Categories
ಶರಣರು / Sharanaru

ಬಸವಲಿಂಗದೇವ

ಅಂಕಿತ: ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀ ಗುರು ಸಿದ್ಧಲಿಂಗೇಶ್ವರ
ಕಾಯಕ: ವಿರಕ್ತ ಪರಂಪರೆಗೆ ಸೇರಿದವನು

ಈತ ತೋಂಟದ ಸಿದ್ಧಲಿಂಗರ ಶಿಷ್ಯಪರಂಪರೆಗೆ ಸೇರಿದ ಗುರುಸಿದ್ಧದೇವರ ಶಿಷ್ಯ. ಸ್ಥಳ-ಹರದನಹಳ್ಳಿ, ಕಾಲ ೧೭೦೦. ‘ಮತ್ಪ್ರಾಣನಾಥ ಮಹಾಶ್ರೀಗುರು ಸಿದ್ಧಲಿಂಗೇಶ್ವರ’ ಎಂಬ ಅಂಕಿತದಲ್ಲಿ ೩೬ ವಚನಗಳು ದೊರೆತಿವೆ. ಇವು ಗುರುಸಿದ್ಧದೇವರು ಸಂಕಲಿಸಿದ ‘ಚಿದೈಶ್ವರ್ಯ ಚಿದಾಭರಣ’ ಕೃತಿಯ ‘ಮಹಾಜ್ಞಾನಿಯ ಸರ್ವಪರಿತ್ಯಾಗ ಸ್ಥಲ’ ಎಂಬ ಸ್ಥಲದ ಅಡಿಯಲ್ಲಿ ಒಂದೇ ಕಡೆಗೆ ಜೋಡಿಸಲ್ಪಟ್ಟಿವೆ. ಎಲ್ಲವೂ ಗುರುವಿನಲ್ಲಿ ಬಿನ್ನಹ ಮಾಡಿಕೊಂಡ ರೀತಿಯಲ್ಲಿವೆ.

ಆತ್ಮ ನಿವೇದನೆ, ಆತ್ಮ ವಿಶ್ಲೇಷಣೆ ಬಸವಲಿಂಗದೇವನ ವಚನಗಳಲ್ಲಿನ ವಿಶೇಷ, ಪವಿತ್ರ ಕ್ಷೇತ್ರಗಳ ಪರ್ಯಟನದಿಂದ ವೃಥಾ ಅಯಾಸವಾಯಿತು ಎನ್ನುವ ಆತ “ಸದ್ಭಕ್ತ ಹರಳಯ್ಯಗಳ ಮನೆಯ ಬಾಗಿಲ ಕಾಯವಂತೆ ಮಾಡಯ್ಯ” ಎಂದಿರುವನು. “ಕಾಮವಿಕಾರದಿಂದ ಉಚ್ಚೆಯ ಬಚ್ಚಲಿಗೆ ಹೊಡೆದಾಡಿ ಸತ್ತಿತಯ್ಯ ಎನ್ನಗುಹ್ಯೇಂದ್ರಿಯವು, ಇಂತೀ ಗುಹ್ಯಲಂಪಟಕ್ಕೆ ದೂರವಾದ ಮಹಾಘನ ಸದ್ಭಕ್ತ ಶಿವಶರಣ ಶಂಕರದಾಸಿಮಯ್ಯನ- ದಾಸಿಯ ದಾಸನ ಮಾಡಿ ಸಲಹಯ್ಯ” ಎಂದು ತನ್ನ ಇಷ್ಟ ದೈವದಲ್ಲಿ ಮೊರೆ ಇಡುವನು. ಹೀಗೆ ತನ್ನಲ್ಲಿನ ಅನಂತ ದೌರ್ಬಲ್ಯಗಳನ್ನು ಹೇಳುತ್ತ ಶಿವಶರಣರ ನಾಮ ಸ್ಮರಣೆ ಮಾಡುತ್ತಾ ಅವರ ಗುಣಗಳು ತನ್ನಲ್ಲಿ ಮೈಗೂಡುವಂತೆ ಪ್ರಾರ್ಥಿಸುವನು.