Categories
ವಚನಗಳು / Vachanagalu

ಮರುಳಶಂಕರದೇವ ವಚನಗಳು

ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ,
ಲಿಂಗದಲ್ಲಿ ಲೀಯವಾದ ಸುಖವು ಮಹಾಲಿಂಗದಲ್ಲಿ ಲೀಯವಾಗಿ
ಮಹಾಲಿಂಗದಲ್ಲಿ ಲೀಯವಾದ ಸುಖವು ಜ್ಞಾನಮುಖದಲ್ಲಿ ಲೀಯವಾಗಿ,
ಜ್ಞಾನಮುಖದಲ್ಲಿ ಲೀಯವಾದ ಸುಖವು ಮಹಾಜ್ಞಾನದಲ್ಲಿ ಲೀಯವಾಗಿ,
ಮಹಾಜ್ಞಾನದಲ್ಲಿ ಲೀಯವಾದ ಸುಖವು ಸರ್ವಾಂಗಮುಖದಲ್ಲಿ ಲೀಯವಾಗಿ,
ಸರ್ವಾಂಗ[ಮುಖ]ದಲ್ಲಿ ಲೀಯವಾದ ಸುಖವು ಸಮರಸಸಂಗದಲ್ಲಿ ಲೀಯವಾಗಿ,
ಸಮರಸಸಂಗದಲ್ಲಿ ಲೀಯವಾದ ಸುಖವು ಐಕ್ಯಸ್ಥಲದಲ್ಲಿ ಲೀಯವಾಗಿ,
ಐಕ್ಯಸ್ಥಲದಲ್ಲಿ ಲೀಯವಾದ ಸುಖವು ನಿರಾಕಾರದಲ್ಲಿ ಲೀಯವಾಗಿ,
ನಿರಾಕಾರದಲ್ಲಿ ಲೀಯವಾದ ಸುಖವು ನಿಶ್ಶಬ್ದದಲ್ಲಿ ಲೀಯವಾಗಿ,
ನಿಶ್ಶಬ್ದದಲ್ಲಿ ಲೀಯವಾದ ಸುಖವು ನಿರಂಜನದಲ್ಲಿ ಲೀಯವಾಗಿ,
ನಿರಂಜನದಲ್ಲಿ ಲೀಯವಾದ ಸುಖವು ಪರಬ್ರಹ್ಮದಲ್ಲಿ ಲೀಯವಾಗಿ,
ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂ ಬ್ರಹ್ಮದಲ್ಲಿ,
ಲೀಯವ ಮಾಡಿದರು ನಮ್ಮ ಶರಣರು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯನಲ್ಲಿ
ಜನನಮರಣವಿರಹಿತ ನಿಜತತ್ವ ನಿಸ್ಪೃಹ ನಿಃಕಳಂಕ
ಮಹಾಶರಣನಲ್ಲದೆ ಮತ್ತೆ ಉಳಿದ ಭೂಲೋಕದ
ಭೂಭಾರ ಜೀವಿಗಳಿಗೆ ಅಳವಡುವುದೆ ಮಹಾಲಿಂಗೈಕ್ಯವು ?
ಇಂತಪ್ಪ ಮಹಾಲಿಂಗೈಕ್ಯನ ನಿಲವ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./1
ಅಯ್ಯಾ, ಅಷ್ಟತನುಮೂರ್ತಿಗಳಿಲ್ಲದಲ್ಲಿಂದತ್ತತ್ತ
ಅನಿರ್ವಾಚ್ಯವಾಗಿರ್ದಿರಯ್ಯ.
ಅಯ್ಯಾ, ನಿಮ್ಮ ವಿನೋದದಿಂದ ನೀವೇ
ವಾಚಾಸ್ವರೂಪದಿಂದ ಜಂಗಮವಾದಿರಿ ದೇವಾ.
ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಿ.
ನಿಮ್ಮ ಮುಖವೈದರಿಂದ ಉದಯಿಸಿದ
ಪಂಚಭೂತಾದಿ ಸಕಲತತ್ವಂಗಳೇ ಪದಾರ್ಥವೆಂದು ನಿಮಗರ್ಪಿಸಲು,
ಪಂಚಾಕ್ಷರಿ ಪ್ರಾಣಾತ್ಮಕನಾಗಿ ಬಂದಾತ ಬಸವಣ್ಣ.
ಪಾದತೀರ್ಥದಲ್ಲಿ ಬೆಳಸ ಬಿತ್ತಿ, ಕ್ರೀಯಿಂದಾದ ಬೆಳೆಸಿರಿವಂತನಾಗಿ
ಗುರುವಿಂಗಿತ್ತ, ಲಿಂಗಕಿತ್ತ, ಮತ್ತಾ ಜಂಗಮಕಿತ್ತ ಬಸವಣ್ಣ.
ಬಸವಣ್ಣನಿಂತಹ ಶ್ರೀಮಂತನೆಂದರಿದು,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಬಸವಣ್ಣಕೊಂಡಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ./2
ಆಯತದಲ್ಲಿ ಅಂಗಭೋಗಿಯಾಗಿರಬೇಕು.
ಸ್ವಾಯತದಲ್ಲಿ ಸನ್ನಹಿತನಾಗಿರಬೇಕು.
ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು.
ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ,
ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು.
ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ,
ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ
ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ.
ಲಿಂಗವಂತನು ಅಂಗಸೂತಕಿಯಲ್ಲ.
ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ
ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು,
ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು,
ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು,
ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ,
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./3
ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು.
ಪ್ರಾಣಲಿಂಗಕ್ಕೆ ಮನವನರ್ಪಿತವ ಮಾಡಬೇಕು.
ಭಾವಲಿಂಗಕ್ಕೆ ತೃಪ್ತಿಯನರ್ಪಿತವ ಮಾಡಬೇಕು.
ಈ ವರ್ಮವನರಿತು ಅರ್ಪಿತವ ಮಾಡಬಲ್ಲಡೆ ಪ್ರಸಾದಿಯೆಂಬೆ.
ಅದೆಂತೆಂದಡೆ: ಇಷ್ಟಲಿಂಗಾರ್ಪಿತಂ ತ್ವಂಗಂ ಪ್ರಾಣಲಿಂಗಾರ್ಪಿತಂ ಮನಃ
ಭಾವಲಿಂಗಾರ್ಪಿತಾ ತೃಪ್ತಿ ರಿತಿಭೇದಂ ವರಾನನೇ ||
ಎಂದುದಾಗಿ, ಲಿಂಗಕ್ಕೆಯೂ ತನಗೆಯೂ ಎಡೆದೆರಹಿಲ್ಲ.
ಇದು ಕಾರಣ, ಲಿಂಗ ಸಹಿತವಾಗಿಯೆ ಕೇಳುವ,
ಲಿಂಗಸಹಿತವಾಗಿಯೆ ಘ್ರಾಣಿಸುವ, ಲಿಂಗಸಹಿತವಾಗಿಯೆ ರುಚಿಸುವ,
ಲಿಂಗಸಹಿತವಾಗಿಯೇ ನೋಡುವ, ಲಿಂಗಸಹಿತವಾಗಿಯೆ ಸಂಗ ಮಾಡುವ,
ಲಿಂಗಸಹಿತವಾಗಿಯೆ ತೊಳಗುವ,
ಇಂತಪ್ಪ ಮಹಾಮಹಿಮ ಸದ್ಭಕ್ತನ
ಅಂಗವೆಲ್ಲವೂ ಲಿಂಗ, ಸಂಗಮವೆಲ್ಲವೂ ಲಿಂಗ,
ಅಂಗ ಸಂಗಮವೆಲ್ಲವೂ ಲಿಂಗಸಂಗಗಳಾದ ಕಾರಣ,
ಅಂಗಕ್ರಿಯೆಗಳೆಲ್ಲವೂ ಲಿಂಗಕ್ರಿಯೆಗಳಾದ ಕಾರಣ,
ಅಂಗಭೋಗವೆಲ್ಲವೂ ಲಿಂಗಭೋಗವಾದ ಕಾರಣ,
ಇಂತಪ್ಪ ಮಹಾಮಹಿಮ ಸದ್ಭಕ್ತನ ಶ್ರೀಚರಣಕ್ಕೆ
ಎನ್ನ ಶಿರವನಿರಿಸಿ ಪೂಜಿಸುವೆ ಕಾಣಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಸದ್ಭಕ್ತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./4
ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು.
ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ.
ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತುವನಾರುಬಲ್ಲರು ?
ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು]
ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ.
ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ.
ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು.
ಈ ಕಷ್ಟದ ನುಡಿಯ ಕೇಳಲಾಗದು.
ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ?
ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ,
ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ,
ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ,
ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ.
ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ
ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ
ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./5
ಇಷ್ಟಲಿಂಗಾರ್ಪಿತಂ ಪ್ರಾಣಂ ತೃಪ್ತಿಲಿಂಗಾರ್ಪಿತಾ ಭವೇತ್
ಅಂಗಾಂಕಿತ ಲಿಂಗಾಂಗಿನಾಂ ತ್ರಿವಿಧಂ ಲಿಂಗಮುಚ್ಯತೇ ||
ಇಂತೆಂದುದಾಗಿ,
ಲಿಂಗಕ್ಕೂ ತನಗೂ ಎಡೆದೆರಹಿಲ್ಲದಿಪ್ಪ,
ಲಿಂಗಸಹಿತವಾಗಿಯೆ ಕೇಳುವ,
ಲಿಂಗಸಹಿತವಾಗಿಯೆ ನೋಡುವ,
ಲಿಂಗಸಹಿತವಾಗಿಯೆ ರುಚಿಸುವ,
ಲಿಂಗಸಹಿತವಾಗಿಯೆ ಸಂಗವ ಮಾಡುವ,
ಲಿಂಗಸಹಿತವಾಗಿಯೆ ಅಳಲುವ,
ಲಿಂಗಸಹಿತವಾಗಿಯೆ ಬಳಲುವ,
ಲಿಂಗಸಹಿತವಾಗಿಯೆ ತೊಳಲುವ.
ಇಂತಪ್ಪ ಮಹಾಮಹಿಮ ಲಿಂಗವಂತನ
ಅಂಗಕ್ರಿಯೆಗಳಲ್ಲಿ ಲಿಂಗಕ್ರಿಯೆಗಳಾದವು.
ಅಂಗಸಂಗವೆಲ್ಲ ಲಿಂಗಸಂಗವಾದವು.
ಅಂಗಭೋಗವೆಲ್ಲ ಲಿಂಗಭೋಗವಾದವು.
ಇಂತಪ್ಪ ಮಹಾಮಹಿಮ ಲಿಂಗವಂತನ ಚರಣಕ್ಕೆ
ಎನ್ನ ಶಿರವನರಿದು ಪೂಜಿಸುವೆ ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./6
ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧನ.
ಅಡಗಿಯೂ ಉಡುಗಿಯೂ ಕಂಡೆಹೆನೆಂದೆಂಬ ಸಂಶಯ.
ಸಂಕಲ್ಪ ಸಂದೇಹ ಭ್ರಾಂತು ಭ್ರಮೆಯ ಭಾವಕ್ಕೆ ಬಯಲಾಯಿತ್ತು.
ನಿತ್ಯನಿರಂಜನ ಪರಂಜ್ಯೋತಿ ಪ್ರಕಾಶವೆನಗೆ ತಲೆದೋರಿತ್ತು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ,
ಕಾಣಬಂದಿತ್ತು ಕಾಣಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಬಸವಣ್ಣ./7
ಎನ್ನ ಜ್ಞಾನಾತ್ಮನ ಚೇತನನಯ್ಯ ಪ್ರಭುದೇವರು.
ಎನ್ನ ಪರಮಾತ್ಮನ ಚೇತನನಯ್ಯ ಸಿದ್ಧರಾಮೇಶ್ವರದೇವರು.
ಎನ್ನ ಚಿನ್ಮಯಾತ್ಮನ ಚೇತನನಯ್ಯ ಬಸವಣ್ಣನು.
ಎನ್ನ ನಿರ್ಮಲಾತ್ಮನ ಚೇತನನಯ್ಯ ಷಟ್ಸ್ಥಲಬ್ರಹ್ಮಿ ಚೆನ್ನಬಸವಣ್ಣನು.
ಎನ್ನ ಮಹಾತ್ಮನ ಚೇತನನಯ್ಯ
ಸಂಗನಬಸವಣ್ಣನ ನಿಜಸುಖಿ ಅಪ್ಪಣ್ಣನು.
ಎನ್ನ ಜೀವಾತ್ಮನ ಚೇತನನಯ್ಯ ಮಡಿವಾಳ ಮಾಚಯ್ಯನು.
ಎನ್ನ ಅಂತರಾತ್ಮನ ಚೇತನನಯ್ಯ ಸೊಡ್ಡಳ ಬಾಚರಸರು.
ಎನ್ನ ಅರಿವಿನ ಚೇತನಾತ್ಮಕನಯ್ಯ ಕಿನ್ನರ ಬೊಮ್ಮಯ್ಯನು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣರ ಕರುಣವ ಪಡೆದೆನಾಗಿ,
ಎನ್ನ ಕರ್ಮ ನಿಮರ್ೂಲವಾಯಿತ್ತಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ./8
ಎನ್ನ ತನು ಬಸವಣ್ಣನ ಆದಿಪ್ರಸಾದವ ಕೊಂಡಿತ್ತು.
ಎನ್ನ ಮನ ಚನ್ನಬಸವಣ್ಣನ ನಿರ್ಮಲಪ್ರಸಾದವ ಕೊಂಡಿತ್ತು.
ಎನ್ನ ಪ್ರಾಣ ಪ್ರಭುದೇವರ ಜ್ಞಾನಪ್ರಸಾದವ ಕೊಂಡಿತ್ತು.
ಇಂತೆನ್ನ ತನುಮನಪ್ರಾಣಪ್ರಸಾದ ಎನ್ನ ಸರ್ವಾಂಗದಲ್ಲಿ ತುಂಬಿತ್ತು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣರ ಪ್ರಸಾದವ ಕೊಂಡು ಬದುಕಿದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./9
ಏಕಬೀಜಂ ಸಮಾವೃಕ್ಷಂ ಲೋಕ ಲಿಂಗಂತು ಪೂಜನಂ
ಸಾಕಾರಂ ಚ ಗುರೋಲರ್ಿಂಗಂ ಏಕಲಿಂಗಂತು ಪೂಜನಂ
ಏಕಧ್ಯಾನ ಸಮಂ ಚಿತ್ತಂ ಊಧ್ರ್ವಲಿಂಗಂತು ಪೂಜನಂ
ಏಕಾಕ್ಷರಂ ತುಷಂ ಜನಂ ಮಹಾಲಿಂಗಂತು ದರುಶನಂ ||
ಇಂತೆಂದುದಾಗಿ,
ಇದು ಕಾರಣ, ನಿಮ್ಮ ಶರಣ ಬಸವಣ್ಣನನು
ಲೋಕದವರು ಮತ್ರ್ಯರೆಂದಡೆ, ಅಘೋರ [ನರಕ ]ತಪ್ಪದು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ.
ನಿಮ್ಮ ಶರಣ ಬಸವಣ್ಣನ ಪರಿಯ, ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./10
ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವ
ಭಕ್ತನ ಪರಿಯಾಯವ ನೋಡಿರಯ್ಯಾ.
ಶ್ರೀಗುರು ಶಿಷ್ಯಂಗೆ ಅನುಗ್ರಹವ ಮಾಡಲೊಡನೆ,
ಆ ಶಿಷ್ಯ ಆ ಗುರುವ ಕೊಂದು ತಿಂದ ನೋಡಿರಯ್ಯಾ.
ಲಿಂಗ ಬಂದು ಪೂಜೆಯ ಮಾಡಿಸಿಕೊಂಡು ಹೋದೆಹೆನೆಂದು ಹೋದಡೆ,
ಆ ಭಕ್ತ ಆ ಲಿಂಗವ ನುಂಗಿದ ಪರಿಯ ನೋಡಿರಯ್ಯಾ.
ಜಂಗಮ ಬಂದು ಲಿಂಗಾರ್ಚನೆಯ ಮಾಡಿಹೆನೆಂದು ಮನೆಗೆ ಬಂದಡೆ.
ಆ ಭಕ್ತ ಆ ಜಂಗಮವ ಕೊಂದು ತಿಂದು ಪರಿಯ ನೋಡಿರಯ್ಯಾ.
ಇಂತೀ ಮೂವರನು ಕೊಂದು ತಿಂಬವನ ಭಕ್ತನೆಂದೆಂಬೆನೆ ಅಯ್ಯಾ ?
ಅಲ್ಲ, ಅಲ್ಲ, ಆತ ಅನಾಚಾರಿ, ವ್ರತಗೇಡಿ, ದುರಾಚಾರಿ.
ಇಂತೀ ದುರಾಚಾರವ ನುಡಿಯಲಾಗದು.
ಆತ ದೇವಲೋಕಕ್ಕೆ ಸಲ್ಲ, ಮೃತ್ಯುಲೋಕಕ್ಕೆ ಸಲ್ಲ.
ಆವ ಲೋಕಕ್ಕೆಯೂ ಸಲ್ಲ.
ಇಂತಪ್ಪ ಪಂಚಮಹಾಪಾತಕನ ಭಕ್ತನೆಂದೆನಗೆ ತೋರದಿರಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಇಂತಪ್ಪ ಭಕ್ತನ ಪರಿಯ, ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./11
ಜಂಗಮಪಾದೋದಕವ ಮಜ್ಜನ ಮಾಡಿ,
ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ,
ಶಿವ ಕಲ್ಯಾಣವ ಮಾಡಿದ.
ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ.
ಲಿಂಗೈಕ್ಯ ಚೈತನ್ಯ ಪ್ರಸಾದವೆಂದು,
ತನಗೆ ಚೈತನ್ಯ ಜಂಗಮವೆಂದು,
ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.
ಜಂಗಮಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು
ಬಸವಣ್ಣನ ಸಾರಿದೆ.
ಬಸವಣ್ಣ ಮಾಡಿದುಪಕಾರವನೇನ ಹೇಳುವೆನಯ್ಯಾ.
ಒಡೆಯರೊಕ್ಕುದ ತಾ ಸವಿದು,
ತನ್ನೊಕ್ಕುದ ಮಿಕ್ಕುದ ತನ್ನ ಗೃಹಚರರುಂಡು,
ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕ್ಕಾಯಿತ್ತು.
ಆ ಪ್ರಸಾದ ಗುಂಡವೆ ಗೃಹವಾಯಿತ್ತು.
ಆ ಪ್ರಸಾದ [ಅರ್ಪಿಸು]ತ್ತವೆ ಎನ್ನ ಲಿಂಗಕ್ಕೆ ಪೂಜೆ.
ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧಪ್ರಸಾದವಾಯಿತ್ತು.
ಮನ ಸಿದ್ಧಪ್ರಸಾದವಾಯಿತ್ತು.
ಗುರುವಾಜ್ಞೆವಿಡಿದೆನಾಗಿ ಆನೆ ಪ್ರಸಿದ್ಧಪ್ರಸಾದವಾದೆನಯ್ಯಾ.
ಇನ್ನು ಬದುಕಿದೆನು ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣ ಸಿದ್ಧರಾಮಯ್ಯನ ಕಂಡು,
ಶಿಖಿಕರ್ಪುರ ಯೋಗದಂತಾದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /12
ಜಯ ಜಯ ತ್ರಾಹಿ ತ್ರಾಹಿ,
ಗರ್ಭದೊಳಗಣ ಶಿಶು ನವಮಾಸವ ಹಾರಿಕೊಂಡಿರ್ದಂದಿರ್ದೆನಯ್ಯಾ.
ಎನ್ನ ಜನ್ಮ ಸಫಲವಾಯಿತ್ತಯ್ಯಾ.
ಶುದ್ಧಸಿದ್ಧ ಪ್ರಸಿದ್ದ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಬಸವರಾಜದೇವರ ದಯದಿಂದ
ಪ್ರಭುದೇವರ ಶ್ರೀಮೂರ್ತಿಯಂ ಕಂಡು ಬದುಕಿದೆನು.
ನಿಮ್ಮ ಧರ್ಮ ನಿಮ್ಮ ಧರ್ಮ
ಶರಣು ಶರಣಾಥರ್ಿ ಸಕಲಪುರಾತರಿಗೆ./13
ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ,
ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ,
ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು,
ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು,
ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ
ಮಹಾಜ್ಞಾನ ಜಂಗಮವ ನೋಡಿರಯ್ಯ.
ಅದೆಂತೆಂದಡೆ: ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ
ನಿರ್ದೆಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ ||
ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./14
ತನುವಿನೊಳಗೆ ತನು ಸವೆಯದೆ, ಮನದೊಳಗೆ ಮನ ಸವೆಯದೆ,
ಧನದೊಳಗೆ ಧನ ಸವೆಯದೆ, ಅನುಮಾನವರಿತು ಘನವ ಬೆರೆಸದೆ,
ತಮತಮಗೆ ಅರಿದೆಹೆನೆಂಬವರಿಗೆಲ್ಲರಿಗೆಯೂ
ಕನಸಿನ ಲಿಂಗತನುವ ಗುರುವಿನಲ್ಲಿ ಸವೆದು,
ಮನವ ಲಿಂಗದಲ್ಲಿ ಸವೆದು, ಧನವ ಜಂಗಮದಲ್ಲಿ ಸವೆದು,
ಅನುಮಾನವರಿತು ಘನವ ಬೆರಸಬಲ್ಲ ಶರಣನ ಪರಿ ಬೇರೆ.
ತನುವ ವಿವರಿಸಿ ನೋಡಿದಡೆ ತನು ಶುದ್ಧವಲ್ಲ.
ಮನವ ವಿವರಿಸಿ ನೋಡಿದಡೆ ಮನ ಶುದ್ಧವಲ್ಲ.
ಧನವ ವಿವರಿಸಿ ನೋಡಿದಡೆ ಧನ ಶುದ್ಧವಲ್ಲ.
ಇಂತೀ ತ್ರಿವಿಧವನು ವಿಚಾರಿಸಿ ನೋಡಿದಡೆ,
ಆವುದೂ ಶುದ್ಧವಲ್ಲ ಕೇಳಿರಣ್ಣಾ.
ಈ ತ್ರಿವಿಧವನು ತ್ರಿವಿಧಕ್ಕೆ ಇತ್ತಡೆ, ತ್ರಿವಿಧ ಶುದ್ಧವಾಯಿತ್ತು.
ಇಂತೀ ತ್ರಿವಿಧವನು ತ್ರಿವಿಧದಲ್ಲಿ ಸವೆಸುವ ಭಕ್ತನ
ತ್ರಿವಿಧ ಪ್ರಸಾದವನು ತ್ರಿಕಾಲದಲ್ಲಿ ನಾನು ಕೊಂಡು ಬದುಕಿದೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ತ್ರಿವಿಧ ಭಕ್ತನ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./15
ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು.
ಆ ಪಟ್ಟಣ ಸುತ್ತಿ ಮುತ್ತಿಕೊಂಡರು.
ಏಳು ಭೂದುರ್ಗಂಗಳು ಕೊಳಹೋದವು.
ಅರಮನೆಯ ಹೊಕ್ಕರು, ಹನ್ನೆರಡುಸಾವಿರ ರಾಣಿವಾಸವ ಸೆರೆ ಹಿಡಿದರು.
ಆನೆಯ ಸಾಲೆಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯ ಹೊಯ್ದರು.
ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು.
ಇಪ್ಪತ್ತೈದು ತಳವಾರರ ನಿಮರ್ೂಲಿಸಿ ಬಿಟ್ಟರು.
ಮೂವರ ಮೂಗ ಕೊಯ್ದರು, ಒಬ್ಬನ ಶೂಲಕ್ಕೆ ಹಾಕಿದರು.
ಆ ಪಟ್ಟಣದ ಲಕ್ಷ್ಮಿ ಹಾರಿತ್ತು.
ಆ ಪಟ್ಟಣದ ಪ್ರಜೆಗಳಿಗೆ ರಣಮಧ್ಯ ಮರಣವಾಯಿತ್ತು.
ಆ ರಣಭೂಮಿಯಲ್ಲಿಕಾಡುಗಿಚ್ಚೆದ್ದುರಿಯಿತ್ತು.
ಆ ಊರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ.
ಆ ಬೇತಾಳನ ಮೇಲೆ ಅಕಾಲವರುಷ ಸುರಿಯಿತ್ತು.
ಆ ವರುಷದಿಂ ಹದಿನಾಲ್ಕು ಭುವನ, ಸಚರಾಚರಂಗಳಿಗೆ
ಶಾಂತಿಯಾಯಿತ್ತು.
ಆ ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ,
ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡ ಘನ[ವ],
ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ, ನಾನೆತ್ತ ಬಲ್ಲೆನಯ್ಯಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /16
ಧರೆಯ ಮೇಲೆ ಸುಳಿವ ಅರುಹಿರಿಯರೆಲ್ಲರು
ಪರಬ್ರಹ್ಮವ ನುಡಿದು ಕೆಟ್ಟರಲ್ಲಾ.
ಈ ದುರುಳತನದ ಮಾತು ನಿಮಗೇಕೆ ಹೇಳಿರಣ್ಣಾ.
ಗುರುವಿನ ಕರುಣದಿಂದ ಗುರುಕರುಣಾಮೃತರಸವ
ಕರೆದೆರದುಂಬಾತಂಗೆ ಕುರುಹಿಲ್ಲವಣ್ಣಾ.
ಇದ ಕರೆದುಂಬಾತನು ಕುರುಹುಗೆಟ್ಟುಹೋದನು.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಇದರ ಸಕೀಲವ ಬಲ್ಲ ಶರಣನ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./17
ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ
ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ
ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ
ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು
ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ
ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /18
ಬೆಟ್ಟವ ನೆಮ್ಮಿದಡೆ ಕಟ್ಟಿಗೆಯ ತಾಳುವದು,
ಅದಾವ ಅಚ್ಚರಿ ಎನಿಸುವದು ?
ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವದು,
ಅದಾವ ಅಚ್ಚರಿ ಎಂದೆನಿಸುವದು ?
ಪರಕಾಯವ ತೊಟ್ಟಿರ್ದಲ್ಲಿ ಅಚ್ಚರಿಗೆ ಅರಿಬಿರಿದೇಕೆ ?
ನಿಮ್ಮುವ ಕಾರುಣ್ಯವನಾಗಿರ್ದಲ್ಲಿ
ಎನಗೆಲ್ಲೆಲ್ಲಿ ಸುಖವಲ್ಲಲ್ಲಿಯೂ ನೀವೆ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುದೇವಯ್ಯಾ,
ಪ್ರಭುದೇವರ ಕಾರುಣ್ಯ ಪ್ರಸಾದದಿಂದ
ಆನು ಬದುಕಿದೆನು ಕಾಣಾ, ಸಂಗನಬಸವಣ್ಣ./19
ಬೆರಸಲಿಲ್ಲದವನ ನೋಟ, ಲೇಸಿಲ್ಲದವನ ಮಾಟ,
ಕಂಗಳ ಸೂತಕ ಹರಿಯದವನ ಅಂಗದ ಕೂಟ,
ಅದೆಂದಿಗೆ ನಿಜವಪ್ಪುದು ?
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ನೀವೆ ಬಲ್ಲಿರಿ./20
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ.
ಇಂತೀ ಷಡುಸ್ಥಲಚಕ್ರವರ್ತಿಯಯ್ಯಾ ನಮ್ಮ ಚನ್ನಬಸವಣ್ಣನು.
ಷಡಕ್ಷರಂ ಸರ್ಮಮಂತ್ರಂ ಸರ್ವಾಂಚಾರಂ ಚ ಲಿಂಗಯೋ
ಷಡ್ವರ್ಗಂ ತ್ರಿವಿಧ ಏಕಂ ತಸ್ಮಾತ್ ಲಿಂಗಂತು ಪೂಜನಂ ||
ಇಂತೆಂದುದಾಗಿ, ಆಚಾರವೆ ಕಾಯ, ಆಚಾರವೆ ಪ್ರಾಣ,
ಆಚಾರವೆ ಅಂಗ, ಆಚಾರವೆ ಲಿಂಗ, ಆಚಾರವೆ ಸಂಗ.
ಇಂತಪ್ಪ ಆಚಾರಕ್ಕೆ ಆಚಾರವೆ ಪ್ರಾಣವಾಗಿರಬಲ್ಲನಲ್ಲಯ್ಯಾ
ನಮ್ಮ ಚನ್ನಬಸವಣ್ಣನು.
ಶುದ್ಧಸಿದ್ಧ ಪ್ರಸಿದ್ಧ ಪ್ರಭುವೆ ಪ್ರಸನ್ನ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣ ಚನ್ನಬಸವಣ್ಣನು ಸರ್ವಾಚಾರ ಸಂಗಸಂ[ಪ]ನ್ನನು.
ಇಂತಪ್ಪ ಚೆನ್ನಬಸವಣ್ಣನ ನಿಲವ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./21
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು.
ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು.
ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ,
ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ,
ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ,
ಬಸವಣ್ಣನ ನೆನೆವುತಿರ್ದೆನಯ್ಯಾ.
ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು.
ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು.
ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು.
ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು.
ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು.
ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು.
ಇದು ಕಾರಣ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣ ಬಸವಣ್ಣನ ನಂಬಿ,
ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./22
ಮಹಾಲಿಂಗಂ ತ್ರಯೋಲಿಂಗಂ ಷಡ್ವಿಧಂ ಚ ತಯೋಮರ್ುಖಂ
ತ್ರಿವಿಧ್ರೈಕಮುಖಂಲಿಂಗಂ ಮಹಾಲಿಂಗಂತು ದರ್ಶನಂ ||
ಇಂತೆಂದುದಾಗಿ,
ಒಂದು ಮೂರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು.
ಆ ಮೂರು ಆರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು.
ಆ ಆರು ಮೂವತ್ತಾರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು.
ಇಂತಪ್ಪ ಸರ್ವಸಂಗಪರಿತ್ಯಾಗಿಯಯ್ಯಾ ನಮ್ಮ ಬಸವಣ್ಣನು.
ಇಂತಪ್ಪ ಸರ್ವಾವಧಾನಿಯಯ್ಯಾ ನಮ್ಮ ಬಸವಣ್ಣನು.
ಇಂತಪ್ಪ ಸರ್ವಾಂಲಿಂಗಿಯಯ್ಯಾ ನಮ್ಮ ಬಸವಣ್ಣನು.
ಇಂತಪ್ಪ ಸರ್ವಕಾರಣಯುತನಯ್ಯಾ ನಮ್ಮ ಬಸವಣ್ಣನು.
ಇಂತಪ್ಪ ಸರ್ವನಿರ್ವಾಣಿಯಯ್ಯಾ ನಮ್ಮ ಬಸವಣ್ಣನು.
ಇಂತಪ್ಪ ಬಸವಣ್ಣನ ಮಹಾಮಹಿಮೆಯನು ನೀವೆ ಬಲ್ಲಿರಿ.
ಅಸಂಖ್ಯಾತ ಪುರಾತರು ಪ್ರಭುದೇವರು ಮುಖ್ಯವಾದ
ಮಹಾಮಹಿಮರ ನಿಲುವಿನ ಶ್ರೀಚರಣಕ್ಕೆ
ನಾನು ಶರಣಾಥರ್ಿ ಶರಣಾಥರ್ಿ ಎಂದೆನುತ್ತ ಶಬ್ದಮುಗ್ಧ ಮೂಗನಾದೆ.
ಉರಿಯುಂಡ ಕರ್ಪುರದಂತೆ, ನಿಮ್ಮ ಶ್ರೀಚರಣವ ನಾನೆಯ್ದೆನಯ್ಯಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣ ಬಸವಣ್ಣನ ಕರುಣ ಪ್ರಸಾದವ ಕೊಂಡು
ನಾನು ಬಸವಣ್ಣನ ಮುಂದೆ ಬಯಲಾಗಿ ಹೋದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./23
ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ.
ಇವರಿಬ್ಬರ ಸಂಗಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯಾ.
ಸರ್ವಾಂಗಸಾಹಿತ್ಯ ನಾನು ಹುಟ್ಟಿದ ಬಳಿಕ.
ತಂದೆ ತಾಯಿಗಳಿಬ್ಬರು ಲಿಂಗವೆಂಬ ಹೆಣ್ಣ ತಂದು,
ಎನ್ನ ಕೊರಳಲ್ಲಿ ಕಟ್ಟಿ ಮದುವೆಯ ಮಾಡಿದರಯ್ಯಾ.
ಆ ಹೆಣ್ಣಿನ ಕೈಹಿಡಿದು ನಾನು ಬದುಕಿದೆನು.
ಆ ಹೆಣ್ಣಿನ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದನಯ್ಯಾ.
ಆ ಮಗ ಹುಟ್ಟಿದ ಮುನ್ನವೆ ಎನಗೆ ಮರಣವಾಯಿತ್ತು.
ಲಿಂಗವೆಂಬ ಹೆಂಡತಿ ಮುಂಡೆಯಾದಳು.
ತಂದೆ ತಾಯಿಗಳಿವರಿಬ್ಬರೂ ನನ್ನ ಒಂದಾಗಿ ಅಡಗಿ ಹೋದರು.
ಇನ್ನು ಮುನ್ನಿನ ಪರಿ ಎಂತುಟಲ್ಲವಾಗಿ ನಾನು ಬದುಕಿದೆ ಕಾಣಾ,
ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನ ಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /24
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ,
ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ,
ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ,
ದುರ್ಗುಣ ದುರಾಚಾರದಲ್ಲಿ ನಡೆದು,
ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ.
ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ.
ಇದ ನಮ್ಮ ಶಿವಶರಣರು ಮೆಚ್ಚರು.
ಲಿಂಗವಂತನ ಪರಿ ಬೇರೆ ಕಾಣಿರೆ.
ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ,
ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಕರಣ ನಿಮರ್ುಕ್ತನ
ಸರ್ವನಿರ್ವಾಣಿಕಾಯೆಂಬೆನು.
ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ,
ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ,
ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./25
ಲಿಂಗವಂತನ ನಿಲವು ಸಂಗಸೂತಕಿಯಲ್ಲ.
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./26
ಶಿಷ್ಯನೆಂಬ ಧರೆಯ ಮೇಲೆ, ಶ್ರೀಗುರುವೆಂಬ ಬೀಜವ ಬಿತ್ತಿ,
ಅರಿವೆಂಬ ಗೊಬ್ಬರನಿಕ್ಕಿ, ಜ್ಞಾನವೆಂಬ ಉದಕವನೆರೆಯಲಿಕೆ,
ಲಿಂಗವೆಂಬ ಆಕಾರ ಮೊಳೆದೋರಿತ್ತು ಕಾಣಿರೆ.
ಜಂಗಮವೆಂಬ ಸಸಿ ಬಲಿದು ವೃಕ್ಷ ಪಲ್ಲವಿಸಿತ್ತು.
ಸುಜ್ಞಾನವೆಂಬ ನನೆದೋರಿ ಬಿರಿಮುಗುಳಾಯಿತ್ತು.
ಮಹಾಜ್ಞಾನವೆಂಬ ಪುಷ್ಪ ವಿಕಸಿತವಾಯಿತ್ತು.
ಖಂಡಿತವೆಂಬ ಮುಗುಳಾಯಿತ್ತು, ಅಖಂಡಿತವೆಂಬ ಕಾಯಿ ಬಲಿಯಿತ್ತು.
ಪರಮಜ್ಞಾನವೆಂಬ ಹಣ್ಣಾಯಿತ್ತು.
ಆ ಹಣ್ಣು ಬಲಿದು ತೊಟ್ಟುಬಿಟ್ಟು, ಬಟ್ಟಬಯಲಲ್ಲಿ ಬಿದ್ದಿತ್ತು.
ಆ ಹಣ್ಣು ಕಂಡು ನಾನು ಇದೆಲ್ಲಿಯದೆಂದು ವಿಚಾರವ ಮಾಡಲ್ಕೆ,
ಬಿತ್ತಿದವರಾರೆಂದು ಹೇಳುವರಿಲ್ಲ.
ಬಿತ್ತಿದವನ ಸೊಮ್ಮ ನಾವು ಕೇಳಬಾರದೆಂದು
ಆ ಹಣ್ಣು ಕೊಂಡು, ನಾನು ಬಿತ್ತಿದಾತನನರಸಿಕೊಂಡು ಹೋಗಲ್ಕೆ,
ನಾನೆತ್ತ ಹೋದೆನೆಂದರಿಯೆನಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಬಿತ್ತಿದಾತನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./27
ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ,
ಆಚಾರದ ನೆಲೆಯನರಿಯದೆ, ಬರಿದೆ ವ್ರತ ಶೀಲಾಚಾರವೆಂದೆಂಬಿರಿ.
ವ್ರತಶೀಲಾಚಾರದ ಸ್ವರೂಪವನರಿಯದ,
ಅದರಾಚರಣೆಯನರಿಯದ ಶೀಲವಂತರು ನೀವು ಕೇಳಿ ಭೋ.
ತನುವಿನ [ಗುಣವ] ಮನದಲ್ಲಿಗೆ ತಂದು, ಆ ಮನದ ಅನುವನರಿದು,
ಶುಚಿ ಶೀಲ ಉಚ್ಯತೆಯೆಂದುದಾಗಿ, ಸಚ್ಚರಿತ್ರವನುಳ್ಳ ಆಚಾರವೆ ಸ್ವರೂಪವಾದ
ಘನಲಿಂಗವ ಬೆರಸಬಲ್ಲಡೆ ಅದು ಶೀಲ.
ಮನದ ತನುವ ಮಹಾಘನದರುವಿನಲ್ಲಿಗೆ ತಂದು
ಅರಿವಿನ ಆಚಾರವೆ ಗುರುಲಿಂಗಜಂಗಮ ಪ್ರಸಾದ ಪಾದತೀರ್ಥ
ಭಕ್ತಿ ಎಂದರಿದು, ಅವರ ಸ್ವರೂಪವನರಿದು, ಆಚರಿಸಿದ ಘನ ಶರಣರ
ಬೆರಸಬಲ್ಲಡೆ ಅದು ವ್ರತ.
ಸದಾಚಾರ ನಿಯತಾಚಾರ,
ಭಕ್ತ್ಯಾಚಾರ ಶಿವಾಚಾರ ಸಮಯಾಚಾರ ಗಣಾಚಾರವೆಂಬವುಗಳ
ಸ್ವರೂಪವನರಿದು ಆಚರಿಸಬಲ್ಲಡೆ ಅದು ಆಚಾರ.
ವ್ರತ ಶೀಲಾಚಾರದ ಅನುವನರಿಯದೆ,
ಘನ ಶರಣರ ಬೆರಸದೆ,
ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸದೆ
ಬರಿದೆ ಅನುವಿನ ತನುವಿನ ಕೊನೆಯ ಮೊನೆಯ ಮೇಲಣ ಜ್ಯೋತಿಯ
ತಮ ತಮಗೆ ಅರಿದೆಹೆನೆಂಬವರೆಲ್ಲರೂ
ಅನುಮಾವನನರಿಯದೆ ಕೆಟ್ಟರು ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ.
ನಿಮ್ಮ ಶರಣರ ಅನುವನರಿದು, ಘನವ ಬೆರಸಬಲ್ಲ
ಶರಣ ಸಂಗನಬಸವಣ್ಣನು, ಇಂತಪ್ಪ ಮಹಾಲಿಂಗವಂತರ
ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ ?
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /28
ಶ್ರೀಗುರು ಶಿಷ್ಯಂಗೆ ಕರುಣದಿಂದ ಉಪದೇಶವ ಮಾಡಬೇಕೆಂದು ಬಂದು,
ಮೂರ್ತಿಗೊಂಡು, ಆ ಶಿಷ್ಯನ ಪೂರ್ವಜನ್ಮವಂ ಕಳೆದು,
ಪುನಜಾರ್ತನೆಂದೆನಿಸಿ, ಹಸ್ತಮಸ್ತಕಸಂಯೋಗವಂ ಮಾಡಿ,
ವಿಭೂತಿಯ ಪಟ್ಟಮಂ ಕಟ್ಟಿ, ಕಿವಿಯಲ್ಲ ಕರ್ಣಮಂತ್ರಮಂ ಹೇಳಿ,
ಮಾಂಸಪಿಂಡವಂ ಕಳೆದು, ಮಂತ್ರಪಿಂಡವಂ ಮಾಡಿ,
ಸರ್ವಾಂಗದವಗುಣವಂ ಕಳೆದು,
ಆ ಶಿಷ್ಯಂಗೆ ಉಪದೇಶವ ಮಾಡಿದ ಪರಿಯೆಂತೆಂದಡೆ: ಆದಿಲಿಂಗ ಅನಾದಿಲಿಂಗ ಪರುಷಲಿಂಗ ಅಮೃತಲಿಂಗ
ಅಗೋಚರಲಿಂಗ ಅಪ್ರತಿಮಲಿಂಗ ಅನಾಮಯಲಿಂಗ
ಅಭೇದ್ಯಭೇದಕಲಿಂಗ, ಅಸಾಧ್ಯಸಾಧಕಲಿಂಗ,
ಇಂತಪ್ಪ ಲಿಂಗಾಕಿಂತವ ಕೊಂಡು, ಒಂದು ಇಷ್ಟಲಿಂಗವಂ ಮಾಡಿ,
ಆ ಶಿಷ್ಯನ ಹಸ್ತದಲ್ಲಿ ನಿಕ್ಷೇಪವಂ ಮಾಡಿದನು ಮಹಾಶ್ರೀಗುರು.
ಆ ಲಿಂಗ ಬಂದು, ಆ ಶಿಷ್ಯನ ಅಂಗವ ಸೋಂಕವ ಮುನ್ನವೆ,
ಆ ಲಿಂಗ ಆ ಶಿಷ್ಯನನವಗ್ರಹಿಸಿತ್ತಯ್ಯ.
ಆ ಶಿಷ್ಯನು ಆ ಗುರುವಿನ ಹಸ್ತದಲ್ಲಿ ಉಪದೇಶವಾಗದ ಮುನ್ನವೆ,
ಆ ಶ್ರೀಗುರುವನು ಆ ಶಿಷ್ಯನವಗಹ್ರಿಸಿಕೊಂಡ ನೋಡಿರಯ್ಯಾ.
ಅಂಗಸಂಗಿಗಳು ಹೋಗಿ ಲಿಂಗಂಸಂಗಿಗಳ ಸಂಗವ ಮಾಡಿಹೆನೆಂದು ಹೋದಡೆ,
ಅಂಗಸಂಗಿಗಳ ಲಿಂಗಸಂಗಿಗಳು ಅವಗ್ರಹಿಸಿಕೊಂಡರು ನೋಡಿರಯ್ಯಾ.
ಪರಿಮಳವುಳ್ಳ ಪುಷ್ಪಕ್ಕೆ ತುಂಬಿ ಬಂದು,
ಪರಿಮಳವ ಕೊಂಡೆಹೆನೆಂದು ಹೋದಡೆ,
ಆ ಪರಿಮಳವುಳ್ಳ ಪುಷ್ಪ ಆ ತುಂಬಿಯನವಗ್ರಹಿಸಿಕೊಂಡಿತ್ತು ನೋಡಿರಯ್ಯಾ.
ಅನಲ ಸಂಗವ ವಾಯು ಮಾಡಿಹೆನೆಂದು ಹೋದಡೆ,
ಆ ಅನಲನು ವಾಯುವನವಗ್ರಹಿಸಿಕೊಂಡಿತ್ತು ನೋಡಿರಯ್ಯಾ.
ರೂಪು ದರ್ಪಣವ ರೂಹಿಸಿಹೆನೆಂದು ಹೋದಡೆ,
ಆ ದರ್ಪಣ ಆ ರೂಪನವಗ್ರಹಿಸಿಕೊಂಡಿತ್ತು ನೋಡಿರಯ್ಯಾ.
ಕಂಗಳು ಕರಸ್ಥಲದ ಲಿಂಗವ ನೋಡಿಹೆನೆಂದು ಹೋದಡೆ
ಆ ಕರಸ್ಥಲದ ಲಿಂಗ ಆ ಕಂಗಳ ನುಂಗಿದ ಪರಿಯ ನೋಡಿರಯ್ಯಾ.
ಸರ್ವಾಂಗಸಾಹಿತ್ಯ ಮಹಾಲಿಂಗೈಕ್ಯರ ಸಂಗವ,
ನಾನು ಮಾಡಿಹೆನೆಂದು ಹೋದಡೆ,
ಉರಿಯುಂಡ ಕರ್ಪುರದಂತೆ ಎನ್ನನವಗ್ರಹಿಸಿಕೊಂಡರು ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಶರಣರ ನಾನು ನಂಬಿ ಕೆಟ್ಟು, ಬಟ್ಟಬಯಲಾಗಿ ಹೋದೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./29
ಷಡ್ವಿಧಲಿಂಗಾಂಗ ಸಕೀಲವನರಿಯದ ಜಡಜೀವಿಗೆ
ದಶವಿಧಪಾದೋದಕ ಏಕಾದಶಪ್ರಸಾದದ ಸಕೀಲಸಂಬಂಧವ
ಹೇಳುವನೊಬ್ಬ, ಪ್ರಸಾದದ್ರೋಹಿ ನೋಡಾ,
ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತ ಚನ್ನಮಲ್ಲಿಕಾರ್ಜುನದೇವಯ್ಯ./30
ಸಂಸಾರವೆಂಬ ಸಾಗರವ ದಾಂಟುವಡೆ,
ಅರಿವೆಂಬ ಹರುಗೋಲನಿಕ್ಕಿ ಜ್ಞಾನವೆಂಬ ಅಂಬಿಗ
ಹರುಗೋಲದಲ್ಲಿ ಕುಳ್ಳಿರ್ದು,
ಸುಜ್ಞಾನವೆಂಬ ಘಾತದ ಗಳೆಯ ಪಿಡಿದು,
ನಾನೀ ಹೊಳೆಯ ಕಂಡು, ಅಂಬಿಗನು ಕೇಳಿದಡೆ,
ನಾನು ಹಾಸಿಕೊಟ್ಟೆಹೆನೆಂದನು.
ನಾನು ನಿನ್ನ ನಂಬಿ ಹರುಗೋಲನೇರಿದೆನು ಕಾಣಾ, ಅಂಬಿಗರಣ್ಣಾಯೆಂದು
ನಾನು ಹರುಗೋಲದಲ್ಲಿ ಕುಳ್ಳಿರ್ದು ಹೊಳೆಯೊಳಗೆ ಹೋಗಲಿಕೆ,
ಕಾಮವೆಂಬ ಕೊರಡು ಅಡ್ಡಬಿದ್ದಿತ್ತು.
ಕ್ರೋಧವೆಂಬ ಸುಳುಹಿನೊಳಗೆ
ಅಹಂಕಾರವೆಂಬ ಮೀನು ಬಂದು ನಿಂದಿತ್ತು.
ಮಾಯೆಯೆಂಬ ಮೊಸಳೆ ಬಂದು ಬಾಯಬಿಡುತ್ತಿದ್ದಿತ್ತು.
ಮೋಹವೆಂಬ ನೊರೆತೆರೆಗಳು ಹೆಚ್ಚಿ ಬರುತ್ತಿದ್ದಿತ್ತು.
ಲೋಭವೆಂಬ ಕಾಳ್ಗಡಲು ಎಳೆದೊಯ್ವುತ್ತಿದ್ದಿತ್ತು.
ಮರವೆಂಬ ಮೊರಹು ನೂಕುತ್ತಲಿದ್ದಿತ್ತು.
ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು.
ಇವೆಲ್ಲವನೂ ಪರಿಹರಿಸಿ,
ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು.
ಈ ಹೊಳೆಯ ದಾಂಟಿಸಿದ ಕೂಲಿಯ ನನ್ನ ಬೇಡಿದಡೆ,
ಕೂಲಿಯ ಕೊಡುವಡೇನೂ ಇಲ್ಲೆಂದಡೆ,
ಕೈಸೆರೆಯಾಗಿ ಎನ್ನನೆಳದೊಯ್ದನಯ್ಯಾ.
ಅರುವೆಯ ಕೊಟ್ಟ ಕೂಲಿಗೆ ತನ್ನ ಕರುವ ಕಾಯಿಸಿಕೊಂಡನಯ್ಯಾ.
ಅರಿಯದೆ ಹರುಗೋಲವ ನೆರೆತೊರೆಯ ದಾಂಟಿಸಿದ ಕೂಲಿಗೆ
ಕರುವ ಕಾಯಿದೆನು ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. /31
ಸರ್ಪನ ಹೆಡೆಯ ಮೇಲೆಪ್ಪತ್ತೇಳುಲೋಕವ ಕಂಡೆನಯ್ಯಾ.
ಎಪ್ಪತ್ತೇಳುಲೋಕದೊಳಗಿಪ್ಪ
ಎಪ್ಪತ್ತೇಳು ಕರ್ಪುರದ ಗಿರಿಗಳ ಕಂಡೆನಯ್ಯಾ.
ಎಪ್ಪತ್ತೇಳು ಕರ್ಪುರದ ಗಿರಿಗಳ ಮೇಲಿಪ್ಪ
ಎಪ್ಪತ್ತೇಳು ಉರಿಯ ಕಂಬವ ಕಂಡೆನಯ್ಯಾ.
ಆ ಎಪ್ಪತ್ತೇಳು ಉರಿಯ ಕಂಬದ ಮೇಲಿಪ್ಪ
ಎಪ್ಪತ್ತೇಳು ಅರಗಿನ ಪುತ್ಥಳಿಯ ಕಂಡೆನಯ್ಯಾ.
ಆ ಎಪ್ಪತ್ತೇಳು ಅರಗಿನ ಪುತ್ಥಳಿಯು ಕರಗಿಹೋದವು.
ಆ ಎಪ್ಪತ್ತೇಳು ಕರ್ಪುರದ ಗಿರಿಗಳೆಲ್ಲಾ ಉರಿದುಹೋದವು.
ಆ ಎಪ್ಪತ್ತೇಳುಲೋಕವೆಲ್ಲವು ಹಾಳಾಗಿಹೋದವು.
ಆ ಸರ್ಪ ಬೆಂದು ಸತ್ತುಹೋಯಿತ್ತು.
ಇನ್ನು ನಿಃಪತಿ ನಿರಾಳವೆಂಬ ನಿಜ ಒಳಕೊಂಡ ಬಳಿಕ,
ನಾನೆತ್ತ ಹೋದೆನೆಂದರಿಯೆನಯ್ಯಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಸರ್ಪನ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./32
ಸಿಂಬೆಗೆ ರಂಭೆತನವುಂಟೆ ?
ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ ?
ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ ?
ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ,
ನೀ ಬಂದೆಯಲ್ಲಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಪ್ರಭುದೇವರ ಕಾರುಣ್ಯದಿಂದ ಬದುಕಿದೆ./33
ಹೃದಯದ ಕೊನೆಯ ಮೇಲೆ ಬಂದ ಪರಿಣಾಮದ ತೃಪ್ತಿಯ ಸುಖವ,
ಹೃದಯದ ಮನದ ಕೊನೆಯ ಮೊನೆಯ ಮೇಲೆ,
ಮಹಾಲಿಂಗಕ್ಕೆ ಸಮರ್ಪಿಸಬೇಕು.
ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ,
ಅವಧಾನದ ಶ್ರೋತ್ರದ ಕೊನೆಯ ಮೊನೆಯ ಮೇಲೆ,
ಪ್ರಸಾದಲಿಂಗಕ್ಕೆ ಅರ್ಪಿಸಬೇಕು.
ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣ ಸುರೂಪಿನ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಶಿವಲಿಂಗಕ್ಕೆ ಸಮರ್ಪಿಸಬೇಕು.
ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಆಚಾರಲಿಂಗಕ್ಕೆ ಅರ್ಪಿಸಬೇಕು.
ಜಿಹ್ವೆಯ ಕೊನೆಯಲ್ಲಿ ಬಂದ ಸುಸ್ವಾದುವಿನ ಪ್ರಸಾದದ ರುಚಿಯ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಗುರುಲಿಂಗಕ್ಕೆ ಸಮರ್ಪಿಸಬೇಕು.
ತ್ವಕ್ಕಿನ ಕೊನೆಯಲ್ಲಿ ಬಂದ ಸುಪರ್ಶನದ ಸುಖದ ಪರಿಣಾಮವ,
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಜಂಗಮಲಿಂಗಕ್ಕೆ ಸಮರ್ಪಿಸಬೇಕು.
ಮನದಲ್ಲಿ ತಟ್ಟುವ ಮುಟ್ಟುವ ತಾಗುನಿರೋಧವೆಲ್ಲವನೂ
ಅವಧಾನದ ಮನದ ಕೊನೆಯ ಮೊನೆಯ ಮೇಲೆ,
ಮಹಾಘನಲಿಂಗಕ್ಕೆ ಸಮರ್ಪಿಸಬೇಕು.
ಈ ಕ್ರಮವನರಿದು ಸರ್ವಾವಧಾನಿಯಾಗಿ,
ಗುರುಲಿಂಗಜಂಗಮಮುಖದಲ್ಲಿ ತನುಮನಧನವನರ್ಪಿಸಿ,
ಆ ಶುದ್ಧಸಿದ್ಧಪ್ರಸಿದ್ಧಪ್ರಸಾದದ ರೂಪುರುಚಿತೃಪ್ತಿಯ
ಆದಿಮಧ್ಯಾಂತವನರಿದು, ಸಾವಧಾನಭಕ್ತಿಯಿಂ
ಇಷ್ಟಪ್ರಾಣಭಾವಲಿಂಗಕ್ಕರ್ಪಿಸಿ, ಮಹಾಪ್ರಸಾದಿಯಾಗಿಪ್ಪಾತ,
ನಮ್ಮ ಚನ್ನಬಸವಣ್ಣ ಕಾಣಿರಯ್ಯಗಳಿರಾ.
ಈ ಪ್ರಕಾರದ ಅವಧಾನ ಮನದ ಕೊನೆಯ ಮೊನೆಯ ಮೇಲೆ,
ಸರ್ವಾರ್ಪಿತಕ್ರಮವನರಿದು ಪ್ರಸಾದಭೋಗಿಯಾಗಿಪ್ಪಾತನು,
ನಮ್ಮ ಸಂಗನಬಸವಣ್ಣನು ಕೇಳಿರಣ್ಣಗಳಿರಾ.
ಈ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ಮತ್ತೀ ಕ್ರಮವನರಿದು, ಅರ್ಪಿತಮುಖವನರಿದು ಅರ್ಪಿಸಿ,
ತೃಪ್ತಿಯನೈದಬಲ್ಲ ಶರಣರ ಮಹಾತ್ಮೆಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ./34
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ
ಅಣ್ಣಗಳು ನೀವು ಕೇಳಿರೆ.
ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ.
ಈ ಹೆಣ್ಣಿನ ಸಂಗ ನಿಮಗೇತಕಣ್ಣಾ.
ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು.
ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ,
ತನ್ನಲ್ಲಿ ತಾನೆ ಕಾಣಬಹುದು.
ತನ್ನ ತಾನರಿಲ್ಲದೆ ಇದಿರನರಿಯಬಾರದು.
ಇದಿರನರಿದಲ್ಲದೆ ಪರವನರಿಯಬಾರದು.
ಪರವನರಿದಲ್ಲದೆ ಸ್ವಯವನರಿಯಬಾರದು.
ಸ್ವಯವನರಿದಲ್ಲದೆ ಅರಿವು ತಲೆದೋರದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
ಮಾಯ ಹಿಂಗಿದಲ್ಲದೆ ಮದವಳಿಯದು.
ಮದವಳಿದಲ್ಲದೆ ಮತ್ಸರ ಹೆರೆಸಾರದು.
ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು.
ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು.
ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು.
ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು.
ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು.
ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು.
ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು.
ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು.
ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು.
ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು.
ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು.
ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು.
ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ.
ಇಂತು ಸಾಯದೆ ನೋಯದೆ ಸ್ವಯವನರಿದು,
ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು.
ಅವ ತಾನೆ ಘನಲಿಂಗವು.
ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ
ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು.
ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು,
ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ
ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು
ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ,
ಸಹಜ ನಿಜನಿತ್ಯವನರಿದು ಹೋದ ಶರಣರ
ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ/35