Categories
ವಚನಗಳು / Vachanagalu

ಮನಸಂದ ಮಾರಿತಂದೆ ವಚನಗಳು

ಅಂಗ ಪಿಂಡದಲ್ಲಿ ತೋರುವ ನೆಲೆ
ಆತ್ಮನೋ, ಅರಿವೋ ? ಎಂಬುದ ತಿಳಿದಲ್ಲಿ,
ಅರಿದು ಮಾಡುವ ಅರಿಕೆ ಮರೆದಿಹಲ್ಲಿ ಮಗ್ನ.
ಉಭಯವಂ ವಿಚಾರಿಸಿ ತೊಲಗಿದಲ್ಲಿ,
ಮನಸಂದಿತ್ತು ಮಾರೇಶ್ವರಾ./1
ಅಂಗಕ್ಕೆ ಕುರುಹೆಂಬುದೊಂದು ಲಿಂಗ.
ಆತ್ಮಂಗೆ ಅರಿವೆಂಬುದೊಂದು ಲಿಂಗ.
ಪರುಷ ಲೋಹದಂತೆ ಕೂಡುವನ್ನಬರ
ಉಭಯನಾಮ ರೂಪಾಯಿತ್ತು.
ಕೂಡಿದ ಮತ್ತೆ ಪರುಷವೆಂಬ ನಾಮವಿಲ್ಲ,
ಲೋಹವೆಂಬ ಕುರುಹಿಲ್ಲ.
ಹೇಮವೆಂಬ ನಾಮವಾಯಿತ್ತು.
ಇಷ್ಟ ಪ್ರಾಣ ಹಾಗಾದಲ್ಲಿ, ಮನಸಂದಿತ್ತು ಮಾರೇಶ್ವರಾ./2
ಅಂಗಲಿಂಗಿಯಾದಲ್ಲಿ,
ಜಾಗ್ರದಲ್ಲಿ ಎಡೆಬಿಡುವಿಲ್ಲದಿರಬೇಕು.
ಪ್ರಾಣಲಿಂಗಿಯಾದಲ್ಲಿ,
ಸ್ವಪ್ನಕ್ಕೆ ನಾನಾ ಪ್ರಕೃತಿಯ ಹಿಂಗಿರಬೇಕು.
ಸರ್ವಗುಣಸಂಪನ್ನ ಸಾವಧಾನಿಯಾದಲ್ಲಿ,
ಸುಷುಪ್ತಿಯಲ್ಲಿ ಯುಕ್ತಿಗೆಡದಿರಬೇಕು.
ಇಂತೀ ತ್ರಿವಿಧಕ್ಕೆ ಒಳಗಹುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./3
ಅಂಡದಲ್ಲಿಪ್ಪ ತತ್ತಿಯ ಕಂಡು,
ಪಿಂಡದಲ್ಲಿಪ್ಪ ಪ್ರಾಣವನರಿದು,
ಆರೋಗ್ಯದ ರೋಗವ ಹರಿದು,
ಅರೋಚಕ್ಕೆ ಹೊರಗಾಗಿ ನಿಂದುದು,
ಮನಸಂದಿತ್ತು ಮಾರೇಶ್ವರಾ./4
ಅಕ್ಕರ ರೂಪಾಗಿ ಲೆಕ್ಕವಟ್ಟೆಯ ಕಾಬಂತೆ,
ವಸ್ತುಮಯ ರೂಪಾಗಿ,
ಭಕ್ತರು ಜಂಗಮದಲ್ಲಿ ಲೆಕ್ಕಕ್ಕೆ ಸಿಕ್ಕಿದೆಯಲ್ಲಾ.
ಲಕ್ಷ ಅಲಕ್ಷಂಗಳಿಂದ ನಿರೀಕ್ಷಿಸಿ ತಿಳಿದಲ್ಲಿ ಸಿಕ್ಕಿ,
ಮನಸಂದಿತ್ತು ಮಾರೇಶ್ವರಾ./5
ಅನಲಂಗೆ ಉರಿ ಉಷ್ಣವಿಲ್ಲದೆ,
ತೃಣ ಕಾಷ್ಠಂಗಳ ಸುಡುವ ಪರಿಯಿನ್ನೆಂತು ?
ಆತ್ಮಂಗೆ ಅರಿವಿಲ್ಲದಿರೆ,
ಬಂಧ ಮೋಕ್ಷ ಕರ್ಮಂಗಳ ಹಿಂಗುವ ಪರಿಯಿನ್ನೆಂತು ?
ಇಂತೀ ದ್ವಂದ್ವಂಗಳನರಿದು ಮರೆದಲ್ಲಿ,
ಮನಸಂದಿತ್ತು ಮಾರೇಶ್ವರಾ./6
ಅಪ್ಪು ಅಪ್ಪುವ ನುಂಗಿದಂತೆ,
ವಿಚಿತ್ರ ಚಿತ್ರದೊಳಡಗಿದಂತೆ,
ಮನ ಮಹವ ಕೂಡಿ
ಬೆಳಗು ಬೆಳಗನೊಳಕೊಂಡಂತೆ,
ತಾನೆಂಬುದೇನೂ ಕುರುಹುದೋರದೆ,
ಮನಸಂದಿತ್ತು ಮಾರೇಶ್ವರಾ./7
ಅರಿಕೆಗೊಡಲಾದವ ನಾನೆಂದು
ಇದಿರಿಗೆ ಹೇಳಿ ಹೋರಲೇತಕ್ಕೆ ?
ನಿಸ್ಪೃಹನಾದೆನೆಂದು ಕಚ್ಚುಟವ ಕಟ್ಟಿ,
ಮನೆಮನೆದಪ್ಪದೆ ಹೋಗಲೇತಕ್ಕೆ?
ಮಡಕೆಯ ಕೊಳಕು
ನೀರ ಹಿಡಿದಾಗಲೆ ದುರ್ಗುಣ ಕಾಣಬಂದಿತ್ತು.
ಇಂತೀ ಇವರುವ ಕಾಬುದಕ್ಕೆ ಮೊದಲೆ
ಮನಸಂದಿತ್ತು ಮಾರೇಶ್ವರಾ./8
ಅರಿದೆನೆಂದು ಎಲ್ಲವ ತೋರದ ಮತ್ತೆ
ಅರಿವ ಮರೆದು ನೆರೆ ನೀರನಾಗಿ,
ತಿರುಗಿಹೆನೆಂಬ ಭವವೇತಕ್ಕೆ ?
ಅರಿದ ಒಡಲಿಂಗೆ ಸುಖದುಃಖಾದಿಗಳೆಲ್ಲವೂ
ಸರಿಯೆಂದ ಮತ್ತೆ, ಇನ್ನೊಂದನರಸಲೇತಕ್ಕೆ ?
ಇಂತೀ ಅರಿವ ಮರೆದ ಒಡಲು,
ನಡುದೊರೆಯಲ್ಲಿ ಬಿದ್ದು ಈಜಲರಿಯದೆ,
ಕೈಕಾಲ ಬೆದರಿ ಸತ್ತಂತಾಯಿತ್ತು.
ಇಂತಿವರಂಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ./9
ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ,
ಆ ಗುಣ ಅರಿವೋ, ಮರವೆಯೋ ?
ಹೋಗಲಂಜಿ, ಹಗೆಯ ಕೈಯಲ್ಲಿ
ಹಾದಿಯ ತೋರಿಸಿಕೊಂಬಂತೆ,
ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ?
ಈ ಅನ್ಯಭಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ./10
ಅರ್ಪಿಸುವುದಕ್ಕೆ ಮುನ್ನವೆ
ಮನವರಿದು, ಕಂಗಳು ತುಂಬಿ, ಕಂಡ ಮತ್ತೆ
ಅರ್ಪಿತವೆಲ್ಲಿ ಅಡಗಿತ್ತು?
ಸಂದೇಹವ ಬಿಟ್ಟು ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ./11
ಅವಿರಳಕ್ಕೆ ವಿರಳದ ದ್ವಾರವುಂಟೆ ?
ಅರಿದವಂಗೆ ಆತ್ಮನಡಗುವುದಕ್ಕೆ ಬೇರೊಂದೆಡೆ ಉಂಟೆ ?
ವಿದ್ಯುಲ್ಲತೆಯಂತೆ, ಬೊಬ್ಬುಳಿಕೆಯಂತೆ,
ತಾನಿದ್ದಲ್ಲಿಯೆ ಲೀಯ, ಮನಸಂದಿತ್ತು ಮಾರೇಶ್ವರಾ./12
ಅಳಿವುದಕ್ಕೆ ಮುನ್ನವೆ ಉಳಿಯಿತ್ತು ಆತ್ಮ.
ಉಳಿದು ಭವದುಃಖಕ್ಕೆ ಒಳಗಾಗದ ಮುನ್ನವೆ
ಮನಸಂದಿತ್ತು ಮಾರೇಶ್ವರಾ./13
ಆಯವಲ್ಲದ ಠಾವನಿರಿದಡೆ ಸಾವುಂಟೆ ?
ಜ್ಞಾನವಿಲ್ಲದ ಪೂಜೆ, ಸದ್ಭಾವವಿಲ್ಲದ ಭಕ್ತಿ,
ಧ್ಯಾನವಿಲ್ಲದ ಜಪ,
ಇವು ಮುನ್ನವಾಯುವಹುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./14
ಇದಿರೆಡೆಯಾದಲ್ಲಿ ಹಿಂದಣಲಗ ಸತ್ತಿತ್ತು.
ಕಡ ಚೀಟ ಕೊಟ್ಟಲ್ಲಿ ಒಡೆಯನ ಬೇಡಲಿಲ್ಲ.
ವಸ್ತುವ ಅಡಿ ಅರಿದು ಕೂಡಿದಲ್ಲಿ,
ಬೇರೊಂದು ಬಿಡುಗಡೆ ಉಂಟೆ ?
ಆ ತೆರನನರಿದು ಕರಿಗೊಂಡಲ್ಲಿ.
ಮನಸಂದಿತ್ತು ಮಾರೇಶ್ವರಾ./15
ಇಷ್ಟಲಿಂಗ, ಪ್ರಾಣಲಿಂಗವೆಂದು
ಬೇರೊಂದು ಕಟ್ಟಣೆಯ ಕಟ್ಟಬಹುದೆ ?
ವೃಕ್ಷ ಬೀಜದಲ್ಲಿ ಅಡಗಿ,
ಬೀಜ ವೃಕ್ಷವ ನುಂಗಿಪ್ಪ ತೆರನಂತೆ,
ಇಷ್ಟ ಪ್ರಾಣ ಬೆಚ್ಚಂತಿರಬೇಕು.
ಅಪ್ಪು ಮುತ್ತಾದಂತೆ, ಉಭಯದ ಗೊತ್ತು ತಾನೆ,
ಮನಸಂದಿತ್ತು ಮಾರೇಶ್ವರಾ./16
ಇಷ್ಟವ ಹಿಡಿದಾಡುವನ್ನಬರ
ಪೂಜೆಯ ಕಟ್ಟುಗೊತ್ತಿನಲ್ಲಿ ಇರಬೇಕು.
ಇಷ್ಟವರತು ಅಂಗದ ಆಚರಣೆ ಅಳಿದಲ್ಲಿ,
ಉಭಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ/17
ಇಹದಲ್ಲಿ ಕಾಬ ಸುಖ,
ಪರದಲ್ಲಿ ಮುಟ್ಟುವ ಭೇದ.
ಉಭಯದ ಗುಣ ಏಕವಾದಲ್ಲಿ,
ಮನಸಂದಿತ್ತು ಮಾರೇಶ್ವರಾ./18
ಉಚಿತ ಬಂದಲ್ಲಿ ನಾಳೆಗೆಂದಾಗವೆ ಕುಚಿತವಲ್ಲವೆ ?
ನೆರೆ ಅರಿದು ಸಂಸಾರವ ಹರಿಯದಿದ್ದಾಗವೆ ಮರವೆಯಲ್ಲವೆ ?
ಅರಿದಡೆ ಮರೀಚಿಕದಂತೆ, ಸುರಚಾಪದಂತೆ,
ಅಂಬರದ ಆಕಾರದಂತೆ ತೋರಿ ಅಡಗುವ
ನಿಜಲಿಂಗಾಂಗಿಯ ಇರವು. ಅದರಂಗ ವೇಧಿಸಿದಲ್ಲಿಯೆ,
ಮನಸಂದಿತ್ತು ಮಾರೇಶ್ವರಾ./19
ಉಟ್ಟುದ ಹೊದ್ದುದ ಬಿಟ್ಟು ಬಂದು,
ಮತ್ತೊಬ್ಬರ ಅಂಗಳದ ಬಟ್ಟೆಯ ಕಾಯಲೇತಕ್ಕೆ ?
ದೃಷ್ಟದ ವಸ್ತುವಿದೆಯೆಂದು ಮಿಕ್ಕಾದವರಿಗೆ ಹೇಳುತ್ತ,
ತ್ರಿವಿಧಬಟ್ಟೆಯ ತಾ ಕಾವುತ್ತ,
ಈ ಕಷ್ಟರ ಕಾಬುದಕ್ಕೆ ಮೊದಲೆ
ಮನಸಂದಿತ್ತು ಮಾರೇಶ್ವರಾ./20
ಉದಕ ಹಲವು ತೆರದಲ್ಲಿ ಬೆರಸಿ,
ಸವಿ ಸಾರವ ಕೊಡುವಂತೆ,
ವಸ್ತು ಸರ್ವಮಯನಾಗಿ, ಷಡುಸ್ಥಲಬ್ರಹ್ಮಿಯಾಗಿ,
ಪಂಚವಿಂಶತಿತತ್ವ ಪರಬ್ರಹ್ಮಮೂರ್ತಿಯಾಗಿ,
ಹೇಮದ ಸ್ವರೂಪದಂತೆ ರೂಪಿಂಗೊಡಲಾಗಿ,
ಅದನಳಿಯೆ, ಏಕಭಾವವಾಗಿ ನಿಂದ ನಿಜದಲ್ಲಿ ನೋಡೆ,
ಮನಸಂದಿತ್ತು ಮಾರೇಶ್ವರಾ./21
ಉದಕವೊಂದರಲ್ಲಿ ತಂದು,
ವರ್ಣ ಭೇದಕ್ಕೆ ಹಲವಾದ ತೆರನಂತೆ,
ಆತ್ಮ ನಾನೆಂಬುದ ಮರೆದು,
ಸರ್ವರಲ್ಲಿ ಬೆರಸುವ ಚಿತ್ತ ಒಂದೋ, ಎರಡೋ ?
ನೆಲಜಲ ಒಂದಾದಡೆ, ಬೆಳೆವ ವೃಕ್ಷ
ಹಲವಾದ ತೆರದಂತೆ,
ಅರಿವು ಮರವೆಗೊಳಗಾದ ಆತ್ಮನ ತಿಳಿದಲ್ಲಿ,
ಬೇರೊಂದೆಡೆಗೆ ತೆರಪಿಲ್ಲ, ಮನಸಂದಿತ್ತು ಮಾರೇಶ್ವರಾ./22
ಎಲ್ಲಾ ಸಂಕಲ್ಪ ತನ್ನ ತಾನರಿಯದ ಭೇದವಲ್ಲದೆ,
ಇದಿರಿಟ್ಟು ಕಾಬುದು, ಇದಿರಿಂಗೆಡೆಯಾಗಿಪ್ಪುದು.
ಅಲ್ಲ ಅಹುದೆಂಬ ಗೆಲ್ಲಸೋಲ ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ./23
ಕಂಗಳಿಂದ ಕಂಡೆಹೆನೆಂದಡೆ, ಅಲ್ಲಿಗೆ ಪರಿಪೂರ್ಣ ನೀನು.
ಚಿತ್ತದಿಂದ ನೆನೆದೆಹೆನೆಂದಡೆ, ಅಲ್ಲಿಗೆ ಅಚ್ಚೊತ್ತಿದಂತಿಹೆ.
ನಾ ನೀನೆಂಬ ಭಾವ ಬೇರಾದಲ್ಲಿ ನೆನಹಿಂಗೆ ಒಡಲಿಲ್ಲ.
ಮನಸಂದಿತ್ತು ಮಾರೇಶ್ವರಾ./24
ಕಂಡೂ ಕಾಣದೆ, ಕೂಡಿಯೂ ಕೂಡದೆ,
ಹೆರೆಹಿಂಗಿಯೂ ಹಿಂಗದೆ,
ಲಿಂಗಸಂಗವೆಂಬುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./25
ಕಂಡೆಹೆನೆಂಬ ಭ್ರಾಂತಿ, ಕಾಣೆನೆಂಬ ಬಯಕೆ.
ಅರಿವುದಕ್ಕೆ ಮುನ್ನ ಅರಿದ ಅರಿವು,
ಮನಸಂದಿತ್ತು ಮಾರೇಶ್ವರಾ./26
ಕರ್ಪುರ ಪುತ್ಥಳಿಯ ಉರಿ ಮುಟ್ಟಲಿಕ್ಕೆ,
ಪುತ್ಥಳಿಯಂತುರಿವುದೆ ಚಿತ್ತ ?
ಕಾಯದ ಒಪ್ಪವನರಿದಲ್ಲಿ, ಮನಸಂದಿತ್ತು ಮಾರೇಶ್ವರಾ./27
ಕರ್ಮದ ಧರ್ಮಂಗಳೊಳಗಾಗಿ ಮಾಡುವ
ಮಾಟಂಗಳೆಲ್ಲವೂ ಕರ್ಮಶಕ್ತಿಗೆ ಬೀಜ.
ಆ ಉಭಯವ ನೇತಿಗಳೆದು ಮಾಡುವುದೆಲ್ಲವೂ
ಜ್ಞಾನಶಕ್ತಿಗೆ ಬೀಜ.
ಸಕಲವ ವಿಚಾರಿಸಿ, ಅಹುದಲ್ಲಾ ಎಂದು
ಹರಿದು ಮಾಡುವುದೆಲ್ಲವೂ ಮುಂದೊಂದ ಕುರಿತು
ವಸ್ತುವೆಂಬ ಒಡಲಿಗೆ ರೂಪಾಯಿತ್ತು.
ಸ್ವಯವೆಂಬ ಭಾವ ನಿಜದಲ್ಲಿ ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ./28
ಕರ್ಮವ ನೇತಿಗಳೆದು ನಿಂದಲ್ಲಿ,
ವರ್ಮವ ವಿಚಾರಿಸಲಿಲ್ಲ.
ಕರ್ಮ ವರ್ಮವೆಂಬ ಉಭಯದ ಸಂದಣಿಯಲ್ಲಿ
ಹೋರಟೆಗೊಳ್ಳದ ಮುನ್ನವೆ,
ಮನಸಂದಿತ್ತು ಮಾರೇಶ್ವರಾ./29
ಕಲ್ಲು ರತಿಯಿಂದ ರತ್ನವಾದಂತೆ,
ಉದಕ ಸಾರವರತು ಲವಣವಾದಂತೆ,
ವಾರಿ ವಾಯುವ ಸಂಗದಿಂದ ಬಲಿದಂತೆ,
ಪೂರ್ವವನಳಿದು ಪುನರ್ಜಾತನಾದ ಮತ್ತೆ,
ಎನ್ನವರೆಂದು ಬೆರಸಿದಲ್ಲಿ,
ಆ ಗುಣ ಆಚಾರಕ್ಕೆ ಹೊರಗಾಯಿತ್ತು.
ಮಾತೆ ಪಿತ ಸಹೋದರ ಬಂಧುಗಳೆಂದು
ಮನ ಕೂರ್ತು ಬೆರಸಿದಲ್ಲಿ,
ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ,
ಪರಮಾರ್ಥಕ್ಕೆ ಸಲ್ಲ.
ಇವನೆಲ್ಲವ ಕಳೆದುಳಿದು ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ./30
ಕಳನನೇರಿದಲ್ಲಿ ಕೈದನರಸಲಿಲ್ಲ.
ಬಲ್ಲವನಾದೆನೆಂಬಲ್ಲಿ ಗೆಲ್ಲ ಸೋಲಕ್ಕೆ ಹೋರಲಿಲ್ಲ.
ನೇಮ ಸಂದಲ್ಲಿ ತನುವಿನಾಸೆಯು,
ಮನಸಂದಿತ್ತು ಮಾರೇಶ್ವರಾ./31
ಕಾಣೆನೆಂಬ ಅರಿಕೆ, ಕಂಡೆನೆಂಬ ಸಂತೋಷ.
ಉಭಯವ ವಿಚಾರಿಸುವನ್ನಬರ ಮರವೆಯ ಬೀಜ.
ಕಂಡೆನೆಂಬ ಕಾಣಿಕೆಯವನಲ್ಲ, ಕಾಣೆನೆಂಬ ಸಂಚಾರದವನಲ್ಲ.
ಆ ಉಭಯದ ಅಂಗ ಲೇಪವಾದಲ್ಲಿ,
ಮನಸಂದಿತ್ತು ಮಾರೇಶ್ವರಾ./32
ಕಾಬುದಕ್ಕೆ ಮೊದಲೆ ಬಯಕೆ ಅರತು,
ಕೂಡುವುದಕ್ಕೆ ಮುನ್ನವೆ ಸುಖವರತು,
ಉಭಯ ನಾಮಧೇಯ ನಷ್ಟವಾದಲ್ಲಿ,
ಮನಸಂದಿತ್ತು ಮಾರೇಶ್ವರಾ./33
ಕಾಯ ದಿಟವೆಂದು ಪ್ರಮಾಣಿಸುವಲ್ಲಿ ಅಳಿವುದಕ್ಕೆ ಮುಖ್ಯ.
ಜೀವ ದಿಟವೆಂದು ಪ್ರಮಾಣಿಸುವಲ್ಲಿ ಪ್ರಕೃತಿರೂಪು.
ಅರಿವು ದಿಟವೆಂದು ಪ್ರಮಾಣಿಸುವಲ್ಲಿ ಮರವೆಗೆ ಬೀಜ.
ಸ್ಥೂಲದ ಅಳಿವನರಿತು, ಸೂಕ್ಷ್ಮದ ಪ್ರಕೃತಿಯನರಿತು,
ಕಾರಣದ ಅರಿವು ಮರವೆಯನರಿತು,
ತ್ರಿಗುಣ ಭೇದಂಗಳ, ತ್ರಿಶಕ್ತಿ ಭಾವಂಗಳ,
ತ್ರಿಗುಣಮಲಕ್ಕೆ ಒಳಗಾಗದ ಮುನ್ನವೆ
ಮನಸಂದಿತ್ತು ಮಾರಿತಂದೆ./34
ಕಾಯ ಮುಟ್ಟಿದ ಠಾವಿನಲ್ಲಿ ಜೀವ ಮುಟ್ಟಲಿಲ್ಲ.
ಜೀವ ಮುಟ್ಟಿದ ಠಾವಿನಲ್ಲಿ ಪರಮ ಮುಟ್ಟಲಿಲ್ಲ.
ಪರಮ ಪ್ರಕಾಶವನೆಯ್ದಿ ತ್ರಿವಿಧಗುಣವರತಲ್ಲಿ,
ಮನಸಂದಿತ್ತು ಮಾರೇಶ್ವರಾ./35
ಕಾಯಕಲ್ಪಿತಕ್ಕೊಳಗಲ್ಲದೆ ಇರಬೇಕು.
ಜೀವ ನಾನಾ ಭವಂಗಳಲ್ಲಿ ಬಾರದೆ ಇರಬೇಕು.
ಅರ್ತಿಗಾರಿಕೆಯಲ್ಲಿ ಎಲ್ಲ ಹೊತ್ತುಹೋಕಂಗೆ.
ನಿಶ್ಚಯದ ಮಾತೇಕೆ ? ಆ ಕುಚಿತ್ತರಿಗೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./36
ಕಾಯದಲ್ಲಿ ಬತ್ತಲೆಯಿಪ್ಪವರೆಲ್ಲರು
ಜೀವರುಗಳ ಬಾಗಿಲಲ್ಲಿ ಬಾಯ ಬಿಡುತ್ತ,
ಉಂಟು ಇಲ್ಲಾ ಎಂಬುದಕ್ಕೆ ಬೇವುತ್ತ,
ಇಂತಪ್ಪವರ ಜ್ಞಾನಿಗಳೆಂಬುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./37
ಕಾಯದೊಳಗಣ ಚಿತ್ತವ ಭಾವಿಸಿ,
ಇದಿರಿಟ್ಟಲ್ಲಿ ಭಾವವೋ, ಜೀವವೋ ?
ನಾನೆಂಬುದು ತಾನೋ, ಬೇರೊಂದು ನೆಲೆಯ ಪರಮನೋ ?
ಆ ಗುಣ ಸ್ಥೂಲ ಸೂಕ್ಷ್ಮ ಕಾರಣಕ್ಕೆ ಹೊರಗಾದಲ್ಲಿ,
ಮನಸಂದಿತ್ತು ಮಾರೇಶ್ವರಾ./38
ಕಾಯವ ಬಿಟ್ಟು ಪ್ರಾಣಹೋದ ಮತ್ತೆ,
ಆ ಕಾಯಕ್ಕೆ ಆ ಪ್ರಾಣ ಪುನರಪಿಯಾಗಿ ಒಪ್ಪುದೆ ?
ಅಂಗವ ಬಿಟ್ಟು ಲಿಂಗ ಬಿದ್ದ ಮತ್ತೆ,
ಮತ್ತಾ ಅಂಗಕ್ಕೆ ಲಿಂಗವುಂಟೆ ?
ಲಯವೆಂದಿದ್ದಡೂ ತಪ್ಪದು.
ಪ್ರಾಯಶ್ಚಿತವೆಂದು ಪ್ರಕಾರವ ಮಾಡಿ,
ಶ್ವಾನನ ಕಾಲಿನಲ್ಲಿ ಸೋಮಪಾನವನೆರೆದು,
ಪಾಯಸ ಶುದ್ಧವಾಯಿತ್ತೆಂದು ಕೊಂಬವನಂತೆ,
ಈ ಗುಣವ ಕಾಬುದಕ್ಕೆ ಮೊದಲೆ
ಮನಸಂದಿತ್ತು ಮಾರೇಶ್ವರಾ./39
ಕಾಯವಿಡಿದಿಹನ್ನಕ್ಕ ಕೈಯ ಕುರುಹು.
ಜೀವವಿಡಿದಿಹನ್ನಕ್ಕ ಭವಪಾಶ.
ಈ ಉಭಯವನರಿದಿಹನ್ನಕ್ಕ
ಮಹಾಶರಣರ ಸಂಗಸುಖ ಬೇಕು.
ಸುಖ ನಿಶ್ಚಯವಾದಲ್ಲಿ, ನಾ ನೀನೆಂಬ ಭಾವ
ಮನಸಂದಿತ್ತು ಮಾರೇಶ್ವರಾ./40
ಕಾಯವಿಡಿದಿಹನ್ನಬರ ಆಗುಚೇಗೆಯನರಿಯಬೇಕು.
ಆಗೆಂಬುದೆ ಜೀವ, ಚೇಗೆಯೆಂಬುದೆ ಕಾಯ.
ಉಭಯವನಳಿದು ತಾ ತೊಲಗಿಪ್ಪುದೆ,
ಮನಸಂದುದು ಮಾರೇಶ್ವರಾ./41
ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ.
ಕಾಯಕವಿಲ್ಲದವನ ಅರಿವು ವಾಯವಾಯಿತ್ತು.
ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆಬೇಡ.
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ.
ಇಂತಿವರಡಿಯ ಕಾಬುದಕ್ಕೆ ಮೊದಲೆ ಅಡಗಿದೆಯಲ್ಲಾ,
ಮನಸಂದಿತ್ತು ಮಾರೇಶ್ವರಾ./42
ಕಾಯಸೂತಕಿಗಳು ಕರ್ಮಕ್ಕೊಳಗು.
ಜೀವಸೂತಕಿಗಳು ಭವಕ್ಕೆ ಬೀಜ.
ಮತ್ತಾವ ಸೂತಕಿಗಳೆಲ್ಲರು
ಎಂಬತ್ತನಾಲ್ಕುಲಕ್ಷ ಜೀವರಾಶಿಗಳ ಠಾವಿಗೆ ಒಳಗು.
ಪ್ರಸೂತವಾಗಿ ಹೊರಗಾದಲ್ಲಿ ಏನೂ ಎಂದೆನಲಿಲ್ಲ,
ಮನಸಂದಿತ್ತು ಮಾರೇಶ್ವರಾ./43
ಕುರುಹಿನ ಪತಾಕೆಯ ಹಿಡಿದವಂಗೆ,
ಕೊರತೆ ಉಂಟೆ, ಆಳ್ದಂಗಲ್ಲದೆ ?
ಎಚ್ಚವನಿದ್ದಂತೆ ಅಂಬಿಗೆ ಮುನಿವರೆ ?
ಎನ್ನ ಮರವೆ ನಿನ್ನ ಕೇಡಾದ ಕಾರಣ,
ನೀ ನಾನೆಂಬುದಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ./44
ಕುಸುಮಗಂಧ ಹಿಸುಕಿದಲ್ಲಿ ದುರ್ಗಂಧ.
ಉದಕದಲ್ಲಿ ನಿರ್ಮಲ, ಕೆದಕಿದಲ್ಲಿ ಮಲ.
ವಿನಯದಿಂದ ಸುಗುಣ, ದುರ್ವಾಸದಿಂದ ಕರ್ಕಶ.
ಇಂತೀ ಉಭಯಂಗಳೆಲ್ಲ ಕೂಡಿ,
ಜೀವ ಪರಮನೆಂಬ ಅರಿವು ಮರವೆ ಎರಡಳಿದು,
ಪಂಕವನೀಂಟಿದ ಸುಜಲ ನಿಂದಂತೆ,
ಏಕಚಿತ್ತಮೂರ್ತಿಯಾದಲ್ಲಿ, ಮನಸಂದಿತ್ತು ಮಾರೇಶ್ವರಾ./45
ಕೂರ್ಮನ ಮೋಹ, ಉರಗನ ಧ್ಯಾನ,
ವಿಹಂಗನ ಚಿತ್ತ, ಪಿಪೀಲಿಕನ ಜ್ಞಾನ,
ಮಯೂರನ ಎಚ್ಚರಿಕೆ, ದಯಾಪರನ ಸರ್ವಗುಣ,
ಉಭಯವಳಿದವನ ನಿರ್ಮೊಹ, ಅಪ್ರಮಾಣನ ವಿಶ್ವಾಸ,
ಕುರುಹುದೋರುವುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./46
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾಯಲೇತಕ್ಕೆ ?
ಕಂಡವರ ಬೇಡಿ ಜಂಗಮಕ್ಕೆ ಮಾಡಿಹೆನೆಂಬ ದಂದುಗವೇಕೆ ?
ಲಂದಣಗಿತ್ತಿಯಂತೆ ಸಾವ ಘಟದಂದವ ಹೊರಲೇತಕ್ಕೆ ?
ಈ ದಂದುಗಕ್ಕೆ ಮೊದಲೆ ಅಂಜಿ, ಅರಿದು ಮನಸಂದಿತ್ತು ಮಾರೇಶ್ವರಾ./47
ಕೈ ತುಂಬಿ ಹಿಡಿದು, ಕಂಗಳು ತುಂಬಿ ನೋಡಿ,
ಮನ ತುಂಬಿ ಹಾರೈಸಿ,
ಎಡೆಬಿಡುವಿಲ್ಲದೆ ಅರಿದ ಮತ್ತೆ
ಆ ಕುರುಹು ಕೈಗೆ ಆದಿಯಾಗಿ, ಕಂಗಳಿಗೀಡಾಗಿ,
ಆತ್ಮನರಿವಿನಲ್ಲಿ ಉಭಯವಳಿದು ನಿಂದಲ್ಲಿಯೆ ಲೀಯವಾಗಿ,
ಮನಸಂದಿತ್ತು ಮಾರೇಶ್ವರಾ. /48
ಕ್ರೀಯಲ್ಲಿ ಇಷ್ಟವ ಪೂಜಿಸುವನ್ನಬರ,
ಚಿತ್ತದ ತೊಟ್ಟುಬಿಟ್ಟು ಬೆಚ್ಚಂತಿರಬೇಕು.
ಭಾವದಿಂದ ಅಧ್ಯಾತ್ಮವನರಿವನ್ನಬರ,
ಜೀವಸಂಸಾರವಿಲ್ಲದಿರಬೇಕು.
ಇಂತೀ ಎರಡಳಿದು ಒಂದರಲ್ಲಿ ನಿಜವಹನ್ನಬರ,
ಕಾಯಕ್ಕೆ ಕರ್ಮ, ಜೀವಕ್ಕೆ ಅರಿವು.
ಅರಿವಿಂಗೆ ಕುರುಹುದೋರುವುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ. /49
ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ.
ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ.
ತನು ತಲೆ ಬತ್ತಲೆಯಾಗಿ,
ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ.
ಇಂತೀ ಗುಣವ ಸಂಪಾದಿಸುವನ್ನಕ್ಕ,
ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ.
ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ./50
ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು.
ವೈರಾಗ್ಯದ ವಿರಕ್ತಿ ಮೂರಕ್ಕೆ ಒಡಲುಗೊಳಿಸಿತ್ತು.
ವಾಗದ್ವೈತದ ಕೇಣಸರ,
ಗೆಲ್ಲ ಸೋಲಕ್ಕೆ ಕಲ್ಲೆದೆಯ ಮಾಡಿತ್ತು.
ಇವೆಲ್ಲವ ತಿಳಿದು, ಇಲ್ಲ ಉಂಟು ಎಂಬಲ್ಲಿಯೆ,
ಮನಸಂದಿತ್ತು ಮಾರೇಶ್ವರಾ./51
ಗರಳವ ಬೈಚಿಟ್ಟುಕೊಂಡಿಪ್ಪ ಉರಗನಂತೆ,
ಫಲವನಿಂಬಿಟ್ಟುಕೊಂಡಿಹ ತರುವಿನಂತೆ,
ನಿಧಾನವ ಮರೆಸಿಕೊಂಡಿಪ್ಪ ಧರೆಯಂತೆ,
ಗಂಧವನಿಂಬಿಟ್ಟ ಚಂದನದಂತೆ
ಇವರಂಗವಾವ ತೆರದಲ್ಲಿ ನಿಂದಿತ್ತು ?
ಸಂಗ ದುಸ್ಸಂಗವನರಿದು ಸಲೆ ಸಂದುದು,
ನಿಂದುದು, ಮನಸಂದುದು ಮಾರೇಶ್ವರಾ./52
ಗುರಿಯನೆಚ್ಚಲ್ಲಿ ತಾಗಿದವೊಲು,
ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ,
ಕಾಯ ಜೀವದ ಸಂದಣಿಯಲ್ಲಿ,
ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ,
ಆ ಗುಣವ ಕರಿಗೊಂಡು, ಮನಸಂದಿತ್ತು ಮಾರೇಶ್ವರಾ./53
ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ,
ಜಂಗಮದಲ್ಲಿ ದೂಷಣ ಮಾಡುತ್ತ
ಲಿಂಗವನರಿತು, ಗುರುವ ಮರೆಯಬೇಕು.
ಅರಿವನರಿತು, ಜಂಗಮವ ಮರೆಯಬೇಕು.
ಗುರುವೆ ಲಿಂಗವಾಗಿ, ಲಿಂಗವೆ ಜಂಗಮವಾಗಿ,
ಜಂಗಮವೆ ಅರಿವಾಗಿ ನಿಂದಲ್ಲಿ
ಲಿಂಗವನರಿತು, ಗುರುವೆಂಬುದ ಮರೆಯಬೇಕು.
ಗುರುವನರಿತು, ಜಂಗಮವ ಮರೆಯಬೇಕು.
ಜಂಗಮವ ಮರೆದಲ್ಲಿ ಅರಿವು ಕರಿಗೊಂಡಿತ್ತು,
ಮನಸಂದ ಮಾರೇಶ್ವರಾ./54
ಗುರುವಿನಲ್ಲಿ ವಿಶ್ವಾಸಿಸಿ, ಲಿಂಗವ ಮರೆಯಬೇಕು.
ಲಿಂಗದಲ್ಲಿ ವಿಶ್ವಾಸಿಸಿ, ಜಂಗಮವ ಮರೆಯಬೇಕು.
ಜಂಗಮದಲ್ಲಿ ವಿಶ್ವಾಸಿಸಿ, ತ್ರಿವಿಧವ ಮರೆಯಬೇಕು.
ತ್ರಿವಿಧವ ಮರೆದು ಅರಿದಲ್ಲಿ,
ಲಿಂಗ ಬಿದ್ದಿತ್ತೆಂಬ ಸಂದೇಹವಿಲ್ಲದೆ, ಎತ್ತಿ ಅವಧರಿಸಿಕೊಂಡು,
ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ,
ಅರಿವಿಂಗೆ ಎಡೆದೆರಪಿಲ್ಲದೆ ನಿಂದುದು.
ಅಂಗಕ್ಕೆ ಅದೆ ಪ್ರಾಯಶ್ಚಿತ್ತ, ಮನಸಂದ ಮಾರೇಶ್ವರಾ./55
ಗೋವಧೆಯ ಮಾಡಿ, ಗೋದಾನವ ಮಾಡಿದಡೆ,
ಕೊಂದ ಕೊಲೆಗೂ ಮಾಡಿದ ದಾನಕ್ಕೂ ಸರಿಯೆ ?
ಆಚಾರಕ್ಕೂ ಅನಾಚಾರಕ್ಕೂ ಪಡಿಪುಚ್ಚವುಂಟೆ ?
ನೇಮಕ್ಕೆ ಹಾನಿಯಾದಲ್ಲಿ
ಭಂಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ./56
ಜ ಎಂಬುದನರಿದಲ್ಲಿ ಬ್ರಹ್ಮತತ್ವ.
ಗ ಎಂಬುದನರಿದಲ್ಲಿ ವಿಷ್ಣುತತ್ವ.
ಮ ಎಂಬುದನರಿದಲ್ಲಿ ರುದ್ರತತ್ವ.
ತ್ರಿವಿಧವ ಹರಿದು ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ. /57
ಜೀರ್ಣಕುಂಭದಲ್ಲಿ ತೋರುವ ಅನಲನಂತೆ,
ಬುಡವೊಂದು ಛಿದ್ರದಿಂದ ಹಲವಾದ ತೆರದಂತೆ,
ಕಾಯಜೀವದ ಭೇದವನರಿತಲ್ಲಿ,
ಮನಸಂದಿತ್ತು ಮಾರೇಶ್ವರಾ. /58
ಜೀವದಿಂದ ಕಾಬ ಅರಿವು, ಪ್ರಕೃತಿರೂಪಾಗಿಪ್ಪುದು.
ಪರಮನಿಂದ ಕಾಬ ಜ್ಞಾನ, ಸಂದೇಹಕ್ಕೊಡಲಾಗಿಪ್ಪುದು.
ಸಂದೇಹವೊಂದೆಂದು ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ./59
ಡಂಭಕದ ಪೂಜೆ, ಹೋಹ ಹೋತಿನ ಕೇಡು.
ಆಡಂಬರದ ಪೂಜೆ, ತಾಮ್ರದ ಮೇಲಣ ಸುವರ್ಣದ ಛಾಯೆ.
ಇಂತೀ ಪೂಜೆಗೆ ಹೂಸೊಪ್ಪನಿಕ್ಕಿ, ಮನವ ಹೂಸಿ ಮಾಡುವ ಪೂಜೆ,
ಬೇರು ನೆನೆಯದ ನೀರು, ಆಯವಿಲ್ಲದ ಗಾಯ,
ಭಾವವಿಲ್ಲದ ಗರಿ, ಮನಸಂದ ಮಾರೇಶ್ವರಾ./60
ತತ್ವ ಅಂಗವಾಗಿ, ಪರತತ್ವ ಪ್ರಾಣವಾಗಿ,
ಉಭಯದಲ್ಲಿ ನಿಂದ ನಿಜ ಹೊರಗಾಯಿತ್ತು,
ಮನಸಂದ ಮಾರೇಶ್ವರಾ. /61
ತತ್ವವೆಲ್ಲ ಬ್ರಹ್ಮನ ಒಡಲು.
ಪರತತ್ವವೆಲ್ಲ ವಿಷ್ಣುವಿನ ಒಡಲು.
ಪಂಚವಿಂಶತಿತತ್ವದೊಳಗಾಗಿ ತೋರುವುದೆಲ್ಲ
ರುದ್ರನ ಪ್ರಳಯಕ್ಕೊಳಗು.
ಇಂತೀ ಒಳಗು ಹೊರಗ ತಿಳಿದು,
ಅಹುದು ಅಲ್ಲಾ ಎಂಬೀ ಸಂದೇಹ ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ./62
ತನು ಒಡಲುಗೊಂಡು ನಿಂದಲ್ಲಿಯೆ
ಗುರುವಿಂಗೆ ಹಂಗಾಯಿತ್ತು.
ಲಿಂಗ ಸಾಕಾರವಾಗಿ ಬಂದಲ್ಲಿಯೆ
ಜಂಗಮಕ್ಕೆ ಹಂಗಾಯಿತ್ತು.
ಮನವು ಮಹವನರಿಯದೆ
ಸಕಲ ಜೀವಕ್ಕೆ ಹಂಗಾಯಿತ್ತು.
ಅಂಗ ಜೀವದ, ಸಂದೇಹವನರಿತಲ್ಲಿ,
ದಂದುಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ./63
ತನುವಿಂದ ಅನುವನರಿತೆಹೆನೆಂದಡೆ,
ಆ ಅನುವಿಂಗೂ ತನುವಿಂಗೂ ಸಂಬಂಧವಲ್ಲ.
ಅನುವಿಂದ ತನುವನರಿತೆಹೆನೆಂದಡೆ
ಅನು ಬಯಲು, ತನು ರೂಪು.
ಕಾಷ್ಠ ಪಾಷಾಣ ಘಟದಲ್ಲಿ ತೋರಿ, ಉರಿವ ಅಗ್ನಿಯಂತೆ,
ಒಂದನಳಿದು, ಒಂದನುಳಿದಿಹವಹ್ನಿಯ ತೆರನನರಿದಲ್ಲಿ,
ಬೇರೊಂದನ್ಯವ ಕುರುಹಿಡಿದಲ್ಲಿ, ಮನಸಂದಿತ್ತು ಮಾರೇಶ್ವರಾ. /64
ತಪಕ್ಕೆ, ಬಂಧನಕ್ಕೆ ಸಿಕ್ಕದ ವಸ್ತು,
ಜಪಕ್ಕೆ, ಮಣಿಮಾಲೆಯೊಳಗಲ್ಲ.
ಮಂತ್ರಕ್ಕೆ ಅಲಕ್ಷಮಯವಾಗಿಪ್ಪುದು.
ತ್ರಿಕರಣ ಶುದ್ಧವಾದಲ್ಲಿ, ಮನಸಂದಿತ್ತು ಮಾರೇಶ್ವರಾ./65
ತಮದ ಸತಿಯ ಸ್ವಯಂಜ್ಯೋತಿ,
ಪುರುಷನಪ್ಪಿದಲ್ಲಿ ತೆಕ್ಕೆಗೊಡಲುಂಟೆ ?
ಅಪ್ಪಿದಲ್ಲಿಯೆ ಬಚ್ಚಬಯಲು.
ತಮಸತಿಯೆಂಬ ನಾಮವಡಗಿತ್ತು.
ಭಾವಕ್ಕೆ ಭ್ರಮೆಯಿಲ್ಲ, ಎನಗೆ ಕುರುಹಿಲ್ಲ,
ಮನಸಂದಿತ್ತು ಮಾರೇಶ್ವರಾ./66
ತೊರೆಯ ಹಾವನ್ನಕ್ಕ, ಒಂದು ಹರುಗೋಲ ಬೇಕು.
ಹರುಗೋಲದೊಳಗಿಹನ್ನಕ್ಕ, ಒಂದು ಅಡಿಗಟ್ಟಿಗೆ ಬೇಕು.
ತೊರೆ ಬತ್ತಿ, ಹರುಗೋಲ ಹಾಕಿ, ಅಡಿಗಟ್ಟಿಗೆ ಮುರಿದಲ್ಲಿ
ತ್ರಿವಿಧವಲ್ಲಿ, ನಾನಿಲ್ಲಿ, ನೀನೆಲ್ಲಿ ? ಮನಸಂದಿತ್ತು ಮಾರೇಶ್ವರಾ./67
ತ್ರಿವಿಧಶಕ್ತಿಯನರಿದಲ್ಲಿ, ತ್ರಿಗುಣಾತ್ಮವ ಮರೆದಲ್ಲಿ,
ತ್ರಿಭೇದಂಗಳ ಕಾಬಲ್ಲಿ,
ತ್ರಿಗುಣ ತನ್ಮಯವಾಗಿ ಚರಿಸುವಲ್ಲಿ,
ಇಂತೀ ತ್ರಿಗುಣ ಏಕವಾದಲ್ಲಿ, ಮನಸಂದಿತ್ತು ಮಾರೇಶ್ವರಾ./68
ದಿವಾರಾತ್ರಿಯೆಂಬ ಉಭಯ ಕೂಡೆ,
ದಿನಲೆಕ್ಕ ಹಾಯಿದು ಕಲ್ಪಿತವನಳಿದಂತೆ,
ಲೆಕ್ಕ ಮುಂಚು, ದಿನ ಹಿಂಚಾಗಿ
ತನ್ನ ತಪ್ಪನರಿವುದಕ್ಕೆ ಮೊದಲೆ ತಪ್ಪಿರಬೇಕು.
ಇದು ನಿಶ್ಚಯ ಬುದ್ಧಿ, ಮನಸಂದಿತ್ತು ಮಾರೇಶ್ವರಾ./69
ಧೀರ, ಕೂರಲಗಿಂಗೆ ಹೆದರುವನೆ ?
ಸಾರಧಿ ಸರ್ವಮಂತ್ರಕ್ಕಲಸುವಳೆ ?
ಭಾರಿಯ ಜಾಣ, ಆರೈಕೆಗೊಳಗಹನೆ ?
ಇವು ಮೀರಿ ಅರಿದ ಅರಿವು,
ತ್ರಿವಿಧ ಹೋರಾಟಕ್ಕೆ ಒಡಲಪ್ಪುದೆ ?
ಇದನರಿಯದ ಮುನ್ನವೆ ಅರಿದಾತಂಗೆ,
ಮನಸಂದಿತ್ತು ಮಾರೇಶ್ವರಾ./70
ಧೀರನೆಂದಡೆ ಇದಿರಾದವರ ಇರಿಯಬಹುದಲ್ಲದೆ,
ತುಂಬಿದ ತೊರೆಯ ಹಾಯಬಹುದೆ ?
ಮಾತಿನಲ್ಲಿ ಶ್ರೇಷ್ಠನಾದೆನೆಂದಡೆ,
ಶಿವಶರಣರ ನೇತಿಗಳೆಯಬಹುದೆ?
ಹಸುಳೆಗೆ ಗಲ್ಲವ ಕುಟ್ಟಿ ಹಾಲೆರೆದಡೆ,
ಅದಾರಿಗೆ ಹಿತವೆಂಬುದನರಿದಲ್ಲಿ,
ಮನಸಂದಿತ್ತು ಮಾರೇಶ್ವರಾ./71
ನಡೆವಾತನ ಕಾಲ ಕೊಯಿದು,
ನುಡಿವಾತನ ನಾಲಗೆಯ ತುಂಡಿಸಿ,
ಕೊಡುವಾತನ ಕೈಯ ಮುರಿದು,
ಕೊಂಡಾಡುವಾತನ ತಲೆಯ ಕುಟ್ಟಿ,
ಮೀರಿ ನಿಂದುದು, ಮನಸಂದಿತ್ತು ಮಾರೇಶ್ವರಾ./72
ನಾ ನೀನೆಂಬ ಉಭಯವ ವಿಚಾರಿಸುವುದು ಅದೇನು ಹೇಳಾ ?
ನಾನೆಂದಡೆ ಎನಗೆ ಹೊರಗು, ನೀನೆಂದಡೆ ಉಭಯಭಿನ್ನ.
ಏನೂ ಎನ್ನದಿದ್ದಡೆ ಅರಿವಿಂಗೆ ಕುರುಹಿಲ್ಲ.
ಉಭಯವ ವಿಚಾರಿಸಿ ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ. /73
ಭಕ್ತಂಗೆ ಪ್ರತ್ಯುತ್ತರ ಘಟಿಸಿದಾಗ,
ಮತ್ಸರಕ್ಕೊಡಲಾಗಲಾಗಿ, ಸತ್ಯ ಜಾರಿತ್ತು.
ನಿತ್ಯ ಕಾಲಂಗಳಲ್ಲಿ
ಅರ್ಚನೆ ಪೂಜೆ ಸತ್ತಿತ್ತು.
ಹುಸಿ ಕುಹಕವೆಂಬ ಭಾವ
ಚಿತ್ತದಲ್ಲಿ ತೋರಿದಾಗವೆ
ತೋರುವ ತೋರಿಕೆಗೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./74
ಭಕ್ತರು ನಾವೆಂದು ನಿತ್ಯನೇಮವ ಮಾಡಿಕೊಂಡೆವೆಂದು
ಮನೆಮನೆಯ ಬಾಗಿಲ ತಪ್ಪಲ ಕಾಯಲೇತಕ್ಕೆ ?
ಇದು ಶಿವಭಕ್ತರಿಗೆ ಒಪ್ಪುವುದೆ ?
ಇಂತೀ ವ್ರತನೇಮವ ಮಾರಿ,
ಘಟವ ಹೊರೆವ ಕುಟಿಲರಿಗಂಜಿ,
ಮುನ್ನವೆ ಮನಸಂದಿತ್ತು ಮಾರೇಶ್ವರಾ./75
ಭಟಂಗೆ ಭಾಷೆಯಲ್ಲದೆ, ಅಂಜಿ ತೊಲಗಿದವಂಗೆ
ಚೌಭಟದ ರಣರಂಗವುಂಟೆ ?
ವಾಗದ್ವೈತಿ ಸ್ವಯಾನುಭಾವಕ್ಕೆ ಸಂಬಂಧಿಯಪ್ಪನೆ ?
ಕೀಟಕ ಅರುಣನ ಕಿರಣವ ಜರೆದಂತೆ,
ದೂಷಣವ ಮಾಡುವಲ್ಲಿ, ಆ ದೂಷಣಕ್ಕೆ ತಾನೊಳಗಹಲ್ಲಿ,
ತಿಳಿದು ವಿಚಾರಿಸುವಲ್ಲಿ, ಒಳಹೊರಗುಯೆಂಬುದಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./76
ಭಾವಭಾವಿಸಿದಲ್ಲಿ, ಜೀವ ಸಂಚರಿಸುವಲ್ಲಿ,
ಜ್ಞಾನ ಪರಮನೆಂದು ಅರಿದಲ್ಲಿ,
ಬೇರೊಂದು ಬೀಜವುಂಟೆ ?
ನಾನಾರೆಂಬುದ ತಾನರಿದ ಮತ್ತೆ,
ನಿರ್ವಿಜವಾಗಿ ಮನಸಂದಿತ್ತು ಮಾರೇಶ್ವರಾ. /77
ಮನ ಬುದ್ಧಿ ಚಿತ್ತ ಅಹಂಕಾರವೆಂಬೀ ನಾಲ್ಕರಲ್ಲಿ ನಿಂದು
ವಿಚಾರಿಸುವುದು ಜೀವನೋ, ಪರಮನೋ ?
ಅದು ಮುಕುರದ ಒಳಹೊರಗಿನಂತೆ.
ಘಟ ಪ್ರಾಣದ ಯೋಗವನರಿತಲ್ಲಿ, ಮನಸಂದಿತ್ತು ಮಾರೇಶ್ವರಾ. /78
ಮನವನರಿದು, ನಯನ ಕಂಡು, ಕೈಯಲ್ಲಿ ಹಿಡಿದಂತಿರಬೇಕು.
ಏನನರಿದಲ್ಲಿಯೂ ಕಾಯಕ್ಕೆ ಕರ್ಮವಳಿದು,
ಜೀವಕ್ಕೆ ಭವ ಹರಿದು, ಉರಿ ಕೊಂಡ ಕರ್ಪುರದಂತೆ
ಉಭಯಕ್ಕೊಡಲಿಲ್ಲ.
ನಿಂದಲ್ಲಿ ಮನಸಂದಿತ್ತು ಮಾರೇಶ್ವರಾ./79
ಮನೋವಿಕಾರವೆಂದೆನಬಾರದು.
ತನುವಿಕಾರವೆಂದೆನಬಾರದು.
ತನು ಮನದ ಅನುವನರಿತಲ್ಲಿ,
ಮನಸಂದಿತ್ತು ಮಾರೇಶ್ವರಾ. /80
ಮಾಟದಿಂದ ಮಾಡಿ ಕಂಡೆಹೆನೆಂಬವರೆಲ್ಲರು
ಸ್ಥೂಲ ಸೂಕ್ಷ್ಮ ಅಧಮವೆಂದರಸಿ ಕೆಟ್ಟರು.
ಅರಿದೆಹೆನೆಂದು ತಿರುಗಾಡುವರೆಲ್ಲರು
ಕಂಗಳ ನೋಟ ಕಾಮನ ಕೂಟ,
ಅಂಗದ ಸುಖಕ್ಕಾಗಿ ಕೆಟ್ಟರು.
ಲಿಂಗವ ಪೂಜಿಸುವರೆಲ್ಲರು
ಆ ಲಿಂಗದ ಅರ್ಚನೆಯನರಿಯದೆ,
ಲಿಂಗದ ಅರ್ಪಿತವನರಿಯದೆ,
ನೀರು ಓಗರವೆಂಬ ರೋಗದಲ್ಲಿ ಸತ್ತರು.
ಇಂತೀ ಭೇದವನರಿದಲ್ಲಿ ಮನಸಂದಿತ್ತು ಮಾರೇಶ್ವರಾ./81
ಮಾತಿಗೆ ಮಾತಡಗಿ, ನೀತಿಗೆ ನೀತಿಯಡಗಿ,
ಮತ್ತೇತಕ್ಕೂ ಕಲೆದೋರದೆ
ಉರಿ ಧರೆಯಂತೆ, ಸಿರಿ ಮೋಹದಂತೆ,
ಉರವಣಿಯಳಿದ ಪರತತ್ವದ ಬೆಳಗು.
ಇರವಿಗೆ ನಾಮ ನಷ್ಟವಾಯಿತ್ತು.
ಉಭಯದ ಕುಲವಳಿದು, ಮನಸಂದಿತ್ತು ಮಾರೇಶ್ವರಾ./82
ಮೊದಲಿಗೆ ಮರ ನೀರನೆರೆದಡೆ ಎಳಕುವುದಲ್ಲದೆ,
ಕಡೆ ಕಿಗ್ಗೊಂಬಿಗೆರೆದವರುಂಟೆ ?
ಅರಿದು ಪೂಜಿಸುವಲ್ಲಿ ಹರಿವುದು ಮನಪಾಶ.
ಅರಿದು ಅರ್ಪಿಸುವಲ್ಲಿ ಲಿಂಗದ ಒಡಲೆಲ್ಲ ತೃಪ್ತಿ.
ತನ್ನನರಿದಲ್ಲಿ ಸಕಲಜೀವವೆಲ್ಲ ಮುಕ್ತಿ.
ತನ್ನ ಸುಖದುಃಖ ಇದಿರಿಗೂ ಸರಿಯೆಂದಲ್ಲಿ,
ಅನ್ನಭಿನ್ನವಿಲ್ಲ, ಮನಸಂದಿತ್ತು ಮಾರೇಶ್ವರಾ./83
ಮೋಹದಿಂದ ಮಾಡುವುದೆಲ್ಲ ಬ್ರಹ್ಮನ ಪೂಜೆ.
ಭಾವದಿಂದ ಮಾಡುವುದೆಲ್ಲ ವಿಷ್ಣುವಿನ ಪೂಜೆ.
ನಿಭರ್ಾವದಿಂದ ಕಂಡೆಹೆನೆಂಬುದೆಲ್ಲ ರುದ್ರಪದ.
ಇಂತೀ ತ್ರಿವಿಧಕ್ಕೆ ಹೊರಗಾಗಿ ನಿಂದುದು,
ಮನಸಂದುದು ಮಾರೇಶ್ವರಾ./84
ರಜ್ಜು ಸ್ಥಾಣು ಶಂಕೆ ಹರಿದಲ್ಲದೆ ಸಂದೇಹ ಬಿಡದು.
ಅರಿವು ಮರವೆ ಹೆರೆಹಿಂಗಿಯಲ್ಲದೆ ಬೇರೊಂದರಿಯಲಿಲ್ಲ.
ಭೇದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ./85
ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು.
ಪಂಡಿತನ ಯುಕ್ತಿ ಖಂಡನವಿಲ್ಲದೆ ನಿಂದಿತ್ತು.
ಸುಸಂಗಿಯ ನಿರಂಗ ದುಸ್ಸಂಗದಿಂದ ಕೆಟ್ಟಿತ್ತು.
ಪತಂಗನಂತಾಗದೆ ಮುನ್ನವೆ ನಿನ್ನ ನೀನರಿ.
ಅರಿದಡೆ ನಿನಗಿದಿರಿಲ್ಲ, ಮನಸಂದಿತ್ತು ಮಾರೇಶ್ವರಾ./86
ರೂಪೆಂಬುದನರಿದು ಸಂಕಲ್ಪಕ್ಕೊಳಗಾಗದೆ,
ಶೂನ್ಯವೆಂಬುದನರಿದು ಸಂಚಾರಕ್ಕೀಡಾಗದೆ,
ಉಭಯಮಾರ್ಗವ ತಿಳಿದು
ಸಂದೇಹವೆಂಬ ಸಂಕಲ್ಪದಲ್ಲಿ ನಿಲ್ಲದೆ,
ನಿಜ ಒಂದೆಂದಲ್ಲಿ, ಮನಸಂದಿತ್ತು ಮಾರೇಶ್ವರಾ./87
ಲಿಂಗದೇಹಿಯ ಅಂಗದಲ್ಲಿ ತೋರುವ ತೋರಿಕೆ,
ಬೇರೊಂದು ಪ್ರಕೃತಿಭಾವದಲ್ಲಿ ಕಂಡಡೆ,
ಲಿಂಗದ ಅಂಗವಾದುದಕ್ಕೆ ಅದೇ ದೂರ.
ಅರಿದು ಮರೆವುದೆಲ್ಲ ಲಿಂಗಮಯವಾಗಿ,
ಪರುಷದ ಪುತ್ಥಳಿಯಂತೆ, ಎಲ್ಲಿ ಮುಟ್ಟಿದಡಲ್ಲಿ
ಲೋಹಕುಲ ಶುದ್ಧವಾದಂತೆ, ಅಂಗಲಿಂಗಸಂಯೋಗ.
ಇಂತೀ ಭಾವ ಅಳವಟ್ಟಲ್ಲಿ, ಉಭಯಗುಣ ಶುದ್ಧ,
ಮನಸಂದಿತ್ತು ಮಾರೇಶ್ವರಾ./88
ವಾಚಕ ಚಪಳತ್ವದಿಂದ ಮಾತನಾಡಿದಡೇನು,
ತ್ರಿವಿಧದ ಆಸೆ ಬಿಡದನ್ನಕ್ಕ ?
ರೋಷದ ಪಾಶ ಕೀಳದನ್ನಕ್ಕ ?
ಮಾತೆಲ್ಲವೂ ಮೂರರಾಸೆಯಲ್ಲಿ ಸಿಕ್ಕಿ,
ರೋಷದ ಪಾಶದಲ್ಲಿ ಕಟ್ಟುವಡೆದು,
ಮತ್ತೇತರ ಭಾಷೆಯ ನೀತಿ ?
ಹೋತಿನ ಕೊರಳ ಮೊಲೆಯ ಆಸೆ ಮಾಡಿ ಉಂಡಡೆ,
ಅಲ್ಲೇತರ ಸುಖ ?
ಮತ್ತೀ ಗುಣದಾಸೆ ಹರಿದು ನಿಂದಡೆ,
ಮನಸಂದಿತ್ತು ಮಾರೇಶ್ವರಾ./89
ವಿರಳ ಅವಿರಳವೆಂಬನ್ನಬರ,
ಕುರುಹು ನಾಮಕ್ಕೆ ಒಡಲಿಲ್ಲ.
ಆ ಉಭಯ ಏಕೀಕರವಾದಲ್ಲಿ,
ಮನಸಂದಿತ್ತು ಮಾರೇಶ್ವರಾ. /90
ವೀರನಾದಲ್ಲಿ ವಿತರಣ ಬೇಕು.
ವಿತರಣನಾದಲ್ಲಿ ಸಕಲವನರಿಯಬೇಕು.
ಸಕಲ ನಿಃಕಲವೆಂಬುದನರಿತು,
ಇದಿರನರಿಯದೆ ತನ್ನನರಿದಲ್ಲಿ,
ಮನಸಂದಿತ್ತು ಮಾರೇಶ್ವರಾ./91
ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು ?
ಶಾಸ್ತ್ರ ಹುಟ್ಟುವುದಕ್ಕೆ ಮುನ್ನವೆ ಕಲಿತವರಾರು ?
ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು ?
ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬವರಾರು.
ಮನಸಂದ ಮಾರೇಶ್ವರಾ ?/92
ವೇದವ ಕಲಿತಲ್ಲಿ, ಪಾಠಕನಲ್ಲದೆ ಜ್ಞಾನಿಯಲ್ಲ,
ನಿಲ್ಲು. ಶಾಸ್ತ್ರ ಪುರಾಣವನೋದಿದಲ್ಲಿ, ಪಂಡಿತನಲ್ಲದೆ ಜ್ಞಾನಿಯಲ್ಲ, ನಿಲ್ಲು.
ವ್ರತ ನೇಮ ಕೃತ್ಯ ಪೂಜಕನಾದಡೇನು ? ದಿವ್ಯಜ್ಞಾನದ ಠಾವನರಿಯಬೇಕು.
ಈ ಭೇದಂಗಳ ತಿಳಿದರಿದಲ್ಲಿ, ಮನಸಂದಿತ್ತು ಮಾರೇಶ್ವರಾ./93
ಸತ್ಯವಾಸದಿಂದ ಮುಕ್ತಿವಾಸಕ್ಕೆ ಒಡಲು.
ಮುಕ್ತಿವಾಸದಿಂದ ಇಹಪರವೆಂಬುದಕ್ಕೆ ಬೀಜ.
ಇಹದಲ್ಲಿ ಸುಖಿಯಲ್ಲದೆ, ಪರದಲ್ಲಿ ಪರಿಣಾಮಿಯಲ್ಲದೆ,
ಉಭಯ ನಿಶ್ಚಯವಾದಲ್ಲಿ, ಮನಸಂದಿತ್ತು ಮಾರೇಶ್ವರಾ./94
ಸಾಯದ ಮುನ್ನವೆ ಸತ್ತುದನರಿದು,
ಅರಿಯದ ಮುನ್ನವೆ ಮರೆದುದ ಕಂಡು,
ಉಭಯಸಂಕಟಕ್ಕೆ ಮುನ್ನವೆ
ಮನಸಂದಿತ್ತು ಮಾರೇಶ್ವರಾ./95
ಹರಿವ ಗರಗಸವೊಂದೆ ಬಗೆಯಲ್ಲಿ ಹರಿವುದೆ ?
ಉಭಯದ ಕೊಯಿತೆ ಶರಣರ ಸಂಗ.
ಅರಿಬಿರಿದಿನ ತೊಡಕು.
ಉತ್ತರ ಕೊಟ್ಟಲ್ಲಿ ಭಕ್ತಿ ನಿಂದಿತ್ತು.
ಗೆಲ್ಲ ಸೋಲಕ್ಕೆ ನಾ ನುಡಿದು ಗೆದ್ದೆಹೆನೆಂದಡೆ,
ಹಿಡಿದ ನೇಮಕ್ಕೆ ಅದೇ ಕಡೆ.
ಸತಿಪತಿಯಾಗಬಹುದೆ ?
ಏನೆಂದಲ್ಲಿ ನಾನೆಂಬುದಳಿದಲ್ಲಿ,
ಮನಸಂದಿತ್ತು ಮಾರೇಶ್ವರಾ./96
ಹರಿವ ಹಾವು, ಉರಿವ ಕಿಚ್ಚೆಂದಡೆ
ಮುಟ್ಟುವವರಿಗೆ ಭೀತಿಯಲ್ಲವೆ ?
ಅರಿದು ಹಿಡಿದಡೆ, ಉರಗ ಹೊರಳೆಗೆ ಸರಿ.
ಸ್ತಂಭಕ್ಕೆ ಅಗ್ನಿ ಚಂದನದ ಮಡು.
ಲಿಂಗವ ಹಿಡಿಯಬಲ್ಲಡೆ, ಅಂಗ ನಿರಂಗದ ಕೂಟ.
ಉಭಯದ ಸಂಗವನರಿದಲ್ಲಿ, ಮನಸಂದಿತ್ತು ಮಾರೇಶ್ವರಾ./97
ಹುಟ್ಟದ ಮುನ್ನವೆ ಬೆಳೆದ ಬೆಳೆಯ,
ಕೊಯ್ಯದ ಮುನ್ನವೆ ಒಕ್ಕಿ,
ಒಕ್ಕುವುದಕ್ಕೆ ಮುನ್ನವೆ ರಾಸಿಯಾಗಿ,
ರಾಸಿಗೆ ಮೊದಲೆ ಅಳೆತ ಸಂದಿತ್ತು.
ಕೊಳಗದ ಕೊರಳು ಹಿಡಿಯದೆ,
ಅಳೆವನ ಕೊರಳು ತುಂಬಿ,
ಹೇಳುವಾತನ ಕಣ್ಣು ಬಚ್ಚಬಯಲಾಯಿತ್ತು,
ಮನಸಂದ ಮಾರೇಶ್ವರಾ./98
ಹೂವ ಕೊಯಿವುದಕ್ಕೆ ಮುನ್ನವೆ,
ವಾಸನೆಯ ಕೊಯ್ಯಬೇಕು.
ಲಿಂಗ ಬಹುದಕ್ಕೆ ಮುನ್ನವೆ,
ಅರಿವನರಿಯಬೇಕು.
ನಾನೆಂಬುದಕ್ಕೆ ಮೊದಲೆ,
ವಸ್ತುಭಾವದಲ್ಲಿ ಮನಸಂದಿರಬೇಕು, ಮಾರೇಶ್ವರಾ./99