Categories
ವಚನಗಳು / Vachanagalu

ಬಾಲಬೊಮ್ಮಣ್ಣನ ವಚನಗಳು

231
ಅಜ್ಞಾನವ ಸುಜ್ಞಾನದಿಂದ ತಿಳಿಯಬೇಕೆಂಬರು
ಅಜ್ಞಾನಕೂ ಸುಜ್ಞಾನಕೂ ಪದರದ ಚೀಲವೆ ?
ಕ್ರೀಯಿಂದ ನಿಃಕ್ರೀಯನರಿಯಬೇಕೆಂಬರು
ಕ್ರೀಗೂ ನಿಃಕ್ರೀಗೂ ಅಡಿಕಿನ ಮಡಕೆಯೆ ?
ಸರ್ವಸಂಗವ ಪರಿತ್ಯಾಗವ ಮಾಡಿ, ಲಿಂಗವ ಒಡಗೂಡಬೇಕೆಂಬರು
ಆ ಲಿಂಗವೇನು ವಿಧಾಂತರ ಲಾಗಿನ ಮೆಚ್ಚೆ ?
ಮೂರ ಬಿಟ್ಟು, ಒಂದ ಮುಟ್ಟಿದಲ್ಲಿ ಅಜ್ಞಾನವಡಗಿತ್ತು.
ಆರ ಬಿಟ್ಟು, ಮೂರ ಹಿಡಿದಲ್ಲಿ
ಕ್ರೀ ನಷ್ಟವಾಗಿ ನಿಃಕ್ರೀ ನೆಲೆಗೊಂಡಿತ್ತು.
ಸರ್ವಾತ್ಮನ ಗುಣದ ವಿವರವ ತಿಳಿದು
ಆತ್ಮನ ಗುಣವ ತನ್ನದೆಂದರಿದಲ್ಲಿ
ಸರ್ವೆಂದ್ರಿಯ ನಷ್ಟ, ನಿಶ್ಚೈಸಿದಲ್ಲಿ ಸರ್ವವಿರಕ್ತನು.
ಇಂತೀ ಗುಣ ವಿವರವ ಮರೆದು
ಊರ ಗುದ್ದಲಿಯಲ್ಲಿ ನಾಡ ಕಾಲುವೆಯ ತೆಗೆಯುವವನಂತೆ
ಬಹುಬಳಕೆಯ ಬಳಸದೆ
ಅರಿವು ತಲೆದೋರಿದಲ್ಲಿ, ಉಳಿಯಿತ್ತು ಪಾಶ ಕೆಲದಲ್ಲಿ
ವೀರಶೂರ ರಾಮೇಶ್ವರಲಿಂಗವನರಿಯಲಾಗಿ.
232
ಊರಿಗೆ ಹೋಹಾತ ದಾರಿಯ ಭಯಂಗಳನರಿದು
ಆರೈಕೆಯಿಂದ ಹೋಗಬೇಕು.
ಕುರಿತ ಕುರುಹ ಹಿಡಿವನ್ನಕ್ಕ ಭೇದ ವಿವರವ ಸೋಧಿಸಬೇಕು.
ಸೋಧಿಸಿ ಸ್ವಸ್ಥವಾಗಿ ನಿಜನಿಂದಲ್ಲಿ
ಉಭಯದ ಕುರುಹು ಅನಾದಿಯಲ್ಲಿ ಅಡಗಿತ್ತು.
ಅಡಗಿದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕುರುಹಿಡಲಿಲ್ಲ.
233
ಕಂಡುದೆಲ್ಲವೂ ಜಗದ ಸೊಮ್ಮು.
ಕಾಣುದದೆಲ್ಲವೂ ಮಾಯೆಯ ಸೊಮ್ಮು.
ಕಂಡುದ, ಕಾಣದುದ ತಾ ನಿಧಾನಿಸಿಕೊಂಡು
ತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟು
ಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆ
ದೃಕ್ಕು ದೃಶ್ಯಕ್ಕೆ ಹೊರಗಾಗಬೇಕು,
ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ
234
ಕನ್ನಗತ್ತಿ ಮಣ್ಣ ಕೆಡಹಿದ ಬಳಿಕ
ಮಣ್ಣ ತೆಗೆಯಬಲ್ಲುದೆ ?
ಇಂತೀ ಉಭಯಾನುಭಾವಬೇಕು.
ಕನ್ನವ ಸವೆದ ಕತ್ತಿ ಕಳಬಲ್ಲುದೆ ?
ಇಂತೀ ಬಿನ್ನಾಣದ ದೃಷ್ಟವ ತಿಳಿದು
ಅರಿವುದ ಅರುಹಿಸಿಕೊಂಬುದೆ ?
ಅರಿದ ಅರಿವ ಅರಿವನ್ನಕ್ಕ
ವೀರಶೂರ ರಾಮೇಶ್ವರಲಿಂಗವ
ಅರ್ಚಿಸುತ್ತ, ಪೂಜಿಸುತ್ತ ಚಿತ್ತಶುದ್ಧನಾಗಿರಬೇಕು.
235
ಕುರುವಿಟ್ಟರೆ ತಾ ದಿಟವಲ್ಲ.
ತನ್ನೊಳ್ಪುದಿದಿರೆ ಅದು ನಿಜವಲ್ಲ.
ಪುನರಪಿಯೊಳ್ನಿಂತಿರೆ ಅದು ಸಹಜವಲ್ಲ.
ಇಂತೀ ತ್ರಿವಿಧವಲ್ಲದೆ ಅಳಿವ ಉಳಿಮೆ ತಿಳಿದು,
ವೀರಶೂರ ರಾಮೇಶ್ವರಲಿಂಗವ ಕೂಡಬೇಕು.
236
ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರದೇವರು.
ಲಿಂಗದಲ್ಲಿ ನಿಬ್ಬೆರಗಾದರಯ್ಯಾ ಅನುಮಿಷದೇವರು.
ಜಂಗಮವಾಗಿ ಸುಳಿದರಯ್ಯಾ ಪ್ರಭುದೇವರು.
ಪ್ರಸಾದವ ಕೊಂಡು ಪಥವ ತೋರಿದರಯ್ಯಾ ಬಿಬ್ಬಿಬಾಚಯ್ಯಗಳು.
ಲಿಂಗದಲ್ಲಿ ನಿರ್ವಯಲಾದರಯ್ಯಾ ನೀಲಲೋಚನೆಯಮ್ಮನವರು.
ಸೌರಾಷ್ಟ್ರಮಂಡಲದಲ್ಲಿ ಮೆರೆದರಯ್ಯಾ ಓಹಿಲದೇವರು.
ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದ
ಕೊಂಡು ಬದುಕಿದೆನಯ್ಯಾ, ವೀರಶೂರ ರಾಮೇಶ್ವರಾ
237
ದುರ್ವಿಕಾರದಲ್ಲಿ ನಡೆದು, ಗುರುಲಿಂಗವ ಪೂಜಿಸಬೇಕು.
ಮನವಿಕಾರದಲ್ಲಿ ನಡೆದು, ಶಿವಲಿಂಗವ ಪೂಜಿಸಬೇಕು.
ತ್ರಿವಿಧ ವಿಕಾರದಿಂದ ನಡೆದು, ಜಂಗಮಲಿಂಗವ ಪೂಜಿಸಬೇಕು.
ಒಳಗನರಿದು ಹೊರಗ ಮರೆದ ಮತ್ತೆ
ವೀರಶೂರ ರಾಮೇಶ್ವರಲಿಂಗವ ಕೂಡಬೇಕು.
238
ಪ್ರಾಣಕೂ ಲಿಂಗಕೂ ಅನುಸಂಧಾನವ ಮಾಡಬೇಕೆಂಬಲ್ಲಿ
ಮಣಿಯ [ನಿ]ರಾಳದಲ್ಲಿ ಏರುವ ನೂಲೆ ?
ರಾಗಾದಿ ವ್ಯಾಮೋಹ ತಥ್ಯಮಿಥ್ಯ ನಿಶ್ಚಯವಾದಲ್ಲಿಯೆ
ವಸ್ತುವಿನಲ್ಲಿ ಅನುಸಂಧಾನವಾದ ಚಿತ್ತವ
ಸನ್ನೆ ಸಂಜ್ಞೆಯ ಮಾಡಿ ಗೂಡಿಸಲಿಲ್ಲ.
ಆಯದಲ್ಲಿ ಗಾಯವಾದ ಆತ್ಮನ ಸ್ವಸ್ಥದಂತೆ
ಅರಿದಲ್ಲಿಯೆ ಮಾಯಾಮಲ ಕರ್ಮ ಬಿಟ್ಟುದು,
ವೀರಶೂರ ರಾಮೇಶ್ವರಲಿಂಗವನರಿದುದು.
239
ಸೂತ್ರದ ಸಂಚದಿಂದ ಉಭಯ ಬೊಂಬೆ ನಡೆದು
ಹೊಡೆದಾಡಿ ಕೆಡದ ಮತ್ತೆ ಸಂಚದ ನೂಲು ಅಲ್ಲಿಗೆ ಲಕ್ಷ.
ಇಷ್ಟ ಪ್ರಾಣ ಒಡಗೂಡಿದ ಮತ್ತೆ
ಕೊಟ್ಟಿಹೆ ಕೊಂಡಿಹೆನೆಂಬ ಅರಿವು ದೃಷ್ಟವ ಕಂಡದರಲ್ಲಿ ನಷ್ಟ.
ಇಂತೀ ಭೇದಂಗಳಲ್ಲಿ ವೇಧಿಸುವನ್ನಕ್ಕ
ವೀರಶೂರ ರಾಮೇಶ್ವರಲಿಂಗವ
ಉಜ್ಜುತ್ತ ಒರೆಸುತ್ತ ತೊಳೆವುತ್ತ ಹಿಳಿವುತ್ತ
ಪೂಜಿಸಿ ಆಳುತ್ತ ಇರಬೇಕು.
240
ಸ್ಥೂಲದಿಂದ ದೃಷ್ಟ.
ಸೂಕ್ಷ್ಮದಿಂದ ಅದರ ಸಸುಂಗ.
ಕಾರಣದಿಂದ ವಾಯುಭ್ರಮೆ.
ಇಂತೀ ತನುತ್ರಯಂಗಳ ಕಳೆದು
ನಿಜ ಉಳುಮೆಯಲ್ಲಿ ಒಡಗೂಡಬೇಕು,
ವೀರಶೂರ ರಾಮೇಶ್ವರಲಿಂಗಾ.
241
ಹಾವಿನ ಬಿಲದಲ್ಲಿ ಕೋಲನಿಕ್ಕಲಾಗಿ
ಕೋಲ ಬೆಂಬಳಿಯಲ್ಲಿ ಹಾಯ್ವ ಹಾವಿನ ತೆರನಂತೆ
ನಿಶ್ಚಯವಸ್ತು.
ಇದನರಿವುತ್ತವೆ ನಿಜವಸ್ತುವಿನ ಗುಣ
ಮೋಹದಲ್ಲಿ ಅಚ್ಚೊತ್ತಿದಂತೆ
ಎರಡಳಿಯಬೇಕು, ವೀರಶೂರ ರಾಮೇಶ್ವರನಲ್ಲಿ.