Categories
ಶರಣರು / Sharanaru

ನೀಲಾಂಬಿಕೆ (ನೀಲಮ್ಮ)

ಅಂಕಿತ: ಸಂಗಯ್ಯ

೮೧೧
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ?

ಈಕೆ ಬಸವಣ್ಣನವರ ಧರ್ಮಪತ್ನಿ. ಸಿದ್ಧರಸನ ಮಗಳು. ಬಿಜ್ಜಳನ ಸಾಕುತಂಗಿ. ಈಕೆಗೆ ಬಾಲಸಂಗಯ್ಯ ಹೆಸರಿನ ಮಗನಿದ್ದನೆಂದು ಸಣ್ಣ ವಯಸ್ಸಿನಲ್ಲಿ ತೀರಿಕೊಂಡನೆಂದು ತಿಳಿದುಬರುತ್ತದೆ. ‘ವಿಚಾರಪತ್ನಿ’ ಎಂದು ತನ್ನನ್ನು ಕರೆದುಕೊಂಡ ಈಕೆ, ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾಳೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕೂಡಲಸಂಗಮ ಸಮೀಪದ ತಂಗಡಗಿಯಲ್ಲಿ ಐಕ್ಯಳಾದಳೆಂದು ತಿಳಿಯುತ್ತದೆ. ಕಾಲ-೧೧೬೦.

೮೩೩
ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,
ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು.
ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು
ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು.
ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ
ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ.

ನೀಲಾಂಬಿಕೆ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿದ್ದಾಳೆ. ಅಂಕಿತ ‘ಸಂಗಯ್ಯ’ ಸದ್ಯ ೨೮೮ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಹೆಚ್ಚಾಗಿ. ಬಸವ ಸ್ತುತಿ, ಅವರ ಅಗಲಿಕೆಯ ನೋವಿನ ಧ್ವನಿ ಕೇಳಿಬರುತ್ತವೆ.

೮೩೨
ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,
ಮಾನ್ಯರ ಸಂಗ, ಮುಖ್ಯರ ಸಂಗ.
ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ.

೮೭೭
ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ.
ಎನಗೆ ಸಂಗಯ್ಯನು ನೀವೆ ಬಸವಯ್ಯಾ.

೧೦೭೫
ಸರ್ವಾಂಗಶುದ್ಭವಾಗಿ ಲಿಂಗದೇಹಿಯಾನಾದೆನು.
ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.
ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ.

೧೦೦೪
ಬಸವಣ್ಣನೆ ಗುರುವೆಂದು ಭಾವಿಸಲಾಗಿ,
ಎನಗೆ ಬಸವಣ್ಣನೆ ಗುರುವಾದನಯ್ಯಾ.
ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ,
ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ.
ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ,
ಎನಗೆ ಪ್ರಭುದೇವರೆ ಜಂಗಮವಾದನಯ್ಯಾ.
ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ,
ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ.
ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ,
ಇಹಃಪಗೆಯಾಂಡರೆ ಧನವಾದನಯ್ಯಾ.
ಇಂತೀ ಐವರ ಕಾರುಣ್ಯಪ್ರಸಾದವನುಂಡು ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ.