Categories
ವಚನಗಳು / Vachanagalu

ಬಾಚಿಕಾಯಕದ ಬಸವಣ್ಣ ವಚನಗಳು

ಅನಾದಿಬಿಂದುವೆಂಬ ಆಧಾರ ಕುಂಡಲಿಯ ಸ್ಥಾನದಲ್ಲಿ
ಅಂಡವೆಂಟು ಉಂಟು.
ಆ ಎಂಟಂಡವನು ಎಂಟು ಪದ್ಮ ಹೊತ್ತುಕೊಂಡಿಪ್ಪವು.
ಆ ಪದ್ಮದ ಎಸಳು ಏಳುಸಾವಿರದ ಎಪ್ಪತ್ತು ಕೋಟಿಯು.
ಏಳುನೂರ ಮೂವತ್ತಾರು ಎಸಳಿನಲ್ಲಿ
ಅಖಂಡ ಪೂಜೆಯ ಮಾಡಲರಿಯದೆ
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ
ಬ್ರಹ್ಮರಂಧ್ರ ರೇಚಕ ಪೂರಕ ಕುಂಭಕದಲ್ಲಿ
ಚೌಕ ಪದ್ಮಾಸನವ ಮಾಡಿ ಕಂಡೇನೆಂಬ ಯೋಗಿಗಳಿಗೆ
ಇದು ಅಪ್ರಮಾಣ, ಅಗೋಚರ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವು
ಇದೆಂದರಿದುದೆ ನಿಜಾನಂದಯೋಗ./1
ಅಪ್ಪು ಬಲಿದು ಪೃಥ್ವಿಯ ಮೇಲೆ
ಶತಕೋಟಿ ಸಹಸ್ರಕೋಟಿ ಬಯಲಿಂದತ್ತ ಭರಿತವಪ್ಪುದೊಂದು ರಥ.
ಆ ರಥಕ್ಕೆ ಬ್ರಹ್ಮ ವಿಷ್ಣು ಸೂರ್ಯ ಚಂದ್ರ (?)
ವೇದಶಾಸ್ತ್ರಪುರಾಣಸಕಲಾಗಮಪ್ರಮಾಣಗೂಡಿದ ಷಟ್ಕಲೆ
ಮೇರುಮಂದಿರವೆಂಬ ಅಚ್ಚುಗಂಬವ ನೆಟ್ಟಿದೆ.
ಆ ರಥದ ಸುತ್ತಲು ದೇವಾದಿದೇವರ್ಕಳೆಲ್ಲರ ತಂದು ಸಾರಥಿಯನಿಕ್ಕಿ
ಆ ರಥದ ನಡುಮಧ್ಯಸ್ಥಾನದಲ್ಲಿ ಅಷ್ಟದಳಕಮಲವಾಯಾಗಿ
ಅನಂತಸಹಸ್ರಕೋಟಿ ಕಮಲಪದ್ಮಾಸನವ ರಚಿಸಿದೆ.
ಆ ಪದ್ಮಾಸನದ ಮೇಲೆ ಶಂಭು ಸದಾಶಿವನೆಂಬ
ಮಹಾದೇವನ ತಂದು ನೆಲೆಗೊಳಿಸಿದೆ.
ಆ ರಥದ ಪೂರ್ವಬಾಗಿಲಲ್ಲಿ ಆದಿಶಕ್ತಿಯ ನಿಲಿಸಿದೆ.
ಉತ್ತರ ಬಾಗಿಲಲ್ಲಿ ಓಂ ಪ್ರಣಮಸ್ವರೂಪಿಣಿಯೆಂಬ ಶಕ್ತಿಯ ನಿಲಿಸಿದೆ.
ಆ ಪಶ್ಚಿಮಬಾಗಿಲಲ್ಲಿ ಕ್ರಿಯಾಶಕ್ತಿಯ ನಿಲಿಸಿದೆ.
ದಕ್ಷಿಣದ ಬಾಗಿಲಲ್ಲಿ ಚಿಚ್ಫಕ್ತಿಯ ನಿಲಿಸಿದೆ.
ಭೈರವ ವಿಘ್ನೆಶ್ವರ ಷಣ್ಮುಖ ವೀರಭದ್ರರೆಂಬ ನಾಲ್ಕು ಧ್ವಜಪಟಗಳನೆತ್ತಿ,
ಆ ರಥದ ಅಷ್ಟದಿಕ್ಕುಗಳಲ್ಲಿ
ನಾನಾ ಚಿತ್ರವಿಚಿತ್ರವೈಭವಂಗಳೆಂಬ ಕೆಲಸವ ತುಂಬಿ,
ಅದರ ಗಾಲಿಯ ಕೀಲುಗಳಲ್ಲಿ
ಈರೇಳುಭುವನವೆಂಬ ಹದಿನಾಲ್ಕುಲೋಕಂಗಳ ಧರಿಸಿ ಆಡುತ್ತಿರ್ಪವು.
ಅನಾದಿ ಶೂನ್ಯವೆಂಬ ಮಹಾರಥದೊಳಗಿಪ್ಪ
ನಮ್ಮ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವು ನಿರಾಳ ನಿಶ್ಚಿಂತ ನಿರ್ಲೆಪನು./2
ಆರಾರಿಗೂ ಅಗೋಚರ ಅಸಾಧ್ಯವೆಂಬ
ಅಷ್ಟಪುರಿಯೆಂಬ ಬಟ್ಟಬಯಲ ಪಟ್ಟಣದೊಳಗೆ
ಪಚ್ಚೆರತ್ನ ಮುತ್ತು ಮಾಣಿಕ್ಯ ತೆತ್ತಿಸಿದ
ಶಿವಾಲಯವೆಂಬುದೊಂದು ಗುಡಿಯುಂಟು.
ಆ ಗುಡಿಯೊಳಗೊಂದು ಒಂಬತ್ತು ನೆಲೆಯ ಪಾಣಿವಟ್ಟ, ಒಂದೆ ಮುಖ.
ಅದರ ಮೇಲೊಂದು ಅನಂತ ಪ್ರಕಾಶವ
ಗರ್ಭಿಕರಿಸಿಕೊಂಡಿರ್ಪುದೊಂದು ಲಿಂಗವುಂಟು.
ಆ ಲಿಂಗಕ್ಕೆ ನೋಡಬಾರದ ಪೂಜೆಯ ಮಾಡಬೇಕು.
ನುಡಿಯಬಾರದ ಮಂತ್ರವ ತುಂಬಬೇಕು.
ಹಿಡಿಯಬಾರದ ಜಪವ ನುಡಿಗೆಡೆಯಿಲ್ಲದೆ ಮಾಡಬೇಕು.
ಕೊಡಬಾರದ ಅರ್ಪಿತವ ಕೊಡಬೇಕು.
ನೆನೆಯಬಾರದ ನೆನಹು ನೆಲೆಗೊಂಡಾತನೆ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ತಾನು ತಾನಾದ ಶರಣಂಗಲ್ಲದೆ ಉಳಿದವರಿಗಸಾಧ್ಯವಯ್ಯ./3
ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ.
ಮಿಕ್ಕಾದ ಮೀರಿದ ಅವಧೂತರುಗಳೆಲ್ಲ
ಎನ್ನ ಉಳಿಯೊಳಗಣ ಒಡಪು.
ಇಂತಿವ ಮೀರಿ ವೇಧಿಸಿ ಭೇದಿಸಿಹೆನೆಂಬವರೆಲ್ಲ
ಎನ್ನ ಕೊಡತಿಯಡಿಯಲ್ಲಿ ಬಡೆಯಿಸಿಕೊಂಬ ಬಡಿಹೋರಿಗಳು.
ಇಂತೀ ವಿಶ್ವಗೋಧರೆಲ್ಲರೂ
ಕತರ್ಾರನ ಕರ್ಮಟದ ನಕ್ಕುಬಚ್ಚನೆಯ ಚಿಕ್ಕಮಕ್ಕಳು.
ಇಂತಿವನರಿದು ಕಾಮದಲ್ಲಿ ಕರಗದೆ,
ಕ್ರೋಧದ ದಳ್ಳುರಿಯಲ್ಲಿ ಬೇಯದೆ,
ನಾನಾ ವ್ಯಾಮೋಹ ಋತುಕಾಲಂಗಳ ಕಾಹಿನ ಬಲೆಗೊಳಗಾಗುತ್ತ
ಮತ್ತೆ ಸಾವಧಾನವೆ, ಮತ್ತೆಯೂ ಜ್ಞಾನಾತೀತವೆ ?
ಮತ್ತೆ ಧ್ಯಾನಮೂರ್ತಿಯೆ, ಮತ್ತೆ ನಾನಾ ಕ್ರೀಯಲ್ಲಿ ಭಾವ ವ್ಯವಧಾನವೆ ?
ಮತ್ತೆ ಗುರು ಚರ ಪರವೆ, ಒಕ್ಕುಡಿತೆ ನೀರಿನಲ್ಲಿ ತಾ ಸತ್ತ ಮತ್ತೆ
ಸಮುದ್ರವೆಷ್ಟಾಳವಾದಡೇನು ?
ಕಿಂಚಿತ್ತು ಸುಖದಲ್ಲಿ ಲಿಂಗವ ಬಿಟ್ಟು,
ಅಂಗನೆಯರುರಸ್ಥಲದಲ್ಲಿ ಅಂಗೀಕರಿಸಿ
ಅವರಧರ ಪಾನಂಗಳ ಮಾಡಿ, ನಾ ಲಿಂಗಾಂಗಿಯೆಂದಡೆ
ಸರ್ವಸಂಗಪರಿತ್ಯಾಗವ ಮಾಡಿದ ಲಿಂಗಾಂಗಿಗಳೊಪ್ಪರು.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ಸ್ವಪ್ನದಲ್ಲಿ ಕುರುಹುಗಾಣಿಸಿಕೊಳ್ಳಾ./4
ಆಶೆಯರತ ಬಾಚಿಯಲ್ಲಿ ಭವಪಾಶವಿಲ್ಲದ ಜಂಗಮಕೆ ತೆತ್ತ.
ರೋಷವಿಲ್ಲದ ಉಳಿಯಲ್ಲಿ ನಿಜವಾಸವ ನೋಡಿ ಹುಗಿಲುದೆಗೆವುತ್ತ
ಭಾಷೆಗೆ ಊಣಯವಿಲ್ಲದ ಸದ್ಭಕ್ತರ ಆಶ್ರಯಕ್ಕೆ ನಿಜವಾಸವ ಮಾಡುವ ಕಾಯಕ.
ಈ ಗುಣ ಬಾಚಿಯ ಬಸವಣ್ಣನ ನೇಮ.
ಇದು ಸಂಗನಬಸವಣ್ಣ ಕೊಟ್ಟ ಕಾಯಕದಂಗ,
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವನರಿವುದಕ್ಕೆ./5
ಆಸೆಯ ಬಿಟ್ಟಡೆ ಭಕ್ತರೆಂಬೆ.
ವೇಷವ ಬಿಟ್ಟಡೆ ಮಾಹೇಶ್ವರರೆಂಬೆ.
ಭವಪಾಶವ ಬಿಟ್ಟಡೆ ಪ್ರಸಾದಿಯೆಂಬೆ.
ಭಾವ ಘಟಿಸಿದಡೆ ಪ್ರಾಣಲಿಂಗಿಯೆಂಬೆ.
ಬಯಕೆ ನಿಂದಡೆ ಶರಣನೆಂಬೆ.
ಅರಿವು ಶೂನ್ಯವಾದಡೆ ಐಕ್ಯನೆಂಬೆ.
ಈ ಷಡುಸ್ಥಲದ ಮಹಾಸ್ಥಲದಲ್ಲಿ ಒಡಗೂಡಿ ನಿಂದುದ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗಕ್ಕಲ್ಲದೆ ಇಲ್ಲವೆಂಬೆ./6
ಐಘಟವೆಂಬ ಅಂಗದಲ್ಲಿ ಐದು ಕುಂಭವ ಕಂಡೆ.
ಕುಂಭದನುವೇನೆಂಬುದು, ಮುಂದಣ ಕುಂಭದ ಚಂದನವನೇನೆಂಬೆ.
ಆ ಚಂದದ ಮುಂದಣ ಎರಡು ಕುಂಭದ ಮಧ್ಯದಲ್ಲಿ
ಒಂದು ಕಮಲವುಂಟು.
ಆ ಕುಂಭಕ್ಕೆ ಐದು ಕಮಲ ಉದ್ಭವವಾದವು.
ಆ ಕಮಲದೊಳಗಣ ದಿವ್ಯಗಂಧವನು ಕಾಬುದು,
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲವೆಂಬೆ./7
ಕನಕನವರತ ಶೋಭಿತವೆಂಬ ದಿನಕರನುದಯದ ಪಟ್ಟಣದೊಳಗೆ
ಏಕಬೆಳಗಿನ ಏಕಾಂತವಾಸದೊಳಿಪ್ಪ
ನಿಶ್ಶಬ್ದಂ ಬ್ರಹ್ಮಮುಚ್ಯತೇ ಎಂಬ ಮೂಲಾಂಕುರವು.
ಉನ್ಮನಿಯ ಪ್ರಾಕಾರದ ಸ್ಫಟಿಕದ ಮನೆಯಲ್ಲಿ
ಇಷ್ಟಲಿಂಗವನರಿದಾತಂಗೆ ಮೂರರ ಹಂಗೇಕೆ?
ಆರು ಮೂರೆಂಬಿವ ದೂರದಲೆ ಕಳೆದು ಮೀರಿದ ಸ್ಥಲದಲ್ಲಿ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವಲ್ಲದೆ ಇಲ್ಲವೆಂಬೆ./8
ಕುಂಭಿನಿಯ ಚಕ್ರದ ಮೇಲೆ ಪಿಂಡಬ್ರಹ್ಮಾಂಡವೆಂಬುದೊಂದು ಅಂಗ.
ಆ ಅಂಗಾಲಯದೊಳಗೆ ಏಕಸಹಸ್ರವೆಂಬುದೊಂದು ದೇವಾಲಯ.
ಆ ದೇವಾಲಯಕ್ಕೆ ವೆಜ್ಜವಿಲ್ಲದ ಬಾಗಿಲು.
ಆ ಬಾಗಿಲ ಮೇಲುಪ್ಪರಿಗೆಯೊಳಗೊಂದು
ಮೂಲಾಧಾರ ಮುಕ್ತಿಯೆಂಬುದೊಂದು ಕೋಣೆ.
ಅದಾರಿಗೂ ಮುಟ್ಟಬಾರದು, ನೆನೆಯಬಾರದು.
ನೋಡಬಾರದ ಕೋಣೆಯೊಳಗೆ ಮಾಣಿಕ್ಯದ ಮಹಾಪ್ರಕಾಶಕ್ಕೆ
ಮಿಗಿಲೆನಿಪ ನುಡಿಗೆಡೆಯಿಲ್ಲದ ಲಿಂಗ.
ಮುಕ್ತಿಯೆಂಬ ಕೋಣೆಯ ಮೂಲಾಗ್ರದಲ್ಲಿ ಇಪ್ಪುದೊಂದು [ಪರಂಜ್ಯೋತಿ].
ಆ ಮೂಲಾಗ್ರದ ಮೇಲಣ ಪರಂಜ್ಯೋತಿ ಪ್ರಕಾಶಪರಿಪೂರ್ಣಲಿಂಗವ
ತಿಳಿಯಬಲ್ಲಡೆ ಮುಟ್ಟಲಾಗದು ಮೂರ, ಕಟ್ಟಲಾಗದು ಆರ.
ಈ ಕಷ್ಟವ ಕಳೆಯದನ್ನಕ್ಕ ಕಂಡೆಹೆನೆಂಬವರನೇನೆಂಬೆ.
ರುದ್ರ ತಪಸ್ಸಿನೊಳಗಾದ, ಬ್ರಹ್ಮ ನಿತ್ಯಕ್ಕೊಳಗಾದ.
ವಿಷ್ಣು ಕಾಮದ ಬಲೆಯಲ್ಲಿ ಸಿಲ್ಕಿದ.
ಇನ್ನು ದೇವದಾನವ ಮಾನವರೆಲ್ಲರೂ ಅನಂತಾನುಕೋಟಿ
ಭವಭವಪಾಶವೆಂಬ ರಾಟಾಳದ ಬಲೆಯಲ್ಲಿ ಉರುಳಾಡುತ್ತಿಪ್ಪರಯ್ಯ.
ಇಂತು ಮೂಲದ ಕೀಲ ಸಂಹರಿಸಿ ನಿಂದ ನಿಸ್ಸೀಮ ಶರಣರೇ ಬಲ್ಲರಲ್ಲದೆ
ಮತ್ತಾರೂ ಅರಿಯರಯ್ಯ.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವ./9
ಕುಲಗೋತ್ರಜಾತಿಸೂತಕದಿಂದ
ಕೆಟ್ಟವರೊಂದು ಕೋಟ್ಯಾನುಕೋಟಿ.
ಜನನಸೂತಕದಿಂದ ಕೆಟ್ಟವರು ಅನಂತಕೋಟಿ.
ಮಾತಿನಸೂತಕದಿಂದ ಮೋಸವಾದವರು
ಮನು ಮುನಿಸ್ತೋಮ ಅಗಣಿತಕೋಟಿ.
ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು
ಹರಿಹರ ಬ್ರಹ್ಮಾದಿಗಳೆಲ್ಲರು.
‘ಯದ್ದೃಷ್ಟಂ ತನ್ನಷ್ಟಂ’ ಎಂಬುದನರಿಯದೆ
ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ
ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ.
ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ
ಪರಬ್ರಹ್ಮ ದೊರಕುವದೆ ಅಯ್ಯಾ ?
ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ.
ಅಗಮ್ಯ ಅಪ್ರಮಾಣ ಅಗೋಚರವಯ್ಯ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು./10
ಘಟಸ್ಥಾವರದೊಳಗನೊಡೆದು ಕಿಚ್ಚಿನ ಹೊರೆಯ ಕಂಡೆ.
ಕಾಣಿಸಿ ಮಿಕ್ಕಾದ ಹೊರಗಣ ಹೊರೆಯ ತಿಗುಡಂ ಕೆತ್ತಿ
ಕಂಬವ ಶುದ್ಧೈಸಿ ನೆಲವಟ್ಟಕ್ಕೆ ಚದುರಸವನಿಂಬುಗೊಳಿಸಿ
ಮೇಲಣವಟ್ಟಕ್ಕೆ ಎಂಟುಧಾರೆಯ ಏಣಂ ಮುರಿದು
ಕಡಿಗೆವಟ್ಟ ವರ್ತುಳಾಕಾರದಿಂ ಶುದ್ಧವ ಮಾಡಿ
ಏಕೋತ್ತರಶತಸ್ಥಲವನೇಕೀಕರಿಸಿ
ಒಂದು ದ್ವಾರದ ಬೋದಿಗೆಯಲ್ಲಿ ಕಂಬವ ಶುದ್ಧೈಸಿ
ಕಂಬ ಎರವಿಲ್ಲದೆ ನಿಂದ ಮತ್ತೆ ಚದುರಸಭೇದ.
ಅಷ್ಟದಿಕ್ಕಿನ ಬಟ್ಟೆಕೆಟ್ಟು ನವರಸ ಬಾಗಿಲು ಮುಚ್ಚಿ,
ತ್ರಿಕೋಣೆಯನುಲುಹುಗೆಟ್ಟು, ಮುಂದಣ ಬಾಗಿಲು ಮುಚ್ಚಿ
ಹಿಂದಣ ಬಾಗಿಲು ಕೆಟ್ಟು, ನಿಜವೊಂದೆ ಬಾಗಿಲಾಯಿತ್ತು.
ಈ ಕೆಲಸವ ಆ ಕಂಬದ ನಡುವೆ ನಿಂದು ನೋಡಲಾಗಿ
ಮಂಗಳಮಯವಾಗಿ, ಇದು ಯೋಗಸ್ಥಲವಲ್ಲ.
ಇದು ಘನಲಿಂಗ ಯೋಗಸ್ಥಲ, ಇಂತೀ ಭೇದವ ತಿಳಿದಡೆ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ./11
ಜಾಲಗಾರಂಗೆ ಸುವರ್ಣದ ವಳಿಯನರಿದು ತೊಳೆಯಬೇಕು.
ಬಲೆಗಾರಂಗೆ ಮತ್ಸ್ಯದ ಬೆಂಬಳಿಯನರಿದು
ಕಲ್ಲಿಯ ವಳಿಯನಿಡಬೇಕು.
ಶಬರಂಗೆ ಸಂಭ್ರಮವ ಬಿಟ್ಟು, ತರು ಲತೆ ಪರ್ಣಂಗಳಂತಿರಬೇಕು.
ಇಂತೀ ಹೊಲಬಿನ ತೆರನಂತೆ ಗುಣವಿವರವನರಿದು,
ಆರಾರ ಇರವಿನ ತೆರನ ಪರಿಹರಿಸಿ,
ತಾ ಸರಿಸವಾಗಿ ನಿರುತಿಗಳ ನಿಜವನರಿದು,
ಪೂಸರ ಆಶೆಯನರಿದು, ವೇಷಗಳ್ಳರ ನಿಹಿತವ ನೋಡಿ,
ವಾಚಕರ ಪರಿಹಾಸಕರ ನೀತಿಯ ತಿಳಿದು,
ಮತ್ತಾವ ರೀತಿನೀತಿಗಳಲ್ಲಿಯೂ ಮಾತ ತಾರದೆ,
ತನ್ನ ಸುನೀತವನೆ ಬೀರಿ, ತನ್ನ ಸದ್ಗುಣ ರೀತಿಯನೆ ತೋರಿ,
ತನ್ನ ಸುಗುಣವಾಸನೆಯನೆ ತೀವಿ,
ಸತ್ಕುಲಭಕ್ತಿಯ ಕುಲರೀತಿಗೆ ತನ್ನ ಸತ್ಯವನೆ ಸಾರಿಯಿಪ್ಪಾತ
ತ್ರಿವಿಧದವನಲ್ಲ, ಅರಿಷಡ್ವರ್ಗಂಗಳೊಳು ನಿಲ್ಲ.
ಪಂಚೇಂದ್ರಿಯಂಗಳ ಸಂಚಿತ ಸುಖದವನಲ್ಲ.
ಮಿಕ್ಕಾದ ಬಹುವಿಷಯದ ಗೊಂಚಲ ತೊಂಬೆಯವಗಿಲ್ಲ.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನೆ./12
ನಿಜಾನಂದ ನಿರ್ಭಿನ್ನವೆಂಬುವ ನಿತ್ಯನಾತನ ಪಿಂಡದೊಳಗೆ
ನಿಶ್ಚಿಂತಾಮೃತವೆಂಬ ದಿವ್ಯಾಮೃತ ಕುಂಭವುಂಟು.
ನಾಭಿಸ್ಥಾನದೊಳಗೆ ಇದ್ದಂಥಾ ಮಹಾಕುಂಭದೊಳಗೆ
ಮಹಾನುಭಾವವೆಂಬುದೊಂದು ಸುವರ್ಣಮಂಟಪವುಂಟು.
ಆ ಸುವರ್ಣ ಮಂಟಪದೊಳಗೆ ರತ್ನಸಿಂಹಾಸನವೆಂಬ ಮಹಾಪೀಠಿಕೆಯುಂಟು.
ಆ ಪೀಠಿಕೆಯ [ಮೇಲೆ] ಸಾಸಿರ ಅನಂತಕೋಟಿಪ್ರಭೆಯೊಳಗಣ
ಕಳಾಸ್ವರೂಪವಪ್ಪುದೊಂದು ಪ್ರಾಣಲಿಂಗ.
ಆ ರತ್ನಪೀಠಿಕೆಯ ಮೇಲೆ ಪ್ರಕಾಶಿಸುತ್ತಿರ್ಪ ಲಿಂಗ.
ಆ ಲಿಂಗವೆ ತನ್ನ ಸ್ವಯಾನಂದದಿಂದ
ಊಧ್ರ್ವವೆಂಬ ಚಕ್ರಸ್ಥಾನದೊಳಗೆ ನಿಂದು ನೋಡುತ್ತಿರಲು
ಒಂದು ಕಮಲ ವಿಕಸಿತವಾಯಿತ್ತು.
ಆ ಕಮಲದೊಳಗೊಂದು ದಿವ್ಯಜ್ಞಾನವೆಂಬುದೊಂದು [ಲಿಂಗ].
ತಲ್ಲಿಂಗ ತೊಳಗಿ ಬೆಳಗಿ ಪ್ರಕಾಶಿಸಿತ್ತು.
ನೋಡುತಿರಲು ತಾನೆ ಪರಂಜ್ಯೋತಿ ದಿವ್ಯವಸ್ತು ಎಂದೆ ಕಾ[ಣಾ],
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗದರಿಕೆಯಾಗಿ./13
ನಿರಾಳ ನಿಶ್ಚಿಂತ ನಿರಾಭಾರಿ ನಿಸ್ಸೀಮನಿಗೆ ಅಗೋಚರ ಶರಣಂಗೆ
ಪರಂಜ್ಯೋತಿರ್ಲಿಂಗ ಪ್ರತ್ಯಕ್ಷವಾಗಿ ತೋರಿದ ಕ್ರಮವೆಂತೆಂದಡೆ: ಪಂಚರತ್ನವೆಂಬ ಸುಲಾ[?]ರತ್ನಮಂಟಪದೊಳಗೆ
ಬೆಳಗುವದೊಂದು ಮುತ್ತಿನ ಪಾಣಿವಟ್ಟವುಂಟು.
ಅದರ ಮಸ್ತಕದ ಮೇಲೊಂದು ಅಮೃತದ ಕಂಕಣವುಂಟು.
ಆ ಕಂಕಣದೊಳಗೊಂದು ನಿಶ್ಚಿಂತಾಮೃತವೆಂಬ ಕಮಲವುಂಟು.
ಆ ಕಮಲದೊಳಗೊಂದು ಮಹಾರತ್ನಪ್ರಕಾಶವೆಂಬುದೊಂದು
ಪ್ರಾಣಲಿಂಗ ಬೆಳಗುತ್ತಿಹದು.
ಆ ರತ್ನಮಂಟಪದೊಳಗೆ ಮಹಾಸ್ಫಟಿಕದ ಭಾಜನವುಂಟು.
ಆ ಭಾಜನದೊಳಗೆ ಜೀವ ನವಪರಬ್ರಹ್ಮನವಗವಿಸಿತ್ತು.
ಆ ಬ್ರಹ್ಮವೆ ತಾನೋ, ನಾನೋ ? ಎಂದು ವಿಚಾರಿಸಿ ನೋಡಿದಡೆ
ಗೋಳಕಾಕಾರ ಸ್ವಯಂಪ್ರಕಾಶ ವಸ್ತು ಎಂದಾತ
ನಮ್ಮ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ತಾನು ತಾನಾದ ಶರಣ./14
ನಿರಾಳದೊಳಗಣ ಲಿಂಗದ ನೆಲೆ ಹೇಂಗೆ ಇದ್ದಿತ್ತು ಎಂದಡೆ:
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಅಂಡವುಂಟು.
ಆ ಅಂಡದೊಳಗೆ ಅಮೃತ ಸರೋದಯವೆಂಬ ಅಷ್ಟದಳಕಮಲವುಂಟು.
ಆ ಕಮಲದಲ್ಲಿ ನಾಲ್ಕಾರು ಮಾಣಿಕ್ಯದ ಕಂಬವುಂಟು.
ಆ ನಟ್ಟನಡುವಣ ನಾಲ್ಕುಮಾಣಿಕ್ಯದ ಕಂಬಕ್ಕೆ
ನಾಲ್ಕು ನವರತ್ನದ ಬೋದಿಗೆಯುಂಟು.
ನಾದವೆಂಬ ನಾಲ್ಕು ಲೋವೆ ನಡುವೆ
ಸೋಮಸೂರ್ಯರೆಂಬೆರಡು ಹಲಗೆಯ ಹರಹಿ,
ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶವೆಂಬ
ಪಂಚರತ್ನದ ಹೃತ್ಕಮಲಕರ್ಣಿಕಾಕಮಲಮಧ್ಯದಲ್ಲಿ ರವೆಯ ಸುತ್ತು ಮುಚ್ಚಿ,
ಅಲ್ಲಿಪ್ಪ ಲಿಂಗಕ್ಕೆ ತನುತ್ರಯ ಜ್ಯೋತಿಯ ಮಾಡಿ
ನಿಮ್ಮ ಶರಣರ ಕಾಯವೇ ಕೈಲಾಸ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರಾಳ/15
ನಿರ್ವಯಲು ಸಾಮೀಪ್ಯ ಸಾಯುಜ್ಯವೆಂಬ ಒಡ್ಡುಗಲ್ಲ ಮೇಲೆ
ಸಕಲಸಾಮ್ರಾಜ್ಯವೆಂಬ ಶಿವಪುರವುಂಟು.
ಆ ಪುರಕ್ಕೆ ವಜ್ರ ಮುತ್ತು ರತ್ನದಿಂದ ತೆತ್ತಿಸಿದ ಕೊತ್ತಳ.
ಕೋಳು ಹೋಗದ ಮುಗಿಲಟ್ಟಣೆಯ ಪುರವನಾಳೆನೆಂಬುವರು.
ಅಂದು ಆಗದು ಸರಸವಲ್ಲ.
ಶಾಸ್ತ್ರದ ಕೊನೆಯ ಮೇಲಣ ಅವಧಾನದಂತೆ
ತೋರಿಯಡಗುವ ವಿದ್ಯುಲ್ಲತೆಯಂತೆ
ಬಯಲಲ್ಲಿ ಮೂಡುವ ಸುರಧನುವಿನಂತೆ
ಮರೀಚಿಕದಂತೆ, ಕುಸುಮದ ನನೆಯಂತೆ
[ದುಗ್ಧಘೃತ] ಮಿಶ್ರದಂತೆ ಮನದಲ್ಲಿಯೇ ವಾಸವಪ್ಪ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು./16
ನಿಶ್ಚಿಂತ ನಿರ್ಲೆಪ ಸಚ್ಚಿದಾನಂದ ಸ್ವರೂಪವಪ್ಪ
ಶರಣನಲಿಂಗದಂಗವ ತೋರಯ್ಯ ಎಂದಡೆ ಶರಣ.
ಶರಣರಿಗೆ ಬಿನ್ನಹಂ ಮಾಡುತ್ತಿರ್ದ, ನಿಮ್ಮ ಶರಣ
ನಿಜಲಿಂಗದ ಕ್ರಮವ.
ಭುವನಾಶ್ರಯವೆಂಬುದೊಂದು ಪದ್ಮಸಿಂಹಾಸನದ ಮೇಲೆ
ಮಾಣಿಕ್ಯವರ್ಣದ ಲಿಂಗವುಂಟು.
ಆ ಲಿಂಗವು ತನ್ನ ನಿಜಾಶ್ರಯವ ನೋಡುತ್ತಿರಲು
ಅಲ್ಲಿ ಚಿದಂಗವೆಂಬ ಮಹಾಹೃತ್ಕಮಲದೊಳಗೆ
ಉನ್ಮನಿಯಸ್ಥಾನವೆಂಬುದೊಂದು [ಉಂಟು].
ಬ್ರಹ್ಮಾನಂದಮಯವೆನಿಪ ನಿಜಾಮೃತಪಾನೀಯವೆಂಬ
ಪಂಚರತ್ನದ ಕಳಸವುಂಟು.
ಆ ಪಂಚರತ್ನದ ಕಳಸದ ಮೇಲೆ
ಇಂಚರನೆಂಬ ಹಂಸನೆಂಬ ಪ್ರಾಣಲಿಂಗವು ಆತ್ಮಪ್ರಭಾಮಂಡಲದೊಳಗಿಹುದು.
ಮಹಾಪ್ರಭೆಯಂ ನುಂಗಿದ ಲಿಂಗವು
ಪದ್ಮಬ್ರಹ್ಮಾಂಡವೆಂಬುದೊಂದು ಆ ಲಯಸ್ಥಾನದಲ್ಲಿ ನೋಡುತ್ತಿರಲು
ಅಲ್ಲಿಂದತ್ತ ಬಟ್ಟಬಯಲಾದ ಅಗಮ್ಯವೆಂಬ ಬಯಲು,
ಆ ಲಿಂಗದೊಳಗಡಗಿ ನಿಂದ ಭಾವವು ತನ್ನೊಳು ತಾನೆ ಕಾಣಿಸಿತ್ತು.
ಅದ ಚೆನ್ನಾಗಿ ತಿಳಿಯಬಲ್ಲಡೆ ಇನ್ನೇಕಯ್ಯಾ ಶಂಕೆ ?
ನಿಃಕಳಂಕ ನಿಜಲಿಂಗವು ತಾನೆ ಎಂದಾತ, ನಮ್ಮ ಬಸವಣ್ಣಪ್ರಿಯ
ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ತಾನು ತಾನಾಗಿ ಇದ್ದಿತ್ತು./17
ಪಂಚರತ್ನವೆಂಬ ಆಕಾರದ ಚಿತ್ಪಿಂಡದೊಳಗೆ
ಸವಿಯುವ ಸವಿಯ ಸವಿದು ನೋಡುತ್ತಿರಲು ಒಂದು ಸ್ಥಾನವುಂಟು.
ಆ ಸ್ಥಾನದೊಳಗೆ ದಿವ್ಯರತ್ನದ ಕುಂಭವುಂಟು.
ಆ ಕುಂಭದೊಳಗೊಂದು ಮಹಾರತ್ನದ ಕಮಲವುಂಟು.
ಆ ಕಮಲದೊಳಗಣ ಅನಾದಿ ಅಮೃತದೊಳಗೆ ನೇಹ…….ವ ಶುದ್ಧವ ಮಾಡಿ
ಆ ಕಮಲದ ನನೆಯ ಹತ್ತಿ, ಇನಿದಾಗಿ ಉಂಡುಂಡು
ಅನುವಾಗಿ ನಿಂದು ನೋಡುವ ಸುಳುಹು ಬೆಳಗು ತಾನೆ ಕಾ[ಣಾ],
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವು ನಿರಾಳ ನಿಶ್ಚಿಂತನು./18
ಪರುಷವ ಸೋಂಕಿದ ಲೋಹಕ್ಕೆ ಮತ್ತೆ ಪರುಷದ ಹಂಗೇಕೆ ?
ಸರ್ಪದಷ್ಟವಾದ ದೇಹಕ್ಕೆ ಕಟುತ್ವ ಮಧುರದ ರಸಂಗಳ
ಪ್ರಮಾಣಿಸಬಲ್ಲುದೆ ?
ಇಂತೀ ದೃಷ್ಟದಂತೆ ಲಿಂಗವಿದ್ದ ತನುವಿಂಗೆ
ಅಷ್ಟೋತ್ತರಶತವ್ಯಾಧಿಗಳಲ್ಲಿ ಕಟ್ಟುವಡೆದು
ಬಂಧನಕ್ಕೊಳಗಾಗುತ್ತ, ತಾಪತ್ರಯದಲ್ಲಿ ಸತ್ತು ಹುಟ್ಟುತ್ತ,
ನಾನಾ ವಿಕಾರದಲ್ಲಿ ನಷ್ಟವಾಗುತ್ತ,
ಮತ್ತೆ ಮಾತಿನ ವಾಸಿಗೆ ಮಿಟ್ಟೆಯ ಭಂಡರಂತೆ ಕಟ್ಟಿ ಹೋರುತ್ತ,
ತಥ್ಯಮಿಥ್ಯದಲ್ಲಿ ಕುಕ್ಕುಳಗುದಿವುತ್ತ,
ಮತ್ತೆ ಭಕ್ತವಿರಕ್ತರೆಂದು ಆತ್ಮತೇಜಕ್ಕೆ ಬಿಕ್ಕನೆ ಬಿರಿವುತ್ತ,
ಇಂತೀ ಕೆಟ್ಟ ಕೇಡ ನೋಡೆ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ಅಂಜಿ ನಷ್ಟವಾಗಿ ಹೋದ./19
ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ
ಅನಾದಿಯ ಮುಟ್ಟದೆ, ಅಪರಿಮಿತವೆಂಬ ಕುಂಭವುಂಟು.
ಆ ಕುಂಭದ ಪೂರ್ವಬಾಗಿಲಿಗೆ ಎಂಟು ಎಸಳಿನ ಬೀಗ.
ಉತ್ತರ ಬಾಗಿಲಿಗೆ ಎಸಳು ಮೂರರ ಬೀಗ.
ಪಶ್ಚಿಮದ ಬಾಗಿಲಿಗೆ ಪಂಚ ಎಸಳಿನ ಬೀಗ.
ದಕ್ಷಿಣದ ಬಾಗಿಲಿಗೆ ಏಕ ಎಸಳಿನ ಬೀಗ.
ಆ ಬೀಗಂಗಳ ದಳದ ಎಸಳಿನಲ್ಲಿ ಕಳೆವಕ್ಷರಗಳೇಳು,
ಉಳಿವಕ್ಷರವಾರು, ಸಲುವಕ್ಷರ ಮೂರು, ನೆಲೆಯಕ್ಷರವೋಂದೇ.
ಇಂತೀ ಎರಡಕ್ಷರವ ಭಾವಿಸಿ ಪ್ರಮಾಣವಿಟ್ಟು ನೋಡಬಲ್ಲಡೆ
ಆ ಕುಂಭದೊಳಹೊರಗ ಕಾಣಬಹುದು.
ಇದು ಲಿಂಗಾಂಗಿಯ ನಿಜೈಕ್ಯಸ್ಥಲವೆಂಬೆ.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ಯೋಗಕ್ಕೆ ಸಿಕ್ಕಲಿಲ್ಲವೆಂಬೆನು./20
ಪೃಥ್ವಿಯ ಮರೆಯ ಸುವರ್ಣದಂತೆ
ಚಿಪ್ಪಿನ ಮರೆಯ ಮುತ್ತಿನಂತೆ
ಅಪ್ಪುವಿನ ಮರೆಯ ಅಗ್ನಿಯಂತೆ
ಒಪ್ಪದೊಳಗಣ ಮಹಾಪ್ರಕಾಶದಂತೆಯಿಪ್ಪ ಘನಲಿಂಗವನರಿಯೆ.
ರುದ್ರ ಬ್ರಹ್ಮ ವಿಷ್ಣ್ವಾವದಿಗಳು ತಮ್ಮ ಆತ್ಮಜ್ಞಾನ
[ನಿಶ್ಚಿಂ]ತೆಯೆಂಬ ನಿಜವ ನೀಗಾಡಿಕೊಂಡರು.
ಇದನರಿಯದೆ ಆಚರಿಸುವರು, ಆರಿಗೂ ಅಳವಲ್ಲವಯ್ಯಾ.
ಇಷ್ಟಪ್ರಾಣಭಾವಸಂಬಂಧಿಗಳಪ್ಪ
ಸದ್ಭಾವಾಚಾರವೆಡೆಗೊಂಡ ಶರಣಂಗಲ್ಲದೆ
ಮಿಕ್ಕಿನ ದುರಾಚಾರಿಗಳಿಗೆ ಸಾಧ್ಯವಲ್ಲ,
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು./21
ಫೋರಾರಣ್ಯದ ಮಧ್ಯದಲ್ಲಿ
ಮೇಲುಗಿರಿ ಪರ್ವತವೆಂಬ ಅಗ್ರದ ಕೊನೆಯ ಮೇಲೆ
ಭಕ್ತಿಜ್ಞಾನವೈರಾಗ್ಯವೆಂಬ ಅಂಗಮಂಡಲದೊಳಗೆ
ಮೂವತ್ತಾರು ಮಾಣಿಕ್ಯದ ಕಂಬದ ಮಂಟಪದೊಳಗೆ
ಸಚ್ಚಿದಾನಂದ ದಿವ್ಯಪರಂಜ್ಯೋತಿಯನಿಕ್ಕಿ ನೋಡಲು
ಅದನೇನೆನ್ನಬಹುದು.
ಒಳಗೆ ನೆನೆಯದೆ, ಹೊರಗೆ ಮುಟ್ಟದೆ
ಬೆಳಗು ಬೆಳಗ ಕೂಡಿದಂತೆ
ಆಕಾಶ ಮಹದಾಕಾಶವ ಕೂಡಿದಂತೆ
ಆ ನುಡಿಗೆಡೆಯಿಲ್ಲದ ಬೆಡಗಿನ ಕೀಲ ಕಳಚಬಲ್ಲಡೆ
ಮತ್ತೆ ಅರಸಲಿಲ್ಲ,
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವ./22
ಬಾಯಿ ಮುಚ್ಚಿ ಉಂಡಡೆ ಸಾವಧಾನಿಯೆಂಬೆ.
ಕಣ್ಣುಮುಚ್ಚಿ ನೋಡಿದಡೆ ಧ್ಯಾನಜ್ಞಾನಿಯೆಂಬೆ.
ಅಂಗ ನಷ್ಟವಾಗಿ ಕೂಡಿದಡೆ ಲಿಂಗಾಂಗಿಯೆಂಬೆ.
ಇಂತೀ ಭಾವಂಗಳಲ್ಲಿ ಭ್ರಮೆಯಿಲ್ಲದೆ,
ಆವ ಜೀವಂಗಳಲ್ಲಿ ನೋವ ತಾರದೆ,
ಚಿಂತೆ ಸಂತೋಷವೆಂಬ ಅಂತುಕಕ್ಕೊಳಗಾಗದೆ,
ಭ್ರಾಂತರ ಕೂಡಿ ಭ್ರಮೆಗೊಳಗಾಗದೆ,
ಕಾಂತೆಯರ ಕಲೆಯ ಬಲೆಯ ಒಳಗಾಗಿ ವಿಶ್ರಾಂತಿಯ ನೀಗಾಡಿಕೊಳ್ಳದೆ,
ಸರ್ವರಲ್ಲಿ ಶಾಂತನಾಗಿ ನಿಗರ್ವಿಯಾಗಿ
ನಿಃಕಳನಾಗಿ ನಿಜತತ್ವನಿಳಯ ನಿವಾಸನಾಗಿ
ಪರಬ್ರಹ್ಮಲೋಕ ಆನಂದ ಅವಿರತನಾಗಿಪ್ಪಾತನೆ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ತಾನು ತಾನಾದ ಶರಣ./23
ಮಾತೆಯ ಆತ್ಮದಲ್ಲಿ ರೇತ ರಕ್ತವು ಕೂಡಿ
ಕೆನ್ನೀರ ಮುತ್ತಿನಂತಾಯಿತ್ತಯ್ಯ.
ಆ ಕೆನ್ನೀರ ಮುತ್ತು ವಿದ್ರುಮದಾಕಾರವಾಯಿತ್ತಯ್ಯ,
ಆ ವಿದ್ರುಮದಾಕಾರ ಒಂದು ಹಿಡಿಯಾಯಿತ್ತಯ್ಯ.
ಆ ಹಿಡಿಯಾದುದಕ್ಕೆ ಆಕಾರ ಅಂದವಾಗಿ ಓಂಕಾರ ಸ್ವರೂಪವಾಯಿತ್ತಯ್ಯ.
ಆ ಓಂಕಾರಸ್ವರೂಪವಾದ ಪಿಂಡಕ್ಕೆ ನವಮಾಸ ತುಂಬಿ
ತೆರಪಾದ ಬಾಗಿಲಲ್ಲಿ ಬಂದ ಆತ್ಮನ ಅಂಗವೆ ಅನುವಾಗಿ ಆಯತವಾಯಿತ್ತು.
ಆ ಆಯತವಾದ ಆತ್ಮನು ತನ್ನ ಅಂಗದೊಳ ಹೊರಗೆ ನೋಡುತ್ತಿರಲು
ಅಂಗವೆ ಪಾಣಿವಟ್ಟವಾಯಿತ್ತು, ಲಿಂಗವೆ ಶಿರಸ್ಸು ಆಯಿತ್ತು.
ಆ ಶಿರಸ್ಸಿನೊಳಗೆ ಎರಡು ಜ್ಯೋತಿಯುಂಟು.
ಆ ಎರಡು ಜ್ಯೋತಿಯ ನಡುಮಧ್ಯಸ್ಥಾನದಲ್ಲಿ
ಒಂದು ಅಮೃತದ ಕಮಲವುಂಟು.
ಆ ಕಮಲದೊಳಗಣ ಅಮೃತವನುಣಬಲ್ಲಡೆ
ಆತನೆ ಪಿಂಡಾಂಡಜ್ಞಾನಿಯೆಂದಾತ
ನಮ್ಮ ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವೆಂಬೆ./24
ಮೂರಂಗುಲದಲ್ಲಿ ಅಳೆದು, ಐದಂಗುಲದಲ್ಲಿ ಪ್ರಮಾಣಿಸಿ
ಆರಂಗುಲದಲ್ಲಿ ವಟ್ಟಕ್ಕೆ ಶುದ್ಧವಾಯಿತ್ತು.
ಎಂಟರಳತೆ ಹದಿನಾರರ ಚದುರಸ
ಮೂವತ್ತೆರಡರ ಮಧ್ಯದಲ್ಲಿ ಹಸ್ತಕಂಬಿಯನಿಕ್ಕಿ
ಮೂರರಲ್ಲಿ ಭಾಗಿಸಲಾಗಿ, ಎರಡು ಒಳಗು ನಿಂದಿತ್ತು.
ಒಂದು ಹೊರಗಾದ ಕೈಸಾಲೆಯಾಯಿತ್ತು.
ಈ ಕೆಲಸವ ಹೊರಗೆ ಬಾಚಿಯಲ್ಲಿ ಸವೆದೆ,
ಒಳಗೆ ಉಳಿಯಲ್ಲಿ ಸವೆದೆ. ಇಂತೀ ತೆರನ ತಿಳಿದಡೆ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ. /25
ರತ್ನಜ್ಯೋತಿಯ ಪ್ರಭೆಯೊಳಗಣ ಸ್ವಯರತ್ನ ಶರಣಂಗೆ
ತತ್ಪದವೆಂದಡೇನಯ್ಯ ? ತ್ವಂ ಪದವೆಂದಡೇನಯ್ಯ ?
ಅಸಿಪದವೆಂದಡೇನಯ್ಯ ?
ತತ್ಪದವೆಂದಡೆ ಲಿಂಗ, ತ್ವಂ ಪದವೆಂದಡೆ ಅಂಗ,
ಅಸಿಪದವೆಂದಡೆ ಲಿಂಗಾಂಗಸಂಯೋಗವಯ್ಯ.
ಇಂತೀ ತ್ರಿವಿಧವನು ಮೀರಿದಾತ ಸ್ವಾನುಭಾವ ಸಂಪನ್ನ, ಸ್ವಯಂಭು ತಾನೆ.
ಅಖಂಡದಾಕಾರ ಆದಿವಸ್ತು ತಾನೆಂದರಿಯದೆ
ತತ್ಪದವೆ ಲಿಂಗವೆಂದು ಬೆರತಿಪ್ಪರು ಆ ಲಿಂಗ ತಮಗೆಲ್ಲಿಯದು ?
ಅಸಿಪದವೆ ಲಿಂಗಾಂಗಸಂಯೋಗವೆಂಬರು.
ಆ ಲಿಂಗಾಂಗಸಂಯೋಗ ತಮಗೆಲ್ಲಿಯದು ?
ಲಿಂಗ ತಮ್ಮದೆಂಬರು, ಪೃಥ್ವಿಯ ಹಂಗು.
ಅಂಗ ತಮ್ಮದೆಂಬರು, ಅಪ್ಪುವಿನ ಹಂಗು.
ಜ್ಞಾನ ತಮ್ಮದೆಂಬರು, ತೇಜದ ಹಂಗು.
ಇಂತೀ ತ್ರಿವಿಧದ ಹಂಗ ಹರಿದು ಲಿಂಗವೆ ತಾನಾದ
ಬಸವಣ್ಣ ಸಾಕ್ಷಿಯಾಗಿ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವಾಯಿತ್ತು./26
ರುಜೆ ರೋಗಂಗಳು ಲಿಂಗದೇಹಿಗಳೆಂಬವರ ಸೋಂಕಿದಲ್ಲಿ,
ರೋಗದ ಇಚ್ಫೆಯನರಿದು ನೆರಳಿದಲ್ಲಿ,
ಲಿಂಗದ ಚಿತ್ತವೆತ್ತಹೋಯಿತ್ತು ?
ಪಂಚಾಕ್ಷರಿ ಪ್ರಣವ ನಷ್ಟವಾಯಿತ್ತು.
ಅರ್ಚನೆಯ ಪೂಜೆ ಕೆಟ್ಟಿತ್ತು. ಕೃತ್ಯದ ನೇಮ ಭ್ರಷ್ಟವಾಯಿತ್ತು.
ಇಂತಿವರ ಲಿಂಗದೇಹಿಗಳೆಂದಡೆ ಲಿಂಗಸಂಗಿಗಳೊಪ್ಪುವರೆ ?
ಈ ಗುಣ ಸಂಗನಬಸವಣ್ಣಂಗೆ ದೂರ.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗಕ್ಕೆ ದೂರ./27
ವಜ್ರದ ಘಟ, ಸೂಜಿಯಲ್ಲಿ ಛಿದ್ರಿಸಿಕೊಂಬುದೆ ?
ಭದ್ರಗಜ, ಅಜಕುಲದಲ್ಲಿ ಗಜರ್ಿಸಿಕೊಂಬುದೆ ?
ನಿರ್ಧರದ ಭಟ, ಜೀವಗಳ್ಳನಲ್ಲಿ ಅದ್ದಲಿಸಿಕೊಂಬನೆ ?
ಇಂತೀ ನಿರ್ಧರವ ತಿಳಿದಲ್ಲಿ, ಸಕಲವಿಷಯ ರೋಗರುಜೆಗಳಲ್ಲಿ
ಮಿಕ್ಕಾದ ತಾಪತ್ರಯಂಗಳಲ್ಲಿ ಲಿಂಗಾಂಗಿ ಒಡಲಗೊಡುವನೆ ?
ಇಂತಿವ ಕಂಡು ಮುಂಗಯ್ಯಾಭರಣಕ್ಕೆ ಮುಕುರದ ಹಂಗೇಕೆ ?
ತಾ ಕಂಡು ನೋಡಿದ ಮತ್ತೆ ಇನ್ನಾರುವ ಕೇಳಲೇತಕ್ಕೆ ?
ಇಂತಿವನರಿದು, ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ಹುಟ್ಟುಗೆಟ್ಟ./28
ವಿಕಾರಿ ವಿರಕ್ತನಲ್ಲ.
ಪ್ರಕೃತಿಜೀವಿ ಅರ್ತಿಕಾರ ಕ್ಷಣಿಕ ಪರಿಹಾಸಕ ಭಕ್ತನಲ್ಲ.
ಕುಚಿತ್ತ ಕುಹಕ ದುರ್ವಿದಗ್ಧ ಪಿಸುಣ
ಘಾತುಕ ಅಪ್ರಮಾಣ ಗುರುಮೂರ್ತಿಯಲ್ಲ.
ಈ ತ್ರಿವಿಧಧರ್ಮ ಇದಿರಾತ್ಮನನರಿಯದೆ
ಬೇಡಿ ಕಾಡಿಯುಂಬವ ಚರಮೂರ್ತಿಯಲ್ಲ.
ಸತ್ಯರುಗಳ ಇಚ್ಫೆಯನರಿದು
ಅಚ್ಚೊತ್ತಿದಂತಿರದಿರ್ದಡೆ ಕರ್ತೃಸ್ವರೂಪಕೆ ಸಲ್ಲ.
ಇಂತಿವರಲ್ಲಿ ಅವಗುಣವ ಕಂಡು ಭಕ್ತಂಗೆ ಬಿಡಬಾರದು.
ಬಾಯೊಳಗಣ ಬಗದಳದಂತೆ ವಿರಕ್ತಂಗೂ ಗುರುಚರಕ್ಕೂ
ಪರಶಿವಮೂರ್ತಿಗೂ ಸದ್ಭಕ್ತನೆ ಘನ.
ಅಷ್ಟಾಷಷ್ಟಿಕೋಟಿತೀರ್ಥಂಗಳು, ದಿವ್ಯದೇವಸ್ಥಾನಂಗಳು
ಸಕಲ ವೇದ ಶಾಸ್ತ್ರ ಪುರಾಣ ಆಗಮಂಗಳು
ಭಕ್ತನ ಬಾಗಿಲ ನೀರಿಂಗೆ ಸರಿಯಲ್ಲವೆಂದು
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ಭಕ್ತರ ಕಟ್ಟುಗೊತ್ತಿನಲ್ಲಿರಬೇಕು./29
ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು
ವೇದೋಪನಿಷತ್ತು ಶಾಸ್ತ್ರ ಆಗಮ ಪುರಾಣ ಶಬ್ದ ಜ್ಯೋತಿಷ ವ್ಯಾಕರಣ
ಯೋಗಾಭ್ಯಾಸ ವೀಣಾಭರಣ[ತ?] ಛಂದಸ್ಸು ನಾಟಕಾಲಂಕಾರ
ಇಂತೀ ಪರೀಕ್ಷೆಯು ನೋಡುವ ಅಯ್ಯಗಳ ಎಲ್ಲ ತನ್ನ
ಜವನಿಕೆಯೊಳಗೆ ಕೆಡಹಿಕೊಂಡಿತ್ತು.
ಧ್ಯಾನ ಮೌನದಿಂದ ಕಂಡೆಹೆನೆಂಬವರ ಅಜ್ಞಾನಕೆ ಒಡಲುಮಾಡಿತ್ತು.
ತತ್ವದವ ನೋಡೆಹೆನೆಂಬವರ ಮೆಚ್ಚಿಸಿ ಮರುಳುಮಾಡಿತ್ತು.
ಅಂಗವೆಲ್ಲವನರಿದೆನೆಂಬವರ ಹಿಂಗದೆ
ತನ್ನ ಅಂಗದ ಬಲೆಯೊಳಗೆ ಕೆಡಹಿತ್ತು.
ಲಿಂಗಮೋಹಿಗಳೆಂಬವರ ತನ್ನ ಸಂಗದ
ಅನಂಗನ ಅಂತರಂಗಕ್ಕೆ ಒಳಗುಮಾಡಿತ್ತು.
ವೇದವೇದ್ಯವೆಂಬರೆಲ್ಲರನು ಏಕಾಂತದೊಳಗೆ ತಳಹೊ[ವ?]ಳಗೊಳಿಸಿತ್ತು.
ಕಣ್ಣ ಮುಚ್ಚಿ ಜಪ ಧ್ಯಾನ ಶೀಲ ಮೌನ ನೇಮ
ನಿತ್ಯವ ಹಿಡಿವ ವ್ರತಿಗಳ ನಾನಾ ಭವದಲ್ಲಿ ಬರಿಸಿತ್ತು.
ವಾಗದ್ವೈತವ ನುಡಿವ ಅರುಹಿರಿಯರೆಂಬವರ
ಜಾಗ್ರದಲ್ಲಿ ಆಕ್ರಮಿಸಿಕೊಂಡಿತ್ತು. ಸ್ವಪ್ನದಲ್ಲಿ ಮೂÙರ್ಳತರ ಮಾಡಿತ್ತು.
ಸುಷುಪ್ತಿಯಲ್ಲಿ ಕಂಡೆನೆಂಬವರ
ವ್ಯಾಪ್ತಿಯೆಂಬ ಬೇಳುವೆಗೊಳಗುಮಾಡಿತ್ತು.
ಇಂತೀ ತ್ರಿವಿಧದೊಳ ಹೊರಗಿನ ಭೇದವನರಿಯದ
ಪ್ರಪಂಚುದೇಹಿಗಳಿಗೆ ವಿರಕ್ತಿ ಇನ್ನೆಲ್ಲಿಯದು ? ಘಟಿಸದು ಕಾ[ಣಾ].
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ನಿರ್ಧರವಾದಲ್ಲಿ ನಿವಾಸವಾಗಿಪ್ಪನು./30