Categories
ಶರಣರು / Sharanaru

ಬಾಲಬೊಮ್ಮಣ್ಣ

ಅಂಕಿತ: ವೀರಶೂರ ರಾಮೇಶ್ವರ

‘ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ’ದಲ್ಲಿ ಈತನ ಕುರಿತು ಹೀಗೆ ಹೇಳಲಾಗಿದೆ. ಸಿದ್ಧರಾಮಯ್ಯ ಸೊಲ್ಲಾಪುರದಲ್ಲಿ ದೇವಾಲಯ ಕಟ್ಟಿಸಿ ಲಿಂಗಪೂಜೆಯನ್ನು ನೆರವೇರಿಸುತ್ತಿದ್ದ. ಆಗ ಬಾಲಬೊಮ್ಮಣ್ಣ ತನಗೆ ಲಿಂಗಪ್ರತಿಷ್ಠೆ ಮಾಡಿ ಪೂಜಿಸುವುದಕ್ಕೆ ಹಣವಿಲ್ಲವೆಂದು ಚಿಂತೆಗೀಡಾದ. ಸಿದ್ಧರಾಮಯ್ಯ ಆತನ ಮನಸ್ಥಿತಿ ಕಂಡು ಹತ್ತಿರ ಕರೆದು ಹಾರೆ, ಗುದ್ದಲಿ ಕೊಟ್ಟು ಅಂಗಳದಲ್ಲಿ ಅಗೆಯಲು ಹೇಳಿದ, ನೆಲವನ್ನು ಅಗೆಯಲು ಹೊನ್ನಿನ ಕೊಪ್ಪರಿಗೆ ದೊರೆಯಿತು. ಆದರಿಂದ ಗುಡಿಯನ್ನು ಕಟ್ಟಿಸಿ, ಲಿಂಗಪ್ರತಿಷ್ಠೆಮಾಡಿ ಪೂಜಿಸುತ್ತ ಬೊಮ್ಮಣ್ಣ ಸುಖವಾಗಿದ್ದನು. ಈ ಕಥೆಯನ್ನು ಸಮರ್ಥಿಸುವಂತೆ ಈತನ ವಚನಗಳಲ್ಲಿ ಉಲ್ಲೇಖಗಳು ಬಂದಿವೆ. ಕಾಲ-೧೧೬೦. ‘ವೀರಶೂರ ರಾಮೇಶ್ವರ’ ಅಂಕಿತದಲ್ಲಿ ೧೧ ವಚನಗಳು ದೊರೆತಿವೆ. ಶರಣಸ್ತುತಿ, ಲಿಂಗನಿಷ್ಠೆ, ತತ್ವಬೋಧೆ ಇವುಗಳಲ್ಲಿ ವ್ಯಕ್ತವಾಗಿವೆ.

ರೇವಣಸಿದ್ಧೇಶ್ವರರು, ಅನಿಮಿಷ, ಪ್ರಭು, ಬಿಬ್ಬಿಬಾಚಯ್ಯ, ನೀಲಲೋಚನೆ, ಓಹಿಲ ಇತರ ಬಯಲ ಪ್ರಸಾದವನ್ನು ಸ್ವೀಕರಿಸಿ ಬದುಕಿದೆ ಎಂದಿರುವನು. ಹಾವಿನ ಬಿಲದಲ್ಲಿ ಕೋಲನ್ನು ಇಕ್ಕಲಾಗಿ ಕೋಲಿನ ಹಿಂದೆ ಬರುವ ಹಾವಿನಂತೆ ನಿಶ್ಚಯವಸ್ತು ಎನ್ನುವ ಉಪಮೆ ಮನೋಹರವಾಗಿದೆ.