Categories
ವಚನಗಳು / Vachanagalu

ಮನುಮುನಿ ಗುಮ್ಮಟದೇವ ವಚನಗಳು

ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ,
ಕುಂಭಿನಿಯಲ್ಲಿ ಇರಲೊಲ್ಲದೆ,
ಹರುಗೋಲ ಬೆಂಬಳಿಯಲ್ಲಿ ಬದುಕಿಹೆನೆಂದು [ಹೋದಡೆ]
ಹರುಗೋಲು ತುಂಬಿ, ಮಂದಿ ಸಂದಣಿಸಿತ್ತು.
[ಗ]ಣಿಯ ಹಿಡಿದು ಒತ್ತುವುದಕ್ಕೆ ಠಾವಿಲ್ಲದೆ, ಅಂಬಿಗ ಹಿಂಗಿದ.
ಹೆರೆಸಾರಿ ಹರುಗೋಲು ಅಂಬುಧಿಯಲ್ಲಿ ಮುಳುಗಿತ್ತು,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ./1
ಅಮೃತದ ಗುಟಿಕೆಯ ಮರೆದು,
ಅಂಬಲಿಯನರಸುವನಂತೆ,
ಶಂಬರವೈರಿ ತನ್ನಲ್ಲಿ ಇದ್ದು,
ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ,
ಅವರಿಗೆ ಇಲ್ಲಾ ಎಂದೆ. /2
ಅಮ್ಮಿಕಲ್ಲಿನಲ್ಲಿ ಅಮಲವ ಅರೆದಡೆ ಹತ್ತುವುದೆ ಬಂಧ ?
ನಿರ್ಮಲಚಿತ್ತದಲ್ಲಿ ಪರಿಬಂಧ ಪ್ರವೇಶಿಸುವುದೆ ?
ಇದು ಸಾಕು ನಿಲ್ಲು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./3
ಅರಿದವನ ವಿಶ್ವಾಸ, ತೊರೆಯ ಗುಂಡಿಗೆಯಿಂದ ಕಡೆಯೆ ?
ಪಿಸಿತದ ಕುಕ್ಕೆಯ ಮೆಚ್ಚಿ, ವಿಷವ ಪೊಯ್ದುದರಿಂದ ಕಡೆಯೆ,
ಒಸೆದು ಕೊಟ್ಟ ಲಿಂಗ ?
ವಿಷರುಹನ ಜನಕನ ಪಿತ ಮೊದಲಾದ
ಮನುಮುನಿದೇವಜಾತಿ ವರ್ಗಂಗಳೆಲ್ಲ
ಶ್ರದ್ಧೆಯಿಂದ ಸದಾತ್ಮನನರಿದು,
ಸದಮಲ ಸುಧೆಯಲ್ಲಿ ಸುಖಿಯಾದರೆಂಬುದ ಕಂಡು ಕೇಳಿ,
ನಂಬುಗೆಯಿಲ್ಲದೆ ಕೊಡುವನ ಮರವೆಯೋ, ಕೊಂಬುವನ ಪ್ರಕೃತಿಯೋ ?
ಇದರ ಸಂದೇಹವ ಹೇಳು, ಗುಡಿಯ ಗುಹೆಯೊಳಗೆ ಅಡಗಬೇಡ,
ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./4
ಅರಿದು ಬಲ್ಲವನಾದಡೆ ಮುರಿ ಕಾಲ,
ಉಡುಗು ಕೈಯ, ಶಿರವ ಕಡಿ, ಬಿಡು ಮೂರ.
ಸಡಗರಿಸು ಗುಡಿಯ ಕಂಬವ, ಅರಿದು ನೋಡು.
ಅಡಗಿ ಗುಡಿಯೊಳಗೆ ಒಡಗೂಡು ಅಗಮ್ಯೇಶ್ವರಲಿಂಗವ./5
ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ.
ಇದಿರ ಕಂಡು ತಾ ಕಾಣದಂತೆ ಇರಲಿಲ್ಲ,
ಗತಿಜಿಹ್ವೆಯ ಚತುಃಪಾದಿಯಂತೆ.
ಕಾಲವನರಿತು, ಆ ಕಾಲದಲ್ಲಿ ಹೋಹ ಕಾಲಜ್ಞಾನಿಯಂತೆ,
ಕೂಗಿ ಕರೆದು, ಕೂಲಿಸಿಕೊಂಬ ಶತಬುದ್ಧಿಪತಿ ಶಿವನಂತೆ,
ಮಾಡಿದ ಅಸಿ ಕಾರುಕನೆಂದಡೆ, ಹೊಯಿದಡೆ,
ಅಸುವಿನ ನಿಸಿತವ ಕೊಳದೆ ?
ತನ್ಮಯವಾದಡೆ, ಮರೆದಡೆ, ಎಳೆಯದೆ ಬಿಡದು, ನಿನ್ನ ಮಾಯೆ.
ಆರಿ ನಂದದ ದೀಪದಂತೆ, ರವೆಗುಂದದ ಬೆಳಗಿನಂತೆ,
ಹೊರಹೊಮ್ಮದ ದಿನಕರನಂತೆ,
ಮಧುಋತು ಅರತ ಮಧುಕರನಂತೆ,
ವಾಯು ಅಡಗಿದ ವಾರಿಧಿಯಂತೆ,
ಅಸು ಅಡಗಿದ ಘಟಚಿಹ್ನದಂತೆ,
ದಿಟಕರಿಸು, ಗುಡಿಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗದಲ್ಲಿ ಪರಿಪೂರಿತವಾಗಿರು./6
ಅರಿದೆಹೆನೆಂದು ಭಾವಿಸುವನ್ನಕ್ಕ,
ಶರೀರವಳಿದ ಮತ್ತೆ, ಅರಿವುದೇನು ?
ಸಕಲಭೋಗಂಗಳಲ್ಲಿ ಇದ್ದು ಬೆರಸಿ,
ಮಗ್ನವಾಗದೆ ಗೇರಿನ ಫಲದಂತೆ ಇರು.
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ./7
ಅರುಹಿರಿಯರೆಂಬವರೆಲ್ಲರು ಕೂಡಿ,
ಅರಿಯದ ಕೂಸಿನ ಕೈಯಲ್ಲಿ ಮರೆಯ ಮಾಡಿ,
ಈಸಿಕೊಂಡ ಲಿಂಗಕ್ಕೆ ಕುರುಹಾವುದು ?
ಅರಿವುದಕ್ಕೆ ತೆರಹಾವುದು ?
ಅರಿವೇ ಮರವೆಗೆ ಬೀಜ.
ಮರವೆಯ ಮನದ ಕೊನೆಯಲ್ಲಿ ಅರಿವುದೇನು ?
ಅರಿವು ತಾನೋ, ಮರವೆಯ ಮುಮ್ಮೊನೆಯೋ ?
ಇಂತೀ ಉಭಯದ ಹಿಂಚುಮುಂಚನರಿತು,
ಅಂತುಕದಲ್ಲಿ ಸಿಕ್ಕದೆ, ವಿಶ್ರಾಂತಿಯೇ ತಾನಾಗಿಪ್ಪ,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./8
ಅಷ್ಟಭೂಮಿಯ ಮಧ್ಯದಲ್ಲಿ ಹುಟ್ಟಿತೊಂದು ಬೆಟ್ಟ.
ತಳಸೂಜಿಯ ಮೊನೆಯಗಲ
ಹಣೆ ಲೆಕ್ಕಕ್ಕೆ ಬಾರದ ವಿಸ್ತೀರ್ಣ.
ಆ ವಿಸ್ತೀರ್ಣದಲ್ಲಿ ಹುಟ್ಟಿದರು ಮೂವರು ಮಕ್ಕಳು: ಒಬ್ಬ ಹೇಮವರ್ಣ, ಒಬ್ಬ ಕಪೋತವರ್ಣ,
ಒಬ್ಬ ಶ್ವೇತ ವರ್ಣ.
ಈ ಮೂವರು ಮಕ್ಕಳ ತಾಯಿ: ಒಬ್ಬಳಿಗೆ ಬಾಯಿಲ್ಲ, ಒಬ್ಬಳಿಗೆ ನಾಲಗೆಯಿಲ್ಲ,
ಒಬ್ಬಳಿಗೆ ಹಲ್ಲಿಲ್ಲ.
ಇಂತೀ ಮೂವರು ಕೂಡಿ ಮಾತಾಡುತ್ತಿದ್ದರು.
ಮಾತಾಡುವುದ ಕಂಡು, ಇದೇತರ ಮಾತೆಂದು
ಅಡಗಿದ ಗುಡಿಯೊಳಗೆ.
ಅಡಗಿದ, ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ./9
ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ ?
ಈಶ್ವರನನರಿಯದವಂಗೆ ಸುಕೃತದ ಪೂಜೆಯ ಪುಣ್ಯವದೇಕೆ ?
ಹೇಳಿ ಹೊಕ್ಕು ಹೋದ ಮತ್ತೆ ವೇಷದ ಒಲವರವೇಕೆ ?
ಭವವಿರೋಧಿಯ ಭಾವದಲ್ಲಿ ನೆಲಸಿದ ಮತ್ತೆ,
ಇದಿರಿಂಗೆ ಸಂಪದಪದವೇಕೆ ?
ಒಡಗೂಡಿದಲ್ಲಿ ಅಂಗದ ತೊಡಕೇಕೆ ?
ಬಿಡು, ಶುಕ್ಲದ ಗುಡಿಯ ಸುಡು.
ಗುಮ್ಮಟನೆಂಬ ನಾಮವ ಅಡಗು,
ಅಗಮ್ಯೇಶ್ವರಲಿಂಗದಲ್ಲಿ ಗುಪ್ತನಾಗಿ, ಒಡಗೂಡಿ ಲೇಪಾಂಗವಾಗಿರು./10
ಆರೂ ಇಲ್ಲದ ಮನೆಯಲ್ಲಿ ಹಾದರಿಗ ಹೊಕ್ಕು,
ಹೆಂಡತಿಯಿಲ್ಲದ ಪುಂಡ ಬಂದು ಅವನಂಗವ ಹೊಯ್ಯಲಾಗಿ,
ಕಂಡರು ಗ್ರಾಮದ ಪುಂಡೆಯರೆಲ್ಲರೂ ಕೂಡಿ.
ಮಿಂಡನೊಬ್ಬನೆ ಸತ್ತ.
ಅಂಗವಿಲ್ಲದ ಕಳವು, ಹೆಂಗೂಸು ಇಲ್ಲದ ಹಾದರ,
ಈ ಊರ ಅಂಗವಲ್ಲಾ ಎಂದು, ಲಿಂಗವಂತರೆಲ್ಲರೂ ಕೂಡಿ
ಕೊಂಡಾಡುತ್ತಿದ್ದುದ ಕಂಡೆ.
ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ,
ನಂಬಲರಿಯದ ಸಂದೇಹಿಗಳಿಗುಂಟೆ ಮಹಾಸಂಗದ ಕೂಟ ?/11
ಆಲೆಯ ಮನೆಯಲ್ಲಿ ಅಕ್ಕಿಯ ಹೊಯಿದು,
ಕೋಣೆಯಲ್ಲಿ ಕೂಳನರಸುವನಂತೆ,
ತನ್ನ ಮಾತಿನ ಗೆಲ್ಲ ಸೋಲಕ್ಕೆ
ದೇವತಾಭಾವವ ಅಲ್ಲ ಅಹುದೆಂದು ಹೋರುವನ ಸೊಲ್ಲು,
ಕಾಲುವಳ್ಳವ ಮುಚ್ಚಿದ ಮತ್ಸ್ಯದಂತೆ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ./12
ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ,
ರಟ್ಟೆ ಮೂರು, ಕಾಲೊಂದು, ಬಾಯಿ ಎರಡಾಗಿ.
ಮುಚ್ಚಿದ ಕಣ್ಣು, ಮೂಗಿನ ಕೆಂಪು, ಮೈಯ ರಕ್ತವರ್ಣ,
ತುಪ್ಪುಳು ಕಪ್ಪು, ಕಾಲು ಹಳದಿ, ಬಾಯಿ ಬೆಳ್ಳಗೆ
ಹಾರಾಡುವ ಬಯಲರೂಪು,
ತೋರದ ಆಗರದಲ್ಲಿ ಹಾರಿಹೋಯಿತ್ತು.
ಆತ್ಮನೆಂಬ ರಾಮ, ಪಂಜರವಿಲ್ಲದೆ ಹೋಯಿತ್ತು,
ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ./13
ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು.
ಕ್ರಿಯಾಶಕ್ತಿಯೆಂಬೆನೆ ವಿಷ್ಣುವಿನ ಸಂತೋಷಕ್ಕೊಳಗು.
ಜ್ಞಾನಶಕ್ತಿಯೆಂಬೆನೆ ರುದ್ರನ ಭಾವಕ್ಕೊಳಗು.
ಇಂತೀ ಮೂರರಿಂದ ಕಂಡೆಹೆನೆಂದಡೆ ಮಾಯಾಪ್ರಪಂಚು.
ಹೆರೆಹಿಂಗಿ ನೋಡಿಹೆನೆಂದಡೆ ವಾಙ್ಮನಕ್ಕೆ ಅಗೋಚರ.
ಇದ ಭೇದಿಸಲಾರೆ.
ಎನ್ನ ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ,
ಎನ್ನ ಕಾಡುವುದಕ್ಕೆ ಏಕೆ ಎಡಗಿದೆ ?/14
ಇದಿರು ನೋಡುವುದಕ್ಕೆ ತೊಲಗು ಸಾಯೆಂಬ ಮಾತಲ್ಲದೆ,
ನಿಂದಲ್ಲಿ ಅಂಬರವ ನೋಡುವುದಕ್ಕೆ ಕೊಂಡಾಡಲೇತಕ್ಕೆ ?
ವಾದದಿಂದ ಹೋರಿ ಕಾಬುದು,
ವೇದಾಂತಿಯ ವಾಗ್ವಾದದ ಗೆಲ್ಲ ಸೋಲವಲ್ಲದೆ,
ವಸ್ತುವ ಭೇದಿಸಲರಿಯ, ಅರಿದುದಕ್ಕೆ ಒಡಲು.
ಅವರಡಿಯ ಅರಿದ ಮತ್ತೆ,
ಏನೂ ಎನ್ನದಿಪ್ಪುದೆ ವೇದಸಿದ್ಧಾಂತ.
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ
ಇದೇ ಪ್ರಮಾಣು./15
ಈ ವಚನ ಉದ್ದೇಶ ಲಕ್ಷಣ ಪರೀಕ್ಷೆ ಮೂರು ತೆರನು: ಆಡು[ಹ]ಲ್ಲ ತಿಂಬಲ್ಲಿ, ಕೋಡಗ ನೋಡಿ ಬಾಲವ ತಿಂದಿತ್ತು.
ಕೋಡಗದ ದಾಡೆ ಆಡುವಾಗ ಬಳ್ಳು ಮಾತಾಡಿದುದಿಲ್ಲ.
ಗೊಲ್ಲನ ಬಿಲ್ಲ ಕೊಪ್ಪ ಕಂಡು,
ಆ ಬಳ್ಳು ತನಗೆ ಇಲ್ಲಿ ಇಲ್ಲವೆಂದು, ಎಲ್ಲಿ ಅಡಗಿತ್ತೆಂದರಿಯೆ.
ಅದರ ಅಡಿವಜ್ಜೆಯ ತೋರು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ./16
ಉತ್ಪತ್ಯ ಗುರುವಿನಲ್ಲಿ, ಸ್ಥಿತಿ ಲಿಂಗದಲ್ಲಿ, ಲಯ ಜಂಗಮದಲ್ಲಿ.
ಮೂರನರಿತು ಮೀರಿದ ಘನ ಕೂಟ ವಸ್ತುವಿನಲ್ಲಿ.
ಇದ ಸಾರಿದೆ, ಗೂಡಿನ ಒಳಗನರಿತು ಕೂಡು,
ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ./17
ಎನಗೆ ಕರಿ ಕಂಡ ಸ್ವಪ್ನದ ಇರವು.
ಹರಿ ಬಂದಂಗದಲ್ಲಿ ನಿಲೆ ಬೆದರಿ ಉಡುಗಿತ್ತು.
ಅದರಿರವು ಎನಗಾಯಿತ್ತು.
ಜಿನವಾಸ ಬಿಟ್ಟು, ದಿನನಾಶನ ವಾಸವಾಯಿತ್ತು.
ಎನಗಿದೆ ಸಾಫಲ್ಯ, ಕೇವಲ ಜ್ಞಾನ,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./18
ಎನ್ನ ಮನದ ಮರವೆ ಭಿನ್ನವಾಗದು.
ಮರೆದು ಅರಿದೆಹೆನೆಂದಡೆ
ಅರಿವಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ.
ಕೋಲಿನಲ್ಲಿ ನೀರ ಹೊಯ್ದಡೆ, ಸೀಳಿ ಹೋಳಾದುದುಂಟೆ ?
ಅರಿವುದೊಂದು ಘಟ, ಮರೆವುದೊಂದು ಘಟ,
ಒಡಗೂಡುವ ಠಾವಿನ್ನೆಂತೊ ?
ಹುತ್ತದ ಬಾಯಿ ಹಲವಾದಡೆ,
ಸರ್ಪನೆಯಿದುವಲ್ಲಿ ಒಡಲೊಂದೆ ತಪ್ಪದು.
ತನ್ನ ಚಿತ್ತದ ಭೇದವಲ್ಲದೆ ವಸ್ತುವಿಗೆ ಭೇದವುಂಟೆ ?
ವಿಷ ವಿಷವ ವೇಧಿಸುವಲ್ಲಿ ಬೇರೊಂದು ಅಸುವಿನ ಕಲೆವುಂಟೆ ?
ಅಸಿಯ ಮಡುವಿನಲ್ಲಿ ಲತೆಯ ಹಾಸಿಕೆಯುಂಟೆ ?
ಇಂತೀ ಹುಸಿಗಂಜಿ, ಗೂಡಿನಲ್ಲಿ ಅಡಗಿದೆ,
ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗವೆ./19
ಒಂದು ಉಪ್ಪರಿಗೆಯ ಮಂದಿರದಲ್ಲಿ,
ಉಭಯದ ಮಧ್ಯದ ಬಾಗಿಲಲ್ಲಿ,
ಕಟ್ಟಿದ್ದಿತ್ತೊಂದು ಬಲುಗೋಡಗಕ್ಕೆ
ಬಾಯ ಅಣಲಿನ ಸಂಚದ ಕೂಳು.
ಉಡಿಯೊಳಗಣ ಬೆಂಬೆಯ ಹಂಬು,
ಹಂಬಿನೊಳಗಣ ಬಹುಧಾನ್ಯದ ತೆನೆ,
ನೆಟ್ಟ ಗಳೆ ಮೂರು, ತಿಪ್ಪಣದ ಮಣೆ ಒಂದು,
ಮಣೆಯಲ್ಲಿ ಕುಳಿತು ಅಣಲ ಸಂಚವ ತಿಂದಿತ್ತು.
ಒಂದು ಮಣೆಯಲ್ಲಿ ಕುಳಿತು ಉಡಿಯ ತೆನೆಯ ತಿಂದಿತ್ತು.
ಮತ್ತೊಂದು ಮಣೆಗೆ ಹೋಗಿ,
ಕುಳಿತು ಹಾರೈಸಿ ದೆಸೆಯ ಕಾಣದೆ ನೆಗೆಯಲಾಗಿ,
ಗಣೆ ದಸಿ ತಾಗಿ, ಕೋಡಗನ ಅಸು ಹೋಯಿತ್ತು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವನರಿದೆ./20
ಒಂದು ಚಿಪ್ಪಿನಲ್ಲಿ, ಮೂರು ಮುತ್ತು ಹುಟ್ಟಿದವು: ಒಂದು ಕಟ್ಟಾಣಿ, ಒಂದು ಸುಪ್ಪಾಣಿ,
ಒಂದು ಮಣಿ ಉದಕವಿಲ್ಲದ ಸೂತೆ.
ಬಿದ್ದ ಉದಕ ಒಂದೆ, ತಾಳಿದ ಚಿಪ್ಪು ಒಂದೆ.
ಚಿಪ್ಪಿನ ಹೊರೆಯೋ, ಉದಕವ ತೆರೆಯೋ, ಮುತ್ತಿನ ಗುಣವೋ ?
ಇವರ ಲಕ್ಷಣದ ಭೇದವೋ ಇದು ?
ಚಿತ್ತದ ಜ್ಞಾನ, ಕರ್ತುವೆ ಹೇಳಾ,
ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./21
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು.
ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು.
ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು.
ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು.
ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ.
ಆರಡಗಿ ಮೂರರಲ್ಲಿ ಮುಗ್ಧನಾಗಿ,
ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ,
ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
/22
ಕಣ್ಣಿನಲ್ಲಿ ಕಂಡೆಹೆನೆಂದಡೆ, ಕಣ್ಣು ಎನ್ನವಲ್ಲ.
ಕೈಯಲ್ಲಿ ಮುಟ್ಟಿಹೆನೆಂದಡೆ, ಕೈಯೆನ್ನವಲ್ಲ.
ಮನದಲ್ಲಿ ನೆನೆದೆಹೆನೆಂದಡೆ, ಮನ ಎನ್ನದಲ್ಲ.
ನಾ ನಡೆವಡೆ ಸ್ವತಂತ್ರಿಯಲ್ಲ.
ಎನಗೆ ಅರಿಕೆಯಾದಡೆ ನಿನ್ನ ಇದಿರಿಡಲೇಕೆ ?
ಇದಿರಿಂಗೆ ಕುರುಹು, ಮನಕ್ಕೆ ಅರುವು,
ಉಭಯದ ತೆರ ನೀನೆ.
ಗೂಡಿನ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ,
ಒಳಹೊರಗಿನಲ್ಲಿ ಪರಿಪೂರ್ಣ ನೀನು ನೀನೆ. /23
ಕಣ್ಣಿನಲ್ಲಿ ನೋಡುವಡೆ ತೊಗಲಿನವನಲ್ಲ.
ಕೈಯಲ್ಲಿ ಹಿಡಿವಡೆ ಮೈಯವನಲ್ಲ.
ಭಾವದಲ್ಲಿ ನೋಡುವಡೆ ಬಯಲಸ್ವರೂಪ.
ನಿನ್ನೊದಗ ಏತರಿಂದರಿವೆ ?
ಎನ್ನ ಭ್ರಾಂತಿನ ಬಲೆಗೆ ಸಿಕ್ಕಿಸಿಹೋದೆ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./24
ಕಣ್ಣಿನೊಳಗಣ ಕಸ, ಕೈಯೊಳಗಣ [ಮೆ]ಳೆ,
ಬಾಯೊಳಗಣ ಬಗದಳ,
ಮನದ ಶಂಕೆ ಹರಿದಲ್ಲದೆ ಪ್ರಾಣಲಿಂಗಿಯಾಗಬಾರದು.
ಕಣ್ಣಿನ ನೋಟ, ಕೈಯ ಕುರುಹು,
ಬಾಯ ಬಯಕೆ, ಚಿತ್ತದ ವೈಕಲ್ಯ ನಷ್ಟವಾಗಿಯಲ್ಲದೆ
ವಸ್ತುನಿರ್ದೆಶವನರಿಯಬಾರದು.
ಅರಕೆ ಅರತು ಅರಿತಡೆ, ಅದೇ ವಸ್ತು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./25
ಕಣ್ಣು ಮೂರು, ತಲೆಯಾರು,
ಬಾಯಿಯೆಂಟು, ಭಗವೊಂಬತ್ತು.
ಆರ ಬಗೆಗೂ ಅಳವಡದ ಬಾಲೆ,
ಬಾಲನನರಸಿ ಬಳಲುತ್ತೈದಾಳೆ.
ಆ ನಾಳಕ್ಕೆ ಒಡೆಯನಿಲ್ಲದೆ,
ಬಾಲನ ಬಗೆ ಎಂತಪ್ಪದು ಎನಗೆ ಹೇಳಾ,
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?/26
ಕಣ್ಣೆಂಬ ಹರುಗೋಲದಲ್ಲಿ ಮಾರ ಅಂಬಿಗನಾಗಿ,
ಮಥನದ ಹೊಳೆಯಲ್ಲಿ ರಸದ ಕೋಲನಿಕ್ಕಿ ಒತ್ತಲಾಗಿ,
ಮಸಕಿತ್ತು ಹರುಗೋಲು.
ದೆಸೆಗೆ ಹೋಗಲಾರದು, ತಡಿಗೆ ಸಾಗದು,
ಮಡುವಿನಲ್ಲಿ ಮರಳಿತ್ತು.
ಇದಕಂಜಿ ನಡುಗಿದೆ, ಹರುಗೋಲ ಕಂಡು,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ./27
ಕರಣಂಗಳ ಕಳೆದು ಕಂಡೆಹೆನೆಂದಡೆ,
ಕುರುಹಿಂಗೆ ಅಗೋಚರ.
ಇಂದ್ರಿಯಂಗಳಿದ್ದು ಕಂಡೆಹೆನೆಂದಡೆ,
ಅವು ಕೊಂದು, ತೂಗುವದ ಅರಿ.
ಹಿಂಗಬಾರದು, ಹಿಂಗದಿರಬಾರದು.
ಇದರ ಸಂಗಸುಖವ ಹೇಳು,
ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ./28
ಕಲ್ಲು ಕವಣೆಯ ನುಂಗಿ, ಇಡುವಾತನ ಹಣೆ ತಾಗಿತ್ತು.
ಹಣೆ ಹನಿತು, ಮೂರು ಸೇ[ದೆ]ಯಾಯಿತ್ತು.
ಸೇ[ದೆ]ಯಲ್ಲಿ ಆರುಮಂದಿ ಹುಟ್ಟಿ,
ಮೂವರ ಕೊಂದು, ಮೂವರು ಆಲುತ್ತೈದಾರೆ.
ಆಲುವೆಗೆ ಹೊರಗಾದ ಅನಾಮಯ ಅನುಪಮ,
ಎನ್ನ ಗುಡಿಯ ಗುಮ್ಮಟೇಶ್ವರನೊಡೆಯ ಅಗಮ್ಯೇಶ್ವರಲಿಂಗ./29
ಕಲ್ಲು, ಹೆಂಟೆ ಹೋರಿಯಾಡಿ,
ಕಲ್ಲು ಕರಗಿ, ಹೆಂಟೆ ಉಳಿಯಿತ್ತು.
ಅಳಿದ ಕಲ್ಲಿಗೆ ಹೆಂಟೆ ಹಿಂಡಿಯ ಕೂಳನಟ್ಟು,
ಉಂಬವರಿಲ್ಲದೆ ಅಳುತ್ತಿದ್ದಿತ್ತು.
ಎನ್ನ ಗೂಡಿನ ಗುಮ್ಮಟನಾಥನಲ್ಲಿ,
ಅಗಮ್ಯೇಶ್ವರಲಿಂಗ ಸತ್ತು ಕಾಣಲರಿಯದೆ./30
ಕಾಡುಗುರಿ [ತಾ]ನೆಯಾಗಿ ಬಂದು,
ಊರೊಳಗೆ ಮೂರು ಮರಿಯನೀಯಿತ್ತು.
ಅವರ ವರ್ಣ ಒಂದೆಡ, ಒಂದು ಕಾಡ,
ಒಂದು ಎಲ್ಲರ ಕೂಡಿದ ಬಣ್ಣ
ಹೆಂಗುರಿ ಸತ್ತಿತ್ತು, ಮರಿಗೆ ಒಡೆಯರಿಲ್ಲ.
ಆ ಮರಿಯ ಕಾವಡೆ,
ಕಾಲಿಲ್ಲದೆ ಕೈಯಿಲ್ಲದೆ ಕಣ್ಣಿಲ್ಲದೆ ಕಾಯಬೇಕು.
ಆ ಮರಿ ಅರಿದು ನಮಗೆ ಇನ್ನಾರು ಇಲ್ಲಾ ಎಂದು
ಎಡಕಾಡನೊಳಗಡಗಿ, ಕಾಡ ನಾನಾ ವರ್ಣದೊಳಗಡಗಿ,
ನಾಡು ನಾದದೊಳಗಡಗಿ, ನಾನಾ ವರ್ಣ ನಾಡಿನೊಳಗಡಗಿ,
ನಾದ ಸುನಾದದಲ್ಲಿ ಅಡಗಿ, ಸುನಾದ ಸುರಾಳವಾಗಿ ಇದ್ದಲ್ಲಿ,
ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ,
ನೀ ನಿರಾಳವಾಗಿ ಇದ್ದೆ./31
ಕಾಯದ ಕೈಯಲ್ಲಿಪ್ಪುದು ರೂಪುವಿಡಿದ ಲಿಂಗ.
ಮನದ ಕೊನೆಯಲ್ಲಿಪ್ಪುದು ಸಾಕಾರವಿರಹಿತಲಿಂಗ.
ಅರಿವಿನ ಭೇದಂಗಳ ತಿಳಿದು ನೋಡಿ,
ಕಂಡೆಹೆನೆಂಬ ಸನ್ಮತ ಸದ್ಭಾವಿಗಳು ಕೇಳಿರೊ.
ಅದು ಚಿದ್ಘನ ಚಿದಾದಿತ್ಯ ಚಿತ್ಸ್ವರೂಪ ಸದಮಲಾನಂದ
ಗೂಡಿನ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ.
ಇದಾರಿಗೂ ಅಪ್ರಮಾಣಮೂರ್ತಿ./32
ಕಾಯವಿಡಿದು ಸೋಂಕಿದುದೆಲ್ಲ, ಪ್ರಕೃತಿಗೆ ಒಳಗು.
ಜೀವವಿಡಿದು ಸೋಂಕಿದುದೆಲ್ಲ, ಭವಕ್ಕೊಳಗು.
ಕಾಯದ ಅಳಿವನರಿತು, ಜೀವದ ಉಳಿವನರಿತು,
ಉಭಯದ ಠಾವನರಿತು,
ಕಾಯದ ಜೀವದ ಬಿನ್ನದ ಬೆಸುಗೆಯ ಠಾವನರಿತು,
ಕೂಡಬಲ್ಲಡೆ ಯೋಗ.
ಅದು ಲಿಂಗದ ಭಾವಸಂಗ, ಇದನರಿ.
ಗುಡಿಯೊಡೆಯ ಗುಮ್ಮಟನಾಥನಲ್ಲಿ
ಅಗಮ್ಯೇಶ್ವರಲಿಂಗವ ಹೆರೆಹಿಂಗದಿರು./33
ಕಾಯಸೂತಕವಳಿದು ಜೀವದ ಭವ ಹಿಂಗಿ,
ಜ್ಞಾನಗುರು ಕೊಟ್ಟ ಭಾವದ ಲಿಂಗವಿರೆ,
ಮತ್ತೇನನು ನೋಡಲೇಕೆ ?
ಗಂಡನುಳ್ಳವಳಿಗೆ ಮತ್ತೊಬ್ಬ ಬಂದಡೆ ಚಂದವುಂಟೆ ?
ಅದರಂಗ ನಿಮಗಾಯಿತ್ತು.
ಲಿಂಗವಿದ್ದಂತೆ ಜೀವಿಗಳ ಅಂಗವ ನೋಡಿ
ಬದುಕಿಹೆನೆಂಬ ಭಂಡರಿಗೇಕೆ ?
ಗುಡಿಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ
ಅವರ ಬಲ್ಲನಾಗಿ ಒಲ್ಲ. /34
ಕಾಲನ ಗೆದ್ದೆಹೆನೆಂದು ಮಾಡಿ ಬೇಡದ ನಿತ್ಯಾರ್ಚನೆ.
ಘಟಲಿಂಗಕ್ಕೆ ಹೊತ್ತಿನ ಗೊತ್ತಿನ ಕಟ್ಟುಂಟೆ ?
ಕತ್ತಲೆಯ ಮನೆಯಲ್ಲಿ ಕುಳಿತು ಸಕ್ಕರೆಯ ಮೆದ್ದಡೆ,
ಕತ್ತಲೆಗೆ ಅಂಜಿ ಮೆತ್ತನಾಯಿತ್ತೆ ಸಕ್ಕರೆಯ ಮಧುರ ?
ಚಿತ್ತದ ಪ್ರಕೃತಿ ಹಿಂಗಿ,
ನಿಶ್ಚಯ ನಿಜ ನೆಮ್ಮುಗೆಯಲ್ಲಿ ಮಾಡುವಡೆ,
ಚಿತ್ತದಲ್ಲಿ ಅಚ್ಚೊತ್ತಿದಂತೆಯಿಪ್ಪ ಹೊತ್ತಿನ ಗಡಿಯವನಲ್ಲ.
ಚಿತ್ತಜಹರ ಗುಡಿಯೊಡೆಯ ಗುಮ್ಮಟನ
ಅಗಮ್ಯೇಶ್ವರಲಿಂಗ ಕಟ್ಟುಗೊತ್ತಿನೊಳಗಲ್ಲ./35
ಕಾಲೆರಡರಲ್ಲಿ ನಿನ್ನಾಟವೆ ?
ಕೈಯೆರಡರಲ್ಲಿ ನಿನ್ನ ಬಂಧವೆ ?
ಮೈಯೊಂದರಲ್ಲಿ ನಿನ್ನ ಭೋಗವೆ ?
ಬಾಯೊಂದರಲ್ಲಿ ನಿನ್ನ ತೃಪ್ತಿಯೆ ?
ಅಯಿದರ ಗುಹೆಯೊಳಗೆ ಗುಹೇಶ್ವರನಾದೆ.
ಮೂರರ ಗೂಡಿನೊಳಗೆ ಗುಮ್ಮಟನಾದೆ.
ಆರರ ಅಂಗವ ಹರಿದು, ಅಗಮ್ಯೇಶ್ವರಲಿಂಗವಾದೆ.
ಮೀರಿ ಕಾಬುದೇನು ಹೇಳಿರಣ್ಣಾ ? /36
ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು.
ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ.
ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ.
ಏನನರಿತಡೂ ಜೀವನ ನೋವನರಿಯಬೇಕು.
ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು.
ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ,
ಕಡಿಯಬಹುದೆ ಅಯ್ಯಾ ?
ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ
ಕೊಡನೊಡೆದ ಏತದ ಕಣೆಯಂತೆ,
ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./37
ಕೂಟದಿಂದ ಕೂಸು ಹುಟ್ಟುವಡೆ
ಬ್ರಹ್ಮನ ಆಟಕೋಟಲೆಯೇಕೆ ?
ಸ್ಥಿತಿ ಆಟದಿಂದ ನಡೆವಡೆ
ವಿಷ್ಣುವಿನ ಭೂತಹಿತವೇಕಯ್ಯಾ ?
ಘಾತಕದಿಂದ ಕೊಲುವಡೆ
ರುದ್ರನ ಆಸುರವೇತಕ್ಕೆ ?
ಇಂತಿವೆಲ್ಲವೂ ಜಾತಿಯುಕ್ತವಲ್ಲದೆ
ತಾ ಮಾಡುವ ನೀತಿಯುಕ್ತವಲ್ಲ.
ಇದಕಿನ್ನಾವುದು ಗುಣ ?
ಭೇದಿಸಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./38
ಕೈ ಗರ್ಭವಾಗಿ ನವಮಾಸ ತುಂಬಿತ್ತು.
ಕಂಗಳಲ್ಲಿ ಬೆಸನಾಯಿತ್ತು.
ಬೆನ್ನಿನಲ್ಲಿ ಮೊಲೆ ಹುಟ್ಟಿ,
ನಡುನೆತ್ತಿಯಲ್ಲಿ ಹಾಲು ಬಂದಿತ್ತು.
ನಾಲಗೆಯಿಲ್ಲದ ಶಿಶುವಿಂಗೆ
ಹಾಲು ಎಯ್ದದೆ ಬಾಯ ಬಿಡುತ್ತಿದ್ದಿತ್ತು.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ
ಗರ್ಭಿಕರಿ[ಸೆನೆಂ]ದು. /39
ಕೊಲುವಂಗೆ ಜೀವದ ದಯವಿಲ್ಲ.
ಪರಾಂಗನೆಯ ಬೆರಸುವಂಗೆ ಪರಮೇಶ್ವರನ ಒಲವರವಿಲ್ಲ.
ಪರರುವ ಬಂಧಿಸಿ ಬೇಡುವಂಗೆ ಧನದ ಒಲವರವಿಲ್ಲ.
ಪ್ರಾಣತ್ಯಾಗಿಗೆ ಕಾಣಿಯಾಚಿಯ ಕೇಣಸರವಿಲ್ಲ.
ಅಘಹರನ ಶರಣನಾಗಿ,
ಜಗವ ಬೋಧಿಸದೆ ಜಗಭರಿತನಾಗಿ ಇರಬೇಕು.
ಆತ ಅಘಹರಮೂರ್ತಿ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನೆ./40
ಗಿರಿಯ ಗುಹೆಯಲ್ಲಿ ಒಂದು ಅರಿಬಿರಿದಿನ ಹುಲಿ.
ಹುಲ್ಲೆಯ ಭಯಕಾಗಿ ಎಲ್ಲಿಯೂ ಹೊರಡಲಮ್ಮದೆ ಅಲ್ಲಿ ಅದೆ.
ಅದ ಮೆಲ್ಲನೆ ನೋಡಿ ಬಿಲ್ಲಂಬಿನಲ್ಲಿ ಎಸೆಯೆ,
ಹುಲಿ ಹಾರಿ ಹುಲ್ಲೆಯಾಯಿತ್ತು.
ಆ ಹುಲ್ಲೆ ಬಲೆಯೊಳಗಲ್ಲ, ಬಾಣದೊಳಗಲ್ಲ, ಎಲ್ಲಿಯೂ ಸಿಕ್ಕದು.
ಇದ ಬಲ್ಲವರಾರು ?
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ,
ತಿರುಗುವ ಭರಿತನು./41
ಗುಂಡಿಯ ಹಳ್ಳವು ತುಳುಕಲಾಗಿ ಇಳಿಯಿತ್ತು ಮತ್ಸ್ಯ,
[ಖ]ಂಡಿ[ತ]ನ ತಂಡಕಾಗಿ.
ಕಂಡವ ಮೆಲುವರ ಬಾಯಲ್ಲಿ,
ಮೂರು [ಹೆ]ಂಡವ ಕೂಡಿ ಭಂಡಾದರು,
ಮಲತ್ರಯದ ಅಂಗದಲ್ಲಿ ಸಿಕ್ಕಿ ಘನಲಿಂಗವನರಿಯದೆ.
ಆತ್ಮನ ಅಂಗದ ಲಿಂಗದ ಸಂಗವ ತೋರು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ. /42
ಗುಡಿಯೊಡೆಯಂಗೆ ಕಂಬವೊಂದು, ಬಿಗಿಮೊಳೆಯೆಂಟು,
ಕಂಬಕ್ಕೆ ಕಟ್ಟಿದ ಆಧಾರ ದಾರವೈದು, ಗುಡಿಯ ಸಂದು ಹದಿನಾರು.
ಕೂಟದ ಸಂಪಿನ ಪಟ್ಟಿ ಇಪ್ಪತ್ತೈದು, ಒಂಬತ್ತು ಬಾಗಿಲು,
ಮುಗಿಯಿತ್ತು ಗುಡಿ.
ಗುಡಿಯ ಮೇಲೆ ಮೂರು ಕಳಸ, ಮೂರಕ್ಕೊಂದೆ ರತ್ನದ ಕುಡಿವೆಳಗು.
ಬೆಳಗಿದ ಪ್ರಜ್ವಲಿತದಿಂದ ಗುಡಿ ಒಡೆಯಿತ್ತು.
ಗುಡಿಯೊಳಗಾದವೆಲ್ಲವು ಅಲ್ಲಿಯೆ ಅಡಗಿತ್ತು.
ಕಳಸದ ಕಳೆ ಹಿಂಗಿತ್ತು, ಮಾಣಿಕದ ಬೆಳಗಿನಲ್ಲಿ.
ಆ ಬೆಳಗಡಗಿತ್ತು, ಅಗಮ್ಯೇಶ್ವರಲಿಂಗದಲ್ಲಿ ಒಡಗೂಡಿತ್ತು./43
ಗುಹೆಯೆಂದಡೂ ಅಂಗ, ಗುಮ್ಮೆಂದಡೂ ಅಂಗ.
ಈಶ್ವರನೆಂದಡೂ ತಾ, ಮಟವೆಂದಡೂ ತಾ,
ಎನಗೊಂದು ಕುರುಹಿಲ್ಲವಾಗಿ.
ಅಗಮ್ಯೇಶ್ವರಲಿಂಗವೆ ಗುಡಿಯೊಡೆಯನಾಗಿ
ಗುಮ್ಮಟಂಗೆ ಈಡಿಲ್ಲ./44
ಘಟದಲ್ಲಿ ಆತ್ಮ ದಿಟಕರಿಸುವುದಿಲ್ಲವೆಂದು ಅರಿದ ಮತ್ತೆ,
ಕುಟಿಲದ ರಸವಾದದ ಮಾತಿನ ಮಾಲೆಯೇಕೆ ?
ಆಗುಚೇಗೆಯನರಿದು ಬೋಧಿಸಲೇಕೆ, ಭೋಗಂಗಳಿಗಾಗಿ ?
ಇದು ಮರುತನ ಇದಿರಿನ ದೀಪ,
ಸುರಚಾಪದ ಬಣ್ಣ, ಶರೀರದ ಅಳಿವು.
ಸಾಕಾರದಲ್ಲಿ ಇದ್ದು, ನಿರಾಕಾರವನರಿ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ. /45
ತಟಾಕ ಒಡೆದಡೆ ಪ್ರತಿಶಬ್ದವಲ್ಲದೆ ಗತಿಭಿನ್ನವುಂಟೆ ?
ಅಂಬುಧಿಗೆ ಅದು ತುಂಬಿದ ಸಂಪದ,
ಅದರಂಗದ ಇರವು, ಲಿಂಗಾಂಗಿಯ ಭಾವದ ಸಂಗ.
ಕಂಡುದ ಕಂಡು ಕಾಳ್ಗೆಡೆವ ಲಿಂಗಿಗಳಿಗುಂಟೆ,
ಗುಡಿಯೊಡೆಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗದ ಸಂಗದ ಸುಖವು ? /46
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು,
ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ.
ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ.
ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ,
ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ,
ಮೂರಂಗವ ತೊಡೆವುದು ಕುಂಚ.
ಹುಟ್ಟುವ ಅಂಡ, ಜನಿಸುವ ಯೋನಿ,
ಮರಣದ ಮರವೆಯೆಂಬೀ ಗುಣವ ಅರಿತು,
ಕೀಳುವುದು ಮಂಡೆಯ ಲೋಚು.
ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು,
ಅಘನಾಶನನ ಅಂಗದ ಮೇಲೆ ಇಂಬಿಟ್ಟು,
ಹೆರೆಹಿಂಗದ ಸಂಗವೆ ತಾನಾಗಿ,
ಆತ ಮಂಗಳಮಯ ಗುರುಮೂರ್ತಿ,
ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./47
ತತ್ ತ್ವಂ ಅಸಿಯೆಂಬ ತ್ರಿವಿಧಭೇದಂಗಳಲ್ಲಿ
ತ್ರಿವಿಧಮಯನಾಗಿ, ತ್ರಿಗುಣಾತ್ಮನಾಗಿ, ತ್ರಿಶಕ್ತಿಪತಿಯಾಗಿ
ಗತಿಯ ತೋರಿಹೆನೆಂದು ಪ್ರತಿರೂಪಾದೆ.
ಎಳ್ಳಿನೊಳಗಣ ಎಣ್ಣೆ, ಕಲ್ಲಿನೊಳಗಣ ಬೆಂಕಿ,
ಬೆಲ್ಲದೊಳಗಣ ಮಧುರ,
ಅಲ್ಲಿಯೆ ಅಡಗಿ ಮಥನದಿಂದಲ್ಲದೆ ತೋರದವೊಲು
ಅಲ್ಲಿಯೆ ಅಡಗಿದೆ ಗುಡಿಯೊಳಗೆ,
ಗುಮ್ಮಟನಾಥನ ಅಗಮ್ಯೇಶ್ವರಲಿಂಗ./48
ತನುವಿನೊಳಗಣ ತನು, ಮನದೊಳಗಣ ಮನ,
ಜ್ಞಾನದೊಳಗಣ ಜ್ಞಾನ, ಕಾಣುವ ಕಂಗಳಿಂಗೆ
ಮತ್ತಮಾ ಕಣ್ಣು ತೆಗೆದು ನೋಡಲಾಗಿ,
ಬ್ರಹ್ಮ ಹರುಗೋಲವಾದ, ವಿಷ್ಣು ಸಟ್ಟುಗವಾದ,
ರುದ್ರ ಅಂಬಿಗನಾಗಿ ಒತ್ತಿದ.
ಹರುಗೋಲ ಸಿಕ್ಕಿತ್ತು,
ಮಾತಂಗವೆಂಬ ಪರ್ವತದ ತಪ್ಪಲಿನ ಸಿಕ್ಕುಗಲ್ಲಿನಲ್ಲಿ.
ಹರುಗೋಲು ಕೊಳೆತಿತ್ತು, ಹುಟ್ಟು ಮುರಿಯಿತ್ತು,
ಅಂಬಿಗ ಎತ್ತಹೋದನೆಂದರಿಯೆ.
ಎನಗಾ ಬಟ್ಟೆಯ ಹೇಳಾ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./49
ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ.
ಕೃತ್ರಿಮ ನುಡಿವುದಕ್ಕೆ ಅಕೃತ್ಯನಲ್ಲ.
ಮತ್ತೆ ಇವರ ನಿಂದಿಸುವುದಕ್ಕೆ ಬಂಧ ಮೋಕ್ಷದವನಲ್ಲ.
ಇವರುವ ಅಂದಚಂದವ ಅಂತಿಂತೆಂಬುದಕ್ಕೆ
ಉಭಯದ ಗೊಂದಳದವನಲ್ಲ.
ಎನ್ನ ಅಂದದ ಇರವ ಕೇಳಲಿಕ್ಕೆ ನಿಮ್ಮಂಗವ ಹೇಳಿದೆನೈಸೆ.
ಎನಗೆ ಎನ್ನಂಗೆ ನಿರುಪಮನ ಸಂಗ ಇನ್ನೆಂದಿಗೆ,
ಎನ್ನ ಗೂಡಿನ ಒಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ ?/50
ತೃಷ್ಣೆ ಹಿಂಗಿದ ಲಿಂಗಾಂಗಿಯ ಅಂಗದ ಇರವು.
ಬಸುರಿಯ ಗರ್ಭದಲ್ಲಿ ತೋರುವ ಶಿಶುವಿನ ದೆಸೆಯ ಇರವು.
ಅನ್ನರಸಕೆ ಭಿನ್ನವಾಗಿ ಬಾಯಿಯಿಲ್ಲದೆ,
ತಾಯ ಪಥ್ಯದಲ್ಲಿ ಆತ್ಮಂಗೆ ಸುಖವಾಗಿ ಇಪ್ಪುದು.
ಘಟಮಟ ಭಿನ್ನವಹನ್ನಕ್ಕ ಸುಖದುಃಖ.
ಶಿಶುವ ತಾಳಿದ್ದ ಆ ತೆರ, ಲಿಂಗದ ಎಸಕವನರಿವವೊಲು,
ಇಷ್ಟಪ್ರಾಣ ಹೆರೆಹಿಂಗದ ಮೂರ್ತಿ ಧ್ಯಾನ ನೆಲೆಗೊಂಡು,
ಕಂಗಳು ಗರ್ಭ, ಮನ ಶಿಶುವಾಗಿ, ಲಿಂಗವೆಂಬ ಅಂಗದ ತೊಟ್ಟಿಲಲ್ಲಿ
ವಿಶ್ವಾಸ ಘನಲಿಂಗ ಇಂಬಿಟ್ಟು ಕಂಡೆ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ./51
ತೊಗಲೊಳಗಣ ನಾದ, ಮಾಂಸದೊಳಗಣ ಕ್ಷೀರ
ಮೃಗಯೋನಿ ಗಂಧ ಹೆರೆಹಿಂಗಿಯಲ್ಲದೆ ನೆರೆ ಯೋಗ್ಯವಿಲ್ಲ.
ಅರುಹಿರಿಯರೆಲ್ಲರೂ ತಿಲರಸಂದಂತೆ, ತಿಲರಸ ಬಿಂದುವಿನಂತೆ
ಬೆರಸಿ ಭಿನ್ನಭಾವವಾಗಿ ಇರಬೇಕು.
ಮಧು ಮಕ್ಷಿಕದಂತೆ ಆಗದೆ,
ಮತ್ತೆ ಅರಿದಡೆ ಮಧುಮಕ್ಷಿಕದಂತೆ ಇರಬೇಕು.
ಇಂತೀ ಉಭಯವನರಿದ ವಿರಕ್ತಂಗೆ
ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ ತಾನು ತಾನೆ./52
ಧರೆಯ ಉದಕ ಮಾರುತನ ಸಂಗದಿಂದ,
ಆಕಾಶಕ್ಕೆ ಎಯ್ದಿ ಭುವನಕ್ಕೆ ಸೂಸುವಂತೆ,
ಆತ್ಮವಸ್ತುವಿನಲ್ಲಿ ಎಯ್ದಿ ವಸ್ತುವ ಬೆರಸುವಂತೆ,
ಇದು ನಿಶ್ಚಯವೆಂದರಿದ ಆ ಚಿತ್ತ ಇಷ್ಟಲಿಂಗವೇ ಮೂರ್ತಿ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./53
ನಾನೆಂಬುದೆ ಸಕಲ, ನೀನೆಂಬುದೆ ಪ್ರತಿರೂಪು.
ನಾ ನೀನೆಂಬುದು ಅರತುದೆ ನಿಃಕಲ.
ಕಂಡೆಹೆನೆಂಬುದಕ್ಕೆ ಸಂದೇಹ.
ಕಾಣದೆ ಏನೂ ಎನ್ನದಿದ್ದುದು ಭಾವಕ್ಕೆ ವಿರೋಧ.
ಕ್ರೀಯಿಂದ ಕಾಬಡೆ ಮಲಸಂಬಂಧಿ.
ನಿಃಕ್ರೀಯಿಂದ ಕಾಬುದಕ್ಕೆ, ಅರಿವ ಮನಕ್ಕೆ ಕುರುಹಿಲ್ಲ.
ಇಂತಿದ ಏನುವೆನ್ನದ ಲಿಂಗವೇ ಇದ್ದೇನೆಂದು ಕೊಟ್ಟೆ,
ಸಾಕಾರದ ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?/54
ನಾನೊಂದು ಗಿಳಿಯ ಕಂಡೆ, ಬೆಕ್ಕಿನ ಬಾಧೆ ಘನ.
ತಾ ಕೋಲಿನಲ್ಲಿದ್ದಡೆ ಶಯನಕ್ಕೆ ಆಸೆಯಿಲ್ಲ.
ಪಂಜರಕ್ಕೆ ಸಂದ ಕೂಡುವ ಸಂಗದವನಿಲ್ಲ.
ಕೊರೆಯ ಕೂಳನಿಕ್ಕುವುದಕ್ಕೆ ಅಡಿಗರಟವಿಲ್ಲ.
ಗಿಳಿಯ ಹಿಡಿದು ನಾ ಕೆಟ್ಟೆ. ಹಕ್ಕಿಯ ಹಂಬಲಿಲ್ಲ,
ಗುಡಿಯೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ./55
ನೋಡುವ ನಯನ ತೆರಪಾದಡೇನು,
ಆಡುವ ಬೊಂಬೆಯಿಲ್ಲದ ಮತ್ತೆ ?
ಗಾಡದ ಘಟ ಇದ್ದಡೇನು, ಮಾತಾಡುವ ಆತ್ಮನಿಲ್ಲದಂತೆ.
ರೂಢಿಯಲ್ಲಿ ಬೋಧಕರಿದ್ದಡೇನು,
ನಿಗಮಗೋಚರನ ವೇದಿಸಬೇಕು.
ಇದು ಬೋಧಕ ಗುರುವಿನ ಅರಿವು, ಇದು ಸಿದ್ಧ.
ಗುಡಿಯ ಗುಮ್ಮಟನಾಥನ ಒಡೆಯ
ಅಗಮ್ಯೇಶ್ವರಲಿಂಗದಲ್ಲಿ ಗುರುನಿರ್ವಾಣಸ್ಥಲ./56
ನೋಡುವ ಮುಕುರ ತಾನಾಡಿದಂತೆ.
ಕೂಡಿದ ಸಂಗ, ಪುನರಪಿ ತುರೀಯಕ್ಕೆ ಏರದಂತೆ,
ಹಂದೆ, ಕಲಿಯಲ್ಲಿ ನೊಂದು, ಚೌಭಟ ಅಂಗಕ್ಕೆ ಹೋರದಂತೆ,
ಕರಣಂಗಳಲ್ಲಿ ಹಿಂಡಿ ಹಿಳಿದು ಹಿಪ್ಪೆಯಾಗಿ ನೊಂದು,
ಲಿಂಗದ ಸಂಗಕ್ಕೆ ಹಿಂಗಲಾರೆ.
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ
ಒಡಗೂಡುವ ಠಾವ ಹೇಳಾ./57
ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ?
ನುಡಿವಲ್ಲಿ ಮಾತಿನ ಬಲುಮೆಯಲ್ಲದೆ,
ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ?
ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ
ಐಕ್ಯವಾದ ಶರಣಂಗೆ./58
ಪಂಚಭೂತಿಕದೊಳಗಾದ ಭೂತಭವಿಷ್ಯದ್ವರ್ತಮಾನ
ಯುಗಜುಗಂಗಳ ಪ್ರಮಾಣು.
ಮೂವರ ಮೊದಲಿಲ್ಲದಲ್ಲಿ, ಅಂಧರ ನಿರಂಧರ
ಮಹಾ ಅಂಧಕಾರ ಸಂದಲ್ಲಿ,
ನಿಮ್ಮ ಬೆಂಬಳಿಯನರಿದವರಾರು ?
ಮನುವಿಂಗೆ ಮನು, ಘನಕ್ಕೆ ಘನ,
ಬೆಳಗಿಂಗೆ ಬೆಳಗು, ಅವಿರಳಕ್ಕೆ ಅವಿರಳನಾಗಿ,
ನಾಮಕ್ಕೆ ನಿರ್ನಾಮನಾಗಿ,
ಅನಲ ಅನಿಲ ರವಿ ಶಶಿ ಕುಂಭ ಕುಂಭಿನಿ ನಭಯೋದ್ಯಮಾನ,
ಅಘರಂಧರ ಅಕ್ಷಮಾಯ, ಕುಕ್ಷಿ ಕಕ್ಷ ಮಾಯ,
ಮಹಿ ಪ್ರತ್ಯಂತರ, ವಿಸರ್ಜನ ನಿಷಿತ, ಭಸಿತೋನ್ಮಯ ಪುಂಜ.
ಸಕಲೇಂದ್ರಿಯ ದೈಹ್ಯ, ಭಕ್ತಕೃಪಾವಲ್ಲಭ
ಹೃತ್ಕಮಲನಿವಾಸಪರಿಪೂರಿತ ಗುಡಿಯ ಗುಮ್ಮಟನೊಡೆಯ
ಅಗಮ್ಯೇಶ್ವರಲಿಂಗ, ಕೂಡು ಕೂಟಸ್ಥನಾಗಿರು./59
ಪದವನರಿಯದ ವಾಚಕ, ಘಾತಕನ ಇರವು
ಪುಸಿ ಧನುವಿನಲ್ಲಿ ಸಿಕ್ಕಿದ ಮಿಸುಕಿದ ಕಣೆಯಂತೆ,
ಹುಸಿದವನ ಒಡಲಿನ ಪ್ರತಿಮೂದಲೆಯಂತೆ.
ಇಂತೀ ಅರಿವಿನ ಒಳಗನರಿಯದ ಜೂಜಿನ ಹುದುಗಿಂಗೆ ಬಂದು,
ಸುರಿಗಾಯ ಸುರಿವವನ ವಿಧಿಯಂತೆ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./60
ಪೃಥ್ವಿಯಿಂದಾದ ರೂಪು, ಅಪ್ಪುವಿನಿಂದಾದ ಘಟ್ಟಿ,
ತೇಜದಿಂದಾದ ರಜಸ್ಸು, ವಾಯುವಿನಿಂದಾದ ಸರ್ವಾತ್ಮ,
ಆಕಾಶದಿಂದಾದ ನಿರವಯ.
ಇಂತೀ ಪಂಚಭೂತಿಕದಿಂದಾದ ಆತ್ಮನಿಪ್ಪ ಪಿಂಡ[ಸ್ಥಲದಲ್ಲಿ ನಿಂದು],
ಸ್ಥೂಲ ಸೂಕ್ಷ್ಮದಿಂದರಿದು, ಕಾರಣದಿಂದ ಕಂಡು,
ಇಂತೀ ತ್ರಿವಿಧ, ಆತ್ಮನ ಆಧಾರ ಆವುದೆಂದರಿದು,
ಬ್ರಹ್ಮನ ಸೃಷ್ಟಿ, ವಿಷ್ಣುವಿನ ಶಾಂತಿ, ರುದ್ರನ ಘಟಿತ,
ಇವ ಮೂರ ಹೊದ್ದದೆಯಿಪ್ಪುದು ಪಿಂಡಜ್ಞಾನಲೇಪ, ಅಂಗದ ನಿರಸನ.
ಗುರುವಿನ ಕರಕಮಲದಲ್ಲಿ ಮನದ ನಿರಸನ.
ಲಿಂಗದ ಯೋಗದಲ್ಲಿ ಸರ್ವೆಂದ್ರಿಯ ನಿರಸನ.
ಶರಣರ ಸಂಸರ್ಗದಲ್ಲಿ ಇಂತಿವನರಿತು,
ಮನಬಂದಂತೆ ನಡೆಯದೆ, ವಿಕಾರವೆಂದಂತೆ ಪ್ರಕೃತಿಗೆ ಒಳಗಾಗದೆ,
ಮಧುರದಂಡದೊಳಗೆ ಅಡಗಿದ ಸುಧೆಯ ತೆಗೆದು,
ಸದೆಯ ಕಳೆವಂತೆ,
ಕಳೆದು ಉಳಿಯಬೇಕು, ಪಿಂಡಪ್ರಾಣಲಿಂಗಯೋಗವ.
ಇಂತಿವು ಅರಿವವರ[ರುಹು], ಕರಿಗೊಂಡವನ ತೆರ[ನರಿಕೆಯೆ] ತಾ
ಗುಡಿಯೊಡೆಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗವ ಅವಗವಿಸಿದ ಸದಮಲಾಂಗನ ಇರವು./61
ಪ್ರಾಣ ತುಡುಕಿಗೆ ಬಂದಲ್ಲಿ,
ಕೊರಳ ಹಿಡಿದು ಅವುಕಿ ಕೊಂದರೆಂಬ ಅಪಕೀರ್ತಿಯೇಕೆ ?
ಬೀಳುವ ಪಾದುಕವ ತಳ್ಳಿ ಘನವ ಹೊರಲೇಕೆ ?
ಬೇವ ಮನೆಗೆ ಕೊಳ್ಳಿಯ ಹಾಕಿ ದುರ್ಜನವ ಹೊರುವನಂತೆ,
ಅರಿಯದವನ ಅರಿಯರೆಂದು ಬಿರುದು ಮಾಡುವನ ಅರಿವು,
ಹರಿ[ದ] ಹರುಗೋಲವನೇರಿದಂತೆ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗಾ. /62
ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ.
ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ.
ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ?
ತೆರಪಿಲ್ಲದುದ ಕಂಡು,
ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ,
ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು,
ಗಂಡನ ಕೊಂದು, ಅವಳ ಕೊಂಡು ಹೋಹಾಗ,
ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು.
ಇದರ ಸಂಗವಾರಿಗೂ ಚೋದ್ಯ,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./63
ಬಂದವನಿವನಾರು, ಕಂಬಳಿಯ ಕಂಥೆಯ ತೊಟ್ಟು,
ಆಪ್ಯಾಯನ ಹಿಂಗದ ಕರಕರ್ಪರವ ಹಿಡಿದು,
ದೆಸೆವರಿವ ದಶದಂಡವ ಹಿಡಿದು,
ಮನೆ ಮನ ಮಂದಿರದ ಬಾಗಿಲಲ್ಲಿ ನಿಂದು,
ಇಂದ್ರಿಯಂಗಳೆಂಬ ತೃಷ್ಣೆ ಭಿಕ್ಷವಂ ಬೇಡಿ,
ಬೇಡಿದ ದನಿಯ ಕೇಳಿ ಎದ್ದವೈದು ನಾಯಿ.
ಹಮ್ಮಿ ಕಚ್ಚಿತ್ತು ಕಾಲ, ಮತ್ತೊಂದಡರಿ ಅಂಗವ ಹಿಡಿಯಿತ್ತು.
ಮತ್ತೊಂದು ಒಡಗೂಡಿ ಕೈಯ ಕಚ್ಚಿತ್ತು.
ಮತ್ತೊಂದು ಬೆರಸಿ, ನಾಸಿಕವ ಓಸರವಿಲ್ಲದೆ ಹಿಡಿಯಿತ್ತು.
ಮತ್ತೊಂದು ಭಿಕ್ಷೆಗೆ ತಪ್ಪದೆ ಬಾಯ ಹಿಡಿಯಿತ್ತು.
ಭಿಕ್ಷದಾಟ ತಪ್ಪಿತ್ತು, ಕಂಬಳಿಯಣ್ಣ ಕಂಬಳಿಯಲ್ಲಿ ಅಳಿದ.
ಇದಕಿನ್ನು ಬೆಂಬಳಿಯ ಹೇಳಾ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ./64
ಬಯಲು ಬ್ರಹ್ಮಾಂಡಂಗಳಿಲ್ಲದಲ್ಲಿ,
ಯುಗಜುಗಂಗಳು ತಲೆದೋರದಲ್ಲಿ,
ಅಲ್ಲಿಂದಾಚೆ ಹುಟ್ಟಿತ್ತು.
ಕರಚರಣಾದಿ ಅವಯವಂಗಳಿಲ್ಲದ ಶಿಶು.
ಬಲಿವುದಕ್ಕೆ ಬಸಿರಿಲ್ಲ,
ಬಹುದಕ್ಕೆ ಯೋನಿಯಿಲ್ಲ, ಮಲಗುವುದಕ್ಕೆ ತೊಟ್ಟಿಲಿಲ್ಲ.
ಹಿಂದು ಮುಂದೆ ಇಲ್ಲದ, ತಂದೆ ತಾಯಿಯಿಲ್ಲದ ತಬ್ಬಲಿ.
ನಿಬರ್ುದ್ಧಿ ಶಿಶುವಿಂಗೆ ಒಸೆದು ಮಾಡಿಹೆನೆಂಬವರು
ವಸುಧೆಯೊಳಗೆ ಇದು ಹುಸಿಯೆಂದೆ.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ
ಭರಿತನಾದವಂಗಲ್ಲದಿಲ್ಲ./65
ಬಲ್ಲವನ ಭಾವ ಶರೀರದ ಹಂಗನರಿಯಬೇಕು.
ಸಂಚಿತದಲ್ಲಿ ತೋರುವ ಸಂಕಲ್ಪ,
ಆಗಾಮಿಯಲ್ಲಿ ತೋರುವ ಸುಖಭೋಗ,
ಪ್ರಾರಬ್ಧದಲ್ಲಿ ತೋರುವ ಆಸುರ ಕರ್ಮ ಪ್ರಾಪ್ತಿ.
ಇಂತಿವ ನೇತಿಗಳೆದು ನಿರ್ಲೆಪನಾಗಿರು.
ಯೋಗ ಭೋಗ ತ್ಯಾಗ ಇಂತೀ ತ್ರಿಗುಣದಲ್ಲಿ
ಲೇಪವಾಗದೆ ಅರಿ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ./66
ಬಾಯಲ್ಲಿ ಬಸುರು ಹುಟ್ಟಿ, ಕಿವಿ ಬೆಸನಾಯಿತ್ತು.
ಕಣ್ಣಿನಲ್ಲಿ ಮೊಲೆ ಹುಟ್ಟಿ, ನಾಸಿಕದಲ್ಲಿ ಹಾಲು ಬಂದಿತ್ತು.
ತಲೆಯ ಹಣೆಯ ಮೇಲೆ ಕುಳಿತು ಕೂಸು ಉಣ್ಣುತ್ತಿರಲಾಗಿ
ಆಕಾಶದ ಬಿಜ್ಜ ಹೊಯಿದೆತ್ತಿತ್ತು.
ಆ ಶಿಶುವನೆತ್ತಿ ಕೊಕ್ಕಿನಲ್ಲಿ ತಿವಿಯಲಾಗಿ, ತಪ್ಪದೆ ನುಂಗಿತ್ತು.
ಆ ಬಿಜ್ಜು ಹೊಟ್ಟೆಗೆಯ್ದದೆ ಅಪ್ಪ ಅವ್ವೆ ಎನ್ನುತ್ತಿದ್ದಿತ್ತು.
ಇದು ದೃಷ್ಟ, ಸೋಜಿಗ.
ಗೂಡಿನೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ ಅಪ್ರಮಾಣು./67
ಬಿಗಿ[ದಾ] ಜಿನಘಟಕ್ಕೆ ಗು[ಡು]ಗಿಸಲಾಗಿ ಉಡುಗುವುದೆ ನಾದ?
ಬಯಲ ಒಡಗೂಡವುದಲ್ಲದೆ.
ಅಲ್ಲಿ ಬಿಡುಮುಡಿಯಿಲ್ಲ.
ಅದರೊಲು ಅಂಗಲಿಂಗ ಲಿಂಗಾಂಗಸಂಯೋಗ ಸನ್ಮತ.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./68
ಬೀಜವ ಮೀರಿದ ವೃಕ್ಷವುಂಟೆ ಅಯ್ಯಾ ?
ಶಿರ ಹೊರಗಾದ ಚಕ್ಷುವುಂಟೆ ಅಯ್ಯಾ ?
ಕಾಯ ಹೊರಗಾದ ಭೋಗವುಂಟೆ ಅಯ್ಯಾ ?
ಇಷ್ಟ ಹೊರಗಾದ ಅರ್ಪಿತ ಅದೆತ್ತಣ ಬಾಯಿ ?
ಕಷ್ಟದ ಮಾತು ದೃಷ್ಟವಲ್ಲ, ಗುಡಿಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗವ ಅರಿತವರ ಅರಿವಲ್ಲ./69
ಬುದ್ಧಿಯಿಂದ ಬದುಕಿಹೆನೆಂಬುದ ನಿರ್ಧರವೆ ?
ನಿಬದ್ಧಿಸಿ ನಿಶ್ಚಯದಿಂದ ತೊಲಗಿರೆ,
ಮತ್ತೆ ಸಕಲಸುಖಭೋಗಂಗಳು ಹೊದ್ದುವುದುಂಟೆ ?
ಇವರೊಳಗೆ ನಿಲ್ಲದು ಮನ, ಸಂಸಾರವ ಗೆಲ್ಲದು ಚಿತ್ತ.
ಕೊಠಾರವನೆಲ್ಲವ ಸುತ್ತಿ ಬಳಸಿ ಬಹೆನ್ನಕ್ಕ
ಯಾಚಕಂಗೆ ಗ್ರಾಸವಿಲ್ಲದ ವಿಧಿಯೆನಗಾಯಿತ್ತು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./70
ಬೆಕ್ಕಿನ ತಲೆಯ ಗಿಳಿ ತಿಂದಿತ್ತು.
ಕತ್ತೆ ಕುದುರೆಯ ರೂಪಾಯಿತ್ತು.
ಮತ್ಸ್ಯ ಸಮುದ್ರವ ಕುಡಿದು,
ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ.
ಈ ಬಚ್ಚಬಯಲ ಇನ್ನಾರಿಗೆ ಹೇಳುವೆ,
ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ. /71
ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ,
ವಿಷ್ಣುವಿಂಗೆ ಕ್ರಿಯಾಶಕ್ತಿಯಾಗಿದ್ದಲ್ಲಿ,
ರುದ್ರಂಗೆ ಜ್ಞಾನಶಕ್ತಿಯಾಗಿದ್ದಲ್ಲಿ,
ಇಂತಿವರು ದಂಪತಿ ಸಹಜವಾಗಿ
ಯುಗಜುಗಂಗಳ ಜೋಗೈಸುತ್ತಿದ್ದರು.
ಬ್ರಹ್ಮಂಗೆ ಸರಸ್ವತಿಯೆಂದಾರು !
ವಿಷ್ಣುವಿಗೆ ಲಕ್ಷ್ಮೀದೇವಿಯೆಂದಾರು !
ರುದ್ರಂಗೆ ಉಮಾದೇವಿಯೆಂದಾರು !
ಬ್ರಹ್ಮ ಅಂಗವಾಗಿ, ವಿಷ್ಣು ಪ್ರಾಣವಾಗಿ,
ರುದ್ರ ಉಭಯಜ್ಞಾನವಾಗಿ,
ಅಂದು ತಾಳಿದ ಸಾಕಾರದ ಗುಡಿಯ ಐಕ್ಯನಾದ ಕಾರಣ,
ಗುಮ್ಮಟನೆಂಬ ನಾಮವ ತಾಳಿ, ಅಗಮ್ಯೇಶ್ವರಲಿಂಗ ಗುಹೇಶ್ವರನಾದ./72
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು.
ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು.
ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು.
ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು.
ಶರಣನಾದಲ್ಲಿ ಆ ಸ್ಥಲ ಅಳವಟ್ಟು.
ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು.
ಆರು ಲೇಪವಾಗಿ, ಮೂರು ಮುಗ್ಧವಾಗಿ,
ಒಂದೆಂಬುದಕ್ಕೆ ಸಂದಿಲ್ಲದೆ,
ಲಿಂಗವೆ ಅಂಗವಾಗಿಪ್ಪ ಶರಣನ ಇರವು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ತಾನು ತಾನಾದ ಶರಣ./73
ಭಕ್ತಿ ವಿಶ್ವಾಸ ವಿರಕ್ತಿ ಜಗದ ವೈಭವದ ದೇಹಿಗಳು ಕೇಳಿರೊ.
ಅಹಿ ಹಲ್ಲಿ ವಿಹಂಗ ಮಾರ್ಜಾಲ ಜಂಬುಕ ಕರೋತಿ ಜಾತಿ
ಉತ್ತರ ಪಿಂಗಲಿ ಲೆಕ್ಕ ಸಹದೇವ ಬೌದ್ಧ ಮತಂಗಳೆಂಬ
ನಿಮಿತ್ತವ ನೋಡಿ, ಕಾರ್ಯಸಿದ್ಧಿಯೆಂಬ ಸಾಕಾರಿಗಳಿಗೆ
ಆಚಾರ ಅರಿವು ನೀತಿಯೇಕೆ ?
ಕರಸ್ಥಲದ ಜ್ಯೋತಿರ್ಮಯಲಿಂಗವಿದ್ದಂತೆ,
ಅಪರವನರಿವ ಪರಂಜ್ಯೋತಿಯ ಬೆಳಗು ಇದ್ದಂತೆ,
ಇಂತೀ ಅನ್ಯವ ನೀತಿಯೆಂದು ಕೇಳುವಾತ,
ಮಾಡುವ ಪೂಜೆ ಹಾವಿನ ಘಾತದಂತೆ.
ಆತ ನುಡಿವ ಮಾತಿನ ಬಳಕೆ,
ಸುರೆಯ ಮಡಕೆಯಲ್ಲಿ ಹೂಸಿಪ್ಪ ಶ್ವೇತದಂತೆ.
ಆತನಿರವು ಮೃತ್ತಿ[ಕೆ]ಯ ಬೊಂಬೆಯ ಜಲದ ಕುಪ್ಪಸದಂತೆ.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ
ಇದಾರಿಗೂ ಚೋದ್ಯ./74
ಭೂತಭವಿಷ್ಯದ್ವರ್ತಮಾನಕ್ಕೆ ಮುನ್ನವೆ
ಅನಾದಿಯಲ್ಲಿ ಆದ ಜಿನೇಶ್ವರನೆಂದಿದ್ದೆ.
ಆದಿ ನಾರಾಯಣನ ಅವತಾರ ತ್ರಿಪುರಸಂಹಾರದಿಂದೀಚೆ.
ಆದ ಕುಟಿಲ ನಾಮದಿಂದ
ದ್ವಾದಶ ಸಹಸ್ರ ಶ್ರುತಿ ಕುಟಿಲವಂ ಮಾಡಿ,
ತ್ರಿಪುರ ನಿಲಬೇಕೆಂಬುದಕ್ಕೆ ಮೊದಲೆ,
ಅಸತ್ಯ ಗೆಲಬೇಕೆಂಬುದಕ್ಕೆ [ಮೊದಲೆ],
ಶಿವನಿಲ್ಲಾ ಎಂದು ನುಡಿಯಲಾ ಸೊಲ್ಲಿಂಗೆ
ಎಲ್ಲರೂ ಕಲಿತು ಗೆಲ್ಲ ಸೋಲಕ್ಕೆ ಹೋರಿ,
ಬಲ್ಲತನವಿಲ್ಲದೆ ಬಸದಿಯ ನಿಳಯವಂ ಪೊಕ್ಕು,
ಹಿಸಿದಲೆಯಲ್ಲಿ ಗಸಣಿಗೊಳಲಾರದೆ,
ನಿಶಿತಮಯ ಕರ್ಮ ಘಟದೂರ
ಕುಟಿಲಹರ ಸ್ಫಟಿಕ ಘಟದಂತಿಪ್ಪ ವರ್ಣಭೇದ ನೀನೆ,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ. /75
ಮದನನ ಚಾಪ, ಮನ್ಮಥನ ಗಂಧ, ಚದುರರ ಮಾತು,
ಸಂಪಲಿಯಗನ್ನ, ಇರಿಯದ ವೀರ,
ವಸ್ತುವಿನಲ್ಲಿ ಕರಿಗೊಳ್ಳದವನ ವಾಚ,
ಅಜನ ಕೊರಳ ಸೂತೆಯಂತೆ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ./76
ಮರ್ಕಟನ ಲಂಘನ ವಿಹಂಗನ ದೃಷ್ಟಿ,
ಪಿಪೀಲಿಕನ ಚಿತ್ತ, ಕೂರ್ಮನ ಸ್ನೇಹ.
ಇಂತೀ ಚತುಷ್ಟಯದ ಭಾವ ನೆಲೆಗೊಂಡು,
ಅಂಗ ಮಧ್ಯದ ರಂಗಮಂಟಪದಲ್ಲಿ ನಿರಂಗನಾಗಿರು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./77
ಮಾಣಿಕದ ಮಣಿ, ಉರಿಯ ಬೆಳಗಲ್ಲದೆ ಸುಡುವುದಿಲ್ಲ.
ಉದಕದ ಮಡು, ಮುಳುಗಲ್ಲದೆ ಕೊಲುವುದಿಲ್ಲ.
ನಿನ್ನನರಿದಲ್ಲದೆ ನೀನವರನರಿಯೆನೆಂಬ ನೇಮವೆ ?
ಅಯಃಕಾಂತದ ಶಿಲೆ ಲೋಹದಂತೆ ಉಭಯಗುಣಸಂಪನ್ನ ನೀನೆ.
ಅಂದಿಗೆ ಅನಿಮಿಷನ ಕೈಯಲ್ಲಿ,
ಇಂದಿಗೆ ಪ್ರಭುವಿನ ಗುಹೆಯಲ್ಲಿ ಗುಹೇಶ್ವರನಾದೆ.
ಎನ್ನ ಗುಡಿಗೆ ಬಂದು ಗುಮ್ಮಟಂಗೆ ಮಠಸ್ಥನಾದೆ.
ಅಗಮ್ಯೇಶ್ವರಲಿಂಗವೆ, ನನಗೂ ನಿನಗೂ ಕೊಳುವಿಡಿಯೇಕೆ ?
ಕೊಂಡು ಹೋಗು, ಶಿವಶಿವಾ ಸಮರ್ಪಣ./78
ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು.
ಜ್ಞಾತೃಜ್ಞೇಯ ಭಾವವ ನುಡಿದಡೆ,
ಪ್ರಖ್ಯಾತ ಆಗಮಯುಕ್ತಿ ಅವರರಿಯರು.
ಇಂತಿವ ಹೇಳಿದಡೆ ಜಗದ ತೊಡಕು,
ಉಳಿದಡೆ ಚಿತ್ತಕ್ಕೆ ವಿರೋಧ.
ಇದರಚ್ಚುಗ ಬೇಡ,
ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ./79
ಮಾಯೆಯ ಗೆದ್ದೆ[ಹೆ]ನೆಂದು, ಮತಿ ಮಂದಿರದಲ್ಲಿ
ಕಂದಮೂಲಾದಿಗಳ ಫಲಪರ್ಣಂಗಳಿಂದ,
ಕಾಲವ ವಂಚಿಸಿಹೆನೆಂದು ಇದ್ದುದೆ ಮಾಯಾಸಂಬಂಧ.
ಅದು ದ್ವೇಷದ ಭ್ರಾಂತಲ್ಲದೆ, ಶಾಂತಿಯ ಕಲೆಯಲ್ಲ.
ಅರಿದು ಮರೆದವ, ಕಾಷ್ಠ ಕರಿಪಯ ಸಂಗದಂತೆ,
ಆತನಿರವು, ಅಷ್ಟೆ ಭಾವ.
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತತ್ವ್ರಾಣಮೂರ್ತಿ./80
ರಸ ಉಂಬಲ್ಲಿ, ಗಂಧ ವಾಸಿಸುವಲ್ಲಿ,
ರೂಪು ನಿರೀಕ್ಷಣೆಯಲ್ಲಿ, ಶಬ್ದ ಗೋಚರದಲ್ಲಿ,
ಸ್ಪರ್ಶ ತ್ವಕ್ಕಿನಲ್ಲಿ, ಪಂಚಪುಟ ಭೇದಂಗಳಲ್ಲಿ,
ಅಷ್ಟಗುಣ ಮದಂಗಳ ಪಟ್ಟಣದ,
ಷೋಡಶದ ರೂಢಿಯ ಷಡ್ಚಕ್ರದ ಆಧಾರದ,
ಪಂಚವಿಂಶತಿಯ ನಿಳೆಯದ ಸಂಚಾರದ,
ನವಕವಾಟದ, ತ್ರಿಶಕ್ತಿ ಸಂಪದದ,
ತ್ರಿಗುಣಾತ್ಮನ ತ್ರಿಗುಣ ಓಹರಿಯಲ್ಲಿ ಬಳಸಿಪ್ಪ
ಬಂಧದಲ್ಲಿ ಮಗ್ನವಾಗದೆ,
ಜಾಗ್ರ [ಸ್ವಪ್ನ] ಸುಷುಪ್ತಿ ತ್ರಿವಿಧ ಘಟಪಟಲ
ತತ್ವನಿರಸನ ನಿರ್ವಿಕಾರನಾಗಿ,
ಇಂತಿವರಲ್ಲಿ ಅವಘಾನವಾಗಿ ಮುಳುಗದೆ,
ನೀರನಿರಿದ ಕೈದಿನಂತೆ ಕಲೆದೋರದೆ,
ಆವ ಸುಖಂಗಳಲ್ಲಿ ಅಭಿನ್ನವಾಗಿ,
ಜಲದೊಳಗಣ ಶಿಲೆ, ಶಿಲೆಯೊಳಗಣ ವಹ್ನಿ
ಸುಳುಹುದೋರದ ತೆರ,
ಮಥನಕ್ಕೆ ಕಂಡು, ಕಾಣದಡಗಿಪ್ಪ ತೆರ,
ಲಿಂಗಾಂಗಿಯ ಇರವು.
ಇದು ಸಿದ್ಧವಾಗಬೇಕು, ಶರೀರದ ಗುಡಿಯೊಡೆಯ
ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ.
ಇದೇ ಅಂಜನಸಿದ್ಧಿ./81
ರೂಪ ಕಂಡಲ್ಲಿ ಇಷ್ಟಕ್ಕೆ, ರುಚಿಯ ಕಂಡಲ್ಲಿ ಪ್ರಾಣಕ್ಕೆ,
ಉಭಯವ ಹೆರೆಹಿಂಗಿ, ಅರ್ಪಿತವನರಿವ ಪರಿಯಿನ್ನೆಂತೊ ?
ಕುಸುಮ ಗಂಧದ ಇರವು, ಫಳರಸದಿರವು ಇಷ್ಟಪ್ರಾಣ.
ಇಷ್ಟವನರಿತಡೆ ಅರ್ಪಿತ ಅವಧಾನಿ.
ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ
ಅರ್ಪಿತ ಅವಧಾನಿ[ಯ] ಇರವು./82
ವಟವೃಕ್ಷದ ಘಟದ ಹೊಟ್ಟೆಯಲ್ಲಿ
ತತ್ತಿಯನಿಕ್ಕಿತ್ತೊಂದು ಗಿಳಿ.
ತತ್ತಿ ಮೂರು, ಆ ತತ್ತಿಗೆ ಪಕ್ಷಿ ಮೂರು.
ಕಂಡನೊಬ್ಬ ಅಂಧಕ.
ವೃಕ್ಷವ ಹತ್ತುವುದಕ್ಕೆ ಮೆಟ್ಟಿಲ್ಲ.
ಹೊಟ್ಟೆಯಲ್ಲಿ ಇಕ್ಕುವುದಕ್ಕೆ ಕೈಯಿಲ್ಲ.
ಗಿಳಿಯಾಸೆ ಬಿಡದು. ಇದಿರಾಸೆಯ ಬಿಡಿಸು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./83
ವಾಯು ಹಸಿದು ಆಪೋಶನವ ಮಾಡುವಲ್ಲಿ
ಬಡಿಸುವ ತೆರಪಿನ್ನಾವುದು ?
ಆಕಾಶ ಉರಿಗಂಜಿದಡೆ, ಸೇರುವ ನೆಳಲಿನ್ನಾವುದು ?
ಭೂಮಿ ಭಯಕಂಜಿ ಓಡಿದಡೆ, ಸೇರುವ ಠಾವಿನ್ನಾವುದು ?
ಇಂತಿವೆಲ್ಲವು ಪರಿಪೂರ್ಣ ತನ್ನಲ್ಲಿಯೆ ತೋರಿದುದು,
ತನ್ನಲ್ಲಿಯೆ ಲಯವಲ್ಲದೆ ಬೇರೆ ಭಿನ್ನಭಾವವಿಲ್ಲ.
ಈ ತೆರ ಶರಣನಿರವು.
ಆತನೇತರಲ್ಲಿದ್ದರೂ ಅಜಾತಮಯನೆಂದೆ.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ,
ತೋರಿಯೂ ತೋರದ ನಿಲವು./84
ವಾರಿಯ ಶಿಲೆ ಕರಗುವುದಲ್ಲದೆ ಒಡೆದುದುಂಟೆ ಅಯ್ಯಾ ?
ಹೇಮದ ಬಣ್ಣ ಪಾವಕನ ಜ್ವಾಲೆಗಂಜುವುದೆ ?
ವಿಶಾಲ ಸಂಪದ ಕಾಲನ ಕಮ್ಮಟಕ್ಕೆ ಲೋಲನಹನೆ ?
ಇದನರಿಯದ ಬಾಲರ ಮಾತೇಕೆ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ? /85
ವೇದಂಗಳ ನಾಲ್ಕು ಭೇದಿಸಲರಿಯದೆ,
ಹದಿನಾರು ಶಾಸ್ತ್ರ ನಿಮ್ಮ ಶಾಂತಿಯನರಿಯದೆ,
ಇಪ್ಪತ್ತೆಂಟು ಪುರಾಣ ನಿಮ್ಮ ಪುಣ್ಯದ ಪುಂಗವನರಿಯದೆ,
ತೊಳಲಿ ಬಲುಳವುದಕ್ಕೆ [ಚ]ಚರ್ೆಯ ಮಾಡಿದೆ.
ನಾ ಕೆಟ್ಟೆ, ಹುಚ್ಚುಗೊಂಡ ನಾಯಿ ಒಡೆಯನ ಕಚ್ಚಿದಂತೆ, ಕೆಟ್ಟೆ.
ಆಗಮಗಳಲ್ಲಿ ಹೋರಿ, ದೃಷ್ಟವ ಕಾಣದೆ ಹೊತ್ತುಹೋರಿದೆನಯ್ಯಾ.
ತಿರುಗುವ ಮೃಗವ ಎಚ್ಚಂತೆ, ಎನೆಗದು ಕುರುಹಾಯಿತ್ತು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./86
ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು.
ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ,
ಹೊಳೆ ಒಂದೆ, ಹಾದಿಯ ಹೊಲಬು ಬೇರಲ್ಲದೆ,
ಧರೆ ಸಲಿಲ ಪಾವಕ ಇವು ಬೇರೆ ದೇವರ ಒಲವರವುಂಟೆ ?
ಧರೆ ಎಲ್ಲರಿಗೂ ಆಧಾರ, ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ,
ಪಾವಕ ಸರ್ವಮಯರಿಗೆ ದಗ್ಧ.
ಸರ್ವಮಯ ಪೂಜಿತ ದೈವದ ಆಧಾರ, ನೀನಲ್ಲದೆ ಬೇರೆಯಿಲ್ಲ,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ./87
ಶೈವಂಗೆ ಹರವರಿ, ನೇಮಸಂಗೆ ಊಧ್ರ್ವ
ಬೌದ್ಧಂಗೆ ವರ್ತುಳ, ಇದಿರಿಡದವಂಗೆ ಹಣೆಯಲ್ಲಿ ಇಡಲಿಲ್ಲ.
ಇಂತಿವೆಲ್ಲವೂ ದರುಶನವಾದ ಸಂಬಂಧಿಗಳು,
ಉಂಟು ಇಲ್ಲಾ ಎಂಬುದಕ್ಕೆ ಇರಿಸಿಹೋದ ಮೂವರಿಗೆ.
ಮೂರನರಿತು ಮೀರಿದವಂಗೆ ಏನೂ ತೋರಲಿಲ್ಲ.
ತೊಗಲಗುಡಿಯೊಳಗೇಕೆ ಅಡಿಗಿದೆ,
ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?/88
ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು
ಇವಾರಿಂದಾದವೆಂದು ಅರಿದ ಮತ್ತೆ, ಬಾಗಿಲ ಕಾಯ್ದು ಕೂಗಿಡಲೇಕೆ ?
ಎಲೆ ಅಲ್ಲಾಡದು, ಅವನಾಧೀನವಲ್ಲದಿಲ್ಲಾ ಎಂದು
ಎಲ್ಲರಿಗೆ ಹೇಳುತ ಭವಬಡಲೇಕೆ ?
ಹೋಯಿತ್ತು ಬಾಗಿಲಿಗೆ ಬಂದಾಗ ಭಾವಜ್ಞಾನ.
ಭಾವ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ
ಅರಿದು, ಹರಿದು ಬದುಕಿರಣ್ಣಾ./89
ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ,
ದೀಪದ ಕುಡಿವೆಳಗಿನ ಧೂಮದ ಪರಿಯಂತೆ.
ಅರಿವು ಮರವೆ ಬೇರೆ ಎಡೆದೆರಪಿಲ್ಲದೆ ಪುದಿದು,
ಆತ್ಮನಲ್ಲಿ ಎಡೆಬಿಡುವಿಲ್ಲದಿಪ್ಪುದು,
ಹೆರೆಹಿಂಗುವ ಪರಿಯಿನ್ನೆಂತೊ ?
ಪಂಕ ಸಲಿಲದಂತೆ, ಪಾಷಾಣ ಪಾವಕನಂತೆ,
ತೈಲ ರಜ್ಜುವಿನ ಯೋಗದಂತೆ
ಹೆರೆಹಿಂಗಿದಡೆ ಅರಿಯಬಾರದು.
ಕೂಡಿದ್ದಡೆ ಅರಿವಿಂಗೆ ವಿರೋಧ.
ಗೋವು ಮಾಣಿಕವ ನುಂಗಿದಂತೆ.
ಇದಾರಿಗೂ ಅಸಾಧ್ಯ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ಅವನರಿದವಂಗಲ್ಲದಿಲ್ಲ./90
ಸ್ವಪ್ನವ ಕಂಡು ಎಚ್ಚರಿವುದು ಅರಿವೋ, ಮರವೆಯೋ ?
ಅರಿತಡೆ ದಿಟವಾಗಬೇಕು, ಮರೆತಡೆ ತೋರದಿರಬೇಕು.
ಉದಕದ ವಾಸನೆಯಂತೆ ಸ್ಥೂಲದ ಸ್ವಪ್ನ.
ಇದ ಒಡಗೂಡಿ ತಿಳಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./91
ಹಾದಿಯ ತೋರಿದವರೆಲ್ಲರು
ಭಯಕ್ಕೆ ನಿರ್ಭಯವಂತರಾಗಬಲ್ಲರೆ ?
ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು
ವೇದಿಸಬಲ್ಲರೆ ನಿಜತತ್ವವ ?
ಹಂದಿಯ ಶೃಂಗಾರ, ಪೂಷನ ಕಠಿಣದಂದ,
ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ.
ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ,
ಎಡೆಬಿಡುವಿಲ್ಲದೆ ಒಡಗೂಡು./92
ಹಾರುವ ಹಕ್ಕಿಯ ಹಿಡಿದೆ, ಬೀಸುವ ಗಾಳಿಯ ಹಿಡಿದೆ.
ವೈಶಾಖದ ಬಿಸಿಲ ಹಿಡಿದು ಜಗವ ಹಾಸಿ ಕಟ್ಟಿದೆ.
ಒಂದು ತಾರು ಗಂಟು, ಒಂದು ಜಿಗುಳು ಗಂಟು,
ಒಂದು ಕುರುಹು ಗಂಟು.
ಮೂರರ ಮುದ್ರೆಯ ಮೀರಿ ಹಾರಿತ್ತು ಹಕ್ಕಿ.
ಬೀಸಿತ್ತು ಗಾಳಿ, ಹುಯ್ಯಿತ್ತು ಬಿಸಿಲು.
ಬಿಸಿಲ ಢಗೆ ತಾಗಿ, ವಸುಧೆಯವರೆಲ್ಲರೂ
ಬಾಯಿ ಕಿಸವುತ್ತಿದ್ದರು.
ಕಿಸುಕುಳರ ನೋಡಿ, ಶರೀರದ ಗೂಡಿನ ಒಡೆಯ
ಗುಮ್ಮಟನ ಪ್ರಾಣ, ಅಗಮ್ಯೇಶ್ವರಲಿಂಗ ಒಡಗೂಡುತ್ತಿದ್ದ./93
ಹಾವಿನ ಹಲ್ಲಿನ ವಿಷದ ಕೊಳಪೆಯ ಮೂಲೆಯಲ್ಲಿ,
ಮೂರು ಕಪ್ಪೆ ಹುಟ್ಟಿದವು.
ಒಂದಕ್ಕೆ ಕಾಲಿಲ್ಲ, ಒಂದಕ್ಕೆ ಬಾಯಿಲ್ಲ, ಒಂದಕ್ಕೆ ಕಣ್ಣಿಲ್ಲ.
ಕಾಲಿಲ್ಲದ ಕಪ್ಪೆ ಮೂರುಲೋಕವ ಸುತ್ತಿತ್ತು.
ಬಾಯಿಲ್ಲದ ಕಪ್ಪೆ ಬ್ರಹ್ಮಾಂಡವ ನುಂಗಿತ್ತು.
ಕಣ್ಣಿಲ್ಲದ ಕಪ್ಪೆ ಕಂಗಾಣದವರ ಕಂಡಿತ್ತು.
ಈ ಖಂಡಮಂಡಲದ ಅಂಗವ ಬಿಡಿಸು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ. /94
ಹಾವು ಹಲ್ಲಿ ಮಾರ್ಜಾಲ ಇವ ಹಾಯಿಸಿ
ಕಂಡೆಹೆನೆಂಬುದರಿಂದ ಕಡೆಯೆ,
ಲಿಂಗವ ಹಿಡಿದಿದ್ದ ಸಾಕಾರ ಅಂಗನ ಇರವು ?
ಮುಂದೆ ಬಹುದ ಹೇಳಿಹೆನೆಂದು ವಿಹಂಗನನೆಬ್ಬಿಸಿ,
ಹೋಹರ ಕಂಡು ನಂಬುವರಿಂದ ಕಡೆಯೆ,
ಲಿಂಗವ ಹಿಡಿದ ಅಂಗ ?
ಛೀ, ಸಾಕು ಸುಡು.
ಇವರಿಗೆ ಲಿಂಗ ಕೊಟ್ಟ ದರುಶನ[ವ],
ಭಂಡನ ಕಂಡು ಅಡಗಿದ ಗುಡಿಯೊಳಗೆ,
ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./95
ಹಿಮಾಚಲದ ತಳದಲ್ಲಿ, ಮಹೀತಳದ ಮಧ್ಯದಲ್ಲಿ,
ಹುಟ್ಟಿದಳೊಬ್ಬ ರಾಕ್ಷಸಿ.
ಮುಂದೆ ಮೂವರು ಮಕ್ಕಳು,
ಹಿಂದೆ ಐವರು ಒಡಹುಟ್ಟಿದವರು.
ತಂದೆ ಎಡದಲ್ಲಿ, ತಾಯಿ ಬಲದಲ್ಲಿ,
ಬಂಧುಗಳೆಲ್ಲರು ಹಿಂದೆ ಮುಂದೆ ಸುತ್ತಿ,
ರಾಕ್ಷಸಿ ಮುಂದಳ ಹಿಂದಳ ಸುತ್ತಿಪ್ಪ ಬಂಧುಗಳ
ಒಂದೆ ಬಾರಿ ನುಂಗಿದಳು.
ಕೈಗೆ ಮೈಯವಳಲ್ಲ, ಮನಕ್ಕೆ ಸಂಶಯದವಳಲ್ಲ.
ಇವಳ ಕೊಂದಡೆ ಸಂಹಾರಕ್ಕೆ ಇಲ್ಲ.
ಇವಳಿದ್ದಡೆ ಎನ್ನ ಮನಕ್ಕೆ ಭಯಂಕರ.
ಈ ಭೀತಿಯ ಬಿಡಿಸು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ./96
ಹುಟ್ಟಿದಳೊಬ್ಬ ಮೂದೇವಿ ಜಗವ ರಕ್ಷಿಸಿಹೆನೆಂದು.
ಬಾಯಲ್ಲಿ ಬಂಧ, ಕೈಯಲ್ಲಿ ಕೂರಲಗು,
ಮಂಡೆಯಲ್ಲಿ ಕಾಲು ಹುಟ್ಟಿ,
ಮನಮಂದಿರದಲ್ಲಿ ತಿರುಗಾಡುತ್ತಿದ್ದಾಳೆ.
ಕೂಡಿಕೊಂಡೆ ಕೂಪಳಲ್ಲ, ಅಗಲುವುದಕ್ಕೆ ಹಗೆಯಲ್ಲ.
ಇಂತಿವಳ ಒಡಗೂಡುವ ಭೇದವಾವುದು ?
ಕರುಣಿಸು, ಎನ್ನೊಡೆಯ
ಗೂಡಿನ ಗುಮ್ಮಟನಾಥನ ಪ್ರಾಣಮೂರ್ತಿ ಅಗಮ್ಯೇಶ್ವರಲಿಂಗ./97
ಹುಲ್ಲೆಯ ಕಣ್ಣಿನಲ್ಲಿ ಹುಲಿ ನಿಂದಿದ್ದುದ ಕಂಡೆ.
ಹುಲ್ಲಿನ ಮಧ್ಯದಲ್ಲಿ ಪಾವಕ ಅಲ್ಲಾಡಲಮ್ಮದೆ ಇದ್ದುದ ಕಂಡೆ.
ಎನ್ನ ಗುಡಿಯ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ,
ಅಡಿಯಿಡಲಮ್ಮದುದ ಕಂಡೆ. /98
ಹೇಮದ ಬಣ್ಣ, ನಾನಾ ಬಗೆಯಲ್ಲಿ ತೋರುವ
ಪರಿಕೂಟದ ಕಪಟದಿಂದ,
ಕಪಟವ ಕಳೆದು ನಿಂದಲ್ಲಿ, ಅದೇತರ ಗುಣ ?
ಒಂದಲ್ಲದೆ ಈ ಪಥ ತಪ್ಪದು,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ
ಅಂಗವ ಕಳೆದು ಉಳಿದ ಶರಣಂಗೆ. /99