿ, ತನ್ನ ಲೀಲೆವಿಡಿದೆರಡಾಗಿ, ಆ ಲೀಲೆ ನಿಂದರೆ
`ಏಕಮೇವನದ್ವಿತೀಯಾಯತಸ್ಥೇ’ ಎಂಬ ಶ್ರುತಿಯನೊಳಕೊಂಡು ನಿಂದುದು.
ಅದೆಂತೆಂದಡೆ : ಏಕೋ ಸ್ವಶಕ್ತಿಭಿನ್ನೇ ಬಹುನಾಸ್ಯಾತ್ ವಿಲಯೇ |
ಶಕ್ತಿ ನಾಸ್ತಿದ್ವಯಂ ಗರ್ಭಿಕೃತಮಾತ್ಮವಸ್ತು ||
ಎಂದುದಾಗಿ, ನಿತ್ಯಪರಿಪೂರ್ಣ ಸಚ್ಚಿದಾನಂದ ಪರಬ್ರಹ್ಮ,
ಪರಮಗುರು ನಂಜುಂಡಶಿವಾ, ನಿಮ್ಮ ಲೀಲೆಯ ಘನವ ನೀವೇ ಬಲ್ಲಿರಿ./21
ವೇದ ಶಾಸ್ತ್ರಾಗಮ ತರ್ಕತಂತ್ರ ಇತಿಹಾಸ
ನಾನಾಪುರಾಣ ಪುರಾತನ ವಚನವ ಕಲಿತರೇನೊ ?
ಗುರುವಿನಲ್ಲಿ ವಿಶ್ವಾಸಿಗಳಲ್ಲ , ಲಿಂಗದಲ್ಲಿ ನಿಷ್ಠೆಯುಳ್ಳವರಲ್ಲ ,
ಜಂಗಮದಲ್ಲಿ ಸಾವಧಾನಿಗಳಲ್ಲ , ಪ್ರಸಾದದಲ್ಲಿ ಪರಿಣಾಮಿಗಳಲ್ಲ ,
ಪಾದೋದಕದಲ್ಲಿ ಪರಮಾನಂದಿಗಳಲ್ಲ.
ಇಂತೀ ಪಂಚಾಚಾರವನರಿದು ತಾನಳಿದುಳಿವ ಭೇದವನರಿಯದೆ,
ನಾನು ಭಕ್ತ, ನಾನು ವಿರಕ್ತನೆಂದರೆ ನಗರೆ ನಿಮ್ಮ ಶರಣರು !
ಪರಮಗುರುವೆ ನಂಜುಂಡಶಿವಾ./22
ಷಟ್ಸ್ಥಲದ ಸೃಷ್ಟಿಯನರಿದಾಚರಿಸುವ ಪರಿ ಯಾವುದೆಂದರೆ
ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಾಹೇಶ್ವರ ಭಕ್ತರೆಂದಿಂತು
ಷಟ್ಸ್ಥಲವಾರು. ಅದೆಂತೆಂದಡೆ : ಐಕ್ಯೆಂ ಶರಣಮಿತ್ಯುಕ್ತಂ ಪ್ರಾಣಲಿಂಗಿ ಪ್ರಸಾದಿ ಚ |
ಮಾಹೇಶ್ವರಸ್ತಥಾ ಭಕ್ತ ಪ್ರೋಚ್ಯತೇ ಸೃಷ್ಟಿಮಾರ್ಗತಃ ||
ಎಂದುದಾಗಿ, ಈ ಸ್ಥಲಂಗಳಿಗೆ ಅಂಗಗಳಾವಾವವೆಂದಡೆ : ಆತ್ಮ ಆಕಾಶ ವಾಯು ಅಗ್ನಿ ಅಪ್ಪು ಪೃಥ್ವಿ ಎಂದಿಂತು ಆರು ಅಂಗಂಗಳು.
ಅದೆಂತೆಂದಡೆ : ಆತ್ಮನಃ ಆಕಾಶಃ ಸಂಭೂತಃ ಆಕಾಶಾದ್ವಾಯು ಸಂಭವಃ |
ವಾಯೋರಗ್ನಿಃ ಸಮುತ್ಪನ್ನಪರರಗ್ನೇರಾವಃ ಉದಾಹೃತಾಃ |
ಅದ್ಭ್ಯಃ ಪೃಥುವೀ ಸಂಭೂತಿರ್ಲಕ್ಷಣೈಕ ಪ್ರಭಾವತಃ ||
ಎಂದುದಾಗಿ, ಈ ಅಂಗಂಗಳಿಗೆ ಹಸ್ತಂಗಳಾವಾವವೆಂದಡೆ : ಭಾವ ಜ್ಞಾನ ಮನ ಅಹಂಕಾರ ಬುದ್ಧಿ ಚಿತ್ತವೆಂದಿಂತು ಆರು ಹಸ್ತಂಗಳು.
ಅದೆಂತೆಂದಡೆ : ವಸ್ತುನಾ ಭಾವ ಉತ್ಪನ್ನೋ ಭಾವಾತ್ ಜ್ಞಾನಸಮುದ್ಭವಃ |
ಜ್ಞಾನಾಚ್ಚಮನ ಉತ್ಪನ್ನಂ ಮನಸೋಹಂಕೃತಿಸ್ತಥಾ |
ಅಹಂಕಾರಾತ್ತಥಾ ಬುದ್ಧಿಃ ಬುದ್ಧಿಶ್ಚಿತ್ತ ಸಮುದ್ಭವಃ |
ಎಂದುದಾಗಿ, ಈ ಹಸ್ತಂಗಳಿಗೆ ಸಾದಾಖ್ಯಂಗಳಾವಾವವೆಂದಡೆ : ಮಹಾಶಿವ ಅಮೂರ್ತಿ ಮೂರ್ತಿ ಕರ್ತೃ
ಕರ್ಮವೆಂದಿಂತು ಆರು ಸಾದಾಖ್ಯಂಗಳು.
ಅದೆಂತೆಂದಡೆ : ಮಹಾನ್ ಚ ಶಿವ ಇತ್ಯುಕ್ತಃ ಅಮೂರ್ತಿರ್ ಮೂರ್ತಿರುಚ್ಯತೇ |
ಕೃರ್ತಸ್ಸ್ಯಾತ್ಕರ್ಮಮಿತ್ಯೇತ ಷಟ್ಸಾದಾಖ್ಯಮಿತೀರಿತಾಃ ||
ಎಂದುದಾಗಿ, ಈ ಸಾದಾಖ್ಯಂಗಳಿಗೆ ಶಕ್ತಿಗಳಾವಾವವೆಂದಡೆ : ಚಿತ್ತು ಪರಾ ಆದಿ ಇಚ್ಛಾ ಜ್ಞಾನ ಕ್ರಿಯಾ ಎಂದಿತು ಆರು ಶಕ್ತಿಗಳು.
ಅದೆಂತೆಂದಡೆ : ವಸ್ತೋರ್ಜಾತಾ ಚ ಚಿಚ್ಛಕ್ತೇಶ್ಚ ಪರೋದ್ಭವಃ |
ಪರೋದ್ಭವಸ್ತ್ವಾದಿಸ್ಸ್ಯಾತ್ ಆದೇರಿಚ್ಛಾ ಸಮುದ್ಭವಃ |
ಇಚ್ಛಾ ಜ್ಞಾನ ಸಮುತ್ಪತ್ತಿಃ ಜ್ಞಾನಾತ್ತಥಾ ಕ್ರಿಯೋದ್ಭವಃ ||
ಎಂದುದಾಗಿ, ಈ ಶಕ್ತಿಗಳಿಗೆ ಲಿಂಗಂಗಳಾವಾವವೆಂದಡೆ : ಮಹಾ ಪ್ರಸಾದ ಜಂಗಮ ಶಿವ ಗುರು ಆಚಾರವೆಂದಿಂತು ಆರು ಲಿಂಗಗಳು.
ಅದೆಂತೆಂದಡೆ : ಮಹಾಲಿಂಗೇ ಸಮಾಖ್ಯಾತಂ ಪ್ರಸಾದಂ ಲಿಂಗಮುದ್ಭವಂ |
ತತಃ ಪ್ರಸಾದಲಿಂಗೇ ಚ ಜಾಂಗಮಂ ಲಿಂಗಮುದ್ಭವಂ ||
ತಥಾ ಜಂಗಮಲಿಂಗೇ ಚ ಶಿವಲಿಂಗಂ ಸಮುದ್ಭವಂ |
ಶಿವಲಿಂಗೇ ತಥಾಚೈವ ಗುರುಲಿಂಗಂ ಸಮುದ್ಭವಃ |
ಗುರುಲಿಂಗೇ ತಥಾಚಾರಲಿಂಗಸ್ಯಾಪಿ ಸಮುದ್ಭವಃ ||
ಎಂದುದಾಗಿ, ಈ ಲಿಂಗಂಗಳಿಗೆ ಕಳೆಗಳಾವಾವವೆಂದಡೆ : ಶಾಂತ್ಯತೀತೋತ್ತರ ಶಾಂತ್ಯತೀತ ಶಾಂತಿ ವಿದ್ಯೆ ಪ್ರತಿಷ್ಠೆ ನಿವೃತ್ತಿ
ಎಂದಿಂತು ಕಳೆಗಾರು.
ಅದೆಂತೆಂದಡೆ : ಶಾಂತ್ಯತೀತೋತ್ತರೇಚೈವ ಶಾಂತ್ಯತೀತೋಭವೇತ್ತಥಾ |
ಶಾಂತಿರ್ವಿದ್ಯಾಪ್ರತಿಷ್ಠಾ ಚ ನಿವೃತ್ತಿಃ ಷಟ್ಕಲಾ ಸ್ಮೃತಾಃ ||
ಎಂದುದಾಗಿ, ಈ ಕಳೆಗಳಿಗೆ ಮುಖಂಗಳಾವಾವವೆಂದಡೆ : ಹೃದಯ ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದಿಂತು
ಆರು ಇಂದ್ರಿಯಂಗಳೆ ಮುಖಂಗಳು,
ಅದೆಂತೆಂದಡೆ : ಹೃಚ್ಚಶ್ರೋತ್ರಂ ತ್ವಕ್ಚೈವ ನೇತ್ರಂ ಜಿಹ್ವಾ ತಥೈವ ಚ |
ಘ್ರಾಣಶ್ಚ ಇಂದ್ರಿಯಂ ಷಟ್ಕ ವಕ್ತ್ರಮೇವ ಸದಾಭವೇತ್ ||
ಎಂದುದಾಗಿ, ಈ ಮುಖಂಗಳಿಗೆ ಪದಾರ್ಥಂಗಳಾವಾವವೆಂದಡೆ : ಪರಿಣಾಮ ಶಬ್ದ ಸ್ಪರ್ಶ ರೂಪ ರಸ ಗಂಧವೆಂದಿಂತು ಆರುಪದಾರ್ಥಂಗಳು.
ಅದೆಂತೆಂದಡೆ : ತೃಪ್ತಿಶ್ಚ ಶಬ್ದಮಿತ್ಯುಕ್ತಂ ಸ್ಪರ್ಶರೂಸ್ತಥೈವ ಚ |
ರಸಶ್ಚ ಗಂಧಮಿತ್ಯೇತ ಪದಾರ್ಥಂ ಚ [ನಿರೂಪಿತಃ] ||
ಎಂದುದಾಗಿ, ಈ ಅರ್ಪಿತಂಗಳಿಗೆ ಭಕ್ತಿಗಳಾವಾವವೆಂದಡೆ : ಸಮರಸಾನಂದ ಅನುಭವ ಅವಧಾನ ನೈಷ್ಠೆ ವಿಶ್ವಾಸವೆಂದಿಂತು ಆರುವಿಧಭಕ್ತಿ.
ಅದೆಂತೆಂದಡೆ : ಸಮರಸಶ್ಚೈವಮಾನಂದನುಭಾವೋತ್ಸಾವಧಾನಃ |
ನೈಷ್ಠಿರಿ ಶ್ರದ್ಧೇಮಿತ್ಯೇ ಚ ಭಕ್ತಿಷಡ್ವಿಧರುಚ್ಯತೇ ||
ಎಂದುದಾಗಿ, ಇವಕ್ಕೆ ಸಂಬಂಧ ವಿವರಗಳಾವಾವವೆಂದಡೆ: ಭಕ್ತಂಗೆ:ಪೃಥ್ವಿಯಂಗ, ಚಿತ್ತಹಸ್ತ, ಕರ್ಮಸಾದಾಖ್ಯ,
ಕ್ರಿಯಾಶಕ್ತಿ, ಆಚಾರಲಿಂಗ, ನಿವೃತ್ತಿಕಳೆ, ಘ್ರಾಣಮುಖ,
ಗಂಧ ಪದಾರ್ಥ, ವಿಶ್ವಾಸಭಕ್ತಿ.
ಮಾಹೇಶ್ವರಂಗೆ :ಅಪ್ಪು ಅಂಗ, ಬುದ್ಧಿಹಸ್ತ, ಕರ್ತೃಸಾದಾಖ್ಯ,
ಜ್ಞಾನಶಕ್ತಿ, ಗುರುಲಿಂಗ, ಪ್ರತಿಷ್ಠೆಕಳೆ, ಜಿಹ್ವೆಮುಖ,
ರುಚಿ ಪದಾರ್ಥ, ನೈಷ್ಠಿಕಾಭಕ್ತಿ.
ಪ್ರಸಾದಿಗೆ :ಅಗ್ನಿ ಅಂಗ, ಅಹಂಕಾರಹಸ್ತ, ಮೂರ್ತಿಸಾದಾಖ್ಯ,
ಇಚ್ಛಾಶಕ್ತಿ, ಶಿವಲಿಂಗ, ವಿದ್ಯಾಕಳೆ, ನೇತ್ರಮುಖ,
ರೂಪ ಪದಾರ್ಥ, ಅವಧಾನಭಕ್ತಿ.
ಪ್ರಾಣಲಿಂಗಿಗೆ :ವಾಯು ಅಂಗ, ಮನಹಸ್ತ, ಅಮೂರ್ತಿಸಾದಾಖ್ಯ,
ಆದಿಶಕ್ತಿ, ಜಂಗಮಲಿಂಗ, ಶಾಂತಿಕಳೆ, ತ್ವಕ್ಕುಮುಖ,
ಸ್ಪರ್ಶನ ಪದಾರ್ಥ, ಅನುಭಾವಭಕ್ತಿ.
ಶರಣಂಗೆ :ಆಕಾಶ ಅಂಗ, ಜ್ಞಾನಹಸ್ತ, ಶಿವಸಾದಾಖ್ಯ,
ಪರಾಶಕ್ತಿ, ಪ್ರಸಾದಲಿಂಗ, ಶಾಂತ್ಯತೀತಕಳೆ, ಶ್ರೋತ್ರಮುಖ,
ಶಬ್ದ ಪದಾರ್ಥ, ಆನಂದಭಕ್ತಿ.
ಐಕ್ಯಂಗೆ :ಆತ್ಮನಂಗ, ಭಾವಹಸ್ತ, ಮಹಾಸಾದಾಖ್ಯ, ಚಿಚ್ಛಕ್ತಿ,
ಮಹಾಲಿಂಗ, ಶಾಂತ್ಯತೀತೋತ್ತರಕಳೆ, ಹೃದಯಮುಖ,
ಪರಿಣಾಮ ಪದಾರ್ಥ, ಸಮರಸಭಕ್ತಿ.
ಇಂತೀ ಷಟ್ಸ್ಥಲಸಂಪನ್ನನಾಗಿ ಆಚರಿಸುವಾತನೆ
ತೂರ್ಯಾತೂರ್ಯನೆಂಬರಿವಿನ ಅದಿಮಧ್ಯವಸಾನದಲ್ಲಿ
ತೆರಹಿಲ್ಲದ ಕುರುಹಿಲ್ಲದ ಬರಿಯ ಬೆಳಗು ತಾನೆ,
ನಮ್ಮ ಪರಮಗುರು ನಂಜುಂಡ ಶಿವನು./23
ಸ್ಥೂಲತನುವಿನ ಜಾಗ್ರಾವಸ್ಥೆ ನೇತ್ರದಲ್ಲಿ,
ಸೂಕ್ಷ್ಮತನುವಿನ ಸ್ವಪ್ನಾವಸ್ಥೆ ಕಂಠದಲ್ಲಿ,
ಕಾರಣತನುವಿನ ಸುಷುಪ್ತಾವಸ್ಥೆ ಹೃದಯದಲ್ಲಿ.
ಇಂತೀ ಮೂರು ಮೂರರ ಭೇದವನರಿದರಿವೆ,
ಸಚ್ಚಿದಾನಂದಸ್ವರೂಪಮಪ್ಪ ಕೇವಲಬ್ರಹ್ಮ.
ಅದಲ್ಲದೆ ಬೇರೆ ವಸ್ತುವೆಂಬುದಿಲ್ಲ.
ಅದೆಂತೆಂದಡೆ : ನೇತ್ರೇತು ಜಾಗರಂ ವಿಂದ್ಯಾತ್ ಕಂಠೇ ಸ್ವಪ್ನಂ ಸಮಾಧಿಸೇತ್ |
ಸುಷುಪ್ತಿಂ ಹೃದಯನ್ಯಸ್ತಾಂ ತುರೀಯಂ ಮೂರ್ಧ್ನಿವರ್ತಿನಂ ||
ಜಾಗ್ರತ್ಸತ್ವಂ ರಜಃಸ್ವಪ್ನಃ ಸುಷುಪ್ತಿಸ್ತಮ ಉಚ್ಯತೇ |
ತುರೀಯೋ ಗುಣಗಂಧಸ್ತು ಪರಾತ್ಮಾ ನಿರ್ಗುಣಕ್ಷಮಃ ||
ಯಸ್ವರ್ವಂ ವಚನಾತೀತಂ ಜಾನಾತಿ ಸ ಚ ಮೂಢಧೀಃ |
ನ ಜಾನಾಮೀತಿ ಜಾನಾತೀತ್ಯೇತದೇವ ಜ್ಞಾನಮುಚ್ಯತೇ ||
ಸ್ಥಾನಾಸ್ಥಾನಂತರೇ ಪ್ರಾಪ್ತೇ ಸಂವಿದೋ ಮಧ್ಯಮೇವಯೇತ್ |
ನಿರಸ್ಥಮನಸಾಕಾಶೋ ಸ್ವರೂಪ ಸ್ಥಿತಿರುಚ್ಯತೇ ||
ನ ದೇವಃ ಪುಂಡರೀಕಾಕ್ಷಃ ನಚದೇವಃ ತ್ರಿಲೋಚನಃ |
ನ ದೇವೋ ಬ್ರಹ್ಮಣೋದ್ಭೂತೋ ವೇದನಂ ಬ್ರಹ್ಮ ಉಚ್ಯತೇ ||
ಎಂದುದಾಗಿ,
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯಾತೂರ್ಯತೀತವನೊಳಕೊಂಡ
ನಿಜಜ್ಞಾನ ನೀವೇ
ಪರಮಗುರುವೆ ನಂಜುಂಡ ಶಿವಾ. /24