Categories
ವಚನಗಳು / Vachanagalu

ಮೆರೆಮಿಂಡಯ್ಯ ವಚನಗಳು

ಅಂಗದಲ್ಲಿ ಕಟ್ಟಿದ ವಸ್ತ್ರವ ಬಿಟ್ಟು ನೋಡಲಾಗಿ,
ಲಿಂಗದ ಕುರುಹು ಇಲ್ಲದಿರೆ,
ಇದೇನು ಅಂಗ ನಾಸ್ತಿಯಾದೆ, ಐಘಟವ ಬಿಟ್ಟು ಘಟ ನಾಸ್ತಿಯಾದೆ
ಎಂಬುದಕ್ಕೆ ಮೊದಲೇ ಅಂಗ ಬಯಲಾಯಿತ್ತು,
[ಐಘಟದೂರ] ರಾಮೇಶ್ವರಲಿಂಗದಲ್ಲಿ./1
ಅಂಗದಲ್ಲಿದ್ದು ಕೈಗೆ ಬಂದೆ.
ಕೈಯಿಂದ ಮನಕ್ಕೇಕೆ ಬಾರೆಯಯ್ಯಾ ?
ನಾ ಹಾಡಿ ನೀ ಕೇಳಿ, ಬಾಯಿ ಕಿವಿ ನೋವಿಲ್ಲವೆ ಅಯ್ಯಾ?
ನೀ ಸಾವ ದಿನವಿಲ್ಲ, ನಾನುಳಿವ ದಿನವಿಲ್ಲ.
ನಿನ್ನಂಗವಡಗದು, ಎನ್ನ ಮನವುಡುಗದು.
ಕ್ರೀಯೆಂಬ ಹಾವಸೆಯಲ್ಲಿ ಸಿಕ್ಕಿ,
ಮೇಲನರಿಯದೆ ತೊಳಲುತ್ತೈದೇನೆ.
ಐಘಟಕ್ಕೆ ಠಾವ ಹೇಳಾ, ಐಘಟದೂರ ರಾಮೇಶ್ವರಲಿಂಗವೆ./2
ಅಂಗಲಿಂಗಸಂಬಂಧದಿರವು,
ಬೀಜವೊಡೆದು, ಮೊಳೆದೋರುವಂತೆ,
ಕುಸುಮ ಬಲಿದು, ದೆಸೆಗೆ ವಾಸನೆ ಪಸರಿಸುವಂತೆ,
ಘನಲಿಂಗ ಘಟ, ಕುರುಹಿನಲ್ಲಿ ನಿಜದೋರುತ್ತದೆ.
ಐಘಟದೂರ ರಾಮೇಶ್ವರಲಿಂಗ ಮೂರ್ತಿ, ಅಮೂರ್ತಿ ಆಗುತ್ತದೆ./3
ಅಂಗವ ಕಳೆದು ನಿಂದ ವಿಹಂಗವೈರಿಯಂತೆ,
ಅಂಗಕ್ಕೆ ಅಸು ಹೊರತೆಯಾಗಿ ನಿಂದುದು.
ಅದರಂಗ ಶುದ್ಧ, ಅದರಂದವಿರಬೇಕು.
ತ್ರಿವಿಧವ ಹಿಡಿದ ಚಂದ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./4
ಅಂಬುಜಾತ ದ್ವಾರವಳಿವೆಳವಾದಡೆ,
ನಾದಕ್ಕೆ ಸಿಕ್ಕುಂಟೆ ಅಯ್ಯಾ?
ಶರೀರ ಸಂಪದದಲ್ಲಿದ್ದಡೆ, ಅರಿವು ಮಹದಲ್ಲಿ ನಿಂದು,
ನೆರೆ ವಸ್ತು ತಾನಾದಲ್ಲಿ, ಬೇರೊಂದೆಡೆಯುಂಟೆ?
ಕರಣಂಗಳ ಹಿಂಡಿಗೆ ಉರಿಯೆದ್ದ ನೆಲೆ,
ನಷ್ಟವಾಗಿಯಲ್ಲದೆ ಬೇರೊಂದ ಹಿಡಿಯಲಿಲ್ಲ.
ಅದು ಘಟಿಸಿ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗ ತಾನೆ. /5
ಅತೀಂದ್ರಿಯರೆಲ್ಲರೂ ಮದನನ ಮನೆಯ
ಬೆಸಕುಡಿಕೆಯ ನೀರೆರೆವುದಕ್ಕೊಳಗಾದರು.
ವ್ರತಿಗಳೆಲ್ಲರೂ ಹೊರಗೆ ಆಚಾರವನಿರಿಸಿ,
ಒಳಗೆ ಭವಿಸಂಗದಲ್ಲಿ ಬಳಲುತ್ತೈದಾರೆ.
ನಿರಾಶೆವಂತರು ಕೊಡುವರ ಬಾಗಿಲಲ್ಲಿ,
ಇಕ್ಕುವರ ಮಂದಿರದಲ್ಲಿ ಸಿಕ್ಕಿ ಅಯಿದಾರೆ.
ಇವಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗಕ್ಕೆ./6
ಅದ್ರಿಯಲ್ಲಿ ಕರೆಯೆ, ಆ ಶಬ್ದ ತನ್ನ ಒಡಗೂಡಿ ಕರೆದಂತೆ,
ಚಿತ್ತ ನೆನೆದು ತಾ ಹೊತ್ತಿದ್ದ ಘಟವ ಎತ್ತಿಕೊಂಡು ಹೋಹಂತೆ,
ವಿಹಂಗನ ರಟ್ಟೆಯಲ್ಲಿ ಮರಳುವ ಸಂಚಾರದ ಒಳುಪಿನಂತೆ,
ಮಿಂಚಿನ ಸಂಚ ತೋರಿ, ಹಿಂಚುಮುಂಚಿಲ್ಲದಂತಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./7
ಅಪ್ಪುಮಯ ಬಲಿದು, ಜಗ ಸಾಕಾರವಾಗಿ ನಿಂದಲ್ಲಿ,
ಧರೆ ಸಲಿಲ ಅನಲ ಕುರುಹಾಗಿ ನಿಂತಿತ್ತು.
ಅವು ನಿಳಯಾಂತವಾಗಿ ವಾಯು ಘಟಿಸಿತ್ತು.
ಇಂತಿವು ಪಂಚಬ್ರಹ್ಮಮೂರ್ತಿ ಐಘಟವಾಯಿತ್ತು,
ಇಂತಿವು ಪ್ರಳಯಕ್ಕೊಳಗೆಂದು ಹೊರಗಾಗಿ ನಿಂದ,
ಐಘಟದೂರ ರಾಮೇಶ್ವರಲಿಂಗ./8
ಅಪ್ಪುವಾಸವ ತುಂಬುವ ಲೆಪ್ಪಣದಂತೆ,
ತುಂಬುವಲ್ಲಿ ಕಟ್ಟಿಲ್ಲ.
ಸೂಸುವಲ್ಲಿ ಪರಿಮಳವಾದಂತೆ ಅರಿವಿನ ಭೇದ.
ಇಷ್ಟದ ಮುಟ್ಟು, ಕಳೆಯ ಗೊತ್ತನರಿಯಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./9
ಅಪ್ಪುವಿಲ್ಲದ ಏರಿ, ಚಿತ್ತವಿಲ್ಲದ ಘಟ,
ನಿಜತತ್ವವನರಿಯದ ಪೂಜೆ, ವ್ಯರ್ಥವಾಯಿತ್ತು.
ಅವನಿರವು, ಐಘಟದೂರ ರಾಮೇಶ್ವರಲಿಂಗವನರಿವುದೆ ?/10
ಅರಿದವನಿರವು ಕಮಠನ ಅಂಗದಂತೆ,
ಲಂಪಟನುಲುಹಿನ ಬೆಂಬಳಿಯ ಅಂಗವಾಸಿಯಂತಿರಬೇಕು.
ಅದು ಲಿಂಗಾಂಗಿಯ ಬೆಡಗು.
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ
ಅದೇ ಸದ್ಭಾವದ ಗೊತ್ತು./11
ಅರಿವೆಂಬುದೆ ಕ್ರೀ, ಕ್ರೀಯೆಂಬುದೆ ನಿರವಯ.
ಅದೆಂತೆಂದಡೆ : ಧರೆಯ ವಾರಿಯ ವಾಯು, ಆಕಾಶಕ್ಕೆ ತಂದು ಸುರಿವಂತೆ,
ಬಾವಿಯ ನೀರ, ಭಾಜನ ತಂದು ಕೊಡುವಂತೆ,
ಇಷ್ಟಲಿಂಗದ ನಿಷ್ಠೆ ದೃಷ್ಟವಾದಲ್ಲಿ,
ವಸ್ತುವ ಕಟ್ಟಿ ತಂದು ಕೊಡುವುದು.
ಕೊಡುವುದಕ್ಕೆ ಸಂದೇಹವಿಲ್ಲ.
ಅದಕ್ಕೆ ದೃಷ್ಟವ ಕೇಳುವುದಕ್ಕೆ, ಅನ್ಯಭಿನ್ನಕ್ಕೆ ತೆರಪಿಲ್ಲ.
ಐಘಟದೂರ ರಾಮೇಶ್ವರಲಿಂಗಕ್ಕೆ
ಸಾವಯ ನಿರವಯವೆಂಬುದಿಲ್ಲ. /12
ಅಶನದಾಸೆಗಾಗಿ ಆಚಾರವ ತಪ್ಪಿ,
ವಿಷಯದಾಸೆಗಾಗಿ ವಿರಕ್ತಿಯ ಬಿಟ್ಟು,
ಸಕಲರ ಕೂಟದಲ್ಲಿ ವಿಕಳತೆಗೊಂಬ
ಪ್ರಕೃತಿಭಾವಿಗುಂಟೆ ನಿಜಭಕ್ತಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ?/13
ಅಸಿಯಾಗಲಿ ಕೃಷಿಯಾಗಲಿ,
ವಾಚಕ ವಾಣಿಜ್ಯ ಮಸಿಯಾಗಲಿ,
ಮಾಡುವಲ್ಲಿ ಹುಸಿಯಿಲ್ಲದಿರಬೇಕು.
ಅದು ಅಸಮಾಕ್ಷನ ಬರವು, ಪಶುಪತಿಯ ಇರವು, ಐಘಟದೂರ ರಾಮೇಶ್ವರಲಿಂಗ ತಾನೆ. /14
ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ,
ಕೆಳಗೆ ನೋಡುವಾತನಿಗೆ ಆಶ್ಚರ್ಯವಾದಂತೆ,
ವಸ್ತುಕೂಟ ಆಟ, ಮತ್ರ್ಯರ ಬೇಟ ನಿಶ್ಚಯವಾಗಿರಬೇಕು,
ಐಘಟದೂರ ರಾಮೇಶ್ವರಲಿಂಗಕ್ಕೆ. /15
ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು.
ಅಲ್ಲ, ಅಹುದೆಂಬುದು ಬಲ್ಲವನ ಮತವಲ್ಲ.
ಎಲ್ಲಿಯೂ ಸದ್ಗುಣ, ಎಲ್ಲರಲ್ಲಿ ನಿಜಭಾವ,
ಪರಿಪೂರ್ಣ ತಾನಾಗಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./16
ಇಚ್ಫಾಶಕ್ತಿ ರೂಪಾಗಿ ಬ್ರಹ್ಮಪದವಾಯಿತ್ತು.
ಕ್ರಿಯಾಶಕ್ತಿ ರೂಪಾಗಿ ವಿಷ್ಣುಪದವಾಯಿತ್ತು.
ಜ್ಞಾನಶಕ್ತಿ ರೂಪಾಗಿ ರುದ್ರಪದವಾಯಿತ್ತು.
ತ್ರಿವಿಧಪದ ಕೂಡಿ ಕಾಮ ನಾಸ್ತಿಯಾಯಿತ್ತು,
ಐಘಟದೂರ ರಾಮೇಶ್ವರಲಿಂಗವನರಿಯದೆ./17
ಇಚ್ಫಾಶಕ್ತಿಸ್ವರೂಪ ವತರ್ುಳವಾಗಿ,
ಕ್ರಿಯಾಶಕ್ತಿಸ್ವರೂಪ ಗೋಮುಖವಾಗಿ,
ಜ್ಞಾನಶಕ್ತಿಸ್ವರೂಪ ಸಲಾಖೆರೂಪಾಗಿ,
ತ್ರಿವಿಧಭೇದವ ಒಡಗೂಡಿ ತ್ರಿವಿಧಶಕ್ತಿ ಲಿಂಗವಾಯಿತ್ತು.
ಇಚ್ಫಾಶಕ್ತಿಗೆ ಕ್ರೀ, ಕ್ರಿಯಾಶಕ್ತಿ ಜ್ಞಾನ,
ಜ್ಞಾನಶಕ್ತಿಗೆ ಸರ್ವಭಾವಕೂಟ.
ಭಾವ ಇಷ್ಟದಲ್ಲಿ ನಿಂದು, ತ್ರಿವಿಧವ ತೊಟ್ಟು ಬಿಟ್ಟು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಇದೇ ಗೊತ್ತು./18
ಇರುಳಿಗೆ ಮೊಲೆ ಯೋನಿ ಅಧರ.
ಹಗಲಿಗೆ ಸಂಪುಟ ಲೇಖ.
ಮಾತಿನ ಮಾಲೆಯ ಸರಕು ವೇಷದ ಪುಣ್ಯ
ಸುಡು ಭ್ರಾಂತರ ಮಾತು, ಸಾಕು ನಿಲ್ಲು,
ಐಘಟದೂರ ರಾಮೇಶ್ವರಲಿಂಗ, ಅವರ ಬಲ್ಲನಾಗಿ./19
ಇಷ್ಟದ ಪೂಜೆಯನರಿವುದಕ್ಕೆ
ಕೋಲ ಸುತ್ತಿದ ನೂಲಿನಂತಿರಬೇಕು.
ಭಾವದ ಭ್ರಮೆ ಹಿಂಗುವುದಕ್ಕೆ
ಸಾವಧಾನದಲ್ಲಿ ಸಾವಯವವಾದ ಸಾವಿನಂತೆ,
ಭಾವ ಎಯ್ದಬೇಕು.
ಇಷ್ಟ ಪ್ರಾಣದಲ್ಲಿ ಉರಿ ಅರಗಿನ ಯೋಗದಂತೆ,
ಕ್ರೀಯಲ್ಲಿ ಕರಗಬೇಕು. ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./20
ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ :
ಅಕ್ಷಿಯ ಮುಚ್ಚಿದಲ್ಲಿ ನಿರೂಪಾಯಿತ್ತು, ತೆರೆದಲ್ಲಿ ರೂಪಾಯಿತ್ತು.
ತನ್ನಯ ಅರಿವು ಮರವೆಯಿಂದ
ಕ್ರೀ, ನಿಃಕ್ರೀಯೆಂಬ ಸಂದೇಹವಾಯಿತ್ತು.
ನಿಂದ ನೀರ ನೆಳಲು, ಚರಿಸಿದಲ್ಲಿ ಅಡಗಿತ್ತು.
ಆ ತೆರದ ದೃಷ್ಟವನರಿ,
ಐಘಟದೂರ ರಾಮೇಶ್ವರಲಿಂಗ ಏಕಸ್ವರೂಪು./21
ಇಷ್ಟಲಿಂಗ ವಸ್ತುವನರಸುವುದಕ್ಕೆ ದೃಷ್ಟವಿಲ್ಲ.
ವಸ್ತು ತಾನೆ ಕುರುಹಿನಲ್ಲಿ ನಿಂದರುಹಿಸಿಕೊಳ್ಳಬೇಕು.
ಅದೆಂತೆಂದಡೆ : ಮಣಿ ದಾರವನೊಳಕೊಂಡು ತಾ ಕುರುಹಿಗೆ ಬಂದು ನಿಲುವಂತೆ.
ವಸ್ತುವನೊಳಕೊಂಡು ಕುರುಹಿನ ರೂಪು ಮಣಿದಾರದಂತೆ.
ಇಂತೀ ಉಭಯದ ಭೇದ, ಎಡೆದೆರಪಿಲ್ಲ,
ಐಘಟದೂರ ರಾಮೇಶ್ವರಲಿಂಗ ತಾನೆ. /22
ಇಷ್ಟಲಿಂಗಸಂಬಂಧ ಮುಕ್ತಿಪದ.
ಭಾವಲಿಂಗಸಂಬಂಧ ಭವಕ್ಕೆ ಬೀಜ.
ಪ್ರಾಣಲಿಂಗಸಂಬಂಧ ಪ್ರಣವದ ಗೊತ್ತು.
ಇಂತೀ ತ್ರಿವಿಧಭೇದವರತು ನಿಂದುದು, ಐಕ್ಯಲಿಂಗಸಂಬಂಧ,
ಐಘಟದೂರ ರಾಮೇಶ್ವರಲಿಂಗದಲ್ಲಿ. /23
ಉಂಟೆಂಬುದು ಭಾವದ ನೆಮ್ಮುಗೆ,
ಇಲ್ಲಾ ಎಂಬುದು ಚಿತ್ತದ ಪ್ರಕೃತಿ.
ಉಭಯನಾಮ ನಷ್ಟವಾಗಿ ನಿಂದುಳುಮೆ,
ಐಘಟದೂರ ರಾಮೇಶ್ವರಲಿಂಗ ಇಕ್ಕಿದ ಗೊತ್ತು./24
ಊಧ್ರ್ವಮುಖದಲ್ಲಿಯೈದಿದ ವಿಹಂಗ,
ಅಧೋಮುಖದಲ್ಲಿ ಧರೆಯ ನೋಡಿ,
ತಾನಡರುವ ತೆರನ ಕಾಬಂತೆ,
ತುರೀಯದಲ್ಲಿಯೈದಿ, ತೂಯರ್ಾತೀತದಲ್ಲಿ ನೋಡಿ,
ತತ್ವದಲ್ಲಿ, ನಿಶ್ಚಯವ ಮಾಡಬೇಕು, ಇಷ್ಟಲಿಂಗವ.
ಆ ಇಷ್ಟ ನಿಶ್ಚಯದ ನಿಜತತ್ವದಲ್ಲಿ ಆಶ್ರಯಿಸಿ,
ಬಚ್ಚಬಯಲಾಗಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./25
ಎಂಬತ್ತುನಾಲ್ಕುಲಕ್ಷ ಜೀವವ್ರತ. ಐವತ್ತಾರು ನೇಮವ್ರತ.
ಅರುವತ್ತನಾಲ್ಕು ಶೀಲವ್ರತ. ಮೂವತ್ತಾರು ಆಚಾರವ್ರತ.
ತ್ರಿವಿಧ ಕ್ರೀಭಾವ ನೇಮವ್ರತ. ಇಂತಿವರಲ್ಲಿ ಶುದ್ಧಾತ್ಮನಾಗಿ
ಅರಿದುದೇ ಜೀವನ್ಮುಕ್ತವ್ರತ. ಐಘಟದೂರ ರಾಮೇಶ್ವರಲಿಂಗದಲ್ಲಿ
ಸರ್ವ ಅವಧಾನಿಯ ಕ್ರೀ ಶುದ್ಧತೆ./26
ಎನ್ನ ಘ್ರಾಣ ಶುದ್ಧವಾಯಿತ್ತಯ್ಯಾ,
ಏಕೋರಾಮಿತಂದೆಗಳ ಧರ್ಮದಿಂದ.
ಎನ್ನ ಜಿಹ್ವೆ ಶುದ್ಧವಾಯಿತ್ತಯ್ಯಾ,
ಪಂಡಿತಾರಾಧ್ಯರ ಧರ್ಮದಿಂದ.
ಎನ್ನ ನೇತ್ರ ಶುದ್ಧವಾಯಿತ್ತಯ್ಯಾ.
ರೇವಣಸಿದ್ಧೇಶ್ವರದೇವರ ಧರ್ಮದಿಂದ.
ಎನ್ನ ತ್ವಕ್ಕು ಶುದ್ಧವಾಯಿತ್ತಯ್ಯಾ,
ಸಿದ್ಧರಾಮೇಶ್ವರದೇವರ ಧರ್ಮದಿಂದ.
ಎನ್ನ ಹೃದಯ ಶುದ್ಧವಾಯಿತ್ತಯ್ಯಾ.
ಮರುಳಸಿದ್ಧೇಶ್ವರದೇವರ ಧರ್ಮದಿಂದ
ಸಕಳೇಶ ಮಾದಿರಾಜಯ್ಯಗಳ ಧರ್ಮದಿಂದ.
ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ,
ತೆಲುಗುಜೊಮ್ಮಯ್ಯಗಳ ಧರ್ಮದಿಂದ.
ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ,
ಕೇಶಿರಾಜಯ್ಯಗಳ ಧರ್ಮದಿಂದ.
ಎನ್ನ ಸವರ್ಾಂಗ ಶುದ್ಧವಾಯಿತ್ತಯ್ಯಾ,
ಬಸವಣ್ಣ, ಚನ್ನಬಸವಣ್ಣ, ಪ್ರಭು, ವೀರಮಡಿವಾಳಯ್ಯಗಳ ಧರ್ಮದಿಂದ.
ಐಘಟದೂರ ರಾಮೇಶ್ವರಾ, ನಿಮ್ಮ ಶರಣರ ಧರ್ಮದಿಂದ
ನಾನು ಶುದ್ಧನಾದೆನಯ್ಯಾ./27
ಐಶ್ವರ್ಯವುಳ್ಳವಂಗೆ ನಿಜಭಕ್ತಿಯಿಲ್ಲ.
ಡಂಬಕದ ವೇಷಧಾರಿಗೆ ನಿಜತತ್ವದ ಜ್ಞಾನವಿಲ್ಲ.
ಕುಟಿಲರ ನೆಮ್ಮಿಗೆ ಘನಲಿಂಗದ ನೆಮ್ಮಿಗೆಯಿಲ್ಲ,
ಐಘಟದೂರ ರಾಮೇಶ್ವರಲಿಂಗ./28
ಒಂದು ಬಿಟ್ಟೊಂದ ಹಿಡಿದಿಹೆನೆಂಬಲ್ಲಿ ಸಿಕ್ಕಿತ್ತು ಅರಿವು,
ತಮಂಧವೆಂಬ ಮಂದಿರದಲ್ಲಿ.
ಹಿಡಿದುದ ಬಿಟ್ಟು, ವಾರಿಯಲ್ಲಿ ಹೊಳಹುದೋರಿದ ಮತ್ಸ್ಯಕ್ಕೆ
ಹೋದ ಶಿವಬುದ್ಧಿಯಂತಾಗಬೇಡ.
ಹಿಡಿದಲ್ಲಿ ಕಂಡು, ಕಂಡಲ್ಲಿ ನಿಂದು, ನಿಂದಲ್ಲಿ ಕೂಡಿ,
ಕೂಡಿದಲ್ಲಿಯೇ ಉಭಯ ಬಯಲಾಯಿತ್ತು.
ಐಘಟದೂರ ರಾಮೇಶ್ವರಲಿಂಗ, ತಾನು ತಾನೆ./29
ಕಂಡು ಹಿಡಿಯುವುದು ಘಟದ ಭೇದ.
ಕಾಣದರಸುವುದು ಆತ್ಮನ ಭೇದ.
ಕಂಡುದ ಕಾಣದುದ ಹಿಂಗಿ ಕೂಡುವುದು, ಅರಿವಿನ ಭೇದ.
ತ್ರಿವಿಧ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗನ ನಿಲವು ಅಸಾಧ್ಯ/30
ಕಂಡೆನೆಂದಡೆ ಮುಂದಕ್ಕೊಂದನರಿವುತ್ತಿದ್ದಿತ್ತು.
ಕಾಣೆನೆಂದಡೆ ಅಂಗದಲ್ಲಿದ್ದ ಕುರುಹು ಇದ್ದಿತ್ತು.
ಈ ಉಭಯವ ಹಿಂಗಿ ಕಂಡೆಹೆನೆಂದಡೆ,
ಐಘಟದೂರ ರಾಮೇಶ್ವರಲಿಂಗ ಸಾಧ್ಯ. /31
ಕತರ್ೃ ಭೃತ್ಯವಾದಲ್ಲಿ, ಸರಸ ಸುರತಸಂಗ ಪರಿಹಾಸಕಂಗಳಿಂದ
ಮಾಡುವುದು, ಮಾಡಿಸಿಕೊಂಬುದು ಉಭಯದ ಕೇಡು.
ಅದು ನೀರಸವಾಗಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./32
ಕರ್ಮದ ಗಸಣಿ ಬೇಡ.
ವರ್ಮವನರಿದಲ್ಲಿ ಬ್ರಹ್ಮವೆಂದೆನಬೇಡ.
ಸಮಾಧಾನ ನೆಲೆಗೊಂಡಲ್ಲಿ,
ನಿರ್ಮಳ ನಿಜ ತಾನಾದಲ್ಲಿ,
ಆನಂದಸಿಂಧು [ಐಘಟದೂರ] ರಾಮೇಶ್ವರನೆನಲಿಲ್ಲ./33
ಕಲ್ಪಿಸಿ ಅರ್ಪಿಸಿ, ಅರ್ಪಿಸಿ ಭೋಗಿಸಲಿಲ್ಲ,
ಅರ್ಪಿತ ಅನರ್ಪಿತವೆಂಬೆರಡಳಿದನಾಗಿ.
ಕಾಯದ ಕೈಗಳಲ್ಲಿ, ಮನದ ಕೈಗಳಲ್ಲಿ,
ಭಾವದ ಕೈಗಳಲ್ಲಿ ಅರ್ಪಿಸುವವನಲ್ಲ, ಆತ ಅನರ್ಪಿತನಾಗಿ.
ಅರ್ಪಿತ ಅನರ್ಪಿತವೆಂಬೆರಡಳಿದನಾಗಿ,
ಕೂಡಿದೆನಗಲಿದೆ, ಅಳಿದೆನುಳಿದೆನೆಂದಡೆ,
ಸಂದನಳಿದ ಸದಮಲಾನಂದಸಿಂಧು
[ಐಘಟದೂರ] ರಾಮೇಶ್ವರನು ತಾನೆ. /34
ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು,
ಈ ಕೇಣಸರದ ಜಾಣತನದ ಗುರುವೇಕೆ ?
ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ?
ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ.
ಬಿಡುವನವರ, ಐಘಟದೂರ ರಾಮೇಶ್ವರಲಿಂಗ./35
ಕಾಮದಲ್ಲಿ ಅಳಿದು, ಕ್ರೋಧದ ದಳ್ಳುರಿಯಲ್ಲಿ ಬೆಂದು,
ಮೋಹದ ಸಮುದ್ರದಲ್ಲಿ ಮುಳುಗಿ,
ನಾನಾ ಭವರಸಂಗಳನುಂಡು ಘೋರಸರಾಗಬೇಡ.
ಅರಿ, ಐಘಟದೂರ ರಾಮೇಶ್ವರಲಿಂಗವ./36
ಕಾಮವ ಬ್ರಹ್ಮಂಗಿಕ್ಕಿ, ಮೋಹವ ವಿಷ್ಣುವಿಂಗಿಕ್ಕಿ,
ಲೋಭವ ರುದ್ರಂಗಿಕ್ಕಿ, ಮದವ ಮದನಂಗೆ ಕೊಟ್ಟು,
ಕಳೆದುಳಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./37
ಕಾಯಶೂನ್ಯ, ಜೀವಶೂನ್ಯ,
ಪ್ರಾಣಶೂನ್ಯವೆಂದೆಂಬರು, ಅದೆಂತಯ್ಯ ?
ಮನ ಮನನ ಮನನೀಯಂಗಳಲ್ಲಿ
ಮಂತ್ರಲೀಯವಾದುದೆ ಕಾಯಶೂನ್ಯ.
ಆ ಮಂತ್ರ ಪಿಂಡಾಂಡದಲ್ಲಿ,
ಪರಿಪೂರ್ಣಭೇದ ತೋರಿದಾಗಲೆ ಜೀವಶೂನ್ಯ.
ಆ ಪ್ರಭೆಯ ಪರಿಣಾಮದಲ್ಲಿ ಜೀವನ ಉಪಾಧಿ ನಷ್ಟವಾಗಿ,
ಜೀವ ಪರಮ ಸಂಯೋಗವೆಂಬ ಸಂದೇಹವಳಿದಾಗಲೇ ಪ್ರಾಣಶೂನ್ಯ,
ಇದು ತ್ರಿವಿಧಶೂನ್ಯ,
ಐಘಟದೂರ ರಾಮೇಶ್ವರಲಿಂಗದಲ್ಲಿ ನಿಲುಕಡೆ./38
ಕಾಲವಿರಹಿತ ಗುರುವಾಗಬೇಕು.
ಕರ್ಮವಿರಹಿತ ಲಿಂಗವಾಗಬೇಕು.
ಭವವಿರಹಿತ ಜಂಗಮವಾಗಬೇಕು.
ಮೂರನರಿತು ಛೇದಿಸಿ, ವಿರಕ್ತನಾಗಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./39
ಕಾಳಿಕೆ ಹರಿದ ಹೇಮದಂತೆ,
ನಾರಿಕೇಳಫಲವ ನುಂಗಿದ ವಾರಣದಂತೆ,
ಬೆರಸಿ ಬೆರಸದಂತಿರಬೇಕು.
ಅದು ನಾಲಿಗೆಯ ಹುಣ್ಣಿನಂತೆ,
ಮೀರಬಾರದು, ಅಂಗೀಕರಿಸಬಾರದು.
ಕ್ರೀಜ್ಞಾನಸಂಪದದಲ್ಲಿ ಕಾಬವಂಗೆ
ಭಾವಶುದ್ಧವಾಗಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./40
ಕುಂಭ ಘಟದಂತೆ ಕುರುಹಾಗಿ,
ತುಂಬಿದ ಜಲದಂತೆ ಮನವಾಗಿ,
ತಂಡುಲದಂತೆ ಚಿತ್ತಶುದ್ಧವಾಗಿ,
ಮಾಡುವ ಕ್ರೀ ಅಗ್ನಿಯಂತಾಗಿ.
ಇಂತಿವು ಕೂಡಿ ಘಟಿಸಿ,
ಕ್ರೀಜ್ಞಾನ ಶುದ್ಧವಾಗಿ ಅರಿಯಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./41
ಕುಟಿಲಕ್ಕಲ್ಲದೆ ಜಗ ಸಿಕ್ಕದು.
ವಾಚಕಂಗಲ್ಲದೆ ಭೋಗವಿಲ್ಲ. ಘಟಧರ್ಮಕ್ಕೆ ಹೊರಗು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./42
ಕುರುಹಿಟ್ಟಲ್ಲಿ ಅರಿವು ನಷ್ಟವಾಯಿತ್ತು.
ಅರಿವ ನುಂಗಿದ ಕುರುಹು, ಇದಿರಭಾವಕ್ಕೊಡಲಾಯಿತ್ತು.
ತನ್ಮಯ ನಷ್ಟವಾಗಿ, ಉಭಯದೋರದೆ ನಿಂದಲ್ಲಿ,
ಆ ನಿಲವು ತಾನೆ, ಐಘಟದೂರ ರಾಮೇಶ್ವರಲಿಂಗ./43
ಕುರುಹೆ ಘಟವಾಗಿ, ಅರಿವೆ ಆತ್ಮನಾಗಿ.
ಉಭಯವನರಿವುದು ಆಚಾರದಂಗವಾಗಿ.
ಇವು ನಿಂದು ಉಳಿಯೆ,
ಐಘಟದೂರ ರಾಮೇಶ್ವರಲಿಂಗದ ಇರವು,
ಬಚ್ಚಬಯಲಾಯಿತ್ತು./44
ಕುಸುಮ ಒಣಗಿದಾಗ ಸೌರಭವಡಗಿತ್ತು.
ಸಾರವರತಾಗ ಸಸಿ ಹೊಂದಿತ್ತು.
ಕುರುಹ ಮರೆದಾಗ ಅರಿವು ನಿಂದಿತ್ತು.
ಐಘಟದೂರ ರಾಮೇಶ್ವರಲಿಂಗ ಭಜನೆಗೊಳಗಾಗಬೇಕು./45
ಕೈ ಕಾಲಿನಲ್ಲಿ ಕೊಂಡಡೇನು,
ಬಾಯಿಗೆ ಬಂದಲ್ಲದೆ ಒಡಲೆಡೆಯಿಲ್ಲ.
ಮಾತಿನಲ್ಲಿ ಆಡಿದಡೇನು, ಮನದಲ್ಲಿ ಅರಿದಡೇನು,
ಆ ಇರವು, ಆತನ ಮುಟ್ಟಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./46
ಕ್ರಿಯಾಸಂಪದನಾದಲ್ಲಿ, ಉರಿ ಕಾಷ್ಠವ ವೇಧಿಸಿದಂತಿರಬೇಕು.
ಆ ಚರಪರ ಒಡಗೂಡಿದಂತಿರಬೇಕು.
ಜಲ ಜಲವ ಕೂಡಿದಂತೆ ಹೆರೆಹಿಂಗುವುದಕ್ಕೊಡಲಿಲ್ಲ.
ವಾರಿಯ ಶಿಲೆ ಬಲಿದು ನೋಡ ನೋಡ ನೀರಾದಂತಿರಬೇಕು.
ಇಷ್ಟಲಿಂಗಸಂಬಂಧದ ನಿಷ್ಠೆ, ಪ್ರಾಣಕೂಟ ಉಭಯ ಮೋಸವಿಲ್ಲದಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./47
ಕ್ರೀಭಾವಶುದ್ಧತೆ ಆದವನಿರವು, ಬೆಂಕಿ ಕಾಷ್ಠವ ಕೂಡಿ,
ದ್ವಂದ್ವವಾಗಿ ಉರಿದು, ಹಿಂಗಿ ನಂದಿದಂತಿರಬೇಕು.
ಹುಳಿ ಸಿಹಿಯ ಕೂಡಿ,
ಕೂಟಸ್ಥದಿಂದ ಉಳುಮೆಯ ಘೃತದಂತಿರಬೇಕು.
ವಿಷ ಶರೀರದಲ್ಲಿ ವೇಧಿಸಿ, ದೆಸೆಯನಳಿದಂತಿರಬೇಕು.
ಅಗ್ನಿಯಲ್ಲಿ ಅರತ ಉದಕದಂತೆ,
ಬಯಲೊಳಡಗಿದ ಶಬ್ದದಂತಿರು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./48
ಕ್ರೀಯ ತೆರನನರಿಯೆನೆಂದು ಬಿಡಬಹುದೆ ಆಚಾರವ ?
ಆಚಾರದ ತೆರನನರಿಯೆನೆಂದು ಮರೆಯಬಹುದೆ ಮಾರ್ಗವ ?
ಇಂತೀ ನಾನಾ ಭೇದಂಗಳಲ್ಲಿ ಅರಿದು, ವಿಚಾರಿಸಿ,
ಮಣ್ಣಿನಲ್ಲಿ ಕೆಡಿಸಿ, ಮಣ್ಣಿನಲ್ಲರಸುವಂತೆ,
ಮನೆಯಲ್ಲಿ ಇರಿಸಿದ ಒಡವೆಯ ಮರೆದು, ನೆನೆವಂತೆ ಅರಿ.
ಇಷ್ಟಲಿಂಗದ ಪ್ರಾಣಲಿಂಗದ ಗೊತ್ತೆಂಬುಭಯ ಬೇಡ.
ಅದು ನಿಶ್ಚಯ, ಒಂದಲ್ಲದೆ ಬೇರೆ ನಾಮವಿಲ್ಲ,
ಐಘಟದೂರ ರಾಮೇಶ್ವರಲಿಂಗಕ್ಕೆ./49
ಗರ್ಭದಲ್ಲಿ ಶಿಶು ಬಲಿದು,
ಹಸಿದೆನೆಂದು ಅತ್ತುದುಂಟೆ ಅಯ್ಯಾ ?
ಬೆಸನಾಗಿ ಪ್ರತಿರೂಪಿಂಗೆ ಕುಚಕ್ಷೀರವಲ್ಲದೆ
ಘಟದಿಂದಡಗಿದಲ್ಲಿ, ಸುಖ ತಾಯ ಇರವಿನಲ್ಲಿ ನಿಂದಂತೆ,
ಉಭಯಭೇದ, ಇಷ್ಟಲಿಂಗಸಂಬಂಧಯೋಗ.
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ
ಇದಿರಿಟ್ಟ ಭೇದ./50
ಗುರುವಿಗೆ ಲಿಂಗ ಸಾಕ್ಷಿ, ಲಿಂಗಕ್ಕೆ ಜಂಗಮ ಸಾಕ್ಷಿ,
ಆ ಜಂಗಮಕ್ಕೆ ಅರಿವು ಸಾಕ್ಷಿ.
ಇಂತೀ ಅರಿವ ಮರೆದು,
ನರಗುರಿಗಳ ಬಾಗಿಲಲ್ಲಿ ನಿಂದು ತಡೆಯಿಸಿಕೊಂಬ
ಅರಿಗುರಿಗೇಕೆ ಅರಿವಿನ ಮಾತು ?
ಐಘಟದೂರ ರಾಮೇಶ್ವರಲಿಂಗಕ್ಕೆ
ಅವರ ಇರವು ಹೊರಗಾಗಿಹುದು./51
ಚಿನ್ನ ವಿಶೇಷ ಮಣ್ಣು ಅಧಮವೆಂದಡೆ,
ಅದು ನಿಂದು ಕರಗುವುದಕ್ಕೆ
ಮಣ್ಣಿನ ಕೋವೆಯೆ ಮನೆಯಾಯಿತ್ತು.
ಇಷ್ಟವನರಿವ ವಸ್ತುವ ನೆಮ್ಮುವುದಕ್ಕೆ ಇದೇ ದೃಷ್ಟ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./52
ಠಕ್ಕುರಂಗೆ ವಾಚಕ, ಭೂಪತಿಗೆ ದೆಸೆ, ಅಜಾತಂಗೆ ನಿಶ್ಚಯ,
ನೇಮಂಗೆ ಖಂಡಿತಭಾವ ನಿರ್ಧರವಾಗಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./53
ತಡೆವನ ಬಾಗಿಲಲ್ಲಿ ನಿಂದು,
ಕರೆಯಿಸಿಕೊಂಡು ಹೋದೆಹೆನೆಂಬ ಒಡೆಯತನವೇಕೆ ?
ಇವೆಲ್ಲವನರಿದು ಬಿಟ್ಟು, ತಿರುಗಿ ಅಲ್ಲಿಗೆ ಬಹ
ಸ್ಥಾಣುವಿನ ಮರೆಯ ಖುಲ್ಲನ ಹಸುವಿನಂತಾಯಿತ್ತು,
ನಿಮ್ಮ ಅರಿವು, ಐಘಟದೂರ ರಾಮೇಶ್ವರಲಿಂಗವನರಿಯದೆ./54
ತನ್ನ ಕಾಯ್ವ ಸೆಡೆಯವಲ್ಲದೆ,
ಸೆಡೆಯವ ಕಾಯ್ವ ಅಂಗವುಂಟೆ ಅಯ್ಯಾ ?
ವಸ್ತುಮುಖದಿಂದ ಎಲ್ಲವನರಿಯಬೇಕಲ್ಲದೆ,
ವಸ್ತು ತನ್ನ ಕಟ್ಟಿಗೆ ನಿಶ್ಚಯವೆ ?
ಅದು ತನ್ನ ಉಭಯದ ಕೇಡು,
ಐಘಟದೂರ ರಾಮೇಶ್ವರಲಿಂಗಕ್ಕೆ. /55
ತನ್ನ ತಾನರಿದಡೆ, ತನ್ನರಿವೆ ಗುರು,
ತಾನೆ ಲಿಂಗ, ತನ್ನ ನಿಷ್ಠೆಯೇ ಜಂಗಮ.
ಇಂತೀ ತ್ರಿವಿಧವು ಒಂದಾದಡೆ,
[ಐಘಟದೂರ] ರಾಮೇಶ್ವರಲಿಂಗವು ತಾನೆ./56
ತನ್ನವರನ್ಯರಹರು, ಹೆಣ್ಣು ಹೊನ್ನು ಮಣ್ಣು ಹಿಡಿದು ಹೋರಲಾಗಿ.
ಆ ಮೂರ ಬಿಟ್ಟಡೆ ಅನ್ಯರು ತನ್ನವರಹರು.
ಅರಿದವಂಗೂ ಸರಿ, ಜಗದ ಒಡಲಾದವಂಗೂ ಸರಿ ಆಸೆವೊಂದೇ ಭೇದ.
ಉಭಯಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ. /57
ತಾ ಮೀವನ್ನಕ್ಕ ಲಿಂಗಕ್ಕೆ ಮಜ್ಜನ.
ತಾನುಂಬನ್ನಕ್ಕ ಲಿಂಗಕ್ಕೆ ನೈವೇದ್ಯ.
ತನ್ನ ತನು ಭೋಗವ ಮಾಡುವನ್ನಕ್ಕ
ಲಿಂಗಾರ್ಪಿತವಾಗಬೇಕು.
ಇದು ಸದ್ಭಕ್ತಮಾರ್ಗದಿರವು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./58
ದ್ವೈತವಳಿದು ಅದ್ವೈತವಾಗಬೇಕು.
ಜ್ಞಾನವಳಿದು ಕ್ರೀಯಲ್ಲಿ ನಿಂದು, ದಿವ್ಯ ಜ್ಞಾನವಾಗಬೇಕು.
ಹಾಲು ಒಗುವಲ್ಲಿ ನೀರ ಬೆರಸಿದಂತೆ,
ಅದು ಹೊತ್ತುವುದಕ್ಕೆ ವಾರಿ ನಿಂದಂತಾಗಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./59
ಧನವ ಗಳಿಸಿದವ ಹೆಣನಾದ.
ಧರೆಯ ಗಳಿಸಿದವ ಅರಿಗಳಿಗೆ ಒಡಲಾದ.
ಕನ್ಯೆಯ ಗಳಿಸಿದವ ಕುಕ್ಕುರಯೋನಿಯಲ್ಲಿ ಸಿಕ್ಕಿದಂತಾದ.
ಅಟ್ಟುವ ವಾಸಿಯಲ್ಲಿ ಕುಕ್ಕುಳಗುದಿಯಬೇಡ.
ಸತ್ಯಕ್ಕೆ ಹೊರಗಾಗು, ಅಸತ್ಯಕ್ಕೆ ಒಳಗಾಗು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./60
ನರದೇಹವ ತೊಟ್ಟು, ತಾ ಗುರುವೆಂದು ಇದಿರಿಗೆ ಇಷ್ಟವ ಕೊಟ್ಟು,
ಅವರ ಮನೆಯಲ್ಲಿ ಒಲ್ಲದೆ, ಅಕ್ಕಿ ತುಪ್ಪವ ನೀಡಿಸಿಕೊಂಡು,
ಅಟ್ಟುಕೊಂಡುಂಬ ಮಿಟ್ಟೆಯಭಂಡರ ಕೈಯಲ್ಲಿ
ಕಟ್ಟಿಸಿಕೊಂಡ ಲಿಂಗ, ದೃಷ್ಟದಿ ಶ್ರವಕಾಯ.
ಇದನರಿತು, ಅಲ್ಲಿ ಹೊಕ್ಕು ಉಂಡವಂಗೆ
ಕರಟನ ಕೈಯ ಕೀಟಕ, ಆ ಕಾಕೂಳು,
ಘಟಿತಮಯ ಐಘಟದೂರ ರಾಮೇಶ್ವರಲಿಂಗ ಅವರ ಒಲ್ಲನಾಗಿ./61
ನಾನಾ ಫಲವ ಸಲಹುವಲ್ಲಿ, ಮೂಲದ ಬೆಳೆಯನರಿತು ನೀರನೆರೆಯಬೇಕು.
ವ್ರತ ನೇಮ ಕೃತ್ಯ ನಿತ್ಯವ ಮಾಡುವಲ್ಲಿ, ಅತಿಶಯನಾಗಿರಬೇಕು.
ಪಟುಭಟನಾದಲ್ಲಿ ಉಭಯದಳ ಪಿತಾಮಹನಾಗಿರಬೇಕು.
ಗತಿ ಬಟ್ಟೆಯ ತೋರುವ ಚರಗುರುದ್ವಯ ಗತಿಮಹನಾಗಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./62
ನೀರೊಳಗಣ ಕಿಚ್ಚಿಗೆ ನೀರೆ ತಾಯಿ.
ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ.
ಮರದೊಳಗಣ ಕಿಚ್ಚಿಗೆ ಮರನೆ ತಾಯಿ.
ಅವು ಹೊರಹೊಮ್ಮಿದಾಗ ತಾಯ ತಿಂದು, ತಾವು ತಲೆದೋರುವಂತೆ
ಕುರುಹಿಂದ ಅರಿವನರಿತು
ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ,
ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು./63
ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು.
ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು.
ಮರದೊಳಗಣ ಕಿಚ್ಚು ಮರನನೂ ಸುಟ್ಚು,
ಇದಿರನೂ ಸುಟ್ಟು, ಪರಿಸ್ಪಂದಕ್ಕೆ ಹರಿಯಿತ್ತು.
ಇಂತೀ ತ್ರಿವಿಧಭೇದದಿಂದ, ಜ್ಞಾನದ ಭೇದವನರಿ
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./64
ಪಂಚೇಂದ್ರಿಯಂಗಳಲ್ಲಿ ಲಿಂಗಮುಖವಾಗಿ ಕೊಳ್ಳಬೇಕೆಂಬರು.
ಆ ಇಂದ್ರಿಯಂಗಳು ಲಿಂಗಕ್ಕೆ ಹೊರತೆಯೆ ?
ಲಿಂಗದ ಮುಖದಲ್ಲಿ ಇಂದ್ರಿಯಂಗಳು ಬಂದು ನಿಂದು,
ತಮ್ಮ ಸಂದೇಹವ ಬಿಡಿಸಿಕೊಂಬವಲ್ಲದೆ,
ಇಂದ್ರಿಯಂಗಳ ಮುಖಕ್ಕೆ ಲಿಂಗವಿಲ್ಲ.
ಲಿಂಗಮುಖದಲ್ಲಿ ಇಂದ್ರಿಯಂಗಳು ನಿವೃತ್ತಿ,
ಐಘಟದೂರ ರಾಮೇಶ್ವರಲಿಂಗದಲ್ಲಿ./65
ಪಟುಕದ ಘಟದಲ್ಲಿ, ರಜನೀರ ತುಂಬಿದ ಪರಿಸೂತ್ರವುಂಟೆ ?
ಉದಕ ಹಿಂಗೆ, ಆ ಘಟ ಮುನ್ನಿನಂದ.
ಅದನಳಿದು ಕಾಣು, ಐಘಟದೂರ ರಾಮೇಶ್ವರಲಿಂಗವ./66
ಪಶು ವಾಹನವ ಕಟ್ಟುವುದಕ್ಕೆ ನೆಟ್ಟಗೊತ್ತಿಲಿಲ್ಲದೆ ಕಟ್ಟಲಿಲ್ಲ.
ಅಸು ಆತ್ಮನ ಕಟ್ಟುವ ಗೊತ್ತು,
ಇಷ್ಟದ ನಿಷ್ಠೆಯಿಂದ ಸ್ಥಾಣು ಕಟ್ಟುವಡೆಯಬೇಕು.
ಇದು ನಿಶ್ಚಯವೆಂದರಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ/67
ಪಾಕವನರಿತು ಮಾಡುವ ಗರತಿಯಂತೆ,
ಲಾಗವನರಿತು ಲಂಘಿಸುವ ವನಚರನಂತೆ,
ಮೇಘವನರಿತು ಕರೆವ ಭೇಕನಂತೆ,
ಉಚಿತಕಾಲಂಗಳಲ್ಲಿ ಮಾಡುವ ಸತ್ಕ್ರೀ, ಲಿಂಗಕ್ಕೆ.
ಅರಿದು ಕೂಡುವುದು, ಘನ ವಸ್ತುವಿನಲ್ಲಿ.
ಉಭಯಭಾವದಲ್ಲಿ ನಿಂದು ಮತ್ತೆರಡಳಿಯಬೇಕು,
ಆ ಕುರುಹಿನಲ್ಲಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./68
ಪಾದತೀರ್ಥವ ಕೊಂಡಲ್ಲಿ ತೃಷೆಯರತು,
ಪ್ರಸಾದವ ಕೊಂಡಲ್ಲಿ ಹಸಿವರತು,
ಭೃತ್ಯಭಾವವಾದಲ್ಲಿ ನಾನೆಂಬುದಿಲ್ಲದೆ
ಅಹಂಕಾರ ವಿಸರ್ಜನವಾಗಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./69
ಪೃಥ್ವಿ, ಸದ್ಯೋಜಾತನ ಹಂಗು.
ಜಲ, ವಾಮದೇವನ ಹಂಗು.
ಅಗ್ನಿ, ಅಘೋರನ ಹಂಗು.
ವಾಯು, ತತ್ಪುರುಷನ ಹಂಗು.
ಆಕಾಶ, ಈಶಾನ್ಯನ ಹಂಗು.
ಪಂಚಬ್ರಹ್ಮನ ಮರೆದು, ಓಂಕಾರ ಬ್ರಹ್ಮವನರಿ,
ಐಘಟದೂರ ರಾಮೇಶ್ವರಲಿಂಗವ. /70
ಪ್ರಸಾದವ ಕೊಂಡಲ್ಲಿ, ಪ್ರಾಣದಾಸೆಯಿಲ್ಲದಿರಬೇಕು.
ಭಕ್ತಿಯ ಹೊತ್ತಲ್ಲಿ, ನಿಜನಿಶ್ಚಯವಿರಬೇಕು.
ಅದು ಸಚ್ಚಿತ್ತದ ನಿಚ್ಚಟದಿರವು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./71
ಫಲ, ರಸವ ಇರಿಸಿಕೊಂಡಿದ್ದಂತೆ,
ನೆಲ, ನಿಧಾನವನಿರಿಸಿಕೊಂಡಿದ್ದಂತೆ,
ತಾಯಿ, ಗರ್ಭದ ಶಿಶುವ ಆರೈಕೆಯಲ್ಲಿ ತಾಳಿಕೊಂಡಿಪ್ಪಂತೆ,
ಇದ್ದೆಯಲ್ಲಾ ನೀ ಕುರುಹಾಗಿ.
ಅರಿವ ಆತ್ಮನ ಮರೆಯಮಾಡಿಕೊಂಡಿದ್ದೆಯಲ್ಲಾ, ಅರಿವನರಿವುದಕ್ಕೆ.
ಕುರುಹಿನ ಮೂರ್ತಿಯಲ್ಲಿ ಅಂಗವ ಮರೆದು, ವಸ್ತುವ ಹಿಂಗದಿರು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./72
ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ
ಸತ್ಯಜ್ಞಾನ ಸಂಬಂಧಶ್ಚ ತದ್ಯಥಾ ಶ್ರುಣು ಪಾರ್ವತಿ ||
ಎಂದಕಾರಣ, ಬಂಧನದೈಕ್ಯವ ಶಿವಶರಣರೊಪ್ಪರಾಗಿ.
ಅದೆಂತೆಂದಡೆ: ತೈಲ ಬತ್ತಿಯುಳ್ಳನ್ನಕ್ಕ ಜ್ಯೋತಿ ಬಯಲಾಗದು.
ಎಣ್ಣೆ ಬತ್ತಿ ತೀರಿದ ಮೇಲೆ ಗೃಹದೊಳಗಣ ಜ್ಯೋತಿ
ಉರಿಯಬಲ್ಲುದೆ ಹೇಳಿರಣ್ಣಾ ?
ಈ ದೃಷ್ಟಾಂತದಂತೆ, ದೇಹಿಗಳ ದೇಹಮಧ್ಯದಲ್ಲಿ
ಸಪ್ತಧಾತುಗಳುಳ್ಳ ಪರಿಯಂತರ
ಪಂಚಾಗ್ನಿಯಿದ್ದ ಜೀವರುಗಳು ಪ್ರಾಣತ್ಯಾಗವ ಮಾಡುವುದು.
ಹಾಗೆ ಶರಣನ ದೇಹಮಧ್ಯದಲ್ಲಿ ಚಿದಗ್ನಿಯಿದ್ದು,
ಪ್ರಾಣ ದಗ್ಧವ ಮಾಡಿ, ವಸ್ತುವಿನಲ್ಲಿ ಎಯ್ದಿಸುತ್ತಿರಲಾಗಿ,
ಆತನ ಅರಿವು ಮರವೆಗೆ ಕರ್ತರಾಗಿಪ್ಪ ತೆತ್ತಿಗತ್ತ್ವವಲ್ಲದೆ
ತಾವು ಕಳಂಕರಾಗಿ, ಆತನ ವಿಕಳತೆಯಿಂದ ಐಕ್ಯವ ಮಾಡಿದಡೆ,
ಆ ದ್ರೋಹ ತಮಗಲ್ಲದೆ ಆತಂಗಿಲ್ಲ.
ಇಂತೀ ವಿವೇಕವುಳ್ಳ ವೀರಮಾಹೇಶ್ವರರ ಐಘಟದೂರ ರಾಮಲಿಂಗವೆಂಬೆ.
ಅಲ್ಲದಿರ್ದಡೆ, ನೀ ಸಾಕ್ಷಿಯಾಗಿ ಛೀ ಎಂಬೆನು./73
ಬಸವಣ್ಣ ಚೆನ್ನಬಸವಣ್ಣ ಪ್ರಭು ಮಡಿವಾಳ ನಿಜಗುಣ
ಶಿವಯೋಗಿ ಸಿದ್ಧರಾಮ ಮೋಳಿಗೆಯ್ಯ ಆಯ್ದಕ್ಕಿಯ ಮಾರಯ್ಯ
ಏಕಾಂತರಾಮಯ್ಯ ಅಜಗಣ್ಣ ಶಕ್ತಿಮುಕ್ತಿ ಮಹಾದೇವಿಯಕ್ಕ
ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳು
ಕೊಟ್ಟ ವ್ರತಪ್ರಸಾದ, ಆ ಪ್ರಸಾದವೆನಗೆ ಪ್ರಸನ್ನ.
ನಿಮಗೆ ಮತ್ರ್ಯದ ಮಣಿಹ ಹಿಂಗುವನ್ನಕ್ಕ ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ,
ನಾ ಹಿಡಿದ ನೇಮದಾ ಭಿಕ್ಷೆಯಲ್ಲಿ,
ನಾ ತಪ್ಪಿದಡೆ, ತಪ್ಪು ಹೊತ್ತಲ್ಲಿ ನಿಮ್ಮ ಕೇಳಿದಡೆ,
ನಾ ಸತ್ತಿಹೆನೆಂದು ಕೂಡಿದಡೆ,
ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ
ಘಟವ ಬಿಟ್ಟಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಕ್ರೀಭಿನ್ನ ಭಿನ್ನದೋರಿದಲ್ಲಿ ಆಚಾರವೆ ಪ್ರಾಣವಾದ
[ಐಘಟದೂರ] ರಾಮೇಶ್ವರಲಿಂಗದಲ್ಲಿಯೇ ಲೀಯ./74
ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು.
ಸಸಿಯಿಲ್ಲದ ಫಲವುಂಟೆ ಅಯ್ಯಾ ?
ಇಷ್ಟದ ಅರ್ಚನೆ ಅರತು, ಚಿತ್ತ ದೃಷ್ಟವ ಕಾಬುದಕ್ಕೆ
ಗೊತ್ತಾವುದು ಹೇಳಯ್ಯಾ ?
ಅದು ಮುಟ್ಟಿದ ಮುಟ್ಟಿನಲ್ಲಿ ಒದಗು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./75
ಬೀಜ ಗುರುವಾಗಿ, ಅಂಕುರ ಲಿಂಗವಾಗಿ,
ಅದರ ಫಲರಸಕಳೆ ಜಂಗಮವಾಗಿ,
ಮೂರನುಳಿಯೆ ನಿಂದುದು ನಿಜತತ್ವವಾಗಿ,
ವಿರಕ್ತಭಾವದಲ್ಲಿ ನಿಂದುದು ಜ್ಞಾನಜಂಗಮ.
ಆ ಭಾವ, ಐಘಟದೂರ ರಾಮೇಶ್ವರಲಿಂಗ ತಾನೆ./76
ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ ?
ಅವ ಮಾತ ಕಲಿತ ಮಾತುಗನಂತೆ, ಆಟವ ಕಲಿತ ಕೋಲಾಟಿಕನಂತೆ.
ಛೀ ಅದೇತರ ಅರಿವು ?
ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ./77
ಭಕ್ತನಾದಲ್ಲಿ ಪಂಕವ ಹೊದ್ದದ ವಾರಿಯಂತಿರಬೇಕು,
ಜಲವ ಮುಟ್ಟದ ತೈಲದಂತಿರಬೇಕು,
ರಸಬದ್ಧ ಯೋಗದಂತಿರಬೇಕು,
ಮರಾಳನ ಮಾಟದಂತೆ, ಸಂಸಾರದ ಒದಗನರಿತು ಅರಿಯದಂತಿರಬೇಕು,
ಐಘಟದೂರ ರಾಮೇಶ್ವರಲಿಂಗದಲ್ಲಿ./78
ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ.
ಭಕ್ತಿ ಹೋಯಿತ್ತು, ಜಂಗಮದಲ್ಲಿ ಸಂದೇಹವ ಮಾಡಲಿಕೆ.
ಭಕ್ತಿ ಹೋಯಿತ್ತು, ಲಿಂಗದ ಅಂಗದ ಸಂಗವನರಿಯದೆ.
ಅರ್ತಿಗಾರಿಕೆಯಲ್ಲಿ ಮಾಡುವ ವ್ಯರ್ಥರ ಭಕ್ತಿ
ಇತ್ತಲೆ ಉಳಿಯಿತ್ತು, ಐಘಟದೂರ ರಾಮೇಶ್ವರಲಿಂಗವನರಿಯದೆ./79
ಭಾಷೆ ತಪ್ಪಿದ ಬಂಟ, ನಿಹಿತವಿಲ್ಲದವನ ಅರಿವು,
ದಾತನರಿದವನ ದೊರೆತನ, ತೂತಕುಂಭದ ಏತದ ಘಾತದಂತೆ,
ಐಘಟದೂರ ರಾಮೇಶ್ವರಲಿಂಗ./80
ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು,
ನಿಲಿಸಿ ತೋರಿ, ಮುನ್ನಿನಂತಾಯಿತ್ತು.
ಅಪ್ಪು ಸಂಗವನೆಯ್ದಿದಂತೆ ಇರಬೇಕು,
ಇಷ್ಟಪ್ರಾಣಯೋಗಸಂಬಂಧ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./81
ಮಣ್ಣು ಬೆಂದು ಮಡಕೆಯಾಗಿ ಒಡೆದಡೆ, ಮುನ್ನಿನಂತಾದುದಿಲ್ಲ.
ಮಿಸುನಿ ವಿಶ್ವದೊಳಗಿದ್ದು, ತನ್ನಯ ರಸಕುಲವ ಬೆರೆಸಿದುದಿಲ್ಲ.
ಕ್ಷೀರ ಬಲಿದು ನಿಂದು, ಮುನ್ನಿನ ಪಿಸಿತವ ಸಾರಿದುದಿಲ್ಲ.
ಮೂರನರಿದು ಹರಿದು, ಮೂರನೊಡಗೂಡುವ
ಡಾಗಿನ ಪಶುಗಳಿಗೇಕೆ ನೆರೆ ನಿರನ ಹೊಲಬು,
ಐಘಟದೂರ ರಾಮೇಶ್ವರಲಿಂಗವನರಿಯರಾಗಿ ?/82
ಮನ ಮುಟ್ಟದ ಪೂಜೆ,
ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ.
ವಸ್ತುವ ಮುಟ್ಟದ ಅರ್ಪಿತ,
ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ,
ಇದು ನಿಶ್ಚಯದ ಮುಟ್ಟಲ್ಲ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.ಮೆರೆಮಿಂಡಯ್ಯ
ಮನೆಯಲ್ಲಿ ಮನುಜರು ಅಡಗುವರಲ್ಲದೆ,
ಮನೆಯಲ್ಲಿ ಮನುಜರು ಅಡಗುವರಲ್ಲದೆ,
ಮನುಜರಲ್ಲಿ ಮನೆ ಅಡಗಿದುದುಂಟೆ ?
ಮಾಡುವುದಕ್ಕೆ ಕರ್ತನಲ್ಲದೆ ಆ ಘಟವ ಘಟಿಸುವುದಕ್ಕೆ ಅಗೋಚರ,
ಐಘಟದೂರ ರಾಮೇಶ್ವರಲಿಂಗ./83
ಮನೆಯ ಹೊರಗಿದ್ದವನ, ಮನೆಯ ಒಳಗಿದ್ದವ ಕರೆದಡೆ
ವಿರೋಧವುಂಟೆ ಅಯ್ಯಾ ?
ಕ್ರೀ ಹೊರಗಾಗಿ ಆತ್ಮನೊಳಗಾದಲ್ಲಿ, ನಾನೆಂಬನ್ನಕ್ಕ ಕ್ರೀ ಶೂನ್ಯವಿಲ್ಲದಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./84
ಮರದ ಘಟಕ್ಕೆ, ತೊಗಲ ಬಿಗಿದು ಹೊಡೆಯೆ,
ಅದು ಒಡಗೂಡೆ ನಾದವಾಯಿತ್ತು.
ಈ ತೊ[ಗಲಿ]ನ ಭೇದ, ಒಡಗೂಡುವ ಲಿಂಗದ ಭಾವ
ಕುರುಹಿನ ನೆಮ್ಮುಗೆಯನರಿ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./85
ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ,
ವಾಳುಕ ಸಂಬಂಧಿಯಾದ ಜಲದ ಇರವಿನಂತೆ,
ಶಿಲೆ ತೈಲದ ಒಲುಮೆಯಂತಿರಬೇಕು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./86
ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು.
ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು.
ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು.
ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಭಿನ್ನವಿಲ್ಲ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./87
ಮೇಘ ಒಸರಿ ಧರೆಯಲ್ಲಿ ನಿಂದು, ಆ ಧರೆಯ ತೋಡಿ ತೆಗೆಯೆ,
[ಆ ಸಲಿಲ] ಮುನ್ನಿನ ಹಾಂಗೆ ಧರೆಗಿಳಿಯೆ.
ಹಾಗಿರಬೇಕು, ಇಷ್ಟಪ್ರಾಣಯೋಗಸಂಬಂಧ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./88
ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ,
ಅದು ಬೀಜ ನಾಮ ನಿಂದು, ಸಸಿಯೆಂಬ ನಾಮವಾಯಿತ್ತು.
ಸಸಿ ಬಲಿದು ಬೆಳೆದು, ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು.
ಬೀಜ ಒಂದೋ, ಎರಡೋ ? ಎಂಬುದನರಿದಲ್ಲಿ,
ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು.
ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು./89
ಮೊನೆಯಿರಿವಡೆ ಕರವಿಡಿಯಲ್ಲಿ ಇರಿದಲ್ಲದಾಗದು.
ಮನ ಅರಿವಡೆ ಕುರುಹಿನ ನೆರಿಗೆಯಲ್ಲಿ ಸಲೆ ಸಂದು ನಿಂದಲ್ಲದಾಗದು.
ಕ್ರೀ ಭಾವಶುದ್ಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./90
ರಾಜರ ಬಾಗಿಲಲ್ಲಿ ನಿಂದು, ಕೂಗಿ ಮೊರೆಯಿಟ್ಟು,
ನೀನಾರೊ ಎಂದು ಕೇಳಿದಡೆ, ನಾನೊಡೆಯ ಎಂದಡೆ,
ಅಡಗದೇಕೆ ನಿನ್ನ ಬಾಯಿ ?
ತಡೆಯಿಸಿಕೊಂಡು ಒಡೆಯತನವುಂಟೆ ನಿನಗಲ್ಲಿ ?
ಇಂತೀ ಬಿಡುಹೋರಿಗಳ ಬುಡ ಅಡಗದೇಕೆ,
ಐಘಟದೂರ ರಾಮೇಶ್ವರಲಿಂಗವನರಿಯದೆ ?/91
ಲಕ್ಷಿಸಿ ಕಂಡೆಹೆನೆಂದಡೆ ಅಲಕ್ಷ್ಯ, ಅನಾಮಯ.
ಅದನುಳಿದು ಕಂಡೆಹೆನೆಂದಡೆ ಮಿಕ್ಕಾದವು ಮೃತಕಾಯ.
ಉಭಯವನರಿದು ವಿಚಾರಿಸಬೇಕು, ಐಘಟದೂರ ರಾಮೇಶ್ವರಲಿಂಗವ./92
ಲಿಂಗಪ್ರಾಣಿಗಳಾದ ಭಕ್ತ ಮಾಹೇಶ್ವರರ
ವ್ರತಲಿಂಗ ಸಂಕಲ್ಪವನು ತಿಳಿದು, ವಿಚಾರಿಸಿ ನೋಡಿ,
ಮುಹೂರ್ತವ ಮಾಡಿಸಿಕೊಂಡಿಪ್ಪ ಸಮಯದಲ್ಲಿ,
ರಾಜಭಯ ಚೋರಭಯದಿಂದವೆ ಕಂಟಕ ಬರಲು,
ಅಂಜಿ ಕಥನವಂ ಮಾಡಿಕೊಳಲಾಗದು.
ಅದೆಂತೆಂದಡೆ: ಆ ವಿಚಾರವೆಲ್ಲವ ಭಕ್ತ ಮಾಹೇಶ್ವರರು ತಿಳಿದು ನೋಡಿಕೊಂಡು,
ಆ ಲಿಂಗಸಮ್ಮರ್ಧನ ಸಂದೇಹವಿಲ್ಲದೆ ಶಿರಿಚ್ಫೇದಮಂ ಮಾಡುವುದು.
ಇದಕ್ಕೆ ದ್ರೋಹವಿಲ್ಲ.
ಉಂಟೆಂದು ನುಡಿದವವರ, ರವಿಚಂದ್ರರುಳ್ಳ ಪರಿಯಂತರ
ಎಕ್ಕಲನರಕದಲ್ಲಿಕ್ಕುವರು.
ಇದಕ್ಕೆ ಆದ್ಯರ ವಚನವೆ ಸಾಕ್ಷಿ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಐಘಟದೂರ ರಾಮೇಶ್ವರಲಿಂಗವೆ,
ಆ ವೀರಮಾಹೇಶ್ವರರನೇನೆಂಬೆನು. /93
ವಾಯು ಪಟವಾಡುವಲ್ಲಿ, ಹಿಡಿದವನ ಕೈಯಲ್ಲಿ ನೂಲು ಸಿಕ್ಕಿ ಆಡುವಂತೆ,
ತನ್ನಯ ಅರಿವು ಕುರುಹಿನಲ್ಲಿ ಸಿಕ್ಕಿ, ಎಡೆ ಬಿಡುವಿಲ್ಲದಾಡಬೇಕು,
ಐಘಟದೂರ ರಾಮೇಶ್ವರರಲಿಂಗವನರಿವುದಕ್ಕೆ./94
ವಾಯುವೆದ್ದು ಪರ್ಣ ತೃಣ ಘಟವನೆತ್ತುವಂತೆ,
ಮನ ನೆನೆದು, ಘಟವ ಕೊಂಡುಹೋದಂತೆ,
ಚಿತ್ತ ನೆನೆದು, ಇಷ್ಟದಲ್ಲಿ ನಿಂದು, ಇಷ್ಟವ ಕೊಂಡು ಎಯ್ದಬೇಕು.
ಇದು ನಿಶ್ಚಯವೆಂದರಿ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./95
ವಾಹನದ ಕೀಲಾಗಿ ತಿರುಗುವ, ಚೂಣಿಯಲ್ಲಿ ಹೋಹ,
ವೇಳೆಯ ಕಾವ ಕಾಳುಗುಡಿಹಿಗೇಕೆ ಭಾಳೇಕ್ಷಣನ ಭಾವ ?
ಕೀಳುಜೀವವೇಕೆ ಅಡಗದು ?
ಮತ್ತೆ ನಾನೆಂಬುದೇಕೆ ಅಡಗದು,
ಐಘಟದೂರ ರಾಮೇಶ್ವರಲಿಂಗವನರಿಯದೆ ?/96
ವಿಷದೇಹಿಗೆ ಆಹಾರ ಒದಗದೆ ?
ನಸು ಸುಳುಹ ಭುಂಜಿಸುವಂತೆ,
ಕ್ರೀ ಶುದ್ಧತೆಯಲ್ಲಿ ಒದಗಲರಿಯದಿರೆ,
ಮಾಡುವ ಆಚರಣೆ ಮಾರ್ಗವಾಗಬೇಕು.
ಎಯ್ದದಿರೆ ಮಾನ್ಯರ ಕಂಡು ಮನ್ನಣೆಯಾಗಿರಬೇಕು.
ಈ ಭಾವವೇನೂ ಇಲ್ಲದಿರೆ,
ಐಘಟದೂರ ರಾಮೇಶ್ವರಲಿಂಗಕ್ಕೆ ದೂರ./97
ವ್ರತಭ್ರಷ್ಟನ, ಗುರುಘಾತಕನ ವಂದಿಸಿ,
ನಿಂದಿಸುವವನ ದ್ರವ್ಯದಾಸೆಗೆ
ಅವನ ಮಂದಿರವ ಹೊಕ್ಕುಂಡಡೆ,
ಜಂಬುಕ ತಿಂದ ಹಡಿಕವ, ಮಿಕ್ಕು ಹುಳಿತವ ತಾ ತಿಂದಂತೆ,
ಐಘಟದೂರ ರಾಮೇಶ್ವರಲಿಂಗ./98
ಶಬ್ದಶಾಸ್ತ್ರಂಗಳಲ್ಲಿ ತಿಳಿದು,
ನ್ಯೂನ್ಯಾದಿಗಳಿಲ್ಲದೆ ನುಡಿದು,
ತ್ರಿವಿಧದೊಳಗೆ ಹುದುಗಿ,
ಭವಪಾಶದ ಪಾಕುಳದಲ್ಲಿ ಬಿದ್ದು,
ನಿಚ್ಚಟಭಕ್ತನೆಂದಡೆ ಒಪ್ಪುವನೆ,
ಐಘಟದೂರ ರಾಮೇಶ್ವರಲಿಂಗ ?/99
ಶರಣಸತಿ ಲಿಂಗಪತಿಯೆಂದು ಆಚರಿಸುವ ಮಾಹೇಶ್ವರರ
ಲಿಂಗ ಓಸರಿಸಿ ಹೋದಲ್ಲಿ,
ಮಾಹೇಶ್ವರರ ಮಧ್ಯದಲ್ಲಿ ಮುಹೂರ್ತವ ಮಾಡಿಕೊಂಡು
ಐಕ್ಯವಾಗುವ ಸಮಯದಲ್ಲಿ,
ಆ ಲಿಂಗ ಸಿಕ್ಕಿದಡೆ, ತೆತ್ತಿಗರಾದವರು ಧರಿಸುವುದು.
ಇದಲ್ಲದೆ ಸಂದೇಹವ ಮಾಡಿದಡೆ ನಾಯಕ ನರಕ.
ನೀವೇ ಬಲ್ಲಿರಯ್ಯಾ, ಐಘಟದೂರ ರಾಮೇಶ್ವರ./100
ಶರೀರ ಬೆಳೆದು, ಪ್ರಳಯಕ್ಕೊಳಗು.
ಬುದ್ಧಿ ಬೆಳೆದು, ಸುಖಕ್ಕೊಳಗು.
ಸುಖ ಬೆಳೆದು, ವಿಕಾರಕ್ಕೊಳಗು.
ವಿಕಾರ, ಸಕಲಮರಣಕ್ಕೆ ಒಳಗಾಯಿತ್ತು.
ಇಂತಿವಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./101
ಸತ್ಕ್ರೀಯೆಂಬುದೆ ಜ್ಞಾನ, ಜ್ಞಾನದೊಡಲೆ ಕ್ರೀ.
ಸುಗಂಧವನಿರಿಸಿಕೊಂಡಿಪ್ಪ ಕರಂಡದಂತೆ
ಆ ಒಡಲಿಲ್ಲದೆ ಗಂಧವಿರಬಲ್ಲುದೆ ?
ಐಘಟದೂರ ರಾಮೇಶ್ವರಲಿಂಗ ಕುರುಹಾಗಿ,
ಅರಿವ ಇರಿಸಿಕೊಂಡಿತ್ತು./102
ಸರ್ವವೆಲ್ಲವೂ ವಸ್ತುವಿನ ಅಧೀನವಾದಲ್ಲಿ,
ಬೇರೊಂದು ತಟ್ಟುವ ಮುಟ್ಟುವ ಠಾವುಂಟೆ ?
ಸರ್ವಭಾವಜ್ಞಗೆ ಭಿನ್ನಭಾವವಿಲ್ಲ,
ಐಘಟದೂರ ರಾಮೇಶ್ವರಲಿಂಗದಲ್ಲಿ./103
ಸ್ಥಾಣುನಿನ ರಜ್ಜು, ಮೀರಿ ಎಯ್ದದೆ ಆಡಿ, ತನ್ನಯ ಸ್ಥಾನಕ್ಕೆ ಬಹಂತೆ,
ವಸ್ತುವಿನ ಗೊತ್ತಿನಿಂದ ಕಟ್ಟು ಮೀರಲಿಲ್ಲವಾಗಿ,
ಐಘಟದೂರ ರಾಮೇಶ್ವರಲಿಂಗದಲ್ಲಿಗೆ ಎಯ್ದುವ ತೆರ./104
ಸ್ಥೂಲದಿಂದ ಕಾಬುದು, ಸೂಕ್ಷ್ಮದಿಂದರಿವುದು, ಕಾರಣದಲ್ಲಿ ಮಾಡುವುದು.
ತ್ರಿವಿಧದ ಭೇದವ ನಿಃಕರಿಸಿ, ತ್ರಿವಿಧ ಭೇದದಿಂದ ಕಾಣು.
ತ್ರಿವಿಧದ ಭೇದವ ಕೂಡಿ ಮರೆ.
ಐಘಟದೂರ ರಾಮೇಶ್ವರಲಿಂಗವ ಏನೂ ಎನ್ನದಿರು./105
ಸ್ವಪ್ನದ ಭಾಷೆ, ಮತ್ರ್ಯರ ಮುಟ್ಟದ ಭಕ್ತಿ
ಚಿತ್ತವನರಿಯದೆ ಕಾಡುವನ ಯುಕ್ತಿ,
ಮೃತ್ತಿಕೆಯ ಬೊಂಬೆಯು ಅಪ್ಪುವಿನ ಮಂದಿರಕ್ಕೆ ಹೋದಂತಾಯಿತ್ತು.
ಐಘಟದೂರ ರಾಮೇಶ್ವರಲಿಂಗವನರಿ./106
ಸ್ವಪ್ನದಲ್ಲಿ ಮರೆದು, ಸಕಲವ ಕಂಡು ಅರಿದು, ಹೇಳುವುದು,
ಆತ್ಮ ಭಿನ್ನವೋ, ಘಟ ಭಿನ್ನವೋ ?
ಇಷ್ಟಲಿಂಗವೆಂದು, ಪ್ರಾಣಲಿಂಗವೆಂದು ಕಟ್ಟಿ ಹೋರುವಾಗ,
ತಾನು ದೃಷ್ಟದ ಅಂಗವ ಹೊತ್ತು ಹೋರುತ್ತಿದ್ದು,
ಮತ್ತೆ ಕ್ರೀಯಲ್ಲಾವೆಂಬುದಕ್ಕೆ ತೆರಪಾವುದು ?
ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು,
ಕ್ರೀಯೋ, ನಿಃಕ್ರೀಯೋ ?
ಮಂದಿಯ ನಡುವೆ ನಿಂದಿರ್ದ ಉಡುವಿನಂತೆ,
ಕಣ್ಣು ಮುಚ್ಚಿ ಗೆದ್ದೆನೆಂದು ಬಡಿಯಿಸಿಕೊಂಬ ತೆರದ
ಮಾತಿನ ಮಾಲೆ ಬೇಡ.
ನೂಲ ಹಿಡಿದು ಬೆಟ್ಟವನೇರುವಂತೆ,
[ವಿ]ಧವೆ ಬಾಲನ ಹಿಡಿದು ಬದುಕುವಂತೆ,
ಕೂಷ್ಮಾಂಡವ ಹಿಡಿದು ಎಯ್ದುವ ಜಲದಲ್ಲಿ ಚರಿಸುವನಂತೆ,
ಕಡೆಯಾಗಬೇಡ, ನೆರೆ ನಂಬು.
ಮಾಡುವ ಕ್ರೀಯಲ್ಲಿ ಅರಿವುಹೀನವಾಗಬೇಡ.
ಮಡುವಿನ ನಡುವೆ ಕಟ್ಟಿದ ಹಾಲದ ಹಾದಿಯಂತೆ,
ಅಡಿ ತೊಲಗಿದಡೆ ಕುಡಿವಿರಿ ನೀರ.
ಬಿಡದಿರು ಮಾಡುವ ಸತ್ಕ್ರೀಯ.
ಇದನರಿದು ಒಡಗೂಡು,
ಐಘಟದೂರ ರಾಮೇಶ್ವರಲಿಂಗವ, ಉಭಯ ಭಾವವಳಿದು./107
ಹುಡಿ ಹತ್ತದ ಗಾಳಿಯಂತೆ,
ವಾ[ಸ] ಹತ್ತದ ಸರ್ವಸಾರ ಸಂಬಂಧಿಯಂತೆ,
ಭಸ್ಮದಲ್ಲಿದ್ದ ಸುಘಟಿಯ ಬೀಜದಂತೆ,
ಘೃತಕಿಸಲಯದಂತೆ ಏತರಲ್ಲಿಯೂ ಬಂಧವಿಲ್ಲದೆ,
ಕಟಿತ್ವ ವಕ್ಷದಲ್ಲಿದ್ದ ಮಧುಪಾನದಂತಿರಬೇಕು ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ./108
ಹೆರುವ ಹೆಂಗೂಸು, ಕೂಸು ಸಿಕ್ಕಿ ತನ್ನ ಉಡಿಯ ತೋರುವಂತೆ,
ಅದು ಕೂಸಿನ ಆಸೆಯೋ ? ತನ್ನ ಅಪಮಾನದಾಸೆಯೋ ?
ತನ್ನ ಅಸುವಿನ ಆಸೆಯೋ ?
ಮಾತ ಕಲಿತು, ವೇಷವ ತೋರಿ, ಘಾತುಕತನದಲ್ಲಿ ಉಂಬ
ಪಾಶಧಾರಿಗಳಿಗೇಕೆ ನಿರ್ಜಾತನ ಮಾತು ?
ಅದು ನೀತಿಯಲ್ಲ, ಐಘಟದೂರ ರಾಮೇಶ್ವರಲಿಂಗ ಅವರ ಬಲ್ಲನಾಗಿ/109