Categories
ವಚನಗಳು / Vachanagalu

ಪ್ರಸಾದಿ ಲೆಂಕಬಂಕಣ್ಣ ವಚನಗಳು

115
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ
ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ
ಗಂಧದಿಂದ ಸುಳಿವ ನಾನಾ ಸುಗಂಧವ
ರಸದಿಂದ ಬಂದ ನಾನಾ ರಸಂಗಳ
ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ
ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ
ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ
ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ
ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ
ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ
-ಇಂತೀ ಪಂಚೇಂದ್ರಿಯಂಗಳಲ್ಲಿ
ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ
ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ.
ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ.
ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ.
ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ.
ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ
ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ.
ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ
ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ
ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು
ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ
ಎತ್ತಿ ಪ್ರತಿಯ ಲಕ್ಷಿಸಬಹುದೆ ?
ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ
ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು
ದಹನ ಚಂಡಿಕೇಶ್ವರಲಿಂಗದಿರವು.

116
ಇಷ್ಟಪ್ರಸಾದವ ದೃಷ್ಟಕ್ಕೆ ಅರ್ಪಿಸಿಕೊಂಡೆಹೆನೆಂಬನ್ನಕ್ಕ
ದೃಷ್ಟವೂ ಇಲ್ಲ, ಇಷ್ಟವೂ ಇಲ್ಲ.
ಉಭಯವಿಲ್ಲಾಗಿ ತೃಪ್ತಿಗೆ ಮುಟ್ಟದ ಅರ್ಪಿತವ
ಇದನಾರು ಬಲ್ಲರು.
ಮುಟ್ಟದಲ್ಲಿಯೆ ಸವಿಸಾರಂಗಳ ಭೇದವ ದೃಷ್ಟ ಮುಂತಾಗಿ
ಅರ್ಪಿತದಲ್ಲಿಯೆ ಸವಿಸಾರಂಗಳನರಿದು ಅರ್ಪಿಸಬಲ್ಲಡೆ
ಅರ್ಪಿತಸೂತಕ ಅಲ್ಲಿಯೆ ನಷ್ಟ.
ಈ ಗುಣ ದೃಷ್ಟಪ್ರಸಾದಿಯ ಕಟ್ಟಿನ ಭೇದ.
ದಹನ ಚಂಡಿಕೇಶ್ವರಲಿಂಗವು ತಾನಾದವನ ಸಂಗದ ಕೂಟ.

117
ಕಣ್ಣು ನೋಡಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ?
ಕಿವಿ ಕೇಳಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ?
ಘ್ರಾಣ ವಾಸಿಸಿ ಅರ್ಪಿಸಿದುದು ಅದಾವ ಲಿಂಗಕ್ಕೆ ?
ಜಿಹ್ವೆಯ ಕೊನೆಯಲ್ಲಿ ಸವಿದು ಅರ್ಪಿಸಿದುದು ಅದಾವ ಲಿಂಗಕ್ಕೆ ?
ಕರ ಮುಟ್ಟಿದ ಸೋಂಕಿನ ಸುಖ ಅದಾವ ಲಿಂಗಕ್ಕೆ ?
ಇಂತೀ ಪಂಚೇಂದ್ರಿಯಂಗಳಲ್ಲಿ ಅರ್ಪಿಸಿಕೊಂಬ
ಆತ್ಮನ ತೃಪ್ತಿ ಐದೋ ಮೂರೋ ಬೇರೆರಡೋ ಏಕವೋ ?
ಎಂಬುದ ನಿಧಾನಿಸಿ ಬಹುವೆಜ್ಜದ ಕುಂಭದಲ್ಲಿ ಅಗ್ನಿಯನಿರಿಸಿ
ಉರುಹಲಿಕೆ ವೆಜ್ಜ ವೆಜ್ಜಕ್ಕೆ ತಪ್ಪದೆ ಕಿಚ್ಚು ಹೊದ್ದಿ ತೋರುವದು
ವೆಜ್ಜದ ಗುಣವೋ ? ಒಂದಗ್ನಿಯ ಗುಣವೋ ?
ಇಂತೀ ಗುಣವ ನಿಧಾನಿಸಿಕೊಂಡು
ನಿಜಪ್ರಸಾದವ ಕೊಂಬ ಸ್ವಯಪ್ರಸಾದಿಗೆ
ತ್ರಿವಿಧಪ್ರಸಾದ ಸಾಧ್ಯವಪ್ಪುದಲ್ಲದೆ ವರ್ತಕಪ್ರಸಾದಿಗಳಿತ್ತಲೆ ಉಳಿದರು.
ದಹನ ಚಂಡಿಕೇಶ್ವರಲಿಂಗಕ್ಕೆ ಅರ್ಪಿತ ಮುಟ್ಟದೆ ಹೋಯಿತ್ತು.

118
ಕಾಯದಲ್ಲಿ ಸೋಂಕ ಅಳಿದು, ಕೊಂಬುದು ಶುದ್ಧಪ್ರಸಾದಿಯ ಅಂಗ.
ಕರಣಂಗಳಿಚ್ಫೆಯಿಲ್ಲದೆ ಕೊಂಬುದು ಸಿದ್ಧಪ್ರಸಾದಿಯ ಅಂಗ.
ಭಾವ ತಲೆದೋರದೆ ಜನನ ಮರಣಾದಿಗಳಲ್ಲಿ
ನಾಮ ರೂಪು ಕ್ರೀಗೆ ಬಾರದೆ ನಿಶ್ಚಯ ನಿಜಾಂಗಲೇಪವಾಗಿ
ಕೊಂಬುದು ಪ್ರಸಿದ್ಧಪ್ರಸಾದಿಯ ಅಂಗ.
ಇಂತೀ ತ್ರಿವಿಧಪ್ರಸಾದಿಗಳಲ್ಲಿ ಹೊರಗೆ ವಿಚಾರಿಸಿ, ಒಳಗ ಕಂಡು
ಒಳಗಿನ ಗುಣದಲ್ಲಿ ಕಳೆ ನಿಂದು ನಿಃಪತಿಯಾಗಿ
ದೃಷ್ಟ ತನ್ನಷ್ಟವಾದುದು ಸ್ವಯಂಪ್ರಸಾದಿಯ ಅಂಗ.
ಇಂತಿವರಲ್ಲಿ ತಿಳಿದುಳಿದವಂಗಲ್ಲದೆ
ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟಿಹೆನೆಂಬುದು ದೃಷ್ಟಾಂತವಲ್ಲ.
ಕೊಟ್ಟು ಕೊಂಡೆಹೆನೆಂದಡೆ
ಆ ಗುರುವಿಗೂ ಲಿಂಗವೆಂಬುದೊಂದು ಕುರುಹು.
ಜಂಗಮಕ್ಕೂ ಲಿಂಗವೆಂಬುದೊಂದು ಕುರುಹು.
ಕೊಟ್ಟು ಕೊಂಡೆಹೆನೆಂಬ ಭಕ್ತಂಗೂ ಲಿಂಗವೆಂಬುದೊಂದು ಕುರುಹು.
ಇಂತೀ ಬೀಜ, ಆ ಬೀಜದಿಂದಂಕುರ.
ಆ ಅಂಕುರದಿಂದ ಪತ್ರ ಕುಸುಮ ಫಲಭೋಗ.
ಆ ಫಲಭೋಗದಿಂದ ಮತ್ತೆ ಬೀಜವಪ್ಪುದರಿಂದ ಕಂಡು
ಇಂತೀ ತ್ರಿವಿಧಗುಣ ಲಿಂಗ ಸೋಂಕೆಂಬುದ ಕಂಡು
ಒಂದರಿಂದೊಂದು ಗುಣವನರಿದೆಹೆನೆಂದಡೆ
ಸಂದನಳಿದ ಸದಮಲಾನಂದವೊಂದು
ಸೂತಕವೆಂದಳಿದು ಕೊಡಲಿಲ್ಲ.
ಎರಡು ಸೂತಕವೆಂದು ಮುಟ್ಟಿ ಅರ್ಪಿಸಲಿಲ್ಲ.
ಮೂರನೊಡಗೂಡಿ ಪ್ರಸಾದವಿದೆಯೆಂದು
ಬೇರೆ ಅರ್ಪಿಸಿಕೊಂಬವರಿನ್ನಾರೊ ?
ಇಂತೀ ಪ್ರಸಾದಿಯ ಪ್ರಸನ್ನವ ತಿಳಿದಲ್ಲಿ
ದಹನ ಚಂಡಿಕೇಶ್ವರಲಿಂಗವು ಪ್ರಸನ್ನಪ್ರಸಾದಿಕಾಯನು.

119
ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ.
ಅದೆಂತೆಂದಡೆ: ಗುರು ಭೇದ್ಯವು, ಲಿಂಗ ಅಭೇದ್ಯವು.
ಜಂಗಮಪ್ರಸಾದವ ಲಿಂಗಕ್ಕೆ ಕೊಡಲಿಲ್ಲ.
ಅದೆಂತೆಂದಡೆ: ಜಂಗಮವು ಚತುರ್ವಿಧಫಲಪದಂಗಳಲ್ಲಿ ರಹಿತವು.
ಲಿಂಗವು ಚತುರ್ವಿಧಫಲಪದಂಗಳಿಗೆ ವಿರಹಿತವು.
ಇಂತೀ ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ
ತಾ ಕೊಂಡೆಹೆನೆಂಬಲ್ಲಿ ತ್ರಿವಿಧಪ್ರಸಾದವಾಯಿತ್ತು.
ಇಂತೀ ತ್ರಿವಿಧಪ್ರಸಾದವ ತಾನರಿದು ಕೊಂಬಲ್ಲಿ
ಗುರುವಿಂಗೆ ತನುವನಿತ್ತು, ಲಿಂಗಕ್ಕೆ ಮನವೆರಡಿಲ್ಲದೆ
ಜಂಗಮಕ್ಕೆ, ತ್ರಿವಿಧಮಲಕ್ಕೆ ಕಟ್ಟುಮೆಟ್ಟಿಲ್ಲದೆ
ಅಂಗವರತು ಇಂದ್ರಿಯಂಗಳಿಚ್ಫೆಯಿಲ್ಲದೆ
ಸಂದುಸಂಶಯ ನಿವೃತ್ತಿಯಾದವಂಗಲ್ಲದೆ
ತ್ರಿವಿಧಪ್ರಸಾದ ಏಕೀಕರ ಸಾಧ್ಯವಲ್ಲ.
ದಹನ ಚಂಡಿಕೇಶ್ವರಲಿಂಗಕ್ಕೆ ಕೊಟ್ಟು ಕೊಳ್ಳಬಾರದು.

120
ಗುರುವಿಂಗೆ ಜೀವಪ್ರಸಾದ, ಚರಕ್ಕೆ ಭಾವಪ್ರಸಾದ.
ಜೀವಭಾವದಲ್ಲಿ ಕೂಡಲಿಕ್ಕಾಗಿ ಪರಮಪ್ರಸಾದ.
ಆ ಪರಮಪ್ರಸಾದ ವ್ಯತಿರಿಕ್ತವಾಗಿ ಕಾಣಿಸಿಕೊಂಡಲ್ಲಿ
ಪ್ರಸಾದವಾಯಿತ್ತು.
ಆ ಲಿಂಗಪ್ರಸಾದ ತನಗಾಗಲಾಗಿ ಸ್ವಯಪ್ರಸಾದವಾಯಿತ್ತು.
ಇಂತೀ ಪ್ರಸಾದಿಸ್ಥಲ ವಿವರಂಗಳ ತಿಳಿದು
ಲಿಂಗಕ್ಕೆ ಕೊಟ್ಟು ಕೊಳಬೇಕು.
ದಹನ ಚಂಡಿಕೇಶ್ವರಲಿಂಗಕ್ಕೆ ಅರಿದು ಅರ್ಪಿಸಬೇಕು.

121
ಧೀರಪ್ರಸಾದ ವೀರಪ್ರಸಾದ ಆವೇಶಪ್ರಸಾದ.
ಇಂತೀ ತ್ರಿವಿಧಪ್ರಸಾದವ ಕೊಂಬಲ್ಲಿ
ಅಂಗವರತು ಇದಿರಿಂಗೆ ಭಯಭಂಗವಿಲ್ಲದೆ
ಬೆಗಡು ಜಿಗುಪ್ಸೆ ಚಿಕಿತ್ಸೆ ತಲೆದೋರದೆ
ಮಹಾಕುಂಭಘೃತಂಗಳ ಕೊಂಡಂತೆ.
ಮಹಾಮೇರುವೆಯ ಅಲ್ಪಮೊರಡಿ ಧಿಕ್ಕರಿಸಿ ಅಲ್ಲಿಗೆ ಹೋದಡೆ
ಅದರ ತಪ್ಪಲಲ್ಲಿಯೆ ತಾನಡಗಿದಂತೆ.
ಈ ಗುಣ ದೃಷ್ಟಪ್ರಸಾದಿಯ ಕಟ್ಟಿನ ಭೇದ.
ದಹನ ಚಂಡಿಕೇಶ್ವರಲಿಂಗವು ತಾನಾದ ಅಂಗದ ತೆರ.

122
ನಿಷ್ಠೆಯಿಂದ ಕೊಂಬುದು ದ್ರವ್ಯಪ್ರಸಾದ.
ತೃಪ್ತಿಯಿಂದ ಭೋಗಿಸುವದು ಕರುಣಪ್ರಸಾದ.
ಅರಿವಿನ ಮುಖದಿಂದ ಕುರುಹಳಿದು ಕೊಂಬುದು
ಎರಡಳಿದ ಪ್ರಸಾದ.
ಆ ಪ್ರಸಾದ ಮಹಾಪ್ರಸಾದವಾಗಲಾಗಿ
ವರುಷ ವರುಷಕ್ಕೆ ಇದಿರೆಡೆಗೆಟ್ಟಂತೆ
ಉರಿ ಉರಿಯೆಡೆ ಸುಡಲಿಲ್ಲದ ತೆರನಂತೆ
ಮುಕುರ ಮುಕುರಕ್ಕೆ ಕಳೆಬೆಳಗೊಡಗೂಡಿದಂತೆ.
ಇಂತೀ ಪ್ರಸಾದ ಅಂಗವಾದ ನಿರಂಗಿಯ ತೆರ.
ದಹನ ಚಂಡಿಕೇಶ್ವರಲಿಂಗವೆ ಅಂಗವಾದವನ ಸಂಗ.

123
ಪ್ರಸಾದವೆ ಅಂಗವಾದವನ ಇರವು ಎಂತುಟೆಂದಡೆ:
ಒಳಗಿಲ್ಲದ ಕುಂಭ ಒಡೆದು ಹೋಳಾದಂತೆ
ಮರೀಚಿಕಾಜಲವ ತುಂಬಿ ಸುರಿದ ಅಂಗದಂತಿರಬೇಕು.
ಉರಿಯ ಮಧ್ಯದಲ್ಲಿ ನಷ್ಟವಾದ ಕರ್ಪುರದ ಗಿರಿಯಂತಿರಬೇಕು.
ಮಹಾಪ್ರಸಾದವ ಕೊಂಡಲ್ಲಿ ಇದಿರು ಮುಯ್ಯಿಲ್ಲದಿರಬೇಕು.
ಹರವರಿ ನಷ್ಟವಾಗಿ ದಹನ ಚಂಡಿಕೇಶ್ವರಲಿಂಗದಲ್ಲಿ ಒಳಗೂಡಿರಬೇಕು.

124
ರೂಪನರಿದು ರುಚಿಯನುಂಡು
ಅವರ ನಿಹಿತಂಗಳ ಕಂಡು ಮತ್ತೆ ಲಿಂಗಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಕೊಂಡೆಹೆನೆಂಬ ವರ್ತಕಭಂಡರ ನೋಡಾ.
ಕಟ್ಟಿ ಹುಟ್ಟದ ರತ್ನ, ಸುಗುಣ ಅಪ್ಪು ತುಂಬದ ಮುತ್ತು
ಕಳೆ ತುಂಬದ ಬೆಳಗು, ಹೊಳಹುದೋರದ ಸೂತ್ರ
ಲವಲವಿಕೆಯಿಲ್ಲದ ಚಿತ್ತ, ಇದಿರಗುಣವನರಿಯದ ಆತ್ಮ.
ಇಂತಿವು ಫಲಿಸಬಲ್ಲವೆ ? ಕ್ರೀಯನರಿದು ಅರ್ಪಿಸಬೇಕು.
ಅರ್ಪಿಸುವಲ್ಲಿ ದೃಷ್ಟಾಂತದ ಸಿದ್ಧಿ ಪ್ರಸಿದ್ಧವಾಗಬೇಕು.
ಕಾಣದವಗೆ ತಾ ಕಂಡು ಕುರುಹಿನ ದಿಕ್ಕ ಅರುಹಿ
ತೋರುವನ ತೆರನಂತೆ
ತಾ ಲಕ್ಷಿಸಿದಲ್ಲಿ, ತಾ ದೃಷ್ಟಿಸಿದಲ್ಲಿ, ತಾ ಮುಟ್ಟಿದಲ್ಲಿ
ಅರ್ಪಿತವಾದ ಪ್ರಸಾದಿಯ ಕಟ್ಟು.
ದಹನ ಚಂಡಿಕೇಶ್ವರಲಿಂಗವು ತಾನಾದ ಚಿತ್ತದವನ ಮುಟ್ಟು.

125
ವೇದ ಶಾಸ್ತ್ರ ಪುರಾಣ ಆಗಮಂಗಳಿಗೆ ಅಭೇದ್ಯಲಿಂಗಕ್ಕೆ
ಸಕಲಸಂಸಾರವೇದಿಗಳ ಶೇಷವ ಸಮರ್ಪಿಸಬಹುದೆ?
ಅಲ್ಲಾಯೆಂದಡೆ ಸಮಯವಿರೋಧ.
ಅಹುದೆಂದಡೆ ಆದಿಯನಾದಿಯಿಂದತ್ತ
ಭೇದಿಸಿ ಕಾಣದ ಅಭೇದ್ಯಲಿಂಗಕ್ಕೆ
ಸರ್ವಸಾಧನೆಯಲ್ಲಿ ಸಾವವರ ಶೇಷವ
ನಾದ ಬಿಂದು ಕಳೆಗೆ ಅತೀತವಪ್ಪ ವಸ್ತುವಿಂಗೆ ನೈವೇದಿಸಬಹುದೆ?
ಲಿಂಗದ ಆದ್ಯಂತವನರಿಯರು.
ಗುರುಲಿಂಗಜಂಗಮದ ಭೇದಕ್ರೀಯನರಿದು ಕಂಡು
ತನ್ನಿರವ ತಾ ಶೋಧಿಸಿಕೊಂಡು ತ್ರಿವಿಧವ ಅರಿತವಂಗಲ್ಲದೆ
ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ
ತ್ರಿವಿಧಪ್ರಸಾದವ ಒಡಗೂಡಿಕೊಂಬುದು ನಿರಂಗಿ.
ನಿರಂಗಿಯ ಮಹಾಪ್ರಸಾದಿಯ ಅಂಗ ಹೀಂಗಲ್ಲದೆ
ಕಂಡವರ ಕೈಕೊಂಡು ಬಂಧ ಮೋಕ್ಷ ಕರ್ಮಂಗಳೊಂದೂ ಹರಿಯದೆ ನಿಂದ
ಕೀರ್ತಿ ಆಡಂಬರಕ್ಕಾಗಿ ಮಾಡಿಕೊಂಡ ನೇಮಕ್ಕೆ ಕೆಟ್ಟಡೆ
ತ್ರಿವಿಧವೇದಿಗಳು ಬಾಧಿಸಿಹರೆಂದು ಕಟ್ಟುಗುತ್ತಿಗೆಯ ವರ್ತಕರಿಗೆ
ತ್ರಿವಿಧಪ್ರಸಾದದ ನಿಜನಿಶ್ಚಯ ಉಂಟೆ?
ಇಂತೀ ಭೇದವಿಚಾರಗಳ ತಿಳಿದು
ಲಿಂಗದ ಅಂದಿನ ಸೋಂಕಿನಿಂದ ಬಂದ
ಗುರು ಲಿಂಗ ಜಂಗಮದ ಅಂಗವನರಿದು
ಲಿಂಗಮೂರ್ತಿ ತ್ರಿವಿಧರೂಪಾಗಿ
ಬಂದುದ ತಿಳಿದು, ತನ್ನ ಮೂರ್ತಿಗೆ ತಾ ಗುರುವಾಗಿ
ದೀಕ್ಷಿತನಾಗಿ ಬಂದುದ ಕಂಡು
ತನ್ನ ಮೂರ್ತಿಗೆ ತಾನು ಸುಳಿದು, ಚರವಾಗಿ ನಿಂದುದ ಕಂಡು
ತನ್ನ ಮೂರ್ತಿಗೆ ನಿಜಕ್ಕೆ ತಾ ಮೂರ್ತಿಯಾಗಿ
ಆ ಲಿಂಗವು ಉಭಯದ ಗುಣದಲ್ಲಿ ಕುರುಹಗೊಂಡಿತ್ತು.
ಇಂತೀ ನಡೆನುಡಿ ಸಿದ್ಧಾಂತವಾದವಂಗಲ್ಲದೆ
ಗುರುಚರಪ್ರಸಾದ ಲಿಂಗಕ್ಕೆ ನೈವೇದ್ಯವಲ್ಲ,
ದಹನ ಚಂಡಿಕೇಶ್ವರಲಿಂಗವನರಿದ ಪ್ರಸಾದಿಯ ನಿರಂಗ.