Categories
ಶರಣರು / Sharanaru

ಬಹುರೂಪಿ ಚೌಡಯ್ಯ

ಅಂಕಿತ: ರೇಕಣ್ಣಪ್ರಿಯ ನಾಗಿನಾಥ
ಕಾಯಕ: ಬಹುರೂಪ ಧರಿಸುವ ನಟ – ನಗೆಗಾರ

ಜನಪದ ಕಲಾವಿದನಾದ ಈತನ ಹುಟ್ಟೂರು ರೇಕಳಿಕೆ. ಕಲ್ಯಾಣಕ್ಕೆ ಬಂದು ಬಹುರೂಪಿ ಕಾಯಕದ ಮೂಲಕ ಶರಣ ಬದುಕನ್ನು ನಡೆಸುತ್ತಾನೆ. ಕಾವ್ಯ-ಪುರಾಣಗಳಲ್ಲಿ ಜನಪದ ಹಾಡುಗಳಲ್ಲಿ ಈತನ ಕಥೆ ಪ್ರಸಿದ್ಧವಾಗಿದೆ. ನಿಪುಣ ನಟ, ನಗೆಗಾರನಾಗಿದ್ದಂತೆ, ಚೌಡಯ್ಯ ಉತ್ತಮ ವಚನಕಾರನೂ ಆಗಿದ್ದಾನೆ. ‘ರೇಕಣ್ಣಪ್ರಿಯ ನಾಗಿನಾಥ’ ಅಂಕಿತದಲ್ಲಿ ೬೬ ವಚನಗಳು ದೊರೆತಿವೆ. ಅವು ಹಚ್ಚಾಗಿ ಬಹುರೂಪ ವೃತ್ತಿಪರಿಭಾಷೆಯಲ್ಲಿ ತತ್ವಭೋದೆ ಮಾಡುತ್ತವೆ. ಕೆಲವು ಬೆಡಗಿನ ವಚನಗಳೂ ಇವೆ.

ಬಹುರೂಪದ ಸ್ವರೂಪವನ್ನು ಹಲವು ವಚನಗಳಲ್ಲಿ ತಿಳಿಸಿರುವನು. ತನ್ನಂಥ ಜಾನಪದ ಕಲಾವಿದನನ್ನು ಬಸವಣ್ಣ ಮನ್ನಿಸಿದ ಕಾರಣಕ್ಕಾಗಿ ಬಸವನ ಶಿಶು ನಾನು ಎಂದು ಗೌರವಪೂರ್ವಕವಾಗಿ ಹೇಳುವನು. ಶೈವ ಗುರುವಿನ ಕೈಯಲ್ಲಿ ಲಿಂಗಧಾರಣೆಯಾದ ಮೇಲೆ ಲಿಂಗಾಯತ ಗುರುವಿನಿಂದ ಮತ್ತೆ ಲಿಂಗವನ್ನು ಪಡೆದದ್ದೇ ಆದರೆ ಆತ ಇಹಲೋಕ ಪೂಜ್ಯ ಪರಲೋಕ ಪೂಜ್ಯನೆಂದಿರುವುದು. ಜಂಗಮದ ಪಾದತೀರ್ಥ ಪ್ರಸಾದಗಳನ್ನು ಸ್ವೀಕರಿಸದ ಗುರುವಿನಿಂದ ಲಿಂಗಧಾರಣ ಮಾಡಿಸಿಕೊಳ್ಳಬಾರದು ಎನ್ನುವ ಕರ್ಮಿಯ ಮಾತನ್ನು ಕೇಳಲಾಗದು – ಎನ್ನುವ ಇವನ ಮಾತುಗಳು ಗಮನಾರ್ಹವಾಗಿವೆ. ಸಾಹಿತ್ಯಕವಾಗಿ ಇವನ ವಚನವನ್ನು ಗಮನಿಸಿದಾಗ ಅಭಿವ್ಯಕ್ತಿಯಲ್ಲಿ ಹೊಸತನ ಕಂಡುಬರುತ್ತದೆ.