Categories
ವಚನಗಳು / Vachanagalu

ಬಹುರೂಪಿ ಚೌಡಯ್ಯನ ವಚನಗಳು

ಅಂಡಜ ಪೃಥ್ವಿ ಉದಯಿಸದಂದು
ಭೂಮಂಡಲವಾಗದಂದು
ಪಿಂಡಜ ಬೀಜವ ನವಬ್ರಹ್ಮರು ತಾರದಂದು
ನವಖಂಡವ ರಚಿಸದಂದು
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೂತಾದಿ [ಸ್ಥ]ಳವಿಡದಂದು
ಅನುಕರಿಸದಂದು, ರೂಹಿಸದಂದು
ಅತಿಮಥನ ಒಡ್ಡದಂದು
ಇಪ್ಪತ್ತೈದರ ಸ್ಥಳವ ಹೆಸರುಗೊಂಡು ಕರೆಯದಂದು
ಎನಗೆ ತನಗೆಂಬಿಚ್ಫೆ ತನ್ನ ತಲೆದೋರದಂದು
ಋಷಿಗಳಾಶ್ರಯ ಲೋಕದಲ್ಲಿ ಹರಿಯದಂದು
ಅಂದು ಬಸವನಿದ್ದ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ./1
ಅನುದಿನಂಗಳೆಂಬವು ಪ್ರಣತೆಯಾಗಿ,
ವರುಷವೆಂಬವು ಬತ್ತಿಯಾಗಿ,
ಜೀವಜಾತಿಯ ಬೆಳಗ ಬೆಳಗಿನಲರಿಯಬೇಕು.
ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು.
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು.
ಎಣ್ಣೆಯೆಂಬ ಜವ್ವನ ಸವೆಯದ ಮುನ್ನ,
ಬೆಳಗು ಕತ್ತಲೆಯಾಗದ ಮುನ್ನ
ರೇಕಣ್ಣಪ್ರಿಯ ನಾಗಿನಾಥಿಾ, ಬೆಳಗ ಬೆಳಗಿನಲರಿಯಬೇಕು. /2
ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟು
ಮುಖಕ್ಕೆ ಹೊತ್ತಿಗೊಂದು ಪರಿಯ ಬಚ್ಚಣೆಯನಿಕ್ಕಿ
ಮತ್ತದನು ತಲೆಯಲ್ಲಿ ಹೊತ್ತು, ತಪ್ಪಿ ಹೆಜ್ಜೆಯನಿಕ್ಕಿ ಆಡುತ್ತಿದ್ದ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಹೊತ್ತುಹೋಗದ ಬಹುರೂಪವ./3
ಅರೆಯ ಆಲಯದಲ್ಲಿ ಕರಿಗೊಳಿಸುವ ಶ್ರವಣವೆ ಮೇಲಹ ಆಕಾಶವನಪ್ಪಲು
ಉಲುಹು ನಿರ್ಯಾತವಾಗಿ ಚಿತ್ತ ಸಮಾಧಾನವನೈದಲು
ಕಾಲ ಕರ್ಮ ಭವಾರಣ್ಯವ ಗೆಲುವುದು
ಎನಗರಿದೇನಯ್ಯ, ರೇಕಣ್ಣಪ್ರಿಯ ನಾಗಿನಾಥಾ./4
ಅಲ್ಲಿಯಬಹುರೂಪ ಇಲ್ಲಿಗೆ ಬಂದಿತ್ತು.
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?
ಎನ್ನ ಬಹುರೂಪ ಬಲ್ಲವರಾರೋ ?
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ./5
ಆಡಿದೆನೈವರನೊಡಗೂಡಿ.
ಮಾಡಿದೆ ಶರ್ವನ ಸಂಗವ.
ನೋಡಿದೆ ನಾ ನೀನೆಂಬ ಭೇದವಳಿದು.
ಕೂಡಿದೆ ಕೇಡಿಲ್ಲದ ಕೂಟವ.
ಆಟ ಮಾಯಿತ್ತು, ನೋಟ ತೀರಿತ್ತು
ರೇಕಣ್ಣಪ್ರಿಯ ನಾಗಿನಾಥಾ./6
ಆಡುವಡೆ ಸದಾಚಾರಿಗಳ ಕೂಡೆ ಆಡುವದು.
ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು.
ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವದು.
ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ
ರೇಕಣ್ಣಪ್ರಿಯ ನಾಗಿನಾಥಿಾ. /7
ಆದಿಶುದ್ಧ ಆಚಾರಲಿಂಗವೆನ್ನುತ್ತಿರ್ಪರೆಲ್ಲರು
ಅನಾದಿಯ ಲಿಂಗದ ಭೇದವನರಿಯರಾಗಿ,
ನಾಸಿಕಪುಟದ ಆಶ್ರಯದಲ್ಲಿ ಲಿಂಗವನರಿಯರಾಗಿ.
ಕೆಲಬರಿಗೆ ಲಿಂಗವು ಹಲಬರಿಗೆ ದೂಷಣೆಯ ಮಾಡಿ
ಹೋದ ಲಿಂಗವನರಿಯರಾಗಿ ದೂಷಣೆ ಪಥ್ಯವಾಗಿ,
ಮನದಾಶ್ರಯಕ್ಕೆ ತಂದಾತ, ರೇಕಣ್ಣಪ್ರಿಯ ನಾಗಿನಾಥ.
ಬಸವಣ್ಣನಿಂದ ಬದುಕಿದೆ./8
ಇಂದು ಬಂದ ಬಹುರೂಪವ ನೋಡಿರಯ್ಯಾ.
ಗತಿಯ ಹೊದ್ದದೆ, ಮತಿಯ ಹೊದ್ದದೆ, ಸ್ಥಿತಿಯ ಹೊದ್ದದೆ
ಸ್ಥಾನವ ಹೊದ್ದದೆ, ಐವರು ಕಟ್ಟಿದ ಕಟ್ಟಳೆಯ ಮೀರಿ
ನಾನಾಡುವೆ ಬಹುರೂಪವ.
ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆ./9
ಇನ್ನಾಡುವೆ ಜಂಗಮ ಬಹುರೂಪ,
ಅಲ್ಲಮನಂತೆ ಆಡುವೆ ಬಹುರೂಪ.
ಅಜಗಣ್ಣನಂತೆ ಆಡುವೆ ಬಹುರೂಪ.
ಮುಖವಾಡದಯ್ಯಗಳಂತೆ ಆಡುವೆ ಬಹುರೂಪ.
ಪುರುಷಾಂಗಣವ ಮೆಟ್ಟಿ ಆಡುವೆ ಬಹುರೂಪ.
ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ./10
ಇನ್ನಾಡುವೆ ಜಂಗಮ ಬಹುರೂಪ,
ಕಲ್ಯಾಣವೆಲ್ಲಾ ಅರಿಯಬೇಕೆಂದು.
ಎನ್ನ ಬಹುರೂಪ ಕಾಮ ಹೊಯ್ದುಕೊಂಡಿಯೆಂದಡೆ
ಪ್ರಸಾದವ ಮಾಡಿಕೊಟ್ಟಡೆ
ಇದು ಬಸವನ ಪ್ರಸಾದವೆಂದು ಕೈಕೊಂಡೆ ಕಾಣಾ.
ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ./11
ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ
ಎಂಟ ಬಿಟ್ಟು ಒಂದೇ ನೇಣಿನಲ್ಲಿ ಹತ್ತಿ ಆಡುತ್ತಿರಲಾಗಿ
ತಟ್ಟೆ ಮುರಿದು, ಮೆಟ್ಟಿನಿಂದ ದಾರ ಕಿತ್ತು,
ನೋಡುವರ ದೃಷ್ಟಿ ಬಟ್ಟಬಯಲು
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಆಟವನಾಡಿದ ಅರಿದಾಗಿ. /12
ಎಂಬತ್ತುನಾಲ್ಕುಲಕ್ಷ ಬಹುರೂಪ
ಚಂದ ಚಂದದಲ್ಲಿ ಆಡಿ
ಬಂಧುಗಳ ಮೆಚ್ಚಿಸಬಂದೆ.
ಅವರು ಬಹುರೂಪದಂದವನರಿಯರು.
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಹುರೂಪದಿಂದ ವಿಚ್ಫಂದವಾಯಿತ್ತು./13
ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ
ಬಸವಣ್ಣ.
ನಾದವನರ್ಪಿಸಿದಲ್ಲಿ ಅರ್ಪಿತಗೊಂಡಾತ
ಬಸವಣ್ಣ.
ನಾ ಹೆಂಡಿರನರ್ಪಿಸುವಲ್ಲಿ ಅರ್ಪಿತಗೊಂಡಾತ
ಬಸವಿದೇವ.
ಎನ್ನ ಧನ ಕೆಟ್ಟಿತ್ತು ಬಸವನಿಂದ, ಮನ ಕೆಟ್ಟಿತ್ತು
ಬಸವನಿಂದ.
ಎನ್ನ ಗೋತ್ರ ನಿವಾರಣವಾಯಿತ್ತು
ಬಸವನಿಂದ.
[ವೇಳವಾಳಿ] ನಾ ಹೆಣ್ಣನರ್ಪಿತ ಮಾಡಿದಲ್ಲಿ
ಒಪ್ಪುಗೊಂಡಾತ ಬಸವಣ್ಣ.
ಕಡುಗಲಿ ತಮ್ಮನನಿರಿಯಲು
ಮುರಿಯಿತ್ತು ಅಲಗು ಬಸವನಿಂದ.
ಎನ್ನೊಡಲಲಿರ್ದ ಏಳು ಮಾನಿಸಸ್ತ್ರೀಯರು
ಏಳಲಾರದೆ ಹೋದರು ಬಸವನಿಂದ.
ನಾ ಕೆಟ್ಟೆ ಕಾಣಾ, ರೇಕಣ್ಣಪ್ರಿಯನಾಗಿನಾಥಾ
ಬಸವನಿಂದ ಬದುಕಿತೀ ಲೋಕವೆಲ್ಲಾ./14
ಎಲ್ಲರಾಟದಂತಲ್ಲ ಎನ್ನಾಟ,
ಕರದಾಧಾರದಲಪ್ಪಿ, ಪಂಚಾಮೃತ ಮಂತ್ರವನುಂಡಾಡಿದೆ.
ಆ ದೇಶ ಈ ದೇಶವೆಂತೆನ್ನದೆ
ಪರದೇಶದಲಾಡಿ ಪರದೇಶಿಯಾದೆನು.
ಕಾಲನ ಮೇಲೆ ನಿಂದು,
ಕಪಾಲದ ಭಿಕ್ಷವ ಹಿಡಿದು
ಹರಿಯ ಶೂಲದಲೆತ್ತಿಯಾಡಿದೆ.
ಹರಶರಣರಾಧಾರದ ಬಸವನ ಶಿಶು ನಾನು ಕಾಣಾ
ರೇಕಣ್ಣಪ್ರಿಯ ನಾಗಿನಾಥಾ./15
ಎಲ್ಲಾ ಜಗಂಗಳೊಳಗಿರ್ದಡೇನು
ಶಿವನು ಜಗದಂತಹನಲ್ಲ.
ಜಗವ ತನ್ನೊಳಗಿಕ್ಕಿ ತಾ ಹೊರಗಿರ್ದಹೆನೆಂದಡೆ
ಬ್ರಹ್ಮಾಂಡದಂತಹನೇ ? ಅಲ್ಲ.
ಆಕಾಶದೋಪಾದಿಯಲ್ಲಿ ಸರ್ವಲೋಕದ
ಒಳ ಹೊರಗೆ ಮೂಲ ಚೈತನ್ಯ ತಾನಾಗಿ, ಆಧಾರವಾದ
ನಮ್ಮ ರೇಕಣ್ಣಪ್ರಿಯ ನಾಗಿನಾಥ /16
ಒಂದರಲ್ಲಿ ಬಂದು, ನಾಲ್ಕರಲ್ಲಿ ಆಡಿ
ಒಂದರಲ್ಲಿ ಅಡಗಿ, ಮೂರರಲ್ಲಿ ಕೂಡಿ
ಎಂಟರಲ್ಲಿ ಕಂಟಕವಾಯಿತ್ತು.
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಪುರೆಹರೆ ಎನುತಿರ್ದೆನು./17
ಒಂಬತ್ತು ಇಟ್ಟಿಯ ನಡುವೆ ಒಂದು ಕತ್ತಿಯ ನಟ್ಟು
ತುಟ್ಟತುದಿಯ ಮೆಟ್ಟಿ ಆಡಲಾಗಿ,
ಆ ಕತ್ತಿ ಇಟ್ಟಿಯ ತಾಗಿ, ಆ ಇಟ್ಟಿ ನಿಷ್ಠೆವಂತರ ತಾಗಿ
ಸತ್ತರೆಲ್ಲರು ಆಟಕ್ಕೆ ಮೊದಲೆ
ರೇಕಣ್ಣಪ್ರಿಯ ನಾಗಿನಾಥನಲ್ಲಿ./18
ಒಡೆಯರ ಸಹಪಙ್ತೆಯಲ್ಲಿ ಪರಿಯಾಣ
ಅಡ್ಡಣಿಗೆಯನಿರಿಸಿಕೊಂಡು ಉಂಬ ಸಮಗ್ರಾಹಕನಲ್ಲ.
ನಿಮ್ಮ ಶರಣರ ಪಾದೋದಕಕ್ಕಲ್ಲದೆ ಕೈಯಾನೆ.
ನಿಮ್ಮ ಶರಣರ ಪ್ರಸಾದಕ್ಕಲ್ಲದೆ ಬಾಯ್ದೆರೆಯೆ.
ನಿಮ್ಮ ಲಾಂಛನಧಾರಿಯ ಮನೆಯ ಪ್ರತಿಭೃತ್ಯನಾಗಿರಿಸಯ್ಯಾ ನೀನೆನ್ನ
ರೇಕಣ್ಣಪ್ರಿಯ ನಾಗಿನಾಥಾ./19
ಕಲ್ಲ ಒಳಗಣ ಕಿಚ್ಚಿಂಗೂ ಬೂದಿಯಿಲ್ಲದಂತಿರಿಸಿದೆ
ಅಯ್ಯಾ ಎನ್ನ, ಲಿಂಗದೊಳಗೆ.
ಗಾಳಿಗಂಧ ಕೂಡಿದಂತಿರಿಸಯ್ಯಾ ಎನ್ನ,
ಲಿಂಗದೊಳಗಂಗವನು.
ರೇಕಣ್ಣಪ್ರಿಯ ನಾಗಿನಾಥಾ, ನಿಮ್ಮ ಒಲವಿನೊಳಗಣ ನಿಲವು
ಸೊಡರ ಬೆಳಗಿನಲಡಗಿದ ಎಣ್ಣೆಯಂತೆ ಇರಿಸಯ್ಯಾ,
ಎನ್ನ ಲಿಂಗದೊಳಗಂಗವನು. /20
ಕಳ್ಳನ ಕೈಯಲ್ಲಿ ಒಂದು ಒಳ್ಳಿಹ ರತ್ನವ ಕಂಡಡೆ
ಎಲ್ಲರೂ ಬಂದು ತಲೆವಿಡಿವರಯ್ಯಾ.
ಆ ರತ್ನವ ರತ್ನವ್ಯವಹಾರಿ ಕೊಟ್ಟು ಕೊಂಡಡೆ
ಆರೂ ಬಾಯಲೆತ್ತಲಮ್ಮರು.
ಶೈವ ಗುರುವಿನ ಕೈಯಲ್ಲಿ ಸಾಹಿತ್ಯವಾದ ಲಿಂಗವನು
ವೀರಶೈವ ಗುರುವಿನ ಕೈಯಲ್ಲಿ ಕೊಟ್ಟು ಮರಳಿ ಕೊಂಡಡೆ
ಆತ ಇಹಲೋಕ ಪೂಜ್ಯನು, ಪರಲೋಕ ಪೂಜ್ಯನು.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ
ತಪ್ಪದು ರೇಕಣ್ಣಪ್ರಿಯ ನಾಗಿನಾಥಾ./21
ಕಾಮನ ಮಂದಿರದಡವಿಯೊಳಗೆ
ಶುಕ್ಲಶೋಣಿತವೆಂಬ ಮಡಕೆಯ ಮಾಡಿ
ಮೂತ್ರ ಶ್ಲೇಷ್ಮ ಅಮೇಧ್ಯವೆಂಬ ಪಾಕದ್ರವ್ಯಂಗಳ
ಮಡಕೆಯಲ್ಲಿ ನಿಶ್ಚಯಿಸಿ
ಆ ಮಡಕೆಯನೊಡೆದಾ[ಗಲೆ ಭಕ್ತ] ಕಾಣಾ.
ರೇಕಣ್ಣಪ್ರಿಯ ನಾಗಿನಾಥಾ
ಬಸವಣ್ಣನಿಂದ ಬದುಕಿದೆನು./22
ಕುಲವ ಕೂಡದೆ ಕೋಪವಡಗಿ
ಅನ್ಯಹೇಸಿಕೆ ಮತ್ತೆ ಐಕ್ಯವಾದ ನಿರುತ ಭರಿತದ ಪರಮಸುಖ
ಎನಗೆಂದಪ್ಪುದೊ?
ಕಾಯದಂದುಗ ಬಿಟ್ಟು ನಿರಾಸೆಯಲ್ಲಿ ನೆರೆ ಸಲು[ಹಿ]ಂದ
ಎನ್ನ ನಚ್ಚಿನ ಲಿಂಗ ಮೆಚ್ಚಿನ ಘನಕ್ಕೆ ಘನಲಿಂಗವಾಗಿ
ರೇಕಣ್ಣಪ್ರಿಯ ನಾಗಿನಾಥನಯಸವಿನೊಲವೆನಗಪ್ಪುದೆಂದೋ ?/23
ಕೈಯ ಮರದು ಕಾದುವ ಅಂಕವದೇನೊ ?
ಭಾವ ಮರದು ನೋಡುವ ನೋಟವದೇನೊ ?
ಭಯವ ಮರದು ಮಾಡುವ ಭಕ್ತಿಯದೇನೊ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು
ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ./24
ಗಾರುಡಿಗನ ವಿಷವಡರಬಲ್ಲುದೆ ?
ಸೂರ್ಯನ ಮಂಜು ಮುಸುಕಬಲ್ಲುದೆ ?
ಗಾಳಿಯ ಮೊಟ್ಟೆಯ ಕಟ್ಟಬಹುದೆ ?
ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ?
ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾದಾ ?/25
ಗುರು ಎನ್ನ ಮುಟ್ಟಿ ಗುರು ಶುದ್ಧವಾದನಯ್ಯ.
ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ.
ಜಂಗಮ ಎನ್ನ ಮುಟ್ಟಿ ಜಂಗಮ ಶುದ್ಧವಾದನಯ್ಯ.
ಪ್ರಸಾದ ಎನ್ನ ಮುಟ್ಟಿ ಪ್ರಸಾದ ಶುದ್ಧವಾಯಿತ್ತಯ್ಯ.
ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ
ರೇಕಣ್ಣಪ್ರಿಯ ನಾಗಿನಾಥಾ./26
ಘನವ ನೆನವ ಮನಕ್ಕೆ ತಕ್ಕ ಕಿವಿಯಾದವಾಗಿ
ಗುರುವಚನ ರತಿಸುಖಸಾರಾಯಸಂಬಂಧದನುಭಾವಿಯಾಗಿ
ಶರಣಸತಿ ಗರ್ಭವಾದಳು.
ಇರುಳಿಲ್ಲ ಹಗಲಿಲ್ಲ, ನವಮಾಸಂಗಳನರಿಯಳು.
ರೇಕಣ್ಣಪ್ರಿಯ ನಾಗಿನಾಥ ಅಯೋನಿ ಸಂಭವನಾಗಿ
ಪ್ರಸೂತಕಾಯನಲ್ಲ. /27
ಚಿತ್ತಾವಧಾನವೆಂದಾಡಬಂದೆ, ಸತ್ಯಶರಣರ ಮುಂದೆ.
ಶುಕ್ಲ ಶೋಣಿತವೆಂಬ ಬಾಯಿ ಕಟ್ಟೆಯ ಮೆಟ್ಟಿ
ತುಟ್ಟತುದಿಯನೇರಿ ಕೈಯ ಬಿಟ್ಟಾಡುತ್ತಿದ್ದೇನೆ.
ಮೆಟ್ಟಿದ ಹೆಜ್ಜೆಯ ಮೆಟ್ಟದೆ,
ನೋಡುವ ನಿಷ್ಠೆವಂತರ ದೃಷ್ಟಿ ಪಲ್ಲಟವಾಗದೆ
ನೋಡದಿರ್ದಡೆ ಲಾಗು ಎತ್ತ ಹೋಯಿತ್ತೊ
ರೇಕಣ್ಣಪ್ರಿಯ ನಾಗಿನಾಥಿಾ ?/28
ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಂತಹ
ಗುರುವಿನ ಕೈಯಲ್ಲಿ
ಲಿಂಗಧಾರಣವ ಮಾಡಿಸಿಕೊಳಲಾಗದು.
ಆತನ ಪಾದತೀರ್ಥ ಪ್ರಸಾದವ ಕೊಳಲಾಗದು.
ಅಥವಾ ಪ್ರಮಾದವಶದಿಂದ ಲಿಂಗಧಾರಣವ
ಮಾಡಿಸಿಕೊಂಡಡೆಯೂ ಮಾಡಿಸಿಕೊಳ್ಳಲಿ.
ಆ ಗುರುವನೆ, ಜಂಗಮದ ಪಾದತೀರ್ಥ ಪ್ರಸಾದವ
ಕೊಂಬ ಹಾಂಗೆ ಸದಾಚಾರಿಯ ಮಾಡುವದು.
ಶಿಷ್ಯನು, ಆ ಗುರು ಜಂಗಮದ
ಪಾದತೀರ್ಥ ಪ್ರಸಾದವ ಕೊಳ್ಳದಿರ್ದಡೆ
ಮತ್ತೆ ಲಿಂಗವನು ಮರಳಿ ಜಂಗಮದ ಪಾದತೀರ್ಥ ಪ್ರಸಾದವ
ಕೊಂಬಂತಹ ಜಂಗಮದ ಕೈಯಲ್ಲಿ ಕೊಟ್ಟು ಕೊಳಬೇಕು.
ಜಂಗಮಲಿಂಗಪ್ರಸಾದವ ಕೊಳದಂತಹ
ಜಂಗಮದ ಕೈಯಲ್ಲಿ ಪ್ರಸಾದವ ಕೊಳಲಾಗದು.
ಆ ಜಂಗಮ ಭಕ್ತನ ಮಠಕ್ಕೆ ಬಂದು
ಪಾದತೀರ್ಥ ಪ್ರಸಾದವ ಕೊಳದಂತಹ ಜಂಗಮವಾದಡೂ
ಅವರಲ್ಲಿ ಪಾದತೀರ್ಥ ಪ್ರಸಾದವ ಕೊಳಲಾಗದು.
ಅದೇನು ಕಾರಣವೆಂದಡೆ : ಜಂಗಮದ ಪಾದತೀರ್ಥ ಪ್ರಸಾದವ ಕೊಳದಂತಹ
ಗುರುವಿಂಗೆಯೂ ಲಿಂಗಕ್ಕೆಯೂ ಜಂಗಮಕ್ಕೆಯೂ
ಮುಕ್ತಿಯಿಲ್ಲ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ. /29
ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ
ಕರ್ಮಿಯ ಮಾತ ಕೇಳಲಾಗದು. ಅದೆಂತೆಂದಡೆ : ಅದು ಪವಿತ್ರವಾದ ಕಾರಣ ಪವಿತ್ರವೆನಿಸುವ ಮೂರ್ತಿ
ಮಹಾಜಂಗಮದ ಪಾದತೀರ್ಥ ಪ್ರಸಾದವ
ಲಿಂಗಕ್ಕೆ ಸಮರ್ಪಿಸಿ
ಪ್ರಸಾದಭೋಗೋಪಭೋಗಿಯಾಗಿರ್ಪ ಭಕ್ತನೆ ಬಸವಣ್ಣ.
ಅದಲ್ಲದೆ ಅಪವಿತ್ರವ ಲಿಂಗಕ್ಕೆ ಸಮರ್ಪಿಸಲಾಗದು.
ಅದೆಂತೆಂದಡೆ-ಸಾಕ್ಷಿ: ಜಂಗಮಂ ಚ ಪ್ರಸಾದಂತು ನಿವೇದ್ಯಂ ಚ ಸಮರ್ಪಣಂ |
ಪ್ರಸಾದಿ ಸತ್ಯ ಶುದ್ಧಾತ್ಮ ಪ್ರಸಾದಿಸ್ಥಲಮುತ್ತಮಂ ||
ಇಂತಲ್ಲದೆ ಅಪವಿತ್ರದ್ರವ್ಯವ,
ಉಚ್ಫಿಷ್ಟ ಚಾಂಡಾಲ ಕಾಯವ ಮುಟ್ಟಿ
ಪವಿತ್ರಲಿಂಗಕ್ಕೆ ಅರ್ಪಿಸಿ ಭುಂಜಿಸುವ
ಚಾಂಡಾಲನ ಮುಖವ ನೋಡಲಾಗದು,
ರೇಕಣ್ಣಪ್ರಿಯ ನಾಗಿನಾಥಾ /30
ಜಂಗಮದನುವನರಿಯದಿರ್ದಡೆ
ಲಿಂಗ ತಮತಮಗೆಲ್ಲಿಯದೊ ?
ಲಿಂಗವಿಪ್ಪ ಸಜ್ಜೆಯೆಲ್ಲಾ ಜಂಗಮದ ಪ್ರಾಣವಲ್ಲವೆ ?
ಲಿಂಗವು ರೇಕಣ್ಣಪ್ರಿಯ ನಾಗಿನಾಥ
ಜಂಗಮದ ಕಾಯವ ತೊಟ್ಟುಕೊಂಡು ಸುಳಿವನಾಗಿ./31
ಜಂಗಮಪ್ರಸಾದವರಿಯದ ಗುರುವಿನ ಕೈಯಲ್ಲಿ
ಲಿಂಗಸಾಹಿತ್ಯವಾಗಲಾಗದಯ್ಯಾ.
ಆದಡೆ ಆಗಲಿ, ಗುರುವನೆ ಸದಾಚಾರಿಯ ಮಾಡೂದು.
ಶಿಕ್ಷಾಗುರು ಜಂಗಮದಲ್ಲಿ ಪ್ರಸಾದವ ಕೊಂಡೆಹೆನೆಂದಡೆ
ಆ ಜಂಗಮ ಜಂಗಮಪ್ರಸಾದಿಯಲ್ಲದಿರ್ದಡೆ
ಆ ಪ್ರಸಾದವ ಮುಟ್ಟಲಾಗದು.
ರೇಕಣ್ಣಪ್ರಿಯ ನಾಗಿನಾಥಲಿಂಗವು
ಆಗುಹೋಗನರಿಯನಾಗಿ
ಬಸವಣ್ಣನ ಕೂಡಿ ಆಡಿ ಪ್ರಸಾದಿಯಾದನಾಗಿ
ಇತ್ತ ಬಾ ಎಂದು ಕೈವಿಡಿದು ತೆಗೆದುಕೊಂಬುದು. /32
ತೊಗಲ ಸೀರೆಯ ತೆರೆಯ ಹಿಡಿದು
ಬಲು ಎಲುವಿನ ಗಳುವಿನಲ್ಲಿ
ನರವಿನ ಭೀಮಗಟ್ಟಂ ಕಟ್ಟಿ
ತೆರೆ ನಿಂದಿತ್ತು ಜವನಿಕೆಯ ಮರೆಯಲ್ಲಿ.
ಬಂದು ನಿಂದು ಜಜ್ಜರೆ ಪುರೆ[ಹರೆ]ಯಾಯಿತ್ತು.
ಹೋಯಿತ್ತು ಎಂಬ ಬಹುರೂಪಮಂ ತೊಟ್ಟು
ರೇಕಣ್ಣಪ್ರಿಯ ನಾಗಿನಾಥಾ,
ಭಲರೆ ಧರುರೆ ಎನುತಿರ್ದೆನು./33
ನನಗೆ ನಾನೆ ಗುರುವಾದೆನಯ್ಯಾ.
ನನಗೆ ನಾನೆ ಲಿಂಗವಾದೆನಯ್ಯಾ.
ನನಗೆ ನಾನೆ ಜಂಗಮವಾದೆನಯನ್ಯಾ.
ನನಗೆ ನಾನೆ ಪ್ರಸಾದವಾದೆನಯ್ಯಾ.
ನನಗೆ ನಾನೆ ಭಕ್ತನಾದೆನಯ್ಯಾ.
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಆಗುಹೋಗನರಿಯೆನಯ್ಯಾ./34
ನಿಃಕಲಶಿವ ತಾನೆ ಗುರುರೂಪವಾಗಿ
ಕೊಂಡಾಡಿದನಯ್ಯ ಬಸವಣ್ಣನು.
ಆ ಬಸವಣ್ಣನಿಂದ ಬಹುರೂಪ ಧರಿಸಿ
ಹಲವಾಕಾರವನಾಡಿ
ಸಾಕಾರದಲ್ಲಿ ಸನುಮತನಾದೆನು.
ನಿರಾಕಾರದಲ್ಲಿ ನಿರತವಾದ ರೇಕಣ್ಣಪ್ರಿಯ ನಾಗಿನಾಥಾ
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಲಿರ್ದೆನು./35
ನಿಃಪತಿ ಬಂದು ಒಳಕೊಂಡಲ್ಲಿ
ನಿರಾಶ್ರಯ ಬಂದು ಹೊದಕೆಯಾದಲ್ಲಿ
ನಿರಾಲಂಬವಾಯಿತ್ತಲ್ಲಾ ಎನ್ನ ಬಹುರೂಪು.
ಎನ್ನ ಬಹುರೂಪಕ್ಕೆ ಪ್ರಾಣಲಿಂಗ ಬಸವ ಕಾಣಾ.
ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆ /36
ಪದ್ಮಾಸನದಲ್ಲಿ ಕುಳ್ಳಿರ್ದು ಆಧಾರಮಂ ಬಲಿದು
ವಾಯುವ ಊಧ್ರ್ವಕ್ಕೆ ತಿದ್ದಿ
ಮನ ಪವನ ಬಿಂದುವ ತ[ರ]ಹರವಂ ಮಾಡಿ
ಷಡಾಧಾರ ಕಮಲವನೂಧ್ರ್ವಮುಖವಂ ಮಾಡಿ
ಮೇಲಣ ಸಹಸ್ರಕಮಲಮಧ್ಯದೊಳಿಪ್ಪ ಜ್ಯೋತಿರ್ಲಿಂಗದಲ್ಲಿ
ಮನವ ನಿಲಿಸಿ, ನೆನೆನೆನೆದು
ಕೀಟಭೃಂಗನ್ಯಾಯದಂತಪ್ಪುದೆ ಯೋಗ
ರೇಕಣ್ಣಪ್ರಿಯ ನಾಗಿನಾಥ./37
ಪ್ರಣವಮಂತ್ರರೂಪ ಪರಶಿವನ ಚೈತನ್ಯ
ಎಲ್ಲಾ ಮಂತ್ರಂಗಳಿಗೆ ಚೈತನ್ಯವು.
ಎಲ್ಲಾ ತಂತ್ರಂಗಳಿಗೆ ಚೈತನ್ಯವು.
ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ |
ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ ||
ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು.
ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮಥ್ರ್ಯವು.
ಅದು ಕಾರಣ, ಮಂತ್ರವೆ ಅವಯವವು
ರೇಕಣ್ಣಪ್ರಿಯ ನಾಗಿನಾಥಂಗೆ. /38
ಬಂದ ಬಹುರೂಪದಲ್ಲಿ ಸಂದಿಲ್ಲದೆ ಆಟವನಾಡುತ್ತ
ಬಂದ ಬಂದವರ ಮೆಚ್ಚಿಸುತ್ತ
ಅವರವರಂದಕ್ಕೆ ಕೊಂಡಾಡಿ, ಬಂದುದ ಕೈಕೊಂಡೆ
ರೇಕಣ್ಣಪ್ರಿಯ ನಾಗಿನಾಥನಲ್ಲಿ./39
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ : ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು.
ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ
ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ.
ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು.
ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ.
ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು.
ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ.
ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ.
ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ.
ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ.
ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ.
ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ./40
ಬಸವಣ್ಣನಿಂದ ಶುದ್ಧಪ್ರಸಾದಿಯಾದೆ.
ಚನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆ.
ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆ.
ಇವರೆಲ್ಲರ ಪ್ರಸಾದಿಯಾಗಿ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಸೊಬಗ ಮೆರೆದೆ/41
ಬಾಯೊಳಗಿದ್ದ ರುಚಿಯನುಗುಳಿ ನುಂಗಲೇಕೇ ?
ಕಣ್ಣಿನೊಳಗಿದ್ದ ರೂಪನಗಲಿ ನೋಡಲುಂಟೆ ?
ಕೈಯೊಳಗಿದ್ದ ವಸ್ತುವ ಬಿಟ್ಟು ಹಿಡಿಯಲುಂಟೆ ?
ತನ್ನೊಳಗಿದ್ದ ಘನವ ಭಿನ್ನವಿಟ್ಟರಸುವಡೆ.
ರೇಕಣ್ಣಪ್ರಿಯ ನಾಗಿನಾಥಾವಣ್ಣನಿಂದ ಬುದುಕಿತೀ ಲೋಕವೆಲ್ಲ. /42
ಬಿತ್ತೆತ್ತ ಮುಂತಾಗಿ ಬಿತ್ತಿದಡೇನೋ ?
ಬೀಜ ನಿರಾಳದ ಬೆಳಸು.
ಶರಣಚಾರಿತ್ರವೆಂತಿರ್ದಡೇನೋ ?
ರೇಕಣ್ಣಪ್ರಿಯ ನಾಗಿನಾಥನ ಶರಣರ
ಅವರಿವರೆಂದಡೆ ನಾಯಕನರಕ. /43
ಭಕ್ತದೇಹಿಕದೇವನೆಂದು ಅಂಜದ ಮತವದೇನಪ್ಪುದೊ ?
ಭಯವಿಲ್ಲದ ಭಕ್ತಿ, ದಯವಿಲ್ಲದ ಶೀಲ
ಗುಣವಿಲ್ಲದ ನಂಟು ಮುಂದೇನಪ್ಪುದೊ ?
ಭಯವ ಮರೆದು, ಲಿಂಗದೊಡನೆ ಸಹಭೋಜನ ಮಾಡಿದಡೆ
ಪಂಚಮಹಾಪಾತಕ ತಪ್ಪದು. ಅದೆಂತೆಂದಡೆ : ಗುರುವ ಬಿಟ್ಟು ಲಿಂಗವನೊಲಿಸಿಹೆನೆಂದಡೆ
ಗುರು ಲಿಂಗ ಎರಡೂ ಇಲ್ಲದೆ ಹೋಹವು.
ಗುರುವೆಂಬುದೆ ಭಯಭಕ್ತಿ, ಲಿಂಗವೆಂಬುದೆ ಶಿವನು.
ಈ ಭಯಭಕ್ತಿಯಿಲ್ಲದೆ ಶಿವನನೊಲಿಸಬಾರದು
ರೇಕಣ್ಣಪ್ರಿಯ ನಾಗಿನಾಥಾ./44
ಭಕ್ತರ ಬರವಿಂಗೆ ಮಂಚವನಿಳಿಯದ ಕಾರಣ
ಧಮ್ಮು ಧಿಮ್ಮನೆ ಬೆನ್ನಬಡಿದು ಅವರಟ್ಟುಗೆಲಸಕ್ಕೆ ಹೋಗೆನಾಗಿ
ಎನ್ನ ತೊಡೆಯ ಕೊಯ್ದುಕೊಂ[ಬೆ]. ರೇಕಣ್ಣಪ್ರಿಯ ನಾಗಿನಾಥನ
ಮಹಾಮನೆಯಲ್ಲಿ ಕಾಯದಂಡ ಕಲಕೇತ [ನಾನು]./45
ಭವಭಾರಿ ಬಂಡಿ ಎತ್ತಿನ ಕಣ್ಣಿ ಹರಿದ ಕಾರಣ
ನಿನ್ನ ಅರಿವಿನ ಬೆಳಗು ಗುರಿ ತಾಗಿ ಬಿದ್ದಡೂ
ಎತ್ತು ಅತ್ತ ಹೋಗಿಯೆ ಮರಳಿತು.
ಆ ಹೆಜ್ಜೆಯನು ಏಕೆ ಇಕ್ಕರೊ ?
ಎತ್ತ ಎತ್ತನೆ ಹೊತ್ತು ಮೀರಿ ಓಡಿತ್ತಾಗಿ
ಹಿಂದೆ ಅರಸುವರಿಲ್ಲ.
ರೇಕಣ್ಣಪ್ರಿಯ ನಾಗಿನಾಥನ ಗೊಗ್ಗನೆತ್ತಿಗೆ ಹಗ್ಗವಿಲ್ಲ./46
ಮಹಾಕಾಲ ಕಲ್ಪದಲ್ಲಿ, ಮಹಾಪ್ರಮಥರ ಕಾಲಾಗ್ನಿಯಲ್ಲಿ
ನರರು ಬೆಂದು ಸುರರುಗಳ ನೆಮ್ಮುವರು.
ಸುರರುಗಳು ಬೆಂದು ಋಷಿಗಳ ನೆಮ್ಮುವರು.
ಋಷಿಗಳು ಬೆಂದು ಬ್ರಹ್ಮರುಗಳ ನೆಮ್ಮುವರು.
ಬ್ರಹ್ಮರುಗಳು ಬೆಂದು ವಿಷ್ಣುಗಳ ನೆಮ್ಮುವರು.
ವಿಷ್ಣುಗಳು ಬೆಂದು ರುದ್ರರುಗಳ ನೆಮ್ಮುವರು.
ರುದ್ರರುಗಳು ಬೆಂದು ಈಶ್ವರರುಗಳ ನೆಮ್ಮುವರು.
ಈಶ್ವರರುಗಳು ಬೆಂದು ಸದಾಶಿವರುಗಳ ನೆಮ್ಮುವರು.
ಸದಾಶಿವರುಗಳು ಬೆಂದು ಪರಮೇಶ್ವ[ರ]ರುಗಳ ನೆಮ್ಮುವರು.
ಪರಮೇಶ್ವರರುಗಳು ಬೆಂದು ಪಂಚಭೂತಂಗಳು ಸಹಿತ
ಭಿಕ್ಷಭೈರವನಂತಾಗಿ ಬೆಂದು ಮಾಯೆಯ ನೆಮ್ಮುವರು.
ಮಾಯೆ ಮನವ ನೆಮ್ಮಿದೊಡಾ ಮನ ನೆಮ್ಮುವದಕ್ಕೆ
ಎರವಿಲ್ಲದೆ ಬೆಂದು, ಬಾಯಾರಿತು ಕಾಣಾ
ರೇಕಣ್ಣಪ್ರಿಯ ನಾಗಿನಾಥಾ./47
ಮಾನವಲೋಕದವರೆಲ್ಲರೂ ಮರದಲಿಂಗವ ಪೂಜಿಸುವರಯ್ಯಾ.
ಮರನ ಸಿಂಹಾಸನದ ಮೇಲೆ ಗಂಗೆವಾಳುಕಸಮಾರುದ್ರರೆಲ್ಲರೂ
ಹಿಂದಣ ಋಷಿಗಳು ದೇವತ್ವಗುಣವನರಿಯರಾಗಿ ಅಂಗವಿಲ್ಲವರಿಗೆ.
ವರಮುಖ ಶಾಪಮುಖರಾಗಿ ಲಿಂಗವಿಲ್ಲವರಿಗೆ.
ಧ್ಯಾನದಿಂದ ಲಿಂಗವ ಕಂಡೆನೆಂದೆಂಬರು.
ಮೌನದಿಂದ ಲಿಂಗವ ಕಂಡೆನೆಂದೆಂಬರು.
ಅನುಷ್ಠಾನದಿಂದ ಲಿಂಗವ ಕಂಡೆನೆಂದೆಂಬರು.
ಜಪ ತಪ ಸಮಾಧಿ ಸಂಧ್ಯಾ ನಿತ್ಯನೇಮ ಹೋಮ ಇವೆಲ್ಲವ ಮಾಡಿದವರೆಲ್ಲರೂ
ಕೆಯ್ಯ ಬೆಳೆದ ಒಕ್ಕಲಿಗನಂತೆ ಫಲದಾಯಕರಾದರಯ್ಯ.
ಇವೆಲ್ಲವನೂ ಅಲ್ಲವೆಂಬೆ, ಸೋಹಂ ಎಂಬೆ.
[ಮೆಲ್ಲ] ಮೆಲ್ಲನೆ ಆಡುವೆ ಬಹುರೂಪ.
ಇವೆಲ್ಲ ನಾಸ್ತಿಯಾದವು, ಎನ್ನ ಬಹುರೂಪಮುಖದಲ್ಲಿ.
ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲ./48
ಮಿತಭೋಜನ ಮಿತವಾಕು ಮಿತನಿದ್ರೆಯ ಮಾಡಿರಣ್ಣಾ.
ಯೋಗಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ
ರೇಕಣ್ಣಪ್ರಿಯ ನಾಗಿನಾಥಿನಲ್ಲಿ ಅಳಿಯದಂತೆ
ಉಳಿಹಿಕೊಳ್ಳಿರಣ್ಣ, ಯೋಗ ಸಾಧ್ಯವಪ್ಪನ್ನಕ್ಕ. /49
ಯುಗವನೊಗೆದಾತ, ಯುಗವನೆಲ್ಲವ ಮಾಡಿದಾತ
ರುದ್ರನ ಜಡೆಯ ಸುತ್ತಿದ ಫಣಿಯ ಬಿಳಿದು ಮಾಡಿದಾತ
ಇವನೆಲ್ಲವ ಬಿಳಿದು ಮಾಡಿ ಬಸವಣ್ಣಂಗೆ ಸೂತ್ರಧಾರಿಯಾದ
ಮಡಿವಳ ಮಾಚಯ್ಯನ ನೆನೆದಾಡುತ್ತಿರ್ದೆ.
ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ./50
ಲಿಂಗ ಲಿಂಗೈಕ್ಯನೆಂಬ, ಶಬುದಲಿಂಗೈಕ್ಯಂಗೆ ಭಕ್ತಿಯೆಂತೊ ?
ಕಿರಿದಿರಲಿ ಅರಿವು ಕರಘಟಿಸಿ
ಘನತೆಗೆ ತೆರಹು ಮರಹು ಕುರುಹು ಕೂಡದ ಬೆರಗು ತೋರದೆ ?
ಕೈಮಾಟ ಮಾಟದ ಕೂಟ ನಿಂದಲ್ಲಿ
ತಂದಿಂಕೆಡೆಯಾಗಲೊಲ್ಲದೆ ಕುಳ್ಳಿದ್ದಾತ ಭೂತಲಿಂಗೈಕ್ಯ[ನು],
ಕಾಯದಲ್ಲಿ ಲಿಂಗೈಕ್ಯನು, ಜೀವದಲ್ಲಿ ಲಿಂಗೈಕ್ಯನು.
ಕಾಯ ಜೀವದ ಸಂದಳಿದ ಲಿಂಗಪ್ರಾಣಿಯು
ಒಂಬತ್ತನೆಯ ಉತ್ತಮಾಂಗವಲ್ಲದೆ
ಹತ್ತನೆಯ ಉತ್ತಮಾಂಗದಲ್ಲಿ ಬೆಳಗಾದ
ಬಾಗಿಲನರಿದಾತನೆ ಜೀವಲಿಂಗೈಕ್ಯ.
ಕಾರಮೇಘವು ನೀರಲ್ಲಿ ಬೆರಸಿ ಹರಿದುಹೋದ ಪರಿಯಂತೆ
ಸಾರಿದ ಶರಣ ಲಿಂಗಸಂಗಿಯಾಗಿರ್ದ.
ವಾಯುಮೇಘವು ನೀರು ಬೆರಸಿ ನಿರಾಳವಾಯಿತ್ತ ಕಂಡೆ.
ರೇಕಣ್ಣಪ್ರಿಯ ನಾಗಿನಾಥಾ ಶರಣನುಪಮೆಯಿಲ್ಲ./51
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು.
ಪ್ರಸಾದವ ಪಡೆಯದವರ ಸಮಪಙ್ತೆಯಲ್ಲಿ ಕುಳಿತು
ಪ್ರಸಾದ ಭೋಗವ ಮಾಡಲಾಗದು.
ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ
ನರಕ ತಪ್ಪದು.
ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು.
ಅದೇನು ಕಾರಣವೆಂದಡೆ : ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ |
ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್ ||
ಎಂದುದಾಗಿ,
ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವ
ನಂಬುಗೆಯ ಭಕ್ತಿ ಬೆಸುಗೆಯಿಲ್ಲದವರ ಎನಗೆ ತೋರದಿರಯ್ಯ
ರೇಕಣ್ಣಪ್ರಿಯ ನಾಗಿನಾಥಾ /52
ವೇಧಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು.
ಸಾಧಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು.
ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು
ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ.
ಅರ್ಧನಾರೀಶ್ವರನ ರೂಪು ಇಂತೆಂದು
ಶುದ್ಧವಾಯಿತ್ತೀ ಲೋಕದೊಳಗೆ.
ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ.
ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ.
ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು.
ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು
ಅರ್ಪಿತವ ಮಾಡಿ ; ನಡೆಸಿ ತೋರಿದ ಭಕ್ತರ ತನುವಿನೊಳಗೆ
ಕಡೆಯಿಲ್ಲದ ಲಿಂಗವ ಖಂಡಿತವ ಮಾಡಿ ತೋರಿದ
ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ./53
ಶುದ್ಧವೆ ಜವನಿಕೆಯಾಗಿ, ಸಿದ್ಧವೆ ಸಿಂಹಾಸನವಾಗಿ
ಪ್ರಸಿದ್ಧದ ಹೊದಿಕೆಯ ಹೊದ್ದು, ನಾನಾಡುತ್ತಿರ್ದೆ ಬಹುರೂಪ.
ಶುದ್ಧ ಓಡಿದಲ್ಲಿ, ಇದ್ದ ನಿಜ ನಾಸ್ತಿಯಾಯಿತ್ತೆನ್ನ ಬಹುರೂಪು.
ಸಿದ್ಧವೆಂಬ ಸಿಂಹಾಸನ ಅಳಿದಲ್ಲಿ
ಬುದ್ಧಿಗೆಟ್ಟಾಡುತ್ತಿದ್ದುದಯ್ಯಾ, ಎನ್ನ ಬಹುರೂಪು.
ಪ್ರಸಿದ್ಧ ಹೊದಿಕೆ ಹರಿದಲ್ಲಿ
ನಾ ಬಸವನ ಕೂಡೆ ಆಡುತ್ತಿರ್ದೆ ಕಾಣಾ.
ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ./54
ಶೂನ್ಯ ಸನ್ನಹಿತವಾದಲ್ಲಿ
ಶೂನ್ಯ ಪದಾರ್ಥವಾದಲ್ಲಿ, ಶೂನ್ಯ ಪ್ರಸಾದವಾದಲ್ಲಿ
ಅದು ಬಸವಣ್ಣನ ಪ್ರಸಾದವೆಂದು
ಆನು ಬಸವಣ್ಣನ ಕೂಡೆ ಆಡುತಿರ್ದೆನು.
ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿದೆನು. /55
ಷಡುಚಕ್ರವಳಯದೊಳಗೆ ನಾನಾಡುವೆ ಬಹುರೂಪ.
ಭ್ರೂಮಧ್ಯಮಂಡಲ ಹೃದಯಕಮಲ ಮಧ್ಯದ
ಅಬ್ಜಸ್ವರದ ಮಣಿಪೂರಕದ ಮೇಲೆ ನಾನಾಡುವೆ ಬಹುರೂಪ.
ಉರಿಯುಂಡ ಕರ್ಪುರದಂತೆ ನಾನಾಡುವೆ ಬಹುರೂಪ.
ಬಯಲ ಬೆರಸಿದ ಮರೀಚಿಯಂತೆ ನಾನಾಡುವೆ ಬಹುರೂಪ.
ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿದೆನು. /56
ಷಡುಸ್ಥಲ ಷಡುಸ್ಥಲವೆಂದು ನುಡಿವುತ್ತಿರ್ಪಿರಿ, ಕೇಳಿರಣ್ಣಾ :
ಒಬ್ಬ ರಾಯನ ಕೆಳಗೆ ಆರು ಬಲ ಉಂಟಾಗಿಪ್ಪಂತೆ
ಆ ಪರಶಿವತತ್ವಕ್ಕೆ ಪ್ರಾಣಪದವಪ್ಪರು ಭಕ್ತರುಂಟು.
ಆ ಭಕ್ತರಿಗೆ ಗುರುಲಿಂಗಜಂಗಮದ ದಾಸೋಹ.
ಪಾದೋದಕ ಪ್ರಸಾದ, ಪಂಚ ಸದಾಚಾರ.
ಇಂತಿವೆಲ್ಲವೂ ಪ್ರಾಣಪದವಾಗಿಪ್ಪವು.
ಇವರೆಲ್ಲರಿಗೆಯೂ ಶರಣಸತಿ ಲಿಂಗಪತಿಗಳೆಂಬವೆ
ಪ್ರಾಣಪದವಾಗಿ, ರೇಕಣ್ಣಪ್ರಿಯ ನಾಗಿನಾಥನಲ್ಲಿ ನಿಂದರು./57
ಸಂಗ ಸಮನಿಸದಂದು, ಲಿಂಗ ಉತ್ಪತ್ತಿಯಾಗದಂದು
ಸಂಗಾ ಬಸವಾಯೆಂಬ ಶಬುದವೆಲ್ಲಿಯದೋ ?
ಸಂಗಾ ಬಸವಾಯೆಂಬ ಶಬುದವ ಲಿಂಗಿಗಳೆತ್ತ ಬಲ್ಲರು ?
ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿದೆ./58
ಸಂಗನಬಸವಣ್ಣ ಎನ್ನ ಕರಸ್ಥಲಕ್ಕೆ ಬಂದ ಕಾರಣ
ಎನಗೆ ಗುರುರೂಪಾದನಯ್ಯಾ.
ಚನ್ನಬಸವಣ್ಣನೆನ್ನ ಕರಸ್ಥಲಕ್ಕೆ ಬಂದ ಕಾರಣ
ಎನಗೆ ಲಿಂಗರೂಪಾದನಯ್ಯಾ.
ಪ್ರಭುದೇವರೆನ್ನ ಕರಸ್ಥಲಕ್ಕೆ ಬಂದ ಕಾರಣ
ಎನಗೆ ಪ್ರಾಣಲಿಂಗವಾದನಯ್ಯಾ.
ಇವರು ಮೂವರಿಗೆ
ನಾ ಭಕ್ತನಾಗಿ ಹುಟ್ಟಿದೆನಾಗಿ
ರೇಕಣ್ಣಪ್ರಿಯ ನಾಗಿನಾಥನೆನಗೆ ಒಚ್ಚತವಾದನಯ್ಯಾ./59
ಸರದೊಳಗೆ ಸರಗಟ್ಟಿ, ಸರ ಹರಿದವ ನಾನಯ್ಯಾ.
ಮಹದೊಳಗೆ ಮನೆಗಟ್ಟಿ, ಮನೆ ಬೆಂದವ ನಾನಯ್ಯಾ.
ಕಿಚ್ಚಿನೊಳಗೆ ಕಿಚ್ಚನೊಟ್ಟಿ, ಕಾದವ ನಾನಯ್ಯಾ.
ಆ ಕಿಚ್ಚಿನೊಳಗೆ ಬಿದ್ದು ಉರಿದವ ನಾನಯ್ಯ.
ಬಸವಣ್ಣನು ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ.
ಸೂತ್ರವಾಗಿ ಹೋದೆ ನಾ. ಬಸವಣ್ಣನಿಂದ ಕೆಟ್ಟೆ ಕಾಣಾ.
ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿತೀ ಲೋಕವೆಲ್ಲ./60
ಹತ್ತಿ ಕದಿರು ರಾಟಿ ಮೊದಲಿಲ್ಲ, ನೂಲುಂಟು.
ಸೆಲದಿಯ ಹೃದಯದಲ್ಲಿ ಲಿಂಗವುಂಟು.
ಭಕ್ತರ ಭಾವದಲ್ಲಿ ಲಿಂಗವುಂಟು.
ರೇಕಣ್ಣಪ್ರಿಯ ನಾಗಿನಾಥನ ಶರಣರ
ಮನದ ಕೊನೆಯನೆತ್ತಿದಡೆ ಲಿಂಗದ ಗೊಂಚಲುಂಟು./61
ಹಲವು ತೀರ್ಥಂಗಳಲ್ಲಿ ಮೀಯಲು ಬಹುದಲ್ಲದೆ
ಜಂಗಮದ ಪಾದೋದಕವ ಕೊಳಬಾರದು.
ಅಂಗದಿಚ್ಫೆಗೆ ಅಂಗನೆಯರ ಅಧರವ ಮುಟ್ಟಬಹುದಲ್ಲದೆ
ಜಂಗಮದ ಪ್ರಸಾದವ ಕೊಳಬಾರದು.
ಊರಗೋಲ ನೆರೆ ನಡುನೀರಲದ್ದಿದಂತಾಯಿತ್ತಯ್ಯಾ, ಎನ್ನ [ಮನದಿರ]ವು.
ಪಾಪಿಯ ಕೂಸಿಂಗೆ ಏನು ಬುದ್ಧಿಯ ಹೇಳಿದಡೆ ಕೇಳೂದೆ ?
ರೇಕಣ್ಣಪ್ರಿಯ ನಾಗಿನಾಥಾ, ನಿಮ್ಮನರಿದ ಶರಣನಲ್ಲದೆ./62
ಹಿರಿಯರೆಂತಿರ್ಪರಯ್ಯಾ ?
ಅಯ್ಯಾ, ದಿಟದ ರಾಸಿಗೆ ಅವರ ಘಟ ಲಕ್ಷಣ.
ನಿಸ್ಸೀಮರೆಂತಿರ್ಪರಯ್ಯಾ ?
ಅಯ್ಯಾ, ಸೀಮೆಗೆಡೆಗುಡದ ಬಯಲನೊಳಕೊಂಡಿರ್ಪರು.
ಭಾವರೆಂತಿರ್ಪರಯ್ಯಾ ?
ಅಯ್ಯಾ, ಕಣ್ಣಾಲಿ ದೃಷ್ಟಿಯ ನುಂಗಿದಂತೆ.
ನೀರೆಂತು ನೆನೆವುದೆಂದು ಬೆಸಗೊಂಡಡೆ
ಹೇಳುವ ಶಬ್ದದಂತಿಹುದದರ ನಿಲುವು.
ಲಿಂಗ ಮಧ್ಯೇ ಜಗತ್ಸರ್ವಂ ಲಿಂಗದಂಗ
ರೇಕಣ್ಣಪ್ರಿಯ ನಾಗಿನಾಥನಂತಿರ್ಪರು./63
ಹುಟ್ಟುಗೆಟ್ಟ ಹಾಳ ಮೇಲೆ ಬಟ್ಟಬಯಲಲೊಬ್ಬನ ಕಂಡೆ.
ಅಂಗವಿಲ್ಲದವಯವಕ್ಕೆ ಸಂಗವೆಲ್ಲಿಯದಯ್ಯ ?
ಹಿಂಗದ ಅವಯವಕ್ಕೆ ಹಿಂಗುವ ತೊಡಿಗೆಯ
ತೊಡಿಸಿಹೆವೆಂಬ ಭಂಗಿತರನೇನೆಂಬೆನಯ್ಯ
ರೇಕಣ್ಣಪ್ರಿಯ ನಾಗಿನಾಥಾ ! /64
ಹುಟ್ಟುವಾತ ಮದ್ದಳೆಯ ಕಟ್ಟಿದ.
ನಡೆವಾತ ತಾಳವನೊತ್ತಿದ.
ಬಿಡುವಾತ ಶ್ರುತಿಯನೆತ್ತಿದ.
ತತ್ಥಾತಿತ್ಥಿ ಎಂಬಾಟ ಇತ್ತಲೇ ಉಳಿಯಿತ್ತು
ರೇಕಣ್ಣಪ್ರಿಯ ನಾಗಿನಾದಾ ! /65
ಹೆರಿಲ್ಲದ ಜವನಿಕೆಯ ಮರೆಯಲ್ಲಿ ಬಂದು
ಅಸುವಿನ ಬಹುರೂಪಮಂ ತೊಟ್ಟು
ಪಶುಪತಿಯ ಅವತಾರವನಾಡುತ್ತಿರಲಾಗಿ
ಹಸುಬೆಯ ತೆರೆಯ ಹರಿದು
ಆ ಅಸು ದೆಸೆಯಲ್ಲಿ ಇಲ್ಲಾ ಎಂದೆ.
ರೇಕಣ್ಣಪ್ರಿಯ ನಾಗಿನಾಥನಲ್ಲಿ ಪುರೆಹರೆ ಎನುತಿರ್ದೆನು./66