Categories
ವಚನಗಳು / Vachanagalu

ನಗೆಯ ಮಾರಿತಂದೆ ವಚನಗಳು

ಅಂಗವೆಂಬ ವಾಕುಳದ ಕುಂಭದಲ್ಲಿ
ತೋರಿ ಅಡಗುವ ಮರೀಚಿಕಾ ಜಲವ ತುಂಬಿದಂತೆ.
ಚಿತ್ತ ಸಾಳಿವನವೆಂಬ ತಂಡುಲ ತೊಳೆಯದೆ, ಥಳಿಸದೆ,
ಕುಂಭದೊಳಗೆ ಹಾಕಿ ವಾಯುವಿನ ದೂಮ್ರದಿಂದ ಬೇಯಿಸಿ
ಅದು ಬೆಂದುದಿಲ್ಲ.
ಅದು ಮೂರು ಗುಂಡಿನ ಗುಣದಿಂದ
ಗುಂಡಿನ ಚಂದ ತುಂಬಿಹ ಮಡಕೆಯಂತೆ.
ಮತ್ತೊಂದರ ಇರವು ತಿರುಗುವ ಚಕ್ರದಗೊಂದಣದಂದದ
ದ್ವಂದ್ವವ,
ಹಿಂಗಿ ನಿಂದ ಕುಂದಿನಿರವು, ಕೂರಲಗಿನ ಬಾಯ ಧಾರೆಯಂತೆ
ಉಭಯವ ಕೂಡಿಕೊಂಡು ನಿಂದ ಗುಂಡು.
ಇದು ಬೇಯದು, ಮಡಕೆಯನೊಡೆ, ಜಲವ ತಡಹು,
ತಂಡುಲವ ಚೆಲ್ಲು, ಮಾರುತನ ಬೆಂಕಿಯ ಕೆಡಿಸು,
ಓಗರದೂಟದ ಬಿಡು, ಭವಸಾಗರದ ಸಾಧನೆಯನೆ ಗೈ,
ಕಾಹುರದ ಕಮ್ಮಟವ ಪರರುವ ಬೋಧಿಸುವ ರಸನವ ಕೀಳು,
ಕಿತ್ತ ಮತ್ತೆ ಇನ್ನರಿ. ಸಕಲೇಂದ್ರಿಯದ ಹುತ್ತದ ಹಾವ ಹಾಡಿ.
ಮೊತ್ತದ ಮನೆ ವಿಕಾರದ ಚಿತ್ತದ ಹುಲಿಯ ಮುರಿ.
ಭಕ್ತಿಗೆ ಸಹ ಕರ್ತುವ ಚಿತ್ತದಲ್ಲಿ ಅಚ್ಚೊತ್ತಿದಂತಿರು.
ಸಚ್ಚಿದಾನಂದ ಹೃದಯಪೂರಿತನಾಗಿ ಬೆಚ್ಚಂತಿರು.
ವಿರಳವಿಲ್ಲದೆ ಅವಿರಳನಾಗಿ ಎನಗೊಂದು ತೊಡುಗೆಯಿಲ್ಲ,
ನಿನ್ನಡಿಯಲ್ಲಿ ಅಡಗಿದೆನಾಗಿ
ನಿನ್ನ ಒಡಗೂಡುವ ಕಡೆಯಾವುದು?
ಎನ್ನ ಕಾಯಕದ ಬಿಡುವಾವುದು?
ಅಂದಾಡಿದ ಮಾತಿನ ಕಡಿವೆಂಗೆ ಬಂದ ಮೊಡತದ
ನಗೆಯ ಕಾಯಕ ಸಂದಿತ್ತು.
ನಿನ್ನಯ ಕೂಪಳ ಬಯಲಾಗಿ ಅಜಾತನೆ ಸಲಹು,
ಆತುರವೈರಿ ಮಾರೇಶ್ವರಾ./1
ಅಂಡದಿಂದ ಪಿಂಡ ಜನಿಸುವಾಗ ಅಂದಿಗಾರೊಡೆಯರು?
ಪಿಂಡ ಹೊರಹೊಮ್ಮಿ ಮಂದಿರಗಳಲ್ಲಿ ಆಡುವಾಗ
ಅಂದಿಗಾರೊಡೆಯರು?
ಮಂದಿರವ ಬಿಟ್ಟು ಮರಣವಾಹಾಗ ಅಂದಿಗಾರೊಡೆಯರು?
ಎಂದೆಂದಿಗೂ ನೀನೆ, ಆತುರವೈರಿ ಮಾರೇಶ್ವರಾ./2
ಅಗಸನ ಮುನಿಸು ಕತ್ತೆಯ ಸ್ನೇಹ,
ಸರ್ಪನ ಮುನಿಸು ಕಪ್ಪೆಯ ಮೋಹ,
ಶಬರನ ಸೊಪ್ಪುಡಿಗೆ ಪ್ರಭೆಯವನ ನಂಬುಗೆ,
ಮೆರೆವಡಿಗನ ಮಾತು ಗುಡುಗಿನ ಮನೆ
ಇಂತಿವು ಅಡಗಿಹ ಭೇದವನರಿ,
ಆತುರವೈರಿ ಮಾರೇಶ್ವರಾ./3
ಅರಸು ಅರಸಿಯ ಕೂಡುವಾಗ ಅವರಂಗವ ಕಂಡವರುಂಟೆ?
ಕೌಮುದಿಯ ಕುಂಡಲಿಯ ತಂದುದುಂಟೆ?
ಚಂದನ ಗಂಧವ ತಂದಿರಲು ಸಂಚಾರದೊದಗು.
ಮಿಂಚಿನವಳಿ, ಕಂಚಿನ ಕೂಟದಂತೆ ಆತ್ಮನ ಸಂಚಿತದಳಿವು
ಆತುರವೈರಿ ಮಾರೇಶ್ವರಾ./4
ಅರಿತಡೆ ಇಹಪರದವನಾಗಿ ಇದ್ದಲ್ಲಿ
ಷಡ್ವಾದಿ ಸರ ಸಮನಾಗಿ ಭಿತ್ತಿಯ ಚಿತ್ರದಂತೆ
ಸುಳಿದೋರದ ಸಲಿಲದಂತೆ, ಕಲೆದೋರದ ಫಲದಂತೆ,
ತ್ರಿವಿಧಕ್ಕಲ್ಲದೆ ತೂತಿನ ಬಲವಿಲ್ಲದೆ ಆತನನರಿ,
ಆತುರವೈರಿ ಮಾರೇಶ್ವರಾ./5
ಅವನಿಕ್ಕಿದ ಗಾಣಕ್ಕೆ ಮೂವರು ಹುದುಗು.
ಉದಯ ಮಧ್ಯಾಹ್ನ ಅಸ್ತಮಯವೆಂಬ ಮೂರು ವೇಳೆಗೆ,
ಅದ ತಿರುಗುವ ಎತ್ತು ಒಂದೆಯಾಯಿತ್ತು.
ಒಬ್ಬ ಹಿಂಗಿದ ಇಬ್ಬರು ಹೊರುತ್ತಿದ್ದರು
ಅತುರವೈರಿ ಮಾರೇಶ್ವರಾ./6
ಅವರಪ್ಪನ ಮಗಳ ಗಂಡನ ತಂದೆಯ ತಾಯ ತಂದವರ
ಗಂಡನ ಹೆಂಡತಿಯ ಹೆತ್ತವಳ ಮಕ್ಕಳ ಮೂರಿ ತಲೆಗಡಿದವರ
ಅಂದಿನ ನಂಟ ಬಂದ ನಾನು.
ನೀಂ ಪಂದಿಯೊಳಗಿರ್ದ ಅಂದವ ತೋರಾ
ಆತುರವೈರಿ ಮಾರೇಶ್ವರಾ./7
ಅವಳನವನೇರಿ ಕಳಚಿತ್ತ ಬಿಂದು
ನಿಲುವುದಕ್ಕೆ ನೆಲೆಯಿಲ್ಲದೆ, ರೂಪಿಂಗೊಡಲಿಲ್ಲದೆ
ಕೂಸು ಸತ್ತಿತ್ತು,
ಅವರಿಬ್ಬರ ಆಸೆ ಹರಿಯಿತ್ತು.
ನಾ ಮಾತಿನ ಮರೆಯವನಲ್ಲ
ಆತುರವೈರಿ ಮಾರೇಶ್ವರಾ./8
ಅಶ್ವತ್ಥವೃಕ್ಷದ ಪರ್ಣದ ಅಗ್ರದ ಬಿಂದುವಿನಂತೆ
ಅಲ್ಪಸುಖಕ್ಕೆ ಮಚ್ಚಿ ಕುಕ್ಕರ ಆಸ್ತಿಯ ಕಚ್ಚಿ
ತನ್ನಯ ಶೋಣಿತವ ಚಪ್ಪಿರಿವಂತೆ.
ಉಚ್ಛೆಯ ಬಚ್ಚಲ ಕೊಚ್ಚೆಯ ಹಡಿಕೆಯ ಮುಚ್ಚಿಕೊಂಡಿಪ್ಪ
ಕಕ್ಕುಲತೆಯಣ್ಣಗಳು ಕೇಳಿರೋ, ಅದು ಮತ್ರ್ಯದ ಹುದುಗು,
ಚಿತ್ತದ ವಿರೋಧ, ಭುಕ್ತಿಯ ವಕ್ರ, ತಮದ ಪುಂಜ,
ಕೌರುಕನಂಗ ಸೌಭೇದಿನ ಬೀಡು, ಮಲದ ಬಾಂಡ.
ಭಾವದ ಭ್ರಮೆಯನರಿ, ಉರಿ ಫಳಕದಂತೆ ನೆರೆ ನಂಬಿರು
ಆತುರವೈರಿ ಮಾರೇಶ್ವರಾ./9
ಆಸೆಯೆಂಬ ಮನ ಕೋಡಗನ ಕೂಸಿನ
ಭಾಸುರಿಯಂತೆನಿಸುವನ ಉದಕದ ಕಾಲಿನ ಮೈಸೆಳವಿನಂತೆ.
ಭಾಸುರವ ಕೂಡಿದ ತಮದ ಕಜ್ಜಳದಂತೆ.
ಈ ಸಾಕಾರವ ಕೂಡಿದ ಆಸೆ ಹುಸಿಲೇಪ ಸಾಕು
ತೂತಿನ ಹಂಬಲು ಇನ್ನೇಕೆ?
ಆತುರವೈರಿ ಮಾರೇಶ್ವರಾ./10
ಇರೆಯೆಂದಡೆ ಕೈಮುಂಚಿಯಲ್ಲದೆ ಗಾಯವಿಲ್ಲ.
ಅರಿಯೆಂದಡೆ ಮನನಿಶ್ಚೆ ಸಲ್ಲದೆ ಜ್ಞಾನಿಯಲ್ಲ
ಮರನ ಕಡಿವುದಕ್ಕೆ ಪ್ರವೇಷ್ಠಿಸಿದ ಮೆಳೆಯ ಕಡಿದಲ್ಲದೆ ಆಗದು.
ಆಗಮದ ಯುಕ್ತಿಯಿಂದ ಬೋಧಕನಹನಲ್ಲದೆ ಅನಾಗತವನರಿಯ.
ಅದ ಭೇದಿಸಬೇಕು, ಆತುರವೈರಿ ಮಾರೇಶ್ವರಾ./11
ಇವರೆಲ್ಲರ ಕಂಡು ನಾನವಳಿಗೆ ಹೋಗಲಾಗಿ,
ಕುಳ್ಳಿರುವುದಕ್ಕೆ ಮೊದಲೆ ಒದ್ದಳೆನ್ನ
ಬಾಯ ಹಲ್ಲು ಮುರಿಯಿತ್ತು. ಗಲ್ಲಮೊಡೆಯಿತ್ತು
ನಾಲಗೆ ಉಡುಗಿತ್ತು. ಇನ್ನಿವಳ ಗೊಡವೆ ಬೇಡ
ಆತುರವೈರಿ ಮಾರೇಶ್ವರಾ./12
ಉತ್ಪತ್ಯ ಉದಯ, ಸ್ಥಿತಿ ಮಧ್ಯಾಹ್ನ, ಲಯ ಅಸ್ತಮಯವೆಂಬ
ಬಾರದ ಬಟ್ಟೆಯಲ್ಲಿ ಮೆಟ್ಟಿದ ಹಜ್ಜೆಯಲ್ಲಿ ಮೆಟ್ಟಡೆತ್ತು ಜ್ಞಾನಿ.
ಇಂತಿದು ದೃಷ್ಟವಾಯಿತ್ತು.
ಅವರಿಗದು ನನಗಿದು ತೂತಿನ ಹಾದಿಯೆ,
ಆತುರವೈರಿ ಮಾರೇಶ್ವರಾ./13
ಉದಯದ ಪೂಜೆ ಬ್ರಹ್ಮನ ತೊಡಕು.
ಮಧ್ಯಾಹ್ನದ ಪೂಜೆ ವಿಷ್ಣುವಿನ ತೊಡಕು.
ಬೈಗಿನ ಪೂಜೆ ರುದ್ರನ ತೊಡಕು.
ಕೃತ್ಯದ ಪೂಜೆ ಮಿಥ್ಯದ ಜಪ.
ಇವು ಮತ್ರ್ಯರ ಸಿಕ್ಕಿಸುವ ಬಲೆ,
ಆತುರವೈರಿ ಮಾರೇಶ್ವರಾ./14
ಊರ ಹೊರಗೊಂದು ಹೊಸ ಕೇಲನಿಕ್ಕಿದೆ.
ಅದು ದಾನವರ ಕೇಲಲ್ಲ, ಮಾನವರ ಕೇಲಲ್ಲ,
ಆತುರವೈರಿ ಮಾರೇಶ್ವರನ ಹೊಂದಿಕೆಯ ಕೇಲು./15
ಊರೆಲ್ಲರ ಹೂರು ತಿಂದಿತ್ತು,
ಹೂರ ಹೂರಣ ತಿಂದಿತ್ತು,
ಬಂದ ಬಂದವರೆಲ್ಲರೂ ಉಂಡುಟ್ಟು ಸಂದಣಿಗೊಳತ್ತಿದ್ದರು.
ಇನ್ನೆಂದಿಗೆ ಸಂದೇಹ ಹರಿಗು
ಆತುರವೈರಿ ಮಾರೇಶ್ವರಾ./16
ಎನಗೆ ಅಂಗವೆಂಬುದೊಂದು ಹೆಣ್ಣು.
ಬಾಯಿ ಎಂಬುದು ಭಗ, ಕೈ ಎಂಬುದು ಪುರುಷ.
ಇಕ್ಕಲಾಗಿ ಸಂಸಾರವೆಂಬ ಬಿಂದು ನಿಂದಿತ್ತು.
ಆಸೆಯೆಂಬ ಮಾಸಿನ ಕುಪ್ಪಸದಲ್ಲಿ ಬೆಳೆ ಪತ್ತಿದೆ.
ನವಮಾಸ ತುಂಬುವನ್ನಕ್ಕ ಕೂಸು ಬಲಿವುದಕ್ಕೆ ಮೊದಲೆ
ಮಾಸ ಹರಿದು ಕೂಸ ಕೊಂದು ಪಾಶವ ಕೆಡಿಸಿ,
ನಿಜತತ್ವದ ಮೂರ್ತಿ ಗುರುವಾಗಿ, ಅದರ ಕಳೆ ಲಿಂಗವಾಗಿ,
ಕೊಟ್ಟ ಲಿಂಗ ಎನ್ನ ಚಿತ್ತದಲ್ಲಿ ನಿಲ್ಲುವುದಲ್ಲದೆ
ಈ ಕೊಟ್ಟಿನ ಕೋಮಳೆ ಕೊಟ್ಟುದ ಎತ್ತಲೆಂದರಿಯೆ
ಆತುರವೈರಿ ಮಾರೇಶ್ವರಾ./17
ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ.
ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ; ಇದ ನಾನೊಲ್ಲೆ.
ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ.
ಎನ್ನ ಬಡತನಕ್ಕ ಬೇಡುವಡೆ ಏನೂ ಇಲ್ಲ,
ಆತುರವೈರಿ ಮಾರೇಶ್ವರಾ./18
ಎನ್ನ ಮಾತು ನಿಮಗೆ ಅನ್ಯವೆ?
ರಂಭದ ಸಂಚಾರ ರಂಭಕ್ಕೆ ಕೇಡು.
ಕುರುಂಬದ ಸಂಚಾರ ರಂಭದ ಕೇಡು.
ಎನ್ನಿಂದ ನಿಮ್ಮಿಂದ ಬಂದ ಕೊರತೆ ಪ್ರಮಥ ಸಮೂಹಕ್ಕೆ ಭಂಗ.
ಹುಲಿಯ ಪ್ರಾಣ ಕಳ್ಳನ ತಲೆ ಹಗೆಯ ಮರಣವೆಲ್ಲಕ್ಕೂ ಲೇಸು.
ಇಂದು ಎನಗೆ ಅಗೂಢವಿಲ್ಲ,
ಆತುರವೈರಿ ಮಾರೇಶ್ವರಾ./19
ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು?
ನಿನ್ನಯ ಚಿತ್ತವ ನೀಕರಿಸಿ ನುಡಿವರೆಂದೆ?
ನಿನ್ನಯ ನೋವು ಎನ್ನೊಳು ನೀ ಮಾಡುವ ಮಾಟ ಅನೇಕ.
ಕುಟಿಲ ಯೋನಿಯ ಸುತ್ತಿ ಮುತ್ತಿದ ಹರಿತದ ಪಾಶದ ಮಲ
ನಿನ್ನಲ್ಲಿ
ಅನೇಕರ ಕೊಲುವ ಪಾಶ ಕೈಯಲ್ಲಿ, ಭವ ವೇಷ ಅಂಗದಲ್ಲಿ.
ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾ?
ನಿನಗದು ನೀತಿ, ರುದ್ರನ ವೇಷಕ್ಕೆ ಸಹಜ.
ಅದ ಬಿಟ್ಟಾಡು, ನೀಕರಿಸು.
ಉಮಾಪತಿಯ ವೇಷವ ಬಿಟ್ಟು ಸ್ವಯಂಭುವಾಗು.
ಅದ ಬಿಟ್ಟು ಇಚ್ಛೆಯಲ್ಲಿ ನಿಂದು, ನಿರ್ಮಾಯ ಮಲನಾಸ್ತಿಯಾಗಿ,
ಮುಕುರ ಪ್ರತಿಬಿಂಬಿಸುವಂತೆ ಎನ್ನಿರವು ನಿನ್ನಲ್ಲಿ ತೋರುತ್ತದೆ.
ಅದೇಕೆ?
ನಿರ್ಮಾಯನಾದ ಕಾರಣ ನಿನ್ನಿರವು ಎನ್ನಲ್ಲಿ ಕೂರ್ತು,
ದರ್ಪಣದ ಆಕಾರ ಬೆಳಗಿನಲ್ಲಿ ತೋರುವ ನಿರಾಕಾರ
ಎರಡಕ್ಕೂ ರೂಪು ನಿರೂಪು ಉಭಯ ಬಿನ್ನವಿಲ್ಲದಂತೆ.
ಎನ್ನಂಗವಂತಿರಲಿ ಮನವ ಒಡಗೂಡಿಕೊ.
ಉರದ ಮಾತಿಂಗೆ ಮಾರನ ಕೊಂದ ಮಲತ್ರಯ ದೂರ,
ಅನಾಗತ ಸಂಸಿದ್ಧ ಭೋಗಮಯ ನಯನಚರಣವಿರಾಜಿತ,
ಜೀಮೂತ ಮೃತ ದಗ್ಧ ಸರ್ವವ್ಯಾಪಕ ನಾಶನ,
ಸರ್ವ ಅಂತರ್ಗತ ವಿಮಲತರಂಗ,
ಕರುಣಾಬ್ಧಿ ಪೂರ್ಣಚಂದ್ರ ವಿಲಾಸಿತ,
ಒಡಗೂಡಿದ ಭಕ್ತರ ಚಿತ್ತದ ಸಾಕಾರ ಪುಂಜವೆ,
ಸರ್ವಾತುರಂಗಳ ವಿರೋಧಿ, ಆಜಾತ,
ಶಂಭು ಮಾರೇಶ್ವರಾ./20
ಎಲ್ಲರಂತೆ ಮಾಡಿ ಮನನಗುಂದಲಾರೆ.
ಅರಿತು ಮರೆಯಲಾರೆ, ಕಂಡು ಕಾಣದಂತಿರಲಾರೆ.
ಹೇಳಿದಡೆ ಭಕ್ತರ ತೊಡಕು, ಹೇಳದಿದ್ದಡೆ ನಿನ್ನ ತೊಡಕು.
ಇಂತೀ ಎರಡರ ಏರಿನಲ್ಲಿ ಗುರಿಯಾಗಲಾರೆ,
ಆತುರವೈರಿ ಮಾರೇಶ್ವರಾ./21
ಎಲ್ಲವ ಜರೆದೆನೆಂದು, ಜಗದವರೆಲ್ಲರ ಗೆದ್ದೆನೆಂದು,
ದೇವಪದದಲ್ಲಿ ಸಲೆ ಸಂದನೆಂದು,
ಅಲ್ಲಿ ಅಲ್ಲಿ ನುಡಿದು ಎಲ್ಲರ ಮಂದಿರದಲ್ಲಿ ಬಂಧನಾಗಲೇಕೆ?
ಅವಳವಳ ಸಂಧಿಯೊಳಗೆ ಅಡಗಿದ ಈ ಭವದ ಅಂದವ ಹೇಳಾ,
ಆತುರವೈರಿ ಮಾರೇಶ್ವರಾ./22
ಏರಿಯ ಕಟ್ಟೆ ಒಡೆದಡೆ ಪಾಪವೆಂಬರು.
ನೀರಿನ ಸಾರವಿಲ್ಲದ ಮತ್ತೆ ಏರಿಯ ಪಾಪ ಆರಿಗೆಂಬುದನರಿ.
ಆಪ್ಯಾಯನವಡಸಿ ಬಂದವರು
ತಮ್ಮಯ ಅಘಹರವಾಗಬೇಕೆಂದು
ಬಗೆಗೊಳ್ಳುತಿರಲಾಗಿ, ತಮ್ಮಯ ಉದರದ ಬಗೆಯ ಹೇಳುವ
ಗುದಿಗಳ್ಳರ ನುಡಿಯೇಕೆ,
ಆತುರವೈರಿ ಮಾರೇಶ್ವರಾ./23
ಒಳಗಣ ಕಲ್ಲು, ಮೇಲಣ ಮರ, ನಡುವಣ ಮಣ್ಣು,
ಹೊಡೆವವನಂಗ ಹದನರಿದಡೆ ಕುಂಭ.
ಇಂತೀ ಮೂವರೆದೆಯನರಿ, ಆಮಳ ಸಂದಿಗೆ ಒಡಗೂಡದಿರು.
ಸಾಕು ಬಿಡು, ತೂತಿನ ಹಾದಿಯ
ಆತುರವೈರಿ ಮಾರೇಶ್ವರಾ./24
ಕಂಗಳ ಮುಂದಣ ಕಾಮವ ಕೊಂದು,
ಮನದ ಮುಂದಣ ಆಸೆಯ ತಿಂದು,
ಆತನನರಿ, ಆತುರವೈರಿ ಮಾರೇಶ್ವರಾ./25
ಕಲ್ಲಿಯ ಹಾಕಿ ನೆಲ್ಲವ ತುಳಿದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;
ವಾಗದ್ವೆ ತವ ಕಲಿತು
ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮತ್ಸ ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ.
ಆತುರವೈರಿ ಮಾರೇಶ್ವರಾ./26
ಕಾಗೆ ಕುಟುಕುವ ಕೊಂಬಾಗ ಗೂಗೆ ಕಣ್ಣು ತೆರೆಯಿತ್ತು.
ಗೂಗೆ ಕಣ್ಣು ತೆರೆವಾಗ ಆದಿಯ ಹಕ್ಕಿ ಬಾಯಿಬಿಟ್ಟಿತ್ತು,
ಆದಿಯ ಹಕ್ಕಿ ಬಾಯಿಬಿಡುವಾಗ ಮೂದೇವರೊಡೆಯ
ಮೂದೇವನಾದ.
ಮೂದೇವಗೆ ಮುಂದೆ ಓಲೆಯ ತೆಗೆವಾಗ ಕೋಡಗ
ಏಡಿಸುತ್ತಿದ್ದಿತ್ತು.
ಕೋಡಗ ಏಡಿಸುವಾಗ ಬಳ್ಳು ತಲೆದೂಗುತ್ತಿದ್ದಿತ್ತು.
ಬಳ್ಳು ತಲೆದೂಗುವಾಗ ಒಳ್ಳೆಗೆ ದಳ್ಳುರಿ ಹೊಡೆಬಂದು,
ಜಗವೆಲ್ಲರ ಕೊಂದಿತ್ತು, ಆತುರವೈರಿ ಮಾರೇಶ್ವರಾ./27
ಕಾಡಕಲ್ಲು ಹೊಲಗೇರಿಯ ನಾಯಿ,
ಇವ ಕೊಂಡಾಡ ಬಂದೆ.
ನೋಡದ ಲಿಂಗ, ಹಿಂದೆ ಬಿಟ್ಟೋಡದ ಹೊಲೆಗುಣ
ಇದೆಂದಿಗೆ ಹರಿದು?
ಈ ಸಂಸಾರದ ಸಂದಣಿ ಬೇಡ,
ಆತುರವೈರಿ ಮಾರೇಶ್ವರಾ./28
ಕಾಯ ಕಲ್ಪಿತಕ್ಕೊಳಗು, ಜೀವ ಭವಕ್ಕೊಳಗು.
ಈ ಉಭಯದ ಠಾವನರಿಯದೆ ಧಾವತಿಗೊಂಬರೆಲ್ಲರು.
ಕಾವಲಾದರು ಕಾಮನ ಕರ್ಮವಕ್ಕೆ.
ಈ ಭಾವವನರಿತು ತೊಲಗು ಸಾರಿದೆ,
ಸಾರಧಿಯ ಪತಿಯೊಡೆಯ ಸುತವೈರಿ ಮಾರೇಶ್ವರಾ./29
ಕಾಯದ ಕರ್ಮ ಮಾಡುವನ್ನಕ್ಕ ಶಿವಪೂಜಕನಲ್ಲ.
ಜೀವ ಭವಕ್ಕೆ ತಿರುಗುವನ್ನಕ್ಕ ವೈರಾಗ್ಯಭಾವ ಸಂಬಂಧಿಯಲ್ಲ.
ಇವೆಲ್ಲವೂ ಹೊಟ್ಟೆಯ ಹೊರೆವ ಘಟ್ಟಿಯತನವಲ್ಲದೆ
ನಿಶ್ಚಯವಲ್ಲ,
ಆತುರವೈರಿ ಮಾರೇಶ್ವರಾ./30
ಕಾಳಕೂಟವ ಕೊಡುವರೆಲ್ಲರು,
ಕೊಂಬವನಾರನೂ ಕಾಣೆ.
ಮಲತ್ರಯವ ಬಿಡೆಂದು ಹೇಳುವರೆಲ್ಲರನೂ ಕಂಡೆ.
ತಾ ತೊಲಗಿ ಹೆರೆಹಿಂಗಿ ಛೀ ಮುಟ್ಟದಿರೆಂಬಿವರನಾರನೂ ಕಾಣೆ.
ಸಕಲೇಂದ್ರಿಯದಲ್ಲಿ ತೊಟ್ಟು ಬಿಟ್ಟರೆಂದು ಹೇಳುವರ ಮಾತಿನ
ದೃಷ್ಟವ ಕಂಡೆ.
ಚಿತ್ತ ವಸ್ತುವಿನಲ್ಲಿ ಬೆಚ್ಚಂತೆ ಕೂಡಿಹರ ಸ್ವಪ್ನದಲ್ಲಿ ಕಾಣೆ.
ವಾಗದ್ವೈತದ ಭಾವಿಗಳ ಸಾಕುಬೇಕಾದಷ್ಟು ಕಂಡೆ,
ಸ್ವಯಾದ್ವೈತ ಸಂಪನ್ನರ ನಾ ಬಂದಂದಿಂದ ಎಂದೂ ಕಾಣೆ.
ಅದು ಎನ್ನ ಇರವೋ? ಪಾಪಿಯ ಕಣ್ಣಿಗೆ ಪರುಷಪಾಷಾಣದಂತೆ!
ಎನ್ನ ಭಾವದ ಮಾಯೆ ಎನ್ನಲ್ಲಿ ನೀ ಕಾಣಿಸಿಕೊಳ್ಳದಿರವೊ.
ಇಂತೀ ಉಭಯದ ಚೆನ್ನಾಗಿ ಪೇಳು,
ಆತುರವೈರಿ ಮಾರೇಶ್ವರಾ./31
ಕುಂಭದಲ್ಲಿ ಕುದಿವ ರೂಪು
ಮುಚ್ಚಳ ಅಂಗವ ತೆಗೆದಲ್ಲದೆ ಪಾತಕ ಸಂಗವನರಿಯಬಾರದು.
ಶರೀರದ ಕುಂಭದಲ್ಲಿ ಕುದಿವ ಜೀವನ ಇಂದ್ರಿಯಂಗಳ
ಹಿಂಗಿಯಲ್ಲದೆ
ಲಿಂಗಸಂಗಿಯಲ್ಲ, ಪ್ರಾಣಲಿಂಗಿಯಲ್ಲ,
ಆಸು ಭೇದವನರಿವುದಕ್ಕೆ ಸುಸಂಗಿಯಲ್ಲ,
ಇಂತಿವನರಿವುದಕ್ಕೆ ಪಶುಪತಿಯ ಶರಣರಲ್ಲಿ
ಒಸೆದು ಸಂಗವ ಮಾಡಿ ಅರಿ, ಅಸುವ ಅರಿ,
ತೂತ ತರಿ, ಸಂದೇಹದ ಭವವನರಿ,
ಘನಲಿಂಗದಲ್ಲಿ ಅರಿದೊರಗು, ಕರಿಗೊಂಡಿರು,
ಆತುರವೈರಿ ಮಾರೇಶ್ವರಾ./32
ಕುಣಿವ ಕುದುರೆಯ ಮೇಲೆ ಕುಳಿತು,
ಆಡುವ ಪಾತ್ರವ ನೋಡುತ ಬಂದವರೆಲ್ಲರು ಅರುಹಿರಿಯರೆ?
ಇವರ ಸಂದಣಿಯ ನೋಡಿ ಅಂಜಿ ಅಡಗಿದೆ,
ಆತುರವೈರಿ ಮಾರೇಶ್ವರಾ./33
ಕೂರಲಗು ಕೊಯ್ಯಿತ್ತು ಜಾಜಿಯ ಬಿರಿಮೊಗ್ಗೆಯ,
ಆರವೆ ನುಂಗಿತ್ತು ಸೇರಿದ ಪಕ್ಷಿಯ
ಮಾದಿಗನ ಮನೆಯ ಮಡಕೆಯ ಕೂಳ ಹಾರುವನುಂಡ.
ಸಹೋದರದವಳ ಕೂಡಿದ ಹಿರಿಯಣ್ಣ.
ಅಣ್ಣನ ಹೆಂಡಿರ ತಮ್ಮ ಹಾಕಿಕೊಂಡು ಕೊಡದಿರಲಾಗಿ,
ಇದು ಅನ್ಯಾಯವೆಂದು ಅವನ ಕಿರಿಯ ತಮ್ಮ ತಾ ತೆಕ್ಕೊಂಡ.
ಇದು ಚೆನ್ನಾಯಿತ್ತು, ಇದರ ಗನ್ನವ ಹೇಳು,
ಆತುರವೈರಿ ಮಾರೇಶ್ವರಾ./34
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ
ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು
ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ
ನೋಡಾ!
ಘಟ ಜೀವವೊಂದೆಂಬರು ಅಸು ಬೇರಾಗಿದೆ.
ಇದರ ಹುಸಿ ಕವಲ ಹೇಳಾ,
ಆತುರವೈರಿ ಮಾರೇಶ್ವರಾ./35
ಕೆಳಗಣ ಅವಳಿವಳೆ, ಮೇಲಣ ಆತನ ಕಾಣೆ, ಆತನೇತರವ.
ಬಾಸರ ಕೃಷ್ಣ ಕಪೋತ ತೂತಿನವ
ಅಜಾತನಲ್ಲಾಯೆಂದೆ, ಆತುರವೈರಿ ಮಾರೇಶ್ವರಾ./36
ಕೈ ಬಾಯಿ ಆಡುವನ್ನಕ್ಕ ಕೆಳಗಣ ಹೂರಿನ ದ್ವಾರವನರಸಿತ್ತು.
ಅದು ಸಾಕಾರದ ನೆಳಲು, ಭೀತಿಯ ಕೇಳದೆ ವಿಕಾರ,
ಸ್ವಪ್ನದಲ್ಲಿ ಸೋರುವ ಮನೆ.
ಇದಾರಿಗೂ ಅಸಾಧ್ಯ, ಮಾರಮಥನ ಮಾರೇಶ್ವರಾ./37
ಕೈದ ಮಾಡಿದ ಕಾರುಕ ಧೀರನಹನೆ?
ಚಿತ್ತದ ಆಮ್ನೆಯಿಂದ ಶಾಸ್ತ್ರ ಭಿತ್ತಿಯಿಂದ,
ಕವಿತ್ವದ ಲಕ್ಷಣದಿಂದ,
ಅನಿತ್ಯ ಅನಿತ್ಯವೆಂದು ಮಿಕ್ಕಾದವರಿಗೆ ಹೇಳುವ ಕರ್ತುವಲ್ಲದೆ
ತತ್ ಪ್ರಾಣಲಿಂಗಾಂಗಯೋಗ ತಾನಾಗಬೇಕು.
ಆತುರ ವೈರಿ ಮಾರೇಶ್ವರಾ./38
ಕೊಟ್ಟವನೀಶ ಭಕ್ತನಲ್ಲ, ಅರಿವಡೆ ಕರಿಗೊಂಡವನಲ್ಲ.
ಅಂಧಕ ಪಂಗುಳನ ಸಂಗದಂತಾಯಿತ್ತು.
ಇದ ನೋಡಿ ಬೆಂದು ಬೇಯಲಾರೆ,
ಆತುರವೈರಿ ಮಾರೇಶ್ವರಾ./39
ಕೋಡಗಕ್ಕೆ ಏಡಿಸುವ ಭ್ರಾಂತು,
ಹುಲಿಗೆ ಹೊಯಿವ ಗದಕ, ಬಲಿಗೆ ಬಂಟನ ಚಿಂತೆ.
ಎನಗೆ ಎಲ್ಲರ ಗೆಲ್ಲುವ ಚಿಂತೆ, ನೀ ಕೊಟ್ಟ ಕಾಯಕ.
ಆತುರವೈರಿ ಮಾರೇಶ್ವರಾ./40
ಗುಂಡ ವೇಶಿ ದಾಸಿ ಜೂಜು ಬೇಂಟೆ
ಭಂಡರ ಸಂಸರ್ಗದಲ್ಲಿರುತ್ತ
ಮತ್ತೆ ಲಿಂಗಾಂಗಸಂಗ ಶರಣರ ವಚನಾನುಭಾವದ
ಸುದ್ಧಿಯೇಕೊ?
ನಡೆ ನುಡಿ ಶುದ್ಧವಿಲ್ಲದೆ ಮಾತಿನ ಬಣಬೆಯ ನೀತಿಯೇಕೊ?
ಸರ್ವರ ಸಿಕ್ಕಿಸುವ ವೇಷದ ಭಾಷೆಯ
ಆಸೆಯ ಘಾತಕತನವಲ್ಲದೆ ಅದು ನಿರತವಲ್ಲ.
ನಂಬುಗೆಯ ದೀಪದಂತೆ ಅವರು ತೂತಿಗೆ ಬಹರೆಂಬೆ
ಆತುರವೈರಿ ಮಾರೇಶ್ವರಾ./41
ಗುರುಲಿಂಗ ಜಂಗಮದ ಇರವನರಿವಲ್ಲಿ,
ತನ್ನ ಶ್ರದ್ಧೆಯೊ ಅವರ ಇರವೊ ಎಂಬುದನರಿಯಬೇಕು.
ಗುರುವಿನಲ್ಲಿ ಗುಣವನರಸಲಿಲ್ಲಾ ಎಂಬರು;
ಲಿಂಗದಲ್ಲಿ ಲಕ್ಷಣವನರಸಲಿಲ್ಲಾ ಎಂಬರು;
ಜಂಗಮದಲ್ಲಿ ಜಾತಿಸೂತಕವನರಸಲಿಲ್ಲಾ ಎಂಬರು.
ಇದು ಎಲ್ಲರ ಬಳಕೆಯ ಮಾತು.
ಗುರುವಿನಲ್ಲಿ ಗುಣವಿಲ್ಲದಿರ್ದಡೆ
ಶಿಷ್ಯನ ಕೃತಾರ್ಥನ ಮಾಡುವ ಪರಿಯಿನ್ನೆಂತೊ?
ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ
ಪಂಚಸೂತ್ರ ಪ್ರವರ್ತನ ವರ್ತುಳ ಗೋಮುಖ
ಗೋಳಕಾಕಾರ ಇಷ್ಟಾರ್ಥ ಭಕ್ತರಿಗೆ
ಮನೋಹರವಹ ಪರಿಯಿನ್ನೆಂತೊ?
ಜಂಗಮಕ್ಕೆ ಜಾತಿಯಿಲ್ಲದಿರ್ದಡೆ,
ಉತ್ತಮ ಕನಿಷ್ಠ ಮಧ್ಯಮ
ಮುಖದಲ್ಲಿ ವೇದಾಂತಿ, ಭುಜದಲ್ಲಿ ಕ್ಷತ್ರಿಯ,
ಉದರದಲ್ಲಿ ಹರದಿಗ, ಜಂಘೆಯಲ್ಲಿ ಹಲಾಯುಧ
ಈ ಅಂಗದಲ್ಲಿ ವಿಶೇಷವ ಕಂಡು ಜಾತಿಯ ಹಿಂಗುವ
ಪರಿಯಿನ್ನೆಂತೊ?
ನುಡಿಯಬಾರದು, ದರಿಸಿನಕ್ಕಂಜಿ ಸುಮ್ಮನಿರಬಾರದು.
ಜ್ಞಾನಕ್ಕಂಜಿ ಬಿದಿರ ಹೋಟೆಯಲ್ಲಿ ಹರಿದ ಉರಿಯಂತೆ
ಬೇವುತ್ತಿದ್ದೇನೆ.
ಈ ಬೇಗೆಯ ಬಿಡಿಸು ಆತುರವೈರಿ ಮಾರೇಶ್ವರಾ./42
ಗುರುವಿನಲ್ಲಿ ಗುಣವಿಲ್ಲದಿರ್ದಡೆ ಪೂಜ್ಯನಾಗಿ
ಪೊಡವಡಿಸಿಕೊಳಲೇಕೆ?
ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ತ್ರಿಸಂಧ್ಯಾಕಾಲದಲ್ಲಿ
ಪೂಜಿಸಿಕೊಳಲೇಕೆ?
ಜಂಗಮದಲ್ಲಿ ಜಾತಿಯಿಲ್ಲದಿರ್ದಡೆ ಹಿರಿದು ಕಿರಿದೆಂದು
ಹೋರಲೇಕೆ?
ಇದನೇನ ಹೇಳುವೆ?
ಗುರು ಭವಕ್ಕೊಳಗಾದ, ಲಿಂಗ ಲಕ್ಷಣಕ್ಕೊಳಗಾಯಿತ್ತು.
ಜಂಗಮ ಜಾತಿಗೊಳಗಾದ!
ಇವನೆಲ್ಲವ ಹೇಳಿ ಹೇಳಿ: ಎನಗಿದು ಒಳ್ಳಿತ್ತೊ ಹೊಲ್ಲವೊ? ಗೆಲ್ಲತನಬೇಡ,
ಆತುರವೈರಿ ಮಾರೇಶ್ವರಾ./43
ಘಟದಲ್ಲಿ ಆತ್ಮ ದಿಟಕರಿಸಿ ಇಹಾಗ ತನ್ನ ಮಠವಾವುದೆಂದರಿ.
ಘಟವಳಿದು ಮಠ ತುಂಬಿ ಹೋಹಾಗ ದಿಟದ ಸುದ್ದಿಯನರಿ.
ಪಥಪಯಣದಿ ಹಾದಿಯ ಕಾಣು,
ಆತುರವೈರಿ ಮಾರೇಶ್ವರಾ./44
ಚೇತನದಿಂದ ಬಿಂದು, ಆ ಬಿಂದುವಿನಿಂದ ಸಾಕಾರ,
ಆ ಸಾಕಾರದಿಂದ ವೈಭವ, ಆ ವೈಭವದಿಂದ ಆಢ್ಯ.
ಇಂತಿವೆಲ್ಲವೂ ಸಂಚಾರದ ಸಂದೇಹ.
ಇದರಲ್ಲಿ ಕಂಚು ಮಿಂಚಾಗದೆ ಮುಂಚಬೇಕು
ಆತುರವೈರಿ ಮಾರೇಶ್ವರಾ./45
ತನ್ನ ಹೊಟ್ಟೆ ತುಂಬಿಯಲ್ಲದ ತೃಪ್ತಿಯಿಲ್ಲ,
ಭವದ ತೊಟ್ಟ ಹರಿದಲ್ಲದೆ ನಿತ್ಯನಲ್ಲ.
ವಿಕಾರದ ಕಟ್ಟು ಮೆಟ್ಟ ನಿತ್ತರಿಸಿಯಲ್ಲದೆ ವಿರಕ್ತನಲ್ಲ.
ಇವನರಿಯದೆ ವ್ಯರ್ಥನಾಗಿ ತಿರುಗುವ ಉನ್ಮತ್ತಂಗೆ
ಸತ್ಯದ ಸುದ್ದಿಯೇಕೆ? ಆತುರವೈರಿ ಮಾರೇಶ್ವರಾ./46
ತನ್ನಯ ಇರವ ತಾನರಿಯದೆ,
ಇದಿರಿಂಗೆ ಭಿನ್ನ ಬೋಧೆಯ ಹೇಳುವವನ ಇರವು,
ಸರಧಿಯಲ್ಲಿ ಹೋಹ ಲಘು ಅನ್ಯಭಿನ್ನವಾದಂತೆ.
ಇವರು ಗನ್ನದ ಗಾಂಭೀರವ ನುಡಿವುದು ಅನ್ಯಾಯವೆ?
ಆತುರವೈರಿ ಮಾರೇಶ್ವರಾ./47
ತಳದಿ ಬಟುವು ಮೇಲೆ ಗೋಮುಖದೊಳಗೆ
ಶಿವದೇವನಾರೆಂದರಿಯೆ.
ಇದು ಹೊರಹೊಮ್ಮಿಯಲ್ಲದೆ ಎನ್ನ ಮನವರಿಯದು.
ಎಲ್ಲರ ಇಷ್ಟಕ್ಕೆ ಕಣ್ಣು ಕೈ ಬಾಯಿ ಮುಖ ಕಾಲು ಇದು
ನುಣ್ಣನಿದೆ.
ಇದ ಚೆನ್ನಾಗಿ ಹೇಳು.
ಆ ಎನ್ನ ಕೈಯಲ್ಲಿ ಕೊಟ್ಟ ಮುನೈದು ನಿನ್ನ ಗನ್ನ,
ಆತುರವೈರಿ ಮಾರೇಶ್ವರಾ./48
ತಾ ಹೊಂದುವಾಗ ಕೈದು ಬಾಯೆಂದು ಕರೆದುದುಂಟೆ?
ತಡಿಯಲ್ಲಿದ್ದು ಮಡುವಿನಲ್ಲಿ ಬೀಳುವಾಗ
ಆ ಮಡು ಒಡಗೂಡುವ ಬಾಯೆಂದು ಕರೆಯಿತ್ತೆ?
ತಮವಡಸಿದ ನಿಳಯಕ್ಕೆ ಕರೆಯಿತ್ತೆ ಜ್ಯೋತಿಯ?
ನೀ ಬಂದ ಮಣಿಹಕ್ಕೆ ಎನ್ನ ಇರಲೀಸೆಯೆಂದು
ಅಸ್ಮಿಕದಲ್ಲಿ ಆತುರವೈರಿ ಮಾರೇಶ್ವರಾ ನುಡಿದ./49
ತಿತ್ತಿಯ ಸೂಯಲು ಅದೆತ್ತಣಿಂದ ಬಂದ ವಾಯ?
ತುಂಬುವಾನಂದ ಸೂಸುವ ಚೆಂದ, ಬೆಂಬಳಿ ಆರೆಂದರಿ.
ಆತುರವೈರಿ ಮಾರೇಶ್ವರಾ./50
ತೂತಿಂಗೆ ತೂತು ಸರಿ,
ಮಾತಿಂಗೆ ಮಾತು ಸರಿ.
ನಿಮ್ಮ ಮಾಟಕೂಟಕ್ಕೆ ಎನ್ನ ಆಟ ಸರಿ.
ಬಹು ರಾಟೆಯ ಹಿಡಿದು ತಿರಹುವಳ ತೂತೇತಕ್ಕೆ ಬಾತೆ
ಆತುರವೈರಿ ಮಾರೇಶ್ವರಾ./51
ತೂತಿಗೆ ಬಹವರ ಶುದ್ಧಿಯ ಮಾತು,
ಅದೇತರ ವೇದ? ಅದೇತರ ಶಾಸ್ತ್ರ?
ಅದೇತರ ಆಗಮಯುಕ್ತಿ?
ಪೂರ್ವ ಅಪರವೆಂಬ ತೂತಿನ ಭೇದವ ಮುಚ್ಚಿ
ಆತನನರಿತಲ್ಲಿ ಸಕಲ ಭ್ರಾಂತು ನಿರಸನ,
ಆತುರವೈರಿ ಮಾರೇಶ್ವರಾ./52
ತೃಣ ಮುನಿದು ತ್ರಿಣಯನ ಹೆಡಗುಡಿಯ ಕಟ್ಟುವಾಗ,
ಹಣೆಯ ಬೆಂಕಿ ಎಲ್ಲಿ ಅಡಗಿತ್ತೆಂದರಿಯೆ,
ಕಡುಗಲಿಗಳೆಲ್ಲರೂ ಉಡುವಿನ ಕೈಯಲ್ಲಿ ಸಾವಾಗ,
ಉಡಿಯ ಕೈದು ಎಲ್ಲಿ ಉಡುಗಿದವೆಂದರಿಯೆ.
ಒಕ್ಕುಡಿತೆಯಲ್ಲಿ ಅಡಗಿತ್ತು ಸಮುದ್ರ,
ಕೆರೆ ತುಂಬಿ ತೊರೆ ಒಡೆಯಿತ್ತು
ಆತುರವೈರಿ ಮಾರೇಶ್ವರಾ./53
ತೊಡೆಯಲ್ಲಿ ಸರಮುದ್ರೆ, ಜಡೆಯಲ್ಲಿ ಸರಮುದ್ರೆ
ಉಡಿಯಲ್ಲಿ ಲಿಂಗಮುದ್ರೆ.
ಇದರ ಒಡಗೂಡುವ ತೆರನಾವುದು?
ಬಿಡು ಸಾಕು, ನಿನಗೆ ಇವು ಒಡವೆಯಲ್ಲ.
ನಿನ್ನಿಡಿಗೆರಗುವೆ, ಆತುರವೈರಿ ಮಾರೇಶ್ವರಾ./54
ದಂತಶೂಕ ಶಿಲೆಯಿದಿರಲ್ಲಿ ಬಂದು ನಿಂದಿರಲಾಗಿ,
ತನ್ನ ಆಕಾರ ಪ್ರತಿಬಿಂಬಿಸಲಿಕ್ಕೆ
ತಿಳಿಯಲರಿಯದೆ ಹೋರಿ ನೊಂದಿತ್ತಲ್ಲಾ!
ನಾನೆಂಬುದನರಿಯದೆ ಅರಿದೆನೆಂಬವರೆಲ್ಲಾ
ಅಹಂಕಾರ ಅಹಂಮಮತೆಗೆ ರಾಗಿಗಳಾದಿರಣ್ಣಾ
ತನ್ನಲ್ಲಿ ತೋರುವ ದ್ವೇಷ ತನಗೆ ಇದಿರಾದುದ ತಾನರಿಯದೆ,
ಇದಿರಿಗೆ ಹೇಳಿಹೆನೆಂದು ಹುದುಗಿಗೆ ಹೋರಲೇಕೆ?
ಆತುರವೈರಿ ಮಾರೇಶ್ವರಾ./55
ದೃಷ್ಟ ಚಕ್ಷು ಸ್ವಪ್ನ ಚಕ್ಷು, ಸುಷಪ್ತಿ ಚಕ್ಷು, ತ್ರಿವಿಧ ಭೇದ.
ಚಕ್ಷುವಿನಲ್ಲಿ ಕಾಬುದು ಒಂದೊ ಮೂರೊ?
ಸಾಕಾರದಲ್ಲಿ ಚರಿಸಿ, ನಿರಾಕಾರದಲ್ಲಿ ವಿಶ್ರಮಿಸಿ
ಕಾಣಬಾರದ ಕಡೆ ನಡು ಮೊದಲಿಲ್ಲದಲ್ಲಿ
ಅಡಗಿ ಕುರುಹುದೋರದ ಇರವು ಕಾರಣಭೇದ
ಇದನರಿವುದಕ್ಕೆ ಕ್ಷೀರ ಸಂಗಪತಿಯೋಗದಿ
ಮಥನ ಕಲಂಕಿ ಘೃತಕಡೆಯಂತೆ ಆತ್ಮಭೇದ,
ಆತುರವೈರಿ ಮಾರೇಶ್ವರಾ./56
ನಡೆವ ಕಾಲು, ಆನುವ, ಕೈ, ಬೇಡುವ ಬಾಯಿ,
ಸರ್ವವನೊಡಗೂಡುವ ಮನವುಡಗಿ,
ಘನಲಿಂಗದಲ್ಲಿ ತಲ್ಲೀಯವಾದವನಂಗ,
ಮರುಳು ಕಂಡ ಕನಸಿನಂತೆ, ಮೂಗನ ಕಾವ್ಯದಂತೆ,
ಜಲಲಿಪಿಯಂತೆ, ಉರಿಯ ಧೂಮದಂತೆ,
ಇದಾರಿಗೂ ಆಸಾಧ್ಯ, ಆತುರವೈರಿ ಮಾರೇಶ್ವರಾ./57
ನಾನಾ ಭವಂಗಳಿಂದ ಬಂದವರ,
ಅಂಡಪಿಂಡದ ಸಂದಣಿಯಲ್ಲಿ ಬಂದವರ,
ಇವ ಹಿಂಗಿದರೆಂದಡೆ ಲಿಂಗಸಂಗಕ್ಕೆ ದೂರ.
ದ್ವಂದ್ವದಲ್ಲಿ ಸಂಗೀತರಾದೆನೆಂದಡೆ ಮಂಗಳಮಯ ಚಿತ್ತ;
ಅನಂಗವಿರೋಧಿಗೆ ದೂರ.
ಹಿಡಿದಡೆ ಭಂಗ, ಹಿಡಿಯದಿದ್ದಡೆ ತೊಡಕು.
ಇದರ ಬಿಡುಗಡೆಯ ಹೇಳಾ,
ಆತುರವೈರಿ ಮಾರೇಶ್ವರಾ./58
ನಿಃಕಲನ ನಿಜ ಬೆಲ್ಲ ಬೇವಾಗಬೇಕು, ಬೇವು ಬೆಲ್ಲವಾಗಬೇಕು.
ಸೊಲ್ಲು ಸೊಲ್ಲಿಂಗೆ ಕ್ರಮವ ಬಲ್ಲವನ ಮುಟ್ಟಬೇಕು.
ಇದು ಎಲ್ಲರ ಬಳಸಿಪ್ಪ ಕಲ್ಲಿಯ ರಜ್ಜು.
ಬಲ್ಲವರ ಮುನ್ನುಡಿಗೆ ಗುಣಜ್ಞರ ಭಾವ ಎಲ್ಲಕ್ಕೂ ಸರಿ,
ಆತುರವೈರಿ ಮಾರೇಶ್ವರಾ./59
ನೆನಹಿನ ಭಾವಕ್ಕೆ ಈ ಭವ; ಮನಸಿನ ಮೋಹವೆಲ್ಲ ಸತಿ;
ಆಸೆಯೆ ತನ್ನ ಸುತ್ತಿಪ್ಪ ಭವಪಾಶದ ಹೇಳಿಗೆ.
ತನ್ನಲ್ಲಿ ತೋರುತಿಪ್ಪ ತಥ್ಯಮಿಥ್ಯವೆ ಕೂರಲಗು.
ಬೇರೊಂದರಸಲೇಕೆ ಸಂಸಾರವ?
ಆತುರವೈರಿ ಮಾರೇಶ್ವರಾ./60
ಪರಬ್ರಹ್ಮವ ನುಡಿವರೆಲ್ಲಾ ಬ್ರಹ್ಮನ ಬಾಯಾಟ,
ಹಿಂಗಿದಲ್ಲಿ ಹೋಯಿತ್ತು.
ಬೊಮ್ಮ ಬಾಯೆಂಬ ಬಾಗಿಲಮುಂದೆ ಸುಳಿಯದಿರೆ,
ಅನ್ನ ಆತ್ಮಂಗೆ ಅರಿವೆ ಪ್ರಾಣ ವಿರಕ್ತಂಗೆ.
ಇಂತೀ ಗುಣಕ್ಕೆ ಇದಿರ ಕೇಳಲಿಲ್ಲ, ತನ್ನ ಮರೆಯಲಿಲ್ಲ,
ಆತುರವೈರಿ ಮಾರೇಶ್ವರಾ./61
ಪೂರ್ವವನಳಿದು ಪುನಜರ್ಾತನಾದ ಮತ್ತೆ
ಜಾತತ್ವ ಅಳವಟ್ಟು ಆ ಗುರುಮೂರ್ತಿಯ ಇರವು
ತಾನಾದ ಮತ್ತೆ ಹಿಂದ ಮೆಟ್ಟಲಿಲ್ಲ.
ಬಂಧುಗಳೆಂದು, ಕೊಂಡ ಕೊಟ್ಟ ಬೆಂಬಳಿಯವರೆಂದು,
ತಂದೆ ತಾಯಿ ಒಡಹುಟ್ಟಿದವರ.
ಹಿಂದ ನೆನೆವನಿಗೇಕೆ ಗುರುಸ್ಥಲದ ಸಂಪತ್ತಿನಿರವು
ಮಾತಾ ಉಮೆ ಪಿತಾ ಶಿವ ಶಿವಭಕ್ತ ಬಾಂಧವರಾದಲ್ಲಿ,
ಅವರೊಳಗೆ ಒಬ್ಬರಿವರೆಂದು ವಿಶೇಷವ ಕಾಣದೆ ಕಾಬುದುಗುರುಸ್ಥಲ.
ಹಾಗಲ್ಲದೆ ಹಿಂದಣ ತೂತಿನವರೆಂದು ಬದ್ದುದ ಮಾಡಿ,
ಮುಂದಣ ತೂತಿಂಗೀಡುಮಾಡುವ
ಭಂಡಂಗೇಕೆ ಗಾಂಭೀರದ ಇರವು
ಆತುರವೈರಿ ಮಾರೇಶ್ವರಾ./62
ಬಂದ ಬಂದವರೆಲ್ಲರೂ ನೀರ ಕಾಸುವರಲ್ಲದೆ
ಮಿಂದುಂಡು ಹೋಹವರನಾರನೂ ಕಾಣೆ.
ಕಾಗಲೆತ್ತಿತ್ತು ಮೇಲು ಮಡಕೆಯಿಲ್ಲ.
ಸೌದೆ ಬೆಂದಿತ್ತು, ಬೆಂಕಿಯ ಕಾಣೆ.
ಮೀವಾತ ಬಂದ, ಉದಕವನೆರೆವವರನಾರನೂ ಕಾಣೆ.
ಕಂಡವರ ಕೇಳಿದಾತ ಬಂದು ಕಾಣಿಸಿಕೊಂಡವನಿಲ್ಲ,
ಆತುರವೈರಿ ಮಾರೇಶ್ವರಾ./63
ಬಲ್ಲವನ ನುಡಿ ಸರ್ವವೆಲ್ಲಕ್ಕೂ ನನ್ನಿ.
ಬೆಲ್ಲದ ಘಟ್ಟಿ ಸರ್ವವೆಲ್ಲಕ್ಕೂ ಮಧುರ.
ಕಳವಿಲ್ಲದವನ ನುಡಿ ಸರ್ವವೆಲ್ಲಕ್ಕೂ ದಿಟ.
ಹುಸಿ ಒಂದಕ್ಕೆ ದಿಟವೆರಡಕ್ಕೆ ಸಂದೇಹ ಮೂರಕ್ಕೆ ಬೀಡು.
ಮೂಕೊರೆಗನ ಶುದ್ಧಿಯೇತಕ್ಕೆ?
ಆತುರವೈರಿ ಮಾರೇಶ್ವರಾ./64
ಬಲ್ಲವನಾಗಿ ಮಾತಿನ ವೈರಕ್ಕೆ ಎಲ್ಲರೊಳಗೂ ಹೋರಿ,
ಕೃಪೆಯಿಲ್ಲಿದವನಾಗಿ ತತ್ಕಾಲ ಉಚಿತ ದೇಹಕ್ಕೆ ದಳ್ಳುರಿಯವನಾಗಿ,
ಮಿಕ್ಕವರೆಲ್ಲರಿಗೆ ಸನ್ಮತಿಯ ಹೇಳುವ ಚಿಳ್ಳನ ನೋಡಾ,
ಆತುರವೈರಿ ಮಾರೇಶ್ವರಾ/65
ಬಾಯಾರಿ ರಸ ಬತ್ತಿದವಂಗೆ ಪಾಯಸದ ಗಡಿಗೆಯ
ತಂದಿರಿಸಿದಡೆ ಬಾಯಾರು ಹಿಂಗುವುದೆ?
ಸಕಲ ಸುಖದಲ್ಲಿ ಇಹಂಗೆ ಸಕಳೇಶ್ವರನ ಅಕಲ ಬಲ್ಲನೆ?
ಇಂತಿವರೆಲ್ಲರು ಅಖಿಳರೊಳಗೆ ಅಡಗಿ ಸುಖದುಃಖವ
ಭೋಗಿಸುವ
ಪ್ರಕೃತಿ ವಿಧರಿಗೇಕೆ ಅಕಳಂಕನ ಮಾತು.
ಆತುರವೈರಿ ಮಾರೇಶ್ವರಾ./66
ಬಿರಿದ ಕಟ್ಟಿದಾತನ ಬಿರಿದದೆ.
ಕಟ್ಟಿದೊಡೆಯನೆತ್ತ ಹೋದನೆಂದರಿಯೆ.
ಇನ್ನಾರೊಳಗೆ ಕದನ? ವಾದಿಸುವರಿಲ್ಲ.
ಭೇದದ ಗುರು, ಚೋದ್ಯದ ಶಿಷ್ಯ,
ಇಂತೀಲಾಗುಕಾರನೊಲ್ಲ.
ಆತುರವೈರಿ ಮಾರೇಶ್ವರಾ./67
ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?
ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?
ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?
ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?
ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?
ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ./68
ಬೆಲ್ಲ ಹಣ್ಣಾದುದುಂಟೆ, ಪಾದಪಕ್ಕೆ ಫಲವಲ್ಲದೆ?
ಬಲ್ಲವ ಎಲ್ಲರೊಳಗೆ ಬಲ್ಲಿದನಾದೆಹೆನೆಂದು ಗೆಲ್ಲ ಸೋಲಕ್ಕೆಹೋರುವ.
ಅವನಲ್ಲಿಯೆ ಉಳಿದ ಎಡದೊಡೆ ಸಂದಿಯಲ್ಲಿ,
ಆತುರವೈರಿ ಮಾರೇಶ್ವರಾ./69
ಬ್ರಹ್ಮ ಅವ್ವೆಯ ಗಂಡನಾದ.
ವಿಷ್ಣು ಅಕ್ಕನ ಗಂಡನಾದ.
ರುದ್ರ ಕಿರುತಂಗಿಯ ಗಂಡನಾದ.
ಈ ಮೂವರ ಹೋಬಳಿ ಇದೇನು ಚೋದ್ಯ!
ಇಂತಿವು ಮಾಯಾಮಲಯೋನಿ ಸಂಬಂಧ.
ಏಕಗುಣ ಭಾವ, ತರುಕೊಂಬು ಫಲದಂತೆ.
ಸಾಕು ಸಂಸರ್ಗ, ಆತುರವೈರಿ ಮಾರೇಶ್ವರಾ./70
ಬ್ರಹ್ಮ ಮಡಕೆಯಾಗಿ, ವಿಷ್ಣು ಮಂತಾಗಿ,
ಯುಗಜುಗಂಗಳು ಮೊಸರಾಗಿ,
ಅಹುದಲ್ಲಯೆಂಬ ಎರಡು ಕಡೆಗುಣಿಯ ನೇಣು;
ನೆಟ್ಟ ಸ್ಥಾಣು ರುದ್ರಮುರ್ತಿ, ಹಿಡಿದು ಕಡೆವ ಕಣ್ಣ ಕಂಗಳ ನೋಟ
ಇದು ಅತಿ ಮಥನವಾಗಿದೆ,
ಆತುರವೈರಿ ಮಾರೇಶ್ವರಾ./71
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ.
ಹೊತ್ತು ಹೋರಿ ಭೂಮಿಯ ಅಗೆವಲ್ಲಿ
ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ
ಮಾಡುವ ಮಾಟ ನಷ್ಟ.
ಇದನರಿತು ವಿರಕ್ತರಾಗಿ ಹೋದಲ್ಲಿ,
ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ.
ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ,
ಆತುರವೈರಿ ಮಾರೇಶ್ವರಾ./72
ಭಕ್ತಿಯುಕ್ತಿ ಸತ್ಯ ಸಮತೆಯ ಹೇಳಿ
ಭೃತ್ಯನುತ್ತಮ ನೀವು ಕರ್ತುವೆಂದು ಅವರುವ
ಅಸ್ತಿ ನಾಸ್ತಿಯನರಿಯದೆ ಕತ್ತರಿಯ ಮೊನೆಯಂತೆ
ಹೊಕ್ಕು ಕೆಡಹುವ ಕೃತ್ತಿಮರು ತೂತಿನ ಅತ್ತಣವರು,
ಅತುರವೈರಿ ಮಾರೇಶ್ವರಾ./73
ಭಕ್ತಿಯೆಂಬ ಭಾಂಡದಲ್ಲಿ ಸತ್ಯವೆಂಬ ಅಕ್ಕಿಯ ಹೊಯಿದು
ನಿರ್ಮಲವೆಂಬ ಉದಕವ ಸಂಬಂಧಿಸಿ
ತ್ರಿಗುಣವೆಂಬ ಮೂರು ಒಲೆಯ ಗುಂಡು
ಆತುರದ ಸೌದೆ, ಸುಡದ ಬೆಂಕಿಯಲ್ಲಿ ಉರುಹಲಾಗಿ,
ಓಗರ ಬೆಂದಿತ್ತು, ಇಕ್ಕುವರಿಲ್ಲ, ಉಂಬವರ ಕಾಣೆ,
ಆತುವವೈರಿ ಮಾರೇಶ್ವರಾ./74
ಭಲ್ಲೂಕನ ನೋಟ, ವ್ಯಾಘ್ರನ ಸಂಚ,
ವಿಕ್ರಮನ ನಾಸಿಕ, ಸಿಕ್ಕಿಸುವಾತನ ಬುದ್ಧಿ,
ಗುರುವೆನಲಿಲ್ಲ, ಪ್ರಮಾಣಿಸಲಿಲ್ಲ, ವರ್ಮಿಸಲಿಲ್ಲ,
ಹರವರಿಯಲ್ಲಿ ಹರಿಸಲಿಲ್ಲ.
ಅವನಿರವಿನಲ್ಲಿ ನುಡಿದ ನುಡಿ ಕೆಡಬಾರದೆಂದು
ಅವುಡಕಚ್ಚಿರು ತೂತಿನ ಭ್ರಾಂತ,
ಆತುರವೈರಿ ಮಾರೇಶ್ವರಾ./75
ಭೂಮಿಯ ಮಧ್ಯದಲ್ಲಿ ಒಬ್ಬ ಗಾಣಿಗ ಸ್ಥಾಣುವ ನೆಟ್ಟು,
ಮೊದಲೊಂದು ಬಾಯಿಮೂರು, ಕೊಂತವಾರು, ಎಂಟೆತ್ತು,
ನೊಗ ಹದಿನಾರು, ಕೊರಳಕಣ್ಣಿ ನೂರೊಂದು.
ಇಂತಿವ ಕೂಡಿ ಹೊಡೆಯಲಾಗಿ,
ಒರಳ ಬಾಯಿಗೆ ಏರಿದ ಹಲಗೆಗೆ
ಮೇಲೆ ಏತದ ಸೂತ್ರಕ್ಕೆ ಒಂದೆ, ಇದ ಹೇಳು,
ಆತುರವೈರಿ ಮಾರೇಶ್ವರಾ./76
ಮಡಿವಳ ವಸ್ತ್ರಕ್ಕೆ ಮುನಿದಲ್ಲಿ, ಅರಿ ಸಮರಿಪು ಮುನಿದಲ್ಲಿ,
ಸರಸಮ ಮುನಿದಲ್ಲಿ ಸುರ ಅಂತಕ ಮುನಿದಲ್ಲಿ
ಇವು ಸರಸವೆ? ಇಂತಿವು ವಿರಸವಲ್ಲಾ ಎಂದು ಉಸುರಿದೆ.
ನಿಮ್ಮ ದೆಸೆಯವನೆಂದು ಎನ್ನ ಗಸಣೆಗೊಳಬೇಡ,
ಅಸುಕುತನ ದೂರವಾಗಿರಿ, ಬಾಳಾಂಬಕನ ಬಾಲಲೋಲರಾಗಿರಿ.
ವಿಶಾಲ ಗುಣನಿಧಿ ಭಕ್ತಗುಣಲೋಲ ಶರಣರನಳಿನರ್ಗ
ಕಾಲುಮಾಡಿದಿರೆನ್ನ, ಆತುರವೈರಿ ಮಾರೇಶ್ವರಾ./77
ಮಣ್ಣೆಂಬುದು ದೇಹ, ಹೊನ್ನೆಂಬುದು ಕಾಂಕ್ಷೆ,
ಹೆಣ್ಣೆಂಬುದು ಸಕಲ ಸುಖಭೋಗಂಗಳು.
ಅಣ್ಣಾ, ಇದ ಹೇಳದೆ ಮಣ್ಣ ಮುದ್ದೆಯ ಕೈಯಲ್ಲಿ ಕೊಟ್ಟು
ನುಣ್ಣನೆ ಹೋದೆ, ಆತುರವೈರಿ ಮಾರೇಶ್ವರಾ./78
ಮನ ಮನವ ಕೂಡಿ, ತನು ತನುವ ಕೂಡಿ,
ಅರಿವು ಅರಿವನರಿತು ಹೆರೆಹಿಂಗದವ
ಕರಿಗೊಂಡು ತನ್ನರಿವಿನ ಕುರುಹಿನ ಕುರಿತು
ಇಷ್ಟದಲ್ಲಿ ಅನೈಷ್ಠಿಕತ್ವವೆ ವಸ್ತು ತಾನಾಗಿ ಇದ್ದು
ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ./79
ಮನ ಮಹದಲ್ಲಿ ನೆಮ್ಮಿ ಮತ್ತೊಂದು ಜಿನುಗುವ ನೇಮವೇತಕ್ಕೆ?
ತಲೆ ಪೂಣ್ಯದ ತತ್ತಿಂಗೆ ಪೂಜೆ.
ಆಗಣ್ಯನನರಿವುದಕ್ಕೆ ತ್ರಿಕರಣ.
ಅಣ್ಣಾ, ಇವ ತಿಳಿದು ನೋಡಿ ಪ್ರಸನ್ನನರಿ,
ಆತುರವೈರಿ ಮಾರೇಶ್ವರಾ./80
ಮಾಡುವರ ಮಾಟಕ್ಕಂಜಿ ತೂತ ಬಿಟ್ಟಡೆ
ಅದೇತರ ಯೋಗ? ಅದೇತರ ಪೂಜೆ?
ಪರರ ಬೇಡುವ ಬಾಯಿ ತೂತ ಮುಚ್ಚಿದಡೆ ಆಸೆಗೆ ಹೊರಗು,
ಆತುರವೈರಿ ಮಾರೇಶ್ವರಾ./81
ಮಾತ ವೆಗ್ಗಳವನಾಡಿ, ಹಿರಿಯತನದಿ ಪಾಶವ ತೋರಿ,
ಜಗಹಿತಾರ್ಥವಾಗಿ ಆಸೆಯೆಂಬ ಕೂಸು
ದ್ರವ್ಯದ ಗಾತ್ರದ ಮೊಲೆಯನುಣುತದೆ.
ನಿಹಿತವ ಬಿಟ್ಟು ಕೂತನಾಗಿ ಬಿಡು ಭಾಷೆಯೇಕೆ?
ವೇಷದ ಪಾಶವೇಕೆ? ಬಿಡು ತೂತಿಗೆ ಪೋಗಿ
ಆತುರವೈರಿ ಮಾರೇಶ್ವರಾ./82
ಮಾತಿನ ವೈರಕ್ಕೆ ಹೋತುವಾಗದೆ,
ಖ್ಯಾತಿಯ ಲಾಭಕ್ಕೆ ಮಾಟಕೂಟವಾಗದೆ
ವಾಸಿಯ ಮಾತಿಗೆ ನಾಸಿಕವನರಿದುಕೊಳ್ಳದೆ,
ವೇಸಿಯ ಕೂಸಿಗಾಗಿ ಸತಿಪುತ್ರರ ಘಾಸಿಮಾಡದೆ,
ಕಿಂಚಿತ್ತು ತೂತಿಗಾಗಿ ಆತನ ಬಿಡದಿರು,
ಆತುರವೈರಿ ಮಾರೇಶ್ವರಾ./83
ಮಾತು ಬ್ರಹ್ಮಾಂಡವ ಮುಟ್ಟಿ,
ನೀತಿ ಮಾತಿನ ಬಾಗಿಲ ಕಾಯ್ವುದು, ಅದೇತರ ಮಾತು?
ಆತುರವೈರಿ ಮಾರೇಶ್ವರಾ./84
ಮಾರುತನಂತೆ ಮನ, ಮರಾಳನಂತೆ ಬುದ್ಧಿ,
ಸಂಚಾರಿಸುವ ಅಂಬುಧಿಯಂತೆ ಅಂಗ,
ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ.
ಬಲುಗೈಯನ ತೋಟಿಯ ತೊಡಕಿನಂತೆ,
ಗೆಲು ಇಂದ್ರಿಯ ವರ್ಗಂಗಳ, ಆತುರವೈರಿಮಾರೇಶ್ವರಾ./85
ಮೆಟ್ಟದ ಮೃತ್ತಿಕೆಯ ಇಕ್ಕುವುದೊಂದೆ ಚಕ್ರ.
ತುರುಗೂಡೊಂದೆ ಭೇದ, ಹಿಡಿದವನೊಬ್ಬನೆ.
ಘಟ ಹಲವು ತೆರನಾದವು, ಬೇಗ ಒಂದೆ.
ಇದರ ಭೇದವ ಹೇಳಾ.
ಆತುರವೈರಿ ಮಾರೇಶ್ವರಾ./86
ಲಿಂಗವ ಪೂಜಿಸುವಲ್ಲಿ ಲಿಂಗದ ಅಂಗವನರಿದು ಮುಟ್ಟಬೇಕು.
ಲಿಂಗಕ್ಕೆ ಅರ್ಪಿತವ ಮಾಡುವಲ್ಲಿ ಲಿಂಗದ ಆಪ್ಯಾಯನವನರಿವಲ್ಲಿ
ಉಚಿತವನರಿದು ಅರ್ಪಿಸಬೇಕು.
ತನ್ನ ಹಸಿವನರಿತು ಹುಸಿಯ ಪೂಜೆಯ ಕಂಡಡೆ,
ಕಿಸುಕುಳದಲ್ಲಿ ಇಕ್ಕುವ,
ಆತುರವೈರಿ ಮಾರೇಶ್ವರಾ./87
ವೇದ ಯೋನಿಯ ಹಂಗು.
ಶಾಸ್ತ್ರ ಯೋನಿಯ ಹಂಗು.
ಪುರಾಣ ಯೋನಿಯ ಹಂಗು.
ಆಗಮ ಯೋನಿಯ ಹಂಗು.
ನಾದದಿಂದ ಉದಿಸಿದವು ಶ್ರೋತ್ರದ ಹಂಗು.
ಹೇಳುವುದು ವೆಜ್ಜ, ಕೇಳುವುದು ವೆಜ್ಜ,
ತಾ ಹಿಂದೆ ಬಂದುದು ವೆಜ್ಜ, ಈಗ ನಿಂದು ಮಾಡುವುದು ವೆಜ್ಜ.
ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ ಬಿದ್ದವರಿಗೆ ನಿರ್ಧರವಿಲ್ಲ
ಆತುರವೈರಿ ಮಾರೇಶ್ವರಾ./88
ಶರೀರದ ವಾಯುದ್ವಾರದ ಸಂಚಾರದ ನಾಡಿ ಕೂಡಿದ
ಮಜ್ಜೆ ನರ ಮಾಂಸ ಪುದಿದಿಹ ಚರ್ಮದ ತ್ರಿಕೋಣೆಯ ತುದಿಯ
ಉನ್ಮನಿಯಲ್ಲಿ ಅರಿಯಬೇಕೆಂಬರು.
ಹರಿದು ಹೋಹಾಗ ಆತ್ಮನಡಿಯ ಹಜ್ಜೆಯಂತೆ
ಅಡಿದೋರದ ಇರವು
ಆತುರವೈರಿ ಮಾರೇಶ್ವರಾ./89
ಸಮತೆಯ ಸಮಾಧಾನವ ಹೇಳುವ ಪುಸ್ತಕ ಎತ್ತಿನ ಮೇಲೆ,
ಹೊಯಿವ ದೊಣ್ಣೆ ಕೈಯಲ್ಲಿ, ಲೇಸಾಯಿತ್ತು ಈತನಿರವು.
ಮಾತಿನಲ್ಲಿ ಆಗಮ, ಮನದಲ್ಲಿ ತೂತಿನ ಕುಡುಕೆಯ ಆಶೆ
ಇದು ನೀತಿಯಲ್ಲ, ಆತುರವೈರಿ ಮಾರೇಶ್ವರಾ./90
ಹರಿಗೋಲು ಹರಿದ ಮತ್ತೆ ಹೊಳೆಯೇನು ಮಾಡುವುದು?
ಇರಿದವನಿದ್ದಂತೆ ಕೈದೇನ ಮಾಡುವುದು?
ಎಚ್ಚವನಿದ್ದಂತೆ ಅಂಬಿಗೆ ಮುನಿವರೆ?
ಎನ್ನ ಚಿತ್ತದಲ್ಲಿ ಕಲೆದೋರಿ, ನೀನಾಡಿಸಿದಂತೆ ಆಡಿದೆ.
ನೀ ಕೊಟ್ಟ ಕಾಯಕವ ಹೊತ್ತೆ, ನೀ ಹೇಳಿದ ಬಿಟ್ಟಿಯ ಮಾಡಿದೆ
ಕುಳದವನಾದ ಮತ್ತೆ ಮಾನ್ಯರ ಒಲವರ ಎನಗೊಂದುಗುಣವಿಲ್ಲ.
ನೀನಾಡಿಸಿದಂತೆ ಆಡಿದೆ, ಆತುರವೈರಿ ಮಾರೇಶ್ವರಾ./91
ಹಳ್ಳಿಯ ಹೊಲೆಯನ ಕೈಯಲ್ಲಿ ಡಿಳ್ಳಿಯಧಿಪತಿ ಸತ್ತ.
ಆಳುವ ಗಂಡ ಹೆಂಡತಿಗೆ ಕೀಳಾಳಾದ.
ಒಡೆದು ಬಂಟನಿಗೆ ಬಡಿಹೋರಿಯಾದ.
ಹೊಡೆಯ ಹುಲ್ಲು ಕರವಾಳ ಹಿಡಿಯ ಕೊಯ್ಯಿತ್ತು.
ಆತುರವೈರಿ ಮಾರೇಶ್ವರಾ./92
ಹಾಕಿದಡೆ ಸಮಯಕ್ಕೆ ಭಂಗ, ಹಿಡಿದಡೆ ಜ್ಞಾನಕ್ಕೆ ಭಂಗ
ಇದರೊಡಗೂಡುವ ಒಡಲಾವುದು?
ಹಾಗಕ್ಕೆ ಕೊಂಡು ಹಣವಡ್ಡವ ಕಟ್ಟುವ ಲಾಗಿನ ಗುರು ಬೇಡ.
ಆತುರವೈರಿ ಮಾರೇಶ್ವರಾ./93
ಹಿಂದೆ ನಾ ಬಂದ ಭವಕ್ಕೆ ಅಟ್ಟಣೆಯಿಲ್ಲ.
ಉದಯದಲ್ಲಿ ಕಮ್ಮಾರನ ಮನೆಗೆ ಬಂದು ಬೇಸತ್ತೆ.
ಮಧ್ಯಾಹ್ನದಲ್ಲಿ ಅಗಸನ ಮನೆಗೆ ಎಡತಾಕಿ ಬೇಸತ್ತೆ.
ಅಸ್ತಮಯದಲ್ಲಿ ನಾವಿದನ ಮನೆಗೆ ಹೋಗಿ ನಿಂದಿದರ್ು ಬೇಸತ್ತೆ.
ಕಮ್ಮಾರನ ಕೈಯ ಮುರಿದವರಿಲ್ಲ,
ಅಗಸನ ಕಾಲ ಕಡಿದವರಿಲ್ಲ.
ನಾವಿದನ ತಲೆಯ ಕೊಯ್ದವರಿಲ್ಲ.
ಇಷ್ಟನಾರೈದುಕೊ, ಆತುರವೈರಿ ಮಾರೇಶ್ವರಾ./94
ಹಿಂದೆ ಬಂದವರೆಲ್ಲರೂ ಯೋನಿಯ ಹಂಗು.
ಸಕಲ ಶಾಸ್ತ್ರಜ್ಞರೆಲ್ಲಾ, ವೇದ ವೇದಾಂತರೆಲ್ಲಾ,
ಹಿಂದೆ ಬಂದ ಯೋನಿಯ ಮರೆದು, ಮುಂದಕ್ಕೆ ಯೋನಿಗಾಗಿ
ಲಂದಳಗಿತ್ತಿಯಂತೆ ಬಂದ ನಿಂದ ಭಕ್ತರಲ್ಲಿ
ಹೊಸತನದಂದವ ಹೇಳಿ, ಎಡಗಾಲಸಂದಿಯ ಮಚ್ಚಿ,
ಅನಂಗನ ಬಲೆಯೊಳಗಾದವರಿಗೆ
ಘನಲಿಂಗನ ಸುದ್ಧಿಯೇಕೆ, ಆತುರವೈರಿ ಮಾರೇಶ್ವರಾ./95
ಹುಗುಲು ಹೂಟದೊಳಗಾಡುವರೆಲ್ಲರು
ಬಗೆಗೆ ಅಳವಡದನ ಬಲ್ಲರೆ?
ಗುಹ್ಯ ಜಿಹ್ವೆಯಲ್ಲಿ ಬಲ್ಲವನಾಗಬೇಕು,
ಅದು ಬಿಡುಮುಡಿಯ ಸಂಗ.
ಒಡಗೂಡುವ ತೊಡಗೆಯ ಭೇದವನರಿಯಬೇಕು,
ಆತುರವೈರಿ ಮಾರೇಶ್ವರಾ./96
ಹೆಣ್ಣಿನ ಮೇಲಿನ ಮೋಹ ಯೋನಿ ಕಂಡಾಗ ದಣಿಯಿತ್ತು.
ಹೊನ್ನಿನ ಮೇಲಿನ ಮೋಹ ಕೂಡಿ ಭಿನ್ನವಾಗಲಾಗಿಯೆ
ದಣಿಯಿತ್ತು.
ಮಣ್ಣಿನ ಮೇಲಿನ ಮೋಹ ಅರಿಗಳ ಮುರಿದು
ಹರಿವರಿಯಾದಾಗಲೇ ದಣಿಯಿತ್ತು.
ಇವನೊಂದುವ ಕಾಣದ ಮೋಹ ಎಂದಿಗೂ ಬಿಡದು.
ಇದರ ಸಂದನಳಿದು ಹೇಳಾ,
ಆತುರವೈರಿ ಮಾರೇಶ್ವರಾ./97
ಹೇಳಿಸಿಕೊಂಡು ಕೇಳಿ ಅರಿದೆಹೆನೆಂದೆಡೆ ಗಣಿತದ ಲೆಕ್ಕವಲ್ಲ.
ಎನ್ನನರಿತು ನಿನ್ನನರಿವಡೆ ನಾ ಪರಂಜ್ಯೋತಿಯಲ್ಲ,
ರುಜೆಯಡಸಿದವನ ದೇಹ, ಅಂಧಕನ ನೋಟ, ಪಂಗುಳನ
ಪಯಣ,
ಮತಿಹೀನನ ಗತಿಗೆಟ್ಟವನ ಮೋಕ್ಷ
ಇಂತಿವು ಹುಸಿಯಾದ ತೆರ ನನಗೊ ನಿನಗೊ,
ಆತುರವೈರಿ ಮಾರೇಶ್ವರಾ./98
ಹೊಳೆಯಲ್ಲಿ ನಿಂದಿದರ್ು ಹಾದಿಯ ಕೇಳಿದಡೆ,
ತಡಿಮಡುವ ಹೇಳಿದಡೆ ಅದು ಕೆಡುಗುಡಿತನವೆ?
ಎನ್ನ ಬಿಡುವರು ಬಿಡಲಿ, ಇದ ನಡಸಿಯಲ್ಲದೆ ಬಿಡೆ, ಬಡಮತವಲ್ಲ.
ಎನ್ನ ಒಡಗೂಡಿಕೊ, ಆತುರವೈರಿ ಮಾರೇಶ್ವರಾ./99