Categories
ಶರಣರು / Sharanaru

ಬಾಚಿಕಾಯಕದ ಬಸವಣ್ಣ

ಹೆಸರು: ಬಾಚಿಕಾಯಕದ ಬಸವಣ್ಣ/ಬಸವಪ್ಪ/ಬಸಪ್ಪ, (ಬಡಿಗೇರ ಬಸಪ್ಪ)
ಅಂಕಿತ: ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ
ಕಾಯಕ: ಮರ ಗೆಲಸದವ (ಬಡಗಿ)

ಬಡಿಗ ಕಾಯಕದವನಾದ ಈತನ ಕಾಲ ೧೧೬೦, ಈತನು ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವನು. ‘ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ’ ಅಂಕಿತದಲ್ಲಿ ೩೦ ವಚನಗಳು ದೊರೆತಿವೆ. ವೃತ್ತಿ ಪರಿಭಾಷೆಯನ್ನು ಬಳಸಿಕೊಂಡು ಅವು ತತ್ವ ಪ್ರಧಾನವಾಗಿವೆ. ಕೆಲವು ಬೆಡಗಿನ ರೂಪದಲ್ಲಿವೆ.

ಬಸವಪ್ಪ ಶರಣರ ವಚನಾಂಕಿತ ಸೂಚಿಸುವಂತೆ ಅವರ ಸ್ಥಳ ಇಂದಿನ ರಾಜೇಶ್ವರ ಆಗಿದೆ. ರಾಜೇಶ್ವರ ಬಸವಕಲ್ಯಾಣ ತಾಲೂಕಿನ ಪ್ರಮುಖ ಗ್ರಾಮ. ಇದು ಪುಣೆ ಹೈದ್ರಾಬಾದ ರಾಷ್ಟ್ರೀ ಹೆದ್ದಾರಿಯ ಮೇಲಿದ್ದು ಬಸವಕಲ್ಯಾಣದಿಂದ ಕೇವಲ ೧೫ ಕಿ. ಮೀ. ದೂರದಲ್ಲಿದೆ. ಬಸವಪ್ಪ ಶರಣರ ಸ್ಥಳ ರಾಜೇಶ್ವರವೇ ಆಗಿರುವುದಕ್ಕೆ ಬಹಳ ಆಧಾರಗಳಿವೆ.

೧. ಇದು ಬಸವಕಲ್ಯಾಣ ಕೆಲವೇ ಕಿ. ಮೀ. ದೂರದಲ್ಲಿದೆ.

೨. ಆಗಿನ ಕಲ್ಯಾಣ ರಾಜ್ಯದ ಬಾಗಿಲು ಇಂದಿನ ಕಲಬುರ್ಗಿಯಾಗಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಅಂದ ಮೇಲೆ ರಾಜೇಶ್ವರವು ಕಲ್ಯಾಣ ರಾಜ್ಯದ ಅಂಗವಾಗಿತ್ತು ಎಂಬುದು ಸಿದ್ಧವಾಗುತ್ತದೆ.

೩. ಬಸವಕಲ್ಯಾಣದಲ್ಲಿ ಕಂಡು ಬರುವಂಥಹ ಗುಹೆಗಳು ರಾಜೇಶ್ವರದಲ್ಲಿಯೂ ಕಾಣಸಿಗುತ್ತವೆ. ಇವುಗಳಲ್ಲಿ ಒಂದಲ್ಲ ಒಂದು ಗುಹೆ ಶರಣ ಬಸವಪ್ಪನವರದಾಗಿರಬಹುದು.

೪. ರಾಜೇಶ್ವರದಿಂದ ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೇವಲ ೩ ಕಿ.ಮೀ. ದೂರದಲ್ಲಿ ಮೊಳಕೇರಿ ಎಂಬ ಗ್ರಾಮವಿದೆ. ಇದು ಶರಣ ಮೋಳಿಗೆಯ ಮಾರಯ್ಯನವರದ್ದು ಎಂಬುದು ತಿಳಿದು ಬರುತ್ತದೆ. ಮೊಳಿಗೆ ಮಾರಯ್ಯನವರು ಆಯ್ದುಕೊಂಡ ಕಾಯಕ ಕಟ್ಟಿಗೆ ಕಡಿದು ಮಾರುವ ಕಾಯಕ, ಹೀಗಾದ ಮೇಲೆ ಇಲ್ಲಿ ಆ ವೇಳೆಯಲ್ಲಿ ಬಹಳವಾಗಿ ಕಟ್ಟಿಗೆ ದೊರೆಯುತ್ತಿತ್ತು ಎಂಬುದು ಸಿದ್ಧವಾಗುತ್ತದೆ. ಹೀಗಿದ್ದಾಗ ಬಡಿಗತನ ಕಾಯಕ ಕೈಗೊಂಡಿದ್ದ ಬಸವಪ್ಪ ಶರಣರು ಇಲ್ಲಿ ಇದ್ದಿರಬಹುದು ಎಂಬುದಕ್ಕೆ ಸಂಶಯವೇ ಇಲ್ಲ.

೫. ಅವರ ವಚನಗಳು ನೋಡಿದರೆ ಅವರ ವಚನ ಅಂಕಿತ ’ಬಸವಪ್ರಿಯ ಅಥವಾ ’ಬಸವಣ್ಣಪ್ರಿಯ’ ಎಂದು ಪ್ರಾರಂಭವಾಗುತ್ತದೆ. ಇಂತಹ ವಚನಾಂಕಿತ ಇರುವುದು ಇನ್ನೊಬ್ಬ ಶರಣ ಹಡಪದ ಅಪ್ಪಣ್ಣ ಶರಣರದು.

೬. ಕಲ್ಯಾಣನಾಡಿನಲ್ಲಿ ಇರುವ ಶರಣ ಸ್ಥಳಗಳು ಗುಹೆ ರೀತಿಯಲ್ಲೇ ಇವೆ. ಇಂತಹ ಗುಹೆಗಳು ರಾಜೇಶ್ವರದಲ್ಲಿಯೂ ಕಾಣ ಸಿಗುವವು ಅಂದ ಮೇಲೇ ಇದು ಶರಣರ ಭೂಮಿಯೇ ಆಗಿತ್ತು. ಹಾಗಿದ್ದ ಮೇಲೆ ಆ ಗುಹೆ ಗಳಲ್ಲಿ ಒಂದು ಶರಣ ಬಾಚಿ ಕಾಯಕದ ಬಸವಪ್ಪನವರದೇ ಏಕೇ ಆಗಿರಬಾರದು?

೭. ರಾಜೇಶ್ವರದ ಸಮೀಪ ತಾಡೋಲಾ ಎಂಬ ಗ್ರಾಮವಿದೆ, ತಾಡೋಲಾ ವನ್ನು ಬಿಡಿಸಲು ‘ತಾಡ’ + ‘ಓಲೆ’ ಎಂದಾಗುತ್ತದೆ. ಅಂದರೆ ಇಲ್ಲಿ ಸಾಕಷ್ಟು ತಾಡಿನ ಮರಗಳು ಇರುತ್ತಿರಬಹುದು ಅದಕ್ಕಾಗೆಯೇ ಇದನ್ನು ತಾಡೋಲೆ/ತಾಡೋಲ/ತಾಡೋಳ ಎಂದು ಹೆಸರಿರಬಹುದು. ಶರಣರು ತಮ್ಮ ವಚನಗಳನ್ನು ತಾಡ ಗರಿಗಳ ಮೇಲೆ ಬರೆದಿರುವರು ಎಂಬುದನ್ನು ಗಮನಿಸಬೇಕಾದ ವಿಷಯ.

೮. ರಾಜೇಶ್ವರದಲ್ಲಿ ಹಿರೇಮಠ, ಜಂಗೇನ ಮಠ, ದೇವಾಂಗಣ ಮಠ, ಕಳ್ಳಿ ಮಠಗಳೂ ಇರುವವು.

೯. ರಾಜೇಶ್ವರದಲ್ಲಿ ಸ್ಥಾವರ ಲಿಂಗ ಹೊಂದಿರುವ ರಾಮಲಿಂಗೇಶ್ವರ ದೇವಾಲಯವಿದೆ ಮತ್ತೆ ಪರ್ವತ ಮಲ್ಲಿಕಾರ್ಜುನ ದೇವಾಲಯವಿದೆ.

೧೦. ರಾಜೇಶ್ವರ ನಿಜಾಮನ ಆಳಿಕೆಯಲ್ಲಿ ಒಂದು ಪ್ರಮುಖ ತಾಲೂಕಾವಾಗಿತ್ತು.

ಷಡ್ದರ್ಶನಗಳೆಲ್ಲ ನನ್ನ ಬಾಚಿಯ ಕಲೆ. ಮಿಕ್ಕಿನ ಅವಧೂತರುಗಳೆಲ್ಲ ನನ್ನ ಉಳಿಯೊಳಗಣ ಒಡವು ಎನ್ನುವನು. ಸೂತಕಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ ಪರಬ್ರಹ್ಮ ದೊರಕದು, ಶರಣರ ಕಾಯವೇ ಕೈಲಾಸ. ಅಷ್ಟಾಷಷ್ಠಿಕೋಟಿ ತೀರ್ಥಗಳು, ದಿವ್ಯ ದೇವಸ್ಥಾನಗಳು, ವೇದ ಶಾಸ್ತ್ರ ಪುರಾಣ ಆಗಮಂಗಳು ಭಕ್ತನ ಬಾಗಿಲ ನೀರಿಂಗೆ ಸಮನಲ್ಲ ಎಂಬ ಇವನ ವಿಚಾರಗಳು ಗಮನಾರ್ಹವಾಗಿವೆ.