Categories
ವಚನಗಳು / Vachanagalu

ಮಧುವಯ್ಯನ ವಚನಗಳು

ಅಂಗಜನ ಮನೆಯಲ್ಲಿ
ಬಂದಬಂದವರೆಲ್ಲರೂ
ಮಿಂದು ಉಂಡು ಉಟ್ಟು ಸಂದಣಿಗೊಳ್ಳುತ್ತಿದ್ದರೆ,
ಅಂಗಜನ ಬಾಗಿಲ ಕಾವ
ಕಂದಲೆಂಕರಿಗೇಕೆ ಅರ್ಕೆಶ್ವರಲಿಂಗದ ಒಲುಮೆ ?/1
ಅಂಗೈಯದು ಹೆಂಗಳಾಗಿ, ನೋಡುವ ಕಂಗಳು ಪುರುಷನಾಗಿ
ಉಭಯವನರಿವುದು, ಪ್ರಜಾಪತಿಯಾಗಿ.
ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ,
ಬಿಂದು ವಿಸರ್ಜನವಾಯಿತ್ತು.
ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು.
ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು.
ಮಂಗಳಮಯ ಅರ್ಕೆಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ?
ಅರ್ಕೆಶ್ವರಲಿಂಗವು ತಾನು ತಾನೆ./2
ಅಂಗೈಯಲ್ಲಿ ಬೇರು ಹುಟ್ಟಿ,
ಮುಂಗೈಯಲ್ಲಿ ಮೊಳೆದೋರಿ,
ಹಿಂಗಾಲಿನಲ್ಲಿ ಮರ ಬಲಿಯಿತ್ತು.
ಮುಂಗಾಲಿನಲ್ಲಿ ಫಲ ಮೂಡಿ,
ಅಂಗೈಯಲ್ಲಿ ಹಣ್ಣಾಯಿತ್ತು.
ಕಂಗಳ ಕೂಸು ಹಣ್ಣ ಮೆದ್ದಿತ್ತು.
ಕೂಸಿನ ಅಂಗವನರಿ, ಅರ್ಕೆಶ್ವರಲಿಂಗದ ಸಂಗವ ಮಾಡು./3
ಅಗ್ಘವಣಿಗಡಿವಜ್ಜೆಯುಂಟೆ ?
ವಾಯುವ ಹಿಡಿದು ಬಂಧಿಸಬಹುದೆ ?
ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಭಿನ್ನವುಂಟೆ ?
ಸುಗಂಧಕ್ಕೆ ಬುಡ ತುದಿಯಿಲ್ಲ.
ಅರ್ಕೆಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ./4
ಅಣ್ಣನ ಮೂರು ಕುತ್ತಿನಲ್ಲಿ,
ಅಕ್ಕ ಮೂರು ಮಕ್ಕಳ ಹೆತ್ತು,
ಅಪ್ಪನ ಕೈಯಲ್ಲಿ ಕೊಟ್ಟಳು.
ಅಣ್ಣ ಹಣ್ಣಿದ ಜಗಳ.
ಅಕ್ಕನ ಹೊಟ್ಟೆಯ ಕೇಡು.
ಅಕ್ಕನ ಕೂಸು ಅಪ್ಪನ ತಿಂದು,
ಎತ್ತ ಹೋಯಿತ್ತೆಂದರಿಯೆ.
ಅರ್ಕೆಶ್ವರಲಿಂಗವ ಕೇಳುವ ಬನ್ನಿ. /5
ಅರಿದು ಲಿಂಗಸಂಗವಾದಲ್ಲಿ ಕಾಯವಳಿದರೇನು ?
ಕಾಯವುಳಿದು ಕೈಲಾಸಕ್ಕೆ ಹೋಗಬೇಕೆಂಬುದು,
ಜೀವನ ಉಪಾಧಿಕೆ.
ಘಟಮಟಪಟನ್ಯಾಯ ಇವೆಲ್ಲವು ಬಯಲೊಳಗು.
ಅರ್ಕೆಶ್ವರಲಿಂಗವನರಿದು ಕೂಡಿದ ಮತ್ತೆ,
ಅಂಗ ಸಿಕ್ಕುವುದಕ್ಕೆ ಠಾವಿಲ್ಲ./6
ಅರಿವುಳ್ಳವನಂತೆ, ಭವದಲ್ಲಿ ಬಾಹರ ಭವನವ ಕಾವನೆ ?
ತತ್ವ ಭಾವನೆಯ ಬಲ್ಲವನಂತೆ,
ತುತ್ತಿನಾಸೆಗಾಗಿ ಬೆಕ್ಕಿನಂತೆ ಧ್ಯಾನಿಸುತ್ತಿಪ್ಪನೆ ?
ಇವರಾಟ, ಮತ್ರ್ಯರ ಸಿಕ್ಕಿಸುವ ಕೂಟ,
ಅರ್ಕೆಶ್ವರಲಿಂಗನ ಕೂಟವಲ್ಲ./7
ಅಸಿ ಕೃಷಿ ಮಸಿ ಯಾಚಕ ವಾಣಿಜ್ಯತ್ವವ
ಮಾಡುವುದು ಲೇಸು.
ಹುಸಿ ವೇಷವ ತೊಟ್ಟು ಅಸುವ ಹೊರೆವವನ ಘಟ
ಪಿಸಿತದ ತಿತ್ತಿಯಂತೆ
ಅಘಟಿತ, ಅವನನೊಲ್ಲ ಅರ್ಕೆಶ್ವರಲಿಂಗ./8
ಆಕಾಶದ ಮಧ್ಯದಲ್ಲಿ ಒಂದು ಭೇಕ ನುಡಿಯುತ್ತದೆ.
ಅದು ಅನೇಕ ಗೀತ ವಾದ್ಯ ನೃತ್ಯಂಗಳಿಂ[ದಾಡುತ್ತಿದ್ದಿತ್ತು].
ಎನ್ನಾಟವ ನೋಡುವರಿಲ್ಲಾಯೆಂದು ನೇತಿಗಳೆಯಿತ್ತು ತನ್ನಂಗವ.
ಅದು ನಿರ್ಜಾತನ ಒಲುಮೆ.
ಅರ್ಕೆಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ./9
ಆಕಾಶದ ಮಳೆಯನರಿತು,
ಭೂಮಿಯ ಬೆಳೆಯನರಿತು,
ಹುಟ್ಟುವ ಬೀಜವನರಿತು,
ದೃಷ್ಟವ ಕಂಡು ಹೊತ್ತಾಡಿ,
ಅರ್ಕೆಶ್ವರಲಿಂಗವನರಿವುದಕ್ಕೆ./10
ಆಡಿನ ಕಾಲ ಕಡಿದು, ಕೋಡಗದ ಹಲ್ಲ ಕಿತ್ತು,
ಉಡುವಿನ ನಾಲಗೆಯ ಒಡಗೂಡಿ ಕೂಡಿ ತಿಂದು,
ಮತ್ತೊಡೆಯನನರಿಯಬೇಕು, ಅರ್ಕೆಶ್ವರಲಿಂಗವ./11
ಆಡುವ ಮಾತಿಂಗೆ, ಮಾಡುವ ಕೀಲಿಂಗೆ,
ಕಡು ನಡು ಮೊದಲಿಲ್ಲ.
ಅರಿದಡೆ ಒಂದೆ ವರ್ಮ ಭೇದ.
ಮಾಡುವ ಸೂತ್ರ ಕೀಲೊಂದರಲ್ಲಿ ಅಡಗಿದಡೆ,
ಅದು ಭೇದಕತನ.
ಅರಿದು ಕುರುಹಿನಲ್ಲಿ ಮರವೆ ನಿಃಪತಿಯಾದಡೆ,
ಅರ್ಕೆಶ್ವರಲಿಂಗ ಭಿನ್ನಭಾವಿಯಲ್ಲ./12
ಆತ್ಮ ಶಯನನಾಗಿದ್ದಲ್ಲಿ ತನುವಿನ ಸಂಚಾರವ ಮರೆದು,
ಸ್ವಪ್ನಾವಸ್ಥೆಯಲ್ಲಿ ಜಾಗ್ರದಿರವನರಿವಂತೆ,
ಸ್ವಪ್ನದ ಭೇದವ ಸುಷುಪ್ತಿಯರಿದು ವಿಶ್ರಮಿಸುವಂತೆ,
ಕಾಯದ ಇಷ್ಟದ ಭೇದವನರಿ.
ಅರ್ಕೆಶ್ವರಲಿಂಗವನರಿವುದಕ್ಕೆ ಉಳುಮೆಯ ಗೊತ್ತು./13
ಆರು ಕಂಬದ ಮಾಳಿಗೆಯ ನಡುವೆ,
ಒಂದು ಮೂರುಮುಖದ ಹೆಗ್ಗಣ ತೋಡಿ ಕಂಡಿತ್ತು,
ತೋಡೊಲೆಗಳವ, ಸಾಗರದ ಮಂದಿರವ ಅದು.
ತನ್ನಿರವ ತೋರುವುದಕ್ಕೆ ಮೊದಲೆ ಮಾಳಿಗೆ ಜಾರಿತ್ತು.
ಅರ್ಕೆಶ್ವರಲಿಂಗವ ಕೇಳಿಕೊಂಬ ಬನ್ನಿ./14
ಇದಿರರಿದಹರೆಂದು ಮರೆಯ ಮಾಡಿ,
ಗೂಢವ ನುಡಿಯಬಹುದೆ ವಸ್ತುವ ?
ಅರು[ವೆ]ಯಲ್ಲಿ ಕೆಂಡವ ಕಟ್ಟಿದಡೆ ಅಡಗಿಹುದೆ ?
ನೆರೆ ವಸ್ತು ಒಬ್ಬರಿಗೆ ಒಡಲೆಡೆವುಂಟೆ ?
ಅರ್ಕೆಶ್ವರಲಿಂಗ ಅರಿವರ ಮನ ಭರಿತ, ಸಂಪೂರ್ಣ./15
ಉಂಟೆಂದಡುಂಟು, ಇಲ್ಲಾ ಎಂದಡೆ ಇಲ್ಲ.
ಅದು ತನ್ನ ವಿಶ್ವಾಸದ ಭಾವ.
ತನಗೆ ಅನ್ಯಭಿನ್ನವಿಲ್ಲ,
ಅರ್ಕೆಶ್ವರಲಿಂಗ ತಾನಾದ ಕಾರಣ./16
ಉರಿ ತರುವಿನಲ್ಲಿ ಹುಟ್ಟಿ ತರುವ ಸುಡುವಂತೆ,
ಜೀವ ಜೀವದಲ್ಲಿ ಹುಟ್ಟಿ ಜೀವರ ಲಯವ ಮಾಡುವಂತೆ,
ಅರಿವು ಜ್ಞಾನದಲ್ಲಿ ನಿಂದು,
ಕುರುಹನವಗವಿಸಿತ್ತು, ಅರ್ಕೆಶ್ವರಲಿಂಗವನರಿತು./17
ಉರಿ ಸಿರಿ ಭೂತ ಭವಿಷ್ಯತ್ ವರ್ತಮಾನಂಗಳಲ್ಲಿ
ನೋಡುವ ಆಲಿ ಮೇಲಕ್ಕೆ ಸಿಕ್ಕಿ,
ಭಾವ ಅಂಗವ ಮರೆದು,
ಧ್ಯಾನವೆ ಮೂರ್ತಿ ಜಪ.
ಪಂಚಾಕ್ಷರಿಯ ಪ್ರಣವ ಏಕೀಕರಿಸಿದಲ್ಲಿ,
ಸಂದಿತ್ತು ಜಪ ಅರ್ಕೆಶ್ವರಲಿಂಗಕ್ಕೆ./18
ಊರ ಸುತ್ತಿ ಬಂದಡೆ ಬಾಗಿಲಲ್ಲಿ ಹೋಗುವ ತೆರನಂತೆ,
ಅರಿದು ಓಡಲಾಗದವಂಗೆ ಬೇರೊಂದು ತೆರನಿಲ್ಲ.
ಉರಿ ಧರಿಸಿದ ಸರದಂತೆ ಅಲ್ಲಿಯೇ ಲೇಪ,
ಅರ್ಕೆಶ್ವರಲಿಂಗದಲ್ಲಿಯೇ./19
ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ,
ಹಾರುವನ ಕೊಂದರು.
ತಲೆವುಳಿದು, ಕಾಲ ಕಂಡಿಸಿ, ಕರುಳಡಗಿತ್ತು.
ಬೇಟೆ ಬೆಲೆಯಾದುದಿಲ್ಲ.
ಕೇಳುವ ಬನ್ನಿ, ಅರ್ಕೆಶ್ವರಲಿಂಗವ. /20
ಊರೊಳಗಣ ದೇವಾಲಯದಲ್ಲಿ
ಐವರು ಹೊಲೆಯರು ಹೊಕ್ಕು,
ದೇವರ ಪೂಜಿಸುತ್ತೈದಾರೆ.
ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು,
ದೇವರೊಳಗದೆ.
ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು,
ಅರ್ಕೆಶ್ವರಲಿಂಗವನರಿದ ಕಾರಣ. /21
ಎಲ್ಲವನರಿದು ಬಿಟ್ಟ ಬಳಿಕ,
ಮತ್ತಿನ್ನು ಗೆಲ್ಲ ಸೋಲಕ್ಕೆ
ಸನ್ನೆಯ ತಗರಿನಂತೆ,
ಹರಿವ ಸಮೂಹವನೊಲ್ಲದೆ,
ತಾ ನಿಂದಲ್ಲಿಯೆ ಸುಖವು.
ಅರ್ಕೆಶ್ವರಲಿಂಗವನರಿವುದಕ್ಕಿದೇ ಗೊತ್ತು./22
ಒಸರಿ ತುಂಬಿ ಮೇಲಕ್ಕೊಸರದಂತೆ,
ಆ ಘಟದ ಮುಖದಲ್ಲಿಯೆ ಅಡಗಿ ತೆಗೆದಡೆ,
ಕಟ್ಟಣಕೆ ಕಟ್ಟಿದಲ್ಲಿಪ್ಪಂತೆ
ನಾನಾ ಸತ್ಕ್ರೀಮಾರ್ಗದಲ್ಲಿದ್ದು,
ನಿಜನಿಶ್ಚಯವ ನೆಮ್ಮಬೇಕು, ಅರ್ಕೆಶ್ವರಲಿಂಗದಲ್ಲಿ./23
ಓಗರ ಹಸಿದು ಆಪ್ಯಾಯನವನುಂಡುದನಾರೂ ಅರಿಯರು.
ನೀರು ಬಾಯಾರಿ ಭೂಮಿಯ ಕುಡಿದುದನಾರೂ ಅರಿಯರು.
ದೇವರು ರೂಪಾಗಿ ಸಕಲರೊಳಗೆ ಗತಿಗೆಡುವುದನಾರೂ ಅರಿಯರು.
ವಿಪರೀತ ಕುರುಹಾಯಿತ್ತು, ಅರ್ಕೆಶ್ವರಲಿಂಗನ ಗೊತ್ತಿಗೆ ಬಂದ ಕಾರಣ./24
ಕಂಗಳ ಮಧ್ಯದ ಮಲೆಯಲ್ಲಿ,
ಒಂದು ನಿಸ್ಸಂಗಶೃಂಗಿ ಮೇವುತ್ತದೆ.
ಅಂಬೊಂದು, ಹಿಳುಕು ಮೂರು,
ಅಲಗಾರು, ಮೊನೆ ಅಯಿದು ಕೂಡಿದಲ್ಲಿ,
ಧನು ನಾಲ್ಕು ಹಿಡಿದು, ನಾರಿಯೆಂಟ ಕೂಡಿ,
ಶರಸಂಧಾನದಲೆಸೆಯೆ,
ಶೃಂಗಿ ಬಿದ್ದಿತ್ತು, ಅಸು ಬದುಕಿತ್ತು,
ಅರ್ಕೆಶ್ವರಲಿಂಗವನರಿದ ಕಾರಣ./25
ಕಂಗಳ ಸೂತಕವ ಯೋನಿ ತಡೆದು,
ಬಾಯ ಬಸುರಾಗಿ, ಕೈ ಬೆಸನಾಯಿತ್ತು.
ಕೈಯ ಶಿಶುವ ಕಂಗಳ ತಾಯಿ ಎತ್ತಿ,
ಭಾವದ ದಾದಿಯ ಕೈಯಲ್ಲಿ ಕೊಟ್ಟು,
ಅರ್ಕೆಶ್ವರಲಿಂಗವು ತೊಟ್ಟಿಲಲ್ಲಿ ಬೆಳಗುತ್ತದೆ. /26
ಕಂಜನಾಭನ ಸುತನ ರಂಜಿಸಿದಲ್ಲಿಯೆ
ಕಾಯಗುಣ ಕೇಡಾಯಿತ್ತು.
ಮನಸಿಜನ ಪಿತನ ಹಾಯವ ಬಿಟ್ಟಾಗಲೆ
ಸುಖ ಲಯವಾಯಿತ್ತು.
ಚಿತ್ತ ವಿಶ್ರಾಂತಿಯನೆಯ್ದಿದಲ್ಲಿ[ಯೆ]
ಸುಳಿದಾಡುವನ ಲಯ ಕೆಟ್ಟಿತ್ತು.
ತ್ರಿವಿಧ ಲೇಪವಾದಲ್ಲಿಯೆ
ಅರ್ಕೆಶ್ವರಲಿಂಗನ ಭಾವ, ಬ್ರಹ್ಮಕ್ಕೊಳಗಾಯಿತ್ತು./27
ಕಂಜನಾಭಿಯಲ್ಲಿ ಕುಂಜರ ಬಂದು,
ಮಂದಿರದವರೆಲ್ಲರ ಕೊಂದಿತ್ತು.
ಕುಂಜರನ ಬೆಂಬಳಿಯವರಲ್ಲದೆ
ಕುಂಜರನ ಸಂದ ಮುರಿವರಿಲ್ಲ.
ಅರ್ಕೆಶ್ವರಲಿಂಗನ ಒಲುಮೆಯಿದ್ದವರಿಗಲ್ಲದೆ ಸಾಧ್ಯವಾಗದು./28
ಕಂಡು ಕಾಬುದು, ಕಾಣದೆ ಅರಿವುದು,
ಭಾವಿಸಿ ಪ್ರಮಾಣಕ್ಕೆ ಬಾರದಿಪ್ಪುದು
ಭಾವವೋ, ಭ್ರಮೆಯೋ ?
ಅದೇನೆಂಬುದ ಕೇಳುವ ಬನ್ನಿ, ಅರ್ಕೆಶ್ವರಲಿಂಗವ./29
ಕಣ್ಣ, ಕಾಡುವ ಗುಂಗುರ ತಿಂದು,
ಬಾಯ, ಕಾಡುವ ಕೈಯ ತಿಂದು,
ಆಪ್ಯಾಯನವಡಸಿದ ಹೊಟ್ಟೆಯ ತಿಂದು,
ಮತ್ತಿವರ ಹುಟ್ಟು ಮೆಟ್ಟನರಿಯಲೇಕೆ ?
ಅರ್ಕೆಶ್ವರಲಿಂಗವನರಿಯಿರಣ್ಣಾ. /30
ಕಲ್ಲು ಬೆಂಕಿ ಕೂಡಿ ಉರಿವಾಗ, ಹುಲ್ಲು ಕತ್ತುದುದಿಲ್ಲ.
ಮೆಲ್ಲನೆ ಉಲುಹುವಾತನ ಸೊಲ್ಲಿನ ಬಲ್ಲತನ ಅಲ್ಲಿಯೆ ಬೆಂದಿತ್ತು.
ಅರ್ಕೆಶ್ವರಲಿಂಗವನರಿಯಿರಣ್ಣಾ./31
ಕವಿಯ ಕಾಳಗದಲ್ಲಿ ರವಿ ಬಂಟನಾಗೆ,
ಶಶಿ ದೆಸೆಗೆಟ್ಟು, ಅರಸು ಬಂಟರ ಬಿಟ್ಟೋಡಿದ.
ರವಿ ರಥವ ತುಡುಕಿ ಅವಿರಥವಾದ.
ಅರ್ಕೆಶ್ವರಲಿಂಗದಲ್ಲಿಗೆ ಕವಿ ಕವಲಾಯಿತ್ತು. /32
ಕಾಡಿನೊಳಗಣ ವರಹನ, ಊರ ಕುಕ್ಕುರ ಕೊಲುವಾಗ
ಊರಿಗೂ ಕಾಡಿಗೂ ಏತರ ಹಗೆ ?
ಅದರ ಭೇದ ಅಲ್ಲಿಯೆ ಅಡಗಿತ್ತು.
ಅರ್ಕೆಶ್ವರಲಿಂಗವನರಿಯಿರಣ್ಣಾ./33
ಕಾಯಕ್ಕೆ ಆಚಾರಸಂಬಂಧ.
ಜೀವಕ್ಕೆ ಅರಿವುಸಂಬಂಧ.
ಅರಿವಿಂಗೆ ಜ್ಞಾನಸಂಬಂಧ.
ಜ್ಞಾನಕ್ಕೆ ಜ್ಯೋತಿಸಂಬಂಧ.
ಜ್ಯೋತಿಗೆ ಮಹಾಬೆಳಗು ಸಂಬಂಧವಾಗಿಯಲ್ಲದೆ,
ಅರ್ಕೆಶ್ವರಲಿಂಗವ ಕಾಣಬಾರದು. /34
ಕಾಯದ ಸೂತಕವ ನೋಟದಿಂದ ಕಳೆದು,
ನೋಟದ ಸೂತಕವ ಭಾವದಿಂದ ಕಳೆದು,
ಭಾವದ ಪ್ರಕೃತಿ[ಯ] ಜ್ಞಾನದಿಂದ ಕಳೆದು,
ಜ್ಞಾನದ ಬೆಳಗು ನಿಂದಲ್ಲಿ,
ಅರ್ಕೆಶ್ವರಲಿಂಗವ ಮುಟ್ಟಿದ ಮುಟ್ಟು./35
ಕಾಯವಳಿದು ಜೀವ ಬಯಲಾದಲ್ಲಿ,
ಭಾವಿಸುವ ಅರಿವ ನೆಲೆಯ ಕುರುಹೆಲ್ಲಿದ್ದಿತ್ತು ?
ಅದ ಕೇಳುವ ಬನ್ನಿ, ಅರ್ಕೆಶ್ವರಲಿಂಗವ./36
ಕಾಲು ಕೈ ತಲೆಗೆ ಹೊಣೆಯಾದ ಮತ್ತೆ
ಊರೆಲ್ಲಕ್ಕೆ ಹೇಳಲೇಕಯ್ಯ?
ತಲೆವೊಡೆಯ ತಲೆಯಳಿಸುತ್ತಿರ್ದು,
ಹಲಬರಿಗೆ ಮೊರೆಯೇಕೆ ?
ಅರ್ಕೆಶ್ವರಲಿಂಗವನರಿಯಿರಣ್ಣಾ./37
ಕಾಳಿಂಗನ ಮಡುವ ಕಲಕಿದವನ
ನಾಭಿಯ ಕೂಸಿನ ಶಿರಪಾಣಿಯಲ್ಲಿ ಬೇಡುವ,
ಆತನ ಶಕ್ತಿಯ ಸಮರಸದಲ್ಲಿ ಓಲಾಡುವ,
ಮುಕ್ತಿವಂತರೆಲ್ಲರೂ ಕೇಳುವ ಬನ್ನಿ, ಅರ್ಕೆಶ್ವರಲಿಂಗವ./38
ಕುಕ್ಕೊಂಬಿನ ಕಾಗೆಯಂತೆ, ಜೀವ ಎತ್ತ ಹಂಬಲಿಸಿದಡೂ
ಆಸೆಯೆಂಬ ಗೊತ್ತಿಗೆ ಬಹವರೆಲ್ಲರು ನಿಶ್ಚಯವನರಿಯಬಲ್ಲರೆ ?
ತುತ್ತು ಕುತ್ತಿಗಾಗಿ ವೇಷವ ತೊಟ್ಟಿಹ
ಚಿತ್ತಶುದ್ಭಾತ್ಮವಿಲ್ಲದವರ ಅರ್ಕೆಶ್ವರಲಿಂಗನೊಪ್ಪನವರ./39
ಕುದುರೆಯ ನರಿ ಕೊಂದು,
ನರಿಯ ಇರುಹೆ ತಿಂದು,
ಆ ಇರುಹೆ ತನ್ನ ತಾ ಸತ್ತಿತ್ತು,
ಅರ್ಕೆಶ್ವರಲಿಂಗವನರಿವುದಕ್ಕೆ./40
ಕುಲವೆರಡಲ್ಲದೆ ಹಲವಿಲ್ಲ.
ದಿನವೆರಡಲ್ಲದೆ ಸಪ್ತದಿನವಿಲ್ಲ.
ಅರಿವು ಮರವೆಯೆರಡಲ್ಲದೆ ಬೇರೊಂದು ತೊಡಿಗೆಯಿಲ್ಲ.
ಅರ್ಕೆಶ್ವರಲಿಂಗ ಏಕರೂಪನಲ್ಲದೆ
ಬಹುನಾಮದವನಲ್ಲ./41
ಕೋಟಿ ಮಾತನಾಡಿದಡೂ ವಸ್ತುವಿನ ಕೂಟವೊಂದೆ ಭೇದ.
ನಾನಾ ಕ್ರೀಯ ಭಾವಿಸಿದಡೂ ಸದ್ಭಾವವೊಂದೆಯಾಗಬೇಕು.
ಊರ ಸುತ್ತಿದಡೂ ಬಾಗಿಲಲ್ಲಿ ಬರಬೇಕು.
ಮರೆಯ ಮಾತು ಬೇಡ.
ಅರ್ಕೆಶ್ವರಲಿಂಗವನರಿತಲ್ಲದಾಗದು./42
ಕ್ರಿಯಾಭಾವದಲ್ಲಿ ನಿಂದು ಮಾಡುವನ ಅರ್ಚನೆ
ಕಾಪರ್ಾಸದಂತಿರಬೇಕು.
ಕಲ್ಪದ್ರುಮದ ಬಿತ್ತಿನ ಸಿಪ್ಪೆಯಂತಿರಬೇಕು.
ವರುಣಕಿರಣದ ಸಂಚಾರ ಸಂಚರಿಸುವಂತಿರಬೇಕು.
ಇದು ಕ್ರೀಶುದ್ಧತೆ, ಅರ್ಕೆಶ್ವರಲಿಂಗವನರಿವುದಕ್ಕೆ./43
ಗುಬ್ಬಿ ಗುಂಭವನೊಡೆದು ಒಬ್ಬುಳಿತೆಯಾಯಿತ್ತು.
ತನ್ನ ಸಿಬ್ಬುದ್ಧಿಯ ಬಿಟ್ಟು,
ಕಬ್ಬಕ್ಕಿಯ ಹಿಂಡನೊಲ್ಲದೆ,
ನಿಬ್ಬದ್ಧಿಯಾಗಿ ಅಲ್ಲಿಯೆ ಹೋಯಿತ್ತು,
ಅರ್ಕೆಶ್ವರಲಿಂಗವನರಿತು./44
ಘಟದ ಮರೆಯಲ್ಲಿ ಅಸುವಿಪ್ಪಂತೆ,
ಫಲದ ಮರೆಯಲ್ಲಿ ರಸವಿಪ್ಪಂತೆ,
ಶಿಲೆಯ ಮರೆಯಲ್ಲಿ ಕಾಲ ಲಯನ ಲೀಲೆ ತೋರುತ್ತದೆ.
ಲೀಲೆ ನಿರ್ವಯಲಾಗಿ, ಆ ಬಯಲ ಬಂಧನವನರಿ,
ಅರ್ಕೆಶ್ವರಲಿಂಗವನರಿವುದಕ್ಕೆ./45
ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ.
ಬಲ್ಲವ ಬಲ್ಲವನಲ್ಲಿಯಲ್ಲದೆ ಒಳ್ಳೆಯ ಗುಣವಿಲ್ಲ.
ಭಟ ಮುಗ್ಗಿದಡೆ ತಿಳಿದ ಭಟ ಕೈ ಹಿಡಿದೆತ್ತಿ,
ಇದಿರಾಗೆಂದಡೆ, ಊಣೆಯವೆಲ್ಲಿ ಅಡಗಿತ್ತು ?
ಕೇಳುವ ಬನ್ನಿ, ಅರ್ಕೆಶ್ವರಲಿಂಗವ./46
ಜಾತಿ ಜಾತಿಯ ಕೊಂದು, ನಿಹಿತ ಅನಿಹಿತವ ಕೆಡಿಸಿ,
ಜಾತ ಅಜಾತನ ಕಂಡು ನಿಹಿತವಾಗಿರಿ,
ಅರ್ಕೆಶ್ವರಲಿಂಗವನರಿವುದಕ್ಕೆ./47
ತನು ನಿರ್ವಾಣ, ಮನ ಸಂಸಾರ.
ಮಾತು ಬ್ರಹ್ಮ, ನೀತಿ ಅಧಮ.
ಅದೇತರ ಅರಿವು ?
ಘಾತಕನ ಕೈಯ ಕತ್ತಿಯಂತೆ,
ಇದು ನಿಹಿತವಲ್ಲ, ಅರ್ಕೆಶ್ವರಲಿಂಗವನರಿವುದಕ್ಕೆ./48
ತಮ ಹಂಜರಿಸಿದಲ್ಲಿ, ಚಂಡಕರನ ಕಿರಣವೆಲ್ಲಿ ಹೊಂದಿತ್ತು ?
ಅಪ್ಪು ವಹ್ನಿಯ ಘಟಿಸಲಾಗಿ, ಧೂಮದಲ್ಲಿ ಉಳಿಯಿತ್ತು?
ಘಟ ಇಷ್ಟದಲ್ಲಿ ಕುರುಹಳಿವಾಗ, ಅರಿವೆಲ್ಲಿದ್ದಿತ್ತು ?
ಅರಿವು ನಾಮ ಅವಧಿಗಿಲ್ಲವಾಗಿ,
ಅರ್ಕೆಶ್ವರಲಿಂಗದ ಕುರುಹು ಎಲ್ಲಿದ್ದಿತ್ತು ?/49
ತರು ಕುಲಿಶದಲ್ಲಿ ಹೊಕ್ಕು,
ತನ್ನಯ ಕುಲವ ಛೇದನವ ಮಾಡುವಂತೆ,
ಸಮಯವ ಹೊಕ್ಕು, ಸಮಯವ ನೇತಿಗಳೆವ
ಶ್ರಮವಿಲ್ಲದವರನೊಲ್ಲ, ಅರ್ಕೆಶ್ವರಲಿಂಗ./50
ತ್ರಿವಿಧ ಘಟಿಸಿ ಕುರುಹಾದಲ್ಲಿ,
ಕುರುಹು ಅರಿವನರಿದುದಿಲ್ಲ.
ಆ ಅರಿವಿಂದ ಕುರುಹ ಪ್ರಮಾಣಿಸಿ,
ಮಧುರದಂಡದಂತೆ ಉಭಯವನರಿ.
ಅರಿದಲ್ಲಿ ಅರ್ಕೆಶ್ವರಲಿಂಗನ ಭಾವದ ಕೂಟ./51
ತ್ರಿಸಂಧಿಯಲ್ಲಿ ಧ್ಯಾನ ಮರವೆಯೆಂದು,
ಮಣಿಮಾಲೆಯಲ್ಲಿ ಅಗಣಿತನ ಎಣಿಕೆಯಿಂದ ಅರಿದೆಹೆನೆಂದು,
ಸಿಕ್ಕಿತ್ತು ಧ್ಯಾನ ಜಪದ ಕೃತ್ಯದಲ್ಲಿ.
ಆ ಜಪ ಧ್ಯಾನ ಭಾವ ಸಂಚಾರವಿಲ್ಲದೆ
ಭಾವಿಸಿದಲ್ಲಿ ಜಪ ಸಂದಿತ್ತು.
ನೇಮಭಾವದಲ್ಲಿ ಅಡಗಿತ್ತು,
ಅರ್ಕೆಶ್ವರಲಿಂಗವನರಿದ ಕಾರಣ./52
ಧಾರೆ ಮೊನೆ ಕಟ್ಟಿದಂತೆ, ಮೀರಿ ತಾಗಬಲ್ಲುದೆ ಅಸಿಕೂರಲಗು ?
ನಿಪುಣ ಕ್ರೀಭಾವ ಶುದ್ಧವಾಗಿಯಿದ್ದವಂಗೆ
ಬೇರೆ ಇಂದ್ರಿಯಂಗಳು ಗತಿಗೆಡಿಸಬಲ್ಲವೆ ?
ಅವು, ಅರ್ಕೆಶ್ವರಲಿಂಗನ ಗೊತ್ತ ಮುಟ್ಟಲರಿಯವು./53
ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿ
ಅರಿಯಿಸಿಕೊಂಬಲ್ಲಿ, ಅದೇನು ಭೇದ ?
ನಾನೆಂದಡೆ ನಿನ್ನ ಸುತ್ತಿದ ಮಾಯೆ.
ನೀನೆಂದಡೆ ನನ್ನ ಸುತ್ತಿದ ಮಾಯೆ.
ನಾ ನೀನೆಂಬಲ್ಲಿ ಉಳಿಯಿತ್ತು, ಅರ್ಕೆಶ್ವರಲಿಂಗನ ಅರಿಕೆ./54
ನಾನೆಂದಡೆ ಸ್ವತಂತ್ರಿಯಲ್ಲ.
ನೀನೆಂದು ಇದಿರಿಟ್ಟಲ್ಲಿ ಭಾವಕ್ಕೆ ಭಿನ್ನ.
ನಾನೆನಬಾರದು, ನೀನೆನಬಾರದು.
ಅರ್ಕೆಶ್ವರಲಿಂಗವ ಏನೂ ಎನಬಾರದು./55
ನಾಯಿಗೆ ಕಾಲು ಕೊಟ್ಟು,
ತೋಳಗೆ ಹೊಟ್ಟೆಯ ಕೊಟ್ಟು,
ಹುಲಿಗೆ ತಲೆಯ ಕೊಟ್ಟು,
ಮೆಲಿಸಿಕೊಂಬವರೆಲ್ಲಕ್ಕು ಬಲವಂತತನವೆ ?
ಅದರ ಸಲೆ ಬಲುಮೆ,
ಅರ್ಕೆಶ್ವರಲಿಂಗವನರಿತವರಿಗಲ್ಲದೆ ಆಗದು./56
ನುಡಿಯಿರಿದಡೆ ಪರಿಕೈದೇಕೆ ?
ಕೈಯಲ್ಲಿ ಅರಿವು ವಸ್ತುವಾದಡೆ,
ಬೇರೊಂದು ಕುರುಹೇಕೆ ?
ಕೈಯಲ್ಲಿ ಕುರುಹು ಕುರುಹಿಂಗೆ ಬೇಕು.
ಅರಿವು ಅರಿವಿಂಗೆ ಬೇಕು.
ಅರ್ಕೆಶ್ವರಲಿಂಗವನರಿವುದಕ್ಕೆ ಕುರುಹಿನ ಮರೆಬೇಕು./57
ನೆನಹು ನಿಜದಲ್ಲಿ ನಿಂದಲ್ಲಿ ಸುರುಳಿನ ತೊಡಕು ಗಂಟುಂಟೆ ?
ಅಂಬರವನಡರಿದವಂಗೆ ಬೇರೊಂದಿಂಬ ಮಾಡಲುಂಟೆ ?
ವಸ್ತುವಿನ ಅಂಗದಲ್ಲಿ ಸರ್ವವೂ ಹಿಂಗಿದಲ್ಲಿ,
ಅರ್ಕೆಶ್ವರಲಿಂಗವ ಕಟ್ಟುವುದಕ್ಕೆ ಬೇರೊಂದು ಠಾವುಂಟೆ ?/58
ನೇತ್ರದಲ್ಲಿ ಕಂಡು, ಶ್ರೋತ್ರದಲ್ಲಿ ಕೇಳಿ,
ಗಾತ್ರದಲ್ಲಿ ಮುಟ್ಟಿ, ಚಿತ್ತದಲ್ಲಿ ಒಲಿಸುವಡೆ
ಮತ್ತೊಬ್ಬರಲ್ಲಿ ಹೊತ್ತುಹೋರಲೇಕಣ್ಣಾ,
ಅರ್ಕೆಶ್ವರಲಿಂಗವನರಿವುದಕ್ಕೆ ? /59
ನೊಣ ರಣವ ಹೊಕ್ಕು, ಶ್ರೋಣಿತವ ಭುಂಜಿಸುವಾಗ,
ಕೇಣಸರದ ಭಟರೆಲ್ಲರೂ
ನೊಣದ ರಾವಡಿಗಂಜಿ ಹೇಳದೆ ಹೋದರು.
ಅರ್ಕೆಶ್ವರಲಿಂಗವನರಿಯಿರಣ್ಣಾ./60
ಪಂಜರದ ಕೋಳಿ ಮಾರ್ಜಾಲನ ಕೊಂದು ತಿಂದು,
ಬಂದುದ ಹೊಂದದೆ ತಾನೊಂದೆ ಹೊಂದಿತ್ತು,
ಪಂಜರ ಹೊರಗೆ, ಅರ್ಕೆಶ್ವರಲಿಂಗವನರಿದ ಕಾರಣ./61
ಪಕ್ಷಿಯ ಕುಕ್ಕೆಯೊಳಗಿಕ್ಕಿ ಮಾರಬಹುದಲ್ಲದೆ
ಮತ್ತಗಜವ ಮಾರಬಹುದೆ ಅಯ್ಯಾ ?
ಚಿತ್ರವ ಬರೆವುದಕ್ಕೆ ಲೆಕ್ಕಣಿಕೆಯಲ್ಲದೆ ಚಿತ್ತಜಗುಂಟೆ ?
ಪುನರಪಿ ವಸ್ತುವನರಿವುದಕ್ಕೆ ಹೊತ್ತುಗೊತ್ತುಂಟೆ ?
ಅರ್ಕೆಶ್ವರನ ಕೂಡುವುದಕ್ಕೆ ತತ್ಕಾಲವುಂಟೆ ?/62
ಪರಮೂರ್ತಿಯಾದಡೆ ಪರಮನ ಸಂಚವನರಿಯಬೇಕು.
ವಿರಕ್ತನಾದಡೆ ಇಹಪರ ನಾಸ್ತಿ, ಪರಮ ಪರಿಣಾಮಿಯಾಗಿರಬೇಕು.
ಜ್ಞಾನಿಯಾದಡೆ ಸರ್ವಜೀವದ ಚೇತನವನರಿಯಬೇಕು.
ಸಾಕು ಮಾತಿನ ಮಾಲೆಯ ನೀತಿಯ ನುಡಿ.
ಅರ್ಕೆಶ್ವರಲಿಂಗನ ಬೆಚ್ಚಂತೆ ಇರಬೇಕು./63
ಪಾಷಾಣದುದಕ ಏತರಿಂದ ದ್ರವ ?
ಪಾಷಾಣದ ಪಾವಕ ಅದೇತರಿಂದ ಕ್ರೋಧ ?
ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ?
ಅರಿದರುಹಿಸಿಕೊಂಬ ಅರ್ಕೆಶ್ವರಲಿಂಗನ ಇರವು ಅದೇತರಿಂದ?/64
ಪೂಜಿಸಿಕೊಂಡೆಹೆವೆಂದು, ಘನಗಂಭೀರದಲ್ಲಿ ರಾಗಿಸಿಕೊಂಡಿಪ್ಪ
ಆತ್ಮ ತೇಜದ ಮಾತಿನ ವೇಷದ ಗರ್ವಿಗಳು,
ಆಡುವ ವಾಚಕ, ಭೇಕನ ಬಾಯಲ್ಲಿ ಸಿಕ್ಕಿದ ಮಕ್ಷಿಕ,
ಶ್ರೋಣಿತದಾಸೆಗೆ ಮಚ್ಚಿದಂತೆ.
ಮತ್ತುಂಟೆ ಅರ್ಕೆಶ್ವರಲಿಂಗನ ಕೂಟ ?/65
ಪೂಜೆ ಪುಣ್ಯದ ಮಾಟ, ಭವದ ಕೂಟ, ಅರಿವು ಸಂದೇಹ.
ಅರಿಯದೆ ಮರೆಯದೆ ಕರಿಗೊಂಡಿರು,
ಅರ್ಕೆಶ್ವರಲಿಂಗವನರಿವುದಕ್ಕೆ./66
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ
ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ.
ರೋಮ ಎಂಟುಕೋಟಿ.
ಹಲ್ಲು ಹದಿನಾರು, ನಾಲಗೆ ಏಳು.
ಕಿವಿ ಇಪ್ಪತ್ತೈದು, ನಾಡಿ ಶತದಶ.
ಮೂಗು ಮೂವತ್ತೇಳು, ಕಾಲೆಂಟು.
ಭುಜವೆರಡು, ಕೈವೊಂದೆ.
ಹಿಂದೆ ಮುಂದೆ ನೋಡುವ ಕಣ್ಣು,
ಅಭಿಸಂಧಿಯೊಳಗೆ ಒಂದೆ ಅದೆ.
ಅರ್ಕೆಶ್ವರಲಿಂಗವ ಕಾಣಬಾರದು./67
ಬಣ್ಣ ನುಂಗಿದ ಬಂಗಾರದಂತಾಯಿತ್ತು, ಈ ಅಂಗ.
ಶಿಥಿಲವನವಗವಿಸಿದ ಸುರಾಳದಂತಾಯಿತ್ತು, ಈ ಅಂಗ.
ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ.
ಸರಸಮಾಧಾನವನೆಯ್ದೆ ಬೆರೆದು ನೆರೆದಂತಾಯಿತ್ತು, ಈ ಅಂಗ.
ಬಯಲು ಬಯಲೊಳಗಡಗಿ, ವಸ್ತು ವಸ್ತುವ ಕೂಡಿ,
ಅರ್ಕೆಶ್ವರಲಿಂಗದಲ್ಲಿ ಒಪ್ಪಿ ಹೋಯಿತ್ತು, ಈ ಅಂಗ./68
ಬಲೆಯ ಮೀರಿದ ಮೃಗ ಸತ್ತಿತ್ತು.
ಕೊಲ ಹೋದಾತ, ಹಲವು ಅರಿದ ತಲೆಯ ಕಂಡು,
ಹೊಲಬುದಪ್ಪಿದ.
ಅರ್ಕೆಶ್ವರಲಿಂಗವನರಿಯಿರಣ್ಣಾ./69
ಬಾವಿಯ ನೆಳಲ ಬಗ್ಗಿ ನೋಡುವನಂತೆ,
ಜೀವದಾಸೆ ನೋಟದ ಬೇಟ ಬಿಡದಂತೆ,
ಸಂಸಾರದ ಘಾತಕತನ, ಅರಿವಿನ ಮಾತಿನ ಮಾಲೆ.
ಉಭಯವ ನೇತಿಗಳೆಯದೆ
ಅರಿಯಬಾರದು, ಅರ್ಕೆಶ್ವರಲಿಂಗವ./70
ಬಾಹ್ಯ ರಚನೆಯಲ್ಲಿ ಸತಿ್ಕೃಯಾಮಾರ್ಗ,
ಅಂತರಂಗ ಮಾರ್ಗದಲ್ಲಿ
ಕರಣಂಗಳ ಸಂಚ ವಿಸಂಚವನರಿಯಬೇಕು.
ಇದು ವಸ್ತುವ ಮುಂಚುವ ಭೇದ,
ಅರ್ಕೆಶ್ವರಲಿಂಗನ ಸಂಚಿತದ ಅಂಗ./71
ಬಾಹ್ಯದಲ್ಲಿ ಶ್ರದ್ಧೆಭಾವ, ಭಾವದಲ್ಲಿ ಬಳಕೆ ನಾಸ್ತಿಯಾಗಿ,
ಅಮಳಕಫಲ ಕರದಲ್ಲಿದ್ದಂತೆ ಕಲೆದೋರದಿರು,
ಅರ್ಕೆಶ್ವರಲಿಂಗವನರಿವುದಕ್ಕೆ./72
ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ,
ತೆಕ್ಕೆ ಮಡಿಯಲರಿಯದೆ ಸಿಕ್ಕಿ,
ಅದೇ ಹುತ್ತದ ಬಾಯಲ್ಲಿ ಕಪ್ಪೆ ಹರಿದು ಬಂದು,
ಸರ್ಪನ ನುಂಗಿತ್ತು.
ಹುತ್ತ ಬಚ್ಚಬಯಲಾಯಿತ್ತು, ಅರ್ಕೆಶ್ವರಲಿಂಗನ ಗೊತ್ತು./73
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ,
ಹಲ್ಲು ಕಲ್ಲಿನೊಳಗಾಗಿ,
ಅಲ್ಲಿಯೆ ಅಡಗಿ ನೋಡುತ್ತದೆ.
ಅದ ನಾವು ನೀವು ಎಲ್ಲರೂ ಅರಿವ ಬನ್ನಿ,
ಅರ್ಕೆಶ್ವರಲಿಂಗವ ಬಲ್ಲವರಹರೆ./74
ಬ್ರಹ್ಮನ ಬಾಯಲ್ಲಿ ಅದೆ, ವಿಷ್ಣುವಿನ ಕೈಯಲ್ಲಿ ಅದೆ,
ರುದ್ರನ ಶಿರದಲ್ಲಿ ಅದೆ.
ತಲೆ ಬಾಯ ನುಂಗಿ, ಕೈ ತಲೆಯೊಳಡಗಿ,
ಕಣ್ಣು ಕಾಲಾಯಿತ್ತು,
ಅರ್ಕೆಶ್ವರಲಿಂಗನನರಿವ ಭೇದದಿಂದ./75
ಬ್ರಹ್ಮನ ಹರಿದಾಟ, ವಿಷ್ಣುವಿನ ಕಾಲಾಟ,
ರುದ್ರನ ಬಾಯಾಟ.
ಈ ತ್ರಿವಿಧ ಸಿಬ್ಬುದ್ಧಿ ಹರಿದು,
ಅಕ್ಕನ ಗುಕ್ಕಿನೊಳಗಾಗಬೇಡ.
ಅರ್ಕೆಶ್ವರಲಿಂಗವನರಿಯಿರಣ್ಣಾ./76
ಭಕ್ತಿ ಜ್ಞಾನ ವೈರಾಗ್ಯವೆಂಬ ಮಧರವ ಮರೆಯದಿರಿ.
ಅರಿವ ನೀಗಾಡಲು ಬೇಡ.
ಹೊರವೇಷವ ಹಸನಿಸಿ,
ಮೂರುಮಲದಂದವನೆಂದಿಗೂ ಸಂಧಿಸದಿರೆಂದು
ಅರ್ಕೆಶ್ವರಲಿಂಗ ಕೂಗುತಿರ್ದ./77
ಭವಸಾಗರವೆಂಬ ಸಮುದ್ರದಲ್ಲಿ,
ಸಾಕಾರವೆಂಬ ಹಡಗು,
ಚೇತನವೆಂಬ ಅಶ್ವಕಟ್ಟಿ ಬರುತ್ತಿರಲಾಗಿ,
ತ್ರಿವಿಧದ ಬಲುಗಿರಿಯ ಹೊಯಿದು, ಹಡಗೊಡೆಯಿತ್ತು.
ಲಾಯದ ಅಶ್ವ ನೀರನೊಡಗೂಡಿತ್ತು.
ಹಡಗಿನ ಸೆಟ್ಟಿ ಪರಪತಿಗಡಹಿಲ್ಲಾಯೆಂದು
ಕುದುರೆಯನೊಡಗೂಡಿದ.
ಅರ್ಕೆಶ್ವರಲಿಂಗವ ಕೇಳುವ ಬನ್ನಿ./78
ಮತ್ಸ್ಯ ಹೊಳೆಯ ನುಂಗಿ,
ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ.
ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು,
ಅರ್ಕೆಶ್ವರಲಿಂಗವನರಿವುದಕ್ಕೆ./79
ಮಧುರವಾಣಿಯ ಉದರದಲ್ಲಿ,
ಒಂದು ನಿಜಕುಕ್ಕುಟ ಕೂಗುತ್ತದೆ.
ಮೂವರ ಮೊಲೆಯನುಂಡು,
ಮರೆದೊರಗಬೇಡಾ ಎಂದು ಬೆಳಗಾಯಿತ್ತು.
ಅರ್ಕೆಶ್ವರಲಿಂಗವ ನೋಡುವ ಬನ್ನಿ
ಎಂದು ಕೂಗುತ್ತಿದ್ದಿತ್ತು./80
ಮನ ಮಹದಲ್ಲಿ ನಿಂದು,
ತನುವಿನ ವಿಕಾರವ ಬಿಟ್ಟ ಮತ್ತೆ
ಭವ ಬಂಧದವರ ಒಲವರವೇಕೆ ?
ಅದು ಸಲೆ ನೆಲೆಯಲ್ಲ, ಅರ್ಕೆಶ್ವರಲಿಂಗವನರಿವುದಕ್ಕೆ./81
ಮನೆಯಲ್ಲಿ ಅಟ್ಟೆನೆಂದಡೆ, ಹೊಟ್ಟೆ ತುಂಬಿದುದುಂಟೆ ?
ಇರಿಯೆಂಬ ಮಾತಿಗೆ ಘಾಯವೊಡಲಾದುದುಂಟೆ ?
ಮಾತಿನ ಮಾಲೆಯ ನುಡಿದು, ಅರ್ಕೆಶ್ವರಲಿಂಗವನರಿದವರುಂಟೆ ?/82
ಮಾಡುವ ಕ್ರೀ ಕರ್ಮಕಾಂಡ, ಅರಿವ ಚಿತ್ತ ಭಾವಕಾಂಡ.
ಉಭಯ ಲೇಪವಾಗಿ ನಿಂದಲ್ಲಿ ಜ್ಞಾನಕಾಂಡ.
ತ್ರಿವಿಧ ಲಯವಾದಲ್ಲಿ, ಅರ್ಕೆಶ್ವರಲಿಂಗನ ಕೂಡವ ಕೂಟ./83
ಮಾಡುವ ಸತ್ಕ್ರೀಮಾರ್ಗ, ಇದಿರಿಗಲ್ಲದೆ
ಲಿಂಗವ ಮುಟ್ಟಲರಿಯವು.
ಸರ್ಪ ಹೆಡೆಯಲ್ಲಿ ಹೊಯಿದಡೆ
ವಿಷ ಹತ್ತಬಲ್ಲುದೆ, ದಷ್ಟವಾಗಿಯಲ್ಲದೆ ?
ಮನ ಭಾವ ಕ್ರೀ ತ್ರಿಕರಣ ಶುದ್ಧವಾಗು,
ಅರ್ಕೆಶ್ವರಲಿಂಗವನರಿವುದಕ್ಕೆ./84
ಮಾತಿನ ನಿಪುಣರೆಲ್ಲರೂ
ಸೋತು ಕುಳಿತರು ಅವಳ ಪೀಠಕ್ಕಾಗಿ.
ಪೀಠದ ಆಟದವರು
ಅರ್ಕೆಶ್ವರಲಿಂಗನ ಕೂಟವ ಬಲ್ಲರೆ ?/85
ಮುಕ್ತಿಯ ಪಥದಲ್ಲಿ ನಿಂದು, ಸುಚಿತ್ತವನರಿದು,
ಸುಚಿತ್ತ ನೆಲೆಗೊಂಡು, ನೆಲೆವಾಸ ಬಲಿದು,
ವಿರಕ್ತಿ ನಿರ್ವಾಣಪದವಾಗಿ,
ಪಥನಾಮ ರೂಪು ನಿರ್ಲೆಪವಾಗಿ,
ಅರ್ಕೆಶ್ವರಲಿಂಗವನರಿಯಬೇಕು./86
ಮೂರು ಸುರೆಯ ಕುಡಿದು,
ಅಡಗಿಸಿದವ ಎನ್ನ ಗುರು.
ಕಾಳಾಡ ಕಣ್ಣ ಕಿತ್ತು, ಎರಳೆಯ ತಿರುಳ ತಿಂದು,
ದಿನವ ಕಳಿದುಳಿದವ ಎನ್ನ ಗುರು.
ಆತ ಅರ್ಕೆಶ್ವರಲಿಂಗಕ್ಕೆ ಸಿಕ್ಕದವ./87
ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು,
ಬೇರೊಂದು ಠಾವಿನಲ್ಲಿ ಆಯಿದಾಳೆ.
ಠಾವನರಿತು ದೈತೆಯ ದಾತ ಮುರಿದು,
ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ,
ಅರ್ಕೆಶ್ವರಲಿಂಗವ ಕೂಡಿದ ಕೂಟ./88
ಮೂರುಲೋಕದ ಹುಟ್ಟಿನಲ್ಲಿ
ಒಂದು ವಾರಣ ಬಂದು,
ಊರೆಲ್ಲರ ಬರಿಕೈವುತ್ತದೆ.
ಅದಾರಿಗೂ ಅಶಕ್ಯ.
ಆ ವಾರಣನ ವಾರಿಸುವರಿಲ್ಲ.
ಅರ್ಕೆಶ್ವರಲಿಂಗವನರಿತವರಿಗಲ್ಲದೆ ಆಗದು./89
ಮೂವರು ಸಮಗಾರರ ಬಾಗಿಲಲ್ಲಿ
ಅಯಿವರು ಹಾರುವರು ಹರಸುತ್ತೈದಾರೆ.
ಒಬ್ಬನಿಗೆ ಕೊಂಬ ಕೊಟ್ಟು, ಒಬ್ಬನಿಗೆ ಕೊಳಗ ಕೊಟ್ಟು,
ಒಬ್ಬನಿಗೆ ಕರುಳ ಕೊಟ್ಟು, ಒಬ್ಬನಿಗೆ ಗರ್ಭವ ಕೊಟ್ಟು,
ಒಬ್ಬನಿಗೆ ಏನೂಯಿಲ್ಲದೆ ತಬ್ಬಿಬ್ಬಿಯಾಯಿತ್ತು.
ಆ ಮಾದಿಗನ ಮನೆಯ ಹೊಕ್ಕು, ಮಾದಗಿತ್ತಿಯ ಅ[ಡಗ] ತಿಂದ,
ಅರ್ಕೆಶ್ವರಲಿಂಗವನರಿದ ಕಾರಣ./90
ಮೊದಲು ಬೀಜ ಬಲಿದು,
ಕಡೆಯಲ್ಲಿ ಬೀಜ ಅಳಿದಲ್ಲದೆ ಅಂಕುರವಾಗದು.
ಕ್ರೀಯಲ್ಲಿ ಆಚರಿಸಿ, ಅರಿವಿನಲ್ಲಿ ವಿಶ್ರಮಿಸಿ,
ತುರೀಯ ಆತುರ ಸಮನವೆಂಬ
ತ್ರಿವಿಧ ಲೇಪವಾಗಿ ಕಂಡ ಉಳುಮೆ,
ಅರ್ಕೆಶ್ವರಲಿಂಗನ ಅರಿಕೆ./91
ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು ?
ಅಂಗ ಲಿಂಗವ ಮರೆದಲ್ಲಿ,
ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ ?
ಅರಿವಿಂಗೆ ಕುರುಹು, ಅರಿವು ಕುರುಹಿನಲ್ಲಿ ನಿಂದು,
ಕಾಷ್ಠದಿಂದೊದಗಿದ ಅಗ್ನಿ ಕಾಷ್ಠವ ಸುಟ್ಟು,
ತನಗಾಶ್ರಯವಿಲ್ಲದಂತಾಯಿತ್ತು.
ಹಾಗಾಗಬೇಕು, ಅರ್ಕೆಶ್ವರಲಿಂಗವನರಿವುದಕ್ಕೆ./92
ಲಿಂಗವನರಿತು ಅಂಗ ಲಯವಾಗಬೇಕು.
ಅಂಕುರ ತೋರಿ ಬೀಜ ನಷ್ಟವಾದಂತೆ,
ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ,
ಅರ್ಕೆಶ್ವರಲಿಂಗವ ಅರಿದ ಗೊತ್ತಿನ ಒಲುಮೆ./93
ವನದ ಬಾಳೆಯ ಗೊನೆಯ ಹೊಯಿದ ಕಳ್ಳನ
ಅಡಿವಜ್ಜೆಯಲ್ಲಿ ಹೋಗಿ,
ಹೆಡಗುಡಿಯ ಕಟ್ಟಿ, ಬಾಧಿಸಿ,
ಗೊನೆಯ ತೋರೆಂದಡೆ,
ಗೊನೆ ಮನೆಯೊಳಗದೆಯೆಂದ.
ಮನೆಯಾಕೆಯ ಕೇಳಿದಡೆ,
ಗೊನೆಯ ನಾ ತಿಂದೆ, ಕಳ್ಳನ ತಲೆಯ ಕುಟ್ಟಿ,
ಎನ್ನದು ಕೊಯಿದುಕೊಳ್ಳಿಯೆಂದಳು,
ಅರ್ಕೆಶ್ವರಲಿಂಗವ ಬಲ್ಲಡೆ./94
ಶಿಲೆಯೊಳಗಣ ಉರಿ ಅಡಗಿಪ್ಪಂತೆ,
ಬಲುಗೈಯನ ಕೋಲೆ ಉಡುಗಿಪ್ಪಂತೆ,
ಸಲೆ ಗರಳ ಕೊರಳೊಳಗೆ ಹೊರಹೊಮ್ಮದಂತೆ,
ಅರ್ಕೆಶ್ವರಲಿಂಗನ ತೊಡಿಗೆ ಹೀಗಾಗಬೇಕು./95
ಶುಕ್ಲ ಶ್ರೋಣಿತದ ಆಶ್ರಯದಲ್ಲಿ
ಕುಕ್ಕುಟ ಮರೆದಿರಲಾಗಿ,
ಬೆಕ್ಕು ನುಂಗ ಬಂದಿತ್ತು.
ಬೆಕ್ಕಿನ ಕುಕ್ಕುಟನ ಕುಕ್ಕುರ ನಂದಿಸಿತ್ತು.
ಕುಕ್ಕುರನ ಬೆಕ್ಕ ಕಾಲಜ್ಞಾನಿ ಎಚ್ಚತ್ತು,
ಅರ್ಕೆಶ್ವರಲಿಂಗವನರಿದ ಕಾರಣ./96
ಸತ್ತವನ ಮನೆಯಲ್ಲಿ
ಹೊತ್ತವರೆಲ್ಲರು ಅಳುತಿದರ್ಾರೆ.
ಮತ್ತೊಬ್ಬನ ಮದುವೆಗೆ ದಿಬ್ಬಣಕೆ ಬಂದು,
ಮದವಳಿಗನ ಕಾಣದೆ,
ಮನೆಮನೆಯ ಹೊಕ್ಕು ಸುತ್ತುತೈದಾರೆ.
ಕೇಳುವ ಬನ್ನಿ, ಅರ್ಕೆಶ್ವರಲಿಂಗವ./97
ಸರ್ಪನಿಪ್ಪುದಕ್ಕೆ ಠಾವಲ್ಲದೆ,
ತಪ್ಪಿ ವಿಷ ಹತ್ತಿದ ಮತ್ತೆಗೊತ್ತಿಂಗೆ ನಿಲುವುದೆ ?
ಅದರೊಪ್ಪಕ್ಕೆ ಕಡೆಯೆ ಲಿಂಗಸಂಗಸಂಯೋಗ ?
ಅರ್ಕೆಶ್ವರಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು./98
ಸಾಕು ಬಹುಮಾತಿನ ಮಾಲೆ.
ಸ್ಥಾಣುವ ತಿರುಗುವ ಪಶುವಿನಂತೆ,
ವೇಣುವ ಹಿಡಿದ ಶುಕನಂತೆ,
ಅದು ಪ್ರಾಣಕ್ಕೆ ಬಂದಾಗ ಅರಿದ ಇರವು.
ಭಾಳಲೋಚನರಿಗೆ ಹೀಗಾಯಿತ್ತು.
ಅರ್ಕೆಶ್ವರಲಿಂಗವನರಿವರಿನ್ನಾರು ?/99
ಸಾಧನೆಯಲ್ಲಿ ಬೆಳೆದ ವಿಹಂಗನಂತೆ,
ದೀಹವಾದ ಮೃಗದಂತೆ,
ಜಾತಿಜಾತಿಯ ಕೊಂದು, ಭೂತಹಿತವುಂಟೆ ?
ಸಮಯ ಸಮಯವ ಕೊಂದು,
ಬಲ್ಲಹ ಬಲ್ಲವನ ಸೊಲ್ಲು ಒಳ್ಳಿತ್ತಲ್ಲಾಯೆಂದು
ಎಲ್ಲರೊಳಗೆ ಹೇಳುವ ಖುಲ್ಲನ
ಬಲ್ಲತನವನೊಲ್ಲ, ಅರ್ಕೆಶ್ವರಲಿಂಗ./100
ಸೂನೆಗಾರನ ಮನೆಯಲ್ಲಿ
ಮೂವರು ಹಂದೆಗಳು ಹೊಕ್ಕು,
ಹೇಳ ಹೆಸರಿಲ್ಲದೆ ಕೊಂದರೆಲ್ಲರ.
ಸೂನೆಗಾರ ಏನೂ ಎನ್ನದೆಯಿದ್ದ,
ಕೇಳುವ ಬನ್ನಿ, ಅರ್ಕೆಶ್ವರಲಿಂಗವ./101
ಹಾವನೂ ಹದ್ದನೂ ಕೂಡೆ ಮೆದ್ದು,
ಬೇವನೂ ಬೆಲ್ಲವನೂ ಕೂಡೆ ಕಲಸಿ,
ಸಾಗರದಲ್ಲಿ ಸಾಧನೆಯ ಮಾಡುವರ ಬೇಗ ನೋಡಿ,
ಅರ್ಕೆಶ್ವರಲಿಂಗನರಿವುದಕ್ಕೆ./102