Categories
ಶರಣರು / Sharanaru

ಮರುಳಶಂಕರದೇವ

ಅಂಕಿತ: ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಮಲ್ಲಿಕಾರ್ಜುನದೇವ

ಶರಣರ ಕೀರ್ತಿವಾರ್ತೆ ಕೇಳಿ ಅಫಘಾನಿಸ್ಥಾನ (ಬರ್ಬರದೇಶದ ಕಣ್ಪತ್ತೂರು ಗ್ರಾಮ)ದಿಂದ ಕಲ್ಯಾಣಕ್ಕೆ ಬಂದವನು. ಬಸವಣ್ಣನವರ ಮಹಾಮನೆಯಲ್ಲಿ ಗುಪ್ತಭಕ್ತನಾಗಿ ಹನ್ನೆರಡು ವರ್ಷವಿದ್ದ ಈತನನ್ನು ಪ್ತಭುದೇವರು ಗುರುತಿಸಿ, ಶರಣರಿಗೆ ಪರಿಚಯಿಸಿದರೆಂದು ಐತಿಹ್ಯವಿದೆ. ಶೂನ್ಯಸಂಪಾದನೆಯಲ್ಲಿ ಇದು ಉಕ್ತವಾಗಿದೆ.
ಪ್ರಸಾದಿಸ್ಥಲದಲ್ಲಿದ್ದ ಮರುಳಶಂಕರದೇವ ‘ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಮಲ್ಲಿಕಾರ್ಜುನ’ ಅಂಕಿತದಲ್ಲಿ ೩೫ ವಚನಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆತನ ವ್ಯಕ್ತಿ ವೈಶಿಷ್ಟ್ಯವೆನಿಸಿದ ಪ್ರಸಾದತತ್ವದ ಪ್ರತಿಪಾದನೆಗೆ ಆದ್ಯತೆ ದೊರೆತಿದೆ. ಜೊತೆಗೆ ಬಸವಾದಿ ಶರಣರ ಸ್ತುತಿ, ಲಿಂಗವಂತರ ನಿಲುವು, ಮಹಾಲಿಂಗೈಕ್ಯದ ಸ್ವರೂಪ, ಶೀಲ, ಚಾರಿತ್ರ್ಯಗಳ ಬೋಧೆ ಎಡೆಪಡೆದಿವೆ. ಶರಣರಲ್ಲಿ ವಿಶೇಷವಾಗಿ ತೋರುವ ‘ಶರನಸತಿ ಲಿಂಗಪತಿ’ ಭಾವವು ಇವನಲ್ಲಿ ‘ಶರಣಪತಿ ಲಿಂಗಪತಿ’ಯಾಗಿದ್ದು ಸೂಫಿ ಪಂಥದ ಪ್ರಭಾವವನ್ನು ಸೂಚಿಸುತ್ತದೆ.

ವಚನಗಳು ದೀರ್ಘವಾಗಿವೆ. ಪ್ರತಿಯೊಂದು ವಚನವೂ ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ, ಎಂಬುದರೊಂದಿಗೆ ಮುಕ್ತಾಯಗೊಳ್ಳುತ್ತವೆ. ಸಮಕಾಲೀನ ಶರಣರ ಉಲ್ಲೇಖ ವಚನಗಳಲ್ಲಿದೆ. ರೂಪಕ ನಿರ್ಮಾಣ ಪ್ರತಿಭೆ ಇವನಲ್ಲಿನ ವಿಶೇಷ ಗುಣ ಮಹಾಲಿಂಗೈಕ್ಯ, ಸದ್ಭಕ್ತ, ಶರಣ, ಲಿಂಗವಂತರ ನಿಲುವು, ಶೀಲ, ಆಚಾರಗಳ ಪ್ರತಿಪಾದನೆ ಇವನ ವಚನಗಳಲ್ಲಿವೆ. ಬಸವಣ್ಣನ ಹಿರಿಮೆ ಕೇಳಿ ಅಫಘಾನಿಸ್ಥಾನದಿಂದ ಈತ ಬಂದನೆಂದು ಹೇಳಲಾಗಿದೆ.